Categories
ರಚನೆಗಳು

ವಿದ್ಯಾಪ್ರಸನ್ನತೀರ್ಥರು

೧೫೨
ತುಂಗ ಭುಜಂಗನ ಫಣಿಯಲಿ ಕುಣಿದನು ಪ
ಮಂಗಳ ಮೂರುತಿ ರಂಗ ಶ್ರೀ ಕೃಷ್ಣನು ಅ.ಪ
ಕಿಣಿ ಕಿಣಿ ತಾಳ ಝೇಂಕರಿಸುವ ತಂಬೂರಿ
ಕಣ ಕಣವೆಂಬ ಸುನಾದ ಮೃದಂಗವ
ಝಣಿ ಝಣಿಸುವ ಕಂಜರಿ ನಾದಗಳನು
ಅನುಸರಿಸುತ ಧಿಕ್ಕಿಟತ ಧಿಕ್ಕಿಟ ಎಂದು ೧
ಗಗನವ ತುಂಬಿ ತುಂಬುರು ಗಂಧರ್ವರು
ಶಹನ ಅಠಾಣ ಶಂಕರಾಭರಣಗಳಿಂದ
ಸೊಗಸಿನಿಂದಲಿ ಗುಣಗಾನವ ಮಾಡಲು
ನಗಧರ ಕೃಷ್ಣನು ನಗು ಮೊಗದಿಂದಲಿ ೨
ಪನ್ನಗ ಸತಿಯರು ಚಿನ್ನರ ತವಕದಿ
ಸನ್ನುತಿಸುತ ಆರತಿಯ ಬೆಳಗುತಿರೆ
ಉನ್ನತ ಗಗನದಿ ಸುಮನಸರೆಲ್ಲ ಪ್ರ
ಸನ್ನ ಹರಿಗೆ ಸುಮಮಳೆಗರೆಯುತಲಿರೆ ೩

 

೨೭೨
ತೋರಿಸಯ್ಯ ಬೆಳಕು ದೇವ ತೋರಿಸಯ್ಯ ಬೆಳಕು
ದಾರಿ ತಪ್ಪಿ ದೂರ ಬಂದಿಹೆನು ಪ
ಘೋರ ತಿಮಿರ ಮಧ್ಯದಿ ನಿಂತಿಹೆನೊ ಅ.ಪ
ಚತುರನೆಂದು ತಿಳಿದು ಬಲುದಿನ
ಸ್ತುತಿಸಲಿಲ್ಲ ನಿನ್ನ
ಪತಿತನೆಂಬ ಭಯ ತೊರೆದು ಧೈರ್ಯದಲಿ
ಕ್ಷಿತಿ ಭೋಗಗಳಿಗೆ ಮತಿಗೊಟ್ಟೆನು ನಾ ೧
ಬೇಡುವುದಿಲ್ಲವೊ ನಾ ಎನ್ನ
ಕೂಡಿ ಪೋಗಲೆಂದು
ಹೂಡು ಎನ್ನಯ ಹೆಜ್ಜೆಯ ಸನ್ಮಾರ್ಗದಿ
ಕಾಡು ಮೇಡುಗಳ ದಾಟಿ ಬರುವೆನೊ ೨
ಕೂತಿರುವೆನು ನಾನು ತನುಮನ
ಸೋತಿರುವುದು ಬಹಳ
ಈ ತರಹದಿ ಬದುಕಿರುವುದು ನಿನ್ನಯ
ಪ್ರೀತಿಯಿಂದಲೆ ಜ್ಯೋತಿರ್ಮಯನೆ ೩
ಕತ್ತಲೆ ಕವಿದಿಹುದೊ ಕಣ್ಣಿಗೆ
ಎತ್ತಲು ಕಾಣದಿದೆ
ಚಿತ್ತವ ಬೆಳಗಿಸೊ ಮತ್ತೆ ನೋಡುವೆನು
ಉತ್ತಮ ದೃಶ್ಯವ ಭಕುತರ ಪ್ರಸನ್ನನೆ ೪

 

೨೯೭
ತ್ಯಜಿಸದಲೆ ಸಂಸಾರ ಭಜಿಸಬಹುದು ಪ
ಅಜಭವಾದಿಗಳೆಲ್ಲ ತ್ಯಜಿಸಿ ಭಜಿಸುವರೇ ಅ.ಪ
ಅರ್ಣವವ ಪೋಲುವ ಭವವನ್ನು ನೀಗಲು
ವರ್ಣಾಶ್ರಮಗಳ ಧರ್ಮಗಳನರಿತು
ಪೂರ್ಣ ಸುಖಜ್ಞಾನ ಪೊಂದಿದ ಹರಿಯ ಗುಣಗಳನು
ನಿರ್ಣಯದ ಭಕುತಿಯಲಿ ವರ್ಣಿಸುವ ನರನು ೧
ಜನ್ಮವನು ಕಳೆವುದಕೆ ತೀರ್ಮಾನ ಮಾಡಿ ದು
ಷ್ಕರ್ಮಗಳ ತ್ಯಜಿಸಿ ಸತ್ಕರ್ಮಗಳನು
ಮರ್ಮವರಿಯುತ ರಚಿಸಿ ಹೆಮ್ಮೆಯಿಂದಲಿ ತನ್ನ
ಧರ್ಮದಲಿ ಸತಿಸುತರ ಭೋಗ ಉಣುವವರು ೨
ಅನ್ಯಾಯಗಳ ಬಿಟ್ಟು ಮಾನ್ಯರೆಂದೆನಿಸುತಲಿ
ಘನ್ನ ಮಹಿಮನ ಸೇವೆಯೆಂದರಿಯುತ
ಕನ್ಯಾದಿ ದಾನಗಳ ಮಾಡುತಲಿ ಮುದದಿಂದ
ಚೆನ್ನಾಗಿ ಹರಿಯ ಪ್ರಸನ್ನತೆಯ ಪಡೆಯುವರು ೩

 

೨೯೮
ದಯಕಿಂತ ಗುಣವಿಲ್ಲ ನರಗೆ
ದಯಕೆ ನಿರ್ಬಂಧವಿಲ್ಲಣ್ಣ ಜಗದಿ ಪ
ಹೃದಯ ಮಂದಿರದಲಿ ನೆಲೆಸಿಹ ದಯೆಯು
ಮೃದು ಮಳೆಹನಿ ತೆರದಲಿ ಸುರಿಯುವುದು ಅ.ಪ
ಬಾರಿಯ ಸ್ಥಾನಕೆ ಈ ದಯೆ ಗುಣವು
ಭಾರಿಯ ಶಕುತಿಯ ನೀಡುವುದು
ಚಾರು ಕಿರೀಟವ ಮೀರಿದ ಕಾಂತಿಯ
ಬೀರುವುದೀ ದಯೆ ನರಪತಿಗೆ ೧
ರಾಜನ ದಂಡವ ನೋಡುತ ನೋಡುತ
ಈ ಜಗವೆಲ್ಲವು ನಡುಗುವುದು
ರಾಜನ ಕಾರ್ಯಗಳೆಲ್ಲಕೆ ದೈವಿಕ
ತೇಜವ ಕೊಡುವುದು ದಯೆ ಗುಣವು ೨
ನಶ್ವರವೆಲ್ಲವು ಪ್ರಾಕೃತವು
ಈಶ್ವರ ಧರ್ಮವೆ ಈ ದಯೆಯು
ಶಾಶ್ವತ ಧರ್ಮಗಳೆಲ್ಲವು ದಯದಿ
ಮಿಶ್ರಿತವಾದರೆ ಸುಖಮಯವು ೩
ಪರಮ ಪುರುಷ ದಯೆ ತೋರದಿರೆ
ವರಗತಿ ಪಡೆಯಲು ನರಗಳವೆ
ಕರುಣೆ ಪ್ರಸನ್ನನ ಮೊರೆ ಹೋಗದೆ ನೀ
ಅರಿಯಲು ಸಾಧ್ಯವೆ ಕರುಣೆಯ ಬೆಲೆಯ ೪

 

೧೫೩
ದರುಶನವನು ಕೊಡೆಲೊ ದೇವ ಪ
ಸರಸಿಜ ಮಿತ್ರನು ಮೂಡೆ ಪ್ರಾರ್ಥಿಸುವೆನು ಅ.ಪ
ತುಂಗಾ ಕೃಷ್ಣ ಕಾವೇರಿ
ಗಂಗೆ ಯಮುನೆ ಗೋದಾವರಿ ನರ್ಮದಾ
ಮಂಗಳ ನದಿಗಳು ಕಾದುಕೊಂಡಿರುವುವು
ರಂಗ ನಿನ್ನ ಚರಣಂಗಳ ಸೇವೆಗೆ ೧
ಜಗವನುದ್ಧರಿಸಿದ ಸುಂದರ ನಿನ್ನಯ
ಮೊಗವನು ನೋಡುತ ಸಂಭ್ರಮದಿ
ಬಗೆ ಬಗೆ ಹೈಮವಸ್ತ್ರಗಳನು ಧರಿಸುತ
ನಗವೃಂದವು ಕಾದಿರುವುದು ದೇವ ೨
ತರುಲತೆಗಳು ಕಾದಿರುವುದು ಪೂಮಳೆ
ಗರೆಯಲು ನಿನ್ನಯ ಶಿರದಲ್ಲಿ
ಪರಮಹಂಸರುಗಳು ಕರದಲಿ ಜಪಮಣಿ
ಧರಿಸಿ ಜಪಿಸುವರೊ ಕರುಣಾ ಪ್ರಸನ್ನನೆ ೩

 

ಅ.ಪಲ್ಲವಿ : ವಾತಕುಮಾರರ ನೀತಿಗಳು
೧೫೪
ದಾತ ನೀನಿರಲಾತರ ಬಡತನವೊ
ಶರಣಾಗತ ಸುಜನರ ದಾತ ನೀನಿರಲಾತರ ಬಡತನವೊ ಪ
ಸೋತು ಮನವನು ವಿಷಯಗಳಲಿ ಬಲು
ಕಾತರನಾಗದೆ ವಾತ ಕುಮಾರರ
ನೀತಿಗಳರಿಯುತ ಧಾತಪಿತನ ಗುಣ
ಜಾತಗಳಲಿ ಅತಿ ಪ್ರೀತಿ ಪಡೆಯುವರ ಅ.ಪ
ತಾನು ತನ್ನವರೆನ್ನುವ ಮೋಹದಲಿ
ಅನುದಿನದಲಿ ಮುಳುಗಿಹ
ಮಾನವರಿಗೆ ಧನಾರ್ಜನೆಯು ಕ್ಲೇಶ
ಜಾನಕೀಶನೆ ನೀನಲ್ಲದೆ ಎನ
ಗೇನು ರುಚಿಸದು ಎಂದರಿಯುತ ನಿನ್ನ
ಜ್ಞಾನ ಪಡೆಯಲು ಸತತ ಶ್ರವಣ
ಮನನಾದಿಗಳ ಸುಖವರಿತ ಸುಜನರಿಗೆ ೧
ಪಾಡುಪಡುತಲಿ ಧನವ ಬಹಳ ಗಳಿಸಿ
ನೋಡುತಲದ ಹಿಗ್ಗುತ
ಗೂಢತನದಲಿ ದಿನದಿನ ನೇವರಿಸಿ
ಕಾಡುವಾ ನರನಂತೆ ಜೀವನ
ಮಾಡುವುದು ಕಡು ಬಡತನವಲ್ಲವೆ
ತೋಡಿ ಗಿರಿಯನು ಇಲಿಮರಿಗಳ ಹಿಡಿ
ದಾಡುವಂತಹ ಮೂಢ ನಾನಲ್ಲವೊ ೨
ನಿನ್ನ ಗಾನವೆ ವಿವಿಧ ಸುರಸ ಪಾನ
ಅವಿಚಾಲಿತ ಮನದಲಿ
ನಿನ್ನ ಧ್ಯಾನವೆ ನವಮಣಿ ಸೋಪಾನ
ನಿನ್ನ ಪೂಜೆಯ ಮಂದಿರವೆ ಎನ
ಗುನ್ನತದ ಉಪ್ಪರಿಗೆಯ ವಾಸವು
ನಿನ್ನ ಸೇವೆಯ ಸುಖತಮ ಭೋಗಗ
ಳೆನ್ನುವರಿಗೆ ಪ್ರಸನ್ನನಾಗುವ ೩

 

ನುಡಿ-೨: ತಂತ್ರಸಾರ
೩೨೮
ದಿನಗಳ ಕಳೆವುದೆ ಸಾಧನವು
ಶ್ರವಣ ಮನನ ನಿಧಿಧ್ಯಾಸನಗಳಲಿ ಪ
ಉದಯದಿ ಸ್ನಾನ ನದಿನದಗಳಲಿ
ಸದಮಲ ಹರಿಯ ಪಾದೋದಕ ಪಾನ
ಹೃದಯದಿ ಕೃಷ್ಣನ ಮೂರ್ತಿಯ ಧ್ಯಾನ
ವಿಧಿಯಲಿ ಜಪತಪ ಪ್ರವಚನಗಳಲಿ ೧
ಪ್ರೇಷ್ಟತಮರ ತಂತ್ರಸಾರದ ಕ್ರಮದಲಿ
ಅಷ್ಟಮಹಾ ಮಂತ್ರಗಳನು ಜಪಿಸಿ
ವೃಷ್ಣಿವರೇಣ್ಯನ ವೈಭವದಿಂದಲಿ
ತುಷ್ಟಿಗೊಳಿಸಿ ಬಲು ಶಿಷ್ಟರ ಸಂಘದಿ ೨
ತ್ರಿಭುವನ ಗುರುಗಳ ಶುಭಕರ ಶಾಸ್ತ್ರವ
ಪ್ರವಚನಗೈಯುತ ಪ್ರತಿಕ್ಷಣಗಳಲಿ
ವಿಬುಧ ಪ್ರಸನ್ನನ ಗುಣಗಳ ಸಜ್ಜನ
ಸಭೆಯಲಿ ಪಾಡುತ ನಿರ್ಭಯರಾಗಿ ೩

 

೨೭೩
ದೀನ ಪಾಲನೆ ಗಾನಲೋಲನೆ
ಮೌನಿ ಸುಜನ ಪ್ರಿಯನೇ ಪ
ಈ ನರಜನ್ಮದ ಕಾನನದಲಿ ಬಲು
ದೀನನಾಗಿ ಗುಣಗಾನ ಮಾಡುವೆನೊ ಅ.ಪ
ದುಷ್ಟಭೋಗಗಳನುಭವಿಸುತ ಸದಾ
ಭ್ರಷ್ಟನಾದೆ ನಾನು
ಅಷ್ಟಿಷ್ಟಲ್ಲದೆ ಮರುಗುತಿರುವೆ ಪರ
ಮೇಷ್ಟಿ ಜನಕ ಎನ್ನ ನಿಷ್ಠನ ಮಾಡೊ ೧
ಜಪವ ಮಾಡಲಿಲ್ಲ ತಪವ ಮಾಡಲಿಲ್ಲ
ಉಪವಾಸವ ಕಾಣೆ
ತಪಿಸುತಿರುವೆ ಎನ್ನ ಅಪರಾಧಗಳಿಗೆ
ಕುಪಿತನಾಗದಿರೊ ದ್ವಿಪ್ರವರ ವರದ ೨
ಧರ್ಮವ ಬಿಟ್ಟು ಸತ್ಕರ್ಮವ ತ್ಯಜಿಸುತ
ದುರ್ಮಾರ್ಗದಲಿ ಬಲು
ಹೆಮ್ಮೆ ಮಾಡಿದ ನನ್ನ ಹಮ್ಮು ಮುರಿದಿಹುದು
ಬೊಮ್ಮ ಜನಕ ಸುಪ್ರಸನ್ನನಾಗೆಲೊ ೩

 

೧೫೫
ದೂರದಿ ನಿಲ್ಲೆಲೆ ಬಾಲೆ ಎನ್ನ
ಜಾರನು ಎಂದು ತಿಳಿದೆಯಾ
ಜಾರೆ ಅಹಲ್ಯೆಯ ನಾರಿ ಮಾಡಿದ
ಬ್ರಹ್ಮಚಾರಿಯೆಂದರಿತೆನೊ ೧
ಅಂಗಸಂಗ ಯಾಚಿಸಲು ಎನ್ನ ಅ
ನಂಗನೆಂದು ಭ್ರಮಿಸಿದೆಯಾ
ಸಂಗದಿಂದ ಪಾಪಭಂಗ ಮಾಡುವ ಅ
ನಂಗಜನಕನೆಂದರಿತೆ ೨
ಪತಿಯನು ಬಿಟ್ಟು ನೀ ಬಂದು ಬಾಲೆ
ಪತಿತಳಾಗದಿರು ಇಂದು
ಪತಿತ ಪಾವನ ಜಗತ್ಪತಿಯು ಎನಗೆ ನೀನೆ
ಪತಿಯೆಂದು ತಿಳಿದು ಬಂದಿರುವೆ ೩
ನಿಂದಿಸರೇ ನಿನ್ನ ಜನರು ಬಾಲೆ
ಹಿಂದು ಮುಂದು ನುಡಿಗಳಲಿ
ಮುಕುಂದನೆ ಪ್ರಿಯಳನು ನಿಂದಿಪ ಜನರೆಲ್ಲ
ಮಂದಮತಿಗಳಲ್ಲವೇನೊ ೪
ನಿನ್ನ ನಡತೆ ತರವಲ್ಲ ಬಾಲೆ
ಚೆನ್ನಾಗಿ ಯೋಚಿಸು ಎಲ್ಲ
ಇನ್ನು ತಾಳಲಾರೆ ಕನ್ಯೆಯ ಮೇಲೆ ಪ್ರ
ಸನ್ನನಾಗೋ ಶ್ರೀಕೃಷ್ಣ ೫

 

೧೫೬
ದೃಷ್ಟಿ ದೋಷವು ತಗಲಿತೆನ್ನ ಕಂದನಿಗೆ ಪ
ದೃಷ್ಟಿಗೋಚರನಲ್ಲದಾ ದೇವ ರಕ್ಷಿಸಲು ಅ.ಪ
ಸೇರು ಬೆಣ್ಣೆಯ ತಿಂದು ದೂರು ಕೇಳಿದೆನಿಂದು
ಚಾರು ಮುಖಿಯರ ನೋಟ ಕ್ರೂರವೆಂದರಿ ಕಂದ
ಈರೇಳು ಭುವನಗಳ ತಿಂದು ತೇಗುವ ದೇವ
ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ ೧
ಎಂದು ಕಾಣೆವು ಇಂಥಾ ಸುಂದರನ ನಾವೆಂದು
ಮಂದಗಮನೆಯರ ನುಡಿ ಅಂದವಾಯಿತೆ ಕಂದ
ಸಂದೇಹವಿಲ್ಲವರ ಶೃಂಗಾರಕೀ ಫಲವು
ಸೌಂದರ್ಯ ಜಲಧಿ ಮನುಮಥನ ಮನುಮಥನೆ ಗತಿ ೨
ನೀರು ಮಂತ್ರಿಸಿದಾಯ್ತು ಬೂದಿ ಮಂತ್ರಿಸಿದಾಯ್ತು
ನಾರಸಿಂಹಾದಿ ವರಮಂತ್ರಗಳ ಜಪವಾಯ್ತು
ಭಾರಿ ಪುಸಿಯಾಯ್ತು ಜನನಿಯೊಲು ಹರಸಿದೀತನಲಿ
ಮೀರಿಹನು ಯಂತ್ರ ಮಂತ್ರಾರ್ಥವೆಲ್ಲಾ ಪ್ರಸನ್ನ ೩

 

೧೫೭
ದೇವ ಬೆಳಗಾಯಿತೋ ಎನ್ನಯ ಸೇವಾ ಪ
ಸ್ವೀಕರಿಸೋ ಮಹಾನುಭಾವ ದೇವ ಅ.ಪ
ಮಧುರ ಗಾನವೇ ಗಂಗಾಸ್ನಾನ
ಹೃದಯ ಶುದ್ಧಿಯೇ ಬದರಿಸ್ನಾನ
ಬದಿಯಲಿರುವ ಭಕುತರ ಸಹವಾಸವೇ
ನದಿನದಗಳವಗಾಹನ ಸ್ನಾನವೋ ೧
ಹಾಲಿಗೆ ಕರದಲಿ ಥಾಲಿಯ ಪಿಡಿದು
ಕೋಲಾಹಲ ಕಲಭಾಷಣ ಮಾಡುವ
ಬಾಲರ ನಗುಮೊಗ ನೋಡಲು ಕೃಷ್ಣನ
ಲೀಲೆಯ ಸಂದರ್ಶನಾನಂದವೋ ೨
ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ
ಕಲ್ಹಾರದ ನವ ಕುಸುಮ ರಾಶಿಯ
ಚಿಲ್ಲೆ ಪಲ್ಲೆಗಳ ಬಹುರೂಪದಿ ಶ್ರೀ
ನಲ್ಲ ನಿನಗೆ ಸಲ್ಲಿಸುವುದೇ ಭಾಗ್ಯವೋ ೩
ತಾತನೆಂದು ಮೊರೆಯಿಡುವರು ನೀ ಅನ್ನ
ದಾತನೆಂದು ಮೊರೆಯುತಿಹರೋ
ತಾತನ ಕಿವಿಗೀ ಮಾತನು ತಿಳಿಸಲು
ದೂತನು ನಾ ಕಾದಿಹೆನೊ ಪ್ರಸನ್ನನೇ ೪

 

೨೭೪
ದೇವಗಂಗೆಯು ಹರಿಯುತಿರಲು ತೀರದಲ್ಲಿ ನಾ
ಬಾವಿಯನು ತೋಡುತಲಿ ಬಲು ಬಳಲಿದೆ ಪ
ಗೋವು ಕರೆಯುವ ಕ್ಷೀರ ಕೊಡಕೊಡದಿ ತುಂಬಿರಲು
ಬೇವಿನೆಣ್ಣೆಯ ಬಯಸಿ ಬಳಲಿ ಬೆಂದೆ ಅ.ಪ

ಅರಸುತನದಲಿ ಆಳುತಿರುವ ಸ್ಥಾನವನು ನಾ
ಮರೆತು ಕಡು ಹೇಡಿಯಂದದಿ ನಡೆದೆನೊ
ದುರಿತರಾಶಿಗಳನ್ನು ತರಿವ ಮಂತ್ರಗಳರಿತು
ಕುರುಬ ಹೊದ್ದಿರುವ ಕಂಬಳಿ ಬಯಸಿದೆ ೧
ವೇದಾಂತ ಸಾಮ್ರಾಜ್ಯದಧಿಕಾರದಲಿ ಕುಳಿತು
ಕಾದ ಮರುಭೂಮಿ ರಾಜ್ಯವ ಬಯಸಿದೆ
ಆದರದಿ ಕರೆದು ಬಡಿಸುವರ ಭೋಜನ ತೊರೆದು
ಮೂದಲಿಸುವರನು ಬೇಡಿದೆನನ್ನವ ೨
ನೀಗಿ ಪುಣ್ಯವು ನಿನ್ನ ದಯವು ತಪ್ಪಿದ ಮೇಲೆ
ಕೈಗೊಂಬೆ ಕರಡಿಯಾಗುವುದು ಕ್ಷಣದಿ
ರಾಗಗಳ ಕಳೆದು ಮನವಚನ ಕಾಯಗಳನ್ನು
ಬೇಗ ನಿನ್ನಡಿಗಳಿಗೆ ಸೆಳೆಯಲೋ ಪ್ರಸನ್ನ ೩

 

ನುಡಿ-೧: ಸ್ವರಮಣ
೩೨೯
ದೇಹವ ದಂಡಿಸಲೇಕೆ ಮನುಜ ಪ
ಶ್ರೀ ಹರಿನಾಮವ ಸ್ನೇಹದಿ ಭಜಿಸೆಲೊ ಅ.ಪ
ಭಕುತಿಯೆ ಸಾಧನ ಹರಿಯ ಪ್ರಸಾದಕೆ
ಮುಕುತಿಗೆ ಹರಿಯ ಪ್ರಸಾದವೆ ಸಾಧನ
ರುಕುಮಿಣೀರಮಣನು ಪೂರ್ಣ ಸ್ವರಮಣನು
ಭಕುತಿಗೆ ಸಜ್ಜನ ಸಂಘವೆ ಸಾಧನ ೧
ವಾದ ವಿವಾದವು ಆಗಿ ಮುಗಿಯಿತೊ
ಮೋದತೀರ್ಥರ ಮತ ಸಾಧನ ಕೈಪಿಡಿ
ಓದಿ ನೀ ಸುಲಭದಿ ತತ್ವಗಳರಿಯುತ
ಮಾಧವನಂಫ್ರಿಯ ಹರುಷದಿ ಭಜಿಸೆಲೊ ೨
ಹೃದಯವು ನಿರ್ಮಲವಾಗುವ ತನಕ
ಮದ ಮತ್ಸರಗಳ ಸದೆ ಬಡಿಯುತಲಿ
ಎದೆಯಗೆಡದೆ ಸದಾ ಹರಿಯ ಭಜಿಸೆಲೊ
ಸದಮಲಗುಣನು ಪ್ರಸನ್ನನಾಗುವನು ೩

 

೧೫೮
ಧಣಿ ನೀನಿರಲು ತಣಿಸಿ ಪರರ
ದಣಿವುದುಂಟೆ ಲೋಕದಿ ಪ
ಕ್ಷಣ ಕ್ಷಣದಲಿ ಪೊರೆವ ಚಿಂತಾ
ಮಣಿ ನೀನಿರೆ ತ್ರಿಭುವನಕೆ ಅ.ಪ
ಕರದಲಿರುವ ಮಣಿಯ ಬೆಲೆಯ
ನರಿಯದಂಥ ಮೂಢ ಜನರು
ಪರರಿಗಿತ್ತು ಹರುಷದಿಂದ
ಪುರಿಯ ಕೊಂಬ ತೆರದಲಿ ೧
ಘೋರ ದುರಿತ ದೂರ ಮಾಡಿ
ಸಾರ ಫಲಗಳನ್ನು ಕೊಡುವ
ನಾರಸಿಂಗ ಮಂತ್ರವಿರಲು
ಭೈರವನನು ಜಪಿಸುವಂತೆ ೨
ಪಡೆದ ಜನಕನಲ್ಲದೆನ್ನ
ನುಡಿಗೆ ಒಲಿವರುಂಟೆ ಜಗದಿ
ಕಡಲಶಯನ ಎನ್ನ ಕರವ
ಪಿಡಿಯುತ ಪ್ರಸನ್ನನಾಗೋ ೩

 

೨೭೫
ನಂದ ಕುಮಾರ ಇಂದುಕುಲ ತಿಲಕ ಪ
ಎಂದಿಗು ನಿನ್ನಯ ಸುಂದರ ಚರಣವ
ವಂದಿಸಿ ನಲಿಯುವ ನಂದವೆನಗೆ ಕೊಡೊ ಅ.ಪ
ಧನಕನಕಗಳನು ದಿನ ದಿನ ಗಳಿಸುವ
ಅನುರಾಗಗಳನು ಕೊನೆಗಾಣಿಸೊ ದೇವ
ವನಜಸಂಭವಪಿತ ಕನಸಿನಲ್ಲಿಯೂ ನಿನ್ನ
ಮನನದಿ ಹಿಗ್ಗುವ ಮನವ ಎನಗೆ ಕೊಡೆಲೊ ೧
ಭಯವಿಲ್ಲದೆ ದೋಷಮಯದ ನೋಟಗಳನು
ಬಯಸುವ ಮತಿಯನು ಲಯಮಾಡೋ ದೇವ
ಜಯ ಮಾಧವ ಎನ್ನ ನಯನಗಳಿಗೆ ನಿನ್ನ
ಪ್ರಿಯ ರೂಪದ ಪರಿಚಯವ ಮಾಡಿಸೊ ಸದಾ ೨
ಕಾಲವ ಕಳೆಯಲು ಆಲಸವಿಲ್ಲದೆ
ಪೇಳಬಾರದ ನುಡಿ ಚಾಲನು ತೊಲಗಿಸೊ
ಬಾಲ ಗೋಪಾಲ ಎನ್ನ ನಾಲಿಗೆಯಲಿ ನಿನ್ನ
ಲೀಲೆಗಳನು ಸದಾ ಲಾಲಿಸಿ ಪೊಗಳಿಸೊ ೩
ಪರಿಪರಿ ಭೋಗಕೆ ಪರಿದಾಡುತ ಸದಾ
ಪರರ ಸೇವಿಸುತಿಹ ಕರಗಳ ನಿಲ್ಲಿಸೊ
ಮುರಳೀಧರ ಕೃಷ್ಣ ಕರುಣದಿಂದಲಿ ಎನ್ನ
ಕರಗಳಿಗೆ ನಿನ್ನ ವರಸೇವೆಯ ನೀಡೊ ೪
ಭುವಿಯಲಿ ದುರುಳರ ಸವಿನುಡಿಗಳಿಗತಿ
ಕಿವಿಗೊಟ್ಟು ಕೇಳುವ ಲವಲವಿಕೆಯ ಬಿಡಿಸೊ
ದಿವಿಜರೊಡೆಯ ಎನ್ನ ಕಿವಿಯೊಳಗೆ ನಿನ್ನ
ನವ ನವ ಚರಿತೆಯ ಸವಿರಸ ಸುರಿಸೆಲೊ ೫
ಮಾಧವನನು ಮರೆತು ಪಾದಗಳಿಂದಲಿ
ಮೇದಿನಿ ತಿರುಗುವ ಮೋದವೆನಗೆ ಬೇಡ
ಯಾದವಪತಿ ನಿನ್ನ ಪಾದದರುಶನದ ವಿ
ನೋದಕ್ಕೆ ಸುತ್ತಲು ಆದರ ಪೊಂದಿಸೊ ೬
ಭಿನ್ನ ಅಂಗಗಳಿಂದ ಎನ್ನ ಕರ್ಮಗಳನು
ನಿನ್ನ ಸೇವೆಯೆಂದು ಬಿನ್ನೈಸುವೆ ದೇವ
ಎನ್ನ ದುರಿತಗಳ ಭಿನ್ನ ಮಾಡುತಲಿ ಪ್ರ
ಸನ್ನನಾಗಿ ಎನಗೆ ಸನ್ಮತಿ ದಯಮಾಡೊ ೭

 

೧೫೯
ನಂದಬಾಲ ನಿನ್ನ ಲೀಲೆಯ
ಅಂದರೀತಿಯಲಿ ಪೊಗಳಲರಿಯೆನೊ ಪ
ಏನನರಿಯೆ ನಾನು ಸತ್ಸುಖ
ಜ್ಞಾನಪೂರ್ಣ ನೀನು ಸನ್ಮತಿ
ದಾನಮಾಡಿ ನಿನ್ನ ಗುಣಗಳ
ಜ್ಞಾನವಿತ್ತು ಸಂತಸದಲಿ ಪೊರೆಯೊ ೧
ಆಶೆಗಾರನೆಂದೆನ್ನನು ಪರಿ
ಹಾಸ ಮಾಡದಿರೆಲೋ ಧನ
ಕೋಶ ಬೇಡವಗೆ ಕರುಣಾ
ಲೇಶ ಮಾತ್ರ ಯಾಚಿಸುವೆನು ನಿನ್ನನು ೨
ಸಂಖ್ಯೆ ಮೀರಿ ಇರುವ ಆ
ತಂಕಗಳನು ಬಿಡಿಸೊ
ಪಂಕಜಾಯತಾಕ್ಷ ವಿಧಿ
ಶಂಕರಾದಿ ಸಕಲ ಸುರ ಪ್ರಸನ್ನನೆ ೩

 

೨೭೬
ನಂಬಿದೆನೊ ನಿನ್ನ ಅಂಬುಜನಯನ ಕೃ
ಪಾಂಬುಧೆ ದೃಢದಲಿ ಪ
ಸಂಭ್ರಮದಲಿ ಕಿವಿ ತುಂಬುತಿರುವ ಆ
ಡಂಬರ ವಚನಕೆ ಮುಂಬರಗೊಳ್ಳುತ ಅ.ಪ
ನವ ಘನ ನಿಭಕಾಯ ನಿನ್ನಯ ಕರುಣಮಯ ಸಹಾಯ
ವಿಲ್ಲದೆ ಬಿಗಿಯುತಿರುವ ಮಾಯಾ
ಪಾಶವ ತೊರೆಯಲಳವೆ ಜೀಯಾ ನಿನ್ನಯ
ದಯವ ಪಡೆದ ಪರಿಯನರುಹುವ
ಯತಿವರೇಣ್ಯ ಗುರುಮಧ್ವರಾಯರ ಪರಮ ಸಮಯ
ಸಾರಗಳನು ಸಂತತ
ಶ್ರವಣ ಮನನ ಧ್ಯಾನಗಳಿಂದ ಪರಿಚಯ ಪಡೆದು ದು
ಷ್ಟ ವಿಷಯಗಳಲಿ ಮತಿಯನು
ಮುರಿಯುವಂತೆ ಕರುಣಿಸೋ ಸುಗುಣಾಲಯ ೧
ನೀರಜದಳ ನೇತ್ರ ವರ ಸುಖ ಚಿನ್ಮಯೈಕ ಗಾತ್ರ
ಶರಣ ಪರಮ ಸುಜನ ಮಿತ್ರ
ಸುರವರ ಸರಸಿಜಭವ ಪುತ್ರ ರುಚಿರರ
ಮುಕುಟಾಕ್ಷಪಾತ್ರ ನಿನ್ನಯ ವಿವಿಧ ಲೀಲೆಗಳು ಚಿತ್ರವಿಚಿತ್ರವು
ಅರಿತೆನೆಂದು ತಿಳಿದು ಮೆರೆಯುತಲಿರುವ
ನರರ ಮದವ ಮುರಿದು ದೈನ್ಯದಿಂದಲಿ
ಮರೆತೆನೆಂದು ದಿನದಿನದಲಿ ಭಜಿಪರ
ಪೊರೆವ ಪರಮ ಕರುಣಾರಸಮಯನೆ ೨
ದೀನಭಕುತರನ್ನು ಪೊರೆಯುವ
ದಾಸಿಯೆಂದು ನಿನ್ನ ಪೊಗಳುವ
ಮಾನತತಿಗಳನ್ನು ಸಂತತ
ಧ್ಯಾನ ಮಾಡಿ ಎನ್ನ ಕ್ಲೇಶವ ಮೌನದಿಂದ ಇನ್ನೂ ಸಹಿಸುತ
ಜಾನಕೀಶ ತವ ಪಾದಕಮಲದ
ರೇಣುವನ್ನು ಶಿರದಿ ಧರಿಸುತಲಿ ಅನು
ಮಾನವನ್ನು ತೊರೆದು ಮುದದಿ ಸುವಿಮಲ
ಜ್ಞಾನಮೂರ್ತೆ ಜ್ಞಾನಿವರ ಪ್ರಸನ್ನನೆ
ನೀನೆ ಎನ್ನ ರಕ್ಷಕನೆಂದರಿಯುತ ೩

 

೧೬೦
ನಗುಮೊಗ ಚಂದಿರ ಸೊಗಸುಗಳಿಗೆ ಬಲು
ಮುಗಿ ಬೀಳುತಲಿಹರೊ ನೀ ಸಿಗದಿರೊ ಪ
ಹಗರಣದಲ್ಲಿ ಪನ್ನಗವೇಣಿಯರು
ಸಿಗಲು ಆಗಲೆ ಬಲು ರಗಳೆ ಮಾಡುವುದು ಅ.ಪ
ಬಲ ಪೂತನಿಯೊಮ್ಮೆ ಲಲನೆಯ ವೇಷದಿ
ಬಲು ಮೋಸದಿ ವಿಷ ಮೊಲೆಯನ್ನು ಉಣಿಸಿದ್ದು
ತಿಳಿದು ತಿಳಿದು ಮತ್ತೆ ಒಲಿಯಲು ಬಯಸುವ
ಲಲನೆಯರಿಗೆ ನಿನ್ನ ಸುಳುವನು ಕೊಡದಿರೊ ೧
ಪತಿಗಳ ತ್ಯಜಿಸುವ ಸತಿಜನರಿರುವರು
ಅತಿಮೋಸದಿ ನಿನ್ನ ಹಿತವ ಬಯಸುವರು
ಮತಿಗೊಟ್ಟರೆ ಇವರು ಅತಿ ಸುಲಭದಿ ನಿನ್ನ
ರತಿಯಲಿ ಸಂಸಾರ ಚ್ಯುತಿಯ ಪೊಂದುವರು ೨
ಬೆಣ್ಣೆಯ ಕೊಡುವೆವು ಚಿನ್ನಬಾಲನೆ ಬಾ
ರೆನ್ನುತ ಕರೆವರು ಕನ್ಯೆಯರುಗಳು
ಸಣ್ಣ ಲೋಭಕೆ ಇವರನು ಸೇರಿದರೆ ಪ್ರ
ಸನ್ನನಾಗದಿರೆ ನಿನ್ನನು ಬಿಡರೋ ೩

 

ಸರಸ್ವತಿ
೨೪೧
ನಲಿಯೆ ನೀ ಜಿಹ್ವೆಯಲಿ ಚತುರಾನನ ಪ್ರಿಯ ರಾಣಿ
ನಾನಾ ಧನಕನಕಾದಿ ವಿಭವಗಳು ಹಿರಿದುಕ್ಕುತಲಿರಲು ಪ
ನೀನೊಲಿಯದಿರಲು ಮಾನವನಿಗೆ ಸ
ನ್ಮಾನವೆಂತು ಬರುವುದು ಜಗದೊಳಗೆ ಅ.ಪ
ಪನ್ನಗವೇಣಿ ಮಧುರ ಸುವಾಣೀ ಕರ ಧೃತ ವೀಣಾಪಾಣಿ
ಉನ್ನತ ಮಹಿಮ ಪ್ರಸನ್ನ ಹರಿಗೆ
ಅಚ್ಛನ್ನ ಭಕುತ ಬೊಮ್ಮನ ಮೋಹದ ಸತಿ ೧

 

೧೬೧
ನಳಿನನಾಭ ಸುಂದರ ಸುಗುಣಾಕರ ಕಮಲೇಶ ಜಗದೀಶ ಪ
ಚಲಿಸಬಲ್ಲರೇ ನಿನ್ನ ಬಲವಿಲ್ಲದಿರಲು ಸಕಲ ಸುರನರರು ಅ.ಪ
ಬ್ರಹ್ಮಾದಿಗಳು ನಿನ್ನ ಸಮ್ಮತಿಯಲಿ ಈ
ಬ್ರಹ್ಮಾಂಡದಲಿ ತಮ್ಮ
ಕರ್ಮರಚಿಸಿ ನಿನ್ನ ಮರ್ಮವನರಿಯಲು
ತಮ್ಮ ಕಾಲವ ಕಳೆಯುವರು ೧
ಅಜ್ಞಾನದೂರನೆ ಸುಜ್ಞಾನ ಮೂರುತಿ
ಯಜ್ಞನಾಮಕ ಪರಮಾತ್ಮ ನಿನ್ನ
ಜಿಜ್ಞಾಸದಿಂ ಸುಪ್ರಜ್ಞೆಯ ಪೊಂದದ
ಅಜ್ಞಾನಿ ಇದನರಿಯುವನೇ ೨
ಸರ್ವತ್ರ ವ್ಯಾಪ್ತನೆ ಸರ್ವಾಗಮಾರ್ಥನೆ
ಸರ್ವ ಪ್ರೇರಕ ಸರ್ವೇಶ
ಗರ್ವ ತೊರೆದು ನೀನೋರ್ವ ಸ್ವತಂತ್ರನೆಂ
ದರಿವ ಜನಕೆ ಸುಪ್ರಸನ್ನ ೩

 

ನುಡಿ-೩: ಭಿನ್ನ ಸಮೀಚೀನ ಸುಖ
೧೬೨
ನಾಗಶಯನ ವರಯೋಗಿ ನಿಕರಪ್ರಿಯ
ಬಾಗಿದೆ ಶಿರ ಅನುರಾಗದಿ ನೋಡೆಲೊ ಪ
ಆಗ ನಿನ್ನ ಮರೆತೆನೆಂದು
ಈಗ ಎನ್ನ ಮರೆಯದಿರೆಲೋ ಅ.ಪ
ಶ್ರೀರಮಣ ನಿನ್ನ ಪ್ರೇರಣೆಯಿಲ್ಲದೆ
ಯಾರು ನಡೆಯುವರು ಈ ಧರೆಯೊಳಗೆ
ಕಾರಣ ಕಾರಣ ನಿನ್ನೊಳಗೆ ಮನ
ಸೇರಿಸಿ ಪೊರೆಯೋ ಸಮೀರಸಖ ೧
ಸುಂದರರೂಪ ಮುಕುಂದ ಪರಾತ್ಪರ
ಸಿಂಧುಶಯನ ನಿನ್ನ ಶುಭಗುಣಗಳಲಿ
ಸಂದೇಹ ಬಾರದೆ ಕರುಣಿಸೆಲೋ ಮುಚು
ಕುಂದ ವರದ ಗೋವಿಂದ ಹರೇ ೨
ನಿನ್ನ ಕರುಣದಿಂದ ಕಣ್ಣು ತೆರದಿಹೆನೊ
ಪೂರ್ಣವಿಮಲ ಸುಖ ಜ್ಞಾನ ಸುಕಾಯ
ಮಾನ್ಯ ಪ್ರಸನ್ನ ಸದಾ ಪೊರೆಯೋ ಸರ್ವ
ಭಿನ್ನ ಸಮೀಚೀನ ಸುಖವೀಯೊ ೩

 

