Categories
e-ದಿನ

ಮೇ-11

ಪ್ರಮುಖಘಟನಾವಳಿಗಳು:

ಕಿಸ್ತ ಪೂರ್ವ 330:ಬೈಝಾಂಟಿಯಮ್ ಅನ್ನು ನೊವಾ ರೋಮಾ ಎಂದು ಹೆಸರು ಬದಲಾಯಿಸಿ ಸಮಾರಂಭವನ್ನು ನಡೆಸಲಾಯಿತು. ಆದರೆ ಈ ಸ್ಥಳ ರೋಮನ್ ದೊರೆ ಕಾನ್ ಸ್ಟಾಂಟಿನ್ ಹೆಸರಿನಿಂದ ಕಾನ್ ಸ್ಟಾಂಟಿನೋಪಾಲ್ ಎಂದೇ ಹೆಚ್ಚು ಪ್ರಸಿದ್ಧಗೊಂಡಿತು.

868: ಡೈಮಂಡ್ ಸೂತ್ರ ಪ್ರತಿಯನ್ನು ಮುದ್ರಿಸಲಾಯಿತು. ಇದು ಮುದ್ರಿತಗೊಂಡ ಅತ್ಯಂತ ಪ್ರಾಚೀನ ಕೃತಿಯಾಗಿದೆ.

1820: ಎಚ್.ಎಮ್.ಎಸ್ ಬೀಗಲ್ ನೌಕೆಯು ತನ್ನ ಪಯಣವನ್ನಾರಂಭಿಸಿತು. ಚಾರ್ಲ್ಸ್ ಡಾರ್ವಿನ್ ಅವರು ಈ ನೌಕೆಯ ಮೂಲಕ ತಮ್ಮ ವಿಜ್ಞಾನ ಪರ್ಯಟನೆಯನ್ನು ಕೈಗೊಂಡರು.

1857: ಭಾರತೀಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವು ಬ್ರಿಟಿಷ್ ಅಧಿಕಾರಿಗಳನ್ನು ಕೊಂದ ಮೀರತ್ತಿನ ಸಿಪಾಯಿಗಳ ಒಂದು ದಂಡು ದೆಹಲಿಯನ್ನು ವಶಪಡಿಸಿಕೊಂಡು ಬಹದ್ದೂರ್ ಷಾ ಅವರನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿತು.

1927: ಅಕಾಡೆಮಿ ಆಫ್ ಮೋಷನ್ ಪಿಚ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಸ್ಥಾಪನೆಗೊಂಡಿತು.

1996: ಮೌಂಟ್ ಎವರೆಸ್ಟ್ ಅಪಘಾತ: ಒಂದೇ ದಿನದಂದು ಎವರೆಸ್ಟ್ ಶಿಖರ ಆರೋಹಣ ಯತ್ನದಲ್ಲಿ ಎಂಟು ಪರ್ವತಾರೋಹಿಗಳು ಅಸುನೀಗಿದರು.

1997: ಡೀಪ್ ಬ್ಲೂ ಎಂಬ ಚೆಸ್ ಆಟವಾಡುವ ಸೂಪರ್ ಕಂಪ್ಯೂಟರ್, ಪ್ರಸಿದ್ಧ ಚೆಸ್ ಚಾಂಪಿಯನ್ ಗ್ಯಾರಿ ಕಾಸ್ಪರೋವ್ ಅವರನ್ನು ಕಡೆಯ ಪಂದ್ಯದಲ್ಲಿ ಸೋಲಿಸಿತು.

1998: ಭಾರತವು ರಾಜಸ್ಥಾನದ ಪೋಖ್ರಾನಿನಲ್ಲಿ ಮೂರು ಅಣ್ವಸ್ತ್ರಗಳ ಪರೀಕ್ಷಾ ಸ್ಫೋಟ ನಡೆಸಿತು. 1998ರ ಮೇ 13ರಂದು ಇನ್ನೆರಡು ಅಣ್ವಸ್ತ್ರಗಳನ್ನು ಸ್ಫೋಟಿಸಲಾಯಿತು.

2006: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸತತ ಏಳನೇ ಬಾರಿಗೆ ಗೆದ್ದು ಅಧಿಕಾರ ಪಡೆಯುವ ಮೂಲಕ ಎಡರಂಗವು ವಿಶ್ವದಾಖಲೆ ನಿರ್ಮಾಣ ಮಾಡಿತು.

