Categories
ರಚನೆಗಳು

ವಿದ್ಯಾಪ್ರಸನ್ನತೀರ್ಥರು

೧೯೧
ಮಧುರವು ಮಧುರನಾಥನ ನಾಮವು ಪ
ದಧಿ ಮಧು ದ್ರಾಕ್ಷಾ ಸುಧೆರಸಗಳಿಗಿಂತ ಅ.ಪ
ಸುಂದರವದನನ ಅರವಿಂದ ನಯನನ
ನಂದಕುಮಾರನ ಚಂದದ ನಾಮವು ೧
ಯದುಕುಲ ತಿಲಕನ ಸದಮಲ ಚರಿತನ
ಮದನ ಪಿತನ ನಾಮ ಮುದದಲಿ ಪಾಡಲು೨
ಗಾನವಿಲೋಲನ ದಾನವ ಕಾಲನ
ಲೀಲೆಗಳನು ಸದಾ ಲಾಲಿಸಿ ಪೊಗಳಲು ೩
ಹೇಮವಸನನ ಕೋಮಲ ರೂಪನ
ಭಾಮಾಕಾಂತನ ಪ್ರೇಮದ ನಾಮವು ೪
ಪನ್ನಗಶಯನನ ಚಿನ್ಮಯ ರೂಪನ
ಸನ್ನುತಿಸಲಿಕೆ ಪ್ರಸನ್ನನ ನಾಮವು ೫

 

೨೬೨
ಮಧ್ವರಾಯರ ಕರುಣೆ ಪಡೆಯಿರೊ ಪ
ಸಿದ್ಧವು ಇಹಪರದಿ ಸೌಖ್ಯವು ಅ.ಪ
ವೀರ ವೈಷ್ಣವ ಮತ ತೋರಿದವರ ನಂಬಿ
ವೀರ ವೈಷ್ಣವರಾಗಿ ಬಾಳಿರೊ ೧
ಸತ್ಯ ಧರ್ಮಗಳಿಗೆ ಮೂರ್ತಿಗಳಾದ ಜೀ
ವೋತ್ತಮರನು ನಂಬಿ ಬಾಳಿರೊ ೨
ಉನ್ನತ ಧ್ಯೇಯವ ಸ್ವರ್ಣದಕ್ಷರದಲ್ಲಿ
ಚೆನ್ನಾಗಿ ಬೋಧಿಸಿದ ಪ್ರಸನ್ನ ಶ್ರೀ ೩

 

೨೬೩
ಮಧ್ವರಾಯರ ಚರಿತೆ ಕೇಳಲು
ಶುದ್ಧವಾಯಿತು ಜನತೆ ಪ
ತಿದ್ದಿತೆಲ್ಲರ ನಡತೆ ಸುಲಭದಿ
ಲಬ್ಧವಾಯಿತು ಘನತೆ ಅ.ಪ
ಉತ್ತಮ ದಿವಿಜರ ಸತ್ಸಭೆಗಳಲಿ
ನೃತ್ಯ ಗೀತೆಗಳಿಂದ ನಿತ್ಯ ಪಾಡುವ ಕಥೆ
ಮರ್ತ್ಯಲೋಕದ ಮದ ಮತ್ಸರ ರೋಗಕೆ
ಪಥ್ಯಮಾಡುವವರಿಗೆ ಉತ್ತಮವೀ ಕಥೆ ೧
ಇಲ್ಲಿಯ ಜೀವನ ಅಲ್ಲಿಗೆ ಸಾಧನ
ಎಲ್ಲಿಯು ಭೇದವ ತೋರಿದರು
ಕ್ಷುಲ್ಲಕ ಮತಗಳ ಬೆಲ್ಲದ ವಚನವು
ಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ ೨
ಹರಿ ಗುರು ಕೃಪೆಯಿದು ಮರುದಂಶರ ಮೈ
ಮರೆಸುವ ಚರಿತೆಯು ಹರಿದುದು ಶ್ರವಣದೊಳ
ದುರಿತವು ತೊಲಗಿತು ಪರಮ ಪ್ರಸನ್ನನ
ಪರಮ ಪದದ ರುಚಿಯರಿತರು ಸುಜನರು ೩

 

೩೦೮
ಮನವ ಶೋಧಿಸದೆಲೆ ಡಂಭದಿ ದಿನದಿನದಲಿ ಕರ್ಮಮಾಡೆ
ತನುವಿಗೆ ಬಲು ಕ್ಲೇಶವಲ್ಲದೆ ಅನುಕೂಲವೇನು ಪ
ಕಾಮಕ್ರೋಧ ಲೋಭಮೋಹ ಮದ ಮತ್ಸರಗಳನು ಬಿಡದೆ
ನಾಮಗಳನು ಬಳೆದು ಮರೆದರೆ ಶ್ರೀ ರಾಮನರಿಯನೆ ೧
ಈಶ ಸೇವೆಗೆಂದು ಬಹಳ ಮೋಸದಿಂದ ಧನವ ಗಳಿಸಿ
ಈಶನನ್ನು ಮರೆವ ನರನನು ಜಗದೀಶನರಿಯನೆ ೨
ಪರಸತಿಯರ ಸರಸಗಳಿಗೆ ಜರಿದು ಮನವ ಮರುಳು ಮಾಡೆ
ಸರಳತನದಿ ದಾನ ಮಾಡಲು ನರಹರಿಯು ಅರಿಯನೆ೩
ದೃಢಭಕುತಿಯ ಪೊಂದದಂತೆ ಒಡಲು ಪೊರೆಯೆ ಸಡಗರದಲಿ
ಮಡಿ ಮಡಿಯೆಂದು ನುಡಿವ ಮೂಢನ ಪೊಡವೀಶನರಿಯನೆ೪
ಪನ್ನಗಾರಿವಾಹನ ಪ್ರಸನ್ನವದನ ಕೃಷ್ಣಮೂರ್ತಿಯ
ಉನ್ನತ ಮಹಿಮೆಗಳನರಿತಗೆ ಇನ್ನೇನು ಬೇಕು ೫

 

೨೭೯
ಮನವು ನೆಮ್ಮದಿಯಾಗಲಿ ಪ
ಅನುದಿನವು ನಿನ್ನ ಮನಸಾರೆ ಪೂಜಿಸುವಂತೆ ಅ.ಪ
ಬೆಟ್ಟ ಬಿಸಿಲಿನಲಿ ಬೇಯುವುದ ನೋಡುತ ಮನವು
ಕೆಟ್ಟು ಹೋಗದೆ ಸತತ ಶುದ್ಧವಿರಲಿ
ಹೊಟ್ಟೆ ಪಾಡಿಗೆ ಕೊರತೆ ಪಡುತಿರುವ ಜನರಲ್ಲಿ
ಸಿಟ್ಟುಬಾರದೆ ಮನಕೆ ತಾಳ್ಮೆಯಿರಲಿ ೧
ನೀರು ಕಡೆದರೆ ಬೆಣ್ಣೆ ಬಾರದೆನ್ನುವ ಕ್ಲೇಶ
ದೂರವಾಗಲಿ ತಿರುಗಿ ಬಾರದಿರಲಿ
ವೀರ ಹನುಮನು ತನ್ನ ಸಾರಸೇವೆಗೆ ಫಲವ
ಕೋರಿದನೆ ಧನಕನಕ ವೈಭವಗಳ ೨
ಗೋಪುರವ ತಾಂಗಿರುವೆನೆಂಬ ಗೊಂಬೆಯ ಹೆಮ್ಮೆ
ಈ ಪರಿಯೆ ಮನದ ಕ್ಲೇಶವ ತಂದಿತು
ಶ್ರೀ ಪತಿಯು ಮಾಡಿ ಮಾಡಿಸುವೆನೆಂಬುವಜ್ಞಾನ
ಲೋಪಪೊಂದದೆ ಮನ ಪ್ರಸನ್ನವಾಗಲಿ ದೇವ ೩

 

೩೦೯
ಮನೆ ಮನೆಯು ಹರಿಯ ಆಲಯವಾಗಬೇಕು ಪ
ಜನಗಳು ಸದಾಚಾರ ಶೀಲರಾಗಬೇಕು ಅ.ಪ
ಭೂತ ಸರ್ಗದಲಿ ಹೊಸ ನೀತಿಗಳ ಕಲ್ಪನೆಯು
ಘಾತಕವು ಲೋಕಹಿತಕೆಂದರಿಯದೆ
ಜಾತಿ ಬೇಡೆನ್ನುವರ ರೀತಿನೀತಿಗಳು ಆ
ಪಾತರ ರಮಣೀಯವೆಂಬುದ ತೋರಬೇಕು ೧
ಅಸ್ತವಾಗಲಿ ಜಾತಿ ಮತ ಭೇದವೆಲ್ಲವು
ಪ್ರಸ್ತಾಪ ಬಿಡಿರಿ ಹರಿ ಗುರು ಹಿರಿಯರ
ಸ್ವಸ್ಥವಾಗುವುದೆಂದು ಭಾರತವು ಎನ್ನುವರು
ಮಸ್ತಕದಿ ಕರವಿಟ್ಟು ಕುಳಿತುಕೊಳ್ಳುವ ತೆರದಿ ೨
ಬಹುಮತವು ಎಮ್ಮದೆಂಬುವ ಮದವು ಬೆಳೆಯುತಿರೆ
ಸಹನವೇ ಸಾಧುಜನಗಳಿಗೆ ಶರಣ
ಇಹಪರಗಳಲ್ಲಿಯೂ ಪ್ರಸನ್ನ ಹರಿ ಸಲಹುವನು
ಕುಹಕ ಮಾರ್ಗವು ಬೇಧ ಸಹಜ ಧರ್ಮಗಳಿಂದ ೩

 

೧೯೨
ಮರೆವನೇ ಮುರವೈರಿಯು ಸಿರಿಪತಿ ಸತ್ಯಶಾಸನ ಪ
ಸುಖದು:ಖಗಳನು ಮನಕೆ ಸೇರಿಸದೆ ಸದಾ
ಅಖಿಲ ಕಾರಣ ಹರಿಭಕುತ ಜನರ ೧
ಅತಿಭಾಗ್ಯ ಬಂದಾಗಲೂ ಚ್ಯುತಿ ಬಂದರೂ ಸ್ಥಿರ
ಮತಿಯ ಪೊಂದುತ ಭಜಿಸುವ ಭಕುತನ ೨
ಸಿಂಧುಶಯನನನು ವಂದಿಪ ಸುಜನರ
ಬಂಧು ಬಳಗ ಜನವೆಂದರಿವನು ೩
ಸಂಕಟ ಬಂದಾಗಲು ಶಂಕೆಯ ಮಾಡದ
ಪಂಕಜನಾಭನ ಕಿಂಕರನನು ೪
ಎನ್ನ ಕರ್ಮಗಳೆಲ್ಲ ನಿನ್ನ ಅಧೀನವೆಂದು
ಸಂತತ ಭಜಿಸೆ ಪ್ರಸನ್ನನಾಗದೆ ೫

 

೨೮೦
ಮರೆವುದೆಂತು ನಿನ್ನ ಪರಮ ದಯವ ಕರುಣಾವಾರಿಧೇ ಪ
ಅರಿಯದ ಅಜ್ಞಾನಿ ಎನ್ನ ಹಿರಿಯನೆನಿಸಿ ಪೊರೆದ ಬಗೆಯ ಅ.ಪ
ಜ್ಞಾನಿಗೆ ಲಭ್ಯನೆಂದು ನಿನ್ನ ಮಾನತತಿಯು ಪೊಗಳುತಿರಲು
ಜ್ಞಾನವೀಯದಿರಲು ನಿನ್ನ ಜ್ಞಾನಿಜನಗಳೇನೆನುವರೋ ೧
ರಾಗ ದ್ವೇಷದಿಂದ ಶಿರವ ಬಾಗದಿದ್ದ ಎನ್ನ ದುರಿತ
ನೀಗಿ ದಿವ್ಯಯೋಗವೀಯಲು ತ್ಯಾಗ ನಿನ್ನದು ಯೋಗವೆನ್ನದು ೨
ಮಡುವಿನಲ್ಲಿ ಬಿದ್ದು ಸುಳಿಯ ಹೊಡೆತದಿಂದ ಮುಳುಗುತಿರಲು
ದಡಕೆ ತಂದು ರಕ್ಷಿಸಿದ ಎನ್ನೊಡೆಯ ವರ ಪ್ರಸನ್ನ ಮೂರುತೆ ೩

 

೧೯೩
ಮಲಗು ಮಲಗೆಲೊ ಸುಮ್ಮನೆ ಸುಕುಮಾರ
ಚೆಲುವ ಜೋಗುಳವ ಪಾಡುವೆ ಗೋಪಾಲ ಪ
ಲಲನಾಮಣಿಯರು ಸುಲಭದಿ ನಿನ್ನನು
ಕಲಭಾಷಣದಿಂದ ಸೆಳೆಯ ಬಯಸುತಿಹರೋ ಅ.ಪ
ಭೋಗಿಶಯನ ಹರಿ ಈ ಜಗದೊಳಗೆ
ಈಗ ಬಂದಿರುವ ಜಾಗವನರಿಯದೆ
ಯೋಗಿ ಜನರು ಅನುರಾಗದಿಂದ ನಿನ್ನ
ಸಾಗಿಸಲಿರುವರೊ ಕೂಗದೆ ಸುಖದಲಿ ೧
ದುರುಳ ಶಕಟನನು ಮುರಿದ ಕೋಮಲದ
ಚರಣ ಕಮಲಗಳು ಉರಿಯುತಲಿದ್ದರು
ಮರೆಯಲದನು ಸುವಿನೋದವೀಯುವ
ಸರಸಪದಗಳನು ಪರಿಪರಿಯರುಹುವೆನೊ ೨
ಎನ್ನಯ ಕರಗಳು ನೋಯುತಲಿರುವುವು
ಚಿನ್ಮಯ ರೂಪನೆ ನಿದ್ರೆಯ ಮಾಡೊ
ಚಿಣ್ಣ ನಿನಗೆ ಸವಿಯಾದ ದಧಿ ಪಯ
ಬೆಣ್ಣೆಯ ಕೊಡುವೆ ಪ್ರಸನ್ನ ಸುಹೃದಯದಲಿ ೩

