(ಸಾಳ್ವ ಭಾರತದಲ್ಲಿ ಉಲ್ಲೇಖವಾಗಿರುವ ಕೆಲವು ಜೈನಾಚಾರ್ಯರ ಕಿರುಪರಿಚಯವನ್ನು ಇಲ್ಲಿ ಕೊಟ್ಟಿದೆ. ಜೈನ ತೀರ್ಥಂಕರರು ಉತ್ತರ ಭಾರತದಲ್ಲಿ ಜನ್ಮ ಭಾರತದಲ್ಲಿ ಜನ್ಮ ತಳೆದಿದ್ದಾರೆ-ಶ್ರೇಷ್ಠ ಜೈನಾಚಾರ್ಯರೂ, ಅದರಲ್ಲಿಯೂ ದಿಗಂಬರಾಚಾರ್ಯರು ದಕ್ಷಿಣ ಭಾರತದಲ್ಲಿ ಜನ್ಮ ತಳೆದಿದ್ದಾರೆ-ಇದು ಗಮನಾರ್ಹವಾಗಿದೆ. ಕನ್ನಡ ಕವಿಗಳಲ್ಲಿ ಜೈನಾಚಾರ್ಯರ ಹೆಸರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಲ್ಲೇಖಿಸುವವರಲ್ಲಿ, ಶಾಂತಿನಾಥ, ಸಾಳ್ವಕವಿ ಮತ್ತು ಶಿಶುಮಾಯಣ ಮುಂತಾದವರು ಗಣ್ಯರಾಗಿದ್ದಾರೆ.)

ಅಕಲಂಕದೇವ [೧-೧೭]: ತಾರ್ಕಿಕ ಚೂಡಾಮಣಿ, ಜಿನಶಾಸನ ದೀಪಕ ಪ್ರಶಸ್ತಿ ಖ್ಯಾತರಾದ ಅಕಲಂಕದೇವರು (ಅಕಳಂಕ, ಭಟ್ಟಾಕಳಂಕ) ಜೈನ ನ್ಯಾಯಶಾಸ್ತ್ರ ಪ್ರತಿಷ್ಠಾಪಕರು. ಉಮಾಸ್ವಾತಿಗಳ ತತ್ವಾರ್ಥಸೂತ್ರಕ್ಕೆ ‘ತತ್ವಾರ್ಥರಾಜವಾರ್ತಿಕ’ ವೆಂಬ ಟೀಕಾಕಾರರು, ಸಮಂತಭದ್ರರ ಆಪ್ತಮೀಮಾಂಸಾ ಕೃತಿಗೆ ಅಷ್ಟಶತೀ ಎಂಬ ಭಾಷ್ಯಕಾರರು. ಇತರ ಕೃತಿಗಳು: ನ್ಯಾಯವಿನಿಶ್ಚಯ, ಪ್ರಮಾಣ ಸಂಗ್ರಹ, ಲಘೀಯ ಸ್ತ್ರಯ, ಸಿದ್ಧಿವಿನಿಶ್ಚಯ. ಬೌದ್ಧರೊಡನೆ ವಾದಗಳಲ್ಲಿ ಗೆದ್ದು ದಿಗ್ವಿಜಯ ಸಂಪಾದಿಸಿದರು. ಪ್ರಾಚೀನ ನಳಂದ ವಿಶ್ವವಿದ್ಯಾಲಯದಲ್ಲಿ ಧರ್ಮಪಾಲರ ನೇತೃತ್ವದಲ್ಲಿ ಬೌದ್ಧ ಧರ್ಮ ವಿಜೃಂಭಿಸುತ್ತಿದ್ದಾಗ ಅಕಲಂಕರು ಅಹಿಂಸೆ – ಸ್ಯಾದ್ವಾದದ ಧ್ವಜವನ್ನು ಹಾರಿಸಿದ್ದು ಅಸಾಮಾನ್ಯ ಘಟನೆ. ಅಕಲಂಕರ ಕಾಲ ಏಳನೆಯ ಶತಮಾನ.

ಅನಂತವೀರ್ಯ [೧-೧೭]: ಅಕಲಂಕಾಚಾರ್ಯರ ಪಂಥದಲ್ಲಿ ಬಂದ ಗಣ್ಯ ಆಚಾರ್ಯರು. ಅಕಲಂಕರ ಅನುಪಲಬ್ಧ ಕೃತಿಗಳಲ್ಲೊಂದಾದ ಸಿದ್ಧಿ ವಿನಿಶ್ಚಯಕ್ಕೆ ಅನಂತವೀರ್ಯರು ನ್ಯಾಯ ವಿನಿಶ್ಚಯ ವೃತ್ತಿಯೆಂಬ ವಿದ್ವತ್‌ಪೂರ್ಣವಾದ ಟೀಕಾಗ್ರಂಥ ಬರೆದಿದ್ದಾರೆ. ವಾದಿರಾಜರು (೧೧ನೆಯ ಶ.) ತಮ್ಮ ನ್ಯಾಯವಿನಿಶ್ಚಯ ವಿವರಣವೆಂಬ ಕೃತಿಯಲ್ಲಿ ‘ಪ್ರಪಂಚವನ್ನೇ ನುಂಗುವ ಶೂನ್ಯವಾದವೆಂಬ ಅಗ್ನಿಯು ಅನಂತವೀರ್ಯರ ವಚನಾಮೃತ ವೃಷ್ಟಿಯಿಂದ ಶಾಂತವಾಯಿತು’ ಎಂದು ಬರೆದಿದ್ದಾರೆ. ಅನಂತವೀರ್ಯರ ಇನ್ನೆರಡು ಕೃತಿಗಳು ಪ್ರಮಾಣ ಸಂಗ್ರಹ ಭಾಷ್ಯಾ ಮತ್ತು ಪ್ರಮೇಯ ರತ್ನಮಾಲಾ. ಅಕಲಂಕರ ಶಿಷ್ಯರಾದ ಮಾಣಿಕ್ಯ ನಂದಿಗಳು ಪ್ರತಿಪಾದಿಸಿದುದನ್ನು ಅನಂತವೀರ್ಯರು ಎತ್ತಿ ಹಿಡಿದಿದ್ದಾರೆ: ‘ಅಕಲಂಕರ ಶಬ್ದ ಸಾಗರವನ್ನು ಮಥಿಸಿದ ಮಾಣಿಕ್ಯ ನಂದಿಗಳಿಗೆ ನಮಸ್ಕರಿಸುತ್ತೇನೆ.’ ಇವರ ಕಾಲ ಹತ್ತನೆಯ ಶತಮಾನ.

ಅಭಯಸೂರಿ [೧-೪೩]: ಅಭಯ ಚಂದ್ರರೆಂಬ ಹೆಸರಿನ ಆಚಾರ್ಯರಿಗೂ ಈ ಹೆಸರಿತ್ತು. ಇವರು ೧೩೩೩-೧೩೪೩ರಲ್ಲಿದ್ದ ಒಬ್ಬ ಪ್ರಸಿದ್ಧ ಜೈನಾಚಾರ್ಯರು. ಅಭಯಸೂರಿಗಳು. ಚಾವುಂಡರಾಯನ ಗುರುಗಳಾದ ಸಿದ್ಧಾಂತ ಚಕ್ರವರ್ತಿ ನೇಮಿಚಂದ್ರಾಚಾರ್ಯರಿಂದ ರಚಿತವಾದ ಗೊಮ್ಮಟ ಸಾರವೆಂಬ ಗ್ರಂಥಕ್ಕೆ ‘ಮಂದಪ್ರಭೋಧಿನೀ’ ಎಂಬ ಟೀಕಾಕೃತಿಯನ್ನು ರಚಿಸಿದ್ದಾರೆ. ಇವರು ಮಹಿಭೂಷಣಾಚಾರ್ಯರ ಶಿಷ್ಯರು. ಸಾಳ್ವ ಕವಿಯ ಕಾವ್ಯವನ್ನು ಆಲಿಸಿದ ಆಚಾರ್ಯ ವರಗುಮ್ಮಟಾರ್ಯರು ಈ ಅಭಯಸೂರಿಗಳ ಶಿಷ್ಯರು. ಇವರ ಕಾಲ ೧೪ನೆಯ ಶತಮಾನ.

ಅರ್ಹದ್ಬಲಿ [೧-೧೩]: ಇವರು ಆಚಾರಾಂಗ (ಏಕಾಂಗ) ಶ್ರುತಧರರು. ಅರ್ಹದ್ಬಲಿ ಆಚಾರ್ಯರನ್ನು ಪ್ರಾಕೃತದಲ್ಲಿ ಅಹಿವಲ್ಲ ಎಂದು ಹೆಸರಿಸಿದೆ.ಇವರಿಗೆ ಗುಪ್ತಿಗುಪ್ತ ವಿಶಾಖಾಚಾರ್ಯ ಎಂಬ ಹೆಸರುಗಳೂ ಇರುವಂತೆ ತೋರುತ್ತದೆ. ಲೋಹಾಚಾರ್ಯರಾದ ಮೇಲೆ ಈ ಅರ್ಹದ್ಬಲಿಗಳೇ ಪ್ರಮುಖರು. ಇವರಾದ ಮೇಲೆ ಮಾಘನಂದಿ, ಧರಸೇನ, ಧರಸೇನ, ಭೂತಬಲಿ, ಪುಷ್ಟದಂತರು ಬಂದರೆಂಬುದಕ್ಕೆ ಆಧಾರಗಳಿವೆ: ‘ನಂದಿಪಟ್ಟಾವಲೀ’ಯಲ್ಲಿ ಬರುವ ಪದ್ಯ;

ಅಹಿವಲ್ಲಿ ಮಾಘನಂದಿಯ ಧರಸೇಣಂ ಪುಷ್ಪಯಂತ ಭೂದಬಲಿ |
ಅಡವೀಸಮ್ ಇಗವೀಸಮ್ ಉಗಣೀಸಂ ತೀಸವೀಸವಾಸಪುಣೋ ||

ಭದ್ರಾಬಾಹುಗಳ ಶಿಷ್ಯರು ಅರ್ಹದ್ಬಲಿ, ಇವರ ಶಿಷ್ಯರು ಕುಂದ ಕುಂದರು. ಲೋಹಾಚಾರ್ಯ, ಅರ್ಹದ್ಬಲಿ, ಮಾಘನಂದಿ, ಜಿನಚಂದ್ರ, ವಜ್ರಸ್ವಾಮಿ-ಇವರ ಸತೀರ್ಥರು; ಕಾಲ ಸುಮಾರು ಕ್ರಿ.ಪೂ.ಒಂದನೆಯ ಶತಮಾನ.

