ಪೀಠಿಕೆ:

ಸೌಂದತ್ತಿ (ಸೌಂದತ್ತಿ ತಾ. ಬೆಳಗಾಂವ ಜಿಲ್ಲೆ)ಯು ಮುಖ್ಯವಾಗಿ ಉತ್ತರ ಕರ್ನಾಟಕ-ಮಹಾರಾಷ್ಟ್ರ ಪ್ರದೇಶದಲ್ಲಿ ಒಂದು ಸುಪ್ರಸಿದ್ಧ ಯಾತ್ರಾ ಸ್ಥಳ ಸ್ಥಳಿಕ ೯-೧೨ನೇ ಶತಮಾನದ ಶಿಲಾ ಶಾಸನಗಳಲ್ಲಿ ಇದನ್ನು ಸುಗಂಧವತ್ತಿ

[1]-೧೨ ಎಂದು ವರ್ಣಿಸಲಾಗಿದೆ. ಸಾರ್ವಭೌಮ ರಾಷ್ಟ್ರಕೂಟಂ, ಅನಂತರ ಕಲ್ಯಾಣ ಚಾಲುಕ್ಯರ ಮಾಂಡಳೀಕ ಅರಸರಾಗಿದ್ದ ರಟ್ಟರು ಈ ಪ್ರದೇಶವನ್ನು ಸುಮಾರು ೧೦ನೇ ಶತಮಾನದ ಮಧ್ಯ ಭಾಗದಿಂದ ಸುಮಾರು ಮುನ್ನೂರು ವರ್ಷಗಳ ಕಾಲ ಆಳಿದರು. ಸೌಂದತ್ತಿಯೇ ಈ ಪ್ರದೇಶದ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಇದು ಒಂದು ಸುಂದರ ನಗರವಾಗಿತ್ತು. ಇಲ್ಲಿಯ ತಾಲ್ಲೂಕು ಕಛೇರಿಯಲ್ಲಿರುವ ಒಂದು ಕನ್ನಡ ಶಾಸನ (ಕಾಲ ಸುಮಾರು ೧೨೨೮) ದಲ್ಲಿ ಈ ನಗರದ ಒಂದು ಸುಂದರ ವರ್ಣನೆಯಿದೆ.[2]

ಸಾಲು ೫೪….. “ಹೊರವೊಳಲೊಳ್ವಿರಾಜಿಸುವ ಚೂತವನಂ ಗಿರಿಸಂಕುಳಂ ಷಳದುರುಗಿದ ನಾ (ಳಿ)

ಸಾಳು ೫೫…… ಕೇರವನವೊಪ್ಪುವಶೋಕವನಂ ಶಿವಾಲಯು ಮಿರುಪ ಜಿನೇಂದ್ರ ಗೇಹಮೆನಿಪಿಂತಿವರುಂದನಶೇಷ ಸೌಖ್ಯದೊಳ್ನೆರೆದು ಸುಗಂಧ ವರ್ತಿ ಸಲೆ ಕೊಂಡಿ ಮಹೀತಳದೊಳ್‌ ವಿರಾಜಿಕುಂ”.

ಈ ರೀತಿ ಭವ್ಯ ದೇವಾಲಯ ಒಸದಿಗಳಿಂದ ಹಸಿರು ತೋಟವನಗಳಿಂದ ಈ ನಗರವು ಕಂಗೊಳಿಸುತ್ತಿತ್ತು.

ಪೌರಾಣಿಕ ಹಿನ್ನೆಲೆ:

ಈ ಕ್ಷೇತ್ರದ ಪ್ರಧಾನ ದೇವರು ಎಲ್ಲಮ್ಮ. ವಾಡಿಕೆಯಲ್ಲಿ “ಏಳು ಕೊಳ್ಳದ ಎಲ್ಲಮ್ಮ” ನೆಂದು ಭಕ್ತಾದಿಗಳು ಉದ್ಗಾರ ಮಾಡುತ್ತಾರೆ. ಲಕ್ಷಾಂತರ ಭಕ್ತರು ಈ ಕ್ಷೇತ್ರದ ಒಂದು ವಿಶಿಷ್ಟ ಸಂಪ್ರದಾಯದಂತೆ ಈ ದೇವಿಗೆ ನಡೆದುಕೊಳ್ಳುತ್ತಾರೆ. ಈ ದೇವಿಯ ಅನ್ವರ್ಥಕನಾಮ ರೇಣುಕಾದೇವಿ. ಪಾರ್ವತಿದೇವಿಯ ಅಂಶ ಸಂಭೂತಳು ಎಂಬ ನಂಬಿಕೆ. ಕ್ಷೇತ್ರ ಪುರಾಣದಂತೆ ಈ ರೇಣುಕಾ ದೇವಿಯು ಪುರಾಣ ಪುರುಷ ಜಮದಗ್ನಿ ೠಷಿಯ ಧರ್ಮ ಪತ್ನಿ.

ಈ ದಿವ್ಯವ್ಯಕ್ತಿಗಳ ಪೌರಾಣಿಕ ಕಥೆಗೂ ಸ್ಥಳ ಪುರಾಣದ ಕಥೆಗೂ ಕೆಲವೊಂದು ಸ್ಪಷ್ಟ ವ್ಯತ್ಯಾಸಗಳಿವೆ. ಪೌರಾಣಿಕ ಕಥೆಯು ಮತ್ಸ, ವಾಯು, ಮಾರ್ಕಂಡೇಯ, ಸ್ಕಾಂದ ಹಾಗೂ ಬ್ರಹ್ಮಾಂಡ ಮೊದಲಾದ ಪುರಾಣಗಳಲ್ಲಿಯೂ ಮಹಾಭಾರತದ ಆದಿ, ಸಭಾ, ಅನುಶಾಸನ ಮತ್ತು ವನಪರ್ವಗಳಲ್ಲಿಯೂ ರಾಮಾಯಣದ ಬಾಲಕಾಂಡದಲ್ಲಿಯೂ ಅಲ್ಪ ಸ್ವಲ್ಪ ವ್ಯತ್ಯಾಸದೊಡನೆ ಉಲ್ಲೇಖವಾಗಿದೆ.

