Loading Events

« All Events

  • This event has passed.

ಕೆ.ಎಂ. ಸೀತಾರಾಮಯ್ಯ

October 10, 2023

೧೦.೧೦.೧೯೨೯ ಗ್ರೀಕ್‌ ಸಾಹಿತ್ಯ ಮತ್ತು ಗ್ರೀಕ್‌ ಪುರಾಣ ಸಾಹಿತ್ಯಗಳ ಬಗ್ಗೆ ಆಳವಾದ ಅಧ್ಯಯನ ಕೈಗೊಂಡು ಗ್ರೀಕ್‌ ಸಾಹಿತ್ಯದ ಹಲವಾರು ಕೃತಿಗಳನ್ನು ಕನ್ನಡಕ್ಕೆ ತಂದಿರುವ ಸೀತಾರಾಮಯ್ಯನವರು ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕೆಂಪಸಾಗರದಲ್ಲಿ ೧೯೨೯ ರ ಅಕ್ಟೋಬರ್ ೧೦ ರಂದು. ತಂದೆ ಕೆ. ಮೈಲಾರಯ್ಯ, ತಾಯಿ ವೆಂಕಟಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ಅರಸೀಕೆರೆ. ಇಂಟರ್ ಮೀಡಿಯೆಟ್‌ ಓದಿದ್ದು ಹಾಸನದಲ್ಲಿ. ಮೈಸೂರು ಮಹಾರಾಜ ಕಾಲೇಜಿನಿಂದ ಪಡೆದ ಬಿ.ಎ. ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಡನೆ ಪಡೆದ ಎಂ.ಎ. ಪದವಿ. ಬೋಧನಾಕ್ಷೇತ್ರವನ್ನು ಪ್ರವೇಶಿಸಿ ಅಧ್ಯಾಪಕರಾಗಿ, ರೀಡರಾಗಿ, ಪ್ರಿನ್ಸಿಪಾಲರಾಗಿ ಮೈಸೂರು ಮಹಾರಾಜಕಾಲೇಜು, ಮಂಡ್ಯ, ಹಾಸನ, ಮಡಿಕೇರಿ, ಶಿವಮೊಗ್ಗ, ಕೋಲಾರ, ಆನೇಕಲ್‌, ಬೆಂಗಳೂರು ಮುಂತಾದೆಡೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲ ವಿದ್ಯಾರ್ಥಿಗಳೊಡನೆ ಕಳೆದು ೧೯೮೮ರಲ್ಲಿ ನಿವೃತ್ತಿ. ಕಥೆಗಾರರಾಗಿ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿ ಬರೆದ ಹಲವಾರು ಕಥೆಗಳು ‘ಸಪ್ತಸ್ವರ’ ಮತ್ತು ‘ಮಾನಸಪೂಜೆ’ ಎಂಬ ಎರಡು ಸಂಕಲನಗಳಲ್ಲಿ ಸೇರಿವೆ. ಇದೇ ಕಾಲದಲ್ಲಿ ಬರೆದ ಎರಡು ಕಾದಂಬರಿಗಳೆಂದರೆ ‘ರಾಜರಹಸ್ಯ’ ಹಾಗೂ ‘ಸಂನ್ಯಾಸಿ’. ನಂತರ ಇವರು ಅಧ್ಯಯನ ಕೈಗೊಂಡಿದ್ದು ಗ್ರೀಕ್‌ ಹಾಗೂ ರೋಮನ್‌ ಮೈಥಾಲಜಿಗಳ ಬಗ್ಗೆ, ಗ್ರೀಕ್‌ನ ಮಹಾಕವಿ ಹೋಮರನ ಮಹಾಕಾವ್ಯಗಳಾದ ‘ಇಲಿಯಡ್‌’ ಮತ್ತು ‘ಒಡಿಸ್ಸಿ’ಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಯೂರೋಪಿನ ಸಾಹಿತ್ಯವನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ವ್ಯಾಸಂಗಮಾಡುವ ವಿದ್ಯಾರ್ಥಿಗಳಿಗೆ ಈ ಮೇಲಿನ ಎರಡು ಕೃತಿಗಳೂ ಆಧಾರ ಗ್ರಂಥಗಳೆನಿಸಿವೆ. ಗ್ರೀಕ್‌ ಸಾಹಿತ್ಯದ ಬಗ್ಗೆ ಇವರು ರಚಿಸಿರುವ ಇತರ ಕೃತಿಗಳೆಂದರೆ ಗ್ರೀಕರ ಪುರಾಣ ಕಥೆಗಳು, ಗ್ರೀಕ್‌ವೀರರು, ಗ್ರೀಕ್‌ದೇವತೆಗಳು, ಟ್ರೋಜನ್‌ ಮಹಾಯುದ್ಧ, ಲ್ಯಾಟಿನ್‌ ಮಹಾಕವಿ ವರ್ಜಿಲನ ‘ಈ ನಿಯಡ್‌’ ಮುಂತಾದವುಗಳ ಜೊತೆಗೆ ಮತ್ತೊಂದು ಪ್ರಮುಖ ಕೃತಿ ಎಂದರೆ ಗ್ರೀಕ್‌ ಪುರಾಣ ಕಥೆಗಳ ‘ಗ್ರೀಕ್‌ ಮಿಥಕಗಳು’. ಈ ಗ್ರಂಥದಲ್ಲಿ ಗ್ರೀಕರ ತಾತ್ತ್ವಿಕ ಚಿಂತನೆ, ವಿಜ್ಞಾನ, ಚರಿತ್ರೆ – ಭೂಗೋಳ, ಇತರ ದೇಶಗಳೊಂದಿಗಿನ ವಾಣಿಜ್ಯ ವ್ಯವಹಾರ, ಸಾಮಾಜಿಕ – ರಾಜಕೀಯ ಜನಜೀವನ ಮುಂತಾದವುಗಳ ಚಿತ್ರಣಗಳಿಂದ ಕೂಡಿದೆ. ಇವರ ಇತರ ಕೃತಿಗಳೆಂದರೆ ಜನಪ್ರಿಯ ಸರ್ವಜ್ಞನ ವಚನಗಳ ಸಂಗ್ರಹ ಹಾಗೂ ಅಮೆರಿಕ ಪ್ರವಾಸಾನುಭವದ ಕೃತಿ  ‘ಅಪೂರ್ವ’. ‘ಗ್ರೀಕರ ಪುರಾಣಕಥೆಗಳು’ ಕೃತಿಗೆ ದೇವರಾಜ ಬಹದ್ದೂರ್ ಸಾಹಿತ್ಯ ಪ್ರಶಸ್ತಿ, ಪ್ರವಾಸ ಸಾಹಿತ್ಯವಾದ ‘ಅಪೂರ್ವ’ ಕೃತಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಈನಿಯಡ್‌ ಮಹಾಕಾವ್ಯದ ಅನುವಾದದ ಕೃತಿಗೆ ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕುಮಾರ ವಾಲ್ಮೀಕಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.

Details

Date:
October 10, 2023
Event Category: