ತೌಲನಿಕ ಕಾವ್ಯಮೀಮಾಂಸೆಯ ಕೆಲವು ವಿಚಾರಗಳನ್ನು ಕುರಿತ ಹದಿಮೂರು ಲೇಖನಗಳ ಸಂಗ್ರಹ ‘ಕಾವ್ಯಾರ್ಥ ಚಿಂತನ’.  ಕಳೆದ ಹದಿನೈದು ವರ್ಷಗಳಿಗೂ ಮೀರಿದ ಕಾಲಮಾನದಲ್ಲಿ ನಾನು ಬರೆದ ಈ ಲೇಖನಗಳನ್ನು ಒಂದು ರೂಪಕ್ಕೆ ಅಳವಡಿಸಿ ಪ್ರಕಟಿಸಲು ಸಾಧ್ಯವಾದದ್ದು ನನಗೆ ಸಮಾಧಾನದ ಸಂಗತಿಯಾಗಿದೆ.  ಈ ನಿಟ್ಟಿನಲ್ಲಿ ನನ್ನ ಕೆಲಸ ಪ್ರಾರಂಭವಾದದ್ದು ೧೯೬೧ರಷ್ಟು ಹಿಂದೆಯೇ, ‘ವಿಮರ್ಶೆಯ ಪೂರ್ವ- ಪಶ್ಚಿಮ’ ಎಂಬ ಕೃತಿಯ ಪ್ರಕಟನೆಯಿಂದ.  ಮುಖ್ಯವಾಗಿ ಇದು ಸಾಹಿತ್ಯ ವಿಮರ್ಶೆಯ ತೌಲನಿಕ ವಿವೇಚನೆಯನ್ನು ಕುರಿತದ್ದು.  ಆದರೆ ಸಾಹಿತ್ಯ ವಿಮರ್ಶೆಗೆ ಹಿನ್ನೆಲೆಯಾದ ಕಾವ್ಯಮೀಮಾಂಸೆಗೆ ಸಂಬಂಧಪಟ್ಟ ತೌಲನಿಕ ವಿವೇಚನೆಯನ್ನು ನಾನು ಮೊದಲು ಮಾಡಿದ್ದು “ಸ್ಫೂರ್ತಿ” ತತ್ವವನ್ನು ಕುರಿತ ಲೇಖನದಿಂದ.  ಪ್ರಸ್ತುತ ಲೇಖನ ೧೯೬೩ರ “ಪ್ರಬುದ್ಧ ಕರ್ಣಾಟಕ” (೪೫-೩)ದಲ್ಲಿ ಪ್ರಕಟವಾಯಿತು.  ಅಲ್ಲಿಂದೀಚೆಗೆ ಅನೇಕ ವರ್ಷಗಳಲ್ಲಿ ಬರೆಯಲಾದ ಲೇಖನಗಳು ಇಲ್ಲಿ ಸಂಗ್ರಹಿತವಾಗಿವೆ.  ಇವುಗಳಲ್ಲಿ ಒಂದೆರಡು ಬೆಂಗಳೂರು ವಿಶ್ವವಿದ್ಯಾಲಯದ “ಸಾಧನೆ” ಪತ್ರಿಕೆಯಲ್ಲಿ, ಮತ್ತೆ ಒಂದೆರಡು ಬೇರೆಡೆ ಅಚ್ಚಾದವು.  ಆದರೆ ಈ ಕೃತಿಯ ಅರ್ಧಕ್ಕಿಂತ ಹೆಚ್ಚಿನ ಕೆಲಸ ಮುಂದುವರಿದದ್ದು ಕಳೆದ ಎರಡು ವರ್ಷಗಳಲ್ಲಿಯೇ.  ಅಷ್ಟೆ ಅಲ್ಲ, ಈ ಹಿಂದೆ ಪ್ರಕಟವಾದ ಲೇಖನಗಳನ್ನು ಆಯಾ ವಿಷಯಗಳಿಗೆ ಸಂಬಂಧಪಟ್ಟಂತೆ ಇನ್ನಷ್ಟು ಸಾಮಗ್ರಿಯನ್ನು ಸೇರಿಸಿ ಪರಿಷ್ಕರಿಸುವ ಕೆಲಸ ನಡೆದದ್ದು ಈ ಅವಧಿಯಲ್ಲಿಯೇ.

