‘ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನೋಡು’ ಎನ್ನುವ ಮಾತಿನಂತೆ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗವು ತನ್ನ ಎಳೆಯ ವಯಸ್ಸಿನಲ್ಲೇ ವಿಶಿಷ್ಟ ಸಾಧನೆಯನ್ನು ಮಾಡುತ್ತಿದೆ. ಬರೀ ನಿರ್ಜೀವ ಆಕರಗಳಂತೆ ಬಳಕೆಯಾಗುತ್ತಿದ್ದ ಹಸ್ತಪ್ರತಿಗಳನ್ನು, ಸಮಕಾಲೀನ ಸಾಹಿತ್ಯಿಕ, ಸಾಂಸ್ಕೃತಿಕ, ಹಾಗೂ ತಾಂತ್ರಿಕ ಆವಿಷ್ಕಾರಗಳ ಹಿನ್ನೆಲೆಯಲ್ಲಿ ಹೊಸರೀತಿಯಾಗಿ ಅಧ್ಯಯನಿಸುತ್ತಿದೆ. ಹಸ್ತಪ್ರತಿ ಶಾಸ್ತ್ರಗಳ ಸಂಗ್ರಹ, ಸಂಪಾದನೆ, ಪರಿಷ್ಕರಣ, ಪ್ರಕಟಣೆ, ವಿಶ್ಲೇಷಣೆ ಮತ್ತು ಗಣಕೀಕರಣದಂತಹ ಕಾರ್ಯಗಳೊಂದಿಗೆ, ನಾಡಿನ ಸುಪ್ರಸಿದ್ಧ ವಿದ್ವಾಂಸರು, ವಿಮರ್ಶಕರು, ಚಿಂತಕರು ಮತ್ತು ಹಸ್ತಪ್ರತಿಶಾಸ್ತ್ರ ದಾನಿಗಳೊಂದಿಗೆ ವಿವಿಧ ರೀತಿಯ ಸಂವಾದ, ಚರ್ಚೆ, ವಿಚಾರ ಸಂಕಿರಣಗಳಲ್ಲದೆ ತರಬೇತಿ ಶಿಬಿರ, ಕಾರ್ಯಾಗಾರಗಳ ಮೂಲಕ ತನ್ನ ಕಾರ್ಯಕ್ಷೇತ್ರವನ್ನು ಸೃಜನಾತ್ಮಕವಾಗಿ ಮತ್ತು ವ್ಯಾಪಕವಾಗಿ ಹಿಗ್ಗಿಸಿಕೊಳ್ಳುತ್ತಿದೆ.

ವಿಭಾಗವು ಈಗಾಗಲೇ ೪,೦೦೦ಕ್ಕಿಂತಲೂ ಅಧಿಕ ಅಮೂಲ್ಯ ಹಸ್ತಪ್ರತಿ ಶಾಸ್ತ್ರಗಳನ್ನು ಸಂಗ್ರಹಿಸಿ ಸಂರಕ್ಷಿಸುತ್ತಿದೆ. ಹಲವಾರು ಮೌಲಿಕ ಯೋಜನೆಗಳನ್ನು ನಿರ್ವಹಿಸಿಕೊಟ್ಟಿದೆ. ವಿಭಾಗದ ಅಧ್ಯಾಪಕರ ಅವಿರತ ಶ್ರಮದಿಂದಾಗಿ, ಎರಡು ಹಸ್ತಪ್ರತಿ ಸೂಚಿಗಳು, ಸ್ವತಂತ್ರ ಮತ್ತು ಸಂಪಾದಿತ ರೂಪದ ಹನ್ನೆರಡು ಮೌಲಿಕ ಪುಸ್ತಕಗಳು ಪ್ರಕಟಗೊಂಡಿವೆ. ಇವೆಲ್ಲವು ಸಾಂಪ್ರದಾಯಿಕ ಅಧ್ಯಯನ ಕ್ರಮದಿಂದ ಭಿನ್ನವಾಗಿ ಗ್ರಂಥಸಂಪಾದನೆ ಮತ್ತು ಹಸ್ತಪ್ರತಿ ಶಾಸ್ತ್ರ ಕ್ಷೇತ್ರದಲ್ಲಿ ಹೊಸ ರೀತಿಯ ಚರ್ಚೆಗಳಿಗೆ ಗ್ರಾಸವನ್ನು ಒದಗಿಸಿವೆ.

