Categories
ನಾಡಿಗೆ ನಮಸ್ಕಾರ ಪುಸ್ತಕ ಸರಣಿ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಸಮಾಜಮುಖಿ ಯೋಜಕ – ಕೆ. ಕೆ. ಪೈ

“ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷತೆಯಿದೆ. ಜತೆಗೆ ವಾಣಿಜ್ಯ, ವಿದ್ಯೆ ಮುಂತಾದ ಅಭಿವೃದ್ಧಿ ಪೂರಕ ವಿಭಾಗಗಳಲ್ಲಿ ಈ ಪ್ರದೇಶ ಅಳಿಸಲಾಗದ ಹೆಜ್ಜೆಗಳನ್ನು ಮೂಡಿಸಿ ಭಾರತದ ಇತಿಹಾಸದಲ್ಲಿ ಗಣನೀಯ ಸ್ಥಾನ ಹೊಂದಿರುವುದು ಹೆಮ್ಮೆಯ ವಿಷಯ. ಪರಸ್ಪರ ಸಾಮರಸ್ಯ ಹಾಗೂ ವಿವಿಧ ಭಾಷೆಗಳ ಬಗ್ಗೆ ಒಲವು ಈ ಪ್ರದೇಶದ ಹೆಗ್ಗಳಿಕೆ. ಈ ಎಲ್ಲ ಸಿದ್ಧಿ ಸಾಧನೆಗಳ ಪರಿಚಯ ನಾಡಿನ ಜನತೆಗೆ ಈ ಸಮ್ಮೇಳನ ಮೂಲಕ ಆಗಬೇಕೆಂದು ನನ್ನ ಬಯಕೆ. 2007ರ ದಶಂಬರ ತಿಂಗಳ ಮಧ್ಯ ಭಾಗದಲ್ಲಿ ಉಡುಪಿಯಲ್ಲಿ ಜರಗಿದ ಅಖಿಲಭಾರತ ಕನ್ನಡ ಸಮ್ಮೇಳನದ ಕುರಿತು ಸ್ವಾಗತ ಸಮಿತಿಯ ಅಧ್ಯಕ್ಷ ಶ್ರೀ ಕೆ.ಕೆ. ಪೈಗಳು ಸಮ್ಮೇಳನದ ಸ್ಮರಣ ಸಂಚಿಕೆ ‘ಮೋಹನ ಮುರಳಿಯಲ್ಲಿ ವ್ಯಕ್ತಪಡಿಸಿದ ಅವರ ಅಂತರಾಳದಿಂದ ಮೂಡಿಬಂದ ಈ ಮಾತುಗಳು ಇವರ ಒಟ್ಟಾರೆ ಕಾಳಜಿಗೆ ಕನ್ನಡಿ ಹಿಡಿಯುತ್ತವೆ.

ಸುಮಾರು ನಾಲ್ಕು ದಶಕಗಳ ಹಿಂದೆ ಕೂಡ ಉಡುಪಿಯಲ್ಲಿ ಅಖಿಲ ಭಾರತ ಕನ್ನಡ ಸಮ್ಮೇಳನ ಜರುಗಿದಾಗ ಪೈಗಳು ತೋರಿಸಿದ್ದು ಇದೇ ತೆರನಾದ ಕಾಳಜಿ. ಆಗ ಮಾತೃಭಾಷಾ ಪ್ರೇಮಿಗಳಿಗೊಂದು ಸವಾಲು ಕೂಡಾ ಅವರು ಹಾಕಿದ್ದರು. ಶ್ರೀ ಕೆ. ಕೆ. ಪೈಯವರಿಗೆ ತಮ್ಮ ಮಾತೃಭಾಷೆ ಕೊಂಕಣಿ ಎಂದರೆ ಅಮಿತ ಆದರ, ಅಭಿಮಾನ. ಕೊಂಕಣಿಗೆ ಲಿಪಿ ಇಲ್ಲವೆನ್ನುವಿರೇ? ಇದೆ ಎನ್ನುತ್ತಾರೆ ಅವರು. ಮೊಹೆಂಜದಾರೊ ನಾಗರಿಕತೆಯ ಕಾಲದಲ್ಲಿ ಆ ಕಾಲದ ಜನರು ಒಂದು ಲಿಪಿಯನ್ನು ಬಳಸಿದ್ದಾರೆ. ಅದನ್ನು ಇನ್ನೂ ಓದಲು ಸಾಧ್ಯವಾಗಲಿಲ್ಲ. ಕೊಂಕಣಿ ಭಾಷೆ ಬಲ್ಲವರೊಬ್ಬರು ಅಲ್ಲಿನ ಲಿಪಿಗಳನ್ನು ಓದಲು ಯತ್ನಿಸಬೇಕು ಎಂದು ಒಂದೊಮ್ಮೆ ಮುಂಬಯಿಯಲ್ಲಿ ಜರಗಿದ ಅಖಿಲ ಭಾರತದ ಸಾಂಸ್ಕೃತಿಕ ಸಂಘದ ಸಮಾವೇಶದ ತುಂಬಿದ ಸಭೆಯಲ್ಲಿ ಅವರು ಕರೆಯನ್ನಿತ್ತಿದ್ದರು. ಮೊಹೆಂಜದಾರೊದ ಲಿಪಿ ಕೊಂಕಣಿಯ ಲಿಪಿ ಎಂದು ಶ್ರೀ ಕೆ. ಕೆ. ಪೈಯವರ ಅಭಿಪ್ರಾಯ.

ಇವರ ಇಂಥ ಕಾಳಜಿ ಸಾಹಿತ್ಯ ಸಮ್ಮೇಳನಕ್ಕೆ ಮಾತ್ರ ಸೀಮಿತವಾದುದಲ್ಲ. ಉಡುಪಿಯಲ್ಲಿ ಜರಗುವ ಯಾವುದೇ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿರಲಿ ಅಲ್ಲಿ ಪೈಗಳ ಉಪಸ್ಥಿತಿ ಅತೀ ಮುಖ್ಯ. ಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದಲ್ಲಿ ಇವರು ಪರ್ಯಾಯ ಮಹೋತ್ಸವದ ಅವಿಭಾಜ್ಯ ಅಂಗವೆಂದರೂ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ತನ್ನ ವಿಶಿಷ್ಟ ವ್ಯಕಿತ್ವದಿಂದ ಉಡುಪಿಯ ಜನಮಾನಸದಲ್ಲಿ ಅಳಿಸಲಾರದ ಛಾಪು ಮೂಡಿಸಿದವರಲ್ಲಿ ಪೈಗಳೂ ಕೂಡ ಒಬ್ಬರು. ಇವರ ಆಸಕ್ತಿಗಳ ಹರವು ವಿಶಾಲ. ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ, ಸಂಘಟನೆ, ಮಾತುಗಾರಿಕೆ, ಜತೆಗೆ ಇವರೊಬ್ಬ ಸಮರ್ಥ ಬ್ಯಾಂಕರ್. ಒಬ್ಬ ಬ್ಯಾಂಕರ್ ಆಗಿ ಇವರು ಏರಿದ ಎತ್ತರಕ್ಕೆ ಮಾತುಗಳೇ ಇಲ್ಲ. ಇದೆಲ್ಲ ಇವರಿಗೆ ಹೇಗೆ ಸಾಧ್ಯವಾಯಿತು? ಏಕೆಂದರೆ ಇವರು ಸಾಧನೆಯ ಹಿಂದೆ ಬಿದ್ದವರು.

The heights by great men reached and kept
Were not attained by sudden  flight
But they while their companions slept
Were toiling upward in the night.  (H.W.Long fellow)

ಕವಿ ಚಿಂತಕ ಲಾಂಗ್‌ಫೆಲೋನ ಕವಿತೆಯ ಈ ಸಾಲುಗಳು ಪೈಗಳ ಮಟ್ಟಿಗೆ ಅಕ್ಷರಶಃ ಅನ್ವಯವಾಗುವಂತಿವೆ. ಪೈಗಳ ದಿನಚರಿಯ ಒಳಹೊಕ್ಕು ಒಂದು ಇಣುಕು ನೋಟ ಬೀರಿದರೆ ಇದನ್ನು ಸಾಬೀತುಪಡಿಸುವ ಹಲವಾರು ಘಟನೆಗಳು ನಮ್ಮ ಕಣ್ಣು ಮುಂದೆ ಬಿಚ್ಚಿಕೊಳ್ಳುತ್ತವೆ. ಇವೆಲ್ಲ ಗುಣಗಳು ಪೈಗಳಲ್ಲಿ ಒಂದಾಗಿ ಮೇಳೈಸಿದ್ದು ಹೇಗೆ? ಅದು ವಂಶಪಾರಂಪರ್ಯವಾಗಿ ಅವರಲ್ಲಿ ಹರಿದು ಬಂದ ರಕ್ತ ಗುಣವೆ? ಇದನ್ನು ಅರಿಯಲು ಕಾಲನ ಪರದೆಯನ್ನು ಕೊಂಚ ಸರಿಸಿ ನಾವು ಒಂದಿಷ್ಟು ನೇಪಥ್ಯಕ್ಕೆ ಹೋಗಬೇಕು.

ಪೈಗಳ ಪೂರ್ವಜರು

ಸುಮಾರು ಒಂದು ಶತಮಾನಕ್ಕೂ ಹಿಂದೆ ಉಡುಪಿಯ ಕಲ್ಲುಸಂಕ ಪ್ರದೇಶದಲ್ಲಿ ವಾಸ ಮಾಡಿಕೊಂಡಿದ್ದ ಪೈಗಳ ಹಿರೀಕರು ಕಲ್ಸಂಕ(ಕಲ್ಲುಸಂಕ) ಮನೆಯವರೆಂದೇ ಊರವರಿಂದ ಗುರುತಿಸಲ್ಪಡುತ್ತಿದ್ದರು. ಪೈಗಳ ಅಜ್ಜ ನಡು ಹರೆಯದಲ್ಲೇ ಅಕಾಲಿಕವಾಗಿ ತೀರಿಕೊಂಡಾಗ ಎರಡು ಹೆಣ್ಣು ಮಕ್ಕಳು ಮತ್ತು ಆರು ಗಂಡು ಮಕ್ಕಳಿರುವ ಸಂಸಾರದ ಹೊಣೆ ಪೈಗಳ ವಿಧವೆ ಅಜ್ಜಿಯ ಹೆಗಲ ಮೇಲೆ. ತನ್ನ ಕುಟುಂಬಕ್ಕೆರಗಿದ ಅನಿರೀಕ್ಷಿತ ಆಘಾತದಿಂದ ಆ ಹೆಣ್ಣು ಮಗಳು ಧೃತಿಗೆಡಲಿಲ್ಲ. ಒಬ್ಬ ಹೊಣೆಯರಿತ ತಾಯಿಯಾಗಿ ಅಷ್ಟು ಮಕ್ಕಳ ಸಂಸಾರದ ರಥವನ್ನು ಮುನ್ನಡೆಸುವ ಸಾರಥ್ಯವನ್ನು ಕೈಗೆತ್ತಿಕೊಂಡಳು. ಇದಕ್ಕಾಗಿ ಆಕೆ ಕಂಡುಕೊಂಡ ಉಪಾಯ ಎಂದರೆ ಮನೆಯಲ್ಲಿ ತಿಂಡಿತಿನಿಸು ಮಾಡಿ ಮಕ್ಕಳ ಮೂಲಕ ಮಾರಾಟ ಮಾಡಿಸಿ ಬಂದ ದುಡ್ಡಿನಿಂದ ಮನೆಯಲ್ಲಿ ಎರಡು ಹೊತ್ತಿನ ಗಂಜಿಗೆ ಕೊರತೆಯಾಗದಂತೆ ನೋಡಿಕೊಂಡದ್ದು. ಆಪತ್ತು ಇದಿರಾದಾಗ ಮುಂದಾಳುತನ ವಹಿಸಿ ಪರಿಹಾರೋಪಾಯಗಳನ್ನು ಕಂಡುಕೊಂಡ ಅನೇಕ ಮಹಿಳೆಯರ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಇದು ಕೂಡ ಅಂತಹದೇ ಒಂದು ಉದಾಹರಣೆ. ಈಕೆ ತಯಾರಿಸುವ ತಿಂಡಿತಿನಿಸುಗಳು ಅವುಗಳ ಗುಣಮಟ್ಟದಿಂದಾಗಿ ಮನೆಮಾತಾಗಿ ಇವರ ತಯಾರಿಕೆಗೆ ಒಳ್ಳೆಯ ಬೇಡಿಕೆ ಬಂದು ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂತು ಎನ್ನುವಾಗ ಉಡುಪಿಯ ರಥಬೀದಿಯಲ್ಲಿ ಇವರದೊಂದು ಪುಟ್ಟ ದಿನಸಿ ಅಂಗಡಿ ಪ್ರಾರಂಭವಾಯಿತು. ದಿನಸಿ ಅಂಗಡಿಯಲ್ಲೂ ಗುಣಮಟ್ಟ ಕಾಯ್ದುಕೊಂಡು ಬಂದ ಕಾರಣ ವ್ಯಾಪಾರ ವೃದ್ಧಿಸಿತು. ಅಂಗಡಿಯ ವ್ಯವಹಾರದಲ್ಲಿ ತೀಕ್ಣಮತಿ ಕೊನೆಯ ಮಗ ವೆಂಕಟರಾಯನದ್ದೇ ಹೆಚ್ಚಿನ ಜವಾಬ್ದಾರಿ. ಸಂತೆಯ ಮುನ್ನಾದಿನ ಕಾಲು ನಡಿಗೆಯಲ್ಲಿ ಬೆಲ್ಲಕ್ಕೆ ಹೆಸರು ಮಾಡಿದ ಕುಂದಾಪುರ ತಲುಪಿ ಅಲ್ಲಿಂದ ಬೆಲ್ಲದ ಡಬ್ಬಿ ಗಳ ಖರೀದಿ, ಅಕ್ಕ ಪಕ್ಕದ ಹಳ್ಳಿಗಳಿಗೆ ಕಾಲ್ನಡಿಯಲ್ಲಿ ಹೋಗಿ ರೈತರಿಂದ ಒಳ್ಳೆಯ ಅಕ್ಕಿ, ಉದ್ದು, ಮೆಣಸು, ಹುರುಳಿ, ಅವಡೆ ಮತ್ತಿತರ ಧಾನ್ಯಗಳ, ಸಾಂಬಾರ ದಿನಸಿಗಳ ಖರೀದಿ ಹೀಗೆ ಎಲ್ಲದರಲ್ಲೂ ಗುಣಮಟ್ಟಕ್ಕೆ ಪ್ರಾಶಸ್ತ್ಯ ಕೊಟ್ಟ ಕಾರಣ ಗಿರಾಕಿಗಳಿಗೆ ಒಳ್ಳೆಯ ಮ್ಹಾಲು ಸಿಕ್ಕಿ ವ್ಯಾಪಾರ ವೃದ್ಧಿಸಲು ಬಹಳ ಸಮಯ ಬೇಕಾಗಲಿಲ್ಲ. ಜತೆಗೆ ಯುವಕ ವೆಂಕಟ್ರಾಯ ಮಾತಿನಲ್ಲಿ ಜಾಣ. ತನ್ನ ಚೆಂದದ ಮಾತುಗಳಿಂದಲೇ ಗಿರಾಕಿಗಳನ್ನು ಸೆಳೆಯುವ ಮಾತುಗಾರಿಕೆ ಮತ್ತೆ ಗಿರಾಕಿಗಳ ಬಗ್ಗೆ ಕಾಳಜಿ ಅವನಲ್ಲಿತ್ತು. ಎಂದೇ ನಂಬಿಗಸ್ಥ ವ್ಯಾಪಾರಿ ಎಂಬ ಹೆಸರು ಅವನಿಗೆ ಸಿಗಲು ತಡವಾಗಲಿಲ್ಲ. ಜಾತಿ ಮತ ಎಂಬ ಬೇಧವೆಣಿಸದೆ ಬಡವ ಬಲ್ಲಿದ ಎಂಬ ತಾರತಮ್ಯ ಮಾಡದೇ ಎಲ್ಲರನ್ನು ಸಮನಾಗಿ ನೋಡುವ ದೃಷ್ಟಿಕೋನ ಬೆಳೆಸಿಕೊಂಡ ಕಾರಣದಿಂದಲೇ ವೆಂಕಟ್ರಾಯ ಎಲ್ಲರಿಗೂ ಬೇಕಾದವನಾಗಿದ್ದ. ಹೀಗಾಗಿ ಉಡುಪಿಯ ಗಣ್ಯವ್ಯಕ್ತಿಗಳ ಹಾಗೂ ಮಠದ ಸಂಪರ್ಕ ವೆಂಕಟ್ರಾಯನಿಗೆ ನಿಕಟವಾಯಿತು ಎಂದು ಬೇರೆ ಹೇಳಬೇಕಾಗಿಲ್ಲ. ಯುವಕ ವೆಂಕಟ್ರಾಯ  ಉಡುಪಿ ಪರಿಸರದ ಒಬ್ಬ ಗಣ್ಯ ವ್ಯಕ್ತಿಯಾಗಲು ತಡವಾಗಲಿಲ್ಲ.

ಜನನ, ಬಾಲ್ಯ, ವಿದ್ಯಾಭ್ಯಾಸ

ಸೂಕ್ತ ಸಮಯದಲ್ಲಿ ಯುವಕ ವೆಂಕಟ್ರಾಯನಿಗೆ ಬ್ರಹ್ಮಾವರದ ಪೈ ಕುಟುಂಬದ ಸುಂದರಿ ಎಂಬ ಅನುರೂಪ ಕನ್ಯೆಯೊಡನೆ ಲಗ್ನವಾಯಿತು. ಬ್ರಹ್ಮಾವರದ ಪೈ ಕುಟುಂಬದ ಸುಂದರಿ ಕಲ್ಸಂಕ ಕುಟುಂಬಕ್ಕೆ ಸೇರಿದ ಮೇಲೆ ಪ್ರಚಲಿತ ವಾಡಿಕೆಯಂತೆ ದುರ್ಗಮ್ಮ ನಾದಳು. ಈಗ ವೆಂಕಟ್ರಾಯನ ಗೃಹಸ್ಥ ಜೀವನಕ್ಕೆ ಚಾಲನೆ ಸಿಕ್ಕಿ ಇಷ್ಟರ ತನಕ ಎಲ್ಲರಿಗೂ ವೆಂಕಟ್ರಾಯನಾಗಿದ್ದವ ಅನಂತರದ ದಿನಗಳಲ್ಲಿ ಎಲ್ಲರ ಬಾಯಿಯಲ್ಲಿ ವೆಂಕಟ್ರಾಯರಾದರು. ಮದುವೆಯಾುದ ಹೊಸತರಲ್ಲಿ ಹುಟ್ಟಿದ ಮೊದಲ ಕೂಸು ಹೆಣ್ಣು. ಜನ್ಮ ನಕ್ಷತ್ರ ಪ್ರಕಾರ ಮಗುವಿಗೆ ಸುಶೀಲ ಎಂದು ನಾಮಕರಣ ಮಾಡಲಾಯಿತು. ಅನಂತರ ಏಳೆಂಟು ವರ್ಷ ಮನೆಯಲ್ಲಿ ಮಕ್ಕಳು ಹುಟ್ಟಲಿಲ್ಲ. ಇದೇ ವ್ಯಥೆ ದಂಪತಿಗಳನ್ನು ಕಾಡುತ್ತಿದ್ದಾಗ ತಿರುಪತಿಗೆ ಹೋಗುವ ಅನಿರೀಕ್ಷಿತ ಪ್ರಸಂಗ. ಅದು ಯೋಗಾ ಯೋಗವೇ ಇರಬೇಕು. ತಿರುಪತಿ ತಿಮ್ಮಪ್ಪನ ದರ್ಶನದ ವೇಳೆ ದಂಪತಿಗಳ ಮನದ ಕೊರಗನ್ನು ತಿಳಿದವರಂತೆ ದೇವಳದ ಅರ್ಚಕರು ದಂಪತಿಗಳ ಮನೋಕಾಮನೆ ಈಡೇರುವಂತೆ ದೇವರಲ್ಲಿ ಬೇಡಿ ವರಪ್ರಸಾದ ನೀಡಿದರು. ವಾಪಾಸು ಬರುವಾಗ ಶ್ರೀರಂಗಂ ಕ್ಷೇತ್ರದಲ್ಲಿ ಶ್ರೀರಂಗನಾಥ ದೇವರ ದರ್ಶನ ಲಾಭವೂ ಆಯಿತು. ಪುಣ್ಯಕ್ಷೇತ್ರಗಳ ಸಂದರ್ಶನದ ಫಲಶ್ರುತಿಯೆಂಬಂತೆ ಮುಂದಿನ ವರ್ಷದೊಳಗೆ 1921ರ ಜೂನ್ 26ರಂದು ಮನೆಯಲ್ಲಿ ಗಂಡು ಮಗುವಿನ ಜನನ. ತಿರುಪತಿ ತಿಮ್ಮಪ್ಪನ ವರಪ್ರಸಾದದಿಂದ ಹುಟ್ಟಿದ ಕಾರಣ ಗೋವಿಂದರಾಯನೆಂದೂ ಜತೆಗೆ ರಂಗನಾಥನ ದರ್ಶನದ ನೆನಪಿಗಾಗಿ ರಂಗನಾಥನೆಂದೂ ನಾಮಕರಣವಾದರೂ ಹೆತ್ತಮ್ಮನ ಮನದಾಳದ ಬಯಕೆ ಮೇಲುಗೈ ಪಡೆದು ಮಗುವಿಗೆ ಕಮಲಾಕ್ಷನೆಂಬ ಹೆಸರು ಶಾಶ್ವತವಾಯಿತು. ಮುಂದೆ ಪ್ರಭಾಕರ, ಚಂದ್ರಕಾಂತ, ಚಿತ್ರಾನಂದ ಎಂಬ ಇನ್ನೂ ಮೂವರು ಗಂಡು ಮಕ್ಕಳು ಹುಟ್ಟಿ ಮನೆ ನಂದಗೋಕುಲವಾಯಿತು.

ಕಮಲಾಕ್ಷ ಮಗುವಾಗಿದ್ದಾಗಿನ ಘಟನೆಯಿದು. ಒಂದು ದಿನ ನಡು ಮಧ್ಯಾಹ್ನ ಊಟ ಮುಗಿಸಿ ಅಳುತ್ತಿದ್ದ ಮಗುವನ್ನು ತೊಡೆಯ ಮೇಲೆ ಕುಳ್ಳಿರಿಸಿ ತಾಯಿ ದುರ್ಗಮ್ಮ ಬೀದಿ ಬಾಗಿಲ ಚಾವಡಿಯಲ್ಲಿ ಕುಳಿತಿದ್ದಳು. ಅದೇ ಸಾಯಂಕಾಲ ಏಕಾಏಕಿ ಮಗುವಿನ ಮೈಯಲ್ಲಿ ಸಿಡುಬಿನ ಗುರುತು ನೋಡಿ ದಂಪತಿಗಳು ಗಾಬರಿಯಾದರು. ಮಗು ಬೇಗ ಗುಣವಾದರೆ ಮುಂದೆ ಉಪನಯನ ಶಾಸ್ತ್ರ ತಿರುಪತಿಯಲ್ಲೇ ನೆರವೇರಿಸುವ ಹರಕೆ ಹೇಳಿಕೊಂಡದ್ದಾಯಿತು. ಮನೆಯ ದೈವ ಪಂಜುರ್ಲಿಗೆ ಕಾಣಿಕೆ ಎತ್ತಿಟ್ಟದ್ದೂ ಆಯಿತು. ಮತ್ತೆ ಉಡುಪಿಯ ಜನರ ಸಂಕಷ್ಟಗಳನ್ನು ಪರಿಹರಿಸುವ ತಾಯಿ ಎಂದೇ ಖ್ಯಾತಿ ಗಳಿಸಿದ ಅಂಬಲಪಾಡಿ ಅಮ್ಮನ ಮೊರೆ ಹೊಕ್ಕಾಗ ಅಮ್ಮನ ನುಡಿಯಾಯಿತು ನಾನು ಬರುವ ದಾರಿಯಲ್ಲಿ ನೀನು ಮಗುವನ್ನು ಹಿಡಿದು ಕುಳಿತಿದ್ದನ್ನು ಆಸೆಯಿಂದ ನೋಡಿದ್ದು ಹೌದು. ಅದು ಮಗುವಿನ ಮೇಲಣ ಪ್ರೀತಿಯಿಂದ ಹೊರತು ಕೆಟ್ಟ ದೃಷ್ಟಿ ಯಿಂದಲ್ಲ. ಮಗುವಿನ ಮೇಲೆ, ನಿಮ್ಮ ಕುಟುಂಬದ ಮೇಲೆ ನನ್ನ ಆಶೀರ್ವಾದ ಸದಾ ಇದೆ ಎಂದು ಸಂಕೇತಿಸಲು ಈ ಹೂವಿನ ಎಸಳುಗಳನ್ನು ಚೆಲ್ಲುತ್ತಿದ್ದೇನೆ. ತೆಗೆದುಕೊ ಪ್ರಸಾದ ಎಂದು ದರ್ಶನದ ಆವೇಶದಲ್ಲಿ ಪಾತ್ರಿ ಕೊಟ್ಟ ಪ್ರಸಾದ ಸ್ವೀಕರಿಸಿದ ಮೇಲೆ ಮಗುವಿನ ಸೋಂಕು ಹೋಯಿತಲ್ಲದೇ ಸ್ವಲ್ಪ ದಿನಗಳಲ್ಲಿ ಮಗುವಿನ ಮೈಮೇಲಿನ ಸಿಡುಬಿನ ಕಲೆಗಳೂ ಮಾಯವಾದವು.

ತನ್ನ ಮಕ್ಕಳು ವಿದ್ಯಾವಂತರಾಗಬೇಕು, ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಬೇಕು ಎಂಬ ಹಂಬಲ ವೆಂಕಟ್ರಾಯ ಪೈಗಳದ್ದು. ಮಗ ಕಮಲಾಕ್ಷನನ್ನು ಒತ್ತಿನವನಾದ ಪ್ರಭಾಕರನೊಂದಿಗೆ ಹತ್ತಿರದ ಕಡಿಯಾಳಿ ಶಾಲೆಯಲ್ಲಿ ದಾಖಲಿಸಿದರು. ಇಬ್ಬರಿಗೂ ಪ್ರಾಯದಲ್ಲಿ ಎರಡು ವರ್ಷಗಳ ಅಂತರ. ತರಗತಿಯ ಪಾಠಗಳ ಹೊರತಾಗಿ ಉಳಿದ ಆಟೋಟಗಳಲ್ಲಿ ಅಣ್ಣತಮ್ಮಂದಿರಿಬ್ಬರೂ ಜತೆಜತೆಯಾಗಿಯೇ ಇರುತ್ತಿದ್ದರು. ಯಾವಾಗಲೂ ಅನ್ಯೋನ್ಯವಾಗಿ ಇರುತ್ತಿದ್ದ ಇವರನ್ನು ಎಲ್ಲರೂ ರಾಮಲಕ್ಷಣರೆಂದು ಕರೆಯುತ್ತಿದ್ದರು. ಶಿಕ್ಷಣದ ಭದ್ರ ಬುನಾದಿ ತಮಗೆ ಕಡಿಯಾಳಿ ಶಾಲೆಯಲ್ಲಿಯೇ ಸಿಕ್ಕಿದ್ದು ಎಂದು ಪೈಗಳು ಯಾವಾಗಲೂ ಜ್ಞಾಪಿಸಿಕೊಳ್ಳುತ್ತಿದ್ದರು. ಆಗಿನ ಕಡಿಯಾಳಿ ಶಾಲೆಯ ಮುಖ್ಯೋಪಾಧ್ಯಾಯ ವಾಸು ಶೆಟ್ಟರು ಶಿಸ್ತು ಮತ್ತು ದಕ್ಷತೆಗೆ ಹೆಸರಾದವರು. ಸ್ಕೌಟ್ ಮತ್ತು ಆಟೋಟಗಳನ್ನು ಎಲ್ಲೂರು ಸೋಮನಾಥ ರಾಯರು ಹೇಳಿ ಕೊಟ್ಟರೆ ಕಡಿಯಾಳಿ ರಾಮಚಂದ್ರ ಉಪಾಧ್ಯರು ಮಕ್ಕಳಲ್ಲಿ ಕನ್ನಡದ ಅಭಿಮಾನವನ್ನು ತಮ್ಮ ರಸವತ್ತಾದ ಪಾಠದ ಮೂಲಕ ಸೃಷ್ಟಿಸುತ್ತಿದ್ದುದು ಮುಂದೆ ತಾನೊಬ್ಬ ಕನ್ನಡ ಸಾಹಿತ್ಯದ ಅಭಿಮಾನಿಯಾಗಿ ಬೆಳೆಯಲು ಸಹಕಾರಿಯಾಯಿತೆಂದು ಪೈಗಳ ಅನಿಸಿಕೆ. ಕಡಿಯಾಳಿ ಶಾಲೆಯಲ್ಲಿರುವಷ್ಟು ದಿನ ತಮಗೆಲ್ಲ ಕನ್ನಡ ಮೇಷ್ಟ್ರಾಗಿದ್ದ ರಾಮಚಂದ್ರ ಉಪಾಧ್ಯರು ಕನ್ನಡ ಕಲಿಸುತ್ತಿದ್ದುದರ ಜತೆಗೆ ಕಡಿಯಾಳಿ ದೇವಳದಲ್ಲಿ ಅವರು ಪ್ರತಿ ಶನಿವಾರ ಜೈಮಿನಿ ಭಾರತದ ಪಠಣ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿದ್ದರು. ಆಗ ಅಲ್ಲಿಗೆ ತಾನೊಬ್ಬ ಶ್ರೋತೃವಾಗಿ ಹೋಗುತ್ತಿದ್ದುದನ್ನು ಹೇಳಲು ಪೈಗಳು ಮರೆಯುತ್ತಿರಲಿಲ್ಲ.

ಶಾಲೆಯ ಪಠ್ಯೇತರ ಚಟುವಟಿಕೆಗಳಲ್ಲಿ ತಾವಿಬ್ಬರೂ ಅಣ್ಣತಮ್ಮಂದಿರು ಒಟ್ಟಿಗೆ ಭಾಗವಹಿಸುತ್ತಿದ್ದುದು ಮಾತ್ರವಲ್ಲ ಅಡುಗೆ ಮನೆಯ ಕೆಲಸಕಾರ್ಯಗಳಲ್ಲಿ ತಾಯಿಗೆ ಸಹಕರಿಸುತ್ತಿದ್ದುದನ್ನು ಪೈಗಳು ಆಗಾಗ ನೆನಪು ಮಾಡಿಕೊಳ್ಳುತ್ತಿದ್ದರು. ಅಡುಗೆ ಮನೆಯಲ್ಲಿ ತೆಂಗಿನಕಾಯಿ ತುರಿದು ಕೊಡುವುದು, ತರಕಾರಿ ತೊಳೆದು ಹೋಳು ಮಾಡಿಕೊಡುವುದು, ಹಬ್ಬ ಹರಿದಿನಗಳಲ್ಲಿ ದೇವರ ನೈವೇದ್ಯಕ್ಕಾಗಿ ಪಂಚಕಜ್ಜಾಯ ಹಾಗೂ ಇತರ ಭಕ್ಷ್ಯಗಳ ತಯಾರಿಕೆಯಲ್ಲಿ ತಾಯಿಗೆ ನೆರವಾಗುವುದು, ದಿನನಿತ್ಯ ಮುಂಜಾನೆ ಎದ್ದು ದೇವರ ಕೋಣೆ ಶುಚಿಮಾಡಿ ತಂದೆಯವರ ದೇವರ ಪೂಜೆಗೆ ಅಣಿ ಮಾಡುವುದು, ಅಷ್ಟೇ ಅಲ್ಲ ವಿದ್ಯುಚ್ಛಕ್ತಿ ಇನ್ನೂ ಬಂದಿರದ ಆ ದಿನಗಳಲ್ಲಿ ಸಂಜೆ ಹೊತ್ತು ಬೆಡ್‌ಲ್ಯಾಂಪ್, ಲಾಟೀನುಗಳ ಬುರುಡೆಗಳನ್ನು ಒರೆಸಿ ದೀಪ ಹಚ್ಚಿಡುವುದು ಇವೆಲ್ಲ ಶಾಲಾ ಓದಿನ ಜತೆಗೆ ತಮ್ಮ ದಿನಚರಿಯ ಭಾಗಗಳು ಎನ್ನುತ್ತಿದ್ದರು ಪೈಗಳು.

