Categories
ರಚನೆಗಳು

ಅಂಬಾಬಾಯಿ

ಶ್ರೀ ಹರಿ

ಅಕ್ಕೋರಂಗ ನೋಡೆ ಇಕ್ಕೋ ಕೃಷ್ಣನೋಡೆ
ತಕ್ಕಥೈ ಎಂದೀಗೆ ಸಿಕ್ಕಿದ ನಮ್ಮ ಕೈಗೆ ಪ.
ಕುರುಳು ಕುಂತಳದಿಂದ ಕಸ್ತುರಿ ತಿಲುಕ ಚಂದ
ಪರಮ ಪುರುಷ ಬಂದ ನೀಲ ವರ್ಣ ನಂದ ೧
ಮುಗುಳು ನಗೆಯ ಕಾಂತಿ ಚಂದ್ರನುದಯ ಭ್ರಾಂತಿ
ಸೊಗಸು ನೋಡಲೆ ಕಾಂತೆ ಸೆಳೆವ ಮನವ ಶಾಂತೆ ೨
ಬಾರೋ ಬಾ ಗೋಪಾಲಕೃಷ್ಣವಿಠ್ಠಲ ಜಾಲ
ತೋರುವ ನೋಡೆ ಬಾಲೆ ಸೇರೋಣ ಬಾ ಸುಶೀಲೆ ೩

 

ವಿಶೇಷ ಸಂದರ್ಭದ ಹಾಡುಗಳು
೨೫೦ *
ಅಡಗಿದೇತಕೊ ರಜತ ಕವಚದೊಳಗೆ
ಅಡಿ ಭಕ್ತರಾಡುವೋ ಬಿಡಿ ನುಡಿಗೆ ಪ.
ಗೇಣು ಪ್ರಮಾಣದಾ ಪ್ರಾಣರಾಯನೆ ಛಿದ್ರ
ಕಾಣುತಿರೆ ಶಿಲೆರೂಪದಲ್ಲಿ ನಲಿದು
ಆನಂದದಿಂ ನುಡಿದ ಆನತರ ವಚನಕ್ಕೆ
ನೀ ನಾಚಿ ಜಗಕಿನ್ನು ಕಾಣಬಾರದು ಎಂದು ೧
ದುರುಳ ಸೀತೆಯ ಕದ್ದು ತೆರಳುತಿರೆ ನಿಮ್ಮ ಕಂ
ಡರವಿಂದನಯನೆ ಆಭರಣ ಕಟ್ಟೊಗೆಯೇ
ಸಿರಿಚರಣ ಸ್ಪರ್ಶವೆನಗಿರಲೆಂದು ಪೈಜಣವ
ಮುರಿಸಿ ಕವಚವ ಮಾಡಿ ಮೆರೆವ ವೈಖರಿಯೇ ೨
ರಜತಗಿರಿ ವಾಸ ರಣದಲ್ಲಿ ಬ್ರಹ್ಮಾಸ್ತ್ರವನು
ಭುಜಬಲದಿ ಬಿಡಲು ಲೆಕ್ಕಿಸದೆ ಮೂದಲಿಸೀ
ನಿಜವಾಸ ಸ್ಥಳವಿಲ್ಲದಲೆಯಲೆಂದೆನ್ನುತಲಿ
ರಜತಗಿರಿ ಕವಚ ಮಾಡಿರುವ ವೈಭವವೋ ೩
ಕುನ್ನಿ ಮತಗಳ ಮುರಿದು ಘನ್ನ ಶಾಸ್ತ್ರವನೊರೆದು
ಚನ್ನಕೃಷ್ಣನ ರಜತ ಪೀಠದಲಿ ನಿಲಿಸೀ
ಎನ್ನೊಡೆಯನಾಸನವು ಎನಗೆ ಭೂಷಣವೆಂದು
ಚನ್ನಾಗಿ ಮೈಗೆ ಸುತ್ತಿರುವ ವಿಸ್ರ‍ಮತಿಯೋ ೪
ನಿನ್ನಲ್ಲಿ ವಡಕಿರಲು ಪೂಜಿಸುವ ಜ್ಞಾನಿಗಳಿ
ಗಿನ್ನೊಂದು ನುಡಿ ಅಜ್ಞರಿಂ ಬೇಡವೆಂದೂ
ಚನ್ನಾಗಿ ಹಿಂದೆ ಮುಂದೆಡಬಲದಿ ಮೇಲ್ ಕೆಳಗೆ
ಇನ್ನು ತೋರದ ತೆರದಿ ಮರೆಮಾಡಿಕೊಂಡೂ೫
ವಡೆಯ ಈರೇಳು ಲೋಕದಿ ವ್ಯಾಪ್ತನಾಗಿ ನೀ
ನುಡಿದು ಶ್ರೀಮಂತ್ರ ಜೀವರ ಕಾಯೊ ಎನಲೂ
ವಡೆಯಗುತ್ತರ ಪೇಳಲಾರದಲೆ ಬ್ಯಾಸತ್ತು
ಅಡಿಗಿಲ್ಲಿ ಮೈದೋರದಿರುವ ಪರಿ ಏನೋ ೬
ಕಂಡವರು ಬಿಡುವರೇ ಆಡದಲೆ ನಿನ ಚರಿತೆ
ಚಂಡ ವಿಕ್ರಮನಹುದೊ ಮುನಿಯದಲೆ ಸಲಹೋ
ಪಾಂಡವರ ಪಾಲ ಗೋಪಾಲಕೃಷ್ಣವಿಠ್ಠಲನತೊಂಡ ಶ್ರೀ ಪ್ರದ್ಯುಮ್ನತೀರ್ಥ ಕರ ಪೂಜ್ಯ ೭

 

ಆತ್ಮಶೋಧನೆ
೨೧೨
ಅಭಯ ಪ್ರಧಾನ ಮಾಡೂ ಇಭಗಿರಿವಾಸ ಪ.
ಮಂಗಳ ಮಹಿಮನೇ ರಂಗನಾಥನೆ ಕೃಷ್ಣಾ
ತುಂಗ ವಿಕ್ರಮ ನರಸಿಂಗ ಲಕ್ಷ್ಮೀಕಾಂತ ೧
ಮೃತ್ಯು ಬೆನ್ಹತ್ತಿರೆ ಕತ್ತರಿಸುವ ಮಹ
ಶಕ್ತ ನೀನಿರುತಿರೆ ಮತ್ತಾರ ಬೇಡಲಿ ೨
ನಿನ್ನ ಕಿಂಕರಳಾಗಿ ನಿನ್ನ ಸೇವೆಯ ಮಾಳ್ಪ
ಉನ್ನಂತ ಅಭಿಲಾಷೆಯನ್ನು ಸಲ್ಲಿಸು ದೇವ ೩
ಹಿಂದಿನ ಎಡರುಗಳೊಂದೊಂದರಲಿ ಕಾಯ್ದೆ
ಇಂದು ಮುಂದೂ ಕಾಯೋ ಮಂದಹಾಸನೆ ಸ್ವಾಮಿ ೪
ಹರಿಗುರು ಕಾರ್ಯಕಲ್ಲವೆ ಎನ್ನ ಈ ದೇಹಾ
ಸಿರಿವರ ಗೋಪಾಲಕೃಷ್ಣವಿಠ್ಠಲ ಸ್ವಾಮಿ ೫

 

ತತ್ವನಿರೂಪಣೆ
೨೩೧
ಆಟವಾಡುವ ಕೂಸು ನಾನು | ಕೃಷ್ಣ
ಕಾಟಬಡಿಸುವೆ ನಿನ್ನ ಸಾಧನವ ನೀಡೊ ಪ.
ಗುರುಗಳು ತಂದು ನಿನಗೊಪ್ಪಿಸಿದರೆಲೊ ದೇವ
ಸರಿಯ ಸಖನೆಂದು ಅನುಗಾಲವೂ
ಸಿರಿಯರಸ ಕೇಳಿನ್ನು ಹಿರಿಯನೆ ನೀನಹುದೊ
ಕಿರಿಯತನದಿಂದ ನಾ ಆಟವಾಡುವೆನೊ ೧
ಹೃದಯವೆಂಬೋ ಪುಟ್ಟ ಮನೆಯ ಕಟ್ಟಿ ಅಲ್ಲಿ
ಮುದದಿಂದ ಅಷ್ಟದಳ ಪದುಮ ರಚಿಸಿ
ಒದಗಿ ಬರುತಿಹ ದುಷ್ಟ ಅರಿಗಳನೆ ನುಗ್ಗೊತ್ತಿ
ಪದುಮನಾಭನೆ ನಿನ್ನ ಜೊತೆಯವರೊಡನೆ೨
ಡಿಂಬದೊಳಗಿರುತಿಹ ಅಂಬರ ಮಧ್ಯದಲಿ
ಬಿಂಬವೆನ್ನುವ ದಿವ್ಯ ಬೊಂಬೆಯನೆ ಇಟ್ಟು
ಸಂಭ್ರಮದಿ ಶೃಂಗರಿಸಿ ಹಾಡಿ ಪಾಡಿ ಕುಣಿದು
ಆಂಬ್ರಣಿನುತ ನಿನ್ನ ನೋಡಿ ದಣಿಯುವೆನೊ ೩
ಪುಂಡರೀಕಾಕ್ಷ ನಿನ್ನ ಕೊಂಡಾಡುವೊ ಬಹಳ
ತಿಂಡಿಯನೆ ನೀಡೆನಗೆ ಅನುಗಾಲವೂ
ಭಂಡು ಮಾಡುವರೊ ಬರಿಕೈಲಿದ್ದರೆ ಸಖರು
ಕಂಡು ಕಂಡೂ ನೀನು ಸಮ್ಮನಿರಬೇಡೊ ೪
ಎಷ್ಟು ಜನ ಸ್ನೇಹಿತರೊ ಈ ಮನೆಯೊಳೆಲೆ ದೇವ
ಪುಟ್ಟನಾಗಿರುವೆ ನಾನೆಲ್ಲರಿಗೆ ಇನ್ನು
ಕೊಟ್ಟರೆ ಸಲಕರಣೆ ಆಟವಾಡುವೆ ಅಳದೆ
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆ ೫

 

೨೩೨
ಉಗಾಭೋಗ
ಆತ್ಮ ಪರಮಾತ್ಮ ತತ್ವ ನೀ ತಿಳಿಯೋ ಪ್ರಾಣಿ
ಈ ತನುವಿನೊಳ್ ದ್ವಯ ಪಕ್ಷಿಗಳಿಪ್ಪುದು
ನೀತಿಯರಿತು ಭಜಿಸೆ ಪ್ರೀತಿಯಿಂ ಸಲಹುವ
ವಾತ ಜನಕ ನಮ್ಮ ಗೋಪಾಲಕೃಷ್ಣವಿಠಲ

 

ಈ ಕೀರ್ತನೆಗಳು
ಹರಿದಾಸರ ಸ್ತುತಿ
೧೬೩
ಆನಂದ ಸಾಗರದ ಸೌಖ್ಯವೇಂ ನುತಿಪೆ ಪ.
ಆನಂದ ಶ್ರೀ ಗುರುಗಳತಿ ಕೃಪೆಯೊಳಿತ್ತ ಅ.ಪ.
ಗಾನಲೋಲನ ಮಹಿಮೆ ಜ್ಞಾನ ಬೋಧನೆಯಿಂದ
ನಾನಾಪ್ರಕಾರದಿಂ ವರ್ಣಿಸುತಲಿ
ಮಾನಿನಿಯ ಮನದ ಶೋಕಾಗ್ನಿ ಶಾಂತಿಯಗೈಸಿ
ಮಾನಸದಿ ನಲಿವಂತೆ ಮಮತೆಯೊಳು ಪೊರೆದ ೧
ರಾಮಚಂದ್ರನ ಮಹಿಮೆ ನೇಮದಿಂದಲಿ ಪಠಿಸೆ
ಸೋಮಕಳೆ ಪೌರ್ಣಿಮ ಸ್ಥಿರವಾರದಿ
ರಾಮಪಟ್ಟಾಭಿಷೇಕದ ಮಹೋತ್ಸವ ನಡೆಸೆ
ಕಾಮಧೇನುವು ಎನುತ ಕರೆದು ಮುದವಿತ್ತು ೨
ಕಲುಷ ಲಿಂಗದ ಕಳೆಯ ಕಳೆದು ಚಂದ್ರನೊಳಿಟ್ಟು ಅ-
ನಿಲ ಭಾರತಿಯರ ವ್ಯಾಪಾರ ತಿಳಿಸಿ
ಜಲಜಾಕ್ಷ ಗೋಪಾಲಕೃಷ್ಣವಿಠ್ಠಲ ಮನದಿ
ನೆಲಸಿ ಮುಕ್ತಿಯ ಕೊಡುವ ಮಾರ್ಗ ತೋರಿದರು ೩

 

೧೬೪
ಆನಂದರತ್ನ ಪರಮಪ್ರಿಯರೆಂಬೊ ಬಿರುದುಳ್ಳ
ಶ್ರೀ ಗುರುವರರಾಯ ಪ.
ಏನೆಂಬೆ ನಾ ನಿಮ್ಮ ಕರುಣಕ್ಕೆ ಎಣೆಗಾಣೆ ಶ್ರೀ ಗುರುವರರಾಯ ಅ.ಪ.
ಭೂಸುರ ಜನ್ಮದಲಿ ದಾಸತ್ವದಿಂದ ಮೆರೆವೊ |
ಶ್ರೀ ಗುರುವರರಾಯ
ಸಾಸಿರ ಫಣಿ ಪನ್ನಗಶಯನನ ಭಜಿಸುವೊ |
ಶ್ರೀ ಗುರುವರರಾಯ ೧
ಶ್ರೀ ತಂದೆ ಮುದ್ದುಮೋಹನವಿಠಲದಾಸ | ಶ್ರೀ ಗುರುವರರಾಯ
ಪ್ರೀತಿಯಿಂದ ಹರಿಯ ಅಂಕಿತ ಕೊಡುವಂಥ |
ಶ್ರೀ ಗುರುವರರಾಯ ೨
ಅಜ್ಞಾನಿಯಾದೆನಗೆ ಸುಜ್ಞಾನವಿತ್ತು ಕಾಯ್ದೆ |
ಶ್ರೀ ಗುರುವರರಾಯ
ವಿಘ್ನಗಳನೆ ತರಿದು ಪ್ರಾಜ್ಞಾ ಮೂರುತಿಯ ತೋರೈ |
ಶ್ರೀ ಗುರುವರರಾಯ ೩
ಮಂದಜ್ಞರಿಗೆ ಜ್ಞಾನ ತಂದಿತ್ತು ರಕ್ಷಿಪ | ಶ್ರೀ ಗುರುವರರಾಯ
ಬಂದೆನು ನಿಮ್ಮ ಪಾದದ್ವಂದ್ವವೇ ಗತಿಯೆಂದು |
ಶ್ರೀ ಗುರುವರರಾಯ ೪
ಅರಿಯೆನು ಅನ್ಯರ ಪರಿಹರಿಸಿ ಭವ | ಶ್ರೀ ಗುರುವರರಾಯ
ತರಳನ ಕಾಯ್ದ ನರಹರಿಯ ಭಜಿಸುವಂಥ |
ಶ್ರೀ ಗುರುವರರಾಯ ೫
ಅಪರಾಧವೆಣಿಸದೆ ಸುಪಥಮಾರ್ಗವ ತೋರೈ |
ಶ್ರೀ ಗುರುವರರಾಯ
ಗುಪಿತ ಮಹಿಮ ನಿನ್ನ ಜಗದೊಳರಿವರ್ಯಾರು |
ಶ್ರೀ ಗುರುವರರಾಯ ೬
ಅರಿಯಬಲ್ಲೆನೆ ನಿಮ್ಮ ಅಗಣಿತ ಮಹಿಮೆಯ |
ಶ್ರೀ ಗುರುವರರಾಯ
ಸುರನರರಿಂದಲಿ ವಂದನೆಗೊಂಬುವ | ಶ್ರೀ ಗುರುವರರಾಯ ೭
ಅಂತರಂಗದಿ ಆನಂದವನಿತ್ತ ಮಹಿಮ | ಶ್ರೀ ಗುರುವರರಾಯ
ಶಾಂತಮೂರುತಿ ನಿಮ್ಮ ಶರಣೆಂದು ಭಜಿಸುವೆ |
ಶ್ರೀ ಗುರುವರರಾಯ ೮
ನೀತ ಗುರುವೆ ನಿಮ್ಮ ನಂಬಿದೆ ಸಲಹಯ್ಯ |
ಶ್ರೀ ಗುರುವರರಾಯ
ಖ್ಯಾತ ಶ್ರೀ ಗೋಪಾಲಕೃಷ್ಣವಿಠಲ ಪ್ರಿಯ |
ಶ್ರೀ ಗುರುವರರಾಯ ೯

 

ಆನಂದ ನಿಲಯರು

ಆನಂದಾದ್ರಿ ಕ್ಷೇತ್ರದಲ್ಲಿ
ಆನಂದವ ಕಂಡೆ ಪ.
ಆನಂದ ಕಂದನ ಗುಣಗಳ
ಆನಂದನಿಲಯರು ಪೇಳಲು ಅ.ಪ.
ಆನಂದವಾಯಿತು ಮನಕೆ
ಆನಂದಗೋಕುಲದೊಡೆಯನು
ಆನಂದತೀರ್ಥರ ಕರದಲಿ
ಆನಂದ ಸೇವೆಯ ಕೊಳುತಿರೆ ೧
ಆನಂದಾದ್ರಿ ಶಿಖರದಲ್ಲಿ
ಸ್ವಾನಂದ ಸೂಚನೆ ತೋರಲು
ಏನೆಂದು ಬಣ್ಣಿಸಲಿನ್ನು
ಸ್ವಾನಂದರು ಶ್ರೀ ಗುರು ದಯದಿ ೨
ಆನೆಂದರೆ ಶಿಕ್ಷಿಸುವನು ಹರಿ
ನೀನೆಂದರೆ ರಕ್ಷಿಸುವನು ದೊರಿ
ಆನಂದವನ ತರುವಂತೆ
ಆನಂದಭೀಷ್ಟವ ಕೊಡುವ ೩
ಆನಂದಜ್ಞಾನಪೂರ್ಣ
ಆನಂದ ನಿತ್ಯರೂಪ
ಆನಂದ ಗುಣಪೂರ್ಣ ನಿ-
ತ್ಯಾನಂದ ಭಕ್ತರಿಗೀವ೪
ಗೋಪಾಲಕೃಷ್ಣವಿಠಲ
ನೀ ಪರಮದೈವವೆನಲು
ತಾಪವ ಭವಹರಿಸಿ
ಕಾಪಾಡೊ ಹರಿಯ ಲೀಲೆ ೫

 

(ನು. ೩) ಮುಕುತಿ ನಾಲ್ಕರಲಿ
ಮಹಾಲಕ್ಷ್ಮಿ
೯೨
ಇಂದಿರೆ ಮುಕುಂದ ಹೃನ್ಮಂದಿರೆ ಪ.
ಇಂದಿರೆ ಲೋಕವಿಖ್ಯಾತೆ | ಶ್ರೀ-
ನಂದನ ಕಂದನೊಳು ಪ್ರೀತೆ | ಆಹ
ಬಂದೆನೆ ಭವದೊಳು ನಿಂದೆನೆ ನಿನ ಪದ
ದ್ವಂದ ಸನ್ನಿಧಿಯಲಿ ಇಂದಿರೇಶನ ತೋರೆ ಅ.ಪ.
ತ್ರಿಗುಣಾಭಿಮಾನಿಯೆ ದೇವಿ | ನಿನ್ನ
ಜಗದೊಳು ನುತಿಪರ ಕಾಯ್ವಿ | ನಿತ್ಯ
ನಗಧರನನು ಸೇವಿಸುವಿ | ಲಯ
ಜಗ ಸೃಷ್ಟಿ ಸ್ಥಿತಿಯಲ್ಲಿ ದೇವಿ | ಆಹ
ಬಗೆ ಬಗೆ ರೂಪದಿ ಸುಗುಣವಂತೆಯಾಗಿ
ನಿಗಮಾದಿಗಳಿಂದ ನಗಧರನನು ಸ್ತುತಿಪೆ ೧
ಸಕಲಾಭರಣ ರೂಪದಿಂದ | ಹರಿಯ
ಅಕಳಂಕ ಭಕ್ತಿಗಳಿಂದ | ಪಂಚ
ಪ್ರಕೃತ್ಯಾದಿ ರೂಪಗಳಿಂದ | ನಾನಾ
ಸಕಲ ಸಾಮಗ್ರಿಗಳಿಂದ | ಆಹಾ
ಮುಕುತಿ ನಾಲ್ಕರಲ್ಲಿ ಭಕುತಿಯಿಂ ಸೇವಿಸುತ
ಮುಕುತರಿಂದೋಲಗ ಅಕಳಂಕದಿಂ ಕೊಂಬೆ ೨
ಪಾದದಿ ಪಿಲ್ಯೆ ಪಾಡಗವೊ | ಮೋದ
ವಾದ ನೆರೆಗೆ ವೈಭವವೂ | ಗಾಂಭೀ-
ರ್ಯದ ವಡ್ಯಾಣ ನಡುವು | ಮೇಲೆ ಭಾ-
ರದ ಕುಚದ್ವಯ ಬಾಹು | ಆಹ
ಶ್ರೀದನ ಪೆಗಲೊಳು ಮೋದದಿಂದೆಸೆವ ಕೈ
ಆದರದಲಿ ನಿನ್ನ ಪಾದಸೇವೆಯ ನೀಡೆ ೩
ಕರದಲ್ಲಿ ಕಡಗ ಕಂಕಣ | ಬೆರಳ
ವರ ವಜ್ರದುಂಗುರಾ ಭರಣ | ನಾಗ-
ಮುರಿಗೆ ಸರಿಗೆ ಕಂಠಾಭರಣ | ಬಲ
ಕರದಲ್ಲಿ ಪದ್ಮ ಭಕ್ತರನ | ಆಹ
ವರದೃಷ್ಟಿಯಿಂದಲಿ ನಿರುತ ಈಕ್ಷಿಸುತ
ಪರಿಪರಿ ಬಗೆಯಿಂದ ಪೊರೆವೊ ಸುಂದರಕಾಯೆ೪
ಗೋಪಾಲಕೃಷ್ಣವಿಠ್ಠಲನ | ನಿಜ
ವ್ಯಾಪಾರ ಕೊಡೆ ಎನಗೆ ಮನನ | ಪೂರ್ಣ
ರೂಪಳೆ ಮುಖದ ಚಲುವಿನ | ನಿನ್ನ
ರೂಪವ ತೋರಿಸೆ ಮುನ್ನ | ಆಹ
ಈ ಪಾಮರ ಮನದ ತಾಪ ಹರಿಸಿ ಲಕುಮಿ
ಶ್ರೀಪತಿ ಪದದಲ್ಲಿ ಕಾಪಾಡು ನಿತ್ಯದಿ ೫

 

೧೬೫
ಇಂದಿರೇಶನ ಪದದ್ವಂದ್ವಕಮಲ ಭಜಿಪ
ಶ್ರೀ ಗುರುವರ ಭೂಪ ಪ.
ಬಂದೆನು ನಿಮ್ಮ ಪದ ಸಂದರುಶನಕೀಗ
ನೀಗಿರಿ ಭವರೋಗ ಅ.ಪ.
ಬಂದವರಯೋಗ್ಯತೆ ಅರಿತಂಕಿತವೀವ | ಕರುಣಾಳುವೆ ದೇವ
ನೊಂದೆನೀಗ ಈ ಅಜ್ಞಭವದಿ ಬಿದ್ದು | ಎಂದಿಗೆ ನಾ ಗೆದ್ದು
ಇಂದಿರೇಶನ ಹೃತ್ಕಮಲದಲಿ ಕಾಂಬೆ | ಗುರುವೆ ತೋರೆಂಬೆ
ಬಂದ ಬಂದ ಕಷ್ಟ ಹಿಂದು ಮಾಡಿ ಪೊರೆದು |
ಕೃಪೆಗೈಯ್ಯಲಿ ಬೇಕಿಂದು ೧
ಮುಖ ಕಮಲದಿ ಹೊರಡುವ ವಾಕ್ಸರಣಿಗಳು |
ಗಂಗಾ ಪ್ರವಾಹಂಗಳು
ಅಕಳಂಕದ ತತ್ವಾರ್ಥದಿ ನಾ ಮುಳುಗಿ | ದುರಿತದ ಭವನೀಗಿ
ಸುಖ ಸಾರೂಪ್ಯದ ಮುಕುತಿ ಮಾರ್ಗ ಕಂಡೆ |
ಇನ್ನೀ ಭವ ತುಂಡೆ
ಭಕುತಿ ಭಾಗ್ಯವ ನಿತ್ಯದಿ ಕರುಣಿಪುದು | ಸುಜ್ಞಾನವ ನೀಡುವುದು ೨
ಇಳೆಯೊಳಿಲ್ಲ ಈ ಚರ್ಯೆ ತೋರುವವರು | ಉದ್ಧರಿಪರಿನ್ಯಾರು
ಒಳಹೊರಗೊಂದಾಗುವ ಪರಿ ಕರುಣಿಪುದು | ನ್ಯಾಯವೆ ನೂಕುವುದು
ಪೊಳಲೊಡೆಯನ ಪರಿಪರಿ ಮಹಿಮಾದಿಗಳ | ರೂಪ ಜಾಲಗಳ
ತಿಳಿದಾನಂದಪಡುವ ಗುರುವರೇಣ್ಯ | ಪೊರೆಯ ಬೇಕೀಗೆನ್ನ ೩
ಕರಿಗಿರಿ ನರಹರಿ ಪದಕಮಲಗಳನ್ನು | ಹೃದ್ವನಜದೊಳಿನ್ನು
ಪರಿಪರಿ ಪೂಜಿಸಿ ಪರಮಾದರದಲ್ಲಿ | ಸಂಕರ್ಷಣನಲ್ಲಿ
ಇರಿಸಿಹ ಮನವನು ನರರಿಗೆ ತೋರದಲೆ | ಚರಿಸುವ ಈ ಲೀಲೆ
ಅರಿತು ಪೇಳೆ ಈ ಪಾಮರಳಿಗೆ ಅಳವೇ | ಆನಂದದಲಿರುವೆ ೪
ತಂದೆ ಮುದ್ದು ಮೋಹನವಿಠಲ ದೇವ | ಹೃದ್ವನಜದಲಿ ಕಾವ
ಸುಂದರ ಗೋಪಾಲಕೃಷ್ಣವಿಠ್ಠಲ ನಿಮ್ಮೊಳು |
ರಮಿಸುವ ನಿತ್ಯದೊಳು
ಮಂದಬುದ್ಧಿಗೆ ಇಂತು ಮತಿಯನಿತ್ತು | ಸಲಹಲಿ ಬೇಕಿಂತು
ತಂದೆ ಧರೆಯೊಳು ಮತ್ತೊಬ್ಬರ ಕಾಣೆ | ಕಾಪಾಡಬೇಕೆನ್ನಾಣೆ ೫

 

೨೫೨ *
ಇಂದು ಕಾಯಲಿಬೇಕೊ ಸುಂದರ ಧನ್ವಂತ್ರಿ
ಇಂದಿರೆರಮಣ ಆನಂದ ಕೃಷ್ಣ ಪ.
ತಂದೆ ಮುದ್ದುಮೋಹನ ಗುರುಗಳ ನೀನು
ಚಂದದಿಂ ಪಾಲಿಸಿ ತಂದುಕೊ ಕೀರುತಿಅ.ಪ.
ಬಂದಿತೊ ನಿನಗೊಂದು ಕುಂದು ಇದರಿಂದ
ನಂದಕಂದನೆ ಕೃಷ್ಣ ಉಡುಪಿ ನಿಲಯ
ಮಂದರೋದ್ಧರ ಕೃಷ್ಣ ಬಂದು ಈಗ ನೀ ಕಾಯೊ
ಕಂದರ್ಪಜನಕನೆ ಇಂದು ಬೇಡುವೆ ನಿನ್ನ ೧
ಭವರೋಗ ಹರನಿಗೆ ಇದೊಂದಸಾಧ್ಯವೆ
ತವಕದಿಂದಲಿ ಆಯುವಿತ್ತು ಕಾಯೊ
ಪವನನಂತರ್ಯಾಮಿ ಭವಪಾಶಬದ್ಧರ
ತವಕದಿಂದಲಿ ಕಾಯ್ವ ಗುರುಗಳಲ್ಲವೆ ಇವರು ೨
ನಿನ್ನ ಆಜ್ಞೆಯಿಂದ ಭಕ್ತರನುದ್ಧರಿಸ
ಲಿನ್ನು ಧರೆಗೆ ಬಂದವರಲ್ಲವೆ
ಮನ್ನಿಸಿ ನೀನಾಯುರಾರೋಗ್ಯ ಭಾಗ್ಯವಿತ್ತು
ಚನ್ನಾಗಿ ಕಾಯಬೇಕಿನ್ನು ಎನ್ನಯ ದೊರೆಯೆ ೩
ಕಷ್ಟ ಬಿಡಿಸುವರಿಗೆ ಕಷ್ಟ ಕೊಡುವರೆ ನೀನು
ಕಷ್ಟ ಪರಿಹಾರಕನೆಂದೆನಿಸಿ
ಬಿಟ್ಟು ಬಿಡು ಈ ಬಿಂಕ ಥಟ್ಟನೆ ಕಾಪಾಡೊ
ಶ್ರೇಷ್ಠ ಗುರುಗಳ ಎಮ್ಮ ಕಷ್ಟ ಬಿಡಿಸುವರ ೪
ಅನ್ನ ಪಾನವಿಲ್ಲದಿನ್ನು ಬಳಲಿಸುವರೆ
ಚನ್ನವಾಯಿತು ಇದು ನಿನ್ನ ಘನತೆ
ಸನ್ನುತ ಮಹಿಮ ಶ್ರೀ ಗೋಪಾಲಕೃಷ್ಣವಿಠ್ಠಲ
ಇನ್ನು ಕಾಯದಿರೆ ಎನ್ನಾಣೆ ಬಿಡೆ ಕಂಡ್ಯಾ ೫

 

೧೬೬
ಇಂದೇಕೆ ಈ ಪರಿ ನಿರ್ದಯಗೈದಿರಿ
ತಂದೆ ಶ್ರೀ ಗುರುವೆ ಪೇಳಿ ಪ.
ನೊಂದೆನು ಈ ದಿನ ನಿಮ್ಮ ವಾರ್ತೆ ತಿಳಿಯದೆ
ಕುಂದೇನು ತೊರಿತೋ ಎನ್ನಿಂದ ಕ್ಷಮಿಸಿರಿ ಅ.ಪ.
ಪ್ರತಿದಿನದಲಿ ನಿಮ್ಮ ಹಿತವಾರ್ತೆ ಕೇಳುತ
ಅತಿಶಯಾನಂದವ ಪಡುತಲಿದ್ದೆ
ಮತಿವಂತರೇ ಇಂದು ಅತಿಶಯದ ನಿಮ್ಮ
ಹಿತವಾರ್ತೆ ತಿಳಿಯದೆ ಮತಿ ಹೀನಳಾಗಿಹೆ ೧
ಉಲ್ಲಾಸಗೊಳಿಸುವ ಪುಲ್ಲನಾಭವ ಮಹಿಮೆ
ಸೊಲ್ಲು ಸೊಲ್ಲಿಗೆ ನುಡಿಸಿ ಭವದಾಟಿಸಿ
ಒಲ್ಲೆನು ನಾನೊಂದು ಇಹಪರ ಸೌಖ್ಯವು
ನಿಲ್ಲಲಿ ಎನ್ನಮನ ನಿಮ್ಮ ಪಾದದಿ ನಿರುತ ೨
ತನುಮನ ಒಪ್ಪಿಸಿ ಮನದಿ ಧ್ಯಾನಿಸುವುದು
ಘನಮನಕಿನ್ನೀಗ ಬರಲಿಲ್ಲವೆ
ವನಜಜಾಡಂಡದೊಳಿನ್ನು ಎನ್ನ ರಕ್ಷಿಸುವರ
ಮನದಿ ನಾ ಕಾಣೆನು ವನಜಾಕ್ಷ ಬಲ್ಲನು ೩
ಮೊರೆಯ ಕೇಳುತಲೀಗ ತ್ವರಿತದಿಂ ಬನ್ನಿರಿ
ಸರಸಿಜಾಕ್ಷನ ತೋರಿ ಹರುಷವಿತ್ತು
ದುರಿತವ ತೊಲಗಿಸಿ ಕರಕರಗೊಳಿಸದೆ
ಪರಮಪ್ರಿಯರು ಎಂಬೊ ಬಿರುದುಳ್ಳ ಶ್ರೀ ಗುರುವೆ ೪
ತಡಮಾಡದೆ ಭವಕಡಲ ದಾಟಿಸಿ ಈಗ
ಮೃಡಸಖನನು ತೋರಿ ದೃಢ ಮನದಿ
ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲ ಜಗಕೆ
ಬಿಡದೆ ಪೊರೆಯುವನೆಂಬೊ ದೃಢವೆನಗೆ ಕರುಣಿಸಿ ೫

 

ಲೋಕನೀತಿ
೨೨೫
ಇತ್ತಿತ್ತ ಬಾರೆಂದು ಕರೆಯುವವರಿಲ್ಲದಿರೆ
ವ್ಯರ್ಥವಲ್ಲವೆ ಜನ್ಮವು ಪ.
ಅತ್ತತ್ತ ಹೋಗೆಂಬ ನುಡಿ ಕೇಳಿ ಜಗದೊಳಗೆ
ಮತ್ತೆ ಇರಬಹುದೆ ಹರಿಯೆ ಅ.ಪ.
ಆರಿಗಾರಾಗುವರೊ ಪ್ರಾರಬ್ಧ ನೀಗದಲೆ
ಶೌರಿ ದಾರಿಯ ತೋರನು
ಈ ರೀತಿಯರಿತು ಹೇ ದುರ್ಮನವೆ ನರಹರಿಯ
ಆರಾಧನೆಯನೆ ಮಾಡೊ ೧
ಏಕಾದಶ್ರೇಂದ್ರಿಯವ ಶ್ರೀ ಕಳತ್ರನೊಳಿಟ್ಟು
ಏಕ ಮನದಲ್ಲಿ ಭಜಿಸು
ಏಕೆ ತಲ್ಲಣಿಸುವೆ ಶೋಕಕ್ಕೆ ಒಳಗಾಗಿ
ನೂಕು ಭವತಾಪ ಜಗದಿ ೨
ಗೋಪಾಲಕೃಷ್ಣವಿಠ್ಠಲನೆ ಗತಿ ಎಂತೆಂದು
ಈ ಪರಿಯಿಂದ ಭಜಿಸು
ಶ್ರೀ ಪರಮ ಕಾರುಣ್ಯ ಗುರುಗಳಂತರ್ಯಾಮಿ
ತಾಪ ಹರಿಸುವನು ಭವದಿ ೩

 


ಇತ್ತೆ ಏತಕ್ಕೆ ಈ ನರಜನ್ಮವ
ಸತ್ಯ ಸಂಕಲ್ಪ ಹರಿ ಎನ್ನ ಬಳಲಿಸುವುದಕೆ ಪ.
ಬಂಧುಬಳಗವ ಕಾಣೆ ಇಂದಿರೇಶನೆ ಭವದಿ
ಬೆಂದು ನೊಂದೆನೊ ನಾನು ಸಿಂಧುಶಯನ
ಬಂದ ಭಯಗಳ ಬಿಡಿಸಿ ನೀನೆ ಪಾಲಿಸದಿರಲು
ಮಂದಮತಿಗೆ ಇನ್ನು ಮುಂದೆ ಗತಿ ಏನೊ ೧
ಕಾಣದಲೆ ನಿನ್ನನು ಕಾತರಿಸುತಿದೆ ಮನವು
ತ್ರಾಣಗೆಡುತಲಿ ಇಹುದೊ ಇಂದ್ರಿಯಗಳೆಲ್ಲ
ಪ್ರಾಣಪದಕನೆ ಸ್ವಾಮಿ ಶ್ರೀನಿವಾಸನೆ ದೇವ
ಜಾಣತನವಿದು ಸರಿಯೆ ಫಣಿಶಾಯಿಶಯನ ೨
ಸಾಧನದ ಬಗೆಯರಿಯೆ ಸರ್ವಾಂತರ್ಯಾಮಿಯೆ
ಮಾಧವನೆ ಕರುಣದಲಿ ಕಾಯಬೇಕೊ
ಹಾದಿ ತೋರದೊ ಮುಂದೆ ಮುಂದಿನಾ ಸ್ಥಿತಿಯರಿಯೆ
ಛೇದಿಸೊ ಅಜ್ಞಾನ ಹೇ ದಯಾನಿಧಿಯೆ ೩
ಸರ್ವನಿಯಾಮಕನೆ ಸರ್ವಾಂತರ್ಯಾಮಿಯೆ
ಸರ್ವರನು ಪೊರೆಯುವನೆ ಸರ್ವರಾಧೀಶ
ಸರ್ವಕಾಲದಿ ಎನ್ನ ಹೃದಯದಲಿ ನೀ ತೋರೊ
ಸರ್ವ ಸಾಕ್ಷಿಯೆ ಸತತ ಆನಂದವೀಯೊ ೪
ಆನಂದಗಿರಿನಿಲಯ ಆನಂದಕಂದನೆ
ಆನಂದ ಗೋಪಾಲಕೃಷ್ಣವಿಠ್ಠಲಾ
ಆನಂದನಿಲಯ ಶ್ರೀ ಗುರುಗಳಂತರ್ಯಾಮಿ
ನೀನಿಂದು ಸರ್ವತ್ರ ಕಾಯಬೇಕಯ್ಯ ೫

 

ವಾಯುದೇವರು
೧೦೪
ಇದು ಏನು ಕೌತುಕವೊ ಹನುಮರಾಯ
ಪದುಮನಾಭನ ದಯಾಪಾತ್ರ ಶುಭಕಾಯ ಪ.
ಅಂಜನೆಯ ಸುತನಾಗಿ ಅಂದು ಶ್ರೀ ರಾಮರಡಿ
ಕಂಜಗಳ ಸೇವಿಸುತ ಮುದ್ರಿಕೆಯನು
ಕಂಜಾಕ್ಷಿಗಿತ್ತು ಕ್ಷೇಮವನರುಹಿ ಬಂದಾಗ
ಸಂಜೀವ ನಿನಗಿಷ್ಟು ತೊಡಿಗೆ ಕೊಟ್ಟಳೆ ದೇವಿ ೧
ಮರುವಾರ್ತೆ ತಂದು ರಾಮಗರುಹಿ ಸೇತುವೆಯ
ಗಿರಿಯಿಂದ ಕಟ್ಟಿ ಕಾರ್ಯವ ಸಾಧಿಸೆ
ಸಿರಿಸಹಿತ ಶ್ರೀ ರಾಮ ರಾಜ್ಯಕೆ ಬಂದಾಗ
ಮರುತ ನಿನಗಿಷ್ಟು ಆಭರಣ ಕೊಟ್ಟನೆ ಪೇಳು ೨
ಎಲ್ಲೆಲ್ಲಿ ನಿನ್ನ ಕೀರ್ತಿಯ ಕೇಳೆ ಕೌಪೀನ
ವಲ್ಲದಲೆ ಮತ್ತೊಂದರ್ಹಂಬಲಿಲ್ಲ
ಮಲ್ಲ ವೈರಾಗ್ಯದಲಿ ಎಂಬುದನು ಕೇಳಿದೆನು
ಇಲ್ಲಿ ನೋಡಲು ಇಷ್ಟು ವೈಭವವ ಪಡುತಿರುವೆ ೩
ರಾತ್ರೆಯಲಿ ಕೀಚಕನ ಕೊಲ್ಲಲೋಸುಗ ಅಂದು
ಮಿತ್ರೆ ರೂಪವ ಧರಿಸಿ ಶೃಂಗರಿಸಿಕೊಂಡು
ಕತ್ತಲೊಳು ನೋಡಿಕೊಳ್ಳಲು ಆಗಲಿಲ್ಲೆಂದು
ಹಸ್ತ ಕಡಗ ಹರಡಿ ಇಟ್ಟು ಮೆರೆಯುವೆಯೊ ೪
ಹುಟ್ಟುತಲೆ ಸಂನ್ಯಾಸ ತೊಟ್ಟು ಬ್ಯಾಸತ್ತೊ ನಡು
ಪಟ್ಟಿ ಉಡುದಾರ ಉಡುಗೆಜ್ಜೆ ಕಾಲ್ಗಡಗ
ಇಟ್ಟು ನಾನಾ ಬಗೆ ಕದರುಂಡಲಿಯಲಿ ನೆಲಸಿ
ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ಪ್ರಿಯನಾದಿ ೫

 

೨೫೧ *
ಇದೆ ಇದೆ ಉಡುಪಿಪುರ ನಮ್ಮ
ಪದುಮನಾಭನು ನೆಲೆಸಿರುವ ಮಂದಿರ ಪ.
ಬಂದ ಆಯಾಸಗಳೊಂದು ಕಾಣಿಸದಿನ್ನು
ಸಿಂಧು ತಡಿಯಲಿಪ್ಪ ಪಟ್ಟಣ ನೋಡೆ
ಸುಂದರ ಗೋಪುರ ಅಂದವಾಗಿಹ ಬೀದಿ
ಬಂದೆವೆ ಗುರು ಹಿರಿಯರ ಕೃಪೆಯಿಂದ ೧
ಮೊದಲೆ ತೋರುವುದು ಶ್ರೀ ರಾಘವೇಂದ್ರ ಮಠ
ಅದರ ಬದಿಯಲ್ಲೆ ಕೃಷ್ಣಪುರ ಮಠವು
ಅದರೆದರಲ್ಲೆ ಶಿರೂರು ಶ್ರೀಗಳ ಮಠ
ಎದುರೆ ಕಾಣುವುದೆ ಕನಕ ಮಂಟಪವು ೨
ಕಿಂಡಿಯಲ್ಲಿ ನೋಡಿ ಪುಂಡರಿಕಾಕ್ಷನ
ಕಂಡು ವಂದಿಸಿ ಮಹಾದ್ವಾರಕೆ ಬನ್ನಿ
ಮಂಡೆ ಬಾಗಿಸಿ ಬನ್ನಿ ಮಹಾಪ್ರದಕ್ಷಿಣಿಗಾಗಿ
ಕಂಡು ಸಾಗಿರಿ ಮುಂದೆ ಕಾಣೂರು ಮಠವ ೩
ಎರಡನೆಯ ಬೀದಿಯಲಿ ಬಲದ ಮಹಾದ್ವಾರ
ಗಿರಿಜೆಯರಸ ಚಂದ್ರೇಶ್ವರನ ಗುಡಿ
ಎರಗಿ ಮುಂದ್ವರಿಯೆ ಎಡದಲ್ಲಿ ಸೋದೆಯ ಮಠ ಅ
ದರ ಪಕ್ಕವೆ ಪುತ್ತಿಗೆ ಮಠ ನೋಡಿ ೪
ಬರಬರುತ ಬೀದಿ ಎರಡು ಪಕ್ಕಗಳಲ್ಲಿ
ಇರುವ ಅಂಗಡಿ ಸಾಲು ವ್ಯಾಸಾದಿ ಮಠಗಳ್
ನಿರರುತಿ ಕೋಣದಿ ಆದಮಾರು ಮಠ ಅ
ದರ ಪಕ್ಕವೆ ಪೇಜಾವರ ಮಠವೆನ್ನಿ ೫
ಮುಂದೆ ಒಂದೆರಡ್ಹೆಜ್ಜೆಯಿಂದ ಬರಲು ಅಲ್ಲಿ
ಸುಂದರವಾದ ಪಲಿಮಾರು ಮಠ
ಅಂದ ನೋಡುತ ಸಾಗಲರ್ಧ ಪ್ರಥಮ
ಬೀದಿಯಿಂದ ಬಲಗಡೆ ತಿರುಗೆ ಅನಂತೇಶ್ವರ ೬
ಚತುರ ಬೀದಿಯ ಮಧ್ಯೆ ರಾಜಿಸುತಿಹ ಗುಡಿ
ಅತಿ ಉನ್ನತವಾದ ಗರುಡಸ್ಥಂಭ
ಪ್ರಥಮ ಪ್ರದಕ್ಷಿಣೆ ದ್ವಾರ ದರ್ಶನಗಳು
ಗತಿಸಿ ಪೋದುವು ನಮ್ಮ ಪಾಪರಾಶಿಗಳು ೭
ನಡೆಯಿರಿ ನಡೆಯಿರಿ ಕೃಷ್ಣನ ಮಠದೆಡೆ
ಬಡಿಯುತಲಿಹರು ನಗಾರಿಗಳು
ತಡೆಯದೆ ತೆಗೆವರು ಮಹಾದ್ವಾರವೀಗಲೆ
ಒಡೆಯ ಕೃಷ್ಣನ ನೋಡ ಬಲ್ಲಿರೆಲ್ಲ ೮
ಬೆಳಗು ಝಾವದ ನಾಲ್ಕು ತಾಸಿನ ಭೇರಿಯು
ಒಳಗೆ ಪೋಗಿರಿ ಎಂದು ಕೂಗುತಿದೆ
ಬಲು ಬೇಗ ಸ್ನಾನ ಮಾಡುತ ಮಧ್ವಸರಸಿನೋಳ್
ಚಲುವ ಕೃಷ್ಣನ ನೋಡ ಬನ್ನಿರೆಲ್ಲ ೯
ಮುನಿವರರೆದ್ದು ಸ್ನಾನವಗೈದು ಉಷಃಕಾಲ
ಘನಪೂಜೆಗೈದು ಪೊಂಗಲು ದೋಸೆಯ
ಮುನಿವರದಗೆ ನೈವೇದ್ಯವರ್ಪಿಸಿ ತಮ್ಮ
ಮನದಣಿಸುತ್ತಲಾನಂದಿಪರು ೧೦
ಬಾಲತೊಡಿಗೆಯನಿಟ್ಟ ಬಾಲರೂಪನ ನೋಡಿ
ನೀಲಮೇಘಶ್ಯಾಮ ನಿರ್ಮಲಾತ್ಮ
ಆಲಯದೆಡಬಲ ಗರುಡ ಮುಖ್ಯಪ್ರಾಣ
ಓಲೈಸೆ ಗೋಪಾಲಕೃಷ್ಣವಿಠಲನ ೧೧

