Categories
ರಚನೆಗಳು

ಕವಿ ಪರಮದೇವದಾಸರು

ದೇವದೇವತೆಗಳ ಸ್ತುತಿ
೧೯
ಅಂಬುಧಿಶಯನ ಪೀತಾಂಬರಧರ ಕಮಳಾಂಬಕ ಸಿರಿರಮಣ
ನಂಬಿದ ಭಕ್ತರ ಬೆಂಬಿಡದಿಹನೆಂಬುದಕೆ ಸಹಜಗುಣ ಪ

ಉತ್ತಾನ ಪಾದನ ಬಳಿಗೆ ಧ್ರುವನು
ಒರಲುತ್ತಾ ಸಭೆಗೆ ಬರಲು
ಮತ್ತೆ ನೀಬಾರೆಂದು ಎತ್ತಿ ತೊಡೆಯಲಿಟ್ಟು
ಒತ್ತಿ ಮುದ್ದಿಸುತಿರಲು
ಮತ್ತ ಕಾಶಿನಿ ಮಲತಾಯಿ ಸುರಚಿ
ಹಿಡಿದೊತ್ತಿ ವನಕೆ ನೂಕಲು
ಎತ್ತಲು ಏನೆಂದರಿಯದ ಬಾಲಗೆ ಇತ್ತುವರವ ನೀನು
ಪೊರೆದೆಯೋ ಧ್ರುವನ೧

ನೆರದ ಬಾಲಕರೊಳು ತರಳ ಪ್ರಹ್ಲಾದ
ಹರಿನಾಮವನು ಬರೆಯೆ
ಕರೆದು ಹಿರಣ್ಯಕ ಹರಿಪಗೆ ನಮಗೆಂದು
ವಿರಚಿಸೆ ಕೇಳದಿರೆ
ಮುರಹರ ಮಧುಸೂಧನನೆಂದು ಬರೆಯಲು
ದುರುಳಬಾಧಿಸೆ ಮಗನ
ಪರಮ ಪಾವನ ಮೂರ್ತಿ ಭರದಿ ಕಂಬದಿ ಬಂದು
ವರವಿತ್ತು ಪೊರೆದೆಯೋ ಪ್ರಹ್ಲಾದನ ೨
ಶಾಪವನೀಯ ಲಗಸ್ತ್ಯನಿಂದ್ರದ್ಯುಮ್ನ ಭೂಪತಿ ಗಜವಾಗಲು
ತಾಪತೃಷೆಗಳಿಂದ ಮಡುವಿನೊಳು ಸುಳಿಯಲು
ಕೋಪದಿ ನೆಗಲ್ವಿಡಿಯೊ
ದ್ವಿಪನ ಬಲಗುಂದೆ ಶ್ರೀಪತಿ ಕಾಯೆಂದು
ಗುಪಿತದಿ ಮೊರೆಯಿಡಲು
ನೀಪರಮಾತುಮ ತಿಳಿದು ಬೇಗದಿ ಬಂದು ಪಾಪಿನೆಗಳ
ಸೀಳ್ದು ಪೊರೆದೆಯೋ ಗಜವ ೩

ಧರ್ಮಜಾನುಜರೊಡಗೂಡಿ ವನದಲಿರೆ
ಧರ್ಮವೇ ಜಯವೆನಲು
ದುರ್ಮತಿಗಳ ನುಡಿಗೇಳು ದೂರ್ವಾಸನು
ಮರ್ಮವನರಿತು ಬರಲು
ಧರ್ಮಭೂಪತಿ ಕರ್ಮಸಾಕ್ಷಿ ತೊಲಗುತಿದೆ
ಅನ್ನವನೀಯೆನಲು
ನಿರ್ಮಲಾತ್ಮಕ ರಕ್ಷಿಸೆನಲು ಧರ್ಮದಿಂದ
ಪೊರೆದೆಯೋ ಪಾಂಡುವರ ೪
ಹರಿಭಕುತ ರುಕುಮಾಂಗದ ಭೂಪತಿ
ಹರಿವಾಸವರವ ಮಾಡಲು
ದುರುಳೆ ಮೋಹಿನಿ ಅಜನೆಂದ ಮಾತಿಗೆ
ಭೂಪನನೊಲಿಸಿ
ಸುಖದೊಳಿರಲು ತರುಣ ವ್ರತವ ಕೆಡಿಸಲು
ನಿಜತರಳನ ಶಿರವನರಿಯ
ಬೇಡಲು ಹರಿಕರುಣಿಸು ಎಂದು ಕೊರಳ
ನರಿಯೆ ಬಂದು ವರವಿತ್ತು
ಪೊರೆದೆಯೋ ವೇಣುಗೋಪಾಲ ೫

೨೦
ಅಗಸುತೆ ನಾಗಭೂಷಣ ಪ್ರೀತೆ ಶ್ರೀ ಮೂಕಾಂಬ
ನಿಗಮಾಗಮ ಸಂಸ್ತುತೆ ವಾಗೀಶ್ವರಿ
ಮಿತ್ರೆ ಶ್ರೀ ಮೂಕಾಂಬ ಪ
ಏಕದಂತನ ಮಾತೆ ಲೋಕಕ್ಕೆ ಪ್ರಖ್ಯಾತೆ ಶ್ರೀ ಮೂಕಾಂಬ
ಪಾಕ ಶಾಸನ ನುತೆ ಮೂಕ ದಾನವ
ಮರ್ಧಿನಿ ಮೂಕಾಂಬ ೧
ತದ ಪಾದವ ನಂಬಿ ವಿವರಿಸಿ
ಪೇಳುವೆ ಶ್ರೀ ಮೂಕಾಂಬ
ಭುವನೇಶ್ವರಿ ಶಿವನರಾಣಿ ನೀ ದಯೆತೋರೆ
ಶ್ರೀ ಮೂಕಾಂಬ ೨
ಭೂರಿ ಸನ್ನುತಿ ಭಾಗ್ಯವಿತ್ತೆನ್ನ ರಕ್ಷಿಸೆ ಶ್ರೀ ಮೂಕಾಂಬ
ಘೋರ ಶುಂಭ ನಿಶುಂಭರ ಮಡಹಿದೆ ಶ್ರೀ ಮೂಕಾಂಬ ೩

ಇಳೆಯೊಳಧಿಕವೆಂಬ ಕೊಲ್ಲೂರು ಪುರವಾಸಿ
ಶ್ರೀ ಮೂಕಾಂಬ
ಒಲಿದೆನ್ನಮನದಿಷ್ಟಾರ್ಥವ ಸಲಿಸು
ಸದಾಶಿವೆ ಶ್ರೀ ಮೂಕಾಂಬ ೪

೮೪
ಇಂದಿನ ದಿನ ಸುದಿನ ನಾಳೆಗೆಂದರೆಂದು ಕಠಿಣ
ಮಂದಮತಿಯು ನೀನಾಗದೆ ಈಗ ಮುಕುಂದನ ನಾಮ
ಕೀರ್ತನೆಯ ಮಾಡುವುದಕೆ ಪ
ಯೋಗಿಗಳೊಡನಾಡು ವಿಷಯದ ಭೋಗವ ನೀಡಾಡು
ಆಗಳು ಈಗಳು ಯಾವಾಗಲೂ ಪೊಲೆಗೂಡಿನೊಳಗೆ
ನಿನ್ನ ನೀ ತಿಳಿವುದಕೆ ೧
ಅಸ್ಥಿರ ದೇಹವಿದುನಾನಾವಸ್ಥೆ ಬಾಧಿಸುತಿಹುದು
ಕಸ್ಥೂರಿರಂಗನ ದಾಸರೊಡನೆ ಉದಯಾಸ್ತಮಾನವು
ಬಿಡನೊಡನಾಡುವುದಕೆ ೨
ಸಾಧು ಸಂಗತಿಯಿಂದ ಪಾಪವಿಚ್ಛೆದನವದರಿಂದ
ಸಾಧಿಸಲಹುದು ಭೀಮನ ಕೋಣೆವಾಸ ಚಿದಾನಂದ
ಲಕ್ಷ್ಮೀರಮಣನ ಪೂಜಿಸಲಿಕೆ ೩

೮೩
ಇಂದಿನಾಜನ್ಮದಲಿ ದರಿದ್ರನು
ಹಿಂದಿಲ್ಲ ಮುಂದಿಲ್ಲ ಇಂದು ಕೊಡಲಿಕೆ ಇಲ್ಲ
ಎಂದೆಂದಿಗೂ ಹುಟ್ಟು ದರಿದ್ರನು ಪ
ಮುಂದಿನ ಜನ್ಮದಲಿ ದಾನ ಧರ್ಮಗಳನ್ನು
ಅನ್ನವನು ಅತಿಥಿಗಿಕ್ಕದಕಾರಣ
ಚನ್ನಾಗಿ ವ್ರತ ನೇಮಗಳನು ಶಿವ ಪೂಜೆಯನು ತನ್ನ
ಕೈಯಾರೆ ಮಾಡದಕಾರಣ ೧
ತೀರ್ಥಕ್ಷೇತ್ರಗಳಲ್ಲಿ ಗೋದಾನ ಧನವ ಸತ್ಪಾತ್ರಕೀಯಲು
ಇಲ್ಲದ ಕಾರಣ
ಮಾತೃ ಪಿತೃ ಗುರುದೇವತಾ ಭಕ್ತಿಯಿಲ್ಲದಿರೆ ಧಾತ್ರಿಯೊಳು
ದರಿದ್ರವದುಕಾರಣ ೨
ಬೇಡುವುದು ಪರರೊಡನೆ ಕಾಡುವುದು ಕೊಡದಿರಲು
ಮಾಡುವುದು ಕೋಪವನು ಅದು ಕಾರಣ
ಗೂಡಿನೊಳು ರುಜೆರೋಗ ಹುಟ್ಟಿದಣಿಯುತ್ತಿಹುದು
ರೂಢಿಯೊಳು ದರಿದ್ರವದುಕಾರಣ ೩
ಉಣ್ಣಲುಡಲಿಕೆ ಇಲ್ಲ ಹೆಣ್ಣಿನಲಿ ಸುಖವಿಲ್ಲ ಬಣ್ಣ
ಬಂಗಾರವಿಲ್ಲದು ಕಾರಣ
ತಣ್ಣನಿರಲಿಕೆ ಒಂದು ಮನೆಯಿಲ್ಲ ಸ್ಥಳವಿಲ್ಲ
ಮುನ್ನದಾನವನು ಮಾಡದಿಹಕಾರಣ ೪
ಸಿರಿವಂತನಾಗ ಬೇಕಾದರೆ ಶಿವಾರ್ಚನೆಯ
ನೆರೆಮಾಡಿ ಭಕ್ತೀಯೊಳುದಾರಿದ್ರವ ಪರಿಹರಿಸಿ
ಮರುತ ನಿಲತ ಕೋಣೆ ಲಕ್ಷ್ಮೀರಮಣ
ನೊಲಿದವರಿಗೆ ಭಾಗ್ಯ ಬಹುದದುಕಾರಣ ೫

ಇಕ್ಕೇರಿ ಅಘೋರÉೀಶ್ವರನ ಬಗ್ಗೆ ರಚಿಸಿದ

೨೧
ಇಂದು ಶೇಖರ ರಕ್ಷಿಸೋ ಎನ್ನ ತಂದೆ ಶಂಕರ
ಹಿಂದೆ ಪೊಂದಿದ ದೇಹದ ಮತ್ತಿಂದು ಹಿಡಿಯುತ ಪ
ಹಿಂದೆ ಬಿಸುಟೊಡಲು ಮರು ಕೊಳಿಸಿ ಸಾರಿ ಬಂದುದು
ತಂದೆ ತಾಯಿಯ ಗಣನೆ ಉರ್ವಿಸಿಕವನು ಮೀರಿತು
ಅಂದು ಮೊದಲು ಜನನೀಸ್ತನವನುಂಡು ಪಾಲಸವಿದುದು
ಸಿಂದುವನ್ನು ಮೀರಿ ಹೋಯ್ತು ಇಂದು ಕಂದು ಗೊರಳನೆ ೧
ಬಾಲಕತ್ವದಿ ಕೆಲವು ದಿನ ಕಾಲ ಕಳೆದನು ಮೇಲು
ಯವ್ವನದ ಮಬ್ಬುಗಳದಿ ಸಿಲುಕಲು
ಬಾಲವನಿತೆ ಬಾಳು ಬದುಕಿನೊಳಗೆ ತೊಳಲಿ ಬಳಲಲು
ಕಾಲ ಸವೆದು ಜರೆಯು ಸ್ಥೂಲ
ಕಾಯದೊಳಗೆ ಮುಸುಕಲು
ಕೊಳುವೋದೆ ಯಮಗೆ ಶೂಲ ಪಾಣಿ ನೀಲಕಂಠನೆ ೨
ಎನ್ನದಾನದೆಂಬ ಹಮ್ಮವಶದಿ ಸುಮ್ಮನೆ
ಹೊನ್ನು ಹೆಣ್ಣು ಮಣ್ಣು ಮೂರು ತನ್ನದೆಂದು ನಂಬುತ
ಎನ್ನ ಸತಿಗೆ ಸುತರಿಗೆಂದು ಬನ್ನ ಬಟ್ಟು ಸಾಯುತ
ಚುನ್ನವಾಡಿ ಪರರನಿಂದಿಸಿ ತನ್ನತಾನೆ ಸ್ತುತಿಸುತಾ ಇನ್ನು
ಭವದಶರಧಿ ಬೇಗೆಯನ್ನು ಈಸಲಾರೆನೋ ೩
ಬಂದ ಭವದಿ ಸಂಸಾರವೆಂಬ ಸಿಂಧು ತೆರೆಯೊಳು
ಮಂದ ಗಜವು ಕುಣಿಯೋಳ್ ಬಿದ್ದು ಏಳಲಾರದಂದದಿ
ಹಂದಿ ಹುಲಿಯ ಕೈಗೆ ಸಿಕ್ಕು ತಿಂದು ತೇಗಿದಂದದಿ
ಕಂದವನಿತೆಯೆಂಬುದೊಂದು ಮೋಹ ಪಾಶದಿಂದಲಿ
ಇಂದ್ರಜಾಲದೊಳಗೆ ಸಿಲುಕಿಮಂದಗೆಟ್ಟು ನೊಂದೆನೋ ೪

ಮಾರ ಮರ್ದನ ನಿನ್ನಯ ನಾಮ ದುರಿತ ಸಂಹರ
ಮರಣ ಕಾಲದೊಳಗೆ ನಾಮಸ್ಮರಣೆ ಯಾದಗುವಂದದಿ
ತರಣಿ ತಮವ ಕಡಿಸಿ ಧರೆಯ ಬೆಳಗುವಂತೆ ಹೃದಯದಿ
ಪರಮಗೆ ವರವಿದ್ಯೆಯಿತ್ತು ಪೊರೆದು
ಕರುಣದಿಂದಲಿ ನಿರುತಸಲಹೋ
ಇಕ್ಕೆರಿ ಅಘೋರೇಶಲಿಂಗನೆ ೫

೮೫
ಇದ್ದರೆ ಹೀಗೆ ಇರಬೇಕು ಇಲ್ಲದಿದ್ದರೆ ಕಾಯವ ಬಿಡಬೇಕು
ಶುದ್ಧ ಚಿತ್ತವಾಗಿ ಹೃದಯದೊಳಿದ್ದ ವಸ್ತುವನ್ನು ನಿನ್ನ
ಬುದ್ಧಿಯಿಂದ ನೀನೆ ತಿಳಿಯುತ್ತಿದ್ದು ಜೀವನ್ಮುಕ್ತನಾಗಿ ಪ
ಕಲ್ಲು ಮರಳು ಕಾಷ್ಠತರುಗಳಲ್ಲಿ
ಜಲದಿ ಜೀವ ನಿಚಯದಲ್ಲಿ ತೃಣ ಸಮೂಹ
ಗಿರಿಗಳಲ್ಲಿ ಚರಿಸುವ
ಹುಲ್ಲೆ ಕರಡಿ ವ್ಯಾಘ್ರ ಸಿಂಹದಲ್ಲಿ ಪಕ್ಷಿ ನಾನಾಮೃಗ
ಗಳಲ್ಲಿ ವಸ್ತುವೊಬ್ಬನಲ್ಲದಿಲ್ಲವೆಂದು ಭಾವಿಸುತ್ತ ೧
ದ್ರಷ್ಟವಾಗಿ ತೋರ್ಪುದೆಲ್ಲ ನಷ್ಟವಾಗಿ ಪೋಪುದೆಂದು
ದಿಟ್ಟನಾಗಿ ತಿಳಿದುಜÁ್ಞನ ದೃಷ್ಟಿಯಿಂದಲೆ
ದುಷ್ಟಜನರ ಸಂಗವನ್ನು ಬಿಟ್ಟು ಅರಿಗಳರುವರನ್ನು
ಕುಟ್ಟಿ ಕೆಡಹಿ ಆಶಪಾಶವೆಂಬ ಹಗ್ಗವನ್ನು ಹರಿದು ೨
ಗೇರು ಹಣ್ಣಿನ ಬೀಜ ಹೊರಸಾರಿ ಇರ್ದವೊಲು ಸಂ
ಸಾರವೆಂಬ ವಾರಿಧಿಯೊಳು ಕಾಲಗಳೆಯುತ
ನೀರ ಮೇಲಕಿದ್ದ ನಳಿನದಂತೆ ಹೊರಗೆ ಬಿದ್ದು ಬಕನ
ವೈರಿ ಕೋಣೆ ಲಕ್ಷ್ಮೀಪತಿಯ ಚಾರು ಚರಣ ಸ್ಮರಣೆಯಿಂದ ೩

*
ಇನ್ನೇತರೊಳಗಾಸೆ ಎನಗಿಲ್ಲವೋ ಈಗಳಿನ್ನು ಹರಿನಾಮ
ಸಂಕೀರ್ತನೆಯೊಂದು ಹೊರತಾಗಿ ಪ
ನೋಡಿ ಸಾಕಾಯ್ತು ಲೋಕದ ಪ್ರಪಂಚವನು ಪೇ
ಚಾಡಿ ಸಾಕಾಯ್ತು ದರಮಂ ಪೊರೆಯಲು
ಆಡಿ ಸಾಕಾಯ್ತು ಸುಜನರೊಳ ನೃತಗಳನು ಒಡ
ನಾಡಿ ಸಾಕಾಯ್ತು ಕುಜನರ ಸಂಗದೊಳಗೆ ೧

ಉಂಡು ಸಾಕಾಯ್ತು ಸಂಸಾರ ಸುಖ ದುಃಖವನು ನಾ
ಕಂಡು ಸಾಕಾಯ್ತು ಸುಜನರ ಭಂಗವನು
ತಂಡಿ ಸಾಕಾಯ್ತು ಪರಸೇವೆಯನು ಮಾಡಿ ಜನ
ರಂಡಲೆದು ಬೇಡಿ ಸಾಕಾಯ್ತು ಈ ಭವಕೆ ೨
ತಿರು ತಿರುಗಿ ಸಾಕಾಯ್ತು ತಲೆ ಹುಳಿತ ನಾಯಂತೆ
ಪರಿ ಪರಿಯ ದುಃಖಗಳನುಣ್ಣುತ
ಚರಿಸಿದೆನು ಮರುತಸುತ ಕೋಣೆ ಲಕ್ಷ್ಮೀರಮಣ
ಇರಿಸಿದಂತಿರ ಬೇಕು ಸಕಲಜನರು ೩

೮೬
ಇವರಿಂದಲೆಕೆಟ್ಟಿತುಜಗವು
ಇವರರುವರ ಹಿಡಿದು ಬಂಧಿಸಿ ನೀವು ಬೇಗ ಪ
ಬಿಮ್ಮನೆ ಬಿಗಿದು ಕಾಮನ ಕಟ್ಟೆ ಅವನ
ತಮ್ಮನ ಹಿಡಿದು ತಲೆಯ ಕುಟ್ಟಿ
ಸುಮ್ಮನೆ ಲೋಭನ ಕೈ ಕೆಟ್ಟಿ ಗುಮ್ಮಿ
ಜಮ್ಮನೆ ಮೋಹನ ದವಡೆಗೆ ತಟ್ಟಿ ೧
ದಂಡಿಸಿರೈ ಮದವೆಂಬುವನ ತಲೆಯ
ಚಂಡ ಹಾರಿಸಿ ಮತ್ತೆ ತುಡಿಗೆ ಮತ್ಸರನ
ಮಂಡೆ ಮಂಡೆಗೆ ತಟ್ಟಿರಿ ಇವರ
ಬಿಡದೆ ಹೆಂಡಿರು ಮಕ್ಕಳಸೆರೆಯೊಳಗಿಕ್ಕಿ ೨
ಅರಿಗಳನರುವರ ಜಯಿಸಿ ಸದ್ಗುರುವಿನ
ಕರುಣ ಕಟಾಕ್ಷವ ಧರಿಸಿ
ಪರಮಾತ್ಮ ಪರಿಪೂರ್ಣನೆನಿಸಿ
ಹರಿಸೂನು ಕೋಣೆ ಲಕ್ಷ್ಮೀಶನ ಸ್ಮರಿಸಿ ೩

೨೨
ಈ ಪುರುಷರೇ ಮರಳುವುದಾದ ಬಳಿಕಿನ್ನು
ಕಾಪುರುಷರುನರರಿಗೆಮೋಕ್ಷವುಂಟೆ ಪ

ಇಂದು ಭಾಸ್ಕರ ತಾರೆ ಮನು ಮುನಿಗಳು
ಕ್ರಮದಿಂದ ಪಕ್ಷ ಮಾಸಂಗಳು
ಒಂದೆರಡಯನ ಋತುವು ತಿಥಿ, ದಿನ, ವಾರ
ಸಂಧಿ ಕರಣ ಲಗ್ನವಮೃತ ವಿಷಗಳೆಂದು ೧
ಅಷ್ಟ ಮೂರುತಿ ಯೋರ್ವನುಳಿವನಲ್ಲದೆ
ಪರಮೇಷ್ಟಿದೇವರ್ಕಳು
ಮರಳುವರು ಇಷ್ಟರೊಳಗೆ ಮನುಜರಿಗಿನ್ನು ಮೋಕ್ಷದ
ಬಟ್ಟೆ ಗಾಣೆನು ಜಗದೀಶನೊಬ್ಬನೇ ಬಲ್ಲ ೨
ಯುಗ ಯುಗ ಸಹ ಕಲ್ಪ ಮಗುಳೆ ಪ್ರಳಯ
ಕಾಲದೊಗುಮಿಗೆಯಿಂದ
ಜನಿಸುತಿಹವು ಮಗಧನಂತರ ಕೋಣೆ ಲಕ್ಷ್ಮೀರಮಣ ನೆನಿಸುವ ನೋರ್ವ ಸದಾಶಿವ ನುಳಿದಿರ್ದು ೩

