ಭಾರತೀಯ ಸಂಗೀತಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಅದಕ್ಕೆ ತನ್ನದೇ ಆದ ಘನ ಪರಂಪರೆ ಇದೆ. ಜಾಗತೀಕ ಸಂಗೀತದಲ್ಲಿ ಅದಕ್ಕೊಂದು ವಿಶಿಷ್ಟ ಸ್ಥಾನವಿದೆ. ಅದು ಭಾರತೀಯ ಸಂಸ್ಕೃತೀಯ ಪ್ರತೀಕ. ಇಂತಹ ಸಂಗೀತದಲ್ಲಿ ಪ್ರಮುಖವಾಗಿ ಎರಡು ಪದ್ಧತಿಗಳಿವೆ. ಒಂದು ಹಿಂದುಸ್ತಾನಿ ಸಂಗೀತ ಇನ್ನೊಂದು ಕರ್ನಾಟಕೀ ಸಂಗೀತ. ಹಿಂದುಸ್ತಾನಿ ಸಂಗೀತಕ್ಕೆ ಉತ್ತರಾದಿ ಸಂಗೀತವೆಂದೂ, ಕರ್ನಾಟಕೀ ಸಂಗೀತಕ್ಕೆ ದಕ್ಷಿಣಾದಿ ಸಂಗೀತವೆಂದೂ ಕರೆಯುವುದುಂಟು. ಮೂಲದಲ್ಲಿ ಒಂದೆಯಾಗಿದ್ದ ‘ಭಾರತೀಯ ಸಂಗೀತ’ ಎರಡು ಸ್ವತಂತ್ರ ರೂಪ ಪಡೆದುಕೊಂಡದ್ದು ೧೩-೧೪ ನೇ ಶತಮಾನದಲ್ಲಿ, ಎರಡೂ ಸಂಗೀತ ಪದ್ಧತಿಗೆ ಸಮಾನ ಸ್ಥಾನಮಾನ ಕಲ್ಪಿಸಿದ್ದು ಕನ್ನಡ ನಾಡಿನ ಹಿರಿಮೆ ಎಂಬುದು ಅಭಿಮಾನದ ಸಂಗತಿ.

೧೩ ನೇ ಶತಮಾನದ ನಂತರ ಸ್ವತಂತ್ರ ರೂಪ ಪಡೆದುಕೊಂಡ ಹಿಂದುಸ್ತಾನಿ ಸಂಗೀತ ಆಧುನಿಕ ಕಾಲದ ಜನಪ್ರಿಯ ಹಾಗೂ ಜಾಗತಿಕ ವ್ಯಾಪ್ತಿ ಪಡೆದ ವಿಶ್ವ ಸಂಗೀತವೆನಿಸಿದೆ. ಭಾರತವನ್ನು ಮೊದಲ್ಗೊಂಡು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅದು ಜನಾನುರಾಗಿಯಾಗಿದೆ.