ಶ್ರೀನಿವಾಸ ಕಲ್ಯಾಣದ ಕಥೆಯ
೧೬೩
ನಾಟಕ ರಂಗದಲಿ ನಟಶಿರೋಮಣಿಯೊಬ್ಬ
ಪಟುತನದಿ ವಿಧವಿಧನ ನಟನೆಗಳ ತೋರುವನು ಪ
ಅಘಟನಾಘಟನ ಶಕ್ತನ ಕಪಟನಾಟಕವು
ಘಟಕರಲ್ಲದ ಜನಕೆ ಎಟುಕದಾನೋಟ ಅ.ಪ
ಮುಖ್ಯಪಾತ್ರವು ನಮ್ಮ ರುಕ್ಮಿಣಿ ರಮಣನದು
ಮುಖ್ಯತಾರೆಯು ಲೋಕ ಜನನಿ ಲಕುಮಿ
ಇಕ್ಕಿದನು ಗೋರೂಪ ಚತುರಾನನನು ಮುದದಿ
ಮುಖ್ಯಪ್ರಾಣನೆ ತುರಗ ಮುಕ್ಕಣ್ಣ ಕರುವಾದ ೧
ಸುಖಸಾರನನು ಪಡೆದು ಧನ್ಯಳಾದ ಯಶೋದೆ
ಬಕುಳೆಯೆ ತಾನಾದಳೀ ನಾಟಕದಲಿ
ಅಕಳಂಕ ಮಹಿಮನನು ಅಗಲದಿದ್ದ ಸತಿಯು
ಮುಖನೋಡಿ ಕೋಪದಲಿ ಕಲ್ಲುಗಳನೆಸೆದಳು ೨
ಸರ್ವತ್ರ ವ್ಯಾಪ್ತನಿಗೆ ಇರಲು ಜಗವು ಸಿಗದೆ
ಕಿರಿದ ತಾ ಹಲ್ಲುಗಳ ವರಹನಲ್ಲಿ
ಹರನ ತಾತನು ತಾನು ಸ್ಮರನ ಬಾಣದಿ ನೊಂದ
ಸುರಮೋಹಿನಿಯು ಇಂಥ ಕೊರವಂಜಿಯಾದಳು೩
ಹುಟ್ಟಿಸುವ ಬೊಮ್ಮನನು ಪುಟ್ಟಶಿಶುವನೆ ಮಾಡಿ
ಹೊಟ್ಟೆಗಿಲ್ಲದೆ ಬಹಳ ಬಾಡಿ ಇರಲು
ಮೃಷ್ಟಾನ್ನವನು ಚಿನ್ನ ತಟ್ಟೆಯಲಿ ತಂದಿಡಲು
ಶ್ರೇಷ್ಠವಿದು ಜನನಿಗೆನ್ನುತ ತಿಂದು ತೇಗಿದಳು ೪
ಬಡುಕನೆದೆಗೊದೆಯಲವನಡಿಗಳಿಗೆ ಶರಣೆಂದ
ಕಡು ಕೋಪಿ ಗೋವಳನ ಕೊಡಲಿಗೊಡ್ಡಿದ ಶಿರವ
ಹಿಡಿ ಮಣ್ಣು ಪಿಂಡಗಳನಿತ್ತ ಚಂಡಾಲನಿಗೆ
ಸಡಗರದಿ ಲಕುಮಿಯನೇ ಕರದಲಿತ್ತ ಪ್ರಸನ್ನ ೫

 

೩೩೦
ನಾಟಕವಿದು ಹಳೆ ನಾಟಕ
ನೋಟಕೆ ಇದು ಬಲು ನೂತನ ಪ
ನಾಟಕ ಮಂದಿರ ಜಗವೆಲ್ಲ ಕಂಡಿರ
ನೋಟವು ಯಾರದೊ ಆಟವು ಯಾರದೊ ಅ.ಪ
ಇರುಳೊಳು ರಾಜಾಧಿರಾಜನಿವ
ಹಗಲಲಿ ಭಿಕ್ಷಕೆ ಹಾಜರಿವ
ಮುಗಿವುದು ಎನ್ನಯ ಪಾತ್ರವೆನ್ನುವುದೆ
ಹಗಲಿನತನಕವು ಕಾಣನಿವ ೧
ಯುದ್ಧವು ದಿನವೊ ಈ ನಾಟಕದಿ
ಗೆದ್ದವರೊಬ್ಬರ ತೋರಿಸಿ
ಯುದ್ಧದಗೋಚಿಗೆ ಹೋಗದೆ ಶಾಂತಿಯೊ
ಳಿದ್ದ ಜನರೆ ಗೆದ್ದವರಿಲ್ಲಿ ೨
ಕಲಿಪುರುಷನ ದೊಡ್ಡ ಸಭೆಯಲ್ಲಿ
ಕುಳಿತು ಮಾತಾಡುವರಾರು ಜನ
ಕಳುಹಿಸಲೊಬ್ಬನು ಇಳೆಯೊಳಗೊಬ್ಬರ
ಉಳಿಸದೆ ಗೆಲುವೆನು ನೋಡು ಪ್ರಭು ೩
ಶೌರ್ಯ ಸಾಹಸ ಕಾಪಟ್ಯಗಳಾ
ಶ್ಚರ್ಯವು ಒಂದೊಂದು ದೃಶ್ಯದಲೂ
ಯಾರ್ಯರೆಂಬುದ ಕಾಣದೆ ವೇಷದ
ಮರ್ಯಾದೆಯು ವರ್ಣಿಪುದೆಂತು ೪
ಕುಣಿವರು ಒಂದೆಡೆ ದಣಿವರು ಒಂದೆಡೆ
ಕೊನೆ ಮೊದಲಿಲ್ಲವೀ ನಾಟಕಕೆ
ಪ್ರಣಯಹನನ ದೃಶ್ಯಗಳನು ಒಂದೇ
ಕ್ಷಣದಲಿ ತೋರುವ ಅಸದೃಶ್ಯದ ೫
ಹೊಸ ಹೊಸ ದೃಶ್ಯವು ಹೊಸ ಹೊಸ ಪಾತ್ರವು
ಪುಸಿಯಲ್ಲವು ಈ ನಾಟಕವು
ಶಶಿಕುಲದರಸ ಪ್ರಸನ್ನನಾಗಿ ತಾ
ಮುಸಿ ಮುಸಿ ನಗುತಲಿ ನೋಡುತಿಹ ೬

 

೨೯೯
ನಾರಿಯರಲಿ ಮಾದರಿಯೆಂದೆನಿಸಿರಮ್ಮ
ಮೂರುಕುಲಕೆ ಕೀರುತಿಯನು ತನ್ನಿರಮ್ಮ
ಸೇರಿದ ಪತಿಮಂದಿರವನುದ್ಧರಿಸಿರಮ್ಮ
ಬೇರೆ ಜನಕೆ ಸೋದರಿಯೆಂದರಿಯಿರಮ್ಮ
ಅಬಲೆಯರಿರಬಹುದು ದೇಹ ಶಕುತಿಯಲಿ
ಪ್ರಬಲಸ್ಥಾನ ನಿಮಗಿಹುದು ಸಮಾಜದಲ್ಲಿ
ಶುಭಪರಂಪರೆಗಳ ಪತಿಗೆ ಕೋರಿರಮ್ಮ
ಲಭಿಸುವುದತಿಸುಲಭದಿ ಪರಲೋಕವಮ್ಮ
ಗೃಹಿಣಿಯೇ ಗೃಹವೆಂಬ ಮಾತನರಿಯಿರಮ್ಮ
ಗಹನದ ಸಂಸಾರಪಥವ ಜರಿಯಬೇಡಿರಿ ೧೦
ವಹಿಸಿರಿ ಗೃಹಕೃತ್ಯಗಳನು ಆದರದಲ್ಲಿ
ಸಹಿಸಿರಿ ಸುಖದು:ಖಗಳನು ಖೇದವಿಲ್ಲದೆ
ಶ್ರದ್ಧೆಯಿರಲಿ ಗೃಹಿಣಿಯ ಕಾರ್ಯದಲಿ ಸರ್ವದ
ಸ್ಪರ್ಧೆಯ ಮಾಡಬೇಡಿ ಪುರುಷಗುಚಿತ ಕಾರ್ಯದಿ
ತಿದ್ದಿರಮ್ಮ ವಿನಯದಿಂದ ಪತಿಯ ದೋಷವ
ಹದ್ದಿನಂತೆ ಕಾಯಿರಮ್ಮ ಪತಿಯ ಶ್ರೇಯವ
ದೈವದತ್ತವಿಹುದು ನಿಮ್ಮ ಮುಖದ ಕಾಂತಿಯು
ಸೇರಿಸಿ ಫಲವೇನು ವಿವಿಧ ಸುಣ್ಣಬಣ್ಣವ
ಹೂವುಗಳನು ಕಸಕಲದರ ಗಂಧವಿರುವುದೆ
ಯಾವ ಕೃತಕ ಬೇಕಿದೆ ಸ್ವಭಾವ ಶೋಭೆಗೆ ೨೦
ಅನುಗಾಲವು ಊರಿಗೆ ಉಪಕಾರಿಯಾದರು
ಮನೆಗೆ ಮಾರಿಯಾಗಬೇಡಿರಮ್ಮ ಎಂದಿಗು
ವಿನಯವಿರಲಿ ನಡೆನುಡಿಯಲಿ ಸರ್ವ ಜನರಲು
ಪ್ರಣಯ ಸರಸ ಬೇಡಿರಮ್ಮ ಬಂಧು ಜನರಲಿ
ದುಡಿದು ದಣಿದು ಉಶ್ಶೆನುತಲಿ ಬರುವ ಪತಿಯಲಿ
ಕಿಡಿಕಿಡಿಯಾಗಲಿ ಬೇಡಿರಿ ತರಲು ಮರೆತರೆ
ಬಡತನವಿರಬಹುದು ಸದ್ಯ ನಿಮ್ಮ ಪಾಲಿಗೆ
ಅಡಿಗಡಿಗದನಾಡಬೇಡಿ ಒಡೆಯನೆದುರಲಿ
ನೆರೆಮನೆ ವೆಂಕಮ್ಮನೊಂದು ಸೀರೆ ಕೊಂಡರೆ
ಗುರು ಗುರುಗುಟ್ಟುತಲಿ ನೋಡಬೇಡಿ ಪತಿಯನು ೩೦
ಮರುಕದಿ ಸಂತೈಸಲವನು ಮನವು ಕರಗದೆ
ಸೆರೆಸೆರೆ ಕಣ್ಣೀರುಗಳನು ಸುರಿಸಬೇಡಿರಿ
ತುಳಸಿಯ ಪೂಜೆಯನು ಮಾಡ ಮರೆಯಬೇಡಿರಿ
ಕೆಲಸಗಳನು ದಿಟ್ಟತನದಿ ಮಾಡಿ ಮುಗಿಸಿರಿ
ಕಲಿಯಿರಿ ಸಂಸಾರದಲಿ ನೆಪ್ಪು ನೇರವ
ಹಳಿಯಬೇಡಿರಮ್ಮ ನೀವು ನೆರೆ ಹೊರೆ ಜನರ
ಉಳಿಸಿ ಬಳಸಿರಮ್ಮ ತಂದ ಧಾನ್ಯವ
ತಿಳಿಸಬೇಡಿ ಮನೆಯ ಗೋಪ್ಯ ಪರರಿಗೆಂದಿಗು
ಕುಳಿತು ಕಾಲ ಕಳೆಯಬೇಡಿ ಕೆಲಸವಿದ್ದರೆ
ಪ್ರಳಯ ಮಾಡಬೇಡಿ ಸಣ್ಣ ಪುಟ್ಟ ಮಾತಿಗೆ ೪೦
ಸೊಟ್ಟ ಬೈತಲೆಯನು ತಗೆಯಲಿಷ್ಟಪಡದಿರಿ
ಅಷ್ಟವಕ್ರದುಡುಪುಗಳನು ಧರಿಸಬೇಡಿರಿ
ರಟ್ಟು ಮಾಡಬೇಡಿರಮ್ಮ ರೂಪು ರಚನೆಯ
ಸಿಟ್ಟು ಮಾಡಬೇಡಿ ಮುದಿಯ ಬುದ್ಧಿವಾದಕೆ
ಶ್ರವಣ ಮಾಡಿರಮ್ಮ ಹರಿಯ ಕಥೆಗಳನುದಿನ
ಶ್ರವಣ ಮಾಡುವಾಗ ಹರಟೆ ನಿದ್ರೆ ಬೇಡವು
ಕಿವಿಯ ಕಚ್ಚಬೇಡಿರಮ್ಮ ಪರರ ವಾಕ್ಯಕೆ
ಲವಲವಿಕೆಯು ಬೇಡಿರಮ್ಮ ಚಾಡಿ ಚುದ್ರದಿ
ರೂಢಿಯಿಲ್ಲದಿರುವ ನಡತೆ ಬೇಡಿರೆಂದಿಗು
ಮೂಢರೆನಿಸಬೇಡಿ ಹಾಡುಹಸೆಯ ಕಲಿಯದೆ ೫೦
ಪಾಡುಪಡುತ ಪತಿಗೆ ಹರುಷನೀಡಿ ಗೃಹದಲಿ
ಪ್ರೌಢವಿದ್ಯೆ ಕಲಿತು ದುಡಿಯಬೇಡಿ ಪರರಿಗೆ
ಬಣ್ಣವಿಲ್ಲದಿರುವುದು ಬಂಗಾರವಲ್ಲವು
ಕಣ್ಣಿಗೆ ಹಿತವಲ್ಲದು ಶೃಂಗಾರವಲ್ಲವು
ಉಣಲು ತಾ ದೊರೆಯದಿರಲು ಸಂಪತ್ತಲ್ಲವು
ಅನ್ನ ಮಾಡಲರಿಯದಿರಲು ಹೆಣ್ಣದಲ್ಲವು
ದುಂದುಗಾರಿಕೆಯನು ಕಲಿಯಬೇಡಿರೆಂದಿಗು
ಮುಂದೆ ಕಾಲಚಕ್ರಗತಿಯನು ಮನದಿ ಯೋಚಿಸಿ
ಬಂದ ಮಾತುಗಳನು ಬಾಯಿತಡೆದು ಆಡಿರಿ
ನಂದಗೋಕುಲವನೆ ಮಾಡಿ ಗೃಹವ ನಗುತಲಿ ೬೦
ಬಳಕೆಯಲ್ಲದಿರುವ ಕಲೆಯ ಕಲಿಯಬೇಡಿರಿ
ಕಲಿಸಿರಮ್ಮ ಕೆಲಸಕಾರ್ಯ ಮಕ್ಕಳುಗಳಿಗೆ
ಗಳಿಸಿರಮ್ಮ ಪುಣ್ಯಕೀರ್ತಿ ತಿಳಿಯಮನದಲಿ
ಸುಲಭವು ಸಾಧನವು ನಿಮಗೆ ಪುಣ್ಯಲೋಕಕೆ
ಮನವತಿ ಚಂಚಲತೆಯನ್ನು ಹೊಂದಬಿಡದಿರಿ
ಅನುಮತಿ ಕೊಡಬೇಡಿ ದುಷ್ಟ ಜನರ ಬೋಧೆಗೆ
ಘನಮತಿಯನು ಪೊಂದಿ ಸತಿಯ ಮಾರ್ಗ ತೋರಿರಿ
ಗುಣವತಿಯೆಂದೆನಿಸಿರಮ್ಮ ಹಿರಿಯ ಜನರಲಿ
ದುಡುಕಿನ ಹೆಣ್ಣೆಂದು ಹೆಸರು ಪಡೆಯಬೇಡಿರಿ
ಸಿಡುಕಿನ ಮೋರೆಯನು ತೋರಬೇಡಿ ಜನರಿಗೆ ೭೦
ಒಡಕಿನ ಬಾಯವಳು ಎಂದು ಎನಿಸಬೇಡಿರಿ
ಕೆಡುಕ ಕೋರಬೇಡಿ ಕೋಪದಿಂದ ಪರರಿಗೆ
ಧ್ವನಿಯು ಮಧುರವಿರಲಿ ನಿಮ್ಮ ಮಾತುಕಥೆಯಲಿ
ಕೆಣಕಬೇಡಿ ಮರೆತುಬಿಟ್ಟ ಜಗಳ ಕದನವ
ಇಣಕಿ ನೋಡಬೇಡಿ ಪರರ ನಡೆನುಡಿಗಳನು
ಸಾರಥಿಯೆಂದೆನಿಸಿರಿ ಸಂಸಾರ ರಥದಲಿ
ವೀರರಮಣಿಯೆಂಬ ದಿವ್ಯ ಕೀರುತಿ ಬರಲಿ
ನಾರಿಯರಲಿ ಮಾದರಿಯನು ಪಡೆದು ತೋರಿದ
ಭಾರತ ಭೂಮಾತೆಗೆ ಪ್ರತಿಬಿಂಬವೆನಿಸಿರಿ ೮೦
ದೇಶಸೇವೆಯೆಂದು ರಾಜಕೀಯ ಬೇಡಿರಿ
ಮೋಸ ಹೋಗಬೇಡಿ ಆಸೆ ತೋರುವ ನುಡಿಗೆ
ದೇಶ ದೇಶ ತಿರುಗಿ ಕಾಯ ಕ್ಲೇಶ ಬೇಡಿರಿ
ಭಾಷಣ ಬಹಿರಂಗದಲ್ಲಿ ಭೂಷಣಲ್ಲವು
ಸಿರಿರಮಣಗೆ ತುಳಸಿಗಿಂತ ಪುಷ್ಪವಿಲ್ಲವು
ಹಿರಿಯತನಕೆ ಸತ್ಯಕ್ಕಿಂತ ಯುಕ್ತಿಯಿಲ್ಲವು
ಅರಸಿ ನೋಡೆ ತಾಯಿಗಿಂತ ನಂಟರಿಲ್ಲವು
ಕರಿಮಣಿ ಸಮ ನಾರಿಜನಕೆ ನಗಗಳಿಲ್ಲವು
ದಾಸರ ನುಡಿ ಧರ್ಮಗಳ ಪ್ರಕಾಶ ಮಾಡಿತು
ಸ್ತ್ರೀ ಸಮೂಹದಿಂದ ನಾಶವಾಗದುಳಿದವು ೯೦
ಆ ಸುಧಾಮ ಸತಿಯರೆ ಈ ದೇಶದ ಸೊಬಗು
ಮಾಸದಂತೆ ರಕ್ಷಿಸಿ ಪ್ರಾಚೀನ ನಡತೆಯ
ನುಡಿಯಬೇಡಿರಮ್ಮ ಪರರ ವಂಚನೆನುಡಿಯ
ಕೊಡಲಿ ಹಾಕಬೇಡಿರಮ್ಮ ಕುಳಿತ ಕೊಂಬೆಗೆ
ಇಡಲಿಬೇಡಿ ಮತ್ಸರವನು ದೀರ್ಘ ಕಾಲದಿ
ಪುಡಿಯನಿಡಲಿಬೇಡಿರಮ್ಮ ಪುಣ್ಯ ಕಾರ್ಯಕೆ
ಸಣ್ಣನುಡಿಗಳೆಂದು ತಿಳಿಯಬೇಡಿರಿವುಗಳ
ಭಿನ್ನ ಭಿನ್ನ ದೇಶಕಾಲದನುಭವಗಳಿದು
ಬಣ್ಣವತಿಶಯೋಕ್ತಿಯಲ್ಲ ಅರಿತು ನೋಡಿರಿ
ಘನ್ನ ಸುಗುಣಭರಿತ ಶ್ರೀ ಪ್ರಸನ್ನ ಸಲಹುವ ೧೦೦

 

೧೬೪
ನಿನ್ನ ಕ್ಲೇಶವ ಕೇಳೆ ಎನಗೆ ಮರುಕ ಪ
ಎನ್ನ ಕ್ಲೇಶವ ನಿನಗೆ ತಿಳಿಸಬಹುದೆ ದೇವ ಅ.ಪ
ಹದಿನಾಲ್ಕು ಲೋಕಗಳ ಹುಡುಗತನದಲಿ ಪಡೆದು
ಅದಕೆಲ್ಲ ಅನ್ನವೀಯುವ ಚಿಂತೆಯು
ಹದಿನಾಲ್ಕು ಲೋಕಗಳ ಸರ್ವಕರ್ಮಗಳಿಗೂ
ಹಗಲಿರುಳು ಪ್ರೇರಣೆಯ ಮಾಡುವಾತಂಕ ೧
ಹಿರಿಮಗನದೊಂದುಸಿರ ತರಿದರೆಂಬಾತಂಕ
ಕಿರಿಮಗನ ದೇಹ ಪೊಸಕಿದ ಚಿಂತೆಯು
ಹರನು ಮೊಮ್ಮಗ ಹಾಲಾಹಲವ ಕುಡಿಯುತ ಹಲ್ಲು
ಕಿರಿಯುವಾತಂಕಕ್ಕೆ ಹರವು ತೆರವಿಲ್ಲ ೨
ಚಂಚಲಳು ಸತಿಯೆಂದು ಹೊಂಚು ಕಾಯುವ ಚಿಂತೆ
ಮಂಚದಲಿ ಘಟಸರ್ಪ ವಿಷದ ಚಿಂತೆ
ಸಂಚಿತಾಗಮ ಪ್ರಾರಭ್ಧಗಳನಳಿಸುವಗೆ
ವಂಚಕರು ಏನು ಮಾಡುವರೆಂಬ ಚಿಂತೆ ೩
ಹಲವು ವಿಧ ವೇಷಗಳ ತಾಳಿ ಜಗಗಳಲಿ ನೀ
ತಲೆಯ ಮರಿಸಿಕೊಂಡರೇನು ಫಲವೊ
ಬಳಸಿ ಹುಡುಕಿ ಗೂಢಚಾರಿ ಯೋಗಿಯು ನಿನ್ನ
ತಿಳಿದು ಬೆಳಕಿಗೆ ತರುವ ಮರೆಮಾಚಲೇಕೊ ೪
ತಾಪತ್ರಯ ತಳೆಯೆ ಗೋಪನಲಿ ಪುಟ್ಟಿದರು
ಗೋಪಿಯರ ಸಾಸಿರದ ಗೋಳು ನಿನಗೆ
ಭೂಪ ದಶರಥನ ಮಗನಾಗಿ ಪುಟ್ಟಿದರಯ್ಯೊ
ಪಾಪ ಸತಿಯಳ ಕಳೆದುಕೊಂಡ ಬಲುಚಿಂತೆ ೫
ನಿನ್ನ ಬೇಡುವುದಿಲ್ಲ ನಿನ್ನ ಕಾಡುವುದಿಲ್ಲ
ನಿನ್ನ ನೋಡಲು ಎನಗೆ ಬೇಸರವು ಜಗಕೆ
ನಿನ್ನ ಚಿಂತೆಯು ಮನ ಪ್ರಸನ್ನತೆ ನೀಡುವುದು
ಇನ್ನೇನು ನಿನಗೆ ಚಿಂತೆಯೊ ತಿಳಿಸಿ ಪೊರೆಯೊ ೬

