Categories
ರಚನೆಗಳು

ಕೃಷ್ಣವಿಠಲದಾಸರು

ಸಜ್ಜನರನ್ನು ನೋಯಿಸುವುದರಿಂದ
೧೦೩
ಸಜ್ಜನರ ಸಂತಾಪ-ಕುಲಕೆ ಮೃತ್ಯುವುಕಂಡ್ಯ-ಮನವೇ ಪ
ನಿರ್ಜರೇಶಗು ಹಾನಿ-ತಪ್ಪದೈ ಇದರಿಂದ ಅ.ಪ.
ಅಂದು ದುರ್ಯೋಧನನು ಸಂದ ಸಭೆಯೊಳು ಪಾಂಡು
ನಂದನರ ಸತಿಮಾನ ಕಂದಿಸಲೆತ್ನಗೈಯೆ
ಇಂದುವದನೆಯ ತಾಪ ಬಂದು ಬಡಿಯಲು ಖಳಗೆ
ಬಂಧು ಬಳಗವುಸಹಿತ ಪೊಂದಿದನೆ ಯಮಸದನ ೧
ತ್ರೇತೆಯಲಿ ರಾವಣನು ನೀತಿಮರೆತವನಾಗಿ
ಖ್ಯಾತ ನಂದಿಯ ನೋಡಿ ಕೋತಿ ಚೇಷ್ಟೆಯನಡಿಸೆ
ಸೀತೆ ದ್ರೋಹದಿ ಹಾಗೆ ವ್ರಾತ್ಯ ಕುಲಸಹಿತ
ತಾ ನಾಥ ರಾಮನ ಶರಕೆ ತುತ್ತಾಗಿ ಪೋದ ಖರೆ ೨
ಇಂದ್ರ ನೆನಿಸಿದ ನಹುಷ ಪೊಂದಿದನು ಸರ್ಪತ್ವ
ಕುಂದದಾ ಯಾದವರು ಪೊಂದಿದರು ಕುಲನಾಶ
ಚಂದ್ರಮೌಳಿಯ ಅಂಶ ಚಂಡಮುನಿ ದೂರ್ವಾಸ
ನೊಂದು ಧಾವಿಸಿ ಜಗದಿ ಬಂದು ನಿಂತುದನರಿಯ ೩
ಗರವ ಕುಡಿಯಲಿಬಹುದು ಶರಧಿ ಧುಮುಕಲಿಬಹುದು
ಉರಿಯ ನುಂಗಲಿ ಬಹುದು ಉರಗವನು ಪಿಡಿಯಬಹುದು
ಹರಿಯ ಶರಣರ ದ್ರೋಹ ತಿರುಗಿದರು ಮುರ್ಲೋಕ
ಹರಿಸಲಾಗದು ಅವರೆ ಕರುಣಗೈಯದೆ ಮತ್ತೆ ೪
ಭಕ್ತವತ್ಸಲ ಹರಿಯು ಭಕ್ತತಾಪವ ಸಹಿಸ
ಶಕ್ತಿಸಾಹಸ ಜರಿದು ಉಕ್ತಿಲಾಲಿಸಿ ಬೇಗ
ಕರ್ತೃ ಹರಿಯೆಂದರಿತು ಭಕ್ತರನು ಸೇವಿಸುತ
ನಿತ್ಯದೊರೆ “ಶ್ರೀಕೃಷ್ಣವಿಠಲ” ಕರುಣವ ಘಳಿಸು ೫

ಐಹಿಕ ಸುಖದ ರುಚಿಯನ್ನೆಲ್ಲ
೧೦೪
ಸುಖವೇ ನೆಂಬುದನು ಇಂದು ಕಂಡೇ ಪ
ವಿಖನಸಾರ್ಚಿತ ಪಾದ ಭಜನೆ ಮಾಡುವದೊಂದೆ ಅ.ಪ.
ಪುಟ್ಟಿದಾರಾಭ್ಯ ಬಹುದಿಟ್ಟನಾಗಿಯೆ ಬಾಳು
ಅಟ್ಟಿಮೆರೆಯುವ ಬಯಕೆ ವಿಟ್ಟು ಮನದಲಿ ಬಹಳ
ಕಷ್ಟಪಟ್ಟೆನು ಘಳಿಸೆ ವಿತ್ತರಾಶಿಯ ವಿಪ್ರ
ಶ್ರೇಷ್ಟಧರ್ಮವ ಬಿಟ್ಟು ವ್ಯರ್ಥ ವಿದ್ಯೆಯ ನೋದಿನೋದಿ
ಅಷ್ಟಕರ್ತನು ಬಯಕೆ ಬಟ್ಟಬಯಲನು ಗೈದು
ಕೊಟ್ಟು ಜ್ಞಾನದ ಕಣ್ಣು ನೆಟ್ಟನೆ ನೊಡೆನಲು
ಬಟ್ಟು ಸುಖವನೆ ಮೆಲ್ವ ಜಟ್ಟಿ ಜಗದಲಿ ಕಾಣೆ
ಬೆಟ್ಟ ಸಮ ಕಷ್ಟವಿದೆ ಎಳ್ಳಷ್ಟು ಭವ ಸುಖಕೆ ೧
ಹೆಂಡತಿಯ ಸುಖವೆಂದೆ ಕೆಂಡಬಡತನ ಸೋಕೆ
ಗಂಡು ಬಯಕೆಗಳೆಲ್ಲ ಉಂಡುದಣಿಯಲಿಲ್ಲ
ಭಂಡ ಬಾಳಿದು ಎಂದು ಮಂಡೆ ಚಚ್ಚುತ ನಿತ್ಯ
ತುಂಡು ಆದಳು ಅವಳು ಬೆಂಡು ಆದೆನುನಾನು
ಹಿಂಡು ಬಳಗಗಳೆಲ್ಲ ಉಂಡು ದಣಿದರು ನಗೆಯ
ಹಿಂಡಿ ಪರಜನ ಪ್ರಾಣ ಉಂಡು ಬದುಕಿಹೆ ಸ್ವಾಮಿ
ಮುಂಡೆ ಗಿಂತಲು ಹೀನ ಷಂಡನಾಗಿಹೆ ಸ್ವಾಮಿ
ಪಾಂಡುರಂಗನೆ ನಿನ್ನ ತೊಂಡನಾದರೆ ಧನ್ಯ ೨
ನೆಂಟರೆಲ್ಲರು ವಿತ್ತ ಅಂಟಿರಲು ಅಂಟುವರು
ಗಂಟು ಇಲ್ಲದಮೇಲೆ ಗಂಟುಮೋರೆಯ ನೇಮ
ಒಂಟಿಗನೆ ಜೀವನಿಹ ನೆಂಟ ಬಿಂಬನೆ ಒಬ್ಬ
ಭಂಟನೆಂದರೆ ಪಿಡಿವ ಶುಂಠ ಬಿಟ್ಟವ ಸತ್ಯ
ಕಂಟಕವು ವಿಷಯತತಿ ಕಜ್ಜಿತಿನಸಿನ ತೆರದಿ
ಎಷ್ಟು ಸೇವಿಸಲಷ್ಟು ತಂಟೆನೀಡುವವೇನೆ
ಕುಂಠವಾದರು ಕರುಣ ಅಂಟಿಮನಸಿಗೆ ಭಾಧೆ
ಉಂಟುಮಾಡುವವು ವೈಕುಂಠ ನಾಯಕಕಾಯೊ ೩
ಬಾಡಿಗೆಯ ಮನೆಯಂತೆ ಗಾತ್ರವಿದು ಜೀವನಿಗೆ
ಹೂಡಿಹನು ಭವಯಾತ್ರೆ ಓಡಿಹೊಹುದು ತಾನೆ
ಆಗಿ ಮುಗಿಯಲು ಆಟ ಪ್ರೌಡ ಹರಿಪುರ ದಾರಿ
ನೋಡಿಕೊಂಡವ ಜಾಣ ಕೇಡು ಮತ್ತಗೆ ಸಿದ್ಧ
ಮಾಡುತಲಿ ವಿಧಿಗಳನು ದೂಡುತಲಿನಿಜೀವ
ಕೂಡುತಲಿ ಸಜ್ಜನರ ಹಾಡುತಲಿ ಹರಿಗಾನ
ಜೋಡಿಸುತ ಹರಿಭಕ್ತಿ ಬೇಡದಲೆ ಏನೊಂದು
ಬಾಡದಿರೆ ದುಃಖ ಬರೆ ನೋಡುವನು ನಿಜ ಸುಖವ ೪
ಹೆಂಡತಿಯು ಸುಗುಣಿ ಇರೆ ಗಂಡನಿಹ ದುರ್ಮಾರ್ಗ
ಗಂಡ ಮೃದು ತರವೆನ್ನೆ ಹೆಂಡತಿಯು ಕರ್ಕಸಿಯು
ಕುಂಡಲಿಯ ಸಿರಿಯೆನ್ನೆ ಮಂಡೆಯಲಿ ಮೆದುಳಿಲ್ಲ
ಹೆಂಡ ಕುಡುಕರು ಸುತರು ಉಂಡುಸುಖಿಸೆ ರೋಗ
ಮುಂಡೆಯರ ಚಲುವಿಕೆಯು ಶಂಡಸಹ ಸಂಸಾರ
ಭಂಡ ಮಕ್ಕಳ ಬಾಳು ಪುಂಡಜನ ಸಹವಾಸ
ಕಂಡು ಸಹಿಸದ ನೆಂಟ ಉಂಡು ದೂರುವ ಬಳಗ
ದಂಡವಲ್ಲವೆ ಮತ್ತೆ ಕೊಂಡು ಮಾಡುವದೇನು ೫
ಹೇಸಿ ಭವ ನಿಜಗುಣವೆ ಕ್ಲೇಶದಾಯಕ ವಿರಲು
ಲೇಸು ದೊರಕುವದುಂಟೇ ಏಸು ಕಾಲವು ಕಳಿಯೆ
ಏಸು ಕಡಿಯಲು ನೀರ ಸೂಸುವುದೆ ನವನೀತ
ಹೇಸಿಗೆಯ ದುರ್ಗಂಧ ನಾಶವಾಗುವುದುಂಟೇ
ಆಶೆ ವಿಷಯದಿ ಬಿಡದೆ ಕ್ಲೇಶ ತೊಲಗದು ಎಂದು
ದಾಶರಥಿಯ ಮನಮುಟ್ಟಿ ದಾಸ ನಾಗದ ತನಕ
ಭಾಸವಾಗದು ಜ್ಞಾನ ಶ್ರೀಶ ಕಾಣಿಸ ತನ್ನ
ದೋಷಿಯಾಗದೆ ಹರಿಗೆ ಮೀಸಲೆನ್ನಿರಿ ಎಲ್ಲ ೬
ನಂಬಿ ಮತಿಮತ ತತ್ವ ವಿಷಯ ಹಂಬಲವಳಿದು
ಡಿಂಬಗತ ಹರಿ ಬಿಂಬ ಧ್ಯಾನ ಮಾರ್ಗವ ಕಂಡು
ಅಂಬುಜಾಕ್ಷ ನಮ್ಮ “ಶ್ರೀ ಕೃಷ್ಣವಿಠಲ”ನ್ನ
ತುಂಬಿ ಹೃದಯದದಿ ಸತತ ಪರಮ ಸಂಭ್ರಮದಿಂದ
ತಂಬೂರಿ ಮೀಟುತ್ತ ಗೆಜ್ಜೆ ಸಹ ಕುಣಿಕುಣಿದು
ಅಂಬಕದಿ ಸುಖ ಬಾಷ್ಪ ಸುರಿಸುತ್ತಹರಿನೆನೆದು
ಅಂಬುಜಾಸನ ಸುರಕದಂಬ ಕರುಣವ ಗಳಿಸಿ
ಅಂಬೆ ಸಿರಿಪತಿ ಚರಣದಿಂಬು ಬೇಡುವದೊಂದೇ ೭