ತಂದೆ ವೆಂಕಟ್ರಾಯ ಪೈಗಳ ಸಾತ್ವಿಕ ಜೀವನ ತನ್ನ ಮೇಲೆ ಗಾಢ ಪ್ರಭಾವ ಬೀರಿತ್ತು ಎಂದೂ ಪೈಗಳು ನೆನಪಿಸಿಕೊಳ್ಳುತ್ತಿದ್ದರು. ಪೈಗಳು ಹೇಳುತ್ತಿದ್ದಂತೆ ತಂದೆ ವೆಂಕಟ್ರಾಯ ಪೈಗಳು ಹಾಸಿಗೆ ಬಿಟ್ಟೇಳುವುದು ನಸುಕಿನಲ್ಲಿಯೇ. ಎದ್ದೊಡನೆ ಮನೆಯಂಗಳದಲ್ಲಿನ ಹೂವು ತುಳಸಿ ಕೊಯ್ದು ದೇವರ ಕೋಣೆಯ ಮುಂದಿಟ್ಟು ಸ್ನಾನ ಇತ್ಯಾದಿ ಪ್ರಾತಃ ಕರ್ಮಗಳನ್ನು, ದೇವರ ಪೂಜೆಯನ್ನು ಮುಗಿಸಿ ತೆಗೆದಿಟ್ಟ ಒಂದಿಷ್ಟು ಹೂವುಗಳನ್ನು ಕಡಿಯಾಳಿ ಅಮ್ಮನಿಗೆ ನಂತರ ಮಠದ ಶ್ರೀಕೃಷ್ಣನಿಗೆ ಕೊಟ್ಟು ಪ್ರದಕ್ಷಿಣೆ ಹಾಕಿ ತೀರ್ಥ ಗಂಧಾಕ್ಷತೆ ಸ್ವೀಕರಿಸಿ ಮನೆಗೆ ಬಂದು ಬೆಳಗ್ಗಿನ ಉಪಾಹಾರ ಸ್ವೀಕರಿಸಿ ಅಂಗಡಿಗೆ ಹೋದರೆ ಮತ್ತೆ ಮಧ್ಯಾಹ್ನ ಮನೆಗೆ ಬಂದಾಗ ಊಟ ಮುಗಿಸಿ ಒಂದಿಷ್ಟು ಬಿಡುವು. ಅನಂತರ ಅಂಗಡಿಗೆ ಹೋದರೆ ಅವರು ಮನೆಗೆ ಮರಳುವುದು ಅಂಗಡಿಯ ಆಯಾ ದಿನದ ಲೆಕ್ಕ ಪತ್ರ ಪರಿಶೀಲನೆ ಮುಗಿಸಿ ರಾತ್ರಿ ಹತ್ತು ಹತ್ತೂವರೆ ನಂತರವೇ. ಪೈಗಳು ನೆನಪಿಸಿಕೊಳ್ಳುತ್ತಿದ್ದಂತೆ ಅವರ ತಂದೆ ಓರ್ವ ಸಾತ್ವಿಕ ಸ್ವಭಾವದ ಸ್ನೇಹ ಜೀವಿ ಹಾಗೂ ಧರ್ಮಭೀರು. ದೈನಂದಿನ ದೇವರ ದರ್ಶನ ಹಾಗೂ ಪೂಜೆ ಪುನಸ್ಕಾರಗಳನ್ನು ಅವರು ಎಂದೂ ತಪ್ಪಿಸಿದ್ದಿಲ್ಲ. (ಬ್ಯಾಂಕಿಗೆ ಹೋಗುವ ಮುನ್ನ ಪೈಗಳು ಕೂಡಾ ಮಗುಟ ಉಟ್ಟು ದಿನ ನಿತ್ಯ ಸುಮಾರು ಒಂದು ಗಂಟೆ ಕಾಲ ದೇವರ ಪೂಜೆ ಮಾಡಲಿಕ್ಕೆ ಅವರ ತಂದೆಯವರ ಪ್ರಭಾವ ಸಾಕಷ್ಟಿರಬಹುದು. ಪೈಗಳು ಯಾವತ್ತೂ ದೈನಂದಿನ ದೇವರ ಪೂಜೆ ತಪ್ಪಿಸಿಲ್ಲ ಎಂಬುದು ಅವರ ನಿಕಟವರ್ತಿಗಳ ಅಂಬೋಣ) ತನ್ನ ಅಂಗಡಿಗೆ ಬರುವ ಗ್ರಾಹಕರಿಗೆ ಗುಣ ಮಟ್ಟದ ದಿನಸಿ ಸಪ್ಲೈ ಮಾಡಲು ಪೈಗಳ ತಂದೆ ವೆಂಕಟ್ರಾಯರು ವಹಿಸುತ್ತಿದ್ದ ಕಾಳಜಿಯನ್ನು ಮಗ ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು. ಮಠಕ್ಕೆ ದಿನಸಿ ಒದಗಿಸುವುದು ಇವರ ಅಂಗಡಿಯಿಂದಲೇ. ಇವರ ಗಿರಾಕಿಗಳ ಮನೆಯಲ್ಲಿ ಮದುವೆ, ಮುಂಜಿ, ಸತ್ಯನಾರಾಯಣ ಪೂಜೆ ಮುಂತಾದ ಶುಭಕಾರ್ಯಗಳಿಗೆ ಗಿರಾಕಿಗಳು ಸಾಲದ ರೂಪದಲ್ಲಿ ದಿನಸಿ ಇವರಿಂದ ಪಡಕೊಂಡು ಅನಂತರ ನಿಧಾನವಾಗಿ ಸಾಲ ಪಾವತಿ ಮಾಡುವುದೂ ಇತ್ತು. ಹೀಗೆ ಜನತೆಯ ಜತೆ ಸ್ಪಂದಿಸುವಲ್ಲಿ ವೆಂಕಟ್ರಾಯ ಪೈಗಳಿಗೆ ಜಾತಿ ಮತಗಳ ಪ್ರಶ್ನೆ ಎಂದೂ ಅಡ್ಡಿ ಬಂದಿರಲಿಲ್ಲ. ತನ್ನ ತಂದೆ ತನಗೆ ಅನೇಕ ವಿಧದಲ್ಲಿ ರೋಲ್ ಮಾಡೆಲ್ ಎಂದು ಪೈಗಳು ಯಾವಾಗಲೂ ಜ್ಞಾಪಿಸಿಕೊಳ್ಳುತ್ತಿದ್ದುದಿದೆ. ತಾನು ಬ್ಯಾಂಕಿನ ವರಿಷ್ಠನಾಗಿದ್ದಾಗ ಕೆಲಸ ನೇಮಕಾತಿಯಲ್ಲಿ ತಂದೆಯವರ ಈ ಗುಣವೇ ತನಗೆ ಮಾರ್ಗದರ್ಶಕ ಎನ್ನುವುದು ಪೈಗಳ ಅಭಿಮತ. ಜಾತಿಮತಗಳನ್ನು ಗಣನೆಗೆ ತೆಗೆದುಕೊಳ್ಳದೇ ಬ್ಯಾಂಕಿನಲ್ಲಿ ನೇಮಕಾತಿ ನಡೆಸುವಲ್ಲಿ ಪೈಗಳು ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡಿದ್ದಾರೆ ಎಂದು ಜನ ಈಗಲೂ ನೆನಸಿಕೊಳ್ಳುತ್ತಾರೆ.

ಕಡಿಯಾಳಿ ಶಾಲೆಯ ಶಿಕ್ಷಣ ಮುಗಿಸಿ ಉಡುಪಿಯ ಬೋರ್ಡ್ ಹೈಸ್ಕೂಲಿಗೆ ಸೇರ್ಪಡೆಯಾದಾಗ ರಾಕಿ ಮಾಸ್ತರೆಂದೇ ಜನಪ್ರಿಯರಾಗಿದ್ದ (ಹಾಲಿ ಲೋಕಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸರ ತಂದೆ) ರಾಕಿ ಫೆರ್ನಾಂಡಿಸರು ಇವರಿಗೆ ಗುರುವಾಗಿ ಸಿಕ್ಕಿದರು. ಹೈಸ್ಕೂಲಿನಲ್ಲಿ ಕೂಡಾ ಪಾಠ ಮತ್ತು ಆಟೋಟಗಳಲ್ಲಿ ಇವರು ಸದಾ ಮುಂದು. ಹೈಸ್ಕೂಲು ಮುಗಿಸಿ ಮುಂದೆ ಮಂಗಳೂರಿನ ಸಂತ ಎಲೋಶಿಯನ್ ಕಾಲೇಜಿಗೆ ಸೇರ್ಪಡೆ. ಉತ್ತಮ ಅಂಕ ಗಳಿಸಿ ಇಂಟರ್ ಪಾಸಾದರೂ ತನ್ನ ಬಹುದಿನದ ಕನಸಾದ ಮೆಡಿಸಿನ್‌ಗೆ ಸೀಟು ದಕ್ಕಿಸಿಕೊಳ್ಳಲು ಇವರಿಗೆ ಸಾಧ್ಯವಾಗಲಿಲ್ಲ. ಆಗಿನ ಮದರಾಸು ಪ್ರಾಂತ್ಯದಲ್ಲಿ ಇದ್ದುದು ಎರಡೇ ಮೆಡಿಕಲ್ ಕಾಲೇಜುಗಳು. ಅಲ್ಲದೇ ಅಲ್ಲಿ ಪ್ರದೇಶವಾರು ಮತ್ತು ಜಾತಿವಾರು ಸೀಟು ಹಂಚಿಕೆಯ ಕಾರಣ, ಕರಾವಳಿ ಜಿಲ್ಲೆಗೆ ನಿಗದಿಪಡಿಸಿದ 3-4 ಬ್ರಾಹ್ಮಣರ ಸೀಟುಗಳ ಮಿತಿಯ ಕಾರಣ ಪೈಗಳಿಗೆ ಮೆಡಿಕಲಿಗೆ ದಾಖಲಾತಿ ಸಿಗಲಿಲ್ಲ. Man proposes, God disposes ಎಂದು ಹೇಳುವುದು ಇದಕ್ಕೆ ಇರಬೇಕು. ಮೆಡಿಕಲಿಗೆ ದಾಖಲಾತಿ ಸಿಕ್ಕಿದ್ದರೆ ವೈದ್ಯಕೀಯ ಕಲಿತು ಅವರೊಬ್ಬ ತಜ್ಞ ವೈದ್ಯರಾಗಬಹುದಿತ್ತು. ಹೆಸರೂ ಗಳಿಸಬಹುದಿತ್ತು. ಆದರೆ ಒಬ್ಬ ಉತ್ತಮ ಬ್ಯಾಂಕರನನ್ನು ಸಮಾಜ ಕಳೆದುಕೊಳ್ಳುತ್ತಿತ್ತು. ಹೀಗೆ ಕಾಣದ ಶಕ್ತಿಯೊಂದು ಪೈಗಳ ಭವಿಷ್ಯವನ್ನು ಬೇರೆ ರೀತಿಯಲ್ಲೇ ಬರೆದಿತ್ತು. ಅದಕ್ಕೆ ಪೂರಕವೆಂಬಂತೆ ವಾಣಿಜ್ಯಶಾಸ್ತ್ರ ಕಲಿಯಲು ಅವರು ಮುಂಬಯಿ ದಾರಿ ಹಿಡಿದರು. ಇದೇ ಇವರ ಜೀವನದ ಮಹತ್ತರ ತಿರುವು. ಇವರ ನಿಜವಾದ ವ್ಯಕ್ತಿತ್ವ ರೂಪುಗೊಳ್ಳಲು ಅಡಿಪಾಯ ಸಿಕ್ಕಿದ್ದು ಇದೇ ತಿರುವಿನ ಮುಖಾಂತರ

ಮುಂಬಯಿಯ ಹೆಸರಾಂತ Sydenham College of Commerce &    Economics ಕಾಲೇಜಿಗೆ ಸೇರ್ಪಡೆಯಾಗಿ ವಿದ್ಯಾಭ್ಯಾಸ ಸಾಗುತ್ತಿದ್ದಂತೆ ಅನೇಕ ಕ್ರಿಯಾತ್ಮಕ ಚಟುವಟಿಕೆಗಳಲ್ಲೂ ಇವರು ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಸಿಂಡಿಕೇಟ್ ಬ್ಯಾಂಕಿನ ರೂವಾರಿಗಳಾಗ ಬೇಕಾಗಿದ್ದ ಟಿ.ಎ.ಪೈ, ಹೆಚ್.ಎನ್.ರಾವ್, ಆರ್.ಕೆ.ಆಗಾಶೆ ಮುಂತಾದವರು ಪೈಗಳಿಗೆ ಅಲ್ಲಿ ಸಹಪಾಠಿಗಳಾಗಿ ದೊರಕಿದರು. ಕಾಲೇಜಿನ ಕನ್ನಡ ವಿದ್ಯಾರ್ಥಿಗಳನ್ನು, ಉಪನ್ಯಾಸಕರನ್ನು ಸೇರಿಸಿ ಪೈಗಳು ಕಾಲೇಜಿನಲ್ಲಿ ಪ್ರಪ್ರಥಮವಾಗಿ ಕರ್ನಾಟಕ ಸಂಘವನ್ನು ಹುಟ್ಟು ಹಾಕಿ ಅಲ್ಲಿ ಕನ್ನಡ ಧ್ವಜವನ್ನು ಹಾರಿಸಿಯೇ ಬಿಟ್ಟರು. ಕಾಲೇಜಿನಲ್ಲಿ ಆಗ ನಡೆಯುತ್ತಿದ್ದ ಕನ್ನಡ ಚಟುವಟಿಕೆಗಳ ರೂವಾರಿ ಇವರೇ. ಅಲ್ಲದೆ ಆಗ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಚಳುವಳಿ ಕಾವು ಪಡೆಯುತ್ತಿದ್ದ ಕಾಲ. ಮುಂಬಯಿ ಈ ಚಳುವಳಿಯ ಆಡೊಂಬುಲವಾಗಿತ್ತೆಂದು ಬೇರೆ ಹೇಳಬೇಕಿಲ್ಲ. ವಿದ್ಯಾರ್ಥಿ ಪೈಗಳು ಚಳುವಳಿಯಲ್ಲಿ ಕೂಡಾ ತನ್ನನ್ನು ಸಕ್ರಿಯ ತೊಡಗಿಸಿಕೊಂಡರು. ಮಾತೃ ಸಂಸ್ಥೆ ಕಾಂಗ್ರೆಸ್ ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣ ಹುಟ್ಟಿಕೊಂಡ ನೇತಾಜಿ ಸುಭಾಸ್‌ಬೋಸರ ನೇತೃತ್ವದ ಫಾರ್ವರ್ಡ್ ಬ್ಲಾಕ್ ಮೊತ್ತ ಮೊದಲು ಮುಂಬಯಿಯಲ್ಲಿ ಸಮಾವೇಶ ನಡೆಸಿದಾಗ ಅದರ ಸ್ವಾಗತ ಸಮಿತಿಯ ಓರ್ವ ಸದಸ್ಯನಾಗಿ ಉತ್ತಮ ಸಂಘಟಕನಾಗಿಯೂ ಇವರು ಗುರುತಿಸಿಕೊಂಡರು. ಆದರೆ ಪಠ್ಯೇತರ ಚಟುವಟಿಕೆಗಳು ತನ್ನ ಓದಿಗೆ ಎಂದೂ ಅಡ್ಡಿಯಾಗದಂತೆ ನೋಡಿಕೊಳ್ಳುವ ಜಾಣತನವೂ ಅವರಲ್ಲಿತ್ತು. ಇದು ಇವರ ದೃಢ ಮನೋಬಲದ ಸಂಕೇತ.

ಬ್ಯಾಂಕಿಂಗ್ ದೀಕ್ಷೆ ಮತ್ತು ವಿವಾಹ

1943ರಲ್ಲಿ ರ್ಯಾಂಕ್ ಗಳಿಸಿ ಕಾಮರ್ಸ್ ಪದವಿ ಗಳಿಸಿದ ಮೇಲೆ ಸ್ನಾತಕೋತ್ತರಕ್ಕೆ ಸೇರ್ಪಡೆಯಾಗುವ ಇಚ್ಛೆ ಇವರಿಗೆ ಇದ್ದರೂ ಸಿಂಡಿಕೇಟ್ ಬ್ಯಾಂಕಿಗೆ ಇವರ ಸೇವೆಯ ಅಗತ್ಯ ಹೆಚ್ಚಿನದಾಗಿದ್ದ ಕಾರಣ ಬ್ಯಾಂಕ್ ಸ್ಥಾಪಕರಾಗಿದ್ದ ಪೈಬಂಧುಗಳ ಆಶೆಯಂತೆ ಬ್ಯಾಂಕಿಗೆ ಸೇರ್ಪಡೆಯಾಗಬೇಕಾಯಿತು. ಮಗ ಬ್ಯಾಂಕಿಗೆ ಸೇರ್ಪಡೆ ಗೊಂಡದ್ದು ಹೆತ್ತವರಿಗೆ ಸಂತೋಷಕೊಟ್ಟಿತು. ಮಗ ಹುಟ್ಟಿದ್ದೇ ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ಮತ್ತೆ ಮುಂದೆ ಆತನ ಉಪನಯನ ಮತ್ತು ತುಲಾಭಾರಗಳು ತಿರುಪತಿ ದೇವರ ಸನ್ನಿಧಿಯಲ್ಲೇ ಜರಗಿದ್ದವು. ಮಗ ಈಗ ಈ ಹಂತಕ್ಕೆ ಏರಿರುವುದು ಎಲ್ಲ ದೇವರ ಅನುಗ್ರಹ ಎಂದು ಹೆತ್ತವರು ತಿಳಿದರು. ಮುಂಬಯಿಯ ಫೋರ್ಟ್‌ಬ್ರಾಂಚಿನ ಶಾಖೆಯಲ್ಲಿ ಇವರ ಮೊದಲ ಸೇರ್ಪಡೆ. ಬರಿಯ ಎಂಟು ಸಾವಿರ ರೂಪಾಯಿಗಳ ಬಂಡವಾಳದೊಡನೆ 1925ರಲ್ಲಿ ದಿವಂಗತ ಉಪೇಂದ್ರ ಪೈಗಳ ಕನಸಿನ ಕೂಸಾಗಿ ಹುಟ್ಟಿಕೊಂಡ ಈ ಬ್ಯಾಂಕು (ದಿ ಕೆನರಾ ಇಂಡಸ್ಟ್ರಿಯಲ್ ಎಂಡ್ ಬ್ಯಾಂಕಿಗ್ ಸಿಂಡಿಕೇಟ್) ಜನ ಸಾಮಾನ್ಯರ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಅದರ ಏಜಂಡಾಗಳನ್ನು ರೂಪಿಸಿಕೊಂಡ ಕಾರಣ ಬಲು ಬೇಗನೆ ಜನಪ್ರಿಯವಾಯಿತು.

ತರಕಾರಿ ಮಾರುವವರು, ದಿನಗೂಲಿ ನೌಕರರು, ಹೋಟೇಲು ಕಾರ್ಮಿಕರು ಹೀಗೆ ಕಡಿಮೆ ವರಮಾನದವರನ್ನು ದೃಷ್ಟಿಯಲ್ಲಿಟ್ಟುಕೊಂಡು ದಿವಂಗತ.ಡಾ.ಮಾಧವ ಪೈಗಳು ಪ್ರಾರಂಭಿಸಿದ ಪಿಗ್ಮಿ ಯೋಜನೆಯಂತೂ ಬ್ಯಾಂಕಿನ ಚರಿತ್ರೆಯಲ್ಲಿ ಒಂದು ಗ್ರ್ಯಾಂಡ್ ಸಕ್ಸಸ್. ಬ್ಯಾಂಕಿಗೆ ಸೇರ್ಪಡೆಯಾದ ಕೆಲವೇ ತಿಂಗಳುಗಳೊಳಗೆ ಮುಂಬಯಿಯ ಫೋರ್ಟ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕೆ.ಕೆ. ಪೈಗಳು ತಮ್ಮ ತಂಗಿ ಸಗುಣಾಗೆ ತಕ್ಕ ವರ ಎಂದು ಟಿ.ಎ.ಪೈಗಳು ಭಾವಿಸಿದ ಕಾರಣ ಅವರ ಮೂಲಕ ವಿಷಯ ಹಿರಿಯರ ಸಮ್ಮುಖಕ್ಕೆ ಬಂದು ಮದುವೆ ವಿಜೃಂಭಣೆಯಿಂದ ನಡದೇ ಹೋಯಿತು. ಮದುವೆಯ ಮೆರವಣಿಗೆಯಲ್ಲಿ ಎರಡು ಆನೆಗಳು ಬಂದು ಮದುವೆಗೆ ವಿಶೇಷ ಕಳೆಕೊಟ್ಟದ್ದು ಅಂದಿನ ದಿನಗಳ ಒಂದು ವಿಶೇಷ ಸುದ್ದಿಯೇ.

ಮಣಿಪಾಲದ ಪೈಕುಟುಂಬದೊಡನೆ ಕೆ.ಕೆ.ಪೈಗಳ ರಕ್ತ ಸಂಬಂಧ ಬೆಳೆದುದು ಕೆ.ಕೆ.ಪೈಗಳ ಜೀವನದಲ್ಲಿ ಒಂದು ಹೊಸ ತಿರುವು. ಅದು ಇಕ್ಕಟಿನ ತಿರುವಾಗಿರಲಿಲ್ಲ. ಅಡೆತಡೆಯಿಲ್ಲದೇ ಅನಾಯಾಸವಾಗಿ ಸೀದಾ ಮುಂದೆ ಚಲಿಸಲು ಸುಲಭವಾಗುವಂತಿದ್ದ ತಿರುವು ಅದು. ಮುಂಬಯಿಯ ಚರ್ನಿರೋಡಿನ ತುಳಸಿ ಬಿಲ್ಡಿಂಗ್‌ನಲ್ಲಿ ಪೈಗಳ ಗೃಹಸ್ಥ ಜೀವನ ಆರಂಭವಾಯಿತು. ತನ್ನ ಪದವಿ ಮುಗಿಸಿ ಮುಂಬಯಿಗೆ ಕೆಲಸ ಅರಸಲು ಬಂದ ಪೈಗಳ ತಮ್ಮ ಪ್ರಭಾಕರ ಕೂಡಾ ಈ ಸಂಸಾರದಲ್ಲಿ ಸೇರಿಕೊಂಡು ಸಂಸಾರದ ರಥ ಚಲಿಸ ತೊಡಗಿತು. ಅತ್ತಿಗೆಗೆ ತರಕಾರಿ ತರಲು ಜತೆ ಕೊಡುವುದು, ಮನೆಗೆಸಲದಲ್ಲಿ ಸಹಕರಿಸುವುದು. ಅಣ್ಣನಿಗೂ ಬೇಕಾದ ಒಂದಿಷ್ಟು ಚಿಕ್ಕಪುಟ್ಟ ಕೆಲಸ ಮಾಡಿಕೊಡುವುದು ಪ್ರಭಾಕರನಿಗೆ ಸೇರಿದ್ದು. ಇಷ್ಟರಲ್ಲಿ ಕೇರಳ, ತಮಿಳನಾಡು ಗ್ರಾಹಕರಿಗಾಗಿ ಸಿಂಡಿಕೇಟ್ ಬ್ಯಾಂಕಿನಿಂದ ಆಗಲೇ ಪ್ರಾರಂಭಗೊಂಡ ಸದರ್ನ ಇಂಡಿಯಾ ಎಕ್ಸ್‌ಪ್ರೆಸ್ ಬ್ಯಾಂಕ್ ಲಿಮಿಟೆಡ್‌ಗೆ ಮ್ಯಾನೇಜಿಂಗ್ ಡೆರೆಕ್ಟರ ಆಗಿ ಪೈಗಳಿಗೆ ಬಡ್ತಿ ಸಿಕ್ಕಿತು. ಅನಂತರ ಸ್ವಲ್ಪ ಸಮಯದಲ್ಲೇ ಈ ಬ್ಯಾಂಕು ಮಾತೃ ಸಂಸ್ಥೆಯಾದ ಸಿಂಡಿಕೇಟ್ ಬ್ಯಾಂಕಿನ ಜತೆ ವಿಲೀನಗೊಂಡಾಗ ಕೆ.ಕೆ.ಪೈಗಳಿಗೆ ಶಾಶ್ವತವಾಗಿ ಮಣಿಪಾಲ ಕಛೇರಿಗೆ ವರ್ಗವಾಯಿತು.

1958ರಲ್ಲಿ ಬ್ಯಾಂಕಿನ ಉಪಮಹಾಪ್ರಬಂಧಕರಾಗಿ ಬಡ್ತಿ ಪಡೆದ ನಂತರ ಪೈಗಳು ಬ್ಯಾಂಕಿಂಗ್‌ಗಳಲ್ಲಿ ಹೆಚ್ಚಿನ ತಿಳುವಳಿಕೆ ಪಡೆಯಲು ಇಂಡಿಯನ್ ಬ್ಯಾಂಕ್ ಅಸೋಶಿಯೇಶನ್ ಪರವಾಗಿ ಸ್ಕಾಟಲೆಂಡ್ ಹಾಗೂ ಇತರ ಐರೋಪ್ಯ ದೇಶಗಳಿಗೆ ಭೇಟಿಕೊಟ್ಟು ಪಡೆದ ಅನುಭವ ಪೈಗಳಿಗೆ ಸಿಂಡಿಕೇಟ್ ಬ್ಯಾಂಕನ್ನು ಮುನ್ನೆಡೆಸಲು ಪೂರಕವಾಯಿತು. ಉಳಿತಾಯ ಯೋಜನೆಗಾಗಿ 1960ರಲ್ಲಿ ಇವರು ರೂಪಿಸಿದ ಇನ್ವೆಸ್ಟರ್ಸ್‌ಏಜನ್ಸಿ ಡಿಪಾರ್ಟಮೆಂಟ್, ಉದ್ದಿಮೆಗಳ ಸ್ಥಾಪನೆಗೆ ನೆರವಾಗುವಂಥ ಇಂಡಸ್ಟ್ರಿಯಲ್ ಪೈನಾನ್ಸ್, ಕೃಷಿ ಸಂಬಂಧಿತ ಚಟುವಟಿಕೆಗಳಿಗಾಗಿ ಕೃಷಿ ಸಾಲದ ಯೋಜನೆ ಮುಂತಾದವುಗಳ ಮೂಲಕ ಮಧ್ಯಮ ವರ್ಗದ ಜನರ ಬಳಿ ಬ್ಯಾಂಕನ್ನು ಕೊಂಡು ಹೋಗುವ ಇವರ ಇಂಥ ಯೋಜನೆಗಳು ಹೆಚ್ಚಿನ ಯಶಸ್ಸು ಕಂಡವು.   ಡಾ. ಮಾಧವ ಪೈಗಳು ಆಡಳಿತ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಮೇಲೆ ಅವರ ಸ್ಥಾನಕ್ಕೆ ಬಂದ ಟಿ.ಎ.ಪೈಗಳ ಜತೆ ಸೇರಿ ಟಿ.ಎ.ಪೈಗಳ ಎಲ್ಲ ಕನಸುಗಳಿಗೆ ಇವರು ಒತ್ತಾಸೆಯಾಗಿ ನಿಂತರು.

ಆರುವತ್ತರ ದಶಕ ಎಂಬುದು ಬ್ಯಾಂಕಿನ ಇತಿಹಾಸದಲ್ಲಿ ನೆನಪಿಡುವಂಥ ದಶಕ. ಏಕೆಂದರೆ ಬ್ಯಾಂಕಿಗೆ ಪುನರ್ನಾಮಕರಣವಾದುದು ಈ ಸಮಯದಲ್ಲೇ. ಕೆನರಾ ಇಂಡಸ್ಟ್ರಿಯಲ್ ಎಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಎಂಬ ಬ್ಯಾಂಕಿನ ದೀರ್ಘ ಹೆಸರಿನ ಬದಲಾಗಿ ಬ್ಯಾಂಕನ್ನು ಸಂಕ್ಷಿಪ್ತವಾಗಿ ಸಿಂಡಿಕೇಟ್ ಬ್ಯಾಂಕ್ ಎಂದು ಪುನರ್ನಾಮಕರಣ ಮಾಡಲಾಯಿತು. ಬ್ಯಾಂಕಿನ ಮುಖ್ಯ ಕಛೇರಿಯನ್ನು ಈ ತನಕವಿದ್ದ ಉಡುಪಿಯ ಮುಕುಂದ ನಿವಾಸದಿಂದ ಮಣಿಪಾಲಕ್ಕೆ ಸ್ಥಳಾಂತರಿಸಲಾಯಿತು. ಅಲ್ಲದೆ ವಿದೇಶಿ ವಿನಿಮಯ ವ್ಯವಹಾರವನ್ನು ಬ್ಯಾಂಕಿನಲ್ಲಿ ಪ್ರಾರಂಭಿಸಲಾಯಿತು. ಇನ್ನೂ ಒಂದು ಬ್ಯಾಂಕಿನ ಮುಖ್ಯ ಹೆಜ್ಜೆ ಅಂದರೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಗಳ್ಳುಳ್ಳ ಒಂದು ಮಹಿಳಾ ಶಾಖೆ ತೆರೆದು ಮಹಿಳೆಯರನ್ನು ಬ್ಯಾಂಕಿಂಗ್‌ನ ಮುಖ್ಯ ವಾಹಿನಿಗೆ ತರುವಲ್ಲಿ ಸಿಂಡಿಕೇಟ್ ಬ್ಯಾಂಕ್ ಮುಂದಾಳುತನ ವಹಿಸಿತು. ಇವೆಲ್ಲ ಬ್ಯಾಂಕು ಇರಿಸಿದ ದೃಢವಾದ ಹೆಜ್ಜೆಗಳು. ಸಂಪೂರ್ಣ ಮಹಿಳೆಯರನ್ನು ಹೊಂದಿದ ಶೇಷಾದ್ರಿಪುರಂ ಶಾಖೆಯನ್ನು ತೆರೆದ ಸಿಂಡಿಕೇಟ್ ಬ್ಯಾಂಕಿನ ಹೊಸ ಹೆಜ್ಜೆಯನ್ನು ಎಲ್ಲರೂ ಬೆರಗಿನಿಂದ ಗಮನಿಸುವಂತಾಯಿತು.

ಇಷ್ಟರೊಳಗಾಗಿ ಬ್ಯಾಂಕಿನ ಆಡಳಿತ ನಿರ್ದೇಶಕ ಡಾ.ಮಾಧವಪೈಗಳು ನಿವೃತ್ತಿ ಹೊಂದಿ ಅವರ ಸ್ಥಾನವನ್ನು ಟಿ.ಎ.ಪೈಗಳು ವಹಿಸಿಕೊಂಡರು. ಬ್ಯಾಂಕಿನಲ್ಲಿ ಹೊಸ ಪೀಳಿಗೆಯ ಆಡಳಿತ ಪ್ರಾರಂಭವಾಯಿತು. ಶೇಷಾದ್ರಿಪುರಂನ ಮಹಿಳಾ ಶಾಖೆ ಬಹು ಬೇಗ ತನ್ನ ಪ್ರಗತಿಯನ್ನು ಸಾಬೀತು ಪಡಿಸಿತು. ಇದರಿಂದ ಉತ್ತೇಜಿತರಾದ ಪೈದ್ವಯರು (ಟಿ.ಎ.ಪೈ, ಕೆ.ಕೆ.ಪೈ) ಸೇರಿ ಮುಂದೆ ದೆಹಲಿ, ಹೈದರಾಬಾದ, ಮದರಾಸು (ಈಗಿನ ಚೆನ್ನೈ) ಮುಂತಾದ ಕಡೆಗಳಲ್ಲೂ ಸಂಪೂರ್ಣ ಮಹಿಳೆಯರಿದ್ದ ಶಾಖೆಗಳನ್ನು ತೆರೆದರು. ಇದೊಂದು ಮಹಿಳಾ ಸಬಲೀಕರಣದ ಅರ್ಥಪೂರ್ಣ ಹೊಸ ಹೆಜ್ಜೆಯೆನ್ನಬಹುದು. ಈ ಇಬ್ಬರು ಪೈಗಳು ಬ್ಯಾಂಕಿನ ಅಭಿವೃದ್ಧಿಯಲ್ಲಿ ಎಷ್ಟು ತತ್ಪರರಾಗಿರುತ್ತಿದ್ದರು ಎಂದರೆ ಅವರ ಕಾರ್ಯಕ್ಷಮತೆ ನೋಡಿದವರು ಇಬ್ಬರನ್ನು ಜವಾಹರಲಾಲ ನೆಹರು ಮತ್ತು ಸರ್ದಾರ್ ವಲ್ಲಭಬಾಯ್ ಪಟೇಲರಿಗೆ ಹೋಲಿಸುತ್ತಿದ್ದಂತೆ.

ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ

1965ರಲ್ಲಿ ಭಾರತದ ಸರಕಾರ ಹೊಸದಾಗಿ ಸ್ಥಾಪಿಸಿದ ಆಹಾರ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಟಿ.ಎ.ಪೈಗಳ ನೇಮಕವಾಗಿ ಅವರು ಮಣಿಪಾಲವನ್ನು ಬಿಡುವಂತಾದಾಗ ಬ್ಯಾಂಕಿನ ಸಂಪೂರ್ಣ ಹೊಣೆ ಕೆ.ಕೆ.ಪೈಗಳ ಹೆಗಲ ಮೇಲೆ. ಹೆಚ್ಚು ಕಡಿಮೆ ಇದೇ ಸಮಯ ಪೈಗಳ ಜೀವನದಲ್ಲಿ ಹಿನ್ನಡೆ ತರುವಂಥ ಘಟನೆ ಸಂಭವಿಸಿದರೂ ಅದನ್ನು ಪೈಗಳು ನಿಭಾಯಿಸಿದ ರೀತಿಯಂತೂ ಅವರನ್ನು ಓರ್ವ ಮುತ್ಸದ್ದಿ ಸ್ಥಾನದಲ್ಲಿ ನಿಲ್ಲಿಸಿತು. ಒಂದು ಕ್ಷುಲ್ಲಕವೆನಿಸುವಂಥ ಘಟನೆಯ ಕಾರಣ ಬ್ಯಾಂಕಿನ ಸುಮಾರು 800ರಷ್ಟು ಉದ್ಯೋಗಿಗಳು ಮುಷ್ಕರ ನಿರತರಾದರು. ತತ್ಫಲವಾಗಿ ಬ್ಯಾಂಕಿನ ದೈನಂದಿನ ವ್ಯವಹಾರ ಬಹು ಮಟ್ಟಿಗೆ ಸ್ಥಗಿತಗೊಂಡು ಬ್ಯಾಂಕಿನ ಇಮೇಜ್‌ಗೆ ಧಕ್ಕೆಯೊದಗುವ ಪ್ರಸಂಗ ಇದಿರಾಯಿತು. ಮುಷ್ಕರನಿರತರು ಯಾವ ಕಾರಣಕ್ಕೂ ರಾಜಿಗೆ ಒಲ್ಲದ ಕಾರಣ ಅಶಿಸ್ತಿನ ನೆಲೆಯಲ್ಲಿ ಒಂದಿಷ್ಟು ನೌಕರರನ್ನು ಅಮಾನತು ಗೊಳಿಸುವುದರ ಜೊತೆಗೆ ಸುಮಾರು 140 ಮಂದಿ ನೌಕರರನ್ನು ಕೆಲಸದಿಂದ ವಜಾಗೊಳಿಸಿದ ಪೈಗಳ ನಿರ್ಧಾರ ವನ್ನು ಉಳಿದ ಬ್ಯಾಂಕಿನ ಸಿಬ್ಬಂದಿಗಳು ಭಯ ಮತ್ತು ಬೆರಗುಗಣ್ಣುಗಳಿಂದ ನೋಡಿದರು. ವಿಚಾರ ಕೋರ್ಟು ಕಟ್ಟೆಯೇರಿ ಕೋರ್ಟು ಪೈಗಳ ಕ್ರಮವನ್ನು ಎತ್ತಿ ಹಿಡಿಯಿತು. ನೌಕರರು ಪೈಗಳಿಂದ ಈ ಕ್ರಮವನ್ನು ಖಂಡಿತಾ ನಿರೀಕ್ಷಿಸಿರಲಿಲ್ಲ. ಕೋರ್ಟಿನ ತೀರ್ಪು ಬಂದೊಡನೆ ನೌಕರರು ರಾಜಿಗಿಳಿಯುವ ಪ್ರಯತ್ನ ಮಾಡಿದರು. ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಪೈಗಳ ಮನವೊಲಿಕೆ ಕಾರ್ಯ ಸುರುವಾಯಿತು. ಅದು ಫಲಿಸದಿದ್ದಾಗ ಟಿ.ಎ.ಪೈಗಳನ್ನು ಸಂಧಾನಕಾರರಾಗಿ ಬರುವಂತೆ ಒತ್ತಾಯ ಹೇರಲಾಯಿತು. ಟಿ.ಎ.ಪೈಗಳು ಸಂಧಾನಕ್ಕಾಗಿ ಏಕ ಸದಸ್ಯ ಆಯೋಗ ರಚನೆಯ ಘೋಷಣೆ ಮಾಡಿದರು. ಅದಕ್ಕೂ ಕೆ.ಕೆ.ಪೈಗಳು ಜಗ್ಗಲಿಲ್ಲ. ಅನಂತರ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ಪ್ರಭಾತ್‌ಕಾರ್ ಅವರು ಮಣಿಪಾಲಕ್ಕೆ ಬಂದು ಖುದ್ದಾಗಿ ಪೈಗಳನ್ನು ಕಂಡು ನೌಕರರ ವಜಾ ಪ್ರಕರಣವನ್ನು ಸಹಾನುಭೂತಿಯ ನೆಲೆಯಲ್ಲಿ ಪರಿಶೀಲಿಸಿ ಎಲ್ಲರನ್ನೂ ವಾಪಾಸು ಕೆಲಸಕ್ಕೆ ತೆಗೆದುಕೊಳ್ಳ ಬೇಕೆಂದು ವಿನಂತಿಸಿಕೊಂಡ ಮೇಲೆ ವಜಾಗೊಂಡ ಹೆಚ್ಚಿನವರನ್ನು ಮತ್ತೆ ಬ್ಯಾಂಕಿಗೆ ಸೇರ್ಪಡೆ ಮಾಡಿಕೊಂಡಿದ್ದು ಬ್ಯಾಂಕ್ ವಲಯದಲ್ಲಿ ಒಂದು ಮಹತ್ತರ ಸುದ್ದಿಯಾಗಿ ಪೈಗಳು ಓರ್ವ ಅಪರೂಪದ ದಕ್ಷ ಬ್ಯಾಂಕರ್ ಎಂಬಂತೆ ಬಿಂಬಿಸಲ್ಪಟ್ಟರು. ನೌಕರ ವಲಯದಲ್ಲಿ ಮುಚ್ಚಿದ್ದ ಕಾರ್ಮೋಡ ಚದುರಿ ಆಕಾಶ ಶುಭ್ರವಾಯಿತು. ಈ ಕಹಿ ಘಟನೆಯ ಸುಖಾಂತ ಎಲ್ಲರಿಗೂ ಖುಶಿ ಕೊಟ್ಟಿತು.