ಸಮಕಾಲೀನ ಸಾಹಿತ್ಯ ವಿಮರ್ಶೆ ಇನ್ನೂ ಒಂದು ನಿಶ್ಚಿತವಾದ ರೂಪವನ್ನು ತಾಳದೆ, ಭಾಷೆ, ಪರಿಭಾಷೆ ಹಾಗೂ ಪರಿಕಲ್ಪನೆಗಳ ವಿಚಾರದಲ್ಲಿ ಗೊಂದಲದಿಂದ ಕೂಡಿರುವುದಕ್ಕೆ ಮುಖ್ಯ ಕಾರಣ, ಸಾಹಿತ್ಯ ವಿಮರ್ಶೆಗೆ ಬೇರು-ಬುಡದಂತೆ ಇರುವ ಕಾವ್ಯಮೀಮಾಂಸೆಯ ಗಾಢವಾದ ತಿಳಿವಳಿಕೆ ಇಲ್ಲದಿರುವುದೇ ಎಂದು ನನ್ನ ಭಾವನೆ.  ಈ ದೃಷ್ಟಿಯಿಂದ ಭಾರತೀಯ ಕಾವ್ಯಮೀಮಾಂಸೆಯ ತಿಳಿವಿನ ಜತೆಗೆ, ನಮ್ಮ ಇಂದಿನ ವಿಮರ್ಶೆಯ ನಿಲುವುಗಳನ್ನು ರೂಪಿಸಿರುವ ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ಒಂದು ಮುಖ್ಯ ಭಾಗವಾಗಿರುವ ಪಾಶ್ಚಾತ್ಯ ಕಾವ್ಯಮೀಮಾಂಸೆಯ ಪರಿಜ್ಞಾನವೂ ಅತ್ಯಂತ ಅಗತ್ಯವಾಗಿದೆ.  ಜತೆಗೆ ಈ ಎರಡೂ ಕಾವ್ಯಮೀಮಾಂಸೆಯ ಗಾಢವಾದ ಅಧ್ಯಯನದಿಂದ ನಿಷ್ಪನ್ನಗೊಳ್ಳುವಂಥ ತೌಲನಿಕ ದೃಷ್ಟಿಕೋನವೊಂದು ಇನ್ನೂ ಮುಖ್ಯವಾದದ್ದು.  ಕನ್ನಡದ ಪರಿಸರದಲ್ಲಿ ಸಾಹಿತ್ಯದ ತೌಲನಿಕ ಅಧ್ಯಯನದ ಪ್ರಯತ್ನಗಳು ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರಿಂದ ಪ್ರಾರಂಭವಾದರೂ, ವಿಶ್ವವಿದ್ಯಾಲಯದ ಕನ್ನಡ ಪಠ್ಯಕ್ರಮದಲ್ಲಿ ಅದಕ್ಕೆ ಪ್ರವೇಶ ಹಾಗೂ ಸ್ಥಾನ-ಮಾನ ದೊರೆತದ್ದು ಶ್ರೀ ಕುವೆಂಪು ಅವರಿಂದ.  ಅದರಲ್ಲಿಯೂ ಕಾವ್ಯಮೀಮಾಂಸೆಯ ತೌಲನಿಕ ಅಧ್ಯಯನ ಪ್ರಾರಂಭವಾದದ್ದು ಕುವೆಂಪು ಅವರಿಂದಲೇ.  ಅವರು ತಮ್ಮ ಬೋಧನೆ ಹಾಗೂ ಬರಹಗಳ ಮೂಲಕ (‘ತಪೋನಂದನ’, ‘ದ್ರೌಪದಿಯ ಶ್ರೀಮುಡಿ’, ಇದಕ್ಕೂ ಮಿಗಿಲಾಗಿ ‘ರಸೋವೈಸಃ’ ಕೃತಿಯ ಮೂಲಕ) ತೌಲನಿಕ ಕಾವ್ಯಮೀಮಾಂಸೆಯ ಹೊಸ ಚಿಂತನ ಕ್ರಮಗಳನ್ನು ಹಾಕಿಕೊಟ್ಟರು.  ‘ಭಾರತೀಯ ಕಾವ್ಯ ಮೀಮಾಂಸೆ’ಯನ್ನು ಸಂಸ್ಕೃತ ಲಾಕ್ಷಣಿಕರ ಚಿಂತನೆಯ ಹಿನ್ನೆಲೆಯಲ್ಲಿ ಅತ್ಯಂತ ಸಮರ್ಥವಾಗಿ ನಿರೂಪಿಸಿರುವ ಪ್ರೊ. ತೀ.ನಂ. ಶ್ರೀಕಂಠಯ್ಯನವರು, ಭಾರತೀಯ ಚಿಂತನೆಗಳನ್ನು ತೌಲನಿಕವಾಗಿ ನೋಡುವ  ಬಗೆಗೆ ಅಲ್ಲಲ್ಲಿ ಸೂಚನೆಗಳನ್ನು ಕೊಟ್ಟಿದ್ದಾರೆ.  ಕಳೆದ ಹಲವು ವರ್ಷಗಳ ಕಾಲದಲ್ಲಿ ಡಾ|| ಕೆ. ಕೃಷ್ಣಮೂರ್ತಿಯವರು ಸಂಸ್ಕೃತದ ಮುಖ್ಯ ಲಾಕ್ಷಣಿಕರ ಕೃತಿಗಳನ್ನು ಅತ್ಯಂತ ಶಾಸ್ತ್ರೀಯವಾಗಿ ಕನ್ನಡಕ್ಕೆ ಅನುವಾದಿಸಿ, ವಿದ್ವತ್‌ಪೂರ್ಣವಾದ ಮುನ್ನುಡಿ, ಟಿಪ್ಪಣಿಗಳ ಸಹಿತವಾಗಿ ಒದಗಿಸಿ ಉಪಕಾರ ಮಾಡಿದ್ದಾರೆ.  ಈಚೆಗೆ ಶ್ರೀ ವಿ.ಎಂ. ಇನಾಂದಾರ್ ಅವರು ಪಾಶ್ಚಾತ್ಯ ಕಾವ್ಯಮೀಮಾಂಸೆಯ ಇತಿಹಾಸವನ್ನು ಸಾರವತ್ತಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.  ಈ ಹಿನ್ನೆಲೆಯಲ್ಲಿ ಮುಂದುವರಿದಿರುವ ನನ್ನ ತೌಲನಿಕ ಕಾವ್ಯ ಮೀಮಾಂಸೆಯ ಈ ಕೆಲಸ, ಅವರೆಲ್ಲರದಕ್ಕಿಂತ ಸ್ವರೂಪ ಹಾಗೂ ಉದ್ದೇಶಗಳಲ್ಲಿ ಬೇರೆಯೆ ಆಗಿದೆ ಎಂಬುದನ್ನು ಯಾರಾದರೂ ಗುರುತಿಸಬಹುದಾಗಿದೆ.