2007: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗಳಲ್ಲಿ ಮಾಯಾವತಿ ಅವರ ನೇತೃತ್ವದ ಬಹುಜನ ಸಮಾಜವಾದಿ ಪಕ್ಷವು 403 ಬಲದ ವಿಧಾನಸಭೆಯಲ್ಲಿ 208 ಸ್ಥಾನ ಗೆದ್ದಿತು. ಸಮಾಜವಾದಿ ಪಕ್ಷಕ್ಕೆ 97, ಬಿಜೆಪಿಗೆ 50, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ 21 ಸ್ಥಾನಗಳು ಲಭಿಸಿದರೆ 26 ಸ್ಥಾನಗಳೂ ಪಕ್ಷೇತರರು ಮತ್ತಿತರರ ಪಾಲಾದವು.

2008: ಪರಿಸರ ಮಾಲಿನ್ಯ ತಡೆಗಟ್ಟಲು ಶ್ರಮಿಸಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರು `ಸ್ವರ್ಣ ಮಯೂರ ಪ್ರಶಸ್ತಿ’ಗೆ ಆಯ್ಕೆಯಾದರು. ಕಾರ್ಖಾನೆಗಳಿಂದ ಆಗುವ ಪರಿಸರ ಹಾನಿಯನ್ನು ತಡೆಗಟ್ಟಲು ಮತ್ತು ಪಾಲಿಥೀನ್ ಚೀಲದ ಬಳಕೆಯನ್ನು ರದ್ದುಪಡಿಸಿ ಪರಿಸರ ಕಾಪಾಡಲು ಹಿಮಾಚಲ ಪ್ರದೇಶ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿತ್ತು. ಇದಕ್ಕಾಗಿ ಮುಖ್ಯಮಂತ್ರಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2016: ಇಸ್ಲಾಮಿಕ್ ನಾಯಕ ಮೊತಿಯುರ್ ರಹ್ಮಾನ್ ನಿಜಾಮಿಯನ್ನು ಬಾಂಗ್ಲಾದೇಶ ಈದಿನ ಡಾಕ್ಕಾದಲ್ಲಿ ನೇಣಿಗೇರಿಸಿತು. 1971ರ ಪಾಕಿಸ್ತಾನದವಿರುದ್ಧದ ಬಾಂಗ್ಲಾ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ನಡೆಸಿದ ಹಿಂಸಾಚಾರದ ಅಪರಾಧಕ್ಕಾಗಿ ಈತನಿಗೆ ಮರಣದಂಡನೆ ವಿಧಿಸಲಾಗಿತ್ತು.

ಪ್ರಮುಖಜನನ/ಮರಣ:

1916: ಸ್ಪ್ಯಾನಿಷ್ ಸಾಹಿತಿ ಕ್ಯಾಮಿಲೊ ಜೋಸ್ ಸೆಲ ಅವರು ಸ್ಪೇನ್ ದೇಶದ ಪ್ಯಾಡ್ರನ್ ಎಂಬಲ್ಲಿ ಜನಿಸಿದರು. ಇವರಿಗೆ 1989 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1918: ಅಮೆರಿಕದ ಭೌತವಿಜ್ಞಾನಿ ರಿಚರ್ಡ್ ಫೆಯ್ನ್ ಮ್ಯಾನ್ ನ್ಯೂಯಾರ್ಕಿನ ಕ್ವೀನ್ಸ್ ಎಂಬಲ್ಲಿ ಜನಿಸಿದರು. ಎಲೆಕ್ಟ್ರೋ ಡೈನಮಿಕ್ಸ್ ಕುರಿತಾದ ಕೊಡುಗೆಗಾಗಿ ಇವರಿಗೆ 1965ರ ವರ್ಷದಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1918: ನೃತ್ಯ ಕಲಾವಿದೆ ಮೃಣಾಲಿನಿ ಸಾರಾಬಾಯಿ ಕೇರಳದಲ್ಲಿ ಜನಿಸಿದರು. ಇವರಿಗೆ ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಮುಂತಾದ ಅನೇಕ ಗೌರವಗಳು ಸಂದಿದ್ದವು.

