Categories
ರಚನೆಗಳು

ಕೃಷ್ಣವಿಠಲದಾಸರು

ಇದು ಒಂದು ದ್ವೈತ
ಶ್ರೀಹರಿ ಕೀರ್ತನೆ

ಅಗಲದಿರೋ ಮನ ಮಂದೀರದಿಂದ ಲೆನ್ನ
ಎಂದೆಂದಿಗೂ ಕೃಷ್ಣ ಪ
ಅಗಲದಿರೋ ಬ್ರಹ್ಮಾದಿ ವಂದಿತ
ಸುಗುಣಗಣ ಪರಿ ಪೂರ್ಣ ಏಕನೆ
ನಿಗಮಗೋಚರ ವಿಶ್ವ ಪ್ರೆರಕ
ಸಗುಣ ನಿರ್ಗುಣ ನಿರಜ ನಿಸ್ಸೀಮ ಅ.ಪ.
ಸೃಷ್ಟಿಗೊಡೆಯನೆ ನೀನೆ- ಶ್ರೇಷ್ಠನು ಸರ್ವತ್ರ
ಕಷ್ಟವಿಲ್ಲದೆ ಸಕಲ- ಚೇಷ್ಟೆಯ ನಡಿಸುವೆ
ಕೊಟ್ಟು ದೇಹಾದಿಗಳ- ಬಿಟ್ಟೇ ಜೀವರ ಭವದಿ
ಗಿಟ್ಟೀಸೆ ತಮ್ಮ ತಮ್ಮ- ಪಟ್ಟಾ ಮುಕ್ತಿಯ ಬೇಗ
ಒಟ್ಟಿನಿಂದಲಿ ಜೀವ ಜಗವಂದಿಷ್ಟು ಚಲಿಸದು
ಬಿಟ್ಟು ನಿನ್ನನು ಗುಟ್ಟು ತಿಳಿಯದೆ ಭವದಿ ಕಂ-
ಗೆಟ್ಟು ಬಳಲಿದೆ ಭಕ್ತಬಾಂಧವ
ನಷ್ಟಕಷ್ಟಗಳಿಲ್ಲದಾ ಸಂತುಷಷ್ಟ ನೀಡುವ ಪ್ರಭುವೆ ಕರುಣಾ-
ದೃಷ್ಟಿ ಬೀರುತ ಭಕ್ತಿ ಭಾಗ್ಯವ ಪುಷ್ಟಿಗೈಸುತಲೆನಗೆ ಸಂತತ ೧
ಶ್ರೀಶಾನೊಬ್ಬನೆ ಸರ್ವ ತಂತ್ರ ಸ್ವತಂತ್ರನು
ನಾಶರಹಿತನಿಗೆಲ್ಲಾ ದಾಸರೆ ಸರಿಸತತಾ
ವಾಸುದೇವನು ಜೀವ ಜಗದಿಂ ವಿಲಕ್ಷಣನು
ಈಸುಜ್ಞಾನವನೀಯೋ ಜನ್ಮಜನ್ಮಾಂತರಕು
ದೋಷದೂರ ವಿಶೇಷ ಮಹಿಮ ಪೂರ್ಣ ವಿಶ್ವಗ ಶಶ್ವದೇಕ ವಿ-
ಲಾಸ ಮಿಷಣಾಭರಣ ಭೂಷಿತ ಸಾಮಸರ್ವಾಧಾರ ನಿರುಪಮ
ಓಸು ಶಬ್ದಗಳಿಂದ ವಾಚ್ಯನೆ- ನಾಶಗೈಸುತ ಕರ್ಮತ್ರಯಗಳ
ದಾಸ ನಿನ್ನವ ನೆಂದು ಕರುಣದಿ ಭಾಸನಾಗುತ
ಹೃದಯಗುಹೆಯಲಿ ೨
ನಿತ್ಯನಿಗಮಾತೀತ-ನೀನೆ ಸತ್ಯರ ಸತ್ಯ
ನಿತ್ಯತೃಪ್ತನು ಸ್ವರತ-ಮುಕ್ತೇಶ ಚಿನ್ಮಯನೂ
ನಿತ್ಯಜೀವಗೆ ನೀನಿರ್ನಿಮಿತ್ತ ಬಂಧು ಸತತ
ನಿತ್ಯಸ್ತೋತ್ರವನು ನುಡಿಸು-ಮೃತ್ಯೋಮೃತ್ಯುವೆ ದೇವಾ
ನೀತಬಲಸುಖ ಜ್ಞಾನ ಸರ್ವೈ-ಶ್ವರ್ಯ ಸದ್ಗುಣ
ಧಾಮ ವಿಶ್ವೋ
ತ್ಪತ್ತಿ ಸ್ಥಿತಿಲಯ ಕರ್ತ ಪರಿಪರಿ ಜೀವ ಸತ್ತಾದಿ ಭಾಸಕ
ನಾಥ ಮುಕ್ತಾಮುಕ್ತ ವಂದಿತ – ಭೂತಿ ಭೂರಿದನಾಂತಾತ್ಮ
ಖ್ಯಾತ ಸರ್ವೋತ್ತಮ ಪರತ:ಪರಾಕ್ಷರ ವಿಷ್ಣುಸರ್ವಜ್ಞ ೩
ಅಂಬುಜಾಕ್ಷನು ನೀನೇ-ಉಂಬುವೆ ಸರ್ವಸಾರ
ತುಂಬಿರುವೆ ಒಳಹೊರಗೆ-ಬೆಂಬಲನು ಜಗಕೆಲ್ಲ
ಬಿಂಬ ನೀ ಚಲಿಸೆ ಪ್ರತಿ ಬಿಂಬಾ ನಾ ಚಲಿಸುವೆ
ನಂಬಿದೆ ಸಲಹಯ್ಯ-ಕಂಬುಚಕ್ರಾಂಕಿತನೆ
ಕುಂಭಿಣೀಪತಿ ಕೃಷ್ಣಕೈಬಿಡೆ ಗೊಂಬೆ ಸರಿನಾಲ್ಲವೇನೈ
ಡಿಂಬದೊಳಗಿನ ವೈರಿವೃಂದವು ಹಂಬಲಿಸಲೆಡೆಗೊಡವುಭವ
ದೊಂಬಿ ಅಡಗಿಸು ದಕ್ಷಣಾಕ್ಷಿಗ-ಸ್ಥಂಭರೂಪಿಯೆ ಶರಣುಶರಣು
ವೆಂಬೆ ಸ್ವಾಮಿಯೆ ಪಾದಪಂಕಜ ದುಂಬಿ
ಎನಿಸೈ ನೀಡಿ ವಿಜ್ಞಾನ ೪
ಮಂದರೋದ್ಧರ ಗೋವಿಂದ ನಿನ್ನಯ ಮಹಿಮೆ
ಇಂದಿರೆಗಾಗದು ಸಾಕಲ್ಯ ತಿಳಿಯೆಸಿದ್ಧವಿದೂ
ಛಂದಾ ಛ್ಚಾದಿತ ಗಾತ್ರ-ಬಂಧ ಮೋಕ್ಷಪ್ರದನೆ
ಎಂದು ಕಾಂಬೆನೋ ನಿನ್ನ-ಮಂದನಾನಿಹೆ ಜಗದೀ
ಮಂದಜಾಸನ ಸದ್ಮ ಪೂರ್ಣಾನಂದ ನಿನ್ನಯ ನಾಮ ವೃಂದದಿ
ಬಂಧಿಸಿಹೆ ಜಗವೆಲ್ಲ ವಿಷ್ಣುವೆ-ಛಂದಬೃಹತೀಪತಿಯೆ ನೀನೈ
ತಂದೆ ಜಯಮುನಿ ವಾಯು ಅಂತರ ನಿಂದು ತಾಂಡವ
ನಾಡಿ ಮೆರೆಯುವ
ಇಂದಿರಾಪತಿ ಕೃಷ್ಣವಿಠಲನೆ-ನಿಂದು ತೋರುತ ನಿನ್ನ ರೂಪವ ೫

ಶ್ರೀಹರಿಯ ಅನೇಕ ಅವತಾರ

ಅದ್ಭುತ ಅದ್ಭುತ ಪರಮಾದ್ಭುತನೆ ಪ
ಮಧ್ವರ ಚರಣದಿ ಬಿದ್ದ ಜನರಪರಿ
ಶುದ್ಧಗೈದು ಸುಖ ಸಿದ್ಧಿಗೊಳಿಪ ಹರಿ ಅ.ಪ
ಪದ್ಮನಾಭ ಅನವದ್ಯ ಪರಾತ್ಪರ
ಶುದ್ಧ ಸುಖಾತ್ಮಕ ಕದ್ದನೆ ಬೆಣ್ಣೆಯನು
ಮಧ್ವರ ದೇವನು ಪದ್ಮಾಲಯ ಪತಿ
ಸಿದ್ಧಿ ಸುವಂದಿತ ಕದ್ದನೆ ಕನ್ಯೆಯನು ೧
ಮೇದಿನಿ ಗೈದವ ಮೇದಿನಿ ತಂದವ
ಮೇದಿನಿ ಸತಿಪತಿ ಮೇದಿನಿ ಅಳಿಯನೆ
ವೇದವ ತಂದವ ವೇದಸು ಬÉೂೀಧಕ
ಬುದ್ಧನು ಆಗುತ ವೇದವ ನುಳುಹಿದನೆ ೨
ಸತ್ಯವತೀ ಸುತ ಸತ್ಯನ ಸತ್ಯನು
ಬತ್ತಲೆ ನಿಲ್ಲುತ ಸತಿಯರ ಕೆಡಸಿದನೆ
ಕತ್ತಲೆ ಕಾಣದ ಉತ್ತುಮ ದೇವನು
ಮಿಥ್ಯಾಜ್ಞಾನವ ಬಿತ್ತಿದನೆ ೩
ಅನ್ನಾದನ್ನನು ಅನ್ನದ ಬೃಹತೀ
ಅನ್ನನು ಸತಿಯರ ಅನ್ನವ ಬೇಡಿದನೆ
ಉಣ್ಣದೆ ರಾಜನ ಅನ್ನವ ವಿದುರನ
ಅನ್ನವ ನುಂಡನು ಸಣ್ಣವನೆನ್ನದಲೆ ೪
ತಂದೆಯ ಕೊಂದು ಕಂದನ ಸಲಹಿದ
ಕಂದನ ಕೊಂದು ತಂದೆಯ ಸಲಹಿದ
ನಿಂದೆಯ ಸುರಿಸಿರೆ ನಂದವ ನೀಡಿದ
ವಂದಿಸಿ ರಾಜ್ಯವ ಮುಂದಿಡೆ ಜರಿದವನೆ ೫
ಅಣ್ಣನ ಕೊಂದು ತಮ್ಮನ ಸಲಹಿದ
ಸಣ್ಣನು ತಮ್ಮನ ಅಣ್ಣನ ಮಾಡಿದ
ಅಣ್ಣ ತಮ್ಮಂದಿರ ನುಣ್ಣಗೆ ಸವರಿದ
ಅಗಣ್ಯ ಮಹಿಮ ಮೈಗಣ್ಣಗೆ ವಲಿದಿಹನೆ ೬
ಭಾರೀ ಗಿರಿಧರ ನಾರಿಯು ಆದನು
ಮಾರನ ಪಡೆದವ ನಾರೇರಿ ಗೊಲಿದನೆ
ನಾರಿಯು ಮೊರೆಯಿಡೆ ಸೀರೆಯ ಕರೆದವ
ಜಾರನು ಎನಿಸುತ ಶೀರೆಯ ಚೋರನೆ ೭
ಇಲ್ಲಿಹೆ ಅಲ್ಲಿಹೆ ಎಲ್ಲಾಕಡೆಯಿಹ
ಎಲ್ಲರ ಒಳಗಿಹ ಎಲ್ಲರ ಹೊರಗಿಹ
ಎಲ್ಲಾ ಪ್ರೇರಿಸಿ ಎಲ್ಲಾ ನಡಿಸುವ
ಎಲ್ಲವ ಬಲ್ಲನು ಬಲ್ಲ ವರಿಲ್ಲವೆ ೮
ಅಣುಕಿವÀ ಅಣುತಮ ಘನಕಿವ ಘನತಮ
ಅಣು ಘನ ಮಾಡುವ ಘನ ಅಣುಮಾಡುವ
ಅಣುವಲಿ ಅಡಗಿಪ ಘನವನು ಬಲ ಬಲ
ತೃಣ ಸಹ ಚಲಿಸದು ಚಿನುಮಯ ನಿಲ್ಲದೆ ೯
ಜಾಗರ ಸ್ವಪ್ನ ಸುಷುಪ್ತಿಗಳೆಲ್ಲವ
ಆಗಿಸಿ ಕಾಯುವ ಯೋಗಸು ಭೋಕ್ತನು
ಬೀಗರ ಮನೆಯಲಿ ಸಾಗಿಸಿ ಯಂಜಲ
ತೇಗಿದ ತಿನ್ನುತ ಶಾಖವ ನಿಜಕರುಣಿ ೧೦
ಲೋಕವ ಸೃಜಿಸುವ ಲೋಕವ ನಳಿಸುವ
ಲೋಕನು ಪಾಲಕ ಲೋಕ ವಿಲಕ್ಷಣನೆ
ನಾಕರ ನಾಯಕ ನಾಕಗತಿ ಪ್ರದ
ಶೋಕವಿದೂರಗೆ ತಾಕಿತು ಕೊಡಲಿ ಬತ ೧೧
ಎಲ್ಲಾ ನಾಮವು ಇವನದೆ ಸರಿಸರಿ
ಎಲ್ಲಾ ರೂಪವು ಕೂಡ್ರವ ದಿವನಿಗೆ
ಎಲ್ಲಾ ಚೇತನ ಜಡದಿಂ ಭಿನ್ನನು
ಎಲ್ಲಾ ಕಾಲದಿ ಒಂದೇ ಸಮನಿಹ ೧೨
ಎಲ್ಲಾ ರೂಪಗಳೊಂದೇ ಸಮ ಬತ
ಎಲ್ಲಾ ರೂಪದನಂತ ಗುಣಂಗಳು
ಎಲ್ಲಾ ರೂಪವು ನಿತ್ಯಸು ಪೂರ್ಣವು
ಎಲ್ಲಾ ಮಹಿಮೆಯ ಯಾರು ಕಾಣರು ೧೩
ಜೀವರ ಬಿಂಬನು ಜೀವನ ಸಹವಿಹ
ಜೀವರಿ ಗುಣಿಸುವ ಸುಖ ದುಃಖಂಗಳ
ದೇವನು ಹರಿತಾ ಸಾರ ಸುಭೋಕ್ತನು
ಜೀವರಿ ಗಲ್ಲವೆ ಕರ್ಮದ ಲೇಪವು ೧೪
ನಿಗಮಕು ಸಿಲಕದ ಅಗಣಿತ ಮಹಿಮನು
ನಗೆಮೊಗ ಶ್ರೀ ಕೃಷ್ಣವಿಠಲ ಪರಾತ್ಪರ
ಸಿಗುವನು ಭಕ್ತಿಗೆ ಸರಿಮಿಗಿಲಿಲ್ಲವೆ
ಬಗೆಯನೆ ದೋಷವ ಶರಣೆಂದವರ೧೫

ಈ ಪದದ ಪ್ರತಿಯೊಂದು
ಶ್ರೀವಾಯು ದೇವರು
೫೬
ಅನಿಲದೇವನೆ ನಿನ್ನ ಅನುದಿನ ಸ್ತುತಿಸುವೆ
ದೀನಮನುಜನ ಜನುಮಗಳಳಿಸೋ ಪ
ಹನುಮ ಭೀಮ ಮಧ್ವರೂಪನೆ
ವಾಣಿವಂದಿತ ಪಾದಪದ್ಮನೆ
ಅಣುಮಹದ್ಛನರೂಪ ಚರಿತನೆ ಸಾನುರಾಗದಿ
ಕಾಯೋ ಈಗಲೇ ಅ.ಪ.
ಜಾನಕೀರಮಣನ ಪ್ರಿಯ ದಾನವಾಂತಕ ಕಾಯ
ಮಣಿಮಂತಾದಿಗಳ ಶೂಲ ಘನ ಪರಾಕ್ರಮ ಭೀಮ
ಜ್ಞಾನದಾಯಕ ವಪುಷ ಆನಂದ ತೀರ್ಥಪ್ರಖ್ಯಾತ
ಮೌನಿಮಾನಸ ಚಂದ್ರ ಅನಿಮಿಶೇಷಗಳಾದಿಗೊಡೆಯ
ಭಾನುಕುಲತಿಲಕ ದೂತನೆ ಭಾನುಕೋಟಿತೇಜರೂಪನೆ
ಮಾನಿ ದ್ರೌಪದಿ ಪ್ರೀಯಗಂಡನೆ
ಗಣಿಸಲಾಗದ ಸತ್ವಮಂದಿರ
ಮೌನಿಗಳ ಕಲಶ ಪ್ರಾಯನೆ ಕನಕವರ್ಣದಶುಭಗಾತ್ರನೆ
ಧ್ಯಾನಗೋಚರ ವಿಶ್ವರೂಪನೆ ಮಾನದಿಂದಲಿ ಪಾಲಿಸಯ್ಯ ೧
ವಾರಿಧಿ ದಾಟಿದಶೂರ ಭಾರಿವನವ ಕಿತ್ತವೀರ
ಜರಾಸಂಧನ ಕೊಂದ ಧೀರ ವೈರಿತಿಮಿರಕೆ ಸೂರ್ಯ
ಹರಿಯ ಹರಡಿದ ರಾಯ ಪರಾಶರಾತ್ಮಜಪ್ರಿಯ
ಕರಿರಾಜವರದನೆ ಪ್ರಥಮಾಂಗ ಭಾರತಿ ರಮಣಮುಖ್ಯಪ್ರಾಣ
ಹರಿಯು ಆಗಿ ಹರಿಯ ಒಲಿಸಿದೆ ವೀರಮಾರುತಿ ದೇವ ದೇವನೆ
ದುರುಳ ಕಲಿಯನು ಕೆಡಹಿ ಧರೆಯಲಿ ಕರುಳ
ಬಗೆದು ಧರಿಸಿ ಮೆರೆದೇ
ವೈರಿಮಾಯ್ಗಳ ಹಲ್ಲುಮುರಿಯುತ ಹರಿಯೆ ಪಿರಿಯನು
ಎಂದು ಸಾರಿದೆ
ಕರವ ಮುಗಿದು ಸಾರಿಬೇಡುವೆ ಚರಣ
ತೋರಿಸಿ ಕಾಯೊ ಸೂತ್ರನೆ ೨
ಅಕ್ಷಯನ ಕೊಂದು ಮೆರೆದ ಲಕ್ಷ್ಮಣನ ಪ್ರಾಣವನುಳಿದ
ರುಕ್ಮಿಣೀ ಪತಿಯ ಕಿಂಕರನಾದ ಲಕ್ಷ್ಯವಿಲ್ಲದೆ ಸೈನ್ಯಗಳಳಿದಾ
ಪಕ್ಷವಾಹನನೆ ದೈವವೆಂದ ಮೋಕ್ಷಸಾಧನಗಳ ತೋರಿನಿಂದ
ದಕ್ಷರಾಕ್ಷಸ ವೈರಿ ಅನಿಲ ರಕ್ಷಿಸು ರಕ್ಷಿಸು ತತ್ವೇಶರೊಡೆಯ
ಲಕ್ಷ್ಮಿಮಾತೆಯಕಂಡುವಂದಿಸಿ ಲಂಕೆ ಸುಟ್ಟು ಸೊಕ್ಕೂ ಮುರಿದೆ
ಅಕ್ಷನಾಟವ ಸೋತುನಟಿಸಿ ಕಾಂತೆಗಭಯವ ನೀಡಿ ಪೊರೆದೆ
ಅಕ್ಷರೇಡ್ಯನ ಕರುಣದಿಂದಲಿ ಸೂತ್ರಭಾಷ್ಯವ ರಚಿಸಿ ಮೆರೆದೇ
ಇಕ್ಷುಚಾಪನ ಪಿತನ ತೋರಿಸೋ ದಕ್ಷಿಣಾಕ್ಷಿಗವತ್ಸರೂಪಿಯೆ ೩
ವಾಮನನುಜನ ಗರ್ವವ ಮುರಿದ ಸೋಮಶೇಖರನ
ವಿಷಉಂಡುಪೊರೆದ
ರೋಮರೋಮಕೆ ಕೋಟಿ ಲಿಂಗಗಳುದುರಿಸಿ ಬಂದ
ಅಮರಪ್ರಾರ್ಥನೆಯಿಂದ ಮುನಿಯಾಗಿನಿಂದ
ಧಾಮಸಕಲ ಗುಣಕೆಂದೆನಿಕೊಂಡ
ಸಮಶೂನ್ಯ ಸತ್ವ ಪ್ರಭಾವ ತಾಮಸವರ್ಜಿತ
ಅನಾದಿ ಅಪರೋಕ್ಷದೇವ
ರಾಮಭಕ್ತಾಗ್ರೇಸರನೆನಿಸಿದ ತಾಮಸಾಂತಕ ವಿಜಯರಥಧ್ವಜ
ಭಾಮೆಯರೂಪವ ತಾಳಿಮೆರೆದ ಭೀಮವಿಕ್ರಮ ಸಪ್ತಶಿವಧರ
ಸಾಮಗಾಯನ ಲೋಲ ಕೃಷ್ಣನ ಪ್ರಿಯದಾಸ ಮೋದಮುನಿಯೆ
ಕಮಲೆಯರಸನ ಒಲುಮೆಯಿಂದಲಿ ಭಾವಿ ಬ್ರಹ್ಮನು
ಎನಿಸಿಮೆರೆಯುವೆ ೪
ವಾನರರೂಪಿಲಿ ಬಂದ ಜಾನಕಿ ಗುಂಗುರಕೊಟ್ಟು ನಿಂದ
ಅನಲನಿಂದಲಿ ಅನುಜರ ಕಾಯ್ದು
ರಾಜಸೂಯವ ಮಾಡಿನಿಂದ
ಪ್ರಾಣಗೀಶಗೆ ಭೇದವು ಎಂದ ಸಾನಂದ ಗುಣಪೂರ್ಣ
ಹರಿಯು ಎಂದ
ಅನುಪಮ ಚರಿತ್ರ ಗುಣಗಣವೃಂದ
ವನಜನಾಭನಮುಖ್ಯ ಪ್ರತಿಬಿಂಬ
ಕ್ಷಣದಿ ಸಂಜೀವನವ ತಂದೆ ವಾನರರ ಪ್ರಾಣ ಉಳಿಸಿದೆ
ದ್ರೋಣಸುತನ ಅಸ್ತ್ರನಿಲಿಸಿದೆ ಸಾಮ ದೂರ ಖ್ಯಾತನಾಮನೆ
ಹೀನಮತಗಳ ಮುರಿದ ಮಧ್ವನೆ ಜ್ಞಾನಿಜಯಮುನಿ
ವಾಯು ಅಂತರ
ಶ್ರೀನಿವಾಸ ಕೃಷ್ಣವಿಠಲನ ಜ್ಯೇಷ್ಠಕುವರ ವಿಶ್ವ ರಜ್ಜುವೆ
ಚರಣ ನಂಬಿದೇ ೫

