ಮಾನವ ಬಳಗದ ಕಲ್ಯಾಣಕ್ಕಾಗಿ ಭಾರತ ದೇಶದಲ್ಲಿ ಜನ್ಮ ತಳೆದು ವೇದಗಳ ಜ್ಞಾನದ ಬೆಳಕನ್ನು ಬೀರಿರುವ ಮಹಾಮಹಿಮರು ಮಹರ್ಷಿ ಯಾಜ್ಞವಲ್ಕ್ಯರು. ಭಗವಾನ್‌ ಸೂರ್ಯನಾರಾಯಣನ ವರದಿಂದ ಶುಕ್ಲ ಯಜುರ್ವೇದದ ಮಂತ್ರದ್ರಷ್ಟಾರರಾಗಿ (ಎಂದರೆ ಮಂತ್ರಗಳನ್ನು ಕಂಡು) ಅದನ್ನು ಲೋಕಕ್ಕೆ ನೀಡಿದ ಪೂಜ್ಯ ಮಹರ್ಷಿಗಳಿವರು.

ಬ್ರಹ್ಮರಾತರ ತಪಸ್ಸು ಫಲಿಸಿತು

ಯಾಜ್ಞವಲ್ಕ್ಯರ ತಂದೆ ಬ್ರಹ್ಮರಾತ ಋಷಿ. ತಾಯಿ ಸುನಂದಾದೇವಿ. ಬ್ರಹ್ಮರಾತರು ಯಜ್ಞ-ಯಾಗ ಮೊದಲಾದವುಗಳಲ್ಲಿ ಅತ್ಯಂತ ನಿಷ್ಠೆ ಉಳ್ಳವರು. ಆಚರಣಶೀಲರಾದ ಮಹಾಪಂಡಿತರು. ಮನೆಯಲ್ಲಿ ಯಾವಾಗಲೂ ಯಜ್ಞದ ಮೂಲಕ ಯಜ್ಞೇಶ್ವರನನ್ನು (ಎಂದರೆ ಅಗ್ನಿ ದೇವನನ್ನು) ಪೂಜಿಸುತ್ತಿದ್ದರು. ಯಜ್ಞವಲ್ಕ, ದೇವರಾತ ಎಂದು ಹೆಸರುಗಳೂ ಅವರಿಗಿದ್ದವು.

ಈ ಋಷಿ ದಂಪತಿಗಳಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವರು ಪುತ್ರ ಸಂತಾನಕ್ಕಾಗಿ ವ್ರತೋಪವಾಸಗಳನ್ನು ಮಾಡುತ್ತಾ ಪರಮಾತ್ಮನಿಗೆ ಪ್ರಾರ್ಥನೆ ಸಲ್ಲಿಸಿದರು.

ಯಜ್ಞ-ಯಾಗಗಳೇ ಮುಂತಾದ ಕರ್ಮಗಳನ್ನು ಮಾಡುತ್ತಾ ಸುಖಶಾಂತಿಗಳನ್ನು ಪಡೆಯಲು ಯತ್ನಿಸುವ ಹಾದಿಗೆ ಕರ್ಮಮಾರ್ಗ, ಕರ್ಮಕಾಂಡ ಎನ್ನುತ್ತಾರೆ.

ಬ್ರಹ್ಮರಾತರಿಗೆ ವೇದದಲ್ಲಿ ಹೇಳಿರುವ ಕರ್ಮಕಾಂಡದ ವಿಚಾರಗಳಲ್ಲಿ ಅರಿವು ಆಸಕ್ತಿಗಳು ಇದ್ದಂತೆ ವೇದದ ಜ್ಞಾನಕಾಂಡದ ವಿಚಾರಗಳಲ್ಲಿರಲಿಲ್ಲ. ಈ ಪ್ರಪಂಚ, ದೇಹ, ಜೀವನ, ಜನ್ಮ, ಸಾವು ಇವುಗಳ ರಹಸ್ಯವೇನು? ಅವುಗಳನ್ನು ಮೀರಿಸಿದ ಅಳಿವಿಲ್ಲದ ಆನಂದ ಇದೆಯೆ? ಎಂಬುದನ್ನು ತಿಳಿಸುವ ವೇದವಿದ್ಯೆಯ ವಿವರಗಳೇ ಜ್ಞಾನಕಾಂಡ ಅಥವಾ ಜ್ಞಾನಮಾರ್ಗ. ಬ್ರಹ್ಮ ಎಂದರೆ ದೊಡ್ಡದು. ಅದಕ್ಕಿಂತ ದೊಡ್ಡದಾದದು ಬೇರಿನ್ನಾವುದೂ ಇಲ್ಲ. ಕಾಣುವ ಈ ಪ್ರಪಂಚವನ್ನೆಲ್ಲ ಅದು ವ್ಯಾಪಿಸಿದೆ. ಅದಕ್ಕೆ ಅಳಿವಿಲ್ಲ. ಅದು ಯಾವುದೆಂದು ತಿಳಿಸಿ ಅದನ್ನು ಸಂಪಾದಿಸಿಕೊಡುವ ವಿದ್ಯೆಯೇ ಬ್ರಹ್ಮವಿದ್ಯೆ. ಆ ವಿದ್ಯೆಯನ್ನು ತನ್ನದಾಗಿಸಿಕೊಂಡವರು ಬ್ರಹ್ಮನಿಷ್ಠರು – ಬ್ರಹ್ಮರ್ಷಿಗಳು. ವೇದಗಳಲ್ಲಿ ಕರ್ಮಮಾರ್ಗ ಮತ್ತು ಜ್ಞಾನಮಾರ್ಗಗಳು ಎರಡೂ ಸೇರಿವೆ. ಅವುಗಳ ವಿವರಗಳನ್ನು ಲೋಕದ ಜನಕ್ಕೆ ಅರ್ಥವಾಗುವಂತೆ ಸಾರಲು ಮಹಾಪುರುಷರೊಬ್ಬರ ಆಗಮನ ಅಗತ್ಯವಾಗಿತ್ತು. ಆಗಲೇ ಬ್ರಹ್ಮರಾತರು ಮಗ ಬೇಕು ಎಂದು ತಪಸ್ಸು ಮಾಡಿದರು. ಅವರ ತಪಸ್ಸು ಫಲಿಸಿತು. ಕಾರ್ತಿಕ ಶುದ್ಧ ಸಪ್ತಮಿಯ ದಿನದಂದು ಶುಭ ಮುಹೂರ್ತದಲ್ಲಿ ಮುದ್ದು ಗಂಡು ಮಗು ಹುಟ್ಟಿತು.

ಯಜ್ಞ-ಯಾಗಾದಿಗಳ ಮೂಲಕ ಯಜ್ಞೇಶ್ವರನನ್ನು ಆರಾಧಿಸುತ್ತಿದ್ದ ಬ್ರಹ್ಮರಾತರಿಗೆ ಹುಟ್ಟಿದ ಗಂಡು ಶಿಶು ಯಜ್ಞೇಶ್ವರನಂತೆ ದಿವ್ಯ ತೇಜಸ್ಸಿನಿಂದ ಕೂಡಿದ್ದಿತು. ಮಗುವಿಗೆ ಯಾಜ್ಞವಲ್ಕ್ಯ ಎಂದು ಹೆಸರಿಟ್ಟರು.

ಮನೆಯಿಂದ ಗುರುಕುಲಕ್ಕೆ

ಯಾಜ್ಞವಲ್ಕ್ಯನು ಸ್ವಲ್ಪ ದೊಡ್ಡವನಾದ. ಅಕ್ಷರಾಭ್ಯಾಸ ಆಯಿತು. ತಾಯಿ ಸುನಂದಾದೇವಿಯು ಮಗನಿಗೆ ಬುದ್ಧಿ ಹೇಳುವ ಅನೇಕ ಕಥೆಗಳನ್ನು ಹೇಳುತ್ತಿದ್ದಳು. ಆಗಾಗ ಹಿತೋಪದೇಶಗಳನ್ನು ನೀಡುತ್ತಿದ್ದಳು. ಮನೆಯಲ್ಲಿ ಅಗ್ನಿದೇವನನ್ನು ಹೋಮ ಪೂಜಾದಿಗಳ ಮೂಲಕ ತಂದೆ ಪೂಜೆ ಮಾಡುತ್ತಿದ್ದುದನ್ನು ಹುಡುಗನು ಭಕ್ತಿಯಿಂದ ನೋಡುತ್ತಿದ್ದನು. ತಾಯಿತಂದೆಯರಂತೆ ತಾನೂ ಭಕ್ತಿಯಿಂದ ಯಜ್ಞೇಶ್ವರನಿಗೆ ನಮಿಸುತ್ತಿದ್ದನು. ಒಮ್ಮೆಮ್ಮೆ ಯಾಜ್ಞವಲ್ಕ್ಯನು “ಅಮ್ಮಾ, ನಾನು ದೇವತೆಗಳ ದರ್ಶನ ಮಾಡಬೇಕು. ಹಾಗೆ ಮಾಡಲು ನನಗೆ ಸಾಧ್ಯವೇನಮ್ಮಾ?” ಎಂದು ಕೇಳುತ್ತಿದ್ದನು. ಆಗ ತಾಯಿಯು ಮಗನನ್ನು ಬಾಚಿ ತಬ್ಬಿ ಪ್ರೀತಿಯಿಂದ ಅವನ ತಲೆಯನ್ನು ನೇವರಿಸಿ “ಯಾಜ್ಞವಲ್ಕ್ಯ, ನಿನಗೆ ಎಲ್ಲವೂ ಸಾಧ್ಯವಾದೀತು. ಸಾಧ್ಯವಾಗಲಿ, ಶುಭವಾಗಲಿ” ಎಂದು ಹರಸುತ್ತಿದ್ದಳು. ಒಮ್ಮೆಮ್ಮೆ ತಂದೆಯ ಬಳಿಗೂ ಹೋಗಿ ಹೋಮದ ಬಗೆಗೆ, ದೇವತೆಗಳ ಬಗೆಗೆ ಪ್ರಶ್ನೆಗಳನ್ನು ಕೇಳುತ್ತಿದ್ದನು. ಬಾಲಕನ ಬೆಳವಣಿಗೆಯನ್ನು ನೋಡಿ ತಾಯಿ ತಂದೆಯರು ಸಂತೋಷ ಪಟ್ಟರು. ಸಕಾಲದಲ್ಲಿ ಅವನಿಗೆ ಉಪನಯನವನ್ನು ಮಾಡಿದರು. ಯಾಜ್ಞವಲ್ಕ್ಯನಿಗೆ ತಂದೆಯಿಂದ ಗಾಯತ್ರಿ ಮಹಾಮಂತ್ರೋಪದೇಶ ಲಭಿಸಿತು. ಇನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಗುರುಕುಲಕ್ಕೆ ಹೋಗಬೇಕು.

ಮಹರ್ಷಿ ವೈಶಂಪಾಯನರು ಭಗವಾನ್‌ ವೇದವ್ಯಾಸ ಮಹರ್ಷಿಗಳ ಶಿಷ್ಯರು. ಅವರು ಯಜುರ್ವೇದವನ್ನು ಹೇಳಿಕೊಡುವ ಸುಪ್ರಸಿದ್ಧ ವೇದವಿದ್ಯಾ ಗುರುಗಳಾಗಿದ್ದರು. ಅವರು ಯಾಜ್ಞವಲ್ಕ್ಯನ ಸೋದರಮಾವ. ಅವನಿಗೆ ಮಾವನನ್ನು ಕಂಡರೆ ಬಹು ಪ್ರೀತಿ. ಹಾಗೆಯೇ ಮಹರ್ಷಿಗಳಿಗೆ ತಮ್ಮ ಅಳಿಯ ಯಾಜ್ಞವಲ್ಕ್ಯನನ್ನು ಕಂಡರೆ ಬಹಳ ಪ್ರೀತಿ, ಅಭಿಮಾನ. ಅವರಲ್ಲಿಗೆ ಯಾಜ್ಞವಲ್ಕ್ಯನನ್ನು ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದರು.

ಗುರುಕುಲದಲ್ಲಿ

ಗುರುಗಳು ಹೇಳಿಕೊಟ್ಟ ಪಾಠ ಪ್ರವಚನಗಳನ್ನು ಯಾಜ್ಞವಲ್ಕ್ಯನು ಬಹು ಜಾಣ್ಮೆಯಿಂದ ಕಲಿತು ಒಪ್ಪಿಸುತ್ತಿದ್ದನು. ಕೆಲವೇ ದಿನಗಳಲ್ಲಿ ಅವನು ಆಶ್ರಮದಲ್ಲಿ ಎಲ್ಲರ ಪ್ರೀತಿ ಮೆಚ್ಚುಗೆಗಳಿಗೆ ಪಾತ್ರನಾದನು. ಅವನು ಗುರುಕುಲದ ಆಚಾರ್ಯರ ಅಚ್ಚುಮೆಚ್ಚಿನ ಶಿಷ್ಯ. ಯಜುರ್ವೇದದಲ್ಲಿ ಯಾಜ್ಞವಲ್ಕ್ಯನು ಅಸಾಧಾರಣ ಅನುಭವಿಯಾದ ಪಂಡಿತ. ಅವನು ಗುರುಕುಲದಲ್ಲಿ ವೇದಾಧ್ಯಯನ ಮಾಡುತ್ತಿದ್ದ ಬ್ರಹ್ಮಚರ್ಯ ವ್ರತವನ್ನು ತಪ್ಪದೆ ನಡೆಸುತ್ತಾ ಬಂದ. ಇದರಿಂದ ದೇಹ, ಮನಸ್ಸುಗಳಲ್ಲಿ ವಿಶೇಷವಾದ ದಿವ್ಯಕಳೆ ತುಂಬಿತು. ಮೊದಲೇ ತೇಜೋವಂತನಾಗಿದ್ದ ಬಾಲಕ ಪುಟವಿಟ್ಟ ಬಂಗಾರದಂತಾದ.

