Categories
ರಚನೆಗಳು

ಅಂಬಾಬಾಯಿ

೧೮೫
ದಾಸರಾಯ ಪುರಂದರದಾಸರಾಯ ಪ.
ದಾಸರಾಯರೆ ನಿಮ್ಮ ಸ್ಮರಣೆಯ
ಘಾಸಿಗೊಳಿಸದೆ ಇತ್ತು ಕರುಣಿಸಿ
ವಾಸುಕಿಶಯನನ ತೋರಿಸಿ
ವಾಸುದೇವನ ಕೃಪೆಗೈಸಿರಿ ಅ.ಪ.
ದಾಸಕೂಟಕೆ ಮೊದಲನೆ ಗುರು
ದೊಷವರ್ಜಿತ ಭಕ್ತರೆನಿಸಿ
ಆಶಪಾಶವೆ ತೊರೆದು ಹರಿಯ
ದಾಸತನವನು ತೋಷದಲಿ ಕೊಂಡು
ಕೇಶವನು ಸರ್ವೋತ್ತಮನು ಎನ್ನುತ
ಶ್ರೀಶನ ಗುಣಗಳನೆ ಪೊಗಳುತ
ಭೂಸುರರ ರಕ್ಷಿಸುತ ಭಕ್ತರ
ಕ್ಲೇಶಗಳೆÉದಂಥ ಗುರುವರ ೧
ವೀಣೆ ಕರದಲಿ ಗಾನಮಾಡುತ
ಜಾಣತನದಲಿ ಕೃಷ್ಣನೊಲಿಸುತ
ಆನಂದದಲಿ ನರ್ತಿಸುತ್ತ
ಧ್ಯಾನದಲಿ ಶ್ರೀ ಹರಿಯ ನೋಡುತ
ಆನನವ ತೂಗುತ್ತ ವೇದ ವಿ-
ಧಾನದಲಿ ಪದಗಳನೆ ರಚಿಸುತ
ಮೌನಿವ್ಯಾಸರ ಶಿಕ್ಷೆಯಿಂದಲಿ
ದಾನವಾಂತಕ ಹರಿಯನೊಲಿಸಿದ ೨
ಪಾಪಿಗಳ ಪಾವನಗೈಸುತ
ಶ್ರೀ ಪತಿಯ ಅಂಕಿತವ ನೀಡುತ
ಈ ಪರಿಯಲಿ ಮೆರೆದ ಮಹಿಮೆಯ
ನಾ ಪೇಳಲಳವಲ್ಲವಿನ್ನು
ನಾ ಪಿರಿಯರಿಂ ಕೇಳಿದುದರಿಂ
ದೀಪರಿ ನುಡಿದಿರುವೆನಲ್ಲದೆ
ಗೋಪಾಲಕೃಷ್ಣವಿಠ್ಠಲನ
ರೂಪ ನೋಡುತ ಸುಖಿಸುವಂಥ ೩

 

೧೮೬
ದಾಸರೆಂದು ಕರೆದ ಮಾತ್ರದಿ | ಈಗ ಎಮ್ಮ
ದೋಷರಾಶಿ ನಾಶವಾಯಿತು ಪ.
ಶ್ರೀಶ ತಾನು ಗುರುಗಳಿಂದ
ಈ ಶರೀರಕೀ ಜನ್ಮದಲಿ
ದಾಸತನದ ಪೆಸರನಿಟ್ಟು
ವಾಸುದೇವ ಕಾಯ್ದ ಎನ್ನ ಅ.ಪ.
ಏಸು ಜನ್ಮ ಯತ್ನ ಗೈಯ್ಯಲು | ಭೃತ್ಯಭಾವ
ಪಾಶ ದುರ್ಲಭವು ಸುಜನಕೆ
ಶ್ರೀಶನನುಗ್ರಹದ ಬಲದಿ
ಈಸು ನಾಮ ದೊರೆಯಬೇಕು
ಆಶಪಾಶ ತೊಲಗಿ ಭವ
ಕ್ಲೇಶ ಕೊನೆಗಾಣಿಸುವುದು ೧
ಪಂಡಿತನೆಂದೆನಿಸಿ ಮೆರೆಯಲು | ಜಗದೊಳಗೆ
ಕಂಡಮಾತ್ರ ಗರ್ವ ಕಾರಣ
ಮಂಡೆಬಾಗಿ ಹರಿಗೆ ನಿನ್ನ
ತೊಂಡನೆಂದು ನಮಿಸೆ ನಲಿದು
ಪುಂಡರಿಕಾಕ್ಷ ತಾನು
ತಂಡ ತಂಡ ಪಾಪ ಕಳೆವ ೨
ಹರಿಯದಾಸರೆಂದು ಎನಿಸಲು | ಧರೆಯೊಳಗೆ
ಸುರರು ಬಯಸಿ ಬರುತಲಿಪ್ಪರು
ಸರ್ವದೇವತೆಗಳು ಬಂದು
ಹರಿಯದಾಸರೆನಿಸಿ ಮೆರೆದು
ಪರಿಪರಿಯ ತತ್ವ ತಿಳುಹಿ
ಹರಿಯ ಪುರಕೆ ತೆರಳಲಿಲ್ಲೆ ೩
ದಾಸತನಕೆ ಅಧಿಕವಿಲ್ಲವು | ಸಾಧನವು
ದಾಸತನವು ಗರ್ವವಳಿವಳಿವುದು
ದಾಸ ದಾಸ ದಾಸ ನಿನಗೆ
ವಾಸುದೇವ ಸಲಹೊ ಎನಲು
ದೋಷನಾಶಗೈಸಿ ಹರಿಯು
ದಾಸ ಜನರ ಕಾಯ್ದ ದಯದಿ ೪
ಅಷ್ಟು ಭಾಗ್ಯಕಧಿಕ ಲಾಭವು | ದಾಸತನವು
ಶ್ರೇಷ್ಠ ಗುರುಗಳಿಂದ ದೊರಕಿತು
ಇಷ್ಟವೆನಗೆ ದಾಸಪೆಸರು
ಶಿಷ್ಟರೆಲ್ಲ ಕರೆಯಲೀಗ
ತುಷ್ಟಿಪಡುವೆ ಶ್ರೀ ಗೋಪಾಲ-ಕೃಷ್ಣವಿಠಲ ಸಲಹೊ ಎಂದು ೫

 

೯೮
ದುರ್ಗೆ ಪಾಲಿಸೆ ಕರುಣದಿ | ಮಹಾ ಲಕುಮಿ
ದುರ್ಗೆ ಪಾಲಿಸೆ ಕರುಣದಿ ಪ.
ದುರ್ಗೆ ಪಾಲಿಸೆ ಅಪವರ್ಗ ಪದವಿ ಇತ್ತು
ದುರ್ಗಮವಾಗಿಹ ದುಃಖವ ಬಿಡಿಸಿ
ಭಾರ್ಗವಿರಮಣನ ಮಾರ್ಗವ ತೋರೆ
ಭೋರ್ಗರೆಯುತ ಖಳರ ನಿಗ್ರಹಿಸುವಳೆ ಅ.ಪ.
ಕ್ಷೀರವಾರಿಧಿ ತನಯೆ | ಶ್ರೀ ರಮಣನ ಜಾಯೆ
ನಾರಸಿಂಹನ ಅರಸಿಯೆ
ಸಾರಿದೆ ನಿನ ಪದ ತೋರಿಸೆ ಹರಿಪದ
ಕಾರುಣ್ಯಾತ್ಮಳೆ ಕರುಣವ ಬೀರೆ
ವಾರವಾರಕೆ ನಿನ್ನ ಆರಾಧಿಸುವಂಥ
ಚಾರುಮತಿಯ ನೀಡೆ ನಾರಿರನ್ನಳೆ ೧
ಪದ್ಮಾವತಿಯೆ ಪದ್ಮಿನಿ | ಪದ್ಮಾಕ್ಷಿದೇವಿ
ಪದ್ಮಸಂಭವೆ ಕಾಮಿನಿ
ಪದ್ಮನಾಭ ಶ್ರೀ ಶ್ರೀನಿವಾಸನ
ಪದ್ಮಪಾದವ ಹೃತ್ಪದ್ಮದಿ ತೋರೆ
ಪದ್ಮಸರೋವರ ತೀರವಾಸಿ ಕರ
ಪದ್ಮಯುತಳೆ ಮುಖಪದ್ಮವ ತೋರೆ೨
ರೂಪತ್ರಯಳೆ ಕಾಮಿನಿ | ಕಾಮಪೂರಿಣೀ
ತಾಪಹರಿಸೆ ಭಾಮಿನಿ
ಪಾಪಗಳÉಲ್ಲವ ನೀ ಪರಿಹರಿಸುತ
ಗೋಪಾಲಕೃಷ್ಣವಿಠ್ಠಲನನು ತೋರುತ ನೀ
ಕೃಪೆಗೈಯ್ಯೆಂದೀ ಪರಿ ನುಡಿವೆನೆ
ನೀ ಪಾಲಿಸುವುದು ಆಪವರ್ಗದಲಿ ೩

 

೧೮೭
ಧನ್ಯ ಧನ್ಯ ಧನ್ಯ ಧನ್ಯ ಗುರುವರಾ
ಧನ್ಯ ತಂದೆ ಮುದ್ದುಮೋಹನ್ನ ಗುರುವರಾ ಪ.
ಮಾನ್ಯ ವಿಭುದ ಮಾನ್ಯ ಜಗದ್ಮಾನ್ಯ ಗುರುವರಾ ಅ.ಪ.
ಪುಟ್ಟಿದಂದಿನಿಂದಿನ್ವರೆಗೆ ತೊಟ್ಟು ದಾಸತ್ವ ದೀಕ್ಷೆ
ನಿಷ್ಟೆ ನೇಮ ಧರ್ಮ ಕರ್ಮ ಜಪತಪಂಗಳಾ
ಕಷ್ಟ ಕರ್ಮ ಮಾಡಿ ಮುಗಿಸಿ ಶ್ರೇಷ್ಠ ಜ್ಞಾನ ಕವಚ ತೊಟ್ಟು
ದಿಟ್ಟತನದಿ ಮೆರೆದ ಗುರುವು ಮುಟ್ಟಿದರೀಗ ಹರಿಯ ಪುರವ ೧
ಭಕ್ತಿ ಭೂಷಣ ತೊಟ್ಟು ವಿರಕ್ತಿ ಖಡ್ಗ ವರೆಯಲ್ಲಿಟ್ಟು
ಮುಕ್ತಿ ಮಾರ್ಗಕೆಲ್ಲ ದೀಕ್ಷೆ ಇತ್ತು ಸುಜನಕೆ
ವ್ಯಕ್ತಾವ್ಯಕ್ತ ಮಹಿಮೆಯಿಂದ ವ್ಯಕ್ತಿತ್ವವನು ತೋರಿಕೊಳದೆ
ಉಕ್ತಿಗೊಶರಮಾಡಿಕೊಂಡ ಶಕ್ತಿ ಪೇಳಲಳವೆ ಎನಗೆ ೨
ಕರ್ಮಮಾರ್ಗ ಕಡಿದು ತತ್ವ ಮರ್ಮ ಕರ್ಮ ಕುರುಹನರುಹಿ
ನಮ್ಮ ಮಧ್ವಮತಕೆ ದಿವ್ಯ ಸಮ್ಮತವಾಗಿ
ವಮ್ಮನದ ಸುಜ್ಞಾನ ಬೆಳಕು ತಮ್ಮ ನಂಬಿದರಿಗೆ ತೋರಿ
ಬÉೂಮ್ಮನೈಯ್ಯನ ಪುರಕೆ ಸಾರ್ದ ನಮ್ಮ ಗುರುವರಾ ೩
ದಾಸಕೂಟ ಸಭಾಸ್ಥಳದಿ ದಾಸ ಪ್ರಾಣರಾಯನ ನಿಲಿಸಿ
ದಾಸಜನಕೆ ಮುಕ್ತಿ ಸ್ಥಾನ ಕರಿಗಿರಿ ಎನಿಸಿ
ವ್ಯಾಸತೀರ್ಥರಿಂದ ಬಂದ ದಾಸಕೂಟ ನಿಜವೆಂದೆನಿಸಿ
ದಾಸಜನರ ಮೆರಸಿ ನೃಹರಿ ದಾಸಕೂಟ ಸಭಾಸ್ಥಾಪಕ ೪
ವ್ಯಾಳಶಯನನಾದ ಗೋಪಾಲಕೃಷ್ಣವಿಠ್ಠಲನ್ನ
ಲೀಲೆಯಿಂದ ಯನ್ನ ಹೃದಯದಲ್ಲಿ ನಿಲ್ಲಿಸೀ
ಮೇಲೆ ಸುಜ್ಞಾನ ಬೋಧೆ ಕಾಲ ಕಾಲಕ್ಕೆ ಇತ್ತು
ಪಾಲಿಸಿದಾ ಪರಮ ಪ್ರಿಯ ಕೃಪಾಳೂ ಗುರುವರಾ ೫

 

೧೮೮
ಧನ್ಯರಾದರು ಗುರುಗಳನು ಪೂಜಿಸುತ
ಇನ್ನಿವರ ಪಾತಕವು ತೊಲಗಿತು ಜಗದಿ ಪ.
ತಂದೆ ಮುದ್ದುಮೋಹನದಾಸ ರಾಯರನು
ಚಂದದಿಂ ಸತಿಸಹಿತ ಕರೆತಂದು ಮನೆಗೆ
ಮಂದರೋದ್ಧರನ ಪದಸೇವೆ ಇದು ಎಂದರಿತು
ಮಂದಹಾಸದಲಿ ನಸುನಗುತ ಸದ್ಭಕ್ತರು ೧
ಮಂಗಳೋದಕದಿಂದ ಮಜ್ಜನವಗೈಸುತಲಿ
ಅಂಗಗಳನೊರೆಸುತಲಿ ನಾಮಗಳನ್ಹಚ್ಚಿ
ರಂಗನಾಥನಿಗರ್ಪಿಸುತ ಪುಷ್ಪಹಾರವನ್ಹಾಕಿ
ಶೃಂಗಾರವನೆಗೈದು ಶ್ರೀ ಗುರುಗಳನ್ನು ೨
ಪಚ್ಚೆಕರ್ಪೂರ ಕೇಸರಿಯಿಂದ ಕೂಡಿದ
ಅಚ್ಚ ಗಂಧವನ್ಹಚ್ಚಿ ಅಕ್ಷತೆಯನಿಟ್ಟು
ಮಚ್ಛರೂಪಿಯ ನೆನೆದು ಪಾದಕಮಲವ ತೊಳೆದು
ನಿಚ್ಚಳದ ಭಕ್ತಿಯಲಿ ನಿಜ ಭಕ್ತರೆಲ್ಲ ೩
ಸತಿಸಹಿತ ಕುಳ್ಳಿರಿಸಿ ಗುರುಗಳನು ಪೀಠದಲ್ಲಿ
ಅತಿಶಯದಿ ಕುಡಿಬಾಳೆ ಎಲೆಗಳನೆ ಹಾಕಿ
ಮತಿಯಿಂದ ರಂಗೋಲೆಗಳನ್ಹಾಕಿ ಲವಣ ಸ-
ಹಿತದಿಂದ ಘೃತದ ಪರಿಯಂತ ಬಡಿಸುತಲಿ ೪
ಅನ್ನಾದಿ ಸಕಲ ಷಡ್ರಸಗಳನೆ ಬಡಿಸುತ್ತ
ಘನ್ನ ಮಹಿಮರಿಗೆ ಭಕ್ಷಾದಿಗಳ ಬಡಿಸಿ
ಸನ್ನುತಿಸುತಲಿ ತೀರ್ಥ ಆಪೋಷನವನ್ಹಾಕಿ
ಪನ್ನಗಶಯನನಿಗೆ ಅರ್ಪಿಸುತ ಮುದದಿ ೫
ಘೃತಶರ್ಕರಾದಿಗಳನಡಿಗಡಿಗೆ ಬಡಿಸುತಲಿ
ನುತಿಸಿ ಗಾನಗಳಿಂದ ಗುರುಮಹಿಮೆಯ
ಅತಿಶಯದಿ ದಧಿ ಕ್ಷೀರದನ್ನಗಳನುಣಿಸುತಲಿ
ಘೃತ ಕ್ಷೀರದಿಂದ ಕೈ ತೊಳೆದು ಸಂಭ್ರಮದಿ ೬
ಯಾಲಕ್ಕಿ ಕರ್ಪೂರ ಮಿಳಿತ ವೀಳೆಯವನಿತ್ತು
ವೇಳೆವೇಳೆಗೆ ತಪ್ಪು ಕ್ಷಮೆಯ ಬೇಡುತಲಿ
ವ್ಯಾಳಶಯನಗರ್ಪಿಸುತ ಉಡಿಗೆ ತೊಡಿಗೆಗಳನಿತ್ತು
ಮಾಲೆಹಾಕುತ ಆರತಿಯನೆತ್ತಿ ಮುದದಿ ೭
ಹರಿಪ್ರೀತನಾಗುವನು ಗುರು ಹೃದಯದಲಿ ನಿಂತು
ಪರಿಹಾರವಾಗುವುದು ಕರ್ಮ ತೊಡಕುಗಳು
ಸರಸಿಜಾಕ್ಷನು ತಾನು ಹರುಷಪಡುವನು ದಯದಿ
ಕರಕರೆಯ ಸಂಸಾರ ಕಡಿದು ಗತಿ ಈವ ೮
ಗುರುದ್ವಾರ ಒಲಿಯುವನು ಹರಿಯು ಮೋಕ್ಷಾರ್ಥಿಗಳ
ಅರಘಳಿಗೆಯಗಲದಲೆ ಕಾಯುವನು ಸತತ
ಗುರು ಅಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ
ತ್ವರಿತದಿಂ ಹೃದಯದಲಿ ತೋರ್ವನು ತನ್ನ ೯

 

