ಇದು ಪಾಪ, ಪುಣ್ಯ, ಇದು ಹಿತ, ಇದು ಅಹಿತ, ಇದು ಸುಖ, ಇದು ದುಃಖ” ಎಂದು ನಮಗೆ ತಿಳಿಯಪಡಿಸಿ ಸರಿಯಾದ ದಾರಿಯಲ್ಲಿ ನಮ್ಮನ್ನು ಕರೆದೊಯ್ಯುವವರು ಆಚಾರ್ಯರು.

ನಮ್ಮ ಪ್ರಪಂಚವನ್ನು ಚೇತನ, ಅಚೇತನ ಎಂದು ಎರಡು ಬಗೆಯಾಗಿ ವಿಂಗಡಿಸಬಹುದು. ಜೀವವುಳ್ಳದ್ದು ಚೇತನ. ಕಲ್ಲಿನಂತೆ ಬಿದ್ದಿರತಕ್ಕದ್ದು ಅಚೇತನ. ಅದು ಜಡ. ಚೇತನ ಅಚೇತನಗಳೆರಡನ್ನೂ ದೇವರು ಸೃಷ್ಟಿಸಿದ ಎಂದು ನಮ್ಮ ನಂಬುಗೆ. ಇವನು ಪರಮಾತ್ಮ. ಜೀವಿಗಳ ದೇಹಗಳಲ್ಲಿ ವಾಸಿಸುವವರು ಜೀವಾತ್ಮರು.

ತಮ್ಮ ತಂದೆಯಾದ ದೇವರ ಸ್ವರೂಪ ಎಂಥದು ಎಂಬುದು ಅನೇಕ ಜೀವರುಗಳಿಗೆ ಗೊತ್ತಿರುವುದಿಲ್ಲ. ತಂದೆ-ಮಕ್ಕಳಾಗಿದ್ದೂ ಬೇರೆಬೇರೆಯಾಗಿರುವ ದೇವ-ಜೀವರ ಸಂಬಂಧವನ್ನು ತಿಳಿದು, ಜೀವರನ್ನು ದೇವರ ಕಡೆಗೆ ಕರೆದೊಯ್ಯುವವರೂ, ಅವರನ್ನು ಮತ್ತೆ ಒಂದುಗೂಡಿಸುವವರೂ ಆಚಾರ್ಯರು ಎಂದು ನಮ್ಮಲ್ಲಿ ನಂಬುಗೆ. ಆದ್ದರಿಂದಲೇ ಆಚಾರ್ಯರಿಗೆ ಹಿರಿಮೆಯ ಸ್ಥಾನ.

ಹಿಂದೂ ಧರ್ಮದ-ಸನಾತನ ಧರ್ಮದ-ಮೂವರು ದೊಡ್ಡ ಆಚಾರ್ಯರು ಶಂಕರ, ರಾಮಾನುಜ, ಮಧ್ವ, ಈ ಮೂವರೂ ಹೊಂದಿದ್ದ ಗುರಿ ಒಂದೇ. ಅದು ಪರಮಾತ್ಮಪ್ರಾಪ್ತಿ. ದೇವರ ಸ್ವರೂಪದ ದರ್ಶನ, ಅವನ ಸಾನ್ನಿಧ್ಯದ ಸಂಪಾದನೆ, ಅವನ ಒಲುಮೆಯ ಗಳಿಕೆ. ಮುಖ್ಯವಾಗಿ ಗಮನಿಸಬೇಕಾದ ವಿಚಾರವಿದು: ಇವರ ಹಾದಿಗಳು ಬೇರೆಬೇರೆಯಾದರೂ ಇವರೆಲ್ಲರಿಗೂ ಬೆಳಕು ನೀಡಿದ ವೇದ ಉಪನಿಷತ್ತುಗಳೂ ಗೀತೆಯೂ ಒಂದೇ.

ಶ್ರೀವೈಷ್ಣವ ಧರ್ಮ

ಈ ಮೂವರು ಆಚಾರ್ಯರ ಪೈಕಿ ರಾಮಾನುಜರು ಬೋಧಿಸಿದ ಮಾರ್ಗಕ್ಕೆ ವಿಶಿಷ್ಟಾದ್ವೈತ ಎಂದು ಹೆಸರು. ಇವರು ಅನುಸರಿಸಿದ ಧರ್ಮ ಶ್ರೀ ವೈಷ್ಣವ ಧರ್ಮ ಎಂದು ಪ್ರಸಿದ್ಧವಾಗಿದೆ. ವಿಶಿಷ್ಟಾದ್ವೈತ ಎಂಬ ಪದದಲ್ಲಿ ವಿಶಿಷ್ಟ. ಅದ್ವೈತ ಎಂಬ ಎರಡು ಪದಗಳಿವೆ. ಅದ್ವೈತ ಎಂದರೆ ಎರಡಲ್ಲದ್ದು. ರಾಮಾನುಜಾಚಾರ್ಯರಿಗೆ ಹಿಂದೆ ಇದ್ದ ಶಂಕರಾಚಾರ್ಯರು ಅದ್ವೈತವನ್ನು ಬೋಧಿಸಿದರು. ಬ್ರಹ್ಮವೊಂದೇ-ಎಂದರೆ ದೇವರೊಂದೇ-ಸತ್ಯ. ಎರಡಿಲ್ಲ. ಉಳಿದಿದ್ದೆಲ್ಲ ಬರಿ ತೋರಿಕೆ, ಮಾಯೆ, ಸ್ವಪ್ನ. ಸಂಸ್ಕೃತದಲ್ಲಿ ಈ ತತ್ವವನ್ನು “ಏಕಮೇವ, ಅದ್ವಿತೀಯಂ” ಎಂದು ಹೇಳಿದ್ದಾರೆ. ದೇವರಿಗೆ – ಬ್ರಹ್ಮನಿಗೆ-ಯಾವ ಗುಣಗಳೂ ಇಲ್ಲ. ಅವನಿಗೆ ರೂಪವಿಲ್ಲ. ಬಣ್ಣವಿಲ್ಲ, ಒಳ್ಳೆಯದು ಕೆಟ್ಟದ್ದು ಎಂಬ ಯಾವುದೂ ಇಲ್ಲ. ಹೀಗೆಂದು ಅದ್ವೈತ ಸಾರುತ್ತದೆ. ರಾಮಾನುಜರು ನಡೆದು ಬೋಧಿಸಿದ್ದು ವಿಶಿಷ್ಟ ಅದ್ವೈತ, ಬ್ರಹ್ಮ ಸತ್ಯ ಎಂದು ಇವರೂ ಹೇಳಿದರು. ಬ್ರಹ್ಮ ಒಬ್ಬನೇ, ಅವನಿಗೆ ಸಮನಾದವರು ಯಾರೂ ಇಲ್ಲ. ಆದರೆ ಬ್ರಹ್ಮ ಸತ್ಯ ಎಂಬ ಮಾತಿಗೆ ಎರಡು ವಿಶೇಷಣಗಳಿವೆ. ಆದ್ದರಿಂದಲೇ ಇದನ್ನು ವಿಶಿಷ್ಟಾದ್ವೈತವೆಂದು ಕರೆದಿರುವುದು. ಆ ವಿಶೇಷಣಗಳು ಚಿತ್ ಮತ್ತು ಅಚಿತ್. ಚಿತ್ ಎಂಬುದು ಜೀವ. ಪ್ರಪಂಚದಲ್ಲಿರುವ ಸಕಲ ಜೀವಿಗಳೂ ಚಿತ್ ಎನಿಸಿಕೊಳ್ಳುತ್ತವೆ. ಅಚಿತ್ ಎಂಬುದು ಪ್ರಕೃತಿ, ಜಡ ಪ್ರಪಂಚ. ದೇವರು ಆನಂದಮಯ, ಸರ್ವವ್ಯಾಪಕ (ಎಲ್ಲ ಕಡೆ ಇರುವವನು). ಸರ್ವಜ್ಞ (ಎಲ್ಲ ತಿಳಿದವನು), ಸರ್ವಶಕ್ತ (ಎಲ್ಲ ಶಕ್ತಿ ಉಳ್ಳವನು). ಚಿತ್, ಅಚಿತ್ ಎರಡೂ ಬ್ರಹ್ಮನ ಶರೀರ. ಇವು ಸ್ವತಂತ್ರವಲ್ಲ, ದೇವರಿಗೆ ಅಧೀನ. ಇವು ಮಿಥ್ಯೆ ಅಥವಾ ಸುಳ್ಳಲ್ಲ. ಇವೂ ಸತ್ಯವೇ. ಕಣ್ಣಿಗೆ ಕಾಣುವ ಎಲ್ಲವೂ ಸತ್ಯವೇ. ಹೀಗೆ ಚಿತ್, ಅಚಿತ್ ಇವುಗಳಿಂದ ಕೂಡಿದ, ಎಂದರೆ ವಿಶಿಷ್ಟವಾದ, ಅದ್ವೈತವನ್ನು ರಾಮಾನುಜಾಚಾರ್ಯರು ಬೋಧಿಸಿದರು. ಆದ್ದರಿಂದ ಇದಕ್ಕೆ ವಿಶಿಷ್ಟಾದ್ವೈತ ಎಂದು ಹೆಸರು ಬಂದಿದೆ.

ಇದನ್ನು ಶ್ರೀವೈಷ್ಣವ ಧರ್ಮವೆಂದು ಕರೆದಿರುವುದಕ್ಕೂ ಅರ್ಥವಿದೆ. ದೇವರೂ ಎಲ್ಲೆಲ್ಲೂ ವ್ಯಾಪಿಸಿರುವುದರಿಂದ ಅವನಿಗೆ ವಿಷ್ಣು ಎಂದು ಹೆಸರು. ಶ್ರೀಯಃಪತಿಯಾದ – ಎಂದರೆ ಲಕ್ಷ್ಮಿಯ ಗಂಡನಾದ – ವಿಷ್ಣುವಿನಲ್ಲಿ ಭಕ್ತಿಯನ್ನು ಸಾಧಿಸುವುದು ಈ ಧರ್ಮದ ಗುರಿ. ಭಕ್ತಿ ಎಂಬುದು ಮೂಢನಂಬಿಕೆಯಲ್ಲ. ಈಶ್ವರನ ಜ್ಞಾನದಿಂದ ಕೂಡಿ ಅವನ ಇಚ್ಛೆಯಂತೆ ನಡೆಯುವುದೇ ಭಕ್ತಿ. ಹೀಗೆ ಜ್ಞಾನ, ಕರ್ಮ(ಕೆಲಸ) ಇವೆರಡೂ ಭಕ್ತಿಯ ಎರಡು ಕಾಲುಗಳು. ದೇವರ ಜ್ಞಾನವನ್ನು-ಅರಿವನ್ನು-ಹೊಂದಿ ನಮ್ಮ ಕೆಲಸವನ್ನು ನಾವು ಶ್ರದ್ಧೆಯಿಂದ ಮಾಡಿದಾಗ ಭಕ್ತಿ ಹುಟ್ಟುತ್ತದೆ. ಭಕ್ತಿಯಿಂದ ದೇವರ ಸಾಕ್ಷಾತ್ಕಾರ ಪಡೆಯಬಹುದು, ಎಂದರೆ ಅವನನ್ನು ಕಾಣಬಹುದು. ಈ ಪ್ರಪಂಚದಲ್ಲಿ ಚೆನ್ನಾಗಿ ಬದುಕಬೇಕು, ಸಂತೋಷದಿಂದ ನಡೆದುಕೊಳ್ಳಬೇಕು ಎಂದು ಶ್ರೀವೈಷ್ಣವ ಧರ್ಮ ಬೋಧಿಸುತ್ತದೆ.

