ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಠಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಅಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಭೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ತತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಸಂಶೋಧನೆ ಅವಿರತವಾದ ಮತ್ತು ಗಂಭೀರವಾದ ನಿರಂತರ ಸತ್ಯಾನ್ವೇಷಣಾ ಕಾರ್ಯ, ಈ ಅನ್ವೇಷಣೆಗೆ ಆ ಕ್ಷೇತ್ರದ ತಲಸ್ಪರ್ಶಿಯಾದ ಜ್ಞಾನ, ಸೂಕ್ಷ್ಮವೂ ವ್ಯಾಪಕವೂ ಆದ ಅಧ್ಯಯನ, ಆ ವಿಷಯದ ಹತ್ತಾರು ಮುಖಗಳ ಪರಿಶೀಲನಾ ಕುತೂಹಲ, ಅಪಾರವಾದ ಶ್ರದ್ಧೆ ಮತ್ತು ತಾಳ್ಮೆ, ಸತ್ಯವನ್ನು ಹುಡುಕುವ ದಾರಿಯಲ್ಲಿ ಎದುರಾಗುವ ದೈಹಿಕ, ಮಾನಸಿಕ, ಆರ್ಥಿಕ ಹಾಗೂ ಇತರ ವೈಯಕ್ತಿಕ ಕ್ಷೇಶಗಳನ್ನು ಮರೆತು ಆ ವಿಷಯದಲ್ಲಿ ಸಂಪೂರ್ಣ ತಲ್ಲೀನತೆಯನ್ನು ಪಡೆಯುವ ಅರ್ಪಣಾ ಮನೋಧರ್ಮ ಮತ್ತು ಏನೇ ಬೆಲೆ ತೆತ್ತಾದರೂ ಯಾರ ಮುಲಾಜು, ದಾಕ್ಷಿಣ್ಯ, ಒತ್ತಡ, ಭಯಗಳಿಗೆ ಒಳಗಾಗದೆ ಸತ್ಯವನ್ನು ಎತ್ತಿ ಹಿಡಿಯುವ ಧರ್ಯ – ಇವು ಅತ್ಯಗತ್ಯವಾಗುತ್ತವೆ. ಈ ಕಾರ್ಯ ಆರಾಮ ಕುರ್ಚಿಯ ಸಲೀಸು ಕಾಯಕವಲ್ಲ; ನಿಧಾನವಾದ ಮತ್ತು ಸಹನಶೀಲವಾದ ಅತ್ಯಂತ ಗಂಭೀರವಾದ ತಪೋ ಕಾಯಕ. ಎಲ್ಲ ಕ್ಷೇತ್ರಗಳ ಸಂಶೋಧನೆಗೂ ಈ ಮಾತು ಅನ್ವಯವಾಗುತ್ತದೆ. ಕನ್ನಡ ವಿದ್ವತ್‌ ಕ್ಷೇತ್ರದಲ್ಲಿ, ಯಾವುದೇ ಅಧಿಕಾರಿಕ, ಆರ್ಥಿಕ ಸೌಲಭ್ಯಗಳಿಲ್ಲದ, ನೈತಿಕ ಬೆಂಬಲವೂ ಇಲ್ಲದ ಸಂಶೋಧನಾ ಯಜ್ಷದಲ್ಲಿ ತಮ್ಮನ್ನು ತಾವೇ ತೆತ್ತುಕೊಂಡು ತಮ್ಮೆಲ್ಲ ಸತ್ವ ಸಂಪನ್ಮೂಲಗಳನ್ನು, ಮುಚ್ಚಿಹೋದ ಸಂಸ್ಕೃತಿಯ ಬಾಗಿಲುಗಳನ್ನು, ಸಾಹಿತ್ಯದ ನಿಜ ನೆಲೆಯನ್ನು ಕಂಡುಕೊಳ್ಳಲು ಶ್ರಮಿಸಿದ ಧೀಮಂತರು ಹತ್ತಾರು ಜನ ಆಗಿಹೋಗಿದ್ದಾರೆ. ನಿರ್ಧಿಷ್ಟವಾದ ಇತಿಹಾಸ ಪ್ರಜ್ಞೆಯಿಲ್ಲದೆ ಬದಲು ಜಾತಿ, ಮತ, ಪ್ರಾಂತ್ಯ, ಕಲ್ಪನೆಗಳ ಬೆನ್ನುಹತ್ತವ ಮಾಮೂಲಿ ಕ್ರಮಕ್ಕೆ ನಮ್ಮ ಕವಿಗಳ, ಕೃತಿಗಳ ಕಾಲ, ಪರಿಸರ, ಪ್ರಭಾವ ಮತ್ತು ಅಂತಃ ಸತ್ವಗಳನ್ನು