ಈ ಶತಮಾನದ ಕನ್ನಡ ಸಂಸ್ಕೃತಿಗೆ ಮಲೆನಾಡಿನ ತುಂಗಾತೀರದ ತೀರ್ಥಹಳ್ಳಿ ಪ್ರದೇಶ ನೀಡಿದ ಎರಡು ಮಹಾಪ್ರತಿಭೆಗಳು: ಕುವೆಂಪು ಮತ್ತು ಶಾಂತವೇರಿ ಗೋಪಾಲಗೌಡ. ಪರಿಸರ ಪ್ರೇಮ, ಮಾನವ ಪ್ರೀತಿ ಮತ್ತು ಸಕಲರಿಗೂ ಸಮಬಾಳು ಇರುವಂಥ ವೈಚಾರಿಕ ನೆಲೆಗಟ್ಟಿನ ಮೇಲೆ ಹೊಸ ಸಾಂಸ್ಕೃತಿಕ ಸಮಾಜವನ್ನು ಕಟ್ಟುವ ಹಂಬಲವೇ ಕುವೆಂಪು ಕೃತಿಗಳ ಮೂಲ ಆಶಯ. ಈ ಆಶಯಗಳನ್ನೇ, ಸಮಾಜವಾದಿ ರಾಜಕಾರಣದ ಮೂಲಕ ಈ ನೆಲದಲ್ಲಿ ಅನುಷ್ಠಾನಗೊಳಿಸಲು ಕ್ರಿಯಾಶೀಲರಾದವರು ಶಾಂತವೇರಿ ಗೋಪಾಲಗೌಡರು. ಕವಿಯೊಳಗೆ ಸದಾ ಕುದಿಯುತ್ತಿರುವ ಕ್ರಾಂತಿಕಾರಿಯೊಬ್ಬನಿರುವಂತೆ, ಕ್ರಾಂತಿಕಾರಿಯೊಳಗೆ ಸಮಾಜದ ಹಿತವನ್ನೇ ಧ್ಯಾನಿಸುವ ಕವಿಯೂ ಇರುತ್ತಾನೆ. ಕುವೆಂಪು ಮತ್ತು ಗೋಪಾಲಗೌಡರು ಪ್ರಕೃತಿ ಮತ್ತು ಮಾನವಜೀವಿಗಳ ಬಗ್ಗೆ ತುಂಬು ವ್ಯಾಮೋಹವನ್ನು ಹೊಂದಿದ್ದ ಒಂದೇ ಆತ್ಮದ ಎರಡು ದೇಹಗಳು. ಎಲ್ಲ ಬಗೆಯ ಮೌಢ್ಯ ಮತ್ತು ಸಂಕೋಲೆಗಳ ಕಡುವಿರೋಧಿಯಾಗಿದ್ದ ಕುವೆಂಪು ತಮ್ಮ ಸೃಜನಶೀಲ ಕೃತಿಗಳಲ್ಲಿ ಏನನ್ನು ಸದಾಕಾಲ ಧ್ಯಾನಿಸುತ್ತಾ ಬಂದರೋ, ಅದನ್ನೇ ಶಾಂತವೇರಿಯವರು ರಾಜಕಾರಣದ ಮೂಲಕ ಜಾರಿಗೆ ತರಲು ಹಂಬಲಿಸಿದರು. ಹೀಗೆ ಕುವೆಂಪುರವರ ಸೃಜನಶೀಲ ಮನಸ್ಸಿನಲ್ಲಿ ಗೋಪಾಲಗೌಡರು, ಗೋಪಾಲಗೌಡರ ಹೋರಾಟದ ರಾಜಕಾರಣದಲ್ಲಿ ಕುವೆಂಪುರವರು ಪರಸ್ಪರ ಒಬ್ಬರೊಳಗೊಬ್ಬರು ಬೆರೆತು ಈ ನಾಡನ್ನು ಸಮೃದ್ಧವಾಗಿ ಕಟ್ಟುವ ದಿನಕ್ಕಿನಲ್ಲಿ ತಮ್ಮ ಪಯಣದ ಉದ್ದಕ್ಕೂ ತಮ್ಮನ್ನು ತಾವೇ ಮುಡಿಪು ಕಟ್ಟಿಕೊಂಡು ದುಡಿದವರು.

ಗಾಂಧಿ ಮತ್ತು ಲೋಹಿಯಾರವರ ಹೃದಯವಂತಿಕೆ ಮತ್ತು ಸಿದ್ಧಾಂತಗಳನ್ನು ಅಪಾರ ಪ್ರೇಮದಿಂದ ತನ್ನೊಳಗೆ ಎಳೆತನದಿಂದಲೇ ತುಂಬಿಕೊಂಡಿದ್ದ ಶಾಂತವೇರಿಯವರು ಸಮಾಜದ ಸುಡುವಾಸ್ತವಗಳನ್ನು ಈ ನೆಲದ ನುಡಿಗಟ್ಟುಗಳ ಮೂಲಕ ತಮ್ಮದೇ ವಿಶಿಷ್ಟವಾದ ಶೈಲಿಯಲ್ಲಿ ಜನಸಮುದಾಯಕ್ಕೆ ವಿವರಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಇವರ ಎಲ್ಲ ಸಭೆ – ಸಮಾರಂಭ, ಚುನಾವಣಾ ಭಾಷಣ, ಆತ್ಮೀಯ ಮಾತುಕತೆ ಹಾಗೂ ಇವರ ಇಡೀ ನಡವಳಿಕೆಯೇ ವೈಚಾರಿಕ ಸಂಘರ್ಷಕ್ಕೆ ಜನತೆಯನ್ನು ಸಜ್ಜುಗೊಳಿಸುವ ಅಪೂರ್ವ ಸಾಧನಗಳಾಗಿದ್ದವು.