ಪೂರ್ವಾಚಾರ್ಯರು-ಆಳ್ವಾರರು-ಆಚಾರ್ಯರು

ರಾಮಾನುಜಾಚಾರ್ಯರಿಗೆ ಬಹಳ ಹಿಂದಿನಿಂದಲೂ ಅನೇಕ ಆಚಾರ್ಯರೂ ಭಕ್ತರೂ ಈ ಧರ್ಮವನ್ನು ಅನುಸರಿಸಿ ಬೋಧಿಸಿದರು; ದೇವರನ್ನು ಕುರಿತ ತಮ್ಮ ಅನುಭವವನ್ನು ಹಾಡಿದರು. ಈ ಆಚಾರ್ಯರು ಬಹಳ ಹಿಂದೆ ಇದ್ದವರಾದ್ದರಿಂದ ಇವರು ಪೂರ್ವಾಚಾರ್ಯರೆಂದು ಹೆಸರಾಗಿದ್ದಾರೆ. ಅನಂತರ ತಮಿಳುನಾಡಿನಲ್ಲಿ ಆಳ್ವಾರ್‌ಗಳೆಂಬ ಸಂತರು ಹುಟ್ಟಿ ದೇವರಲ್ಲಿ ಭಕ್ತಿ ಸಾಧಿಸಿ ತಮ್ಮ ಅನುಭವಸಾರವನ್ನು ತಮಿಳಿನಲ್ಲಿ ಹಾಡಿದರು. ಇವರು ರಚಿಸಿದ ಹಾಡುಗಳು ದಿವ್ಯ ಪ್ರಬಂಧಗಳೆಂದು ಪ್ರಸಿದ್ಧವಾಗಿವೆ. ಆಳ್ವಾರರುಗಳೆಂದರೆ ದೇವರ ಭಕ್ತಿಯಲ್ಲಿ ಆಳಿದವರು, ಅದ್ದಿದವರು ಎಂದು ಅರ್ಥ.

ಪೂರ್ವಾಚಾರ್ಯರ ಸಂಸ್ಕೃತ ಕೃತಿಗಳ ತಿರುಳೂ, ಆಳ್ವಾರರುಗಳ ತಮಿಳು ಪ್ರಬಂಧಗಳ ತಿರುಳೂ ಬೇರೆ ಬೇರೆಯಲ್ಲ. ಅವೆರಡೂ ಒಂದೇ ಎಂಬುದನ್ನು ನಮಗೆ ತೋರಿಸಿಕೊಟ್ಟವರೆಂದರೆ, ಆಳ್ವಾರರುಗಳ ಅನಂತರ ಬಂದ ಆಚಾರ್ಯರು. ಇವರು ಆಳ್ವಾರರುಗಳ ತಮಿಳು ಪ್ರಬಂಧಗಳಿಗೆ ಸಂಗೀತವನ್ನು ಹಚ್ಚಿ ಅವನ್ನು ಹಾಡಿ, ಅವು ಜನರಿಗೆ ಹೆಚ್ಚು ಪ್ರಿಯವಾಗುವಂತೆ ಮಾಡಿದರಲ್ಲದೆ, ಪೂರ್ವಾಚಾರ್ಯರ ಸಂಸ್ಕೃತ ಕೃತಿಗಳನ್ನೂ ಆಳ್ವಾರರುಗಳ ತಮಿಳು ಪ್ರಬಂಧಗಳನ್ನೂ ಚೆನ್ನಾಗಿ ಅಭ್ಯಾಸಮಾಡಿ ಇವೆರಡರಲ್ಲೂ ಅಡಗಿರುವ ವಿಶಿಷ್ಟಾದ್ವೈತ ತತ್ವವನ್ನು ವಿವರಿಸಿದರು, ವ್ಯಾಖ್ಯಾನ ಮಾಡಿದರು.

ಪರಂಪರೆ

ಹೀಗೆ ಆಳ್ವಾರರುಗಳ ಅನಂತರ ಬಂದ ಆಚಾರ್ಯರಲ್ಲಿ ಮೊದಲಿಗರು ನಾಥಮುನಿಗಳು. ಅನಂತರ ಬಂದವರು ಉಯ್ಯಕ್ಕೊಂಡಾರ್ ಅಥವಾ ಪುಂಡರೀಕಾಕ್ಷ. ಅವರ ಪಟ್ಟಶಿಷ್ಯ ಮಣಕ್ಕಾಲ್ ನಂಬಿ ಅಥವಾ ರಾಮಮಿಶ್ರ. ಈ ಪರಂಪರೆಯಲ್ಲಿ ಅವರ ಉತ್ತರಾಧಿಕಾರಿ ಯಾಮುನಾಚಾರ್ಯ. ಇವರ ಅನಂತರ ಬಂದವರು ಆಚಾರ್ಯ ರಾಮಾನುಜರು. ಆಮೇಲೆ ಕೂಡ ಈ ಪರಂಪರೆ ಹೀಗೆಯೇ ಮುಂದುವರಿಯಿತು.

ಉಯ್ಯಕ್ಕೊಂಡಾರರು ತೀರಿಕೊಳ್ಳುವ ಕಾಲ ಸಮೀಪಿಸಿದಾಗ ಅವರು ರಾಮಮಿಶ್ರರನ್ನು ಹತ್ತಿರಕ್ಕೆ ಕರದರು. ತಮ್ಮ ಗುರುಗಳಾದ  ನಾಥಮುನಿಗಳ ತೀರಿಕೊಂಡ ಮಗನ ಮಗನಾದ ಯಾಮುನಾಚಾರ್ಯರು ದೊಡ್ಡವರಾದ ಮೇಲೆ ಅವರಿಗೆ ತಮ್ಮ ಜ್ಞಾನವನ್ನೆಲ್ಲ ಬೋಧಿಸಬೇಕೆಂದೂ, ಯಾಮುನರು ಈ ಪರಂಪರೆಯನ್ನು ಮುಂದುವರಿಸಬೇಕೆಂದೂ ಹೇಳಿದರು. (ಯಾಮುನರು ಹುಟ್ಟಿದ್ದು ಕ್ರಿ.ಶ. ೯೧೬ರ ಸುಮಾರಿಗೆ,)

ಯಾಮುನರು ಎಲ್ಲಿ?

ತಮ್ಮ ಗುರುವಾದ ಉಯ್ಯಕ್ಕೊಂಡಾರರಿಗೆ ಮಾತು ಕೊಟ್ಟಂತೆ ರಾಮಮಿಶ್ರರು ಯಾಮುನರಿಗಾಗಿ ಹುಡುಕಾಟ ನಡೆಸಿದರು. ಯಾಮುನರು ನಾಥಮುನಿಗಳ ಮಗ ಮೊಮ್ಮಗ ಎಂಬುದು ಅವರಿಗೆ ಗೊತ್ತಿತ್ತಾದರೂ, ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿರಲಿಲ್ಲ. ಚಿಕ್ಕಂದಿನಲ್ಲಿ ಯಾಮುನರು ತುಂಬ  ಬಡತನದ ಜೀವನ  ನಡೆಸುತ್ತಿದ್ದರು. ನಾಥಮುನಿಗಳ ಮಗ ಈಶ್ವರಮುನಿ, ಯಾಮುನರು ಅವರ ಮಗ, ಈಶ್ವರಮುನಿ ಅಕಾಲ ಮರಣಕ್ಕೆ ತುತ್ತಾಗಿದ್ದುದರಿಂದ ಯಾಮುನರು ತಬ್ಬಲಿಯಾಗಿ ಬೆಳೆಯ ಬೇಕಾಯಿತು. ನಾಥಮುನಿ ಸಂನ್ಯಾಸಿಯಾದರು. ತಾತನಾದ ನಾಥಮುನಿಯ ಆಶ್ರಯವೂ ಯಾಮುನರಿಗೆ ದೊರಕಲಿಲ್ಲ. ಅವರು ತಾಯಿ ಅಜ್ಜಿಯರ ಆರೈಕೆಯಲ್ಲಿ ಬೆಳೆದರು.

ಇದರಿಂದ ರಾಮಮಿಶ್ರರಿಗೆ ಯಾಮುನರನ್ನು ಪತ್ತೆ ಹಚ್ಚುವುದು ಬಹು ಕಷ್ಟವಾಯಿತು. ಆದರೂ ಯಾಮುನರನ್ನು ಕೊನೆಗೂ ಅವರು ಪತ್ತೆ ಹಚ್ಚಿದರು. ಮುಂದೆ ಯಾಮುನರು ಗುರುಗಳಾಗಿ, ಸಾವಿರಾರು ಮಂದಿಗೆ ಮಾರ್ಗದರ್ಶನ ಮಾಡುವ ಹಿರಿಯರಾಗಬೇಕಾಗಿತ್ತಲ್ಲವೆ? ಆದುದರಿಂದ ಅವರಿಗೆ ಒಳ್ಳೆಯ ಶಿಕ್ಷಣ ದೊರೆಯುವುದು ಅಗತ್ಯವಾಗಿತ್ತು. ಅವರಿಗೆ ಒಳ್ಳೆಯ ಗುರುವಿನ ಮಾರ್ಗದರ್ಶನ ದೊರೆಯಬೇಕಾಗಿತ್ತು.

ಮಹಾಭಾಷ್ಯ ಭಟ್ಟರು-‘ವಿದ್ವಜ್ಜನ ಕೋಲಾಹಲ’

ಯಾಮುನರಿಗೆ ವಿದ್ಯೆ ಹೇಳಿಕೊಡುತ್ತಿದ್ದ ಗುರುವಿನ ಹೆಸರು ಮಹಾಭಾಷ್ಯ ಭಟ್ಟ. ಅವರು ಬಲು ದೊಡ್ಡ ವಿದ್ವಾಂಸರು. ಆಸೆಯಿಂದ ಕಲಿಯುವವರಿಗೆ ತಮ್ಮಲ್ಲಿದ್ದ ಜ್ಞಾನದ ಭಂಡಾರವನ್ನೆಲ್ಲ ಒಪ್ಪಿಸಿಬೇಕೆಂಬುದು ಅವರ ತವಕ. ಯಾಮುನರಂತೂ ಅವರಿಗೆ ಬಲು ಅಚ್ಚುಮೆಚ್ಚು. ಈ ಶಿಷ್ಯ ತಮ್ಮನ್ನೂ ಮೀರಿಸುತ್ತಾನೆ. ತನ್ನ ಜ್ಞಾನದಿಂದ ಲೋಕವನ್ನು ಬೆಳಗುತ್ತಾನೆ ಎಂದು ಅವರಿಗೆ ಅನ್ನಿಸಿತ್ತು.

ಆದರೆ ಎಲ್ಲ ವಿದ್ವಾಂಸರೂ ಮಹಾಭಾಷ್ಯ ಭಟ್ಟರ ಹಾಗೆಯೇ ಇರುವುದಿಲ್ಲ. ಕೆಲವರಿಗೆ ಸ್ವಲ್ಪ ವಿದ್ಯೆ ಬಂದರೂ ಬಹಳ ಗರ್ವಪಡುತ್ತಾರೆ.

ಆಗ ಆ ಸುತ್ತಿನ ನಾಡನ್ನು ಆಳುತ್ತಿದ್ದ ರಾಜನ ಆಸ್ಥಾನದಲ್ಲಿ ಒಬ್ಬ ಪಂಡಿತನಿದ್ದ. ಆಸ್ಥಾನಪಂಡಿತನೆಂದ ಮೇಲೆ ಕೇಳಬೇಕೆ? ಸಕಲ ಮರ್ಯಾದೆ, ಉರುಳಾಡುವಷ್ಟು ಸಂಪತ್ತು, ಸುಖ.

ಅವನಿಗೆ ಮಹಾ ಅಹಂಕಾರ. ತನ್ನ ಸಮಾನ ಯಾರೂ ಇಲ್ಲ ಎಂದು ಅವನು ಭಾವಿಸಿದ್ದ. ಎಲ್ಲ ವಿದ್ವಾಂಸರನ್ನೂ ವಾದಕ್ಕೆ ಕರೆದು, ಅಟ್ಟಹಾಸದಿಂದ ಅವರನ್ನು ಜರೆದು, ಬಾಯಿಬಡಿದು ಅವರನ್ನು ಸೋಲಿಸುತ್ತಿದ್ದ. ‘ವಿದ್ವಜ್ಜನಕೋಲಾಹಲ’ ಎಂಬ ಬಿರುದು ಬೇರೆ ಅವನಿಗೆ ಬಂದಿತ್ತು. ಅದೇ ಅವನ ಹೆಸರಾಗಿಬಿಟ್ಟಿತ್ತು. ಎಲ್ಲ ವಿದ್ವಾಂಸರನ್ನೂ ತೊಳಲಾಡಿಸುವವನು ತಾನು ಎಂದು ಅವನ ಹೆಮ್ಮೆ. ದೊರೆಯ ಆಶ್ರಯ ಪಡೆದಿದ್ದ ವಿದ್ವಜ್ಜನಕೋಲಾಹಲನನ್ನು ಕಂಡರೆ ಎಲ್ಲರೂ ಹೆದರುತ್ತಿದ್ದರು. ಇವನ ಸಹವಾಸ ನಮಗೇಕೆ ಎಂದು ಅವನಿಗೆ ಕೈಮುಗಿಯುತ್ತಿದ್ದರು. ಸುಮ್ಮನೆ ಕೈಮುಗಿದರೆ ಸಾಲದು; ನೀವೆಲ್ಲಾ ನನಗೆ ಕಪ್ಪ ಕೊಡಬೇಕು ಎಂದು ಅವನು ವಿಧಿಸಿದ್ದ. ಇಲ್ಲದಿದ್ದರೆ ಅವರನ್ನು ವಾದಕ್ಕೆ ಎಳೆದು ಮುಖಭಂಗ ಮಾಡುತ್ತಿದ್ದ. ಆದ್ದರಿಂದ ಎಲ್ಲರೂ ಸದ್ದು ಮಾಡದೆ ಅವನಿಗೆ ಕಪ್ಪ ಒಪ್ಪಿಸುತ್ತಿದ್ದರು.