ತೆರೆದಿಡುವ ಮೂಲಕ ಸಾಹಿತ್ಯ ಚರಿತ್ರೆಗೆ ಅಧಿಕೃತತೆಯನ್ನು ಸಾಕ್ಷಾಧಾರಿತ ಸಮರ್ಥನೆಯನ್ನು ಒದಗಿಸುವ ಮೂಲಕ ಇತಿಹಾಸದ ಪುಟಗಳಿಗೆ ಜೀವವನ್ನು ತುಂಬಿದ ಮಹಾ ವಿದ್ವಾಂಸರಲ್ಲಿ ಒಬ್ಬರು ಶ್ರೀ ನಾ. ಶ್ರೀ ರಾಜಪುರೋಹಿತ ಅವರು. ಈಗಿನ ಕಾಲದಂತೆ ಆಧುನಿಕ ಸಂಚಾರ ಸೌಲಭ್ಯವಿಲ್ಲದ, ಸಂಚರಿಸಲು ಸರಿಯಾದ ದಾರಿಗಳೂ ಇಲ್ಲದ, ಅಗತ್ಯ ಆರ್ಥಿಕ ಅನುಕೂಲವೂ ಇಲ್ಲದ ಹಾಗೂ ಸರ್ಕಾರದ ಯಾವುದೇ ಪ್ರೋತ್ಸಾಹವೂ ಇಲ್ಲದ ಕಾಲದಲ್ಲಿ ಕೇವಲ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರೀತಿಯಿಂದ, ಅಭಿಮಾನದಿಂದ ಪ್ರೇರೇಪಿತರಾಗಿ ವೈಯಕ್ತಿಕ ಕಷ್ಟ ನಿಷ್ಠೂರಗಳನ್ನು ಲೆಕ್ಕಿಸದೆ ನಾಡಿನ ಉದ್ದಗಲಕ್ಕೂ ಓಡಾಡಿ ನಮ್ಮ ಹಲವಾರು ಮುಖ್ಯ ಕವಿಗಳ ಕಾಲ, ದೇಶ, ಸಾಹಿತ್ಯಗಳ ಬಗ್ಗೆ ಕೂಲಂಕಷವಾದ ಅಧ್ಯಯನವನ್ನು ಕೈಗೊಂಡು ಬರಹಗಳನ್ನು ಪ್ರಕಟಿಸಿ, ಸಾಹಿತ್ಯ ಚರಿತ್ರೆಗೆ ಮುಖ್ಯ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿ ರಾಜಪುರೋಹಿತರು ಅನನ್ಯ ನಿಷ್ಠೆಯಿಂದ ದುಡಿದರು. ಅವರ ಕೂಲಂಕಷ ಅಧ್ಯಯನ, ಬಹುಶ್ರುತ ಪಾಂಡಿತ್ಯ ಮತ್ತು ಸತ್ಯ ಪ್ರೀತಿಯೊಂದನ್ನು ಬಿಟ್ಟು ಬೇರೆ ಯಾವುದೇ ಒಲವರವಿಲ್ಲದ ಕನ್ನಡದ ಸಂಶೋಧನಾ ಕ್ಷೇತ್ರವನ್ನು ಸಮೃದ್ಧಿಗೊಳಿಸಿದವರು ಅವರು. ಅವರಿಂದಾಗಿ ಎಷ್ಟೋ ಜನ ಕವಿಗಳ ಕಾಲ, ದೇಶ, ಸಾಹಿತ್ಯ ವಿಚಾರಗಳು ನಮಗೆ ದೊರೆಯುವಂತಾಗಿ ಸಾಹಿತ್ಯ ಚರಿತ್ರೆಯ ಸಂಪುಟಗಳು ಸಂಪುಟಗಳು ಅಪಾರ ಲವ ಲವಿಕೆಯಿಂದ ಹೊಸ ವಿಷಯಗಳಿಂದ ಕಂಗೊಳಿಸುವಂತಾಗಿದೆ. ತಮ್ಮ ವಿಷಯದ ಸಮರ್ಥನೆಗಾಗಿ ಅವರು ತಿರುಗಿದ ಸ್ಥಳಗಳು, ಕಂಡುಹಿಡಿದ ಆಕರಗಳು, ಅವುಗಳ ಸೂಕ್ಷ್ಮವೂ ಬಹು ಮುಖಿಯೂ ಆದ ಅಧ್ಯಯನಗಳು, ಸತ್ಯಪ್ರತಿಪಾದನೆಯಲ್ಲಿ ಅದರ ಹಲವು ಆಯಾಮಗಳನ್ನು ಕಂಡುಕೊಳ್ಳುವ ಗಂಭೀರ ಪರಿಶ್ರಮ, ತಮ್ಮ ವಾದಕ್ಕೆ ಪುಷ್ಠಿಯಾಗಿ ಬಂದ ಸಮರ್ಥನೆಗಳನ್ನು ಎಂತೋ ಅಂತೆಯೇ ಅವುಗಳನ್ನು ವಿರೋಧಿಸಿ ಬಂದ ವಾಗ್ವಾದಗಳನ್ನು ಅಷ್ಟೇ ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುವ ಉದಾರ ಮನೋಧರ್ಮ ಅವರ ವ್ಯಕ್ತಿತ್ವದ ವಿಶೇಷ ಗುಣಗಳಾಗಿದ್ದವು. ಯಾರ ಗೌರವ, ಅಗೌರವಗಳಿಗೂ ಮನಸ್ಸು ಕೊಡದೆ ತಮಗೆ ಸರಿ ಎನಿಸಿದ ದಾರಿಯಲ್ಲಿ ಅವರು ನಡೆಯುವ ಮೂಲಕ ಸತ್ಯಪಥದ ಆರಾಧಕರಾದರು. ಆ ಕಾಲದ ಪ್ರಮುಖ ವಿದ್ವತ್‌ ಪತ್ರಿಕೆಗಳಲ್ಲಿ ಅವರ ಸಂಶೋಧನಾ ಬರಹಗಳು ತುಂಬಿಕೊಂಡಿವೆ. ಇನ್ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಕನ್ನಡದಲ್ಲೂ ಮತ್ತು ೨೦ ಮೌಖಿಕ ಲೇಖನಗಳನ್ನು ಮರಾಠಿಯಲ್ಲೂ ಅವರ ಬರೆದು ಪ್ರಕಟಿಸಿದ್ದಾರೆ. ಈ ಲೇಖನಗಳಲ್ಲದೆ ಆರು ಗ್ರಂಥಗಳು ಅವರಿಂದ ರಚಿತವಾಗಿವೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆಯ ಮಹಾ ವಿದ್ವಾಂಸರಾಗಿ ಅವರು ಸಲ್ಲಿಸಿದ ಸೇವೆ ಸಾಹಿತ್ಯ ಮತ್ತು ಸಂಸ್ಕೃತಿ ಲೋಕಕ್ಕೆ ಅನನ್ಯವಾದ ಕೊಡುಗೆಯಾಗಿದೆ. ಸುಮಾರು ೪೦ ವರ್ಷಗಳ ಕಾಲ ಸತತವಾಗಿ ಅವರು ಸಂಶೊಧನೆಯಲ್ಲಿ ನಿರತರಾಗಿದ್ದರು ಅವರ ಸಮಗ್ರ ಸಂಶೋಧನಾ ಲೇಖನಗಳನ್ನು ಇದುವರೆಗೂ ಪ್ರಕಟಿಸಲಾಗದಿರುವುದು ದುರ್ದೈವ. ಅವರ ಲೇಖನಗಳ ಪುಟಪುಟಗಳಲ್ಲಿ ಅವರ ಅಧ್ಯಯನ ತಪಸ್ವಿನ ಮೌಲಿಕ ಫಲಿತಗಳು ಬಿಂಬಿತವಾಗಿವೆ. ಅವರ ವಾದ ವೈಖರಿ, ತಮ್ಮ ವಾದವನ್ನು ಬಹುಶ್ರಮದಿಂದ ಕಲೆಹಾಕಿದ ಆಧಾರಗಳ ಮೂಲಕ ಸಮರ್ಥಿಸುವ ದುಷ್ಟರೂ, ಸತ್ಯ ನಿರೂಪಣೆಯಲ್ಲೂ ಮೆರೆಯುವ ವಿನಯಶೀಲ ಮನಸ್ಸು, ತಮ್ಮ ಪೂರ್ವ ವಾದಗಳಲ್ಲಿ ಕೆಲವು ತಪ್ಪೆಂದು ಅನಿಸಿದಾಗ ಅವುಗಳನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುವ ಮನಃಪರಿಪಾಕ, ಇತಿಹಾಸ ತಜ್ಞನಿಗೆ ಅಗತ್ಯವಾದ ಪಾರದರ್ಶಕ ಭಾಷಾ ಶೈಲಿ, ಅವುಗಳ ಹಿಂದಿನ ಅವ್ಯಾಜ್ಯವಾದ ಸಂಸ್ಮೃತಿಪ್ರೇಮ ಇವೆಲ್ಲ ಇಂದಿನ ಸಂಶೋಧಕರಿಗೆ ಮಾರ್ಗದರ್ಶಿಯಾಗಿವೆ. ನಮ್ಮ ಸಾಹಿತ್ಯ ಚರಿತ್ರೆಗೆ ಭದ್ರವಾದ ಅಡಿಗಲ್ಲು ಹಾಕಿದ ಇಂತಹ ಹಿರಿಯರನ್ನು ನೆನೆದುಕೊಳ್ಳುವುದು ಮತ್ತು ಅಂದಿನ ಸಂದರ್ಭದಲ್ಲಿ ರಚಿತವಾದ ಅವರ ಬರಹಗಳನ್ನು ಮತ್ತೊಮ್ಮೆ ಹೊಸ ಶೋಧಗಳ ಬೆಳಕಿನಲ್ಲಿ ನಿರ್ಮಮವಾಗಿ ಚರ್ಚಿಸುವುದು ಸಾಹಿತ್ಯಪ್ರಿಯರ ಕರ್ತವ್ಯವಾಗಿದೆ.