ಸೂರ್ಯಾಂತರ್ಗತನಾದ
೫೨
ಸೂರ್ಯಾಂತರ್ಗತ ಹರಿ ನಮೋ ನಮೋ
ವೀರ್ಯಾದಿಗಳದಾತ ನಮೋ ನಮೋ ಜಗಬಿಂಬ ಪ
ತೋಯಜಾಕ್ಷನ ವಿಷ್ಣು ನಮೋನಮೋ
ಜೀಯ ಪಾಲಿಸುದೇವ ನಮೋನಮೋ ಮಮಬಿಂಬ ಅ.ಪ
ಆನಂದ ಪರಿಪೂರ್ಣ ನಮೋನಮೋ
ಏನೆಂಬೆ ಪರಮೋಚ್ಚ ನಮೋನಮೋ
ಶ್ರೀನಾಥ ಸಿರಿಪೂರ್ಣ ನಮೋನಮೋ
ಏನೆಂಬೆ ಪರದೋಚ್ಚ ನಮೋನಮೋ
ಶ್ರೀನಾಥ ಸಿರಿಪೂರ್ಣ ನಮೋನಮೋ
ನೀನಾಯಕ ಸ್ವತಂತ್ರ ನಮೋನಮೋ ಜಗಜೂತಿ ೧
ನಾಲ್ಕರು ನಿಜರೂಪಿ ನಮೋನಮೋ
ಕಾಲಾದಿಗಳ ನಾಳು ನಮೋನಮೋ
ಏಳೆರಡು ಜಗಪಾಲ ನಮೋನಮೋ
ಪಾಲಾಬ್ದಿಶಯನ ಏಕ ನಮೋ ನಮೋ ಕೇವಲನೆ ೨
ಸರ್ವಾಂಗರ್ಬಹಿವ್ಯಾಪ್ತ ನಮೋನಮೋ
ಸರ್ವಾಶ್ರಯನೆಗೋಜ ನಮೋನಮೋ
ದೇವಾದಿದೇವ ವಿಭು ನಮೋನಮೋ
ಸರ್ವೇಂದ್ರಿಯಂಗಳ ಪ್ರೇರಿಸೈ ಋಜುಮಾರ್ಗದಲಿ ೩
ಸರ್ವದೋಷವಿದೂರ ನಮೋ ನಮೋ
ಸರ್ವಸುಗುಣ ಪರಿಪೂರ್ಣ ನಮೋನಮೋ
ಜೀವ ಜಗದಿಂದ ಬಿನ್ನ ನಮೋ ನಮೋ
ಶ್ರೀ ವಿಧೀರ ಪರಿಪಾಲ ನಿಸ್ಸೀಮ ೪
ಸೃಷ್ಟ್ಯಾದ್ಯಷ್ಠಕರ್ತ ನಮೋನಮೋ
ತುಷ್ಠಿ ಪುಷ್ಠಿಯ ನೀಡು ನಮೋನಮೋ
ಶ್ರೇಷ್ಟ ಶ್ರೀಕೃಷ್ಣ ವಿಠಲ ನಮೋನಮೋ
ದೃಷ್ಠಿ ಬೀರುತ ಬೇಗ ಕಾಣಿಸೈ ತವರೂಪಮೋಕ್ಷದನೆ ೫

ಶ್ರೀ ರಾಘವೇಂದ್ರ ಸ್ವಾಮಿಗಳನ್ನು
೭೬
ಸೋಜೀಗ ರೊಳಗತಿ ಸೋಜೀಗ ರಾಘವೇಂದ್ರಾ ಗುರು ಪ
ಸೋಜೀಗ ವಲ್ಲವೆ ರಾಜಾ ಗುರುವು ನೀನು
ನೈಜ ರೂಪದಿ ಬಂದು ಮಾಜಾದೆ ಪೊರೆವುದು ಅ.ಪ
ಬೆಂಬಲ ನಿನಗೆಂದು ಸ್ತಂಭದಿ ಹರಿ ಬಂದ
ಬೆಂಬಲ ನೀನಮಗೆ ಇಂಬು ಪಾಲಿಸು ಗುರುವೇ
ನಂಬೀದ ಜನಗಣ ಡಿಂಭದಿ ನೀ ಮೂಡಿ
ಹಂಬಲ ವಳಿಪುದು ಅಂಬಕ ದೊಳು ಕಂಡೇ ೧
ಇಲ್ಲ ಹರಿಯು ಎಂಬ ಕ್ಷುಲ್ಲ ಸಂಶಯ ವೆಂಬ
ಹಲ್ಲು ಮುರಿದು ಭಕ್ತರಲ್ಲಿ ತುಂಬುವೆ ಭಕ್ತಿ
ಇಲ್ಲದಿರಲು ನೀನು ಕಳ್ಳ ಕಲಿಯು ಜಗ
ವೆಲ್ಲ ತುಂಬುತ ಶೃತಿ ಸುಳ್ಳು ಎನಿಸುತಿದ್ದಾ ೨
ನಿರುತ ನೀಡುತ ಹರಿಕೆ ಕರೆದು ಪೊರೆವೆ ಜನರ
ಸರಿಯು ಕಾಣೆನು ನಿನಗೆ ಹರಿಯ ಕಿಂಕರ ಶರಣು
ಮರುತ ದೇವನ ಮತ ಮೆರೆಸಿ ಕುಣಿಸುತ್ತಿರುವೆ
ಶರಣ ಜನರ ಪೊರೆವ ಪರಮಾಪ್ತ ಸಿದ್ಧವೋ ೩
ಹುಣ್ಣು ಅಳಿಸಿ ಭಕ್ತಿ ಹಣ್ಣು ತಿನ್ನಿಸಿ ಜ್ಞಾನ
ಕಣ್ಣು ಪಾಲಿಪ ಗುರು ಮಣ್ಣು ಗೂಡಿಸೊ ಭವವ
ಸಣ್ಣವರೆಮ್ಮ ಶಂಕು ಕರ್ಣನೆ ಸಲಹೈಯ್ಯ
ಗಣ್ಯರೊಳಗೆ ಗಣ್ಯ ಪೂರ್ಣ ಪ್ರಜ್ಞರ ಪ್ರೀಯಾ ೪
ಹಿಂದೆ ಹೋಯಿತು ಹೊತ್ತು ಮುಂದೆ ಕಾದಿದೆ ಮೃತ್ಯು
ಇಂದು ಭಾರವ ಪೊತ್ತು ಕಂದರೆಮ್ಮನು ಕಾಯೋ
ಇಂದ್ರ ತಾತನ ಹೃದಯ ಮಂದೀರದಲಿ ನಲಿವ
ಇಂದಿರೇಶ ಕೃಷ್ಣವಿಠಲ ರಾಯನ ತೋರು ೫

ಈ ಪದದ ಒಂದೊಂದು ನುಡಿಯಲ್ಲಿ
೫೩
ಹಂಸವಾಹನಪಿತನೆ _ ಹಂಸಾ ಢಿಭಿಕವೈರಿ
ಕಂಸಮರ್ದನ ಶೌರಿ _ ಬಾ ಬಾ ಬಾ ಪ
ಸಾಸಿರನಾಮದೊಡೆಯ
ವಾಸವವಿನುತನೆ
ಲೇಸಾಗಿಸ್ತುತಿಸುವೆ _ಬಾ ಬಾ ಬಾ ಅ
ವೇದಾವಕದ್ದಂಥ
ಉದ್ದಂಡ ದೈತ್ಯನ
ಮರ್ಧಿಸಿ ವೇದವ ತಂದು
ವೇಧನ ಸಲಹಿದ
ಮುದ್ದು ಮೂರುತಿ ಮತ್ಸ್ಯ ಬಾ ಬಾ ಬಾ ೧
ಸಿಂಧು ವಿನೊಳಗಿದ್ದ
ಮಂದರಗಿರಿಯನ್ನು
ಬಂದು ಬೆನ್ನಿಲಿಪೊತ್ತು
ತಂದು ಪೀಯೂಷವ
ಚಂದದಿ ಸಲಹಿದ
ಕೂರ್ಮಸ್ವರೂಪನೆ _ ಬಾ ಬಾ ಬಾ ೨
ಕನಕನೇತ್ರನ ಕೊಂದು
ಕಾಂತೆಯಹಿಡಿದೆತ್ತಿ
ಕನಕಗರ್ಭನಿಗೊಲಿದ
ಕಾರುಣ್ಯನಿಧಿಚಂದ್ರ
ಕನಕವರ್ಣದ ಕ್ರೋಢ ಯಜ್ಞ ಸ್ವರೂಪನೆ _ ಬಾ ಬಾ ಬಾ ೩
ತರುಳನಮೊರೆಕೇಳಿ
ದುರುಳನ ಕರುಳನೆ ಬಗೆದು
ಕೊರಳೊಳು ಕರುಳ ಧರಿಸಿ
ಸುರರನ್ನು ಪೊರೆದಂಥ
ಸರ್ವವ್ಯಾಪಿ ಕರುಣಿಯೆ
ನಾರಸಿಂಹ ಮೂರ್ತಿ _ ಬಾ ಬಾ ಬಾ ೪
ಅನುಜನ ಪೊರೆಯಲು
ತನುವನು ಮರೆಸಿಕೊಂಡು
ದಾನವನು ಬೇಡುತ ಬಲಿ
ಯನು ತುಳಿದು ಪೊರೆದ
ಘನ್ನ ಮಹಿಮ ವಟು ವಾ
ಮನ ರೂಪಿಯೆ _ ಬಾ ಬಾ ಬಾ ೫
ಕೊಡಲಿಯ ಪಿಡಿಯುತ
ಒಡೆಯರ ತರಿದು
ಕಡಿದು ಮಾತೆಯ ಪಿತ
ನುಡಿಯನು ಸಲಿಸಿದ
ಚಂಡವಿಕ್ರಮ ಮಹಿಮ
ಭಾರ್ಗವ ಮೂರುತಿ _ ಬಾ ಬಾ ಬಾ ೬
ಕಾಂತೆಯನೆಪದಿಂದ
ಕದನವ ಹೂಡಿಕೊಂಡು
ಅಂತಕಸದನಕೆ
ಅರಿಗಳ ತಳ್ಳುತ
ಶಾಂತತೆ ಬೀರಿಪೊರೆದ
ದಶರಥ ರಾಮನೆ _ ಬಾ ಬಾ ಬಾ ೭
ಚೋರತನದಿ ಬಲು
ಬೆಣ್ಣೆಯ ಮೆಲ್ಲುತ
ಜಾರತನದಿ ಋಷಿ
ಸ್ತ್ರೀಯರಿಗೊಲಿದಂಥ
ಮಾರಜನಕ ಶ್ರೀ
ರುಕ್ಮಿಣಿ ಕೃಷ್ಣ _ ಬಾ ಬಾ ಬಾ ೮
ವೇದಗೋಚರ ವಿಶ್ವ
ವೇದ ಬಾಹ್ಯರಿಗೆಲ್ಲ
ವೇದ ವಿರುದ್ಧವಾದ
ವಾದಗಳ ತೋರಿ
ನಿಂದು ಬೆತ್ತಲೆ ಮೆರದ
ಬೌದ್ಧ ಸ್ವರೂಪನೆ _ ಬಾ ಬಾ ಬಾ ೯
ಕಲಿಬಾಧೆ ಹೆಚ್ಚಾಗೆ
ಕಲಿಯುಗ ಕೊನೆಯಲ್ಲಿ
ಮಲಿನಾರ ಮರ್ಧಿಸಿ
ಉಳಿಸಲು ಧರ್ಮವ
ಚಲುವ ರಾಹುತನಾದ
ಕಲ್ಕಿ ಸ್ವರೂಪನೆ _ ಬಾ ಬಾ ಬಾ ೧೦
ಸತ್ಯಸಂಕಲ್ಪನೆ ನಿತ್ಯಸ್ವರೂಪನೆ
ಉತ್ತಮನೀನೆಂದು
ಒತ್ತೊತ್ತಿ ಪೊಗಳುವೆ
ಭೃತ್ಯನು ನಿನ್ನವನು ಕಣ್ಣೆತ್ತಿ ನೋಡುತ _ ಬಾ ಬಾ ಬಾ೧೧
ಏಕರೂಪನೆ ನಿನ್ನನೇಕ ರೂಪಂಗಳ
ಸಾಕಲ್ಯದಿಂದಲಿ ಶ್ರೀಕಾಂತೆ ಅರಿಯಳು
ಕಾಕುಮತಿಯು ನಾನು
ಎಂತು ವರ್ಣಿಸಲಯ್ಯ _ ಬಾ ಬಾ ಬಾ೧೨
ಪೂರ್ಣಸ್ವರೂಪನೆ _ ಪೂರ್ಣ ಗುಣಾಬ್ಧಿಯೆ
ಪೂರ್ಣನಂದಾನೆ ಪೂರ್ಣ ಸ್ವತಂತ್ರನೆ
ಪೂರ್ಣಬೋಧರ ಪೂರ್ಣ
ಕರುಣಾವ ಬೀರಿಸು _ ಬಾ ಬಾ ಬಾ ೧೩
ಮಾತುಮಾತಿಗೆ ನಿನ್ನ ನಾಮದಸ್ಮರಣೆಯ
ನಿತ್ತು ಪಾಲಿಸು ಎನ್ನ
ಮೃತ್ಯೋಪಮೃತ್ಯುವೆ ದೇವ
ಭಕ್ತಿಭಾಗ್ಯವನಿತ್ತು ಮನ್ನಿಸಿ ಸಲಹುತ _ ಬಾ ಬಾ ಬಾ ೧೪
ದೋಷದೂರನೆ ನಿನ್ನ ದಾಸನುನಾನಯ್ಯ
ವಾಸವ ಜಯಮುನಿ ವಾತನೊಳ್ವಾಸಿಪ
ಈಶ ಸಿರಿಕೃಷ್ಣ ವಿಠಲರಾಯನೆ
ಬೇಗ ಬಾ ಬಾ ಬಾ ೧೫

ಅಹಂಕಾರ, ಮಮಕಾರಾದಿಗಳನ್ನು
೧೦೬
ಹರಿ ವಲಿಯಾ ನಮ್ಮ ಹರಿವಲಿಯಾ ಪ
ಮರುತನ ಪೊಂದದ ಅಸುರರಿಗೆಂದಿಗು ಅ.ಪ.
ಹರಿಕಥೆ ಕೇಳದೆ ಹರಟೆಗಳಾಡುತ
ಸಿರಿಮದ ವಿಷಯದಿ ಮೆರೆಯುವ ನರರಿಗೆ ೧
ಮಾನಿನಿ ಮನೆಯಭಿಮಾನವ ತೊರೆಯದೆ
ಜ್ಞಾನವ ಘಳಿಸದ ಶ್ವಾನನಿಗೆಂದಿಗು ೨
ತಾನುಡಿ ವಂದದಿ ತಾನೇ ನಡೆಯದ
ಜ್ಞಾನಿಯ ತೆರದಿಹ ಹೀನನಿ ಗೆಂದಿಗು ೩
ನಾನೇ ಕರ್ತನು ನಾನೇ ಭೋಕ್ತನು
ನಾನೇ ಯೆಂಬೀ ದನುಜರಿಗೆಂದಿಗು ೪
ದೋಷವಿವರ್ಜಿತ ಶ್ರೀಶನೆದೊರೆ ಸರಿ
ದಾಸನು ನಾನಿಹೆ ಪೋಷಿಸುಯೆನ್ನದೆ ೫
ಗುರುಗಳ ಪಿಡಿಯದೆ ಹರಿಯಡಿ ಬೀಳದೆ
ತರಿಯದವಿದ್ಯೆಯ ಅರಿಯದೆ ವಿದ್ಯೆಯ ೬
ವಿಧಿಯ ನಿಷೇಧವ ಮುದದಿಂ ನಡೆಸದೆ
ವೇದವ ನೊಡದೆ ಸಾಧುಗಳ್ಪಡಿಯದೆ ೭
ನನ್ನದು ನಿನ್ನದು ನಿನ್ನದೆ ಸಕಲವು
ನೀನೇ ಧನಗತಿ ನನಗೈಯನ್ನದೆ ೮
ಸಿರಿಕೃಷ್ಣವಿಠಲನೆ ವರಪುರುಷೋತ್ತಮ
ಉರುತರ ಭಕ್ತಿಲಿ ಪೊರೆಯನ್ನದೆ ೯

ಲೋಕದಲ್ಲಿ ಜನರು ನಡೆದುಕೊಳ್ಳುವ
ಏಕನಾದ
೧೦೫
ಹರಿಗುರುಗಳ ಬಿಟ್ಟು ನರಸ್ತುತಿಗಳನು ಮಾಡಬಾರ್ದು ಪ
ಸಿರಿವುರಿಯಲಿ ಸಿಕ್ಕಿ ನರಹರಿ ಚರಣವ ಬಿಡಬಾರ್ದು ಅ.ಪ.
ಒಂಟಿಲಿ ಸತಿಯನು ಪತಿವ್ರತೆ ಎನ್ನುತ ಬಿಡಬಾರ್ದು
ನೆಂಟೆಗೆ ಮಿತ್ರಗೆ ಸೂಳೆಗೆ ಸಾಲವ ಕೊಡಬಾರ್ದು
ತುಂಟರ ಕುಡುಕರ ಜಾರರ ನೆರೆಹೊರೆ ಇರಬಾರ್ದು
ಒಂಟಿಯ ಊಟವ ಪಯಣವ ಕಲಹವ ಬೆಳೆಸಬಾರ್ದು ೧
ಮಾವನ ಮನೆಯಲಿ ದುಡಿಯದ ಅಳಿಯನು ನಿಲ್ಲಬಾರ್ದು
ಕೋವಿದರಡಿಗಳ ಸುಜನರ ಸಂಗವ ಬಿಡಬಾರ್ದು
ಜೀವರು ಹರಿ ಸಮ ಮಾಯವೆ ಜಗಸರಿ ಎನಬಾರ್ದು
ದೇವನ ದೂಡುತ ವಿಷಯವ ಹರಿಸುತ ಕೆಡಬಾರ್ದು ೨
ಮನೆಕದ ಮುಂದಿಲಿ ಪತಿವ್ರತೆ ತಾನು ನಿಲಬಾರ್ದು
ತನುವನು ತೋರುತ ಸೆರೆಗನು ಬೀರುತ ನಡಿ ಬಾರ್ದು
ವನಿತೆಯ ಸಂಗಡ ಗುಟ್ಟಿನ ವಿಷಯವ ನುಡಿಬಾರ್ದು
ಮಣಿಯದೆಲೆಂದಿಗು ಹಿರಿಯರ ಚರಣಕೆ ನಡಿಬಾರ್ದು೩
ನುಡಿಯುವ ತೆರೆದಲಿ ನಡೆಯದ ಮನುಜನ ನಂಬಬಾರ್ದು
ತಡೆಯದೆ ಕೋಪವ ದುಡುಕುವ ನೆಡೆಯಲಿ ನಿಲ್ಲಬಾರ್ದು
ಬೆಡಗನು ತೋರುವ ನಾರಿಯ ಕಡೆಯಲಿ ನೋಡಬಾರ್ದು
ದುಡುಕುತ ಲೊಡನೆಯೆ ಯಾವುದು ನಿಶ್ಚಯ ಮಾಡಬಾರ್ದು ೪
ಕೆಟ್ಟರೆ ನೆಂಟರನೆಂದಿಗು ಮಾನಿಯು ಸೇರಬಾರ್ದು
ಕಷ್ಟವು ಬಂದೆಡೆ ಧೈರ್ಯವನೆಂದಿಗು ಬಿಡಬಾರ್ದು
ಗುಟ್ಟಿನ ಮಂತ್ರವು ಘಟ್ಟಿಲಿ ಜಪಿಸುತ ಕೂಗಬಾರ್ದು
ಶಿಷ್ಯರಿಗಲ್ಲದೆ ದುಷ್ಟಗೆ ಶಾಸ್ತ್ರವ ನುಡಿಬಾರ್ದು ೫
ತಿಂಡಿಯ ಚಪಲವ ನರಹರಿ ತೊಂಡನು ಮಾಡಬಾರ್ದು
ಹೆಂಡರ ಭಜಕನ ಜಾರನ ನುಡಿಗಳ ನಂಬಬಾರ್ದು
ಗಂಡನಿಗಂಜದ ಸತಿ ಸಹ ಸರಸವ ಮಾಡಬಾರ್ದು
ಮಂಡೆಲಿ ಚರಣದಿ ಬರಿತೆರ ವೆಂದಿಗು ಹೋಗಬಾರ್ದು ೬
ಹುಡುಗರ ಶಾಲೆಗೆ ಕಲಿಯಲು ಹುಡುಗಿಯ ಕಳಿಸಬಾರ್ದು
ಮಡದಿಗೆ ಭಂಟಗೆ ಒಡನೆಯೆ ಸದರವ ನೀಡಬಾರ್ದು
ಹುಡುಗಿಯ ಕಾಣದ ಜನರಿಗೆ ದೇಶಕೆ ಕೊಡಬಾರ್ದು
ನಡೆನುಡಿ ನೋಟ ವಿಶೇಷದಿ ನೇಮವನಿಡದಲೆ ಇರಬಾರ್ದು ೭
ಯಾಚಕ ಸವಿನುಡಿ ವಿನಯ ವಿವೇಕವ ಮರಿಬಾರ್ದು
ಯೋಚನೆ ಗೈಯದೆ ನೆರೆಹೊರೆ ಹಗೆತನ ಗಳಿಸಬಾರ್ದು
ಆಚೆಗೆ ಸತಿಪತಿ ಒಗೆತನ ಹುಳುಕನು ಹಾಕಬಾರ್ದು
ಮೋಚಕ ನಿಜ ಸಖ ಹರಿತಾನೆಂಬುದ ಮರಿಬಾರ್ದು ೮
ದೊಡ್ಡವರೆಡೆಯಲಿ ಹುಡುಗರು ಸರಸವ ಮಾಡಬಾರ್ದು
ದುಡ್ಡಿನ ಜನಗಳನೆದುರಿಸಿ ಬಡವನು ನಿಲ್ಲಬಾರ್ದು
ಸಡ್ಡೆಯ ಮಾಡದೆ ಅಡ್ಡಿಗಳೆಲ್ಲವ ಸರ್ವರಿಂ
ದೊಡ್ಡವ ಶ್ರೀ ಕೃಷ್ಣವಿಠಲನ ಭಜನೆಯ ಬಿಡಬಾರ್ದು ೯

ತಾವು ಕಿರಿಯರೆಂದು ಕಡೆಗಾಣದೆ
೮೭
ಹರಿದಾಸನ ಮಾಡಿಕೊಂಬುವಿಯ ಎನ್ನ ಪ
ಪರಮಕರುಣಾಶರಧಿ ಭಕ್ತ ಪ್ರಸನ್ನ ಅ.ಪ.
ತಂಬೂರಿ ಹಿಡಿಸುತ ಕೈಲಿ-ಪರಮಸಂಭ್ರಮದಿಂದ
ಪಾಡುವ ಶೈಲಿ ತಿಳಿಸಿ
ತುಂಬಿ ಹರಿಗುರು ಭಕ್ತಿ ಗಾಳಿ ಹೃದಯ ಬಿಂಬನ
ನೋಡಿ ಕುಣಿದು ಕುಣಿಯುವ ೧
ಹಿಂದಿನ ದುರುಳ ಕಥೆಗಳ ಅಳಿಸೀ-ಮುಂದಿನ
ಸುಖಕೆ ದಾರಿಯ ತಿಳಿಸೀ
ಎಂದೆಂದು ಅಹಂಮಮತೆ ಕೊಡದೆ-ನಂದ ದಿಂದ
ಪಥ ಸಾಗಿಸಿ ಬಿಡದೇ ೨
ಗೆಜ್ಜಿಕಟ್ಟಿಸಿ ಕಾಲುಗಳಲ್ಲೀ ಭರದಿ-ಭರ್ಜಿಸಿ ವಿಷಯ
ಕಜ್ಜಿಗಳನು ನಿರುತ
ಉಜ್ಜಲಿಸುತ್ತ ಭಕ್ತಿಯ ದೀಪ ಪರರು ಸಜ್ಜನ ಸಂಗ
ದಿರಿಸಿ ಕಾಯುತ ಲೀಗ ೩
ಕಿರಿಯದಾಸನು ಎಂದು ಜರಿಯದೆಲೆನಗೆ ಹಿರಿಯ ದಾಸರ
ಕರುಣ ಕವಚವ ತೊಡಿಸಿ
ಪರಮ ಅದ್ಬುತ ಚರಿತೆ ವಿಶೇಷ ನುಡಿಸಿ-ಹರಿಸಿ ಕಲಿಗಣ
ಬಾಧೆ ತಟ್ಟದ್ಹಾಂಗೆ ೪
ದಿಟ್ಟಜಯಮುನಿ ವಾಯು ಹೃಸ್ಥ ಸಿರಿ ಪ್ರೇಷ್ಠತನು
ಶ್ರೀಕೃಷ್ಣವಿಠಲ ಪರಮೋ-
ತೃಷ್ಟ ದೈವವೆಂದಾರ್ಭಟಿಸಿ ನಿನಗಿಷ್ಟದಾಸನಾಗಿ
ಚರಿಸಿ ನಲಿವಂಥ ೫

ಸಮ ಕಕ್ಷೆಯರಾದ ಇಬ್ಬರ ಮಹಿಮೆಗಳು
೬೨
ಷಟ್ಪದಿ
ಹಾಟ ಗರ್ಭನ ರಾಣಿ ಸುರಗಣ |
ಕೂಟವಾಳುವ ಶ್ರೇಷ್ಠ ಶಾರದೆ |
ಸಾಟಿ ಯಾರೆಲೆ ವೇದ ಮಾನಿಯೆ ವಾಣಿ ಮಂದಿರೆಯೆ |
ಏಟು ತಿಂದೆನೆ ಭವದಿ ತಾಯಿಯೆ |
ಕೈಟ ಭಾರಿಯ ಭಕ್ತಿ ವೃಕ್ಷವ|
ನಾಟಿ ಹೃದಯದಿ ಬೆಳಸೆ ಶುಭಗುಣ ಖಣಿಯೆ ಮಂಗಳೆಯೆ ೧
ಗಾನಕವಿಕುಲ ಹಂಸವ್ಯೂಹದಿ | ಹೀನ ಕಾಕನ
ಪೋಲ್ವ ಮೂಢನ |
ಮಾನ ಕಾಯುವ ಭಾರ ನಿನ್ನದೆ ದೀನ ವತ್ಸಲೆ ಯೆ|
ಏನು ಬೇಡೆನೆ ಅನ್ಯ ವಿಷಯವ | ಗಾನಕಲೆ
ಶುಭಮರ್ಮ ಕಳಿಸುತ |
ಶ್ರೀನಿವಾಸನ ಭಕ್ತಿ ಜ್ಞಾನವಿರಕ್ತಿ ಕೊಡಿಸಮ್ಮ ೨
ಮಾನ್ಯ ಕೋಕಿಲ ವಾಣಿ ಪು¸್ತಕ | ಪಾಣಿ ಸುಂದರ
ವೇಣಿ ವೀಣೆಯ |
ಗಾನ ನುಡಿಸುವ ಜಾಣೆ ವಿಧಿಮನ ಹಾರಿ ಕೋಮಲೆಯೆ |
ಹೀನ ಕಲಿಗುಣ ಶೂನ್ಯ ನಿತ್ಯದಿ | ಕಾಣ್ವೆ ಬಿಂಬನ
ಮೂರು ರೂಪಳೆ |
ಸಾನುರಾಗದಿ ವಲಿದು ಹರಿಪಥ ಸಿಗಿಸಿ ಪೊರೆಯಮ್ಮ ೩
ಬೊಮ್ಮನಂಕೂಡುತ್ತೆ ಬಹುವಿಧ |
ರಮ್ಯರೂಪಗಳಿಂದ ನಾ ನಾ |
ರಮ್ಯಸೃಷ್ಟಿಗಳಿಗನುವಾಗುತ ಹರಿಯ ಸೇವಿಸಿದೆ |
ಅಮ್ಮ ಶ್ರುತಿತತಿ ಅರ್ಥಗಳ ಹರಿ| ಸಮ್ಮತ ತೆರದಿ
ನುಡಿಸಿ ಕರಿಸುವಿ |
ಯಮ್ಮ ಜಗದಿ ಸರಸ್ವತೀಯಂತೆಂದು ವಿಪಮಾತೆ ೪
ಶಕಲ ಜ್ಞಾನ ವಿದೂರೆ ವಿದ್ಯಾ | ಮುಕುಟ
ಧರಿಸಿಹೆಯಮ್ಮ ಬೋಧಿಸೆ | ಯುಕುತಿ ಶಾಸ್ತಗಳನ್ನು
ಮಾಯ್ಗಳ ಗೆಲ್ವ ಬಗೆ ತೋರು |
ಪ್ರಕಟ ಮಾಡುತ ಶಬ್ದ ನಿಚಯದಿ ಸಕಲ ರೊಡೆಯನ
ಮಾತೆ ಯೆನಿಸಿಹೆ
ವಿಕಟ ಜಗದವತಾರ ವರ್ಜಿತೆ ಶರಣು ಶ್ರೀ ಸೊಸೆಯೆ ೫
ಶ್ರದ್ದೆ ಪ್ರದ್ಯುಮ್ನ ಕೃತಿ ಸುತೆಸು | ಮಧ್ವಶಾಸ್ತ್ರದಲಿ ಮನದಕು|
ಬುದ್ದಿಗಳ ಕಡಿಸಿ ಪ್ರಸಿದ್ಧಿಯ ನೀಡಿ ಸಾಕಮ್ಮ |
ಪದ್ಮನಾಭನ ವೇದ ಸಮ್ಮತಿ | ಯಿಂದ ಪಾಡುತ ಭಾಗ್ಯವಾಹುದೆ |
ಎಂದಿಗಾದರು ನೀನೆ ಮನದಲಿ ನಿಂತು ನುಡಿಸದಲೆ ೬
ವೇದ ಶಾಸ್ತ್ರಗಳೊದಿ ಕೇಳದ | ಗಾಧ ಮೂಢ
ವಿನೋದ ಗೊಷ್ಠಿಯ |
ಹಾದಿ ಹಿಡಿದವಿವೇಕಿ ನಾನಲೆ ಕೇಳು ವಿಪತಾಯೆ |
ಮೋದದಿಂ ನೀಕಾಯದಿದ್ದರೆ ಚರಣವ |
ಮಾಧವನು ಸಿಗನಮ್ಮ |
ಆದರದಿ ಸಾರಿದೆನು ಕವಿಜನಗೇಯೆ ವಿಧಿಜಾಯೆ ೭
ಅಂಬೆ ನೀರಜ ಬಿಂಬೆ ಸ್ವಾತಿಕೆ | ಬೊಂಬೆ
ರುದ್ರರ ಬಿಂಬೆ ಭಕ್ತರ |
ಸ್ತಂಭೆ ಶಾಂಭವಿ ವಂದ್ಯೆ ನಿತ್ಯದಿ | ಉಂಬೆ ಸುಖಗಳನೂ |
ತುಂಬೆ ಶಾಸ್ತ್ರದ ಸಾರ ಮನದಲಿ | ವೆಂಬೆ
ಹರಿಯಡಿ ಮನದಿ ಕಾಂಬುವ | ಹಂಬಲದ
ಕೈಗೊಡಿಸಮ್ಮ ಸಮೀರ ಗ್ಹೇಳುತಲಿ ೮
ತತ್ವ ಪತಿಗಳ ನೆತ್ತಿ ಕುಣಿಸುವೆ | ಭೃತ್ಯ ನಾನೆಲೆ ನಿತ್ಯ ಭಕ್ತಳೆ |
ವಿತ್ತ ವನಿತಾ ವ್ಯಾಧಿ ಹರಿಸುತ ಚಿತ್ತ ಶುದ್ಧಿಯನು |
ಇತ್ತು ಹತ್ತಿಸು ನೆತ್ತಿಗೆಂಬುವೆ |
ಸಪ್ತ ಶಿವಗಳ ಮರ್ಮ ಬೇಗನೆ
ವತ್ತಿ ಮಿಥ್ಯಾಜ್ಞಾನ ತಿಮಿರವ ಭಕ್ತಿ ಭಾಸ್ಕರಳೆ ೯
ನಳಿನ ನಾಭನ ವಲುಮೆ ಗಾಗಿಯೆ | ವಳಿತು
ಸುಖಗಳನುಂಬೆ ಭುಜಿವಿದಿ|
ತಳಿಹೆ ಪತಿತೆರದ್ವಿಶತ ಕಲ್ಪಗಳಲ್ಲಿ ಸಾಧನೆಯು |
ವಳಿದು ಸ್ಥಾನವ ನೀಡಿ ಅಂಗದಿ | ಕಳದೆ
ಶಾಪವ ಶ್ಯಾಮಲಾಶಚಿ |
ಗಳಿಗೆ ದ್ರೌಪತಿ ಇಂದ್ರ ಸೇನಾಕಾಳಿ ಚಂದ್ರಾಖ್ಯೆ ೧೦
ಮೂರ್ತ ಮಾನಿಯೆ ಚಂದ್ರಮಾವಿ | ಖ್ಯಾತಳಾಗುತ
ನಿಂತು ಶಶಿಯಿಲ್|
ಭೂತ ಗುಪಚಯವಿತ್ತು ಸೃಷ್ಠಿಯ ಕಾರ್ಯಗನುವಾಹೆ |
ನೀತ ಪತಿ ಸಹವಾಸ ವೇಸ | ರ್ವತ್ರ
ನಿನಗಹುದಮ್ಮ ಕೊರತೆಯು |
ಯಾತರಿಂದಲು ಯಾವಕಾಲುಕು ಇಲ್ಲರಯಿ ನಿನಗೆ ೧೧
ಮಾನ್ಯ ಮಧ್ವರ ಶಾಸ್ತ್ರ ಕನ್ಯಗೆ | ಚೆನ್ನ ಕನ್ನಡ
ಕವಚ ತೊಡಿಸುತ |
ಶ್ರೀನಿವಾಸನಭಕ್ತನಿಚಯಕ್ಕೆ ಕೈಮುಗಿದು
ಆನತಾಮರಧೇನು ಮುಖ್ಯ | ಪ್ರಾಣಮಂದಿರನಾದಶುಭಗುಣ
ಪೂರ್ಣಪೂರ್ಣಾನಂದ ತದ್ವನ ಬಾದರಾಯಣಗೆ ೧೨
ದೈನ್ಯ ದಿಂದಸಮರ್ಪಿಸುತ ಪವಮಾನರಾಯನ ಕರುಣವೆಲ್ಲೆಡೆ
ಅನ್ಯ ವಿಷಯವ ಬೇಡದಂದದಿ ಮಾಡುತಲಿಯನ್ನ |
ಜ್ಞಾನ ಭಕ್ತಿ ವಿರಕ್ತಿ ಸಂಪದ | ನೀನೆ ನೀಡುತ ಸಲಹೆ ಕೃತಿಸುತೆ |
ನೀನೆ ಸಾಸರಿ ನಮಿಪೆ ಬೃಹತೀಖ್ಯಾತ ಭಾರತಿಯೆ ೧೩
ಸೂರಿ ಜಯ ಮುನಿ ವಾಯು ವಂತರ |
ಸೇರಿ ತಾಂಡವ ಮಾಡಿ
ಮೆರೆಯುವ | ಶ್ರೀ ರಮಾವರ ಕೃಷ್ಣವಿಠಲನ ಪಾದ ಪಂಕಜವ
ಸೂರಿ ಸಮ್ಮತ ವೇದ ಗಾನದಿ | ಸಾರಿ ಸಾರಿಸೆ ಸೇರು ವದನದಿ |
ನೀರ ಜಾಕ್ಷನ ಸೊಸೆಯೆ ಶುಚಿಶತಿ ನಮಿಪೆ ಭೂಯಿಷ್ಠ ೧೪

ತಮ್ಮ ಜೀವನವು ಬರಿದೇ
೮೮
ಹಿಂಗಾಯಿತಲ್ಲಾ ಏನಿದು ಹರಿಹರಿಪ
ಮಂಗನ ತೆರ ಈ ಅಂಗವ ವಿಷಯತ
ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ.
ಬರಿದೆಯೆ ಹೋಗುತ್ತಿರುವುದು ಹೊತ್ತು
ಹರಿಧ್ಯಾನಕೆ ಸಾಲದು ಪುರಸೊತ್ತು
ತಿರುಗಲು ಮನೆಮನೆ ಸಾಲದು ಹೊತ್ತು
ಸರಸಿಜನಾಭನೆ ಇದಕ್ಕೇನು ಮದ್ದು ೧
ಶ್ರೀ ಕಮಲೇಶನ ಪೂಜೆಯ ಮಾಡನೆ
ಆಕಳಿಸುತ ಮೈ ಕೈ ಮುರಿಯುವೆನು
ಸ್ವೀಕರಿಸಲು ಸವಿ ಪಾನೀಯಂಗಳ
ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ೨
ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು
ಧ್ಯಾನವು ಯೆಂತೆನೆ ಕೂಳಿನ ಚಿಂತೆಯು
ಆನನ ಮುಸುಕುತ ಬರಿಪಿಚಿಯೆಂದು ನಿ
ಧಾನದಿ ಜಪಸರ ನೂಕುವೆನಲ್ಲಾ ೩
ಮಂತ್ರವು ಬಾರದು ಸ್ತ್ರೋತವು ಬಾರದು
ತಂತ್ರದಿ ನೂಕುವೆ ದೇವರ ಪೂಜೆಯ
ವಿಧಿಗಳ ಮೌನದಿ ಕರ್ಮಗಳೆಲ್ಲವ
ಮಂತ್ರಿಯ ಮಡಿದಿಯು ಪೇಳಿದ ತೆರದೂಳು
ಯಂತ್ರ ವಿಧಾನದಿ ನುಡಿಯುವೆ ದಿನವಹಿ೪
ಹೀನಕ ವೃತ್ತಿಗಳಿಂದಲಿ ಜೀವನ
ವರ್ಣವಿವೇಕವ ನಡಿಸಲಸಾಧ್ಯವು
ಜನ್ಮದಿ ವಿಪ್ರನು ನಾನಿಹೆ ಬರಿಸರಿ
ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ೫
ಊಟದ ಚಪಲವು ತಿಂಡಿಯ ಚಪಲವು
ನೋಟದ ಚಪಲವು ಚಪಲ ಕಂದರ್ಪನ
ಕಾಟದಿ ಸಿಲುಕಿಹೆ ಕೈಟಭಮರ್ದನ
ದಾಟುವೆದೆಂತೋ ಭವವನು ಕಾಣೇ ೬
ಏರಿದೆ ಬಹುನಿತ್ರಾಣವು ಗಾತ್ರದಿ
ಮೀರಿದವಯ ಶಾಸ್ತ್ರಾಭ್ಯಾಸಕೆ
ಕಾರುವರೈ ವಿಷ ಬಾಂಧವರೆಲ್ಲರು
ಆ ರವಿಸುತನಾಳ್ಗಳಗು ನಾನಿಹೆ ೭
ಮಡದೀ ಮಕ್ಕಳ ಪಾಶದಿ ಬಿದ್ದಿಹೆ
ದುಡಿಯದ ಕಾರಣ ದುಗುಡವ ತೋರ್ಪರು
ನಡೆಯದು ತುಸನನ್ನ ಮಾತೇನಿಲ್ಲ
ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ ೮
ತೋಡಿದರೂ ಎದೆ ಕಾಣೆನು ಭಕ್ತಿಯ
ಕಾಡನು ಸೇರಲೊ ಬಾವಿಗೆ ಬೀಳಲೋ
ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ
ಓಡದು ಬುದ್ಧಿಯು ತೋರಿಸು ಹಾದಿ ೯
ಕರುಣಾಮಯ ನೀನೆಂಬುವ ಬಿರುದನು
ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ
ಭರವಸೆ ಎನಗಿಹದೊಂದೇ ನಿಶ್ಚಯ
ಶರಣನ ಬಿಡದಿರು ಆಪದ್ಬಾಂಧವ ೧೦
ಪಾಮರ ನಿಹೆಬಹು ಕಲುಷಿತ ಚಿತ್ತನು
ಭೀಮಾರ್ಚಿತ ಪದಯಗ ನಂಬಿಹೆ
ಪ್ರೇಮವ ಸುರಿಸುತ ಕಾಯೈ ಬೇಗನೆ
ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” ೧೧