ಸಂಗೀತವನ್ನೊಳಗೊಂಡು ಯಾವುದೇ ಕಲೆಯನ್ನು ಆಸ್ವಾದಿಸಲು, ಅದು ಜನಮನವನ್ನು ಸೊರೆಗೊಳ್ಳಲು ಮುಖ್ಯ ಕಾರಣ ಅದರ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ಪಕ್ಷ. ಒಂದು ಕ್ರಿಯೆ, ಇನ್ನೊಂದು ಜ್ಞಾನ. ಕ್ರಿಯೆ ಮತ್ತು ಜ್ಞಾನಗಳ ಸಂಗಮ ಪರಿಪೂರ್ಣತೆಯ ಲಕ್ಷಣ. ಇಲ್ಲಿ ಕ್ರಿಯೆ ಎಂಬುದು ಪ್ರಾಯೋಗಿಕ (Practical) ಜ್ಞಾನವೆಂದು ಸಿದ್ಧಾಂತ (Theory). ಮೇಲ್ನೋಟಕ್ಕೆ ಅವೆರಡು ಭಿನ್ನ ಭಿನ್ನವೆನಿಸಿದರು ಅವು ಒಂದನ್ನೊಂದು ಮತ್ತು ಒಂದಕ್ಕೊಂದು ಪೂರಕವಾದವುಗಳಾಗಿವೆ. ಕ್ರಿಯೆ ಇಲ್ಲದ ಜ್ಞಾನ ನಿಷ್ಪ್ರಯೋಜಕ, ಜ್ಞಾನವಿಲ್ಲದ ಕ್ರಿಯೆ ನಿಷ್ಫಲ. ಅವು ಒಂದಕ್ಕೊಂದು ಪೂರಕವಾಗಿ ಸಾಮ್ಯತೆಯಿಂದಿದ್ದಾಗಲೇ ಅಮೂರ್ತವಾದ ಅಲೌಕಿಕ ಆನಂದ ಸಾಕಾರಗೊಳ್ಳಲು ಸಾಧ್ಯ. ಈ ಅರ್ಥದಲ್ಲಿ ಸಂಗೀತ ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ಎರಡೂ ಭಾಗಗಳು ಸಮಸಮವಾಗಿ ಮುನ್ನಡೆದರೆ ಅದರ ಸರ್ವತೋಮುಖ ಅಭಿವೃದ್ಧಿಯಾಗುವಲ್ಲಿ ಎರಡು ಮಾತಿಲ್ಲ.

ಹಾಗೆ ನೋಡಿದರೆ ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತದಲ್ಲಿ ಪ್ರಾಯೋಗಿಕ ಬೆಳೆದಷ್ಟು ಸಿದ್ಧಾಂತ ಪಕ್ಷ ಬೆಳೆದಿಲ್ಲ. ಭಾರತದ ಇತರ ಭಾಷೆಗಳಲ್ಲಿ ಹಿಂದುಸ್ತಾನಿ ಸಂಗೀತದ ಸಿದ್ಧಾಂತ ಬೆಳೆದಷ್ಟು ಕನ್ನಡದಲ್ಲಿ ಬೆಳೆದಿಲ್ಲ.

ಹಿಂದುಸ್ತಾನಿ ಸಂಗೀತವೆಂದರೇನು? ಅದು ಆರಂಭವಾದುದು ಯಾವಾಗ? ಅದರ ವಿಕಾಸ ಹೇಗಾಯಿತು? ಅದರ ವೈಶಿಷ್ಟ್ಯಗಳೇನು? ಅದರ ತತ್ವ, ಸಿದ್ಧಾಂತಗಳಾವವು? ಅದರ ಗಾಯನ, ವಾದನ ಶೈಲಿಗಳೇನು? ಅದರ ಬಾಜ್, ಘರಾಣೆಗಳಾವುವು? ನುಡಿಸುವ ವಾದ್ಯಗಳಾವುವು? ಅದರ ತಂತ್ರಗಾರಿಕೆಗಳೇನು? ಮುಂತಾದ ಅನೇಕ ವಿಷಯಗಳ ಕುರಿತ ವಿವರವಾದ ಮಾಹಿತಿ ಕನ್ನಡದಲ್ಲಿ ತುಂಬ ವಿರಳ. ಇದ್ದರೆ ಅವು ಬೇರೆ ಬೇರೆ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ, ಅಭಿನಂದನ ಹಾಗೂ ಸ್ಮರಣ ಸಂಚಿಕೆಯಲ್ಲಿ ಹರಿದು ಹಂಚಿಹೋಗಿವೆ. ಈ ಎಲ್ಲ ವಿಷಯಗಳನ್ನು ಒಂದೆಡೆ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವುದು ತೀರ ಅಗತ್ಯವಾಗಿತ್ತು.