೮೭
ಈಗಳೋ ಆಗಳೋ ಇನ್ನಾವಾಗಳೋ ಜೀವನಿದು
ಗೂಡಿನಿಂದ ಸಾಗಿ ಹೋಗುವಂಥ ಕಾಲ ಪ
ಏಳು ಏಳು ಎಂದು ಯಮನ ಆಳು ಬಂದು ಪಾಶವಿಕ್ಕಿ
ಕಲ್ಲು ಮುಳ್ಳು ಮೇಲೆ ಎಳೆದು ಒಯ್ವ ಹೊತ್ತು ೧
ಅಷ್ಟಪುರದ ಕಾವಲವರು ಕಟ್ಟ ಕಡೆಗೆ ತೊಲಗೆ ಬಾಯ
ಬಿಟ್ಟು ಹೊರಗೆ ಜೀವ ಕೆಂಗಟ್ಟು ಹೋಗುವಂಥಕಾಲ ೨
ದಾರಿಯೊಳಗೆ ಪಾಪಿಗಳನು ಘೋರ ಬಡಿಸಿ ದಂಡದಿಂದ
ಬೇರು ಗೊಲೆಯ ಕೊಂದು ಯಮನ ಊರಿ
ಗೊಯ್ವ ಹೊತ್ತುವ್ಯಾಳ್ಯಾ ೩
ಹೆಂಡಿರಿಲ್ಲ ಮಕ್ಕಳಿಲ್ಲ ಬಂಧು ಬಳಗವಿಲ್ಲವಲ್ಲಿ
ಖಂಡವನ್ನು ಕಿತ್ತು ನರಕದ ಗುಂಡಿಗದ್ದಿ ತೆಗೆವ ಕಾಲ ೪
ಬುದ್ದಿವಂತರಾದರೆಚ್ಚರಿದ್ದು ಪಾಪವನ್ನು ಮಾಡ
ವಿದ್ದು ಮರುತಸುತನ ಕೋಣೆ ಲಕ್ಷ್ಮೀಪತಿ ಸ್ಮರಣೆಯಿದ್ದು
ಭವನಗೆಲವ ಹೊತ್ತು ೫

*
ಗುರುದತ್ತ ದಿಗಂಬರ ಸ್ತುತಿ
೧೪೩
ಈಸಲಾರೆ ಗುರುವೆ ಸಂಸಾರಶರಧಿಯ
ಮೋಸದಿಂದ ಬಿದ್ದು ನಾನು ಘಾಸಿಯಾಗಿ ನೊಂದೆ ಗುರುವೆ ಪ
ಗುರುವೆ ಬೇರೆ ಗತಿಯ ಕಾಣೆ ನೀನೆಗತಿ ದಿಗಂಬರೇಶ
ಮರಯ ಹೊಕ್ಕೆನಿಂದು ನಿಮ್ಮ ಚರಣ ಕಮಲವ
ತರುಣ ದಿಂದಲೆನ್ನ ಭವದ ಶರಧಿಯನ್ನು ದಾಟುವಂಥ
ಪರಿಯನೊರೆದು ನಾವೆಯಿಂದ ದಡವ ಸೇರಿಸೋ ೧
ಮಡದಿ ಮಕ್ಕಳೆಂಬುದೊಂದು ನೆಗಳುಖಂಡವನ್ನು ಕಚ್ಚಿ
ಮಡುವಿಗೆಳೆದು ತಿನ್ನು ತಾವೆ ತಡೆಯಲಾರೆನು
ನಡುವೆ ಸೊಸೆಯು ಎಂಬನಾಯಿ ಜಡಿದು ಘೋರ ಸರ್ಪದಂತೆ
ಕಡಿಯೆ ವಿಷಮ ನೆತ್ತಿಗಡರಿ ಮಡಿವಕಾಲ ಬಂದಿತು ೨
ಹಲವು ಜನ್ಮದಲ್ಲಿ ಬಂದು ಹಲವು ಕರ್ಮವನು ಮಾಡಿ
ಹಲವು ಯೋನಿಯಲ್ಲಿ ಹುಟ್ಟಿ ಹಲವು ನರಕವ
ಹಲವು ಪರಿಯ ಲುಂಡು ದಣಿಯ ನೆಲೆಯ ಗಾಣದೆನ್ನಜೀವ
ತೊಳಲಿತಿನ್ನುಗತಿಯ ಕಾಣೆ ಗುರು ಚಿದಂಬರ ೩
ಕಾಲವೆಲ್ಲಸಂದು ತುದಿಯಕಾಲ ಬಂತು ಕಂಡ ಪರಿಯೆ
ಹೇಳಿಕೊಂಡೆ ಗುರುವೆ ಎನ್ನಮೇಲೆ ದಯವನು
ತಾಳಿ ಕಿವಿಗೆ ಊದ್ರ್ವಗತಿಗೆ ಪೋಪಮಂತ್ರವನ್ನು
ತಿಳಿಸಿ ನಿರಾಳ ವಸ್ತುವನ್ನು ತೋರೋವರ ದಿಗಂಬರಾ ೪
ಆಸೆಯೆಂಬ ನಾರಿಯನ್ನು ನಾಶಗೈದು ಗುರುವಿನಡಿಗೆ
ಹಾಸಿತನುವ ದಡದಂತೆ ಬೇಡಿಕೊಂಡೆನು ಈಸ
ಮಸ್ತಲೋಕವನ್ನು ಪೋಷಿಸುವ ಲಕ್ಷ್ಮೀಪತಿಯ
ದಾಸಗಭಯವಿತ್ತು ಕಾಯೋವರ ದಿಗಂಬರ ೫

೨೩
ಎಂದಿಗಾದರು ಭವ ಬಂಧನ ಹರಿಯದು
ನಂದನಕಂದ ಗೋವಿಂದನ ಚರಣಾರವಿಂದದ
ಕರುಣಕಟಾಕ್ಷಗಳಿಲ್ಲದೆ ಪ

ಮಾಟಮರವೆ ಯಂತ್ರ ಮಂತ್ರವು ಪರಸತಿ ನೋಟವು ದಿವಾರಾತ್ರಿ
ದ್ಯೂತವು ಚದುರಂಗ ದಾಟವು ಪಿತೃ ಮಾತೃ ದ್ವೇಷ
ದುರ್ಜನರೊಡನಾಟ ಕಾಲವಕಳೆವ ಕಾಟಕರಿಗೆ ೧

ಹೇಸದೆ ಪರದಾನದಾಸೆಗೆ ಮುನಿದು ವಿಶ್ವಾಸ ದೊಳಗೆಯೆ
ಪಾತಕವ ಮಾಳ್ವರಿಗೆ
ಲೇಸುಂಟೆ ಗುರು ಹಿರಿಯರನು ನಿಂದಿಸಿ ನಿತ್ಯ ಬೇಸರಿಸುವ
ಬಲು ಕಪಟ ಕಲ್ಮಷರಿಗೆ ೨
ಬಡಲಿದು ನಿಶ್ಚಯವಲ್ಲ ನೀರಿನಗುಳ್ಳೆ ಒಡೆದಂತೆ
ತನುವಿದೆಂದರಿತು ಸತ್ಕರ್ಮದಿ ನಡೆದು ಶ್ರೀ ಹರಿಯ
ದ್ಯಾನಿಸುವಗೆ ಮುಕ್ತಿಯನು ಕೊಡುವ
ಭೀಮನಕ್ಷೋಣೆ ಲಕ್ಷ್ಮೀಶ ನುಳಿದರ್ಗೆ ೩

ಶ್ರೀ ಗಣೇಶಸ್ತುತಿ ಹಾಡುಗಳು

ಎಲ್ಲ ದೇವರಿಗೆ ಮಿಗಿಲು ಈತ ಕಾಣಿರೋ ಜನರು
ಬಲ್ಲಡಿವನ ಭಜಿಸಿ ನೆನೆಸಿದೆಲ್ಲ ಪಡೆಯಿರೋ ಪ

ಬುದ್ಧಿಯುತರು ಏಕದಂತನ ಹೊದ್ದಿ ಭಕ್ತಿಭಾವದಿಂದ
ಶುದ್ಧರಾಗಿ ಮಡಿಯನುಟ್ಟು ಹೋದ್ದುವಸನವ
ತಿದ್ದಿ ನಿತ್ಯ ಕರ್ಮಗಳನು ಸಿದ್ಧಿ ಗಣಪನಿಂಗೆ ಜಲದಿ
ರುದ್ರದಿಂದ ಜಳಕಗೈದು ಮಡಿಯ ನಡಿಸಿರೋ ೧

ಅಷ್ಟಗಂಧ ವಿಡಿಸಿ ಪಣಿಗೆ ನಿಷ್ಟೆಯಿಂದಲಕ್ಷತೆಯನು
ಬೊಟ್ಟ ನಿಟ್ಟು ಪತ್ರ ಪುಷ್ಪ ಪೂಜೆಯಿಂದಲಿ
ಅಟ್ಟ ಭಕ್ಷ್ಯ ಭೋಜ್ಯಗಳನು ಇಟ್ಟು ಧೂಪವೆತ್ತಿ
ಹೊಟ್ಟೆ ತುಂಬ ತುಷ್ಟಿಗೈಸಿ ವಿಘ್ನರಾಜಗೆ ೨

ಹೋಳಿಸಿರ್ದ ಹಣ್ಣು ಕಾಯಿಯಿತ್ತು ಸೊಡರವೆತ್ತಿ
ಮೆಲ್ಲನೆದ್ದುನಮಿಸಿ
ಶೋಢಷೋಪಚಾರವನೆಲ್ಲ ತಿದ್ದಿ ಕರವ ಮುಗಿದು
ಬೇಡಿ ಕೊಲು ಮಂಡಲ ಮನೆಯ
ಡೊಳ್ಳಿನ ಗಣಪನವರಿಗೀವ ನಿಷ್ಟ ಸಿದ್ದಿಯ ೩

೨೪
ಎಲ್ಲಿ ಹುಟ್ಟಿದರೇನು ಎಲ್ಲಿ ಮಡಿದರೇನು
ಅಲ್ಲಿಗಲ್ಲಿಗೆ ರಾಮಸ್ಮರಣೆ ಸೊಲ್ಲು ಸೊಲ್ಲಿಗೆ ಬರುತಿರಲು ಪ
ಇಹವು ಎಂಬತ್ತನಾಲ್ಕು ಲಕ್ಷ ಜೀವ ರಾಶಿಯಲ್ಲಿ
ಮರಳಿ ಮರಳಿ ಹುಟ್ಟಿ ಸತ್ತು ಬರುವ ಜನ್ಮದೊಳಗೆ
ಜÁ್ಞನವಿರಲಿ ಕಲ್ಲಿ ಹರಿಯ ಸ್ಮರಣೆ ನಿರುತ ವಿರಲು
ನೀಚ ಜನ್ಮ ದೊರಕಲದುವೆ ಯಾವ ಜನ್ಮದಲ್ಲಿ
ಬಂದರದು ಆನಂದ ೧

ನೊರಜು ಕೀಟ ಸರಿಸೃಪಾದಿ ಕ್ರಿಮಿ ಮೃಗಾದಿ ಪಕ್ಷಿನಿಚಯ
ತರು ಲತಾದಿ ಸಕಲ ಜೀವ ಜಂತು ಜÁ್ಞನ
ವಿರಲಿ ಕಾವ ಜನ್ಮದಲ್ಲಿ ಬಂದರೇನು ಅಳಿದರೇನು
ಹರಿಯ ನಾಮ ಸ್ಮರಣೆ ಜಿಹ್ವೆ
ಕೊನೆಯೊಳಿರಲಿಕದು ಆನಂದ ೨

ಊಚು ನೀಚು ಜನ್ಮವೆಲ್ಲ ಪ್ರಾಚೀನದ ಕರ್ಮ ವಶದಿ
ಕೂಚುಮಾಡಿ ಜನ್ಮಕಿಕ್ಕಿ ಚಾಚಿ ಬರಗುತಿಹಳುಮಾಯೆ ಈಚ –
ರಾಚರಂಗಳೆಲ್ಲ ಬ್ರಾಹ್ಮವೆಂದು ತಿಳಿದವರಿಗೆ
ಕೀಚಕಾರಿ ಕೋಣೆ ಲಕ್ಷ್ಮೀಪತಿಯ ಸ್ಮರಣೆಯೊಂದು ಆನಂದ ೩

೭೯
ಏನ ಮಾಡಲಿ ಎನ್ನ ರೋಗಕೆ ರಾಮ
ಧ್ಯಾನದಮೃತವುಂಡು ಪೋಗ ಬೇಕಲ್ಲದೆ ಪ
ಗೂಡಿನೊಳಗೆ ಜರೆ ಮುತ್ತಿತು ಅದಕೆ ಬಲ
ಗೂಡಿ ರೋಗವು ಮತ್ತೆ ಪುಟ್ಟಿತು ಕಾಡಿನೌಷಧಿಯ
ಕೊಂಡು ತೀರಿತು ನಿತ್ಯ ಮಾಡುವ ಜಪತಪ ನಿಂತಿತು ೧
ಯಾರಾರೇನೆಂದುದೆಲ್ಲವ ಮಾಚಿತು ಅದು
ಸಾರ ನಿಸ್ಸಾರವಾಗಿ ಹೋಯಿತು ಮಾರುದೂರ
ನಡೆಯೆಕಾಲುಬತ್ತಿತು
ಶರೀರದೊಳಗೆ ಕ್ಷೀಣವಾಯಿತು ೨
ವಾಂತಿ ಭ್ರಾಂತಿಗಳೆರಡಾಯಿತು ರೋಗ
ಶಾಂತಿಯಿಲ್ಲದೆ ಚಿಂತೆ ಬಂದಿತು ಮುಖದಕಾಂತಿ
ಕಮಲಕಂಡಿತು ಕಾಲ
ಬಂತೊ ಎಂಬಂತೆ ಮನವಾಯಿತು ೩
ಹಿಂದೆ ಮಾಡಿದ ಪಾಪ ಬಂದಿತು ಈಗ
ಳೊಂದುರುಪಾಗಿ ಎನ್ನ ಕಾಡಿತು ಎಂದು
ಮನದಿಹಂಬಲವಾಯಿತು ಇನ್ನು
ಎಂದನೆಂದರೆ ದನಿ ಕುಂದಿತು ೪
ಕಾಮನಯ್ಯನ ಚಿಂತೆ ಬಂದಿತು ರೋಗ
ನಾಮಸ್ಮರಣೆಯಿಂದ ಹೋಯಿತು ಕ್ಷೇಮ ಕುಶಲಕೆಲ್ಲ
ಭೀಮನ ಕೋಣೆ ಲಕ್ಷ್ಮೀರಮಣನಪ್ಪಣೆಯಿದ್ದಂತಾಯಿತು ೫

೮೮
ಏನ ಮಾಡಿರಿಲ್ಲವೋ ನೀ ಪಡೆಯದ ಮೇಲಿನ್ನೇನ
ಮಾಡಿದರಿಲ್ಲವೋ ಪ
ಆಸೆ ಮಾಡಿದರಿಲ್ಲ ದೇಶ ತಿರುಗಿದರಿಲ್ಲ
ಈಶರೀರವ ದಣಿಸಿ ಘಾಸಿ ಮಾಡಿದರಿಲ್ಲ ೧
ಮೊಟ್ಟೆಯನು ಹೊತ್ತರಿಲ್ಲ ಕಷ್ಟ ಮಾಡಿದರಿಲ್ಲ
ಘಟ್ಟ ಬೆಟ್ಟವ ಹತ್ತಿ ಕುಟ್ಟಿ ಕೊಂಡರು ಇಲ್ಲ ೨
ಟೊಂಕ ಕಟ್ಟಿದರಿಲ್ಲ ಲಂಕೆಗೆ ಹೋದರೂ ಇಲ್ಲ
ಬೆಂಕಿ ಬಿಸಿಲೊಳು ತಿರುಗಿ ಮಂಕು ಮರುಳಾದರಿಲ್ಲ ೩
ಊರನೀ ಬಿಟ್ಟರಿಲ್ಲ ಪರ ಊರಿಗೆ ಹೋದರಿಲ್ಲ
ಆರಿಗ್ಹೇಳಿದರಿಲ್ಲವಾರಸೇರಿದರಿಲ್ಲ ೪
ವಾತಸುತನ ಕೋಣೆ ಲಕ್ಷ್ಮೀಶನು
ಆತ ಕೊಟ್ಟರೆ ಉಂಟು ಆತ ಕೊಡದರಿಲ್ಲ ೫

ಹೊಯ್ಸಳ ಸಾಂತರಸರಾಳಿದ ನಾಡು

೨೫
ಏನಯ್ಯ ಕಲಿ ಹನುಮಯ್ಯ
ರಾಮನ ಪಟ್ಟದಾನೆ ಎಂದವರು ಬಿಡದಾದರೇನಯ್ಯ ಪ
ಎಪ್ಪತ್ತು ಏಳ್ಕೋಟಿ ಕವಿನಾಯಕರಿಗೆಲ್ಲ ಮುಖ ರಾಮಗೆನೀ
ಶಿಖಾಮಣಿಯು ಅಪ್ಪಣೆಯಿಂದ ಲಂಕೆಗೆಹಾರಿ ಧನುಜರ
ಜಪ್ಪಿದಶೂರ ಉದಾರ ವಯ್ಯಾರ ೧
ಬಿಂಕದಿ ವನವ ಮುರಿದು ದೇವಿಯನು ಕಂಡು ಶಂಕೆಯ
ಬಿಡಿಸಿ ಉಂಗುರವಿತ್ತು ಝಂಕಿಸಿ ಅಕ್ಷ ಮುಂತಾದ
ರಾಕ್ಷಸರನ್ನು ಟೊಂಕವ ಮುರಿದ ನಿಶ್ಚಂಕ ಬಿರುದಂಕ್ತ ೨
ಅಂದು ಬ್ರಹ್ಮಾಸ್ತ್ರದೊಳಗೆ ಕಟ್ಟಿ ಸುರ ಜಿತುತಂದು
ತನ್ನಯ್ಯನಿಗೋಪ್ಪಿಸಲು
ಮಂದ ಮತಿಯ ದಶವದನ ಕಪಿಯನೋಡಿರೆಂದ ರಂಜಿಸಿದ
ಭಂಜಕ ಅಂಜನ ಪುತ್ರ ೩
ಸುತ್ತಿ ಬಾಲಕೆ ತೈಲ ದುರುವೆಯ ಧನುಜರು ಹೊತ್ತಿಸಿ
ಉರಿಯನೋಡುತಿರಲು ಮತ್ತೆ ನೀ ಪುರವ ಸುಟ್ಟುರುಹಿ
ಮರಳಿಬಂದು ಇತ್ತೆರಾಮಗೆ ಚೂಡಾಮಣಿಯ ನೀಧೀರ ೪
ಅಂದಿನಮಾತು ಹಾಗಿರಲಿ ಈಗಳು ಹೊಸಗÀುಂದದ
ಸೀಮೆಯ ಬ್ರಾಹ್ಮಣ್ಯವು ಬಂದು ಸರ್ವಾಂಗವೆಲ್ಲವ
ಹಗ್ಗದಿ ಕಟ್ಟಿ ನಂದಿತಳೆಯಲಿ ನಿಂದಿರಿಸಿ ಪೂಜಿಸುವರೋ ೫

೮೯
ಏನಾದರೇನಲ್ಲಿ ಇರಕೂಡದು ಹೋಗಿ
ಆನಂದ ಕಾನನದೊಳಿರೆ ಸುಖವದು ಪ
ನರಮನುಜರೊಳಗಿಲ್ಲಿ ಜನಿಸಿಭೂತಳಕೆಲ್ಲ
ದೊರೆಯೆನಿಸಿ ಭೋಗ ಪಡಿಸುವುದರಿಂದಲು
ನೊರಜಾಗಿ ಜನಿಸಿ ಕಾಶಿಯೊಳು ಮಣಿ ಕರ್ಣಿಕೆಯ
ಸರಸಿಯೊಳು ಚರಿಸಿ ಮಡಿದರೆ ಮುಕ್ತಿಯಹುದು ೧
ಕೊಕ್ಕದಲಿ ವನಿತೆ ಮನೆಮಕ್ಕಳಲಿ ಪಶುಗಳಲಿ
ಹೆಕ್ಕಳದೊಳಿಲ್ಲಿ ಸಾವುದರಿಂದಲು
ಹೊಕ್ಕು ಮನೆ ಮನೆ ಬಿಡದೆ ಕಾಶಿಯಲಿ ತಿರಿದುಂಡು
ಡೊಕ್ಕೆಯನು ಬಿಡೆ ಮೋಕ್ಷ ಪದವಿಯಹುದು ೨
ಹರಿ ಸುತನ ಕೋಣೆ ಲಕ್ಷ್ಮೀಪತಿಯ ಪಾದ
ಸರಸಿರುಹದಲಿ ಜನಿಸಿರ್ದ ಜಾಹ್ನವಿಯಲಿ
ನರ ಮುಳುಗಿ ಕಾಶಿ ವಿಶ್ವೇಶ್ವರನ ಸನ್ನಿಧಿಯೊಳೊರಗಿದರೆ
ಮರಳೆ ಜನ್ಮಕೆ ಬಾರೆನೋ ೩

೯೦
ಏನಿದು ಬರಿ ಮಾಯೆ ತೋರ್ಪುದಿದೆಲ್ಲವು ಪುಸಿಮಾಯೆ
ಮಾನಿನಿ ಮನೆಮನೆ ವಾರ್ತೆ ಮಕ್ಕಳು
ತಾನಿದು ಕನಸಿನ ಬಾಳ್ವೆ ನಿದಾನ ಪ
ಕೇರೆಯ ನುಂಗಿ ಓತಿ ಕೊಸರುತಿರಲು ತೆರೆಯಿತೆನಗೆ ಕಣ್ಣು
ವಾರೆ ಮಾಡಿದರದು ತಿಳಿವುದೋ ಉಳಿವುದೋ
ತೆರೆಯಕ್ಷುಧೆಗೇನು ಕಾಣೆನುಗತಿಯ ೧
ಯಾವಾವ ತನು ವಿಡಿದು ಬರುವುದೋ ಆವಾವ ಠಾವಿನಲಿ
ಜೀವ ಜೀವವ ತಿಂದು ಜೀವಿಸಿಕೊಂಡು
ಸಾಯುತ ಜನಿಸುತಲಿರುವುದು ಪ್ರಾಣಿ ೨
ತಿಳಿಯಲೊಂದಕೆ ಒಂದು ತಿನಿಸಿಗೆ ಬೆಲೆ ಮಾಡಿದವ ಬೇರೆ
ಬಳಗು ಹೊರಗು ತಾನೆ ಬೆಳಗುತಲಿರುವನು
ಚಲನ ಭವನ ಕೋಣೆ ಲಕ್ಷ್ಮೀರಮಣ ೩