(ನು. ೨) ಚಂದ್ರಿಕೆಯನು
೧೫೩
ಧರೆಯೊಳಗೆ ವ್ಯಾಸಮುನಿವರನ ಸಂಸ್ಥಾನಕಿ
ನ್ನೆರಡನೆಯದಾವುದುಂಟು ಪ.
ಪರಿಪರಿಯಲಿ ನೋಡೆ ಪರಮ ವೈಭವದಿಂದ
ಧರಣಿಯೊಳು ಮೆರೆಯುತಿಹುದು ಇಹುದುಅ.ಪ.
ಹಂಸನಾಮಕನಿಂದ ಹರಿದು ಬಂದಂಥ ಯತಿ
ಸಂಸ್ಥಾನ ಸುರನದಿಯೊ
ಕಂಸಾರಿಪ್ರಿಯ ಶ್ರೀ ಮಧ್ವಮುನಿ ಮತ ಸಾರ
ಹಂಸಗಳು ಸುರಿಯುತಿರಲು
ಸಂಶಯವ ಪರಿಹರಿಸಿ ಸದ್ಗ್ರಂಥಗಳ ಸ-
ದ್ವಂಶರಿಗೆ ಸಾರುತಿರಲು
ಅಂಶ ಹರಿಪರ್ಯಂಕ ಸಹಿತ ಬಾಹ್ಲೀಕ ಯತಿ
ವಂಶದಲಿ ಉದಿಸಿ ಬರಲು ಬರಲು ೧
ಬನ್ನೂರು ಸ್ಥಳದಲ್ಲಿ ಜನ್ಮವೆತ್ತುತಲಿ ಬ್ರ
ಹ್ಮಣ್ಯರಾ ಕರದಿ ಬೆಳೆದು
ಚಿಣ್ಣತನದಲಿ ಮೌಂಜಿಧರಿಸಿ ಕಿತ್ತೊಗೆಯುತಲಿ
ಧನ್ಯಯತಿಯಾಗಿ ಮೆರೆದು
ಘನ್ನ ಶ್ರೀಪಾದರಾಯರಲಿ ಸದ್ಗ್ರಂಥಗಳ
ಚನ್ನಾಗಿ ಮನನಗೈದು
ಸಣ್ಣ ಪೆಟ್ಟಿಗೆಯೊಳಡಗಿದ್ದ ಶ್ರೀ ಕೃಷ್ಣನ
ತನ್ನ ಭಕ್ತಿಯೊಳ್ ಕುಣಿಸಿ ನಲಿದು ೨
ಪಡೆದು ಪರಿಪರಿಯ ಮಹಿಮೆಗಳ ತೋರುತಲಿ ದುರ್ವಾದಿ
ದುರುಳ ಮತಗಳನೆ ಮುರಿದು
ಮರುತ ಮತ ಶೀತಾಂಶುಕಿರಣ ಚಂದ್ರಿಕೆಯನ್ನು
ಹರಹಿ ಪ್ರಕಾಶಗೈದು
ಸರ್ವ ಸಜ್ಜನರ ಮನದಂದಕಾರವ ಕಳೆದು
ಸಿರಿವರನ ಪ್ರೀತಿ ಪಡೆದು
ತಿರುವೆಂಗಳೇಶನ ಪರಮ ಮಂಗಳ ಪೂಜೆ
ವರುಷ ದ್ವಾದಶವಗೈದು ಮೆರೆದು ೩
ಆರಸನಿಗೆ ಬಂದಂಥ ಆಪತ್ಕುಯೋಗ ಪರಿ
ಹರಿಸಿ ಸಂಸ್ಥಾನ ಪಡೆದು
ಪರಮ ಸಾಮ್ರಾಜ್ಯ ಪಟ್ಟಾಭಿಷೇಕವ ತಳೆದು
ಪರಮ ವೈಭವದಿ ಮೆರೆದು
ಚಿರಕಾಲ ವಿಜಯನಗರವು ಮೆರೆಯಲೆಂದ್ಹರಸಿ
ಅರಸನಿಗೆ ರಾಜ್ಯವೆರೆದು
ಕರುಣಾಳುವೆನಿಸಿ ವೈರಾಗ್ಯ ಶಿಖರದಿ ಮೆರೆದು
ಮೊರೆಪೊಂದಿದವರ ಪೊರೆದು ಬಿರುದು ೪
ಎಲ್ಲೆಲ್ಲಿ ನೋಡಲಲ್ಲಲ್ಲಿ ಶ್ರೀ ಮರುತನ್ನ
ನಿಲ್ಲಿಸುತ ಪೂಜೆಗೈದು
ನಿಲ್ಲದಿರೆ ಹಂಪೆಯಲಿ ಪ್ರಾಣಾರಾಯನು ಯಂತ್ರ
ದಲ್ಲಿ ಬಂಧನವಗೈದು
ಚಲ್ಲಾಡಿ ಸುವರ್ಣವೃಷ್ಟಿಯಿಂ ದುರ್ಭಿಕ್ಷ
ನಿಲ್ಲಿಸದೆ ದೂರಗೈದು
ಎಲ್ಲ ಕ್ಷೇತ್ರಗಳ ಸಂಚರಿಸಿ ಬಹುದಿನ ಹಂಪೆ
ಯಲ್ಲಿ ಶಿಷ್ಯರನು ಪಡೆದು ನಿಂದು ೫
ನವಕೋಟಿ ಧನಿಕ ವೈರಾಗ್ಯ ಧರಿಸುತ
ಭವದ ಬವಣೆಯಲಿ ನೊಂದು ಬಂದು
ನವ ಜನ್ಮಕೊಟ್ಟು ಉದ್ಧರಿಸಬೇಕೆಂದೆರಗೆ
ಅವನಂತರಂಗವರಿದು
ಪವಮಾನ ಮತವರುಹಿ ತಪ್ತ ಮುದ್ರಾಂಕಿತದಿ
ನವ ಜನ್ಮವಿತ್ತು ಪೊರೆದು
ಪವನ ಗ್ರಂಥಾಂಬುಧಿಯೊಳಡಗಿದ್ದ ದಾಸ್ಯ ರ
ತ್ನವ ಪೂರ್ವಗುರುವಿಗೊರೆದು ಸುರಿದು ೬
ಯತಿವಾದಿರಾಜ ಪುರಂದರ ಕನಕರೆಂ
ಬತುಲ ಶಿಷ್ಯರ ಕೂಡುತಾ
ಸತತ ಹರಿ ಚರ್ಯ ಮಹಿಮಾದಿಗಳ ಸ್ಮರಿಸುತ್ತ
ಸ್ರ‍ಮತಿ ಮರೆದು ಕುಣಿದಾಡುತಾ
ರತಿಪಿತನ ಗಾನ ಭಕ್ತಿಯಲಿ ಕನ್ನಡ ಕವನ
ಮತಿಯೊಳ್ ನಾಲ್ವರುಗೈಯುತಾ
ಕ್ಷಿತಿಯಲ್ಲಿ ದಾಸಪದ್ಧತಿ ಬಾಳಲೆಂದೆನುತ
ಯತಿವರರ ಸೃಷ್ಟಿಸುತ್ತಾ | ಸತತ ೭
ಅಂದು ವಿಜಯೀಂದ್ರರನು ಯತಿವರರು ಬೇಡÉ
ಆನಂದದಲಿ ಭಿಕ್ಷವಿತ್ತ
ಬಂದು ಕೈ ಸೇರಿದಾ ರಾಜ್ಯವನು ಕ್ಷಿತಿಪನಿಗೆ
ಮುಂದಾಳಲೆನುತಲಿತ್ತ
ಇಂದಿರೇ ಪತಿ ವೆಂಕಟೇಶನ್ನ ಪೂಜೆ ವರ
ಕಂದನಿಗೆ ಒಲಿದು ಇತ್ತ
ಒಂದೊಂದು ವೈಭವವು ಕೈ ಸೇರೆ ವೈರಾಗ್ಯ
ತಂದು ಅಭಿರೂಪ ಬಿಡುತಾ | ಕೊಡುತ ೮
ನವವಿಧದ ಭಕ್ತಿಯಲಿ ಜ್ಞಾನ ವೈರಾಗ್ಯದಲಿ
ಕವನದಲಿ ಶಾಂತತೆಯಲಿ
ನವಗ್ರಂಥ ನಿರ್ಮಾಣ ಪವನ ಗ್ರಂಥೋದ್ಧಾರ
ಸವಿನಯವು ಸದ್ಗುಣದಲೀ
ಸುವಿವೇಕ ಸತ್ಕರ್ಮ ಅಂತರ್ಮುಖ ಧ್ಯಾನ
ಅವನಿ ಸಂಚಾರದಲ್ಲಿ
ಇವರ ಸರಿಯಿಲ್ಲ ದಾಸ ವ್ಯಾಸ ಕೂಟದಲಿ
ಭುವನದಲಿ ಮೆರೆದ ಧನ್ಯಾ | ಮಾನ್ಯ ೯
ಪಾಪಿಗಳ ಸಲಹಿ ಪಾವನ್ನಗೈಯುತ ಭವದ
ಕೂಪದಿಂದುದ್ಧರಿಸಿದಾ
ಆಪಾರ ಮಹಿಮೆ ಆದ್ಯಂತ ವರ್ಣಿಸಲಳವೆ
ಶ್ರೀಪಾದ ಪದುಮ ರಜದಾ
ವ್ಯಾಪಾರವೆನ್ನ ಗುರು ದಯದಿ ಎನ್ನೊಳು ನಿಂದು
ತಾ ಪಾಲಿಸುತ ನುಡಿಸಿದ
ಗೋಪಾಲಕೃಷ್ಣವಿಠಲ ಧ್ಯಾನದಲಿ ಹಂಪೆ
ಗೋಪ್ಯಸ್ಥಳದಲಡಗಿದಾ ೧೦

 

ಧೀರೇಂದ್ರತೀರ್ಥರು
೧೫೮
ಧೀರೇಂದ್ರ ಧೀರೇಂದ್ರ ಪ.
ಧೀರ ಮೂಲರಾಮನ ಪದಕಮಲವ
ತೋರು ಮನದಿ ನೀ ಕುಣೀಕುಣಿದಾಡುವೆ ಅ.ಪ.
ವರದಾ ತೀರದಿ ವರಗಳ ಕೊಡುತಲಿ
ಮರುತಮತಾಂಬುಧಿ ಚಂದಿರನೆನಿಸಿದ ೧
ಕುಷ್ಟಾದಿ ಬಹು ದುಷ್ಟ ಗ್ರಹಗಳ
ಕುಟ್ಯೋಡಿಸುತ ಅಭೀಷ್ಟವಗರೆಯುವ ೨
ಮುನಿ ಮೌಳಿಯೆ ನಿನ್ನನು ಸ್ತುತಿಗೈಯುತ
ಘನ ಭಕ್ತಿಯೊಳಾಂ ಕುಣಿಕುಣಿದಾಡುವೆ ೩
ಅರ್ಥಿಯಿಂದ ನಾ ನರ್ತನಗೈಯುವೆ
ಸುತ್ತಿ ಸುತ್ತಿ ದಾಸತ್ವದ ನೇಮದಿ ೪
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲಪ್ರಿಯ
ಕೃಷ್ಣನ ಚರಣವ ಥಟ್ಟನೆ ತೋರಿಸೋ ೫

 

(ನು. ೧೨) : ವಾಯು ದೇವರು
೧೦೯
ನಂಬಿದೆನೊ ನಿನ್ನ ಪಾದ | ಜಯ ಮುಖ್ಯ ಪ್ರಾಣ
ಬೆಂಬಿಡದೆ ಬಹು ಮೋದ | ತೀರ್ಥಾರ್ಯ ಎನ್ನ
ಹಂಬಲಿಗೆ ಕೊಡೊ ಭೇದ | ಅರ್ಥಗಳ ವಾದ ಪ.
ನಂಬಿದೆನೊ ನಿನ್ನ ಪಾದ ಹೃದಯ
ಅಂಬರದೊಳು ನಿತ್ಯ ಹರಿಯ
ಬಿಂಬ ತೋರಿಸಿ ಎನ್ನ ಭವದ
ಅಂಬುಧಿ ಕಡೆ ಮಾಡು ವೇಗದಿ ಅ.ಪ.
ನೂರ ತೊಂಭತ್ತಷ್ಟ | ಕಲ್ಪದಲಿ ಹರಿಯ
ಆರಾಧಿಸಿದೆಯೊ ಶ್ರೇಷ್ಠ | ಅಲ್ಲಿಂದ ಮುಂದೆ ಸ-
ವಿೂರ ಪದಕೆ ದಿಟ್ಟ | ಬಂದೆಯೊ ಉತ್ರ‍ಕಷ್ಟ
ನಾರಸಿಂಹನ ಪಾದ ಭಜಿಸಿ
ಮೂರು ಅವತಾರವನೆ ಧರಿಸಿ
ವೀರ ಕಪಿರೂಪದಲಿ ರಾಮರ
ವಾರಿಜಾಂಘ್ರಿಯ ಭಜಿಸಿ೧
ಭುಜ ಪರಾಕ್ರಮ ಭೀಮ | ನೆಂದೆನಿಸಿ ಕೌರವ
ಧ್ವಜವ ಕೆಡಹಿದ್ಯೊ ಸೋಮ | ವಂಶಕೆ ತಿಲುಕ ನೀ
ಧ್ವಜ ಕಪಿಗೆ ಬಹುಪ್ರೇಮ | ನಿನ್ನಲಿ ಹರಿಯ ಧಾಮ
ದ್ವಿಜನ ಉದರದಿ ಜನಿಸಿ ಅಲ್ಲಿಂ
ಕುಜನ ಮತವನು ತರಿದು ಹರಿಯ
ಧ್ವಜ ವಜ್ರಾಂಕುಶ ಪಾದ ಭಜನೆ
ನಿಜಗತಿಗೆ ಬಹು ಶ್ರೇಷ್ಠವೆನಿಸಿದೆ ೨
ವ್ಯಾಪಕನೊ ನೀ ಎಲ್ಲಾ | ಕಡೆಯಲಿ ನಿನ್ನ
ರೂಪ ತುಂಬಿಹದಲ್ಲಾ | ಎನಗದನು ತೋರೊ
ಶ್ರೀ ಪತಿ ಗೋಪಾಲಕೃಷ್ಣವಿಠ್ಠಲ | ಲೀಲ
ನೀ ಪರಿಪರಿಯಿಂದ ತಿಳಿಸಿ
ತಾಪ ಹರಿಸೊ ಮೂರು ವಿಧದ
ಪಾಪಿ ಎಂದು ಎನ್ನ ನೂಕದೆ
ಕಾಪಾಡೊ ಪಂಚರೂಪ ಮೂರುತಿ ೩

 

೧೮೯
ನಗಬೇಡಿ ನಗಬೇಡಿ ನೀವ್
ನಗಬೇಡಿ ನಗಬೇಡಿ ಪ.
ನಿಗಮನುತನ ಭಜಿಸುವ ನಿಜದಾಸರ
ಬಗೆಯರಿಯದೆ ಬಿನ್ನಾಣದಿಂದ ನೀವ್ ಅ.ಪ.
ಹರಿಸರ್ವೋತ್ತಮ ಹೌದ್ಹೌದೆಂಬುವ
ಹರಿದಾಸರ ಲಕ್ಷಣಗಳ ತಿಳಿಯದೆ೧
ಸ್ಥಿರವಲ್ಲದ ತನುಭ್ರಾಂತಿಯ ಪೊಂದುತ
ಗುರುಚರಣ ನಂಬಿದ ದಾಸರ ಕಂಡು ೨
ಲಜ್ಜೆಯ ತೊರೆಯುತ ಮೂರ್ಜಗದೊಡೆಯನ
ಘರ್ಜಿಸಿ ಪಾಡುವ ಸಜ್ಜನರನೆ ಕಂಡು ೩
ಲೋಕವಿಲಕ್ಷಣ ಚರ್ಯೆಯ ಧರಿಸುತ
ಶ್ರೀ ಕಾಂತನ ಧ್ಯಾನಿಪರಿವರನರಿಯದೆ೪
ಗೋಪಾಲಕೃಷ್ಣವಿಠ್ಠಲನಂಘ್ರಿಗಳನು
ಭೋಪರಿ ನಂಬಿದ ನಿಜದಾಸರ ಕಂಡು ೫

 

೧೫೦
ನಮಿಪೆ ನದಿ ದೇವತೆಗಳೇ | ನಿಮಗೆ ಪ.
ನಮಿಪೆ ನದಿ ದೇವತೆಗಳೇ ನಿಮ್ಮ ಚರಣಕ್ಕೆ
ಕಮನೀಯ ಗಾತ್ರೆಯರೆ ಕಂಜದಳ ನೇತ್ರೆಯರೆ
ಸುಮನರ ವಂದಿತರೆ ಸುಗುಣ ಸಂಪನ್ನೆಯರೆ
ವಿಮಲಾಂಗ ಅಘ ಹರೆಯರೇ
ಕಮಲನಾಭನ ಅಂಗೋಪಾಂಗ ಸಂಜಾತೆಯರೇ
ಅಮರ ಭೂ ಪಾತಾಳ ಲೋಕ ಸಂಚರೆಯರೆ
ನಮಿಸಿ ಸ್ನಾನವಗೈವ ನರರ ಪಾವನಗೊಳಿಪ
ಅಮಿತ ಪಾವಿತ್ರತರರೇ ೧
ಗಂಗೆ ಗೋದಾವರಿ ಯಮುನೆ ಸರಸ್ವತಿ ಸಿಂಧು
ಮಂಗಳಾಂಗೆ ಕೃಷ್ಣ ಭೀಮರಥಿ ಪಲ್ಗುಣಿ
ಸಂಗಮ ತ್ರೀವೇಣಿ ಸರಯು ಗಂಡಿಕಿ ಸೀತ
ತುಂಗಭದ್ರಾ ನಾಮರೇ
ಅಂಗ ಮಾಲಾಪಾರಿ ಕಾವೇರಿ ಕಪಿಲೆ ನರ
ರಂಗ ಪಾವನ ಗೈವ ಪುಷ್ಕರಗಳಭಿಮಾನಿ
ಅಂಗನೆಯರೆಲ್ಲರಿಗೆ ಅಭಿವಂದಿಸುವೆ ಅಘವ
ಹಿಂಗಿಸುವುದೆಂದು ಮುದದೀ ೨
ಬಂದು ಸ್ವಪ್ನದಿ ಮಾಘ ಶುದ್ಧ ನವಮೀ ಭರಣಿ
ಸಂಯೋಗದ ಪರ್ವವೆಂದು ಭದ್ರೆಲಿ ಸ್ವಾನ
ವಿಂದು ಗೈದೆವು ಎಂದು ಮುಂದೆ ಕುಳ್ಳಿರೆ ನಾನಾ
ನಂದದಿಂ ಕಂಡು ನಿಮ್ಮಾ
ಸುಂದರಿಯರೇ ನಿಮ್ಮ ಸಂದರ್ಶನದಿ ಫಲವು
ಬಂದುದೆನಗೆಂದು ನಾನಂದ ವಚನಕೆ ನಲಿದು
ಒಂದು ಅರಿಯದ ಎನಗೆ ತಂದು ಕೊಟ್ಟಿರಿ ಸ್ನಾನ
ದಿಂದ ಬಹು ಪುಣ್ಯ ಫಲವಾ ೩
ಹರದಿಯರೆ ಕಂಡೆ ನಿಮ್ಮರವಿಂದ ಮುಖ ಶುಭ್ರ
ಸರಿತು ದೇವತೇಗಳೇ ಗುರು ಕೃಪೆಯ ಬಲದಿಂದ
ವರನಾಡಿಯಲಿ ಪರಿವ ಸಿರಿ ನದಿಗಳೇ ಜಗದಿ
ಹರಿದು ನರರಘವ ಕಳೆದು
ಭರದಿಂದ ಪರಿದು ಸಾಗರವ ಕೂಡುವ ತ್ವರದಿ
ಪರಿಪರಿಯ ಜಲ ಜಂತು ಸಂಸಾರಿ ಸಂಗೆಯರೆ
ನರರು ಬಣ್ಣಿಸಲಳವೆ ಕರುಣಿ ನಿಮ್ಮಯ ಮಹಿಮೆ
ಸಿರಿಕಾಂತ ಪ್ರಿಯಸುತೆಯರೇ ೪
ಶ್ರೇಷ್ಟನದಿ ಅಭಿಮಾನಿ ಸತಿಯರೇ ಎನ್ನ ಅಘ
ಸುಟ್ಟು ನಿರ್ಮಲ ಭಾವ ಕೊಟ್ಟು ಹೃತ್ಪದದಲಿ
ವಿಷ್ಣು ಮೂರ್ತಿಯ ಕಾಂಬ ಶ್ರೇಷ್ಟ ಜ್ಞಾನದ ಮಾರ್ಗ
ಕೊಟ್ಟು ಸದ್ಭಕ್ತಿ ಭರದೀ
ಚಿಟ್ಟನೇ ಚೀರಿ ದಾಸ್ಯದ ಭಾವದಲಿ ಕುಣಿದು
ಶ್ರೇಷ್ಟ ಶ್ರೀ ಗೋಪಾಲಕೃಷ್ಣವಿಠ್ಠಲನ ಪದ
ಮುಟ್ಟುವೊ ವಿಜ್ಞಾನ ಪ್ರವಹ ರೂಪದಿ ವಲಿದುದಿಟ್ಟಿಯರ ಸಂತೈಸಿರಿ ೫

 

೧೩೫
ನಾಟ್ಯವಾಡಿದ ನಮ್ಮ ನಾರಸಿಂಹನ ಭಕ್ತ
ಶಿಷ್ಟೇಷ್ಟ ಜನಪ್ರಿಯ ಶ್ರೀ ಪಾರ್ವತೀಶ ಪ.
ಪರಮ ಸಂತೋಷದಲಿ ಉದಯಸ್ತ ಪರಿಯಂತ
ಸಿರಿವರ ರಾಮನ ಪರಮ ನಾಮಾಮೃತವ
ತರುಣಿ ಗಿರಿಜೆಗೆ ಅರುಹಿ ಮರೆದು ತನುಮನವನ್ನು
ಉರುತರದ ಭಕ್ತಿಯಿಂ ಪರಮ ವೈರಾಗ್ಯನಿಧಿ ೧
ತರತಮ್ಯ ಜಗಸತ್ಯ ಹರಿಯು ಸರ್ವೋತ್ತಮನು
ಸಿರಿಯು ಅನಂತರದಿ ವಾಯು ಜೀವೋತ್ತಮನು
ಪರಮ ವೈರಾಗ್ಯ ಹರ ವೈಷ್ಣವೊತ್ತಮನೆನುತ
ಉರವಣಿಸಿ ನುಡಿಯುವರ ನುಡಿ ಕೇಳಿ ಹರುಷದಿ ೨
ಗೋಪಾಲಕೃಷ್ಣವಿಠಲ ತಾ ಪ್ರೀತಿಯಿಂದಲಿ
ಗೋಪತನಯರನೆಲ್ಲ ಸಲಹಲೋಸುಗದಿ
ಪಾಪಿ ಕಾಳಿಂಗನ ಫಣೆಯಲ್ಲಿ ಕುಣಿದುದು
ಈ ಪರಿ ಎಂದೆನುತ ತಾ ಪ್ರೀತಿಯಿಂ ತೋರಿ ೩

 

೨೧೮
ನಾನೇ ಭ್ರಮಿಸಿದೆನೋ ವಿಷಯ ಸಂಗ
ನೀನೇ ನಲಿದಿತ್ತೆಯೋ ಪ.
ಗಾನಲೋಲನೆ ಕೃಷ್ಣ ಏನೆಂಬುದರಿಯೆನೊ
ಮೌನಿ ಜನಪ್ರಿಯ ಧ್ಯಾನಗಮ್ಯನೆ ರಂಗ ಅ.ಪ.
ಲೋಕ ದೃಷ್ಟಿಯ ಸುಖ ಹೀನತೆಯಿಂದೆ
ನೂಕುತ ದಿನ ಕಳೆದೆ
ಕಾಕು ಯುಕುತಿಯಲ್ಲಿ ವ್ಯಾಕುಲ ಮನಕಿಲ್ಲ
ಶ್ರೀಕಾಂತ ನಿನ್ನಿಚ್ಛೆ ಸುಖದುಃಖ ನಿಕರವ ೧
ಆಟ ಪಾಟ ನೋಟವೂ ಊಟ ಕೂಟ
ಕಾಟ ಕರ್ಮಗಳೆಲ್ಲವೂ
ಹಾಟಕಾಂಬರ ನಿನ್ನಾಟವÉನ್ನಲುಭವ
ದಾಟಿಸುವವೊ ತೆರೆ ಏಟಿಗೆ ಕೊಡುವುವೋ ೨
ನರಕಕೆ ಕಾರಣವೋ ಹೇ ಶ್ರೀನರ
ಹರಿ ನಿನ್ನ ಪ್ರೀತಿ ಕರವೋ
ಪರಿಪರಿ ಜನ್ಮ ಸಂಚಿತ ಕರ್ಮ ಹರಿಸುತ
ವರ ಸುಖ ಪಾಲಿಪ ಗುರುತಿನ ಪರಿಯೋ ೩
ದೇಹಕ್ಕೆ ಹಿತಕರವೋ ಇಲ್ಲವೆ ಮನ
ದಾಹಕ್ಕೆ ಮೃತ ಕರವೋ
ದೇಹ ಮೋಹಾದಿಗಳಳಿದು ನಿಶ್ಚಲ ತತ್ವ
ಶ್ರೀಹರಿ ತೋರುವ ತೆರವೊ ಒಂದರಿಯೆ ೪
ಪಾಪಕ್ಕೆ ಹಿತಕರವೋ ಇಲ್ಲವೆ ಮನ
ದಾಹಕ್ಕೆ ಮೃತ ಕರವೋ
ದೇಹ ಮೋಹಾದಿಗಳಳಿದು ನಿಶ್ಚಲ ತತ್ವ
ಶ್ರೀಹರಿ ತೋರುವ ತೆರವೊ ಒಂದರಿಯೆ ೫
ಪಾಪಕ್ಕೆ ಕಾರಣವೋ ಈ ಕರ್ಮಗಳ
ಳಾಪದುದ್ಧಾರಕವೋ
ಗೋಪಾಲಕೃಷ್ಣವಿಠ್ಠಲನೆ ಮದ್ಗುರು ಬಿಂಬ
ವ್ಯಾಪಾರದ್ವಯ ನಿಂದು ನೀ ಪ್ರೀತನಾಗಲೊ ೬