ಈ ಕೃತಿಯಲ್ಲಿ ನನ್ನ ಗಮನ ಮುಖ್ಯವಾಗಿ ಕೆಲವು ಕಾವ್ಯತತ್ವ ಹಾಗೂ ಪರಿಕಲ್ಪನೆ ಮತ್ತಿತರ ಸಂಗತಿಗಳನ್ನು ತೌಲನಿಕವಾಗಿ ವಿವೇಚಿಸುವ ಕಡೆಗೆ. ಇದುವರೆಗೆ ಸುಸಮರ್ಥವಾಗಿ ನಿರೂಪಿತವಾಗಿರುವ ಸಂಗತಿಗಳನ್ನು ಸಾಧ್ಯವಾದಮಟ್ಟಿಗೆ ಪುನರಾವರ್ತಿಸದೆ, ಆದರೆ ಅವುಗಳನ್ನು ಇಲ್ಲಿನ ವಿಷಯ ಪ್ರತಿಪಾದನೆಗೆ ಅಗತ್ಯವಾದೆಡೆ ಬಳಸಿಕೊಳ್ಳುತ್ತ, ಪೂರ್ವ ಹಾಗೂ ಪಶ್ಚಿಮದ ಚಿಂತನೆಗಳಲ್ಲಿರುವ ಸಾಮ್ಯ ಹಾಗೂ ವೈಶಿಷ್ಟ ಗಳನ್ನು ಗುರುತಿಸುತ್ತ, ಈ ತೌಲನಿಕ ವಿಧಾನದಿಂದ ಹೊರಡುವ ಕೆಲವು ಹೊಸ ಅಥವಾ ಬೇರೆಯೆ ಆದ ವಿಚಾರಗಳನ್ನು ಪ್ರಸ್ತಾಪಿಸುವ ಕಡೆಗೆ ನನ್ನ ಗಮನವನ್ನು ಕೇಂದ್ರೀಕರಿಸಿದ್ದೇನೆ.  ಮುಖ್ಯವಾಗಿ ಈ ಕೃತಿ ಇದುವರೆಗು ಈ ಕ್ಷೇತ್ರದಲ್ಲಿ ನಡೆದಿರುವ ಅಧ್ಯಯನಕ್ಕೆ ಪೂರಕವೂ, ಅಧ್ಯಯನದ ಮುಂದುವರಿಕೆಯೂ ಆಗುವುದರ ಜತೆಗೆ, ಸ್ವರೂಪ ಹಾಗೂ ವೈಶಿಷ್ಟಗಳಲ್ಲಿ ಬೇರೆಯದೆ ಆಗಬೇಕೆಂಬುದು ನನ್ನ ಉದ್ದೇಶ.  ಇದು ಎಷ್ಟರಮಟ್ಟಿಗೆ ನೆರವೇರಿದೆ ಎಂಬುದನ್ನು ಬಲ್ಲವರು ಹೇಳಬೇಕು.