ಒಮ್ಮೆ ಗುರು ವೈಶಂಪಾಯನವರಿಗೆ ತೀವ್ರವಾದ ಅನಾರೋಗ್ಯ ಉಂಟಾಯಿತು. ಅದರ ನಿವಾರಣೆಗಾಗಿ ಶಿಷ್ಯರಾದ ಚರಕ, ಅಧ್ವರ್ಯ ಮೊದಲಾದವರು ಒಂದು ವ್ರತವನ್ನು ಆಚರಿಸಲು ನಿಶ್ಚಯಿಸಿದರು. ಅದು ಯಾಜ್ಞವಲ್ಕಯನಿಗೆ ತಿಳಿಯಿತು. ಅವನು ಗುರುಗಳ ಬಳಿಗೆ ಹೋಗಿ, ‘ಪೂಜ್ಯರೇ, ಸುಲಭವಾದ ಈ ವ್ರತದಿಂದ ಪ್ರಯೋಜನವೇನು? ನಿಮ್ಮ ಅನಾರೋಗ್ಯ ಕಳೆಯಲು ಇದಕ್ಕಿಂತಲೂ ಕಠಿಣವಾದ ವ್ರತ ಅಗತ್ಯ. ತಾವು ಅಪ್ಪಣೆಕೊಟ್ಟರೆ ನಾನು ಅದನ್ನು ನಡೆಸಿ ನಿಮ್ಮ ಅನಾರೋಗ್ಯವನ್ನು ಪರಿಹರಿಸುತ್ತೇನೆ’ ಎಂದು ಹೇಳಿದ.

ಯಾಜ್ಞವಲ್ಕ್ಯನ ಈ ಮಾತುಗಳಿಂದ ಗುರುಗಳಿಗೆ ಅಸಮಾಧಾನವಾಯಿತು. “ಚರಕ, ಅಧ್ವರ್ಯ ಇವರೆಲ್ಲ ನನ್ನ ಹಿರಿಯ ಶಿಷ್ಯರು. ಅವರು ಕೈಗೊಳ್ಳುವ ವ್ರತದ ಬಗೆಗೆ ಅನಾದರಣೆಯಿಂದ ಮಾತಾಡಿದೆಯಲ್ಲ? ನಿನ್ನ ವ್ರತದಿಂದ ನನಗೆ ಖಾಯಿಲೆ ಗುಣವಾಗಬೇಕಾಗಿಲ್ಲ” ಎಂದು ಕಟುವಾಗಿ ಹೇಳಿದರು. ಯಾಜ್ಞವಲ್ಕ್ಯನು ಗುರುಗಳಿಗೆ ಮಾರುತ್ತರ ಹೇಳದೆ ತನ್ನ ಕೆಲಸಗಳಿಗೆ ತೆರಳಿದನು.

ರಾಜನ ರೋಗಕ್ಕೆ ತೀರ್ಥದ ಔಷಧಿ

ವೈಶಂಪಾಯನ ಮಹರ್ಷಿಗಳ ಆಶ್ರಮದ ಸಮೀಪದಲ್ಲಿ ಒಂದು ಪಟ್ಟಣವಿತ್ತು. ಅದರ ಹೆಸರು ವರ್ಧಮಾನಪುರ. ಸುಪ್ರಿಯ ಎಂಬುವನು ಅಲ್ಲಿಯ ರಾಜನಾಗಿದ್ದನು. ವೈಶಂಪಾಯನರು ಸುಪ್ರಿಯನ ಗುರು;  ರಾಜಪುರೋಹಿತರು. ರಾಜನು ತನ್ನ ಕೆಟ್ಟ ಜೀವನದಿಂದ ಒಮ್ಮೆ ತೀವ್ರವಾದ ರೋಗಕ್ಕೆ ತುತ್ತಾದನು. ಅನೇಕ ವೈದ್ಯರು ವಿಧವಿಧವಾಗಿ ಚಿಕಿತ್ಸೆ ನಡೆಸಿದರೂ ಅದರಿಂದ ಪ್ರಯೋಜನವೇನೂ ಆಗಲಿಲ್ಲ. ಕೊನೆಗೆ ರಾಜನು ವೈಶಂಪಾಯನರ ಬಳಿ ಬಂದು ತನ್ನ ರೋಗ ನಿವಾರಣೆಗಾಗಿ ಹಾದಿ ತೋರಿ ನೆರವಾಗಬೇಕೆಂದು ಬೇಡಿಕೊಂಡನು. ಅವರು ಆಶ್ರಮದಲ್ಲಿ ವಿಧಿ ಪ್ರಕಾರವಾಗಿ ಹೋಮ, ಜಪ, ಪ್ರಾರ್ಥನೆ ಇತ್ಯಾದಿಗಳನ್ನು ನಡೆಸಿ ಪ್ರಸಾದ ರೂಪವಾಗಿ ತೀರ್ಥವನ್ನು ಪ್ರತಿದಿನ ರಾಜನಿಗೆ ಕಳುಹಿಸಿಕೊಡಲು ತೊಡಗಿದರು. ಕೆಲವು ದಿನಗಳು ಕಳೆದವು. ರಾಜನ ರೋಗ ಅಲ್ಪಸ್ವಲ್ಪ ಗುಣವಾಯಿತು. ರಾಜನಿಗೆ ಗುರುಗಳು ಕಳುಹಿಸಿಕೊಡುತ್ತಿದ್ದ ತೀರ್ಥದಲ್ಲಿ ನಂಬಿಕೆ ಮೂಡಲಿಲ್ಲ. ಆಚಾರ್ಯರ ಶಿಷ್ಯರು ಪ್ರತಿದಿನ ಅರಮನೆಗೆ ತಂದುಕೊಡುತ್ತಿದ್ದ ಮಂತ್ರೋದಕವನ್ನು ರಾಜನು ಅರ್ಧ ಮನಸ್ಸಿನಿಂದ ತೆಗೆದುಕೊಳ್ಳುತ್ತಿದ್ದನು.

ಒಂದು ದಿನ ಅರಮನೆಗೆ ತೀರ್ಥವನ್ನು ಕೊಂಡೊಯ್ಯುವ ಸರದಿ ಯಾಜ್ಞವಲ್ಕ್ಯನದಾಯಿತು. ಅವನು ಅರಮನೆಗೆ ಹೋಗಿ ರಾಜನಿಗೆ ತೀರ್ಥ ಪ್ರಸಾದವನ್ನು ಕೊಡಲು ಮುಂದಾದನು. ಆಗ ಅರಸನು ಅವನನ್ನು ತುಂಬಾ ಅಸಡ್ಡೆಯಿಂದ ಕಂಡನು. ತೀರ್ಥವನ್ನು ತೆಗೆದುಕೊಳ್ಳುವ ಉತ್ಸಾಹವನ್ನೇ ತೋರಿಸಲಿಲ್ಲ. ಯಾಜ್ಞವಲ್ಕ್ಯನಿಗೆ ಅಸಮಾಧಾನವಾಯಿತು. ಅವನು, “ನಿಮಗೆ ತೀರ್ಥ ಪ್ರಸಾದಗಳಲ್ಲಿ ಭಕ್ತಿ ಶ್ರದ್ಧೆಗಳು ಇಲ್ಲವೆಂದಾದರೆ ನಾವೇಕೆ ಅಷ್ಟು ದೂರದ ಆಶ್ರಮದಿಂದ ಅವನ್ನಿಲ್ಲಿಗೆ ಪ್ರತಿದಿನವೂ ತರಬೇಕು?” ಎಂದು ರಾಜನನ್ನು ಪ್ರಶ್ನಿಸಿದ. “ತೀರ್ಥ ಪ್ರಸಾದಕ್ಕೆ ಅಷ್ಟೊಂದು ಮಹತ್ವ ಇದೆ ಎಂದಾದರೆ ಅದನ್ನು ತೋರಿಸಬಹುದು” ಎಂದ ರಾಜ ದರ್ಪದಿಂದ.

ಯಾಜ್ಞವಲ್ಕ್ಯನು ಮರುಮಾತನ್ನಾಡದೆ ಆ ಕ್ಷಣದಲ್ಲಿಯೇ ಮಂತ್ರೋಪಚ್ಚಾರಣೆ ಮಾಡಿ ಅಲ್ಲಿದ ಮರದ ಕಂಬಗಳ ಮೇಲೆ ತೀರ್ಥವನ್ನು ಪ್ರೋಕ್ಷಣೆ ಮಾಡಿದನು.

ಏನಾಶ್ಚರ್ಯ

ಯಜ್ಞವಲ್ಕ್ಯನು ಹಿಂತಿರುಗಿ ನೋಡದೆ ಅಲ್ಲಿಂದ ನೇರವಾಗಿ ತನ್ನ ಗುರುಗಳ ಆಶ್ರಮಕ್ಕೆ ಬಂದನು.

ಅಷ್ಟರಲ್ಲಿ ಆ ಕಡೆ ಅರಮನೆಯಲ್ಲಿ ಒಣ ಕಂಬಗಳು ತೀರ್ಥದ ಪ್ರಭಾವದಿಂದ ಚಿಗುರಿ ನಿಂತವು. ಕೂಡಲೇ ಅವುಗಳಲ್ಲಿ ಹೂ, ಕಾಯಿ, ಹಣ್ಣುಗಳು ಮೂಡಿದವು! ಅದನ್ನು ನೋಡಿ ಅರಸ ಮತ್ತು ಅವನ ಪರಿವಾರದವರೆಲ್ಲರೂ ಅತ್ಯಂತ ಚಕಿತರಾದರು . ರಾಜನ ಅನಾದರಣೆ, ಅಹಂಕಾರಗಳು ಕರಗಿದವು. ತಕ್ಷಣ ರಾಜದೂತರನ್ನು ವೈಶಂಪಾಯನರ ಆಶ್ರಮಕ್ಕೆ ಕಳುಹಿಸಿದ. ‘ಯಾಜ್ಞವಲ್ಕ್ಯನು ಮತ್ತೆ ಪುನಃ ಅರಮನೆಗೆ ತೀರ್ಥಪ್ರಸಾದವನ್ನು ತರಬೇಕು’ ಎಂಬುದಾಗಿ ಅವರು ರಾಜನ ಸಂದೇಶವನ್ನು ಮಹರ್ಷಿಗಳಿಗೆ ತಿಳಿಸಿದರು.

ಯಾಜ್ಞವಲ್ಕ್ಯ ಆಶ್ರಮಕ್ಕೆ ಬಂದವನೇ ಅರಮನೆಯಲ್ಲಿ ನಡೆದುದನ್ನೆಲ್ಲ ಗುರುಗಳಿಗೆ ವಿನಂತಿ ಮಾಡಿದ. ಅವರಿಗೆ ಅಸಮಾಧಾನವಾಯಿತು. ಶಿಷ್ಯನು ದುಡುಕಿದ ಎನ್ನಿಸಿತು. ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದರು. ಅಷ್ಟರಲ್ಲಿ ರಾಜದೂತರು ಬಂದರು “ಮತ್ತೆ ಯಾಜ್ಞವಲ್ಕ್ಯ ತೀರ್ಥಪ್ರಸಾದಗಳನ್ನು ತರಬೇಕು ಎಂದು ಅರಸನ ಪ್ರಾರ್ಥನೆ’ ಎಂದರು. ಗುರುಗಳಿಗೆ ಸಮಾಧಾನವಾಯಿತು.

ಆಶ್ರಮವನ್ನು ಬಿಡಬೇಕು!

ವೈಶಂಪಾಯನರು ಯಾಜ್ಞವಲ್ಕ್ಯನನ್ನು ಕರೆದು, “ನೀನು ನಡೆದುಕೊಂಡ ರೀತಿಯಿಂದ ರಾಜನಿಗೆ ಸಿಟ್ಟು ಬಂದಿರಬಹುದು. ನಿನಗೆ ಶಿಕ್ಷೆಯೂ ಆಗಬಹುದು. ಮತ್ತೆ ಹೋಗಿ ತೀರ್ಥ ಪ್ರಸಾದಗಳನ್ನು ಕೊಟ್ಟು ಬಾ. ನಿನಗೂ ಶಿಕ್ಷೆ ತಪ್ಪುತ್ತದೆ. ನನಗೂ ಸಂತೋಷ” ಎಂದರು.

ಆದರೆ ಯಾಜ್ಞವಲ್ಕ್ಯನಿಗೆ ಅವರ ಮಾತು ಒಪ್ಪಿಗೆಯಾಗಲಿಲ್ಲ. ‘ತಪಸ್ವಿಗಳಲ್ಲಿ ತಿರಸ್ಕಾರ ಭಾವನೆಯನ್ನು ಹೊಂದಿರುವ ರಾಜನಿಗೆ ನಾನು ತೀರ್ಥವನ್ನು ಕೊಂಡು ಹೋಗಿ ಕೊಡಲು ಸಿದ್ಧನಿಲ್ಲ’ ಎಂದು ಖಂಡಿತವಾಗಿ ನುಡಿದನು. ಅಷ್ಟೇ ಅಲ್ಲದೆ ‘ದುರಾಚಾರಿ, ದುಷ್ಟಬುದ್ಧಿಯ ರಾಜನಿಗೆ ಸಹಾಯ ಮಾಡಿ ಅವನನ್ನು ಗುಣಮುಖನಾಗಿಸಿದರೆ ಅದರಿಂದ ಯಾರಿಗೂ ಹಿತವಲ್ಲ ಎಂದು ನನಗನಿಸುತ್ತದೆ’ ಎಂದೂ ಹೇಳಿದ.