ಗೇಣಿದಾರ-ಬಡಕುಟುಂಬದಿಂದ ಬಂದ ಗೋಪಾಲಗೌಡರು ಉದ್ದಕ್ಕೂ ಆಶ್ಚರ್ಯಕರ ರೀತಿಯಲ್ಲಿ ಸ್ವಾಭಿಮಾನಿಯಾಗಿ ಬೆಳೆದು ನಿಂತವರು. ೧೯೪೨ರಲ್ಲಿ ‘ಕ್ವಿಟ್ ಇಂಡಿಯಾ ಚಳವಳಿ’ ಆರಂಭವಾದಾಗ ಇವರಿನ್ನೂ ಪ್ರೌಢಶಾಲಾ ವಿದ್ಯಾರ್ಥಿ, ಗಾಂಧೀಜಿಯವರ ಪ್ರಭಾವದಿಂದಾಗಿ ಈ ರಾಷ್ಟ್ರೀಯ ಚಳವಳಿಯಲ್ಲಿ ಧುಮುಕುವುದರ ಮೂಲಕವೇ ಶಾಂತವೇರಿಯವರ ಹೋರಾಟದ ಬದುಕಿನ ಉದ್ಘಾಟನೆಯಾಯಿತು. ವಿಚಾರಶೀಲತೆಯ ಹಾದಿಯಲ್ಲಿದ್ದೂ ತಾಕಲಾಟದಲ್ಲಿದ್ದ ಅವರ ಗುರುಗಳ ಒಳಮನಸ್ಸನ್ನು ಗಟ್ಟಿಗೊಳಿಸುವ ತದೇಕಚಿತ್ತ ಹದಿಹರೆಯದ ಈ ಚೇತನಕ್ಕೆ ಸಾಧ್ಯವಾಗಿತ್ತು. ಗೇಣಿರೈತರ ಪರವಾಗಿ ಹೋರಾಟಗಳನ್ನ ರೂಪಿಸಿ ಅವರಲ್ಲಿ ಜಾಗೃತಿ ತಂದರು: ಸಾಗರ-ಸೊರಬ-ತೀರ್ಥಹಳ್ಳಿ-ಹೊಸನಗರ ಭಾಗಗಳಲ್ಲಿ ಭೂಮಾಲೀಕರು ರೈತರಿಂದ ಗೇಣಿಬತ್ತವನ್ನು ಮನಸೋ ಇಚ್ಚೆ ಪಡೆಯುತ್ತಿದ್ದರು. ಶಾಂತವೇರಿಯವರು ಈ ಒಕ್ಕಲುಗಳಲ್ಲಿ ಉಂಟುಮಾಡಿದ ಜಾಗೃತಿಯ ಫಲವಾಗಿ ಅವರೆಲ್ಲ ಭೂಮಾಲೀಕರ ಸ್ವೇಚ್ಛಾಚಾರವನ್ನು ಪ್ರಶ್ನಿಸತೊಡಗಿದರು. ಕೆಲವು ಗೇಣಿರೈತರು ನಿಗದಿಯಾಗಿರುವುದಕ್ಕಿಂತ ಒಂದು ಕಾಳೂ ಹೆಚ್ಚಿಗೆ ಕೊಡುವುದಿಲ್ಲವೆಂದು ಹಠತೊಟ್ಟು, ಮುಂದೆ ಅದರಿಂದ ಉಟಾಗಬಹುದಾಗಿದ್ದ ಎಲ್ಲ ಬಗೆಯ ಪರಿಣಾಮಗಳನ್ನು ಎದುರಿಸಲು ಸಿದ್ಧರಾದರು. ಮಲೆನಾಡಿನ ಒಕ್ಕಲುಗಳಲ್ಲ ತಂತಮ್ಮ ಒಡೆಯರ ವಿರುದ್ಧ ಉಂಟಾದ ಈ ಎಚ್ಚರವೇ ಮುಂದೆ ಕಾಗೋಡು ರೈತಸತ್ಯಾಗ್ರಹದಲ್ಲಿ ಬೃಹತ್ ಆಗಿ ಸ್ಫೋಟಿಸಿತು. ಗೋಪಾಲಗೌಡರು, ಅಣ್ಮಯ್ಯ ಹಾಗೂ ಸದಾಶಿವರಾಯರ ಮುಂದಾಳ್ತನದಲ್ಲಿ ನಡೆದ ಸಮಾಜವಾದಿ ಪಕ್ಷದ ಈ ಪ್ರಮುಖ ಹೋರಾಟದಿಂದಾಗಿ ಮಹತ್ವದ ಬದಲಾವಣೆ ಉಂಟಾಯಿತು. ಸಮಾಜವಾದಿ ಪಕ್ಷವು ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಭದ್ರವಾದ ನೆಲೆಯನ್ನು ಕಂಡುಕೊಂಡಿತು. ಸಾಮಾಜಿಕ ಬದಲಾವಣೆ ತರಲು ಈ ಹೋರಾಟಗಳು ಒತ್ತಾಯಿಸುತ್ತಿದ್ದವು. ಆಗಿನ ಸಮಾಜವಾದಿ ಪಕ್ಷವು ರೂಪಿಸುತ್ತಿದ್ದ ಜನತೆಯ ಪರವಾದ ಹೋರಾಟಗಳು ಸಣ್ಣ ಪ್ರಮಾಣದಲ್ಲಿದ್ದರೂ ಅವುಗಳ ಸೈದ್ಧಾಂತಿಕ ನಿಲುವು ಖಚಿತವಾಗಿರುತ್ತಿತ್ತು. ಸಮಗ್ರ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು ತಳಮಟ್ಟದಿಂದ ಸಹಜವಾಗಿ ಕುಡಿಯೊಡೆಯಬೇಕು ಎನ್ನುವ ಬಗ್ಗೆ ದೃಢವಾದ ನಿಲುವುಗಳನ್ನು ಹೊಂದಿದ್ದವು. ಸಮಾಜವಾದಿ ಪಕ್ಷ, ಪ್ರಧಾನವಾಗಿ ಭೂಹೀನ ರೈತರನ್ನು ಸಂಘಟಿಸಿತು; ಅವರಲ್ಲಿ ಎಚ್ಚರ ಮೂಡಿಸಿ, ಭೂಮಿಗೆ ಸಂಬಂಧಪಟ್ಟ ಚಳವಳಿಗಳನ್ನು ರೂಪಿಸುವ ಕಾರ್ಯಕ್ಕೆ ಹೆಚ್ಚು ಗಮನ ನೀಡಿತು.

