Categories
ರಚನೆಗಳು

ಕಾರ್ಪರ ನರಹರಿದಾಸರು

೧೦೫
ಭಕ್ತ ಪ್ರಹ್ಲಾದಗೆ ಆರುತಿ ಮಾಡುವೆನಾ ಪ
ಆರುತಿ ಮಾಡುವೆ ನಾರಿಯ ಗರ್ಭದಿ
ನಾರದ ಮುನಿಯಿಂದ ನಾರವ ಪಡೆದಗೆ ಅ.ಪ
ಶಾಲೆಯೊಳಗೆ ದೈತ್ಯ ಬಾಲಕರಿಗೆ ಸಿರಿ
ಲÉೂೀಲನೆ ಪರನೆಂದು ಪೇಳಿದ ಬಾಲಕಗೆ ೧
ನಂದತೀರ್ಥರ ಮತಸಿಂಧುವಿಗೆ ಪೂರ್ಣ
ಚಂದ್ರನೆಂದೆನಿಸಿದ ಚಂದ್ರಿಕಾರ್ಯರಿಗೆ ೨
ವಂದಾರು ಜನರಿಗೆ ಮಂದಾರನೆನಿಸಿದ
ನಂದದಾಯಕ ಸುಧೀಂದ್ರಕುಮಾರಗೆ ೩
ವೃಂದಾವನದೊಳಗೆ ನಿಂದು ಶೇವಕಜನ
ವೃಂದಾಪಾಲಕ ರಾಘವೇಂದ್ರಯತೀಂದ್ರಗೆ ೪
ಧರೆಯೊಳು ಶರಣರ ಪೊರೆವ ಕಾರ್ಪರ
ನರಹರಿ ಯ ನೊಲಿಸಿದಂಥ ಪರಿಮಳಾಚಾರ್ಯರಿಗೆ೫

೭೧
ಭಜರೆ ಮಾನಸ ದ್ವಿಜವರಗಮನಂ ಪ
ದ್ವಿಜಕುಲ ತೋಷಣಂ ಗಜವರ ಪೋಷಣಂ ಅ.ಪ
ವಿಜಯ ಸಾರಥಿಂ ಭಜಕೃಷ್ಣಮೂರುತಿಂ
ಭಜಕಾಮರತರುಂ ಕುಜನಕುಠಾರಂ ೧
ಹರಿಪದ ಸ್ಮರಣಂ ದುರಿತನಿವಾರಣಂ
ಸರಸಿಜ ಭವ ಮುಖಸುರನುತ ಚರಣಂ ೨
ಜಲಧಿಜಾರಮಣಂ ಬಲಿಕೃತ ಕರುಣಂ
ವಿಲಸತ್ಕಾರ್ಪರ ನಿಲಯ ನರಹರಿಂ ೩


ಭಾರತೀ ರಮಣ ಸುರವಿನುತ ಚರಣ
ಶಾರದಾ ಪುರ ಶರಣ ಪ
ನೂರು ಯೋಜನಮಿರ್ದವಾರಿಧಿ ಲಂಘಿಸಿ ಬೇಗ
ಧಾರುಣಿ ಸುತೆಯ ಕಂಡು ದೂರ ನಮಿಸಿ
ಸಾರಿ ಮುದ್ರಿಕೆಯ ನಿತ್ತು ತೋರಿರಾಕ್ಷಸಗೆ ಭಯ
ಶ್ರೀರಾಮಗೆ ಬಂದು ಕ್ಷೇಮ ವಾರುತಿಯ ಪೇಳಿದಂಥ ೧
ಇಂದು ಕುಲದಲ್ಲಿ ಪಾಂಡುನಂದನನೆನಿಸಿ ಜರಾ
ಸಂಧ ಮುಖರನು ಗದೆಯಿಂದವರಸಿ
ಅಂದುರಣದಲ್ಲಿ ಕರುವೃಂದವ ಮಥಿಸಿ ಆ
ನಂದ ಕಂದನೊಲಿಮೆಯ ಛಂದದಿ ಪಡೆದು ಗುರು ೨
ಶ್ರೀಧನಾಜ್ಞೆಯಿಂದ ಪುಟ್ಟಿ ಮೇದಿನಿ ಸುರ ಗೃಹದಿ
ಮೋದ ತೀರ್ಥರೆಂದೆನಿಸಿ ವಾದದಿಂದಲಿ
ವಾದಿ ಮತ್ತ ವಾರಣ ಮೃಗಾಧಿಪರೆನಿಸಿ ಪಂಚ
ಬೇಧ ಬೋಧಿಸುವ ಶಾಸ್ತ್ರ ಸಾದರದಿ ವಿರಚಿಸಿದ ೩
ಕಾಲಕಾಲದಲಿ ದ್ವಿಜರಾಲಯದಿ ಬಂದು ನಿನ್ನ
ಬಾಲವನಿತೆರ ಸಹ ಶೇವಿಸುವರು
ಪಾಲಿಕಿ ಉತ್ಸವದಲ್ಲಿ ಶೇರುವದು ಪೌರಜನ
ಪಾಲಿಸಬೇಕಯ್ಯ ಪಾಂಚಾಲಿರಮಣನೆ ನಮೊ ೪
ನೀರಜಾಸನಾದಿ ವಂದ್ಯ ಪಾರುಮಾಡೋ ಭವ ಕೂ
ಪಾರ ನಾವಿಕನೆ ಎಂದು ಪ್ರಾರ್ಥಿಸುತಲಿ
ಸೇರಿದ ಸಜ್ಜನರಘ ದೂರಮಾಡಿ ಪೊರೆವಂಥಕಾರ್ಪರ ನಿಲಯ ಸಿರಿನಾರಸಿಂಹ ನೊಲಿಸಿದ ೫


ಭಾರತೀವರ ಪಾಹಿಮಾಂ ಟೊಣ್ಣೂರು
ಮಂದಿರ ಕರುಣಾಕರ ಪ
ಸೇರಿದವರ ದುರಿತ ಘನ ಸಮೀರ
ಸುರವರ ಮಾಮುದ್ಧರ ಅ.ಪ
ನೂರುಯೋಜನದುದಧಿ ಲಂಘಿಸಿ ಧಾರುಣಿ
ಸುತೆಯಾ ಶುಭವಾರ್ತೆಯಾ
ಶ್ರೀರಾಮನಿಗರುಹಿದ ಬಲುಶೂರ
ಬಿಡಿಸಯ್ಯ ಸಂಸೃತಿ ಭಯ ೧
ಕ್ರೂರದ್ವೈತರ ಮಥನದಿ ಕಂಸಾರಿ ಕರುಣವ
ಪಡೆದಿಯೊ ಜವ
ಕೌರವಾಂತಕ ನೀಡೋ ಮನದಿ ಶೌರಿ ಚರಣವ
ನೋಳ್ಪ ಸುಖವ೨
ಧೀರ ಕಾರ್ಪರ ನಾರಸಿಂಹ ನಾಪಾರ
ಮಹಿಮೆಯ ತಿಳಿವ ಬಗೆಯ
ಸಾರ ಶಾಸ್ತ್ರದಿ ಪೇಳಿದ ಸುಖತೀರಥಾಹ್ವಯ
ಕೊಡು ಸುಮತಿಯ ೩

೧೧
ಭಾರತೀಶನೆ ಬೇಗ ಬಾರೊ ಮನ್ಮನದಲಿ
ತೋರೊ ನಿಮ್ಮಯ ಚರಣ ಭಜಕಾರ್ತಿ ಹರಣ ಪ
ಸಾರಿ ಭಜಿಸುವೆನು ಚಾರು ಭಾಸ್ಕರ ಕ್ಷೇತ್ರ
ಗಾರನೆ ದಶರಥಕುಮಾರ ಸೇವಕಾಗ್ರಣಿ ಅ.ಪ
ನೂರುಯೋಜನಮಿರ್ದ ವಾರಿಧಿ ಲಂಘಿಸಿದ
ಶೂರನೆ ಗಿರಿಯಾಶ್ರಯದಿ ತೋರುವಿ ಶ್ರಮಪರಿ-
ಹಾರಾರ್ಥಿಗಳ ತೆರ ಘೋರ ಪಾತಕಾಂಬುದ ಸ
ಮೀರ ಪಾಲಿಸೆನ್ನನು ೧
ತಂದು ನೀಡಿದಿ ದ್ರುಪದ ನಂದಿನಿಯಳಿಗೆ ಸೌ
ಗಂಧಿಕ ಪುಷ್ಪ ದಯದಿ ವಂದಿಸುವೆನು ಮನ
ಮಂದಿರದಲಿ ಯದು ನಂದನನಂಘ್ರೀ ನೋಳ್ಪಾ
ನಂದವ ಕರುಣಿಸೊ ೨
ಭೇದಾಬೋಧಿಸಿ ಬಲುಮೋದವ ಗರಿವ ಶಾಸ್ತ್ರ
ನೀದಯದಲಿ ರಚಿಸಿ ವಾದಿ ಮದಗಜ ಮೃ
ಗಾಧಿಪನೆನಿಸಿದ ಮೋದತೀರ್ಥಾಹ್ವಯಾ-
ಗಾಧ ಮಹಿಮ ಗುರು ೩
ಸತತ ಸೇವಿಪ ಗರ್ಭವತಿಯಾಗಿರುವ ವಿಪ್ರ
ಸತಿಯ ನುಡಿಯ ಲಾಲಿಸಿ ನತಜನ ಪಾಲನೆ ಪ-
ರ್ವತ ದಿಂದಿಳಿದಶ್ವತ್ಥ ಕ್ಷಿತಿರುಹ ಮೂಲದಿ ಪಾ-
ರ್ವಾತಿ ನಾಥ ಸೇವಿತನೆ ೪
ಈ ಸುಕ್ಷೇತ್ರದೊಳು ವಿದ್ವಾಂಸ ದೇವರಾಜಾಖ್ಯ
ಭೂಸುರ ವರ್ಯ ಸನ್ನುತ ವಾಸಕಾರ್ಪರ ನರ
ಕೇಸರಿ ಗತಿ ಪ್ರಿಯ ದಾಸ ಪಾಲಿಸೊ ಗುರು
ವ್ಯಾಸರಾಜ ಪೂಜಿತ ೫

೧೦
ಭಾರತೀಶಪಾಹಿ ಸುರವರ ನಾ ಮುಗಿವೆನು ಕರ ಪ
ಸೂರಿನಿವಾಸ ಭೋಗಾಪುರ ಮಂದಿರ ಮಾಮುದ್ಧರ ಅ.ಪ
ಶ್ರೀರಘುವರನಾಜ್ಞೆಯಿಂದಲಿ ವಾರಿಧಿಯಕ್ಷಣದಲಿ
ಹಾರಿ ಭೂಮಿಸುತೆ ಗೆರಗುತಲಿ ಮುದ್ರಿಕೆಯ ಕೊಡುತಲಿ
ಶ್ರೀರಾಮಗೊಂದಿಸಿದಿ ಕ್ಷೇಮದಲಿ ಇಹಳೆಂದು ಪೇಳಿ ೧
ಇಂದು ಕುಲದಿ ಪಾಂಡು ನೃಪತಿಯ ಎನಿಸಿದೆಯೊ ತನಯ
ಬಂಥ ಕೌರವ ವೃಂದ ಮಥಿಸಿದೆಯಾರಣದೊಳಗೆ ವಿಜಯ
ನಂದಸುತನ ನೊಲಿಮೆ ಪಡದಿಯಾ ಭೀಮಶೈನರಾಯ ೨
ಮೇದಿನಿ ಸುರಗೃಹದಿ ಜನಿಸಿದ ವೇದಾರ್ಥ ತಿಳಿಸಿದ
ವಾದಿಗಳ ನಿರ್ವಾದಗೈಸಿದ ದಿಗ್ವಲಯ ಚರಿಸಿದ ಭೇದ
ಭೋದಕ ಶಾಸ್ತ್ರವಿರಚಿಸಿದ ಶ್ರೀ ಪೂರ್ಣಬೋಧ ೩
ಕಾಲಕಾಲಗಳಲ್ಲಿ ದ್ವಿಜಜನ ಬರುತಿಹರು ನಿನ್ನ
ಧೂಳಿ ದರುಶನಾಬಿಷೇಚನ ಶೇವಿಪರು ಘನ್ನ
ಪಾಲಿಸಬೇಕಯ್ಯ ಭಕುತರನಾ ಪಾಂಚಾಲಿರಮಣ ೪
ನೀರಜಾಸನಾದಿ ಸುರಗಣ ವಂದಿತ ಸುಚರಣ
ಕಾರ್ಪರ ಶಿರಿನಾರಸಿಂಹನ ಒಲಿಸಿರುವ ನಿನ್ನ
ಶೇರಿದವರಭೀಷ್ಟ ವರ್ಷಣ ದುರಿತಾಪ ಹರಣ ೫

೧೨
ಭಾವಿ ಅಜನಂಘ್ರಿಯುಗವ ಭಜಿಸಬಾರದೆ ಪ
ಭಜಕ ಮಾನವರ ವೃಜಿನಘನಸಮೀರ
ಕುಜನವನಕುಠಾರ ಸುಜನರಿಗೆ ಮಂದಾರನೆಂದು
ಭಜಿಸಬಾರದೆಅ.ಪ
ಭೂತಳದಿ ಶ್ರೀರಾಮ ದೂತನೆನಿಸಿ ಭಕುತ
ವ್ರಾತಕೆ ಸಕಲೇಷ್ಟದಾತನೆಂದು ಪ್ರೀತಿಯಿಂದ ೧
ಪುಂಡ ಕೌರವರ ಹಿಂಡುಗೆಲಿದು ರಮೆಯ
ಗಂಡನೊಲಿಸಿದ ಮಧ್ಯ ಪಾಂಡವನ ಪದ ಪಂಡರೀಕ ೨
ಶ್ರೀನರಸಿಂಹನೆ ಜಗನಿರ್ಮಾಣ ಕಾರಣನೆಂದು
ಜ್ಞಾನದಾಯಕ ಮಧ್ವ ಮೌನಿಯೆನಿಸಿದ ಪ್ರಾಣಪತಿಯ ೩

೧೩
ಭೀಮ ಶೈನನೆ ಸತ್ಯಭಾಮಾ ಪ್ರಿಯನ ಪರಮ
ಪ್ರೇಮ ಪಾತ್ರನೆ ಪಾಹಿಮಾಂ ಪ
ಭೂಮಿಯೊಳು ಶೇವಿಸುವರಿಗೆ ಸುರ
ಭೂಮಿರುಹ ವೆಂದೆನಿಸಿ ಪೊರೆಯಲು
ಗ್ರಾಮ ಮೋತಂಪಲ್ಲಿ ಕ್ಷೇತ್ರ ಸುಧಾಮರಿಪುಕುಲ
ಭೀಮನೆನಿಸಿದ ಅ.ಪ
ರಾಮಕಾರ್ಯವನು ನಿಷ್ಕಾಮದಿ ಸಾಧಿಸಿ
ಧಾಮ ಕಿಂಪುರುಷದಲ್ಲಿ ಭೂಮಿಜಾವಲ್ಲಭನ
ಶುಭಗುಣ ಸ್ತೋಮಗಾನದಿ ರಮಿಸುತಿರೆ ಬಡ
ಭೂಮಿದೇವನ ಪ್ರಾರ್ಥನದಿ ಬಂದೀ ಮಹಾ ಶಿಲೆ
ಯೊಳಗೆ ನೆಲಸಿಹ ೧
ರಾಜಕುಲಜ ಪಾಂಡುರಾಜ ನಾತ್ಮಜ ಧರ್ಮರಾಜನನುಜನೆನಿಸಿ
ರಾಜ ಸೂಯಾಗವನೆ ಮಾಡಿಸಿ ಪೂಜಿಸಿದಿ ಸಿರಿಕೃಷ್ಣನಂಘ್ರಿಯ
ರಾಜ ಕೌರವ ಬಲವ ಮದಿಸಿ ವಿರಾಜಿಸಿದ ಸುರರಾಜ
ನಮೋ ನಮೋ ೨
ಶ್ರೀದನಾಜ್ಞಾದಿ ಬಂದು ಮೇದಿನಿಯೊಳು
ಪುಟ್ಟಿಮೇದಿನಿ ಸುರಸದ್ಮದಿ
ಮೋದ ತೀರ್ಥಾಹ್ವಯನೆನಿಸಿ ಬಹುವಾದಿ
ಗಜ ಪಂಚಾಸ್ಯನೆನಿಸಿಸು
ಬೋಧದಾಯಕ ಶಾಸ್ತ್ರವಿರಚಿಸಿ ಸಾಧು
ಜನಕತಿ ಮೋದನೀಡಿದ ೩
ವಂದಿಪ ಜನರಘ ವೃಂದವಾರಿದ
ಗಣಕೆ ಗಂಧವಾಹನನೆನಸಿ
ಬಂದು ಪದುಮಾವತಿಯ ಪರಿಣಯವೆಂದು
ಶೇಷ ಗಿರೀಂದ್ರಯಾತ್ರೆಗೆ
ಇಂದ್ರ ದಿಕ್ಕಿನ ದ್ವಾರದಲಿ ನೀನಿಂದು ಭಕುತರ
ವೃಂದ ಸಲಹುವಿ ೪
ಭಾರತೀಶನೆ ನಿನ್ನ ಚಾರುಚರಣಯುಗ್ಮ
ಶೇರಿದವನೆ ಧನ್ಯನೋ
ಘೋರ ಪಾತಕಿಯಾದ ವಿಪ್ರನು ಸಾರಿ
ಭಜಿಸಿ ವಿಮುಕ್ತನಾದನು
ನಾರದನು ಬಂದಿಲ್ಲಿ ಶೇವಿಸಿ ಸೇರಿದನು
ಸುರಋಷಿಯ ಪದವನು ೫
ಮೇಲೆ ಗೋಪುರದಿ ಭೂಪಾಲ ನಿರ್ಮಿತ
ಸುವಿಶಾಲ ಮಂಟಪ ಮಧ್ಯದಿ
ಕಾಲ ಕಾಲಗಳಲ್ಲಿ ವಿಭವದಿ ವಾಲಗವ
ಕೈಕೊಳುತ ಭಕುತರ
ಮ್ಯಾಳದಿಂ ಪಾಂಚಾಲಿರಮಣ ಕೃಪಾಳೊ
ಗುರುವರ ಪಾಲಿಸೆನ್ನನು ೬
ಬಂಗಾರದಾಭರಣಂಗಳಿಂದೊಪ್ಪುತ ಶೃಂಗಾರದಿಂ ಶೋಭಿತ
ತುಂಗರಥದೋಳ್ ಕುಳಿತು ನೋಳ್ಪಜನಂಗಳಿಗೆ
ಸರ್ವೇಷ್ಟದಾಯಕ
ಮಂಗಳಪದ ಕಾರ್ಪರದ ನರಸಿಂಗನಿಗೆ
ಪ್ರಥಮಾಂಗನೆನಿಸಿದ ೭

೧೧೬
ಮಂಗಲ ಮಾನವಿ ನಿಲಯ ಕವಿಗೇಯ
ಗುರುರಾಯ ಗುರುರಾಯ ಪಿಡಿಕೈಯಾ ಪ
ಪರಮ ಕರುಣದಲಿ ವಿರಚಿತ ಶ್ರೀ ಮ-
ದ್ಹರಿಯ ಕಥಾಮೃತ ಗ್ರಂಥ ಶುಭ್ರ
ಚರಿತ ಜಗನ್ನಾಥ ಜಗನ್ನಾಥ ಪ್ರಖ್ಯಾತ೧
ಮೇದಿನಿ ಸುರರಿಗೆ ಮೋದಮುನಿ ಮತದ
ಭೇದ ಪಂಚಕ ಸುಬೋಧ ಪ್ರದರಾದ ಸ-
ಹ್ಲಾದ ಕೊಡು ಮೋದ ೨
ಶರಣು ಜನಕೆ ಸುರತರುವೆಂದೆನಿಸಿದ
ಸಿರಿಕಾರ್ಪರ ಶುಭನಿಲಯ
ನರಹರಿಯ ಸುಪ್ರೀಯ ಸುಪ್ರೀಯ ದಾಸಾರ್ಯ ೩

