Categories
e-ದಿನ

ಮೇ-08

ಪ್ರಮುಖಘಟನಾವಳಿಗಳು:

1794: ಆಧುನಿಕ ರಸಾಯನ ಶಾಸ್ತ್ರದ ಪಿತಾಮಹರೆಂದು ಖ್ಯಾತರಾದ ಫ್ರೆಂಚ್ ವಿಜ್ಞಾನಿ ಆಂಟೋನಿ ಲಾವೋಯಿಸಿಯರ್ ಅವರನ್ನು ದೇಶದ್ರೋಹದ ಆಪಾದನೆಯ ಮೇರೆಗೆ ಮರಣ ದಂಡನೆಗೆ ಗುರಿಪಡಿಸಲಾಯಿತು.

1856: ಔಷಧ ಮಾರಾಟಗಾರರಾದ ಜಾನ್ ಪೆಂಬರ್ಟನ್ ಅವರು ಮೊದಲ ಬಾರಿಗೆ ಕೋಕಾ-ಕೋಲಾವನ್ನು ಪೇಟೆಂಟ್ ಪಡೆದ ಔಷಧವನ್ನಾಗಿ ಮಾರಿದರು.

1898: ಇಟಾಲಿಯನ್ ಫುಟ್ಬಾಲ್ ಲೀಗ್ ವ್ಯವಸ್ಥೆಯ ಪ್ರಥಮ ಪಂದ್ಯವನ್ನು ಆಡಲಾಯಿತು.

1912: ಪ್ಯಾರಮೌಂಟ್ ಪಿಕ್ಚರ್ಸ್ ಸ್ಥಾಪನೆಗೊಂಡಿತು.

1933: ಮಹಾತ್ಮ ಗಾಂಧೀಜಿ ಅವರು ಸ್ವಯಂ ಶುದ್ಧೀಕರಣಕ್ಕಾಗಿ 21 ದಿನಗಳ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿ, ಜೊತೆಗೆ ಹರಿಜನ ಉದ್ಧಾರದ ಕಾರ್ಯಕ್ರಮಗಳನ್ನೂ ಆರಂಭಿಸಿದರು.

1962: ರಬೀಂದ್ರ ಭಾರತಿ ವಿಶ್ವವಿದ್ಯಾಲಯವು ಸ್ಥಾಪನೆಗೊಂಡಿತು.

1978: ರೀಯಿನ್ ಹೋಲ್ಡ್ ಮೆಸ್ಸೆನೆರ್ ಮತ್ತು ಪೀಟರ್ ಹಬೇಲೆರ್ ಅವರು ಮೊಟ್ಟ ಮೊದಲ ಬಾರಿಗೆ ಪೂರಕ ಆಮ್ಲಜನಕದ ಸಹಾಯವಿಲ್ಲದೆ ಮೌಂಟ್ ಎವರೆಸ್ಟ್ ಆರೋಹಣ ಮಾಡಿದರು.

1980: ವಿಶ್ವ ಆರೋಗ್ಯ ಸಂಸ್ಥೆಯು ಸಿಡುಬು ಕಾಹಿಲೆ ಸಂಪೂರ್ಣವಾಗಿ ನಿರ್ಮೂಲನೆಗೊಂಡಿರುವುದಾಗಿ ದೃಢೀಕರಿಸಿತು.

2007: ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನಾಗರಿಕ ವಿಮಾನ ಯಾನಿ ಸೂಪರ್ ಜಂಬೋ ವಿಮಾನ ಏರ್ ಬಸ್ ಎ 380 ಈದಿನ ದೆಹಲಿಯಿಂದ ಹೊರಟು ಮುಂಬೈಯಲ್ಲಿ ಬಂದಿಳಿಯಿತು.

2008: ಬೀಜಿಂಗ್ ಒಲಿಂಪಿಕ್ ಜ್ಯೋತಿಯನ್ನು ಹೊತ್ತ 26 ಸದಸ್ಯರ ಪರ್ವತಾರೋಹಿಗಳ ಮೌಂಟ್ ಎವರೆಸ್ಟ್ ಆರೋಹಣ ಈ ದಿನ ಯಶಸ್ವಿಯಾಗಿ ನಡೆಯಿತು.

ಪ್ರಮುಖಜನನ/ಮರಣ:

1828: ಸ್ವಿಸ್ ಉದ್ಯಮಿ ಮತ್ತು ಕಾರ್ಯಕರ್ತ ಹಾಗೂ ರೆಡ್ ಕ್ರಾಸ್ ಸಂಸ್ಥಾಪಕ ಮತ್ತು ಪ್ರಪ್ರಥಮ ನೊಬೆಲ್ ಶಾಂತಿ ಪುರಸ್ಕೃತರಾದ ಹೆನ್ರಿ ಡ್ಯೂನಾಂಟ್ ಅವರು ಜಿನೀವಾದಲ್ಲಿ ಜನಿಸಿದರು. 1864ರ ಜಿನೀವಾ ಸಮ್ಮೇಳನವು ಡ್ಯೂನಾಂಟ್ ಅವರ ಚಿಂತನೆಯ ಫಲಫಾಗಿ ನಡೆಯಿತು.