ಈ ಮಾತನ್ನು ಕೇಳಿ ಗುರುಗಳಿಗೆ ಕೋಪ ಬಂದಿತು. ತನ್ನ ಅಳಿಯ, ಮೇಲಾಗಿ ಪ್ರಿಯ ಶಿಷ್ಯ. ತನ್ನ ಆಜ್ಞೆಯನ್ನು ಪಾಲಿಸದೆ ಅವಮಾನವನ್ನುಂಟು ಮಾಡಲು ಹೊರಟಿರುವನಲ್ಲ ಎಂದು ಆಚಾರ್ಯರ ಕೋಪ ಮಿತಿಮೀರಿ ಬೆಳೆಯಿತು. ಅವರ ಧ್ವನಿ ಗಡಸಾಯಿತು. “ನೀನು ನನ್ನ ಮಾತನ್ನು ತಿರಸ್ಕರಿಸಿ ನನಗೆ ವಿರೋಧವಾಗಿ ವರ್ತಿಸುವೆಯಾ? ನೀನು ನನಗೆ ಅವಮಾನ ಮಾಡಿದಂತಾಯಿತು. ಆದುದರಿಂದ ನೀನು ಇನ್ನು ನನ್ನ ಶಿಷ್ಯನಾಗಿ ಮುಂದುವರಿಯಲು ಅರ್ಹನಲ್ಲ. ಈಗಿಂದೀಗಲೇ ಇಲ್ಲಿಂದ ಹೊರಟು ಹೋಗು. ಆಶ್ರಮದಿಂದ ಹೋಗುವ ಮೊದಲು ಈ ತನಕ ನಾನು ನಿನಗೆ ಕಲಿಸಿರುವ ವೇದವಿದ್ಯೆಯನ್ನು ಇಲ್ಲಿಯೇ ಬಿಟ್ಟು ಹೋಗು”  ಎಂದು ಯಾಜ್ಞವಲ್ಕ್ಯನಿಗೆ ಕಠಿಣವಾಗಿ ಆಜ್ಞೆಯನ್ನಿತ್ತರು.

ತಕ್ಷಣ ಯಾಜ್ಞವಲ್ಕ್ಯನು ತಾನು ಗುರುಗಳಿಂದ ಕಲಿತ ಯುಜುರ್ವೇದ ಮಂತ್ರವನ್ನೆಲ್ಲ ವಾಂತಿ ಮಾಡಿದನು. ಹಾಗೆ ಮಾಡಿದುದರಿಂದ ಅವನ ದೇಹದಿಂದ ತೇಜಸ್ಸೂ ಹೊರಬಂದಿತು.

ಮುಂದೇನು ಎಂಬ ಚಿಂತೆಯೊಡನೆ ಯಾಜ್ಞವಲ್ಕ್ಯನು ಗುರುಗಳಿಗೆ ನಮಿಸಿ ಆಶ್ರಮದಿಂದ ಹೊರಬಂದನು. ಆದರೆ ಅವಳ ಅಂತರಾಳದಲ್ಲಿ ‘ನಾನು ನಿಜಕ್ಕೂ ತಪ್ಪನ್ನು ಮಾಡಿರುವುದಿಲ್ಲ. ಮುಂದೆ ಒಳ್ಳೆಯದೇ ಆಗುತ್ತದೆ’ ಎಂಬ ಭರವಸೆಯ ದೀಪ ಬೆಳಗುತ್ತಲೇ ಇತ್ತು.

ವಿದ್ಯಾರ್ಜನೆ ಮುಂದುವರಿಯಿತು

ಯಾಜ್ಞವಲ್ಕ್ಯನು ಮನೆಗೆ ಬಮದು ಸೇರಿದನು. ಗುರುಕುಲದಲ್ಲಿ ನಡೆದ ಘಟನೆಯನ್ನು ವಿವರವಾಗಿ ತಾಯಿತಂದೆಯರಿಗೆ ತಿಳಿಸದನು. ಅವರಿಗೆ ಚಿಂತೆಯಾಯಿತು.

ಉಪನಯನದ ಸಂದರ್ಭದಲ್ಲಿ ಯಾಜ್ಞವಲ್ಕ್ಯನಿಗೆ ಗಾಯತ್ರಿ ಮಂತ್ರದ ಉಪದೇಶವಾಗಿತ್ತಷ್ಟೆ. ಅದರ ಜಪವನ್ನು ಅವನು ಶ್ರದ್ಧೆಯಿಂದ ಉದ್ದಕ್ಕೂ ನಡೆಸಿಕೊಂಡೇ ಬಂದಿದ್ದನು. ವೇದಮಯಿ ಗಾಯತ್ರಿ ಮಾತೆಯ ಮೊರೆಹೊಕ್ಕರೆ ಮುಂದಿನ ಹಾದಿ ಸುಗಮವಾಗುವುದು ಎಂದು ಯಾಜ್ಞವಲ್ಕ್ಯನು ನಂಬಿದ್ದನು. ಅದರಂತೆ ದಿನವೂ ಹೆಚ್ಚು ಹೆಚ್ಚು ಕಾಲವನ್ನು ಅವನು ಗಾಯತ್ರಿ ಮಂತ್ರದ ಜಪ ಮಾಡುವುದರಲ್ಲಿ ಕಳೆಯತೊಡಗಿದ.

ಮಗನ ವಿದ್ಯಾಭ್ಯಾಸದ ಮುಂದಿನ ಏರ್ಪಾಟಿನ ಬಗೆಗೆ ಬ್ರಹ್ಮರಾತ ದಂಪತಿಗಳು ಚಿಂತಿಸಿದರು. ಕಡೆಗೆ ಯಾಜ್ಞವಲ್ಕ್ಯನನ್ನು ಪೈಲ ಮುನಿಗಳ ಶಿಷ್ಯರಾದ ಭಾಷ್ಕಲ ಮುನಿಗಳ ಆಶ್ರಮಕ್ಕೆ ವಿದ್ಯಾರ್ಥಿಯಾಗಿ ಕಳುಹಿಸಿದರು. ಅಲ್ಲಿ ಅವನು ಗುರುಗಳಿಂದ ಋಗ್ವೇದವನ್ನು ಕಲಿತುಕೊಂಡನು. ಕೋಸಲ ದೇಶದಲ್ಲಿದ್ದ ಆಚಾರ್ಯ ಹಿರಣ್ಯನಾಭರ ಪದತಲದಲ್ಲಿ ಕುಳಿತು ಸಾಮವೇದವನ್ನು ಕಲಿತನು. ಆಚಾರ್ಯ ಅರುಣಿಯವರಿಂದ ಅಥರ್ವವೇದದ ಉಪದೇಶವನ್ನು ಪಡೆದನು. ಆಮೇಲೆ ವೈದಿಕ ಕರ್ಮವಿಚಾರಗಳ ಪರಿಜ್ಞಾನವನ್ನು ಪಡೆಯಲು ಯಾಜ್ಞವಲ್ಕ್ಯನು ಉದ್ದಾಲಕ ಮುನಿಗಳ ಆಶ್ರಮಕ್ಕೆ ವಿದ್ಯಾರ್ಥಿಯಾಗಿ ತೆರಳಿದನು.

ಉದ್ದಾಲಕರ ಆಶ್ರಮದಲ್ಲಿ

ಜಗತ್ತಿನಲ್ಲಿ ದಿವ್ಯವಾದ ಜ್ಞಾನಜ್ಯೋತಿಯನ್ನು ಬೆಳಗಿಸಲು ಬಂದ ಮಹಾಪುರುಷನೇ ಯಾಜ್ಞವಲ್ಕ್ಯ ಎಂಬುದನ್ನು ಉದ್ದಾಲಕರು ಸ್ಪಷ್ಟವಾಗಿ ಕಂಡುಕೊಂಡರು. ಅವರು ತುಂಬು ಪ್ರೀತಿ ಮತ್ತು ಸಂತೋಷದಿಂದ ಯಾಜ್ಞವಲ್ಕ್ಯನನ್ನು ಗುರುಕುಲವಾಸಕ್ಕೆ ಸೇರಿಸಿಕೊಂಡರು.

ಕಲಿತಿದ್ದ ಯಜುರ್ವೇದ ವಿದ್ಯೆಯನ್ನು ಯಾಜ್ಞವಲ್ಕ್ಯ ಕಳೆದುಕೊಂಡು ಬಿಟ್ಟಿದ್ದ. ಅಲ್ಲವೆ? ಇದರಿಂದ ಅವನಿಗೆ ಮನಸ್ಸಿನಲ್ಲಿ ವಿಷಾದವಿದ್ದೇ ಇತ್ತು. ಅವನು ಆಗಲೇ ಬಹುಮಟ್ಟಿಗೆ ವೇದವಿದ್ಯಾ ಪಾರಂಗತನಾಗಿದ್ದನೇನೋ ನಿಜ. ಆದರೆ ಯಜುರ್ವೇದ ವಿದ್ಯೆ ಇಲ್ಲದೆ ಕಲಿತ ವಿದ್ಯೆ ಪೂರ್ಣವಾಗುವುದಾದರೂ ಹೇಗೆ? ಹಾಗಾಗಿ ಯಜುರ್ವೇದ ವಿದ್ಯೆ ನಷ್ಟವಾಗಿ ಹೋದುದನ್ನು ಪುನಃ ಸಂಪಾದಿಸಿಕೊಳ್ಳಲು ಯಾಜ್ಞವಲ್ಕ್ಯನು ಯತ್ನಶೀಲನಾದನು. ಆಶ್ರಮದಲ್ಲಿ ವೇದಮಾತೆ ಗಾಯತ್ರೀದೇವಿಯ ಮಂತ್ರ, ಜಪ, ಧ್ಯಾನಗಳನ್ನು ಹೆಚ್ಚು ಹೆಚ್ಚು ಮಾಡತೊಡಗಿದ. ಕಠಿಣವಾದ ವ್ರತವನ್ನೂ ಕೈಕೊಂಡ.

ಗಾಯತ್ರಿ ಮಾತೆಯ ದರ್ಶನಅನುಗ್ರಹ

ಯಾಜ್ಞವಲ್ಕ್ಯನು ವೇದಮಾತೆ ಗಾಯತ್ರಿಯನ್ನು ಕುರಿತು ನಡೆಸಿದ ವಿಶೇಷ ವ್ರತ ಫಲಿಸಿತು. ಗಾಯತ್ರಿ ದೇವಿಯು ಪ್ರತ್ಯಕ್ಷಳಾದಳು. ಯಾಜ್ಞವಲ್ಕ್ಯನು ‘ವೇದ ವಿದ್ಯೆಯ ಬಗೆಗೆ ನನ್ನ ಜ್ಞಾನ ಪೂರ್ಣ ಆಗಲು ಯಜುರ್ವೇದ ವಿದ್ಯೆಯನ್ನು ಅನುಗ್ರಹಿಸಬೇಕು’ ಎಂದು ಬೇಡಿಕೊಂಡನು. ಆಗ ಗಾಯತ್ರಿದೇವಿಯು ಮುಗುಳುನಗುತ್ತಾ ‘ಮಗೂ ಯಜ್ಞವಲ್ಕ್ಯಾ, ನಿನ್ನ ಬಯಕೆ ಕೈಗೊಡಲು ನೀನು ಸೂರ್ಯದೇವನನ್ನು ಕೇಳಬೇಕು. ಅವನಿಂದ ನಿನಗೆ ಯಜುರ್ವೇದ ವಿದ್ಯೆ ಉಪದೇಶವಾಗುತ್ತದೆ’ ಎಂದು ಆಶೀರ್ವಾದ ಮಾಡಿ ಅಂತರ್ಧಾನಳಾದಳು.

ಗಾಯತ್ರಿ ಮಾತೆಯ ಮಂಗಳಾಶೀರ್ವಾದದಿಂದ ಯಾಜ್ಞವಲ್ಕ್ಯನ ದೇಹ, ಮನಸ್ಸುಗಳಲ್ಲಿ ನವಚೇತನ ತುಂಬಿ ಹರಿಯಿತು. ದೇಹದ ವಿವಿಧ ಭಾಗಗಳಲ್ಲಿ ಸೂಕ್ಷ್ಮವಾಗಿ ಅಡಗಿರುವ ಬೇರೆ ಬೇರೆ ದೇವತಾಶಕ್ತಿಗಳ ಅರಿವು ಅವನಿಗಾಯಿತು.ಅವನಿನ್ನೂ ಎಷ್ಟೋ ಮಹಾಕಾರ್ಯಗಳನ್ನು ಮಾಡಬೇಕಾಗಿತ್ತು. ಯಾಜ್ಞವಲ್ಕ್ಯನಿಗೆ ದಿವ್ಯ ದೇವತಾದರ್ಶನದಿಂದ ವಿಶೇಷವಾದ ಆನಂದ, ಆತ್ಮಶಕ್ತಿಗಳು ಒದಗಿಬಂದವು.