 

೩೮
ನಾರಸಿಂಹನೆ ಧೀರ | ನಂಬಿದೆನೊ ಪೊರೆಯೊ
ಶ್ರೀ ರಮಾಪತಿ ವೀರ | ಕರಿಗಿರಿ ವಿಹಾರ ಪ.
ಸಾರಿದೆನೊ ನಿನ್ನ ಪದವ ಅನುದಿನ
ಸೇರಿಸೆನ್ನನು ಭಕ್ತಕೂಟದಿ
ಗಾರು ಮಾಡುವುದುಚಿತವೇ ಹರಿ
ಪಾರುಗಾಣಿಸೊ ಭವ ಸಮುದ್ರದಿ ಅ.ಪ.
ತಡೆಯಲಾರೆನೊ ತಾಪ | ನಾನಾರಿಗುಸುರಲೊ
ಒಡಲ ದುಃಖವ ಭೂಪ | ನೀನಲ್ಲದಿಲ್ಲವೊ
ಕಡೆಮಾಡು ಭವ ಶ್ರೀಪ | ತೋರದಿರು ಕೋಪ
ಘುಡು ಘುಡುಸಿ ನೀ ಎನ್ನ ಬೆದರಿಸೆ
ತಡೆವೆನೇ ನಿನ್ನ ಕೋಪದಗ್ನಿಗೆ
ಬಿಡು ಬಿಡು ಬಿಂಕ ಎನ್ನೊಳು
ತಡೆಯೊ ಎನ್ನ ದುರುಳತನಗಳ
ಕಡುಕರುಣಿ ನೀನಲ್ಲವೆ ಹರಿ
ಒಡಲೊಳಗೆ ಪ್ರೇರಕನು ನೀನೆ
ನಡಸಿದಂದದಿ ನಡೆವೆನಲ್ಲದೆ
ಒಡೆಯ ಎನ್ನ ಸ್ವತಂತ್ರವೇನೊ? ೧
ದುರುಳತನದಲಿ ದೈತ್ಯ | ಭೂವಲಯವೆಲ್ಲವ
ಉರವಣಿಸಿ ದುಷ್ಕುತ್ಯ | ಎಸಗುತಿರೆ ದುಃಖದಿ
ಸುರರು ಮೊರೆಯಿಡೆ ಸತ್ಯ | ದೃಢಮನದಿ ಭೃತ್ಯ
ಕರಕರೆ ಪಿತ ಬಡಿಸುತಿರಲು ದೊರೆಯೆ ನೀ
ಪೊರೆ ಎಂದು ಮೊರೆಯಿಡೆ
ಸರ್ವವ್ಯಾಪಕನೆಂದು ತೋರಲು
ತ್ವರಿತದಲಿ ಕಂಭದಲಿ ಬಂದು
ಸರಸಿಜವು ಕಂಗೆಡುವೊ ಕಾಲದಿ
ಧರಿಸಿ ತೊಡೆಯ ಮೇಲಸುರ ಕಾಯವ
ಕರುಳ ಬಗೆದು ಮಾಲೆ ಧರಿಸಿ
ಪೊರೆದೆಯೊ ಸ್ತುತಿ ಕೇಳಿ ಬಾಲನ ೨
ಅಜಭವಾದಿಗಳೆಲ್ಲ | ಸ್ತುತಿಸಿದರೆ ಮಣಿಯದ
ಭುಜಗಶಾಯಿ ಶ್ರೀ ನಲ್ಲ | ನಾ ನಿನ್ನ ಸ್ತುತಿಸಿ
ಭಜಿಸಲಾಪೆನೆ ಕ್ಷುಲ್ಲ | ಮಾನವನ ಸೊಲ್ಲ
ನಿಜಮನವ ನೀ ತಿಳಿದು ಸಲಹೊ
ಧ್ವಜವಜ್ರಪದ ಕಮಲ ತೋರಿ
ಕುಜನನಲ್ಲವೊ ಹಿರಿಯರೆನಗೆ
ನಿಜಗತಿಯ ಪಥ ತೋರುತಿಹರೊ
ರಜ ತಮವ ದೂರಟ್ಟಿ ಶುದ್ಧದಿ
ಭಜಿಸುವಂದದಿ ಕೃಪೆಯ ಮಾಡಿ
ಸುಜನರೆನ್ನನು ಪಾಲಿಸುತ್ತಿರೆ
ನಿಜದಿ ಗೋಪಾಲಕೃಷ್ಣವಿಠ್ಠಲ ೩

 

(ನು.೨) ವಿಶ್ವತೈಜಸ ಪ್ರಾಜ್ಞ
೪೦
ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ
ಕಂದರ್ಪಜನಕ ದೇವ ಪ.
ನಂದಕಂದನೆ ನಿನ್ನ ಮಂದಮತಿ ನಾನೆಂತು
ವಂದಿಸಿ ಸ್ತುತಿಪೆನಯ್ಯ | ಜೀಯ ಅ.ಪ.
ಸತ್ವಗುಣವಾರಿಧಿಯೆ ತತ್ವಗಳ ತಿಳಿಸೆನಗೆ
ಉತ್ತಮ ಪಥವ ತೋರೋ
ನಿತ್ಯ ಸಂಸಾರದಲ್ಲಿ ಸುತ್ತಿಸದೆ ನಿನ್ನಪದ
ಭೃತ್ಯಸಂಗದಲಾಡಿಸೊ | ಸತತ ೧
ವಿಶ್ವತೈಜಸಪ್ರಾಜ್ಞತುರಿಯ ರೂಪಗಳಿಂದ
ವಿಶ್ವೇಶ ದೇಹದೊಳಗೆ
ವಿಶ್ವವ್ಯಾಪಕ ಹರಿಯೆ ಸ್ವಪ್ನ ಜಾಗ್ರತೆ ಸುಷುಪ್ತಿ
ವಿಶ್ವಮಯ ಜೀವಕೀವೆ | ಕಾವೆ ೨
ತತ್ವಾಧಿಪತಿಗಳೊಳು ವ್ಯಾಪ್ತನಾಗಿರುತ ನೀ
ಮತ್ತೆಲ್ಲ ಕಾರ್ಯ ಮಾಳ್ಪೆ
ಚಿತ್ತಾಭಿಮಾನಿ ಶ್ರೀ ಮಾರುತಾಂತರ್ಯಾಮಿ
ವ್ಯಾಪ್ತನಾಗಿರುವೆ ಜಗದಿ | ಮುದದಿ ೩
ಮಧ್ಯನಾಡೀ ಹೃದಯ ಮಧ್ಯಪದ್ಮದ ಮಧ್ಯೆ
ಇದ್ದೆನೆಗೆ ರೂಪ ತೋರೋ
ಒದ್ದಾಡುವೆನೊ ಭವದಿ ಉದ್ಧರಿಸಬೇಕಿನ್ನು
ಒದ್ದು ತಾಪತ್ರಯವನು | ನೀನು ೪
ಶ್ರೀನಿವಾಸನೆ ನಿನ್ನ ಧ್ಯಾನ ಅನವರತದಲಿ
ಮಾನಸದಲೆನಗೆ ನೀಡೋ
ಶ್ರೀನಿಧೇ ಗೋಪಾಲಕೃಷ್ಣವಿಠ್ಠಲ ಎನ್ನ
ಸಾನುರಾಗದಲಿ ಸಲಹೋ ಎಲವೋ ೫

 

೨೪೪
ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ
ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ.
ಹಸ್ತಿವರದನು ತಂಗಿಯರ ನೋಡಬೇಕೆಂದು
ಹಸ್ತಿನಾಪುರಕೆ ಬಂದ್ಹರುಷದಿಂದ
ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು
ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ ೧
ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು
ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ
ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ
ಎನ್ನ ಭಾಗದ ದೈವ ಸಲಹೆಂದು ನುತಿಸೇ ೨
ಅಂತರಂಗದ ಭಕ್ತಿ ಆನಂದಮಯ ತಿಳಿದು
ಕಂತುಪಿತ ಕರಗಿದಾ ಮಮತೆ ಪ್ರೇಮದಲಿ
ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ
ಇಂತು ನುಡಿನುಡಿಗೆ ಆಡಲು ಕರುಣೆಯಿಂದ ೩
ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ
ಬಾಲೆ ನಿಜ ತಂಗಿ ನಾನಿರಲು ಐವರಿಗೆ
ಲೋಲೆಯಾದವಳೆ ಬಲು ಮೇಲಾದವಳೆ ಎಂದು
ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ ೪
ಕಂಡು ಕಮಲಾಕಾಂತ ವಡಹುಟ್ಟಿದಳ
ಬೆಂಡಾದ ತೆರವ ಪೇಳೆನಲು ಖತಿಯಿಂದಾ
ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ
ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ ೫
ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ
ದಚ್ಚರಿಯ ಕೌತುಕವ ತೋರ್ವೆನೆಂದೂ
ಅಚ್ಛಿದ್ರ ಅಕ್ಲೇಶ ಆನಂದಮಯ ತಾನು
ಕಚ್ಚಿ ಬೆರಳನು ಕ್ಲೇಶ ಪಡುತ ವರಲಿದನೂ ೬
ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ
ಸೋರುತಿದೆ ಬೇಗೊಂದು ಚಿಂದಿ ತಾರೆ
ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ
ತೋರದಲೆ ಒಂದ್ಹರಕು ಬಟ್ಟೆ ಕಂಗೆಡುತಾ ೭
ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು
ಉತ್ತಮಾ ವಸನ ಕಂಚುಕ ಮಕುಟ ಮೆರೆಯೇ
ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು
ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ ೮
ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ
ವರ ತಂಗಿ ಬೇಗ ಕೊಡೆ ಹರಕು ಬಟ್ಟೆ
ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು
ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ ೯
ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ
ನಿಂದು ನೋಡಿದಳೂ ದ್ರೌಪತಿಯ ಕೃತಿಯಾ
ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು
ಇಂದಿರೇಶನು ಇದರ ವಿವರ ತೋರಿದನು ೧೦
ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು
ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ
ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ
ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ ೧೧
ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು
ಎನ್ನ ಅಭಿಮಾನ ಕಾಯುವ ದೈವ ನೀನೂ
ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ
ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ ೧೨
ಹೇ ನಾರಿ ನಾನನಾಥರಿಗೆ ನಾಥನು ಮುಂದೆ
ನೀನಿತ್ತ ವಸನ ಅಕ್ಷಯವಾಗಲೆಂದು
ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದ
ಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ ೧೩

 

(ನು.೨) ಭೂಪತಿಯಿಂದಲಿ
೧೫೭
ನಿತ್ಯಾನಮಿಪೆ ನಿಮ್ಮುತ್ತಮ ಪದಕೆ ಶ್ರೀ
ಸತ್ಯಾಬೋಧ ಗುರುವೆ ಪ.
ಚಿತ್ತದಲ್ಲಿ ಶ್ರೀ ವತ್ಸಾಂಕಿತನ ಪದ
ನಿತ್ಯಾ ಸ್ಮರಿಪ ಮುನಿಯೆ ಅ.ಪ.
ಚಿದಾತ್ಮವಾದ ನಿಮ್ಮುದಾರ ಕೀರ್ತಿಗೆ
ಸದಾ ಉದಯವಹುದು
ಇದನರಿಯದ ಅಧಮರಿಂದಲಿ
ಒದಗುವುದೆ ಕುಂದು
ವಿಧವಿಧಾನ್ನವ ಬುಧರಿಗಿತ್ತಂಥ
ನಿಧಾನಿ ನೀನೆಂದು
ಇದೆ ವಾರ್ತೆ ಕೇಳೆದೂರಿಗೆ ಬಂ
ದದಾನರಿತೆನಿಂದು ೧
ವೃಂದಾವನಸ್ಥನೆ ಮಂದರಿಗರಿದೆ ನಿ
ಮ್ಮಂದಿನ ಕೀರುತಿಯು
ಒಂದನರಿಯದ ಮಂದಮತಿಯು ನಾ
ಬಂದೆ ನಿಮ್ಮ ಬಳಿಯು
ಕುಂದುಗಳನೆಣಿಸದೆ ಸಂದೇಹ ಮಾಡದೆ
ಇಂದು ಪೊರೆದು ಆಯು
ಮುಂದೆ ಕೊಟ್ಟು ಗೋಪಿಕಂದನ ಪಾದ
ದ್ವಂದ ತೋರಿ ಕಾಯೋ ೨
ಕೃಪಾಳು ನಿಮ್ಮಂಥ ತಪಸಿಗಳು ಉಂಟೆ
ತಪಾನ ನಿಶಿ ತೋರ್ದೆ
ಶ್ರೀ ಪತಿ ರಾಮನ ಆಪಾದಮಸ್ತಕ
ರೂಪ ನೋಡಿ ದಣಿದೆ
ಭೂಪತಿಯಿಂದಲಿ ಈ ಪರಿಭವನವ
ನೀ ಪ್ರೀತಿಯಿಂ ಪಡೆದೆ
ಗೋಪಾಲಕೃಷ್ಣವಿಠ್ಠಲನ ಧ್ಯಾನಿಸುತ ಸ್ವ
ರೂಪಾನಂದ ಪಡೆದೆ ೩

 

೨೧೯
ನಿನ್ನ ಚಿತ್ತ ನಿನ್ನ ಚಿತ್ತ ನಿನ್ನ ಚಿತ್ತವೋ ಪ.
ನಿನ್ನ ಚಿತ್ತಕಿನ್ನು ತಂದು ಬನ್ನ ಬಡಿಸಬೇಡವಿನ್ನು
ಭಯವ ಬಿಡಿಸಿ ಕಾಯೊ ಎನ್ನ ಅ.ಪ.
ಘನ್ನ ಮನಸು ಮಾಡಿ ಈಗ
ಎನ್ನ ಸಲಹಿದರೆ ಜಗದಿ
ನಿನ್ನ ಕೀರ್ತಿಯು ಉನ್ನತದಲಿ ಮೆರೆವುದಿದೆಕೊ
ಬನ್ನ ಬಡಿಸಬೇಡವಿನ್ನು
ಘನ್ನಮಹಿಮ ಕೇಳು ಸೊಲ್ಲ
ಇನ್ನು ಸುಮ್ಮನಿರಲು ಸಲ್ಲ ಘನಮಹಿಮನೆ ೧
ಬುದ್ಧಿ ಭ್ರಮೆಯಿಂದ ನಾನು
ಪೊದ್ದಿರುವ ಭಯವ ಬಿಡಿಸಿ
ನಿದ್ದೆಯಲಿ ತಿಳಿಸಿದ್ವಾರ್ತೆ ಶುದ್ಧಗೊಳಿಸುತ
ಮುದ್ದುಕೃಷ್ಣ ಅಭಯ ತೋರಿ
ಉದ್ಧರಿಸಿದರೆ ಎನ್ನ
ಶ್ರದ್ಧೆಯಿಂದ ನಿನ್ನ ಕೀರ್ತಿ ಮಧ್ವಮತದಿ ಸಾರುವೆನು೨
ಬೆದರಿಸುವ ಪರಿಯದೇನು
ಬದಿಗನಾಗಿ ಅರಿಯದೇನು
ಹೃದಯದಲ್ಲಿ ನಿಂತ ಮೇಲೆ ಎನ್ನದಿನ್ನೇನು
ಪದುಮನಾಭ ನಿನ್ನ ನಂಬಿ
ಪದೋಪದಿಗೆ ನೆನೆಸುತಿರಲು
ವಿಧ ವಿಧದಿ ಪರಿಕಿಸುವ ವಿಧವನರಿಯೆ ಪದುಮೆಯರಸ೩
ಉಡಲು ಉಣಲು ಆಸೆಯಿಲ್ಲ
ತೊಡಲು ಇಡಲು ಮಮತೆಯಿಲ್ಲ
ಎಡದ ಬಲದ ನೆಂಟರಭಿಮಾನವಿಲ್ಲವು
ಎಡರು ಬರಲು ಭಯವು ಇಲ್ಲ
ಬಿಡಲು ದೇಹ ಅಂಜಿಕಿಲ್ಲ
ನಡುವೆ ಕರೆವುದುಚಿತವಲ್ಲ ಮೃಡನ ಸಖನೆ ಕೇಳೊ ಸೊಲ್ಲ ೪
ನಿರ್ದಯವನು ಮಾಡಲಿಕ್ಕೆ
ಮಧ್ಯಮಧಮಳಲ್ಲವಿನ್ನು
ಮಧ್ವಮುನಿಯ ಮತದಿ ಜನಿಸಿ ಶುದ್ಧ ಭಾವದಿ
ಶುದ್ಧ ಸಾತ್ವಿಕರು ತಂದೆ
ಮುದ್ದುಮೋಹನ ಗುರುಗಳಿಂದ
ಪೊದ್ದಿ ದಾಸ್ಯರೀಗ ಜಗದಿ ಬದ್ಧ ಕಂಕಣಧರಿಸಿ ಮೆರೆವೆ ೫
ಒಡೆಯ ನೀನು ಎನ್ನ ಧರೆಗೆ
ಬಿಡದೆ ತಂದು ಜನ್ಮವಿತ್ತು
ಬಿಡದೆ ಕಾಯ್ವ ಗುರುಗಳನ್ನು ಅಗಲಿಸುತ್ತಲಿ
ಅಡಿಗಡಿಗಭಯವ ತೋರಿ
ಪಿಡಿದು ಕೈಯ್ಯ ಸಲಹದಿರಲು
ಅಡಿಗಳಾರದಿನ್ನು ನಾನು ಪಿಡಿಯೆ ಕಡಲಶಯನ ೬
ನಾಥರಾರು ಎನಗೆ ಇಲ್ಲ |ಅ-
ನಾಥಗಳನ್ನು ಮಾಡಿ ನಿನ್ನ
ಮೂತಿ ತಿರುಹಿ ಸಲಹದಿರಲು ಪಾತಕಲ್ಲವೆ
ಪಾತಕಾದಿ ದೂರನೆಂಬೊ
ಖ್ಯಾತಿ ಸಟೆಯದಾಯ್ತು ಈಗ
ನೀತಿಯರಿತು ಪೊರೆಯದಿರಲು ಜಾತರಹಿತ ಜಗದಿ ಸಲಹು ೭
ದಾಸತನದಿ ಮೆರೆವೊದೊಂದು
ಆಸೆಯಿಲ್ಲದಿನ್ನು ಬೇರೆ
ಆಸೆಯೊಂದು ಇಲ್ಲ ಕೇಳು ನಾಶರಹಿತನೆ
ಪಾಶಕರ್ಮ ಹರಿಸಿ ನಿನ್ನ
ದಾಸಳೆಂದು ಮೆರೆಸೆ ಜಗಕೆ
ಈಶನೆಂದು ನಿನ್ನ ಮೆರೆಸಿ ಆಸೆ ಪೂರೈಸಿಕೊಂಬೆ ೮
ಮೃತ್ಯುವಿಗೆ ಮೃತ್ಯುವಾಗಿ
ತುತ್ತುಮಾಡಿ ಜಗವ ನುಂಗಿ
ಮತ್ತೆ ಬ್ರಹ್ಮಾಂಡ ಸೃಜಿಸಿ ಪೆತ್ತು ಜೀವರ
ಭಕ್ತ ಜನಕೆ ಬಂದ ಎಡರು
ಮೃತ್ಯುಗಳನು ಕಾಯ್ದ ದೇವ
ಮೃತ್ಯು ಮೃತ್ಯು ಶರಣು ನೃಹರಿ ಮೃತ್ಯು ಹರಿಸಿ ಕಾಯೊ ಶೌರಿ೯
ಬಿಡಲಿಬೇಡ ಕೈಯ್ಯ ಇನ್ನು
ಬಿಡದೆ ಕಾಯೊ ಶರಣು ಶರಣು
ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲಾತ್ಮಕ
ಕಡೆಗೆ ನಿನ್ನ ಪಾದಸೇವೆ ಬಿಡದೆ
ಕೊಡುವ ದೃಢವ ಬಲ್ಲೆ
ಕಡಲಶಯನ ಗುರುಗಳೊಡೆಯ ಕಡುಕೃಪಾಳು ಕರವ ಪಿಡಿಯೊ ೧೦

 

೩೯
ನಿನ್ನ ನೋಡಲಿ ಬಂದೆ ಘನ್ನ ಮಹಿಮನೆ ಕೃಷ್ಣಾ
ಮನ್ನಿಸಿ ಕೃಪೆಯ ಮಾಡೊ ಪ.
ನಿನ್ನ ದರುಶನವಿತ್ತು ಎನ್ನ ಪಾಪವ ಕಳೆದು
ನಿನ್ನ ಪಾದವನೆ ತೊರೋ ಸ್ವಾಮಿ ಅ.ಪ.
ರಜತಪೀಠಾಪುರದಿ ರಮ್ಯ ಮಂದಿರದಲ್ಲಿ
ರಾಜಿಸುತ್ತಿಹ ದೇವನೆ
ಕುಜನಮರ್ಧನ ಎನ್ನ ರಜ ತಮೋಗುಣ ಕಳದು
ನಿಜಭಕ್ತರೊಡನಾಡಿಸಿ
ಸುಜನವಂದಿತ ನಿನ್ನ ಭಜನೆಯಿಂದಲಿ ನಲಿದು
ನಿಜರೂಪ ನೋಡುವಂತೆ
ವಿಜಯಸಾರಥಿಯೆ ನೀ ಈ ತೆರದಿ ಪೊರೆಯದಿರೆ
ಭಜಿಸಲ್ಯಾತಕೆ ನಿನ್ನನು ದೇವ ೧
ಶ್ರೀ ತಂದೆ ಮುದ್ದುಮೋಹನದಾಸರೆಂತೆಂಬ
ನೀತ ಗುರುದ್ವಾರದಿಂದ
ನಾ ತಿಳಿದು ಬಂದೆ ನಿನ್ನಯ ಮಹಿಮೆ ಜಾಲಗಳ
ಪ್ರೀತನಾಗಿ ಕಾಯೋ
ನೀತಿಯಲ್ಲವು ನಿನಗೆ ಮಹಿಮೆ ತೋರದೆ ಎನ್ನ
ಘಾತಿಗೊಳಿಸುವರೆ ಹೀಗೆ
ನಾಥ ನಿನ್ನಗಲಿ ನಾನರಘಳಿಗೆ ಇರಲಾರೆ
ಸೋತು ಬಂದಿಹೆನೊ ಭವದಿ ಮನದಿ ೨
ಸತ್ಯಸಂಕಲ್ಪ ನೀನಾದಡೆ ಎನಗಿನ್ನು
ಅತ್ಯಧಿಕ ರೂಪ ತೋರೊ
ಮೃತ್ಯು ಬೆನ್ಹತ್ತಿ ಆಯುಷ್ಯವ ಪರಿಹರಿಸುವುದು
ಎತ್ತ ಪೋದರು ಬಿಡದೆಲೊ
ಭೃತ್ಯತನವನೆ ವಹಿಸಿ ನಿನ್ನ ತೋರೆಂದೆನಲು
ಮತ್ತೆ ಕರುಣವಿಲ್ಲವೆ
ಚಿತ್ತಜಾಪಿತ ನಿನ್ನ ಒಲುಮೆ ಮಾರ್ಗವನರಿಯೆ
ಚಿತ್ತಕ್ಕೆ ತಂದು ಕಾಯೊ ಕೃಷ್ಣ ೩
ಆನಂದಮುನಿವರದ ಆನಂದ ಕಂದನೆ
ಆನಂದನಿಲಯವಾಸ
ಆನಂದರತ್ನಪ್ರಭಾದಿಂದ ರಾಜಿತನೆ
ಆನಂದಮೂರ್ತಿ ಕೃಷ್ಣ
ಆನಂದಗೋಕುಲದಿ ಆನಂದದಲಿ ಮೆರೆದು
ಆನಂದ ಸುಜನಕಿತ್ತೆ
ನೀನಿಂದು ಎನ್ನ ಮನಕೆ ಆನಂದವನೆ ಇತ್ತು
ಆನಂದರೂಪ ತೋರೊ ಕೃಷ್ಣ ೪
ಥರವಲ್ಲ ನಿನಗೆನ್ನ ಕರಕರೆಗೊಳಿಸುವುದು
ಪೊರೆವರಿನ್ಯಾರು ಜಗದಿ
ಮರೆತು ಗರ್ವದಿ ಎನ್ನ ಮರೆವರೆ ನೀನ್ಹೀಗೆ
ಗುರುಗಳಂತರ್ಯಾಮಿಯೆ
ಸರ್ವನಿಯಾಮಕ ಸರ್ವವ್ಯಾಪಕನೆಂಬ
ಬಿರುದು ಪೊತ್ತಿಲ್ಲವೇನೊ
ಕರುಣಾಳು ಗೋಪಾಲಕೃಷ್ಣವಿಠ್ಠಲ ನಿನ್ನ
ಪರಿಪರಿಯ ರೂಪ ತೋರೊ ಕೃಷ್ಣ ೫

 

೨೨೦
ನಿನ್ನವಳೆನಿಸೊ ಎನ್ನ ಘನ್ನ ಗೋಪಾಲ
ನಿನ್ನವಳೆನಿಸೊ ಎನ್ನ ಪ.
ಅನ್ಯರೊಬ್ಬರ ಕಾಣೆ ಮನ್ನಿಸುವರ ಜಗದಿ
ನಿನ್ನ ಹೊರತು ಇಲ್ಲ ಪನ್ನಗಾದ್ರಿವಾಸ ಅ.ಪ.
ಜನನ ಮರಣ ಕಷ್ಟ ಘನಭವ ಜಲಧಿಯೊಳ್
ಮುಣಗಿ ಮುಣಗಿ ದಡವನು ಕಾಣದಿರುವೆನೊ ೧
ದುಷ್ಟ ವಿಷಯಗಳ ಅಟ್ಟಿ ದೂರದಿ ನಿನ್ನ
ಶ್ರೇಷ್ಠ ನಾಮಾಮೃತ ಕೊಟ್ಟು ಪುಷ್ಟಿಯನಿತ್ತು ೨
ಭಕ್ತಿ ಜ್ಞಾನವು ನಿನ್ನ ಭಕ್ತ ಸಂಗವು ವಿ-
ರಕ್ತಿ ಪಥವ ತೋರಿ ಮುಕ್ತಿಯ ಪಾಲಿಸಿ ೩
ಶ್ರೀನಿಕೇತನ ನಿನ್ನ ಧ್ಯಾನವ ಮಾಳ್ಪಂಥ
ಗಾನಾನಂದವನಿತ್ತು ದೀನ ಬಂಧುವೆ ನಿತ್ಯ ೪
ಮಧ್ವಮತದ ಸಾರ ಉದ್ಘೋಷಿಸುವಂತೆ
ಬುದ್ಧಿಪ್ರೇರಕನಾಗಿ ಶುದ್ಧ ಜ್ಞಾನವನಿತ್ತು ೫
ನಿನ್ನ ಪದುಮ ಪಾದವನು ನಂಬಿದ ಎನ್ನ
ನಿನ್ನ ದಾಸಳೆನಿಸಿ ಘನ್ನ ಮಾರ್ಗವ ತೋರಿ೬
ಅಂತರಂಗದ ಧ್ಯಾನ ನಿಂತು ನೀ ನಡಿಸುತ
ಅಂತರಂಗದಿ ನಿನ್ನ ಶಾಂತರೂಪವ ತೋರಿ ೭
ತಂದೆ ಮುದ್ದುಮೋಹನ ಗುರುಹೃದಯ
ಮಂದಿರ ನಿವಾಸ ಎಂದೆಂದಿಗಗಲದೆ ೮
ಗೋಪಾಲಕೃಷ್ಣವಿಠ್ಠಲದೇವ ಸರ್ವೇಶಆಪನ್ನಿವಾರಕ ಆಪದ್ಭಾಂದವನಾಗಿ ೯

 

ಯಂತ್ರೋದ್ಧಾರ
೧೧೦
ನಿಷ್ಠೆಯಿಂದ ನಿಂತ ಈ ಪುಟ್ಟ ಕಪಿಯ ನೋಡೆ ಪ.
ಎಷ್ಟು ಮೌನ ಧರಿಸಿದಂಥ ಪುಟ್ಟ ಕಪಿಯ ನೋಡೆ ಅ.ಪ.
ವಾರಿಧಿಯ ದಾಟಿದಂಥ ಪುಟ್ಟ ಕಪಿಯ ನೋಡೆ
ಹೀರಿದ ಕುರುಪರ ರಕ್ತ ಪುಟ್ಟ ಕಪಿಯ ನೋಡೆ ೧
ತೂರಿದ ಅನ್ಯರ ಮತ ಪುಟ್ಟ ಕಪಿಯ ನೋಡೆ
ಸಾರಿ ಹರಿ ಸರ್ವೋತ್ತಮನೆಂದ ಪುಟ್ಟ ಕಪಿಯ ನೋಡೆ೨
ಶೌರ್ಯವೆಲ್ಲ ಉಡುಗಿದಂಥ ಪುಟ್ಟ ಕಪಿಯ ನೋಡೆ
ಹಾರಿ ಯಂತ್ರದಲ್ಲಿ ಶಿಲ್ಕಿದ ಪುಟ್ಟ ಕಪಿಯ ನೋಡೆ ೩
ಮಾನ ಉಳಿಸಿಕೊಳ್ಳಲು ಮೌನದ ಪುಟ್ಟ ಕಪಿಯ ನೋಡೆ
ಧ್ಯಾನ ಮುದ್ರಾಂಕಿತದಿ ಶೋಭಿಪ ಪುಟ್ಟ ಕಪಿಯ ನೋಡೆ ೪
ಯೋಗಾಸನದಿ ಪದ್ಮಾಸನವು ಪುಟ್ಟ ಕಪಿಯ ನೋಡೆ
ವಾಗೀಶನ ಪದಕ್ಹೋಗುವ ತಪದ ಪುಟ್ಟ ಕಪಿಯ ನೋಡೆ ೫
ವ್ಯಾಸರಿಗೊಲಿದ ವೇಷಧಾರಕ ಪುಟ್ಟ ಕಪಿಯ ನೋಡೆ
ಮೋಸವೊ ಧ್ಯಾನವೊ ಅರಿಯೆ ಪುಟ್ಟ ಕಪಿಯ ನೋಡೆ ೬
ಕಷ್ಟದ ಭವಕಟ್ಟು ಬಿಡಿಸುವ ಪುಟ್ಟ ಕಪಿಯ ನೋಡೆ
ಕಟ್ಟಿನೊಳ ಸಿಲ್ಕಿ ಗುಟ್ಟು ತಿಳಿಸದ ಪುಟ್ಟ ಕಪಿಯ ನೋಡೆ ೭
ಸಿದ್ಧ ಸಾಧನ ಬುದ್ಧಿ ಬಲಿದ ಪುಟ್ಟ ಕಪಿಯ ನೋಡೆ
ಉದ್ಧಾರಕ ಪ್ರಸಿದ್ಧ ಪುರುಷ ಪುಟ್ಟ ಕಪಿಯ ನೋಡೆ ೮
ಸ್ವಾಪರೋಕ್ಷಿ ಜಗದ್ವ್ಯಾಪಕನಾದ ಪುಟ್ಟ ಕಪಿಯ ನೋಡೆ
ಗೋಪಾಲಕೃಷ್ಣವಿಠ್ಠಲನ ದಾಸನೀ ಪುಟ್ಟ ಕಪಿಯ ನೋಡೆ ೯

 

೪೧
ನೀನಲ್ಲದಲೆ ಇನ್ನು ನಾನಾರ ಕೂಗಲೊ
ಮಾನನಿಧಿ ಗೋಪಾಲ ಶ್ರೀನಿಧಿಯೇ ಪ.
ಶ್ರೀನಿವಾಸನೆ ಎನ್ನ ನಾನಾ ಪರಿಯ ಕಷ್ಟ
ನೀನೆ ಬಿಡಿಸಿ ಸಲಹೊ ಮಾನಾಭಿಮಾನದೊಡೆಯ ಅ.ಪ.
ಕಡುಕೋಪದಿಂ ಖಳನು ಹುಡುಗನ ಬಾಧಿಸೆ
ದೃಢ ಭಕ್ತಿಯಿಂದ ನಿನ್ನಡಿಯ ಭಜಿಸೆ
ಘುಡು ಘುಡಿಸುತ ಕಂಭವ ಒಡದು ಆ ಕ್ಷಣ ಬಂದು
ಕೆಡಹಿ ಅಸುರನ ಕೊಂದು ಒಡನೆ ಭಕ್ತನ ಕಾಯ್ದೆ ೧
ತೊಡೆಯನೇರಲು ಬರೆ ಜಡಿದು ನೂಕಲು ತಾಯಿ
ಒಡನೆ ಮನದಿ ನೊಂದು ಪೊಡಮಡುತ
ಅಡವಿ ಅಡವಿ ತಿರುಗಿ ದೃಢದಿ ಭಜಿಸೆ ಧ್ರುವ
ಒಡನೆ ಓಡಿ ಬಂದು ದೃಢಪಟ್ಟ ಕೊಡಲಿಲ್ಲೆ ೨
ಮಡುವಿನೊಳ್ ಕರಿ ಕರೆಯೆ ತಡೆಯದೆ ಸಲಹಿದ
ಪೊಡವೀಶ ನೀನಲ್ಲೆ ಕಡುಕರುಣಿ
ಬಡವಗೆ ಸಿರಿಯಿತ್ತೆ ಮಡದಿಗಕ್ಷಯವಿತ್ತೆ
ಕಡುದ್ರೋಹಿಗಳ ಕೊಲಿಸಿ ಒಡನೆ ಐವರ ಕಾಯ್ದೆ೩
ಚಿನುಮಯ ಗುಣಪೂರ್ಣ ಅಣು ಮಹತ್ ಅಂತರಾತ್ಮ
ಎಣಿಸಲಾಹೊದೆ ನಿನ್ನ ಘನ ಮಹಿಮೆ
ಮನ ಮಧ್ವಮಂದಿರ ಮನಸಿಜಪಿತ ಸರ್ವ
ಮನನಿಯಾಮಕ ಹರಿ ಮನದಲ್ಲಿ ನೀ ನಿಲ್ಲೊ ೪
ಶ್ರೀಪದ್ಮಭವನುತ ನಾ ಪಾಮರಾಳಿಹೆ
ಗೋಪಾಲಕೃಷ್ಣವಿಠಲ ಶ್ರೀಪತಿಯೆ
ನೀ ಪಾರು ಮಾಡದೆ ಕಾಪಾಡುವವರ್ಯಾರೊ
ಗೋಪಕುವರ ಪೇಳೋ ತಾಪ ಬಿಡಿಸಿ ಸಲಹೋ ೫

 

೨೨೧
ನೀರಿನೊಳು ಮುಳುಗುತಿರೆ ತೋರದಲಿ ಪೋಗುವರೆ
ಯಾರು ಕರ ಪಿಡಿವರೈ ತೋರು ಶೌರೇ
ವಾರಿಜಾನಾಭ ಭಯ ತೋರುವರೆ ಕರುಣಾಳು
ಬಾರದಿರುವಂಥ ಅಪರಾಧವೇನೆಲೊ ಹರೀ ಪ.
ಕನಸಿನೊಳಗೊಂದು ಪರಿ ಮನಸಿನೊಳಗೊಂದು ಪರಿ
ವನಜನಯನನೆ ಭಯವ ತೋರಿ ತೋರೀ
ಚಿನುಮಯಾತ್ಮಕ ಎನ್ನ ಪರಿಕಿಸುವ ಪರಿ ಏನೋ
ಬಿನಗುದೈವರ ಗಂಡ ಪರಿಹರಿಸು ಗಂಡಾ೧
ಕರಿಯ ನೀರೊಳು ಕಾಯ್ದೆ ಪೊರೆದೆ ನೀರೊಳು ಮನುವ
ಧರಣಿ ಪ್ರಹ್ಲಾದರನು ಜಲದಿ ಸಲಹೀ
ಬಿರುದು ಪೊತ್ತವ ಎನ್ನ ಪರಿಯನರಿಯೆಯೆ ದೇವ
ಪೊರೆವರಿನ್ನಾರು ಹೇ ಕರುಣಾಳು ಶರಣೂ ೨
ಮುಳುಗಿಹೆನು ಸಂಸಾರ ಗಣಿಸಲಾಗದ ಕರ್ಮ
ಫಣಿಶಾಯೆ ಕಡೆಮಾಡಿ ಕರವ ಪಿಡಿದೂ
ಧಣಿಸು ನಿನ ದಾಸತ್ವ ಧರೆಯೆ ಮೇಲ್ ಡಂಗುರದೀ
ಘಣಿಶಾಯಿ ಗೋಪಾಲಕೃಷ್ಣವಿಠಲ ಕೈಪಿಡಿದು ೩

 

೧೧೧
ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ
ಮಂದಭಾಗ್ಯಳ ಜೀವೇಶ ಪ.
ಅಂದು ಶ್ರೀ ರಾಮರ ಸಂದೇಶವನ್ನೆ ಭೂ-
ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ.
ಪರಮ ಕರುಣಾಳು ಶೌರಿ | ಭಕ್ತರ ಕಾಯ್ವ
ದುರಿತದೂರನೆ ಉದಾರಿ
ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ
ಎರವು ಮಾಡದೆ ದುರಿತ ತರಿಯುತ
ಪೊರೆಯೊ ಗುರುವರ ರಾಮಕಿಂಕರ ೧
ಗುರುಕರುಣದ ಬಲದಿ | ಅರಿತೆನೊ ನಿನ್ನ
ಚರಣ ನಂಬಿದೆ ಮನದಿ
ಪರಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ
ಹರಿವರನೆ ದಯಮಾಡು ಶ್ರೀ ಹರಿ
ದರುಶನವನನವರವಿತ್ತು ೨
ಕಾಂತನ ಅಗಲಿರಲು | ಚಿಂತೆಯಲಿ ಭೂ
ಕಾಂತೆ ವನದೊಳಗಿರಲು
ಸಂತೋಷದಿಂ ರಾಮನಂತರಂಗವನರುಹಿ
ಸಂತಸವಪಡಿಸುತಲವನಿಸುತೆಯ
ನಿಂತೆ ರಾಮರಿಗ್ಹರುಷ ತೋರಿ ೩
ದ್ರುಪದ ಸುತೆಯಳ ಕೀಚಕ | ದುರ್ಮನದಲಿ
ಅಪಮಾನಪಡಿಸೆ ದುಃಖ
ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ
ಕುಪಿತದಿಂದಲಿ ಖಳನ ಕೊಂದೆ
ಅಪರಿಮಿತ ಬಲಭೀಮ ಪ್ರೇಮ ೪
ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್
ಅತ್ಯಂತ ತಪಿಸುತಿರೆ
ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ
ಘಾತುಕರ ಮತ ಮುರಿದ ಮಧ್ವನೆ
ಖ್ಯಾತಿ ಪಡೆದೆ ಸಿದ್ಧಾಂತ ಸ್ಥಾಪಿಸಿ ೫
ಪ್ರಾಣಪಾನವ್ಯಾನ | ಉದಾನ ಸ
ಮಾನ ಭಾರತಿ ಕಾಂತನೆ
ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ
ದೀನಜನ ಮಂದಾರ ಕಾಯೊ
ದೀನಳಾಗಿಹೆ ಕೈಯ ಮುಗಿವೆ ೬
ನೋಯಲಾರೆನೊ ಭವದಿ | ಬೇಗನೆ ತೋರೊ
ಧ್ಯೇಯ ವಸ್ತುವ ದಯದಿ
ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ
ಜೀಯನೆ ಕೈ ಪಿಡಿಯೊ ಕಮಲ ದ-
ಳಾಯತಾಕ್ಷನ ಮನದಿ ತೋರಿ೭
ಹರಣ ನಿನಗೊಪ್ಪಿಸಿದೆ | ಸುರವಂದಿತ
ಕರೆದು ಮನ್ನಿಸಿ ಕಾಪಾಡೊ
ಸಿರಿವರನನು ಹೃತ್ಸರಸಿಜದಲಿ ತೋರೊ
ಧರೆಯ ವಸ್ತುಗಳ್ ಮಮತೆ ತೊರೆಸು
ಹರಿಯ ನಾಮಾಮೃತವನುಣಿಸು ೮
ಈ ಪರಿಬಂದೆ ಅನಿಲ | ನಿನ್ನೊಳು ವಾಸ
ಗೋಪಾಲಕೃಷ್ಣವಿಠ್ಠಲ
ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ
ಕೈಪಿಡಿದು ಸಂತೈಸು ಕರುಣದಿ
ಭಾಪುರೇ ಕದರುಂಡಲೀಶ ೯

 

೨೫೭ *
ನೋಡಬಲ್ಲಿರೆ ದಿವ್ಯ ಉಡುಪಿ ಕ್ಷೇತ್ರ
ನಾಡಿನೊಳಗಲ್ಲಿ ಪೋದವನೆ ಸತ್ಪಾತ್ರ ಪ.
ಶ್ರೇಷ್ಠ ಸದ್ಗುರು ಚರಣ ಕಮಲಗಳಿಗಭಿನಮಿಸಿ
ಅಷ್ಟು ದೇವತೆಗಳಿಗೆ ಅಭಿವಂದಿಸಿ
ಮುಟ್ಟಿ ಹಿರಿಯರ ಚರಣ ಮಹದಾಜ್ಞೆ ಸ್ವೀಕರಿಸಿ
ಪಟ್ಟ ಬ್ರಹ್ಮನ ಪದಕೆ ಸಿರಿಹರಿಗೆ ಎರಗಿ ೧
ಎಷ್ಟು ಜನ್ಮದ ಫಲವೊ ಈ ಯಾತ್ರೆ ಕೈಕೊಳಲು
ಶ್ರೇಷ್ಠ ಶ್ರೀ ಮಧ್ವಮುನಿ ಮತದಿ ಜನಿಸಿ
ದಿಟ್ಟ ವೈಷ್ಣವರಾದ ಭಕ್ತಸಂಗವ ಕೂಡಿ
ಬಿಟ್ಟು ಮನ ಕಲ್ಮಷಗಳೆಲ್ಲ ಮುಂದೋಡಿ೨
ಭರತಖಂಡದಿ ಪುಟ್ಟಿ ವಾಯುಮತ ಪೊಂದಿದಕೆ
ಹರುಷದಲಿ ಈ ಯಾತ್ರೆ ಗೈದಲ್ಲದೆ
ಹರಿದು ಪೋಗದು ಜೀವದಜ್ಞಾನದಂಧತೆಯು
ಪರಮ ಸುಜ್ಞಾನದಾತನ ನೋಡಬನ್ನಿ ೩
ಮಧ್ವರಾಯರ ಕರುಣ ಮುದ್ದು ಕೃಷ್ಣನ ಕತೆಯು
ಸದ್ವೈಷ್ಣವರ ಸಂಗ ಸನ್ಮೋದ ಲಾಭ
ಹೃದ್ವನಜದಲಿಪ್ಪ ಹರಿಯ ಕಾಣಲು ಮಾರ್ಗ
ಗೆದ್ದು ಭವದಬ್ಧಿ ದಾಟುವಿರಿ ನೀವಿನ್ನು ೪
ಶ್ರೀ ಪತಿಯು ಬಾಲರೂಪದಿ ಇಲ್ಲಿ ನೆಲಸಿಹನು
ಗೋಪಿಕಾಜನಪ್ರಿಯ ಗೋಪಿಬಾಲ
ಗೋಪಾಲಕೃಷ್ಣವಿಠ್ಠಲನ ನೋಡುವ ಪುಣ್ಯ
ಈ ಪರಮ ಪುರುಷನೇ ತಂದಿತ್ತನೆಂದೂ ೫