 

ಪಲ್ಲವಿ: ರವದಿ
೧೬೫
ನಿರವಧಿ ಬಲ ಲಾವಣ್ಯ ಸಂಪನ್ನ ಪ
ಚರಣ ಸೇವಕನೆಂದೆನಿಸಲೋ ಎನ್ನ ಅ.ಪ
ನಿಖಿಲ ಜಗಂಗಳ ಜನನಾದಿಗಳಿಗೆ
ಅಖಿಲ ಕಾರಣನೇ ಸುಖಮಯನೇ
ಶುಕಭಾಷಣದಿಂ ಪೊಗಳುತಿಹನೋ ನಿನ್ನ
ಭಕುತಿಯ ಮಾರ್ಗವ ತೋರಿ ಪೊರೆಯೆಲೋ ೧
ಹೆಚ್ಚಿನ ಜ್ಞಾನದ ಕೆಚ್ಚೆನಗಿಲ್ಲವೊ
ಉಚ್ಚಪದವು ನಿನ್ನ ಇಚ್ಛೆಯಿಂದಲ್ಲವೇ
ಹುಚ್ಚನಾದೆನೊ ಜನಮೆಚ್ಚುಗೆ ಬಯಸುತ
ಅಚ್ಯುತ ಎನ್ನ ಉಪೇಕ್ಷಿಸದಿರೆಲೊ ೨
ನಿನ್ನನು ಪೂಜಿಸಿ ಧನ್ಯ ನಾನಾದೆನೊ
ಎನ್ನ ಸತ್ಕಾಲವು ಮಾನ್ಯವಾಯಿತೊ
ಇನ್ನು ನಿನ್ನಯ ಪ್ರಸನ್ನತೆಯಲ್ಲದೆ
ಅನ್ಯ ವಿಷಯಗಳ ಬಯಸುವುದಿಲ್ಲವೊ ೩

 

೩೪೨
ನಿಲ್ಲು ನಿಲ್ಲು ಕೃಷ್ಣ ನಿನ್ನ ಸೊಲ್ಲ ಮುರಿಯ ಬಂದೆವು
ಸೊಲ್ಲ ಮುರಿಯ ಬಂದೆವು ಈ ಕಳ್ಳತನವ ಸಹಿಸೆವು ೧
ದಿಕ್ಕು ರಕ್ಷಿಪರಿಗೆ ದಿಕ್ಕು ಕಾಣದಂತೆ ಇರುವುದು
ಸೊಕ್ಕು ಮುರಿದು ನಿಮ್ಮ ಕಾರ್ಯ ಧಿಕ್ಕರಿಸುವೆ ಕ್ಷಣದಲಿ ೨
ಈಡುಮಾಡಲೇಕೆ ಇಂಥ ಕೇಡಿಗೆ ಈ ಅಬಲೆಯ
ನೋಡಿ ಎಮ್ಮ ಅವಿತುಕೊಂಡ ಹೇಡಿ ಇವನ ಬಿಡುವೆನೆ ೩
ಎಂಟು ಜನ ದಿಕ್ಪಾಲಕರು ಸೊಂಟ ಮುರಿವ ರಾಣಿಯ
ರೆಂಟು ಜನರ ಪಡೆದ ಶೌರಿ ತಂಟೆಗಾರು ಬರುವರು ೪
(ಸತ್ಯಭಾಮೆ ಮತ್ತು ದೇವೇಂದ್ರನ ವನಪಾಲಕರ ಸಂವಾದ)

 

೧೬೬
ನಿಲ್ಲು ನಿಲ್ಲೆಲೋ ನಿನ್ನ ಚಲ್ವಮೋರೆಯ ನೋಡಿ
ಕಳ್ಳ ನಿನ್ನಯ ಬಿಡೆನೋ ಶ್ರೀ ಕೃಷ್ಣ ಪ
ಬೆಣ್ಣೆ ಪಾತ್ರೆಯೊಳೇಕೆ ನಿನ್ನ ಕರವನಿಟ್ಟೆ
ಸಣ್ಣತನವಿದಲ್ಲವೇ ನಂದಕುಮಾರ ಅ.ಪ
ಕೋಮಲಾಂಗಿಯೇ ಇಂಥ ಸಾಮಾನ್ಯ ವಿಷಯದ
ನೀ ಮರೆತುದು ತರವೇ ಯೋಚಿಸಿ ನೋಡು
ಈ ಮೃದುವಸ್ತುವು ಕಲ್ಲು ಎದೆಯ ನಿನ್ನ
ಧಾಮದಲ್ಲಿರಬಹುದೇ ಯೋಚಿಸಿ ನೋಡು ೧
ನಾ ಕರುಣಾಮಯ ಲೋಕ ಸುಂದರನೆಂದು
ಏಕೆ ಹೆಮ್ಮೆಯ ತೋರುವೆ ಗೋಕುಲನಾಥ
ಆ ಶಕಟನ ಪುಡಿ ಮಾಡಿ ಪಾದಗಳಿಂದ
ನೀ ಕೋಮಲನೆಂಬುದ ನಾ ಕಾಣೆನೇ ೨
ಕೇಳಿ ಕೋಪಿಸಬೇಡ ಬಾಲನೆನ್ನನು ಎತ್ತಿ
ಲಾಲನೆಯನು ಮಾಡಿದಿ ಪ್ರಸನ್ನಳು
ಬಾಲೆ ನಿನ್ನಯ ಇಷ್ಟು ಸ್ಥೂಲ ಕುಚವು ತಗಲಿ
ಕಾಲು ಕಠಿಣವಾಯಿತೇ ಪೇಳುವೆ ನಿಜ ೩

 

೧೬೮
ನೀ ನೋಡಿದರೆ ಏನಾಗಲೊಲ್ಲದೊ ಪ
ಶ್ರೀ ನಿಕೇತನ ನಾನೇ ನಿದರ್ಶನ ಅ.ಪ
ಪೂಜೆಯ ಮಾಡಿದ ಪುಣ್ಯದ ರಾಶಿಯು
ರಾಜಿಸುತಿರುವುದೊ ಎನ್ನಯ ಶಿರದಲಿ ೧
ಸಾಕಲು ಹೆದರಿದ ಪರಿವಾರವನು
ವ್ಯಾಕುಲವಿಲ್ಲದ ಗೋಕುಲ ಮಾಡಿದಿ ೨
ಈ ಮಹಾಭಾಗ್ಯವು ನಿನ್ನದೋ ಶಿಷ್ಯರ
ಪ್ರೇಮದ ಕವಚವ ಧಾರಣೆ ಮಾಡಿದೆ ೩
ಪಾತ್ರನು ನಿನ್ನಯ ಕರುಣಕೆ ನಾನಿರೆ
ಶತ್ರುಗಳೆಲ್ಲರು ಮಿತ್ರರಾಗಿರುವರೋ ೪
ನಗುವೆನು ಕುಣಿವೆನು ನಗಿಸುವೆ ಕುಣಿಸುವೆ
ಸೊಗಸನು ನೋಡಿ ನೀ ನಗೆಲೋ ಪ್ರಸನ್ನನೆ ೫

 

೨೩೩
ನೀನು ಸರ್ವಜ್ಞನಾಗಿರಲು ನಿನ್ನಲಿ ಜನರು
ಜಾಣತನ ತೋರಲಾಗುವುದೆ ಪವಮಾನ ಪ
ಪ್ರಾಣಪತೇ ನಿನ್ನೊಲುಮೆ ಪಡೆದು ಸುಜನರು ದಿವ್ಯ
ಸ್ಥಾನಗಳ ಪೊಂದಿ ಇಹಪರದಿ ಸುಖಿಸುವರು ಅ.ಪ
ಧರ್ಮಯೋನಿಯ ಶಾಸನಗಳ ಸಂರಕ್ಷಣೆಯ
ಕರ್ಮ ನಿನಗಲ್ಲದನ್ಯರಿಗೆ ತರವೆ
ಕಿಮ್ಮೀರ ಕೀಚಕ ಜರಾಸಂಧ ಮೊದಲಾದ
ಧರ್ಮಘಾತಕರ ಸದೆ ಬಡಿದ ಬಲಭೀಮ ೧
ಜ್ಯೇóಷ್ಠನೆಂಬುವ ಮಮತೆ ತೊರೆದು ಧೈರ್ಯದಲಿ ಧೃತ
ರಾಷ್ಟ್ರನಿಗೆ ಕಿಲುಬು ಕಾಸನು ಕೊಡದೆಲೆ
ಶ್ರೇಷ್ಠ ಭಾಗವತ ಧರ್ಮಗಳ ಹಂಚುವ ಹರಿಗೆ
ಪ್ರೇಷ್ಟತಮ ನೀನಲ್ಲದನ್ಯರಾರಿಹರೊ ೨
ನಿನ್ನ ಮತವೇ ಸಿರಿಯರಮಣನಿಗೆ ಸಮ್ಮತವು
ನಿನ್ನ ದಯವೇ ಸಾಧು ಜನಕೆ ಅಭಯ
ನಿನ್ನ ಮಾರ್ಗವ ನಂಬಿ ಧನ್ಯರಾಗುವರಲಿ ಪ್ರ
ಸನ್ನನಾಗುವ ಹನುಮ ಭೀಮ ಮಧ್ವೇಶ ೩

 

೧೬೭
ನೀನೆ ಅನಾಥನಾಗಿರಲು ಅನ್ಯರಿಗೆ
ಏನು ದಾನವ ನೀ ಮಾಡುವಿಯೊ ಪ
ಜ್ಞಾನಪೂರ್ಣ ನೀನೆಂದು ಅರಿತು ನಿನ್ನ
ಜ್ಞಾನಲೇಶವನು ಯಾಚಿಸುವೆ ಅ.ಪ
ಯಾರು ನಿನ್ನ ತಂದೆ ಯಾರು ನಿನ್ನ ತಾಯಿ
ತೋರೆಲೊ ಈರೇಳು ಭುವನದಲಿ
ಊರೊಳು ವಾಸಕೆ ಗೃಹವನು ಕಾಣದೆ
ವಾರಿಧಿಯೊಳು ನೀನಡಗಿದೆಯೊ ರಂಗ ೧
ಎಡಬಿಡದಿಹ ನಿನ್ನ ಮಡದಿಯ ಬಯಸದೆ
ಪಡೆದೆಯೊ ನಾಭಿಯೊಳ್ನಾಲ್ಮುಗನ
ಅಡಿಯಾಕಾಶವ ಕಾಣದ ಇಂತಹ
ದುಡುಕಿನ ಲೋಕೋತ್ತರ ಪುರುಷ ೨
ಪೆತ್ತುದನೆಲ್ಲವ ತುತ್ತು ಮಾಡುವುದು
ಎತ್ತರ ನಡತೆಯೊ ನಾ ಕಾಣೆ
ಪುತ್ಥಲಿ ಗೊಂಬೆಗಳಂದದಿ ಎಲ್ಲರ
ಸುತ್ತಿಸುತಿಹೆ ಪುರುಷೋತ್ತಮನೆ ೩
ಚಂಚಲಳಾದ ಮಡದಿಯು ನಿನ್ನನು
ವಂಚಿಪಳೆನ್ನುವ ಭಯದಿಂದ
ಹೊಂಚು ಕಾಯಲು ನಿನ್ನ ಹೃದಯದಲ್ಲಿ ಪೊತ್ತು
ಸಂಚರಿಸುವೆ ವಿಲಕ್ಷಣ ಪುರುಷ ೪
ಅಣುವಿನೊಳಗೆ ಅಣು ಮಹತಿನೊಳಗೆ ಮಹ
ತೆನಿಪ ವಿರೋಧ ಧರ್ಮಕೆ ಧರ್ಮಿ
ಎನ್ನಿಪ ನಿನ್ನಯ ಗುಣವರಿಯಲು ಸಂತತ
ಮಿಣುಕುತಿರುವ ಸುಜನ ಪ್ರಸನ್ನ ೫

 

೧೬೯
ನೀಲ ನೀರದ ಕಾಯ ಕಾಂತೇಯ
ಪಾಲ ಕರವ ಪಿಡಿಯೊ ಗೋಪಾಲ ಪ
ಜಾಳು ಜೀವನದ ಗೋಳಿಗೆ ಸಿಲುಕಿದೆ
ಕೇಳುವರುಂಟೆ ದಯಾಳು ನೀನಲ್ಲದೆ ಅ.ಪ
ತನುಬಲ ಧನಬಲ ಜನಬಲವೆಲ್ಲವು
ಅನುಸರಿಸುವುವೇ ಕೊನೆತನಕ
ಧನವು ತಪ್ಪಿದರೆ ಜನರು ತ್ಯಜಿಸುವರು
ಜನಕ ನೀನಲ್ಲದೆ ಪೊರೆವರ ಕಾಣೆನೊ ೧
ಸಟೆಯನಾಡುವುದು ದಿಟವ ತೊರೆಯುವುದು
ಕಟುತರ ವಚನಕೆ ನಗುತಿಹುದು
ಅಕಟಕಟ ಈ ಕಪಟ ಜೀವನವು
ತುಟಿಯ ಮೀರಿದ ದಂತಗಳಂತಿರುವುದು ೨
ನಿಮಿಷದ ಸೌಖ್ಯಕೆ ವರುಷದ ಕ್ಲೇಶವು
ಪುರುಷ ಜೀವನವಿದು ಧರೆಯೊಳಗೆ
ಪುರುಷೋತ್ತಮನೆ ಪ್ರಸನ್ನ ಹೃದಯನಾಗಿ
ಕಲುಷರಹಿತವಾದ ಹರುಷವ ನೀಡೆಲೋ ೩

 

೩೦೦
ನೆನೆ ಮನವೆ ಮಾಧವನ ಪ
ಮುನಿವರೇಣ್ಯರ ಮನದಿ ಅನುದಿನವು ನೆಲಸಿಹ
ವನರುಹ ಲೋಚನನ ಅ.ಪ
ಸತಿಸುತರ ಮೋಹವನು ಹಿತವೆಂದು ಅರಿಯುತಲಿ
ಮತಿಯ ಕೆಡದಂತೆ ನೀ ಅತಿಶಯದ ಭಕುತಿಯಲಿ ೧
ಮರುಳು ಮಾಡುವ ಭವದ ಪುರಳು ಸುಖಗಳಿಗೆ ನೀ
ಇರುಳು ಹಗಲಲ್ಲಿ ಉರಳಿ ಕೆಡದಿರುವಂತೆ ೨
ಮುನ್ನಗಳಿಸಿದ ಬಹಳ ಉನ್ನತದ ಅಘಗಳಿಗೆ
ಖಿನ್ನನಾಗುತ ಸುಪ್ರಸನ್ನ ಶ್ರೀ ನರಹರಿಯ ೩

 

೧೭೧
ನೋಡಲು ಬಂದಿರುವ ನಿಮ್ಮನು ಪ

ಬೇಡಿದ ವರಗಳ ನೀಡುವ ದೇವನು ಅ.ಪ
ವಾಸುದೇವನ ಕೃಪಲೇಶವ ಪಡೆಯಲು
ಅಸೇತು ಹಿಮಗಿರಿ ದೇಶಗಳಿಲ್ಲಿಹ
ಸಾಸಿರ ಕ್ಷೇತ್ರ ಪ್ರವಾಸವ ಗೈವದು
ಲೇಸಲ್ಲವೆನುತ ದಾಸಜನಗಳನು ೧
ಬೆಡಗು ಬಿಂಕಗಳಿಲ್ಲ ಸಿಡುಕನು ಇವನಲ್ಲ
ಬಡವಬಲ್ಲಿದನೆಂಬೊ ಕಡುಭೇದವಿಲ್ಲವು
ಕಡಲಶಯನನಿವ ಪೊಡವಿಯಳಿಗೆ ತ
ನ್ನಡಿಯಾಳುಗಳ ಕರಪಿಡಿದೆತ್ತಲೋಸುಗ೨
ಒಂದು ತುಳಸಿದಳ ಬಿಂದು ಗಂಗೋದಕ
ದಿಂದಲೇ ಪರಮಾನಂದವ ಪೊಂದುವ
ತಂದೆ ಪ್ರಸನ್ನನು ಬಂದ ಮಂದಿರದಲಿ
ಇಂದಿರೆ ತಾನಲ್ಲಿ ಎಂದೆಂದು ಇರುವಳು ೩

 

೧೭೦
ನೋಡಿದೆನೋ ಕೊಂಡಾಡಿದೆನೋ ಪ
ಜೋಡಿಸಿ ಕರಗಳ ಬೇಡಿದೆ ಕೃಷ್ಣನ ಅ.ಪ
ಮೂಡಲು ಸೂರ್ಯನು ಹಿಮದ ಕಣಗಳಂತೆ
ಓಡಿದು ಮೋಹವು ಕೂಡಿತು ಧೈರ್ಯವು
ನೋಡಲು ಕೃಷ್ಣನ ಮಂಗಳ ಮೂರ್ತಿಯ
ಈಡೇರಿತು ಮನದಾಸೆಯು ಕೃಷ್ಣನ ೧
ಕಳೆಯಿತು ದುರಿತವು ಬೆಳೆಯಿತು ಸುಕೃತವು
ಸೆಳೆದನು ಮನವನು ತನ್ನಡಿಗಳಲಿ
ಬಳಿಯಲಿ ರುಕ್ಮಿಣೀ ಭಾಮೆಯರೊಡಗೂಡಿ
ಕೊಳಲೂದುವ ಮಂಗಳಕರ ದೃಶ್ಯವ ೨
ಉಕ್ಕಿತು ಹರುಷವು ಪರಮ ದರುಶನದಿ
ನಕ್ಕನು ನೋಡುತ ಕರುಣಾಪಾಂಗದಿ
ಭಕ್ತ ಪ್ರಸನ್ನನು ತಕ್ಕವನೆಂದೆನ್ನ
ಅಕ್ಕರೆಯಿಂದಲಿ ಕರೆಯುವಂತಿರುವುದ ೩

 

೧೭೨
ನೋಡುವ ಬನ್ನಿ ಮುರಳೀಧರನ್ನ ಪ
ಪಾಡುತ ಕುಣಿ ಕುಣಿದಾಡಿ ಕೊಂಡಾಡುತ ಅ.ಪ
ಮನೆಕೆಲಸಗಳಿಗೆ ಕೊನೆ ಮೊದಲಿಲ್ಲವು
ನೆನೆದರೆ ಬೇಸರ ಮನೆಗಳಂತಿರಲಿ ೧
ಪತಿಗಳ ಸೇವೆ ಶ್ರೀಪತಿಯನೆ ಒಲಿಸಲು
ಅತಿ ಸುಲಭದಲಿರೆ ಪತಿಗಳಂತರಲಿ ೨
ಬಾಲೆಯರಾದರೆ ಲಾಲಿಸುವನು ಬಲು
ಏಳಿರೇ ಎಮ್ಮಯ ಬಾಲರಂತಿರಲಿ ೩
ಪರಪುರುಷನ ಕೂಡಿ ದುರಿತಗಳೆಲ್ಲವ
ತೊರೆಯುತ ಮೈಗಳ ಮರೆಯುವ ಮುದದಿ ೪
ಬಂಧುಗಳೆಂದೆಮ್ಮ ಬಂಧನ ಸಾಕಮ್ಮ
ಚಂದದಿ ಪ್ರಸನ್ನ ನಂದಕುಮಾರನ ೫

 