 

(ಪಲ್ಲವಿ) ಪವಮಾನ ಪಿತ

ಇವನೆ ಪ್ರಹ್ಲಾದನಿಂದಲಿ ಉಪಾಸ್ಯ
ಪವಮಾನ ಪಿತ ಭಕ್ತವರದ ಲಕ್ಷ್ಮೀಶ ಪ.
ವಲಯಕಾರದಿ ಶೇಷ ಛತ್ತರಿಯಾಗಿ
ಹಲ ಮುಸಲ ಧರಿಸಿ ಎಡದಲಿ ವಾರುಣೀ
ಬಲದಲ್ಲಿ ಶಂಬುಕ ವರ್ಣನೆಂಬ ಪುತ್ರನ ಸಹಿತ
ನಲಿದು ಸೇರಿಸೆ ಇಂಥ ಆಸನದಿ ಕುಳಿತಾ ೧
ಯೋಗಾಸನವನ್ಹಾಕಿ ಎಡತೊಡೆಯ ಮೇಲ್ ಸಿರಿಯು
ಆಗಮನುತ ಬಲದ ತೊಡೆಯಲ್ಲಿ ವಾಯು
ಭೋಗ ರೂಪನು ಸರ್ವ ಆಭರಣ ಶೃಂಗಾರ
ಸಾಗರಾತ್ಮಜೆ ಪತಿಯು ಧರಿಸಿ ಮೆರೆವಂಥಾ೨
ಶಿರದಿ ನವರತ್ನ ಮಕುಟವು ಫಣೆಯು ತಿಲಕವೂ
ಮೆರೆವನೇತ್ರದ್ವಯವು ಕರ್ಣ ಕುಂಡಲವೂ
ಹಿರಿಯ ನಾಸಿಕ ಗಲ್ಲ ತೆರದ ಬಾಯ್‍ದಾಡೆಗಳು
ದುರುಳರಿಗೆ ಘೋರ ವರಭಕ್ತರಿಗೆ ಅಭಯ ೩
ಕಂಠ ಕೌಸ್ತುಭಮಣಿಯು ಶ್ರೀವತ್ಸ ತುಳಸಿ ಸರ
ಜಂಟಿ ಮುತ್ತಿನ ವೈಜಯಂತಿ ಹಾರಾ
ಎಂಟು ಕರ ಶಂಖ ಚಕ್ರವು ಪದ್ಮ ಗದೆ ಅಭಯ
ವಂಟಿ ಕರಶಿರಿ ಭುಜದಿ ದ್ವಯ ಯೋಗ ಚಿಹ್ನೆ ೪
ಕರದಿ ಕಂಕಣಗಳೂ ಉರ ಉದರ ಶೃಂಗಾರ
ಅರವಿಂದ ಪೊಕ್ಕಳಲಿ ಬ್ರಹ್ಮ ಮೆರೆಯೇ
ಮಿರುಗುವೋ ಮಕುಟ ಉಟ್ಟಿರುವ ನಡು ಕಿರುಗೆಜ್ಜೆ
ಕರಿಸೊಂಡಲಿನ ತೊಡೆಯು ಸುರವರದ ಚರಣಾ೫
ಚರಣದಾಭರಣ ಸಾಲ್ಯೆರಳನಖ ಕಾಂತಿಗಳು
ತರಳರವಿ ವರ್ಣ ಕೋಮಲ ಪಾದ ಪದುಮಾ
ನರದೇಹ ಮೃಗ ಮುಖವು ನರಮೃಗಾಕೃತಿರೂಪ
ತರಳ ಪ್ರಹ್ಲಾದನಲಿ ಕರುಣಾರ್ದ ದೃಷ್ಟಿ ೬
ಎಡತೊಡೆಯಲಿ ಸಿರಿಯು ಬಲಕರದಿ ಪದುಮವ ಪಿಡಿದು
ಎಡತೊಡೆಯ ಮೇಲೆ ಮದನನ ಕುಳ್ಳಿರಿಸುತಾ
ಎಡದಿ ರತಿಯನು ಮದನ ಇರಿಸಿ ಹೂ ಬಾಣವನು
ಪಿಡಿದು ರತಿ ಪದುಮ ಕರದಿಂದ ಶೋಭಿಸಲೂ ೭
ಹರಿಗೆ ಬಲತೊಡೆಯಲಿದ್ದಂಥ ವಾಯುವು ತನ್ನ
ಅರಸಿ ಭಾರತಿಯ ಎಡತೊಡೆಯಲಿಟ್ಟೂ
ತರಳ ವಿಷ್ವಕ್ಸೇನನನು ಬಲದ ತೊಡೆಯಲ್ಲಿ
ಇರಿಸಿಕೊಂಡತುಲ ಸಂತಸದಿಂದ ಮೆರೆಯೇ ೮
ಚತುರ ಹಸ್ತನು ವಾಯು ಎಡಗೈಲಿ ಪಿಡಿದು ಗದೆ
ಹಿತದಿ ಬಲಗೈಯ್ಯ ಭಕ್ತರಿಗಭಯ ತೋರ್ವ
ಅತಿಭಕ್ತಿಯಿಂದುಭಯಕರ ಅಂಜಲಿಯ ಮಾಡಿ
ರತಿ ಪತಿ ಪಿತನ ಕರುಣವ ಭಿಕ್ಷೆ ಬೇಡುವಾ೯
ನಾಭಿಯಲಿ ಬ್ರಹ್ಮ ಉದ್ಭವಿಸಿ ಹಸ್ತದಿ ವೇದ
ಶೋಭಿಸಲು ಎಡತೊಡೆಯ ಮೇಲೆ ವಾಣೀ
ಆಭರಣ ಶೃಂಗರದಿ ವೀಣೆ ಪುಸ್ತಕ ಧರಿಸಿ
ವೈಭವದಿ ದೇವ ಮುನಿ ಎಡೆ ತೊಡೆಯೊಳಿರಲೂ೧೦
ಬ್ರಹ್ಮ ಬಲತೊಡೆಯಲ್ಲಿ ಪಂಚಮುಖ ರುದ್ರನ್ನ
ಸುಮ್ಮಾನದಿಂದ ಕುಳ್ಳಿರಿಸಿಕೊಂಡಿರಲೂ
ಬ್ರಹ್ಮಸುತ ಕರದಿ ಆಯುಧ ಗೌರಿ ಎಡದಲ್ಲಿ
ಷಣ್ಮುಖನ ಬಲ ತೊಡೆಯಲ್ಲಿಟ್ಟು ಮೆರೆಯೇ ೧೧
ಗೌರಿಗಣಪನ ತನ್ನ ತೊಡೆಯೊಳಿಟ್ಟಿರಲು
ಈ ರೀತಿಯಿಂದ ಪರಿವಾರ ಸಹಿತಾ
ಶೌರಿ ಮೆರೆಯುವ ದಿವ್ಯ ಅದ್ಭುತಾಕೃತಿ ನೃಹರಿ
ಭಾರತಿಯ ಪತಿ ಮನದಿ ತೊರೆ ಭಕ್ತರಿಗೆ ೧೨
ಕಾಲನಾಮಕ ಗರುಡ ಬಾಲೆ ಸೌಪರ್ಣಿ
ಲೀಲೆಯಿಂದಲಿ ಕೂಡಿ ಸಮ್ಮುಖದಿ ನಿಂದೂ
ಓಲಗವ ಕೊಡುತ ಹರಿಗನುಕೂಲನಾಗಿರುವ
ಲೀಲ ಮಾನುಷ ಇಂಥ ವೈಭವದಿ ಮೆರೆವಾ೧೩
ಇಂತೆಸೆವ ಹರಿ ಎದುರು ನಿಂತು ಪ್ರಹ್ಲಾದ ಗುಣ
ವಂತೆ ಸಾಧ್ವೀ ಸಾಧುಮತಿ ಸತಿಯ ಸಹಿತಾ
ಅಂತರಂಗದಿ ಚಿಂತಿಸುತ ಅಂಜಲಿಯ ಕರದಿ
ಶಾಂತಮನದಲಿ ಸುಖಿಸಿ ಆನಂದಿಸುವನೂ೧೪
ವರಭಕ್ತ ಪ್ರಹ್ಲಾದ ವರದನ್ನ ಈ ರೂಪ
ನರರು ಚಿಂತಿಸಲಳವೆ ಚರಿಪ ಭಕ್ತಿಯಲೀ
ಪರಮ ಉತ್ಸಾರಕರನೊಂದೊಂದು ಅಂಶದಲಿ
ವರ ಭಕ್ತರಲಿ ನೆಲಸೆ ಚಿಂತನೆಗೆ ನಿಲುವಾ ೧೫
ಪರಿವಾರ ಆಭರಣ ಆಯುಧಗಳಿಂ ಮೆರೆವ
ನರಹರಿಯ ಈ ರೂಪ ನಿರುತ ಸ್ಮರಿಸೇ
ಗುರುವರದ ಕರಿಗಿರೀ ಯೋಗ ಭೋಗಾ ನೃಹರಿ
ಕರುಣಿಸುವ ಮುಕ್ತಿ ಗೋಪಾಲಕೃಷ್ಣವಿಠಲಾ೧೬

 

೨೧೩
ಈಗಲೂ ನೀ ಕಾಯ ಬೇಕೋ ಇಂದಿರೆ ರಮಣ
ಆಗಲೂ ನೀ ಕಾಯಬೇಕೋ ಅರವಿಂದ ನಯನ ಪ.
ಈಗ ಈ ಜನ್ಮದಲ್ಲಿ
ಆಗ ಭವ ದಾಟುವಲ್ಲಿ ಅ.ಪ.
ನಾನಾ ಜನ್ಮದಲಿ ತಿರುಗಿ ಮಾನವ ನಾನಾಗಿ ಪುಟ್ಟಿ
ಶ್ವಾನ ಸೂಕರನಂತೆ ಕಾಲ ಕಳೆದು
ದೀನನಾಗೀಗ ಇನ್ನು ನೀನೆ ಗತಿಯೋ ಎನಲು
ಶ್ರೀನಾಥ ನಿನ್ನ ನಾಮ ಎನ್ನ ನಾಲಗೆಯಲಿ ನುಡಿಸಿ ೧
ಮಾಯಾಪತಿಯೆ ಕೇಳೋ ಆ ಯಮಭಟರು ಎಳೆದು
ನೋಯಿಸುತ್ತಿರಲು ಎನ್ನ ಬಾಯಬಿಡುತಲಿ
ತೋಯಜಾಂಬಕನೆ ಎನ್ನ ಕಾಯೋ ಎಂದೆನುತ ಒದರೆ
ಆ ಯಮಬಾಧೆ ಬಿಡಿಸಿ ಸಾಯದಾ ಸೌಖ್ಯವನಿತ್ತು ೨
ವೈಷ್ಣವ ಜನ್ಮವ ನೀನು ಇತ್ತುದು ಪಿರಿಯದಲ್ಲೊ
ವೈಷ್ಣವ ಜ್ಞಾನವ ನೀಡೊ ಸುಭಕ್ತಿ ಸಹಿತ
ಕೃಷ್ಣಮೂರುತಿಯೆ ನೀನು ಅಷ್ಟದಳ ಪದ್ಮದಲಿ ನಿಂತು
ಉಷ್ಣ ಶೀತ ದ್ವಂದ್ವ ಸಹಿಷ್ಣುತೆ ವಿರಕ್ತಿಯೊಡನೆ ೩
ತ್ರಿಗುಣದಿಂದ ಬದ್ಧವಾದ ವಿಗಡದೇಹ ತೊಲಗುವಂತೆ
ಬಗೆಬಗೆಯ ನಿನ್ನ ಲೀಲೆ ಅಂತರದಿ ತಿಳಿಸಿ
ಜಗದಾವರಣ ತೊಲಗುವಾಗ ಬಗೆಬಗೆಯ ಲಯದ ಚಿಂತೆ
ತಗಲಿ ಮನಕೆ ನಿನ್ನ ಮಹಿಮೆ ಆನಂದವಾಗುವಂತೆ ೪
ಗೋಪಾಲಕೃಷ್ಣವಿಠಲ ನೀ ಪರದೈವನೆನಿಸಿ
ಆಪಾದಮೌಳಿ ನಿನ್ನ ರೂಪವ ತೋರಿ
ಅಪವರ್ಗದಲಿ ಎನಗೆ ಶ್ರೀಪಾದಾಸ್ಥಾನವಿತ್ತು
ಈ ಪರಿಯಿಂದ ಉಭಯ ವ್ಯಾಪಾರದಲ್ಲಿ ಹರಿಯೆ ೫

 

ತುಳಸೀ ದೇವಿ
೧೪೧
ಉದಯ ಕಾಲದೊಳೆದ್ದು ಮುದದಿಂದ ಶ್ರೀ ತುಳಸಿ
ಪದುಮನಾಭನ ಸತಿ ಉದ್ಧರಿಸೆನ್ನನೆಂದು
ಉದಕವೆರೆದು ನಮಸ್ಕರಿಸಿ ವಂದಿಸುತಲಿ
ಸುಧೆಯ ಸುರರಿಗಿತ್ತ ಧನ್ವಂತರಿ ನಯನದಿ
ಉದಿಸಿದೆ ಆನಂದ ಅಶ್ರುಗಳಿಂದಲಿ
ಮದಗರ್ವ ಬಿಡಿಸೆನ್ನ ಶುದ್ಧಿಯನ್ನೆ ಮಾಡಿ
ಹೃದಯದಿ ಹರಿಯ ತೋರಿ ರಕ್ಷಿಸೆಂದೆನಲು
ಸದ್ದಿಲ್ಲದೆ ಪೊರೆವ ಗೋಪಾಲಕೃಷ್ಣವಿಠ್ಠಲ

 


ಉದ್ಧಾರ ಮಾಡಯ್ಯ ಉಡುಪಿ ನಿಲಯ
ಹೃದ್ವನಜದಲಿ ನೆಲಸಿ ಅನುಗಾಲ ನಿನ ತೋರಿ ಪ.
ಬಂದೆ ಬಹುದೂರದಲಿ ನಿಂದೆ ತವಚರಣದಡಿ
ತಂದೆ ಮುದ್ದುಮೋಹನ ಗುರುಕರುಣದಿಂದ
ಕುಂದುಗಳನೆಣಿಸದೆಲೆ ಸಿಂಧುಶಯನನೆ
ಹೃದಯ ಮಂದಿರದಿ ಮನೆ ಮಾಡು ಸುಂದರಾತ್ಮನೇ ೧
ಜನ್ಮಜನ್ಮಾಂತರದ ಅಜ್ಞಾನಗಳ ಕಳೆದು
ಕರ್ಮಸಾಸಿರ ಕಡಿದು ಕರುಣದಿಂದ
ರಮೆಯರಸನೆ ನಿನ್ನ ಅನುಗಾಲ ಸ್ಮರಿಪಂಥ
ಸನ್ಮಾರ್ಗವನೆ ತೋರೊ ಸರ್ವಲೋಕೇಶ ೨
ಜಪತಪಗಳೊಂದರಿಯೆ ವ್ರತ ನೇಮಗಳ ಕಾಣೆ
ಉಪವಾಸದುಪಟಳವು ಗತಿ ತೋರದೆನಗೆ
ಗುಪಿತಮಾರ್ಗದಿ ನಿನ್ನ ನಾಮಾಮೃತವನುಣಿಸಿ
ಅಪಹಾಸಗೊಳಿಸದಲೆ ಆದರಿಸೊ ಜೀಯ ೩
ಬೇಡಲೇನನು ನಿನ್ನ ಕಾಡಲೇತಕೆ ನಾನು
ನೀಡುವ ದಾತ ನೀ ಸರ್ವಜ್ಞನಿರಲು
ಮಾಡುವೆನು ಸಾಷ್ಟಾಂಗ ಬೇಡುವೆನು ಪದದಾಸ್ಯ
ನೋಡು ಕರುಣಾದೃಷ್ಟಿಯಿಂದೆನ್ನ ಕಡೆಗೆ ೪
ಅಂತರಂಗದಲಿಪ್ಪ ಸರ್ವಾಂತರಾತ್ಮಕನೆ
ಚಿಂತನೆಗೆ ನೆಲೆತೋರು ಚಿನ್ಮಯಾತ್ಮಕನೆ
ಕಂತುಪಿತ ಗೋಪಾಲಕೃಷ್ಣವಿಠ್ಠಲನೆ ಸಿರಿ
ಕಾಂತ ಕಾಪಾಡು ಕಡು ಕರುಣಿ ಮಧ್ವೇಶ ೫

 

ಕಥನಾತ್ಮಕ ಹಾಡುಗಳು
೨೪೧
ಉದ್ಭವಿಸಿದ ಕಂಬದಿ | ಶ್ರೀ ನಾರಸಿಂಹ
ಉದ್ಭವಿಸಿದ ಕಂಬದಿ ಪ.
ಉದ್ಭವಿಸಿದ ಬೇಗ ಪದ್ಮಸಂಭವಪಿತ
ಮುದ್ದು ಬಾಲಕನ ಉದ್ಧರಿಸುವೆನೆಂದು ಅ.ಪ.
ದುರುಳನು ಪ್ರಹಲ್ಲಾದನು | ಪರಿಪರಿಯಿಂದ
ಕರಕರಪಡಿಸೆ ಕುವರನ
ನರಹರಿ ಎನ್ನನು ಪೊರೆ ಎಂದು ಮೊರೆಯಿಡೆ
ಸುರರು ನೋಡುತಿರೆ ಭೋರ್ಗರೆಯುತ ಆ ಕ್ಷಣ ೧
ಎಲ್ಲಿರುವನು ಹರಿ ಎಂದು | ದೈತ್ಯನು ಮಗನ
ಇಲ್ಲಿ ಸ್ಥಂಭದಿ ತೋರೆಂದು
ಖುಲ್ಲನು ಹಿಂಸಿಸೆ ಸರ್ವತ್ರದಿ ಶ್ರೀ-
ನಲ್ಲನಿರುವನೆಂದು ಸಾಧಿಸೆ ಭಕ್ತನು ೨
ತನಯನ ನುಡಿ ಉಳಿಸಲು | ನರಹರಿ ಹೊಸಲೊಳ್
ಇನನು ತಾ ಮುಳುಗುತ್ತಿರಲು
ದನುಜನ ತೊಡೆಯ ಮೇಲಿಟ್ಟು ನಖದಲಿ
ಕನಲಿ ಸೀಳಿ ಕರುಳ್ಮಾಲೆ ಧರಿಸುತ ೩
ಸುರರು ಜಯ ಜಯವೆನ್ನುತ | ಪೊಗಳುತ್ತಲಿರೆ
ನರಹರಿ ಉಗ್ರ ತಾಳುತ
ಸುರರು ಬೆದರಿ ಪ್ರಹ್ಲಾದನ ಕಳುಹಲು
ಕರಿಗಿರಿ ನರಹರಿ ಶಾಂತನೆನಿಸಿದ ೪
ತಾಪವಡಗಿತು ಜಗದಲಿ | ವರ ಭಕ್ತನಿಂದ
ಶ್ರೀಪತಿ ಲಕುಮಿ ಸಹಿತಲಿ
ಗೋಪಾಲಕೃಷ್ಣವಿಠ್ಠಲ ಗುರುವರದ
ಈ ಪರಿಯಿಂದ ಭಕ್ತರ ಪೊರೆಯಲು ೫

 

೧೧
ಎಂಥ ಮಹಿಮ ಏನು ಚಲುವನೆ ಶ್ರೀ ಉಡುಪಿ ನಿಲಯ ಪ.
ಎಂಥ ಮಹಿಮ ಏನು ಚಲುವ ಕಂತುಪಿತ ಶ್ರೀ ಬಾಲಕೃಷ್ಣ
ಶಾಂತಯತಿಗಳಿಂದ ಪೂಜಿತ ನಿಂತ ಮಧ್ವಮುನಿಕರಾರ್ಚಿತ ಅ.ಪ.
ಕಂಡ ಕ್ಷಣದಿ ಮಂಡೆ ಬಾಗಿದ
ಹಿಂಡು ಭಕ್ತರಘ ಕಳೆವ
ಪುಂಡರೀಕ ನೇತ್ರ ಕನಕ-
ಕಿಂಡಿಯಲ್ಲಿ ಕಾಂಬ ರೂಪ ೧
ಬಾಲರೆಂಟು ಯತಿಗಳಿಂದ
ಲೀಲೆಯಿಂದ ಪೂಜೆಗೊಂಬ
ಲೀಲಮಾನುಷರೂಪ ರುಕ್ಮಿಣಿ
ಲೋಲ ಲೋಕಪಾಲ ಜಾಲ ೨
ಕಾಲಕಾಲದ ಪೂಜೆಗೊಂಬ
ಬಾಲತೊಡಿಗೆ ಧರಿಸಿಕೊಂಬ
ವ್ಯಾಳಶಯನ ಮುದ್ದುಮುಖ ಗೋ
ಪಾಲಕೃಷ್ಣವಿಠ್ಠಲನೀತ ೩

 

೧೦
ಎಂಥಾ ಮಹಿಮನಿವನೆ ಗೋಪಾಲಕೃಷ್ಣ
ಎಂಥ ಮಹಿಮನಿವನೆ ಪ.
ಎಂಥಾ ಮಹಿಮನಿವನಂತ ಕಂಡವರಿಲ್ಲ
ಕಂತು ಜನಕ ಸರ್ವರಂತರಂಗದೊಳಿಪ್ಪ ಅ.ಪ.
ಕರಚರಣಗಳಿಲ್ಲದೆ ಇದ್ದರು | ಮುದುರಿ
ಘುರುಘುರುಗುಟ್ಟುತಿಹುದೆ
ವರಕಂಬೋದ್ಭವ ವಟು ಪರಿಶು | ಧರಿಸಿರುವನ
ಚರಿಸಿ ಮಾವನ ಕೊಂದ ನಿರ್ವಾಣ ಹಯವೇರಿ
ಶರಧಿಯೊಳಾಡಿ ಗಿರಿಯಡಿ ಓಡಿ
ಧರೆಯನು ತೋಡಿ ಕರಳೀಡ್ಯಾಡಿ
ಕರವ ನೀಡಿ ಭಾರ್ಗವ ದಶರಥ ಸುತ
ನರಸಖ ಅಂಬರ ತೊರೆದ ರಾವುತ ೧
ಮನುವಿಗೊಲಿದು ಮಂದರ | ಬೆಂಡಂತೆ ಧರಿಸಿ
ವನಿತೆಯ ತಂದನೀ ಧೀರ
ಘನಘರ್ಜನೆಯು ಗಂಗಾಜನಕ | ಜಮದಗ್ನಿಸುತ
ವನಚಾರಿ ತುರುಪಾಲ ವನಿತೆರೊಂಚಕ ಕಲ್ಕಿ
ಜನಿಸಿ ಜಲದಿ ಬೆನ್ನಲಿ ಗಿರಿಕೋರೆ
ಘನ ಹೊಸಲಾಸನ ತಿರಿದನುಜನ
ತರಿದ ಮಾತೆ ಕಪಿವೆರಸಿ ವೃಂದಾವನ
ಚರಿಸಿ ದಿಗಂಬರ ಹರಿ ಏರಿದನೆ ೨
ಸುತನಿಗಾಗಮವಿತ್ತನೆ | ಕ್ಷಿತಿಧರಧಾರಿ
ಸುತನ ಮೂಗಿನೊಳ್ ಬಂದನೆ
ಸುತವಾಕ್ಯ ಸತ್ಯವೆನಿಸಿ ಅತಿ ಕುಬ್ಜ ಕ್ಷಿತಿಯನಿತ್ತು
ವ್ರತಧಾರಿ ವಸನ ಚೋರ ವ್ರತಭಂಗ ಏರಿ ತುರಂಗ
ಸತಿಯನೆ ಪೊರೆದ ಸತಿಯಂತಾದ
ಸತಿಯಳ ಸಂಗ ಸತಿಗರಿದಂಗ
ಸತಿಯ ಬೇಡಿ ನೀಡಿ ಸತಿಯ ಕೂಡಿ ಜಾರ
ಸತಿಯರ ಕೆಡಿಸುತ ಸತಿ ಹೆಗಲೇರಿದ ೩
ವಾಸ ಜಲದಿ ಮೈ ಚಿಪ್ಪು | ಯಜ್ಞ ಸ್ವರೂಪ
ವೇಷ ಮಾನವ ಮೃಗರೂಪು
ಆಸೆಬಡಕ ಮಾತೆ ದ್ವೇಷ ವನದಿ ವಾಸ
ಪೋಷ ಪಾಂಡವ ಜಿನ ಮೋಸ ವಾಜಿ ಮೇಲ್ವಾಸ
ನಾಸಿಕ ಶೃಂಗ ನಗಪೋತ್ತಂಗ
ಭೂಸತಿ ಸಂಗ ಮಾನವ ಸಿಂಗ
ಮೋಸ ನೃಪರ ದ್ವೇಷ ಪೋಷಿ ಯಜ್ಞವೃಂದ
ವಾಸಿ ಘಾಸಿವ್ರತ ಕಲಿಮುಖ ದ್ವೇಷಿ ೪
ಕಾಪಾಡಿ ವೇದ ಅಮೃತ ಭೂಸತಿಯ ಪೊರೆದು
ಪಾಪಿ ಕರುಳ್ಬಗೆದ ಜಲಪಿತ
ಭೂಪರ ಕಾಡಿ ರಘುಭೂಪ ಸೋದರತಾಪ
ಗೋಪ್ಯಕಲ್ಯಂತಕಾಲ ಗೋಪಾಲಕೃಷ್ಣವಿಠ್ಠಲ
ಆಪಜವಾಸ ಆ ಪೃಥ್ವೀಶ
ಆ ಪುತ್ರಪೋಷ ಆ ಪದ ಸರಿತ
ಕೋಪಿ ಲಂಕೆ ಪುರತಾಪಿ ಗೋಪಿಕಾ
ವ್ಯಾಪಿ ಮಾನಹೀನ ಘೋಟಕವಹನ ೫

 

೨೫೩ *
ಎಂಥಾದ್ದೊ ಶ್ರೀ ತಿರುಪತಿ | ಎಂಥಾದ್ದೊ ಪ.
ಎಂಥಾದ್ದೊ ತಿರುಪತಿ ಕ್ಷೇತ್ರ | ಸ
ತ್ಪಾಂಥರಿಗಿಲ್ಲಿ ಸುಗಾತ್ರ | ಆಹ
ಕಂತುಪಿತನು ಇಲ್ಲಿ ನಿಂತು ಭಕ್ತರಿಗೆಲ್ಲ
ಸಂತಸಪಡಿಸುವನಂತಾದ್ರಿನಿಲಯ ನಿನ್ನೆಂದಾದ್ದೊ ಅ.ಪ.
ನಾಗಾದ್ರಿಗಿರಿಯ ಮೆಟ್ಟುಗಳು | ಅ
ಯೊಗ್ಯರಿಗಿದು ದುರ್ಲಭಗಳು | ಅಲ್ಲಿ
ಭಾಗವತರ ಸಮ್ಮೇಳಗಳು | ಶಿರ
ಬಾಗಿ ವಂದಿಪರು ಜನರುಗಳು | ಆಹ
ಪೋಗುತ ಗಾಳಿಗೋಪುರವ ಕಂಡೆರಗಿ ಮುಂ
ದ್ಯಾಗುತ ಸಜ್ಜನ ನೀಗುವರು ದುಃಖ೧
ಹರಿಮಂದಿರ ಮಹಾದ್ವಾರ | ಬಹು ಜ
ನರು ಕೂಡಿಹರು ವಿಸ್ತಾರ | ಬೀದಿ
ನಡೆದು ಪದ್ರಕ್ಷಿಣಾಕಾರ | ಭೂ
ವರಹನ ಸ್ವಾಮಿ ಕಾಸಾರ | ಆಹ
ಹರುಷದಿಂದಶ್ವತ್ಥ ತರುವ ಕಂಡೆರಗಿ ಹರಿ
ದರುಶನಕಾಗಿ ಹಾರೈಸುವ ಜನತತಿ ೨
ಸ್ವಾಮಿಪುಷ್ಕರಣಿಯ ಸ್ನಾನ | ಮನ
ಕಾನಂದಪ್ರದ ಸುಜ್ಞಾನ | ಭಾನು
ತಾನುದಿಸುವನು ಮುಂದಿನ | ಸುಖ
ಕೇನೆಂಬೆ ಹರಿಯ ದರ್ಶನ | ಆಹ
ನೀನೆ ಗತಿಯೆಂದು ನಂಬಿದವರ ಪೊರೆವ
ಭಾನುಪ್ರಕಾಶ ಹಣ ಕಾಣೀಕೆ ಕೈಕೊಂಬ ೩
ಗರುಡ ಸ್ಥಂಭವನೆ ಕಾಣುತ್ತ | ಬಾಗಿ
ಕರಮುಗಿದು ಒಳದ್ವಾರ ಪೊಗುತ | ವಿಮಾನ
ಗಿರಿ ಶ್ರೀನಿವಾಸಗೆರಗುತ್ತ | ಬಂದು
ವರ ತೊಟ್ಟಿ ತೀರ್ಥ ಕೊಳ್ಳುತ್ತ | ಆಹಾ
ತರತರದ ಕಾಣಿಕೆ ಕೊಪ್ಪರಿಗೆಗೆ ಸುರಿಯುತ್ತ
ನಿರುತ ನೀ ಸಲಹೆಂದು ಮೊರೆಯಿಡೆ ಭಕ್ತರು ೪
ಗರುಡನ ಎದುರೊಳು ನಿಂದು | ಸ್ವಾಮಿ
ಗರುವ ರಹಿತ ತಾ ಬಂದು | ಬಂದ
ವರಭಕ್ತರನೆ ಕಾಯ್ವ ಬಿರುದು | ಇಂಥ
ಹರಿಗೆ ಅಮೃತೋದಕವೆರೆದು | ಆಹಾ
ಜರಿಯ ಪೀತಾಂಬರ ಉಡಿಸಿ ಸರ್ವಾಭರಣ
ಹರಿಗೆ ಶೃಂಗರಿಸಿಪ್ಪ ಪರಿಯ ವರ್ಣಿಸಲಳವೆ ೫
ಶಿರದಲಿ ಪೊಳೆವ ಕಿರೀಟ | ಕ
ಸ್ತೂರಿ ತಿಲಕವು ಸುಲಲಾಟ | ಸುರ
ನರರ ಪಾಲಿಪ ವಾರೆ ನೋಟ | ಕರ್ಣದಿ
ಮಿರುಗುವ ಕುಂಡಲ ಮಾಟ | ಆಹ
ವರ ಸಂಪಿಗೆಯ ಪೋಲ್ವ ನಾಸಿಕದ ಕದಪುಗಳ್
ಮೆರೆಯೆ ಕನ್ನಡಿಯಂತೆ ಮುಗುಳು ನಗೆಯ ಚೆಲ್ವ ೬
ಸಿರಿವತ್ಸ ಕೌಸ್ತುಭಹಾರ | ಕಂಠ
ಕರಶಂಖ ಚಕ್ರವಪಾರ | ಸುರ
ನರರಿಗಭಯ ತೋರ್ಪಧೀರ | ಕರ
ದ್ವರವ ಕೊಡುವಂಥ ಉದಾರ | ಆಹ
ತರತರದ ಪುಷ್ಪಗಳ್ ನವರತ್ನ ತುಳಸಿಯ
ಮೆರೆವೊ ಹಾರಗಳನು ಧರಿಸಿರ್ಪ ಗಂಭೀರ ೭
ವಕ್ಷಸ್ಥಳದಲ್ಲಿ ಲಕುಮಿ | ಹರಿ
ಕುಕ್ಷಿಯೊಳ್ ಈರೇಳು ಅವನಿ | ಜಗ
ರಕ್ಷಿಪ ಮಮಕುಲಸ್ವಾಮಿ | ಸರ್ವ
ಸಾಕ್ಷಿಯಾಗಿದ್ದು ತಾ ಪ್ರೇಮಿ | ಆಹ
ಪಕ್ಷಿವಾಹನ ಸುರಾಧ್ಯಕ್ಷ ಖಳ ಶಿಕ್ಷ
ಪಕ್ಷವಹಿಸಿ ಸುರರ ರಕ್ಷಿಪ ಸರ್ವದ ೮
ನಡುವಿನ ನಾಭಿ ವಡ್ಯಾಣ | ಮೇಲೆ
ಉಡಿದಾರ ಗೆಜ್ಜೆ ಕುಂದಣ | ನೆರೆ
ಪಿಡಿದುಟ್ಟ ಪೀತಾಂಬ್ರವರ್ಣ | ಕಾ
ಲ್ಕಡಗ ರುಳಿಯು ಗೆಜ್ಜೆ ಪೂರ್ಣ | ಆಹ
ಮಡದಿಯರುಭಯದಿ ಪರಿಶೋಭಿಸುತಿರೆ
ಪೊಡವಿಯಳೆದ ಪಾದ ದೃಢಭಕ್ತರನೆ ಪೊರೆವ ೯
ನೋಟಕತಿ ಚಲುವ ಗಂಭೀರ | ಭಕ್ತ
ಕೂಟದಿ ಮೆರೆಯುತಪಾರ | ಉತ್ಸ
ವಾಟಗಳಾಡುತ ಸಾರ | ಭೋಕ್ತ
ಸಾಟಿರಹಿತ ಬರುವ ಧೀರ | ಆಹ
ಕೋಟಿದೇವತೆಗಳ ನೋಟದಿಂ ಪೊರೆಯುವ
ದಾಟಿಸುವ ಭವನಾಟಕಧರದೇವ ೧೦
ಮಚ್ಛಾದ್ಯನೇಕ ಅವತಾರ | ಬಹು
ಇಚ್ಛೆಯಿಂದಲಿ ಭಜಿಸುವರ | ಕಾಯ್ವ
ಮೆಚ್ಚುತ ಮನದಲಿ ನಾರ | ಸಿಂಹ
ಸ್ವೇಚ್ಛೆÉ್ಛಯಿಂ ಮೆರೆವ ಜಗತ್ಸಾರ | ಆಹ
ತುಚ್ಛಕರು ವಸನ ಬಿಚ್ಚಿ ಸೆಳೆಯುತಿರೆ
ಇಚ್ಛೆಯರಿತು ಲಲನೆ ರಕ್ಷಿಸೆನಲು ಪೊರೆದ ೧೧
ಎಲ್ಲೆಲ್ಲಿ ನೋಡಲು ಭಕ್ತ | ಜನ
ರಲ್ಲಲ್ಲಿ ನೆರೆಯುತ ಮುಕ್ತಾ | ಧೀಶ
ನಲ್ಲದಿನ್ನಿಲ್ಲೆಂದು ಸ್ತುತಿಸುತ್ತ | ಶ್ರೀಶ
ಇಲ್ಲೆ ಬಾರೆಂದು ಕರೆಯುತ್ತ | ಆಹ
ಮಲ್ಲ ಮರ್ಧನ ಎಮ್ಮ ಸೊಲ್ಲು ಲಾಲಿಸೊ ಎನಲು
ಬಲ್ಲಿದ ಭಕ್ತರ ಸೊಲ್ಲಿಗೆ ಒಲಿಯುವ ೧೨
ಬುತ್ತಿ ಪೊಂಗಲು ಮಾರುವರು | ಜನ
ರರ್ಥಿಯಿಂದದನು ಕೊಂಬುವರು | ಗೀತ
ನೃತ್ಯ ವಾದ್ಯಗಳಿಂ ಕುಣಿಯುವರು | ಅನ್ನ
ಅರ್ಥಿಯಿಂ ದಾನ ಮಾಡುವರು | ಆಹ
ಎತ್ತ ನೋಡಲು ಮನಕತ್ಯಂತ ಆನಂದ
ನಿತ್ಯ ಉತ್ಸವಗಳು ಸತ್ಯಾತ್ಮ ಕೈಗೊಂಬ ೧೩
ಇಂತು ಮೆರೆವೊ ಕ್ಷೇತ್ರ ಘನವು | ನೋಡಿ
ನಿಂತು ವರ್ಣಿಸಲಸದಲವು | ಜಗ
ದಂತರಾತ್ಮಕನ ವೈಭವವು | ಗುರು
ಅಂತರ್ಯಾಮಿ ಶ್ರೀನಿಧಿಯು | ಆಹ
ಇಂತು ಬ್ರಹ್ಮೋತ್ಸವ ನಿಂತು ರಥದಿ ಬರುವ
ಕಂತುಪಿತ ಶ್ರೀ ಭೂಮಿಕಾಂತೇರ ಒಡಗೂಡಿ೧೪
ಶ್ರೀಪತಿ ಜಲದೊಳಾಡೀದ | ಕೂರ್ಮ
ರೂಪದಿಂ ಗಿರಿಯನೆತ್ತಿದ | ಬಹು
ಪಾಪಿ ಕನಕಾಕ್ಷನ ಕೊಂದ | ನೃಹರಿ
ರೂಪ ವಾಮನ ಭೃಗುಜನಾದ | ಆಹ
ಚಾಪಖಂಡನ ಕೃಷ್ಣಚರಿಸಿ ಬತ್ತಲೆ ಕಲ್ಕಿ
ಗೋಪಾಲಕೃಷ್ಣವಿಠ್ಠಲನ ಮಹಾಕ್ಷೇತ್ರ ೧೫

 

೧೬೭
ಎಂದಿಗೆ ನಿಮ್ಮ ಪದ ಕಾಂಬೆನೊ | ಗುರು
ಎಂದಿಗೆ ನಿಮ್ಮ ಪದ ಕಾಂಬೆನೊ ಪ.
ಎಂದಿಗೆ ನಿಮ್ಮ ಕಾಂಬೆ
ಅಂದಿಗೆ ಮುಕ್ತಳಹೆ ಅ.ಪ.
ಸಕಲ ಶಾಸ್ತ್ರಗಳನೆ ಶೋಧಿಸಿ | ಬಹು
ಅಕಳಂಕ ತತ್ವವ ಸಾಧಿಸಿ | ಬೇಗ
ಮುಕುತಿ ಯೋಗ್ಯರಿಗೆಲ್ಲ
ಸುಖವ ತೋರುವ ಗುರು ೧
ಮನದಿ ನೆಲಸಿ ಲೀಲೆ ತೋರುತ | ದೃಢ
ಮನದಿ ಮನಸಿಜನ ಗೆಲ್ಲುತ | ದೇವ
ಮನಸಿಜನಯ್ಯನ
ಮನಸಿನೊಳ್ ತೋರುತ ೨
ಕಷ್ಟಪಡುವುದು ಕಾಣುತ | ಬಹು
ತುಷ್ಟರಾಗಿ ಅಭಯ ನೀಡುತ | ಮನ
ಮುಟ್ಟಿ ರಕ್ಷಿಪೆನೆಂದು
ಇಷ್ಟು ಸಲಿಪ ಗುರು ೩
ನರಹರಿ ಧ್ಯಾನಿಪ ಶ್ರೀ ಗುರು | ಬಹು
ಕರುಣಾಳುವೆ ದೇವತರು | ನಿಮ್ಮ
ಅರಘಳಿಗೆ ಬಿಟ್ಟು
ಇರಲಾರೆ ಧರೆಯೊಳು ೪
ಮುಕ್ತಿ ಸೌಭಾಗ್ಯವ ನೀಡುವ | ಬಹು
ಶಕ್ತರಹುದು ನಿಮ್ಮ ಭಾವವ | ನಾನು
ಎತ್ತ ಯೋಚಿಸೆ ಕಾಣೆ
ಸತ್ಯವಚನವಿದು ೫
ಆನಂದಪಡಿಸುವ ಶ್ರೀ ಗುರು | ನಿಮ್ಮ
ಏನೆಂದು ಸ್ತುತಿಹಲಿ ಪಾಮರರು | ನಿಮ್ಮ
ಕಾಣರು ಜಗದಲಿ
ಏನೆಂಬೆ ಮಹಿಮೆಯ ೬
ಗೋಪಾಲಕೃಷ್ಣವಿಠ್ಠಲನ | ಶುಭ
ರೂಪವ ತೋರುವ ಕಾರುಣ್ಯ | ದೇವ
ಈ ಪರಿ ನಿಮ್ಮ ಸ್ತುತಿಸಿ
ನಾ ಪಾರು ಕಾಂಬೆನು ೭

 

ಮುಕ್ತೇಶ : ಸಾರೂಪ್ಯ,
೧೨
ಎಂದೆನ್ನ ಪೊರೆವೆ ಶ್ರೀರಂಗಧಾಮ
ಎಂದೆನ್ನ ಪೊರೆವೆ ಪ.
ಎಂದೆನ್ನ ಪೊರೆವೆ ಎಂದೆನ್ನ ಕರೆವೆ
ಮಂದಹಾಸ ಮುಖನೆ ಎಂದೆನ್ನನೀಕ್ಷಿಸುವೆ ಅ.ಪ.
ಶ್ರೀಶ ವೈಕುಂಠದಿ ಸಾಸಿರ ಫಣೆಯುಳ್ಳ
ಶೇಷಶಯನ ಎನ್ನ ಘಾಸಿಗೊಳಿಸಿದೆ ೧
ಅರವಿಂದನಯನನೆ ಅರವಿಂದ ದಳ ಪೋಲ್ವ
ವರಹಸ್ತವನೆ ಎನ್ನ ಶಿರದ ಮೇಲಿಡುತಲಿ ೨
ಬಳಲಬೇಡೆಂತೆಂದು ನಳಿತೋಳಿನಿಂದೆತ್ತಿ
ನಳಿನನಾಭನೆ ಎನ್ನ ಬಳಲಿಕೆ ಬಿಡಿಸುತ್ತ ೩
ಮುಕ್ತರ ಸಂಗಡ ಮುಕ್ತೇಶ ಎನ್ನಲ್ಪ
ಶಕ್ತಿ ಸೇವೆಯ ಕೊಳುತ ಮುಕ್ತಾರ್ಥದಾಯಕ ೪
ವ್ಯಾಪಕ ಶ್ರೀಗುರು ಸ್ಥಾಪಕ ಮನದಲ್ಲಿ
ಗೋಪಾಲಕೃಷ್ಣವಿಠ್ಠಲ ಈ ಪರಿ ದಯೆಗೈದು ೫

 