ತಮ್ಮಲ್ಲಿ ಅನೇಕ ನ್ಯೂನತೆ
೮೯
ಹ್ಯಾಂಗೆ ಉದ್ದರಿಸುವಿ ಎನ್ನ ಕೃಷ್ಣ ಕರುಣ ಸಂಪನ್ನ ಪ
ಹೋಗಿ ಹೊಗಿ ವಿಷಯ ಕೂಪದಲ್ಬೀಳ್ವವನಾಅ.ಪ.
ದಾಸನು ಎಂದೆನಿಸಿ ಮೆರೆವೆ
ಮನದೀ ಲೇಶಾ ಭಕುತಿಯನಾನೊಂದರಿಯೇ
ವೇಷಹಾಕಿದೆ ಧನಕೆ ಬರಿದೇ
ಆಶೆ ಇಟ್ಟು ಭವದಿ ವಂಚಕನೆನಿಸಿದವನಾ೧
ಮಂದಿ ಜನರ ಮುಂದೆ ವೈರಾಗ್ಯನಟನೆ
ಮಂದಿರದೊಳು ಬಹು ಕಾಮದ ಭಜನೆ
ಬಂಧು ಬಳಗ ಕೂಡೆ ಬಹಳ ಭಕ್ತಿ
ಇಂದಿರೇಶನ ಧ್ಯಾನ ದೋಳ್ವಿರಕ್ತಿ೨
ಗುರುಹಿರಿಯರ ಜರಿವೊದೆ ಜಪವು
ದುರುಳರ ಸಂಗ ದೋಳ್ಮೆರೆವೋದೆ ವ್ರತವು
ಪರಿಸರನ ಶಾಸ್ತ್ರದೋಳ್ಮೌನ
ನರನಾರಿ ಸ್ತವ ದೋಳ್ಧ್ಯಾನ ೩
ವೇದ ಓದಿದೆ ನಾನು ಆದರೇನು
ಮೋದತೀರ್ಥರ ಮರ್ಮ ಸಿಗಲಿಲ್ಲವು ಇನ್ನು
ವಾದಕ್ಕನುಕೂಲ ವಾಯ್ತದು ಅಷ್ಟೆ
ಖೇದ ತೊಲಗದೆ ಮನದಿ ಬಹುಕಷ್ಟಪಟ್ಟೇ ೪
ಭುಕ್ತಿ ಪಡೆಯೆ ಕಾಲಕಳೆದೆನಲ್ಲಾ
ಯುಕ್ತಿಯಿಂದಲಿ ನೀನು ಒಲಿವೋನು ಅಲ್ಲಾ
ಭಕ್ತ ಜನರ ಸಂಗ ನಾ ಪಿಡಿಯಲಿಲ್ಲ
ಮುಕ್ತಿಗಾಗುವ ಭಾಗ್ಯ ಎನ್ನಲಿಲ್ಲವಲ್ಲಾ ೫
ಸ್ವೋತ್ತುಮರ ನೋಡೆ ಮಾತ್ಯರ್ಯ ಎನಗೇ
ವಾತ್ಯಲ್ಯ ತೋರೆನು ಸ್ಧಾವರ ಜನಕೇ
ಕುತ್ಸಿತ ಪಾವಡ ಬೀರುವೆ ಜಗಕೆ
ತಾತ್ಸಾರ ತೋರುವೆ ಭಕ್ತರ ಗುಣದೀ೬
ಈಷಣ ತ್ರಯಗಳ ಬಿಡಲಿಲ್ಲ ಲೇಶಾ
ಭಾಷಣದಿ ತೋರ್ಪೆಜ್ಞಾನ ಪ್ರಕಾಶ
ಈಶ ನೀನೊಬ್ಬನೆ ಸರಿಯೆಂಬೆ ಹರಿಯೆ
ದಾಸನಾಗಿ ಬಾಳ್ವೆ ಬಹು ನೀಚ ಜನಕೆ ೭
ನಾನು ನಾನೆಂಬುದು ತುಂಬಿದೆ ಮನದಿ
ನೀನು ನಿನ್ನಾಧೀನ ವೆಂತ್ಹೇಳಿ ದೃಢದಿ
ಜ್ಞಾನವಿದ್ದರು ಇಲ್ಲ ಎನಚರ್ಯೆ ನೋಡೆ
ಮಾನಿನಿಯರ ಬೊಂಬೆ ಗುಣಗಣನೆ ಮಾಡೆ ೮
ಮೂರೊಂದು ಹರಿತ್ಯಾಗ ತೊರೆಯಲಿಲ್ಲ
ವೈರಿ ಆರರ ಬೇರು ನಾಕೀಳಲಿಲ್ಲ
ವೀರ ವೈಷ್ಣವನಾಗಿ ಬಾಳಲಿಲ್ಲಾವಲ್ಲ
ಗಾರು ಮನ್ನಿಸದಿರೆ ಗತಿಯೊಬ್ಬರಿಲ್ಲಾ ೯
ವ್ರತನೇಮ ಉಪವಾಸ ಸಾಧನೆಯಿಲ್ಲ
ರತಿಯಿಂದ ಸಲಹೆಂದು ನಾಕೂಗಲಿಲ್ಲ
ಮತಿ ಮತದಿ ಪುಟ್ಟಿದರು ಫಲವಾಗಲಿಲ್ಲ
ಗತಿ ನೀನೆ ಕೈ ಪಿಡಿಯೊ ಕೇಳುತ ಸೊಲ್ಲ ೧೦
ಡಂಭಕ ತನದಿಂದ ಬಹುಕಾಲ ಕಳೆದೇ
ತುಂಬಿ ಭಕ್ತಿಯ ಬೇಗ ನೀ ಕಾಯೋಮುಂದೆ
ಜಂಭಾರಿ ಜಯತೀರ್ಥ ವಾಯ್ವಾಂತರ್ಗತನಾದ
ಕಂಬುಕಂಧರಧಾರಿ “ಶ್ರೀ ಕೃಷ್ಣವಿಠಲ” ೧೧

ಮೂರೇ ತಾಳಗಳುಳ್ಳ
ಸುಳಾದಿ

ಧ್ರುವತಾಳ
ಅನ್ಯವಾರ್ತೆಯ ಬಿಡಿಸು ನಿನ್ನ ವಾರ್ತೆಯ ತಿಳಿಸು
ಇನ್ನಾದರು ಕೈಪಿಡಿದು ನಿನ್ನ ದಾಸರಲಿ ಸೇರಿಸು
ಹೊನ್ನು ಹೆಣ್ಣು ಮಣ್ಣಿಂದ ಹುಣ್ಣು ಹುಣ್ಣು ಹುಣ್ಣಾಗಿ ನೊಂದೆನೊ
ಕುನ್ನಿಯಂತಾಯ್ತ್ಯಯ್ಯ ಎನ್ನ ಬಾಳು ಕೇಳು
ಅನ್ಯರಿ ಗಾಲ್ಪರಿಯೆ ಚೆನ್ನಫಲವೇನೊ
ಬೆನ್ನು ಬಿದ್ದೆನು ನಿನಗೆ ಘನ್ನ ಕರುಣಾಳುವೆ
ಚಿನ್ಮಯ ಮೂರುತಿ ಪ್ರ ಪನ್ನರ ಪರಿಪಾಲ
ಎನ್ನ ಭಾಗ್ಯವೆಲ್ಲೆ ನಿನ್ನದೇ ಸಿದ್ದವು
ಎನ್ನದೆಂಬುವ ದಿನ್ನು ಮನ್ನಮಾಡಿಸಬೇಕು
ಇನ್ನು ಬೇಡವು ತಡವು ಮನ್ನಿಸಿ ಸಲಹೈಯ
ಘನ್ನ ಜಯಮುನಿ ವಾಯುವಂತರ ಸಿರಿ
ಕೃಷ್ಣ ವಿಠಲರಾಯನಿನಗೆ ನಮೊ ನಮೊ ಯಂಬೆ
ನಿನ್ನ ಸಮ್ಮತ ನೀಡು ನಾನಿನ್ನ ದಾಸ ನಾನಿನ್ನ ದಾಸ ೧
ಮಟ್ಟತಾಳ
ಊರೂಳಗೆ ಇರಿಸೈಯ ಊರಿಂದ ಓಡಿಸೊ
ಸೇರಿಸಿ ಬಾಂಧವರ ಜರಿಸೋ ಜರಿಸೋಯನ್ನ
ಸಾರಿ ಸಾರಿಸಿ ಬೈಸು ವೀರ ಮಾರುತಿ ಪ್ರೀಯ
ಸೂರೆ ನೀಡುತ ಜ್ಞಾನ ಕ್ರೂರರಿಂದಗಲಿಸಿ
ಸಾರ ಸಂತರ ಗಣದಿ ಸೇರಿಸುತ್ತನುದಿನ
ಬಾರಿ ಬಾರಿಗೆ ನಿನ್ನ ಚಾರು ನಾಮಗಳನ್ನು
ಕೇರಿ ಕೇರಿಲಿ ಬೀರಿ ನೀರ ಜಾಕ್ಷನೆ ಏಕ
ಮೇರೆ ಇಲ್ಲದ ದೇವ ಈರ ಪ್ರೇರಕನೆಂದು
ಸಾರಿ ಸಾರುವ ಭಾಗ್ಯ ಹೇರು ಹೇರಾಗೀಯೋ
ಶೂರ ಜಯ ಮುನಿಹೃಸ್ಥ ವಾಯುವಂತರವಿರ್ಪ
ಸಿರಿ ಕೃಷ್ಣವಿಠಲನೆ ಪರಿಪಾಲ ಸರ್ವರಿಗೆ ೨
ತ್ರಿವಿಡಿತಾಳ
ನಾರಿ ಜನರು ಎಲ್ಲ ದೂರು ಮಾಡಿದ ರೆನ್ನ
ಹರಿ ನೀನು ಜರಿದರೆ ಆರು ಯಿಲ್ಲವೊಯನಗೆ
ನೆರೆ ನಂಬೀದವರನ್ನ ಜರಿದು ಹಾಕುವರೇನೋ
ಹಿರಿಯ ರಂದದಿಯನಗೆ ಹುರುಡು ಏನೂ ಇಲ್ಲ
ವಿರಕ್ತಿ ಭಕ್ತಿಗಳರಿಯೆ ಹರಿ ನಾಮ ಗತಿಯೊಂದೆ
ಮೀರಿ ಬರುವ ದುರಿತ ಬೇರು ಕೀಳುವುದಕ್ಕೆ
ಸಾರಿದೆ ತವಪಾದ ಸಿರಿ ಪದ್ಮಜ ವಂದ್ಯ
ಬೀರು ನಿನ್ನಯ ಕರುಣ ತೋರು ಹೃದಯದಿ ರೂಪ
ಮೂರೊಂದು ಅವಸ್ಥೆಯಲಿ ಚರಣದಿರಿಸು ಮನವ
ಸರ್ವತ್ರ ನಿನ್ನಿರವು ತೋರಿಸುಯನಗಿನ್ನು
ತೊರೆದು ಬದುಕಲಾರೆ ಹರಿಯೇ ಗತಿಯೆಂಬ
ಸರ್ವ ಶಬ್ದಘೋಷ ಹರಿನಾಮ ವೆಂತೆಂಬ
ಸರಸ ಜ್ಞಾನವ ನೀಡೊ ಸರ್ವಾಂತರನೆ ಶರಣು
ಸೂರಿ ಜಯ ಮುನಿ ಹೃಸ್ಥ ವಾಯುವಂತರ್ಯಾಮಿ
ಸಿರಿ ಕೃಷ್ಣ ವಿಠಲನೆ ವಿರಕ್ತಿ ಭಕ್ತಿಯ ಬೆರಿಸೊ ೩
ಜೊತೆ ಪಾರಿಲ್ಲ ಭವಕ್ಕೆಂಬೆ ತ್ವರಿತದಿ ಕೈಪಿಡಿಯೊ
ಶರಣರ ಭಯ ಹರಣ ಶ್ರೀ ಕೃಷ್ಣವಿಠಲ

ಸುಳಾದಿ
೯೧
ಧ್ರುವತಾಳ
ಏಸು ದಿನಗಳಾದರೆನೋ ನಿನಗೆ ಘಾಸಿ ಜೀವವೆಲೇಶ ಜ್ಞಾನ ಭಕುತಿ ವೈರಾಗ್ಯ ಪುಟ್ಟಲಿಲ್ಲವೀಸು ಕಾಸಿಗೆ ಕ್ಲೇಶಪಡುತ ಆಶೆ ಮಾಡುವಿ ಮರುಳರಸನೇಂದ್ರಿಯ ಬಾಪಲ್ಯ ಬಿಡದೆ ನಾಯಿಯಂತೆ ಆಶೆ ಯಿಂದಲಿ ತಿರುಗುವಿತನುವಿನಭಿಮಾನವ ತುಸ ತೊರೆಯಲೊಲ್ಲೆನೂರೆಂಟುಕಾಲ ಬದುಕಲು ಪೋಷಿಸುವಿ ಕಾಯದಂಡಿಸಲಂಜುವಿಮರಳಿ ಮರಳಿದರೂ ಹೇಸಿಗೆ ಸಂಸಾರ ಸ್ಥಿರವೆಂ¨ ಭ್ರಾಂತಿ ಬಿಡದೈಯ್ಯಏಸುಏಸು ಜನುಮಗಳಲ್ಲಿ ಅನುಭವಿಸಿದರೂಹೊಸಹೊಸದಾಗಿ ತೋರುತಿರ್ಪುದು ತುದಿಮೊದಲಿಲ್ಲಹಿಂಸೆ ಮಾಡಿ ಪರರ ದ್ರವ್ಯದಿ ಒಡಲ ತುಂಬುವಿಹೊಸದೆಂದು ತಿಂದದ್ದೆ ತಿನ್ನುವಿ, ಮಾಡಿದ್ದೆ ಮಾಡುವಿಹೇಸಿಕೆ ಮನವೆ ನಾಚಿಕೆ ಇಲ್ಲವೆ ನಿನಗೆ ಯೋಚಿಸುಈ ಶರೀರ ಧರಿಸಿದ್ದು ಊಟತಿಂಡಿ ಗಾಯಿತಲ್ಲೋವಾಸುದೇವನ ಒಲಿಸುವ ಹಾದಿಕಾಣದೆ ಶ್ವಾನಪಶುವಿನಂದದಿ ಪೊರೆವೆ ಹೊಟ್ಟೆ, ದಿನ ದಿನದಿ ಕ್ರೋಧಆಶಾಲೊಭ ಮೋಸ ಅರಿಷಡ್ವರ್ಗಗಳ ಜಯಿಸಲಿಲ್ಲಅಸುಗಳೋತ್ತಮನ ಮತಗ್ರಂಥಗಳೋದದೆ ದಂಡಈ ಶರೀರವ ಬೆಳೆಸಿದೆ, ದಾನ ಧರ್ಮಕರ್ಮಗಳಿಲ್ಲದಾಶರಥಿಯ ದಾಸನೆಂದು ಕುಣಿಯಲಂಜುವಿಓಸು ಜನರು ಬಂಧುಗಳೆಲ್ಲ ನಿನ್ನ ಭಂಗಪಡಿಸೋರೆಲ್ಲಶ್ರೀಶಕೃಷ್ಣನ ನಾಮ ಒಂದಲ್ಲದೆ ಬೇರೆ ತಾರಕವಿಲ್ಲಕೇಶವನಪಾಡಿ ಪೊಗಳೋದೇ ಸಾಧನಕೇಳಯ್ಯಾವಾಸುದೇವನ ಮನಮುಟ್ಟಿ ಪೂಜಿಸೋದೇ ಯಜ್ಞಜಪಬ್ಯಾಸರದೆ ದಾಸನೆಂತೆಂದು ಚಿಂತಿಸಿ ಎರಗಿದರೆ ಬೇಗನೆಸಂಸಾರ ಬಿಡಿಸಿ ಇಡುವನು, ತನ್ನ ಭಕ್ತರ ಜನರೊಡನೆಮೋಸಹೋಗದೆ ಶ್ರೀಜಯತೀರ್ಥ ವಾಯ್ವಂತರ್ಗತ ಕೃಷ್ಣವಿಠಲನನಿಸ್ಸಂಶಯದಿ ಮೊರೆ ಹೋಗಿ ಭವಪಾಶನೀಗೋ ಮರುಳೇ ೧

ಮಟ್ಟತಾಳ
ಹಿಂದೆ ಮಾಡಿದ ಕರ್ಮ ಇಂದು ಅನುಭವಿಸುತ್ತಿರುವಿಇಂದು ಮಾಡುವ ಕರ್ಮ ಮುಂದೆ ಉಣ್ಣಲಿಬೇಕೋಬಂಧು ಗೋವಿಂದನ ಬಿಟ್ಟರೆ ಭವಣೆ ತಪ್ಪದೋ ಮೂಢಹಿಂದೆ ನಿನಗೆಷ್ಟು ಮಡದಿ ಮಕ್ಕಳು ಅಗಿಹೋದರೋಹಂದಿಯಂದದಿ ಬಯಸಿದ್ದೆ ಬಯಸುತ್ತಚಂದದಿಂದಲಿ ಊಟತಿಂಡಿಗಳ ತಿನ್ನುತ್ತಅಂದಣವನೇರಿ ಮೆರೆಯ ಬೇಕೆಂಬುವಿಮುಂದಿನ ಭವಣೆಗೆ ದಾರಿಯನೋಡೋ ಮರುಳೆ ಆ-ನಂದತೀರ್ಥರು ತೋರಿದ ಹಾದಿಯ ಹಿಡಿದುನಂದನಂದನ ಶ್ರಿ ಜಯತೀರ್ಥ ವಾಯ್ವಂತರ್ಗತ ಕೃಷ್ಣವಿಠಲ ತಂದೆ ಎಂತೆಂದು ನೆನೆ ನೆನೆದು ಸುಖಿಯಾಗ ಬೇಕು ೨

ರೂಪಕತಾಳ
ಸತಿಯೆಗತಿ ಎಂಬೆಯಾ ಮೂಢ ಒಡವೆ ತಂದರೆ ದೂತರು ಸೆಳೆವಾಗ ನಿನ್ನಹತ್ತಿರ ಬರಳು ಕಾಣೋಗತಿ ತನಗೇನು ಮುಂದೆಂದು ರೋದಿಸುವಳುಪಿತನೆಂದು ಅಕ್ಕರೆ ಮಾಡುವ ಇಲ್ಲದಿದ್ದರೆಮತ್ತು ಅನ್ನವನಿಕ್ಕದೆ ಸತಿಯ ಅಧೀನದಲ್ಲಿಡುವಎತ್ತ ನೋಡಿದರೂ ನಿಜ ಪ್ರೇಮ ಒಬ್ಬರಲ್ಲಿಲ್ಲ ಅನಿ-ಹೊತ್ತು ಹೊತ್ತಿಗೆ ಉತ್ತಮೋತ್ತಮ ನಮ್ಮ ಹರಿಯನೆನೆ-ಯುತ್ತ ಜಯತೀರ್ಥವಾಯ್ವಂತರ್ಗತ ಶ್ರೀ ಕೃಷ್ಣವಿಠಲನ್ನಪ್ರೀತಿಯ ಪಡೆದು ಕೃತ ಕೃತ್ಯನಾಗೋನೀನು ೩

ಝಂಪೆತಾಳ
ಗಾಣದೆತ್ತಿನಂತೆ ದಿನದಿನ ಧನವನಿತೆಗಾಗಿದಣಿದು ದಣಿದರೆ ಫಲವೇನಯ್ಯ ನೆರೆಹೊರೆಜನರೆಲ್ಲ ನಿನ್ನ ಹೊಗಳಿದರೆ ಬಂದ ಭಾಗ್ಯವೇನೋದೀನನೆನಿಸಿ ಹೀನಜನ ಸೇವೆಯ ಮಾಡಿ ಬಲು ಹೇರುಧನಗಳಿಸಿ ಮಡದಿ ಮಕ್ಕಳ ಸಾಕಿದರೆ, ಮುಂದೆನಿನ್ನ ಯಮದೂತರೆಳೆವಾಗ ಕಾಯಬಲ್ಲರೇನೋದಾನವಾಂತಕನ ಮರೆತು ದೋಷಿಯಾಗಲು ಬೇಡ ಈತನುವು ದೇವ ಕೊಟ್ಟದ್ದು ಮುಕುತಿ ಸಾಧನಕೆ ಕಾಣೋಅನುದಿನವು ವನಿತೆಯರ ಕೂಡಿ ತಿಂದು ತೇಗುವುದಕ್ಕಲ್ಲಜ್ಞಾನ ದೀಪವ ಹಚ್ಚಿ ಮನದಿ ನೋಡುತನುಮನ ಧನಗಳೆಲ್ಲ ಶ್ರೀ ಹರಿಗರ್ಪಿಸು ನರಹರಿಜನಾರ್ದನ ಮುಕುಂದ ಮಾಧವನೆಂದು ಕೊಂಡಾಡುಏನೇನು ಮಾಡುವುದೆಲ್ಲ ಶ್ರೀ ಕೃಷ್ಣಸೇವೆಂದ್ಹೇಳುಕಾನನ ಊರು ಎಲ್ಲಿದ್ದರು ಸತತ ನಾರಾಯಣನ ನಾಮವನೆನೆಯುತ್ತ ಸಂಸಾರದಲ್ಲಿದ್ದರೂ ಮಮತೆ ತೊರೆದುಮನದಿ ವಿರಕ್ತಿಯ ಧರಿಸಿ ದೇವ ಕೊಟ್ಟದರಲ್ಲಿದಿನವೂ ತೃಪ್ತಿಪಡುತಲಿ ಅನಿಲನ ಮತಪಿಡಿದುಅಣುರೇಣು ತೃಣಕಾಷ್ಠ ಪರಿಪೂರ್ಣ ಜಯತೀರ್ಥಅನಿಲಾಂತರ್ಗತ ಶ್ರೀ ಕೃಷ್ಣವಿಠಲನ ದಾಸನಾಗಿ ಬಾಳೋ ಮುಂದೆ ೪

ತ್ರಿವಿಡಿತಾಳ
ಆಳುದ್ದದ ಶರೀರವ ಗೇಣು ಮಾಡಿಕೊಂಡು ಪರರಆಳಾಗಿ ಬಾಳಲು ವೀಸಕಾಸು ಕೊಡಲು ಕಷ್ಟ ವೈಯ್ಯಶ್ರೀ ಲಕ್ಷ್ಮೀಕಾಂತ ಪೊರೆ ಎಂದು ಗಜರಾಜ ಒದರಲು ಅರಸಿಗೆಹೇಳದೆ ಭರದಿ ಗರುಡನೇರಿ ಬಂದು ನಕ್ರನ ತರಿದಚೇಲವಸ್ತ್ರದಿ ತಂದಿದ್ದ ದ್ವಿಜ ಪಿಡಿಯವಲಕ್ಕಿಯತಿಂದು ಕು-ಚೇಲಗೆ ಕೆಡದ ಸಂಪದವಿತ್ತು ಸಲಹಿದನಾರಿ ದ್ರೌಪದಿ ಗೋಳು ಕೇಳುತಲೆ ಅಕ್ಷಯವಸ್ತ್ರವ ಅಲ್ಲಿಂದ ಪಾಲಿಸಿದಗೊಲ್ಲಗೋಪಿಯರ ಸೊಲ್ಲು ಲಾಲಿಸಿ ಪ್ರೀತಿಗೊಲಿದಮೆಲ್ಲನೆ ಕುಬುಜೆಯ ಡೊಂಕು ತಿದ್ದಿ ಅಂಗಸಂಗವನಿತ್ತಕ್ಷುಲ್ಲ ಬೈಗಳಬೈದ ಶಿಶುಪಾಲನ ಸುಜೀವಗೆ ಗತಿ ಯನಿತ್ತನಲ್ಲನೆಂದಡಿಗೆರಗಿದ ಪಾಂಡವರ ಬಂಡಿ ಭೋವನಾದಮೆಲ್ಲನೆ ಅಪದ್ಭಾಂಧವ ಶ್ರೀ ಕೃಷ್ಣನೆಂದೊದರಿ ಒಂದುದಳ ತುಳಸಿ ದಳ ಅರ್ಪಿಸಲು ಒಡಲು ಕಾಯುತ ಲಕ್ಷ್ಮೀ-ನಲ್ಲನ ಕರುಣಕ್ಕೆ ಎಣೆಯಿಲ್ಲ ಸಾರಿಸಾರಿ ಹೇಳುವೆ ಕೇಳು ಮರಳು ಮನವೆಕ್ಷುಲ್ಲ ಮಾನವರ ಸೇವಕನೆನಿಸಲು ನಾಚಿಕಿಲ್ಲವು }ಸಿರಿ ಪದ್ಮಜ ವಂದಿಪೆನಾಲ್ಕು ಮೂರೆರೆಡು ಲೋಕಾಧೀಶ ಅತುಳಮಹಿಮ ಜಯತೀರ್ಥವಾಯ್ವಂತರ್ಗತ ಶ್ರೀ ಕೃಷ್ಣವಿಠಲನ್ನಆಳಾಗಿ ಬಾಳಲು ನಾಚಿಕೆ ಯಾಕೋ ಹೀನ ಮನವೆ ೫