ಉಮಾಸ್ವಾತಿ [೧-೧೫]: ಉಮಾಸ್ವಾತಿ (-ದ್ವಿ, -ಮಿ)ಗಳು ಶ್ವೇತಾಂಬರ – ದಿಗಂಬರ ಇಬ್ಬರಿಂದ ಮಾನ್ಯರು: ಶ್ವೇತಾಂಬರರು ವಾಚಕಾಚಾರ್ಯರೆಂದೂ, ದಿಗಂಬರರು ಶ್ರುತಕೇವಲೀ ಸದೃಶರೆಂದೂ ಕರೆದಿದ್ದಾರೆ. ಶ್ರುತಕೇವಲಿದೇಶಿಯ, ಗೃಧ್ರ (ಗೃದ್ಧ) ಪಿಂಛಾಚಾರ್ಯ ಎಂಬ ಹೆಸರುಗಳೂ ಇದ್ದಂತೆ ಕಾಣುತ್ತದೆ. ಇವರು ಕುಂದಕುಂದರ ತರುವಾಯದವರು, ಸಮಂತ ಭದ್ರರಿಗಿಂತ ಮೊದಲಿನವರು. ನ್ಯಾಯದರ್ಶನದಲ್ಲಿ ನ್ಯಾಯಸೂತ್ರಗಳಿಗೆ, ವೇದಾಂತ ದರ್ಶನದಲ್ಲಿ ವೈಶೇಷಿಕ ಸೂತ್ರಗಳಿಗೆ, ಮೀಮಾಂಸಾ ದರ್ಶನದಲ್ಲಿ ಜೈಮಿನಿ ಸೂತ್ರಗಳಿಗೆ, ವೇದಾಂತ ದರ್ಶನದಲ್ಲಿ ಬಾದರಾಯಣ ಸೂತ್ರಗಳಿಗೆ, ಯೋಗ ದರ್ಶನದಲ್ಲಿ ಯೋಗ ಸೂತ್ರಗಳಿಗೆ ಇರುವ ಸ್ಥಾನ ಜೈನ ದರ್ಶನದಲ್ಲಿ ಉಮಾಸ್ವಾತಿಗಳ ತತ್ವಾರ್ಥ ಸೂತ್ರಕ್ಕಿದೆ. ಡಾ || ಹೀರಾಲಾಲ್ ಜೈನರ ಅಭಿಪ್ರಾಯದಂತೆ ‘ತತ್ವಾರ್ಥ ಸೂತ್ರವು ಜೈನರ ಬೈಬಲ್, ಕುಂದಕುಂದರ ಕೃತಿಗಳು ಜೈನರ ವೇದಾಂತ. ಉಮಾಸ್ವಾತಿಗಳ ಕಾಲ ಮೂರನೆಯ ಶತಮಾನ. ಉಮಾಸ್ವಾತಿ – ಕುಂದಕುಂದರು ಅಭಿನ್ನರೆಂಬವಾದವೂ ಇದೆ.

ಕವಿಪರಮೇಷ್ಠಿ [೧-೧೯]: ಇವರು ಪ್ರಥಮಾನುಯೋಗಶಾಸ್ತ್ರಬಲ್ಲ ಮಹಾಮುನಿ ಗಳಾಗಿದ್ದರಲ್ಲದೆ ಮಹಾಕವಿಗಳೂ ಹೌದು. ಆಚಾರ್ಯ ಜಿನಸೇನರು ಇವರನ್ನು ಕುರಿತು –

ಸ ಪೂಜ್ಯಃ ಕವಿಭಿರ್ಲೋಕೇ ಕವಿನಾಂ ಪರಮೇಶ್ವರಃ |
ವಾಗರ್ಥ ಸಂಗ್ರಹಂ ಕೃತ್ಸ್ನಂ ಪುರಾಣಂ ಯಃ ಸಮಗ್ರಹೀತ್ ||

ಎಂದೂ, ಗುಣಭದ್ರ ಆಚಾರ್ಯರು –

ಕವಿ ಪರಮೇಶ್ವರ ನಿಗದಿತ ಗದ್ಯ ಕಥಾಮಾತೃಕಂ ಪುರೋಶ್ಚರಿತಮ್
ಸಕಲ ಛಂದೋsಲಂಕೃತಿ ಲಕ್ಷ್ಯಂ ಸೂಕ್ಷ್ಮಾರ್ಥ ಪದರಚನಮ್ ||

ಎಂದೂ ನೆನೆದಿದ್ದಾರೆ. ಆರ್ಷ ಪ್ರಣೀತವಾದ ತ್ರಿಪಷ್ಠಿ ಶಲಾಕಾ ಪುರುಷ ಪುರಾಣವನ್ನು ಗದ್ಯದಲ್ಲಿ ಕವಿಪರಮೇಷ್ಠಿ ಆಚಾರ್ಯರು ರಚಿಸಿದ್ದು ಅದು ಅನುಪಲಬ್ಧವಾಗಿದೆ. ಇವರ ಕಾಲ ಸುಮಾರು ಆರನೆಯ ಶತಮಾನ.

ಕುಂದಕುಂದಾಚಾರ್ಯ [೧-೧೫] : ಇವರಿಗೆ ಪದ್ಮನಂದಿ, ಏಲಾಚಾರ್ಯ, ಗೃಧ್ರಪಿಂಛಾಚಾರ್ಯ (?) ಮೊದಲಾದ ಹೆಸರುಗಳಿದ್ದವು. ಚಾರಣ ಋದ್ಧಿಯಿದ್ದ ದಕ್ಷಿಣದ ಮಹಾನ್ ಆಚಾರ್ಯರಾದ ಕುಂದಕುಂದರಿಗೆ ಕನ್ನಡ ತೆಲುಗು ತಮಿಳು ಭಾಷೆಗಳಲ್ಲಿ ಗೌರವ ಸಾಹಿತ್ಯವಿದೆ. ತಮಿಳಿನ ತಿರುಕ್ಕುರಳ್‌ನ ಕರ್ತೃ ಇವರೇ ಎಂದು ಪ್ರಾ || ಎ. ಚಕ್ರವರ್ತಿಯವರು ಅಭಿಪ್ರಾಯಸಿದ್ದಾರೆ. ದ್ರಾವಿಡ ಸಂಘದ ಸಂಸ್ಥಾಪಕರಲ್ಲೊಬ್ಬರಾದ ಇವರ ಹುಟ್ಟೂರು ಕೌಂಡಕುಂಡ (ಕೌಂಡುಕುಂಡ ಪುರವಾಸಿ). ಕೌಂಡ (ಕವುಂಡ) ಕುಂಡವೆಂಬ ದ್ರಾವಿಡ ಶಬ್ದ ಸಂಸ್ಕೃತೀಕರಣಗೊಂಡು ‘ಕುಂಡಕುಂದ’ ವೆಂದಾಗಿರಬಹುದು. ಡಾ || ಹೀರಾಲಾಲ್ ಜೈನರ ಅಭಿಪ್ರಾಯದಂತೆ ಇವರು ಶ್ವೇತಾಂಬರ-ದಿಗಂಬರ ವಿಭಜನೆಯಾದ ಮೇಲಿನವರು. ಇವರು ೮೪ ಪಾಹುಡ ಗ್ರಂಥಗಳನ್ನೂ, ದಶಭಕ್ತಿಯ ಪ್ರಾಕೃತಸ್ತೋತ್ರ ಪಾಠಗಳನ್ನೂ ರಚಿಸಿದ್ದಾರೆ. ಕ್ರಿಸ್ತಶಕದ ಆರಂಭದಲ್ಲಿದ್ದವರೆಂದು ಡಾ.ಆ.ನೇ. ಉಪಾಧ್ಯೆಯವರ ಅಭಿಪ್ರಾಯ.

ಗೃಧ್ರಪಿಂಛಾಚಾರ್ಯ (೧-೧೩): ಸಾಳ್ವಕವಿ ಉಮಾಸ್ವಾತಿಗಳನ್ನೂ (೧-೧೫) ಗೃಧ್ರಪಿಂಛಾ ಚಾರ್ಯರನ್ನೂ ಪ್ರತ್ಯೇಕವಾಗಿ ಸ್ಮರಿಸಿರುವುದನ್ನು ನೋಡಿದರೆ ಆತನಿಗೆ ಇವರಿಬ್ಬರೂ ಬೇರೆ ಬೇರೆ ಇರಬೇಕೆಂಬ ನಂಬಿಕೆಯಿದ್ದಂತೆ ತೋರುತ್ತದೆ; ಆದರೆ ಇವರಿಬ್ಬರೂ ಅಭಿನ್ನರೆಂಬ ತಿಳುವಳಿಕೆಯಿದೆ (ನೋಡಿ: ಉಮಾಸ್ವಾತಿ). ಅದರಂತೆ ಕುಂದಕುಂದರಿಗೂ ಈ ಹೆಸರು ಇದ್ದಂತೆ ಅಭಿಪ್ರಾಯ ವ್ಯಕ್ತವಾಗಿದೆ (ನೋಡಿ: ಕುಂದಕುಂದಾಚಾರ್ಯ). ಅಲ್ಲದೆ ಕುಂದಕುಂದರಿಗೂ ಈ ಹೆಸರು ಇದ್ದಂತೆ ಅಭಿಪ್ರಾಯ ವ್ಯಕ್ತವಾಗಿದೆ (ನೋಡಿ:ಕುಂದಕುಂದಾಚಾರ್ಯ). ಅಲ್ಲದೆ ಉಮಾಸ್ವಾತಿಳೂ, ಕುಂದ ಕುಂದರೂ ಅಲ್ಲದ ಗೃಧ್ರಪಿಂಛಾಚಾರ್ಯರೆಂಬುವರೊಬ್ಬರು ಇದ್ದಂತೆ ಹೇಳಿಕೆಯಿದೆ. ಕಾಲ ಸರಿಯಾಗಿ ತಿಳಿಯದು. ಡಾ || ಆ.ನೇ.ಉಪಾಧ್ಯೆಯವರು ಉಮಾಸ್ವಾತಿಯವರೇ ಇವರೆಂದು ಒಪ್ಪಿದ್ದಾರೆ. ಕವಿಗಳು ಗೃಧ್ರಪಿಂಛರು, ಸಿದ್ಧಸೇನರು ಮತ್ತು ಸಮಂತಭದ್ರರನ್ನು ‘ರತ್ನತ್ರಯ’ರೆಂದು ಕರೆದಿದ್ದಾರೆ.

ಗುಣಭದ್ರದೇವ [೧-೧೮]: ಆಚಾರ್ಯ ಜಿನಸೇನರ ಶಿಷ್ಯರಾದ ಗುಣಭದ್ರರು ಮಾನ್ಯಖೇಟ ಹಾಗೂ ಬಂಕಾಪುರಗಳಲ್ಲಿ ಬಹುಕಾಲ ನೆಲಸಿದ್ದ ಕನ್ನಡನಾಡಿನ ಆಚಾರ್ಯರು. ಜಿನಸೇನರು ಪ್ರಾರಂಭಿಸಿ ಮುಗಿಸಲಾಗದ ಮಹಾಪುರಾಣದ ಉತ್ತರಾರ್ಧ (ಉತ್ತರ ಪುರಾಣ) ವನ್ನು ಇವುರ ಪೂರ್ತಿಗೊಳಿಸಿದರು. ಕೃತಿಗಳು: ಆತ್ಮಾನುಶಾಸನ, ಉತ್ತರ ಪುರಾಣ, ಜಿನದತ್ತ ಚರಿತೆ, ಭಾವಸಂಗ್ರಹ. ಆತ್ಮಾನುಶಾಸನ ೨೭೨ ಪದ್ಯಗಳ ಆಧ್ಯಾತ್ಮ ಗ್ರಂಥ. ಇದಕ್ಕೆ ಪ್ರಭಾಚಂದ್ರರು ಸಂಸ್ಕೃತದಲ್ಲಿ ಟೀಕೆ ಬರೆದಿದ್ದಾರೆ, ಅಲ್ಲದೆ ಹಿಂದಿಯಲ್ಲೂ ಕನ್ನಡದಲ್ಲೂ ಬೇರೆ ಟೀಕೆಗಳಿವೆ. ವೀರಬಂಕೇಯನ ಮಗ ಲೋಕಾದಿತ್ಯನು ಇವರ ಪರಮಶಿಷ್ಯ. ಗುಣಭದ್ರರಿಗೆ ಜಿನಸೇನರೂ, ಅದರಂತೆ ಆಚಾರ್ಯ ದಶರಥರೂ ಗುರುಗಳು. ಕನ್ನಡ ಕವಿಗಳ ಮೇಲೆ ಗುಣಭದ್ರರ ಪ್ರಭಾವ ಅಪಾರ.ದ ಇವರ ಕಾಲ ಒಂಬತ್ತನೆಯ ಶತಮಾನದ ಅಂತ್ಯಭಾಗ.

