ವಚನಗಳು ಕನ್ನಡದ ಅಪೂರ್ವ ರಚನೆಗಳು. ಇದುವರೆಗೆ ಲಭ್ಯವಾಗಿರುವ ಸುಮಾರು ಇಪ್ಪತ್ತು ಸಾವಿರ ವಚನಗಳಲ್ಲಿ ಬಸವಣ್ಣನವರ ವಚನಗಳು, ಅಕ್ಕನ ವಚನಗಳು, ಅಲ್ಲಮನ ಮತ್ತು ಚನ್ನಬಸವಣ್ಣನ ಕೆಲವು ವಚನಗಳು, ಒಟ್ಟು ಸುಮಾರು ಒಂದು ಸಾವಿರದಷ್ಟು ವಚನಗಳ ಅತಿ ಪರಿಚಯದಿಂದ ಇಡೀ ವಚನ ಸಾಹಿತ್ಯವೇ ಸುಪರಿಚಿತವಾಗಿಬಿಟ್ಟಿದೆ ಎಂಬ ಭ್ರಮೆಯೂ ಬೆಳೆದುಕೊಂಡಿದೆ. ಆಯ್ದ ವಚನಗಳ ಅತಿಪರಿಚಯದಿಂದಾಗಿಯೇ ಇಡೀ ವಚನ ಸಾಹಿತ್ಯವೇ ಸುಲಭ, ಸರಳ, ಸುಸ್ಪಷ್ಟ ಎಂಬ ಭ್ರಮೆ ಗಟ್ಟಿಯಾಗಿ ನೆಲೆಗೊಂಡಿದೆ. ವಚನಗಳ ವೈವಿಧ್ಯವಾಗಲೀ, ಅವು ಒಳಗೊಂಡಿರುವ ವಿಚಾರಗಳ ತಾಕಲಾಟವಾಗಲೀ ಮುಖ್ಯವೆಂದು ಅನ್ನಸಿಯೇ ಇಲ್ಲದಿರುವುದು ಸಾಂಸ್ಕೃತಿಕ ದುರಂತವೇ ಸರಿ. ವಚನ ಲೋಕದ ವೈವಿಧ್ಯ ಮತ್ತು ವೈರುಧ್ಯಗಳನ್ನು ಪರಿಚಯಿಸುವುದೇ ಪ್ರಸ್ತುತ ಸಂಕಲನದ ಮುಖ್ಯ ಉದ್ದೇಶವಾಗಿದೆ. ವಚನಗಳ ಹೊಸ ಓದುವಿಕೆಗೆ ಅವಕಾಶ ದೊರೆತೀತು ಎಂಬ ಹಂಬಲ ಈ ಸಂಕಲನದ ಹಿಂದಿದೆ.

ಹನ್ನೆರಡನೆಯ ಶತಮಾನದಲ್ಲಿ ವಚನಗಳು ರಚನೆಗೊಂಡ ಸುಮಾರು ೧೫ – ೩೦ ವರ್ಷಗಳ ಕಾಲಾವಧಿಯು ತೀವ್ರವಾದ ಸ್ಥಿತ್ಯಂತರಗಳ ಅವಧಿಯಾಗಿತ್ತೆಂದು ಇಂದು ತಿಳಿದಿದ್ದೇವೆ. ಲೋಕ ದೃಷ್ಟಿ, ಲೋಕಾನುಭವ ಮಂಡನೆಯ ಸ್ವರೂಪ ಇವೆಲ್ಲವೂ ಬದಲಾದ ಅವಧಿ ಅದು. ನಗರೀಕರಣದ ಪರಿಣಾಮವಾಗಿ ಕಸುಬುಗಳಿಗೆ, ಕಸುಬುದಾರರಿಗೆ ದೊರೆತ ಪ್ರಾಮುಖ್ಯ, ಮಹಿಳೆಯರೂ ಸೇರಿದಂತೆ ವಿವಿಧ ಕಸುಬುಗಳ ಜನ ತಮ್ಮ ಅನುಭವದ ಹಿನ್ನೆಲೆಯಲ್ಲೇ ವಿಚಾರಗಳನ್ನು ಮಂಡಿಸುವುದಕ್ಕೆ ದೊರೆತ ಸ್ವಾತಂತ್ಯ, ಆಧ್ಯಾತ್ಮಿಕ ಸಮಾನತೆಯ ಆದರ್ಶ ಇವುಗಳಿಂದಾಗಿ ವೈವಿಧ್ಯ ಮತ್ತು ವೈರುಧ್ಯಮಯ ವಚನ ಪಠ್ಯಗಳು ಸೃಷ್ಟಿಯಾದವು. ಇಷ್ಟದೈವದ ಕಲ್ಪನೆಗೆ ದೊರೆತ ಪ್ರಾಮುಖ್ಯ, ವೈಯಕ್ತಿಕ ಅನುಭವವೇ ಅಥವ ವೈಯಕ್ತಿಕ ಅನುಭವವೂ ಪ್ರಮಾಣ ಎಂಬ ದೃಢವಿಶ್ವಾಸ ಇವು ವಚನಗಳ ಹಿನ್ನೆಲೆಯಲ್ಲಿವೆ.

ಈ ವಚನ ಪಠ್ಯಗಳು ತತ್ಕಾಲೀನ ಅಗತ್ಯಗಳಿಗಾಗಿ ರೂಪುಗೊಂಡ ರಚನೆಗಳು, ನಿಜ. ಆದರೆ ವೈಯಕ್ತಿಕ ಅನುಭವ ಪ್ರಮಾಣವನ್ನು ಒಳಗೊಂಡಿರುವುದರಿಂದ ಮತ್ತು ಮನುಷ್ಯ ಅಸ್ತಿತ್ವದ, ಮನುಷ್ಯ ಮನಸ್ಸಿನ ಮೂಲಭೂತ ವಿಚಾರಗಳ ಮಂಡನೆಯ ಕಾರಣದಿಂದ ವಚನಗಳಿಗೆ ಕಾಲಾತೀರ ಗುಣಗಳೂ ಪ್ರಾಪ್ತವಾಗಿವೆ. ಅಂದರೆ, ವಚನ ಪಠ್ಯಗಳೊಡನೆ ನಡೆಸುವ ಸಂವಾದದಿಂದ ಅವುಗಳನ್ನು ಸಮಕಾಲೀನಗೊಳಿಸಿಕೊಳ್ಳಲು ಸಾಧ್ಯವಿದೆ. ಸಮಕಾಲೀನಗೊಳಿಸಿಕೊಳ್ಳುವುದೆಂದರೆ ವಚನ ಪಠ್ಯಗಳಲ್ಲಿನ ವಿಚಾರಗಳನ್ನು ಸಾರ್ವಕಾಲಿಕ ಸತ್ಯವೆಂದೇ ಒಪ್ಪಿಕೊಳ್ಳಬೇಕೆಂದು ಅರ್ಥವಲ್ಲ. ವಚನಕಾರರ ನಡುವೆಯೇ ನಡೆದಂಥ ಸಂವಾದವನ್ನು ನಾವೂ ನಡೆಸುವುದು ಅಗತ್ಯವೆಂದಷ್ಟೇ ಅರ್ಥ. ಆದರೆ, ಕನ್ನಡದಂಥ ಪ್ರಾದೇಶಿಕ ಭಾಷೆಗಳಲ್ಲಿ ರೂಪುಗೊಳ್ಳುತ್ತಿದ್ದ ವೈಚಾರಿಕತೆ ಹತ್ತೊಂಬತ್ತನೆಯ ಶತಮಾನದ ವೇಳೆಗೆ ತುಂಡುಗಡೆದು ಹೋದದ್ದು ಚಾರಿತ್ರಿಕ ಸಂಗತಿ. ಕನ್ನಡದಂಥ ಭಾಷೆಗಳು ಇಂದು ಪಡೆದುಕೊಂಡಿರುವ ಪಾಶ್ಚಾತ್ಯ ತಿಳಿವಳಿಕೆಯ ಹಿನ್ನೆಲೆಯನ್ನು ಇಲ್ಲವಾಗಿಸಿಕೊಳ್ಳುವುದು ಅಸಾಧ್ಯ. ಆದರೆ, ಸ್ವೀಕೃತ ಪಾಶ್ಚಾತ್ಯ ವೈಚಾರಿಕ ತಿಳಿವಳಿಕೆಗೆ ವಚನ ಪಠ್ಯಗಳನ್ನು ಹೊಂದಿಸಿಕೊಳ್ಳುವುದೋ, ಪಾಶ್ಚಾತ್ಯರು ಇಂದು ಹೇಳುತ್ತಿರುವ ಸಂಗತಿ ಅಂದೇ ಕನ್ನಡದಲ್ಲಿ ವ್ಯಕ್ತವಾಗಿದೆ ಎಂದು ಒಣ ಹೆಮ್ಮೆಪಟ್ಟುಕೊಳ್ಳುವುದೋ, ಎರಡೂ ಸರಿಯಾದ ದಾರಿಗಳಲ್ಲಿ. ಲಭ್ಯವಿರುವ ವಚನ ಪಠ್ಯಗಳ ಮೂಲಕವೇ ಕನ್ನಡದ ವೈಚಾರಿಕತೆಯ ರೂಪು – ರೇಖೆಗಳನ್ನು ಗುರುತಿಸಿಕೊಳ್ಳುವುದು ದೊಡ್ಡ ಬೌದ್ಧಿಕ ಸಾಹಸವೇ ಆಗುತ್ತದೆ.

ಸುಮಾರು ಸಾವಿರ ವರ್ಷಗಳಷ್ಟು ಕಾಲ ಕನ್ನಡದ ಜನ ಸಮುದಾಯ ಈ ರಚನೆಗಳನ್ನು ಕಾಪಾಡಿಕೊಂಡು ಬಂದಿದೆ. ಹಾಗೆ ಕಾಪಾಡಿಕೊಂಡು ತಲೆಮಾರಿನಿಂದ ತಲೆಮಾರಿಗೆ ದಾಟಿಸಿಕೊಂಡು ಬರುವುದಕ್ಕೆ ಬೇರೆ ಬೇರೆ ಕಾರಣಗಳು ಇವೆ. ವಚನಗಳನ್ನು ಧರ್ಮ ಪ್ರತಿಪಾದನೆಯೆಂದು, ಶಾಸ್ತ್ರ ನಿರೂಪಣೆಯೆಂದು, ಕಾವ್ಯಾತ್ಮಕವೆಂದು, ಸಾಮಾಜಿಕ ಹೋರಾಟದ ಭಾಷಿಕ ಪ್ರತಿಫಲನವೆಂದು, ಅಧ್ಯಾತ್ಮ ಸಾಧನೆಯ ತೋರು ಕುರುಹುಗಳೆಂದು ವೈಯಕ್ತಿಕ ತೊಳಲಾಟ ಹುಡುಕಾಟಗಳ ದಾಖಲೆಗಳೆಂದು, ಚಾರಿತ್ರಿಕ ಆಕರಗಳೆಂದು, ಇತ್ಯಾದಿಯಾಗಿ ತಮತಮಗೆ ಮುಖ್ಯವೆಂದು ತೋರುವ ಕಾರಣಕ್ಕೆ ವಚನಗಳನ್ನು ಗಮನಿಸಬೇಕೆಂದು ಬಯಸುವ ಮನಸ್ಸುಗಳು ವಚನಗಳನ್ನು ತಮ್ಮ ಉದ್ದೇಶಕ್ಕೆ ಅನುಗಣವಾಗಿ ಸಂಗ್ರಹಿಸಿ ನಮ್ಮ ಕಾಲದವರೆಗೆ ತಲುಪಿಸಿದ್ದಾರೆ.