ಕೃಷ್ಣನ ಪಾದವನ್ನೇ

ಆವೂರು ಈ ಊರು ಯಾವೂರು ಆದರೇನು ಪ
ಕಾವೋರು ಶ್ರೀಹರಿ ಲೇಸಾಗಿ ಇರಲೂ ಅ.ಪ
ನೀರಜನಾಭನ ಕಾಳಿಂಗ ಮಥನನ ಪಾರಿಜಾತವ ತಂದ
ರುಕ್ಮಿಣಿ ಪತಿಯ ಸಾರುತ್ತ ಪಾಡುತ್ತ ಪೊಗಳುತ್ತಬೇಡುತ್ತ
ಚರಣಾವ ನೆರೆನಂಬಿ ತಿರುಗುವ ದಾಸರಿಗೆ೧
ಆರು ಆಳಿದರೇನು ಆರು ಅಳಿದರೇನು
ಮಾರುವ ಧಾರಣಿ ಏರಿದರೇನು ಇಳಿದರೇನು
ಊರೆಲ್ಲ ಎದುರಾದರೇನು ಹಿತವಾದರೇನು
ಕರಿರಾಜವರದನ ಕೊನೇರಿ ವಾಸನ ಕರುಣವ ಪಡೆದವಗೆ ೨
ಕಾಸು ಎಂದರೆ ಪ್ರಾಣ ಸಾಮಾನ್ಯಜನರಿಗೆ
ಈ ಶರೀರವ ಕಷ್ಟದಿ ಬಿಡುವಾಗ ಬಾಹುದೈ
ವಾಸವಾನುತ ಪಾದ ಸೋಮಶೇಖರ ವಂದ್ಯ
ಶೇಷಗಿರೀಶನ ದಾಸಾನು ಎಂತೆಂದು ಕುಣಿವವಗೆ ೩
ಮೂರುಲೋಕದ ಅರಸು ಸಾರಂಗ ಪಾಣಿಯು
ನೀರಜಭವಾಂಡ ಉದಯಕೆ ಕಾರಣ ಅಷ್ಟಕರ್ತ
ಸಿರಿಪದ್ಮಜಾಸನ ವಂದ್ಯ ದೇವಾದಿದೇವನ
ಮೀರಿ ನಡೆವುದುಂಟೆ ಈ ಚರಾಚರ ಜಗದೊಳು ಮನವೇ೪
ಊರೆಲ್ಲನೆಂಟರು ಉಣಬಡಿಸುವರಿಲ್ಲ
ಸಿರಿಯಿದ್ದಕಾಲಕ್ಕೆ ಎಲ್ಲರು ನೆಂಟರಯ್ಯ
ಸಿರಿತನ ತಾ ತಪ್ಪಿ ಬಡತನ ಬಂದರೆ
ಯಾರಿಗೆ ಯಾರೈಯ್ಯ ಮೋರೆಯ ತಿರುಹುತ
ನಡಿನಡಿಯೆಂಬರು ೫
ಹರಿ ಊರು ನಮ್ಮೂರು ಹರಿವೋರು ನಮ್ಮೋರು
ಹರಿನಾಮ ಬಂಧುವು ಹರಿನಾಮ ಬಳಗ
ಹರಿಹರಿ ಎಂದರೆ ದುರಿತವು ಪರಿಹಾರ
ಹರಿಗುರು ಚರಣವೆ ಪರಗತಿ ಸಾಧನ ಮನವೇ ೬
ಕೋರಿ ಕೋರಿದ ವರವ ನೀಡುವ ಪ್ರಭುವು
ಸಿರಿಜಯಮುನಿ ಹೃಸ್ಥವಾಯುಗ
“ ಶ್ರೀ ಕೃಷ್ಣವಿಠಲಾ” ಸಾರಿದ ಜನರನು ಪೊರೆಯುವ
ಕರುಣದಿ ನೆರೆನಂಬುಮನವೆ ಭಯಬೇಡ ಮನವೇ೭

ಶ್ರೀಹರಿಯ ಕರುಣವನ್ನು
ಲೋಕನೀತಿ
೯೦
ಇರಬೇಕು ಇದ್ದರು ಇಲ್ಲದಿರಬೇಕು ಪ
ಹರಿಯಲ್ಲಿ ಮನವಿಟ್ಟು ತೊರೆದು ಮಮತೆ ಭವದಿ ಅ.ಪ.
ಪರದೈವ ಹರಿಯೆಂದು ದೃಢದಿಂದಲಿರಬೇಕು
ಗುರುವಾಯು ಸರಿಯೆಂದು ಗುರುಭಕ್ತಿಮಾಡಬೇಕು
ಹರಿಯ ಕರುಣ ವಿಲಾಸದಿಂದಲಿ
ತರಿದು ತನುಗತ ವೈರಿ ವೃಂದವ ಸ್ಮರಿಸಿ ಸ್ಮರಿಸುತ
ಕ್ರಮದಿ ಬಿಂಬನ ಪರಮ ಸುಖದಿಂ ಜ್ಞಾನ ಘಳಿಸುತ ೧
ತಿಳಿಯಬೇಕೊ ವಿದ್ಯೆ ತುಳಿಯಬೇಕಾವಿದ್ಯೆ
ಬೆಳಿಸಬೇಕು ಭಕ್ತಿ ಹಳಿಯಬೇಕು ಹಂಮದ
ನಳಿನ ನಯನನ ಆಳುವೆಂಬುದ ತಿಳಿದು ತವಕದಿ ದೊರೆಯ
ಮೆಚ್ಚಿಸೆ ಪುಳುಕಿತಾಂಗದಿ ಕ್ರಮವನಡೆಸುತ
ತೊಳಳಿಬಳಲಿದೆ ಬಹಳ ವುದರಕೆ ೨
ಹರಿಯಿತ್ತದುಣಬೇಕು ಸಮಚಿತ್ತವಿರಬೇಕು
ಹರಿಗಿತ್ತುಮಣಿಬೇಕು ಧೊರೆ ಚಿತ್ತವೆನಬೇಕು
ಪರರ ಬೇಡದೆ ಬಿಡುತ ಹರಿಯನು ಸಿರಿಗುಪ್ರೇರಕ ವಿಷ್ಣುವೆನ್ನುತ
ಅರಿತು ಕ್ರಮದಿಂ ತಾರತಮ್ಯವನೆರಗಿ
ಹಿರಿಯರಕರುಣ ಪಡೆಯುತ ೩
ಮಂತ್ರಸಿದ್ಧಿಯು ಬೇಕು ತಂತ್ರ ವೃಂದವು ಬೇಕು
ಯಂತ್ರವಾಹಕ ಹರಿಯ ಸ್ವಾತಂತ್ರವರಿಯಬೇಕು
ಶಾಸ್ತ್ರ ಚರ್ಚೆಯ ಮಾಡಿಮಾಡುತ
ಕಂತುಪಿತನೇಕಾಂತ ಭಕ್ತರ
ಮುಟ್ಟಿಭಜಿಸುತ ಪ್ರೇಮದಿಂ ಶ್ರೀಕಾಂತ ಭೃತ್ಯರ
ಭಾಗ್ಯ ಪಡೆಯುತ ೪
ತೀರ್ಥಯಾತ್ರೆಯು ಬೇಕು ಗಾತ್ರ ಶುದ್ಧಿಯುಬೇಕು
ಪಾತ್ರವರಿಯುತ ದಾನವಿತ್ತು ಪೂಜಿಸಬೇಕು ಪುತ್ರಮಿತ್ರ
ಕಳತ್ರ ಗತಹರಿ ತುತ್ತುವುಣ್ಣಿಸಿ ಜಗವ ಸಲಹುವ
ನೆಂತು ತಿಳಿಯುತ ರತಿಯಮಾಡುತ ಆತ್ಮಗತ
“ಶ್ರೀಕೃಷ್ಣವಿಠಲ”ನ ಕರುಣ ಪಡೆಯಲು ೫

ಇದು ಶ್ರೀ ಉತ್ತರಾದಿ ಮಠದ
ಸತ್ಯಧ್ಯಾನತೀರ್ಥರು
೭೭
ಇಷ್ಟು ಸುಲಭದಲಿ ಈ ಮುದ್ದು ಯತಿ ವರರಿಗೆ
ಪ್ರೇಷ್ಠತಮ ನೀ ನೊಲಿದ ಬಗೆಯೇನೋ ರಾಮಾ ಪ
ಪಟ್ಟ ಪುತ್ರನ ಶ್ರೇಷ್ಠ ಪೀಠದಲಿ ಕುಳಿತಿಂದು
ಮುಟ್ಟಿ ಪೂಜಿಪ ಭಾಗ್ಯಗಿಟ್ಟಹುದೆ ಏನೆಂಬೆ ಅ.ಪ.
ಚಿಕ್ಕತನದಲೆ ನೂಕಿ ವಿಷಯ ವಿದ್ಯೆಗಳನ್ನು
ಚೊಕ್ಕ ಶಾಸ್ತ್ರಗಳಲ್ಲಿ ಇಕ್ಕಿ ದಾಸರ ಮನವಲಿದ್ಯೋ
ಕಕ್ಕಸವುಭವವೆಂದು ವೈರಾಗ್ಯ ಧರಿಸುತಲಿ
ಭಕ್ತಿ ಮಾಳ್ಪುದ ನೋಡಿ ಮುಕ್ತರಾಶ್ರಯ ವಲಿದ್ಯೋ ೧
ದಾನಶೂರರು ಬಹು ನಿದಾನ ವಂತರು ಹಾಗೆ
ಮಾನ ಸಾಗರರೆಂದು ಜ್ಞಾನಿ ಪ್ರಾಪ್ತನೆ ವಲಿದ್ಯೋ
ದೀನ ಜನ ಮಂದಾರ ಮಾನ್ಯ ಮುನಿಕುಲ ತಿಲಕ
ಶೂನ್ಯವಾದಧ್ವಾಂತ ಭಾನು ವೆಂದೊಲಿದ್ಯೋ ೨
ಮೋದವಿತ್ತರು ಸತ್ಯಧ್ಯಾನ ತೀರ್ಥರು ಹಿಂದೆ
ಸಾಧಿಸುತ ಸುಖಮತದ ಜಯ ಭೇರಿ ಜಗದೀ
ಸಾಧು ಜನರ ಜ್ಞಾನ ಖೇದವಳಿಯುತ ಪ್ರಮೋದ
ವೀಯುವರೀಗೆ ಸಿದ್ದವೆಂದೊಲಿದ್ಯೋ ೩
ಹಿಂದಿ ನ್ಹಿರಿಯರ ವಲವೊ ಮಂದಿ ಪುಣ್ಯವೊ ಮತ್ತೆ
ತಂದೆ ಕರುಣವೊ ಕಾಣೆ ಬಂದುದೀ ಪೀಠದಲಿ
ನಂದ ಮುನಿ ವಿಧಿ ವಿನುತ ರಾಮ ನಿನ್ನೊಲಸಿಹ ಪ್ರ
ಮೋದ ತೀರ್ಥರುಸತ್ಯ ಪಾಮರರಿಗಾಗುವುದೆ ಸ್ತುತಿಸೆ ೪
ಸಾಧು ಸಜ್ಜನ ಪ್ರಾಪ್ಯ ಬಾದರಾಯಣ ಶರಣು
ಮೋದ ಮಯ ನಿರ್ದೋಷ ವೇದ ವೇದ್ಯನೆ ಶರಣು
ಮಾಧವ ಶ್ರೀ ಕೃಷ್ಣ ವಿಠಲರಾಯನೆ ಶರಣು
ಗಾಧವರ್ಜಿತ ಮಹಿಮ ಶ್ರೀ ರಾಮ ಶರಣು ಶರಣು ೫

ಇದು ಶ್ರೀ ಪುರಂದರದಾಸರನ್ನು
ಪುರಂದರದಾಸರು
೭೯
ಎಂತು ಪೊಗಳಲಿ ನಾನು ಪ
ಕಂತುಪಿತನೇಕಾಂತ ಭಕ್ತನ ಪಂಥವನು ಪದ
ಪಂಕ್ತಿಯಲಿ ತುಂಬಿಟ್ಟು ಸಲಹಿದ ದಾಸವರ್ಯರ ಅ.ಪ.
ಪಾಂಡುರಂಗನ ನಿತ್ಯ ನೆನೆಯುತ್ತ
ಪಂಡಿತೋತ್ತಮರೊಡನೆ ಸುಖಿಸುತ್ತ
ಕಂಡು ಹರಿಯನು ಮುಂದೆ ಕುಣಿಯುತ್ತ
ಕುಂಡಲಿಗೆ ನಿಜ ಭೂಷಣವು ಎನಿಸುತ್ತ
ಭಂಡಜನರಾ ಪುಂಡುಮಾರ್ಗವ
ಕಂಡಕಂಡೆಡೆ ಖಂಡ್ರಿಸುತ ಬ್ರಹ್ಮಾಂಡ
ದೊಡೆಯನ ಭಕ್ತಿ ಬಿತ್ತುತ
ಹಿಂಡಿ ಮತಿಮತ ರಸವ ಕುಡಿಸಿದ ದಾಸವರ್ಯರ ೧
ಮೊದಲು ಗಾಯಕ ದೇವಸಭೆಯಲ್ಲಿ
ಮುದದಿ ಕಾಮುಕ ಚೇಷ್ಟೆ ನಡೆಸುತಲಿ
ಪದವಿಯಿಂ ಚ್ಯುತನಾಗಿ ದಾಸಿಯಲಿ
ಉದಿಸಿ ಬಂದು ಸಾಧು ಸಂಗದಲಿ
ಬದಿಗೆ ತಳ್ಳುತ ಭವದ ಕೋಟಲೆ
ಮುದದಿ ಜಪಿಸುತ ವಾಸುದೇವನ
ಪದವಿ ಸಾಧಿಸಿ ದೇವ ಋಷಿ ತಾ
ಪದುಮನಾಭನ ನೆನೆದು ನರಕವ ಬ
ರಿದು ಮಾಡ್ಡ ಮಹಾನುಭಾವನ ೨
ಕಾಸಿನಾಶಯವು ಮೋಸವೆಂತೆಂದು
ಹೇಸಿವಿಷಯದಿ ಲೇಸು ಸಿಗದೆಂದು
ಶ್ರೀಶ ಸಿಗುವನು ದಾಸಗೆಂತೆಂದು
ಆಶೆಯಿಂದಲಿ ಸಾರಬೇಕೆಂದು
ಓಸು ಸಂಪದ ನೂಕಿ ಭರದಿಂ
ವ್ಯಾಸರಾಯರ ಶಿಷ್ಯನೆನಿಸುತ
ವಾಸುದೇವನ ದಾಸನಾಗುತ
ದೋಷಜ್ಞಾನವ ನಾಶಮಾಡಿದ
ದೇಶ ತಿರುಗಿದ ದಾಸವರ್ಯರ ೩
ಭಕ್ತಿಯಿಲ್ಲದ ಗಾನ ತಾನಿನ್ನು
ಕತ್ತೆಕೂಗನುಮಾನವಿಲ್ಲೆಂದು
ನಿತ್ಯದೇವನ ಗಾನ ಗೈಯಲು
ಗಾತ್ರವಿದು ನಿಜವೀಣೆಯೆಂತೆಂದು
ಸಪ್ತಸ್ವರಗಳ ಕ್ಲಪ್ತಮರ್ಮಗ
ಳೆತ್ತಿ ತೋರುತ ಶ್ರೇಷ್ಠತರ ಸಂಗೀತ
ಶಾಸ್ತ್ರವ ಬಿತ್ತಿ ಜಗದೊಳು
ಸೂತ್ರ ಸಂಮತ ನೀತಿ ನುಡಿದಿಹ ದಾಸವರ್ಯರ ೪
ಮುಂದೆ ದಿವಿಜರ ಭಾಷೆ ಶಿಥಿಲತೆಯ
ಪೊಂದಿ ಪುಸ್ತಕ ದೀಚೆ ಬರದೆಂದು
ಛಂದ ಮರ್ಮವ ತಂದಿಡುವೆ ನಮ್ಮೀ
ಅಂದ ಕನ್ನಡ ದೊಳಗೆ ಎಂತೆಂದು
ಕಂದ ವೃತ್ತ ಸುಳಾದಿ ಪದಗಳ
ಛಂದ ಭೂಷಣವೃಂದ ನೀಡುತ
ನಂದದಿಂ ಕರ್ಣಾಟಮಾತೆಯ
ಮುಂದೆ ತಾ ನಲಿವಂತೆ ಮಾಡಿದ ದಾಸವರ್ಯರ ೫
ನಾರಿ ಮನೆ ಪರಿವಾರ ಹರಿಗೆಂದು
ಸಾರವನ್ನೆ ಮುರಾರಿ ಮನೆಯೆಂದು
ಚಾರು ಶ್ರುತಿಗತಸಾರ ನಡತೆಯಲಿ
ಸೂರಿಯಾದವ ತೊರಬೇಕೆಂದು
ನೀರಜಾಕ್ಷನ ಧೀರ ದೂತನ
ಸಾರ ಮನವನು ಸಾರಿ ಸಾರುತ
ದೂರ ಒಡಿಸಿ ಮೂರು ಮತಗಳ
ನೇರ ಸುಖಪಥ ತೋರಿಸಿದ ಮಹರಾಯ ದಾಸರ ೬
ಕರ್ಮಕೋಟಲೆಗಿಲ್ಲ ಕೊನೆಯೆಂದು
ಮರ್ಮತಿಳಿಯುತ ಬಿಂಬಹೃದಯಗನ
ನಿರ್ಮಮತೆಯಿಂದೆಸಗಿ ಕರ್ಮಗಳ
ಕರ್ಮಪತಿಗೊಪ್ಪಿಸುತ ಸರ್ವಸ್ವ
ಭರ್ಮಗರ್ಭನ ಭಕ್ತಿ ಭಾಗ್ಯದಿ
ಪೇರ್ಮೆಯಿಂ ಹರಿದಾಸನೆಸಿಸುತ
ಶರ್ಮ ಶಾಶ್ವತವಿತ್ತು ಸಲಹುವ
ವರ್ಮ ನೀಡಿದ ವಿಶ್ವಬಾಂಧವ ೭
ಇಂದಿರೇಶನು ಮುಂದೆ ಕುಣಿಯುತಿರೆ
ಕುಂದುಂಟೆ ಮಹಿಮಾತಿಶಯಗಳಿಗೆ
ತಂದೆ ಕೌತಕ ವೃಂದ ಮಳೆಗರೆದು
ಕಂದನನು ಪೊರೆದಂದವೇನೆಂಬೆ
ಬಂದು ಸತಿಸಹ ಮಂದಿರಕೆ ಗೋ
ವಿಂದ ಪಾಕವಗೈದು ಬ್ರಾಹ್ಮಣ
ವೃಂದಕಿಕ್ಕುತ ದಾಸರಿಗೆ ಮುದ
ತಂದ ಮಾಧವ ಭಾಗ್ಯಕೆಣೆಯುಂಟೆ ೮
ದೀನ ಹೊಲೆಯಗೆ ಪ್ರಾಣ ಬರಿಸಿದನು
ಏನು ಒಲ್ಲದೆ ಹರಿಯ ಯಜಿಸಿದನು
ಜ್ಞಾನ ಭಾಗ್ಯದಿ ಮುಳುಗಿ ತೇಲಿದನು
ದೀನ ಜನರುದ್ಧಾರ ಮಾಡಿದನು
ದಾನಿ ಜಯಮುನಿ ವಾಯು ಹೃದಯಗ
ಚಿನ್ಮಯ ಶ್ರೀ ಕೃಷ್ಣವಿಠಲನ
ಗಾನ ಸುಧೆಯನು ಬೀರಿಸುತ ವಿ
ಜ್ಞಾನವಿತ್ತ ಮಹೋಪಕಾರಿ ವಿಶೇಷ ಮಹಿಮನ ೯

ಶ್ರೀವಿನಾಯಕ

ಏಕದಂತ ಪಿನಾಕಿ ಸುತ ಜಗ
ದೇಕನಾಥನ ನಾಭಿಮಂದಿರ
ಲೇಖಕಾಗ್ರಣಿ ವಿಷ್ಣುಕೀರ್ತನ ಮಾನಿ ಸಾಧಕನೆ
ಜೋಕೆ ಯಿಂದ ಪರಾಕು ನುಡಿಯುವೆ
ನೂಕಿ ವಿಘ್ನವ ಸಾಕು ನಮ್ಮನು
ನೋಕನೀಯನ ಭಜಿಸಲನುವಾಗೆಂದು ಬೇಡುವೆನು ೧
ಕಾಣೆ ನಿನಗೆಣೆ ಮೂರುಲೋಕದಿ
ಮಾನ್ಯನಾಗಿಹೆ ಸರ್ವರಿಂದಲು
ಶ್ರೀನಿಧಿಯ ದಯದಿಂದ ಪ್ರಾಣಾವೇಶಸಂಯುತನೆ
ಧ್ಯಾನ ಮಾಡುವೆ ವಿಶ್ವತೈಜಸ
ನನ್ನು ಮಹದಾಕಾಶಮಾನಿಯೆ
ಆನತಾಮರಧೇನು ಸಿದ್ಧಿವಿನಾಯಕನೆ ನಮಿಪೆ ೨
ದೈತ್ಯಗಣಗಳಿಗಿತ್ತು ವರವು
ನ್ಮತ್ತರನು ಮಾಡುತಲಿ ಶ್ರೀಪುರು
ಷೋತ್ತಮನ ಸೇವಿಸುವೆ ವಿದ್ಯಾಧೀಶ ಸುಖಭೋಕ್ತ
ಮಾತರಿಶ್ವನ ದಾಸರಿಗೆ ಹರಿ
ಭಕ್ತಿ ವಿಷಯ ವಿರಕ್ತಿ ನೀಡುವೆ
ಶಕ್ತಿ ನೀ ನಾಲ್ಕೆರಡು ಕಲ್ಪದಿ ಸಾಧಿಸಿರೆ ಪದವಿ ೩
ವಕ್ರ ತುಂಡನೆ ನೀಗಿಸೆನ್ನಯ
ವಕ್ರಬುದ್ಧಿ ವಿವೇಕನೀಡುತ
ದಕ್ಕಿಸೈ ಶಾಸ್ತ್ರಾರ್ಥ ಚಯನವ ಚಾರುವಟು ಗಣಪ
ರಕ್ತಗಂಧಪ್ರೀಯ ಸೋಮನ
ಸೊಕ್ಕು ಮುರಿದೆಯೊ ಭೂಪ ಭಕ್ತಿಯ
ಉಕ್ಕಿ ಸೈ ಹರಿಯಲ್ಲಿ ತವಕದಿ ಮಂಗಳಪ್ರದನೆ ೪
ರಂಗ ಮಂದಿರ ದಕ್ಷಿಣಸ್ಥವಿ
ಹಂಗಗಮನನ ರಾಣಿ ರುಕ್ಮಿಣಿ
ಯಂಗದಲಿ ಪುಟ್ಟುತಲಿ ದಿತಿಜಾಂತಕನೆನಿಸಿಕೊಂಡು
ಗಂಗೆಪಿತನನು ಸೇವಿಸಿದೆ ಮಾ
ತಂಗಮುಖ ಮಹಕಾಯ ನಾರೀ
ಸಂಗವರ್ಜಿತ ಬೀರು ಕರುಣಾಪಾಂಗ ದೃಷ್ಟಿಯನು ೫
ಮೊದಲು ಪೊಜೆಯ ನಿನಗೆ ವಿಹಿತವು
ವಿಧಿ ಭವಾದ್ಯರ ಪೊರೆವ ವಿಶ್ವನು
ಮುದದಿ ನೀಡಿಹ ವರವ ಸಿದ್ಧಿಯ ಕೊಡುವೆ ಭಕ್ತರಿಗೆ
ಮದದಿ ಬಿಡುವರಿಗೆಲ್ಲ ಖೇದವೆ
ಒದಗಿ ಬರ್ಪುದು ಬಾಗಿ ಭಜಿಸುವೆ
ಸದಯನಾಗುತ ವಿಷ್ಣು ಭಕ್ತರ ಸಂಗ ನೀಡೆನಗೆ ೬
ವ್ಯಾಪ್ತ ದರ್ಶಿಯೆ ವಂದಿಸುವೆ ಪರ
ಮಾಪ್ತ ಹರಿ ಭಕ್ತರಿಗೆ ನೀನಿಹೆ
ಸೂಕ್ತ ಸಾಧನೆ ಗೈಸು ಖೇಶನೆ ಸೋಮಪಾನಾರ್ಹ
ಆರ್ತನಿಹೆ ಬಹುಮೂಢ ಖರೆವೇ
ದೋಕ್ತಮರ್ಮವ ಭಾಸಗೈಸಿ ಕೃ
ತಾರ್ಥನೆನಿಸೈ ಮೃದ್ಭವ ವಿರೂಪಾಕ್ಷ ತತ್ವೇಶ ೭
ಬರೆದೆ ಭಾರತ ವೇದವ್ಯಾಸರ
ಕರುಣದಿಂದಲಿ ಭಕ್ತಿಯೋಗಿಯೆ
ಶರಣು ಶೇಷಶತಸ್ಥರಿಗೆ ಗುರುವಿರ್ಪೆ ಹೇರಂಭ
ದುರಳ ಗಣಗಳ ಕಾಟತಪ್ಪಿಸಿ
ಹರಿಗೆ ಸಮ್ಮತವಿಲ್ಲ ದೆಡೆಯಲಿ
ಮರುಳುಗೊಲ್ಲದ ಮನವು ನನಗಿರಲೆಂದು ಹರಸೆಂಬೆ ೮
ಜಯಜಯತು ವಿಶ್ವಂಭರ ಪ್ರೀಯ
ಜಯಜಯವು ಮೈನಾಕಿತನಯಗೆ
ಜಯಜಯವು ಶ್ರೀಕೃಷ್ಣವಿಠ್ಠಲನ ದಾಸವರ್ಯನಿಗೆ
ಜಯಜಯವು ಸದ್ವಿದ್ಯೆಕೋಶಗೆ
ಜಯಜಯವು ಮೀನಾಂಕ ಭ್ರಾತೃವೆ
ಜಯಜಯವು ವಿಘ್ನೇಶ ಮಂಗಳಮೂರ್ತಿ ಗಣಪನಿಗೆ ೯