ಇದಾದ ಕೆಲವೇ ದಿನಗಳಲ್ಲಿ ಒಂದು ಭಾನುವಾರ ಸಂಜೆ ಸರ್ ಪಿರೋಜ್‌ಶಹಾ ಮೇಥಾ ಮಾರ್ಗದಲ್ಲಿರುವ ಬ್ಯಾಂಕ್ ಶಾಖೆಯ ಹತ್ತಿರದ ಫೋರ್ಟ್ ಸೆಂಟ್ರಲ್ ಹೋಟೇಲಿನಲ್ಲಿ ಪೈಗಳು ಒಂದು ಆತ್ಮೀಯ ಚಹಾಕೂಟ ಏರ್ಪಡಿಸಿ ಮುಂಬಯಿನ ಎಲ್ಲ ಶಾಖಾಧಿಕಾರಿಗಳನ್ನೂ, ಅಧಿಕಾರಿ ವರ್ಗದವರನ್ನೂ ಚಹಾಕೂಟಕ್ಕೆ ಆಮಂತ್ರಿಸಿದರು. ಈ ತುರ್ತು ಚಹಾಕೂಟದ ಉದ್ದೇಶ ಏನಿದ್ದೀತು ಎಂಬುದು ಎಲ್ಲರಿಗೂ ಕುತೂಹಲ. ಚಹಾಕೂಟ ಇನ್ನೇನು ಮುಗಿಯುತ್ತದೆ ಎನ್ನುವಾಗ ಪೈಗಳು ಒಂದು ಪುಟ್ಟ ಭಾಷಣ ಬಿಗಿದರು. ಅಶಿಸ್ತಿನ ವರ್ತನೆ ನೆಲೆಯಲ್ಲಿ ಯಾವ ನೌಕರರನ್ನು ವಜಾಗೊಳಿಸಿ ನಂತರ ಅನುಕಂಪದ ನೆಲೆಯಲ್ಲಿ ಅವರನ್ನು ವಾಪಾಸು ತೆಗೆದುಕೊಂಡರೋ ಅದೇ ನೌಕರರ ಪರವಾಗಿ ಪೈಗಳು ಅಲ್ಲಿದ್ದ ಅಧಿಕಾರಿ ವರ್ಗದ ಮುಂದೆ ತನ್ನ ಮನವಿ ಇಟ್ಟರು. ಮರು ಸೇರ್ಪಡೆಗೊಂಡ ನೌಕರರ ಕುರಿತಾಗಿ ಯಾರೂ ಕಹಿ ಭಾವನೆ ತಾಳದೇ ಅವರೆಲ್ಲರನ್ನೂ ಸ್ನೇಹಿತರಂತೆ ನಡೆಸಿಕೊಳ್ಳಬೇಕೆಂದು ಪೈಗಳು ವಿನಂತಿಸಿಕೊಂಡಾಗ  ಸ್ವಲ್ಪ ದಿನಗಳ ಮೊದಲು ವಜಾಗೊಂಡ ನೌಕರರ ಕುರಿತು ಕಠಿಣ ನಿಲುವು ತಾಳಿದ ಪೈಗಳು ಇವರೆಯೇ ಎನ್ನುವಂತಾಯಿತು ಎಲ್ಲರಿಗೆ. ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ (ವಜ್ರಗಿಂತ ಕಠೋರ, ಹೂವಿಗಿಂತ ಮೃದು) ಈ ನುಡಿಗಟ್ಟು ಪೈಗಳಿಂದಾಗಿಯೇ ಹುಟ್ಟಿಕೊಂಡಿತು ಎನ್ನುವಷ್ಟರ ಮಟ್ಟಿಗೆ ಪೈಗಳು ಆ ನೌಕರರ ಬಗ್ಗೆ ಮೃದು ಧೋರಣೆ ತಾಳಿದ್ದು ನೋಡಿ ಅಲ್ಲಿದ್ದ ಎಲ್ಲರೂ ಅಚ್ಚರಿ ಪಡುವಂತಾಯಿತು.

ಇಂತಹದೇ ಒಂದು ಅನುಭವ 60ರ ದಶಕದ ಮಧ್ಯಭಾಗದಲ್ಲಿ ಕೃಷಿ ವಿಜ್ಞಾನಿ ಯಾಗಿ ಬೆಂಗಳೂರಿನಲ್ಲಿ ಬ್ಯಾಂಕ್ ಸೇರಿದ ಕೆ.ಎಂ. ಉಡುಪರದು. ಬ್ಯಾಂಕ್ ಸೇರಿದ ಸ್ವಲ್ಪ ಸಮಯದೊಳಗೆ ರೋಟರಿ ಇಂಟರ್ ನ್ಯಾಶನಲ್ ಅವರ ಗ್ರೂಪ್ ಸ್ಟಡಿ ಎಕ್ಸಚೇಂಜ್ ಪ್ರೋಆಯ್ಕೆಯಾಗಲು ಉಡುಪರು ಅರ್ಜಿಯೊಂದನ್ನು ಹಾಕಿದಾಗ ತಾನು ಆಯ್ಕೆಯಾಗುವ ಕಿಂಚಿತ್ತೂ ಭರವಸೆ ಅವರಲ್ಲಿರಲಿಲ್ಲ. ಅದಕ್ಕಾಗಿಯೇ ಅರ್ಜಿಯನ್ನು proper channel ಮೂಲಕ ಕಳಿಸುವ ಗೋಜಿಗೆ ಅವರು ಹೋಗಲೇ ಇಲ್ಲ. ಆದರೆ 1971ರ ಮೇ ತಿಂಗಳಲ್ಲಿ ಆಯ್ಕೆಗೊಂಡವರ ಅಂತಿಮ ಪಟ್ಟಿ ಬಿಡುಗಡೆಯಾದಾಗ ಉಡುಪರಿಗೆ ಆಶ್ಚರ್ಯವೋ ಆಶ್ಚರ್ಯ. ಅಷ್ಟಾಗಲೇ ತಮ್ಮ ಕಿರಿಯ ಉದ್ಯೋಗಿಯೊಬ್ಬ ಹೀಗೆ ಆಯ್ಕೆ ಪಟ್ಟಿಯಲ್ಲಿರುವುದನ್ನು ತಿಳಿದು ಉಡುಪರ ಆಯ್ಕೆಗಾಗಿ ಖುಷಿ ಪಟ್ಟ ಬ್ಯಾಂಕಿನ ಹಿರಿಯ ಅಧಿಕಾರಿ ಎಚ್.ಡಿ.ಎಸ್ ಪೈಗಳು ಕೆ.ಕೆ. ಪೈಗಳಿಗೆ ಈ ಕುರಿತು ಟೆಲೆಕ್ಸ್ ರವಾನಿಸಿದ್ದೂ ಆಯಿತು. ಮುಂದಿನದನ್ನು ಉಡುಪರ ಮಾತುಗಳಲ್ಲೇ ಕೇಳಿದರೆ ಸೂಕ್ತ.

ಬೆಂಗಳೂರಿಂದ ಮಣಿಪಾಲಕ್ಕೆ ಬಂದು ನಾನು ಮಾಡಿದ ಮೊದಲ ಕೆಲಸ ಪೈ ಗಳನ್ನು ಭೇಟಿಯಾಗಿ ವಿಷಯ ತಿಳಿಸಿದ್ದು. ರೋಟರಿ ಕಾರ್ಯಕ್ರಮದನ್ವಯ ಆಗಸ್ಟ್ ತಿಂಗಳಿಂದ ಅಕ್ಟೋಬರ್ ಅಂತ್ಯದವರೆಗೆ ಮೂರು ತಿಂಗಳು ನಾನು ದೇಶದಿಂದ ಹೊರಗಿರ ಬೇಕು. ಇದೇ ಅವಧಿ ಕೃಷಿ, ಆರ್ಥಿಕ ನೆರವಿನ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಪೀಕ್ ಪೀರಯಡ್. ಈ ವಿಚಾರ ತಿಳಿದುಕೊಂಡ ಮೇಲೆ ಇದಕ್ಕೆ ಪೈಗಳ ಪ್ರತಿಕ್ರಿಯೆ ಆತಂಕಕಾರಿಯಾಗಿತ್ತು. ಸರಿ ಉಡುಪರೆ, ಇನ್ನೂ ಮೂರು ತಿಂಗಳು ನಿಮ್ಮ ಸೇವೆ ಬ್ಯಾಂಕಿಗೆ ಲಭ್ಯವಿಲ್ಲ. ಇದರ ಉಸ್ತುವಾರಿ ನೋಡಿಕೊಳ್ಳುವವರಾರು? ಸೇವಾ ನಿಯಮಾವಳಿಗೆ ಅನುಗುಣವಾಗಿ ಸಂಬಂಧಪಟ್ಟವರ ಮೂಲಕ ನೀವು ಅರ್ಜಿ ಕಳಿಸಬೇಕಾಗಿತ್ತು. ನೇರವಾಗಿ ಅರ್ಜಿ ಕಳಿಸಿದ ನಿಮ್ಮ ಈ ವರ್ತನೆ ಅಶಿಸ್ತಿನ ಕೆಲಸ ಪೈಗಳು ಗುಡುಗಿದ್ದು ಕೇಳಿಯೇ ಉಡುಪರು ನಿಂತಲ್ಲಿಯೇ ತತ್ತರಿಸಿ ತೊದಲುತ್ತಾ ಉತ್ತರಿಸಿದರಂತೆ. ಸರ್ ದಯವಿಟ್ಟು ಕ್ಷಮಿಸಿ. ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ

ತಕ್ಷಣವೆ ಪೈಗಳು ಮೃದುವಾದುದನ್ನು ನೋಡಿ ಉಡುಪರಿಗೆ ಆಶ್ವರ್ಯ. ಇದು ಬ್ಯಾಂಕಿನ ಪ್ರತಿಷ್ಠೆಯ ವಿಷಯ ಉಡುಪರೇ. ಇದು ನಿಮ್ಮೊಬ್ಬರಿಗೆ ಸಂಬಂಧಿಸಿದ ವಿಚಾರವಲ್ಲ. ಎಲ್ಲರಿಗೂ ಸಂಬಂಧಿಸಿದ್ದು. ನೀವು ಹೋಗಲೇಬೇಕು. ಯುರೋಪ್, ಅಮೇರಿಕಾ ಮಾತ್ರವಲ್ಲ ಬರುವಾಗ ಜಪಾನ, ಮನಿಲಾ ಮುಂತಾದ ದೇಶಗಳನ್ನು ಸಂದರ್ಶಿಸಿ ಅಲ್ಲಿನ ಕೃಷಿ ಅಧ್ಯಯನ ಮಾಡಿ ಬನ್ನಿ, ಇದರ ಎಲ್ಲ ಖರ್ಚನ್ನೂ ಬ್ಯಾಂಕು ಭರಿಸುತ್ತಿದೆ. ಮತ್ತೆ ಮೂರು ತಿಂಗಳ ನಿಮ್ಮ ಗೈರುಹಾಜರಿಯನ್ನು ಕರ್ತವ್ಯದ ರಜೆ ಎಂದು ಪರಿಗಣಿಸಲಾಗುತ್ತಿದೆ. ಪೈಗಳ ಈ ಮಾತುಗಳನ್ನು ಕೇಳಿದ ಉಡುಪರಿಗೆ ಹೃದಯವೇ ಬಾಯಿಗೆ ಬಂದಂತಾಗಿ ಮುಂದೆ ಏನು ಮಾತನಾಡುವುದೆಂದು ತಿಳಿಯಲಿಲ್ಲ ವಂತೆ. ಪೈಗಳ ಔದಾರ್ಯ ಇಷ್ಟಕ್ಕೆ ಮುಗಿಯಲಿಲ್ಲ. ಉಡುಪರಿಗೆ ಬೇಕಾದ ಸಲಹೆ ಸಹಕಾರಗಳ ಜತೆಗೆ ಬ್ಯಾಂಕಿನ ವತಿಯಿಂದ ಒಂದು ಬೀಳ್ಕೋಡುಗೆ ಸಮಾರಂಭ ಏರ್ಪಡಿಸಿ ಬ್ಯಾಂಕಿನ ವಿಶೇಷ ಕಾರಿನಲ್ಲಿ ಉಡುಪರನ್ನು ಬೆಂಗಳೂರಿಗೆ ಕಳಿಸುವ ಏರ್ಪಾಟೂ ಪೈಗಳು ಮಾಡಿದರು. ತಾನು ವಿದೇಶದಲ್ಲಿದ್ದಾಗ ತನ್ನ ಅನುಪಸ್ಥಿತಿಯಲ್ಲಿ ತನ್ನ ಮನೆಯವರ ಯೋಗಕ್ಷೇಮವನ್ನು ಪೈಗಳು ಆಗಾಗ ವಿಚಾರಿಸಿಕೊಳ್ಳುತ್ತಿದ್ದುದು ಉಡುಪರ ಮನಸ್ಸಿನಲ್ಲಿ ಇನ್ನೂ ಹಸಿರಾಗಿರುವ ನೆನಪು. ಇದು ತನ್ನ ಸಿಬ್ಬಂದಿಗಳ ಕುರಿತಾದ ಪೈಗಳ ಕಾಳಜಿ ಎಂದು ಅಭಿಮಾನದಿಂದ ಉಡುಪರು ಇಂದಿಗೂ ಹೇಳಿಕೊಳ್ಳುತ್ತಾರೆ.

ದೇಶ ಆರ್ಥಿಕ ವಲಯದಲ್ಲಿ ಬ್ಯಾಂಕಿನ ಕೊಡುಗೆ – ಶಾಖೆಗಳ ಜಾಲ

ಬ್ಯಾಂಕಿನ ಉನ್ನತ ಸ್ಥಾನದಲ್ಲಿದ್ದು ಆ ಮೂಲಕ ಪೈಗಳು ಬ್ಯಾಂಕಿನ ನೀಡಿದ ಕೊಡುಗೆಗಳು ಅನನ್ಯ. 1969ರಲ್ಲಿ ಬ್ಯಾಂಕುಗಳು ರಾಷ್ಟ್ರೀಕರಣಗೊಂಡಿದ್ದೇ ಒಬ್ಬ ಜನ ಸಾಮಾನ್ಯನನ್ನು ದೃಷ್ಟಿಯಲ್ಲಿಟ್ಟುಗೊಂಡು. ಸಮಾಜದ ಅಂಚಿನಲ್ಲಿರುವವರೂ ಬ್ಯಾಂಕಿನ ಯೋಜನೆಗಳ ಫಲಾನುಭವಿಗಳಾಗ ಬೇಕೆಂದು ದೂರದೃಷ್ಟಿಯಿಟ್ಟು ಕೊಂಡೇ ಆಗಿನ ಪ್ರಧಾನಿ ಇಂದಿರಾಗಾಂಧಿ ಬ್ಯಾಂಕ್ ರಾಷ್ಟ್ರೀಕರಣದಂಥ ದಿಟ್ಟ ನಿಲುವು ತೆಗೆದುಕೊಂಡರು. ಸಿಂಡಿಕೇಟ್ ಬ್ಯಾಂಕು ಮೊದಲಿನಿಂದಲೂ ಜನಸಾಮಾನ್ಯರಿಗೆ ಎಟಕುವಂಥ ಯೋಜನೆಗಳನ್ನೇ ತನ್ನ ಕಾರ್ಯಸೂಚಿಯಲ್ಲಿ ರೂಪಿಸಿಕೊಂಡು ಬಂದ ಕಾರಣ ರಾಷ್ಟ್ರೀಕರಣ ಎಂಬುವುದು ಸಿಂಡಿಕೇಟ್ ಬ್ಯಾಂಕ್ ಮಟ್ಟಿಗೆ ಏನೂ ವ್ಯತ್ಯಾಸಕ್ಕೆ ಕಾರಣವಾಗಲಿಲ್ಲ.

ಕೃಷಿ ಆರ್ಥಿಕ ನೆರವಿನ ಯೋಜನೆ ಬಗ್ಗೆ ಪೈಗಳಿಗೆ ವಿಶಿಷ್ಟ ಒಳನೋಟಗಳಿದ್ದವು. ಭಾರತ ಸರಕಾರ ಹಾಗೂ ರಿಸರ್ವ ಬ್ಯಾಂಕ್ ಜಂಟಿಯಾಗಿ 1974ರಲ್ಲಿ ಮಧುರೆಯಲ್ಲಿ ಏರ್ಪಡಿಸಿದ ಸಂಕಿರಣವೊಂದರಲ್ಲಿ ಪೈಗಳು ಹಸಿರು ಕ್ರಾಂತಿಯ ಕುರಿತು ಮಾಡಿದ ಭಾಷಣವೇ ಇದಕ್ಕೆ ಸಾಕ್ಷಿ. ಶಾಖಾ ವಿಸ್ತರಣೆ ಮತ್ತು ಠೇವಣಿ ಸಂಗ್ರಹಣೆಗೆ ಹೆಚ್ಚು ಒತ್ತು ಕೊಡುತ್ತಾ ನೌಕರರ ವೃತ್ತಿಪರತೆಗೆ ಆದ್ಯತೆ ನೀಡುವಲ್ಲಿ ಜರ್ಮನ್ ಮಾದರಿಯ ಪರಿಪೂರ್ಣತೆ ಅವರ ಕನಸಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಶಾಖಾ ವಿಸ್ತರಣೆಗೆ ಪೈಗಳು ಪ್ರಾಮುಖ್ಯತೆ ನೀಡಿದರು. ಶಾಖಾ ವಿಸ್ತರಣೆಯ ನೆಲೆಯಲ್ಲಿ 1971ರಲ್ಲಿ ಲಕ್ಷದ್ವೀಪದ ಕವರಟ್ಟಿ, ಅನಂತರ ಅಮೇನಿ, ಮಿನಿಕಾಯ್‌ಗಳಲ್ಲಿ ಶಾಖೆಗಳನ್ನು ತೆರೆದುದು ಪೈಗಳ ವಿಚಕ್ಷಣತೆಗೆ ಸಾಕ್ಷಿ. ಲೀಡ್ ಬ್ಯಾಂಕ್ ಪಾತ್ರ ವಹಿಸಿ ಉತ್ತರ ಪ್ರದೇಶ ಹರಿಯಾಣದ ಮೂಲೆಮೂಲೆಗೂ ಬ್ಯಾಂಕಿಂಗ್ ಸೌಲಭ್ಯ ಜನರಿಗೆ ಸಿಗುವಂತೆ ಮಾಡಿದ್ದು ಹಿಂದುಳಿದ ಪ್ರದೇಶಗಳ ಕುರಿತು ಇವರ ಕಾಳಜಿ ತೋರಿಸುತ್ತದೆ. ಯಾವುದಾದರೂ ಪ್ರದೇಶಕ್ಕೆ ಬ್ಯಾಂಕಿಂಗ್ ಸೇವೆಯ ಅಗತ್ಯವಿದೆ ಎಂದು ಪೈಗಳಿಗೆ ತಿಳಿದು ಬಂದೊಡನೆ ಅದಕ್ಕೆ ಅವರು ಸ್ಪಂದಿಸುತ್ತಿದ್ದ ಪರಿಯನ್ನು ಈ ಒಂದು ಘಟನೆ ತಿಳಿಸುತ್ತದೆ.

1969ರಲ್ಲಿ ಸಂಭವಿಸಿದ ಘಟನೆಯಿದು. ವಿಜ್ಞಾನಿ ಲೇಖಕ ದಿವಂಗತ ಜಿ.ಟಿ ನಾರಾಯಣ ರಾಯರು ಮೈಸೂರು ವಿಶ್ವವಿದ್ಯಾನಿಲಯದ ಹುದ್ದೆ ಒಪ್ಪಿ ಅಲ್ಲಿ ಹೋಗಿ ರಿಪೋರ್ಟ್ ಮಾಡಿಕೊಂಡರು. ಅವರು ವಾಸ ಮಾಡುತ್ತಿದ್ದ ಸರಸ್ವತಿಪುರಂ ಬಡಾವಣೆ ಯಲ್ಲಿ ಆಗ ಯಾವೊಂದು ಬ್ಯಾಂಕೂ ಇರಲಿಲ್ಲವಂತೆ. ಹಾಗಾಗಿ ಬ್ಯಾಂಕಿಂಗ್ ಸೇವೆಗಾಗಿ ಬೇರೆ ಬಡಾವಣೆಗೆ ಹೋಗಬೇಕು. ತಾನು ಮೊದಲಿನಿಂದಲೂ ವ್ಯವಹರಿಸುತ್ತಿದ್ದ ಬ್ಯಾಂಕಿಗೆ ಪತ್ರ ಬರೆದು ನಾರಾಯಣರಾಯರು ಸರಸ್ವತಿಪುರಂನಲ್ಲಿ ಅದರ ಶಾಖೆಯೊಂದನ್ನು ತೆರೆಯಲು ವಿನಂತಿಸಿ ಕೊಂಡರಂತೆ. ಅಲ್ಲಿ ಶಾಖೆ ತೆರೆದರೆ ಅಲ್ಲಿ ವಾಸ್ತವ್ಯವಿದ್ದ ಎಲ್ಲ ಜನರಿಗೂ ಅದರಿಂದ ಅನುಕೂಲ, ಬ್ಯಾಂಕಿಗೂ ಲಾಭ ಎಂದು ಇವರು ಬರೆದ ಪತ್ರಕ್ಕೆ ತಿಂಗಳು ಕಳೆದರೂ ಉತ್ತರ ಬಾರದಿದ್ದುದನ್ನು ಕಂಡು ಅನಂತರ ಕೆ.ಕೆ.ಪೈಗಳಿಗೆ ಪತ್ರದ ಮೂಲಕ ಎಲ್ಲವನ್ನೂ ವಿಶದೀಕರಿಸಿದರಂತೆ. ಪೈಗಳು ತಕ್ಷಣವೇ ನಾರಾಯಣ ರಾಯರಿಗೆ ಪತ್ರ ಬರೆದು ಸದ್ಯದಲ್ಲಿಯೇ ತಮ್ಮ ಬ್ಯಾಂಕು ನಾರಾಯಣ ರಾಯರ ಇಚ್ಛೆಯಂತೆ ಅಲ್ಲಿ ಶಾಖೆ ತೆರೆಯಲಿದೆ ಎಂದು ತಿಳಿಸಿದರಂತೆ. ಅಂತೆಯೇ ಸ್ವಲ್ಪ ದಿನಗಳಲ್ಲಿಯೇ ಸಿಂಡಿಕೇಟ್ ಬ್ಯಾಂಕಿನ ಶಾಖೆ ಸರಸ್ಪತಿಪುರಂನಲ್ಲಿ ಪ್ರಾರಂಭವಾಗಿ ಜನರು ಖುಶಿಗೊಂಡರಂತೆ. ಹೀಗೆ ಪೈಗಳು ಜನರ ಮನವಿಗೆ ಸ್ಪಂದಿಸುವ ರೀತಿ ಅನನ್ಯ ಎಂದು ಒಂದೆಡೆ ನೆನಪಿಸಿ ಕೊಂಡಿದ್ದಾರೆ ನಾರಾಯಣರಾಯರು. ಇದು ಪೈಗಳು ಕಂಡುಕೊಂಡ ಅಭಿವೃದ್ಧಿ ತಂತ್ರವೆಂದೂ ಹೇಳಬಹುದು. ಕವಿ ಕುವೆಂಪು ಅವರ ಕವಿತೆಯ ಒಂದು ತುಣುಕು ಕರುಣೆಗೊಂದು ಕೋಡವನ್ ಎಂದಿದೆ. ಇಲ್ಲಿ ಕೂಡ ಕೆ.ಕೆಪೈಗಳ ಹೆಸರಿನ ಮೊದಲಿನ ಎರಡು ಅಕ್ಷರಗಳಿಗಿರುವ ಕೆ.ಕೆ ಅಂದರೆ ಕರುಣೆಗೊಂದು ಕೋಡವನ್ ಇರಬಹುದೆ ಎಂಬ ಭಾವನೆ ಎಲ್ಲರಲ್ಲಿ ಬಂದರೆ ಅದು ಅಸಹಜವೇನಲ್ಲ.

ಟಿ.ಎ. ಪೈಗಳ ಕನಸಿಗೆ ಸಾಕಾರ ರೂಪ

ಭಾರತೀಯ ಆಹಾರ ನಿಗಮದ ಅಧ್ಯಕ್ಷ ಪದವಿಯ ಅವಧಿ ಮುಗಿದ ಮೇಲೆ ಟಿ.ಎ.ಪೈಗಳು ಮತ್ತೆ ಬ್ಯಾಂಕಿಗೆ ಮರಳಿದರು. ಟಿ.ಎ.ಪೈಗಳ ಮನಸ್ಸಿನಲ್ಲಿ ಆಗಲೇ ಭಾರತದ ಆಹಾರ ಸಮಸ್ಯೆ ನೀಗಿಸಲು ಕೆಲವು ಯೋಜನೆಗಳು ಮೊಳಕೆಯೊಡೆಯ ಲಾರಂಭಿಸಿದ್ದವು. ಅವರು ನಿಗಮದ ಅಧ್ಯಕ್ಷರಾಗಿದ್ದಾಗ ಭಾರತ ಎಂಥ ತೀವ್ರ ಆಹಾರ ಸಮಸ್ಯೆಯನ್ನು ಇದಿರುಸುತ್ತಿದೆ ಎಂಬ ಪರಿಪೂರ್ಣ ಮಾಹಿತಿ ಅವರಿಗೆ ಸಿಕ್ಕಿತ್ತು. ಈ ಸಮಸ್ಯೆ ನಿವಾರಣೆಗಾಗಿ ಬ್ಯಾಂಕಿನ ಕೊಡುಗೆ ಏನಾಗಬೇಕು ಎಂದು ಚಿಂತಿಸಿದ ಟಿ.ಎ.ಪೈ ಗಳು ಬ್ಯಾಂಕಿನಲ್ಲಿ ಎಗ್ರಿಕಲ್ಚರಲ್ ಫೌಂಡೇಶನ್ ಸ್ಥಾಪಿಸಲು ಮುಂದಾದಾಗ ಅದರ ಸಂಪೂರ್ಣ ಹೊಣೆಯನ್ನು ಹೊರಲು ಕೆ.ಕೆ.ಪೈಗಳು ಸಜ್ಜಾದರು. ಕೃಷಿಕರಿಗೆ ಮಾಹಿತಿ ನೀಡುವ ಸಲುವಾಗಿ ಕೃಷಿಲೋವೆಂಬ ಪತ್ರಿಕೆ ಅಲ್ಲದೇ ಫಾರ್ಮಕ್ಲಿನಿಕ್, ಫಾರ್ಮರ್ಸ್‌ಕ್ಲಬ್, ಕೃಷಿ ವಿನಿಮಯ ಕೇಂದ್ರಗಳು, ಗೋಬರ್ ಗ್ಯಾಸ್ ಪ್ಲಾಂಟ್ ಯೋಜೆ ಹೀಗೆ ಟಿ.ಎ. ಪೈಗಳ ಕನಸಾದ ಹಸಿರುಕ್ರಾಂತಿ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಕೆ.ಕೆ. ಪೈಗಳು ಮಹತ್ತರ ಪಾತ್ರ ವಹಿಸಿದರು. ಕೃಷಿ ವಿಜ್ಞಾನಿಯಾಗಿ ಆಗ ಬ್ಯಾಂಕ್ ಸೇರಿದ್ದ ಕೆ.ಎಂ ಉಡುಪ (ಈಗ ಬಿ.ವಿ.ಟಿ.ಯ ಮುಖ್ಯಸ್ಥ) ರ ಕೃಷಿ ಸಂಬಂಧಿತ ಜ್ಞಾನವನ್ನು ಬ್ಯಾಂಕಿನ ಅಭಿವೃದ್ಧಿಗೆ ಬಳಸಿಕೊಳ್ಳುವಲ್ಲಿ ಕೆ.ಕೆ ಪೈಗಳು ತೋರಿದ ಆಸಕ್ತಿ ಅವರ ವಿಚಕ್ಷಣತೆಯನ್ನು ತೋರಿಸುತ್ತದೆ.

1970ರಲ್ಲಿ ಟಿ.ಎ. ಪೈಗಳು ಭಾರತೀಯ ಜೀವ ವಿಮಾ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಸಿಂಡಿಕೇಟ್ ಬ್ಯಾಂಕಿನ ತನ್ನ ಹುದ್ದೆಗೆ ವಿದಾಯ ಹೇಳಿದಾಗ ಕೆ.ಕೆ ಪೈಗಳು ಬ್ಯಾಂಕಿನ ಕಸ್ಟೋಡಿಯನ್ ಹಾಗೂ ಚೇರ್‌ಮನ್ ಆಗಿ ಅಧಿಕಾರ ವಹಿಸಿ ಕೊಂಡರು. 1978ರಲ್ಲಿ ಅವರು ನಿವೃತ್ತರಾಗುವ ತನಕ ಬ್ಯಾಂಕಿನ ವರಿಷ್ಠರಾಗಿಯೇ ಮುಂದುವರಿದರು. ಬ್ಯಾಂಕಿಂಗ್ ಇತಿಹಾಸದಲ್ಲಿ ಇಷ್ಟು ದೀರ್ಘ ಸಮಯ ಕಸ್ಟೋಡಿಯನ್ ಆಗಿ ಯಾರಾದರೂ ಕಾರ್ಯ ನಿರ್ವಹಿಸಿದವರಿದ್ದರೆ ಅದು ಕೆ.ಕೆ. ಪೈಗಳು ಮಾತ್ರ ಎಂದು ಎಲ್ಲರೂ ಹೇಳಿಯಾರು.

