ಕನ್ನಡ ನಾಡು ರಸ ಋಷಿಗಳ ಬೀಡು. ಸಂಸ್ಕೃತಿ, ಕಲೆ-ನೆಲೆಗಳ ನಾಡು. ಈ ನಾಡಿನಲ್ಲಿ ಕವಿಗಳು, ಕಲಿಗಳು, ಋಷಿಗಳು ಹುಟ್ಟಿ ನಾಡಿನ ಕೀರ್ತಿಯನ್ನೂ ಧರ್ಮವನ್ನೂ ರಕ್ಷಿಸಿ ಬೆಳಗಿಸಿರುವರು.

ಕಲಿಗಳು ನಾಡುಕಟ್ಟಿ ರಕ್ಷಕರಾಗಿದ್ದರೆ, ಕವಿಗಳು ನಾಡಿನ ಜನರ ಮುಂದೆ ಹಿರಿಯ ಆದರ್ಶಗಳನ್ನಿಟ್ಟಿದ್ದಾರೆ, ಬಾಳು ಹಿರಿದಾಗುವ ರೀತಿ ತೋರಿಸಿದ್ದಾರೆ. ಇದಕ್ಕಾಗಿ ಅವರು ಹಿಂದಿನ ಕಾಲದಲ್ಲಿ ಕಾವ್ಯ, ನಾಟಕಗಳನ್ನು ರಚಿಸಿದರು. ಈ ಮೂಲಕ ಕೀರ್ತಿ ಭಾಜನರಾದರು.

ಕನ್ನಡ ಕಾವ್ಯ ಪ್ರಪಂಚದಲ್ಲಿ ಪಂಪ, ಪೊನ್ನ, ರನ್ನರನ್ನು ರತ್ನತ್ರಯ (ಮೂರು ರತ್ನಗಳು) ರೆಂದು ಕರೆದಂತೆ, ಹರಿಹರ, ಪದ್ಮರಸ, ಮತ್ತು ರಾಘವಾಂಕರನ್ನು ಭಕ್ತಕವಿಗಳೆಂದು ಕರೆದಿರುವರು. ಹರಿಹರ ರಾಘವಾಂಕರಂತೂ ಭಕ್ತ ಕವಿಗಳೂ ಹೌದು, ಶಿವಕವಿಗಳೂ ಹೌದು ಅವರು ಹಾಗೆಯೇ ಪ್ರಸಿದ್ಧರಾಗಿದ್ದಾರೆ.

ಕನ್ನಡ ಸಾಹಿತ್ಯವು ಹನ್ನೆರಡನೆಯ ಶತಮಾನದಲ್ಲಿ ಸಮೃದ್ಧವಾಗಿ ಬೆಳೆಯಿತು. ಅದು ತನ್ನದೇ ಆದ ಹೊಸ ರೂಪುರೇಷೆಯನ್ನು ಪಡೆಯಿತು. ಕಾವ್ಯ ರಚನೆಯಲ್ಲಿ, ವಸ್ತುವಿನ ಆಯ್ಕೆಯಲ್ಲಿ, ಭಾಷೆ ಮತ್ತು ಛಂದಸ್ಸಿನ ಪ್ರಯೋಗದಲ್ಲಿ ವಿಶಿಷ್ಟ ಬದಲಾವಣೆ ಮಾಡಿಕೊಂಡು ಕಾವ್ಯ ರಚಿಸಿ ಪ್ರಸಿದ್ಧರಾದ ಕವಿ ಶ್ರೇಷ್ಠರ ಪಂಕ್ತಿಗೆ ಸೇರಿದವರು ಹರಿಹರ ಮತ್ತು ರಾಘವಾಂಕರು.

ಹರಿಹರ

ಹರಿಹರ ರಾಘವಾಂಕನ ಗುರು ಹಾಗೂ ಸೋದರ ಮಾವ. ದ್ವಾರಸಮುದ್ರದ ನರಸಿಂಹ  ಬಲ್ಲಾಳನ ಆಸ್ಥಾನದಲ್ಲಿ ಕರಣಿಕನಾಗಿದ್ದವನು. ಶಿವನದಲ್ಲಿ ಅಪಾರ ಭಕ್ತಿ. ಶಿವಕವಿ. ಈತನನ್ನು ಮಹಾಕವಿ ಎಂದೂ, ಕ್ರಾಂತಿ ಕವಿ ಎಂದೂ ಕರೆಯುವರು. ಕ್ರಾಂತಕವಿ ಎಂದರೆ ಕಾವ್ಯ ರಚನೆಯಲ್ಲಿ ತನ್ನದೇ ಆದ ಅನೇಕ ಬದಲಾವಣೆ ಮಾಡಿಕೊಂಡು ಹೊಸ ಮಾರ್ಗ ಕಲ್ಪಿಸಿದವನು. ಅಂತಹ ಹೊಸ ಮಾರ್ಗ “ರಗಳೆ” ಎಂಬ ಪದ್ಯ ಪ್ರಕಾರವನ್ನು ಪ್ರಚುರಕ್ಕೆ ತಂದುದು, ಕಥಾವಸ್ತುವಿನ ಆಯ್ಕೆಯಲ್ಲಿ ವೈವಿಧ್ಯ, ಆಡುಭಾಷೆಯನ್ನು ಕಾವ್ಯ ಭಾಷೆಯನ್ನಾಗಿ ಬಳಸಿದುದು, ಶಿವಭಕ್ತರ ಕಥೆಯನ್ನು ಚಿಕ್ಕ ಚಿಕ್ಕ ಅನೇಕ ಕೃತಿಗಳಲ್ಲಿ ರಚಿಸಿದುದು, ರಾಜರನ್ನು ಹೊಗಳಿ ತನ್ನ ಕವಿತಾ ಶಕ್ತಿಯನ್ನು ಉಪಯೋಗಿಸದೆ ಜನಸಾಮಾನ್ಯರನ್ನು ಕುರಿತು ಕೃತಿ ರಚಿಸಿದ್ದು ಇತ್ಯಾದಿ.

ರಾಘವಾಂಕನ ಮನೆತನ

ಹರಿಹರನ ರಕ್ತ ಸಂಬಂಧಿ ರಾಘವಾಂಕ. ಮುಂದೆ, ರಾಘವಾಂಕ ಪಂಡಿತ, ರಾಘವದೇವ, ಸುಕವಿ ಹಂಪೆಯ ರಾಘವಾಂಕ ಎಂದು ಕರೆಯಲ್ಪಟ್ಟನು. ಸುಮಾರು ೧೨೨೫ ರಲ್ಲಿದ್ದನೆಂದು ಅನೇಕ ವಿದ್ವಾಂಸರು ಅಭಿಪ್ರಾಯಪಡುವರು.

ಹಂಪೆ ರಾಮಾಯಣದ ಕಾಲದಿಂದಲೂ ಪ್ರಸಿದ್ಧಿ. ಪಂಪಾ ವಿರೂಪಾಕ್ಷನ ಸಾನ್ನಿಧ್ಯ, ತುಂಗಭದ್ರಾ ನದಿಯ ಮಡಿಲಿನ ಈ ತಾಣವೇ ರಾಘವಾಂಕನು ಜನಿಸಿದ ಊರು. ಹರಿಹರನು “ಪರಮಾನಂದಾಬ್ದಿ, ಪಂಪಾಪುರದರಸ ವಿರೂಪಾಕ್ಷನ ಸಾಕ್ಷಾತ್ ಸುಪುತ್ರನಾದರೆ”, “ಚತುರ ಕವಿರಾಯ ಹಂಪೆಯ ಹರೀಶ್ವರನ ವರಸುತ ರಾಘವಾಂಕ”. ಒಟ್ಟಿನಲ್ಲಿ ವಿರೂಪಾಕ್ಷ ಸ್ವಾಮಿಯೇ ಈರ್ವರಿಗೂ ಆರಾಧ್ಯ ದೇವತೆ. ಈತನ ಪ್ರೇರಣೆಯೇ ಕಾವ್ಯ ರಚನೆಗೆ ಕಾರಣ.

ಮಹಾದೇವಭಟ್ಟ ಮತ್ತು ರುದ್ರಾಣಿ ಎಂಬ ದಂಪತಿಗಳು ಹಂಪೆಯಲ್ಲಿ ವಾಸವಾಗಿದ್ದರು. ಶಿವನಲ್ಲಿ ಅಪಾರ ಭಕ್ತಿ ಮತ್ತು ಶ್ರದ್ಧೆ. ಮಹದೇವ ಭಟ್ಟನು ದೇವ, ತರ್ಕ, ಆಗಮ ಶಾಸ್ತ್ರಗಳಲ್ಲಿ ಪಾರಂಗತ. ಆದರೆ ಇವರಿಗೆ ಒಂದೇ ಕೊರತೆ. ವಿವಾಹವಾಗಿ ಅನೇಕ ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ವಿರೂಪಾಕ್ಷನಿಗೆ ಹಲವಾರು ಬಾರಿ ಕಾಣಿಕೆ ಅರ್ಪಿಸಿದುದೂ ಉಂಟು. ಪುನಃ ಹರಕೆ ಹೊತ್ತುದುದೂ ಉಂಟು.

ವಿರೂಪಾಕ್ಷನ ಕರುಣೆಯಿಂದ ಗಂಡು ಶಿಶುವೊಂದಕ್ಕೆ ರುದ್ರಾಣಿ ಜನ್ಮವಿತ್ತಳು. “ಮೋಡದೊಳಗಿನ ಚಂದ್ರನೋ” ಎಂದು ತಂದೆ ತಾಯಿಗಳು ಹರ್ಷಿಸಿದರು. ಪ್ರೀತಿಯಿಂದ ಮಗುವಿಗೆ “ರಾಘವಾಂಕ” ಎಂದು ಕರೆದು ಹೆಸರಿಟ್ಟರು.

ಹರಿಹರನಿಂದ ಮಾರ್ಗದರ್ಶನ

ರಾಘವಾಂಕ ತನ್ನ ಬಾಲ್ಯವನ್ನು ಹಂಪೆಯಲ್ಲಿಯೇ ಓರಗೆಯವರೊಂದಿಗೆ ಕಳೆದ. ವಿದ್ಯಾಭ್ಯಾಸವೆಲ್ಲವೂ ಹಂಪೆಯಲ್ಲಿಯೇ. ಹರಿಹರನೇ ಗುರು ಹಂಪೆಯ ಮಾದಿರಾಜ, ಹಂಪೆಯ ಮಹಾದೇವ ಹಾಗೂ ಹಂಪೆಯ ಶಂಕರಪ್ರಭು ಇತರ ಗುರುಗಳು. ಹರಿಹರನಲ್ಲಿ ರಾಘವನಿಗೆ ಅಪಾರ ಪ್ರೀತಿ, ಭಯ, ಭಕ್ತಿ. ತನ್ನ ವಿದ್ಯಾಭ್ಯಾಸದೊಂದಿಗೆ ಗುರುಸೇವೆ, ಪಂಪಾಪತಿಯ ಪೂಜೆಗ ಸಕಲ ಸಿದ್ಧತೆಯ ವ್ಯವಸ್ಥೆ ಇವು ರಾಘವನ ದಿನಚರಿ. ಈತನ ಚುರುಕು ಬುದ್ಧಿ ಕಂಡು ಹರಿಹರನಿಗೆ ರಾಘವನಲ್ಲಿ ತುಂಬ ಪ್ರೀತಿ.

ಏಳು ವರ್ಷ ತುಂಬುತ್ತಲೇ ಹರಿಹರನಿಂದ ವೇದ ಪಾಠ ಆರಂಭ. ಸಂಸ್ಕೃತ-ಕನ್ನಡ ಎರಡೂ ಭಾಷೆಗಳಲ್ಲಿಯೂ ಪಾಠ. ನಿರರ್ಗಳವಾಗಿ ಎರಡು ಭಾಷೆಗಳ ಬಳಕೆ.

ರಾಘವಾಂಕನ ಬುದ್ಧಿವಂತಿಕೆ, ಕಾವ್ಯ ಚತುರತೆಯನ್ನು ಕಂಡು ಹಂಪೆಯ ಭೂಪಾಲ ದೇವರಾಜನು ಮೆಚ್ಚಿದ. ದೇವರಾಜನ ಸಮಕಾಲೀನ ಪ್ರತಾಪರುದ್ರ, ಕಾಕತೇಯ ವಂಶದ ಓರಂಗಲ್ಲಿನ ಅರಸ. ಆತನ ಆಸ್ಥಾನಕ್ಕೆ ರಾಘವಾಂಕನು ಹೋಗಿ ಅಲ್ಲಿದ್ದ ಅನೇಕ ಪಂಡಿತರನ್ನು ವಾದದಲ್ಲಿ ಜಯಿಸಿದನಂತೆ.

