ಕ್ರಿ. ಶ. ೧೬ನೆಯ ಶತಮಾನದ ಅದಿಭಾಗದಲ್ಲಿ ಉದಯಿಸಿದ ಇಕ್ಕೇರಿ ಅರಸರ ಚರಿತ್ರೆಯನ್ನು ಹಾಗೂ ಅದರ ಮೂಲ ಬೆಳವಣಿಗೆಯನ್ನು ಪ್ರಾರಂಭಿಸುವ ಮುನ್ನ ಈ ಐತಿಹಾಸಿಕ ಸಂಸ್ಥಾನದ ಹಿನ್ನೆಲೆಯನ್ನು ಅರಿಯುವುದು ಬಹುಮುಖ್ಯವೆಂದೆನ್ನಿಸುತ್ತದೆ.

ಸುಂದರ ಮಲೆನಾಡಿನ ಸೆರಗಿನ ಜಿಲ್ಲೆಯಾಗಿರುವ ಶಿವಮೊಗ್ಗದ ಸಾಗರ ತಾಲ್ಲೂಕು ಕೇಂದ್ರದಿಂದ ಎರಡು ಮೈಲಿ ದೂರದಲ್ಲಿರುವ ಇಕ್ಕೇರಿಯು ಇತ್ತೀಚಿನ ೪೫೦ ವರ್ಷಗಳ ಹಿಂದೆಯಷ್ಟೇ ಕರ್ನಾಟಕದ ಪಾವಿತ್ರ್ಯತೆಯನ್ನು ತನ್ನ ಮಡಿಲಿನಲ್ಲಿ ಸಾಕಿ ಸಲುಹಿ ಭರತ ಖಂಡದಲ್ಲಿಯೇ ವಿಶಿಷ್ಟ ಚರಿತ್ರೆಯನ್ನು ನಿರ್ಮಿಸಿ, ರಾಜಧಾನಿಯಾಗಿ ಮೆರೆದ ಊರು ಎಂದು ಹೇಳಿದರೆ ನಂಬಲಾಗದಿರಬಹುದು. ಇಕ್ಕೇರಿಯು ಇಂದು ಒಂದು ಗ್ರಾಮವಾಗಿ ಮಾತ್ರ ಉಳಿದಿದ್ದು ತಾನು ತನ್ನ ವೈಭವದ ಕಾಲದಲ್ಲಿ ಈ ನಾಡಿನ ರಕ್ಷಣೆಗೋಸ್ಕರ, ಇದರ ಸಂಸ್ಕೃತಿಯ ಉಳಿವಿಗೋಸ್ಕರ ಹೋರಾಡಲು ವೀರಾಧಿವೀರ ಅರಸರಿಗೆ ಜನ್ಮ ನೀಡಿತ್ತು ಎಂಬುವುದನ್ನು ಮರೆತಂತೆ ಮರೆಯಲ್ಲಿಯೇ ನಾಚಿಕೆಯಿಂದ ಕಂಗೊಳಿಸುತ್ತಿದೆ. ಅಂದಿನ ಕಾಲದಲ್ಲಿಯೇ ಒಂದು ಪುಟ್ಟ ವಿದ್ಯಾಕೇಂದ್ರದಂತಿದ್ದ ಇಕ್ಕೇರಿಯು ಅನೇಕ ವಿದ್ವಾಂಸರನ್ನು, ಕವಿಗಳನ್ನು, ನಾಟಕಕಾರರನ್ನು ರಕ್ಷಿಸಿಕೊಂಡು ಅವರಿಂದ ಉತ್ತಮ ಕೃತಿಗಳು ನಾಡಿಗೆ ಸಮರ್ಪಿತವಾಗುವಂತೆ ಮಾಡಿದೆ. ಇಂದು ಈ ಗ್ರಾಮದ ಸುತ್ತಮುತ್ತಲೂ ಕಂಡುಬರುವ ಪುರಾತನ ಅವಶೇಷಗಳು ಆ ಕಾಲದ ವೈಭವದ ಇತಿಹಾಸವನ್ನು ಇಂದಿನ ಪೀಳಿಗೆಗೆ ದಿನನಿತ್ಯ ಪಠ್ಯರೂಪದಲ್ಲಿ ಓದಿ ತಮ್ಮ ಪೂರ್ವಜರ ಆಚಾರ, ವಿಚಾರ, ಕಲೆ, ಸಂಸ್ಕೃತಿಯ ಪಾಠವನ್ನು ತಿಳಿಸುತ್ತಿವೆ. ಅವರು ಕಟ್ಟಿಸಿರುವ ದೇವಾಲಯಗಳು, ಮಠಗಳು ಹಾಗೂ ಮಸೀದಿಗಳನ್ನು ಈಗಲೂ ನೋಡಬಹುದಾಗಿದೆ. ಇಲ್ಲಿಯ ಅರಸರು ಸಂಗೀತ, ನಾಟ್ಯ, ಶಿಲ್ಪ ಮತ್ತು ವಾಸ್ತುಕಲೆಗಳಿಗೂ ಹಾಗೂ ವಿದ್ಯಾಭ್ಯಾಸದ ಬೆಳವಣಿಗೆಗೆ ವಿವಿಧ ರೀತಿಯ ಪ್ರೋತ್ಸಾಹ ನೀಡಿದ್ದರು. ಇದಕ್ಕೆ ನಿದರ್ಶನವೆಂಬಂತೆ ಹೇಳುವುದಾದರೆ ವಿಜಯನಗರದ ಪತನದ ನಂತರ ಇಕ್ಕೇರಿ, ಮಧುರೆ, ತಂಜಾವೂರು, ಗೇರುಸೊಪ್ಪೆ, ಸೋದೆ ಮೊದಲಾದ ಸಂಸ್ಥಾನಗಳು ಸಂಸ್ಕೃತ ವಿದ್ಯಾಭ್ಯಾಸದ ಬೆಳವಣಿಗೆಗೆ ಹಾಗೂ ಕಲೆಗಳ ಅಭಿವೃದ್ಧಿಗೆ ತುಂಬಾ ಸಹಾಯಕವಾಗಿದ್ದವು ಎಂದು ಅನೇಕ ಸಾಹಿತ್ಯಾಧಾರಗಳಿಂದ ತಿಳಿಯುತ್ತದೆ.