ಗುಮ್ಮಟಾರ್ಯ [೧-೪೩] :ಸಾಳ್ವ ಮತ್ತು ಶಿಶುಮಾಯಣರಿಬ್ಬರೂ ಇವರನ್ನು ನೆನೆದಿದ್ದಾರೆ. ಸಾಳ್ವಭಾರತವನ್ನು ‘ವರಗುಮ್ಮಟಾರ್ಯರು ಅವಧಾರಿಸಿದ್ದರಿಂದ ಈ ಕೃತಿಯೆ ಸುಕೃತಿಯಲಾ’ ಎಂದು ಸಾಳ್ವಕವಿ ಹರ್ಷೋದ್ಗಾರವೆತ್ತಿದ್ದಾನೆ. ಇವರು ಮಹಿಭೂಷಣ ಮುನಿಗಳ ಶಿಷ್ಯರಾದ ಅಭಯಸೂರಿಮುನಿಗಳ ಶಿಷ್ಯರು. ಗಮ್ಮಟಾರ್ಯರು ಆಗಮತ್ರಯಸಾರ ಸರ್ವಜ್ಞರು, ವಿನೇಯ ನೃಪಾಲವಂದಿತರು, ಪ್ರತಿವಾದಿಗಜಕಂಠೀರವರು. ಇವರು ಎಲ್ಲೆಲ್ಲ ವಾದಗಳನ್ನು ಮಾಡಿದರೆಂಬುದು ತಿಳಿಯದು. ನಗಿರೆ, ಹಾಡುವಳ್ಳಿ, ಹೊನ್ನಾವರ, ಕಳಸ, ಕಾರಕಳ ರಾಜ್ಯಗಳ ದೊರೆಗಳಿಂದ ಇವರು ಮಾನ್ಯರಾಗಿದ್ದರೆಂದು (ವಿನೇಯ ನೃಪಾಲವಂದಿತರು) ತೋರುತ್ತದೆ. ಇವರ ಕಾಲ ೧೫ನೆಯ ಶತಮಾನದ ಉತ್ತರಾರ್ಧ. ಸಾಳ್ವಕವಿ ಮತ್ತು ಶಿಶುಮಾಯಣರು ಗುಮ್ಮಟಾರ್ಯರ ಶ್ರಾವಕ ಶಿಷ್ಯರು. ಶ್ರವಣ ಬೆಳ್ಗೊಳದ ೪೭೩ (೩೪೨) ನೆಯ ಶಾಸನದಲ್ಲಿ ಉಕ್ತರಾದ ‘ಹಿರಿಯ ಅಯ್ಯಗಳ ಶಿಷ್ಯರು ಗುಂಮಟಂಗಳು’ ಇವರೇ ಎಂದು ತೋರುತ್ತದೆ.

ಚಾರುಕೀರ್ತಿ ಪಂಡಿತಾಚಾರ್ಯ [೧-೧೯] : ಶ್ರವಣ ಬೆಳುಗೊಳದ ಮಠಾಧೀಶರಾದ ಇವರನ್ನು ಬಾಹುಬಲಿಪಂಡಿತನು (೧೩೫೦) ತನ್ನ ಧರ್ಮನಾಥ ಪುರಾಣದಲ್ಲಿ (೧-೨೪)ಸ್ಮರಿಸಿದ್ದಾನೆ. ಇವರು ಕುಂದಕುಂದಾನ್ವಯ ಪುಸ್ತಕಗಚ್ಛ ದೇಶೀಯಗಣದವರು. ಹೊಯ್ಸಳದೊರೆ ಒಮ್ಮಡಿ ಬಲ್ಲಾಳನನ್ನು (೧೧೦೦-೧೧೦೬) ಆಗಿನ ಚಾರುಕೀರ್ತಿಗಳು ರೋಗಮುಕ್ತನನ್ನಾಗಿ ಸಿದ್ದರಿಂದ ಬಲ್ಲಾಳರಾಯ ಜೀವರಕ್ಷಕರೆಂಬ ಬಿರುದಿದೆ. ಶ್ರವಣ ಬೆಳುಗೊಳ ಮತ್ತು ಬಿಳಿಗಿಯ ಶಾಸನಗಳಲ್ಲಿ ಈ ವಿಷಯ ಉಕ್ತ. ಇವರು ಸಿಂಹಪುರ (ಚಿಟ್ಟಾಂಬೂರ್-ಚಿತ್ತಾಮೂರ್-ಚಿತಾಂಬ್ರ-ಚಿತಾಮ್ರ) ದವರು. ಕೃತಿಗಳು: ಗೀತವೀತರಾಗ ಪ್ರಬಂಧ (ಋಷಭನಾಥರ ಚರಿತೆ) ಮತ್ತು ಜಿನಸೇನರ ಪಾರ್ಶ್ಚಾಭ್ಯುದಯ ಟೀಕೆ; ಇವೆರಡೂ ಸಂಸ್ಕೃತದಲ್ಲಿವೆ. ಇವರ ಕಾಲವನ್ನು ೧೫ನೆಯ ಶತಮಾನದ ಪೂರ್ವಾರ್ಧವೆಂದು ಡಾ || ಆ.ನೇ.ಉಪಾಧ್ಯೆಯವರು ಸಾದರಪಡಿಸಿದ್ದಾರೆ.

ಜಿನಚಂದ್ರ [೧-೧೪]: ಈಗ ತಿಳಿದು ಬರುವಂತೆ ಇಬ್ಬರು ಜಿನಚಂದ್ರ ಮುನಿಗಳಿದ್ದಾರೆ. ಇವರಲ್ಲಿ ಒಬ್ಬರನ್ನು ಪೊನ್ನಕವಿ ತನ್ನ ಶಾಂತಿಪುರಾಣದಲ್ಲಿ ಸ್ಮರಿಸಿದ್ದಾನೆ. ಸಾಳ್ವಕವಿ ಸ್ತುತಿಸುವ ಜಿನಚಂದ್ರರು ಕುಂದಕುಂದರಿಗಿಂತ ಪೂರ್ವದವರು, ಸು.ಕ್ರಿಪೂ ೧೭ರಲ್ಲಿ ಇದ್ದವರು. ಈ ಜಿನಚಂದ್ರರು ೨೪ ವರ್ಷ ಒಂಬತ್ತು ತಿಂಗಳು ಗೃಹಸ್ಥಾಶ್ರಮದಲ್ಲಿದ್ದು ದೀಕ್ಷಿತರಾಗಿ ೩೨ ವರ್ಷ ಸನ್ಯಾಸಶ್ರಮದಲ್ಲಿದ್ದರು. ಇವರು ಮೂಲ ಸಂಘದ ನಂದಿ ಆಮ್ನಾಯಬಲಾತ್ಕಾರಗಣ ಸರಸ್ವತೀ ಗಚ್ಛದ ಪಟ್ಟಾವಲಿಗೆ ಸೇರಿದವರು. ಇವರ ಕಾಲ ಕ್ರಿ.ಪೂ.೧ನೆಯ ಶತಮಾನದ ಕಡೆಗಾಲ.

ಜಿನಸೇನ [೧-೧೭]: ಸಮಂತಭದ್ರರ ಶಿಷ್ಯ ಪರಂಪರೆಯ ವೀರಸೇನರ ಶಿಷ್ಯರು ಈ ಜಿನಸೇನರು. ಇವರ ಶಿಷ್ಯರು ಗುಣಭದ್ರರು. ಜಿನಸೇನರು ಪಂಚಸ್ತೂಪಾನ್ವಯದ ಸೇನಸಂಘದ ಆಚಾರ್ಯರು. ಇವರು ತಮ್ಮ ಕೃತಿಯಲ್ಲಿ ತಮಗಿಂತ ಹಿಂದೆ ಆಗಿಹೋದ ಕೆಲವು ಜೈನಾಚಾರ್ಯರನ್ನು ಸ್ಮರಿಸಿರುವುದು ಅವರ ಕಾಲನಿರ್ದೇಶನಕ್ಕೆ ಅತ್ಯುಪಯುಕ್ತ. ರಾಷ್ಟ್ರಕೂಟ ಚಕ್ರವರ್ತಿ ಅಮೋಘ ವರ್ಷ ನೃಪತುಂಗ (ಬೊದ್ದಣರಾಯ)ನಿಗೆ ಇವರು ರಾಜಗುರು. ಕನ್ನಡ ಕವಿಗಳ ಮೇಲೆ ಜಿನಸೇನರ ಪ್ರಭಾವ ಅಚ್ಚಳಿಯದಷ್ಟು ಗಾಢ. ಜಿನಸೇನರ ಕೃತಿಗಳು : ಆದಿಪುರಾಣ (ಪೂರ್ವ ಪುರಾಣ), ಜಯಧವಲಾ ಟೀಕೆ, ಪಾರ್ಶ್ವಾಭ್ಯುದಯ, ವರ್ಧಮಾನ ಪುರಾಣ; ಇವುಗಳಲ್ಲಿ ಕಡೆಯ ಕೃತಿ ಅನುಪಲಬ್ಧ. ಪಾರ್ಶ್ವಾಭ್ಯುದಯ ಕಾಳಿದಾಸನ ಮೇಘದೂತನ ಮಾದರಿಯಲ್ಲಿ ೨೬೪ ಮಂದಾಕ್ರಾಂತ ವೃತ್ತಗಳಿರುವ ಕೃತಿ. ಜಯಧವಲಾ ಟೀಕೆ ಸಂಸ್ಕೃತ ಪ್ರಾಕೃತ ಸಮ್ಮಿಶ್ರ ಶೈಲಿಯಲ್ಲಿದೆ. ಆದಿಪುರಾಣ ಜಿನಸೇನರ ಮಹಾಕಾವ್ಯ. ಪಂಪನ ಆದಿಪುರಾಣಕ್ಕೆ ಇದೇ ಮೂಲ ಆಕರ. ಜಿನಸೇನರ ಕಾಲ ಒಂಬತ್ತನೆಯ ಶತಮಾನದ ಪೂರ್ವಾರ್ಧ.

ಧರ್ಮಚಂದ್ರ [೧-೨೩]: ಇವರು ಕವಿ ಸಾಳ್ವನ ಗುರು. ‘ಪೆತ್ತ ಮದ್ಗುರು ಧರ್ಮಚಂದ್ರ ಬುಧೋತ್ತಮರ ಪದಕೆರಗಿ’ ಕವಿ ತನ್ನ ಗುರುಗೌರವವನ್ನು ಸಾದರಪಡಿಸಿದ್ದಾನೆ. ಇವರ ವಿಷಯವಾಗಿ ಹೆಚಿನ ಸಂಗತಿಗಳು ತಿಳಿಯದು. ಈ ಧರ್ಮಚಂದ್ರರ ಕಾಲಕೂಡ ೧೫ ನೆಯ ಶತಮಾನದ ಉತ್ತರಾರ್ಧ.