ಪ್ರಸ್ತುತ ಕೃತಿಯ ಹಸ್ತಪ್ರತಿಶಾಸ್ತ್ರ ವಿಭಾಗ ಮಾಲೆಯ ಹದಿನಾರನೆಯ ಪ್ರಕಟಣೆಯಾಗಿದೆ. ಈ ಕೃತಿ ಕನ್ನಡದಲ್ಲಿ ಮೊದಲಬಾರಿಗೆ ಪ್ರಕಟವಾಗುತ್ತಿರುವುದು ಕನ್ನಡ ವಿಶ್ವವಿದ್ಯಾಲಯಕ್ಕೂ ಮತ್ತು ಹಸ್ತಪ್ರತಿಶಾಸ್ತ್ರ ವಿಭಾಗಕ್ಕೂ ತುಂಬ ಹೆಮ್ಮೆಯ ವಿಷಯವಾಗಿದೆ. ಈ ಕೃತಿಯು ವಿಶಿಷ್ಟ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಕಟ್ಟಿಕೊಡುವಂಥದ್ದಾಗಿದೆ. ಕನ್ನಡದ ಜನಮನ, ಮಾತಿನ ಉಳಿಕೆ-ಬೆಳೆಕೆ, ಬದುಕು-ಬಳಕೆ ಆತಂಕದ ಅನುಭವಗಳಾಗಿ ಇಲ್ಲಿನ ಕಥಾಜಗತ್ತು ಕಾಣುತ್ತದೆ. ಹಿರಿಯಣ್ಣ ಕವಿ ರಚಿಸಿದ ಈ ಹಯರತ್ನ ಶ್ರೇಣಿ ಪುಸ್ತಕದಲ್ಲಿ ಉತ್ತರ ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಯ ಸೊಗಡು ಜೀವಂತವಾಗಿ ನಲಿದಾಡುತ್ತಿದೆ. ಹೀಗಾಗಿ ಇದೊಂದು ಚಲನಶೀಲ ಪಠ್ಯವಾಗಿ ನಮಗಿದಿರಾಗುತ್ತದೆ. ಸಂಪಾದಕರು ಕೂಡ ಶಾಸ್ತ್ರಶುದ್ಧ ಚೌಕಟ್ಟಿನಲ್ಲಿ ಕೃತಿಯ ಸ್ವಾಭಾವಿಕತೆಯನ್ನು ಶುಷ್ಕವಾಗಿಸದೆ, ಅದರ ಬಹು ಸಾಂಸ್ಕೃತಿಕ ಆಯಾಮಗಳಿಗೆ ಒತ್ತು ನೀಡುವ ಮೂಲಕ ಆದರ ಸಾಂಸ್ಕೃತಿಕ ಅನನ್ಯತೆಯನ್ನು ವಿಶಿಷ್ಟೀಕರಿಸಿದ್ದಾರೆ. ಗ್ರಂಥ ಸಂಪಾದನೆಯ ಶುದ್ಧ, ಅಶುದ್ಧ, ಕಲ್ಪನೆಗಳನ್ನು ಮೀರಿ ಹೆಚ್ಚು ಸೃಜನಾತ್ಮಕವಾಗಿ ದೇಸೀಯತೆಯನ್ನು ಎತ್ತಿಹಿಡಿಯುವ ಇಲ್ಲಿನ ಸಂಪಾದನ ಕ್ರಮವೂ ಕೂಡ ಹಲವಾರು ಹೊಸ ಪ್ರಯೋಗಗಳನ್ನು ಗರ್ಭೀಕರಿಸಿಕೊಂಡಿದೆ.