ಇಂದು ಭಾರತವು ತನ್ನ ರಕ್ತದೊಂದಿಗೆ ಬೆಸೆದುಕೊಂಡಿರುವ ಸರ್ವಧರ್ಮವನ್ನೂ ಸಮನಾಗಿ ಕಾಣು ಎನ್ನುವ ತತ್ವಕ್ಕೆ ಅಂದಿನ ಕಾಲದ ರಾಜಮಹಾರಾಜರು ಅಂಟಿಕೊಂಡಿರುವ ಸುಮಧುರವಾದ ದಾರಿಯೇ ಮೂಲ ಕಾರಣವೆಂದು ಹೇಳಬಹುದು. ಇದರಲ್ಲಿ ಇಕ್ಕೇರಿಯ ನಾಯಕರು ಹಿಂದೆ ಬಿದ್ದಿರಲಿಲ್ಲ. ಎಲ್ಲಾ ಧರ್ಮ, ಮತಗಳನ್ನು ಸಮಾನ ದೃಷ್ಟಿಯಿಂದ ನೋಡಿ ತಮ್ಮ ಸಂಸ್ಥಾನದಲ್ಲಿದ್ದ ಮಠ, ಮಸೀದಿ, ಚರ್ಚುಗಳಿಗೆ ಅಪಾರ ದಾನದತ್ತಿಗಳನ್ನು ನೀಡಿ ಅವುಗಳ ಶ್ರೇಯೋಭಿವೃದ್ಧಿಗೆ ಕೈ ಚಾಚಿರುವುದಕ್ಕೆ ಶಾಸನಾಧಾರಗಳು ಲಭ್ಯವಿದೆ. ಬಾರತದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಕೃತಿಯು ಪ್ರಧಾನವಾಗಿ ಕಂಡರೆ, ಅಪ್ರಧಾನ ಸಂಸ್ಕೃತಿಯು ಉಜ್ವಲವಾಗಿ ಬೆಳಗಬೇಕಾದರೆ ಇಕ್ಕೇರಿ ಹಾಗೂ ಮೈಸೂರು ಸಂಸ್ಥಾನದ ಅಧೀನ ರಾಜ್ಯಗಳ ಸಾಂಸ್ಕೃತಿಕ ಇತಿಹಾಸವನ್ನು ಉತ್ಪ್ರೇಕ್ಷೆ ಇಲ್ಲದೆ ಬರೆದರೆ ಮಾತ್ರ ನಮ್ಮ ನಾಡಿನ ಚರಿತ್ರೆಯ ಜೊತೆಗೆ ದೇಶದ ಇತಿಹಾಸದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬಹುದೆನ್ನಿಸುತ್ತದೆ.

ಕೆಳದಿ ಅರಸರ ಮೂಲ

ಕೆಳದಿ ಅರಸರ ಮೂಲದ ಬಗ್ಗೆ ಖಚಿತವಾಗಿ ಹೇಳುವ ಮೂಲ ದಾಖಲೆಗಳು ದೊರಕುವುದಿಲ್ಲ. ದೊಕಿರುವ ಅನೇಕ ಸಾಹಿತ್ಯಾಧಾರಗಳು ಹಾಗೂ ಶಾಸನಗಳ ಆಧಾರದ ಮೇಲೆ ಈ ನಾಡಿನ ಬಗ್ಗೆ ಪ್ರೋ.ದೀಕ್ಷಿತ್ ಹಾಗೂ ಕೆಳದಿ ಗುಂಡಾ ಜೋಯಿಸ್ ರವರು ನೀಡಿರುವ ಹೇಳಿಕೆಯನ್ನೆ ನಾವು ಇಂದಿಗೂ ನಂಬಬೇಕಾಗಿದೆ. ಒಂದು ರೀತಿಯಲ್ಲಿ ಈ ಆಧಾರವು ಸತ್ಯವಾದದೆಂದೂ ಹೇಳಬಹುದು. ಕೆಲವು ಸನ್ನಿವೇಶಗಳು ಉತ್ಪ್ರೇಕ್ಷೆಯಿಂದ ಕೂಡಿರುವುದಾಗಿದ್ದರೂ ಅವನ್ನು ಹೊರತುಪಡಿಸಿದರೆ ಮಿಕ್ಕ ದಾಖಲೆಗಳು ಸಿಕ್ಕ ಸಂಗತಿಯನ್ನು ನಿರೂಪಿಸುತ್ತವೆ ಹಾಗೂ ನಂಬುವಂತೆಯೂ ಮಾಡುತ್ತವೆ.

ಕೆಳದಿ ಗುಂಡಾಜೋಯಿಸ್ ರವರು ತಮ್ಮ ಮಹತ್ವದ ಕೃತಿಯಾಗಿರುವ “ಕೆಳದಿಯ ಸಂಕ್ಷಿಪ್ತ ಇತಿಹಾಸ” ಎಂಬುದರಲ್ಲಿ ಈ ಕೆಳಕಂಡಂತೆ ಕೆಳದಿ ಅರಸರ ಮೂಲ ಹಾಗೂ ಸ್ಥಾಪನೆಯ ಬಗ್ಗೆ ವಿವರಣೆ ನೀಡುತ್ತಾರೆ. “ಈಗಿನ ಶಿವಮೊಗ್ಗ ಜಿಲ್ಲೆಯ ‘ಕೆಳದಿ’ ಎಂಬ ಗ್ರಾಮವು ನಾಲ್ಕುನೂರಾ ಐವತ್ತು ವರ್ಷಗಳ ಹಿಂದೆ ದಟ್ಟವಾದ ಅರಣ್ಯ ಪ್ರದೇಶಗಳಿಂದ ಕೂಡಿತ್ತು. ಆಗ ಸಂಚಾರಕ್ಕೆ ಮಾರ್ಗಗಳೇ ಇರದೆ. ಕೇವಲ ಕಾಲುದಾರಿಗಳಿಂದ ಸಂಪರ್ಕ ಪಡೆದಿದ್ದ ಪಳ್ಳಿ ಬಯಲು (ಈಗ ಹಳ್ಳಬೈಲು ಎಂದಾಗಿದೆ) ಎಂಬ ಗ್ರಾಮದಲ್ಲಿ ಬಸವಪ್ಪನೆಂಬ ರೈತನು ತಕ್ಕಮಟ್ಟಿಗೆ ಕೃಷಿ ಮೊದಲಾದ್ದನ್ನು ಮಾಡಿಕೊಂಡು ನೆಮ್ಮದಿಯಿಂದ ಬಾಳುತ್ತಿದ್ದನು. ಉತ್ತಮ ಶಿವಭಕ್ತನೂ, ಜ್ಞಾನಿಯೂ ಆಗಿದ್ದ ಈತನಿಗೆ ಬಸವಮಾಂಬೆ ಎಂಬ ಪತ್ನಿಯಿದ್ದಳು. ಇವಳು ತುಂಬಾ ಸದ್ಗುಣಶೀಲೆಯಾಗಿದ್ದು. ಪತಿವ್ರತಾಶಿರೋಮಣಿಯಾಗಿ ಪತಿಗೆ ತಕ್ಕ ಪತ್ನಿಯಾಗಿದ್ದಳು. ಇವಳಿಗೆ ಚೌಡಪ್ಪ – ಭದ್ರಪ್ಪ ಎಂಬಿಬ್ಬರು ಗಂಡು ಮಕ್ಕಳು ಹುಟ್ಟಿದರು. ಈರ‍್ವರೂ ಬುದ್ದಿವಂತರಾಗಿ ವೃದ್ಧಿಯಾಗುತ್ತಾ ಪ್ರಬುದ್ಧಮಾನಕ್ಕೆ ಬಂದಕೂಡಲೇ ಕೃಷಿಕಾರ್ಯಗಳಲ್ಲಿ ನಿರತರಾಗಿ ತಂದೆಗೆ ನೆರವು ನೀಡುತ್ತಾ ತಂದೆಗೆ ತಕ್ಕ ಮಕ್ಕಳಾಗಿ ಕಾಲಯಾಪನೆ ಮಾಡುತ್ತಿದ್ದರು. ಯೌವನ ಪ್ರಾಪ್ತವಾಗುತ್ತಲೇ ಇವರಿಬ್ಬರಿಗೂ ಬಸಪ್ಪನು ಸತ್ಕುಲ ಪ್ರಸೂತೆಯರಾದ ಕನ್ಯೆಯರನ್ನು ತಂದು ವಿವಾಹ ಮಾಡಿದನು. ಕಾಲಕ್ರಮದಲ್ಲಿ ವಿಧಿಯ ದುರ್ಯೋಗದಿಂದ ಬಸಪ್ಪನು ಶಿವಾಧೀನನಾದನು. ತರುವಾಯ ಚೌಡಪ್ಪ – ಭದ್ರಪ್ಪರೀರ್ವಗೂ ತಾಯಿಯನ್ನು ಸಂತೈಸಿ, ತಮ್ಮ ಪಾಲಿಗೆ ಪ್ರಾಪ್ತವಾದ ಭೂಮಿಯನ್ನು ಕಾಲಕಾಲಕ್ಕೆ ಕೃಷಿ ರೂಪದಿಂದ ಅಭಿವೃದ್ಧಿಪಡಿಸುತ್ತಾ ಬೇಸಾಯದಲ್ಲಿ ನಿರತರಾಗಿ ಕಾಲಮಾಪನೆ ನಡೆಸುತ್ತಿದ್ದರು” ಎಂದು ತಿಳಿಸುತ್ತಾ ನಂತರ ಅವರು ಚೌಡಪ್ಪ – ಭದ್ರಪ್ಪರವರುಗಳನ್ನು ಅದೃಷ್ಟವಂತರನ್ನಾಗಿಸಲು ಮುಂದಾಗುತ್ತಾರೆ. ಮೇಲಿನದು ಅನೇಕ ಆಧಾರಗಳಿಂದ ತಿಳಿದುಬರುವಂತಹ ಘಟನೆ. ಆದರೆ ಅವರಿಗೆ ರಾಜ್ಯಪ್ರಾಪ್ತವಾಗಿರುವ ವಿಷಯದ ಪ್ರಸ್ತಾಪ ಮಾತ್ರ ಸ್ವಲ್ಪ ನಂಬಲು ಸಾಧ್ಯವೆಂದೆನಿಸುತ್ತದೆ. ಆದರೆ ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ಘಟನೆಗೂ ಒಂದೊಂದು ಪುರಾಣ ಮಿಶ್ರಿತವಾದ ಕಥೆಯನ್ನು ಹೇಳುವುದು ವಾಡಿಕೆ. ಅದೇ ರೀತಿಯಲ್ಲಿ ಕೆಳದಿ ಅರಸರ ಉಗಮದಲ್ಲಿಯೂ ಈ ಪುರಾಣ ಕಥೆ ಬೆಳೆದು ಬಂದಿದೆ.