 

೧೯೪
ಮಲಗೆಲೊ ಗೋಪಾಲ ಎನ್ನಯ
ಕರವು ನೋಯುತಿಹುದೊ ಶ್ರೀ ಕೃಷ್ಣ ಪ
ತಿರುಗಿ ತಿರುಗಿ ವನದಿ ನಿನ್ನಯ
ಪದವು ನೋಯುತಿಹುದೇ ಶ್ರೀ ಕೃಷ್ಣ ಅ.ಪ
ದುಷ್ಟ ಪೂತನಿ ವಿಷದಿ ನಿನ್ನಯ
ಹೊಟ್ಟೆ ನೋಯುತಿಹುದೇ ಶ್ರೀ ಕೃಷ್ಣ
ದಿಟ್ಟ ಆ ನಾರಿಯರ ಕ್ರೂರದ
ದೃಷ್ಟಿ ತಾಕಿತೇನೋ ಶ್ರೀ ಕೃಷ್ಣ ೧
ಮುರಳಿಯ ಬಾರಿಸಿದ ನಿನ್ನಯ
ಬೆರಳು ನೋಯುತಿಹುದೇ ಶ್ರೀ ಕೃಷ್ಣ
ಒರಳು ಬಲದಿ ಎಳೆದ ನಿನ್ನಯ
ಕರಳು ಹಿಡಿಯತೇನೋ ಶ್ರೀ ಕೃಷ್ಣ ೨
ನಿನ್ನ ಕೊರತೆಗಳನು ಬೇಗನೆ
ಎನ್ನ ಮನಕೆ ತಿಳಿಸೋ ಶ್ರೀ ಕೃಷ್ಣ
ಚಿನ್ನ ನಿದ್ರೆ ಬರಲು ಮನದಿ ಪ್ರ
ಸನ್ನ ಹರಿಯ ನೆನೆಯೋ ಶ್ರೀ ಕೃಷ್ಣ ೩

 

೩೧೦
ಮಾಡು ಮನವನು ಬರಮಾಡು ಹರಿಯನು
ಸ್ಥಿರ ಮಾಡು ಮನವನು ಪ
ಜೋಡಿಸಿ ಕರಗಳ ಕರೆದರೆ
ಓಡುತ ಓಡುತಲಿವ ಬರುವನು ಅ.ಪ
ನಾಳೆ ನಾಳೆ ಎನ್ನಬೇಡ
ಕಾಲ ನಿನ್ನಧೀನವಲ್ಲ
ಕೇಳಿದರಾಕ್ಷಣ ಕರುಣಾಶೀಲನು
ಆಲಯಕಿವ ಬರುವನು ೧
ಕಾಮಧೇನು ಕಲ್ಪವೃಕ್ಷ
ಈ ಮಹಾಮಹಿಮಗೆ ಸಮವೇ
ಪ್ರೇಮದಿ ಪೂಜಿಸಿದಾತಗೆ
ಕ್ಷೇಮವ ಭಾಮೆಯ ಪ್ರಿಯ ಕೊಡುವನು ೨
ಮನಗೆ ಬಂದರೀತನೊಮ್ಮೆ
ಜನಕೆ ಬಂದುದೆಂಥ ಹೆಮ್ಮೆ
ಪ್ರಣಯ ಸುಧೆಯ ಸವಿರಸವನು
ಮನೆಯಲಿ ತುಂಬುವನು ಪ್ರಸನ್ನನು ೩

 

೧೯೫
ಮಾಧವ ಗೋವಿಂದ ದೇವ ಮಾಧವ ಗೋವಿಂದ ಪ
ಪಾದಭಕುತಿ ನೀಡೋ ದೇವ ಅ.ಪ
ಅನವರತವು ಮನದಿ ನಿನ್ನಯ
ಘನಮಹಿಮೆಗಳನ್ನು ಮೋದದಿ
ನೆನೆಯುವಂತೆ ಮಾಡೋ ದೇವ ೧
ಅಭಿಮಾನವ ಬಿಡಿಸೋ ವಿಷಯದ
ಅಭಿಮಾನವ ಬಿಡಿಸೋ ನಿನ್ನಯ
ಅಭಯಕರ ನೀಡೋ ದೇವ ೨
ಎಂದಿಗು ಹೃದಯದಲಿ ರಾಗದ
ಗಂಧವು ಬರದಂತೆ ದೇವ
ಸುಂದರ ಗೋಪಾಲ ಎನ್ನ ಹೃ
ನ್ಮಂದಿರದಲಿ ನಿಲ್ಲೋ ಪ್ರಸನ್ನ ೩

 

೧೯೬
ಮಾಧವ ಸಾಧುಜನ ಕಾದಿರುವರೊ ಪ
ಆದರದಿಂದ ನಿನ್ನ ನೋಡುವುದಕೆ ಅ.ಪ
ಶಾಸ್ತ್ರಗಳಿಂದಲು ಅರಿಯದ ನಿನ್ನ ಪ
ವಿತ್ರ ರೂಪವನು ನೋಡಲೋಸುಗ ೧
ಘೋರತಪಗಳಿಂದ ಸೇರದೆ ನಿನ್ನನು
ಚಾರಿಯೊಳ್ ಪೊಂದಲು ಕೋರುತಿಹರೊ ೨
ದಾನ ಧರ್ಮಗಳಿಗೂ ಸುಲಭದಿ ದೊರೆಯದ
ನೀನೆ ಬಂದಿರಲು ವಿನೋದಿಸುವರೊ ೩
ತೀರ್ಥಯಾತ್ರೆಯು ಮನ ಮಾತ್ರ ಶೋಧಿಪುದೆಂದು
ಮೂರ್ತಿ ನೋಡಲು ನಿನ್ನ ಪ್ರಾರ್ಥಿಸುವರೊ೪
ಅನ್ನದಾನವ ಮಾಡೆ ಹೊನ್ನು ಇವರಿಗಿಲ್ಲ
ಮನ್ನಣೆ ಮಾಡಿ ಪ್ರಸನ್ನನಾಗೆಲೊ ೫

 

ನುಡಿ-೩: ಸಾಲೋಕ್ಯ
೧೯೭
ಮುರಳಿ ಬಾರಿಸೊ ಮಾಧವ ಪ
ಕುಣಿಯುವೆ ಮುರಳಿ ಬಾರಿಸೊ ಮಾಧವಅ.ಪ
ಭವದ ಸಂತಾಪವು ಕೊನೆಗಾಣಲಿ
ಭುವಿಯೊಳು ಜೀವನ ಸವಿಯಾಗಲಿ
ನವವಿಧ ಭಕುತಿಯು ಹರಿದಾಡಲಿ
ಕಿವಿ ತುಂಬ ಕೇಳಿ ನಾ ನಲಿಯುವೆ ಶ್ರೀಕರ ೧
ಅರಿಷಡ್ವರ್ಗಗಳೆಲ್ಲ ಮರೆಯಾಗಲಿ
ಹರುಷ ಮಾನಸದಲಿ ಸೆರೆಯಾಗಲಿ
ಮುರಳಿಯ ಧ್ವನಿಯು ತಾ ದೊರೆಯಾಗಲಿ
ಪರಮ ವೈರಾಗ್ಯವೆ ಸಿರಿಯಾಗಲಿ ದೇವ ೨
ಸಾಲೋಕ್ಯ ಸಾರೂಪ್ಯ ಸಾಯುಜ್ಯವು
ಈ ಲೋಕದಲ್ಲೀಗ ಈ ಲಾಭವು
ಶ್ರೀಲೋಲ ಗೋಪಾಲ ಬಾಲ ಪ್ರಸನ್ನನೆ
ಮೇಲಾಯ್ತು ನರಜನ್ಮವಿರಲಿ ಎಂದೆಂದಿಗೂ ೩

 

೧೯೯
ಮುರಳಿಯ ಧ್ವನಿಯು ಕರೆಯುತಲಿರುವುದು
ಪೋಗುವ ಬಾರೆ ಸಖಿ ಪ
ಪೋಗುವ ಬಾರೆ ಸಖಿ ಬೇಸರ ನೀಗುವ ಬಾರೆ ಸಖಿ
ವಿಧ ವಿಧ ಭೋಗವ ಪಡುವ ಸಖೀ ಅ.ಪ
ವರವಂಶದಿ ಜನಿಸಿದ ಭಾಗ್ಯವ ಈ
ಮುರಳಿಯು ತಂದಿತು ಕೇಳೆ ಸಖಿ
ಪರಮ ಪ್ರೇಯಸಿ ಇವಳಂತರಂಗವ
ಮರೆ ಮಾಚುವ ರಸಿಕಾಗ್ರಣಿ ಕೃಷ್ಣನ ೧
ಕ್ಷೀರಶರಧಿತನಯಳ ವೈಭವ ಈ
ನೀರಸಳಿಗೆ ಇದು ಅಚ್ಚರಿಯು
ಕೋರಿ ಚುಂಬಿಸುವ ಕೃಷ್ಣನಧರ ಸುಧೆ
ಧಾರೆಯೊ ಸೂರೆಯೊ ಶೌರಿಯ ೨
ಹುಲ್ಲೆ ಹುಲಿಯ ಭಯ ತೊರೆದು ಕೇಳುತಿದೆ
ಕಲ್ಲು ಕರಗಿ ಮೃದುವಾಗಿರುವಂತೆ
ನಲ್ಲೆ ಎನ್ನ ಹೃದಯವು ಕರಗಿತು ನಾ
ನಿಲ್ಲಿ ಎನ್ನ ಮನವಲ್ಲಿ ಪ್ರಸನ್ನನ ೩

 

೨೦೦
ಮುರಳಿಯ ನಾದವ ಕೇಳಿ ಬನ್ನಿರಿ ಪ
ಮುರಳಿಯ ನಾದವ ಕೇಳಿ ಅ.ಪ
ಮದುರಾನಾಥನು ಮುರಳಿಯನೂದಲು
ಸುರಿವುದಾನಂದಜಲ ನಯನದಲಿ ೧
ಕಂಗೊಳಿಸುವ ಬೆಳದಿಂಗಳ ಸೊಬಗಿನಲಿ
ತಂಗಾಳಿಯ ಸುಖದಿ ಶ್ರೀರಂಗನ ೨
ಶ್ಯಾಮಲಾಂಗನು ತನ್ನ ಕೋಮಲ ಕರದಲಿ
ಆ ಮುರಳಿಯ ಪಿಡಿಯೆ ಹೃದಯದಲಿ
ಪ್ರೇಮವು ತುಂಬುವುದು ೩
ಪಂಚಬಾಣನ ಪಿತ ಮುರಳಿಯ ಮಧುರಸ
ಹಂಚಲೆಮಗೆ ರೋಮಾಂಚವಾಗುವುದು ೪
ರಜನೀಕಾಂತನ ಕುಲದಲಿ ಜನಿಸಿ
ವ್ರಜಜನಗಳಿಗಧಿಕ ಪ್ರಸನ್ನನ ೫

 

ನುಡಿ-೧ : ಕೊಳಲೂದಲು
೧೯೮
ಮುರಳಿಯಧರ ಶ್ರೀ ಕೃಷ್ಣನ ನೋಡಲು
ಏನೋ ಸಂತೋಷ ಏನೋ ವಿನೋದ ಪ
ಹರಿವಳು ಯಮುನೆಯು ಮೆಲ್ಲನೆ ನೋಡಲು
ಗೋವಿಂದನನು ಪರಮಾನಂದದಿ ಅ.ಪ
ಕೊಳಲೂದಲು ಶ್ರೀಕೃಷ್ಣನು ನಾದದ
ಸುಳಿ ಬಾಡುವುದೆಂಬುವ ಭೀತಿಯಲಿ
ಜಲ ಮೂಲನು ಬೆಳದಿಂಗಳ ಕರಗಳ
ತಳಿರುಗಳಿಂದಲಿ ತಳ ಸೇರಿಸುವ ೧
ಶೃಂಗಾರ ಶರಧಿ ತರಂಗಗಳೆದ್ದವು
ರಂಗನ್ನ ವದನ ಶಕಾಂಕನ್ನ ನೋಡಿ
ಅಂಗನೆಯರು ತಮ್ಮಂಗಗಳಲಿ
ಭಂಗವ ಪಡೆದರನಂಗನ ಶರದಿ ೨
ಭುವನವ ತುಂಬಿತು ಗಗನವು ತುಂಬಿತು
ದಿವಿಜರ ಲೋಕಗಳೆಲ್ಲವು ತುಂಬಿತು
ಕವಿಗಳು ಬೆರಗಾದರು ವರ್ಣಿಸಲೀ
ಸವಿ ಮುರುಳಿಯು ನಾದದ ಪ್ರವಹನನು ೩
ತುರುಗಳ ಪಯಧರ ಸ್ರವಿಸಿತು ಕ್ಷೀರವ
ಕರೆದರು ಮೋದದ ಕಂಬನಿಯೆಲ್ಲರು
ಮರೆತರು ನರಲೋಕದ ಮಂದಿಗಳು
ಅರಿತು ಮೋಕ್ಷದ ಸುಖವೆಂತೆಂಬುದ ೪
ಈಶನು ಕೈಲಾಸದಲಿ ಕುಣಿದನು
ಶೇಷನು ಸಾಸಿರ ಫಣಿಗಳನಾಡಿದ
ದೋಷರಹಿತ ವಾಣೀಶನ ವದನ ವಿ
ಕಾಸವು ಬೆಳಗಿತು ನಾಕು ದಿಕ್ಕುಗಳ ೫
ಆ ಸಮಯವ ಇತಿಹಾಸಗಳಲಿ ಕವಿ
ವ್ಯಾಸರಿಗಲ್ಲದೆ ವರ್ಣಿಸಲಳವೆ
ಭಾಸುರ ಸುಂದರ ವದನ ಪ್ರಸನ್ನನು
ರಾಸಕ್ರೀಡೆಯ ರಸವನು ಹರಿಸುತ ೬