ಕಳದಿ ರಾಮೇಶ್ವರನನ್ನು

೨೬
ಏನಿರೇ ನಿಮ್ಮ ಮಾತುಗಳೆಲ್ಲ ತಾನಿದು
ಪುಸಿಬಲು ಆಶ್ಚರ್ಯವೆಲ್ಲ ಪ
ದಿಟ್ಟೇರು ನಿಮಗೇನು ಮಾನಗಳಿಲ್ಲ ಶ್ರೀ ಕೃಷ್ಣನು
ಬಲ್ಲದ ಗಂಡುತಾನಲ್ಲ
ಬಟ್ಟ ಬಯಲ ನುಡಿಯಿದು ದಿಟವಲ್ಲ ಭ್ರಷ್ಟರಾಗಲು
ಬೇಡಿ ಗೋಕುಲಕೆಲ್ಲ ೧
ಅಷ್ಟ ವರುಷವಿನ್ನು ತುಂಬಿದುದಿಲ್ಲ
ಇಷ್ಟರೊಳಗೆ ಹೆಣ್ಣು ಮಮತೆಗಳಿಲ್ಲ
ಸೃಷ್ಟಿಗೆ ಬಲು ಚೋದ್ಯವಾಗಿದೆಯಲ್ಲ
ದೃಷ್ಟಿಗೆ ನಮಗೇನು ದಿಟ ಕಾಣೊದಿಲ್ಲ ೨
ಅಂಗಳ ಇಳಿವುದು ಕಾಣುವುದಿಲ್ಲ ಶ್ರೀ ರಂಗನು
ಬಲರಾಮಗೋವಳರಲ್ಲಿ
ಹಿಂಗದೆ ಮನೆಯೊಳಗಾಡುವರೆಲ್ಲ
ಮಂಗಳಮಹಿಮ ಲಕ್ಷ್ಮೀಶನೇಬಲ್ಲ ೩

೯೧
ಏನು ಇದ್ದರೇನು ನಿನ್ನ ಸಂಗದ ಸಂಗಡ ಬಾರದೇನು
ದಾನ ಧರ್ಮವ ಮಾಡಿದ್ದೊಂದು ಬೆನ್ನಬಿಡದದೇನು ಪ
ಆಳು ಕಾಳು ಮಂದಿ ಮನುಷರು ಬಹಳವಿದ್ದರೇನು
ಮಾಳಿಗೆ ಕೈಸಾಲೆ ಚಂದ್ರಶಾಲೆಯಿದ್ದರೇನು
ನೀಲ ಮುತ್ತು ಕೆಂಪಿನುಂಗುರ ಕೈಯಲಿದ್ದರೇನು
ಕಾಲನವರು ಎಳೆಯುತಿರಲು ನಾಲಗೆಗೆ ಬಾರದೇನು ೧
ನೆಟ್ಟ ಹತ್ತಿಲು ತೋಟ ತೆಂಗು ಎಷ್ಟುತಾನಿದ್ದರೇನು
ಹಟ್ಟಿಯೊಳಗೆ ಹಸುವು ಮಹಿಷಿ ಸಾವಿರವಿದ್ದರೇನು
ಪಟ್ಟೆ ಶಾಲು ಚಿನ್ನದ ಕುಳದ ಘಟ್ಟಿಯಿದ್ದರೇನು
ಕಟ್ಟಿಯಿಟ್ಟ ಗಂಟುನಿನ್ನ ಸಂಗಡ ಬಾರದೇನು ೨
ಲಕ್ಷವಿತ್ತ ಜಯಿಸಿ ರಾಜ್ಯ ಪಟ್ಟವಾದರೇನು
ಕಟ್ಟಿದಾನೆ ಮಂದಿ ಕುದುರೆ ಹತ್ತಿರಿದ್ದರೇನು
ನೆಟ್ಟನೆ ಜೀವಾತ್ಮ ಗೂಡ ಬಿಟ್ಟು ಪೋಗದೇನು
ಕುಟ್ಟಿ ಕೊಂಡಳುವುದರೆ ಮಂದಿ ಎಷ್ಟು ಇದ್ದರೇನು ೩
ಮಕ್ಕಳು ಮೊಮ್ಮಕ್ಕಳು ಹೆಮ್ಮಕ್ಕಳಿದ್ದರೇನು
ಚಿಕ್ಕ ಪ್ರಾಯದ ಸತಿಯು ಸೊಸೆದಿಕ್ಕಳಿದ್ದರೇನು
ಲೆಕ್ಕವಿಲ್ಲದ ದ್ರವ್ಯ ನಿನಗೆ ಸಿಕ್ಕುಯಿದ್ದರೇನು
ಡೊಕ್ಕೆ ಬೀಳೆ ಹೆಣವ ಬೆಂಕಿಗಿಕ್ಕಿ ಬರುವರೋ ೪
ಹೀಗೆ ಎಂದು ನೀನು ನಿನ್ನ ತಿಳಿದು ಕೊಳ್ಳಬೇಕೋ
ಆಗೋದ್ಹೋಗೋದೆಲ್ಲ ಈಶ್ವರಾಜÉ್ಞ ಎನ್ನ ಬೇಕೋ
ಮಾಗಧ ವೈರಿ ಕೋಣೆ ಲಕ್ಷ್ಮೀರಮಣನ ಭಜಿಸಬೇಕೋ
ಯೋಗ ಮಾರ್ಗದಿಂದ ನೀನು ಮುಕ್ತಿ ಪಡೆಯ ಬೇಕೋ ೫


ಏನು ಕಡಿಮೆ ನಿನಗೆ ಗಣಪತಿ ಎ್ಞÁನವ ಕೊಡು ಎನಗೆ ಪ

ಕಾಲಲಂದಿಗೆ ಮೆರೆವ ಕಿರುಗೆಜ್ಜೆ ಮೇಲೆ ಸರಪಣಿ ರವವ
ನೀಲ ಮೇಘದ ಕಾಂತಿ ಬಾಲಕೇಳಿ ವಿಲಾಸ
ನೀಲ ಕಂಠನ ಸುತ ಸ್ಥೂಲಶರೀರಿ ೧

ಹೊನ್ನಾ ಭರಣ ಶೃಂಗಾರ ಕಟಿಗೆ ಚಿನ್ನದ ಉಡುದಾರ |
ಚೆನ್ನಾಗಿ ಸುತ್ತಿದ ಪನ್ನಗಭೂಷಣ
ಹೊನ್ನ ಕಡಗ ಕೈಯ ಬೆರಳ ಉಂಗುರವು ೨

ಕುತ್ತಿಗೆಯೊಳಗಿರುವ ದುಂಡು ಮುತ್ತಿನ ಗುಂಡಿನ ಸರವು
ಹಸ್ತ ಚತುರ್ಭುಜದೊತ್ತಿನೊಳಗೆ ದಿವ್ಯಾಸ್ತ್ರರಂಜಿಸೆ
ಹೊತ್ತು ನಡೆವ ಮೂಷಿಕವು ೩

ಕುಂದಣದಿಂದ ಕೆತ್ತಿಸಿದ ಕಿರೀಟವು
ಚಂದದ ಮಂದಲೆ ಬೊಟ್ಟು
ಹೊಂದಿಕೆಯಿಂದ ಕಿವಿಯಲಿಟ್ಟ ಕುಂಡಲ
ಗಂಧ ಚಂದನ ಸರ್ವಾಂಗ ಲೇಪಿತನ ೪

ಪರಿಪರಿ ಭಕ್ಷ್ಯ ಭೋಜ್ಯಗಳು ನಾನಾ ಪರಿ
ಪರಿ ಷಡ್ರಸಾನ್ನಗಳು
ಕರಿವದನ ನಿನಗರ್ಪಿಸುವ ಸೊಪ್ಪಿನ ಸುಬ್ಬಗೊಲಿದ
ನೀಧೀರ ಉದಾರ ೫

೯೨
ಏನು ಮರುಳಾಗುವೆಯೇ ಎಲೆಮಾನವ
ನಿನ್ನ ಮಾನಿನಿಯ ಗುಣಕೆ ನೀ ಹಿಗ್ಗಿ ಹಿಗ್ಗಿ ಪ
ದಾನ ಧರ್ಮಗಳ ಕೊಡಬೇಕೆಂದರೊಡ ಬಡಲು
ಹೀನ ಗುಣಗಳನೆ ತಾ ಸೇವಿಸುವಳು
ಜÁ್ಞನ ಮೋಕ್ಷಾದಿಗಳ ಹಾದಿಯನುಕಟ್ಟಿ ಭವ
ಕಾನನವನೆ ಹೊಗಿಸಿ ತೊಳಲಿಸುವಳು ೧
ನರಕವನು ತನ್ನಲ್ಲಿ ನೆಲೆಮಾಡಿ ಕೊಂಡಿಹಳು
ಪರಿಪರಿಯ ಮೋಹಗಳ ಬೀಸುತಿಹಳು
ಸ್ಮರನ ಬಾಣವ ಮಾಡಿ ಸಾಲು ಗೊಲೆಕೊಲ್ಲುವಳು
ಅರಿಯದವರಂತೆ ಮಿಣ್ಣಗೆ ಇರುವಳು ೨
ತನ್ನಮನ ಬಂದಂತೆ ಚರಿಸುವಳು ಪಗಲಿರುಳು
ಕನ್ನಗೊಯ್ಕರ ವೋಲು ಕೊರೆಯುತಿಹಳು
ಭಿನ್ನಭಾವದಿ ನಡೆದು ಮನೆಯ ಪಾಲ್ಮಾಡುವಳು
ಕಣ್ಣಿನೊಳು ಕಂಡೊಡವೆಗಳನಿರಿಸಳು ೩
ಮಾಯೆ ತಾನೇ ಸುದತಿ ಯಾಕಾರೆ ಯಾಗಿಹಳು
ನೋಯೆ ನುಡಿವಳು ಕಂಡ ಕಂಡವರೊಳು
ಹೋಯೆಂದು ಕೂಗುವಳು ಶಿಕ್ಷಿಸಳು ನಿನ್ನನುರೆ
ಬಾಯೊಳಗೆ ಭಯಬಿಡಿಸಿ ಹಾಗಿಸುವಳು ೪
ಕಾಮ ಕ್ರೋಧಾದಿಗಳ ಕೀಲ ಬಲಗೊಳಿಸುವಳು
ಪ್ರೇಮ ಗೆಡಿಸುವಳೆಲ್ಲ ಬಾಂಧವರನು
ಭೂಮಿಯೋಳಗಧಿಕ ಭೀಮನ ಕೋಣೆ
ಲಕ್ಷ್ಮೀಪತಿಯ ನೆನೆನೆನೆದು ಸಖಿಯಾಗು ಕಂಡ್ಯಾ ೫

೨೭
ಏನೇ ಗೋಪಮ್ಮ ಕೇಳೆ ನಮ್ಮಮ್ಮ ಬಾಲ
ಕೃಷ್ಣನ ಬಾಧೆ
ತಾಳಲಾರೆವು ನಾವು ನಾಳೆ ಗೋಕುಲದಿಂದ
ಪೋಗುವೆವಮ್ಮ ಪ
ಉದಯವಾಗದ ಮುನ್ನ ಬರುವ ಕಣಮ್ಮ
ಕದವ ಬಾರಿಸಿ ಒಳಪೊಕ್ಕ ಕಣಮ್ಮ
ಮೊದಲೆನ್ನ ಮಗಳ ತಕ್ಕೈಸಿದನಮ್ಮ
ಸದರದಲಿ ಮೊಸರನೆಲ್ಲ ಕುಡಿದ ಕಣಮ್ಮ ೧
ಉಟ್ಟ ಸೀರೆಯ ಬೆಲೆ ಏನೆಂದಮ್ಮ
ಪಟ್ಟೆ ಕುಪ್ಪಸಕೇನು ಪಣವೆಂದನಮ್ಮ
ಮುಟ್ಟಿ ಬರಲು ಬಿಗಿದಪ್ಪಿದನಮ್ಮ
ತೊಟ್ಟು ಕೊಂಡೆನ್ನನು ಬಿಡದೆ ಕಾಣಮ್ಮ ೨
ನಸುಗಪ್ಪಿನೊಳು ಸಜ್ಜೆಮನೆಯೊಳಗಮ್ಮ
ಮೊಸರು ಪಾಲ್ಬೆಣ್ಣೆಯ ಮೆದ್ದ ಕಾಣಮ್ಮ
ಸೊಸೆಯು ಪಿಡಿಯೆ ಬಿಗಿದಪ್ಪಿದನಮ್ಮ
ನಸು ಬೆವರಿಡೆ ತನು ಬಿಡದೆ ಕಾಣಮ್ಮ ೩
ಜಾರ ಜೋರರ ಶಿಖಾಮಣಿಯಿವನಮ್ಮ
ಕಾರ ಕತ್ತಲೆಯೊಳು ಸುಳಿದ ಕಾಣಮ್ಮ
ಯಾರೆಂದು ಹೊರಗೊಬ್ಬ ಕರೆಯೆ ಗೋಪಮ್ಮ
ಚೋರ ಗಂಡಿಯ ಪೊಕ್ಕು ಓಡಿದನಮ್ಮ ೪

ಊಚು ನೀಚುಗಳೇನು ಇವಗಿಲ್ಲವಮ್ಮ
ನಾಚಿಕೆನಮಗಾಗುತಿದೆ ಹೇಳಲಮ್ಮ
ಕೀಚಕರಿಪು ಕೋಣೆ ಲಕ್ಷ್ಮೀಶಗಮ್ಮ
ವಾಚಿಸೆ ನೀನೊಂದ ಮಾತ ನಮ್ಮಮ್ಮ ೫

೯೪
ಏನೇನಿಲ್ಲದ ಧನಹೀನನಿಗೆ ಹರಿ ನಾಮವೆ ಭಾಗ್ಯಕರ
ನೀನಿದನರಿತು ಜಪಿಸುಬಿಡದನುದಿನ
ಸಾಧಿಸು ಮುಕ್ತೀಕರ ಪ
ಹಿಂದಣ ಜನ್ಮ ದೊಳಗೆ ದಾನದರ್ಮಗಳ
ನೊಂದನು ಮಾಡದಿರೆ
ಇಂದಿನ ಜನ್ಮದೊಳಗೆ ದಾರಿದ್ರ್ಯವು ಬಂದು ಪೀಡಿಸುತಲಿದೆ
ಮುಂದೆ ಸಾಧಿಸಿ ಕೊಂಬೆನೆಂದರೆ ಕೈಯೊಳೊಂದರೆ ಕಾಸಿಲ್ಲವು
ನೊಂದೆನುಭವ ಸಿಂಧುವಿನೊಳು ಮುಳುಗಿ ಮುಕುಂದ
ಪಾಲಿಸೋ ಹರಿಯೇ ೧
ದಟ್ಟ ದಾರಿದ್ರ್ಯದೊಳಗೆ ಹುಟ್ಟಿದೆನೆಂದು
ಕುಟ್ಟಿ ಕೊಂದರೆ ಪಣೆಯ
ಕೊಟ್ಟು ನಡೆಸಿ ಕೊಂಬುವರಿಲ್ಲ ಮರುಳೆ
ನಿನ್ನಿಷ್ಟವಮನ ದಣಿಯ
ದಿಟ್ಟಿಸಿ ನೋಡಲು ಪೂರ್ವದೊಳಗೆ
ಪಡೆದಷ್ಟು ಉಣ್ಣಬೇಕಲ್ಲದೆ
ಹುಟ್ಟಿದನಿತನುಂಡು ಇನ್ನಾದರು ಮನ ಮುಟ್ಟಿ
ಪೂಜಿಸೋ ಹರಿಯೆ ೨
ಸಾಕಾಯಿತು ಸಂಸಾರದೊಳಗೆ ಕ್ಷಣ
ಮಾತ್ರವು ಸುಖವಿಲ್ಲ
ಸಾಕು ನೀ ಪಡೆದುದನುಂಡು ಸುಖಿಸಿ
ಜಗದೇಕ ವಂದ್ಯನ ನೆನೆಸು
ಲೋಕದೊಳಧಿಕ ಭೀಮನ ಕೋಣೆ
ಶ್ರೀ ಲಕ್ಷ್ಮೀಶನ ಭಜಿಸಿದರೆ
ಬೇಕಾದನಿತುವನಿತ್ತು ಕಡೆಗೆ ತನ್ನ ಲೋಕವ ಪಾಲಿಪನು ೩

೯೩
ಏನೇನು ಬುದ್ಧಿ ನಿನಗಿಲ್ಲವೋ ಮೃತ್ಯುವಧೀನನಾಗಿ
ಕೆಡದಿರು ಮೂಢ ಮನುಜ ಪ
ನಿನ್ನೊಳಗೆ ನೀ ತಿಳಿದು ನೋಡಿದರೆ ಮಾಯೆ
ಚೈತನ್ಯ ಸಾಲದು ಕಾಯಕಂ ಮುಸುಕಲು
ಪನ್ನಗಾರಿ ಧ್ವಜನ ನಾಮಬ ಸಂಕೀರ್ತನೆಯ
ಚೆನ್ನಾಗಿ ಮಾಡುಲದುಸಾಫಲ್ಯವು ೧
ನಾನು ನಾನೆಂದೆಂಬ ಹಮ್ಮಿನಲಿ ಮನ ಮುಳುಗಿ ಶ್ವಾನ
ಸೂಕರನಂತೆ ಸಂಚರಿಸುತ
ಸ್ನಾನ ಸಂಧ್ಯಾವಂದನಾದಿ ಹರಿಯರ್ಚನೆಗಳೇನು
ಇಲ್ಲದೆ ಕಾಲವನು ಕಳೆವರ ೨
ಅಂತಕನ ದೂತರಿಗೆ ಕೈಸಿಕ್ಕದಿರು ಮರುಳು ಭ್ರಾಂತೆ
ಸದ್ಗುರುಗಳ ಕಟಾಕ್ಷದಿಂದ
ಅಂತರಂಗದೊಳು ಭೀಮನ ಕೋಣೆ ಶ್ರೀ ಲಕ್ಷ್ಮೀಕಾಂತನನು
ಭಜಿಸಲಪ್ಪುದು ಮೋಕ್ಷಪದವಿ ೩

೨೮
ಏಳಯ್ಯ ಶ್ರೀ ಲಕ್ಷ್ಮೀರಮಣ ಸುರನÀುತ ಚರಣ
ಏಳು ಶ್ರೀ ನೀಲಕಂಠನ ಮಿತ್ರ ಸುಚರಿತ್ರ
ಏಳು ಶ್ರೀ ಭಾಗೀರಥೀ ಪಿತನೆ ಮತಿಯುತನೆ
ಏಳು ಶ್ರೀ ಕೃಷ್ಣರಾಯ ಸ್ವಾಮಿ ಏಳಯ್ಯ ಬೆಳಗಾಯಿತು ಪ

ತಂಪಿಡಿದು ತಂಗಾಳಿ ತೀಡುತಿದೆ ಮೂಡಲು
ನಸುಗೆಂಪಾಗಿ ತಾರಕಿಗಳಡುಗುತಿದೆ
ತಂಪಡರುತಿದೆ ಮಲ್ಲಿಕಾ ಜಾಜಿ ಕತ್ತಲೆಯ
ಬೊಂಪು ಹರಿದೋಡುತಿದೆಕೋ
ಸೊಂಪಡಗುತಿದೆ ಕುಮುದ ಕಮಲವರಳುತಿದೆ ನಾಗ
ಸಂಪಿಗೆಯ ಬನದಿ ಸ್ವರ ಗೈಯುತಿದೆ ಮರಿದುಂಬಿ
ಸಂಪತ್ತು ಬಡವಗೆ ಬರುವಂತೆ ರವಿ ಬಿಂಬ
ಸೊಂಪಿ ನಿಂದೆಸೆಯುತಿದೆಕೋ ||ಸ್ವಾಮಿ|| ೧

ಹಲವುಮೃಗ ಜಾತಿಗಳು ಹಳುವನಡ ಹಾಯುತಿವೆ
ಫಲ ಪುಷ್ಪಚಯವು ಪಲ್ಲವಿಸಿ ಪಸರಿಸುತಲಿವೆ
ಬಿಲಗಳ ಸಾರುತಿವೆ ಗೃಹದಿ ಮೂಷಿಕವನದಿ
ಕೋಗಿಲೆಯು ಧ್ವನಿ ಗೈಯುತಿದೆ ಕೋ
ಗಿಳಿ ವಿಂಡು ನಲಿಯುತಿದೆ ನವಿಲು ಜೇಂಕರಿಸುತಿವೆ
ಹೊಲ ಮನೆಗಳೆಲ್ಲ ಹಸನಾಗಿ ಕಾಣಿಸುತಲಿವೆ
ಸುಳಿಗಾಳಿ ಸುಳಿಯುತಿದೆ ಜಲಜಾಕ್ಷನುಪ್ಪವಡಿಸಾ ||ಸ್ವಾಮಿ|| ೨

ಹಕ್ಕಿಗಳು ಹಾರುತಿದೆ ಕುಕ್ಕುಟವು ಕೂಗುತಿದೆ
ನಕ್ಷತ್ರ ಪತಿಯ ಪ್ರಭೆ ಮಾಸುತಿದೆ ಸುರಭಿ ಬಲು
ಅಕ್ಕರದಿ ಹೂಂಕರಿಸುತಿವೆ ತನ್ನ ಪಸುಳೆಯನು
ರಕ್ಕಸಾಂತರನೆವಳು
ಲೆಕ್ಕವಿಲ್ಲದ ಕಾಗೆ ದಿಕ್ಕುದಿಕ್ಕಿಗೆ ಊರಹೊಕ್ಕು
ಮನೆಮನೆ ಬಿಡದೆ
ಸಾರುತಿವೆ ಸಣ್ಣ ಹಸು ಮಕ್ಕಳೆದ್ದು
ಅಮ್ಮಿಯನು ಹುಡುಕುತಿವೆ
ಚೊಕ್ಕ ಬೆಳಗಾಯಿತಿದೆ ಕೋ ||ಕೃಷ್ಣ || ೩