ಭಾರತದ ಇತರ ಭಾಷೆಗಳಲ್ಲಿ ಹಿಂದುಸ್ತಾನಿ ಸಂಗೀತ ಕುರಿತ ಗ್ರಂಥಗಳು ಪ್ರಕಟವಾದುದರ ಕಾಲುಭಾಗದಷ್ಟು ಕನ್ನಡದಲ್ಲಿ ಪ್ರಕಟವಾಗಿಲ್ಲ. ಪ್ರಕಟಗೊಂಡ ಗ್ರಂಥಗಳ ಕಾಲುಭಾಗದಷ್ಟು ಸಂಗೀತ ಬರಹಗಾರ ಸಂಖ್ಯೆ ಉಂಟು. ಕನ್ನಡದಲ್ಲಿ ಪ್ರಕಟಗೊಂಡ ಹೆಚ್ಚಿನ ಗ್ರಂಥಗಳು ಸಂಗೀತಗಾರರ ಜೀವನ ಚರಿತ್ರೆ ಕುರಿತವುಗಳು. ಸಿದ್ಧಾಂತ ಕುರಿತು ಪ್ರಕಟಗೊಂಡದ್ದು ತೀರ ಕಡಿಮೆ.

ಈ ವಿಷಯದ ಬಗ್ಗೆ ಸದಾ ಚಿಂತಿಸುತ್ತಿದ್ದ ನನ್ನ ಚಿಂತನೆಗೆ ಇಂಬುಗೊಡುವಂತೆ ಇದಕ್ಕಿದ್ದಂತೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ನನಗೊಂದು ಪತ್ರ ಬಂದಿತು. ‘ಹಿಂದುಸ್ತಾನಿ ಸಂಗೀತದ ಬಗ್ಗೆ ಈಗಾಗಲೇ ಬೇರೆ ಬೇರೆ ಪುಸ್ತಕಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಬಿಡಿ ಬಿಡಿ ಲೇಖನಗಳನ್ನು ಹಾಗೂ ಅವಶ್ಯವೆನಿಸಿದಲ್ಲಿ ಅಂಥಹ ಲೇಖನಗಳನ್ನು ಬರೆಯಿಸಿ ಹಿಂದುಸ್ತಾನಿ ಸಂಗೀತ ಕುರಿತ ಒಂದು ಆಕರ ಗ್ರಂಥ ರೂಪದಲ್ಲಿ ಒಂದು ಮಹತ್ವಪೂರ್ಣವಾದ ಪುಸ್ತಕವೊಂದನ್ನು ಪ್ರಕಟಿಸಲು ಅಕಾಡೆಮಿ ಉದ್ದೇಶಿಸಿದ್ದು, ಈ ಪುಸ್ತಕದ ಸಂಪಾದಕರನ್ನಾಗಿ ತಮ್ಮನ್ನು ಅಕಾಡೆಮಿ ಸಭೆಯಲ್ಲಿ ಆಯ್ಕೆ ಮಾಡಲಾಗಿದ್ದು, ಕಾರಣ ನೀವು ಕೂಡಲೇ ಇದಕ್ಕೆ ಒಪ್ಪಿಗೆ ತಿಳಿಸಬೇಕೆಂದು’ ಈ ಪತ್ರದಲ್ಲಿ ವಿನಂತಿಸಲಾಗಿತ್ತು.

ಈ ಪತ್ರವನ್ನು ಓದಿ ಒಂದೆಡೆ ಖುಷಿ; ಇನ್ನೊಂದೆಡೆ ದುಗುಡ ಉಂಟಾಯಿತು. ಹಿಂದುಸ್ತಾನಿ ಸಂಗೀತ ಕುರಿತ ಲೇಖನಗಳ ಅಪರೂಪ ಹಾಗೂ ಮಹತ್ವದ ಗ್ರಂಥ ಅಕಾಡೆಮಿ ಪ್ರಕಟಿಸುತ್ತಿರುವುದು ಖುಷಿ ನೀಡಿದರೆ, ಇಂತಹ ಜವಾಬ್ದಾರಿಯುತವಾದ ಸಂಪಾದಕೀಯ ಕಾರ್ಯ ನನಗೆ ವಹಿಸಿದ ಬಗ್ಗೆ ದುಗುಡ – ಹೀಗೆ ಎರಡೂ ಏಕಕಾಲಕ್ಕೆ ಉಂಟಾದವು. ಈ ವಿಷಯ ಕುರಿತ ನನ್ನ ಚಿಂತನೆ ಹಾಗೂ ಅಕಾಡೆಮಿಯ ಉದ್ದೇಶ ಎರಡೂ ಒಂದೇಯಾಗಿದ್ದುದನ್ನು ಗಮನಿಸಿ ಅಕಾಡೆಮಿ ನನಗೆ ವಹಿಸಿದ ಈ ಕಾರ್ಯ ನನ್ನ ಪಾಲಿನ ಕರ್ತವ್ಯವೆಂದು ಭಾವಿಸಿ ಈ ಕೆಲಸ ಮಾಡಲು ಒಪ್ಪಿಕೊಂಡೆ. ಅದರ ಫಲವೇ ಈ ಗ್ರಂಥ.