 

೨೦೧
ಮೊಸರ್ಬೇಕ್ ಮೊಸರು ಧೇಂಡಿಯ ಮೊಸರು ಪ
ಕರಣೆಯೆಂದ್ಹೆಸರು ಕೇಳ್ಬೇಡಿ ಕೊಸರು ಅ.ಪ
ಗೋಕುಲದಲಿ ಶ್ರೀಕೃಷ್ಣನು ತಾನೆ
ಆಕಳಮಂದೆಯ ಹೊಂದಿರುತಾನೆ
ಆ ಕರುಣಾನಿಧಿ ಕಳಿಸಿರುತಾನೆ
ಬೇಕಾದರೆ ಬನ್ನಿ ನಾ ಇಕ್ಕುತ್ತೇನೆ ೧
ಎಳಗಂದಿಯಲ್ಲವು ತಿಳಿಗಟ್ಟುವುದಿಲ್ಲ
ಕೊಳೆಯಿಲ್ಲವು ಈ ಬಿಳಿಮೊಸರಿನಲಿ
ತಿಳಿಯ ವೈರಾಗ್ಯ ಭಕ್ತಿಗಳುಳ್ಳ ಜನಕೆ
ಗೆಳೆಯ ಶ್ರೀ ಕೃಷ್ಣನು ಕಳಸಿದನಮ್ಮ ೨
ಬಿಂದು ಮಾತ್ರದಿ ನಿಜಾನಂದವ ಕೊಡುವುದು
ಬಿಂದಿಗೆ ತಂಬಿಗೆ ತರಬೇಡಿರಮ್ಮ
ಮಂದ ಜನರು ತಾವರಿಯರು ಇದನು
ತಂದೆ ಪ್ರಸನ್ನನ ಪರಮ ಪ್ರಸಾದವ ೩

 

೨೫೩
ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ಪ
ಕ್ಷಿತಿಯೊಳಗೆ ದಶಪ್ರಮತಿಗಳ ಸುಖಕರ
ಮತದ ಪರಮ ಸಂಗತಿಗಳ ಹರಡಿದ ಅ.ಪ
ಜಯ ಮುನಿಗಳವರ ಗ್ರಂಥಗಳಿಗೆ
ಸುಖಮಯ ಟಿಪ್ಪಣಿಗಳನು ರಚಿಸಿ ಚಿನ್
ಮಯ ರಾಮರ ಸೇವೆಯ ಸಂತಸದಲಿ
ಗೈದು ಸುಮಂತ್ರಾಲಯದಲಿ ನೆಲೆಸಿದ ೧
ಮಂಗಳಕರವಾದ ತುಂಗಾನದಿಯ
ತರಂಗಗಳಲಿ ಮಿಂದು ನಿಮ್ಮನು
ಕಂಗಳಿಂ ನೋಡಿ ಗುಣಗಳ ಪಾಡಿ
ನಿಸ್ಸಂಗರಾದ ಸಾಧು ಸಂಘವ ಪೊರೆಯುವ ೨
ಪರಿಪರಿಯಲಿ ನಿಮ್ಮ ನಮಿಪ ಸೇವಕರಿಗೆ
ಸುರಧೇನುವಿನಂತೆ ಸಂತತ
ಹರುಷದಿಂದಲಿ ನಿಮ್ಮ ಭಜಿಪ ಸುಜನರಿಗೆ
ಸುರತರುವಂತೆ ಪ್ರಸನ್ನರಾಗುವಂಥ ೩

 

೨೬೪
ಯತಿವರೇಣ್ಯರ ಮನುಜ ಸತತ ಭಜಿಸೆಲೊ ಪ
ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ ಅ.ಪ
ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆ
ಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ ೧
ಭೂಸುರವರ ಕುಲದಿ ಜನಿಸಿ ವಾಸುದೇವ ನಾಮದಿಂದ
ಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ ೨
ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದ
ಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ ೩
ಹರಿಯು ಜೀವರು ಸಮರು ಎಂದು ನರಿಯುತಕುತಿಗಳಿಂದ ಬೋಧಿಪ
ದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ ೪
ಶುಕ್ತಿರಜತ ಜ್ಞಾನದಂತೆ ವಿಶ್ವವೆಲ್ಲ ಮಿಥ್ಯಾವೆಂಬೊ
ಯುಕ್ತಿಗಳನೆ ಖಂಡಿಸಿ ಜಗತ್ ಸತ್ಯವೆಂದು ದೃಢದಿ ತೋರಿದ ೫
ಬ್ರಹ್ಮನು ಗುಣಶೂನ್ಯನೆಂದು ದುರ್ಮತಗಳ ಹರಡುವವರ
ಹಮ್ಮು ಮುರಿದು ಜಗದಿ ಶಾಸ್ತ್ರ ಮರ್ಮಗಳನು ವಿವರಿಸಿದ ೬
ದೂಷ್ಯವಾದ ಇಪ್ಪತ್ತೊಂದು ಭಾಷ್ಯಗಳನು ಮುರಿದು ಶುದ್ಧ
ಭಾಷ್ಯಗಳನು ರಚಿಸಿ ತಮ್ಮ ಶಿಷ್ಯವರ್ಗಕೆ ಸಾರ ಪೇಳಿದ ೭
ಶ್ರವಣ ಮನನ ಧ್ಯಾನಗಳಿಂ ಸಿರಿರಮಣನ ಜ್ಞಾನ ಪೊಂದಿ
ವರ ಕರುಣವ ಪಡೆಯುವುದೇ ನಿರತ ಸುಖಕೆ ಪಥವೆಂದರುಹಿದ ೮
ಹನುಮ ಭೀಮ ಮಧ್ವ ರೂಪದಿ ರಾಮ ಕೃಷ್ಣ ವೇದವ್ಯಾಸರ
ನಿರತ ಸೇವೆ ಮಾಡಿ ಶ್ರೀಹರಿಯೊಲಿಮೆಯಿಂದ ಪ್ರಸನ್ನರಾದ ೯

 

೨೦೨
ಯಾರಯ್ಯ ನೀನ್ಯಾರಯ್ಯ ಪ
ಸೋರುತಿರುವ ಸೌಂದರ್ಯದಿ ಮನವನು
ಸೂರೆಯಗೊಂಬ ನೀನ್ಯಾರಯ್ಯ ಅ.ಪ
ನಂದನ ಕಂದ ನೀನಾದರೆ ಗೋವ್ಗಳ
ಮಂದೆಯ ಬಿಟ್ಟು ಬಂದಿಹುದೇಕೆ
ಸಂದೇಹವು ತೋರುತಲಿವೆ ನಿನ್ನನು
ಎಂದಾದರು ನಾ ಬಯಸಿದೆನೆ ೧
ನೀರಿಗೆ ಬಂದೆನು ನಾನಿಲ್ಲಿ
ಯಾರು ಪೇಳಿದರು ಎನ್ನ ಸುದ್ದಿ
ಮಾರನ ತಾತ ನೀನಿರಬಹುದು
ಯಾರ ಮಾತ ಕೇಳುವಳಲ್ಲ ೨
ಬಿಂದಿಗೆ ಭಾರವು ಜಗಿಯುತಿದೆ
ಮಂದಸ್ಮಿತವೆನ್ನ ಬಿಗಿಯುತಿದೆ
ತಂದೆ ಪ್ರಸನ್ನ ಕೈಮುಗಿಯುವೆನು
ಮಂದಿರ ಮಾರ್ಗವು ಸಿಗಲೆನಗೆ ೩

 

೩೧೧
ಯಾರಿಗೆ ಯಾರಿಹರೋ ಜಗದಲಿ
ನಾರಾಯಣ ನೀನಲ್ಲದೆ ಬಾಂಧವ ಪ
ಜನನಿ ಜನಕ ಸತಿಸುತ ಸಹಜರುಗಳು
ಮನೆ ಮಠ ಧನಕನಕಾಧಿಗಳೆಲ್ಲವು
ಕನಸಿನ ರಥ ತುರಗಾದಿಗಳಲ್ಲವೆ
ಅನಿಮಿತ್ತ ಬಾಂಧವ ನೀನಲ್ಲದೆ ಹೊಣೆ ೧
ದೇಹಬಿಟ್ಟು ಪರದೇಹವ ಸೇರಲು
ಬಾಹರೇ ಲೋಕದ ಬಂಧುಗಳು
ದೇಹ ದೇಹದಲೂ ಕ್ಷಣವಗಲದೆ ಎಂದು
ಸಾಹಚರ್ಯ ಜಗಮೋಹನಗಲ್ಲದೆ ೨
ಸಂತೆಗೆ ಸೇರುವ ಗಂಟುಕಳ್ಳರುಗಳ
ತಂಟೆಯು ಬೇಡೆಂದು ಲೌಕಿಕಕೆ
ಅಂಟದಿದ್ದರೆ ದೊಡ್ಡ ಗಂಟನು ಹೊರಿಸುವ
ನಂಟನು ಭಕ್ತ ಪ್ರಸನ್ನ ತಾನಲ್ಲದೆ ೩

 

೨೦೩
ಯಾರಿರಬಹುದೀತ ಗೆಳತೀ
ಯಾರಿರಬಹುದೀತ ಪ
ಯಾರೆಂದರಿಯದೆ ಪೋಗದೆ ಕೊರತೆ
ಯಾರಿರಬಹುದೀತ ಅ.ಪ
ಸಾವಿರ ಸಂಖ್ಯೆಯ ಗೋವಳರಿದ್ದರೂ
ಯಾವನಿಗೀ ವಿಧ ಠೀವಿಯಿರುವುದೇ
ಹಾವಭಾವಗಳ ನೋಡಲು ಈತನ
ಗೋವಳ ವೇಷವದಾವ ಕಾರಣವೋ ೧
ನಮಗೇತಕೆ ಈತನ ಗೋಜೆಂದರು
ಕಮನೀಯನ ನೋಡುತ ನೋಡುತ ಬಲು
ಮಮತೆಯು ಮನದಲಿ ಏರುತಲಿರುವುದು
ಕಮಲನಯನೆ ನಾ ನಮಿಸುವೆ ಪೇಳೆ ೨
ಸರಳನೋ ದುರುಳನೋ ಅರಿಯುವುದೆಂತೇ
ಕರೆಯದೆ ಹೋದರೆ ಜರಿಯಲುಬಹುದೇ
ಮುರಳಿಯ ನಾದದ ಕರೆ ಬಂದರೆ ನಾ
ಬರವೆನೆಂದರು ಹೇ ಸರಸ ಪ್ರಸನ್ನ ೩

 

೨೩೬
ಯಾರಿರುವರೊ ಭವ ಪಾರಗಾಣಿಸಲು
ಭಾರತಿ ರಮಣ ಸಮೀರನಲ್ಲದೆ ಬೇರೆ ಪ
ವೀರ ಹನುಮ ರಘು ವೀರ ಭಕುತ ಬ್ರಹ್ಮ
ಚಾರಿಯಾಗಿ ಜೀವ ಸಾರವೆನಿಸಿದೆ ಅ.ಪ
ಶೇಷ ಗರುಡ ಶಿವ ಮುಖಸುರರೊಬ್ಬರೂ
ದೋಷದೂರಲ್ಲವೊ ಪವಮಾನ
ಈಶದಜ್ಞಾನ ಸಂಶಯ ಭ್ರಮೆ ಪೊಂದದೆ
ಶ್ರೀಶನ ಪರಮ ಸಂತೋಷಕೆ ಪಾತ್ರನು ೧
ವೀರರಧಿಕರೆಲ್ಲರು ನಿನ್ನೆದುರಲಿ
ಸಾರಮೇಯದಂತಾದರೊ ಭೀಮ
ನಾರಾಯಣನಿಗೊಬ್ಬನಿಗಲ್ಲದೆ
ಶಿರಬಾಗದೆ ಮರೆದೆಯೊ ಧೀರ ಕಂಠೀರವ ೨
ಶಾಂತನು ನೀ ಬಲುದಾಂತನು ನೀನೆ
ಸ್ವಾಂತದಿ ಹರಿಯು ಪ್ರಸನ್ನನು ಸತತವು
ಅಂತಿಮಭಾಷ್ಯಾದಿಗಳ ರಚಿಸಿ ವೇ
ದಾಂತ ಸಾಮ್ರಾಜ್ಯದಿ ಸಾರ್ವಭೌಮ ಯತಿ ೩

 

ನುಡಿ-೩: ಬಲಮುರಿ ಶಂಖ
೩೧೨
ಯೋಗಿ ವಲ್ಲಭನ ಅನುರಾಗವನು ಪಡೆದವಗೆ
ಲಾಗವೆಲ್ಲವು ದೊಡ್ಡ ಯೋಗವಾಗುವುದು ಪ
ಹೋಗಿ ಗಂಗೆಯ ತೀರದಲಿ ಬಾವಿ ತೋಡಿದರೂ
ಬೇಗ ಸಿಗುವುದು ದಿವ್ಯ ಬಲಮುರಿಯ ಶಂಖವು ಅ.ಪ
ಮಾಧವನ ಪರಮ ಕರುಣವ ಪಡೆದ ಮನುಜನಿಗೆ
ಹೋದ ಕಡೆಗಳಲಿ ದೊರೆಕುವುದಾದರೆ
ಮೂದಲಿಸುವರ ಮನವು ಕಾದ ಬೆಣ್ಣೆಯು ಕರಗಿ
ಹೋದ ತೆರದಲಿ ಕ್ಷಣದಿ ಸಾಧುವಾಗುವುದು ೧
ವೇದಾಂತ ರಾಜ್ಯದಲಿ ಜ್ಞಾನಭಕುತಿಗಳಿಂದ
ವೇದಾಂತ ವೇದ್ಯನನು ಮೋದ ಪಡಿಸುವನು
ಕಾದ ಮರುಭೂಮಿಯಲಿ ಸಕಲ ಸಂಪತ್ತುಗಳ
ಸಾಧಿಸುವ ಬೇಧಿಸುವ ವಿಘ್ನರಾಶಿಗಳನ್ನು ೨
ಕುರುಡ ನೋಡುವನೆಲ್ಲ ಕಿವುಡ ಕೇಳುವನೆಲ್ಲ
ಗುರುವರ ಪ್ರಸನ್ನ ನೀ ಮರುಕ ತೋರಿದರೆ
ಕರಡಿ ಕೈ ಗೊಂಬೆಯಾಗುವುದು ಕೈಗೊಂಬೆಯು
ತ್ವರಿತದಲಿ ಕಲ್ಪತರುವಾಗಿ ಕೊಡುವುದು ಫಲವ ೩