ಶ್ರೀ ನರಸಿಂಹನನ್ನು ತಮ್ಮ ಮನಸ್ಸೆಂಬ
ಆತ್ಮನಿವೇದನೆ
೮೧
ಏನಿದು ಎನ್ನಯ ಬಾಳು-ನರಹರೀ ಪ
ಶ್ರೀನಿಧಿಯನು ಮನಮನೆಯೊಳು ನಿಲಿಸದಾ ಅ.ಪ.
ಕಳೆಯಿತು ಆಯು-ಕಳೆಯಿತು ಕಾಯೊ
ಬೆಳೆಯಿತು ಆಶೆ-ಉಳಿಯಿತು ಸಾಧನ ೧
ಹೊಟ್ಟೆಗೆ ಹಾಕೇ-ಪುಟ್ಟಿದು ದಾಯ್ತೇ
ಪೊಟ್ಟೆಯ ತುಂಬವೆ-ದುಷ್ಟ ಮೃಗಂಗಳು೨
ಇಲ್ಲವು ತಾ ಹರಿ-ಎಲ್ಲವೂ ನೀನೇನೆ
ಇಲ್ಲವು ಯಾಕೇ-ಎಲ್ಲ ಕಾಲದಿ ಸುಖ ೩
ಪುಟ್ಟವುದೇ ಜಗ-ಪುಟ್ಟಿಸ ನಿಲ್ಲದೇ
ಭ್ರಷ್ಠರ ಮತವಿದು-ಅಷ್ಟಕರ್ತನ ಬಿಡೆ ೪
ಮಾನವಾ ತನುವಾ-ಬಾಹೋದೆ ದುರ್ಲಭ
ಮಾನದ ಶ್ರೀ ಕೃಷ್ಣ ವಿಠಲನ ತೋರದಿಹ೫

ಈ ಪದದಲ್ಲಿ ಭಾಗವತದಲ್ಲಿ

ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ
ರಂಗನ ಮಹಿಮೆಯ ಏನೆಂದ್ಹೇಳಲಿ ಪ
ಘನ್ನಸಿರಿವಿಧಿ ಧ್ಯಾನಕೆ ನಿಲುಕದ
ಪೂರ್ಣಾನಂದನ ಅಗಣಿತ ಮಹಿಮೆಯ ಅ
ಎಲ್ಲವ ಬಲ್ಲನು ಎಲ್ಲವ ಮಾಡುವ
ಎಲ್ಲರ ಒಡೆಯನು ಇಲ್ಲದ ಸ್ಥಳವಿಲ್ಲ
ಬಲ್ಲವರಿಲ್ಲವೆ ಫುಲ್ಲನಾಭನ
ನಲ್ಲನು ಲಕ್ಷ್ಮಿಗೆ ಗೊಲ್ಲನು ಆದನೆ ೧
ಅಂಗನೆ ಲಕ್ಷ್ಮಿಯ ಸೊಗಸಿಗೆ ನಿಲುಕದ
ಅಂಗನೆ ಇಲ್ಲದೆ ಮಗನನು ಪಡೆದವ
ಹಿಂಗದ ತಾನೆ ಅಂಗನೆ ಯಾದವ
ರಂಗನ ಗೋಕುಲ ಹೆಂಗಳ ಕೂಡಿದನೆ೨
ತಂದೆಯ ಕೊಂದನು ಕಂದನ ಸಲಹಿದ
ಕಂದನ ಕೊಂದನು ತಂದೆಯ ಸಲಹಿದ
ಬಂಧುಗಳೆನ್ನದೆ ಕೊಂದನು ವಂಶವ
ತಂದೆಯು ಇಲ್ಲದೆ ಕಂದನು ಆಗುವನೇ ೩
ದಾನವ ನೀಡಿದ ದಾನಿಯ ತುಳಿದನು
ಮಾನವ ತೆಗೆದಾ ಹೀನನ ಸಲಹಿದ
ದೀನರ ಸಲಹುವ ದಾನವರಳಿವನು
ಜ್ಞಾನಿಗಮ್ಯನು ಮಾನಸ ಹಂಸನ ೪
ಹಸಿವೆಯ ಅರಿಯದ ಅಸಮದೇವನು
ಸೊಸಿಯು ನೀಡಿದ ಶಾಖವ ತಿಂದನೆ
ಹಸನಾಗಿ ತೇಗುತ ಪಶುಪತಿ ಋಷಿಯನು
ವಶವಾಗಿ ಮಾಡಿದ ಮಾಸದಮಹಿಮನು ೫
ನಾಲ್ಮೊಗನಯ್ಯನು ಸುಳ್ಳನು ಹೇಳುತ
ಕಳ್ಳನು ಆದನು ಗೊಲ್ಲರ ಭಕ್ತರಿಗೆ
ಮೆಲ್ಲನೆ ಕುರುಕುಲ ಎಲ್ಲವ ಸವರಿದ
ಬಲ್ಲಿದ ಕೃಷ್ಣಗ ಇಲ್ಲವೆ ಸಮರಧಿಕ ೬
ಜಗವನು ಮಾಡುವ ಜಗವನು ಪಾಲಿಪ
ಜಗವನು ಅಳಿಸುವ ಮಗುವಾಗಿ ಬಂದನೆ
ಜಗಜೀವ ಭಿನ್ನನು ಜಗದೊಳು ವ್ಯಾಪ್ತನು
ನಗುತಲಿ ಬಾಯಲಿ ಜಗವನು ತೋರಿದನೆ೭
ಯಾಗವ ನಡೆಸಿದ ಯಾಗವ ಕೆಡಿಸಿದ
ಯೋಗವ ಚರಿಸುತ ಯೋಗವ ಬೋಧಿಪನೆ
ಬಾಗುವ ಭಕ್ತರ ನೀಗುವ ಕಲುಷವ
ಆಗಮವಂದಿತ ಸಾಗರಶಯನನೆ೮
ಹತ್ತವತಾರವ ನೆತ್ತಿದ ಮಹಿಮನು
ಉತ್ತಮ ಭಕುತರ ತೆತ್ತಿಗನಾದನೆ
ಬತ್ತಲೆ ಶಿಶುವಾಗಿ ಬಿತ್ತಿದ ಮೋಹವ
ಬೆಸ್ತರಕುವರಿಗೆ ಆತ್ಮಜನಾದವನೆ೯
ಚಕ್ರವಪಿಡಿದವ ನಕ್ರನ ತರಿದವ
ಶಕ್ರನಕಾಯ್ದವ ವಕ್ರೆಯ ಕೂಡಿದನೆ
ರಕ್ಕಸಯವನನ ಠಕ್ಕಿಲಿ ಅಳಿಸುತ
ಭಕ್ತನಪೊರೆದಾ ಯುಕ್ತಗಳೊಡೆಯನೆ ೧೦
ನಾರೆಂದೊದರಿದ ಉರುತರ ಪಾಪಿಯ
ಭರದಿಂಪೊರೆಯೊ ಕರುಣಾಸಾಗರನೆ
ನರಹರಿದೇವನು ಪರಿಪರಿರೂಪನು
ಪರಿಪರಿಲೀಲೆಗೆ ಮೇರೆಯೆ ಇಲ್ಲಾವೇ ೧೧
ವಾರಿಯಲಾಡುವ ಭಾರವ ಹೊರುವಾ
ಕೋರೆಯ ತೀಡುವ ಘೋರವ ತೋರುವನೇ
ವೀರರತರಿಯುವ ಕ್ರೂರರಸವರುವ
ಜಾರನು ಆಗುವ ವೈರಿಗಳ್ವಂಚಿಪ ಏರುವ ತೇಜಿಯನೆ ೧೨
ಅದ್ಬುತ ರೂಪವ ಕದನದಿ ತೋರಿದ
ಬದರಿಯನಿಲಯಗೆ ತುದಿಮೊದಲಿಲ್ಲಾವೆ
ಉದರದಿ ಮಗುವನು ಮುದದಿಂಸಲಹಿದ
ಮುದಮುನಿ ಪ್ರಿಯನು ಹೃದಯದಿ ವಾಸಿಪನೆ ೧೩
ವಿಷವನು ಕುಡಿದಾ ವೃಷಭವಾಹನ
ಅಸುರನ ಭಯದಿಂ ಘಾಸಿಲಿ ಓಡುತಿರೇ
ಮೋಸದಿ ಯುವತಿಯ ವೇಷವ ಧರಿಸುತ
ಅಸುರನ ಅಳಿಸುತ ಪಶುಪತಿ ಸಲಹಿದನೇ ೧೪
ಭರದಿಂ ರಥವೆತ್ತಿ ನರನಂ ಕಾಯ್ದನು
ಧರಣಿಯ ಒತ್ತುತ ಕುರುಪನ ಕೆಡಹಿದನೇ
ಮರೆಸುತ ರವಿಯನು ಪೊರೆದನು ಚೇಲನ
ಸುರವರಪೋಷಕ ಸಿರಿಪತಿ ಚದುರನ ೧೫
ಗಂಗೆಯಪಡೆದ ಮಂಗಳ ಮಹಿಮನು
ಹಿಂಗದೆ ಗೋಪರ ಸಂಗಡ ಆಡಿದನೇ
ತಿಂಗಳ ಬೆಳಕಲಿ ಶೃಂಗರ ಸೊಬಗನು
ಹೆಂಗಳ ಕೂಡುತ ಸಂಗೀತ ಪಾಡಿದನೆ ೧೬
ಕಾಳಿಯ ಫಣೆಯಲಿ ಕಾಳಿಂದೀಶನು
ತಾಳಕೆ ಕುಣಿಯುತ ಕೊಳಲನ್ನೂದಿದನೆ
ಘೂಳಿಗಳಳಿಯುತ ನೀಲಳತಂದವ
ಕಾಳಿಯಮನೆಯಲಿ ಊಳಿಗ ಮಾಡಿದನೇ ೧೭
ನಾರಿಯು ಮೊರೆಯಿಡೆ ಸೀರೆಯನೀಡಿದ
ವಾರಿಜಾಕ್ಷನು ಸೀರೆಯ ಚೋರನೆ
ನೀರೊಳು ಮುಳುಗಿದ ಪೋರರಿಗೆಲ್ಲ
ತೋರಿದ ಜಗವನು ಸೂರಿಗಳೊಡೆಯನೆ ೧೮
ಗರುಡನ ಏರುವ ಧರಣಿಯ ರಮಣನು
ಏರುತಹುಡುಗರ ತುರುಗಳ ಕಾಯ್ದನೆ
ಮಾರನಪಡೆದ ಮುರಹರಕೃಷ್ಣನು
ಗಿರಿಯನು ಎತ್ತುತ ಹರುಷವ ಬೀರಿದನೇ ೧೯
ಶೃತಿಗಳು ಪೊಗಳುವ ವ್ಯಾಪ್ತನ ನಿತ್ಯನ
ನಿತ್ಯದಿ ಸ್ತುತಿಸಲು ಪಾತಕ ಹೋಗುವುದೇ
ಪೂತನಿ ಅಂತಕ ಗತಿ ಮತಿ ಪ್ರೇರಕ
ದಾತನು ಎಂತೆನೆ ಪ್ರೀತಿಲಿ ಸಲಹುವನೆ ೨೦
ಮಜ್ಜಿಗೆ ಕಡೆಯುವ ರಜ್ಜುವಿನಿಂದಲಿ
ಮೂರ್ಜಗನಯ್ಯನು ಕಟ್ಟಿಸಿಕೊಂಡಾನೆ
ಲಜ್ಜೆಯ ಬಿಡುತಲಿ ಗೆಜ್ಜೆಯ ಕಟ್ಟುತ
ಘರ್ಜಿಸಿ ಪಾಡಲು ಹೆಜ್ಜೆಯ ತೋರುವನೆ ೨೧
ದಾಸರ ಪೋಷಿಪ ಶೇಷಗಿರೀಶನ
ವಿಶೇಷವೆ ಬಣ್ಣಿಸೆ ಶೇಷಗೆ ಆಗದೆ
ದೋಷವು ಇಲ್ಲದ ವಾಸುದೇವನೆ
ತೋಷವ ನೀಡುವ ಸಾಸಿರ ನಾಮಕನೆ೨೨
ಜಯಮುನಿ ಅಂತರ ವಾಯುವಿನಲ್ಲಿಹ
ಜಯಕೃಷ್ಣವಿಠಲನು ಜೀಯನೆ ಜಗಕೆಲ್ಲ
ನಯಭಯದಿಂದಲಿ ಹಯಮುಖನೊಲಿಸಲು
ಭಯವನು ಹರಿಸುತ ನ್ಯಾಯದಿ ಪಾಲಿಪನೇ ೨೩

ಅನೇಕ ಮತಗಳ ಪ್ರಕ್ರಿಯೆಗಳನ್ನು
೧೦೭
ತಾತ್ವಿಕವಿವೇಚನೆ
ಏರಿಸಿ ಏರಿಸಿ ಮಾರುತ ಮ್ವತಧ್ವಜ
ಸಾರ ಸುಖಂಗಳ ನಿತ್ಯದಲುಂಬುವ
ಯೋಗ್ಯತೆ ಯುಳ್ಳವರೂ ಪ
ಈರನ ಮತವೇ ಸಾರವು ಶ್ರುತಿಗಳ
ಶೌರಿಯ ಮತವೇ ಈರನ ಮತ ಖರೆ
ದೂಡಿರಿ ಸಂದೇಹ ಅ.ಪ
ಇಲ್ಲವು ಜಗವಿದು ಭ್ರಾಂತಿಯ ಕಲ್ಪನೆ
ಸುಳ್ಳೇ ಎಲ್ಲವು ಬ್ರಹ್ಮನ ಬಿಟ್ಟರೆ ಬ್ರಹ್ಮನೆ ಸತ್ಯವೆನೆ
ಅಲ್ಲವು ನುಡಿಯಿದು ಬ್ರಹ್ಮನು ಕಾರಣ
ಸುಳ್ಳಾಯಿತು ನುಡಿ ಅಲ್ಲವೆ ಯೋಚಿಸಿ ಕೊಡದು ಈ ಮನವು ೧
ಉಂಬುದು ಉಡುವುದು ಕಾಂತೆಯ ಸಂಗವು
ನಂಬಲು ಬೇಡಿರಿ ಸುಳ್ಳೇಯೆಂತೆಂನೆ ಸಾಕ್ಷಿಯು ಒಪ್ಪುವುದೇ
ನಂಬಲನರ್ಹವೆ ಕಾರ್ಯಸುಕಾರಿಯ
ಹಂಬಲ ದುಃಖವು ಸುಖಗಳು ಎಲ್ಲಾ ಅನುಭವ ಸಿದ್ಧ ಖರೆ ೨
ಒಂದೇ ತೆರವಿಹ ವಸ್ತು ದ್ವಯವಿರೆ
ಒಂದನು ಮತ್ತೊಂದೆಂಬುವ ಭ್ರಾಂತಿಯು ಕೊಡುವದೂ
ಎಂದೀ ಒಂಟೀ ಬ್ರಹ್ಮನು ಭ್ರಾಂತಿಯ
ಪೊಂದಿಹ ಹೇಗೆನೆ ಉತ್ತರ ಸಿಕ್ಕದು ಯೋಚಿಸಿ ಕೋವಿದರೆ ೩
ಭ್ರಾಂತಿಯ ಪೆಣ್ಣನು ಕೊಡುತ ತಾಸ್ವಾ
ತಂತ್ರ ವಿಹೀನನು ಆಗುತ ಮಿಡುಕುವ ದೇವನು ಎನಿಸುವನೆ
ಮಂತ್ರಿಸೆ ಬ್ರಹ್ಮನ ನಾನಿಹೆ ನೆಂಬುದ
ಭ್ರಾಂತಿಯ ತೊಲಗುತ ಬ್ರಹ್ಮನು ಆಹನೆ ಮನವ ವಿಚಾರಿಸಿರಿ೪
ನಾನೇ ಬ್ರಹ್ಮನು ಎಂಬೀ ಜ್ಞಾನವು
ತಾನೇ ಬಾರದು ಸಹಜ ವಿದಲವು ಅನುಭವ ವಿರುದ್ಧಾ
ತಾನೇ ಬ್ರಹ್ಮನು ಆಗಿರೆ ಭವದೊಳು
ನಾನಾ ದುಃಖವ ನುಣ್ಣಲು ಬಂದರೆ ಹುಚ್ಚನೆ ಅವಸರಿಯು೫
ಬ್ರಹ್ಮ ದ್ವಯವಿದೆ ಸತ್ಯ ದ್ವಯವಿದೆ
ಬ್ರಹ್ಮನು ಆಹುದು ಕೊನೆ ಮಾತೆಂದರೆ ಬ್ರಹ್ಮನು ಶೂನ್ಯನಿಹ
ಬ್ರಹ್ಮನು ನಿರ್ಗುಣ ನಂದವಿಹೀನನು
ಬ್ರಹ್ಮನ ಗತಿಯೆನೆ ಸರ್ವವಿನಾಶವೆ ಯಾರಿದ ಬಯಸುವರೂ೬
ವ್ಯಕ್ತಿತ್ವವು ತಾನಾಶವು ಆಹುದೆ
ಮುಕ್ತಿಯು ಯೆಂತೆನೆ ಸರ್ವವಿನಾಶಕೆ ಸಾಧನೆಯೇ ಬತವು
ಮುಕ್ತಿಯು ದುಃಖವಿವರ್ಜಿತ ಬರಿಸುಖ
ರಿಕ್ತವು ಬರಿಯೆನೆ ಭವವಿದು ವರವೈ ಬೇಡವು ಆ ಮುಕ್ತಿ೭
ಸತ್ಯವ ನುಡಿವುದು ವೇದವು ಒಂದೆಡೆ
ಮಿಥ್ಯವ ನುಡಿವುದು ಮತ್ತೊಂದೆಡೆಯೆನೆ ಯಾವುದು ಸಿದ್ಧಾಂತ
ಮೊತ್ತವ ನೂಕುತ ಕಿಚ್ಚಡಿ ವೇದಕೆ
ಮೊತ್ತವ ಕೊಳ್ಳುತ ಒಂದೇ ಅರ್ಥವ ಜೋಡಿಸಿ ಇದು ನೀತಿ೮
ಬೌದ್ಧರು ಒಪ್ಪನು ಶ್ರುತಿಗಳ ದೇವನ
ವೇದವ ಒಪ್ಪುವ ಮಾಯಾವಾದಿಯ ಬ್ರಹ್ಮನು ಸೊನ್ನೆಯಿಹ
ವೈದಿಕ ವೇಷದ ಬೌದ್ಧನ ವಾದವೆ
ಶೋಧಿಸಿ ನೋಡಲು ಮತ್ತೇನಿಲ್ಲವು ಚಿಂತಿಸೆ ಸರಿಯಿಷ್ಠೆ೯
ತರತಮ ಬಹುವಿಧ ಭೋಗವ ಮುಕ್ತಿಲಿ
ಇರುವುದು ಸಿದ್ಧವು ಶೃತಿಗಳ ನಂಬಲು ಜೀವರ ಭಿನ್ನತೆಯು
ಸ್ಥಿರವೇ ಆಯಿತು ಇದರಿಂ ಮುಕ್ತಲಿ
ಪರಿ ಪರಿ ಬಗೆತಾ ವಿದಿತವೆ ಜಗದಲಿ ಭೇದವೆ ಸರ್ವತ್ರ೧೦
ನಾಸ್ತಿಕ ವಾದವ ತಳ್ಳಿರಿ ಆಚೆಗೆ
ನಾಸ್ತಿಕ ಬಂದನೆ ತಂದೆಯು ಇಲ್ಲದೆ ಕಾರ್ಯವು ಜಗವಿರಲು
ನಾಥನು ಓರ್ವನು ಇರಬೇಕಲ್ಲವೆ
ಆತನು ನೊಡಿಹ ಜ್ಞಾನಿಗಳಿಲ್ಲವೆ ಪೊಗಳವೆ ಗೋತತಿಯು೧೧
ಪ್ರಕೃತಿ ವಿಕಾರದ ಜಗವಿದು ವಿದಿತವೆ
ವಿಕಲ ವಿಶೇಷದ ಜೀವನು ಹಾಗೆಯೆ ಉಭಯರ ಆಳುವನು
ವಿಕಲ ವಿವರ್ಜಿತ ಸಕಲ ಗುಣಾರ್ಣವ
ಸಕಲ ನಿಯಾಮಕ ಸರ್ವ ಸಮರ್ಥನು ಇರಲೇ ಬೇಕಷ್ಟೆ೧೨
ನಿತ್ಯವು ಈತ್ರಯ ಸಿದ್ಧವು ಆದರೆ
ನಿತ್ಯ ಪರಸ್ಪರ ಸಂಬಂಧ ತ್ರಯ ಜ್ಞಾನವೆ ಪುರುಷಾರ್ಥ
ಉತ್ತಮ ನೊಬ್ಬನು ಅಧಮರು ಇಬ್ಬರು
ಮತ್ತಿವರಲಿ ಹಾಗಧಮನು ಜೀವನು ಚೇತನ ಪ್ರಕೃತಿ ವರ೧೩
ಸರ್ವ ಸ್ವತಂತನು ಒಬ್ಬನೆ ಇರದಿರೆ
ಸರ್ವಾ ಭಾಸವೆ ಜಗವಿದು ಆಹುದು ಪ್ರಭು ದ್ವಯ ಕೂಡುವುದೆ
ಸರ್ವಗ ಶಾಶ್ವತ ಪೂರ್ಣಾ ನಂದನು
ಸರ್ವ ವಿಚಿತ್ರನು ಮುಕ್ತಿದನಿರದಿರೆ ಪ್ರಭು ಅವನೆಂತಾಹ೧೪
ಶುರುಕೊನೆ ಮಧ್ಯವು ಇದ್ದ ದೇವಗೆ
ಬರುವನೆ ಹೊಸ ಹೊಸ ದೇವನು ಪ್ರತಿಪ್ರತಿ ಕಲ್ಪದಿ ಯೋಚಿಸಿರಿ
ಇರದಿರೆ ಸಕಲೈಶ್ವರ್ಯವು ಆತಗೆ
ತರುವನು ನಂದದ ಸೃಷ್ಠಿಯ ಹೇಗವ ವರಸಮರಿಲ್ಲವಗೆ೧೫
ಸುಳ್ಳಿರೆ ಜಗವಿದು ಪಾಲಿಪ ದೊರೆಯದ
ಕಳ್ಳನೆ ಅಲ್ಲವೆ ಅಷ್ಠಕರ್ತುತ್ವವು ಕೂಡುವ ದ್ಹೇಗಿನ್ನು
ಎಲ್ಲಾ ಜಗವಿದು ನಿತ್ಯಾ ನಿತ್ಯವು
ಎಲ್ಲಾ ಸತ್ಯವೆ ಶ್ರುತಿಗಳ ನುಡಿಗಳು ಭೃತ್ಯರು ಜೀವಗಣ೧೬
ನಿತ್ಯವು ಪ್ರಕೃತಿಯು ಜೀವರು ಈಶನು
ಸತ್ಯವು ಇದುಯೆನೆ ಪಂಚಸುಭೇದವು ನಿತ್ಯವೆ ಎಲ್ಲೆಲ್ಲು
ನಿತ್ಯ ಸುಖಂಗಳ ಬಯಸುವ ನಮಗವು
ಹತ್ತವು ಕಾರಣ ಸರ್ವಸ್ವತಂತ್ರನು ದೇವನೆ ಸತ್ಯವಿದು೧೭
ಚೇತನ ಪ್ರಕೃತಿಯೆ ಲಕ್ಷ್ಮಿಯು ತಿಳಿವುದು
ಆತನ ರಾಣಿಯು ನಿತ್ಯಸುಮುಕ್ತಳು ನಿತ್ಯಾವಿಯೋಗಿನಿಯು
ಚೇತನ ನಿಚಯದ ಚೇತನ ಹರಿ ಇಹ
ಆತನೆ ದೊರೆ ಜಗ ಜಂಗಮ ಸ್ಥಾವರ ಸತ್ತಾದಾಯಕನು ೧೮
ದೋಷ ವಿದೂರ ಅಶೇಷ ಗುಣಾರ್ಣವ
ದಾಸ ಪೋಷನಿಜ ಮುಕ್ತಿದ ನಿರದಿರೆ ಭಜಿಸುವದೇಕವನ
ಶ್ರೀಶನು ಬಿಡೆ ಜಡ ಚೇತನ ಚೇಷ್ಠೆಯು
ಲೇಶವು ಸಾಗದು ಸ್ವಾಮಿಯೆಂದು
ನಿಹ ಉಲ್ಲಾಸದಿ ಭಜಿಸುವುದು ೧೯
ಪರಿಮಿತ ಶಕ್ತನು ದೇವನು ಇದ್ದರೆ
ಪರಿಮಿತ ಜೀವರ ತೆರವೇ ಆಹನು ಕಾರಣ ನಿಸ್ಸೀಮ
ಹರಿಗುಣವಗಣಿತ ಸಿಗ ಸಾಕಲ್ಯದಿ
ನಿರುಪಮ ಸುಖಜ್ಞಾನಾತ್ಮಕ ವಿಭುವರ ಅನಾದಿ ಸಿದ್ಧವಿದು ೨೦
ಪ್ರಾಕೃತ ಗುಣಗಣ ವರ್ಜಿತ ದೇವನ
ಪಾಕೃತ ಕರಣವು ನೋಡುವ ದಾಗದು
ಜ್ಞಾನ ಸುದೃಷ್ಠಿಗೆ ಗೋಚರನು
ಸ್ವೀಕೃತ ನಾದರೆ ಜೀವನು ಹರಿಯಿಂ
ತಾಕಿಸಿ ದೃಷ್ಠಿಗೆ ತನ್ನನೆ ತೋರುವ ಭಕ್ತರ ಬಾಂಧವನು ೨೧
ತರತಮ ಜ್ಞಾನದಿ ಗುಣ ಉತ್ಕರ್ಷವು
ಬರುವುದು ಕಾರಣ ತಿಳಿಯುತ ಹರಿಪರ ಮೋಚ್ಛನು ಹೌದೆನ್ನಿ
ಅರಿವುದು ಅತಿಪರಿ ಪಕ್ವದ ಭಕ್ತಿಯ
ತರುವುದು ಕ್ರಮದಲಿ ಸಿದ್ಧಿಸೆ ಭಕ್ತಿಯು ಮಾಧವ ಮೆಚ್ಚುವನು೨೨
ವೇದಗಳಿಂದಲೆ ದೇವನು ವ್ಯಕ್ತನು
ವೇದಗಳಿಂದಲೆ ಧರ್ಮಾಧರ್ಮವಿ ವೇಕವು ಸರಿಯಷÉ್ಠ
ವೇದ ನಿಜಾರ್ಥವೆ ಸಚ್ಛಾಸ್ತ್ರಂಗಳು
ಮೋದವೆ ದೊರಕದು ಬಿಟ್ಟರೆ ಇವುಗಳ ಸಾದರ ಭಜಿಸುವುದು೨೩
ಬಿಂಬನು ಹರಿ ಪ್ರತಿ ಬಿಂಬನು ಜೀವನು
ಬಿಂಬಾಧೀನವು ಪ್ರತಿ ಬಿಂಬನ ಚೇಷ್ಠೆಗಳೆಂತರಿತು
ಉಂಬುತ ಮುದದಿಂ ಸುಖದುಃಖಂಗಳ
ಬಿಂಬಕ್ರಿಯೆಯೆನುಸಂಧಾನವ ಗುರುವಿಂದರಿತು ಸಮರ್ಪಿಸಿ೨೪
ಮೆಚ್ಚುಲು ಮಾಧವದಾವುದಸಾಧ್ಯವು
ಅಚ್ಚುತನೊಲಿಮೆಗೆ ಹೆಚ್ಚಿದುದೇನಿದೆ ಕೊಚ್ಚುತಕಲಿ ಸೊಂಕು
ತಚ್ಛಭಿಮಾನ ಫಲೇಚ್ಛೆಯ ತ್ಯಜಿಸುತ
ಕಚ್ಛಪ ನೊಲಿಮೆಗೆ ವಿಧಿಯ ನಿಷೇಧವ ಮರೆಯದೆ ಗೈಯುತಲಿ೨೫
ಹರಿ ಪರ ಮೋಚ್ಚನು ವರಸಮರಿಲ್ಲವು
ಸಿರಿ ವರ ವಿಧಿಪಿತ ಸೃಷ್ಠ್ಯಾದ್ಯಷ್ಠಸು ಕರ್ತನು ವಿಭುವೆಂದು
ನಿರುಪಮ ನಿಖಿಳಾಗಮ ಪ್ರತಿ ಪಾದ್ಯನು
ಸ್ವರತ ಸ್ವತಂತ್ರನು ಪೂರ್ಣಾನಂದನು ಎನ್ನುತ ಸಾರುತಲಿ೨೬
ಸಾಮನು ಸರ್ವರ ಬಿಂಬನು ಸರ್ವಸು
ನಾಮನು ಸರ್ವಾಧಾರನು ಜಡಜಂಗಮ ವಿಲಕ್ಷಣನು
ಭೂಮನು ಭಕ್ತ ಪ್ರೇಮಿಯು ಸದ್ಗುಣ
ಧಾಮನು ಪೂರ್ಣನು ನಿಜ ಸುಖ ಮುಕ್ತಿದನೆನ್ನುತ ಸಾರುತಲಿ೨೭
ಸಿರಿ ವಿಧಿ ಪರಿಸರ ವಿಪಶಿವ ಪ್ರಮುಖರು
ಪರಿವಾರವು ನಿರವದ್ಯನು ಮುಕ್ತಾ ಮುಕ್ತರ ನಾಯಕನು
ಉರುಗಾಯನ ಜಗದೊಳ ಹೊರವ್ಯಾಪ್ತನು
ಪರಿಮರ ಸ್ವಗತ ಭೇದ ವಿವರ್ಜಿತನೆಂಬುದ ಸಾರುತಲಿ೨೮
ತರತಮ ಪಂಚಸುಭೇದವು ನಿತ್ಯವು
ನಿರುತದಲುಂಬುವ ಸಾರವೆ ದುಃಖ ನಿರ್ಲೇಪನು ಅದ್ಭುತನು
ಅರಿಯರು ಯಾರೂ ಇವನೇ ವಲಿಯದೆ
ಪುರುಷೋತ್ತುಮ ಸಾಕಲ್ಯದವಾಚ್ಯನು
ಎಂದು ಡಂಗುರ ಹೊಡೆಯುತ ೨೯
ಗುರುವಿನ ದ್ವಾರವೆ ಹರಿತಾ ವಲಿಯುವ
ಗುರುವೆನೆ ಮುಖ್ಯದಿ ಮುಖ್ಯ ಪ್ರಾಣನೆ ಸರಿಸಿರಿ ಯೆಂತೆಂದು
ಗುರುಗಳು ಹಿರಿಯರು ಎಲ್ಲಾ ಕ್ರಮದಲಿ
ಮೂರೋಂದು ತ್ಯಾಗವ ಘಳಿಸದೆಲೆಂದಿಗು
ಮಧ್ವರಿಗೊಂದಿಸಿ ಮುದದಿ ೩೦
ಅನುಭವವಿಲ್ಲದ ಜ್ಞಾನವು ವಣವಣ
ಮನದೊಳು ಗುಣಿಸಿರಿ ತಿಳಿವಿನ ತಿರುಳನು
ಸಾಧನೆ ಇದು ಖರೆಯ
ಚಿನುಮಯ ನೊಲಿಸಲ್ ಮನೆಧನ ಬೇಡವು
ತನುಮನೆ ವಿಷಯಗಳಿಂದಲೆ ಪೂಜಿಪ ಕ್ರಮದಿಂಯಜಿಸುತ ೩೧
ಕಲಿಯುಗವಿದು ವರ ಸುಲಭದಿ ಸಾಧನೆ
ವಲಿಯುವ ಬೇಗನೆ ನಾಮ ಸ್ಮರಣೆಗೆ ಭಜಿಸಿರಿ ಹರಿನಾಮ
ವಳದಾರಿಯು ಸರಿ ಕ್ರಮದಿಂ ಪಾಡಲು
ಮುಳುಗುತ ಭಕ್ತಿಯ ಕಡಲೊಳ್ ನಿಜಹರಿ ದಾಸರು ದೀಕ್ಷೆಯಲಿ೩೨
ಕವಿಗುರು ರಾಜರ ಚರಣದಿ ಬಾಗುತ
ಪವನ ಮತಾಂಬುಧಿ ಸೋಮನು ಜಯಮುನಿ
ಹೃದಯಗ ವಾಯುವಲಿ
ಅವಿರತ ನಲಿಯುವ ಶ್ರೀ ಕೃಷ್ಣವಿಠಲನು
ತವಕದಿ ವಲಿಯುವ ಗ್ರಹಿಸಲ್ ಈ ಪದ ಜಯ ಜಯವೆನ್ನುತ೩೩