೮೯
ಮಂಗಳ ಜಯ ಮಂಗಳ
ಮಂಗಳ ಶ್ರೀ ನರಸಿಂಗ ಮೂರುತಿಗೆ ಪ
ಅಂಗುಟಾಗ್ರದಿ ಗಂಗೆಯ ಪಡೆದ
ಮಂಗಳ ಗಾತ್ರ ಶ್ರೀ ರಂಗನಿಗೆ
ಅಂಗಜರಿಪು ಧನು ಭಂಗವ ಮಾಡಿ ಸೀ-
ತಾಂಗನೆಯಳ ಕರಪಿಡಿದವಗೆ ೧
ವರಮತ್ಸ್ಯಗೆ ಗಿರಿಧರ ಕ್ರೋಢಗೆ
ತರುಳನ ರಕ್ಷಿಸಿ ಧರೆಯ ಬೇಡಿದಗೆ
ಪರಶು ಧರಿಸಿದ ರಾಮಕೃಷ್ಣಗೆ
ಧರಿಸದೆ ವಸನವ ತುರಗನೇರಿದಗೆ ೨
ಕರಿವರ ಕರೆಯಲು ಭರದಿ ಬಂದವಗೆ
ಸ್ಮರಿಪರ ಭಯ ಪರಿಹರಿಸುವ ದೇವಗೆ
ಶರಣು ಜನಕೆ ಸುರತರುವೆಂದೆನಿಸಿದ
ಸಿರಿ ಕಾರ್ಪರ ನರಹರಿ ರೂಪಗೆ ೩

೯೧
ಮಂಗಳ ವೇಣು ಗೋಪಾಲಾ ಸಿರಿಲೋಲ
ಗಜಪಾಲಾ ಗಜಪಾಲಾ ಶುಭಲೀಲಾ ಪ
ಅಂಗುಟಾಗ್ರದಿಂ ಗಂಗೆಯ ಪಡೆದಿಹ
ಮಂಗಳ ಚರಿತ ಶುಭಾಂಗ ಶ್ರೀ
ರಂಗ ದಯಪಾಂಗ ದಯಪಾಂಗ ನೀಲಾಂಗ ೧
ನಂದಕುಮಾರ ನವನೀತ ಚೋರ
ವೃಂದಾವನ ಸುವಿಹಾರ
ಭವದೂರ ಸುಕುಮಾರಸುಕುಮಾರ ಶರೀರ೨
ಧರೆಯೊಳು ಮೆರೆಯುವ ಸಿರಿಕಾರ್ಪರ
ನರಹರಿ ರೂಪನೆ ಪೊರೆಯೆನ್ನ ಅಘ
ಹರಣ ತವಚರಣ ತವಚರಣಕೆರಗುವನ ೩

೯೦
ಮಂಗಳಂ ನರಶಿಂಗ ಮೂರುತಿಗೆ ಲಕ್ಷ್ಮೀಸಮೇತಗೆ
ತುಂಗ ಮಹಿಮ ವಿಹಂಗ ವಾಹನಗೆ
ಅಂಗಜನಪಿತಗೆ ಅಂಗುಟದಿ ಗಂಗೆಯನು ಪಡೆದವಗೆ ಮಾ
ತಂಗವರದಗೆ ಪ
ವಾರಿಜಾಸನ ಮುಖ್ಯಸುರನುತಗೆ ಉ-
ದಾರ ಚರಿತಗೆ ಸೇರಿದವರಘದೂರ ಮಾಡುವಗೆ
ಕಾರ್ಪರ ಋಷಿಗೆ ಘೋರ ತಪಸಿಗೆ ಒಲಿದು ಬಂದವಗೆ
ಅಶ್ವತ್ಥ ರೂಪಗೆ ೧
ಕುಕ್ಷಿಯೊಳು ಜಗವಿಟ್ಟು ರಕ್ಷಿಪಗೆ ಕರುಣಾಕ-
ಟಾಕ್ಷಗೆ ವಕ್ಷದೊಳು ಶ್ರೀ ವತ್ಸಲಾಂಛನಗೆ ದ್ರೌಪದಿ ದೇವಿಗೆ
ಅಕ್ಷಯಾಂಬರವಿತ್ತು ಸಲಹಿದಗೆ ಲಕ್ಷ್ಮೀನೃಸಿಂಹಗೆ ೨
ಕೃಷ್ಣವೇಣಿ ತಟವಿರಾಜಿತಗೆ ಸೃಷ್ಟ್ಯಾದಿ ಕರ್ತಗೆ
ಶ್ರೇಷ್ಠತರು ಪಿಪ್ಪಲದಿ ಪ್ರಕಟಿತಗೆ ದುಷ್ಟನಿಗ್ರಹಗೆ
ದ್ಯಷ್ಟ ಬಾಹುಗಳಿಂದ ಭಜಕರಿಗೆ ಇಷ್ಟಾರ್ಥಗರಿವಗೆ ೩
ಹಿಂದೆ ಗೋರೂಪದಲಿ ಬಂದವಗೆ ಬಹುಸುಂದರಾಂಗಗೆ
ವಂದಿಸುವೆ ಶೀ ವೇಂಕಟೇಶನಿಗೆ ಮಂದರೋದ್ಧರಗೆ
ವಂದಿಪರ ಭವ ಬಂಧ ಬಿಡಿಸುವಗೆ ಆನಂದವೀವಗೆ ೪
ತರುಳ ಪ್ರಹ್ಲಾದನ್ನ ಕಾಯ್ದವಗೆ ಸುರಸಾರ್ವಭೌಮಗೆ
ಶರಣು ಜನ ಮಂದಾರನೆನಿಸುವಗೆ ಭೂಸುರರ ಪೊರಿವಗೆ
ಧರಣಿಯೊಳು ಕಾರ್ಪರ ಸುಮಂದಿರಗೆ ಶಿರಿನಾರಶಿಂಹಗೆ ೫

೫೦
ಮಧ್ವಸಿದ್ಧಾಂತ ವೈಭವ ನೋಡಿರೈ ಸಭೆಯ
ವೈಭವ ನೋಡಿರೈ ಪ
ಗುರುವರೇಣ್ಯ ಸತ್ಯ ಪ್ರಮೋದ ತೀರ್ಥರು ಸಂಭ್ರಮದಲಿ
ಮೆರೆದು ಬರುವ ವೈಭವ ನೋಡಿರೈ ೧
ಪರಮಹಂಸ ಪರಿವ್ರಾಜಕಾದಿ ಸ
ದ್ಬಿರುದುಗಳಿಂದಲಿ ಕರೆಸಿಕೊಳ್ಳುವ ೨
ಅಂದಣದಲಿ ನಲುವಿಂದ ಪರಾಶರ
ಕಂದನ ನಿರಿಶ್ಯಾನಂದ ಬಡುವ ೩
ಸುಂದರ ರಾಜಮಹೇಂದ್ರ ಪುರದಿ ಜನ
ಸಂದಹಿಯೋಳ್ಬುಧ ವೃಂದ ಬರುವ ೪
ಮೋದತೀರ್ಥ ಸುಮತೋದಧಿ ಚಂದ್ರ ಪ್ರ
ಮೋದ ತೀರ್ಥರಿವರೆಂದು ನುಡಿವ ೫
ಮೇದಿನಿ ಸುರಕೃತ ವೇದ ಘೋಷಣ ಸು-
ನಾದ ಭರಿತ ಬಹುವಾದ್ಯ ನಿನದ ೬
ಹರಿದಾಸರು ಸುಸ್ವರದಿ ಪಾಡುತಲಿ
ಪರವಶದಲಿ ತನುಮರೆದು ಕುಣಿವ೭
ಕಂಡೆನು ಪರಮತ ಖಂಡನದಿ ಸುಧೆಯ
ಮಂಡನೋತ್ಸವದಿ ಕಂಡುಬರುವ ೮
ಚಲುವ ಗುರು ಚರಣ ಜಲಜಕೆ ನಮಿಸುತ
ಲಲನೆಯರಾರುತಿ ಬೆಳಗುತಿರುವ ೯
ನೇಮದಿ ಎಡಬಲ ಭೂಮಿಸುರರು ಕೈ
ಚಾಮರ ಬೀಸುತ ಸಾಮ ಪಠಣ೧೦
ಭಯವ ಪುಟ್ಟಿಸಿ ಹೃದಯದಿ ಮಾಯ್ಗಳ
ಜಯ ಘೋಷದಿ ನಿರ್ಭಯದಿ ಬರುವ ೧೧
ಕಾಣೆನು ಸತ್ಯಜ್ಞಾನ ತೀರ್ಥರ ಸ-
ಮಾನ ಗುರುಗಳೆಂದಾನಮಿಸುವ ೧೨
ಪಾವನತರ ಗೋದಾವರಿ ಸ್ನಾನದಿ
ಶ್ರೀವರನಂಘ್ರಿಯ ಶೇವಿಸುವರ ೧೩
ವಿದ್ವಜ್ಜನನುತ ಮಧ್ವಮುನಿಯ ಮತ
ವೃದ್ಧಿಕಾರಿಣಿ ಪ್ರಸಿದ್ಧ ಸಭೆಯ ೧೪
ಧರೆಯೊಳು ಸಿರಿ ಕಾರ್ಪರ ನರಸಿಂಹನೆ
ಪರನೆಂದರುಹುತ ಮೆರೆವ ಸಭೆಯ ೧೫

೧೪
ಮರುತನಾತ್ಮಜ ನಿನ್ನ ಚರಣ ಕಮಲಯುಗ್ಮ
ನೆರೆನಂಬಿದವ ಧನ್ಯನೊ ಪ
ಧರೆಯೊಳಗೆ ರಘುವರನ ಶೇವಿಸಿ ಶರಣು ಜನರನು
ಪೊರೆವುದಕೆ ಭೂಸುರಗಣದಿ ರಾಜಿಸುವ ರಾಯಚೂರ
ಪುರದ ಕೋಟೆಯೊಳಿರಲು ಬಂದಿಹ ಅ.ಪ
ಖರವೈರಿಯಾಜ್ಞೆಯ ಶಿರದಿವಹಿಸಿ
ಬಹುಭರದಿವಾರಿಧಿ ಲಂಘಿಸಿ
ಧರಣಿಸುತೆಯಳ ಕಂಡೆರಗಿ ಮುದ್ರಿಕೆಯಿತ್ತು
ಹರಿಭಟನೆಂದು ತಿಳಿಸಿ
ವರ ಶಿರೋರತುನವ ಧರಿಸಿ ಕರದಿ ಬಂದು
ತ್ವರದಿ ರಾಮನಿಗರ್ಪಿಸಿ
ಕುಶಲವನೆ ತಿಳಿಸಿ ಪರಮ ಕರುಣವ ಪಡೆದ
ಧೀರನೆ ಸುರವಿನುತ ತವ
ಚರಣದೆಡೆಯೊಳ್ ನಿರುತ ಪೂಜೆಯಗೊಂಬ
ಪರಿಮಳವಿರಚಿಸಿದ ಗುರುವರರ ನೋಡಿದೆ ೧
ಇಂದು ಕುಲದಿ ಪಾಂಡುನಂದನನೆನಸಿ
ಗೋವಿಂದನಂಘ್ರಿಯ ಭಜಿಸಿ
ಸಂದೇಹವ್ಯಾಕೆ ಖಳವೃಂದ ವಧವೆ ಯಜ್ಞವೆಂದು
ಮನದಿ ಭಾವಿಸಿ
ಸಿಂದೂರ ಜಲಜರಾಸಂಧಾದಿಗಳ ಮಥಿಸಿ
ನಂದಸುತನಿಗರ್ಪಿಸಿ ಪ್ರಥಮಾಂಗನೆನಿಸಿ
ವಂದಿಪರ ಭವಬಂಧ ಬಿಡಿಸ್ಯಾನಂದಗರಿವ
ಸಮರ್ಥ ತವಪದ ಕೊಂದಿಸುವೆ ಮನ
ಮಂದಿರದಿ ಯದುನಂದನನ ಪದದ್ವಂದ್ವ ತೋರಿಸು ೨
ಕ್ಷಿತಿಸುರ ಗೃಹದೊಳಚ್ಯುತನಾಜ್ಞದಿಂ
ಪುಟ್ಟಿಯತಿರೂಪವನೆಧರಿಸಿ
ಕ್ಷಿತಿಯೊಳಗಖಿಲ ದುರ್ಮತಗಳೆಂಬುವ
ಮೇಘತತಿಗೆ ಮಾರುತನೆನಿಸಿ
ಶೃತಿತತಿಯಿಂದೆ ಶ್ರೀಪತಿಯೆ ಉತ್ತಮನೆನಿಸಿ
ಪ್ರತಿಪಾದ್ಯನೆಂದು ತಿಳಿಸಿ ಸುಖ
ತೀರ್ಥರೆನಿಸಿ ಅತಿಹಿತದಿ ಸತ್ಪಥವ ತೋರಿದಿ
ಅತುಳ ಮಹಿಮನೆನುತಿಸುವೆನು
ತ್ವತ್ರ‍ಕತ ಸುಶಾಸ್ತ್ರವನರಿತ ಬುಧಜನ ತತಿಯ ಸಂಗವ
ಸತತ ಪಾಲಿಸೋ ೩
ಫಣಿ ಪಾಶದಿಂದ ರಾವಣಿಯು ಕಪಿಗಳ ಬಿಗಿಯೆ
ತನುಮರೆಯಲು ಧುರದಿ
ಕ್ಷಣಕಾಲದಲಿ ಸಂಜೀವನ ಗಿರಿತಂದು
ಜೀವನವಿತ್ತಕಾರಣದಿ ವನಜನಾಭನು
ಮೆಚ್ಚಿ ನಿನಗಿತ್ತ ಸಂಜೀವನೆಂಬೊ ನಾಮದ
ದಯದಿ ತನ್ಮೂರ್ತಿ ಸಹಿತದಿ
ಅನಿಲಜನೆ ತಟಿತ್ಕೋಟಿ ಮಂದಿರನೆನಿಸಿ
ಸೇವಕಜನರ ಸಲಹುವಿ
ಅನುದಿನದಿ ದ್ವಿಜವರ್ಯರಿಂದರ್ಚನೆಯ
ಕೊಳುತಲಿ ಮೆರೆವದೇವನೆ ೪
ನಿರುತ ಸಮ್ಮುಖದಲ್ಲಿ ಅರಿದರಾಭಯಹಸ್ತ
ಶಿರದಿ ಮುಕುಟ ಮಂಡಿತ
ಪರಮಸುಂದರವಾದ ಶಿರಿವಲ್ಲಭನ ಮೂರ್ತಿ
ದರುಶನವನೆ ಕೊಳ್ಳುತ
ಪರಿಶೋಭಿಸುವ ಸದ್ಗೋಪುರಯುಕ್ತವಾದ
ವಿಸ್ತರ ಮಂಟಪದಿರಾಜಿತ
ಸುರಪೂಜಿತ ಕÀರುಣ ಶರಧಿಯೆ ಪೊರೆವದೆನ್ನನು ಶರಣು ಜನರಘ
ತರಿದಭೀಷ್ಟೆಯಗರಿವ ಕಾರ್ಪರನಿಲಯ ಸಿರಿನರಹರಿಯ
ಕರುಣವ ಪಡೆದ ಧೀರನೆ ೫

೧೫
ಮುಂಚೆ ನೋಡಣು ಬನ್ನಿ ಜನಗಳೆ
ಹಂಚಿನಾಳಿನವ ಹನುಮನ
ವಾಂಛಿತಾರ್ಥಗಳೀವ ಭಾವಿ
ವಿರಂಚಿದೇವ ಪದಾರ್ಹನಾ ಪ
ಅಂದು ಕಪಿಕುಲದಿಂದ ದುಸ್ತರ
ಸಿಂಧು ದಾಟಿದ ಧೀರನ
ವಂದಿಸುತ ಭೂನಂದನೆಯು
ಕ್ಷೇಮೆಂದು ರಾಮಗೆ ಪೇಳ್ದನ ೧
ಧಾರುಣಿಯೊಳವತರಿಸಿ ಕುಂತಿ
ಕುಮಾರನೆನಿಸಿದ ಧೀರನ
ಕೌರವಾಂತಕನೆನಿಸಿ ಕೃಷ್ಣನ
ಭೂರಿ ಕರುಣವ ಪಡೆದನ ೨
ವಾದಿಗಳ ನಿರ್ವಾದ ಗೈಸಿದ
ಬಾದರಾಯಣನ ಶಿಷ್ಯನ
ಭೇದಮತವನು ಸ್ಥಾಪಿಸಿದ ಗುರು
ಮೋದ ತೀರ್ಥ ಯತೀಂದ್ರನಾ ೩
ಪಾಲಕಿಯ ಉತ್ಸವದಿ ಮೆರೆಯುತ
ವಾಲಗವ ಕೈಕೊಳುವನ
ಕಾಲಕಾಲಗಳಲ್ಲಿ ಭಜಕರ
ಮ್ಯಾಳವನು ಪಾಲಿಸುವನಾ ೪
ಶೇಷಭೂಷಣ ವಾಸವಾದಿಸು
ರೇಶ ಭಕುತರ ಪೋಷನ
ಶ್ರೀಶ ಕಾರ್ಪರವಾಸ ಸಿರಿನರ
ಕೇಸರಿಗೆ ಪ್ರಿಯ ದಾಸನ೫

ವ್ಯಾಸಕೂಟ-ದಾಸಕೂಟದ ಇತರ ಗುರುಗಳ ವರ್ಣನೆ
೨೭
ಮುನಿವರ್ಯ ಶ್ರೀಕಾರ್ಪರ ಮುನಿವರ್ಯ ಪ
ಮುನಿವರ್ಯ ಕಾಯಬೇಕೆನ್ನ ಮಧ್ವಮುನಿಕೃತ
ಗೃಂಥಾರ್ಥ ಜ್ಞಾನ
ಕೊಟ್ಟು ಕನಸಿನೊಳಾದರು ವನಿತಾದಿ
ವಿಷಯವ ನೆನೆಸದಂದದಿ
ಮಾಡೋ ವನಜನಾಭನ ಪ್ರೀಯ ಅ.ಪ
ಮುನಿವರ್ಯ ಮನವಾಚಾಕಾಯಾ ದಿಂದ
ಅನುದಿನ ನಡೆಯುವ ಕ್ರಿಯಾ ಶ್ರೀ
ಕೃಷ್ಣನೆ ಮಾಡಿಸುವನೆಂಬೊ ಮತಿಯಾ ಕೊಡು
ಯನಗೆಂದು ಮುಗಿವೆನು ಕೈಯಾ ಆಹಾ
ಮನಸಿಜನಯ್ಯನ ಗುಣಕಥನದಿ ಭವ ವನಧಿ
ದಾಟಿಸುವ ಸಜ್ಜನರ ಸಂಗವ ಕೊಡು ೧
ಹಿಂದಕ್ಕೆ ನೀ ಮಾಡಿದಂಥ ತಪದಿಂದ
ಶ್ರೀಕಾಂತನಶ್ವತ್ಥ ರೂಪ
ದಿಂದ ಒಲಿದು ಬಂದು ನಿಂತು ಭಕ್ತ
ವೃಂದವ ಪಾಲಿಪ ನಿರುತ ಆಹ
ಇಂದುಮೌಲಿ ಮುಖರಿಂದ ಸಹಿತನಾಗಿ
ಮಂದ ಜಾಸನನಿಲ್ಲಿ ಬಂದು ಪೂಜಿಪನಿತ್ಯ ೨
ಪರಮಪಾವನ ಕೃಷ್ಣಾತೀರದಲ್ಲಿ ಮೆರೆವ
ಶ್ರೀ ಕಾರ್ಪರಾಗಾರ
ಬಹುಶರಣು ಜನರಿಗೆ ಮಂದಾರ
ನರಹರಿಯನೊಲಿಸಿದಂಥ ಧೀರಾ ಆಹಾ
ಕರುಣ ಶರಧೆಯನ್ನ ದುರಿತಗಳೋಡಿಸಿ
ಹರಿಗುರು ಚರಣದಿ ಪರಮಭಕ್ತಿಯ ಕೊಡೊ ೩