ಗುರುಕುಲದಿಂದ ಮರಳಿ ಮನೆಗೆ

ದಿನಗಳು ಕಳೆದಂತೆ ಯಾಜ್ಞವಲ್ಕ್ಯನು ಹೆಚ್ಚು ಹೆಚ್ಚಾಗಿ ವ್ರತೋಪವಾಸಗಳಲ್ಲಿಯೇ ಮಗ್ನನಾಗಿರುತ್ತಿದ್ದುದನ್ನು ಅವನ ಗುರುಗಳು ಗ್ರಹಿಸಿದರು. ತಂದೆ ತಾಯಿಗಳಿಗೂ ಸುದ್ದಿ ತಿಳಿಯಿತು. ಯಾಜ್ಞವಲ್ಕ್ಯನು ಮನೆತನದ ಸಂಪ್ರದಾಯವಾದ ಯಜ್ಞ ಯಾಗಗಳೇ ಮೊದಲಾದ ಕರ್ಮಮಾರ್ಗವನ್ನು ಶ್ರೇಷ್ಠವಾದ ರೀತಿಯಲ್ಲಿ ಅನುಸರಿಸಿಕೊಂಡು ಹೋಗಬೇಕು. ಬ್ರಹ್ಮನಿಷ್ಠನಾಗಿ, ಯತಿಯಾಗಿ ಸಂಸಾರದಿಂದ ದೂರವಾಗಬಾರದು ಎಂಬುದು ಅವನ ತಂದೆತಾಯಿಯರ ಆಸೆ. ಯಾಜ್ಞವಲ್ಕ್ಯನಿಗೆ ಯೋಗ್ಯಳಾದ ಹುಡುಗಿಯೊಡನೆ ಮದುವೆ ಮಾಡಬೇಕು ಎಂದು ಅವರು ನಿಶ್ಚಯಿಸಿಕೊಂಡರು. ಯಾಜ್ಞವಲ್ಕಯನು ಗುರುಕುಲದಲ್ಲಿ ಇನ್ನೂ ಕೆಲಕಾಲ ಇರಬೇಕೆಂದು ಉದ್ದಾಲಕ ಮುನಿಗಳು ಬಯಸಿದ್ದರು. ಆದರೆ ಜ್ಞಾನಿಗಳಾದ ಅವರಿಗೆ ಯಾಜ್ಞವಲ್ಕ್ಯನು ಈಗಲೇ ಗುರುಕುಲದಿಂದ ಹೊರಟು ಹೋಗಿ ಗೃಹಸ್ಥಾಶ್ರಮಿ ಆಗುವುದರಿಂದ ಅವನಿಗೇ ಒಳ್ಳೆಯದು ಎಂದು ಅರ್ಥವಾಯಿತು.

ಯಾಜ್ಞವಲ್ಕ್ಯನು ಆಶ್ರಮದಿಂದ ಹೊರಡುವ ದಿನವೂ ಬಂದಿತು. ಉದ್ದಾಲಕರು, ಅವರ ಹೆಂಡತಿ, ಇತರ ಶಿಷ್ಯರು ಎಲ್ಲರೂ ಯಾಜ್ಞವಲ್ಕ್ಯರನ್ನು ಬಹಳ ಪ್ರೀತಿಯಿಂದ ಶುಭ ಹಾರೈಕೆಗಳನ್ನು ಇತ್ತು ಆಶ್ರಮದಿಂದ ಬೀಳ್ಕೊಟ್ಟರು. ಆಚಾರ್ಯರು ಮಮತೆಯಿಂದ ‘ಸತ್ಯವನ್ನೇ ಹೇಳು. ಧರ್ಮವನ್ನು ಆಚರಿಸು. ತಾಯಿಯು ನಿನಗೆ ದೇವರಗಲಿ. ತಂದೆಯು ನಿನಗೆ ದೇವರಾಗಲಿ. ಆಚಾರ್ಯರು ನಿನಗೆ ದೇವರಾಗಲಿ. ಅತಿಥಿಯು ನಿನಗೆ ದೇವರಾಗಲಿ. ನಮ್ಮಲ್ಲಿ ಯಾವ ಒಳ್ಳೆಯ ನಡತೆಗಳು ಇವೆಯೋ ಅವುಗಳನ್ನು ಸೇವಿಸಬೇಕು. ಉಳಿದವುಗಳನ್ನು ಕೂಡದು’ ಎಂದು ಮೊದಲಾಗಿ ಉಪದೇಶ ಮಾಡಿದರು. ಅವರ ಮಾತುಗಳು ಯಾಜ್ಞವಲ್ಕ್ಯನ ಅಂತರಂಗದಲ್ಲಿ ಪ್ರತಿಧ್ವನಿಗೊಳ್ಳುತ್ತಲೇ ಇದ್ದವು.

ಯಾಜ್ಞವಲ್ಕ್ಯನು ಮದುವೆಗೆ ಒಪ್ಪಿದನು. ಹೆಂಡತಿ, ಮಕ್ಕಳು, ಆಸ್ತಿಪಾಸ್ತಿ ಎಂದುಕೊಂಡು ಬದುಕಬೇಕು ಎಂದಲ್ಲ. ಅವನ ಪಾಲಿಗೆ ವಿವಾಹ ಎಂದರೆ ಉನ್ನತವಾದ ಆದರ್ಶ ಸಾಧನೆಗೆ, ಶಾಶ್ವತವಾದ ಆನಂದದ ಪ್ರಾಪ್ತಿಗೆ ನೆರವಾಗುವ ಒಂದು ಪವಿತ್ರ ಸಂಸ್ಕಾರ. ವೇದ ಮಾತೆ ಗಾಯತ್ರಿದೇವಿಯ ದರ್ಶನವಾಗಿದ್ದ ಅವನಿಗೆ ಇನ್ನೀಗ ಆದಿತ್ಯನಾರಾಯಣ ಸ್ವಾಮಿಯ ದರ್ಶನ ಆಗಬೇಕಿತ್ತು. ಆದಿತ್ಯನಾರಾಯಣನ ವ್ರತವನ್ನು ಶೀಘ್ರದಲ್ಲೇ ಕೈಗೊಳ್ಳಬೇಕೆಂದು ಸಂಕಲ್ಪವನ್ನೂ ಮಾಡಿದ್ದನು. 

ಜನಕನು ಸರ್ವಜ್ಞ ಕಿರೀಟವನ್ನು ಯಾಜ್ಞವಲ್ಕ್ಯರಿಗೆ ಒಪ್ಪಿಸಿದನು.

ಕದಿರ ಮುನಿಗಳು ಬ್ರಹ್ಮರಾತ ದಂಪತಿಗಳಿಗೆ ಬಹಳ ಆಪ್ತರು. ಅವರಿಗೊಬ್ಬ ಮಗಳು. ಹೆಸರು ಕಾತ್ಯಾಯಿನಿ. ಅವಳು ಯಾಜ್ಞವಲ್ಕ್ಯನಿಗೆ ಯೋಗ್ಯ ವಧು ಎಂದು ಹಿರಿಯರೆಲ್ಲ ಸೇರಿ ತೀರ್ಮಾನಕ್ಕೆ ಬಂದರು. ಆಗ ಕಾತ್ಯಾಯನಿಗೆ ಹತ್ತೇ ವರ್ಷ.

ಯಾಜ್ಞವಲ್ಕ್ಯ- ಕಾತ್ಯಾಯನಿಯರ ಮದುವೆಗೆ ಮಹರ್ಷಿ ವೈಶಾಂಪಯನ ದಂಪತಿಗಳೂ ಬಂದಿದ್ದರು. ಯಾಜ್ಞವಲ್ಕ್ಯನು ಪತ್ನಿ ಕಾತ್ಯಾಯಿನಿಯೊಡನೆ ಗುರು ವೈಶಂಪಾಯನ ದಂಪತಿಗಳಿಗೆ ನಮಿಸಿ ಅವರ ಆಶೀರ್ವಾದವನ್ನು ಬೇಡಿದನು. ಅವರು ಕೋಪವನ್ನೆಲ್ಲ ಮರೆತು ಬಿಟ್ಟಿದ್ದರು. ಸಂತೋಷದಿಂದ ‘ನಿಮಗೆ ಎಲ್ಲ ಮಂಗಳವಾಗಲಿ. ದೇವದೇವತೆಗಳ ಕೃಪಾಶೀರ್ವಾದದ ರಕ್ಷೆ ಸದಾ ನಿಮಗಿರುವಂತಾಗಲಿ’ ಎಂದು ಆಶೀರ್ವಾದ ಮಾಡಿದರು.

ಆದಿತ್ಯ ವ್ರತ

ಕಾತ್ಯಾಯಿನಿಯು ವಯಸ್ಸಿನಲ್ಲಿ ಯಾಜ್ಞವಲ್ಕ್ಯನಿಗೆ ಕಿರಿಯಳೇ ಆದರೂ ನಡೆ ನುಡಿ, ಎಲ್ಲಾ ರೀತಿಯಲ್ಲೂ ಅವನಿಗೆ ಯೋಗ್ಯ ಪತ್ನಿಯೇ ಆಗಿದ್ದಳು.

ಯಾಜ್ಞವಲ್ಕ್ಯನು ಸೂರ್ಯನಾರಾಯಣ ವ್ರತವನ್ನು ಬಹಳ ಕಟ್ಟುನಿಟ್ಟಿನಿಂದ ಆಚರಿಸಲು ಆರಂಭಿಸಿದನು. ಸೂರ್ಯೋದಯಕ್ಕೆ ಮೊದಲೇ ಬ್ರಾಹ್ಮೀ ಮುಹೂರ್ತದಲ್ಲಿ ಏಳುತ್ತಿದ್ದನು. ನಿತ್ಯ ವಿಧಿಗಳನ್ನು ಮುಗಿಸಿ ಉಪವಾಸವಿದ್ದು ಮಧ್ಯಾಹ್ನದ ತನಕ ಸೂರ್ಯಮಂಥ್ರದ ಜಪವನ್ನು ಮಾಡುತ್ತಾ ಕುಟೀರದಲ್ಲಿ ಧ್ಯಾನಮಗ್ನನಾಗಿ ಕುಳಿತಿರುತ್ತಿದ್ದನು. ಸೂರ್ಯದೇವನಿಗೆ ಪೂಜೆ ಸಲ್ಲಿಸಿ ಪಾಯಸ್ನಾನವನ್ನು ಅರ್ಪಿಸುತ್ತಿದ್ದನು. ಆ ಪಾಯಸಾನ್ನ ಪ್ರಸಾದವಷ್ಟೇ ಯಾಜ್ಞವಲ್ಕ್ಯನಿಗೂ ಕಾತ್ಯಾಯಿನಿಗೂ ದಿನದ ಆಹಾರ.

ಆದಿತ್ಯನ ಅನುಗ್ರಹ ಮಹಾಪ್ರಸಾದ

ದಿವಸಗಳು ಒಂದೊಂದಾಗಿ ಕಳೆದವು. ಯಾಜ್ಞವಲ್ಕ್ಯನು ತಪಸ್ಸಿನ ಹಾದಿಯಲ್ಲಿ ಹಂತಹಂತವಾಗಿ ಮುಂದೆ ಸಾಗಿದನು. ಅವನು ಧ್ಯಾನದಲ್ಲಿ ಕುಳಿತಂತೆ ವಿಶೇಷವಾದ ತೇಜಸ್ಸು ಅವನನ್ನು ಆವರಿಸುತ್ತಿತ್ತು.

ಒಂದು ದಿನ ಎಂದಿನಂತೆ ಯಾಜ್ಞವಲ್ಕ್ಯನು ಪ್ರಾತಃಕಾಲದಲ್ಲಿ ಸೂರ್ಯದೇವನ ಮಂತ್ರಜಪ ಹಾಗೂ ಧ್ಯಾನದಲ್ಲಿ ತಲ್ಲೀನನಾಗಿದ್ದಾನೆ. ಅವನಿಗೆ ಎಂದಿಗಿಂತಲೂ ಹೆಚ್ಚಿನ ಆನಂದವು ಧ್ಯಾನದಲ್ಲಿ ಲಭಿಸಿದಂತಾಯಿತು. ಅವನ ದೇಹದಿಂದ ತೇಜಸ್ಸು ಹೊರಹೊಮ್ಮಿ ಕುಟೀರವನ್ನೆಲ್ಲ ಆವರಿಸಿತು. ಸೂರ್ಯನೆಡೆಯಿಂದ ತೇಜೋರಾಶಿ ಅವನೆಡೆಗೆ ಹರಿದು ಬರುವುದನ್ನು ಕಂಡನು. ಒಳಗೆ ಹೊರಗೆ ಎಲ್ಲೆಲ್ಲೂ ಮುಂದುವರಿಸಿದನು. ಅತ್ಯಂತ ತೇಜೋಶಕ್ತಿಯಿಂದ ಕೂಡಿದ ಒಂದು ಮಹಾಪುಂಜವೇ ಸೂರ್ಯನೆಡೆಯಿಂದ ಹೊರಹೊಮ್ಮಿ ಇವನೆಡೆಗೆ ಬಂದಂತಾಯಿತು. ಯಾಜ್ಞವಲ್ಕ್ಯ ಕಣ್ಣು ಬಿಟ್ಟನು. ಆ ತೇಜಃಪುಂಜವು ಕೆಂಪಗಿನ ಅತ್ಯಂತ ಆಕರ್ಷಣೀಯವಾದ ಒಂದು ಕುದುರೆಯಾಗಿ ಆಕಾರ ತಳೆಯಿತು. ಆ ಕುದುರೆ ಕೆನೆಯುತ್ತಾ ಯಾಜ್ಞವಲ್ಕ್ಯನ ಮುಂದೆ ನಿಂತಿತು. ಆನಂದದಿಂದ ಯಾಜ್ಞವಲ್ಕ್ಯನಿಗೆ ಏನು ಹೇಳಬೇಕೆಂದು ತೋರಲಿಲ್ಲ. ಮತ್ತೆ ಸೂರ್ಯದೇವನ ಮಂತ್ರವನ್ನು ಉಚ್ಚರಿಸಿದನು. ಆ ದಿವ್ಯಾಶ್ವವು, ‘ಯಾಜ್ಞವಲ್ಕ್ಯ, ನಿನ್ನ ತಪಸ್ಸಿಗೆ ಮೆಚ್ಚಿರುತ್ತೇನೆ. ನಿನಗೇನು ಬೇಕು?’ ಎಂದಿತು.