‘ನಿಮ್ಮ ಗುರು ನನ್ನನ್ನು ಕರೆಯಲಿ’

ಯಾಮುನರ ಗುರುವಾದ ಮಹಾಭಾಷ್ಯ ಭಟ್ಟರಿಗೂ ಈ ಕಪ್ಪ ತಪ್ಪಿರಲಿಲ್ಲ. ಆದರೆ ಇದನ್ನು ವರ್ಷವರ್ಷವೂ ತಪ್ಪದೆ ಒಪ್ಪಿಸಲು ಅವರಿಗೆ ಶಕ್ತಿ ಇರಲಿಲ್ಲ. ಎರಡು ಮೂರು ವರ್ಷಗಳಿಂದ ಇದನ್ನು ಕೊಟ್ಟಿರಲಿಲ್ಲ.

ಬಾಕಿ ವಸೂಲಿಗಾಗಿ ವಿದ್ವಜ್ಜನಕೋಲಾಹಲ ತನ್ನ ಶಿಷ್ಯನೊಬ್ಬನನ್ನು ಮಹಾಭಾಷ್ಯ ಭಟ್ಟರ ಮನೆಗೆ ಕಳಿಸಿದ. ಆಗ ಭಟ್ಟರು ಊರಿನಲ್ಲಿರಲಿಲ್ಲ. ಗುರುವಿನ ಮನೆಯಲ್ಲಿ ಯಾಮುನರಿದ್ದರು. “ನೀವು ಯಾರು? ಬಂದದ್ದರ ಉದ್ದೇಶ ಏನು?” ಎಂದು ಅವರು ಶಿಷ್ಯನನ್ನು ಕೇಳಿದರು.

ದುರಹಂಕಾರದಲ್ಲಿ ಆ ಶಿಷ್ಯ ತನ್ನ ಗುರುವನ್ನೂ ಮೀರಿಸಿದ್ದ. “ನಿಮ್ಮ ಗುರು ನಮ್ಮ ಗುರುವಿಗೆ ತೆರಿಗೆ ಕೊಡಬೇಕು. ಮೂರು ವರ್ಷಗಳಿಂದ ಕೊಟ್ಟಿಲ್ಲ. ಕೂಡಲೇ ಬಾಕಿ ತೀರಿಸಬೇಕು. ಇಲ್ಲದಿದ್ದರೆ ಅವನ ಗತಿ ನೆಟ್ಟಗಾಗುವುದಿಲ್ಲ. ನಮ್ಮ ಗುರುಗಳೊಂದಿಗೆ ವಾದಮಾಡಿ ಗೆಲ್ಲುವ ಯೋಗ್ಯತೆ ನಿಮ್ಮ ಗುರುವಗಾಗಲಿ ಬೇರೆ ಯಾರಿಗಾಗಲಿ ಇಲ್ಲ. ಕಪ್ಪ ಒಪ್ಪಿಸಿ ತೆಪ್ಪಗಿರುವ ಜಾಣತನವೂ ನಿಮ್ಮ ಗುರುವಿಗೆ ಇಲ್ಲ” ಎಂದು ಶಿಷ್ಯ ಗಳಪಿದ.

ತಮ್ಮ ಗುರುವನ್ನು ಆ ಶಿಷ್ಯ ಈ ರೀತಿ ನಿಂದಿಸುತ್ತಿದ್ದುದನ್ನು ಯಾಮುನರಿಂದ ಕೇಳವುದಕ್ಕಾಗಲಿಲ್ಲ. ಅವರು ಕಿವಿ ಮುಚ್ಚಿಕೊಂಡರು. “ನೀನು ಈ ರೀತಿ ಮಾತನಾಡಬೇಡ” ಎಂದು ಹೇಳಿದರು. “ನಮ್ಮ ಗುರುಗಳ ಮಹಿಮೆ ನಿನಗೆ ಗೊತ್ತಿಲ್ಲ. ನಿನ್ನ ಗುರು ಒಣಪಂಡಿತ, ಜಂಬದ ಕೋಳಿ. ಅವನ ಸೊಕ್ಕು ಮುರಿಯುವುದಕ್ಕೆ ನಮ್ಮ ಗುರುವೇ ಬರಬೇಕಾಗಿಲ್ಲ. ನನ್ನಂಥ ಸಣ್ಣ ಶಿಷ್ಯ ಒಬ್ಬ ಸಾಕು. ನಮ್ಮ ಗುರುವಿನ ಪ್ರಭಾವ ಅಂಥದು. ನಿನ್ನ ಗುರುವಿನೊಂದಿಗೆ ವಾದಿಸುವುದಕ್ಕೆ ನನ್ನನ್ನು ಕರೆಯಲಿ. ಅವನಿಗೆ ಗೊತ್ತಾಗುತ್ತದೆ.”

ಆ ಶಿಷ್ಯನಿಗೆ ಬಲು ಕೋಪ ಬಂತು. ನೆಟ್ಟನೆ ತನ್ನ ಗುರುವಿನ ಬಳಿಗೆ ಹೋಗಿ ಯಾಮುನರು ಹೇಳಿದ್ದನ್ನೆಲ್ಲ ತಿಳಿಸಿದ. ಜೊತೆಗೆ ಇನ್ನಷ್ಟು ಉಪ್ಪುಕಾರ ಸೇರಿಸಿದ.

‘ನಿಮ್ಮ ಆಶೀರ್ವಾದ ಒಂದಿರಲಿ’

ವಿದ್ವಜ್ಜನಕೋಲಾಹಲ ದೊಡ್ಡದಾಗಿ ನಕ್ಕುಬಿಟ್ಟ. “ಈ ಹುಡುಗ ಬರುತ್ತಾನಂತೆ! ನನ್ನೊಂದಿಗೆ ವಾದಿಸಿ ಗೆಲ್ಲುತ್ತಾನಂತೆ! ಇವನೊಬ್ಬ ಮೂರ್ಖ!” ಎಂದು ಹೇಳಿದ.

ದೊರೆಗೂ ಸುದ್ದಿ ತಿಳಿಯಿತು. ತನ್ನ ಆಸ್ಥಾನ ವಿದ್ವಾಂಸನೊಡನೆ ವಾದಮಾಡುವುದು ಅಷ್ಟು ಸುಲಭವೆ? ಹುಡುಗನಿಗೆ ತಿಳಿವಳಿಕೆಯಿಲ್ಲ ಎಂದ. ವಾದಮಾಡ ಬೇಕೆನಿಸಿದರೆ ಬರಲಿ ಎಂದು ಹೇಳಿ ಕಳುಹಿಸಿದ.

ಈ ಕರೆ ಬಂದಾಗ ಯಾಮುನರು ಥಟ್ಟನೆ ಒಪ್ಪಿ ಕೊಳ್ಳಲಿಲ್ಲ. ಸುಮ್ಮನೆ ಬಾ ಎಂದು ಕರೆದರೆ ನಾನು ಹೋಗುವುದಿಲ್ಲ. ನಮ್ಮ ಗುರುಗಳ ಯೋಗ್ಯತೆ ಕಡಿಮೆಯೆ? ಪಂಡಿತರಿಗೆ ಉಚಿತವಾದ  ಮರ್ಯಾದೆ ಸಲ್ಲಬೇಕು. ಪಲ್ಲಕ್ಕಿ ಕಳಿಸಬೇಕು – ಎಂದು ಹೇಳಿದರು.

ಇದನ್ನು ಕೇಳಿ ದೊರೆಗೆ ನಗು ಬಂತು. ಎಲ್ಲಾ ಹುಡುಗ; ಏನು ಇವನ ಗತ್ತು! ಇದೇನು ಹುಡುಗಾಟ ಎಂದುಕೊಂಡ. ಆದರೂ ಇದೊಂದು ತಮಾಷೆ ಎಂದು ಭಾವಿಸಿ ಎಲ್ಲ ರಾಜಮಾರ್ಯಾದೆಗಳೊಂದಿಗೆ ಪಲ್ಲಕ್ಕಿಯನ್ನು ಕಳುಹಿಸಿಕೊಟ್ಟ.

ಅರಮನೆಯ ಪಲ್ಲಕ್ಕಿ ಯಾಮುನರ ಗುರುಗಳ ಮನೆಯ ಮುಂದೆ ಬರುವ ವೇಳೆಗೆ ಗುರುಗಳು ಬಂದಿದ್ದರು. ಅವರಿಗೆ ಎಲ್ಲ ಸಮಾಚಾರವೂ ತಿಳಿಯಿತು. ಯಾಮುನರ ಧೈರ್ಯವನ್ನು ನೋಡಿ ಅವರಿಗೆ ಹೆದರಿಕೆಯಾಯಿತು. ವಿದ್ವಜ್ಜನ ಕೋಲಾಹಲ ಮಾಹಾ ದುಷ್ಟ, ಅಹಂಕಾರಿ. ಅವನೊಂದಿಗೆ ವಾದ ಮಾಡಿ ಯಾಮುನರು ಗೆಲ್ಲುವುದು ಸಾಧ್ಯವೆ? ಹುಡುಗನನ್ನು ಅವರೆಲ್ಲ ಸೇರಿ ಗಲ್ಲಿಗೆ ಹಾಕಿ ಬಿಡುತ್ತಾರೆ ಎಂದು ಅವರು ಅಂಜಿದರು.

ಯಾಮುನರು ಹೆದರಲಿಲ್ಲ. “ನಿಮ್ಮ ಆಶೀರ್ವಾದ ಒಂದಿರಲಿ. ನಾನು ಆ ಪಂಡಿತನನ್ನು ಗೆಲ್ಲುವುದೇನು ಮಹಾಕಷ್ಟ!” ಎಂದು ಅವರು ಹೇಳಿದರು. ಗುರುಗಳು ಕಣ್ಣಲ್ಲಿ ನೀರು ತಂದುಕೊಂಡು ಶಿಷ್ಯನನ್ನು ಅಪ್ಪಿ ಆಶೀರ್ವದಿಸಿದರು. ಯಾಮುನರು ಗುರುವಿಗೆ ನಮಸ್ಕರಿಸಿ ಪಲ್ಲಕ್ಕಿ ಏರಿ ಹೊರಟರು.

ರಾಜ – ರಾಣಿ ಪಣ ಒಡ್ಡಿದರು

ಯಾಮುನರು ಬರುವುದನ್ನೇ ನಿರೀಕ್ಷಿಸುತ್ತ ಅರಮನೆಯಲ್ಲಿ ದೊರೆ ಕುಳಿತಿದ್ದ. ಇದೊಂದು ಭಾರಿ ತಮಾಷೆ ಎಂದೇ ಅವನ ಅನಿಸಿಕೆ. ನಮ್ಮ ವಿದ್ವಾಂಸನನ್ನು ಈ ಹುಡುಗ ಕೆಣಕುತ್ತಿದ್ದಾನಲ್ಲ, ಅವನ ಮುಂದೆ ಇವನು ಎಷ್ಟರವ, ಅವನು ಬೆಕ್ಕು, ಇವನು ಇಲಿ ಎಂದು ಗಟ್ಟಿಯಾಗಿ ನಕ್ಕ.