ಶಾಂತವೇರಿಯವರಿಗೆ ಸಮಾಜವಾದವು ಕೇವಲ ಬೌದ್ಧಿಕ ಗ್ರಹಿಕೆಯಾಗಿರದೆ ಅವರ ಜೀವನ ವಿಧಾನವೇ ಆಗಿತ್ತು. ಅದರಂತೆ ಅವರು ನಿತ್ಯಜೀವನದಲ್ಲಿ ಅಕ್ಷರಶಃ ಬದುಕಿತೋರಿದರು. ಗೋಪಾಲಗೌಡರ ಸರಳ ಜೀವನದ ಬಗೆಗಿನ ವಿವರಗಳ ಸೂಕ್ಷ್ಮಗಳನ್ನು ಅವರ ಎಲ್ಲ ಒಡನಾಡಿಗಳು, ಹೃದಯತುಂಬಿ ತೇವದ ಕಣ್ಣುಗಳಲ್ಲಿ ಈಗಲೂ ನೆನೆಯುತ್ತಾರೆ. ನಮ್ಮ ಕ್ಷೇತ್ರಕಾರ್ಯದ ದಿನಗಳಲ್ಲಿ ದೊರೆತ ಹೆಚ್ಚಿನ ಮಾಹಿತಿಗಳಲ್ಲಿ ಎಲ್ಲೆಡೆ ಈ ಅಂಶಗಳೇ ಮೊದಲು ಪ್ರಸ್ತಾಪವಾಗುತ್ತಿದ್ದವು. ಹಾಲುಂಟು, ಹೊದೆಯಲುಂಟು ಎನ್ನುವಷ್ಟ ಬಡತನದಲ್ಲಿ ಮುಳುಗಿರುವ ದಲಿತ ಮಹಿಳೆ ಮಿಣಕಮ್ಮ, ಕಾಳಮ್ಮನಗುಡಿ ವೆಂಕಟರಮಣ ಮುಂತಾದವರು “ಅವರೂ ನಮ್ಮಂತೆಯೇ ಬಡವರು. ನಾವೂ ಅವರೂ ಒಂದೇ’’ ಎಂದು ಅಗಲಿದ ತಮ್ಮ ಈ ಬಂಧುವನ್ನು ನೆನಪಿಸಿಕೊಳ್ಳುತ್ತಾರೆ. ಶಾಂತವೇರಿಯವರು ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನಗಳೆರಡರಲ್ಲೂ ನಡೆ-ನುಡಿಗಳಲ್ಲಿ ಒಂದಾಗಿ ಬಾಳಿದವರು; ಅವರಲ್ಲಿದ್ದ ಸರಳತೆ, ಸಜ್ಜನಿಕೆ, ಇನ್ನಿಲ್ಲದಂತಹ ನೈತಿಕ ಧೈರ್ಯ, ಅಸಾಧಾರಣ ನಿರ್ದಾಕ್ಷಿಣ್ಯ ಪ್ರವೃತ್ತಿ, ಅಪಾರವಾದ ಜೀವನಪ್ರೀತಿ, ಅಪರೂಪದ ಸದಭಿರುಚಿ ಮತ್ತು ಸೌಂದರ್ಯಪ್ರಜ್ಞೆಯ ಬಗೆಗೆ ಚೆನ್ನಾಗಿ ಅರಿತುಕೊಂಡಿದ್ದ ಅವರ ವಿರೋಧಿಗಳು ಹಾಗೂ ಅನೇಕ ವಿಷಯಗಳಲ್ಲಿ ಶಾಂತವೇರಿಯವರೊಂದಿಗೆ ಭಿನ್ನಮತ ಹೊಂದಿದ್ದ ಗೆಳೆಯರು ಸಹ ತುಂಬು ಗೌರವದಿಂದ ಅವರನ್ನು ಕಾಣುತ್ತಿದ್ದರು.