ಸೂರ್ಯದೇವನು ಯಾಜ್ಞವಲ್ಕ್ಯನ ಮುಂದೆ ಪ್ರತ್ಯಕ್ಷನಾದನು.

ತನ್ನ ಮುಂದೆ ನಿಂತಿರುವ ದಿವ್ಯಾಶ್ವ ಭಗವಾನ್‌ ಸೂರ್ಯ ಎಂದು ಯಾಜ್ಞವಲ್ಕ್ಯನಿಗೆ ಅರ್ಥವಾಯಿತು. ಸಾಷ್ಟಾಂಗ ಪ್ರಣಾಮ ಮಾಡಿ, ‘ಈ ತನಕ ಯಾರಿಗೂ ಲಭಿಸಿರದ ಯಜುರ್ವೇದ ವಿದ್ಯೆಯ ಪೂರ್ಣ ಅನುಗ್ರಹ ಆಗಬೇಕು’ ಎಂದು ಬೇಡಿಕೊಂಡನು. ಆಗ ಆ ವಿದ್ಯಾಶ್ವವು ತೇಜೋರಾಶಿಯಲ್ಲಿ ಮಾಯವಾಯಿತು. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಯಾಜ್ಞವಲ್ಕ್ಯನು ತನ್ನ ಮುಂದೆ ಉಜ್ವಲ ಪ್ರಕಾಶದಿಂದ ಕೂಡಿರುವ ಸೂರ್ಯದೇವನು ನರರೂಪಧಾರಿಯಾಗಿ ದಿವ್ಯ ಕಿರೀಟಮಂಡಲಗಳಿಂದ ಅಲಂಕಲೃತವಾಗಿ ಶೋಭಿಸುತ್ತಿರುವುದನ್ನು ಕಂಡನು. ಯಾಜ್ಞವಲ್ಕ್ಯನು ಮತ್ತೊಮ್ಮೆ ಸಾಷ್ಟಾಂಗ ಪ್ರಣಾಮ ಮಾಡಿ ಆದಿತ್ಯ ಮಂತ್ರೋಚ್ಚಾರಣೆ ಮಾಡಿದನು. ಆಗ ಸೂರ್ಯದೇವನು ‘ಯಾಜ್ಞವಲ್ಕ್ಯಾ, ನಿನ್ನ ದೇಹವು ನನ್ನಿಂದ ವೇದವಿದ್ಯೆಯನ್ನು ಪಡೆದು ಗ್ರಹಿಸಲು ಇನ್ನೂ ಪೂರ್ಣವಾಗಿ ಪರಿಶುದ್ಧ ಮತ್ತು ಶಕ್ತಿಪೂರ್ಣ ಆಗಿರುವುದಿಲ್ಲ. ಅದಕ್ಕಾಗಿ ನಿನ್ನ ದೇಹದೊಳಗೆ ವಾಙ್ಮಯ ಸರಸ್ವತಿಯು ಶಕ್ತಿರೂಪವಾಗಿ ಪ್ರವೇಶಿಸುವಂತೆ ಮಾಡುತ್ತೇನೆ. ಬಾಯಿ ತೆರೆ’ ಎಂದನು. ಬಾಯಿಯ ಮೂಲಕ ಯಾಜ್ಞವಲ್ಕ್ಯನ ದೇಹ, ಮನಗಳಿಗೆ ಸರಸ್ವತಿ ಶಕ್ತಿಯ ಪ್ರವೇಶವಾಯಿತು. ಅದರಿಂದಾಗಿ ಅವನ ದೇಹದಲ್ಲೆಲ್ಲಾ ಮಹಾ ತಾಪವುಂಟಾಯಿತು. ಅವನು ತಾಪದಿಂದ ಕಷ್ಟಪಡುತ್ತಿದ್ದಂತೆ ಸೂರ್ಯ ದೇವನು, ‘ಮುಹೂರ್ತ ಕಾಲದಷ್ಟು ನೀನು ಈ ಕಷ್ಟವನ್ನು ಸಹಿಸು. ಅದರಿಂದ ನಿನ್ನ ದೇಹ, ಮನಗಳು ಶುದ್ಧವಾಗುತ್ತವೆ.  ವೇದ ವಿದ್ಯೆಯನ್ನು ಹೊಂದಿ ಉಳಿಸಿಕೊಳ್ಳುವ ಶಕ್ತಿ ತುಂಬಿ ಬರುತ್ತದೆ’ ಎಂದು ಸಮಾಧಾನ ಹೇಳಿದನು. ಅಷ್ಟರಲ್ಲಿ ಯಾಜ್ಞವಲ್ಕ್ಯನ ದೇಹದ ತಾಪ ಆರಿತು. ಅವನಿಗೆ ವಿಶೇಷವಾದ ಆನಂದ ಮೈಯಲ್ಲಿ ಹರಿಯಿತು. ಸೂರ್ಯ ಭಗವಂತ ಅವನನ್ನು ಆಶೀರ್ವದಿಸಿ ಮತ್ತ ತೇಜೋರಾಶಿಯಲ್ಲಿ ಲೀನವಾಗಿ ಹೋದನು.

ಯಾಜ್ಞವಲ್ಕ್ಯನು ಆ ತೇಜೋರಾಶಿಯನ್ನೇ ನೋಡುತ್ತಾ ನಿಂತನು. ಆಗ ಅವನಿಗೆ ಆ ತೇಜೋರಾಶಿಯಲ್ಲಿ ದಿವ್ಯವಾದ ವೇದಮಂತ್ರಗಳು ಅತ್ಯಂತ ಆಕರ್ಷಣೀಯವಾದ ರೀತಿಯಲ್ಲಿ ಹೊಳೆಯುತ್ತಿರುವುದು ಕಾಣಿಸಿತು. ಕಣ್ಮುಚ್ಚಿ ನೋಡಿದನು. ಹೃದಯಾಂತರಾಳದಲ್ಲೂ ಹಾಗೆಯೇ ಆ ಮಂತ್ರಗಳು ಹೊಳೆಯುತ್ತಿರುವುದನ್ನು ಕಂಡನು. ಎತ್ತ ನೋಡಿದರೂ ತೇಜೋರಾಶಿ! ಅದರ ಮಧ್ಯದಲ್ಲಿ ಅಲ್ಲಲ್ಲಿ ದಿವ್ಯಮಂತ್ರಗಳ ಹೊಳಪು! ಜೊತೆಗೆ ಆ ಮಂತ್ರಗಳ ಮೃದು ಮಂಜುಳವಾದ, ಆನಂದಪೂರ್ಣವಾದ, ಓಂಕಾರಾತ್ಮಕವಾದ ದಿವ್ಯ ಮಂಗಳ ಧ್ವನಿ! ಯಾಜ್ಞವಲ್ಕ್ಯನ ದೇಹ-ಮನ-ಆತ್ಮವೆಲ್ಲ ಈ ದಿವ್ಯಾನಂದಾನುಭವದಿಂದ ತುಂಬಿ ತುಳುಕಾಡಿತು! ಅಷ್ಟರಲ್ಲಿ ದೃಶ್ಯ ಬದಲಾಯಿತು. ಮತ್ತೇ ಅದೇ ಆ ಕೆಂಪಗಿನ ದಿವ್ಯವಾದ ಕುದುರೆಯು ಕೆನೆಯುತ್ತಾ ಯಾಜ್ಞವಲ್ಕ್ಯನ ಮುಂದೆ ನಿಂತಿತು.  ಅದು ಕೆನೆಯುವಾಗ ಬಾಯಿಯಿಂದ ದಿವ್ಯ ತೇಜಸ್ಸು ಹೊರಹೊಮ್ಮುತ್ತಿತ್ತು! ಆ ತೇಜಸ್ಸಿನಲ್ಲಿ ಮಂತ್ರಗಳು ಹೊಳೆಯುತ್ತಿದ್ದು ಅವೆಲ್ಲಾ ತೇಜೋರಾಶಿಯಲ್ಲಿ ಸೇರಿ ಹೋಗುತ್ತಿದ್ದವು. ಯಾಜ್ಞವಲ್ಕ್ಯನು ದಿವ್ಯಾಶ್ವವನ್ನು ನೋಡುತ್ತಾ ನಿಂತಂತೆ ಕ್ಷಣ ಮಾತ್ರದಲ್ಲಿ ಅದು ಆ ದಿವ್ಯ ತೇಜೋರಾಶಿಯಲ್ಲಿ ಲೀನವಾಯಿತು!

ಈ ಮಹಾದರ್ಶನದಿಂದ ಯಾಜ್ಞೊಲ್ಕ್ಯರು ವ್ರತ ಸಿದ್ಧಿಯನ್ನು ಪಡೆದರು. ಯಾಜ್ಞೊಲ್ಕ್ಯರು ಮಂತ್ರದ್ರಷ್ಟಾರರಾದರು, ಮಹರ್ಷಿಗಳಾದರು. ದಿವ್ಯಜ್ಞಾನವನ್ನು ಪಡೆದ ಬ್ರಹ್ಮರ್ಷಿಗಳಾದರು!

ಮಹಾಗ್ರಂಥಗಳು

ಯಾಜ್ಞವಲ್ಕ್ಯರು ತಾವು ಕಂಡ ವೇದದ ದಿವ್ಯ ದರ್ಶನಾನುಭವವನ್ನು ಗ್ರಂಥಗಳ ರೂಪದಲ್ಲಿ ಬರೆದು ಇಡಬೇಕೆಂದು ನಿಶ್ಚಯಿಸಿದರು. ಅದರಂತೆ ಯಾಜ್ಞವಲ್ಕ್ಯರ ಮಂಗಳ ಹಸ್ತದಿಂದ ‘ಶುಕ್ಲಯಜುರ್ವೇದ’ ಎಂಬ ಮಹಾಗ್ರಂಥವು ರೂಪುಗೊಂಡಿತು. ವೇದದ ಕರ್ಮ ಮತ್ತು ಜ್ಞಾನ ವಿಚಾರಗಳನ್ನು ತುಂಬ ಸುಂದರವಾಗಿ ಅದರಲ್ಲಿ ವಿವರಿಸಿದ್ದಾರೆ. ಆತ್ಮವಿದ್ಯೆ, ದಿವ್ಯ ಜೀವನ ಇವುಗಳ ಬಗೆಗೆ ಮಹತ್ಪೂರ್ಣವಾದ ವಿವರಗಳನ್ನು ಒಳಗೊಂಡ ‘ಈಶಾವಾಸ್ಯೋಪನಿಷತ್‌’ ಮತ್ತು ‘ಬೃಹದಾರಣ್ಯಕೋನಿಷತ್‌’ ಎಂಬ ಎರಡು ಉಪನಿಷತ್ತು ಇನ್ನೂ ಹದಿನೇಳು ಉಪನಿಷತ್‌ ಗ್ರಂಥಗಳೂ ಈ ಶುಕ್ಲಗಳೂ ಯಜುರ್ವೇದ ಮಹಾಗ್ರಂಥ ಸಂಪುಟಗಳಲ್ಲಿ ಅಡಕವಾದವು. ಯಾಜ್ಞವಲ್ಕ್ಯರ ಕೀರ್ತಿ ದೂರದೂರದ ರಾಜ್ಯಗಳಿಗೆ ಹಬ್ಬಿತು.

ಕುಲಪತಿ ಯಾಜ್ಞವಲ್ಕ್ಯರು

ಯಾಜ್ಞವಲ್ಕ್ಯರ ಗುರುಗಳಲ್ಲಿ ಒಬ್ಬರಾದ ಉದ್ದಾಲಕ ಮುನಿಗಳು ತುಂಬ ವೃದ್ಧರಾದರು. ಅವರಿಗಿನ್ನು ಆಶ್ರಮದಲ್ಲಿ ಕುಲಪತಿಗಳಾಗಿ ಕಾರ್ಯಭಾರವನ್ನು ನಡೆಸಲು ಸಾಧ್ಯವಿಲ್ಲ ಎಂದಾಯಿತು. ಕುಲಪತಿಯ ಸ್ಥಾನ ಎಂದರೆ ಬಹು ಹೊಣೆಗಾರಿಕೆಯದು. ಕುಲಪತಿ ಮಹಾಜ್ಞಾನಿಯಾಗಿರಬೇಕು. ಉತ್ತಮ ಗುರುವಾಗಿರಬೇಕು. ಶಿಷ್ಯರನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಉದ್ದಾಲಕರು ಕುಲಪತಿಯಾಗಲು ಯಾಜ್ಞವಲ್ಕ್ಯರನ್ನೇ ಅತ್ಯಂತ ಅರ್ಹರೆಂದು ಪರಿಗಣಿಸಿದರು. ಅದರಂತೆ ಯಾಜ್ಞವಲ್ಕ್ಯರು ಉದ್ದಾಲಕ ಮುನಿಗಳ ಆಶ್ರಮದ ಕುಲಪತಿಗಳಾದರು. ಯಾಜ್ಞವಲ್ಕ್ಯರ ಆಗಮನದಿಂದ ಆ ಆಶ್ರಮಕ್ಕೆ ಅತಿಶಯವಾದ ಕೀರ್ತಿ, ಗೌರವಗಳು ತುಂಬಿ ಬಂದಂತೆ ವಿದ್ಯಾರ್ಥಿಗಳೂ ವಿಪುಲ ಸಂಖ್ಯೆಯಲ್ಲಿ ಬಂದು ಸೇರಿದರು. ಯಾಜ್ಞವಲ್ಕ್ಯರು ತಮ್ಮ ದಿವ್ಯ ಜ್ಞಾನದ ಬಲದಿಂದ ನಡೆಸುತ್ತಿದ್ದ ವೇದವಿದ್ಯಾ ಪಾಠ-ಪ್ರವಚನಗಳು ವಿದ್ಯಾರ್ಥಿಗಳ ಪಾಲಿಗೆ ಮಹಾ ಭಾಗ್ಯದ ಬೆಳಕೇ ಆದವು.