ಪೈಗಳು ಬ್ಯಾಂಕಿನ ವರಿಷ್ಠರಾಗಿದ್ದ ಸಮಯದಲ್ಲಿನ ಮುಖ್ಯ ಘಟನೆ ಎಂದರೆ ಬ್ಯಾಂಕಿನ ಸುವರ್ಣ ಮಹೋತ್ಸವದ ಆಚರಣೆ. ಸಭೆ, ಸಮಾರಂಭ, ವಿಚಾರ ಸಂಕಿರಣ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂಥ ಹವಾನಿಯಂತ್ರಿತ ಗೋಲ್ಡ್ ಜುಬಿಲಿ ಹಾಲ್ ಉದ್ಘಾಟನೆ ಇದೇ ಸಂದರ್ಭದಲ್ಲಾಯಿತು. ಉದ್ಘಾಟನೆಗೆ ಅಂದಿನ ಕೇಂದ್ರ ಅರ್ಥ ಮಂತ್ರಿ ಸಿ.ಸುಬ್ರಹ್ಮಣ್ಯಂ ಬಂದು ಸಮಾರಂಭಕ್ಕೆ ಕಳೆಗೊಟ್ಟರು. ಆಗಿನ ಕೇಂದ್ರ ಕೈಗಾರಿಕಾ ಮಂತ್ರಿ ಟಿ.ಎ.ಪೈ, ಉತ್ತರ ಪ್ರದೇಶದ ಮುಖ್ಯಮಂತ್ರಿ ಎನ್.ಡಿ.ತಿವಾರಿ, ರಿಸರ್ವ ಬ್ಯಾಂಕ್ ಗವರ್ನರ ಆಗಿದ್ದ ಕೆ.ಆರ್. ಪುರಿ ಮೊದಲಾದ ಗಣ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು. ಇದೇ ಸಂದರ್ಭ ಆರ್ಥಿಕ ಪ್ರಗತಿಗಾಗಿ ಬ್ಯಾಂಕಿಂಗ್ ಅಭಿವೃದ್ಧಿ ಎಂಬ ವಿಚಾರಸಂಕಿರಣವನ್ನು ಏರ್ಪಡಿಸಲಾಯಿತು. ಸಂಕಿರಣದಲ್ಲಿ ವಿಷಯ ಮಂಡನೆಗಾಗಿ ದೇಶದ ಹೆಸರಾಂತ ಆರ್ಥಿಕ ತಜ್ಞರನ್ನು ಕರೆಸಲಾಗಿತ್ತು. ಸಮಾರಂಭ ನಭೂತೋ ನ ಭವಿಷ್ಯತಿ ಎಂಬಂತೆ ಎಲ್ಲರ ನೆನಪಿನಲ್ಲಿ ಉಳಿಯಿತು. ಗೋಲ್ಡನ್ ಜುಬಿಲಿ ಹಾಲ್ ಉದ್ಘಾಟನೆಯ ನೆನಪಿನಲ್ಲಿ ಗೋಲ್ಡನ್ ಜುಬಿಲಿ ಕ್ಯಾಶ್ ಸರ್ಟಿಫಿಕೇಟ್ ಎಂಬ ಹೊಸ ಠೇವಣಿ ಯೋಜನೆಯ ಜತೆಗೆ ವಿಶ್ವವಿದ್ಯಾನಿಲಯಗಳಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಗೋಲ್ಡನ್ ಜುಬಿಲಿ ಮೆಡಲ್ ಕೊಡುವ ಪರಿಪಾಠ ಅಂದಿನಿಂದಲೇ ಪ್ರಾರಂಭ ವಾಯಿತು. ಬ್ಯಾಂಕಿನ ಇತಿಹಾಸದಲ್ಲಿನ ಇನ್ನೂ ಒಂದು ಮಹತ್ವ್ವದ ಘಟನೆ ಎಂದರೆ ಗೋಲ್ಡನ್ ಜುಬಿಲಿ ಹಾಲ್ ಉದ್ಘಾಟನೆಗೊಂಡ ಮರು ವರ್ಷವೇ ಲಂಡನ್‌ನಲ್ಲಿ ಬ್ಯಾಂಕಿನ ಶಾಖೆಯೊಂದನ್ನು ತೆರೆದು ತನ್ನ ತ್ರಿವಿಕ್ರಮ ಹೆಜ್ಜೆಗಳನ್ನು ಲಂಡನ್‌ನಲ್ಲಿ ಊರಿ ವಿದೇಶದಲ್ಲಿ ಶಾಖೆಹೊಂದಿದ ಪ್ರಥಮ ಬ್ಯಾಂಕು ಎಂದು ಬ್ಯಾಂಕಿಗೆ ಹೆಗ್ಗಳಿಕೆ ಸಿಗುವಂತೆ ಆದದ್ದು ಪೈಗಳ ಕಾರಣದಿಂದಾಗಿಯೇ. ಸವಾಲನ್ನು ಸ್ವೀಕರಿಸುವುದು, ಬ್ಯಾಂಕನ್ನು ಜನರ ಹತ್ತಿರ ತರುವಲ್ಲಿ ಯೋಜನೆ ರೂಪಿಸುವುದು ಪೈಗಳಿಗೆ ಯಾವಾಗಲೂ ಪ್ರಿಯವೇ. ಪೈಗಳ ತ್ವರಿತ ಗ್ರಾಹಕ ಸೇವೆಯ ಕಾಳಜಿ ಬ್ಯಾಂಕನ್ನು ಜನರ ಬಳಿ ಕೊಂಡೊಯ್ಯಿತು ಎಂಬುದರಲ್ಲಿ ಸಂದೇಹವೇ ಇಲ್ಲ. Where service is a way of life ಎನ್ನುತ್ತಿದ್ದ ಪೈಗಳು ಬ್ಯಾಂಕಿನ ಕಾರ್ಯಾಚರಣೆ ಸುಲಭಗೊಳಿಸಲು ಪ್ರಾದೇಶಿಕ ಅಭಿವೃದ್ಧಿ ಕಛೇರಿಗಳನ್ನು ತೆರೆದು ಅದರ ನಿಯಂತ್ರಣಕ್ಕೆ ಪ್ರಾದೇಶಿಕ ಅಭಿವೃದ್ಧಿ ನಿರ್ವಾಹಕರನ್ನು ನೇಮಿಸಿದರು. ಆಡಳಿತ ಮತ್ತು ನೌಕರರೊಳಗೂ ಸಂಬಂಧವನ್ನು ಆಪ್ತಗೊಳಿಸಲು ಬ್ಯಾಂಕಿನಿಂದ ಉತ್ತಮ ಸೇವೆ ಗ್ರಾಹಕರಿಗೆ ನೀಡುವಲ್ಲಿ ಶ್ರಮಿಸಿ ಗ್ರಾಹಕರ ದೃಷ್ಟಿಯಲ್ಲಿ ಬ್ಯಾಂಕಿನ ಘನತೆ ಹೆಚ್ಚಿಸಲು ನೆರವಾದ ಸಿಬ್ಬಂದಿಗಳನ್ನು ಗುರುತಿಸಿ ಅವರಿಗೆ Man of the Year ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠಕ್ಕೆ ನಾಂದಿ ಹಾಡಿದ್ದು ಪೈಗಳ ಒಳನೋಟದ ದ್ಯೋತಕ.

ಇದು ನಮ್ಮ ಬ್ಯಾಂಕ್

ಇವರು ಬ್ಯಾಂಕಿನ ಕಸ್ಟೋಡಿಯನ್ ಆಗಿದಷ್ಟು ಕಾಲ ಪೈಗಳನ್ನು ಅರಸಿ ಬಂದವರು ದಿನನಿತ್ಯವೆಂಬಂತೆ ಇವರ ಚೇಂಬರಿನ ಬಾಗಿಲು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರಂತೂ ಇವರ ಮನೆಗೂ ಹೋಗಿ ಇವರ ಪತ್ನಿಯ ಮನವೊಲಿಸಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿದ್ದರು. Power is not an end in it self. It is an oppprtunity to help and serve the people ಎಂಬ ಸಿದ್ಧಾಂತವನ್ನು ಜೀವನದುದ್ದಕ್ಕೂ ನಂಬಿಕೊಂಡು ಬಂದ ಇವರು ದೀನರಿಗೆ, ದಲಿತರಿಗೆ, ಶೋಷಿತರಿಗೆ, ವಿಧವೆಯರಿಗೆ ಮತ್ತು ಎಲ್ಲ ಜಾತಿ ಮತಗಳ ಯುವಕ ಯುವತಿಯರಿಗೆ ಕೆಲಸ ನೀಡಿ ಅವರ ಎರಡು ಹೊತ್ತಿನ ಊಟಕ್ಕೆ ದಾರಿ ಮಾಡಿಕೊಟ್ಟಿರುವುದು ಸರ್ವವಿದಿತ. 1970ರಲ್ಲಿ ಇವರು ಬ್ಯಾಂಕಿನ ವರಿಷ್ಠರಾಗಿ ಅಧಿಕಾರ ವಹಿಸಿಕೊಂಡಾಗ ಬ್ಯಾಂಕಿನ ಸಿಬ್ಬಂದಿಗಳ ಸಂಖ್ಯೆ ಬರೀ 5872ರಷ್ಟಿದ್ದದು ಇವರು ಬ್ಯಾಂಕಿನ ಅಧಿಕಾರ ಬಿಟ್ಟು ಕೊಡುವಾಗ 19,650ಕ್ಕೇರಿತ್ತು. ಠೇವಣಿ ಮೊತ್ತ 145 ಕೋಟಿ ರೂಪಾಯಿಗಳಿಂದ 1978ರಲ್ಲಿ 865 ಕೋಟಿ ರೂಪಾಯಿಗಳಷ್ಟಾಯಿತು. ಇವರು ಕಸ್ಟೋಡಿಯನ್ ಆಗಿದ್ದ ಏಳೆಂಟು ವರ್ಷದಲ್ಲಿ ಇವರು ಮಾಡಿದ ನೇಮಕಾತಿ 14600ರಷ್ಟು. ಇದನ್ನೆಲ್ಲ ಗಮನಿಸುವಾಗ ಬ್ಯಾಂಕಿಗೆ ಅಗತ್ಯವಾದ ಆರ್ಥಿಕ ಹಾಗೂ ಮಾನವ ಸಂಪನ್ಮೂಲ ಹೆಚ್ಚಿಸಲು ಅಗತ್ಯವಾದ ಇವರ ಕಾಳಜಿ ಅರ್ಥವಾಗುತ್ತದೆ. ಬಹಳಷ್ಟು ತಜ್ಞರು ಸಾಮಾಜಿಕ ನ್ಯಾಯದ ಕುರಿತು ಬಹಳಷ್ಟು ಮಾತನಾಡಿಯಾರು. ಆದರೆ ಇವರು ಮಾತನಾಡದೇ ಎಲ್ಲವನ್ನೂ ಕಾರ್ಯದಲ್ಲೇ ಮಾಡಿ ತೋರಿಸಿದರು. ಇಷ್ಟೇ ಅಲ್ಲ. Self Employment Endeavour ಯೋಜನೆಯನ್ವಯ ನಿರುದ್ಯೋಗಿ ಯುವಕರಿಗೆ ಬೇಕಾದ ಮಾರ್ಗದರ್ಶನ, ಆರ್ಥಿಕ ಸಂಪನ್ಮೂಲ ಒದಗಿಸಿ ಅವರು ಸ್ವಂತ ಉದ್ದಿಮೆ ಸ್ಥಾಪಿಸಲು ಕೂಡ ಪೈಗಳ ಕೊಡುಗೆ ಸಾಕಷ್ಟು ಇದೆ. ಈ ಯೋಜನೆಗೆ J.C Internation Award ಇವರಿಗೆ ದೊರಕಿದೆ. ಹೀಗೆ ಸುಮಾರು 1400 ನಿರುದ್ಯೋಗಿಗಳು ಬ್ಯಾಂಕಿನ ಈ ಯೋಜನೆಯ ಫಲಾನುಭವಿಗಳಾಗಿ ಸ್ವಂತ ಉದ್ದಿಮೆ ಸ್ಥಾಪಿಸಿ ಸಮಾಜದಲ್ಲಿ ಗೌರವಯುತ ಜೀವನ ನಡೆಸುತ್ತಿದ್ದಾರೆ. ಸಿಂಡಿಕೇಟ್ ಬ್ಯಾಂಕು ಹುಟ್ಟು ಹಾಕಿದ ಇಂಥ ಯೋಜನೆಯಿಂದ ಸ್ವಂತ ಉದ್ದಿಮೆ ಸ್ಥಾಪಿಸಿದ ಉದ್ಯಮಿಗಳು ತಮ್ಮ ಉದ್ದಿಮೆಗಳಲ್ಲಿ ಒಂದಿಷ್ಟು ಜನರಿಗೆ ಉದ್ಯೋಗ ಕೊಟ್ಟು ಆ ಮೂಲಕವೂ ಉದ್ಯೋಗ ಸೃಷ್ಟಿಯಾದುದನ್ನು ಇಲ್ಲಿ ಸ್ಮರಿಸಬೇಕು. ಒಂದೇ ಬಾಣದಿಂದ ಎರಡು ಹಕ್ಕಿಗಳು ಎಂಬಂತೆ ಪೈಗಳು ರೂಪಿಸಿದ ಈ ಯೋಜನೆ ಬಹಳ ಫಲಕಾರಿಯಾಯಿತು.

ಪೈಗಳಿಗೆ ಕೇಳುವ ಕಿವಿಗಳಿದ್ದವು. ಹಾಗಂತ ಇದಿರು ಕುಳಿತವರು ಹೇಳಿದುದನ್ನು ಪೂರ್ತಿ ನಂಬಿ ಬಿಡುವ ಜಾಯಮಾನವೂ ಇವರದಲ್ಲ. ಮಾತುಗಳ ಸತ್ಯಾಸತ್ಯತೆ ತೂಗಿ ನೋಡಿಯೇ ನಿರ್ಣಯಕ್ಕೆ ಬರುವುದು ಇವರ ಜಾಯಮಾನ. ಬಡವರ ಪರ ಪೈಗಳದ್ದು ಯಾವಾಗಲು ಸಹಾಸುಭೂತಿಯ ನಿಲುವು. ಇದನ್ನು ಸಾಬೀತು ಪಡಿಸುವಂಥ ಈ ಘಟನೆ ನೋಡಿ. ಎಲ್.ಐ.ಸಿ.ಯ ಉದ್ಯೋಗಿಯಾಗಿದ್ದು ಪೈಗಳ ನಿಕಟವರ್ತಿ ಬಿ.ವಿ. ಕೆದಿಲಾಯರ ಅನಿಸಿಕೆ ಹೀಗೆ. ಅವರ ಪರಿಚಯಸ್ಥರಾಗಿದ್ದ ಐದಾರು ಮಕ್ಕಳುಳ್ಳ ಸಂಸಾರದ ಯಜಮಾನ ಆಕಸ್ಮಾತ್ ತೀರಿಕೊಂಡಾಗ ಕುಟುಂಬದ ಹಿರಿಯ ಹುಡುಗನಿಗೆ ಆಗಷ್ಟೇ ಹದಿನೆಂಟು ತುಂಬಿತ್ತು. ಆ ಸಂಸಾರದಲ್ಲಿ ಬಡತನವೆಂಬುದು ಹೊದ್ದು ಮಲಗಿತ್ತು. ಒಪ್ಪೊತ್ತಿನ ಕೂಳಿಗೂ ತತ್ವಾರ. ಅದಕ್ಕೆಂದೇ ಹುಡುಗನ ಜತೆ ಬೇರೊಂದು ಬ್ಯಾಂಕಿನ ಅಧ್ಯಕ್ಷರನ್ನು ಕಂಡು ಕೆದಿಲಾಯರು ಹುಡುಗನ ಮನೆಯ ಪರಿಸ್ಥಿತಿ ವಿವರಿಸಿ ಹುಡುಗನಿಗೆ ಬ್ಯಾಂಕಿನಲ್ಲಿ ಒಂದು ಕೆಲಸ ಕೊಟ್ಟರೆ ಸಂಸಾರ ಬದುಕಿ ಕೊಳ್ಳುತ್ತದೆ ಎಂದು ವಿನಂತಿಸಿ ಕೊಂಡರಂತೆ. ಅಧ್ಯಕ್ಷರಿಂದ ತಕ್ಷಣವೇ ಪಟಾಕಿ ಸಿಡಿಸಿದಂತೆ ಪ್ರತಿಕ್ರಿಯೆ. ಅಪ್ಪ ಸತ್ತದ್ದು ಅಂದರೆ ಅದೊಂದು ಕ್ವಾಲಿಫಿಕೇಶನ್ನಾ? ಕೆದಿಲಾಯರು ಅವರಿಂದ ಖಂಡಿತಾ ಇಂಥ ಪ್ರತಿಕ್ರಿಯೆಯನ್ನು ನಿರೀಕ್ಷಿಸಿಯೇ ಇರಲಿಲ್ಲವಂತೆ. ಇದರಿಂದ ನೊಂದ ಕೆದಿಲಾಯರು ಅನಂತರ ಪೈಗಳನ್ನು ನೋಡಿದರಂತೆ. ಹುಡುಗನ ಪರವಾಗಿ ಕೆದಿಲಾಯರು ಪೈಗಳಲ್ಲಿ ಹುಡುಗನ ಕುಟುಂಬದ ಪರಿಸ್ಥಿತಿ ವಿವರಿಸಿ ನಿವೇದಿಸಿಕೊಂಡರಂತೆ. ಎಲ್ಲವನ್ನೂ ಶಾಂತವಾಗಿ ಕೇಳಿಸಿಕೊಂಡು ಪೈಗಳು ಕೇಳಿದ್ದು ಒಂದೇ ಪ್ರಶ್ನೆ. ಈ ಹುಡುಗನಿಗೆ ಎಲ್ಲಿ ಪೋಸ್ಟಿಂಗ್ ಕೊಟ್ಟರೆ ಅನುಕೂಲ? ಮುಂದೆ ಹುಡುಗನಿಗೆ ಅನುಕೂಲವಾದೆಡೆ ಪೋಸ್ಟಿಂಗ್ ಆಯಿತು. ಆ ಹುಡುಗನಿಗೆ ಕೆಲಸ ಕೊಟ್ಟ ಕಾರಣ ಇಡೀ ಕುಟುಂಬಕ್ಕೆ ಅನ್ನದ ದಾರಿಯಾಯಿತು. ತನ್ನ ಪರಿಮಿತಿಯೊಳಗೆ ಎಷ್ಟು ಮಾಡಲು ಸಾಧ್ಯವೋ ಅಷ್ಟನ್ನು ಪೈಗಳು ಸದಾ ಮಾಡಿದ್ದಾರೆ. ಆದರೆ ತನ್ನ ಔದಾರ್ಯವನ್ನು ಅಪಾತ್ರ ದಾನವಾಗದಂತೆ ಕೂಡಾ ಅವರು ನೋಡಿದ್ದಾರೆ ಇದು ಕೆದಿಲಾಯರ ಅನಿಸಿಕೆ.

ಇನ್ನು ಉಡುಪಿ ಪರಿಸರದಲ್ಲಿ ಹೆಸರು ಪಡೆದ ಐರೋಡಿ ಕುಟುಂಬದಲ್ಲಿ ಒಬ್ಬರಾಗಿದ್ದು ಸಮಾಜಸೇವೆಯಲ್ಲಿ ಸಕ್ರಿಯರಾಗಿರುವ ಸಹನಶೀಲ ಪೈಗಳು ಕೆ.ಕೆ.ಪೈಗಳ ಕುರಿತು ಹೇಳುವುದು ಹೀಗೆ.

‘‘ಉಡುಪಿ ಜಿಲ್ಲಾ ವರ್ತಕರ ಸಂಘ, ಸಂಗೀತ ಸಂಗಮ, ಟೇಕ್‌ಕೇರ್ ಫೌಂಡೇಶನ್‌ನ ಪ್ರತಿನಿಧಿಯಾಗಿ ನಾನು ಈ ಸಂಸ್ಥೆಗಳ ಸಭೆ-ಸಮಾರಂಭದಲ್ಲಿ ಭಾಗವಹಿಸಲು ವಿನಂತಿಸಿದಾಗ ಶ್ರೀಯುತ ಕೆ.ಕೆ.ಪೈಯವರು ಆಗಮಿಸಿ, ಆ ಸಭೆ-ಸಮಾರಂಭ ಗಳಲ್ಲಿ ಭಾಗವಹಿಸಿದರೆ ಅದರ ಕಳೆಯೇ ಬೇರೆಯಾಗುತ್ತಿತ್ತು. ಹೂವಿನ ಜತೆಗೆ ದಾರಕ್ಕೆ ಬೆಲೆ ಬರುತ್ತದೆಂಬ ಸ್ವಾರ್ಥದಿಂದ ಅವರನ್ನು ವಿನಂತಿಸುತ್ತಿದ್ದೆ. ನಾನು ಕರೆದ ಪ್ರತಿಯೊಂದು ಸಮಾರಂಭಕ್ಕೂ ಅವರು ಬರುತ್ತಿದ್ದರು. ಜತೆಗೆ ನನ್ನ ತಂದೆಯವರಾದ ದಿ ಐರೋಡಿ ರಾಮದಾಸ ಪೈಯವರ ಸ್ವಾತಂತ್ರ್ಯ ಹೋರಾಟ, ಲಾವಣಿ ಹಾಡುವುದು, ದೇವತಾರ್ಚನವಸ್ತುಗಳ ಕುಸುರಿ ಕೆಲಸ ಹಾಗೂ ಎರಕದ ವಸ್ತುಗಳ ಕೆಲಸದ ನೈಪುಣ್ಯವನ್ನು ಹೊಗಳುತ್ತಿದ್ದರು. ಅಲ್ಲದೆ, ರಥಬೀದಿಯಲ್ಲಿ ಪ್ರಸಿದ್ಧ ಪಾತ್ರೆ ವ್ಯಾಪಾರಿ ದಿ ಐರೋಡಿ ರಾಧಾಕೃಷ್ಣ ಪೈಯವರ ದೇಶಭಕ್ತಿ, ದೈವಭಕ್ತಿ, ವ್ಯಾಪಾರದ ಬಗ್ಗೆ ಶ್ರದ್ಧೆ ಹಾಗೂ ಸಮಾಜಸೇವೆಯನ್ನು ಕೊಂಡಾಡುತ್ತಿದ್ದರು.

ಯಾವುದೋ ಒಂದು ಸಮಾರಂಭಕ್ಕೆ ಶ್ರೀಯುತ ಕೆ.ಕೆ. ಪೈಯವರಿಗೆ ಭಾಗವಹಿಸಲು ಅನನುಕೂಲವಾದುದರಿಂದ ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಸಗುಣಾ ಪೈಯವರನ್ನು ಸಭಾಧ್ಯಕ್ಷರಾಗಿ ಕಳುಹಿಸಿಕೊಟ್ಟಿದ್ದರು. ಜತೆಗೆ. ‘ಸಭೆಯಲ್ಲಿ ತುಂಬಾ ಮಾತನಾಡಬೇಡ, ಶಿಸ್ತಿನಿಂದಿರಬೇಕು ಎಂದು ಷರತ್ತು ವಿಧಿಸಿದ್ದರು! ಆಗ ನಾನು – ‘ಸಗುಣಕ್ಕ, ನೀನು ಮಾತಾಡು. ನಾನು ಕೆ. ಕೆ. ಪೈಯವರಲ್ಲಿ ಹೇಳುವುದಿಲ್ಲ  ಎಂದು ತಮಾಷೆ ಮಾಡಿದ್ದು ಇಂದಿಗೂ ನನಗೆ ನೆನಪಿದೆ. ಅಲ್ಲದೆ, ನನಗೆ ಅವರ ಕುಟುಂಬದ ಒಡನಾಟದಲ್ಲಿ ಹೆಮ್ಮೆಯಿದೆ.

ನಾನು ಅವರಿಗೆ ಎಷ್ಟು ಪರಿಚಿತನಾಗಿದ್ದೆ ಎಂದರೆ ಕೆ. ಕೆ. ಪೈಯವರ ಮನೆಯ ಅಂಗಳದಲ್ಲಿ ವಾಹನದಿಂದ ಇಳಿದ ಕೂಡಲೇ ಅಲ್ಲಿ ಡ್ರೈವರ್- ‘ಉಲಾಯಿ ಉಲ್ಲೆರ್. ಪೋಲೆ (ಒಳಗೆ ಇದ್ದಾರೆ, ಹೋಗಿ) ಎನ್ನುತ್ತಿದ್ದರು. ಒಳಗೆ ಹೋದ ಕೂಡಲೇ ಅವರ ಮನೆಯವರು ‘ಭಿತ್ತರಿ ಬಸ್ಲ ವಸ್ (ಒಳಗೆ ಕೂತಿದ್ದಾರೆ, ಹೋಗು) ಎಂದು ಪ್ರೀತಿಯಿಂದ ಹೇಳುತ್ತಿದ್ದರು.

ಒಂದು ದಿನ ನಾನು ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಹೋಗಿದ್ದೆ. ಆಗ ಸಾಯಂಕಾಲ ಏಳು ಗಂಟೆಯಾಗಿತ್ತು. ಅವರ ಮೇಲಿನ ಪ್ರೀತಿಯಿಂದ ಯಾರೂ ತೆಗೆದುಕೊಂಡು ಹೋಗದ ಉಡುಗೊರೆ ತೆಗೆದುಕೊಂಡುಹೋಗಬೇಕೆಂಬ ದೃಷ್ಟಿಯಿಂದ ತುಪ್ಪದಿಂದ ತಯಾರಿಸಿದ ಮೈಸೂರುಪಾಕನ್ನು ವೆಂಕಟೇಶ್ವರ ಸ್ವೀಟ್ ಸ್ಟಾಲ್‌ನಿಂದ ತೆಗೆದುಕೊಂಡು ಹೋಗಿದ್ದೆ. ಅವರಿಗೆ ಎಷ್ಟು ಖುಷಿಯಾಯಿತೆಂದರೆ, ತತ್‌ಕ್ಷಣ ‘ಇದು ಒಳ್ಳೆಯ ಕ್ವಾಲಿಟಿ ಎಂದು ಹೇಳಿ, ನನಗೂ ಒಂದು ತುಂಡನ್ನು ತಿನ್ನಲು ಅವರು ಕೈಯಾರೆ ತೆಗೆದುಕೊಟ್ಟರು. ಅವರಿಗೋಸ್ಕರ ತೆಗೆದುಕೊಂಡು ಹೋದದ್ದನ್ನು ನಾನು ತಿನ್ನುವುದು ಸರಿಯಲ್ಲವೆಂದು ತಿಳಿದಿದ್ದರೂ ದೊಡ್ಡ ವ್ಯಕ್ತಿಯ ಕೈಯಿಂದ ತಿನ್ನುವುದು ನನ್ನ ಯೋಗವೆಂದು ತಿಳಿದು ತತ್‌ಕ್ಷಣ ಅದನ್ನು ಪಡೆದುಕೊಂಡು ತಿಂದೆ.

ಸಾವಿರಾರು ಮಂದಿಗೆ ಉದ್ಯೋಗ. ಅಸಹಾಯಕರಿಗೆ ಸಹಾಯ ಮಾಡಿದ ಹಾಗೆ ನಮಗೂ ಅವರು ಅನ್ನದಾತರೆಂದು ಹೆಮ್ಮೆಯಿಂದ ಹೇಳುತ್ತೇನೆ. ನನ್ನ ಇಬ್ಬರು ಸಹೋದರರಿಗೆ ಹಾಗೂ ಇಬ್ಬರು ಸಹೋದರಿಯರಿಗೆ ಉದ್ಯೋಗ ಕೊಟ್ಟ ಮಹಾನುಭಾವರು ಅವರು. ನಾನು ಉದ್ಯೋಗ ಕೇಳಲು ಹೋದಾಗ, ‘ನೀನು ಅಂಗಡಿಯಿಡು ಎಂದು ಹರಸಿ ಕಳುಹಿಸಿದರು. ಅವರ ಆಶೀರ್ವಾದದಿಂದ ವ್ಯಾಪಾರ ರಂಗದಲ್ಲಿ ಉತ್ತುಂಗದಲ್ಲಿದ್ದೇನೆ ಹಾಗೂ ಅಧಿಕಾರ, ಅಂತಸ್ತು ದೊರೆತಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಜತೆಗೆ, ನಾಡಿನ ಎಲ್ಲ ಪ್ರಮುಖ ವ್ಯಕ್ತಿಗಳ ಸ್ನೇಹವಿದೆ. ಸುಖ, ಶಾಂತಿ, ನೆಮ್ಮದಿಯಿದೆ. ಇದು ನನ್ನ ಜೀವನದಲ್ಲಿ ಪೈಗಳ ಕೊಡುಗೆ. ಇವು ಕೆ. ಕೆ. ಪೈಯವರ ಕುರಿತು ಸಹನಶೀಲ ಪೈಗಳು ಹೇಳುವ ಅಭಿಮಾನದ ಮಾತುಗಳು.

ಪೈಗಳ ಮಾನವೀಯತೆ

ಸಿಂಡಿಕೇಟ್ ಬ್ಯಾಂಕನ್ನು ಜನರು ಇದು ನಮ್ಮ ಬ್ಯಾಂಕ್ ಎಂದು ಅಭಿಮಾನ ಪಡುವುದಕ್ಕೆ ಮೇಲಿನ ನಿದರ್ಶನವಷ್ಟೇ ಅಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಇಲ್ಲೊಂದು ಘಟನೆ ನೋಡಿ. ಘಟನೆ ಚಿಕ್ಕದಾದರೂ ಅದು ಮಹತ್ವ ಪಡೆದದ್ದು ಪೈಗಳ ಮಾನವೀಯತೆ ಹಾಗೂ ಕಾಳಜಿಯಿಂದಾಗಿ. 1977ರಲ್ಲಿ ನಡೆದ ಈ ಘಟನೆಯನ್ನು ನೆನಪಿಸಿಕೊಂಡವರು ಆಗ ಮಣಿಪಾಲ ಶಾಖೆಯ ಮ್ಯಾನೇಜರ್ ಆಗಿದ್ದ ದೇವೇಂದ್ರ ಪೆಜತ್ತಾಯರು.

ಮಣಿಪಾಲದ ಮೈದಾನದ ಪೂರ್ವಬದಿಯಲ್ಲಿ ನೆಟ್ಟ ಅಡಿಕೆ ಮರದ ಸುತ್ತ ಹಾಕಿದ ದೊಡ್ಡದಾದ ವೃತ್ತದೊಳಗೆ ನಿರಂತರವಾಗಿ ಒಬ್ಬ ಸೈಕಲ್ ಸವಾರಿ ಮಾಡುತ್ತಿದ್ದ. ಅವನ ಈ ಕಸರತ್ತು ನೋಡಿ ವಿದ್ಯಾರ್ಥಿಗಳು ಹಾಗೂ ದಾರಿಹೋಕರು ಅಷ್ಟಿಷ್ಟು ಪುಡಿಗಾಸು ಹಾಕಿ ಅವನನ್ನು ಪ್ರೋಆ ಯುವಕನ ಕಸುಬು ದಿನನಿತ್ಯ ಕಟ್ಟಡಗಳಿಗೆ ಬಣ್ಣ ಬಳಿಯುವುದು ಮತ್ತು ಸಾಯಂಕಾಲ 7ರಿಂದ 10ರ ವರೆಗೆ ಬಾಡಿಗೆ ಸೈಕಲ್ ಗಾಡಿಯಲ್ಲಿ ಮಂಡಕ್ಕಿ ಉಪ್ಕರಿ, ಹುರಿಗಡಲೆ ಇತ್ಯಾದಿ ಮಾರಿ ಒಂದಿಷ್ಟು ಕಾಸು ಸಂಪಾದಿಸುವುದು. ಒಂದು ದಿನ ಆ ಯುವಕ ಸ್ವಂತವಾಗಿ ಸೈಕಲ್ ಗಾಡಿ ಖರೀದಿಸುವ ಇರಾದೆಯಿಂದ ಪೆಜತ್ತಾಯರನ್ನು ಬ್ಯಾಂಕಿನಲ್ಲಿ ಕಂಡು ಮಾತನಾಡಿದ ನಂತೆ. ಆಗಲೇ ಬ್ಯಾಂಕಿನ ಅವನ ಖಾತೆಯಲ್ಲಿ ಒಂದಿಷ್ಟು ಹಣ ಜಮಾ ಆಗಿತ್ತು. ಆ ಹಣದೊಂದಿಗೆ ಬ್ಯಾಂಕಿನವರು ನೀಡಿದ ಸಾಲ ಸೇರಿಸಿ ಸೈಕಲ್ ಗಾಡಿ ಖರೀದಿಸುವ ಆಲೋಚನೆ ಆತನದು. ಅವನ ಜತೆಗೆ ಗಾಡಿ ಮಾರುವವನನ್ನು ಅಂದು ಆತ ಬ್ಯಾಂಕಿಗೆ ಕರೆತಂದಿದ್ದ. ಬ್ಯಾಂಕಿನ ನಿಯಮಾವಳಿಯಂತೆ ಅವನಿಗೆ ಸಾಲ ಮಂಜೂರಾಗಿ ಆತ ಸೈಕಲ್ ಗಾಡಿಯನ್ನೂ ಖರೀದಿಸಿದ. ಮರುದಿನ ಬ್ಯಾಂಕಿಗೆ ಬಂದು ಸೈಕಲ್ ಗಾಡಿಯ ವ್ಯಾಪಾರದ ಬೋಣಿ ಮಾಡಿ ಕೈಗಾಡಿಯ ಉದ್ಟಾಟನೆ ಮಾಡಬೇಕೆಂದು ಪೆಜತ್ತಾಯರಲ್ಲಿ ವಿನಂತಿಕೊಂಡಂತೆ ಪೆಜತ್ತಾಯರು ಗಾಡಿಯಿದ್ದಲ್ಲಿ ಬಂದು ನಿಂತುಕೊಂಡಾಗಲೇ ಪೈಗಳ ಕಾರು ಅಲ್ಲಿಂದ ಹಾದು ಹೋಯಿತು. ತನ್ನ ಚೇಂಬರ್‌ನಿಂದ ಮರುಕ್ಷಣವೇ ಪೈಗಳಿಂದ ಫೋನು. ಏನು ಪೆಜತ್ತಾಯರೇ ಅಷ್ಟು ಜನ ಕೂಡಿದ್ದಾರಲ್ಲ. ಅಲ್ಲಿ ಏನು ವಿಶೇಷ? ಪೆಜತ್ತಾಯರು ಸಂದರ್ಭದ ವಿವರಣೆ ನೀಡಿದರು. ‘‘ಅವನಿಗೆ ಸಾಲ ನಮ್ಮ ಬ್ಯಾಂಕಿಂದಲೇ ಕೊಡಲಾಗಿದೆ. ಅದಕ್ಕೆ ಸೈಕಲ್ ಗಾಡಿಯ ಉದ್ಘಾಟನೆ ಕೂಡ ನಮ್ಮವರಿಂದ ಆಗ ಬೇಕೆಂದು ಅಪೇಕ್ಷೆ ಪಡುತ್ತಾನೆ. ತಾವು ಬಂದು ಉದ್ಘಾಟಿಸಿದರೆ ಯುವಕನಿಗೆ ಪ್ರೋನೀಡಿದಂತಾಗುತ್ತದೆ ಎಂದು ಪೆಜತ್ತಾಯರು ಹೇಳಿದಾಗ ‘‘ಇಷ್ಟು ಸಣ್ಣ ವಿಚಾರಕ್ಕೆ ಇಷ್ಟು ಮಹತ್ವ ಯಾಕೆ? ಎಂಬಂತೆ ಪೈಗಳ ದನಿಯಲ್ಲಿ ಸ್ವಲ್ಪ ಗಡಸುತನ ತೋರಿದಂಥ ಅನುಭವ ಪೆಜತ್ತಾಯರಿಗೆ ಆಯಿತು. ಆದರೆ ಏನಾಶ್ಚರ್ಯ! ಮರುಕ್ಷಣದಲ್ಲಿಯೇ ಪೈಗಳು ಸೈಕಲ್ ಗಾಡಿಯಿದ್ದಲ್ಲಿ ಹಾಜರ್. ತಾನು ವಿಶ್ವಾಸವಿಟ್ಟ ಅಧಿಕಾರಿಗಳ ಮಾತನ್ನು ತೆಗೆದು ಹಾಕಲಾರದೇ ಪೈಗಳು ಬಂದದ್ದು ಪೆಜತ್ತಾಯರಿಗೆ ಖುಶಿ ಕೊಟ್ಟಿತು. ಗಾಡಿಯ ಮೇಲೆ ಹೂಎಸಳನ್ನು ಚೆಲ್ಲಿ ಪೈಗಳು ಸೈಕಲ್ ಗಾಡಿಯನ್ನು ಉದ್ಘಾಟಿಸಿ ಯುವಕನಿಗೆ ಶುಚಿತ್ವ ಮತ್ತು ಪ್ರಾಮಾಣಿಕತೆ ಕಾಪಾಡಿಕೊಂಡು ಬರುವಂತೆ ಎರಡು ಬುದ್ಧಿ ಮಾತು ಹೇಳಿದರು. ಯುವಕ ಪೈಗಳ ಸಹೃದಯತೆಗೆ ಆನಂದ ಭಾಷ್ಪ ಸುರಿಸಿ ಅವರಿಗೆ ಒಂದೇ ಕೈಯಿಂದ ನಮಸ್ಕರಿಸಿದಾಗಲೇ ಅವನಿಗೆ ಎಡಗೈ ಇಲ್ಲ ಎಂದು ಎಲ್ಲರಿಗೂ ತಿಳಿದದ್ದು. ಪೈಗಳು ಯುವಕನ ಬೆನ್ನು ತಟ್ಟಿ ಪ್ರೋಮತ್ತು ಧೈರ್ಯದ ಮಾತುಗಳನ್ನು ಹೇಳಿದ ಸಂದರ್ಭ ಯಾರೂ ಮರೆಯುವಂಥಹದಲ್ಲ ಎನ್ನುವುದ ಪೆಜತ್ತಾಯರ ಅನಿಸಿಕೆ.

