ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವ ಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ-ಕನ್ನಡಿಗ-ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದದ್ದು. ಈ ಕಾರಣದಿಂದ ಕನ್ನಡ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಹಾಗೂ ಪ್ರಗತಿಪರ. ಕನ್ನಡದ ಸಾಮರ್ಥ್ಯವನ್ನು ಎಚ್ಚರಿಸುವ ಕಾಯಕವನ್ನು ಉದ್ದಕ್ಕೂ ಅದು ನೋಂಪಿಯಿಂದ ಮಾಡಿಕೊಂಡು ಬಂದಿದೆ. ಕರ್ನಾಟಕತ್ವದ ‘ವಿಕಾಸ’ ಈ ವಿಶ್ವವಿದ್ಯಾಲಯದ ಮಹತ್ತರ ಆಶಯವಾಗಿದೆ.

ಕನ್ನಡ ಅಧ್ಯಯನ ಮೂಲತಃ ಶುದ್ಧ ಜ್ಞಾನದ, ಕಾಲ, ದೇಶ, ಜೀವನ ತತ್ವದ ಪರವಾಗಿರುವುದರ ಜೊತೆಗೆ ಅಧ್ಯಯನವನ್ನು ಒಂದು ವಾಗ್ವಾದದ ಭೂಮಿಕೆ ಎಂದು ನಾವು ಭಾವಿಸಬೇಕಾಗಿದೆ. ಕನ್ನಡ ಬದುಕಿನ ಚಿಂತನೆಯ ಭಾಗವೆಂದೇ ಅದನ್ನು ರೂಪಿಸಿ ವಿವರಿಸಬೇಕಾಗಿದೆ. ಅಂದರೆ: ದೇಸಿ ಬೇರುಗಳ ಗುರುತಿಸುವಿಕೆ ಕನ್ನಡ ಅಧ್ಯಯನದ ಮುಖ್ಯ ಭಿತ್ತಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯು ಬಹುತ್ವದ ನೆಲೆಗಳನ್ನು ಆಧರಿಸಿ ರೂಪುಗೊಂಡಿದೆ. ಸಮಾಜಮುಖಿ ಚಿಂತನೆಗಳ ವ್ಯಾಪಕ ಅಧ್ಯಯನ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪವನ್ನು ಇದು ಪರಿಚಯಿಸುತ್ತದೆ. ನಾವು ಇದನ್ನು ಎಲ್ಲ ವಲಯಗಳಲ್ಲಿ ಕನ್ನಡದ ಅನುಷ್ಠಾನದ ಮೂಲಕ ಉಳಿಸಿ, ಬೆಳೆಸಬೇಕಾಗಿದೆ. ಆಗ ಕನ್ನಡ ಸಂಸ್ಕೃತಿಯು ವಿಶ್ವಪ್ರಜ್ಞೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ‘ಕನ್ನಡದ್ದೇ ಮಾದರಿ’ಯ ಶೋಧ ಇಂದಿನ ಮತ್ತು ಬರುವ ದಿನಗಳ ತೀವ್ರ ಅಗತ್ಯವಾಗಿದೆ.

