ದಾವಣಗೆರೆಯಲ್ಲಿ ಜನಪದ ಕಲೆಗಳ ಧರತಿ

ಜಾನಪದದ ಕಲಾಸಂಪ್ರದಾಯ ಹಾಗೂ ಸಾಹಿತ್ಯಸಂಪ್ರದಾಯಗಳಲ್ಲಿ ಕಲೆಯ ಮುಖವನ್ನು ರಂಗದರ್ಶನ ಎತ್ತಿ ತೋರಿದರೆ ಅದರ ಸಾಹಿತ್ಯ ಮುಖವನ್ನು ವಿಚಾರ ಸಂಕಿರಣಗಳು ಪರಿಚಯಿಸಿಕೊಡುತ್ತವೆ. ಈ ಹಿನ್ನೆಲೆಯಲ್ಲಿ ಇದೇ ಮಾರ್ಚ ತಿಂಗಳು ೯ ಮತ್ತು ೧೦ ರಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯ ನೆರವಿನಿಂದ ದಾವಣಗೆರೆಯಲ್ಲಿ ೧೪ ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ನಡೆಸಿತು. ಡಾ. ಹಾ. ಮಾ. ನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನದಲ್ಲಿ ಒಂದು ಕಡೆ ತತ್ವವಿವೇಚನೆ, ಇನ್ನೊಂದು ಕಡೆ ಮನರಂಜನೆಯನ್ನು ಒದಗಿಸಲಾಯಿತು. ಸಮ್ಮೇಳನದ ನಿರ್ದೇಶಕರಾದ ಡಾ. ಎಸ್. ಎಂ. ವೃಷಭೇಂದ್ರಸ್ವಾಮಿಯವರೆಂದಂತೆ, ‘ಜನಪದ ಅಧ್ಯಯನ,. ಇಪ್ಪತ್ತೊಂದನೆಯ ಶತಮಾನದ ಮಾನವನ ಸಮಸ್ಯೆಗಳಿಗೆ ಮಾನವೀಯ ಪರಿಹಾರ ನೀಡಬಲ್ಲದೆಂ’ಬುದು ಇಲ್ಲಿ ಸಾಬೀತಾಯಿತು. ಎರಡೂ ದಿನ ರಾತ್ರಿ ೭ ರಿಂದ ಜಾನಪದ ರಂಗಪ್ರದರ್ಶನಗಳು ನಡೆದು ವಿವಿಧ ಜಾನಪದ ಕಲೆಗಳ ಪರಿಚಯ, ವೈಭವಗಳನ್ನು ಮೆರೆದು ಸಹೃದಯ ಪ್ರೇಕ್ಷಕರ ಹೃದಯ-ಮನಗಳೆರಡನ್ನೂ ತಣಿಸಿದವು.

ರಂಗದರ್ಶನದ ಪ್ರವೇಶ :

ಸಮ್ಮೇಳನದ ಮೊದಲದಿನವಾದ ಮಾರ್ಚ ೯ ರಂದು ಸಂಜೆ ೭ ಗಂಟೆಗೆ ದಾವಣಗೆರೆಯ ಎ. ಆರ್. ಎಂ. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಬಿ. ಜಿ. ನಾಗರಾಜ ಅವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಜಾನಪದ ವಿದ್ವಾಂಸರಾದ ಶ್ರೀ ಮುದೇನೂರ ಸಂಗಣ್ಣ ಅವರಿಂದ ರಂಗದರ್ಶನದ ಉದ್ಘಾಟನಾ ಸಮಾರಂಭವು ನೆರವೇರಿತು. ರಂಗಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತ ನಾಗಾಲೋಟದಿಂದ ಮುನ್ನಡೆಯುತ್ತಿರುವ ಆಧುನಿಕ ನಾಗರಿಕತೆಯು ಜಾನಪದ ಕಲೆ, ಸಾಹಿತ್ಯಗಳೆರಡನ್ನೂ ಅಲಕ್ಷಿಸುತ್ತಿರುವುದರ ಬಗೆಗೆ ವಿಷಾದ ವ್ಯಕ್ತಪಡಿಸಿ, ಹೀಗಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಒತ್ತಿ ಹೇಳಿದರು. ಸಮಗ್ರ ನಾಡಿನ ಭವ್ಯ ಸಂಸ್ಕೃತಿ-ಪರಂಪರೆಗಳೆರಡನ್ನೂ ಪ್ರತಿನಿಧಿಸುವ ಜಾನಪದ ಸಾಹಿತ್ಯ-ಕಲೆಗಳ ಬಗೆಗೆ ಇತ್ತೀಚೆಗ ವಿದ್ವಾಂಸರು ಗಮನ ಹರಿಸಿರುವುದು ಸಂತಸದ ಸಂಗತಿ ಎಂದೂ ಅವರು ಹೇಳಿದರು. ಹಾಗೆಯೇ ಕರ್ನಾಟಕದಲ್ಲಿ ಇತರ ಯಾವ ಸಂಸ್ಥೆಗಳೂ ಮಾಡಲಾರದಂಥ ಕಾರ್ಯವನ್ನು ಹದಿಮೂರು ಸಮ್ಮೇಳನಗಳನ್ನು ನಿರಂತರವಾಗಿ ನಡೆಸುವುದರ ಮೂಲಕ ಮಾಡುತ್ತ ಬಂದ ಕರ್ನಾಟಕ ವಿಶ್ವವಿದ್ಯಾಲಯವನ್ನು ಅಭಿನಂದಿಸಿದರು.