೨೨೬
ಎಲ್ಲಾ ಶಾಸ್ತ್ರದ ಸಾರದ ತಿಳಲ್ಮನ
ದಲ್ಲಿ ಹರಿಯನು ಕಾಂಬುದಕೆ ಪ.
ಮನದಲಿ ಹರಿಯನು ಕಾಂಬುವ ಸೊಬಗು
ಬಲ್ಲಿದ ವೈಕುಂಠಕೋಡ್ವದಕೆ ಅ.
ವಿಧಿನೀಷೇಧಗಳಾಚರಿಸುವುದು
ವಿಧ ವಿಧ ಜೀವರ ಸಾಧನಕೆ
ವಿಧ ವಿಧ ಸಾಧನ ನಂತರ ತಿಳಿವುದು
ವಿಧಿ ಜನಕನ ಪದಪಿಡಿವುದಕೆ ೧
ಸ್ನಾನಜಪಾಹ್ನೀಕಗಳೆಲ್ಲವು ತನ್ನ
ಧ್ಯಾನಕೆ ಶ್ರೀಹರಿ ನಿಲ್ವುದಕೆ
ಧ್ಯಾನಕೆ ಶ್ರೀಹರಿ ನಿಂತ ಮೇಲೆ ಸು
ಜ್ಞಾನದಿಂದ ತನ್ನರಿವುದಕೆ ೨
ನೆಲೆ ಇಲ್ಲದ ಕರ್ಮಾಳಿಗಳ್ ದೇಹದ
ಮಲಿನ ತೊಳೆದು ಶುದ್ಧಿಗೈವುದಕೆ
ಮಲಿನ ತೊಳೆದು ಮನಶುದ್ಧದಿ ಹೃದಯದಿ
ಇಳೆಯರಸನ ನೆಲೆ ಅರಿವುದಕೆ ೩
ಅಗ್ನಿ ಹೋತ್ರಯಜ್ಞಾದಿ ಕಾರ್ಯಗಳ್
ಶೀಘ್ರದಿ ಹರಿಯನು ಕಾಂಬುದಕೆ
ಶೀಘ್ರದಿ ಹರಿಯನು ಕಂಡ ಮ್ಯಾಲೆ ಇವು
ಅಗ್ರಜವಲ್ಲೆಂದರಿವುದಕೆ ೪
ರಂಗನ ಮೂರ್ತಿಯನಿಟ್ಟು ಪೂಜಿಸುವುದು
ಅಂಗದಲ್ಲಿ ತಾನು ಕಾಂಬುದಕೆ
ಅಂಗದಲ್ಲಿ ತಾನು ಕಂಡ ಮೇಲೆ ಇವು
ಅಂಗಡಿ ಎಂತೆಂದರಿವುದಕೆ ೫
ನಿತ್ಯ ನೈಮಿತ್ತಿಕ ಕರ್ಮಗಳೆಲ್ಲವು
ಚಿತ್ತದಿ ಹರಿಯನು ತೋರ್ಪುದಕೆ
ಚಿತ್ತದಿ ಹರಿಯನು ಕಂಡ ಮೇಲೆ ಇವು
ಮತ್ರ್ಯರಿಗೆಸಗಿ ಮೌನಾಗ್ವುದಕೆ ೬
ಚಾಂದ್ರಾಯಣ ವ್ರತ ಉಪವಾಸಗಳು
ಇಂದ್ರಿಯ ನಿಗ್ರಹ ಮಾಡ್ವದಕೆ
ಇಂದ್ರಿಯ ಚಲಿಸದೆ ಮನ ಧೃಡವಾಗಲು
ಹಿಂದಿನ ಹಂಬಲ ತ್ಯಜಿಪುದಕೆ ೭
ಮಧ್ವಶಾಸ್ತ್ರದ ಸಾರತತ್ವ ಮನ
ಶುದ್ಧಿಯಗೈಸುತ ಸುಖಿಪುದಕೆ
ಶುದ್ಧರಾದ ಶ್ರೀ ಗುರು ಕರುಣವು ಅನಿ-
ರುದ್ಧನ ಹೃದಯದಿ ತೋರ್ವದಕೆ ೮
ನೇಮದಿ ದ್ವಾದಶ ನಾಮಧಾರಣೆ ಹರಿ
ನಾಮದ ದೇಹ ಬೆಳಗ್ವದಕೆ
ಕಾಮಕ್ರೋಧವ ಬಿಡುವುದು ವಳಗಿನ
ಶ್ರೀ ಮನೋಹರನನು ಕಾಂಬುದಕೆ ೯
ಹೊರಗಿನ ವಸ್ತು ದೃಷ್ಟಿಸುವುದು ಶ್ರೀ ಹರಿ
ವರ ವಿಶ್ವರೂಪವ ತಿಳಿವುದಕೆ
ವರ ವಿಶ್ವರೂಪಧ್ಯಾನದಿಂದ ತನ್ನ
ವರ ಬಿಂಬನ ಕಂಡು ನಲಿವುದಕೆ ೧೦
ಅರಗಣ್ಣ ಮುಚ್ಚುವ ಅಭ್ಯಾಸಗಳೆಲ್ಲ
ಸ್ಥಿರಮನವಾಗುವ ಕಾರಣಕೆ
ಸ್ಥಿರಮನ ಶ್ರೀ ಹರಿ ದಯ ಮಾಡಲು ನೇತ್ರ
ತೆರೆಯದೆ ಬಿಂಬನ ಕಾಂಬುದಕೆ ೧೧
ಶಾಸ್ತ್ರದಿ ಪೇಳುವ ಧ್ಯಾನ ಪ್ರಕರಣವು
ಶ್ರೋತ್ರದಿ ಕೇಳುತ ತಿಳಿವುದಕೆ
ಗಾತ್ರದಿ ಶ್ರೀ ಗುರು ಕೃಪೆ ಮಾಡಲು ವಳ
ನೇತ್ರದಿ ಸರ್ವವು ಕಾಂಬುದಕೆ ೧೨
ಪಕ್ಷಮಾಸ ವ್ರತ ಪಾರಾಯಣ ಅಪ-
ರೋಕ್ಷ ಪುಟ್ಟಲು ದಾರಿ ತೋರ್ವದಕೆ
ಶಿಕ್ಷ ರಕ್ಷಕರಾದ ಗುರುಕರುಣವು ಅಪ-
ರೋಕ್ಷ ಪುಟ್ಟಿಸಿ ನಿಜವರಿವುದಕೆ೧೩
ಪರಿ ಪರಿ ಜನರನು ಸೇವಿಸುವುದು ತನ್ನ
ಪರಮಾರ್ಥತೆ ದೂರಾಗ್ವದಕೆ
ಗುರುಚರಣವ ಸೇವಿಸುವುದು ಶ್ರೀ ಹರಿ
ಅರಘಳಿಗಗಲದೆ ಪೊರೆವುದಕೆ ೧೪
ಡಾಂಭಿಕ ಸಾಧನವೆಲ್ಲವು ಶ್ರೀ ಹರಿ
ಡಿಂಬದೊಳಗೆ ಮರೆಯಾಗ್ವದಕೆ
ನಂಬಿ ಶ್ರೀ ಹರಿ ಗುರು ಚರಣವ ಪೊಗಳ್ಪದು
ಡಿಂಬದೊಳಗೆ ಹರಿ ಕಾಂಬುದಕೆ೧೫
ಕಷ್ಟದ ಕರ್ಮ ವೈರಾಗ್ಯಗಳೆಲ್ಲವು
ಪುಟ್ಟಿಸಲೂ ಭಕ್ತಿ ಜ್ಞಾನಕ್ಕೆ
ಪುಟ್ಟಲು ಭಕ್ತಿ ಜ್ಞಾನ ಪಾಂಡುರಂಗ
ವಿಠ್ಠಲನೊಬ್ಬನ ಪಿಡಿವುದಕೆ ೧೬
ಯಾತ್ರೆ ತೀರ್ಥ ಚರಿಪುದು ಶ್ರೀ ಹರಿ ತನ್ನ
ಗಾತ್ರದಲ್ಲಿರುವನೆಂದರಿವುದಕೆ
ಗಾತ್ರವೆ ಕ್ಷೇತ್ರವೆಂದರಿತ ಮೇಲೆ ಸ
ರ್ವತ್ರದಿ ವಿಠಲನ ಕಾಂಬುದಕೆ೧೭
ಎಂತೆಂತೋ ಮಾರ್ಗಗಳರಸುವುದು
ಚಿಂತನೆಗೆ ಹರಿ ನಿಲ್ವುದಕೆ
ಚಿಂತನೆಗೆ ಹರಿ ನಿಂತ ಮೇಲೆ ತಾನು
ಶಾಂತನಾಗಿ ಜಡನಾಗ್ವದಕೆ ೧೮
ಹೊರಗಿನ ಸಂಸ್ಕಾರಗಳೆಲ್ಲವು ತನ್ನ
ವಳಗಿನ ಸಂಸ್ಕಾರ ತೆರೆವುದಕೆ
ವಳಗಿನ ಸಂಸ್ಕಾರ ತೆರೆದಮ್ಯಾಲೆ ತನ್ನ
ಇರವರಿತು ಸುಖ ಸುರಿವುದಕೆ೧೯
ಸಾಸಿರ ಜನ್ಮದ ಸಾಧನಗಳು ಹರಿ
ದಾಸನಾಗಿ ತಾನು ಮೆರೆವುದಕೆ
ದಾಸನಾದ ಮೇಲೆ ಕ್ಲೇಶಕೆ ಸಿಲುಕದೆ
ಶ್ರೀಶನ ಹೃದಯದಿ ಕಾಂಬುದಕೆ ೨೦
ಸಾರತತ್ವವನು ಅರಿವುದು ಗುರು ಮಧ್ವ-
ಚಾರ್ಯರ ಮಾರ್ಗವ ಪಿಡಿವುದಕೆ
ಪ್ರೇರಕ ಗೋಪಾಲಕೃಷ್ಣವಿಠಲ ಮನ
ಸೇರಲು ಕಂಡು ತಾ ನಲಿವುದಕೆ ೨೧

 

(ನು. ೪) ಕಾರ್ಯಕಾರಣ ಕರ್ತ

ಎಲ್ಲಿ ಪೋದೆಯೊ ಕೃಷ್ಣ ಸೊಲ್ಲು ಕೇಳುತ ಈಗ
ಮೆಲ್ಲನೆ ಎನ್ನ ಮನದಲ್ಲಿ ನಿಲ್ಲೊ ಪ.
ಪುಲ್ಲಲೋಚನ ದೇವ ಎಲ್ಲಿಗು ಪೋಗದೆ
ಉಲ್ಲಾಸಪಡಿಸುತ ನಿಲ್ಲೊ ಹೃದಯದಲಿ ಅ.ಪ.
ಸ್ಥಾವರ ಜಂಗಮ ವ್ಯಾಪ್ತನಾಗಿಹ ದೇವ
ದೇವ ಎನ್ನ ಮನದಿ ನಿಲುವುದು ಘನವೆ
ಶ್ರೀವರ ನೀನೀಗ ಕಾವನೆಂದರಿತಿರೆ
ಸಾವಕಾಶವಿದೇಕೆ ಭಾವಜನಯ್ಯನೆ ೧
ಇಷ್ಟು ದಿನವು ನಿನ್ನ ಮುಟ್ಟಿ ಪೂಜಿಸಲಿಲ್ಲ
ಸಿಟ್ಟೇನೊ ನಿನಗಿದರ ಗುಟ್ಟು ತಿಳಿಯದೆ
ಬಿಟ್ಟುಬಿಡು ಈ ಬಿಂಕ ಕೊಟ್ಟು ಅಭಯ ಸಲಹೊ
ಇಷ್ಟ ಸ್ಥಾನದಿ ನಿನ್ನ ಮುಟ್ಟಿ ಪೂಜಿಸಿರುವೆ ೨
ಸರಿಯಲ್ಲ ನಿನಗಿದು ಕರೆದರೆ ಭಕ್ತರು
ತ್ವರಿತದಿಂದಲಿ ಬರುವ ಬಿರುದಿಲ್ಲೆ ನನಗೆ
ಸರಿ ಬಂದರೆ ಬಾರೊ ಬಾರದಿದ್ದರೆ ಬಿಡೊ
ಅರಿತು ನಿನ್ನಯ ನಾಮ ಅರುಹುವ ಮತಿ ನೀಡೊ ೩
ಕಾರ್ಯಕಾರಣಕರ್ತ ಪ್ರೇರ್ಯಪ್ರೇರಕರೂಪ
ಉರ್ವಿಗೊಡೆಯ ಸರ್ವ ನಿರ್ವಾಹಕ
ಗರ್ವರಹಿತಳ ಮಾಡಿ ಸರ್ವದಾ ಪೊರೆದರೆ
ಸರ್ವಾಧಿಪತಿಯೆಂದು ಸಾರ್ವೆನೊ ನಾನಿಂದು ೪
ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತನೊಬ್ಬನೆ ನೀನು
ಶ್ರೇಷ್ಠನಾಗಿರುವೆಯಾ ಸರ್ವರಿಗೆ
ಬಿಟ್ಟಿರುವೆಯೊ ಜಗದ ಅಷ್ಟೂ ವಸ್ತುಗಳಿಂದ
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲದೇವ ೫

 

೨೧೪
ಎಲ್ಲಿರುವೆಯೊ ಎಂದು | ತಲ್ಲಣಗೊಳುತ್ತಿದ್ದೆ
ಇಲ್ಲೆ ಬಂದೆಯೊ ದೇವನೆ ಪ.
ಪುಲ್ಲಲೋಚನ ಎನ್ನ ಉಲ್ಲಾಸಗೊಳಿಸುತ
ನಿಲ್ಲೊ ಹೃತ್ಕಮಲದಿ ನೀ ಬಹು ಮುದದಿ ಅ.ಪ.
ಕಪಟನಾಟಕ ದೇವ | ಅಪರಿಮಿತ ಮಹಿಮ
ಗುಪಿತರೂಪನೆ ನಿನ್ನನು
ವಿಪುಲಮತಿಯಿಂದ ವರ್ಣಿಸಲಾಪೆನೆ
ಸಪುತ ಸಪುತ ಭುವನೇಶ ಕೃಪೆಮಾಡೊ
ಕೃಪಣವತ್ಸಲ ನಿನ್ನ ಕಾಣದೆ
ಅಪರಿಮಿತವಾಗಿ ನೊಂದೆನಯ್ಯ
ತಪಿಸುವುದು ನಿನಗುಚಿತವೆ ಹರಿ
ಕೃಪೆ ಮಾಡೊ ಬೇಗ ಶ್ರೀನಿವಾಸ ೧
ಹರಿ ನಿನ್ನ ಪಾದವ | ನಿರುತದಿ ಧ್ಯಾನಿಪ
ವರಮತಿ ಎನಗೆ ನೀಡೊ
ಗರುವಿಕೆಯನೆ ಬಿಡಿಸು ಶರಣಳ ಪೋಷಿಸು
ಸುರವರ ನಿನ್ನಂಘ್ರಿಗೆರಗಿ ಬಿನ್ನೈಸುವೆ
ಕರೆಕರೆಗೊಳಿಸುವುದುಚಿತವೆ
ತೊರೆದರೆ ಎನ್ನ ಪೊರೆವರ್ಯಾರೊ
ಥರವಲ್ಲ ನಿನಗಿನ್ನು ಕೇಳಿದು
ಪೊರೆಯದಿದ್ದರೆ ನಗರೆ ಭಕ್ತರು ೨
ಮಂದಮತಿಯಿವಳೆಂದು | ಹಿಂದು ಮಾಡಿದರÉನ್ನ
ಕುಂದು ನಿನಗೆ ತಪ್ಪದೊ
ಬಂಧನ ಬಿಡಿಸು ನೀ ಬಂಧನದೊಳಗಿಡು
ಮಂದಿರ ಹೃದಯದಿ ಎಂದೆಂದಿಗಗಲದೆ
ಮಂದರೋದ್ಧರ ಕೇಳಿಸಿತೆ ಈ
ಮಂದಭಾಗ್ಯೆಯ ಮಾತು ಕಿವಿಗೆ
ಮಂದಗಮನೆಯ ಮಧ್ಯೆ ಇರುವಗೆ
ಮಂದಹಾಸ ಮುಖೇಂದು ವದನನೆ ೩
ಅಜಸುರ ವಂದ್ಯನೆ | ಭಜಿಸಲಾಪೆನೆ ನಿನ್ನ
ತ್ರಿಜಗದೊಡೆಯ ಹರಿಯೆ
ವಿಜಯಸಾರಥಿ ಎನ್ನ ರಜತಮವನೆ ಕಳೆದು
ಕುಜನರೊಳಿಡದಲೆ ನಿಜಗತಿ ಪಾಲಿಸೊ
ಗಜವರದ ಗಂಭೀರ ದೇವನೆ
ಧ್ವಜವಜ್ರೌಕುಶ ಪಾದಕಮಲನೆ
ಭಜಿಸಿದವರಿಗೊಲಿವ ದೇವನೆ
ಭುಜಗಭೂಷಣನಿಂದ ವಂದ್ಯನೆ ೪
ಸೃಷ್ಟ್ಯಾದಿ ಕರ್ತನೆ | ಎಷ್ಟು ಬೇಡಲೊ ನಾನು
ಇಷ್ಟ ದೈವವೆ ಕೇಳಲೊ
ಭ್ರಷ್ಟತನವನೆಣಿಸದೆ
ದೃಷ್ಟಿಯಿಂದಲಿ ನೋಡಿ
ಕಷ್ಟಬಿಡಿಸಿದರೆ ಮುಟ್ಟಿಪೂಜಿಸುವೆನೊ
ದಿಟ್ಟ ಗೋಪಾಲಕೃಷ್ಣವಿಠ್ಠಲ
ಇಷ್ಟು ಬಿನ್ನಪ ನಷ್ಟ ಮಾಡದೆ
ಕೊಟ್ಟು ಧೈರ್ಯವ ಮೆಟ್ಟಿ ಪಾಪವ
ಸುಟ್ಟು ಕರ್ಮವ ಕೃಷ್ಣ ಸಲಹೊ ೫

 

(ನು. ೪) ಇದರಲ್ಲಿ ದಶಾವತಾರದ ಉಲ್ಲೇಖ

ಎಷ್ಟು ಕೂಗಲು ದಯ | ಪುಟ್ಟಲಿಲ್ಲವೊ ನಿನಗೆ
ಬೆಟ್ಟದೊಡೆಯ ಹರಿಯೆ ಪ.
ಸಿಟ್ಟೇಕೆ ಎನ್ನೊಳು ಕೃಷ್ಣಮೂರುತಿ ನಿನಗೆ
ಬಿಟ್ಟರೆ ನೀ ಎನ್ನ ಸೃಷ್ಟಿಯೊಳಾರುಂಟೊ ಅ.ಪ.
ಪರಮ ಪಾತಕಿಯೆಂದು | ತೊರೆದರೆ ನೀ ಎನ್ನ
ಮೊರೆಬೀಳಲಿನ್ನಾರಿಗೆ
ಕರೆಕರೆಗೊಳಿಪುದು ತರವಲ್ಲ ಕೇಳಿನ್ನು
ಕರುಣಾಮೂರುತಿ ಎಂಬೊ ಬಿರುದು ಪೊತ್ತಿಲ್ಲವೆ
ಸರಿಯೆ ನಿನಗಿದು ಕೊರಗಿಸುವುದು
ಜರಿದು ಬಳಲುವೆ ಧರೆಯೊಳೀಗ ನಾ
ಸುರರ ರಕ್ಷಕ ಪರಮಪಾವನ
ಕರವ ಮುಗಿವೆ ದರುಶನವ ನೀಡೊ ೧
ನೀನಲ್ಲದೆ ಇನ್ನು | ನಾನಾರ ಭಜಿಸಲೊ
ಗಾನವಿಲೋಲ ಹರಿ
ಕಾನನದೊಳು ಕಣ್ಣು ಕಾಣದಂತಾಗಿದೆ
ಧ್ಯಾನಕೆ ಸಿಲುಕದೆ ನೀನೆನ್ನ ಕಾಡುವೆ
ಮಾನ ಪ್ರಾಣ ಶರೀರ ನಿನ್ನದೊ
ನಾನು ಅನ್ಯರ ಭಜಿಸಲಾರೆನೊ
ಹೀನಬುದ್ಧಿಯ ಬಿಡಿಸಿ ಗುರುಗಳ
ಧ್ಯಾನವೆನಗಿತ್ತು ನೀನು ಕಾಯೊ ೨
ಅನ್ನಪಾನವ ಬಿಟ್ಟು | ನಿನ್ನನು ಸ್ತುತಿಸಲು
ಇನ್ನು ಕರುಣವಿಲ್ಲವೆ
ಇನ್ನು ಸೈರಿಸಲಾರೆ ಘನ್ನ ಮಹಿಮನೆ ದುಃಖ
ನಿನ್ನ ಮನಸು ಕರಗಲಿನ್ನೇನಗೈಯ್ಯಲೊ
ಎನ್ನ ಯತ್ನವು ವ್ಯರ್ಥವಾಯಿತು
ಇನ್ನು ನೀ ದಯೆಗೆಯ್ಯಬೇಕೊ
ಮುನ್ನ ಮಾಡಿದ ತಪ್ಪನೆಣಿಸದೆ
ಎನ್ನ ದೃಷ್ಟಿಗೆ ನಿನ್ನ ತೋರೊ ೩
ಸುತನ ಮೊರೆಯನೆ ಕೇಳಿ | ಹಿತದಿ ವೇದವನಿತ್ತೆ
ಮಥಿಸಿ ಶರಧಿ ಅಮೃತ ಸುರರಿಗಿತ್ತೆ
ಕ್ಷಿತಿಯ ಬಾಧೆಯ ಬಿಡಿಸಿ ಸುತನ ಬಾಧಿಸೊವೊನ
ಹತಮಾಡಿ ಇಂದ್ರಗೆ ಗತಿಸಿದ ಪದವಿತ್ತೆ
ಕ್ಷಿತಿಯನಾಳ್ವರ ಹತವಗೈಸಿದೆ
ಕ್ಷಿತಿಸುತೆಯ ಪ್ರೇಮದಲಿ ತಂದೆ
ಹಿತದಿ ಪಾಂಡವ ಸುತರ ಕಾಯ್ದೆ
ವ್ರತವ ಕೆಡಿಸಿ ಕಲಿಹತವಗೈದೆ ೪
ಇಂತು ಎಲ್ಲರ ಕಾಯ್ದ | ಕಂತು ಜನಕನೆ ನಿನಗೆ
ನ್ನಂತರ ತಿಳಿಯದೇನೋ
ಸಂತತ ಗೋಪಾಲಕೃಷ್ಣವಿಠ್ಠಲ ನಿನ್ನ
ಶಾಂತರೂಪವ ಎನ್ನ ಅಂತರಂಗದಿ ತೋರೊ
ಚಿಂತಿತಾರ್ಥ ಪಂಥಗಾರನೆ
ಎಂತು ದಿನಗಳು ಸಂದು ಹೋದುವೊ
ಇಂತು ನಿರ್ದಯವೇಕೊ ಇನ್ನು
ಸಂತತಾನಂದನಂತಶಯನ ೫

 

೨೧೫
ಎಷ್ಟು ದಿವಸ ಹೀಗೆ ಕಳೆಯಲೊ ಗೋಪಾಲಕೃಷ್ಣ
ಎಷ್ಟು ದಿವಸ ಹೀಗೆ ಕಳೆಯಲೊ ಪ.
ಎಷ್ಟು ದಿವಸ ಹೀಗೆ ಎನ್ನ ಸೃಷ್ಟಿಗೊಡೆಯ ಬಳಲಿಸುವೆಯೊ
ಕಷ್ಟಪಡಲಾರೆ ಭವದಿ ದೃಷ್ಟಿಯಿಂದ ನೋಡಿ ಸಲಹೋ ಅ.ಪ.
ನಾನಾ ಜನ್ಮದಿ ತೊಳಲಿಸಿ ಎನ್ನನು
ನೀನೆ ತಂದೆಯೊ ಮಾನವತ್ವದಿ
ನಾನು ಎಂಬುದು ಬಿಡಿಸಿ ಈಗ
ನೀನೆ ಕರ್ತನೆನಿಸಿ ಕಾಯೋ೧
ದೇಹಸ್ಥನೆಂದೆನಿಸಿ ಎನ್ನ
ದೇಹ ಮಧ್ಯದಿ ಕಾಣದಿಹರೆ
ದೇಹಗಳನು ಧರಿಸಲಾರೆ
ದೇಹ ಮೋಹ ಬಿಡಿಸದಿಪ್ಪರೆ ೨
ಭೃತ್ಯವತ್ಸಲನೆಂದು ನಿನ್ನ
ಭಕ್ತರೆಲ್ಲರು ಕರೆಯುತಿಹರೊ
ಪೊತ್ತ ಬಿರುದು ಬಿಡುವರೇನೊ
ಭೃತ್ಯಳೆಂದು ಎನ್ನ ಸಲಹೊ೩
ಪೋಗುತಿದÉ ದಿವಸ ನೋಡು
ಬೇಗ ಬೇಗನೆ ದಯವ ಮಾಡು
ಭೋಗದಲಿ ವೈರಾಗ್ಯ ನೀಡು
ಭಾಗವತರ ಸಂಗ ಕೊಡು ೪
ಕರ್ಮದಲ್ಲಿ ಶ್ರದ್ಧೆಯಿಲ್ಲ
ಧರ್ಮದಲ್ಲಿ ಬುದ್ಧಿಯಿಲ್ಲ
ನಿರ್ಮಲದ ಜ್ಞಾನವಿಲ್ಲ
ನಿರ್ಮಲಾತ್ಮ ಬಲ್ಲೆಯಲ್ಲ ೫
ಅಂಧಕಾರದಿ ಎನ್ನನಿರಿಸಿ
ಚಂದವೇನೋ ಹೀಗೆ ಮಾಳ್ಪದು
ದ್ವಂದ್ವ ಕರ್ಮ ಸ್ವೀಕರಿಸಿ
ಮುಂದೆ ಕರ್ಮವಿಡದೆ ಸಲಹೋ ೬
ಅಪಾರ ಜನುಮದಲ್ಲಿನ
ಪಾಪ ಸಮೂಹಗಳ ತರಿದು
ಶ್ರೀಪಾದ ಸ್ಮರಣೆ ನೀಡೋ
ಗೋಪಾಲಕೃಷ್ಣವಿಠಲ ೭

 


ಎಷ್ಟು ಪುಣ್ಯ ಮಾಡಿ ಇಲ್ಲಿ ಇಟ್ಟಿಗೆ ನೆಲಸಿತೋ
ವಿಠ್ಠಲನ್ನ ಚರಣ ಶಿರದಿ ಮೆಟ್ಟಿಸಿ ಕೊಂಡಿತೋ ಪ.
ಭಕ್ತನಾದ ಪುಂಡಲೀಕನ ಕರಕೆ ಸೋಕಿತೋ
ಚಿತ್ತಧೃಡನು ಎಸೆಯೆ ರಂಗನ ಪಾದಕೆರಗಿತೋ ೧
ಹರಿಯೆ ಎನ್ನ ಶಿರವ ಮೆಟ್ಟೆಂದ್ಹರಿಕೆ ಮಾಡಿತೋ
ಪರಮ ಪುರುಷ ಬಂದು ನಿಲ್ಲೆ ಖ್ಯಾತಿ ಪೊಂದಿತೋ ೨
ಒಲಿದು ಮೆಟ್ಟಿದಂಥ ಪಾದ ಶಿರದಿ ಪೊತ್ತಿತೋ
ಇಳೆಯನಳೆದ ಪಾದ ಇಲ್ಲಿ ಅಡಿಗಿಸಿಕೊಂಡಿತೋ ೩
ಗೋಕುಲದಲಿ ಮೆರೆದ ಪಾದ ಸೋಕಿಸಿಕೊಂಡಿತೋ
ನಾಕ ಜನರು ವಂದಿಪ ಪಾದ ನನ್ನದೆಂದಿತೋ ೪
ಯಮುನ ದಡದಿ ಸುಳಿದ ಪಾದಯತ್ನದಿ ಪೊಂದಿತೋ
ರಮೆಯು ಸೇವಿಪಂಥ ಪಾದ ರಜವ ಧರಿಸಿತೋ ೫
ಬಂಧ ಬಿಡಿಸುವಂಥ ಪದದಿ ಬಂಧಿಸಿಕೊಂಡಿತೋ
ಸುಂದರ ಸುಕೋಮಲನ ಪಾದ ಸೂಕ್ಷ್ಮದಿ ಪೊತ್ತಿತೋ ೬
ಪೊಗಳಲೊಶವು ಅಲ್ಲದ ಪಾದ ಘಳಿಗೆ ಬಿಡದಾಯ್ತೋ
ಜಗದಲಿಟ್ಟಿಗೆ ನಿಲಯನೆಂಬೊ ಲಾಭ ಹೊಂದಿತೋ ೭
ನಂದ ಕಂದ ಬಂದನೆಂದು ನಲಿದು ನಿಂತಿತೋ
ಇಂದಿರೇಶ ಪೋಗದಿರೆಂದು ಇಲ್ಲೆ ಹಿಡಿದಿತೋ ೮
ಪಾಪ ಕಳೆದು ಪಾವನ್ನದಲಿ ಮುಕ್ತಿ ಪೊಂದಿತೋ
ಗೋಪಾಲಕೃಷ್ಣವಿಠ್ಠಲನ ಚರಣ ಸೇರಿತೋ೯

 

೨೪೨
ಎಷ್ಟು ಪುಣ್ಯ ಮಾಡೀ ಕಂಬ
ವಿಠ್ಠಲನ್ನ ಗುಡಿ ಸೇರಿತೋ ಪ.
ಶ್ರೇಷ್ಠ ಪುರಂದರ ದಾಸರನ್ನು
ಕಟ್ಟಿಸಿಕೊಂಡು ತಾ ಪೂಜೆಗೊಂಡಿತೊ ಅ.
ಎಲ್ಲಾ ಕಂಬಗಳಿದ್ದರೂ ಇಂತು
ಇಲ್ಲೀ ಇದಕೆ ಈ ಖ್ಯಾತಿಯು ಬಂತು
ಬಲ್ಲಿದ ಸುಜನ ವಂದಿಪರಿ
ಪುಲ್ಲನಾಭನ್ನ ಕೃಪೆಯ ಪಡೆದಿತು ೧
ಮಾಯಾಕಾರನು ನೀರನು ತಂದು
ಈಯಲು ಪುರಂದರದಾಸರಿಗಂದು
ನೋಯಿಸೆ ತಿಳಿಯದೆ ಮನಕದ ತಂದು
ನ್ಯಾಯದಿ ಕಟ್ಟಿಸಿ ಹೊಡೆಸಿದನಂದು ೨
ದಾಸರಂತೆ ತಾನು ವೇಷವ ಧರಿಸಿ
ವೇಶ್ಯೆಗೆ ತನ್ನ ಕಂಕಣವನ್ನೆ ಕೊಡಿಸಿ
ತಾಸೊತ್ತಿನಾ ರಾತ್ರೆ ಹೊಡೆದದ್ದ ನೆನಸಿ
ವಾಸುದೇವ ಬೈಲಿಗೆಳೆಸಿದ ಬಿಗಿಸಿ ೩
ಜ್ಞಾನ ಪುಟ್ಟಲು ಹರಿಮಾಯವಿದೆಂದು
ಶ್ರೀನಿವಾಸ ತಾ ವಲಿದನು ಅಂದು
ಆನಂದದಿಂದೊಂದು ಕವನ ಗೈದು
ಶ್ರೀನಿಧೆ ಮುಟ್ಟಿತು ಮುಯ್ಯವಿದೆಂದು೪
ದಾಸರ ಅಂಗವು ಸೋಕಿದ್ದರಿಂದ
ಶ್ರೀಶನು ಹಗ್ಗದಿ ಬಿಗಿಸಿದ್ದರಿಂದ
ದಾಸರ ಪೆಸರಲಿ ಮೆರೆವುದರಿಂದ
ದೋಷ ಪೋಯಿತು ಕಂಬಕೆ ಭವ ಬಂಧ೫
ಹಿಂದೆ ಕಂಬದಿ ನರಹರಿ ಅವತರಿಸೆ
ಅಂದಿನ ಕಂಬವೆ ಈಗಿಲ್ಲ್ಲಿ ಉದಿಸೆ
ಸಿಂಧುಶಯನನ್ನ ದಾಸತ್ವ ವಹಿಸೆ
ಬಂದಿತು ವಿಠಲನ್ನ ಗುಡಿಯನಾಶ್ರೈಸೆ೬
ದಾಸರ ದರುಶನ ಕರ್ಮ ಕಳೆವುದು
ದಾಸರ ವಾಕ್ಶ್ರವಣ ಜ್ಞಾನವೀಯುವುದು
ದಾಸರ ಉಪದೇಶ ಹರಿಯ ತೋರುವುದು
ದಾಸರ ಸ್ಪರ್ಶವು ಮುಕ್ತಿಗೊಯ್ಯವುದು೭
ಕಂಭವೆ ಸಾಕ್ಷಿಯು ಈ ಕಲಿಯುಗದಿ
ಡಾಂಭಿಕ ಜನರಿಗೆ ತಿಳಿಯದು ಹಾದಿ
ಬೆಂಬಿಡದೆ ಹರಿ ಕಾಯುವ ಭರದಿ
ಇಂಬುಗೊಟ್ಟು ತನ್ನ ನಿಜ ದಿವ್ಯ ಪುರದಿ ೮
ದಾಸರ ಮಾರ್ಗವೆ ಸುಲಭವೆಂತೆಂದು
ದಾಸರ ಕೃಪೆ ದ್ವಾರ ವಲಿಯುವೆನೆಂದು
ದಾಸರ ದೂಷಿಸೆ ಗತಿ ಇಲ್ಲೆಂದು
ಶ್ರೀಶ ತಾನಿಲ್ಲೀ ನಿಂತನು ಬಂದು ೯
ಶ್ರೀ ರಮಾಪತಿ ಓಡಿ ಬಂದ ನಿಲ್ಲೆಂದೂ
ದ್ವಾರಕ ಪುರದೊಂದು ಕಂಭವೆ ಬಂದು
ಸೇರಿತೊ ವಿಠಲನ ಮಂದಿರವಂದು
ಸೂರೆಗೈದರೊ ಖ್ಯಾತಿ ದಾಸರು ಬಂದು ೧೦
ನಿಜದಾಸರಂಗಸಂಗದ ಫಲದಿ
ರಜತದ ಕಟ್ಟಿನಿಂ ಮೆರೆದಿತು ಜಗದಿ
ಸುಜನರ ಸಂಗದಿ ಮುಕುತಿಯ ಹಾದಿ
ಭುಜಗಶಯನ ತೋರುವ ನಿರ್ಮಲದಿ ೧೧
ತತ್ವವನಿದರಿಂದ ತಿಳಿವುದು ಒಂದು
ಉತ್ತಮತ್ವ್ವವು ಜಡಕಾಯಿತು ಬಂದು
ಉತ್ತಮರಾ ಪಾದ ಸೋಂಕಲು ಅಂದು
ವ್ಯರ್ಥವಾಗದು ಹರಿಭಕ್ತರೆ ಬಂಧು೧೨
ಪಾಪ ನಿರ್ಲೇಪವಾಗೋದು ವಿಠ್ಠಲನ್ನ
ಆಪಾದ ಮೌಳಿಯ ರೂಪ ದರುಶನ್ನ
ಈ ಪರಿ ಖ್ಯಾತಿ ಪೊಂದಿತು ಕಂಬ ಘನ್ನ
ಗೋಪಾಲಕೃಷ್ಣವಿಠ್ಠಲ ಸುಪ್ರಸನ್ನ ೧೩

 

೧೬೮
ಏನು ಮಹಿಮರೊ ನಮ್ಮ ಶ್ರೀ ಗುರುಗಳು
ಶ್ರೀನಿಧಿಗೆ ಪರಮ ಪ್ರಿಯರೆನಿಸಿ ಮೆರೆಯುವರು ಪ.
ಶಾಂತತ್ವವೆಂತೆಂಬ ಕವಚವನೆ ತೊಟ್ಟಿಹರು
ದಾಂತತ್ವದಾ ನಡುಕಟ್ಟು ಕಟ್ಟಿಹರು
ಸಂತೋಷ ಸುಖದಲಿ ಅಂತರಂಗದಿ ಹರಿಯ
ಚಿಂತನೆಯ ಮಾಡುತಲಿ ಮುಕ್ತಿಪೊಂದಿಹರು ೧
ವೈರಾಗ್ಯವೆಂತೆಂಬ ಆಯುಧವ ಧರಿಸಿಹರು
ಸೇರಿದವರನು ಪೊರೆವ ಕಂಕಣವ ಕಟ್ಟಿ
ನಾರಸಿಂಹನ ನಾಮ ಕರ್ಣಭೂಷಣ ಧರಿಸಿ
ನಾರಾಯಣನ ಗುಣದ ಹಾರ ಧರಿಸಿಹರು ೨
ಪರರಿಗುಪಕಾರವನೆಸಗುವ ಭುಜದ ಕೀರುತಿಯು
ವರತತ್ವ ಅರುಹುವ ವನಮಾಲಿಕೆಯು
ಸಿರಿ ಭಕ್ತಿಗುಣಗಳೆಂತೆಂಬೊ ವಸನಗಳು
ಧರಿಸಿರುವ ಮಹಿಮರ ಸರಿಗಾಣೆ ಜಗದಿ ೩
ಕುಂದದೆ ಭಕ್ತರನು ಪೊರೆಯುವ ಭಾರದ
ಅಂದದಾ ಮುಕುಟ ಶಿರದಲ್ಲಿ ಧರಿಸಿ
ತಂದೆ ಮುದ್ದುಮೋಹನದಾಸರೆಂದೆನಿಸುತ
ಮಂದಜ್ಞ ಮನ ಪಾಪ ಪಾದುಕೆಯ ಮೆಟ್ಟಿಹರು ೪
ಎಷ್ಟು ಹೇಳಲು ಸಾಧ್ಯ ಶ್ರೇಷ್ಠ ಗುರುಗಳ ಚರಿತೆ
ಪಟ್ಟವಾಳ್ವರು ಜ್ಞಾನ ಸಾಮ್ರಾಜ್ಯವ
ಕೆಟ್ಟ ಭವರೋಗವನು ಸುಟ್ಟು ಭಸ್ಮವ ಮಾಡಿ
ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ತೋರ್ವರು ೫

 

೧೩
ಏನು ಮಾಡಲಿ ವಿಠಲ ಏನು ತಿಳಿಯದು ವಿಠಲ
ಏನಿತ್ತು ಮೆಚ್ಚಿಸಲಿ ವಿಠಲಾ ಪ.
ಜ್ಞಾನ ಮೊದಲೇ ಇಲ್ಲ ಧ್ಯಾನ ಮಾಡುವುದರಿಯೆ
ನೀನಾಗೆ ವಲಿದೆನ್ನ ಸಲಹಯ್ಯ ವಿಠಲಯ್ಯ ಅ.ಪ.
ತಂದೆತಾಯಿಯು ನೀನೆ ಬಂಧು ಬಳಗವು ನೀನೆ
ತಂದವನುಭವದಲ್ಲಿ ಎನ್ನ ನೀನೆ
ಮುಂದೆ ಪೊರೆವವ ನೀನೆ ಹಿಂದೆ ಪೊರೆದವ ನೀನೆ
ಇಂದು ಪೊರೆಯುವನು ನೀನೇ
ಒಂದರಿಯೆ ತವ ಪದದ್ವಂದ್ವವೆ ಗತಿ ಎಂದು
ಇಂದು ಚರಣದಿ ಬಿದ್ದೆ ಪೊರೆಯಯ್ಯ ವಿಠಲಯ್ಯ ೧
ಹಿಂದಿನಾ ಭಕ್ತರನು ಪೊರೆದ ಕೀರುತಿ ನೋಡೆ
ಒಂದು ನಿಜವೆಂದರಿಯೆ ವಿಠಲಾ
ಇಂದೆನ್ನ ಕರಪಿಡಿದ ಮುಂದಕ್ಕೆ ಕರೆದು ನೀ
ಒಂದು ಮಾತನಾಡೆ ವಿಠಲಾ
ಅಂದಿನಾ ಭಕ್ತವತ್ಸಲನೆಂಬ ಕೀರ್ತಿ ನಿಜ
ವೆಂದು ತಿಳಿಯುತಲಿ ಆನಂದಿಸುವೆ ವಿಠಲಯ್ಯ ೨
ಸಿರಿವಂತರಿಗೆ ವಲಿವ ಬಿರುದೊಂದು ಘನವೆ ಕೇಳ್
ಅರಿಯೆನೈ ಅದರ ಪರಿ ವಿಠಲಾ
ಪರಿಪರಿಯಲಿ ನಿನ್ನ ಚರಣ ಪಿಡಿದಾಲ್ಪರಿಯೆ
ಥರವೆ ಗರುವಿಕೆ ಪೇಳು ವಿಠಲಾ
ತೆರದು ನೋಡದೆ ನೇತ್ರ ಕರದಭಯ ಪೇಳದಲೆ
ಇರುವ ಪರಿ ಕರುಣೆಗೆ ಸರಿಯೆ ಪೇಳ್ ವಿಠಲಯ್ಯ೩
ಹಿಂದೆ ಕೆಲವರ ಕಾಯ್ದುದೊಂದೆ ಕೀರ್ತಿಯು ಜಗದಿ
ಮಂದಿ ಹೊಗಳುವರದನೆ ಮತ್ತೆ ಮತ್ತೆ
ಇಂದು ಮುಂದೆ ಅಂಥ ಬಂದ ಭಕ್ತರು ಇಲ್ಲೆ
ಇಂದಿಲ್ಲವೇ ನಿನಗೆ ಆ ಶಕ್ತೀ
ಇಂದಿನವರಲಿ ಅಂಥ ಭಕುತಿ ಇಲ್ಲವೆ ಪೇಳು
ಇಂದಿರೇಶನೆ ಎನಗೆ ವಲಿಯದಿಹೆ ವಿಠಲಯ್ಯ ೪
ಅಂತರಂಗದಿ ನಿಂತು ಶಾಂತತ್ವ ಕೊಡುವುದಕೆ
ಚಿಂತೆ ಏತಕೆ ಪೇಳು ವಿಠಲಾ
ಸಂತತದಿ ನಿನಧ್ಯಾನ ಚಿಂತನೆಯ ಕೊಡು ಎನಗೆ
ಚಿಂತಿತಾರ್ಥಪ್ರದನೆ ವಿಠಲಾ
ಕಂತುಪಿತ ಗೋಪಾಲಕೃಷ್ಣವಿಠ್ಠಲ ಗುರುಗ
ಳಂತರ್ಯಾಮಿಯೆ ಪೊರೆಯೊ ಕರ ಪಿಡಿದು ೫

 

೨೫೪ *
ಏರಿ ಬಂದನು ಸೂರ್ಯ | ನಾರಾಯಣ ರಥ
ಏರಿ ಬಂದನು ಸೂರ್ಯ ಪ.
ಏರಿ ಬಂದನು ಸೂರ್ಯ ರಥವನು
ಭಾರಿ ವಸನಾಭರಣ ತೊಡುತಲಿ
ಮೂರುಲೋಕವ ಬೆಳಗು ಮಾಡುತ
ಭಾರಿ ತಮವನು ಛೇದಿಸುತ್ತ ಅ.ಪ.
ಸಪ್ತ ಹಯೆಗಳ್ ಕಟ್ಟುತ | ಚಕ್ರೇಕ ರಥಕೆ
ಸಪ್ತ ಋಷಿಗಳ್ ಪೊಗಳುತ | ಅರುಣ ಸಾರಥ್ಯ
ಸಪ್ತ ಜಿಹ್ವನ ತೆರದಿ ತೋರುತ
ಸಪ್ತ ಶರಧಿಯ ದಾಟಿ ಸಾರುತ
ಸಪ್ತಗಿರಿ ಮೇರು ಸುತ್ತುತಾ ರಥ
ಸಪ್ತಮಿ ಶುಭ ದಿವಸದಲ್ಲಿ ೧
ವಾಲಖಿಲ್ಯರು ಎದುರಲಿ | ಅರವತ್ತು ಸಾವಿರ
ಓಲಗ ತೊಡುತಲಲ್ಲೀ | ಹಿಂದು ಮುಂದಿನಲಿ
ಗಾಲಿದಬ್ಬುವ ರಕ್ಕಸೊಬ್ಬನು
ವ್ಯಾಳನೊಬ್ಬನು ರಜ್ಜರೂಪಕೆ
ಮೇಲೆ ಯಕ್ಷಕಿನ್ನರರು ಸುತ್ತಲು
ಕಾಲಕಾರಿವ ಕರ್ಮ ಸಾಕ್ಷಿಯು ೨
ಉತ್ತರಾಯಣ ಮಾಘದಿ | ಸ್ನಾನವಗೈದು
ಉತ್ತಮರಘ್ರ್ಯ ಕರದಿ | ಪಿಡಿಯುತ್ತ ಭರದಿ
ಉತ್ತಮ ಗಂಗಾದಿ ತೀರ್ಥದಿ
ಉದಿಸಿ ಬರುವಗೆ ಕೊಡುವ ಕತದಿ
ಚಿತ್ತ ನಿರ್ಮಲದಿಂದ ಕಾದಿರೆ
ಹತ್ತಿ ಛಾಯೆಯೆ ಸಹಿತ ರಥದಿ ೩
ಜಗಚಕ್ಷುವೆನಿಸಿದನೂ | ಧರ್ಮಜಗೆ ವಲಿದು
ಮಿಗೆ ಅಕ್ಷಪ್ರದನಾದನೂ | ಸವಿತೃ ನಾಮಕನೂ
ಬಗೆ ಬಗೆಯ ಜೀವರುಗಳಯುವ
ತೆಗೆದು ಸೆಳೆಯುತ ದಿನದಿನದಲಿ
ನಿಗಮಗೋಚರ ನಾಜ್ಞೆಧಾರಕ
ಸುಗುಣರಿಗೆ ಸುಜ್ಞಾನವೀಯುತ ೪
ಶಂಖ ಚಕ್ರಾ ಕಮಲ | ಗದೆಯ ಧರಿಸಿ
ಕಿಂಕರಾದ್ಯರ ನುತಿಗಳ | ಕೇಳುತ್ತ ಬಹಳ
ಶಂಖ ಚಕ್ರಾಂಕಿತನು ಶಿರಿಸಹ
ಶಂಕಿಸದೆ ತನ್ನ ಹೃದಯದಲ್ಲಿರೆ
ಬಿಂಕ ಗೋಪಾಲಕೃಷ್ಣವಿಠಲಗೆ
ಕಿಂಕರನು ತಾನಂದು ಪೊಗಳುತ ೫