ಪ್ರಸ್ತುತ ಗ್ರಂಥಗಳಲ್ಲಿ ಒಟ್ಟು ೩೯ ಲೇಖನಗಳಿವೆ. ಹಿಂದುಸ್ತಾನಿ ಸಂಗೀತ ಕುರಿತ ಲೇಖನ ಕೋರಿ ವಿವಿಧ ಪತ್ರಿಕೆಗಳಲ್ಲಿ ಅಕಾಡೆಮಿ ಪ್ರಕಟಣೆ ನೀಡಿತು. ಆದಾಗ್ಯೂ ನಿರೀಕ್ಷಿತ ಮಟ್ಟದಲ್ಲಿ ಲೇಖನ ಬರಲಿಲ್ಲ. ನಾಡಿನ ವಿವಿಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಅಭಿನಂದನ ಗ್ರಂಥಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಇದುವರೆಗೆ ಪ್ರಕಟಗೊಂಡ ಹಿಂದುಸ್ತಾನಿ ಸಂಗೀತ ಕುರಿತ ಲೇಖನಗಳನ್ನು ಆಯ್ದುಕೊಂಡು, ಅವಶ್ಯವಿದ್ದ ಲೇಖನಗಳನ್ನು ಸಂಗೀತಗಾರರಿಂದ, ಸಂಗೀತತಜ್ಞರಿಂದ ಹಾಗೂ ಸಂಗೀತಾಸಕ್ತರಿಂದ ಬರೆಯಿಸಿ ಪ್ರಸ್ತುತ ಗ್ರಂಥದಲ್ಲಿ ಪ್ರಕಟಿಸಲಾಗಿದೆ.

ಪ್ರಸ್ತುತ ಗ್ರಂಥದಲ್ಲಿ ನಾಡಿನ ಹೆಸರಾಂತ ಸಂಗೀತತಜ್ಞರಾದ ಡಾ.ರಾ.ಸತ್ಯನಾರಾಯಣ, ಹೆಸರಾಂತ ಸಂಗೀತ ಬರಹಗಾರರಾದ ಪ್ರೊ.ಸದಾನಂದ ಕನವಳ್ಳಿ, ಹೆಸರಾಂತ ಸಂಗೀತಗಾರರಾದ ಡಾ. ಕಮಲ ರಾಜೀವ ಪುರಂದರೆ, ಡಾ. ಮೀರಾ ಶಿವಶಂಕರ ಗುಂಡಿ, ಸಂಗೀತ ಅಂಕಣಕಾರ ಡಾ. ನಾಗರಾಜರಾವ್ ಹವಾಲ್ದಾರ್ ಹಾಗೂ ದಿವಂಗತರಾದ ಖ್ಯಾತ ಬೀನ್ ವಾದಕ ಡಾ. ಬಿಂದುಮಾಧವ ಪಾಠಕ ಹಾಗೂ ಖ್ಯಾತ ಸಂಗೀತಜ್ಞ ಪ್ರೊ. ಎ.ಯು.ಪಾಟೀಲ ಅವರ ಲೇಖನಗಳನ್ನು ಆಯ್ದುಕೊಳ್ಳಲಾಗಿದೆ. ನಾಡಿನ ಅನೇಕ ಕಡೆಗಳಲ್ಲಿ ಸಂಗೀತ ಪ್ರಾಧ್ಯಾಪಕರ ಲೇಖನಗಳನ್ನು ಇದರಲ್ಲಿ ಪ್ರಕಟಿಸಲಾಗಿದೆ.