ನಮ್ಮ ಕಾಲದವರೆಗೆ ಸಾಗಿ ಬಂದಿರುವ ವಚನ ಪಠ್ಯಗಳೆಲ್ಲ ‘ಸಂಗ್ರಹ’ಗಳ ಮೂಲಕವೇ ಒದಗಿ ಬಂದಿವೆ ಎಂಬುದು ಮುಖ್ಯವಾದ ಸಂಗತಿಯಾಗಿ ತೋರುತ್ತದೆ. ಸಂಗ್ರಹದ ಕಲ್ಪನೆಯೇ ವಿಚಿತ್ರವಾದ ವಿರೋಧಾಭಾಸವನ್ನು ಹೊಂದಿದೆ. ಪ್ರಾಚೀನ ಕಾಲದ ಸಂಗ್ರಹಗಳು ಅನೇಕ ಪಠ್ಯಗಳನ್ನು ಉಳಿಸಿ ಕಾಪಾಡಿದಂತೆಯೇ ಅಸಂಖ್ಯ ಪಠ್ಯಗಳು ಕಣ್ಮರೆಯಾಗಲೂ ಕಾರಣವಾಗಿವೆ. ಸಂಗ್ರಹದ ಉದ್ದೇಶವೇ ಸಂಗ್ರಹದೊಳಗೆ ಸೇರುವ ಮತ್ತು ಸೇರದಿರುವ ವಚನಗಳು ಯಾವುವು ಎಂದು ನಿರ್ಧರಿಸುತ್ತದೆಯಷ್ಟೆ ಷಟ್ ಸ್ಥಲ, ಸ್ತೋತ್ರ, ಬೆಡಗು, ಶಾಸ್ತ್ರ, ಆಚರಣೆ ಇಂಥ ಸ್ಥಲಕಟ್ಟುಗಳ ಹೆಸರೇ ವಚನ ಸಂಗ್ರಹಗಳ ಹಿಂದಿನ ಉದ್ದೇಶವನ್ನೂ ಸೂಚಿಸುತ್ತವೆ. ಹೀಗೆ ತಮ್ಮ ತಮ್ಮ ಉದ್ದೇಶಕ್ಕೆ ಹೊಂದಿಕೆಯಾಗದೆಂದು ‘ಸಂಗ್ರಹಿಸದೆ’ ಬಿಟ್ಟು ಬಿಟ್ಟ ವಚನಗಳು ಕಣ್ಮರೆಯಾಗಿ ಹೋದವೆಂದು ಊಹಿಸಬಹುದು.

ವಚನ ಪಠ್ಯಗಳ ಅರ್ಥವಂತಿಕೆಗೂ ವಚನ ಸಂಗ್ರಹ ಮತ್ತು ಜೋಡಣೆಗಳು ಎಷ್ಟರಮಟ್ಟಿಗೆ ಕಾರಣವೆಂಬ ಕಾರಣವೆಂಬ ಪ್ರಶ್ನೆ ಕುತೂಹಲವನ್ನು ಹುಟ್ಟಿಸುತ್ತದೆ. ಸಂಗ್ರಹ ಮತ್ತು ಜೋಡಣಾ ಕ್ರಮಗಳು ವಚನಗಳ ಅರ್ಥವಂತಿಕೆಯ ಚೌಕಟ್ಟನ್ನು ನಿರ್ಮಿಸಿಬಿಡುತ್ತವೆ. ಶೂನ್ಯಸಂಪಾದನೆಗಳು ನಿರ್ದಿಷ್ಟ ವಿಚಾರಧಾರೆಯನ್ನು ಸಮರ್ಥಿಸಲು ನಾಟಕೀಯ ಸನ್ನಿವೇಶ ಮತ್ತು ಕಥನಗಳ ಚೌಕಟ್ಟಿನೊಳಗೆ ವಚನಗಳನ್ನು ಜೋಡಿಸಿ ಸಂಗ್ರಹಿಸಿದ್ದರ ಪರಿಣಾಮವಾಗಿಯೇ ನಾವು ಇಂದು ಅಲ್ಲಮ – ಸಿದ್ಧರಾಮ, ಅಲ್ಲಮ – ಮುಕ್ತಾಯಕ್ಕ ಇತ್ಯಾದಿ ಸಂದರ್ಭ ಸಂವಾದಗಳನ್ನು ಚಾರಿತ್ರಿಕ ಸತ್ಯಗಳೋ ಎಂಬಂತೆಯೇ ಗ್ರಹಿಸಲು ತೊಡಗಿದ್ದೇವೆ. ಅದರಂತೆಯೇ ಷಟ್ ಸ್ಥಲಾನುಗುಣ ಸಂಪಾದನೆ ಇತ್ಯಾದಿಗಳು ಕೂಡ ವಚನ ಪಠ್ಯಗಳ ಅರ್ಥವಂತಿಕೆಯ ಸೀಮೆಯನ್ನು ನಿರ್ಧರಿಸುತ್ತವೆ. ಅಥವ ವ್ಯಾಖ್ಯಾನವೇ ಅರ್ಥವಾಗಿ ಪರಿವರ್ತನೆಯಾಗುವ ಬಗೆಯನ್ನು ಈ ಎಲ್ಲ ಸಂಗ್ರಹಗಳಲ್ಲಿ ಕಾಣುತ್ತೇವೆ. ಬಹುಮುಖಿಯಾದ, ವೈವಿಧ್ಯ ಮತ್ತು ವೈರುಧ್ಯಗಳಿಂದ ಕೂಡಿರುವ ವಚನ ಪಠ್ಯಗಳನ್ನು ಒಟ್ಟಾರೆಯಾಗಿ ಏಕಾರ್ಥದ, ಏಕರೂಪದ ವಾಙ್ಮಯವಾಗಿ ಮಂಡಿಸುವ ಕಾರ್ಯವನ್ನು ಪ್ರಾಚೀನ ಸಂಗ್ರಹಗಳು ಮಾಡಿದವೆಂದು ಹೇಳಲು ಸಾಧ್ಯವಿದೆ.

ಇಪ್ಪತ್ತನೆಯ ಶತಮಾನದ ಮೊದಲು ಆಯ್ದ ವಚನಗಳಿಗೆ ವ್ಯಾಖ್ಯಾನವನ್ನು, ಟೀಕುಗಳನ್ನು ಬರೆಯುವ ಸಂಪ್ರದಾಯವಿತ್ತು. ಸಾಮಾನ್ಯವಾಗಿ ಈ ಟೀಕು ಮತ್ತು ವ್ಯಾಖ್ಯಾನಗಳು ವೀರಶೈವ ಧರ್ಮದ ಕಲ್ಪಿತ, ಅಂಗೀಕೃತ ನಂಬಿಕೆ, ಧೋರಣೆ, ಪರಿಕಲ್ಪನೆಗಳು ಬಿಡಿ ವಚನಗಳಲ್ಲಿ ಹೇಗೆ ವ್ಯಕ್ತವಾಗಿವೆ ಎಂಬುದನ್ನು ಪ್ರತಿಪಾದಿಸುವ ಆಸಕ್ತಿಯನ್ನು ಹೊಂದಿದ್ದವು. ಇಪ್ಪತ್ತನೆಯ ಶತಮಾನದಲ್ಲಿ ವೀರಶೈವ ಧರ್ಮಶಾಸ್ತ್ರ ನಿರ್ಣಯದ ಆಕರಗಳೆಂದು, ವಿಶಾಲ ಹಿಂದೂ ಧರ್ಮದ ಮುಖ್ಯ ಆಸಕ್ತಿಗಳನ್ನೆ ಕನ್ನಡದಲ್ಲಿ ವ್ಯಕ್ತಪಡಿಸುವ ಪಠ್ಯಗಳೆಂದು, ನವೋದಯ ಮತ್ತು ನವ್ಯ ಸಾಹಿತ್ಯ ಚಿಂತನೆಗಳು ಒಪ್ಪಿಕೊಂಡಿದ್ದ ಕಾವ್ಯಸ್ವರೂಪದ ಉತ್ತಮ ನಿದರ್ಶನಗಳೆಂದು, ಸಾಮಾಜಿಕ ಅಸಮಾನತೆ ಮತ್ತು ಜಾತಿ ವಿನಾಶ ಹೋರಾಟಗಳಿಗೆ ಸ್ಫೂರ್ತಿ ತುಂಬುವ ಪ್ರಾಚೀನ ಪಠ್ಯಗಳೆಂದು, ಹೀಗೆ ಮುಖ್ಯವಾಗಿ ನಾಲ್ಕು ಬಗೆಯಲ್ಲಿ ವಚನಗಳನ್ನು ಗಮನಿಸಲಾಗಿದೆ. ಐದನೆಯ ಇನ್ನೊಂದು ಬಗೆಯೆಂದರೆ ನಿರ್ದಿಷ್ಟ ವಚನಕಾರರ ಪಠ್ಯಗಳನ್ನು ಸಂಪದಿಸಿ ಪ್ರಕಟಿಸುವ ಬಗೆ. ಇಂಥ ಸಂಪಾದನೆಗಳಲ್ಲಿ ವಚನಗಳು ‘ನಿದರ್ಶನ’ ಮಾತ್ರವಾಗಿರುತ್ತವೆ. ಅವುಗಳ ಹಿಂದಿರುವ ವಿಚಾರ, ತಾತ್ವಿಕತೆಗಳೇ ನಿದರ್ಶನ’ ಅಥವಾ ‘ಪ್ರಧಾನ’ ಸತ್ಯಗಳಾಗಿರುತ್ತವೆ. ರೂಢಿಯಾಗಿರುವ ಸಂಗ್ರಹ ಪದ್ಧತಿ ಮತ್ತು ಜೋಡಣಾ ಕ್ರಮಗಳನ್ನು ಕೈಬಿಟ್ಟು ವಚನಗಳನ್ನು ಓದುಗರೆದುರು ಮಂಡಿಸಲು ಸಾಧ್ಯವೇ ಎಂಬುದು ಈ ಸಂಗ್ರಹವನ್ನು ರೂಪಿಸುವುದುಕ್ಕೆ ಪ್ರೇರಣೆಯನ್ನು ನೀಡಿರುವ ವಿಚಾರ.

ವಿಚಾರ ಹೀಗಿದ್ದರೂ ಸಂಪೂರ್ಣವಾಗಿ ವ್ಯಾಖ್ಯಾನಮುಖ್ತವಾದ ಸಂಗ್ರಹವಿರಲು ಸಾಧ್ಯವೇ ಇಲ್ಲ. ಸಂಗ್ರಹವು ಆಯ್ಕೆಯನ್ನು ಆಧರಿಸಿಯೇ ನಡೆಯುವುದರಿಂದ ಆಯ್ಕೆ ಮತ್ತು ನಿರಾಕರಣೆಗಳೆ ಸಂಪಾದಕರ ವ್ಯಾಖ್ಯಾನವೂ ಆಗುತ್ತದೆಯಲ್ಲವೇ? ಅಷ್ಟರಮಟ್ಟಿಗೆ ವ್ಯಾಖ್ಯಾನ ಸಾಧ್ಯತೆಯನ್ನು ಒಪ್ಪಿಕೊಳ್ಳಲೇಬೇಕು. ನಮ್ಮ ಸಮಕಾಲೀನ ಪ್ರಶ್ನೆ ಕಾಳಜಿಗಳಿಗೆ ಪ್ರತಿಧ್ವನಿಯಂತಿರುವ ವಚನಗಳಿಗೆ ಪ್ರಾಮುಖ್ಯ ನೀಡಬೇಕು, ಅಭಿವ್ಯಕ್ತಿಯ ತೀವ್ರತೆಗೆ ಮೊದಲ ಮನ್ನಣೆ ಇರಬೇಕು. ವಚನ ಪಠ್ಯಗಳ ವೈವಿಧ್ಯ ಓದುಗರ ಗಮನಕ್ಕೆ ಬರುವಂತಿರಬೇಕು, ಸಾಧ್ಯವಾದಷ್ಟೂ ಹೆಚ್ಚಿನ ಸಂಖ್ಯೆಯ ವಚನಕಾರರ ರಚನೆಗಳು ಸೇರ್ಪಡೆಯಾಗಬೇಕು; ಆಚರಣೆ, ಮತ ಪ್ರತಿಪಾದನೆ, ಶಾಸ್ತ್ರವಿಚಾರ ಚರ್ಚೆ, ಯೋಗ, ದರ್ಶನ, ಅನುಭಾವ ಇತ್ಯಾದಿ ವಿಷಯಗಳ ಬಗ್ಗೆ ಬೋಧನೆ, ಇಂಥ ಸಂಗತಿಗಳಿಗೆ ಪ್ರಾಮುಖ್ಯ ನೀಡಿರುವ ವಚನಗಳನ್ನು ಕೈಬಿಡಬೇಕೆಂಬುದು ಪ್ರಸ್ತುತ ಸಂಗ್ರಹದ ಹಿಂದಿನ ಕಾಳೋಜಿ.

ವಚನಗಳನ್ನು ಆಯ್ಕೆ ಮಾಡಿದ ನಂತರ ಅವನ್ನು ಜೋಡಿಸಿಕೊಡುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಒಂದು ಸಾಧ್ಯತೆಯೆಂದರೆ ವಿವಿಧ ವಿಷಯಗಳ ಬಗ್ಗೆ ಭಿನ್ನ ನಿಲುವುಗಳನ್ನು, ವಿವರಗಳನ್ನು ಒಳಗೊಂಡ ವಚನಗಳನ್ನು ಒಂದೊಂದೆಡೆಯಲ್ಲಿ ಜೋಡಿಸುವುದು. ನಿದರ್ಶನಕ್ಕೆ ಕುರುಹು ಅಗತ್ಯ ಮತ್ತು ಅನಗತ್ಯ ಎಂಬ ಧೋರಣೆಯ ವಚನಗಳನ್ನು ಒಟ್ಟಿಗೆ ಇಡುವುದರಿಂದ ವಚನಲೋಕದ ವಿಚಾರ ವೈವಿಧ್ಯ ಸ್ಪಷ್ಟವಾಗಬಹುದು. ಆದರೆ ಈ ಬಗೆಯ ಕ್ರಮವು ನಿಜವಾಗಿ ಶೂನ್ಯಸಂಪಾದನೆಯ ಜೋಡಣೆಯ ಕ್ರಮವೇ ಆಗಿದೆ. ಇದನ್ನೇ ಶ್ರೀ ಸಂ.ಶಿ. ಭೂಸನೂರುಮಠ ಅವರ ಸಂಪಾದನೆಯು ಪರಿಷ್ಕೃತ ರೂಪದಲ್ಲಿ ಅಳವಡಿಸಿಕೊಂಡಿದೆ.

ವಚನಕಾರರನ್ನು ಮತ್ತು ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಪ್ರತಿಯೊಂದು ವಿಭಾಗದಲ್ಲೂ ಆಯ್ದ ವಚನಕಾರರನ್ನು ಅದೇ ಕ್ರಮದಲ್ಲಿ ನೀಡುವುದು ಇನ್ನೊಂದು ಸಾಧ್ಯತೆ. ಆದರೆ ಈ ಕ್ರಮವು ಬಸವೇಶ್ವರರ ಷಟ್‌ಸ್ಥಲ ವಚನಗಳು ಮೊದಲಾಗಿ ವಿವಿಧ ವಚನಕಾರರ ಪ್ರತ್ಯೇಕ ಸಂಕಲನಗಳ ಮಾದರಿಯದೇ ಇನ್ನೊಂದು ರೂಪವಾಗುತ್ತದೆ.

ನಾನು, ನೀನು, ಅದು, ಅವರು, ಎಂಬಂತೆ ವಚನದ ಸಂಬೋಧನಾ ವಿಷಯ ಕೇಳುಗರನ್ನು ಆನುಸರಿಸಿ ವಿಭಾಗಕ್ರಮವನ್ನು ರೂಪಿಸುವುದು ಸಾಧ್ಯವಿದ್ದರೂ ಅದರ ಉಪಯುಕ್ತತೆ ತೀರ ಸೀಮಿತವಾದದ್ದಾಗುತ್ತದೆ. ನೆನಪು, ಅರಿವು, ಕುರುಹು, ಮಾಯೆ, ಶರಣ – ವ್ಯಕ್ತತ್ವ, ಸ್ಥಾವರ – ಜಂಗಮ, ಕಾಯ – ಮನಸ್ಸು, ಶೀಲ – ಆಚಾರ, ವ್ಯಕ್ತಿ – ವ್ಯಕ್ತಿ ಸಂಬಂಧ ಭಾಷೆ, ಕಾಲ, ಸಮಾನತೆ – ಸಮಾಧಾನ (ಮೇಲು – ಕೀಳು೦, ಬಯಲು, ಅನುಭಾವ, ಹೆಣ್ಣು, ಅಂತರಂಗ – ಬಹಿರಂಗ, ಇತ್ಯಾದಿಯಾಗಿ ಪ್ರಮುಖ ಪರಿಕಲ್ಪನೆಗಳನ್ನು ಗುರುತಿಸಿ ದ್ವಂದ್ವಾತ್ಮಕ ಚಿಂತನೆಗಳನ್ನು ಕುರಿತು ಒಂದು ಸಮಗ್ರ ನೋಟ ನೀಡುವಂಥ ಜೋಡಣೆಯನ್ನೂ ಮಾಡಬಹುದು. ಆದರೆ ಈ ಎಲ್ಲ ಜೋಡಣೆಗಳಲ್ಲೂ ಸಂಪಾದಕರ ಮಧ್ಯಪ್ರವೇಶ ಮತ್ತು ವ್ಯಾಖ್ಯಾನಗಳು, ಅರ್ಥ ನಿರ್ಧಾರಗಳು ಮುನ್ನೆಲೆಗೆ ಬಂದು ನಿಲ್ಲುತ್ತವೆಯೇ ಹೊರತು ವಚನಗಳನ್ನು ಓದುಗರು ತಮಗೆ ಬೇಕಾದಂತೆ ಸ್ವೀಕರಿಸುವ ಸ್ವಾತಂತ್ರ್ಯ ಇರುವುದಿಲ್ಲ.

ಪ್ರಸ್ತುತ ಸಂಕಲನಕ್ಕಾಗಿ ಆಯ್ದ ವಚನಗಳನ್ನು ಜೋಡಿಸುವ ಕ್ರಮ ಯಾವುದಿರಬೇಕು ಎಂಬ ಪ್ರಶ್ನೆಗೆ ಎರಡು ಅಂಶಗಳು ಮಾರ್ಗದರ್ಶನ ಮಾಡಿದವು. ಮೊದಲನೆಯದು ವಚನಗಳು ಸೃಷ್ಟಿಯಾದ ಪರಿಸರದ ವಾಸ್ತವ, ಇನ್ನೊಂದು ಓದುಗರ ಮನಸ್ಸಿನಲ್ಲಿ ಅರ್ಥನಿರ್ವಾಣವಾಗುವ ವಿಧಾನ. ವಚನಗಳ ಪರಿಚಯವಿರುವ ಓದುಗರು ತಿಳಿದಿರುವಂತೆ ಈ ಎಲ್ಲ ರಚನೆಗಳೂ ಸಂವಾದಗಳೇ ಆಗಿವೆ. ವಿವಿಧ ಮನೋಧರ್ಮ, ವೃತ್ತಿ, ಹಿನ್ನೆಲೆಗಳಿಂದ ಬಂದ ಮನಸ್ಸುಗಳು ಬದುಕನ್ನು ಕುರಿತು ನಡೆಸಿದ ಸಂವಾದಗಳೇ ವಚನಗಳು. ಸಂವಾದದ ಮುಕ್ತತೆ ಪ್ರತಿಫಲಿತವಾಗುವಂತೆ ಸಂಗ್ರಹದ ಜೋಡಣೆ ಇರಬೇಕೆನ್ನುವ ಆಶಯದೊಂದಿಗೆ ಈ ಸಂಕಲನ ರೂಪುಗೊಂಡಿದೆ. ಹತ್ತು ಜನ ಸೇರಿ ನಡೆಸಿದ ಮಾತುಕತೆಯಲ್ಲಿ ವಿಚಾರ ಭೃಂಗಗತಿಯಲ್ಲಿ ವಿಸ್ತರಿಸುವುದನ್ನು ನಾವೆಲ್ಲರೂ ಗಮನಿಸಿರುತ್ತೇವಲ್ಲವೇ? ಮಾತನಾಡುವವರು, ಅದು ನಿಜವಾದ ಸಂವಾದವಾಗಿದ್ದರೆ, ಹಿರಿತನ – ಕಿರಿತನಗಳ ಕ್ರಮವನ್ನೇನೂ ಅನುಸರಿಸದೆ ತಮ್ಮ ಭವ, ವಿಚಾರಗಳನ್ನು ವ್ಯಕ್ತಪಡಿಸುತ್ತಾರಷ್ಟೇ? ವಚನ ಸಂವಾದದ ವಾಸ್ತವವೂ ಹೀಗೆಯೇ ಇದ್ದಿರಬೇಕು. ಆನಂತರದ ಕಾಲದಲ್ಲಿ ಒಂದೊಂದು ಉಕ್ತಿಗೂ ಸಂದರ್ಭವನ್ನು ಕಲ್ಪಿಸಿ ಸಂವಾದಕ್ಕೆ ಚೌಕಟ್ಟು ಒದಗಿಸುವ ಪ್ರಯತ್ನಗಳು ನಡೆದವು. ಕಾಲ ಸಂದಂತೆ ಚೌಕಟ್ಟೇ ಮುಖ್ಯವಾದ ಅದರೊಳಗಿನ ಚಿತ್ರದ ಪ್ರಾಮುಖ್ಯ ಕಳೆದುಹೋಯಿತು. ಆದುದರಿಂದ ಎಲ್ಲ ವಚನಗಳನ್ನೂ ಮೊದಲು ಸಾಲುಗಳ ಅಕಾರಾದಿಯಲ್ಲಿ ಜೋಡಿಸುವುದರಿಂದ ವಾಸ್ತವ ಸಂವಾದದ ಮುಕ್ತತೆಯನ್ನು ಮತ್ತೆ ಮುನ್ನೆಲೆಗೆ ತರಬಹುದೆಂಬ ಅಭಿಪ್ರಾಯದಲ್ಲಿ ಈಗಿನ ಜೋಡಣೆಯ ಕ್ರಮವನ್ನು ಅನುಸರಿಸಲಗಿದೆ. ವಚನ ರಚನೆಗಳಲ್ಲಿ ಮೊದಲ ಸಾಲು, ಕೆಲವೊಮ್ಮೆ ಮೊದಲ ಪದ, ಇಡೀ ವಚನದ ಪ್ರಮುಖ ಆಶಯಗಳಲ್ಲಿ ಒಂದನ್ನು ಸೂಚಿಸುವಂತಿರುತ್ತದೆ. ಆದುದರಿಂದಲೇ ಮೊದಲ ಸಾಲುಗಳ ಅಕಾರಾದಿ ಜೋಡಣೆ ನಿರ್ದಿಷ್ಟ ವಿಷಯವನ್ನು ಕುರಿತ ಹಲವು ಮನಸ್ಸುಗಳ ಸಂವಾದವನ್ನು ಮಂಡಿಸುವ ಸಾಧ್ಯತೆಯನ್ನು ಹೊಂದಿರುತ್ತದೆ. ಉದಾಹಾರಣೆಗೆ ‘ನೋಡು’ ‘ಕಳವು’ ‘ನಾನು’ ಮೊದಲಾದ ಪದಗಳಿಂದ ಆರಂಭವಾಗುವ ವಚನಗಳೆಲ್ಲ ಒಂದೆಡೆಯಲ್ಲಿ ಸಂಗ್ರಹಗೊಳ್ಳುವುದರಿಂದ ಆಯಾ ವಿಚಾರಗಳನ್ನು ಕುರಿತು ಹಲವು ಮನಸ್ಸುಗಳ ವಿಚಾರವೆಲ್ಲ ಒಂದೆಡೆಯಲ್ಲಿ ಸಂವಾದವನ್ನು ದೊರೆಯುತ್ತದೆ. ವಚನಕಾರರು ಎಷ್ಟೆಂದರೂ ತಮ್ಮ ವ್ಯಕ್ತಿತ್ವವನ್ನು ಬಯಲಾಗಿಸುವ ಆದರ್ಶವನ್ನು ಹೊಂದಿದ್ದವರು. ವಚನಕಾರರಿಗೆ ಪ್ರಾಮುಖ್ಯ ನೀಡಿ ಜೋಡಿಸುವುದಕ್ಕಿಂತ ವಚನಗಳನ್ನೇ ಮುನ್ನೆಲೆಗೆ ತರುವುದಕ್ಕೆ ಸಹಾಯವಾಗುವುದೆಂದು ಈಗಿನ ಕ್ರಮವನ್ನು ಆರಿಸಿಕೊಂಡದ್ದಾಗಿದೆ. ವಚನಕಾರರು ಮುಖ್ಯವಾದರೂ ಅವರಿಗಿಂತ ವಚನಗಳು ಮುಖ್ಯ.

ಇನ್ನು ಓದುಗರ ಮನಸ್ಸಿನಲ್ಲಿ ಅರ್ಥ ನಿರ್ಮಾಣವಾಗುವ ವಿಧಾನ. ನಮ್ಮ ನಮ್ಮ ಮನಸ್ಸುಗಳನ್ನೇ ನೋಡಿಕೊಂಡರೆ ನಾವು ಓದುವ ವಿಷಯ ಇತರ ಹಲವು ಹತ್ತು ಸಂಗತಿಗಳೊಡನೆ ಬೆರೆತು ತನ್ನದೇ ಅರ್ಥವಂತಿಕೆಯನ್ನು ಸೃಷ್ಟಿಸಿಕೊಳ್ಳುವುದು ಗಮನಕ್ಕೆ ಬರುತ್ತದೆ. ವಚನಗಳಂಥ ರಚನೆಗಳಂತೂ ಬಿಡಿ ಬಿಡಿಯಾಗಿಯೂ ಅರ್ಥಪೂರ್ಣವೇ ಆಗಿವೆ. ಪರಿಚಿತವಾದ ಸಂಗ್ರಹ ಮತ್ತು ಜೋಡಣೆಯ ವಿಧಾನಗಳನ್ನು ಕೈಬಿಟ್ಟು ಮುಕ್ತಸಂವಾದ ರೂಪದಲ್ಲಿ ಜೋಡಣೆಗೊಂಡಿರುವ ಈ ವಚನಗಳನ್ನು ಓದುತ್ತ ಓದುಗರ ಮನಸ್ಸಿನಲ್ಲಿ ವಚನಗಳ ನಡುವೆ ಹೊಸಬಗೆಯ ಸಂಬಂಧಗಳು ಕಲ್ಪಿತಗೊಳ್ಳುವ ಅವಕಾಶವಿರುತ್ತದೆ. ವಚನಗಳ ಅರ್ಥವಂತಿಕೆಯ ನಿರ್ಣಯದ ಜವಾಬ್ದಾರಿಯನ್ನು ಸಂಗ್ರಾಹಕ ಸಂಪಾದಕರ ಬದಲಾಗಿ ಓದುಗರಿಗೆ ಮರಳಿ ದೊರೆಯುವಂತೆ ಮಾಡುವುದು ನಮ್ಮ ಕಾಲದ ಆದರ್ಶಕ್ಕೆ ತಕ್ಕುದಾಗಿಯೇ ಇದೆ.

ಇಷ್ಟಾಗಿಯೂ ಮೊದಲ ಸಾಲುಗಳ ಅಕಾರಾದಿಯಲ್ಲಿ ಜೋಡಿಸುವುದು ಕೂಡ, ಇತರ ಕ್ರಮಗಳಿಗೆ ಹೋಲಿಸಿದರೆ ನಿರ್ಲಿಪ್ತವಾಗಿರಬಹುದಾದರೂ, ಒಂದು ಕ್ರಮವೇ ಆಗಿದೆ. ಮರಳಿ ಮರಳಿ ಯಾವುದೇ ವಚನವನ್ನು ಓದುಬೇಕೆಂದು ಬಯಸಿದರೆ ಅದು ಸುಲಭವಾಗಿ ದೊರೆಯುವಂತಾಲಿ ಎಂಬ ಉದ್ದೇಶದಿಂದಲೇ ಅಕಾರಾದಿ ಕ್ರಮವನ್ನು ಆಯ್ದುಕೊಳ್ಳಲಾಗಿದೆ. ವಚನಕಾರರ ಮುಖಾಂತರ ವಚನಗಳನ್ನು ಪ್ರವೇಶಿಸಲು ಬಯಸುವ ಓದುಗರಿಗಾಗಿ ಪ್ರತ್ಯೇಕ ಅನುಬಂಧವಿದೆ.

ವಚನಗಳ ಇಂದಿನ ಓದುಗರು ಪಡೆದಿರಬಹುದಾದ ಭಾಷಾ ಸಿದ್ಧತೆಗಳ ಪರಿಮಿತಿಯನ್ನು ಗಮನದಲ್ಲಿರಿಸಿಕೊಂಡು ಸುಗಮ ಓದಿಗೆ ಸಹಾಯಕವಾಗುವ ಇನ್ನಿತರ ಅನುಬಂಧಗಳನ್ನೂ ಕೊನೆಯಲ್ಲಿ ನೀಡಲಾಗಿದೆ.

*

ವಚನ ವೈವಿಧ್ಯವನ್ನು ಮುನ್ನೆಲೆಗೆ ತರುವುದು ಈ ಸಂಕಲನದ ಪ್ರಮುಖ ಉದ್ದೇಶವಾಗಿದೆ ವಚನಗಳನ್ನು ಅನುಭವ ಪ್ರಧಾನ. ವಿಚಾರಪ್ರಧಾನ ಎಂದು ಎರಡು ಬಗೆಗಳಲ್ಲಿ ಸ್ಥೂಲವಾಗಿ ವಿಂಗಡಿಸಿಕೊಳ್ಳಬಹುದು. ವಿಚಾರಪ್ರಧಾನ ವಚನಗಳಲ್ಲಿ ಪ್ರತಿಪಾದನೆಯ ವಚನಗಳು, ನಿರಾಕರಣೆಯ ವಚನಗಳು, ವಿವರಣೆಯ ವಚನಗಳು ಮತ್ತು ಆಚಾರ ವಚನಗಳು ಇವೆ. ಪ್ರತಿಪಾದನೆಯ ವಚನಗಳು ನಿರ್ದಿಷ್ಟ ನೀತಿ, ವರ್ತನೆ ಅಥವಾ ಮೌಲ್ಯಗಳ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತವೆ. ನಿರಾಕರಣೆಯ ವಚನಗಳು ಅಂಗೀಕೃತವಾದ ನಿಲುವುಗಳನ್ನು, ಮೌಲ್ಯಗಳನ್ನು, ಅವು ವೈಯಕ್ತಿಕ ಅಥವಾ ಸಮೂಹಿಕ ಹಿತಕ್ಕೆ ಅನುಕೂಲಕರವಾಗಿಲ್ಲವೆಂದು ನಿರಾಕರಸುವ ಉದ್ದೇಶವನ್ನು ಹೊಂದಿರುತ್ತವೆ. ವಿವರಣೆಯ ವಚನಗಳು ವೈಯಕ್ತಿಕ ಮತ್ತು ಸಾಮುಹಿಕ ಬದುಕಿನ ರೀತಿಯ ಬಗ್ಗೆ ಇರುವ ಪರಿಕಲ್ಪನೆಗಳ ಅರ್ಥವನ್ನು ವಿವರಿಸಿ, ಖಚಿತಗೊಳಿಸುವ ಉದ್ದೇಶವನ್ನು ಹೊಂದಿರುತ್ತವೆ. ಆಚಾರ ವಚನಗಳು ವೀರಶೈವ ತಾತ್ವಿಕತೆಯನ್ನು ಅಂಗೀಕರಿಸಿದ ಸಮೂಹವು ಹೇಗೆ ಮತ್ತು ಯಾವ ಬಗೆಯ ದೈನಿಕ ಆಚರಣೆ, ವೈಯಕ್ತಿಕ ಆಚರಣೆ ಮತ್ತು ಸಾಮೂಹಿಕ ಆಚರಣೆಗಳನ್ನು ಆಳವಡಿಸಿಕೊಳ್ಳಬೇಕೆಂಬುದನ್ನು ಹೇಳುವ ಉದ್ದೇಶವನ್ನು ಹೊಂದಿರುತ್ತವೆ.

ವಚನಗಳ ಉದ್ದೇಶಿತ ಕೇಳುಗರು ಕೂಡ ವೈವಿಧ್ಯಮಯವಾಗಿದ್ದಾರೆ. ತನಗೆ ತಾನೇ ಹೇಳಿಕೊಂಡ ವಚನ, ಇತರ ಸರಣರನ್ನು ಉದ್ದೇಶಿಸಿದ ವಚನ, ಶರಣರಲ್ಲದ ಅನ್ಯರನ್ನು ಉದ್ದೇಶಿಸಿದ ವಚನ, ತನ್ನ ಇಷ್ಪದೈವವನ್ನು ಉದ್ದೇಶಿಸಿದ ವಚನ, ಸಮಾನ ಅನುಭವಿಗಳನ್ನು ಉದ್ದೇಶಿಸಿದ ವಚನ, ಸಮಾನ ಅನುಭವಿಗಳನ್ನು ಉದ್ದೇಶಿಸಿದ ವಚನ, ಗಂಡು ತನ್ನನ್ನು ಹೆಣ್ಣೆಂದು ಪರಿಭಾವಿಸಿಕೊಂಡ ವಚನ, ಹೆಣ್ಣು ತನ್ನನ್ನು ಗಂಡೆಂದು ಪರಿಭಾವಿಸಿಕೊಂಡ ವಚನಗಳು ಕಾಣುತ್ತವೆ. ವಚನಗಳಲ್ಲಿ ಬಳಕೆಯಾಗಿರುವ ಸಂಬೋಧನ ಸೂಚಕಗಳನ್ನೇ ಗಮನಿಸಿದರೆ ಈ ವೈವಿಧ್ಯವು ಗಮನಕ್ಕೆ ಬರುತ್ತದೆ.

ವಚನಗಳು ವೈವಿಧ್ಯಮಯ ಎನ್ನುವ ಮಾತು ವಚನಗಳು ವ್ಯಕ್ತಪಡಿಸುವ ವೈಚಾರಿಕತೆಯನ್ನೂ ಒಳಗೊಳ್ಳುತ್ತದೆ. ವ್ಯಕ್ತಿಯ ಅಂತರಂಗ ಮತ್ತು ಸಮಾಜದ ಬಹಿರಂಗ ಇವುಗಳ ಸಮತೋಲನವನ್ನು ಸಾಧಿಸುವುದು ವಚನ ವೈಚಾರಿಕತೆಯ ಮುಖ್ಯ ಆಸಕ್ತಿಯಾಗಿದ್ದರೂ ನಮ್ಮ ಕಾಲದ ಆದರ್ಶಗಳ ಧ್ವನಿಯನ್ನೇ ವಚನಗಳಲ್ಲಿಯು ಕೇಳಲು ಬಯಸುವುದು ಸರಿಯಾಗುವುದಿಲ್ಲವೆಂದು ತೋರುತ್ತದೆ. ಸ್ತ್ರೀ ಸಮಾನತೆ ಮತ್ತು ಜಾತಿಕ ಪ್ರಶ್ನೆಗಳನ್ನು ಕುರಿತಂತೆ ವಚನ ಪಠ್ಯಗಳನ್ನು ವ್ಯಾಖ್ಯಾನಿಸುವಾಗ ಈ ಎಚ್ಚರ ಅಗತ್ಯವಾಗುತ್ತದೆ. ಆಧ್ಯಾತ್ಮಿಕದ ನೆಲೆಯಲ್ಲಿ ಗಂಡು – ಹೆಣ್ಣುಗಳೆಂಬ ಭೇದವಿಲ್ಲ ಎಂದು ಪ್ರತಿಪಾದಿಸಿದರೂ ವಚನಗಳು ಮುಖ್ಯವಾಗಿ ಪುರುಷಪ್ರಧಾನವಾದ ನೀತಿ ಕಲ್ಪನೆಯನ್ನೇ ಹೊಂದಿರುವ ಪಠ್ಯಗಳು. ವೇಶ್ಯೆಯನ್ನು ಕುರಿತು, ಗಂಡನ ಹಿರಿತನವನ್ನು ಒಪ್ಪದ ಹೆಂಡತಿಯನ್ನು ಕುರಿತು ವಚನಗಳು ವ್ಯಕ್ತಪಡಿಸುವ ಧೋರಣೆಗಳು ಇಂದಿನ ಚಿಂತನೆಗೆ ಅಷ್ಟು ಸೂಕ್ತವೆಂದು ತೋರುವುದಿಲ್ಲ. ವರ್ಣಾಶ್ರಮ ಪ್ರೇರಿತ ಮೇಲುಕೀಳುಗಳನ್ನು ನಿರಾಕರಿಸಿದರೂ ಶರಣರಲ್ಲದವರನ್ನು, ಭವಿಗಳನ್ನು, ಅನ್ಯ ದೈವಗಳನ್ನು ಕುರಿತು ಇರುವ ತಿರಸ್ಕಾರ ಮತ್ತು ರೋಷ ಸಾಕಷ್ಟು ದೊಡ್ಡ ಪ್ರಮಾಣದಲ್ಲೇ ವ್ಯಕ್ತವಾಗಿದೆ. ಅನ್ಯವೆಂಬುದು ಇಲ್ಲವಾಗಿ ತಾನೇ ಎಲ್ಲವೂ ಆಗುವ ಆಧ್ಯಾತ್ಮಿಕ ಸಾಧ್ಯತೆ ಮತ್ತು ಲೋಕ ವ್ಯವಹರದಲ್ಲಿ ಅನ್ಯದ ವಾಸ್ತವಕ್ಕೆ ಪ್ರತಿಕ್ರಿಯೆ ತೋರಬೇಕಾದ ಅನಿವಾರ್ಯತೆಗಳನ್ನು ವಚನ ಪಠ್ಯಗಳಲ್ಲಿ ಢಾಳಾಗಿ ಕಾಣುತ್ತವೆ.

ವಚನಗಳ ಕ್ರಾಂತಿಕಾರಕ ಗುಣವನ್ನು ಕುರಿತು ಸಾಕಷ್ಟು ಮಾತು ಕೇಳಿದ್ದೇವೆ. ವಚನಗಳಲ್ಲಿರುವ ಕ್ರಾಂತಿಕರಕತೆ ಅಂತರಂಗಕ್ಕೆ ಸಂಬಂಧಿಸಿದ್ದು. ವಚನಗಳಲ್ಲಿ ಬರುವ ಹಿಂದು ಮತ್ತು ಮುಂದು ಎಂಬ ಮಾತುಗಳನ್ನು ಭೂತ ಮತ್ತು ಭವಿಷ್ಯ ಎಂಬರ್ಥದಲ್ಲಿಯೇ ನೋಡುವುದು ಸೂಕ್ತವೆಂದು ತೋರುತ್ತದೆ. ಭೂತವೆನ್ನುವುದು ಮನಸ್ಸಿನ, ನಿರಂತರ ಆಲೋಚನೆಯ ಸೃಷ್ಟಿ, ಭವಿಷ್ಯವೆನ್ನುವುದು ಆಸೆ ಮತ್ತು ಭಯಗಳಿಂದ ಮೂಡುವ ಕಲ್ಪನೆ. ಇಂಥ ಕಾಲ್ಪನಿಕವಾದ ಮಾನಸಿಕ ಕಾಲವನ್ನು ಇಲ್ಲವಾಗಿಸಿಕೊಂಡಾಗ ಸತತ ಎಚ್ಚರದೊಡನೆ ವರ್ತಮಾನದಲ್ಲಿ ಇರುವುದು ಸಾಧ್ಯವಾಗುತ್ತದೆ. ಸಾವಧಾನವೆಂದರೆ ಸ – ಅವಧಾನ, ಎಚ್ಚರ. ಈ ಎಚ್ಚರದಲ್ಲಿ ಯಾವ ಮಾಯೆಯೂ ಇಲ್ಲ. ಮಾಯೆ ಎಂಬುದೇನಿದ್ದರೂ ಕೇವಲ ಕಾಲ್ಪನಿಕ, ಅದರ ಕಾಲ್ಪನಿಕತೆಯನ್ನು ಕಂಡುಕೊಳ್ಳುವುದೇ ಅರಿವಿನ ದಾರಿ. ಇಂಥ ಮಾಯೆ ಇಲ್ಲದ ಮಾನಸಿಕ ಎಚ್ಚರ ಅನಿವಾರ್ಯವಾಗಿಯೇ ಬಹಿರಂಗದ ಪರಿವರ್ತನೆಗೂ ಕಾರಣವಾದೆ. ಅದರೂ, ವಚನ ಪಠ್ಯಗಳಲ್ಲಿ ಇದೊಂದೇ ನಿಲುವು ಇದೆ ಎಂದು ಹೇಳಲು ಆಗುವುದಿಲ್ಲ. ದ್ವಂದ್ವವನ್ನು ಒಪ್ಪಿಕೊಳ್ಳುವ, ಬಹಿರಂಗ ಮತ್ತು ಕುರುಹುಗಳಿಗೆ ಪ್ರಾಮುಖ್ಯ ನೀಡುವ, ಬಹಿರಂಗದ ಶುದ್ಧತೆಗಾಗಿ ಹಾತೊರೆಯುವ ನಿಲುವುಗಳೂ ಇವೆ. ಎಲ್ಲ ಭಾಷೆಯ ವ್ಯವಸ್ಥೆಯೂ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ನಿರಾಕರಿಸುವ, ಯಾವುದೇ ನಿರ್ದಿಷ್ಟಮಾರ್ಗವನ್ನು ಒಲ್ಲದ, ಪರಿಣಾಮವು ತಟ್ಟನೆ ಸಂಭವಿಸಬೇಕೇ ಹೊರತು ಸಾವಕಾಶವಾಗಿ, ನಿರ್ದಿಷ್ಟಮಾರ್ಗವಲಂಬನೆಯಿಂದಲ್ಲ ಎಂದೆನ್ನುವ ನಿಲುವಿನೊಂದಿಗೆ ವ್ರತ ನೇಮ ಆಚರಣೆಗಳ ಮಾರ್ಗವನ್ನು ನಿಷ್ಠುರವಾಗಿ ಪಾಲಿಸಲು ಬಯಸುವ ನಿಲುವುಗಳೂ ಇವೆ. ಬಯಲನ್ನು ಆಲಯವಾಗಿಸುವ ಆಸೆ ಇರುವಂತೆಯೇ ಆಲಯವನ್ನು ಬಯಲಾಗಿಸುವ ತೀವ್ರತೆಯೂ ಇವೆ. ಅರಿವು ಮೂಡುವವರೆಗೆ ಸಾವಕಾಶವಾಗಿ ಕುರುಹನ್ನು ಹಿಡಿದು ವಿಕಾಸಹೊಮದಿ ಕೊನೆ ಮುಟ್ಟಬೇಕೆಂದು ವಾದಿಸುವ ವಚನಗಳೂ ಇವೆ. ಕೆಲವು ವಚನಕಾರರು ತಮ್ಮ ರಚನೆಗಳಲ್ಲಿ ಬೇರೆ ಬೇರೆ ನಿಲುವುಗಳನ್ನು ನಿರೂಪಿಸಿರುವುದೂ ಇದೆ. ವಚನ ಪಠ್ಯಗಳಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಅನೇಕ ವಚನಗಳಲ್ಲಿ ಕಾಣುವ ಅನ್ಯ ಸಮಯ, ಅನ್ಯ ದೈವಗಳನ್ನು ಕುರಿತ ಆಕ್ರೋಶ ಮತ್ತು ಅಸಹನೆ. ತಮ್ಮ ಶರಣಧರ್ಮವನ್ನು ಒಪ್ಪದ ಇತರ ಪ್ರಮುಖ ಧರ್ಮ ವ್ಯವಸ್ಥೆಗಳ ಬಗ್ಗೆ ಮಾತ್ರವಲ್ಲ, ಜನಪದರ ಬಗ್ಗೆ. ಅವರ ದೈವಗಳ ಬಗ್ಗೆ ಕೂಡ ಈ ಅಸಹನೆ ಆಕ್ರೋಶಗಳಿವೆ. ಈ ನಿಲುವು ವಚನಗಳಲ್ಲಿ ಪ್ರತಿಪಾದಿತವಾಗಿರುವ ಆಧ್ಯಾತ್ಮಿಕತೆಗೆ ಹೊಂದದ ನಿಲುವು ಮತ್ತು ಸಾಂಸ್ಕೃತಿಕ ಬಹುಮುಖತೆಯನ್ನು ಆದರ್ಶವಾಗಿ ಹೊಂದಿರುವ ಸಮಾಜ ಒಪ್ಪಬೇಕಾಗಿಲ್ಲದ, ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕಾದ ನಿಲುವು. ಆದರೆ ನಮ್ಮ ಕಾಲದಲ್ಲಿಯೇ ಅನ್ಯವೆಂದು ಭಾವಿಸಲಾದ ಜನಸಮುದಾಯಗಳ ಸಾಂಸ್ಕೃತಿಕ ಸಂಕೇತಗಳನ್ನು ನಾಶಮಾಡುವ ಮನೋಧರ್ಮ ತೀವ್ರವಾಗಿಯೇ ವ್ಯಕ್ತವಾಗುತ್ತಿದೆಯಲ್ಲವೇ? ಅನನ್ಯತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕ್ರೌರ್ಯವೂ ಸಮರ್ಥನೀಯ ಎಂಬ ಮನೋಧರ್ಮ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಸಹಿಸಿ ಪೋಷಿಸುವ ಆದರ್ಶ ಇವುಗಳ ಹೋರಾಟ ನಿರಂತರವೆಂದೇ ತೋರುತ್ತದೆ.

ಎಲ್ಲ ತಿಳಿವಳಿಕೆ ಮತ್ತು ಜ್ಞಾನದ ಮುಲವನ್ನು ವ್ಯಕ್ತಿಯ ಅಂತರಂಗದಲ್ಲಿಯೇ ಸ್ಥಾಪಿಸಿ ವಿವರಿಸಿದ್ದು ವಚನಗಳ ಹಿರಿಮೆಯಾಗಿ ಕಾಣುತ್ತದೆ. ಜಗದಗಲ ಮುಗಿಲಗಲ ಮಿಗೆಯಗಲವಾಗಿರುವ ದೈವ ತನ್ನ ಅಂಗೈಗೆ ಬಂದದ್ದು ಎಂಬ ಅನುಭವವಿರಲಿ, ಸಮಾಜದ ಎಲ್ಲ ಜಾತಿಗಳು ಪ್ರತಿ ವ್ಯಕ್ತಿಯ ಒಳಗೇ ಅಡಗಿವೆ ಎಂದು ವಿವರಿಸುವ ಮಾತೇ ಇರಲಿ, ಅಂತರಂಗವೇ ಎಲ್ಲ ತಿಳಿವಳಿಕೆಯ ಕ್ರಿಯೆಯ ಮುಲ ಸ್ತ್ರೋತವಾಗಿ ವಚನಗಳಲ್ಲಿ ಕಾಣುತ್ತದೆ. ಒಳಗಿನ ಅರಿವು ಹೊರಗಿನ ಕ್ರಿಯೆಯಾಗಿ ವ್ಯಕ್ತವಾಗುವ ಬಗೆ ವಚನಗಳ ವೈಚಾರಿಕತೆಯ ಮುಖ್ಯ ಆಸಕ್ತಿಯಾಗಿದೆ. ನೆನಪು – ಮರೆವು, ಅರವು – ಅರಿವಿನ ಕುರುಹು, ತಿಳಿವಳಿಕೆ – ಭಾಷೆ, ಇವುಗಳ ಸಂಬಂಧ, ಬಹುಶಃ ಕನ್ನಡದಲ್ಲಿ ಮೊಟ್ಟಮೊದಲು ಬಾರಿಗೆ ವಚನಗಳಲ್ಲಿ ಇಷ್ಟು ದೊಡ್ಡ ಪ್ರಮಾನದಲ್ಲಿ ಚರ್ಚೆಗೆ ಗುರಿಯಾಗಿವೆ. ಈ ಚರ್ಚೆಯನ್ನು ಭಾರತದ ತಾತ್ವಿಕ ದರ್ಶನಗಳ ಪರಂಪರೆಯಲ್ಲಿ ಇಟ್ಟು ನೋಡುವುದು ಅಗತ್ಯವಾಗಿ ಆಗಬೇಕಾದ ಕೆಲಸವಾಗಿದೆ. ವಚನಗಳನ್ನು “ಸರಳ, ಸುಲಭ ರಚನೆಗಳು” ಎಂಬ ಭ್ರಮೆಯಲ್ಲಿಯೇ ಇರುವಷ್ಟು ದಿನ ಈ ಕೆಲಸ ಸಾಧ್ಯವಾಗುವುದಿಲ್ಲ. ಶೈವ ಪರಂಪರೆಗಳೊಡನೆ ವಚನಗಳ ಕೊಡುಕೊಡುಗೆಯನ್ನು ಕುರಿತ ಅಧ್ಯಯನ ಇನ್ನೂ ಆಗಬೇಕಾದ ಕೆಲಸ.

ವಚನಗಳು ತಮ್ಮ ಬೌದ್ಧಿಕ ಚರ್ಚೆಯನ್ನು ರೂಪಕದ ಭಾಷೆಯಲ್ಲಿ ನಡೆಸಿವೆ. ಆದುದರಿಂದಲೇ ಅವನ್ನು ಕೇವಲ ಕಾಲಬದ್ಧ ರಚನೆಗಳು ಎಂದಲ್ಲದೆ ನಮ್ಮ ಸಮಕಾಲೀನ ಪಠ್ಯಗಳ ಎಂದು ವ್ಯವಹರಿಸುವುದಕ್ಕೂ ಸಾಧ್ಯವಾಗಿದೆ. ಪ್ರಾಚೀನ ಪಠ್ಯಗಳಲ್ಲಿ ದಿನನಿತ್ಯದ ಬದುಕಿನ ವಿವರಗಳನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ರೂಪಕ ಸಾಮಗ್ರಿಯಾಗಿ ಬಳಸಿಕೊಂಡದ್ದು ವಚನಗಳು ಮಾತ್ರವೇ. ಸ್ವ – ಅನುಭವ ಮೂಡಿಸಿದ ವಿಚಾರದ ವಾಹಕವಾದಾಗ ರೂಪಕಗಳು ಉಜ್ವಲವಾಗಿರುತ್ತವೆ. ಅಂಗೀಕೃತ ವಿಚಾರದ ವಾಹಕವಾದಾಗ ಅವು ಕೇವಲ ಭಾಷಿಕ ಉಪಕರಣಗಳಾಗುತ್ತವೆ. ಹೀಗೆ ಉಪಕರಣಗಳಾದ ರೂಪಕಗಳು ಪರಂಪರಾಗತ ಅರ್ಥಸೂಚನೆಗಳನ್ನಷ್ಟೇ ವ್ಯಕ್ತಪಡಿಸುವಾಗ ಬೆಡಗು ಎಂದು ಕರೆಯಲಾಗುವ ಸಂವಾದ ಹುಟ್ಟಿಕೊಳ್ಳುತ್ತದೆ. ಬೆಡಗಿನ ವಚನಗಳೆಂದು ಕರೆಯಲಾಗುವ ವಚನಗಳ ವ್ಯಾಖ್ಯಾನಗಳೆಲ್ಲದರ ಮುಖ್ಯ ಲಕ್ಷಣವೆಂದರೆ ರೂಪಕವು ಹೊಳೆಯಿಸುವ ಅರ್ಥ ಸೂಚನೆಗಳಿಗಿಂತ ಅದಾಗಲೇ ಸ್ಪಷ್ಟವಾಗಿ ಬಿಟ್ಟಿರುವ ಬೌದ್ಧಿಕ ತಿಳಿವಳಿಕೆ, ಪರಿಕಲ್ಪನೆಗಳೇ ಮುಖ್ಯವೆಂದು ಭಾವಿಸುವುದೇ ಆಗಿದೆ. ಆದುದರಿಂದಲೇ ಬಹುತೇಕ ಬೆಡಗಿನ ವಚನ ವ್ಯಾಖ್ಯಾನಗಳೆಲ್ಲ ರೂಪಕವೆಂಬುದು ಸಿದ್ಧ ಅಥವ ಪ್ರಸಿದ್ಧ ಅರ್ಥಕ್ಕೆ ಹೊದಿಸಿರುವ ತೆರೆ ಎಂದೇ ಭಾವಿಸುತ್ತವೆ. ರೂಪಕಗಳು ಯಾವುದೇ ಇದ್ದರೂ ಅರ್ಥ ಮಾತ್ರ ಅದೇ ಎನ್ನಿಸುವಂತೆ ಇರುತ್ತವೆ. ಬೆಡಗಿನ ಸಂವಾದ ಪರಂಪರೆಯು ನಿರ್ಮಿಸಿಕೊಂಡಿರುವ ಸಿದ್ಧ ಅರ್ಥಗಳನ್ನು ಕ್ಷಣಕಾಲವಾದರೂ ಬದಿಗೆ ಸರಿಸಿ, ರೂಪಕಗಳೊಡನೆಯೇ ನೇರವಾಗಿ ವ್ಯವಹರಿಸುವುದು ಹೊಸ ಓದಿಗೆ ಅನುವು ಮಾಡಿಕೊಟ್ಟೀತು.