 

೯೩
ಏಳಮ್ಮ ಕೊಲ್ಲಾಪುರಧೀಶೆ | ಇನ್ನೂ
ಭಾಳ ಹೊತ್ತಾಯಿತು ವೈಕುಂಠವಾಸೆ ಪ.
ಸೃಷ್ಟಿಸೆಂದೆನುತ ಆಂಬ್ರಣಿರೂಪದಿಂದ್ಹರಿ
ಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕು
ಅಷ್ಟ ಭುಜದ ಲಕುಮಿ ಪ್ರಕೃತಿರೂಪಿಣಿಯಾಗಿ
ಸೃಷ್ಟಿಕಾರ್ಯಕೆ ಅನುವಾಗಬೇಕು ೧
ಸಕಲ ದೇವತೆಗಳ ಸೃಷ್ಟಿ ಮಾಡಲಿಬೇಕು
ಮುಕುತಿಯೋಗ್ಯರ ಸೇವೆ ಕೊಳ್ಳಬೇಕು
ಸಕಲರೂಪದಲಿ ಶ್ರೀಹರಿಯ ಸೇವಿಸಬೇಕು
ಅಕಳಂಕÉ ಆದಿದೇವತೆ ಎನಿಸಬೇಕು ೨
ಶ್ರೀ ಪದ್ಮಭವೆ ವೆಂಕಟೇಶನ ಕೂಡುತ
ನೀ ಪರಿಪರಿ ಲೀಲೆಗೈಯ್ಯಬೇಕು
ಗೋಪಾಲಕೃಷ್ಣವಿಠ್ಠಲನ ವಕ್ಷಸ್ಥಳ
ವ್ಯಾಪಿಸಿ ಭಕ್ತರ ಕಾಪಾಡಬೇಕು ೩

 

೧೪
ಏಳು ಗೋಪಾಲ ಬಾಲ ಇನ್ನೂ
ಭಾಳ ಹೊತ್ತಾಯಿತು ಭಕ್ತ ಪರಿಪಾಲ ಪ.
ಮುನಿಜನರೆದ್ದು ಪೂಜಿಸೆ ನಿನ್ನ ನಿಂತಿರೆ
ಮನುಜರೆಲ್ಲರೂ ಕಾದಿಹರು ದರುಶನಕೆ
ಸನಕಾದಿ ವಂದಿತ ಸರ್ವೇಶನೆಂತೆಂದು
ವಿನಯದಿಂದಲಿ ನುತಿಪರು ಭಾಗವತರು ೧
ತಾರೆಗಳಡಗಿತು ಕಮಲಗಳರಳಿತು
ಪೂರ್ವ ದಿಕ್ಕಿನಲಿ ತೋರುವ ರವಿ ಉದಯ
ಭೇರಿ ತುತ್ತೂರಿ ನಗಾರಿ ಬಾರಿಸುತಿದೆ
ಸಾರಿ ಕೂಗುತಲಿದೆ ಕೋಳಿ ವೃಂದಗಳು ೨
ಬಾಲಲೀಲೆಗಳಿಂದ ಗೋವಳರೊಡನಾಡಿ
ಭಾಳ ಆಯಾಸವಾಗಿಹುದೆ ಕಂದಯ್ಯ
ಬಾಲೆ ಗೋಪ್ಯಮ್ಮ ನಿನ್ನ ಲಾಲಿಸಲಿಲ್ಲವೆ
ಬಾಲಯತಿಗಳು ಪೂಜಿಸುವರೇಳಯ್ಯ ೩
ಬಿಸಿಬಿಸಿ ನೀರು ಪಂಚಾಮೃತವೆರೆಯುತ
ಹಸನಾದ ಪಾಲು ಸಕ್ಕರೆ ಉಂಡೆಗಳು
ಹಸುಗೂಸು ನಿನಗೆ ಹುಗ್ಗಿಯು ದೋಸೆ ಪೊಂಗಲು
ಬಿಸಜಾಕ್ಷ ಯತಿಗಳರ್ಪಿಸುವರೇಳಯ್ಯ ೪
ನುತಿ ಕೇಳಲಿಲ್ಲ ಆ ದಣಿದೆಂದು ಮಲಗಿದ್ಯಾ
ಶ್ರುತಿ ವೇದತತಿಗಿಂತ ಚತುರ ಮಾತಿನೊಳು
ಹಿತದಿ ಯಶೋದೆ ಎಬ್ಬಿಸಲೆಂದು ಮಲಗಿದ್ಯಾ
ಚ್ಯುತದೂರ ಗೋಪಾಲಕೃಷ್ಣವಿಠ್ಠಲಯ್ಯ ೫

 

೧೫
ಏಳು ಪಂಡರಿವಾಸ ಏಳು ಶ್ರೀ ದೇವೇಶ
ಏಳು ಮುಕ್ತ ಗಿರೀಶ ಏಳು ಹೃದೇಶ ಪ.
ಏಳು ಮೂಲೋಕದೀಶ ಏಳು ಹೃತ್ಪದವಾಸ
ಏಳು ಏಳಯ್ಯ ಶ್ರೀಶಾ ಏಳು ಸರ್ವೇಶಾ ಅ.ಪ.
ಗಂಗಾ ಭಾಗೀರಥಿ ತುಂಗಭದ್ರಾ ಯಮುನ
ಸಂಗಮ ತ್ರೀವೇಣಿ ಸರಸ್ವತಿ ಸರಯೂ
ಮಂಗಳೆ ಚಂದ್ರಭಾಗೆಯೋಳ್ ಕೂಡಿ ಸೇವಿಸೆ
ರಂಗಾ ಬಾಗಿಲೋಳ್ ನಿಂತು ಕಾದಿಹಳಯ್ಯ ೧
ಪುನಗು ಜವಾಜಿ ಕಸ್ತೂರಿ ಬೆರಸಿದ ಜಲ
ನಿನಗೆ ತೈಲವನೊತ್ತಿ ಎರೆವೆನೆಂದು
ಕನಕ ರತ್ನದಿ ಭೂಷಿತರಾದ ದೇವ
ಕನ್ನಿಕೆಯರು ಕಾದಿಹರೈಯ್ಯ ಲಕುಮಿಪತಿ ೨
ಪಂಚಬಾಣನ ಪಿತನೆ ಪಂಚಾಮೃತ ತಂದು
ಪಂಚಕನ್ನೆಯರು ಎರೆವೆನೆಂದು
ಮಿಂಚು ಕೋಟಿಯತೇಜಾಭರಣ ಪೀತಾಂಬರ
ಪಂಚ ರೂಪಗೆ ಉಡಿಸಿ ಶೃಂಗರಾಗೈಯುವರು ೩
ಕಸ್ತೂರಿ ತಿಲಕವು ಕನಕಾಂಬರದ ಶಾಲು
ಸುತ್ತಿದ ಮುಂಡಾಸು ಶೃಂಗರಿಸಿ
ಮತ್ತೆ ಕಾಸಿದ ಹಾಲು ಹಣ್ಣು ಸಕ್ಕರೆ ಕೊಟ್ಟು
ಎತ್ತಿ ಬೆಳಗುವ ಮುತ್ತಿನಾರುತಿ ವಿಠಲ ೪
ಪಾಪರಹಿತ ಏಳು ಪಾವನ್ನ ರೂಪ ಏಳು
ಗೋಪಾಲಕೃಷ್ಣವಿಠಲ ಹರಿ ಏಳು
ಶ್ರೀಪದ್ಮಭವಮುಖರಾಪಾರ ಮುನಿಗಳು
ರೂಪ ನೋಡಲು ಇಲ್ಲಿ ಕಾದಿಹರೇಳಯ್ಯ ೫

 

೧೬೯
ಏಳು ಪುರಂದರ ಗುರುವರ ಇನ್ನು
ಭಾಳ ಹೊತ್ತಾಯಿತು ಭಕುತ ಜನಪ್ರಿಯ ಪ.
ಶ್ರೀಶನಪ್ಪಣೆಯಿಂದ ಭೂಲೋಕದಲಿ ಪುಟ್ಟಿ
ಆಶೆಯಿಂದಲಿ ಧನ ಗಳಿಸಿ ಕೋಟಿ
ವಾಸುದೇವನು ಎಚ್ಚರಿಸಲು ವೈರಾಗ್ಯ
ದಾಸತ್ವದಲಿ ಜಗದಿ ಮೆರೆಯಬೇಕು ೧
ವ್ಯಾಸ ಮುನಿಯಿಂದುಪದೇಶಕೊಳ್ಳಲುಬೇಕು
ದಾಸತ್ವ ಜಗದಲಿ ಸ್ಥಾಪಿಸಬೇಕು
ದೋಷರಹಿತ ಮಧ್ವಶಾಸ್ತ್ರ ತತ್ವಗಳ ಪ್ರ
ಕಾಶಗೈಸುತ ಕವನಗೈಯ್ಯಬೇಕು ೨
ಸತಿಸುತ ಪರಿವಾರ ಭೂ ಸಂಚರಿಸಬೇಕು
ಸ್ತುತಿಸುತ್ತ ಹರಿಯನ್ನು ಕುಣಿಸಬೇಕು
ಜತನದಿ ನಿಜತತ್ವಗಳನರಿಯಲಿಬೇಕು
ಕ್ಷಿತಿಗೆ ಅಚ್ಚರಿ ಮಹಿಮೆಯ ತೋರಬೇಕು ೩
ಪುಷ್ಯದಮಾವಾಸೆ ಹರಿಪುರ ಸೇರಲು
ಶಿಷ್ಯಕುಲವು ಜಗದಿ ಬೆಳೆಯಲೆಂದು
ಶಿಷ್ಯ ವಿಜಯದಾಸರಿಗೆ ಅಂಕಿತವನಿತ್ತು
ಶಿಷ್ಯ ಪ್ರಶಿಷ್ಯ ಸಂತತಿ ಬೆಳಸಬೇಕು ೪
ಪಾಪಿ ಜನಗಳ ಪಾವನಗೈಯಲಿಬೇಕು
ತಾಪಪಡುವರ ಪೊರೆಯಲೆತ್ನಿಸಬೇಕು
ಶ್ರೀಪತಿ ದಾಸತ್ವ ಜಗದಿ ನಿಲ್ಲಿಸಬೇಕು
ಗೋಪಾಲಕೃಷ್ಣವಿಠ್ಠಲನ ಸ್ಮರಿಸಬೇಕು ೫

 

೧೭೦
ಏಳು ಶ್ರೀ ಗುರುರಾಯ ಏಳು ಪರಮಪ್ರಿಯ
ಏಳು ಮಂಗಳಕಾಯ ಭಕ್ತಜನಪ್ರಿಯ ಏಳಯ್ಯ ಬೆಳಗಾಯಿತು ಪ.
ಬಳಲಿ ಬಂದಿರುವಂಥ ಬಾಲ ಶಿಷ್ಯಂದಿರನು
ಸುಲಲಿತದ ಪ್ರಿಯ ವಾಕ್ಯದಿಂದ ಸಂತೈಸಿ
ಮಲಿನ ಮನವನೆ ತಿದ್ದಿ ಸುಜ್ಞಾನ ಬೋಧಿಸಿ
ನಳಿನನಾಭನ ಪಾದಕೊಪ್ಪಿಸಲಿಬೇಕು ೧
ಶುದ್ಧಾಂತಃಕರಣದಿಂ ಪೊದ್ದಿರುವ ಶಿಷ್ಯರನು
ಉದ್ಧಾರಗೈಯಲಂಕಿತಗಳಿತ್ತು
ಮಧ್ವಶಾಸ್ತ್ರದ ಸಾರ ತತ್ವಾಮೃತವನುಣಿಸಿ
ಪದ್ಮನಾಭನ ದಾಸರೆಂದೆನಿಸಬೇಕು ೨
ಎದ್ದು ಸ್ನಾನವಗೈದು ತಿದ್ದಿ ನಾಮವನ್ಹಚ್ಚಿ
ಪದ್ಮಾಕ್ಷಿ ತುಳಸಿ ಮಾಲೆಗಳ ಧರಿಸಿ
ಗದ್ದುಗೆಯೊಳು ಕುಳಿತು ಹೃದ್ವನಜಸ್ಥಾನ
ಪದ್ಮಪಾದವ ಮನದಿ ಸ್ಮರಿಸಬೇಕು ೩
ಹಿಂದ್ಯಾರು ಪೊರೆದರು ಮುಂದ್ಯಾರು ಕಾಯ್ದರು
ತಂದೆ ನೀವಲ್ಲದಿರೆ ಪೊಂದಿದರಿಗೆ
ತಂದೆ ಮುದ್ದುಮೋಹನದಾಸವರ ಎಮ್ಮೊಳು
ಕುಂದನೆಣಿಸದೆ ಕಾಯೊ ಕರುಣಾಳು ಗುರುವೆ ೪
ಅಪಾರಮಹಿಮನೆ ಆಪನ್ನ ರಕ್ಷಕನೆ
ಗೋಪಾಲಕೃಷ್ಣವಿಠ್ಠಲನಂಘ್ರಿ ಕಮಲ
ಕೃಪಾಳು ತೋರು ನೀ ಕೃಪೆಮಾಡು ಕಣ್ತೆರದುಶ್ರೀ ಪದ್ಮಜಾತರೊಂದಿತನ ದಾಸಾರ್ಯ ೫

 

೧೭೧
ಐದನೆ ವರ್ಷದ ಅಂತ್ಯ ಭಾಗದೊಳಗೆ
ಐದುವೊ ಮಾರ್ಗವನು ನಿಶ್ಚಯಿಸಿದೆ ಪ.
ಆದಿಮಾಸದ ಶುದ್ಧನವಮಿ ಸ್ಥಿರವಾರದಲಿ
ಮೋದಗುರುಗಳು ಬೋಧಿಸೆ | ದಯದಿ ಅ.ಪ.
ಐದನೆ ತಿಂಗಳಲಿ ಅಂಕುರುವು ಪಲ್ಲೈಸಿ
ಐದು ಇಂದ್ರಿಯವು ಕಲೆತು
ಐದು ಭೂತನ ಕಾಯ ಐದಲಾರದು ಜೊತೆಗೆ
ಐದುವುದು ಕರ್ಮ ಒಂದು
ಈ ದಿವ್ಯ ಮತಿಯೆನಗೆ ಸಾದರದಿ ಪುಟ್ಟಲು
ಮೋದವಾಗುತ ಮನದೊಳು
ಆದಿದೈವನ ಕರುಣವಾದ ಬಳಿಕಿನ್ನೇನು
ಪಾದಪದ್ಮವ ತೋರೆಲೊ | ಸ್ವಾಮಿ ೧
ಐದೆರಡು ಒಂದು ಇಂದ್ರಿಯಗಳನೆ ಬಂಧಿಸಿ
ಐದಿಸಿ ಮೂಲಸ್ಥಳಕೆ
ಐದು ರೂಪಾತ್ಮಕನ ಆದರದಿ ಪೂಜಿಸುತ
ಐದೊಂದು ದೂರ ತ್ಯಜಿಸಿ
ಐದು ನಾಲ್ಕು ತತ್ವದಧಿಪತಿಗಳನು
ಆದರದಿ ಧ್ಯಾನಮಾಡಿ
ಐದು ಮೂರು ದಳದಿ ಆದಿತ್ಯನಂತಿರುವ
ಶ್ರೀಧರನ ನುತಿಸಿ ನುತಿಸಿ | ಸ್ತುತಿಸಿ ೨
ಐದು ಭೇದಗಳ ಮತ ಸ್ಥಾಪಕರ ಕರುಣದಲಿ
ಐದು ಮೂರನೆ ಖಂಡಿಸಿ
ಐದೆರಡು ರೂಪಕನ ಆದರದಿ ಸ್ತುತಿಸುತ್ತ
ಭೇದಿಸಿ ಹೃದಯಗ್ರಂಥಿ
ಶ್ರೀದ ಶ್ರೀಗೋಪಾಲಕೃಷ್ಣವಿಠ್ಠಲನ ಪದ
ಆದರದಿ ನಂಬಿ ಸ್ತುತಿಸಿ
ಈ ದಾರಿ ಕಾಣಲು ಇದಕೆ ಕಾರಣದಿವ್ಯ
ಮೋದ ಶ್ರೀಗುರು ಕರುಣವೋ | ದಯವೋ ೩

 

ಐದೊಂದು ಅರಿಗಳು
೨೧೬
ಉಗಾಭೋಗ
ಐದೊಂದು ಅರಿಯ ಬಿಡಿಸೊ
ಐದೆರೆಡು ಹೊದಿಕೆ ಹರಿಸೊ
ಐದು ಮೂರು ಕಡಿಸೊ ಐದು ನಾಲ್ಕು ಕೊಡಿಸೊ
ಐದು ಐದು ಒಂದು ನಿನ್ನ ಪಾದದೊಳಿಡಿಸೊ
ಐದರಿಂದಾದ ದೇಹ ಎನ್ನದಲ್ಲವೆನಿಸೊ
ಐದು ಐದು ಅಧಿಪತಿಗಳ ಎನಗೊಲಿಸೊ
ಐದೊಂದು ವನಜಗಳ ತತ್ವಗಳನೆ ತಿಳಿಸೊ
ಐದು ಮೂರುದಳ ಪದ್ಮದಿ ಕಾಣಿಸೊ
ಐದೇಳು ದಳ ಪದ್ಮ ಹಾದಿಯ ತೋರಿಸೊ
ಐದು ಜನರ ಕಾಯ್ದ ಗೋಪಾಲಕೃಷ್ಣವಿಠ್ಠಲ
ಐದಿಸೊ ಮನವ ನಿನ್ನ ಪಾದ ಧ್ಯಾನದಿ ನಿರುತಾ

 

೨೪೩
ಒಂದು ದಿನ ನಾರದಮುನಿ ಗೋಕುಲದಿ
ಇಂದಿರೇಶನ ಲೀಲೆಯಾ
ನಿಂದು ನಭದಲಿ ನೋಡುತಾ | ಮೈಯುಬ್ಬಿ
ಬಂದನಾ ವೈಕುಂಠಕೆ ೧
ಸಿರಿದೇವಿ ಸಖಿಯರೊಡನೆ | ವನದಲ್ಲಿ
ಪರಿಪರಿಯ ಕ್ರೀಡೆಯೊಳಿರೇ
ಅರವಿಂದ ನಯನೆಯನ್ನೂ | ಕಂಡನಾ
ಸುರಮುನಿಯು ಸಂಭ್ರಮದಲೀ ೨
ಜಗನ್ಮೋಹನಾಕಾರಳೂ | ಶ್ರೀ ಹರಿಯ
ಜಗ ಸೃಷ್ಟಿಗನುಕೂಲಳೂ
ಬಗೆ ಬಗೆಯವತಾರಳೂ | ಕ್ಷಣ ಹರಿಯ
ಅಗಲದಂತಿರುತಿಪ್ಪಳೂ ೩
ಹರಿಗೆ ಗುಣದಿಂ ಕಿರಿಯಳೂ | ಮತ್ತೆಲ್ಲ
ಪರಿಯಲ್ಲಿ ಹರಿಗೆ ಸಮಳೂ
ಶರಣೆಂದವರ ಕಾಯ್ವಳೂ | ಬೊಮ್ಮಾದಿ
ಸುರರ ಸೃಜಿಸುವ ಶಕ್ತಳೂ ೪
ನಾಕ ಸ್ತ್ರೀಯರನೆ ಕೂಡೀ | ವನದಲ್ಲಿ
ಲೋಕನಾಯಕಿ ರಮಿಸುತಾ
ಶ್ರೀಕಾಂತನಗಲದವಳೂ | ಮುನಿಗೆ ತ
ನ್ನೇಕರೂಪವ ತೋರ್ದಳೂ ೫
ನೊಡಿ ನಮಿಸಿದನು ಸಿರಿಯಾ | ಹರಿಗುಣವ
ಹಾಡಿ ಪಾಡಿದನು ಮೈಯ್ಯಾ
ಮೂಡೆ ರೋಮಾಂಚ ಕೈಯ್ಯಾ | ಮುಗಿಯುತಲಿ
ನೋಡಿದನು ಸಿರಿಯ ದಣಿಯಾ ೬
ಪಲ್ಲವಾಧರೆ ನಗುತಲಿ | ತನ್ನ ಕರ
ಪಲ್ಲವದಿ ಕೃಪೆಯ ಮಾಡೀ
ಎಲ್ಲಿಂದ ಬಂದೆ ಮುನಿಪಾ ವಿಷಯವೇ
ನೆಲ್ಲ ಪೇಳೆಂದೆನ್ನಲೂ ೭
ಏನ ಪೇಳುವೆನೆ ತಾಯೆ | ನಿನ ಪತಿಯ
ನಾನಾ ವಿಧ ಚರ್ಯೆಗಳನೂ
ನಾನರಿಯಲಾರೆ ನಮ್ಮಾ | ನವನೀತ
ಚೋರನಾಗಿರುವನಮ್ಮಾ ೮
ನಾಕ ಭೂಲೋಕ ತಿರುಗೀ | ಭುವಿಯೊಳಗೆ
ನಾ ಕಂಡೆ ಗೋಕುಲವನೂ
ಹೇ ಕಮಲೆ ಕೇಳು ಅಲ್ಲೀ | ನಿನ ಪತಿಯು
ಆಕಳಾ ಕಾಯುತಿಹನೂ ೯
ಬಿಟ್ಟು ವೈಕುಂಠವನ್ನೂ | ಪ್ರಾಯ ಸತಿ
ದಿಟ್ಟೆ ನಿನ್ನನು ತೊರೆದನೂ
ಹುಟ್ಟಿ ಗೊಲ್ಲರ ಕುಲದಲೀ | ಬೆರತನಾ
ಕೆಟ್ಟ ಹೆಂಗಳೆಯರಲ್ಲಿ ೧೦
ನಳಿನಜಾಂಡವ ಸಾಕುವಾ | ಜಗದೀಶ
ಕಳುವಿನಲಿ ಹೊಟ್ಟೆ ಹೊರೆವಾ
ನಳಿನಭವ ಸುರವಂದ್ಯನೂ | ಗೋಪಿ ಬೈ
ಗಳನು ತಾ ಕೇಳುತಿಹನೂ ೧೧
ಮದನಮೋಹನರೂಪನೂ | ಗೊಲ್ಲತೆರ
ಅಧರಾಮೃತವ ಸವಿವನೂ
ಎದೆ ಗಂಟು ಪಿಡಿಯುತಿಹನೂ | ಚಂಡೆಂದು
ಗದರಿಸಲು ನುಡಿಯುತಿಹನೂ ೧೨
ಸಂಪೂರ್ಣ ಕಾಮ ತಾನು | ವನದಲ್ಲಿ
ಗುಂಪು ಸ್ತ್ರೀಯರ ಕೂಡ್ವನೂ
ಸಂಪನ್ನ ಭೋಗಿಸುವನೂ | ಕೊಳಲ ಪಿಡಿ
ದಿಂಪುಗಾನವ ಗೈವನೂ ೧೩
ವನದ ಸೊಬಗೇನುಸುರುವೇ | ಶ್ರೀರಮಣಿ
ದನಕರುವ ಕಾಯುತ್ಹರಿಯಾ
ವನವನವ ತಿರುಗುತ್ತಿರೇ | ಕೊಳಲ ಧ್ವನಿ
ವನವೆಲ್ಲ ತುಂಬಿರುತಿರೇ ೧೪
ತಿಳಿಯುದಕ ಯಮುನೆ ಮಳಲು | ದಿಣ್ಣೆಯಲಿ
ಕೊಳಲೂದೆ ಹರಿ ಕೇಳಲೂ
ಮೊಳೆತವಾ ಬಂಜೆ ಮೋಟೂ | ಮೃಗಪಕ್ಷಿ
ಕುಳಿತು ಮೈಮರೆತು ಕೇಳೇ ೧೫
ಓಡಿ ಬರುತಲಿ ತುರುಗಳೂ | ಬಾಲವ
ಲ್ಲಾಡಿಸದೆ ಕಣ್ಣುಮುಚ್ಚಿ
ಮಾಡಿಟ್ಟ ಪ್ರತಿಮೆಯಂತೆ | ಕಾಣುತಿರೆ
ಆಡಿಸದೆ ಸರ್ಪ ಹೆಡೆಯಾ ೧೬
ಶೃಂಗಾರ ಕೊಳಲನೂದೆ | ಜಡ ಚೇತ
ನಂಗಳಾಗುತ ಚಿಗುರಲೂ
ಅಂಗ ಮರೆಯುತ ಜೀವಿಗಳ್ | ಜಡದಂತೆ
ಕಂಗಳನುಮುಚ್ಚಿನಿಲ್ಲೆ ೧೭
ಅಷ್ಟ ಐಶ್ವೈರ್ಯದಾತಾ | ನಾರಿಯರ
ತುಷ್ಟಿಪಡಿಸುತಲಿ ಖ್ಯಾತಾ
ಶಿಷ್ಟ ಜನರನು ಪೊರೆಯುತಾ | ರಕ್ಕಸರ
ಹುಟ್ಟಡಗಿಸುವನು ವಿಹಿತಾ ೧೮
ಪೇಳಲಳವಲ್ಲವಮ್ಮಾ | ಶ್ರೀ ಹರಿಯ
ಲೀಲೆ ಜಾಲಗಳ ಬ್ರಹ್ಮಾ
ನೀಲಗಳರರಿಯರಮ್ಮಾ | ಆನಂದ
ತಾಳಿದೆನು ಕೇಳೆ ರಮ್ಮಾ ೧೯
ಇಷ್ಟು ಗೋಕುಲದಿ ನೋಡೀ | ಕಾಣದಿ
ನ್ನೆಷ್ಟೋ ಎನ್ನುತಲಿ ಪಾಡೀ
ಗುಟ್ಟು ಪೇಳಲು ಬಂದೆನೂ | ಸಿರಿದೇವಿ
ಸಿಟ್ಟಾಗಬೇಡವಿನ್ನೂ ೨೦
ಪರನಾರಿಯರ ಬೆರೆಯುತಾ | ಶ್ರೀ ಕೃಷ್ಣ
ಮರೆತು ನಿನ್ನನು ಸುಖಿಸುತಾ
ಇರುವ ಪರಿ ಯೊಚಿಸಮ್ಮಾ | ಆಜ್ಞೆ ಕೊಡು
ತ್ವರಿತದಲಿ ಪೋಪೆನಮ್ಮಾ ೨೧
ಹರಿಚರ್ಯವೆಲ್ಲ ಕೇಳಿ | ಶ್ರೀ ತರುಣಿ
ಪರಮ ಆನಂದ ತಾಳೀ
ಬೆರಗಾದ ಪರಿತೋರುತಾ | ಮುನಿವರಗೆ
ಪರಿ ಏನು ಮುಂದೆ ಎನಲೂ ೨೨
ಸನ್ನುತಾಂಗನ ಕೂಡಲೂ | ಭೂತಳದಿ
ಇನ್ನೇನುಪಾಯವೆನಲೂ
ಪನ್ನಂಗ ವೇಣಿ ಉದಿಸೂ | ಭೀಷ್ಮಕಗೆ
ಇನ್ನು ನೀ ಕುವರಿ ಎನಿಸೂ ೨೩
ಎಂತೆಂತು ಹರಿಯಚರ್ಯೆ | ಸಿರಿಕಾಂತೆ
ಅಂತಂತು ನಿನ್ನ ಚರ್ಯೆ
ಸಂತೋಷಪಡಿಸಿ ಎಮ್ಮಾ | ಸಲಹಮ್ಮ
ಶಾಂತೆ ನಾ ಪೋಪೆನಮ್ಮಾ ೨೪
ಮತ್ತೊಮ್ಮೆ ನೋಳ್ಪೆನೆಂದೂ | ಗೋಕುಲದ
ಹತ್ತಿರದಿ ನಭದಿ ನಿಂದೂ
ಸುತ್ತು ಮುತ್ತಲೂ ನೊಡಲೂ | ಸಿರಿದೇವಿ
ವ್ಯಾಪ್ತಳಾಗಲ್ಲಿ ಇರಲೂ ೨೫
ವನದಿ ಹರಿವಕ್ಷದಲ್ಲೀ | ಸಿರಿದೇವಿ
ಘನ ವೇಣೂರೂಪದಲ್ಲೀ
ವನಲಕ್ಷ್ಮೀರೂಪದಲ್ಲೀ | ಗೋಪಿಯರ
ಪ್ರಣಯ ಪ್ರಕಾಶದಲ್ಲೀ ೨೬
ಎಲ್ಲೆಲ್ಲಿ ಸೌಂದರ್ಯವೋ | ಉಲ್ಲಾಸ
ಎಲ್ಲೆಲ್ಲಿ ವೈಭವಗಳೋ
ಎಲ್ಲೆಲ್ಲಿ ಹರಿಲೀಲೆಯೋ | ಸಿರಿದೇವಿ
ಅಲ್ಲಲ್ಲಿ ತಾನಿರುತಿರೆ ೨೭
ಬೆರಗಾದ ನೋಡಿ ಮುನಿಪಾ | ಸಿರಿ ಹರಿಯ
ಚರಿಯ ನೊಡಿದ ಪ್ರತಾಪಾ
ಧರೆಗಿಳಿದು ನಮಿಸಿ ನಿಂದಾ | ಕ್ಷಮಿಸೆಂದು
ಸಿರಿ ಹರಿಗೆ ಸ್ತೋತ್ರಗೈದಾ ೨೮
ಸಿರಿಹರಿ ವಿಯೋಗವಿಲ್ಲಾ | ಆವಾವ
ಪರಿ ಕಾಲ ದೇಶದಲ್ಲೀ
ಅರಿಯದಜ್ಞಾನ ನುಡಿಯಾ | ಮನ್ನಿಸೋ
ಕರುಣಾಳು ಕಳೆಯೊ ಮಾಯಾ ೨೯
ಜಯ ಜಯತು ಜಗದೀಶನೆ | ಲಕ್ಷ್ಮೀಶ
ಜಯ ಜಯತು ಸುರವಂದ್ಯನೇ
ಜಯ ಜಯತು ದುಷ್ಟಹರಣ | ಗುಣ ಪೂರ್ಣ
ಜಯ ಜಯತು ಶಿಷ್ಟ ಶರಣಾ೩೦
ಸ್ತುತಿಸುತಂಬರಕಡರಿದಾ | ಸುರಮುನಿಪ
ಚ್ಯುತದೂರನತಿ ವಿನೋದಾ
ಪತಿತರನು ಕಾಯ್ವ ಮೋದಾ | ಸುಖತೀರ್ಥ
ಯತಿಗೊಲಿದು ಉಡುಪಿಲ್ನಿಂದಾ ೩೧
ಆಪಾರ ಮಹಿಮ ಶೀಲಾ | ಸರ್ವೇಶ
ಗೋಪಿಕಾ ಜನ ವಿಲೋಲಾ
ಆಪನ್ನ ಜನರ ಪಾಲ | ಗುರುಬಿಂಬ
ಗೋಪಾಲಕೃಷ್ಣವಿಠಲಾ ೩೨

 

೧೬
ಓಡಿ ಬಾ ನಿನ್ನ ಎತ್ತಿ ಮುದ್ದಾಡುವೆ ನಾಗಶಯನ ರಂಗನೇ ಪ.
ನಾಗಶಯನ ರಂಗನೆ, ನಾಗಶಯನ ರಂಗನೇ ಅ.ಪ.
ಕುಣಿ ಕುಣಿಯುತ ಗೆಜ್ಜೆ ಝಣ ಝಣರೆನೆ್ನ ಕೃಷ್ಣಾ
ಫಣಿಶಾಯಿ ನಿನ್ನ ನಾ ಕ್ಷಣದಲ್ಲಿ ಬಿಗಿದೂ ೧
ಚಿನ್ನರೊಡನೆಗೂಡಿ ಮಣ್ಣನೆ ಮೆಲ್ಲದಿರೂ ಕೃಷ್ಣಾ
ಅಣ್ಣಯನೊಡನಾಡೊ ಚಿನ್ನ ಗೋಪಾಲನೇ ೨
ಗೋಪಿಯರೊಡನಾಡಿ ಗೋಕುಲಾಂಬುಧಿ ಚಂದ್ರ
ಗೋಪಾಲಕೃಷ್ಣವಿಠಲ ಗೋವಳರೊಡೆಯ ೩

 

ನದೀದೇವತೆಗಳು
೧೪೭
ಕಂಗಳಿಂದಲಿ ನಿನ್ನ ಕಂಡೆ ನಾನೀಗ
ಹಿಂಗಿತೇ ಎನ್ನ ಅಘದ್ಹಿಂಡು ಕಾವೇರಿ ಪ.
ಮಂಗಳಾಂಗಿಯೆ ಶ್ರೀ ರಂಗನಾಥನ ಪದ
ಭೃಂಗಳೆನಿಸಿ ಜನರ ಪಾವನಗೈವೆ
ತುಂಗವಿಕ್ರಮ ಹರಿಗೆ ಮೂಲರೂಪಳಾಗಿ
ಅಂಗ ಶುದ್ಧಿಯಗೈವೆ ಪಾಪಿಗಳ ಸತತ ೧
ಎಲ್ಲೆಲ್ಲಿ ನೋಡೆ ಶ್ರೀರಂಗನ್ನ ಸೇವಿಸುವೆ
ಪುಲ್ಲಲೋಚನೆ ನಿನ್ನ ಬಗೆಯರಿವೆನೆ
ಬಲ್ಲ ಭಕ್ತರು ಬಂದು ನಿನ್ನಲ್ಲಿ ಸ್ನಾನವಗೈದು
ಉಲ್ಲಾಸದಿಂದ ಆನಂದಪಡುತಿಹರೆ ೨
ನೊರೆಸುಳಿಗಳಿಂದ ಭೋರ್ಗರೆಯುತ್ತ ಹರಿ ಇರುವ
ಅರಮನೆಯೆ ವೈಕುಂಠವೆಂದು ಸೂಚಿಸುತ
ಹರಿಸದನ ಸುತ್ತಿರುವೆ ವಿರಜೆ ನಾನೆಂದೆನುತ
ಅರುಹುವಾ ತೆರದಿ ಬಹು ರಭಸದಿಂ ಪರಿವೆ ೩
ನಿನ್ನ ಧ್ವನಿ ಇಂಪೆಂದು ಆನಂದದಿಂದಾಲಿಸುತ
ಚನ್ನ ಶ್ರೀರಂಗ ತಾ ಪವಡಿಸಿಹನೆ
ಘನ್ನ ಮಹಿಮಳೆ ಸಕಲ ಜೀವರಾಶಿಯ ಪೊರೆವೆ
ಎನ್ನ ಮನ ಹರಿಪದದಿ ನಲಿವಂತೆ ಮಾಡೆ ೪
ನಿನ್ನನೇ ವಿರಜೆ ಎಂತೆಂದು ಭಾವಿಸಿ ಈಗ
ಎನ್ನ ಗುರುಗಳ ದಯದಿ ಸ್ನಾನಗೈದೆ
ಇನ್ನು ಶ್ರೀ ವೈಕುಂಠದೊಡೆಯನಾ ತೋರಮ್ಮ
ಘನ್ನ ಶ್ರೀ ಗೋಪಾಲವಿಠ್ಠಲನ ೫

 

ಎಂಟಕ್ಷರನುತ : ಓಂನಮೋ
೨೧
ಕಂಟಕದ ಭವ ಹರಿಸೊ ಕರುಣಾ ಜಲಧಿ
ನೆಂಟ ನೀನಾಗಿ ಹೃನ್ಮಂಟಪದೊಳಗೆ ಪ.
ಎಂಟಕ್ಷರ ನುತನೆ ಎಂಟು ರೂಪಾತ್ಮಕನೆ
ಎಂಟು ಮೂರು ತತ್ವ ನಿರ್ಮಿಸಿಹನೆ
ಎಂಟು ದಳದಲಿ ನಿಂತು ಎಂಟು ವಿಧ ಪ್ರೇರಿಸುತ
ಎಂಟು ದಿಕ್ಪತಿಗಳಿಂ ಸೇವೆ ಕೊಳುತಿಹನೆ ೧
ಎಂಟು ವಿಧ ಕರ್ತೃವೆ ಎಂಟು ಭಾಗ್ಯಯುತನೆ
ಎಂಟು ಬಾಹು ಎಂಟು ಆಯುಧಧರನೆ
ಎಂಟು ಪತ್ನಿಯರಿಂದ ಎಂಟನೇ ಅವತಾರಿ
ನೆಂಟರೊಡನೆ ಜಗದ ಕಂಟಕರ ಸದೆದನೆ ೨
ಎಂಟೆರಡು ಕಲೆಪೂರ್ಣ ವೆಂಕಟರಮಣನೆ
ಎಂಟು ವಿಧ ಮದಗಳನು ಭೇದಿಸುತಲಿ
ಎಂಟೆರಡು ಒಂದು ಇಂದ್ರಿಯ ನಿನ್ನ ಕಡೆ ಮಾಡಿ
ಭಂಟನೆನಿಸೆನ್ನ ಶ್ರೀ ಗೋಪಾಲಕೃಷ್ಣವಿಠಲ ೩

 

೨೨
ಕಂಡು ಎಂದಿಗೆ ಧನ್ಯಳಾಗುವೆ ನಾನು
ಪಂಡರೀಶನ ಪಾದ ಪುಂಡರೀಕವನೂ ಪ.
ಪುಂಡರೀಕನಿಗೊಲಿದು ಒಂದು ಇಟ್ಟಿಗೆ ಮೇಲೆ
ಪಾಂಡವರ ಪ್ರಿಯ ಬಂಧು ನೆಲಸಿದಂಥಾ
ಪಂಡರೀ ಕ್ಷೇತ್ರದಲಿ ಚಂದ್ರಭಾಗದಿ ಮಿಂದು
ಮಂಡೆ ಬಾಗುತ ಹರಿಗೆ ಹಿಂಡಘವ ಕಳೆದೂ ೧
ಕೋಮಲದ ಚರಣಕಭಿನಮಿಸಿ ಕರಯುಗದಿಂದ
ಶ್ಯಾಮವರ್ಣನ ಪಾದಕಮಲ ಮುಟ್ಟೆ
ಆ ಮಹಾ ಆನಂದ ಅನುಭವಿಪ ಭಾಗ್ಯವನು
ಶ್ರೀ ಮಹಾಲಕುಮಿಪತಿ ಎಂದು ಕಾಂಬುವೆನೋ ೨
ಆಪಾರಭಕ್ತರಿಗೆ ವಲಿದ ವಿಠಲನ ಮೂರ್ತಿ
ಆಪಾದ ಮೌಳಿ ಈಕ್ಷಿಸುತ ಹೃದಯದಲಿ
ಇರ್ಪಮೂರ್ತಿಯ ತಂದು ಗುರುಬಿಂಬ ಸಹಿತದಲಿ
ಗೋಪಾಲಕೃಷ್ಣವಿಠಲನ ಎಂದು ಕಾಂಬೆ ೩

 

೨೫
ಕಂಡು ಧನ್ಯಳಾದೆ ನಾ
ಪಾಂಡುರಂಗವಿಠಲನಾ ಪ.
ಕಂಡು ಧನ್ಯಳಾದೆ ಹರಿಯ
ಪುಂಡರೀಕ ಪದದಿ ಎನ್ನ
ಮಂಡೆ ಇಟ್ಟು ವಂದಿಸುತಲಿ
ಪುಂಡರೀಕ ವರದ ನಾ ಅ.
ದೂರದಿಂದ ಬಂದು ಹರಿಯ
ಸೇರಿವಂದಿಸುತಲಿ ಈಗ
ಹಾರಹಾಕಿ ನಮಿಸಿ ಮನೋ
ಹಾರ ನೋಡಿ ದಣಿದೆನಿಂದು ೧
ಗುರುಗಳಂತರ್ಯಾಮಿ ಹರಿಯ
ಇರಿಸಿ ಎನ್ನ ಬಿಂಬ ಸಹಿತ
ಸ್ಮರಿಸಿ ಚಿಂತಿಸಿ ವಿಠಲನಲ್ಲಿ
ಕರುಣಮೂರ್ತಿ ಪಾಂಡುರಂಗನ ೨
ಗುರುಪುರಂದರ ಸ್ತಂಭ ಕಂಡೆ
ವರದ ಚಂದ್ರಭಾಗ ತೀರದಿ
ಚರಣ ಇಟ್ಟಿಗೆಯಲಿ ಇಟ್ಟು
ಸಿರಿ ಗೋಪಾಲಕೃಷ್ಣವಿಠಲನ ೩

 

೧೭೨
ಕಂಡು ಧನ್ಯಳಾದೆ ನಾನೀಗ | ಈ ದಿವ್ಯ ಪಾದ
ಕಂಡು ಧನ್ಯಳಾದೆ ನಾನೀಗ ಪ.
ಕಂಡು ಧನ್ಯಳಾದೆನೀಗ ತಂಡ ತಂಡದ ಪಾಪಗಳನು
ಖಂಡಿಸುತಲಿ ಹರಿಯ ರೂಪ ಕಂಡು ಭಜಿಪ ದಿವ್ಯ ಪಾದ ಅ.ಪ.
ಭಕ್ತ ನುಡಿಗೆ ಮನದಿ ಮರುಗಿ
ಮುಕ್ತಿ ತೋರ್ವೆನೆಂದು ಬಂದು
ಶಕ್ತನಾದ ಹರಿಯ ತೋರಿ
ಭಕ್ತಜನರ ಪೊರೆವೊ ಪಾದ ೧
ಕಮಲನಾಭನ ಭಜಿಪ ಪಾದ
ಕಮಲಾಪತಿಗೆ ಪ್ರೀತಿ ಪಾದ
ಕಮಲಪುಷ್ಪ ಹರಿಗೆ ಅರ್ಪಿಸಿ
ಕಮಲಾಕ್ಷನನು ತೋರ್ಪ ಪಾದ ೨
ತಂದೆ ಮುದ್ದುಮೋಹನರೆಂ-
ತೆಂದು ಜಗದಿ ಮೆರೆವೊ ಪಾದ
ನಂದ ಕಂದನ ಮನದಿ ತೋರಿ
ಇಂದು ಆನಂದ ಕೊಡುವೊ೩
ಪಾದತೊಳೆದು ಪೂಜೆಗೈದು
ಪಾದೋದಕವ ಪಾನಮಾಡಿ
ಪಾದಪದ್ಮ ನಂಬಿ ನಮಿಸಿ
ಪಾದಕಮಲ ಸ್ತೋತ್ರಗೈವೆ ೪
ಗೋಪಾಲಕೃಷ್ಣವಿಠ್ಠಲನ
ರೂಪ ಮನದಿ ತೋರ್ವ ಪಾದ
ಪಾಪಗಳನು ಧ್ವಂಸಗೈದು
ಶ್ರೀಪತಿಯ ತೋರ್ವ ಪಾದ ೫

 

(ನು. ೨) ಹೋಮಕುಂಡದಿ ಹುಟ್ಟಿದಾಸತಿ
೨೬
ಕಂಡು ನಮಿಸಿದೆ ನಿನ್ನ | ಕಡಗೋಲ ಪಿಡಿ-
ದುದ್ದಂಡ ದೇವವರೇಣ್ಯ
ತಾಪತ್ರಯಗಳಘ ಹಿಂಡು
ಓಡಿಸು ರನ್ನ ಪೊರೆ ಸುಪ್ರಸನ್ನ ಪ.
ಕಂಡೆ ನಿನ್ನಯ ಬಾಲರೂಪವ
ಪುಂಡರೀಕದಳಾಯತಾಕ್ಷನೆ
ಕುಂಡಲೀಶಯ ನಿನ್ನ ಚರಣದಿ
ದಂಡವಿಕ್ಕುವೆ ಗೋಪಿಬಾಲ ಅ.ಪ.
ಜನನ ಮರಣದಿ ನೊಂದೆ | ಶ್ರೀ ಜಾನಕೀಪತೆ
ಪ್ರಣತ ಜನರಿಗೆ ತಂದೆ | ನೀ ಕಾಯದಿದ್ದರೆ
ಘನವೆ ನಿನಗಿದು ಎಂದೆ | ಪಾಲಿಪುದು ಮುಂದೆ
ಜನಮ ಜನುಮದ ಕರ್ಮಗಳ ನಾ
ಅನುಭವಿಸಿ ಪೂರೈಸಲಾಪೆನೆ
ಘನಮಹಿಮ ದಯ ಮಾಡಿದಲ್ಲದೆ
ಕೊನೆಯ ಕಾಣೆನು ವಿಷಯ ವಾಸನೆ
ವನಜ ಸಂಭವ ಪವನ ರುದ್ರಾ
ದ್ಯನಿಮಿಷಿರಿಗಿನಿತಿಲ್ಲ ಮಹಿಮೆಯು
ನಿನಗೆ ವಿೂರಿದರುಂಟೆ
ದನುಜದಲ್ಲಣ ದಯದಿ ಸಲಹೊ ೧
ಕಾಮಪಿತ ಮಧ್ವೇಶ | ಸೌಂದರ್ಯ ಸಾರ
ತಾಮಸರ ವಿಧ್ವಂಸ | ಸಜ್ಜನರ ಕಾಯುವ
ಕೋಮಲಾಂಗನೆ ಶ್ರೀಶ | ಲಕ್ಷ್ಮೀ ನಿವಾಸ
ಹೋಮಕುಂಡದಿ ಪುಟ್ಟಿದಾ ಸತಿ
ಕಾಮಿಗಳ ಉಪಟಳಕೆ ಸಹಿಸದೆ
ಶ್ರೀ ಮನೋಹರ ಕಾಯೊ ದ್ವಾರಕೆ
ಧಾಮ ನೀ ಗತಿ ಎನುತವರಲೆ
ಪ್ರೇಮದಿಂದಕ್ಷಯವನಿತ್ತ
ನಾಮ ಮಂಗಳ ನಿರ್ಮಲಾತ್ಮಕ
ಸೋಮಶತಪ್ರಭ ಸೌಮ್ಯರೂಪ ತ್ರಿ-
ಧಾಮ ಭಕ್ತರ ಕಾಮಿತಾರ್ಥನೆ ೨
ಆದಿಮಧ್ಯವಿದೂರ | ಆನಂದ ಪೂರ್ಣ
ಸಾಧು ಮನದಿ ವಿಹಾರ | ಸರ್ವಜ್ಞರಾಯರ
ಹಾದಿ ತೋರಿಸೊ ಧೀರ | ಸುಜ್ಞಾನಸಾರ
ವೇದ ಶಾಸ್ತ್ರಗಳರ್ಥವರಿಯೆನು
ಮಾಧವನೆ ಮಮಕಾರದಲಿ ನಾ
ಹಾದಿ ತಿಳಿಯದೆ ನೊಂದೆ ಅಜ್ಞತೆ
ಹೋದಡಲ್ಲದೆ ನಿನ್ನ ಕಾಣುವ
ಮೋದ ಬರುವುದೆ ಮಧ್ವವಲ್ಲಭ
ಭೇದ ಮತಿ ಕೊಡು ತಾರತಮ್ಯದಿ
ನೀ ದಯದಿ ಒಲಿದೆನ್ನ ಮನದಲಿ
ಆದರದಿ ನೆಲೆಸಿನ್ನು ಪೊಳೆಯೊ ೩
ಕಡಲಶಯನನೆ ಶ್ರೀಶ | ಕಡಗೋಲ ಕೈ
ಪಡುಗಡಲ ತೀರದಿ ವಾಸ | ಕಮಲೇಶ ನಾ ನಿ-
ನ್ನಡಿಯ ಕಂಡೆನು ನಾಶ | ರಹಿತನೆ ಪ್ರಕಾಶ
ಎಡೆಬಿಡದೆ ನಿನ್ನಸ್ಮರಿಪ ಧ್ಯಾನವ
ಕೊಡುತ ಮಧ್ಯದಿ ತಡೆವ ಸಂಸೃತಿ
ತಡೆದು ಸಂತ ಚಿಂತನೆಯ ದೃಢ
ಒಡಲೊಳಗೆ ನೆಲೆಸಯ್ಯ ಬಿಡದೆ
ಕಡಲಸುತೆ ಪತಿ ಕಡಲ ಸತಿ ಪಿತ
ಕಡಲವಾಸನೆ ಕಡಲ ಬಂಧನ
ಕಡಲ ಮಧ್ಯದಿ ಪುರವ ರಚಿಸಿದೆ
ಕಡು ದಯಾಂಬಯಧೆ ಕಾಯೊ ಸತತ ೪
ಅಷ್ಟಯತಿ ನುತಪಾದ | ಸುಖ ತೀರ್ಥ ಹೃದಯ
ದೀಷ್ಟಿತನೆ ಸನ್ಮೋದ | ಸಜ್ಜನರ ಮನದಾ
ಭೀಷ್ಟವೀವ ಪ್ರಮೋದ | ಕರುಣಿ ಸುಪ್ರಸೀದ
ಕೊಟ್ಟೆ ಮನು ಮುನಿಗಳಿಗೆ ಜ್ಞಾನವ
ತುಷ್ಟಿಪಡಿಸುತ ಸುರರ ಸುಧೆಯಲಿ
ಕುಟ್ಟಿ ಅಸುರನ ಕೋರೆದಾಡಿಲಿ
ದಿಟ್ಟ ನರಹರಿ ಬ್ರಹ್ಮಚಾರಿ
ಕುಟ್ಟಿ ಅರಸರ ಕಟ್ಟಿ ಜಟೆಯನು
ಮಟ್ಟಿ ಕಂಸನ ಬಿಟ್ಟು ವಸನವ
ದಿಟ್ಟ ಕಲ್ಕಿ ಗೋಪಾಲಕೃಷ್ಣ
ವಿಠ್ಠಲನೆ ಶ್ರೀ ಉಡುಪಿಲೋಲ ೫

 

ಇದು ಸತ್ಯಬೋಧರ ಸ್ತುತಿ
೧೫೬
ಕಂಡು ನಮಿಸಿದೆ ಸತ್ಯಬೋಧ ಮುನಿಯ
ಮಂಡೆ ಬಾಗುತ ದೇಹ ದಂಡವಿಕ್ಕುತಲಿ ಪ.
ಭವ್ಯ ಬೃಂದಾವನದಿ ವೈಭವದಿ ಮೆರೆವವರ
ಸವ್ಯಸಾಚಿಯ ಸಖನ ಪ್ರಿಯ ಪಾತ್ರರ
ದಿವ್ಯ ಕೂರ್ಮಾಸನದಿ ಕುಳಿತು ತಪಚರಿಸುವರ
ಅವ್ಯಯಾತ್ಮನ ಚರಣ ಧ್ಯಾನ ಮಾಳ್ಪವರ ೧
ವಿಷವಿಡಲು ಪಾಪಿಗಳು ರಾಮಗರ್ಪಿಸಿ ಭುಜಿಸೆ
ನಿಶಿಯಲ್ಲಿ ನಿದ್ರೆ ಜೈಸುತ ನಿತ್ಯದಲಿ
ಹಸನಾಗಿ ದೇವತಾರ್ಚನೆ ಭೋಜನವಗೈಯೆ
ದೂಷಿಸಿದ ಕುಜನರಿಗೆ ರಾತ್ರೆ ಸೂರ್ಯನ ತೋರ್ದ ೨
ಕಾಶಿಗ್ಹೋಗುವೆನೆಂಬ ಆಸೆ ಪೂರೈಸುವೊಡೆ
ತಾ ಸ್ವಪ್ನದಲಿ ಬಂದು ಜಾಹ್ನವಿಯು ಪೇಳೆ
ರಸರಹಿತವಾದ ವೃಕ್ಷದಿ ಗಂಗೆಯನೆ ತರಿಸಿ
ತಾ ಸ್ನಾನಗೈದು ಭಾಗೀರಥಿಯ ಪೂಜಿಸಿದ೩
ಪೇಳಲಳವಲ್ಲದಿಹ ಬಹಳ ಕೌತುಕ ಮಹಿಮೆ
ಕಾಲಕಾಲಕೆ ತೋರಿ ಭಕ್ತರನು ಕಾಯ್ದು
ಮೇಲಾದ ಮಧ್ವ ಶಾಸ್ತ್ರಾರ್ಣವದಿ ಈಜುತಲಿ
ಲೀಲೆಯಿಂದಲಿ ಮಾಯ್ಗಳನೆ ಗೆದ್ದ ಮಹಿಮ ೪
ಪ್ರತಿವರ್ಷ ಪಾಲ್ಗುಣದಿ ದ್ವಿತೀಯ ಪಕ್ಷದಿ
ದ್ವಿತೀಯ ತಿಥಿಯಲ್ಲಿ ದಿವ್ಯ ಉತ್ಸವ ಕೊಳುತ
ಸತತ ಈ ಸವಣೂರು ಕ್ಷೇತ್ರದಲಿ ನೆಲಸುತಲಿ
ಚ್ಯುತರಹಿತ ಗೋಪಾಲಕೃಷ್ಣವಿಠ್ಠಲನ ಭಜಿಪೆ ೫

 

(ನು. ೨) ಚಂದ್ರ ಮಂಡಲ ಮದ್ಯವರ್ತಿ
೨೪
ಕಂಡೆ ಕಂಡೆ ಪಂಡರೀಶನ | ಕಂಡೆ ಕಂಡೆ ಪ.
ಕಂಡೆ ಪಂಡರಿಪುರದಿ ಮೆರೆವನ
ಕಂಡೆ ಭಕ್ತರ ಕಾವ ಬಿರುದನ
ಕಂಡೆ ಮಂಡೆಯ ಚರಣದಲ್ಲಿಡೆ
ಹಿಂಡು ಅಘಗಳ ತರಿವ ವಿಠಲನ ಅ.ಪ.
ಕಟಿಯಲೀ ಕರವಿಟ್ಟು ಮೆರೆವನ
ಹಟದಿ ವಗದಿಟ್ಟಿಗೆಲಿ ನಿಂತನ
ಸ್ಪಟಿಕ ಹಾಟಕ ಕಟಕ ಮಕುಟನ
ವಟದೆಲೆ ಮೇಲೊರಗಿದಂಥನ
ಕುಟಿಲ ಕುಂತಳ ಫಣಿಯ ತಿಲುಕನ
ತೃಟಿಯು ತೆರವಿಲ್ಲದಲೆ ನಮಿತನ
ವಟುವೆನಿಸಿ ಬಲಿರಾಯಗೊಲಿದನ
ನಟನೆಗೈಯ್ಯವ ದಿವ್ಯರೂಪನ ೧
ಚಂದ್ರಭಾಗಾ ತೀರದಲ್ಲಿಹನ
ಚಂದ್ರ ಕೋಟಿಸ್ಮರನ ರೂಪನ
ಇಂದಿರೆಯ ಸಹಿತದಲಿ ನೆಲಸುತ
ಚಂದ್ರದ್ಹಾರಗಳಿಂದಲೆಸವನ
ಬಂದ ಭಕ್ತರ ಭೇದ ನೋಡದೆ
ಸಂದರುಶನಾನಂದವೀವನ
ಚಂದ್ರಮಂಡಲ ಮಧ್ಯವರ್ತಿಯ
ಚಂದ್ರಕುಲಕೆ ತಾ ಚಂದ್ರನೆನಿಪನ ೨
ವಿಠ್ಠಲನ ಪುರದಲ್ಲಿ ಹರಿಯುವ
ಶ್ರೇಷ್ಠ ಇಂದುಭಾಗೆಯಲಿ ಮಿಂದು
ಮುಟ್ಟಿ ವಿಠಲನ ಚರಣಕಮಲವ
ಬಿಟ್ಟು ಮನದ್ಹಂಬಲಗಳೆಲ್ಲವ
ವಿಠ್ಠಲಾ ನೀನೆ ಗತಿ ಕೈ
ಗೊಟ್ಟು ಕಾಯೆಂದೆನುತ ಸ್ತುತಿಸಿ
ಕಷ್ಟಹರ ಗೋಪಾಲಕೃಷ್ಣ
ವಿಠ್ಠಲನ ಚರಣಾಂಬುಜಗಳನು ೩

 

೨೩
ಕಂಡೆ ಕನಸಿನಲಿ ನಾ ಪಾಂಡುರಂಗನ
ಮಂಡೆ ಇಡುತಲಿ ಪುಂಡಲೀಕ ಚರಣದಲೀ ಪ.
ಪಂಡರೀಕ್ಷೇತ್ರದಲಿ ವಿಠ್ಠಲನ ದರ್ಶನಕೆ
ದಂಡೆ ಹಾರ ಕೊಂಡು ಪೋಗುತಿರಲೂ
ಹಿಂಡು ಜನ ಊಟಕೆಡೆ ಅಣಿಮಾಡುತಿರಲಲ್ಲಿ
ಕಂಡು ಸಾಗುತ ಮುಂದೆ ದ್ವಾರದೆಡೆ ಬಂದು ೧
ನಂತರದಿ ದ್ವಾರಗಳು ಮುಚ್ಚಿರಲು ಕಂಡು ಬಹು
ಚಿಂತಿಸಲು ಅಲ್ಲೊಬ್ಬ ಬರಲು ಅವಗೇ
ಅಂತರಂಗವನುಸುರೆ ಕದ ತೆರೆದು ನೋಡೆನಲು
ಸಂತೋಷದಿಂದೆರಡು ದ್ವಾರಗಳ ತೆರೆದೇ ೨
ರತಿಪತಿಯ ಬಿಂಬ ಶ್ರೀ ಪ್ರದ್ಯುಮ್ನವಿಠ್ಠಲನ
ಮೂರ್ತಿಯನೆ ಕಂಡು ಹಾರವನ್ಹಾಕಿ ನಮಿಸಿ
ಅತಿ ಪ್ರೀತಿ ಭಕ್ತಿಯಲಿ ಅಪ್ಪಿ ನಾ ಮೈ ಮರತೆ
ಸ್ತುತಿಸುತಲಿ ಗೋಪಾಲಕೃಷ್ಣವಿಠ್ಠಲನನಾ ೩

 

(ನು. ೪) ಅಹಂಕಾರ
ಶೇಷ-ರುದ್ರದೇವರು
೧೩೪
ಕಂಡೆ ನಾನೀಗ ಈ ದಿವ್ಯ ಪಾದ ಭೂ-
ಮಂಡಲದೊಳು ಚರಿಸಿ ಉದ್ಧರಿಪ ಪಾದ ಪ.
ಹರಿಗೆ ಹಾಸಿಗೆಯಾಗಿ ಹರುಷಪಡುವ ಪಾದ
ಹರಿಯ ಮಂದಿರಲ್ಲಿ ಇರುವ ಪಾದ
ಹರ ಪುರಂದರರಿಗೆ ಪೂಜ್ಯವಾಗಿಹ ಪಾದ
ಹರ ಪದವಿಯಿಂ ಬಂದು ಮೆರೆವ ಪಾದ ೧
ವಾರುಣಿ ದೇವಿಗೆ ವರನೆನಿಸಿದ ಪಾದ
ಶ್ರೀ ರಾಮಗೆ ಕಿರಿಯನಾದ ಪಾದ
ಘೋರ ಇಂದ್ರಾರಿಯ ಸಂಹರಿಸಿದ ಪಾದ
ದ್ವಾರಕಾಪುರದಲ್ಲಿ ಮೆರೆವ ಪಾದ ೨
ವಾಯುದೇವರು ಜೊತೆಗೆ ವಾದವಾಡಿದ ಪಾದ
ನೋಯದೆ ಭೂಮಿಯನು ಪೊತ್ತಿಹ ಪಾದ
ಶ್ರೀಯರಸನ ಪಾದಪದ್ಮ ಸೇವಿಪ ಪಾದ
ಬಾಯಬಿಡುತಿರೆ ಸುರರು ಸುಧೆ ಕಡೆದ ಪಾದ ೩
ಸಪ್ತೆರಡು ಭುವನದಲಿ ಗುಪ್ತವಾಗಿಹ ಪಾದ
ಚಿತ್ತದಭಿಮಾನಿಗೆ ಸೇವಕನಾದ ಪಾದ
ಮತ್ತೆ ಮನ ಅಹಂಕಾರ ತತ್ವದೊಡೆಯನ ಪಾದ
ತೃಪ್ತ ಶರಣರಿಗೀವ ಕರುಣ ಪಾದ ೪
ಘೋರರೂಪವ ತೊರೆದು ಸೌಮ್ಯವಾಗಿಹ ಪಾದ
ಸೇರಿದವರನು ಪೊರೆವ ಶ್ರೇಷ್ಠ ಪಾದ
ಹಾರೈಸಿ ಗೋಪಾಲಕೃಷ್ಣವಿಠ್ಠಲನ ಪಾದ
ಸಾರಿ ಭಜಿಸುತ ಸೌಖ್ಯ ಪೊಂದಿರುವ ಪಾದ ೫

 

೯೫
ಕಟ್ಟಿದಳು ಕಂಕಣವ ನಾರಿ ಲಕುಮಿವಿಷ್ಣು ಮೂರುತಿ ಕರಕೆ ವೈಕುಂಠರಾಣಿ ಪ.
ಅವಿಯೋಗಿಯಾದ ಶ್ರೀ ಸತಿಯ ಸೇವೆಗೆ ಒಲಿದು
ಪವಮಾನನೊಡೆಯ ವರ ಬೇಡೆನ್ನಲು
ಭುವನೇಶ ನಿನ್ನ ಕೃಪೆ ಪೂರ್ಣಳಾನೆಂದೆನು
ತಹವಣೆಯಿಂ ಕೇಳ್ದಳೆರಡೊರವ ಲೋಕೋದ್ಧಾರಿ ೧
ಶರಣಾಗತ ರಕ್ಷಕನು ಎಂಬ ಬಿರುದೊಂದು
ಶರಣಾಗತ ವತ್ಸಲನು ಎಂಬುದೊಂದು
ಧರಿಸು ಈ ಬಿರುದು ಹರಿ ವರವು ಅದೆ ಎನಗೆನಲು
ಕಿರುನಗೆಯ ನಗುತ ಒಲಿದನು ಸತಿಯ ನುಡಿಗೆ ೨
ನಾರಿರನ್ನಳೆ ನಿನ್ನ ಕೋರಿಕೆಯ ತೆರನಂತೆ
ಆರಾಧನೆಯ ಮಾಳ್ಪ ಶರಣರಿಗೆ ಒಲಿವೆ
ತೋರಲೀ ಬಿರುದುಗಳು ನಿನ್ನ ಕರಗಳಲೆಂದು
ಶ್ರೀ ರಮೆಯ ಕರಕೆ ಕಂಕಣಗಳನೆ ತೊಡಿಸಿದನು ೩
ನಾರಿ ಈ ಕಂಕಣವ ನಿನಗ್ಯಾಕೆ ಅರ್ಪಿಸಲು
ತೋರದೆನ್ನುತ ನಟನೆಗೈವನಿತರೊಳ್‍ಕ್ಷೀರಸಾಗರ ಮಥನ ಕಾಲದಲಿ ಜನಿಸುತಲಿ
ಶ್ರೀ ರಮೇಶಗೆ ಒಲಿದು ಮಾಲೆ ಹಾಕಿದಳು ೪
ಭಕ್ತಿ ಪ್ರೇಮಕೆ ಒಲಿದು ಭಕ್ತವತ್ಸಲ ಅಭಯಹಸ್ತವನು ಶಿರದಲ್ಲಿ ಇಡಲು ನಾರಿಚಿತ್ತದಲಿ ಆನಂದಪುಳಕಾಂಕುರಿತಳಾಗಿಚಿತ್ತದೊಲ್ಲಭನ ಮುಖಕಮಲ ವೀಕ್ಷಿಸುತ ೫
ಈಕ್ಷಿಸಲು ಶ್ರೀ ಹರಿಯ ಕರಕಮಲ ಲಕ್ಷಣವ
ಲಕ್ಷ್ಮಿ ಬೆರಗಾಗಿ ಮುನ್ನಿನಕಿಂತ ಅಧಿಕ
ಅಕ್ಷಯದ ಸಾಮುದ್ರಿ ಲಕ್ಷಣವ ಕಾಣುತಲಿ
ಪಕ್ಷಿವಾಹನನ ಮೊಗ ಈಕ್ಷಿಸುತ ನಗುತ ೬
ನೀನಿತ್ತ ವರದಾನ ಕಂಕಣದ ಬಂಧನವ
ನಿನಗರ್ಪಿಸುತ ಧನ್ಯಳಾಗ್ವೆನೆಂದು
ಆನಂದದಲಿ ಮಾಡಿ ಕಂಕಣವ ಕಟ್ಟಿದಳು ೭
ಜಗವನಾಡಿಸುವಂಥ ಸೂತ್ರವನೆ ಹದಿನಾರು
ಬಗೆ ಕಲೆಗಳೆಂಬ ಎಳೆ ಮಾಡಿ ಹಳದಿಮಿಗೆ ಕಾಂತಿ ಬಣ್ಣದಲಿ ಮಂಗಳಾಕಾರದ
ಜಗಕೆ ವಿೂರಿಸಿದಂಥ ಕಂಕಣವ ಕಟ್ಟಿದಳು ೮
ಕರಿ ಕೆಂಪು ಬಿಳುಪು ವರ್ಣವು ಪ್ರಳಯ ಕಾಲದಲಿ
ಇರಲಾರದೆಂದು ತ್ಯಜಿಸುತ ಹಳದಿಯವರ
ಕಾಂತಿ ಬಣ್ಣವನು ಪೂಸಿ ಮಂಗಳವದ
ನೆಸರದಿಂ ಮೂರು ಗ್ರಂಥಿಯ ಬಿಗಿದಳಾಗ ೯
ಸಿರಿಯೆ ಈ ಚಾತುರ್ಯ ಪರಿ ಏನು ಪೇಳೆಂದು
ಸರಸದಲಿ ಹರಿ ಕೇಳೆ ಹರಿಣಾಕ್ಷಿಯು
ಪರಮ ಪುರುಷನೆ ನೀನು ಅರಿಯದಿನ್ನುಂಟೆ ಕೇಳ್
ಸರಸವಾಣಿಯಲಿ ಪೇಳ್ಪೆನು ದೇವ ದೇವ ೧೦
ಒಂದು ಮುಕ್ತಿಯ ಗ್ರಂಥಿ ಒಂದು ಕರ್ಮದ ಗ್ರಂಥಿ
ಒಂದು ಅಜ್ಞಾನ ನಿನ್ನ ಬಂಧಕರ ಗ್ರಂಥಿ
ಇಂದಿರೇಶನೆ ಇದರ ಗುಟ್ಟು ಅರುಹುವ ಕೇಳು
ಒಂದೊಂದು ವಿವರಗಳ ವಂದ್ಯ ಬ್ರಹ್ಮಾದಿ ೧೧
ಕರ್ಮಗ್ರಂಥಿಯು ಬ್ರಾಹ್ಮಣರ ಯಜ್ಞದುಪವೀತ
ಕರ್ಮ ಬಿಡುಗಡೆ ಇದು ಯತಿರತ್ನಗಳಿಗೆ
ನಿಮ್ಮ ಬಂಧಕರ ಗ್ರಂಥಿ ಅಜ್ಞಾನಿ ಹೃದಯಕ್ಕೆ
ನಿಮ್ಮ ಕೃಪೆಯಿಂದ ಬಿಡುಗಡೆ ಕೇಳು ಜೀವರಿಗೆ ೧೨
ಮುಕ್ತರಿಗೆ ಸಂಸಾರ ಮತ್ತೆ ಬರದಂದದಲಿ
ಕತ್ತರಿಸಿ ಲಿಂಗವನು ಕಾಯ್ದು ನಾನು
ಚಿತ್ತಜಾಪಿತನೆ ನಿನ್ನಸ್ತಕೊಪ್ಪಿಸಿ ಬಿಗಿದು
ಸುತ್ತಿ ಕಗ್ಗಂಟು ಹಾಕಿರುವೆ ನೀ ಗ್ರಂಥಿ ೧೩
ಬಿಚ್ಚಲಾರೆಯೊ ನೀನು ಬಿಚ್ಚಲಾರೆನೊ ನಾನು
ಬಿಚ್ಚಿಕೊಳಲಾರರೊ ಮುಕ್ತ ಜನರು
ಅಚ್ಯುತನೆ ಇದೆ ನಿನಗೆ ಹೆಚ್ಚಿನಾ ಬಿರುದು ನಾ
ಮೆಚ್ಚಿ ಕಟ್ಟಿರುವೆ ನೀ ಗ್ರಂಥಿ ಕಂಕಣವ ೧೪
ಎರಡು ಗ್ರಂಥಿಯ ತೊಡಕು ಹರಿದು ಭಕ್ತರ ಕಾಯ್ದು
ಪರಮ ಆನಂದ ಮುಕ್ತರಿಗೆ ಶರೆ ಮಾಡಿ
ಮೆರೆಯೊ ಶರಣಾಗತರ ರಕ್ಷಕನೆ ಎಂದೆನುತ
ಹರಸಿ ಸಿರಿ ಮುತ್ತಿನಾರತಿಯನೆತ್ತಿದಳು ೧೫
ಸಿರಿಹರಿಯ ಏಕಾಂತ ಸರಸ ವಚನಗಳಿದನು
ಅರಿತವರು ಯಾರೆಂಬ ಅನುಮಾನ ಬೇಡಿ
ಹರಿಶಯನನಾದವನು ಅರಿತು ಧೈರ್ಯದಿ ಜಗದಿ
ಹರಹಿದುದ ಸಜ್ಜನರು ಅರಿತು ಆನಂದಿಸಲಿ ೧೬
ಸಿರಿ ಒಲಿಯೆ ಶ್ರೀಹರಿಯು ತ್ವರಿತದಲಿ ಒಲಿಯುವನು
ಮರುತ ಒಲಿಯಲು ಸಿರಿಯು ತಾ ಒಲಿವಳು
ಗುರುವು ಒಲಿಯಲು ಮರುತ ಮರುಕ್ಷಣದಿ ಒಲಿಯುವನು
ಅರಿವುದಿದರಿಂ ಗುರುವ ಒಲಿಮೆ ಅಧಿಕೆಂದು ೧೭
ಪರಮ ಸುಜ್ಞಾನದಿಂದರಿತು ತತ್ವಾರ್ಥಗಳ
ಶರಣ ನಾ ನಿನಗೆನಲು ವಾತ್ಸಲ್ಯದಿ
ಸಿರಿಯರಸ ತನ್ನಭಯ ಹಸ್ತ ಶಿರದಲಿಟ್ಟು
ಶರಣರನು ಪಾಲಿಸುವ ಮುಕ್ತಿ ಪದವಿಯನಿತ್ತು ೧೮
ಹರಿಸಿರಿಯ ಲೀಲೆಗಳ ಗುರುಕರುಣ ಬಲದಿಂದ
ಅರುಹಿದ ಮಹಿಮೆ ಧರೆಯಲ್ಲಿ ಮೆರೆದು
ಪರಮ ಮಂಗಳ ಕೊಡಲಿ ನಿರುತ ಸದ್ಭಕ್ತರಿಗೆ
ಕರುಣಾಳು ಗೋಪಾಲಕೃಷ್ಣವಿಠ್ಠಲನ ದಯದಿ ೧೯

 

೯೪
ಕಮಲೆ ನಿನ್ನನು ಭಜಿಪೆ ಕಮನೀಯಗಾತ್ರೆ
ಸುಮನಸರ ಜನನಿ ನಿನ್ನಮಲಪದ ತೋರೆ ಪ.
ಲೋಕಸುಂದರಿ ಎನ್ನ ಶೋಕಗಳ ತರಿದು ಅವ
ಲೋಕಿಸೆ ಕರುಣಮಯ ದೃಷ್ಟಿಯಿಂದ
ಏಕಮನಸು ನೀಡೆ ಶ್ರೀ ಕಳತ್ರನ ಪದದಿ
ನೀ ಕರುಣಿಸಿದನೆ ನನಗನೇಕ ಜನ್ಮದಲಿ ೧
ಇಂದಿರೆ ನಿನ್ನ ಪತಿ ಸಂದರುಶನವನೆನಗೆ
ಎಂದೆಂದಿಗೆ ತೊಲಗದಂದದಲಿ ನೀಡೆ
ಒಂದನರಿಯೆನೆ ಈಗ ಬಂದೆನೇ ನಿನ್ನ ಬಳಿಗೆ
ನಂದಕಂದನ ತೋರಿ ಕುಂದು ಪರಿಹರಿಸೆ ೨
ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ
ಕಾಪಾಡೆ ಸತತದಲಿ ಕಾರುಣ್ಯಶಾಲಿ
ನೀ ಪಯೋಬ್ಧಿಯೊಳ್ ಕೈಪಿಡಿದೆ ಶ್ರೀ ಹರಿಯ
ರೂಪ ರೂಪಾಂತರದ ವ್ಯಾಪಾರ ತಿಳಿಸೆ ೩

 

ಪ್ರದ್ಯುಮ್ನ ತೀರ್ಥರು
೧೬೨
ಕರಕಮಲ ತಡೆಯುವುದೆ ಕಟುಖಾರವಾ
ನರಹರಿಯ ನಿತ್ಯ ಪೂಜಿಸುವ ಕೋಮಲದಾ ಪ.
ಪರಿವಾರ ಜನವು ಭೋಜನಕೆ ಕುಳಿತಿರಲು ನರ
ಹರಿಗೆ ಅರ್ಪಿತದ ಹುಳಿಯಲ್ಲಿ ಕರವಿಟ್ಟು
ಪರಿಪಕ್ವ ಶಾಖದ ಹೋಳುಗಳ ಬಡಿಸಲು
ಉರಿ ಉರಿ ಎಂಬ ತೆರದಿ ಮನ ಕರ ಕರೆಗೆ ಸಿಲುಕೇ ೧
ಮಧ್ವದುಗ್ಧಾಭ್ಧಿಯಲಿ ಜನಿಸಿದ ಸುಧಾರಸವ
ಶುದ್ಧ ದೃಷ್ಟಿಯಲ್ಲೀ ಸವಿಸವಿದು ಮಧುರಾ
ಹೃದ್ವಜದಲಿ ತುಂಬಲನುವಾದ ಪುಸ್ತಕವ
ಮುದ್ದಾಗಿ ಪಿಡಿಯಲನುಕೂಲವಾಗಿ ಇಂಥ ೨
ಗಂಧ ಕುಸುಮಾಕ್ಷತೆಗಳಿಂದ ಶ್ರೀ ತುಳಸಿದಳ
ದಿಂದ ವಿಠ್ಠಲ ಕೃಷ್ಣ ಲಕ್ಷ್ಮಿನರಹರಿಯಾ
ವೃಂದ ಸಾಲಿಗ್ರಾಮ ಹನುಮ ಯತಿಕುಲಜರುಗ
ಳಿಂದ ಸಹಿತದಿ ಪೂಜೆ ವಿಭವದಲಿ ಗೈದಾ ೩
ಮಧುರಾನ್ನ ಸವಿದು ಮಧುಸೂದನನ ಗುಣಗಳನು
ವಿಧವಿಧದಿ ಮಧ್ವಗ್ರಂಥದಿ ಕಂಡು ನಲಿದೂ
ಹೃದಯ ನಿರ್ಮಲದಿ ಆಲಿಸುವ ಭಕ್ತರಿಗೆ
ಮಧುರ ರಸಮನದ ಎಡೆಯಲ್ಲಿ ಬಿಡಿಸುವ ಇಂಥ ೪
ಗೋಪಾಲಕೃಷ್ಣವಿಠ್ಠಲನ ಭಕ್ತರು ಬಂದು
ಶ್ರೀಪಾದಕೆರಗೆ ಸಿರದಲ್ಲಿ ಅಕ್ಷತೆಯಾ
ಅಪಾರ ಕರುಣದಿಂದಲಿ ಸೂಸಿ ನಲಿಯುತಲಿ
ಅಪತ್ತು ಕಳೆವ ಶ್ರೀ ಪ್ರದ್ನುಮ್ನತೀರ್ಥಯತಿ ೫

 

೧೭
ಕರಪಿಡಿದು ಕಾಯೊ ಶ್ರೀ ಕರುಣಾಳು ಧನ್ವಂತ್ರಿ
ವರ ವೆಂಕಟಾದ್ರಿವಾಸ ಪ.
ತರಳೆ ಸೇವೆಯ ಕೊಂಡು ಪರಿಪರಿಯ ಬಗೆಯಿಂದ
ವರ ಕೃಪೆಯ ಮಾಡೊ ಸ್ವಾಮಿ ಪ್ರೇಮಿ ಅ.ಪ.
ಆವ ಪರಿಯಿಂದ ಜಗದೊಳು ನೋಡೆ ಕಾವರಿ
ನ್ನಾವರುಂಟೆಲೊ ದೇವನೆ
ಪಾವಮಾನಿಯ ಪ್ರೀಯ ಪರಿಪರಿಯ ಪಾಪ ಫಲ
ದೀವಿಧದ ಬವಣೆಯನ್ನೇ
ನೀ ವಿಚಾರಿಸಿ ಕಾಯೊ ನಿನ್ನ ಶರಣ್ಹೊಕ್ಕಮೇ-
ಲಾವ ಸಂಶಯ ಕಾವನೇ
ಪಾವಕನ ತೆರದಿ ಭಸ್ಮವ ಮಾಡಿ ದುಷ್ಕರ್ಮ
ಜೀವಕ್ಹಿತ ಕೊಡು ಪ್ರೀತನೇ | ಇನ್ನೇ ೧
ಸುರರ ವ್ಯಾಕುಲ ಬಿಡಿಸಿ ಅಮರ ಪಕ್ಷವ ವಹಿಸಿ
ವರ ಸುಧೆಯನವರಿಗುಣಿಸೀ
ದುರುಳ ಸಂಘವ ಕೊಲಿಸಿ ಸುರ ರಾಜ್ಯಸ್ಥಿರಪಡಿಸಿ
ಪರಿಪರಿಯ ಸೌಖ್ಯ ಸುರಿಸೀ
ಮೆರೆದೆಯೋ ಗುಣಸಿಂಧು ನಿನ್ನ ಸೇವಕಳೆಂದು
ಪರಿಕರಿಸಿ ನೀನೀಕ್ಷಿಸೀ
ಪೊರೆಯದಿದ್ದರೆ ನಿನ್ನ ಬಿರುದುಳಿವ ಪರಿ ಕಾಣೆ
ಹರಿಸು ಭಯ ಶ್ರೀ ನರಹರೇ | ಶೌರೇ ೨
ಬರಿದು ಮಾಡದೆ ಎನ್ನ ಬಿನ್ನಪವ ಪೊರೆಯ ಬೇ-
ಕರವಿಂದ ದಳ ನೇತ್ರನೇ
ಗುರು ಹಿರಿಯರುಕ್ತಿಯಲ್ಲದೆ ಎನ್ನದೆಂಬುವೋ
ಗರುವ ನುಡಿಯಲ್ಲ ನೀನೇ
ಚರಣ ಸೇವಕರ ಪೊರೆವಂಥ ವಿಶ್ವಾತ್ಮಕನೆ
ಪರಿಹರಿಸು ಕ್ಲೇಶಗಳನೇ
ಕರುಣಿ ಶ್ರೀ ಗೋಪಾಲಕೃಷ್ಣವಿಠ್ಠಲ ಶೇಷ-
ಗಿರಿನಿಲಯ ಭಕ್ತ ಪ್ರೀಯಾ | ಜೀಯಾ ೩

 

೧೮
ಕರಿಗಿರೀಶ ನಿನ್ನ ಬೇಡುವೆನೀಗ
ಪರಿಪಾಲಿಸೊ ಸತತ ಪ.
ನರಹರಿ ಭಕ್ತರ ಪೊರೆಯುವೆ ನೀನೆಂ-
ದರುಹಿದರೆನಗೆ ಶ್ರೀ ಗುರುಗಳು ಇಂದು ಅ.ಪ.
ನಾರಸಿಂಹ ನಿನ್ನ ಸಾರಿ ಭಜಿಸುವೆನು
ತೋರೊ ನಿನ್ನ ಪದವ
ಬಾರಿಬಾರಿಗೆ ಸ್ತುತಿಸಲು ಬಾಲನು
ಘೋರ ದೈತ್ಯನ ಸೀಳಿ ಪೊರೆದೆಯೊ ೧
ಶೇಷಾಂತರ್ಗತ ನಾರಸಿಂಹ ವಿ-
ಶೇಷ ಮಹಿಮೆ ತೋರೊ
ಶೇಷಶಯನ ಮಹರುದ್ರಾಂತರ್ಗತ
ಪೋಷಿಸೊ ಭಕ್ತರ ಶಾಂತರೂಪದಿ ೨
ಲೀಲೆಯಿಂದ ಶ್ರೀ ಲಕುಮಿ ಹಿತದಿ
ವ್ಯಾಳಶಯನನಾಗಿ
ಪಾಲಿಸಬೇಕೆನ್ನನು ಸತತದಿ ಗೋ-
ಪಾಲಕೃಷ್ಣವಿಠ್ಠಲ ನೀ ದಯದಿ ೩

 

೧೯
ಕರುಣ ಬಾರದೆ ವಿಠ್ಠಲಾ | ಶ್ರೀ ಪಾಂಡುರಂಗ ಪ.
ಶರಣಳಲ್ಲವೆ ನಿನ್ನ ಚರಣ
ಸ್ಮರಣೆ ಮಾಡುತ ಪೊರೆ ಎಂದೆನ್ನುತ
ವರಲುವಾ ಧ್ವನಿ ಕೇಳದೇ ಈ
ಪರಿಯ ಗರ್ವವಿದೇನೊ ಹರಿಯೆ ಅ.
ದೂರದಿಂದಲಿ ಬಂದೆನೋ | ಇಲ್ಲಿಂದ ಮುಂದೆ
ದಾರಿ ಕಾಣದೆ ನಿಂದೆನೋ
ದ್ವಾರಕಾಪತಿ ನೀನಲ್ಲದಿ
ನ್ನಾರು ಕಾಯುವರೀಗ ಪೇಳು
ಸಾರಿದೆನು ನಿನ್ನಂಘ್ರಿ ಕಮಲವ
ಚಾರು ಚರಿತನೆ ಮಾರನೈಯ್ಯ ೧
ತನುಸುಖ ಬೇಡಲಿಲ್ಲಾ | ನಿನ್ನ ನಾನು
ಘನವಾಗಿ ಕಾಡಲಿಲ್ಲ
ಮನದ ಹಂಬಲ ನೀನೆ ಬಲ್ಲೆಯೊ
ಮನಕೆ ತಾರದೆ ಸುಮ್ಮನಿಪ್ಪೆಯೋ
ಎನಗೆ ಪ್ರೇರಕ ನೀನೆ ಅಲ್ಲವೆ
ನಿನಗೆ ದಾಸಳು ನಾನು ಅಲ್ಲವೆ ೨
ಕರೆಕರೆ ಪಡಿಸುವುದೂ | ಸರಿಯಲ್ಲ ನಿನಗೆ
ಕರಿವರದ ಕೇಳು ಇದೂ
ನರಸಖನೆ ದಯದಿಂದ ನಿನ್ನ
ಚರಣ ದರುಶನವಿತ್ತೆ ಒಲಿದು
ಕರಪಿಡಿದು ಸಲಹೆಂದರೀಗ
ತೆರೆದು ನೋಡದೆ ನೇತ್ರವಿರುವರೆ ೩
ಜ್ಞಾನಿ ಹೃತ್ಕಮಲವಾಸ | ಶ್ರೀ ರುಕ್ಮಿಣೀಶ
ಭಾನುಕೋಟಿ ಪ್ರಕಾಶ
ನೀನೆ ಗತಿ ಇನ್ನಿಲ್ಲ ಅನ್ಯರು
ಸಾನುರಾಗದಿ ಸಲಹೊ ಎನ್ನಲು
ಆನನದಿ ಈಕ್ಷಿಸದೆ ನಿಂತರೆ
ಮಾನ ಉಳಿವುದೆ ಭಕ್ತವತ್ಸಲ ೪
ಇಟ್ಟಿಗೆ ಕೊಟ್ಟವನೊ ಕೊಟ್ಟನಿನ್ನೇನು
ಅಷ್ಟು ಭಾಗ್ಯವನೂ
ಕೊಟ್ಟೆ ಬಡ ಬ್ರಾಹ್ಮಣನ ಅವಲಿಗೆ
ದೃಷ್ಟಿ ಬಿದ್ದರೆ ಕಷ್ಟ ಉಂಟೆ
ಕೊಟ್ಟು ಅಭಯ ಪೊರೆ ಗೋಪಾಲ-
ಕೃಷ್ಣವಿಠ್ಠಲ ಮನದಿ ತೋರೋ ೫

 

(ನು. ೫) ಸ್ವಾಸ ಜಪವ ಮಾಡಿ
೧೦೫
ಕರುಣದಿ ಕಾಯಬೇಕಿನ್ನು ಪ್ರಾಣೇಶ
ಅರಿಯೆನೊ ಅನ್ಯರ ಜಗದ್ವಾಸ ಪ.
ಪರಿಪರಿ ಬವಣೆಯ ಪರಿಹಾರಗೈಸುತ
ತ್ವರಿತದಿ ಸಲಹೊ ಭಾರತಿಗೀಶ ಅ.ಪ.
ಅನ್ನವಸನಗಳಿಗೆ ಅಲ್ಪರ ತೆರದೊಳು
ಬನ್ನಬಡುತಲಿರಲು
ನಿನ್ನ ಪಾದವ ನಂಬಿ ನೀ ಗತಿ ಎನುತಿರೆ
ಮನ್ನಿಸಿದ ಮಹಿಮ ನಿಸ್ಸೀಮ ೧
ಮನದಿ ಬಹುನೊಂದು ನಿನ್ನ ಘನತೇನೆಂದು
ಅನುದಿನ ಕಾಯೊ ಎಂದು
ಎನುತಿರೆ ಸ್ವಪ್ನದಿ ಹನುಮ ನಿನ್ನಭಯ ಹಸ್ತ
ವನೆ ಶಿರದಿ ಇಟ್ಟೆ ಶ್ರೇಷ್ಠನೆ ೨
ಉಭಯ ಹಸ್ತವು ಎನ್ನ ಶಿರದ ಮ್ಯಾಲಿಡುತಲಿ
ಅಭಯ ಕೊಡುತಲಿರಲು
ನಿರ್ಭಯದಿಂದ ನಾ ನಿನ್ನ ಭಜಿಪೆನಯ್ಯ
ಶುಭಗುಣನಿಲಯ ಜೀಯಾ ೩
ಹನುಮ ಭೀಮಾನಂದ ಮುನಿಯಾಗಿ ಜಗದಲಿ
ಹನನಗೈಯುತ ದನುಜರ
ವನಜಾಕ್ಷ ಹರಿಯನು ಘನವಾಗಿ ಸೇವಿಸಿ
ಅನುದಿನದಲಿ ಕಾಯ್ವೆ ಸುಜನರ೪
ಶ್ವಾಸಜಪವ ಮಾಡಿ ರಾಶಿ ಜೀವರ ಕಾಯ್ವೆ
ಶ್ವಾಸ ನಿಯಾಮಕನೆ
ಶ್ರೀಶ ಶ್ರೀ ಗೋಪಾಲಕೃಷ್ಣವಿಠ್ಠಲನಿಗೆ
ಕೂಸು ಎಂದೆನಿಸಿರುವೆ ನೀ ಕಾವೆ ೫

 

೧೫೪
ಕರುಣಿಸೆನ್ನ ಗುರು ಮಂತ್ರಾಲಯ ನಿಲಯಾ
ಶ್ರೀ ನರಹರಿ ಗತಿ ಪ್ರೀಯಾ ಪ.
ಹರಿಶಯ ಮರುತರ ಆವೇಶಕೆ ನಿಲಯಾ
ನಂಬಿದೆ ಶುಭಕಾಯಾ ಅ.ಪ.
ತರಳತನದಿ ಶ್ರೀ ನೃಹರಿ ಶಾಂತನಾಗೇ
ಸುರರೆಲ್ಲರು ನಿಮಗೇ
ಎರದು ಕೀರ್ತಿ ಹಿರೆತನವಹಿಸಿದ ರಾಗೇ
ಅದರಂದದಿ ಈಗೇ
ವರ ಯತಿಗಳು ಹರಿದಾಸರು ವಂದಾಗೇ
ಭಕ್ತರ ಅಘ ನೀಗೇ
ಧರೆ ಕಲ್ಪ ಧ್ರುಮವೆಂದು ನಿಮ್ಮ ಬಳಿಗೇ
ವಪ್ಪಿಸುವರು ಅಡಿಗೇ ೧
ಎಮ್ಮ ಗುರುಗಳಿಂದ್ಹೇಳಿದ ನುಡಿ ಮರೆದೇ
ನಿಮ್ಮಡಿಗೆರವಾದೇ
ಸಮ್ಮತದಲಿ ಮೃತ್ತಿಕೆಯನು ಸೇವಿಸದೇ
ಹಮ್ಮಿನಲಿ ಮೈಮರೆದೇ
ನಿಮ್ಮ ಸುಕೀರ್ತಿಯ ತಿಳಿಸು ತಿಳಿಯದಾದೇ
ಅತಿ ಭಕ್ತಿಯ ಜರಿದೇ
ನಿಮ್ಮ ಕರುಣವಿರಲದರಿಂದೀಗರಿದೇ
ತನುಮನವಪ್ಪಿಸಿದೇ ೨
ಒಂದೇ ಕೃತಿ ದ್ವಿದಳಾತ್ಮಕದಪರಾಧ
ಪಡಿಸಿತು ಬಹು ಬಾಧ
ಸಂದಿತು ಕಾಲವು ಮುಂದರಿಯುವ ಮೋದ
ಸಂದಿಸಿತುತ್ಸಹದಾ
ನಂದಕೆ ಕಲಿ ಮಲ ತೊಳೆಯಲು ಮೌನದಾ
ಪರಿ ಅರಿತೆ ಸುಭೋಧಾ
ಕುಂದೆಣಿಸದೆ ಪೊರೆದೆನ್ನ ನಿಮ್ಮಗಾಧಾ
ಕೃಪೆತೋರಲು ಬಹು ಮೋದಾ ೩
ಎಲ್ಲಿ ನೋಡಲಲ್ಲಲ್ಲಿ ನಿಮ್ಮ ವಾಸಾ
ಪುರಗಳು ಜನ ತೋಷಾ
ಸೊಲ್ಲು ಸೊಲ್ಲಿಗೇ ನುತಿಪ ಗಾನ ಘೋಷಾ
ಮಹಿಮೆಗಳ ಪ್ರಕಾಶ
ವಲ್ಲದಾಯಿತ್ಯಾತಕೊ ಎನಗಭಿಲಾಷಾ
ಈಗಾಯಿತು ಈ ಆಶಾ
ಬಲ್ಲವರೀಪರಿ ಮಾಡುವರೇ ಮೋಸಾ
ಸದ್ಭಕ್ತರಲಾಭಾಸಾ ೪
ಒಂದು ದಿನದ ಮೃತ್ತಿಕೆ ಜಲ ಸೇವಿಂದ
ಪೊಂದಿದೆ ನಿಮ್ಮ ಪದಾ
ಒಂದಾಗಲಿ ಗುರುವೆನಿಸಿದರೆಲ್ಲರದಾ
ಮನವಮ್ಮನ ವಾದಾ
ನಂದವು ಶ್ರೀ ನರಹರಿ ತಾ ಪರಿಕಿಸಿದಾ
ನಂದವು ಬಹು ಮೋದಾ
ಸಂದಲಿ ಗೋಪಾಲಕೃಷ್ಣವಿಠಲನಿಂದಾ
ಎಣಿಸದೆ ಬಹು ಕುಂದಾ ೫