ಪ್ರಸ್ತುತ ಗ್ರಂಥದಲ್ಲಿ ಹಿಂದುಸ್ತಾನಿ ಸಂಗೀತದ ಸಮಗ್ರ ವಿಷಯಗಳಿಲ್ಲ. ಲಭ್ಯವಿರುವ ಲೇಖನಗಳನ್ನು ಇದರಲ್ಲಿ ಪ್ರಕಟಿಸಲಾಗಿದೆ. ಇನ್ನು ಅನೇಕ ವಿಷಯಗಳು ಉಳಿದುಕೊಂಡಿವೆ. ಇದು ಆ ಹಂತದಲ್ಲಿ ಪ್ರಥಮ ಪ್ರಯತ್ನವೆನ್ನಬೇಕು. ಈ ದಿಶೆಯಲ್ಲಿ ಇದು ಪ್ರಥಮ ಸಂಪುಟವೆನ್ನೋಣ. ಉಳಿದಿರುವ ಇತರ ವಿಷಯಗಳನ್ನು ಸೇರಿಸಿ ಮುಂದಿನ ದಿನಗಳಲ್ಲಿ ಅಕಾಡೆಮಿ ‘ಸಂಗೀತದ ಲೇಖನಗಳ ಎರಡನೇ ಸಂಪುಟ’ ಪ್ರಕಟಿಸಲಿ. ಅದರ ನಂತರ ಮೂರನೇ ಸಂಪುಟ, ನಾಲ್ಕನೇ ಸಂಪುಟ- ಹೀಗೆ ಸಂಪುಟಗಳ ಮಾಲೆ ಹೊರಬರಲೆಂಬುದು ನನ್ನಾಸೆ.

ಇಷ್ಟೊಂದು ಸಂಖ್ಯೆಯಲ್ಲಿ ಹಿಂದುಸ್ತಾನಿ ಸಂಗೀತ ಕುರಿತ ಲೇಖನಗಳ ಸಂಪುಟ ಪ್ರಕಟಗೊಂಡಿರುವುದು ಬಹುಶಃ ಇದೇ ಮೊದಲೆಂಬುದು ನನ್ನ ಅನಿಸಿಕೆ. ಇಂತಹ ಅಪರೂಪದ ಮತ್ತು ಮಹತ್ವದ ಕಾರ್ಯ ಅಕಾಡೆಮಿಗಲ್ಲದೆ ಯಾರಿಗೆ ತಾನೇ ಸಾಧ್ಯ? ಈ ದಿಶೆಯಲ್ಲಿ ಅಕಾಡೆಮಿಯ ಕಾರ್ಯ ಶ್ಲಾಘನೀಯ. ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಅಕಾಡೆಮಿ ನೀಡಿರುವ ಒಂದು ಮಹತ್ತರ ಕೊಡುಗೆ ಎಂಬುದರಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಈ ಗ್ರಂಥ ಕರ್ನಾಟಕದ ಸುವರ್ಣ ಮಹೋತ್ಸವದ ಶುಭ ಸಂದರ್ಭದಲ್ಲಿ ಪ್ರಕಟಗೊಳ್ಳುತ್ತಿರುವುದು ತುಂಬಾ ಸಂದರ್ಭೋಚಿತ ಹಾಗೂ ಸ್ತುತ್ಯ.