1924: ಬ್ರಿಟಿಷ್ ರೇಡಿಯೋ ಖಗೋಳ ಶಾಸ್ತ್ರಜ್ಞ ಆಂತೋನಿ ಹ್ಯೂಯಿಶ್ ಅವರು ಇಂಗ್ಲೆಂಡಿನ ಫೋವೆ ಎಂಬಲ್ಲಿ ಜನಿಸಿದರು. ಅಪೇರ್ಚರ್ ಸಿಂಥೆಸಿಸ್ ಅಂಡ್ ಇಟ್ಸ್ ರೋಲ್ ಇನ್ ದಿ ಡಿಸ್ಕವರಿ ಆಫ್ ಪಲ್ಸರ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1974 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1944:ಸಾಹಿತ್ಯ ಹಾಗೂ ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಜನಪ್ರಿಯರಾದ ಬಾಬು ಕೃಷ್ಣಮೂರ್ತಿ ಅವರು ಬೆಂಗಳೂರಿನಲ್ಲಿ ಜನಿಸಿದರು. ‘ಮಂಗಳ’ ಪತ್ರಿಕಾ ಸಂಪಾದಕರಾದ ಇವರ ನೇತೃತ್ವದಲ್ಲಿ ಬಾಲಮಂಗಳ, ಬಾಲ ಮಂಗಳ ಚಿತ್ರಕಥಾ, ಗಿಳಿವಿಂಡು ಪತ್ರಿಕೆಗಳು ಹೊರಬಂದವು. ಸ್ವಾತ್ರಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಕುರಿತು ಸಂಶೋಧನೆ ನಡೆಸಿ ರಚಿಸಿದ ‘ಅಜೇಯ’ ಕೃತಿ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು. ಕರ್ಮವೀರ ಸಾಪ್ತಾಹಿಕದ ಸಂಪಾದಕರೂ ಆಗಿದ್ದ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

1963:ಅಮೆರಿಕದ ವೈದ್ಯಶಾಸ್ತ್ರಜ್ಞ ಹರ್ಬರ್ಟ್ ಸ್ಪೆನ್ಸರ್ ಗಾಸ್ಸೆರ್ ನ್ಯೂಯಾರ್ಕ್ ನಗರದಲ್ಲಿ ನಿಧನರಾದರು. ‘ಆಕ್ಷನ್ ಪೊಟೆನ್ಶಿಯಲ್ಸ್ ಇನ್ ನರ್ವ್ ಫೈಬರ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1944 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

2006: ನ್ಯೂಯಾರ್ಕ್ ಟೈಮ್ಸ್ ನಿರ್ವಾಹಕ ಸಂಪಾದಕ, ಪುಲಿಟ್ಜರ್ ಪ್ರಶಸ್ತಿ ವಿಜೇತ ವರದಿಗಾರ ಎ.ಎಂ. ರೋಸೆಂಥಾಲ್ ಅವರು ತಮ್ಮ 94ನೇ ವಯಸ್ಸಿನಲ್ಲಿ ನ್ಯೂಯಾರ್ಕಿನಲ್ಲಿ ನಿಧನರಾದರು. ಅವರು ಭಾರತದಲ್ಲೂ ವಿದೇಶೀ ಬಾತ್ಮೀದಾರರಾಗಿ ದುಡಿದಿದ್ದರು.

2006: ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ ಫ್ಲಾಯ್ಡ್ ಪ್ಯಾಟರ್ಸನ್ ಅವರು ನ್ಯೂಯಾರ್ಕಿನ ನ್ಯೂಪಾಲ್ಟ್ಜಿನಲ್ಲಿ ನಿಧನರಾದರು. 1956ರಲ್ಲಿ ಆರ್ಕಿ ಮೂರೆ ಅವರನ್ನು ಪರಾಭವಗೊಳಿಸುವ ಮೂಲಕ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಡೆದ ಅತ್ಯಂತ ಕಿರಿಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು.

2009: ಭಾರತೀಯ ನೌಕಾಪಡೆಯ ಅಡ್ಮಿರಲ್ ಆಗಿದ್ದ ಸರ್ದಾರಿಲಾಲ್ ಮಾತೃದಾಸ್ ನಂದ ತಮ್ಮ 93ನೇ ವಯಸ್ಸಿನಲ್ಲಿ ನವದೆಹಲಿಯಲ್ಲಿ ನಿಧನರಾದರು. ಪದ್ಮವಿಭೂಷಣ, ಪರಮ ವಿಶಿಷ್ಟ ಸೇವಾ ಪದಕ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.