ಪತಿವ್ರತೆಯರೆದ್ದು ಪುರುಷನ ಚರಣಕ್ಕೆರಗಿ ಚಮ
ತ್ರ‍ಕತಿಯಿಂದ ಮುಖ ಮಜ್ಜನವಮಾಡಿ ಪಣೆಗಿಟ್ಟು
ಹಿತವಾದ ವಸ್ತ್ರಾಭರಣಗಳಲಂಕರಿಸಿ ದಧಿ
ಮಥಕನುವಾಗಿ ಕುಳಿತು
ಅತಿಶಯ ದೊಳಗೆಲ್ಲ ಮನೆವಾರ್ತೆಯನು ಮುಗಿಸಿ ನಿಜ
ಮತ ವಿಡದು ಭಕ್ತಿಯಲಿ ಗಿಂಡಿಲುದಕವ ತುಂಬಿ
ಪತಿಯ ಬರವನು ಹಾರುತಿರುತಿಪ್ಪಸಮಯ ಶ್ರೀಪತಿಯೆ
ನೀನು ಉಪ್ಪವಡಿಸ ೪
ಮದ್ದು ಮಂತ್ರವು ಸಿದ್ದಿಸುವ ಕಳವಿನೊಳಗಿರ್ದ ಚೋರರಿ
ಗೆದೆಯ ಧೈರ್ಯಗುಂದುವ ಸಮಯ
ಉದ್ಯೋಗವಂತರಿಗೆ ಎಚ್ಚರಿಕೆ ಸಮಯ ದರಿದ್ರರಿಗೆ
ನಿದ್ದೆ ಸಮಯ ಬುದ್ದಿಯುತರಾದ ಬುಧಬಾಲರಿಗರ್ಥಗ್ರಂಥ
ದ್ಯಾನ ಶಾಸ್ತ್ರ ಪುರಾಣಗಳ ಬಹುವಿದ್ಯೆ ಪಠಿಸುವ
ಪಠಿಸುವ ಸಮಯವೀಗ ನೀನೇಳಯ್ಯ
ಮುದ್ದು ಗೋಪಾಲಕೃಷ್ಣ ೫
ವ್ಯಾಸ ವಾಲ್ಮೀಕಿ ಶುಕನಾರದನು ಶೌನಕ ಪರಾಶರ
ವಶಿಷ್ಟ ವೈಶಂಪಾಯ ಕಣ್ವ ವಿಶ್ವಾಮಿತ್ರ ಗೌತಮ ಭರದ್ವಾಜ
ಸನಕ ದೂರ್ವಾಸ ಕೌಶಿಕ ಕಪಿಲರು
ಕೌಶ್ಯಪ ದಧೀಚಿ ಭಾರ್ಗವರಗಸ್ತ್ಯ ಋಷಿ
ಋಷುಶೃಂಗ ಅತ್ರಿ ಜಮದಗ್ನಿಯು ವಿಭಾಂಡಕರು
ಈ ಸಮಸ್ತಾದಿ
ಋಷಿಗಳು ನೆರೆದು ನಿಮ್ಮ ಹಾರೈಸುತಿದಾರೆ
ಹರಿಯೇ || ಸ್ವಾಮಿ || ೬
ಜಾಂಬವ ವಿಭೀಷಣಾಶ್ವತ್ಥಾಮ ಹನುಮಂತ
ಅಂಬರೀಶಾಕ್ರೂರ ಅಜಾಮೀಳ ದ್ರುವಾದಿಗಳು
ಜಂಭಾರಿಸುತ ಧನಂಜಯ ಬಲಿಷ್ಠಹಲಾದರೆಂಬಸದ್ಭಕ್ತರುಗಳು
ಅಂಬುಜೋದ್ಭವ ಮುಖ್ಯರಮರ ಗಂಧರ್ವಾದಿ
ತುಂಬುರ ಭುಜಂಗ ಭೂಸುರರೆಲ್ಲರೊಂದಾಗಿ
ಅಂಬುಜ ಸಹಾಯಗಘ್ರ್ಯವನಿತ್ತು ನಿಮ್ಮ ಚರಣಾಂಬುಜವನೆ
ಬಿಡದ ಹಂಬಲಿಸುತೈದಾರೆ ಹರಿಯೆ || ಸ್ವಾಮಿ || ೭
ಗಂಗೆ ಗೋದಾವರಿಯ ಭೀಮರತಿವರದೆ ವರ
ತುಂಗ ಭದ್ರೆಯು ಯಮುನೆ ಕಾವೇರಿ ಸಿಂಧು
ನದಿ ಕುಮುದಾವತಿ ಹರಿದ್ವತಿ ಕಪಿನಿ ಮೊದಲಾದ
ಅಂಗನೆಯರೆಲ್ಲರೂ ಕೂಡಿ
ರಂಗು ಮಾಣಿಕದ ಆಭರಣಗಳಲಂಕರಿಸಿ
ಹಿಂಗದೆಲ್ಲರು ನೆರೆದು ಹರಿ ನಿಮ್ಮ ಬಾಗಿಲೋಳು
ಪೋಂಗಳಸದಲಿ ನೀರ ಪಿಡಿದು ನಿಂತೈದಾರೆ
ಮಂಗಳಭಿಷೇಕಕೆಂದು ಸ್ವಾಮಿ ೮
ಕರಿಯ ರಕ್ಷಿಸಿದಂಥ ಕರುಣಸಾಗರ ಏಳು
ಖರದೂಷಣರ ತರಿದ ಕಪಟನಾಟಕನೆ ಏಳು
ಕರುಗಳನು ಕಾಯ್ದ ಕಾರುಣ್ಯ ಮೂರುತಿ ಏಳು
ವರ ಪಾಂಡುರಂಗ ವಿಠಲ
ಹರಿಸುತನ ಹಯವರೂಥವ ಹರಿಸಿದವನೆ ಏಳು
ಹರಿಸುತನ ಸುತನ ಸುತನ ಕಾಯ್ದವನೆ ಏಳು
ಹರಿಸುತನ ಕೋಣೆ ಲಕ್ಷ್ಮೀರಮಣನೆ ಏಳು ಶ್ರೀ ಹರಿಯೆ
ನೀನು ಉಪ್ಪವಡಿಸಾ ||ಕೃಷ್ಣ || ೯

೯೫
ಒಂದು ಕೊಟ್ಟರೆ ಶಿವ ಮತ್ತೊಂದು ಕೊಡನಯ್ಯ
ಆನಂದ ವಸ್ತುವಿಗೊಂದು ಲೀಲೆ ಇದಯ್ಯ ಪ
ರೊಕ್ಕವಿದ್ದವರಿಗೆ ಮಕ್ಕಳೆಂಬವರಿಲ್ಲ
ಮಕ್ಕಳಿದ್ದರೆ ತಕ್ಕವನಿತೆಯಿಲ್ಲ
ಚೊಕ್ಕಸತಿಯು ಸಿಕ್ಕಿತಾನುರೂಪದೊಳಿರೆ
ಪಕ್ಕನೆ ಅಗಲಿ ಪೋಗುವರಯ್ಯ ೧
ಚೆಲುವ ಹೆಣ್ಣೆಗೆ ತಕ್ಕ ಚೆಲುವ ಪುರುಷನಿಲ್ಲ
ಚೆಲುವ ನಾದವ ಗೊಳ್ಳೆಲಲನೆಯಿಲ್ಲ
ಹಲವು ಜನ್ಮದ ಪುಣ್ಯ ಫಲದಿಂದ ಸೇರಲು
ಹೊಳೆದು ಹೋಗುವರಿದರೊಳಗೊಬ್ಬರಯ್ಯ ೨
ಸತಿ ಸುತರು ಇರುತಿರಲು ದಾರಿದ್ರ ತಿಂಬುವುದಕಿಲ್ಲ
ಗತಿಯಿಲ್ಲದವನಿಗೆ ನರಕವಿಲ್ಲ
ಅತಿಶಯವಾಗಿ ತಿಂಬುದಕ್ಕಿದ್ದ ನರರಿಗೆ
ಸತತ ಶಾರೀರ ಸುಖವಿಲ್ಲವಯ್ಯ ೩
ಉಂಬಲೂಡಲು ಸರ್ವಸಕಲ ಸಂಪತ್ತೆಲ್ಲ
ತುಂಬಿರಲು ತನ್ನ ಗೃಹದೊಳೆಲ್ಲ
ಬೆಂಬಿಡದೆ ರೋಗವು ಪುಟ್ಟಿತನುವಿನೊಳ್
ತಿಂಬುದಕವಗೆ ಬಾಯಿಗಳಿಲ್ಲವಯ್ಯ ೪
ಸಕಲ ಜೀವರಿಗು ಚಿಂತೆಗಳಿಲ್ಲದವರಿಲ್ಲ
ಸುಖವು ಸ್ವಪ್ನದೊಳು ಕಾಣುವುದಿಲ್ಲವಯ್ಯ
ಬಕನ ವೈರಿಯ ಕೋಣೆಯ ಲಕ್ಷ್ಮೀಪತಿ ಪ್ರಿಯ
ಮಕರ ಕೇತನ ವೈರಿಯಾಟವಿದಯ್ಯ ೫

೨೯
ಕಂಡೆ ನಾನಿಂದು ಪರಶಿವನ ಅಖಿಲಾಂಡ ಕೋಟಿ
ಬ್ರಹ್ಮಾಂಡನಾಯಕನ ಪ

ಥಳ ಥಳಿಸುವ ದೇಹ ಪ್ರಭೆ ಪುಲಿದೊಗಲುಡುಗೆಯು
ಕೆಂಜೆಯ ಮೇಲÉೂಪ್ಪುವ ಶಶಿ
ಕಳೆ ಕರತಳದೊಳು ಮೆರೆದಕ್ಷಯ ಸರದಭಯ
ಹಸ್ತದ ಸದ್ಯೋಜಾತ ಸ್ವಯುಂಭುವ ೧

ಕುಂಕುಮ ವರ್ಣವು ತನುಭಸ್ಮಾಂಗಲಂಕೃತ
ಗಜ ಚರ್ಮಾಂಬರ ದುಡಿಗೆಯು
ಪಂಕಜಮುಖ ಸುಲಿಪಲ್ಲಿನ ಪ್ರಭೆಯು
ಬೆರಳುಕದೊಳಕ್ಷಮಾಲೆಯ ವಾಮ ದೇವನ೨

ಕಾಳ ಮೇಘದ ವೋಲ್ ವರ್ಣವು ದಂಷ್ಟ್ರಕರಾಳ
ಭ್ರೂಕುಟಿ ಮುಖದ ಭಯವರದ ಜಪಮಾಲೆ ಪಾಶಾಂಕುಶ
ಢಮರುಗ ಶೂಲ ಖಡ್ವಾಂಗ ಕಪಾಲಮಾಲಾ
ಸರ್ಪಾಭರಣದ ಘೋರನ ೩
ಕರದೋಳ್ ಕಪಾಲ ಮಿಂಚಿನ ದೇಹ ಪ್ರಭೆ | ಉರಗಾಭರಣ
ದೊಡಿಗೆ ಕೆಂಪುನೊಸಲು ಪರಶುಡಮರುಗ ಖಡ್ಗ
ಭೇಟಕ ಧನುರ್ಬಾಣ
ಉಗ್ರಾಸನ ಉರಿಗಣ್ಣಿಂದು ಮೌಳಿಯ ತುತ್ಪುರುಷನ ೪
ಎಳೆ ಮುತ್ತಿನ ಭಾಳಾಂಗಚ್ಛವಿತನು ಪರಿಮಳಿಪ
ಶ್ರೀ ಗಂಧ ಲೇಪನ
ಶಾಂತ ರೂಪದೊಳಭಯ ವರದಜಪಮಾಲೆ
ಖಡ್ವಾಂಗ ಢಮರುಗ
ಕರದ ಕಪಾಲೇಂದು ಮೌಳಿಯ ಈಶಾನ್ಯನ ೫
ಕಂಡೆನು ಪೂರ್ವಮುಖದಿ ತುತ್ವುರುಷನ
ರುಂಡ ಮಾಲಾಧಾರ
ದಕ್ಷಿಣಘೊರನ ಕಂಡೆನು ಪಶ್ಚಿಮದೊಳು ಸದ್ಯೋಜಾತನ
ಕಂಡೆನು ಉತ್ತರದೊಳ್ ವಾಮದೇವನ ಕಂಡೆನು ೬
ಶುದ್ಧದಾಕಾಶ ಮುಖನು ಪಂಚವಕ್ತೊದೊಳಿದ್ದು ಬೇರ್ಬೇರ
ಜಟಾಜೂಟ ಗಂಗೆ ಸಮೃದ್ಧಿ
ಪಾರ್ವತಿ ಸಹ ಉರಿಗಣ್ಣು ಫಣಿ ಬಂಧಿವಿದ್ದ ಕೆಳದಿ ರಾಮೇಶನ ೭

೧೪೪
ಕಂಡೆನೋ ಕಂಡೆ ಗುರುಚಿದಂಬರನಾ ತನು
ಗೊಂಡು ಭೂಮಂಡಲದೊಳು ಚರಿಸುವನಾ ಪ
ಪರಮಾತ್ಮ ಪರತತ್ವವನು ತಿಳಿದವನ
ಧರೆಯ ಜನರನು ಪಾವನವ ಮಾಡುವನಾ
ಕರುಣ ಸಮುದ್ರ ದೀನರ ದಯಾಪರನಾ
ನೆರೆನಂಬಿದವರಿಗೆ ವರವ ಕೊಡುವನಾ ೧
ಮಳೆ ಛಳಿ ಬಿಸಿಲು ಹಸಿವಿಗಂಜದವನ
ಕಲ್ಲು ಮುಳ್ಳು ಬೆಟ್ಟವೆನ್ನದೆ ಚರಿಸುವನ
ನೆಲೆಗಾಣದಂತಹ ಅಪಾರ ಮಹಿಮನು
ಕಲಿಮನದೊಡ್ಡದಾನಂದ ನಿರ್ಗುಣನ ೨
ಸ್ಮರಹರನಂತೆ ಭಸಿತ ದಿಗಂಬರನಾ
ಕೆರೆಬಾವಿ ದೇವಾಲಯವನು ಕಟ್ಟಿಸುವನ
ಪುರಹರನಂತೆ ಢಿಕ್ಕನೆ ಧರಿಸಿಹನ
ನರ ಗುರಿಗಳು ಬಲ್ಲರೇನೋ ಇಂಥವನಾ ೩
ಯಮನಿಯಮ ಅಷ್ಟಾಂಗ ನಿರತನ
ಕಮಲಾರಿ ಪಿತನಂತೆ ಗಂಭೀರದವನ
ಹಿಮವಂತನಂತೆ ಧೈರ್ಯದೊಳಿರುತಿಹನ
ಕಮಲ ಬಾಂಧವನಂತೆ ತೇಜದಿಂದಿರುತಿಹನ ೪
ಅರಿಗಳನರುವರ ನುಗ್ಗೊತ್ತಿದವನ
ಕರಣೇಂದ್ರಿಯಂಗಳ ನಿಗ್ರಹಿಸಿದವನ
ಪರಮ ದಾಸಗೆ ಆಲಿಂಗನವನಿತ್ತನಾ
ಸ್ಥಿರ ಚಿದಾನಂದ ಪುರದ ದಿಗಂಬರನ ೫


ಕಂಡೆನೋ ನಿನ್ನ ಚರಣ ಕಮಲವ
ಸೊಂಡಿಲಿಂದಿಹ ಗಣಪತಿ ಕೊಡು ವರವ ಪ

ಗಂಡ ಮಂಡಿತ ಮಣಿ ಕುಂಡಲ ಭೂಷಾ
ಉಂಡಲಿಗೆ ಚಕ್ಕುಲಿಯೊಳಗೆ ಸಂತೋಷ
ಚಂಡ ಪ್ರಬಲನಲ ಅಖಂಡ ಪ್ರಕಾಶ ಭೂ
ಮಂಡಲದೊಳು ನಿನ್ನ ಕೀರ್ತಿ ವಿಶೇಷ ೧

ಚಂದನಾಗರು ಧೂಪ ದೀಪಾವಳಿಯಿಂದಾ
ನಂದದಿಂದಲಿ ಪೂಜಿಪೆ ಭಕ್ತಯಿಂದ
ನಂದಿವಾಹನನಿಗೆ ಮೋಹದ ಕಂದ
ಮಂದಮತಿಯ ಬಿಡಿಸೈಯ್ಯ ನೀ ಮುದದಿಂದ ೨

ಚಿಕ್ಕ ಮೂಷಿಕವೇರಿ ಗಕ್ಕಾನೆ ಬರುವೆ
ಅಕ್ಕರಿಂದಲಿ ಭಕ್ತರೆಲ್ಲಾರ ಪೊರೆವೆ
ಮಿಕ್ಕ ಮಾತುಗಳೇನೋ ಪೊಗಳಲೆನ್ನಳವೇ
ಇಕ್ಕೇರಿಯೊಳು ಟೆಂಕಸಾಲೆಯೊಳಿರುವೆ ೩

೯೭
ಕಾಲನವರ ದಂಡು ಬರುತಿದೆ ಬಂದು
ಮೂಲ ದೇಹದಿ ಪಾಳ್ಯ ಬಿಡುತಿದೆ
ನಾಳೆ ನಾಡದೋ ಕಾಣೆ ತಮಪುರವಿದು
ಹಾಳಾಗುವ ಕಾಲ ಬರುತಿದೆ ಪ
ಬಂದು ಬಂದವರೆ ಮುಕ್ತಿಗೆಯಿಕ್ಕಿ ರವಿ
ನಂದನ ನಾಳುಪದ್ರವನಿಕ್ಕಿ
ಹಿಂದು ಮುಂದಕು ಛಾವಣೆಯಿಕ್ಕಿಪುರದ
ಮಂದಿಯ ಕಾವಲನಿಕ್ಕಿ ೧
ಪುರದೊಳಗೇನು ಬೀಯಗಳಿಲ್ಲ ಮುಂದೆ
ಬರುವ ಮಾರ್ಗವ ಕಟ್ಟಿದರೆಲ್ಲ
ಕರಣವೃತ್ತಿಗಳು ತಗ್ಗಿತು ಎಲ್ಲ ಕೋಟೆ
ಜರಿದು ಹೋಯಿತು ಸುತ್ತಲು ಎಲ್ಲ ೨
ಕಾಲು ಕೈಗಳ ಧಾತು ತಪ್ಪಿತು ನುಡಿದ
ನಾಲಗೆ ಹಿಂದಕೆ ಸರಿಯಿತು
ಕಣ್ಣಾಲಿಯೊಳಗೆ ನೀರು ಉಕ್ಕಿತು ವಸ್ತು
ಗಾಳಿಯೊಳಗೆ ಮಾಯವಾಯಿತು ೩
ಮಡದಿ ಮಕ್ಕಳಿಗೆಲ್ಲ ಹೊಡೆದಾಟ ಬಲಕೆ
ಎಡಕೆ ಹೊರಳದಿರಿ ಎನುವಾಟ ಕಿಚ್ಚಿ
ಯೊಡನೆ ಗೂಡನು ಸುಡುವಾಟ ಕೆಲವು
ಕಡೆಯವರೆಲ್ಲ ತೆರಳುವಾಟ ೪
ಹೇಳದ ಯಮದೂತರಿಗಂದು ಕಡು
ಖೂಳ ಪಾಪಿಗಳೆಳತಹುದೆಂದು ಲಕ್ಷ್ಮೀ
ಲೋಲ ನಾಳು ಗಳಮುಟ್ಟದಿರೆಂದು
ತನ್ನಾಳಿಗೆ ಕಟ್ಟು ಮಾಡಿದನಂದು ೫

೧೦೦
ಕುಟ್ಟಿ ಕೊಳ್ಳೊ ಮಾಣಿ ನಿನ್ನ ಹುಟ್ಟಿಸಿರುವ ದೈವಕೆ
ಹೊಟ್ಟೆ ತುಂಬ ಬಾಯಿಗಾನು ಬಿಟ್ಟೆನೆಂದ್ರೆ ಕ್ಷೀರವಿಲ್ಲ ಪ
ಕೊಟ್ಟು ಪಡೆಯಲಿಲ್ಲ ಮುನ್ನಹುಟ್ಟಿ ಪಡೆಯಲಿಲ್ಲ ಮುಂದೆ
ಹಟ್ಟಿಯೊಳಗಣಾಕಳೆಲ್ಲ ನಷ್ಟವಾಯ್ತು ರೋಗದಿಂದ ೧
ಅತ್ತು ಸಾಯ ಬೇಡ ನೀನು ಎತ್ತಿ ಕೊಂಬರೊಬ್ಬರಿಲ್ಲ
ಭತ್ತವನ್ನು ಕುಟ್ಟಿ ನಾನು ತುತ್ತಮಾಡಿ ತಿನ್ನಿಸುವೆನು ೨
ನೀರು ಕಾದು ಬಂತು ಬಿಸಿಯ ನೀರ ನೆರೆವೆನೀಗ ನಿನಗೆ
ಸಾರಿ ಮೊಲೆಯ ನೂಡಿ ನನ್ನ ಸೀರೆ ಸೆರಗಹಾಸಿ ಕೊಡುವೆ ೩
ದೊಡ್ಡ ಕೂಸ ಕಾಣೆಯವಳು ಗುಡ್ಡೆ ಬಸವಿಯಾದಳೀಗ
ಚಡ್ಡೆಯಲ್ಲದೆ ಹೋಗುತಿಹಳು ಸಡ್ಡೆ ಮಾಡಳೆನ್ನಮಾತ ೪
ಇಂತೆನುತ್ತ ಬಾಲಕನ್ನ ಸಂತವಿಟ್ಟು ನಾರಿ ಲಕ್ಷ್ಮೀ
ಕಾಂತ ಮಾಡ್ದ ಲೀಲೆಗಳನು ನಿಂತು ಪಾಡಿಪೋದಳಾಕೆ ೫