 

ಸುಮತೀಂದ್ರ
೨೦
ಕರುಣಿಸೈ ಶ್ರೀ ರಾಮ ಕೌಸಲ್ಯ ಪ್ರೇಮ
ಶರಣ ಜನಕನು ಪೊರೆವ ಕಾರುಣ್ಯಧಾಮ ಪ.
ದಶರಥಾತ್ಮಜ ಯಜ್ಞ ಕಾಯ್ದು ಸೀತೆಯ ವರಿಸಿ
ಕುಶಲದಿಂದಲಿ ಬಂದು ನಗರದಲ್ಲಿರಲೂ
ದಶರಥನ ಆಜ್ಞೆಯಲಿ ಸತಿ ಅನುಜಸಹ ವನದಿ
ನಸುನಗುತ ಚರಿಸಿ ರಕ್ಕಸರ ಸದೆಬಡಿದೆ ೧
ಸತಿಯೆ ಕಳೆದಿರೆ ಹನುಮ ಹಿತವಾರ್ತೆ ಬಿನೈಸೆ
ಹತಗೈದು ರಾವಣಾದಿಗಳನೆಲ್ಲ
ಹಿತದ ರಾಜ್ಯದ ವಿಭೀಷಣ ರವಿಜರಿಗೆ ಇತ್ತು
ವ್ರತ ಬಿಡಿಸಿ ಭರತನಿಗೆ ಧರಣಿಯಾಳಿದನೇ ೨
ಪಟ್ಟಾಭಿರಾಮ ಮಂಗಳ ನಾಮ ಕೃಪೆಯಿಂದ
ಇಷ್ಟಾರ್ಥವೀಯೊ ಸನ್ಮಂಗಳವನೂ
ದಿಟ್ಟ ಶ್ರೀ ಹನುಮ ವಂದಿತ ಚರಣ ನಮಿಸುವೆನು
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೇ ೩

 

೨೭
ಕಾಯಬೇಕೆನ್ನ ಕರುಣದಲಿ ಧನ್ವಂತ್ರಿ
ಶ್ರೀಯರಸ ನರಹರಿಯೆ ಪ್ರಾರ್ಥಿಸುವೆ ನಿನ್ನ ಪ.
ಸುರರಿಗೆ ಮರಣ ಕಾಲವು ಪ್ರಾಪ್ತವಾಗಲು
ಗಿರಿಯಿಂದ ಶರಧಿಯನು ಮಥಿಸೆ ಪೇಳಿ
ಕರುಣದಿಂದಮೃತ ಕರದಿಂದ ಸುರರಿಗೆ ಎರೆದು
ಜರೆ ಮೃತ್ಯು ಬಿಡಿಸಿದಗೆ ಇದು ಒಂದು ಘನವೆ ೧
ಸಕಲ ನಾಡಿಗಳಲ್ಲಿ ಚೇಷ್ಟಪ್ರದ ನೀನಾಗಿ
ಸಕಲ ವ್ಯಾಪಾರಗಳ ನಡೆಸುತಿರಲು
ಯುಕುತಿಯಿಂದಲಿ ನಾಡಿ ನೋಡಿ ತಿಳಿಯುವನ್ಯಾರೊ
ಮುಕುತಿದಾಯಕ ನಿನಗೆ ಇದು ಒಂದು ಘನವೆ ೨
ಅನಾದಿಯಿಂದ ಅಪಥ್ಯದಲಿ ನರಳುವೆನೊ
ಈಗ ಪಥ್ಯವ ಮಾಳ್ಪ ಬಗೆ ಯಾವುದೊ
ಶ್ರೀನಿವಾಸನೆ ನಿನ್ನ ಧ್ಯಾನವೆ ಔಷಧವೊ
ಶ್ರೀ ಗುರುಗಳಾಜ್ಞೆಯೆ ಪಥ್ಯವೆನಗಿನ್ನು ೩
ಭಕ್ತಪ್ರಹ್ಲಾದನನು ಯುಕ್ತಿ ಶಕ್ತಿಗಳಿಂದ
ಮುಕ್ತಿಮಾರ್ಗವ ತೋರಿ ಸಲಹಲಿಲ್ಲೇ
ಭಕ್ತಿಹೀನರನೆ ಕಂಡು ಎನ್ನ ರಕ್ಷಿಸದಿರಲು
ಯುಕ್ತವೇ ನಿನಗಿನ್ನು ಭಕ್ತಪಾಲಕನೆ ೪
ನಿನ್ನ ದಾಸತ್ವದಲಿ ನೆಲಸಬೇಕಾದರೆ
ಬಿನ್ನಣದ ರೋಗಗಳ ಪರಿಹರಿಸಿ ಸಲಹೊ
ನಿನ್ನವರಾದ ಮೇಲಿನ್ನು ಕಾಯದೆ ಇಹರೆ
ಘನ್ನ ಶ್ರೀ ಗೋಪಾಲಕೃಷ್ಣವಿಠ್ಠಲನೆ ೫

 

೯೬
ಕಾಯಬೇಕೆನ್ನ ಲಕುಮಿ | ಕಮಲಾಯತಾಕ್ಷಿ
ಕಾಯಬೇಕೆನ್ನ ಲಕುಮಿ ಪ.
ಕಾಯಬೇಕೆನ್ನ ನೋಯುವೆ ಭವದಲಿ
ಕಾಯಜಪಿತನನು ಕಾಯದಿ ತೋರಿ ಅ.ಪ.
ಕ್ಷೀರವಾರಿಧಿ ತನಯೆ | ಶ್ರೀ ಹರಿಯ ಜಾಯೆ
ಪಾರುಗಾಣಿಸೆ ಜನನಿಯೆ
ತೋರೆ ನಿನ್ನ ಪತಿಯ ಪಾದವ ಮನದೊಳು
ಸೇರಿಸೆ ಸುಜನರ ಸಂಗದೊಳೀಗ೧
ಮುಕ್ತಿದಾಯಕಿ ಸಿರಿಯೆ | ನೀ ಎನ್ನ ಕಾಯೆ
ಮುಕ್ತಿಮಾರ್ಗವ ನೀನೀಯೆ
ಶಕ್ತಿರೂಪೆ ನಿನ್ನ ಭಕ್ತಿಲಿ ಭಜಿಸುವೆ
ಮುಕ್ತರೊಡೆಯನೊಳು ಭಕ್ತಿಯ ನೀಡೆ ೨
ಅಷ್ಟಭುಜದ ಶಕ್ತಿಯೆ | ಶ್ರೀ ಭೂಮಿ ದುರ್ಗೆ
ಅಷ್ಟ ಐಶ್ವರ್ಯದಾಯಿನಿಯೆ
ಶ್ರೇಷ್ಠ ಶ್ರೀಗೋಪಾಲಕೃಷ್ಣವಿಠ್ಠಲನೊಳು
ಪಟ್ಟವಾಳ್ವೆ ಜಗಸೃಷ್ಟಿ ಪ್ರಳಯದಿ ೩

 

(ನು. ೨) ಬ್ರಹ್ಮನ ಪಟ್ಟ.
೧೩೨
ಕಾಯೆ ಕಾಯೆ ಕಾಯೆ ಶ್ರೀ ಮಾರುತಿ ಜಾಯೆ ಪ.
ಸುರಸತಿಯರುಗಳಿಂ
ಪರಿಪರ ಓಲಗ
ಹರುಷದಿ ಕೈಗೊಂಬ
ಮರುತನ ಮಡದಿಯೆ ೧
ಇಂದಿರೆ ಪತಿಯನು
ತಂದು ತೋರಿಸೆ ಹೃನ್-
ಮಂದಿರದಲಿ ಬೇಗ
ಸಿಂಧುರಗಮನೆ ೨
ಕಾಲ ಕಾಲಕೆ ಮತಿ
ಪಾಲಿಸು ಶ್ರೀಗೋ
ಪಾಲಕೃಷ್ಣವಿ
ಠ್ಠಲನ ಸೊಸೆಯೆ ನೀ ೩

 

೨೩೩
ಕಾವಿಯ ಕಲ್ಲಿನ ತಿಲುಕವಿಡಕ್ಕ
ಕಾವಿಯ ಕಲ್ಲಿನ ತಿಲುಕ ಪ.
ಕಾವಿಯ ಕಲ್ಲಿನ ತಿಲುಕವನಿಟ್ಟರೆ
ಕಾಯುವ ಶ್ರೀಹರಿ ಸತತ ಕಾಣಕ್ಕ ಅ.ಪ.
ಕಾವಿಯ ತಿಲುಕವು ಕಲುಷವ ಕಳೆವುದು
ಕಾವಿಯ ತಿಲುಕವು ಕಲಿಬಾಧೆ ಕಳೆವುದು
ಕಾವಿಯ ತಿಲುಕವು ಕೋಪತಾಪಗಳನ್ನು
ಜೀವನ ಬಳಿಯಲ್ಲಿ ಬರಲೀಸದಕ್ಕ ೧
ಕಾವಿಯ ತಿಲುಕವು ಕವಿತೆಯ ಮಾಳ್ಪರಿಗೆ
ಭಾವಶುದ್ಧಿಯನಿತ್ತು ಭಕ್ತಿ ಹೆಚ್ಚಿಸುವುದು
ಕಾವಿಯ ಮಹಿಮೆಯ ಪಾವನ ಗುರು
ಮಧ್ವರಾಯರೆ ಬಲ್ಲರಕ್ಕ ೨
ಕಾವಿಯ ತಿಲುಕವು ಗುರುಭಕ್ತಿ ಕೊಡುವುದು
ಕಾವಿಯ ತಿಲುಕವು ವೈವಿಧ್ಯ ಕಳೆವುದು
ಕಾವಿಯ ತಿಲುಕವು ಕಳೆಯ ಹೆಚ್ಚಿಸುವುದು
ಶ್ರೀ ವರನನು ಮನದಿ ತೊರುವುದಕ್ಕ ೩
ಕಾವಿಯ ತತ್ವ ದಾಸರೆ ಬಲ್ಲರು
ಕಾವಿಯೆ ಭೂಷಣ ದಾಸ ಶಿರಸಿಗೆ
ಕಾವಿ ಇಲ್ಲದ ವ್ಯಾಸ ದಾಸಕೂಟವು ಇಲ್ಲ
ಕಾವಿಯೆ ಸಂಸಾರ ನಾವೆಯಕ್ಕ ೪
ಕಾವಿಯ ಮಹಿಮೆ ತಂದೆ ಮುದ್ದುಮೋಹನ ಗುರು
ಭಾವಿಸಿ ಪೇಳಲು ಅರಿತು ಧರಿಸಿಹೆನು
ಪಾವನ ಗೋಪಾಲಕೃಷ್ಣವಿಠ್ಠಲ ವ್ಯಾಸ
ಕಾವಿಯ ಧರಿಸಿ ಮುನಿಯಾದ ಬದರಿಯಲಿ ೫

 

೧೦೬
ಕುಲವ್ಯಾವುದಯ್ಯ ಕಪಿಕುಲನೆ ನಿನಗೆ
ಒಲಿದಿಹನು ಹರಿ ನಿನಗೆ ಎಂದು ಜನ ನುತಿಸುವರು ಪ.
ಮರ ಹಾರುವಂಥ ಮರ್ಕಟಕುಲದಲವತರಿಸಿ
ಶರಧಿ ಲಂಘಿಸುತ ದ್ವೀಪಾಂತರವಾಸಿ
ದುರುಳರನು ಸಂಹರಿಸಿ ದೊರೆ ಸುತರ ಸೇವಿಸಿ
ಕರದಿ ಎಂಜಲು ಕೊಂಡು ಮರವನೇರಿದನೆ ೧
ಪ್ರಥಮ ಕುಲವನೆ ಬಿಟ್ಟು ದ್ವಿತೀಯ ಕುಲದೊಳಗುದಿಸಿ
ಹಿತವೆ ರಕ್ಕಸಿ ಸಂಗ ಪಥದಿ ನಿನಗೆ
ದಿತಿಜನಾಹುತಿ ಅನ್ನ ಗತಿಯಿಲ್ಲದಲೆ ತಿಂದು
ಚತುರ ಕುಲಜನ ನೀ ನುತಿಸಿ ಹಿಗ್ಗಿದನೆ ೨
ತುಳುವಂಶಜನೆ ನೀ ಲಲನೆ ಸಂಗವ ತೊರೆದು
ಅಲೆದೆ ಯತಿಯಾಗಿ ಈ ಇಳೆ ಎಲ್ಲವ
ಕುಲನ್ಯೂನ ಗೋಪಾಲಕೃಷ್ಣವಿಠ್ಠಲನ ಪದವ
ಒಲಿಸಲೋಡಿದೆ ಆರು ಬರದಂಥ ಗಿರಿಗೆ ೩

 

೨೨೭
ಕೃಷ್ಣಚಿತ್ತ ಕೃಷ್ಣಚಿತ್ತ ಕೃಷ್ಣಚಿತ್ತ ಎನ್ನಿರೊ ಪ.
ಕೃಷ್ಣಧ್ಯಾನದಿಂದ ಪರಮ ತುಷ್ಟರಾಗಿ ಸುಖದುಃಖ
ಕಷ್ಟ ಕರ್ಮಂಗಳು ಎಲ್ಲ ಅಷ್ಟು ಹರಿಯಾಧೀನವೆಂದು ಅ.ಪ.
ಜನನವಾದ ಕಾಲದಿಂದ
ಇನಿತು ಪರ್ಯಂಕಾರದಲ್ಲಿ
ಅನುಭವಿಸಿದಂಥ ಕರ್ಮ
ಗುಣನಿಧಿಯಾಧೀನವೆಂದು೧
ಕಷ್ಟದಲ್ಲಿ ಕಳೆದ ಕಾಲ
ಅಷ್ಟರಲ್ಲೆ ಪಟ್ಟ ಸುಖ
ಕೊಟ್ಟ ಹರಿಯು ಎನಗೆ ಎನುತ
ಕೆಟ್ಟ ವಿಷಯ ಮನಕೆ ತರದೆ ೨
ಕಾಮ ಕ್ರೊಧ ಲೋಭ ಮೋಹ
ಆ ಮಹಾ ಮದ ಮತ್ಸರಗಳು
ಕಾಮಿಸಿ ಮನ ಕೆಡಿಸುತಿರಲು
ಶ್ರೀ ಮನೋಹರನಾಟವೆಂದು ೩
ಪೊಂದಿದಂಥ ಮನುಜರಿಂದ
ಕುಂದು ನಿಂದೆ ಒದಗುತಿರಲು
ಇಂದಿರೇಶನ ಕರುಣವೆಂದು
ಒಂದು ಮನಕೆ ತಾರದಂತೆ ೪
ಮಾನ ಅಪಮಾನಗಳು
ದೀನನಾಥನಧೀನವೆಂದು
ಜ್ಞಾನಿಗಳ ವಾಕ್ಯ ನೆನೆದು
ಮಾನಸದ ದುಃಖ ಕಳೆದು ೫
ಹೊಟ್ಟೆ ಬಟ್ಟೆಗೊದಗುವಂಥ
ಅಷ್ಟು ಕಷ್ಟ ಸುಖಗಳೆಲ್ಲ
ವಿಷ್ಣುಮೂರ್ತಿ ಕೊಟ್ಟನೆಂದು
ಮುಟ್ಟಿ ಮನದಿ ಹರಿಯ ಪದವ ೬
ಹರಿಯ ಧ್ಯಾನ ಮಾಡುವುದು
ಹರಿಯ ಧ್ಯಾನ ಅರಿಯುವುದು
ಹರಿಯ ಮೂರ್ತಿ ಕಾಣುವುದು
ಹರಿಯಧೀನವೆಂದು ತಿಳಿದು ೭
ಗುರುಕೃಪೆಯಿಂ ದತ್ತವಾದ
ವರ ಸುಜ್ಞಾನವರೆಯ ತಿಳಿದು
ಹರುಷ ಕ್ಲೇಶಾ ಮನಕೆ ತರದೆ
ಹರಿಯ ಮೂರ್ತಿ ಮನಕೆ ತಂದು ೮
ನಿಷ್ಟೆಯಿಂ ಗೋಪಾಲ
ಕೃಷ್ಣವಿಠ್ಠಲಾಧೀನ ಜಗವು
ಇಟ್ಟ ಹಾಗೆ ಇರುವೆನೆಂದು
ಗಟ್ಟಿಮನದಿ ಹರಿಯ ಪೊಂದಿ ೯

 

ಕೇಶವ ಮಾಧವತೀರ್ಥರು
೧೬೦
ಕೇಶವ ಮಾಧವ ತೀರ್ಥಾ ಯತಿ
ವಾಸಿಪ ವೃಂದಾವನದಲ್ಲಿ ಖ್ಯಾತಿ ಪ.
ವಾಸುದೇವನ ಭಕ್ತ ಸುಜನಕೆ ಪ್ರೀತಿ
ಸೂಸುತ ಪೊರೆಯುವ ಕರುಣಿ ಪ್ರತೀತಿ ಅ.ಪ.
ಭದ್ರಾವತಿಯ ತೀರ ನರಸಿಂಹ ಕ್ಷೇತ್ರ
ಭದ್ರಾವತೀ ಪುರ ಮಠದಿ ಸತ್ಪಾತ್ರಾ
ಮುದ್ದಾದ ವೀರ ರಾಮನ ಪ್ರೀತಿ ಗಾತ್ರಾ
ಪೊದ್ದಿಸಿಕೊಂಡಿಪ್ಪ ಶಿರದಿ ಪತಿತ್ರ ೧
ಸ್ವಪ್ನದಿ ತೋರಿದ ಯತಿರೂಪದಿಂದ
ವಪ್ಪದಿ ದರ್ಶನಕೆ ಬಾರೆಂದು ನುಡಿದಾ
ಅಪ್ಪ ತಿಮ್ಮಪ್ಪನ ಸ್ತುತಿಯನಾಲಿಸಿದಾ
ಬಪ್ಪ ನರ ದರ್ಶನಕೆ ಮುಂದೆ ನಿಲ್ಲಿಸಿದಾ೨
ಎನ್ನಿಂದ ಸಾರೋದ್ಧಾರ ಪದವನ್ನು
ಎನ್ನಲ್ಲೆ ನಿಂತು ತಾ ಬರಸಿದ ಘನ್ನ
ತನ್ನ ದೇವತ್ವವ ತೋರ್ದ ಪ್ರಸನ್ನ
ಇನ್ನಿಂಥ ಕರುಣಿಯ ಕಾಣೆ ನಾ ಮುನ್ನ ೩
ಮಧ್ವಕರ ಸಂಜಾತ ಮಾಧವರಂತೇ
ಶುದ್ಧ ಈ ಯತಿಕುಲ ಸಂಜಾತನಂತೇ
ಭದ್ರಾವತೀ ಪುರದಲ್ಲಿ ವಾಸಂತೇ
ಮುದ್ದು ಕೇಶವ ಮಾಧವಾತೀರ್ಥನಂತೆ ೪
ಕಾಮಿತಾರ್ಥವ ನಂಬೆ ಕೊಡುತಿಪ್ಪನಂತೆ
ಕಾಮಚಾರಿಗಳೀಗೆ ತೋರ್ಪನಲ್ಲಂತೆ
ಸ್ವಾಮಿ ರಾಮನ ಜಪಮೌನ ವ್ರತವಂತೆ
ಈ ಮಹಿಯಲಿ ಯೋಗಿ ಅವಧೂತನಂತೆ ೫
ಭಾಗಾವತಾದಲ್ಲಿ ಬಹು ದೀಕ್ಷಾಯುತರು
ಬಾಗಿದ ಜನರಿಗೆ ಪ್ರೇಮ ತೋರುವರು
ಭಾಗವತವ ರಾಜಗ್ಹೇಳಿದರಿವರು
ಬೇಗರಿತುಕೊಳ್ಳಿರಿ ಬಹುಗೋಪ್ಯಯುತರು ೬
ನಂಬಿದ ಜನರಿಂದ ಹಂಬಲೊಂದಿಲ್ಲ
ತುಂಬಿದ ಭಕ್ತಿ ಆತ್ಮಾರ್ಪಣೆ ಬಲ್ಲ
ಸಂಬ್ರಹ್ಮದಿಂ ನಲಿವ ಗುರುಭಕ್ತಿ ಬೆಲ್ಲ
ಕುಂಭಿಣಿ ಮೂಢರಿಗೀವನು ಬಲ್ಯಾ ೭
ಎನ್ನ ಶ್ರೀ ಗುರು ತಂದೆ ಮುದ್ದುಮೋಹನ್ನ
ಘನ್ನರ ಕೃಪೆಯಿಂದ ಈ ಮುನಿವರನಾ
ಸನ್ನುತ ಸುಗುಣವ ಕಂಡ ನಾ ನಿನ್ನ
ಚನ್ನ ಶ್ರೀ ಲಕ್ಷ್ಮೀ ನರಸಿಂಹ ತೋರ್ದರನಾ ೮
ಸ್ವಾಪರೋಕ್ಷಿಯ ವೃಂದಾವನಸ್ಥಾ
ಗೋಪ್ಯದಿ ವಾಸಿಪ ಮಹಿಮ ವಿಖ್ಯಾತಾ
ಗೋಪಾಲಕೃಷ್ಣವಿಠಲನ ಕೃಪಾ ಪಾತ್ರಾ
ಕಾಪಾಡು ತವ ದಾಸದಾಸರ ನಿರುತಾ ೯

 

೨೩೪
ಕೇಳಿರಿ ಕೌತುಕ ಪೇಳುವೆನೀಗ
ಶೀಲ ಶ್ರೀ ಗುರುಗಳ ಕರುಣದಲಿ ಪ.
ವ್ಯಾಳಶಯನ ರಂಗ ತಾಳಿ ಕರುಣಿಸಿದ
ಮೇಲು ಮೇಲು ಭಕ್ತಿಯ ನೀಡುತಲಿ ಅ.ಪ.
ಅರಿಯದ ದೇಶದಿ ಅರಿಯದ ಕಾಲದಿ
ಅರಿಯದವಸ್ಥೆಯ ಅನುಭವವು
ಸಿರಿಯರಸನ ವ್ಯಾಪಾರವಿದಲ್ಲದಡೆ
ನರರಿಗೆ ಸಾಧ್ಯವೆ ನಾಡಿನೊಳು ೧
ಸಂಭ್ರಮದಲಿ ಸಮಾರಂಭವು ಕಲೆತಿರೆ
ಬೆಂಬಿಡದಲೆ ರಕ್ಷಿಸುತಿರಲು
ಕುಂಭಿಣಿಯೊಳು ಸ್ಥಿರವಾದ ಪದವಿಗೆ
ಅಂಬುಜನಾಭನ ಕರುಣವಿದು ೨
ಅಗ್ನಿಗಳೆರಡು ಕಲೆತು ಶಾಂತವಾಗಿ
ಭಗ್ನವಿಲ್ಲದ ಆನಂದ ತೋರೆ
ವಿಘ್ನವಾಗದ ಕಾಲಗಳೊದಗುತ
ಮಗ್ನಗೈಸಿತಾನಂದದಲಿ ೩
ಚಲಿಸದ ವಸ್ತುಗಳ್ ಚಲಿಸಿತು ಮತ್ತೆ
ಚಲನೆಯಿಲ್ಲದೆ ಸುಸ್ಥಿರವಾಯ್ತು
ಬಲು ವಿಚಿತ್ರವು ಭೂತಲದೊಳಗಿದು
ನಳಿನನಾಭನ ಸಮ್ಮತವು೪
ಬಿಂಬನಾಗಿ ಹೃದಂಬರ ಮಧ್ಯದಿ
ಸಂಭ್ರಮಗೊಳಿಸೆಲೊ ಶ್ರೀ ವರನೆ
ಬೆಂಬಿಡದಲೆ ನಿತ್ಯ ಇಂಬುಗೊಟ್ಟು ಕಾಯೊ
ಬಿಂಬ ಶ್ರೀ ಗೋಪಾಲಕೃಷ್ಣವಿಠ್ಠಲ ೫

 

೨೮
ಕೊಳಲಕೃಷ್ಣ ಬಂದು ನಿಲ್ಲೊ ಹೃದಯ ಕಮಲದಿ
ನಳಿನನಾಭ ನಿನ್ನ ದಿವ್ಯ ಚಲುವ ರೂಪದಿ ಪ.
ಶಿರದಿ ಮಕುಟ ಫಣೆಯ ತಿಲುಕ ಒಲಿವ ಮುಂಗುರುಳು
ಸರಸಿದಳ ನಯನ ನಾಸಿಕ ಗಲ್ಲ ಹೊಳೆಯುತ ೧
ಕರ್ಣದಲಿ ಕುಂಡಲಗಳು ಸ್ವರ್ಣ ಕಂಠವು
ನಿನ್ನ ದಂತ ಹೊಳೆಯುತಿರಲು ಚನ್ನ ಶ್ರೀಹರಿಯೆ ೨
ಕೊಳಲ ನಾದಗೈವೊ ಅಧರ ಉರದಿ ಲಕ್ಷಿಯು
ನಳಿತೋಳಿನಲಿ ಶಂಖ ಚಕ್ರ ವೇಣು ಪಿಡಿದಿಹ ೩
ಹಾರ ಪದಕ ಕಮಲ ಮಾಲೆ ಮೇಲೆ ತುಳಸಿಯು
ಮಾರಜನಕ ಹೊಳೆವೊ ಜರಿಯ ಪೀತ ವಸನವು ೪
ರಕ್ತವರ್ಣ ವಸನ ಉಟ್ಟು ಕಟ್ಟಿ ಕಿರುಗೆಜ್ಜೆ
ಮುಕ್ತರೊಡೆಯ ಮುಕ್ತಿಕೊಡುವ ಪಾದಕಮಲವು ೫
ಶೇಷಶಯನ ಎನ್ನ ಮನದಿ ಕ್ಲೇಶ ಕಳೆಯುತ
ದಾಸ ಜನರ ಕಾಯ್ವ ಕೃಷ್ಣ ಘಾಸಿಗೊಳಿಸದೆ ೬
ಗುರುಗಳಲ್ಲಿ ನಿಂತು ಎನ್ನ ಹರುಷಪಡಿಸೊ ನೀ
ಪರಮಪುರುಷ ನರಹರಿಯೆ ದುರಿತದೂರನೆ ೭
ನೀರೊಳಾಡಿ ಭಾರಪೊತ್ತು ಕೋರೆ ತೋರಿದೆ
ಘೋರರೂಪಿ ಬ್ರಹ್ಮಚಾರಿ ಕ್ಷತ್ರಿಯಾರಿ ನೀ ೮
ಶ್ರೀ ಹರಿ ರಾಮ ಕೃಷ್ಣ ಬೌದ್ಧ ಕಲ್ಕಿಯೆ
ಗೋಪಾಲಕೃಷ್ಣವಿಠ್ಠಲ ರೂಪ ತೋರೊ ನೀ ೯

 

ನೀಲಕಂಠ (ನು-೨):
೨೯
ಕೊಳಲನೂದುವ ನಮ್ಮ ಚಲುವ ಕೃಷ್ಣಯ್ಯ
ನಳಿನಾಕ್ಷಿಯರ ಮಧ್ಯೆ ಪೊಳೆವ ರಂಗಯ್ಯ ಪ.
ಕರದ್ವಯದಲಿ ಶಂಖ ಚಕ್ರಪಿಡಿದಿಹ
ಕಿರುನಗೆ ನಗುತ ಸುಲಿಪಲ್ಲಿನ ಚಲುವ
ಸ್ವರಗಳ ಪಿಡಿಯುತ ವೇಣು ನುಡಿಸುವ
ಸರಸಿಜನಾಭ ಹೃನ್ಮಂದಿರದಿ ಮೆರೆವ ೧
ಜಗವ ಮೋಹಿಸುವಂಥ ನಗೆಯ ಮೊಗ ಚೆಲುವ
ಹೆಗಲು ಎಡದಲ್ಲಿ ಗಲ್ಲ ತಗುಲಿಸಿ ಇರುವ
ಖಗವಾಹನ ಹಸ್ತ ಸತಿ ಹೆಗಲಲಿ ಇಡುವ
ನಗಧರ ನರ್ತನವಾಡಿ ಮುದವೀವ ೨
ಕಾಲಕಡಗ ಗೆಜ್ಜೆ ಪಾಡಗರುಳಿಯು
ಮೇಲೆ ಪೀತಾಂಬರ ಜರಿಯ ವೈಭವವು
ಸಾಲ ಮುತ್ತಿನಹಾರ ಪದಕದ್ವಜ್ರಗಳು
ಓಲಾಡುವ ನೀಲಾಂಬರ ಹೊದ್ದಿಹ ಒಲಪು ೩
ಕಂಠ ಕೌಸ್ತುಭಮಣಿ ಅಧರದ ಕೆಂಪು
ಒಂಟಿ ಚೌಕುಳಿ ಕರ್ಣ ಕದಪು ಕನ್ನಡಿಯು
ಬಂಟರಾದವರನ್ನು ಪೊರೆಯುವ ದೃಷ್ಟಿ ವೈ –
ಕುಂಠನ ನಾಸಿಕ ಫಣೆಯ ತಿಲುಕವು ೪
ಶ್ರೀಪತಿ ಮುಂಗುರುಳು ಶಿರದಲ್ಲಿ ಮಕುಟ
ಪಾಪವ ದಹಿಸುವ ಪಾವನ ವೇಣು
ಆಪಾದ ಮೌಳಿಯ ರೂಪದ ಚಲುವ
ಗೋಪಾಲಕೃಷ್ಣವಿಠ್ಠಲ ಎನ್ನ ಕಾವ ೫

 

೨೪೯
ಕ್ಷೇಮದಿಂದಿರುವನಮ್ಮಾ | ಶ್ರೀನಿವಾಸ
ಭಾಮೆ ಲಕುಮಿ ಕೇಳಮ್ಮಾ ಪ.
ಕಾಮಜನಕ ಪೂರ್ಣ ಕಾಮನಾಗಿಹನಮ್ಮ
ಕಾಮಿಸಿದವರ ಅಭೀಷ್ಟ ಕೊಡುವನಮ್ಮ ಅ.ಪ.
ವೈಕುಂಠ ತೊರೆದನಮ್ಮಾ | ನಿನಗಲ್ಲಿ ಬ
ಹು ಕಷ್ಟವೆಂಬೊನಮ್ಮಾ
ನೀ ಕೊಲ್ಲಾಪುರಕೆ ಬರಲು ಖೇದಪಡುತಲಿ
ಆ ಕೋಲಗಿರಿಯಲಿ ತಾನೆ ನೆಲಸಿದನಮ್ಮಾ ೧
ಬಲುದಿನವಾಯಿತಂತೇ | ನಿನ್ನನು ನೋಡಿ
ಛಲವಿನ್ನು ಬೇಡವಂತೆ
ಲಲನೆ ಪದ್ಮಾವತಿ ದೂರದಲ್ಲಿಹಳಂತೆ
ವಲಿದು ನೀ ವಕ್ಷ ಸ್ಥಳದಿ ನೆಲಸ ಬೇಕಂತೆ ೨
ನೋಡಬೇಕೆಂಬೊನಮ್ಮಾ | ನಿನ್ನೊಡನೊಂದು
ಆಡಬೇಕೆಂಬೊನಮ್ಮಾ
ಮಾಡಿಸಿದೇಯಂತೆ ಪದ್ಮಿಣಿ ಲಗ್ನವ
ಮಾಡಿದ ಉಪಕಾರ ಮರಿಯನಂತಮ್ಮ ೩
ತಲೆನೋವು ಬಿಡದಂತಮ್ಮಾ | ತನ್ನಾ ಸೇವೆ
ತಿಳಿದು ಮಾಡುವರ್ಯಾರಮ್ಮಾ
ಲಲನೆ ನಿನ್ಹೊರತಿಲ್ಲ ಕೆಲಕಾಲ ಸೇವಿಪೆ
ತಿಳಿದು ತಿಳಿದು ಇಲ್ಲಿ ನೆಲೆÉಸಿದೆ ಯಾಕಮ್ಮ ೪
ವಡೆಯಳೆ ಭಾಗ್ಯವಂತೆ | ನೀ ತೊರೆಯಲು
ಬಡತನ ಬಂದಿತಂತೆ
ಕೊಡುವ ಜನರ ಕಪ್ಪಕೊಳುತ ದರ್ಶನವನ್ನು
ಕೊಡದೆ ಹೊಡೆಸುವಂಥ ಕಡುಲೋಭ ಕಲಿತನೆ ೫
ಅಷ್ಟ ಐಶ್ವರ್ಯ ಪ್ರದೆ | ಹೃದಯದಲಿರೆ
ಎಷ್ಟು ವೈಭವವಿಹುದೆ
ಬಿಟ್ಟೆ ನೀನೀಗೆಂದು ಎಷ್ಟು ಆಭರಣಗ
ಳಿಟ್ಟು ಮೆರೆವೊನಮ್ಮ ದೃಷ್ಟಿ ಸಾಲದು ನೋಡೆ ೬
ಎಷ್ಟು ಲೀಲೆಯೆ ನಿಮ್ಮದೂ | ವೈಕುಂಠವ
ಬಿಟ್ಟು ಇಬ್ಬರು ಇಹುದೂ
ಗುಟ್ಟು ಬಲ್ಲಂಥ ಹರಿದಾಸರಿಗೊಲಿಯುವ
ಶ್ರೇಷ್ಠ ಶ್ರೀ ಗೋಪಾಲಕೃಷ್ಣ ವಿಠ್ಠಲನರಸಿ ೭

 

ಗಣಪತಿ

ಗಜಮುಖ ನಿನ್ನನು ಭಜಿಸುವೆ ಸತತದಿ
ನಿಜಮತಿಯನೆ ನೀಡೊ ಪ.
ಭುಜಗ ಭೂಷಣಸುತ ರಜತಮ ಕಳೆಯುತ
ಗಜವರದನ ತೋರೊ ಅ.ಪ.
ಮೋದಕಪ್ರಿಯನೆ ಆದರದಲಿ ನಿನ್ನ
ಪಾದಕೆ ಎರಗುವೆನೊ
ನೀ ದಯದಲಿ ಹರಿ ವಿಶ್ವರೂಪವ ನಿನ್ನ
ಹೃದಯದಿ ತೋರೋ ೧
ಸೊಂಡಿಲ ಗಣಪನೆ ಹಿಂಡು ದೈವಗಳಿಗೆ
ಇಂದು ಪ್ರಥಮ ನೀನೆ
ಕಂಡಮಾತ್ರ ನಿನ್ನ ವಿಘ್ನಗಳೆಲ್ಲವು
ಬೆಂಡಾಗುವುದಿನ್ನೆ ೨
ಅಂಬರದಭಿಮಾನಿಯೆ ಸತತದಿ ಹರಿ
ಹಂಬಲ ನೀ ನೀಡೋ
ಕುಂಭಿಣೀಶ ಗೋಪಾಲಕೃಷ್ಣ
ವಿಠ್ಠಲನ ಮನದಿ ತೋರೋ ೩

 

ಶಿವನವಲ್ಲಭೆ ತ್ರಾಸಿನಲಿ ತೂಗುವಳು
೩೦
ಗುರು ಅಂತರ್ಯಾಮಿ ಶ್ರೀನಿವಾಸ
ಸಿರಿರಮಣ ಶ್ರೀ ಕೃಷ್ಣ ಶ್ರೀನಿಧಿಯೆ ಶ್ರೀಶ ಪ.
ಸೃಷ್ಟಿಕರ್ತನೆ ನಿನ್ನ ಲಕ್ಷಿದೇವಿಯು ಸತತ
ಶ್ರೇಷ್ಠತನದಲ್ಲಿ ಪೂಜೆ ಮಾಡುತಿಹಳೊ
ಅಷ್ಟು ದೇವತೆಗಳು ಆಗಮವನನುಸರಿಸಿ
ಶಿಷ್ಟೇಷ್ಟನೆಂತೆಂದು ಪೂಜೆ ಮಾಡುವರೋ ೧
ಅಣು ನಾನು ನಿನ್ನ ಅರ್ಚಿಸ ಬಲ್ಲೆನೇ ದೇವ
ಘನಮಹಿಮ ಸ್ವೀಕರಿಸೊ ಅಲ್ಪ ಸೇವೆ
ಮನ ಮಂದಿರದಿ ನಿಂತು ಅನುಗಾಲ ನಿನ್ನ ದಿವ್ಯ
ಘನ ಮೂರ್ತಿಯನೆ ತೋರೋ ಪೂಜೆ ಮಾಡುವೆನೊ ೨
ಸರಸಿಜಾಕ್ಷನೆ ನಿನಗೆ ಸರಸದಿಂದ ಗುಲಾಬಿ
ಸರದ ಪೂಮಾಲೆಯನು ಕೊರಳಿಗ್ಹಾಕುವೆನೊ
ಸುರರ ಪಾಲಿಪ ಹರಿಯೆ ಸುರಹೊನ್ನೆ ಹಾರವನು
ಕರ ಚಕ್ರಯುತ ನಿನ್ನ ಕಂಧರದಿ ಧರಿಸೋ ೩
ಶ್ಯಾಮವರ್ಣನೆ ರತ್ನಹಾರಗಳು ಹೊಳೆಯುತಿರೆ
ಶ್ರೀ ಮನೋಹರ ಮುತ್ತಿನ್ಹಾರ ಪದಕಗಳು
ಈ ಮಧ್ಯೆ ದಿವ್ಯ ಶ್ಯಾವಂತಿಗೆ ಸುಮನದಿಂ
ಕಾಮಜನಕನೆ ಮಾಲೆಕಟ್ಟಿ ಹಾಕುವೆನೊ ೪
ಈ ಜಗವ ಉದರದಲಿ ಧರಿಸಿ ಮೆರೆಯುವ ದೇವ
ಜಾಜಿ ಪೂಮಾಲೆಯನು ಕಂಧರದಿ ಧರಿಸೊ
ಭೋಜಕುಲ ತಿಲಕನೆ ಕೆಂಡ ಸಂಪಿಗೆ ಸರವ
ಮಾಜದೇ ಎನ್ನಿಂದ ಸ್ವೀಕರಿಸೊ ದೇವ ೫
ಪಾತಕರಹಿತ ಹರಿ ಪಾವನರೂಪನೆ
ಪ್ರೀತಿಯಿಂ ಸ್ವೀಕರಿಸೊ ಕೇತಿಕೆಯ ಸರವ
ಶ್ರೀತರುಣಿ ಸತ್ಯಭಾಮೆಯರು ಕದನವಗೈದ
ಪ್ರೀತಿ ಪಾರಿಜಾತ ಧರಿಸಯ್ಯ ೬
ಮರುಗ ದವನಗಳಿಂದ ಸುರಹೊನ್ನೆಯನೆ ಕಟ್ಟಿ
ಇರುವಂತಿಗೆಯ ಹಾರ ಹರಿಯೆ ಅರ್ಪಿಸುವೆ
ಪರಿಮಳವ ಬೀರುತಿಹ ಪರಿಪರಿಯ ಮಲ್ಲಿಗೆಯ
ಸರಗಳನೆ ಧರಿಸಿನ್ನು ಸಾಕಾರರೂಪ ೭
ದುಂಡುಮಲ್ಲಿಗೆಯ ಮೊಗ್ಗು ಪಾಂಡವರ ಪಾಲಕಗೆ
ದಂಡೆಯನೆ ಕಟ್ಟಿ ನಾ ಕೊರಳಿಗ್ಹಾಕುವೆನೊ
ಚಂಡವಿಕ್ರಮ ಶಂಖ ಚಕ್ರಧಾರಿಯೆ ಪಾದ
ಮಂಡೆ ಪರಿಯಂತರದಿ ನೊಡಿ ದಣಿಯುವೆನೊ೮
ಶ್ರೇಷ್ಠಳೆನಿಸಿ ಜಗಕೆ ಇಷ್ಟ ಸತಿ ನಿನಗಾಗಿ
ಕಾಷ್ಟದಳ ಮೃತ್ತಿಕೆಯ ಸೇವಿಸುವ ಜನಕೆ
ಇಷ್ಟ ಫಲವನೆ ಇತ್ತು ಕೃಷ್ಣನ್ನ ತೋರಿಸುವ
ಶ್ರೇಷ್ಠ ತುಳಸಿಮಾಲೆ ಕಟ್ಟಿ ಹಾಕುವೆನೊ ೯
ಕಮಲನಾಭನೆ ಕೃಷ್ಣ ಕಮಲಾಪತಿಯೆ ಸ್ವಾಮಿ
ಕಮಲಪಾಣಿಯೆ ದೇವ ಕಮಲಾಕ್ಷನೆ
ಕಮಲಮುಖ ನಿನ್ನ ಪದಕಮಲದಲಿ ನಲಿವಂತೆ
ಕಮಲದ್ಹಾರವ ಕಟ್ಟಿ ಕೊರಳೀಗ್ಹಾಕುವೆನೋ೧೦
ಈ ಪರಿಯ ಮಾಲೆಗಳ ನೀ ಪ್ರೀತಿಯಿಂ ಧರಿಸಿ
ಪಾಪಗಳ ತರಿದೆನ್ನ ಪಾವನವಗೈಯ್ಯೊ
ಆಪತ್ತು ಕಳೆವ ಶ್ರೀ ಗುರು ಕಟಾಕ್ಷದಿ ನುಡಿದೆ
ಗೋಪಾಲಕೃಷ್ಣವಿಠ್ಠಲನೆ ಕೃಪೆಮಾಡೊ ೧೧

 

೧೭೬
ಗುರುರತ್ನ ಪರಮ ಪ್ರಿಯ ಕರುಣಾನಿಧೆ ನಿಮ್ಮ
ಶರಣು ಹೊಕ್ಕೆನು ಪೊರೆಯಬೇಕೆನ್ನ ದೊರೆಯೆ ಪ.
ವರ ತಂದೆ ಮುದ್ದುಮೋಹನ ದಾಸಾರ್ಯರೆ
ಪರಿಪರಿಯಿಂದ ಭಕ್ತರನು ಪೊರೆಯುವರೆ
ಪರಮಾರ್ಥ ಚಂದ್ರೋದಯದ ಪ್ರಕಾಶಕರೆ
ಪರಿಮಳ ಸುನಾಮದಲಿ ಸರ್ವತ್ರವ್ಯಾಪಕರೆ ೧
ತರತರದ ಸುಗುಣ ಮಣಿಮಾಲೆಯಿಂ ಶೋಭಿಪರೆ
ವರಶಿಷ್ಯ ರತ್ನಪದಕಗಳಿಂದಲೊಪ್ಪಿಹರೆ
ಸುರರಗಣ ಮಧ್ಯದಲಿ ಪರಿಶೋಭಿಸುತಲಿಹರೆ
ಮೊರೆಹೊಕ್ಕವರ ಕಾಯ್ವ ಪರಮ ಕರುಣಾಕರರೆ ೨
ಕನಸಿನಲಿ ಮನಸಿನಲಿ ಕಳವಳವ ಹರಿಸುವರೆ
ಮನಸಿಜಪಿತನನ್ನು ಮನದಿ ನೆನೆಯುವರೆ
ಇನಕೋಟಿತೇಜ ಶ್ರೀ ಶ್ರೀನಿವಾಸನ ಕೃಪೆಗೆ
ಅನುಮಾನವಿಲ್ಲದೆಲೆ ಅರ್ಹತೆಯ ಕೊಡಿಸುವರೆ ೩
ಭಕ್ತರನು ಪೊರೆಯುವ ಕಾರುಣ್ಯನಿಧಿ ಎಂದು
ಭಕ್ತಿಯಿಂದಲಿ ನಿಮ್ಮ ಪಾದ ನಂಬಿರುವೆ
ಭಕ್ತವತ್ಸಲ ಶೇಷಶಯನನಾ ಸೇವೆಯನು
ನಿತ್ಯ ಮಾಳ್ಪಂಥ ಸೌಭಾಗ್ಯ ನೀಡುವುದು ೪
ಕವಿದಿರುವ ಅಜ್ಞಾನಪರೆಯನ್ನು ಛೇದಿಸುತ
ಸವಿಯಾದ ಹರಿಯ ನಾಮಾಮೃತ ಉಣಿಸಿ
ಪವನನಂತರ್ಯಮಿ ಗೋಪಾಲಕೃಷ್ಣವಿಠ್ಠಲ
ತವಕದಿಂದಲಿ ಪೊಳೆವ ಸುಜ್ಞಾನ ನೀಡುವುದು ೫