ಕನ್ನಡಿಗರಾಗಿ ನಮಗೆ ನಮ್ಮ ಭಾಷೆ-ಸಾಹಿತ್ಯ-ಸಂಸ್ಕೃತಿಗಳ ಬಗೆಗೆ ಎಷ್ಟೇ ಅಭಿಮಾನವಿದ್ದರೂ, ಸಾಹಿತ್ಯದ ನಿಜವಾದ ಅಧ್ಯಯನ ಹಾಗೂ ಅರ್ಥವಂತಿಕೆಗೆ ಅದಷ್ಟೆ ಸಾಲದು.  ಅದರಲ್ಲಿಯೂ ಕನ್ನಡ ಸಾಹಿತ್ಯ, ಇತರ ಭಾರತೀಯ ಭಾಷಾ ಸಾಹಿತ್ಯಗಳಂತೆ ನಿಜವಾಗಿಯೂ ಬದಲಾದದ್ದು, ನಮ್ಮ ದೃಷ್ಟಿ-ಧೋರಣೆಗಳಲ್ಲಿ ಮೌಲಿಕವಾದ ಹೊಸತನ ಮೂಡಿದ್ದು, ಪಾಶ್ಚಾತ್ಯ ಸಾಹಿತ್ಯ ಹಾಗೂ ಸಾಹಿತ್ಯ ಚಿಂತನೆಗಳ ಪ್ರಭಾವದಿಂದಲೇ ಎಂಬುದನ್ನು ನೆನೆದಾಗ, ನಮ್ಮ ಸಾಹಿತ್ಯ ಮತ್ತು ಸಾಹಿತ್ಯ ವಿಚಾರಗಳನ್ನು ಪಶ್ಚಿಮದ ವಿಚಾರಗಳೊಂದಿಗೆ ಹೋಲಿಸಿ, ಅದರ ಋಣಗಳನ್ನೂ, ಗುಣಗಳನ್ನೂ, ನೆಲೆಗಳನ್ನೂ, ಬೆಲೆಗಳನ್ನೂ ಪರಿಶೀಲಿಸುವುದು ಅತ್ಯಂತ ಅಗತ್ಯವಾಗಿದೆ.