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್‌ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತ್ರವಾಗದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಈ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಈ ಸಂದರ್ಭದಲ್ಲಿ ಕನ್ನಡದ ಚಹರೆ ಮತ್ತು ಕನ್ನಡ ಭಾಷೆಯ ಚಲನಶೀಲತೆಯನ್ನು ಶೋಧಿಸಲಿಕ್ಕೆ ಭಾಷಾ ಆಧುನೀಕರಣ ಮತ್ತು ಪ್ರಮಾಣೀಕರಣದ ಪ್ರಕ್ರಿಯೆಗಳ ನೆಲೆಯಲ್ಲಿ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ, ಭಾಷಾನೀತಿ, ಭಾಷಾ ಯೋಜನೆ ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆಗ ಅಧ್ಯಯನದ ಸ್ವರೂಪ ಹಾಗೂ ಬಳಕೆಯ ವಿಧಾನದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಪ್ರತಿರೋಧವಾಗಿ ನಮ್ಮ ದೇಶೀಯ ಜ್ಞಾನಪರಂಪರೆಯನ್ನು ಮರುಶೋಧಿಸಿ ಆ ಮೂಲಕ ಕುಸಿಯುತ್ತಿರುವ ನಮ್ಮ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕಾಗಿದೆ. ಭಾಷೆ, ಸಾಹಿತ್ಯ, ವ್ಯಾಕರಣ, ಛಂದಸ್ಸು, ಚರಿತ್ರೆ, ಕೃಷಿ, ವೈದ್ಯ, ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನವೇ ‘ಜ್ಞಾನ’ ಎಂದು ರೂಪಿಸಿರುವ ಇಂದಿನ ಆಲೋಚನೆಗೆ ಪ್ರತಿಯಾಗಿ ಈ ಜ್ಞಾನಶಾಖೆಗಳಲ್ಲಿ ಹುದುಗಿರುವ ದೇಶಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಾಗಿದೆ. ಅಂತಹ ಪ್ರಯತ್ನಗಳಿಗೆ ಬೇಕಾದ ಮಾರ್ಗದರ್ಶಕ ಸೂತ್ರಗಳ ಹಾಗೂ ಆಕರ ಪರಿಕರಗಳ ನಿರ್ಮಾಣದ ನೆಲೆ ತುಂಬ ಮುಖ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನಾರು ವರ್ಷಗಳಿಂದ ಈ ಕೆಲಸಗಳನ್ನು ಹಲವು ಯೋಜನೆಗಳ ಮೂಲಕ ರೂಪಿಸಿಕೊಂಡಿದೆ, ರೂಪಿಸಿಕೊಳ್ಳುತ್ತಿದೆ. ಇದೊಂದು ಚಲನಶೀಲ ಪ್ರಕ್ರಿಯೆಯಾಗಿದೆ. ಸಮಕಾಲೀನ ಭಾಷಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಕನ್ನಡ ನಾಡುನುಡಿಯನ್ನು ಹೊಸದಾಗಿ ಶೋಧಿಸುತ್ತಾ, ವಿವರಿಸುತ್ತಾ ಬಂದಿದೆ. ಅಂದರೆ: ಕನ್ನಡದ ಅರಿವಿನ ವಿಕೇಂದ್ರೀಕರಣವೇ ವರ್ತಮಾನದ ಹೊಸ ಬೆಳವಣಿಗೆ. ಇದು ಕನ್ನಡ ವಿಶ್ವವಿದ್ಯಾಲಯದ ಜೀವಧಾತುವಾಗಿದೆ.