ಹರಿಹರನು ಹಾಕಿಕೊಟ್ಟ ಮಾರ್ಗವನ್ನೇ ರಾಘವಾಂಕ ತನ್ನ ಬಾಲ್ಯದಿಂದಲೂ ಅನುಸರಿಸಿದನು. ಆದರೆ ಕಾವ್ಯ ರಚನೆಯಲ್ಲಿ ಮಾತ್ರ ತನ್ನ ಮಾರ್ಗದಲ್ಲಿ ನಡೆದು ಕೀರ್ತಿ ಗಳಿಸಿದ. ಗುರು ಹರಿಹರನಲ್ಲಿ ಭಕ್ತಿ ಮತ್ತು ಗೌರವ. ಅಂತೆಯೇ “ಮಹಾಮಹಿಮ ಹಂಪೆಯ ಹರೀಶ್ವರನ ಮೂರ್ತಿ ನೆಲಸಿರ್ಕೆನ್ ಚಿತ್ತದೊಳಗೆ” (ಶ್ರೇಷ್ಠನಾದ ಹಂಪೆಯ ಹರಿಹರನ ಮಂಗಳ ಮೂರ್ತಿ ನನ್ನ ಮನಸ್ಸಿನಲ್ಲಿ ಸದಾಕಾಲ ನೆಲೆಸಿರಲಿ) ಎಂದು ಕಾವ್ಯದ ಆರಂಭದಲ್ಲಿ ಪ್ರಾರ್ಥಿಸುತ್ತಾನೆ.

ಷಡ್ಪದಿ ಬ್ರಹ್ಮ

ಹರಿಶ್ಚಂದ್ರ ಚಾರಿತ್ರ” ಎಂಬ ಕಾವ್ಯವೇ ರಾಘವಾಂಕನನ್ನು ಕೀರ್ತಿಸಿದ ಕೃತಿ. ಅದು ತುಂಬ ಜನಪ್ರಿಯವಾದ ಕಾವ್ಯ. ಇದೇ ಅಲ್ಲದೆ, ಸೋಮನಾಥ ಚರಿತೆ, ವೀರೇಶ ಚರಿತೆ, ಸಿದ್ಧರಾಮ ಚಾರಿತ್ಯ್ರ ಇವುಗಳನ್ನೂ ರಚಿಸಿರುವನು. ಶರಭ ಚಾರಿತ್ರ, ಹರಿಹರ ಮಹತ್ವ ಎಂಬ  ಇನ್ನೂ ಇನ್ನೂ ಎರಡು ಗ್ರಂಥಗಳನ್ನು ರಚಿಸಿದ್ದಾನೆ. ಆದರೆ ಇದುವರೆಗೂ ಅವು ದೊರೆತಿಲ್ಲ.

ಬಾಲ್ಯದಿಂದ ಹರಿಹರನ ಶಿಷ್ಯ

“ಷಟ್ಪದಿ ಬ್ರಹ್ಮ” ಎಂಬುದು ರಾಘವಾಂಕನ ಪ್ರಸಿದ್ಧ ಬಿರುದು. “ಷಟ್ಪದಿ” ಹಿಂದಿನಿಂಲೂ ಇದ್ದ ಒಂದು ಪದ್ಯದ ಮುಟ್ಟು. ಆದರೆ “ಷಟ್ಪದಿ” ಪ್ರಕಾರದಲ್ಲಿಯೇ ಇಡೀ ಕಾವ್ಯವನ್ನು ರಚಿಸಿ ಬಳಕೆಗೆ ತಂದ ಕೀರ್ತಿ ರಾಘವಾಂಕನಿಗೆ ಸಲ್ಲಬೇಕು. ಈತನೇ ಮೊದಲಿಗನೂ ಹೌದು.

ಷಟ್ಪದಿಯಲ್ಲಿ ಅನೇಕ ವಿಧಗಳಿವೆ. ಭಾಮಿನಿ ಮತ್ತು ವಾಧಕ ಷಟ್ಪದಿಗಳು ತುಂಬ ಜನಪ್ರಿಯ. ಶರ, ಭೋಗ, ಕುಸುಮ ಉಳಿದವು. ಇದು ಆರು ಪಾದಗಳನ್ನು ಹೊಂದಿರುವ ಪದ್ಯ. ರಾಘವಾಂಕ ತನ್ನ ಕೃತಿಗಳನ್ನು “ವಾರ್ಧಕ ಷಟ್ಪದಿ” ಪ್ರಕಾರದಲ್ಲಿ ರಚಿಸಿದ.

ಒಂದು ಕಥೆ

ರಾಘವಾಂಕನ ಬಗ್ಗೆ ಒಂದು ಇಥೆ ಇದೆ.

“ಹಂಪೆಯರಸ ದೇವರಾಜ. ಅವನ ಇಚ್ಛೆಯ ಮೇರೆಗ “ಹರಿಶ್ಚಂದ್ರ ಕಾವ್ಯ”ವನ್ನು ಬರೆದನು. ರಾಘವಾಂಕನ ಕವಿತಾ ಶಕ್ತಿ ಹಾಗೂ ಕೌಶಲವನ್ನು ಕಂಡು ಮೆಚ್ಚಿದ ದೇವರಾಜನು “ಕವಿಶರಭ ಬೇರುಂಡ” ಎಂದು ಬಿರುದು ನೀಡಿ ಅನೇಕ ಉಡುಗರೆಗಳನ್ನು ನೀಡಿದನು. ಸಂತೋಷದಿಂದ ತನ್ನ ಗುರು ಹರಿಹರನಲ್ಲಿಗೆ ತೆಗೆದುಕೊಂಡು ಹೋಗಿ ಅನುಗ್ರಹಕ್ಕಾಗಿ ಪ್ರಾರ್ಥಿಸಿಕೊಂಡನಂತೆ. ಮಾನವರನ್ನು ಹಾಡಿ ಹೊಗಳಿ ಕಾವ್ಯ ರಚಿಸಿದ್ದ ಶಿಷ್ಯನನ್ನು ಕಂಡು ಕುಪಿತನಾಗಿ ಆತನ ದವಡೆಗೆ ಹೊಡೆಯಲು, ಹಲ್ಲುಗಳೆಲ್ಲ ಉದುರಿದುವಂತೆ. ರಾಘವಾಂಕ ಅಲ್ಲಿಂದ ಅಪಮಾನಿತನಾಗಿ ದುಃಖದಿಂದ ಮನೆಗೆ ಹಿಂದಿರುಗಿ ಶಿವನ ಹಾಗೂ ಶಿವಭಕ್ತರ ಶ್ರೇಷ್ಠತೆಯನ್ನು ಸಾರುವ ಕೃತಿಗಳನ್ನು ರಚಿಸಿ ಪುನಃ ಎಲ್ಲ ಹಲ್ಲುಗಳನ್ನು ಪಡೆದುಕೊಂಡನಂತೆ”.

ಈ ಕಥೆ ನಿಜವೋ ಅಲ್ಲವೋ ಹೇಳುವಂತಿಲ್ಲ. ಒಟ್ಟಿನಲ್ಲಿ ರಾಘವಾಂಕನು ಒಳ್ಳೆಯ ಕವಿ. ಕನ್ನಡ, ಸಂಸ್ಕೃತ ಎರಡರಲ್ಲೂ ಪಾಂಡಿತ್ಯ ಗಳಿಸಿದ್ದವನು, ಮಾರ್ಗ ಕವಿ. ಭಾಷೆಗೊಂದು ಶಕ್ತಿ ನೀಡಿದ ಕವಿ.

ರಾಘವನ ಕಾವ್ಯ ಕೌಶಲವನ್ನು ಸೋಮನಾಥ ಚರಿತೆಗಿಂತಲೂ ವಿರೇಶ ಚರಿತೆಯಲ್ಲಿ, ವಿರೇಶ ಚರಿತೆಗಿಂತ ಸಿದ್ಧರಾಮ ಚರಿತೆಯಲ್ಲಿ ಇವೆಲ್ಲಕ್ಕಿಂತಲೂ ಕವಿಯ ಅನುಭವಪೂರ್ಣತೆಯನ್ನು ಹರಿಶ್ಚಂದ್ರ ಕಾವ್ಯದಲ್ಲಿ ಕಾಣಬಹುದು.

ಸೋಮನಾಥ ಚರಿತೆ

ಹರಿಹರನು ತನ್ನ “ರಗಳೆ” ಗಳಲ್ಲಿ ಜನ ಸಾಮಾನ್ಯರನ್ನೆ ಕುರಿತು ಕೃತಿ ರಚಿಸಿದ. ಬಹುಪಾಲು ಈತನ ಕಥಾವಸ್ತುವೇ ರಾಘವನಿಗೂ ಆಧಾರ.

ಸೌರಾಷ್ಟ್ರವೆಂಬುದೊಂದು ರಾಜ್ಯ. ಪಾರದತ್ತ ಸೆಟ್ಟಿ ಮತ್ತು ಪುಣ್ಯವತಿಯರೆಂಬ ಶಿವಭಕ್ತ ದಂಪತಿಗಳು ವಾಸವಾಗಿದ್ದರು. ವ್ಯಾಪಾರ ಇವರ ವೃತ್ತಿ. “ಆದಯ್ಯ”ನೆಂಬ ಹೆಸರಿನಿಂದ ಆದಿಗಣನಾಥನು ಇವರಿಗೆ ಶಿವನ ಆಜ್ಞೆಯ ಮೇರೆಗೆ ಮಗನಾಗಿ ಜನಿಸುವನು. “ಅರಳೆಲೆಯ ಗರುವ ಮಾಗಾಯ ಮದದಾನೆ” ಶಿಶು ಬೇಗ ಬೇಗನೆ ಬೆಳೆದು ಬಾಲ್ಯ ಮುಗಿಸುವನು. ತಂದೆ ತಾಯಿಗಳು ಯೋಗ್ಯಳಾದ ಕನ್ಯೆಯನ್ನು ತಂದು ವಿವಾಹ ಮಾಡುವರು.

ವ್ಯಾಪಾರದ ನಿಮಿತ್ತ ಆದಯ್ಯನು, ಪುಲಿಗೆರೆ ಎಂಬ ಸ್ಥಳಕ್ಕೆ ಬರುವನು. ಅಲ್ಲಿ ಉದ್ಯಾನದಲ್ಲಿ ಅವನು ಪದ್ಮಾವತಿ ಎಂಬ ಸುಂದರ ತರುಣಿಯನ್ನು ನೋಡುವನು. ಅವರಲ್ಲಿ ಪರಸ್ಪರ ಪ್ರೀತಿಯುಂಟಾಗಿ ಅವರು ಮದುವೆಯಾಗುವರು. ಕಾವ್ಯ ಮುಂದುವರಿದು ಅವರ ಕಥೆಯನ್ನು ಹೇಳುತ್ತ ಆದಯ್ಯ ನಿಷ್ಠ ಶಿವಭಕ್ರನಾಗಿದ್ದನೆಂದು ಹೇಳಿ, ಅವನೂ ಅವನ ಹೆಂಡತಿಯೂ ಶಿವ ದೇವಾಲಯದ ಕಂಬದಲ್ಲಿ ಐಕ್ಯರಾದರು ಎಂದು ಮುಕ್ತಾಯವಾಗುತ್ತದೆ.

ಹೀಗೆ ಕವಿ ಆದಯ್ಯನ ಶಿವಭಕ್ತಿ, ನಿಷ್ಠೆಯನ್ನು ಈ ಕಾವ್ಯದಲ್ಲಿ ಚಿತ್ರಿಸಿ, ಶಿವನ ಶ್ರೇಷ್ಠತೆಯನ್ನು ವಿವರಿಸಿರುವನು. ಮಂಗಳಮೂರ್ತಿಯಾದ ಶಿವನ ಬಗ್ಗೆಯೇ ರಾಘವನದಲ್ಲಿ ಅತೀವ ಪ್ರೀತಿ. ಆತನನ್ನು ಎಷ್ಟು ಹಾಡಿ ಹೊಗಳಿದರೂ ತೀರದು. ಆದುದರಿಂದ ತನ್ನೆಲ್ಲ ಕಾವ್ಯಗಳಲ್ಲೂ ಶಿವನಿಗೇ ಪ್ರಾಧಾನ್ಯ.