ನೇಮಿಚಂದ್ರ [೧-೧೭]: ಸಿದ್ಧಾಂತ ಚಕ್ರವರ್ತಿಯೆಂದು ಪ್ರಸಿದ್ಧರಾದ ನೇಮಿಚಂದ್ರಾ ಚಾರ್ಯರು ಹತ್ತನೆಯ ಶತಮಾನದ ಕನ್ನಡ ನಾಡಿನ ಗಣ್ಯ ಆಚಾರ್ಯರು. ಇವರು ಚಾವುಂಡರಾಯನ ಪೂಜ್ಯ ಆಚಾರ್ಯರು. ಶಿಷ್ಯ ವತ್ಸಲ ಪ್ರೇರಣೆಯಿಂದ ಚಾವುಂಡರಾಯನಿಗಾಗಿ ಇಡೀ ಜೈನ ಧರ್ಮದ ಮಹತ್ವವನ್ನು ಸಾರಸಂಗ್ರಹವಾಗಿ ನಿರೂಪಿಸುವ ಗೊಮ್ಮಟ ಸಾರವನ್ನು ನೇಮಿಚಂದ್ರರು ಪ್ರಾಕೃತದಲ್ಲಿ ರಚಿಸಿದ್ದಾರೆ. ಗೊಮ್ಮಟ (ಮನ್ಮಥ?ಕೂಷ್ಮಾಂಡ?) ಎಂಬುದು ಚಾವುಂಡರಾಯನಿಗಿದ್ದ ಪ್ರಿಯವಾದ ಬಿರುದು. ಅದರಿಂದಲೇ ಆತ ಶಿಲೆಯಲ್ಲಿ ಮಾಡಿಸಿದ ಬಾಹುಬಲಿ (ಭುಜಬಲಿ) ಮೂರ್ತಿಗೆ ಗೊಮ್ಮಟೇಶ್ವರನೆಂಬ ಹೆಸರು. ನೇಮಿಚಂದ್ರರು ಗೊಮ್ಮಟನಿಗಾಗಿ ಬರೆದ ಬರೆದ ಜಿನಧರ್ಮಸಿದ್ಧಾಂತ ಸಾರಕ್ಕೂ ಗೊಮ್ಮಟಸಾರವೆಂಬ ಹೆಸರು. ನೇಮಿಚಂದ್ರರು ದ್ರವ್ಯ ಸಂಗ್ರಹ, ತ್ರಿಲೋಕ ಸಾರ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕುಂದಕುಂದಾಚಾರ್ಯರ ತರುವಾಯ ಪ್ರಾಕೃತದಲ್ಲಿ ಶಾಸ್ತ್ರಗ್ರಂಥಗಳನ್ನು ರಚಿಸಿದವರಲ್ಲಿ ನೇಮಿಚಂದ್ರ ಪ್ರಮುಖರು. ಇವರ ಕಾಲ ೧೦ ನೆಯ ಶತಮಾನ.

ಪ್ರಭೇಂದು [೧-೧೮]: ಸಾಳ್ವ, ಮುಮ್ಮಡಿ ಮಂಗರಸ, ಆದಿಯಪ್ಪ, ದೇವಪ್ಪ ಮೊದಲಾದ ಕವಿಗಳು ಪ್ರಭೇಂದುಗಳನ್ನು ಬಹು ಗೌರವದಿಂದ ನೆನೆದಿದ್ದಾರೆ. ಮಂಗರಸನು ‘ಸ್ವಗುರು ಚಿಕ್ಕ ಪ್ರಭೇಂದುವನ್ನು ಹೆಸರಿಸಿರುವುದರಿಂದ ಅವರಿಗಿಂತ ಹಿಂದಿನವರಾದ ಈ ಪ್ರಭೇಂದುಗಳೂ ೧೪ನೆಯ ಶತಮಾನದ ಕಡೆಯಲ್ಲೊ ೧೫ನೆಯ ಶತಮಾನದ ಆದಿಯಲ್ಲೋ ಆಗಿಹೋಗಿರಬೇಕೆಂದು ಊಹಿಸಬಹುದು. ಆದರೆ ಪ್ರಭೇಂದು [ಪ್ರಭಾ-ಇಂದು(=ಚಂದ್ರ)] ಎಂಬ ಶಬ್ದವನ್ನು ಪ್ರಭಾಚಂದ್ರ (ಅಥವಾ ಚಂದ್ರಪ್ರಭಾ) ಎಂಬ ಶಬ್ದದ ಪರ್ಯಾಯವಾಗಿ ಬಳಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಹಸ್ತಿಮಲ್ಲಾಚಾರ್ಯರು ಕೂಡ ತಮ್ಮ ಸುಭದ್ರಾಹರಣ ನಾಟಕದ ಕಡೆಯ ಮೂರು ಪದ್ಯಗಳಲ್ಲಿ ಪ್ರಭೇಂದುಗಳನ್ನು (ಪ್ರಭಾ ಚಂದ್ರಾಚಾರ್ಯರನ್ನು) ನೆನೆದಿದ್ದಾರೆ. ಹಸ್ತಿಮಲ್ಲರ ಕಾಲ ಸು.೧೩೨೦. ಅದರಿಂದ ಪ್ರಭೇಂದು ಅಥವಾ ಪ್ರಭಾಚಂದ್ರರ ಕಾಲ ಇನ್ನೂ ಹಿಂದಕ್ಕೆ ಹೋಗುತ್ತದೆ; ಚಾವುಂಡರಾಯನು ಇವರನ್ನು ಸ್ಮರಿಲ್ಲವಾದ ಕಾರಣ ಇವರ ಕಾಲ ೧೦ನೆಯ ಶತಮಾನದ ತರುವಾಯ ಆಗುತ್ತದೆ. ಪ್ರಭೇಂದುಗಳೆಂಬುವರು ಪ್ರಮೇಯ ಕಮಲ ಮಾರ್ತಾಂಡ ಮೊದಲಾದ ಕೃತಿಗಳನ್ನು ಬರೆದ ಪ್ರಭಾಚಂದ್ರರೇ ಎಂಬುದಾಗಿ ನಿರ್ಧರಿಸಬಹುದು. ಪ್ರಭೇಂದುವು ಭೋಜರಾಜನ ಸಭೆಯಲ್ಲಿ ಅಮಾವಾಸ್ಯೆಯನ್ನು ಹುಣ್ಣಿಮೆಯನ್ನಾಗಿ ಮಾಡಿದರೆಂದು ಪಾಮವರ್ಣಿ ತನ್ನ ಜ್ಞಾನಚಂದ್ರ ಚರಿತೆಯಲ್ಲಿ ಹೇಳಿದ್ದಾನೆ. ಈ ಪ್ರಭೇಂದುಗಳ ಕಾಲ ೧೧ನೆಯ ಶತಮಾನ. ಮೂರನೆಯ ಮಂಗರಸನ ಗುರುಗಳಾದ ಚಿಕ್ಕ ಪ್ರಭೇಂದುಗಳ ಕಾಲ ಸು.೧೫೦೦.

ಪಾಲ್ಯಕೀರ್ತಿ [೧-೨೨]: ಪಾಲ್ಯಕೀರ್ತಿ ಅಥವಾ ಪಾಲಕೀರ್ತಿಯು ವ್ಯಾಕರಣದಲ್ಲಿ ಘನ ವಿದ್ವಾಂಸರಾಗಿದ್ದು ಶಾಕಟಾಯನ ವ್ಯಾಕರಣವನ್ನು ರಚಿಸಿದ್ದಾರೆ. ಶಾಕಟಾಯನ ವ್ಯಾಕರಣ ರಚಿಸಿದ್ದರಿಂದ ಪಾಲ್ಯಕೀರ್ತಿಗೆ ಶಾಕಟಾಯನ ಎಂಬ ಹೆಸರೂ ಬಳಕೆಯಾಗಿದೆ. ಪಾಲ್ಯಕೀರ್ತಿಯು ತಮ್ಮ ವ್ಯಾಕರಣದ ಮೇಲೆ ತಾವೇ ‘ಅಮೋಘ’ ವೃತ್ತಿಯೆಂಬ ಟೀಕೆಯನ್ನೂ ರಚಿಸಿದ್ದಾರೆ. ಮತ್ತೊಂದು ಮುಖ್ಯವಾದ ಮಾತೆಂದರೆ ಇವರು ಯಾಪನೀಯ ಸಂಘದ ಆಚಾರ್ಯರೆಂಬುದು. ಪ್ರಾಚೀನಾಚಾರ್ಯರಾದ ವೀರಸೇನ, ಜೀನಸೇನ, ಗುಣಭದ್ರ, ವಿದ್ಯಾನಂದ, ಅನಂತವೀರ್ಯ ಇವರೆಲ್ಲ ಒಂಬತ್ತನೆಯ ಶತಮಾನಕ್ಕೆ ಸೇರಿದ ಆಚಾರ್ಯರು. ಸಾಳ್ವಕವಿ ಈ ಪದ್ಯದಲ್ಲಿ ಪಾಲ್ಯಕೀರ್ತಿಗಳು ಸಾಯಂಕಾಲದಿಂದ ಬೆಳಗ್ಗೆವರೆಗೆ, ಬೇಸಗೆ ಮಾಗಿ ಮಳೆಗಾಲವೆನ್ನದೆ ಹಾವು ಹುಲಿಗಳಿಗೆ ಹೆದರದೆ ನಟ್ಟಡವಿಯಲ್ಲಿ ನಿಂತು ಧ್ಯಾನ ಜಪವೆಸಗಿದ ಸಂಗತಿಯನ್ನು ಹೇಳಿದ್ದಾನೆ. ಪಾಲ್ಯಕೀರ್ತಿಗಳ ಕಾಲ ಎಂಟನೆಯ ಶತಮಾನ. ೧೨ನೆ ಶತಮಾನಕ್ಕೆ ಸೇರಿದ ಇನ್ನೊಬ್ಬ ಪಾಲ್ಯ ಕೀರ್ತಿಗಳಿದ್ದಾರೆ. ಅವರು ಯಾಪನೀಯ ಸಂಘದ ವಂದಿಯೂರ್ ಗಣದ ಬಾಲಕೀರ್ತಿಗಳ ಶಿಷ್ಯರಾದ ಮುನಿಚಂದ್ರರ ಶಿಷ್ಯರು.

ಪಾಲದಿದೇವ [೧-೨೧]: ಪಾಲಾದಿದೇವ ಅಥವಾ ಪೋಲಾದಿದೇವರ ವಿಷಯ ಅಷ್ಟಾಗಿ ತಿಳಿಯದು. ಇವರು ಸುಮಾರು ಹತ್ತನೆಯ ಶತಮಾನದ ಆಚಾರ್ಯರೆಂದು ತೋರುತ್ತದೆ. ಪಾಲ್ಯಕೀರ್ತಿಯ ಶಬ್ದಾನುಶಾಸನದ ಮೇಲೆ ‘ರೂಪಸಿದ್ಧಿ’ ಎಂಬ ಟೀಕಾ ಗ್ರಂಥವನ್ನು ಬರೆದ ದಯಾಪಾಲ ಮುನಿಯೇ ಈ ಪಾ (ಪೋ) ಲಾದಿದೇವರಿರಬಹುದೇ?