ಈ ಅಗತ್ಯದ ಫಲವಾಗಿಯೇ ಈಗೀಗ ತೌಲನಿಕ ಅಧ್ಯಯನ ದಿನದಿಂದ ದಿನಕ್ಕೆ ಮಹತ್ವವನ್ನು ಪಡೆಯುತ್ತಿದೆ.  ಇದರಿಂದ ಸಾಹಿತ್ಯದ ಅರ್ಥವಂತಿಕೆಗೆ ಅಗತ್ಯವಾದ ಸಮಗ್ರ ನಿಲುವೊಂದು ಪ್ರಾಪ್ತವಾಗುತ್ತದೆ.  ಭಾರತೀಯ ಪರಿಸರದ ತೌಲನಿಕ ಅಧ್ಯಯನ ಹೀಗೆ ಇಂಗ್ಲಿಷಿನ ಮೂಲಕ ಪರಿಚಿತವಾದ ಪಶ್ಚಿಮದ ಚಿಂತನೆಗಳ ಜೊತೆಗೆ ಇರಿಸಿ ನಡೆದದ್ದು ಹಾಗೂ ನಡೆಯುತ್ತಿರುವುದು, ವಸಾಹತುಶಾಹಿ ಸಂದರ್ಭದಿಂದಾಗಿ ತೀರಾ ಸಹಜವಾದದ್ದಾದರೂ, ಒಂದರ್ಥದಲ್ಲಿ ಇದು ಅಸಮಗ್ರವಾದದ್ದು ಎಂಬುದನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ.  ಯಾಕೆಂದರೆ, ನಮಗೆ ಇನ್ನೂ ಭಾಷೆಯ ಕಾರಣದಿಂದ ಪರಿಚಿತವಾಗದಿರುವ ಸಾಹಿತ್ಯ ಪಶ್ಚಿಮದಲ್ಲೇ ಸಾಕಷ್ಟಿದೆ; ಅಲ್ಲದೆ, ತಿಳಿವಿನಲ್ಲಿ, ಚಿಂತನೆಯಲ್ಲಿ ಸಮೃದ್ಧವಾದ ‘ಪೂರ್ವದ’ (ಚೀನಾ-ಜಪಾನ್-ಬರ್ಮಾ ಇತ್ಯಾದಿ) ಸಾಹಿತ್ಯ ಚಿಂತನೆಗಳೊಂದಿಗೂ ಭಾರತೀಯ ಚಿಂತನೆಗಳನ್ನು ಇರಿಸಿ ತೌಲನಿಕವಾದ ವಿವೇಚನೆ ಇನ್ನೂ ನಡೆಯಬೇಕಾಗಿದೆ.

ತೌಲನಿಕ ಕಾವ್ಯಮೀಮಾಂಸೆಯ ಚಿಂತನಕ್ರಮದಲ್ಲಿ ನಾನು ಉದ್ದಕ್ಕೂ ಸೃಜನ ಸಾಹಿತ್ಯವನ್ನು ಹಿನ್ನೆಲೆಗೆ ಇರಿಸಿಕೊಂಡೇ ನನ್ನ ಚರ್ಚೆಯನ್ನು ಮುಂದುವರಿಸಿದ್ದೇನೆ. ಕಾವ್ಯಮೀಮಾಂಸೆ ನಡೆಯುವುದು, ನಡೆಯಬೇಕಾದದ್ದು, ಕಾವ್ಯ ಅಥವಾ ಸಾಹಿತ್ಯ ಪರಂಪರೆಯ ಹಿನ್ನೆಲೆಯಲ್ಲಿಯೇ ಎಂಬ ಅರಿವು ನನಗಿದೆ. ಇಲ್ಲದಿದ್ದರೆ ಸಿದ್ಧಾಂತಗಳು ಕೇವಲ ಸಿದ್ಧಾಂತಗಳಾಗಿ ನಿಲ್ಲುವ ಸಾಧ್ಯತೆ ಇದೆ.

ಈ ಕೃತಿಯೊಳಗಿನ ಲೇಖನಗಳನ್ನು ನಾನು ಬರೆಯುತ್ತ ಬಂದಹಾಗೆ, ಅಂದಂದು ಓದುತ್ತ, ಪ್ರಗತಿಯನ್ನು ವಿಚಾರಿಸಿಕೊಳ್ಳುತ್ತ ಜತೆಗೆ ನಿಂತ ಆತ್ಮೀಯರಾದ ಪ್ರೊ. ಕೆ.ಜಿ. ನಾಗರಾಜಪ್ಪನವರನ್ನು, ಹಸ್ತಪ್ರತಿಯಲ್ಲೇ ಕೆಲವು ಲೇಖನಗಳನ್ನು ಓದಿ, ಚರ್ಚಿಸಿ ಉಚಿತವಾದ ಪರಿಷ್ಕರಣಕ್ಕೆ ಕಾರಣರಾದ ಡಾ. ಕೆ.ವಿ. ನಾರಾಯಣ ಅವರನ್ನು ನಾನಿಲ್ಲಿ ಪ್ರೀತಿಯಿಂದ ನೆನೆಯುತ್ತೇನೆ.