ಈ ಮಾತನ್ನು ರಾಣಿ ಒಪ್ಪಲಿಲ್ಲ. ವಿದ್ವಜ್ಜನಕೋಲಾಹಲನ ಅಹಂಕಾರವನ್ನೂ ಇತರ ಪಂಡಿತರಿಗೆ ಅವನು ಅವಮಾನಮಾಡುತ್ತಿದ್ದುದನ್ನೂ ನೋಡಿ ನೋಡಿ ರಾಣಿಗೆ ಬೇಸರ ಬಂದಿತ್ತು. ಈ ಹುಡುಗ ಅವನಿಗೆ ಬುದ್ಧಿ ಕಲಿಸಿದರೂ ಕಲಿಸಬಹುದು ಎಂದು ಅವಳಿಗೆ ಅನಿಸಿತು. ಯಾರಲ್ಲಿ ಎಂಥ ಸತ್ತ್ವ ಅಡಗಿದೆಯೋ ಯಾರು ಬಲ್ಲರು? ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂದು ಗಾದೆ ಇಲ್ಲವೆ? ಯಾಮುನ ಸಣ್ಣವನಿರಬಹುದು. ಕಿಡಿಯೂ ಸಣ್ಣಗಿರುತ್ತದೆ. ಆದರೆ ಹತ್ತಿಯ ರಾಶಿಯನ್ನು ಸುಟ್ಟು ಬೂದಿ ಮಾಡಲು ಒಂದು ಸಣ್ಣ ಕಿಡಿ ಸಾಕಲ್ಲವೆ?

‘ನಿಮ್ಮ ಆಶೀರ್ವಾದ ಒಂದಿರಲಿ.’

ರಾಣಿಗೂ ದೊರೆಗೂ ವಾದ ಹತ್ತಿತ್ತು. ಕೊನೆಗೆ, “ನಿನ್ನ ಹುಡುಗ ಸೋತರೆ ಏನು ಮಾಡುತ್ತೀಯೆ?” ಎಂದು ಅವನು ಕೇಳಿದ.

“ನಿಮ್ಮ ಪಂಡಿತ ಸೋತರೆ?”

“ಹುಡುಗನಿಗೆ ಅರ್ಧ ರಾಜ್ಯವನ್ನೇ ಕೊಡುತ್ತೇನೆ.”

“ಹುಡುಗ ಸೋತರೆ ಈ ರಾಣಿ ಪದವಿಯೇ ನನಗೆ ಬೇಡ, ನಾನು ನಿಮ್ಮ ದಾಸಿಯಾಗುತ್ತೇನೆ.”

ಹೀಗೆ ಅವರು ಪಣ ಒಡ್ಡಿ ಆಸ್ಥಾನಕ್ಕೆ ಬಂದು ಆಸನಗಳಲ್ಲಿ ಕುಳಿತರು. ವಿದ್ವಜ್ಜನಕೋಲಾಹಲ ತನ್ನ ಪೀಠದಲ್ಲಿ ಎದೆ ಉಬ್ಬಿಸಿ ಕುಳಿತಿದ್ದ. ಯಾಮುನರಿಗೆ ಅವನ ಎದುರಿಗೆ ಆಸನ ಹಾಕಿದ್ದರು.

‘ಆಳವಂದಾರ್’

ವಿದ್ವಜ್ಜನಕೋಲಾಹಲ ಭಾರಿ ಆಳು. ಯಾಮುನ ಇನ್ನೂ ಎಳೆಯ ಹುಡುಗ. ಕೆನ್ನೆ ಕಿತ್ತಳೆ ಕೆಂಪು. ಕಣ್ಣು ಹೊಳಪು. ದೊಡ್ಡ ಆಸನದಲ್ಲಿ ಪುಟ್ಟ ದೇಹ.

ಪುಟ್ಟ ಯಾಮುನರನ್ನು ನೋಡಿ ವಿದ್ವಜ್ಜನಕೋಲಾಹಲ ಗಟ್ಟಿಯಾಗಿ ನಕ್ಕ. ಅವನ ಅಹಂಕಾರ ಆತನ ನಗುವಿನಲ್ಲೂ ಅಲೆ ಅಲೆಯಾಗಿ ಅಟ್ಟಹಾಸ ಮಾಡಿತು. “ಇವರು ನನ್ನನ್ನು ಆಳಲು ಬಂದವರೆ? ಗೆಲ್ಲಲು ಬಂದವರೆ?” ಎಂದು ವ್ಯಂಗ್ಯವಾಗಿ ಹೇಳುತ್ತ ಮತ್ತೆ ನಕ್ಕ. ಅವನಿಗೆ ನಗುವನ್ನು ತಡೆದುಕೊಳ್ಳಲಾಗಲಿಲ್ಲ. ರಾಜಸ್ಥಾನದಲ್ಲಿ ಇದು ಅಸಭ್ಯ ವರ್ತನೆಯಾಗಬಹುದೆಂಬ ಅರಿವೂ ಆತನಿಗೆ ಆ ಕ್ಷಣದಲ್ಲಿ ಇರಲಿಲ್ಲ.

ಪಂಡಿತನ ಉದ್ಗಾರವನ್ನು ಕೇಳಿ ರಾಣಿಗೆ ಕಿರಿಕಿರಿಯಾಯಿತು. “ಹೌದು! ಆಳಲು ಬಂದವರು!” ಎಂದಳು. ಆಳಲು ಬಂದವರು ಇವರಾದರು.

ರಾಣಿಯ ಸಿಡುಕೂ ವಿದ್ವಜ್ಜನಕೋಲಾಹಲನನ್ನು ಎಚ್ಚರಿಸಲಿಲ್ಲ. ಈ ಹುಡುಗ ಏನು ಮಹಾ ಎಂದು ಅವನಿಗೆ ಉದಾಸೀನ. ಅವನು ವ್ಯಾಕರಣ, ಅಮರಕೋಶ ಇವುಗಳ ಮೇಲೆ ಕೆಲವು ಪ್ರಶ್ನೆಗಳನ್ನು ಕೇಳಿದ.

ಯಾಮುನರು ಲೀಲಾಜಾಲವಾಗಿ ಉತ್ತರ ಹೇಳಿದರು. ” ಯಾವುದಾದರೂ ದೊಡ್ಡ ಪ್ರಶ್ನೆ ಕೇಳಿ ಪಂಡಿತರೆ. ನಾನು ಹುಡುಗನೆಂದು ಭಾವಿಸಬೇಡಿ. ತೂಕ ಗಾತ್ರಗಳಿಗೂ ಪಾಂಡಿತ್ಯಕ್ಕೂ ಸಂಬಂಧವಿಲ್ಲ. ಗೂಳಿ ನಿಮಗಿಂತಲೂ ದೊಡ್ಡದು. ಅಂದಮಾತ್ರಕ್ಕೆ ಅದು ನಿಮಗಿಂತ ದೊಡ್ಡ ಪಂಡಿತನೆ?” ಎಂದರು.

ಈ ಮಾತಿನಿಂದ ಪಂಡಿತನಿಗೆ ಮುಖಭಂಗ ಆದ ಹಾಗಾಯಿತು. ಆದರೂ ಅದನ್ನು ತೋರಿಸಿಕೊಳ್ಳಲಿಲ್ಲ. “ಭೇಷ್ ! ಹುಡುಗನಾದರೂ ಚಮತ್ಕಾರವಾಗಿ ಮಾತಾಡುತ್ತಿದ್ದೀಯೆ” ಎಂದ. “ನೀನು ದೊಡ್ಡ ಪಂಡಿತನೇ ಇರಬಹುದು. ನೀನೇ ಪ್ರಶ್ನೆ ಕೇಳು. ಉತ್ತರ ಹೇಳುವುದಕ್ಕೆ ಆಗುತ್ತೋ ಇಲ್ಲವೋ ನೋಡುತ್ತೇನೆ” ಎಂದ.

ಪ್ರಶ್ನೆಗಳು-ಉತ್ತರಗಳು

“ಆಗಬಹುದು” ಎಂದರು ಯಾಮುನರು. “ನಾನು ಮೂರು ವಿಷಯಗಳನ್ನು ಮಂಡಿಸುತ್ತೇನೆ. ಅವು ತಪ್ಪು ಎಂದು ಖಂಡಿಸಿ ನೋಡೋಣ. ಆಗ ನಾನು ಸೋಲು ಒಪ್ಪಿಕೊಳ್ಳುತ್ತೇನೆ.”

“ಬೇಗ ಹೇಳು” ಎಂದ ಪಂಡಿತ. ಇವನನ್ನು ಬೇಗ ಮುಗಿಸಿ ಕಳಿಸಿಬಿಡಬೇಕು ಎಂದು ಅವನಿಗೆ ಆತುರ, ಅಸಹನೆ.

ಪಂಡಿತನು ಮೂರು ಹೇಳಿಕೆಗಳು ಸುಳ್ಳು ಎಂದು ತೋರಿಸಿಕೊಡಬೇಕೆಂದು ಯಾಮುನರು ಕೇಳಿದರು. ಪಂದಿತನಿಗೆ ಸಾಧ್ಯವಾಗಲಿಲ್ಲ. “ನೀನೇ ಅವು ಸುಳ್ಳು ಎಂದು ತೋರಿಸಿಕೊಡು, ಇಲ್ಲವಾದರೆ ನಿನ್ನ ತಲೆ ಹೋಗುತ್ತದೆ” ಎಂದ ಪಂಡಿತ. ಯಾಮುನರು ಮೂರು ಹೇಳಿಕೆಗಳೂ ಸುಳ್ಳು ಎಂದು ಶಾಸ್ತ್ರಗಳ ಪ್ರಕಾರ ತೋರಿಸಿಕೊಟ್ಟರು. ಉದಾಹರಣೆಗೆ, ‘ನಮ್ಮ ದೊರೆ ತುಂಬಾ ಧರ್ಮಿಷ್ಠರು. ಆದುದರಿಂದ ಅವರು ಧರ್ಮಿಷ್ಠರಲ್ಲ ಎಂದು ಹೇಗೆ ತೋರಿಸುವುದು?’ ಎಂದು ಬೆಪ್ಪಾಗಿದ್ದ ಪಂಡಿತ. ಯಾಮುನರು ಹೇಳಿದರು, “ಈ ಕಲಿಯುಗದಲ್ಲಿ ಧರ್ಮ ಕಾಲು ಭಾಗವಾದರೆ ಅಧರ್ಮ ಮುಕ್ಕಾಲು ಭಾಗ. ನಮ್ಮ ದೊರೆ ಎಷ್ಟೇ ಧರ್ಮಿಯಾಗಿದ್ದರೂ ಪ್ರಜೆಗಳ ಅಧರ್ಮದಲ್ಲಿ ಆರನೆಯ ಒಂದು ಭಾಗ ದೊರೆಗೆ ಸಲ್ಲುತ್ತದೆ. ಇದನ್ನೂ ಮನಸಂಹಿತೆಯಲ್ಲಿ ಹೇಳಲಾಗಿದೆ. ಈ ಕಾರಣಗಳಿಂದ ನಮ್ಮ ದೊರೆ ಅಧರ್ಮಿಯೇ.”

ಯಾಮುನರ ಮಾತಿನಿಂದ ಕೋಲಾಹಲ ತಣ್ಣಗಾದ. ಅವನೂ ಅವನ ಕಡೆಯವರೂ ತಲೆತಗ್ಗಿಸಿದರು. ಉಳಿದವರೆಲ್ಲ ಹರ್ಷೋದ್ಗಾರ ಮಾಡಿದರು. ಈ ಹುಡುಗ ವಾದದಲ್ಲಿ ಗೆದ್ದು ದೊರೆಹೊಂದಿಗೆ ತಾನು ಕಟ್ಟಿದ್ದ ಪಣವನ್ನು ಗೆಲ್ಲುವಂತೆ ಮಾಡಿದನೆಂದು ರಾಣಿಗೆ ಬಹಳ ಸಂತೋಷ ಆಯಿತು.

‘ನಿಜವಾದ ಜ್ಞಾನವನ್ನು ಸಂಪಾದಿಸಲು ಪ್ರಯತ್ನಿಸಬೇಕು.’

