ಶ್ರೀವಾಕ್ದೇವಿಗೆ, ಶಬ್ದದಿಂ
ಆವ ಆವ ಇಂದ್ರಿಯದ ವಿಷಯಮಂ;
ಶ್ರೋತ್ರದೊಳ್
ಉದ್ಭಾವಿಪ ನಿರ್ಮಳ
ಮೂರ್ತಿಗೆ; ಇಳಾವಂದ್ಯೆಗೆ
ಶಾಸ್ತ್ರ ಮುಖದೊಳ್
ಅವನತಂ ಅಪ್ಪೆಂ

ಕಿವಿ, ಕಣ್ಣು, ಮೂಗು, ನಾಲಗೆ ಮತ್ತು ಚರ್ಮಗಳೆಂಬ ಐದು ಶ್ರವಣೇಂದ್ರಿಯಗಳಿಗೆ ವಿಷಯಗಳಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಕಿವಿಯೊಂದರಲ್ಲಿಯೇ ಶಬ್ದ ರೂಪದಿಂದ ಅಭಿವ್ಯಕ್ತಿಗೊಳಿಸುವ ವಿಮಲ ಸ್ವರೂಪೆಯೂ ಭುವಸ್ತುತೆಯೂ ಆದ ಸರಸ್ವತಿಗೆ ಶಬ್ದಶಾಸ್ತ್ರದ ಆರಂಭದಲ್ಲಿ ನಮಸ್ಕರಿಸುತ್ತೇನೆ. ಮಂಗಲಾಚಾರಣೆಯ ಸೂತ್ರವಿದು.


ಕವಿ, ಸುಮನೋಬಾಣನನ
ಯಾದವ ಕಟಕಾಚಾರ್ಯನ
ಎಸೆವ ದೌಹಿತ್ರನೆಂ;
ಆಂ ಕವಿ ಕೇಶವನೆಂ
ಯೋಗಿ ಪ್ರವರ ಚಿದಾನಂದ
ಮಲ್ಲಿಕಾರ್ಜುನ, ಸುತನಂ

ಕವಿಕೇಶವನಾದ ನಾನು ಯಾದವ ಕಟಕಾಚಾರ್ಯನಾದ ಕವಿ ಸುಮನೋಬಾಣನ ಮಗಳ ಮಗ, ಮೊಮ್ಮಗ. ಯೋಗಿ ಶ್ರೇಷ್ಠನೂ ಚಿದಾನಂದನೂ ಆದ ಮಲ್ಲಿಕಾರ್ಜುನನ ಮಗನು. ಈ ಸೂತ್ರದಲ್ಲಿ ಕೇಶಿರಾಜ ಸ್ವಪರಿಚಯವನ್ನು ಮಾಡಿಕೊಡುತ್ತಾನೆ.


ಗುಣಂ ಅಮರೆ
ಶಬ್ದಮಣಿದರ್ಪಣ ನಾಮಮಂ
ಇಟ್ಟು ನೆಱೆಯೆ;
ಕರ್ಣಾಟಕ ಲಕ್ಷಣ ಶಬ್ದಶಾಸ್ತ್ರಂ
ಲಾಕ್ಷಣಿಕರ್ ಪೇೞ್ ಎಂದು;
ಬೆಸಸೆ, ಬಗೆವುಗೆ ಪೇೞ್ವೆಂ

ಶಬ್ದ ಸಾಮರ್ಥ್ಯವೆಂಬ ಗುಣಗಳಿಂದ ಕೂಡಿದ ಕನ್ನಡದ ಲಕ್ಷಣಗಳನ್ನು ಸಮಗ್ರವಾಗಿ ತಿಳಿಸುವ ಕನ್ನಡ ಶಬ್ದಶಾಸ್ತ್ರವನ್ನು ಶಬ್ದಮಣಿದರ್ಪಣಂ ಎಂಬ ಹೆಸರನ್ನಿಟ್ಟು ಹೇಳೆಂದು ಲಾಕ್ಷಣಿಕರು ಆಜ್ಞಾಪಿಸಲಾಗಿ ಮನಗಂಬುವಂತೆ ಹೇಳುತ್ತೇನೆ.