 

೧೭೫
ಗುರುರಾಜ | ನಮಿಪರ ಸುರಭೋಜ
ಗುರುರಾಜ ಪ.
ವರತಂದೆ ಮುದ್ದುಮೋಹನರೆಂದೆನಿಸುತ
ಮೆರೆಯುತ ಜಗದೊಳು ಪೊರೆಯುವ ಕರುಣಿ ೧
ಅಜ್ಞತೆ ತೊಲಗಿಸಿ ಸುಜ್ಞತೆ ಕೊಡುತಲಿ
ವಿಘ್ನವ ತರಿಯುವ ಪ್ರಾಜ್ಞ ಮೂರುತಿಯೆ ೨
ಸರಸಿಜಾಕ್ಷನ ಪದ ಹರುಷದಿ ಭಜಿಸುವ
ಪರಮಪ್ರಿಯರು ಎಂದು ಬಿರುದು ಪೊತ್ತಿಹರೆ ೩
ನಾಗಶಯನನಿಗೆ ಭೋಗವಪಡಿಸುವ
ಆಗಮಜ್ಞರೆ ನಿಮಗೆ ಬಾಗುವೆ ಸತತ ೪
ಸಾಸಿರ ಫಣೆಯಿಂದ ಸೂಸುವ ಕಾಂತಿಯೊಳ್
ಶ್ರೀಶನ ಕಾಣುವ ವಾಸವ ವಿನುತ ೫
ದೇವತಾಂಶದ ಗುರು ಪವಮಾನಿಗೆ ಪ್ರಿಯ
ಭಾವಿಸಿ ಭಜಿಪರ ಕಾವ ಕರುಣಾಳು ೬
ಶಾಂತಚಿತ್ತದಿ ಬಹು ಸಂತೋಷಪಡುತಲಿ
ಅಂತರಂಗದಿ ಹರಿಯ ಚಿಂತಿಸುತಿರುವ ೭
ಉದ್ಭವಿಸಿ ಜಗದಿ ಅಧ್ಭುತ ಮಹಿಮೆಯ
ಒಬ್ಬೊಬ್ಬರಿಗೆ ತೋರಿ ಹಬ್ಬಿಪೆ ಹರುಷ ೮
ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನನು
ದೃಷ್ಟಿಗೆ ತೋರಿಸಿ ಕಷ್ಟ ಬಿಡಿಸಿರಿ ೯

 

೧೭೪
ಉಗಾಭೋಗ
ಗುರುವಿನ ಕರುಣದಿ ಭಕ್ತಿ ಜ್ಞಾನಾದಿಗಳು
ಗುರುವಿನ ಕರುಣದಿ ವೈರಾಗ್ಯ ಭಾವವು
ಗುರುವಿನ ಕರುಣದಿ ತತ್ವ ಸಾಧನೆಗಳು
ಗುರುವಿನ ಕರುಣದಿ ಆತ್ಮ ವಿವೇಕಗಳು
ಗುರುವಿನ ಕರುಣದಿ ಅಪರೋಕ್ಷ ಪುಟ್ಟಲು
ಗರುವಿಕೆಯನೆ ಬಿಡಿಸಿ ಕರೆದು ಕೊಡುವ ಮುಕ್ತಿ
ಗುರು ಅಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ

 

೧೭೩
ಗುರುವೆ ನಿಮ್ಮನು ನಾ ಮೊರೆಹೊಕ್ಕೆನಲ್ಲದೆ
ಅರಿಯೆ ಅನ್ಯರನಿನ್ನು ಪೊರೆಯಿರೀಗ ಪ.
ಸಿರಿಯರಸನ ತೋರಿ ಗುರುವೆ ಕರುಣಿಸಿರಿ
ತರತಮ್ಯ ತಿಳಿಸುತ ಹರಿಸಿರಿ ಭವದುಃಖಅ.ಪ.
ಬಂದೆನು ಭವದೊಳು ನಿಂದೆನು ತಾಪದಿ
ಹಿಂದು ಮುಂದರಿಯದೆ ಕುಂದಿದೆನು
ಬಂದು ಕರುಣದಿ ಆನಂದವ ನೀಡುತ
ನಂದಕಂದನ ಲೀಲೆಯಿಂದ ರಕ್ಷಿಸಿದಿರಿ೧
ಮುಸುಕಿದ ಅಜ್ಞಾನ ಹಸನಾಗಿ ತೊಲಗಿಸಿ
ಕುಶಲದ ಮತಿಯಿತ್ತು ಪಾಲಿಸುತ
ಬಿಸಜಾಕ್ಷನು ದಯ ಎಸೆವ ಕರುಣದಿಯಿತ್ತು
ಘಸಣೆಗೊಳಿಸದಲೆ ವಸುಮತಿಯೊಳು ಪೊರೆವ ೨
ಕಷ್ಟವಪಡಲಾರೆ ಸೃಷ್ಟಿಯೊಳಗಿನ್ನು
ತಟ್ಟದೆ ಎನ್ನ ಮೊರೆ ಮನಸಿಗೀಗ
ಕೊಟ್ಟು ಅಭಯವನು ಘಟ್ಯಾಗಿ ಪೊರೆಯಿರಿ
ಕೆಟ್ಟ ಕಲ್ಮಷ ಕಳೆದು ಸೃಷ್ಟಿಗೊಡೆಯನ ತೋರಿ ೩
ತಲ್ಲಣಿಸುತಿಹೆ ಕ್ಷುಲ್ಲ ದೇಹದಿ ಬಂದು
ಒಲ್ಲೆನು ಈ ದುಃಖಭವ
ಎಲ್ಲ ಮನಸು ನಿಮ್ಮ ಪಾದದಲಿರುವುದು
ತಲ್ಲಣಗೊಳಿಸದೆ ಪೊರೆಯಿರಿ ಗುರುದೇವ ೪
ತಂದೆ ಮುದ್ದುಮೋಹನವಿಠ್ಠಲನೆಂಬೊ
ಇಂದಿರೇಶನ ಅಂಕಿತದಿ ಮೆರೆವೊ
ಸುಂದರ ಗೋಪಾಲಕೃಷ್ಣವಿಠ್ಠಲನ
ಎಂದೆಂದಿಗೂ ಮನಮಂದಿರದಲಿ ಕಾಂಬ ೫

 

೧೪೮
ಗೋದಾವರಿ ಎನಗೆ ಶ್ರೀಧರನ ತೋರೆ ಪ.
ನೀ ದಯದಿ ಸಲಹೆನ್ನ ಮಾಧವಗೆ ಪ್ರಿಯೆ ಅ.ಪ.
ಸ್ವಚ್ಛವರ್ಣಳೆ ಬಹು ಹೆಚ್ಚಾಗಿ ಪರಿಯುವಳೆ
ಮುಚ್ಚಿರುವ ಮಲಗಳನು ದೂರಮಾಡೆ
ಅಚ್ಯುತನ ಪದವೀವ ಹೆಚ್ಚಿನಾ ಜ್ಞಾನವನು
ಸ್ವಚ್ಛತನದಲಿ ಕೊಟ್ಟು ಮೆಚ್ಚಿ ಎನ್ನನು ಸಲಹೆ ೧
ಧರೆಯ ಜನರು ನಿನ್ನೊಳ್ ಬರುತ ಮಲಗಳ ತೊಳೆಯೆ
ಅರಿತು ಅದನು ಮನದಿ ಪರಿಹರಿಸಿಕೊಳಲು
ಪರಮ ಭಾಗವತರ ವರ ಮಂದಿರಕೆ ಪೋಗಿ
ವರಹ ವೆಂಕಟಗಿರಿಯೊಳ್ ಸ್ಥಿರವಾಗಿ ನಿಂತೆ ೨
ಬರುತ ದಾರಿಯೊಳೆನಗೆ ಸ್ವಪ್ನದಲಿ ತೋರಿದೆ
ವರ ದಿವ್ಯರೂಪವನು ನಾರಿಮಣಿಯೆ
ಸರಿಗೆ ಕಂಕಣ ಮುತ್ತಿನಾ ಬುಗುಡಿಯನೆ ಧರಿಸಿ
ವರ ಮುತ್ತೈದೆಯರಿಬ್ಬರಂದದಲಿ ತೋರಿದೆ ೩
ಮುಕ್ಕೋಟಿ ಗಂಧರ್ವ ದೇವರ್ಕಳೂ ಬರುತಿರಲು
ಅಕ್ಕರದಿ ತಂಗಿಯನೆ ಒಡಗೂಡುತ
ಲಕ್ಕುಮಿ ಸ್ವಾಮಿ ಶ್ರೀ ಪುಷ್ಕರಣಿ ಸಾರಿರಲು
ಉಕ್ಕುವೋ ಉಲ್ಲಾಸದಿಂದ ತೆರಳಿದೆಯೆ ೪
ಜಿಷ್ಣು ಸಖನ ದಿವ್ಯ ಪಟ್ಟಣವ ಸೇರಲು
ಕೃಷ್ಣವೇಣಿಯ ಒಡಗೂಡಿ
ವಿಷ್ಣುಪಾದೋದ್ಭವೆಗೆ ಸರಿಯೆನಿಸಿ ಗೋಪಾಲ
ಕೃಷ್ಣವಿಠ್ಠಲನ ಬಹುನಿಷ್ಠೆಯಿಂ ಧ್ಯಾನಿಸುವೆ ೫

 

೨೧೭
ಚಿಂತಾರಹಿತ ಮೂರ್ತಿ ಚಿನ್ಮಯಾತ್ಮಕ ರೂಪ
ಸಂತತದಿ ನೆನೆವವರ ಸಲಹೊ ಕರುಣಿ ಪ.
ಚಿಂತೆಯಲಿ ಜಗವೆಲ್ಲ ತಾ ತುಂಬಿ ಇರುತಿಹುದು
ಎಂತು ನಿನ್ನಾಟ ಪೇಳ್ ನಿಗಮವೇದ್ಯ
ಚಿಂತೆ ಎನಗೊಂದಿಲ್ಲ ಅಂತರಂಗದಿ ನೆಲೆಸಿ
ಸಂತತದಿ ನಿನ ಧ್ಯಾನ ನೀಡೆಂಬೆನೊ ೧
ದೇಶಾಧಿಪತಿಗಳಿಗೆ ಕೋಶ ತುಂಬದ ಚಿಂತೆ
ದೇಶ ತಿರುಗುವನಿಗೆ ಹಣದ ಚಿಂತೆ
ದೇಶಸ್ಥನಾದವಗೆ ರಾಜಭಟರಾ ಚಿಂತೆ
ಕಾಶಿಯಲ್ಲಿರುವವಗೆ ಮನೆಯ ಚಿಂತೆ ೨
ಜಾರಿಣಿಗೆ ವಿಟನೊಬ್ಬ ಬಾರದಿರುವ ಚಿಂತೆ
ಚೋರನಿಗೆ ರವಿ ಮುಳುಗದಿರುವ ಚಿಂತೆ
ಮಾರನಿಗೆ ಯೋಗಿಗಳ ಹೃದಯ ಭೇದಿಪ ಚಿಂತೆ
ನಾರಿಗೆ ಪತಿ ಒಲುಮೆ ಪಡೆವ ಚಿಂತೆ ೩
ಕರ್ಮತತ್ಪರರಿಗೆ ಹರಿಮರ್ಮವರಿಯದ ಚಿಂತೆ
ಧರ್ಮಪುರುಷಗೆ ಕಲಿಬಾಧೆಯ ಚಿಂತೆ
ವೇದಶಾಸ್ತ್ರಜ್ಞನಿಗೆ ವಾದಿಯ ಭಯ ಚಿಂತೆ
ಹಾದಿ ನಡೆವಗೆ ದುಷ್ಟ ಜನರ ಚಿಂತೆ ೪
ಸಾಧು ಸಜ್ಜನರಿಗೆ ಬಾಧೆ ಕೊಡುವರ ಚಿಂತೆ
ಹಾದಿ ತಪ್ಪಿದ ಪಾಪಿಗೆ ಯಮನ ಚಿಂತೆ
ವಾಣಿಜ್ಯತನದವಗೆ ಹಣವು ಗಳಿಸುವ ಚಿಂತೆ
ಮಾನವಂತರಿಗೂನ ನುಡಿಯ ಚಿಂತೆ ೫
ಇಂತೆಲ್ಲರಾ ಚಿಂತೆ ಇರಲಿ ಕೇಳ್ ಹರಿಯೆ
ಚಿಂತೆ ಬಿಡಿಸೆನಗೆ ನೀನೊಲಿದು ದೊರೆಯೆ
ಚಿಂತನೆಗೆ ಸಿಗದಿಹುದು ನಿನಗೆ ಸರಿಯೆ
ಚಿಂತಿಪರಿಗೊಲಿವಂಥ ಸಿರಿಕಾಂತ ಹರಿಯೆ೬
ಶಾಂತ ಮೂರುತಿ ಪರಮ ಕರುಣಾಳುವೆನ್ನುತಲಿ
ಎಂತೆಂತೂ ಸಜ್ಜನರು ಸ್ತುತಿಪುದನು ಕೇಳುತಲಿ
ಇಂತು ನಿನ ಪದವನಾನ್ಹಾರೈಸಿ ಬಂದರೂ
ನಿಂತರೂ ಎದುರಲ್ಲಿ ನೀನೊಲಿಯಲಿಲ್ಲ ೭
ಕರಮುಗಿದು ಎರಗಿದರೂ ಶಿರಬಾಗಿ ನಮಿಸಿದರೂ
ಚರಣದಲಿ ತನುಮನ ಒಪ್ಪಿಸಿದರೂ
ಕರಗಲಿಲವು ಮನಸು ಕರುಣಪುಟ್ಟಲು ಕಾಣೆ
ಭರವಸೆಯು ನಿನ್ನಲ್ಲಿ ಮೂಡಲಿಲ್ಲ ೮
ಶಿರದಿ ಕರವಿಡಲಿಲ್ಲ ತೊರೆದೆಯೊ ಜರಿದೆಯೊ
ವರಭಕ್ತಿ ಸಾಲದೊ ಗುರುವಿಕೆಯೊ ದೊರೆತನವೊ
ಅರಹೊಟ್ಟೆ ಜೀವಿಸುತ ಅರಿಯದೆ ಮತ್ತೊಂದು
ಇರುಳು ಹಗಲಾಲ್ಪರಿವ ತೆರವು ತೋರದೊ ಮನಕೆ ೯
ಸರಿಯಲ್ಲ ಸರಿಯಲ್ಲ ಕರುಣಾಳುವೆಂಬುವೋ
ಬಿರುದುಳಿವ ತೆರವಿಲ್ಲ ಬಿಂಕಪಟ್ಟರೆ ಈಗ
ಕರೆದು ಮನ್ನಿಸೊ ಪಾಂಡುರಂಗವಿಠ್ಠಲ ದೇವ
ವರ ಪುಂಡಲೀಕಗೆ ಒಲಿದದ್ದು ನಿಜವಾಗೆ ೧೦
ಪರಿಪರಿಯ ಭಕ್ತರನು ಪೊರೆದದ್ದು ನಿಜವಾಗೆ
ಹರಿದಾಸ ಸಂತತಿಗೆ ಮನೆದೈವ ನಿಜವಾಗೆ
ಸರಿಯಿಲ್ಲದಾ ದೈವ ನೀನೆಂದು ನಿಜವಾಗೆ
ಹೊರವೊಳಗೆ ಒಂದಾಗಿ ಕರಪಿಡಿದು ಸಲಹಿನ್ನು ೧೧
ಗುರುಕೊಟ್ಟ ವರಬಲದಿ ಶರಣು ಪೊಂದಿದೆ ನಿನಗೆ
ಚರಣದಲಿ ಬಿದ್ದಿರುವೆ ಪರಮ ಪುರುಷನೆ ದೇವ
ಸ್ಮರಪಿತನೆ ಗೋಪಾಲಕೃಷ್ಣವಿಠ್ಠಲ ನಿನ್ನ
ಸ್ಮರಣೆ ಮಾಡಿದ ಮೇಲೆ ಭವದ ಭಯ ಉಂಟೆ ೧೨

 

೨೫೫ *
ಚಿರಂಜೀವಿಯಾಗು ಗುರುವರ ಕುಮಾರಿ
ಪರಮಪ್ರಿಯ ಶ್ರೀ ಗುರುಪದಧೂಳಿ ಕರುಣದಲಿ ಪ.
ಶುಕ್ಲಪಕ್ಷದ ಚಂದ್ರನಂತೆ ಆಭಿವೃದ್ಧಿಸುತ
ಅಕ್ಲೇಶಳಾಗಿ ಅನುಗಾಲದಲ್ಲಿ
ಚಿಕ್ಕತನದಿಂದ ಗುರು ಬೋಧಾಮೃತವ ಸವಿದು
ಅಕ್ಕರೆಯಿಂದ ಪಿತ ಮಾತೆ ಪೋಷಿತಳಾಗಿ ೧
ಭೂ ಕಲ್ಪತರುವೆನಿಪ ಗುರುಗಳಿತ್ತಂಕಿತವ
ಜೋಕೆಯಿಂದಲಿ ನಿತ್ಯ ಪಠಣಗೈದು
ಏಕಾಂತ ಭಕ್ತಿಯಿಂ ಇಂದಿರೇಶನ ಸ್ತುತಿಸಿ
ಶ್ರೀಕಾಂತ ಹರಿಯ ಮಂಗಳ ಕೃಪೆಯ ಪಡೆಯುತಲಿ ೨
ಪುಟ್ಟಿದಾ ಗೃಹಕೆ ಚಿಂತಾಮಣಿಯು ಎಂದೆನಿಸು
ಶ್ರೇಷ್ಠ ಪತಿ ಗೃಹಕೆ ಗೃಹಲಕ್ಷ್ಮಿ ಎಂದೆನಿಸು
ಅಷ್ಟು ಬಂಧು ಜನಕೆ ಅಮೃತವಾಣಿಯು ಎನಿಸು
ಕೃಷ್ಣ ಭಕ್ತರನು ಪೂಜಿಸುತಲಿರು ಸತತ ೩
ಇಂದು ಗುರುಕೃಪೆಗೈದ ಆಶೀರ್ವಾದದುಡುಗೆಯನು
ಚಂದದಿಂ ಧರಿಸಿ ಮಂಗಳಕರಳು ಎನಿಸಿ
ಒಂದು ಕ್ಷಣ ಬಿಡದೆ ಫಣಿರಾಜಶಯನನ ಸ್ಮರಣೆ
ಮುಂದೆ ಸತ್ಪುತ್ರ ಪೌತ್ರರ ಪಡೆದು ಸುಖದಿ ೪
ನಾಗಶಯನನ ಭಕ್ತನಾದ ಪತಿಯನೆ ಸೇರಿ
ಭೋಗಿಸುತ ಇಹಪರದ ಸುಖಭಾಗ್ಯವ
ಭಾಗವತಪ್ರಿಯ ಗೋಪಾಲಕೃಷ್ಣವಿಠ್ಠಲನ
ಬಾಗಿ ನಮಿಸುತ ಸುಮಂಗಳೆಯಾಗಿ ನಿತ್ಯದಲಿ ೫

 

ಮನದ ಅಭಿಮಾನಿಗಂತರ್ಯಾಮಿ ಸ್ವಾಮಿ
೩೧
ಜಗಕೆ ಶಾಂತಿಯನೀವ ಜಗನ್ನಾಥನೇ | ನಿನ್ನ
ಬಗೆಯರಿತ ಸುಜನರಿಗೆ ಕ್ಲೇಶವಿನ್ನುಂಟೇ ಪ.
ನಾನಾ ಇಂದ್ರಿಯಗಳಿಗೆ ನೀನೇ ಪ್ರೇರಕನಾಗಿ
ನಾನಾ ವಿಧ ಸುಖದುಃಖ ತಗಲಿಸುತ ಮನಕೇ
ಜ್ಞಾನವಂತರ ಹೃದಯ ವಾಸನಾಗಿರುತಿರ್ದು
ಮಾನಿತರ ಬಳಲಿಸುವ ಕಾರಣವದೇನೈ ೧
ಭೂಸುರರ ಮನಕ್ಲೇಶ ನಾಶಗೈಸುತ ಸತತ
ಪೋಷಿಸೆಲೊ ಸ್ವಾಮಿ ಸಂತೋಷವಿತ್ತು
ನಾಶರಹಿತನೆ ಭಕ್ತರಾಶೆ ಪೂರೈಪ ಗುಣ
ರಾಶಿ ನಿನ್ಹೊರತಿಲ್ಲ ಅಬುಜಜಾಂಡದೊಳೂ೨
ಮನಕೆ ಶಾಂತಿಯ ನೀಡೋ ಮಾಧವನೆ ಮಮತೆಯಲಿ
ಮನದ ಅಭಿಮಾನಿಗಂತರ್ಯಾಮಿ ಸ್ವಾಮಿ
ಚಿನುಮಯನೆ ಗೋಪಾಲಕೃಷ್ಣವಿಠ್ಠಲ ಪ್ರೇಮಿ
ಘನ ಗುರುಗಳಂತರ್ಯಾಮಿಯೆ ಮಧ್ವನಾಥಾ ೩

 

ಭಾರತೀ ದೇವಿ
೧೩೧
ಜಗದುದರನ ಸೊಸೆಯೆ ಶ್ರೀ ವಾಯು ಸತಿಯೆ
ಜಗದುದರನ ಸೊಸೆಯೆ ಪ.
ಸುಗುಣಿ ನಿನ್ನ ನಾ ಬಗೆ ಬಗೆ ವರ್ಣಿಸೆ
ಜಗದೊಳು ಖ್ಯಾತೆಯೆ ನಗಧರ ಪ್ರೀತೆಯೆ ಅ.ಪ.
ಸಾರಿ ಬಂದೆ ನಿನ್ನ ನಾರಿಮಣಿಯಳೆ
ತೋರೆ ಹರಿಪದ ಭೂರಿ ಕರುಣದಿ ನೀ
ನಿರೆ ಸರಸಿಜೋದ್ಭವ ಸತಿ ಪದಕೆ
ಸೇರುವೆ ಮುಂದಿನ ಕಲ್ಪದಿ ಪತಿ ಸಹ
ಭಾರತಿ ನಿನ್ನಯ ವಾರಿಜಪದವನು
ಸೇರಿ ಸುಖಿಸುವಂಥ ದಯ ತೋರೆ ನೀ ೧
ದಾರಿ ತೋರಿ ನೀ ಪಾರುಗಾಣಿಸೆ
ತಾರತಮ್ಯದಿ ವಾರಿಜಾಂಬಕಿಯೆ
ಆರು ಅರಿಯದ ಹರಿಯ ಮಹಿಮೆಯ
ಸಾರತತ್ವ ನೀ ಪತಿಯಿಂದರಿತಿಹೆ
ಬಾರದು ಅಜ್ಞತೆ ನಿನಗೆ ಪ್ರಳಯದಿ
ನಾರಿ ರನ್ನೆ ಸರ್ವ ಬುದ್ಯಭಿಮಾನಿಯೆ ೨
ಹಾರಪದಕವು ದೋರೆ ಕಂಕಣ
ನಾರಿ ನಿನ್ನನು ಯಾರು ವರ್ಣಿಪರೆ
ನಾರಿ ನಿನ್ನ ಪತಿದ್ವಾರದಿ ಎನ್ನ ಶ-
ರೀರದಿ ಸರ್ವನಿಯಾಮಕರೊಡನೆ
ತೋರೆ ಗೋಪಾಲಕೃಷ್ಣವಿಠ್ಠಲನ
ನೀರಜನಾಭನ ಶ್ರೀ ರಮೇಶನ ೩

 

೩೨
ಜಯ ಮಂಗಳಂ ನಿತ್ಯ ಶುಭ ಮಂಗಳಂ
ಭಯ ವಿನಾಶನದೇವ ಶ್ರೀನಿವಾಸನಿಗೆ ಪ.
ಮಂಗಳಂ ಜಲಚರಗೆ ಮಂಗಳಂ ಗಿರಿಧರಗೆ
ಮಂಗಳಂ ಭೂದೇವಿ ರಕ್ಷಕನಿಗೆ
ಮಂಗಳಂ ನರಹರಿಗೆ ಮಂಗಳಂ ಮಾಣವಗೆ
ಮಂಗಳಂ ಭಾರ್ಗವಗೆ ದಾಶರಥಿಗೆ ೧
ಮಂಗಳಂ ಗೋಪಾಂಗನೆಯರ ಕಾಯ್ದವನಿಗೆ
ಮಂಗಳಂ ತ್ರಿಪುರ ಸುರರಳಿದ ಹರಿಗೆ
ಮಂಗಳಂ ಹಯವೇರಿ ಕಲಿಮುಖರ ಗೆಲಿದವಗೆ
ಮಂಗಳಂ ಶ್ರೀಕೃಷ್ಣ ಶ್ರೀನಿವಾಸನಿಗೆ ೨
ಆಪಾದಮೌಳಿ ಪಾವನರೂಪನಿಗೆ
ಆಪನ್ನ ರಕ್ಷಕಗೆ ಆದಿರೂಪನಿಗೆ
ಆಪದ್ಭಾಂಧವ ಶ್ರೀಗುರುಗಳಂತರ್ಗತಗೆ ಗೋಪಾಲಕೃಷ್ಣವಿಠ್ಠಲಮೂರ್ತಿಗೆ ೩

 

ಗಂಗಾಜನಕ :
೩೩
ಜಿತಮನವ ನೀಡೆನಗೆ ಜಿಷ್ಣುಸಖನೆ
ರತಿಪತಿಪಿತ ನಿನ್ನ ಹಿತದಿ ಭಜಿಸುವೆನೊ ಪ.
ದುಷ್ಟ ಇಂದ್ರಿಯಗಳು ಕೆಟ್ಟ ವಿಷಯಗಳಲ್ಲಿ
ಕಟ್ಟ್ಟೆ ಎನ್ನಯ ಮನವ ಸೆಳೆಯುತಿಹವೊ
ಕೃಷ್ಣಮೂರುತಿ ನೀನೆ ದೃಷ್ಟಿಯಿಂದಲಿ ನೋಡಿ
ಒಟ್ಟುಗೂಡಿಸಿ ನಿನ್ನ ಪಾದದಲ್ಲಿಡಿಸೊ ೧
ಎಂಟು ಜನ ದುಷ್ಟರು ಆರು ಜನ ಕಳ್ಳರು
ಕಂಟಕರಾಗಿನ್ನು ಕಾಡುತಿಹರೋ
ಎಂಟುದಳಗಳಿಪ್ಪ ನೆಂಟರೆನಗಾಗರೊ
ಎಂಟೆರಡು ಇಂದ್ರಿಯವ ಬಂಧನದೊಳಿರಿಸೊ ೨
ಮೂರು ತಾಪಗಳಿಂದ ಮೂರು ಗುಣದೊಳು ತಿರುಗಿ
ಮೂರು ಮಾರ್ಗವ ಕಾಣೆ ಮುರವೈರಿಯೆ
ಮೂರು ಅವಸ್ಥೆಗಳ ವಿವರವರಿಯದ ಎನಗೆ
ದಾರಿ ತೋರಿ ಸಲಹೊ ಕಾರುಣ್ಯನಿಧಿಯೆ ೩
ಡಿಂಬ ಮಧ್ಯದಲಿರುವ ಅಂಬರದಲಿ ನಿನ್ನ
ಬಿಂಬರೂಪವ ತೋರೊ ಶಂಭು ಸಖನೆ
ಅಂಬುಜನಾಭ ಎಪ್ಪತ್ತೆರಡು ಸಾಹಸ್ರ
ತುಂಬಿದ ನಾಡಿಯೊಳು ರೂಪಗಳ ತೋರೊ೪
ಮನದಲ್ಲಿ ನೆಲಸಿಹನೆ ಮನುಶಬ್ದವಾಚ್ಯನೆ
ಮನದಿಂದ ಭಿನ್ನನೆ ಮನಪ್ರೇರಕ
ಮನವ ನಿನ್ನಲಿ ನಿಲಿಸಿ ಅನುಗಾಲ ಸಲಹುವುದು
ಚಿನುಮಯನೆ ಗೋಪಾಲಕೃಷ್ಣವಿಠ್ಠಲನೆ ೫

 

೩೪
ಜೋ ಜೋ ರುಕ್ಷಿಣಿರಮಣ ಜೋ ಜೋ ಕಲ್ಯಾಣ
ಜೋ ಜೋ ಗುಣಪರಿಪೂರ್ಣ ವೆಂಕಟರಮಣ ಪ.
ರನ್ನ ಮಾಣಿಕದೊಜ್ರ ಚಿನ್ನ ಮಂಟಪದಿ
ಘನ್ನ ನವರತ್ನದಿಂ ಮೆರೆವ ತೊಟ್ಟಿಲೊಳು
ರನ್ನೆರಿಬ್ಬರ ಕೂಡಿ ನಲವಿಂದ ಕೃಷ್ಣ
ಸನ್ನುತನಾಗಿ ಸುರರಿಂದ ಪವಡಿಸಿದ ಜೋ ಜೋ ೧
ಕನಕಮಯ ಸರಪಳಿ ಥಳಥಳನೆ ಹೊಳೆಯೆ
ಮಿನುಗುವಾಭರಣಗಳು ಝಗ ಝಗಿಸುತಿರಲು
ಸನಕಾದಿ ಒಡೆಯನ ಫಣಿಪ ಹಿಂತೂಗೆ
ಮುನಿವರನು ಮುಂದೆ ತಾ ಲಾಲಿ ಪಾಡಿದನು ಜೋ ಜೋ ೨
ವೇದವನೆ ಕದ್ದವನ ಕೊಂದವನೆ ಜೋ ಜೋ
ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ
ಭೇಧಿಸಿ ಜಲಧಿ ಮೇದಿನಿ ತಂದೆ ಜೋ ಜೋ
ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ ೩
ಬಲಿಯನೊಂಚಿಸಿದಂಥ ತರಳನೆ ಜೋ ಜೋ
ಕುಲವನೆ ಸವರಿದ ಬಲಶಾಲಿ ಜೋ ಜೋ
ಲಲನೆ ಸೀತೆಯ ತಂದ ಶ್ರೀರಾಮ ಜೋ ಜೋ
ಮೆಲಲು ಪಾಲು ಬೆಣೆÉ್ಣ ಕದ್ದವನೆ ಕೃಷ್ಣ ಜೋ ಜೋ೪
ತ್ರಿಪುರ ಸತಿಯರ ವ್ರತವಳಿದೆ ಜೋ ಜೋ
ಚಪಲತನದಿಂ ಹಯವನೇರಿದನೆ ಜೋ ಜೋ
ಅಪರಿವಿತದವತಾರದಿಂ ಬಳಲಿ ಬಂದು
ನಿಪುಣರೆಲ್ಲರು ಸ್ತುತಿಸೆ ಪವಡಿಸಿದೆ ಕೃಷ್ಣ ಜೋ ಜೋ ೫
ಅರಸು ಜಯದೇವಿ ಸಂಕರ್ಷಣನೆ ಜೋ ಜೋ
ಸಿರಿದೇವಿಪ್ರಿಯ ಶ್ರೀ ನರಹರಿಯೆ ಜೋ ಜೋ
ವರರುಕ್ಮಿಣಿ ಸತ್ಯವರ ಕೃಷ್ಣ ಜೋ ಜೋ
ಅರಸಿ ಪದ್ಮಾವತಿ ಸಹಿತ ವೆಂಕಟನೆ ಜೋ ಜೋ೬
ನಾರದಾದಿಗಳೆಲ್ಲ ನರ್ತನದಿ ಪಾಡೆ
ಊರ್ವಶಿ ಅಪ್ಸರರು ನೃತ್ಯವನು ಮಾಡೆ
ತೋರೆ ಗಂಧರ್ವರು ಗಾನಗಳ ರಚನೆ
ಸಾರಿಸಾರಿಗೆ ಭಕ್ತರೆಲ್ಲ ನುತಿಗೈಯೆ ೭
ಭಕ್ತನಾದ ವಾಯು ಸಹಿತ ಪವಡಿಸಿದೆ
ಜೊತ್ತಾದ ತೊಟ್ಲುಗಳು ಭೃತ್ಯರು ತೂಗೆ
ಮತ್ತೆ ನಿವಿ್ಮೂರ್ವರಿಗೆ ನಿದ್ರೆ ಇನ್ನುಂಟೆ
ಭಕ್ತರನು ಸಲಹಲು ಲೀಲೆ ಕೈಕೊಂಡೆ ಜೋ ಜೋ ೮
ಶ್ರೀಪಾದಪದ್ಮಯುಗಳಕೆ ಎರಗಿ ನಮಿಪೆ
ಗೋಪಾಲಕೃಷ್ಣವಿಠ್ಠಲನೆ ನೀ ಸಲಹೊ
ಶ್ರೀ ಪದ್ಮಭವ ಭವರಿಂ ಸೇವೆ ಕೊಳುತ
ಈ ಪಯೋಜ ಭವಾಂಡದೊಳು ಲೀಲೆ ತೋರ್ಪೆ ಜೋ ಜೋ ೯

 

೨೫೬
ಜೋಜೋ ಶ್ರೀ ಗೋಪಾಲಕೃಷ್ಣ ಮೂರುತಿಯೆ
ಜೋಜೋ ಶ್ರೀ ರುಕ್ಮಿಣೀ ಪತಿ ಲೋಕ ದೊರೆಯೆ
ಜೋಜೋ ಈ ಲೋಕದೊಳು ನಿನಗಿನ್ನು ಸರಿಯೆ
ಜೋಜೋ ಶ್ರೀ ಗುರುಕರಾರ್ಚಿತದಿ ಬಂದ್ಹರಿಯೆ ಪ.
ತಂದೆ ಮುದ್ದುಮೋಹನರು ಕೊಟ್ಟ ಅಂಕಿತದಿ
ಪೊಂದಿದ್ದ ರೂಪ ಗ್ರಹದಲ್ಲಿ ಹೊಂದಿ
ಮುಂದೆಂಟು ವತ್ಸರಕೆ ಎನ್ನೊಡನೆ ಬಂದಿ
ತಂದೆ ಮುದ್ದುಮೋಹನರ ಕರಸ್ಪರ್ಶ ಪೊಂದಿ ೧
ನಮ್ಮ ಹಿರಿಯರ ಪೂಜೆ ಒಮ್ಮೊಮ್ಮೆ ಎಂದು
ಒಮ್ಮೆ ದುರುಳನು ಮುಟ್ಟೆ ಮಲಿನಾದೆನೆಂದು
ನಮ್ಮ ಗುರು ಕರಸ್ಪರ್ಶದಿಂ ಪುನಃ ಬಂದು
ರಮ್ಮೆ ಪತಿ ಎನ್ನ ಕರಪೂಜೆ ಬೇಕೆಂದು ೨
ಘನ್ನ ಗುಣರು ನಿನ್ನ ಪೂಜಿಸಿ ಪೋಗಲಂದು
ಮನೆ ಪೆಟ್ಟಿಗೆಯೊಳ್ ಸುಮ್ಮನಿರಲಾರೆನೆಂದು
ಮನಕೆ ಪ್ರೇರಿಸೆ ದುರುಳರಿಗೆ ಕದ್ದು ಒಯ್ದು
ಘನ ಮೂರ್ತಿಗಳು ಪೋಗೆ ನೀನೊಬ್ಬ ಬಂದು ೩
ಬಹುದಿವಸ ಮಲಿನವಾಗಿರುತಿರಲು ನೀನು
ಮಹಮಹಿಮೆ ಅರಿಯಲಿಲ್ಲಾಗ ನಾನಿನ್ನು
ಅಹಹ ನಮ್ಮ ಗುರುಗಳೆರೆಯಲು ಜ್ಞಾನವನ್ನು
ಮಹಿಯೊಳೆನ್ನ ಪೂಜೆಯನು ಬಯಸಿದೆಯೊ ನೀನು ೪
ಮನದಲ್ಲಿ ಪ್ರೇರಿಸಲು ಘನವಲ್ಲವೆಂದು
ಕನಸಿನಲಿ ಎನ್ನ ಹಸ್ತದೊಳ್ ಬಂದು ನಿಂದು
ಸನುಮತದಿ ಹರುಷದಲಿ ನಿನ್ನ ನಾ ತಂದು
ಘನ ಮಹಿಮ ಗುರುಗಳಿಗೆ ಒಪ್ಪಿಸಲು ಅಂದು ೫
ಅಂತರಾತ್ಮನ ಗುರುವು ವಿಗ್ರಹದೊಳಿಟ್ಟು
ಸಂತೋಷದಿಂದ ಮನಮುಟ್ಟಿ ಕೊಡಲಷ್ಟು
ಅಂತಾಯ್ತು ಮಲಿನ ಕುಂದಿತು ತೇಜವೆಷ್ಟು
ನಿಂತೆನ್ನ ಕೈಲಿ ಪೂಜೆಯಗೊಂಬ ಗುಟ್ಟು ೬
ದಿನದಿನಕೆ ಭಜನೆ ಪೂಜೆಯನೆಗೊಂಬ ಚಂದ
ಘನಭಕ್ತರನು ಪೊರೆವ ಬಿರುದು ಆನಂದ
ಮುನಿಜನರ ಮೋಹಕನೆ ಸಚ್ಚಿದಾನಂದ
ಎನಗೊಲಿದೆ ಗೋಪಾಲಕೃಷ್ಣ ಗೋವಿಂದ ೭
ರಮೆ ಬ್ರಹ್ಮ ಸುರರಿಗೆ ಸರಿ ಪೂಜಿಸುವೆನೆ
ಕಮಲಾಕ್ಷ ಅಣು ನಾನು ನಿನ್ನ ಒಲಿಸುವೆನೆ
ರಮಣೀಯವಾದ ವಸ್ತುಗಳ ನಾ ತಹೆನೆ
ಕ್ಷಮಿಸು ನಿನ್ನ ದಾಸಿ ನನ್ನಪರಾಧಗಳನೆ ೮
ಅಂತರಂಗದಲಿಪ್ಪ ಬಿಂಬ ಮೂರುತಿಯೆ
ನಿಂತು ಈ ವಿಗ್ರಹದಿ ಈ ರೀತಿ ಮೆರೆಯೆ
ಸಂತೋಷ ನೋಳ್ಪರಿಗೆ ಕೊಡು ಭಕ್ತಿ ಹರಿಯೆ
ಕಂತುಪಿತ ಕಮಲಾಕ್ಷ ಕಾಯೊ ಸಿರಿದೊರೆಯೆ ೯
ಪೂಜ್ಯಪೂಜಕನೆಂದು ಪೂಜೆ ಮಾಡುವೆನೊ
ಮೂರ್ಜಗತ್ಪತಿ ನಿನ್ನ ಲಾಲಿ ಪಾಡುವೆನೊ
ಪೂಜ್ಯ ಶ್ರೀ ಗೋಪಾಲಕೃಷ್ಣವಿಠ್ಠಲ ನೀನು
ಗೋಜು ಬೇಡನ್ಯರದು ಪೊರೆಯೊ ದಾಸರನು ೧೦

 

ಅಜಾಮಿಳನ ಉದ್ದರಿಸಿದೆ
೩೫
ತಂಗಿ ಕೇಳೆ ಅತಿಕೌತುಕ ಒಂದು ಸುದ್ಧಿಯ
ಸಿಂಗನ ಮೋರೆ ಮಗುವು ಪುಟ್ಟಿ ಮಾಡಿದಾ ಚರ್ಯ ಪ.
ತಂದೆ ತಾಯಿಗಳಿಲ್ಲಾದ್ಹಾಂಗೆ ಕಂದ ಪುಟ್ಟಿತು
ಬಂಧು ಎತ್ತು ಕೊಂಬೇನೆಂದರೆ ಗುಡು ಗುಡುಗುಟ್ಟಿತೂ
ಅಂದ ಛಂದವ ನೋಡೇನೆಂದರೆ ಘೊರಾಕೃತಿಯಾಯ್ತು
ತಂದ ತೊಟ್ಟಿಲೊಳಿಟ್ಟೀನೆಂದರೆ ಹೊಸಲೊಳ್ ಕೂತೀತು ೧
ತೊಡೆಯಲ್ಲಿಟ್ಟು ತಟ್ಟೀನೆಂದರೆ ಕಿಡಿ ಕಿಡಿ ಉಗುಳೀತು
ಕಡುಪಾಪಿ ರಕ್ಕಸನ ತನ್ನ ತೊಡೆಯಲ್ಲಿಟ್ಟಿತೂ
ಕಡು ಕೋಪದಿಂದಾಲಿ ಅವನ ಒಡಲ ಬಗೆದಿತು.
ಎಡಬಲಕೊಬ್ಬರು ಬರದಂತೆ ಆರ್ಭಟಿಸುತಲಿದ್ದಿತು ೨
ಹಾಲನೆರೆದೆನೆಂದರೆ ರುಧಿರ ಪಾನವ ಮಾಡಿತು
ಮಾಲೆ ಹಾಕಿ ಮುದ್ದಿಪನೆನೆ ಕರುಳ್ಮಾಲೆ ಹಾಕೀತು
ಮೇಲೆ ಕೇಶ ಕಟ್ಟೀನೆಂದರೆ ಕೆದರಿಕೊಂಡೀತೂ
ಬಾಲಲೀಲೆ ನೋಡೇನೆಂದರೆ ಜಗವ ಬೆದರಿಸಿತು ೩
ಸುರಹರ ಬ್ರಹ್ಮಾದಿಗಳು ಬಂದರು ತಿರುಗದೆ ಕೂತೀತು
ಸಿರಿಕಂಡೂ ಬೆರಗಾಗೆ ಮನವು ಕರಗದೆ ಕಲ್ಲಾಯ್ತು
ತರಳನೊಬ್ಬನ ಕೂಡೆ ತಾನೂ ಆಟವನಾಡಿತು
ಉರಿಮುಖ ಹುಬ್ಬೂ ಗಂಟೂ ಬಿಟ್ಟು ಕಿರುನಗೆ ನಕ್ಕೀತು ೪
ಶ್ರೀಪತಿ ಎಂದು ತರಳನು ಪೊಗಳೇ ಸಿರಿಯ ಬೆರತೀತು
ಆಪತ್ತನು ಪರಿಹರಿಪ ಲಕ್ಷ್ಮೀನರಹರಿ ಎನಿಸೀತು
ದ್ವಾಪರದಲ್ಲಿ ಮತ್ತೆ ಪುಟ್ಟಿ ಮುದುವ ಬೇಡೀತು
ಗೋಪಾಲಕೃಷ್ಣವಿಠ್ಠಲನೆನಿಸಿ ಗೋಪಿಯ ಮಗುವಾಯ್ತು ೫

 