ಈ ಕಥೆಯ ಭೌಗೋಳಿಕ ಪರಿಸರ ನರ್ಮದಾ ನದಿಯ ಬಯಲು. ಇಲ್ಲಿಯೇ ಜಮದಗ್ನಿ ಆಶ್ರಮ. ಪ್ರತಿನಿತ್ಯವೂ ಈ ೠಷಿಯ ಪತ್ನಿ ರೇಣುಕಾದೇವಿಯು ತನ್ನ ಗಂಡನ ಯಜ್ಞಯಾಗಾದಿ ಕರ್ಮಗಳಿಗೆ ಬೇಕಾದ ನೀರನ್ನು ನದಿಯಿಂದ ತರುತ್ತಿದ್ದಳು. ಈ ನದಿಯ ದಂಡೆಯ ಮೇಲೆ ಮತ್ತೊಂದೆಡೆಯಲ್ಲಿ ಮಾಹಿಷ್ಮತಿ ನಗರ. ಇದನ್ನು ಸಹಸ್ರಬಾಹು ಕಾರ್ತವೀರ್ಯಾಜುನನು ಆಳುತ್ತಿದ್ದನು. ಮಾಹಿಷ್ಮತಿ ಈಗಿನ ಮಧ್ಯ ಪ್ರದೇಶದಲ್ಲಿರುವ ನರ್ಮದಾ ನದಿ ತೀರದ ಮೇಲಿರುವ ಮಹೇಶ್ವರ ಎಂಬ ಒಂದು ಗ್ರಾಮ. ಇಲ್ಲಿ ಹಳೇ ಶಿಲಾಯುಗದ ಸುಮಾರು ೫೦,೦೦೦-೫ ಲಕ್ಷ ವರ್ಷಗಳ ಕಾಲದ ಅತೀ ಪ್ರಾಚೀನ ಮಾನವನ ಸಾಂಸ್ಕೃತಿಕ ಅವಶೇಷಗಳು ಉತ್ಖನನದಲ್ಲಿ ದೊರೆತಿವೆ. ಇದರ ಎದುರು ದಂಡೆಯಲ್ಲಿರುವ ನವಡಾಟೋಳಿ ಗ್ರಾಮದಲ್ಲಿ ಸುಮಾರು ೩೧/೨ ಸಾವಿರ ವರ್ಷಗಳ ಹಿಂದಿನ ಶಿಲಾ-ತಾಮ್ರ ಯುಗ ಸಂಸ್ಕೃತಿಯ ಒಂದು ಸುಧಾರಿತ ಗ್ರಾಮವಿದ್ದುದು ಇಲ್ಲಿಯ ಉತ್ಖನನಗಳಿಂದ[3] ತಿಳಿದು ಬಂದಿದೆ. ಪೌರಾಣಿಕ ರಾಜಧಾನಿಯ ಅವಶೇಷಗಳೇನೂ ಉತ್ಖನನಗಳಲ್ಲಿ ದೊರೆಯಲಿಲ್ಲ. ಆದರೆ ಉತ್ಖನನ ಮಾಡಿದ ಸ್ಥಳದಲ್ಲಿಯೇ ಮಾಹಿಷ್ಮತಿ ನಗರ ಇದ್ದಿರಬೇಕೆಂಬುದಕ್ಕೆ ಆಧಾರವೇನಿಲ್ಲ.

ಸ್ಥಳ ಪುರಾಣದ ಕಥೆಯಲ್ಲಿ ಬಹುಮಟ್ಟಿಗೆ ಮಲಪ್ರಭೆಯ ಪರಿಸರವನ್ನೇ ಸೂಚಿಸುತ್ತದೆ.

ಎರಡನೆಯದಾಗಿ ರೇಣುಕಾದೇವಿಯು ತನ್ನ ಗಂಡನ ನಿತ್ಯಕರ್ಮ ಅನುಷ್ಠಾನಗಳಿಗೆ ಬೇಕಾದ ನೀರನ್ನು ತರಲು ಮರಳಿನಲ್ಲಿಯೇ ಕೊಡವನ್ನು ಮಾಡಿ, ಜೀವಂತ ಸರ್ಪವನ್ನು ಸಿಂಬೆಯನ್ನಾಗಿ ಮಾಡಿ ತಲೆಯ ಮೇಲಿಟ್ಟುಕೊಂಡು ಅದರ ಮೇಲೆ ನೀರಿನ ಕೊಡವನ್ನಿಟ್ಟುಕೊಂಡಲು ತರುತ್ತಿದ್ದಳು. ಇದು ಅವಳ ಪಾತಿವ್ರತ್ಯದ ಮಹಿಮೆಯ ಒಂದು ಸಂಕೇತ. ಈ ಅಂಶವು ಪೌರಾಣಿಕ ಕಥೆಯಲ್ಲಿಲ್ಲ.

ಮೂರನೆಯದಾಗಿ ಒಂದು ಸಲ ಜಮದಗ್ನಿಯು, ತನ್ನ ನಿತ್ಯಕರ್ಮಗಳ ಅನುಷ್ಠಾನಕ್ಕೆ ತನ್ನ ಪತ್ನಿಯು ನೀರು ತರುವುದನ್ನು ತಡಮಾಡಿದ್ದರಿಂದ ಅತಿ ಕೋಪದಿಂದ ರೇಣುಕೆಯ ಶಿರಚ್ಛೇದ ಮಾಡಲು ತನ್ನ ಮಕ್ಕಳಿಗೆ ಆಜ್ಞಾಪಿಸುವ ಸನ್ನಿವೇಶ ಪೌರಾಣಿಕ ಕಥೆಯಲ್ಲಿದೆ. ಆದರೆ ಸ್ಥಳಿಕ ಕಥೆಯ ಪ್ರಕಾರ ಜಮದಗ್ನಿಯು ರೇಣುಕೆಯನ್ನು ಕುಷ್ಠರೋಗಿಯಾಗೆಂದು ಶಪಿಸಿ ಆಶ್ರಮದಿಂದ ಹೊರಹಾಕುತ್ತಾನೆ. ರೇಣುಕೆಯು ರೋಗದಿಂದ ನರಳುತ್ತಾ ತಿರುಗಾಡುತ್ತಿರುವಾಗ ಅಕಸ್ಮಾತ್ತಾಗಿ ಎಕ್ಕಯ್ಯ ಮತ್ತು ಜೋಗಯ್ಯ ಎಂಬ ಮುನಿಗಳು ಎದುರಾಗುತ್ತಾರೆ. ಇವಳ ಸಂಕಟವನ್ನು ತಿಳಿದು ಆ ಮುನಿಗಳ ಆಶ್ರಮದ ಹತ್ತಿರವೇ ಒಂದು ನೀರಿನ ಕುಂಡವಿದ್ದು ಅದರಲ್ಲಿ ಅವಳಿಗೆ ಸ್ನಾನ ಮಾಡಲು ಹೇಳುತ್ತಾರೆ. ಅದರಿಂದ ಅವಳು ಸಂಪೂರ್ಣ ರೋಗ ವಿಮುಕ್ತಳಾಗುತ್ತಾಳೆ. ಕೃತಜ್ಞತೆಯಿಂದ ಹಾಗೂ ಭಕ್ತಿಯಿಂದ ಎಕ್ಕಯ್ಯ, ಜೋಗಯ್ಯ ಎಂಬ ಆ ಮುನಿಗಳ ಹೆಸರುಗಳನ್ನು ದಿವ್ಯ ಮಂತ್ರಗಳೆಂದು ಸ್ಮರಣೆಗೆ ತೆಗೆದುಕೊಳ್ಳುತ್ತಾಳೆ ಅನಂತರ ತನ್ನ ಗಂಡನ ಆಶ್ರಮಕ್ಕೆ ಹಿಂದಿರುಗುತ್ತಾಳೆ. ಆದರೆ ಜಮದಗ್ನಿಯು ತಾನು ಕೊಟ್ಟ ಶಾಪವನ್ನು ಮುನಿಗಳ ಸಹಾಯದಿಂದ ಪರಿಹರಿಸಿಕೊಂಡೆನೆಂಬ ಗರ್ವ ಇವಳಿಗಿದೆಯೆಂದು ತಿಳಿದು ಆಗ ಅವಳ ಶಿರಚ್ಛೇದನ ಮಾಡಲು ತನ್ನ ಮಕ್ಕಳಿಗೆ ಆಜ್ಞಾಪಿಸುತ್ತಾನೆ.