ಅಟ್ಟತಾಳ
ಹೊಟ್ಟೆಗೇನೆಂದು ಯೊಚಿಸಿ ಕೆಡಬೇಡ ಈರೇಳುಸೃಷ್ಟಿಗೈದ ಸರ್ವೋತ್ರ‍ಕಷ್ಟ ಶ್ರೀಕೃಷ್ಣಗೆ ಇದು ಕಷ್ಟವೆಹುಟ್ಟಿಸಿದ ದೇವ ಹುಲ್ಲು ಮೇಯಿಸಲಾರನೇಗಟ್ಟ್ಯಾಗಿ ಅಷ್ಟಕರ್ತ ಒಡೆಯನ ಚರಣವ ನೆರೆನಂಬಿಬಿಟ್ಟು ಸಂಸಾರದ್ಹಂಬಲದ ದಾಸನಾಗಿ ತಿರುಗೋಹುಟ್ಟು ಸಾಯುವ ಕಟ್ಟು ಬಿಡಿಸಲು ಅನ್ಯ ಉಪಾಯವಿಲ್ಲಎಷ್ಟು ದಿನಗಳಿದ್ದರೂ ಸಂಸಾರದಾಶೆಗೆ ಕೊನೆ ಇಲ್ಲನಿಷ್ಠೆಯಿಂದಲಿ ಶ್ರೀ ಜಯತೀರ್ಥ ವಾಯ್ವಂತರ್ಗತ ಕೃಷ್ಣವಿಠಲನ್ನಇಟ್ಟು ಮನದಲಿ ಭಜಿಸೋ ಅರಿಷಡ್ವರ್ಗವೈರಿಗಳಅಟ್ಟೋಭರದಿ ತುಂಟಜನರ ಸಂಗ ತ್ಯಜಿಸೋ ಬೇಗಇಷ್ಟಾರ್ಥಪಾಲಿಸಿ ಕಾಯುವ ಕೃಷ್ಣ ಸಂದೇಹ ಬ್ಯಾಡಾ ಸಂದೇಹ ಬ್ಯಾಡಾ ೬

ಜೊತೆ ಎಂದಿಗಿದ್ದರು ಈ ಕೊಂಪೆ ಸ್ಥಿರವಲ್ಲ ಮನವೆಇಂದೇಶ್ರೀ ಜಯತೀರ್ಥವಾಯ್ವಂತರ್ಗತ ಕೃಷ್ಣವಿಠಲನ ಮೊರೆಹೊಗೋ ಮನವೇ ||

ಶ್ರೀ ಹರಿಯ ನಾನಾ ವ್ಯಾಪಾರಗಳನ್ನೂ,
ಸುಳಾದಿ

ಧ್ರುವತಾಳ
ಒಂದು ವೇಳೆ ನಗಿಸುವಿ ಒಂದು ವೇಳೆ ಅಳಿಸುವಿ
ಒಂದು ವೇಳೆ ಅಳಿಸುವಿ ನಗಿಸುವಿ ಹಿಂದೆ ಮಾಡಿದವನ್ಯಾರೋ
ಇಂದು ನುಡಿದು ನುಡಿಸುವನ್ಯಾರೋ ಇಂದು ಹಿಂದು
ಮುಂದುನೀನೇಗತಿ ನಂದನಂದನ ಮುಕುಂದ ಮಾಧವ
ಸಿಂಧುಶಯನ ಅರವಿಂದನಯನ ಬಂಧುವು ನೀನೆ
ಎನಗೆ ಬಳಗವು ನೀನೆ
ತಂದೆ ತಾಯಿಯು ನೀನೆ ಅನ್ಯರ ಕಾಣೆ
ಕಂದನೆಂತೆಂದು ಬಂದು ಸಲಹೈಯ್ಯ
ಸಂದೇಹ ಬ್ಯಾಡ ನಿನ್ನ ನಂಬಿದವನೋ ನಾನು
ಮುಂದಿನ ದಾರಿಕಾಣದೆ ಬಳಲುತ್ತಿರುವೆ
ಕಂದಿಕುಂದಿದೆನು ಮನದೊಳಗೆ ಭಕ್ತ-
ಬಾಂಧವ ಶ್ರೀಕೃಷ್ಣವಿಠಲನೆ ನೀನು ಅಂದು ಇಂದೆನ್ನದೆ
ಇಂದೇಸಲಹೋ ದ್ವಂದ್ವ ಪಾದಗಳಿಗೆ ನಮೋನಮೋ ೧
ಮಟ್ಟತಾಳ
ಯಾರು ಒಲಿದು ಮಾಡುವದೇನು ಯಾರು
ಮುನಿದು ಮಾಡುವುದೇನು
ಊರುಜನರೆಲ್ಲ ನಕ್ಕಾರಾಗುವುದೇನು ಊರನಾಳುವ
ಧೊರೆ ಮನ್ನಿಸಿದರೇನು ಮುನಿದರೇನು
ಘೋರ ಸಂಸಾರಶರಧಿಯ ದಾಟಿಸಬಲ್ಲರೆ
ಮರಳಿ ಮರಳಿ ಬರುವ ಜನನ ಮರಣಂಗಳ
ಹರಿಸಿ ಪೊರೆಯ ಬಲ್ಲರೇನೋ ಕಂಸಾರಿ
ಸಿರಿ ಪದ್ಮಜವಂದ್ಯ ಅತುಳಮಹಿಮ ನಮ್ಮ
ಸಿರಿ ಕೃಷ್ಣವಿಠಲನ ಚರಣಸರೋಜವಲ್ಲದೆ
ಬೇರೆ ತಾರಕವಿಲ್ಲ ಶರಣು, ಶರಣು, ಶರಣು ೨
ತ್ರಿವಿಡಿತಾಳ
ಇಲ್ಲಿ ನೀನೇಗತಿ ಅಲ್ಲಿ ನೀನೇ ಗತಿ
ಎಲ್ಲೆಲ್ಲು ನೀನೇ ಗತಿ ಮಲ್ಲ ಮರ್ಧನನೆ
ಬಲ್ಲವರಾರು ನಿನ್ನ ಸಾಕಲ್ಯ ಶರಣೈಯ್ಯ
ಗೊಲ್ಲನೆನಿಸಿ ಗೋಪಿಯರಿಗೊಲಿದೆ
ಚೆಲ್ವಸುಂದರಿಯಾಗಿ ಅಸುರರನಳಿದೆ
ಬಲಿಯ ತುಳಿದು ಬಾಗಿಲಕಾಯ್ದೆ
ಮೆಲ್ಲನೆ ದುರ್ಯೋಧನನ ಹಾರಿಸಿದೆ
ಹುಲ್ಲಿನಿಂದಲಿ ಕಾಕಾ ಸುರನ ತುಳಿದೆ
ಹುಲ್ಲೆನೆಪದಿ ಸತಿಯನಗಲಿಕೆ ನಟಿಸಿದೆ
ಕ್ಷುಲ್ಲ ಬೈಯ್ಗಳ ಬೈಯ್ದವನ ಇಂಬಿಟ್ಟುಕೊಂಡೆ
ಸೊಲ್ಲಲಾಲಿಸಿ ನರಸಿಂಹ ನೀನಾದೆ
ಸುಳ್ಳು ಬೋಧಿಸಿ ಬತ್ತಲೆ ನಿಂದೆ
ಪುಲ್ಲನಾಭನಾಗಿ ಮಗನ ಪಡೆದೆ
ನಲ್ಲ ನಿರುಪಮ ಶ್ರೀ ಕೃಷ್ಣ ವಿಠಲನೆ
ಬಲ್ಲಿದರಿಗತಿ ಬಲ್ಲಿದನು ಅಪ್ರತಿಮಲ್ಲ
ನಿಲ್ಲೋ ಎನ್ನ ಮನದಿ ಸರ್ವದಾ ದೇವಾದಿದೇವ
ದೇವಾದಿದೇವ ೩
ಅಟ್ಟತಾಳ
ಸ್ನಾನ ಸಂಧ್ಯಾವಂದನದಿ ಮೆಚ್ಚಿಸಲರಿಯೆ
ಮೌನ ಜಪತಪ ನೇಮ ಹೋಮ ಒಂದನರಿಯೆ
ದಾನ ಧರ್ಮಗಳ ಸುಳಿವನ್ನರಿಯೆ
ಅನುದಿನಶ್ರವಣ ಮನನಾದಿ ಸಾಧನ ವನರಿಯೆ
ಜ್ಞಾನಮಾರ್ಗದ ಧೂಳಿ ಸಹ ಕಂಡರಿಯೆ
ತನುಮನ ಧನ ಪ್ರಾಣಗಳನೊಪ್ಪಿಸಿದೆನೊ
ಶ್ರೀನಿವಾಸ ಜಯತೀರ್ಥ ವಾಯ್ವಂತರ್ಗತ ಶ್ರೀಕೃಷ್ಣವಿಠಲ
ನಿನ್ನ ನಾಮ ಉಣ್ಣಿಸಿ ಕಾಯೋ ನಿನ್ನ ನಾಮ
ಉಣ್ಣಿಸಿ ಕಾಯೋ ೪
ಆದಿತಾಳ
ಏನುಮಾಡಿದರೇನು ಏನು ಓದಿದರೇನು
ಕಾನನ ದೊಳಗೆ ತಿರುಗಿ ಬೆಂಡಾದರೇನು
ದಾನವಾಂತಕ ನಿನ್ನ
ದಯವಾಗೋ ತನಕ ನಾನು ನಾನು ಎಂದು
ಹೀನ ಮಾನವನಾದೆ ನೀನು ನೀನು ನಿನ್ನಾಧೀನವು
ಶ್ರೀನಿವಾಸಾಮಾನಾಭಿಮಾನವು ನಿನ್ನ ದೈಯ್ಯ ದೇವ
ಸಾನುರಾಗದಲಿ ನಿನ್ನ ನಿಜದಾಸನ ಮಾಡೋ
ವಾಣಿಪಿತ ಶ್ರೀಜಯತೀರ್ಥ ವಾಯ್ವಂತರ್ಗತ ಶ್ರೀಕೃಷ್ಣ ವಿಠಲ
ನಿನ್ನಡಿಗಳಿಗೆ ನಮೋನಮೋ ಎಂಬೆ ಶರಣು ೫
ಜೊತೆ
ಹರಿಯೇ ಗತಿ ಹರಿಯೇ ಮತಿ ಹರಿಯೇ ದೈವ
ಹರಿಯೇ ಸರ್ವವು ಶ್ರೀಕೃಷ್ಣವಿಠಲನ ಮೊರೆ ಹೊಕ್ಕು ಬೇಗನೆ
ಸೂರೆಗೊಳಿರೋ ಮುಕುತಿ, ಸೂರೆಗೊಳಿರೋ ಮುಕುತಿ ||

ಕಂಡವರ ತೊಂಡನೆನಿಸ
೯೨
ಕಂಡವರ ತೊಂಡ ನೆನಿಸ ಬೇಡ ಹರಿಯೇ ಪ
ಪುಂಡರೀಕಾಕ್ಷನೆ ಕಾವ ತೊಂಡರ ತೊಂಡನೆನಿಸೋ ಅ.ಪ.
ಹೆಂಡತಿಯ ಬಿಡಬಹುದು-ಕಾಡಿಗ್ಹೋಗಲಿ ಬಹುದು
ಬಿಡದೆ ಜಪಿಸಲಿ ಬಹುದು-ಕಟುತಪವ ಮಾಡಲಿಬಹುದು
ಒಡೆಯ ಕೃಷ್ಣನೆ ನಿನ್ನ ಅಡಿಯ ಕಾಡಲಿಬಹುದು
ಕಂಡವರ ಊಳಿಗದಿ ಕೀರ್ತಿ ಪಡೆಯಲಾಗದೊ ದೇವ ೧
ಆಶೆಯ ತೊರೆದು ನಿಜ ದಾಸನಾಗಲಿಬಹುದು
ದೇಶ ದೇಶವ ತಿರುಗಿ ಕಾಸುಗಳಿಸಲಬಹುದು
ಕೇಸರಿಯ ಹಿಡಿತಂದು ಪಾಶದಲಿ ಕಟ್ಟಬಹುದು
ಶ್ರೀಶನಿನಗಲ್ಲದವರ ಸಂಗ ಏಸೇಸು ಜನ್ಮಕ್ಕು ಬ್ಯಾಡೋ ೨
ಹೀನ ಜನರಾ ಸಂಗ ಮಾನವಂತರಿಗಲ್ಲ
ದೀನಜನಮಂದಾರ ಕೊಡಬೇಡ ಇದು ಎನಗೇ
ಮಾನಾಭಿಮಾನವನು ನಿನಗೆ ಒಪ್ಪಿಸಿದೆನೋ
ಇನ್ನಾದರೂ ಸಲಹೋ ಶ್ರೀನಿವಾಸ ಕೃಷ್ಣವಿಠ್ಠಲನೆ ಜೀಯಾ ೩