1884: ಅಮೆರಿಕದ 33ನೇ ಅಧ್ಯಕ್ಷರಾಗಿದ್ದ ಹ್ಯಾರಿ ಎಸ್. ಟ್ರೂಮನ್ ಅವರು ಮಿಸ್ಸೌರಿ ಬಳಿಯ ಲಮಾರ್ ಎಂಬಲ್ಲಿ ಜನಿಸಿದರು.

1899: ಆಸ್ತ್ರಿಯನ್ ಅರ್ಥಶಾಸ್ತ್ರಜ್ಞ ಫ್ರೆಡ್ರಿಕ್ ಹಯೇಕ್ ಅವರು ವಿಯೆನ್ನಾದಲ್ಲಿ ಜನಿಸಿದರು. ಇವರಿಗೆ 1974 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತು.

1902: ಫ್ರೆಂಚ್ ಸೂಕ್ಷ ಜೀವವಿಜ್ಞಾನಿ ಆಂಡ್ರೆ ಮಿಚೆಲ್ ಲ್ವಾಫ್ ಅವರು ಜನಿಸಿದರು. ಇವರಿಗೆ ಬ್ಯಾಕ್ಟೀರಿಯಾಗಳ ಮೇಲೆ ಪ್ರಭಾವ ಬೀರುವ ಕೆಲವೊಂದು ವೈರಸ್ ಕುರಿತಾದ ಸಂಶೋಧನೆಗಾಗಿ 1965 ವರ್ಷದ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತು.

1916: ಸ್ವಾಮಿ ಚಿನ್ಮಯಾನಂದ ಸರಸ್ವತಿ ಎಂದು ಖ್ಯಾತರಾದ ಬಾಲಕೃಷ್ಣ ಮೆನನ್ ಅವರು ಕೇರಳದಲ್ಲಿ ಜನಿಸಿದರು. ಭಗವದ್ಗೀತಾ ಪ್ರವಚನಗಳಿಗೆ ವಿಶ್ವದಾದ್ಯಂತ ಹೆಸರಾದ ಇವರು ಚಿನ್ಮಯ ಮಿಷನ್ ಸ್ಥಾಪಿಸಿದರು. 1993ರಲ್ಲಿ ಚಿಕಾಗೋದಲ್ಲಿ ನಡೆದ ಜಾಗತಿಕ ಧಾರ್ಮಿಕ ಸಂಸತ್ತಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

1917: ಅಮೆರಿಕದ ಬಾಕ್ಸಿಂಗ್ ಪಟು ಚಾರ್ಲ್ಸ್ ‘ಸೋನ್ನಿ’ ಲಿಸ್ಟನ್ ಅವರು ಅರ್ಕನಾಸ್ ಬಳಿಯ ಸ್ಯಾಂಡ್ ಸ್ಲಫ್ ಎಂಬಲ್ಲಿ ಜನಿಸಿದರು. 1962ರಿಂದ 1964ರ ಅವಧಿಯಲ್ಲಿ ಜಾಗತಿಕ ಹೆವಿವೈಟ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ ಇವರನ್ನು 1964ರಲ್ಲಿ ಮುಹಮ್ಮದ್ ಅಲಿ ಸೋಲಿಸಿದರು.

1925: ಆಧುನಿಕ ಕನ್ನಡ ಸಾಹಿತ್ಯದ ವಿಮರ್ಶಕರಲ್ಲಿ ಪ್ರಮುಖರಾದ ಡಾ. ಗುರುರಾಜ ಶ್ಯಾಮಾಚಾರ್ಯ ಅಮೂರ್ ಅವರು ಧಾರವಾಡ ಜಿಲ್ಲೆಯ ಬೊಮ್ಮನಹಳ್ಳಿಯಲ್ಲಿ ಜನ್ಮ ತಾಳಿದರು. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿಗಳಂತಹ ಅನೇಕ ಗೌರವಗಳು ಸಂದಿವೆ.

1928: ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಮಹಾನ್ ವಿದ್ವಾಂಸ, ಕವಿ-ಕಾದಂಬರಿಕಾರ-ವಿಮರ್ಶಕ ಶಂಕರ ಮೊಕಾಶಿ ಪುಣೇಕರ ಅವರು ಧಾರವಾಡದಲ್ಲಿ ಜನಿಸಿದರು. ‘ಅವಧೇಶ್ವರಿ’ ಕೃತಿಗಾಗಿ ಅವರಿಗೆ 1988ರ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಅವರ ಮತ್ತೊಂದು ಕಾದಂಬರಿ ‘ಗಂಗವ್ವ ಗಂಗಾಮಾಯಿ’ ಕೃತಿಯನ್ನು ಇತರ ಭಾಷೆಗಳಲ್ಲಿ ಅನುವಾದಿಸಲು ನ್ಯಾಷನಲ್ ಬುಕ್ ಟ್ರಸ್ಟ್ ಆಯ್ಕೆ ಮಾಡಿತು.

