ಈ ಪುಸ್ತಕದ ಉದ್ದೇಶ, ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯನಗಳು ಉದ್ದಕ್ಕೂ ಹೇಗೆ ನಡೆದು ಬಂದಿವೆ ಹಾಗೂ ಈಗ ಹೇಗೆ ಹೊಸ ಹೊಸ ತಿರುವು ಪಡೆದುಕೊಂಡು ನಡೆಯುತ್ತಿವೆ ಎಂಬ ಚರಿತ್ರೆಯನ್ನು ಸರಳವಾಗಿ ದಾಖಲಿಸುವುದು. ಪರಂತು, ಒಂದು ವಿಷಯ ಆರಿಸಿಕೊಂಡು ಸಾಂಸ್ಕೃತಿಕ ಅಧ್ಯಯನ ಹೇಗೆ ಮಾಡಬಹುದು ಎಂಬುದಕ್ಕೆ ಒಂದು ಮಾದರಿಯನ್ನು ಮಂಡಿಸುವುದಲ್ಲ. ಇದೊಂದು ಮಾಹಿತಿ ಪ್ರಧಾನವಾದ ಪ್ರವೇಶಿಕೆ. ಇದನ್ನು ಬರೆಯುವಾಗ ನನ್ನ ಮನಸ್ಸಿನಲ್ಲಿರುವವರು ಈ ಕ್ಷೇತ್ರದಲ್ಲಿ ಚಿಂತನೆ ಮತ್ತು ಅಧ್ಯಯನ ಮಾಡಿರುವ ವಿದ್ವಾಂಸರಲ್ಲ. ಬದಲಾಗಿ ಸಾಹಿತ್ಯ, ಭಾಷೆ, ಜಾನಪದ, ಚರಿತ್ರೆ, ಸಮಾಜಶಾಸ್ತ್ರಗಳನ್ನು ಅಧ್ಯಯನ ಮಾಡುವ ಮಾನವಿಕ ಹಾಗೂ ಸಮಾಜ ವಿಜ್ಞಾನದ ಪ್ರಾಥಮಿಕ ವಿದ್ಯಾರ್ಥಿಗಳು. ಮುಂದುವರೆದು ಕೆಲವಾದರೂ ಸಾಂಸ್ಕೃತಿಕ ಅಧ್ಯಯನ ಕೈಗೊಳ್ಳುವ ಯುವ ಸಂಶೋಧಕರಿಗೆ, ಸಂಶೋಧನೆ ವಿಧಾನಗಳನ್ನು ಚರ್ಚಿಸುವ ಹೊತ್ತಲ್ಲಿ ಈ ಪುಸ್ತಿಕೆ ಉಪಯುಕ್ತವಾದೀತು ಎಂಬ ಸಣ್ಣ ನಂಬಿಕೆಯಿದೆ.

ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯನಗಳು ಎರಡು ಕಡೆ ನಡೆದಿವೆ. ಒಂದು, ಮಾನವಿಕ ಕ್ಷೇತ್ರದ ಸಾಹಿತ್ಯ, ಭಾಷೆ ಇತ್ಯಾದಿ ಶಿಸ್ತುಗಳಲ್ಲಿ. ಇನ್ನೊಂದು, ಸಮಾಜವಿಜ್ಞಾನ ಕ್ಷೇತ್ರದ ಸಮಾಜಶಾಸ್ತ್ರ, ಚರಿತ್ರೆ, ಮಾನವಶಾಸ್ತ್ರ, ಜಾನಪದ, ಬುಡಕಟ್ಟು ಮುಂತಾದ ಶಿಸ್ತುಗಳಲ್ಲಿ. ಮುಖ್ಯ ಸಂಗತಿಯೆಂದರೆ, ಈ ಎರಡೂ ಕಡೆಯ ಶಿಸ್ತುಗಳು ಪರಸ್ಪರ ಕೊಡುಕೊಳೆ ಮಾಡುತ್ತ, ಅವುಗಳ ನಡುವಣ ಗಡಿಗೆರೆಗಳು ತೀವ್ರವಾಗಿ ಕಲಸಿಕೊಳ್ಳುತ್ತಿರುವುದು. ಇದು ಕನ್ನಡ ಸಾಂಸ್ಕೃತಿಕ ಅಧ್ಯಯನಗಳ ಪ್ರಧಾನ ಲಕ್ಷಣ. ವಿಶೇಷವೆಂದರೆ, ಕನ್ನಡದಲ್ಲಿ ‘ಸಾಂಸ್ಕೃತಿಕ ಅಧ್ಯಯನ’ಗಳನ್ನು ಕೈಗೊಂಡಿರುವವರಲ್ಲಿ ಹೆಚ್ಚಿನವರು ಸಾಹಿತ್ಯದವರು. ಅವರ ಹಿಂದೆ ನಿಂತು ಕೆಲಸ ಮಾಡಿರುವವು ಹೆಚ್ಚಾಗಿ ಸಮಾಜ ವಿಜ್ಞಾನದ ಚಿಂತನೆಗಳು. ಇಲ್ಲಿ ಸಹಜವಾಗಿ ಸಾಹಿತ್ಯಕ ಅಧ್ಯಯನಗಳನ್ನು ಹೆಚ್ಚಾಗಿ ಪರಿಶೀಲಿಸಲಾಗಿದೆ. ಸಮಾಜ ವಿಜ್ಞಾನದವರು ಸಾಂಸ್ಕೃತಿಕ ಅಧ್ಯಯನಗಳನ್ನು ಕುರಿತು ಬರೆದರೆ, ಅದು ಖಂಡಿತ ಬೇರೆಯಾಗಿರುತ್ತದೆ. ಈ ಖಬರು ನನಗಿದೆ.