ಡಾ. ಬಿ.ಎಂ.ಪುಟ್ಟಯ್ಯ ಅವರು ‘ಸಂಶೋಧನೆ: ತಾತ್ವಿಕ ಆಯಾಮಗಳು’ ಎನ್ನುವ ಈ ಕೃತಿಯನ್ನು ತಮ್ಮ ವೈಯಕ್ತಿಕ ಸಂಶೋಧನ ಯೋಜನೆಯ ಭಾಗವಾಗಿ ರೂಪಿಸಿದ್ದಾರೆ. ಸಮಾಜ, ಭಾಷೆ ಮತ್ತು ಸಾಹಿತ್ಯ ಈ ಯಾವುವೂ ಕೂಡ ಜಡವಾದವಲ್ಲ. ಅವು ನಿರಂತರವಾಗಿ ಬದಲಾಗುತ್ತಿರುತ್ತವೆ. ಅದೇ ರೀತಿ ಅವುಗಳನ್ನು ಕುರಿತು ನಡೆಸುವ ಸಂಶೋಧನೆಗಳೂ ಕೂಡ ಕಾಲಕಾಲಕ್ಕೆ ಬದಲಾಗುತ್ತ, ಹಳದಯ ಆಲೋಚನೆಗಳನ್ನು ಬಿಡುತ್ತ, ಹೊಸ ಆಲೋಚನೆಗಳನ್ನು ನಿರ್ಮಾಣ ಮಾಡುತ್ತ ಸಾಗಬೇಕಾಗುತ್ತದೆ. ಈ ಬಗೆಯ ಬದಲಾವಣೆ ನಿಸರ್ಗದ ತತ್ವ ಮತ್ತು ಸಾಮಾಜಿಕ ನಿಯಮ. ಕನ್ನಡ ಸಾಹಿತ್ಯವನ್ನು ಬೇರೆ ಬೇರೆ ವಿಧಾನಗಳಲ್ಲಿ ಅಧ್ಯಯನ ಮಾಡಲಾಗಿದೆ. ಆದರೆ ಉನ್ನತ ಶಿಕ್ಷಣದಲ್ಲಿ ಸಂಶೋಧನೆಗೆಂದು ಬರುವ ಸಂಶೋಧಕರಿಗೆ ಸಾಹಿತ್ಯವನ್ನು ಸಂಶೋಧನೆಗಾಗಿ ಹೇಗೆ ಓದಬೇಕು. ಹೇಗೆ ಗ್ರಹಿಸಬೇಕು ಎಂಬ ಬಗ್ಗೆ ಸಾಕಷ್ಟು ಗೊಂದಲಗಳು, ಸಮಸ್ಯೆಗಳು ಇವೆ. ಜೊತೆಗೆ ಸಂಶೋಧನೆಯ ವಿಧಾನ, ಸಂಶೋಧನೆಯ ತಾತ್ವಿಕತೆ, ಸಂಶೋಧನೆಯ ಧೋರಣೆ ಮುಂತಾದ ವಿಷಯಗಳಲ್ಲಿ ಪ್ರವೇಶ ಮತ್ತು ಪ್ರಬುದ್ಧತೆ ಇರುವುದಿಲ್ಲ. ಸಂಶೋಧನೆಗೆ ಪ್ರವೇಶ ಪಡೆದ ಮೇಲೆ ಇಂತಹ ತಿಳುವಳಿಕೆ ಕೊಡುವ ಗ್ರಂಥಗಳನ್ನು ಸಂಶೋಧನ  ವಿದ್ಯಾರ್ಥಿಗಳು ಅವನ್ನೇ ಆದರ್ಶವೆಂದು ನಂಬುವಂತೆ ಮಾಡಿವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ನಾಡಿನ ಬೇರೆ ವಿಶ್ವವಿದ್ಯಾಲಯ ಗಳಿಗಿಂತ ಭಿನ್ನ ದಾರಿಯನ್ನು ನಿರ್ಮಾಣ ಮಾಡುತ್ತ ಸಾಗಿದೆ. ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿಗಳನ್ನು ಹೊಸ ಕ್ರಮದಲ್ಲಿ ಪರಿಭಾವಿಸುವ ವಿಧಾನಗಳನ್ನು ಸೃಷ್ಟಿಸುತ್ತ ನಡೆದಿದೆ. ಆದರೆ ಈ ದೃಷ್ಟಿಕೋನದ ಸ್ವರೂಪವನ್ನು ಒಟ್ಟಾಗಿ ಮಂಡಿಸುವ ಕೃತಿಯೊಂದರ ಕೊರತೆಯಿತ್ತು. ಈ ದೊಡ್ಡ ಕೊರತೆಯನ್ನು ಬಿ.ಎಂ. ಪುಟ್ಟಯ್ಯನವರ ಈ ಪುಸ್ತಕ ತುಂಬಿಕೊಟ್ಟಿದೆ ಎಂದು ಹೇಳಬಹುದು.