ಪುಷ್ಪದಂತ [೧-೧೪]: ಇವರು ಆಚಾರಾಂಗ (ಏಕಾಂಗ) ಶ್ರುತಧರರು. ಅರ್ಹದ್ಬಲಿ ಆಚಾರ್ಯರ ಅನಂತರ ಬಂದ ಶ್ರೇಷ್ಠ ಆಚಾರ್ಯರಾದ ಧರಸೇನಾಚಾರ್ಯರ ಶಿಷ್ಯವರೇಣ್ಯರು ಈ ಪುಷ್ಪದಂತರು ಮತ್ತು ಭೂತಬಲಿ ಆಚಾರ್ಯರು. ಇವರಿಬ್ಬರೂ ದಕ್ಷಿಣದವರು. ಇಬ್ಬರಿಗೂ ಗುರುಗಳಾದ ಧರಸೇನರು ಮಾತ್ರ ಸೌರಾಷ್ಟ್ರದೇಶದವರು, ಅಲ್ಲಿನ ಗಿರನಗರದ ಬಳಿಯ ಊರ್ಜಯಂತಗಿರಿಯ ಚಂದ್ರಗುಹೆಯಲ್ಲಿ ಈ ಮುನಿಮುಖ್ಯರು ತಪವೆಸಗಿದರು. ಪುಷ್ಪದಂತರು ಭೂತ ಬಲಿಗಳಿಗಿಂತ ಹಿರಿಯರು (‘ಜ್ಯೇಷ್ಠ’). ಪುಷ್ಟದಂತರು ವನವಾಸ (ಬನವಾಸಿ) ದೇಶಕ್ಕೆ ಬಂದು ನಿಂತರೆಂಬುದಕ್ಕೆ ಆಧಾರಗಳಿವೆ. ಅದರಿಂದ ಅವರು ಕರ್ನಾಟಕದವರೆನ್ನಬಹುದು. ವನವಾಸ (ಬನವಾಸಿ) ದೇಶದಲ್ಲಿದ್ದಾಗ ಪುಷ್ಪದಂತರು ತಮ್ಮ ಸೋದರಳಿಯನಾದ ಜಿನಪಾಲಿತನಿಗೆ ದೀಕ್ಷೆಯಿತ್ತು ಆತನಿಗಾಗಿ, ಷಟ್ಬಂಡಾಗಮದ ಮೊದಲ ಖಂಡವಾದ ಜೀವಸ್ಥಾನದ ಎಂಟು ಅನುಗಮಗಳಲ್ಲೊಂದಾದ ಸತ್ಪ್ರರೂಪಣೆಯನ್ನು ೧೭೭ ಸೂತ್ರಗಳಲ್ಲಿ ರಚಿಸಿದರು. ಇವರ ಕಾಲ ೨ನೆಯ ಶತಮಾನ.

ಪೂಜ್ಯಪಾದ [೧-೧೬]:ಜೈನಾಚಾರ್ಯರಲ್ಲಿ ಪ್ರಸಿದ್ಧರು, ಕನ್ನಡ ಕವಿಗಳಿಂದ ಬಹುಸ್ತುತ್ಯರು. ಉಮಾಸ್ವಾತಿಗಳ ತತ್ವಾರ್ಥಸೂತ್ರಕ್ಕೆ ಸರ್ವಸಿದ್ಧಿಯೆಂಬ ಟೀಕೆಯನ್ನು ಅಯ್ದೂವರೆ ಸಾವಿರ ಶ್ಲೋಕ ಪ್ರಮಾಣದಲ್ಲಿ ರಚಿಸಿದ್ದಾರೆ. ಪೂಜ್ಯಪಾದರು ವಿಖ್ಯಾತ ವೈಯಾಕರಣಿ, ಸುಕವಿ, ಗಗನ ಸಮರ್ಥರು, ತಾರ್ಕಿಕ ತಿಲಕರು, ಹಾಗೂ ವೈದ್ಯ ವಿಜ್ಞಾನಿ. ಇವರ ಜೈನೇಂದ್ರ ವ್ಯಾಕರಣ ಪ್ರಸಿದ್ಧಿ ಪಡೆದಿದೆ. ಪೂಜ್ಯಪಾದರಿಗೆ ದೇವನಂದಿಯೆಂಬ ಹೆಸರೂ ಇದ್ದಿರಬಹುದು. ಇವರದು ಪ್ರಭಾವಶಾಲಿ ವ್ಯಕ್ತಿತ್ವ. ಸಮಕಾಲೀನ ಹಾಗೂ ಅನಂತರದ ಆಚಾರ್ಯರ ಮೇಲೆ ಇವರ ವರ್ಚಸ್ಸು ಬಿದ್ದಿದೆ. ಗಂಗವಂಶದ ಪ್ರಸಿದ್ಧ ದೊರೆಯಾದ ದುರ್ವಿನೀತನಿಗೆ (೪೮೨-೫೨೨) ಪೂಜ್ಯಪಾದರು ಗುರುಗಳು. ಇವರ ಕೃತಿಗಳು: ಸರ್ವಾರ್ಥಸಿದ್ಧಿ, ಪಾಣಿನಿ ಶಬ್ದಾವತಾರ, ಜೈನೇಂದ್ರ ವ್ಯಾಕರಣ, ಪಂಚವಸ್ತುಕ, ಸಮಾಧಿತಂತ್ರ, ಇಷ್ಟೋಪದೇಶ. ಪೂಜ್ಯಪಾದರ ಕಾಲ ೫ ನೆಯ ಶತಮಾನದ ಅಂತ್ಯ.

ಭೂತಬಲಿ [೧-೧೪] : ಇವರು ಆಚಾರಾಂಗ (ಏಕಾಂಗ) ಶ್ರುತಧರರು. ಪುಷ್ಪದಂತರು ಇವರ ಸಹೋದರರು (ಸಹಯೋಗಿಗಳು ಮತ್ತು ಹಿರಿಯರು. ಮಹಾವೀರರು ಮುಕ್ತರಾದ ಆರನೂರು ಎಂಬತ್ತಮೂರು ವರ್ಷಗಳ ತರುವಾಯ ಇದ್ದ ಧನಸೇನಾಚಾರ್ಯರು ಪುಷ್ಪದಂತರಿಗೂ ಭೂತಬಲಿಗಳಿಗೂ ಆಚಾರ್ಯರು, ಉಪದೇಶಕರು. ವೇಣಾಕತಟದ ಕಡೆಯಿಂದ ಹೋಗಿ ಈ ಶಿಷ್ಯರಿಬ್ಬರೂ ಗುರುಗಳ ಬಳಿ ಶಿಕ್ಷಣ ಪಡೆದು ವನವಾಸ ದೇಶಕ್ಕೆ ಬಂದರು. ಭೂತಬಲಿಗಳು ಅಲ್ಲಿಂದ ಮಧುರೆಗೆ ಹೋದರು. ಅಲ್ಲಿ ಇವರು ಜೀವಸ್ಥಾನದ ಏಳು ಅನುಗಮನಗಳನ್ನೂ, ಕ್ಷುದ್ರಬಂಧ, ಬಂಧಸ್ವಾಮಿತ್ವವಿಚಯ, ವೇದನಾಖಂಡ, ವರ್ಣನಾಖಂಡ, ಮಹಾ ಬಂಧ-ಎಂಬ ಇತರ ಐದು ಖಂಡದ ಆಗಮನವನನ್ನು ಗ್ರಂಥರೂಪಕ್ಕಿಳಿಸಿದರು. ಈ ಪವಿತ್ರ ಗ್ರಂಥ ರಚನೆ ಜ್ಯೇಷ್ಠ ಶುದ್ಧ ಪಂಚಮಿಯೆಂದು ಪೂರೈಸಿದ್ದರಿಂದ ಅಂದು ಶ್ರುತಪಂಚಮಿ ಪೂಜೆ, ಆಚರಿಸುತ್ತಾರೆ. ಇವರ ಕಾಲ ಎರಡನೆಯ ಶತಮಾನ.

ಮಯೂರ ಪಿಂಛಾಚಾರ್ಯ [೧-೧೩]: ಜೈನಾಚಾರ್ಯರು ಪಿಂಛ (ಪಿಂಛಿ) ಮತ್ತು ಕಮಂಡಲು ಎಂಬ ಎರಡು ವಸ್ತುಗಳನ್ನು ಮಾತ್ರ ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ಈ ಪಿಂಛವನ್ನು ಗೋವಿನಬಾಲದ ಕೂದಲುಗಳಿಂದಲೂ, ಗೃಧ್ರದ (ಹದ್ದಿನ) ಗರಿಗಳಿಂದಲೂ, ನವಿಲಿನ ಗರಿಗಳಿಂದಲೂ ಮಾಡುತ್ತಿದ್ದರು. ಇದರಿಂದ ಇವುಗಳಿಗೆ ಕ್ರಮವಾಗಿ ಗೋಪಿಂಛ, ಗೃಧ್ರಪಿಂಛ ಮತ್ತು ಮಯೂರ ಪಿಂಛ ಎಂಬ ಹೆಸರುಗಳಾದುವು. ಮಯೂರ ಪಿಂಛವನ್ನು ಉಪಯೋಗಿಸುವವರು ಮಯೂರ ಪಿಂಛಾಚಾರ್ಯರು. ಅದರೆ ಇಲ್ಲಿ ಸಾಳ್ವಕವಿ ಮಯೂರ ಪಿಂಛಾಚಾರ್ಯ ಎಂಬುದನ್ನು ಸಾಮಾನ್ಯರ್ಥದಲ್ಲಿ ಸಾಧರಣೀಕರಿಸಿಲ್ಲ. ಇಮ್ಮಡಿ ಗುಣ ವರ್ಮನೂ, ವೃತ್ತವಿಲಾಸನೂ ಮುಮ್ಮಡಿ ಮಂಗರಸಕವಿಯೂ ಮಯೂರ ಪಿಂಛಾಚಾರ್ಯರನ್ನು ಸ್ಮರಿಸಿದ್ದಾರೆ. ಸಾಳ್ವನು ತನ್ನ ಪದ್ಯದಲ್ಲಿ

ಆರ್ಯನುತ…….ಸುರಗಿರಿ
ಧೈರ್ಯರೆನಿಸಿದ ಗೃಧ್ರಪಿಂಛಾ
ಚಾರ್ಯರಮಳ ಮಯೂರಪಿಂಛಾರ್ಯರಡಿಗೆರಗೀ |

ಎಂದು, ಸ್ಪಷ್ಟವಾಗಿ ಹೇಳಿದ್ದಾನೆ. ಆಚಾರ್ಯರು ಸುಮಾರು ಒಂದನೆಯ ಶತಮಾನದಲ್ಲಿದ್ದಿರಬಹುದು.

ಮಹಿಭೂಷಣಮುನಿ [೧-೨೧] :ಇವರನ್ನು ಸಾಳ್ವಕವಿ ಮತ್ತು ಶಿಶುಮಾಯಣಕವಿ ಇಬ್ಬರೂ ಸ್ಮರಿಸಿದ್ದಾರೆ. ಇವರ ವಿಚಾರವಾಗಿ ಹೆಚ್ಚು ತಿಳಿಯದು. ಇವರ ಕಾಲ ಸುಮಾರು ೯ನೆಯ ಶತಮಾನ.