ರಂಗದರ್ಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಿ. ಆರ್. ಎಂ. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಬಿ. ಜಿ. ನಾಗರಾಜ ಅವರು ತಮ್ಮ ವಿಚಾರಪೂರ್ಣ ಭಾಷಣದ ಮೂಲಕ ತಾವು ಗಣಿತಶಾಸ್ತ್ರದ ಅಧ್ಯಾಪಕರೆನ್ನುವುದನ್ನು ಮರೆಯಿಸಿದರು. ಮಾನವ ಎಷ್ಟೇ ಮುಂದುವರೆದರೂ ತನ್ನ ಮೂಲಪರಂಪರೆಯನ್ನು ಬಿಡಬಾರದು, ಬಿಡಲಿಕ್ಕಾಗದು ಎಂದು ಹೇಳಿದರು. ಈ ಸಮಾರಂಭದ ನಿರ್ವಹಣೆ ಕಾರ್ಯವನ್ನು ಕನ್ನಡ ಅಧ್ಯಯನಪೀಠದ ಡಾ. ಬಿ. ವಿ. ಶಿರೂರ ಅವರು ನೆರವೇರಿಸಿದರು.

ಕೊಡಗಿನ ಬೆಡಗಿಯರ ಉಮ್ಮತ್ತಾಟ :