ಕಥೆಯ ಪಾಠ ಈ ಕೆಳಗಿನ ರೀತಿಯಲ್ಲಿರುತ್ತದೆ. ಒಂದು ದಿನ ಚೌಡಗೌಡನು ತನ್ನ ವ್ಯವಸಾಯದ ಭೂಮಿಯಲ್ಲಿ ಕೆಲಸವನ್ನೆಲ್ಲ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಆಯಾಸವಾಗಿದ್ದರಿಂದ ಹತ್ತಿರದಲ್ಲಿರುವ ಒಂದು ಮಾವಿನ ಮರದ ಕೆಳಗೆ ಮಲಗಿ ವಿಶ್ರಮಿಸಿಕೊಳ್ಳಲು, ಸ್ವಲ್ಪ ಹೊತ್ತಿನಲ್ಲಿಯೇ ಗಾಢನಿದ್ರೆ ಬಂದಿತು. ಅದೇ ಸಮಯದಲ್ಲಿ ಮಾರ್ಗಸ್ಥರಾಗಿಕ ವೆಂಕಟಾದ್ರಿ ಯಜಮಾನರೆಂಬ ವಿಪ್ರಶ್ರೇಷ್ಠರೊಬ್ಬರು ಅಲ್ಲಿಗೆ ಬಂದಾಗ ಪ್ರಸಂಗವಶಾತ್ ಅದ್ಬುತವೊಂದನ್ನು ಕಂಡರು. ಮಾವಿನ ಮರದ ಕೆಳಗೆ ಮಲಗಿರುವ ಚೌಡಗೌಡನ ತಲೆಯ ಮೇಲ್ಬಾಗದಲ್ಲಿ ನಾಗಸರ್ಪವೊಂದು ಹೆಡೆಯಾಡಿಸುತ್ತಾ ಅವನ ಮುಖಕ್ಕೆ ನೆರಳನ್ನುಂಟುಮಾಡಿತ್ತು. ಇದನ್ನು ನೋಡಿದ ವೆಂಕಟಾದ್ರಿಜೋಯ್ಸರು ಕ್ಷಣ ಮಾತ್ರದಲ್ಲಿ ಸ್ತಬ್ದರಾಗಿ ಕುತೂಹಲಚಿತ್ತದಿಂದ ಮುಂದಿನ ಘಟನೆಗಳನ್ನು ನಿರೀಕ್ಷಿಸುತ್ತಿದ್ದರು.

ಇತ್ತ ಬಹು ಹೊತ್ತಾದರೂ ತನ್ನ ಮಗನು ಮನೆಗೆ ಬಾರದೇ ಇದ್ದುದರಿಂದ ಚಿಂತಾಕ್ರಾಂತಳಾದ ಬಸವಮಾಂಬೆಯು ಚೌಡಗೌಡನನ್ನು ಹುಡುಕಿಕೊಂಡು ಹೋಗುತ್ತಾ ಗದ್ದೆಯ ಹತ್ತಿರ ಬರುವಾಗ್ಗೆ. ಅಲ್ಲಿ ನಿಂತಿರುವ ತೇಜಸ್ವೀ ಬ್ರಾಹ್ಮಣನನ್ನು ಮತ್ತು ಮರದ ಕೆಳಗೆ ನಿದ್ದೆ ಮಾಡುತ್ತಿದ್ದ ತನ್ನ ಮಗನ ತಲೆಯ ಮೇಲ್ಬಾಗದಲ್ಲಿ ಹೆಡೆಯಾಡಿಸುತ್ತಿರುವ ನಾಗಸರ್ಪವನ್ನೂ ಕಂಡು ಬೆರಗಾದಳು. ತದನಂತರ ಅವಳು ತನ್ನ ಮಗನಿಗೆ ಸರ್ಪವು ಏನು ಮಾಡುವುದೋ ಎಂದು ಗಾಬರಿಯಿಂದ ಅರಚಿಕೊಳ್ಳಲು ಪ್ರಯತ್ನಿಸುವ ಸಂದರ್ಭದಲ್ಲಿ ಜೋಯ್ಸರು ಅವಳಿಗೆ ಧೈರ್ಯ ಹೇಳಿ ಸುಮ್ಮಾನಾಗಿಸಿ “ಸ್ವಲ್ಪ ಕಾಲ ಏನೂ ಸದ್ದು ಮಾಡಬೇಡ. ನಿನ್ನ ಮಗನು ಬಹು ಪುಣ್ಯಶಾಲಿ ಮುಂದೇ ಅವನಿಗೆ ರಾಜ್ಯಾಧಿಪತ್ಯಯೋಗವಿದೆ” ಎಂದರು. ಕೂಡಲೆ ಗೌಡನು ಜೋಯ್ಸರ ಪೂರ್ವೇತಿಹಾಸವನ್ನು ತಿಳಿದು ಕೆಲವು ಕಾಲ ಇಲ್ಲಿಯೇ ಇರಲು ಪ್ರಾರ್ಥಿಸಿದನು.

ಮೇಲೆ ಉಲ್ಲೇಖಿಸಿರುವ ವೆಂಕಟಾದ್ರಿ ಮೂಲತಃ ಆನೆಗೊಂದಿ ಪಟ್ಟಣದ ನಿವಾಸಿಗಳಾಗಿದ್ದರು. ಕೆಲವು ಸಾಮಾಜಿಕ ತೊಡೆರುಗಳಿಂದಾಗಿ ಮನೆಯನ್ನು ತೊರೆದು ಅನೇಕ ಸ್ಥಳಗಳಲ್ಲಿ ಸಂಚರಿಸುವಾಗ ಹಳ್ಳಿಬೈಲಿನ ಹತ್ತಿರ ಕಂಡ ಮೇಲ್ಕಂಡ ದೃಶ್ಯವು ಇವರು ಅಲ್ಲಿಯೇ ನಿಲ್ಲುವಂತೆ ಮಾಡಿತು.