 

೨೦೫
ರಕ್ಷಿಸೊ ಜಾನಕಿ ಕಾಂತ ಶಾಂತ ಪ
ತಕ್ಷಣದಲಿ ಉಪೇಕ್ಷೆಯ ಮಾಡದೆ ಅ.ಪ
ದಕ್ಷ ನಾನಲ್ಲವೊ ಪೊಗಳಲು ಶಾಸ್ತ್ರ ವಿ
ಚಕ್ಷಣೆಯರಿಯೆನೋ ಲಕ್ಷ್ಮೀನಾಥ೧
ಸಂತತಪಡುತಿಹ ಚಿಂತೆಯ ಬಿಡುತಲಿ
ಶಾಂತಿಯ ಪೊಂದುವ ತಂತ್ರವ ತೋರುತ ೨
ಬೇಡುವ ವಿಧದಲಿ ರೂಢಿಯಿಲ್ಲದೆ ಬಲು
ಪಾಡುಪಡುತಿಹೆನೋ ನೀಡುತ ಕರವನು ೩
ಕ್ಷೀಣಿಸೆ ಉರುತರ ತಪಗಳಿಂ ತನುವನು
ತ್ರಾಣವಿಲ್ಲವೋ ರಮಾಪ್ರಾಣನಾಥನೆ ೪
ಕೆಟ್ಟಯೋಚನೆ ಎನ್ನ ಮುಟ್ಟದೆ ಮನವನು
ಘಟ್ಟಿಯ ಮಾಡುತ ಶಿಷ್ಟ ಪ್ರಸನ್ನನೇ ೫

 

೨೦೪
ರಮಿಸುವೆವೆಂದಿಗೆ ಮುರಳೀಧರನ ಪ
ಸುಮನಸವಂದಿತ ವಿಮಲ ಚರಿತನ ಅ.ಪ
ಮಂದಮಾರುತ ಸುಮಗಂಧ ಬೀರುತಲಿರೆ
ಸುಂದರವದನ ಗೋವಿಂದನ ನೊಸಲಲಿ ೧
ವನರುಹನೇತ್ರನ ಪರಮ ಪವಿತ್ರನ
ವನಜಾಕ್ಷಿಯರೆಲ್ಲ ವನವಿಹಾರದಲಿ ೨
ಹೇಮವಸನನ ಕೋಮಲ ರೂಪನ
ಕಾಮಿನಿಯರು ನಾವು ಪ್ರೇಮವ ಬೀರುತ ೩
ಕಲಭಾಷಣದಿಂದ ಸೆಳೆಯುತ ಮನವನು
ಜಲಜಾಕ್ಷಿಯರೆಲ್ಲ ಜಲ ವಿಹಾರದಲಿ ೪
ಭಾಸುರಾಂಗನ ಪರಿಹಾಸ ಮಾಡುತಲಿ
ಬೇಸರವಿಲ್ಲದೆ ರಾಸಕ್ರೀಡದಿ ೫
ಸಂಗೀತವ ಪಾಡಿ ರಂಗನ ಒಡಗೂಡಿ
ಅಂಗನೆಯರೆಲ್ಲ ಅನಂಗ ಕೇಳಿಯಲಿ ೬
ಬಿನ್ನನೆ ಬಾರೆಂದು ಕೆನ್ನೆಯ ಪಿಡಿಯುತ
ಸನ್ನೆಯ ಮಾಡಿ ಪ್ರಸನ್ನಮುಖಿಯರು ೭

 

೨೦೭
ರಾಮ ಭಜನೆ ಮಾಡೋ ಮನುಜ
ರಾಮ ಭಜನೆ ಮಾಡೋ ಪ
ರಾಮ ರಾಮ ಜಯ ರಾಘವ ಸೀತಾ
ರಾಮನೆಂದು ಸುಸ್ವರದಲಿ ಪಾಡುತ ಅ.ಪ
ತಾಳವನು ಬಿಡಬೇಡ ಮೇಳವನು ಮರೆಬೇಡ
ತಾಳಮೇಳಗಳ ಬಿಟ್ಟು ನುಡಿದರೆ
ತಾಳನು ನಮ್ಮ ಇಳಾಸುತೆಯರಸನು ೧
ಚಿತ್ತವನು ಚಲಿಸದಿರು ಭೃತ್ಯ ಮನೋಭಾವದಲಿ
ಸತ್ಯ ಜ್ಞಾನ ಅನಂತ ಬ್ರಹ್ಮನು
ಹೃದ್ಗತನೆಂದರಿಯುತ ಭಕುತಿಯಲಿ ೨
ಭಲರೆ ಭಲರೆಯೆಂದು ತಲೆದೂಗುವ ತೆರದಿ
ಕಲಿಯುಗದಿ ವರಕೀರ್ತನೆಯಿಂದಲಿ
ಸುಲಭದಿ ಹರಿಯ ಪ್ರಸನ್ನತೆ ಪಡೆಯಲು ೩

 

೩೧೩
ಲೋಭಿಯು ಬೇಡಲು ಲಾಭವೇನಿರುವುದು
ನಾಭಿಯು ಒಣಗುವುದು | ಬೇರೊಂದಿಲ್ಲ
ನಾಭಿಯು ಒಣಗುವುದು ಪ
ಲೋಭಿಗೆ ಧನದಿಂದ ಶೋಭೆಯುಂಟೆ ಮನ
ಕ್ಷೋಭೆಯಲ್ಲದೆ ಸತತ | ತನ್ನಯ ಮನಕ್ಷೋಭೆಯಲ್ಲದೆ ಸತತ ಅ.ಪ
ನೂರು ಛಿದ್ರಗಳಲ್ಲಿ ತೋರುತಿದ್ದರು ದೇಹ
ಕೋರನು ನವವಸನ | ಏನೆಂದು ಕೋರನು ನವವಸನ
ಮೂರು ಕಾಸಿಗೆರಡು ಮಾರುತಿದ್ದರು ಅದ
ದೂರದಿ ತ್ಯಜಿಸುವನು | ನೂತನವಸ್ತ್ರ ದೂರದಿ ತ್ಯಜಿಸುವನು ೧
ಬಂಧು ಜನರು ತನ್ನ ಮಂದಿರಕ್ಕಿಳಿಯಲು
ನೊಂದುಕೊಳ್ಳುವ ಮನದಿ | ತತ್ತಳಿಸುತ ನೊಂದುಕೊಳ್ಳುವ ಮನದಿ
ತೊಂದರೆಗಳ ಪೊಂದಿಹೆನೆನ್ನುತ
ಮುಂದಕೆ ಸಾಗಿಸುವ | ಬಂದವರನು ಮುಂದಕೆ ಸಾಗಿಸುವ ೨
ಮುಗ್ಗಿದ ಧವಸವು ಅಗ್ಗದಿ ಮಾರಲು
ಹಿಗ್ಗುತ ಕೊಳ್ಳುವನು | ಸೊಗಸಿನಲಿ ಹಿಗ್ಗುವನು
ಒಗ್ಗಿಹುದೆನ್ನುತ ನುಗ್ಗಿಸಿ ಉದರದಿ
ಸಗ್ಗದೆ ನಡೆಯುವನು | ಪರನುಡಿಗೆ ಸಗ್ಗದೆ ನಡೆಯುವನು ೩
ಹಣದಲಿ ಲೋಭಕೆ ಕೊನೆ ಮೊದಲಿಲ್ಲದೆ
ಒಣಗಿಸುವನು ತನುವ | ಕಾರ್ಪಣ್ಯದಿ ಒಣಗಿಸುವನು ತನುವ
ಗೆಣೆಯನಿವನು ನಾಲ್ಕಾಣೆಯ ಕಂಡರೆ
ಕುಣಿಯುವನು ಮನದಲ್ಲಿ | ಎಣೆಯಿಲ್ಲದೆ ಕುಣಿಯುವ ಮನದಲ್ಲಿ೪
ಕಿಕ್ಕಿರಿದರು ಧನ ಕಕ್ಕುಲತೆಯೊಳ್ ತನ್ನ
ಮಕ್ಕಳ ಸಲಹುವನು | ರಕ್ಕಸನಿವ ಮಕ್ಕಳ ಸಲಹುವನು
ಮಿಕ್ಕ ಧನವ ಬಲು ಅಕ್ಕರೆಯಿಂದ ಎವೆ
ಯಿಕ್ಕದೆ ನೋಡುವನು | ನೇತ್ರದಿ ಎವೆಯುಕ್ಕದೆ ನೋಡುವನು ೫
ನುಡಿದರೆ ಸವಿಮಾತ ಒಡವೆ ವಸನಗಳಿ
ಗ್ಹಿಡಿವಳೆಂದರಿಯುತಲಿ | ಸಡಗರದಿ ಹಿಡಿವಳೆಂದರಿಯುತಲಿ
ಕರವ ಪಿಡಿವ ತನ್ನ ಮಡದಿಯ ಕಂಡರೆ
ಸಿಡಿಮಿಡಿಗುಟ್ಟುವನು | ನಿರ್ಘೃಣನಿವ ಸಿಡಿಸಿಡಿ ಗುಟ್ಟುವನು ೬
ರಾಯರೆ ನಿಮ್ಮ ಸಹಾಯ ಹೊರತು
ಬೇರುಪಾಯ ಕಾಣೆನೆನಲು | ಈ ಧರೆಯೊಳು ಉಪಾಯ
ಕಾಣೆನೆನಲು
ಕಾಯುವ ಧಣಿ ನಾರಾಯಣನೆನುತಲಿ
ಬಾಯಲಿ ನುಡಿಯುವನು | ವೈರಾಗ್ಯವ ಬಾಯಲಿ
ನುಡಿಯುವನು ೭
ಈ ಧನವೆ ದೊಡ್ಡ ಸಾಧನವೆನ್ನುವ
ಮೇಧಾವಿಯು ಇವನು | ಓದಲರಿಯದ ಮೇಧಾವಿಯು ಇವನು
ಮಾಧವ ಕೃಷ್ಣನ ಪಾದ ಕಮಲದಲಿ
ಆದರವರಿಯನಿವ | ಎಂದೆಂದಿಗು ಆದರವರಿಯನಿವ ೮
ಘನತೆಯು ಬೇಡವು ಜನತೆಯು ಬೇಡವು
ಧನವಿದ್ದರೆ ಸಾಕು | ಈ ನರನಿಗೆ ಧನವಿದ್ದರೆ ಸಾಕು
ಮನುಜ ಮುಟ್ಟದ ಗುಬ್ಬಿಯನನುಕರಿಸುತ ಜೀ
ವನವನು ಕಳೆಯುವನು | ಕ್ಲೇಶದಿ ಜೀವನವನು ಕಳೆಯುವನು ೯
ಗಳಿಸಿದವನ ಧನ ಬಳಸಿದವನಿಗೆಂಬ
ಇಳೆಯ ಅನುಭವಗಳ ತಿಳಿದು | ಮತ್ತೆ ಅನುಭವಗಳ ತಿಳಿದು
ಉಳಿಸಲು ಧನವನ್ನ ಕೊಳೆಯ ಜೀವನದಲಿ
ಮುಳುಗಿ ಮುಳುಗುತಿರುವ | ಕ್ಲೇಶಗಳಲಿ ಮುಳುಗು ಮುಳುಗುತ್ತಿರುವ ೧೦
ಭುಜಗಶಯನ ಹರಿ ಸುಜನರು ತನ್ನನು
ಅಜನೆಂದು ಕರೆಯುತಿರೆ | ಸೃಷ್ಟೀಶನ ಅಜನೆಂದು ಕರೆಯುತಿರೆ
ತ್ಯಜಿಸದೆ ಹೆಸರನು ಅಜಗಳ ಸ್ತನದಂತೆ
ಸೃಜಿಸಿದನೀ ಜನರ | ಪ್ರಸನ್ನ ಹರಿ ಸೃಜಿಸಿದನೀ ಜನರ ೧೧

 

೩೪೮
ವರ್ಣಿಸಲಳವೇ ಪ್ರಿಯವನದ ಸೊಬಗ ಪ
ಧನ್ಯನು ಶಚಿಪತಿ ಧನ್ಯಳು ಶಚಿಯು ಅ.ಪ
ಚಂದ್ರನು ತನ್ನಯ ಸುಂದರ ಬಿಂಬದಿ
ನಂದನ ವನದಲಾನಂದಪಡುತಿಹನು ೧
ಮಂದಮಾರುತ ಸುಮಗಂಧವ ಬೀರುತ
ಮಂದದಿಂದಲಿ ಸುಧೆ ಬಿಂದುಗಳೆಸವುದು ೨
ಮಣಿಮಯ ತರುಗಳು ಎಣಿಕೆಗೆ ಬಾರವು
ಕುಣಿಯುತಲಿದೆ ಎನ್ನ ಮನದಭಿಲಾಷೆಯು * ೩
(ನಂದನವನವನ್ನು ಕಂಡಾಗ ಸತ್ಯಭಾಮೆಯ ಸಂತೋಷ)

 