ಅವಧರಿಪುದು ವಿಬುಧರ್,
ದೋಷಂ ಇದಱೊಳ್;
ಏನಾನುಂ ಉಳ್ಳೊಡಂ;
ಪ್ರಿಯದಿಂ ತಿರ್ದುವುದು;
ಗುಣಯುಕ್ತಮುಂ
ದೋಷ ವಿದೂರಮುಂ, ಆಗೆ
ಮೆಚ್ಚಿ ಕೈಕೊಳ್ವುದಿದಂ

ವಿದ್ವಾಂಸರು ಈ ಶಬ್ದಮಣಿದರ್ಪಣವೆಂಬ ಗ್ರಂಥದಲ್ಲಿ ದೋಷವೇನಾದರೂ ಇದ್ದರೆ ಅವುಗಳನ್ನು ಪ್ರೀತಿಯಿಂದ ತಿದ್ದಬೇಕು. ಗುಣಗಳಿಂದ ಕೂಡಿದುದೂ ದೋಷಗಳಿಂದ ವಿಮುಕ್ತವಾದುದೂ ಆಗಿದ್ದರೆ, ಅದನ್ನು ಮೆಚ್ಚಿ ಸ್ವೀಕರಿಸಬೇಕು. ಕೇಶಿರಾಜನಿಗೆ ತಾನು ಕೈಕೊಂಡ ಕಾರ್ಯದ ಅಗಾಧತೆಯ ಅರಿವಿದೆ. ಈ ಸೂತ್ರದಲ್ಲಿ ಕೇಶಿರಾಜ ಮೆರೆದಿರುವ ವಿನಯವು ಪ್ರಾಮಾಣಿಕವಾದುದು. ವಿದ್ವತ್‌ಕ್ಕೆ ವಿನಯದ ಲೇಪನವಾದಾಗ ವ್ಯಕ್ತಿತ್ವಕ್ಕೆ ಶೋಭೆ ಬರುತ್ತದೆ.


ಗಜಗನ, ಗುಣನಂದಿಯ
ಮನಸಿಜನ, ಅಸಗನ, ಚಂದ್ರಭಟ್ಟ
ಗುಣವರ್ಮ, ಶ್ರೀವಿಜಯರ
ಪೊನ್ನನ, ಪಂಪನ, ಸುಜನೋತ್ತಂಸನ
ಸುಮಾರ್ಗಂ ಇದಱೊಳೆ ಲಕ್ಷ್ಯಂ

ಗಜಗ, ಗುಣನಂದಿ, ಮನಸಿಜ, ಅಸಗ, ಚಂದ್ರಭಟ್ಟ, ಗುಣವರ್ಮ, ಶ್ರೀವಿಜಯ, ಪೊನ್ನ, ಪಂಪ, ಸುಜನೋತ್ತಂಸ ಮೊದಲಾದವರ ಉದಾತ್ತ ಕಾವ್ಯ ಮಾರ್ಗ ಈ ಗ್ರಂಥದಲ್ಲಿ ಉದಾಹರಣೆಗಳಾಗಿವೆ. ಈ ವ್ಯಾಕರಣ ಗ್ರಂಥಕ್ಕೆ ಉಕ್ತರಾದ ಕವಿ ಪ್ರಯೋಗಗಳು ಆಕರಗಳಾಗಿವೆ.


ಪ್ರಾಸಛಂದಃ ಅನ್ವಯ
ವಿನ್ಯಾಸದಿಂ, ಅಂತು ಇಂತು
ಶಬ್ದಂ ಇರ್ಕುಂ, ವೃತ್ತಿ ವ್ಯಾಸಂ
ತದ್ ವ್ಯಾಕುಳಂ ಎಂದು
ಸೂತ್ರಕ್ಕೆ
ಅರ್ಥ ವೃತ್ತಿ ವರ್ತಿಸೆ ಪೇೞಂ

ಕೇಶಿರಾಜ ತನ್ನ ಸೂತ್ರಗಳಿಗೆ ತಾನೇ ವೃತ್ತಿ ಬರೆದಿರುವುದಕ್ಕೆ ಕಾರಣವನ್ನು ಈ ಸೂತ್ರದಲ್ಲಿ ಹೇಳಿದ್ದಾನೆ. ಹೇಳಬೇಕಾದ ಅರ್ಥವು ಪ್ರಾಸ ನಿಯಮಗಳನ್ನೂ ಛಂದೋನಿಯಮಗಳನ್ನೂ ಪರಿಪಾಲಿಸಿ ಬರೆಯುವಾಗ, ಶಬ್ದಗಳು ಹಿಂದು ಮುಂದಾಗಿರುತ್ತವೆ. ಇದರಿಂದ ಸೂತ್ರದ ಅರ್ಥವು ಸ್ಪುಟವಾಗಿ ತಿಳಿಯದೆ ಸಂದೇಹವುಂಟಾಗುತ್ತದೆಂದು ಸೂತ್ರಗಳಿಗೆ ಅರ್ಥವೃತ್ತಿಯನ್ನು ಬರೆದಿದ್ದಾನೆ.