ಯಾಜ್ಞವಲ್ಕ್ಯರ ಕೀರ್ತಿ ನಾನಾ ದಿಕ್ಕುಗಳಲ್ಲಿ ಹಬ್ಬಿತು. ವಿದೇಹ ದೇಶದ ಮಹಾರಾಜ ಜನಕನು ಅವರನ್ನು ಕಂಡು ಅವರ ಉಪದೇಶ ಪಡೆಯಲು ಉತ್ಸುಕನಾದನು. ಅವನು ಧರ್ಮಪರಾಯಣನೂ, ಮಹಾ ವಿದ್ವಾಂಸನೂ ಆಗಿದ್ದನು.  ಮಹಾರಾಜನೂ ಆಶ್ರಮಕ್ಕೆ ಬರುವ ಸಂದರ್ಭದಲ್ಲಿ ಒಂದು ವಿದ್ವತ್ಸಭೆ ಕೂಡಿಸಬೇಕು, ಯಾಜ್ಞವಲ್ಕ್ಯರು ರಚಿಸಿರುವ ಶುಕ್ಲ ಯಜುರ್ವೇದದ ಪಾರಾಯಣ – ಪ್ರವಚನ ನಡೆಸಬೇಕು ಎಂಬುದಾಗಿ ಎಲ್ಲರೂ ಸೇರಿ ಆಶ್ರಮದಲ್ಲಿ ತೀರ್ಮಾನಿಸಿದರು. ಆ ಮೇರೆಗೆ ಬೇಕಾದ ಏರ್ಪಾಡುಗಳೆಲ್ಲವೂ ನಡೆದವು.

ಬೇರೆ ಬೇರೆ ಎಡೆಗಳಿಂದ ಋಷಿಗಳು, ವಿದ್ವಾಂಸರು, ತುಂಬು ಸಂಖ್ಯೆಯಲ್ಲಿ ಬಂದರು. ಮಹಾರಾಜ ಜನಕನೂ ಬಂದನು. ಸಭೆ ಆರಂಭವಾಯಿತು. ಆ ಮಹಾಸಭೆಯಲ್ಲಿ ಶುಕ್ಲಯಜುರ್ವೇದದ ಪಾರಾಯಣವು ನಡೆದು ಕೆಲವು ದಿವಸಗಳಲ್ಲಿ ಅದು ಮುಕ್ತಾಯಗೊಂಡಿತು. ಅಗತ್ಯವಾದಾಗ ಮಹರ್ಷಿ ಯಾಜ್ಞವಲ್ಕ್ಯರು ವೇದಮಂತ್ರಗಳಿಗೆ ವಿವರಗಳನ್ನು ಹೇಳುತ್ತಿದ್ದರು. ಕೆಲವೊಮ್ಮೆ ವೇದಮಂತ್ರಗಳನ್ನು ಕುರಿತು ಚರ್ಚೆ, ವಿಚಾರ ವಿನಿಮಯಗಳೂ ನಡೆಯುತ್ತಿದ್ದವು.

ಸಭೆಯಲ್ಲಿನ ಚರ್ಚೆಗಳಲ್ಲಿ ಪ್ರಚಂಡ ವಿದ್ವತ್ತುಳ್ಳ ಜ್ಞಾನಿಗಳೇ ಭಾಗವಹಿಸಿದರು. ಅವರಲ್ಲಿ ಬ್ರಹ್ಮಚಾರಿಣಿಯಾಗಿದ್ದ ಮುನಿಕನ್ಯೆ ಗಾರ್ಗಿ ಎಂಬುವಳು ಒಬ್ಬಳು. ಮೈತ್ರೇಯಿ ಎಂಬ ಮತ್ತೊಬ್ಬ ಋಷಿಕನ್ಯೆಯೂ ಆ ಸಭೆಯಲ್ಲಿ ಸೇರಿದ್ದಳು. ವೇದಪಾರಾಯಣ ಮುಗಿದಾಗ ಅಲ್ಲಿ ನೆರೆದಿದ್ದ ವಿದ್ವತ್ಸಮೂಹವಿಡೀ ಮಹರ್ಷಿ ಯಾಜ್ಞವಲ್ಕ್ಯರನ್ನು ಕೊಂಡಾಡಿತು. ಪವಿತ್ರ ವೇದಕೃತಿ ಶುಕ್ಲ ಯಜುರ್ವೇದವನ್ನು ಆ ಮಹಾ ವಿದ್ವತ್ಸಭೆಯು ಆನಂದ ಅಭಿಮಾನಗಳಿಂದ ಕೂಡಿ ಸ್ವೀಕರಿಸಿತು. ಮಹರ್ಷಿ ಯಾಜ್ಞವಲ್ಕ್ಯರನ್ನು ಬ್ರಹರ್ಷಿಗಳೆಂದು ಕರೆಯಿತು.

ಮೈತ್ರೇಯಿಯ ಪ್ರಾರ್ಥನೆ ಫಲಿಸಿತು

ಮೊದಲಿನಿಂದಲೂ ಮೈತ್ರೇಯಿ ಯಾಜ್ಞವಲ್ಕ್ಯರ ಶಿಷ್ಯೆಯಾಗಿ ಪರಮಾತ್ಮನ ಚಿಂತನೆಯಲ್ಲಿಯೇ ಅವರೊಡನೆ ಬಾಳುವೆ ನಡೆಸಿ ಬ್ರಹ್ಮದರ್ಶನ ಪಡೆಯಬೇಕೆಂದು ಬಯಸಿದಳು. ಆದರೆ ತಾನೊಬ್ಬಳು ಮಹರ್ಷಿಗಳ ಜೊತೆಯಲ್ಲಿಯೇ ಬಾಳ ಹೊರಟರೆ ಜನರು ಕೆಟ್ಟ ಮಾತನಾಡಬಹುದು. ಅವಳಿಗೆ ನಿಜವಾಗಿಯೂ ವಿವಾಹ ಬೇಕಿರಲಿಲ್ಲ. ಮಕ್ಕಳು, ಆಸ್ತಿ, ಹಣ ಎಂಬ ಸುಖ ಬೇಕಾಗಿರಲಿಲ್ಲ. ಯಾಜ್ಞವಲ್ಕ್ಯರಿಗೆ ಆಗಲೇ ಮದುವೆಯಾಗಿತ್ತು. ಮತ್ತೊಬ್ಬ ಕನ್ಯೆಯನ್ನು ವಿವಾಹವಾಗುವವರಲ್ಲ ಎಂದೂ ಮೈತ್ರೇಯಿಗೆ ತಿಳಿದಿತ್ತು.

ಮೈತ್ರೇಯಿ ಬಹಳ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಳು. ಕಾತ್ಯಾಯಿನಿದೇವಿಯ ಬಳಿಗೆ ಹೋದಳು.

‘ಅಕ್ಕಾ ನನಗೊಂದು ಸಮಸ್ಯೆ ಇದೆ. ನಿಮ್ಮಿಂದಲೇ ಅದು ಪರಿಹಾರವಾಗಬೇಕು’ಎಂದಳು.

‘ಏನದು ಮೈತ್ರೇಯಿ? ಹೇಳು’.

ಮೈತ್ರೇಯಿ ಯಾಜ್ಞವಲ್ಕ್ಯರ ಜೊತೆಗಿದ್ದು ಜ್ಞಾನವನ್ನು ಬೆಳೆಸಿಕೊಳ್ಳುವ ತನ್ನ ಆಸೆಯನ್ನು ಹೇಳಿಕೊಂಡಳು. ‘ನಿಮ್ಮ ತಂಗಿಯಾಗಿ, ಅವರೊಡನೆ ಬ್ರಹ್ಮಚಾರಿಣಿಯಾಗಿ ಆಶ್ರಮದಲ್ಲಿರುತ್ತೇನೆ. ನೀವು ಕೃಪೆ ಮಾಡಬೇಕು’ ಎಂದಳು.

ಕಾತ್ಯಾಯಿನಿ ಸಂತೋಷದಿಂದ ಒಪ್ಪಿದಳು. ಅನಂತರ ಮೈತ್ರೇಯಿ ಯಾಜ್ಞವಲ್ಕ್ಯರನ್ನು ಕಂಡು ಅವರಲ್ಲಿ ತನ್ನ ಮನದ ಇಂಗಿತವನ್ನು ಹೇಳಿಕೊಂಡು ಪ್ರಾರ್ಥಿಸಿದಳು. ‘ಕಾತ್ಯಾಯಿನಿದೇವಿಯವರ ತೀರ್ಮಾನವೇ ಕೊನೆಯ ತೀರ್ಮಾನ’ ಎಂದು ಯಾಜ್ಞವಲ್ಕ್ಯರು ಹೇಳಿದರು. ಅಷ್ಟರಲ್ಲಿ ಕಾತ್ಯಾಯಿನಿ ದೇವಿ ಅಲ್ಲಿಗೆ ಬಂದಳು. ಯಾಜ್ಞವಲ್ಕ್ಯರ ಪ್ರಶ್ನೆಗೆ ಒಪ್ಪಿಗೆಯ ಉತ್ತರ ಇದೆ ಎಂದು ಮೈತ್ರೇಯಿಯ ಮುಖ ನೋಡಿ ಮುಗುಳು ನಗುವನ್ನು ಬೀರಿದರು. ‘ಅಕ್ಕಾ ನೀವು ಸಾಕ್ಷಾತ್‌ ದೇವಿಯೇ ಸರಿ’ ಎಂದು ಮೈತ್ರೇಯಿಯು ಅವಳಿಗೆ ನಮಸ್ಕರಿಸಿದಳು. ಕಾತ್ಯಾಯಿನಿ, ಮೈತ್ರೇಯಿ ಇಬ್ಬರೂ ಯಾಜ್ಞವಲ್ಕ್ಯ, ಮಹರ್ಷಿಗಳನ್ನು ‘ಭಗವಾನ್‌ ಎಂದು ಕರೆದು ಗೌರವ ಸೂಚಿಸುತ್ತಾ ನಮಸ್ಕರಿಸಿದರು. ಮೈತ್ರೇಯಿ ಯಾಜ್ಞಲ್ಕ್ಯರ ಸಹಬ್ರಹ್ಮಚಾರಿಣಿಯಾದಳು.

ಗೋವುಗಳನ್ನು ಅಟ್ಟಿಕೊಂಡು ಹೋಗು!’

ಜನಕ ಮಹಾರಾಜನು ಬಹು ದಕ್ಷಿಣಿಯ ಜ್ಞಾನಯಾಗವೊಂದನ್ನು ಮಾಡಲು ಏರ್ಪಾಡು ಮಾಡಿದನು. ಹಲವೆಡೆಗಳಿಂದ ಮಹಾಮುನಿಗಳು, ವಿದ್ವಾಂಸರು ಎಲ್ಲರನ್ನು ಕರೆಸಿ ದಿವ್ಯಜೀವನದ ಕುರಿತಾಗಿ ಶಾಸ್ತ್ರ-ಅನುಭವಗಳ ಆಧಾರದಲ್ಲಿ ಚರ್ಚೆ, ವಿಚಾರ ವಿನಿಮಯಗಳನ್ನು ನಡೆಸುವುದು, ವಿದ್ವತ್ಸಭೆಯಲ್ಲಿ ಭಾಗವಹಿಸಿ ಸರ್ವ ಶ್ರೇಷ್ಠ ಎಂದು ತಮ್ಮ ಪಾಂಡಿತ್ಯ, ಅನುಭವಚಗಳಿಂದ ಸಿದ್ಧಪಡಿಸಿಕೊಂಡವರಿಗೆ ಅತ್ಯುನ್ನತವಾದ ಗೌರವವನ್ನು ನೀಡಿ ಕೊಂಡಾಡುವುದು-ಇವು ಮುಖ್ಯವಾಗಿ ಜನಕ ಮಹಾರಾಜನು ನಡೆಸಬೇಕೆಂದು ನಿಶ್ಚಯಿಸಿದ ಬಹುದಕ್ಷಿಣ ಜ್ಞಾನಯಾಗದ ಕಾರ್ಯಾಂಶಗಳಾಗಿದ್ದವು. ಅದರಂತೆ ಆತ್ಮ-ಪರಮಾತ್ಮ, ಜನನ-ಮರಣ ಮೊದಲಾದ ದಿವ್ಯ ವಿಚಾರಗಳ ಚರ್ಚೆಯಲ್ಲಿ ಭಾಗವಹಿಸಿ ವೇದಾರ್ಥವನ್ನು ಅನುಭವ ಪೂರ್ಣವಾಗಿ ತಿಳಿಸಬಲ್ಲವರೇ ಬ್ರಹ್ಮನಿಷ್ಠರು. ನೆರೆದ ವಿದ್ವತ್ಸಭೆಯಲ್ಲಿ ಬ್ರಹ್ಮನಿಷ್ಠರು ಯಾರು ಎಂದು ತೀರ್ಮಾನ ಆಗಬೇಕು. ಅವರಿಗೆ ಮಹಾಜ್ಞಾನಯಾಗದ ಕೊನೆಯಲ್ಲಿ ಸರ್ವಜ್ಞ ಕಿರೀಟ ಧಾರಣೆ ಮಾಡಿಸಿ ಗೌರವಿಸಲಾಗುವುದು ಎಂದು ಸಾರಿದರು. ದೂರದೂರದ ದೇಶಗಳಲ್ಲಿರುವ ಮುನಿಗಳಿಗೆ, ಮಹಾ ವಿದ್ವಾಂಸರಿಗೆಲ್ಲ ಆಮಂತ್ರಣವನ್ನು ಕಳುಹಿಸಲಾಯಿತು. ಯಾಜ್ಞವಲ್ಕ್ಯರನ್ನೂ ಜನಕನು ಗೌರವದಿಂದ ಆಮಂತ್ರಿಸಿದ.