 

೪೨
ನೋಡಿ ದಣಿಯದೊ ನಯನ ಪಾಡಿ ದಣಿಯದೊ ಜಿಹ್ವೆ
ನಾಡಿಗೊಡೆಯನೆ ರಂಗ ದೇವ ದೇವ ಪ.
ಬೇಡಲೇನನೊ ಸ್ವಾಮಿ ಕಾಡಲ್ಯಾತಕೊ ದೇವ
ನೀಡೊ ನಿನ್ನ ಪದಕಮಲ ಶ್ರೀ ಶ್ರೀನಿವಾಸ ಅ.ಪ.
ಶಿರದಲ್ಲಿ ಮಕುಟ ವರ ಫಣೆಯಲ್ಲಿ ತಿಲುಕವು
ಉರದಲ್ಲಿ ಸಿರಿವತ್ಸ ಹಾರ ಪದಕಗಳು
ಕರ ಶಂಖ ಚಕ್ರಯುತ ನೆರಿಗೆ ಪೀತಾಂಬರವು
ಸುರರು ಪಾಲಿಸುವಂಥ ಪಾದ ಕಮಲಗಳ ೧
ಮಂದಹಾಸ ಮುಖಾರವಿಂದದಲಿ ಕಿರುನಗೆಯು
ಬಂದ ಭಕ್ತರಿಗಭಯ ತೋರ್ಪಕರವೊ
ನಿಂದು ಸ್ತುತಿಸುವರಿಗಾನಂದ ತೋರುವ ದಿವ್ಯ
ಒಂದೊಂದು ಅವಯವದ ಸುಂದರಾಕೃತಿಯ ೨
ವೇದವನೆ ತಂದು ಸುತಗಾದರದಿ ಇತ್ತೆ ಕ್ಷೀ-
ರೋದಧಿಯ ಮಥಿಸಿ ಸುಧೆಯ ಸುರರಿಗುಣಿಸಿದೆಯೊ
ಭೂದೇವಿಯನೆ ಪೊರೆದು ಉದ್ಭವಿಸಿ ಕಂಭದೊಳು
ಪಾದದಲಿ ಭೂಮಿಯನು ಅಳೆದ ವಟುರೂಪಿ ೩
ದುಷ್ಟ ಕ್ಷತ್ರಿಯರನೆ ಕುಟ್ಟಿ ಕೆಡಹಿದ ಶೌರಿ
ದಿಟ್ಟತನದಲಿ ಅನ್ನ ಬಟ್ಟೆಯನೆ ತೊರೆದೆ
ಕೊಟ್ಟು ಗೋಪಿಗೆ ಮುದವ ಮೆಟ್ಟಿ ಕಾಳಿಂಗನ
ಬಿಟ್ಟು ವಸನವ ಕಲಿದುಷ್ಟರನೆ ಕೊಂದೆ ೪
ಅಪದ್ರಕ್ಷಕ ನಿನ್ನ ವ್ಯಾಪಾರ ರೂಪಗಳು
ತಾಪ ಪರಿಹರಗೈದು ಕಾಪಾಡೆಲೊ
ಶ್ರೀಪತಿಯೆ ಅಂತರ್ಬಹಿವ್ರ್ಯಾಪ್ತ ನಿರ್ಲಿಪ್ತನೇ
ಗೋಪಾಲಕೃಷ್ಣವಿಠ್ಠಲ ತಾಪ ಪರಿಹಾರನೆ ೫

 

೪೪
ನೋಡಿದೆನು ಕೃಷ್ಣನ್ನ | ದಣಿಯ
ನೋಡಿದೆನು ಕೃಷ್ಣನ್ನ | ಮನದಣಿಯ ಪ.
ಪಾಡಿದೆನು ವದನದಲಿ ಗುಣಗಳ
ಮಾಡುತಲಿ ಸಾಷ್ಟಾಂಗ
ಕಡು ಕೃಪೆ ಬೇಡಿದೆನು ಹರಿಯ ಅ.ಪ.
ಅರುಣ ಉದಯದ ಮುನ್ನ ಯತಿಗಳೂ
ಶರಣವತ್ಸಲನನ್ನು ಪೂಜಿಸಿ
ಕರದಿ ಕಡಗೋಲನ್ನು ಪಿಡಿದಿಹ ಬಾಲರೂಪನಿಗೆ
ತರತರದ ನೇವೇದ್ಯವರ್ಪಿಸಿ
ತುರುಕರುಗಳಾರತಿ ಗೈಯ್ಯುತ
ಪರಮಪುರುಷಗೆ ವಂದಿಸಲು ಈ ಚರಿತ ಮತ್ಸ್ಯನ್ನಾ ೧
ಮಧ್ವರಾಯರ ಹೃದಯವಾಸಗೆ
ಮುದ್ದು ಯತಿ ಪಂಚಾಮೃತಂಗಳ
ಶುದ್ಧ ಗಂಗೋದಕದ ಸ್ನಾನವಗೈಸಿ ಸಡಗರದಿ
ಮಧ್ಯೆ ಮಧ್ಯೆ ನೈವೇದ್ಯವರ್ಪಿಸಿ
ಮುದ್ದು ತರಳರಿಗ್ಹೆಜ್ಜೆ ಪಂಕ್ತಿಯು
ಮುದ್ದು ಕೃಷ್ಣನ ಮಹಿಮೆ ಅಗಣಿತ ಕೂರ್ಮರೂಪನ್ನಾ೨
ಉದಯಕಾಲದಿ ಸರ್ವ ಜನಗಳು
ಮುದದಿ ಮಧ್ವ ಸರೋವರದೊಳು
ವಿಧಿಯಪೂರ್ವಕ ಸ್ನಾನ ಜಪ ತಪವಗೈದು ಮಾಧವನಾ
ಉದಯದಾಲಂಕಾರ ದರ್ಶನ
ಪದುಮನಾಭಗೆ ನಮನಗೈವರು
ವಿಧಿಕುಲಕೆ ಉದ್ಧಾರಕರ್ತನು ವರಹನೆಂದಿವನಾ ೩
ಪಾಲಿಸಲು ಬಾಲನ ಶ್ರೀ ಗೋ
ಪಾಲಕೃಷ್ಣನು ಕಂಭದಲಿ
ಲೀಲೆಯಿಂದಲಿ ಉದಿಸಿ ಖೂಳನ ಸೀಳೀ ತೊಡೆಯಲ್ಲಿ
ಬಾಲೆಯನು ಕುಳ್ಳಿರಿಸಿಕೊಂಡಘ
ಜಾಲಗಳ ಸುಡುವಂಥ ದೇವನು
ಬಾಲರೂಪವ ಧರಿಸಿ ನಿಂತಿಹ ಲೋಲ ನರಹರಿಯ ೪
ಅದಿತಿ ದ್ವಾದಶವರ್ಷ ತಪಸಿಗೆ
ವಿಧಿ ಜನಕ ತಾ ಕುವರನಾದನು
ಅದರ ತೆರದಲಿ ವ್ರತವ ಗೈದ ವೇದವತಿಗಿನ್ನು
ಚದುರ ತನಯನ ವರವನಿತ್ತನು
ಯದುಕುಲಾಗ್ರಣಿ ಅವರ ಭಕ್ತಿಗೆ
ಒದಗಿ ಬಂದ ಮೂರ್ತಿವಾಮನನೆಂಬ ವಟುವರನ೫
ದುಷ್ಟ ಕ್ಷತ್ರಿಯರನ್ನೆ ಕೊಲ್ಲುತ
ಅಷ್ಟು ಭೂಮಿಯ ದಾನಗೈಯುತ
ದಿಟ್ಟ ತಾನೆಲ್ಲಿರಲಿ ಎಂಬುವ ಯೋಚನೆಯ ತಳೆದು
ಅಟ್ಟಿ ಅಬ್ಧಿಯ ಪುರವ ನಿರ್ಮಿಸಿ
ಪುಟ್ಟ ರೂಪವ ತಾಳಿ ಬರುತಲಿ
ಮೆಟ್ಟಿ ನಿಂತಿಹ ರಜತ ಪೀಠದಿ ಶ್ರೇಷ್ಠ ಭಾರ್ಗವನ ೬
ಪಿತನ ಆಜ್ಞೆಯ ಪೊತ್ತು ಶಿರದಲಿ
ವ್ರತಧರಿಸಿ ಸತಿ ಅನುಜ ಸಹಿತದಿ
ಜತನದಲಿ ವನವಾಸ ಮುಗಿಸುತ ದಶಶಿರನ ಕೊಂದ
ಅತಿ ಸಹಾಯವ ಗೈದ ಶರಧಿಗೆ
ಪ್ರತಿಯುಪಕಾರವನು ಕಾಣದೆ
ಜತನದಲಿ ತಾ ನಿಲ್ಲೆ ನೆಲಸಿದ ಜಾನಕೀಪತಿಯ೭
ಗೋಪಿಯರ ಉಪಟಳಕೆ ಸಹಿಸದೆ
ಗೋಪನಂದನರೊಡನೆ ಕಾದುತ
ತಾಪಪಡಿಸುವ ಕಂಸರನುಚರರಿಂದ ಕಳದೋಡಿ
ಗೋಪಿ ಮೊಲೆ ಕೊಡುತರ್ದದಲಿ ಬಿಡೆ
ಈ ಪರಿಯ ತಾಪಗಳ ಸಹಿಸದೆ
ತಾಪಸರ ಪೂಜೆಗಳ ಬಯಸುತ ಬಂದ ಗೋಪತಿಯ ೮
ವೇದ ಬಾಹಿರರಾದ ದುರುಳರು
ವೇದ ಮಾರ್ಗವ ಪಿಡಿಯೆ ಸುರತತಿ
ನೀ ದಯದಿ ಸಲಹೆಂದು ಪ್ರಾರ್ಥಿಸೆ ಜಿನ ವಿಮೋಹಕನೂ
ವೇದರ್ಥವ ಗುಪ್ತದಲಿ ತಾ
ಬೋಧಿಸುತ ಮೋಹಕವ ಕಲ್ಪಸಿ
ಮೋದದೊಸನವ ಕಳದ ಬುದ್ಧ ಪ್ರಮೋದನೆಂಬುವನಾ ೯
ಚತುರ ಪಾದವು ಕಳದು ಧರ್ಮವು
ಅತಿಮಲಿನವಾಗುತಲಿ ಕಲಿಜನ
ಚತುರ ಜಾತಿಯ ಕಲೆತು ಕಂಗೆಡೆ ಭಕ್ತವರ್ಗಗಳು
ಗತಿಯು ನೀನೆ ಪೊರೆಯೊ ಎಂದೆನೆ
ಸತಿಯ ಹೆಗಲೇರುತಲಿ ಖಡ್ಗದಿ
ಹತವಗೈಯ್ಯುತ ಖಳರ ಸುಜನರ ಪೊರೆದ ಕಲ್ಕಿಯನು೧೦
ನೋಡಿದೆನು ವರ ಮಚ್ಛ ಕೂರ್ಮನ
ನೋಡಿದೆನು ಧರಣೀಶ ನೃಹರಿಯ
ನೋಡಿದೆನು ವಾಮನನ ಭಾರ್ಗವ ರಾಮಚಂದ್ರನನೂ
ನೋಡಿದೆನು ಕಡಗೋಲ ಕೃಷ್ಣನ
ನೋಡಿದೆನು ವರ ಬುದ್ಧ ಕಲ್ಕಿಯ
ನೋಡಿದೆನು ಗುರು ವರದ ಗೋಪಾಲಕೃಷ್ಣವಿಠ್ಠಲನ ೧೧

 

೪೩
ನೋಡಿದೆನು ವಿಠ್ಠಲನ ದಣಿಯ ಪ.
ನೋಡಿದೆನು ವಿಠ್ಠಲನ ರೂಪವ
ಪಾಡಿದೆನು ಮನದಣಿಯ ಹರುಷವು
ಮೂಡಿತಂಗದಿ ಮುಗಿದು ಕೈ ನಾ ಮಾಡಿ ಸಾಷ್ಟಾಂಗ
ಬೇಡಿ ಮನಸಿನಭೀಷ್ಟ ಸಂತತ
ನೀಡು ನಿನ್ನಯ ಚರಣ ಸ್ಮರಣಿಯ
ಪಾಡಿಪೊಗಳುವ ಭಾಗ್ಯಬೇಕೆಂದು ಕಾಡಿದೆನು ಹರಿಯಾ ೧
ಪಂಚ ಪಂಚ ಉಷಃ ಕಾಲದೀ
ಪಂಚ ಬಾಣನ ಪಿತಗೆ ಆರುತಿ
ಮುಂಚಿನೊಸನಗಳೆಲ್ಲ ತೆಗೆಯುತ ತೈಲವೆರೆಯುವರೂ
ಪಂಚರೂಪಗೆ ಚಂದ್ರಭಾಗೆಯ
ಪಂಚ ಗಂಗೋದಕಗಳೆರೆಯುತ
ಪಂಚ ಅಮೃತ ಸ್ನಾನಗೈಸುವ ಸೊಬಗ ನೋಡಿದೆನು ೨
ಬೆಣÉ್ಣ ಬಿಸಿನೀರೆರೆದು ಕೃಷ್ಣಗೆ
ಸಣ್ಣ ವಸ್ತ್ರದಿ ವರಸಿ ಮೈಯ್ಯನು
ಘನ್ನ ಪೀತಾಂಬರವನುಡಿಸುತ ಜರಿಯ ಶಾಲ್ಹೊದಿಸಿ
ಬಣ್ಣದೊಸ್ತ್ರದ ಪಾಗು ಸುತ್ತುತ
ಬೆಣ್ಣೆ ಕಳ್ಳಗೆ ಅಂಗಿ ತೊಡಿಸುತ
ಸಣ್ಣ್ಣ ಮಲ್ಲಿಗೆ ಹಾರ ಉಪವೀತ ಸಡಗರವ ಕಂಡೆ ೩.
ಗಂಧ ಅಕ್ಷತೆ ಪುನುಗು ಜವ್ಜಾಜಿ
ಛಂದದಾ ಕಸ್ತೂರಿ ತಿಲಕವು
ಸುಂದರಾಂಗದ ಮುಖಕೆ ಕನ್ನಡಿ ತೋರಿಸುವರಿಂತೂ
ಅಂದದಾ ಪಕ್ವಾನ್ನ ತರುತಲಿ
ಇಂದಿರೇಶಗೆ ಅರ್ಪಿಸುತ್ತಲಿ
ಒಂದು ಧೂಪಾರತಿಯ ಬೆಳಗಿ ಒಂದು ಏಕಾರ್ತಿ ೪
ಮಾಡಿ ಪಂಚಾರ್ತಿಗಳ ವಿಠಲಗೆ
ಪಾಡುವರು ಮನದಣಿಯ ಭಕ್ತರು
ನೀಡುವರು ಪಂಚಾಮೃತಂಗಳ ಬೇಡುವರು ಹರಿಯ
ರೂಢಿಯೊಳು ಪಂಡರಿಯ ಕ್ಷೇತ್ರವ
ಮಾಡಿ ಮಂದಿರ ನೆಲಸಿ ರಂಗನು
ಬೇಡಿದವರನು ಪೊರೆವ ಗೋಪಾಲಕೃಷ್ಣವಿಠ್ಠಲನು ೫

 

೯೯
ನೋಡಿದೆನೆ ನಿನ್ನ ಪಾದ ಮಾಡಿದೆನೆ ಸಾಷ್ಟಾಂಗ
ಬೇಡಿದೆನೆ ಮನದಭೀಷ್ಟ ಪ.
ನೀಡು ಕೊಲ್ಲಾಪುರದ ನಾಡಿಗೊಡೆಯಳೆ ಲಕುಮಿ
ಮಾಡಮ್ಮ ಕೃಪೆಯ ಬೇಗಾ ಈಗಾ ಅ.ಪ.
ಬಂದೆನೇ ಬಹುದೂರ ನಿಂದೆನೇ ತವಪದ
ದ್ವಂದ್ವ ಸನ್ನಿಧಿಯಲೀಗ
ವಂದನರಿಯೆನೆ ನಿನ್ನ ಚಂದದಿ ಸ್ತುತಿಪೊದಕೆ
ಮಂದಮತಿಯಾಗಿಪ್ಪೆನÉೀ
ತಂದೆ ಮುದ್ದುಮೊಹನ್ನ ಗುರು ಕರುಣ ಬಲದಿಂದ
ಇಂದು ನಿನ್ನನು ಕಂಡೆನೇ
ಮುಂದೆನ್ನ ಮಾನಾಭಿಮಾನ ನಿನಗೊಪ್ಪಿಸಿದೆ
ಸಿಂಧುಸುತೆ ಪಾಲಿಸಮ್ಮಾ ದಯದೀ ೧
ಉತ್ತರಾಯಣ ಪುಣ್ಯ ದಿನದಿ ನಿನ್ನನು ಕಂಡೆ
ಮುಕ್ತರಾಧೀಶೆ ಕಾಯೆ
ಉತ್ತಮಾಭರಣ ನವರತ್ನ ಪದಕವು ದಿವ್ಯ
ನತ್ತು ಧರಿಸಿದ ಚಲ್ವಳೇ
ಮುತ್ತೈದೆಯರು ಮತ್ತೆ ಭಕ್ತ ಸಂದಣಿ ಇಲ್ಲಿ
ಎತ್ತನೋಡಲು ಕಂಡೆನೇ
ಸತ್ಯ ಸಂಕಲ್ಪ ಶ್ರೀ ಹರಿಯ ಪಟ್ಟದ ರಾಣಿ
ಚಿತ್ತಕ್ಕೆ ತಂದು ಕಾಯೆ ಮಾಯೆ ೨
ರೂಪತ್ರಯಳೆ ನಿನ್ನ ವ್ಯಾಪಾರ ತಿಳಿಯಲು
ಆ ಪದ್ಮಭವಗಸದಳಾ
ಶ್ರೀಪತಿಯ ಕೃಪೆ ಯಿಂದ ಸೃಷ್ಟಿಸ್ಥಿತಿಲಯಗಳನು
ವ್ಯಾಪಾರ ಮಾಳ್ಪ ಧೀರೆ
ಕೃಪೆಯ ನೀ ಮಾಡದಲೆ ಉಭಯ ಸುಖವೆತ್ತಣದು
ಭೋಪರೀ ನಂಬಿದರಿಗೆ
ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ
ನೀ ಪಾರುಗೊಳಿಸೆ ಭವದೀ ದಯದೀ ೩

 

೨೨೮
ಪತಿಯೆ ಪರದೇವತೆಯು ಸತಿಯರಿಗೆ ಜಗದಿ
ಮತಿಯರಿತು ಭಜಿಸಿ ಪರಗತಿಯ ಸಾರುವುದು ಪ.
ಉದಯಕಾಲದೊಳೆದ್ದು ಸದಮಲ ಶುಧ್ಧಿಯಲಿ
ಪದುಮನಾಭನ ಪಾದ ಮನದಿ ಸ್ಮರಿಸುತಲಿ
ಹೃದಯಸ್ಥ ಹರಿಯೆ ಪತಿ ಹೃದಯದಲಿರುವನು ಎಂದು
ಮುದದಿಂದ ನಮಿಸಿ ಪತಿ ಪದಕರ್ಪಿಸುವುದು ೧
ಆದರದಲಿ ಪತಿಯ ಪಾದವನೆ ತೊಳೆದು ಆ
ಸ್ವಾದೋದಕವ ಪಾನಗೈದು ಸುಖಿಸುವುದು
ವೇದಗೋಚರ ಹರಿಯೆ ನೀ ದಯವ ಮಾಡೆಂದು
ಆದರದಿ ಪತಿಯ ಮನವರಿತು ನುಡಿಯುವುದು ೨
ಸ್ವಚ್ಛದಲ್ಲಿ ಮನದ ತುಚ್ಛ ವಿಷಯವ ತೊರೆದು
ಇಚ್ಛೆಯಿಂದಲಿ ಹರಿಯ ನಾಮಗಳ ಭಜಿಸಿ
ಅಚ್ಯುತಾನಂತ ಗೋವಿಂದನೆನ್ನುತ ಸತತ
ಮಚ್ಚಾದ್ಯನೇಕ ಅವತಾರ ನೆನೆಯುವುದು ೩
ಪತಿಯೆ ಹರಿಯೆಂದರಿತು ಪತಿಯೆ ಗುರುವೆಂದರಿತು
ಪತಿಯ ಪೂಜೆಯನು ಅತಿ ಹಿತದಿ ಗೈಯ್ಯುವುದು
ಪತಿಯಂತರ್ಗತನೆ ಎನ್ನತಿಶಯದಿ ಪೊರೆಯೆಂದು
ಪತಿವ್ರತವ ನಡೆಸುತಲಿ ಹಿತದಿ ಬಾಳುವುದು ೪
ಪತಿಯ ನಿಂದಕಳಿಗೆ ಗತಿಯಿಲ್ಲ ಪರದಲ್ಲಿ
ಅತಿ ಬಾಧೆಪಡಿಸುವನು ಯಮನು ನಿರ್ದಯದಿ
ಪತಿವ್ರತವ ಸಾಧಿಸುವ ಸತಿಯರಿಗೆ ಅನವರತ
ಚ್ಯುತರಹಿತ ಪದವೀವ ಗೋಪಾಲಕೃಷ್ಣವಿಠಲ ೫