೨೩೭
ವಾಯು ಕುಮಾರ ಸುಜನೋದ್ಧಾರ
ಮಾ ರಮಣ ಪ್ರಿಯ ಭಕುತವರ ಪ
ಪಾರಾವಾರದಂತಿಹ ಈ ಘೋರ ಸಂಸಾರದ
ಪಾರವಗಾಣಲುಪಾಯವ ತೋರೊ ಅ.ಪ
ಇನಕುಲ ತಿಲಕನ ಅನವರತದಿ ದರು
ಶನದಲಿ ಹಿಗ್ಗುವ ಅನುಭವವು
ಸನಕ ಸನಂದನ ಮುನಿಜನಗಳಿಗುಂಟೆ
ವಿನಯದಿ ಬೇಡುವೆ ಅನುಗ್ರಹವ ೧
ಈ ಮಹಿಯೊಳು ಬಲ ಭೀಮನೆಂಬ ದಿವ್ಯ
ನಾಮದಿ ಪರಿಪರಿ ಸೇವಿಸುತ ಸತ್ಯ
ಭಾಮಾಕಾಂತನ ಪ್ರೇಮ ಪಾತ್ರನೆಂದು
ಕಾಮಿಸುವೆನು ನಿನ್ನ ವರ ದಯುವ ೨
ವರ ಯತಿ ವೇಷದಿ ಹರಿಮತವನು ಬಲು
ಹರಡುತ ಧರೆಯೊಳು ಸುಜನರಿಗೆ ನರ
ಹರಿ ಲೋಕಕೆ ಮಾರ್ಗವರುಹಿದ ಗುರುಗಣ
ಗುರು ಮಧ್ವರಾಯ ಪ್ರಸನ್ನನಾಗೊ ೩

 

ನುಡಿ-೧: ಮಾತರಿಶ್ವ ನೀ
೨೨೯
ವಾರಿಜಗಣ ನಿಲಯೇ ಕಮನೀಯೆ
ತಾಯೇ ಕಾಯೇ ನರಹರಿ ಜಾಯೇ ಪ
ಸಾರಸಭವಮುಖ ಸುರ ಮಹನೀಯೆ
ಚಾರುವದನೆ ಜಾಂಬೂನದ ಛಾಯೆ ಅ.ಪ
ನಿನ್ನ ಕಟಾಕ್ಷ ಮಹಾಸುರಧೇನು
ನಿನ್ನ ಮನವು ಚಿಂತಾಮಣಿಯು
ನಿನ್ನಯ ಕರಗಳು ಸುರತರುವೆನಗೆ
ನವ ನಿಧಿಗಳು ನೀನೆ ಇಂದಿರೆ ೧
ಹೃನ್ಮಂದಿರದಲಿ ಜ್ಞಾನವನು
ಮನ್ಮಂದಿರದಲಿ ಭಾಗ್ಯವನು
ಅಮ್ಮ ಬೆಳಸೆ ಕಮಲೆ ಸುವಿಮಲೆ
ಸಡಿಲದಿರೆ ದಯವ ಇಂದಿರೆ ೨
ಈಶನಂಘ್ರಿಯಲಿ ಭಕ್ತಿಯನು ಹರಿ
ದಾಸದಾಸ್ಯದಲಿ ಶಕ್ತಿಯನು
ಮೋಸಕೆ ಸಿಗದ ವಿರಕ್ತಿಯನು
ಕರುಣದಲಿ ನೀಡೆ ಪ್ರಸನ್ನೆ ೩

 

೨೮೧
ವಾಸುದೇವ ನಿನ್ನ ದಾಸನಾಗಲು ಬಲು
ಆಸೆಯ ಪೊಂದಿ ಸಂತೋಷದಲಿರುವೆನೊ ಪ
ಈ ಸಂಸಾರದ ಮೋಸಕೆ ಸಿಲುಕೆ ನಾ
ಶ್ರೀಶನ ಚರಣವ ಲೇಶ ಭಜಿಸಲಿಲ್ಲ
ಪಾಶಕೆ ಸಿಲುಕದ ಸುಜನರುಗಳ ಸಹ
ವಾಸವಿತ್ತು ಅವಕಾಶವ ನೀಡೊ ಅ.ಪ
ಸಾರುತಲಿರುವ ಸಮೀರ ಸಮಯಗಳ
ಸಾರವನರಿಯದೆ ದೂರಿದೆ ನಿನ್ನನು
ಯಾರ ಕರುಣವೊ ತೋರಿತು ಮನದಲಿ
ಘೋರತರದ ಅಪರಾಧಗಳೆಲ್ಲವು
ನೀರಜ ನಯನನೆ ಭೂರಿ ದಯದಿ ನಿನ್ನ
ಚಾರು ಚರಣದಲಿ ಸೇರಿಸೊ ಮನವ ೧
ಪರಿಪರಿ ವಿಧದ ಕುಶಾಸ್ತ್ರಗಳೋದಲು
ಬರಿಗಾಳಿಯ ಗುದ್ದಿ ಮುರಿದವು ಕರಗಳು
ಸಿರಿರಮಣನೆ ನಿನ್ನ ಪರಿಚಾರಕನೆಂಬೊ
ಅರಿವಿನಿಂದಲೆ ಪರತರ ಸುಖವೆಂದು
ಪರಿಪರಿಯರುಹುವ ಗುರು ಮಧ್ವರಾಯರ
ವರಶಾಸ್ತ್ರಗಳಿಗೆ ಸರಿಯುಂಟೆ ಜಗದೆ ೨
ಅನ್ಯಸೇವೆಗಳಲ್ಲಿ ಅನ್ಯಾಯದಿ ಕಾಲ
ಮುನ್ನ ಕಳೆದುದನು ಮನ್ನಿಸೆಲೋ ಹರಿ
ನಿನ್ನ ಸೇವೆಯ ಸುಖವನ್ನು ಅರಿತೆನೊ
ಎನ್ನ ಮನಕೆ ಬಲವನ್ನು ಕರುಣಿಸುತ
ಇನ್ನಾದರು ಚ್ಯುತಿಯನ್ನು ಪೊಂದಿಸದೆ
ನಿನ್ನ ದಾಸನಲಿ ಪ್ರಸನ್ನನಾಗೆಲೊ ೩

 

೨೦೮
ವಾಸುದೇವ ಸಾಮಾನ್ಯ ನೀನಲ್ಲವೊ ಪ
ಪೋತನಾದರು ನವನೀತ ಇಷ್ಟು ತಿನ್ನುವಿ
ಭೂತಗಳಿರುವುವೇನೊ ಉದರದೊಳು ೧
ಕುದಿಯುವ ಪಾಲನು ಮುದದಿಂದ ಕುಡಿಯುವೆ
ಉದಕದ ರಾಶಿ ಜಿಹ್ವೆಯೊಳಿಹುದೇನೊ ೨
ರಾತ್ರಿ ವೇಳೆಯಲಿ ನೀ ಸುತ್ತುವಿ ಮನೆ ಮನೆ
ನೇತ್ರದೊಳ್ ಸೂರ್ಯಚಂದ್ರರು ಇಹರೇನೊ ೩
ಶಿಕ್ಷೆಮಾಡಲು ಬೆನ್ನು ಪಾಶ್ರ್ವದಲ್ಲಿಹ ನಮ್ಮ
ಈಕ್ಷಿಸುವುದಕೆ ವಿಶ್ವತ ಚಕ್ಷುವೇನೊ ೪
ನಿನ್ನ ಚರಿತೆ ಎಮಗೆ ಚೆನ್ನಾಗಿ ತಿಳಿಸಿ ಪ್ರ
ಸನ್ನನಾಗದಿರೆ ಮನ್ನಿಸೆವೋ ನಿನ್ನ ೫

 

೨೦೮
ವೇಣು ಗೋಪಾಲನು ಬರುವನಂತೆ ಪ
ಜಾಣೆ ನಮ್ಮನೆಯಲಿ ಇರುವನಂತೆ ಅ.ಪ
ಪರಮ ಸುಂದರ ನವತರುಣನಿವ ಸಖಿ
ಅರಿತು ಭಜಿಪರಿಗೆ ಕರುಣಿ ಇವ ಸಖಿ
ತೊರೆಯಬೇಕಭಿಮಾನ ಕ್ಷಣದಲಿ
ಮರೆಯಬೇಕಿಹಲೋಕ ಬಂಧನ ೧
ಹೃದಯವ ಕದಿಯುವ ಚೋರನಿವ ಸಖಿ
ಮದನನ ಜಗಕಿತ್ತ ಜಾರನಿವ ಸಖೀ
ಕದನದಲಿ ಕಂಠೀರವನು ಶುಭ
ವದನೆಯರ ಶೃಂಗಾರ ಜಲನಿಧಿ ೨
ಘನತೆಯು ರುಚಿಸದು ಹುಡುಗನಿವ
ಧನವನು ಬಯಸನು ಸಿರಿರಮಣ
ತನುಮನಗಳರ್ಪಿಸಲು ಹರುಷದಿ
ಕುಣಿಯುವನು ಕುಣಿಸುವ ಪ್ರಸನ್ನನು ೩

 

೨೫೦
ವೇದಾಂತ ಸಾಮ್ರಾಜ್ಯ ರಾಜಾಧಿರಾಜ
ತೇಜೋಮಯರ ಪಾದಾಬ್ಜನೇ ಶರಣ ಪ
ರಾಜಾಧಿರಾಜ ಕರಾರ್ಚಿತ ಚರಣ
ಪ್ರಾಜ್ಯಪ್ರಜ್ಞರ ಶುದ್ಧಕುಲ ದಿವ್ಯಾಭರಣ ಅ.ಪ
ಭ್ರಾಂತಿಗೆ ನಿಧನ ಸುಖಶಾಂತಿಗೆ ಸದನವೇ
ದಾಂತಿಯ ಮಾನಸ ಕಾಂತಿಗೆ ಸಾಧನ ೧
ಇಂದಿರಾಪತಿಯ ಆನಂದಾದಿ ಸದ್ಗುಣ
ವೃಂದ ತೋರಿದ ಶೇಷಚಂದ್ರಿಕಾಚಾರ್ಯ ೨
ಹಿರಿದು ನಿಮ್ಮಯ ವ್ಯಾಪ್ತಿ ಕಿರಿದು ಎಮ್ಮಯ ಶಕ್ತಿ
ಪರಮ ಪ್ರಸನ್ನ ಶ್ರೀಗುರು ಸಾರ್ವಭಾಮ ೩

 

ನುಡಿ-೩: ಸಕಲ ಸಾರಭೋಕ್ತ
೨೦೯
ವ್ರಜ ವಿಹಾರ ಜಯ ಮುರಾರೆ ಪ
ಭಜಿಪ ಯೋಗವೇನು ಸುಕೃತವೊ ಅ.ಪ
ಮುರಳಿನಾದ ಸುಧೆಯ ಧಾರೆ
ಹರಿದುದೆನ್ನ ಶ್ರವಣದಲ್ಲಿ
ಬೆರೆತೆ ನಿನ್ನ ಮರೆತೆ ಮೈಯ್ಯ
ಹಿರಿಯದಾಯ್ತು ಜನುಮವಿಂದು ೧
ಮೃದುಲಹಾಸ ಮಧುರಭಾಷ
ವದನ ಸೊಬಗ ನೋಡಿದೆನೋ ಶ್ರೀಶ
ಸದನದಲಿ ಮನೋಹರ ವಿಲಾಸ
ಹೃದಯ ಕಮಲಕಾದುದು ವಿಕಾಸ ೨
ಸಕಲಸಾರ ಭೋಕ್ತ ನಿನಗೆ
ಭಕುತಿ ಕುಸುಮವೆನ್ನ ಸೇವೆ
ಸುಖವನೀಪರಿ ನಿತ್ಯಗೊಳಿಸೊ
ಮುಕುತಿಯಿರಲಿ ಶ್ರೀ ಪ್ರಸನ್ನ ೩

 

ನುಡಿ-೩: ತ್ರಿವಿಧ ಪೂಜೆ
೨೧೦
ಶರಣಾಗತಿಯೊಂದೆ ಸಾಧನ
ಶರಣಾಗತನಾದೆ ಮಾಧವ ಪ
ಶರಣಾಗತಿಯಿಂದ ಹರಿಯ ಪ್ರಸಾದವು
ಹರಿಯ ಪ್ರಸಾದವು ಪುರುಷಾರ್ಥಕೆ ಸಾಧನ ಅ.ಪ
ಹರಿಯಲಿ ಚಿತ್ತವು ಹರಿಯಲಿ ಭಕುತಿಯು
ಹರಿಯುದ್ದೇಶದಿ ಯಜನಾದಿಗಳು
ಹರಿಯ ಚರಣದಲಿ ನಮ ನವು ಇದನೇ
ಶರಣಾಗಿಯೆಂದರುಹಿದ ನುಡಿ ಕೇಳಿದೆ ೧
ಸರ್ವೋತ್ತಮ ನೀನೊಬ್ಬನೆ ಎನ್ನುವ
ದಿವ್ಯಜ್ಞಾನವ ಪೊಂದುತ ಮನದಲಿ
ಸರ್ವಾಧಿಕ ನಿಶ್ಚಲ ಪ್ರೇಮ ಸಹಿತ
ಸರ್ವಕರ್ಮ ನಿನ್ನೊಳಗರ್ಪಣೆ ಮಾಡುವೆ ೨
ಹರಿಯ ತ್ರಿವಿಧ ಪೂಜೆಗಳಲಿ ರತಿಯು
ಹರಿಯ ಪ್ರಸನ್ನತೆಯಲಿ ನಂಬುಕೆಯು
ಹರಿದಾಸನು ನಾನೆಂಬುವ ನಂಬಿಕೆ
ಶರಣಾಗತಿಯಿದು ಮೋಕ್ಷಫಲಕೆ ಸಾಧನ ೩

 

೨೩೦
ಶರಧಿಸುತೆ ಮಾತೆ ಶರಧಿಸುತೆ ಮಾತೆ ಪ
ಪೊರೆಯೇ ಜಗನ್ಮಾತೆ ಅ.ಪ
ಸರಸಿಜಭವ ಶಿವ ಗರುಡ ಶೇಷ ಮುಖ
ಸುಮನಸ ವಂದಿತ ಪದಯುಗಳೆ
ಮನಸಿಜ ಜನಕನ ಕೋಮಲತಮ ಹೃತ್ಕಮಲದೊಳು
ಸದಾ ನೆಲಸಿದ ಶುಭಗೆ ೧
ವಂದಿಪೆ ನಿನ್ನಯ ಚರಣ ಕಮಲ
ಎನಗೊಂದುಪಕಾರವ ದಯಮಾಡೆ
ಒಂದನು ಅರಿಯದ ಭಕುತರೊಳಗೆ ಇವ
ನೊಂದು ಎಂದು ಗೋವಿಂದನಿಗರುಹೆ ೨
ತುಂಗಮಹಿಮನನು ಎಡಬಿಡದೆಲೆ ಅವ
ನಿಂಗಿತವನು ನೀನರಿತಿರುವೆ
ಮಂಗಳದೇವತೆ ಅದನರುಹಿ ಕೃಪಾ
ಪಾಂಗವ ಬೀರೆ ಪ್ರಸನ್ನ ಸುವದನೇ ೩