ಇದಕ್ಕೆ ಸಂಬಂಧಿಸಿದಂತೆಯೇ ಗುಂಡಾಜೋಯಿಸ್ ರವರು ಮತ್ತೊಂದು ಸನ್ನಿವೇಶವನ್ನು ಬರೆದಿದ್ದಾರೆ. ಗೌಡನ ಹಸುವೊಂದು ಕೆಲವು ದಿನಗಳವರೆಗೆ ಹಾಲನ್ನು ಕೊಡುತ್ತಿರಲಿಲ್ಲ. ದನಕಾಯುವ ಹುಡುಗನೊಡನೆ ಕಾರಣವನ್ನು ಶೋಧಿಸಲಾಗಿ, ಹಸುವು ಮೇಯಲು ಹೊರಟಾಗ ಅದನ್ನು ಹಿಂಬಾಲಿಸಲು ಅದು ಹತ್ತಿರದಲ್ಲಿರುವ ಹುತ್ತವೊಂದರ ಮೇಲೆ ಹಾಲು ಸುರಿಸುತ್ತಿರುವುದು ಕಂಡುಬಂದಿತು. ಕೂಡಲೇ ಎಲ್ಲರೂ ಸೇರಿ ಹುತ್ತವನ್ನು ಅಗೆಸಲಾಗಿ ಈಶ್ವರಲಿಂಗವೊಂದು ಗೋಚರಿಸಿತು. ಇದನ್ನು ಕಂಡು ಆಶ್ಚರ್ಯದಾನಂದ ತುಂಬಿದವರಾಗಿ ಅದರ ಸುತ್ತಲೂ ಚೊಕ್ಕಟ ಮಾಡಿಸಿ ಅದಕ್ಕೆ ಪೂಜಾದಿ ಕಾರ್ಯಗಳನ್ನು ಏರ್ಪಡಿಸಿದರು. ಅದೇ ದಿನ ರಾತ್ರಿ ಗೌಡನ ಕನಸಿನಲ್ಲಿ ವಿಪ್ರಶ್ರೇಷ್ಠನೊಬ್ಬನು ಕಾಣಿಸಿಕೊಂಡು. ಅರಣ್ಯದಲ್ಲಿನ ಹುತ್ತದೊಳಗಿಂದ ಉದ್ಬವಿಸಿದ ಲಿಂಗವು ಶ್ರೀ ರಾಮೇಶ್ವರಲಿಂಗವೆಂದೂ ಇದರ ಪೂಜಾದಿಗಳನ್ನು ನಿಷ್ಟೆಯಿಂದ ನಡೆಸಿಕೊಂಡು ಬರತಕ್ಕದ್ದೆಂದೂ. ಶೀಘ್ರದಲ್ಲಿಯೇ ಒಂದು ಪ್ರಾತ್ಯದ ಅಧಿಪತಿಯಾಗುವ ಯೋಗವಿದೆಯೆಂದೂ ತಿಳಿಸಿ ಅಂತರ್ಧಾನನಾದನು

ನಂತರ ಇವನಿಗೆ ಹಾವು ಸನ್ನೆಮಾಡಿದ್ದ ಸ್ಥಳದಲ್ಲಿ ಹೇರಳವಾಗಿ ದ್ರವ್ಯ ಸಿಕ್ಕಿ ಇದರಿಂದ ರಾಜ್ಯ ಸ್ಥಾಪಿಸಿದರೆಂದು ಪುರಾಣ ಕಥೆಗಳು ಹಾಗೂ ಜನಪದರೂಪದಲ್ಲಿ ಹೇರಳವಾಗಿ ಕಂಡುಬರುತ್ತದೆ. ಆದರೆ ಇಲ್ಲಿ ಕೆಳದಿ ಅರಸರ ಮೂಲದ ಬಗ್ಗೆ ದೊರಕಿರುವ ವಿಷಯಗಳೆಲ್ಲವೂ ಸಹ ಪುರಾಣ ಮಿಶ್ರಿತವಾದ ಘಟನೆಗಳಾಗಿಯೇ ಹೊರತು ಮಿಶ್ರಿತವಾದ ಇತಿಹಾಸದ ಮೇಲೆ ಅಪಾರ ನಂಬಿಕೆಯಿತ್ತೇ ವಿನಃ ಸತ್ಯವಾದ, ಶುದ್ಧವಾದ ಇತಿಹಾಸದಲ್ಲಿ ಹೆಚ್ಚಿಗೆ ನಂಬಿಕೆ ಕಂಡುಬರುತ್ತಿರಲಿಲ್ಲ. ಇದು ಸತ್ಯವೂ ಕೂಡ, ಇಂದೂ ಸಹ ಮನುಷ್ಯನು ಕಾನೂನು ಕಟ್ಲೆಗಳಿಗೆ ಬೆಲೆಕೊಡುವುದಿಲ್ಲ. ಆದರೆ ಧಾರ್ಮಿಕ ಕಟ್ಲೆಗಳಿಗೆ ಸಂಪೂರ್ಣ ತಲೆಬಾಗಿ ನಡೆಯುವುದನ್ನು ನಾವು ನೋಡುತ್ತಿರುವುದೇ ಆಗಿರುತ್ತದೆ. ಈ ನಿಸರ್ಗ ಪ್ರಕೃತಿಯ ಬದಲಾವಣೆಯು ನಂಬಲು ಅಸಾಧ್ಯವಾಗಿದ್ದರೂ. ಇಂತಹ ಪುರಾಣ ಕಥೆಗಳಂತೂ ದೇಶದುದ್ದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಪ್ರಚಲಿತದಲ್ಲಿರುವುದು ಕಂಡುಬರುತ್ತದೆ.