ಚಿಕ್ಕವರು, ದೊಡ್ಡವರು, ಬಡವರು, ಬಲ್ಲಿದರು ಎಂದು ಪೈಗಳು ಎಂದೂ ತಾರತಮ್ಯ ಮಡಿದವರೇ ಅಲ್ಲ. No man is too small ಇದನ್ನು ಪೈಗಳು ಯಾವಾಗಲೂ ಅನ್ನುತ್ತಿದ್ದುದು ಇದಕ್ಕೆ ಇರಬೇಕು. ಅದನ್ನು ಬಾಯಿಯಲ್ಲಿ ಮಾತ್ರವಲ್ಲ, ಕಾರ್ಯದಲ್ಲೂ ಮಾಡಿ ತೋರಿಸುವುದು ಪೈಗಳ ದೊಡ್ಡ ಗುಣ. ಇದಕ್ಕೆ ಮೇಲಿನ ನಿದರ್ಶನವೇ ಸಾಕು. ಇದು ನಮ್ಮ ಬ್ಯಾಂಕು ಎಂದು ಸಮಾಜದ ಅಂಚಿನ ವ್ಯಕ್ತಿಯೂ ಸಿಂಡಿಕೇಟ್ ಬ್ಯಾಂಕ್ ಬಗ್ಗೆ ಅಭಿಮಾನ ಪಡಲು ಇಂಥ ಘಟನೆಗಳು ಪೈಗಳ ಸಾಚಾತನಕ್ಕೆ ಕನ್ನಡಿ ಹಿಡಿಯುತ್ತವೆ. ಇಷ್ಟೆ ಅಲ್ಲ, ಯಾವಾಗಲೂ ಸವಾಲನ್ನು ಸ್ವೀಕರಿಸುವ ಯುವಕರ ಕುರಿತು ಪೈಗಳಿಗೆ ಅತೀವ ಅಭಿಮಾನ. ಅಂಥವರಿಗೆ ಪ್ರೋನೀಡಿ ಜೀವನದಲ್ಲಿ ಮೇಲೆ ಬರಲು ಪೈಗಳೂ ಕಾರಣರಾಗಿದ್ದಾರೆ ಎಂಬುದಕ್ಕೆ ಈ ನಿದರ್ಶನಗಳು ಸಾಕು.

ಅಬುದಾಬಿಯ ಬಿ.ಆರ್. ಶೆಟ್ಟಿ, ಸತೀಶ್ಚಂದ್ರ ಎಂಡ್ ಕಂಪೆನಿಯ ಸತೀಶ್ಚಂದ್ರ ಹೆಗ್ಡೆ ಜೀವನದಲ್ಲಿ ಎತ್ತರವಾಗಿ ಬೆಳೆಯಲು ಪೈಗಳೇ ಕಾರಣ. ಎಂದು ಈ ಇಬ್ಬರು ಯಾವಾಗಲೂ ಸ್ಮರಿಸಿದ್ದು ಇದೆ. ಒಂದರ್ಥದಲ್ಲಿ ಪೈಗಳು Builder of the Men.

ಪೈಗಳುದ್ದು ಎಲ್ಲ ಜನರೊಡನೆ ಆತ್ಮೀಯವಗಿ ಬೆರೆಯುವಂಥ ಗುಣ. ಆತ ದಿಲ್ಲಿಯವನಿರಲಿ ಹಳ್ಳಿಯವನಿರಲಿ ಆತನೊಡನೆ ಸಲೀಸಾಗಿ ಒಡನಾಡಿ ವಿಷಯ ಗ್ರಹಣ ಮಾಡುವಲ್ಲಿ ಪೈಗಳು ಎತ್ತಿದ ಕೈ. ವಿದೇಶಿ ಶೈಲಿಯ ಇಂಗ್ಲೀಷಿನಲ್ಲಿ ಮಾತನಾಡುತ್ತಲೇ ಮರುಕ್ಷಣ ಅಪ್ಪಟ ತುಳುವಿನಲ್ಲಿ ಮಾತನಾಡಿಯಾರು. ಪೋಷಾಕಿನಲ್ಲಿ ಎಷ್ಟು ಆಧುನಿಕರೋ ಅಷ್ಟೇ ಸಂಪ್ರದಾಯಸ್ಥರು. ಮನೆಯಲ್ಲಿ ಒಂದು ದಿನವೂ ದೇವರ ಪೂಜೆಯನ್ನು ತಪ್ಪಿಸಿದವರೇ ಅಲ್ಲ ಅವರು. ಗೋಪಿ ಚಂದನದ ನಾಮ ಮುದ್ರೆಗಳಲ್ಲಿ ರೇಶಿಮೆ ಮಗುಟ ಉಟ್ಟು ಪೂಜೆಗೆ ಕುಳಿತರೆ ಕನಿಷ್ಠ ಒಂದು ಗಂಟೆಯಾದರೂ ಪೂಜೆಗೆ ತೆಗೆದುಕೊಂಡಾರು. ಹಬ್ಬ ಹರಿದಿನಗಳಲ್ಲಿ ಎಲ್ಲವೂ ಶಾಸ್ತ್ರೋಕ್ತವಾಗಿ ನಡೆಯಬೇಕು ಅವರಿಗೆ. ತಾನೊಬ್ಬ ಅಪ್ಪಟ ಮಾಧ್ವ ಎಂದು ಅಭಿಮಾನದಿಂದ ಅವರು ಯಾವಾಗಲೂ ಹೇಳಿಕೊಳ್ಳುತ್ತಿದ್ದುದಿದೆ.

ಪೈಗಳನ್ನು ಜನರು ಯಾವ ರೀತಿ ಸ್ಮರಿಸಿಕೊಳ್ಳುತ್ತಾರೆ. ಮುಖ್ಯವಾಗಿ ಅವರೆಲ್ಲರ ಪಾಲಿಗೆ ಪೈಗಳು ಒಬ್ಬ ಅನ್ನದಾತ. ಬಹಳಷ್ಟು ಯುವಕ ಯುವತಿಯವರಿಗೆ ಬ್ಯಾಂಕಿನಲ್ಲಿ ಕೆಲಸ ಕೊಡಿಸಿದ್ದಲ್ಲದೇ ಬಹಳಷ್ಟು ಮಂದಿ ನಿರುದ್ಯೋಗಿಗಳು ಸ್ವಂತ ಉದ್ದಿಮೆ ಸ್ಥಾಪಿಸಲು ನೆರವಾಗುವಲ್ಲಿ ಇವರ ಕೊಡುಗೆ ಗಮನಿಸಿ ಜೇಸಿ ಇಂಟರ್‌ನ್ಯಾಷನಲ್‌ನವರು 1975 ಮತ್ತು 1976ರಲ್ಲಿ ಎರಡು ಬಾರಿ ಮೆರಿಟೋರಿಯಸ್ ಸರ್ವೀಸ್ ಎವಾರ್ಡ್ ನೀಡಿ ಇವರನ್ನು ಗೌರವಿಸಿದ್ದಾರೆ. ಜತೆಗೆ ನ್ಯಾಶನಲ್ ಅಲೈಯನ್ಸ್ ಆಫ್ ಯಂಗ್ ಎಂಟ್ರಪೂರ್ಯೃನಿಯರ್ ಸಂಸ್ಥೆಯವರು ಲಘು ಉದ್ಯೋಗ ಸಹಕಾರಿ ಪ್ರಶಸ್ತಿ ಅಲ್ಲದೇ ಎಫ್‌ಐಸಿಸಿಐ ಪ್ರಶಸ್ತಿಗಳು ಇವರಿಗೆ ಸಿಕ್ಕಿವೆ. ಇವರ ಆಡಳಿತಾವಧಿಯಲ್ಲಿ ಬ್ಯಾಂಕಿಗೆ ಸಿಕ್ಕಿದ ಅಸೋಶಿಯೆಟೇಟ್ ಚೇಂಬರ್ ಆಫ್ ಕಾಮರ್ಸ ಎವಾರ್ಡ್ ಇಂಡಿಯನ್ ಮರ್ಚಂಟ್ಸ ಚೇಂಬರ್ ಎವಾರ್ಡ್ ಅಲ್ಲದೇ ನ್ಯಾಶನಲ್ ಟ್ರಾಫಿಗಳು (ವಿದೇಶಿ ವಿನಿಮಯ ವ್ಯವಹಾರಕ್ಕಾಗಿ) ಬ್ಯಾಂಕಿನ ಹಿರಿಮೆಗೆ ಸಾಕ್ಷಿಯಾದುದನ್ನು ಇಲ್ಲಿ ನೆನೆಯಬೇಕು. ತನ್ನ ಅಧಿಕಾರವಧಿಯಲ್ಲಿ ಬ್ಯಾಂಕಿಂಗ್‌ನಲ್ಲಿ ಹೆಚ್ಚಿನ ಪರಿಜ್ಞಾನ ಪಡೆಯಲು ಪೈಗಳು ಹೆಚ್ಚು ಕಡಿಮೆ ಇಡೀ ಭೂಖಂಡವನ್ನು ಸುತ್ತಿದ್ದಾರೆ. ಯು.ಕೆ., ಯುರೋಪ್, ಇಜಿಪ್ಟ್, ಥಾಯ್‌ಲೇಂಡ್ ಹಾಂಗಕಾಂಗ್, ಜಪಾನ್, ಯುಸ್‌ಎ, ಇಟಲಿ, ಫಿಲಿಪ್ಪೀನ್ಸ್, ಮಲೇಶಿಯಾ, ಸಿಂಗಪೂರ, ಸ್ಕಾಟಲೇಂಡ್ ಹೀಗೆ ಇವರು ಸಂದರ್ಶಿಸದ ದೇಶವೇ ಇಲ್ಲ ಎನ್ನಬೇಕು. ಅಲ್ಲಿಂದ ಗಳಿಸಿ ತಂದ ಅನುಭವವನ್ನು ಸ್ವಂತ ನಾಡಿನ ಹಣಕಾಸು ಸಂಸ್ಥೆ, ಕೈಗಾರಿಕಾ ಸಂಸ್ಥೆ ಶಿಕ್ಷಣ ಸಂಸ್ಥೆಗಳಿಗೆ ಧಾರೆಯೆರೆದು ಅಂಥ ಸಂಸ್ಥೆಗಳನ್ನು ಸಮೃದ್ಧಿಯೆಡೆಗೆ ತೆಗೆದುಕೊಂಡು ಹೋಗುವಲ್ಲಿ ಇವರ ಕೊಡುಗೆ ಅನುಪಮ. ಬ್ಯಾಂಕಿಗೆ 35 ವರ್ಷಗಳ ತನ್ನ ಅಮೂಲ್ಯ ಸೇವೆ ನೀಡಿ ಎಲ್ಲ ಸಹೋದ್ಯೋಗಿಗಳ ಶುಭ ಹಾರೈಕೆಗಳ ದೊಡ್ಡ ಮೊತ್ತದೊಡನೆ 1978ರ ಎಪ್ರಿಲ್ 22ರಂದು ಪೈಗಳು ಬ್ಯಾಂಕಿನ ತನ್ನ ಅಧಿಕಾರ ಬಿಟ್ಟುಕೊಟ್ಟಾಗ ಅವರ ಎಲ್ಲ ಸಹೋದ್ಯೋಗಿಗಳ ಹಾಗೂ ಇತರ ಸಿಬ್ಬಂದಿಗಳ ಹೃದಯಗಳಲ್ಲಿ ಏನೋ ಒಂದು ದುಗುಡ, ಏನೋ ಒಂದು ಹೇಳಲಾಗದ ಚಿಕ್ಕ ಆತಂಕ. ಅಭಿಮಾನದಿಂದ ಬಾಯಿ ಕಟ್ಟಿದಂತೆ ಆಗಿ ಯಾರಿಗೂ ಮಾತೇ ಬೇಡದ ಅನುಭವ, ಬರಿಯ  ಒಂದು ಮೌನದಲ್ಲಿಯೇ ಎಲ್ಲವನ್ನು ಕಣ್ಣುಗಳೇ ಹೇಳಿದಂತೆ. ‘‘ಪೈಗಳ ಆಡಳಿತಾವಧಿ ಬ್ಯಾಂಕಿನ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯ. ಅವು ಸುವರ್ಣ ಪುಟಗಳು ಎನ್ನುವವರಿದ್ದಾರೆ.

ಇದು ಇನ್ನೊಂದು ಅಧ್ಯಾಯ…

ಪೈಗಳು ವೃತ್ತಿಯಿಂದ ನಿವೃತ್ತಿ ಪಡೆದರೂ ಪ್ರವೃತ್ತಿಯಿಂದ ನಿವೃತ್ತಿ ಪಡೆಯಲಿಲ್ಲ. ಅದಕ್ಕೆ ಕಾರಣ ಅವರು ಮೊದಲಿನಿಂದಲೂ ಬೆಳೆಸಿಕೊಂಡ ಹಲವಾರು ಆಸಕ್ತಿಗಳು. ಬ್ಯಾಂಕಿನಲ್ಲಿ ಸೇವೆ ನೀಡಿದಷ್ಟೇ ಪ್ರಮಾಣದಲ್ಲಿ ಉಳಿದ ಕ್ಷೇತ್ರಗಳಾದ ಸಮಾಜ ಸೇವೆ, ಸಂಗೀತ, ಸಾಹಿತ್ಯ, ಕಲೆ, ಕ್ರೀಡೆ ಹೀಗೆ ಅವರ ಬೆಳೆಸಿಕೊಂಡ ಆಸಕ್ತಿಗಳ ಹರವು ವಿಶಾಲ. ಪೆರ್ಡೂರು ಶಾಲೆ ಸಹಿತ ಕೆಲವು ಹೈಸ್ಕೂಲು ಸ್ಥಾಪನೆಗೆ ಕಾರಣರಾಗಿ ಅಂಥ ಶಾಲೆಗಳ ಕರೆಸ್ಪಾಂಡೆಂಟ್ ಕೂಡ ಆಗಿ ಇವರು ಸೇವೆ ಸಲ್ಲಿಸಿದ್ದಾರೆ. ಮಣಿಪಾಲ ಎಕೆಡೆಮಿ ಆಫ್ ಜನರಲ್ ಎಜ್ಯುಕೇಶನ್ ಇದರ ರಿಜಿಸ್ಟ್ರಾರ್ ಆಗಿಯೂ ಡಾ.ಟಿ.ಎಂ.ಎ. ಪೈ ಫೌಂಡೇಶನಿನ ಅಧ್ಯಕ್ಷರಾಗಿ ಜತೆಗೆ ಟಿ.ಎ.ಪೈ ಇನ್‌ಟ್ಯೂಟ್ಸ್ ಆಫ್ ಮೆನೇಜ್‌ಮೆಂಟ್ ಸಂಸ್ಥೆಯ ಅಧ್ಯಕ್ಷರಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಮಣಿಪಾಲದ ಹಣಕಾಸಿನ ಸಮೂಹ ಸಂಸ್ಥೆಗೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇನ್ನೂ ಅವರು ಸಲಹಾಕಾರರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಹಣಕಾಸು ಸಂಸ್ಥೆ, ಕೈಗಾರಿಕಾ ಸಂಸ್ಥೆಗಳ ಹೆಸರುಗಳನ್ನು ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ.

ಸಂಗೀತ ಸಭಾದ ಅಧ್ಯಕ್ಷರಾಗಿ ಇವರು ಉಡುಪಿಯ ಜನತೆಗೆ ಮಹಾನ್ ಸಂಗೀತಗಾರರ ಸಂಗೀತ ಕೇಳುವ ಅವಕಾಶ ಒದಗಿಸಿದರು. ಯಕ್ಷಗಾನದಲ್ಲೂ ಇವರ ಆಸಕ್ತಿ ಕಡಿಮೆಯೇನಿಲ್ಲ. ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ ಬೆಳೆಯಿಸುವಲ್ಲಿ ಇವರ ಪ್ರೋಇದೆ. ರೋಟಕ್ ಸಿಂಡಿಕೇಟ್ ಟೂರ್ನಮೆಂಟ್ ಇಪ್ಪತ್ತೊಂದು ವರ್ಷಗಳ ಕಾಲ ಯಶಸ್ವಿಯಗಿ ನಡೆಸಿ ತನ್ನ ಕ್ರೀಡಾಸಕ್ತಿಯನ್ನು ಇವರು ಸಾಬೀತು ಪಡಿಸಿದ್ದಾರೆ. ಕ್ರೀಡಾ ಪಟುಗಳಿಗೆ, ಸಾಹಿತಿ, ಕಲಾವಿದರಿಗೆ ಬ್ಯಾಂಕಿನಲ್ಲಿ ಕೆಲಸ ಕೊಡಿಸಿ ಕ್ರೀಡೆ, ಸಾಹಿತ್ಯ ಮುಂತಾದುವುಗಳ ಮೇಲಣ ತನ್ನ ಅಭಿಮಾನಕ್ಕೆ ಕೂಡಾ ಸಾಕ್ಷಿಯಾದರು. ಉಡುಪಿ ಪರಿಸರದ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಸೇವೆ ನೀಡುತ್ತಾ ಇವುಗಳ ಕುರಿತಾದ ತನ್ನ ಕಾಳಜಿಗೆ ಒತ್ತು ಕೊಟ್ಟಿದ್ದಾರೆ. ಉಡುಪಿ ಪರಿಸರದ ಯಾವುದೇ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಲ್ಲಿ ಪೈಗಳು ಭಾಗವಹಿಸದಿದ್ದರೆ ಆ ಕಾರ್ಯಕ್ರಮಗಳು ಸಪ್ಪೆಯೆಂದೇ ಭಾವಿಸುತ್ತಿದ್ದರು. ಅಷ್ಟ ಮಠಕ್ಕೂ ಪೈಗಳಿಗೂ ತುಂಬಾ ನಿಕಟ ಸಂಪರ್ಕ. ಇದು ಪೈಗಳ ತಂದೆಯ  ಕಾಲದಿಂದ ನಡೆದು ಬಂದದ್ದು. ಹಾಗಾಗಿ ಪ್ರತೀ ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದಷ್ಟು ಸಮಯ ಪೈಗಳು ತನಗೆ ವಹಿಸಿದ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದು ಕೂಡಾ ಇಲ್ಲಿ ನೆನೆಯಬೇಕು.

ಪೈಗಳು ರಾಜಕೀಯ ಮುತ್ಸದ್ದಿ ಕೂಡಾ. ನಾಲ್ವತ್ತರ ದಶಕಗಳಲ್ಲಿ ಟಿ.ಎ.ಪೈಗಳು ಕಾಂಗ್ರೆಸ್ ಟಿಕೇಟಿನಲ್ಲಿ ವಿಧಾನಸಭೆಗೆ ಆರಿಸಿ ಬರಲು ಕಾರ್ಯಕ್ರಮ ರೂಪಣೆ ರಚಿಸಿದ್ದು ಕೆ.ಕೆ.ಪೈಗಳೇ. ಫಲಿತಾಂಶದಲ್ಲಿ ನಿರೀಕ್ಷಿಸಿದ ಸ್ಥಾನಗಳಿಗಿಂಥ ಹೆಚ್ಚಿನ ಸ್ಥಾನಗಳನ್ನು ಇವರ ಪಾರ್ಟಿ ಗಳಿಸುವಂತಾದದ್ದು ಪೈಗಳ ದೂರ ದೃಷ್ಟಿಯೆನ್ನಬೇಕು. ಅನಂತರ ಟಿ.ಎ ಪೈಗಳು ರಾಷ್ಟ್ರ ರಾಜಕೀಯಕ್ಕೆ ಪ್ರವೇಶಿಸಿದಾಗ ಅವರಿಗೆ ಬೆಂಗಾವಲಾಗಿ ನಿಂತವರಲ್ಲಿ ಕೆ.ಕೆ. ಪೈಗಳೂ ಒಬ್ಬರು. ನಗರ ಸಭೆಯ ಸದಸ್ಯರಾಗಿ 14 ವರ್ಷಗಳ ಕಾಲ ಹಾಗೂ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಇವರು ಸೇವೆ ಸಲ್ಲಿಸಿದ್ದಾರೆ. ಇವರ ಕಾಲದಲ್ಲಿ ನಗರಾಡಳಿತಕ್ಕೆ ಸಂಬಂಧ ಪಟ್ಟ ಹಾಗೆ ಅನೇಕ ಸುಧಾರಣೆಗಳಾದುದಲ್ಲದೆ ಪರ್ಯಾಯ ಪೀಠ ಯಶಸ್ವಿಯಾಗಿ ಮುಗಿಸಿದ ಹಾಗೂ ಪರ್ಯಾಯ ಪೀಠವೇರುವ ಸ್ವಾಮಿಗಳಿಗೆ ನಾಗರಿಕ ಸಮ್ಮಾನ ಮಾಡುವ ಕ್ರಮವನ್ನು ಪ್ರಾರಂಭಿದ್ದು ಪೈಗಳು ನಗರಸಭೆ ಅಧ್ಯಕ್ಷರಾಗಿದ್ದಾಗ. ಈ ಕಾರ್ಯಕ್ರಮ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ. ಇದು ಪೈಗಳು ಹಾಕಿದ ಹೊಸ ಹೆಜ್ಜೆ. ಹಾಗೆಯೇ ಉಡುಪಿಯ ಸುಪುತ್ರರನ್ನು ಸಮ್ಮಾನಿಸುವ ಪರಂಪರೆಯನ್ನು ಪರ್ಯಾಯದ ಸಮಯ ಪ್ರಾರಂಭಿಸಿದ್ದು ಪೈಗಳೇ ಎಂಬುದನ್ನು ಗಮನಿಸಬೇಕು. ಇವರು ನಗರಸಭೆ ಅಧ್ಯಕ್ಷರಾಗಿದ್ದಾಗಲೇ ಕರ್ನಾಟಕ ರಾಜ್ಯ ಉದಯವಾಯಿತು ಎಂಬುದನ್ನು ಕೂಡಾ ಈ ಸಂದರ್ಭದಲ್ಲಿ ಜ್ಞಾಪಿಸಿಕೊಳ್ಳಬೇಕು.

ಎಲ್ಲರೊಳು ಒಂದೊಂದಾಗಿ

ಇಷ್ಟನ್ನು ಹೇಳಿದರೆ ಪೈಗಳ ಕುರಿತು ಎಲ್ಲವನ್ನೂ ಹೇಳಿದಂತಾಗುವುದಿಲ್ಲ. ಬ್ಯಾಂಕಿನಿಂದ ನಿವೃತ್ತಿ ಹೊಂದಿದ ಮೇಲೆ ಪೈಗಳು ಸಮಾಜ ಸೇವೆಗೆ ಸಂಪೂರ್ಣವಾಗಿ ತನ್ನನ್ನು ಅರ್ಪಿಸಿಕೊಂಡರು. ಉಡುಪಿಯ ಅಸುಪಾಸಿನ ಯಾವುದೇ ಅಭಿವೃದ್ಧಿ ಕಾರ್ಯ, ಸಂಸ್ಮರಣೆ, ದೇವಳದ ನವೀಕರಣ ಮುಂತಾದುವುಗಳಿಗೆ ಪೈಗಳೇ ಮಾರ್ಗದರ್ಶನ ನೀಡಬೇಕು. ಇದಕ್ಕೆ ಒಂದು ಉದಾಹರಣೆ ಉಡುಪಿಯ ಹೆಣ್ಣು ಮಕ್ಕಳ ತರಬೇತಿ ಸಂಸ್ಥೆಯ ವಜ್ರ ಮಹೋತ್ಸವದ ಸಂದರ್ಭದಲ್ಲಿ ಶಾಲೆಯ ನವೀಕರಣ ಕಾರ್ಯಕ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಕೆ.ಕೆ ಪೈಗಳನ್ನು ಮುಂದಿಟ್ಟುಕೊಂಡು ಕೆಲಸ ಪ್ರಾರಂಭಿಸಿದ್ದು. ಅಭಿವೃದ್ಧಿ ಕೆಲಸ ಪೈಗಳ ಹೆಸರಿನಲ್ಲಿ ಸುಲಭವಾಯಿತು. ದೇಣಿಗೆ ಹರಿದು ಬರಲು ಕಷ್ಟವಾಗಲಿಲ್ಲ. ಪೈಗಳ ಹೆಸರಿನ ಮಹತ್ವ ಅಷ್ಟು. ನಿನ್ನ ನಾಮದ ಬಲವೊಂದಿದ್ದರೆ ಸಾಕು ಅನ್ನುತ್ತಾರಲ್ಲ ಹಾಗೆ. ಸಮಾಜ ಸೇವೆಯ ಮುಂದುವರಿದ ಭಾಗವಾಗಿ ಅಲ್ಲಲ್ಲಿ ನಡೆಯುವ  ಕಾರ್ಯಕ್ರಮಗಳ ಉದ್ಘಾಟನೆಯ ಮುಖ್ಯ ಅತಿಥಿ ಸ್ಥಾನ ಮತ್ತಿತರ ಜವಾಬ್ದಾರಿಗಳು ಹೀಗೆ ತಾನು ಹೋಗುವ ಕಾರ್ಯಕ್ರಮಗಳಿಗೆ ಪೈಗಳು ಕ್ಲಪ್ತ ಸಮಯಕ್ಕೆ ಹೋಗಿ ಹಾಜರಾಗುತ್ತಿದ್ದರು. ತಡವಾಗಿ ಹೋದ ನಿದರ್ಶನಗಳು ಇಲ್ಲವೇ ಇಲ್ಲವೆನ್ನಬೇಕು. ನಿಗದಿತ ಸಮಯದಲ್ಲಿ ಕಾರ್ಯಕ್ರಮಕ್ಕೆ ಬಂದು ಅದನ್ನು ಚಂದವಾಗಿ ಮುಗಿಸಿಕೊಟ್ಟು ಹೋಗುವುದು ಅವರ ಜಾಯಮಾನ.

ಸುಮಾರು 10-15 ವರ್ಷಗಳ ಹಿಂದೆ ಕುಮಟಾದಲ್ಲಿ ಒಂದು ಗ್ರಾಮೀಣ ಬ್ಯಾಂಕು ಪ್ರಾರಂಭವಾಗುವುದಿತ್ತು. ಮುಖ್ಯ ಅತಿಥಿಯಾಗಿ ಬರಬೇಕೆಂದು ಪೈಗಳನ್ನು ಫೋನಿನ ಮೂಲಕ ಕೇಳಿಕೊಳ್ಳಲಾಯಿತು. ಆಗ ಪೈಗಳಿಗೆ 74ರ ಹರೆಯ. ಹಳ್ಳಿಯ ಮೂಲೆಯಲ್ಲಿರುವ ಗ್ರಾಮೀಣ ಬ್ಯಾಂಕಿನ ಉದ್ಘಾಟನೆ ಎಂದೇನೂ ಅವರು ಉಪೇಕ್ಷೆ ಮಾಡಲಿಲ್ಲ. ಕಾರ್ಯಕ್ರಮಕ್ಕೆ ಬರಲು ತಮ್ಮ ಒಪ್ಪಿಗೆ ನೀಡಿದರು. ಬೆಳಗ್ಗೆ ಆರರ ನಸುಕಿನಲ್ಲಿ ಮಣಿಪಾಲದಿಂದ ಕಾರಿನಲ್ಲಿ ಹೊರಟು 9 ಗಂಟೆ ಒಳಗೆ ಕಾರ್ಯಕ್ರಮಕ್ಕೆ ಅವರು ಹಾಜರು. ಇದು ಪೈಗಳ ಸಮಯ ಬದ್ಧತೆ. ಅದಕ್ಕಾಗಿಯೇ ಪೈಗಳು ವಿಶಿಷ್ಟವಾಗಿ ಎದ್ದು ತೋರುತ್ತಾರೆ. ದೊಡ್ಡವರಲ್ಲಿ ದೊಡ್ಡವರಾಗಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುವ ಗುಣ ಅವರದು.

ಇವೆಲ್ಲಕ್ಕಿಂತ ಮುಖ್ಯ ಪೈಗಳು ಒಬ್ಬ ಅಪ್ಪಟ ಸಾಹಿತ್ಯಾಭಿಮಾನಿ. ಸಾಹಿತ್ಯದ ವಿಷಯ ಕೇಳಲು ಅವರಿಗೆ ನಾಲ್ಕು ಕಿವಿಗಳು. ಸಾಹಿತ್ಯ ವಿಷಯಗಳೆಂದರೆ ಗಂಟೆಗಟ್ಟಲೆ ಮಾತನಾಡಿಯಾರು. ಮಂಗಳೂರಿನಲ್ಲಿ ಕಲಿಯುವಾಗ ತಾನು ಮುಳಿಯ ತಿಮ್ಮಪ್ಪಯ್ಯನವರ ವಿದ್ಯಾರ್ಥಿಯಾಗಿದ್ದೆ ಎಂದು ಯಾವಾಗಲೂ ಅವರು ಅಭಿಮಾನದಿಂದ ಹೇಳಿಕೊಳ್ಳು ತ್ತಿದ್ದರು. ಆಗ ಮಂಗಳೂರಿನ ಕನ್ನಡ ದಿಗ್ಗಜರೆಲ್ಲ ಸೇರಿ ಕಟ್ಟಿದ ಕನ್ನಡ ಸಂಘ ಮಿತ್ರ ಮಂಡಳಿಯ ಸದಸ್ಯನಾಗಿ ಸಾಹಿತ್ಯದ ಒಲವನ್ನು ಇವರು ಬೆಳೆಸಿಕೊಂಡರು. ಇವರಲ್ಲಿ ಕನ್ನಡ ಅಭಿಮಾನದ ಬಗ್ಗೆ ಬೀಜಾಂಕುರವಾದುದು ಇವರು ಕಡಿಯಾಳಿ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಎಂಬುದು ಕೂಡಾ ಅಷ್ಟೇ ಸತ್ಯ. ಹಾಗೆ ಬೆಳೆದು ಬಂದ ಒಲವು ಮಂಗಳೂರಿನಿಂದ ಮುಂಬಯಿ ತನಕ ಇವರನ್ನು ಬಿಡಲಿಲ್ಲ. ಮುಂಬಯಿಯಲ್ಲಿ ಕಲಿಯುತ್ತಿದ್ದಾಗ ಕಾಲೇಜಿನಲ್ಲಿ ಕರ್ನಾಟಕ ಸಂಘವನ್ನು ಇವರು ಕಟ್ಟಿದ್ದನ್ನು ಇಲ್ಲಿ ಸ್ಮರಿಸಬೇಕು. ದಿವಂಗತ ಕು.ಶಿ.ಯವರು ಒಂದೆಡೆ ದಾಖಲಿಸಿದ ಈ ಘಟನೆ ಪೈಗಳ ಕನ್ನಡ ಪ್ರೇಮಕ್ಕೆ ಸಾಕ್ಷಿ. 1951ರಲ್ಲಿ ಉಡುಪಿಯಲ್ಲಿ ಕರ್ನಾಟಕ ಸಂಘದ ದಸರಾ ಮಹೋತ್ಸವ ನಡೆಯಿತು. ಒಂದು ಸಮಾರಂಭವೆಂದರೆ ಸಂಘಟಕರಿಗೆ ಸಾಕಷ್ಟು ಓಡಾಟಗಳಿರುತ್ತವೆ. ಅದನ್ನರಿತ ಪೈಗಳು ಕು.ಶಿ.ಯವರ ಓಡಾಟಕ್ಕೆ ತನ್ನ ಮೋರಿಸ್ ಕಾರನ್ನು ಕಾರ್ಯಕ್ರಮ ಮುಗಿಯುವ ತನಕ ಉಪಯೋಗಿಸುವಂತೆ ಬಿಟ್ಟು ಕೊಟ್ಟರಂತೆ. ಆಮೇಲೆ ಉಡುಪಿಯಲ್ಲಿ ನಡೆದ ಕನಕ ಉತ್ಸವ, ಪುರಂದರ ಉತ್ಸವ, ಸರ್ವಧರ್ಮ ಸಮ್ಮೇಳನ ಹೀಗೆ ಉತ್ಸವ ಮುಗಿಯುವ ತನಕ ಪೈಗಳ ಕಾರು ಸಂಘಟಕರ ಸುಪರ್ದಿಯಲ್ಲಿ. ಸಾಹಿತ್ಯಾಭಿಮಾನಿಯಾಗಿ ತರಾಸು, ಅನಕೃ, ವಿ.ಸೀ, ನರಸಿಂಹ ಸ್ವಾಮಿ, ದ.ರಾ.ಬೇಂದ್ರೆ ಮೊದಲಾದ ಸಾಹಿತ್ಯ ದಿಗ್ಗಜರ ಜತೆ ಪೈಗಳು ನಿಕಟ ಸಂಪರ್ಕ ಹೊಂದಿದ್ದರು. ಪೈಗಳು ಸಾಹಿತ್ಯದಲ್ಲಿ  ಜ್ಞಾನ ಬೆಳೆಸಿ ಕೊಂಡದ್ದು ಇಂಥವರ ಒಡನಾಟದಿಂದ.