೭೨
ರಂಗನಾಥ ಮಾಂ ಗಂಗಾಜನಕ
ತುಂಗ ಮಹಿಮ ಮಂಗಳಾಂಗ ಪಾಹಿ ಪ
ತಿಂಗಳ ತೇಜದಲಿ ಪೊಳೆಯುತ
ಕಂಗೊಳಿಸುವ ಮುಕುಟ ಮಂಡಿತ
ಬಂಗಾರದಾಭರಣ ಭೂಷಿತ
ಶೃಂಗಾರದಿ ರಥವನೇರುತ
ಮಂಗಳ ವಾದ್ಯಂಗಳುಲಿಯೆ
ರಂಗನಾಥ ಪ್ರತಿವರ್ಷದಿ
ತುಂಗಛತ್ರ ಚಾಮರ ವ್ಯಜ-
ನಂಗಳ ವಿಭವದಿ ಬರುತಿರೆ
ಕಂಗಳಿಂದ ನೋಳ್ಪ ಭಕ್ತ
ಜಂಗುಳಿ ಪಾಲಿಸಲೋಸುಗ
ಮಂಗಳಸಿರಿ ಜಾಲಹಳ್ಳಿ ಪುರನಿಲಯ ಪೊರೆ ಎನ್ನ೧
ಹಿಂದಕೆ ಮುದಗಲ್ಲು ಪುರದಿ
ಬಂದಿಹ ಉಪ್ಪಾರ ಜನದಿ
ಬಂದು ಗೋಣಿಯೊಳಗೆ ಮುದದಿ
ನಿಂದಿಯೊ ಪದಮೆಟ್ಟೆ ಬೆಟ್ಟದಿ
ಅಂದಿನ ರಾತಿಯ ಸ್ವಪ್ನದಿ
ಸಂದರ್ಶನವಿತ್ತು ಪುರದಿ
ಮಂದಿರಕಾರ್ಯವ ಸೂಚಿಸ-
ಲಂದು ರಾಯಗೌಡನಿಂದ
ಬಂಧುರದಲಿ ನಿರ್ಮಿತ ಆ-
ನಂದನಿಲಯ ಮಂದಿರ ಮು
ಕುಂದನಂದ ಕಂದನೆ ಮದ್ ಹೃದಯದಲಿ ಸದಾತೋರೋ೨
ವಾರಿಚರ ಮಂದರಧರ ಭೂ
ಚೋರಮಥನ ಘೋರರೂಪನೆ
ಚಾರು ಬ್ರಹ್ಮಚಾರಿ ವಾಮನ
ಶೂರ ಪರಶುರಾಮನೆ ನಮೊ
ಧಾರುಣಿ ಜಾವಲ್ಲಭ ಕಂ-
ಸಾರಿ ವಸನದೂರನೆ ಹಯ
ವೇರಿ ದುಷ್ಟ ದಿತಿಜರ ಭಯ
ದೂರ ಮಾಡಿ ಕಾವದೇವ
ಧಾರುಣಿಸುರ ಪರಿಪಾಲಕ
ವಾರಿಜಭವ ನುತ ಕಾರ್ಪರಾ-
ಗಾರವೀರ ನಾರಸಿಂಹ ನಮಿಸುವೆನು ರಮಾರಮಣ೩

೩೨
ರಥವೇರಿ ಬರುತಿಹ ಗುರುವರನ್ಯಾರೆ ಪೇಳಮ್ಮಯ್ಯಾ ಪ
ಕ್ಷಿತಿಯೊಳು ಮುದಮುನಿಕೃತ ಗ್ರಂಥಕೆ ವಿಶೃತ
ಟೀಕಾಕೃಧ್ಯ ತಿವರನಮ್ಮ ಅ.ಪ
ಕ್ಷಿತಿಯೊಳು ರತಿಪತಿಪಿತನಾಜ್ಞೆಯ
ಸ್ವೀಕರಿಸಿ ಮಾರುತನವತರಿಸಿ
ಶೃತಿಸಮ್ಮತ ಶ್ರೀಮಧ್ಭಾಷ್ಯವತಾರಚಿಸಿ ಛಾತ್ರರಿಗೆ ವಿವರಿಸೆ
ಸ್ತುತಿಸುತಿಹರು ಫಣಿಪತಿ ಮುಖ ಸುರರಾಗಸದಿ
ಕೇಳುತಲನುದಿನದಿ
ಅತಿಹಿತದಲಿ ಗೊಪತಿ ರೂಪದಿ ಕೇಳ್ದತುಲ
ಮಹಿಮ ಸುರಪತಿಯು ಕಾಣಮ್ಮ ೧
ಚಾರು ತುರಂಗಮವೇರಿ ನಡೆಸಲತಿ ಚತುರ
ದೇಶಪಾಂಡ್ಯರಕುವರ
ವಾರಿಮಧ್ಯ ಹಯವೇರಿ ಮಾಡಲು ಜಲಪಾನ
ಕೇಳಲು ಗುರುವಚನ
ಮೀರಗೊಡದೆ ತಲೆ ದೋರಿತಾಗಲೆ ಸುಜ್ಞಾನ
ಸಂಸಾರ ಸುಖವನ
ದೂರಮಾಡಿ ಯತಿಸೂರಿ ಅಕ್ಷೋಭ್ಯ ಕುಮಾರರೆನಿಪ
ಜಯ ತೀರಥರಮ್ಮ ೨
ಮಧ್ವಶಾಸ್ತ್ರ ವಿಜಯ ಧ್ವಜಯಾಪವ ಜಗದಿ
ಸ್ಥಾಪಿಸಿದರು ಮುದದಿ
ಶುದ್ಧಮಾಯಿ ಸುಭಟಧ್ವಜನಿಯ ಓಡಿಸಿದ ವಾಕ್ಸಾಯಕದಿಂದ
ಮಧ್ವರಾಜಕೃತ ಸದ್ಗ್ರಂಥಗಳ ವಿಸ್ತಾರ ಮಾಡಿದ ಯತಿಧೀರಾ
ವಿದ್ಯಾರಣ್ಯಾಖ್ಯಾದ್ವೈತಿಯ ವಾಗ್ಯುದ್ಧದಿ
ಗೆಲಿದ ಪ್ರಸಿದ್ಧ ಕಾಣಮ್ಮ ೩
ಚಾಮೀಕರಕೃತ ಚಾಮರ ಛತ್ರಗಳಿಂದ ಸೇವಿಪದ್ವಿಜರಿಂದ
ನೇಮದಿ ಪಠಿಸುವ ಸಾಮದಿ ಶೃತಿ ಘೋಷ
ಶ್ರವಣಕೆ ಪೀಯೂಷ
ಭೂಮಿಸುರರಿಗತಿ ಪ್ರೇಮದಿ ಸುಧೆಯನುಣಿಸಿದ
ಭವಬಾಧೆ ಬಿಡಿಸಿದ
ಭೂಮಿಜಾವರ ಶ್ರೀರಾಮ ಪದಾರ್ಚಕ
ಶ್ರೀಮಳಖೇಡ ಸುಧಾಮ ಕಣಮ್ಮ೪
ನಿರುತ ಶಿಷ್ಯರಿಗೆ ಮರುತಶಾಸ್ತ್ರ ಬೋಧಿಪರ
ತೋಷಿತ ಬುಧನಿಕರ
ಗುರುಸತ್ಯ ಪ್ರಮೋದತೀರ್ಥ ಸಂಶೇವ್ಯ
ಪಾವನತರಚರಿಯ ಶರಣುಜನಕೆ
ಸುರತರುವೆನಿಸಿದ ಜಯರಾಯಾ ವಿದ್ವಜ್ಜನಗೇಯಾ ಧರೆಯೊಳು
ಸಿರಿಕಾರ್ಪರ ನರಸಿಂಹನೆ ಪರನೆಂದರುಹಿದ ಗುರುವರನಮ್ಮ೫

೫೧
ರಾಮ ಧ್ಯಾನ ಸುತೀರ್ಥರ ಸ್ಮರಿಸುತ
ಕಾಮಿತವನು ಪಡಿಯೋ ಪ
ಈ ಮಹಿಯೊಳು ರಘುವೀರ ತೀರ್ಥರ ಕರ-
ತಾಮರಸೋದ್ಭವರೆನಿಸಿ ಮೆರೆದ ಗುರು ಅ.ಪ
ಧರೆಸುತ ಮಂಡಿತ ಸುರಪುರದಲಿ ದ್ವಿಜ
ವರ ಕುಲದಲಿ ಜನಿಸಿಯಳಿಮೇ-
ಲಾರ್ಯರ ಬಳಿಯಲಿ ಶಬ್ದಾವಳಿ
ಶಾಸ್ತ್ರವ ಪಠಿಸಿ ಇಳಿಸುರನುತ
ರಘುವೀರತೀರ್ಥ ಕರ ಜಲಜೋದ್ಭವ
ರೆನಿಸಿ ಕಲಿತು ಗುರುಮುಖದಿ
ಮರುತ ಶಾಸ್ತ್ರವನು ತಿಳಿಸುತ ಬುಧಜನ
ರೊಲಿಸಿದಂಥ ಗುರು ೧
ಹೇಮಮಂಟಪದಿ ಭೂಮಿ ಸುತಾನ್ವಿತ
ರಾಮನ ಪೂಜಿಸು ತಾ ಶ್ರೀಮನ್ಮಧ್ವಕ
ರಾಬ್ಜಾದಾಗತ ಸೌಮಿತ್ರಿಯ ಸಹಿತ
ಸಾಮವ ಪಠಿಸುವ ಭೂಮಿಸುರಜನ
ಸ್ತೋಮದಿ ಶೋಭಿಸುತ ಧೀಮಜನರಿಗೆ
ಪ್ರೇಮದಿಂದ ಮೃಷ್ಟಾನ್ನದಾನ ಸನ್ಮಾನ
ಮಾಡುತಿಹ ೨
ಭೂತಳದಲಿ ಸುಕ್ಷೇತ್ರ ಬಹು ಆರ್ಥ
ಯಾತ್ರಿಗಳಾ ಚರಿಸಿ ಭೂತಬಾಧೆ
ರೋಗಾತುರ ಜನಗಳ ಭೀತಿಯ ಪರಿಹರಿಸಿ
ಶಾಸ್ತ್ರಸುಧಾರಸ ಸತ್ಯಮೋದ ಯತಿ-
ನಾಥರಿಂದ ಗ್ರಹಿಸಿ ಖ್ಯಾತ ಕಾರ್ಪರ
ಕ್ಷೇತ್ರದಿ ನರಮೃಗನಾಥನ ಪ್ರೀತಿಗೆಪಾತ್ರರೆನಿಸಿರುವ ೩

೧೬
ರಾಮದೂತ ನಮಿಭಕುತ
ಕಾಮಿತದಾತ ಸುರಶೇವಿತ ಪ
ಈ ಮಹಿಯೊಳೂ ಗ್ರಾಮಕೂಡ್ಲಿಗಿ
ಧಾಮಮಾರುತ ಪಾಹಿಸತತ ಅ.ಪ
ಭೂಮಿಸುತೆಯ ಕ್ಷೇಮವಾರ್ತೆಯ
ರಾಮಗರುಹಿದ ಪದಕೆರಗಿದ
ಹೇ ಮಹಾತ್ಮನೆ ಪ್ರೇಮದಿ ರಘು
ರಾಮ ನೀಡಿದ ಬ್ರಹ್ಮನ ಪದ ೧
ಇಂದು ಕುಲದಿ ಬಂದು ಕೌರವ
ವೃಂದ ಮಥಿಸಿದೆಯಾ ಪಾಂಡು ತನಯ
ಪೊಂದಿದಿಯಾ ನಂದಗೋಪನ
ಕಂದನ ಕೃಪೆಯಾ ಪಾಲಿಸಯ್ಯಾ ೨
ವ್ಯಾಸಶಿಷ್ಯ ಯತೀಶ್ವರ ತವ
ಶಾಸ್ತ್ರದಿ ಮತಿಯಾ ಕರುಣಿಸಯ್ಯಾ
ಶ್ರೀಶಕಾರ್ಪರ ವಾಸ ಶ್ರೀನರ
ಕೇಸರಿಗೆ ಪ್ರೀಯ ಮಧ್ವರಾಯಾ ೩

೮೧
ರಾಮನ ನೋಡಿರೈ ಮಂಗಳ ನಾಮನ ಪಾಡಿರೈ ಪ
ಭೂಮಿಯೊಳಾರ್ಯ ಅಕ್ಷೋಭ್ಯರ ಮಠದಿ
ಪೂಜಿತನ ಸೀತಾನ್ವಿತನ ಅ.ಪ
ತಾಮರಸ ಭವಾದ್ಯಮರ ಗಣ ಪ್ರಾರ್ಥನದಿ
ದಶರಥ ಗೃಹದಿ
ಶ್ರೀ ಮನೋಹರ ನವತರಿಸಿ ಭೂಭಾರವನಿಳುಹಿ
ಸುಜನರ ಸಲುಹಿ
ಪ್ರೇಮದಿ ಕುಶಲವರನುದಿನ ಪೂಜಿಪೆವೆಂದು
ಬೆಸಗೊಳಲಂದು
ರಾಮನು ಸ್ಮರಿಸಲು ವೈಕುಂಠದಿ ಬಂದಿಹನಾ
ಸೀತಾವರನಾ ೧
ಚಿಂತಿಸು ರಾಮನ ಶುಭಲಕ್ಷಣಗಳನೇಕ ಕರ್ಮವಿಪಾಕ
ಗ್ರಂಥದೊಳಷ್ಟಮ ಕಾಂಡದಿ ಚತುರಧ್ಯಾಯ
ದೊಳಗೀ ವಿಷಯಾ-
ದ್ಯಂತವಾಗಿ ವರ್ಣಿತವೆಂಬುವದನೆ
ಖರೆಯ ಯತಿಕುಲವರ್ಯ
ಕಾಂತ ಕರಜ ರಘುದಾಂತ ಕರಾರ್ಚಿತ
ಚರಣ ಸುಜನೋದ್ಧರಣ ೨
ಫನಶೋಭಿಸುವ ಕುಂದಣ ಮಣಿಮಯದ
ಕಿರೀಟ ಯುಕ್ತಲಲಾಟ
ಚಿನ್ಮಯಗಾತ್ರದಿ ಮಿನುಗುವ ರತ್ನಾಭರಣ ಜಿತರವಿ ಕಿರಣ
ಮನದೊಳು ಬಿಡದೆ ತನ್ನನು ಧೀನಿಪರಘ
ಹರಣ ಕರುಣಾಪೂರ್ಣ
ಮುನಿ ಸರ್ವಜ್ಞಕರಾಗತ ಲಕ್ಷ್ಮಣಯುತನಾ
ರಿಪುಕುಲಮಥನಾ ೩
ಮಂದಹಾಸ ಮುಖದಿಂದೊಪ್ಪುವ
ಶುಭಕಾಯಾಕವಿಜನಗೇಯಾ
ಸುಂದರ ಹೇಮ ಮಂಟಪದೊಳು ಪೂಜೆಯ
ಕೊಳುವ ಮನದೊಳು ಪೊಳೆವ
ನಿಂದಿರುವುದು ದ್ವಿಜವೃಂದ ಪಠಿಸುತಲಿ
ವೇದಾ ಮನಕತಿಮೋದಾ
ಹಿಂದಕೆ ಮಳಖೇಡ ಮಂದಿರವೆನಿಪ ಜಯಾರ್ಯ
ಮುನಿ ಸಂಶೇವ್ಯ ೪
ವರ್ಣಿಸಲೊಶವೆ ಶ್ರೀರಘು ಶಾಂತರ
ಶುಭಚರಿಯ ಬಹು ಆ
ಶ್ಚರ್ಯ ಪರಮಕ್ಷೇತ್ರ ಕೂಡಲಿಯೊಳಿರುವ
ಮಂದಿರದಿ ಪಾರಾ-
ಯಣದಿ ಇರುತಿರ ಲೊಂದಿನ ಕಿರುಗೆಜ್ಜೆಗಳ
ಸುನಾದ ಕೇಳಲು ಮೋದ
ತರುಳರೀರ್ವರತಿತ್ವರದಿ ಬರುತ ಸಮ್ಮುಖದಿ
ಪೊಕ್ಕರು ಗೃಹದಿ ೫
ಕಂಡರು ಮುನಿಪರು ಕೊಂಡಾಡುತ ಹರಿಗುಣವ
ಪೊಂದಿರೆ ಮುದವ
ತಂಡ ತಂಡ ಬಣ್ಣಿಸುತವರನು ಗೃಹದೊಳಗೆ
ಪುಡಕಿದರಾಗೆ ಬಾಲವ
ಕಾಣದೆ ಯೋಚಿಸಿದರು ಮನದೊಳಗೆ ತಿಳಿದರು
ಹೀಗೆ ಕುಂಡಲಿಶಯನ
ಶ್ರೀರಾಮನೆ ದರ್ಶನವಿತ್ತ ಲಕ್ಷ್ಮಣಸಹಿತ೬
ಧರೆಯೊಳು ಬಹುಯತಿಕರ ಪೂಜಿತ ಪದಪದುಮಸ-
ದ್ಗುಣ ಧಾಮ ನಿರುತ ಶೇವಿಸುವ ಧರೆಸುರ ನಿಕರಕೆ
ಕೊಡುವ ಬೇಡಿದ ವರವ ಶರಣು ಜನಕೆ ಸುರ
ತರುವೆನಿಸಿದ ಸುರಪ್ರಿಯ ಕಾರ್ಪರನಿಲಯ ತರು
ಪಿಪ್ಪಲಗತ ಶಿರಿನಾರಸಿಂಹನೆ ಈತ ಶ್ರೀರಘುನಾಥಾ೭

೩೫
ವಂದನೆ ಮಾಡಿರೈ ವ್ಯಾಸ ಮುನೀಂದ್ರರ ಪಾಡಿರೈ ಪ
ವಂದಿಸುವರ ಭವಬಂಧವ ಬಿಡಿಸಿ ಆ
ನಂದವ ಕೊಡುವ ಕರ್ಮಂದಿವರೇಣ್ಯರ ಅ.ಪ
ನಂದತೀರ್ಥಮತ ಸಿಂಧುವಿಗೆ ಪೂರ್ಣಚಂದ್ರಾ
ಸದ್ಗುಣ ಸಾಂದ್ರಾ
ಚಂದ್ರಿಕಾದಿ ಪ್ರಬಂಧತ್ರಯ ನಿರ್ಮಿಸಿದಾ ಮತವರ್ಧಿಸಿದಾ
ನಂದದಿಂದ ಮುಚಕುಂದ ವರದನರ್ಚಿಸಿದಾ ಸತಿ ಮೆಚ್ಚಿಸಿದಾ
ಹಿಂದಕೆ ಹರಿಯನು ಸ್ತಂಭದಿ ತೋರಿದ ಕಂದ ಪ್ರಹ್ಲಾದರೆ
ಬಂದಿಹರೆನ್ನುತ ೧
ಕೃಷ್ಣರಾಯನಿಗೆ ದುಷ್ಟಯೋಗ ಪರಿಹರಿಸಿ ರಾಜ್ಯವಹಿಸಿ ಯ-
ಥೇಷ್ಟ ದಾನಫಲಕೊಟ್ಟು ನೃಪನನುಗ್ರಹಿಸಿ ರಾಜ್ಯದೊಳಿರಿಸಿ
ಶ್ರೇಷ್ಠವಾದ ಸಿಂಹಾಸನದಲಿ ಕುಳ್ಳಿರಿಸಿ ಆಜ್ಞೆಯ ತಿಳಿಸಿ
ಎಷ್ಟು ಮಹಿಮರೆಂದರಿತು ಇವರ ಮನ ಮುಟ್ಟಿ ಭಜಿಪರಿಗ
ಭೀಷ್ಟೆಯಗರಿವರ ೨
ಧರೆಯೊಳು ಚರಿಸುತ ಪರಮತತಿಮಿರಕೆ
ಸೂರ್ಯಯತಿ ಕುಲ-
ವರ್ಯ ಗುರುಮಧ್ವಮ ತದಿಸದ್ವೈಷ್ಣವ ಕುಮುದಕೆ
ಭಾರ್ಯಾ ಪಾವನ ಚರ್ಯ ಪರಮಮಹಿಮ ಬ್ರಹ್ಮಣ್ಯ-
ತೀರ್ಥರಿಗೆ ತನಯಾ ಕವಿಜನಗೇಯಾ ಶರಣರ ಪೊರಿಯುವ
ಶಿರಿಕಾರ್ಪರನರಹರಿಯ ನೊಲಿಸಿರುವ ಪರಮ ಮಹಾತ್ಮರ೩

೨೧
ವಂದಿಪೆ ವಾಗ್ದೇವಿ ಭಾರತಿ ನೀಡೆನಗೆ ಸುಮತಿ
ನಂದಸುತನ ಪದದಿ ಕೊಡು ರತಿ ಪ
ವಂದಿಪೆ ವಾಗ್ದೇವಿಯನ್ನ ಮಂದಮತಿಯ
ಕಳೆದು ಮನದಿ-
ನಿಂದು ವಿದ್ಯೆಯ ನೀಡಿ ಎನಗಾನಂದ
ಗರಿಯೆ ಬಂದು ಬೇಗ ಅ.ಪ
ಇಂದು ಮೌಲಿ ಮುಖ್ಯ ಸುರಗಣ ವಂದಿತಳೆ ಎನ್ನ
ನಿಂದು ವದನದಲ್ಲಿ ಅನುದಿನ ನಂದ ಮುನಿಯ ಶಾಸ್ತ್ರವಚನ
ಛಂದದಿಂದ ಪಠಣ ಶ್ರವಣಾನಂದವಾಗುವಂದದಿ ಗುರು
ಗಂಧ ವಾಹನರಾಣಿ ನಿನಗೆ೧
ಪೇಳಲಳವೆ ನಿಮ್ಮ ಮಹಿಮೆಯ ಕಾಲಭಿಮಾನಿ
ಕೇಳುವೆ ಸುಜ್ಞಾನ ಭಕುತಿಯ ಕಾಲಕಾಲಗಳಲ್ಲಿ ಎನ್ನ
ನಾಲಿಗೆಯೋಳ್ ನಿಂತು ಲಕ್ಷ್ಮೀಲೋಲನ ಶುಭ ಲೀಲೆಗಳನು
ಪಾಡಿ ಪೊಗಳುವಂತೆ ಜನನಿ ೨
ಚಾರು ಕೃಷ್ಣಾತೀರಸಂಸ್ಥಿತಾ ಉದಾರ ಚರಿತ
ನೀರಜಾಸನಾದಿಸುರನುತಾ ಶೇರಿದ ಭಕುತರಿಗೆ ತ್ರಿದಶ
ಭೂರುಹ ವೆಂದೆನಿಸಿದಂಥಾ ಪಾರ ಮಹಿಮ ಕಾರ್ಪರಸಿರಿ
ನಾರಸಿಂಹನ ಸೊಸೆಯೆ ನಿನಗೆ ೩

೧೭
ವರ ಹಳ್ಳೇರಾಯಾ ಮಾಂಪಾಲಯ ಪ
ಕರ ಮುಗಿವೆನು ದುಮ್ಮದ್ರಿನಿಲಯ ಅ.ಪ
ತರಣಿ ಕುಲತಿಲಕ ಸಿರಿರಾಮನ ಪದ
ಸರಸಿಜ ಮಧುಕರ ಸುರಗಣ ಸೇವ್ಯಾ ೧
ಸೋಮ ಕುಲಜ ಬಲರಾಮನನುಜನ
ಪ್ರೇಮಪಾತ್ರ ಬಲಭೀಮನೆ ಕೃಪಯಾ೨
ಸಿರಿಕೃಷ್ಣನೆ ಪರತರನೆಂದರುಹಲು
ವಿರಚಿತ ಶಾಸ್ತ್ರ ಶ್ರೀ ಗುರು ಮಧ್ವಾರ್ಯ ೩
ಯವನ ಕುಲದಿ ಭಜಿಸುವರಿಗೊಲಿದೆಯಾ
ಅವನಿಸುರಾರ್ಚಿತ ಶ್ರೀ ಪವಮಾನತನಯಾ೪
ಶರಣು ಜನಕೆ ಸುರತರುವೆಂದೆನಿಸಿದ
ಸಿರಿಕಾರ್ಪರ ನÀರಹರಿಗತಿ ಪ್ರೀಯಾ ೫

೪೪
ವರದೇಂದ್ರ ತೀರ್ಥರ ಪದಧ್ಯಾನ,
ಮುಕ್ತಿಮಾರ್ಗಕೆ ಸೋಪಾನ ಪ
ಗುರುವಸುಧೇಂದ್ರರ ಕರ ಕಮಲಜ ತವ ಚರಣಯುಗಲ
ಪರಿಶೇವನಾ ೧
ಪರಮತ ತಿಮಿರ ಭಾಸ್ಕರನೆಂಬುವ ತವ
ಬಿರುದಾವಳಿ ಸಂಕೀರ್ತನಾ ೨
ಕ್ಷೋಣಿಸುರರಿಗೆ ದ್ರವ್ಯ ದಾನದಿಂದಲಿ ಜಿತ
ಭಾನುಜರೆಂಬುವ ಭಾಷಣ ೩
ಹರುಷತೀರ್ಥರ ಮತ ಶರಧಿಗೆ ಪೂರ್ಣ
ಚಂದಿರನೆಂಬುವ ಶುಭಗಾಯನ ೪
ಶರಣರ ಪೊರಿವ ‘ಕಾರ್ಪರನರಸಿಂಹ’ನ
ಕರುಣ ಪಾತ್ರ ತವಶೇವನಾ ೫

೩೬
ವಾದಿರಾಜ ಗುರುವೇ ಪಾದಾರಾಧಕ ಸುರತರುವೆ ಪ
ಮೋದವ ಕೊಡುವದು ನೀ ದಯದಿಂದಲಿ
ಸ್ವಾದಿನಿಲಯ ತವ ಪಾದಕೆ ನಮಿಸುವೆಅ.ಪ
ಮೇದಿನಿಯೊಳು ಚರಿಸೀ ಜನರೊಳಗಾಧ ಮಹಿಮರೆನಿಸಿ
ಮೋದಮುನಿಯ ಸುಮತೋದಧಿಚಂದಿರ
ವಾದಿ ಮದ ಗಜ ಮೃಗಾಧಿಪರೆನಿಸಿದ ೧
ಯುಕ್ತಿ ಮಲ್ಲಿಕಾಧೀ ಬಹುಸರಸೋಕ್ತಿ ಸಹಿತವಾಗಿ
ಭಕ್ತಿ ಪುಟ್ಟಿಸುವ ರುಕ್ಮಿಣೇಶ ವಿಜಯಾಖ್ಯ ಗ್ರಂಥದಿ ಚಮ
ತ್ರ‍ಕತಿ ತೋರಿದ ೨
ಭಾಗವತರ ಪ್ರೀಯಾ ನಮಿಸುವೆ ವಾಗೀಶರ ತನಯಾ
ಯೋಗಿವರ್ಯ ಕವಿಗೇಯ ದಯಾಕರ
ಭೋಗಪುರೀಶನ ರೋಗವ ಕಳೆದಿ ೩
ರಾಜರನ್ನು ಪೊರೆದಿ ಯತಿಕುಲರಾಜರೆನಿಸಿ ಮೆರೆದಿ
ವಾಜಿಪದನ ಪದ ರಾಜೀವ ಯುಗಲ ಪೂಜಿಸಿ ಜಗದಿವಿ
ರಾಜಿಸಿದಂಥ ೪
ಭೂತಭಯವ ಬಿಡಿಸಿ ಭಜಕರ ಪಾತಕ ಪರಿಹರಿಸಿ
ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗ ನಾಥನ ಪರಮ
ಪ್ರೀತಿಯ ಪಡೆದಿ ೫

೫೩
ವಿಜಯರಾಯ ಭಜಿಸೋ ಹೇ ಮನುಜಾ ನೀ ಪ
ವಿಜಯರಾಯರ ಪಾದ ಭಜಿಸುವ ಮನುಜರ
ವೃಜಿನ ವಾರಿಧಿಗೆ ಕುಂಭಜರೆನಿಸಿದ ಗುರು ಅ.ಪ
ಮೊದಲು ಬೃಗುಮುನಿರೂಪದಿ ಶೀ-
ಘ್ರದಿ ಪೋಗಿ ಬರಲು ಶ್ರೀಹರಿ ಲೋ-
ಕದಿ ವಿಧಿ ವಿಷ್ಣು ಶಿವರೊಳು
ಪದುಮನಾಭನಕಿಂತ ಅಧಿಕರಿಲ್ಲೆಂದು ನಾ
ರದ ಮುನಿಗರುಹಿದ ೧
ಜಗದೊಳು ಸಕಲ ಕ್ಷೇತ್ರ ತೀರ್ಥಗಳ
ಮಹಿಮೆಯ ವರ್ಣಿಸುತ ಖಗರಾಜ
ಗಮನ ಶ್ರೀ ಭಗವದ್ಗುಣಗಳನ್ನು
ಬಗೆ ಬಗೆ ಪದಸುಳಾದಿಗಳಿಂದ ತುತಿಸಿದ ೨
ಕಾಶಿಯೊಳಗೆ ಸಂಪ್ರಾಪ್ತ ಪುರಂದರ
ದಾಸರಿಂದಲಿ ಅಂಕಿತ
ಶೇಷಶಯನ ಶ್ರೀನಿವಾಸ ‘ಕಾರ್ಪರನರ-
ಕೇಸರಿ ‘ ಗತಿ ಪ್ರಿಯ ದಾಸರೆಂದೆನಿಸಿದ ೩

ದೇವದೇವತೆಗಳ ಸ್ತುತಿ

ವೀರನ ನೋಡಿರೈ ನರಮೃಗಾಕಾರನ ಪಾಡಿರೈ ಪ
ಕಾರ್ಪರ ಋಷಿ ತಪಕೊಲಿದು ಅಶ್ವತ್ಥದಿ ಮೆರೆವಾ
ಭಕುತರ ಪೊರೆವಾ ಅ.ಪ
ಚಾರು ಚರಣಯುಗಳಾರಾಧಿಸುವರ ದುರಿತ ತಿಮಿರಕೆ ಸವಿತ
ವಾರಿಜಭವ ತ್ರಿಪುರಾರಿ ಮುಖಸುರ ವ್ರಾತ ಸೇವಿತ ತ್ವರಿತ
ನಾರಾಯಣ ಮುನಿ ಪೂಜೀತ ಪದ
ಮಧ್ಬಂಧು ಪೊರೆಯೊನೀನೆಂದು
ಪ್ರಾರ್ಥಿಸುವರಿಗಭೀಷ್ಟಿಯಗರಿಯಲು ದೇವ ತರುಸ್ವಭಾವ ೧
ಉಗ್ರನಾದರು ಭಕುತಾಗ್ರಣಿಗಳಿಗೆ ಅನುಗ್ರ ಒಲಿವನು ಶೀಘ್ರ
ವಾಗ್ಧೇವಿಯರ ಸನಾಜ್ಞದಿ ನಮಿಸಿ ಪ್ರಹ್ಲಾದ ಸ್ತುತಿಸಲು ಒಲಿದ
ಉಗ್ರವದನ ಶಾಲಿಗ್ರಾಮಗಳ ರೂಪದಲಿ ವೃ-
ಕ್ಷಾಗ್ರದಲಿ ಭಾರ್ಗವಿ ರಮಣನನುಗ್ರಹಿಸಲು ಭಕುತರನ
ಪ್ರಕಟನಾಗಿಹನ ೨
ಸ್ಥಿರಚರದೊಳು ತನ್ನಿರುವಿಕೆಯೆನು ಬುಧಜನಕೆ
ತೋರಿಸುವದಕೆ
ಸುರುಚಿರ ಷೋಡಶಕರಗಳಿಂದಾಯುಧ ಧರಿಸಿ
ಅಸುರನ ಮಥಿಸಿ
ತರುಮೂಲದಳೊವತರಿಸಿ ಚಕ್ರಾಂಕಿತಶಿಲದಿ
ನೆಲಸಿಕರುಣದಿ
ಶರಣು ಜನಕೆ ಪರಿಹರಿಸ್ಯಭಯ ನೀಡುವನ
ದಿವಿಜರೊಡೆಯನ೩
ಕ್ಷೋಣಿಯೋಳಿಸು ಸ್ಥಾನದರ್ಶನದಿ ಮನುಜನ
ಪೋಪುದು ವೃಜಿನ
ಸ್ಥಾನದ ಮಹಿಮೆ ಪುರಾಣದಿ ಪೇಳಿರುವದನ
ತಿಳಿವದು ಮುನ್ನ
ಭಾನು ಕರ್ಕಾಟಸ್ಥಾನದಿ ಬರುವ ಕಾಲದಲಿ ತೀರ್ಥಗಳಲ್ಲಿ
ಸ್ನಾನ ಜಪಾನುಷ್ಠಾನ ಮಾಳ್ವರಿಗೆ ಒಲಿವ
ಹೃದಯದಿ ಪೊಳಿವ ೪
ಚಾರು ಶ್ರೀಕೃಷ್ಣಾತೀರದಿ ಮೆರೆವಾಶ್ವತ್ಥ
ತರುವರ ಸಂಸ್ಥಾ
ನಾರದ ಮುನಿ ಸಂಕೀರ್ತಿತ ಪಾವನ
ಚರಿತ ತ್ರಿಗುಣಾತೀತ
ಕಾರ್ಪರ ನಿಲಯ ಶ್ರೀನಾರಸಿಂಹನ
ಪದಯುಗಲ ಬಿಡದನುಗಾಲ
ಸಾರಿ ಭಜಿಪರಿಗಪಾರ ಸೌಖ್ಯಗಳ ಗರಿವ ವಿಘ್ನವ ತರಿವ೫

೧೦೧
ವೃಂದಾವನೀ ದೇವಿ ವಂದಿಸುವೆ ಶ್ರೀ ತುಳಸಿ
ಮಂದಿರಳೆ ನಿನ್ನಪದಕೆ
ವಂದಾರು ಜನತತಿಗೆ ಮಂದಾರಳೆನಿಸಿರುವಿ
ಸಂದೇಹವಿಲ್ಲವಿದಕೆ ೧
ಅಂದು ಧನ್ವಂತರಿಯು ತಂದಿರುವ ಪೀಯೂಷ
ದಿಂದ ಪೂರಿತ ಕಲಶದಿ
ಇಂದಿರಾಪತಿಯ ಆನಂದ ಬಾಷ್ಪೋದಕದ
ಬಿಂದು ಬೀಳಲು ಜನಿಸಿದಿ೨
ಶ್ರೀ ತುಳಸಿ ನಿನ್ನನು ನಿಕೇತನದಿ ಪೂಜಿಪರ
ಪಾತಕವ ಪರಿಹರಿಸುವಿ
ಶ್ರೀ ತರುಣಿಪತಿಗೆ ಬಲುಪ್ರೀತಿ ವಿಷಯಳೆನಿನ್ನ
ನಾ ಸ್ತುತಿಸಲೆಂತು ಜನನಿ ೩
ಸರ್ವ ತೀರ್ಥಗಳೆಲ್ಲ ತರುಮೂಲದಲ್ಲಿಹವು
ಸರ್ವ ವಿಬುಧರು ಮಧ್ಯದಿ
ಸರ್ವ ವೇದಗಳೆಲ್ಲ ತರುಅಗ್ರಭಾಗದಲಿ
ಇರುತಿಹರು ಬಿಡದೆ ನಿರುತ ೪
ತುಳಸಿ ನಿಮ್ಮಯ ಲಕ್ಷದಳಗಳಿಂದಲಿ
ಲಕ್ಷ್ಮಿನಿಲಯನಂಘ್ರಿಗಳರ್ಚಿಸಿ
ಕಲುಷ ವರ್ಜಿತನಾಗಿ ಬಲುಬೇಗ ಶ್ರೀಹರಿಯ
ಒಲುಮೆ ಪಡೆವನು ಜಗದೊಳು ೫
ತುಳಸಿ ದೇವಿಯೆ ನಿನಗೆ ಜಲವೆರೆದು ಕುಂಕುಮದ
ತಿಲಕವಿಡುತಲಿ ನಿತ್ಯದಿ
ಲಲನೆಯರು ಪೂಜಿಸಲು ಒಲಿದಿತ್ತು ಸೌಭಾಗ್ಯ
ಸಲಹುವಿಯೆ ಕರುಣದಿಂದ ೬
ಮಾಧವ ಪ್ರಿಯ ತುಳಸಿ ಸಾದರದಿ ನಿನ್ನೊಳಗೆ
ಶ್ರೀದೇವಿ ನಿಂದಿರುವಳು
ಮೋದಮುನಿ ಶಾಸ್ತ್ರವನು ಬೋಧಿಸುವ ಬುಧಜನರ
ಪಾದಸೇವೆಯ ಕರುಣಿಸು ೭
ಮಿತ್ರನುದಯದಲೆದ್ದು ಚಿತ್ತನಿರ್ಮಲರಾಗಿ
ಭಕ್ತಿಯಲಿ ಶ್ರೀ ತುಳಸಿಯ
ಮೃತ್ತಿಕೆಯ ಧರಿಸಿದ ಮಹಾತ್ಮರನು ಕಂಡು ಯಮ
ಭೃತ್ಯರಂಜುವರು ಭಯದಿ ೮
ಇಂತು ಶ್ರೀತುಳಸಿ ಸೀಮಂತಿನಿಯ ಸ್ತೋತ್ರವ ನಿ-
ರಂತರದಿ ಪಠಿಸುವವರ
ಚಿಂತಿತ ಪ್ರದನಾಗಿ ನಿಂತು ಕಾರ್ಪರದಿ ಸಿರಿ
ಕಾಂತ ನರಹರಿ ಪೊರೆವನು ೯

೮೨
ವೇದವ್ಯಾಸರ ದಿವ್ಯಪಾದ ಪದುಮಯುಗಲ
ಆರಾಧಿಸುತಿರು ಮನುಜಾ ಪ
ವೇದಗಳಿಗೆ ಸಮ್ಮತವಾದ ಪುರಾಣಗಳ
ಸಾದರದಲಿ ರಚಿಸಿ ಮೋದವ ಬೀರಿದ ಅ.ಪ
ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದು
ಸುರಮುನಿ ಪ್ರಾರ್ಥನದಿ
ಪರಮ ಮಂಗಲ ವೀರವರ ಭಾಗವತ ಗ್ರಂಥ
ವಿರಚಿಸಿ ಶುಕಮುನಿಗೆ ಕರುಣದಿಂದರುಹಿದ ೧
ವಾಸಿಪ ಮುನಿಗುಣ ಭೂಷಿತ ಬದರಿಯೋಳ್
ತೋಷ ತೀರ್ಥರ ಕರೆದು
ಭೂಸುರ ಜನರಿಗೆ ಮೋಕ್ಷದಾಯಕ ಸೂತ್ರ
ಭಾಷ್ಯವರಚಿಸೆಂದಾದೇಶವ ನೀಡಿದ೨
ಅರಿದರಾದ್ಯಯುಧ ಧರಿಸಿ ಷೋಡಶಸಂಖ್ಯ
ಕರಗಳಿಂದಲಿ ಶೋಭಿತ
ಶರಣು ಜನಕೆ ಸುರತರು ವೆನಿಸಿ ಧರೆಯೊಳು
ಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ ೩

೪೫
ವ್ಯಾಸ ತತ್ವಜ್ಞರ ಚರಿಯಾ ಮನಕಾಶ್ಚರಿಯಾ
ಪರಮಹಂಸ ಕುಲಜ ಭುವನೇಂಧ್ರರ ತನಯಾ ಪ
ಶೇಷಗಿರೀಶ್ವರ ಕೃಪಯಾ ಐಜಿ ವ್ಯಾಸವೆಂಕಟ ನರ-
ಸಿಂಹಾಭಿಧೇಯ ಭೂಸುರೋತ್ತಮರಿಗೆ ತನಯಾ ನೆನಿಸಿ
ಭಾಸುರ ಕೀರ್ತಿಯ ಪಡೆದ ರಾಮಾರ್ಯ ೧
ವೇಣಿ ಸೋಮಪುರ ನಿಲಯ ಪಾಹಿ
ಆನತ ಜನಸುರಧೇನೋ ಮಾಂಕೃಪಯಾ
ವೇಣು ಗೋಪಾಲನ ಪ್ರೀಯ ಎಂದು
ಧ್ಯಾನಿಪ ಜನರಘ ತಿಮಿರಕೆ ಸೂರ್ಯ ೨
ಕೇಳಿವರ ಮಹಿಮೆ ಅಪಾರ ಗದ್
ವಾಲ ಭೂಪಗೆ ಬಂದ ಭಯ ಪರಿಹಾರ
ಪೇಳಲು ಶ್ಲೋಕಾರ್ಥಸಾರ ಕೃಷ್ಣಾ
ಮೇಲೆ ಪ್ರವಹಿಸಲು ಓಡಿತು ಶತೃನಿಕರ ೩
ರಾಮ ಪದಾಂಬುಜ ಭೃಂಗ ತನ್ನ
ನೇಮದಿಂದಲಿ ಶೇವಿಪರ ಭವಭಂಗ
ಕಾಮಿತ ಫಲದ ಕೃಪಾಂಗ ಪರ ಬ್ರಹ್ಮ
ನಾನೆಂಬೊ ದುರ್ಮತ ಗಜಸಿಂಗ೪
ನಂದ ನಂದನ ಗುಣಸ್ತವನ ಮಾಳ್ಪ
ನಂದ ತೀರ್ಥರ ಮತಾಂಬುದಿ ಶೀತ ಕಿರಣ
ಒಂದಾರು ಜನರೊಳು ಕರುಣ ಕೃತ
ಮಂದ ನಂದಿನಿ ವ್ಯಜನಾದಿ ವ್ಯಾಖ್ಯಾನ ೫
ಘನ್ನ ಮಹಿಮ ಜಿತಕಾಮಾ ಅ-
ರಣ್ಯ ಕಾಚಾರ್ಯ ಸೇವಿತ ಪದ ಪದುಮ
ಸನ್ನುತ ಶುಭ ಗುಣಸ್ತೋಮ ಮನವೇ
ಬಣ್ಣಿಸಲೊಶವೆ ಪಂಚಾಮೃತ ಮಹಿಮಾ ೬
ವಾಸುದೇವನ ಗುಣತತಿಯ ಪೇಳಿ
ದಾಸ ಜನರಿಗೆ ಪಾಲಿಸಿದಿ ಸನ್ಮತಿಯಾ
ಭಾಸುರ ಕುಸುಮೂರ್ತಿರಾಯ ನೆನಿಸಿ’ಶ್ರೀಶಕಾರ್ಪರ ನರಹರಿ’ ಗತಿ ಪ್ರೀಯ ೭


ಶಿರಿದೇವಿಯೆ ಪೊರಿಯುವದೆನ್ನನು ತಾಯೆ ಭಾ
ಸ್ಕರ ಪುರ ನಿಲಯೆ ಪ
ಧರಣಿಸುರವರನಿಗೊಲಿದು ಶ್ರೀಗಂಧದ
ವರ ಶಿಲೆಯೊಳು ನೆಲಿಸಿರುವ ಶುಭಾಂಗಿಯೆ ಅ.ಪ
ವರಕೊಲ್ಲಾಪುರ ಕ್ಷೇತ್ರದೊಳಿರುವಂಥ
ಲಕುಮಿಯೆ ತವ ದರುಶನ
ವರುಷಂಪ್ರತಿ ಮಾಡುವ ನೇಮಾಸಕ್ತ ಶ್ರೀ ಲಕ್ಷ್ಮೀಕಾಂತ
ವರನಾಮಕ ದ್ವಿಜ ವರಗೊಲಿದು ಬಂದಂಥ
ತತ್ಕರಸಂಪೂಜಿತ
ವರಗೋಪುರದಿಂ ಪರಿಶೋಭಿತ ಮಂದಿರದೊಳು
ವೆಂಕಟಗಿರಿ ರಮಣನ ಸತಿ ೧
ಪದ್ಮೇ ಪ್ರಣಮಾಮಿ ಭವತ್ಪದ ಪದ್ಮೆ ವಾರಿಜದಳ ಸದ್ಮೆ
ಪದ್ಮಾನನೆ ಸ್ಮರಿಸುವೆ ಕರಧೃತ ಪದ್ಮೆ ವಾಸಯಿ ಮಮಸದ್ಮನಿ
ಪದ್ಮಾವತಿ ಪದ್ಮಜನುತ ಪದಪದ್ಮೇ ಉದ್ಭವಿಸಿದ ಪದ್ಮದಿ
ಪದ್ಮಲೋಚನೆ ಸಮುದ್ರಕುಮಾರಿಯೇ
ಪದ್ಮನಾಭ ಹೃತ್ಪದ್ಮನಿವಾಸಿನಿ ೨
ಕ್ಷೋಣಿಸುರ ಪೂಜಿತೆ ಪಾವನ ಚರಿತೆ
ಸಿಂಹಧ್ವಜ ಶೋಭಿತೆ
ಸಾನುರಾಗದಿ ಭಜಿಸುವರಿಗೆ ಪ್ರೀತೆ ಕಾಮಿತ ಫಲದಾತೆ
ಜ್ಞಾನಾ ಸದ್ಭಕುತಿಯು ಕರುಣಿಸು ಮಾತೆ ವರದಾಭಯಹಸ್ತೆ
ಕ್ಷೋಣಿಯೊಳಗೆ ಸುಸ್ಥಾನ ಕಾರ್ಪರದ ಶ್ರೀನರಸಿಂಹನ
ರಾಣೆಯೆ ನಮಿಸುವೆ ೩
ವಂದಾರುಜನ ಮಂದಾರಾಮಿಂದಿರಾ ಸುಂದರಾನನಾಂ
ವಂದೇಹಂ ಭಾಸ್ಕರ ಕ್ಷೇತ್ರ ನಂದಸೂನು ಪದಾಶ್ರಯಂ

೫೫
ಶೇರಿ ಸುಖಿಸು ಮಾನವ ಗುರುಚರಣ ಸರೋಜವ ಪ
ಶೇರಿದ ಶರಣರ ಘೋರ ಪಾತಕವೆಂಬೊ
ವಾರಿದ ಗಣಕೆ ಸಮೀರ ಜಗನ್ನಾಥ
ಸೂರಿವರ್ಯ ದಾಸಾರ್ಯರಂಘ್ರಿಯನುಅ.ಪ
ತಾರತಮ್ಯವ ತಿಳಿಯದೀ ಕಲಿಯುಗದಿ ಮುಕ್ತಿ
ದಾರಿಗಾಣದೆ ಭವದಿ ಬಿದ್ದ ಸಜ್ಜನೋ-
ದ್ದಾರ ಮಾಡಲು ದಯದಿ ಬ್ಯಾಗವಾಟದಿ
ನಾರ ಸಿಂಹಾಖ್ಯ ವಿಪ್ರಾಗಾರದೊಳುದ್ಭವಿಸಿ
ಶ್ರೀರಮಾಪತಿಯ ಚಾರು ಕಥಾಮೃತ
ಸಾರವಧರೆಯೊಳು ಬೀರಿದಂಥವರ ೧
ಮೇದಿನಿಯೊಳು ಚರಿಸಿ ವ್ಯಾಕ್ಯಾರ್ಥದಿ ಬಹುದು-
ರ್ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ
ಭೋಧ ಮತಾಬ್ಧಿಗೆ ಶಶಿ ನೃಪಮಾನ್ಯರೆನಿಸಿ
ಶ್ರೀದ ಪ್ರಹ್ಲಾದಾನುಜ ಸಲ್ಹಾದರೆ ಇವರೆಂದು
ಸಾದರದಿ ಬಿಡದೆ ಪಾದ ಪಂಕಜಾ ರಾಧಕರಿಗೆಸುರ
ಪಾದಪರೆನಿಪರ ೨
ಕ್ಷೋಣಿ ವಿಬುಧ ಗಣದಿ ಸೇವೆಯಕೊಳುತ
ಮಾನವಿಯೆಂಬೊ ಕ್ಷೇತ್ರದಿ ಮಂದಿರ ಮಧ್ಯ
ಸ್ಥಾಣುವಿನೊಳು ಮುದದಿ ಕಾರ್ಪರವೆಂಬೊ
ಕಾನನದಲಿ ಕೃಷ್ಣಾವೇಣಿ ಕೂಲದಿ ಮೆರೆವ
ಶ್ರೀನಿಧಿ ನರ ಪಂಚಾನನಂಘ್ರಿಯುಗ
ಧ್ಯಾನದಿ ಕುಳಿತ ಮಹಾನುಭಾವರನು ೩

೨೩
ಶೇಷದೇವನೆ ಷೋಷಿಸೆನ್ನನು ಶೇಷದೇವಾ ಕರುಣಾ ಸಮುದ್ರಭವ ಪ
ಕ್ಲೇಶವ ಕಳಿಯೋ ಸುರೇಶ ಮುಖವಿನುತ ಅ.ಪ
ವಾಸುದೇವನ ಶಯ್ಯಾಸನ ರೂಪದಿ ಸೇವಿಸುವಿ ಚರಣ
ಸಾಸಿರವದನದಿ ಶ್ರೀಶನ ಶುಭಗುಣಲೇಶ ವರ್ಣಿಸುವ
ಭಾಸುರ ವಪುಷಾ ೧
ಹೇ ಮಹಾತ್ಮನೇ ಭೂಮಿ ಪಾತಾಳವ್ಯೋಮ
ವ್ಯಾಪ್ತನೆ ರಾಮನ ಸೇವಿಸಿ
ಪ್ರೇಮವ ಪಡೆದಿಹ ಸೌಮಿತ್ರಿಯ ಶುಭನಾಮದಿ ಮೆರೆದಾ ೨
ವಾರುಣೀವರ ಧಾರುಣಿಯೊಳು ಕೃಷ್ಣಾತೀರಕಾರ್ಪರ
ನಾರಸಿಂಹನ ಪದಾರವಿಂದಯುಗ ಸೇರಿಸುಖಿಸುತಿಹ
ಶೌರಿ ಅಗ್ರಜ೩

೩೩
ಶ್ರೀ ಮದ್ರಾಮ ಪದಾರ್ಚಕ ನಿರ್ಜಿತ ಕಾಮಸುಗುಣ
ಧಾಮ ನಮೋ
ಮಾಮವನತ ಜನಕಾಮಿತ ಫಲದ
ಜಿತಾಮಿತ್ರಾಖ್ಯ ಮುನೀಂದ್ರ ನಮೋ ೧
ನಂದತೀರ್ಥ ವಂಶೋದ್ಭವಗುರು
ವಿಭುದೇಂದ್ರಕುಮಾರ ಯತೀಂದ್ರ ನಮೋ
ಇಂದು ಮೌಳಿ ಭೂವೃಂದಾರಕ ಭವಬಂಧ
ವಿಮೋಚಕ ನಮೋ ನಮೋ೨
ಭೂತನಾಥ ಪುರುಹೂತ ಮುಖಸುರ ವ್ರಾತ
ವಿನುತತೇ ನಮೋನಮೋ
ವಾತಮತಾಂಬುಧಿ ಶೀತಕಿರಣ ಪ್ರಖ್ಯಾತ
ಜಿತಾಹಿತ ಪಾಲಯಮಾಂ ೩
ಶರಣಾಗತ ಜನ ದುರಿತ ತಿಮಿರ ಭಾಸ್ಕರ
ಕರುಣಾಕರ ನಮೋ
ಸಪ್ತವಾಸರ ಮುಷಿತ್ವಾಭೋ ಪುನರುತ್ಥಿತ
ಪರಮ ಸಮರ್ಥನಮೋ ೪
ಆನಮಿಪೆ ಕೃಷ್ಣಾವೇಣಿ ತಟಸ್ಥಿತ ಗೋನದ
ತರು ಸುಸ್ಥಾನಗತ
ಆನತಜನ ಸುರಧೇನುಸಮಾನ ಮಹಾನುಭಾವತೇ
ನಮೋನಮೋ ೫
ಶ್ರೀ ಮತ್ಕಾರ್ಪರಧಾಮ ನರಹರೇ ಪ್ರೇಮ
ಪಾತ್ರ ಸುಚರಿತ್ರ ನಮೋ
ಕಾಮಾದಿ ರಿಪುಸ್ತೋಮ ಭಯಾಪದ
ಮಾಮುದ್ಧರತೆ ನಮೋನಮೋ ೬

೭೩
ಶ್ರೀ ಶ್ರೀನಿವಾಸ ಭಕುತರ ಪೋಷ
ಮಾಂ ಪಾಹಿ ಸುರೇಶ ಪ
ಆರಾಧಕ ಪರಿವಾರವ ಪೊರೆಯಲು
ಧಾರುಣಿಯೊಳು ಶಿರಿವಾರನಿವಾಸ ಅ.ಪ
ವಾರಿಜೋದ್ಭವ ಮುಖಸುರ ಸಂಶೇವ್ಯಫಣಿ
ರಾಜ ಸುಶಯ್ಯಾ ಸೇರಿಸೇವಿಪರಘ ತಿಮಿರಕೆ
ಸೂರ್ಯ ನೀರದ ನಿಭಕಾಯ ಧಾರುಣಿ ಸುರಪರಿ
ವಾರ ಸುಪೂಜಿತ ಮಾ ರಮಣನೆ
ಗುರುಮೂರುತಿ ಪ್ರಿಯ ೧
ಕಂದರ್ಪನಯ್ಯ ಕವಿಜನಗೇಯ ಬಂಧುರ ಶುಭನಿಲಯ
ನಂದನಂದನ ಮಾಮುದ್ಧರ ಕೃಪಯಾನಾಮುಗಿವೆನು ಕೈಯ್ಯಾ
ಇಂದಿಗೂ ಬುಧ ಜನರಿಂದ ವೈಭವದಿ ಸ್ಯಂದನವೇರಿದ
ಸುಂದರಕಾಯಾ ೨
ಇಳಿದೇವಾರ್ಪಿತ ಶ್ರೀ ತುಳಸಿಯ ಹಾರ ಪೀತಾಂಬರಧಾರ
ಪೊಳೆವಾ ಕುಂಡಲ ಮುಕುಟಾಲಂಕಾರ ಭೂಷಿತ ಶರೀರಾ
ಜಲಧಿ ಶಯನ ಮಂಗಳ ರೂಪನೆಭವ
ಜಲಧಿಯ ದಾಟಿಸೊ ಕಲುಷ ವಿದೂರ ೩
ಕೃಷ್ಣರಾಯಾನೆಂಬುವ ಸದ್ಭಕ್ತ ಇರುತಿರಲು ವಿರಕ್ತ
ಸಾಷ್ಟಾಂಗ ನಮಸ್ರ‍ಕತಿ ಸೇವಾಸಕ್ತ ಗ್ರಾಮವ ರಕ್ಷಿಸುತ
ನಿಷ್ಠೆಯಿಂದ ಮನಮುಟ್ಟಿ ಭಜಿಸುತಿರೆ ಥಟ್ಟನೆ ವಲಿದಖಿ
ಲೇಷ್ಟ ಪ್ರದಾತಾ ೪
ದೇಶಾದಾಗತ ಭಕುತರ ಅಭಿಲಾಷಾ ಪೂರೈಸಲು ಅನಿಶಾ
ವಾಸಾ ಮಾಡಿದಿ ಗಿರಿಯೊಳು ಸರ್ವೇಶ ಕೊಡು ಸತ್ಸಹವಾಸ
ದೇಶದಿ ಕಾರ್ಪರವಾಸ ಲಕ್ಷ್ಮಿನರಕೇಸರಿ ರೂಪನೆ
ಶೇಷಗಿರೀಶ೫

೧೦೯
ಶ್ರೀದೇವಿ ವರಮಂಚಕೆ ಬರುವದೀಗಲೆ
ಸಖಿಯೆ ಬರುವದೀಗಲೆ ಪ
ಕರಿದಂತ ರಚಿತ ಚರಣ ವರಮೌಕ್ತಿಕ ವಿಲಾಸ
ಪರಿಶೋಭಿತ ಪರಿಯಂಕಕೆ ಬರುವದೀಗಲೆ೧
ಮಂದರಧರ ಸಮೀರ ವಂದಿತನಂದ ಕುವರÀ
ಕಂದರ್ಪ ಪಿತನ ಸುಖ ಶಯನಕೆ ಬರುವದೀಗಲೆ ೨
ಏಣಾಂಕ ಬಿಂಬವದÀನೆ ಸುಶ್ರೋಣಿ ಮಂದಗಮನೆ
ಶ್ರೀ ನಾರಸಿಂಹನ ವರಮಂಚಕೆ ಬರುವದೀಗಲೆ೩

೭೪
ಶ್ರೀಧವ ಮಾಮವ ಪ್ರಣತ ಜಾನರ್ತಿ ಹರಭೋ
ಭೂಧರಜಾವರನುತಪದ ಪ
ಸಾದರದಲಿ ನಿನ್ನಾ ಪಾದವ ಭಜಿಸುವೆ ನಾ
ಮೋದವ ಕೊಡು ಕರುಣಾಂಬೋಧಿಯೆ
ಮಧು ಮಥನಾ ಸದಾಮಲಾಚರಿತನೆ
ಒದಗಿಸುತವ ಪದದಲಿ ಮನ ೧
ನತಜನ ಕೃತ ಕರುಣಾ ಶ್ರೀತಜನರಘಹರಣ
ಶೃತಿಗಣನುತ ಶರಣಾಗತ ಜನವತ್ಸಲನ
ನತಿಸುವೆ ಸತತದಿ ರತಿಪತಿ ಪಿತಕರ ಪಿಡಿವದು ೨
ಧರಿ ಸುರ ಜನ ಪ್ರಿಯಾ ಕರುಣದಿ ಭವಮಾಯಾ
ಪರಿಹರಿಸೆಲೊ ಜೀಯಾ ವರಕಾರ್ಪರ ನಿಲಯಾ
ನರಹರಿ ವಿಠಲನೆ ವರಪಿಪ್ಪಲತರು ಸಂಸ್ಥಿತ ೩

೩೪
ಶ್ರೀಪಾದರಾಜ ಪಾಲಿಸೊ ಕೈಪಿಡಿದೀ ಭವದ
ಕೂಪಾರದಿಂದ ದಾಟಿಸೋ ಪ
ಕಾಪಾಡೆಲೊ ಕರುಣಾ ಪಯೋನಿಧೆ ಭೂಪಚಂದ್ರ ಗಿರಿ
ಪಾಪಗಳನ್ನು ಕಳದಿರುವೆ ಮದ್ಗುರುವೆ ಕರಮುಗಿವೆ
ಭಜಕರ ಸುರತರುವೇ ಅ.ಪ
ಮೇದಿನಿ ಪಾಲಪೂಜಿತ ವಿದ್ವಜ್ಜನವಿನುತ
ಮೇದಿನಿ ಜಾತ ಪ್ರದಾತ
ಮೋದಮುನಿಯ ಸುಮತೋದಧಿಚಂದಿರ
ವಾದಿ ಮದಗಜ ಮೃಗಾಧಿಪ ಕವಿಜನಗೇಯ ಶುಭ
ಕಾಯ ಧೃವರಾಯ ಆಶ್ವರ್ಯ ಚರ್ಯ೧
ವಿಪ್ರಹತ್ಯಾದಿ ದೋಷಗಳನ್ನು ಕಳೆಯುವ ಮಹಿಮೆಯನು
ಅಪ್ರಬುದ್ಧರು ದೂಷಿಸೆನಿಮ್ಮನ್ನು
ಕ್ಷಿಪ್ರ ಶಂಖೋದಕ ಸಂಪ್ರೋಕ್ಷಿಸಿ ಬಲು ಕಪ್ಪುವಸನವನು
ಸುಪ್ರಕಾಶಿಸಿದ ಮಹಿಮಾ ಶುಭನಾಮ ಜಿತಕಾಮಾ
ಯತೆ ಸಾರ್ವಭೌಮ ೨
ಕ್ಷೇತ್ರ ಕಾರ್ಪರದಲಿ ಶ್ರೀ ರಘುನಾಥ
ವಿಭುದೇಂದ್ರ ಸಹಿತ
ಛಾತ್ರಾ ನಿಮ್ಮನ್ನು ಕೇಳಲು ಸೂ-
ತ್ರಾರ್ಥಾ ಚಾತುರ್ಮಾಸದಿ ಕೂತಿರೆತವ
ಸರ್ವಾತಿಶಯದಿಸ-
ಚ್ಛಾಸ್ತ್ರ ಪ್ರವಚನ ಸುಪ್ರೀತಾ ರಘುನಾಥಾ
ಮುಖಗೀತಾನಾಮದಿ ಪ್ರಖ್ಯಾತ ೩
ಎಷ್ಟು ನಿಮ್ಮಂಘ್ರಿಸ್ಮರಣೆಯ ಮಾಡುವರಿಗೆ ನಿತ್ಯಾ
ಮೃಷ್ಟಾನ್ನ ಕೊಡುವೊ ಮಹಿಮೆಯ ಕೃಷ್ಣಗರ್ಪಿಸಿದ
ಪಷ್ಠಿಶಾಕಯುತ ಮೃಷ್ಟಾನ್ನ ದ್ವಿಜ
ತುಷ್ಟಿಗೈಸುವಿರಿ ನಿರುತ ಗುಣಭರಿತ ಪ್ರಖ್ಯಾತ
ಪಾವನ ತರ ಚರಿತ ೪
ನಿರುತ ನಿಮ್ಮನ್ನು ಸ್ಮರಿಸುವ ನರಧನ್ಯ
ಜಗದೊಳು ಸನ್ಮಾನ್ಯ
ಚರಿಸಿ ಸತ್ಕರ್ಮವ ಘಳಿಸುವ ಪುಣ್ಯ
ಶರಣುಜನಕೆ ಸುರತರುವೆಂದೆನಿಸುತ ಧರೆಯೊಳು
ಮೆರೆಯುವ ಶಿರಿಕಾರ್ಪರ ಶುಭನಿಲಯ ಸುರಗೇಯ
ಗುರುರಾಯ ನರಹರಿಗತಿ ಪ್ರೀಯ ೫

೩೧
ಶ್ರೀಮದಕ್ಷೋಭ್ಯ ತೀರ್ಥರ ದಿವ್ಯ ಚರಿತಂ
ಕಾಮಿತ ಪ್ರದವಹುದು ಶೃಣ್ವತಾಂ ಸತತಂ ಪ
ಈ ಮಹಿಯೊಳವತರಿಸಿ ಭೂಮಿಜಾಸಹಿತ ಶ್ರೀ
ರಾಮನಂಘ್ರಿದ್ವಯವ ಪೂಜಿಸುತಲಿ
ಭೂಮಿ ನಿರ್ಜರ ಜನಸ್ತೋಮ ವಂದಿತರಾಗಿ
ವ್ಯೋಮ ಕೇಶಾಂಶರೆಂದೆನಿಸಿ ಮೆರೆವಂಥ ೧
ಮೋದತೀರ್ಥರ ಮತ ಮಹೋದಧಿಗೆ ಪೂರ್ಣಹಿಮ
ದೀದಿತಿಯರೆಂದೆನಿಸಿ ದಿಗ್ವಲಯದಿ
ಭೇದ ಬೋಧಕ ಸೂತ್ರವಾದದಿಂದಲಿ ಮಹಾ
ವಾದಿ ವಿದ್ಯಾರಣ್ಯ ಯತಿವರನ ಜಯಿಸಿದ ೨
ವಿಟ್ಠಲನ ಪದಪದುಮ ಷಟ್ಟದರೆಂದೆನಿಸಿ
ಸ್ವಪ್ನಸೂಚಿತ ಚಂದ್ರಭಾಗತಟದಿ
ಶ್ರೇಷ್ಠ ಕುದುರೆಯನೇರಿ ನದಿಯ ಜಲಕುಡಿದವರ
ಇಷ್ಟರೆನ್ನುತ ಕರೆದು ಕೊಟ್ಟರಾಶ್ರಮವ ೩
ಸೃಷ್ಟಿಯೊಳು ಮಧ್ವಮತ ಪುಷ್ಠಿಗೈಸುವರೆಂಬ
ದೃಷ್ಟಿಯಿಂದಿವರಿಗೆ ಸುಮುಹೂರ್ತದಿ
ಪಟ್ಟಗಟ್ಟಿದರು ಜಯತೀರ್ಥ ನಾಮವನಿಡುತ
ಕೊಟ್ಟರಾಜ್ಞೆಯನು ದಿಗ್ವಿಜಯ ಮಾಡಿರಿ ಎಂದು ೪
ದೇಶದೇಶದಿ ಬರುವ ಭೂಸುರೋತ್ತಮರ ಅಭಿ
ಲಾಷೆಗಳನೆಲ್ಲ ಪೂರೈಸಿ ಪೊರೆವ
ಶ್ರೀಶಕಾರ್ಪರ ಕ್ಷೇತ್ರವಾಸ ಅಶ್ವತ್ಥನರ
ಕೇಸರಿಯ ನೊಲಿಸಿದ ಯತೀಶರಿವರೆಂದು ೫

೭೫
ಶ್ವೇತಗಿರಿನಿವಾಸ ಕೇಶವ ನೀಡೆನಗೆ ಮುದವಾ ಪ
ಭೂತಳದಿ ಪ್ರಖ್ಯಾತವಾದ ಶ್ವೇತಗಿರಿನಿವಾಸಯನ್ನ
ಪಾತಕ ವಾರಿಧಿಗೆ ಕುಂಭ ಜಾತನೆನಿಸಿ
ಪೊರಿಯೊ ದೇವಾ ಅ.ಪ
ಭೂತನಾಥ ನಿಮ್ಮಯ ಪದ
ಪಾಥೋರುಹ ಭಜಿಪ ಸತತ
ಸೀತ ಲಕ್ಷ್ಮಣ ರಘು ನಾಥನು
ಸಂಚರಿಸಿದಂಥ ೧
ಸಪ್ತಋಷಿಗಳಿರುವ ಕೃಷ್ಣಾ
ಚೋತ್ತರ ವಾಹಿನಿಯ ಸ್ನಾನ
ಕ್ಷೇತ್ರಕಾಶಿಗಿಂತ ಫಲದಿ
ಉತ್ತಮವೆಂದೆನಿಸಿದಂಥ ೨
ಶ್ರೀಮನೋಹರ ನಿಮ್ಮಯ ಪದ
ತಾಮರಸವ ಪೂಜಿಸಲು
ಸೂತ್ರಾಮ ಲೋಕದಿಂದ ಬರುವ
ಕಾಮಧೇನು ಚರಿಸಿದಂಥ ೩
ಅಷ್ಟತೀರ್ಥಂಗಳಿರುವ
ಶ್ರೇಷ್ಠಸ್ಥಾನವೆಂದು ತಿಳಿದು
ನಿಷ್ಠೆಯಿಂದ ಸೇವಿಸುವರ
ಭೀಷ್ಠಗಳನ್ನು ಸಲಿಸುವಂಥ ೪
ಶ್ವೇತರಾಜ ತಪವಗೈದು
ಪೂತವಾದ ಪದವಿ ಪಡೆದ
ಆ ತರುವಾಯದಲಿ ಗಿರಿಯು
ಶ್ವೇತನಾಮದಿಂದ ಮೆರೆಯೆ ೫
ಸ್ಕಂದ ಪುರಾಣೋಕ್ತ ಮಹಿಮೆ
ಅಂದವಾಗಿ ತಿಳಿದು ಭಕುತಿ
ಯಿಂದ ಶೇವಿಪ ಮನುಜಗೆ ಭವ
ಬಂಧ ಬಿಡಿಸ್ಯಾನಂದ ಗರಿವ ೬
ತುಂಗಗಿರಿಯ ಸ್ಥಾನದಲ್ಲಿ
ಶೃಂಗನೆಂಬ ಋಷಿಯು ತಪದಿ
ಮಂಗಳ ಪ್ರದ ಕಾರ್ಪರನರ
ಸಿಂಗನೊಲಿಸಿ ವರವ ಪಡೆದ ೭

೭೬
ಸಂತತ ಶ್ರೀಮದನಂತ ಗಿರೀಶನ ಚಿಂತಿಸುತಿರು
ಮನವೆ ಪೇಳುವೆ ಪ
ಅಂತರಂಗದಲಿ ಚಿಂತಿಪರಘಶುಲಧ್ವಾಂತ
ದಿವಾಕರನಾ ಶ್ರೀವರನಾ ಅ.ಪ
ಎಂತು ಸುಕೃತವೂ ಸಿರಿಕಾಂತನುಯನ್ನೊಳು
ನಿಂತಿರುವನು ಎನುತ ಪರ್ವತ
ಸಂತೋಷದಲಿರುವಂತೆ ತೋರುವದು ಸು-
ಕಾಂತ ಶಿಖರದಿಂದ ಛಂದ ೧
ವರಶಿಲೆಯೊಳಿರುವ ಹರಿಯ ಶೇವಿಸಲು
ಹರುಷದಿ ಸುರನಿಕರ ಭಾಸುರ
ತರುಲತೆರೂಪದಿ ಇರುತಿಹರೆನ್ನುತ
ಮೆರೆವನು ಗಿರಿರಾಜಾ ಸುತೇಜಾ೨
ಸರಸಿಜನಾಭಗೆ ಸರಿತಾನೆಂಬುವ ತೆರದಲಿ
ಗಿರಿನಾಥಾ ತೋರುತ ಅರಳಿದ ಪೂವಿನ
ಪರಿಮಳ ಬೀರುವ ಸುರಚಿರ ತರುವ್ರಾತಾ
ಶೋಭಿತ೩
ಪವನ ಶೇವಿತನು ಭುವನೋದರ ತಾ
ದಿವಿಜರಿಂದ ಸಹಿತ ಸೇವಿತ
ಅವನಿಧರನು ಮಾಧವನ ತೆರದಿ ತೋ
ರು ವೆನೆಂಬುಗರ್ವಾದಿಂದಿರುವ ೪
ಸಿದ್ಧಚಾರಣ ತಪೋವೃದ್ಧರಿದೇ ಸ್ಥಳ
ಸಿದ್ಧಿದಾಯಕವೆಂದೂ ಬಂದೂ
ಪದ್ಮಾಕ್ಷನ ಪದಪದ್ಮವ ಧ್ಯಾನಿಸು-
ತಿದ್ದರು ಗುಹೆಗಳಲಿ ಪೂರ್ವದಲಿ೫
ಮುನಿ ಮಾರ್ಕಾಂಡೇಯನು ಬಹುದಿನದಲಿ
ಘನ ತಪವಾಚರಿಸಿ ಸೇವಿಸಿ
ವನಜನಾಭನ ಪದವನಜ ಮಧುಪ ನೆಂ
ದೆನಿಸುತಲಿರೆ ಗುಹದಿ ತಪೋನಿಧಿ೬
ಗಿರಿಯ ಬಲದಿ ಅಹೋಬಲ ನರಸಿಂಹನ
ದರ್ಶನವನು ಕೊಳುತ ನಿರುತ
ಇರುತಿರಲೊಂದಿನ ಬರಲಾಷಾಢದ
ಹರಿವಾಸರ ವೃತವಾ ಚರಿಸುವ ೭
ದ್ವಾದಶಿ ಸಾಧನೆ ಬರಲು ಪ್ರತಿದಿನದಿ
ಶ್ರೀದನ ದರ್ಶನದಾ ನೇಮದ ಸಾಧನೆ
ವಿಷಯದಿ ಯೋಚಿಸುತಿರೆ ಹರಿ
ಮೋದದಿ ಮುನಿಗೊಲಿದಾ ಸೂಚಿಸಿದಾ ೮
ಅರುಣೋದಯದಲಿ ಸುರಗಂಗೆಯು ತಾ
ವರ ಪುಷ್ಕರಣಿಯೊಳು ಬರುವಳು
ತರುರೂಪದಿ ನಾ ಬರುವೆನು ಬಿಡದಿರು
ಮರುದಿನದಾ ಚರಣೆ ಪಾರಣೆ೯
ಎಂತು ಕರುಣವೊ ನಿರಂತರ ಭಜಿಪರ
ಚಿಂತಿತ ಫಲವೀವ ಕೇಶವ
ಇಂತು ಹರಿಯ ಗುಣ ಚಿಂತಿಸುತಿರಲು ನಿ
ಶಾಂತದಿ ಸರೋವರದಿ ವೇಗದಿ೧೦
ಭಾಗೀರಥಿ ಜಲದಾಗಮ ವೀಕ್ಷಿಸಿ
ರಾಗದಿ ವಂದಿಸಿದ ತುತಿಸಿದ
ಯೋಗಿವರನುತ ಸ್ನಾನವಮಾಡಿ
ಬರುವಾಗಲೆ ಧ್ಯಾನಿಸಿದ ಹರಿಪದ೧೧
ಆ ತರುವಾಯದಿ ಪಾರಿಜಾತ ತರು
ವ್ರಾತವ ನೋಡಿದನು ವಂದಿಸಿದನು
ಈತನೆ ನರಮೃಗನಾಥನೆನುತ ಮುನಿ
ಪ್ರಾತ:ಪಾರಣವ ಮಾಡಿದ ಜವ೧೨
ಮೀಸಲು ಮನದಲಿ ಶೇಷಶಯನಗಾ-
ವಾಸಗಿರಿಯ ಸೇವಾ ಮಾಡುವ
ಭೂಸುರ ಗಣದಭಿಲಾಷೆಗಳನು
ಪೂರೈಸಿ ಪೊರೆವನೀತಾ ಪ್ರಖ್ಯಾತಾ ೧೩
ಶ್ರೀಯುತ ಮಾರ್ಕಾಂಡೇಯರ ಚರಿತೆಯ
ಗಾಯನ ಫಲವಿದನು ಪೇಳುವೆನು
ಶ್ರೇಯಸ್ಸಾದನ ಕಾಯದಿ ಬಲದೀ-
ರ್ಘಾಯುತ್ವವ ಪಡೆವ ಮಾನವ ೧೪
ಶರಣು ಜನರ ಸುರತರು ಕಾರ್ಪರ ಶಿರಿ
ನರಸಿಂಹನೆ ಈತ ಎನ್ನುತ
ನಿರುತ ಅನಂತನ ಗಿರಿಯ ಮಹಿಮೆಯನು
ಸ್ಮರಿಸುವ ನರಧನ್ಯಾ ಸನ್ಮಾನ್ಯ ೧೫

೧೧೦
ಸಖಿ ವಾರಿಜ ಹಾರವನಾ ಶ್ರೀಕೃಷ್ಣನ
ಕೊರಳಿಗೆ ಹಾಕುವೆನಾ ಪ
ಕುಂದಮಲ್ಲಿಗೆ ಅರವಿಂದಗಳಿಂದತಿ
ಸುಂದರ ಹಾರವನಾ ಮು-
ಕ್ಕುಂದನ ಕೊರಳಿಗೆ ಹಾಕುವೆನಾ ೧
ನಾರಿ ದ್ರೌಪದಿಗೆ ಸೀರೆಗಳುಡಿಸಿದ
ಪಾರ ಮಹಿಮದವನಾ ಸಖಿಯೇ ಆ
ಪಾರ ಮಹಿಮದವನಾ ೨
ಕರುಣದಿ ಶರಣರ ಪೊರಿಯುವ ‘ಕಾರ್ಪರ
ನರಹರಿ ಯೆನಿಸುವನಾ ಸಖಿಯೆ
ನರಹರಿಯೆನಿಸುವನಾ ನರಸಿಂಹನ ಕೊರಳಿಗೆ ಹಾಕುವೆನಾ ೩

೪೭
ಸತ್ಯಧ್ಯಾನರ ನಿತ್ಯ ಸ್ಮರಿಸಿ ಕೃತಕೃತ್ಯನು ನೀನಾಗೊ ಪ
ಮತ್ರ್ಯನೆ ಶ್ರೀ ಗುರು ಸತ್ಯಜ್ಞಾನ ಸುತೀರ್ಥರ ಕರ ಕಂ-
ಜೋತ್ಥರಾದ ಗುರು ಅ.ಪ
ಸುತ್ತಲು ಬಿಡದೆ ಧರಿತ್ರಿಯೊಳಗೆ ಸುಕ್ಷೇತ್ರಗಳಲಿ ಚರಿಸಿ
ಮತ್ತ ಮಾಯಿ ಜನ ಹಸ್ತಿ ಗಣಕೆ ಪಂಚ ವಕ್ತ್ರರೆಂದು ಕರಿಸಿ
ಛಾತ್ರ ವರ್ಗ ಸಂಯುಕ್ತರಾಗಿ ಸುಖತೀರ್ಥರ ಸುಮತಕೆ
ಸಂಸ್ಥಾಪಕ ಗುರು ೧
ಏನು ಕರುಣವೊ ಜ್ಞಾನಿಗಳನು ಧನದಾನದಿ ದಣಿಸುತಲಿ
ಕ್ಷೋಣಿ ವಿಬುಧರಿಗೆ ನ್ಯಾಯ ಸುಧಾರಸ ಪಾನ ಮಾಡಿಸುತಲಿ
ದೀನ ಜನಕೆ ಸುರಧೇನು ಎನಿಸಿದ ಮಹಾನುಭಾವರೆಂದು
ಸಾನುರಾಗದಲಿ ೨
ಹೇಮ ವಜ್ರಮಯ ಮಂಟಪದಲಿ
ಶ್ರೀರಾಮನ ಪದಪದುಮ
ನೇಮದಿ ಪೂಜಿಸುವಾ ಮಹ ವೈಭವ
ನೋಳ್ಪಜನರ ಜನುಮ
ಈ ಮಹಿಯೊಳು ಸಾರ್ಥಕವೆನಿಸಿತು ಬಹು
ಧೀಮಜ್ಜನರಿಗೆ ಕಾಮಿತ ಗರಿಯುವ೩
ಹರಿಪದ ಪೊಂದಲು ಮರುತ ಶಾಸ್ತ್ರವೆಂಬೊ
ತರಣಿಯೋಳ್ಪಗಲಿರುಳು
ಹರುಷದಿ ಕುಳಿತಿಹ ಧರೆಸುರರನು
ಭವಶರಧಿಯ ದಾಟಿಸಲು
ಕರದೊಳು ದಂಡÀವ ಧರಿಸಿ ನಿಂದಿರುವರರುಣ
ವಸನದಲಿ ಪರಿಶೋಭಿತ ತನು ೪
ಶರಣು ಜನರ ಬಹು ದುರಿತ ತಮಕೆ ದಿನಕರ ಸಮರೆನಿಸುತಲಿ
ಸಿರಿ ಕಾರ್ಪರ ನರಹರಿಯ ಚರಣಯುಗ್ಮ ಸ್ಮರಿಸುತ ಹರುಷದಲಿ
ಧರೆಯೊಳು ಪಂಢರ ಪುರ ಸುಕ್ಷೇತ್ರದಿವರತನುವಿರಿಸಿದ
ಪರಮ ಮಹಿಮ ಗುರು ೫

೭೭
ಸಾರಿದೆನೋ ನಿನ್ನ ವೆಂಕಟರಮಣ ಪ
ನಾರಪ್ಪಯ್ಯನಿಗೊಲಿದು ಗೋರೂಪದಲಿ ಬಂದಿಯೊ ಅ.ಪ
ಸುಂದರ ಶುಭಕಾಯಾ ಆಕಾಶರಾಜನ
ನಂದಿನಿಯಳ ಪ್ರೀಯ
ವಂದಿಸುವೆನು ಭವಬಂಧನ ಬಿಡಿಸಯ್ಯ ೧
ಕುರಕಿಹಳ್ಳಿಯ ಗ್ರಾಮದಿ ಶಿಲೆಯೊಳಗೆನಿಂದು
ವರಕೃಷ್ಣಾನದಿ ಜಲದೀ
ಅರುಣನುದಯದಲ್ಲಿ ನಿರುತ ಪೂಜೆಯಕೊಳುವಿ ೨
ನೀರದ ನಿಭಕಾಯಾ ಧರೆಯೊಳುಕೃಷ್ಣಾ
ತೀರ ಕಾರ್ಪರನಿಲಯಾ
ಘೋರ ಪಾತಕಹರ ನಾರಸಿಂಹಾತ್ಮಕನೆ ೩

ಗಣೇಶ ಪ್ರಾರ್ಥನೆ

ಸಿಂದೂರ ವದನ ಕೊಡುವರ ಸಿಂದೂರ ವದನ ಪ
ಇಂದುಧರಾತ್ಮಜ ವಂದಿಸುವೆನಾ ಅ.ಪ
ಮುದಮುನಿ ಮತಾಂಬುಧಿಚಂದಿರ
ಬುಧಜನ ಪ್ರಸಂಗದಿ ಭವಹರ
ಮಧು ವಿರೋಧಿಯ ಕಥಾಮೃತಶ್ರವಣದಿ
ಒದಗಿಸು ಮಮ ಸುಜ್ಞಾನ ಮಾನಸದಿ ೧
ಭಜಕರ ಮನೋರಥ ಪೂರಕ
ಸುಜನರ ಭವಾಂಬುದಿ ತಾರಕ
ವಿಜಯ ಸಾರಥಿಯ ಭಜನೆಯ ಮಾಡಿಸೋ
ವೃಜಿನ ವಾರಿಧಿ ಕುಂಭ ಸಂಭವ ೨
ಗಿರಿಜೆಯ ಕುಮಾರ ಕೃಪಾಕರ
ಶರಧಿಜೆ ಮನೋಹರ ಕಾರ್ಪರ
ನರಮೃಗೇಂದ್ರ ಚರಣಾಂಬುಜ ಮಧುಕರ
ಕರುಣೆಸೆನಗೆ ಸಿದ್ಧಿಯನು ಕಾರ್ಯದಲಿ ೩

೧೧೨
ಸಿಂದೂರಗಮನೆ ಸಾರೆ ಮಲಗಿರುವನ್ಯಾರೆ ಪ
ಸಂದರೀ ಮಂದಿರದೊಳಿವನ್ಯಾರೆ
ಸೌಂದರ್ಯದ ಮ್ಯಾರೆ ಛಂದದಲಿ ನೀ ಸಾರೆ
ಇಂದು ನಭದಲಿ ಚರಿಸುತಲಿ ಮನ
ನೊಂದು ಬೇಸರದಿಂದ ಇಲ್ಲಿಗೆ
ಬಂದು ಮಲಗಿಹನೇನೆ ಸುಖದಿ ೧
ಶೀಲೆ ನೋಡಿವನ ಮುಖಕಮಲ
ಸಂಗರದೊಳತಿ ಚಟುಲ ಸುವಿಶಾಲ
ಭುಜಯುಗಲ ಶ್ರೀ ಲಕುಮಿವರ
ಪಾಲ ನಯನ ಮರಾಳ ಧ್ವಜರೊಳ
ಗಾವನೊ ಇವ ಪೇಳುವದು ಕೀಲಾಲಜಾಂಬಕಿ೨
ನಾರಿ ಮಾತನಾಡಿಸೇ ಇವನ ಮನ
ಮೋಹದವರನ ಕಮನೀಯ
ಗುಣಯುತನ ವಾರಿಜಾಸನ ಮುಖ್ಯ
ಸುರಪರಿವಾರ ಸೇವಿಯ ಕೊಳುವ ಕಾರ್ಪರನಾರಸಿಂಹನೆ ಪವಡಿಸಿಹನೆ ೩

೧೮
ಸೇರಿ ಸುಖಿಸುತಿರು ಮನುಜಾ ಗುರು
ಮಾರುತಸುತನ ಶುಭ ಚರಣ ಸರೋಜ ಪ
ನೂರು ಯೋಜನಮಿರ್ದ ಉದಧಿ ದಾಂಟಿ
ಧಾರುಣಿಜಳಿಗೆ ಮುದ್ರಿಕೆಯಿತ್ತು ಜವದಿ
ಶ್ರೀ ರಘುವರಗೆ ವಿನಯದಿ ಕ್ಷೇಮ
ವಾರುತಿಯನು ಪೇಳಿದವನಂಘ್ರಿ ಮುದದಿ ೧
ಇಂದು ಕುಲದಿ ಪಾಂಡು ನೃಪನ ಪುತ್ರ
ನೆಂದು ಕರಿಸಿ ದುಷ್ಟ ಕೌರವಾಂತಕನ
ನಂದ ನಂದನನೊಲಿಸಿದನ ದೃಪದ
ನಂದಿನಿಯಳಿಗೆ ಪುಷ್ಪವ ತಂದಿತ್ತವನ ೨
ಮಧ್ಯಗೇಹ ನೆಂಬೊದ್ವಿಜನ ಗೃಹದಿ
ಮಧ್ವಾಭಿದಾನದಿ ಜನಿಸಿ ಮಾಯ್ಗಳನ
ಗೆದ್ದು ಸಚ್ಛಾಸ್ತ್ರ ರಚಿಸಿದನ ಸುಪ್ರ
ಸಿದ್ಧ ಸಿದ್ಧ ಕಾರ್ಪರ ನರಹರಿಗತಿ ಪ್ರಿಯನ ೩

೮೪
ಸೇವಿಸೊ ಮನುಜಾ ನಿರಂತರ ಸುಖವೀವುದು
ಭಾಗವತದ ಸಾರ ಪ
ಪ್ರಶ್ನೆ:ಯಾತರಿಂದಲಿ ಕೇಳೆನ್ನಯಮನ ಬಹು
ಪೂತವಾಗುವದು ಗುರುವರೇಣ್ಯ
ಭೂತಳದಲಿ ಪರಮ ಪಾವನ ತೀರ್ಥ
ಯಾತ್ರೆ ಚರಿಸಲೇನು ಅನುದಿನ ೧
ಉತ್ತರ:ಶ್ರಧ್ದ ಪೂರ್ವಕ ಶ್ರವಣಸಾಧನ ಮನ
ಶುದ್ಧಿಗೆ ಇದೆ ಮುಖ್ಯ ಕಾರಣ
ಉದ್ಭವಿಸುವದು ಭಕ್ತಿ ಜ್ಞಾನ ಅನಿ
ರುದ್ಧನ್ನ ಪ್ರಾಪ್ತಿಗೆ ಸಾಧನ
ಪ್ರಶ್ನೆ:ವಶವಲ್ಲಭವದಿ ಬಂದೊದಗುವ ನಾನಾ
ವ್ಯಸನಗಳನು ಪರಿಹರಿಸುವ
ಬೆಸಸುವದೆನ ಗೀ ಉಪಾಯವ
ಚರಿಸಲೇನು ಗಿರಿಗುಹದಲಿ ತವ|
ಉ.ವಸುದೇವಸುತನ ಸಂಕೀರ್ತನ ನಾನಾ
ವ್ಯಸನ ಪರಿಹಾರಕ್ಕೆ ಕಾರಣ
ಮುಸುಕಿರ್ದ ಮೇಘಕ್ಕೆ ಪವಮಾನ ಭವ
ವ್ಯಸನಾಂಧಕಾರಕ್ಕೆ ರವಿಕಿರಣ ೨
ಪ್ರ:ಏನು ಮಾಡಲಿ ಸದುಪಾಸನ ದೈವಾ
ಧೀನದಿ ಬರುವ ವಿಘ್ನಗಳನ್ನು
ಕಾಣೆನು ಪರಿಹಾರ ಕೃತಿಯನ್ನು ಇದ
ಕೇನುಪಾಯನ ಪೇಳಿರಿ ಮುನ್ನ
ಉ:ಬಿಡದಿರೊ ಕೃಷ್ಣನ್ನ ಸ್ಮರಣವ ಬರುವ
ಯಡರುಗಳನು ಪರಿಹರಿಸುವ
ದೃಢಮನದಲಿ ತಿಳಿವದು ಜವ ಪೋಪ
ದ್ಯಡರು ಪ್ರಾಪಕವಾದ ಪಾತಕವ ೩
ಪ್ರ:ಮೋಕ್ಷಫಲದ ಕಮಲಾಕ್ಷಣ ಅಪ-
ರೋಕ್ಷ ವಾಗುವದಕ್ಕೆ ಸಾಧನ
ಶಿಕ್ಷಿಸುವದು ಸದುಪಾಸನ ಆ
ಪೇಕ್ಷಿಸುವೆನು ನಿಮ್ಮಯ ಕರುಣ
ಉ:ಆದರದಿ ನೈರಂತರ್ಯದಿ ಯುಕ್ತ
ಮಾಧವನಂಘ್ರಿಯ ಸ್ಮರಣದಿ
ಸಾಧಿತ ಬಿಂಬಾಪರೋಕ್ಷದಿಸ
ನ್ಮೊದ ಭರಿತನಾಗಿರು ಜಗದಿ ೪
ಪ್ರ:ಏನು ಮಾಡಲು ಮುಕ್ತಿಸಾಧನವಾದ
ಜ್ಞಾನ ವಿಜ್ಞಾನ ಸಂಪದವನ್ನ
ಕಾಣುವದೆಂದಿಗೆ ತಿಳಿಸೆನ್ನ ಮುಂದೆ
ಸಾನುರಾಗದಲಿ ಬೇಡುವೆ ನಿನ್ನ
ಉ:ಭಕ್ತಿ ವೈರಾಗ್ಯದಿ ಕೂಡಿದ ಪುರು
ಷೋತ್ತಮನಂಘ್ರಿ ಸಂಸ್ರ‍ಮತಿಯಿಂದ
ಚಿತ್ತದಿ ಜ್ಞಾನ ವಿಜ್ಞಾನದ ಉತ್ಪ-
ತ್ತಿಯ ಪಡೆದು ಪೊಂದೆಲೊ ಮೋದ ೫
ಪ್ರ:ಜಲಜನಾಭನ ಪದಯುಗದಲ್ಲಿ ನಿ-
ಶ್ಚಲ ಭಕ್ತಿಯೆನಗೆ ಪುಟ್ಟುವದೆಲ್ಲಿ
ಬಲುವಿಧ ಭಕುತಿಯ ಬಗೆ
ಬಲ್ಲಿ ಇದನು ತಿಳಿಸುವದೆನಗೆ ನೀ ದಯದಲ್ಲಿ
ಉ:ಜ್ಞಾನ ವೈರಾಗ್ಯದಿ ಕೂಡಿದ ನಂದ
ಸೂನು ಪಾದಾಂಬುಜ ಸ್ರ‍ಮತಿಯಿಂದ ಪ್ರಾ-
ಣೇಂದ್ರಿಯಾತ್ಮಾದಿಗಳಿಂದ ಅಧಿಕ
ಕಾಣಿಸುವದು ಭಕ್ತಿ ಜವದಿಂದ ೬
ಪ್ರ:ದೃಢತರವಾದ ವೈರಾಗ್ಯವ ಪೊಂದಿ
ಪಡಿವೆನೆಂದಿಗೆ ಮಾಧವನ ದಯವಾ
ಗಡನೆ ಪೇಳಿದಕೇನು ಪಾಯವ ನಿ-
ಮ್ಮಡಿಗಳಿಗೆರಗಿ ಬೇಡುವೆ ಮುದವಾ
ಉ:ಜ್ಞಾನ ಭಕ್ತಿಗಳಿಂದ ಕೂಡಿದ ಶಿರಿ
ವೇಣು ಗೋಪಾಲನ ಸ್ರ‍ಮತಿಯಿಂದ
ಕಾಣುವಿ ಸಧೃಡ ವೈರಾಗ್ಯದ ಭಾಗ್ಯ
ಶ್ರೀನಿಧಿ ಚರಣಾನು ಗ್ರಹದಿಂದ೭
ಪ್ರಃಘನಲೌಕಿಕದಿ ಕೇಳೆನ್ನಯ ಮನ ನಿ-
ಪುಣತರವೆನಿಸುವ ದನುದಿನ
ಎನಗೆಂದಾಧ್ಯಾತ್ಮ ತತ್ವದಿ ಮನವೆರಗ
ಲೆನಿಸುವದದೆ ಮುಕ್ತಿಸಾಧನ
ಉ:ಅನುದಿನ ಶ್ರವಣಾದಿ ಸಾಧನ ದಿಂದ
ಜನಿತ ಸದ್ಭಕುತಿಯೆ ಕಾರಣ
ಮನದೊಳಾಧ್ಯಾತ್ಮ ತತ್ವಗಳನ್ನ ನೋಡಂ
ಜನಯುಕ್ತ ನಯನ ದಂದದಿ ಮುನ್ನ ೮
ಪ್ರಃಏನಿರುವುದು ಬಿಂಬಲಕ್ಷಣ ಮತ್ತೇ
ನೇನು ಮಾಳ್ಪ ಕರ್ಮಗಳನ್ನು
ಸಾನುರಾಗದಿ ಪೇಳುವದುಮುನ್ನ ಮನದಿ
ಧ್ಯಾನವ ಮಾಡುವೆ ಪ್ರತಿದಿನ
ಉ.ಇಂತಿರುವದು ಬಿಂಬ ಲಕ್ಷಣ ಬಹಿ
ರಂತರದಲಿ ತಿಳಿವದು ಮುನ್ನ
ಸಂತತ ಸೃಷ್ಟ್ಯಾದಿಗಳನ್ನ ದೇ
ಹಾಂತಃ ಸ್ವಪ್ನದಿ ಸಂದರುಶನ ೯
ಪ್ರ.ಎಲ್ಲಿರುವನು ಬಿಂಬ ದೇಹದಿ ಸಿರಿ
ನಲ್ಲನು ವ್ಯಾಪ್ತವೆಂಬರು ಜಗದಿ
ಎಲ್ಲದೇಶ ಗುಣಕಾಲದಿಯನ್ನ
ಸೊಲ್ಲಿಗುತ್ತರವ ಪಾಲಿಸುದಯದಿ
ಉ:ನಿಂತಿರುವನು ಸರ್ವಜೀವರ ಹೃದ
ಯಾಂತರದಲಿ ವ್ಯಾಪ್ತನು ಪೂರಾ
ಸಂತತ ಜೀವನ ವ್ಯಾಪಾರ ತಾನೆ
ನಿಂತು ಮಾಡಿಸುವನು ನಿರ್ಧಾರ ೧೦
ಪ್ರ:ಎಂತು ಮಾಡಲಿ ಬಿಂಬೋಪಾಸನ ಮುಕ್ತಿ
ಪಂಥಕ್ಕೆ ಮುಟ್ಟಲು ಸೋಪಾನ ಅ-
ನಂತ ಗುಣಾತ್ಮಕ ಬಿಂಬನ ಗುಣ
ಚಿಂತಿಪರಿಗೆ ಬಂಧ ಮೋಚನ
ಉ:ಇದೆ ತಿಳಿಬಿಂಬೋಪಾಸನÀ ಚತು
ರ್ವಿಧ ದಿಂದಲಾತ್ಮ ಸಮರ್ಪಣ
ಮೊದಲು ಆತ್ಮಾನಮೇವಾರ್ಪಣ ದ್ರವ್ಯ
ಸದ್ಗುಣ ಕರ್ಮಸಮರ್ಪಣ ೧೧
ಪ್ರ:ಈ ವಿಧ ಬಿಂಬೋಪಾಸನ
ಮಾಡಲಾವ ಧರ್ಮಗಳ ಮಾಡಲಿ ಮುನ್ನ
ಜೀವರ ಬಂಧ ವಿಮೋಚನ ಮಾಳ್ಪ
ಶ್ರೀ ವರ ನೊಲಿಮೆಗೆ ಸಾಧನ
ಉ:ಶುದ್ಧ ಭಾಗವತ ಧರ್ಮಗಳನ್ನು ತಿಳಿದು
ಶ್ರದ್ಧೆಯಿಂದಲ್ಲಿ ಮಾಡೋ ಮುನ್ನ
ಹೃದ್ಗತ ಬಿಂಬೋಪಾಸಾನ ಮಾಡಿ
ಸಿದ್ಧನಾಗಿ ಬಾಳೆಲೋ ಮುನ್ನಾ ೧೨
ಪ್ರ:ಎಂತಿರುವದು ಗುರುಲಕ್ಷಣ ಮುಕ್ತಿ
ಪಂಥವ ತೋರಿಸುವವರನ್ನ
ಚಿಂತಿಸುವೆನು ಮನದೊಳುಮುನ್ನ ಭಗ
ವಂತನ ಮಹಿಮೆ ಪೇಳುವರನ್ನ
ಉ:ಜಲಜನಾಭನÀ ಪದಯುಗಲವ ಬಿಟ್ಟು
ಚಲಿಸದಿರು ಲವ ನಿಮಿಷಾರ್ಧವ
ಇಳಿಯೊಳಗಿಂಥಾ ಸದ್ವೈಷ್ಣವರನ್ನು
ತಿಳಿದು ಸೇವಿಸುತಿರು ಮಾನವಾ ೧೩
ಪ್ರ:ಏನು ಕೊಡಲಿ ಗುರುದಕ್ಷಿಣ ಈ
ಕ್ಷೋಣಿಯಿತ್ತರು ಸರಿಗಾಣೆ ನಾ
ಧ್ಯಾನವ ಮಾಡುವೆ ಪ್ರತಿದಿನಾ ಬಿಂಬ
ಜ್ಞಾನವ ಕೊಟ್ಟು ರಕ್ಷಿಪರನ್ನ
ಉ:ಆತ್ಮಾರ್ಪಣ ಮೇವದಕ್ಷಿಣ ಸಿರಿ
ನಾಥ ನಿಂದನ್ಯ ವಸ್ತುಗಳನ್ನು
ಪ್ರೀತಿಸರೆಂದಿಗೂ ಧನವನ್ನು ಈ ಮ-
ಹಾತ್ಮರ ಸ್ಮರಿಸುತಲಿರು ಮುನ್ನ ೧೪
ಕ್ಷೇತ್ರ ಕಾರ್ಪರದೊಳಗಿರುವಂಥ ಲಕ್ಷ್ಮಿ
ಯುಕ್ತ ನರಸಿಂಹನೊಲಿಸುವಂಥ
ಸ್ತೋತ್ರ ಮಾಲಿಕೆಯನ್ನು ಪಠಿಸುತ್ತ
ಕೃತ ಕೃತ್ಯನಾಗಿ ಬಾಳೆಲೊನಿರುತ

೬೨
ಸ್ಮರಿಸಿ ಸುಖಿಸು ಮನವೆ ಗುರುರಾಜಾಚಾರ್ಯರ ಪ
ಸ್ಮರಿಸು ಪರಿಮಳ ವಿರಚಿಸಿದ ಗುರು ವರರ
ಕರುಣವ ಪಡೆದ ಶರಣರ ದುರಿತ
ಉರಗಕೆ ಗರುಡನೆನಿಸಿದವರ ಸುಚರಿತೆಯ
ಹರುಷದಿಂದಲಿ ಅ.ಪ
ಇಳಿಯೋಳ್ ಶ್ರೀ ಸುರಪುರದಿ
ಯಳಮೇಲಿ ಶ್ರೀ ವಿಠ್ಠಲಚಾರ್ಯ
ರಿಹ ಜನ್ಮದಿ ಕುಸುಮೂರ್ತಿ ಗುರುಗಳ
ಒಲಿಮೆ ಪಡೆದು ನಿತ್ಯದಿ ಗಳಿಸಿದ
ಸುಪುಣ್ಯದಿ ಲಲನೆ ಜಾನಕಿ ವರ
ಸುಗರ್ಭದಿ ಚಲುವ ಲಕ್ಷಣ
ಗಳಲಿ ಜನಿಸಿ ಗೆಳೆಯರೊಡನಾಡುತಲೆ
ಶಬ್ಧಾವಳಿ ಸುಶಾಸ್ರ್ತವ ಕಲಿತ ವರಪದ ೧
ಎರಡನೆ ಆಶ್ರಮದಿ ಪದವಿಟ್ಟು ನೋಡಲು
ಮೆರೆವ ಘನ ವೈಭವದಿ ವೈರಾಗ್ಯಭಾಗ್ಯವೆ
ಪಿರಿದೆಂಬೊ ಧೃಢಮನದಿ ವನಿತಾದಿ ವಿಷಯದಿ
ತಿರುಗಿಸುತ ಮನವಿರದೆ ಸಿರಿವರ ತುರುಗವದನನ
ಚರಣ ಪೂಜಿಯೊಳಿರಿಸಿ ಗುರುವರ ಮುಖದಿ ಶ್ರೀ
ಮನ್ಮರುತ ಶಾಸ್ತ್ರದ ಶ್ರವಣಗೈದರ ೨
ವರ ವಿದ್ಯಾವಂತರೆನಿಸಿ ವಿದ್ಯಾರ್ಥಿಗಳನುಪ
ಚರಿಸಿ ಶಾಸ್ತ್ರವ ಬೋಧಿಸಿ ಪ್ರವಚನದಿ
ಗುರುಗಳ ಕರುಣವ ಸಂಪಾದಿಸಿ
ನೃಪಮಾನ್ಯರೆನಿಸಿ ಹರಿದಿನಾದಿ
ವೃತ ಬಿಡದಾಚರಿಸಿ ಕಾರ್ಪರ ನಿಲಯ
ಶಿರಿನರ ಹರಿಯ ಪುರವನು ತ್ವರದಿ
ಶೇರಿದ ಪರಮ ಮಹಿಮರ ಚರಣ ಯುಗಲವ ೩