‘ಬರಿಯ ಬುದ್ಧಿವಂತಿಕೆಯಿಂದ ಪ್ರಯೋಜನವಿಲ್ಲ’

ಯಾಮುನರೇ ಮತ್ತೆ ಮಾತು ಮುಂದುವರಿಸಿದರು: “ಪಂಡಿತರೆ, ನಿಮ್ಮನ್ನು ಅವಮಾನಗೊಳಿಸುವುದು ನನ್ನ ಉದ್ದೇಶವಲ್ಲ. ನಿಮ್ಮ ವಿಧಾನದಿಂದಲೇ ನಿಮ್ಮ ಬಾಯನ್ನು ಕಟ್ಟಿಹಾಕಿದೆ, ಅಷ್ಟೆ. ಇದುವರೆಗಿನ ಮಾತೆಲ್ಲ ಬುದ್ಧಿವಂತಿಕೆಯ ಮಾತಷ್ಟೆ. ಇಂಥ ತರ್ಕಗಳಿಂದ ಪ್ರಯೋಜನ ಇಲ್ಲ ಎಂಬುದನ್ನು ತೋರಿಸಿಕೊಡುವುದು ನನ್ನ ಉದ್ದೇಶ. ನಿಜವಾದ ಜ್ಞಾನವನ್ನು ಸಂಪಾದಿಸಲು ಪ್ರಯತ್ನಿಸಬೇಕು. ಆಗಲೇ ನಮ್ಮ ಜೀವನ ಸಾರ್ಥಕವಾಗುತ್ತದೆ. ನಾನು ಮಹಾಜ್ಞಾನಿ ಎಂದು ಗರ್ವದಿಂದ ಬೀಗಿ ಇತರರನ್ನು ಅವಮಾನಕ್ಕೆ ಗುರಿಪಡಿಸಬಾರದು. ಕಪ್ಪ ವಸೂಲು ಮಾಡುವುದನ್ನು ಬಿಟ್ಟುಬಿಡಿ. ನಿಮಗೆ ಒಳ್ಳೆಯದಾಗಲಿ.”

ಯಾಮುನರ ಮಾತಿನಿಂದ ಆಸ್ಥಾನದಲ್ಲಿದ್ದ ಎಲ್ಲರಿಗೂ ಸಂತೋಷವಾಯಿತು. ಅವರು ಚಪ್ಪಾಳೆ ಇಕ್ಕಿದರು. ಪಂಡಿತನಿಗೂ ಬುದ್ಧಿ ಬಂತು.

ರಾಜ ರಾಣಿಗೆ ಕೊಟ್ಟಿದ್ದ ಮಾತಿನ ಪ್ರಕಾರ ಯಾಮುನರಿಗೆ ಅರ್ಧ ರಾಜ್ಯ ಕೊಡುವುದಾಗಿ ಹೇಳಿದ. ಆದರೆ ಯಾಮುನರು ಬೇಡವೆಂದರು. ರಾಜ್ಯ ಆಳುವುದು ನನ್ನ ಮನೋಧರ್ಮಕ್ಕೆ ಒಗ್ಗುವುದಿಲ್ಲ ಎಂದರು. ಅಲ್ಲದೆ ನೀವು ನೀವು ವಿನೋದಕ್ಕಾಗಿ ಮಾಡಿಕೊಂಡ ಪಂದ್ಯವನ್ನು ಜಾರಿಗೆ ಕೊಡಬೇಕಾದ್ದಿಲ್ಲ, ಹಾಗೆ ಮಾಡಬೇಡಿ ಎಂದರು. ದೊರೆ ಅವರಿಗೆ ನಾನಾ ರೀತಿಯಲ್ಲಿ ಸತ್ಕರಿಸಿದ ಭೂಮಿ ಕಾಣಿ ಕೊಟ್ಟ, ಬೇಕಾದಷ್ಟು ಹಣ ಕೊಟ್ಟ, ಅವರಿಗೆ ಮಾಸಾಶನವನ್ನು ಗೊತ್ತುಪಡಿಸಿದ.

ಯಾಮುನರು ತೃಪ್ತಿಯಿಂದ ತಮ್ಮ ಗುರುಗಳ ಬಳಿಗೆ ಹಿಂದಿರುಗಿದರು. ಗುರುಗಳಿಗೆ ಬಹಳ ಸಂತೋಷ ಆಯಿತು. ತಮ್ಮ ಶಿಷ್ಯ ಎಷ್ಟು ಬುದ್ಧಿವಂತ ಎಂದು ಅವರಿಗೆ ಹೆಮ್ಮೆಯಾಯಿತು. ಯಾಮುನರಿಗೆ ಅವರು ತಮ್ಮ ವಿದ್ಯೆಯನ್ನೆಲ್ಲ ಬೋಧಿಸಿದರು.

ಕಾಲಕ್ರಮದಲ್ಲಿ ಯಾಮುನರು ಮದುವೆಯಾದರು. ನೆಮ್ಮದಿಯ ಸಂಸಾರ ಅವರದು. ಅವರಿಗೆ ನಾಲ್ವರು ಮಕ್ಕಳಾದರು.

‘ನಿಮ್ಮ ತಾತ ನಿಧಿ ಇಟ್ಟಿದ್ದಾರೆ’

ಯಾಮುನರು ಹೀಗೆ ಎಲ್ಲರಂತೆ ಸಂಸಾರಿಯಾಗಿ ಬಾಳು ಮುಗಿಸಬಹುದಾಗಿತ್ತು. ಆದರೆ ನಾಥಮುನಿಗಳ ಮೊಮ್ಮಗನಾದ ಅವರ ಬಾಳಿನಲ್ಲಿ ಮುಂದೆ ಮಹಾ ಪರಿವರ್ತನೆ ಆಯಿತು.

ನಾಥಮುನಿಗಳ ಶಿಷ್ಯರ ಶಿಷ್ಯರಾದ ರಾಮಮಿಶ್ರರು ಅವರ ಗುರುಗಳಾದ ಉಯ್ಯಕ್ಕೊಂಡಾರರಿಗೆ ಕೊಟ್ಟಿದ್ದ ಮಾತನ್ನು ಮರೆತಿರಲಿಲ್ಲ. ಯಥಾಕಾಲದಲ್ಲಿ ಯಾಮುನರ ಮನಸ್ಸನ್ನು ದೇವರ ಕಡೆಗೆ ತಿರುಗಿಸಿ, ಜನರಿಗೆ ಮಾರ್ಗದರ್ಶನ ಮಾಡುವ ಕೆಲಸವನ್ನು ಮುಂದುವರಿಸಿ ಬೆಳಸುವ ಕಾರ್ಯವನ್ನು ಅವರಿಗೆ ವಹಿಸಿಕೊಡಬೇಕೆಂದು ರಾಮ ಮಿಶ್ರರು ಹಂಬಲಿಸುತ್ತಿದ್ದರು.

ಯಾಮುನರನ್ನು ನೋಡಬೇಕೆಂಬುದು ರಾಮಮಿಶ್ರರ ಬಯಕೆಯಾಗಿತ್ತು.

ಆದರೆ ಯಾಮುನರನ್ನು ನೋಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆಳು ಕಾಳುಗಳಿಂದ ಕೂಡಿದ ದೊಡ್ಡ ಮನೆಯಲ್ಲಿ ಯಾಮುನರು ವಾಸಿಸುತ್ತಿದ್ದರು. ಅವರನ್ನು ಭೇಟಿ ಮಾಡಲು ರಾಮಮಿಶ್ರರು ಆರು ತಿಂಗಳ ಕಾಲ ಕಾಯಬೇಕಾಯಿತು.

ಪರಸ್ಪರ ಕುಶಲ ಸಂಭಾಷಣೆ ಆಯಿತು. “ನೀವು ಇಲ್ಲಿಗೆ ಬಂದ ಉದ್ದೇಶವೇನು ?” ಯಾಮಾನರು ಕೇಳಿದರು.

ನಿಮ್ಮ ತಾತ ನಾಥಮುನಿಗಳು ಒಂದು ನಿಧಿಯನ್ನು ಇಟ್ಟು ಹೋಗಿದ್ದಾರೆ. ಆ ನಿಧಿಯನ್ನು ನಿಮಗೆ ಒಪ್ಪಿಸಬೇಕೆಂಬುದಾಗಿ ನನ್ನ ಗುರುಗಳಾದ ಉಯ್ಯಕ್ಕೊಂಡಾರರು ತೀರಿಕೊಳ್ಳುವ ಮುನ್ನ ನನಗೆ ಆಜ್ಞೆ ಮಾಡಿದರು. ಅದಕ್ಕಾಗಿ ಬಂದೆ.”

“ತಾತ ಇಟ್ಟ ನಿಧಿಯೆ? ಯಾವುದು? ಎಲ್ಲಿದೆ?”

“ಆ ನಿಧಿ ಇಲ್ಲಿಲ್ಲ. ನನ್ನೊಡನೆ ಬಂದರೆ ತೋರಿಸುತ್ತೇನೆ. ಆದರೆ ನೀವೊಬ್ಬರೇ ಬರಬೇಕು. ಯಾರನ್ನೂ ಜೊತೆಯಲ್ಲಿ ಕರೆತರಬಾರದು.”

ಯಾಮುನರು “ಆಗಲಿ” ಎಂದರು. ಇಬ್ಬರೂ ಹೊರಟರು.

‘‘ನನ್ನಲ್ಲಿ ಶರಣಾಗತನಾಗು’’

ಹಾದಿ ನಡೆದು ಆಯಾಸವಾದಾಗ ಅವರು ಒಂದು ಜಾಗದಲ್ಲಿ ವಿಶ್ರಾಂತಿಗಾಗಿ ಕುಳಿತರು. ಬೇಸರ ಕಳೆಯಲೆಂದು ರಾಮಮಿಶ್ರರು ಇಂಪಾಗಿ ಹಾಡತೊಡಗಿದರು.

ಅವರು ಹಾಡುತ್ತಿದ್ದುದು ಭಗವದ್ಗೀತೆ. ಮಹಾ ಭಾರತದ ಯುದ್ಧದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಬೋಧಿಸಿದ ವೇದಾಂತಸಾರ.

ರಾಮಮಿಶ್ರರು ಹಾಡುತ್ತಿದ್ದಂತೆ ಯಾಮುನರ ಮನಸ್ಸು ದೇವರ ಕಡೆಗೆ ಹರಿಯಲಾರಂಭಿಸಿತು. ಅವರ ಚಿಕ್ಕಂದಿನ ದಿನಗಳ ನೆನಪಾಯಿತು-ಅವರು ಗುರುಗಳಲ್ಲಿ ಪಾಠ ಕಲಿತದ್ದು, ದೊರೆಯ ಆಸ್ಥಾನದಲ್ಲಿ ವಿದ್ವಜ್ಜನಕೋಲಾಹಲನನ್ನು ವಾದದಲ್ಲಿ ಸೋಲಿಸಿ ಅವನ ಅಹಂಕಾರವನ್ನು ಮುರಿದದ್ದು, ಎಲ್ಲ.

ತಾವು ಈಗ ನೆಮ್ಮದಿಯ ಜೀವನದಲ್ಲಿ ಎಲ್ಲವನ್ನೂ ಮರೆತಿದ್ದಾರಲ್ಲವೆ?

ಯಾಮುನರ ಮನಸ್ಸು ಮತ್ತೆ ಅಧ್ಯಾತ್ಮದ ಕಡೆಗೆ ತಿರುಗಿತು. “ಇವತ್ತಿನಿಂದ ನಾನು ನಿಮ್ಮ ಶಿಷ್ಯ. ನಿಮ್ಮಿಂದ ಗೀತೆಯ ಅಂತರಾರ್ಥವನ್ನು ಮೊದಲಿನಿಂದ ಕೊನೆಯವರೆಗೆ ಕಲಿಯಬೇಕು” ಎಂದರು.

“ಗೀತೆಯ ಆಳವನ್ನು ಸಂಪೂರ್ಣವಾಗಿ ತಿಳಿದವರು ಯಾರೂ ಇಲ್ಲ. ಅದನ್ನು ಅಭ್ಯಾಸ ಮಾಡಲು ಬಹಳ ಕಾಲ ಬೇಕು. ನಾವು ಇಲ್ಲೇ ನಿಲ್ಲಬೇಕು. ನೀವು ಮನೆಯಲ್ಲಿ ಎಲ್ಲಾ ಏರ್ಪಾಡು ಮಾಡಿ ಬಂದುಬಿಡಿ.”

“ಇನ್ನು ಕಾಲ ಕಳೆಯುವುದು ಸರಿಯಲ್ಲ. ಗೀತಾಧ್ಯಯನವೇ ಎಲ್ಲಕ್ಕಿಂತ ಮೊದಲು.”

ಯಾಮುನರ ಮಾತನ್ನು ಕೇಳಿ ರಾಮಮಿಶ್ರರಿಗೆ ತುಂಬ ಸಮಾಧಾನವಾಯಿತು. ಅವರು ಯಾಮುನರಿಗೆ ಗೀತೆಯನ್ನು ಸಾಂಗೋಪಾಂಗವಾಗಿ ಬೋಧಿಸಿದರು.