ಹಿರಿಯ ಮತ್ತು ಗೌರವಾನ್ವಿತ ಮಹಾವಿದ್ವಾಂಸರಾದ ರಾಜಪುರೋಹಿತರ ೫೦ನೇ ಪುಣ್ಯತಿಥಿಯ ಈ ಸಂದರ್ಭದಲ್ಲಿ ಅವರಿಗೆ ಕೃತಜ್ಞತೆಯ ಕಾಣಿಕೆಯನ್ನು ಅರ್ಪಿಸಲು ಅವರನ್ನು ಕುರಿತ ಈ ಪುಸ್ತಕವನ್ನು ಪ್ರಕಟಿಸಲಾಗುತ್ತಿದೆ. ಅವರ ಹಿರಿಯ ಮಗಳು ಶ್ರೀಮತಿ ಸರೋಜಿನಿ ಕುಲಕರ್ಣಿ ಅವರು ಈ ಬಗ್ಗೆ ನನಗೆ ಬರೆದ ಒಂದು ಪತ್ರ ನನ್ನ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸಿತು. ಇವರ ಬಗ್ಗೆ ಕೇವಲ ಒಂದು ಸಮಾರಂಭವನ್ನು ಏರ್ಪಡಿಸುವುದಕ್ಕಿಂತ ಅವರನ್ನು ಕುರಿತ ಒಂದು ಕೃತಿಯನ್ನು ಪ್ರಕಟಿಸುವುದು ಅವರ ನೆನಪಿಗೆ ಒಂದು ಕಿರುಕಾಣಿಕೆಯಾಗಬಹುದೆಂದು ಭಾವಿಸಲಾಗಿದೆ. ನನ್ನ ಕೋರಿಕೆಯನ್ನು ಮುನ್ನಿಸಿ ಪ್ರಖ್ಯಾತ ವಿದ್ವಾಂಸರಾದ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಅವರು ಬಹುಪರಿಶ್ರಮದಿಂದ ಮತ್ತು ಅತ್ಯಲ್ಪ ಕಾಲದಲ್ಲಿ ಈ ಕೃತಿಯನ್ನು ಸರಳ, ಸುಂದರವಾಗಿ ಮತ್ತು ರಾಜಪುರೋಹಿತರಿಂದ ಹಿರಿಯ ಚೇತನಕ್ಕೆ ಗೌರವ ಬರುವ ರೀತಿಯಲ್ಲಿ ರಚಿಸಿಕೊಟ್ಟಿದ್ದಾರೆ. ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಅವರಿಗೆ ಮತ್ತು ಈ ಸುಸಂದರ್ಭವನ್ನು ನೆನಪಿಗೆ ತಂದುಕೊಟ್ಟ ಶ್ರೀಮತಿ ಸರೋಜಿನಿ ಕುಲಕರ್ಣಿ ಅವರಿಗೆ ವಿಶ್ವವಿದ್ಯಾಲಯ ಆಭಾರಿಯಾಗಿದೆ. ರಾಜಪುರೋಹಿತರ ಸಮಗ್ರ ಬರಹಗಳ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆಗೆ ಈ ಕಿರುಕೃತಿ ನಾಂದಿಯಾಗಲಿ ಎಂದು ಆಶಿಸುತ್ತೇನೆ.

ಡಾ. ಎಚ್‌. ಜೆ. ಲಕ್ಕಪ್ಪಗೌಡ
ಕುಲಪತಿಗಳು