ಅನೇಕ ಸಂದರ್ಭಗಳನ್ನು ಸೂಚಿಸಿ

ಒಲ್ಲೆ ಒಲ್ಲೆ ಸ್ವಾಮಿ ಒಲ್ಲೆ ಒಲ್ಲೆ ಪ
ವಲ್ಲಭ ಶ್ರೀ ಕೃಷ್ಣವಿಠಲನಲ್ಲದೆ
ಬೇರೆ ವಲ್ಲಭನನು ನಾ ಅ.ಪ.
ಹರಿ ನಿಮ್ಮ ಗುಣಗಳ ಪಾಡದೆ ಇರಲೊಲ್ಲೆ
ಚರಿತೆ ನಿಮ್ಮದು ನಿತ್ಯ ಕೇಳದೆ ಇರಲೊಲ್ಲೆ
ಚರಣ ಪೂಜೆಯನಿರುತ ಮಾಡದೆ ಇರಲೊಲ್ಲೆ
ದೊರೆಯೆ ನಿಮ್ಮನು ಬಿಟ್ಟು ಬೇಡೆ ಅನ್ಯರ ನಾನು ೧
ದುಷ್ಟಜನರ ಸಂಗ ಎಂದೆಂದಿಗುವಲ್ಲೆ
ಶಿಷ್ಟಜನರ ಸಂಗ ಎಂದಿಗು ಬಿಡಲೊಲ್ಲೆ
ಅಷ್ಟಕರ್ತನು ಜಗಕೆ ವಿಷ್ಣು ಒಬ್ಬನೆ ಬಲ್ಲೆ
ಕಷ್ಟ ನೀಡುವ ಭವವ ಎಂದೆಂದಿಗು ಮುಂದೆ ೨
ದುರಿತ ರಾಶಿಯ ಮತ್ತೆ ಮಾಡಲು ನಾನೊಲ್ಲೆ
ಅರಿಷಡ್ವರ್ಗಂಗಳ ಜಯಿಸದೆ ಬಿಡಲೊಲ್ಲೆ
ಗುರುಪಾದ ಪದ್ಮಗಳ ಒಲೆಸದೆ ಬಿಡಲೊಲ್ಲೆ
ಪರನಾರಿಯರ ಸಂಗ ಎಂದೆಂದಿಗು ಒಲ್ಲೆ ೩
ಉತ್ತಮೋತ್ತುಮ ಕೃಷ್ಣಸಾರದೆ ಇರಲೊಲ್ಲೆ
ಭೃತ್ಯ ನಿನ್ನವನೆಂದು ಸಾರದೆ ಇರಲೊಲ್ಲೆ
ನಿತ್ಯ ಶೃತಿಯ ಆಜ್ಞೆ ನಡಿಸದೆ ಬಿಡಲೊಲ್ಲೆ
ಸುತ್ತಿ ಕಾಯುವೆ ನಮ್ಮ ಬಲ್ಲೆಬಲ್ಲೆನು ಸತ್ಯ ೪
“ಶ್ರೀ ಕೃಷ್ಣವಿಠಲ”ನೆ ಪರಮಾಪ್ತ ಸರಿಬಲ್ಲೆ
ಏಕೋವಿಷ್ಣುವು ವಾಕು ಸತ್ಯವೆಂಬುದ ಬಲ್ಲೆ
ಏಕ ಭಕ್ತಿಯ ಬಿಟ್ಟು ಏನೇನು ನಾನೊಲ್ಲೆ
ಶ್ರೀಕಾಂತನನು ಬಿಟ್ಟು ಕ್ಷಣವು ಜೀವಿಸಲೊಲ್ಲೆ೫

ಕಂಡ ಕಂಡವರ ಸೇವೆಯು
೯೨
ಕಂಡವರ ತೊಂಡ ನೆನಿಸ ಬೇಡ ಹರಿಯೇ ಪ
ಪುಂಡರೀಕಾಕ್ಷನೆ ಕಾವ ತೊಂಡರ ತೊಂಡನೆನಿಸೋ ಅ.ಪ.
ಹೆಂಡತಿಯ ಬಿಡಬಹುದು-ಕಾಡಿಗ್ಹೋಗಲಿ ಬಹುದು
ಬಿಡದೆ ಜಪಿಸಲಿ ಬಹುದು-ಕಟುತಪವ ಮಾಡಲಿಬಹುದು
ಒಡೆಯ ಕೃಷ್ಣನೆ ನಿನ್ನ ಅಡಿಯ ಕಾಡಲಿಬಹುದು
ಕಂಡವರ ಊಳಿಗದಿ ಕೀರ್ತಿ ಪಡೆಯಲಾಗದೊ ದೇವ ೧
ಆಶೆಯ ತೊರೆದು ನಿಜ ದಾಸನಾಗಲಿಬಹುದು
ದೇಶ ದೇಶವ ತಿರುಗಿ ಕಾಸುಗಳಿಸಲಬಹುದು
ಕೇಸರಿಯ ಹಿಡಿತಂದು ಪಾಶದಲಿ ಕಟ್ಟಬಹುದು
ಶ್ರೀಶನಿನಗಲ್ಲದವರ ಸಂಗ ಏಸೇಸು ಜನ್ಮಕ್ಕು ಬ್ಯಾಡೋ ೨
ಹೀನ ಜನರಾ ಸಂಗ ಮಾನವಂತರಿಗಲ್ಲ
ದೀನಜನಮಂದಾರ ಕೊಡಬೇಡ ಇದು ಎನಗೇ
ಮಾನಾಭಿಮಾನವನು ನಿನಗೆ ಒಪ್ಪಿಸಿದೆನೋ
ಇನ್ನಾದರೂ ಸಲಹೋ ಶ್ರೀನಿವಾಸ ಕೃಷ್ಣವಿಠ್ಠಲನೆ ಜೀಯಾ ೩

ಶ್ರೀ ಲಕ್ಷ್ಮೀದೇವಿಯನ್ನು
೫೫
ಕಾಮಾನ ಜನನಿಯೆ ಸೋಮಾನ ಸೋದರಿ
ಸಾಮಾಜ ವರದನ ಪ್ರೇಮವ ಕೊಡಿಸಮ್ಮ ಪ
ನೇಮಾದಿಂದಲಿ ಹರಿ ನಾಮಾವ ನುಡಿಸುತ
ತಾಮಾಸ ಓಡುವಂತೆ ನೀಮಾಡಬೇಕಮ್ಮ ಅ.ಪ
ನಿತ್ಯ ತೃಪ್ತಳೆನಿನ್ನ ನಿತ್ಯದಿ ಬೇಡಿಕೊಂಬೆ
ಭೃತ್ಯರೊಳಗೆ ಎನ್ನ ಎತ್ತಿ ಸೇರಿಸೆ ತಾಯೆ ||
ಮತ್ತನಾಗದೆ ಭವದಿ ಉತ್ತುಮನೆನಿಸುತ
ಆತ್ಮದಿ ಹರಿ ತೋರಿ ಕೃತಕೃತ್ಯನೆನಿಸಮ್ಮ ೧
ದೇಶಕಾಲದಿನೀನು ಶ್ರೀಶಗೆ ಸಮಳಮ್ಮ
ನಾಶಮಾಡುತ ದೋಷ ದಾಸಾನು ಎನಿಸಮ್ಮ ||
ಶ್ವಾಸಾಶೇಷರನೆಲ್ಲ ಲೇಸಾಗಿ ಆಳುವಳೆ
ವಾಸುದೇವನಲ್ಲಿ ಆಸೇಯ ನೀಡಮ್ಮ ೨
ಶೃತಿಯಲ್ಲಿ ನೀನಿದ್ದು ಸ್ತುತಿಸೀ ಶ್ರೀಹರಿಯನ್ನ
ಮತ್ತೆಸೃಜಿಸುವಂತೆ ಎತ್ತಿಗಾನವ ಮಾಳ್ವೆ ||
ಎತ್ತ ನೋಡಲು ಬಲು ಕತ್ತಲೆಕಣಿ ತಾಯೆ
ಸತ್ಯವ ಬಿಡದಂತೆ ಹತ್ತೀಸೆ ಹರಿದಾರಿ೩
ಹರಿಯಂತೆ ಅವತಾರ ನಿರುತನೀ ಮಾಡುತ
ಪರಿ ಪರಿ ರೂಪದಿಂದ ಪರಿಚರಿಯ ನೀಮಾಳ್ವೆ ||
ಸರ್ವೇಶ ಹರಿಯಿಂದ ಸರ್ವಕಾಲದಿ ಕೂಡಿ
ಸರ್ವಕಾರ್ಯವ ಮಾಳ್ವೆ ಸರಿಯಾರೆ ನಿನಗಮ್ಮಾ ೪
ಅಕ್ಷರ ರೂಪಳೆ ಈಕ್ಷಿಸುಕರುಣದಿಂದ
ತ್ರ್ಯಕ್ಷೇಶ ವಿಧಿಮಾತೆ ಅಕ್ಷರನರ್ಧಾಂಗಿ ||
ಕುಕ್ಷೀಲಿ ಬ್ರಹ್ಮಾಂಡ ಲಕ್ಷ್ಯವಿಲ್ಲದೆ ಪಡೆದಿ
ಅಕ್ಷಯ ಮಾಡಿ ಜ್ಞಾನ ಮೋಕ್ಷಾವ ಕೊಡಿಸಮ್ಮಾ೫
ವಿಕಾರ ಶೂನ್ಯಳೆ ಪ್ರಕೃತಿಗೆ ಮಾನಿಯೆ
ನೀಕಾರ್ಯ ಕಾರಣಕ್ಕೆ ಮುಖ್ಯ ಹೇತುವೆ ತಾಯೆ ||
ಪ್ರಕೃತಿ ಬಂಧವ ಬಿಡಿಸಿ ಸಾಕಾರ ಮೂರುತಿ
ಲೋಕನಾಯಕ ಹರಿಯ ಏಕಾಂತದಲಿ ತೋರೆ೬
ತ್ರಿಗುಣ ಕಾರ್ಯಗಳೆಲ್ಲ ಸುಗುಣಿ ನೀ ಮಾಡುತ
ನಿಗಮ ವೇದ್ಯನ ನಿತ್ಯ ಪೊಗಳಿ ಹಿಗ್ಗುವೆ ಮಾತೆ ||
ಜಗವೆಲ್ಲ ಕುಣಿಸುತ ನಗುತಲೀಲೆಯಿಂದ
ನಿಗಮಾದಿಗಳ ಮೀರಿ ಬಗೆ ಬಗೆ ಲೀಲೆ ಕಾಂಬೆ ೭
ನಿತ್ಯಾ ಮುಕ್ತಳು ನೀನು ಪ್ರೀತಿಲಿ ನಮಿಪೆನೆ
ಮಾತುಲಾಲಿಸಿ ಎನ್ನ ನಿತ್ಯದಿ ಸಲಹೆಮ್ಮ ||
ಹೆತ್ತ ತಾಯಿಯು ನೀನು ಎತ್ತಿ ಪೊರೆಯದಿರೆ
ಎತ್ತ ಪೋಗಲಿ ನಾನು ಉತ್ತುಮರಮೆ ಹೇಳೆ ೮
ಸಾಗರನ ಮಗಳೆ ಆಗಮರೂಪಳೆ
ಹೋಗೀಸುಲಿಂಗವ ಸಾಗಿಸಿಗುಣಕಾರ್ಯ ||
ಭಾಗ್ಯ ಸ್ವರೂಪಳೆ ಬಾಗಿ ನಮಿಸುವೆ
ಆಗು ಮಾಡಿಸು ಹರಿ ಗೀತೆಗಳೆನ್ನಿಂದ ೯
ಮರುತ ದೇವನ ಪಿತನ ಉರದಲಿ ವಾಸಿಪಳೆ
ಹರಿಗುರು ಚರಣದಿ ನಿರುತ ಭಕ್ತಿಯ ಕೊಟ್ಟು ||
ವಾರಿಜನಾಭನಲ್ಲಿ ಧಾರೆ ಧಾರೆಯ ಭಕ್ತಿ
ಬೀರೀಕರುಣಿಸು ಸಾರಸ ದಳನಯನೇ ೧೦
ಮಾತು ಮಾತಿಗೆ ನಮ್ಮ ಖ್ಯಾತಾಜಯತೀರ್ಥ
ವಾತನೊಳ್ವಾಸಿಪ ನವನೀತ ಧರಿಸೀಹ ||
ಶ್ರೀ ತಾಂಡವ ಕೃಷ್ಣ ವಿಠಲರಾಯನ ಸ್ಮರಣೆ
ಆತ್ಮಾದೊಳಗೆ ನಿಂತು ಖ್ಯಾತೀಲಿನಡಿಸಮ್ಮಾ ೧೧

ಪ್ರಾಸಬದ್ಧವಾದ
ಶ್ರೀ ಲಕ್ಷ್ಮೀ ದೇವಿಯರು
೫೪
ಕಾಯೆ_ಕಾಯೆ _ ಶ್ರೀ ಹರಿಜಾಯೆ ಪ
ಕಾಯೆ ಕಾಯೆ ಸಂತೋಷವೀಯೆ ಮೂರು ಜಗ
ಕಾಯೆ ವಿಷ್ಣುಮನ ಛಾಯೆ ಭಕುತಿವರವೀಯೆ
ನಿತ್ಯ ಎಳೆಕಾಯೆ ಸುಜನಗಣ ಧ್ಯೇಯೆ
ನಿಗಮತತಿಗೇಯೆ ಮಾಯೆ ಅ.ಪ.
ಶರಣು-ಶರಣು-ಶರಣು ಗುಣಭರಣಿ
ಶರಣು ಭವ ತರಣೀ ಶರಣು ತ್ರಿಗುಣ ಧಣಿ
ಶರಣು ಸೊಬಗು ಖಣಿ ಶರಣು ನಿಗಮಧ್ವನಿ
ಶರಣು ಹರಿಯ ಮನಿ ಶರಣು ಸುಖದ ಮಣಿ
ಶರಣುಜಯ ಸಿರಿ ೧
ಅಂಬೇ-ಅಂಬೇ-ಅಂಬೇ-ಅಂಬೇ ನಿರುತಹರಿ
ಕಾಂಬೆ ಉರದಲಿಹೆ ಎಂಬೆ ಪಡೆದೆ ಜಗ-
ವೆಂಬೆ ಭಕುತಿ ಜನಸ್ತಂಭೆ ಅಮಿತಶಶಿ
ಬಿಂಬೆ ಗೈವೆ ವಿಧಿ ಯಿಂಬೆ ತ್ರಿಗುಣ ಹರಿ
ಸೆಂಬೆ ನಮಿಪೆ ಕೃತಿ ೨
ರಾಣೀ_ರಾಣೀ-ಶ್ರೀ ಅನಿರುದ್ಧನ ರಾಣಿ ಲಕ್ಷಣ
ಶ್ರೇಣಿ ಪಂಕಜಪಾಣಿ ಭುಜಂಗ ಸು-
ವೇಣಿ ನಿತ್ಯ ಕಲ್ಯಾಣಿ ಮಂಗಳವಾಣಿ ದುಃಖವ
ಕಾಣಿ ನೀ ಬಹು ಜಾಣಿ ವಲಿದಿಹ ಹರಿ ೩
ಅಮ್ಮ-ಅಮ್ಮ-ನೀಜಗದಮ್ಮ ಅಮ್ಮ ಕಣ್ ತೆಗೆಯಮ್ಮ
ಸಿರಿಸುರಿಸಮ್ಮ ಉರಿಹರಿಸಮ್ಮ ದಯಮಾಡಮ್ಮ
ವಿಧಿಗುರುವಮ್ಮ ಭುಜಿಸೊಸೆಯಮ್ಮ
ಹರಿಗ್ಹೇಳಮ್ಮ ದಕ್ಷಣೆ ೪
ಶೀಲೆ-ಶೀಲೆ- ನಿರುತ ಹರಿಯ ಜಪ ಶೀಲೆ ಕುಂಕುಮ
ಫಾಲೇ ಕಮಲಕಪೋಲೆ ಥಳ ಥಳ ವಾಲೆ ಇಟ್ಟಹೆ
ಬಾಲೇ, ಚಂಚಲ ಲೀಲೆ ನತಜನ ಪಾಲೆ
ಖಳರೆದೆಶೂಲೆ ಹರಿಗಿಹೆಮಾಲೆ ೫
ಹೇತು-ಹೇತು-ಕಾರ್ಯ ಕಾರಣ ನೀ
ಒಡವೆಗಳಾಗಿ ವಸ್ತ್ರಗಳಾಗಿ ಶಸ್ತ್ರಗಳಾಗಿ
ಚರಣದಿ ಬಾಗಿ ಹರಿಗನುವಾಗಿ ಸಾಧಕಳಾಗಿ
ಧೊರೆವಶಳಾಗಿ ಗಂಡನ ಭಜಿಪೆ ೬
ಇಲ್ಲ-ಇಲ್ಲ-ಹರಿಯಗಲಿಕೆ ನಿನಗಿಲ್ಲ
ಕ್ಲೇಶವು ಇಲ್ಲ ದೋಷಗಳಿಲ್ಲ ಪಾಶಗಳಿಲ್ಲ ಹರಿ ಬಿಡನಲ್ಲ
ಸರಿಯಾರಿಲ್ಲ ಮುಕ್ತರಿಗೆಲ್ಲ
ಒಡೆಯಳೆ ಚೆಲ್ವೆ ನೀ ಆಕಾಶೆ೭
ನೀರೆ-ನೀರೆ-ಹರಿ ಸಮಾಸಮನೀರೆ
ಘನ ಗಂಭೀರೆ-ಶ್ರುತಿಗಳ ಮೇರೆ ಮೀರುತ
ಧೀರೆ ಹರಿಮನಸಾರೆ-ಪೊಗಳುವೆ ಬೇರೆ
ಸಾಟಿಯು ಯಾರೆ-ಹರಿಪುರ ತೋರೆ ಕರುಣದಿ ೮
ಕಂದ-ಕಂದ-ನಾನಿಹೆ ನಿನ್ನ
ನಂದದ ಶ್ರೀ ಕೃಷ್ಣವಿಠಲನ ರಾಣಿ ಇಂದಿರೆಸಲಹೆ
ಕುಂದುಗಳಳಿಸೆ ತಂದೆಯ ತೋರೆ
ಚೆಂದದ ಭಕುತಿ ಮುಂದಕೆ ತಂದೂ ೯