೧೭೩
ಪಟ್ಟಿಯು ಬಂದಿಲ್ಲ ಕೃಷ್ಣ ಪಟ್ಟಿಯು ಬಂದಿಲ್ಲ
ಪಟ್ಟಿಯು ಬಾರದೆ ಕಟ್ಟಲು ಸಾಧ್ಯವೆ ಪ
ನಿಷ್ಠುರ ಮಾಡದೆ ಇಷ್ಟ ಬಂದುದ ಮಾಡೊ ಅ.ಪ
ಬುದ್ಧಿಯು ಸಾಲದೆ ಬಿದ್ದೆನೋ ಸಾಂಕೆ
ಬದ್ದನಾಗಿರುವೆನೋ ತೀರಿಸಲು
ಇದ್ದು ಇಲ್ಲೆಂಬುವ ಸುದ್ದಿಯ ಪೇಳುವ
ಕ್ಷುದ್ರ ನಾನಲ್ಲವೋ ಉದ್ಧರಿಸಯ್ಯ ೧
ಕೊಟ್ಟ ಭಾಗ್ಯವನು ದೂಷ್ಯ ರೀತಿಯಲಿ
ಕುಟ್ಟಿ ಕೋಲಾಹಲ ಮಾಡಿದೆನೊ
ಇಷ್ಟು ದಿನವು ಬಡ್ಡಿ ಕಟ್ಟಲಿಲ್ಲವೆಂದು
ಸಿಟ್ಟು ಮಾಡಿದರೆ ಕೆಟ್ಟು ಹೋಗುವೆನೊ ೨
ಭೃತ್ಯರ ಸಲಹುವ ಸತ್ಯ ಸಂಕಲ್ಪನೆ
ಭೃತ್ಯನಾಗಿ ನಾ ಸೇವೆಯ ಮಾಡುವೆ
ಭಕ್ತರು ಈ ಜನ ಭಕ್ತ ಪ್ರಸನ್ನ ನಾ
ನಿತ್ತ ಸಾಲಗಳು ಉತ್ತಾರಾಯಿತೆಂಬೊ ೩

 

ಅ. ಪಲ್ಲವಿ : ಗುರು ಕರುಣವನು
೩೩೧
ಪರಲೋಕವಿಲ್ಲೆಂಬೊ ಪರಮ ಪಾಪಿಗಳಿಗೆ
ನರಲೋಕವೇ ನರಕವಣ್ಣ ಪ
ಪರಲೋಕವಿಹುದೆಂದು ಗುರುಕರುಣವನು ಪಡೆದ
ಕುರುಬನದ ಅರಿತನಣ್ಣ ಅ.ಪ
ಈಶ ಜಡ ಜೀವರೆಂಬುವ ಭಿನ್ನ ತತ್ವಗಳು
ಈಶನೊಬ್ಬನೆ ಕರ್ತನಣ್ಣ
ಸಾಸಿರದಿ ಆಸೆ ಭಂಗಗಳ ಪೊಂದುತಲಿರಲು
ಮೀಸೆಯನೇತಕೆ ತಿರುವಬೇಕಣ್ಣ ೧
ಹರಿಯು ಪರನಲ್ಲದಿದ್ದರೆ ಸರ್ವಭುವನಗಳು
ಹರಿಯಧೀನದಲಿರುವುದೇಕೆ
ಹರಿಯಧೀನಲಿಲ್ಲದಿದ್ದರೀ ಜಗದೊಳಗೆ
ಕೊರತೆಯೇತಕೆ ಮಂದಿಗಳಿಗೆ ೨
ದೇವದತ್ತನು ಧನಿಕ ಪ್ರೇತದತ್ತನು ಬಡವ
ಯಾವ ಕಾರಣ ವಿಷಮಗತಿಗೆ
ಸಾವು ನೋವುಗಳ ಪ್ರತಿಕ್ಷಣಗಳಲಿ ನೋಡಿ ದೊರೆ
ಭಾವವಿರುವುದು ನ್ಯಾಯವೇ ೩
ಈಶನಿಲ್ಲೆಂಬುವರು ಹೇಸಲಾರರು ಪಾಪ
ರಾಶಿ ರಾಶಿಯ ಗಳಿಸಲು
ಆಶೆಬಡುಕರ ಜಗವ ನಾಶಮಾಡಲು ರಾಜ
ಶಾಸನಕೆ ಬುಡವೆಲ್ಲಿಯಣ್ಣ ೪
ಇದನು ಪಡೆದೆನು ಇಂದು ಇದನು ಪಡೆಯುವೆ ಮುಂದೆ
ಅಧಿಕ ಧನವನು ಗಳಿಸುವೆ
ಸದೆ ಬಡಿಯುವೆನು ಪರರನೆಂಬ ನುಡಿ ತಮಗುಣದ
ಬೆದೆಯಲಿರುವನು ನುಡಿವನು ೫
ಎಲ್ಲಿಂದ ಬಂದೆ ಹೋಗುವುದೆಲ್ಲಿಗೆಂಬುದನು
ಬಲ್ಲವಗೆ ಮುಕುತಿ ಇಲ್ಲೇ
ಒಳ್ಳೆ ಮನವನು ಪಡೆದು ಬಲ್ಲವರ ಸೇವೆಯಿಂ
ದೆಲ್ಲವನು ತಿಳಿಯಲಳವಣ್ಣ ೬
ಕಾಯವಾಚಾಮನಸದಿ ತಪವಗೈಯುತ ಶುದ್ಧ
ಭಾವವನು ಗಳಿಸಿರಣ್ಣ
ದೇವಗುರು ಪ್ರಾಜ್ಞ ಪೂಜನ ಲಾಭವಿದು ವಿನಯ
ಭಾವಕೆ ಪ್ರಸನ್ನರಿವರು ೭

 

೩೦೧
ಪರಸಿರಿಗೆ ಕರಗುತಿಹುದು ಸರಿಯೇ ಯೋಚಿಸು ಪ
ಹರಿಯು ಕರುಣದಿಂದ ಕೊಟ್ಟ ಸಿರಿಗೆ ತೃಪ್ತನಾಗದಂತೆ ಅ.ಪ
ಉರಗನ ನೆರಳಲ್ಲಿ ಕಪ್ಪೆಯು ಚಿರಕಾಲ ಜೀವಿಸುವುದೇ
ಧರೆತಲದಲಿ ನರರ ಸಿರಿಯು ಸ್ಥಿರವಲ್ಲವೆಂದರಿಯದಂತೆ ೧
ಹಲವು ಜನುಮಗಳ ಕರ್ಮದ ಫಲವನರಿತು ಮೋಸವಿಲ್ಲದೆ
ನಳಿನನಾಭ ನಾರಾಯಣನೊಲಿದು ಕೊಡುವನೆಂದರಿಯದೆ ೨
ಎನ್ನದೆಂದು ನಿನ್ನದೆಂದು ಖಿನ್ನನಾಗುವುದು ಸರಿಯೆ
ಸನ್ನುತ ಪ್ರಸನ್ನ ಹರಿಯು ತನ್ನ ಭಾಗ್ಯವನರಿತು ನೀಡಲು ೩

 

೨೩೪
ಪವಮಾನ ಸುತರ ಪದಕಮಲಗಳ
ಸ್ತವನವು ಸಾಧನವು ಜವದಲಿ ಶ್ರೀ ಹರಿದಯ ಪಡೆವುದಕೆ ಪ
ನವ ನವ ರೂಪದಿ ಅವನಿತಲದೊಳಗೆ
ಭುವನಜನಾಭನ ವಿವರವನರುಹಿದ ಅ.ಪ
ಶ್ರೀ ರಾಘವನಾಜ್ಞೆಯ ಶಿರದಲಿ ವಹಿಸಿ
ವಾರಿಧಿಯನೆ ಲಂಘಿಸಿ ವಾರಿಜಲೋಚನೆ ಸೀತೆಯ ಕಂಡು
ತೋರುವ ಭಕುತಿಯನು ಶೂರ ದಾಶರಥಿಯಂಗುಳಿಯವ ಕೊಟ್ಟು
ಧೀರತನದಿ ಲಂಕೆಯ ಸೂರೆಯ ಮಾಡಿದ ೧
ಪಾಂಡುಸತಿ ಮನುವನು ಜಪಿಸಲು ಜನಿಸಿ ಭೂ
ಮಂಡಲದೊಳಗೆ ಪುಂಡತನದಲಿ ಮೆರೆಯುತಲಿದ್ದ
ಹಿಂಡುರಕ್ಕಸರ ಖಂಡಿಸಿ ಜಗದಲಿ
ಪಾಂಡು ತನುಜರೊಳು ಮಂಡನರೆನಿಸಿ ಪ್ರಚಂಡ ವಿಕ್ರಮರಾದ ೨
ಬಾದರಾಯಣರೊಳು ಶ್ರವಣವ ಮಾಡಿ
ಮೋದವ ಪೊಂದುತಲಿ ಸಾಧಿಸಿ ದ್ವೈತವ ಮೇದಿನಿಯಲಿ
ಸಾಧುಗಳಿಗೆ ಶ್ರೀಹರಿ ಪಾದಕಮಲದಲಿ
ಆದರ ನೀಡಿ ಸದಾ ಪ್ರಸನ್ನ ಪೂರ್ಣಬೋಧರೆಂದೆನಿಸಿದ ೩

 

೨೫೯
ಪಾದ ಚಿಂತನವು ಕ್ಷಣದಲಿ
ಶೋಧಿಪುದು ಮತಿಯ ತಾರಕ ಪ
ಮೋದತೀರ್ಥರ ಭೇದಮತ ಅನು
ವಾದ ಮಾಡಿದ ಶ್ರೀಜಯತೀರ್ಥರ ಅ.ಪ
ಈ ಜಗದೊಳಗಿನ ರಾಜಕೀಯದ
ಸೋಜಿಗ ಜೀವನವನೆ ತೊರೆದು
ರಾಜೀವೋದ್ಭವನಯ್ಯನ ಚರಣಾಂ
ಬೋಜ ನಿರತ ಯತಿರಾಜರ ತಾರಕ ೧
ಕಾಕುಮತಗಳನೇಕಗಳನು ನಿ
ರಾಕರಿಪ ಗ್ರಂಥಗಳನು ರಚಿಸಿ
ಲೋಕೋತ್ತರನಿಗೆ ನ್ಯಾಯಸುಧೆಯಭಿ
ಷೇಕವ ಮಾಡಿದ ಟೀಕಾಚಾರ್ಯರ ೨
ಶಿಷ್ಟ ಭಕ್ತ ಪ್ರಸನ್ನ ವಿಧಿ ಫಾ
ಲಾಕ್ಷನುತ ಶ್ರೀಕೃಷ್ಣನ ಪೂಜಕ
ದುಷ್ಟ ಪಕ್ಷ ನಿರಾಸದಲಿ ಅತಿ
ದಕ್ಷ ದೀಕ್ಷ ಅಕ್ಷೋಭ್ಯರ ಕುವರರ ೩

 

೧೭೪
ಪಾಹಿ ರಮಾ ಮನೊಹರ ಪಾಪಿ ಪ
ಪಾಹಿ ಸದಾಗಮವೇದ್ಯ ಸಕಲ ಕ
ಲ್ಯಾಣ ಗುಣಾರ್ಣವ ಲೀಲಾಮಾನುಷ ಅ.ಪ
ಆನೆಯೊಂದು ಕರೆಯಲು ಆ ಕ್ಷಣದಲಿ
ನೀನೇ ಬಂದುದೇಕೆ ದೇವ
ನೀನೇ ಪಡೆದ ಮಕ್ಕಳ ದೈನ್ಯದ ನುಡಿ
ನೀನಲ್ಲದೆ ಕೇಳುವರ್ಯಾರಿರುವರು೧
ತುರುವಿನ ಕೆಚ್ಚಲ ಕರು ಗುದ್ದಿದರದು
ಕರೆಯದೇ ಕ್ಷೀರವನು ದೇವ
ಮರೆತು ಎನ್ನ ಅಪರಾಧಗಳೆಲ್ಲವ
ಮರೆಯದಿರೆಲೊ ಎನ್ನಯ ಬಾಂಧವ್ಯವ ೨
ಅತ್ತು ಕರೆದು ಔತಣ ನೀಡಿದ ಪರಿ
ನಿತ್ಯ ಸೇವೆಯಾಯ್ತೋ ಕೃಷ್ಣ
ನಿತ್ಯ ಪೂರ್ಣ ಕರುಣಾಮಯ ಕರುಣಿಸೊ
ಚಿತ್ತ ಪ್ರಸನ್ನತೆ ಸಾರ್ಥಕ ಜೀವನ ೩

 

ನುಡಿ-೧: ವ್ಯಾಸರಾಜ ಯತಿರಾಜ
೧೭೫
ಪುಣ್ಯ ಪೂರ್ವಾರ್ಜಿತವಿದು ಸುರ
ಮಾನ್ಯ ಶ್ರೀ ನಿಲಯನ ದರುಶನ ಪ
ಚೆನ್ನಿಗನೀತನು ಸುಜನರ ಪೊರೆಯಲು
ಪನ್ನಗಾಚಲದಿ ಬಂದಿರುವುದು ಬಲು ಅ.ಪ
ರಾಜ್ಯವಿವಗೆ ಹದಿನಾಲ್ಕು ಲೋಕಗಳು
ಭೋಜ್ಯ ಚರಾಚರಜಗವೆಲ್ಲ
ರಾಜೀವಾಲಯನಾಥನಿವನು ಬಲು
ಸೋಜಿಗದಲಿ ಬಂದಿಹ ನೋಡಿ
ಪೂಜ್ಯಚರಣ ಗುರುವ್ಯಾಸರಾಜ ಯತಿರಾಜ
ರಚಿತ ದ್ವಿಕ್ಷಡಬ್ಧದ ಪೂಜೆಯ ೧
ಸೌಂದರ್ಯದ ಗಣಿ ಇವನು ಎಲ್ಲರನು
ತಂದೆಯಂತೆ ಸಲಹುವ ಸತತ
ಒಂದೊಂದೆಡೆಯಲು ವ್ಯಾಪ್ತನಿವನು ತಾ
ನೊಂದೆಡೆಯಲು ಸುಲಭದಿ ಸಿಗನು
ನಂದತೀರ್ಥ ಪರಿವಾರ ಜನರು ಇವರೆಂದು ಹರುಷದಲಿ
ಮುಂದೆ ನಿಂತಿಹುದು ೨
ಪದ್ಮಾವತಿ ವಲ್ಲಭನಿವ ಮುನಿಜನ
ಹೃದ್ಗತ ಪ್ರಕಟಾಮಿತ ಚರಿತ
ಮುಗ್ಧಜನರು ಪರಮಾದರ ತೋರಲು
ಸ್ನಿಗ್ಧನಾಗುವನು ಹರುಷದಲಿ
ಛದ್ಮಕೆ ದೂರನು ಭಕ್ತ ಪ್ರಸನ್ನನು
ಉದ್ಧರಿಸಲು ಈ ಸದ್ಮಕೆ ಬಂದಿಹ ೩

 

೩೦೨
ಪೇಳ ಸುಲಭವೆ ಜಗದಿ ಕಾಲಮಹಿಮೆಯ ನಮ್ಮ
ಮೂಲ ಪುರುಷನ ದಿವ್ಯ ಲೀಲೆಯಲ್ಲವೆ ಎಲ್ಲ ಅ.ಪ
ಮುಂದೆ ಸ್ತುತಿಪರು ಜನರು ಹಿಂದೆ ಜರಿವರು ಬಹಳ
ತಂದೆ ಬಡವನ ನೀನ್ಯಾರೆಂದು ಕೇಳ್ವರು ಮನದಿ ೧
ನೀಚಕೃತ್ಯವ ಮನದಿ ಯೋಚಿಸುತ್ತಲಿ ಸತತ
ನಾಚಿಕೆಯನು ಪೊಂದದೆಲೆ ಯಾಚಿಸುವರು ದ್ರವ್ಯವನು ೨
ಸತಿಯರೆಲ್ಲರು ಶುದ್ಧಮತಿಯ ತೊರೆಯುತ ತಮ್ಮ
ಪತಿಯ ಜರಿವರು ಮುದದಿ ಇತರರನ್ನು ಕೋರುವರು ೩
ದ್ಯೂತಗಳಲಿ ಕಾಲ ಕಳೆದು ಖ್ಯಾತಿ ಪಡೆವರು ಬಹಳ
ಸೋತು ತಮ್ಮ ದ್ರವ್ಯಗಳ ಪಾತಕಗಳ ಮಾಡುವರು ೪
ಸ್ನಾನ ಜಪತಪ ಪೂಜೆ ಏನನರಿಯರು ದುಷ್ಟ
ಪಾನಗಳನು ಸೇವಿಸುತ ಮಾನ ದೂರ ಮಾಡುವರು ೫
ಹರಿಯ ಮಹಿಮೆಗಳನ್ನು ಅರಿಯದಂತೆ ಸಂತತವು
ಧರೆಯ ದುಷ್ಟ ಭೋಗದಲಿ ಕುರಿಗಳಂತೆ ಬೀಳುವರು ೬
ಘನ್ನ ಧರ್ಮಗಳೆಲ್ಲ ಶೂನ್ಯವಾಗಿರೆ ಸುಪ್ರ
ಸನ್ನ ಹರಿಯ ಸೇವಕರು ಇನ್ನು ಇರುವುದಚ್ಚರಿಯು ೭

 

೨೩೫
ಪ್ರಾಣನಾಥ ಪ್ರಾಣನಾಥ ತ್ರಿಭುವನಚೇಷ್ಟ ಪ್ರದಾತಾ ಪ
ಅಖಿಲನೇತಾ ಸುಗುಣಜಾತಾ ಶೂರ ಸೀತಾರಾಘವದೂತ ಅ.ಪ
ನೂರು ಯೋಜನ ಶರಧಿಯ ಹಾರಿ ಲಂಕಾಪುರವ
ಸೇರಿ ಹರುಷದಿ ಜನಕಕುಮಾರಿಗುಂಗುರವಿತ್ತ ೧
ದುಷ್ಟ ದಶಕಂಧರನನು ಮುಷ್ಟಿತಾಡನದಿಂದ
ಚೇಷ್ಟರಹಿತನ ಮಾಡಿ ದಿಟ್ಟತನದಲಿ ಮೆರೆದ ೨
ಗಂಧಮಾದನ ಗಿರಿಯನು ಒಂದು ಕರದಲಿ ಸುಖದಿ
ತಂದು ರಾಮರ ಪಾದ ದ್ವಂದ್ವಕೆರಗಿದ ಮುಖ್ಯ ೩
ಕ್ರೂರನಿಶೇಚರಪತಿ ಪರಿವಾರವನು ಸದೆ ಬಡಿದು
ಮೂರು ಜಗಗಳ ಮೀರಿದ ಕೀರುತಿಯ ಪೊಂದಿದ ೪
ಇನ್ನು ಎರಡವತಾರಗಳನ್ನು ಧರಿಸುತ ಜಗದಿ ಪ್ರ
ಸನ್ನ ಮಾಧವವ್ಯಾಸರನ್ನು ಸೇವೆಯ ಮಾಡಿದ ೫

 

ನುಡಿ-೧ : ನೇದೃಶಂ ಸ್ಥಲಮಲಂ
೨೪೯
ಪ್ರಾರ್ಥಿಸುವೆ ರಘುನಾಥತೀರ್ಥರ
ಪ್ರಾರ್ಥಿಸುವೆ ಪುರುಷಾರ್ಥಪ್ರದರ ಪ
ಸಾರ್ಥಕವಾಗಲು ಪಾರ್ಥಿವ ದೇಹವು
ಪಾರ್ಥಸಖನೆ ಸರ್ವೋತ್ತಮನೆಂದು ಸಮರ್ಥಿಸಿ
ಜಗದಲಿ ಕೀರ್ತಿಗಳಿಸಿದವರ ಅ.ಪ
ನೇದೃಶಂ ಸ್ಥಲಿಮಲಂ ಶಮಲಘ್ನಂ
ನಾಸ್ಯತೀರ್ಥಂ ಸಲಿಲಸ್ಯಸಮಂ ವಾಃ
ನಾಸ್ತಿ ವಿಷ್ಣುಂ ಸದೃಶಂ ನನುದೈವಂ
ಸತ್ಯ ವಚನಗಳಿವೆಂದು ಸೂಚಿಸುತ
ಆಸ್ತಿಕ ಜನಮನ ರಂಜಕ ತ್ರಿಮಕುಟ
ಕ್ಷೇತ್ರನಿವಾಸ ಪವಿತ್ರತಮ ಚರಿತರ ೧
ವ್ಯಾಸರಾಜ ಗುರುವರ್ಯ ರಚಿತ ತಾ
ತ್ಪರ್ಯ ಚಂದ್ರಿಕಾ ಗ್ರಂಥವನು
ವಾಸುದೇವ ನರಹರ್ಯನುಗ್ರಹದಿ
ಉರ್ವರಿತವ ವಿರಚಿಸಿ ಮೆರೆದ
ಶೇಷಚಂದ್ರಿಕಾಚಾರ್ಯರೆಂಬೊ ಗುರು
ವ್ಯಾಸರಾಜರ ಪರಾವತಾರರ ೨
ರಾಗ ದ್ವೇಷಗಳ ತೊರೆಯುತ ತ
ನ್ನನು ರಾಗದಿಂದ ಭಜಿಸುವ ಜನಕೆ
ಭೂಗಕಲ್ಪ ತರುವಂತೆ ಅರಿಷ್ಠವ ನೀಗಿ
ಸಾಧು ಭೋಗಗಳೀವ
ಯೋಗಿಜನ ಮನೋನಯನ ಪ್ರಸನ್ನ ಶ್ರೀ
ರಾಘವೇಂದ್ರರಪರಾವತಾರರ ೩