ಜನಂ ಅಂಗೀಕರಿಪುದು
ನೆಟ್ಟನೆ ಸಂಬಂಧ ಅಭಿದೇಯಂ;
ಶಕ್ಯಾನುಷ್ಠಾನಂ
ನಿಜ ಇಷ್ಟಸಿದ್ದಿಗಳ್;
ನೆಲಸಿನಿಂದ ಕಾರಣದೆ
ಶಬ್ದಮಣಿದರ್ಪಣಮಂ

ತನ್ನ ಶಬ್ದಮಣಿದರ್ಪಣವನ್ನು ಜನರು ಅಂಗೀಕರಿಸುತ್ತಾರೆಂಬ ಭರವಸೆಯನ್ನೂ ಆ ಭರವಸೆಗಿರುವ ಕಾರಣವನ್ನು ಈ ಸೂತ್ರದಲ್ಲಿ ಹೇಳಿದ್ದಾನೆ. ಹೇಳಬೇಕಾದ ವಿಷಯವನ್ನು ಸೂಕ್ತವಾಗಿ ಹೇಳುವಲ್ಲಿ ಏರ್ಪಡಬೇಕಾದ ಪ್ರಕೃತಿ ಪ್ರತ್ಯಯದ ಸಂಬಂಧ ಮತ್ತು ಪದದಿಂದ ಪದಕ್ಕಿರುವ ಸಂಬಂಧ, ಆ ಸಂಬಂಧದಿಂದ ಹೊರಡುವ ಅರ್ಥ. ಆ ಅರ್ಥವನ್ನು ಪ್ರಕಟಿಸಲು ಬೇಕಾದ ಸಾಧನಸಾಮರ್ಥ್ಯ ಮತ್ತು ಇದೆಲ್ಲದರಿಂದ ನಿಷ್ಪನ್ನವಾಗುವ ಕೃತಿಸಿದ್ದಿ ಇವು ನೆಲೆಗೊಂಡಿರುವುದರಿಂದ ಶಬ್ದಮಣಿದರ್ಪಣವನ್ನು ಜನರು ಅಂಗೀಕರಿಸುತ್ತಾರೆ.


ಕ್ರಮದಿಂದೆ ಸಂಧಿ, ನಾಮಂ
ಸಮಾಸಂ, ತದ್ದಿತಂ;
ಪೊದಳ್ದ ಅಖ್ಯಾತಂ;
ಸಮುದಿತ ಧಾತು, ಅಪಭ್ರಂಶಂ;
ಅವ್ಯಯಂ
ಸಂಧಿ ಶಬ್ದಮಣಿದರ್ಪಣದೊಳ್

ತನ್ನ ಗ್ರಂಥದಲ್ಲಿ ಕಂಡುಬರುವ ಪ್ರಕರಣಗಳ ವಿಭಾಗವನ್ನು ಈ ಸೂತ್ರದಲ್ಲಿ ತಿಳಿಸಿದ್ದಾನೆ. ಶಬ್ದಮಣಿದರ್ಪಣದಲ್ಲಿ ಕ್ರಮವಾಗಿ ಸಂಧಿ, ನಾಮ, ಸಮಾಸ, ತದ್ದಿತ, ಅಖ್ಯಾತ, ಧಾತು, ಅಪಭ್ರಂಶ ಹಾಗೂ ಅವ್ಯಯ ಎಂಬ ಎಂಟು ಪ್ರಕರಣಗಳಿವೆ. ಪ್ರಾಸದ ಹಾಗೂ ಛಂದಸ್ಸಿನ ಇಕ್ಕಟ್ಟಿಗೆ ಸಿಕ್ಕಿಬಿದ್ದು ಸಮುದಿತ ಹಾಗೂ ಪೊದಳ್ದ ಎಂಬ ಶಬ್ದಗಳು ಬಂದಿವೆ.


ಅನುಕೂಲ ಪವನನಿಂ
ಜೀವನ ಇಷ್ಟದಿಂ;
ನಾಭಿಯಮೂಲದೊಳ್
ಕಹಳೆಯ ಪಾಂಗಿನವೊಲ್;
ಶಬ್ದ ದ್ರವ್ಯಂ ಜನಿಯಿಸುಗುಂ
ಶ್ವೇತಂ ಅದಱ ಕಾರ್ಯಂ ಶಬ್ದಂ