ವೀರೇಶ ಚರಿತೆ

ಹೊಸ ಹೊಸ ಪ್ರಯೋಗಶೀಲತೆಗೆ ರಾಘವಾಂಕ ಪ್ರಥಮ. ಆತನ ಪ್ರಯತ್ನ ವಿರೇಶ ಚರಿತೆಯಲ್ಲಿ ಸ್ಫುಟಗೊಂಡಿದೆ. ವಾಧ್ಕ ಷಟ್ಪದಿಯಲ್ಲಿಯೇ ಎರಡು ಮೂರು ಕೃತಿಗಳನ್ನು ರಚಿಸಿದ ಕವಿ ವಿರೇಶ ಚರಿತೆಯನ್ನು “ಉದ್ದಂಡ ಷಟ್ಪದಿ” ಎಂಬ ಪ್ರಕಾರದಲ್ಲಿ ರಚಿಸಿದನು. ವೀರಭದ್ರ ದೇವಾಲಯದಲ್ಲಿಯೇ ಈ ಕಾವ್ಯವನ್ನು ರಚಿಸಿದನಂತೆ.

ಹರಿಹರನ ವೀರಭದ್ರ ದೇವರ ರಗಳೆಯೇ ಈ ಕೃತಿಗೆ ಆಧಾರ. ಸ್ಕಂದಪುರಾಣ, ಭಾರತ-ಭಾಗವತ, ಶಿವಪುರಾಣಗಳಲ್ಲಿ ಬಂದಿರುವ ದಕ್ಷನ ಕಥೆಯೇ ವೀರೇಶ ಚರಿತೆಯ ಕಥಾವಸ್ತು.

ದಕ್ಷನು ಬ್ರಹ್ಮನ ಮಕ್ಕಳಲ್ಲಿ ಒಬ್ಬ. ದಕ್ಷನಿಗೆ ಹದಿನಾರು ಮಂದಿ ಹೆಣ್ಣುಮಕ್ಕಳು. ದಾಕ್ಷಾಯಿಣಿಯೇ ಕಡೆಯವಳು. ಪಶುಪತಿಯಾದ ಶಿವನ ಹೆಂಡತಿಯೇ ದಾಕ್ಷಾಯಣಿ. ದಕ್ಷ ಅಹಂಕಾರಿ. ಸೂರ್ಯನೇ ಮೊದಲಾದ ದೇವತೆಗಳಿಂದ ಗೌರವ ಗಳಿಸಿದ್ದುದರಿಂದ ಶಿವನಿಂದಲೂ ಗೌರವ ಪಡೆಯಬೇಕೆಂಬ ದುರ್ಬುದ್ಧಿ ಹುಟ್ಟುವುದು. ಒಮ್ಮೆ ಆಹ್ವಾನವಿಲ್ಲದೆಯೇ ಶಿವನ ಸಭೆಗೆ ದಕ್ಷ ಬರುವನು. ಶಿವನು ಗಮನಿಸುವುದಿಲ್ಲ.

“ಮರುಳಂ ಬಗೆಯದೊಡೇಂ ಬಗೆಯೆಳೆ ಮಗಳ್?” ಎಂದು ಮಗಳತ್ತ ತಿರುಗುವನು. ಆದರೆ ಮಗಳು- “ಪತಿಯಾದರಿಸದವರನ್ ಆದರಿಪುದು ಸತಿಗೆ ಹಿತವಲ್ಲ” (ಗಂಡನು ತಿರಸ್ಕರಿಸಿದವನನ್ನು ಆದರಿಸುವುದು ಹೆಂಡತಿಗೆ ತಕ್ಕದು ಅಲ್ಲ) ಎಂದು ಪತಿಯ ಮಾರ್ಗವನ್ನೇ ಹಿಡಿಯುವಳು. ದಕ್ಷ ನಿರುಪಾಯನಾಗಿ “ಮಂದಿಯ ವಂದನೆಗೊಸೆದು” ಸಭೆಯತ್ತ ನೋಡುವನು. ಎಲ್ಲರೂಸ ಮೌನ! “ಚಿಂತಾಕುಂತಂ ತನುವಂ ತಟ್ಟಲ್” ಅಲ್ಲಿಂತ ಅವಮಾನಗೊಂಡು ಹೋಗುವನು.

“ವಿನಾಶಕಾಲದಲ್ಲಿ ವಿಪರೀತ ಬುದ್ಧಿ” ಎನ್ನುವಂತೆ ಶಿವನಿಗೆ ಅವಮಾನಪಡಿಸುವ ಸಲುವಾಗಿ ಶಿವದ್ವೇಷಿಯಾಗಿ “ಬೃಹಸ್ಪತಿ ಸಪ” ಎಂಬ ಯಾಗವನ್ನು ಆರಂಭಿಸುವನು.  “ಇಂದಾನು ಕರೆದೊಡೆ ಬಾರದ ಮುನಿವರರಂ ಕೊಂದಿಕ್ಕುವೆ” (ಆಹ್ವಾನಿಸಿದ ಮುನಿಗಳು ಬರದಿದ್ದಲ್ಲಿ ಅವರೆಲ್ಲರನ್ನೂ ನಾನು ಕೊಲ್ಲುವೆ) ಎಂದುದರಿಂದ ಮುನಿಗಳೆಲ್ಲ ಪ್ರಾಣ ಭಯದಿಂದ ಯಾಗಕ್ಕೆ ಬರುವರು.

ಶಿವನ ಮಾತನ್ನು ಕೇಳದೆ ದಾಕ್ಞಾಯಣಿ ಯಾಗಕ್ಕೆ ಬರುವಳು. ದಕ್ಷನ ಹಿಂದಿನದನ್ನು ನೆನೆದು ಶಿವನನ್ನು ಹಲವು ವಿಧದಲ್ಲಿ ಜರೆಯುವನು. ಪತಿ ನಿಂದನೆಯನ್ನು ಕೇಳಲಾರದೆ ದಾಕ್ಷಾಯಣಿ ಯಜ್ಞಕುಂಡದಲ್ಲಿ ಬಿದ್ದು ದೇಹ ತೊರೆಯುವಳು. ಶಿವನಿಗೆ ಈ ವಿಚಾರ ತಿಳಿದು ದುಃಖಗೊಳ್ಳುವನು. ಅತ್ಯಂತ ಕೋಪಗೊಳ್ಳುವನು. ಆಗ  ಹಣೆಯ ಕಣ್ಣಿನಿಂದ ವೀರಭದ್ರ ಜನಿಸುವನು.

ಶಿವನ ಆಣತಿಯಂತೆ ದಕ್ಷನ ಯಾಗಶಾಲೆಗೆ ಬಂದು ಎಲ್ಲವನ್ನೂ ಧ್ವಂಸಗೊಳಿಸುವನು. “ಮಲೆ ತೊಡೆದವರನ್ನು ಕೊಂದು ಶರಣಾದವರಿಗೆ ತಕ್ಕುದ ಮಾಡುವನು”. ದೇವತೆಗಳನ್ನು ಸೆರೆಹಿಡಿಯುವನು. ದಕ್ಷನ ತಲೆ ಕಡಿದು “ಕುರಿತಲೆ” ಯನ್ನು ಜೋಡಿಸಿಕೊಂಡು ಶಿವನ ಬಳಿಗೆ ಒಯ್ಯುವನು.

ದಕ್ಷ ಶಿವನ ಶಕ್ತಿಯನ್ನರಿಯದೆ ಮಾಡಿದ ಅಪರಾಧಕ್ಕಾಗಿ ಶಿವನಲ್ಲಿ ಕ್ಷಮೆ ಯಾಚಿಸುತ್ತಾನೆ. ಕ್ಷಮೆ, ಕರುಣೆಗಳ ಮಂಗಳಮೂರ್ತಿಯಾದ ಶಿವ ದಕ್ಷನನ್ನು ಮನ್ನಿಸಿ ಯಾಗ ಮುಂದುವರಿಸಲು ಆಶೀರ್ವದಿಸಿ ಕಳುಹಿಸಿ ಕೊಡುವನು. ಹೀಗೆ ಶಿವನ ಕರುಣೆ ಅಪಾರ, ಶರ ರಕ್ಷಕ, ಭಕ್ತರ ಅಧೀನ ಎಂಬುದನ್ನು ರಾಘವಾಂಕನು ಈ ಕೃತಿಯಲ್ಲಿ ಚಿತ್ರಿಸಿದ್ದಾನೆ.

ಸಿದ್ಧರಾಮ ಚರಿತೆ

ಈ ಕೃತಿ ಬರೆಯುವ ವೇಳೆಗೆ ಸಿದ್ಧರಾಮನ ಜೀವನ, ಸಾಧನೆ, ಕೆಲಸಗಳೆಲ್ಲವೂ ದಂತಕಥೆಯಾಗಿ ಪ್ರಚುರವಾಗಿತ್ತೇನೋ! ಸಿದ್ಧರಾಮ ಒಬ್ಬ ಐತಿಹಾಸಿಕ ವ್ಯಕ್ತಿ. ಅಲ್ಲಮಪ್ರಭು, ಬಸವಣ್ಣರ ಸಮಕಾಲೀನ, “ಜಗದಗುರು ಸಿದ್ಧರಾಮ” ನೆಂದೇ ಖ್ಯಾತಿ. ಶಿವಜ್ಞಾನಿ. ದೀನದಲಿತರ ಸೇವೆ, ಸಮಾಜ ಸೇವೆಯಲ್ಲಿಯೇ ಜೀವನ ಸಾಗಿಸಿ ತೃಪ್ತಿ ಪಡೆದೆ ವ್ಯಕ್ತಿ. ಇವರ ಜೀವನದಲ್ಲಿ ಮಾಡಿದ ಪ್ರತಿಯೊಂದು ಕಾರ್ಯವೂ ಪವಾಡವೆನ್ನುವಷ್ಟರ ಮಟ್ಟಿಗೆ ಪ್ರಚುರ.

ದನ ಕಾಯುತ್ತಿದ್ದ ಸಿದ್ಧರಾಮನನ್ನು ಶಿವ ಜಂಗಮ ವೇಷ ಧರಿಸಿ ಬಂದು ಹಂಜಕ್ಕಿ ಬೇಡುವನು. ಅದನ್ನು ನೀಡಿದ. ಅನಂತರ ಮಜ್ಜಿಗೆ ಕೇಳುತ್ತಾನೆ. ಸಿದ್ಧರಾಮನು ತರಲು ಮನೆಗೆ ಹೋಗಿ ಹಿಂದಿರುಗುವಷ್ಟರಲ್ಲಿಯೇ ಶಿವನು ಅದೃಶ್ಯನಾಗುವನು. ಸಿದ್ಧರಾಮನು ಬಂದು ಜಂಗಮನು ಇಲ್ಲದುದನ್ನುಕಂಡು ಗೋಳಾಡುವನು. ಹೆಸರಿಡಿದು ಕೂಗುವನು. ಅಳತೊಡಗುವನು. ಶ್ರೀಶೈಲಕ್ಕೆ ಹೋಗುತ್ತಿದ್ದ ಯಾತ್ರಿಕರು, ಇದನ್ನು ಕಂಡು, ಆತನನ್ನು “ಜಂಗಮನು ಅಲ್ಲಿರುವನೆಂದು ಕರೆದುಕೊಂಡು ಹೋಹೊ. ಶಿವಾಲಯದಲ್ಲಿದ್ದ ಈಶ್ವರಲಿಂಗವನ್ನು ಈತನೇ ಆ ಜಂಗಮನೆಂದು” ತೋರಿಸುವರು. ಅವರಲ್ಲಿ ನಂಬಿಕೆ ಬಾರದ ಸಿದ್ಧರಾಮ ಪ್ರಾಣ ಹತ್ಯೆ ಮಾಡಿಕೊಳ್ಳಲು ಹತ್ತಿರದಲ್ಲಿದ್ದ ಗುಡ್ಡವನ್ನೇರಿ ಸಿದ್ಧನಾಗುವನು. ಶಿವನು ಆತನ ದೃಢತೆಗೆ ಮೆಚ್ಚಿ ಸೊನ್ನಲಿಗೆಗೆ ಹಿಂದಿರುಗಲು ಹೆಳುವನು. ತಾನೂ ಅವನೊಂದಿಗೆ ಬರುವೆನೆಂದು ಭರವಸೆ ಇತ್ತ ಮೇಲಯೇ ಸಿದ್ಧರಾಮ ಅಲ್ಲಿಂದ ಹೊರಟುದುದು.

ಅಲ್ಲಮನು ಸಿದ್ಧರಾಮನ ಬಳಿಗೆ ಬದ ಸಂಗತಿ ಈ ಕಾವ್ಯದಲ್ಲಿ ಬಹಳ ಪ್ರಮುಖವಾದುದು. “ಲೋಹದ ಸಂಗದಿಂದ ಕಿಚ್ಚು (ಬೆಂಕಿ) ಏಟು ತಿನ್ನುವಂತೆ ದೇಹದ ಸಂಗದಿಂದ ಆತ್ಮ ಆಯಾಸಪಡುವುದು”, ನೀನು ಬೇರೆಯವರಿಗಾಗಿ ಅತ್ತು ಕಣ್ಣನ್ನು ಕಳೆದುಕೊಳ್ಳಬೇಡ  ಎಂದು ಸಿದ್ಧರಾಮನನ್ನು ಎಚ್ಚರಗೊಳಿಸಿ ಆಧ್ಯಾತ್ಮಕ ಸಾಧನೆಗೆ ತಿರುಗಿಸಿ ಅವನ ಬಾಳಿಗೊಂದು ಹೊಸ ತಿರುವನ್ನು ನೀಡಿ ಹಿಂದಿರುಗುವನು.