ಸಂಸ್ಕೃತಿ ಚಿಂತನೆಗಳು ಪಶ್ಚಿಮ ದೇಶಗಳಲ್ಲಿ ಸುದೀರ್ಘವಾಗಿ ನಡೆದಿವೆ. ಕೊನೇಪಕ್ಷ ಈ ವಾಗ್ವಾದಗಳಿಗೆ ೧೫೦ ವರ್ಷಗಳ ಚರಿತ್ರೆಯಿದೆ. ಇವರಲ್ಲಿ ಹೆಚ್ಚಿನವರು ರಾಜಕೀಯ ಚಿಂತಕರು, ಮಾನವಶಾಸ್ತ್ರಜ್ಞರು, ಸಮಾಜ ವಿಜ್ಞಾನಿಗಳು ಹಾಗೂ ಸಾಹಿತ್ಯ ವಿಮರ್ಶಕರು. ನಮ್ಮ ಸಂಸ್ಕೃತಿ ಚಿಂತಕರೂ ಸಾಂಸ್ಕೃತಿಕ ಅಧ್ಯಯನಕಾರರೂ ಇವರ ಪ್ರಭಾವ ಪಡೆದಿದ್ದಾರೆ. ಹೀಗಾಗಿ ಪಶ್ಚಿಮದ ತಾತ್ವಿಕ ಚಿಂತನೆ ಹಾಗೂ ವಾಗ್ವಾದಗಳನ್ನು ಹಿನ್ನೆಲೆ ರೂಪದಲ್ಲಿ ಪರಿಚಯಿಸುವ ಯತ್ನ ಇಲ್ಲಿ ಮಾಡಿದೆ. ‘ಪ್ರಭಾವ’ದ ಮಾತನ್ನಾಡುವಾಗ ಕನ್ನಡದ ಮಟ್ಟಿಗೆ ಬಹಳ ಹುಶಾರಾಗಿರಬೇಕು. ಯಾವುದೇ ಜೀವಂತ ಪರಂಪರೆಯಿರುವ ನಾಡಿನಲ್ಲಿ ಅನ್ಯ‘ಪ್ರಭಾವ’ ಎಂಬುದು ಮರವೊಂದು ಕೆಳಗಿನ ನೆಲದ ಮೇಲೆ ನೆರಳು ಚೆಲ್ಲಿದಂತೆ ಸರಳವಾಗಿರುವುದಿಲ್ಲ. ಪಶ್ಚಿಮದ ಸಂಸ್ಕೃತಿ ಚರ್ಚೆಯನ್ನು ಹಾಗೂ ಸಾಂಸ್ಕೃತಿಕ ಅಧ್ಯಯನಗಳ ಮಾದರಿಗಳನ್ನು ಕನ್ನಡದಲ್ಲಿ ಯಾಂತ್ರಿಕವಾಗಿ ಅನುಸರಿಸಿರುವ ನಿದರ್ಶನಗಳು ಇವೆ. ಆದರೆ ಅವುಗಳ ಹಂಗನ್ನು ದಾಟಿಕೊಂಡೇ ಹೆಚ್ಚಿನ ಚಿಂತನೆ ಮತ್ತು ಅಧ್ಯಯನಗಳು ನಡೆದಿವೆ. ಕಡವಾಗಿ ಪಡೆದಿದ್ದನ್ನು ಮುರಿದು ಕಟ್ಟಿಕೊಳ್ಳಲಾಗಿದೆ. ಇದೊಂದು ಸಾಂಸ್ಕೃತಿಕ ಮರುಹುಟ್ಟು. ಕರ್ನಾಟಕದ ವಿಭಿನ್ನ ಕಾಲಘಟ್ಟದ ಚಾರಿತ್ರಿಕ ಒತ್ತಡಗಳು, ಅಧ್ಯಯನಕಾರರ ವೈಯಕ್ತಿಕ ತಾತ್ವಿಕ ನಂಬಿಕೆ, ವರ್ಗಹಿತಾಸಕ್ತಿ, ಆಶೋತ್ತರ, ಗುಣದೋಷ ಎಲ್ಲವೂ ಈ ಮರುಹುಟ್ಟಿನಲ್ಲಿ ಖುದ್ದಾಗಿ ಭಾಗವಹಿಸಿವೆ. ಈ ರೂಪಾಂತರಗಳ ಒಳಗೆ ಕರ್ನಾಟಕದ ಸಂಸ್ಕೃತಿಯ ಗುಟ್ಟುಗಳು ಅಡಗಿವೆ.