ಶಬ್ದದ ಉತ್ಪತ್ತಿ ಹೇಗಾಗುತ್ತದೆ ಎಂಬುದನ್ನು ಈ ಸೂತ್ರದಲ್ಲಿ ಹೇಳಲಾಗಿದೆ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ಮಾತು ಹೊರಬರುವುದು. ಇದನ್ನೇ ‘ಜೀವನಿಷ್ಟದಿಂ’ ಎಂಬುದು ಸೂಚಿಸಿದೆ. ಮಾತು ಎಂದರೆ ಅರ್ಥವತ್ತಾದ ಭಾಷಾಧ್ವನಿಗಳು. ಅವುಗಳನ್ನು ಉಚ್ಚರಿಸುವಾಗ ಪ್ರಾಣವಾಯುಬೇಕು. ಶ್ವಾಸಕೋಶದಲ್ಲಿ ನಾಭಿಮೂಲ ಪ್ರಾಣವಾಯುವಿನ ಸಂಕೋಚನ ವಿಕಸನ ಕ್ರಿಯೆಯಿಂದ ಭಾಷಾಧ್ವನಿಯು ಎತ್ತಿದ ಕಹಳೆಯ ಆಕಾರದಲ್ಲಿ ಉದ್ಭವಿಸುತ್ತದೆ; ವ್ಯವಹರಿಸುತ್ತದೆ. ಶಬ್ದಕ್ಕೆ ಬಿಳಿಯ ಬಣ್ಣವುಳ್ಳದ್ದು ಎಂದು ಕೇಶಿರಾಜ ಹೇಳಿದ್ದಾನೆ. ವಾಗ್ದೇವಿಯಾದ ಸರಸ್ವತಿಯನ್ನು ಧವಲಾ ಎಂದು ಕರೆಯುತ್ತಿದ್ದುದರಿಂದ ಶಬ್ದದ್ರವವು ಶ್ವೇತವೆಂದು (ಬಿಳಿ) ಅವನು ಹೇಳಿರಬಹುದು. ಭಾವನಾಭಿವ್ಯಕ್ತಿಯೇ ಶಬ್ದದ ಕಾರ್ಯವಾಗಿದೆ.

೧೦
ವ್ಯಾಕರಣದಿಂದೆ ಪದಂ;
ವ್ಯಾಕರಣದ ಪದದಿಂ
ಅರ್ಥಂ, ಅರ್ಥದೆ ತತ್ತ್ವಾಲೋಕಂ
ತತ್ತ್ವಾಲೋಕದಿಂ ಆಕಾಂಕ್ಷಿಪ
ಮುಕ್ತಿ ಅಕ್ಕುಂ;
ಅದೆ ಬುಧರ್ಗೆಫಲಂ

ವ್ಯಾಕರಣದ ಅಭ್ಯಾಸದಿಂದ ಬುಧರಿಗೆ (ವಿದ್ವಾಂಸರಿಗೆ) ದೊರಕುವ ಫಲ ಯಾವುದು ಎಂಬುದನ್ನು ಈ ಸೂತ್ರದಲ್ಲಿ ತಿಳಿಸಿದ್ದಾನೆ. ಪ್ರತಿಯೊಂದು ಭಾಷೆಗೂ ಅದರ ರಚನೆಗೆ ಸಂಬಂಧಿಸಿದಂತೆ ಹಲವು ನಿಯಮಗಳಿರುತ್ತವೆ. ಆ ನಿಯಮಗಳಿಗನುಗುಣವಾಗಿ ಒಂದು ಭಾಷಾರಚನೆಯ ಅಧ್ಯಯನದಿಂದ ಒಂದು ಪದದ ಶುದ್ಧರೂಪವು ಸಿದ್ದಿಸುವುದು. ಅಂತಹ ಶುದ್ಧ ರೂಪದ ಪದದಿಂದಲೇ ಸರಿಯಾದ ಅರ್ಥಜ್ಞಾನ ಹೊಳೆಯುವುದು. ಸರಿಯಾದ ಅರ್ಥಜ್ಞಾನದಿಂದಲೇ ಆ ಭಾಷಾರಚನೆಯ ತತ್ವ ಸಿದ್ಧಾಂತ ತಿಳಿಯುವುದು. ಅಂತಹ ತತ್ವಜ್ಞಾನದಿಂದ ಮುಕ್ತಿ ದೊರೆಯುವುದು. ಇದುವೇ ವಿದ್ವಾಂಸರಿಗೆ ದೊರೆಯುವ ಫಲ. ವ್ಯಾಕರಣದ ಅಭ್ಯಾಸದಿಂದ ಮೋಕ್ಷ ಲಭಿಸುತ್ತದೆ ಎಲ್ಲಾ ವ್ಯವಹಾರಗಳಿಗೂ ಶಬ್ದಾರ್ಥ ನಿರ್ಣಯವೇ ಮೂಲ. ಶಬ್ದಾರ್ಥ ನಿರ್ಣಯವು ವ್ಯಾಕರಣದಿಂದಲೇ ಸಾಧ್ಯ. ಆದುದರಿಂದಲೇ ಮುನಿಗಳು ವ್ಯಾಕರಣಗಳನ್ನು ರಚಿಸಿ ಮುಕ್ತಿ ಪಡೆದರು. ಈ ದೃಷ್ಟಿಯಿಂದಲೇ ಮುಕ್ತಿಯೇ ವಿದ್ವಾಂಸರಿಗೆ ಲಭಿಸುವ ಫಲ ಎಂದು ಹೇಳಿದ್ದಾನೆ.