 

೧೭೬
ಬಂದಾ ಬಂದಾ ಮುಕುಂದ
ಇಂದಿರೆಯೊಡನೆ ನಿಲಯಕೆ ಬಂದಾ ಪ
ಬೃಂದಾವನಾಂಚನನು ಶರ
ದಿಂದುವದನ ಮುನಿವೃಂದ ನುತಚರಿತ ಅ.ಪ
ಭೇರಿ ಗಜ ತುರಗ ಪತಾಕ ತು
ತ್ತೂರಿ ವರ ಛತ್ರಿ ಚಾಮರ
ತಾಳ ಮೇಳ ಬಿರುದಾವಳಿ ಸಹಿತದಿ
ಪೌರಬೀದಿಯಲಿ ಮೆರೆಯುತ ಶೌರಿಯು ೧
ಪಾರಿಜಾತ ಸುಜಾತ ಮಲ್ಲಿಕಾ
ಚಾರು ಮಾಲತೀಹಾರ ತುಳಸೀ
ಹಾರವನರ್ಪಿಸಿ ನೀರಜನಾಭನಿಗೆ
ನಾರಿಜನರು ಆರತಿಯನು ಬೆಳಗಿರೆ ೨
ವೇದಘೋಷ ಜಯಘೋಷ ಜನರ ಸಂ
ತೋಷ ಧ್ವನಿಯು ತುಂಬಿತು ಗಗನ
ಯಾದವ ವಂಶ ಪ್ರಸನ್ನನು ಎಮ್ಮವ
ನಾದನಿಂದು ಹಿರಿದಾಯಿತು ಜನುಮವು ೩

 

೩೦೩
ಬಡವನಿಗೆ ನಂಟರುಂಟೆ ಪೊಡವಿಯಲಿ
ಬಲಿದನಿಗೆ ತಂಟೆಯುಂಟೆ ಪ
ಬಡವನನು ಕಂಡರೆ ಮಡದಿಯರು ಜರಿವರು
ಬಲಿದನನು ಕಂಡರೆ ಹಲ್ಲುಗಳ ಕಿರಿವರು ಅ.ಪ
ಸಿರಿಯ ಪೊಂದಿದ ಮನುಜ ಜಗದಲಿ
ಸರಿಯೆಂದು ಎನಿಸುವನು
ಉರುತರ ಜ್ಞಾನವ ಪೊಂದಿದ ಬಡವನ
ಮರುಕವಿಲ್ಲದೆ ನರರು ಪರಿಪರಿ ಜರಿವರು ೧
ಕಾಸು ಪೊಂದಿದ ನರನ ಪರಿ
ಹಾಸವೆ ಬಲು ಸೊಗಸು
ಕಾಸಿನ ಮದದಿಂದ ಲೇಸವೂ ಇಲ್ಲದೆ
ಕ್ಲೇಶ ಪಡುವನ ಕಂಡು ಮೀಸೆಯ ತಿರುವುವರು ೨
ಕ್ರೂರನಾದರು ಧನಿಕ ಇವನನು
ಸೇರಲು ಬಯಸುವರು
ಭಾರಿ ನಡತೆ ಇದ್ದು ಸೇರದಿರಲು ಧನ
ಯಾರು ಕಂಡರು ಇವನ ಮೋರೆ ತಿರುಗುವರು ೩
ಧನವಿದ್ದರೆ ಜೋಕು ಜಗದೊಳು
ಘನತೆ ಏತಕೆ ಬೇಕು
ಕನಸಿನಲ್ಲಿಯು ಧನ ಕಾಣದ ಮನುಜನ
ಘನತೆಯು ಜನಗಳ ಮನಕೆಂತು ತೋರುವುದು ೪
ಕಾಸಿದ್ದವನೆ ಮದನ ಜಗದಲಿ
ಕಾಸಿಲ್ಲದವನು ದನ
ಕೋಶ ಪೊಂದಿದವನು ಕೀಶನಾದರು ಪ್ರೇಮ
ಪಾಶಕ್ಕೆ ಬೀಳಲು ಆಸೆಯಪಡುವರು ೫
ಹಣವಿದ್ದ ಪುರುಷನನ್ನು ಧರಣಿಯೊಳ್
ಕೆಣಕಿ ಬದುಕಬಹುದೆ
ಗುಣಶಾಲಿಯಾದರು ಋಣಗಾರ ನರನನು
ಕುಣಿಸುತ್ತ ಕ್ಲೇಶಕೆ ಹೊಣೆಯ ಮಾಡುವರು ೬
ಝಣಿಝಣಿಸುವ ಧನವ ಪೊಂದಿರೆ
ತೃಣವಂತೆ ಜಗವೆಲ್ಲ
ಪಣಿಯಲಿ ಬೊಮ್ಮನು ಹಣವ ಬರೆಯದಿರೆ
ಅಣಿಯಾದ ಜ್ಞಾನಿಯು ಹೆಣದಂತಾಗುವನು ೭
ಶುಂಠನಾದರು ಧನಿಕ ಇವನಿಗೆ
ಉಂಟೆ ಜಗದಿ ಎದುರು
ಗಂಟು ಇಲ್ಲದವನ ನೆಂಟರು ಜರಿವರು
ಕುಂಟು ಎತ್ತಿನಂತೆ ಒಂಟಿಯಾಗುವನು ೮
ಹೊನ್ನು ಜರಠ ನರಗೆ ಸುಲಭದಿ
ಹೆಣ್ಣು ಒದಗಿಸುವುದು
ಸೊನ್ನೆಯಾದರೆ ಧನ ಚಿನ್ನದಂತಿರುವಗೆ
ಇನ್ನಾರು ಕಾಣೆ ಪ್ರಸನ್ನ ಹರಿಯೇ ಗತಿ ೯

 

೨೭೭
ಬದುಕಲು ಪ್ರಾರ್ಥಿಸಿರೊ ಬಹುದಿನ
ಬದುಕಲು ಪ್ರಾರ್ಥಿಸಿರೊ ಪ
ಬದುಕಿ ಬಾಳುವಂಥ ಹದವತಿ ಸುಲಭವು
ಬುಧಜನ ತೋರುವರದನು ಸಂತೋಷದಿ ಅ.ಪ
ನಾನಾ ಯೋನಿಗಳಲ್ಲಿ ಬಂದು ಈ
ಮನುಷ್ಯ ಜನ್ಮವು ಏನು ಪುಣ್ಯವೊ ೧
ಕಾಲವು ಕೆಟ್ಟಿತು ಬಾಳಲಾಗದೆಂದು
ಬಾಲಭಾಷೆಗಳ ಪೇಳದೆ ದ್ಯೆರ್ಯದಿ ೨
ರಾಜಶಾಸನವು ಈ ಜಗಕಲ್ಲವೆ
ಮೂರ್ಜಗದೊಡೆಯನ ಶಾಸನ ಮೀರದೆ ೩
ಕ್ಷೇತ್ರ ತೀರ್ಥಗಳು ವ್ಯರ್ಥಗಳಾದರೂ
ಕ್ಷೇತ್ರಜ್ಞನ ಕೃಪಾ ಮಾತ್ರವಿದ್ದರೆ ಸಾಕು ೪
ಜ್ಞಾನಿಗೆ ಹರಿ ಪ್ರಿಯ ಜ್ಞಾನಿ ಹರಿಗೆ ಪ್ರಿಯ
ಜ್ಞಾನವ ಪಡೆದು ಪ್ರಸನ್ನ ಮಾನಸರಾಗಿ ೫

 

ನುಡಿ-೧: ಆನಕ ದುಂದುಭಿ
೧೭೭
ಬನ್ನಿರಿ ಬನ್ನಿರಿ ಪುರಜನರೆಲ್ಲರು
ಕೃಷ್ಣನ ದರುಶನಕೆ ಪೋಗುವ ಪ
ಕೃಷ್ಣನು ಜನಿಸಿದ ಈ ದಿನ
ಇಷ್ಟವ ಪ್ರಾರ್ಥಿಸಲು ಪೋಗುವಅ.ಪ
ದುಂದುಭಿ ನಾದವು ಕೇಳುತಿದೆ ಬಲು
ಮಂದಿಯ ತಂಡವು ಹೋಗುತಿದೆ
ಕಂದನ ರೂಪದಿ ಬಂದಿಹ ಆನಕ
ದುಂದುಭಿ ಕುವರನ ಸಂಭ್ರಮ ನೋಡಲು ೧
ಪೇಳಿರಿ ನಿಮ್ಮಯ ಕೊರತೆಗಳೆಲ್ಲವ
ಕೇಳಿರಿ ವರಗಳ ಧೈರ್ಯದಲಿ
ಬಾಲನು ಸುಲಭದಿ ಒಲಿಯುವ ಒಳ್ಳೆಯ
ಕಾಲವಿದೆಲ್ಲರಿಗೆ ಬೇಗನೆ ೨
ಜನುಮ ಜನುಮಗಳ ಪುಣ್ಯದ ರಾಶಿಯು
ಜನುಮಾಷ್ಟಮಿ ದಿನದಿ ಲೋಕಕೆ
ಜನುಮಾದ್ಯಷ್ಟಕದಾತನ ದರುಶನ
ಮನಕೆ ಪ್ರಸನ್ನತೆ ಕೊಡುವುದು ಪೋಗುವ ೩

 

೨೬೧
ಬರುತಲಿಹರು ನೋಡಿ ಗುರುವರೇಣ್ಯ
ಸುಖತೀರ್ಥ ಯತಿವರರು ಪ
ಹರಿದು ಬರುವ ಸುರನದಿಯ ಪ್ರವಾಹದ
ತೆರದಲಿ ಪರಿಪರಿ ಪರಿವಾರ ಸಹಿತ ಅ.ಪ
ಕರದಲಿ ಪಿಡಿದಿಹ ದಂಡ ಕಮಂಡಲ
ಕೊರಳೊಳು ತುಳಸಿಯ ಚಿಗುರಿನ ಮಾಲೆಯು
ಅರಿವಾರಿಜ ಲಾಂಛನಗಳಿಂದೊಪ್ಪುವ
ವರ ದ್ವಾದಶ ನಾಮಗಳನು ಧರಿಸುತ ೧
ಯತಿಗಳು ಗೃಹಿಗಳು ಬ್ರಹ್ಮಚಾರಿಗಳು
ಶತಶತ ಸಂಖ್ಯೆಗಳಲಿ ಸೇರಿಹರು
ಅತಿ ಸಂಭ್ರಮದಲಿ ನೋಡಲು ಪುರುಷ
ರತುನವು ಮಾರ್ಗದ ಖತಿಪರಿಹರಿಸುತ ೨
ಅವನಿಸುರರು ಮುಂಬದಿಯಲಿ ತಮ್ಮಯ
ಕವಿತೆಗಳಲಿ ಗೋವಿಂದನ ಗುಣಗಳ
ನವ ನವ ಸ್ವರದಲಿ ಪಾಡುತ ಕುಣಿಯಲು
ಶ್ರವಣ ನಯನಕಾನಂದವ ಬೀರುತ ೩
ತ್ವರೆಯಲಿ ಸರಿದು ತಾ ಬರುತಿರೆ ಯುವ ಕೇ-
ಸರಿಯ ಧಿಕ್ಕರಿಸುವ ಸಂಭ್ರಮ ಗಮನ
ಚರಣಯುಗಳ ಕಾಂತಿಯ ಪಸರಿಸುತಲಿ
ಧರಣಿಯ ಪಾವನ ಮಾಡುವ ಬಗೆಯಲಿ ೪
ಏನಿರಬಹುದೆಂದು ನೋಡುವರಿಗೆ
ಕಾಣಿಸುವುದು ತೇಜದ ಪುಂಜ
ಭೂನಿಲಯವ ಬೆಳಗಲು ಅತಿ ನೂತನ
ಭಾನು ಉದಯಿಸಿದ ತೆರದಲಿ ಪೊಳೆಯುತ ೫
ಪದುಮರಾಗ ಕಾಂತಿಯ ಮೀರಿದ ನಖ
ಹೃದಯಂಗಮ ವರ ಕೂರ್ಮ ಪ್ರಪದಗಳು
ವಿಧಿಭವಮುಖ ಸುರಸೇವಿತ ಜಂಘವು
ಮದಗಜ ಕರವನು ಪೋಲುವ ತೊಡೆಗಳು ೬
ಪುಷ್ಪ ನಿತಂಬಗಳಲಿ ಪೊಳೆಯುತಲಿಹ
ರೇಷ್ಮೆಯ ವಸ್ತ್ರವ ಧರಿಸಿಹರು
ಕುಕ್ಷಿಲಲಾಟ ಶಿರೋಧರಗಳಲತಿ
ಶ್ರೇಷ್ಠದ ತ್ರಿವಳಿಗಳಿಂದ ರಾಜಿಸುತ೭
ಕೆಚ್ಚಿನ ವಕ್ಷಸ್ಥಳವತಿ ಸುಂದರ
ಉಚ್ಚ ಪೀವರದ ಸ್ಕಂಧಯುಗಳವು
ಸ್ವಚ್ಛದ ಕೆಂಬಣ್ಣದ ಕರತಲದಲಿ
ಬಿಚ್ಚಿ ಹಾರುತಿಹ ಧ್ವಜಲಾಂಛನದಿ ೮
ಚಂದಿರ ಬಿಂಬವಿದೋ ಪ್ರೇಕ್ಷಕರಾ
ನಂದತರಂಗವ ಉಕ್ಕಿಸುತಿಹುದು
ಒಂದು ಕಳಂಕವು ಕಾಣದಿರುವ ಅತಿ
ಸುಂದರ ಪುರುಷವರೇಣ್ಯರು ಸೊಗಸಿಲಿ ೯
ಸುಂದರ ಮಂದಸ್ಮಿತದಿಂ ಶೋಭಿಪ
ಕುಂದ ಕುಸುಮ ತೆರದಲಿ ದಂತಗಳು
ಮಂದಿಗಳಿಗೆ ಬಲು ಹರುಷವಿತ್ತು ಅರ
ವಿಂದ ನಯನ ಆನಂದತೀರ್ಥ ಮುನಿ ೧೦
ಕಿವಿಯಲಿ ಪೊಳೆಯುವ ತುಳಸಿಯದಳಗಳು
ಅವಿರಳ ತೇಜದಿ ಹೊಳೆಯುವ ಕಪೋಲ
ಭುವನತ್ರಯಗಳಭೀಷ್ಟವ ನೀಡುವ
ಸುವಿಮಲ ಸುಂದರ ಭ್ರಕುಟಿ ವಿಲಾಸದಿ ೧೧
ಅಕಲಂಕ ಶರೀರರು ಬರುತಿಹುದನು
ಸಕಲ ಕಲಾಕುಶಲರು ನೋಡಿ
ಶಕುತಿಗೆ ಮೀರಿದ ಮಾದರಿಯೆಂದರು
ಪ್ರಕೃತಿ ಮಧುರ ಸರ್ವಾಂಗ ಸುಂದರರು ೧೨
ಕಾಂತಿ ಸುಧೆಯ ಪಾನವ ಮಾಡಿರಿ ಸುಖ
ಶಾಂತಿ ನಿಲಯರಾಶ್ರಯದಲಿ ಬಾಳಿರಿ
ಚಿಂತೆ ಸಂತಾಪಗಳೆಲ್ಲವ ತೊಳೆಯಿರಿ
ಸಂತತ ಹರಿದಾಸ್ಯದಲಿ ಪ್ರಸನ್ನರು ೧೩

 

೧೭೮
ಬಲ್ಲೆನೋ ಚಲ್ಲಾಟವ ಪ
ಸಲ್ಲದೋ ಎನ್ನಲಿದೆಲ್ಲವು ಅ.ಪ
ದುರುಳ ಕಂಸನಿಗಂಜಿ ಇರುಳು ಸಮಯದಲಿ
ತೆರಳಿದ ನಿನ್ನಯ ತಿರುಳುಗಳನು ೧
ಸಾಧು ಸುಧಾಮನ ಹಿಡಿಯವಲಕ್ಕಿಗೆ
ಮೋದವ ಪೊಂದಿದ ಮಾದರಿಯನು ೨
ಗಂಧದ ಲೋಭಕೆ ನಂದದಿ ಕುಬುಜೆಯ
ಸುಂದರಿ ಮಾಡಿದ ಅಂದಗಳನು ೩
ನಾರಿಜನರುಗಳ ಸೀರೆಯ ಕದಿಯುತ
ಕೋರಿಕೆ ಪೊಂದಿದ ಜಾರತನವ ೪
ಹಟದಲೆ ಪಾರ್ಥಗೆ ಅನುಜೆ ಸುಭದ್ರೆಯ
ಘಟಿಸಿದ ನಿನ್ನಯ ಕಪಟತನವ ೫
ನಿನ್ನ ಭಕುತರೊಳು ಎನ್ನನು ಸೇರಿಸಿ
ಮನ್ಮನವರಿತು ಪ್ರಸನ್ನ ನೀನಾಗೆಲೋ ೬

 

೧೭೯
ಬಲ್ಲೆನೋ ನಿನ್ನ ಗುಣವ
ಸಲ್ಲಿಸೋ ಎನ್ನ ಋಣವ ಪ

ಎಲ್ಲ ತೊರೆದು ಭಜಿಸುತಿಹೆನೋ
ಒಲ್ಲೆನೊ ಸಣ್ಣ ಫಲವ ಅ.ಪ
ನಲ್ಲ ಬ್ರಹ್ಮಚಾರಿ ರೂಪದಿ ಚಿಲ್ಲರೆ ದಾನವನು ಮೋಸದಿ
ಸಲ್ಲಿಸೆಂದು ಬಲಿಯ ಶಿರದಲಿ ಪಾದವಿಟ್ಟು ತುಳಿದ ೧
ಉಂಡಮನೆಗೆ ಎರಡು ಬಗೆದು ಖಂಡಿಸಿರುವೆ ಪೂತನಿಯನು
ಕಂಡ ಜನರ ಮನೆಗಳಲ್ಲಿ ಚಂಡು ಬೆಣ್ಣೆ ಕದ್ದು ತಿಂದ ೨
ಸಣ್ಣ ನರ ನಾನಾದರೂ ಪ್ರಸನ್ನವದನ ವಾಸುದೇವ
ನಿನ್ನ ಗುಣವ ಪೇಳಿ ನಿನ್ನ ಚರಣ ಕಟ್ಟುವೆನೊ ೩

 

ನುಡಿ-೧ ಪೂರ್ಣ
೧೮೦
ಬಾ ಬಾ ಯದುತಿಲಕ ಮದನ ಜನಕ
ಹೃದಯ ನಿಲಯಕೆ ಮುರವುಥನ ಪ
ಆದರದಲಿ ಉಪಚರಿಸುವೆನು ಕಲಿ
ಬಾಧೆಯ ಪರಿಹರಿಸೋ ಮಧುಸೂದನ ಅ.ಪ
ಪೂರ್ಣಸದಾಗಣಿತೇಡ್ಯಗುಣಾನುಭ
ವೈಕಶರೀರ ಕಲುಷದೂರ
ಚೀರ್ಣ ಪುಣ್ಯಚಯದಿಂದ ಕರೆಯಲು
ತ್ರಾಣವಿಹುದು ಮನ್ಮನದಲಿ ನೆಲಿಸೊ ೧
ಶಮದಮಗಳನುಗ್ರಹಿಸುತ ಸಜ್ಜನ
ಸಮಿತಿಯ ಸಹವಾಸವ ನೀಡೋ
ಅಮಿತಪ್ರಮತಿಗಳ ಶಾಸ್ತ್ರಪ್ರವಚನದಿ
ಮಮತೆಯ ಸ್ಥಿರಪಡಿಸೊ ಶೃತಿಪತೇ ೨
ಗುರುಕರಣವು ನಿನ್ನನರಿಯಲು ಕಾರಣ
ಶರಣಂಭವ ಸಂತತ
ಹಿರಿಯರು ಮಾಡಿದ ಸಾಧನಗಳಿಗಿದು
ಹಿರಿದಾಗುವುದೇ ಪ್ರಣತ ಪ್ರಸನ್ನ ೩

 