ನಾಲ್ಕನೆಯದಾಗಿ ಜಮದಗ್ನಿಯ ಆಶ್ರಮವನ್ನು ಸಹಸ್ರಬಾಹು ಕಾರ್ತ ವೀರ್ಯಾರ್ಜುನನು ತನ್ನ ಸೈನ್ಯದ ಮೂಲಕ ಧ್ವಂಸ ಮಾಡಿ ಜಮದಗ್ನಿ ೠಷಿಯನ್ನು ಕೊಂಡು ಕಾಮಧೇನುವನ್ನು ತೆಗೆದುಕೊಂಡು ಹೋದಾಗ ತನ್ನ ಗಂಡನ ಶವವನ್ನು ನೋಡಿ ರೇಣುಕಾದೇವಿಯು ದುಃಖತಪ್ತಳಾಗಿ ಎದೆಯನ್ನು ೨೧ ಸಲ ಬಡಿದುಕೊಳ್ಳುತ್ತಿರುವಾಗ ಅವಳ ಮಗ ಪರುಶುರಾಮನು ಅವಳನ್ನು ಸಾಂತ್ವನಗೊಳಿಸಿ, ತಾನು ಸಹಸ್ರಬಾಹು ಕಾರ್ತವೀರ್ಯಾರ್ಜುನ ಮೊದಲಾದ ಎಲ್ಲಾ ಕ್ಷತ್ರಿಯರನ್ನು ೨೧ ಸಕಲ ಭೂಪ್ರದಕ್ಷಿಣೆ ಮಾಡಿ ನಾಶ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ರೇಣುಕಾ ದೇವಿಯು ತನ್ನ ಗಂಡನ ಚಿತೆಯನ್ನು ಏರಿ ಸಹಗಮನ ಮಾಡುತ್ತಾಳೆ. ಇದು ಪುರಾಣದಲ್ಲಿರುವ ಅಂಶ.

ಈ ರೀತಿ ಕೆಲವೊಂದು ಸ್ಪಷ್ಟ ಬದಲಾವಣೆಗಳನ್ನು ಸ್ಥಳ ಪುರಾಣದಲ್ಲಿ ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಪ್ರಶ್ನೆಗಳು ಏಳುತ್ತವೆ.. ರೇಣುಕಾದೇವಿ ಜಮದಗ್ನಿ ಕಥೆ ವಿಶೇಷವಾಗಿ ಈ ಭಾಗದಲ್ಲಿ ಜನಪ್ರಿಯವಾಗಲು ಇದ್ದಂಥ ಸಾಂಸ್ಕೃತಿಕ ಪರಿಸರವೇನು? ಸ್ಥಳ ಪುರಾಣಗಳಲ್ಲಿ ಬರತಕ್ಕಂಥ ವ್ಯತ್ಯಾಸಗಳಿಗೆ ಕಾರಣವೇನು? ಮತ್ತು ಅರ್ಥವೇನಿದ್ದಿರಬಹುದು? ಈ ರೀತಿ ಪ್ರಸಿದ್ಧಗೊಂಡ ರೇಣುಕಾದೇವಿಯನ್ನು ಎಲ್ಲಮ್ಮನೆಂದು ಕರೆಯಲು ಕಾರಣವೇನು? ಹಾಗೂ ಈ ದೇವಿ ಆರಾಧನೆಯಲ್ಲಿ ಈಗ ಪ್ರಚಲಿತವಿರುವ ವಿಶಿಷ್ಟ ಸಂಪ್ರದಾಯವು ಹೇಗೆ ಸೇರಿಕೊಂಡಿತು, ಮತ್ತು ಈ ವ್ಯತ್ಯಾಸವನ್ನು ಪುಷ್ಠೀಕರಿಸುವಂಥ ಐತಿಹಾಸಿಕ ಆಧಾರ ಈ ಪ್ರದೇಶದಲ್ಲೇನಾದರೂ ಇದೆಯೇ? ಈ ಮುಖ್ಯವಾದ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಥಳಿಕವಾಗಿ ದೊರೆಯುವ ಕೆಲವು ಐತಿಹಾಸಿಕ ಅವಶೇಷಗಳನ್ನು ಈ ಕೆಳಗೆ ಪರಿಶೀಲಿಸಲಾಗಿದೆ.

ಪುರಾತತ್ವ ಅವಶೇಷಗಳು:

ಎತ್ತರ ಹಾಗೂ ವಿಶಾಲ ಸಮತಲ ನಸುಗೆಂಪು ಮರಳು ಕಲ್ಲಿನ ಬೆಟ್ಟದ ಒಂದು ದೊಡ್ಡ ಕೊಳ್ಳದಲ್ಲಿ ಸುಪ್ರಸಿದ್ಧ ಶ್ರೀ ಎಲ್ಲಮ್ಮ ದೇವಿಯ ದೇವಾಲಯವಿದೆ. ಬೆಟ್ಟದಿಂದ ದೂರದಲ್ಲಿ ಕೆಳಗೆ ವಿಸ್ತಾರವಾದ ಬಯಲು ಪ್ರದೇಶದಲ್ಲಿ ಮಲಪ್ರಭೆಯು ಬಳುಕಿ ಹರಿಯುತ್ತಾ ಎದುರಿರುವ ಸಾಲು ಬೆಟ್ಟದ ಒಂದು ಇಕ್ಕಟ್ಟಾದ ಕೊರಕಲಿನ ಮೂಲಕ ಹಾದು ಮುಂದೆ ಸಾಗಿದ್ದಾಳೆ. ಈ ಸ್ಥಳವೇ ನವಿಲುತೀರ್ಥ. ಸೌಂದತ್ತಿಯಿಂದ ಬಳಸಿಕೊಂಡು ಹೋಗುವ ರಸ್ತೆಯಿಂದ ಈಗ ಸುಮಾರು ೭-೮ ಕಿ.ಮೀ. ದೂರದಲ್ಲಿದೆ.  ಇಲ್ಲಿ ಅಣೆಕಟ್ಟನ್ನು ಹಾಕಿ ಜಲಾಶಯವನ್ನು ಕರ್ನಾಟಕ ಸರ್ಕಾರವು ಇತ್ತೀಚೆಗೆ ನಿರ್ಮಿಸಿದೆ. ಎಲ್ಲಮ್ಮ ಗುಡ್ಡದ ತಪ್ಪಲಲ್ಲಿ ಸೌಂದತ್ತಿ ನಗರವಿದೆ.. ಇಲ್ಲಿಂದ ಉತ್ತರಕ್ಕೆ ಸುಮಾರು ೧೦ ಕಿ.ಮಿ. ದೂರದೊಳಗೆ ಸುಪ್ರಸಿದ್ಧ ಧಾರ್ಮಿಕ ಸ್ಥಳಗಳಿವೆ. ಅವು ಹೂಲಿ ಮತ್ತು ಶಿರಸಂಗಿ. ಕ್ರಮವಾಗಿ ಇವೆರಡು ಸ್ಥಳಗಳಲ್ಲಿ ಪಂಚಲಿಂಗೇಶ್ವರ ಮತ್ತು ಕಾಳಮ್ಮ ದೇವಾಲಯಗಳು ಮುಖ್ಯವಾದವು. ಶಿರಸಂಗಿ ಕಾಳಮ್ಮ ಆ ಭಾಗದಲ್ಲಿ ಹೆಚ್ಚು ಪ್ರಸಿದ್ಧ. ಅದೂ ಒಂದು ಕ್ಷೇತ್ರ. ಹಾಗೆಯೇ ನವಿಲು ತೀರ್ಥದಿಂದ ಸ್ವಲ್ಪ ಮುಂದೆ ಮತ್ತೊಂದು ಪ್ರಸಿದ್ಧ ಗ್ರಾಮ. ಮುನವಳ್ಳಿ (ಮುನಿಗಳ ಹಳ್ಳಿ ಎಂದು ಅರ್ಥೈಸಲಾಗಿದೆ) ಇಲ್ಲಿಯ ಪಂಚಲಿಂಗೇಶ್ವರ ದೇವಾಲಯವು ಪ್ರಸಿದ್ಧ. ಸೌಂದತ್ತಿಯಿಂದ ಪಶ್ಚಿಮಕ್ಕೆ ಗುರ್ಲ ಹೊಸೂರು ಎಂಬ ಗ್ರಾಮವಿತ್ತು. ಇದು ಮಲಪ್ರಭೆ ಜಲಾಶಯ ನಿರ್ಮಾಣದಲ್ಲಿ ಮುಳುಗಡೆ ಪ್ರದೇಶದಲ್ಲಿ ಸೇರಿ ಹೋಯಿತು. ಇದು ದತ್ತಾತ್ರೆಯ ಉಪಾಸಕರಾಗಿದ್ದ ಶ್ರೀ ಚಿದಂಬರಸ್ವಾಮಿಗಳ ಸ್ಥಾನವಾಗಿದ್ದು ಒಂದು ಕ್ಷೇತ್ರವೇ ಆಗಿತ್ತು. ಹೀಗೆ ಸೌಂದತ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶವು ನೂರಾರು ವರ್ಷಗಳಿಂದ ಧಾರ್ಮಿಕ ಸ್ಥಳಗಳಿಂದ ನಿಬಿಡವಾಗಿದೆ. ಇನ್ನು ಈ ಪ್ರದೇಶದಲ್ಲಿ ಪುರಾತತ್ವ ಅವಶೇಷಗಳ ಸ್ಥೂಲ ಪರಿಚಯ ಅವಶ್ಯ.

ಪ್ರಾಗೈತಿಹಾಸಿಕ ಅವಶೇಷಗಳು:

ಎಲ್ಲಮ್ಮ ಗುಡ್ಡದ ಪ್ರದೇಶದಲ್ಲಿ ಅತೀ ಪ್ರಾಚೀನ ಪ್ರಾಗೈತಿಹಾಸಿಕ ಅವಶೇಷಗಳಿವೆ. ೧೯೫೬ರಲ್ಲಿ ಆದಿ ಹಳೆ ಶಿಲಾಯುಗದ ನೆಲೆಗಳು[4] ಮಲಪ್ರಭೆಯ ತಡಿಯಲ್ಲಿ ಅಲ್ಲಲ್ಲಿ ಶೋಧಿಸಲಾಗಿದೆ. ಅವುಗಳಲ್ಲಿ ಮುನವಳ್ಳಿ ಹತ್ತಿರ ತಲ್ಲೂರಿನ ಬಳಿಯ ನೆಲೆಯೂ ಒಂದು. ೧೯೭೦ರ ಆದಿ ಭಾಗದಲ್ಲಿ ಎಲ್ಲಮ್ಮ ಗುಡ್ಡ ಪ್ರದೇಶದಲ್ಲಿಯೇ ಆದಿ ಮತ್ತು ಮಧ್ಯ ಹಳೆ ಶಿಲಾಯುಧಗಳನ್ನು ಡಾ.ಬಿ. ನರಸಿಂಹಯ್ಯ[5] ಶೋಧಿಸಿದರು. ಇಂಥ ನೆಲೆಗಳಲ್ಲಿ ಪ್ರಾಣಿಗಳನ್ನು ಬೇಟೆಯಾಡುವುದಕ್ಕೆ, ಗೆಡ್ಡೆ ಗೆಣಸುಗಳನ್ನು ಹರಡುವುದಕ್ಕೆ ಮೊದಲಾದ ನಿತ್ಯಜೀವನದ ಸಾಧನೆಗಳಿಗೆ ಮಾನವನು ಮಾಡಿದ ಕೇವಲ ಕಲ್ಲಿನ ಉಪಕರಣಗಳು ಮಾತ್ರ ದೊರಕಿವೆ. ತಜ್ಞರ ಅಂದಾಜಿನಂತೆ ಇವುಗಳು ಸುಮಾರು ೨-೫ ಲಕ್ಷ ವರ್ಷಗಳಷ್ಟು ಹಳೆಯದು. ಗುಡ್ಡದ ಮೇಲೆ ನಗರದಿಂದ ದೇವಾಲಯಕ್ಕೆ ಇದ್ದ ಹಿಂದಿನ ರಸ್ತೆಯ ಎಡಬದಿಗಳಲ್ಲಿ ಕಬ್ಬಿಣ ಯುಗದ ಬೃಹತ್‌ ಶಿಲಾಯುಗ ಕಲ್ಗೋರಿ[6] ಗಳಿದ್ದುದು ೧೯೬೮ರಲ್ಲಿ ನನಗೆ ಗೋಚರವಾಯಿತ್ತು. ಇವುಗಳ ಕಾಲಮಾನ ಸುಮಾರು ಕ್ರಿ.ಪೂ. ೯೦೦-೫೦೦. ಇಂಥ ಕಲ್ಗೋರಿಗಳ ಮತ್ತೆರಡು ನೆಲೆಗಳು ಮುನವಳ್ಳಿ ಹತ್ತಿರ ಸಿಂದೋಗಿ ಗ್ರಾಮದ[7] ಹದ್ದಿನಲ್ಲಿ ಮಲಪ್ರಭೆಯ ದಂಡೆಯ ಮೇಲೆಯೂ, ತಲ್ಲೂರಿನ[8] ಗುಡ್ಡದ ಹತ್ತಿರವೂ ಇವೆ.