“ಎಲ್ಲ ಧರ್ಮಗಳನ್ನೂ ಬಿಟ್ಟು ನನ್ನಲ್ಲಿ ಶರಣಾಗತನಾಗು. ಹೆದರಬೇಡ. ನಾನು ನಿನ್ನನ್ನು ಎಲ್ಲ ಪಾಪಗಳಿಂದಲೂ ಬಿಡುಗಡೆಮಾಡುತ್ತೇನೆ” ಎಂಬ ಅರ್ಥದ ಗೀತೆಯ ಹದಿನೆಂಟನೆಯ ಅಧ್ಯಾಯದ ಶ್ಲೋಕವನ್ನು ರಾಮಮಿಶ್ರರು ಸುಂದರವಾಗಿ ಹಾಡಿ ಅದನ್ನು ವಿವರಿಸಿದರು. ಅದು ಶ್ರೀ ವೈಷ್ಣವ ಧರ್ಮದ ಮೂಲನಂಬಿಕೆ.

ಗೀತಾ ಪ್ರವಚನ ಮುಗಿದ ಮೇಲೆ ಅವರಿಬ್ಬರೂ ಪ್ರಯಾಣ ಮುಂದುವರಿಸಿದರು.

“ಇದೇ ನಿಧಿ”

ಯಾಮುನರ ಮನಸ್ಸು ಸಂಪೂರ್ಣವಾಗಿ ದೇವರ ಕಡೆಗೆ ತಿರುಗಿತ್ತು. ಇನ್ನು ತಾತ ಇಟ್ಟ ನಿಧಿ ಏಕೆ ಎಂದು ಅವರಿಗೆ ಅನಿಸಿತು. ತಮಗೆ ಹೇಗೂ ಅರವತ್ತು ವರ್ಷ ಆಗುತ್ತ ಬಂದಿತ್ತು. ಮಕ್ಕಳೆಲ್ಲ ದೊಡ್ಡವರಾಗಿದ್ದರು.

ರಾಮಮಿಶ್ರರು ಕೊಟ್ಟ ಮಾತಿಗೆ ತಪ್ಪಲೊಪ್ಪಲಿಲ್ಲ. ಯಾಮುನರನ್ನು ನಿಧಿ ಇದ್ದಲ್ಲಿಗೆ ಕರೆದೊಯ್ದರು. ಅದು ಇದ್ದುದು ತಮಿಳುನಾಡಿನ ಶ್ರೀರಂಗದಲ್ಲಿ. ಸುತ್ತ ಕಾವೇರಿ. ನಡುವೆ ಶ್ರೀರಂಗ.

ಶ್ರೀರಂಗನಾಥನ ದೇವಾಲಯದ ಪ್ರಾಕಾರಗಳನ್ನು ದಾಟಿ ಅವರು ಒಳಗೆ ಹೋದರು. ಶೇಷಸರ್ಪದ ಮೇಲೆ ಮಲಗಿದ ಲಕ್ಷ್ಮೀಸಮೇತನಾದ ಶ್ರೀರಂಗನಾಥನ ದಿವ್ಯ ಸುಂದರ ವಿಗ್ರಹವನ್ನು ರಾಮಮಿಶ್ರರು  ತೋರಿಸಿದರು.

“ನಿಮ್ಮ ತಾತ ಹೇಳಿದ ನಿಧಿ ನಿಮ್ಮ ಮುಂದೆ ಇದೆ. ನಿಮಗೆ ತೋರಿಸಿದ್ದೇನೆ. ನನ್ನ ಜವಾಬ್ದಾರಿ ಮುಗಿಯಿತು.”

ಯಾಮುನರ ಮುಂದೆ ದಿವ್ಯವಾದ ಬೆಳಕೊಂದು ಕಣ್ಣು ಕೋರೈಸುವಂತೆ ಕಂಡಿತು. ಅವರು ದೇವರಿಗೆ ಭಕ್ತಿಯಿಂದ ನಮಸ್ಕಾರ ಮಾಡಿದರು. ” ಇಂದಿನಿಂದ ನಾನು ದೇವರ ಆಳು” ಎಂದರು. ವಿಶಿಷ್ಟಾದ್ವೈತ ಸಿದ್ಧಾಂತವನ್ನು ಬೆಳಸಿ ಪ್ರಚಾರ ಮಾಡುವ ಹೊಣೆ ಹೊತ್ತರು. ಆ ಪರಂಪರೆಯ ಮುಂದಿನ ಆಚಾರ್ಯ ಪದವಿ ಅವರಿಗೆ ಪ್ರಾಪ್ತವಾಗಿತ್ತು.

ಗ್ರಂಥಗಳು

ಪೂರ್ವದ ಆಚಾರ್ಯರು, ತಮಿಳು ಪ್ರಬಂಧಗಳನ್ನು ರಚಿಸಿದ ಆಳ್ವಾರರುಗಳು ಇವರ ಕೃತಿಗಳನ್ನೆಲ್ಲ ಯಾಮುನಾಚಾರ್ಯರು ಆಳವಾಗಿ ಅಭ್ಯಾಸ ಮಾಡಿದರು. ಅವುಗಳ ತಿರುಳನ್ನೆಲ್ಲ ಅರಿತುಕೊಂಡು ತಮ್ಮದನ್ನಾಗಿ ಮಾಡಿಕೊಂಡರು.

ಅವರು ಸಂಸ್ಕೃತದಲ್ಲಿ ಕೃತಿಗಳನ್ನು ರಚಿಸಿದರು. ಅವಿಗಳ ಪೈಕಿ ‘ಚತುಃಶ್ಲೋಕೀ’ ಎಂಬುದು ಪುಟ್ಟದು. ಜೀವಿಯಾದವನು ಲಕ್ಷ್ಮಿಯ ಅನುಗ್ರಹದಿಂದ ಮೋಕ್ಷವನ್ನು ಸಾಧಿಸಿಕೊಳ್ಳುವ ವಿಚಾರವನ್ನು ಅದರಲ್ಲಿ ಹೇಳಲಾಗಿದೆ. ‘ಸ್ತೋತ್ರರತ್ನ’ ಎಂಬುದು ಅದರ ಹೆಸರೇ ಹೇಳುವಂತೆ ದೇವರ ಸ್ತೋತ್ರಗಳ ಮಾಲೆ. “ಮಹಾಪುರುಷ ನಿರ್ಣಯ” ದಲ್ಲಿ ಆಚಾರ್ಯರು ವಿಷ್ಣುವಿನ ಮಹಿಮೆಯನ್ನು ವರ್ಣಿಸಿದ್ದಾರೆ.

ಆಚಾರ್ಯದ ತುಂಬ ಮುಖ್ಯವಾದ ಗ್ರಂಥ ‘ಸಿದ್ಧಿತ್ರಯ’. ಇದರಲ್ಲಿ ಆತ್ಮಸಿದ್ಧಿ, ಈಶ್ವರಸಿದ್ಧಿ ಮತ್ತು ಸಂವತ್ ಸಿದ್ಧಿ ಎಂದು ಮೂರು ಭಾಗಗಳಿವೆ. ಜೀವಾತ್ಮ ಪರಮಾತ್ಮರ ಸ್ವರೂಪವನ್ನೂ, ಜೀವಾತ್ಮನಿಗೂ ಕಣ್ಣಿಗೆ ಕಾಣುವ ಪ್ರಪಂಚಕ್ಕೂ ಇರುವ ಸಂಬಂಧವನ್ನೂ ಇಲ್ಲಿ ವಿವರಿಸಲಾಗಿದೆ. ಉಪನಿಷತ್ತಿನ ‘ಏಕಮೇವಾದ್ವಿತೀಯಂ’ ಎಂಬ ವಾಕ್ಯವನ್ನು ಯಾಮುನರು ಇಲ್ಲಿ ಬಲು ಚೆನ್ನಾಗಿ ವಿವರಿಸಿದ್ದಾರೆ. “ಬ್ರಹ್ಮ ಒಂದೇ, ಅದಕ್ಕೆ ಎರಡನೆಯದಿಲ್ಲ” ಎಂಬುದಾಗಿ ಹೇಳಿದರೆ, ಪರಬ್ರಹ್ಮನಿಗೆ ಬೇರೆ ಯಾವುದೂ ಸಮನಲ್ಲ ಎಂದು ಅರ್ಥ; ಬೇರೆ ಯಾವುದೂ ಇಲ್ಲವೇ ಇಲ್ಲವೆಂದು ಅರ್ಥವಲ್ಲ. “ಚೋಳರಾಜ ಅದ್ವಿತೀಯ” ಎಂದರೆ ಏನು ಅರ್ಥ? ಬೇರೆ ಯಾರೂ ಇಲ್ಲವೇ ಇಲ್ಲವೆಂದು ಅರ್ಥವೆ? ಹೆಂಡತಿ, ಮಕ್ಕಳು, ಸೇವಕರು, ಅಧಿಕಾರಿಗಳು ಎಲ್ಲರೂ ಉಂಟು. ಆದರೆ ಬೇರೆ ಯಾರೂ ಅವನಿಗೆ ಸಮನಲ್ಲ. ಉಪನಿಷತ್ತಿನ ಮೇಲೆ ಹೇಳಿದ ಮಾತನ್ನು ಈ ರೀತಿ ಅರ್ಥ ಮಾಡಬೇಕು ಎಂದು ಯಾಮುನರು ವಾದಿಸಿದ್ದಾರೆ. ವಿಶಿಷ್ಟಾದ್ವೈತ ತತ್ವವನ್ನು ಇಷ್ಟು ಚೆನ್ನಾಗಿ ಬೇರೆ ಯಾರೂ ಅದುವರೆಗೂ ವಿವರಿಸಿರಲಿಲ್ಲ.

‘ಇಂದಿನಿಂದ ನಾನು ದೇವರ ಆಳು’

ಮೂರು ಕೆಲಸಗಳು ಆಗಲಿಲ್ಲ

ತಾವು ವಹಿಸಿಕೊಂಡ ಹೊಣೆಯನ್ನು ಯಾಮುನರು ಬಲು ಚೆನ್ನಾಗಿ ನಿರ್ವಹಿಸಿದರು. ತಾತನಿಂದ ತಮಗೆ ಬಂದ ನಿಧಿಯನ್ನು ಬೆಳೆಸಿದರು.

ಅವರು ಮಾಡಬೇಕಾದ ಕೆಲಸ ಇನ್ನೂ ಬಹಳವಿತ್ತು. ಶ್ರೀವೈಷ್ಣವ ಧರ್ಮದ ತಿರುಳನ್ನು ಅರಿತುಕೊಳ್ಳುವುದರಲ್ಲಿಯೇ ಅವರಿಗೆ ತುಂಬ ಮುಪ್ಪು ಬಂದಿತ್ತು. ಅವರು ಶ್ರೀರಂಗಕ್ಕೆ  ಬರುವ ವೇಳೆಗೆ ಅವರಿಗೆ ಸುಮಾರು ಅರವತ್ತು ವರ್ಷ ಆಗಿತ್ತು. ಧರ್ಮದ ಪ್ರಚಾರ ಕಾರ್ಯವನ್ನು ತಾವು ಬಯಸಿದಷ್ಟು ಮಟ್ಟಿಗೆ ಮಾಡುವುದು ಅವರಿಂದ ಸಾಧ್ಯವಾಗಿರಲಿಲ್ಲ. ಜನರನ್ನು ಸರಿಯಾದ ಹಾದಿಗೆ ಹೆಚ್ಚುವ ಕೆಲಸ ಇನ್ನೂ ಹೆಚ್ಚು ಚುರುಕಿನಿಂದ ಆಗಬೇಕಾಗಿತ್ತು ಎನಿಸುತ್ತಿತ್ತು.

ಆಳ್ವಾರರ ಪ್ರಬಂಧಗಳ ಪೈಕಿ ನಮ್ಮಾಳ್ವಾರರ ‘ತಿರುವಾಯ್ಮೊಳಿ’ ಯಲ್ಲಿ ಶ್ರೀವೈಷ್ಣವ ಧರ್ಮದ ಆಳ ಹರವುಗಳನ್ನು ಕಾಣಬಹುದು. ಇದಕ್ಕೆ ವಾಕ್ಯಾರ್ಥ ಬರೆಯಿಸಬೇಕೆಂಬುದು ಅವರ ಇಚ್ಛೆಯಾಗಿತ್ತು. ಆ ಕೆಲಸ ಆಗಿರಲಿಲ್ಲ.