ಅಲಕ್ಷಿತರಾಗಿರುವ ಗ್ರಾಮೀಣ ಕಲಾವಿದರನ್ನು ಗುರುತಿಸಿ, ಆಹ್ವಾನಿಸಿ, ಪ್ರದರ್ಶನ ಏರ್ಪಡಿಸಿ, ಜನಮನವನ್ನು ತಣಿಸುವ ಈ ‘ರಂಗದರ್ಶನ’ ವ್ಯವಸ್ಥೆ ತನ್ನ ವೈವಿಧ್ಯತೆಯಿಂದ, ಸಹೃದಯರನ್ನು ಮರಳುಗೊಳಿಸಿತು. ದಾವಣಗೆರೆಯ ಹುಟ್ಟುಕುರುಡ ಶ್ರೀ ರಾಮಣ್ಣ ಚೌಡಕಿ ಮತ್ತು ಸಂಗಡಿಗರು ಎಲ್ಲಮ್ಮದೇವಿಯ ಕಥಾಸಂದರ್ಭವನ್ನು ಚೌಡಕಿ ವಾದ್ಯದ ಮುಖಾಂತರ ಸುಮಧುರ ರೀತಿಯಲ್ಲಿ ಹಾಡಿ, ಕುಣಿದು, ಮಣಿದು ಜನಮನ ರಂಜಿಸಿದರೆ, ಕೊಡಗಿನ ವೈಶಿಷ್ಟ್ಯಪೂರ್ಣ ಕಲೆಯಾದ ಉಮ್ಮತ್ತಾಟವನ್ನು ಅಮ್ಮತ್ತಿನ (ಕೊಡಗು) ಜಾನಪದ ಮೇಳದ ೧೨ ಜನ ಹೆಣ್ಣುಮಕ್ಕಳು ಪ್ರದರ್ಶಿಸಿದರು. ಕೊಡಗಿನ ಬೆಡಗಿಯರ ಸೊಗಸಿನ ವೇಷ ಹಾಡು, ಕುಣಿತ, ಮಣಿತಗಳು, ಜನಪದ ಕಲೆಯಲ್ಲಿ ತೋರುವ ರಸಿಕತೆ, ರಂಜನೆಗಳಿಗೆ ಮಾದರಿಯಾಗಿದ್ದವು. ಅದೇ ದಿನ ದೇಶವಿದೇಶಗಳಲ್ಲಿ ಜನಪ್ರಿಯತೆ, ಜನ ಮೆಚ್ಚುಗೆಯನ್ನು ಗಳಿಸಿ ಕರ್ನಾಟಕಕ್ಕೆ ಕೀರ್ತಿ ತಂದ ಯಡ್ರಾಮನಹಳ್ಳುಯ ಶ್ರೀ ದೊಡ್ಡಭರಮಪ್ಪನವರ ಮೇಳದವರಿಂದ ‘ಸೀತಾಸ್ವಯಂವರ’ ಎಂಬ ತೊಗಲುಗೊಂಬೆಯಾಟವನ್ನು ಪ್ರದರ್ಶಿಸಲಾಯಿತು. ವಂಶಪಾರಂಪರ್ಯವಾಗಿ ಬಂದ ಈ ಕಲೆಯನ್ನು ಉಳಿಸಿ-ಬೆಳೆಯಿಸುವಲ್ಲಿ ಶ್ರೀ ದೊಡ್ಡರಾಮಪ್ಪನವರು ಅತ್ಯಂತ ಶ್ರಮಪಡುತ್ತಿರುವುದು ಗಮನಾರ್ಹಸಂಗತಿ. ಇಂದಿನ ವೈಜ್ಞಾನಿಕ ಸ್ಫುಟನಿಕ್ ಯುಗದಲ್ಲಿಯೂ ಜರ್ಮನದಂಥ ಮುಂದುವರೆದ ದೇಶದಲ್ಲಿ ಈ ತೊಗಲು ಗೊಂಬೆಯಾಟವನ್ನು ಈಚೆಗೆ ತಾನೆ ಪ್ರದರ್ಶಿಸಿ ಯಶಸ್ವಿಯಾಗಿ ಬಂದುದು ಒಂದು ಸೋಜಿಗದ ಸಂಗತಿಯೆನಿಸಿದೆ. ಗೊಂಬೆಗಳ ಬಣ್ಣ, ಕುಣಿತ, ಕಥಾಪ್ರಸಂಗದ ನಿರೂಪಣೆ ಎಲ್ಲ ಮೇಳವಿಸಿದ ಈ ಆಟದಲ್ಲಿ ತೊಗಲುಗೊಂಬೆಗಳೇ ಸಜೀವ ರೂಪದಲ್ಲಿ ಪ್ರಸಂಗವನ್ನು ಪ್ರದರ್ಶಿಸುತ್ತವೆ ಎನೋ ಎಂಬ ಭಾವನೆ ಪ್ರೇಕ್ಷಕರಲ್ಲಿ ಮೂಡಿ ರಸಾನಂದವನ್ನು ನೀಡಿ ನೆರೆದ ಜನರೆಲ್ಲರ ಮನವನ್ನು ಸೂರೆಗೊಂಡವು. ………ರಿದು ನೆರೆದ, ದಾವಣಗೆರೆಯ ನಾಗರಿಕರಿಗೆ ಇದೊಂದು ಹೊಸ ಅನುಭವವೆನಿಸಿತು.

ವೀರಭದ್ರ ತಾಂಡವನೃತ್ಯ :