ಕನ್ನಡ ಸಾಹಿತ್ಯದಲ್ಲಿ ರೂಢಿಯಲ್ಲಿರುವ ಮಾರ್ಗ ಮತ್ತು ದೇಸೀ ಸಾಹಿತ್ಯ ಪರಿಕಲ್ಪನೆಗೆಗಳಿಗೆ ಬಳಸುವ ಸಂಪಾದನೆಯ ಮಾನದಂಡಗಳು ಒಂದೇ ರೀತಿಯವಾಗಿವೆ. ಗೇಯ ಮತ್ತು ನಾದಪ್ರಧನವಾದ ದೇಸೀ ಹಾಗೂ ತೋಂಡಿ ಕಾವ್ಯ ಸಾಹಿತ್ಯ ಪ್ರಖಾರಗಳು ತುಂಬಾ ಚಲನಶೀಲವಾದ ದೇಹಾಕೃತಿಯನ್ನು ಹೊಂದಿರುತ್ತದೆ. ಇವನ್ನು ಶಾಸ್ತ್ರಶುದ್ಧ ಸಂಪಾದನೆಯ ಹೆಸರಿನಲ್ಲಿ ಏಕಮುಖಿಗೊಳಿಸುತ್ತಾ ಬರಲಾಗಿದೆ. ಇಂಥ ಸಂಗತಿಗಳು ನಮ್ಮ ಅಧ್ಯಯನ ಮತ್ತು ಚಿಂತನೆಗಳು ವೈದಿಕ ಮತ್ತು ವಸಾಹತುಶಾಹಿ ಪ್ರಣೀತ ಚಿಂತನ ಕ್ರಮಗಳಿಂದ ಹೊರಬಂದಿಲ್ಲ ಎಂಬುದನ್ನೇ ಸೂಚಿಸುತ್ತವೆ. ಹೀಗಾಗಿಯೇ ನಮ್ಮ ಪ್ರಾಚೀನ ಸಾಂಸ್ಕೃತಿಕ ಸಂವೇದನೆಗಳೊಂದಿಗೆ ಸಮಕಾಲೀನ ಸಂವಾದ ಸಾಧ್ಯವಾಗುತ್ತಿಲ್ಲ. ಆದರೆ ಹಸ್ತಪ್ರತಿಶಾಸ್ತ್ರ ವಿಭಾಗವು ತನ್ನ ಚಿಂತನೆ, ಯೋಚನೆ, ಪ್ರಕಟಣೆ, ಚರ್ಚೆ, ಸಂವಾದಗಳಲ್ಲಿ ಹೊಸ ರೀತಿಯ ತಿಳುವಳಿಕೆಯ ದಾರಿಗಳನ್ನು ರೂಪಿಸಿಕೊಳ್ಳುತ್ತಿದೆ. ಹಳತು ಹೊಸತರ ಮುಖಾಮುಖಿಯಲ್ಲಿ ಹೊಸದಾರಿಗಳನ್ನು ಹುಡುಕಿಕೊಳ್ಳುತ್ತಿದೆ.

ಇಂಥ ಒಂದು ಅಪರೂಪದ ಕೃತಿಯನ್ನು ಸಂಪಾದಿಸಿ ಕನ್ನಡ ಸಾರಸ್ವತಲೋಕಕ್ಕೆ ಅನುಪಮ ಕೊಡುಗೆ ನೀಡಿದ ಡಾ. ಎಫ್. ಟಿ. ಹಳ್ಳಿಕೇರಿಯವರನ್ನು ಮನದುಂಬಿ ಹಾರೈಸುತ್ತೇನೆ. ಈ ಮೌಲಿಕ ಕೃತಿಯನ್ನು ಪ್ರಕಟಿಸುವಲ್ಲಿ ಒತ್ತಾಸೆಯಾಗಿ ನಿಂತ ಮಾನ್ಯ ಕುಲಪತಿಗಳಾದ ಡಾ. ಎಚ್. ಜೆ. ಲಕ್ಕಪ್ಪಗೌಡ ಅವರಿಗೂ ಅಚ್ಚುಕಟ್ಟಾಗಿ ಪ್ರಕಟಿಸಿರುವ ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ. ಚಿ. ಬೋರಲಿಂಗಯ್ಯನವರಿಗೂ ವಿಭಾಗದ ವತಿಯಿಂದ ಪ್ರೀತಿಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಡಾ. ವಿರೇಶ ಬಡಿಗೇರ
ಮುಖ್ಯಸ್ಥರು