1947: ಅಮೆರಿಕದ ಜೀವವಿಜ್ಞಾನಿ ಎಚ್. ರಾಬರ್ಟ್ ಹೋರ್ವಿಟ್ಜ್ ಅವರು ಚಿಕಾಗೋದಲ್ಲಿ ಜನಿಸಿದರು. ‘ನೆಮಾಟೋಡ್’ ಕ್ರಿಮಿ ಕುರಿತಾದ ಸಂಶೋಧನೆಗಾಗಿ ಇವರಿಗೆ 2002 ವರ್ಷದ ನೊಬೆಲ್ ವೈದ್ಯಕೀಯ ಪುರಸ್ಕಾರ ಸಂದಿತು.

1953: ನಾರಾಯಣ ಹೃದಯಾಲಯ ಸ್ಥಾಪಿಸಿ ಮೈಕ್ರೋಚಿಪ್ ಕ್ಯಾಮೆರಾವನ್ನು ಉಪಯೋಗಿಸಿಕೊಂಡು ತೆರೆದ ಹೃದಯ ಶಸ್ತ್ರ ಚಿಕಿತ್ಸೆಯ ಮೂಲಕ ಹೃದಯದ ರಂದ್ರಕ್ಕೆ ತೇಪೆ ಹಾಕುವ ಶಸ್ತ್ರ ಚಿಕಿತ್ಸೆ ಮಾಡಿದ ಪೈಕಿ ಪ್ರಪಂಚದಲ್ಲೇ ಮೊದಲಿಗರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ದಕ್ಷಿಣ ಕನ್ನಡದ ಕಿನ್ನಿಗೋಳಿ ಎಂಬಲ್ಲಿ ಜನಿಸಿದರು. ಸಿ ಎನ್ ಎನ್ ಐ ಬಿ ಎನ್ ವಾಹಿನಿಯ ಶ್ರೇಷ್ಠ ಭಾರತೀಯರೆಂಬ ಗೌರವ, ಕರ್ನಾಟಕ ರತ್ನ, ಪದ್ಮವಿಭೂಷಣ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.

1891: ಥಿಯೋಸೋಫಿಕಲ್ ಸೊಸೈಟಿಯ ಸಹ ಸಂಸ್ಥಾಪಕಿ ರಷ್ಯಾ ಮೂಲದ ಹೆಲೆನಾ ಬ್ಲಾವಟ್ ಸ್ಕಿ ಅವರು ಲಂಡನ್ನಿನಲ್ಲಿ ನಿಧನರಾದರು.

1971: ‘ತಿರುಳ್ಗನ್ನಡದ ತಿರುಕ’ ಎಂದು ಕರೆಯಿಸಿಕೊಂಡ ‘ಸರ್ವಜ್ಞನ ವಚನ’ಗಳ ಸಂಪಾದನೆಗಾಗಿ ಖ್ಯಾತರಾದ ಉತ್ತಂಗಿ ಚನ್ನಪ್ಪನವರು ನಿಧನರಾದರು.

1972: ಭಾರತೀಯ ದರ್ಶನ ಶಾಸ್ತ್ರಜ್ಞ ಮತ್ತು ಸಂಸ್ಕೃತ ವಿದ್ವಾಂಸ ಪಾಂಡುರಂಗ ವಾಮನ್ ಕಾನೆ ಅವರು ತಮ್ಮ 92ನೆಯ ವಯಸ್ಸಿನಲ್ಲಿ ನಿಧನರಾದರು. ಇವರಿಗೆ 1963 ವರ್ಷದಲ್ಲಿ ಭಾರತ ರತ್ನ ಪುರಸ್ಕಾರವಿತ್ತು ಗೌರವಿಸಲಾಗಿತ್ತು.

1984: ರೀಡರ್ಸ್ ಡೈಜೆಸ್ಟ್ ಸಹ ಸಂಸ್ಥಾಪಕಿ ಲೀಲಾ ಬೆಲ್ ವಾಲೇಸ್ ಅವರು ನ್ಯೂಯಾರ್ಕಿನ ಮೌಂಟ್ ಕಿಸ್ಕೋ ಎಂಬಲ್ಲಿ ನಿಧನರಾದರು.

2014: ಜಿಪಿಎಸ್ ಸಹ-ಸಂಶೋಧಕ ರೋಜರ್ ಎಲ್. ಈಸ್ಟನ್ ಅವರು ಅಮೆರಿಕದ ಹ್ಯಾನೋವರ್ ಎಂಬಲ್ಲಿ ನಿಧನರಾದರು.