ಸಮಾಜ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಹೇಗೆ ನೋಡಬೇಕು ಮತ್ತು ಹೇಗೆ ಓದಿ ಪ್ರತಿಕ್ರಿಯಿಸಬೇಕು ಎಂಬ ವಿವರಣಾತ್ಮಕ ವಿಧಾನವನ್ನು ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಹೇಳಿಕೊಡಲಾಗುತ್ತಿದೆ. ಆದರೆ ಅದೇ ದೃಷ್ಟಿಕೋನದ ಮೂಲಕ ಸಂಶೋಧನೆ ಮಾಡಲು ಆಗುವುದಿಲ್ಲ. ಯಾಕೆಂದರೆ ಸಂಶೋಧನೆ ಎಂದರೆ ಕೇವಲ ಆಕರಗಳ ಸಂಗ್ರಹವಾಗಲಿ, ಕವಿಗಳ ಮತ್ತು ಸಾಹಿತಿಗಳ ಜೀವನ ಹಾಗೂ ಕೃತಿಗಳ ವಿವರಗಳ ಮಾಹಿತಿಗಳಾಗಲಿ ಅಲ್ಲ. ಅವುಗಳನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ, ಅರ್ಥೈಸಿ ವ್ಯಾಖ್ಯಾನಿಸಬೇಕಾಗುತ್ತದೆ. ಆದರೆ ಅಲ್ಲಿ ಎದುರಾಗುವ ಸಮಸ್ಯೆ ಎಂದರೆ ಸ್ಥಾಪಿತ ವೈಚಾರಿಕ ಆಕೃತಿಗಳು ಮೇಲುಗೈ ಪಡೆದುಬಿಡುತ್ತವೆ. ಇದಕ್ಕೆ ಹೊಸ ದಾರಿಗಳು ಯಾವುದು ಎಂಬುದನ್ನು ಸರಳವಾಗಿ ಅಭಿಪ್ರಾಯಗಳ ಮಟ್ಟದಲ್ಲಿ ಹೇಳಿಬಿಡಬಹುದು. ಆದರೆ ಅವುಗಳ ಸಮಸ್ಯೆಯ ಸ್ವರೂಪ ಯಾವುದು ಎಂಬುದನ್ನು ಮೊದಲು ಅಮೂಲಾಗ್ರವಾಗಿ ಪರಿಶೀಲಿಸಿ ನೋಡಬೇಕಾಗುತ್ತದೆ. ಸಮಸ್ಯೆಯ ಸ್ವರೂಪವೇ ಸರಿಯಾಗಿ ತಿಳಿಯದಿದ್ದರೆ ಅದಕ್ಕೆ ಸೂಚಿಸುವ ಪರಿಹಾರಗಳೂ ವ್ಯರ್ಥವಾಗುತ್ತವೆ. ಸಮಾಜ, ಶಿಕ್ಷಣ ಮತ್ತು ಉನ್ನತ ಸಂಶೋಧನೆಗಳಲ್ಲಿ ಸಮಸ್ಯೆಯ ಸ್ವರೂಪ ಯಾವುದು ಎಂಬುದನ್ನು ಅರಿಯುವ ಕೆಲಸ ನಡೆಯುತ್ತಿಲ್ಲ. ಆದರೆ ಪರಿಹಾರ ಸೂಚಿಸುವ ಯಾಂತ್ರಿಕ ಕೆಲಸಗಳು ನಡೆಯುತ್ತಿವೆ. ಅದರಿಂದಾಗಿ ಸಮಸ್ಯೆಯ ಸ್ವರೂಪಕ್ಕೂ ಮತ್ತು ಸೂಚಿತ ಪರಿಹಾರದ ಸ್ವರೂಪಕ್ಕೂ ತಾಳ ಮೇಳವೇ ಬೀಳುತ್ತಿಲ್ಲ. ಹಾಗಾಗಿ ಸಾಹಿತ್ಯ ಸಂಶೋಧನೆಯಲ್ಲಿ ವಿದ್ಯಾರ್ಥಿಗಳಿಗೆ ಎದುರಾಗುತ್ತಿರುವ ಸಮಸ್ಯೆಗಳು ಯಾವುವು ಎಂಬುದನ್ನು ವಿವರಿಸಬೇಕಾಗುತ್ತದೆ. ಅದರ ಬೆಳಕಿನಲ್ಲಿ ಅವುಗಳಿಗೆ ಕೆಲವು ದಾರಿಗಳನ್ನು ತೋರಿಸಬೇಕಾಗುತ್ತದೆ. ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಇದರ ದೊಡ್ಡ ಕೊರತೆ ಕಂಡುಬರುತ್ತಿದೆ. ಪ್ರಸ್ತುತ ಕೃತಿಯಲ್ಲಿ ಸಾಹಿತ್ಯವನ್ನು ಇದುವರೆಗೆ ಅರ್ಥೈಸಿರುವ ಮಿತಿಗಳನ್ನು ಮತ್ತು ಸಮಸ್ಯೆಗಳನ್ನು ವಿವರವಾಗಿ ಬಿಡಿಸಿಡಲಾಗಿದೆ. ಭಾರತೀಯ ಕಾವ್ಯ ಮೀಮಾಂಸೆ, ನಿಘಂಟಿನ ಅರ್ಥಗಳು, ಸಾಹಿತ್ಯ ಚರಿತ್ರೆಗಳು, ವ್ಯಕ್ತಿ ಗೌರವ, ಜಾಗತೀಕರಣ, ಎನ್.ಜಿ.ಓ. ಗಳಂತಹ ವೈಚಾರಿಕ ಆಕೃತಿಗಳು ಸಮಾಜ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಗ್ರಹಿಸುವಲ್ಲಿ ಹೇಗೆ ತೊಡಕಾಗಿವೆ ಎಂಬುದನ್ನು ಪ್ರಸ್ತುತ ಕೃತಿಯಲ್ಲಿ ಎಳೆಯೆಳೆಯಾಗಿ ಬಿಡಿಸಿಡಲಾಗಿದೆ.

ಸಾಹಿತ್ಯ ಓದಿನ ಗ್ರಹಿಕೆಯ ನೆಲೆಗಳು ಸಾಮಾಜಿಕ ಮೌಲ್ಯ ಮತ್ತು ಸಾಮಾಜಿಕ ನಂಬಿಕೆಗಳಿಂದಲೂ ಪ್ರೇರಣೆ ಪಡೆದಿರುತ್ತವೆ. ವಿಮರ್ಶಕರ ಬಗೆಗಿನ ಸಾಹಿತ್ಯ ಚರಿತ್ರೆಗಳ ಪೂರ್ವ ತೀರ್ಮಾನಗಳು ಸಾಹಿತ್ಯ ಓದನ್ನು ನಿಯಂತ್ರಿಸಿರುವ ಬಗೆಯನ್ನು ಮತ್ತು ಅವುಗಳಿಂದ ಬಿಡಿಸಿಕೊಳ್ಳುವ ದಾರಿಗಳು ಯಾವುವು ಎಂಬುದನ್ನು ವಿವರವಾಗಿ ಈ ಕೃತಿ ಶೋಧಿಸಿದೆ. ಇಡೀ ವಿದ್ಯಾರ್ಥಿ ಸಮೂಹವನ್ನು ಸ್ವತಂತ್ರ ಆಲೋಚನೆಯಲ್ಲಿ ತೊಡಗಿಸಿಲ್ಲವಾದ ಕಾರಣ ಅದು ಸಂಶೋಧನೆಯಲ್ಲಿ ಸ್ಥಾಪಿತ ತೀರ್ಮಾನಗಳನ್ನು ತಮ್ಮವೆಂದೇ ನಂಬುವಂತೆ ಮಾಡಲಾಗಿರುವುದನ್ನು ಆಳವಾಗಿ ಪರಿಶೀಲಿಸಲಾಗಿದೆ. ಆ ಮುಲಕ ಸಂಶೋಧಕರು ಸಮಾಜ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಸ್ವತಂತ್ರ ಆಲೋಚನೆಯ ಮೂಲಕ, ಪ್ರಶ್ನೆ, ಸಂದೇಹ ಮತ್ತು ಭಿನ್ನಮತಗಳ ಮೂಲಕ ನೋಡಿದಾಗ ಮಾತ್ರ ಸಂಶೋಧನೆಯು ಶುರುವಾಗುತ್ತದೆ ಎಂಬುದನ್ನು ಈ ಕೃತಿಯಲ್ಲಿ ಒತ್ತಿ ಹೇಳಲಾಗಿದೆ.