*

ಅಂದಿನ ದಿನಗಳಲ್ಲಿ ಸಣ್ಣ ಪಟ್ಟ ಪಾಳೆಯ

೯೮
ಕೆಟ್ಟ ಕಾಲ ಬಂತು ಪ್ರಜೆಗೆ ಎಷ್ಟು ಪೇಳ್ವರೇನು ಕೆಲಸ
ದಿಟ್ಟ ಅರಿಗಳನು ಕುಟ್ಟಿ ತೆಗೆಯದಿದ್ದಮೇಲೆ ಪ
ದಂಡು ಬಂತು ಎಂದು ಜನರು ಗಂಡು ಹೆಣ್ಣು ಮಕ್ಕಳೆಲ್ಲ
ಕಂದುಗಳನು ಕಟ್ಟಿ ಗೋವಿನ ಹಿಂಡ ನೆಲ್ಲ ದಾರಿಗೊಳಿಸಿ
ಕಂಡ ಕಡೆಗೆ ಹೋಗಿ ಸೇರಿಕೊಂಡುಯಿರಲು ಸೋವಿನಿಂದ
ದಂಡಿನವರು ದಾರಿಗಟ್ಟಿಕೊಂಡು ಸುಲಿದು ಕಡಿದ ಮೇಲೆ ೧
ಅಲ್ಲಿ ಬಂತು ಇಲ್ಲಿ ಬಂತು ಎಂದು ಬೆದರಿಕೊಂಡು
ಕುಣಿಗಳಲ್ಲಿ ಭತ್ತಭಾಂಡವಿಕ್ಕಿ ನಿಲ್ಲದೆಲ್ಲ ಊರಬಿಟ್ಟು
ಕಲ್ಲು ಮುಳ್ಳು ಗುಡ್ಡಕಾನಿನಲ್ಲಿ ಸೇರಿಕೊಂಡು
ಬಚ್ಚಿಯಿಟ್ಟ ವಸ್ತು ವಡವೆ ಅಲ್ಲಿ ನಷ್ಟವಾದ ಮೇಲೆ ೨
ಮತ್ತೆ ಕುದುರೆಯಿಲ್ಲ ಮಂದಿಹೊತ್ತು ಪ್ರಜೆಗಳನ್ನು ಮಾರ್ಗ
ದೊತ್ತಿನಲ್ಲಿ ತರುಬಿ ನಿಂದು ಕತ್ತಿಯನ್ನು ಕಿತ್ತು ಗೋಣ
ಕುತ್ತಿ ಕೆಡಹಿ ಕೆಲರ ಮೈಯ ರಕ್ತವನ್ನು
ಬರಿಸಿ ಯಾವತ್ತು ವಡವೆ
ವಸ್ತುಗಳನು ಮತ್ತು ಮತ್ತು ಸುಲಿದಮೇಲೆ ೩
ಮುಟ್ಟು ಪಟ್ಲೆ ಸಹಿತವರಡಿಯೆತ್ತ ಕೊಟ್ಟು ಬೀಳ ಭೂಮಿ
ನಷ್ಟ ತೆತ್ತು ಹಳೆಯ ಅರಿವೆ ಬಟ್ಟೆಗಟ್ಟಿ ಬೀದಿ ಬದಿಗೆ
ಕಟ್ಟಿ ದನವ ಹಿಂಡು ಗುರಿಯ ಕೆಟ್ಟ ಗೌಡಿ ದ್ವಿಗುಣಿಸಂಕ ತೆತ್ತು
ಕೊಟ್ಟು ಪ್ರಜೆಗೆ ಘಟ್ಟ ಬೆಟ್ಟ ವಾಸ ವಾದಮೇಲೆ ೪
ಇಕ್ಕಿ ಕದವ ರಾಜ್ಯವನ್ನು ಹೊಕ್ಕು ಅರಿಗಳೆಲ್ಲ ಸುಲಿದು
ಸೊಕ್ಕಿನಿಂದ ಪಾಳ್ಯವನ್ನು ಹೊಕ್ಕರಯ್ಯ ನಮ್ಮ ಕಡೆಗೆ
ದಿಕ್ಕಕಾಣೆ ಪ್ರಜೆಗಳನ್ನು ರಕ್ಷಿಸುವರು ಬೇರೆಉಂಟು
ಭಕ್ತಿಯಿಂದ ಭೀಮನ ಕೋಣೆ ಲಕ್ಷ್ಮೀರಮಣನ
ನಂಬಿ ಜನರು ೫

೯೬
ಕೆಟ್ಟಿತು ಕಾಲಗತಿಯು ದುರ್ಜನರಟ್ಟಳಿಯಲಿ ಜಗತಿ
ಹೊಟ್ಟು ಬೇವಂದದಿ ಬೇಯುತಲಿದೆ ವರ್ಮ ಬಿಟ್ಟು
ಕೆಡಿಸುವರು ಸಾದುಸಜ್ಜನರು ಪ
ಊರು ಕೇರಿ ಕೇರಿಗಳೊಳಗೆ ಒಳಿತುಣಲಾರು ಸೈರಿಸಹರು
ಕ್ರೂರ ಜನರು ಕೂಡಿ ಕೆಡಿಸುವ ಬಗೆಯ
ವಿಚಾರವನೆಣಿಸುತಹರು ದುರ್ಜನರು ೧
ಒಳಗು ಹೊರಗು ಹುಳುಕನರಸುತ ಕಾಣದೆ ಕಳವಳಿಸಿ
ಒಳಗೆ ಕದಿನಿ ಉಂಟೆನುತ ಚಾಡಿಯ ನಾಡಿ ತಿಳಿಯದಂದದಿ
ಮುದಿಗೂಬೆಯಂತಿಹರು ೨
ಮನ ಮುನಿಸುಗಳಿಂದ ಸಜ್ಜನರನು ದನಿಗಳ ಮುಖದಿಂದ
ತನು ಬಿರಿಯಲು ಕೊಲಿಸುವ ಬಗೆಯನು
ವಾಯುಸುತನ ಕೋಣೆಯಲಕ್ಷ್ಮೀರಮಣನೇ ಬಲ್ಲ ೩

೩೦
ಕೆಟ್ಟು ಹೋಗಬೇಡ ಮನುಜ ಸಾರಿ ಹೇಳುವೆ ಮನವ
ಮುಟ್ಟಿ ಭಜಿಸೋ ಹರಿಯ ಶ್ರೀ ಕೃಷ್ಣ ಕಾಯುತಾನೆ ಪ
ಆನೆಯಂತೆ ಹರಿವುದೊಂದು ಹೀನ ಮನವ ಹರಿಯಬಿಟ್ಟು
ನೀನು ವಿಷಯವನ್ನು ಬಯಸಿ ನಾನಾನರಕದಲ್ಲಿ ಬಿದ್ದು ೧
ದಾನ ಧರ್ಮಗಳನು ಬಿಟ್ಟು ಬರಿಯ ತನುವದಂಡಿಸುತ್ತ
ಪುಣ್ಯ ತೀರ್ಥಸ್ನಾನಬಿಟ್ಟು ವಿಷ್ಣು ಮೂರ್ತಿಧ್ಯಾನ ತೊರೆದು ೨
ಗಂಟು ಗಡಿಗೆ ಇರಲುನಿನಗೆ ನೆಂಟರಿಷ್ಟರೆಂದು ಬಂದು
ಪಂಟಿಯನ್ನು ತೆಗೆವರೆಲ್ಲ ಅಂಟಿ ಬೆನ್ನಬರುವರಿಲ್ಲ ೩
ಪಂಡಧರನ ದಂಡು ಬಂದು ದಂಡೆಗೆ ದಂಡೆ ಬಿಗಿದು ಕಟ್ಟಿ
ಕೊಂಡು ಹೋಗುವಾಗ ನಿನ್ನ ಹೆಂಡಿರು
ಮಕ್ಕಳು ಬರುವನೋ ೪
ನಿನ್ನ ನೀನೆ ತಿಳಿದುಕೊಂಡು ಚೆನ್ನಿಗನ ಕೂಟದಲ್ಲಿ
ಚಿನ್ಮಯಾತ್ಮಕ ಲಕ್ಷ್ಮೀಪತಿಯ ಮುನ್ನಭಜಿಸೋ ಜನ್ಮವಿಲ್ಲ ೫

೯೯
ಕೆಟ್ಟು ಹೋಯಿತು ಪ್ರಜೆಗಳು ಎಲ್ಲಾ ಬಾಯ
ಬಿಟ್ಟುಪಾಯವ ಹೇಳುವರಿಲ್ಲ ಪ

ಸುಳ್ಳು ಹೇಳಲು ಹೆದರುವುದಿಲ್ಲ ಪೊಳ್ಳಾಗಿ
ಹಲ್ಲ ಬಿಡುವರು ಎಲ್ಲ
ಕಲ್ಲೆದೆಯರು ಕರೆಸಿದರೆಲ್ಲ ಚಿನ್ನ ಬೆಳ್ಳಿ
ತಾಮ್ರಗಳ ಮಾರಿದರೆಲ್ಲ ೧
ಹೆಚ್ಚು ಮಟ್ಟಿಗೆ ತೇರುಗಳಿಂದ ಒಳ್ಳೆ
ಚೊಚ್ಚಲಾಕಳು ಎಮ್ಮೆಗಳಿಂದ
ಹೆಚ್ಚಿನಾಭರಣಗಳಿಂದ ಕೊಟ್ಟು ನಿಶ್ಚಲವಾಯಿತು
ಕೋರಡೆಯಿಂದ ೨
ತಿಂಬೆವೆಂದರೆ ಅನ್ನಕೆ ಇಲ್ಲ ಮುಂದೆ ನಂಬಿ
ಕೊಡುವೆನೆಂಬುವರಿಲ್ಲ
ಡಿಂಬವಿದೇಕೆ ಬೀಳುವುದಿಲ್ಲ ಎಂದೆಂಬರು
ಚಿಕ್ಕ ದೊಡ್ಡವರೆಲ್ಲ ೩
ಸರಕಿನ ಮಾರು ಮಾರ್ಗವು ಕೆಟ್ಟು ಮೆಣಸಿನ
ಸೆರೆಯ ಮಾರಲಿಕಿಲ್ಲದೆ ಕೆಟ್ಟು ಮತ್ತರ ಮನೆಗದರ
ಪ್ರಜೆ ಬಾಯಿಬಿಡುತಿದೆ ಬಾಯನು ಬಿಟ್ಟು ೪

ನರಗುರಿಯಾಯ್ತ ಪ್ರಜೆಗಳು ಎಲ್ಲ
ದೊರೆಗಳಿಗಳ್ಳೆಷ್ಟು ಕರುಣವಿಲ್ಲ
ಇನ್ನಿರುವ ಬಗೆಯ ಕಾಣುವುದಿಲ್ಲ ಮುಂದೆ
ಹರಿಸೂನು ಕೋಣೆ ಲಕ್ಷ್ಮೀಶನೆ ಬಲ್ಲ ೫

೩೧
ಕೇಳೆ ನಂದನ ಕಾಂತೆ ಹೇಳೆ ಮಗಗೆ ಬುದ್ದಿ
ಬಾಲೆಯರನು ಇರಗೊಡನೆ ದಮ್ಮಯ್ಯ ಪ

ಕುತ್ತಿಗೆಯೊಳಗಣ ಮುತ್ತಿನ ಸರಗಳ
ಕಿತ್ತು ಹರಿದು ಚೆಲ್ಲಿ ಪೋದ ದಮ್ಮಯ್ಯ ೧

ಕಟ್ಟಿದ ಕರುಗಳ ಬಿಟ್ಟು ಒಲೆಯ ಮೇಲೆ
ಇಟ್ಟ ಪಾಲ್ಗಳನೆಲ್ಲ ಕುಡಿದ ಗೋಪಮ್ಮ ೨

ಪಿಕ್ಕದೊಳಿಹ ಬೆಣ್ಣೆ ಚೊಕ್ಕನೆಲ್ಲವ ಮೆದ್ದು
ಮರ್ಕಟಗಳಿಗಷ್ಟನಿತ್ತ ದಮ್ಮಯ್ಯ ೩

ಬೇಡವೆಂದರೆ ಛಲಗೇಡಿ ಹಿಡಿದು ಎನ್ನ
ನೋಡಿ ಮೋಸವ ಮಾಡಿ ಹೋದ ದಮ್ಮಯ್ಯ ೪
ಮರುತಾತ್ಮಜ ಕೋಣೆ ಲಕ್ಷ್ಮೀರಮಣಗೊಮ್ಮೆ
ನಾರಿ ನೀ ಬುದ್ದಿಯ ಹೇಳೆ ದಮ್ಮಯ್ಯ ೫

೧೬೫
ಕೊಡು ಕೊಡು ಕೊಡು ಭಕುತಿ ಲಕ್ಷ್ಮೀಪತಿ
ಕೊಡು ಕೊಡು ಕೊಡು ಭಕುತಿ ಪ
ಕೊಡು ಕೊಡು ತವ ಭಕ್ತಿ ಬಿಡಲಾರೆ ಶ್ರೀಪತಿ
ಬಿಡದೆ ಭಜಿಪ ನಿನ್ನ ದೃಢ ಚಿತ್ತ ಕೊಡು ರಂಗ ೧
ದೇವಕಿ ಸುತ ನಿನ್ನ ಸೇವಿಸಲರಿಯೆನು
ಭಾವಾತೀತನೆ ದುಷ್ಟ ಭವದಿಂದ ದಾಟಿಸೊ ೨
ಸುಜನರ ಪಾಲನೇ ಕುಜನರಾಂತಕÀನೇ
ಭಜಕರ ಪೊರೆವನೇ ಅಜಪಿತ ಹರಿಯೇ ೩
ಚಿನ್ಮಯ ರೂಪನೇ ಸನ್ನುತ ಸ್ಮರಿಸುವೆ
ಮನ್ನಿಸಿ ರಕ್ಷಿಸೋ ಚನ್ನಕೇಶವನೇ ೪

೧೦೧
ಕೋಲು ಕೋಲೆ ಕೋಲು ಕೋಲನ್ನ ಕೋಲೆ
ಮೂಲೆ ಮೂಲೆಯ ಹೊಕ್ಕು ಅಡಗಿರ್ದ ಕೋಲೆ ಪ
ಕೆಂಜಿಗ ಉಡನು ಬಂದು ಮುಂಚಿಕವಲ ಕೊಟ್ಟು
ಅಂಚೆಡೆಗಳನೆಲ್ಲ ಸುಲಿದರ್ದ ಕೋಲೆ ೧
ಆನೆ ಕುದುರೆಯಿಲ್ಲ ಸೇನೆ ಬಹಳವಿಲ್ಲ
ಏನೆಂದು ಬೆಸಗೊಂಬರಿಲ್ಲದ ಕೋಲೆ ೨
ಮುನಿಯ ಭಾವನದಂಡು ಮನೆ ಮನೆಗಳ ಹೊಕ್ಕು
ಧನಕನಕಂಗಳ ಸುಲಿದಿರ್ದ ಕೋಲೆ ೩
ಮಕ್ಕಳು ಮರಿಗಳು ವೃದ್ಧ ಜವ್ವನರನ್ನು
ದಿಕ್ಕುದಿಕ್ಕಿನ ಕಾನಿಗಟ್ಟಿದ ಕೋಲೆ ೪
ಜನರನ್ನು ತರಿದು ಸುಲಿದು ಕರುಗಳ
ತರುಗಳ ಹಿಂಡನು ಹೊಡೆದಿರ್ದ ಕೋಲೆ ೫
ಕೊಟ್ಟ ಕಣ್ಣಿಯನೆಲ್ಲ ಕಿತ್ತೊಯ್ದು ಸೂಸ್ಯಾನು
ಪಟ್ಟೆ ಪೀತಾಂಬರಗಳ ನೊಯ್ದ ಕೋಲೆ ೬
ದಂಡೋ ಭಂಡೋ ಪುಂಡೋ ಕಾಣಿ ಜೀವರನೆಲ್ಲ
ಹಾಡಿ ಹಿಳಿದು ಹಿಪ್ಪೆಹೀರಿದ ಕೋಲೆ ೭
ಇಟ್ಟವಡವೆ ವಸ್ತು ಇಟ್ಟಲ್ಲಿ ಇಲ್ಲದೆ
ಕೆಟ್ಟು ಜನರು ಹೊಟ್ಟೆ ಹೊಡಕೊಂಬರು ೮
ಉಟ್ಟು ತೊಟ್ಟುದನೆಲ್ಲ ಸುಲಿದುಬೆತ್ತಲೆ ಮಾಡಿ
ಬಿಟ್ಟು ಮನೆಗೆ ಬೆಂಕಿ ಕೊಟ್ಹೋದ ಕೊಲೆ ೯
ಕೆಲರ ತಲೆಯ ಕುಟ್ಟಿ ಕೆಲರು ಸುಲಿದು ಬಿಟ್ಟು
ಕೆಲರಿಗೆ ಮುರುವಾಳ ವಿಕ್ಕಿದ ಕೋಲೆ ೧೦
ಅಟ್ಟಡಿಗೆಯ ನುಂಡು ಇಟ್ಟೊಡವೆಯ ಕೊಂಡು
ಕುಟ್ಟಿ ಖಂಡವ ಚೂರು ಮಾಡಿದ ಕೋಲೆ ೧೧
ಉಪ್ಪಿನಕಾಯಿ ಕೊಡ ತುಪ್ಪ ತೈಲದ ಪಾತ್ರೆ
ಜಪ್ಪಿ ವಡೆದು ನೆಲ ಕುಣಿಸಿದ ಕೋಲೆ ೧೨
ಚಿನ್ನ ಚಿಗುರು ಬೆಳ್ಳಿ ಕಂಚು ತಾಮ್ರಗಳನ್ನು
ನುಣ್ಣಗೆ ಹೊರೆಗಟ್ಟಿ ಹೊತ್ತೊಯ್ದ ಕೋಲೆ ೧೩
ಉಣ್ಣ ಉಡಲಿಕ್ಕಿಲ್ಲ ಹೊನ್ನು ಕೈಯೊಳಗಿಲ್ಲ
ಎಣ್ಣೆ ಬೆಣ್ಣೆಗೆ ಬಾಲ ನಳಿಸಿದ ಕೋಲೆ ೧೪
ಮುಂಜ ಮುಚ್ಚಲಿಕಿಲ್ಲ ಗಂಜಿಗೆ ಲವಣಿಲ್ಲ
ಸಂಜೆ ದೀಪಕೆ ತೈಲವಿಲ್ಲದೆ ಕೋಲೆ ೧೫
ಅತಿಥಿಗಿಕ್ಕಲಿಲ್ಲ ಪ್ರತಿಮೆ ಪೂಜೆಗಳಿಲ್ಲ
ವ್ರತನೇಮಗಳನು ಕಟ್ಟಿರಿಸಿದ ಕೋಲೆ ೧೬
ತೆಪಕಾರನ ಪದಾರ ಕಾಲಟದೊಳು
ಜಪ ತಪಗಳಿಲ್ಲದೆ ಕೊಳ ತನ್ನಿಸಿದ ಕೋಲೆ ೧೭
ನಗರದ ಕೋಲೆದ್ದು ತೆಪರಾರ ಮೇಲ್ಬಿದ್ದು
ಜಿಗಿದು ಹಿಂದಕೆ ಜಾರಿ ಜುಣುಗಿದ ಕೋಲೆ ೧೮
ಹಿಂದಣ ಬೆಳೆಮಣ್ಣ ಕೂಡಿತು ಕುಳಿಯಲಿ
ಮುಂದಣ ದುದುರಿತು ಹಣ್ಣಾಗಿ ಕೋಲೆ ೧೯
ಕೆಳಗು ಮೇಲಕು ದಂಡು ಬಳಪ್ರಾಂತ ದೊಳುದಂಡು
ನೆಲೆಗೊಂಡು ಜನರು ತಲ್ಲಣಿಪರು ಕೋಲೆ ೨೦
ಸುಬ್ಬರಾಯನ ವೀರಭದ್ರನ ಪ್ರಸಾದ
ಸರ್ವಜನರ ಬಾಯ್ಗೆ ಬಿತ್ತಣ್ಣ ಕೋಲೆ ೨೧
ಧರೆಯ ಭರವಪಹರಿಸಲು
ನರರೂಪ ಧರಿಸಿ ಲಕ್ಷ್ಮೀಶನು ಹೊಯ್ಸೂವ ಕೋಲೆ ೨೨


ಗಜ ಮುಖದವಗೆ ಗಣಪಗೆ ಚಲ್ವ ತ್ರಿಜಗ ವಂದಿತಗಾರತಿ ಎತ್ತಿರೆ ಪ

ಒಳ್ಳಿತಾದ ಬಲು ತೆಂಗಿನ ಕಾಯಿ ಕಡಲೆಯ
ಎಳ್ಳುಂಡಲಿಗೆ ಕಬ್ಬು ಮೆಲುವವವಗೆ
ಬೆಳ್ಳಿಯ ಹುರಿಗೆಜ್ಜೆಗಳ ಕಟ್ಟಿನಲಿವಗೆ
ಡೊಳ್ಳಿನ ಗಣಪಗಾರತಿ ಎತ್ತಿರೆ೧
ಕರದಲಿ ಪರಶು ಪಾಶಾಂಕುಶವ ಧರಿಸಿಹ ಹರುಷದಿ
ಭಕ್ತರ ಪೊರೆವವಗೆ
ಉರಗ ಕುಂಡಲನ ಕುಮಾರ ಗಜವದನಗೆ
ಶರಣ ಜನಕಗಾರತಿ ಎತ್ತಿರೆ ೨

ದೇವತೆಗಳ ಕೈಯ ಕಪ್ಪವ ಕೊಂಬುವಗೆ
ದಾವಾಗ್ನಿಯಿಂದ ಮೀರಿರುವಗೆ
ಯಾವಾಗ ಜನರಿಗೆ ಬೇಡಿದಿಷ್ಟಾರ್ಥವ ನೀವ
ಗಣೇಶಗಾರತಿ ಎತ್ತಿರೇ ೩

೩೨
ಗೋವಿಂದ ರಾಮ ಗೋವಿಂದ ಹರೇ ಗೋವಿಂದ ನಾರಾಯಣ
ಗೋವಳಿಗಾಗಿ ಗೋವರ್ಧನ ಗಿರಿಯನೆತ್ತಿ ಗೋವುಗಳನು
ಕಾಯ್ದೆ ಶ್ರೀ ಕೃಷ್ಣ ಪ