 

೧೦೦
ಉಗಾಭೋಗ
ಪದ್ಮಾಲಯೆ ಪದ್ಮೆ ಪದ್ಮ ಸಂಭವೆ ಲಕುಮಿ
ಪದ್ಮಾಕ್ಷಿ ಪದ್ಮ ಹಸ್ತೆ ಪದ್ಮಾಸನನ ಜನನಿ
ಪದ್ಮಮುಖಿಯೆ ನಿನ್ನ ಪದಪದ್ಮ ಧ್ಯಾನ ನೀಡೆ
ಪದ್ಮನಾಭನ ಹೃದಯ ಪದ್ಮಸದನ ನಿಲಯೆ
ಪದ್ಮಿನಿ ಎನ್ನ ಹೃದಯ ಪದ್ಮ ಮಧ್ಯದಿ ಸತತ
ಪದ್ಮಾಕ್ಷ ಗೋಪಾಲಕೃಷ್ಣವಿಠಲನ ಪದ
ಪದ್ಮದ್ವಯವ ತೋರಿ ಉದ್ಧಾರವನು ಮಾಡೆ

 

೪೫
ಪರಮ ಕರುಣಾಕರನೆ ಕರಪಿಡಿದು ಸಲಹೆನ್ನ
ವರ ತಂದೆ ಮುದ್ದುಮೋಹನರೊಡೆಯನೆ ಪ.
ಸಿರಿಯರಸ ಶ್ರೀ ಶ್ರೀನಿವಾಸ ಶ್ರೀ ಕೃಷ್ಣಹರೆ
ಪರಮದಯಾಳು ದೇವ | ದೇವಅ.ಪ.
ನಿರುತ ನೀ ಸ್ವಪ್ನದಲ್ಲಿ ಪರಿಪರಿಯ ರೂಪದಲಿ
ತ್ವರಿತದಲಿ ತೋರಿ ಕಾಯ್ದೆ
ಪರಮಪಾವನಮೂರ್ತಿ ಗುರು ಅಂತರ್ಯಾಮಿಯೆ
ಕರಕರೆಯ ಬಿಡಿಸಿ ಸಲಹೊ | ದೇವ ೧
ವಿಶ್ವತೈಜಸ ಪ್ರಾಜ್ಞ ತುರಿಯ ರೂಪಗಳಿಂದ
ನೀ ಸ್ವಪ್ನಗಳನೆ ತೋರ್ವೆ
ವಿಶ್ವೇಶ ಎನ್ನೊಳಗೆ ಸಾಕ್ಷಿಯಾಗಿರುತ್ತಿರ್ದು
ವಿಶ್ವಮಯ ಚೇಷ್ಟೆ ಮಾಳ್ಪೆ | ದೇವ ೨
ಈ ಶರೀರದೊಳಗೆ ಶ್ರೀ ತೈಜಸನೆ ನೀನು
ವಾಸವಾಗಿರುತಲಿರ್ದು
ನಾಶರಹಿತನೆ ಮೋಹಪಾಶದಲಿ ಸಿಲುಕಿಸಿ
ಮೋಸಪಡಿಸುವರೆ ಎನ್ನ | ದೇವ ೩
ಬಿಡಿಸೊ ದುರ್ವಿಷಯಗಳ ತಡವಾಕೊ ಹರಿ ಇನ್ನು
ಒಡಲಿಗೊಡೆಯನೆ ಶ್ರೀಹರಿ
ಕೊಡು ನಿನ್ನ ಪದಸೇವೆ ನುಡಿಸು ನಿನ್ನಯ ನಾಮ
ಪಡಿಸು ಸುಖ ಅನವರತದಿ | ದೇವ ೪
ಸ್ವಪ್ನ ವ್ಯಾಪಾರದಲಿ ಅಪ್ರತಿಮಮಹಿಮೆಗಳ
ಕ್ಷಿಪ್ರದಿಂದಲಿ ತೋರಿದೆ
ಸಪ್ತಫಣಿಮಂಡಿತನೆ ಒಪ್ಪದಿಂದಲಿ ಎನ್ನ
ತಪ್ಪನೆಣಿಸದಲೆ ಕಾಯೋ | ದೇವ ೫
ನೀತ ಗುರುಗಳ ದ್ವಾರ ಪ್ರೀತನಾದ ಹರಿಯೆ
ಪಾತಕವ ಕಳದೆ ಸ್ವಾಮಿ
ವಾತಜನಕನೆ ನಿನ್ನ ಖ್ಯಾತಿ ಪೊಗಳಲು ಅಳವೆ
ಪ್ರೀತನಾಗಿದ್ದು ಸಲಹೊ | ದೇವ ೬
ಶ್ರೀಪತಿಯೆ ಪರಮಪಾವನಮೂರ್ತಿ ವಿಖ್ಯಾತ
ನೀ ಪ್ರೀತಿಲೀಲೆ ತೋರ್ದೆ
ಕಾಪಾಡಿದೆಯೊ ಎನ್ನ ಶ್ರೀ ಗುರುಗಳೊಳಗಿರ್ದು
ಗೋಪಾಲಕೃಷ್ಣವಿಠ್ಠಲ ದೇವ ೭

 

೧೯೦
ಪರಮ ಕರುಣಾಳುಗಳು ಈ ಗುರುಗಳು ಶ್ರೀ
ವರತಂದೆ ಮುದ್ದುಮೋಹನವಿಠಲಾಖ್ಯರು ಪ.
ಶಾಂತರು ದಾಂತರು ಸಂತೋಷ ಸುಖಿಗಳು
ಅಂತರಂಗದಿ ಹರಿಯ ಧ್ಯಾನಿಸುವರು
ಕಂತುಜನಕನ ಧ್ಯಾನ ಸತ್ಪಾಂಥರಿಗೆ ಬೀರುತಲಿ
ಎಂತೆಂತೊ ಸುಜನರಿಂ ಸ್ತುತಿಸಿಕೊಳುತಿಹರು ೧
ನಿರಪೇಕ್ಷೆಯಿಂದಲಿ ಪರರಿಗುಪಕಾರವನು
ತೆರವಿಲ್ಲದೆಲೆ ಸತತ ಮಾಡುತಿಹರು
ಅರಿಯೆನಿವರಾ ಮಹಿಮೆ ಪರದೇಶಿ ನಾನಿನ್ನು
ಕರುಣೆಯಿಂದೆನಗೆ ಹರಿ ಅಂಕಿತವನಿತ್ತರು ೨
ಸುಪ್ರೀತರಾಗಿನ್ನು ಈ ಶರೀರದ ಒಳಗೆ
ಶ್ರೀಪತೀ ತೈಜಸನ ವ್ಯಾಪಾರದಿ
ಶ್ರೀ ಪರಮ ಗುರುಗಳೆಂದ್ಹರಿಯ ನಿರ್ಮಾಲ್ಯವನು
ಕೃಪಾತಿಶಯದಿ ಕೊಡಿಸಿ ಎನ್ನನುದ್ಧರಿಸಿದರು೩
ಎಲ್ಲರೂ ದÉೀವಾಂಶರೆನ್ನುವುದು ಕೇಳುತಲಿ
ನಿಲ್ಲದೇ ಮನಸು ಬಹು ತಲ್ಲಣಿಸುತಿರಲು
ಪಲ್ಲವಿಸಿ ಎನ್ನ ಮನ ಮಂದಿರದಿ ಅನುಗಾಲ
ಪುಲ್ಲಾಕ್ಷನನು ತೋರಿ ಉಲ್ಲಾಸಕೊಡುತಿಹರು ೪
ಶ್ರೇಷ್ಠಗುರುಗಳು ಇವರು ಸೃಷ್ಟಿಯೊಳಗೆನಗಿನ್ನು
ಎಷ್ಟು ಯೋಚಿಸೆ ಮನವು ಮಹಿಮೆಯರಿಯೆ
ವೃಷ್ಟಿವಂಶಜ ರುಕ್ಮಿಣೀರಮಣ ಗೋಪಾಲ-
ಕೃಷ್ಣವಿಠಲನ ಬಹು ದಿಟ್ಟಾಗಿ ತೋರುವರು ೫

 

೧೯೧
ಪರಮ ಕಾರುಣ್ಯ ಗುರು ಕರುಣಿಸೆನಗ್ಹರಿ ಪದವ
ಶರಣೆಂದು ನಮಿಪೆ ನಿಮಗೆ ಪ.
ಹರಿಯ ದಾಸತ್ವದಲಿ ವರದೀಕ್ಷೆಯನೆ ಕೊಟ್ಟು
ಕರುಣಿಸಿ ಕೃಪೆಗೈದಿರಿ ಗುರುವೆ ಅ.ಪ.
ಅಂಕಿತವ ಮೊದಲಿತ್ತು ಹೃದಯಾಂಕದಲಿ ನಿಲಸಿ
ಮಂಕುಬುದ್ಧಿಯ ತೊಲಗಿಸಿ
ಶಂಖ ಚಕ್ರಾಂಕಿತನ ಪದಕಮಲವನು ಮನ
ಪಂಕಜದೊಳಗೆ ತೋರಿ
ಶಂಕರಾರ್ಚಿತನ ಕೃಪೆ ಎನ್ನೊಳಾಗಲಿ ಎಂದು
ಶಂಕಿಸದೆ ವರವಿತ್ತಿರಿ ಗುರುವೆ ೧
ಶ್ರೀನಿವಾಸನು ನಿಮ್ಮೊಳ್ ಸಾನುರಾಗದಿ ನೆಲಸಿ
ತಾನಿತ್ತ ದಾಸತ್ವವ
ಏನೆಂಬೆ ಈಗಭಿಮಾನವ ತೊರೆ ಎನುತ
ತಾ ನುಡಿಸುತಿಹನು ನಿಮ್ಮೊಳ್
ಮಾನಾಭಿಮಾನ ಹರಿ ಗುರುವಶವಾಗಿರಲು
ನಾನಳುಕಲಿದಕೇತಕೆ ಗುರುವೆ ೨
ಸ್ವಪ್ನದಲಿ ದಾಸತ್ವ ಸಿದ್ಧಿಸಲಿ ಎಂದೆನುವ
ಅಪ್ರತಿಮ ನುಡಿ ಕೇಳಿದೆ
ಕ್ಷಿಪ್ರದಿಂದಲಿ ಕರುಣಿಸಿದಿರೆನಗಾಗಿದನಿನ್ನು
ತಪ್ತವಾಯಿತು ಭವದ ದುರಿತ
ಆಪ್ತಗುರು ನಿಮ್ಮಂಥ ಮಹಿಮರನು ನಾ ಕಾಣೆ
ಗುಪ್ತದಲಿ ಜಗದಿ ಮೆರೆವ ಗುರುವೆ ೩
ಇತ್ತಿರೆನಗೊಂದೊಂದೆ ದಾಸತ್ವ ಸಾಮಗ್ರಿ
ಅತ್ಯಧಿಕ ಕರುಣೆಯಿಂದ
ನಿತ್ಯವಾಗಿರಲಿ ಹರಿದಾಸತ್ವ ಇಹ ಪರದಿ
ಸತ್ಯವಂತರ ಕೃಪೆಯಲಿ
ನಿತ್ಯದಲಿ ನೀತ ಗುರು ನಿಮ್ಮಿಂದ ನಿಜ ರೂಪ
ವ್ಯಕ್ತವಾಗಲಿ ಜ್ಞಾನದೀ ಗುರುವೆ ೪
ಸಿರಿ ತಂದೆ ಮುದ್ದುಮೋಹನದಾಸರಾಯ
ಗುರುವೆ ನಿಮ್ಮ ಕರುಣದಿ
ಹರಿದುಹೋಯಿತು ಎನ್ನ ಪರಿ ಪರಿ ಭವಪಾಶ
ದುರಿತಗಳು ದೂರಾದವು
ಪರಮ ಸಾತ್ವಿಕರೆ ಸಿರಿವರನ ಪದ ಭಜಿಪಂಥ
ವರದೇವತಾಂಶರೆನಿಪ ಗುರುವೆ ೫
ಮಂದರಿಗೆ ಬಹು ಮಲಿನರಂದದಲಿ ತೋರುತ
ಕಂದರ್ಪಪಿತನ ಸ್ಮರಿಪ
ಒಂದೊಂದು ವ್ಯಾಪಾರ ಅರಿಯಲಳವಲ್ಲಿನ್ನು
ಮಂದಮತಿಯಾದ ಎನಗೆ
ಬಂದು ಭೂಲೋಕದಲಿ ಸಜ್ಜನರನುದ್ಧರಿಪ
ತಂದೆ ನಿಮ್ಮರಿವರ್ಯಾರೊ ಗುರುವೆ ೬
ಅರಿಯೆ ಅನ್ಯರನಿನ್ನು ಶ್ರೀ ಗುರುವೆ ಕರುಣಿಸಿರಿ
ವರಜ್ಞಾನ ಸುಧೆಯನಿತ್ತು
ವರಶೇಷಶಯನನ ನಿರುತ ಸೇವಿಸುವಂಥ
ಪರಮಭಾಗ್ಯವ ಕರುಣಿಸಿ
ಸಿರಿವರ ಗೋಪಾಲಕೃಷ್ಣವಿಠ್ಠಲನ ರೂಪ
ತ್ವರಿತದಿಂ ತೋರಿ ಪೊರೆಯೊ ಗುರುವೆ ೭

 

ಇದು ದೊಡ್ಡಬಳ್ಳಾಪುರದ
೧೯೨
ಪರಮ ಗುರುವೆ ನಿನ್ನ ಪರಿಪರಿ ಮುನ್ನ
ಅರಿತಷ್ಟು ವರ್ಣಿಸುವೆ ಕೊಡು ದೃಢ ಜ್ಞಾನ ಪ.
ಪರಮ ವೈರಾಗ್ಯಶಾಲಿ ಪರಿಪರಿ ಲೀಲೆ
ತೋರಿದ್ಯೋ ಜಗದಲಿ ಕಾರುಣ್ಯಶಾಲಿ ೧
ಗುರುಗಳ ಕರುಣದಿ ಒಲಿದ್ಯೊ ಸ್ವಪ್ನದಿ
ಪರಮಾತ್ಮನಾ ಹಾದಿ ತೋರೆನಗೆ ಮೋದಿ ೨
ಕರ್ಮಜ ನೀನೆಂದು ನುಡಿವರೊ ಇಂದು
ಮರ್ಮ ಮನದಿ ನಿಂದು ತೋರೋ ದಯಾಸಿಂಧು ೩
ಅಗ್ರಜ ಬಳ್ಳಾಪುರದಿ ಉಗ್ರತಾಪದಿ
ವಿಗ್ರಹ ರಚಿಸಿದೆ ಶ್ರೀಘ್ರದೊಳ್ ದಯದಿ ೪
ಪ್ರೀತಿಯಿಂ ಯತಿಶೀಲಾ ನೀತಿಯ ಪಾಲನ
ನೀ ತೋರೋ ಗೋಪಾಲಕೃಷ್ಣವಿಠಲನ ೫

 

೧೯೩
ಪರಮ ಪಾವನಕಾಯ ಗುರುರಾಯ ಜೀಯ
ವರ ಭಾಗವತರ ಪ್ರಿಯ ಸುರರ ಸಹಾಯ ಪ.
ಶ್ರೀ ತಂದೆ ಮುದ್ದುಮೋಹನ ದಾಸರೆಂದೆನಿಸಿ
ವಾತ ಜನಕನ ಒಲಿಸಿ ವೈರಾಗ್ಯ ಧರಿಸಿ
ಖ್ಯಾತಿಯನು ಪಡೆದ ಅನಾಥ ರಕ್ಷಕ ಸ್ವಾಮಿ
ನೀತ ಗುರು ನಿಮ್ಮ ಪದಕೆ ನಾ ತುತಿಸಿ ನಮಿಪೆ ೧
ಘನ ಅಂಶದಲಿ ನೆಲಸಿ ಅನವರತ ಸಲಹುವೊ
ಮನವ ಮಾಡಿರಬಲೆ ಅಂಜಿ ಬೆದರೆ
ಘನ ಜ್ಯೋತಿ ಸ್ವೀಕರಿಸಿ ತನುವಿಗಭಯ ತೋರಿ
ಮನದಿ ಪದವನೆ ನಂಬೆ ರಕ್ಷಿಸಿದ ಗುರುವೆ ೨
ಅಪಮೃತ್ಯು ಬಂದು ಬಹು ಅಪರಿಮಿತ ಭಯಪಡಿಸಿ
ಸುಪಥ ಕಾಣದೆ ನಿಮ್ಮ ಪದವ ನಂಬಿರಲು
ಸ್ವಪ್ನದಲಿ ನಿಜರೂಪ ಗುಪ್ತದಿಂದಲಿ ತೋರಿ
ಆಪತ್ತು ಪರಿಹರಿಪೆನೆಂದಭಯವಿತ್ತ ೩
ಪರಿಪರಿ ಅಪಮೃತ್ಯು ಪರಿಹಾರವನೆಗೈದು
ಪರಮ ಹರುಷದಿ ಕಾಯ್ದು ಆಯುವನೆ ಇತ್ತು
ಕರಕರೆಯ ಬಿಡಿಸಿ ಕಾಯ್ದಂಥ ಘನ ಚರಿತೆಯನು
ಅರಿತು ವರ್ಣಿಸಲರಿಯೆ ಪರಮ ಪ್ರಿಯ ದೊರೆಯೆ ೪
ಈ ಪರಿಯ ಮಹಿಮರೆ ಆಪನ್ನ ರಕ್ಷಕರೆ
ಶ್ರೀ ಪತಿಯ ತೋರುವ ಘನಶಕ್ತರೆ
ಕಾಪಾಡುವೋ ಕರ್ತರೆಂದು ನಾ ನಂಬಿರುವೆ
ಗೋಪಾಲಕೃಷ್ಣವಿಠ್ಠಲನ ನಿಜ ಪ್ರಿಯರೆ ೫

 

೧೧೨
ಪರಮಪುರುಷ ಶ್ರೀ ರಾಮನ ಪದಯುಗ
ಹರುಷದಿ ಸ್ಮರಿಸುವ ಹನುಮಂತ
ಸಿರಿರಮಣ ನಿಜದಾಸನೆಂದೆನಿಸಿದ
ವರ ಕದರುಂಡಲಿ ಹನುಮಂತ ಪ.
ಒಂದೇ ಮನದಲಿ ತಂದೆ ನಿನ್ನಡಿಗಳ
ಪೊಂದಿದೆ ಸಲಹೈ ಹನುಮಂತ
ಕುಂದುಗಳೆಣಿಸದೆ ಕಂದನ ತೆರದಲಿ
ಎಂದೆಂದಿಗು ಪೊರೆ ಹನುಮಂತ ೧
ವಾರಿಧಿ ದಾಟುತ ಸೇರುತ ಅರಿಪುರ
ಧಾರುಣಿಜೆಯ ಕಂಡೆ ಹನುಮಂತ
ನಾರಿಚೋರನಪುರ ಸೇರಿಸಿ ಅನಲಗೆ
ಸೇರಿದೆ ರಾಮನ ಹನುಮಂತ ೨
ಕೃಷ್ಣನ ಸೇವಿಸಿ ದುಷ್ಟರ ಕೊಲ್ಲುತ
ಮೆಟ್ಟಿದೆ ಖಳರನು ಹನುಮಂತ
ದಿಟ್ಟತನದಿ ಸಾಮ್ರಾಜ್ಯವಾಳಿ ಜಗ-
ಜಟ್ಟಿ ಎಂದೆನಿಸಿದೆ ಹನುಮಂತ ೩
ಮಿತಿಯಿಲ್ಲದ ಅತಿಖತಿ ಮತಗಳನು
ಹತಗೈಸುತ ನೀ ಹನುಮಂತ
ಪ್ರತಿ ಗ್ರಂಥಗಳನ್ನು ಸ್ಥಾಪಿಸಿ ಸುರರಿಗೆ
ಅತಿ ಹಿತ ತೋರಿದೆ ಹನುಮಂತ ೪
ಇಷ್ಟ ಫಲಪ್ರದ ತುಷ್ಟಿಬಡಿಸೊ ನೀ
ಕೊಟ್ಟೀಗಭಯವ ಹನುಮಂತ
ದಿಟ್ಟ ನಿನ್ನಡಿಗಳ ಭಜಿಸುವೆ ಗೋಪಾಲ
ಕೃಷ್ಣವಿಠ್ಠಲ ಪ್ರಿಯ ಹನುಮಂತ ೫

 