ನಿಜವಾದ ಸಾಹಿತ್ಯಾಸಕ್ತರಾದ ಹಾಗೂ ಕನ್ನಡದ ಕೆಲವು ಮುಖ್ಯ ಲೇಖಕರ ಮೊದಲ ಕೃತಿಗಳನ್ನು ಪ್ರಕಟಿಸುವುದರ ಮೂಲಕ, ತನ್ನ ‘ಪ್ರಕಾಶನ’ವನ್ನು ವಿಶಿಷ್ಟಗೊಳಿಸಿಕೊಂಡ ‘ಶಾರದಾ ಪ್ರಕಾಶನ’ದ ಶ್ರೀ ಜಿ. ಬಸವರಾಜ್ ಅವರು ಅತ್ಯಂತ ವಿಶ್ವಾಸದಿಂದ ಈ ಕೃತಿಯನ್ನು ಪ್ರಕಟಿಸಿದ್ದಾರೆ.  ರೋಹಿಣಿ ಪ್ರಿಂಟರ‍್ಸ್ನ ಶ್ರೀ ಜಿ. ಕಲ್ಲಯ್ಯ ಮತ್ತು ಅವರ ಪುತ್ರ ನರೇಶಕುಮಾರ್ ಅವರು ವಿಶೇಷ ಶ್ರದ್ಧೆ ಹಾಗೂ ವಿಶ್ವಾಸಗಳಿಂದ ಈ ಕೃತಿಯ ಅಚ್ಚಿನ ಕಾರ್ಯವನ್ನು ನಿರ್ವಹಿಸಿದ್ದಾರೆ.  ಇವರೆಲ್ಲರಿಗೂ ನಾನು ತುಂಬ ಕೃತಜ್ಞನಾಗಿದ್ದೇನೆ.

ಜಿ.ಎಸ್. ಶಿವರುದ್ರಪ್ಪ
ಅಕ್ಟೋಬರ್, ೧೯೮೩

 

ಎಂಟನೆಯ ಮುದ್ರಣಕ್ಕೆ ಎರಡುಮಾತು

ಕರ್ನಾಟಕ ಸರ್ಕಾರವು ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ, ನನ್ನ ಸಮಗ್ರ ಕೃತಿಗಳನ್ನು ಒಂಬತ್ತು ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸುತ್ತಿರುವುದು ನನಗೆ ತುಂಬ ಸಂತೋಷವನ್ನು ತಂದಿದೆ.

ಈ ಅಭಿನಂದನೀಯವಾದ ಕಾರ್ಯವನ್ನು ಕೈಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರಿಗೆ, ಜಂಟಿ ನಿರ್ದೇಶಕರಾದ ಶ್ರೀ ಶಂಕರಪ್ಪ ಅವರಿಗೆ, ಪ್ರಕಟಣಾ ಶಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವೈ.ಎಸ್. ವಿಜಯಲಕ್ಷಿ  ಅವರಿಗೆ ಮತ್ತು ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿರುವ ಲಕ್ಷ್ಮಿ ಮುದ್ರಣಾಲಯದ ಶ್ರೀ ಅಶೋಕ್‌ಕುಮಾರ್ ಅವರಿಗೆ ಹಾಗೂ ಸಂಪುಟಗಳ ಕರಡು ತಿದ್ದುವುದರಲ್ಲಿ ನೆರವಾದ ಶ್ರೀ ಕೆ.ಆರ್. ಗಣೇಶ್‌ ಅವರಿಗೆ ನನ್ನ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುತ್ತೇನೆ.

ಜಿ.ಎಸ್. ಶಿವರುದ್ರಪ್ಪ
ಫೆಬ್ರವರಿ ೨೦೦೯