೨೬೫
ಬಾದರಾಯಣ ಪಾದಕೆರಗಿದೆನೊ ಪ
ನೀದಯದಿ ಕಾಮಕ್ರೋಧಗಳನೆ ಬಿಡಿಸಿ
ಸಾಧು ಕರ್ಮದಲಿ ಆದರವೀಯೊ ಅ.ಪ
ಜ್ಞಾನಿ ಗೌತಮಿ ಮೌನಿ ಶಾಪದಿಂದ
ಜ್ಞಾನಿಗಳಿಗೆ ಅಜ್ಞಾನತೆ ಬರಲು
ದೈನ್ಯದಲಿ ಚತುರಾನನಾದಿಗಳು
ನೀನೆ ಗತಿಯೆನಲು ಮಾನಿಸಿದ ಸುಖಾತ್ಮ ೧
ತಾಪಸೋತ್ತಮ ಆ ಪರಾಶರರು
ದ್ವೀಪದಲ್ಲಿರಲು ನೀ ಪವಳಿಸಿದೆ
ಶಾಪದಿಂದ ಕ್ರಿಮಿರೂಪ ಪೊಂದಿದವಗೆ
ಭೂಪತನವನಿತ್ತ ದ್ವೈಪಾಯನಾಖ್ಯ ೨
ಶೃತಿಗಳರ್ಥ ಮಂದಮತಿಗಳರಿಯದಿರೆ
ಹಿತದಿ ಬ್ರಹ್ಮಸೂತ್ರತತಿಗಳನ್ನೆ ರಚಿಸಿ
ಅತುಲವಾದ ಭಾಗವತ ವರ ಮಹಾಭಾ-
ರತಗಳನ್ನು ರಚಿಸಿ ಅತಿ ಪ್ರಸನ್ನರಾದ ೩

 

೨೨೮
ಬಾರಮ್ಮ ಬಾರೆ ಇಂದಿರೆ ಪ
ಹಾರೈಸುತಲಿಹೆ ನೀರಜ ನಿಲಯೆ ಅ.ಪ
ಬಾರೆನ್ನಯ ಭವನಕೆ ಭಾಗ್ಯದ ನಿಧಿ
ಪೂರಗೊಳಿಸೆ ಮನ ಕೋರಿಕೆಗಳನು ೧
ಕೊಳಲೂದುವ ಗೋವಳನಿಲ್ಲಿರುವನು
ತಿಳಿನಗುಮೊಗದಲಿ ಬೆಳಗೆಲೆ ಭವನವ ೨
ಚಿನ್ನದ ಹೊಗೆಯಾಡಿಸೆ ಈ ಮಂದಿರ
ನಿನ್ನದೇ ಭಕುತ ಪ್ರಸನ್ನನ ಪ್ರಿಯಳೆ೩

 

೧೮೧
ಬಾರೆ ಸಖಿ ಪೋಗಿ ರಾಸ ಕ್ರೀಡೆಯಾಡುವ ಪ
ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ಅ.ಪ
ಜಾರನೆಂದು ಸಣ್ಣಮಾತನಾಡಿದ್ದಾಯಿತು
ಚೋರನೆಂದು ಬಹಳ ದೂರು ಮಾಡಿದ್ದಾಯಿತು
ಮೂರು ನಿಮಿಷ ಅವನ ಮರೆಯಲಾಗದಾಯಿತು
ಬೀರುತಿರುವ ಮೋಹಜಾಲ ಸಡಲದಾಯಿತು ೧
ಯಾವನೀತನೆಂದು ಚಿಂತೆ ಮಾಡಿದ್ದಾಯಿತು
ಗೋವಳನಿವನಲ್ಲವೆಂದು ನಿರ್ಧರಾಯಿತು
ಯಾವನಾದರೇನು ಇವನ ಕ್ಷಣವು ಕಾಣದೆ
ಜೀವನ ಕಳೆಯುವುದೆ ದೊಡ್ಡ ಭಾರವಾಯಿತು ೨
ಮಂದಹಾಸದಿಂದ ಸಕಲ ಜಗವ ಬೆಳಗುವ
ಚಂದ್ರನು ತಾನಿವನ ನೋಡಿ ಬಹಳ ನಾಚುವ
ಸಾಂದ್ರವಾಯಿತಂತರಿಕ್ಷ ಮಧುರ ನಾದದಿ
ಮಂದ ಮಲಯ ಮಾರುತ ತಾ ತಲೆಯನಾಡುವ ೩
ನಾದದ ಸುಧೆ ಸಾಗರದಲಿ ತೇಲುವಂತಿದೆ
ಮಾಧವ ತಾ ಸುಧೆಯ ರಸವನೆರಚುವಂತಿದೆ
ಬಾಧಿಸುತಿಹ ಭವದ ತಾಪವಡಗಿದಂತಿದೆ
ಮಾದರಿಫಲ ರಾಸಕ್ರೀಡೆ ತೋರುವಂತಿದೆ ೪
ಸಕಲ ಲೋಕನಾಥನೀತನೆಂದು ತಿಳಿಯಿತು
ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು
ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು
ಭಕುತಿ ಹರಿದು ಎನ್ನ ವಇನ ಪ್ರಸನ್ನವಾಯಿತು ೫

 

೧೮೨
ಬಾರೋ ಯದುಕುಲ ತಿಲಕ ನಲಿಯುತ
ಬಾರೋ ಯದುಕುಲ ತಿಲಕ ಅ.ಪ
ನಂದಕುಮಾರ ಸುಂದರಾಕಾರ
ಬೃಂದಾವನಲೋಲ ನಲಿಯುತ ೧
ನಗುಮಲ್ಲಿಗೆ ಚಿಗುರಿನ ಮುಖದ
ಜಗಮೋಹನ ಬಾಲ ಸದನಕೆ ೨
ಅಧರಾಮೃತದ ಮಧುರಸ ಕುಡಿದ
ಹೃದಯಂಗಮ ಮುರಳೀ ನುಡಿಸುತ ೩
ರಂಗಿನ ತಿಲಕ ಮುಂಗುರುಳುಗಳು
ಶೃಂಗಾರದ ಸೊಬಗ ನೋಡುವೆ ೪
ಕುಣಿಯುತಲಿರುವ ಮನದ ಬಯಕೆಯ
ದಣಿಸೋ ವನಮಾಲಿ ಪ್ರಸನ್ನನೆ ೫

 

೧೮೩
ಬಾರೋ ಶೌರೇ ಚಾರು ನವರತುನ
ಮಣಿ ಮಂಟಪಕೆ ಪ
ನೀರಜಾಕ್ಷ ಆ ರುಕುಮಣಿ ಭಾ
ಮೆಯರೊಡಗೂಡಿ ಅ.ಪ
ಹೇಮದ ತಂಬಿಗೆ ಬಿಂದಿಗೆಗಳಲಿ
ನೇಮದಿ ಉದಕವ ತುಂಬಿಹರೊ
ಕೋಮಲ ತುಳಸೀ ಮಲ್ಲಿಗೆ ಸಂಪಿಗೆ
ಪೂಮಳೆಗರೆಯಲು ತಂದಿಹರೊ
ಸ್ವಾಮಿ ನಿನಗೆ ಪರಿಮಳ ದ್ರವ್ಯಗಳನು
ಪ್ರೇಮದಿಂದಲರ್ಪಿಸಲಿಹರೊ
ಚಾಮರ ಸೇವೆಯ ಅರ್ಪಿಸುವರು ಹರಿ
ನಾಮ ಹಾಡಿ ಸ್ವಾಗತ ಬಯಸುವರೊ ೧
ಮೇಳದ ಮಂಗಳವಾದನ ಒಂದೆಡೆ
ಕಹಳೆ ಶಂಖ ದುಂದುಬಿ ಧ್ವನಿಯು
ತಾಳ ತಂಬೂರಿ ಮೃದಂಗದ ಶೃತಿಗಳ
ಮೇಳನದಲಿ ದಾಸರ ಗಾನ
ಶೀಲರಿವರು ಸುಸ್ಸರದಲಿ ವೇದವ
ಪೇಳಲು ಕಾಲಕೆ ಕಾದಿಹರೊ
ಬಾಲರು ಸಂಭ್ರಮದಲಿ ಝಾಂಗಟೆ ಕೈ
ತಾಳಗಳನು ಕರದಲಿ ಪಿಡಿದಿಹರೊ ೨
ಲಾಡು ಜಿಲೇಬಿಯ ರಾಶಿಗಳನು ಹೊಸ
ಗೂಡೆಗಳಲಿ ತುಂಬಿಟ್ಟಿಹರೊ
ನೋಡಲೆ ದಣಿಸುವ ತೆರದಲಿ ಚತುರರು
ಮಾಡಿದರೋ ಪಕ್ವಾನ್ನಗಳ
ಜೋಡಿಸಿ ಕರಗಳ ಕಾದಿರುವರೋ ಬಲು
ನಾಡುನಾಡುಗಳ ಮಂದಿಗಳು
ಈಡೇರಿಸುವದು ಭಕುತ ಮನೋರಥ
ರೂಢಿಯು ನಿನ್ನದು ಶರಣ ಪ್ರಸನ್ನನೆ ೩

 

೧೮೪
ಬಾಲಗೋಪಾಲನ ತೋರೆಲೆ ಲಲನೆ
ಲೀಲೆಗಳಲ್ಲಿ ಮುದದಿಂದ ಪ
ಕಾಲ ಕಳೆಯುತಿರೆ ಬಾಲೆಯರು ಕೇಳೆ
ಪೇಳದೆ ಅಗಲಿದನೆಮ್ಮ ಬಲು
ಲೋಲನಾಗಿಹನಿವನಮ್ಮ ಎಮ್ಮ
ಮೇಲೆ ಅತಿ ಕಠಿಣನಮ್ಮ ಮೋರೆ
ಕೀಳು ಮಾಡುವನಿವನಮ್ಮ ಕೋಪ
ಜ್ವಾಲೆಯಿಂದುರಿಯುವನಮ್ಮ ಬಲು
ಬಾಲನಾಗಿಹನಿವನಮ್ಮ ಗುಣ
ಶಾಲಿ ಮಾತೆಯ ಕೊಂದನಮ್ಮ ಕಪಿ
ಜಾಲದೊಳತಿ ಪ್ರಿಯನಮ್ಮ ಪರ
ಬಾಲೆಯೊಳತಿ ಮೋಹವಮ್ಮ ಮಾಯಾ
ಜಾಲವ ಬೀಸುವನಮ್ಮ ಬಲು
ಕೀಳನು ಮೇಲು ಮಾಡುವನು ಇಂಥಾ ೧
ಸಾರಸಾಕ್ಷನ ವಿರಹವನು
ಸೈರಿಸಲಾರೆವೆ ಕರುಣದಲಿ ತೋರೆ
ಕೋರುವೆವು ವಿನಯದಲಿ ಅವ
ನೀರೊಳಗಡಗಿದನೇನೆ ದೊಡ್ಡ
ಮೇರು ಬುಡದಲಿಹನೇನೆ ಅವ
ಚಾರು ಸೂಕರನಾಗಿಹನೇನೆ ಅವ
ಬಾರಿ ಕಂಭದಲಿಹನೇನೆ ವೇಷ
ಧಾರಿ ಬ್ರಹ್ಮಚಾರಿಯೇನೆ ಕ್ಷಿತಿ
ಪಾರಿಯೆನಿಸಿ ತಿರುಗುವನೆ ಅವ
ಸೇರಿಹನೆ ಹನುಮನನು ಅಯ್ಯೋ
ಜಾರ ಚೋರನಿವನಮ್ಮ ಮಾನ
ಮೀರಿ ಬತ್ತಲೆ ನಿಂತಿಹನೇ ವಾಜಿ
ಏರುತ ಓಡುತಲಿಹನೇ ಇಂಥಾ ೨
ವೇಣು ವಿನೋದದಿ ಕುಣಿಯುತಲಿ
ಕಾಣುವುದೆಂತು ಪ್ರಸನ್ನ ಮಾಧವನ
ಜಾಣೆ ಜಾಣೆಯರಲ್ಲದೆ ಎಮಗೆ ದಿವ್ಯ
ಮೀನ ರೂಪವ ತಾಳಿದನ ಬಲು
ಪೀನ ಶರೀರ ಕಂಠನ ಧರೆ
ಯಾನನದಲ್ಲಿ ಪೊತ್ತಿಹನ ದುಷ್ಟ
ದಾನವನನು ಸೀಳಿದವನ ಭೂಮಿ
ದಾನವ ಯಾಚಿಸಿದವನ ಭೃಗು
ಮುನಿಯೊಳವತರಿಸಿದನ ಕಡು
ಕಾನನದೊಳು ತಿರುಗಿದನ ಸವಿ
ವೇಣು ಗಾನವ ಮಾಡಿದನ ಬಹು
ಮಾನಿನಿ ವ್ರತಗಳನಳಿದವನ ಪ್ರಸ
ನ್ನಾನನ ತುರಗವಾಹನನ ೩

 

೧೮೫
ಬಾಲೆಯರು ನಿನ್ನ ಲಾಲಿಸುವರೋ
ಸೋಲದಿರು ಮನವ ಗೋಪಾಲ ಪ
ಲೋಲತನದಿ ಬಾಲ ನಿನಗೆ
ಜಾಲವೆಸೆದು ಕಾಲ ಕಳೆಯಲು ಅ.ಪ
ಪೊಂದಲೋಸುಗ ಸುಂದರಿಯರು
ಸಂದು ಮಾಡುವರೊ ಮುಕುಂದ
ಮಂದಹಾಸದಿಂದ ನಿನಗೆ
ಗಂಧ ಪೂಸುವರೊ ಗೋವಿಂದ ೧
ಓರೆಗಣ್ಣಿನ ನೋಟದಿಂದ
ಸೂರೆಗೊಳುವರೊ ನಾರೇರು
ಕೋರಿಕೆಯನು ಮೀರಿದರೆ ನೀ
ದೂರು ಮಾಡುವರೊ ಮುರಾರೆ ೨
ಮುರಳಿನಾದವ ಮಾಡೆ ನಿನ್ನ
ತೆರಳ ಬಿಡರಿವರು ಮನೆಗೆ
ಸರಳನೆಂದು ಅರಿತು ನಿನ್ನ
ಮರುಳು ಮಾಡುವರೊ ಶ್ರೀ ಕೃಷ್ಣ ೩
ಎನ್ನ ಮನವನು ತಿಳಿಯುವುದಕೆ
ಕನ್ಯೆಯರಿಗಳವೇ ಪೇಳಮ್ಮ
ಇನ್ನು ಪೋಗುವುದಿಲ್ಲವೆ ಪ್ರ
ಸನ್ನಳಾಗಮ್ಮ ಯಶೋದೆ ೪

 

ನುಡಿ-೧: ಅಷ್ಟ ವಿಭವಪೂರ್ಣ
೧೮೬
ಬಿಟ್ಟನೋ ಆತಂಕಗಳನು ನಾ ಕೃಷ್ಣ ನಿನ್ನ ಕರುಣಾ ನಂಬಿ ಪ
ಸೃಷ್ಟಿ ಸ್ಥಿತಿ ಲಯಾದಿ ಕರ್ತ ಅಷ್ಟವಿಭವಪೂರ್ಣ ನಿನ್ನ
ಇಷ್ಟದಂತೆ ನಡೆಯುವುದೇ ಶ್ರೇಷ್ಠವೆಂಬೊ ಬುದ್ಧಿ ಬಂದು ೧
ಬೆಟ್ಟದಂತೆ ಇದ್ದುದಲ್ಲಿ ಘಟ್ಟಿಮಂಜಿನಂತೆ ಕರಗಿ
ಕಷ್ಟರಾಶಿಯೆಲ್ಲಾ ಸ್ವಪ್ನ ದೃಷ್ಟದಂತೆ ಆದಮೇಲೆ ೨
ತಲೆಯಮೇಲೆ ಕೈಯ್ಯನಿಟ್ಟು ಇಳೆಯ ಮೋರೆ ಮಾಡಿ ನೊಂದು
ನೆಲವ ಕಚ್ಚಿ ಬಿದ್ದರೇನು ಫಲವೊ ಧೀರಜನ ಪ್ರಸನ್ನ ೩

 

೨೭೮
ಬಿಡಿಸೊ ಬಂಧನ ಕ್ಲೇಶವ ಬಿಗಿಯುತಲಿದೆ ಪ
ನಾನು ಬಿಟ್ಟರು ಎನ್ನ ಕಂಬಳಿ ಬಿಡದಿದೆ ಅ.ಪ
ಎಲ್ಲವ ಬಿಟ್ಟು ನಾ ಬಂದೆನೆಂದರಿತೆನೊ
ಎಲ್ಲವು ಎನ್ನನು ಬಿಡಲಿಲ್ಲವೊ
ಕಲ್ಲು ಎದೆಯ ಪೊತ್ತ ಮಲ್ಲನೆಂದರಿತೆನೊ
ಹುಲ್ಲೆಯ ಮರಿಯಂತೆ ನಡುಗುವಂತಾಯಿತೊ ೧
ಮಿಕ್ಕ ವಿಷಯಗಳ ಬೇಡ ಬೇಡೆನ್ನುತ
ಹೊಕ್ಕರು ಮೂಲೆ ಮೂಲೆಗಳನ್ನು
ದಿಕ್ಕು ದಿಕ್ಕುಗಳಿಂದ ಸೆಳೆಯುತಲಿರುವುದು
ಅಕ್ಕರೆ ತೊಲಗಿತು ಶುಷ್ಕವಾಯಿತು ಮನವು ೨
ಲೋಕ ರಕ್ಷಕನು ನೀನೆಂಬುದನರಿತರು
ವ್ಯಾಕುಲವೇತಕೆ ಪ್ರತಿ ಕ್ಷಣವು
ತಾ ಕಾಣದ ನರ ವರವ ಕೊಡಲುಬಹುದೆ
ಏಕಾಂತ ಭಕುತ ಪ್ರಸನ್ನನೆ ಕರುಣದಿ ೩

 

೩೩೨
ಬೀಸಿದ ಗುಂಡಗೆ ಬುಕ್ಕಿದ್ದೇ ಲಾಭ ಬೇಸರವಿಲ್ಲದೆ ಪ
ವಾಸುಕಿಶಯನನ ಲೇಶವು ಭಜಿಸದೆ ಅ.ಪ
ಹಗಲು ಇರುಳು ವಿಷಯಗಳಲಿ ಮುಳುಗಿ
ಪೊಗಳದಿರಲು ಹರಿ ನಾಮವನು
ಜಗದೊಳೆನಗೆ ಸಮರಾರೆಂದೆನುತಲಿ
ಬೊಗಳಿ ನರಕಕ್ಕುರುಳುವೆನೆಂದರಿಯದೆ ೧
ಮೋಸದಿಂದ ಧನರಾಶಿಗಳಿಸಿ ಅತಿ
ಹೇಸಿಗೆ ಭೋಗಗಳಾಶಿಸುವ
ಈಶನಂತೆ ಬಲು ಮೆರೆಯುತ ಮದದಲಿ
ಶ್ರೀಶ ಸಹಾಯವ ಬಯಸದ ತನಕ ೨
ಗಂಗಾ ಶುಚಿಜಲ ದೊರಕುತಿರೆ ಹಲ
ವಂಗವ ನೀರನು ಬಯಸುವರೇ
ಮಂಗಳ ಕರ್ಮಗಳಾಚರಿಸದೆ ನೀ
ಮಂಗನಂದದಲಿ ಕುಣಿಯುವ ತನಕ ೩
ಕಂಗಳಿಲ್ಲದ ಕುರುಡನಿಗೆ ಬೆಳ
ದಿಂಗಳ ಸೌಖ್ಯವು ತೋರುವುದೆ
ರಂಗನ ಮಹಿಮೆಯನರಿಯದ ಮೂಢನು
ತಂಗಳು ಭೋಗವ ಬಯಸುವ ತನಕ ೪
ಕನ್ನಡಿಯೊಳಗಿನ ಗಂಟಿನಂತಿರುವುದು
ನಿನ್ನ ನಶ್ವರದ ಭೋಗಗಳು
ಇನ್ನಾದರು ನಿನ್ನ ಮೂಢತನವ ಬಿಟ್ಟು
ಸಂತತ ಭಜಿಸೋ ಪ್ರಸನ್ನ ಶ್ರೀಹರಿಯ ೫

 

೩೦೪
ಬೆರಗದಿರು ಮನವೇ ನೀ ತತ್ವವನು ತಿಳಿಯದೆ
ಮರುಗಬೇಕಾಗುವುದು ಅವಿವೇಕಕೆ ಪ
ಸಿರಿಯರಸ ನರಹರಿಯ ಮರೆತು ಬಾಳುವ ನರನು
ನರಕಕ್ಕೆ ಗುರಿಯಾಗಿ ಸೊರಗುವನು ನಿಜದಿ ಅ.ಪ
ಸುಲಭವಲ್ಲವೊ ನಿನಗೆ ಮನುಜ ಜನ್ಮದ ಲಾಭ
ತನುಭೋಗವಲ್ಲವೊ ಅದರ ಫಲವು
ವನಜನಾಭನ ಮನದಿ ನೆನೆನೆನೆದು ದಿವ್ಯ ಸ
ನ್ಮಾನವ ಪಡೆಯುವತನಕ ಶುನಕಕ್ಕೆ ಸಮನೋ ೧
ಭವಮೋಹದಿಂದ ನೀ ಘನ ಪಾಪಗಳ ಮಾಡಿ
ಧನಿಕನೆಂದೆನಿಸಿದರೆ ಎಣಿಕೆ ಬಾರದೋ
ದಿನದಲ್ಲಿ ಧನದಿಂದ ಪಡುವ ಭೋಗಗಳು ಬಂ
ಧನದಲ್ಲಿ ಕೆಡಹುವುವು ನಿನ್ನನು ನಿಜದಿ ೨
ಪ್ರೇಮಪಾಶಕೆ ಸಿಲುಕಿ ವಾಮಲೋಚನೆಯರ
ಕಾಮಿತಕೆ ಬಿದ್ದು ನಿರ್ನಾಮವಾಗದಿರೊ
ಹೇಮದಾಸೆಗೆ ನಿನ್ನ ಕಾಮನೆಂದ್ಹೊಗಳುವರೋ
ರೋಮ ರೋಮದಿ ಸುಲಿದು ಕೊನೆಗೆ ಬಿಸುಡುವರೋ ೩
ಮುನ್ನ ಏಸೇಸು ಜನ್ಮಗಳ ಪೊಂದಿದೆಯೊ ನೀ
ನಿನ್ನವರು ಯಾರೆಂದು ಪೇಳಲಳವೇ
ಘನ್ನ ಮಹಿಮನಲಿ ಸಂಪನ್ನಮತಿಯನೆ ಪೊಂದು
ಪನ್ನಗಶಯನ ಪ್ರಸನ್ನನಾಗುವನು ೪