೧೭೮
ತಂದೆ ಮುದ್ದುಮೋಹನ ದಾಸರಾಯರ ಪದವ
ಪೊಂದಿದವರಿಗೆ ಕಷ್ಟವೆ ಪ.
ಬಂಧನವ ಪರಿಹರಿಸಿ ಸಿಂಧುಶಯನನ ಮೂರ್ತಿ
ತಂದು ತೋರುವರು ಮನದಿ | ಮುದದಿ ಅ.ಪ.
ಅತಿಶಯದ ತಪದಿಂದ ಪತಿತ ಪಾವನನಂಘ್ರಿ
ಮತಿವಂತರಾಗಿ ಭಜಿಸಿ
ಪೃಥುವಿಯೊಳಗವತರಿಸಿ ಯತನವಿಲ್ಲದೆ ಕರ್ಮ
ಪಥವನ್ನೆ ಕೊನೆಗಾಣಿಸಿ
ಪತಿತರಿಗೆ ಅಂಕಿತವ ಹಿತದಿಂದ ಬೋಧಿಸಿ
ಅತಿ ಅದ್ಭುತವ ತೋರಿಸಿ
ಸುತರಂತೆ ಶಿಷ್ಯರನು ಹಿತದಿಂದನುಗ್ರಹಿಸಿ
ಗತಿಯ ಮಾರ್ಗವ ತೋರ್ವರು | ಇವರು ೧
ದೇವತೆಗಳೊಡೆಯರು ಪಾವಮಾನಿಗೆ ಪ್ರಿಯರು
ಭೂವಲಯದೊಳು ಮೆರೆವರು
ಆವಕಾಲದಲಿ ಸುಖಾನಂದಭೋಗಿಗಳು
ಪಾವನ ಸುಚರಿತ್ರರು
ದೇವ ನರಹರಿ ಕರುಣ ಪೂರ್ಣವಾಗಿ ಪಡೆದು
ಭಾವಶುದ್ಧಿಯಲಿಪ್ಪರು
ಈ ವಿಧದ ಇವರ ಚರ್ಯೆಯನರಿಯುವರನರಿಯೆ
ಕಾವ ಭಕ್ತರ ಕರುಣಿಯ | ದೊರೆಯ ೨
‘ತ’ ಎನಲು ತಪಸಿಯಹ ‘ದೇ’ ಎನಲು ದೇಹ ಶುದ್ಧಿ
‘ಮು’ ಎನಲು ಮುಕ್ತನಾಗ್ವ
‘ದು’ ಎನ್ನಲು ದುರ್ಜನರು ದೂರವಾಗಿರುತಿಹರು
‘ಮೋ’ ಎನಲು ಮೋಕ್ಷದಾರಿ
‘ಹ’ ಎನಲು ಹರಿಬಂದು ‘ನ’ ಎನಲು ನರ್ತಿಸುವ
‘ದಾ’ ಎನಲು ದಾರಿದ್ರನಾಶ
‘ಸ’ ಎನಲು ಸತ್ವಗುಣಿ ‘ರಾಯ’ ಎನೆ ಪದವಾಳ್ವ
‘ರು’ ಎನಲು ಋಜುಮಾರ್ಗಿಯು | ಸುಖಿಯು ೩
ಈ ರೀತಿಯಿಂ ತಂದೆ ಮುದ್ದುಮೋಹನದಾಸ ರಾ –
ಯರೆಂತೆಂದು ಜಪಿಸೆ
ಪಾರುಗಾಣಿಸಿ ಭವದ ಬಂಧನವ ಬಿಡಿಸುವರು
ದೇವಾಂಶ ಸಂಭೂತರು
ಕಾರುಣ್ಯ ನಿಧಿಗಳು ತೋರುವರು ಹರಿಮಾರ್ಗ
ಸಾರಿ ಭಜಿಪರಿಗೆ ಸತತ
ನಾರಸಿಂಹನ ಚರಣ ಸೇರಿಸಿ ಹೃದಯದಲಿ
ಸೂರೆಗೊಂಡಿಹರು ಮುಕ್ತಿ | ಸುಕೀರ್ತಿ ೪
ಅಪಾರ ಅದ್ಭುತದ ಕರ್ಮಗಳ ನಡೆಸಿಹರು
ಪಾಪಿ ಜನಗಳ ಪೊರೆವರು
ರೂಪ ರೂಪಾಂತರದಿ ತೋರ್ಪರು ಸುಜನರಿಗೆ
ಶ್ರೀಪತಿಯ ವರ ಭಕ್ತರು
ಕೋಪತಾಪಗಳಿಂದ ನಿರ್ಲೇಪರಾಗಿಹರು
ತಾಪತ್ರಯಗಳ ಕಡಿವರು
ಗೋಪಾಲಕೃಷ್ಣವಿಠ್ಠಲನ ಪದಧ್ಯಾನವನು
ಗೋಪ್ಯದಿಂದಲಿ ಇತ್ತರು | ಇವರು ೫

 

೧೭೮ (ಅ)
ತಂದೆ ಮುದ್ದುಮೋಹನ ದಾಸರೆನಿಸಿದ
ತಂದೆ ಶ್ರೀ ಗುರುವರ್ಯರೆ ಪ.
ತಂದಿರಿ ಜ್ಞಾನಾಂಬುಧಿ ಮಧ್ಯದೊಳಗೀಗ
ತಂದಿಹ ಎನ್ನ ದುಷ್ಕರ್ಮವ ತರಿಯುತ ಅ.ಪ.
ಬಂದೆನು ಭವದೊಳು ನಿಂದೆನು ತಾಪದಿ
ಮಂದಮತಿಯಿಂದ ಜಗದೊಳಗೆ
ಕುಂದುಗಳೆಣಿಸದೆ ಬಂದು ದರ್ಶನವಿತ್ತು
ಕಂದನಂದದಿ ದಯದಿಂದ ಪಾಲಿಸಿದಿರಿ ೧
ಯೋಗಿಗಳೆನಿಸಿದ ಭೋಗಿವರರೆ ಶಿರ
ಬಾಗಿ ನಮಿಸುವೆ ಈಗ ನಾನು
ನಾಗಶಯನನ ತೋರಿ ಬೇಗ ಪಾಲಿಸಿರಿ
ಪೋಗುತಿದೆ ದಿನ ಜಾಗು ಮಾಡದೆ ಮುನ್ನ ೨
ನರಸಿಂಹನನು ಹೃತ್ಸರಸಿಜದಲಿ ಕಾಂಬ
ಗುರುವರ ನಿಮ್ಮಂಘ್ರಿಗೆರಗುವೆನು
ಪರಿಪರಿ ತಾಪವ ಹರಿಸಿ ಎನ್ನ ಮನ
ಹರಿಗುರು ಚರಣದೊಳಿರುವಂತೆ ಕೃಪೆಗೈದೆ ೩
ಪರಮ ಗುರುಗಳಿಗೆ ಪ್ರಿಯರಾಗಿ ಇಳೆಯೊಳು
ಚರಿಸಿ ಸುಜನರ ಪಾವನಗೈದು
ಪರಮ ಗುಪ್ತದಿಂದ ಹರಿಯ ಧ್ಯಾನಿಸುತ್ತ
ಧರೆಯೊಳಗಿರುವ ಪಾಮರರ ಮೋಹಿಸುವಂಥ ೪
ಕಷ್ಟವ ಬಿಡಿಸಿರಿ ತುಷ್ಟರಾಗಿ ನೀವೆ
ಇಷ್ಟು ಪರಿಯಿಂದ ಬೇಡಿಕೊಂಬೆ
ಇಷ್ಟದೈವರು ನೀವೆ ಶ್ರೇಷ್ಠ ಶ್ರೀ ಗೋಪಾಲ
ಕೃಷ್ಣವಿಠ್ಠಲನ ಉತ್ರ‍ಕಷ್ಟದಿ ತೋರಿರಿ ೫

 

೧೭೭
ತಪಿಸಲಾರೆ ನಾನು ಪರಿಪರಿ ತಾಪದಲಿ
ಕೃಪೆಮಡಿ ಸಲಹಿರಿ ಶ್ರೀ ಗುರುಗಳೆ ಪ.
ಸುಪಥ ಕಾಣದೆ ನಿಮ್ಮ ಪಾದವನೆ ನಂಬಿದೆನು
ಗುಪಿತ ಮಹಿಮರೆ ಇನ್ನು ಭವಪಾಶ ಬಿಡಿಸುತ್ತ ಅ.ಪ.
ಬಂಧು ವರ್ಗಗಳನ್ನ ಬದುಕಿಸುವರು ಎಂದು
ಬಂಧನದೊಳು ಬಿದ್ದು ಬೆಂದು ನೊಂದೆ
ಮುಂದೆ ದಾರಿಯ ಕಾಣೆ ಮುಕ್ತಿ ಮಾರ್ಗವನರಿಯೆ
ಬಂಧು ಬಳಗಗಳೆಲ್ಲ ನೀವೆಂದು ನಂಬಿದೆ ೧
ಅಶನವಸನಗಳಲ್ಲಿ ಆಸೆಯನು ತೊರೆಯದೆ
ವಸುಮತಿಯೊಳು ಜ್ಞಾನ ಹೀನವಾಗಿ
ಪಶುವಿನಂದದಿ ತಿರುಗಿ ಕಾಲವ್ಯರ್ಥ ಕಳೆದೆ
ಅಸಮ ಮಹಿಮರೆ ಇನ್ನು ಅಜ್ಞಾನ ಪರಿಹರಿಸಿ ೨
ಮಮತೆಯನು ತೊರೆಯದೆ ಮಾಯ ಪಾಶಕೆ ಸಿಲುಕಿ
ಮಮಕಾರದಿಂದ ನಾ ಮೈಮರೆತೆನು
ನಮಿಸುವೆನು ದೈನ್ಯದಲಿ ನಾನೀಗ ನಿಮ್ಮ ಪದಕೆ
ರಮೆಯರಸನ ತೋರಿ ಎನ್ನ ಮನ ಮಧ್ಯದಿ ೩
ಪಾವನರೂಪರೆ ಪಾಪರಾಹಿತ್ಯರೆ
ಪಾವಿನಶಯನಗೆ ಪರಮಪ್ರಿಯರೆ
ದೇವತೆಗಳೊಡೆಯರೆ ದೇವಾಂಶ ಸಂಭವರೆ
ಪಾವಮಾನಿಗೆ ಪ್ರಿಯರೆ ಪಾವನ್ನಗಾತ್ರರೆ ೪
ಆಪತ್ತು ಕಳೆಯುವರೆ ಶ್ರೀಪತಿಯ ತೋರ್ವರೆ
ಕೋಪಿಸದೆ ಎನ್ನೊಳು ಕೃಪೆಗೈಯ್ಯರಿ
ಗೋಪಾಲಕೃಷ್ಣವಿಠ್ಠಲ ತಾನು ಹೃದಯದಲಿ
ತೋರ್ಪುತೆ ಕರುಣಿಸುತ ಈ ಪರಿಯಿಂ ಸಲಹಿರಿ ೫

 

(ನು. ೨) ಹೋಮಕುಂಡದಿ
೩೬
ತುಂಗಭದ್ರ ನದಿ ತೀರದಿ ನೆಲಸಿಹನ್ಯಾರೆ ಪೇಳಮ್ಮಯ್ಯ ಪ.
ಗಂಗಾಧರನರ್ಧಾಂಗಿಯಾಗಿ ಶ್ರೀ
ರಂಗ ತಾನು ಇಲ್ಲಿರುತಿಹನಮ್ಮ ಅ.ಪ.
ಶಂಖ ಚಕ್ರ ತ್ರಿಶೂಲವ ಧರಿಸಿಹನ್ಯಾರೇ ಪೇಳಮ್ಮಯ್ಯ
ಶಂಕರ ಸಹಿತಲಿ ನೆಲಸಿಹ ಕುರುಹನು
ಶಂಕಿಸದಂದದಿ ತೋರುವನಮ್ಮ ೧
ಈ ಪರಿರೂಪವ ಧರಿಸಲು ಕಾರಣವೇನೇ ಪೇಳಮ್ಮಯ್ಯ
ಪಾಪಿ ಗುಹನ ವರಬಲವನೆ ಕೆಡಹಲು
ಈ ಪರಿರೂಪವ ಧರಿಸಿಹನಮ್ಮ ೨
ಇದ್ದರೆ ಈ ಪರಿ ಶುದ್ಧ ಸಾತ್ವಿಕರಿಗೆ ಹ್ಯಾಗೇ ಪೇಳಮ್ಮಯ್ಯ
ಮಧ್ವಮತರಿಗೆ ಮನದಲಿ ಪ್ರೇರಕ
ಶುದ್ಧ ಜ್ಞಾನವನಿತ್ತು ಸಲಹುವನಮ್ಮ ೩
ವಿಷ್ಣು ಭಕ್ತರ ಮನಸಿಗೆ ತೋರುವ ಮತಿ ಏನೇ ಪೇಳಮ್ಮಯ್ಯ
ಶ್ರೇಷ್ಠ ವೈಷ್ಣವೊತ್ತಮ ಹರನನು ತಾ
ಬಿಟ್ಟಿರಲಾರದ ಗುಟ್ಟು ಕಾಣಮ್ಮ ೪
ಇನಕೋಟಿತೇಜನ ಈ ಪರಿ ಲೀಲೆ ಇದೇನೆ ಪೇಳಮ್ಮಯ್ಯ
ಮನಸಿಗೆ ಪ್ರೇರಕ ಹರನೊಲುಮಿಲ್ಲದೆ
ಹರಿಯು ತಾನು ಒಲಿಯನು ಕಾಣಮ್ಮ ೫
ಹರಿಹರ ರೂಪವ ಧರಿಸಿದ ಪರಿ ಹ್ಯಾಗೇ ಪೇಳಮ್ಮಯ್ಯ
ಸುರವಂದ್ಯನು ಪರಿಪರಿರೂಪಾಗ್ವಗೆ ಈ
ಪರಿ ಧರಿಸುವದೊಂದರಿದೇನಮ್ಮ ೬
ಹರಿಹರ ಕ್ಷೇತ್ರದಿ ನೆಲಸಿಹ ಸ್ವಾಮಿಯ ಭಜಿಸುವದ್ಹ್ಯಾಗೇ ಪೇಳಮ್ಮಯ್ಯ
ಹರನಂತರ್ಗತ ಹರಿಯೊಲುಮಿಂದಲಿ
ಕರಕರೆ ಭವವನು ಕಳೆಯಬೇಕಮ್ಮ ೭
ಶ್ರೀಸತಿ ಪಾರ್ವತಿ ಸಹಿತದಿ ನೆಲಸಿಹನ್ಯಾರೇ ಪೇಳಮ್ಮಯ್ಯ
ದಾಸರನಿಧಿ ಗೋಪಾಲಕೃಷ್ಣವಿಠ್ಠಲ
ಶೇಷಭೂಷಣ ಸಹ ಶ್ರೀನಿವಾಸ ಕಾಣಮ್ಮ ೮

 

೧೪೯
ತುಂಗೆ ಮಂಗಳ ತರಂಗೆ | ಕರುಣಾಂತರಂಗೆ
ರಂಗನಾಥನ ಪದಭೃಂಗೆ ಪ.
ಅಂಗಜಪಿತನ ಅಂಗದಿ ಉದ್ಭವೆ
ಮಂಗಳಾಂಗಿ ಭವ ಭಂಗ ಹರಿಸೆ
ಅಂಗನೆ ಎನ್ನಂತರಂಗದಿ ಹರಿಪಾ-
ದಂಗಳ ತೋರಿಸೆ ಶೃಂಗೆ ಶುಭಾಂಗೆ ಅ.ಪ.
ಆದಿ ದೈತ್ಯನು ಖತಿಯಲಿ | ಮೇದಿನಿಯ ಸುತ್ತಿ
ಒಯ್ದು ಪಾತಳ ಪುರದಲಿ
ಬಾಧೆಪಡಿಸುತಿರೆ ಮಾಧವ ಕರುಣದಿ
ಆದಿವರಾಹನೆಂದೀ ಧರೆಯೊಳು ಬಂದು
ಬಾಧಿಸಿ ಖಳನನು ಮೇದಿನಿ ಪೊರೆಯಲು
ಶ್ರೀದನ ದಾಡೆಯಿಂ ನೀನುದುಭವಿಸಿದೆ ೧
ಸ್ನಾನಪಾನದಿ ನರರನು | ಪಾವನಗೈವ
ಮಾನಿನಿ ನಿನ್ನ ಕಂಡೆನು
ನಾನಾ ದುಷ್ರ‍ಕತಗಳ ನೀನೋಡಿಸಿ ಮತ್ತೆ
ನಾನು ಎಂಬುವ ನುಡಿ ನಾಲಗೆಗೀಯದೆ
ನಾನಾ ವಿಧದಲಿ ಮಾನವ ಕಾಯೆ
ಶ್ರೀನಾಥನ ಪದಧ್ಯಾನವನೀಯೆ ೨
ಹರನ ಪೆಸರಿನ ಪುರದಲಿ | ಹರಿದು ಬಂದು
ವರ ಶ್ರೀ ಕೂಡಲಿ ಸ್ಥಳದಲಿ
ಭರದಿ ಭದ್ರೆಯ ಕೂಡಿ ಪರಿದಲ್ಲಿಂದಲಿ
ಹರಿಹರ ಕ್ಷೇತ್ರವ ಬಳಸಿ ಮಂತ್ರಾಲಯ
ಪುರಮಾರ್ಗದಿ ಸಾಗರವನೆ ಸೇರಿ
ವರ ಗೋಪಾಲಕೃಷ್ಣವಿಠ್ಠಲನೆ ಧ್ಯಾನಿಪೆ ೩

 

ಹನುಮಂತನ ತೆಪ್ಪೋತ್ಸವವನ್ನು
೧೦೮
ತೆಪ್ಪದುತ್ಸವ ನಿನಗೆ ಏನು ಹಿತವೋ
ಅಪ್ಪ ಹನುಮಯ್ಯ ನಿನ್ನಾಟಕೇನೆಂತೆಂಬೆ ಪ.
ರಾಮ ಉಂಗುರ ಸತಿಗೆ ಕಂಡಿತ್ತು ಬಾರೆನಲು
ನೇಮದಿಂದಲಿ ನೂರು ಯೋಜನುದಧಿ
ಪ್ರೇಮದಿಂದಲಿ ಹಾರಿ ಕುರುಹು ತಂದಾ ಮಹಿಮ
ಈ ಮಡುವಿನ ಜಲದಿ ಈ ಆಟವಾಡುವುದು ೧
ಕುರುಕುಲಾರ್ಣವವೆಂಬ ಘನ ಶತ್ರು ಸೈನ್ಯವನು
ಒರಸಿ ಕ್ಷಣದಲಿ ಭುಜಬಲದ ಶೌರ್ಯದಲಿ
ಧುರವೆಂಬ ಶರಧಿಯನು ಲೀಲೆಯಲಿ ದಾಟಿದಗೆ
ವರ ಸರೋವರದ ಈ ಜಲದಾಟವಾಡುವುದು ೨
ಅನ್ಯ ದುರ್ಮತ ಮಹಾರ್ಣವನು ಶೋಷಿಸುತ ಬಹು
ಉನ್ನತದ ವೇದ ಶಾಸ್ತ್ರಾರ್ಣವದಲಿ
ಚೆನ್ನಾಗಿ ಈಜಿ ಶ್ರೀ ಹರಿಚರಣ ದಡ ಸೇರ್ದ
ಘನ್ನ ಮಹಿಮನಿಗೆ ಈ ಚಿನ್ನ ಮಡುವೀಜುವುದು ೩
ಮುಕ್ತಿಯೊಗ್ಯರ ಕರ್ಮಶರಧಿಯನು ದಾಟಿಸುತ
ಮುಕ್ತರಾಶ್ರನ ಪುರ ಸೇರಿಸುವನೆ
ಅತ್ಯಂತ ಅಲ್ಪ ಈ ಜಲದಾಟವಾಡಿದರೆ
ಭಕ್ತರಾದಂತ ದಾಸರು ನಗರೆ ಹನುಮ ೪
ವರ ಕದರುಂಡಲಿಯಲ್ಲಿ ನೆಲಸಿರುವ ಭಕ್ತರಿಗೆ
ಮರುಳುಗೊಳಿಸುತ ಮಹಾ ಮಹಿಮನೆನಿಸಿ
ಪರಿಪರಿಯ ಉತ್ಸವಪಡುವೆ ಶ್ರೀ ಕಾಂತೇಶ
ಸಿರಿರಮಣ ಗೋಪಾಲಕೃಷ್ಣವಿಠ್ಠಲನ ದಾಸ ೫

 

೧೭೯
ತೆರಳಿ ಪೋದರು ದಿವ್ಯ ನರಹರಿಯ ಪುರಕೆ ಶ್ರೀ
ವರತಂದೆ ಮುದ್ದುಮೋಹನರೂ ಪ.
ಕರಿಗಿರಿ ಕ್ಷೇತ್ರದಲಿ ತೊರದು ಭೌತಿಕ ದೇಹ
ಪರಮ ಉಲ್ಲಾಸದಿಂದಾ ನಂದಾ ಅ.
ಪರಿಪರೀ ಪೂಜಿಸಿದ ಪರಮ ಭಕ್ತರಿಗೆ ತಾವ್
ತೆರಳುವೋಪರಿ ತಿಳಿಸದೇ
ಪರಮ ಕರುಣಾಳು ಹೆಂಗರುಳಿನಾ ಖಣಿ ಎಂಬ
ತೆರವೆಲ್ಲರಿಗೆ ಮರೆಸದೇ
ಪರಮಸುಜ್ಞಾನಿಯಾದಂಥ ಶಿಷ್ಯರಾ
ಕರೆಸಿ ಅಗಲಿಸಿಕೊಳ್ಳದೇ
ಪರಮ ಸಾಧ್ವೀಪತ್ನಿ ವರ ಪುತ್ರರಿರುತಿರಲು
ಕಿರಿಶಿಷ್ಯನೊಬ್ಬನೆದುರೊಳ್ | ಜವದೊಳ್ ೧
ಎಂಭತ್ತು ಮೇಲೆರಡು ವತ್ಸರವು ಧರಣಿಯೊಳು
ಸಂಭ್ರಮದಿ ಧೃಡ ಕಾಯದೀ
ತುಂಬಿ ತತ್ವಾಮೃತವು ಸುಜನರಾ ಹೃದಯದಲಿ
ಕುಂಭಿಣಿಯೋಳ್ ದಾಸತ್ವದೀ
ನಂಬಿಕೆಗಳಿತ್ತು ಸುಜ್ಞಾನಿಗಳಿಗಂಕಿತವು
ಅಂಬುಜಾಕ್ಷನ ನಾಮದೀ
ಒಂಭತ್ತು ವರ್ಷದಿಂ ಬೆಂಬಿಡದೆ ಕಾಯ್ದೆನ್ನ
ಕುಂಭಿನಿಯ ತೊರೆದು ಈಗಾ | ಬೇಗಾ ೨
ಶಾಲಿಶಕ ಸಾಹಸ್ರ ಅಷ್ಟ ಶತ ಅರವತ್ತು
ಮೇಲೆರಡು ವಿಕ್ರಮದಲೀ
ಕಾಲ ಮಧ್ಯಾಹ್ನ ಚೈತ್ರದ ಶುದ್ಧ ಶ್ರೀ ರಾಮ
ನವಮಿ ಭೌಮವಾಸರದಲಿ
ಆಲಿಸುತ ದಿವ್ಯ ಮಂತ್ರ ಶ್ರವಣ ಕೀರ್ತನವ
ಮೌನ ಮುಂದ್ರಾಂಕಿತದಲೀ
ಶೀಲ ಶ್ರೀ ಗೋಪಾಲಕೃಷ್ಣವಿಠಲನ ಪುರಕೆ
ಆಯಾಸಗೊಳದೆ ಮುದದೀ ತ್ವರದೀ ೩

 

೧೮೦
ತೊರೆದು ಜೀವಿಸಬಹುದೆ ಗುರು ನಿಮ್ಮ ಚರಣವ ಪ.
ಬರಿಯ ಮಾತಲ್ಲವಿದು ಜರಿದು ನುಡಿವೆ
ಕರಕರೆಗೊಳಿಸದೆ ಕಾಯಬೇಕಿನ್ನು ಗುರು ಅ.ಪ.
ಅತಿಶಯ ಮಹಿಮೆಯ ಹಿತದಿಂದ ತೋರಿದ
ಪಿತನಂತೆ ಪೊರೆಯುವಚ್ಯುತ ದೂರ ಪದವೀವ
ಮತಿವಂತರೆ ನಿಮ್ಮ ಕ್ಷಿತಿಯೊಳಗಲಲಾರೆ೧
ನೀತಿಯ ಬೋಧಿಪ ಖ್ಯಾತಿ ಶ್ರೀ ಗುರುಗಳೆ
ದೂತರಾದವರನು ಈ ತೆರ ಮಾಳ್ಪರೆ
ಪಾತಕರಹಿತರೆ ಪ್ರೀತಿಯ ತೋರಿರಿ೨
ಬಂದಿರಿ ಮಮತೆಲಿ ಕಂದರಂದದಿ ತಿಳಿದು
ಇಂದಿರೇಶನ ತತ್ವಾವೃಂದಗಳರುಹುತ
ಮಂದಿಗಳಿಗೆ ಆನಂದವನೆ ತೋರ್ದಿರಿ ೩
ಎಲ್ಲಿ ಭಕ್ತರು ಕರಿಯೆ ಅಲ್ಲಿಗೆ ಬರುವ ಗುರುವೆ
ಇಲ್ಲಿ ನಿಮ್ಮ ಹೊರತು ಇಲ್ಲವು ಇನ್ನೊಂದು
ಒಲ್ಲೆನು ಈ ಜಗದ ನಿಲ್ಲದ ವಸ್ತುಗಳು ೪
ಗೋಪಾಲಕೃಷ್ಣವಿಠ್ಠಲ ತಾ ಪರಿಪರಿ ಲೀಲ
ವ್ಯಾಪ್ತ ಶ್ರೀ ಗುರು ಸಹ ಶ್ರೀಪತಿ ಹೃದಯದಿ
ತೋರ್ಪಂತೆ ಕೃಪೆ ಮಾಡಿ ಕಾಪಾಡಬೇಕೊ ದೊರಿ ೫

 

೧೮೧
ತೊರೆದು ಪೋಗುವುದುಚಿತವೇ | ಶ್ರೀ ಗುರುವರ
ಹರಣ ನೀಗುವುದುಚಿತವೇ ಪ.
ಪರಿಪರಿಯಿಂದಲಿ ಚರಣ ಕಮಲ ನಂಬಿ
ಇರುವಂಥ ತರಳೆಯ ಜರಿದು ಮೋಸದಿ ಇಂತು ಅ.ಪ.
ಆರನಾ ಪೂಜಿಸಲಿ | ಪರಿಪರಿಯಿಂದ
ಆರನಾ ಸ್ತುತಿಗೈಯ್ಯಲಿ | ಪೇಳೆನ್ನ ಗುರುವೆ
ತೋರದು ಮನಸಿಗೆ ಬೇರೊಂದು ಮತಿ ಇನ್ನು
ಕಾರುಣ್ಯಮೂರ್ತಿ ಮತ್ತಾರ ಸೇವಿಸಲಿನ್ನು
ಧಾರುಣಿಯೊಳ್ ನಿಮ್ಮ ಹೊರತಿ
ನ್ನಾರು ಕಾಯುವರಿಲ್ಲವೆಂದು
ಸೇರಿದವಳನು ಬಿಟ್ಟು ಶ್ರೀ ಗುರು
ಮಾರನಯ್ಯನ ಪುರಕೆ ಪೋಪರೆ ೧
ತುಪ್ಪ ಸಕ್ಕರೆ ಸವಿದಾ | ಶುಭತನುವಿನ್ನು
ಒಪ್ಪವಾಯಿತೆ ಶಿಖಿಗೆ | ಕ್ಷಣ ಮಾತ್ರದಲ್ಲಿ
ಅಪ್ಪಾವು ಅತಿರಸ ಮೆಲ್ಲುವ ಇಚ್ಛೆಯು
ತೃಪ್ತಿಯಾಯಿತೆ ಪೇಳಿ ಅಪ್ಪಯ್ಯ ನಿಮಗಿನ್ನು
ಅಪ್ಪ ಅಮ್ಮ ಸರ್ವಬಳಗವು
ತಪ್ಪದಲೆ ನೀವೆಂದು ನಂಬಿದೆ
ಒಪ್ಪಿಕೊಂಡೊಂಬತ್ತು ವರುಷವು
ಇಪ್ಪ ರೀತಿಯ ಬಯಲು ಮಾಡಿ೨
ಕಡುಕೃಪೆಯಿಂದಲಿ | ಪೇಳಿದ ಗೋಪ್ಯ
ಒಡಲೊಳು ನೆನೆಯುತಲಿ | ಕುಣಿದಾಡುತಿದೆ ಒಡಲೊಳು
ದೃಢಭಕ್ತಿಯೊಳ್ ನಂಬಿ ಬಿಡದೆ ನಿಮ್ಮಡಿಗಳು
ನಡುವೆ ಬಂದೆಡರುಗಳ್ ಕಡೆಹಾಯ್ದು ಮಿಡುಕದೆ
ಅಡಿಗಡಿಗೆ ಬೆಂಬಿಡದೆ ಚರಣವ
ಪಿಡಿದು ಕೇಳಲು ಅಭಯವಿತ್ತ
ನುಡಿಗಳೆಲ್ಲವು ಎತ್ತ ಪೋಯಿತೊ
ಕಡಲಶಯನನ ಮಾಯವಕಟಾ ೩
ಹಿಂದೊಬ್ಬರನು ಕಾಣೆನೊ | ನಿಮ್ಮಂದದಿ
ಮುಂದೊಬ್ಬರನು ಕಾಣೆನೊ | ಈ ಕರುಣದವರ
ಒಂದೊಂದು ಗುಣ ಗಣ ಬಂದು ಸ್ಮರಣೆ ಮನಕೆ
ಕಂದಿ ಕುಂದಿಸುತಿದೆ ನೊಂದು ಬೆಂದು ಪೋದೆ
ಚಂದವೇ ಇದು ಪೋಪ ತೆರವು
ತಂದೆ ಸೈರಿಸಲಾರೆ ಗುರುವರ
ತಂದೆ ಮುದ್ದುಮೋಹನರೆನಿಸಿದ
ಸುಂದರಾತ್ಮಕ ಸುಗುಣಪೂರ್ಣ ೪
ಎನ್ನಂತೆ ಬಳಲುವರು | ನಿಮ್ಮಯ ಶಿಷ್ಯ
ರುನ್ನಂತೆ ಇರುತಿಹರೊ | ಬಹು ಭಕ್ತಿ ಉಳ್ಳವರು
ಮನ್ನಿಸುತವರ ಸಂಪನ್ನ ಸಲಹಬೇಕು
ಬಿನ್ನಪವಿದು ಕೇಳು ಮನ್ನಿಸು ಕೃಪಾಳು
ಇನ್ನು ಸೈರಿಸೆ ಸೈರಿಸೆನು ನಿಮ್ಮ
ಘನ್ನ ಮೂರ್ತಿಯ ಮನದಿ ತೋರೈ
ಇನ್ನು ಗೋಪಾಲಕೃಷ್ಣವಿಠ್ಠಲನು
ಬನ್ನ ಬಡಿಸದೆ ಬಿಡಿಸಲೀ ಭವ ೫

 

೧೮೨
ತೋರೆನಗೆ ಶ್ರೀ ಕೃಷ್ಣ ತೋಯಜಾಂಬಕ ನಿನ್ನ
ಶ್ರೀ ರಮೇಶನೆ ನಾನಾ ಗುಣನಾಮ ಮಾಲೆ ಪ.
ವಾರಿಜಾಂಬಕನೆ ಶ್ರೀ ಗುರುಗಳ ರಚಿಸುತಲಿ
ಹಾರಹಾಕಿಹರೊ ನಿನಗೆ ಹರಿಯೆ ಅ.ಪ.
ಮುದ್ದು ಮೋಹನದಾಸರಿಂದಲಿ ತಂದೆ ಮುದ್ದು
ಮೋಹನವಿಠ್ಠಲನೆಂಬಾ
ಮುದ್ದಾದ ಅಂಕಿತವ ಶ್ರದ್ಧೆಯಿಂದ ಪಡೆದು
ಒದ್ದು ತಾಪತ್ರಯವನು
ಮಧ್ವಮತಸಾರಗಳ ಸಂಗ್ರಹಿಸಿ ಸುಜನರಿಗೆ
ತಿದ್ದಿ ತಿಳಿಸುತಲಿ ಜ್ಞಾನ
ಬದ್ಧ ಜೀವರ ಕರ್ಮ ಕಳೆಯುತಲಿ ನಿನ್ನ ನಾಮ
ತಿದ್ದಿ ತಿಳಿಸಿದ ಗುರುಗಳು ಇವರು ೧
ಸರ್ವೋತ್ತಮನೆ ನಾಗಶಯನ ಗಂಗಾಜನಕೆ
ಇಂದಿರಾಪತಿ ರಂಗನಾಥ
ಶರ್ವಾದಿವಂದ್ಯ ಕೃಪಾಸಾಂದ್ರ ದಶರಥರಾಮ
ರಘುರಾಮ ಇಂದಿರೇಶ
ಸರ್ವಾಧಿಪತಿಯೆ ಶ್ರೀ ಗೋಪಾಲಕೃಷ್ಣನೇ
ದಯಾಪೂರ್ಣ ಸೀತಾಪತೇ
ಸರ್ವೇಶ ಗುಣಭರಿತ ದಯಾಸಾಂದ್ರ ರಮಾಕಾಂತ
ವೇದೇಶ ಯಾದವೇಂದ್ರ ಸ್ವಾಮಿ ೨
ಸದಾನಂದ ಗುಣಭರಿತ ದಯಾ ಪಯೋನಿಧಿಯೆ
ಇಂದಿರಾರಮಣ ಜಯ ಗೋಪಾಲನೆ
ಚಿದಾನಂದ ಜಯರಾಮ ಶ್ರೀಪತಿ ಮೋಹನ
ವರದೇಶ ಪ್ರಾಣನಾಥಾ
ಭೂದೇವಿಪತಿ ಪದ್ಮನಾಭ ಆನಂದಪೂರ್ಣ
ಶ್ರೀನಾಥ ಜಗದೀಶನೆ
ಸುಧಾಪ್ರಿಯ ಸಿರಿರಾಮ ರಂಗೇಶ ಜಗದ್ಭರಿತ
ವರದ ಮೋಹನದೇವಾ ೩
ವರಗುರು ಗೋಪಾಲ ಪತಿತ ಪಾವನ ಸ್ವಾಮಿ
ಶ್ರೀಕಾಂತ ಪುರುಷೋತ್ತಮ
ಸಿರಿರಾಮಕೃಷ್ಣ ಹೃಷಿಕೇಶ ನಿತ್ಯಾನಂದ
ಪರಮಾನಂದ ಶ್ರೀ ಸುರೇಂದ್ರ
ಸಿರಿಗೋವಿಂದ ಮಧ್ವಮುನಿವರದ ಜಯಾರಮಣ
ಕರುಣಾಕರ ವೆಂಕಟ
ಕರುಣಾಕರ ರಾಮ ಜಯಾಪತಿಯೆ ಲಕ್ಷ್ಮೀರಮಣ
ದಯಾಮಯನೆ ಭವತಾರಕ ಹರಿಯೆ ೪
ಜ್ಞಾನಾನಂದ ಶುಭಗುಣಭರಿತ ಮೋಹನನೆ
ವಸುದೇವ ಪಾರ್ಥಸಾರಥಿಯೆ
ಪ್ರಾಣಪ್ರಿಯ ಪರಿಪೂರ್ಣ ಮಧ್ವವಲ್ಲಭಮುಕ್ತಿ
ದಾಯಕ ಸತ್ಯೇಶನೆ
ಜ್ಞಾನಪೂರ್ಣ ಕಾಮಿತಾರ್ಥ ರಘುನಂದನ
ಪರಮಪಾವನ ರಮೇಶ ಕರುಣಾನಿಧೆ
ಸಿರಿನಿಧಿ ಸುಖಪೂರ್ಣ ಲೋಕೇಶ ಶ್ರೀ ಲೋಲ
ರಮಾಧವನೆ ಪುಂಡರೀಕಾಕ್ಷ ಸ್ವಾಮಿ ೫
ಕಲ್ಯಾಣಗುಣಪೂರ್ಣ ಚಂದ್ರಹಾಸವರದ ಮಾಯಾಪತಿ
ಉಪೇಂದ್ರ ಚಕ್ರಪಾಣಿ
ನೀಲಾಪತಿಯೆ ದಯಾಕರನೆ ಗರುಡಧ್ವಜ ಧೃವವರದ
ಮುಕ್ತೇಶ ಬದರಿನಾಥಾ
ಬಾಲಕೃಷ್ಣನಂದ ಸುಖತೀರ್ಥವರದನೆ ನಿರ್ಮಲಾತ್ಮಕ
ಜಯಪ್ರದ ನಿರ್ಜರೇಶ
ಪ್ರಹ್ಲಾದವರದ ಮಧುರಾನಿಲಯ ರಾಧಾಪ್ರಿಯ
ಜಾನಕೀಪತಿ ವಿಶ್ವನಾಥಾ ಸ್ವಾಮಿ ೬
ಮುಕ್ತಾಶ್ರಯನೆ ಚಿನ್ಮಯ ಉರಗಾದ್ರಿವಾಸನೆ
ಭುವನೇಶ ಗಜರಾಜವರದ
ಭಕ್ತಪ್ರಿಯ ದಾಶರಥಿಯೆ ಸೀತಾಕಾಂತ ಶ್ರೀಧರ
ಜನಾರ್ಧನ ಮಧ್ವನಾಥ
ರುಕ್ಮಿಣೀಶ ಪುಂಡರೀನಾಥ ಕಮಲಾಕ್ಷ ಹಯಗ್ರೀವ
ಆನಂದ ಅರವಿಂದಾಕ್ಷ
ಲಕ್ಷ್ಮೀಕಾಂತ ಅಮರೇಶ ರಮಾಕಾಂತ ಸುರವರೇಶ
ಪುಂಡರೀಕವರದ ಶ್ರೀ ಕೃಷ್ಣಸ್ವಾಮಿ ೭
ಮಧ್ವೇಶ ಮಾಧವ ಗಾನಲೋಲ ಗಂಗಾಪಿತ
ಕಮಲಾನಾಥ ಕಮಲನಾಭ
ಮಧ್ವರಮಣ ಮುರಳಿಲೋಲ ಶೇಷಾದ್ರೀಶ
ಸದಮಲಾನಂದ ವೈಕುಂಠವಾಸ
ಮಧುರಾನಾಥ ರಮಾವಲ್ಲಭ ಮಾಯಾವರ
ಪದ್ಮೇಶ ಗುರು ಮಧ್ವೇಶ
ಪದ್ಮಾವತಿಪ್ರಿಯ ಲಕುವಿೂಶ ಸತ್ಯೇಶ ಸಿರಿನಾಥ
ಇಂದಿರಾಪತಿ ರಮೇಶ ಶ್ರೀಶ ೮
ಸರಸಿಜಾಕ್ಷನೆ ನಿಗಮ ಗೋಚರ ರಮಾನಂದ
ಸಿರಿರಮಣ ಕಮಲಾಕಾಂತನೆ
ವರನಾಮರತ್ನಗಳ ಹುಡುಕಿ ವಿಠಲನೆ ನಿನಗೆ
ಸರವ ಪೋಣಿಸಿ ಹಾಕುತ
ಸುರಸಿ ಆನಂದಬಾಷ್ಪವ ಸುಖಪಡುತಿಹರು
ಪರಮ ಪ್ರಿಯ ಶ್ರೀ ಗುರುಗಳು
ಗುರುರಮಣ ಗೋಪಾಲಕೃಷ್ಣವಿಠಲ ಇನ್ನು ಅರಿಯೆನೊ
ಉಳಿದ ನಾಮಾ ಪೊರೆಯೋ ೯

 

೧೮೩
ಉಗಾಭೋಗ
ದಾಸ ಭಾಗ್ಯವೆ ಭಾಗ್ಯ ಹರಿಕೊಟ್ಟ ಸೌಭಾಗ್ಯ
ದಾಸ ಭಾಗ್ಯಕ್ಕೆ ಜಗದಿ ಸರಿಮಿಗಿಲಿಲ್ಲವೆಂದು
ದಾಸತ್ವವೇ ಮಧ್ವಮತ ಸಾರತತ್ವವೆಂದು
ವ್ಯಾಸರಾಯರು ಜಗದಿ ದಾಸರ ನಿಲ್ಲಿಸಿದರು
ದಾಸರಿಗಂಕಿತ ಇರಲೇಬೇಕೆನುತಲಿ
ದಾಸ ಪುರಂದರವಿಠ್ಠಲನಿಗೆನಿಸಿದರು
ಈ ಸುಮಾರ್ಗವ ತಂದೆ ಮುದ್ದುಮೋಹನ ಗುರು
ಮಾಸದಂತೀಗ ಮತ್ತೆ ಬಿತ್ತಿ ಬೆಳೆಸಿದರು
ದಾಸ ಜನಪ್ರಿಯ ಗೋಪಾಲಕೃಷ್ಣವಿಠ್ಠಲ
ತಾ ಸುಮ್ಮನೀವ ತನ್ನ ನಿಜದಾಸರಿಗೆ ಮುಕ್ತಿ

 

೩೭
ದಾಸರ ನರಸಿಂಹ | ಶ್ರೀಹರಿ
ದಾಸರ ನರಸಿಂಹ ಪ.
ಯೊಗಾ ನರಸಿಂಹ | ಕರಿಗಿರಿ
ಭೋಗಾ ನರಸಿಂಹ
ಆಗಲೆ ಸುರಿಯುವ ಮಳೆಯನು ನಿಲ್ಲಿಸಿ
ಬೇಗನೆ ಕೈಕೊಂಡ ಉತ್ಸವ ನರಸಿಂಹ ೧
ಶಾಂತಾ ನರಸಿಂಹ | ಪ್ರಹ್ಲಾ-
ದಾಂತರ ನರಸಿಂಹ
ನಿಂತು ಹೆಜ್ಜೆ ಹೆಜ್ಜೆಗೆ ಆರತಿ ಕೊಂಡು
ಸಂತಸಪಡಿಸಿದ ಗುರುಗಳ ನರಸಿಂಹ ೨
ಕಾಮಿತ ನರಸಿಂಹ | ಪರಮ
ಪ್ರೇಮದ ನರಸಿಂಹ
ಸ್ವಾಮಿ ತಂದೆ ಮುದ್ದು ಮೋಹನದಾಸರ
ಧಾಮದಿ ನೆಲಸಿಹ ಸ್ವಾಮಿ ಶ್ರೀ ನರಸಿಂಹ ೩
ಭಕ್ತರ ನರಸಿಂಹ | ಭವಭಯ
ಒತ್ತುವ ನರಸಿಂಹ
ಭಕ್ತಿ ಭಾವದಿಂದ ಭಜನೆಯ ಮಾಳ್ಪರ
ಮುಕ್ತಿ ಮಾರ್ಗ ತೋರಿ ಸಲಹುವ ನರಸಿಂಹ ೪
ಸುಲಭ ನರಸಿಂಹ | ನೀ ಬಹು
ದುರ್ಲಭ ನರಸಿಂಹ
ಒಲಿಯುವ ಗೋಪಾಲಕೃಷ್ಣವಿಠ್ಠಲ ಹರಿ
ನೆಲಸಿ ಹೃದಯ ಮಂದಿರದಲಿ ನರಸಿಂಹ ೫

 

೧೮೪
ದಾಸರಾಗಿರಿ ದಾಸರಾಗಿರಿ ದಾಸರಾಗಿರಿ ಬೇಗನೆ ಪ.
ದಾಸರಾಯರ ಪದವ ನಂಬಿ
ವಾಸುದೇವಗೆ ಬೇಗನೆ ಅ.ಪ
ದುಷ್ಟಮನ ಕಲ್ಮಷವ ಕಳದು
ಶಿಷ್ಟಜನರೊಳು ಕೂಡುತಾ
ಸೃಷ್ಟಿಕರ್ತನ ಭಜನೆ ಮಾಡುತ
ಕಷ್ಟಗಳನೀಡಾಡಿರಿ ೧
ತಂದೆ ಮುದ್ದುಮೋಹನರೆಂ-
ತೆಂದು ಮೆರೆಯುವ ಗುರುಗಳ
ದ್ವಂದ್ವ ಪಾದವ ಭಜಿಸಿ ಈ ಭವ
ಬಂಧನವನೀಗಾಡುತ ೨
ಜನನ ಮರಣ ನೀಗುವುದಕೆ
ಕೊನೆಯ ಮಾರ್ಗವು ದಾಸತ್ವ
ಘನಮನದಿ ಸ್ವೀಕಾರ ಮಾಡಿ
ವನಜ ನಯನನ ಪಾಡಿರಿ ೩
ಅಂಕಿತವ ಸ್ವೀಕಾರ ಮಾಡಿರಿ
ಶಂಕಿಸದೆ ಶ್ರೀಗುರುಗಳಿಂ
ಶಂಖ ಚಕ್ರಾಂಕಿತನ ಗುಣಮನ
ಪಂಕಜದೊಳು ಸ್ಮರಿಸಿರಿ ೪
ಆದಿಯಿಂದಲಿ ಇಹುದು ಜೀವಗೆ
ಶ್ರೀಧರನ ದಾಸತ್ವವು
ಈ ಧರ್ಮ ತಿಳಿಯದಲೆ ಗರ್ವದಿ
ಹಾದಿ ತಪ್ಪಲಿ ಬೇಡಿರಿ ೫
ಜಗದೊಡೆಯ ಶ್ರೀ ಹರಿಯು ಸರ್ವದ
ನಿಗಮಗಳಿಗಾಧಾರನು
ಬಗೆಬಗೆಯ ಜೀವರೊಳಗಿರುತಲಿ
ಸುಗುಣವಂತರ ಪೊರೆವನು ೬
ಈ ಪರಿಯ ದಾಸತ್ವ ಹೊಂದಿ ನಿ
ರ್ಲೇಪರಾಗಿರಿ ಕರ್ಮದಿಂ
ಗೋಪಾಲಕೃಷ್ಣವಿಠ್ಠಲನು
ರೂಪ ತೋರ್ವನು ಹೃದಯದಿ ೭