ದಶರಥನರಸಿ ಕೌಸಲ್ಯೆಯ ಬಸಿರೊಳು ಶಿಶುವಾಗಿ
ಜನಿಸಿದೆ ಶ್ರೀರಾಮ
ವಸುದೇವ ದೇವಕಿಯರಿಗೆ ನೀಸುತ ನೆನಿಸಿ
ಅಸುರರ ಮಡುಹಿದೆ ಶ್ರೀ ಕೃಷ್ಣ
ಪಶುಪತಿಧನುವನು ಮುರಿದು
ಜಾನಕಿಯ ಕೈವಶ ಮಾಡಿದೆ ಶ್ರೀ ರಾಮ
ಕುಶಲದಿ ಪಶುಗಳ ಕಾಯುತ ಬಕ ಧೇನುಕರ
ಸಂಹರಿಸಿದೆ ಶ್ರೀ ಕೃಷ್ಣ ೧
ಪರಶುರಾಮನ ಗರ್ವಗಿರಿಯ ಜರಿಸಿ
ಪರಾಕ್ರಮವನು ತಮಿಸಿದೆ ಶ್ರೀ ರಾಮ
ಕರತಳ ದೊಳಗೆ ಚಂದ್ರಮನ
ಪಿಡಿದು ನೋಡಿ ಮರಳಿ
ನಭಕೆಬಿಟ್ಟೆ ಶ್ರೀ ಕೃಷ್ಣ
ನರನಾಟಕವ ನಟಿಸಿ
ಪುರದೊಳು ಮಂಥರೆಯನು ಬೆಳೆಸಿದೆ ಶ್ರೀರಾಮ
ನೆರೆಮನೆ ಮುಮ್ಮೊನೆ
ಮೊಸರು ಪಾಲ್ ಬೆಣ್ಣೆಯ
ಮರೆದೋಚಿತೆಗೆದುಂಡೆ ಶ್ರೀ ಕೃಷ್ಣ೨
ಕಾಲೊಳು ಶಿಲೆಯನು ಮೆಟ್ಟಿ ಅಹಲ್ಯೆಯ
ಸ್ತ್ರೀರೂಪವ ಮಾಡಿದೆ ಶ್ರೀ ರಾಮ
ಕಾಳಿಯ ಮಡುವನು
ಧುಮುಕಿ ಹೆಡೆಯ ಮೆಟ್ಟಿ ವಾರಿಧಿಗಟ್ಟಿದೆ ಶ್ರೀ ಕೃಷ್ಣ
ಲೀಲೆಯಿಂದಲಿ ಕೌಶಿಕನ ಯಜ್ಞವ
ಪರಿಪಾಲನೆ ಮಾಡಿದೆ ಶ್ರೀರಾಮ
ಬಾಲಕತನದೊಳು ಪೂತನಿಯಸುವನು ಹೀರಿ
ಮುಕ್ತಿಯನಿತ್ತೆ ಶ್ರೀ ಕೃಷ್ಣ ೩
ತಾಯಿ ತಂದೆಯರ ವಾಕ್ಯವ ಸಲಿಸಲು
ವನವಾಸವ ಮಾಡಿದೆ ಶ್ರೀರಾಮ
ಬಾಯೊಳು ಬ್ರಹ್ಮಾಂಡವನು ವೈಕುಂಠವ
ತಾಯಿಗೆ ತೋರಿದೆ ಶ್ರೀ ಕೃಷ್ಣ
ಮಾಯಾಮೃಗವನು ಬೆನ್ನಟ್ಟಿ ಬಳಲಿಸಿ
ಸಾಯಕದೊಳು ಕೊಂದೆ ಶ್ರೀರಾಮ
ದಾಯವ ನಿಕ್ಕಿ ದ್ರೌಪದಿಯಭಿಮಾನವಕಾಯ್ದೆ
ಕರುಣದಿ ಶ್ರೀ ಕೃಷ್ಣ ೪
ಧರಣಿಯ ಭಾರವ ನಿಳುಹಲು
ಕಪಿಗಳ ನೆರಹಿ ಖಳನ ಕೊಂದೆ ಶ್ರೀ ರಾಮ
ಕುರುಕುಲದೊಳು ವೈರವಬಿತ್ತಿ ಪಾರ್ಥಗೆ
ನರವಾಗಿ ಕೊಲಿಸಿದೆ ಶ್ರೀ ಕೃಷ್ಣ
ಶರಣಗೆ ಪಟ್ಟವ ಕಟ್ಟಿ ಇರಿಸಿದೆ ಸ್ಥಿರವಾಗಿ ಶ್ರೀ ರಾಮ
ಮರುಸುತನ ಕೋಣೆವಾಸ ಲಕ್ಷ್ಮೀಶನೆ
ಮೆರೆದನು ಶ್ರೀ ರಾಮ ಶ್ರೀ ಕೃಷ್ಣ ೫

ಉಡುಪಿ ಶ್ರೀಕೃಷ್ಣನ ಮೇಲೆ

೩೩
ಗೋವಿಂದೋ ಗೋವಿಂದೋ ರಾಮ
ಗೋವಿಂದೋ ನಾರಾಯಣ
ಗೋವಿಂದೋ ಗೋಪಾಲಕೃಷ್ಣ
ಗೋವಿಂದೋ ನಾರಾಯಣ ಪ
ವೇದಗಳು ಕದ್ದೊಯ್ದು ದೈತ್ಯ ಪಯೋಧಿಯೊಳಗಿಡಲು
ಆದಿ ಮತ್ಸ್ಯ ರೂಪದೊಳಂದು ವೇದಗಳ ತಂದನಮ್ಮ ೧
ಬೆಟ್ಟವು ಮುಳುಗು ಸಮಯದಿ ನಮ್ಮರಂಗ
ದಿಟ್ಟ ಕಮಠನಾಗಿ ಬಂದನು ಭ್ರಷ್ಟನಿಶಾಚರರ ವರ್ಗಗಳನು
ಹುಡಿಗಟ್ಟಿ ಸುರರರಕ್ಷಿಸಿದನಮ್ಮ ೨
ಮೂಢ ಹಿರಣ್ಯಾಕ್ಷ ನೆಂಬ ಸುರನು ರೂಢಿಯನು
ಮಡಿದೊಯ್ಯಲು
ಕ್ರೋಡತನ ತಾಳ್ದವನ ಛೇದಿಸಿ ದವಡೆಯೊಳ-
ವನಿಯನೆತ್ತಿದನಮ್ಮ ೩
ಎಸೆವ ಕಂಬದಿಬಂದು ನಮ್ಮರಂಗ ಅಸುರ
ಕಶ್ಯಪನ ಸಿಗಿದನಮ್ಮ
ಶಿಶು ಪ್ರಹ್ಲಾದನ ರಕ್ಷಿಸಿ ಬಹುದೆಸೆದೆಸೆಯೊಳಗೆ
ಕೀರ್ತಿಯ ಪಡೆದನಮ್ಮ ೪
ವರವಟು ವೇಷದಲಿ ನಮ್ಮ ರಂಗಭೂಮಿ
ದಾನವ ಬೇಡಿದನು
ವರ ವಸುಧೆಯ ಈರಡಿ ಮಾಡಿ ಮೂರನೆ ಚರಣದಿ
ಬಲಿಯಕೊಂದ ನಮ್ಮ ೫
ಉತ್ತಮ ಕೊಡಲಿಯ ಪಿಡಿದು ನಮ್ಮರಂಗ ಕ್ಷತ್ರಿಯ
ಕುಲವನೆಲ್ಲ ತರಿದನಮ್ಮ ಹೆತ್ತಮಾತೆಯ ಕಡಿದು ಬದುಕಿಸಿ
ನಿತ್ಯಾತ್ಮಕನಾಗಿ ಮೆರೆದ ನಮ್ಮ ೬
ಈರೈದುವದನನು ಸೀತೆಯ ನೊಯ್ಯಲು
ವಾರಿಧಿಯನು ಬಂಧಿಸಿದನಮ್ಮ
ಮೀರಿದ ರಕ್ಕಸನಗಳ ನಿಳುಹಿ ನಾರಿ ಸೀತೆಯ ತಂದನಮ್ಮ ೭
ದೇವಕಿ ಉದರದಿ ಜನಿಸಿದನಮ್ಮ ರಂಗ ಮಾವ
ಕಂಸನನು ಕೊಂದನಮ್ಮ
ಗೋವಧನಗಿರಿಯ ಬೆರಳೊಳು ತಾಳ್ದು
ಗೋವುಗಳನು ಕಾಯ್ದನಮ್ಮ ೮
ಸತಿಯರ ವ್ರತಗಳ ಕೆಡಿಸಿದ ನಮ್ಮ ರಂಗ ಅತಿ
ಬೌದ್ಧರೂಸವತಾಳ್ದನಮ್ಮ
ಚಿತ್ತಜಸ್ಮರನಿಗೆ ಬೆಂಬಲವಡಗಿಸಿ ತ್ರಿಪುರವ ಮರ್ಧಿಸುತ
ಕೀರ್ತಿಯ ಪಡೆದ ನಮ್ಮ ೯
ಧರೆಯ ಭಾರವನಿಳುಹಲು ನಮ್ಮರಂಗ
ತುರುಗವ ನೇರುತ ಬಂದನಮ್ಮ
ದುರುಳ ಜನರ ಕೆಡಹುತ ಸುಜನರ
ಕರುಣದಿಂದಲಿ ಕಾಯ್ದನಮ್ಮ ೧೦
ಹಡಗಿನಿಂದಲಿ ಬಂದ ನಮ್ಮರಂಗ ಉಡುಪಿ
ಸ್ಥಳದಲಿ ನಿಂತನಮ್ಮ
ಬಿಡದೆ ಭಕ್ತರ ಸಲಹುವ ಗುರು ಮಧ್ವಗೊಲಿದ
ಶ್ರೀ ಕೃಷ್ಣ ಮುಕುಂದನಮ್ಮ ೧೧

೩೪
ಚರಣವ ನರ್ಚಿಸುವೆ ಹರಿ ನಿನ್ನ ಮರೆಯದೆ ಕೀರ್ತಿಸುವೆ
ಪರಮ ಪಾವನ ಪುಣ್ಯ ಚರಿತ ಸಕಲಗುಣ ಭರಿತ
ನೀನೆ ಎನ್ನರಸ ರಕ್ಷಿಸು ಎಂದು ಪ

ತರಳ ಧ್ರುವನು ಮುನ್ನ ಚರಣವ ಭಜಿಸಲು
ಕರುಣದಿ ಬಂದು ನೀಸ್ಥಿರ ಪದವಿಯನಿತ್ತು
ಪೊರೆದೆ ಶ್ರೀ ಹರಿ ಎನ್ನಾ
ಮೊರೆಯ ಲಾಲಿಸಿ ಕಂಡು ಭರದಿಬಂದು ಉದ್ಧರಿಸಿ
ರಕ್ಷಿಸು ಎಂದು ೧
ವಿಗಡ ದೂರ್ವಾಸನನು ದುಗಡದಿ ಶಾಪವ
ಸುಗುಣಂಬರೀಶ ಭೂಪಗೆ ಕೊಡಲಾಕ್ಷಣ
ಬಗೆಯರಿಯದವನ ಸುತ್ತಿಗೆ ಮೆಚ್ಚಿ ಸಲಹಿದ
ಖಗರಾಜ ಗಮನ ಚನ್ನಿಗನೆ ರಕ್ಷಿಸು ಎಂದು ೨
ಮುಳಿದು ಗಜವ ನೆಗಳೆಳೆಯಲು ಭಯದಲಿ
ನಳಿನಾಕ್ಷ ನಿನಗೆ ದೂರಲು ಬೇಗದಲಿ ಸಾರಿ
ಸುಲಲಿತ ಮಹಿಮನೆಗಳ ಸೀಳಿ ಕರಿಯನು
ಸಲಹಿದೆ ದೇವ ಗೋವಳನೆ ರಕ್ಷಿಸು ಎಂದು ೩
ಉದರದೊಳಗೆ ಜನಿಸಿದ ಪ್ರಹ್ಲಾದನ ಮಮುಖಕೊಲಲು
ಬೇಗದಲಿ ಕಂಬದಿಬಂದು
ಸದೆದು ದಾನವನ ದಾಯದಲಿ ಕಾಯ್ದು
ಪದುಮಾಕ್ಷ ನರಹರಿ ಮುದದಿ ರಕ್ಷಿಸು ಎಂದು ೪
ದುರುಳ ದುಶ್ಯಾಸನ ಭೂವರ ಪಾಂಡು ತನುಜರ
ಅರಸಿಯ ಸೀರೆಯ ಭರದಿ ಸೆಳೆಯಲಾಗ
ಮೊರೆಯಿಡಲಕ್ಷಯ ವರವನಿತ್ತು ಸಲಹಿದ
ಹರಿ ಸುತ ಕೋಣೆಯ ಲಕ್ಷ್ಮೀಶ ರಕ್ಷಿಸು ಎಂದು ೫

೧೦೨
ಛೀ ಛೀ ಬಿಡು ಸಂಸಾರಾಬ್ಧಿಯ ದಾಂಟಲು ನಾವೆಯಚಾಚು
ಛೂ ಛೂ ಎಂದರು ಸರ್ವನು ಒಂದಿಷ್ಟು ನಾಚಿಕೆಯಿಲ್ಲ ಈಸು ಪ
ಆಯಾಸ ಗೊಳುತಿಲ್ಲರುವುದರಿಂದಲು ಕಾಯವ
ಬಿಡುವುದೆ ಲೇಸು
ಬಾಯೊಳು ಬ್ರಹ್ಮವ ನುಡಿದರೆ ಬ್ರಹ್ಮದ
ಗಾದಿಯು ತಿಳಿಯದು ಈಸು
ಮಾಯೆಯ ಮರೆಯಲಿ ಏನು ತೋರದು
ಪ್ರಾಚೀನ ಕರ್ಮವಿ ದೀಸು
ನಾಯಕ ನರಕಕೆ ಬೀಳದೆ ಮನದೊಳು
ತಾರಕ ಮಂತ್ರವ ಸೂಸು ೧
ಹೊನ್ನಿನ ಬಳಿಯಲಿ ಸರ್ವಾಭರಣವು ಚಿನ್ನವು ಎನಿಸದ ಹಾಗೆ
ಕನ್ನಡಿ ಮಸಕನು ಬೆಳಗಲು ವದನವು
ಚೆನ್ನಾಗಿ ತೋರುವಹಾಗೆ
ಕಣ್ಣಲಿ ಕಾಣುವುದೆಲ್ಲ ಕಡೆಯಲಿ ನುಣ್ಣಗೆ ಲಯವಾದಹಾಗೆ
ತನ್ನೊಳುತಾನೆ ಜÁ್ಞನದಿ ತಿಳಿಯಲು ಚಿನ್ಮಯ
ರೂಪನು ತಾನಾದ ಹಾಗೆ ೨
ರೇಚಕ ಪೊರಕ ಕುಂಭಕವಿರವನು ಸಾಧಿಸು ನಿನಗದು ಊಚು
ಯಾಚಿಸು ಗುರುವಿನ ಕರುಣದ ಕಿಡಿಯಲಿ
ಜ್ಯೋತಿಗೆ ಬತ್ತಿಯ ಚಾಚು
ಈ ಸಚರಾಚರ ದೊಳಗಣ ಜನರಿಗೆ
ನೀಚರ ಸಂಗಕೆ ನಾಚು
ಕೀಚಕನ ವೈರಿಯ ಕೋಣೆ ಲಕ್ಷ್ಮೀಶನ
ಗೋಚರ ದೊಳು ಲಘುತೋಚು ೩


ಜಯತು ಶ್ರೀ ಗಣನಾಥ ಜಯತು ಗೌರಿಪುತ್ರ ಜಯತು
ಸುರಮುನಿವಂದ್ಯಜಯತುಗಣನಾಥ ಪ

ನಿಗಮ ಶಾಸ್ತ್ರ ವಿಚಾರ ಸಕಲಗುಣ ಗಂಭೀರ
ಅಗಜೆಯರಸ ಕುಮಾರ ಹರಿಪೂಜಿತ
ಜಗದ ಜೀವರುದ್ಧಾರ ಸಿದ್ಧಿ ವರದಾಕಾರ
ಅಗಣಿತಾಮಲ ಪುಣ್ಯಚರಿತ ಜನವಿನುತ
ಜಯತು ಜಯತು ೧
ತರಣಿ ಶಶಿ ಹರಿನಯನ ನಿರುತ ಮೂಷಿಕ ಗಮನ
ಶಿರದಿ ಮಣಿಗಣ ಮಕುಟ ಜ್ವಲಿಸೆ ಗಜವದನ
ಕರದಿ ಪಾಶಾಂಕುಶವ ಧರಿಸಿ ಭಕ್ತರಿಗಿಷ್ಠ
ವರಗಳನು ಪಾಲಿಸುತಲಿರುವ ಗಣನಾಥ ೨
ಅಡಿಗಡಿಗೆ ನೆನೆಗಡಲೆ ಗೊನೆಯ ಬಾಳೆಯ ಹಣ್ಣು
ಒಡೆದ ತೆಂಗಿನ ಕಾಯಿಗಳನು ಭಕ್ಷಿಸುತ
ಪೊಡವಿಯೊಳಗಧಿಕ ಕೇಡಲಸರುಹಿಲಿನಿಂದ
ಕಡು ಚೆಲುವ ಮೂರ್ತಿ ಗಣನಾಥ ವಿಖ್ಯಾತ
ಜಯತು ಜಯತು ೩

೩೫
ತಾಯೆ ಕೇಳೆನ್ನ ಬಿನ್ನಪವ ಬಲು
ಮಾಯ ಕಾರನು ಕೃಷ್ಣ ಮಾಡಿದೊಳಿಗವ ಪ
ಮಕ್ಕಳೂಳಿಗವ ತಾಯ್ಗಳಿಗೆ ಹೇಳ
ತಕ್ಕುದು ನೀತಿ ಕೇಳವ್ವ ನಿಮ್ಮಡಿಗೆ
ಸಿಕ್ಕದೋಡವನು ಕೈಗಳಿಗೆ ಇಂಥ
ಠಕ್ಕನ ದೆಸೆಯಿಂದ ದಣುಕೊಂಬುದೆಮಗೆ ೧
ಬೆಳಗು ದೋರದ ಮುನ್ನ ಬರುವ ಕೃಷ್ಣ
ನೆಲುವಿನ ಪಾಲ್ಬೆಣ್ಣೆಗಳ ಕದ್ದು ಮೆಲುವ
ನಿಲುಕದಿದ್ದರೆ ಕಲ್ಲಲಿಡುವ
ಒಳ ಹೊರಗೆಲ್ಲ ಕ್ಷೀರ ಸಮುದ್ರವ ಕರೆವ ೨
ಉಂಡುದ ಕಳಲುವರಲ್ಲ ನೆಲನುಂಡು ಕೆಟುದು
ಪಾಲು ಬೆಣ್ಣೆಗಳೆಲ್ಲ ಮೊಸರ
ಬಾಂಢವೆಂದರೆ ಬರಲೊಲ್ಲ ಇವನ
ಕಂಡೆನೆಂದರೆ ಸುಳುಹನೆ ಕಾಣಲಿಲ್ಲ ೩
ಹೆಣ್ಣ ಮಕ್ಕಳನಿರಗೊಡನು ಬಲು
ಬಣ್ಣಿಸಿ ಕರೆದು ಮುದ್ದಿಸಿ ಆಡುತಿಹನು
ಚಿಣ್ಣರಂದದಿ ಕಾಣುತಿಹನು ತೊಂಡೆ
ವೆಣ್ದಟಿಯ ನಗಲಿಸಿ ನೋಡಿ ನಸುನಗುತಿಹನು ೪
ಆಸೆ ನಮಗೆ ಊರೊಳಿಲ್ಲ ಪರ
ದೇಶಕ್ಕಾದರೂ ಹೋಗಿ ಜೀವಿಪೆವೆಲ್ಲ
ಬೇಸರಾಯಿತು ನಿಮಗೆಲ್ಲ ನಮ್ಮ
ಪೋಕ್ಷಿಸುತಿಹ ಲಕ್ಷ್ಮೀರಮಣನೆ ಬಲ್ಲ ೫

೧೦೪
ದಂಡು ಬರುತಿದೆ ಆರೇರ ದಂಡು ಬರುತಿದೆ
ದಂಡಿನೊಳಗೆ ಸಿಕ್ಕಿ ಸೋಲಿಸಿ ಕೊಂಡು
ಬಂದೆವು ನಾಲ್ಕು ಮಂದಿ ಪ
ಅಮ್ಮ ಲಿಮ್ಮಿ ಬೊಮ್ಮಿ ನಾನು ಸುಮ್ಮನೊಂದು ಮರೆಯಲಿರಲು
ಜಮ್ಮನವರು ಬಂದು ಹಿಡಿದು ಗುಮ್ಮಿಹೋದರು ನಮ್ಮನ್ನೆಲ್ಲ ೧
ಅತ್ತೆಮಾವ ಮೈದುನರು ಎತ್ತಹೋದರೋ ಕಣ್ಣಲಿಕಾಣೆ
ಕತ್ತೆ ಹೆಣ್ಣೆ ಹೋಗು ಎಂದು ಬತ್ತಲೆಬಿಟ್ಟರು ಎನ್ನ ೨
ದಿಂಡ್ಯ ದಿಂಡ್ಯ ಜವ್ವನೆಯರು ಕಂಡ ಕಂಡೆಗೆ ಹೋಗಿ ಬೇಗ
ದಂಡಿನವಗೆ ಸಿಕ್ಕಿ ಕೆಟ್ಟು ಕೊಂಡು ಬಾಳ್ವುದೊಳ್ಳಿತಲ್ಲ ೩
ರಂಡೆ ಮುಂಡೆರೆಂದವರು ಬಿಡರು ಕಂಡಮಾತ ಹೇಳುತೇನೆ
ಪೆಂಡಾರರಿಗೆ ಸಿಕ್ಕು ಕೆಟ್ಟು ಗಂಡು ಕೂಸು ಪಡೆಯದಿರಿ ೪
ಮಾನವುಳ್ಳ ಹೆಣ್ಮಕ್ಕಳು ನಾನು ಪೇಳ್ವಮಾತಕೇಳಿ
ತಾನೆ ಸೇರಿ ಲಕ್ಷ್ಮೀರಮಣ ಧ್ಯಾನವನ್ನು ಮಾಡುಕಂಡ್ಯಾ ೫