ವ್ಯಾಸ ಮಹರ್ಷಿಗಳೇ ರಚಿಸಿದರೆನ್ನಲಾದ ಬ್ರಹ್ಮ ಸೂತ್ರಗಳಿಗೆ ವಿಶಿಷ್ಣಾದ್ವೈತದ ದೃಷ್ಟಿಯಲ್ಲಿ ಭಾಷ್ಯವನ್ನು ಬರೆಯಬೇಕೆಂಬುದಾಗಿಯೂ ಅವರು ಆಸೆಪಟ್ಟಿದ್ದರು. ಭಾಷ್ಯ ಎಂದರೆ ವಿವರಣೆ. ಶಂಕರಾಚಾರ್ಯರು ಅದ್ವೈತದ ದೃಷ್ಟಿಯಲ್ಲಿ ಇದಕ್ಕೆ ಭಾಷ್ಯ ಬರೆದಿದ್ದರೆ. ಬ್ರಹ್ಮ ಸೂತ್ರಗಳಿಗೆ ವೇದಾಂತ ಸೂತ್ರಗಳಿಗೆ-ವಿಶಿಷ್ಟಾದ್ವೈತ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ಎಲ್ಲರಿಗೂ ತೋರಿಸಿ ಕೊಡಬೇಕು ಎಂದು ಯಾಮುನರು ಆಶಿಸಿದ್ದರು.

ಆದರೆ ಈ ಮೂರೂ ಕೆಲಸಗಳು ತಮ್ಮಿಂದ-ಅಥವಾ ತಮ್ಮ ಕಾಲದಲ್ಲೇ-ಆಗುವಂತಿಲ್ಲ. ತಮಗೆ ಮುಪ್ಪು ಬಂತು. ಈ ಕೆಲಸವನ್ನು ಯೋಗ್ಯರಾದವರಿಗೆ ವಹಿಸಿ ಕೊಡಬೇಕು. ಇದೇ ಯಾಮುನರ ಚಿಂತೆ.

ಇವರೇ ಶಿಷ್ಯರಾಗಬೇಕು

ಆ ಸಮಯಕ್ಕೆ ಕಾಂಚೀಪುರದಲ್ಲಿ ರಾಮಾನುಜರು ಯಾದವಪ್ರಕಾಶರೆಂಬ ಗುರುವಿನ ಬಳಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅದ್ವೈತದಲ್ಲಿ ನಂಬಿಕೆ ಇಟ್ಟಿದ್ದ ಯಾದವ ಪ್ರಕಾಶರಿಗೂ ಅವರ ಶಿಷ್ಯರಾದ ರಾಮಾನುಜರಿಗೂ ಆಗಿಂದಾಗ್ಗೆ ವಾದಗಳು ನಡೆಯುತ್ತಿದ್ದುವು. ಬ್ರಹ್ಮ ನಿರ್ಗುಣನೆಂದು ಯಾದವಪ್ರಕಾಶರು ರಾಮಾನುಜರು ವ್ಯಾಖ್ಯಾನ ಮಾಡಿ, ಬ್ರಹ್ಮ ಸಗುಣನೆಂದು-ಗುಣಗಳಿಂದ ಕೂಡಿದವನೆಂದು-ವಾದಿಸಿದ್ದರು. ಇದು ವಿಶಿಷ್ಟಾದ್ವೈತದ ದೃಷ್ಟಿ.

ಯಾಮುನರು ಒಮ್ಮೆ ಕಾಂಚೀಪುರಕ್ಕೆ ತಮ್ಮ ಜೊತೆಯವರೊಡನೆ ಹೋಗಿದ್ದರು. ಯಾದವಪ್ರಕಾಶರು ತಮ್ಮ ಶಿಷ್ಯ ರಾಮಾನುಜರ ಭುಜದ ಮೇಲೆ ಕೈಯಿಟ್ಟು ನಡೆಯುತ್ತಿದ್ದುದ್ದನ್ನು ಯಾಮುನರು ದೂರದಿಂದಲೇ ನೋಡಿದರು. ಉದ್ದವಾದ ತೋಳು, ಅಗಲವಾದ ಎದೆ, ವಿಶಾಲವಾದ ಹಣೆ, ಹೊಳೆಯುವ ಕಣ್ಣು, ದಿವ್ಯವಾದ ವರ್ಚಸ್ಸುಗಳಿಂದ ಕೂಡಿದ ತರುಣ ರಾಮಾನುಜರನ್ನು ಕಂಡಾಗ ಯಾಮುನರಿಗೆ ಇವರೇ ತಮ್ಮ ಉತ್ತರಾಧಿಕಾರಿಯಾಗಲು ಯೋಗ್ಯ ಎನ್ನಿಸಿತು. ನಮ್ಮ ಪರಂಪರೆಯನ್ನು ಮುಂದುವರಿಸಲು ರಾಮಾನುಜ ನಮಗೆ ದೊರಕುವಂತಾಗಲಿ, ಆ ಕಾಲ ಬೇಗ ಬರಲಿ ಎಂದು ಅವರು ಕಂಚಿಯ ವರದರಾಜದೇವರ ಮುಂದೆ ಭಕ್ತಿಯಿಂದ ಪ್ರಾರ್ಥಿಸಿ ಶ್ರೀರಂಗಕ್ಕೆ ಹಿಂದಿರುಗಿದ್ದರು.

ಮುಂದೆ ರಾಮಾನುಜರು ಬಹುಕಾಲ ಯಾದವ ಪ್ರಕಾಶರ ಶಿಷ್ಯರಾಗಿ ಮುಂದುವರಿಯಲಾಗಲಿಲ್ಲ. ಅವರಿಬ್ಬರದೂ ಬೇರೆಬೇರೆ ದೃಷ್ಟಿ.

‘‘ರಾಮಾನುಜರನ್ನು ಕರೆದುಕೊಂಡು ಬಾ’’

ರಾಮಾನುಜರು ತಮ್ಮಲ್ಲಿಗೆ ಬಂದಾರು. ತಾವು ಸಾಯುವ ಮುನ್ನ ಅವರಿಗೆ ತಮ್ಮ ಕೊನೆಯ ಆಸೆಗಳನ್ನು ತಿಳಿಯಪಡಿಸಿ, ಶ್ರೀವೈಷ್ಣವ ಪರಂಪರೆಯನ್ನು ಮುಂದುವರಿಸುವ ಕಾರ್ಯಕ್ಕೆ ಅವರನ್ನು ಹಚ್ಚಬೇಕು ಎಂಬುದಾಗಿ ಯಾಮುನರು ನಿತ್ಯವೂ ನಿರೀಕ್ಷೆಯಿಂದ ಕಾದರು. ‘ಸ್ತೋತ್ರ ರತ್ನ’ ಎಂಬ ಕೃತಿಯನ್ನು ರಚಿಸಿ ಅವರು ಅದನ್ನು ನಿತ್ಯವೂ ದೇವರ ಮುಂದೆ ಹಾಡಿಕೊಳ್ಳುತ್ತಿದ್ದರು.

ರಾಮಾನುಜರು ಬರಲೇ ಇಲ್ಲ.

ತಮ್ಮ ಕೊನೆಗಾಲ ಸಮೀಪಿಸುತ್ತಿದೆಯೆಂದು ಯಾಮುನಾಚಾರ್ಯರಿಗೆ ಎನ್ನಿಸಿತು. ತಮ್ಮ ಅನಂತರ ಏನೇನು ಆಗಬೇಕು ಎಂಬುದನ್ನೆಲ್ಲ ಶಿಷ್ಯರೊಂದಿಗೆ ಚರ್ಚಿಸತೊಡಗಿದರು. “ದೇವರ ಪೂಜೆ ತಪ್ಪಿಸಬೇಡಿ. ಹಾದಿ ತಪ್ಪಿ ನಡೆಯಬೇಡಿ” ಎಂದು ಶಿಷ್ಯರಿಗೆ ಬೋಧಿಸಿದರು.

ಯಾಮುನರ ಶಿಷ್ಯರ ಪೈಕಿ ಮಹಾಪೂರ್ಣ ಎಂಬವರೊಬ್ಬರಿದ್ದರು. ಅವರನ್ನು ಯಾಮುನರು ರಾಮಾನುಜರನ್ನು ಕೂಡಲೇ ಕರೆದುಕೊಂಡು ಬರಲು ಕಾಂಚೀಪುರಕ್ಕೆ ಕಳುಹಿಸಿದರು.

ಯಾಮಾನರು ಈ ಲೋಕ ಬಿಟ್ಟರು

ಆದರೆ ಸ್ವಲ್ಪ ದಿನಗಳಲ್ಲೇ ಅವರ ಆರೋಗ್ಯ ತುಂಬ ಕೆಟ್ಟಿತು. ಅವರು ದುರ್ಬಲರಾಗುತ್ತಿದ್ದರು.

ರಾಮಾನುಜರು ಬರುವುದನ್ನೇ ಅವರು ಎದುರು ನೋಡುತ್ತಿದ್ದರು.

ವೃಷಭ ಮಾಸ ಬಂತು. ಯಾಮುನರು ಇನ್ನು ಬಹುಕಾಲ ಬದುಕಲಾರರು ಎನಿಸುತ್ತಿತ್ತು.

ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು ನಡೆಯುತ್ತಿದ್ದವು. ಅಂದು ಕೊನೆಯ ಉತ್ಸವ.

ಯಾಮುನರು ದೇವರ ಮುಂದೆ ಧ್ಯಾನ ಮಾಡುತ್ತ ಕುಳಿತರು. ದೇವರನ್ನು ಕಣ್ತುಂಬ ನೋಡಿದರು. ತೀರ್ಥ ಪ್ರಸಾದ ಸ್ವೀಕರಿಸಿ ನಿಧನವಾಗಿ ಮಠಕ್ಕೆ ಹಿಂದಿರುಗಿದರು.

ಮಠದಲ್ಲಿ ಎಲ್ಲರೂ ಅವರ ಸುತ್ತ ಸೇರಿದರು. ಯಾಮುನರು ಎಲ್ಲರಿಗೂ ಕೈ ಮುಗಿದು, “ತಿಳಿದೋ ತಿಳಿಯದೆಯೋ ನಾನು ನಿಮಗೆ ಏನಾದರೂ ತಪ್ಪು ಮಾಡಿದ್ದರೆ ಅದನ್ನೆಲ್ಲ ಮರೆತು ನನ್ನನ್ನು ಕ್ಷಮಿಸಿ” ಎಂದರು. “ನಿಮ್ಮ ಕರ್ತವ್ಯ ಸದಾ ನೆನಪಿನಲ್ಲಿರಲಿ.”

“ನಿಮ್ಮ ಆಜ್ಞೆಯಂತೆ ಸದಾ ನಡೆದುಕೊಳ್ಳುತ್ತೇವೆ.”

ಯಾಮುನರು ಉಸಿರನ್ನು ಬಂಧಿಸಿ ಪದ್ಮಾಸನದಲ್ಲಿ ಕುಳಿತರು. ತಮ್ಮ ಆಚಾರ್ಯರಲ್ಲಿ ಮನಸ್ಸನ್ನು ನೆಲೆಗೊಳಿಸಿದರು. ಶಿಷ್ಯರು ಪ್ರಾರ್ಥನೆ ಮಾಡುತ್ತಿದ್ದಂತೆ ಅವರು ದೇಹತ್ಯಾಗ ಮಾಡಿದರು.

‘ನಾನು ಪೂರೈಸುತ್ತೇನೆ’

ರಾಮಾನುಜರನ್ನು ಕರೆತರಲು ಹೋಗಿದ್ದ ಮಹಾ ಪೂರ್ಣರು ಕಾಲುನಡಿಗೆಯಲ್ಲಿ ಕಾಂಚೀಪುರವನ್ನು ತಲುಪಲು ಹಲವು ದಿನಗಳೇ ಬೇಕಾದವು. ದೇವರ ಸೇವೆಯಲ್ಲಿ ನಿರತರಾಗಿದ್ದ ರಾಮಾನುಜರನ್ನು ದೂರದಿಂದಲೇ ಕಂಡು ಅವರು ಯಾಮುನರ ‘ಸ್ತ್ರೋತ್ರರತ್ನ’ದ ಶ್ಲೋಕಗಳನ್ನು ಹಾಡಿದರು.

ಅದನ್ನು ಕೇಳಿ ರಾಮಾನುಜರು ಥಟ್ಟನೆ ನಿಂತರು. “ಇಷ್ಟು ಸುಂದರವಾದ ಸ್ತೋತ್ರವನ್ನು ರಚಿಸಿದವರು ಯಾರು?”

“ಯಾಮುನಾಚಾರ್ಯರ ‘ಸ್ತೋತ್ರರತ್ನ’ ಇದು.”