ಮುಂದೆ 1972ರಲ್ಲಿ ಸೇಡಿಯಾಮ ಕೃಷ್ಣಭಟ್ಟರು ತನ್ನ ಮಗನೊಂದಿಗೆ ಮಣಿಪಾಲಕ್ಕೆ ಬಂದು ನೆಲೆಸಿದರು. ಆಗಷ್ಟೇ ಅವರ ಚಂದ್ರಖಂ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಎಕಾಡೆಮಿಯ ಪ್ರಶಸ್ತಿ ಬಂದಿತ್ತು. ಇದೇ ನೆಪದಲ್ಲಿ ಇವರಿಗೊಂದು ಅಭಿನಂದನಾ ಸಮಾರಂಭ ಮಣಿಪಾಲ ಸಾಹಿತ್ಯ ಸಂಘದ ವತಿಯಿಂದ ನಡೆಯಿತು. ಈ ಕಾರ್ಯಕ್ರಮದ ಬೆನ್ನೆಲುಬಾಗಿ ನಿಂತ ಪೈಗಳು ಕಾರ್ಯಕ್ರಮ ನಡೆಯಲು ಬ್ಯಾಂಕಿನಲ್ಲೇ ಜಾಗದ ಏರ್ಪಾಟು ಮಾಡಿದರು. ಅದೇ ಸಮಯ ಕಾರ್ಕಳದ ಪ್ರೊ.ಎಂ ರಾಮಚಂದ್ರ ಅವರು ಸೇಡಿಯಾಪು ತನಗೆ ಬರೆದ ಅನೇಕ ಸಾಹಿತ್ಯಿಕ ಮೌಲ್ಯವುಳ್ಳ  ಪತ್ರಗಳಲ್ಲಿ ಕೆಲವನ್ನು ಆರಿಸಿ ಸಭೆಯಲ್ಲಿ ವಾಚಿಸಿದರು. ಇದನ್ನು ಆಲಿಸಿದ ಪೈಗಳು ಕಾರ್ಯಕ್ರಮ ಮುಗಿದ ಮೇಲೆ ರಾಮಚಂದ್ರರನ್ನು ಕಂಡು ಅವರ ಪತ್ರ ಸಂಗ್ರಹದ ಬಗ್ಗೆ ಖುಶಿ ಪಟ್ಟರಂತೆ. ಪತ್ರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವಂತೆ ಕೂಡಾ ಆಗ ಪೈಗಳಿಂದ ಸೂಚನೆ ಬಂತಂತೆ. ಅದರ ಫಲಶ್ರುತಿಯೇ ಸೇಡಿಯಾಪು ಅವರಿಗೆ 90 ತುಂಬಿದಾಗ ಹೊರತಂದ ಅವರದೇ ಆದ ಸುಮಾರು 100 ಪತ್ರಗಳ ಸಂಗ್ರಹ ಪತ್ರಾವಳಿ. ಇದು ಒಂದು ಮೌಲಿಕ ಕೃತಿಯೆಂದು ಪರಿಗಣಿಸಲ್ಪಡುತ್ತದೆ. ಸೇಡಿಯಾಪು ಅವರ ಪತ್ರಗಳನ್ನೊಳ ಗೊಂಡ ಈ ಪತ್ರಾವಳಿ, ಸಾಹಿತ್ಯದ ಕುರಿತಾಗಿ ಸೇಡಿಯಾಪು ಅವರಿಗಿದ್ದ ಸೂಕ್ಷ್ಮ ಒಳನೋಟವನ್ನು ತೋರಿಸುತ್ತದೆ.

ಕೆ.ಕೆ ಪೈಗಳ ಸಾಹಿತ್ಯ ಪ್ರೀತಿಯ ಇನ್ನೂ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸ ಬಹುದೇನೊ? ಪ್ರೊ.ಎಸ್.ವಿ. ಪರಮೇಶ್ವರ ಭಟ್ಟರ ಮಹಾಕವಿ ಕಾಳಿದಾಸ ಸಮಗ್ರ ಸಂಪುಟ ಪ್ರಕಟಣೆಯ ಕುರಿತು ಮಾತು ಬಂದಾಗ ಪ್ರಕಟಣೆಗಾಗಿ ಯಾವ ಭದ್ರತೆಯನ್ನು ಬಯಸದೇ ಬ್ಯಾಂಕಿನಿಂದ ಸಾಲ ಒದಗಿಸಿದ್ದು ಪೈಗಳ ಔದಾರ್ಯದ ಹಾಗೂ ಸಾಹಿತ್ಯ ಪ್ರೇಮದ ಸಂಕೇತ. ಯಾವ ವಿಶ್ವವಿದ್ಯಾನಿಲಯವೂ ಅಷ್ಟರ ತನಕ ಮಾಡದಿದ್ದ ಒಂದು ದಾಖಲೆಯ ಘಟನೆಯಿದು. ಹೀಗೆ ಪೈಗಳ ಸಾಹಿತ್ಯ ಪ್ರೀತಿಯ ಬಗ್ಗೆ ಹೇಳುತ್ತಾ ಹೋದರೆ ಅದೇ ಒಂದು ಸಮಗ್ರ ಸಂಪುಟವಾದೀತು.

ಇಷ್ಟೆಲ್ಲಾ ಹೇಳಿದ ಮೇಲೆ ಪೈಗಳ ಬದುಕಿನ ಫಿಲಾಸಫಿ ಬಗ್ಗೆ ಒಂದಿಷ್ಟು ಮಾತು. ಹೌದು! ಅವರ ಬದುಕಿನ ಫಿಲಾಸಫಿ ಯಾವುದು?

ಶ್ರೀ ಕೆ. ಕೆ. ಪೈಯವರ ಬದುಕಿನ ಫಿಲಾಸಫಿ

  • ಯಶಸ್ವೀ ಜೀವನ : ಯಶಸ್ವೀ ಜೀವನವೆಂದರೆ ಪರಿಸ್ಥಿತಿಗನುಗುಣವಾಗಿ ನಮ್ಮ ಧ್ಯೇಯಗಳ ಹೊಂದಾಣಿಕೆ ಮಾಡುವುದು.
  • ಬದುಕು : ನಾನು ಬದುಕಲು ಕಲಿತಿದ್ದೇನೆ. ನನ್ನ ಬದುಕು ಬೇರೆಯವರಿಗೆ ಪ್ರಯೋಜನಕಾರಿ ಯಾಗಿರುವಂತೆ ನನಗೂ ಪ್ರಯೋಜನಕಾರಿಯಾಗಿದೆ.
  • ಜೀವನ – ಸ್ಪರ್ಧೆ : ಘಟನೆಗಳು ಸಂಭವಿಸಿದಂತೆ ಅವನ್ನು ಸ್ಪರ್ಧಾಭಾವದಿಂದ ಎದುರಿಸುವುದೇ ಜೀವನವೆಂದು ನಾನರಿತಿದ್ದೇನೆ.
  • ಧ್ಯೇಯ : ಜೀವನಕ್ಕೊಂದು ಧ್ಯೇಯವಿರಬೇಕು – ಗುರಿ ಇರಬೇಕು. ಇಲ್ಲವಾದರೆ ಜೀವನವೆಂದರೆ ಗುರಿ ತಪ್ಪಿದ ನೌಕೆಯು ಅಂತ್ಯವಿಲ್ಲದ ಸಾಗರದಲ್ಲಿ ಅಲೆದಾಡಿದಂತೆ.
  • ಉಪದೇಶ ಆಚರಣೆ : ಉಪದೇಶ ಕೊಡುವುದು ಬಹಳ ಸುಲಭ. ಆದರೆ ಉಪದೇಶಿಸುವುದು ಅದನ್ನು ಆಚರಿಸಬೇಕೆಂದಿದ್ದರೆ ಅದರಷ್ಟು ಕಷ್ಟ ಇನ್ನೊಂದಿಲ್ಲ! ಜೀವನದಲ್ಲಿ ನಾನು ಕಲಿತ ದೊಡ್ಡ ಪಾಠವೆಂದರೆ ಯಾರಿಗೂ ಉಪದೇಶ ಕೊಡದಿರುವುದು.
  • ಕರ್ತವ್ಯ – ಫಲ : ಕರ್ತವ್ಯವನ್ನು ಪೂರೈಸುವುದು ಮಾತ್ರ ನನ್ನ ಹಕ್ಕು ಹೊರತು ಅದರ ಫಲ ಇಲ್ಲವೇ ಪರಿಣಾಮದೆಡೆಗೆ ದೃಷ್ಟಿ ಬೀರುವುದು ನನಗೆ ಸಂಬಂಧಿಸಿದುದಲ್ಲ. ಕಾರಣವಿಷ್ಟೇ. ದೇವರ ಆದೃಶ್ಯ ಹಸ್ತಗಳು ಕಾರ್ಯನಿರತವಾಗಿ ಸದಾ ನನಗೆ ಮಾರ್ಗದರ್ಶನವನ್ನು ಮಾಡುತ್ತಲಿವೆ. ದೇವರೆನ್ನಿ ಅಥವಾ ವಿಧಿಯೆನ್ನಿ. ನನಗರಿವಿಲ್ಲದಿದ್ದರೂ ನನ್ನ  ಅನುಭವಕ್ಕೆ ಬರುವಂತಿರುವ ಅದೃಶ್ಯ ಶಕ್ತಿ ಸದಾಕಾಲವಿರುವುದನ್ನು ಕಾಣಬಹುದು. ನನಗೆ ಆತನಲ್ಲಿ ವಿಶ್ವಾಸವಿದೆ.
  • ಜೀವನ ದರ್ಶನ : ಜೀವನವೆಂದರೆ ಶಾಂತವಾಗಿರುರುವ ಕಡಲಲ್ಲಿ ಚಲಿಸುವ ಒಂದು ನೌಕೆಯಂತೆ. ಅದರ ಪಥ ನಿರ್ದಿಷ್ಟವಾಗಿ ಪೂರ್ವ ನಿಯೋಜಿತವಾಗಿದೆ. ಆದರೆ ಅದು ಯಾವ ದಿಕ್ಕಿಗೆ ಚಲಿಸುವುದೆಂದು ಮಾತ್ರ ಅರಿವಿಲ್ಲ!.
  • ಜೀವನ ಶಿಕ್ಷಣ : ಒಳ್ಳೆಯ ಜೀವನ ಹಾಗೂ ಯಶಸ್ವೀ ಜೀವನವನ್ನು ನಡೆಸಲು ತರಬೇತಿಯನ್ನು ನೀಡಲು ಕಾಲೇಜುಗಳು ಇನ್ನು ಪ್ರಾರಂಭವಾಗಬೇಕು. ಜೀವನವೆಂದರೆ ಉದ್ಯೋಗದಲ್ಲಿ ತರಬೇತಿ ಇದ್ದಂತೆ. ಕೆಲವು ಬಾರಿ ಬೇರೆಯವರ ಜೀವನವನ್ನು ನಕಲುಮಾಡಿ, ಕೆಲವೊಮ್ಮೆ ಬೇರೆಯವರ ಆದರ್ಶಗಳನ್ನು ನೋಡಿ ಧ್ಯೇಯಗಳನ್ನು ಅನುಸರಿಸಿ, ಅಳವಡಿಸಿ ಮುಂದಡಿ ಇಡಬೇಕು.

What is success?

Success is speaking words of Praise
In cheering other people’s ways.
In doing just the best you can
with every task and every plan.
It’s silence when your speech would hurt,
Politeness when your neighbour’s curt.
It’s deafness when the scandal flows
And symapathy with others’ woes
It’s loyalty when duty calls,
It’s courage when disater falls,
It’s patience when the hours are long,
It’s found in laughter and in song,
It’s in the silent time of prayer,
In happiness and in despair,
In all of life and nothing less,
We find the thing we call success.

ಮನೆಗೆ ಮಲ್ಲಿಗೆಯಾಗು

ಪೈಗಳು ಹೀಗೆ ಪರಿಪೂರ್ಣವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಹಕಾರಿಯಾದ ಅಂಶಗಳು ಯಾವುವು? ಡಿ.ವಿ.ಜಿ ತನ್ನ ಮಂಕುತಿಮ್ಮನ ಕಗ್ಗದಲ್ಲಿ ಹೇಳುತ್ತಾರೆ :

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಸೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ !!

ಡಿವಿಜಿಯವರ ಕವನದ ಈ ಸಾಲುಗಳು ಪೈಗಳ ಪತ್ನಿ ಸಗುಣ ಪೈಗಳನ್ನೇ ಉದ್ದೇಶಿಸಿ ಹೇಳಿದಂತಿವೆ. ಪ್ರತಿಷ್ಠಿತ ತೋನ್ಸೆ ಪೈ (ಮಣಿಪಾಲ ಪೈ) ಗಳ ಕುಟುಂಬದಿಂದ ಬಂದು ಕಲ್ಸಂಕ ಕುಟುಂಬದ ಹಿರಿಯ ಮಗ ಕಮಲಾಕ್ಷ ಪೈಗಳ ಕೈಹಿಡಿದು ಮನೆಯ ಹಿರಿಯ ಸೊಸೆಯಾಗಿ ಮನೆಯ ಹಿರಿಯರನ್ನೂ ಕಿರಿಯರನ್ನೂ ಪ್ರೀತಿಯಿಂದ ನೋಡಿ ಕೊಂಡು ಕಲ್ಸಂಕ ಕುಟುಂಬದಲ್ಲಿ ಮಲ್ಲಿಗೆಯಾಗಿ ಬಂದ ಈ ಹೆಣ್ಣು ಮಗಳ ಕುರಿತು ಒಂದಿಷ್ಟು ಹೇಳದಿದ್ದರೆ ಈ ಬರವಣಿಗೆಗೆ ಅರ್ಥ ಬರುವುದಿಲ್ಲ. ದೊಡ್ಡ ಕುಟುಂಬದಿಂದ ಬಂದು ದೊಡ್ಡ ಮನುಷ್ಯರ ಪತ್ನಿಯಾಗಿಯೂ ಸಾಮಾನ್ಯ ಹೆಣ್ಣು ಮಗಳಂತೆ ತನ್ನ ಮನೆಗೆಲಸ ನೋಡಿಕೊಳ್ಳುವ ಇವರನ್ನು ನೋಡಿ ಆಸುಪಾಸಿನವರು ಅಚ್ಚರಿ ಪಡುತ್ತಿದ್ದರಂತೆ. ಮನೆಯಲ್ಲಿದ್ದ ಗೋಬರ್ ಪ್ಲಾಂಟ್ ನಿರ್ವಹಿಸುವುದು, ಬಚ್ಚಲೊಲೆಗೆ ಹಾಕಲು ಹಿತ್ತಲಲ್ಲಿ ಬಿದ್ದ ತೆಂಗಿನ ಗರಿಗಳನ್ನು ಒಟ್ಟು ಮಾಡುವುದು, ಮನೆಯಲ್ಲಿ ಹಸುಗಳಿದ್ದ ಕಾರಣ ಹಸುಗಳ ಆರೈಕೆ, ಕೆಲಸದವಳು ಬಾರದಿದ್ದರೆ ಕೆಲವೊಮ್ಮೆ ಹಸುಗಳ ಹಾಲು ಕರೆಯುವುದು. ಹೀಗೆ ಎಲ್ಲ ಕೆಲಸ ಇವರದೇ. ಕೆಲವೊಮ್ಮೆ ಮನೆಯಲ್ಲಿ ಗಬ್ಬದ ದನ ಕರು ಹಾಕುವಾಗ ಲಂತೂ ದನದ ವೇದನೆ ನೋಡಲಾಗದೇ ದನದ ಮೈ ನೇವರಿಸುತ್ತಾ ಇವರು ಕುಳಿತುಕೊಳ್ಳುತ್ತಿದ್ದುದು – ಇದೆಲ್ಲ ಇವರ ಪ್ರಾಣಿ ಪ್ರೀತಿಯನ್ನು ತೋರಿಸುತ್ತದೆ. ಇನ್ನು ಅಡುಗೆ ಮನೆಯ ಹೊಣೆಗಾರಿಕೆ ಕೂಡಾ ಇವರದೇ. ಇವರ ಮಕ್ಕಳಲ್ಲದೇ ಕಾಲೇಜಿಗೆ ಹೋಗಲೆಂದು ಇವರ ನಿಕಟ ಸಂಬಂಧಿಗಳ ಮತ್ತು ನಿಕಟವರ್ತಿಗಳ ಮಕ್ಕಳಿಗಾಗಿ ಮಧ್ಯಾಹ್ನದ ಊಟ ಇವರ ಮನೆಯಲ್ಲಿಯೇ. ಆಗಾಗ ಪೈಗಳ ಸ್ನೇಹಿತ ವರ್ಗದವರು ಅನಿರೀಕ್ಷಿತ ಅತಿಥಿಗಳಾಗಿ ಬಂದಾಗಲೂ ಸಗುಣಾ ಪೈಗಳದು ನಗುಮೊಗದ ಆತಿಥ್ಯ.

ಬ್ಯಾಂಕಿನ ಕೆಲಸ ಮುಗಿಸಿ ಮನೆಗೆ ವಾಪಾಸು ಬರಲು ಪೈಗಳಿಗೆ ನಿಗದಿತ ಸಮಯವೇ ಇರಲಿಲ್ಲ. ಫೈಲುಗಳ ವಿಲೇವಾರಿ ಮಾಡುತ್ತಿರುವಾಗ ಕೆಲವೊಮ್ಮೆ ಮನೆಯ ನೆನಪೇ ಆಗುತ್ತಿರಲಿಲ್ಲವಂತೆ. ಎಲ್ಲ ಬಾಕಿ ಉಳಿದ ಫೈಲುಗಳ ಪರಿಶೀಲನೆ ಮುಗಿಸಿ ಮನೆಗೆ ಬರುವಾಗ ಮಧ್ಯರಾತ್ರಿಯಾದರೂ ಆದೀತು. ಒಂದೊಮ್ಮೆ ಹೀಗೆ ಆಯಿತಂತೆ. ಎಲ್ಲ ಫೈಲುಗಳನ್ನು ಪರಿಶೀಲಿಸಿ ಅವುಗಳ ವಿಲೇವಾರಿ ಮಾಡುತ್ತಾ ಇರುವಾಗ ಪೈಗಳಿಗೆ ಮಾರಣೆ ದಿನ ನಸುಕು ಹರಿದದ್ದೇ ತಿಳಿಯಲಿಲ್ಲವಂತೆ. ಹೀಗೆ ಮುನ್ನಾ ದಿನ ಹತ್ತು ಗಂಟೆಗೆ ಕಛೇರಿಗೆ ಬಂದವರು ಕೆಲಸ ಮುಗಿಸಿ ಮನೆಗೆ ಮರಳಿದ್ದು ಮಾರಣೆ ದಿನ ಬೆಳಗ್ಗಿನ ಆರೂವರೆಗೆ ಅಂದರೆ ಅವರು ಆವತ್ತು ಕೆಲಸ ಮಾಡಿದ್ದು ಬರೋಬ್ಬರಿ 21 ಗಂಟೆಗಳಷ್ಟು. ಇದು ಒಂದೆರಡು ದಿನಗಳ ವಿದ್ಯಮಾನ ಮಾತ್ರವೆಂದು ನೀವು ಭಾವಿಸಿದರೆ ಅದು ತಪ್ಪಾದೀತು. ಪೈಗಳ ಜಾಯಮಾನವೇ ಹಾಗೆ. ಕೆಲವೊಮ್ಮೆ ಅಂತೂ ಕಛೇರಿಯ ಕೆಲಸ ಮುಗಿಸಿದ ಮೇಲೆ ಸಭೆ ಸಮಾರಂಭಗಳ ಅನಿವಾರ್ಯವಾದ ಗಣ್ಯ ಅತಿಥಿಯ ಕರ್ತವ್ಯ. ಪೈಗಳು ಬ್ಯಾಂಕಿನ ವರಿಷ್ಠರಾದ ಮೇಲಂತೂ ಇದೆಲ್ಲ ಅವರ ದಿನಚರಿಯ ಭಾಗ. ಹೀಗೆ ಪೈಗಳು ಹೆಚ್ಚು ಕಡಿಮೆ ಮನೆಗೆ ಮರಳುತ್ತಿದ್ದುದು ತಡರಾತ್ರಿಯೇ. ಗಂಡನ ಈ ರೀತಿಯ ದಿನಚರಿಯನ್ನು ತನ್ನ ಜೀವನದ ಅವಿಭಾಜ್ಯ ಅಂಗ ಎಂಬಂತೆ ಸಗುಣಾ ಪೈಗಳು ತಾಳ್ಮೆಯಿಂದ ಸ್ವೀಕರಿಸಿ ಕೊಂಡಿದ್ದು ಅವರ ಹೊಂದಾಣಿಕೆ ಸ್ವಭಾವವನ್ನು ತೋರಿಸುತ್ತದೆ.

ಪೈಗಳು ಕುಂಜಿಬೆಟ್ಟಿನಲ್ಲಿ ವಾಸಿಸುತ್ತಿದ್ದಾಗ ಬ್ಯಾಂಕಿನ ದೀಪ ಕುಂಜಿಬೆಟ್ಟು ಮನೆಯಲ್ಲಿ ಕಾಣಿಸುತ್ತಿತ್ತಂತೆ. ಕತ್ತಲು ಆವರಿಸಿದ ಮೇಲೆ ಬ್ಯಾಂಕಿನ ದೀಪದ ಮೇಲೆಯೇ ಸಗುಣಾ ಪೈಗಳ ಗಮನ. ದೀಪ ಆರಿದೊಡನೆ ಪೈಗಳು ಮನೆಗೆ ಹೊರಟರು ಎಂದರ್ಥ. ಆಗ  ಸಗುಣಾ ಪೈಗಳು ಬಂದು ಗೇಟಿನ ಬಳಿ ಕಾಯುವರು. ಗಂಡ ಬಂದೊಡನೆ ಗೇಟಿನ ಬಾಗಿಲು ತೆಗೆದು ಕಾರನ್ನು ಒಳಗೆ ಬಿಡುವ ಕೆಲಸ ಸಗುಣಾ ಪೈಗಳದ್ದೇ. ಮನೆಯಲ್ಲಿ ಇದಕ್ಕಾಗಿ ಆಳುಗಳಿದ್ದರೂ ಗೇಟನ್ನು ತೆರೆಯುವ ಕಾಯಕ ಮಾತ್ರ ಸಗುಣಾ ಪೈಗಳದ್ದು. ಮನೆಗೆ ಬಂದ ಪೈಗಳು ಕೈಕಾಲು ತೊಳೆದು ಡ್ರೆಸ್ ಬದಲಿಸಿ ದೇವರಿಗೆ ನಮಸ್ಕರಿಸಿ ಬರುವುದರೊಳಗೆ ಡೈನಿಂಗ್ ಟೇಬಲ್ ಮೇಲೆ ಬಿಸಿ ಮಾಡಿದ ಅಡುಗೆ ರೆಡಿ. ಪತಿಯ ಊಟವಾದ ಮೇಲೆಯೇ ಸಗುಣಾ ಪೈಗಳ ಊಟ. ಇವೆಲ್ಲ ಇವರು ಮೈಗೂಡಿಸಿಕೊಂಡ ದಿನಚರಿಯ ಭಾಗಗಳು.

ಸಗುಣಾ ಪೈಗಳದು ಯಾರ ಮನಸ್ಸನ್ನೂ ನೋಯಿಸದ ಸ್ವಭಾವ, ಮಿತಮಾತು. ಗಾಸಿಪ್‌ಗಳಿಂದಂತೂ ಅವರು ಬಲು ದೂರ. ಬದುಕನ್ನು ಯಾವಾಗಲೂ ಸಮಚಿತ್ತದಿಂದ ನೋಡುವ ದೃಷ್ಟಿ ಆಕೆಯದು.

ದುಃಖೇಷ್ವನುದ್ವಿಗ್ನ ಮನಾಃ ಸುಖೇಷು ವಿಗತಃಸ್ಪಹಃ

ವೀತರಾಗ ಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೆ

ಎನ್ನುವ ಭಗದ್ಗೀತೆ ಉವಾಚದ ಹಾಗೆ ಬದುಕಿನ ಸಿಹಿಕಹಿಗಳನ್ನು ಒಂದೇ ಎಂಬಂತೆ ಸ್ವೀಕರಿಸಿದ ಮನೋವೃತ್ತಿ ಅವರದು. ಸದಾ ಎಲೆ ಮರೆಯ ಕಾಯಿಯಂತಿದ್ದು ಪತಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಾ ಪತಿಯ ಬದುಕನ್ನು ಶ್ರೀಮಂತಗೊಳಿಸಿದ ಅನನ್ಯ ಮಹಿಳೆ ಆಕೆ. ಮನೆಯೊಳಗೆ ಒಬ್ಬ ಸಾಮಾನ್ಯ ಗೃಹಿಣಿಯಾಗಿದ್ದು ಜನರ ಮನಸ್ಸುಗಳನ್ನು ಪ್ರಭಾವಿಸಿದ್ದ ಮಹಿಳೆಯರು ಯಾರಾದರೂ ಇದ್ದರೆ ಅದು ಸಗುಣಾ ಪೈಗಳು ಎಂದು ಖಂಡಿತವಾಗಿಯೂ ಹೇಳಬಹುದು. 1998 ರಲ್ಲಿ ಪೈಗಳಿಗೆ ಉಡುಪಿಯ ಜನರಿಂದ ಒಂದು ಸಾರ್ವಜನಿಕ ಸಮ್ಮಾನವಾಯಿತು. ಆ ಸಂದರ್ಭದಲ್ಲಿ ಅಭಿನಂದನಾ ಗ್ರಂಥದಲ್ಲಿ ಪ್ರಕಟಿಸಲು ಡಾ.ಕೆ.ಕೆ. ಅಮ್ಮಣ್ಣಾಯರು ಸಗುಣಾ ಪೈಗಳ ಒಂದು ಸಂದರ್ಶನ ನಡೆಸಿದರು. ಸಗುಣಾ ಪೈಗಳು ಎಂಥ ಒಂದು ಸರಳ ವ್ಯಕ್ತಿ ಎಂದು ತಿಳಿಯಲು ಡಾ.ಅಮ್ಮಣ್ಣಾಯರು ನಡೆಸಿದ ಸಂದರ್ಶನ ಓದಿದರೆ ಸಾಕು. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಸಂದರ್ಶಕ : ಡಾ  ಕೆ.ಕೆ. ಅಮ್ಮಣ್ಣಾಯ

ಪ್ರ : ನೀವು ನಿಮ್ಮ ಮದುವೆಯ ಮೊದಲು ಹೆಸರಾಂತ ತೋನ್ಸೆ ಮನೆತನದವರು. ದಿ  ಉಪೇಂದ್ರ ಪೈ ನಿಮ್ಮ ತಂದೆ ಮತ್ತು ಡಾ ಟಿ.ಎಂ.ಎ. ಪೈ ನಿಮ್ಮ ಚಿಕ್ಕ ತಂದೆ. ಟಿ. ಎ. ಪೈ ನಿಮ್ಮ ಅಣ್ಣ. ಹೀಗಿರುವಾಗ, ನೀವು ಕಲ್ಸಂಕ ಮನೆತನಕ್ಕೆ ಸೊಸೆಯಾಗಿ ಬರಲು ಹೇಗೆ ಮನಸ್ಸು ಮಾಡಿದಿರಿ?

ಉ: ತಾ. 8-3-1944ರಲ್ಲಿ ನನಗೆ ಇವರೊಂದಿಗೆ ಮದುವೆಯಾಯಿತು. ಆಗ ನನಗೆ ಬರೇ 17 ವರ್ಷ ವಯಸ್ಸು. ಇವರು ನನ್ನ ಸಹೋದರ ಶ್ರೀ ಟಿ.ಎ. ಪೈಯವರ ಸಹಾಪಾಠಿಯಾಗಿದ್ದರು. ಟಿ.ಎ. ಪೈಗಳು ಇವರನ್ನು ಚೆನ್ನಾಗಿ ಅರಿತಿದ್ದರು. ಹಾಗಾಗಿ, ಮದುವೆ ಮಾಡಿಸಲು ಅವರು ಪ್ರಯತ್ನಿಸಿದರು. ನನ್ನ ತಾಯಿ ಮನೆಯ ಪ್ರಯತ್ನವೇ ಇಲ್ಲಿ ಹೆಚ್ಚಾಗಿತ್ತು. ಆ ವೇಳೆಗೆ ಕಲ್ಸಂಕ ಮನೆತನವೂ ಉಡುಪಿಯಲ್ಲಿ ವ್ಯಾಪಾರ- ವಹಿವಾಟುಗಳಿಂದ ಪ್ರಸಿದ್ಧವಾಗಿತ್ತು. ನನ್ನ ಗಂಡನ ಮನೆಯವರಿಗೆ ಕಡಿಮೆಯೇನೂ ಇರಲಿಲ್ಲ. ಒಳ್ಳೆಯ ಹೆಸರು ಅಂತಸ್ತು, ಉತ್ತಮ ಆರ್ಥಿಕ ಸ್ಥಿತಿ ಮತ್ತು ಸ್ಥಾನಮಾನ-ಇವೆಲ್ಲ ಇದ್ದವು.

ಪ್ರ : ಕೆ. ಕೆ. ಪೈಯವರು ಬ್ಯಾಂಕಿನಲ್ಲಿರುವಾಗ ರಾತ್ರಿ -ಹಗಲು ದುಡಿಯುತ್ತಿದ್ದರು. ಕೆಲವೊಮ್ಮೆ ಮಧ್ಯರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಇದು ನಿಮಗೆ ಕಿರಿಕಿರಿಯಾಗುತ್ತಿರಲಿಲ್ಲವೇ? ನೀವು ಮತ್ತು ನಿಮ್ಮ ಅತ್ತೆ ಇದನ್ನು ಹೇಗೆ ಸಹಿಸಿಕೊಂಡಿರಿ?

ಉ : ಅವರು ರಾತ್ರಿ ಕೆಲಸ ಮಾಡಿ, ಕೆಲಸ ಮುಗಿದ ಮೇಲೆ ಎಷ್ಟು ತಡವಾಗಿ ಮನೆಗೆ ಬಂದರೂ ನಮಗೆ ತೊಂದರೆಯಾಗುತ್ತಿರಲಿಲ್ಲ. ನಮ್ಮ ಅತ್ತೆ ಕೂಡಾ ಆಗ ನನ್ನ ಮಗನನ್ನು ಕಾಯುವುದು ಬೇಡ, ಎಲ್ಲರೂ ಊಟ ಮಾಡಿ ಎಂದು ಹೇಳುತ್ತಿದ್ದರು. ಹಿಂದಿನಿಂದಲೂ ನನ್ನ ಗಂಡ ಬ್ಯಾಂಕಿನಿಂದ ಬಂದು ಅಂಗಡಿಗೆ ಹೋಗುತ್ತಿದ್ದರು. 12 ಗಂಟೆ ರಾತ್ರಿವರೆಗೆ ಅಂಗಡಿ ಕೆಲಸ.

ಪ್ರ : ಕೆ.ಕೆ. ಪೈಗಳು ಕೆಲಸದಲ್ಲೇ ಮಗ್ನರಾಗಿದ್ದುದರಿಂದ ನಿಮಗೆ ನಿಮ್ಮ ಮಕ್ಕಳನ್ನು ಸಾಕಿ ಬೆಳೆಸಲು ತೊಂದರೆಯಾಗಲಿಲ್ಲವೆ?

ಉ : ಇಲ್ಲ. ನನಗೆ ತೊಂದರೆಯಾಗಲಿಲ್ಲ. ಮಕ್ಕಳನ್ನೆಲ್ಲ ನಾನು ಸರಿಯಾಗಿ ನೋಡಿಕೊಳ್ಳುತ್ತಿದ್ದೆ. ನನ್ನ ಅತ್ತೆಯವರ ಮಾರ್ಗದರ್ಶನವೂ ಇತ್ತು.

ಪ್ರ : ನಿಮ್ಮ ಅತ್ತೆಯವರು ತೀರಾ ಇತ್ತೀಚೆಗಷ್ಟೇ ನಿಧನಾದರು. ಅವರು ತೀರಿಕೊಂಡಾಗ ಕೆ.ಕೆ. ಪೈಯವರು ತಾಯಿಯಿಲ್ಲದೆ ಈಗ ನಾನು ತಬ್ಬಲಿಯಾದೆ ಎಂದು ಪತ್ರವೊಂದರಲ್ಲಿ ಬರೆದಿದ್ದರು. ಆಗಲೇ ಕೆ.ಕೆ ಪೈಗಳಿಗೂ ಇಳಿವಯಸ್ಸು. ತಾಯಿಗೂ ಮಗನಿಗೆ ಅಷ್ಟು ಪ್ರೀತಿಯೆ?

ಉ : ಹೌದು. ಅತ್ತೆಯವರಿಗೆ ಇವರ ಮೇಲೆ ತುಂಬಾ ಪ್ರೀತಿ. ಮಾವನವರು (ಕಲ್ಸಂಕ ವೆಂಕಟ್ರಾಯ ಪೈಯವರು) ಸ್ವಲ್ಪ ಸ್ಟ್ರಿಕ್ಟ್. ಹಾಗಾಗಿ ತಾಯಿಯೊಂದಿಗೆ ಇವರಿಗೆ ಸಂಪರ್ಕ ಹೆಚ್ಚಾಗಿತ್ತು. ಅತ್ತೆಯವರು ಮಕ್ಕಳನ್ನೆಲ್ಲ ಚೆನ್ನಾಗಿ ನೋಡಿಕೊಂಡರಂತೆ.

ಪ್ರ : ಕೆ.ಕೆ. ಪೈಗಳು ಇಷ್ಟು ದೊಡ್ಡ ವ್ಯಕ್ತಿಯಾಗಿ ಬೆಳೆದರು. ಸಾಧನಾತೃಪ್ತಿ-ವೈಯಕ್ತಿಕ ಖ್ಯಾತಿಗಳನ್ನು ಸಂಪಾದಿಸಿದರು. ಕಲ್ಸಂಕ ಮನೆತನದಲ್ಲಿ ಹೀಗೆ ಹೆಸರು ಪಡೆದವರು ವಿರಳ. ಇದಕ್ಕೆ ನಿಮ್ಮ ತಂದೆ, ಚಿಕ್ಕಪ್ಪ ಮತ್ತು ಅಣ್ಣ ಟಿ.ಎ. ಪೈ ಇವರುಗಳ ಸಹಕಾರ, ಪ್ರಭಾವ ಕಾರಣವೆ?