ಒಟ್ಟು ಹದಿನೈದು ವರ್ಷಗಳ ಕಾಲ ಶಾಸಕರಾಗಿದ್ದು, ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಶಾಂತವೇರಿಯವರು, ತಮ್ಮ ಬದುಕಿನುದ್ದಕ್ಕೂ ಬರಿಗೈ ಫಕೀರನಾಗಿಯೇ ನಿಂತು ಚುನಾವಣೆಗಳಲ್ಲಿ ಶ್ರೀಮಂತ ಅಭ್ಯರ್ಥಿಗಳ ವಿರುದ್ಧ ಜನಬೆಂಬಲದಿಂದಾಗಿ ಗೆದ್ದು ಬಂದವರು. ಅವರು ಎದುರಿಸುತ್ತಿದ್ದ ಚುನಾವಣೆಗಳು, ಅವುಗಳ ಹಣಕಾಸು ವ್ಯವಸ್ಥೆ, ಪ್ರಚಾರ ಶೈಲಿಗಳೆಲ್ಲ ಈಗಲೂ ಮಲೆನಾಡಿನಲ್ಲಿ ರಂಜಕ ದಂತಕಥೆಗಳ ರೂಪವನ್ನು ಪಡೆದುಕೊಂಡು ಮನೆಮಾತಾಗಿವೆ. ಠೇವಣಿ ಸಲ್ಲಿಸಲೂ ಬಿಡಿಗಾಸಿಲ್ಲದ ಗೋಪಾಲಗೌಡರಿಗೆ ಅವರ ಕ್ಷೇತ್ರದ ಜನತೆಯೇ ನಿಧಿ ಸಂಗ್ರಹಿಸಿ ಚುನಾವಣಾ ಠೇವಣಿಯ ಹಣ ಕಟ್ಟುತ್ತಿದ್ದರು. ಬೆಂಬಲಿಗರು, ವಿಶ್ವಾಸಿಗರು ನೀಡುತ್ತಿದ್ದ ಅಲ್ಪಸ್ವಲ್ಪ ಹಣಕಾಸಿನ ಊರುಗೋಲಿನಿಂದಲೇ ಅವರ ಚುನಾವಣೆಯ ಖರ್ಚನ್ನು ಆತ್ಮೀಯರು ಸರಿದೂಗಿಸುತ್ತಿದ್ದರು. ಮತಗಳಿಕೆಯ ಉದ್ದೇಶದಿಂದ ವಿವಿಧ ಜನವರ್ಗದ ಧಾರ್ಮಿಕ ಭಾವನೆಗಳನ್ನಾಗಲೀ, ಜಾತಿಯನ್ನಾಗಲಿ, ತಮ್ಮ ಭಾಷಣಗಳಲ್ಲಿ ಎಂದೂ ಪ್ರಸ್ತಾಪ ಮಾಡದೆ, ಸೈದ್ಧಾಂತಿಕ ವಿಚಾರಗಳ ಹಿನ್ನೆಲೆಯಿಂದ ನೇರವಾಗಿ ಜನತೆಯ ಬಳಿಗೆ ಹೋಗುತ್ತಿದ್ದ ಇವರನ್ನು ಎಲ್ಲ ಹೃದಯವಂತರೂ ಸ್ವಾಗತಿಸುತ್ತಿದ್ದರು. ಶಾಂತವೇರಿಯವರು ಮೂರು ಚುನಾವಣೆಗಳಲ್ಲಿ ಗೆದ್ದರೂ ಯಾವ ಸನ್ಮಾನ ಸಭೆಗಳಲ್ಲೂ ಭಾಗವಹಿಸಿದವರಲ್ಲ; ಚುನಾವಣೆಯ ನಂತರ ಕ್ಷೇತ್ರದ ವಿವಿಧ ಭಾಗಗಳಲ್ಲಿ ಏರ್ಪಡಿಸುತ್ತಿದ್ದ ಸಬೆಗಲು ಪಕ್ಷದ ಕಾರ್ಯಕರ್ತರನ್ನು ಹಾಗೂ ತನ್ನ ಕ್ಷೇತ್ರದ ಮತದಾರರನ್ನು ಭೇಟಿಮಾಡುವ ಕಾರ್ಯಕ್ರಮಗಲಾಗಿರುತ್ತಿದ್ದವು. ಹೀಗೆ ಜನಪ್ರತಿನಿಧಿಯೊಬ್ಬನ ಹೊಣೆಗಾರಿಕೆಯನ್ನು ಅರ್ಥಪೂರ್ಣವಾಗಿ ನಿರ್ವಹಿಸಿದ ವಿರಳ ರಾಜಕಾರಣಿ ಇವರಾಗಿದ್ದರು.