ಮೇಲಿನದೆಲ್ಲವೂ ಪುರಾಣ ಆಧಾರಗಳಾದರೆ ಗುಂಡಾಜೋಯಿಸರು ಅವರ ಮೂಲವನ್ನು ವಿಜಯನಗರದ ಅರಸರಾದ ಕೃಷ್ಣದೇವರಾಯನಿಂದ ಅನುಮತಿಪಡೆದು ಈ ಪ್ರಾಂತ್ಯದ ಜವಾಬ್ದಾರಿಯನ್ನು ಪಡೆದುಕೊಂಡು ಅವರಿಗೆ ಸಾಮಂತರಾಗಿ ಆಳ್ವಿಕೆ ನಡೆಸಲಾರಂಭಿಸಿದರೆಂದೂ ಕೆಲವು ಆಧಾರಗಳಿಂದ ಸ್ಪಷ್ಟಪಡಿಸಲು ಪ್ರಯತ್ನಿಸುತ್ತಾರೆ. ಇದಕ್ಕೆ ಅನೇಕ ಆಧಾರಗಳು ಲಭ್ಯವಾಗಿವೆ. ಅತಿ ಬಡವರಾದವರು ದಿಢೀರನೆ ಶ್ರೀಮಂತರಾದರೆ ನೋಡುವವರಿಗೆ ಅಸಹನೆ ಅಥವಾ ಹೊಟ್ಟೆಕಿಚ್ಚು ಬರುವುದು ಸಹಜವೇ ತಾನೆ, ಇದರಂತೆ ಕೆಳದಿಯ ಹಳ್ಳಿಬೈಲಿನಲ್ಲಿ ಚೌಡಪ್ಪ – ಭದ್ರಪ್ಪರೀರ್ವರ ಉತ್ಕರ್ಷವನ್ನು ಮತ್ತು ಅಭಿವೃದ್ಧಿಯನ್ನು ಕೇಳಿ ತಿಳಿದಿದ್ದ ವಿಜಯನಗರದ ಅಸ್ಥಾನದಲ್ಲಿನ ಕೆಲವು ಅದಿಕಾರಿಗಳಿಗೆ ಅಸಹನೆಯುಂಟಾಯಿತು. ಅವರೆಲ್ಲರೂ ರಾಜನಲ್ಲಿ ಕೆಳದಿ ನಾಯಕರ ಬಗ್ಗೆ ದುರಾಭಿಪ್ರಾಯ ಮೂಡುವಂತೆ ದೂರಿತ್ತರು. ಕೆಳದಿ ಸಹೋದರ ಖ್ಯಾತಿಯನ್ನೂ ಮತ್ತು ಅವರಿಗೆ ಕರಗತವಾದ ದ್ರವ್ಯದ ಸಂಗತಿಯನ್ನೂ ಮೊದಲೇ ಅರಿತಿದ್ದ ರಾಜನಿಗೆ ಅವರನ್ನು ನೋಡಬೇಕೆಂಬ ಕುತೂಹಲವುಂಟಾಗಿ, ಕೂಡಲೇ ಓಲೆಯನ್ನು ಬರೆಯಿಸಿ, ವಿಜಯನಗರದ ರಾಯಭಾರಿಯನ್ನು ಇಕ್ಕೇರಿಗೆ ಕಳುಹಿಸಿ ಆಸ್ಥಾನಕ್ಕೆ ಬರಲು ಚೌಡಗೌಡ – ಭದ್ರಗೌಡರನ್ನು ಆಹ್ವಾನಿಸಿದನು.

ಸಹೋದರರು ಈ ಆಹ್ವಾನವನ್ನು ಅಂಗೀಕರಿಸಿ ಮಿತಪರಿವಾರದವರೊಡನೆ ವಿಜಯನಗರದ ಆಸ್ಥಾನಕ್ಕೆ ರಾಜಮರ್ಯಾದೆ ಪಡೆದು ಪ್ರವೇಶಿಸಿದರು. ಚಕ್ರವರ್ತಿಯಾದ ಕೃಷ್ಣದೇವರಾಯನು ಇವರಿಬ್ಬರನ್ನು ಉಚಿತಾಸನದಲ್ಲಿ ಕುಳ್ಳರಿಸಿ, ಕೂಸಲ ಪ್ರಶ್ನೆಗಳು ಜರುಗಿದ ತರುವಾಯ ಅವರನ್ನು ಕುರಿತು “ಬಡವರೂ, ರೈತರೂ ಆದ ನೀವು ಹೇಗೆ ಇಷ್ಟು ಪ್ರಾಬಲ್ಯವನ್ನು ಹೊಂದಿದಿರಿ? ನಿಮಗೆ ನಿಕ್ಷೇಪಗಳು ಸಿಕ್ಕಿವೆ ಎಂದು ಕೇಳಿದ್ದೇವೆ, ಅದನ್ನು ರಾಜಭಂಡಾರಕ್ಕೆ ಒಪ್ಪಿಸದೆ ನೀವುಗಳೇ ಉಪಯೋಗಿಸಿಕೊಂಡುದು ರಾಜನೀತಿಗೆ ವಿರೋಧವಾಗಿದೆ. ಅದ್ದರಿಂದ ಅವುಗಳನ್ನು ರಾಜ ಭಂಡಾರಕ್ಕೆ ಒಪ್ಪಿಸಿರಿ” ಎಂದು ಕೇಳಿದನು. ಕೂಡಲೇ ಸಹೋದರರು ತಮಗೆ ನಿಕ್ಷೇಪ ದೊರೆತ ಸಂಗತಿಯನ್ನು ಮತ್ತು ತಮಗೆ ಗೋಚರಿಸಿದ ಕನಸಿನ ವಿವರಗಳನ್ನೂ ಅದರಂತೆ ಕೆಳದಿ ಶ್ರೀ ರಾಮೇಶ್ವರ ಲಿಂಗವು ಉದ್ಬವವಾಗಿ ಕೃಪೆ ಮಾಡಿದ ವಿವರಗಳನ್ನೂ ಸಂಪೂರ್ಣವಾಗಿ ಅರಕೆ ಮಾಡಿಕೊಂಡರು.