ಉ : ಅಲ್ಲ. ನನ್ನ ಅತ್ತೆಯವರ ತಿರುಪತಿ ಹರಕೆಯಿಂದ ಇವರು ಹುಟ್ಟಿದರು. ಮಗ ಹುಟ್ಟಿದರೆ ತಿರುಪತಿಯಲ್ಲಿ ಉಪನಯನ ಮಾಡಿಸುತ್ತೇನೆ ಎಂದಿದ್ದರಂತೆ. ಹಾಗೆಯೇ ಇವರಿಗೆ ತಿರುಪತಿಯಲ್ಲೇ ಉಪನಯನವಾಗಿತ್ತು. ಅತ್ತೆಯವರು ಹೇಳುತ್ತಿದ್ದರು: ‘‘ಜಾತಕ ಪ್ರಕಾರ ಅವರ ಇಬ್ಬರು ಮಕ್ಕಳು ದೊಡ್ಡ ಜನಗಳಾಗುತ್ತಾರೆ  ಹೆಸರುವಾಸಿಯಾಗುತ್ತಾರೆ ಎಂದು. ಇದಕ್ಕೆ ಮುಖ್ಯವಾಗಿ ನನ್ನ ಗಂಡನ ಶ್ರದ್ಧೆಯ ದುಡಿಮೆಯೇ ಕಾರಣ. ಸ್ವಲ್ಪ ಮಟ್ಟಿಗೆ ಜಾತಕದ ಫಲವೂ ಇರಬಹುದು. ಅತ್ತೆಯವರ ತಿರುಪತಿ ಹರಕೆಯಿಂದ ಇವರು ಹುಟ್ಟಿದ ಪರಿಣಾಮವೂ ಇರಬಹುದು.

ಪ್ರ : ಈ ಇಳಿವಯಸ್ಸಿನಲ್ಲೂ ಬೈಪಾಸ್ ಸರ್ಜರಿ ಆಗಿದ್ದರೂ ಕೆ.ಕೆ. ಪೈಗಳ ಆರೋಗ್ಯ ಚೆನ್ನಾಗಿದೆ. ಈಗ 78ರಲ್ಲಿ ಅವರಿಗೆ ಇಪ್ಪತ್ತೆಂಟರ ಉತ್ಸಾಹ. ಈಗಲೂ ಹಿಂದಿನಂತೆಯೇ ಚುರುಕು. ಅವರ ಆರೋಗ್ಯ, ಉತ್ಸಾಹ ಮತ್ತು ನಿರಂತರ ಚಟುವಟಿಕೆಗಳ ಗುಟ್ಟೇನು? ಈಗಲೂ ಅವರ ಎಲ್ಲಾ ಮಣಿಪಾಲ ಸಂಸ್ಥೆಗಳಿಗೆ ಮುಖ್ಯಸ್ಥರು. ಇಷ್ಟೆಲ್ಲ ಸಂಸ್ಥೆಗಳ ಜವಾಬ್ದಾರಿಯಿದ್ದರೂ ಅವರು ಅನೇಕರಂತೆ ಪುರುಸೊತ್ತಿಲ್ಲ ಎಂದು ಹೇಳುವ ವ್ಯಕ್ತಿಯೇ ಅಲ್ಲ. ಇದು ಹೇಗೆ ಸಾಧ್ಯವಾಯಿತು?

ಉ : ಅವರು ಮೊದಲಿನಿಂದಲೂ ಹಾಗೆಯೇ. ಕೆಲಸ ಮಾಡುತ್ತಾ ಇರಬೇಕು ಅವರಿಗೆ. ಏನೂ ಕೆಲಸ ಇಲ್ಲದಿದ್ದರೆ ಗಾರ್ಡನಿಗೆ ಹೋಗಿ ಏನಾದರು ಕೆಲಸ ಮಾಡುತ್ತಾರೆ. ಬ್ಯಾಂಕಿನಲ್ಲಿರುವಾಗ ಅವರಿಗೆ ಊಟ ಸರಿಯಾದ ಸಮಯಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅತ್ತೆಯವರ ಆರೋಗ್ಯ ಚೆನ್ನಾಗಿತ್ತು. ಅವರಿಗೆ ಡಯಬಿಟಿಸ್, ಬಿಪಿ ಇತ್ಯಾದಿ ಇರಲಿಲ್ಲ. ಅತ್ತೆಯವರು 97 ವರ್ಷ ಬದುಕಿದರು. ಅತ್ತೆಯ ಉತ್ತಮ ಆರೋಗ್ಯದಿಂದ ಹೆರಿಡಿಟರಿ ಆಗಿ ಇವರಿಗೂ ಒಳ್ಳೆಯ ಆರೋಗ್ಯ ಬಂದಿರಬೇಕು. ಈಗಲೂ ನನ್ನ ಗಂಡ ರಾತ್ರಿ 1 ಗಂಟೆಗೆ ಮೊದಲು ಮಲಗುವುದಿಲ್ಲ. ನಿರಂತರ ಚಟುವಟಿಕೆ ಅವರ ಅಭ್ಯಾಸ. ಯಾರು ಬಂದು ಭೇಟಿಯಗಲು ಕೂತರೂ ಪುರುಸೊತ್ತಿಲ್ಲ ಎಂದು ಅವರು ಹೇಳುವುದೇ ಇಲ್ಲ.

ಪ್ರ : ನೌಕರಿಗಾಗಿ ಬರುವವರು, ಬ್ಯಾಂಕಿನಲ್ಲಿ ಅವರಿರುವಾಗ ಸಾಲಕ್ಕಾಗಿ ಬರುವವರು ನಿಮ್ಮ ಮೂಲಕ ಇನ್‌ಫ್ಲುಯೆನ್ಸ್ ಮಾಡಿಸುತ್ತಿದ್ದರೆ?

ಉ : ಎಷ್ಟೋ ಜನ ನನ್ನಲ್ಲಿ ನಿಮ್ಮ ಗಂಡನಲ್ಲಿ ಹೇಳಿ, ಈ ಹುಡುಗನಿಗೆ ಕೆಲಸ ಮಾಡಿಸಿ ಎಂದೋ ಅಥವಾ ಈ ಲೋನ್ ಪಾಸ್ ಮಾಡಿಸಿ ಎಂದೋ ಹೇಳಿದ್ದುಂಟು. ನಾನು ನನ್ನ ಗಂಡನಿಗೆ ಇದನ್ನು ತಿಳಿಸಿ ಸಾಧ್ಯವಾದರೆ ಸಹಾಯ ಮಾಡಿ ಎನ್ನುತ್ತಿದ್ದೆ ಅಷ್ಟೆ.

ಪ್ರ : ಕೆ.ಕೆ. ಪೈಗಳಲ್ಲಿ ಬ್ಯಾಂಕ್ ಬಿಟ್ಟ ಮೇಲೆ ಏನಾದರೂ ಬದಲಾವಣೆ ಕಂಡಿದ್ದೀರಾ?

ಉ : ಇಲ್ಲ. ಅವರು ಇದ್ದ ಹಾಗೆಯೇ ಇದ್ದಾರೆ. ಬದಲಾವಣೆಯೇ ಇಲ್ಲ.

ಪ್ರ : ಕೆ.ಕೆ. ಪೈಗಳ ಕುಟುಂಬದಲ್ಲಿ ಅಣ್ಣ ತಮ್ಮಂದಿರೆಲ್ಲ ಹೇಗಿದ್ದಾರೆ?

ಉ : ಅಣ್ಣ ತಮ್ಮಂದಿರೆಲ್ಲ ಬಹಳ ಅನ್ಯೋನ್ಯತೆಯಿಂದ ಇದ್ದಾರೆ. ಇವರು ತಮ್ಮಂದಿರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ.

ಪ್ರ : ಬಿಡು ಸಮಯವನ್ನು ಕೆ.ಕೆ ಪೈಗಳು ಹೇಗೆ ಉಪಯೋಗಿಸಿಕೊಳ್ಳುತ್ತಾರೆ?

ಉ: ಓದುವುದು, ಟಿ.ವಿ. ನೋಡುವುದು, ಮೊಮ್ಮಕ್ಕಳೊಂದಿಗೆ ಆಟ, ಸರಸಸಲ್ಲಾಪ – ಹೀಗೆ ಸಮಯ ಹೋಗುತ್ತದೆ. ಗಾರ್ಡನಿಂಗ್ ಅವರಿಗೆ ತುಂಬಾ ಇಷ್ಟ. ತೋಟದಲ್ಲೂ ಕೆಲಸ ಮಾಡುತ್ತಾರೆ.

ಪ್ರ : ನಿಮ್ಮ ಅಣ್ಣ ಮಾನ್ಯ ಟಿ.ಎ. ಪೈಗಳು ಕೇಂದ್ರ ಸಚಿವರಾಗಿದ್ದರು. ಅವರಿಂದ ನಿಮಗೆ ಏನಾದರೂ ಸಹಾಯ, ಸಹಕಾರ, ಬೆಂಬಲ ಇತ್ತಾ?

ಉ : ನಮಗೆ ಅಂದರೆ ನನ್ನ ಗಂಡನ ಕುಟುಂಬಕ್ಕೆ ಅಂತಹ ಸಹಾಯ, ಬೆಂಬಲ ಬೇಕಾಗಿರಲಿಲ್ಲ. ನನ್ನ ಗಂಡನ ಕುಟುಂಬಕ್ಕೆ ಯಾವ ತೊಂದರೆಗಳೂ ಇರಲಿಲ್ಲ. ಎಲ್ಲಾ ಸಮಸ್ಯೆಗಳನ್ನು ಅವರೇ ನಿವಾರಿಸಿಕೊಳ್ಳಲು ಶಕ್ತರಾಗಿದ್ದರು.

ಪ್ರ : ಕೆ.ಕೆ. ಪೈಗಳು ಬ್ಯಾಂಕಿನಿಂದ ಬರುವಾಗ ಮುನ್ಸೂಚನೆ ಇಲ್ಲದೆ ಯಾರನ್ನಾದರೂ ಊಟಕ್ಕೆ ಕರಕೊಂಡು ಬಂದರೆ ನಿಮಗೆ ತೊಂದರೆಯಾಗುತ್ತಿರಲಿಲ್ಲವೆ?

ಉ : ಇಲ್ಲ. ನಾವು ಯಾವಾಗಲೂ ಅದಕ್ಕೆ ಸಿದ್ಧವಾಗಿಯೇ ಇರುತ್ತಿದ್ದೆವು. ಮೊದಲು ಎಲ್ಲಾ ಕೆಲಸ ನಾನೇ ಮಾಡುತ್ತಿದ್ದೆ. ಆಗ ದನ ಕೂಡಾ ಇತ್ತು. ನಾನೇ ಹಾಲು ಕರೆಯುತ್ತಿದ್ದೆ. ಈಗ ಕೆಲಸಕ್ಕೆ ಜನ ಇದೆ. ಸೊಸೆ ಇದ್ದಾಳೆ. ಈಗ ನನಗೆ 72 ವರ್ಷ. ನನ್ನ ಆರೋಗ್ಯ ಚೆನ್ನಾಗಿದೆ. ನನ್ನ ತಂದೆ 61 ವರ್ಷ ಬದುಕಿದ್ದರು. ನನ್ನ ತಾಯಿ ಬರೇ 54 ವರ್ಷ ಬದುಕಿದ್ದರು. ನನಗೆ ಡಯಾಬಿಟಿಸ್ ಇತ್ಯಾದಿ ಯಾವುದೂ ಇಲ್ಲ. ಈಗಲೂ ಕೆಲಸ ಮಾಡುತ್ತೇನೆ. ಸೊಸೆಯಿರುವ ಕಾರಣ ಕೆಲಸದ ಭಾರ ಕಡಿಮೆಯಾಗಿದೆ. ಕೆಲಸಕ್ಕೆ ಜನವೂ ಉಂಟು. ನನಗೆ ಈಗ ನೆಮ್ಮದಿಯಿದೆ. ಗಂಡನಿಗೆ ಸಹಕಾರಿಯಾದ ಪತ್ನಿಯಾಗಿದ್ದೇನೆಂಬ ತೃಪ್ತಿಯಿದೆ.

ಈ ಸಂದರ್ಶನವೇ ಸಗುಣಾ ಪೈಗಳ ಸರಳ ವ್ಯಕ್ತಿತ್ವವನ್ನು ತಿಳಿಸುತ್ತದೆ. ಇದಕ್ಕೆ ಪೂರಕವಾಗಿ ತರಂಗದ ಸಂಧ್ಯಾ ಎಸ್. ಪೈ ಅವರು ಸಗುಣಾ ಪೈ ಕುರಿತು ಬರೆದ ಈ ಲೇಖನ ಕೂಡಾ ಓದಿರಿ.

ಅಮ್ಮನ ನೆನಪಿನಲ್ಲಿ ಪುಸ್ತಕವೊಂದನ್ನು ಪ್ರಕಟಿಸುವ ಯೋಜನೆ ಇದೆ. ಅವಳನ್ನು ಹತ್ತಿರದಿಂದ ಬಲ್ಲವರಿಗೆ ಅವರ ಮತ್ತವಳ ಸಂಬಂಧದ ಬಗ್ಗೆ ನಾಲ್ಕು ಸಾಲು ಬರೆಯಲು ಕೇಳಿಕೊಂಡಿದ್ದೇವೆ. ನೀವೂ ಬರೆಯುವುದಿಲ್ಲವೇಕೆ? ಏನು ಅನಿಸುವುದೋ ಅದನ್ನು ಬರೆಯಿರಿ ಎಂದು ಸುಧಾ ಮತ್ತು ಗೀತಮ್ಮ ಹೇಳಿದಾಗ ನಿರಾಳವಾಗಿ ಒಪ್ಪಿಕೊಂಡೆ.

ಒಪ್ಪಿಕೊಂಡಿದ್ದೇನೋ ಸರಿ, ಅದರೆ ಲೇಖನಿ ಕೈಗೆತ್ತಿಕೊಂಡಾಗ ಅನಿಸಿದ್ದು ಮನಸ್ಸೆಲ್ಲ ಖಾಲಿ ಕಾಗದದಂತೆ ಆಗಿದೆ ಎಂದು. ಸಂಬಂಧಗಳಿಗೆ ಹೆಸರಿಡುವುದು, ಅದನ್ನು ಶಬ್ದಗಳಲ್ಲಿ ಬರೆಯುವುದು, ಹೇಳುವುದು ಬಲು ಕಷ್ಟ. ಅದರಲ್ಲೂ ನನ್ನ ಮತ್ತು ಸಗುಣಕ್ಕನ ಸಂಬಂಧದ ತಂತು ಯಾವುದು? ಅದನ್ನು ಹೆಸರಿಟ್ಟು ಕರೆಯಲು ಬಾಧ್ಯಳೇ ನಾನು? ಏಕೆಂದರೆ ಗತಕಾಲದಲ್ಲಿ ಕಳೆದುಕೊಂಡ ಪ್ರೇಮದ ಸೆಲೆಯೊಂದನ್ನು ನಾನವಳಲ್ಲಿ ಕಂಡಿದ್ದೆ. ಆದರೆ ಅದನ್ನು ಹಾಗೆ ಕರೆಯಲಾಗದು. ಅದಕ್ಕೆಂದೇ ಹೆಸರಿಡಲಾಗದ ತಂತುವೊಂದು ನನ್ನನ್ನು ಅವರಿಗೆ ಕಟ್ಟಿಹಾಕಿತ್ತು.

ಇಷ್ಟಕ್ಕೂ ಅವಳು ವಾವೆಯಲ್ಲಿ ನನ್ನ ನಾದಿನಿ. ಯಜಮಾನರ ಹಿರಿಯಕ್ಕ. ವಯಸ್ಸಿನ ಅಂತರವೂ ಹೆಚ್ಚೇ ಎನ್ನಬಹುದು. ಇಪ್ಪತ್ತು ವರ್ಷಗಳು, ಸರಿ ಸುಮಾರು ನನ್ನಮ್ಮನ ವಯಸ್ಸು. ನನ್ನಮ್ಮ ಬದುಕಿದ್ದರೆ ನಿಮ್ಮ ವಯಸ್ಸೇ ಇರುತ್ತಿತ್ತು ಸಗುಣಕ್ಕ ಎಂದರೆ ಹೌದೇನು ಎಂದು ಕಣ್ಣರಳಿಸಿ ನಗುತ್ತಿದ್ದಳು. ಹೀಗೆ ಅತ್ತಿಗೆಯಾಗಿರಬೇಕಾದ್ದವಳು ಅಕ್ಕನಾಗಿ ನನ್ನ ಪ್ರತೀದಿನದ ಬದುಕಿನ ಹಿಸ್ಸೆಯಾಗಿ ಹೋದಳು. ತಾಯಿಯೊಂದಿಗಿನ ವಯಸ್ಸಿನ ಅಂತರದಿಂದ ಕೆಲವೊಮ್ಮೆ ಕೆಲ ವಿಷಯಗಳನ್ನು ಚರ್ಚಿಸಲು ಹಿಂಜರಿಕೆ ಯಾಗುತ್ತದೆ. ಆದರೆ ಅಕ್ಕನೊಂದಿಗೆ ಹಾಗೆನಿಸುವುದಿಲ್ಲ. ಎಂಥಹುದೇ ವಿಚಾರವಾದರೂ ಮುಕ್ತ ಮನಸ್ಸಿನಿಂದ ಬಿಚ್ಚಿಡಲು ಅವಳೇ ಸೈ. ಹೀಗೆ ಸಗುಣ ಅಕ್ಕನೊಂದಿಗೆ ಯಾರೊಂದಿಗೂ ಹಂಚಿಕೊಳ್ಳಲಾಗದ ನೋವುಗಳನೇಕವನ್ನು ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಂಡಿದ್ದೇನೆ.

ನನ್ನತ್ತೆ ಇವರಿಗೆ ಸಗುಣ ಎಂಬ ಹೆಸರನ್ನು ಅದು ಹೇಗೆ ಆರಿಸಿದರೋ ನಾನರಿಯೆ. ಆದರೆ ಅವರಿಗೆ ಅನ್ವರ್ಥವಾಗಿತ್ತು. ಸ ಎಂದರೆ ಒಳಿತು, ಸಹನೆ, ತಾಳ್ಮೆ, ಅನುಕಂಪಗಳ ಆಗರವಾಗಿತ್ತವಳ ಮನಸ್ಸು. ಕೆಲವೊಮ್ಮೆ ತೀರಾ ಅತಿಯಾಯಿತು ಎಂದು ಅನಿಸುವವರೆಗೆ. ಕೆಲವು ಮಂದಿ ಅವಳ ಈ ಗುಣಗಳನ್ನು ದುರಪಯೋಗಪಡಿಸಿ ಕೊಂಡದ್ದೂ ಇದೆ. ಆವಾಗಲೆಲ್ಲ ನಾನು ಅವಳೊಂದಿಗೆ ಜಗಳವಾಡುತ್ತಿದ್ದುದುಂಟು. ನೀನ್ಯಾಕೆ ತಗ್ಗಿ ಬಗ್ಗಿ ಅನ್ಯಾಯ ಸಹಿಸಬೇಕು? ಎದುರಿಸಿ ನಿಲ್ಲಬೇಕು ಎಂದದ್ದುಂಟು. ಅವಳು ಮಾತ್ರ ಯಾವುದೇ ಸೆಡವಿಲ್ಲದೆ ಹೋಗಲಿ ಬಿಡೆ. ಅದು ಅವರ ಕರ್ಮ. ನನಗೆ ಬೇರೆಯವರಿಗೆ ಸಹಾಯ ಮಾಡಬೇಕೆಂದೇ ಇಷ್ಟು ಒಳ್ಳೆಯ ಸೌಲಭ್ಯಗಳನ್ನು ದೇವರು ಕರುಣಿಸಿದ್ದಾನೆ. ಇದು ನನಗೆ ಶಾಶ್ವತವಾಗಿದ್ದರೆ ಸರಿ. ಹಾಗೇ ನಡೆಸಲಿ, ದೇವರು ಎಂದುಬಿಡುತ್ತಿದ್ದಳು.

ನನ್ನ ಮಗ ಬೆಳೆದದ್ದೇ ಅವಳ ಮಡಿಲಲ್ಲಿ ಎನ್ನಬಹುದು. ಶಾಲೆಗೆ ಹೋಗುವ ವಯಸ್ಸಾಗುವವರೆಗೆ ಬೆಳಗೆದ್ದು ಸಗುಣಕ್ಕನ ಮನೆಗೆ ಹೋದರೆ, ಮಧ್ಯಾಹ್ನ ಊಟದ ಹೊತ್ತಿಗೆ ಮರಳುತ್ತಿದ್ದ. ಮತ್ತೆ ಸಾಯಂಕಾಲ ಅವರೊಂದಿಗೆ ಉಡುಪಿಗೋ, ಅಥವಾ ಅವರು ಹೋದ ಮತ್ತೆಲ್ಲಿಗೂ ತಿರುಗಾಟವಾಗಿ ರಾತ್ರೆ ಊಟದ ಹೊತ್ತಿಗೆ ಮನೆಗೆ ಬರುತ್ತಿದ್ದ. ಊರಿನಲ್ಲಿ ಅವನು ನಮ್ಮ ಮಗನೆಂದು ಬಹಳಷ್ಟು ಜನರಿಗೆ ತಿಳಿದಿರಲೇ ಇಲ್ಲ. ಸಗುಣಕ್ಕನ ಮೊಮ್ಮಗ ಎಂದೇ ತಿಳಿದಿದ್ದರು. ಕಾರಣ ಇಷ್ಟು. ಅವರ ಪ್ರೀತಿ ಅವರನ್ನು ಅವನಿಗೆ ಬೇಕಿದ್ದಂತೆ ಕುಣಿಸುತ್ತಿತ್ತು. ಅವನು ಅವಳಲ್ಲಿ ಇಲ್ಲದ ಅಜ್ಜಿಯ ಪ್ರೇಮಲ ಸಾನ್ನಿಧ್ಯವನ್ನು ಕಂಡು ಅನುಭವಿಸುತ್ತಿದ್ದ.

ತನ್ನಿಂದ ಯಾರಿಗೂ ತೊಂದರೆಯಾಗಬಾರದು ಎಂಬುದು ಅವಳ ಜಪವಾಗಿತ್ತು. ಯಾರಿಗೂ ಭಾರವಾಗಿ ಬದುಕದಂತೆ ದೇವರು ಕರುಣಿಸಬೇಕು. ಇದೊಂದೇ ನನ್ನ ಬೇಡಿಕೆ ಎನ್ನುತ್ತಿದ್ದಳು. ಅನಾರೋಗ್ಯವಾದಾಗ, ಸಂಧಿವಾತದಿಂದ ಮೊಣಕಾಲಿಗೆ ಶಸ್ತ್ರಚಿಕಿತ್ಸೆಯಾದಾಗ, ಇನ್ನು ತಾನೆಲ್ಲಿ ಪರಾಧೀನಳಾಗುತ್ತೇನೋ ಎಂಬ ಭಯದಿಂದ ವೈದ್ಯರು ಹೇಳಿದ್ದಕ್ಕಿಂತ ಹೆಚ್ಚೇ ವ್ಯಾಯಾಮ, ಪಥ್ಯ ಮಾಡುತ್ತಿದ್ದಳು. ಅಗತ್ಯವಿದ್ದರೆ ಬೇರೆಯವರ ಉಪಚಾರಕ್ಕೆ ಎಂದೂ ಹಿಂದೇಟು ಹಾಕುತ್ತಿರಲಿಲ್ಲ. ಬಹಳಷ್ಟು ಸಲ ಅವಳು ಏಕೆ ಹೀಗೆ? ಎಲ್ಲರಿಗಿಂತ ಭಿನ್ನ ಎಂದು ನಾನು ಚಿಂತಿಸಿದ್ದುಂಟು. ಸಿಕ್ಕಿದ ಉತ್ತರವೆಂದರೆ ಅದು ಅವಳ ಸಹಜ ಸ್ವಭಾವವಾಗಿತ್ತು. ಸೂರ್ಯನಂತೆ, ಚಂದ್ರಮ, ತಾರೆಯರು, ತಂಗಾಳಿಯಂತೆ, ಸುರಿವ ಸಜಲಧಾರೆಯಂತೆ, ಫಲಪುಷ್ಪಭರಿತ ವೃಕ್ಷದಂತೆ, ತಾನು ತನ್ನದೆನ್ನುವ ಭೇಧಭಾವವಿಲ್ಲದೆ ಪರರಿಗಾಗಿ ಮಿಡಿಯುವುದು ಅವಳ ಬದುಕಿನ ಪರಿಯಾಗಿತ್ತು.

ಇಂದು ನಾವು ಬದುಕುತ್ತಿರುವುದು ಮುಖವಾಡಗಳ ಹಿಂದೆ. ಹುಟ್ಟಿನಿಂದ, ಹೆತ್ತವರಿಂದ, ವಿದ್ಯಾಭ್ಯಾಸ ಪದ್ಧತಿಯಿಂದ, ಪರಿಸರದಿಂದ ಕಲಿತ ಪಾಠಗಳು, ಒಳಿತೋ, ಕೆಟ್ಟದೋ, ಪರಿಪರಿಯ ಮುಖವಾಡಗಳನ್ನು ಸೃಷ್ಟಿಸುತ್ತದೆ. ಇದರ ಇರುವಿಕೆಯನ್ನು ತಿಳಿಯದೆಯೇ ನಾವು ಅದರಲ್ಲಿ ಮನಮುಟ್ಟಿ ಬದುಕುತ್ತೇವೆ. ಮುಖವಾಡದ ಹೊದಿಕೆ ಇಲ್ಲದ ಬದುಕು ಭಯಾವಹ ಎನಿಸುತ್ತದೆ. ಸಹಜತೆ ಸಾಯುತ್ತದೆ. ಆದರೆ ಸಗುಣಕ್ಕ ಇದಕ್ಕೆ ಹೊರತಾಗಿದ್ದಳು. ಮುಖವಾಡಗಳು ಇವಳಲ್ಲಿ ರೂಪುಗೊಂಡಿರಲೇ ಇಲ್ಲ. ಎಲ್ಲವೂ ಸರಳ, ಸಹಜ. ಈ ಸರಳತೆ ನನ್ನನ್ನು ಅವರತ್ತ ಸೆಳೆದ ಮೊದಲ ತಂತು. ನಂತರ ಕಂಡದ್ದು, ಅರ್ಥಮಾಡಿಕೊಂಡದ್ದು ನನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದು ಬಹಳಷ್ಟು. ಈ ಸೆಳೆತ, ಕೊನೆಯವರೆಗೂ ಸಡಿಲವಾಗಲೇ ಇಲ್ಲ. ಬದಲಿಗೆ ಗಾಢವಾಗುತ್ತಾ ಅವಳ ಸಂಸಾರವನ್ನು ನನ್ನದಾಗಿಸಿತು. ಅವಳ ಮಕ್ಕಳು, ಕಿರಿಯ ಸೊಸೆ ನನ್ನವರೇ ಆಗಿ ಹೋದರು.

ಸಾಮಾನ್ಯ ಮಗಳಾಗಿ, ಗೃಹಿಣಿಯಾಗಿ, ಪತ್ನಿಯಾಗಿ, ತಾಯಿಯಾಗಿ ಬದುಕಿನ ಏರಿಳಿತಗಳನ್ನು ಬದುಕಿನ ಸಮಸ್ತ ವ್ಯವಹಾರಗಳನ್ನು ಸಮದೃಷ್ಟಿಯಿಂದ ಕಾಣುವ ದೃಷ್ಟಿಕೋನವನ್ನು ಬೆಳೆಸಿಕೊಂಡ ಒಬ್ಬ ಅಸಾಮಾನ್ಯಳನ್ನು ಹತ್ತಿರದಿಂದ ಕಂಡು, ಅವಳ ಸಾನ್ನಿಧ್ಯವನ್ನು ಅನುಭವಿಸಿ, ಕಡೆಗೊಮ್ಮೆ ಭೌತಿಕವಾಗಿ ಅವಳಿಂದ ದೂರವಾದಾಗ ಕೊರತೆ ಕಂಡಿತೇ ವಿನಃ ದುಃಖವಲ್ಲ. ಏಕೆಂದರೆ ಅನಾಯಾಸದ ಮರಣ ವಿನಾ ದೈನ್ಯತೆಯ ಜೀವನ ಅವಳ ಕನಸಾಗಿತ್ತು. ಒಳ್ಳೆಯ ಜೀವವೊಂದರ ಕನಸು ನನಸಾದ ತೃಪ್ತಿ ನನಗಾಯಿತು.

ಇವಳೇ ಜೀವನ್ಮುಕ್ತೆ !
ಮಂಕುತಿಮ್ಮ ಎನ್ನುವಂತೆ
ಇಂದ್ರಿಯಂಗಳೊಳು ಬಾಳಿ, ಜೀವ ಪಕ್ವಂಗೊಳ್ಳ –
ಲಿಂದ್ರಿಯಗಳ ಮೀರಿ ಮೇಲೇರಿ ಜಾಣಿಂ –
ದಿಂದ್ರಿಯಗಳನಾಳಿ ಲೋಕವಂ ಸಂತಯಿಪ
ಬಂಧು ಜೀವನ್ಮುಕ್ತ – ಮಂಕುತಿಮ್ಮ

ಮನಸ್ಸು ತುಂಬಿದಾಗ, ಮಾತು ಹೊರಬರಲು ತಡಕಾಡುತ್ತದೆ. ಹಾಗೆಯೇ ಪದಗಳೂ ಕೂಡ. ಕೈ ತಡೆಯುತ್ತದೆ. ಒಂದು ಹೊತ್ತಗೆ ಬರೆಯಬಹುದಾದಷ್ಟು ನೆನಪುಗಳು ನನ್ನ ಮನದಲ್ಲಿ ಮೂಡಿನಿಂತಿವೆ. ಆದರೆ ಪದಗಳಿಗೆ, ಮಾತಿಗೆ ಮಿತಿ ಇದೆ. ಓದುವವ ಯಾವ ಭಾವದಿಂದ ಓದುತ್ತಾನೋ ಅದು ಅವನಿಗೆ ತಲುಪುತ್ತದೆ. ಒಂದು ಸಂಬಂಧದ ಆಳ, ಗಹನತೆ, ಅನುಭವಿಸಿದವರಿಗೆ ಮಾತ್ರ ವೇದ್ಯವಾಗುವಂತಹದು. ನಾನು ಕಂಡ ಸಗುಣಕ್ಕ ಬರೀ ನನ್ನವಳು ಮಾತ್ರ . ಇನ್ನು ಮಿಕ್ಕವರು ಅವಳನ್ನು ಬಹಳಷ್ಟು ರೂಪಗಳಿಂದ ಕಂಡಿರಬಹುದು. ಆದರೆ ನಾನು ಅವಳ ಜತೆ ಕಳೆದ ಕೆಲವು ಕ್ಷಣಗಳು ಕೇವಲ ನಮ್ಮವು ಮಾತ್ರ. ಹಂಚಿಕೊಳ್ಳಲಾರದ ನವರಸದ ಬಿಂದುಗಳವು. ಅವಳಿಲ್ಲದ ಕೊರತೆ ಇದೆ. ಆದರೆ ಅಂತೇ ಅವಳ ಬದುಕಿನ ಆದರ್ಶವೂ ನನ್ನ ಮುಂದಿದೆ. ಕಲಿತ ಪಾಠವಿದೆ. ನೆನಪುಗಳಿವೆ.

ಸಂಧ್ಯಾ ಪೈಗಳು ಬರೆದ ಈ ಲೇಖನದಲ್ಲಿ ಸಗುಣಾ ಪೈಗಳ ಕುರಿತು ಅವರಿಗಿರುವ ಪ್ರೀತಿ ವ್ಯಕ್ತವಾಗುತ್ತದೆ. ಕೆ. ಕೆ. ಪೈಗಳಿಗೆ ತಮ್ಮ ಪತ್ನಿಯ ಬಗ್ಗೆ ಅಪಾರ ಗೌರವವಿತ್ತು ಎಂದು ಅವರೊಡನೆ ಮಾತಿಗೆ ಕೂತಾಗ ತಿಳಿದು ಬಂದ ವಿಚಾರ. ತನ್ನ ಕುರಿತು ಹೊರ ತರುವ ಪುಸ್ತಕದಲ್ಲಿ ತನ್ನ ಪತ್ನಿಯ ಕುರಿತೂ ಒಂದಿಷ್ಟು ಮಾತು ಬರೆಯುವುದು ಸೂಕ್ತ ಎಂಬ ಆಶಯವನ್ನೂ ಅವರು ಮಾತಿಗೆ ಕೂತಾಗ ವ್ಯಕ್ತಪಡಿಸಿದ್ದುಂಟು. ಒಂದರ್ಥದಲ್ಲಿ ಸಗುಣಾ ಪೈ ಅವರು ತಮ್ಮ ಪತಿಯ ಯಶಸ್ಸಿನ ರೂವಾರಿ ಎಂಬುದೂ ಕೆ. ಕೆ. ಪೈಗಳ ನಿಕಟವರ್ತಿ ಬ್ಯಾಂಕಿನ ಉಪಮಹಾಪ್ರಬಂಧಕರಾಗಿ ನಿವೃತ್ತಿ ಹೊಂದಿದ ಪ್ರಸ್ತುತ ಭಾರತೀಯ ವಿಕಾಸ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಕೆ.ಎಂ. ಉಡುಪರ ಅಂಬೋಣ. ಕೆ. ಕೆ. ಪೈ ದಂಪತಿಗಳ ಕುರಿತಾಗಿ ಉಡುಪರಿಗೆ ಅಪಾರ ಗೌರವ. ಸಗುಣಾ ಪೈ ಅವರು ತೀರಿಕೊಂಡ ಮೇಲೆ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಹೊರತಂದ ಪುಸ್ತಕ ‘ಸದ್ಗುಣಿ ಸಗುಣಾ ಇದರಲ್ಲಿ ಉಡುಪರು ಸಗುಣಾ ಪೈಗಳ ಕುರಿತು ತನ್ನ ಅನಿಸಿಕೆಗಳನ್ನು ಬಿಚ್ಚಿಟ್ಟಿದ್ದು ಹೀಗೆ :

ಅಂದು ತಾ. 19 ನವಂಬರ. ಶ್ರೀ ಕೆ. ಕೆ. ಪೈಯವರನ್ನು ಕಾಣುವುದಿತ್ತು. 11 ಗಂಟೆಗೆ ಮನೆಗೆ ಫೋನ್ ಮಾಡಿದಾಗ ಸಗುಣಮ್ಮ ಮಾತನಾಡಿದರು. ಶ್ರೀ ಪೈಯವರು ಹೊರಹೋಗಿದ್ದಾರೆ, ಮಧ್ಯಾಹ್ನದ ಊಟಕ್ಕೆ ಬರುತ್ತಾರೆ ಎಂದು ತಿಳಿಸಿದರು. ಸುಮಾರು ಒಂದು ಗಂಟೆಗೆ ಅವರ ಮನೆಗೆ ಹೋದೆ. ಊಟಕ್ಕೆ ಕುಳಿತಿದ್ದರು. ಮತ್ತೆ ಬರುತ್ತೇನೆ ಎಂದು ಹೊರಟವನನ್ನು ಸಗುಣಮ್ಮ ಕರೆದರು. ಉಡುಪರೇ ಊಟ ಮಾಡಿ ಹೋಗಿ  ಎಂದರು. ಇಲ್ಲ ಮತ್ತೆ ಸಿಗುತ್ತೇನೆ ಎಂದರೂ ಕೇಳದೆೇ ಒತ್ತಾಯ ಮಾಡಿ ಬಡಿಸಿದರು. ಸ್ವಲ್ಪ ಹೊತ್ತಿನಲ್ಲಿ ಮಗ ಸುರೇಶ ಬಂದರು. ಎಲ್ಲಾ ಒಟ್ಟಿಗೆ ಊಟ ಮಾಡಿದೆವು. ಅಂದಿನ ವಿಶೇಷ ಪತ್ರೊಡೆ ಚೆನ್ನಾಗಿತ್ತು. ಎರಡೆರಡು ಸಲ ಹಾಕಿಸಿಕೊಂಡೆ. ತಾಯಿಯ ವ್ಯಾತ್ಸಲ್ಯದ ಸಗುಣಮ್ಮನ ಅತಿಥ್ಯ ಅದ್ವಿತೀಯವಾದುದು.