ನವಿಲುತೀರ್ಥದ ಜಲಾಶಯಕ್ಕೆ ಹೋಗುವ ರಸ್ತೆಯ ಎಡಬದಿಗೆ ನಾಗಮಂಡಲದಂತೆ[9] ಉಳಿಯಿಂದ ಬಿಡಿಸಿದ ರೇಖಾ ಚಿತ್ರವುಳ್ಳ ಒಂದು ಕಲ್ಲು ಇದೆ. ಇದು ಬಹುಶಃ ಬೃಹತ್‌ ಶಿಲಾ ಸಂಸ್ಕೃತಿ ಜನರ ಧಾರ್ಮಿಕ ಕಟ್ಟಳೆಯ ಪೂಜಾ ಶಿಲೆಯಿರಬಹುದೆಂದು ನನ್ನ ತರ್ಕ. ನವಿಲುತೀರ್ಥದ ಜಲಾಶಯದ ಹತ್ತಿರವೇ ಗುಡ್ಡದ ಬಯಲಿನಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ಉಜ್ಜಿ ನಯ ಮಾಡಿದ ಒಂದು ಕಲ್ಲಿನ ಕೊಡಲಿಯು ನನಗೆ ೧೯೭೮ರಲ್ಲಿ ಸಿಕ್ಕಿತು. ಸ್ವಲ್ಪ ವರ್ಷಗಳ ಹಿಂದೆ, ಮಲಪ್ರಭೆಯ ಪ್ರದೇಶದಲ್ಲಿಯ ಕಲ್ಲೂರು ಕಿತ್ತೂರು (ನರಗುಂದ ತಾಲ್ಲೂಕು, ಧಾರವಾಡ ಜಿಲ್ಲೆ)ಗಳಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ಜನವಾಸ್ತವ್ಯದ[10] ನೆಲೆಗಳನ್ನು ಶೋಧಿಸಿದ್ದೆ. ಈ ಸಂಸ್ಕೃತಿಯ ಕಾಲಮಾನ ಸುಮಾರು ಕ್ರಿ.ಪೂ. ೧೭೦೦-೮೦೦.

ಈ ಮಹತ್ವದ ಸಾಂಸ್ಕೃತಿಕ ಅವಶೇಷಗಳಿಂದ, ಲಕ್ಷ ಲಕ್ಷಾಂತರ ವರ್ಷಗಳಿಂದಲೂ ಈ ಪ್ರದೇಶವು ಮಾನವನಿಗೆ ಆಶ್ರಯ ನೀಡಿ ಇಲ್ಲಿ ಅವನು ತನ್ನ ಸಂಸ್ಕೃತಿಯನ್ನು ರೂಪಿಸಿಕೊಳ್ಳಲು, ಬೆಳೆಸಿಕೊಳ್ಳಲು ಅವಕಾಶವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಇದು ಪ್ರಾಗೈತಿಹಾಸಿಕ ಕಾಲದ ವಿಷಯ.

ಇತಿಹಾಸ ಕಾಲದ ಅವಶೇಷಗಳು:

ತಲ್ಲೂರಿನ ಕಲ್ಗೋರಿಗಳ ನೆಲೆಗಳ ಸಮೀಪದಲ್ಲಿಯೇ ಇತಿಹಾಸ ಪ್ರಾರಂಭ ಕಾಲದ ಜನವಸತಿ ಇದ್ದ ಒಂದು ನೆಲೆಯಿದೆ. ಇಲ್ಲಿ ದೊರೆಯುವ ಮೃತಪಾತ್ರೆಗಳ ಅವಶೇಷಗಳಿಂದ ಈ ನೆಲೆಯು ಕ್ರಿ.ಪೂ. ೨ನೇ ಶತಮಾನದ್ದೆಂದು ತರ್ಕಿಸಬಹುದು. ಬೆಳಗಾವಿ ಹೊರವಲಯದ ವಡಗಾಂವ-ಮಾಧವಪುರದಲ್ಲಿ ಸುಮಾರು ೨,೦೦೦ ವರ್ಷಗಳ ಹಿಂದಿನ ಪ್ರಾಚೀನ ಸುಧಾರಿತ ನಗರದಂತೆ[11] ಇಲ್ಲಿಯೂ ಒಂದು ಪಟ್ಟಣವಿದ್ದಿತ್ತೆಂದು ತೋರುತ್ತದೆ. ಉತ್ಖನನದಿಂದ ಮಾತ್ರ ತಿಳಿಯಲು ಸಾಧ್ಯ. ಇಂಥ ನೆಲೆಗಳು ಸೌಂದತ್ತಿ ಸುತ್ತಮುತ್ತಲಿನ ಪ್ರದೇಶದಲ್ಲೂ ಇದ್ದಿರಬಹುದಾದ ಸಾಧ್ಯತೆ ಇದೆ.