ಇದನ್ನು ಕೇಳಿ ರಾಯನು “ನೀವು ಬಹು ಪುಣ್ಯಶಾಲಿಗಳಿರುವಿರಿ; ದುಷ್ಟರಾದ ಆಸ್ಥಾನದ ಅಧಿಕಾರಿಗಳ ಮಾತು ಕೇಳಿ ನಿಮ್ಮನ್ನು ನೋಯಿಸಿದ್ದು ತುಂಬಾ ಅನುಚಿತವಾಗಿದೆ. ಆದ್ದರಿಂದ ನೀವುಗಳು ನಾವು ಮಾಡುವ ಎಲ್ಲಾ ರಾಜಕಾರ್ಯಗಳಿಗೂ ಬೆಂಬಲರಾಗಿದ್ದುಕೊಂಡು ಸನ್ಮತ್ರರಾಗಿರಬೇಕು” ಎಂದು ಹೇಳಿ ಅವರಿಗೆ ಛತ್ರ, ಚಾಮರ, ಪಲ್ಲಕ್ಕಿ ಮೊದಲಾದ ಉಡುಗೊರೆಗಳಿಂದ ಸನ್ಮಾನಿಸಿ ಕೆಲವು ದಿನಗಳವರೆಗೆ ತನ್ನ ಅರಮನೆಯಲ್ಲಿಯೇ ಇರಿಸಿಕೊಂಡು ಸತ್ಕರಿಸಿದನು.

ಕೃಷ್ಣದೇವವರಾಯನ ಅಪ್ಪಣೆಯಂತೆ ನಾಯಕರು ಸಾಮ್ರಾಜ್ಯದ ಒಂದು ಭಾಗದಲ್ಲಿ ಬೇಡರೂ ಮತ್ತು ಇತರ ದುಷ್ಟರೂ ಕೂಡಿಕೊಂಡು ಲಕ್ಷ್ಯವಿಲ್ಲದೆ ಪ್ರಜೆಗಳನ್ನು ಬಹುವಾಗಿ ಹಿಂಸಿಸುತ್ತಿದ್ದುದನ್ನು ಹತ್ತಿಕ್ಕಲು ಅಜ್ಞೆ ಪಡೆದು ಇದರಲ್ಲಿ ಚೌಡಪ್ಪ – ಭದ್ರಪ್ಪ ಇವರಿಬ್ಬರೂ ಪರಾಕ್ರಮದಿಂದ ಹೋರಾಡಿ ದಂಗೆಯನ್ನು ಹತ್ತಿಕ್ಕಿ ಕೃಷ್ಣದೇವರಾಯ ಇವರನ್ನು ಸನ್ಮಾನಿಸಿ ಚಂದ್ರಗುತ್ತಿ, ಕೆಳದಿ, ಇಕ್ಕೇರಿ, ಪೆರ್ಬಯಲು, ಯಲಗಳಲೆ, ಮೋದೂರು, ಕಲಿಸೆ ಮತ್ತು ಪಾತವಾಡಿ ಎಂಬ ಎಂಟು ಮಾಗಣೆಗಳನ್ನಿತ್ತು, ಇದನ್ನು ವಂಶಪಾರಂಪರ‍್ಯವಾಗಿ ಆಳಿ ಅನುಭವಿಸಿಕೊಂಡು ಬರುತ್ತಾ ನಮಗೆ ಸಹಾಯಕರಾಗಿರಬೇಕೆಂದು ಹೇಳಿ ಶಾಸನ ಬರೆಯಿಸಿ, ಅವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ “ಕೆಳದಿ ಮೂಲಸಂಸ್ಥಾನದ ಮೊನ್ನೆಯ ಚೌಡಪ್ಪ ನಾಯಕ” ಎಂದು ಬಿರುದನ್ನಿತ್ತು ಗೌರವಿಸಿ ಮಿತಪರಿವಾರದೊಡನೆ ಕೆಳದಿಗೆ ಕಳುಹಿಸಿಕೊಟ್ಟನು ಎಂದು ಕೆಳದಿ ಗುಂಡಾಜೋಯಿಸ್‌ರವರು ವಿವರಣೆ ನೀಡುತ್ತಾರೆ. ಇದನ್ನು ಅನೇಕ ವಿದ್ವಾಂಸರೂ ಸಹ ಅನುಮೋದಿಸಿರುವುದು ಕಂಡುಬರುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಅನೇಕ ಶಾಸನಗಳಲ್ಲಿ ಹಾಗೂ ಸಾಹಿತ್ಯ ಗ್ರಂಥಗಳಲ್ಲಿಯೂ ಇದೇ ವ್ಯಕ್ತವಾಗಿರುವುದನ್ನು ನಾವು ಕಾಣಬಹುದಾಗಿದೆ.