೧೦೩
ದಿಕ್ಕೆಯಿಲ್ಲ ನಮ್ಮ ಕಡೆಗೆ ಸೊಕ್ಕಿ ಬಂದರಾರೆರು
ಚಿಕ್ಕ ಮನುಷ ಕೆಂಚೆಗೌಡ ಠಕ್ಕ ಮುನಿಯ ಭಾವಬಿರಿಯ
ಬೆಂಕಿಯಂತೆ ತೋರ್ಪನೊಬ್ಬ ಪರಶುರಾಮನು ಪ
ಆನೆಯಲ್ಲಿ ತೇಜಿಯಿಲ್ಲ ಸೇನೆ ಬಹಳವಾಗಿಯಿಲ್ಲ
ಹೀನಗೆಟ್ಟು ದಂಡು ಬಂದು ಮಾನಗೊಂಡು ಹೆಣ್ಣುಗಳನು
ಭಾನು ಮುಟ್ಟಲೆತ್ತಿ ಆಸಿಯ ದೀನ
ಜನರ ಕೊಚ್ಚಿ ಕಡಿದು ಪ್ರಾಣವನ್ನ ಕೊಳ್ಳಲಿನರು
ಬೇಕು ಬೇಡೆಂದೆಂಬರಿಲ್ಲ ೧
ಆರು ಮೂರೆ ಮಂದಿ ಬಂದು ಊರ
ಮನೆಗಳನ್ನು ಹೊಕ್ಕು
ಚಾರುವರಿದು ಕೊಟ್ಟ ಕಣ್ಣಿಯ ಸೂರೆಮಾಡಿ ಕಟ್ಟಿಕೊಂಡು
ತೆರೆದ ಮನೆಯ ಸುಟ್ಟು ದಾರಿದೆಗೆದು ಹೋಗುವಾಗ
ಧೀರರಾಗಿ ನಿಲ್ಲಿರೆಂದು ಎಂಬವರೊಬ್ಬರಿಲ್ಲ ವೋ ೨
ಯಾವಜನರ ದಂಡು ಗಂಟು ಹಣದಾಸೆಗಾಗಿ ಮಾಡಿ
ದಾವ ಕಡೆಗೆ ಬರುವರೆಂದು ಸೋವ ನೋಡು ತಲ್ಲಿತಮ್ಮ
ಜೀವ ದೊಳಗೆ ಜೀವ ವಿಲ್ಲದಾಗಿ ಜನರುಬಾಯಬಿಡಲು
ಕೋವಿ ಕತ್ತಿ ಎಂಬುದೊಂದು ಶಬ್ದವಿಲ್ಲ ನಮ್ಮ ಕಡೆಗೆ ೩
ಬೀಸಿ ಬೀಸಿ ಕತ್ತಿಯನ್ನು ಸಾಸವನ್ನು ತೋರಿರೋರ
ದಾಸೆಗಾಗಿ ಕಂಡ ಜನರ ಮೋಸದಿಂದ ಕಡಿದುಕೊಚ್ಚಿ
ಲೇಸುಗಾಣದಾಗಿ ಮತ್ತೆ ಭಾಸೆಯಿಂದ ತಮ್ಮ ತಾವೆ
ನೇಸರಡಗಿ ಬಂತು ಪೋಪ ಪಾಳ್ಯಕೆಂದು
ಮಾರ್ಗವಿಡಿಯೆ೪
ಕೆಟ್ಟು ಪ್ರಜೆಯು ನಾಶವಾಗಿ ಸುಟ್ಟು ಮನೆಯು ಮಾರುಬಿದ್ದು
ಹಟ್ಟಿಯೊಳಗಣಾಕಳೆಲ್ಲ ನಷ್ಟ ತೋಟತುಡಿಗೆ
ನಿಟ್ಟು ಹಾಳುಸುರಿಯೆ ಪ್ರಜೇಯು ಹೊಟ್ಟೆಗಿಲ್ಲ ದಳಲುತಿಹುದು
ಸೃಷ್ಟಿ ಗೊಡೆಯನಾದ ಲಕ್ಷ್ಮೀರಮಣ ಬಲ್ಲನೆಲ್ಲವನ್ನು ೫

೧೦೫
ದುರ್ಜನರಿಗೀ ಕಾಲ ಶುಭದಕಾಲ ಸಾದು
ಸಜ್ಜನರಿಗನ್ನಕಿಲ್ಲದ ಸಾವಕಾಲ ಪ
ಅರಮನೆಯ ಬಾಗಿಲನು ಕಾದು ಕೊಂಡಿರ್ದು ನೃಪ
ವರನೊಡನೆ ಮಾತುಕಥೆಗಳ ನಡೆಸುತ
ವರಮಂತ್ರಿಯಾಗಿ ರಾಜಾಧಿ ಕಾರಂಗಳನು
ನಿರುತ ಮಾಡುವಂಗೆ ಇದು ಒಳಿತು ಕಾಲ ೧
ಅಡಗಡಿಗೆ ಮಂತ್ರಿಗಳನಾಶ್ರಯಿಸಿ ಕೋವಿದರು
ಗಡಿಗಳನು ಕೊಡಿಸೆನಗೆ ತನಗೆನ್ನುತ
ಒಡನೆ ಮೇಲಾಡಿ ಹೆಚ್ಚಿಗೆ ಮುಟ್ಟಿಗೆಯ ಹೊತ್ತು
ಕೊಡಿರೆಂದು ಪ್ರಜೆಗಳನು ಬಡಿವ ಕಾಲ ೨
ಮತ್ತಿವರನಾಶ್ರಯಿಸಿ ಕೆಲರು ಮಣಿಹಂಗಳನು
ಪೊತ್ತು ಸೀಮೆಯ ಗ್ರಾಮಗಳ ನೋಡುತ
ಇತ್ತ ಕುಳ ಸ್ಥಳ ವಂಚನೆಗಳೆಂದು ಬಂದ ಕಾ
ರೆತ್ತ ಲೊಕ್ಕಲು ಬಾಯ ಬಿಡುವ ಕಾಲ ೩
ಬುಡಗಳನ್ನು ಗೈದೆ ಹಾಳ್ಮಾಡಿ ಕೊಂಡಿರ್ದರಿಗೆ
ಕಡ ಮೊದಲುಗಳ ಕೊಟ್ಟು ಪೋಗೆಂಬರು
ಅಡೆಯಂಚು ಮೂಲೆಗೆಳಗೈದು ಕುಳದೆರಿಗೆಯನು
ಕೊಡುವವರಿಗೆ ಈ ಕಾಲ ದಣಿವ ಕಾಲ ೪
ಚಾಡಿ ಕೋರರು ಹೆಚ್ಚಿ ಕೆಡಿಸಿವರ ರಾಜ್ಯವನ್ನು
ರೂಢಿ ಪತಿಗಳಿಗೆಲ್ಲ ಕಿವಿಯೇ ಕಣ್ಣು
ನೋಡಿದರೆ ಮರುತ ಸುತ ಕೋಣೆ ಲಕ್ಷ್ಮೀರಮಣ
ನಾಡಿಸಿದ ವೋಲು ಜಗವಾಡುತಿಹುದು ೫

೩೬
ದೇವ ಬಂದ ಭಕ್ತರ ಕಾವ ಬಂದ
ರಂಗ ಬಂದ ಕೋಮಲಾಂಗ ಬಂದ ಪ
ದೇವರ ದೇವ ಬಂದ ದೇವಕಿಯ ಕಂದ ಬಂದ
ಮಾವ ಕಂಸನ ಕೊಂದು ಮದನ ಗೋಪಾಲ ಬಂದ ೧
ಅಚ್ಯುತಾನಂತ ಬಂದ ಸಚ್ಚಿದಾನಂದ ಬಂದ
ಹೆಚ್ಚಿನ ತಮವಗೆಲಿದು ವೇದತಂದವ ಬಂದ ೨
ನಂದನಂದನ ಬಂದ ಸಿಂಧುಶಯನ ಬಂದ
ಇಂದ್ರವಂದಿತ ಬಂದ ಇಂದಿರಾ ರಮಣ ಬಂದ ೩

೩೭
ದೇವದೇವರ ದೇವ ಭಕ್ತ ಸಂಜೀವಿ ಮಹಾನುಭಾವ ಪ
ದಶರಥ ಸುಕುಮಾರ ಜಾನಕೀವರ ಧೀರ
ಅಸಮ ಸಾಹಸಿ ಕಪಿವೆರಸಿ ಲಂಕೆಯಪೊಕ್ಕ ಅಸುರರ
ಕೊಂದ ಶ್ರೀ ರಾಮಾವತಾರ ೧
ಯದುಕುಲದೊಳಗುದಿಸಿ ಮಾತುಲಮದ ಮುಖರನ್ನು ವಧಿಸಿ
ಚದುರತನದಿಂದ ದುಷ್ಟರೆಲ್ಲರ ಮಡುಹಿ ಪದವಿಯನಿತ್ತು
ಪಾಂಡುವರನ್ನೇ ವಹಿಸಿದೆ ೨
ತಿರುಪತಿ ಗಿರಿಯಿಂದ ವರ ಮೃಗ ಪುರದೆಡೆಯೊಳು ನಿಂದು
ಮರೆಹೊಕ್ಕರಿಗೆವರವೀವುದಾನಂದಚರಣ
ಸೇವಕÀ ವೆಂಕಟಾಚಲಗೋವಿಂದ ೩

ಸಾಗರ ತಾ ಹೊನ್ನೆಸರಹುವಿನಲ್ಲಿರುವ

೩೮
ದೇವರ ದೇವ ದಯಾಳು ಭಕ್ತ ಸಂಜೀವನೆ ಪರಮದಯಾಳು
ದೇವಕಿ ದೇವಿಯ ನಂದನು ಸನಕ ಸನಂದನ
ವಂದಿತ ಇಂದಿರಾರಮಣ ಪ
ಸಜಲ ಜಲದ ನಿಭಾಕಾಂತಿಯ ಮಿಗಿಸಿದೆ ನಿನ್ನ ಸರ್ವಾಂಗ
ಅಜಸುರಗಣವಂದಿತಪಾದಕಮಲವ
ಭಜಿಸುವ ಭಕುತರಹೃದಯನಿವಾಸ ೧
ಆಲಿಯೊಳಗೆ ನೋಡಿ ಭಕ್ತರ ಮೇಲೆ ಕೃಪೆಯಮಾಡಿ
ಪಾಲಿಸೋ ಗೋಪಾಲ ಬಾಲ ಗೋಪೀಜನ ಲೋಲ
ತುಳಸಿವನಮಾಲ ಶ್ರೀ ಲೋಲ ೨

ಸರಸಿಜಗದೆ ಶಂಖಾರಿ ಕರದೊಳು ಮೆರೆವ ಪೀತಾಂಬರಧಾರಿ
ತರಣಿ ಸಾಸಿರ ಕೋಟಿ ತೇಜರಂಜಿತ ಪಂಕರುಹವದನ
ಮಣಿಮುಕುಟ ಕುಂಡಲನೆ ೩

ವೃಂದಾವನದೊಳಗಾಡಿ ಗೋಪೀ ವೃಂದದೊಡನೆ ನಲಿದಾಡಿ
ವೃಂದಾರಕರು ನರ್ತಿಸೆ ನಭದೊಳು ಗೋವೃಂದದೊಡನೆ
ಗೋಕುಲದೊಳಾಡುವನೇ ೪

ತರು ತುರು ವಿಂಡುಗಳ ಸಂದಣಿಯೊಳು
ಬಲಿರುಗು ಕಹಳೆಕೊಂಬುಗಳ
ಬಿರುದ ಬಾರಿಸುತ ಹೊಂಗೊಳಲನೂದುತ
ಹೊನ್ನೇ ಸರಹಿನೊಳಗೆ ನಿಂದ ವೇಣುಗೋಪಾಲ ಕೃಷ್ಣ ೫

೧೦೬
ದೇವರ ಪೂಜೆಯ ಮಾಡಿರೋ ಮಾಡಿ ಬಿಟ್ಟರು ಬಿಡಿ
ಭೂದೇವರ ಪೂಜೆ ಮಿಗಿಲು ಬಿಡಬೇಡ ಪ
ಉಂಬೋ ದೇವರ ನೋಡಿ ಕರೆತಂದೊಯ್ಯನೆ
ಶಂಭು ಶ್ರೀಹರಿ ಎಂದು ಮನತಂದು ಕರು
ಣಾಂ ಬುಧಿ ಮಣಿಯೊಳೇರಿ ಎಂದು ಹರು
ಷಾಂಬುಧಿಯೊಳು ಪಾದ ತೊಳೆದು೧
ಮಾತನಾಡುವ ದೇವನಿವನೆಂದು ಸಂಪ್ರೀತಿಯಿಂದಲೆ
ಈತ ಶಿವನೆಂದು ಜಾತಿ ಶ್ರೀ ಗಂಧ ಪುಷ್ಪವ ತಂದುಮನ
ವೊತು ಪೂಜೆಯನು ಮಾಡಿರೋ ಎಂದು ೨
ಎಡೆಮಾಡಿ ಷಡುರಸಾನ್ನವ ನಂದು ಉಣ
ಬಡಿಸೆ ನಾರಿಯರಟ್ಟುದನುತಂದು
ಕಡುಬು ಕಜ್ಜಾಯ ಘೃತವನಂದು ಜಗ
ದೊಡೆಯ ನುಂಡನು ಸಾಕು ಬೇಕೆಂದು ೩
ಉತ್ತರಾಪೋಶನವನು ಕೊಟ್ಟು
ಹಸ್ತವ ತೊಳೆದ ಮೇಲ್ವೀಳ್ಯವ ಕೊಟ್ಟು
ಮತ್ತೇನಾ ಪೋಪೆನೆಂದರೆ ಪೊಡಮಟ್ಟು
ಚಿತ್ತೈಸಿ ಮರಳಿಬರಬೇಕು ದಯವಿಟ್ಟು ಎಂದು ೪
ಪ್ರತಿಮೆಗಿಕ್ಕಿದರಲ್ಲೆ ಇಹುದು ಮತ್ತೆ
ಕ್ಷತಿಗೆ ಹಾಕಲುಬೇಕು ಬೇಡೆನ್ನಾದಿಹುದು
ಅತಿಥಿಗಿಕ್ಕಲು ಸಾಕು ಬೇಕೆನ್ನುತಿಹನು ಲಕ್ಷ್ಮೀ
ಪತಿಗಿದು ಪೂಜೆ ಸಂಪೂರ್ಣವಾಗಿ ೫

ಪ್ರಜೆಗಳ, ಅಧಿಕಾರಿಗಳ ನಡುವಿನ

೧೦೮
ಧರಣೆಯನಾಳ್ವ ಪಾರ್ಥಿವರಿಂಗೆ ಪ್ರಜೆಗಳು ಬೇಡವಾಯ್ತು
ವರಹದ ಮೇಲಣಾಸೆಯಿಂದ ರಹಿತರ ಬಡಿವುದಾಯ್ತು ಪ
ರಾಜ್ಯಕೆ ದಂಡ ಹಾಕಿದರು ತೀರಿತೆಲ್ಲಿ
ಪ್ರಜೆಗಳ ಬಾಳು ನಜರು ಕೊಡುವುದಾಯ್ತು
ತೆರತೆರುವುದರಿಂದ ವರಹಕೊಂಡು ಬಂದು
ಏರೆಯ ರೂಪಾಯಿಗಳನು ಎತ್ತಿ ದಂಡಿಗೆ ಕೊಡುವುದಾಯ್ತು ೧
ಮತ್ತೆ ಸೇನಭೋಗರು ಶಿರಸ್ತೆದಾರರು ಸಾವಿರ ಸಾವಿರ
ವೆತ್ತಿ ಜನಕೆ ಬೆದುಕಮಾಳ್ವ ಕರಣಿಕರಿಗೆ
ಪತ್ತು ನೂರು ಮೂರು ಸಾವಿರವೆಂದು ದಂಡವನುಕಟ್ಟಿ
ವಿತ್ತವನ್ನು ಸೆಳೆದರದುವೆ ಬಿತ್ತು ಬೇರೆ ಪ್ರಜೆಗಳ ಮೇಲೆ ೨
ಸೂಳೆ ಮಾಲೆಯರನು ಕರೆಸಿ ಜನಕೆ ಸಾವಿರದಂಡಕಟ್ಟಿ
ಕೂಳತಿನಲು ಬಿಡದೆ ತರುಬಿವಾಲೆ ಮೂಗುತಿ ನಾಣ್ಯಗೊಂಡು
ಬೀಳು ಕೊಟ್ಟು ಮನೆಗೆ ಅಂಗಡಿ ಸಾಲುವಳಿಗೆಯರನು
ಕಾಲನಂತೆ ದಣಿಸಿ ರೊಕ್ಕದ ಜಾಳಿಗೆಯನು ಕೊಂಡು ಮೆರೆವ ೩
ಸುಲಿಗೆಯಾಗ ದುಳಿಯಲಿಲ್ಲ ಬೆಳೆದ ಬೆಳೆಯ ನುಣ್ಣಲಿಲ್ಲ
ಹೊಳಲ ಸುಟ್ಟು ಬಿಟ್ಟುದೆಲ್ಲ ಕುಲಕೆ ಪಶುಗಳುಳಿಯಲಿಲ್ಲ
ತಲೆಯ ಚಂಬುಹಾರಿತಲ್ಲ ಜನರು ಸತ್ತು ಹೋದುದೆಲ್ಲ
ಮಲೆತ ರಿಪುಗಳನ್ನು ಕುಟ್ಟಿ ಪ್ರಜೆಗಳ ಕಾಯ್ದು ಕೊಳ್ಳಲಿಲ್ಲ ೪
ತಿರುಕರಿಂಗೆ ಸುಖಿಗಳಿಂಗೆ ಹರುವೆ ಸೊಪ್ಪುಮಾರ್ವರಿಂಗೆ
ತರುಣಿಯರನು ಬಿಟ್ಟು ತಲೆಯ ಹೆರೆಸಿ ಕೊಂಡಲೆಗಳರಿಂಗೆಗೆ
ಹಿರಿದು ಕಿರಿದು ಎಂದು ಬಿಡದೆ ಮರುತ ಸುತನ ಕೋಣೆಲಕ್ಷ್ಮಿ
ಯರಸ ರುದ್ರರೂಪಧರಿಸಿ ಜನರಿಗಿನಿತು ಮಾಡಿದ ೫

೧೦೭
ಧರ್ಮದಮಾತು ಹಳಸಿ ಬಂದಿತು ಯುಗ
ಧರ್ಮದಿಂದದು ವನವನು ಸೇರಿತು ಪ
ಆಟ ನೋಟಕೆ ಉಂಟು ಪೋಟ ಪುಂಡರಿಗುಂಟು
ಮೀಟಾದ ಮನೆ ಮಾರ ಕಟ್ಟಲುಂಟು
ಕಾಟಕ ದೊರೆಗೆ ದಂಡವನು ಕೊಡಲಿಕುಂಟು ಚಂದ್ರ
ಜೂಟಗರ್ಪಿತವೆಂದು ಕೊಡಲು ದ್ವಿಜರಿಗಿಲ್ಲ ೧
ಕಲ್ಲು ಮಣ್ಣಿಗೆ ಇಕ್ಕಲುಂಟು ಆಕಳ ಎಮ್ಮೆ
ಕೊಳ್ಳಲಿ ಕುಂಟು ಕೈಯೊಳು
ಹೊನ್ನು ಚಿನ್ನಗಳ ಬಂಗಾರ ಮಾಡಿಸಲುಂಟು
ಇಲ್ಲದೇಹಿ ಎಂದು ಯಾಚಿಪದ್ವಿಜರಿಗೆ ೨
ಬಣ್ಣ ಸಣ್ಣಗಳ ಕೊಡಲಿ ಕುಂಟು ಕಾಮನ
ಕಣ್ಣಿಗೆ ಸಿಲುಕಿ ಕಳೆಯಲಿ ಕುಂಟು
ತನ್ನ ಕೈಯಾರೆ ಲಕ್ಷ್ಮೀಶಗರ್ಪಿತವೆಂದು
ಮನ್ನಿಸಿ ದ್ವಿಜರಿಗೀಯಲಿಕೆ ದುಡ್ಡುಗಳಿಲ್ಲ ೩

ಮನೆದೇವರು ಕೊಲ್ಲೂರು ಮೂಕಾಂಬಿಕೆಯ

೩೯
ನಂಬಿದೆ ನಾ ನಿನ್ನ ಚರಣಾಂಬುಜಗಳ
ಶ್ರೀ ಮೂಕಾಂಬ ದೇವಿ
ಬೆಂಬಿಡದನುದಿನ ಬೇಡಿದ ವರವೀವ
ಶ್ರೀ ಮೂಕಾಂಬ ಪ
ಕಪಟ ನಾಟಕಿ ನಿನ್ನ ಮಹಿಮೆಯ
ನರಿವರೆ ಶ್ರೀ ಮೂಕಾಂಬ
ಕುಪಿತ ಮಹಿಷ ದುಷ್ಟದಾನವ ಸಂಹಾರಿ
ಶ್ರೀ ಮೂಕಾಂಬ ೧
ವಾರಾಹಿ ನಿಜವೇಣಿ ಶ್ರೀ ಮೂಕಾಂಬ
ಸಾರ ಗೋಪಮವಾಣಿ ಶ್ರೀ ಮೂಕಾಂಬ
ಧ್ರುತ ಸಾರಂಗ ಗಾಮಿನಿ ಶ್ರೀ ಮೂಕಾಂಬ ನೀರಂಗ
ರೂಪಿಣಿ ಮೂಕಾಂಬ ೨
ಧರೆಯೊಳಧಿಕವೆಂಬ ಕೊಲ್ಲೂರು ಪುರದೊಳು
ಸ್ಥಿರವಾಸಿ ಶ್ರೀ ಮೂಕಾಂಬ
ಪರಿಪರಿ ಭಕ್ತಗೆ ಬೇಡಿದ ವರವೀವ ಶ್ರೀ ಮೂಕಾಂಬ ೩

೪೦
ನಾ ನಿನ್ನ ನಂಬಿದೆನೊ ಗೋಪಾಲಕೃಷ್ಣ ನಿನ್ನ ನಾನಂಬಿದೆನೊ
ಎನ್ನ ದಾನೆಂದೆಂಬ ಹಮ್ಮಿನವಶದಲಿ ಸುಮ್ಮನೆ ಮುಳುಗಿದೆನೋ
ಶ್ರೀ ಹರಿಯೆ ನಿನ್ನನಾ ನಂಬಿದೆನೋ ಪ
ಕನಸಿನಂದದಿ ತೋರುವನು ಸುಖಘನ ಸಿರಿ ಸಹಿತಲಾಗಿ
ಚಿನುಮಯಾತ್ಮಕ ಆನಂದ ಕಟಾಕ್ಷದಿ
ತನಯ ನೆಂದೆನ್ನನು ಕಾಯೋ ಮುರಾರಿ ೧
ದ್ರಷ್ಟವಾಗಿಹುದೆಲ್ಲ ಸಟೆಯಿದು
ನಷ್ಟವಾಗಿಯೆ ಪೋಪುದೋ
ಕಷ್ಟ ಸಂಸಾರದ ಬಟ್ಟೆಯು ಸ್ಥಿರವೆಂಬ
ತೊಟ್ಟ ಮುರಿದು ಕಾಯೋ ಶಿಷ್ಟ ಮುರಾರಿ ೨
ಆಸೆಯಂಬಂಗನೆಯ ನಾಶವಮಾಡಿ ಸಲಹೋ ಎನ್ನ
ವಾಸುದೇವನೆ ನಿನ್ನ ದಾಸನ ಕರುಣದಿ ಪಾ
ಲಿಸಿ ಕಾಯೋ ಲಕ್ಷ್ಮೀಶ ಮುರಾರಿ ೩

೪೧
ನಾನು ತಿಳಿದವನಲ್ಲ ನೀ ಕಾಯ್ದೆ ಶ್ರೀ ಕೃಷ್ಣ
ನಾನರಿಯದಿರ್ದಡಿದ ನೀನರಿಯದವನೇ ಪ

ಒಂದು ದಿನ ನಿನ್ನ ಧ್ಯಾನದಿ ನಡೆದು ಬರುತಿರಲು
ಕೊಂದು ಚೂತದ ನೆಳಲಸಾರಿ ನಾನು
ಒಂದು ನಿಮಿಷಮ ನೀರ ತಡಿಯಲಿ ಸಂಚರಿಸುತಿರ
ಲೊಂದು ತಕ್ಷಕ ಬಂದು ವನವ ಹೊಕ್ಕಿರಲು ೧