ತಾ. 21ರಂದು ಬೆಳಗ್ಗಿನ ಉದಯವಾಣಿಯಲ್ಲಿ ಸಗುಣಮ್ಮನ ನಿಧನದ ವಾರ್ತೆ ಬಂದಿತ್ತು. ಕೂಡಲೇ ಮಣಿಪಾಲಕ್ಕೆ ಹೋದೆ. ಕೆ. ಕೆ. ಪೈಯವರ ಮನೆಯಲ್ಲಿ ಜನಸಾಗರವೇ ನೆರೆದಿತ್ತು. 20ರ ಸಂಜೆ ಅವರು ಸಾರ್ಥಕ ಬಾಳನ್ನು ಮುಗಿಸಿದ್ದರು. ಮುತ್ತೈದೆಯಾಗಿ ಅನಾಯಾಸ ಮರಣ ಬಹಳ ಪುಣ್ಯವಂತರಿಗೆ ಮಾತ್ರ ದೊರಕುತ್ತದೆ. ಅಂತಹ ಸೌಭಾಗ್ಯ ಸಗುಣಮ್ಮನದಾಗಿತ್ತು.

ನಾನು 1965ರಲ್ಲಿ ಸಿಂಡಿಕೇಟ್ ಬ್ಯಾಂಕಿಗೆ ಸೇರಿದಾಗಿನಿಂದ, ಶ್ರೀ ಕೆ.ಕೆ. ಪೈಯವರ ವಿಶೇಷ ಪ್ರೀತಿಗೆ ಪಾತ್ರನಾಗಿದ್ದೆ. ಹಾಗಾಗಿ ಅಂದಿನಿಂದಲೇ ಅವರ ಮನೆಗೆ ಆಗಾಗ ಹೋಗಿ ಬರುವುದು ರೂಢಿಯಾಗಿತ್ತು. ಹಾಗೆ ಹೋದಾಗಲೆಲ್ಲಾ ಸಗುಣಮ್ಮನ ಆತಿಥ್ಯವನ್ನು ಅನುಭವಿಸುತ್ತಿದ್ದೆ. ಅಂದಿನ ಕೆ. ಕೆ. ಪೈಯವರ ಮನೆಯೆಂದರೆ ಸದಾ ಜನರಿಂದ ತುಂಬಿರುವ ತಾಣವಾಗಿತ್ತು. ಉದ್ಯೋಗ ಕೇಳಿಕೊಂಡು, ಬ್ಯಾಂಕ್ ವ್ಯವಹಾರದ ಸಮಸ್ಯೆಗಳು, ಹಾಗೂ ವೈಯಕ್ತಿಕ ಕಾರಣಗಳಿಗಾಗಿ ಜನ ಪೈಯವರನ್ನು ಸಂಪರ್ಕಿಸಲು ಬರುತ್ತಿದ್ದರು. ಕುಂಜಿಬೆಟ್ಟಿನ ಅವರ ಮನೆ ಜೇನುಗೂಡಿನಂತಿರುತ್ತಿತ್ತು. ಬಂದವರನ್ನೆಲ್ಲಾ ಮಾತನಾಡಿಸಿ ಸುಧಾರಿಸುವ ಕೆಲಸ ಸಾಮಾನ್ಯವಲ್ಲ. ಆದರೂ ನಗುಮೊಗದಿಂದ ಇದನ್ನು ಮಾಡಿಕೊಂಡು ಬಂದು ಕುಟುಂಬದ, ಸಾರ್ವಜನಿಕರ ಮೆಚ್ಚುಗೆ ಗಳಿಸಿದವರು ಸಗುಣಮ್ಮ.

ಕೆಲವರಿಗೆ ಹೆಸರು ಅನ್ವರ್ಥವಾಗುತ್ತದೆ. ಪ್ರಾಯಶಃ ಶ್ರೀ ಉಪೇಂದ್ರ ಪೈಗಳು ತಮ್ಮ ಹಿರಿಯ ಮಗಳಿಗೆ ಈ ಹೆಸರಿಟ್ಟದ್ದು ಪೂರ್ಣ ಸತ್ಯವಾಗಿತ್ತು.

ಸಗುಣಮ್ಮನ ಒಳ್ಳೆಯತನಕ್ಕೆ ಪೂರಕವಾದುದು ಪ್ರಾಯಶಃ ಹಿರಿಯರ ಆದರ್ಶ. ತಂದೆ ಉಪೇಂದ್ರ ಪೈ, ಚಿಕ್ಕಪ್ಪ ಡಾ. ಟಿ. ಎಂ. ಪೈ ಮತ್ತು ಹಿರಿಯಣ್ಣ ಶ್ರೀ ಟಿ. ಎ. ಪೈಯವರ ವಿಶಿಷ್ಟ ವ್ಯಕ್ತಿತ್ವ ಇವರ ಮೇಲೆ ಆಗಾಧ ಪರಿಣಾಮ ಬೀರಿರಬೇಕು. ತುಂಬು ಸಂಸಾರ. ಅನಂತ ಸಾಧನೆಗಳ ಯಶಸ್ಸಿನ ಮಧ್ಯೆ, ಬಾಲ್ಯವನ್ನು ಕಳೆದ ಇವರಿಗೆ ಸರಳತೆ, ಸಜ್ಜನಿಕೆ, ಸದ್ಗುಣಗಳು ಸ್ವಾಭಾವಿಕವಾಗಿಯೇ ಮೈಗೂಡಿಕೊಂಡಿರಬೇಕು.

60 ವರುಷಗಳ ಹಿಂದೆ ಶ್ರೀ ಕೆ. ಕೆ. ಪೈಯವರನ್ನು ವಿವಾಹವಾದ ನಂತರ ಪ್ರಾಯಃ ಇವರು ತಮ್ಮ ಪತಿ ಮತ್ತು ಕುಟುಂಬದವರು ಯಶಸ್ಸಿನ ಸೋಪಾನ ಗಳನ್ನೇರುತ್ತಿರುವುದನ್ನು ಗಮನಿಸಿ, ಅದಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಗೃಹಿಣಿಯೊಬ್ಬಳು ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅರಿತು ನಿಭಾಯಿಸಿದಾಗ, ಕುಟುಂಬದ ಸಮಗ್ರ ಉನ್ನತಿ ಹೇಗೆ ಆಗುತ್ತದೆ ಎನ್ನುವುದಕ್ಕೆ ಸಗುಣಮ್ಮ ಒಂದು ಜ್ವಲಂತ ಉದಾಹರಣೆ. ಹುಟ್ಟಿದ ಮನೆಯ ತುಂಬು ಸಂಸಾರ, ಗಂಡನ ಮನೆಯಲ್ಲಿಯೂ ದೊಡ್ಡ ಕುಟುಂಬ, ಇವೆರಡನ್ನೂ ಹೊಂದಿಸಿಕೊಂಡು ಎಲ್ಲರಿಗೂ ಬೇಕೆನಿಸಿಕೊಂಡು ಅವರನ್ನು ಬೆಳೆಸಿ ತಾವೂ ಬೆಳೆದರು.

ಮುಖ್ಯವಾಗಿ ಇಲ್ಲಿ ಗಮನಿಸಬೇಕಾದುದು, ಶ್ರೀ ಕೆ.ಕೆ. ಪೈಯವರ ಸಹಧರ್ಮಿಣಿ ಯಾಗಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದುದನ್ನು. ಸಿಂಡಿಕೇಟ್ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿ, 1970ರಲ್ಲಿ ಅಧ್ಯಕ್ಷರಾಗಿ ನೇಮಕ ಗೊಂಡ ನಂತರ ಅವರ ಜೀವನದ ಕ್ರಮವೇ ಬೇರೆಯಾಗಿತ್ತು. ದಿನಕ್ಕೆ ಕನಿಷ್ಠ 18 ತಾಸು ಅಥವಾ ಅದಕ್ಕೂ ಹೆಚ್ಚು ಬ್ಯಾಂಕಿನಲ್ಲೇ ಕಳೆಯುತ್ತಿದ್ದ ಶ್ರೀ ಕೆ. ಕೆ. ಪೈಯವರಿಗೆ ಬಿಡುವೆಂಬುದೇ ಇಲ್ಲ. ಜತೆಗೆ ವಿವಿಧ ಸಾರ್ವಜನಿಕ, ಸಾಮಾಜಿಕ ಚಟುವಟಿಕೆಗಳು, ಬರುವ ಅತಿಥಿಗಳು. ಇವುಗಳನ್ನೆಲ್ಲಾ ಸುಧಾರಿಸಿಕೊಂಡು ಗೃಹಕೃತ್ಯದ ಜವಾಬ್ದಾರಿಯನ್ನು ನಿರ್ವಹಿಸುವುದು ಬಹಳ ದೊಡ್ಡ ಸವಾಲು. ಇದನ್ನು ತಾಳ್ಮೆಯಿಂದ ಕರಾರುವಕ್ಕಾಗಿ ನಡೆಸಿಕೊಂಡು ಬಂದು ಸದಾ ಹಸನ್ಮುಖಿಯಾಗಿ, ಐದು ಮಕ್ಕಳ ತಾಯಿಯಾಗಿ, ಅವರ ಪಾಲನೆ ಪೋಷಣೆಗಳ ಜತೆಗೆ, ಉತ್ತಮ ಮನುಷ್ಯರಾಗಿ ರೂಪಿಸಿದುದು ಸಾಮಾನ್ಯ ಸಾಧನೆಯಲ್ಲ. ಮನೆಯ ಆತಿಥ್ಯ ಬಹಳ ದೊಡ್ಡ ಹೊಣೆಗಾರಿಕೆ. ಬ್ಯಾಂಕಿನ ಕೆಲಸಕ್ಕಾಗಿ ಬಂದ ಗಣ್ಯರನ್ನು ಮನೆಗೆ ಕರೆದು ಉಪಚರಿಸುವುದು ಶ್ರೀ ಕೆ. ಕೆ. ಪೈಯವರ ಒಂದು ಉತ್ತಮ ಪರಿಪಾಠ. ಇದಕ್ಕೆ ಬೇಕಾದ ತಯಾರಿ ಅದು ಅತ್ಯಂತ ಕಡಿಮೆ ಸಮಯದಲ್ಲಿ ಮಾಡುವುದು ಸಗುಣಮ್ಮನವರ ಕಾಯಕ. ಅದೂ ಶ್ರೀ ಪೈಯವರ ದಿನಚರಿ ಹೀಗೆಂದು ಹೇಳಲು ಬರುವಂತಿರಲಿಲ್ಲ. ಬೆಳಗ್ಗೆ ಎಂಟು ಗಂಟೆ, ಅಥವಾ ರಾತ್ರಿ 12 ಗಂಟೆ-ಮನೆಯ ಬಾಗಿಲು ಅತಿಥಿ ಸತ್ಕಾರಕ್ಕೆ ಸದಾ ತೆರೆದಿರಬೇಕಿತ್ತು. ಜತೆಗೆ ಇಂದು ಮುಂಬೈ, ನಾಳೆ ದಿಲ್ಲಿ ಹೀಗೆ ದೇಶದಾದ್ಯಂತ ಪಯಣ ಮಾಡುತ್ತಿದ್ದ ಪತಿಯ ಅಗತ್ಯತೆಗಳಿಗೂ ಗಮನಹರಿಸಬೇಕಿತ್ತು. ಇವುಗಳನ್ನೆಲ್ಲಾ ಸಮಚಿತ್ತದಿಂದ ನಿಭಾಯಿಸಿ, ಮನೆಯವರಿಗೂ, ಹೊರಗಿನವರಿಗೂ ಆಪ್ತರಾದವರು ಸಗುಣಮ್ಮ. 9 ವರ್ಷಗಳ ಕಾಲ ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರಾಗಿ ಇನ್ನಿಲ್ಲ ಎನ್ನುವ ರೀತಿಯಲ್ಲಿ ಬ್ಯಾಂಕನ್ನು ಬೆಳೆಸಿ ದೇಶದಾದ್ಯಂತ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ ಪೈಯವರ ಯಶಸ್ಸನ್ನು, ಸಾಧನೆಯನ್ನು ಗಮನಿಸಿ, ತೃಪ್ತಿಪಟ್ಟ ಮಹಾಸಾಧ್ವಿ ಅವರು.

ಮನೆವಾರ್ತೆಯ ಯಾವ ಕೆಲಸಕ್ಕೂ ಹಿಂಜರಿದವರಲ್ಲ, ಮನೆಯಲ್ಲಿ ದನಸಾಕಿ, ಗೋಬರ್‌ಗ್ಯಾಸ್ ಪ್ಲಾಂಟ್ ಇಟ್ಟು, ತೆಂಗಿನ ಗರಿಗಳಿಂದ ಬಿಸಿನೀರು ಕಾಯಿಸಿ ಗೃಹಕೃತ್ಯಗಳನ್ನು ನಡೆಸುತ್ತಿದ್ದರು. ಇಂದಿನ ದಿನಗಳಲ್ಲಿ ಸಾಮಾನ್ಯವರ್ಗದ ಗೃಹಿಣಿಯರೂ ಮಾಡದ, ಇಂತಹ ಕೆಲಸಗಳನ್ನು ತಾದಾತ್ಮ್ಯಭಾವದಿಂದ ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮಾನವೀಯ ಗುಣಗಳಿಂದ ತುಂಬಿ ತುಳುಕಾಡುತ್ತಿದ್ದ ಸಗುಣಮ್ಮ,  ಬ್ಯಾಂಕಿನ ಹಿರಿಯ ಅಧಿಕಾರಿಗಳಿಂದ ಹಿಡಿದು, ಕಾರಿನ ಡ್ರೈವರ್, ಮನೆಕೆಲಸದವರು-ಎಲ್ಲರ ಮೆಚ್ಚುಗೆ ಗಳಿಸಿದ್ದರು.

1987ರಿಂದ 89ರ ವರೆಗೆ ಅವರ ಕುಂಜಿಬೆಟ್ಟಿನ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದೆ. ತೋಟದ ಮೇಲ್ವಿಚಾರಣೆ ನೋಡಲು ಸಗುಣಮ್ಮ ಆಗಾಗ ಬರುತ್ತಿದ್ದರು. ಆಗ ಅವರನ್ನು ತುಂಬಾ ಆತ್ಮೀಯವಾಗಿ ಹತ್ತಿರದಿಂದ ನೋಡುವ ಅವಕಾಶ ನನಗೆ, ನನ್ನ ಶ್ರೀಮತಿ ಶಾಂತ ಹಾಗೂ ಮಕ್ಕಳಿಗೆ ದೊರಕಿತ್ತು. ಅದೇನು ಸೌಜನ್ಯ, ಸಹನೆ!  ಇದನ್ನು ನಾವಿಂದಿಗೂ ಮೆಲುಕು ಹಾಕುತ್ತಿದ್ದೇವೆ. ಅಂತೆಯೇ ಮಂದರ್ತಿಯ ನಮ್ಮ ಮನೆಗೆ ವರುಷಕ್ಕೊಮ್ಮೆ ನವರಾತ್ರಿಯ ಸಮಯ, ಅಥವಾ ಮಕ್ಕಳು ಅಮೇರಿಕದಿಂದ ಬಂದಾಗ ಬರುತ್ತಿದ್ದರು. ಆಗ ಶ್ರೀ ಕೆ. ಕೆ. ಪೈಯವರೂ ಜತೆಗಿರುತ್ತಿದ್ದರು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಹೊಂದಿಕೊಂಡು ಹೋಗಿ ನಮಗೆಲ್ಲಾ ಖುಷಿ ನೀಡುತ್ತಿದ್ದರು.

1978ರಲ್ಲಿ ಕೆ. ಕೆ.ಪೈಯವರು ಬ್ಯಾಂಕಿನ ಅಧ್ಯಕ್ಷ ಪದವಿಯಿಂದ ನಿವೃತ್ತಿಹೊಂದಿದ ನಂತರವೂ, ಅವರ ಜೀವನಶೈಲಿ ಮುಂಚಿನಂತೆಯೇ ಇತ್ತು. ವಿವಿಧ ಪ್ರತಿಷ್ಠಿತ ಕಂಪೆನಿಗಳಲ್ಲಿ ನಿರ್ದೇಶಕ ಹುದ್ದೆ, ಸಂಸ್ಥೆಗಳ ಹಿರಿತನ, ಸಾಮಾಜಿಕ ಜೀವನದಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳು, ಮನೆಗೆ ಬರುವ ಜನರು ಇವುಗಳನ್ನೆಲ್ಲಾ ಮುಂಚಿನಂತೆಯೆ ನಿಭಾಯಿಸುವುದು ಅವರ ಜಾಯಮಾನವಾಗಿತ್ತು. ಹಾಗಾಗಿ ಸಗುಣಮ್ಮನವರ ದಿನಚರಿಯಲ್ಲಿ ಬದಲಾವಣೆಯಾಗಲಿಲ್ಲ. 1998 ಜೂನ್ 26ರಂದು ಶ್ರೀ ಪೈಯವರ ಹುಟ್ಟುಹಬ್ಬದ ದಿನ ನಡೆದ ಅವರ ಸಾರ್ವಜನಿಕ ಸಮ್ಮಾನ ಉಡುಪಿಯ ಚರಿತ್ರೆಯಲ್ಲಿ ಒಂದು ಅಪೂರ್ವ ಘಟನೆ. ಕೆ. ಕೆ. ಪೈಯವರಿಂದ ಉಪಕೃತರಾದ ಬ್ಯಾಂಕ್ ಸಿಬ್ಬಂದಿಗಳು, ಉದ್ಯಮಿಗಳು, ಸಾರ್ವಜನಿಕರೂ ಹಿರಿಯ ಚೇತನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದು ತಮ್ಮ ಕೃತಜ್ಞತೆ ಸೂಚಿಸಿದರು. ಸಾವಿರಾರು ಜನಕ್ಕೆ ಜೀವನದ ದಾರಿತೋರಿಸಿ, ಕುಟುಂಬಗಳಿಗೆ ಅನ್ನ ತೋರಿಸಿದ ಇವರಿಗೆ ‘ಚಿನ್ನದ ಬಟ್ಟಲಿನ ನೆನಪಿನ ಕಾಣಿಕೆಯಿತ್ತು ಸಮ್ಮಾನಿಸಿದರು. ಅಂದು ಸಹ ಸಗುಣಮ್ಮ ಅವರ ಜತೆಗಿದ್ದು ಬಾಳ ಕೃತಾರ್ಥತೆಯನ್ನು ಅನುಭವಿಸಿದರು.

ತುಂಬಿದ ಕಲ್ಸಂಕ ಪೈಗಳ ಕುಟುಂಬದ ಹಿರಿಯ ಸೊಸೆಯಾಗಿ ಅತ್ತೆ ಮಾವಂದಿರು, ಭಾವಮೈದುನರುಗಳನ್ನು ಅಕ್ಕರೆಯಿಂದ ನೋಡಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾದರು. ಅಂತೆಯೇ ತಂದೆಯ ಮನೆಯವರ ದೊಡ್ಡ ಕುಟುಂಬದ ಎಲ್ಲರಿಗೂ ಸಗುಣಕ್ಕನಲ್ಲಿ ವಿಶೇಷ ಅಕ್ಕರೆ. ಹೀಗೆ ವಿವಿಧ ವೈರುಧ್ಯಗಳ ನಡುವೆ ‘ಸಮರಸದ ಬಾಳನ್ನು ಬಾಳಿದ ಆದರ್ಶ ಗೃಹಿಣಿ ಸಗುಣಮ್ಮ ಮುತ್ತೈದೆಯಾಗಿ ಮರಣದಲ್ಲೂ ವಿಶೇಷತೆಯನ್ನು ಮೆರೆದರು. ಮಧ್ಯಾಹ್ನದ ಊಟ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವಾಗಲೇ ಅವರ ಜೀವನಯಾತ್ರೆ ಯಾರಿಗೂ ತಿಳಿಯದಂತೆ ಮುಗಿದಿತ್ತು. ‘ಅನಾಯಾಸೇನ ಮರಣಂ ಇದನ್ನು ದೇವರು ಅವರಿಗೆ ಕರುಣಿಸಿದ. ಅವರ ಬದುಕು ಇಂದಿನ ಯುವತಿಯರಿಗೆ ಒಂದು ‘ದಾರಿದೀಪವಾಗಲಿ. ಇವು ಉಡುಪರ ಹೃದಯಾಂತರಾಳದ ಮಾತುಗಳು.

ಪೈ ದಂಪತಿಗಳದ್ದು 5 ಮಕ್ಕಳ ಸುಖ ಸಂಸಾರ. ವೈದ್ಯೆಯಾಗಿದ್ದ ಒಬ್ಬ ಮಗಳು ವಿದೇಶದಲ್ಲಿ ಅನಿರೀಕ್ಷಿತವಾಗಿ ಸಾವಿಗೀಡಾದ್ದು ಇವರ ಜೀವನದಲ್ಲಿ ಸಂಭವಿಸಿದ ಅನಿರೀಕ್ಷಿತ ಆಘಾತಕಾರಿ ಘಟನೆ. ಉಳಿದ ಮಕ್ಕಳೆಲ್ಲ (ಮೊಮ್ಮಕ್ಕಳು ಸೇರಿ) ತಂತಮ್ಮ ಸಂಸಾರದೊಂದಿಗೆ ಸುಖೀ ಜೀವನ ನಡೆಸುತ್ತಿರುವುದು ಪೈಗಳಿಗೆ ಸಂತಸ ತಂದ ವಿಚಾರ. ಹಿರೇ ಮಗ ಡಾಕ್ಟರನಾಗಿ 1970ರಿಂದ ಅಮೇರಿಕಾದ ಕೆಲಿಫೋರ್ನಿಯಾದಲ್ಲಿ ವೈದ್ಯಕೀಯ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದಾನೆ. ಹಿರೇ ಮಗಳು ಮನೆ ವಾರ್ತೆಯಲ್ಲಿಯೇ ಇದ್ದು ಅಲ್ಲದೇ ಸಮಾಜದಲ್ಲಿ ಬೆರೆತು ಕರಕುಶಲ ತರಬೇತಿಯನ್ನು ಹೊಂದಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾಳೆ. ಕಿರಿಯ ಮಗಳು ವೈದ್ಯೆಯಾಗಿ ಕಾನ್ಸರ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾಳೆ. ಅವಳ ಇಬ್ಬರು ತಂಗಿಯಂದಿರು ಕೂಡಾ ಪ್ರಸಿದ್ಧ ಜನಪ್ರಿಯ ವೈದ್ಯರಾಗಿದ್ದಾರೆ.

ಸಗುಣಾ ಪೈಗಳು ಪತಿಯೊಡನೆ ಸಭೆ ಸಮಾರಂಭಗಳಿಗೆ ಹೋಗುತ್ತಿದ್ದುದು ಅಪರೂಪವೇ. ಆದರೆ ಕೌಟುಂಬಿಕ ಹಾಗೂ ಆಪ್ತರ ಮನೆಗಳಲ್ಲಿನ ಪೂಜೆ ಪುನಸ್ಕಾರ, ಮದುವೆ, ಮುಂಜಿ ಮುಂತಾದ ಸಮಾರಂಭಗಳನ್ನು ಮಾತ್ರ ಅವರು ಎಂದಿಗೂ ತಪ್ಪಿಸುತ್ತಿರಲಿಲ್ಲ. ಅದು ಕಡ್ಡಾಯ. 1998ರಲ್ಲಿ ಉಡುಪಿ ಪರಿಸರದ ಪೈಗಳ ಅಭಿಮಾನಿಗಳೆಲ್ಲ ಸೇರಿ ಪೈಗಳಿಗೆ ಒಂದು ಸಾರ್ವಜನಿಕ ಸಮ್ಮಾನ ಏರ್ಪಡಿಸಿದರು. ಉಡುಪಿಯ ಅಮ್ಮಣ್ಣಿ ರಾಮಣ್ಣ ಕಲ್ಯಾಣ ಮಂಟಪದಲ್ಲಿ ನಡೆದ ಈ ಸಮಾರಂಭದಲ್ಲಿ ಪೈಗಳ ಅಭಿಮಾನಿಗಳು ಅತ್ಯಧಿಕ ಸಂಖ್ಯೆಯಲ್ಲಿ ಸೇರಿದ್ದು ಉಡುಪಿಯ ಇತಿಹಾಸದಲ್ಲಿ ಒಂದು ದಾಖಲೆಯ ಘಟನೆ ಎಂದು ಅದನ್ನು ಈಗಲೂ ಸ್ಮರಿಸುವವರಿದ್ದಾರೆ. ಈ ಸಮಾರಂಭಕ್ಕೆ ಪೈಗಳ ಜೊತೆಗೆ ಸಗುಣಾ ಪೈಗಳೂ ಉಪಸ್ಥಿತರಿದ್ದು ಸನ್ಮಾನವನ್ನು ಸ್ವೀಕರಿಸಿದಾಗ ಪೈಗಳ ಅಭಿಮಾನಿಗಳು ಸಾರ್ಥಕತೆಯ ಭಾವ ಅನುಭವಿಸಿದರು. ಪತ್ನಿಯ ಜತೆ ಪೈಗಳು ಅಭಿಮಾನಿಗಳ ಗೌರವ ಸ್ವೀಕರಿಸಿದ ಆ ಸಂದರ್ಭ ಪೈಗಳ ಬದುಕಿನ ಒಂದು ಅವಿಸ್ಮರಣೀಯ ಘಟನೆಯೂ ಹೌದು. ಪೈಗಳ ಕುರಿತು ಅಂದು ಅವರ ಅಭಿಮಾನಿಗಳು ವ್ಯಕ್ತಪಡಿಸಿದ ಮೆಚ್ಚುಗೆಯ ನುಡಿಗಳಿಗೆ ಲೆಕ್ಕವೇ ಇಲ್ಲ. ಪೈಗಳ ನೆರವಿನ ಹಸ್ತದಿಂದ ತಮ್ಮ ಬಾಳನ್ನು ಬಂಗಾರವಾಗಿಸಿಕೊಂಡ ಅವರ ಅಭಿಮಾನಿಗಳೆಲ್ಲ ಸೇರಿ ಬಂಗಾರದ ಬಟ್ಟಲನ್ನೇ ಪೈಗಳಿಗೆ ಸಮರ್ಪಿಸಿದ ಸಂದರ್ಭವಂತೂ ವರ್ಣನಾತೀತ ಎನ್ನುತ್ತಾರೆ ಸಮಾರಂಭ ವೀಕ್ಷಿಸಿದವರು. ಆ ಬಂಗಾರದ ಬಟ್ಟಲ ತುಂಬಾ ಅಭಿಮಾನಿಗಳ ಪ್ರೀತಿಯ ಶುಭಹಾರೈಕೆಗಳೇ ಹಾರೈಕೆಗಳು. ಅಭಿಮಾನಿಗಳ ಇಂಥ ಪ್ರೀತಿ ಪೈಗಳಿಗೆ ದಕ್ಕಿದ ಭಾಗ್ಯ, ಅದೊಂದು ಬೆಲೆ ಕಟ್ಟಲಾಗದ ಆಸ್ತಿಯೆಂದರೂ ತಪ್ಪಿಲ್ಲ. ಪೈಗಳ ಕುರಿತು ಜನರ ಪ್ರೀತಿ ಇಷ್ಟಕ್ಕೆ ಮುಗಿಯಲಿಲ್ಲ. ಪೈಗಳ ಹೆಸರಿನಲ್ಲಿ ಅಭಿಮಾನಿಗಳೆಲ್ಲ ಸೇರಿ ಒಂದು ದತ್ತಿನಿಧಿ ಸ್ಥಾಪಿಸಿ ಅದರಿಂದ ಬರುವ ಬಡ್ಡಿಯಿಂದ ಪ್ರತಿವರ್ಷ ಶ್ರೇಷ್ಠ ಬ್ಯಾಂಕರನೊಬ್ಬನನ್ನು ಗುರುತಿಸಿ ಸಮ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದೂ ಒಂದು ಮಹತ್ವದ ಹೆಜ್ಜೆ. ಇದು ಪೈಗಳ ಮೇಲಿನ ಅಭಿಮಾನಿಗಳ ಪ್ರೀತಿಯ ದ್ಯೋತಕ.

ಸಾರ್ವಜನಿಕ ಸಮ್ಮಾನದ ನಂತರ ಸಗುಣಾ ಪೈಗಳು ಬದುಕಿದ್ದು ಆರು ವರ್ಷ ಮಾತ್ರ. ಅದು 2004ರ ನವಂಬರ 20ರ ದಿನ. ಪೈಗಳಿಗೆ ಕೆಲವು ಮಹತ್ವದ ಕಾರ್ಯಕ್ರಮಗಳಿದ್ದವು. ಮಧ್ಯಾಹ್ನ ಊಟವಾದ ಮೇಲೆ ಕಾರ್ಯಕ್ರಮಕ್ಕೆ ಹೋಗುವುದಕ್ಕೆ ಸಜ್ಜಾಗುತ್ತಿದ್ದ ಪೈಗಳಿಗೆ ಸಹಕರಿಸಿ ಅವರು ಮನೆ ಬಿಟ್ಟು ಹೋದ ಮೇಲೆ ದಣಿವಾರಿಸಿಕೊಳ್ಳಲೆಂದು ಹಾಸಿಗೆ ಮೇಲೆ ಅಡ್ಡಾಗಿದ್ದ ಸಗುಣಾ ಪೈಗಳು ಮತ್ತೆ ಮೇಲೇಳಲೇ ಇಲ್ಲ. ಅನಾಯಾಸೇನ ಮರಣಂ ಎನ್ನುವಂತೆ ವೈವಾಹಿಕ ಜೀವನದ 60 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದ ಸಗುಣಾ ಪೈಗಳು ಸಹಸ್ರಚಂದ್ರ ದರ್ಶನ ಕಾರ್ಯಕ್ರಮದ ಆಸೆಯನ್ನು ಹೃದಯದಲ್ಲಿಟ್ಟುಕೊಂಡೇ ಇಹ ಲೋಕಕ್ಕೆ ವಿದಾಯ ಹೇಳಿದರು, ತನ್ನ ಕುರಿತಾದ ನೆನಪುಗಳನ್ನು ಎಲ್ಲರ ಹೃದಯಗಳಲ್ಲೂ ಬಾಕಿ ಉಳಿಸುತ್ತಾ.

ಈ ದಂಪತಿಗಳ ಕುರಿತಾಗಿ ಅಭಿಮಾನಿಗಳ ಪ್ರೀತಿಗೆ ಅಳತೆಯೇ ಇಲ್ಲ. ಪೈ ದಂಪತಿಗಳ ಕುರಿತಾಗಿ ಜನರು ವ್ಯಕ್ತಪಡಿಸುವ ಭಾವನೆಗಳನ್ನು ಸಂಗ್ರಹಿಸಿದರೆ ಅದೊಂದು ಸಂಪುಟವೇ ಆದೀತು. ಮೊದಲು ಸಗುಣಾ ಪೈಗಳ ಕುರಿತು ಕೆಲವೇ ಕೆಲವು ಆತ್ಮೀಯರ ಅಭಿಪ್ರಾಯಗಳನ್ನು ತಿಳಿಯೋಣ.

  • She was very loving mother. We are privileged to have a mother like her. Geetha Kamath (daughter)
  • My mother was a very sensitive person all her life. She had a child like trust in people which was more often abused. Sudha Prabhu (daughter)
  • I am fortunate being born to such a great mom.  Aravind Pai (Son)
  • No complaints against any body.  She was an embodiment  of Goodness.
  • Suresh Pai & Asha pai (Son & daughter in law)
  • She was a true angel on earth. KPS Kamath (son-in-law)
  • ಅತಿಥಿ ಸತ್ಕಾರ ಮಾಡುವುದು, ಯಾವ ಸಮಯದಲ್ಲಿ ಬಂದರೂ ಉಪಚಾರ ಮಾಡುವುದು, ಸಂತೋಷದಿಂದ ಸ್ವಾಗತಿಸುವುದು ಅವಳ ಗುಣ. ಟಿ. ರಮೇಶ್ ಪೈ (ಸಹೋದರ)
  • She was a devoted wife to her husband  Shruthi R. Pai (sister in law)
  • ನಮ್ಮ ಸಗುಣಕ್ಕನಿಗೆ ಸದಾ ಗಂಡನ ಬಗ್ಗೆ ಕಾಳಜಿ. ತಾರಾ ಕುಡ್ವ (ಸಹೋದರಿ)
  • ನಾನು ಮರೆಯಲಾಗದ ನನ್ನ ಹಿರಿಯಕ್ಕ ಆಕೆ. ಲೀಲಾ ಎಂ. ಪೈ (ಸಹೋದರಿ)
  • ತಾಯಿಗೆ ಸರಿ ಸಮಾನರಾದ ನನ್ನ ಅಕ್ಕ ಆಕೆ. ವರದಾ ಎಸ್. ಪ್ರಭು (ಸಹೋದರಿ)