ಸಿದ್ಧರಾಮನು ಸೊನ್ನಲಿಗೆಯ ಹೊರಭಾಗದಲ್ಲಿ ಉದ್ಭವಿಸಿದ್ದ ಶಿವಲಿಂಗವನ್ನು ತರಲು ರಥಕ್ಕೆ ಹೂಡಿದ್ದ ಎತ್ತುಗಳು ಮೃತಿ ಹೊಂದಿದಾಗ ಬದುಕಿಸಿದುದು, ಏಲೇಶನಿಗೆ ತಾತ್ಕಾಲಿಕವಾಗಿ ಜೀವದಾನ ಮಾಡಿದುದು, ಆತನ ಪವಾಡಗಳಿಗೆ ನಿದರ್ಶನವಾಗಿ ಕಾವ್ಯದಲ್ಲಿ ಸುಂದರವಾಗಿ ವರ್ಣಿತವಾಗಿವೆ. ಸಿದ್ಧರಾಮ ಲೌಕಿಕವಾಗಿ ಅದೆಷ್ಟು ಕಾರ್ಯಗಳನ್ನು ನಿರ್ವಹಿಸಿದ, ಹಾಗೂ ಆ ಬಗ್ಗೆ ಆತನಲ್ಲಿ ಎಷ್ಟರಮಟ್ಟಿಗೆ ಶ್ರದ್ಧೆ ಯಿತ್ತೆಂಬುದನ್ನು ಸ್ಪಷ್ಟವಾಗಿ ರಾಘವಾಂಕ ಚಿತ್ರಿಸಿದ್ದಾನೆ. “ಸಿದ್ಧರಾಮನಂತೆ ಎಲ್ಲರೂ ಅಭಿರಾಮರಾಗಲು ಪ್ರಯತ್ನಪಡಿರಿ. ಸೇವೆಯಲ್ಲಿ ನಿಷ್ಠರಾಗಿ, ಎಲ್ಲರಿಗೂ ಬದುಕಲು ಅವಕಾಶ ಕೊಡಿ” ಎಂಬ ಸಂದೇಶವನ್ನು ಈ ಕೃತಿಯಲ್ಲಿ ಗಮನಿಸಬಹುದು. ಇದಕ್ಕೂಇನ್ನೂ ಮೇಲಾಗಿ ತ್ಯಾಗ-ಪರೋಪಕಾರ, ದಯೆ – ಲೋಕಸೇವೆ ಮತ್ತು ಆದರ್ಶ ವಾಸ್ತವತೆಗೆ ಕವಿ ಪ್ರಾಧಾನ್ಯ ನೀಡಿರುವುದು ಮುಖ್ಯವಾಗಿದೆ.

ಹರಿಶ್ಚಂದ್ರ ಕಾವ್ಯ

ದಾನಕ್ಕೆ ಕರ್ಣ, ಶೌರ್ಯಕ್ಕೆ ಭೀಮ, ಭಕ್ತಿಗೆ ಪ್ರಹ್ಲಾದನಿದ್ದಂತೆ ಸತ್ಯಕ್ಕೆ ಹರಿಶ್ಚಂದ್ರನೆಂದು ಮನೆಮಾತಾಗಿದೆ. ಅಂತಹ ಹರಿಶ್ಚಂದ್ರನ ಕಥೆಯನ್ನು ಕೇಳದವರಾರು? ಸತ್ಯಕ್ಕಾಗಿ ತನ್ನ ಸುಖವನ್ನು, ರಾಜ್ಯವನ್ನು ತ್ಯಾಗ ಮಾಡಿದ, ಕಷ್ಟಗಳನ್ನು ಸುಖಗಳೆಂದೇ ಪರಿಗಣಿಸಿ ಅನುಭವಿಸಿದ ತೇಜಸ್ವಿ ಅರಸ. ಇಕ್ಷ್ವಾಕುವಂಶದ ಕೀರ್ತಿ ಪುರುಷ. ಸತ್ಯಸಂಧ, ಕೀರ್ತಿವಂತ. ಆತನ ಹೆಂಡತಿ ಚಂದ್ರಮತಿ, ಮಗ ಲೋಹಿತಾಶ್ವ.

ಹರಿಶ್ಚಂದ್ರನ ಕಥೆ ವೈದಿಕ ಸಾಹಿತ್ಯ ಮತ್ತು ಪುರಾಣಗಳಲ್ಲಿ ಬಂದಿರುವಂಥದೇ ಆದರೂ ಕನ್ನಡದಲ್ಲಿ ಪ್ರಥಮ ಬಾರಿಗೆ ಪ್ರಸಿದ್ಧಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲಬೇಕು. “ಭಾರತೀಯ ಸಾಹಿತ್ಯದಲ್ಲಿ ಎಲ್ಲೂ ದೊರೆಯದ ನೂತನ ಸೃಷ್ಟಿ”. ಹರಿಶ್ಚಂದ್ರನ ಕಥೆಯಲ್ಲಿ ಮೊದಲು ಕನ್ನಡದಲ್ಲಿ ಪ್ರಾಯಿಕವಾಗಿ ಬರೆದವರು ಜೈನರು. ಸಂಸ್ಕೃತ ಸಾಹಿತ್ಯದಲ್ಲಿ ಈ ಕಥೆ ೧೦ನೆಯ ಶತಮಾನದ “ಚಂಡ ಕೌಶಿಕ ನಾಟಕ”ದಲ್ಲೂ ಬಂದಿದೆ.

ದೇವೇಂದ್ರನ ಸಭೆಯಲ್ಲಿ

ದೇವೇಂದ್ರನ ಸಭೆಯಲ್ಲಿ “ಒಡಲನಾವರಿಸಿದ ಅಂಗೋಪಾಂಗ ಸಂಕುಳದ ನಡುವೆ ನಯನದ್ವಯಂಗಳು” (ಎರಡು ಕಣ್ಣುಗಳು) ಎಂಬ ತೆರದಿ ವಸಿಷ್ಠ- ವಿಶ್ವಾಮಿತ್ರರು ಕುಳಿತಿದ್ದರು. ಪ್ರಾಸಂಗಿಕವಾಗಿ ದೇವೇಂದ್ರನು ವಸಿಷ್ಠರನ್ನು “ಸತ್ಯವಂತರಾರು? ಹೇಳು” ಎನ್ನುವನು.

 

ರಾಘವಾಂಕ ಬರೆಯುತ್ತಿರುವುದು- ಕೃತಿಗಳು

ವಸಿಷ್ಠನು ಇಕ್ಷ್ವಾಕು ವಂಶದ ಹಿಂದಿನ ಅರಸರನ್ನು ಉದ್ಧರಿಸುವುದಕ್ಕಾಗಿಯೋ ಎನ್ನುವಂತೆ ಹುಟ್ಟಿರುವ, “ವಸುಧಾಧಿಪತಿ ಹರಿಶ್ಚಂದ್ರನಾಥನ ಸತ್ಯದೆಸಕಮಂ ಪೊಗಳಲ್‌ ಎನ್ನಳವೆ? ಫಣಿಪತಿಗರಿದು ಶಶಿಮೌಳಿಯಾಣೆ” ಎನ್ನುತ್ತಾನೆ. ತಕ್ಷಣವೇ, “ಅಖಿಳ ಜೀವಾವಳಿಯಲಿ ಭಾವಿಪಡೆ ಕುಂದನಲ್ಲದೆ ಲೇಸಕಾಣದಿಹ” (ಎಲ್ಲ ಜೀವಿಗಳಲ್ಲಿಯೂ ಒಳ್ಳೆಯದನ್ನು ಬಿಟ್ಟು ಕೆಟ್ಟದುದನ್ನೇ ಕಾಣುವ) ವಿಶ್ವಾಮಿತ್ರನು-

“ನಿಲ್ ನುಡಿಯ ಬೇಡ! ಬೇಸರದೆ ಕೇಳ್ವ ದೇವೇಂದ್ರ ನುಂಟೆಂದು ಹೇಸದೆ ಅಕಟ ಸೊರಹುವರೆ ವಾಸಿಷ್ಠ?” ದೇವೇಂದ್ರನು (ಬೇಸರಪಟ್ಟುಕೊಳ್ಳದೆ ಹೇಳಿದುದನ್ನೆಲ್ಲ ಕೇಳುತ್ತಾನೆಂದು ಹೇಳುವರೆ? ನಿಲ್ಲಿಸು ಮಾತನಾಡಬೇಡ) ಎನ್ನುವನು.

ವಸಿಷ್ಠ: ಹರಿಶ್ಚಂದ್ರನೆಂದೂ ಅನೃತ ನುಡಿಯಲಾದ.

ವಿಶ್ವಾಮಿತ್ರ: ನುಡಿದರೆ?

ವಸಿಷ್ಠ: ನನ್ನ ಸದಾಚಾರ ತೊರೆದು, ಧರ್ಮಭ್ರಷ್ಟನಾಗಿ ಹೆಂಡ ಕುಡಿಯುತ್ತ ದಕ್ಷಿಣದಿಕ್ಕಿನತ್ತ ಪ್ರಯಾಣ ಮಾಡುವೆ.

ಸಭೆಯನ್ನು ಗಂಭೀರ ಮೌನ ಆವರಿಸಿತ್ತು. ಆಗ ಇದೇ ಸಮಯವನ್ನು ನಿರೀಕ್ಷಿಸುತ್ತಾ ಕುಳಿತಿದ್ದ ನಾರದರು ತಕ್ಷಣವೆ “ಕೊಡು ಭಾಷೆಯನು ವಾಸಿಷ್ಠಂಗೆ” ಎಂದು ವಿಶ್ವಾಮಿತ್ರನನ್ನು ಪ್ರೋತ್ಸಾಹಿಸುವರು.

“ತಾನು ಮಾಡುವ ಪರೀಕ್ಷೆಯಲ್ಲಿ ಹರಿಶ್ಚಂದ್ರನು ವಿಜಯಿಯಾದಲ್ಲಿ ನನ್ನ ತಪಸ್ಸಿನ ಅರ್ಧಭಾಗವನ್ನೇ ನೀಡುವೆ” ಎಂಬುದು ವಿಶ್ವಾಮಿತ್ರನ ಸವಾಲು.

“ಕೋಣನೆರಡುಂ ಹೋರೆ ಗಿಡುವಿಂಗೆ ಮೃತ್ಯು” ಎಂಬಂತೆ ಮುನಿಗಳಿಬ್ಬರ ಸವಾಲಿಗೆ ಪರೀಕ್ಷೆಗೆ ಸಿಲುಕಿದ ಹರಿಶ್ಚಂದ್ರ ನಾನಾ ವಿಧದ ಕಷ್ಟಗಳಿಗೆ ಗುರಿಯಾಗಿ, ರಾಜ್ಯ ಕೋಶಗಳನ್ನು, ಹೆಂಡತಿ, ಮಗನನ್ನು ಕಳೆದುಕೊಳ್ಳುವನು.

ಭೂಪಾಲನನ್ನು ಕಾಡಿದಷ್ಟೂ ವಿಶ್ವಾಮಿತ್ರ ತಾನೇ ಸೋಲುವನು. ಸೋತಷ್ಟೂ ಸಿಟ್ಟಿಗೇಳುವನು. ಆದರೆ ಕಡೆಯಲ್ಲಿ ಹರಿಶ್ಚಂದ್ರನ ತೇಜಸ್ಸು ತರಣಿಯಂತೆ ಹೊಳೆಯುವುದು.

ಅಗ್ನಿ ಪರೀಕ್ಷೆ ಪ್ರಾರಂಭವಾಯಿತು

ವಂಚನೆಯನ್ನೇ ಅರಿಯದ ಹರಿಶ್ಚಂದ್ರ ಸುವರ್ಣಯಾಗ ಮಾಡುವನು. ವಿಶ್ವಾಮಿತ್ರ ಇಲ್ಲಿಗೆ ಬಂದು “ಪಿರಿಯ ಕರಿಯಂ ಮೆಟ್ಟಿ ಕವಡೆಯಂ ಮಿಡಿದಡೆ ಎನಿತುದ್ದಕ್ಕೆ ಹೋಹುದು” (ದೊಡ್ಡ ಆನೆಯ ಮೇಲೆ ನಿಂತು ಕವಡೆಯನ್ನು ಮೇಲಕ್ಕೆ ಚಿಮ್ಮಿದರೆ ಎಷ್ಟು ಎತ್ತರಕ್ಕೆ ಹೋಗುವುದೋ) ಅಷ್ಟು ಧನರಾಶಿಯನ್ನು ಬೇಡುವನು. “ತೆಗೆದುಕೊ” ಎಂದು ರಾಜನು ನಡಲು ಮುಂದಾಗುವನು. ವಿಶ್ವಾಮಿತ್ರನು ಅಗತ್ಯ ಬಿದ್ದಾಗ ತೆಗೆದುಕೊಳ್ಳುವೆ ನಿನ್ನ ಬಳಿಯೇ ಇರಲಿ ಎಂದು ಅವನಲ್ಲಿಯೇ ಬಿಟ್ಟು ಹಿಂದಿರುಗುವನು.