ಕೃಷ್ಣರಾಮಾವತಾರಗಳ ಲೀಲಾ
ಅಶ್ವಧಾಟೀ
೧೦
ಕಾಯೊ ಕೃಷ್ಣನೆ ಕಾಯೊ ಕೃಷ್ಣನೆ ಕಾಯೊ
ಕೃಷ್ಣನೆ ಎಮ್ಮನು ಪ
ಮಾಯ ರಮಣನೆ ಕಾಯ ಒಪ್ಪಿಸಿ ಜೀಯ
ನಂಬಿದೆ ನಿನ್ನನುಅ.ಪ
ಸಾರ ಮಾರ್ಗದ ದಾರಿ ಕಾಣದೆ ಸಾರಿ ಬೇಡುವೆ ನಿನ್ನನು
ನೀರಜಾಕ್ಷನೆ ಘೋರಭವದಿ ಪಾರುಗಾಣಿಸೊ ಎಮ್ಮನು ೧
ದುಷ್ಟನಾಶಕ ಶಿಷ್ಟಪಾಲಕ ಶ್ರೇಷ್ಠಮೂರುತಿದೇವನೆ
ಕಷ್ಟಓಡಿಸಿ ಇಷ್ಟಪಾಲಿಸೊ ಅಷ್ಟಕರ್ತನೆ ಬೇಗನೆ ೨
ವೇದಗೋಚರ ಯಾದವೇಂದ್ರ ಸುಧಾಮ ರಕ್ಷಕ ಕೃಷ್ಣನೆ
ನಂದಗೋಪ ಸುಕಂದ ನಾಮಕ ರಾಧೆವಂದಿತ ಚರಣನೆ ೩
ಗೋಪಿ ಮೋಹಕ ಪಾಪಮೋಚಕ ತಾಪಸ ಪ್ರಿಯರೂಪನೆ
ಕೋಪಮಾಡದೆ ಪಾಪಿ ಎನಗೆ ರೂಪ ತೋರಿಸೊ ಬೇಗನೆ ೪
ದೋಷದೂರ ವಿನಾಶವರ್ಜಿತ ಕೇಶಿ ಸೂದನ ಶೂರನೆ
ಆಶೆ ಬಿಡಿಸಿ ಕ್ಲೇಶ ಓಡಿಸಿ ದಾಸನೆನಿಸೊ ಬಿಂಬನೆ ೫
ವೇಣುನಾದ ವಿನೋದ ಸುಂದರ ಜಾಣೆ ರುಕ್ಮಿಣಿ ಅರಸನೆ
ಸಾನುರಾಗದಿ ಜ್ಞಾನದಂಬಕ ದಾನ ಮಾಡೊ ದಾನಿಯೆ೬
ಶ್ಯಾಮಸುಂದರ ಮಾಮನೋಹರ ಭೀಮ ವಿಕ್ರಮ ಭೂತಿಯೆ
ಸಾಮಸನ್ನುತ ರಾಮಚಂದಿರ ಕಾಮಜನಕನೆ ಕಲ್ಕಿಯೆ ೭
ಸಿಂಧು ಶಯನನೇ ಬಂಧಮೋಚಕ ಮಂದರಾದ್ರಿಧಾರನೇ
ಬಿಂಧುಮಾಧವ ಮಂದಹಾಸದ ಸುಂದರಾಂಗ ರೂಪನೆ೮
ಲಕ್ಷ್ಮಣಾಗ್ರಜ ಪಕ್ಷಿವಾಹನ ಅಕ್ಷರೇಡ್ಯ ಸುಲಕ್ಷಣ
ಮೋಕ್ಷದಾಯಕ ಲಕ್ಷ್ಮಿರಮಣನೆ ರಕ್ಷಿಸಯ್ಯ ಸರ್ವದಾ ೯
ವಾರಿಜನೇತ್ರ ವಾರಿಜನಾಭ ವಾರಿಜಾಸನ ವಂದ್ಯನೆ
ವಾರಿಮಂದಿರ ಸೂರಿ ಶೇಖರ ಮೇರೆಗಾಣದ ಮಹಿಮನೆ ೧೦
ಸರ್ವರಕ್ಷಕ ಸರ್ವಭಕ್ಷಕ ಸರ್ವಸಾಕ್ಷಿಯೆ ಸರ್ವನೆ
ಸರ್ವವ್ಯಾಪ್ತನೆ ಸರ್ವವಂದ್ಯನೆ ಸರ್ವವಾಚ್ಯದ ಈಶನೆ ೧೧
ಪೂರ್ಣಗುಣನೆ ಪೂರ್ಣಶಕ್ತನೆ ಪೂರ್ಣಭೋಧರ ಪ್ರಿಯನೆ
ಪೂರ್ಣರೂಪನೆ ಪೂರ್ಣಪೂರ್ಣನೆ ಪೂರ್ಣ ತಂತ್ರ ಸ್ವತಂತ್ರನೆ೧೨
ಬಾಲ ಲೀಲ ಕಲಾವಿಭೂಷಿತ ಲೀಲ ಮಾನುಷ ವಿಗ್ರಹ
ಲೋಲ ಸುಂದರ ಜಾಲ ಮೋಹಕ ಕಾಲನಾಮಕ ಪುರುಷ ೧೩
ಕಾಳಿಮರ್ಧನ ಕಾಳಿವರದ ಕಾಳಿಯನುಜ ಕೇವಲ
ಮೌಳಿಯಿಂದಲಿ ಕಾಲಿಗೆರಗುವೆ ಪಾಲಿಸಯ್ಯ ಈಗಲೇ ೧೪
ಶಕಟ ಭಂಜನ ನಿಕಟ ಸರ್ವರ ಕುಟಿಲ ವರ್ಜಿತ ಶ್ರೇಷ್ಟನೆ
ನಕ್ರತರಿದ ಚಕ್ರಪಾಣಿಯೆ ಫಕ್ಕನೊಲಿಯೊ ಶುಕ್ರನೇ ೧೫
ವಿಪ್ರಸತಿಯರ ಕ್ಷಿಪ್ರದಿಂದಲಿ ತಪ್ಪದೆ ಪೊರೆದಾತನೆ
ತಪ್ಪುನೋಡದೆ ಒಪ್ಪಿಕೊಂಡು ಅಪ್ಪ ಒಲಿಯೊ ವೆಂಕಟ ೧೬
ಪಾಂಡವ ಪ್ರಿಯ ಪುಂಡಮರ್ದನ ಅಂಡಜಾಧಿಪ ಅಂಡಗ
ಭಂಡನೆನಿಸದೆ ತೊಂಡನೆನಿಸೊ ಪಾಂಡುರಂಗ ವಿಠ್ಠಲಾ ೧೭
ಸೋಮಶೇಖರ ಭಾಮೆ ಪೂಜಿತ ಕಾಮಿತ ಪ್ರದಸಾಮನೆ
ತಾಮಸಾರಿಯ ನೇಮದಿಂದಲಿ ನಾಮನುಡಿಸೊ ಶೀಲನೆ ೧೮
ಸೋಮಕಾಂತಕ ಭಾಮ ರೂಪದಿ ಸೋಮಹಂಚಿದ ಜಾಣನೆ
ವಾಮದೇವಗೆ ಭ್ರಮೆಯ ಮಾಡಿದ ಶ್ರೀಮನೋಹರವಾಮನ ೧೯
ಇಂದ್ರಗೊಲಿದ ವೀಂದ್ರವಾಹನ ನಂದಗೋಕುಲ ಚಂದ್ರನೆ
ಬಂಧನಪ್ರದ ಬಂಧು ಸರ್ವರ ತಂದೆ ಕಾಯೋ ಬೇಗನೆ ೨೦
ವಿಜಯಸಾರಥಿ ವೃಜಿಜನಾರ್ದನ ಅಜಭವಾದಿ ಪೂಜಿತ
ತ್ರಿಜಗವಂದಿತ ಭುಜಗಶಯನನೆ ಅಜಿತ ಶಾಶ್ವತ ವಿಷ್ಣುವೆ ೨೧
ಏಕನಾಯಕ ನಾಕಮಂದಿರ ಶ್ರೀ ಕಳತ್ರ ಅನೀಕನೆ
ವಾಕು ಲಾಲಿಸು ನೂಕುಭವವನು ಏಕರೀತಿಲಿಮೆರೆವನೆ ೨೨
ಜೀವ ಪ್ರೇರಕ ಜೀವಭಾಸರ ಜೀವರಾಶ್ರಯ ಭಿನ್ನನೇ
ದೇವದೇವನೆ ಕಾವುದೆಮ್ಮನು ಕೋವಿದಪ್ರಿಯ ಕಪಿಲನೆ ೨೩
ಅನ್ನನಾಮಕ ಅನ್ನದಾಯಕ ಅನ್ನುಉಂಬುವ ಅತಿಥಿಯೆ
ಮಾನ್ಯಮಾನದ ಜ್ಞಾನಿಗಮ್ಯನೆ ಬೆನ್ನುಬಿದ್ದೆ ಅನಂತನೆ ೨೪
ಸಾರ ಉಣ್ಣುವ ಗಾರು ಉಣ್ಣದ ಮಾರುತೀಶನೆ ಸ್ವರತನೆ
ಧೀರ ಜಯಮುನಿ ವಾಯು ಅಂತರ ಮೆರೆವ ಸಿರಿಪತಿ
ಕೃಷ್ಣವಿಠಲನೆ ಬಿಂಬನೆ ೨೫

ಭವಸಾಗರದಲ್ಲಿ ತೊಳಲುತ್ತಿರುವವನಿಗೆ
೧೧
ಕೃಷ್ಣ ಕೃಷ್ಣ ಬೇಡಿಕೊಂಡೆ ಕೃಪೆಯ ಪಾಲಿಸೋ ಪ
ಎಷ್ಟು ಎಷ್ಟು ಕೇಳಿಕೊಂಡೆ ಎಳ್ಳಷ್ಟು ದಯಬಾರದೇ ಅ.ಪ
ಜನನ ಮರಣ ಹೊಳೆಯ ಸೇರಿ ಮುಳುಗಿ ಮುಳುಗಿ
ಬಳಲುತಿಹೆನು
ಧಣಿಯು ನೀನು ನೋಡುವಾರೆ ಮುಣಿದು ಬೇಡ್ವೆ
ಎತ್ತೋ ಕರುಣಿ ೧
ನಿನ್ನ ಬಿಟ್ಟು ಇರುವೆನೆನೋ ನಿನ್ನದಯದಿ ನನ್ನ ಬದುಕು
ನಿನ್ನ ಮರೆತೆ ತಪ್ಪುಕ್ಷಮಿಸು ನಿನ್ನ ದಾಸ ಪ್ರಾಣರಾಣೆ೨
ಈಗ ಆಗ ಎಂದು ಹೇಳಿ ಭೋಗದಲ್ಲೇ ರತಿಯ ನೀಡಿ
ನಾಗಶಯನ ನಾಮಸುಧೆಯ ಬೇಗ ಕೊಡದೆ ಬಿಡುವರೇನೋ೩
ದೊಷಿನಾನು ಸತ್ಯದೇವ ದೋಷರೂರ ನಿನಗೆ ಶರಣು
ದಾಸನೆಂದು ಭಕ್ತಿಯಿತ್ತು ನಾಶಮಾಡೋ ಕುಂದುಗಳ ನೀ೪
ಲೋಕವೆಲ್ಲ ಪೊರೆದ ನಿನಗೆ ಸಾಕೆ ಎನ್ನ ಕಷ್ಟವೇನೋ
ನೂಕಬೇಡ ದೇವ ಎನ್ನ ನಾಕ ದೊರೆಯೆ ಪುಣ್ಯಶ್ಲೋಕ ೫
ಬರಿಯ ಶುಂಠ ನಾನು ಹರಿಯೆ ಅರಿಯೆದಾರಿ ವಲಿಸೆನಿನ್ನ
ಶರಣ ಜನರ ಬಿಡನು ಎಂಬ ಬಿರುದೊಂದೆ ಧೈರ್ಯವೆನಗೆ ೬
ಶಿರಿಯರಮಣ “ಕೃಷ್ಣವಿಠಲ” ಶರಣು ಜ್ಞಾನ ಸುಖದ
ಚರಣವೆರಡು ತೋರಿಸೆನಗೆ ನಿರುತ ಹೃದಯ ಕಮಲದಲ್ಲಿ ೭

ಕೃಷ್ಣನನ್ನು ಬಿಟ್ಟರೆ
೧೨
ಕೆಟ್ಟೆ ಕೆಟ್ಟೆ ಕೆಟ್ಟೆ ಕೃಷ್ಣ ದೃಷ್ಟಿಕೊಟ್ಟು ಕೈಯ ಪಿಡಿಯೋ ಪ
ಇಷ್ಟ ಮೂರ್ತಿ ಬಿಟ್ಟರೆನ್ನ ಕಷ್ಟಬಿಡಿಸೆಯಾರ ಬೇಡಲೋ ಅ.ಪ
ಕಟ್ಟಿತಾಳಿ ತೊರೆಯೆ ಗಂಡ ಕಷ್ಟವಲ್ಲೆ ಸತಿಗೆ ಪೇಳು
ಶಿಷ್ಠ ದೊರೆಯೆ ದಾಸನೆಂಬಿ ಶ್ರೇಷ್ಠತಾಳಿ ಕಂಠದಲ್ಲಿದೆ
ಬಿಟ್ಟಿ ಏನೋ ಬಿರದು ಎಲ್ಲ ಕಟ್ಟಿಕೊಂಡು ಮೆರೆಯುತಿಹುದು
ಕೆಟ್ಟದೂರು ತಟ್ಟದಿರದು ಭ್ರಷ್ಠನೆನಿಸಬೇಡೊ ಎನ್ನ ೧
ಎಡವಿ ಬೀಳೆ ಮಗುವು ತಾಯಿ ಕಡಿವಳೇನು ಪೊಡವಿಗೊಡೆಯ
ಅಡಿಯ ಪಿಡಿದ ದಾಸನಾನು ಬಡವನಾದರೇನೂ ನುಡಿಯೋ
ಬಿಡದು ನನ್ನ ಭಾರ ನಿನಗೆ ತಡವು ಯಾಕೋ ಬರಿದೆ ಬಿಂಕ
ಸಡಲಿ ಸುತ್ತ ಮಾಯಪಾಶ ದೃಢವ ಮಾಡು ಭಕ್ತಿ ವಿರಕ್ತಿ ೨
ದೋಷಿಯಾದರೇನು ನಾನು ದೋಷದೂರನಲ್ಲೆ ನೀನು
ನಾಶಮಾಡು ಬೀಸಿದೃಷ್ಠಿ ಮೀಸಲಲ್ಲೆ ನಿನಗೆ ಸ್ವಾಮಿ
ಈಶ ಕರುಣಕುಂಟೆ ಮೇರೆ ಓಸು ಜಗದ ಭಾಸವೆಲ್ಲ
ಶ್ರೀಶ ನೀನು ಕೊಟ್ಟರುಂಟು ದಾಸಪೋಷ ಶ್ವಾಸನಾಣೆ ೩
ಗಂಟು ಕಳ್ಳ ನೀನೆ ಸತ್ಯ ಭಂಟನೆನ್ನ ಸ್ವತ್ತು ನೀನೆ
ನೆಂಟ ಬೇರೆ ಇಲ್ಲದಿರಲು ಅಂಟಿಸಿರುವೆ ವಿಷಯ ಕಂಟಕ
ತಂಟಿ ಬಿಟ್ಟು ಈಗಲೇನೆ ಅಂಟಿಕೊಳ್ಳೊ ಮನದಿ ಗಟ್ಟಿ
ಕುಂಟು ಕಲೆಯ ಸುಟ್ಟುಬಿಟ್ಟು ಉಂಟು ಮಾಡು ಎಲ್ಲ ನನಗೆ ೪
ಬೆಟ್ಟದೊಡೆಯ ಶ್ರೀನಿವಾಸ ಎಷ್ಟರವನೊ ನಾನು ಭೃತ್ಯ
ಗಟ್ಟಿಮಾತು ನುಡಿದೆನೆಂದು ಸಿಟ್ಟುಬೇಡ ಪಾದ ಪಿಡಿದಿಹೆ
ಸುಟ್ಟು ಸುಟ್ಟು ಭವದಿ ಬೆಂದು ಇಷ್ಟು
ನುಡಿದೆ ಜಯಮುನೀಂದ್ರ
ಶ್ರೇಷ್ಟಹೃಸ್ಥಮಧ್ವ ಶ್ರೀ ಪ್ರೇಷ್ಟದೈವ ಕೃಷ್ಣವಿಠಲ೫

ಅನೇಕ ಕೋಟಲೆಗಳಿಗೆ
೧೩
ಕೈಯ ಬಿಡುವರೇ ಕೃಷ್ಣ ಕೈಯ ಬಿಡುವರೇ ಪ
ಹೇಯ ವಿಷಯದಲ್ಲೆ ಇರಿಸಿ ಜೀಯ ನಿನ್ನ ವಿಷಯ ಮರೆಸಿ
ತೋಯಜಾಕ್ಷ ಭಕ್ತಿ ಕೊಡದೆ ಹಾಯಗೊಡದೆ ಭವ ಸಮುದ್ರ ಅ.ಪ
ಬಿಂಬ ನೀನು ಸಿದ್ಧಪ್ರತಿಬಿಂಬ ನಾನು ಸಿಧ್ದವಿರಲು
ತುಂಬಿ ಪರಿವ ನದಿಯ ಮಧ್ಯೆ ಅಂಬಿಗನೆ ತ್ಯಜಸಿದಂತೆ ೧
ಕಲಿಯ ಕಾಟ ವಿಷಯ ದಾಟಗೆಲುವ ಶಕ್ತಿ ಎನಗೆ ಉಂಟೆ
ಒಲಿಯದಿರಲು ನೀನೆ ದಯದಿ ಸುಲಭದೇವ ನೆನಿಸಿ ಹೀಗೆ ೨
ಕಾಯ ಸೊಬಗು ಗುಣವ ನೋಡಿ
ತಾಯಿ ಬಿಡುವಳೇನು ಶಿಶುವ
ಮಾಯೆ ಸುಳಿಯಲ್ಲಿರಲು ಸಹಾಯ ಮಾಡದೇನೆ ಬದಿಗ ೩
ಶಿಷ್ಟನಲ್ಲ ದುಷ್ಟಕರ್ಮ ಭ್ರಷ್ಟನೆಂಬ ಮಾತು ಮೂಟೆ
ಕಟ್ಟಿಪೇಳು ಬಿಟ್ಟು ನಿನ್ನ ಎಷ್ಟು ಕರ್ಮಮಾಡಲಾಪೆ ೪
ಹಿಂದಿನವರು ತಾವೆ ಮುಂದೆ ಬಂದರೇನೊ ಬಿಟ್ಟು ನಿನ್ನ
ಒಂದು ತೃಣವು ಚಲಿಸದಲ್ಲ ತಂದೆ ಮನವ ಮಾಡದಿರಲು ೫
ನಾನು ಎಂದು ಹೀನನಾದೆ ನೀನು ಸ್ವಾಮಿ ನಾನು ಭೃತ್ಯ
ಶ್ರೀನಿವಾಸ ಶರಣು ಶರಣು ಜ್ಞಾನವಿತ್ತು ಕಾಯೊ ಮುಂದೆ ೬
ನಿನ್ನ ನಂಬಿ ಇರುವೆ “ಶ್ರೀ ಕೃಷ್ಣವಿಠಲ” ಸತ್ಯಸತ್ಯ
ಅನ್ಯರನ್ನು ಕಾಣೆನಪ್ಪ ನಿನ್ನ ಚಿತ್ತ ನನ್ನ ಭಾಗ್ಯ ೭

ಶ್ರೀರಾಘವೇಂದ್ರ ಸ್ವಾಮಿಗಳು
೬೮
ಗುರುಗಳ ನೋಡಿರಿ _ ನೀವು _
ಗುರುಗಳ ನೋಡಿರಿ ರಾಘವೇಂದ್ರ ಪ
ಗುರುಗಳ ನೋಡಿ ಚರಣದಿ ಬಾಗಿ
ಕರೆಕರೆ ನೀಗಿ ವರಸುಖ ಪಡೆಯಿರಿ ಅ.ಪ
ಕಾಮಿತ ಫಲಗಳ ಇತ್ತು ಇತ್ತು
ತಾಮಸ ಗುಣಗಳ ಕೆತ್ತಿ ಕೆತ್ತಿ
ರಾಮನ ಭಕ್ತಿಯ ಬಿತ್ತಿ ಬಿತ್ತಿ
ಪ್ರೇಮದಿ ಶಿಷ್ಯರ ಸಲಹುವ ನಮ್ಮ ೧
ಅಂತೆ ಕಂತೇ ಸಂತೆ ಮಾತು
ಸಂತರ ಬೆಲ್ಲ ಇವರಲಿಲ್ಲ
ಎಂಥಾ ಭಕ್ತಿ ಅಂಥಾ ಫಲವು
ಕುಂತೀ ಭೀಮನ ಪಂಥಾ ಪಿಡಿದು ೨
ಇಲ್ಲ ಎಂಬಗೆ ಎಲ್ಲಾ ಇಲ್ಲಾ
ನಲ್ಲ ಎಂಬಗೆ ಎಲ್ಲಾ ಉಂಟು
ಕ್ಷುಲ್ಲ ಸಂಶಯ ಹಲ್ಲು ಮುರಿದು
ಪುಲ್ಲ ನಾಭನ ಬಲ್ಲವರೊಡನೆ ೩
ಕಲಿಯೆಂದೇಕೆ ಅಳುವಿರಿ ನೀವು
ಒಲಿಯಲು ಗುರುವು ಸುಳಿಯುವ ಹರಿಯು
ತುಳಿಯುತ ಕಲಿಯ ಬೆಳಸಿರಿ ಭಕ್ತಿ
ಸುಲಭವು ಕೇಳಿ ಕಳೆಯದೆ ಕಾಲ ೪
ಕೃಷ್ಣ ವಿಠಲನ ಇಷ್ಟ ಗುರುಗಳು
ತೃಷ್ಠರಾದೆಡೆ ಇಷ್ಟ ಕರಗತವು
ಭಷ್ಟರಾಗದೆ ಶಿಷ್ಠರ ಸೇರುತ
ಪುಷ್ಠಿಯ ಗೈಸುತ ಸುಷ್ಠು ಜ್ಞಾನವ ೫