 

೨೧೧
ಶಾಮ ಸುಂದರ ಪ್ರೇಮವ ತೋರೆಲೊ ಪ
ತಾಮಸವಿಲ್ಲದೆ ಕಾಮಿತಗಳ ನೀಡೊ ಅ.ಪ
ಹಿಂದೆ ಅಜಮಿಳ ಒಂದನರಿಯದೆ
ಕಂದನನ್ನು ನಾರಾ ಎಂದು ಕರೆಯಲು
ಬಂಧುವೆಂದರಿತು ಮಂದಹಾಸದಿಂದ
ಬಂದು ರಕ್ಷಿಸಿದೆ ಎಂದು ಕೇಳಿರುವೆ ೧
ಕ್ರೂರ ಶಾಸನ ನಾರಿ ದ್ರೌಪದಿಯ
ಸೀರೆ ಸೆಳೆದು ಮಾನ ಸೂರೆಗೊಳುತಿರೆ
ಸಾರಿ ಕೂಗಲು ಭೂರಿದಯವನು
ತೋರಿರುವೆ ಎಂದು ಕೋರಿರುವೆ ನಿನ್ನ ೨

ಮುನ್ನ ಮಾಡಿದ ಎನ್ನ ಪಾಪಗಳಿಗೆ
ಖಿನ್ನನಾಗಿರುವೆ ಎನ್ನ ಮನದಲಿ
ಮನ್ನಿಸುತ್ತ ಸುಪ್ರಸನ್ನನಾಗಿ ಸದಾ
ಎನ್ನ ಹೃದಯ ಶುದ್ಧಿಯನ್ನೆ ಮಾಡಿ ಪೊರೆಯೊ ೩

 

ಪಲ್ಲವಿ : ಭೈಷ್ಮೀ ಸತ್ಯಾ ಸಮೇತ
೨೧೨
ಶಿಷ್ಟ ಜನರುಗಳಿಗೆ ಸತತ ಇಷ್ಟಾರ್ಥಗಳನೆ ಕೊಡುವ
ಬೈಷ್ಮೀಸತ್ಯಾಸಮೇತ ಕೃಷ್ಣ ನಿನಗೆ ಮಂಗಳಂಪ
ಸರ್ವಶಾಸ್ತ್ರಾರ್ಥಗಳನರಿತು ದುರ್ವಾದಿ ಮತವನಳಿದ
ಸರ್ವಜ್ಞಾಚಾರ್ಯ ಪೂಜಿತ ಕೃಷ್ಣ ನಿನಗೆ ಮಂಗಳಂ ೧
ಲೇಸಾಗಿ ಮಧ್ವಶಾಸ್ತ್ರವ ಭೂಸುರರಲಿ ಅರುಹಿದ
ವ್ಯಾಸಾರ್ಯವರಕರಾರ್ಚಿತ ಕೃಷ್ಣ ನಿನಗೆ ಮಂಗಳಂ ೨
ಘನ್ನ ಶ್ರೀ ವ್ಯಾಸಯತಿಗಳ ಉನ್ನತ ಪೀಠಪತಿಗಳಿಂ
ಚೆನ್ನಾಗಿ ಪೂಜಿಗೊಂಬ ಪ್ರಸನ್ನ ಕೃಷ್ಣಗೆ ಮಂಗಳಂ ೩

 

೨೧೩
ಶೂರತನವೇನೊ ಬಲು
ನಾರಿ ಜನರು ನೀರೊಳಿರಲು ಪ
ಸೀರೆಗಳ ಅಪಹರಿಸುತ ಬಲು
ಭಾರಿ ಮರವನೇರುತಿಹುದು ಶೌರಿ ಅ.ಪ
ಸಾರಸವದನನೆ ಕಾರಣವಿಲ್ಲದೆ
ನಾರಿಯರೆಮ್ಮನು ಸೇರಿ ಬಹಳ ಸರಸಗಳನ್ನು
ತೋರಿ ಮಾನಸೂರೆಗೆಯ್ಯುವುದು
ಭಾರಿ ನಡತೆ ಎಂದರಿತಿರುವಿಯೇನೊ ೧
ಮುರಹರನೆ ಈ ಪರಿಯಲಿರುವ ಎಮ್ಮ
ಕರಗಳ ಮುಗಿವುದು ತರವೇ ಬಹಳ ಮನ ಜರಿಯುವುದು
ಸರಿಯೇ ಇಂತು ಕೋರುತಲಿರುವುದು
ಮುರಳೀಧರನೆ ವಸನಗಳನು ಕೊಡೆಲೊ ೨
ಬಿಸಜನಯನ ಇದು ಹೊಸ ಪರಿಯಲ್ಲವೆ
ರಸಿಕ ಜನರು ಪರಿಹಾಸ ಮಾಡಿ ಮುಸಿ ಮುಸಿ ನಗುವರು
ಶ್ರೀಶ ನಿನಗೆ ಪಸುಳೆ ಜನರ ಸಹ
ವಾಸವೇ ಪ್ರಸನ್ನವದನ ಕೃಷ್ಣ ೩

 

ಪಲ್ಲವಿ ಮತ್ತು ನುಡಿ-೨
೨೪೮
ಶ್ರೀ ಜಗನ್ನಾಥತೀರ್ಥರ ದಿವ್ಯ ಮಹಿಮೆಯನು
ರಾಜಿಸುವ ಹೈಮಲಿಪಿಯಲ್ಲಿ ಬರೆಯಲಿ ಬೇಕು ಪ
ಈ ಜಗದಿ ಸುಜನ ಸುರಭೂಜರಾಗಿಹ ಮಹಾ
ರಾಜ ಶ್ರೀ ರಘುನಾಥತೀರ್ಥ ಕರ ಸಂಜಾತ ಅ.ಪ
ಉದ್ಭವಿಸಿದರು ಗಾಲವರು ಜಗದೊಳೆಂಬಂಶ
ವೇದ್ಯವಾಯಿತು ಆಪ್ತಜನವೃಂದಕೆ
ಮಧ್ವಮತ ತತ್ವಗಳನುದ್ಧಾರವನೆಗೈದ
ದಿಗ್ಧಂತಿಗಳತಿ ಪ್ರಸಿದ್ಧ ಸ್ಥಾನವ ಪಡೆದ ೧
ಸಕಲ ಶಾಸ್ತ್ರಾರ್ಥ ನಿರ್ಣಯಗೈವ ಪರಸೂತ್ರ
ನಿಕರಗಳಿಗಲವಬೋಧರ ಭಾಷ್ಯವ
ಸುಖದಿಂದಲರಿಯಲುಪಕೃತಿಗೈದ ಯತಿಕುಲ
ತಿಲಕ ಭಾಷ್ಯಾದೀಪಿಕಾಚಾರ್ಯರೆಂದತಿ ಖ್ಯಾತ ೨
ಸರ್ವಗುಣ ಗುಣಪೂರ್ಣ ಸರ್ವತ್ರ ವ್ಯಾಪ್ತ ಹರಿ
ಸರ್ವಭಕ್ತ ಪ್ರಸನ್ನನೆಂದರುಹಲು
ಓರ್ವ ಆಮ್ರವೃಕ್ಷದಲಿ ಶ್ರೀ ನರಹರಿಯ
ಉರ್ವನುಗ್ರಹ ಪಡೆದ ಸರ್ವತಂತ್ರ ಸ್ವತಂತ್ರ ೩

 

೨೫೮
ಶ್ರೀ ಪಾದರಾಜ ಸಂದರ್ಶನದಿ ಸಕಲ ಸಂ
ತಾಪಗಳು ಕಳೆದುವಿಂದು ಪ
ತಾಪಸೋತ್ತಮರಿವರು ಇಹ ಪರಗಳಲ್ಲೆಮ್ಮ
ಕಾಪಾಡುತಿರುವರೆಂದು ಅ.ಪ
ಸ್ವರ್ಣವರ್ಣರ ಕುವರ ಜ್ಞಾನಭಕ್ತಿಗಳಿಂದ
ಪೂರ್ಣರಿದ್ದರು ಲೋಕದಿ
ಸ್ವರ್ಣಾಕ್ಷರಗಳಿಂದ ಬರೆಯುವಂತಹ ಶಾಸ್ತ್ರ
ನಿರ್ಣಯಗಳಿತ್ತರಿವರು ೧
ಮಂಗಳಾತ್ಮಕ ನಮ್ಮ ರಂಗವಿಠಲ ಕೃಪಾ
ಪಾಂಗ ಪಾತ್ರರು ಪೂಜ್ಯರು
ಕಂಗಳಿಗೆ ಹಬ್ಬವಿದು ಮಂಗಳಕೆ ಸಾಧನವು
ಹಿಂಗಿತೆಮ್ಮಯ ಕೊರತೆಯು ೨
ಜ್ಞಾನ ಭಂಡಾರವನು ಲೋಕಕೀಯಲು ಶುದ್ಧ
ಮಾನಸ ಪ್ರಸನ್ನರಿವರು
ಮೌನಿವರ ವ್ಯಾಸತೀರ್ಥರಲಿ ಪರಮಾದರದಿ
ಜ್ಞಾನಧಾರೆಯ ಕರೆದರು ೩

 

೩೫೬
ಶ್ರೀನಿವಾಸನೆ ನಿನ್ನ ಧ್ಯಾನದಲಿ ನಾನಿದ್ದೆ
ಏನು ಸುಕೃತವೊ ನಿನ್ನ ಕರವ ಪಿಡಿದೆ ಪ
ಭಾನುಶತತೇಜ ನಿನ್ನಾನನಾಬ್ಜದ ಮಧುವ
ಪಾನ ಮಾಡುತ ತೃಪ್ತಿ ಕಾಣದಿರುವೆ ಅ.ಪ
ಕಾಮನಂತಹ ರೂಪ ಸೋಮನಂತಹ ಕಾಂತಿ
ರಾಮನಂತಹ ಸತ್ಯ ಧರ್ಮ ನಡತೆ
ಈ ಮಹಾ ಸುಗುಣಶಾಲಿಯು ನೀನು ನಿನ್ನಯ
ಪ್ರೇಮವನು ಕಾಮಿಸುವ ಹಸುಳೆ ನಾನು ೧
ಗಂಧ ಫಲಪುಷ್ಪ ತಾಂಬೂಲಗಳನು
ಅಂದದ ಹೇಮದ ತಬಕದಲ್ಲಿ
ತಂದು ಕೊಡುವೆನು ಪ್ರೇಮ ಕಾಣಿಕೆಯನು
ಮಂದಹಾಸದಿ ನಿನ್ನ ಪಾಂಗದಿಂದ ನೋಡೋ ೨
ಒಂದು ದಿನ ಕನಸಿನಲಿ ಕಂಡೆನಚ್ಚರಿ ದೃಶ್ಯ
ಮುಂದೆ ನಿಂತಳು ಯುವತಿ ನಸುನಗುತಲಿ
ಗಂಧ ತಾಂಬೂಲ ಫಲಪುಷ್ಪ ಪರಿಮಳದ್ರವ್ಯ
ತಂದಿಹಳು ಚಿನ್ಮಯದ ತವಕದಲ್ಲ್ಲಿ
ಕಂದನಿದ ನಿನಗಾಗಿ ತಂದಿರುವೆನೆಂದು ಮೃದು
ಮಂದಹಾಸದಿ ತಲೆಯ ಸವರಿ ನುಡಿಯೆ
ಸುಂದರಿಯೆ ನೀನಾರು ಬಂಧುವರ್ಗಗಳಲ್ಲಿ
ಹಿಂದೆ ನಾ ನೋಡಿಲ್ಲವೆಂದು ನುಡಿಯೆ
ನಂದಗೋಕುಲದಲ್ಲಿ ನಂದನಕುಮಾರನಿಗೆ
ಅಂದ ರಾಣಿಯು ನಾನು ಸತ್ಯಭಾಮೆ
ಇಂದ್ರದೇವನ ದಿವ್ಯ ನಂದನವನದಿಂದ
ತಂದಿರುವೆ ನಿನ್ನ ವರಕುಲವನರಿತು
ಸುಂದರಾಂಗನ ಸೇರಿ ಸುಖಪಡುವ ಸೌಭಾಗ್ಯ
ಮುಂದಿಹುದು ನಿನಗೆ ಬಲು ತ್ವರಿತದಲ್ಲಿ
ಅಂದು ನೀ ಈ ಸ್ವರ್ಣಮಯ ತವಕದಲ್ಲಿರುವ
ಗಂಧ ಪುಷ್ಪಾದಿಗಳ ಫಲವನರಿವೆ
ಚಂದದಲಿ ದಾಂಪತ್ಯ ಸುಖಶಾಂತಿ ಪಡೆಯುವೆ
ಕಂದ ನೀ ಸ್ವೀಕರಿಸು ಪೋಗಿ ಬರುವೆ
ಎಂದು ನುಡಿಯಲು ತರುಣಿ ಎಚ್ಚರಿತೆನು
ಬಂದುದಾಕ್ಷಣ ನಿನ್ನ ಶುಭ ಸುದ್ದಿಯು
ತಂದಿರುವೆ ತಬಕವ ಪ್ರಸನ್ನ ವದನ

 