“ಆಚಾರ್ಯರ ಆರೋಗ್ಯ ಹೇಗಿದೆ? ನೀವು ಇಲ್ಲಿಗೆ ಬಂದ ಕಾರಣವೇನು?”

“ನಾನು ಇಲ್ಲಿಗೆ ಹೊರಟಾಗ ಅವರ ಆರೋಗ್ಯ ಸ್ವಲ್ಪ ಮಟ್ಟಿಗೆ ಸುಧಾರಿಸಿತ್ತು. ಆದರೆ ತಾವು ಇನ್ನು ಬಹುದಿನ ಬದುಕಲಾರೆನೆಂದು ಅವರಿಗೆ ಅನಿಸಿದೆ. ಕಣ್ಣು ಮುಚ್ಚುವ ಮುನ್ನ ನಿಮ್ಮನ್ನು ನೋಡಬೇಕೆಂಬುದು ಅವರ ಆಸೆ. ನಿಮ್ಮನ್ನು ಕರೆತರಬೇಕೆಂದು ನನ್ನನ್ನು ಇಲ್ಲಿಗೆ ಕಳಿಸಿದರು.”

ಈ ಮಾತು ಕೇಳಿ ರಾಮಾನುಜರು ಥಟ್ಟನೆ ಮಹಾ ಪೂರ್ಣರೊಂದಿಗೆ ಹೊರಟರು.

ಶ್ರೀರಂಗದ ದಾರಿಯನ್ನು ಅವರು ಬೇಗಬೇಗ ನಡೆದು ಮುಗಿಸಿದರು. ಇಬ್ಬರ ಮನಸ್ಸಿನಲ್ಲೂ ದುಗುಡ.

ಅವರು ಶ್ರೀರಂಗದ ಬಳಿಗೆ ಬಂದರು. ಕಾವೇರಿಯನ್ನು ದಾಟಿ ಊರಿನ ಅಂಚನ್ನು ಮುಟ್ಟಿದರು.

ದೂರದಲ್ಲಿ ಗುಂಪೊಂದು ಸೇರಿತ್ತು. ಆದರೆ ನಿಶ್ಶಬ್ಧ.

ಯಾಮುನಾಚಾರ್ಯರು ತೀರಿಕೊಂಡಿದ್ದುದು ಅವರಿಗೆ ತಿಳಿಯಿತು. ಅವರ ಶರೀರದ ಅಂತ್ಯಕ್ರಿಯೆ ನಡೆಸಲು ಸೇರಿದ್ದ ಗುಂಪು ಅದು.

ಈ ದು:ಖದ ಸುದ್ದಿಯನ್ನು ಕೇಳಿ ಮಹಾ ಪೂರ್ಣರೂ ರಾಮಾನುಜರೂ ಮೂರ್ಛೆ ಹೋದರು.

ಸ್ವಲ್ಪ ಹೊತ್ತಿನಲ್ಲಿ ಚೇತರಿಸಿಕೊಂಡರು.

ಯಾಮುನರ ದೇಹವನ್ನು ಮಲಗಿಸಿದ್ದರು. ಅವರು ಶಾಂತವಾಗಿ ನಿದ್ರಿಸುವಂತೆಯೇ ಇತ್ತು.

ಯಾಮುನರನ್ನು ರಾಮಾನುಜರು ಕಾಲಿನಿಂದ ತಲೆಯವರೆಗೆ ನಿಟ್ಟಿಸಿ ನೋಡಿದರು-ಅವರ ರೂಪವನ್ನು ಹೀರಿಕೊಳ್ಳುವಂತೆ.

ಯಾಮುನರ ಬಲಗೈಯ ಮೂರು ಬೆರಳುಗಳು ಮಡಿಸಿಕೊಂಡಿದ್ದವು.

“ಆ ಬೆರಳುಗಳು ಮಡಿಸಿಕೊಂಡಿರುವುದೇಕೆ? ಅವರು ಬದುಕಿದ್ದಾಗ ಅವು ಹಾಗೇ ಇದ್ದುವೆ?” ಎಂದು ಅವರು ಕೇಳಿದರು.

“ಇಲ್ಲ. ಈಗ ಮಡಿಸಿವೆ. ಅವರೇಕೆ ಹಾಗೆ ಮಡಿಸಿಕೊಂಡರೋ ಗೊತ್ತಿಲ್ಲ” ಶಿಷ್ಯರೆಂದರು.

“ಆಚಾರ್ಯರಿಗೆ ಯಾವುದಾದರೂ ಆಸೆಗಳಿದ್ದುವೆ? ಅವನ್ನು ಪೂರೈಸಿಕೊಳ್ಳಲಾಗಲಿಲ್ಲವೆ?”

“ಯಾವ ಆಸೆಗಳೂ ಇದ್ದಂತಿಲ್ಲ. ಆದರೆ ಇನ್ನು ಮೂರು ಕೆಲಸಗಳನ್ನು ಮಾಡಬೇಕಾಗಿತ್ತು. ಅವನ್ನು ಮಾಡಲಿಲ್ಲ ಎಂದು ಅವರು ಆಗಿಂದಾಗ್ಗೆ ಹೇಳುತ್ತಿದ್ದರು.”

ಆ ಕೆಲಸಗಳು ಯಾವುವು? ನೆನಪಿವೆಯೆ?”

“ಶ್ರೀವೈಷ್ಣವ ಧರ್ಮ ಪ್ರಸಾರ ಮಾಡಿ ಜನರನ್ನು ದೇವರ ಕಡೆಗೆ ತಿರುಗಿಸಬೇಕು ಎಂಬುದು ಮೊದಲನೆಯ ಕೆಲಸ. ನಮ್ಮಾಳ್ವಾರರ ‘ತಿರುವಾಯ್‌ಮೊಳಿ’ಗೆ ವಾಕ್ಯಾರ್ಥ ಬರೆಯಿಸಬೇಕು ಎಂಬುದು ಎರಡನೆಯದು. ಬ್ರಹ್ಮಸೂತ್ರಗಳಿಗೆ ವಿಶಿಷ್ಟಾದ್ವೈತ ರೀತಿಯ ಭಾಷ್ಯ ಬರೆಯಿಸಬೇಕೆಂಬುದು ಮೂರನೆಯದು.”

ಇದನ್ನು ಕೇಳಿದ ರಾಮಾನುಜರು ಗಟ್ಟಿಯಾದ ದನಿಯಲ್ಲಿ, “ಇವು ನಿಮ್ಮ ಸಂಕಲ್ಪಗಳಾಗಿದ್ದರೆ, ನಾನು ಆರೋಗ್ಯವಾಗಿದ್ದರೆ, ನಿಮ್ಮ ಕರುಣೆ ನನ್ನ ಮೇಲಿದ್ದರೆ, ದೇವರು ನನ್ನ ಪ್ರಾರ್ಥನೆಯನ್ನು ಮನ್ನಿಸಿದರೆ, ಈ ಮೂರನ್ನೂ ನಾನು ಪೂರೈಸುತ್ತೇನೆ” ಎಂದರು. ಒಂದೊಂದು ಸಂಕಲ್ಪವನ್ನು ಉಚ್ಚರಿಸಿ, “ಅದನ್ನು ನೆರವೇರಿಸುತ್ತೇನೆ” ಎಂದು ಅವರು ಮಾತುಕೊಟ್ಟಾಗಲೂ ಯಾಮುನರ ಮಡಿಸಿದ್ದ ಒಂದೊಂದು ಬೆರಳು ಬಿಚ್ಚಿಕೊಂಡಿತು.

ಅಲ್ಲಿ ಸೇರಿದ್ದವರಿಗೆ ಆಶ್ಚರ್ಯವಾಯಿತು. “ಯಾಮುನರ ಅನುಗ್ರಹ ನಿಮ್ಮ ಮೇಲಿದೆ. ಅವರ ಎಲ್ಲ ಶಕ್ತಿಯೂ ನಿಮಗೆ ಸಂದಿದೆ. ಅವರ ಉತ್ತರಾಧಿಕಾರಿ ನೀವೇ. ಈ ಪರಂಪರೆಯನ್ನು ಮುಂದುವರಿಸುವ ಹೊಣೆ ನಿಮ್ಮದು” ಎಂದರು. “ಅದೇ ಆಚಾರ್ಯರ ಆಶಯವಾಗಿತ್ತು”

ರಾಮಾನುಜರು ಏನನ್ನೂ ಹೇಳಲಿಲ್ಲ. ಅವರು ಯಾಮುನರನ್ನೇ ನಿಟ್ಟಿಸುತ್ತ ನಿಂತರು.

ಯಾಮುನರು ಸಾಯುವವರೆಗೂ ರಾಮಾನುಜರ ಬರವನ್ನೇ ನಿರೀಕ್ಷಿಸುತ್ತಾ ಇದ್ದರು. ರಾಮಾನುಜರು ಬರಬಹುದು, ಅವರಿಗೆ ತಮ್ಮ ಈ ಮೂರು ಸಂಕಲ್ಪಗಳನ್ನು ತಿಳಿಸಬೇಕು ಎಂದುಕೊಳ್ಳುತ್ತಾ ಬೆರಳನ್ನು ಮಡಿಸಿಕೊಂಡಿದ್ದರು.

ಅವರ ಉಸಿರು ಹೋದರೂ ಇಂದ್ರಿಯಗಳು ರಾಮಾನುಜರು ಬರುವುದನ್ನೇ ಎದುರು ನೋಡುತ್ತಿದ್ದುವು. ಅವರ ದೇಹವು ಮರೆಯಾಗುವ ಮುನ್ನ ರಾಮಾನುಜರು ಬಂದಿದ್ದರು. ಆ ಮೂರನ್ನು ಮಾಡುವುದಾಗಿ ಮಾತುಕೊಟ್ಟರು. ಯಾಮುನರ ಕಿವಿ ಆಲಿಸಿತು. ಇಂದ್ರಿಯಗಳು ವಹಿಸಿಕೊಂಡಿದ್ದ ಕೆಲಸ ಪೂರೈಸಿತು. ಮಡಿಸಿದ ಬೆರಳುಗಳು ಬಿಚ್ಚಿಕೊಂಡವು.

ಹೃದಯ ಕ್ರಿಯೆ ನಿಂತರೂ ಇಂದ್ರಿಯಗಳು ಸ್ವಲ್ಪ ಕಾಲ ಸ್ತಬ್ಧವಾದವು. ಯಾವುದೋ ಆಗಬೇಕಾಗಿದ್ದದ್ದು ಆಗಲಿಲ್ಲ, ಬರಬೇಕಾದವರು ಬರಲಿಲ್ಲ ಎಂದುಕೊಳ್ಳುತ್ತ ಸತ್ತಾಗ ಹೀಗಾಗಬಹುದು.

ಯಾಮುನರ ಶಿಷ್ಯರು ಅವರ ಅಂತ್ಯಕ್ರಿಯೆ ನಡೆಸಿದರು. ಅವರ ಸಮಾಧಿಯ ಮೇಲೆ ಒಂದು ಬೃಂದಾವನ ನಿರ್ಮಿಸಿದರು. ಅದಕ್ಕೆ ನೆರಳಾಗಿ ಮಂಟಪ ಕಟ್ಟಿದರು.

ರಾಮಾನುಜರು ಯಾಮುನರ ಶಿಷ್ಯರಿಂದ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಸಮಗ್ರವಾಗಿ ಅಭ್ಯಾಸ ಮಾಡಿದರು. ಯಾಮುನರ ಮೂರು ಸಂಕಲ್ಪಗಳನ್ನೂ ನೆರವೇರಿಸಿದರು.

ಶ್ರೀವೈಷ್ಣವ ಪರಂಪರೆ ಹುಲುಸಾಗಿ ಹಬ್ಬಿತು. ಭಕ್ತಿಯ ಹೊಳೆ ಭಾರತದಲ್ಲೆಲ್ಲಾ ಹರಿಯಿತು. ಉತ್ತರ ಭಾರತದಲ್ಲಿ ಹುಟ್ಟಿ ಬದುಕಿದ ಅನೇಕ ಸಂತರಿಗೆ ಇದು ಸ್ಫೂರ್ತಿ ನೀಡಿತು.

ಆಚಾರ್ಯ ಯಾಮುನರು ಆಳವಂದಾರರು, ಆಳಲು ಬಂದವರು. ಅವರು ತಮ್ಮ ಶಿಷ್ಯ ಪರಂಪರೆಯ ಹೃದಯಗಳನ್ನು ಸದಾ ಆಳುತ್ತಿದ್ದಾರೆ.