ನಮ್ಮ ನಡುವಣ ಎಲ್ಲ ಹಿನ್ನೆಲೆಗಳ ಬಡವರು ಮತ್ತು ತಬ್ಬಲಿ ಹಾಗೂ ಅಪಮಾನಿತ ಜಾತಿಗಳಬಗ್ಗೆ ಅಪಾರ ಅಂತಃಕರಣವನ್ನಿಟ್ಟುಕೊಡಿದ್ದ ಶಾಂತವೇರಿಯವರು, ಆ ಜನವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿಸಲು ಸಮಾಜವಾದಿ ಪಕ್ಷದಲ್ಲೇ ಆ ಬಗೆಯ ಪ್ರಕ್ರಿಯೆಗೆ ಚಾಲನೆ ನೀಡಿದರು. ಇದರಿಂದಾಗಿ ಅತ್ಯಂತ ನಿರ್ಲಕ್ಷಕ್ಕೆ ಒಳಗಾದ ಜನಾಂಗದ ಹಿನ್ನೆಲೆಯಿಂದ ಬಂದ ಕಾಗೋಡು ತಿಮ್ಮಪ್ಪ, ಸೋರೆಕೊಪ್ಪ ಬಂಗಾರಪ್ಪ, ಕೋಣಂದೂರು ಲಿಂಗಪ್ಪ ಇವರೆಲ್ಲ ಗೋಪಾಲಗೌಡರು ಮತ್ತು ಅವರ ಗೆಳೆಯರ ಹೋರಾಟಗಳಿಂದಾಗಿ ರಾಜಕೀಯ ಕ್ಷೇತ್ರಕ್ಕೆ ಬಂದವರು. ಸಮಾಜವಾದಿ ಪಕ್ಷದ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬ ಕಾರ್ಯಕರ್ತನಲ್ಲೂ ನಾಯಕತ್ವದ ಗುಣಗಳನ್ನು ರೂಪಿರಿ, ಅವರನ್ನು ಮುನ್ನೆಲೆಗೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿದ್ದ ವಿರಳ ರಾಜಕಾರಣಿ ಗೋಪಾಲಗೌಡರು.

ಕಲೆ, ಸಾಹಿತ್ಯ ಇತಿಹಾಸ, ಸಂಗೀತ ಮುಂತಾದವುಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದು ಅವುಗಳ ಬಗ್ಗೆ ಖಚಿತವಾದಿ ಮಾತಾಡುವ, ಚರ್ಚಿಸುವ ಸಾಮರ್ಥ್ಯವನ್ನು ಗಳಿಸಿದ್ದ ಶಾಂತವೇರಿಯವರು ಉದ್ದಕ್ಕೂ ಲೇಖಕರು ಮತ್ತು ಕಲಾವಿದರ ಹತ್ತಿರದ ಸಂಪರ್ಕದಲ್ಲಿಯೇ ಇದ್ದವರು. ಸಾಮ್ರಾಜ್ಯಶಾಹಿ ಭಾಷೆಯಾದ ಇಂಗ್ಲೀಷ್ ನಮ್ಮ ಆಡಳಿತದ ಹಲವು ಹಂತಗಳಲ್ಲಿ, ಶಿಕ್ಷಣ ಮಾಧ್ಯಮದಲ್ಲಿ ಜನಭಾಷೆಗೆ ಬದಲಾಗಿ ಬಳಕೆಯಾಗುವುದರ ವಿರುದ್ಧ ತೀವ್ರವಾದ ನೈತಿಕ ಸಿಟ್ಟನ್ನು ಅವರು ತೋರುತ್ತಿದ್ದರು. ಕರ್ನಾಟಕದಲ್ಲಿ ಕನ್ನಡವು ಶಿಕ್ಷಣ ಮಾಧ್ಯಮದ ಭಾಷೆಯಾಗಬೇಕು ಎಂದು ಹೇಳುತ್ತಿದ್ದರೂ, ಎಳೆತನದಲ್ಲಿ ಮಕ್ಕಳ ಮಾತೃಭಾಷೆಯಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಬೇಕಾದದ್ದು ಸರ್ಕಾರದ ನೈತಿಕ ಜವಾಬ್ದಾರಿ ಎಂದು ಒತ್ತಾಯಿಸುತ್ತಿದ್ದರು; ನಮ್ಮ ಗಡಿಭಾಗಗಳಲ್ಲಿ ಕಂಡುಬರುವ ಮರಾಠಿ, ತೆಲುಗು, ತಮಿಳು ಭಾಷೆಗಳಿಗೆ ಸಲ್ಲಬೇಕಾದ ನ್ಯಾಯದ ಬಗ್ಗೆ ಶಾಂತವೇರಿಯವರು ಎಚ್ಚರ ವಹಿಸುತ್ತಿದ್ದರು. ಜನತೆ ಮತ್ತು ಜನಭಾಷೆಗಳ ಬಗ್ಗೆ ಅವರಿಗಿದ್ದ ಅಪಾರವಾದ ನಿಷ್ಠೆಯು ಅವರ ಭಾಷಣಗಳಲ್ಲಿ ವಿವರವಾಗಿ ದಾಖಲಾಗಿದೆ.

ಕಾಗೋಡು ರೈತಸತ್ಯಾಗ್ರಹವು ಕರ್ನಾಟಕದಲ್ಲಿ ಸಮಾಜವಾದಿ ಪಕ್ಷಕ್ಕೆ ರಾಜಕೀಯ ಸ್ಥಿರತೆಯನ್ನು ತಂದುಕೊಟ್ಟಿತ್ತಲ್ಲದೆ ಗೋಪಾಲಗೌಡರಲ್ಲಿ ಸಹಜ ನಾಯಕತ್ವದ ಪ್ರಬಾವಳಿಯನ್ನೂ ರೂಪಿಸಿತು. ಕಾಗೋಡು ರೈತಸತ್ಯಾಗ್ರಹವನ್ನು ಹುಟ್ಟುಹಾಕಿದ್ದು ಸಾಗರ ತಾಲ್ಲೂಕು ರೈತ ಸಂಘ. ರೈತರು ಮತ್ತು ಭೂಮಾಲೀಕರ ನಡುವೆ ಇದ್ದ ಗೇಣಿ ಬತ್ತದ ಅಳತೆಯ ಕೊಳಗದ ತಕರಾರು ಗೇಣಿರೈತರನ್ನು ಭೂಮಾಲೀಕರ ವಿರುದ್ಧ ಬಂಡೇಳುವಂತೆ ಮಾಡಿತು; ವಾಸ್ತವವಾಗಿ ಭೂಮಾಲೀಕರಿಂದ ಮನುಷ್ಯನ ಘನತೆಗೆ ಆಗುತ್ತಿದ್ದ ಅಪಮಾನದ ವಿರುದ್ಧ ಸ್ಫೋಟಿಸಿದ ಸತ್ಯಾಗ್ರಹ ಇದು.