ಮಾರ್ಘಣಂದಿ [೧-೧೮]: ಅಂಗಪೂರ್ವದೇಶದ ಪ್ರಕಾಶಕರಲ್ಲಿ ಅರ್ಹದ್ಬಲಿ ಮುನಿಗಳಾದ ಮೇಲೆ ಬಂದವರು ಮಘನ[ಣ]ಂದಿಗಳು. ಇವರಾದಮೇಲೆ ಧರಸೇನಾಚಾರ್ಯರು ಪ್ರಸಿದ್ಧರು. ಮಾಘನಂದಿಗಳನ್ನು ಶಾಂತಿನಾಥನೇ ಮೊದಲಾದ ಹಲವು ಕನ್ನಡ ಕವಿಗಳು ಸ್ತುತಿಸಿದ್ದಾರೆ. ಲೋಹಾಚಾರ್ಯರ್ಯದ್ಬಲಿ-ಮಾಘನಂದಿ-ಧರಸೇನ-ಪುಷ್ಪದಂತ-ಭೂತಬಲಿ ಇದು ಈ ಪ್ರಾಚೀನಾಚಾರ್ಯರ ಕ್ರಮ. ಮಾಘನಂದಿಗಳು ೨೧ವರ್ಷ ಆಚಾರ್ಯರಾಗಿದ್ದರು. ಇವರ ಕಾಲ ಕ್ರಿ.ಪೂ.೧ನೆಯ ಶತಮಾನ (ಅಕಲಂಕಾಚಾರ್ಯಾನಂತರದ ಮಹಾ ನ್ಯಾಯಶಾಸ್ತ್ರಜ್ಞರೂ, ಶಾಸ್ತ್ರಸಾರ ಸಮುಚ್ಚಯ ಕರ್ತೃವೂ ಆದ ಮಾಘನಂದಿ ಎಂಬ ಇನ್ನೊಬ್ಬ ಆಚಾರ್ಯರೂ ಇದ್ದಾರೆ. ಇವರ ಕಾಲ ಸು. ೮ನೆಯ ಶತಮಾನ).

ಮಾಣಿಕ್ಯನಂದಿ [೧-೧೮] :ಕೇವಲ ಛಂದಸ್ಸಿನ ಸೌಕರ್ಯಕ್ಕಾಗಿ ಸಾಳ್ವಕವಿ ಮಾಣಿಕನಂದಿ ಎಂದು ಕರೆದಿದ್ದರೂ ಮಾಣಿಕ್ಯನಂದಿ ಎಂಬುದೇ ಸರಿಯಾದ ರೂಪ. ಅಕಲಂಕಾನಂತರದ ಉಚ್ಚನ್ಯಾಯಶಾಸ್ತ್ರಜ್ೞರಾದ ಇವರ ಕೃತಿ ಪರೀಕ್ಷಾಮುಖವು ಅಕಲಂಕಾಚಾರ್ಯರ ಕೃತಿಗೆ ಬರೆದ ಸೂತ್ರಗ್ರಂಥ. ಇದರಲ್ಲಿ ಪ್ರಮಾಣ (ಪ್ರತ್ಯಕ್ಷ-ಪರೋಕ್ಷ-ಅನುಮಾನ) ಮತ್ತು ಪ್ರಮಾಣಾಭಾಸಗಳ ಹೃದ್ಯ ವಿವೇಚನೆಯಿದೆ. ದಿಗಂಬರ ಸರಸ್ವತೀಗಚ್ಛದ ಪಟ್ಟಾವಲಿಯಂತೆ ೫೨೩ ರಲ್ಲಿ ಇವರು ಪಟ್ಟಧರರಾದರೆಂದು ತಿಳಿದುಬರುತ್ತದೆಯಾದರೂ ಅದನ್ನು ಒಪ್ಪಲಾಗುವುದಿಲ್ಲ. ಇವರು ಆಲಂಕರಿಗೆ ಉತ್ತಮ ಭಾಷ್ಯಕಾರರಾಗಿದ್ದುಕೊಂಡು ಅಕಲಂಕರ ನ್ಯಾಯಸರಣಿಯನ್ನು ಮುಂದುವರಿಸಿದ್ದಾರೆ. ಇವರ ಪರೀಕ್ಷಾಮುಖಕ್ಕೆ ಅನಂತವೀರ್ಯಾಚಾರ್ಯರೇ ಪ್ರಮೇಯ ರತ್ನಮಾಲಾ ಎಂಬ ವ್ಯಾಖ್ಯಾನ ಬರೆದಿದ್ದಾನೆ. ಕಮಲಮಾರ್ತಾಂಡದ ಕರ್ತೃ ಪ್ರಭಾಚಂದ್ರರು ‘ಮಾಣಿಕ್ಯ ನಂದಿಗಳ ಕೃತಿಯದ್ವಾರಾ ಅಕಲಂಕರ ವಿಷಯ ಪ್ರತಿಪಾದನೆ ಗ್ರಹಿಸಲು ಸುಲಭಸಾಧ್ಯ’ ವೆಂದು ಭಾವಿಸಿದ್ದಾರೆ. ಮಾಣಿಕ್ಯನಂದಿಗಳ ಕಾಲ ಒಂಬತ್ತನೆಯ ಶತಮಾನ.

ಮೇರುನಂದಿ [೧-೨೧]: ಇವರೂ ಒಂಬತ್ತನೆಯ ಶತಮಾನದ ಜೈನಾಚಾರ್ಯರು.

ರಾಮಚಂದ್ರ [೧-೧೮]: ಮಾಘನಂದಿ ತ್ರೈವಿದ್ಯದೇವರು ಮತ್ತು ಶುಭಚಂದ್ರ ತ್ರೆವಿದ್ಯದೇವರು (ಶುಭಚಂದ್ರರು ದೇವಕೀರ್ತಿ ಪಂಡಿತದೇವರ ಶಿಷ್ಯರು) – ಇವರಿಬ್ಬರೂ, ಜತೆಗೆ ರಾಮಚಂದ್ರ ತ್ರೈವಿದ್ಯದೇವರು ಹಾಗೂ ಅಕಲಂಕ ತ್ರೈವಿದ್ಯದೇವರೂ ಸಮಕಾಲೀನರು. ಇವರೆಲ್ಲರೂ ಕನಕ ನಂದಿ ಮತ್ತು ದೇವಚಂದ್ರರೆಂಬ ಆಚಾರ್ಯರ ಸಧರ್ಮಿಗಳು. ಇವರ ಕಾಲ ಎಂಟನೆಯ ಶತಮಾನ. ಹೇಮಚಂದ್ರರ (೧೦೮೮-೧೧೭೨) ಶಿಷ್ಯರಾದ ರಾಮಚಂದ್ರರು ಬೇರೆ ಇದ್ದಾರೆ. ಅವರ ಕೃತಿ ದ್ರವ್ಯಾಲಂಕಾರ. ಕಾಲ (೧೨ನೆ ಶ.)

ರಾಮಸೇನ [೧-೧೭]: ಆಚಾರ್ಯ ಜಿನಸೇನರ ಸತೀರ್ಥರಾದ ಆಚಾರ್ಯ ವೀರಸೇನರ ಶಿಷ್ಯರಾದ ಕುಮಾರಸೇನರ (ವಿ.ಸಂ.೭೫೩) ಕಾಷ್ಠಾ ಸಂಘಕ್ಕೆ ಸಂಬಂಧಿಸಿದಂತೆ ವಿ.ಸಂ. ೯೫೩ರಲ್ಲಿ ಮಧುರೆಯಲ್ಲಿ ಮಾಥುರ ಸಂಘವನ್ನು ಸ್ಥಾಪಿಸಿದವರು ಈ ರಾಮಸೇನರು. ನಂದಿತಟದಲ್ಲಿ ವಾಸಿಸುತ್ತಿದ್ದ ಕಾಷ್ಠಾಸಂಘಸ್ಥಾಪಕರಾದ ಕುಮಾರಸೇನರು ಕರ್ಕಶಕೇಶ (ದನದ ಕೂದಲಪಿಂಛ) ಧರಿಸುತ್ತಿದ್ದರು. ಮಯೂರಪಿಂಛವನ್ನು ವಿರೋಧಿಸುತ್ತಿದ್ದರು. ಮಧುರೆಯಲ್ಲಿದ್ದ ರಾಮಸೇನರು ಮುನಿಗಳಿಗೆ ಪಿಂಛವೇ ಬೇಡವೆಂದೂ ನಿಃಪಿಂಛಕರಾಗಿರುವಂತೆಯೂ ಬೋಧಿಸಿದರು, ಈ ಸಂಘಕ್ಕೆ ಮಾಥುರ ಸಂಘವೆಂದು ಹೆಸರಾಯಿತು. ಆಚಾರ್ಯ ರಾಮಸೇನರ ಶಿಷ್ಯರು ಆಚಾರ್ಯ ಮಾಥುರರು. ರಾಮಸೇನರಿಂದ ಸ್ಥಾಪಿತವಾದ ಮಾಥುರ ಸಂಘವನ್ನು, ಕುಮಾರಸೇನರಿಂದ ಸ್ಥಾಪಿತವಾದ ಕಾಷ್ಠಾಸಂಘದ ಶಾಖೆಯೆಂದು ಪರಿಗಣಿಸುತ್ತಾರೆ. ರಾಮಸೇನರ ಕಾಲ ೯ನೆಯ ಶತಮಾನದ ಅಂತ್ಯ ಮತ್ತು ೧೦ ನೆಯ ಶ.ದ ಆರಂಭ.

ವಾಸುವೇಂದು [೧-೧೮]: ವಾಸುವೇಂದು ಎಂಬುದು ದೇವಚಂದ್ರ ಎಂಬ ಹೆಸರಿನ ಬೇರೊಂದು ರೂಪವೆಂದು ತೋರುತ್ತದೆ. ಮಾಘನಂದಿ, ಶುಭಚಂದ್ರ, ಕನಕನಂದಿ, ರಾಮಚಂದ್ರ ಮೊದಲಾದ ಆಚಾರ್ಯರೂ ವಾಸವೇಂದುಗಳೂ ಸಮಕಾಲೀನರು. ಇವರ ಕಾಲ ಎಂಟನೆಯ ಶತಮಾನ.

ವಿಜಯಕೀರ್ತಿ [೧-೨೧]: ಶೃಂಗಾರಾರ್ಣವ ಚಂದ್ರಿಕಾ ಎಂಬ ಕೃತಿಯನ್ನು ರಚಿಸಿರುವ ವಿಜಯವರ್ಣಿಗಳ ಶಿಷ್ಯರಾದ ಈ ವಿಜಯಕೀರ್ತಿಗಳನ್ನು ಹಲವು ಜೈನ (ಕನ್ನಡ) ಕವಿಗಳು ಸ್ತುತಿಸಿದ್ದಾರೆ. ವಿಜಯಕೀರ್ತಿ ಎಂಬ ಹೆಸರಿನ ಜೈನಾಚಾರ್ಯರು ಕೆಲವರಿದ್ದಾರೆ.

೧. ಪೂಜ್ಯಪಾದರ ಶಿಷ್ಯನಾದ ದುರ್ವಿನೀತನ ತಂದೆಯಾದ ಗಂಗರ ದೊರೆ ಅವಿನೀತನ (೪೩೦-೪೮೨) ರಾಜಗುರುಗಳಾದ ವಿಜಯಕೀರ್ತಿಗಳು

೨. ರಟ್ಟರ ದೊರೆ ಮುಮ್ಮಡಿ ಗೋವಿಂದನು (೭೯೨-೭೧೪) ಒಬ್ಬ ವಿಜಯಕೀರ್ತಿಗಳ ಶಿಷ್ಯರಾದ ಆಚಾರ್ಯ ಅರಿಕೀರ್ತಿ (ಅರ್ಕಕೀರ್ತಿ ?)ಗೆ ದತ್ತಿಕೊಟ್ಟಿದ್ದನು.