“ಇಕ್ಕೇರಿ ಅರಸರು” ಎಂಬ ಕೃತಿಯಲ್ಲಿ ನಿರೂಪಿಸಿರುವಂತೆ ಈ ಪಾಳೆಯಪಟ್ಟು ಕ್ರಿ.ಶ. ೧೪೯೯ರಲ್ಲಿ ಉದಯಿಸಿತು. ಇದರ ಪ್ರಥಮ ದೊರೆ ಚೌಡಪ್ಪ ನಾಯಕನು. ಕೆಳದಿಯನ್ನು ರಾಜಧಾನಿಯನ್ನಾಗಿಟ್ಟುಕೊಂಡು ಹದಿಮೂರು ವರ್ಷಗಳವರೆಗೆ ಆಳ್ವಿಕೆ ನೆಡೆಸಿದ್ದನು. ಕ್ರಿ.ಶ. ೧೫೧೨ರಲ್ಲಿ ರಾಜಧಾನಿಯು ಕೆಳದಿಯಿಂದ ಇಕ್ಕೇರಿಗೆ ವರ್ಗಾಯಿಸಲ್ಪಟ್ಟಿತು. ಎರಡನೆ ರಾಜಧಾನಿ ಇಕ್ಕೇರಿಯಲ್ಲಿ ಕ್ರಮವಾಗಿ ಸಾದಶಿವ ನಾಯಕ, ದೊಡ್ಡ ಸಂಕಣ್ಣ, ಚಿಕ್ಕಸಂಕಣ್ಣ, ರಾಮರಾಜನಾಯಕ, ಹಿರಿಯ ಮೆಂಕಟಪ್ಪ ನಾಯಕ ಮತ್ತು ವೀರಭದ್ರ ನಾಯಕರವರುಗಳು ಕ್ರಮವಾಗಿ ಕ್ರಿ.ಶ. ೧೫೧೪ ರಿಂದ ೧೬೪೫ರವರೆಗೂ ಆಳಿದರು. ಅಂದಿನ ಸಂಸ್ಕೃತಿಯನ್ನು ವಿದೇಶಿ ಪ್ರವಾಸಿಗರಾದ, ಇಟಳಿಯನ್ ಪ್ರವಾಸಿ, ಪ್ರಿಯತ್ರೋಡೆಲ್ಲಾವಲ್ಲೆ ಹಾಗೂ ಕ್ರಿ.ಶ. ೧೬೩೭ರಲ್ಲಿ ಯೂರೋಪಿಯನ್ ಪ್ರವಾಸಿ, ಪೀಟರ್ ಮಂಡಿ ಮುಂತಾದವರು ಕಣ್ಣಾರೇ ಕಂಡು ವರ್ಣಿಸಿದ್ದಾರೆ. ಇಷ್ಟೇ ಅಲ್ಲದೆ ಕೆಳದಿ ಅರಸರ ಸಮಗ್ರ ಇತಿಹಾಸವನ್ನೂ ತಿಳಿಯಲು ಅನೇಕ ಸಾಧನ ಸಾಮಗ್ರಿಗಳು ಲಭ್ಯವಿದ್ದು ಅವುಗಳೆಲ್ಲವೂ ಇಂದಿಗೂ ಸಹ ಇತಿಹಾಸದ ಮರೆಯಲ್ಲಿಯೂ ಅಲ್ಲಲ್ಲಿಯೂ ಹರಡಿಕೊಂಡಿವೆ. ತಾಮ್ರಪಟಗಳು, ನಾಣ್ಯಗಳು, ಐತಿಹಾಸಿಕ ಪರಿಸರಗಳು, ಪ್ರಾಚ್ಯ ಅವಶೇಷಗಳು, ಕಡತಗಳು, ಓಲೆಗರಿಗಳು, ಚಾರಿತ್ರಿಕ ದಾಖಲೆಗಳು, ವಿದೇಶೀಯ ಪ್ರವಾಸಿಗರ ಹಾಗೂ ಇತರ ಉಲ್ಲೇಖಗಳು ಈ ದಿಸೆಯಲ್ಲಿ ಸಂಶೋಧನೆಗೆ ಗಮನಾರ್ಹ ಬೆಳಕನ್ನು ಚೆಲ್ಲುತ್ತವೆ.

ವಂಶವೃಕ್ಷ

ಕ್ರಿ.ಶ. ೧೪೯೯ ರಿಂದ ೧೭೬೩ ರವರೆಗೆ ಮಲೆನಾಡಿನ ಮಡಿಲಿನಲ್ಲಿ ವೈಭವದ ಆಳ್ವಿಕೆ ನಡೆಸಿದ ಕೆಳದಿ ಅರಸರು, ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಡಳಿತ ಪ್ರಾರಂಭಿಸಿ ೧೫೬೫ರಲ್ಲಿ ವಿಜಯನಗರ ಸಾಮ್ರಾಜ್ಯವು ರಕ್ಕಸತಂಗಡಿ ಯುದ್ಧದಲ್ಲಿ ಸಂಪೂರ್ಣವಾಗಿ ಸೋತು ಪತನದ ಹಾದಿ ಹಿಡಿದಿದ್ದಾಗ ನಾಯಕನು ಸ್ವತಂತ್ರವಾಗಿ ಆಳ್ವಿಕೆ ನಡೆಸಿಕೊಂಡು ಬರಲಾರಂಭಿಸಿದರು. ದೊರಕಿರುವ ಶಾಸನಾಧಾರ ಹಾಗೂ ಸಾಹಿತ್ಯಧಾರಗಳ ಮೇಲೆ ನಾಯಕರ ಕಾಲಾನುಕ್ರಮವನ್ನು ಈ ಕೆಳಕಂಡಂತೆ ಕೆಳದಿ ಗುಂಡಾಜೋಯಿಸ್‌ರವರು ವರ್ಗೀಕರಿಸಿರುವುದು ಅವರ ಬಿದನೂರಿನ ಕೆಳದಿ ನಾಯಕರು ಎಂಬ ಪುಸ್ತಕದಲ್ಲಿ ಕಂಡುಬರುತ್ತದೆ. ಇದರಿಂದಾಗಿ ಇಕ್ಕೇರಿ ನಾಯಕರ ಆಡಳಿತ ಪದ್ಧತಿ, ಧರ್ಮ, ಸಂಸ್ಕೃತಿ ಹಾಗೂ ರಾಜ್ಯದ ಏಳು – ಬೀಳು ಮೊದಲಾದ ಅಂಶಗಳನ್ನೂ ಗಮನಿಸಬಹುದಾಗಿದೆ.

01_SMS-KUH

ಮೇಲಿನ ಕಾಲಾನುಕ್ರಮಿಕೆಯನ್ನು ಅನೇಕ ಸಾಹಿತ್ಯ ಹಾಗೂ ಶಾಸನಗಳು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಒಂದೇ ಕಾಲಾವಧಿಯನ್ನು ಸೂಚಿಸುತ್ತವೆ. ಮೇಲೆ ಸೂಚಿಸಿರುವ ವಂಶವೃಕ್ಷವನ್ನು ಖ್ಯಾತ ಸಂಶೋಧಕರಾದ ಅಳ್ವಾರೀಸ್, ಡಾ. ಸ್ವಾಮಿನಾಥನ್, ಡಾ. ಕೆ.ಎನ್ ಚಿಟ್ನೀಸ್ ಮೊದಲಾದವರ ನಿರಂತರ ಸಂಶೋಧನೆಯು ಮೇಲಿನದನ್ನೆ ಅನುಮೋದಿಸುತ್ತದೆ.

***