ಹಾಡಿನ ಹೆಸರು :ಕಂಡವರ ತೊಂಡನೆನಿಸ
ಹಾಡಿದವರ ಹೆಸರು :ಶ್ರೀರಕ್ಷಾ ಅರವಿಂದ್
ಸಂಗೀತ ನಿರ್ದೇಶಕರು :ರವೀಂದ್ರ ಹಂದಿಗನೂರ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಕಾಮಾನ ಜನನಿಯೆ ಸೋಮಾನ
೫೫
ಕಾಮಾನ ಜನನಿಯೆ ಸೋಮಾನ ಸೋದರಿ
ಸಾಮಾಜ ವರದನ ಪ್ರೇಮವ ಕೊಡಿಸಮ್ಮ ಪ
ನೇಮಾದಿಂದಲಿ ಹರಿ ನಾಮಾವ ನುಡಿಸುತ
ತಾಮಾಸ ಓಡುವಂತೆ ನೀಮಾಡಬೇಕಮ್ಮ ಅ.ಪ
ನಿತ್ಯ ತೃಪ್ತಳೆನಿನ್ನ ನಿತ್ಯದಿ ಬೇಡಿಕೊಂಬೆ
ಭೃತ್ಯರೊಳಗೆ ಎನ್ನ ಎತ್ತಿ ಸೇರಿಸೆ ತಾಯೆ ||
ಮತ್ತನಾಗದೆ ಭವದಿ ಉತ್ತುಮನೆನಿಸುತ
ಆತ್ಮದಿ ಹರಿ ತೋರಿ ಕೃತಕೃತ್ಯನೆನಿಸಮ್ಮ ೧
ದೇಶಕಾಲದಿನೀನು ಶ್ರೀಶಗೆ ಸಮಳಮ್ಮ
ನಾಶಮಾಡುತ ದೋಷ ದಾಸಾನು ಎನಿಸಮ್ಮ ||
ಶ್ವಾಸಾಶೇಷರನೆಲ್ಲ ಲೇಸಾಗಿ ಆಳುವಳೆ
ವಾಸುದೇವನಲ್ಲಿ ಆಸೇಯ ನೀಡಮ್ಮ ೨
ಶೃತಿಯಲ್ಲಿ ನೀನಿದ್ದು ಸ್ತುತಿಸೀ ಶ್ರೀಹರಿಯನ್ನ
ಮತ್ತೆಸೃಜಿಸುವಂತೆ ಎತ್ತಿಗಾನವ ಮಾಳ್ವೆ ||
ಎತ್ತ ನೋಡಲು ಬಲು ಕತ್ತಲೆಕಣಿ ತಾಯೆ
ಸತ್ಯವ ಬಿಡದಂತೆ ಹತ್ತೀಸೆ ಹರಿದಾರಿ೩
ಹರಿಯಂತೆ ಅವತಾರ ನಿರುತನೀ ಮಾಡುತ
ಪರಿ ಪರಿ ರೂಪದಿಂದ ಪರಿಚರಿಯ ನೀಮಾಳ್ವೆ ||
ಸರ್ವೇಶ ಹರಿಯಿಂದ ಸರ್ವಕಾಲದಿ ಕೂಡಿ
ಸರ್ವಕಾರ್ಯವ ಮಾಳ್ವೆ ಸರಿಯಾರೆ ನಿನಗಮ್ಮಾ ೪
ಅಕ್ಷರ ರೂಪಳೆ ಈಕ್ಷಿಸುಕರುಣದಿಂದ
ತ್ರ್ಯಕ್ಷೇಶ ವಿಧಿಮಾತೆ ಅಕ್ಷರನರ್ಧಾಂಗಿ ||
ಕುಕ್ಷೀಲಿ ಬ್ರಹ್ಮಾಂಡ ಲಕ್ಷ್ಯವಿಲ್ಲದೆ ಪಡೆದಿ
ಅಕ್ಷಯ ಮಾಡಿ ಜ್ಞಾನ ಮೋಕ್ಷಾವ ಕೊಡಿಸಮ್ಮಾ೫
ವಿಕಾರ ಶೂನ್ಯಳೆ ಪ್ರಕೃತಿಗೆ ಮಾನಿಯೆ
ನೀಕಾರ್ಯ ಕಾರಣಕ್ಕೆ ಮುಖ್ಯ ಹೇತುವೆ ತಾಯೆ ||
ಪ್ರಕೃತಿ ಬಂಧವ ಬಿಡಿಸಿ ಸಾಕಾರ ಮೂರುತಿ
ಲೋಕನಾಯಕ ಹರಿಯ ಏಕಾಂತದಲಿ ತೋರೆ೬
ತ್ರಿಗುಣ ಕಾರ್ಯಗಳೆಲ್ಲ ಸುಗುಣಿ ನೀ ಮಾಡುತ
ನಿಗಮ ವೇದ್ಯನ ನಿತ್ಯ ಪೊಗಳಿ ಹಿಗ್ಗುವೆ ಮಾತೆ ||
ಜಗವೆಲ್ಲ ಕುಣಿಸುತ ನಗುತಲೀಲೆಯಿಂದ
ನಿಗಮಾದಿಗಳ ಮೀರಿ ಬಗೆ ಬಗೆ ಲೀಲೆ ಕಾಂಬೆ ೭
ನಿತ್ಯಾ ಮುಕ್ತಳು ನೀನು ಪ್ರೀತಿಲಿ ನಮಿಪೆನೆ
ಮಾತುಲಾಲಿಸಿ ಎನ್ನ ನಿತ್ಯದಿ ಸಲಹೆಮ್ಮ ||
ಹೆತ್ತ ತಾಯಿಯು ನೀನು ಎತ್ತಿ ಪೊರೆಯದಿರೆ
ಎತ್ತ ಪೋಗಲಿ ನಾನು ಉತ್ತುಮರಮೆ ಹೇಳೆ ೮
ಸಾಗರನ ಮಗಳೆ ಆಗಮರೂಪಳೆ
ಹೋಗೀಸುಲಿಂಗವ ಸಾಗಿಸಿಗುಣಕಾರ್ಯ ||
ಭಾಗ್ಯ ಸ್ವರೂಪಳೆ ಬಾಗಿ ನಮಿಸುವೆ
ಆಗು ಮಾಡಿಸು ಹರಿ ಗೀತೆಗಳೆನ್ನಿಂದ ೯
ಮರುತ ದೇವನ ಪಿತನ ಉರದಲಿ ವಾಸಿಪಳೆ
ಹರಿಗುರು ಚರಣದಿ ನಿರುತ ಭಕ್ತಿಯ ಕೊಟ್ಟು ||
ವಾರಿಜನಾಭನಲ್ಲಿ ಧಾರೆ ಧಾರೆಯ ಭಕ್ತಿ
ಬೀರೀಕರುಣಿಸು ಸಾರಸ ದಳನಯನೇ ೧೦
ಮಾತು ಮಾತಿಗೆ ನಮ್ಮ ಖ್ಯಾತಾಜಯತೀರ್ಥ
ವಾತನೊಳ್ವಾಸಿಪ ನವನೀತ ಧರಿಸೀಹ ||
ಶ್ರೀ ತಾಂಡವ ಕೃಷ್ಣ ವಿಠಲರಾಯನ ಸ್ಮರಣೆ
ಆತ್ಮಾದೊಳಗೆ ನಿಂತು ಖ್ಯಾತೀಲಿನಡಿಸಮ್ಮಾ ೧೧

ಹಾಡಿನ ಹೆಸರು :ಕಾಮಾನ ಜನನಿಯೆ ಸೋಮಾನ
ಹಾಡಿದವರ ಹೆಸರು :ಶಂಕರ ಶಾನುಭಾಗ್
ರಾಗ :ಮಿಶ್ರ ಮಾಂಡ್
ತಾಳ :ಮಿಶ್ರ ಛಾಪು
ಶೈಲಿ :ವಿಶ್ವಚಾಪು
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ತಾಂಡವಾಡು-ತಾಂಡವಾಡು
೧೮
ತಾಂಡವಾಡು-ತಾಂಡವಾಡು ತಾಂಡವಾಡು-ಶ್ರೀ ಕೃಷ್ಣವಿಠಲ ಪ
ತೊಂಡನಾನು_ ತೊಂಡನಾನು_
ತುಂಡುಮಾಡು ಭಂಡ ಭವವ ಅ.ಪ.
ಅಂದು ಇಂದು ಎಂದು ಏನು _ ಹಿಂದು ಮುಂದು
ಒಂದು ಅರಿಯೆ
ಇಂದಿರೇಶ ನಂದದಿಂದ ಮುಂದೆ ಬಂದು ಛಂದ ದಿಂದ ೧
ಹಾಗೋ ಹೀಗೋ _ ಹ್ಯಾಗೋ ಕಾಣೆ _ ಕೂಗಿ ಕೂಗಿ
ಬಾಗಿ ಬಾಗುವೆ
ಯಾಗ _ ಯೋಗ _ ಭೋಗ ಮುಕ್ತಿ ಎಲ್ಲ ನೀನೆ ಬೇಗ ಸಾಗಿ೨
ದೋಷ ದೂರ _ ವಾಸುದೇವ _ ಶ್ರೀ ಕೃಷ್ಣವಿಠ್ಠಲ ನಿತ್ಯ
ದೋಷಿಯಾದರೇನು ನಾನು ಶ್ವಾಸ ಶಿಷ್ಯ _ ನಿತ್ಯಭೃತ್ಯ ೩

ಹಾಡಿನ ಹೆಸರು :ತಾಂಡವಾಡು-ತಾಂಡವಾಡು
ಹಾಡಿದವರ ಹೆಸರು :ಕಿಕ್ಕೇರಿ ಕೃಷ್ಣಮೂರ್ತಿ
ರಾಗ :ಹಂಸಾನಂದಿ
ತಾಳ :ರೂಪಕ ತಾಳ
ಸಂಗೀತ ನಿರ್ದೇಶಕರು :ಫಲ್ಗುಣ ಹೆಚ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಮನಸಿನನುತಾಪವನು ಪರಿಹರಿಸು
೩೭
ಮನಸಿನನುತಾಪವನು _ ಪರಿಹರಿಸು _ ಹರಿಯೇ ಪ
ವನಜ ನಾಭನು ನೀನೇ ಮನದ ಪ್ರೇರಕನಲ್ಲವೇ ಅ.ಪ.
ಅನುದಿನದಿ ಧನವನಿತೆ _ ಎಂತೆಂಬ ಕಾನನದಿ
ಮನಸು ಮಾಡೀ ಬಹಳ _ ಶ್ವಾನನಂದದಿ ತಿರಿದೇ
ಕನಸಿಲಾದರು ನಿನ್ನ _ ಧ್ಯಾನವನು ಮಾಡದೆಲೆ
ಮನುಜ ಪಶುವೆನಿಸಿದೆನು _ ದೀನವತ್ಸಲ ಸ್ವಾಮಿ ೧
ಸಂಸಾರ ವೆಂಬುವುದು _ ಹಿಂಸೆರೂಪವೆಸಿದ್ಧ
ಹಂಸರೂಪಿಯ ಮರೆತ _ ಸಂಶಯಾತತಜನಕೆ
ಧ್ವಂಸ ಗೈಸಿ ವಿಷಯ _ ವಾಸನೆಯ ತರಣಿಯನು
ಕಂಸ ಮರ್ಧನ ಶೌರಿ _ ದಾಸನೆನ್ನನು ಮಾಡಿ೨
ಜ್ಞಾನ ತಿರುಳನು ತಿಳುಹಿ _ ಧ್ಯಾನಬಗೆಯನು ಅರುಹಿ
ಮಾನಾಭಿಮಾನವನು _ ನಿನಗೆ ಸಮರ್ಪಿಸಿ ಸು
ಜ್ಞಾನಿಗಳ ಸಹ ಶ್ರೀ ಕೃಷ್ಣವಿಠಲನ ನಿತ್ಯ
ಗಾನದಲಿ ಮೆಚ್ಚಿಸುವ ಭಾಗ್ಯ ಶೀಲನ ಮಾಡೀ ೩

ಹಾಡಿನ ಹೆಸರು :ಮನಸಿನನುತಾಪವನು ಪರಿಹರಿಸು
ಹಾಡಿದವರ ಹೆಸರು :ರಮಾಕಾಂತ್ ಆರ್. ಎಸ್.
ಸಂಗೀತ ನಿರ್ದೇಶಕರು :ಶ್ರೀಕಂಠನ್ ಆರ್. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *