ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ಜಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ ಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನ ಸರ್ವ ಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ. ನಾಡಿನ ಕೋಟಿಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು. ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡ ಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾ ಪಥವನ್ನು ಕ್ರಮಿಸುವುದು ನಮ್ಮ ವಿಶ್ವ ವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಸೇಷ ಹೋಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ಜಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಅಧಿಕಾರದ ಎಲ್ಲಾ ಹಂತಗಳನ್ನು ವ್ಯವಸ್ಥೆಗಳನ್ನು ಒಬ್ಬನೇ ವ್ಯಕ್ತಿ ಅಥವಾ ಒಂದೇ ಸಂಸ್ಥೆ ಸಮಗ್ರವಾಗಿ ತನ್ನ ಹಿಡಿತದಲ್ಲಿ ಇಟ್ಟುಕೊಂಡು ನಿಯಂತ್ರಿಸುವುದು ಕೇಂದ್ರೀಕೃತ ವ್ಯವಸ್ಥೆ. ಈ ಕೇಂದ್ರೀಕೃತ ಅಧಿಕಾರವನ್ನು ಅಥವಾ ಕಾರ್ಯಭಾರವನ್ನು ಬೇರೆ ಬೇರೆ ಶ್ರೇಣಿಗಳಲ್ಲಿ, ಹಂತಗಳಲ್ಲಿ, ವ್ಯಕ್ತಿಗಳಲ್ಲಿ ಹಂಚಿ ಆ ಮಾಧ್ಯಮಗಳಲ್ಲಿಯೂ ಸ್ವತಂತ್ರವಾಗಿ, ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ವಿಕೇಂದ್ರೀಕರಣ ವ್ಯವಸ್ಥೆ. ಕೇಂದ್ರೀಕರಣವು ಸಾಮ್ರಾಜ್ಯಶಾಹಿ ವ್ಯವಸ್ಥೆಯ ಪ್ರಮುಖ ನೆಲೆಯಾದರೆ ವಿಕೇಂದ್ರೀಕರಣವು ಪ್ರಜಾಪ್ರಭುತ್ವ ವ್ಯವಸ್ಥೆಯ ಗುಣಾತ್ಮಕ ಕಾರ್ಯ ನಿರ್ವಹಣಾ ವಿಧಾನ. ಕೇಂದ್ರೀಕರಣ ವ್ಯವಸ್ಥೆಯಲ್ಲಿ ಉಂಟಾಗುವ ಒಳಿತು ಕೆಡಕುಗಳಿಗೆ ಎಲ್ಲ ಅಧಿಕಾರವನ್ನು ತನ್ನಲ್ಲಿ ಕೇಂದ್ರೀಕರಿಸಿಕೊಂಡ ವ್ಯಕ್ತಿ ಅಥವಾ ವ್ಯವಸ್ಥೆ ಕಾರಣವಾದರೆ ವಿಕೇಂದ್ರೀಕರಣ ವ್ಯವಸ್ಥೆ ಸಮಗ್ರ ಸ್ವರೂಪದ ಅರಿವು, ಅಧ್ಯಯನ, ಕಾರ್ಯತಂತ್ರ ಯೋಜನೆ, ಸಮಸ್ತ ಕಲ್ಯಾಣ ದೃಷ್ಟಿ, ನಿಕಟ ಮತ್ತು ಸೂಕ್ಷ್ಮ ಪರಿಶೀಲನೆ ಹಾಗೂ ಅವುಗಳ ಮೂಲಕ ಗರಿಷ್ಟ ಪ್ರಮಾಣದಲ್ಲಿ ಜನ ಸಮುದಾದ ಒಳಿತನ್ನು ಸಾಧಿಸಿವ ಬಹುಮುಖ ವ್ಯವಸ್ಥೆ. ಸ್ವತಂತ್ರ ಪೂರ್ವದಲ್ಲಿ ಭಾರತದಲ್ಲಿ ತೃಣಮೂಲವಾಗಿದ್ದ ರಾಜಶಾಹಿ ಅಥವಾ ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ರಚನೆಗೊಂಡ ಅಧಿಕಾರ ಕೇಂದ್ರೀಕರಣ ಪ್ರಕ್ರಿಯೆ ಮುಖ್ಯವಾಗಿದ್ದರೆ, ಸ್ವಾತಂತ್ರ್ಯೋತ್ತರ ಭಾರತ ರಾಜ್ಯಗಳಿಗೆ, ರಾಜ್ಯಗಳಿಂದ ಸೂಕ್ತ ಕಾರ್ಯ ನಿರ್ವಹಣೆಗೆ ಜನಸತ್ತಾತ್ಮಕ ವಿಧಾನದಲ್ಲಿ ರೂಪಿಸಲಾದ ಅಧಿಕಾರ ಮತ್ತು ಸೇವಾ ಕಾರ್ಯ ವಿಕೇಂದ್ರೀಕರಣ ಮೂಲವಾಗಿದೆ.

ಸದುದ್ದೇಶದ ಸಮಷ್ಟಿ ದಕ್ಷತೆಯಲ್ಲಿ ಹಾಗೂ ಕಾರ್ಯ ವಿಧಾನದಲ್ಲಿ ನಂಬಿಕೆಯುಳ್ಳ ಜನಕಲ್ಯಾಣ ಕಾರ್ಯಗಳ ವಿನಿಯೋಜನೆ ಮುಖ್ಯವಾಗಿರುತ್ತದೆ. ಪ್ರಜಾಪ್ರಭುತ್ವ ರಹಿತವಾದ ಕೇಂದ್ರೀಯ ವ್ಯವಸ್ಥೆಯಲ್ಲಿಯೂ ಉತ್ತಮ ಕಾರ್ಯನಿರ್ವಹಣೆ ಸಾಧ್ಯವಾಗಬಹುದಾದರೂ ಅದು ವ್ಯಕ್ತಿಯೊಬ್ಬನ ಅಥವಾ ಸಂಸ್ಥೆಯೊಂದರ ಇಷ್ಟಾನಿಷ್ಟಗಳನ್ನು ಅವಲಂಬಿಸಿರುತ್ತದೆ. ಆದರೆ ಪ್ರಜಾಪ್ರಭುತ್ವ ಸರ್ಕಾರದ ವಿಕೇಂದ್ರೀಕರಣ ಯೋಜನೆಯಲ್ಲಿ ಎಷ್ಟೇ ಲೋಪದೋಷಗಳಿದ್ದರೂ ಅವು ಜನಮುಖಿ ಆಭ್ಯುದಯಾಕಾಂಕ್ಷೆಯನ್ನು ಹೊಂದಿರುತ್ತದೆ ಮತ್ತು ಹೊಂದಿರಬಹುದಾಗಿದೆ ಎಂಬುದು ಪ್ರಧಾನ ಕಾಳಜಿಯಾಗಿರುತ್ತದೆ. ಮಾತ್ರವಲ್ಲ ಅಂತಿಮವಾಗಿ ಒಳಿತಾಗಲೀ ಅಥವಾ ಕೆಡಕಾಗಲೀ, ಅದಕ್ಕೆ ತಾವೆಲ್ಲ ಜವಾಬ್ದಾರರು ಎನ್ನುವ ವೈಯಕ್ತಿಕ ಭಾಗಿದಾರಿಕೆ ಈ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಅತ್ಯಂತ ಪ್ರಧಾನವಾದುದಾಗಿದೆ. ಎಲ್ಲ ಸಮಸ್ಯೆಗಳಿಗೂ ವಿಕೇಂದ್ರೀಕರಣವೇ ಪೂರ್ಣ ಪ್ರಮಾಣದ ಮದ್ದಲ್ಲವಾದರೂ ಸುಶಿಕ್ಷಿತ ಸದುದ್ದೇಶಪೂರ್ಣ ಹಾಗೂ ಸೇವಾಕಾಂಕ್ಷೆಗಳ ನಿರ್ವಹಣೆ ಇದ್ದಲ್ಲಿ ಇದು ಅತ್ಯುತ್ತಮ ವ್ಯವಸ್ಥೆ ಎಂಬುದು ವಿವಾದಿತವಲ್ಲ. ವಿಕೇಂದ್ರೀಕರಣದಿಂದಾಗಿ ಬೇರೆ ಬೇರೆ ಹಂತಗಳಲ್ಲಿ ನಾಯಕತ್ವವೂ, ಸಮರ್ಥ ಆಡಳಿತ ತಂತ್ರವೂ, ವಿಷಯ ತಜ್ಞೆತೆಯೂ, ಸ್ಥಳೀಯ ವಲಯ ನಿಷ್ಠೆಯೂ, ಸ್ವತಂತ್ರ ಚಿಂತನಶೀಲತೆಯೂ ಬೆಳೆಯುವುದಕ್ಕೆ ವಿಪುಲವಾದ ಅವಕಾಶಗಳಿವೆ. ಪ್ರತಿಯೊಬ್ಬರ ಕಾರ್ಯಶೀಲನಾ ಬುದ್ಧಿಮತ್ತೆ, ಕಾರ್ಯನುಷ್ಠಾನಶೀಲತೆಗಳ ಪರೀಕ್ಷೆಯೂ ನಿರಂತರವಾಗಿ ನಡೆಯುವ ಕಾರಣದಿಂದಾಗಿ ಈ ವ್ಯವಸ್ಥೆಯಲ್ಲಿ ಪಾಲ್ಗೋಳ್ಳುವ ವ್ಯಕ್ತಿಗಳು ಹೆಚ್ಚು ಎಚ್ಚರ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾದ ಆಗತ್ಯತೆ ಹೆಚ್ಚಾಗುತ್ತದೆ. ಇದು ವ್ಯಕ್ತಿಗಳ ವಿಕಸನಕ್ಕೆ ಕಾರ್ಯಪೂರ್ಣತೆಗೆ ಒಟ್ಟಾರೆಯಾಗಿ ಸಮಗ್ರ ಅಭಿವೃದ್ಧಿಗೆ ಇಂಬು ಕೊಡುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅತ್ಯಂತ ಎಚ್ಚರಿಕೆಯಿಂದ, ಪೂರ್ವ ಸಿದ್ಧತೆಯಿಂದ ಸಮಷ್ಟಿ ಚಿಂತನೆಯಿಂದ ಈ ವಿಕೇಂದ್ರೀಕರಣ ವ್ಯವಸ್ಥೆ ನಮ್ಮ ಅಸಮರ್ಪಕ ಆಡಳಿತಕ್ಕೆ ಶಕ್ತ ಉತ್ತರವಾಗುವ ಎಲ್ಲ ಸಾಧ್ಯತೆಗಳಿಗೆ. ಇಂತಹ ವಿಕೇಂದ್ರೀಕರಣ ವ್ಯವಸ್ಥೆಯಿಂದ ನಮ್ಮ ಜಿಲ್ಲಾ ಪಂಚಾಯತ್‌ಗಳಲ್ಲಿ, ಪಟ್ಟಣ ಪಂಚಾಯತ್‌ಗಳಲ್ಲಿ, ಗ್ರಾಮಪಂಚಾಯತ್‌ಗಳಲ್ಲಿ ನಿಧಾನವಾಗಿಯೂದರೂ ಆಗುತ್ತಿರುವ ಪರಿವರ್ತನೆಗಳನ್ನು ಗಮನಿಸಬಹುದಾಗಿದೆ.

ಅವಿದ್ಯಾವಂತರೆಂದು ಅಶಿಕ್ಷಿತರೆಂದು ಆಡಳಿತ ಸಾಮ್ಯಥ್ಯ, ರಾಜಕೀಯ ಪ್ರಜ್ಞೆಯಿಲ್ಲದ ಮುಗ್ಧರೆಂದು ಭಾವಿಸಲಾಗಿದ್ದ, ಆ ಕಾರಣದಿಂದಲೇ ಆಡಳಿತದ ಮುಖ್ಯವಾಹಿನಿಯಿಂದ ದೂರವಾಗಿ ಉಳಿದು ರಾಮನಿಗೆ ರಾಜ್ಯ ಬಂದರೆ ರಾಗಿ ಬೀಸಿವುದು ತಪ್ಪಿತೇ ಎಂಬ ನಿರ್ಲಿಪ್ತ ಮನೋಧರ್ಮದಲ್ಲಿ ಪ್ರತಿಕ್ರಿಯೆರಹಿತರಾಗಿ ಬದುಕುತ್ತಿದ್ದ ಜಿಲ್ಲಾ ಮಟ್ಟದ, ಗ್ರಾಮ ಮಟ್ಟದ ಪುರುಷರು ಮತ್ತು ಸ್ತ್ರೀಯರು ಅನಿರೀಕ್ಷಿತವಾಗಿ ಮತ್ತು ಅಮಾನತ್ತಾಗಿ ಈ ವಿಕೇಂದ್ರೀಕರಣದಿಂದ ತಾವು ಹೊರಬೇಕಾಗಿ ಬಂದಿರುವ ಜವಾಬ್ದಾರಿಗಳ ಬಗ್ಗೆ ತಂತ್ರಕ್ಷೇತ್ರಗಳಲ್ಲಿ ತತ್ತರಿಸಿ ತಬ್ಬಿಬ್ಬಾದರೂ ಅನಂತರದ ವರ್ಷಗಳಲ್ಲಿ ಈ ಮುಗ್ಧತೆ, ಅಜ್ಞೆತೆ ಹಾಗೂ ಅಸಮರ್ಥಗಳು ಮರೆಯಾಗುತ್ತಾ ತಮ್ಮ ಕ್ಷೇತ್ರದ ಅಭಿವೃದ್ಧಿಗಳ ಬಗ್ಗೆ ಹೆಚ್ಚಿನ ಅರಿವನ್ನು ಪಡೆಯುತ್ತಿರುವುದು ವಿಕೇಂದ್ರೀಕರಣದ ಹಾಗೂ ಪ್ರಜಾಸತ್ತೆಯ ಉತ್ತಮ ಫಲಿತ ಗೋಚರಿಸುತ್ತದೆ, ಮಾತ್ರವಲ್ಲದೆ ತಮ್ಮ ವೈಫಲ್ಯಗಳಿಗೆ ತಮ್ಮ ಪರಿಸರದ ಅಭಿವೃದ್ಧಿರಾಹಿತ್ಯಕ್ಕೆ ದೂರದ ಯಾರನ್ನೋ ದೂಷಿಸುತ್ತಾ ಕೈಕಟ್ಟಿ ಕುಳಿತಿದ್ದ ಜನತೆ ತಮ್ಮ ಸುತ್ತಮುತ್ತಣ ಪರಿಚಿತರ ಪ್ರಶ್ನೆಗಳಿಗೆ ತಾವೇ ಉತ್ತರ ಹೇಳಬೇಕಾದ ಅನಿವಾರ್ಯತೆ ಪ್ರಾಪ್ತವಾಗಿರುವುದರಿಂದ ಅವರ ಜವಾಬ್ದಾರಿ ಮಾತ್ರವಲ್ಲದೆ ಕಾರ್ಯಕ್ಷಮತೆಯು ಹೆಚ್ಚುತ್ತದೆ. ಆದ್ದರಿಂದ ಆರಂಬದ ಹಂತಗಳಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ತಂದೊಡ್ಡಬಹುದಾದ ಕಾರ್ಯ ಕುಶಲತೆಯ ಅಭಾವದ ಸ್ವಸಮರ್ಥನದ ಅರಿವಿನ ಕೊರತೆಯ ಅಡೆತಡೆಗಳು ಕ್ರಮೇಣ ನಿವಾರಣೆಯಾಗಿ ಅವರು ಎಲ್ಲರೊಡನೆ ಸಮಾನ ಮನೋಧರ್ಮದಿಂದ ಬದುಕುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಆದ್ದರಿಂದ ಎಷ್ಟೇ ಕೊರತೆಗಳಿದ್ದರೂ ವಿಕೇಂದ್ರೀಕರಣ ವ್ಯವಸ್ಥೆ ಇತ್ಯಾತ್ಮಕ ಫಲಗಳನ್ನು ನಿಧಾನವಾಗಿಯಾದರೂ ನೀಡುತ್ತವೆ.

ಮೇಲಿನ ಹಿನ್ನೆಲೆಯಲ್ಲಿ ವಿಕೇಂದ್ರೀಕರಣ ಮತ್ತು ಗ್ರಾಮ ಪಂಚಾಯತ್ ಎಂಬ ಈ ಕಿರು ಹೊತ್ತಿಗೆ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳಿಗೆ ಮತ್ತು ಗ್ರಾಮೀಣ ಜನತೆಗೆ ಇದರ ಅರಿವನ್ನು ಹೆಚ್ಚಿಸುವ ಮಾಹಿತಿಗಳನ್ನು ಒದಗಿಸಬಲ್ಲ ಕೃತಿಯಾಗಿದೆ. ಸಾಕಷ್ಟು ಅಧ್ಯಯನ ಮತ್ತು ಮಾಹಿತಿ ಸಂಗ್ರಹದ ಆಧಾರದ ಮೇಲೆ ರಚಿತವಾಗಿರುವ ಈ ಕೃತಿ ಗ್ರಾಮೀಣ ಸಮಾಜ ಮತ್ತು ಗ್ರಾಮೀಣಾಭಿವೃದ್ಧಿಯ ಬಗೆಗೆ ಉತ್ತಮ ಅರಿವನ್ನು ಉಂಟುಮಾಡಬಲ್ಲದಾಗಿದೆ. ಇದನ್ನು ಪರಿಶ್ರಮ ಪೂರ್ವಕವಾಗಿ ರಚಿಸಿಕೊಟ್ಟಿರುವ ಶ್ರೀ. ಎ. ಶ್ರೀಧರ ಅವರಿಗೆ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತವೆ.

ಡಾ.ಎಚ್. ಜೆ. ಲಕ್ಕಪ್ಪಗೌಡ
ಕುಲಪತಿಗಳು