ಕನ್ನಡ ನಾಡಿನ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಲೆಗಳ ಪ್ರದರ್ಶನ ಸಮ್ಮೇಳನದ ಎರಡನೆಯ ದಿನ ನಡೆಯಿತು, ಮೊದಲನೆಯದಾಗಿ ಶ್ರೀ ಕೊಳ್ಳೆಪ್ಪ ನೀರಲಗಿ ಮೇಳದವಳು ಕಿನ್ನರಿ ವಾದ್ಯದ ಮುಖಾಂತರ ಪಾಂಡವರ ಕಥಾಸಂದರ್ಭವನ್ನು ಸುಶ್ರಾವ್ಯವಾಗಿ ಹಾಡಿ ತೋರಿಸಿದರು. ಈ ಕಥಾಸಂದರ್ಭದ ಮಧ್ಯೆ ದಾವಣಗೆರೆ ನಗರದ ನಾಗರಿಕರ ಮೇಲೆ ರಚಿಸಿದ ಹಾಡನ್ನೂ ಈ ಮೇಳದವರು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಇದು ಜಾನಪದ ಸಾಹಿತ್ಯದ ಸ್ಥಿತಿಸ್ಥಾಪಕ ಗುಣಕ್ಕೆ ಮಾದರಿಯಾಗಿತ್ತು. ನಂತರ ದಕ್ಷಾಸುರ ಸಂಹಾರ ಪ್ರಸಂಗದ ಕಥೆಯನ್ನೊಳಗೊಂಡ ವೀರಭದ್ರನ ರೋಮಾಂಚಕಾರಿ ಪುರವಂತ ಕುಣಿತವನ್ನು ತುಮಕೂರಿನ ಶ್ರೀ ಎಚ್. ಎಸ್. ನೀಲಕಂಠಯ್ಯ ಮತ್ತು ಅವರ ಸಂಗಡಿಗರ ಮೇಳದವರು ಪ್ರದರ್ಶಿಸಿದರು. ಅದೊಂದು ಅದ್ಭುತರಸ ಪ್ರಸಂಗವಾಗಿದ್ದಿತು.

ದೊಡ್ಡಾಟದ ವಿವಿಧ ಕುಣಿತದ ಭಂಗಿಗಳನ್ನು ಪ್ರದರ್ಶಿಸಿ ತೋರಿಸಿದವರು ಧಾರವಾಡದ ಶ್ರೀ ಸಿದ್ದೇಶ್ವರ ಮೇಳದವರು. ಆ ಮೇಲೆ ಕಾಡಿನಿಂದ ತಪ್ಪಿಸಿಕೊಂಡು ದಾವಣಗೆರೆಯ ರಂಗಮಂದಿರಕ್ಕೆ ಓಡಿ ಬಂದಂತಿದ್ದ ‘ಸಿಂಹನೃತ್ಯ’ವನ್ನು ಹೊನ್ನಾವರದ ಶ್ರೀ ಕೆ. ಪಿ. ಹಾಸ್ಯಗಾರ ಮೇಳದವರು ಮಾಡಿತೋರಿಸಿದರು. ಸಿಂಹದ ವಿವಿಧ ಭಂಗಿ, ಹಾವಭಾವ, ಗರ್ಜನೆ, ಅದರ ವೇಷ-ಭೂಷಣಗಳು ರಸಿಕರನ್ನು ತಣಿಸಿದವು. ನಮ್ಮ ನಾಡಿನ ಆಸ್ತಿಯಾದ ಇಂಥ ಜಾನಪದ ಕಲೆಗಳು ಇನ್ನೂ ಉಳಿದು ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಇವೆಲ್ಲವುಗಳನ್ನು ಉಳಿಸಿ ಬೆಳೆಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎರಡನೆಯ ದಿನದ ರಂಗಪ್ರದರ್ಶನದ ನಿರ್ವಹಣೆಯ ಕಾರ್ಯವನ್ನು ಕನ್ನಡ ಅಧ್ಯಯನ ಪೀಠದ ಡಾ. ಎಸ್. ವಿ. ಅಯ್ಯನಗೌಡರ ಅವರು ನೆರವೇರಿಸಿಕೊಟ್ಟರು. ಗ್ರಾಮೀಣ ಕಲಾವಿದರಿಗೆ ಗೌರವಾನ್ವಿತ ವ್ಯವಸ್ಥೆ, ಭೂರಿಭೋಜನ, ಕೈತುಂಬ ಗೌರವಧನ ನೀಡಿದ ಕರ್ನಾಟಕ ವಿಶ್ವವಿದ್ಯಾಲಯದ ಈ ಜಾನಪದ ಸಮ್ಮೇಳನ ಜನಪದ ಕಲೆಗಳನ್ನು ಪ್ರೋತ್ಸಾಹಿಸುವ ರೀತಿಗೂ ಆದರ್ಶವಾಗಿದ್ದಿತು. ಬಾಪೂಜಿ ವಿದ್ಯಾಸಂಸ್ಥೆಯ ಆತಿಥ್ಯ ಮೆಚ್ಚುವಂಥದಾಗಿತ್ತು.