ಕರ್ನಾಟಕ ಚರಿತ್ರೆಯಲ್ಲಿ ಮಾತ್ರವಲ್ಲ ಭಾರತದ ಚರಿತ್ರೆಯಲ್ಲಿಯೇ ಮೈಸೂರು ಸಂಸ್ಥಾನಕ್ಕೆ ವಿಶಿಷ್ಟ ಸ್ಥಾನವಿದೆ. ೧೭೯೯ ರಿಂದ ೧೮೩೦, ೧೮೩೧ ರಿಂದ ೧೮೮೧ ಹಾಗೂ ೧೮೮೧ ರಿಂದ ೧೯೪೭ ಈ ಮೂರು ಹಂತದ ಆಧುನಿಕ ಮೈಸೂರಿನ ಚರಿತ್ರೆ ದೇಶ-ವಿದೇಶದ ಚರಿತ್ರೆಗಾರರು ಮತ್ತು ಚಿಂತಕರನ್ನು ಮುಖಾಮುಖಿ ಮಾಡುವಂತೆ ಮಾಡಿದ ಕಾಲವಾಗಿದೆ. ರಾಜಕೀಯ ಏಳುಬೀಳುಗಳು ಶೈಕ್ಷಣಿಕ ಆರ್ಥಿಕ ಅಭಿವೃದ್ಧಿಪರ ಕಾರ್ಯಗಳು ವ್ಯವಸ್ಥೆಯಲ್ಲಿನ ಪ್ರಗತಿ ಹಾಗೂ ದೇಶದಲ್ಲಿಯೇ ಅನೇಕ ಪ್ರಥಮಗಳನ್ನು ಸಾಧಿಸಲು ಮುಂದಾದ ಬಗೆಗಳ ಕುರಿತು ಇರುವ ಕಾಲದ ದಾಖಲೆಗಳನ್ನು ವಿಶ್ಲೇಷಿಸಿ ವಿಮರ್ಶಿಸಿ ಅಧ್ಯಯನಕ್ಕೆ ಒಳಪಡಿಸುವುದೇ ಒಂದು ಮಹತ್ವದ ಕಾಲಘಟ್ಟವಾಗಿ ಕಂಡುಬರುತ್ತದೆ. ಇಂಥ ದಾಖಲೆಗಳನ್ನು ಅಧ್ಯಯನ ಮಾಡುವಾಗ ರೋಮಾಂಚನದ ಜೊತೆಗೆ ಸಾಮ್ರಾಜ್ಯ, ಸಂಸ್ಥಾನಗಳ ಪ್ರಗತಿಗೆ ಸ್ಥಳೀಯ ಪಾಳ್ಯಗಾರರು, ಜಮೀನುದಾರರು, ಬಂಡವಾಳಶಾಹಿಗಳು, ಕೃಷಿಕರು, ಕಾರ್ಮಿಕರು, ನಿಮ್ನವರ್ಗದವರು ಸಮಾಜದ ವಿವಿಧ ವರ್ಗದ ಜನರ ಸ್ಥಿತ್ಯಂತರಗಳ ಕುರಿತು ಸಬಾಲ್ಟ್ರನ್ ನೆಲೆಯ ಅಧ್ಯಯನಕ್ಕೂ ಇದು ದಾರಿ ಮಾಡಿಕೊಡುತ್ತದೆ. ಕೃತಿಯಲ್ಲಿ ೧೭೯೯ ರಿಂದ ೧೯೪೫ರ ವರೆಗಿನ ಮೈಸೂರು ಸಂಸ್ಥಾನದ ವಿವಿಧ ಹಂತದ ವಸಾಹತುಶಾಹಿಗಳ ಆಳ್ವಿಕೆಯ ಮಜಲುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ‘ವಸಾಹತುಶಾಹಿಗಳ ಕೂಸು’ ಎಂದೆನ್ನಿಸಿಕೊಂಡಿರುವ ಮೈಸೂರು ಸಂಸ್ಥಾನ ೧೮೮೧ರ ನಂತರದ ಪ್ರಗತಿಯ ಕುರಿತು ದೊರಕುವ ದಾಖಲೆಗಳನ್ನು ಚರ್ಚೆಗೆ ಎಡೆಮಾಡಲಾಗಿದೆ. ಇತಿಹಾಸದ ಪೂರ್ವಗ್ರಹಗಳನ್ನು ಬದಲಾಯಿಸಲು ಈ ಪ್ರಯತ್ನ ಶಕ್ತವಾಗುತ್ತದೆಂದುಕೊಂಡರೆ ತಪ್ಪಾಗದು. ಜೊತೆಗೆ ವಸಾಹತುಶಾಹಿಗಳ ಆಳ್ವಿಕೆ ಮತ್ತು ರಾಜತ್ವದ ಬಗ್ಗೆ ಸಾಮಾನ್ಯವಾಗಿ ಇರುವ ಇತಿಹಾಸದ ಪೂರ್ವಾಗ್ರಹಗಳನ್ನು ಬದಲಾಯಿಸುವ ಹಂತದಲ್ಲಿ ರಚಿಸಲಾಗಿದೆ.

ನನ್ನ ಎಲ್ಲಾ ಕೆಲಸಕಾರ್ಯಗಳಿಗೆ ಮೆಚ್ಚುಗೆ ಮಾತನಾಡಿರುವ ಮಾನ್ಯ ಕುಲಪತಿಗಳಾದ ಡಾ. ಎ. ಮರಿಗೆಪ್ಪ ಅವರಿಗೆ, ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ, ಸಹೋದ್ಯೋಗಿ ಮಿತ್ರರಾದ ಡಾ. ಟಿ.ಪಿ. ವಿಜಯ್, ಡಾ. ಸಿ.ಆರ್. ಗೋವಿಂದರಾಜು, ಡಾ. ಕೆ. ಮೋಹನ್‌ಕೃಷ್ಣ ರೈ, ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ ಕೃತಜ್ಞತೆಗಳು.

ಈ ಕೃತಿಯನ್ನು ನನ್ನ ತಾಯಿಯವರಾದ ಮಾತೃಶ್ರೀ ಮಲ್ಲಾಜಮ್ಮ ಅವರಿಗೆ ಅರ್ಪಿಸುತ್ತೇನೆ. ಬಾಳಸಂಗಾತಿ ಡಾ. ಬಿ.ವಿ. ನಾಗವೇಣಿ, ಮಕ್ಕಳಾದ ಸ್ಫೂರ್ತಿ. ಸಿ. ಸೋಸಲೆ, ತಾನ್ಯ ಸಿ. ಸೋಸಲೆ ಅವರಿಗೆ ಪ್ರೀತಿಯ ನೆನಕೆಗಳು.

ಕೃತಿ ಪ್ರಕಟಣೆಗೆ ಸಹಕರಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ್ ಕುಂಟಾರ್, ಸಹಾಯಕ ನಿರ್ದೇಶಕರಾದ ಶ್ರೀ ಎಚ್.ಬಿ. ರವೀಂದ್ರ, ಶ್ರೀ ಬಿ. ಸುಜ್ಞಾನಮೂರ್ತಿ, ಡಾ. ಮೋಹನ್ ಎಸ್., ಮುಖಪುಟ ರಚಿಸಿದ ಶ್ರೀ ಕೆ.ಕೆ. ಮಕಾಳಿ ಹಾಗೂ ಅಕ್ಷರ ಸಂಯೋಜಿಸಿದ ಫಾಂಟ್‌ಲೈನ್ ಗ್ರಾಫಿಕ್ಸ್‌ನ ಶ್ರೀ ವೀರೇಶ್. ಪುಟವಿನ್ಯಾಸಗೊಳಿಸಿದ ವಿದ್ಯಾರಣ್ಯ ಗಣಕ ಕೇಂದ್ರದ ಶ್ರೀ ಶ್ರೀನಿವಾಸ ಕೆ. ಕಲಾಲ್ ಅವರಿಗೆ ಆಭಾರಿಯಾಗಿರುತ್ತೇನೆ.

ಡಾ. ಎನ್. ಚಿನ್ನಸ್ವಾಮಿ ಸೋಸಲೆ