ಪ್ರಸ್ತುತ ಕೃತಿಯು ಸಾಹಿತ್ಯ ಸಂಶೋಧನೆಯನ್ನು ಕೇಂದ್ರೀಕರಿಸಿಕೊಂಡಿದ್ದರೂ ಕೂಡ ಅದನ್ನು ಸರಳವಾಗಿ ಮತ್ತು ಏಕಮುಖವಾಗಿ ಪರಿಚಯಿಸುವುದಿಲ್ಲ. ಔಪಚಾರಿಕ ಶಿಕ್ಷಣದ ತಾತ್ವಿಕ ಸಮಸ್ಯೆಗಳು, ಪ್ರಸ್ತುತ ಅಂತರರಾಷ್ಟ್ರೀಯ ರಾಜಕಾರಣ, ಬಂಡವಾಳಶಾಹಿ ಅಭಿವೃದ್ಧಿ ಮಾದರಿಗಳು, ಸಾಮ್ರಾಜ್ಯಶಾಹಿ ಮಾರುಕಟ್ಟೆಯ ಹುನ್ನಾರುಗಳು, ಮುಂದುವರಿಯುತ್ತಿರುವ ಆರ್ಥಿಕ ಸಾಮಾಜಿಕ ಅಸಮಾನತೆಗಳು, ಸ್ಥಾಪಿತ ಸಾಮಾಜಿಕ ನಂಬಿಕೆಗಳು ಹಾಗೂ ಮೌಲ್ಯಗಳು ಇವೆಲ್ಲ ಒಟ್ಟಾಗಿ ಸೇರಿ ಸಂಶೋಧನೆಯ ಧೋರಣೆ ಮತ್ತು ವಿಧಾನಗಳನ್ನು ಪ್ರಭಾವಿಸುತ್ತಿರುವ ಹಾಗೂ ನಿಯಂತ್ರಿಸುತ್ತಿರುವ ಗಂಭೀರ ವಿಶ್ಲೇಷಣೆ ಇದರಲ್ಲಿದೆ. ಜೊತೆಗೆ ಹೊಸ ದೃಷ್ಟಿಕೋನಗಳ, ಹೊಸ ವಿಧಾನಗಳ ನಿರ್ಮಾಣದ ಸಾಧ್ಯತೆಗಳ ಕಡೆಗೂ ಸೂಕ್ಷ್ಮ ಒಳನೋಟಗಳಿವೆ. ಆ ಮೂಲಕ ಸಂಶೋಧನೆಯ ಧೋರಣೆಗಳನ್ನು ಹಾಗೂ ವಿಧಾನಗಳನ್ನು ಬದಲಾಯಿಸಬೇಕಾದ ಅನಿವಾರ್ಯತೆಯನ್ನೂ ಮತ್ತು ಅದರ ಅಗತ್ಯವನ್ನೂ ಈ ಕೃತಿ ಒತ್ತಿ ಹೇಳಿದೆ. ಈ ದೃಷ್ಟಿಯಿಂದ ಇದು ಈ ಕ್ಷೇತ್ರದಲ್ಲಿ ಬಂದ ಅಪರೂಪದ ಕೃತಿ. ಇಂತಹ ಮಹತ್ವದ ಕೃತಿಯನ್ನು ರಚಿಸಿದ ಬಿ.ಎಂ. ಪುಟ್ಟಯ್ಯನವರಿಗೆ ಅಭಿನಂದನೆಗಳು.

ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನ ಮೂರ್ತಿ ಅವರಿಗೆ ಅಭಾರಿಯಾಗಿದ್ದೇನೆ.

ಡಾ. . ಮುರಿಗೆಪ್ಪ
ಕುಲಪತಿ