ಮಾಯಾಮೃಗಗಳ ಸೃಷ್ಟಿಯಿಂದ ಪ್ರಜೆಗಳಿಗೆ ಉಂಟಾದ ಕೋಟಲೆಯನ್ನು ಪರಿಹರಿಸಲು ಅರಣ್ಯಕ್ಕೆ ಹರಿಶ್ವಂದ್ರನು ಹೋಗುವನು. ಬೇಟೆಯಾಡಿ ಆಯಾಸಗೊಂಡು ಅಲ್ಲಿಯೇ ಇದ್ದ ಉದ್ಯಾನವನದಲ್ಲಿ ವಿಶ್ರಮಿಸಿ ಕೊಳ್ಳುತ್ತಿರುವಾಗ ವಿಶ್ವಾಮಿತ್ರ ಹೆಣ್ಣುಗಳನ್ನು ಸೃಷ್ಟಿಸಿ ರಾಜನಲ್ಲಿಗೆ ಕಳಿಸುವನು.

ಆ ಹೆಣ್ಣುಗಳು “ಸಂದ ಕಾರಿರುಳ ಕನ್ಯೆಯರು, ಹಗಲಂ ನೋಡಲೆಂದು ಬಂದರೊ” (ಕಗ್ಗತ್ತಲೆಯಂತಿದ್ದ ಆ ಹೆಣ್ಣುಗಳು ಹಗಲನ್ನು ನೋಡಲು ಬಂದರಂತೆ!) ಎಂಬಂತಿದ್ದರು. ನೃತ್ಯ- ಗಾನಗಳಿಂದ ರಾಜನನ್ನು ಸಂತಸಗೊಳಿಸುವರು. ರಾಜ  ಸಂತೋಷದಿಂದ ಉಡುಗೊರೆ ನೀಡುವನು. ತೃಪ್ತಿಗೊಳ್ಳದೆ “ಮುತ್ತಿನ ಸುತ್ತಿಗೆಯನಿತ್ತು ಸಲಹು, ನೀನೆಮಗೆ ವಲ್ಲಭನಾಗಿ ಚಿತ್ತದ ಉಮ್ಮಳಿಕೆಯಂ ಕಳೆ ಭೂನಾಥ” ಎಂದು ಪೀಡಿಸುವರು. ಬೇರೆ ದಾರಿಗಾಣದ ಹರಿಶ್ಚಂದ್ರ ಚಮ್ಮಟಿಗೆಯಿಂದ ಜಡಿದು ಕಳಿಸುವನು.

ಪುರದ ಪುಣ್ಯಂ

ಈ ವಿಚಾರ ತಿಳಿದು “ಮೀಸೆಗೂದಲು ಹೊತ್ತಿ ಹೊಗೆಯೆ” (ಮೀಸೆಕೂದಲು ಹತ್ತಿ ಉರಿಯುತ್ತಿದೆಯೊ) ಎಂಬಂತೆ ಕೋಪಗೊಂಡು ವಿಶ್ವಾಮಿತ್ರ ಬರುವವನು. “ಸತಿಯರನ್ನು ಸಾಯ ಬಡಿದ ಕೈಗಳನ್ನು ಕಡಿದು ಬರಿದು ಬಿಟ್ಟು ಬಿಡುವೆನೆ?” ಎಂದು ನುಡಿವನು. “ಎಡೆಬಿಡದೆ ಕಾಡುವಿರಾದರೆ ಸರ್ವ ರಾಜ್ಯವನ್ನಾದರೂ ಕೊಟ್ಟೇನು, ನಿನ್ನ ಕನ್ನಿಕೆಯರ ವರಿಸಲಾರೆ” ಎಂದ ಹರಿಶ್ಚಂದ್ರ ಖಂಡಿತ ನುಡಿಯುವನು. ವಿಶ್ವಾಮಿತ್ರನು ಸಂಕೋಚವಿಲ್ಲದೆ ರಾಜ್ಯವನ್ನೂ ಬೇಡಿ ಹರಿಶ್ಚಂದ್ರನಿಂದ ಸರ್ವಸ್ವವನ್ನೂ ಪಡೆದುಕೊಳ್ಳುತ್ತಾನೆ.

ಹರಿಶ್ಚಂದ್ರನು ಕಾಶಿಯತ್ತ ಹೆಂಡತಿ ಮತ್ತು ಮಗನೊಂದಿಗೆ ಹೊರಡುವನು. ರಾಜವೇಷವನ್ನು ತೆಗೆದಿರಿಸಿ ನಾರುಡೆ ಧರಿಸುವಂತೆ ವಿಶ್ವಾಮಿತ್ರ ಆದೇಶಿಸುವನು!

“ಪುರದ ಪುಣ್ಯಂ ಪುರುಷರೂಪಿಂದೆ ಪೊಗುತಿದೆ” (ಪಟ್ಟಣದ ಪುಣ್ಯ ಪುರುಷನ ರೂಪದಲ್ಲಿ ಹೊರಹೋಗುತ್ತಿದೆ) ಎಂದು ರಾಘವಾಂಕ ಹರಿಶ್ಚಂದ್ರನ ನಿರ್ಗಮನವನ್ನು ವರ್ಣಿಸುತ್ತಾನೆ.

ವಿಶ್ವಾಮಿತ್ರನಿಗೆ ಹಣದ ನೆನಪು ಬಂದಿತು. ಶೀಘ್ರವಾಗಿ ರಾಜನನ್ನು ತಡೆದು ನಾನು ಹಿಂದೆ ಇಟ್ಟಿದ್ದ ಹಣವನ್ನು ಕೊಡುವಂತೆ ಒತ್ತಾಯಿಸುವನು. ಹರಿಶ್ಚಂದ್ರನಿಗೆ ದಿಕ್ಕು ತೋಚದಂತಾಗುವುದು. ಆದರೂ ಧೃತಿಗೆಡದೆ ಹಿಂದಿರುಗಿಸಲು ಒಂದು ತಿಂಗಳ ಅವಧಿ ಪಡೆದು ಹೊರಡುವನು. ಜೊತೆಯಲ್ಲಿ ವಿಶ್ವಾಮಿತ್ರ ಮುನಿಯ ಶಿಷ್ಯ ನಕ್ಷತ್ರಕ! ವಿಶ್ವಾಮಿತ್ರನಿಗಿಂತಲೂ ರಾಜನನ್ನು ಒಂದು ಕೈ ಹೆಚ್ಚಾಗಿ ಪೀಡಿಸಿದ!

ಮಾರ್ಗ ಮಧ್ಯದಲ್ಲಿ ಹರಿಶ್ಚಂದ್ರ ಅನುಭವಿಸಿದ ಕಷ್ಟಗಳನ್ನು ಕಂಡು ಸೂರ್ಯ ಚಂದ್ರರೂ ಮರುಗಿದರಂತೆ. ಕಾಡಿನಲ್ಲಿ ಕಾಡ್ಗಿಚ್ಚು ಹಬ್ಬಿದಾಗ ಚಂದ್ರಮತಿಯು ಅಗ್ನಿಯನ್ನು ಪ್ರಾರ್ಥಿಸುವಳು. ರಾಘವಾಂಕ “ಉತ್ತಮರ ಮುಂದೆ ಆವ ಠಕ್ಕಿರಲಾಪುದು?” (ಸತ್ಯವಂತರ ಮುಂದು ಯಾವ ವಂಚನೆ ನಿಲ್ಲುವುದು?) ಎಂದು ಪ್ರಶ್ನಿಸುವನು. ನಂತರ ಸುತ್ತುವರಿದಿದ್ದ ಕೃತಕಾಗ್ನಿ ದಾರಿ ಬಿಟ್ಟು ಕೊಡುವುದು.

ಕಾಶಿ ತಲುಪುವರು. ಮುನಿಗೆ ಕೊಟ್ಟ ಅವಧಿ ಮುಗಿಯುತ್ತಿದೆ. “ಪೋದನಿತು ಪೋಗಲ್ ಎಮ್ಮಿರ್ವರಂ ಮಾರಿ, ಬಳಿಕ ಉಳಿದುದಂ ಕಾಣು ಭೂಭುಜ” (ಏನೇ ಆದರೂ ಚಿಂತೆ ಇಲ್ಲ. ನಮ್ಮಿಬ್ಬರನ್ನು ಮಾರಿ ಉಳಿದುದನ್ನು ಚಿಂತಿಸು) ಎಂದು ಚಂದ್ರಮತಿ ಪತಿಗೆ ಸಲಹೆ ನೀಡಿ ಧೈರ್ಯ ತುಂಬುವಳು. ಬೇರೆ ದಾರಿಯಿಲ್ಲದೆ ತನ್ನ ಹೆಂಡತಿ, ಮಗನನ್ನು ಮಾರಿ” ಋಣಮುಕ್ತನಾಗುವನು. ಇವರನ್ನು ಕೊಂಡುಕೊಂಡ ಸಂಸಾರವನ್ನು ರಾಘವನು ಹೀಗೆ ವರ್ಣಿಸುವನು.

“ಒಡೆಯನತಿ ಕೋಪಿ, ಹೆಂಡತಿ ಮಹಾಮೂರ್ಖೆ, ಮಗ ಕಡು ಧೂರ್ತ, ಸೊಸೆಯಾದಡೆ ಅಧಿಕ ನಿಷ್ಠುರೆ”

ಇಂಥಹವನ ಮನೆಯಲ್ಲಿ ಪಟ್ಟ ಮಹಿಷಿ ಚಂದ್ರಮತಿ ಬದುಕಬಾರದು, ಸಾಯಬಾರದು ಎನ್ನುವಂಥ ನಾನಾ ಚಿತ್ರಹಿಂಸೆಗಳಿಂದ ಬಳಲುವಳು. ವಿಶ್ವಾಮಿತ್ರನಿಗೆ ಇನ್ನೂ ತೃಪ್ತಿಯಿಲ್ಲ. ಹರಿಶ್ಚಂದ್ರನನ್ನು “ಕಡೆಗನಾಮಿಕನ ಕಿಂಕರನಾಗಿ ಸುಡುಗಾಡಕಾವಂತೆ” ಮಾಡಿಯೇ ರೀತುವೆ ಎಂದು ಮತ್ತೆ ಮತ್ತೆ ಶಪಥಗೈಯುವನು. ಅಂತೆಯೇ ಮಾಡಿಯೂ ಬಿಡುವನು.

ಸ್ಮಶಾನದಲ್ಲಿ

ದರ್ಭೆ ಹುಲ್ಲಿಗಾಗಿ ಹೋಗಿದ್ದ ಲೋಹಿತಾಶ್ವ ಹಾವು ಕಚ್ಚಿ ಸತ್ತ ವಿಚಾರವನ್ನು ಚಂದ್ರಮತಿ ತಿಳಿದು ಗೋಳಾಡುತ್ತ ಗಾಢಾಂಧಕಾರದ ದಾರಿಯಲ್ಲಿ ಬೀಳುತ್ತಾ ಏಳುತ್ತಾ ಮಗನ ಶವವನ್ನು ಕಂಡು “ಹಡೆದ ಒಡಲು ಹುಡಿಯಾಯ್ತು ಮಗನೆ” ಎಂದು ಪ್ರಲಾಪಿಸ ತೊಡಗುವಳು. “ಸೀಗೆಯೊಳಗಣ ಬಾಳೆಗೆಣೆಯಾದುದು” ಎಂಬುದಾಗಿ ರಾಘವಾಂಕನು ಚಂದ್ರಮತಿಯ ಸ್ಥಿತಿಯನ್ನು ಸಂದರ್ಭೋಚಿತವಾಗಿ ವರ್ಣಿಸುತ್ತಾನೆ.

ಭೂ ಪೋತ್ತಮನ ಸುತನನ್ನು ಸುಡಲು ಸೂಡಿಲ್ಲ! ಸ್ಮಶಾನದಲ್ಲಿ ಚಿತೆಯಲ್ಲಿ ಉರಿದು ಉಳಿದಿದ್ದ ಸೂಡು (ಸೌದೆ)ಗಳನ್ನಾಯ್ದು ತಂದು ಚಿತೆ ಮಾಡಿ ಚಂದ್ರಮತಿ ಅಗ್ನಿ ಸ್ಪರ್ಶಿಸಲು ಸಿದ್ಧಳಾಗುವಳು.