೫೮
ಸ್ಮರಿಸುವ ನರನೇ ಧನ್ಯ ಸನ್ಮಾನ್ಯ ಪ
ಸ್ಮರಿಸುವರಿಗೆ ಸುರತರುಕಲ್ಪ ವಿಭರಾಮ
ಪುರದಿ ಶ್ರೀಹರಿ ಧ್ಯಾನಪರ ಶ್ರೀ ಕೃಷ್ಣಾಚಾರ್ಯರ ಅ.ಪ
ಭರತ ಭೂಮಿಯೊಳವತರಿಸಿ ದೇವಾಂಶದಿ
ಪುರುಹೂತನಂತೆ ಗಜಾಂತ ವೈಭವದಿಂದ
ಮೆರೆಯುತ ತಮ್ಮಯ ಚರಣಾರಾಧಕರನು-
ದ್ದರಿಸಲೋಸುಗದಿ ಸಂಚರಿಸುತ ಮುದದಿ
ಸಂದರುಶನದಿಂಧಾಘವ ಕಳೆದು ಬಲು
ಕರುಣದಲಿಷ್ಟಾರ್ಥವ ಗರಿದು ಬಹು ಶರಣು ಜ-
ನರ ಪೊರೆವ ಭೂಸುರರೊಳು ಮರುತ ಮತಾಬ್ಧಿ
ಚಂದಿರನೆನಿಸಿದವರ ೧
ವರ್ಣಿಸಲೊಶವಲ್ಲ ಚರಣಯುಗ್ಮಾರಭ್ಯ
ಶಿರಪರಿಯಂತರ ಗುರುಗಳಾಕೃತಿಯನ್ನು
ನಿರುತ ಧ್ಯಾನಿಪರಿಗೆ ಪರಮ ಮಂಗಳವೀವ
ಪರಿಶೋಭಿಸುವ ರತ್ನಾಭರಣದಿಂದೋಪ್ಪುವ
ಸ್ವರ್ಣತುಲಸಿ ಮುಕ್ತಹಾರ ಭೂಷಿತ ಕಂಧರ
ಸುಂದರವಾದ ಮುಖದೊಳು ಮಂದಸ್ಮಿರ
ಕಸ್ತೂರಿಯಂತೆ ಪರಿಮಳಾನ್ವಿತ ಶರೀರ
ಮಂತ್ರಾಲಯ ಗುರುರಾಘವೇಂದ್ರರ ಕರುಣಾಸುಪಾತ್ರರ೨
ಚಿರಕಾಲ ಶೇವಿಪ ಪರಮ ವಂಧ್ಯರಿಗೆಲ್ಲ
ವರಪುತ್ರ ಸೌಖ್ಯವ ಕರುಣಿಸುವರು ಸತ್ಯ
ಅಪರಿಮಿತ ಮಹಿಮರೆಂದರಿಯದೆ ಇವರನ್ನು
ಜರಿಯಲಾಕ್ಷಣದಲಿ ಅರಿತು ಭೀಕರವಾದ
ಉರಗರೂಪವ ತೋರುತ ತ್ಯಜಿಸಿ ಮತ್ತೆ
ನಿಜರೂಪದಿಂದಿರುತ ನೋಳ್ಪರಿಗತ್ಯಾಶ್ಚರ್ಯ ಸದ್ಗುಣ
ಭರಿತ ಕಾರ್ಪರ ನರಹರಿಯ ಪರೋಕ್ಷದಿ ನಿರುತ
ಸುಖಿಪರಂಘ್ರಿ ೩

೪೯
ಸ್ಮರಿಸೊ ಮಾನವನೆ ಗುರುಚರಣ ಅಂತ:
ಕರಣ ಶುದ್ಧಿಯಲಿ ಮರೆಯದೆ ಪ್ರತಿದಿನ ಪ
ನಿರುತ ಸ್ಮರಿಪರ ದುರಿತ ಘನತತಿ ಮರುತ ಶ್ರೀ
ರಘುದಾಂತ ತೀರ್ಥರ ಕರಜ ಶ್ರೀ ರಘುವೀರ
ತೀರ್ಥರ ಚರಣಯುಗಲವ ಹರುಷದಿಂದಲಿ ಅ.ಪ
ಧರೆಯೋಳ್ ಸುಂದರ ಸುರಪುರದಿ ಜನಿಸಿ
ಗುರು ವಿಠ್ಠಲಾರ್ಯರ ಚರಣಾನುಗ್ರಹದಿ
ವರ ಶಬ್ದ ಶಾಸ್ತ್ರವ ತ್ವರದಿ ಕಲಿತು
ತುರಿಯಾ ಶ್ರಮವನೆ ಸ್ವೀಕರಿಸಿ ಗುರುಮುಖದಿ
ಮರುತ ಶಾಸ್ತ್ರವನರಿತು ಧರ್ಮದೊಳಿರುತ ವಿಷಯದಿ
ವಿರತಿಯಲಿ ಅನವರತ ಪ್ರವಚನ ನಿರತ ಸದ್ಗುಣ
ಭರಿತ ಪಾವನ ಚರಿತರಂಘ್ರಿಯ ೧
ಹೇಮಾಲಂಕೃತ ರತ್ನನಿಚಯಯುಕ್ತ
ಹೇಮ ಮಂಟಪದಿ ಸುಂದರ ಶುಭಕಾಯಾ
ಶ್ರೀ ಮನೋಹರ ಕವಿಗೇಯಾ ಬ್ರಹ್ಮ
ವ್ಯೋಮ ಕೇಶಾದಿ ನಿರ್ಜರಗÀಣಶೇವ್ಯಾ
ಭೂಮಿ ಸುರಜನ ಸ್ತೋಮಕನುದಿನ
ಕಾಮಿತಾರ್ಥವ ಗರಿವ ಸೀತಾರಾಮರಂಘ್ರಿಯ
ತಾಮರಸವನು ನೇಮದಿಂದರ್ಚಿಪರ ಶುಭಪದ೨
ಪರಿಶೋಭಿಸುವ ಕಾಷಾಯ ವಸ್ತ್ರ
ವರನಾಮ ಮುದ್ರಾಲಂಕೃತ ತನುಸಿರಿಯ
ಗುರು ಅಕ್ಷೋಭ್ಯರ ಶುಭಚರಿಯ ಗ್ರಂಥ
ವಿರಚಿಸಿದರು ನವರತುನ ಮಾಲಿಕೆಯ
ಧರಣಿಯೊಳು ಸಂಚರಿಸುತಲಿ ಬಲು
ಕರುಣದಿಂದಲಿ ಶರಣು ಜನರಘ
ಹರಣ ದೀನೋದ್ಧರಣ ಭವ ಭಯಹರಣ
ಗುರುವರ ಚರಣಯುಗಲವ೩
ಮಾರಾರಿ ವಿನುತ ಸಮೀರ ಕೃತ
ಸಾರಶಾಸ್ತ್ರವನೆ ಬೋಧಿಸುತ ಸಜ್ಜನರ
ಘೋರ ಸಂಸೃತಿ ಭಯದೂರ ಮಾಡಿ
ತೋರಿ ಸನ್ಮಾರ್ಗ ದೀಪಿಕೆಯ ಸುಸಾರ
ಸೇರಿದವರಘ ದೂರ ಪರಮೋದಾರ ಗುಣ ಗಂ-
ಭೀರರೆನ್ನುತ ಸೂರಿಜನ ಪರಿವಾರನುತ ಜಿತ-
ಮಾರ ಶ್ರೀ ರಘುವೀರ ತೀರ್ಥರ ೪
ಶೇಷಾಚಲದಿ ಶಿಷ್ಯಗಣದಿ ಬಂದ
ಶ್ರೀ ಸತ್ಯ ಪ್ರಮೋದ ತೀರ್ಥರ ಸ್ವರ್ಣೋತ್ಸವದಿ
ತೋಷಬಡಿಸುತ ನಿರ್ಭಯದಿ ಉಪನ್ಯಾಸ ಮಾಡಿದರು
ವಿದ್ವಾಂಸರ ಸಭದಿ ವೀಶಗಮನ ಸುರೇಶ ಭಕುತರ
ಪೋಷ ಕಾರ್ಪರ ವಾಸ ಸಿರಿ ನರಕೇಸರಿಗೆ ಪ್ರಿಯದಾಸ
ಕೊಡಲಿವಾಸ ಕರ್ಮಂದೀಶರಂಘ್ರಿಯ ೫

೪೬
ಸ್ಮರಿಸೊ ಸಂತತ ಮಾನವ ಗುರುವಿಷ್ಣು ತೀರ್ಥರ ಪ
ಸ್ಮರಿಸೊ ಟೀಕೆಯ ವಿರಚಿಸಿದ ಗುರುವರರ
ಕರುಣದಿ ಜನಿಸಿ
ಧರೆಯೊಳು ನಿರುತ ಸ್ಮರಿಸುವ ಶರಣು ಜನರಘ
ತರಿದ ಭೀಷ್ಠೆಯ ಗರಿವರಂಘ್ರಿಯ ಅ.ಪ
ಪುರಹರಾಂಶಜರೆನಿಸಿ ಬಾಳಾಚಾರ್ಯರ
ತರುಣಿ ಗರ್ಭದಿ ಜನಿಸಿ
ಮಳಖೇಡ ಮಂದಿರ ಗುರುನಾಮದಲಿ ಕರಿಸಿ
ವಟು ವ್ರತವ ಧರಿಸಿ
ಗುರುಕುಲದಿ ರಾಮಾರ್ಯರಿಂದಲಿ ಅರಿತು
ವೇದವೇದಾಂತ ಶಾಸ್ತ್ರವ
ಗುರುಸುತನ ಮಹಜ್ವರ ಹರಣ ನರಹರಿಯ
ಮಂತ್ರವ ಜಪಿಸಿದವರನು ೧
ಗುರುತುರಗವನುಸರಿಸಿ ಬರುತಿರಲು ಬಿಸಿಲೊಳು
ಗುರುಪ್ರೀತಿಯನು ಬಯಸಿ ಗುರುವಿತ್ತ ಪಾದುಕವೆರಡು
ಶಿರದಲಿ ಧರಿಸಿ ಮಹಿಮೆಯನು ತಿಳಿಸಿ ಧರಿಸಿ ದ್ವಿತಿಯಾ
ಶ್ರಮದಿ ನೋಡಲು ಪರಮ ಸತ್ಕುಲ ಜಾದಿ ಗುಣಯುತ
ವರವಧೂ ಮಣಿಸಹಿತ ವಿಭವದಿ ಸಿರಿಯ
ತನದೋಳ್ಮೆರೆವರಂಘ್ರಿಯ೨
ಮಂಚದೊಳ್ ಸುಖತಲ್ಪದಿ ಪದವತ್ತು
ತಿರೆ ಮೃಗಲಾಂಚನ ಮುಖಸಹಿತದಿ
ಪವಡಿಸಿರಲೊಂದಿನ ಕಿಂಚಿದ್ದೇಹಾಸ್ವಾಸ್ಥ್ಯದಿ
ಹರಿದಾಸ ಪಾಡಿದ
ಮಂಚಬಾರದು ಮಡದಿಬಾರಳು ಮುಂಚೆ
ಮಾಡಿರಿ ಧರ್ಮವೆಂಬುವ
ಕಿಂಚಗೀತೆಯ ಕೇಳಿದೊಡನೆ ಪ್ರಪಂಚ
ಸುಖವನು ತ್ಯಜಿಸಿಪೊರಟರ ೩
ಫಣಿಯ ರೂಪವ ನೋಡುತ್ತ ಮಾರ್ಗದೊಳು
ಚರಿಸುತ ಗಮನ
ನಿರೋಧಿಸುತ ಯೋಚನೆಯ ಮಾಡುತಯಿರಲು
ಸ್ವಪ್ನದಿ ಸೂಚಿತ
ಶಿಷ್ಯರ ಸಮೇತ ಅನವರತ ಶ್ರೀ ಮತ್ಸುಧಾ
ಪ್ರವಚನ ವಿಜಯ ಮುನಿ
ಮನಕೆ ಸಮ್ಮತವೆನುತ ಮುನಿ ವೃತ್ತಿಯಲಿ ಸತಿಸಹ
ಮುನಿಯವಲ್ಲಿ ಯೊಳಿರುವ ಗುರುಗಳ ೪
ಸಾರ ಗ್ರಂಥಗಳ ರಚಿಸಿ ಸತ್ಯವರತೀರ್ಥ
ಕುಮಾರಕರೆಂದೆನಿಸಿ ಸುಕ್ಷೇತ್ರ
ಮೋದನೂರೊಳು ತನುವಿರಿಸಿ ಹರಿಪದವ
ಧ್ಯಾನಿಸಿ ಸೇರಿದವರ ಘ
ದೂರ ಮಾಡುವ ಚಾರು ಕೃಷ್ಣಾತೀರ
‘ಕಾರ್ಪರ ನಾರಶಿಂಹ’ ವಲಿಮೆ ಪಡೆದ
ಅಪಾರ ಮಹಿಮರ ಚಾರು ಚರಣವ೫

೬೧
ಸ್ಮರಿಸೋ ಆದರಿಸೋ ಆನಮಿಸೊ, ಮಾನವನೆ
ಗುರುಪದವ ಪೊಂದು ಮುದವ ಹೇ ಮನವೇ ನೀ ಸ್ಮರಿಸೋ ಪ
ಸ್ಮರಿಸು ಶರಣರ ದುರಿತ ತಿಮಿರಕೆ
ತರಣಿ ಸಮರೆಂದೆನಿಸಿ ದ್ವಿಜರೊಳು
ಮೆರೆದು ವಿಭವದಿ ಕರೆದು ಛಾತ್ರರ
ಪೊರೆದ ಐಕೂರು ನರಶಿಂಹಾರ್ಯರ ಅ.ಪ
ವರವೆಂಕಟಾರ್ಯರ ತರುಣಿ ಸೀತಾಗರ್ಭ
ಶರಧಿಯಿಂದ ಜನಿಸಿದ ಶಶಿಯ ತೆರದಿ
ಧರಿಸಿ ವಿಪ್ರತ್ವವನು ಶೀಘ್ರದಿ
ಇರಿಸಿ ದ್ವಿತಿಯಾಶ್ರಮದಿ ಪದವನು
ಚರಿಸುತಲೆ ಸಾಧನಸುಮಾರ್ಗದಿ
ಕರೆಸಿದರು ವರಭಾಗವತರೆಂದು ೧
ಹರಿಪದದಲಿ ಮನವಿರಿಸಿ ದುರ್ವಿಷಯಧಿಃ
ಕರೆಸಿ ಧಿ:ಕರಿಸಿ ಪ್ರಿತಾಜ್ಞಾನುಸರಿಸಿ
ಧರಣಿಯೊಳು ಗುರುಕರುಣದಿಂದಲಿ
ಮರುತ ಶಾಸ್ತ್ರವನರಿತು ಕರುಣದಿ
ಸರಸದಲಿ ಸಚ್ಛಾಸ್ತ್ರ ಮರ್ಮವ-
ನರುಹಿ ಜನರನುಧ್ಧರಿಸಿದವರನು ೨
ನಿರುತ ಮಾಡುವ ಕರ್ಮ
ಹರಿಯೆ ಮೂಡಿಸುವನೆಂದರಿದು
ಅರಿದು ಧ್ಯಾನಿಸುತ ಮೈಮರೆದು
ಹರಿಯ ಗುಣಗಳ ಪೊಗಳಿ ಹಿಗ್ಗುತ
ಶರಣು ಜನ ಮಂದಾರ ಕಾರ್ಪರ
ಶರಣಶಿರಿ ನರಹರಿಯ ಪುರವನು
ತ್ವರದಿ ಸೇರಿದವರ ಸುಚರಿತೆಯ ೩

೯೭
ಹರಷದಿ ತಾ ಸಖಿ ತ್ವರದಿ ಆರುತಿಯ
ದ್ವಿರದ ವರದ ಶಿರಿನರಹರಿಗೆ ಪ
ನಿಗಮ ತಂದವಗೆ ನಗಧರ ಕ್ರೋಢಗೆ
ಮಗುವಿನ ಸಲಹಿ ಜಗವ್ಯಾಪಿಸಿದಗೆ
ಭೃಗುಜಾ, ರಘುಜಾ ವ್ರಜಜಾರ್ತಿ
ಹರಣ ವಿಗತವಸನ ತುರುಗನೇರಿದಗೆ ೧
ಗರುಡ ಗಮನಗೆ ಶರಧಿಶಯನಗೆ
ಸುರನದಿ ಪಿತ ಭೂಸುರ ಪ್ರಿಯಗೆ
ಅರುಣಾ, ಚರಣಾ ಕರುಣಾಕರಮಂ-
ದರಧರ ಶರಣರ ಪೊರೆವ ಸಿರಿವರಗೆ ೨
ಛಳಿಮಳೆ ಸಹಿಸುತ ಛಲದಲಿಧೇನಿಪ
ಬಲುವಿಧ ಭಕ್ತಾವಳಿ ಹೃನ್ಮಧ್ಯದಿ
ಪೊಳೆವಾ, ನಲಿವಾ ಕಳೆವಾಘವ ಭೂ-ವಲಯದಿ ಕಾರ್ಪರ ನಿಲಯ ನರಹರಿಗೆ ೩

೧೧೯
ಹಿತದಿ ಜೀವಿಸು ಬಾಲೆ ಸುಮಂಗಲೆ
ಹಿತದಿ ಜೀವಿಸು ಬಾಲೆ ಪತಿಯ ಪ
ಸೇವಾನುಕೂಲೆ ಕ್ಷಿತಿಯೊಳಗೆ
ಪತಿವ್ರತಾ ಧರ್ಮನಿರತಳೆನಿಸಿ ಬಹುಸುತರ ಪಡೆದು ಅ.ಪ
ರತಿಪತಿಪಿತನಿಗೆ ಪ್ರತಿಮೆಗಳೆನಿಸುವ
ಅತಿಥಿಗಳ ಸಂತತ ಸುಶೇವಾ-
ರತಳು ಬಹು ಗುಣವತಿಯಳೆನಿಸುವ ೧
ಗುರುಜನರಿಗೆ ಸದಾ ಶಿರಬಾಗಿ ನಡೆಯುತ
ಹರುಷದಲಿ ಹರನರಸಿಯಳ ಪದ
ಸರಸಿಜದಿ ಮನವಿರಿಸಿ ಪೂಜಿಸಿ ೨
ಶರಣು ಜನಕೆ ಸುರತರುವೆನಿಪ ಕಾರ್ಪರ
ಸಿರಿಮನೋಹರ ನರಹರಿಯ ಶುಭ
ಚರಣಯುಗಲವ ಸ್ಮರಿಸುತನುದಿನ ೩

೧೯
ಹಟ್ಟಿ ಹನುಮನ ಪಾದ ಭಜಿಸೊ ಕಷ್ಟ ತ್ಯಜಿಸೊ ಪ
ಬುದ್ಧ್ಯಾದ್ಯಷ್ಟ ಸಿದ್ಧಿಗಳನ್ನು ಥಟ್ಟನೆ ಘಳಿಸೋ ಅ.ಪ
ಎಷ್ಟು ಬಲವಂತನೊ ಈತ ಗಿರಿಯ
ಮೆಟ್ಟಿ ಹಾರಿದ ಸಮುದ್ರವ ಕಪಿನಾಥ
ಕೊಟ್ಟು ಮುದ್ರಿಕೆಯನು ಸೀತಾದೇವಿ
ಗಷ್ಟು ರಾಮಗೆ ಪೇಳಿದನು ಕ್ಷೇಮವಾರ್ತಾ ೧
ಕುಂತಿಯ ಜಠರ ಸಂಭೂತ ಕೌರ
ವಾಂತಕನೆನಿಸಿದ ಬಹು ಬಲವಂತ
ಶಾಂತ ಕಿರಣಕುಲಜಾತ ಮಾತು
ಲಾಂತಕನೊಲಿಸಿದ ದ್ರೌಪದಿ ಕಾಂತಾ ೨
ಮೇದಿನಿಯೊಳು ಮಧ್ವರಾಯಾರೆನಿಸಿ
ಭೇದಮತವ ಸ್ಥಾಪಿಸಿದ ಯತಿವರ್ಯ
ವೇದವಿನುತ ಶುಭಚರಿಯಮನವೆ
ಶ್ರೀದ ಕಾರ್ಪರ ನರಹರಿಗತಿಪ್ರಿಯ೩

ಗುರುರಾಘವೇಂದ್ರ ಕರುಣಿಸೋ ತವಚರಣ
೩೯
ಗುರುರಾಘವೇಂದ್ರ ಕರುಣಿಸೋ ತವಚರಣ ಸ್ಮರಣೆಯ ಪ
ಶರಣು ಜನಕೆ ಸುರತರುವೆಂದೆನಿಸುತ ವರ ಮಂತ್ರಾಲಯ
ಪುರದಿ ಮೆರೆವ ಶ್ರೀಮದ್ ೧
ನಂದತೀರ್ಥರ ಮತ ಸಿಂಧುವಿಗೆ ಪೂರ್ಣ
ಚಂದ್ರನೆನಿಸಿದ ಸುಧೀಂದ್ರ ಕರೋದ್ಭವ ೨
ಧರಿಯೊಳು ಶರಣರ ಪೊರೆವ ಕಾರ್ಪರನರಹರಿಯನೊಲಿಸಿರುವ ಪರಿಮಳಾಚಾರ್ಯ ಶ್ರೀ೩

ಹಾಡಿನ ಹೆಸರು :ಗುರುರಾಘವೇಂದ್ರ ಕರುಣಿಸೋ ತವಚರಣ
ಹಾಡಿದವರ ಹೆಸರು :ನೀಲಾ ರಾಮಗೋಪಾಲ್
ರಾಗ :ತಿಲಂಗ್
ತಾಳ :ಖಂಡಛಾಪು ತಾಳ
ಸಂಗೀತ ನಿರ್ದೇಶಕರು :ನೀಲಾ ರಾಮಗೋಪಾಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