ಸ್ವಾತಂತ್ರ್ಯ ಚಳವಳಿಯ ಮೂಲಕ ಹೊರಬಂದಿದ್ದ ದೀವರ ಜನಾಂಗದ ಪ್ರಜ್ಞಾವಂತ ಯುವಕ ಗಣಪತಿಯಪ್ಪನವರು, ದೀವರಿಗೆ ವಿದ್ಯಾಭ್ಯಾಸ ನೀಡಿ, ಭೂಮಾಲೀಕರ ನಿರಂತರ ಕ್ರೌರ್ಯದ ವಿರುದ್ಧ ಅವರನ್ನು ಸಂಘಟಿಸಿ ಸತ್ಯಾಗ್ರಹಕ್ಕೆ ಅಣಿಮಾಡಿದರು. ಸಂಪೂರ್ಣವಾಗಿ ಅಹಿಂಸಾತ್ಮಕ ರೀತಿಯಲ್ಲಿ ನಡೆದ ಈ ಸತ್ಯಾಗ್ರಹವು ಭೂಮಾಲೀಕರು ಮತ್ತು ಆಳುವ ಸರ್ಕಾರದ ದಬ್ಬಾಳಿಕೆಗೆ ತುತ್ತಾಗಿ ನಿಲುಗಡೆಯ ಹಂತಕ್ಕೆ ಬಂದಿತ್ತು; ಆಗ ಸಮಾಜವಾದಿ ಪಕ್ಷ ಈ ಚಳವಳಿಯನ್ನು ಆಪ್ತವಾಗಿ ಕೈಗೆತ್ತಿಕೊಂಡು, ರೈತರ ಸತ್ಯಾಗ್ರಹ ಮುಂದುವರೆಯಲು ವೇಗವರ್ಧಕವಾಯಿತು. ಸಮಾಜವಾದಿ ಪಕ್ಷದ ಭಾಗವಹಿಸುವಿಕೆಯೊಂದಿಗೆ ಕಾಗೋಡು ರೈತಸತ್ಯಾಗ್ರಹ ರಾಷ್ಟ್ರದ ಗಮನ ಸೆಳೆಯಿತು. ರಾಷ್ಟ್ರನಾಯಕರಾದ ಡಾ. ರಾಮಮನೋಹರ ಲೋಹಿಯಾ ಅವರೂ ಕಾಗೋಡು ರೈತ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದವರು. ಕಾಗೋಡು ರೈತಸತ್ಯಾಗ್ರಹವನ್ನು ಲೋಹಿಯಾ ಅವರು ಅಂತರರಾಷ್ಟ್ರೀಯ ಸಮಾಜವಾದಿ ಸಮ್ಮೇಳನಗಳಲ್ಲೂ ಪ್ರಸ್ತಾಪಿಸಿದರು. ಇದರಿಂದ ಅವೈಜ್ಞಾನಿಕ ಭೂಒಡೆತನವನ್ನು ಪ್ರಶ್ನಿಸಿದ ಈ ಸತ್ಯಾಗ್ರಹ ಉಳುವವನೇ ನೆಲದೊಡೆಯ ಎನ್ನುವ ತಾತ್ವಿಕ ನಿಲುವಿಗೆ ಈ ಮೂಲಕ ಚಾಲನೆ ನೀಡಿತು. ಕಾಗೋಡು ಸತ್ಯಾಗ್ರಹದ ಬೆನ್ನಲ್ಲೇ ಬಂದ ೧೯೫೨ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಆಧುನಿಕ ವಿದ್ಯೆಯನ್ನು ಪಡೆದುಕೊಂಡ ಎಲ್ಲ ಹಿನ್ನೆಲೆಯ ಯುವಕರು, ರೈತರು ಹಾಗೂ ಕಡುಬಡವರು ಒಟ್ಟಾಗಿ ತಮ್ಮ ಹೆಮ್ಮೆಯ ಪ್ರತಿನಿಧಿಯನ್ನಾಗಿ ವಿಧಾನಸಭೆಗೆ ಶಾಂತವೇರಿಯವರನ್ನು ಸಂತೋಷದಿಂದ ಆಯ್ಕೆಮಾಡಿದರು. ಶಾಸನಸಭೆಯೊಳಗೆ ಮುಂದುವರೆದ ಗೋಪಾಲಗೌಡರ ಸೈದ್ಧಾಂತಿಕ ಹೋರಾಟದ ಸ್ವರೂಪವನ್ನು ಅವರ ಶಾಸನಸಭೆಯ ಭಾಷಣಗಳು ಒಳಗೊಂಡಿವೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಆರಗ ಗ್ರಾಮದ ಪೂರ್ವದಿಕ್ಕಿನ ಅಂಚಿನಲ್ಲಿರುವ ಶಾಂತವೇರಿಯಲ್ಲಿ ೧೯೨೩ರಲ್ಲಿ ಜನಿಸಿದ ಗೋಪಾಲಗೌಡರು ತಮಗೆ ಐವತ್ತು ತುಂಬುವ ಮೊದಲೇ (ತಮ್ಮ ನಲವತ್ತೊಂಬತ್ತನೇ ವಯಸ್ಸಿನಲ್ಲಿ ೧೯೭೨) ತೀರಿಕೊಂಡರು. ನಾವು ಅವರನ್ನು ಕಳೆದುಕೊಂಡು ಇಪ್ಪತೈದು ವರ್ಷಗಳಾಗಿರುವ ಈ ಸಂದರ್ಭದಲ್ಲಿ ಗೋಪಾಲಗೌಡರನ್ನು ಹತ್ತಿರದಿಂದ ಬಲ್ಲವರನ್ನು ಕಂಡು, ಕೇಳಿ, ಸಂಪರ್ಕಿಸಿ ಚರ್ಚಿಸಿದೆವು; ಆಗ ತಿಳಿದುಬಂದ ಅಂಶಗಳು ನಮ್ಮ ಮನಸ್ಸನ್ನು ಅರಳಿಸಿದವು. ಗೋಪಾಲಗೌಡರ ಜೀವಿತದ ಸೂಕ್ಷ್ಮ ವಿವರಗಳನ್ನು ಮಲೆನಾಡಿನ ಜನತೆ ಇಂದಿಗೂ ತನ್ನೊಳಗೆ ಮಮತೆಯಿಂದ ಕಾಯ್ದುಕೊಂಡಿದೆ; ಶಾಂತವೇರಿಯವರು ಸಾಂಸ್ಕೃತಿಕ ನಾಯಕರಾಗಿ ಇಲ್ಲಿ ಈಗಲೂ ಉಳಿದಿದ್ದಾರೆ. ಮಳೆಗಾಳಿಯ ತುಂಬು ಒಡನಾಟದಲ್ಲಿ ಸುತ್ತಾಡಿ ನಡೆಸಿದ ಸುದೀರ್ಘ ಕ್ಷೇತ್ರಕಾರ್ಯದ ಅವಧಿಯಲ್ಲಿ ಇದನ್ನೆಲ್ಲಾ ಕಣ್ಣಾರೆ ಕಂಡ ನಾವು ಅಕ್ಷರಶಃ ಬೆರಗಾದೆವು.

ಗೋಪಾಲಗೌಡರ ಹೋರಾಟಗಳಲ್ಲಿ ಭಾಗವಹಿಸಿ ದುಡಿದ ಕಾರ್ಯಕರ್ತರು, ಗೆಳೆಯರು, ರಾಜಕಾರಣಿಗಳು, ಲೇಖಕರು, ಕಲಾವಿದರು ತಂತಮ್ಮ ಮನಸ್ಸುಗಳಲ್ಲಿ ತುಂಬಿಕೊಂಡ ಶಾಂತವೇರಿಯವರ ವ್ಯಕ್ತಿತ್ವವನ್ನು ತಾವು ಕಂಡಂತೆ ನೆನಪುಗಳ ಮೂಲಕ ಇಲ್ಲಿ ಕಡೆದಿದ್ದಾರೆ. ಹೀಗೆ ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ನಾಡಿನ ಸಾಂಸ್ಕೃತಿಕ ಜೀವವನ್ನು ಆವರಿಸಿಕೊಂಡಿದ್ದ ಗೋಪಾಲಗೌಡರ ವ್ಯಕ್ತಿತ್ವದ ವಿವಿಧ ಮುಖಗಳು ಈ ಸಂಪುಟದಲ್ಲಿ ವಿವರವಾಗಿ ದಾಖಲಾಗಿವೆ.

ಗೋಪಾಲಗೌಡರು ಶಾಸಕರಾಗಿದ್ದ ಅವಧಿಯ ಭಾಷಣಗಳ ಮುಖ್ಯ ಭಾಗಗಳು, ಅವರ ಎರಡು ಲೇಖನಗಳು ಮತ್ತು ೧೯೬೦ನೇ ವರ್ಷದ ದಿನಚರಿಯ ಹಲವಾರು ಪುಟಗಳು ಈ ಗ್ರಂಥದಲ್ಲಿ ಸೇರಿವೆ; ಅವರ ವ್ಯಕ್ತಿತ್ವ ಮತ್ತು ಸಾಧನೆಯ ವಿವರಗಳನ್ನು ಅರ್ಥಮಾಡಿಕೊಳ್ಳುವ ದಿಕ್ಕಿನಲ್ಲಿ ಇವು ಸಹಾಯಕವಾಗಿವೆ. ಇನ್ನೂ ಕೆಲವು ಅವರ ಲೇಖನಗಳು ಮತ್ತು ದಿನಚರಿಯ ಪುಸ್ತಕಗಳಲ್ಲಿ ಅಲ್ಲಲ್ಲಿ ಚದುರಿಹೋಗಿದ್ದು, ನಮ್ಮ ಕ್ಷೇತ್ರಕಾರ್ಯದ ನಿರಂತರ ಸುತ್ತಾಟದಲ್ಲಿಯೂ ಅವು ನಮಗೆ ದೊರೆಯಲಿಲ್ಲ. ೧೯೮೨ರಲ್ಲಿ ‘ಗೋಪಾಲಗೌಡರ ಡೈರಿ, ಪತ್ರಗಳು ಇತ್ಯಾದಿ’ ಕೃತಿಯನ್ನು ಪ್ರಕಟಿಸಿರುವ ಡಾ. ಎಚ್.