೩. ವಿಜಯವರ್ಣಿಗಳ ಶಿಷ್ಯರಾದ ವಿಜಯಕೀರ್ತಿಗಳು

ಇವರಲ್ಲಿ ಸಾಳ್ವಕವಿ ಸ್ಮರಿಸಿರುವುದು ಕಡೆಯ ವಿಜಯಕೀರ್ತಿಗಳನ್ನು; ಇವರ ಕಾಲ ೧೩ನೆಯ ಶತಮಾನ – ಎಂದು ಭಾವಿಸಬಹುದಾದರೂ ಸಂಗೀತಪುರದ ಜೈನ ಆಚಾರ್ಯದಲ್ಲಿ ಬರುವ ಒಮ್ಮಡಿ ವಿಜಯಕೀರ್ತಿಗಳನ್ನು ಸಾಳ್ವಕವಿ ಸ್ಮರಿಸಿದ್ದಾನೆಂದು ತಿಳಿಯುವುದಕ್ಕೆ ಅನ್ಯ ಆಧಾರಗಳಿವೆ.

ವಿದ್ಯಾನಂದ [೧-೧೮]: ಆಚಾರ್ಯ ವಿದ್ಯಾನಂದರು ಉಮಾಸ್ವಾತಿಗಳದ ತತ್ವಾರ್ಥ ಸೂತ್ರಕ್ಕೆ ‘ತತ್ವಾರ್ಥ ಶ್ಲೋಕವಾರ್ತಿಕ’ ವೆಂಬ ಟೀಕೆಯನ್ನು ರಚಿಸಿದ್ದಾರೆ. ಇವರು ಅಕಲಂಕಾಚಾರ್ಯರ ಶಿಷ್ಯರು. ಜಿನಸೇನಾಚಾರ್ಯರೂ ತಮ್ಮ ಆದಿ ಪುರಾಣದಲ್ಲಿ ವಿದ್ಯಾನಂದರನ್ನು ಪರಕೇಸರಿ ಸ್ವಾಮಿ ಎಂಬ ವಿಶೇಷಣದಿಂದ ಗೌರವಿಸಿದ್ದಾರೆ. ಹಿಂದೂ ಧರ್ಮದ ಇನ್ನಿತರ ಸಮಕಾಲೀನ ಶಾಖೆಗಳ ತರ್ಕ ಹಾಗೂ ತತ್ವಗಳನ್ನು ಕೂಡಾ ಪ್ರಸ್ತಾಪಿಸಿರುವುದು ವಿದ್ಯಾನಂದರ ಕೃತಿಗಳ ಹಿರಿಮೆ. ವಿವಿಧ ದರ್ಶನಗಳ ಪಾರಗಾಮಿ ವಿದ್ವಾಂಸರೂ ಪಾಟಲಿಪುತ್ರದವರೂ ಆದ ವಿದ್ಯಾನಂದರು ಅಕಲಂಕಾಚಾರ್ಯರ ಅಷ್ಟಸತೀ ಗ್ರಂಥಕ್ಕೆ ಅಷ್ಟ ಸಹಸ್ರೀ ಎಂಬ ಬೃಹತ್ ಕೃತಿ ಬರೆದಿದ್ದಾರೆ. ಕೃತಿಗಳೂ: ಅಷ್ಟಸಹಸ್ರೀ, ಆಪ್ತಪರೀಕ್ಷಾ, ತತ್ವಾರ್ಥಶ್ಲೋಕವಾರ್ತಿಕ, ಪತ್ರಪರೀಕ್ಷಾ, ಇವೆಲ್ಲ ಪ್ರೌಢ ದಾರ್ಶನಿಕ ಗ್ರಂಥಗಳಾಗಿವೆ. ಇವರ ಕಾಲ ಒಂಬತ್ತನೆಯ ಶತಮಾನದ ಆರಂಭ. (ವಿದ್ಯಾನಂದ ಎಂಬ ಹೆಸರಿನ ಅಚಾರ್ಯರು ಹಲವರಿದ್ದಾರೆ.)

ವಿಶಾಲಕೀರ್ತಿ [೧-೧೬]: ವಿಶಾಲಕೀರ್ತಿಗಳು ಪಂಡಿತ ಪ್ರವರ ಆಶಾಧರರ ಶಿಷ್ಯರಲ್ಲೊಬ್ಬರು. ಆಶಾಧರರು ವಿಶಾಲಕೀರ್ತಿಗಳಿಗೆ ತರ್ಕಶಾಸ್ತ್ರವನ್ನು ಓದಿಸಿದ್ದರು. ಇವರನ್ನು ೧೩೫೦ ರಲ್ಲಿದ್ದ ಬಾಹುಬಲಿ ಪಂಡಿತ ಕವಿ ತನ್ನ ಧರ್ಮನಾಥ ಪುರಾಣದಲ್ಲಿ ಹೆಸರಿಸಿದ್ದಾನೆ. ಈಗಲೂ ಲಾಕೂರು ಮಠಾಧೀಶರಿಗೆ ವಿಶಾಲಕೀರ್ತಿಗಳೆಂಬ ಹೆಸರಿದೆ. ಇವರ ಕಾಲ ೧೩ನೇ ಶತಮಾನದ ಉತ್ತರಾರ್ಧ. ಆದರೆ ಆಂಧ್ರದ ಕರ್ನೂಲು ಜಿಲ್ಲೆಯ ಆಲೂರು ತಾ || ನ ಚಿಪ್ಪಗಿರಿಗೆ ಸೇರಿದ ೧೬ನೆಯ ಶತಮಾನದ ದಾಖಲೆಯೊಂದರಲ್ಲಿ ಆದವಾನಿಯ ವಿಶಾಲಕೀರ್ತಿ ಆಚಾರ್ಯರ ಉಲ್ಲೇಖವಿದೆ (A.R.on SIE ೧೯೪೩ – ೪೪ ಮತ್ತು ೪೪-೪೫). ಸಾಳ್ವ ಕವಿ ಈ ಇಮ್ಮಡಿ ವಿಶಾಲಕೀರ್ತಿಗಳನ್ನು ಸ್ಮರಿಸಿದ್ದಾನೆಯೆ?

ವೀರಸೇನ [೧-೧೭] : ಇವರು ಆಚಾರ್ಯ ಜಿನಸೇನರ ಸತೀರ್ಥರು. ಈ ವೀರಸೇನರ ಶಿಷ್ಯರು ಕುಮಾರ ಸೇನರು; ಈ ಕುಮಾರ ಸೇನರು ಕಾಷ್ಠಾ ಸಂಘವನ್ನು ಸ್ಥಾಪಿಸಿದರು. ಇವರು ನಂದಿತಟದಲ್ಲಿ ವಾಸಿಸುತ್ತಿದ್ದರು. ‘ಆರ್ಯ ಆರ್ಯನಂದಿಯ ಶಿಷ್ಯನೂ ಚಂದ್ರಸೇನನ ಪ್ರಶಿಷ್ಠನೂ ಪಂಚಸ್ತೂಪಾನ್ವಯದ ಸೂರ್ಯನೂ ಆದ ವೀರಸೇನ ಸ್ವಾಮಿ’ ಎಂಬರ್ಥದ ಪ್ರಾಕೃತ ಪದ್ಯ ಧವಲ ಟೀಕೆಯ ಪ್ರಶಸ್ತಿಯಲ್ಲಿದೆ. ವೀರಸೇನರು ಸಂಸ್ಕೃತ ಪ್ರಾಕೃತ ಭಾಷೆಗಳಲ್ಲಿ ವಿಶಾರದರಾಗಿದ್ದರು. ಜತೆಗೆ ಅಗಮಗಳ ತಜ್ಞರೂ ಆಗಿದ್ದರು. ವೀರಸೇನರು ಷಟ್ ಖಂಡಾಗಮ ಸೂತ್ರಕ್ಕೆ ೭೨ ಸಾವಿರ ಶ್ಲೋಕಗಳ ಧವಲಾಟೀಕೆಯನ್ನೂ, ಕಷಾಯಪ್ರಾಭೃತಕ್ಕೆ ೨೦ಸಾವಿರ ಶ್ಲೋಕಗಳ ಜಯಧವಲಾ ಟೀಕೆಯನ್ನೂ ಬರೆದಿದ್ದಾರೆ. ಇವರ ಕಾಲ ೮ನೆಯ ಶತಮಾನ.

ಶ್ರುತಕೀರ್ತಿ[೧-೨೧] : ಶ್ರುತುಕೀರ್ತಿ ಎಂಬ ಹೆಸರಿನ ಆಚಾರ್ಯರು ಕೂಡ ಹಲವರಿದ್ದಾರೆ. ಕಡೆಯ ಪಕ್ಷ ಆರು ಜನರಾದರೂ ಇದ್ದಾರೆ. ಕದಂಬರ ದೊರೆ ಕಾಕುತ್ಸ್ಥವರ್ಮನು (೪೨೫-೪೫೦) ಯುವರಾಜನಾಗಿದ್ದಾಗ ರವಿಕೀರ್ತಿ ಮತ್ತು ಶ್ರುತುಕೀರ್ತಿಗೆ ಬೋಧವರ ಕ್ಷೇತ್ರವನ್ನು ದಾನಮಾಡಿದ ಸಂಗತಿ ಶಾಸನದಲ್ಲಿದೆ (1A.VI. ಪುಟ ೨೪): ಈ ಕಾಕುತ್ಸ್ಥವರ್ಮನ ಮೊಮ್ಮಗನಾದ ಮೃಗೇಶವರ್ಮನು (೪೭೦-೪೮೮) ವೈಜಯಂತಿಯಲ್ಲಿನ ದತ್ತಿಯಲ್ಲಿ ದಾಮಕೀರ್ತಿಯ ತಾಯಿಗೆ ದತ್ತಿಕೊಟ್ಟ ಸಂಗತಿಯಿದೆ (1A.VII. ಪುಟ ೩೬-೩೭). ಅಗ್ಗಳ ಕವಿಯ ಗುರುಗಳಾದ ಶ್ರುತ ಕೀರ್ತಿಗಳು ಬೇರೆ ಇದ್ದಾರೆ. ಆದರೆ ಸಾಳ್ವಭಾರತದಲ್ಲಿ ಸಾಳ್ವಕವಿ ಹೇಳುವ ಶ್ರುತಕೀರ್ತಿಗಳು ಕವಿಯ ಗುರು: ‘ಕಲಿಕಾಲಜಿನನೆನೆ ಸೊಗಯಿಪೆನ್ನೆಯ ಗುರುಗಳಾ ಪದಯುಗಕೆ ಭಕ್ತಿಯೊಳೆರಪೆನಾ ಶ್ರುತಕೀರ್ತಿ ದೇವರನೂ’ ಎಂದು ಹೇಳಿದ್ದಾರೆ. ಅದರಿಂದ ಇವರ ಕಾಲ ೧೫ನೆಯ ಶತಮಾನದ ಉತ್ತರಾರ್ಧವೆಂದು ಹೇಳಬಹುದು; ಇವರು ಸಂಗೀತ ಪುರದ ಒಮ್ಮಡಿ ವಿಜಯಕೀರ್ತಿಗಳ ಶಿಷ್ಯರಾದ ಇಮ್ಮಡಿ ಶ್ರುತಿಕೀರ್ತಿಗಳು.