ಮಲ ಮೂತ್ರದುಪಹತಿಯ ಪರಿಹರಿಸಿ ಕೈಗಳನು
ಜಲಮೃತ್ತಿಕೆಗಳಿಂದ ತೊಳೆದು ತೊಳೆದು
ಎಳೆ ಬಿಸಿಲ ಸೇವಿಸುತ ದಂತಧಾವನ ಗೈದು
ಸಲಿಲವನೆ ಮುಕ್ಕುಳಿಸಿ ಕೇಲದೊಳುಗಿದು ೨

ನಿಂತು ಕಾಲ್ಮೊಗ ದೊಳೆದು ಆಚಮಿಸಿ ಆದಿತ್ಯ
ನಂತಿ ಕಕೆ ಸಲಿಲಮಂತಿದ್ದಿ ಜಪವಾ
ಅಂತ ರಂಗದಿ ಜಪಿಸಿ ಮುಗಿಸಿ ವಸ್ತ್ರಗಳಿಟ್ಟು
ಗೊಂತಿಗೈತಂದವನು ಮರಳಿಧರಿಸಿ ೩

ಹಚ್ಚಡವ ಹೊದ್ದು ಮುಂದಕೆ ನಡೆದು ಬರುತಿರ
ಲಾಶ್ಚರ್ಯವೆನಿಸಿ ಬದಿಯೊಳಗುಮ್ಮಲು
ಸ್ವಚ್ಚವಲ್ಲವಿದೆಂದು ಕಿಮುಚಿನಾ ನೋಡಿ ಬಲು
ಬೆಚ್ಚಿ ಹಚ್ಚಡ ಬಿಸುಡೆ ಬಿಚ್ಚೆ ಪೆಡೆಯಲು ಕಂಡೆ ೪

ನೀ ಕೊಲುವ ಕಾಲದೊಳು ಕೊಲುವರಿಲ್ಲ
ಲೋಕೈಕನಾಥ ಚಿಪ್ಪಳಿ ವೇಣುಗೋಪಾಲ
ನೀ ಕರುಣದಿಂ ಕಾಯ್ದೆ ಎನ್ನಸುವನು ೫

ಚಿಪ್ಪಳಿಗೋಪಾಲಕೃಷ್ಣನನ್ನು ಪರಮದೇವರು

೪೨
ನಾರಾಯಣ ನರಹರಿಯೆ ನರ ಜನ್ಮದಿ ಸಿಲುಕಿದೆನು
ಮರಳಿ ಜನಿಸದಂದಲೆನ್ನ ಕರುಣಿಸೋ ಕ್ಷೀರವಾರಿಧಿಶಯನ ಪ
ಮುರಹರ ಮಧುಸೂಧನ ಶ್ರೀಹರಿ ಧರಣೀಧರ ವರಾಹ
ನಾರಾಯಣ ವಟು ವಾಮನ ಕೇಶವ ವಾರಿಜದಳನಯನ ೧
ನಂದನಂದನ ಹರಿಯೆ ನಾರದವಂದಿತ ಸುರ ಸಂಹಾರಿ
ಇಂದ್ರನಮಿತ ಪುರುಷೋತ್ತಮಾವಧು
ಮಂದಜಾಯತನಯನ ೨
ಅರಿಗದೆ ಶಂಖಾಬ್ಜ ಕರದೊಳು ಮೆರೆವ ಪೀತಾಂಬರ ಧಾರಿ
ಕರಿವದನನೆ ಕಾಳಿಂಗಮರ್ಧನ ಸರಸಿರುಹದಳನಯನ ೩
ಚಿತ್ತಜ ಪಿತ ಹರಿಯೆ ಭವಗುತ್ತದಿ
ಮುಳುಗಿದೆನು ಎತ್ತು ಕಮಲನಯನ ೪
ಹಾಳು ಗುಣಿಯಲಿ ಪಶುವು ಬೀಳಲು ತಾನೇಳ
ಬಲ್ಲುದೇ ಕರು
ಣಾಳುಗಳೆತ್ತುವಂತೆನ್ನ ಚಿಪ್ಪಳಿಗೋಪಲ
ಎತ್ತಿಕೋ ಹರಿಯೇ ೫

೪೪
ನಾರಾಯಣ ಹರಿ ಎನ್ನ ಭವ ಸಾಗರವನು
ದಾಂಟಲಿಕಿದುಸಾರಾ ಪ
ಅಚ್ಯುತಾನಂತ ಗೋವಿಂದ ಕೇಶವ ಎನ್ನಿ
ಸಚ್ಚಿದಾನಂದ ಶ್ರೀ ಕೃಷ್ಣ ನೆನ್ನಿ
ಹೆಚ್ಚಿದ ದುರುಳದಾನವರ ಸಂಹರಿಸಿದ
ಮುಚುಕುಂದ ವರದಾಯಕ ನೆನ್ನಿ ೧
ನೀಲ ಮೇಘ ನಿಭಾಂಗ ರೂಪನು ಎನ್ನಿ
ಕಾಳಿಯ ತುಳಿದ ಗೋಪಲ ನೆನ್ನಿ
ಪಾಲು ಮೊಸರು ಬೆಣ್ಣೆಗಳ್ಳನಿವನುಎನ್ನಿ
ಭೂಲಲನೆಯ ಗಂಡ ನೀತ ನೆನ್ನಿ ೨
ಶಂಖ ಚಕ್ರಗದೆ ಪದ್ಮಧರನು ಎನ್ನಿ
ಶಂಕರ ಪ್ರಿಯ ಮುರ ವೈರಿಯೆನ್ನಿ
ಪಂಕಜ ವದನ ಕಸ್ತೂರಿ ತಿಲಕನೆನ್ನಿ
ಡೊಂಕ ತಿದ್ದಿದ ಕುಬುಜೆಯನೀತನೆನ್ನಿ ೩
ರಾಣಿಯ ನೊಯ್ದ ರಾವಣನ ಕೊಂದವನೆನ್ನಿ
ಬಾಣಾಸುರನ ತೋಳ ತರಿದವನೆನ್ನಿ
ಚಾಣೂರ ಮಲ್ಲರ ಮುಷ್ಟಿಕರ ಸಂಹರಿಸಿದ
ವೇಣುನಾದ ಪ್ರಿಯ ಶ್ರೀರಂಗ ನೆನ್ನಿ ೪
ನಾಮವೇಗತಿ ಎನ್ನಿ
ನಾಮವೇ ಮತಿ ಎನ್ನಿ
ನಾಮವೇ ಪರಕೆ ಸಾಧನವು ಎನ್ನಿ
ಪ್ರೇಮದಿಂದಲಿ ರಸನೆಯೊಳು ಲಕ್ಷ್ಮೀಶನ
ನಾಮ ಸ್ಮರಣೆಯನು ನುಡಿನುಡಿಗೆನ್ನಿ ೫

೪೩
ನಾರಾಯಣ ಹರಿ ನಾಮವ ಭಜಿಪಗೆ ನರಕದ ಭಯವುಂಟೆ
ನಾರದ ಸನಕ ಸನಂದನ ಸುರನರ ಪಾಲಿತ ಕರುಣಾಕರನರಹರಿ ಎಂದು ಪ

ಖಗರಾಜಗಳುಕದ ಉರಗನುಂಟೆ ದೊಡ್ಡ
ಮೃಗರಾಜ ಗಳುಕದ ಆನೆಯುಂಟೆ
ನಿಗಮಗೋಚರ ನಿತ್ಯ ಜಗದುದರನೆ
ಜಗದೊಡೆಯ ಜಾಹ್ನವಿಪಿತ ತ್ರಿಗುಣ ನಿರ್ಗುಣನೆಂದು೧
ಕುಂಭಜ ಗಳುಕದ ಅಂಭುಧಿಯುಂಟೇ
ತ್ರಯಂಬಕ ನುರಿಗಣ್ಣ ಲುಳಿದವರುಂಟೆ
ಅಂಭುಧಿ ಶಯನ ಪೀತಾಂಬರಧರ ಕರುಣಾಂಬುಧಿ
ಬಲಿಬಂಧನ ನರಹರಿ ಎಂದು ೨
ಕುಳಿಶಕಳುಕದ ಪರ್ವತವುಂಟೆ ಚಲುವ
ನಳಿನ ಮಿತ್ರನ ಮುಂದೆ ತಮವುಂಟೆ
ನಳನಳಿಸುವ ಮುದ್ದು ಮೊಗದ ಮೋಹನ
ಕಾಮ ಚೆಲುವ
ಜಲಜಮಿತ್ರ ಕುಲಲಲಾಮನೆ ಎಂದು ೩
ಹರಿಯೆ ರಕ್ಷಿಸಲು ಕೊಂದವರುಂಟೆ ಮನ
ಮುರಿದು ಕೊಂದರೆ ಕಾವವರುಂಟೆ
ಮುರಹರ ನಾರಾಯಣ ನರಹರಿ
ಕರಿವರದ ಪಾಲಿತ ಸುರನರರ ಸೇವಿತನೆಂದು ೪
ಅನಿಲಗಳುಕದ ಅಭ್ರಗಳುಂಟೆ
ಹುತಾಶನನಿಗಳುಕದ ಕಾನನವುಂಟೆ
ವನರುಹಾಂಬಕ ವಾಯುತನಯ ಕೋಣೆಯ ಲಕ್ಷ್ಮಿರಮಣ
ಸನಕ ಸುತ ಚಿನುಮಯಾತ್ಮಕನೆಂದು ೫

ಪುಂಡರಿಂದ ಪ್ರಜೆಗಳಿಗೆ

೧೦೯
ನಿಂತರಿಪಲು ಬಗೆಯಿಲ್ಲ ಕಷ್ಟಬಂತು ಪ್ರಜೆಯನು
ಪಾಲಿಪರೊಬ್ಬರಿಲ್ಲ ಪ
ದಂಡಾದಿ ರಾಜ್ಯವು ಕೆಟ್ಟು ಪೋಕ
ಪುಂಡರು ಹೆಚ್ಚಿ ಮಾರ್ಗವತೋರಿ ಕೊಟ್ಟು
ಪೆಂಡಾರರಿಗೆ ಸುಲಿಗೆ ಕೊಟ್ಟು ಭೂ
ಮಂಡಲದೊಳಗಣ ಜನರೆಲ್ಲ ಕೆಟ್ಟು ೧
ಎತ್ತು ಮುಟ್ಟುಗಳೆಲ್ಲ ಹೋಗಿ ಬೀಳು
ಬಿದ್ದು ಗದ್ದೆಯ ಪೈರು ನಿಸ್ಥಳವಾಗಿ
ತುತ್ತುರಿಗಳು ಸುಟ್ಟು ಹೋಗಿ ದಂಡು
ನಿತ್ತು ಪ್ರಜೆಗೆ ಮನೆ ಮುಖವಿಲ್ಲದಾಗಿ ೨
ಕರಿದೋ ಬಿಳಿದೋ ಕಾಣೆ ಕ್ಷೀರ ಕೊಡುವ
ತರುಗಳಿಲ್ಲವು ಮರ ಒಣಗಿ
ಅರಮನೆ ಯತ್ತಣಿಂ ಘೋರ
ಕರೆ ಕರೆಯೊಳು ಬಂದಿತಯ್ಯ ಗ್ರಹಚಾರ ೩
ಗಂಜಿ ಗಾಸ್ಪದವಿಲ್ಲವಾಯ್ತು ಮೂರು
ಸಂಜೆಯ ದೀಪಕೆ ಕೊಳ್ಳಿ ಬೆಳಕಾಯ್ತು
ಅಂಜನ ಪಾತ್ರೆ ಹೆಚ್ಚಾಯ್ತು ಬದುಕಲು
ನಾಲ್ಕು ವರ್ಣ ಒಂದಾಯ್ತು ೪
ಕಾಲಗತಿಯು ಬಲು ಬಿರುಸು ಮುಂದೆ
ಬಾಳುವ ಜನರಿಗೆ ನೃಪರಿಂದ ಹೊಲಸು
ಶೂಲಿ ಸಾಯುಜ್ಯವ ಬಯಸು ಲಕ್ಷ್ಮೀ
ಲೋಲನ ನಾಮವ ಮನದೊಳುಚ್ಚರಿಸು ೫

೧೧೦
ನಿನ್ನೊಳು ನೀನೆ ತಿಳಿದು ನೋಡು ಗುರುವಿನ್ನೊಬ್ಬ
ಬೇಡಧ್ಯಾನಿಸಿ ನೋಡು ಪ
ಹಂದಣ ಭವ ಮುಳುಗಿ ನೀನಾರು ಅಲ್ಲಿ
ತಂದೆ ತಾಯಿಗಳು ಮತ್ತವರಾರು
ಅಂದಿನವನಿತೆಯಾಗಿಗಳಾರು ನಿನ್ನ
ನಂದನರೆನಿಸಿ ಬಂದವ ರಾರೋ ೧
ಮುನ್ನ ಮಾಡಿದ ಹೊಲಮನೆಯೆಲ್ಲ ನಿನ್ನ
ಬೆನ್ನು ಬಂದಗ್ರಜಾನುಜರೆಲ್ಲ ಚೊಕ್ಕ
ಚಿನ್ನ ಚಿಗುರು ಬೆಳ್ಳಿ ನಗವೆಲ್ಲಿ ಪಶು
ಹೊನ್ನು ಕನಕ ಮಿತ್ರ ಜನರೆಲ್ಲ ೨
ಇಂದಿನ ಭವದೊಳು ನಿನಗೆಲ್ಲಿ ಈಗ
ಬಂದು ಕೊಡಿದ ಸಂಸಾರವೆಲ್ಲಿ ಮುಂದೆ
ಹೊಂದಿ ಹುಟ್ಟುವ ಠಾವುಗಳೆಲ್ಲ ಅಲ್ಲಿ
ಬಂಧು ಬಳಗ ನೆರೆದಿಹುದೆಲ್ಲ ೩
ಹಲಬರ ನೆರವಿಯ ದೇಹವಿದು ಹೊಳೆ
ಯೊಳಗೆ ಕೂಡಿದ ಕೊರಡಂತಿಹುದು
ಚಳಿಕ ತನ್ನಯ ಈ ಋಣ ತೀರುವುದು
ಎಲ್ಲ ಬಯಲಿಗೆ ಬಯಲಾಗಿ ಹೋಗುವುದು ೪
ಸಾರವಿಲ್ಲದ ಸಂಸಾರವಿದು ನಿ
ಸ್ಸಾರ ದೊಳಿಹ ಪರ ಕೆಡುತಿಹುದು ಈ
ಘೋರವನುಳಿದು ನಿರ್ಮಲನಹುದು ಲಕ್ಷ್ಮೀ
ನಾರಾಯಣನ ಪಾದ ಕೊಡುವುದು೫

೧೧೧
ನಿಮ್ಮಿಚ್ಛೆ ಏನೇನು ಇಲ್ಲ ಎಲ್ಲಾ ಪರಮಾತ್ಮ ನಾಟ ಪ
ಪಗಲಿರುಳಾರಿಂದಬಹುದು ರವಿಶಶಿ ದಿಗುವಿವರವ
ಬೆಳಗುತಲುದಿಸುವರು ಗಗನ ಮಾರ್ಗದಿ ಮಳೆ ಬಹುದು
ಜಗದುದರನಾಟದಿ ಸೃಷ್ಟಿ ಸ್ಥಿತಿಲಯವಹುದು ೧
ಜ್ವಲಿಸಿ ತಾರೆಗಳುದಿಸುವುದು ಜಾಲದೊಳಗೆ
ಮುಳಗದಂತೆ ಇಳೆಯು ಇರುತಿಹುದು
ಸುಳಿದು ಗಾಳಿಯು ಬೀಸುತಿಹುದು ಮೃತ್ಯು
ಎಳೆದು ಹೊಸೆದು ಕಾಲ ಬಳಿ ಕೊಲ್ಲುತಿಹುದು ೨
ನಿನ್ನಿಂದಲೇವಾಗುತಿಹುದು ನಾನು ನನ್ನದು
ನಾನು ಮಾಡಿದೆನೆನ್ನುತಿಹುದು
ತನ್ನ ತಾನಾಗಿ ಹೋಗುವುದು ಕೆಟ್ಟರೆನ್ನರುಶಿವನು
ಕೆಡಿಸಿದನೆನ್ನುತಿಹರು ೩
ಬಾಲ್ಯಯೌವನವು ತೋರುವುದು ನಿನ್ನ
ಸ್ಥೂಲ ಶರೀರದೊಳಗೆ ಮುಪ್ಪುಬಹುದು ಕಾಲ
ಕಾಲಕಾಗುವುದಾಗು ತಿಹುದುವಧಿ
ಕಾಲತೀರಲು ತನಗೆ ತಾ ಲಯವಹುದು ೪
ಉಳ್ಳಷ್ಟ ಮೀರ ದಂತಿಹುದು ಎಲೆ
ಅಲ್ಲಾಡಲಾತನಾಜ್ಞೆಯ ಲಾಡು ತಿಹುದು
ನಿಲ್ಲದೊಡುವ ವಾಯುಸುತನ ಕೋಣೆಯ ಲಕ್ಷ್ಮೀ
ನಲ್ಲನಪ್ಪಣೆಯ ಊಳಿಗ ಸಾಗುತಿಹುದು ೫

೪೫
ನೀನಿಲ್ಲದಾರಿಲ್ಲ ಜಗದೊಳು ನಿತ್ಯ ನೀನೆ
ಸಲಹೆ ಜನರನು ಅನ್ನಪೂರ್ಣೆ ಪ
ಉಲ್ಲಾಸದಿಂದಲಿ ಪಲ್ಲಕ್ಕಿಯ ಮೇಲೆ ನೀ
ಕುಳ್ಳಿರ್ದು ಛತ್ರ ಚಾಮರ ವ್ಯಜನಗಳಿಂದ
ಅಲ್ಲಿ ಗಲ್ಲಿಗೆ ನೃತ್ಯಗೀತ ವಾದ್ಯುಪಚಾರ
ದಲ್ಲಿ ಉತ್ಸವದಿ ಬರುವ ಸಂಭ್ರಮವಕಂಡೆ ೧

ಹಾಡಿ ಪಾಡಿಸಿ ಕೊಳುತ ಚತುರ್ವಿಧ ಗೂಡಿದ
ಮಂತ್ರ ಸ್ತುತಿಗಳಿಂದಲಿ
ಕೂಡಿದ ಜನರ ಸಂದಣಿಯಲ್ಲಿ ಮನೆಯಲ್ಲಿ
ಬೇಡಿದ ಜನರಿಂಗಿಷ್ಟಾರ್ಥವ ನೀವುದ ಕಂಡೆ ೨

ಮೂರು ಮೂರುತಿ ನೀನೆ ನಿರ್ಮಿಸಿ ಮತ್ತೆ
ಮೂರು ಗುಣಂಗಳ ಧರಿಸಿ
ತಾರಣ ರೂಪೆ ಸೃಷ್ಟಿಸ್ಥಿತಿಗಳನು ಸಂಹಾರವ
ಮಾಳ್ಪ ಚೈತನ್ಯ ರೂಪೆಯಕಂಡೆ ೩

ಬಿಂಕವ ಮುರಿದೆ ಜನರ ಸಾಕಿನ್ನು ಭಯಂಕರವನು
ಬೀರದಿರು ತಾಯೆ ಎನ್ನ ಮಾಡಲ ಮನೆಯೊಳು ನೆಲಸಿ
ಭಕುತರನು ಶಂಕರಿ ಸಲಹೆ ದಯದೊಳನ್ನಪೂರ್ಣೆ ೪

ಎಲ್ಲ ಜೀವರಿಗು ಜೀವಳು ನೀನು
ಇಲ್ಲಿನ್ನು ನಿನಗಿಂತ ಬಲ್ಲಿದರು
ಇಲ್ಲಮ್ಮ ವಿಜಯದಶಮಿಯೊಳು ನೀ ಬಂದು
ಕೊಲ್ಲೂರ ಮೂಕಾಂಬೆಯೊಳಿರ್ದುದ ಕಂಡೆ ೫


ನೀನೆ ರಕ್ಷಿಸು ಎನ್ನ ಗಣಪತಿ ಧ್ಯಾನಿಸುವೆನು ನಿನ್ನ
ಮಾನವರೊಳು ಮಾನ ಹೀನನಾದೆನಗೆ ಸುಎ್ಞÁನವ
ಕರುಣಿಸಿ ಸಲಹೋ ದಯಾಳೋ ಪ

ಗೌರಿವರತನಯ ನಿನ್ನ ಕೊಂಡಾಡುವೆ ಕೀರ್ತನೆಯ
ಮಾರ ಹರನ ಸುಕುಮಾರ ಶರಧಿ ಗಂಭೀರ ಉ –
ಧಾರ ವೈಯ್ಯಾರ ನೀಧೀರ ೧

ಮೂಷಕ ವಾಹನನೆ ಕರದಿ ಪಾಶಾಂಕುಶ ವಿಡಿದಿಹನೆ
ದೇಶಿಕರನು ನೆರೆ ಪೋಷಿಸಿ ದುರಿತ
ರಾಶಿಯ ನಾಶಿಸುವ ಗುಣ ನಿಧಿಯೇ ೨

ನಾಗವಾಹನ ನಮಿತ ಸುರನರ ನಾಗ ಕಿನ್ನರ ಸೇವಿತ
ನಾಗ ವೈರಿಯ ಸುತ ನಾಗಶಯನ ನುತ
ನಾಗ ಮುಖನೆ ಘೋರ ನಾಗಭೂಷಣನೆ
ನೀನೆ ರಕ್ಷಿಸುಎನ್ನ ೩

ಇಕ್ಷು ಪಣ್ ಫಲಗಳನು ನಾನಾ
ಭಕ್ಷ್ಯ ಭೋಜ್ಯಂಗಳನು ಭಕ್ಷಿಸಿ ಕುಜನರ
ಶಿಕ್ಷಿಸಿ ಸುಜನರ ರಕ್ಷಿಪೆ ನಿರುತ ನೀ
ದಕ್ಷ ಮುಖಾರಿ ಸುತನೆ ೪
ಹಿಂಡು ದಿವಿಜರೊಡನೆ ಪೂಜಿಸಿ ಕೊಂಡು ಹಿಗ್ಗುತಲಿಹನೆ
ಮಂಡಲ ಮನೆಯೊಳು ನಿಂದೀಗಳೆನ್ನ ಉ
ದ್ದಂಡ ವಿಘ್ನವ ಪರಿಖಂಡನೆಗೈದು ೫