ಸಿ. ವಿಷ್ಣುಮೂರ್ತಿಯವರಲ್ಲಿ ಶಾಂತವೇರಿಯವರ ದಿನಚರಿಯ ಕೆಲವು ಪುಸ್ತಕಗಳ ಹಸ್ತಪ್ರತಿ ಇರುವುದು ಸಂತೋಷದ ಸಂಗತಿಯಾಗಿದೆ; ಅವುಗಳ ಆಯ್ದ ಭಾಗಗಳನ್ನು ಈ ಗ್ರಂಥದಲ್ಲಿ ಅಳವಡಿಸಬೇಕೆಂಬುದು ನಮ್ಮ ಆಶ್ಯವಾಗಿತ್ತು. ಈ ಬಗ್ಗೆ ಮಾನ್ಯ ಸ್ನೇಹಿತರು ಸಹಕರಿಸುವ ಮನಸ್ಸು ಮಾಡಲಿಲ್ಲ. ಅದು ಇರಲಿ, ಆ ಅಪ್ರಕಟಿತ ದಿನಚರಿಯ ಪುಸ್ತಕಗಳು ಇನ್ನಾದರೂ ಸಾಧ್ಯವಾದಷ್ಟು ಬೇಗ ಪ್ರಕಟವಾಗಿ ನಾಡಿನ ಜನತೆಗೆ ವಿಚಾರಗಳು ತಲುಪಲಿ ಎಂಬುದೇ ನಮ್ಮ ಹಾರೈಕೆಯಾಗಿದೆ.

ಶಾಂತವೇರಿ ಗೋಪಾಲಗೌಡರ ನೆನಪಿನ ಸಂಪುಟವನ್ನು ಸಿದ್ಧಪಡಿಸುವು ಜವಾಬ್ದಾರಿಯನ್ನು ನಮಗೆ ಒಪ್ಪಿಸಿ, ಆ ಸಂಪುಟದ ಯೋಜನೆಯು ಇಷ್ಟು ಶೀಘ್ರವಾಗಿ ಕಾರ್ಯಗತವಾಗಲು ಎಲ್ಲ ನೆರವನ್ನು ನೀಡಿ, ಡಾ. ರಾಮಮನೋಹರ ಲೋಹಿಯಾ ಪೀಠದ ಮೊದಲ ಪ್ರಕಟಣೆಯಾಗಿ ಈ ಕೃತಿಯು ಹೊರಬರಲು ಕಾರಣಕರ್ತರಾಗಿರುವ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರರಿಗೆ ನಮ್ಮ ತುಂಬು ಮನಸ್ಸಿನ ಕೃತಜ್ಞತೆಗಳು ಸಲ್ಲುತ್ತವೆ.

ಹಾಗೆಯೇ ನಮ್ಮ ಕ್ಷೇತ್ರಕಾರ್ಯದಿಂದ ಮೊದಲುಗೊಂಡು ಪುಸ್ತಕ ಅಚ್ಚಾಗುವವರೆಗೂ ಹೆಚ್ಚಿನ ಆಸಕ್ತಿವಹಿಸಿ ನಮ್ಮೊಡನೆ ಉದ್ದಕ್ಕೂ ಸಹಕರಿಸಿದ ಪ್ರೊ. ಕರೀಗೌಡ ಬೀಚನಹಳ್ಳಿ ಮತ್ತು ಪ್ರೊ. ಹಿ.ಚಿ. ಬೋರಲಿಂಗಯ್ಯ; ಕಾಗೋಡು ಅಣ್ಣಾಜಿ, ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಗಂದ ನಿರ್ದೇಶಕರಾದ ಪ್ರೊ. ಎ.ವಿ. ನಾವಡ; ಅಧ್ಯಯನಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ನಮ್ಮ ಕ್ಷೇತ್ರಕಾರ್ಯದ ಒಡನಾಟದಿಂದ ಮೊದಲಾಗಿ ಪುಸ್ತಕದ ರಕ್ಷಾಪುಟ ಮತ್ತು ರೇಖಾಚಿತ್ರಗಳನ್ನ ಸುಂದರವಾಗಿ ರೂಪಿಸಲು ನೆರವಾಗಿರುವ ಕೆ.ಕೆ. ಮಕಾಳಿ; ಪುಸ್ತಕ ವಿನ್ಯಾಸ ಮತ್ತು ಮುದ್ರಣದ ಎಲ್ಲ ಜವಾಬ್ದಾರಿಗಳನ್ನು ಹೊತ್ತು ಆತ್ಮೀಯವಾಗಿ ಕಾರ್ಯ ನಿರ್ವಹಿಸಿರುವ ಸಿ.ಸಿ. ಪೂವಯ್ಯ ಮತ್ತು ಕೆ.ಎಲ್. ರಾಜಶೇಖರ್ ಅವರಿಗೂ ಹಾಗೂ ವಿಶ್ವವಿದ್ಯಾಲಯದ ಎಲ್ಲ ಗೆಳೆಯರಿಗೆ ನಮ್ಮ ಕೃತಜ್ಞತೆಗಳು.

ಕಾಳೇಗೌಡ ನಾಗವಾರ
ಜಿ.ವಿ. ಆನಂದಮೂರ್ತಿ
ಸಂಪಾದಕರು