೧೯೪
ಪರಮಪ್ರಿಯರೆಂದೆಂಬ ಕರುಣ ಜಲಧಿ | ನಿಮ್ಮ
ಮೊರೆಹೊಕ್ಕವರ ಕಾಯ್ದು ಪೊರೆಯುವಿರಿ ದಯದಿ ಪ.
ಅರಿಯರು ಜಗದೊಳಗೆ ನರರು ನಿವಿ್ಮೂ ಮಹಿಮೆ
ಕರಕರೆಪಡುತಿಹರು ಭವದೊಳಗೆ
ಪರಮ ನಮ್ರತೆಯಿಂದ ಚರಣಕೆರಗಲು ಬಂದು
ಉರುತರದ ಕಾರುಣ್ಯದಿಂದ ಪೊರೆಯುವಿರಿ ೧
ಇಲ್ಲವೊ ಆಸೆ ಆಡಂಬರದ ದ್ರೌವ್ಯದಲಿ
ಎಲ್ಲೆಲ್ಲಿ ನೊಡಲು ತತ್ವಬೋಧೆ
ಉಲ್ಲಾಸದಿಂದ ಸಜ್ಜನರಿಗರುಹುತ ಮೋದ
ಎಲ್ಲೆ ಕಾಣಿಸದಂಥ ಆನಂದವೀವ ಗುರು ೨
ತಂದೆ ಮುದ್ದುಮೋಹನವಿಠ್ಠಲನೆಂದೆಂಬ ಬಹು
ಚಂದದ ಅಂಕಿತದಿ ಜಗದಿ ಉದಿಸಿ
ಮಂದರಿಗೆ ಸುಜ್ಞಾನ ತಂದು ರಕ್ಷಿಸುವಂಥ
ಒಂದೊಂದು ಮಹಿಮೆಗಳ ಪೇಳಲೆನ್ನೊಶವೆ ೨
ಅನಾದಿಯಿಂದಲಿ ಹೀನ ದೆಸೆಯೊಳಗಿದ್ದು
ನಾನಾ ಜನ್ಮದಿ ಬಂದು ಕರ್ಮದಲಿ ತೊಳಲಿ
ದೀನತ್ವವೈದುವ ಮಾನವನ ಕರುಣಿಸಿ
ಸಾನುರಾಗದಿ ಹರಿಯ ಪದಕೆ ಸೇರಿಸುವಂಥ ೩
ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತ ಹರಿ ಎಂತೆಂದು
ಶ್ರೇಷ್ಠ ಕನಿಷ್ಠದ ಅರ್ಥ ತತ್ವ ತಿಳಿಸಿ
ಕಷ್ಟ ಬಿಡಿಸುವ ಜಗತ್ಕರ್ತ ಒಬ್ಬನೆ ಹರಿಯು
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆನುವ ೫

 

೧೯೫
ಉಗಾಭೋಗ
ಪರಿಪರಿ ದೇಹ ಧರಿಸಿ ನರ ಜನ್ಮದಲಿ ಬಂದು
ಕರಕರೆ ಪಡುತಲಿ ಇರುವ ಮಾನವರೊಳು
ಅರಿತು ಸಾತ್ವಿಕರನು ಕರದು ಬುದ್ಧಿಯ ಪೇಳೆ
ಹರಿಯ ಪಾದವ ತೋರ್ವ ಗುರುವು ಒಬ್ಬರು ಬೇಕು
ಪರಮಪ್ರಿಯರು ಇವರು ಅರಿವರು ಸಾತ್ವಿಕರ
ಕರದು ಉಪದೇಶವಿತ್ತು ಉದ್ಧಾರ ಮಾಡುವರು
ಚರಿತೆಯ ವರ್ಣಿಸಲು ನರರಿಗೆ ಸಾಧ್ಯವಲ್ಲ
ನರಹರಿಯೆ ಬಲ್ಲ ಉರಗಾಖ್ಯರ ಮಹಿಮೆ
ವರಭಕ್ತರಾಗಿ ಹರಿಗೆ ಶರಣು ಹೊಕ್ಕವರನು
ಕರುಣೆಯಿಂ ಸ್ವರೂಪವರಿತು ಉದ್ಧರಿಪರು
ಪರತರ ಗೋಪಾಲಕೃಷ್ಣವಿಠ್ಠಲನ
ಚರಣವ ತೋರುವರು
ವರ ತಂದೆ ಮುದ್ದುಮೋಹನರು

 

೪೬ *
ಪಶ್ಚಿಮಕೆ ತಿರುಗಿದಾ ಪರಿಯದೇನೋ
ಅಚ್ಯುತಾನಂತ ಗೋವಿಂದ ಗೋಪಾಲ ಪ.
ಪವನ ಮುನಿಗಳು ನಿನ್ನ ಪರಿ ಪರೀ ಸ್ತುತಿಗೈದು
ಪೂರ್ವಾಭಿಮುಖವಾಗಿ ಸ್ಥಾಪಿಸಿರಲೂ
ಆವಕಾಲಕು ಪವನ ಮತದಂತೆ ನಟನೆಯವ
ಈ ವಿಧದಿ ಅವರ ಮನಮೀರಿ ತಿರುಗಿಹುದೂ ೧
ಕ್ಷೀರ ಸಾಗರ ಜಾತೆ ನೋಡುವಳೆಂದು
ನಾರಿ ಹಂಬಲನೆನಸಿ ಕಡಲ ಕಡೆಗೇ
ಸೇರಬೇಕೆಂದು ವೈಕುಂಠವನು ತಿರುಗಿದ್ಯಾ
ಕಾರಣವದೇನೈಯ್ಯ ನಾರದ ಸ್ತುತನೇ ೨
ಕ್ಷೀರಸಾಗರ ಮಧ್ಯೆ ತೋರುವೋ ದಿವ್ಯಪುರ
ಸೇರಿದಾ ಮುಕ್ತ ಸ್ತುತಿಯನಾಲೈಸಿ
ಹಾರಿಹೋಗಲು ಮನಸು ಹಾರಿತೇ ಮಮತೆಯಲಿ
ದ್ವಾರಕಿಯ ನೆನಪಾಯಿತೇನೋ ಕೃಷ್ಣಯ್ಯ ೩
ದುರ್ಜನಕೆ ದುರ್ಮನಸು ಮರುಕಲಿ ಪುಟ್ಟಲೂ
ಸರ್ಜನಕೆ ಸರ್ವೇಶ ನೀನೇನಿಸಲೂ
ಮೂರ್ಜಗದಿ ನಿನ್ನ ಮೀರಿದರಿಲ್ಲವೆನಿಸಲೂ
ಅಬ್ಜಭವಪದರಲ್ಲಿ ಸಲುಗೆ ಬಹಳಿರಲೂ ೪
ಎಲ್ಲ ಕಾರಣವಿರಲಿ ಬಲ್ಲ ಕನಕನು ಬರಲು
ಗುಲ್ಲು ಮಾಡುತ ಕುರುಬನೆಂದೊಳಗೆ ಬಿಡದೇ
ನಿಲ್ಲಿಸಲು ಕಲ್ಲೊಡೆದು ಪಶ್ಚಿಮಕೆ ತಿರುಗಿ ನೀ
ಅಲ್ಲೆ ಕನಕಗೆ ದಿವ್ಯ ದರುಶನ ಕೊಡಲೂ ೫
ಸಿರಿಬೊಮ್ಮ ಸುರರ ಲೆಕ್ಕಿಸದೆ ಸದ್ಭಕ್ತರಾ
ಗರುವ ರಹಿತರ ಸ್ತುತಿಗೆ ಮೈದೋರುವಾ
ಪರಿಯ ತೋರಲು ಇತ್ತ ತಿರುಗಿದ್ಯಾ ಪೇಳಿನ್ನು
ಪರಮ ಪುರುಷನೆ ನಿನ್ನ ಪರಿ ತಿಳಿವರಾರೈ೬
ಆನಂದ ಗುಣಪೂರ್ಣ ಆನಂದ ಮುನಿವರದ
ಆನಂದ ಕಂದ ಪಶ್ಚಿಮ ತಡಿಯವಾಸಾ
ಆನಂದ ಗೋಕುಲದಿ ಆನಂದ ತೋರಿದಾ
ಆನಂದ ಗೋಪಾಲಕೃಷ್ಣವಿಠಲೈಯ್ಯಾ ೭

 

೪೮
ಪಾಂಡುರಂಗನೆ ಪಾಲಿಸೆನ್ನನು
ಬೇಡಿಕೊಂಬೆನು ವರವ ನೀಡಯ್ಯ ನೀನು ಪ.
ಸಿರಿವಿರಂಚ್ಯಾದಿ ಸುರರು ನಿರುತ ನಿನ್ನನು ಬಿಡರು
ಕರಗಳನೆ ಜೋಡಿಸುವರು ವರಗಳನೆ ನೀಡೆಂಬರು
ಭರದಿ ಹದಿನಾಲ್ಕು ಜಗದ ಉದರದಿ ಇಂಬಿಟ್ಟ ಭೋಜ
ಸಿರಿಸ್ತುತಿಗೆ ಸಿಲ್ಕ ರಾಜವರ ರವಿಶತರ ತೇಜ
ಭೀಮರಥಿಯ ತೀರದಲ್ಲಿ ಮಹಾನಂದ ಭರಿತ ನಂದನ ಕಂದ
ಸ್ವಾಮಿ ನಂಬಿದೆ ಅಭಯವ ಕೊಟ್ಟು ವರಗಳನನಿಟ್ಟು
ಪೂರ್ಣಸುಖವನ್ನೆ ಕೊಟ್ಟು
ನಾಮ ಧ್ಯಾನಗಳ ಅನುದಿನ ಮಾಡುವ ಜ್ಞಾನ ಕೊಟ್ಟನಂತಾಸನ
ಧಾಮ ಶ್ವೇತದ್ವೀಪ ವೈಕುಂಠದಲ್ಲೆ ನಿನ ಭಂಟರೊಳು
ಸೇರಿಸೊ ವೈಕುಂಠ ೧
ಬಂದು ಕಂಡೆನು ನಿನ್ನ ಇಂದು ನಾ ಮಾಡ್ದ ಪುಣ್ಯ
ಬಂದು ಕೈಸೇರಿತಿನ್ನ ಸುಂದರಾಂಗನೆ ಎನ್ನ
ಬಂಧ ಪರಿಹರಿಸಿ ಬೇಗದಿಂದ ಉದ್ಧರಿಸೋ ಈಗ
ನಂದನ ಕಂದ ರಂಗ ಬಂಧುವೇ ಪಾಂಡುರಂಗ
ನೀರೊಳು ಮಚ್ಛಾವತಾರನೆ ಕಮಠ ರೂಪನೆ
ವರಹ ವೇಷಧಾರಕನೆ
ನಾರಸಿಂಹನೆ ದೈತ್ಯಸಂಹಾರಿ ಗಂಗಾಪದಧಾರಿ ಕ್ಷತ್ರಿಯ ಕುಲವೈರಿ
ಶ್ರೀರಾಮ ಲಂಕಾಧೀಶನ ಕೊಂದಿ ಮಧುರಿಗೆ ಬಂದಿ
ಬೌದ್ಧನೆನಿಸುತ್ತ ನಿಂದಿ
ಶೂರ ಕಲ್ಕಿಯೆ ನಿನ್ನ ಮಹಿಮೆಯ
ಪೊಗಳಲು ಜೀಯಾ ಶೇಷಗೊಶವಲ್ಲವಯ್ಯಾ ೨
ಪುಟ್ಟ ಧ್ರುವರಾಯಗಿನ್ನ ಕೊಟ್ಟೆ ಸ್ಥಿರ ಪಟ್ಟವನ್ನ
ಎಷ್ಟು ವರ್ಣಿಸಲಿ ನಿನ್ನ ಇಷ್ಟ ಫಲದಾಯಕನ್ನ
ಇಟ್ಟಿಗೆ ಪೀಠನಿಲಯ ದಿಟ್ಟ ಶ್ರೀ ಕೃಷ್ಣರಾಯ
ಕಷ್ಟಪರಿಹರಿಸು ಗೋಪಾಲಕೃಷ್ಣವಿಠ್ಠಲ ಜೀಯ
ನಿಲ್ಲಿಸೆನ್ನಯ ಮನ ನಿನ್ನೊಳು ಭಕ್ತಿ ಗುಣಗಳು
ಪಾಡಲಿ ಹಗಲಿರುಳು
ಒಲ್ಲೆ ನೀನೊಲ್ಲದ ಸುದ್ದಿಯ ದುರ್ಬುದ್ಧಿಯ
ಕೊಡದಿರು ವಿಠ್ಠಲಯ್ಯ
ಮಲ್ಲಮರ್ಧನ ಲಕುಮಿಯ ಕಾಂತರಂಗ
ಬಲವಂತ ರಕ್ಷಿಸೆನ್ನ ವಸಂತ
ವಲ್ಲಭ ಪುಂಡಲೀಕನ ವರದ ದಾಮೋದರ
ಶ್ರೀದ ಕೈಯ ಮುಗಿವೆ ಸರ್ವದಾ ೩

 

೧೫೫
ಪಾರುಗಾಣಿಸೊ ಎನ್ನ ಪಾವನಕಾಯ ಶ್ರೀ
ಗುರು ರಾಘವೇಂದ್ರಾರ್ಯನೇ ಪ.
ಶ್ರೀ ರಮಾಪತಿ ಗುಣವ ನೀ ಮನದೊಳು ತಿಳಿಸಿ
ಶ್ರೀ ರಾಮ ನಾಮ ನುಡಿ ಸೋ | ಭವ ಬಂಧ ಬಿಡಿಸೋ ಅ.ಪ.
ಮಿಂಚಿನಂತಿಹ ಎನ್ನ ಚಂಚಲ ಮನದಲ್ಲಿ
ಸಂಚಿತನೆ ಎನೆ ನೆಲಸೋ
ಸಂಚಿತಾಗಮಿಗಳು ಕೊಂಚ ಉಳಿಯದ ತೆರದಿ
ಪಂಚ ಭೇದಾರ್ಥ ತಿಳಿಸೊ
ಪಂಚವಕ್ತ್ರನ ತಾತ ಮಿಂಚಿನಂದದಿ ಪೊಳೆವೊ
ಹಂಚಿಕೆಯ ಎನಗೆ ತೋರೋ | ಮನಕ್ಹರುಷ ಬೀರೋ ೧
ಶ್ರೀ ನರಹರಿ ಕೃಷ್ಣ ರಾಮ ವ್ಯಾಸರ ಪದವ
ನೀ ನಿರ್ಮಲದಲಿ ನೆನೆವೆ
ಮಾನನಿಧಿ ಮುರಹರಿಯ ಧಾಮತ್ರಯಗಳ ಮಾರ್ಗ
ಕಾಮಿಸಿದ ಭಕ್ತಗೀವೆ
ನಾನಧಮೆ ನಿನ್ನಡಿಗೆ ಬಾಗಿ ಭಜಿಸುವೆ ಗುರುವೆ
ನೀನಿತ್ತ ನೋಡಿ ಪೊರೆಯೊ | ನೀ ದಯವ ಗರೆಯೊ ೨
ತರಳತನದಲಿ ಶ್ರೀ ನರಹರಿಯ ಭಜಿಸುತ್ತ
ಉರುತರದಿ ಭಾದೆ ಸಹಿಸಿ
ಹರಿಯು ಸರ್ವತ್ರ ವ್ಯಾಪಕನೆಂಬೊ ಮಹಿಮೆಯ
ಉರ್ವಿಯೊಳಗೆಲ್ಲ ನೆಲಸಿ
ವರಯತಿ ರೂಪದಲಿ ಸಿರಿ ಕೃಷ್ಣನಾ ಭಜಿಸಿ
ಮರುತ ಮತವನೆ ಸ್ಥಾಪಿಸಿ | ಗುರುರಾಯನೆನಸಿ ೩
ತುಂಗ ತೀರದಿ ನಿಂದು ಮಂಗಳರೂಪದಲಿ
ಪಂಗು ಬಧಿರರ ಸಲಹುತ
ಸಂಗೀತ ಪ್ರಿಯನೆನಿಸಿ ಶೃಂಗಾರರಾಮನ
ಮಂಗಳರೂಪ ಭಜಿಸಿ
ಹಿಂಗದೇ ಸುಜನರಿಗೆ ವರವ ಕೊಡುವೊ ಬಿರುದು
ರಂಗನಾ ಪದದೊಲುಮೆಯೋ | ನಿನ್ನಯ ಮಹಿಮೆಯೋ ೪
ಗೋಪಾಲಕೃಷ್ಣವಿಠ್ಠಲನ ಪರಿಪರಿಯಿಂದ
ಆ ಪಾದ ಮೌಳಿ ನೋಳ್ಪೆ
ಶ್ರೀ ಪತಿಯ ತೋರೆನಗೆ ಪಾಪ ಕಲುಷವ ಕಳದು
ತಾಪಪಡಲಾರೆ ಭವದಿ
ಕಾಪಾಡುವವರಿಲ್ಲ ನೀ ಕೃಪಾನಿಧಿಯೆಂದು
ಈ ಪರಿ ಕೇಳ್ದೆ ಗುರುವೆ | ಭಕ್ತರ ಕಲ್ಪ ತರುವೆ ೫

 

೪೭
ಪಾಲಿಸೀ ಪಸುಳೆಯನು ಪರಮ ಪುರುಷ ಪ.
ಬಾಲೆ ನಿನ್ನವಳೆಂದು ಶ್ರೀ ಕರಿಗಿರೀಶ ಅ.ಪ.
ನರಹರಿಯೆ ಲಕ್ಷೀಶ ತರಳೆ ನಿನ್ನವಳಿನ್ನು
ತ್ವರಿತದಲಿ ಕಾಪಾಡು ತಡಮಾಡದೆ
ಕರಕರೆಯ ರೋಗ ಬಾಧೆಯ ಬಿಡಿಸಿ ಹರಿ ನಿನ್ನ
ಕರುಣಾಮೃತವಗರೆದು ಕಡುಕೃಪೆಯೊಳಿನ್ನು ೧
ಫಣಿರಾಜಶಯನ ಪರ್ಯಂಕ ದೇವರದೇವ
ಬಿನಗು ದೇವರ ಗಂಡ ಎಣೆಯುಂಟೆ ನಿನಗೆ
ಮಣಿಯದಾಗ್ರಹದೇವಗಣ ಉಂಟೆ ನಿನಗಿನ್ನು
ಕ್ಷಣ ಬಿಡದೆ ಸರ್ವಬಾಧೆಯ ಬಿಡಿಸಿ ಸತತ ೨
ಪ್ರಾಣದೇವನೆ ಸರ್ವ ದೇವತೆಗಳಧಿನಾಥ
ಪ್ರಾಣದೇವನು ನಿನ್ನ ಪ್ರಾಣ ಪದಕ
ಪ್ರಾಣದೇವಗೆ ಪೇಳಿ ಪ್ರಾಣ ಭಯವನೆ ಬಿಡಿಸಿ
ಪ್ರಾಣಸೂತ್ರವ ನಡಿಸಿ ತ್ರಾಣಗೆಡದಂತೆ ೩
ನಿನ್ನ ದಾಸರ ದಾಸಳಿವಳು ಶ್ರೀಹರಿ ಕೇಳು
ಎನ್ನ ಬಿನ್ನಪವ ನೀ ಬರಿದೆನಿಸದೆ
ಚನ್ನಾಗಿ ಆಯುರಾರೋಗ್ಯ ಸಂಪದವಿತ್ತು
ಮನ್ನಿಸಿ ಕಾಪಾಡು ಮಂಗಳಾತ್ಮಕನೆ ೪
ಗುರುಕರುಣ ವರಬಲದಿ ಪುಟ್ಟಿದಾ ಶಿಶು ಇವಳು
ಪರಮ ಮಂಗಳೆ ಎನಿಸಿ ಪಾಲಿಸೈ ಜಗದಿ
ನಿರುತದಲಿ ನಿನ್ನ ಪದಭಕ್ತಿ ಜ್ಞಾನವ ಕೊಟ್ಟು
ಹರಸಿ ಪೊರೆ ಗೋಪಾಲಕೃಷ್ಣವಿಠ್ಠಲನೆ ೫

 

೧೩೬
ಪಾಲಿಸು ಶಂಕರನೆ ಪಾರ್ವತಿ ಪತೆ
ಪಾಲಿಸು ಶಂಕರನೆ ಪ.
ಹರಚರ್ಮಾಂಬರ ಗೌರಿ ಮನೋಹರ
ಸುರನರ ವಂದಿತ ಗರಳಕಂಧರನೆ ೧
ಮನದಭಿಮಾನಿಯೆ ಸನುಮತದಲಿ ಎನ್ನ
ಮನದಲಿ ಶ್ರೀ ಹರಿ ವನಜ ಪಾದವ ತೊರೋ೨
ಶ್ರೇಷ್ಠನೆ ಗೋಪಾಲಕೃಷ್ಣವಿಠ್ಠಲನಿಗೆ
ಪುಟ್ಟ ಮೊಮ್ಮಗ ನೀನೆ ತುಷ್ಟಿಯಿಂದಲಿ ಕಾಯೊ ೩

 