ದೇಶದೇಶಗಳಿಂದ ಋಷಿಗಳು, ವಿದ್ವಾಂಸರು, ಬ್ರಹ್ಮವಾದಿನಿ ಕನ್ಯೆಯರೂ, ಜ್ಞಾನಯಾಗಕ್ಕೆಂದು ಜನಕರಾಜನ ಪಟ್ಟಣಕ್ಕೆ ಬಂದರು. ಮಹರ್ಷಿ ಯಾಜ್ಞವಲ್ಕ್ಯರೂ ಶಿಷ್ಯರ ಸಹಿತ ಬಂದರು. ಸಭೆಯಲ್ಲಿ ಮಹರ್ಷಿಗಳ ಗಾಂಭೀರ್ಯ, ದಿವ್ಯ ತೇಜಸ್ಸುಗಳು ಎದ್ದು ಕಾಣುತ್ತಿದ್ದವು.

ಜನಕಮಹಾರಾಜನು ಸಭೆಗೆ ಬಂದವರೆಲ್ಲರನ್ನೂ ಗೌರವಪೂರ್ಣವಾಗಿ ಸ್ವಾಗತಿಸಿದನು. ಅನಂತರ ‘ಇಲ್ಲಿ ಬ್ರಹ್ಮ ವಿದ್ಯೆ-ದಿವ್ಯ ಜೀವನದ ಕುರಿತಾದ ವಿಚಾರ-ಚರ್ಚೆಗಳೆಲ್ಲ ನಡೆಯಲಿವೆ. ಬ್ರಹ್ಮಿಷ್ಠರು ಯಾರೆಂದು ಅದರಿಂದ ತೀರ್ಮಾನ ಆಗಲಿದೆ. ಅವರನ್ನು ಸರ್ವಜ್ಞ ಪೀಠಾಧಿಪತಿ ಎಂದು ಕರೆದು ಅವರಿಗೆ ಸರ್ವಜ್ಞ ಕಿರೀಟವನ್ನು ಅರ್ಪಿಸುತ್ತೇನೆ. ಹತ್ತಿರದ ಗೋಶಾಲೆಯಲ್ಲಿ ಸುವರ್ಣ ಪದಕಗಳಿಂದ ಅಲಂಕೃತವಾದ ಒಂದು ಸಹಸ್ರ ಗೋವುಗಳನ್ನು ಕಟ್ಟಿದೆ. ಈ ಸಭೆಯಲ್ಲಿ ಬ್ರಹ್ಮಿಷ್ಠರು ಯಾರೋ ಅವರು ಈ ಗೋವುಗಳನ್ನು ತಮ್ಮವೆಂದು ಹೊಡೆದುಕೊಂಡು ಹೋಗಬಹುದು’ ಎಂದು ಸಭೆಯಲ್ಲಿ ಪ್ರಕಟಪಡಿಸಿದನು.

ಸ್ವಲ್ಪ ಕಾಲ ಗಂಭೀರ ಮೌನ.

ಯಾಜ್ಞವಲ್ಕ್ಯರು ಸಭೆಯಲ್ಲಿ ಎದ್ದು ನಿಂತರು. ಅಲ್ಲೇ ಕುಳಿತಿದ್ದ ತಮ್ಮ ಶಿಷ್ಯನತ್ತ ನೋಡಿ, ಧೀರ ಗಂಭೀರ ಧ್ವನಿಯಿಂದ ‘ಸಾಮಶ್ರವ, ಸಾಲಂಕೃತವಾಗಿ ಸಿದ್ಧವಿರುವ ಆ ಸಹಸ್ರ ಗೋವುಗಳನ್ನು ಅಟ್ಟಿಕೊಂಡು ಆಶ್ರಮಕ್ಕೆ ಹೋಗು’ ಎಂದು ಆಜ್ಞಾಪಿಸಿದರು.

ಸಭೆಯಲ್ಲಿ ನೆರೆದವರೆಲ್ಲ ಬೆರಗಾದರು. ಯಾಜ್ಞವಲ್ಕ್ಯರನ್ನೇ ದಿಟ್ಟಿಸಿದರು.

ಆಗ ರಾಜಪುರೋಹಿತರಾದ ಅಶ್ವಲರು, ‘ನಮ್ಮಲ್ಲಿ ಬ್ರಹ್ಮಿಷ್ಠರು ನೀವೇ ಅಲ್ಲವೇ?’ ಎಂದು ಯಾಜ್ಞವಲ್ಕ್ಯರನ್ನು ಪ್ರಶ್ನಿಸಿದರು.

ಯಾಜ್ಞವಲ್ಕ್ಯರು ‘ಬ್ರಹ್ಮಿಷ್ಠರಿಗೆ ನಾವು ವಂದಿಸುತ್ತೇವೆ’ ಎಂದರು. ‘ಹಾಗಿದ್ದರೆ ನೀವು ಗೋವುಗಳನ್ನೇಕೆ ಹೊಡೆದುಕೊಂಡು ಹೋಗಲು ಹೇಳಿದಿರಿ?’ ಎಂದು ಅಶ್ವಲರು ಪ್ರಶ್ನಿಸಿದರು. ‘ನಮಗೆ ಗೋವುಗಳು ಬೇಕಿದ್ದವು’ ಎಂದರು ಯಾಜ್ಞವಲ್ಕ್ಯರು. ‘ಬ್ರಹ್ಮಿಷ್ಠರು ಯಾರೋ ಅವರು ಕರೆದುಕೊಂಡು ಸಾಗಿಸಬಹುದೆಂದು ಇಟ್ಟ ಸಹಸ್ರ ಗೋವುಗಳನ್ನು ನೀವು ಹೊಡೆದುಕೊಂಡು ಹೋಗಲು ಶಿಷ್ಯನಿಗೆ ಆಜ್ಞಾಪಿಸಿದ್ದೀರಿ. ಅದರಿಂದ ಬ್ರಹ್ಮಿಷಠರು ನೀವೇ ಎಂದು ಬೇರೊಂದು ರೀತಿಯಲ್ಲಿ ಸ್ಪಷ್ಟಪಡಿಸಿರುತ್ತೀರಿ. ಹಾಗಾಗಿ ಈ ಸಭೆಯಲ್ಲಿ ಯಾರು ಬೇಕಾದರೂ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬಹುದೆಂದು ನೀವು ಹೇಳಿದಂತಾಯಿತು’ ಎಂದರು ರಾಜಪುರೋಹಿತರು.

‘ಪ್ರಶ್ನೆಗಳನ್ನು ಬ್ರಹ್ಮ ವಿಚಾರವಾಗಿ ಕೇಳಬಹುದು’ ಯಾಜ್ಞವಲ್ಕ್ಯರು ಉತ್ತರಿಸಿದರು.

ಸರ್ವಜ್ಞ ಕಿರೀಟ

ಆ ಮಹಾಸಭೆಯಲ್ಲಿ ಅದ್ಭುತ ಪಾಂಡಿತ್ಯವಿದ್ದವರು ಅನೇಕರು ಸೇರಿದ್ದರು. ಅವರು ಯಾಜ್ಞವಲ್ಕ್ಯರ ಮೇಲೆ ಪ್ರಶ್ನೆಗಳ ಮಳೆಯನ್ನೇ ಸುರಿಸಿದರು.

ಪ್ರಶ್ನೆ ಮುಗಿಯುತ್ತಿದ್ದಂತೆಯೇ ಯಾಜ್ಞವಲ್ಕ್ಯರು ಸಾಮರ್ಥ್ಯದಿಂದ ಉತ್ತರಿಸಿದರು. ಯಾವುದರ ಮೂಲಕ ಮೃತ್ಯುವಿನಿಂದ ಮುಕ್ತಿ ಲಭಿಸುತ್ತದೆ? ಆತ್ಮ ಎಂದರೇನು? ಕಾಣುವ ಈ ಜಗತ್ತು, ಆಕಾಶ ಇವುಗಳೆಲ್ಲ ಯಾವುದರಿಂದ ವ್ಯಾಪ್ತವಾಗಿದೆ? ಎಂದು ಅನೇಕ ರೀತಿಯ ಪ್ರಶ್ನೆಗಳನ್ನು ಒಬ್ಬೊಬ್ಬರಾಗಿ ಯಾಜ್ಞವಲ್ಕ್ಯರನ್ನು ಕೇಳಿದರು. ಬ್ರಹ್ಮವಾದಿನಿ ಗಾರ್ಗಿಯೂ ಹಲವು ಪ್ರಶ್ನೆಗಳನ್ನು ಕೇಳಿದಳು. ‘ಮನಸ್ಸೇ ಮುಕ್ತಿಗೆ ಸಾಧನ. ಮನಸ್ಸು ಬ್ರಹ್ಮ. ಯಾವನು ಸರ್ವ ಪ್ರಾಣಿಗಳಲ್ಲಿ ಇದ್ದು ಸರ್ವ ಪ್ರಾಣಿಗಳ ಒಳಗಿರುವನೋ, ಯಾವನನ್ನು ಸರ್ವಪ್ರಾಣಿಗಳು ತಿಳಿಯವೋ, ಯಾವನಿಗೆ ಎಲ್ಲ ಪ್ರಾಣಿಗಳು ಶರೀರವೋ, ಯಾವನು ಒಳಗೆ ಇದ್ದುಕೊಂಡು ಸರ್ವ ಪ್ರಾಣಿಗಳನ್ನು ನಿಯಮಿಸುವನೋ ಅವನೇ ಅಂತರ್ಯಾಮಿಯು. ಅಮೃತನಾದ ಆತ್ಮನು. ಕಾಣುವ ಈ ಜಗತ್ತು, ಆಕಾಶ ಎಲ್ಲವೂ ಅಕ್ಷರದಿಂದ, ಅಂದರೆ ನಾಶವಿಲ್ಲದ ಪರಮಾತ್ಮನಿಂದ ತುಂಬಿದೆ. ಅದನ್ನು ತಿಳಿದುಕೊಳ್ಳುವ ತನಕ ಜನನ ಮರಣಗಳ ಸಂಕಟ ತಪ್ಪಿದ್ದಲ್ಲ. ಅಕ್ಷರನನ್ನು ಪರಮಾತ್ಮನನ್ನು ಅರಿತುಕೊಂಡಾಗ ಅವನು ಬ್ರಹ್ಮವಿದನಾಗುತ್ತಾನೆ, ಬ್ರಹ್ಮಿಷ್ಠನಾಗುತ್ತಾನೆ. ಜನನ ಮರಣಗಳ ಸಂಕಟದ ಸಂಕೋಲೆಯಿಂದ ಬಿಡುಗಡೆ ಹೊಂದುತ್ತಾನೆ’ ಎಂಬುದಾಗಿ ಯಾಜ್ಞವಲ್ಕ್ಯರು ವೇದವಿದ್ಯೆಯ ದಿವ್ಯದರ್ಶನಹದ ಅನುಭವದಿಂದ ಹೇಳಿದರು. ಅವರ ಉತ್ತರ ಜ್ಞಾನಗಂಗೆಯಾಗಿ ಅಲ್ಲಿ ನೆರೆದವರೆಲ್ಲರ ಹೃನ್ಮನಗಳಲ್ಲಿ ಹರಿಯಿತು. ಪ್ರಶ್ನೆಗಳನ್ನು ಕೇಳಿದವರು ತಮಗೆ ಯಾಜ್ಞವಲ್ಕ್ಯರಿಂದ ಸಮರ್ಪಕವಾದ ಉತ್ತರ ದೊರೆತಂತೆ ‘ಬ್ರಹರ್ಷಿಗಳಿಗೆ ನಮಸ್ಕಾರ’ ಎಂದು ಕೈ ಮುಗಿದು ಕುಳಿತುಕೊಳ್ಳುತ್ತಿದ್ದರು.