ಹೊಸ ಓದಿನ ಸ್ವರೂಪವನ್ನು ಕುರಿತು ಹೀಗೆ ವಿವರಿಸಬಹುದು. ವಿವಿಧ ಕಾರಣಗಳಿಗಾಗಿ ಜನಪ್ರಿಯವಾಗಿರುವ ಹಲವು ನೂರು ವಚನಗಳು, ಅವು ಜನಪ್ರಿಯವಾಗಿರುವ ಕಾರಣದಿಂದಲೇ, ಅರ್ಥಸಂದಿಗ್ಧತೆಯೇನೂ ಇಲ್ಲದ, ಸರಳ ನೇರ ನುಡಿಗಳಾಗಿ ಕೇಳುತ್ತವೆ. ಪರಿಚಿತ ಅರ್ಥದ ಸದೃಢ ಜಡ ಭಿತ್ತಿಯ ಹಿನ್ನೆಲೆಯಲ್ಲಿಯೇ ಹೊಸ ವಚನಗಳನ್ನೂ ಓದುತ್ತೇವೆ. ಅರ್ಥ ಗೊತ್ತಿದೆ, ಸುಸ್ಪಷ್ಟವಾಗಿದೆ ಎಂದೇ ಭಾವಿಸಿ ನಾವು ವಚನಗಳು ಒಳಗೊಂಡಿರುವ ಅನುಭವಕ್ಕೆ ಮುಚ್ಚಿದ ಮನಸ್ಸಿನವರಾಗಿಬಿಡುತ್ತೇವೆ. ಪರಿಚಿತವಾದದ್ದನ್ನೂ ಅಪರಿಚಿತಗೊಳಿಸಿಕೊಳ್ಳದ ಹೊರತು ಓದಿನ ಹೊಸತನ ಸಾಧ್ಯವಾಗುವುದಿಲ್ಲ. ವಚನಗಳನ್ನು ಅಪರಿಚಿತಗೊಳಿಸಿಕೊಳ್ಳುವುದಕ್ಕೆ ಒಂದು ದಾರಿ ಎಂದರೆ ವಚನದ ಸಾಲುಗಳನ್ನು ಅರ್ಥಕ್ಕೆ ಅನುಗುಣವಾಗಿ ಹೊಸ ರೀತಿಯಲ್ಲಿ ಮುರಿದು ಜೋಡಿಸಿಕೊಳ್ಳುವುದು. ಈ ಸಂಕಲನದ ಬಹಳಷ್ಟು ವಚನಗಳನ್ನು ಹೀಗೆ ಹೊಸ ರೀತಿಯ ವಿನ್ಯಾಸದಲ್ಲಿ ಜೋಡಿಸಿಕೊಡಲಾಗಿದೆ. ತಾಳೆಯಗರಿಯ ಹಸ್ತಪ್ರತಿಗಳಲ್ಲಿ, ಶ್ರೀ ಭೂಸನೂರುಮಠ ಅವರು ಸಂಪಾದಿಸಿರುವ ಸಂಪುಟದಲ್ಲಿ ಪಠ್ಯಗಳನ್ನು ಗದ್ಯದ ಸಾಲುಗಳಂತೆ ನೀಡಿರುವುದನ್ನು ನೋಡಬಹುದು. ಲಯಕ್ಕೆ ಅನುಗುಣವಾಗಿ ವಚನ ಸಾಲುಗಳನ್ನು ಕವಿತೆಯ ಸಾಲುಗಳಂತೆ ಜೋಡಿಸಿ ಪಠ್ಯದ ಕಾವ್ಯರೂಪವನ್ನು ಮುನ್ನೆಲೆಗೆ ತರುವ ರೀತಿಯನ್ನೂ ಶ್ರೀ ಬಸವನಾಳರು ಸಂಪಾದಿಸಿರುವ ಬಸವ ವಚನಗಳಲ್ಲಿ ಕಾಣಬಹುದು. ಈಗ ಇನ್ನೊಂದು ಹೆಜ್ಜೆ ಮುಮದೆ ಹೋಗಿ ವಚನಗಳ ಅನುಭವ, ಅರ್ಥ, ಮಾತಿನ ರೀತಿಗೆ ಗಮನ ನೀಡಿ, ಪ್ರತಿಸಾಲಿನ ನಡುವೆ ಅಗತ್ಯವಾಗಿ ಬರಬೇಕಾದ ಮೌನಕ್ಕೆ ಪ್ರಾಧಾನ್ಯ ನೀಡಿ ಇನ್ನೂ ಬೇರೆಯದೇ ರೀತಿಯಲ್ಲಿ ವಚನ ಸಾಲುಗಳನ್ನು ಜೋಡಿಸಿಕೊಳ್ಳುವುದು ಸಾಧ್ಯ ಎಂಬ ನಂಬಿಕೆಯೊಂದಿಗೆ ಇಲ್ಲಿನ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ನಿದರ್ಶನಕ್ಕೆಂದು ಹೇಳುವುದಾದರೆ, ಸಂಬೋಧನೆಯ ಮಾತುಗಳನ್ನು ಪ್ರತ್ಯೇಕಗೊಳಿಸಿ ನೀಡಲಾಗಿದೆ, ಅಥವಾ ಕೆಲವು ಸೂಕ್ತ ಸಂದರ್ಭಗಳಲ್ಲಿ ಅಂಕಿತವು ತಾನೇ ಪ್ರತ್ಯೇಕ ಸಾಲು ಎಂಬಂತೆ ಉಳಿದುಕೊಳ್ಳುತ್ತದೆ. ಇಂಥ ಸಂದರ್ಭಗಳಲ್ಲಿ ಓದುಗರು ಸಾಲು ಮುರಿದಲ್ಲಿಂದ ಆರಂಭವಾಗುವ ಖಾಲಿಜಾಗವನ್ನು ಮೌನವೆಂದೇ ಭಾವಿಸಿ ಓದಿನ ವೇಗಕ್ಕೆ ಅಷ್ಟು ಬಿಡುವು ಕೊಟ್ಟು ಮುಂದಿನ ಸಾಲನ್ನು ಓದಿಕೊಳ್ಳುವುದರಿಂದ ವಚನದ ಅನುಭವ ಹೊಸರೀತಿಯಲ್ಲಿ ಮನಸ್ಸಿಗೆ ತಟ್ಟುವುದಕ್ಕೆ ಅವಕಾಶವಾಗುತ್ತದೆ. ಇನ್ನೊಂದು ಸಂಗತಿ ಎಂದರೆ ನಮಗೆ ಪರಿಚಿತ ಎನ್ನಿಸುವ ಪದಗಳ ಅರ್ಥವನ್ನು ಹೊಸದಾಗಿ ಹುಡುಕಿಕೊಳ್ಳುವುದು, ಅರ್ಥದ ಇತರ ಸಾಧ್ಯತೆಗಳನ್ನು ಗಮನಿಸುವುದು ಕೂಡ ಹೊಸ ಓದಿನ ಮುಖ್ಯ ಅಂಶ. ನಿದರ್ಶನಕ್ಕೆ ಅಲ್ಲಮನ ಒಂದು ವಚನದ, ಈ ಸಂಕಲನದ ವಚನ ೯೧೪, “ತಗರ ಹೋರಟೆ” ಎಂಬ ನುಡಿಗಟ್ಟನ್ನು “ಟಗರುಗಳ ಹೋರಾಟ” ಎಂದು ಒಪ್ಪಿ ವಿವರಿಸಿಕೊಂಡು ಬಂದಿದ್ದೇವೆ. ಆದರೆ “ತಗರ” ಎಂಬ ಮಾತಿಗೆ “ಒಂದು ಬಗೆಯ ಪಗಡೆಯಾಟದ ಜೂಜು” ಎಂಬ ಅರ್ಥವೂ ಇದೆ. ಹಿಂದಿನ ಸಾಲಿನ ಪುಂಡರ ಗೋಷ್ಠ ಎಂಬುದರೊಡನೆ ಸೇರಿ ವ್ಯರ್ಥಾಲಾಪದ ಪಗಡೆಯಾಟಕ್ಕೆ ಇನ್ನೂ ಶ್ರೀಮಂತವಾದ ಅರ್ಥ ದೊರೆಯುತ್ತದೆ. ತರ್ಕವೆಂಬುದು ಒಂದು ಬಗೆಯ “ಅರ್ಥ”ರಹಿತ ಕ್ರೀಡೆ ಎಂಬ ಅರ್ಥ ಹೊಳೆಯುತ್ತದೆ. ಭಾಷಾ ರಚನೆಯನ್ನು ಗಮನಿಸುವಾಗಲೂ ಇಂಥದೇ ಎಚ್ಚರ ಬೇಕಾಗುತ್ತದೆ. ಒಂದು ನಿದರ್ಶನವನ್ನು ನೀಡುವುದಾದರೆ ವಚನ ಪಠ್ಯಗಳಲ್ಲಿ ಬಳಕೆಯಾಗುವ “ಬಾರದು” ಎಂಬ ನುಡಿಯನ್ನು ಇಂದಿನ ಪರಿಚಿತ ನಿಷೇಧಾರ್ಥಕದ ರೀತಿಯಲ್ಲಿ ಅರ್ಥೈಸಿಕೊಳ್ಳುವುದಕ್ಕಿಂತ “ಸಾಧ್ಯವಿಲ್ಲವ ಎಂಬರ್ಥದಲ್ಲಿ ತೆಗೆದುಕೊಳ್ಳುವುದು ಹೆಚ್ಚು ಉಪಯುಕ್ತವಾಗುತ್ತದೆ. ವೀರಶೈವದ ಪಾರಿಷಾಷಿಕಗಳು ಬಳಕೆಯಾಗಿರುವ ಅನೇಕ ವಚನಗಳು ಈ ಸಂಕಲನದಲ್ಲಿವೆ. ಅವುಗಳನ್ನು ಓದುವಾಗ ಕೇವಲ ಮತ ಪ್ರತಿಪಾದನೆಯ ಅರ್ಥವನ್ನಷ್ಟೇ ಗಮನಿಸುವುದಕ್ಕಿಂತ ತಾತ್ವಿಕವಾಗಿ ಅವುಗಳನ್ನು ಗಮನಿಸುವುದು ಹೆಚ್ಚು ಉಪಯುಕ್ತ. ನಿದರ್ಶನಕ್ಕೆ ಸಕಲೇಶ ಮಾದರಸನ ೯೮೩ನೆಯ ವಚನದಲ್ಲಿ ಬರುವ ಷಟ್ ಸ್ಥಲದ ಕುರಿತು ಪ್ರಶ್ನೆಗಳನ್ನು ಕೇವಲ ವೀರಶೈವ ಪಾರಿಭಾಷಿಕಗಳನ್ನಾಗಿ ನೋಡದೆ ಅನುಭವಿ ಸ್ವೀಕಾರದ ತಾತ್ವಿಕ ಚರ್ಚೆ ಎಂದು ಪರಿಭಾವಿಸುವುದು ಸೂಕ್ತವೆಂದು ತೋರುತ್ತದೆ. ಅರ್ಥ ಮುಖ್ಯವಾದರೂ ಅರ್ಥವಾಗುವ ಕ್ರಮವಿದೆಯಲ್ಲ, ಅರ್ಥವನ್ನು ರೂಪಿಸುವ ಓದಿನ ಅನುಭವವಿದೆಯಲ್ಲ ಅದಕ್ಕೆ ಪ್ರಾಮುಖ್ಯ ನೀಡುವುದು ಹೊಸ ಓದು ಆಗುತ್ತದೆ. ಪರಿಚಿತವನ್ನು ಅಪರಿಚಿತಗೊಳಿಸಿಕೊಳ್ಳದೆ ಹೊಸತನ ಒದಗದು.