ಹೀಗೆ ತಾತ್ವಿಕ ಚಿಂತನೆ ಹಾಗೂ ಅಧ್ಯಯನಗಳ, ಅಧ್ಯಯನ ಹಾಗೂ ಸಮಾಜದ ನಡುವಣ ಸಂಬಂಧಗಳು ಕನ್ನಡದ ಮಟ್ಟಿಗೆ ಸಂಕೀರ್ಣ ಸ್ವರೂಪದಲ್ಲಿವೆ. ಇದುವೇ ಕನ್ನಡ ಸಾಂಸ್ಕೃತಿಕ ಅಧ್ಯಯನಗಳ ವಿಶಿಷ್ಟತೆಗೆ ಕಾರಣ. ಈ ಅಂಶಕ್ಕೆ ಮಹತ್ವ ಸಿಗಬೇಕು ಎಂಬ ಉದ್ದೇಶದಿಂದ ಕನ್ನಡದಲ್ಲಿ ನಡೆದ ಸಂಸ್ಕೃತಿ ವಾಗ್ವಾದ ಹಾಗೂ ಸಾಂಸ್ಕೃತಿಕ ಅಧ್ಯಯನಗಳನ್ನು ಚರ್ಚಿಸಿದೆ. ಈ ಕಾರಣಕ್ಕೆ ಈ ಕೃತಿಯನ್ನು ‘ಕನ್ನಡದ ಸಾಹಿತ್ಯದ ಸಾಂಸ್ಕೃತಿಕ ಅಧ್ಯಯನ’ ಅಥವಾ ‘ಕರ್ನಾಟಕದ ಸಾಂಸ್ಕೃತಿಕ ಅಧ್ಯಯನಗಳು’ ಎಂದು ಪರಿಭಾವಿಸಬಹುದು.

ಇದನ್ನು ಬರೆಯಲು ಕಾರಣರಾದವರು, ನನ್ನ ಮೇಲೆ ಅಪಾರ ವಿಶ್ವಾಸ ತೋರುವ, ನಾನು ಕೂಡ ಯಾವತ್ತೂ ಆದರಿಸುವ ಶ್ರೀ. ಗುರುಲಿಂಗ ಕಾಪಸೆಯವರು. ಪುಸ್ತಿಕೆಯನ್ನು ಸಹಜೆಯಿಂದ ಪರಿಶೀಲಿಸಿ, ತಿದ್ದುಪಡಿಗಳನ್ನು ಸೂಚಿಸಿದವರು ಸಂಪಾದಕರಾದ ಗಿರಡ್ಡಿ ಗೋವಿಂದರಾಜ ಅವರು. ಇವರಿಬ್ಬರಿಗೂ ನನ್ನ ನಮಸ್ಕಾರಗಳು. ಹಸ್ತಪ್ರತಿ ಹಂತದಲ್ಲಿರುವಾಗಲೇ ಇದನ್ನು ಓದಿ ಕಾಮೆಂಟನ್ನು ಮಾಡಿದವರು, ಮಿತ್ರರಾದ ತಾರಕೇಶ್ವರ, ಅಮರೇಶ ನುಗಡೋಣಿ, ಚಂದ್ರಪೂಜಾರಿ ಹಾಗೂ ಪಿಎಚ್.ಡಿ. ಅಧ್ಯಯನ ಮಾಡುತ್ತಿರುವ ವೆಂಕಟೇಶ್ ನೆಲ್ಲಿಕುಂಟೆ ಮತ್ತು ಸತೀಶ್ ಪಾಟೀಲ್‌ಅವರು. ಇವರ ಪ್ರತಿಕ್ರಿಯೆಗಳಿಂದ ನನಗೆ ಬಹಳ ಸಹಾಯವಾಗಿದೆ. ಇನ್ನು ಓದುಗರ ಪಾಳಿ. ಅವರನ್ನು ಕೇಳಿಸಿಕೊಳ್ಳುತ್ತೇನೆ.

ರಹಮತ್ ತರೀಕೆರೆ