೨೮೨
ಸಂತೋಷವೆಂತು ನಾ ವರ್ಣಿಪೆನು ಎನ್ನಂತರಂಗವ
ಸಂತೋಷವೆಂತು ನಾ ವರ್ಣಿಪೆನು ಪ
ಕಂತೆ ಜೀವನವ ತೊರೆದು ಸಂತತ ನಿನ್ನ ಭಜಿಸುವ ಅ.ಪ
ಲೇಸು ಜೀವನದ ಆಸೆಗೆ ಬೆರಗಿ ಮೋಸದಿ ದಿನ ದಿನನೂರಾರು ಮಿತ್ರ ಬಾಂಧವ ಜ
ಸಾಸಿರ ದುಷ್ರ‍ಕತಿಗಳನು ರಚಿಸಿ
ಬೇಸರದಲಿ ಮುಳುಗಿರೆ ಶ್ರೀಶ ನೀ ಕರವ ನೀಡಿದೆ ೧
ನರು ಯಾರೆನ್ನವುದಕೆ
ಕಾರಣರಾದರೋ ನಾನರಿಯೆ
ನೀರಜಾಕ್ಷನೆ ನಿನ್ನಯ ಸಾರಸೇವೆಯನು ಮಾಡಿದ ೨
ಅನ್ನವನರ್ಜಿಸುವ ಬಗೆ ಹೊರತು ಇನ್ನೊಂದನರಿಯದೆ
ಸಣ್ಣತನದಲಿ ದಿನ ಕಳೆಯುತಿರೆ
ಮಾನ್ಯ ಯೋಗವನರುಹಿ ಪ್ರಸನ್ನ ಶ್ರೀಹರಿಯ ನುತಿಸುವ ೩

 

೨೮೩
ಸಂಸಾರ ಸುಖವಿಲ್ಲ ನಾ ಹಿಂಸೆಯ ತಾಳಲಾರೆ ಪ
ಮಾತೆಯ ಮಾಂಸದ ಹೇಸಿಗೆ ಕೋಶದೊಳ್
ಮಾಸ ಒಂಭತ್ತನು ಕ್ಲೇಶದಿಂದ ತಳ್ಳಿದೆ
ಈಶ ಲಕ್ಷ್ಮೀಶನು ಕೋಪದಿಂದ ಬೀಸಲು
ಕೂಸಾಗಿ ಭೂಮಿಗೆ ವಾಸಕ್ಕೆ ಬಂದೆನು ೧
ನಡೆ ನುಡಿಯ ಕಲಿಯುತಲಿ ಹರುಷದಲಿ ಕುಣಿಯುತಲಿ
ಹುಡುಗತನ ಕಳೆಯುತಿರೆ ಹರುಷಗಳು ತೊಲಗಿದವು
ದುಡಿಕಿನಲಿ ಭ್ರಮಿಸಿದೆನು ಮಡದಿಯಳ ಸಡಗರಕೆ
ನಡುಗಿದೆನು ಬರುಬರುತ ಭವ ಕಡಲೊಳಗೆ ಮುಳುಗಿ ೨
ಕಡುಬಡತನ ಕೊರೆಯುತಲಿದೆ ಕಿರಿಕಿರಿಗಳು ಉರಿಸುತಲಿವೆ
ತನುಮನಗಳು ಜರಿಯುತಲಿವೆ ಅಣಕಿಸುವರು ನಿಜ ಜನಗಳು
ಬಿಡುಗಡೆ ಕೊಡೋ ಪರಮದಯದಿ
ಪರಮ ಪುರುಷ ಸಿರಿಯರಸನೆ
ಮರೆಯದಿರುವೆ ಉಪಕೃತಿಗಳ ದಡಕೆಳೆಯೊ ಪ್ರಸನ್ನ ಹರೇ ೩

 

೨೧೪
ಸಕಲ ಕಲ್ಯಾಣ ಗುಣಾಢ್ಯಗೆ ಮಂಗಳಂ
ನಿಖಿಲ ದೋಷದೂರಗೆ ಮಂಗಳಂ
ಭಕುತರ ಸಂತತ ಪೊರೆಯುತಿರುವ ನಮ್ಮ
ರುಕುಮಿಣಿ ಭಾಮಾರಮಣಗೆ ಮಂಗಳಂ ೧
ಯಾದವ ಕುಲಭೂಷಣನಿಗೆ ಮಂಗಳಂ
ಸಾಧು ಸುಧಾಮ ಸಖಗೆ ಮಂಗಳಂ
ಪಾದ ಸೇವಕರಿಗೆ ಮೋದವ ನೀಡುವ
ಮಾಧವನಿಗೆ ಸಂತತ ಶುಭಮಂಗಳಂ ೨
ವಿವಿಧ ಸೌಭಾಗ್ಯ ಸಂಪನ್ನಗೆ ಮಂಗಳಂ
ರವಿಶತ ಸಮತೇಜಗೆ ಮಂಗಳಂ
ಸುವಿನಯದಲಿ ಬೇಡುವರಿಗೆ ಶುಭಗಳ
ಜವದಲಿ ಕೊಡುವ ಪ್ರಸನ್ನಗೆ ಮಂಗಳಂ ೩

 

೩೧೪
ಸತತ ನಿನ್ನ ಭಜನೆಯಲ್ಲಿ ಹಿತವ ಪೊಂದಿಸೊ ದೇವ ಪ
ಅತುಲ ಮಹಿಮೆಗಳಲ್ಲಿ ಎನ್ನ ಮತಿಯ ಸೇರಿಸೊ ಶ್ರೀಪತೆ ಅ.ಪ
ಕೂಳಿಗಾಗಿ ಬಹುತರದಲಿ ಕಾಲ ಕಳೆಯಿತೊ ದೇವ
ನಾಳೆ ನಾಳೆಯೆಂದು ನಿನ್ನ ಪೊಗಳಲಿಲ್ಲವೊ ದೇವ ೧
ಯೋಚಿಸದೆಲೆ ನಿನ್ನ ದೈನ್ಯದಿ ನೀಚ ಜನರಲಿ ನಾನು
ಚಾಚಿ ಕರವ ಯಾಚಿಸುತ್ತ ಶೋಚನೀಯನಾದೆನೊ ೨
ಸ್ಥೈರ್ಯದಿಂದ ಮನವು ನಿನ್ನೊಳು ಸೇರದಿರುವುದೋ ದೇವ
ಕಾರಣವನು ತೋರಿ ಸಲಹೊ ಮಾರ ಜನಕನೆ ೩
ಕಾಮಕ್ರೋಧದಿಂದ ವಿಷಯ ಪ್ರೇಮಗಳಲಿ ನಾ ನಿನ್ನ
ನಾಮ ಮರೆತು ಬಳಲಿದೆನೊ ಕಾಮಿತಪ್ರದ ೪
ಸಣ್ಣ ಜನರ ನಡೆನುಡಿಗಳಿಂ ಖಿನ್ನನಾದೆನೊ ದೇವ
ಎನ್ನಮೇಲೆ ಕರುಣದಿಂದ ಪ್ರಸನ್ನನಾಗೆಲೊ ದೇವ ೫

 

೩೩೭
ಸತತ ಹರಿಯ ನಾಮವನ್ನು ಯತುನದಿಂದ ನುಡಿವ ನರನು ಪ
ಅತಿತ್ವರೆಯಲಿ ಸರ್ವಕಾರ್ಯ ಸಿದ್ಧಿಪೊಂದುವ ಅ.ಪ
ದುರ್ಗಮಾರ್ಗ ಪಿಡಿದು ಕುರುಕ್ಷೇತ್ರ ಪಯಣವೇಕೆ ಜಿಹ್ವ
ಯಗ್ರದಲ್ಲಿ ಹರಿಯನಾಮವಿರುವ ನರನಿಗೆ ೧
ಮೂರು ಲೋಕಗಳಲಿ ಇರುವ ಹೇರು ಪುಣ್ಯಲಾಭ ಒಂದು
ಸಾರಿ ಹರಿಯನಾಮದಿಂದ ಸಾಧ್ಯವಿರುವುದು ೨
ಉಚ್ಚರಿಸಲು ಹರಿ ಎಂದೆರಡು ಅಕ್ಷರಗಳ ನರನು ಕ್ಷಣದಿ
ಮೋಕ್ಷ ಪಾಥೇಯವನ್ನು ಸಿದ್ಧಗೊಳಿಸುವ ೩
ಹರಿಯನಾಮ ಒಂದೇ ಎನಗೆ ಸರ್ವವಿಧದ ಜೀವನವು
ಹರಿಯನಾಮ ಹೊರತು ಕಲಿಯೊಳರಿಯೆ ಗತಿಯನು ೪
ಹರಿಯೇ ಗಂಗಾ ಹರಿಯೇ ಗಯಾ ಹರಿಯೇ ಕಾಶಿ ಸೇತು ಪುಷ್ಕರ
ಹರಿಯ ನಾಮ ಜಿಹ್ವೆಯಲ್ಲಿ ಇರುವ ನರನಿಗೆ ೫
ನೂಕಿ ಕಾಮಕ್ರೋಧಗಳನು ಏಕವಾರ ಹರಿಯೆಂದೆನಲು
ನಾಕುವೇದಗಳನು ಓದಲೇಕೆ ಮನುಜನು ೬
ಅಶ್ವಮೇಧ ಪುರುಷಮೇಧ ಯಜ್ಞಫಲವು ಲಬ್ಧವಿಹುದು
ವಿಶ್ವಾಸದಿ ಹರಿಯನಾಮ ನುಡಿದ ನರನಿಗೆ ೭
ಕೋಟಿ ಶತ ಗೋದಾನ ಕನ್ಯಾಭೂಮಿ ದಶಶತಕಗಳ ದಾನ
ಸಾಟಿ ಹರಿಯನಾಮ ನುಡಿಯು ಭಕ್ತಜನರಿಗೆ ೮
ಸಪ್ತ ಕೋಟಿ ಮಹಾಮಂತ್ರ ಚಿತ್ತ ವಿಭ್ರಮ ಕಾರಕಗಳು
ಯುಕ್ತಿಯೊಂದೇ ಹರಿಯನಾಮದಕ್ಷರದ್ವಯ ೯
ಮುನ್ನ ವರ ಪ್ರಹ್ಲಾದ ನುಡಿದ ಘನ್ನನಾಮ ಪಠನದಿಂದ ಪ್ರ
ಸನ್ನ ಹರಿಯು ತನ್ನ ಪದವನೀವ ಮುದದಲಿ ೧೦

 

೨೧೬
ಸರಿ ಸರಿ ಬಿಡು ಬಿಡು ನಿನ್ನಯ ಲೀಲೆಗ
ಳರಿಯಲು ಸಾಧ್ಯವೆ ಮುರಹರನೇ ಪ
ಸರಸ ನಿನಗೆ ಇದನರಿಯದ ಜನಗಳು
ಮರೆತನು ಹರಿ ಭಕುತರನೆಂದು
ಸುರಿವರು ಕಂಬನಿ ತರತರಿಸುವರು
ದುರಾತ್ಮರಿಗೆ ಪರಾಜಯವೆ ಕಾಣದೆ ೧
ಸಿಡಿಲಿನ ಬಡಿತಕೆ ಗುರಿಯಾದವು ಜಗ
ದೊಡೆಯನು ತೋರಿದ ಧರ್ಮಗಳು
ನುಡಿದ ವಚನಗಳ ನಡೆಸುವುದಾದರೆ
ತಡೆ ತಡೆ ಕಡುಘಾತಕರುಗಳನು ೨
ಕಲಿಪುರುಷನು ಬಲು ಸುಲಭದಿ ಜನರನು
ಸೆಳೆಯುತಿಹನು ತನ್ನ ಬಲೆಗೆ
ಗೆಳೆಯ ಪ್ರಸನ್ನನೇ ಕುಳಿತೆಡೆಯಲಿ ಜಗ
ವಳಿಯುತಿರಲು ಕಿಲಿ ಕಿಲಿ ನಗುತಿಹೆಯ ೩

 

ನುಡಿ-೨: ಭುಜಪುಂಗರಿಪು ಧ್ವಜ
೨೧೫
ಸರಿಯೆ ಮರೆವುದು ಮುರಹರ ಪ
ಚರಣ ಸೇವಕರ ದಾಸನ ಮುರಹರ ಅ.ಪ
ಶರಣಾಗತಜನ ಭರಣನೆಂದರಿತು ನಾ
ಚರಣ ಕಮಲಗಳಿಗೆರಗಿದೆನೊ
ಕರುಣಾಮಯ ಕಾರಣ ಕಾರಣ
ಮಾರಮಣನೆ ಭಯ ಹರಣ ಮಾಡದೆ ೧
ಗಜವರನನು ಕಾಯ್ದ ನಿಜಚರಿತೆಯ ಸದಾ
ಭಜಿಸುತಿರುವೆನೊ ಅಜಜನಕ
ಸುಜನೋದ್ಧಾರ ತ್ಯಜಿಸದಿರೆಲೊ ಎನ್ನ
ಭುಜಪುಂಗರಿಪು ಧ್ವಜ ಹರಿ ಎನ್ನನು ೨
ಅನ್ಯರ ಮರೆತು ನಾ ನಿನ್ನನು ನಂಬಿದೆ
ಎನ್ನಲಿ ದಯದಿ ಪ್ರಸನ್ನನಾಗೊ
ಉನ್ನತಚರಿತ ಚಿನ್ಮಯ ಮೂರುತಿ
ನಿನ್ನ ಸೇವಕನನು ಧನ್ಯನ ಮಾಡದೆ ೩

 