ವಚನಗಳೇ ಮುಖ್ಯ, ವಚನಕಾರರಲ್ಲ ಎಂಬ ನಿಲುವಿನಲ್ಲಿ ಈ ಸಂಕಲನ ಸಿದ್ಧಗೊಂಡಿರುವುದರಿಂದ ವಚನಗಳ ಕರ್ತೃತ್ವದ ಪ್ರಶ್ನೆ, ವಚನ ಪಾಠದ ನಿಷ್ಕರ್ಷೆ ಇವು ಇಲ್ಲಿನ ಮುಖ್ಯ ಆಸಕ್ತಿಗಳಲ್ಲ. ಹಾಗೆ ನೊಡುವುದಾದರೆ ನಡುಗನ್ನಡ ಕಾಲದ ಪಠ್ಯಗಳ ನಿಷ್ಕೃಷ್ಟ ಪಾಠವನ್ನು ನಿರ್ಧರಿಸುವುದು ಅಸಾಧ್ಯವೆಂದೇ ತೋಡುತ್ತದೆ. ನಿದರ್ಶನಕ್ಕೆ ಈ ಸಂಕಲನದ ೪೩೫ ಮತ್ತು ೪೩೬ ವಚನಗಳು ಚಂದಿಮರಸ ವಚನವೋ ಬಸವ ವಚನವೋ ನಿರ್ಧರಿಸುವುದು ಕಷ್ಟ ಕಲಿದೇವ ಅಂಕಿತವನ್ನು ಬಳಸುವ ಮಡಿವಾಳಮಾಚಯ್ಯ ವಚನ ಮತ್ತು ಅಮರಗುಂಡದ ಮಲ್ಲಿಕಾರ್ಜುನ ಅಂಕಿತವನ್ನು ಬಳಸುವ ಪುರದ ನಾಗಣ್ಣ ವಚನಗಳು ಒಂದೇ ರೂಪ, ವಿವರಗಳಲ್ಲಿ ಕಾಣುತ್ತವೆ. ಇನ್ನು ರೂಪಕ, ನುಡಿಗಟ್ಟುಗಳಂತೂ ಹಲವು ವಚನಗಳಲ್ಲಿ ಅದೇ ಅದೇ ರೀತಿಯಲ್ಲಿಯೇ ಪುನರುಕ್ತವಾಗುತ್ತವೆ. ಇಂತ ಪ್ರಶ್ನೆಗಳನ್ನು ಪರಿಹರಿಸುವುದು ಈ ಸಂಕಲನದ ಉದ್ದೇಶವಲ್ಲ ವಚನಗಳ ಪಾಠಾಂತರ ಅತ್ಯಂತ ಕುತೂಹಲಕರವಾದ ಬೌದ್ಧಿಕ ಮತ್ತು ಅನುಭವ ಸಾಹಸದ ಯಾತ್ರೆ. ಪ್ರಸ್ತುತ ಸಂಕಲಕ್ಕಾಗಿ ಲಭ್ಯವಿರುವ ಪಾಠಗಳಲ್ಲಿ ಅರ್ಥ ಶ್ರೀಮಂತಿಕೆಗೆ ಇಂಬು ಕೊಡುವಂಥ ಪಾಠವನ್ನು ಉಳಿಸಿಕೊಳ್ಳಲಾಗಿದೆ. ನಿದರ್ಶನಕ್ಕೆಂದು ಈ ಸಂಕಲನದ ೨೬೩ನೆಯ ವಚನದ ಹಲವು ಪಾಠಗಳಲ್ಲಿ “ನಿಮ್ಮ ನಿಲುವು” ಎಂಬುದನ್ನು ಕೈಬಿಡಲಗಿದೆ. ವಚನಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಇಂಥ ಎಲ್ಲ ವಿವರಗಳನ್ನು ಒಳಗೊಂಡ ಚರ್ಚೆಯನ್ನು “ವಚನ ವಿವರ” ಎಂಬ ಕೃತಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು.

ವ್ಯಕ್ತಿತ್ವದ ಶೋಧನೆ, ಕಾಲದ ಮೂಲಕ, ಜ್ಞಾನದ ಮೂಲಕ, ನೆನಪುಗಳ ಮೂಲಕ, ಭ್ರಮೆಗಳ ಮೂಲಕ ಗಟ್ಟಿಗೊಳ್ಳುವ ಅಹಂಕಾರ, ಕಲ್ಪಿತವಾದ ಅಹಂಕಾರದ ನಿರಸನ, ಆ ಮೂಲಕ ಸೀಮಿತ ಅಹಂಕಾರಕ್ಕಿಂತ ಬಹು ವಿಶಾಲವಾದ ಸೃಷ್ಟಿಯಲ್ಲಿ ಸಮರಸಗೊಳ್ಳುವುದು. ಅಹಂಕಾರದ ಬದ್ಧತೆಯನ್ನು ನೀಗಿಕೊಮಡು ಸ್ವತಂತ್ರರೂ, ಸೀಮಾತೀತರೂ ಆಗುವುದು, ವ್ಯಕ್ತಿ ಮತ್ತು ಸೃಷ್ಟಿಯ ನಡುವೆ ಸಮರಸದ ಕಲ್ಯಾಣವನ್ನು ಕಂಡುಕೊಳ್ಳುವುದು ಇವು ವಚನ ಪಠ್ಯಗಳ ಮುಖ್ಯವೆಂದು ಭಾವಿಸಿರುವ ಪ್ರಶ್ನೆಗಳು, ಹುಡುಕಾಟಗಳು. ಲಭ್ಯವಿರುವ ಸುಮರು ಇಪ್ಪತ್ತು ಸಾವಿರ ವಚನಗಳಲ್ಲಿ ವೈವಿಧ್ಯಮಯವಾದ ೯೮ ವಚನಕಾರರ ೧೦೬೮ ವಚನಗಳನ್ನು ಆಯ್ದು ಈ ಸಂಕಲವನ್ನು ರೂಪಿಸಲಾಗಿದೆ. ವಚನಗಳ ಹೊಸ ಓದಿಗೆ ಪ್ರಚೋದನೆ ನೀಡಿದರೆ ಈ ಶ್ರಮ ಸಾರ್ಥಕವಾಗುತ್ತದೆ.

*

ಈ ಸಂಕಲನ ರೂಪುಗೊಳ್ಳುವುದಕ್ಕೆ ಮುಖ್ಯ ಕಾರಣ ಕನ್ನಡ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯವರಾದ ಡಾ. ಕೆ.ವಿ. ನಾರಾಯಣ ಅವರು. ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ.ಬೋರಲಿಂಗಯ್ಯ ವೈಯಕ್ತಿಕ ಕಾಳಜಿಯನ್ನು ವಹಿಸಿ ಈ ಸಂಕಲನದ ಪ್ರಕಟಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಧ್ಯಯನಾಂಗದ ನಿರ್ದೇಶಕರಾದ ಡಾ. ಕರೀಗೌಡ ಬೀಚನಹಳ್ಳಿ, ಅಭಿವರದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಟಿ.ಆರ್. ಚಂದ್ರಶೇಖರ್, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಪಕರಾದ ಡಾ. ಅಮರೇಶ ನುಗಡೋಣಿ ಈ ಮಾನ್ಯ ಮಿತ್ರರು ಸಲಹಾ ಸಮಿತಿಯ ಸದಸ್ಯರಾಗಿ ಈ ಸಂಕಲನ ರೂಪುಗೊಳ್ಳುವುದರಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಪ್ರಕಟಣೆಯ ತಾಂತ್ರಿಕ ವಿಷಯಗಳನ್ನು ಕುರಿತಂತೆ ಶ್ರೀ ಸುಜ್ಞಾನಮೂರ್ತಿಯವರ ನೆರವು ಬಹಳ ಬೆಲೆಯುಳ್ಳದ್ದಾಗಿದೆ. ಕನ್ನಡ ಗಣಕ ಪರಿಷತ್ತಿನ ಶ್ರೀ ಶ್ರೀನಾಥಶಾಸ್ತ್ರಿ ಮತ್ತು ಶ್ರೀ ನರಸಿಂಹಮೂರ್ತಿ, ಶ್ರೀ ಅಭಿಷೇಕ್, ಕುಮಾರಿ ಕವಿತಾ ಇವರು ನೀಡಿರುವ ತಾಂತ್ರಿಕ ಸಹಕಾರಕ್ಕೆ ಕೃತಜ್ಞನಾಗಿದ್ದೇನೆ.

ನನ್ನ ಎಲ್ಲ ಬರವಣಿಗೆಯೂ ತನ್ನದೇ ಎಂಬಷ್ಟು ಪ್ರೀತಿಯನ್ನು ತೋರುವ, ನಿಷ್ಠುರವಾಗಿ ವಿಮರ್ಶಿಸುವ ನನ್ನ ಗೆಳೆಯ ಮೈಸೂರಿನ ರಾಮು, ದಿನದಿನವೂ ಆಗುತ್ತಿರುವ ಕೆಲಸದ ಬಗ್ಗೆ ಆಸಕ್ತಿ ತೋರುತ್ತಾ, ಸಲಹೆ ನೀಡುತ್ತಾ ಸಹಕರಿಸಿರುವ ಗೆಳೆಯ ಡಾ. ಎಚ್. ಎಸ್. ರಾಘವೇಂದ್ರರಾವ್. ಅಗತ್ಯವಾದ ಕೆಲವು ಪುಸ್ತಕಗಳನ್ನು ಒದಗಿಸಿಕೊಟ್ಟ ಡಾ. ವಿಜಯಾ ಗುತ್ತಲ, ಕರಡು ತಿದ್ದುವಲ್ಲಿ ಸಹಕಾರ ನೀಡಿರುವ ಕುಮಾರಿ ಎಸ್. ಹೇಮಾ ಇವರಿಗೆಲ್ಲ ಕೃತಜ್ಞನಾಗಿದ್ದೇನೆ.

.ಎಲ್. ನಾಗಭೂಷಣಸ್ವಾಮಿ