ಇಂತಹ ಮಹತ್ವದ ಹಾಗೂ ಅಪರೂಪದ ಗ್ರಂಥದ ಸಂಪಾದಕೀಯ ಕಾರ್ಯ ಮಾಡುವ ಸದವಕಾಶವನ್ನು ಒದಗಿಸಿದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಪಂ. ರಾಜಶೇಖರ ಮನ್ಸೂರ್, ಅಕಾಡೆಮಿಯ ರಿಜಿಸ್ಟ್ರಾರ್‌ರಾದ ಶ್ರೀ ಬಲವಂತರಾವ್ ಪಾಟೀಲ್, ಗ್ರಂಥ ಸಿದ್ಧಗೊಳ್ಳುವಲ್ಲಿ ಲೇಖನಗಳನ್ನು ಸಂಗ್ರಹ ಮಾಡಿ, ಸೂಕ್ತ ಸಲಹೆ ನೀಡಿದ ವಿಶ್ರಾಂತ ಸಂಗೀತ ಪ್ರಾಧ್ಯಾಪಕರು, ಸಂಗೀತ ಸಂಶೋಧಕ ಮಂಡಳಿಯ ಸದಸ್ಯರೂ ಆದ ಡಾ.ಕಮಲ ರಾಜೀವ ಪುರಂದರೆ, ನಾಡಿನ ಹೆಸರಾಂತ ಹಾರ್ಮೋನಿಯಂ ವಾದಕ, ಆಕಾಶವಾಣಿ ನಿಲಯದ ವಿಶ್ರಾಂತ ಕಲಾವಿದ, ಗ್ರಂಥ ಸಂಪಾದಕ ಮಂಡಳಿ ಹಾಗೂ ಅಕಾಡೆಮಿಯ ಸದಸ್ಯರಾದ ಪಂ. ವಸಂತ ಕನಕಾಪೂರ, ಸಂಸ್ಕೃತ ವಿದ್ವಾಂಸ ಹಾಗೂ ಗ್ರಂಥ ಸಂಪಾದಕ ಮಂಡಳಿಯ ಸದಸ್ಯ ಡಾ.ಕೆ ಗಣಪತಿ ಭಟ್ ಅವರಿಗೆ ಕೃತಜ್ಞತಾಪೂರ್ವಕ ವಂದನೆಗಳನ್ನು ಸಲ್ಲಿಸುವೆನು.

ಗ್ರಂಥಕ್ಕೆ ಉತ್ತಮ ಲೇಖನ ಬರೆದುಕೊಟ್ಟ ಮತ್ತು ಪ್ರಕಟಿತ ಲೇಖನಗಳನ್ನು ಗ್ರಂಥದಲ್ಲಿ ಪ್ರಕಟಿಸಲು ಅನುಮತಿ ನೀಡಿದ ಎಲ್ಲ ಸಂಗೀತ ಬರಹಗಾರರಿಗೆ ವಂದನೆಗಳು.

ನಾಡಿನ ಸಮಸ್ತ ಸಂಗೀತಗಾರರು, ಸಂಗೀತಜ್ಞರು, ಸಂಗೀತ ವಿದ್ವಾಂಸರು, ಸಂಗೀತ ಅಧ್ಯಯನದಲ್ಲಿ ನಿರತರಾಗಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಂಗೀತ ಶಿಕ್ಷಕರು, ಸಂಗೀತಾಸಕ್ತರು, ಸಂಗೀತ ಕಲಾಪೋಷಕರು ಹಾಗೂ ಪಂಚಕೋಟಿ ಸಹೃದಯಿ ಕನ್ನಡಿಗರು ಈ ಗ್ರಂಥದ ಸದುಪಯೋಗ ಪಡಿಸಿಕೊಂಡರೆ ಅಕಾಡೆಮಿಯ ಸಂಪಾದಕ ಮಂಡಳಿಯ ಹಾಗೂ ಲೇಖಕರ ಶ್ರಮ ಸಾರ್ಥಕವೆಂದು ಭಾವಿಸುವೆ.

ವಿದ್ವಜನ್ಯವಿಧೇಯ
ಪಂ. ಸಿದ್ಧರಾಮಯ್ಯ ಮಠಪತಿ ಗೊರಟಾ