ಸ್ಮಶಾನದ ಕಾವಲುಗಾರ ಹರಿಶ್ಚಂದ್ರ. ಹೆಣವನ್ನು ಸುಡುವ ಮೊದಲು ಕಾಣಿಕೆ ಕೊಡಬೇಕು. ಚಂದ್ರಮತಿಯ ಅಳುವಿನ ಶಬ್ದ ಕೇಳಿ ಆತ ಬರುತ್ತಾನೆ. ತನಗೆ ತಿಳಿಸದೆ,  ಸ್ಮಶಾನದ ಕಾಣಿಕೆ ಕೊಡದೆ ಶವಸಂಸ್ಕಾರ ಮಾಡ ಹೊರಟಿರುವುದನ್ನು ಕಂಡು ಕುಪಿತನಾಗಿ ಚಿತೆಯ ಬಳಿಗೆ ಬಂದು “ಸುತನ ಹಿಂಗಾಲ್ವಿಡಿದು ಸೆಳೆದು ಬಿಸುಟಂ ಭೂಪಂ”. ಎಂತಹ ಕಠೋರ ಪ್ರಸಂಗ! ಚಂದ್ರಪತಿಯ ಹೃದಯಕ್ಕೆ ಚೂರಿ ಇರಿದಂತಾಗುವುದು, ಕಲ್ಲು ಕರಗುವಂತೆ ಬೇಡಿಕೊಳ್ಳುವಳು- “ಬಿಸುಡದಿರು, ಬಿಸುಡದಿರು ಬೇಡ, ಬೇಡಕಟ ಪಸುಳೆನೊಂದಹುದು ನಿನ್ನ ಶಿಶುವಿನೋಪಾದಿಸ ತಿಳಿ” ಎಂಬುದಾಗಿ ಬೇಡಿಕೊಳ್ಳುವಳು. ಮಗ ಸತ್ತಿದ್ದಾನೆ. ಅವನ ಹೆಣವನ್ನು ಎಳೆದರೆ ಅವನಿಗೆ ತಿಳಿಯುವುದಿಲ್ಲ ಎಂಬುದನ್ನು ತಾಯಿಯ ಹೃದಯ ಗುರುತಿಸುವುದಿಲ್ಲ. “ಅಯ್ಯೋ, ನೀನು ಹಾಗೆ ಎಳೆದರೆ ಅವನಿಗೆ ನೋವಾಗುತ್ತದೆ”! ಎಂದು ದುಃಖಿಸುತ್ತಾಳೆ.

ಹರಿಶ್ಚಂದ್ರನಿಗೆ ಸತ್ತ ಹುಡುಗ ತನ್ನ ಮಗನೆಂದು ಗೊತ್ತಿಲ್ಲ. ಈ ಹೃದಯ ಒಡೆಯುವ ಕ್ಷಣದಲ್ಲಿ ಗಂಡ ಹೆಂಡತಿಯರಿಗೆ ಗುರುತು ಸಿಕ್ಕುತ್ತದೆ. ತನ್ನ ಮುಂದಿರುವ ಹೆಣ ತನ್ನ ಒಬ್ಬನೇ ಮಗನದು ಎಂದು ಹರಿಶ್ಚಂದ್ರನಿಗೆ ತಿಳಿಯುತ್ತದೆ. ಅವನಿಗೂ ದುಃಖ ಉಕ್ಕುತ್ತದೆ. ಆದರೂ ಶುಲ್ಕ ನೀಡದೆ ಶವ ದಹಿಸಲು ಅವಕಾಶ ನೀಡದಾದ. ಹಣ ಸಿಕ್ಕದೆ ಹೋದರೆ ಶವವನ್ನು ಸುಡುವುದೇ ಬೇಡ ಎಂದ. ಅನ್ಯಮಾರ್ಗ ಕಾಣದೆ ಒಡೆಯನ ಬಳಿಯಿಂದ ಹಣ ತರಲು ಹೊರಟ ಚಂದ್ರಮತಿಯನ್ನು ರಾಜಭಟರು, ರಾಜಕುಮಾರನನ್ನು  ಕೊಂದ ಪಾತಕಿ ಇವಳೇ ಎನ್ನುತ್ತಾ ರಾಜನಲ್ಲಿಗೆ ಎಳೆದೊಯ್ಯುವರು. ರಾಜ “ಶಿರಚ್ಛೇದನದ ಆಜ್ಞೆ” ಮಾಡುವನು. ಅವಳ ತಲೆ ಕಡಿಯುವವರು ಯಾರು? ಹರಿಶ್ಚಂದ್ರನಿಗೇ ಬಂದಿತ್ತು ಆ ಕೆಲಸ!

ವೀರಭಾಹುವಿನ ಆಜ್ಞೆಯಂತೆ ಹರಿಶ್ಚಂದ್ರ ಚಂದ್ರಮತಿಯ ತಲೆ ಕತ್ತರಿಸಲು ಸಿದ್ಧನಾಗುವನು. ಚಂದ್ರಮತಿಯ ತಲೆ ಕತ್ತರಿಸಲು ಸಿದ್ಧನಾಗುವನು. ಚಂದ್ರಮತಿ ಪದ್ಮಾಸನದಲ್ಲಿ ಕುಳಿತು, ಕಣ್ಣು ಮುಚ್ಚಿ ಮನದಲ್ಲಿಯೇ ಗುರುವಸಿಷ್ಠಂಗೆ ನಮಿಸಿ.

“ಕಲಿ ಹರಿಶ್ಚಂದ್ರ ರಾಯಂ ಸತ್ಯವೆರಸಿ ಬಾಳಲಿ ಮಗಂ ಮುಕ್ತನಾಗಲಿ, ರಾಜ್ಯದೊಡಯ ವಿಶ್ವಾಮಿತ್ರ ನಿತ್ಯನಾಗಲಿ ಹರಕೆ ಹೊಡೆಯೆಂದಳು!” (ಪರಾಕ್ರಮಿಯಾದ ಹರಿಶ್ಚಂದ್ರ ರಾಜನು ಸತ್ಯವಂತನಾಗಿ ಬಾಳಲಿ, ಮಗನು ಮುಕ್ತನಾಗಲಿ, ರಾಜ್ಯದ ಪ್ರಭು ವಿಶ್ವಾಮಿತ್ರನು ಚಿರಂಜೀವಿಯಾಗಲೀ ಇದೇ ನನ್ನ ಹರಕೆ ಹೊಡೆ ಎನ್ನುತ್ತಾಳೆ). ಈಗಲೇ ಹರಿಶ್ಚಂದ್ರನಿಗೆ ತನ್ನ ಹೆಂಡತಿ ಎಂದು ತಿಳಿದುದು, “ಯಜಮಾನನ ಅಪ್ಪಣೆ ನಡೆಯಬೇಕು” ಎಂದು ಅವನು ಚಂದ್ರಮತಿಯ ತಲೆ ಕತ್ತರಿಸಲು ಸಿದ್ಧನಾದ. ವಿಶ್ವಾಮಿತ್ರ ಕಡೆಯಬಾರಿ ಪ್ರಲೋಭನೆಗೆ ಪ್ರಯತ್ನಿಸುವನು. ಆದರೆ ಹರಿಶ್ಚಂದ್ರ ಒಪ್ಪಿದನೆ?

“ವರಪುತ್ರನಸುವಳದು ಪೋದೊಡೇಂ, ನಾನೆನ್ನ ತರುಣಿಯ ಕೊಂದಡೇಂ ಕುಂದೇ, ಸತ್ಯವನ್ನು ಬಿಟ್ಟರನೆನಿಸಿದಡೆ ಸಾಕು”

(ಮಗನ ಪ್ರಾಣ ಹೋದರೇನು? ನನ್ನ ಪತ್ನಿಯನ್ನು ಕೊಂದರೂ ಚಿಂತೆಯಿಲ್ಲ, ಸತ್ಯವನ್ನು ಬಿಡಲಿಲ್ಲ ಎನ್ನಿಸಿಕೊಂಡರೆ ಸಾಕು) ಎಂದು ಖಡ್ಗವೆತ್ತಿ ಜಡಿವನು! ಗಗನದಿಂದ ಪುಷ್ಪವೃಷ್ಟಿಯಾಗುವುದು.

“ಘನ ಸತ್ಯವೇ ಜೀವವೆಂದಿರ್ದ, ನಿನ್ನ ಹೊಲೆ
ಯನ ಸೇವೆ ಗುರುಸೇವೆ, ಹೊತ್ತ ಹೊಲೆವೇಷ ಪಾ
ವನ ಪುಣ್ಯವೇಷ, ಸುಡುಗಾಡ ರಕ್ಷಿಸುವಿರವು ತಾ
ಯಜ್ಞ ರಕ್ಷೆಯಿರವು
ಅನುದಿನ ಭುಂಜಿಸಿದ ಶವನ ಶಿರದಕ್ಕಿಯ
ಲ್ಲನಪೇಯ, ಚಾಂದ್ರಾಯಣಂ ಮುನ್ನಳಿವು ಜ
ನ್ಮ ನಿಕಾಯದಳಿವಂಗನಾಹನನ ಮಾಯಾಹನನಂಜ ಬೇಡ”

ಎಂದು ನುಡಿಯುತ್ತಾ ಈಶ್ವರನು ಪ್ರತ್ಯಕ್ಷನಾಗುವನು. ನಮಸ್ಕರಿಸಿದ ಹರಿಶ್ಚಂದ್ರನನ್ನು ಹಿಡಿದೆತ್ತಿ ಪರಮೇಶ್ವರನು “ಸತ್ಯವನ್ನೇ ಪ್ರಾಣವೆಂದುಕೊಂಡಿದ್ದ ಹರಿಶ್ಚಂದ್ರನೇ ಇದುವರೆಗೂ ನೀನು ಮಾಡುತ್ತಿದ್ದುದು ಹೊಲೆಯನ ಸೇವೆಯಲ್ಲ ಅದು ಗುರುಸೇವೆ. ತೊಟ್ಟಿದ್ದ ವೇಷ ಹೊಲೆಯಲ್ಲ ಪವಿತ್ರವಾದ ರಾಜಯೋಗ್ಯ ಉಡುಪು, ಸ್ಮಶಾನವನ್ನು ರಕ್ಷಿಸುತ್ತಿದ್ದುದಲ್ಲ, ರಾಜನ ಕರ್ತವ್ಯದಂತೆ ಯಾಗವನ್ನೇ ರಕ್ಷಣೆ ಮಾಡುತ್ತಿದ್ದುದು. ಹೆಣಗಳ ತಲೆಯಮೇಲಿನ ಅಕ್ಕಿಯನ್ನು ನೀನು ಭುಂಜಿಸಿದುದಲ್ಲ ಅದು ಪ್ರಸಾದ. ನೀನು ತುಂಡರಿಸಿದ ಸ್ತ್ರೀ ಮಾಯಾ ಸ್ತ್ರೀ ಹೆದರಬೇಡ” ಎನ್ನುತ್ತಾ ಆತನ ಮೈದಡವಿ ಹಣೆಗೆ ಭಸ್ಮವನ್ನಿಡುವನು.

ವಿಶ್ವಾಮಿತ್ರನ ಹಠ ಇಲ್ಲಿಗೆ ಮುಗಿಯುತ್ತದೆ. “ಕುಡಿದೌಷಧ ಕಹಿಯಾಗಿದ್ದರೂ ಆರೋಗ್ಯಕ್ಕೆ ಒಳ್ಳೆಯದಾಗುವಂತೆ” ಹರಿಶ್ಚಂದ್ರನಿಗೆ ಒದಗಿದ ಕಷ್ಟಪರಂಪರೆ ಆತನ ಕೀರ್ತಿಯನ್ನು ಬೆಳಗಿಸಿತು.

ಇಂತಹ ಪುಣ್ಯಕಥೆಯನ್ನು ಬರೆದು “ಧರೆಯೊಳು ಹರಿಶ್ಚಂದ್ರ ಚಾರಿತ್ರಮಂ ಕೇಳ್ ನರರೇಳು ಜನ್ಮದಿಂ ಮಾಡಿರ್ದ ಪಾತಕವು, ತರಣಿಯುದಯದ ಮುಂದೆ ನಿಂದ ತಿಮಿರದ ತೆರದಿ ಹರೆಯುತಿಹುದು” ಎನ್ನುತ್ತಾ “ಹರನೇ ಸತ್ಯ ಸತ್ಯವೇ ಹರನು” ಎಂದು ರಾಘವಾಂಕ ಜಗತ್ತಿಗೆ ಸಾರಿದನು. ಸತ್ಯಕ್ಕಾಗಿ ಬದುಕಿ ಸರ್ವಸ್ವವನ್ನೂ ಧಾರೆಯೆರೆದ ಹರಿಶ್ಚಂದ್ರನ ಕಥೆ ಪುಣ್ಯವೂ ಹೌದು, ಪಾವನವೂ ಹೌದು. “ಸತ್ಯದಿಂದ ಹರಿಶ್ಚಂದ್ರನಿಗೆ ಬೆಲೆ ಬಂದಂತೆ ಹರಿಶ್ಚಂದ್ರನಿಂದ ಸತ್ಯಕ್ಕೆ ಬೆಲೆ ಸಂದಿತು”.

ನಾಟಕೀಯತೆ

ಕಾವ್ಯದಲ್ಲಿ ನಾಟಕದ ಹಾಗೆ ಸಂಭಾಷಣೆ ತುಂಬುವುದು ಕಷ್ಟ. ಕನ್ನಡ ಕಾವ್ಯಗಳಲ್ಲಿ “ನಾಟಕೀಯತೆ” ಯಂತೂ ಬಹಳ ಕಡಿಮೆ. ರನ್ನ ಮೊದಲಾದವರು ಕಾವ್ಯ ಬಿಟ್ಟರೆ ಅತ್ಯಂತ ಸಮರ್ಥವಾಗಿ ಔಚಿತ್ಯಪೂರ್ಣವಾಗಿ ನಾಟಕೀಯ ಸಂಭಾಷಣೆಯನ್ನು ಕಾವ್ಯದಲ್ಲಿ ಬಳಸಿರುವ ಕನ್ನಡ ಕಾವ್ಯಗಳು ಕೆಲವೇ. ರಾಘವಾಂಕನ “ಹರಿಶ್ಚಂದ್ರ ಕಾವ್ಯ” ನಾಟಕೀಯತೆಗೆ ಒಂದು ಉತ್ತಮ ಉದಾಹರಣೆ.

ಹರಿಶ್ಚಂದ್ರ ಕಾವ್ಯದಲ್ಲಿ ರಾಘವಾಂಕನು ಒಂದಾದ ಮೇಲೊಂದರಂತೆ ಭಾವಗಳ, ವ್ಯಕ್ತಿಗಳ ಘರ್ಷಣೆಯ ಅಥವಾ ಒಂದು ವ್ಯಕ್ತಿಯ ಸ್ವಭಾವವನ್ನೇ ಬಿಚ್ಚಿ ತೋರಿಸುವ ದೃಶ್ಯವನ್ನು ನಮ್ಮ ಮುಂದಿಡುತ್ತಾನೆ. ಒಳ್ಳೆಯ ನಾಟಕಗಳಲ್ಲಿ ನಾವು ಮರೆಯಲಾಗದ ಕೆಲವು ದೃಶ್ಯಗಳಿರುತ್ತವೆ. ಇವುಗಳಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ವಿರೋಧಿಸುವುದು, ಅವರ ಬಲವತ್ತರವಾದ ಭಾವನೆಗಳ ಘರ್ಷಣೆ, ಕಲ್ಲಿಗೆ ಕಲ್ಲುಜ್ಜಿ ಕಿಡಿಯುದುರುವಂತೆ ಮನಸ್ಸು ಮನಸ್ಸಿಗೆ ಉಜ್ಜಿ ಹಾರುವ ಮಾತುಗಳು ನಮಗೆ ಮನುಷ್ಯ ಸ್ವಭಾವದ ಮತ್ತು ಜೀವನದ ಆಳವಾದ ಅನುಭವವನ್ನು ನೀಡುತ್ತದೆ.

ಒಮ್ಮೊಮ್ಮೆ ಒಂದು ದೇಶ್ಯದಲ್ಲಿ ಒಂದು ವ್ಯಕ್ತಿ ಒಂದು ಗಳಿಗೆಯಲ್ಲಿ ನಡೆದುಕೊಳ್ಳುವ ರೀತಿ, ಒಂದು ಸಲ ಮಿಂಚು ಮಿಂಚಿ ಒಂದು ಇಡೀ ಪ್ರದೇಶವನ್ನು ಸ್ಪಷ್ಟವಾಗಿ ತೋರಿಸುವಂತೆ, ಇಡೀ ವ್ಯಕ್ತಿತ್ವವನ್ನು ತೋರಿಸುತ್ತದೆ. ಇಂತಹ ಸಂಭಾಷಣೆ, ಸನ್ನಿವೇಶ ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಮತ್ತೆ ಮತ್ತೆ ಉಂಟು. ಕೆಲವು ಉದಾಹರಣೆಗಳನ್ನು ನೋಡೋಣ.

ಇಂದ್ರ ಸಭೆಯಲ್ಲಿ ವಸಿಷ್ಠ- ವಿಶ್ವಾಮಿತ್ರರ ಬೆಂಕಿಯಂತಹ ವಾಗ್ವಾದದ ಮೊದಲ ಭಾಗವನ್ನು ಹಿಂದೆಯೇ ಕೊಟ್ಟಿದೆ.

ಇಂದ್ರನ ಸಭೆಯಲ್ಲಿ ವಸಿಷ್ಠ- ವಿಶ್ವಾಮಿತ್ರದ ವಾಗ್ವಾದದ ಸಂದರ್ಭ. ಹರಿಶ್ಚಂದ್ರನನ್ನು ಪರೀಕ್ಷೆಗೆ ಒಳಪಡಿಸಿಯೇ ತೀರುವೆನು ಎಂದು ಕೌಶಿಕನು ನುಡಿಯುವನು.

ವಶಿಷ್ಠ : ಎಂದು ಭೂವರನಂ ಪರೀಕ್ಷಿಸುವೆ?

ವಿಶ್ವಾಮಿತ್ರ: ಎನ್ನ ಮನ ಬಂದ ದಿನಂ

ವಶಿಷ್ಠ :ಎನಿತು ಸೂಳು? (ಎಷ್ಟು ಬಾರಿ?)

ವಿಶ್ವಾಮಿತ್ರ: ಆತನ್ ಈ ಧರೆಯೊಳ್ ಇಪ್ಪಂದು ತನಕ. (ಅವನು ಭೂಮಿಯ ಮೇಲೆ ಬರುಕಿರುವವರೆಗೂ)

ವಶಿಷ್ಠ :ಆವ ಪರಿಯೋಳು? (ಯಾವ ರೀತಿಯಲ್ಲಿ?)

ವಿಶ್ವಾಮಿತ್ರ: ಸಹಸ್ರ ವಿಧದೋಳು!

ವಶಿಷ್ಠ :ದಿಟವೆ?

ವಿಶ್ವಾಮಿತ್ರ: ದಿಟ!

ವಿಶ್ವಾಮಿತ್ರನಿಗೆ ಹರಿಶ್ಚಂದ್ರನು ರಾಜ್ಯವನ್ನು ಧಾರೆಯೆರೆದು ಕೊಡಲು ಕರೆದೊಯ್ಯುವ ಸಂದರ್ಭ:-

ವಿಶ್ವಾಮಿತ್ರ: ನಡೆ, ರಥವನೇರಿಕೊಳ್

ಹರಿಶ್ಚಂದ್ರ: ಒಲ್ಲೆನ್ (ಒಪ್ಪಲಾರೆ)

ವಿಶ್ವಾಮಿತ್ರ: ಏಕೊಲ್ಲೆ?

ಹರಿಶ್ಚಂದ್ರ: ಪರರೊಡವೆಯೆನಗಾಗದು. (ಇನ್ನೊಬ್ಬರ ವಸ್ತು ನನಗಾಗದು)

ವಿಶ್ವಾಮಿತ್ರ: ಏಕಾಗದು?

ಹರಿಶ್ಚಂದ್ರ: ಆನ್ ಇತ್ತೆನು! (ನಾನೇ ಕೊಟ್ಟಿರುವೆ)

ವಿಶ್ವಾಮಿತ್ರ: ಇತ್ತಡೆ

ಹರಿಶ್ಚಂದ್ರ: ಕೊಳಲುಬಾರದು (ತೆಗೆದುಕೊಳ್ಳಬಾರದು)

ಹೀಗೆ ಕಾವ್ಯದಲ್ಲಿ ಹರಿಶ್ಚಂದ್ರನಿಗೂ, ವಿಪ್ರನಿಗೂ, ಹರಿಶ್ಚಂದ್ರ-ನಕ್ಷತ್ರಿಕನಿಗೂ, ಹರಿಶ್ಚಂದ್ರ ವೀರ ಬಹುಕನಿಗೂ, ಚಂದ್ರಮತಿಯೊಂದಿಗೆ- ವಿಪ್ರನಿಗೂ ಮತ್ತು ರಾಜನಿಗೂ, ನಡೆಯುವ ಸಂಭಾಷಣೆಗಳು ತುಂಬಾ ಪರಿಣಾಮಕಾರಿಯಾಗಿವೆ. ಪ್ರತಿಯೊಂದು ಸಂದರ್ಭದಲ್ಲಿ ಆಯಾಯ ಪಾತ್ರಗಳ ಗುಣನಡತೆಗಳು ಸ್ಪಷ್ಟವಾಗಿ ಕಟ್ಟುವಂತೆ ಚಿತ್ರಿಸಿರುವನು.

ಅಂತೆಯೇ ವೀರೇಶ ಚರಿತೆಯಲ್ಲಿಯೂ ಅನೇಕ ಕಡೆ ಕಾಣಬಹುದು. ದಕ್ಷ ಬ್ರಹ್ಮನಿಗೆ ಆತ ಮಂತ್ರಿ ವಿದಗ್ಧನು ಯಾಗವನ್ನು ಮಾಡುವುದು ಬೇಡ ಎಂದು ಬುದ್ದಿವಾದ ಹೇಳುವ ಸಲ್ಲಿವೇಶ:

ಮಂತ್ರಿ: ಕೊಂದೊಡೆ ಕೊಲು, ಯಾಗಂ ಬೇಡ. ಕರಂ ಬಿಡು, ಬೇಡ.

ದಕ್ಷ: ಬಿಡೆ, ಬಿಡೆನ್

ಮಂತ್ರಿ: ನಿಂದೆಗೆ ಸೆಲೆಯಹುದು (ಅಪಕೀರ್ತಿಗೆ ಮಾರ್ಗವಾಗುತ್ತದೆ)

ದಕ್ಷ: ಆಗಲಿ

ಮಂತ್ರಿ: ಕೆಟ್ಟೆಪೆ (ನಾಶವಾಗುವೆ)

ದಕ್ಷ: ಕೆಡುವೆಂ ಮಾಣೆಂ, ಮಾಣೆಂ ಹೋಗು.

ಮಂತ್ರಿ: ನಂದನೆ ಮುನಿಯಳೆ? (ಮಗಳು ಕೋಪಗೊಳ್ಳುವುದಿಲ್ಲವೆ?)

ದಕ್ಷ: ಹೇ ಬಿಡು, ಮುನಿಯಲಿ

ಮುಖ್ಯ ಪಾತ್ರಗಳ ಸ್ವಭಾವವನ್ನು ಒಂದು ಸನ್ನಿವೇಶದಲ್ಲಿ ಅವರು ನಡೆದುಕೊಳ್ಳುವ ರೀತಿಯಿಂದ ರಾಘವಾಂಕ ಬೆಳಗಬಲ್ಲ. ಹರಿಶ್ಚಂದ್ರ ತನ್ನ ರಾಜ್ಯವನ್ನೂ ಸಮಸ್ತ ಸಂಪತ್ತನ್ನೂ ವಿಶ್ವಾಮಿತ್ರನಿಗೆ ಒಪ್ಪಿಸಿರುತ್ತಾನೆ.