 

ನುಡಿ-೨: ನಮ್ಮವರಿರುವರು
೩೩೩
ಬೇಸಾಯ ಮಾಡಬೇಕು ಬೇಸಾಯ ಮಾಡಬೇಕು ಪ
ಹೃದಯವೆಂಬ ಕ್ಷೇತ್ರದಲಿ ಬೇಸಾಯ ಮಾಡಬೇಕು ಅ.ಪ
ಮಧ್ವಾಚಾರ್ಯರವರ ಗ್ರಂಥಗಳೆಂಬ ಸರೋವರ ತುಂಬಿಹುದು
ಬುದ್ಧಿ ಜಲವ ವರಗುರುಗಳೆಂಬ ತೂಬಿನಲಿ ತರಲಿಬೇಕು
ಶುದ್ಧ ಧರ್ಮದಾಚರಣೆಗಳೆಂಬ ನೇಗಿಲ ಪಿಡಿಬೇಕು
ಮುದ್ದೆಯಾದ ನೆಲ ಮೃದುವಾಗುವ ಪರಿ ನೆಲವನುಳಲಿಬೇಕು ೧
ತತ್ವಜಲವು ಹರಿದೋಡದ ಪರಿಯಲಿ ತೆವರಿ ಹಾಕಬೇಕು
ಸುತ್ತಲು ದುರ್ಜನ ನರಿಗಳ ತಡಿಯಲು ಬೇಲಿ ಹಾಕಬೇಕು
ಉತ್ತಮ ರೀತಿಯ ಭಕುತಿ ಪೈರುಗಳ ನಾಟಿ ಮಾಡಬೇಕು
ಮತ್ತೆ ಪೈರುಗಳು ಒಣಗದಂತೆ ಜಲವನು ಹಾಯಿಸುತಿರಬೇಕು ೨
ಬೆಳೆಯುವ ವಿಷಯದ ಅನುಭವದಾಸೆಯ ಕಳೆಯು ಕೀಳಬೇಕು
ಕೊಳೆವೆಯ ರೋಗಕೆ ಸಜ್ಜನ ಸಂಘದ ಔಷಧಿ ಕೊಡಬೇಕು
ಕಲಿಪುರುಷನ ತಲೆಯೆಂಬ ಗೊಬ್ಬರವ ತುಳಿಯುತಲಿರಬೇಕು
ಕುಳಿತೆಡೆಯಲಿ ವರಭಕುತ ಪ್ರಸನ್ನನು ಕೊಡುವ ಮುಕುತಿ ದವಸ ೩

 

೩೩೪
ಭಂಡನೆಂದು ಎನ್ನ ನೀ ತಿಳಿಯೋ ಅಖಿಲಾಂಡನಾಯಕ ಪ
ತಂಡ ತಂಡದಿ ಒದಗಿ ಬರುತಿಹ ಗಂಡ ಸಂತತಿ ನಾ
ಕಂಡು ಬೆದರುವ ಷಂಡನಲ್ಲವೊ
ಪುಂಡರೀಕ ಲೋಚನನೇ ದೊಡ್ಡ ೧
ಮಂದ ಮಾನವರಿಂದ ನುಡಿಸುವ ನಿಂದೆ ವಚನಗಳಿಂದ ಮನ
ನೊಂದರೂ ಗೋವಿಂದ ನಿನ್ನನು
ಬಂಧುವೆಂದು ನಂದದಿ ಪೊಗಳುವ ೨
ದ್ವೇಷಿ ಜನಗಳೂ ರೋಷದಿಂದಲಿ ಶೋಷಿಸಿದರೂ ನೀ ಕಮ
ಲೇಶ ಎನ್ನನು ಪೋಷಿಸುವನೆಂದು
ಘೋಷಿಸುವೆನೋ ಶೇಷಶಯನನೇ ೩
ಹೀನ ಮಾನವರಿಂದ ನೀ ಅವಮಾನ ನೀಡಿದರೂ ವರ
ಜಾನಕೀಶನೆ ನೀನು ಎನ್ನಯ
ಮಾನರಕ್ಷಕನೆಂದು ಅರಿಯುವ ೪
ಸಣ್ಣ ಮಾನವರಿಂದ ಎನ್ನಯ ಸಕಲ ವೈಭವವು ದೊಡ್ಡ
ಸೊನ್ನೆಯಾದರು ನಿನ್ನ ಪಾದಗ
ಳನ್ನು ಬಿಡೆನೊ ಪ್ರಸನ್ನ ಮೂರುತಿ ೫

 

೩೦೫
ಭಕುತರಿಗಾಶೀರ್ವಾದಗಳು ಕುಶಲಕೆ ಬರೆಯುತಲಿರಿ ಎನಗೆ ಪ
ಸುಖಶಾಂತಿಗಳನು ಬಯಸುವರಿಗೆ ಕೆಲ
ಯುಕುತಿಗಳನು ಬರೆದಿಹೆನಿಲ್ಲ ಅ.ಪ
ಬೆರೆಯಬೇಡಿ ಈ ಜಗದ ರಗಳೆಯಲಿ
ಮರೆಯಬೇಡಿ ಎನ್ನನು ಕ್ಷಣವು
ಬೆರೆಯದೆ ಮರೆಯದೆ ಇರುವ ಧೀರರನು
ಪೊರೆಯುವುದೇ ಎನ್ನಯ ಗುರಿಯು ೧
ನಾಳೆಗೆ ಅಣಿಮಾಡಲು ಕೈಲಾಗದೆ
ಗೋಳೇತಕೆ ನಾನೊದಗಿಸುವೆ
ಕಾಲು ಕೈಗಳೊದ್ದಾಡುವತನಕ
ಮೇಲೆತ್ತುವುದಳವೇ ಎನಗೆ ೨
ಬಿಸಿಲು ಗಾಳಿ ಮಳೆಗಳು ಸಿದ್ಧೌಷಧ
ಹಸನ ಮುಖವೆ ನಿಮ್ಮಯ ಪಥ್ಯ
ರಸ ಕವಳವು ಬೇಕಾದರೆ ಕೊಳೆಯುವ
ರಸವನು ತಿನ್ನಲು ಬಯಸದಿರಿ ೩
ಕತ್ತಲಿನಲಿ ಓಡುತಲಿರುವಿರಿ
ಸತ್ತಿರುವುದೆ ನಿಮ್ಮಯ ಬಲವು
ಅತ್ತರೇನು ಫಲ ಎತ್ತಿನೋಡಿ ತಲೆ
ಹತ್ತಿರದಿ ನಾನಿಹೆ ಸತತ ೪
ಭಯವೇತಕೆ ದಾರಿದ್ರ್ಯದಲಿ
ಭಯವೇತಕೆ ಜನರನು ಬಿಡಲು
ಭಯವೇತಕೆ ಲೌಕಿಕವಿರದಿರಲು
ಅಭಯ ಪ್ರಸನ್ನನಿರೆ ಹೃದಯದಲಿ ೫
ಬೊಗಳುವರಿರುವರು ಹೊಗಳುವರಿರುವರು
ಹಗರಣವೇತಕೆ ಮಾನಸದಿ
ಒಗೆಯಿರಿ ಹಗೆತನ ನಗುತ ನಗುತಲಿರಿ
ಜಗವೆ ಹೊಸ ಮೊಗ ತೋರುವುದು ೬

 

೧೮೭
ಭಕುತಿ ಸುಲಭವಲ್ಲ ಶ್ರೀ ಹರಿ ಭಕುತಿ ಸುಲಭವಲ್ಲ ಪ
ಮುಕುತಿಗೆ ಯುಕುತಿ ಬೇರೆಯಿಲ್ಲ ಶ್ರೀ ಹರಿ ಅ.ಪ
ಉರುತರ ಕ್ಲೇಶಕೆ ಗುರಿಯಾಗುತಿರಲು
ಹರಿ ಹರಿಯೆನ್ನುತ ಕಿರುಚುತ ಸತತವು
ಮರೆಯಾಗಲು ಕ್ಲೇಶ ಹರಿಯನು ಸುಲಭದಿ
ಮರೆವುದು ಭಕುತಿಯ ತರವಾಗುವುದೇ ೧
ಭುವಿಯಲಿ ಬಹು ವಿಧ ಸುವಿನೋದಗಳ
ಸವಿಯನು ಪೊಂದಲು ವಿವಿಧ ಭಾಗ್ಯಗಳ
ಸುವಿನಯದಲಿ ಮಾಧವನನು ಬೇಡಲು
ಹವನ ಹೋಮಗಳು ಭಕುತಿಯಾಗುವುದೇ ೨
ಶ್ರವಣ ಮನನ ವಿಧಿಧ್ಯಾಸಗಳಿಂ ಸಿರಿಪತಿ
ಗುಣಗಣದಲಿ ದೃಢಮತಿಯನು ಮಾಡುತ
ತನುಮನಗಳನರ್ಪಣೆಯನು ಮಾಡುತ
ಮನಸಿಜ ಜನಕ ಪ್ರಸನ್ನನಾಗುವಂಥ ೩

 

೧೮೮
ಭಕ್ತವತ್ಸಲ ಹರಿ ಎಂಬ ಬಿರುದು ನಿನ
ಗಿತ್ತವರ್ಯಾರಯ್ಯಾ ಹೇ ಜೀಯಾ ಪ
ಎತ್ತ ನೋಡಲು ನಿನ್ನ ಭಕ್ತ ಜನರು ಬಲು
ತತ್ತರಿಸುತಲಿಹರು ಈ ಜಗದೊಳು ಅ.ಪ
ಪರಿಪರಿಯಲಿ ನಿನ್ನ ಮೊರೆಯ ಹೊಕ್ಕಿರುವ
ಪರಮ ಸುಜನರುಗಳು ಈ ಧರೆಯೊಳು
ಒರಳಿಗೊಡ್ಡಿರುವ ಶಿರಗಳುಳ್ಳವರಂತೆ
ದುರುಳರ ಭಯದಿಂದ ನರಳುತಿರೆ ೧
ವಾಸಕೆ ಗೃಹವಿಲ್ಲ ಲೇಶ ಸುಖಕೆ ಅವ
ಕಾಶ ಇವರಿಗಿಲ್ಲ ಈ ಭುವಿಯೊಳು
ಶ್ರೀಶನಾಗಿರೆ ನಿನ್ನ ದಾಸರೊಳಗೆ ಪರಿ
ಹಾಸ ಮಾಡುತಲಿಹೆಯೋ ಜಗದೀಶ ೨
ನಿನ್ನಯ ಈ ಪರಿ ಘನ್ನಬಿರುದುಗಳು
ಇನ್ನು ಉಳಿವುದೆಂತೋ ನಾ ಕಾಣೆ
ಸನ್ನುತಿಸುವವರಿಗೆ ಇನ್ನಾದರು ಸುಖ
ವನ್ನು ನೀ ದಯಮಾಡೋ ಪ್ರಸನ್ನ ೩

 

೩೦೬
ಭಯವುಂಟೆ ಹರಿಯ ಭಕುತರಿಗೆ ಪ
ತತ್ವಗಳರಿಯುತ ಕೃತ್ಯವ ಮಾಡುವ
ಸಾತ್ವಿಕರಾಗಿರುವ ಸುಜನರಿಗೆ೧
ಸ್ವಾರ್ಥತೆಯಲಿ ಕಾಲ ವ್ಯರ್ಥಮಾಡದೆ ಪುರು
ಪಾರ್ಥಪ್ರದನ ಪದನ ಭಜಿಪರಿಗೆ ೨
ಕಾಮ ಕ್ರೋಧಗಳ ಬಿಟ್ಟ ಮನದಿ ಶ್ರೀ
ರಾಮನ ಚರಣಗಳ ಭಜಿಪರಿಗೆ ೩
ಸಾಧು ಸಂಗದಲಿ ಮೋದವಗೊಳ್ಳುತ
ಮಾಧವನನು ಸತತ ನೆನೆವರಿಗೆ ೪
ಚಿನ್ಮಯ ರೂಪ ಪ್ರಸನ್ನ ಶ್ರೀಕೃಷ್ಣನ
ಉನ್ನತ ಮಹಿಮೆಗಳ ಸನ್ನುತಿಸಲು ೫

 

೩೩೫
ಭಿಕ್ಷಾಂ ದೇಹಿಮೇ ಸ್ವಾಮಿನ್
ಕುಕ್ಷಿಯು ತುಂಬುವ ತೆರದಲಿ ಭಕ್ತಿಯ ಪ
ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊ
ಕುಕ್ಷಿಯು ಬರಿದಾಗಿಹುದು ಭಕ್ತಿಯ ಅ.ಪ
ಆರುಮಂದಿ ಶತ್ರುಗಳಿರುವರು ಬಲು
ಕ್ರೂರರಿವರು ಎನ್ನನು ಬಿಡರೊ
ದೂರ ಕಳುಹಲಾಹಾರವು ಸಾಲದು
ಚೂರು ಮಾಡುವೆನು ಕರುಣದಿ ಶಮ ದಮ ೧
ನಮ್ಮವರಿರುವರು ಹತ್ತುಮಂದಿಗಳು
ಸುಮ್ಮನಿರರು ಒಂದರಘಳಿಗೆ
ಸಮ್ಮತಿಗೊಡದಿರೆ ಬಳಲಿಸುವರು ಇವ
ರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ ೨
ಕತ್ತಲೆಯಲಿ ಬಂದಿರುವೆನು ಹೊಟ್ಟೆಯು
ಹತ್ತಿ ಹೋಯಿತೊ ಹಸಿವಿನಲಿ
ಎತ್ತ ಸುತ್ತಿದರೂ ತುತ್ತನು ಕಾಣೆನೊ
ಭಕ್ತ ಪ್ರಸನ್ನ ದಯಾಜಲನಿಧೇ ಜ್ಞಾನ ೩

 

ನುಡಿ-೧ : ಪುಟ್ಟದಕಟ್ಟು
೩೦೭
ಭಿಕ್ಷೆಯ ಹಾಕಿರಿ ಜೋಳಿಗೆಗೆ
ಅಕ್ಷಯವಾಗುವುದು ನಿಮಗೆ ಪ
ಕುಕ್ಷಿಯೊಳೆಲ್ಲವ ಪೊಂದಿರುವಾತನ
ಕುಕ್ಷಿಗೆ ಹಿತಕರ ಭಿಕ್ಷೆಯೆಂದೆನ್ನುತ ಅ.ಪ
ಹೊಟ್ಟಿಗೆ ಇಲ್ಲದೆ ಬಂದಿಲ್ಲ ಕೊಟ್ಟರೆ
ಪುಟ್ಟದ ಕಟ್ಟನು ತರುವೆವು
ಅಷ್ಟು ಪಾಪಗಳ ಮಾಡಲು
ಕೃಷ್ಣ ದಯೆಯ ತಂಬಿಟ್ಟನು ಕೊಡುವೆವು ೧
ಶ್ರಾವಣ ಮಾಸದ ಶನಿವಾರ
ಯಾವನು ಕೊಡುವನೊ ಮನಸಾರ
ಜೀವನ ಕ್ಲೇಶದ ಪರಿಹಾರ
ಭಾವದಿ ಪೊಂದುವ ಸುಖಸಾರ ೨
ಮೋಸವಿಲ್ಲದವು ದಾಸ ಪ್ರಸನ್ನ
ತೋಷಣ ವೈಭವ ಶ್ರೀಶನೆ ಬಲ್ಲನು
ಸಾಸಿರ ಸಾಸಿರ ನಾಣ್ಯದ ಕಾರ್ಯವ
ವೀಸಕೆ ಮಾಡುವ ದಾಸರ ಗುಂಪಿದು ೩

 

೩೩೬
ಭೋಗ ಬೇರಿಹುದಣ್ಣ ಭವ
ಭೋಗಗಳೆಲ್ಲವು ರೋಗಗಳಣ್ಣ
ಭೋಗವ ಪೊಂದುವ ಯೋಗವ ಮರೆಸುವ
ರೋಗಗಳಿಗೆ ಗುರಿಯಾಗದಿರಣ್ಣ ೧
ಬಗೆ ಬಗೆ ಭಕ್ಷಗಳ ಭೋಗವು
ಸೊಗಸೆಂದರಿಯದಿರು
ಹಗರಣದಲಿ ತನು ದುಗುಡಕೆ ಸಿಲುಕಲು
ಸೊಗಸುಗಳೆಲ್ಲವು ಹಗೆಯಾಗುವುವು ೨
ಅಂಗನೆಯರ ಸರಸ ಎಳೆಯ ಭು
ಜಂಗನ ಸಹವಾಸ
ಅಂಗಗಳಲಿ ಬಲ ಸಡಲಲು ನಿನ್ನಯ
ಹಂಗಿಲ್ಲದೆ ಮಾನಭಂಗ ಮಾಡುವರು ೩
ಉಡಿಗೆ ತೊಡುಗೆ ಯೋಗ ಜಗದಲಿ
ಹುಡುಗುತನದ ಭೋಗ
ಗಿಡಗ ಗಿಳಿಮರಿಯನೊಯ್ಯುವ ತೆರದಲಿ
ಪಿಡಿಯಲು ದೂತರು ತಡೆ ಮಾಡುವರೇ ೪
ಪ್ರಕೃತಿಯೊಳ್ ಸಿಲುಕಿರಲು ಭೋಗಕೆ
ಶಕುತಿ ಸಾಲದಣ್ಣ
ಭಕುತ ಪ್ರಸನ್ನನು ಭಕುತಿಯೆಂಬೊ ನಿನ್ನ
ಯುಕುತಿಗೆ ನೀಡುವ ಮುಕುತಿಯೆಂಬ ದಿವ್ಯ ೫

 

೧೮೯
ಮಂಗಳಂ ಶ್ರೀ ರಘುಪುಂಗವನಿಗೆ ಜಯ
ಮಂಗಳಂ ಜಾನಕಿವಲ್ಲಭನಿಗೆ ಶುಭ ೧
ಶಿಷ್ಟ ಜನಗಳಿಗೆ ಇಷ್ಟಾರ್ಥಗಳೀವ
ವೃಷ್ಟಿವರೇಣ್ಯ ಶ್ರೀ ಕೃಷ್ಣ ಮೂರುತಿಗೆ ೨
ಸಚ್ಚಿದಾನಂದ ಸ್ವರೂಪಗೆ ಮಂಗಳಂ
ಸತ್ಯವತಿ ಸುಕುಮಾರಗೆ ಮಂಗಳಂ ೩
ಹೇಮಕಶಿಪುವಿನ ತನಯನಿಗೊಲಿದ
ನಾಮಗಿರೀಶ ಶ್ರೀ ಸ್ವಾಮಿನೃಸಿಂಹಗೆ ೪
ತನ್ನ ಭಕುತರಿಗೆ ಹೊನ್ನು ಮಳೆಗರೆವ
ಪನ್ನಗಶಯನ ಪ್ರಸನ್ನವಿಠಲಗೆ ೫

 

೧೯೦
ಮದನ ಜನಕ ಸದಯ ಎನ್ನ ಹೃದಯ ಮಂದಿರದಲಿ
ವದನ ಕಮಲ ನಿಲ್ಲಿಸೊ ಸತತ ಯದುತಿಲಕ ಪ
ಮದ ಮತ್ಸರದಿಂದ ಬಹಳ ಚದುರುತಿರುವ ಎನ್ನ ಮನದ
ಹದವಗೈದು ನಿನ್ನ ದಿವ್ಯ ಪದಸೇವೆಯ ಮುದವೊದಗಿಸೊ ಅ.ಪ
ಮಲಿನವಾದ ಎನ್ನ ಮನವು ಹಲವು ವಿಧದ ಅನುಭವಗಳಿಂ
ಚಲಿಸದಂತೆ ಇರುವುದೆಂದು ತಿಳಿದು ಮುದವ
ಪೊಂದಿರುವೆನೊ ೧
ಕಲಿಪುರುಷನಿಗೆ ಸುಲಭದಲಿ ಸಿಲುಕದಂತೆ ಎನ್ನ ಮನಕೆ
ಬಲವನಿತ್ತು ಹರುಷದಿಂದ ಒಲಿಯುತ ಪ್ರಸನ್ನನಾಗೊ ೨