ಇದು ಟೀಕಾಚಾರ್ಯರೆಂದೇ
ಶ್ರೀಜಯತೀರ್ಥರು
೬೩
ಗುರುರಾಜ ಕರುಣದಿ ನೋಡಯ್ಯ ಪ
ಸುರಗಣ ಒಡೆಯನೆ ಕರವೆತ್ತಿ ಮುಗಿಯುವೆ
ಕರೆಕರೆ ಮಾಡದೆ ಚರಣವ ತೋರಿಸು ಅ.ಪ.
ಭವಸಾಗರದಿ ಬಿದ್ದು ಭವ ಮೋಚಕನ ಬಿಟ್ಟು
ಭವಣೇಗಳನೆಪಟ್ಟು ನಾ ಒದ್ದಾಡುವೆ ಇಂದು
ಅವನಿಯ ಜನರೊಳು ಅವಗುಣ ಪ್ರತಿಮೆಯ
ತವಕದಿ ಪೊರೆಯದೆ ಜವನಡಿಕಳಿಸೊದೇ ೧
ಅನುದಿನದೀ ನಾನು ಅನುಮಾನದಿಂದಲಿ ನೊಂದೆ
ಅನಿಲನ ಹಾದಿಯ ಬಿಟ್ಟು ಅನ್ಯರಾನಂಬೀ ಕೆಟ್ಟೆ
ತನುಮನ ನಿನ್ನಡಿ ಅರ್ಪಿಸಿನಂಬಿದೆ
ದಿನದಿನ ದಯದಿಂ ನಿನ್ನವರೊಳು ಸೇರಿಸೊ ೨
ಕಾಮಕೇಳಿಯಲಿ ಮುಳುಗಿ ಕಾಮಿನಿಯರ ಬರೆದೆ
ಕಾಮಜನಕನ ಮರೆತೆ ಸೋಮಶೇಖರ ಪ್ರಿಯನೆ
ಶಮದಮಪಾಲಿಸಿ ತಾಮಸ ಓಡಿಸಿ
ಸಾಮಜವರದನ ಪ್ರೇಮವ ಕೊಡಿಸೋ ೩
ಜ್ಞಾನಶೂನ್ಯನು ಆಗಿ ಶ್ವಾನಂದದಿ ಇರುವೆ
ಮಾನಾಭಿಮಾನವನ್ನು ನಿನಗೆ ಅರ್ಪಿಸಿದೆನೊ
ಅನಿಲನಶಾಸ್ತ್ರದಿ ಜ್ಞಾನವ ನೀ ನೀಡಿ
ಮನದಲಿ ನಲಿನಲಿ ಮುನಿಗಳ ಒಡೆಯಾ ೪
ವಿಧವಿಧ ಟೀಕೆಗಳನು ಮುದದಿಂದಲಿ ಮಾಡಿ
ಮೋದವಂತದ ತತ್ವಗಳ ಮುಂದಕ್ಕೆ ತಂದೆಯೋ
ಸದಯದಿ ಜಯಮುನಿ ವಾಯ್ವಾಂತರ್ಗತ
ಮಾಧವ ಕೃಷ್ಣವಿಠಲನ ತೋರುತ ೫

ಇದು ಶ್ರೀವಾದಿರಾಜರ ಸ್ತೋತ್ರ
೬೫
ಗುರುವರ ದಯಮಾಡೈ ಹಯಮುಖ
ಪದಯುಗ ನಿಜ ಭಕ್ತಾಗ್ರಣೀ ಪ
ಚರಣವ ನಂಬಿದೆ ಮುಂದಿನ ಪರಿಸರ
ಸರಸರ ಸುರಿಸುತ ವರಗಳ ಕರುಣದಿ ಅ.ಪ
ನಿನ್ನನೆ ನಂಬಿದ ಅನ್ಯರವಲ್ಲದ
ಚಿಣ್ಣರ ಬಿಡುವರೆ ಘನ್ನಗುಣಾರ್ಣವ
ಸಣ್ಣವರೆನ್ನೆದೆ ಮನ್ನಿಸಿ ಕೈಪಿಡಿ
ಚಿನ್ಮಯ ನಂದನ ಅನ್ಯರ ಪೋಷಕನೆ ೧
ದಾಸರ ದೋಷವಿನಾಶಗೈವುದು
ಕ್ಲೇಶವ ಭಾವೀಶ್ವಾಸ ನಿಯಾಮಕಗೆ
ವಾಸವ ಗುರುಶಿವ ಶೇಷಸುವಂದಿತ
ವಾಸಿಸಿ ಹೃದಯದಿ ಭಾಸಿಸು ಹರಿದಾರಿ ೨
ಆರ್ರ್ತಿವಿದೂರ ಪರಾರ್ಥಕೆ ನೆಲಸಿಹ
ಖ್ಯಾತ ಕವೀಂದ್ರನೆ ಪ್ರೀತಿಯ ಬೇಡುವೆನು
ಮಾತೆಯ ತೆರಮುರವ್ರಾತವ ನೋಡದೆ
ನಾಥನೆ ನೀಡಿಸು ಆತ್ಮವಿಕಾಸವನು ೩
ವಿಜ್ಞಾನಾಸಿಯ ದಾನವ ಗೈಯುತ
ದೀನನ ಮೌಢ್ಯದಿ ಶೂನ್ಯವಗೈಯುತ
ಪ್ರಾಜ್ಜನ ಮಾಡೈ ಪ್ರಾಜ್ಞಲಲಾಮನೆ
ಆಜ್ಞಾಧಾರಕ ನಿನ್ನ ಜನುಮ ಜನುಮದಲಿ೪
ವೇದವ್ಯಾಸರ ಪಾದಾರಾಧಕ ಮೋದಮುನೀಂದ್ರರ
ಪ್ರೇಮವ ಪಡೆದಿಹನೆ ವೇದವ್ಯಾಸರ ಸೇವಿಪ ಭಾಗ್ಯವ
ಸಾದರದಿಂ ಕೊಡು ಕಾಮಿತ ಕೊಡುವವನೆ೫
ಹಿರಿಯರ ಕರುಣದಿ ಕಿರಿಯರ ಸಾಧನೆ
ಶರಣನ ಭಾರವು ಸೇರಿದೆ ನಿಮ್ಮಡಿ
ಹರಣವ ವಪ್ಪಿಸಿ ಚರಣವ ಪಿಡಿದಿಹೆ
ಪೊರೆಯೈ ಮನತರ ಕುರುಡನು ನಾನಿಹೆ ೬
ಮಿಥ್ಯಾಮತ ವಿಧ್ವಂಸನೆ ಗೈಯುವ
ಸದ್ಗ್ರಂಥಂಗಳದಾತನೆ ಬಾಗುವೆನು
ಪಾರ್ಥನಸಖ “ಶ್ರೀಕೃಷ್ಣವಿಠಲ”ನ
ಭಕ್ತಿತರಂಗವ ನೀಡುತ ಕಾಯುತ ೭

ಇದು ಒಂದು ಅಣು ವೆಂಕಟೇಶ
ವೆಂಕಟೇಶ ಕಲ್ಯಾಣ
೧೪
ಚರಿತೆ ನಿನ್ನದು ಪೊಗಳಳಲವೇ ಪರಮ ಪುರುಷ
ಶ್ರೀವೆಂಕಟ ದೊರೆಯೆ ಪ
ಪರಿಸರ ವಿಧಿಗಳ ಕುಣಿಸಿ ಆಡುವಂಥ ಸರಸದಿಂದಲಿ
ವಿಶ್ವಸೃಷ್ಟಿಯಗೈದಂಥ
ನಿರುತ ಉರದಲ್ಲಿದ್ದು ಚರಣಸೇವಿಸುವಂಥ ವರಸಿರಿ
ತಾನಿನ್ನು ಅರಿಯೆನು ಎಂತೆನಲು ಅ.ಪ
ಸುರವರ ನಾರೆಂದು ಅರಿಯೆಭೃಗುವು ತಾನು
ಜರಿದಂ ಪಾರ್ವತಿ ಪತಿ ಹರ ವಿಧಿಗಳೆನೆಲ್ಲ
ಬರುವ ಬಗೆಯ ಕಂಡು ಸುರತ ಕೇಳಿಯಸೋಗು
ಧರಿಸಿ ಮಲಗಿರಲಂದು ಜರಿದುವದಿಯಲು ವಕ್ಷ
ಹರಿಸಿ ದುಗುಡವ ಮುನಿಗೆ ವರಸಿ ಚರಣದ ಕಣ್ಣು
ತರಿದು ಸಾಧನೆ ಅಧಿಕ ಸಿರಿಗೆ ಪ್ರೇರಿಸಿ ಕೋಪ
ತೊರೆದು ಧಾಮವ ಬೇಗ ಧರೆಗೆ ಇಳಿಯುತ ಬಂದು
ಗಿರಿಯ ಹುತ್ತವ ಸೇರಿ ಸುರಿಸೆ ವಿಧಿಯು ಪಾಲು
ಕರುಣದಿಂದಲಿ ಕೊಂಡು ದೊರೆಯ ಸೇವಕ ಗೋವ
ಹರಿಸೆ ಕೊಡಲಿಯ ನೆತ್ತೆ ಶಿರವನೊಡ್ಡುತ ರಕ್ತ
ಧಾರೆ ಚಿಮ್ಮಿಸಿನಭದಿ ಬರಲು ಚೋಳನು ದೊರೆಗೆ
ಕ್ರೂರ ಶಾಪವನಿತ್ತು ಕರೆಸಿಗುರುಗಳಮದ್ದು
ತರಲು ಹೊರಟದೇವ ನಿರುತ ಚಿನ್ಮಯಗಾತ್ರ
ಉರು ವೈದ್ಯ ಧನ್ವಂತ್ರಿ ನಿರುಪಮ ನಾಟಕದೆ ೧
ಸಾಮ ವಿಶ್ವದ ಸಾರ್ವಬೌಮ ಬೇಡಿದೆ ರಚಿಸೆ
ಧಾಮ ಕ್ರೋಢನ ಕಂಡು ಪ್ರೇಮದಿಂದಲಿ ಬಕುಳೆ
ವಾಮ ಕಂದನು ಆಗಿ ಭಾಮೆ ಪಾಕವನುಂಡು
ಕಾಮ ವರ್ಜಿತ ಪೂರ್ಣ ಕಾಮ ಕುದುರೆಯನೇರಿ
ಕಾಮ ಬೇಟೆಯೋಳ್ ನಿಜ ಕಾಮಿನಿಯನು ಕಂಡು
ದ್ಧಾಮ ಮೋಹವ ತೋರಿ ಭೂಮಿಜಾತೆಯ ಘಟಿಸೆ
ಭಾಮೆ ಬಕುಳೆಯ ಕಳಿಸಿ ಧರ್ಮದೇವತೆಯೆನಿಸಿ
ಗ್ರಾಮ ತಿರುಗುತ ಪೋಗಿ ಜಾಮಾತ ಸನ್ನಾಹ
ಜಾಣ್ಮಿಯಿಂದಲಿನಡೆಸಿ ಕಾಮಿತಾರ್ಥವ ಕೊಂಡು
ಧಾಮ ಸೇರಲು ಬಕುಳೆ ಹೇಮಮಯ ದಾರಿದ್ರ
ನೇಮದಾಟವ ತೋರಿ ಹೇಮಗರ್ಭನ ಕರಿಸೆ
ಸೋಮಶೇಖರ ಕೊಡಿಸೆ ಹೇಮರಾಶಿಯ ತಂದು
ಭೀಮರುಜೆಗಳ ನಟಿಸೆ ಸೋಮಸೋದರಿಕರಿಸಿ
ಮಾಮನೋಹರಗೈದ ಸೀಮೆಇಲ್ಲದಂಥ ೨
ಮದುವೆ ಹಬ್ಬಿಸಿ ಭಕ್ತ ಹೃದಯ ತುಂಬುವ ನಂದ
ಮುದದಿ ಬೆಳೆಸೆ ಪಯಣ ವದಗೆ ಶುಕರಾತಿಥ್ಯ
ಸದಯಗೊಳ್ಳುತ ತೃಪ್ತಿ ಬದಿಗರೆಲ್ಲರಿಗಿತ್ತು
ಮದನಮೋಹನ ತೇಜ ಮದುವೆ ಊರನು ಸೇರಿ
ಕುದಿವ ಕುತೂಹಲದಿ ಅದ್ಭುತ ಸ್ವಾಗತವ
ಪದುಮಾವತಿಯ ತಂದೆ ಹೃದಯ ಪೂರ್ವಕ ನೀಡೆ
ಆದರದಿ ಸ್ವೀಕರಿಸಿ ಪಾದದ್ವಂಧ್ವವ ನೀಡಿ
ವೇಧಾದಿ ನಿಜವೃಂದ ಮೇದಿನೀ ಸುರವೃಂದ
ಸಾಧು ಸಜ್ಜನ ಸಂಗ ಮೋದ ಮೆಲ್ಲಲು ಕೂಡಿ
ವೇದ ಘೋಷವುಗೈಯೆ ವಾದ್ಯದುಂದುಭಿ ಮೊಳಗೆ
ವೇದವೇದ್ಯನು ಮದುವೆ ವೇದಿಕೆಯನು ಏರಿ
ಕಾದುಕೊಂಡಿಹ ಜನಕೆ ಸಾಧಿಸುತಲಭೀಷ್ಠ
ಪದ್ಮಾವತಿಯ ಕರ ಸಾದರ ಪಿಡಿದಂಥ
ಖೇದ ತರಿಯುತ ನಿಜ ಮೋದದಾನವ ಗೈವ ೩
ತಿರುಪತಿ ತಿಮ್ಮಪ್ಪ ಸುರಗಣ ಜಗದಪ್ಪ
ವರಸಮರಿಲ್ಲಪ್ಪ ಭರದಿ ಕಸಿವಕಪ್ಪ
ಅರಿತವರಿಲ್ಲಪ್ಪ ಧರಿಸಿಹ ಸಿರಿಯಪ್ಪ
ಕರುಣ ಸುರಿಸುವನಪ್ಪ ಉರುಗಗಿರಿಯಲ್ಲಿಪ್ಪ
ಗರುಡ ಗಮನನಪ್ಪ ಸುರತರು ಇವನಪ್ಪ
ಗಿರಿಸಪ್ತ ದೊರೆಯಪ್ಪ ಹರಿಕೆ ಕೊಳ್ಳುವನಪ್ಪ
ಅರಿಮಾರಿ ಸರಿಯಪ್ಪ ಶರಣರ ಪೊರೆಯಪ್ಪ
ಕರೆಕರೆ ಬೇಡಪ್ಪ ಸ್ವರತ ಸುಖಮಯನಪ್ಪ
ಅರವಿದೂರನಪ್ಪ ಮರೆವ ಶರಣರ ತಪ್ಪ
ಸರ್ವಹೃದಯಗನಪ್ಪ ಪರಿಪೂರ್ಣಗುಣನಪ್ಪ
ಅರಿಶಂಖುಧರನಪ್ಪ ಉರಿವ ರವಿಯಲ್ಲಿಪ್ಪ
ಸರ್ವಮುಕ್ತರಿಗಪ್ಪ ಬಿರಿವ ಖಳರೆದೆಯಪ್ಪ
ಮರುತ ಮಂದಿರನಪ್ಪ ಪರಿಮರ ಹೌದಪ್ಪ
ಪೊರೆದೆ ಮಾಧವನಪ್ಪ ವರಲೀಲಾ ಮಯನಪ್ಪ
ಪರಮ ಅದ್ಭುತನಪ್ಪ ಪರಮಾತ್ಮಹೌದಪ್ಪ
ಕರಣ ಚೋದಿಪನಪ್ಪ ಕರಣಕ್ಕೆಸಿಗನಪ್ಪ
ದುರಿತ ಪಾವಕನಪ್ಪ ಪರಮ ಪಾವನನಪ್ಪ
ಹರನ ಅಪ್ಪನಿಗಪ್ಪ ಪರಮೋಚ್ಚಹೌದಪ್ಪ ೪
ಬಾದರಾಯಣ ಪೂರ್ಣ ಭೋಧ ತೀರ್ಥರ ದೈವ
ಸಾಧುಸಜ್ಜನ ಪ್ರಾಷ್ಯ ಮೋದ ಚಿನ್ಮಯಗಾತ್ರ
ವೇದ ವಿಭಜಿಸಿ ನಿಂದ ಖೇದವಿದ್ಯೆಯ ಕೊಂದ
ವಾದಿವಾರಿಣಿ ಸಿಂಹ ವಾದಿರಾಜರ ಹೃದಯ
ಮೋದ ಹಯಮುಖ ಶುದ್ಧ ವೇದರಾಶಿಯತಂದ
ವೇಧಗರುಹಿದ ಕರುಣಿ ಖೇದ ನೀಡುತಲಿದ್ದ
ಆದಿದೈತ್ಯರ ಕೊಂದು ಮೇದಿನಿಯನು ಎಯ್ದೆ
ಶ್ರೀಧರ ನರಸಿಂಹ ಗೋಧರಮಹಿದಾಸ
ಕಾದುಕೊ ಶ್ರೀ ವಿಷ್ಣು ಭೇದ ವಿದ್ಯೆಯಮನಕೆ
ಭೋಧಿಸು ವರ ಕಪಿಲ ಸಾಧು ಋಷಭದತ್ತ
ಯಾದವ ಕುಲರನ್ನ ಕಾಯ್ದೆ ಗೋಪಿಯ ರನ್ನ
ಸೀಳ್ದೆ ಕೌರವರನ್ನ ಪೇಳ್ದೆ ಪಾರ್ಥಗೆ ಗೀತೆ
ಶುದ್ಧ ಜಯಮುನಿಹೃಸ್ಥ ಮಧ್ವ ಇಂದಿರೆನಾಥ
ಮುದ್ದು ಕೃಷ್ಣವಿಠಲ ಬಿದ್ದೆ ಪಾದದಿ ಶರಣು ೫

ವಿಠಲನನ್ನೇ ನಂಬಿರುವ
೧೫
ಛಂದದಿಂದ ಬಂದು ಸಲಹೊ ಫಂಡರೀಶ ನಿನ್ನ ನಂಬಿದೆ ಪ
ತಂದೆ ನೀನೆ ಸರ್ವರಿಗೆ ಅನಿಮಿತ್ತ ಬಂಧುವಲ್ಲವೆ ಅ.ಪ
ದೋಷಿನಾನು ಮೂಢನಾನು ವಲಿಯೆನೆಂದು ಏಕೆ ಹೇಳು
ದೋಷದೂರ ಜ್ಞಾನರೂಪ ಬಿಂಬ ನಿನ್ನ ದಾಸನಲ್ಲವೆ ೧
ಎಲ್ಲಾ ಸತ್ತಾದಾತ ನೀನು ಇಲ್ಲ ನಿನಗೆ ಭೇದವೇನು
ನಲ್ಲ ಶರಣು ಎಂದಮೇಲೆ ವಲ್ಲೆ ಎನ್ನೆ ಬಿರುದು ಪೋಗದೆ ೨
ಕಾಕುಮಾಡಿ ಎನ್ನ ಜಗದಿ ನೂಕಿ ಬಿಟ್ಟು ಭಂಟರಲ್ಲಿ
ಸಾಕದೇನೆ ಬಿಟ್ಟರೀಗ ಲೋಕನಗದೆ ಭಕ್ತರಾಣೆ ೩
ಮುಂದುಮಾಡಿ ಹಿಂದೆ ಎನ್ನ ಹಿಂದು ಮಾಡಿ ಈಗ ನಗುವೆ
ಇಂದಿರೇಶ ನಿನ್ನ ನ್ಯಾಯ ಮಂದನಾನು ಅರಿಯೆ ಶರಣು ೪
ಲಕುಮಿ ಮೊದಲು ಎಲ್ಲಾ ಜಗಕೆ ಶಕುತ ನೀನೆ ಒಬ್ಬ ಆಶ್ರಯ
ಮುಕುತರೊಡೆಯ “ಕೃಷ್ಣವಿಠಲ” ಭಕುತಿ
ನೀಡಿಕಾಯೋ ಬೇಗನೆ ೫

ದಾಸರನ್ನು ವಿಶೇಷವಾಗಿ
೧೬
ಜಯತೀರ್ಥ ಗುರು ಹೃದ್ಗುಹಾಂತರ ವಾಸ
ವಾಯ್ವಂತರ್ಗತ ಶ್ರೀ ಕೃಷ್ಣಯ್ಯ ಜೀಯಾ ಪ
ಕಾಯೈಯ ನಿನ್ನವ ನಿವನೆಂದು ಅನುದಿನದಿ
ಕಾಯ ಮನ ವಚನದಲಿ ನಿನ್ನ ನೆನವಿರಲಿ
ಜೀಯಾ ಶ್ರೀ ವಿಜಯರಾಯರ ಸೇವೆ
ಕಾರ್ಯಗಳಿಗಭಯವ ನಿಡೈಯಾ ಜೀಯಾ ೧
ಲೌಕಿಕದಲ್ಲಿಹನೆಂದು ನಿರಾಕರಿಸದೇಲೆ
ನಿನ್ನ ಏಕಾಂತ ಭಕುತಿಯನಿತ್ತು ಸಲಹೋ
ಶ್ರೀ ಕಳತ್ರನೆ ಇವನ ವ್ಯಾಕುಲಗಳ ಹರಿಸಿ
ಕೃಪಾಕಟಾಕ್ಷದಿ ನೋಡಿ ಕಾಯಬೇಕೈಯಾ ೨
ಭಕ್ತವತ್ಸಲ ನಿನ್ನ ಭಕ್ತನಿವನೆಂದೆನಿಸು
ಭಕ್ತಿಬಲಜ್ಞಾನ ಸಾಧನವನಿತ್ತು
ಶಕ್ತನೆನಿಸಿಹಪರದಿ ಭಕ್ತಿನಿನ್ನೊಳು ಇರಲಿ
ಮುಕ್ತರೊಡೆಯ ಕೃಷ್ಣವಿಠಲ ಶ್ರೀ ವೆಂಕಟೇಶ ೩

ಶ್ರೀಹರಿಯ ದಶಾವತಾರಗಳನ್ನು
೧೭
ತಂಗಿ ಹೇಳೆ ಚೆಲುವ ಕೃಷ್ಣನು ದೊಡ್ಡವನೇನೆ
ಬಲುದೊಡ್ಡವನೇನೆಪ
ರಂಗನ ಪೊಗಳುವ ಹೆಡ್ಡರ ಮಾತನು ಕೇಳುವರೇನೆ
ಅಕ್ಕಕೀಳುವರೇನೆ ಅ.ಪ
ಹಿರಿದಾಗಿ ಕೃಷ್ಣನು ವೇದವ ತಂದು ಸರಸಿಜೋದ್ಭವಗಿತ್ತನೆ
ಕೃಷ್ಣಸರಸಿಜೋದ್ಭವಗಿತ್ತನೆ
ನೀರೊಳಗಿರುವ ಮೀನಾಗೋದು ಗಾರುಡಿವಿದ್ಯವೆ ಇದು
ಗಾರುಡಿವಿದ್ಯವೆ ೧
ಶೃಂಗಾರಲೋಲನು ಹಿಂಗದ ಅಮೃತವ ಸುರರಿಗೆ ಹಂಚಿದನೆ
ಕೃಷ್ಣಸುರರಿಗೆ ಹಂಚಿಚನೆ
ಅಂಗನೆಯಾಗಿ ಹೀಂಗೆ ಮಾಡೋದು ವಂಚನೆಯಲ್ಲವೆ
ಇದು ವಂಚನೆಯಲ್ಲವೆ ೨
ಸಂದರಾಂಗನು ವರಹನಾಗುತ ಭೂಮಿಯನೆತ್ತಿದನೆ ಕೃಷ್ಣ
ಭೂಮಿಯನೆತ್ತಿದನೆ
ಹಂದಿಯವೇಷದಿ ದಿತಿಜನ ಕೊಂದೂದು ಮೋಸದವಿದ್ಯವೆ
ಇದುಮೋಸದ ವಿದ್ಯವೆ ೩
ಪರಿಪರಿವ್ಯಾಪ್ತಿಯ ತೋರುತ ಕೃಷ್ಣನುನರಹರಿ ಆದನೆ
ಕೃಷ್ಣನು ನರಹರಿ ಆದನೆ
ಪೋರನ ಮಾತಿಗೆ ಕರುಳನು ಬಗೆದುದು ಘೋರಕೃತ್ಯವೆ
ಇದು ಘೋರಕೃತ್ಯವೆ ೪
ಘನವಾಮನ ಆಗುತ ಕೃಷ್ಣನು ಇಂದ್ರನ ಸಲಹಿದನೆ
ಕೃಷ್ಣ ಇಂದ್ರನ ಸಲಹಿದನೆ
ಅಣ್ಣನ ಸಲಹಲು ತಮ್ಮನ ತುಳಿದುದು ಯಾತರ ನ್ಯಾಯವೆ
ಇದು ಯಾತರೆ ನ್ಯಾಯವೆ ೫
ಪೊತ್ತು ಕೊಡಲಿಯ ತಿರುಗುತಕೃಷ್ಣನು ಭೂಪರ ತರಿದನೆ
ಕೃಷ್ಣ ಭೂಪರ ತರಿದನೆ
ಹೆತ್ತತಾಯಿಯ ಕಡಿಯುವ ಮಗನು ಘಾತುಕನಲ್ಲವೆ
ಅವನು ಘಾತುಕನಲ್ಲವೆ ೬
ಶ್ರೀಪತಿ ಆದರು ಪಿತನ ಮಾತಿಗೆ ಆಡವಿಯೊಳ್ ಚರಿಸಿದನೆ
ಕೃಷ್ಣ ಅಡವಿಯೊಳ್ ಚರಿಸಿದನೆ
ಕಪಿಗಳಕೂಡೆ ಓಡಾಡುವುದು ಒಡೆಯರ ಲಕ್ಷಣವೆ ಇದು
ಒಡೆಂಇÀಇರ ಲಕ್ಷಣವೆ ೭
ಗೋಪತಿ ಕೃಷ್ಣನು ಪ್ರೀತಿಗೆ ಒಲಿಯುತ ಗೋಪೆರ ಕೂಡಿದನೆ
ಕೃಷ್ಣಗೋಪೆರ ಕೂಡಿದನೆ
ಶ್ರೀಪತಿಯಾಗಿ ಅನ್ಯರ ಬೆರೆದುದು ಪಾಪವಲ್ಲವೆ ಇದು
ಪಾಪವಲ್ಲವೆ ೮
ಉತ್ತುಮ ಬುದ್ಧನು ಆಗುತ ಕೃಷ್ಣನು ದೈತ್ಯರ ನಳಿಸಿದನೆ
ಕೃಷ್ಣ ದೈತ್ಯರ ನಳಿಸಿದನೆ
ಬೆತ್ತಲೆ ನಿಂತು ಸ್ತ್ರೀಯರಕೆಡಿಸುವ ಭಂಡನಲ್ಲವೇ ಇವನು
ಭಂಡನಲ್ಲವೇ ೯
ಚೆಲುವ ರಾಹುತನಾಗಿ ಕೃಷ್ಣ ಧರ್ಮವ ನುಳುಹುವನೆ
ಕೃಷ್ಣ ಧರ್ಮವನುಳುಹುವನೆ
ಒಳ್ಳೆಯ ಮಾತಿಲಿ ಸುಳ್ಳನು ಹೇಳಿದೆ ಕೋಪ ಬೇಡವೆ
ಅಕ್ಕ ಕೋಪ ಬೇಡವೇ ೧೦
ಜೀಯ ಜಯಮುನಿ ವಾಯುವಿನಂತರ ಶ್ರೀ
ಕೃಷ್ಣವಿಠಲನೆ ಅವನು ಶ್ರೀ ಕೃಷ್ಣವಿಠಲನೆ ಅತನು
ಶ್ರೀಕೃಷ್ಣವಿಠಲನು ಅವನಾದರೆ ಜೀಯನೆ ಅವನೆಮಗೆ
ಅಕ್ಕ ಜೀಯನೆ ಅವನೆಮಗೆ೧೧

ತಂಬೂರಿಯನ್ನು ಹಿಡಿದು
೮೨
ತಂಬೂರಿ ಹಿಡಿಸಿದನು ಪ
ಅಂಬುಜಾಕ್ಷನು ದಯದಿ ಅ.ಪ
ನಂಬೀದ ಜನರಿಗೆ ಬೆಂಬಲ ತಾನೆಂಬ
ನಂಬಿಕೆ ಹೃದಯದಿ ತುಂಬುತ ತಾನೀಗ ೧
ಆಶಾ ಪಾಶಕೆ ಸಿಲುಕಿ ಬೇಸತ್ತು ಬೆಂಡಾಗಿ
ಮೋಸ ಹೋಗುತ್ತಲಿದ್ದೆ ಶ್ರೀಶ ದಯಾಂಬುಧಿ ೨
ಹುಟ್ಟಿದ ದಿನದಿಂದ ಕಷ್ಟದಲ್ಲೇ ಬಂದೆ
ಮುಟ್ಟಲಿದನು ಈಗ ಸಂತುಷ್ಟಿಯ ಕಂಡೆನು ೩
ಕಾಡಿ ಬೇಡುವರಿಲ್ಲ ನಾಡೆಲ್ಲ ನಮ್ಮದೇನೆ
ನೀಡುವ ದೊರೆ ಒಬ್ಬ ಈಡಿಲ್ಲದವನಾತ ೪
ಸ್ಮರಣೆ ಒಂದೇ ವಿಧಿ ವಿಸ್ಮರಣೆ ನಿಷೇಧ
ಹರಿನಾಮ ಸುಧೆಯನ್ನು ಕರೆದು ಕರೆದು ಕುಡಿವೆ೫
ತಂಬೂರಿ ಸಿಗುವುದು ತುಂಬ ಭಾಗ್ಯವು ಸತ್ಯ
ಹಂಬಲಂಗಳ ಬಿಡಿಸಿ ತುಂಬುವ ಹರಿ ಮನದಿ೬
ಪುಣ್ಯ ರಾಶಿಗಳೆಲ್ಲ ವದಗಿ ಬಂದವೊ ಏನೋ
ಚಿನ್ಮಯ “ಶ್ರೀ ಕೃಷ್ಣವಿಠಲ”ನ ದಾಸನಾದೆ೭

ದಾಸರು ತಮ್ಮ ಅಂಕಿತ
೧೮
ತಾಂಡವಾಡು-ತಾಂಡವಾಡು ತಾಂಡವಾಡು-ಶ್ರೀ ಕೃಷ್ಣವಿಠಲ ಪ
ತೊಂಡನಾನು_ ತೊಂಡನಾನು_
ತುಂಡುಮಾಡು ಭಂಡ ಭವವ ಅ.ಪ.
ಅಂದು ಇಂದು ಎಂದು ಏನು _ ಹಿಂದು ಮುಂದು
ಒಂದು ಅರಿಯೆ
ಇಂದಿರೇಶ ನಂದದಿಂದ ಮುಂದೆ ಬಂದು ಛಂದ ದಿಂದ ೧
ಹಾಗೋ ಹೀಗೋ _ ಹ್ಯಾಗೋ ಕಾಣೆ _ ಕೂಗಿ ಕೂಗಿ
ಬಾಗಿ ಬಾಗುವೆ
ಯಾಗ _ ಯೋಗ _ ಭೋಗ ಮುಕ್ತಿ ಎಲ್ಲ ನೀನೆ ಬೇಗ ಸಾಗಿ೨
ದೋಷ ದೂರ _ ವಾಸುದೇವ _ ಶ್ರೀ ಕೃಷ್ಣವಿಠ್ಠಲ ನಿತ್ಯ
ದೋಷಿಯಾದರೇನು ನಾನು ಶ್ವಾಸ ಶಿಷ್ಯ _ ನಿತ್ಯಭೃತ್ಯ ೩

ಬೂಟಾಟಿಕೆಯ ಭಕ್ತಿಯನ್ನು
೯೫
ದಂಭಕ-ಭಕುತಿಯ-ಮಾಡಬೇಡ ಬರಿ
ಡಿಂಭವ ಪೋಷಿಸೆ-ಪಾಡಬೇಡ ಪ
ಅಂಬುಜನಾಭವ ಬಿಡಬೇಡ ಒಣ
ಜಂಭವ-ಮಾಡುತ-ಕೆಡಬೇಡ ಅ.ಪ.
ಕಾಸಿಗೆ ದಾಸನು ಆಗಬೇಡ-ಹರಿದಾಸನು ಆದರೆ ಆಶೆಬೇಡ
ಮೋಸದ ವೇಷವ ತೋರಬೇಡ-ಸುಖ ಲೇಶವು
ದೊರಕದು ತಿಳಿಗಾಢ ೧
ಕಂಡಕಂಡೆಡೆ ತಿರಿಬೇಡ-ಯಮದಂಡಕೆ ಬೆದರದೆ ನಡಿಬೇಡ
ಪುಂಡರ ಸಂಗವ ಸೇರಬೇಡ-ಹರಿತೊಂಡರ
ಕೆಣಕುತ ಕೆಡಬೇಡ ೨
ಕೆಂಡದ ಕೋಪವ ಮಾಡಬೇಡ-ಅದು ಗಂಡವು
ಮುಂಬರೆ ತಿಳಿಮೂಢ
ದಂಡದಿ ಕಾಲವ ಕಳಿಬೇಡ ಪರ ಹೆಂಡಿರು ವಿತ್ತವ ನೋಡಬೇಡ ೩
ತುಚ್ಛರ ಸೇವೆಯ ಮಾಡಬೇಡ ಮನಸ್ವಚ್ಛತೆ ಪೊಂದದೆ ಇರಬೇಡ
ಕೆಚ್ಚೆದೆ ಕಷ್ಟದಿ ಬಿಡಬೇಡದೈವೇಚ್ಛೆಯೆ ಸಕಲಕು ಮರಿಬೇ4
ಆತ್ಮಸ್ತುತಿಯನು ಮಾಡಬೇಡ ಪರಮಾತ್ಮನ ಗುಣಗಳ ಕದಿಬೇಡ
ಗಾತ್ರವು ಅಸ್ಥಿರ-ತಿಳಿ-ಬೇಗ-ಜೀವೋತ್ತಮ ನಂಘ್ರಿಯ ಬಿಡಬೇಡ ೫
ಕರ್ಮವ ಮಾಡದೆ ಬಿಡಬೇಡ-ಶೃತಿ ಮರ್ಮವ
ತಿಳಿಯದೆ ಇರಬೇಡ
ಹಮ್ಮಿನಮಾತನು ಆಡಬೇಡ ಪರಧರ್ಮಕೆ
ಮನವನು ಸೋಲಬೇಡ ೬
ನೋಡದ ವಿಷಯವ ನುಡಿಬೇಡ ಗುಣ ನೋಡದೆ
ಸ್ನೇಹವ ಮಾಡಬೇಡ
ಪಾಡದೆ ದೇವನ ಇರಬೇಡ ಭವ ಕಾಡಿಗೆ ಕಿಚ್ಚಿದು ಸರಿ ಪ್ರೌಢ ೭
ನೆಂಟಗೆ ಸಾಲವ ಕೊಡಬೇಡ ಅದು ಗಂಟಿಗೆ ಮೊಸವೆ ತಿಳಿಬೇಗ
ಒಂಟಿಲಿ ಊಟವ ಮಾಡಬೇಡ ವೈಕುಂಠಕೆ ಸಾಧನೆ ಬಿಡಬೇಡ ೮
ಹಿರಿಯರ ಪಿತೃಗಳ ಜರಿಬೇಡ ಅದು ನರಕದ
ದಾರಿಯು ಮರಿಬೇಡ
ಪರಿಪರಿ ಚಪಲವ ಮಾಡಬೇಡ ನಿಜಗುರುವನು
ಒಲಿಸದೆ ಬಿಡಬೇಡ ೯
ಮಡಿ ಮಡಿ ಎನ್ನುತ ಹಾರಬೇಡ-ನಿಜ ಮಡಿ ಹರಿ
ಚಿಂತನೆ ತಿಳಿಬೇಗ
ಕಡು ಆಲಸ್ಯವ ಮಾಡಬೇಡ ಸಿರಿಬಿಡುವಳು ಆತನ ತಿಳಿಬೇಗ೧೦
ಸಾಧು ಸುಸಂಗವ ಧೃಡಸೇರು ಅದು ಮಾಧವ
ನೊಲಿಮೆಗೆ ಹೆದ್ದಾರಿ
ಮೋದದ ತೀರ್ಥದಿ ಮಡಿಮಾಡು ಭವಖೇದವ
ಶೀಘ್ರದಿಪೊಗಾಡು ೧೧
ಸತ್ಯವ ಧರ್ಮವ ಬಿಡಬೇಡ ಈ ಉಕ್ತಿಗಳಾಚೆಗೆ ಹಾಕಬೇಡ
ಸತ್ಯವ ಪಠಿಸದೆ ಬಿಡಬೇಡ-ಶ್ರೀ ಸತ್ಯನ ಮತವನು ಪಿಡಿಬೇಗ೧೨
ತೃಷೆಯ ಬಹುವಿಧ ಮಾಡಬೇಡ ಸಂತುಷ್ಠಿಯೆ
ನಿಜಸುಖ ತಿಳಿಬೇಗ
ನಿಷ್ಠಿಯ ಗುರುವಡಿ ಬಿಡಬೇಡ “ಶ್ರೀ ಕೃಷ್ಣವಿಠಲ”ನ ತೊರಿಬೇಡ೧೩

ಇದು ಶ್ರೀಹರಿಯ ವೇದವ್ಯಾಸ
೧೯
ದಾರಿ ತೋಚದಲ್ಲಾ ನನಗೆ ಏನು ಪ
ನೀರಜಾಕ್ಷ ನಿನ್ನ ನೊಲಿಸುವ ಅ.ಪ
ಓದಿವಾದ ಗ್ರಂಥಗಳ ವಿದ್ಯಾ ವಿಧಿ ಸಾಧಿಸುತ
ವೇದವ್ಯಾಸ ನಿನ್ನ ಪ್ರೀತಿ ಸಾಧಿಸಲು ಮೂಢನಾನು ೧
ಉಂಡು ಕೂತು ಮುದುಕನಾದೆ ಕಾಯಬೆಳಸಿ
ದಂಡಕಾಲ ಕಳೆದುದಯ್ತು
ಮಂಡೆಗೀಗ ಹತ್ತದವು ಫಂಡರೀಶ ಕೃಪೆಯಮಾಡೊ ೨
ಹಾಡಿಪಾಡಿ ವಲಿಸಾಲು ರಾಗ ಈ ಭಾವ ತಾಳ ಕಾಣೆ
ಕಾಡು ಕೋಣನಂತೆ ಇರ್ಪೆ ನೀಡಿ ಸಲಹೊ ಸರ್ವ ಶಕ್ತಿ ೩
ದಾನಧರ್ಮತೀರ್ಥಯಾತ್ರೆ ನಾನು ಮಾಡೆ ಹುಟ್ಟು ಬಡವ
ಶ್ವಾನನಂತೆ ತಿರಿದು ಉಂಬೆ ಸಾಧ್ಯವೇನು ನೀನೇ ನುಡಿಯೊ೪
ನೆಂಟರಿಷ್ಟರೆಲ್ಲ ಎನ್ನ ಕೈಯ ಬಿಟ್ಟು ಹೋದರೈಯ
ಒಂಟಿಯಾಗಿ ಅಲೆದು ಅಲವೆ ಭಂಟನೆನಿಸಿ ಕಾಯಬೇಕೊ ೫
ದಾಸನಾಗಿ ಬಾಳೋದಕ್ಕೆ ಆಶೆಯಿನ್ನು ತೊಲಗಲಿಲ್ಲ
ಮೊಸವೇನೆ ಬರಿಯ ವೇಷ ದೋಷದೂರ ಶ್ರೀಶವಲಿಯೊ ೬
ಹಿಂದಿನವರ ಕಾಯ್ದಬಗೆಯು ಇಂದಿನವರಿಗೆ ಬರಿಯ ಕಥೆಯು
ಮಂದನೆನ್ನ ಈಗ ಪಿಡಿದು ಮುಂದು ಮಾಡೊ ನಿನ್ನ ಖ್ಯಾತಿ೭
ಶರಣ ಜನರ ಬಿಡನು ಎಂಬ ಖರೆಯಬಿರುದು ನಿನ್ನದೆಂದು
ಹಿರಿಯರಿಂದ ಅರಿತುಬಂದೆ ಪರಮ ಕರುಣಿ ಕೈಯ ಪಿಡಿಯೊ೮
ಕ್ರಿಮಿಯ ಪೊರೆದ “ಕೃಷ್ಣವಿಠಲ” ಶ್ರಮವೆ
ನಿನಗೆ ಯೆನ್ನ ಪೊರೆಯೆ
ಕ್ಷಮಿಸಿ ದೋಷ ಪೊರೆಯೊ ಬೇಗ ನಮಿಪೆ ನಂಬಿ ನಿನ್ನನೀಗ ೯

ಶ್ರೀಹರಿಯ ಮಹಿಮೆಯನ್ನು
೨೦
ದ್ರೋಹಿಯೋ ನಾನಿನಗೆ ದ್ರೋಹಿಯೋ ಪ
ಪಾಹಿ ಬ್ರಹ್ಮಜವಂಶ ಪಾಪ ಬ್ರಾಹ್ಮಣ ಪ್ರಿಯ ಅ.ಪ
ಸ್ವಪ್ನ ಜಾಗ್ರತೆ ನಿದ್ರೆ ಮೋಕ್ಷಾವಸ್ಥೆಯಲ್ಲಿ
ಗೊಪ್ಪ ತೈಜಸ ವಿಶ್ವ ಅಪ್ಪತುರೀಯನಾಗಿ
ತಪ್ಪದೆ ಸಲಹುವ ದಾತ ನಿನ್ನನ್ನು ಬಿಟ್ಟು
ಬೆಪ್ಪನಂದದಿ ನರರ ಯೆಂಜಲ ಬಯಸುವೆ ೧
ಬಿಂಬ ಮೂರ್ತಿಯು ನೀನು ಪ್ರತಿ ಬಿಂಬನಾನಿನಗೆ
ತುಂಬಿ ಅಂತರ್ಬಹಿ ಮೆರೆವ ವಿಷ್ಣುವೆ ನಿನ್ನ
ನಂಬಿದೆ ದೃಢದಿಂದ ಬರಿದೆ ಹಂಬಲಿಸುವೆ
ಬೆಂಬಲನಾಗಿದ್ದು ತುಂಬೊ ನಿನ್ನಯ ಭಕ್ತಿ ೨
ಸತಿ ಸುತ ಪಿತರಲ್ಲಿ ತಿಳಿಯದೆ ನಿನ್ನಿರವ
ಹಿತರವರು ಬರಿದೆಂಬ ಭ್ರಾಂತಿಯ ನೀಗದೆ
ಖತಿಯ ಪಡುವೆನು ಭವದಿ ಕುಮತಿಯನಗೆಮುಂದೆ
ಗತಿಯೇನು ಜಗದೀಶ ಮರೆತು ನಿನ್ನನು ದೇವ ೩
ಕಸವ ರಸವೆಂದು ಬಯಸುವೆ ವಿಷಯವ
ರಸವ ವಿಷವೆಂದು ತೊರೆದು ಜೀವಿಸುತಿರ್ಪೆ
ಅಸಮವಿಷಣವಿಷ್ಣು ಆತ್ಮಾಖ್ಯಾತನ ನಿನ್ನ
ತುಸಸಹ ನೆನೆಯದೆ ಹುಸಿಯ ದಾಸನಾಗಿ ೪
ನನ್ನದಲ್ಲದ ಒಡವೆ ನನ್ನದೆಂದು ತಿಳಿವೆ
ನಿನ್ನ ಸ್ವಾಮಿತ್ವವ ಮರದು ಮೆರೆಯುತಿರ್ಪೆ
ನನ್ನದೇ ಸ್ವಾತಂತ್ರವೆಂದು ತಿಳಿದು ಭವದಿ
ಹುಣ್ಣು ತಿಂದೆನು ದೊರೆಯೆ ಕೊಡದೆ ನಿನ್ನದುನಿನಗೆ ೫
ವೇದ ವೋದುವ ನಾನು ನಾನೆನೀನೆಂಬುವೆ
ಭೇದವ ತಿಳಿಯದೆ ಭಜಿಸುವೆ ಕುವಿದ್ಯೆ
ಬಾದರಾಯಣಗುದರ ಭೇದವ ನುಡಿಯುವೆ
ಮಧ್ವಮಂದಿರ ಕೃಷ್ಣ ನೀನಿಲ್ಲ ವೆನ್ನುತ೬
ಪೂರ್ಣ ಗುಣದವ ನಿನ್ನ ನಿರ್ಗುಣನೆಂಬುವೆನು
ಪೂರ್ಣರಲ್ಲದ ಸುರರ ಸಾಟಿ ನಿನಗೆಂಬುವೆನು
ಪೂರ್ಣಬೋಧರ ಕರುಣ ಕೊಡಿಸದ್ದಿದರೆಯಿನ್ನು
ಜ್ಞಾನ ಮಾರ್ಗವ ಕಾಣೆ ಸ್ವಾಮಿ ಜಗಜ್ಜನಕ ೭
ಜನನ ಮರಣ ರಹಿತ ಜನಿಸುವೆ ನಮ್ಮೊಡನೆ
ಕ್ಷಣ ಬಿಟ್ಟಗಲದಲೆಮಗೆ ಉಂಡುಣಿಸುತಿಪ್ಪೆ
ಅನಿಮಿತ್ತ ಬಂಧುವೆ ಮರೆತು ನಿಮ್ಮುಪಕಾರ
ದನುಜರ ಸೇವಿಸುತ ಹಾಳು ಮಾಡಿದೆ ಬಾಳು ೮
ದಾರಿತಪ್ಪಿ ನಡೆದು ನಿರಯ ಭಾಜನ ನಾದೆ
ದೂರವಾಯಿತು ಮುಕುತಿ ದಾರಿಕಾಯುವರ್ಯಾರೊ
ಧೀರ ಜಯತೀರ್ಥ ವಾಯು ಅಂತರದಿರ್ಪ
ನೀರಜಾಕ್ಷನಮ್ಮ ಶ್ರೀ ಕೃಷ್ಣವಿಠಲನೆ ೯

ಬೇರೆ ಏನನ್ನಾದರೂ ಮಾಡಬಹುದು
೯೬
ಧನವ ಗೆದ್ದವರುಂಟೆ ಜನರೊಳಗೆ ಶ್ರೀನಿವಾಸ ಪ
ಕನಸಿಲಾದರು ಬಿಡದು ಕನಕದಾಶೆಯು ಈಶ ಅ.ಪ.
ಹೆಂಡತಿಯ ಬಿಡಬಹುದು ಮಂಡೆಬೋಳಿಸಬಹುದು
ಕಂಡ ಕಂಡವರೀಗೆ ದಂಡ ಬೀಳಲಿ ಬಹುದು
ಪುಂಡರೀಕಾಕ್ಷನಿಗೆ ತೊಂಡನಾಗಲಿ ಬಹುದು
ದುಡ್ಡು ಕಾಸುಗಳನ್ನು ನೀಡಲಾಗದು ಮನಸು ೧
ನಾಮ ಹಾಕಲಿಬಹುದು ನೇಮಮಾಡಲಿಬಹುದು
ಹೋಮಮಾಡುತಲಿ ಬಹು ಕರ್ಮಿಷ್ಟನೆನಿಸಬಹುದು
ನಾಮ ಪಾಡಲಿಬಹುದು ಧರ್ಮಪೇಳಲಿ ಬಹುದು
ಹೇಮದಾಶೆಯು ಬಿಡದೂ ಶ್ರೀ ಮನೋಹರನೇ ೨
ಜಪಮಾಲೆಧರಿಸುತಲಿ ಉಪವಾಸ ಮಾಡಬಹುದು
ತಾಪಸನು ಎನಿಸುತಲಿ ಪುರಾಣಗಳ ಪೇಳಲಿಬಹುದು
ಶ್ರೀಪತಿಯ ಸೇವಿಸುತ ಜಪತಪವ ನಡೆಸಬಹುದು
ರೂಪಾಯಿ ಮಮತೆ ತಾ ಮುಪ್ಪಿನಲು ತೊಲಗದೈಯ್ಯ ೩
ಯಾತ್ರೆಮಾಡಲಿಬಹುದು ಸ್ತೋತ್ರ ಘಟ್ಯಾಗಿ ಹೇಳಬಹುದು
ನೀತಿ ಪೇಳಲಿಬಹುದು ಪೂತನೆನಿಸಬಹುದು
ಮಾತು ಮಾತಿಗೆವೇದ ಎತ್ತಿ ಪೇಳಲಿಬಹುದು
ಪ್ರೀತಿ ತಪ್ಪದೂ ಯೆಂದೂ ಆಸ್ತಿ ಧನಕನಕದಲಿ ೪
ಲಜ್ಜೆಬಿಡುತಲಿ ಬೇಗ ಗೆಜ್ಜೆಕಟ್ಟಲಿ ಬಹುದು
ಸಜ್ಜನನುಯೆಂದೆನಿಸಿ ಮೂರ್ಜಗದಿ ಮೆರೆಯಬಹುದು
ಮಜ್ಜನಕ ಜಯತೀರ್ಥ ವಾಯು ಹೃದಯದಲಿರ್ಪಜ
ಗಜ್ಜನಕ “ಶ್ರೀಕೃಷ್ಣವಿಠಲ”ನೆ ನೀವಲಿವ ತನಕ ೫