ಸಮಂತಭದ್ರ I [೧-೧೬]: ಜೈನಶಾಸ್ತ್ರ ಪ್ರಣೀತರಾದ ಸಮಂತಭದ್ರರು ಅತಿ ಪ್ರಭಾವ ಶಾಲಿ ಆಚಾರ್ಯರು. ಮಗಧ ದೇಶದ ರಾಜ ಶ್ರೇಣಿಕನಂತೆ (ಬಿಂಬಸಾರ) ಸಮಂತಭದ್ರರು ಕೂಡ ಭವಷ್ಯತ್ ಕಾಲದ ತೀರ್ಥಂಕರರಾಗುವರು. ಶ್ರವಣಬೆಳ್ಗೊಳ ಶಾಸನ ೨೫೪ ರಲ್ಲಿ ಇವರ ಪ್ರಸ್ತಾಪವಿದೆ. ಮಲ್ಲಿಷೇಣರು ಕೂಡ ಸಮಂತ ಭದ್ರರನ್ನು ‘ಜೈನ ದಿಗಂತವನ್ನು ಬೆಳಗಿದ ಚಂದ್ರ’ರೆಂದು ಕರೆದಿದ್ದಾರೆ. ವಿದ್ಯಾನಂದರು ‘ಪರೀಕ್ಷೇಕ್ಷಣ’ರೆಂದೂ (ಪರೀಕ್ಷಾ ನೇತ್ರಗಳಿಂದ ಇಲ್ಲವನ್ನೂ ಕಾಣುವಂಥವರು), ವಾದಿರಾಜರು ‘ಸ್ವಾಮಿ, ದೇವ’ ಎಂದೂ ಕರೆದಿದ್ದಾರೆ.

ಸಮಂತಭದ್ರ ಸ್ವಾಮಿಗಳ ಲಬ್ಧ ಕೃತಿಗಳು : ಆಪ್ತಮೀಮಾಂಸಾ (ದೇವಾಗಮ), ಜಿನಸ್ತುತಿ ಶತಕ, ಬೃಹತ್ ಸ್ವಯಂಭೂ ಸ್ತೋತ್ರ, ಯುಕ್ತ್ಯಾನುಶಾಸನ (ವೀರಜಿನ ಸ್ತೋತ್ರ) ರತ್ನ ಕರಂಡ (ಕ) ಶ್ರಾವಕಾಚಾರ. ಇದರಿಂದ ರಚಿತವಾದ ಕರ್ಮಪ್ರಾಭೃತಟೀಕಾ, ಗಂಧಹಸ್ತಿ ಮಹಾಭಾಷ್ಯ, ತತ್ವಾನುಶಾಸನ, ಪ್ರಾಕೃತ ವ್ಯಾಕರಣ, ಪ್ರಮಾಣ ಪದಾರ್ಥ, ಜೀವಸಿದ್ಧಿ ಮೊದಲಾದ ಕೃತಿಗಳು ಅನುಪಲಬ್ಧ, ಸಮಂತಭದ್ರರನ್ನು ಅಕಲಂಕರೂ (ಅಷ್ಟಶತೀ), ವಿದ್ಯಾನಂದಿಗಳೂ (ಅಷ್ಟಸಹಸ್ರೀ), ಜಿನಸೇನರೂ (ಆದಿಪುರಾಣ), ಪುನ್ನಾಟ ಜಿನಸೇನರೂ (ಹರಿವಂಶ), ವಾದಿರಾಜ ಸೂರಿಗಳೂ (ನ್ಯಾಯವಿನಿಶ್ಚಯ ವಿವರಣ ಮತ್ತು ಪಾರ್ಶ್ವನಾಥ ಚರಿತೆ), ವೀರನಂದಿಗಳೂ (ಚಂದ್ರಪ್ರಭಚರಿತೆ), ಹಸ್ತಿಮಲ್ಲರೂ (ವಿಕ್ರಾಂತ ಕೌರವ ನಾಟಕ), ಪಂಪ ಮೊದಲಾದ ಕನ್ನಡ ಕವಿಗಳೂ ಗೌರವ ಪುರಸ್ಸರವಾಗ ಸ್ಮರಿಸಿದ್ದಾರೆ.

ಏಳನೆಯ ಶತಮಾನದ ಕುಮಾರಿಲನು ಸಮಂತಭದ್ರರನ್ನು ಸ್ಮರಿಸುವುದರಿಂದ ಇವರು ಅದಕ್ಕಿಂತ ಹಿಂದಿನವರೆಂಬುದು ಸ್ಪಷ್ಟ. ಸ್ವಾಮಿ ಸಮಂತಭದ್ರರ ಉಪಾಸನಾ ದೇವಿ ಯಕ್ಷಿ ಜ್ವಾಲಾ ಮಾಲಿನಿದೇವಿ. ಇವರ ಸಂಬಂಧವಾದ ಸ್ಥಳಪುರಾಣಗಳು ನಗಿರೆ (ಗೇರುಸೊಪ್ಪೆ), ನರಸಿಂಹರಾಜಪುರ (ಸಿಂಹನಗದ್ದೆ)ಗಳಲ್ಲಿ ಉಪಲಬ್ಧವಾಗಿವೆ (ಎಕ VI, ಕೊಪ್ಪ ತಾಲೂಕಿನ ಎಡೆಹಳ್ಳಿಯ ಶಾಸನ, ೧೫ನೆಯ ಶತಮಾನ). ಅಲ್ಲದೆ ಸಮಂತಭದ್ರರೆಂಬ ಹೆಸರಿನ ಆಚಾರ್ಯರು ಹಲವರಿದ್ದಾರೆ. ಉದಾಹರಣೆಗೆ ೧೫ನೆಯ ಶತಮಾನದ ಪೂರ್ವಾರ್ಧದಲ್ಲಿ ಆಗಿಹೋದ ಮಾಘನಂದಿ ವ್ರತಿಗೆ (ಐತಿಹಾಸಿಕ ಸ್ತುತಿ ಅಥವಾ ಚಿಕ್ಕ ಸಮಂಥಭದ್ರ ಸ್ತೋತ್ರದ ಕರ್ತೃ) ಚಿಕ್ಕ ಅಥವ ಲಘು ಸಮಂತಭದ್ರರೆಂಬ ಹೆಸರಿದೆ; ಇವರು ಆಚಾರ್ಯ ಅಮರ ಕೀರ್ತಿಯ ಶಿಷ್ಯರು! ಚಿಕ್ಕ (ಲಘು) ಸಮಂತಭದ್ರರ ಶಿಷ್ಯನಾದ ಭೋಗರಾಜನು ೧೪೫೯ರಲ್ಲಿ ಶಾಂತಿನಾಥ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಸಂಗತಿ (S.I,Jainism, part II,ಪುಟ ೫೭) ಶಾಸನದಿಂದ ತಿಳಿದುಬರುತ್ತದೆ.

ಸ್ವಾಮಿ ಸಮಂತಭದ್ರರ ರತ್ನಕರಂಡಕ್ಕೆ ಕನ್ನಡದಲ್ಲಿ ವರ್ಧಮಾನ ಸಿದ್ಧಾಂತಿ ದೇವನ ಶಿಷ್ಯನಾದ ಆಯತವರ್ಮನೆಂಬ ಕವಿ (೧೪೦೦) ಚಂಪೂ ರೂಪದಲ್ಲಿ ವ್ಯಾಖ್ಯಾನ ಬರೆದಿದ್ದಾನೆ. ಅದಲ್ಲದೆ ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಇನ್ನೂ ಕೆಲವು ಅನುವಾದ ಕೃತಿಗಳಿವೆ, ಮಿರ್ಜಿ ಅಣ್ಣಾರಾಯರು ಹೊಸಗನ್ನಡ ಅನುವಾದ ಪ್ರಕಟಿಸಿದ್ದಾರೆ (ಜೀವರಾಜ ಜೈನ ಗ್ರಂಥಮಾಲಾ, ಕನ್ನಡ ಗ್ರಂಥ ೧, ಸೊಲ್ಲಾಪುರ. ೧೯೬೦) ಜೆ.ಮುಕ್ತಾರೆಯವರ ಹಾಗೂ ಪಂಡಿತ ನಾಥೂರಾಮ್ ಪ್ರೇಮಿಯವರ ಪುಸ್ತಕಗಳಲ್ಲಿ ಇನ್ನೂ ಹೆಚ್ಚಿನ ವಿವರಗಳು ಸಿಗುತ್ತವೆ. ಸಮಂತ ಭದ್ರರ ಕಾಲ ನಾಲ್ಕನೆಯ ಶತಮಾನ. (ಸಾಳ್ವಕವಿ ಇಬ್ಬರು ಸಮಂತಭದ್ರರನ್ನು ಸ್ಮರಿಸಿದ್ದಾನೆ; ಇನ್ನೊಬ್ಬರ ವಿವರ ಮುಂದೆ ಕೊಟ್ಟಿದೆ.)

ಸಮಂತಭದ್ರ II [೧-೨೧]: ಸಾಳ್ವಕವಿ ಈ ಕಾವ್ಯದಲ್ಲಿ ಇಬ್ಬರು ಸಮಂತಭದ್ರರನ್ನು ಸ್ಮರಿಸಿದ್ದಾನೆಂಬುದು ಸ್ಪಷ್ಟ. ಒಂದನೆಯ ಸಂಧಿಯಲ್ಲಿನ ೧೬ನೆಯ ಪದ್ಯದಲ್ಲಿ ಉಲ್ಲೇಖಿಸಿರುವುದು ವಿಖ್ಯಾತ ಸಮಂತಭದ್ರರನ್ನು; ಈ ೨೧ ನೆಯ ಪದ್ಯದಲ್ಲಿ

ಪಣಿದಣುವ್ರತರಾಗಿಯುಂ ವರ
ಗುಣಧರ ಪ್ರಾಯರೆದಲೆನಿಸುವ
ಗುಣ ಸಮುದ್ರ ಸಮಂತಭದ್ರ ಚರಣಕೆರಗುವೆನು ||

ಎಂದು ಹೇಳಿದೆ. ಗೇರುಸೊಪ್ಪೆ ರಾಜ್ಯದ ಕಾಳದಲ್ಲಿ ಆಗಿ ಹೋದ ಸಮಂತಭದ್ರರನ್ನು ಸಾಳ್ವಕವಿ ಇಲ್ಲಿ ನೆನೆದಂತೆ ತೋರುತ್ತದೆ. ಶಿಶುಮಾಯಣ ಕೂಡ ಇದೇ ರೀತಿ ಇಬ್ಬರು ಸಮಂತಭದ್ರರನ್ನು ಸ್ಮರಿಸಿದ್ದಾನೆ. ಈ (ಇಮ್ಮಡಿ) ಸಮಂತಭದ್ರರ ಕಾಲ ಸು.೧೪೧೦, ಇವರ ಶಿಷ್ಯರು (ಇಮ್ಮಡಿ) ಗುಣಭದ್ರರು, ಅವರ ಶಿಷ್ಯರು ವೀರಸೇನರು. ಈ ವೀರಸೇನರು ಗೇರುಸೊಪ್ಪೆಯ ದೊರೆ ಭೈರವ ರಸನ ರಾಜಗುರುಗಳು, ಮತ್ತು ಈ ವೀರಸೇನಾಚಾರ್ಯರ ಆಜ್ಞಾನುಸಾರವಾಗಿ ಆದಿಯಪ್ಪ ಕವಿ ತನ್ನ ಧನ್ಯಕುಮಾರ ಚರತೆ ರಚಿಸುವುದಾಗಿ ತಿಳಿದು ಬರುತ್ತದೆ. (ಹಂಪ. ನಾಗರಾಜಯ್ಯ; ಸಾಂಗತ್ಯ ಕವಿಗಳು: ೧೯೭೫, ಪು.೨೯)