ಆ ಸಭೆಯಲ್ಲಿ ನೆರೆದವರೆಲ್ಲರೂ ಯಾಜ್ಞವಲ್ಕ್ಯರು ಬ್ರಹ್ಮನಿಷ್ಠರು, ಸರ್ವಜ್ಞರು ಎಂದು ಕೊಂಡಾಡಿ ಗೌರವಿಸಿದರು. ಸಭೆಯಲ್ಲಿ ಹರ್ಷೋದ್ಗಾರವಾಯಿತು. ಆಗ ಜನಕರಾಜನು ಎದ್ದು ನಿಂತು ಯಾಜ್ಞವಲ್ಕ್ಯರನ್ನು ಸರ್ವಜ್ಞ ಪೀಠಾಧಿಪತಿ ಎಂದು ಸಾರಲು ಸಭೆಯ ಅನುಮತಿಯನ್ನು ಕೇಳಿದನು. ಸಭೆ ಒಪ್ಪಿತು. ಮಹಾರಾಜ ಜನಕನು ಸರ್ವಜ್ಞ ಕಿರೀಟವನ್ನು ಬ್ರಹ್ಮರ್ಷಿ ಯಾಜ್ಞವಲ್ಕ್ಯರಿಗೆ ಒಪ್ಪಿಸಿ ನಮಸ್ಕಾರ ಮಾಡಿದನು.

ಜನಕ ಮಹಾರಾಜನು ಆಗಾಗ್ಗೆ ಯಾಜ್ಞವಲ್ಕ್ಯರನ್ನು ದರ್ಶನ ಮಾಡುತ್ತಿದ್ದರು. ಅವರಿಂದ ದಿವ್ಯ ಉಪದೇಶಗಳನ್ನು ತಿಳಿಯುತ್ತಿದ್ದನು. ಕೊನೆಗೊಂದು ದಿವಸ, ‘ಪೂಜ್ಯರೇ, ತಾವು ನನ್ನನ್ನು ಶಿಷ್ಯನನ್ನಾಗಿ ಅಂಗೀಕರಿಸಬೇಕು. ನನ್ನ ರಾಜ್ಯ, ಸಂಪತ್ತು ಸರ್ವವನ್ನೂ ತಮ್ಮದೆಂದು ಸ್ವೀಕರಿಸಬೇಕು’ ಎಂದು ಯಾಜ್ಞವಲ್ಕ್ಯರಲ್ಲಿ ಪ್ರಾರ್ಥಿಸಿಕೊಂಡನು. ವೈರಾಗ್ಯನಿಧಿಯಗಿದ್ದ ಯಾಜ್ಞವಲ್ಕ್ಯರು ನಗುನಗುತ್ತಾ ‘ಅವು ಯಾವುವೂ ನನಗೆ ಬೇಡ’ ಎಂದರು. ಜನಕನಿಗೆ ದಿವ್ಯೋಪದೇಶ ನೀಡಿ ಅವನನ್ನು ಶಿಷ್ಯನಾಗಿ ಸ್ವೀಕರಿಸಿದರು.

ಯಾಜ್ಞವಲ್ಕ್ಯರು ದಿವ್ಯ ಜೀವನವನ್ನು ನಡೆಸಿದರು. ಎಲ್ಲೆಡೆಗಳಿಂದಲೂ ಗೌರವ ಆದರಗಳನ್ನು ಪಡೆದರು. ವೇದ ವಿದ್ಯೆಯನ್ನು ಬಹು ಮಂದಿ ಶಿಷ್ಯರಿಗೆ ಉಪದೇಶಿಸಿದರು. ನಿತ್ಯ ಜೀವನವನ್ನು ಧರ್ಮಸಮ್ಮತವಾಗಿ ನಡೆಸಲು ಸಹಾಯವಾಗುವಂತೆ ಕೆಲವು ಸೂತ್ರಗಳನ್ನು ತಿಳಿಸಿದರು. ಅವು ಒಟ್ಟಿನಲ್ಲಿ ಕಾಲಕ್ರಮೇಣ ‘ಯಾಜ್ಞವಲ್ಕ್ಯ ಸ್ಮೃತಿ’ ಎಂದು ಪ್ರಸಿದ್ಧಿಯನ್ನು ಪಡೆದವು.

ಲೋಕದಿಂದ ಕಣ್ಮರೆಯಾದರು

ಕ್ರಮೇಣ ಯಾಜ್ಞವಲ್ಕ್ಯರಿಗೆ ಲೋಕ ವ್ಯವಹಾರದ ಈ ಜೀವನ ಸಾಕು ಎನ್ನಿಸಿತು. ವನವಾಸಿಗಳಾಗಿ ಬ್ರಹ್ಮ ಚಿಂತನೆಯಲ್ಲೇ ಕಾಲ ಕಳೆಯಲು ನಿರ್ಧರಿಸಿದರು. ತಮ್ಮ ಇಬ್ಬರು ಪತ್ನಿಯರಿಗೆ ತಮ್ಮ ನಿರ್ಧಾರವನ್ನು ತಿಳಿಸಿದರು. ತಮ್ಮ ಸಂಪತ್ತೆಲ್ಲವನ್ನು ಇಬ್ಬರಿಗೂ ಸಮವಾಗಿ ಹಂಚಿದರು. ತನಗೆ ದೊರೆತದ್ದನ್ನು ಕಾತ್ಯಾಯಿನಿದೇವಿಯು ಪತಿಯ ಪ್ರಸಾದ ಎಂದು ಸ್ವೀಕರಿಸಿದಳು. ಆಕೆ ಆಶ್ರಮದ ಶ್ರೀ ಮಾತೆಯಾಗಿ ಉಳಿದಳು. ಮೈತ್ರೇಯಿ ದೇವಿಯು ‘ನನಗೆ ಯಾವುದೂ ಬೇಡ. ಆತ್ಮ ಸಾಕ್ಷಾತ್ಕಾರ ಒಂದೇ ಸಾಕು. ಅದಕ್ಕೆ ಈ ಆಸ್ತಿಪಾಸ್ತಿಗಳಿಂದ ಏನೂ ಉಪಯೋಗವಿಲ್ಲ’ ಎಂದು ಹೇಳಿದಳು.

ಯಾಜ್ಞವಲ್ಕ್ಯರು ವನಕ್ಕೆ ತೆರಳಲು ಹೊರಟು ನಿಂತರು. ಆಗ ಕಾತ್ಯಯಿನಿದೇವಿಯು ಅವರಿಗೆ ಪ್ರಣಾಮ ಮಾಡಿ ಮೊಣಕಾಲೂರಿ ಶಿರಬಾಗಿ ಆಶೀರ್ವಾದವನ್ನು ಬೇಡಿದಳು. ‘ಬ್ರಹ್ಮ ಚಿಂತನೆ ಫಲಿಸಲಿ. ಮುಕ್ತಿ ಶೀಘ್ರವಾಗಿ ಲಭಿಸಲಿ’ ಎಂದು ಹೇಳಿ ಯಾಜ್ಞವಲ್ಕ್ಯರು ಆಶೀರ್ವಾದ ಮಂಗಳ ಕುಂಕುಮವನ್ನು ಕಾತ್ಯಾಯಿನಿ ದೇವಿಯ ಹಣೆಗೆ ತಿಲಕವಾಗಿಟ್ಟರು. ಆಮೇಲೆ ಅವರು ತಪಸ್ಸಿಗೆಂದು ಹಿಮಾಲಯದ ತಪ್ಪಲಿಗೆ ತೆರಳಿದರು. ಮೈತ್ರೇಯಿದೇವಿಯು ಕಾತ್ಯಾಯಿನಿದೇವಿಗೆ ನಮಿಸಿ ಅಕ್ಕನಿಂದ ಬೀಳ್ಕೊಂಡು ವಿರಕ್ತಿಯಾಗಿ ಯಾಜ್ಞವಲ್ಕ್ಯರನ್ನು ಹಿಂಬಾಲಿಸಿದಳು.

ಇಬ್ಬರೂ ಹಿಮಾಲಯದ ತಪ್ಪಲಿನಲ್ಲಿ ತಪಸ್ಸಿನಲ್ಲಿ ನಿರತರಾಗಿದ್ದರು. ಒಂದು ದಿನ ಮೈತ್ರೇಯಿಯು ಮುಕ್ತಿಯನ್ನು ಹೊಂದಿದಳು. ಇನ್ನು ಕೆಲವು ದಿನಗಳು ಕಳೆದ ನಂತರ ಯಾಜ್ಞವಲ್ಕ್ಯರು ದಿವ್ಯಧ್ಯಾನದ ಮೂಲಕ ಬ್ರಹ್ಮಲೀನರಾಗಿ ಈ ಲೋಕದಿಂದ ಕಣ್ಮರೆಯಾದರು!

ಯಾಜ್ಞವಲ್ಕ್ಯರ ಜೀವನದ ಹಿರಿಮೆಸಂದೇಶದ ಬೆಳಕು

ಯಾಜ್ಞವಲ್ಕ್ಯರ ಶುಕ್ಲಯಜುರ್ವೇದವನ್ನು  ಲೋಕಕ್ಕೆ ನೀಡಿ ಮಹಾಮಹಿಮರಾದರು. ಹಗಲಿನ ವೇಳೆ ಭಗವಂತನಿಂದ ಪಡೆದ ಜ್ಞಾನನಿಧಿ ಅದಾದ್ದರಿಂದ ಅದಕ್ಕೆ ಶುಕ್ಲ ಯಜುರ್ವೇದ ಎಂದು ಹೆಸರಾಯಿತು. ಸೂರ್ಯದೇವನು ವಾಜಿ (ಕುದುರೆ)ಯ ರೂಪದಲ್ಲಿ ಬಂದು ವೇದವಿದ್ಯೆಯನ್ನು ಅನುಗ್ರಹಿಸಿದುದರಿಂದ ಶುಕ್ಲ ಯಜುರ್ವೇದವನ್ನು ‘ವಾಜಸನೇಯ ಸಂಹಿತೆ’ ಎಂದೂ ಕರೆಯುತ್ತಾರೆ. ಯಾಜ್ಞವಲ್ಕ್ಯರ ಜೀವನದಲ್ಲಿ ಸತ್ಯನಿಷ್ಠೆ, ಆತ್ಮ ವಿಶ್ವಾಸ, ಸಾಹಸಪೂರ್ಣ ಸಾಧನೆ ಮತ್ತು ತಪಸ್ಸುಗಳ ಬಲ ಮತ್ತು ಫಲವನ್ನು ನಾವು ವಿಶೇಷವಾಗಿ ಕಾಣುತ್ತೇವೆ. ಮನುಷ್ಯನು ಭಗವದ್ಭಕ್ತಿ ಮತ್ತು ಸ್ವಪ್ರಯತ್ನ ಇವೆರಡರ ನೆರವಿನಿಂದ ಎಷ್ಟು ಮೇಲ್ಮಟ್ಟಕ್ಕೆ ಏರಬಹುದು, ಏರಿ ಮಹಾಕಾರ್ಯಗಳನ್ನು ಹೇಗೆ ಸಾಧಿಸಬಹುದು ಎಂಬುದಕ್ಕೆ ಯಾಜ್ಞವಲ್ಕ್ಯರ ಜೀವನ ಉಜ್ವಲವಾದ ಒಂದು ನಿದರ್ಶನ. ನಾವು ಮಾಂಸ, ಮೂಳೆಗಳಿಂದ ಕೂಡಿದ ಶರೀರಗಳಷ್ಟೇ ಅಲ್ಲ, ನಮ್ಮಲ್ಲಿ ಅಳಿವಿಲ್ಲದ ಆತ್ಮಶಕ್ತಿ ಇದೆ. ಅದನ್ನು ಸರಿಯಾದ ಸಾಧನೆಯಿಂದ ಪ್ರಕಾಶಗೊಳಿಸಿದಾಗ ನಮ್ಮ ಜೀವನ ಭದ್ರವಾಗುತ್ತದೆ. ಶುಭ ಆಗುತ್ತದೆ. ಮಂಗಳವಾಗುತ್ತದೆ ಎಂದು ಯಾಜ್ಞವಲ್ಕ್ಯರ ಜೀವನ ತೋರಿಸಿಕೊಡುತ್ತದೆ.

ಈ ಜಗತ್ತೆಲ್ಲವೂ ಈತನಿಂದ ಎಂದರೆ ಪರಮಾತ್ಮನಿಂದ ವ್ಯಾಪ್ತವಾಗಿರುತ್ತದೆ. ಈ ಲೋಕದಲ್ಲಿ ಜನ್ಮವೆತ್ತಿದ ಮೇಲೆ ಮಾಡುವ ಕರ್ಮಗಳು ಎಲ್ಲವನ್ನೂ ಸರ್ವವ್ಯಾಪಿ ಪರಮಾತ್ಮನಿಗೆ ಅರ್ಪಿತ ಎಂದು ಮಾಡಬೇಕು. ಅದೇ ತ್ಯಾಗ, ಆ ಭಾವನೆಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಾ ಈ ಲೋಕದಲ್ಲಿ ನೂರು ವರ್ಷಗಳ ಕಾಲದಷ್ಟು ಜೀವಿಸಲು ಇಚ್ಛಿಸಬೇಕು. ವೇದದ ಈ ದಿವ್ಯ ಸಂದೇಶವನ್ನು ಯಾಜ್ಞವಲ್ಕ್ಯರು ಈಶಾವಾಸ್ಯ ಉಪನಿಷತ್ತಿನ ಮೂಲಕ ನೀಡಿರುತ್ತಾರೆ.

ಮಂತ್ರದ್ರಷ್ಟಾರರಾಗಿ, ಮಹಾಮಹಿಮರಾಗಿ, ಮನುಕುಲದ ಕಲ್ಯಾಣಕ್ಕಾಗಿ ವೇದದ ಬೆಳಕನ್ನು ಇಳೆಯಲ್ಲಿ ಬೆಳಗಿರುವ ಮಹರ್ಷಿ ಯಾಜ್ಞವಲ್ಕ್ಯರು ನಿಜಕ್ಕೂ ಪಾವನ ಪುರುಷರು – ಪ್ರಾತಃಸ್ಮರಣೀಯರು!