ಎರಡು ಮಾರ್ಗ
೨೩೫
ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ
ಶ್ರೀ ಲೋಲ ನೀ ನಿತ್ಯದಿ ಪ.
ಶೀಲಗುಣ ನಿನ್ನ ಏನು ಬೇಡುವುದಿಲ್ಲೊ
ಕಾಲರೂಪನೆ ನಿನ್ನನು | ಇನ್ನು ಅ.ಪ.
ಒಂದು ಅಸ್ವತಂತ್ರ ಒಂದು ಸರ್ವಸ್ವತಂತ್ರ
ಒಂದು ಮನೆಯೊಳಗೆ ಇದ್ದು
ಒಂದೆರಡು ಲೋಕಕ್ಕೆ ಒಂದೆ ದೈವನು ಎನಿಸಿ
ಒಂದೊಂದರಲಿ ಇರುವ
ಒಂದು ಅಪೇಕ್ಷಿಸದೆ ಒಂದೆರಡು ಗುಣದಿಂದ
ಒಂದೆರಡು ಮಾಳ್ಪ ಜಗವ
ಇಂದಿರೇಶನೆ ನಿನ್ನ ಈ ವಿಧದ ವ್ಯಾಪಾರ
ಒಂದೊಂದು ಮನಕೆ ತೋರೋ | ಸ್ವಾಮಿ ೧
ಎರಡು ಮಾರ್ಗಗಳಿಹವು ಎರಡು ಕರ್ಮಗಳಿಂದ
ಎರಡು ವಿಧ ಸಮ ತಿಳಿದರೆ
ಎರಡು ರೂಪಗಳನು ಒಂದಾಗಿ ಭಾವಿಸುತ
ಎರಡೊಂದು ಜೀವ ತಿಳಿದು
ಎರಡು ಫಲ ಅನುಭವಿಸಿ ಎರಡು ಹರಿಗರ್ಪಿಸುತ
ಎರಡು ವಿಧ ಕರ್ತನೆಂದು
ಎರಡು ಎಪ್ಪತ್ತು ಸಹಸ್ರನಾಡಿಗಳಲ್ಲಿ
ಎರಡು ರೂಪದಲಿರುವ ಪೊರೆವ ೨
ಮೂರು ಅವಸ್ಥೆಯಲಿ ಮೂರು ತಾಪವ ಸಹಿಸಿ
ಮೂರು ಮಾರ್ಗದಲಿ ನಡೆದು
ಮೂರೆಂಟು ಇಂದ್ರಿಯವ ಮೂಲರೂಪದಿ ಲಯಸಿ
ಮೂರಾರು ವಿಧ ಭಕ್ತಿಯಲಿ
ಮೂರೈದು ನುಗ್ಗೊತ್ತಿ ಮೂರು ಮೂರು ಅರಿಯ
ಮೂರು ಶುದ್ಧಿಯಲಿ ಗೆದ್ದು
ಮೂರಾರು ಎರಡೊಂದು ಖೋಡಿ ಮತಗಳ ಮುರಿಸಿ
ಮಾರುತಿಯ ಮತದಿ ನೆಲಸಿ | ತಿಳಿಸಿ ೩
ವಿೂನ ಕೂರ್ಮನೆ ವರಹ ಶ್ರೀ ನಾರಸಿಂಹನೆ
ದಾನಯಾಚಕ ಭಾರ್ಗವ
ವಾನರರಿಗೊಲಿದನೆ ವೇಣುಹಸ್ತರೂಪಿ
ಮಾನವಿಲ್ಲದ ಕಲ್ಕಿಯೆ
ಶ್ರೀನಿವಾಸನೆ ನಿನ್ನ ನಾನಾವಿಧ ರೂಪಗಳು
ನಾನು ವರ್ಣಿಸಲು ಅಳವೆ
ಮಾನಾಭಿಮಾನದೊಡೆಯನೆ ಕೃಷ್ಣ ಕೈಪಿಡಿಯೊ
ಭಾನುಪ್ರಕಾಶ ಹರಿಯೆ | ಸಿರಿಯೆ ೪
ಶಿರದಲ್ಲಿ ಕಿರೀಟ ಫಣೆಯಲ್ಲಿ ತಿಲುಕವು
ಮೆರೆವ ಕುಂಡಲದ ಕದಪು
ಕಿರುನಗೆಯ ಪಲ್ಗಳು ಕೊರಳಲ್ಲಿ ಹಾರಗಳು
ಕರದಲ್ಲಿ ಆಯುಧಗಳು
ಜರಿಯ ಪೀತಾಂಬರವು ಸಿರಿ ಭೂಮಿ ಎಡಬಲದಿ
ಸುರನದಿಯ ಪೆತ್ತಪಾದ
ಸಿರಿರಮಣ ಗೋಪಾಲಕೃಷ್ಣವಿಠ್ಠಲ ಎನಗೆ
ಪರಿ ಪರಿಯ ರೂಪ ತೋರೊ ಸ್ವಾಮಿ ೫

 

೧೩೭
ಪಾಲಿಸೋ ಗಂಗಾಧರ ಪಾಲಿಸೋ ಪ.
ಪಾಲಿಸೊ ಗಂಗಾಧರನೆ | ಮಧ್ಯ
ಫಾಲದಿ ನಯನ ಉಳ್ಳವನೆ | ಆಹ
ಶ್ರೀಲೋಲನ ಗುಣಜಾಲವ ಸ್ಮರಿಸುತ್ತ
ಲೀಲೆಯಿಂ ಭಕ್ತರ ಪಾಲಿಸುತಿಪ್ಪನೆ ಅ.ಪ.
ಬ್ರಹ್ಮನ ಭ್ರೂಮಧ್ಯೆ ಜನಿಸಿ | ಬಹು
ದುರ್ಮತಿಗಳನೆ ಮೋಹಿಸಿ | ಕು
ಧರ್ಮದ ಶಾಸ್ತ್ರವ ರಚಿಸಿ | ಅಂ
ಧತಮ್ಮಸಿಗವರ ಕಳಿಸಿ | ಆಹ
ನಿರ್ಮಲ ಮನದಲ್ಲಿ ಬೊಮ್ಮನಯ್ಯನ ಭಜಿಸಿ
ಉಮೆಯೊಡನೆ ನಿತ್ಯ ರಮಿಸುತಲಿಪ್ಪನೆ ೧
ಕಂಜನಾಭನ ಮೊಮ್ಮಗನೆ | ಖಳರ
ಭಂಜಿಸುವಂಥ ಬಲಯುತನೆ | ಮನ
ರಂಜನ ರೂಪಾಕೃತನೆ | ಖಳ
ಗಂಜಿ ಹರಿಯಿಂದ ರಕ್ಷಿತನೆ | ಆಹ
ಅಂಜಿ ದೈತ್ಯರಿಗೆ ಅಮೃತ ಮಥಿಸುವಾಗ
ನಂಜುದ್ಭವಿಸೆ ಕುಡಿದು ನಂಜುಂಡನೆನಿಸಿದೆ ೨
ಕಪಿಲನದಿ ತೀರದಲ್ಲಿ | ಬಹು
ತಪಸಿಗಳಿಗೆ ಒಲಿಯುತಲಿ | ಭಕ್ತ
ರಪರಿಮಿತ ಬರುತಿಲ್ಲಿ | ನಿತ್ಯ
ಜಪಿಸುತ್ತ ನಿನ್ನ ಸ್ತೋತ್ರದಲಿ | ಆಹ
ಗುಪಿತದಿಂದ್ಹರಿ ಭಕ್ತರಪವರ್ಗದೊಡೆಯ ನಿನ್ನ
ಲ್ಲಿಪ್ಪನೆಂತೆಂದು ಜಪಿಸುತ್ತಲಿಪ್ಪರೊ೩
ಗಂಗಾಧರನೆನಿಸಿದನೆ | ಅಂತ
ರಂಗದಿ ಹರಿಯ ತೋರುವನೆ | ಉಮೆ
ಕಂಗಳಿಗಾನಂದಪ್ರದನೆ | ನಿತ್ಯ
ರಂಗನಾಥನ ಪೂಜಿಸುವನೆ | ಆಹ
ಜಂಗಮ ಜೀವರ ಮನದಭಿಮಾನಿಯೆ
ಲಿಂಗರೂಪದಿ ಜನರ ಕಂಗಳರಂಜನೆ೪
ಅಪಾರ ಮಹಿಮನ ಗುಣವ | ಬಹು
ರೂಪಗಳನೆ ನೋಡುತಿರುವ | ನಿತ್ಯ
ಶ್ರೀಪತಿ ನರಹರಿಯ ನೆನೆವ | ಮುಂದಿ
ನಾ ಪದವಿಗೆ ಶೇಷನಾಗ್ವ | ಆಹ
ಈ ಪರಿ ಮಹಿಮನೆ ನೀ ಪರಿ ಪರಿಯಿಂದ
ಗೋಪಾಲಕೃಷ್ಣವಿಠ್ಠಲನ ಧ್ಯಾನವ ನೀಡೊ ೫

 

೪೯
ಪುಟ್ಟ ಪುಟ್ಟ ಶ್ರೀನಿವಾಸ ಬೇಗ ಬಾರೊ | ಬಹು
ದಿಟ್ಟ ನಿನ್ನಯ ಪಾದ ಎನಗೆ ತೋರೋ ಪ.
ಸಿಟ್ಟಿನಿಂದಲಿ ನೀನು ಕೆಟ್ಟ ದೈತ್ಯನ | ಕೊಂದು
ಪುಟ್ಟ ಬಾಲನ ಕಾಯ್ದ ನಾರಸಿಂಹ ಅ.ಪ.
ಬಿಟ್ಟ ಕಣ್ಣು ಬೆಟ್ಟ ಬೆನ್ನು ಸೊಟ್ಟಕೋರೆ | ಬಹು
ದುಷ್ಟ ಘೋರರೂಪಿ ನೀನು ಪುಟ್ಟ ಬಾಲ
ದುಷ್ಟ ರಾಜರ ಕೊಂದ ದಿಟ್ಟ ರಾಮನೆ | ಕೃಷ್ಣ
ಬಿಟ್ಟ ವಸ್ತ್ರವ ದುಷ್ಟ ಹನನ ಕಲ್ಕಿ ೧
ನೀರೊಳಿದ್ದು ಭಾರ ಪೊತ್ತು ಕೋರೆ ತೋರ್ದೆ | ಬಹು
ಘೋರಕಾರ ಬಾಲರೂಪಿ ಕ್ರೂರ ರಾಮ
ನಾರಿಚೋರನ ಕೊಂದು ಜಾರ ಚೋರನು | ಆಗಿ
ವಿೂರಿ ಬತ್ತಲೆ ನಿಂದು ಏರಿ ಕುದುರೆ ೨
ಕುಟ್ಟಿ ತಮನ ಕೊಟ್ಟು ಅಮೃತ ದಿಟ್ಟ ವರಹ | ಹರಿ
ಸಿಟ್ಟು ನಿನಗೆ ಪುಟ್ಟಿ ಭಾರ್ಗವ ಶ್ರೇಷ್ಠ ಶ್ರೀ ರಾಮ
ಕೃಷ್ಣಮೂರುತಿ ಬುದ್ಧ ಕೆಟ್ಟ ಕಲಿಯ | ಗೆದ್ದ
ಶ್ರೇಷ್ಠ ಗೋಪಾಲಕೃಷ್ಣವಿಠ್ಠಲ ಈಗ ೩

 

೧೪೩
ಪೂಜಿಸುವೆನೆ ತುಳಸಿ ನಿನ್ನ ಬೇಗ ಸಲಹೆ ನೀ ಪ.
ಜಾಜಿ ಮಲ್ಲಿಗೆ ಕುಸುಮದಿಂದ ಪೂಜೆಗೈಯ್ಯವೆ ಅ.ಪ.
ಧ್ಯಾನ ಆವಾಹನೆಯಿಂದ ಶ್ರೀ ವರನ ಸಹ
ನಾನಾ ಮಂಗಳ ದ್ರವ್ಯದಿ ನಾನು ಪೂಜಿಪೆ ೧
ವೃಂದಾವನದಿ ಮೆರೆಯುವವಳೆ ಸುಂದರಾಂಗಿಯೆ
ನಂದಕಂದಗೆ ಮಾಲೆಯವಳೆ ಇಂದು ಕರುಣಿಸೆ ೨
ಗೋಪಾಲಕೃಷ್ಣವಿಠ್ಠಲನ ರೂಪ ತೋರೆ ನೀ
ಶ್ರೀಪತಿಯ ಪಾದ ತೋರಿ ಕಾಪಾಡೆ ದೇವಿ ೩

 

(ನು. ೧) ಪೂರ್ಣಕಾಮ
೫೦
ಪೂರ್ಣರೂಪನೆ ಎನ್ನ ಪೂರ್ಣ ಮನದಲಿ ನಿಂತು
ಪೂರ್ಣಗೊಳಿಸಭಿಲಾಷೆಯ ಪ.
ಪೂರ್ಣ ಚಂದ್ರನ ಕಾಂತಿ ಪೂರ್ಣಧಿಕ್ಕರಿಸುವೊ
ಪೂರ್ಣ ಪ್ರಕಾಶ ಹರಿಯೆ | ನೀ ಪೊರೆಯೊ ದೊರೆಯೆ ಅ.ಪ.
ಪೂರ್ಣಕಾಮನೆ ಸ್ವಾಮಿ ಪೂರ್ಣ ಆನಂದ ಸಂ-
ಪೂರ್ಣ ಗುಣಗಣನಿಲಯನೆ
ಪೂರ್ಣ ಭಕ್ತರದಾತ ಪೂರ್ಣ ಲಕ್ಷ್ಮೀಶಪ್ರೀತ
ಪೂರ್ಣಭೋಧರ ವರದನೆ
ಪೂರ್ಣ ಪ್ರಕಾಶ ನಿನ್ನ ಕಾಣದೆಲೆ ಕಂಗೆಡುವೆ
ಪೂರ್ಣ ದೃಷ್ಟಿಯಲಿ ನೋಡೊ | ನಿನ್ನ ಪಾದ ನೀಡೋ ೧
ಪೂರ್ಣ ಭಕ್ತ ಚಕೋರ ಪೂರ್ಣಚಂದ್ರನೆ ಭಕ್ತಿ
ಪೂರ್ಣ ಶರಧಿಗೆ ಚಂದ್ರನೆ
ಪೂರ್ಣ ಬಾಧೆಯಪಡುವೆ ಪೂರ್ಣಗೈಸೆನ್ನಭವ
ಪೂರ್ಣಚಂದ್ರನೆ ತಾಪಕೆ
ಪೂರ್ಣ ನಂಬಿರುವೆನೊ ಪೂರ್ಣದಯವನೆಗರೆಯೊ
ಪೂರ್ಣ ಕೃಪೆ ಚಂದ್ರಿಕೆ ಈಗಲೇ | ಬೀರೆನ್ನ ಮೇಲೆ ೨
ಪೂರ್ಣಚಂದ್ರನ ವಂಶ ಪಾವನವಗೈಯಲು
ಪೂರ್ಣ ಯದುಕುಲದಿ ಜನಿಸಿ
ಪೂರ್ಣ ಭಕ್ತರು ಆದ ಆ ನರಾದಿಗಳನ್ನು
ಪೂರ್ಣ ಯುದ್ಧದಲಿ ಗೆಲಿಸಿ
ಪೂರ್ಣ ರಾಜ್ಯವನಿತ್ತೆ ಪ್ರಾಣಿ ಹೃದ್ಗುಹವಾಸಿ
ಪೂರ್ಣ ಶ್ರೀ ವೆಂಕಟೇಶ | ಶ್ರೀ ಶ್ರೀನಿವಾಸ ೩
ಪೂರ್ಣತತ್ವಗಳಿಗೆ ಪೂರ್ಣ ಶಕ್ತಿಯನಿತ್ತು
ಪೂರ್ಣಗೊಳಿಸಿದೆ ಸೃಷ್ಟಿಯ
ಪೂರ್ಣತತ್ವಾಧಿಪತಿ ಪ್ರಾಣದೇವನ ಪ್ರಿಯ
ಪೂರ್ಣ ಭಕ್ತರ ರಕ್ಷಕ
ಪೂರ್ಣ ಮನೋರಥದಾತ ಜೀವನಂತರ ವ್ಯಾಪ್ತ
ಜ್ಞಾನ ವಿಜ್ಞಾನದಾತ | ಸುಜನರಿಗೆ ಪ್ರೀತ ೪
ಪೂರ್ಣ ಭೂಮಂಡಲಕೆ ಪೂರ್ಣ ಪ್ರಭು ನೀನೆಂದು
ಪೂರ್ಣಬೋಧರು ನುಡಿವರೊ
ಪೂರ್ಣ ದೇವತೆಗಳು ಪೂರ್ಣ ನಿನ್ನನು ಭಜಿಸಿ
ಪೂರ್ಣ ಪದ ಪಡೆದಿರುವರೊ
ಪೂರ್ಣ ಹರಿ ಗೋಪಾಲಕೃಷ್ಣವಿಠ್ಠಲ ಎನ್ನ
ಪೂರ್ಣ ಇಚ್ಛೆಯನೆ ಸಲಿಸೊ | ನೀ ಮನದಿ ನೆಲಸೊ ೫

 

೨೫೮ *
ಪೊರೆಯೊ ಈ ವೇಳೆಯಲಿ ಕರಿಗಿರಿನಿಲಯ ಶ್ರೀ
ನರಹರಿಯೆ ಸುಕ್ಷೇಮವ ಪ.
ಪರಮಪ್ರಿಯರಿಗೆ ಇತ್ತು ವರ ಸೇವೆ ಕೈಕೊಂಡು
ನಿರುತದಿ ಪಾಲಿಸೆನ್ನ ಘನ್ನ ಅ.ಪ.
ದಾಸ ಗುರುಕುಲತಿಲಕರಿವರಿಗೆ ನೀನೀಗ
ಘಾಸಿಗೊಳಿಸುವುದುಚಿತವೆ
ದೋಷದೂರನೆ ಎಮ್ಮ ಮನವನರಿತವ ಜನರ
ದೂಷಣೆಗೆ ಗುರಿ ಮಾಳ್ಪರೆ
ಘಾಸಿಪಡುತಿಹರ ಆಯಾಸಪಡಿಸುವುದು ಬಹು
ಲೇಸಲ್ಲ ನಿನಗೆ ಥರವೆ
ಶೇಷಶಯನನೆ ಎಮ್ಮ ಮಾತು ಲಾಲಿಸಿ ಈಗ
ಪೋಷಿಸಲಿ ಬೇಕೊ ಸ್ವಾಮಿ ಪ್ರೇಮಿ ೧
ಕಲ್ಪತರುವಂತಿಹರು ಶಿಷ್ಯವೃಂದಕೆ ಇವರು
ಇಪ್ಪರೋ ಚಂದ ಜಗದಿ
ತಪ್ಪದಲೆ ಆಯುರಾರೊಗ್ಯ ಕೊಟ್ಟು ನೀ
ಸರ್ಪಶಯನನೆ ರಕ್ಷಿಸೊ
ಒಪ್ಪದಿಂದಲಿ ಎಮ್ಮ ಸೇವೆ ಸಫಲವಗೊಳಿಸಿ
ಅಪ್ಪ ಸಂತಸವಪಡಿಸೊ
ಬಪ್ಪ ಪೋಪ ಕೀರ್ತಿ ಅಪಕೀರ್ತಿ ನಿನ್ನಡಿಗೆ
ಪುಷ್ಪದಂತರ್ಪಿಸುವೆನೊ ನೃಹರಿ ೨
ಮನವಚನ ಕಾಯದಲಿ ಅನ್ಯ ಬಗೆಯದೆ
ಎಮ್ಮ ಗುರುಗಳನು ಸೇವಿಸುವೆವೊ
ವನಜಾಕ್ಷ ಲಕುಮಿಪತಿ ಎನ್ನ ಮನ ಪ್ರೇರಕನೆ
ಚಿನುಮಯನೆ ನೀ ಸಾಕ್ಷಿಯೋ
ಮನುಜರಿದನೇನ ಬಲ್ಲರು ಕೇಳು ತಂತಮ್ಮ
ಮನ ಬಂದ ತೆರ ನುಡಿವರೊ
ಎನಗದರ ಗೊಡವೇನು ನೀನಿರಲು ಭಯವೇನು
ಘನ ಮಹಿಮ ಪೊರೆಯೊ ಬೇಗ ಸ್ವಾಮಿ ೩
ಪಂಚಪ್ರಾಣರು ಇವರು ವಂಚನಿಲ್ಲದೆ ಪೇಳ್ವೆ
ಮುಂಚೆ ನೀ ಕಾಪಾಡೆಲೊ
ಸಂಚಿತಾಗಾಮಿ ಪ್ರಾರಬ್ಧ ದುಷ್ಕರ್ಮಗಳು
ಮಿಂಚಿನಂದದಿ ಮಾಡೆಲೊ
ಸಂಚಿತಾಗಾಮಿಗಳ ಶಿಷ್ಯರಿಗೆ ಕಳೆವರಿಗೆ
ಕೊಂಚ ಬಾಧೆಯ ಕೊಡದೆಲೊ
ಸಂಚಿತಿತ ಪ್ರದನೆ ಎನ್ನ ಮೊರೆ ಲಾಲಿಸು
ಅಚಂಚಲದ ಕ್ಷೇಮವೀಯೋ ದೇವ ೪
ಕಾಪಾಡುವ ಕರ್ತ ಈ ಪರಿ ಪ್ರಾರ್ಥಿಸುವೆ
ಶ್ರೀ ಪತಿಯೆ ದಯವ ಮಾಡೊ
ನಾ ಪೇಳ್ವುದಿನ್ನೇನು ನಿನ್ನ ಸೇವಾದಿಗಳು
ಕೃಪೆಯಿಂದ ಗುರುಗಳಿಂದ
ಪಾಪ ಪರಿಹರನೆ ನೀ ಕೈಕೊಂಡು ಕೀರ್ತಿಯನು
ಈ ಪೃಥ್ವಿಯಲ್ಲಿ ನೆಲಸೊ
ಗೋಪಾಲಕೃಷ್ಣವಿಠ್ಠಲನೆ ನೀ ಕಾಪಾಡು
ಕಾಪಾಡು ಜಗದ್ರಕ್ಷಕ ಹರಿಯೆ ೫

 

೨೩೬
ಉಗಾಭೋಗ
ಪ್ರಪಂಚದೊಳಗಿದ್ದು ಪ್ರಪಂಚವನೆ ಮೆದ್ದು
ಪ್ರಪಂಚವನೆ ಗೆದ್ದು ಪ್ರಪಂಚವನೆ ಒದ್ದು
ಪ್ರಪಂಚಾತೀತ ನಮ್ಮ ಗೋಪಾಲಕೃಷ್ಣವಿಠ್ಠಲನ
ಪ್ರಪಂಚದೊಳು ಸುಖವ ಪೊಂದುವನೆ ಧನ್ಯ