ಶಾಸನ ದೇವಾಲಯ ಮತ್ತು ಬಸದಿಗಳು:

ಶ್ರೀ ಎಲ್ಲಮ್ಮ ದೇವಾಲಯವೂ ಸೇರಿದಂತೆ ಸೌಂದತ್ತಿಯ ಒಟ್ಟು ಒಂಭತ್ತು ಶಿಲಾ ಶಾಸನಗಳು ಪ್ರಕಟವಾಗಿವೆ. ಇವು ಸುಮಾರು ೯ನೇ ಶತಮಾನದಿಂದ ಹಿಡಿದು ೧೬ನೇ ಶತಮಾನದವರೆಗಿನವು. ಇವುಗಳಿಂದ ಮೊದಲು ಸಾರ್ವಭೌಮರಾಗಿದ್ದ ರಾಷ್ಟ್ರಕೂಟರಿಗೂ ಅನಂತರ ಕಲ್ಯಾಣ ಚಾಲುಕ್ಯರಿಗೂ ಆಧೀನರಾಗಿದ್ದ ಮಹಾ ಮಂಡಳೇಶ್ವರ ರಟ್ಟರು ಬಹುಕಾಲ ಸುಗಂಧವರ್ತಿ (ಸೌಂದತ್ತಿ)ಯನ್ನು ಕೊನೆಯಲ್ಲಿ ವೇಣುಗ್ರಾಮ (ಬೆಳಗಾಂವ)ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಸುಮಾರು ೯೬೦ ರಿಂದ ೧೨೫೩ರ ವರೆಗೆ ಆ ವಂಶದ ೧೫ ರಾಜರುಗಳು ಈ ಪ್ರದೇಶವನ್ನು ಆಳಿದರೆಂದು ತಿಳಿಯುತ್ತದೆ. ಇವರು ಬಹುಮಟ್ಟಿಗೆ ಜೈನ ಮತಾವಲಂಬಿಗಳಾಗಿದ್ದರು. ಜಿತೇಂದ್ರ ಭವನ, ಅಂಕೇಶ್ವರ ದೇವಾಲಯ, ಮಲ್ಲಿನಾಥ ಬಸದಿ ಮೊದಲಾದವುಗಳನ್ನು ನಿರ್ಮಿಸಿ ಅವುಗಳಿಗೆ ಮತ್ತು ಇದ್ದ ದೇವಾಲಯಗಳಿಗೆ ಭೂಮಿ ಮೊದಲಾದ ದಾನಗಳನ್ನು ಮಾಡಿದರು. ಈಗಿನ ಬಸದಿ ಗುಡಿಯಲ್ಲಿಯ ಶಾಸನಗಳಿಂದ ರಾಷ್ಟ್ರಕೂಟ ಇಮ್ಮಡಿ ಕೃಷ್ಣನ ಕಾಲದಲ್ಲಿ ರಟ್ಟ ಪೃಥ್ವಿಸೇನನು ಸುಮಾರು ೮೭೫-೭೬ರಲ್ಲಿ “ಜಿನೇಂದ್ರ ಭವನ”ಕ್ಕೆ ಹಾಗೂ ಶಾಂತಿವರ್ಮರಸನು ಒಂದು ಜಯನ ಬಸದಿಯನ್ನು ಕಟ್ಟಿಸಿ ಸುಮಾರು ೯೮೦ ರಲ್ಲಿ ಅದಕ್ಕೆ ಭೂಮಿ ದಾನಗಳನ್ನು ಮಾಡಿದ್ದಾಗಿ ತಿಳಿದು ಬರುತ್ತದೆ. ನಂತರ ೧ನೇ ಸೋಮೇಶ್ವರನ ಕಾಲದಲ್ಲಿ ಅಂಕರಸನು “ಅಂಕೇಶ್ವರ” ಎಂಬ ದೇವಾಲಯವನ್ನು ಕಟ್ಟಿಸಿ ಅದಕ್ಕೆ ೧೦೪೮-೪೯ರಲ್ಲಿ ಭೂಮಿದಾನ ಮಾಡಿಸಿದನು. ಇದರಂತೆಯೇ ರಠ್ಠರ ಕಾಳಸೇನನು ಆರನೇ ವಿಕ್ರಮಾದಿತ್ಯನ ಕಾಲದಲ್ಲಿ “ಜಿನೇಂದ್ರ ಭವನ”ವನ್ನು ಕಟ್ಟಿಸಿದನು. ಸುಮಾರು ೧೦೯೮ರಲ್ಲಿ ತನ್ನ ಒಡೆಯ ಮಹಾಮಂಡಳೇಶ್ವರ ಕಾರ್ತವೀರ್ಯ ಅರಸನಿಂದ ಇದಕ್ಕೆ ಭೂಮಿದಾನ ಮಾಡಿಸಿದನು. ವೇಣುಗ್ರಾಮದಿಂದ ಆಳುತ್ತಿದ್ದ ನಾಲ್ವಡಿ ಲಕ್ಷ್ಮೀದೇವರಸನ ಕಾಲದಲ್ಲಿ ಕೋಲಾರದ ಪ್ರಭು ಕೇಶಿರಾಜನು “ಮಲ್ಲಿನಾಥ ಬಸದಿ” ಯನ್ನು ನಿರ್ಮಿಸಿದನು.

ಇಂದ್ರಕೀರ್ತಿ ಸ್ವಾಮಿ, ಬಾಹುಬಲಿ, ಭಟ್ಟಾರಕ, ಅರ್ಹನಂದಿ ಮುನೀಂದ್ರ, ಕನಕಪ್ರಭು, ಸಿದ್ಧಾಂತದೇವ, ಜ್ಞಾನಶಕ್ತಿವತೀಂದ್ರ, ಮುನಿಚಂದ್ರದೇವ ಮೊದಲಾದ ಜೈನ-ಶೈವ ಯತಿಗಳು ಈ ಬಸದಿ-ದೇವಾಲಯಗಳ ಧರ್ಮಾಧಿಕಾರಿಗಳಾಗಿದ್ದು ಅವುಗಳಲ್ಲಿಯ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿಕೊಳ್ಳುತ್ತಿದ್ದರು.

ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಈಗಿನ ಸೌಂದತ್ತಿ ನಗರವನ್ನು ಮತ್ತು ಶ್ರೀ ಎಲ್ಲಮ್ಮ ಗುಡ್ಡವನ್ನು ಸಮೀಕ್ಷಿಸಿ[12]ದರೆ ನಗರದಲ್ಲಿ ಸುಮಾರು ೧೧-೧೨ನೇ ಶತಮಾನದ ಎರಡು ದೇವಾಲಯಗಳು ಮತ್ತು ಶ್ರೀ ಎಲ್ಲಮ್ಮ ಗುಡ್ಡದಲ್ಲಿ ಇದೇ ಕಾಲದ ಎರಡು ದೇವಾಲಯಗಳು ಇರುವುದು ತಿಳಿಯುತ್ತದೆ. ಈಗ ನಗರದಲ್ಲಿಯ ದೇವಾಲಯಗಳು ಒಂದು “ಪುರದೇಶ್ವರ” ಮತ್ತೊಂದು “ಅಂಕುಶೇಶ್ವರ”. ಗುಡ್ಡದಲ್ಲಿಯ ದೇವಾಲಯಗಳಲ್ಲಿ ಒಂದು ಪ್ರಸಿದ್ಧವಾದ ಎಲ್ಲಮ್ಮ. ಮತ್ತೊಂದು ಇದರ ಸಮೀಪದಲ್ಲಿಯ ಮಲ್ಲಿಕಾರ್ಜುನ. ಶ್ರೀ ಎಲ್ಲಮ್ಮ ದೇವಾಲಯವೊಂದನ್ನು ಬಿಟ್ಟು ಉಳಿದೆಲ್ಲವೂ ಉತ್ತಮ ಸ್ಥಿತಿಯಲ್ಲಿಲ್ಲ. ಬಿದ್ದುಹೋದ ಭಾಗಗಳಲ್ಲಿ ಕೆಲವನ್ನು ಮಣ್ಣಿನಿಂದಲೋ, ಕಲ್ಲಿನಿಂದಲೋ ಅವ್ಯವಸ್ತವಾಗಿ ಕಟ್ಟಲಾಗಿದೆ. ಮಲ್ಲಿಕಾರ್ಜುನ ದೇವಾಲಯದ ಗರ್ಭಗುಡಿಯ ಒಳಮೈ ಮಾತ್ರ ಮೂಲಭಾಗ, ಉಳಿದೆಲ್ಲವೂ ಅರ್ವಾಚೀನ ಕಾಲದಲ್ಲಿ ಮತ್ತೆ ಕಟ್ಟಲಾಗಿದೆ. ಅರ್ಧ ಭಾಗ ಮಣ್ಣಿನಲ್ಲಿ ಹೂತು ಹೋದ ಅಂಕುಶೇಶ್ವರ ಪ್ರಾಯಶಃ ಮೇಲೆ ಉಲ್ಲೇಖಿಸಿದ ಶಾಸನದ ಅಂಕೇಶ್ವರ ಇರಬಹುದೇನೋ? ಬಸ್ತಿ ಗುಡಿಯು ಮತ್ತು ಅದರೊಳಗಿನ ಪೂಜೆಗೊಳ್ಳುತ್ತಿರುವ ತೀರ್ಥಂಕರನ ಮೂರ್ತಿಯು ಆಧುನಿಕ ಕಾಲದ್ದು.

ವಾಸ್ತುಶಿಲ್ಪ ದೃಷ್ಟಿಯಿಂದ ಪುರದೇಶ್ವರ ದೇವಾಲಯವು ಗಮನಾರ್ಹ. ಸಾಮಾನ್ಯವಾಗಿ ಈ ಕಾಲದ ದೇವಾಲಯಗಳಲ್ಲಿಯ ಸಭಾಮಂಟಪದಲ್ಲಿ ನಾಲ್ಕು ಮಧ್ಯಗಂಬಗಳು, ಎಂಟು ಅರ್ಧಗಂಬಗಳು ಮತ್ತು ನಾಲ್ಕು ಮೂಲೆಗಂಬಗಳಿರುತ್ತವೆ. ಅಥವಾ ಅಪರೂಪವಾಗಿ ಮೂರು ದಿಕ್ಕುಗಳಿಗೆದುರಾಗಿರುವ ಮುಖಮಂಟಪಗಳೂ ಸೇರಿ ಸಭಾಮಂಟಪವು ವಿಶಾಲವಾಗಿರುತ್ತದೆ. ಮಧ್ಯ ನಾಲ್ಕು ಕಂಬಗಳ ಹೊರ ಸುತ್ತಿನಲ್ಲಿ ಹನ್ನೆರಡು ಕಂಬಗಳ ಮತ್ತೊಂದು ಸುತ್ತು ಇರುತ್ತದೆ. ಮುಖ ಮಂಟಪಗಳ ಕಂಬಗಳೂ ಸೇರಿ ಹಲವಾರು ಕಂಬಗಳ ಸಭಾಮಂಟಪವಾಗಿರುತ್ತದೆ. ಉದಾಹರಣೆಗೆ ಹೂಲಿಯ ಪಂಚಲಿಂಗೇಶ್ವರ, ಬಂಕಾಪುರದ ನಗರೇಶ್ವರ ದೇವಾಲಯ. ಸೌಂದತ್ತಿಯ ಪುರದೇಶ್ವರ ದೇವಾಲಯದ ಸಭಾಮಂಟಪವು ಇವೆರಡು ವಿನ್ಯಾಸಗಳಿಂದ ಭಿನ್ನವಾಗಿದೆ. ಸ್ವಲ್ಪ ಆಯತಾಕಾರದ ಮಧ್ಯ ಭಾಗದಲ್ಲಿ ಸಮಾನಾಂತರ ನಾಲ್ಕು ಸಾಲುಗಂಬಗಳಿವೆ. ಪಟ್ಟದಕಲ್ಲಿನಲ್ಲಿರುವ ಎಂಟನೆ ಶತಮಾನದ ಬಾದಾಮಿ ಚಾಲುಕ್ಯರ ವಿರೂಪಾಕ್ಷ ಅಥವಾ ಮಲ್ಲಿಕಾರ್ಜುನ ದೇವಾಲಯದ ಸಭಾಮಂಟಪದ ಹಾಗಿದೆ.

ಶ್ರೀ ಎಲ್ಲಮ್ಮ ದೇವಾಲಯದ ಅನತಿ ದೂರದಲ್ಲಿ ಅಲ್ಲಲ್ಲಿ ಸಣ್ಣಸಣ್ಣ ಗುಡಿಗಳಿವೆ. ಮತ್ತು ನಾಥ ಸಂಪ್ರದಾಯದ ಒಂದು ನಾಥ ಮಠವಿದೆ. ಗುಡಿಗಳಲ್ಲಿ ಒಂದು ಪರುಶರಾಮನದು. ಮತ್ತೊಂದು ಅಷ್ಟಾಂಗ ಯೋಗದ ತತ್ವವನ್ನು ಸಂಕೇತಿಸುವ ಅಷ್ಟಕೋನ ವಿನ್ಯಾಸದ ಜಮದಗ್ನಿ ೠಷಿಯದು. ಇವೆರಡು ಗುಡಿಗಳು ಅರ್ವಾಚೀನ ಕಾಲದವೆ. ಪರಶುರಾಮನ ಮೂರ್ತಿಯು ಸುಮರು ೧೬-೧೭ನೇ ಶತಮಾನ ಇಲ್ಲವೆ ಸ್ವಲ್ಪ ಈಚಿನದೇ ಎಂದು ಹೇಳಿದರೆ ತಪ್ಪಾಗಲಾರದು.

ಶ್ರೀ ಎಲ್ಲಮ್ಮ ದೇವಾಲಯದಿಂದ ಸುಮರು ೧೧/೨ ಕಿ.ಮೀ. ದೂರದಲ್ಲಿ ಗುಡ್ಡ ದಂಚಿಗೆ ಒಂದು ಪ್ರಾಚೀನ ಕೋಟೆ ಇದೆ. ಇದು ರಟ್ಟ ಅರಸರದ್ದೆಂದು ಸ್ಥಳಿಕೆ ಜನರ ನಂಬಿಕೆ. ಇದಕ್ಕೆ ಪರಸಗಡ ಎಂದು ಸ್ಥಳಿಕ ಹೆಸರು. ಕೋಟೆಯೇನೋ ಮಧ್ಯ ಯುಗೀನ ಅಪರ ಕಾಲದ್ದೆಂದು ಹೇಳಬಹುದು. ನಗರದೊಳಗೆ ಕೂಡ ಎತ್ತರದ ಮಡ್ಡಿಯ ಮೇಲೆ ಮರಾಠ ಕಾಲದ ಒಂದು ಕೋಟೆಯಿದೆ.[1]      ಸೌಥ ಇಂಡಿಯನ್‌ ಇನ್‌ಸ್ಕ್ರಿಪ್‌ಷನ್ಸ್‌ ಸಂಪುಟ ೨೦, ಶಾಸನಗಳ ಸಂಖ್ಯೆ: ೧೩, ೧೮, ೩೩, ೫೫, ೬೨, ೨೩೫ ಮತ್ತು ೨೪೭-೪೮.

[2]      ಅದೇ ಕಡೆ, ಶಾಸನ ಸಂಖ್ಯೆ: ೨೪೮ ಪುಟ ೨೦೭.

[3]      ಸಾಂಕಳಿಯ. ಎಚ್‌.ಡಿ. ೧೯೫೮: ದಿ ಎಕ್ಸಕವೇಶನ್ಸ್ ಅಟ್‌ ಮಹೇಶ್ವರ ಅಂಡ್‌ ನವ್ದತೋಲಿ ೧೯೫೨೫೩

[4]      ಜೋಷಿ, ಆರ್.ವಿ.: ೧೯೫೫: ಪ್ಲೀಸ್ಟೊಸೀನ್‌ ಸ್ಟಡೀಸ್‌ ಇನ್‌ ದಿ ಮಲಪ್ರಭಾ ಬೇಸಿನ್‌, ಪೂನಾ ಮತ್ತು ಧಾರವಾಡ ಪುಟ ೩೩

[5]      ಡಾ.ಬಿ. ನರಸಿಂಹಯ್ಯನವರು ಈ ಪ್ರದೇಶದಲ್ಲಿ ಅನ್ವೇಷಣೆಯಲ್ಲಿ ತಮಗೆ ದೊರಕಿದ ಶಿಲಾಯುಧಗಳನ್ನು ನನಗೆ ತೋರಿಸಿದ್ದರು. ನೋಡಿ. ಇಂಡಿಯನ್‌ ಅರ್ಕಿಯಾಲಜಿ ರಿವ್ಯೂ ೧೯೭೨-೭೩ ಪುಟ ೬೦.

[6]     ಸುಂದರ ೧.೧೯೭೫: ಅರ್ಲಿ ಛೇಂಬರ್ ಟೂಂಬ್ಸ್‌ ಇನ್‌ ಸೌತ್‌ ಇಂಡಿಯಾ ನೂ ಡೆಲ್ಲಿ ಪುಟ ೨೪-೨೬.

[7]      ಅದೇ ಕಡೆ

[8]     ಅದೇ ಕಡೆ

[9]     ಆ ಪ್ರದೇಶದಲ್ಲಿಯ ೧೯೭೭ರ ನನ್ನ ಅನ್ವೇಷಣೆಯಲ್ಲಿ ಈ ರೇಖಾ ಚಿತ್ರದ ಕಲ್ಲು ಶೋಧವಾಯಿತು. ಜಲಾಶಯದ ಪಕ್ಕದಲ್ಲಿಯ ಹೂದೋಟದಲ್ಲಿ ಬೃಹತ್‌ ಶಿಲಾ ಸಂಸ್ಕೃತಿಯ ಮೃತ ಪಾತ್ರೆಯ ಅವಶೇಷಗಳೂ ಸಿಕ್ಕವು. ಇವುಗಳ ಬಗ್ಗೆ ಪುಣೆಯ ಡೆಕ್ಕನ್‌ ಕಾಲೇಜ ಪೋಸ್ಟ ಗ್ರಾಜುಯೇಟ್‌ ಅಂಡ್‌ ರಿಸರ್ಚ ಇನ್ಸ್ಟಿಟ್ಯೂಟ್‌. ಪ್ರಾಕ್ತನ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ೧೯೭೮ ರಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಒಂದು ಸಂಶೋಧನ ಲೇಖನವನ್ನು ಸಾದರ ಪಡಿಸಿದ್ದೆ. ಈ ಸಂಕಿರಣದಲ್ಲಿ ಸಾದರ ಪಡಿಸಿದ ಲೇಖನಗಳು ಮುದ್ರಣದಲ್ಲಿವೆ.

[10]     ಸುಂದರ. ಅ: ೧೯೬೮ : “ಪ್ರೋಟ್‌ ಹಿಸ್ಟಾರಿಕ್‌ ಸೈಟ್ಸ್ ಇನ್‌ ಬಿಜಾಪುರ ಡಿಸ್ಟ್ರಿಕ್ಟ್” ಜರ್ನಲ್‌ ಆಫ್‌ ಕರ್ನಾಟಕ ಯುನಿವರ್ಸಿಟಿ (ಸೋಷಿಯಲ್‌ ಸೈನ್ಸ್ಸ್), ಸಂಖ್ಯೆ: ೪.

[11]     ಸುಂದರ, ಅ: ೧೯೮೧: “ಎ ಟೂ ಥೌಸಂಡ್‌ ಇಯರ್ ಓಲ್ಡ್‌ ಅಂಡ್‌ ಇಟ್ಸ್ ಆರ್ಕಿಟೆಕ್ಚರ್” ಮಧು (ರೀಸೆಂಟ್‌ ರಿಸರ್ಚಸ್ ಇನ್‌ ಇಂಡಿಯನ್‌ ಆರ್ಕಿಯಾಲಜಿ ಅಂಡ್‌ ಆರ್ಟ್ ಹಿಸ್ಟರಿ) ದೆಹಲಿ, ಪುಟಗಳು ೮೭-೯೭.

[12]     ಸೌಂದತ್ತಿ-ಹೂಲಿ-ಸೌಂದತ್ತಿ ಪ್ರದೇಶದಲ್ಲಿಯ ಪ್ರಾಚೀನ ದೇವಾಲಯಗಳನ್ನೆಲ್ಲಾ ೧೯೭೬-೮೩ ರಲ್ಲಿ ಪರಿಶೀಲಿಸಿದ್ದೇನೆ.