ಕೃಷ್ಣನನ್ನು ನಂಬದೆ
೮೩
ನಂಬದೆ-ನಾ-ಕೆಟ್ಟೆ ಪ
ಅಂಬುಜಾಕ್ಷನೆ ನಿನ್ನಾ ಅ.ಪ
ಗಳಿಸಿತು ಬಹುಕಾಲಾ ವಿಷಯಕೆ ಆಯ್ತೆಲ್ಲಾ
ಅತಿಶಯ ವಾಯ್ತಾಶೇಗತಿಯನು ನಾಕಾಣೆ
ಮತಿವಂತ ವ್ರತತತಿ ಜಪಜಪ ಹೋಮಕೆ
ಪತಿಗತಿಯೆನಿಸುವ ಗತಿದಾಯಕ ನಂಬದೆ ೧
ಬಂದೆನು ಬಹುಸಾರಿ ನೊಂದೆನು ಈ ಪರಿಯೇ
ಕಂದಿಸೆ ಯಮರಾಯಾ ಬಂಧುವು ಯಾರೈಯ
ಇಂದಿರೆ ಮನಶಶಿ ಸುಂದರಮೂರ್ತಿ
ಮಹೇಂದ್ರ ಪರಾತ್ಪರ ಪೂರ್ಣಾನಂದನ ೨
ಮಾಡಿಹೆನಪರಾಧ ಪಾಡದೆ ತವ ಮಹಿಮೆ
ಬೇಡುವೆ ನಿಜಭಕ್ತಿ ಓಡಿಸು ಈ ಬುದ್ಧಿ
ಓಡಿಸೆ ಜಗ ಕಾಪಾಡುತಜೀವರ
ಈಡು ದಿಕ್ಕಿಲ್ಲದ ಗೂಢ ಸ್ವತಂತ್ರನೆ ೩
ಜ್ಞಾನವ ನಾಬಿಟ್ಟೆ ಹೀನನು ಹೇ ಧೊರೆಯೆ
ಜ್ಞಾನದ ಶರಣೆಂಬೆ ಏನನು ಕೊಡಲಾರೆ
ಆನತ ಬಂಧುವನಂತ ಗುಣಾರ್ಣವ
ಶ್ರೀನಿಧಿ ಸೃಷ್ಟಿವಿನೋದವ ಗೈವನ೪
ಬಂದಿಯು ನಾನೈಯಾ ಬಂಧಕ ನೀನೈಯ
ಎಂದಿಗುನಾದಾಸಾ-ತಂಡಿಡು ನೀಲೇಸಾ
ನಂದ ಮುನೀಂದ್ರ ಸುಮಾನಸ ಮಂದಿರ
ನಂದದ ಶ್ರೀವರ “ಶ್ರೀ ಕೃಷ್ಣವಿಠಲ”ನ೫

ಇದೂ ಸಹ ಶ್ರೀ ಜಯತೀರ್ಥರ ಸ್ತುತಿ.
೬೪
ನಂಬಿ ಭಜಿಸಿರೋ _ ಜನರೆಲ್ಲರೂ _ ನಂಬಿ ಭಜಿಸಿರೊ ಪ
ಅಂಬುಜಾಕ್ಷ ಪ್ರಿಯಾ _ ನಮ್ಮ ಜಯರಾಯರಾ ಅ.ಪ
ಕಾಶಿಯಾತಕೇ _ ಬಲು ಕ್ಲೇಶ ಯಾತಕೇ
ಕಾಸು ಕಳಕೊಂಡು _ ಅತಿಘಾಸಿ ಯಾತಕೇ
ಶ್ರೀಶನಂಘ್ರಿ ಭಜಕರಾದ _ ವಾಸವಾವೇಶರಿವರ ಪಾದ
ಆಶೆಯಿಂದ ಭಜಿಸಲೂ _ ವಾಸುದೇವನೊಲಿವನು ೧
ನೇಮ ಯಾತಕೇ _ ನಿಷ್ಠೆ ಯಾತಕೇ
ಹೋಮ ಯಾತಕೇ _ ಕಷ್ಟಯಾತಕೇ
ಪ್ರೇಮದಿಂದಲೀ _ ಇವರ ಭಜಿಸಲೂ
ತಾಮಸಗುಣ _ ತಾನೇ ಓಡೋದು ೨
ಮಧ್ವಶಾಸ್ತ್ರದ _ ಚಂದ್ರರಿವರು
ಅದ್ವೈತವಾದವ _ ಗೆದ್ದಸಿಂಹರು
ಮಧ್ವರಾಯರಾ _ ಮುದ್ದುಮೊಮ್ಮಗ
ಸಿದ್ಧಸೇವ್ಯರು _ ಸುಧೆಯ ಕರ್ತರು ೩
ಇವರ ಧ್ಯಾನವೂ _ ಜ್ಞಾನದಾಯಕಾ
ಇವರ ಪೂಜೆಯೂ _ ಪಾಪನಾಶನ
ಇವರ ಸ್ಮರಣೆ _ ಕಲಿವಿ ಭಂಜನೆ
ಇವರ ಸೇವೆಯು _ ಮುಕ್ತಿಸೋಪಾನ ೪
ಶ್ರೀಕಳತ್ರನಾ _ ಆಜ್ಞೆಯಿಂದಲಿ
ನಾಕದಿಂದಲೀ _ ಇಲ್ಲಿ ಬಂದರು
ಏಕಮನದಿ _ ಶರಣು ಹೋಗಲು
ಪಾಪನಾಶನ _ ಪುಣ್ಯವೆಗ್ಗಳಾ ೫
ಮಳಖೇಡದೀ _ ನೆಲಸಿ ಇಪ್ಪರೂ
ನಳಿನನಾಭನ _ ಒಲಿಸುತನುದಿನಾ
ನಲಿಸಿ ಮನದೊಳು _ ಒಲಿಸುವಾತನೆ
ಶೀಲವಂತನು _ ಧನ್ಯ ಮಾನ್ಯನು೬
ನರನ ವೇಷದಿ _ ಸುರರ ಒಡೆಯನೊ
ಹರಿಯ ಕರುಣದಿ _ ಮೆರೆಯುತಿರ್ಪರು
ಶರಣಜನರ _ ದುರಿತರಾಶಿಯ
ತರಿದು ಶೀಘ್ರದಿ _ ಪೊರೆಯುತಿಪ್ಪರು೭
ಎತ್ತಿನ್ವೇಷದಿ _ ವಾತದೇವನ
ಪ್ರೀತಿ ಪಡೆದು _ ಖ್ಯಾತಿಆದರು
ಮತ್ತೆ ಯತಿಯಾಗಿ _ ಕೀರ್ತಿಯಿಂದಲಿ
ಬಿತ್ತರಿಸಿದರು, ತತ್ತ್ವಶಾಸ್ತ್ರವ ೮
ಕಾಗಿನೀನದೀ _ ತೀರವಾಸರು
ವಿಗತರಾಗರು _ ನಿತ್ಯತೃಪ್ತರು
ಜಾಗರೂಕದಿ _ ಪೊಗಳಿ ಪಾಡಲು
ನಿಗಮವೇದ್ಯನು _ ಬೇಗ ಪೊರೆಯುವ ೯
ಶೇಷಾವೇಷದಿ _ ವಾಸಿಸುವರು
ಶೇಷಶಯನನ _ ದಾಸರೀವರು
ಬೆಸರಿಲ್ಲದೆ _ ಆಸೆ ತೊರೆದು
ದಾಸನೆನ್ನಲು _ ಪೋಷಿಸೂವರು ೧೦
ಕೆರೆಯ ಏರಿಯು _ ಬಿರಿದು ಪೋಗಲು
ಮೊರೆಯ ಇಟ್ಟರು _ ಇವರ ಅಡಿಗೆ
ಭರದಿ ಕರುಣದಿ ಹರಿಯ ಸ್ತುತಿಸಿ
ಕರದಿ ಮುಟ್ಟಲು _ ಏರಿ ನಿಂತಿತು ೧೧
ಯರಗೋಳದ _ ಗುಹೆಯ ಒಳಗೆ
ಮರುತದೇವನ _ ಕರುಣದಿಂದಲಿ
ಪರಿಪರಿಯಲಿ _ ಬರೆದು ಟೀಕೆಯ
ಕರೆದು ಸುರಿದರು _ ತತ್ತ್ವಕ್ಷೀರವ ೧೨
ಇವರ ನಾಮವು _ ವಿಜಯ ಸೂಚಕ
ಇವರ ಕೀರ್ತನೆ _ ಭವಕೆ ಔಷಧ
ಇವರ ಕರುಣದಿ _ ಅನಿಲನೊಲಿವನು
ಇವರ ಶಿಷ್ಯರೇ _ ಅವನಿಶ್ರೇಷ್ಠರು ೧೩
ಸರ್ವಕ್ಷೇತ್ರದ _ ಯಾತ್ರೆಯಾ ಫಲ
ಸರ್ವದಾನವ _ ಮಾಡಿದ ಫಲ
ಇವರ ಪಾದವ _ ನಂಬಿ ಭಜಿಸಲು
ತವಕದಿಂದಲಿ _ ತಾನೇ ಬರುವುದು ೧೪
ಜಯತೀರ್ಥರ _ ಹೃದಯವಾಸಿಯು
ವಾಯುಹೃದಯಗ _ ಕೃಷ್ಣವಿಠ್ಠಲನು
ದಯದಿ ನುಡಿಸಿದಾ _ ಪರಿಯು ಪೇಳಿದೆ
ಜೀಯ ಕೃಷ್ಣನೆ _ ಸಾಕ್ಷಿ ಇದಕ್ಕೆ೧೫

ಕೃಷ್ಣನನ್ನು ಅವನ ಅನೇಕ
೨೧
ನಂಬಿದೆನೊ ನಿನ್ನ _ ನಿಖಿಳ ಗುಣಗಣ ಪೂರ್ಣ ಪ
ಅಂಬುಜಾಸನ ಜನಕ ನರಹರಿ
ಅಂಭ್ರಣೀ ಜಗನ್ನಾಥ ನಾಯಕ
ಬಿಂಬ ವಿಷ್ಣುವೆ ನಿಖಿಳವಿಶ್ವಕೆ
ತುಂಬಿ ಭಕ್ತಿಯ ಕಾಯೋ ಕರುಣಿ ಯೇ ಅ.ಪ.
ತಂದೆಕಾರಣ ಭವದೀ- ನೀ ಎನ್ನ
ಬಂದೆನಲ್ಲದೆ ನಿಜದೀ- ಸುಖಪೂರ್ಣ
ನಿಂದು ನಡೆಸದೆ ಭವದೀ- ದಾಟಿನ್ನ
ಎಂದಿಗಾದರು ಗೆಲ್ಲುವೆನೆ ಘನ್ನ
ಬಂಧನಪ್ರದ ನೀ ಬಂಧಮೋಚಕ
ತಂದ ವಿಷ್ಣುವೆ ಮೂಲಕಾರಣ
ವೆಂದು ಶೃತಿಗಳವೃಂದ ನುಡಿವುವು
ಬಂದು ನಿನಗಿಂತಧಿಕರಾರೈ
ನಿಂದು ಹೃದಯದಿ ಸರ್ವಕಾಲದಿ
ತಂದು ಉಣಿಸುವೆ ಸಕಲ ವಿಷಯವ
ಬಂಧಿ ನಾನಿಹೆ ಜಡವೆ ನೀ ಬಿಡೆ
ಮುಂದಿನಾಗತಿ ಬೇಗ ತೋರೈ
ಇಂದಿರೇಶ ಮಹೇಂದ್ರ ಸುಖಮಯ
ಕಂದರಾಶ್ರಯ ಬ್ರಹ್ಮಮಂದಿರ
ನಂದಿವಾಹನ ತಾತ ವಿಭುವರ
ಚಂದಗೋಚರ ಸಾರ್ವಭೌಮನೆ
ಕೂಂದುನಕ್ರನ ಗಜವ ಸಲಹಿದೆ
ನಂದನೀಡಿದೆ ಪಾರ್ಥಮಡದಿಗೆ
ತಿಂದು ಎಂಜಲ ಕಾಯ್ದೆ ಶಬರಿಯ
ಗಂಧ ಕೊಳ್ಳುತ ಕಾಯ್ದೆ ಕುಬ್ಜೆಯ
ಕಂದ ಕೂಗಲ್ ಬಂದೆ ಕಂಭದಿ
ಇಂದ್ರ ಗೋಸುಗ ಬಲಿಯ ಬೇಡದೆ
ಮಂದರಾದ್ರಿಯ ಪೊತ್ತೆ ಸುರರಡೆ
ಸುಂದರಾಂಗಿಯುಆದೆ ಹಾಗೆಯೆ
ಹಿಂದೆ ಈತೆರ ನಿತ್ಯತೃಪ್ತನೆ
ಬಂದು ಸಲಹಿದ ಭಕ್ತವೃಂದವ
ಮಂದನಾದರು ಶರಣುಬಿದ್ದವ
ನೆಂದು ಸಲಹೈ ಪೂರ್ಣಕರುಣಿಯೇ೧
ಕೂಡಿಸುತ ಮನ ವಿಷಯ ಬಲೆಯಲ್ಲೀ
ಮಾಡಿಸುವೆ ಮಾಡಿದ್ದ ದಿನದಿನದೀ
ಗೂಢ ನಿನ್ನಯ ಭಕ್ತಿ ಕೊಡಲೊಲ್ಲೀ
ಕೇಡುಮೋಹ ಸಜಾಡ್ಯ ಹರಿಸಿಲ್ಲೀ
ಓಡಿಓಡಿಸೆ ಜಗವು ನಡೆವುದು
ನೋಡಿನೋಡಿಸೆ ನಾವು ನೋಳ್ಪೆವು
ಮಾಡಿಮಾಡಿಸೆ ಕರ್ಮವಾಹುದು
ಪ್ರೌಢ ನಿನ್ನಯ ಬಲದ ವಿಶ್ವಕೆ
ಕಾಡಿಕಾಡಿಪ ವಿಷಯ ಬಿಡಿಸುತ
ಹಾಡಿಹಾಡಿಸಿ ನಿಮ್ಮ ಕೀರ್ತನೆ
ಆಡಿಆಡಿಸಿ ಸಾಧುಸಂಗದ
ಜಾಡುತೋರಿಸೊ ಭಕ್ತಿ ಮಾರ್ಗದ
ಕ್ರೋಢನರಹರಿ ಮತ್ಸ್ಯವಾಮನ
ಪ್ರೌಢ ಭಾರ್ಗವ ರಾಮಕೃಷ್ಣನೆ
ಗಾಡಿಕಾರ ಪರೇಶ ಬುದ್ಧನೆ
ದೂಡು ಕಲಿಯನು ಕಲ್ಕಿದೇವನೆ
ಕೂಡು ಮನದಲಿ ಬಾದರಾಯಣ
ನೀಡು ಜ್ಞಾನವ ಜೀಯ ಹಯಮುಖ
ಮಾಡು ದತ್ತಾತ್ರೇಯ ಕೃಪೆಯನು
ಈಡುಕಾಣದು ಕಪಿಲಮೂರ್ತಿಯೆ
ಬೀಡುಗೈದಿಹ ಬೀಜ ನಿದ್ರೆಯು
ನೋಡಗೊಡದೈ ನಿನ್ನತುರ್ಯನೆ
ನಾಡುದೈವಗಳನ್ನು ಭಜಿಸಲು
ಓಡದದು ಎಂದೆಂದು ಸತ್ಯವು
ಮಾಡುತಲಿ ಸಾಷ್ಟಾಂಗ ನತಿಗಳ
ಜೋಡಿಸಿಹೆ ಶಿರ ಪಾದಪದ್ಮದಿ
ಗಾಢಪ್ರೇಮದಿ ಸಲಹು ಭೂಮನೆ
ಮೂಡಿಸುತನಿಜ ಭಕ್ತಿ ಜ್ಞಾನವ ೨
ಎನ್ನ ಯೋಗ್ಯತೆ ನೋಡೆ ಫಲವಿಲ್ಲ
ನಿನ್ನಕೃಪೆ ತೋರದಿರೆ ಗತಿಯಿಲ್ಲ
ಅನ್ಯ ಹಾದಿಯು ಯಾವುದೆನಗಿಲ್ಲ
ಘನ್ನಚಿತ್ತಕೆ ಬರಲು ತಡಿಯಿಲ್ಲ _ ಹೇನಲ್ಲ
ಪೂರ್ಣಜ್ಞಾನಾನಂದ ಶಾಶ್ವತ ಪೂರ್ಣ ಚಿನ್ಮಯ
ಪೂರ್ಣ ಮೂಲದಿ ಪೂರ್ಣ ನಂದದಿ
ಪೂರ್ಣ ಅವಯವಿ ಪೂರ್ಣಶಕ್ತನೆ
ಪೂರ್ಣಬೋಧ ಮುನೀಂದ್ರ ವಂದಿತ
ಪೂರ್ಣಕರುಣಾ ಶರಧಿ ದೇವನೆ
ಪೂರ್ಣನಿತ್ಯಾನಂದ ದಾಯಕ
ಪೂರ್ಣಮಾಡೈ ಬಯಕೆ ತೂರ್ಣದಿ
ನೀನೆ ಸರ್ವಾಧಾರ ಪ್ರೇರಕ ನೀನೆ ರಕ್ಷಕ ಸರ್ವಶಿಕ್ಷಕ
ನೀನೆ ಸೀಮಾಶೂನ್ಯ ನಿಶ್ಚಯ ನೀನೆಪೊಗಳಿತನಿಖಿಳವೇದದಿ
ನೀನೆ ವಾಚ್ಯನು ಸರ್ವಶಬ್ದದಿ ನೀನೆ ಮುಕ್ತಾಯಕ್ತ ಸೇವಿತ
ನೀನೆ ದೋಷವಿದೂರ ಸ್ಥಾಣುವು ನೀನೆ ಸೃಷ್ಟಾ ದ್ಯಷ್ಟಕರ್ತೃವು
ನಿನ್ನಸಮ ಉತ್ರ‍ಕಷ್ಟರಿಲ್ಲವು ನಿನ್ನ ದಾಸರು ಸರ್ವಜೀವರು
ಭಿನ್ನರೈ ಸರ್ವತ್ರ ಸರ್ವರು ನಿನ್ನ ದಾಸರ ಭಾಗ್ಯಬೇಡುವೆ
ಜನ್ಮಜನ್ಮಕು ಇದನೆ ಬಯಸುವೆ ನಿನ್ನ ನಂಬಿಹೆ ನಿನ್ನನಂಬಿಹೆ
ಘನ್ನಜಯಮುನಿ ವಾಯುಮಂದಿರ ಚೆನ್ನ
ಸಿರಿಪತಿ ಕೃಷ್ಣವಿಠಲನೇ ೩

ಇದೂ ಸಹ ಶ್ರೀ ರಾಘವೇಂದ್ರ
೬೯
ನಂಬಿದೇ ಗುರುವರಾ ನಂಬಿದೇಪ
ನಂಬಿದೆ ಗುರುಸಾರ್ವಭೌಮಾ
ತುಂಟುಮನದೊಳು ಹರಿಭಕ್ತಿ ನಿಸ್ಸೀಮಆಹಾ
ಅಂಬುಜೋದ್ಭವಪಿತನ ಕಂಭದಿ ತೋರಿದ
ಶಂಬರ ಕುಲದೀಪ ಪ್ರಹ್ಲಾದ ವ್ಯಾಸಮುನಿಯೇ ಅ.ಪ.
ದಾಸನೆಂದಡಿಗೆ ಬಿದ್ದೆನೋ ಈಗ
ದೋಷ ನಾಶಮಾಡೋ ಎನಗೆ ಬೇಗ ಆಹಾ
ವಾಸುಕಿಶಯನನ ಬ್ಯಾಸರದೆ ಸ್ತುತಿಸಿ
ಈಶನ ಸರ್ವತ್ರವ್ಯಾಪ್ತಿಯನರುಹಿದ ಭೂಪ ೧
ಪಾತಕರೊಳಗೆ ಅಗ್ರೇಸರನಾನು
ಪೂತಮಾಡುವರೊಳಗೆ ನಿಸ್ಸೀಮ ನೀನು ಆಹಾ
ತಾತನಪ್ಪಣೆಯಂತೆ ವ್ಯಾಸರಾಜಾಎನಿಸಿ
ಖ್ಯಾತಿಯಿಂದಲಿ ತರ್ಕತಾಂಡವರಚಿಸಿ ಮೆರೆದೇ ೨
ತಾಪಸಶ್ರೇಷ್ಠ ಬ್ರಹ್ಮಣ್ಯಕುವರನಾದೆ
ಶ್ರೀಪಾದರಾಯರ ಪ್ರಿಯ ಶಿಷ್ಯನಾದೆ ಆಹಾ
ಗೋಪಾಲಕೃಷ್ಣನ್ನ ಕುಣಿಕುಣಿದಾಡಿಸಿ
ಭೂಪನ ಕುಹಯೋಗ ಕಳೆದ ಯತಿಕುಲತಿಲಕ ೩
ಮಧ್ವಶಾಸ್ತ್ರಗಳ ಮಂದರರಿಯದಿರಲು
ಮುದದಿಂದ ಪದಸುಳಾದಿಗಳ ರಚಿಸಿದೆ ನೀನು ಆಹಾ
ಆದರದಿಂದಲಿ ಪುರಂದರಕನಕರಿಗೆ
ಸದುಪದೇಶವ ಕೊಟ್ಟು ಜಗದುದ್ಧಾರಮಾಡಿದ ಪ್ರಭುವೇ ೪
ಮತ್ತೆ ಪುಟ್ಟಿದೆ ವೆಂಕಣ್ಣಭಟ್ಟ ನೆಂದೆನಿಸೀ
ಮತ್ತ ಕೇಸರಿಯಂತೆ ಮಧ್ವಶಾಸ್ತ್ರದಿ ಮೆರೆದೇ ಆಹಾ
ಕತ್ತಲೆ ಅದ್ವೈತವಾದಗಳಿಗೆಲ್ಲಾ
ಕತ್ತಿಎನಿಸಿದ ಪರಿಮಳಾಚಾರ್ಯ ಗುರುವೇ ೫
ವಿಪ್ರನು ದಿಟ್ಟತನದಿ ನಿನ್ನ ಗಂಧವ ತೇದುಕೊಡುಎನೆ
ಕ್ಷಿಪ್ರದಿ ತೋರಿದೆ ನಿನ್ನ ಮಹಿಮೆಯಜಗಕೇ ಆಹಾ
ಅಪ್ಪ ಶ್ರೀರಾಮರ ಪೂಜಿಸಬೇಕೆಂದು
ಒಪ್ಪಿಸನ್ಯಾಸವ ರಾಘವೇಂದ್ರನಾದ ೬
ಮುದದಿ ದೇಶ ದೇಶವ ಚರಿಸಿದೇ
ಸಮಯದಿ ಸುಜನರಕ್ಲೇಶಗಳಳಿದೇ ಆಹಾ
ಮೋದಮುನಿಯ ಗ್ರಂಥಗಳಿಗೆಲ್ಲ ಟಿಪ್ಪಣಿ ಮಾಡುತ
ಬುಧರಿಗೆ ತತ್ವ ಕನ್ನಡಿ ತೋರ್ದ ಗುಣಗಣನಿಧಿಯೇ೭
ಪರಿಪರಿ ಮಹಿಮೆಯ ತೋರುವ ಗುರುವೇ
ಸುರತರು ಅಂದದಿ ಹರಕೆ ಗಳೀವೆ ಪ್ರಭುವೇ ಆಹಾ
ಮೂರೆರಡು ಒಂದುನೂರು ವರುಷ ಪರಿಯಂತ
ಸಾರಿಸಾರಿದವರ ಪೊರೆದು ಮೆರೆಯುವ ದಿವಿಜವಂದಿತ ಗುರು೮
ದಯದಿಂದ ನೋಡೆನ್ನ ದೀನೋದ್ಧಾರ
ಜೀಯನೆ ಭವ ಬಿಡಿಸು ಕರುಣಾಸಾರ ಆಹಾ
ಜಯತೀರ್ಥವಾಯ್ವಂತರ್ಗತ ಶ್ರೀಕೃಷ್ಣ ವಿಠಲನ ಹೃ-
ದಯಮಂದಿರದಿ ತೋರೆನಗೆ ಗುರುಸಾರ್ವಭೌಮ ೯

Leave a Reply

Your email address will not be published. Required fields are marked *