ಇದು ರತ್ನ ಭಂಡಾರವಿದು ಹೇಮ ಭಂಡಾರ
ವಿದು ಸುವಾಣೆಯ ವರ್ಗವಿದು ಪಟ್ಟಕರ್ಮ ಕುಲ
ವಿದು ಬೆಳ್ಳಿಯುಗ್ರಾಣವಿದು, ಕಂಚಿನುಗ್ರಾಣವಿದು ಸರ್ವಶಸ್ತ್ರ ಶಾಲೆ |

ಇದು ಹಸ್ತಿ ಸಂದೋಹವಿದು ತುರಗ ಸಂತಾನ
ವಿದು ವರೂಥ ಪ್ರಕಾರವಿದು ಪದಾತಿವ್ರಾತ
ವಿದು ನೋಡಿಕೋಯೆನುತೊಪ್ಪಿಸಿದನಾ
ಮುನಿಗೆ ಭೂನಾಥ ಕಂದರ್ಪನು ||

ಸಾವಿಗೆ ಸಿದ್ಧಳಾಗಿ ಕುಳಿತ ಚಂದ್ರಮತಿ:
ಬಲಿದ ಪದ್ಮಾನನಂ, ಮುಗಿದಕ್ಷಿ, ಮುಚ್ಚಿಂ
ಜಲಿವೆರಸಿ, ಗುರು ವಸಿಷ್ಠಂಗೆರಗಿ, ಶಿವನ ನಿ
ರ್ಮಲ ರೂಪ ನೆನೆದು ಮೇಲಂ ತಿರುಗಿ ನೋಡಿ ಭೂ ಚಂದ್ರಾರ್ಕ ತಾರಾಂಬರಂ

ಕಲಿ ಹರಿಶ್ಚಂದ್ರ ರಾಯಂ ಸತ್ಯವೆರಸಿ ಬಾ
ಳಲಿ, ಮಗಂ ಮುಕ್ತನಾಗಲಿ, ಮಂತ್ರಿ ನೆನೆದುದಾ
ಗಲಿ, ರಾಜ್ಯದೊಡೆಯ ವಿಶ್ವಾಮಿತ್ರ ನಿತ್ಯನಾಗಲಿ,
ಹರಕೆ ಹೊಡೆಯೆಂದಳು.

ಸುಲಭವಾದ ಭಾಷೆಯಲ್ಲೆ ಇದೆ ಪದ್ಯ (ಭೂ ಚಂದ್ರಾರ್ಕ ತಾರಾಂಬರಂ ಎಂದರೆ ಭೂಮಿ, ಚಂದ್ರ, ಸೂರ್ಯ, ನಕ್ಷತ್ರಗಳು ಇರುವವರೆಗೆ ಎಂದರ್ಥ). ಸಾವು ಬಂತೆಂದು ಒಂದಿಷ್ಟೂ ದುಃಖವಿಲ್ಲ, ಭಯವಿಲ್ಲ. ಅವಳ ಪ್ರಾರ್ಥನೆಯ ಹಿಂದಿನ ದೃದಯ ವೈಶಾಲ್ಯವನ್ನು ಗಮನಿಸಬೇಕು. ಗಂಡನ ಸತ್ಯವ್ರತಕ್ಕೆ ಕೇಡಾಗದಿರಲಿ, ಮಗ ತೀರಿಕೊಂಡ ಅವನಿಗೆ ಮುಕ್ತಿಯಾಗಲಿ, ಮಂತ್ರಿ ರಾಜ್ಯದ ಅಭ್ಯುದಯವನ್ನು ಬಯಸುವವನು, ಅವನ ಇಷ್ಟಾರ್ಥ ಸಲ್ಲಲಿ. ಹೀಗೆ ಈ ಘೋರ ಗಳಿಗೆಯಲ್ಲಿಯೂ ರಾಜ್ಯಕ್ಕೆ ಒಳ್ಳೆಯದಾಗಬೇಕೆಂಬ ಹಂಬಲ. ಕಡೆಗೆ, ಇಷ್ಟೆಲ್ಲ ಕಷ್ಟ ಕೊಟ್ಟು ಹಿಂಸಿಸಿದ “ರಾಜ್ಯದೊಡೆಯ ವಿಶ್ವಾಮಿತ್ರ ನಿತ್ಯನಾಗಲಿ” (ಎಂದೆಂದಿಗೂ ಆಳಲಿ), ಎಂತಹ ಉದಾರ ಹೃದಯ!

 

ಭೂಪಾಲ ದೇವರಾಜು ರಾಘವಾಂಕನಿಗೆ ಬಿರುದನ್ನು ಕೊಟ್ಟು ಗೌರವಿಸಿದ

ಶೈಲಿ

 

‘ನಾಟಕೀಯತೆ’ ಪ್ರತಿಭೆಗೆ, ಚಾರ್ತುಕ್ಕೆ ನಿದರ್ಶನವಾದರೆ “ಕಾವ್ಯ ಶೈಲಿ” ಕವಿಯ ವ್ಯಕ್ತಿತ್ವಕ್ಕೆ ಕನ್ನಡಿಯಾಗಿರುತ್ತದೆ. ರಾಘವಾಂಕನು ಬಳಸಿರುವ ರೂಪಕ, ದೃಷ್ಟಾಂತ, ಉಪಮಾಲಂಕಾರಗಳು ಕೃತಿಗೆ ಮೆರಗು ನೀಡಿವೆ. ಒಂದೆರಡು ಸಂದರ್ಭಗಳನ್ನು ಪರಿಶೀಲಿಸಬಹುದು.

ವಿಶ್ವಾಮಿತ್ರನು ಸೃಷ್ಟಿಸಿದ ಮಾಯಾಮೃಗಗಳು ರಾಜ್ಯದಲ್ಲಿ ಪ್ರಜೆಗಳಿಗೆ ನಾನಾ ರೀತಿಯಲ್ಲಿ ಹಿಂಸಿಸುತ್ತಿರುತ್ತವೆ. ಉಂಟಾದ ಪೀಡೆಯನ್ನು ತೊಲಗಿಸುವ ಸಲುವಾಗಿ ಹರಿಶ್ಚಂದ್ರನೇ ಬೇಟೆಗಾಗಿ ಹೊರಡುವನು. ಹರಿಶ್ಚಂದ್ರನಿಂದ ಏಟು ತಿಂದ ಹಂದಿ ವಿಶ್ವಾಮಿತ್ರನಲ್ಲಿಗೆ ಬರುತ್ತದೆ.

“ಹಂದಿಯಂ ಕಾಣುಹತಡಂ, ಕೋಪಗಿಚ್ಚು ಭುಗಿ
ಲೆಂದು ಜಪಜಾರಿ, ತಪತಗ್ಗಿ, ಮತಿಗತವಾಗಿ
ಸಂದಯೋಗಂ ಹಿಂಗಿ, ದಯೆ ದಾಂಟಿ ನೀತಿ ಬೀತಾನಂದ ವರತು ಹೋಗಿ |
ಹಿಂದೆ ನೆನೆದುರಿದೆದ್ದು ಸಿಕ್ಕಿದನಲಾ ಭೂಪ,
ನಿಂದು ನಾನಾಯ್ತು ತಾನಾಯ್ತು ಕೆಡಿಸದೆ ಮಾಣೆ”

ಎಂದು ಗರ್ಜಿಸುತ್ತಾನೆ ಕೌಶಿಕ. ಆಗ ಅವನ ಹೂಂಕಾರದಿಂದಲೇ ಇಬ್ಬರು ಸತಿಯರು ಜನಿಸುವರು!

“ಪುರುಷರ ಪ್ರತಿಮೆ ಮುನಿದೊದೆದೊಡಂ ಲೋಹ ಹೊನ್ನಾಗದಿಹುದೆ?” “ಮೂಗಂ ಕೊಯ್ದು ಕನ್ನಡಿಯ ತೋರುವಂತೆ” ಎಂದು ಮುಂತಾಗಿ ಉಪಮೆಗಳ ಮಾಲೆಯನ್ನೇ ಇರಿಸಿರುವನು. ಅಷ್ಟೇ ಅಲ್ಲ; “ಕೋಣ ನೆರಡುಂ ಹೋರೆ ಗಿಡುವಿಂಗೆ ಮತ್ಯು”, ನೆಲೆಗೆಟ್ಟು ಬಂದವರ್ಗೆ ಮುನಿಯದವರಾರು?”, “ಕಡೆಗೆ ಮೆಣಸು ಹುಳಿತಡೆ ಜೋಳದಿಂ ಕುಂದೆ? “ಕಣ್ಣರಿಯದಿದ್ದೊಡಂ ಕರುಳರಿಯದೆ?” “ನಡೆವರೆಡಹದೆ ಕುಳಿತವರೆಡಹುವರೆ?” ಹೀಗೆ ಆಡುಮಾತಿನ ಗಾದೆಗಳನ್ನು ಸಂದರ್ಭಕ್ಕೆ ತಕ್ಕಂತೆ ಉಚಿತವಾಗಿ, ಒಪ್ಪವಾಗಿ ಬಳಸಿರುವುದು ಆತನ ಅನುಭವಕ್ಕೆ ಉದಾಹರಣೆಯಾಗಿದೆ. ಹಾಗೂ ವೈಶಿಷ್ಟ್ಯವಾಗಿದೆ.

ಜನ ಬದುಕಬೇಕೆಂದು

ಹರಿಹರ-ರಾಘವಾಂಕರು ಸಹಜವಾಗಿಯೇ ಬೇರೆ ಬೇರೆ ಮನೋಧರ್ಮದ ಕವಿಗಳು. ರಾಘವಾಂಕನ ಕೃತಿಯಲ್ಲಿ ಸಾಮಾನ್ಯವಾಗಿ ಶಾಂತತೆಯ ಗುಣಗಳನ್ನು ಕಂಡರೆ ಹರಿಹರನಲ್ಲಿ ಅಷ್ಟೇ ಉತ್ಸಾಹವನ್ನು ಗಮನಿಸಬಹುದು. ರಾಘವಾಂಕ ವಸ್ತುವಿನ ಆಯ್ಕೆಯಲ್ಲಿ ಹರಿಹರನನ್ನು ಹಿಂಬಾಲಿಸಿದ. ಮಾಧ್ಯಮಕ್ಕೆ ಮಾತ್ರ “ಷಟ್ಪದಿ” ಪ್ರಕಾರವನ್ನು ಪ್ರಯೋಗಿಸಿ “ಷಟ್ಪದಿ ಬ್ರಹ್ಮ”ನಾದ, ಮಾರ್ಗಕಾರನಾದ.

“ಸಮಸ್ತ ಭೂಮಿಯ ಜನರು ತನ್ನ ಕಾವ್ಯವನ್ನು ಕೇಳಿ ಸವಿದು ಬದುಕಲೆಂದೂ, ದುರ್ನೀತಿ ಬಿಟ್ಟು ಶಿವಭಕ್ತಿ ನೆಲೆಸಿ ಪರಮ ಸುಖ ದೊರೆಯಲೆಂದು ಆಶಿಸುವನು. ಶಿವನು ಅವರಿಗೆ ಆರೋಗ್ಯವನ್ನೂ, ಸಂಪತ್ತನ್ನೂ ದಯಪಾಲಿಸಲೆಂದು ಬೇಡುವು. ತನಗಾದರೊ ಭಕ್ತಿ, ಜ್ಞಾನ, ವೈರಾಗ್ಯ ಸಂಪತ್ತು ದೊರೆಯಲೆಂದು ಪ್ರಾರ್ಥಿಸುತ್ತಾನೆ”. ಈ ಮಾತುಗಳು ಆತನ ಒಳ್ಳೆಯತನಕ್ಕೆ, ವಿಶಾಲಹೃದಯದ ಭಾವನೆಗೆ ಸಾಕ್ಷಿಯಾಗಿವೆ. ಸತ್ಕಾವ್ಯಗಳ ಪಠಣ ಮತ್ತು ಮನನಂದಿದ ಜನತೆತ ಹೃದಯ ವಿಶಾಲವಾಗಲಿ ಎಂದು ಹರಸಿ ಸಾರ್ಥಕ ಬಾಳನ್ನು ಬಾಳಿದ ರಾಘವಾಂಕ ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸದೊಂದು ಆಯಾಮವನ್ನು ಕಲ್ಪಿಸಿಕೊಟ್ಟು ಅಮರನಾದ.

ರಾಘವಾಂಕನ ಜೀವನದ ವಿಷಯ ಖಚಿತವಾಗಿ ತಿಳಿದಿರುವುದು ಕಡಿಮೆ. ಹಂಪೆಯ ಭೂಪಾಲ ದೇವರಾಜನು ಇವರಿಗೆ “ಉಭಯ ಕವಿ ಶರಭಭೇರುಂಡ” ಎಂಬ ಬಿರುದನ್ನು ಕೊಟ್ಟುಗೌರವಿಸಿದ. ರಾಜರಿಂದಲೂ ವಿದ್ವಾಂಸರಿದಲೂ ಜನಸಾಮಾನ್ಯರಿಂದಲೂ ರಾಘವಾಂಕ ಮನ್ನಣೆ ಪಡೆದ.

ಈತನ ಸಾವಿನ ಬಗ್ಗೆ ಒಮ್ಮತ ಅಭಿಪ್ರಾಯವಿಲ್ಲದಿದ್ದರೂ ಬೇಲೂರಿನಲ್ಲಿ ಮೃತಪಟ್ಟನೆಂದೂ, ಈಗಲೂ ಆತನ ಸಮಾಧಿಯನ್ನು ಕಾಣಬಹುದಾಗಿದೆ ಎಂದೂ ಬಹುಮಂದಿಯ ಅಭಿಮತವಾಗಿದೆ.