೩೩೮
ಸಾರ್ಥಕವು ವರ ವೈಷ್ಣವ ಜನುಮವು ಸಾರ್ಥಕವು ಪ

ಸಾರ್ಥಕವಿದು ಪುರುಷಾರ್ಥಕೆ ಸಾಧನ ಅ.ಪ
ಸ್ವಾಮಿದಾಸ ಭಾವವನು ನಿರಂತರ
ನಿಯಮದಿಂದ ಬೋಧಿಸುತಿರುವ
ಕಾಮಕ್ರೋಧಗಳ ಜರಿದು ಶ್ರೀ ಹರಿಯಲಿ
ಪ್ರೇಮವೇ ಪರಮ ಸಾಧನವೆಂದರಿತರೆ ೧
ದಾನ ಸ್ನಾನ ಜಪ ಸಂಧ್ಯಾತ್ರಿಯಗಳು
ಜ್ಞಾನಕೆ ಸಾಧನವೆಂಬುದರಿಯುತ
ಕಾಣಲು ಹರಿಯನು ಹೃದಯಾಂಬರದಲಿ
ನಾನಾ ಜನುಮದ ಕರ್ಮ ಸವೆಯುತಿರೆ ೨
ವಿಶ್ವ ಜನನ ಸ್ಥಿತಿ ಪ್ರಳಯಗಳಿಗೆ ಸದಾ
ಈಶ್ವರ ತಾನು ಪ್ರಸನ್ನನಾಗಲು
ಶಾಶ್ವತವಾದ ಸ್ವರೂಪಾನಂದವ
ಸ್ವಪ್ನಯೋಗ್ಯ ರೀತಿಯಲಿ ಪಡೆಯುವುದೇ ೩

 

೨೧೮
ಸಿರಿಯ ರಮಣ ನರಹರಿಯ ಚರಣಗಳ
ನಿರತ ಭಜಿಪರಿಗೆ ಸ್ಥಿರ ಸುಖವಿಹುದು ಪ
ದುರಳ ವಿಷಯಗಳ ತೊರೆದು ಮುದದಿ ಮೈ
ಮರೆಯುವ ತೆರದಲಿ ಉರುತರ ಭಕುತಿಯಲಿ ಅ.ಪ
ತನಯ ಪ್ರಹ್ಲಾದನು ಜನಕನ ವಚನವ
ನನುಸರಿಸದೆ ತನ್ನ ಮನದಲಿ ಸಂತತ
ನೆನೆದು ಶ್ರೀಹರಿಯನು ದಿನದಿನ ನಾರಾಯಣನ
ಸುಮಂಗಳ ಗುಣಗಳ ಪೊಗಳುತ
ಕುಣಿ ಕುಣಿಯುತ ತನ್ನ ಜನಕನ ಕೋಪಕೆ
ಹೊಣೆಯಾಗುತಲಿರೆ ಕ್ಷಣದಲಿ ಪೊರೆದ ೧
ಖೂಳನು ತನ್ನಯ ಬಾಲನ ನಡತೆಯ
ತಾಳಲಾರದೆ ಕೋಪ ಜ್ವಾಲೆಯಿಂದುರಿಯುತ
ಪೇಳೊ ಇಲ್ಲಿಹನೇನೊ ತಾಳೊ ನೋಡುವೆನೆಂದು
ಪೇಳಿ ಕಂಬವ ತನ್ನ ಕಾಲಲಿ ಒದೆಯಲು
ಸೀಳಿ ಛಟ ಛಟನೆ ತಾಳಿ ಘೋರತನು
ಖೂಳ ರಕ್ಕಸನಲಿ ಧಾಳಿಯ ಗೈದ ೨
ದುರುಳ ಹಿರಣ್ಯಕನ ಕರಳ ಬಗೆದು ತನ್ನ
ಕೊರಳಲ್ಲಿ ಮಾಲೆಯ ಧರಿಸಿ ಸಿಡಿಯುತಿರೆ
ಉರಿಯಿಂದ ಧರಣಿಯು ತರತರ ನಡುಗಲು
ಸುರರ ಮೊರೆಯ ಕೇಳಿ ವರಲಕುಮಿಯು ನರ
ಹರಿಯನು ಸ್ತುತಿಸಲು ಮರೆತು ಕೋಪವನು
ವರ ಭಕುತನಿಗೆ ಪ್ರಸನ್ನತೆಯಿತ್ತ ೩

 

೨೮೪
ಸಿರಿಯು ಬೇಡೆನಗೆ ಈ ಬರಿಯ ವೈಭವದ
ಪರಿಯು ಬೇಡವೆನಗೆ ಪ
ಪರಿಪರಿಯಲಿ ನಿನ್ನ ಚರಣ ಸೇವೆಯಲಿ
ಪರತರ ಸುಖಗಳ ಅರಿವು ಬೇಕಲ್ಲದೆ ಅ.ಪ
ಮರೆತೆನೊ ನಿನಗಾಗಿ ಚೆಲುವ ಸತಿಸುತರ
ತೊರೆದೆನೋ ಬಹು ವಿಧ ಪ್ರೇಮಪಾಶಗಳ
ಬೆರಗಾದೆನೋ ದೇವ ಮರುಕದಿಂದೆನಗೆ ನೀ
ವರ ಮಾರ್ಗವ ತೋರೋ ಮುರಳೀಧರನೆ ೧
ಮಂದಮತಿಗಳೆನ್ನ ನಿಂದಿಸುತಿರುವುದಾ
ನಂದವೇನೋ ನಿನಗೆ
ಸುಂದರ ಮೂರುತಿ ಕುಂದಿ ಕುಂದಿದ ಮನ
ಮಂದಿರದಲಿ ನಿಲ್ಲೋ ಇಂದಿರಾ ರಮಣನೆ ೨
ಎನ್ನ ಕುಂದುಗಳನ್ನು ಮನ್ನಣೆ ಮಾಡಿ ಸಂ
ಪನ್ನತೆ ಎನಗೀಯೋ
ಘನ್ನ ಮಹಿಮ ಸುಪ್ರಸನ್ನವಿಠ್ಠಲನೇ
ನಿನ್ನವನೆನಿಸೆಲೋ ಪನ್ನಗಶಯನನೇ ೩

 

೨೧೭
ಸುಂದರ ಕೃಷ್ಣನು ಕರೆಯುವ ಬನ್ನಿರೆ
ಇಂದುಮುಖಿಯರೆಲ್ಲ ಪ
ಚಂದದಿ ವಿಹರಿಸುವ ಬನ್ನಿರಿ
ಇಂದುಮುಖಿಯರೆಲ್ಲ ಅ.ಪ
ಭಾಸುರಾಂಗನ ಕೂಡಿ ನಾವು
ರಾಸಕ್ರೀಡೆಯಲಿ
ಈ ಸಂಸಾರದ ಕ್ಲೇಶಗಳನು ಪರಿ
ಹಾಸ ಮಾಡುವ ಬನ್ನಿ ೧
ಪರಿಮಳ ಕುಸುಮಗಳ ಸೊಗಸಿನ
ತರುಲತೆ ಬುಡದಲ್ಲಿ
ಮುರಹರ ಕೃಷ್ಣನ ಮುರಳಿಯನೂದುವ
ತರಳೆಯ ಅಂಬನ್ನಿ ೨
ನಂದಕುಮಾರನಿಗೆ ನಾವು
ಮಂದಹಾಸದಲ್ಲಿ
ಗಂಧ ತಾಂಬೂಲಗಳಂದದಿ ನೀಡುತಾ
ನಂದಪಡುವ ಬನ್ನಿ ೩
ಯಮುನಾ ತೀರದಲಿ ನಾವು
ಕಮನೀಯನ ಕೂಡಿ
ಸುಮಬಣನ ಸೊಲ್ಲನು ಮುರಿಯುವ ಬನ್ನಿ
ಕಮಲಾಕ್ಷಿಯರೆಲ್ಲಾ ೪
ಪನ್ನಗವೇಣಿಯರೇ ಈಗ ಪ್ರ
ಸನ್ನವದನ ಕೃಷ್ಣ
ತನ್ನ ಇಂಗಿತವನರುಹಲು ಎಮ್ಮನು
ಸನ್ನೆಯ ಮಾಡುತಿಹ ೫

 

೨೧೯
ಸುಮ್ಮನೆ ದೂರುವರೇ ಅಮ್ಮಯ್ಯ ಎನ್ನ
ಸುಮ್ಮನೆ ದೂರುವರೇ ಪ
ತಮ್ಮಯ ಸರಸಕೆ ಸಮ್ಮತಿ ಕೊಡದಿರೆ
ಕಣ್ಮಣಿಯರುಗಳೆಲ್ಲಾ ಅ.ಪ
ಕ್ಷೀರಚೋರನೆಂಬೋರೇ ಅಮ್ಮಯ್ಯ ಇವರ
ಕೋರಿಕೆ ನಡೆಸದಿರೆ
ಕ್ಷೀರ ಸಾಗರಶಾಯಿ ನಾರಾಯಣ ನಾನೆ
ಕ್ಷೀರಕೆ ಬಡತನವೇ ಅಮ್ಮಯ್ಯ ೧
ತುಂಟನೆಂಬೋರೆ ಎನ್ನ ಅಮ್ಮಯ್ಯ ಇವರ
ತಂಟೆ ಏತಕೆ ಎನಗೆ
ತುಂಟತನದಿ ಪಾಪ ಗಂಟು ಹೋಯಿತೆ ವೈ
ಕುಂಠಪತಿಯೇ ಸಾಕ್ಷಿ ಅಮ್ಮಯ್ಯ ೨
ಮಾಯಗಾರನೆಂಬೋರೆ ಅಮ್ಮಯ್ಯ ಎನ್ನ
ತೋಯಜಾಕ್ಷಿಯರೆಲ್ಲ
ಮಾಯಕೆ ಸಿಲುಕದೆ ಮಾಯೆಗೊಡೆಯನಾಗೆ
ಜಾಯಮಾನವಲ್ಲವೇ ಅಮ್ಮಯ್ಯ ೩
ಯಾರಿಂದೆನಗೇನೆ ಅಮ್ಮಯ್ಯ ಎನ್ನ
ಜಾರನೆಂಬೋರೆ ಎಲ್ಲಾ
ಯಾರು ಒಪ್ಪುವರೇ ಕುಮಾರನಲ್ಲವೆ ನಾನು
ಮಾರಜನಕ ನಾನೆ ಅಮ್ಮಯ್ಯ ೪
ಎನ್ನ ಮಾತನು ಕೇಳೆ ಅಮ್ಮಯ್ಯ ಈಗ
ಕನ್ನೆಯರಿಗೆ ಪೇಳೆ
ಇನ್ನಾದರು ಇವರು ಅನ್ಯಾಯವ ಬಿಟ್ಟು
ಎನ್ನನು ಪೊಗಳಿದರೆ ಅಮ್ಮಯ್ಯ ಪ್ರಸನ್ನನಾಗುವೆನೆಂದು ೫

 

೩೧೫
ಸುಮ್ಮನೇಕೆ ಪರದಾಡುವೆಯೊ ಪರ
ಬೊಮ್ಮನ ಚರಣಕೆ ಶರಣು ಹೊಡಿ
ನಮ್ಮನು ಸೃಜಿಸುವ ಪೊರೆಯುವ ಕೊನೆಯಲಿ
ನಮ್ಮನೇ ನುಂಗುವ ಗುಮ್ಮನಿವ
ನಮ್ಮ ಶರೀರದೊಳಿರುವ ಯಂತ್ರಗಳು
ನಮ್ಮಧೀನವೆ ಯೋಚಿಸೆಲೊ
ಕೆಮ್ಮು ನೆಗಡಿಗಳು ವಾತ ಪಿತ್ಥಗಳು
ನಮ್ಮಾಕಾಂಕ್ಷೆಯೆ ಯೋಚಿಸೆಲೊ ೧
ಮೂರಂತಸ್ಥಿನ ನೂರು ಸದನಗಳು
ನೂರು ರೂಪಗಳು ನಿನಗಳವೆ
ಚಾರು ಮನೋಹರ ಸತಿಯಳಿರಲು ಮನ
ಕೋರಿಕೆಯವಳಲಿ ಶಾಶ್ವತವೆ
ನೂರು ಎಕರೆ ಹೊಲ ಗದ್ದೆ ತೋಟಗಳು
ಮೂರು ಲಕ್ಷಗಳು ಬೆಲೆಯಿರಲು
ಮೂರು ಚಟಾಕಿನ ಅನ್ನ ಹೊರತು ಅದ
ಮೀರಿ ನುಂಗುವುದು ನಿನಗಳವೇ ೨
ಶೂರನು ನಾ ಬಲುಧೀರನು ನಾ ಅಧಿ
ಕಾರಿಯು ನಾ ಈ ಜಗದೊಳಗೆ
ಕೋರಿದ ಜನರನು ಸದೆಬಡಿಯುವೆ ಎನ
ಗಾರು ಸಮರು ಈ ಧರೆಯೊಳಗೆ
ಕೋರುವ ಸುಖಗಳನನುಭವಿಸುವ ಮಮ
ಕಾರದ ಗತಿಯನು ಯೋಚಿಸೆಲೊ
ಹೇರಳ ಗಜತುರಗಾದಿ ವಾಹನಗ
ಳೇರಿದ ನೀ ಹೆಗಲೇರಿ ಹೋಗುವಿಯೊ ೩
ಸಾಸಿರ ಸಾಸಿರ ಬಡ್ಡಿ ಬಾಚಿಗಳ
ಬೇಸರವಿಲ್ಲದೆ ಗಳಿಸಿದೆಯೊ
ಕಾಸಿನ ಲೋಭಕೆ ಮೂಸಲು ಬಾರದ
ಕಾಸಕ್ಕಿ ಅನ್ನವ ನುಂಗಿದೆಯೊ
ಲೇಶವು ಗಮನಕೆ ತರಲಿಲ್ಲ
ಈ ಸವಿನುಡಿ ಬಲು ಹಳೆಯದೆಂದು
ಆಕ್ರೋಶವ ಮಾಡದೆ ಯೋಚಿಸೆಲೊ ೪
ಮಾಯವು ತಾ ಈ ಜಗತ್ತಿನ ಜೀವನ
ಹಾಯವೆಂದು ರುಚಿ ತೋರುವುದು
ಕಾಯವು ಶಾಶ್ವತವೆಂಬ ಭ್ರಾಂತಿಯಲಿ
ಹೇಯ ವಿಷಯಗಳನುಣಿಸುವುದು
ಪ್ರಾಯಶರೆಲ್ಲರು ಬಲ್ಲರಿದನು ಬರಿ
ಬಾಯಲಿ ನುಡಿಯುವರೊ ಸತತ
ಕಾಯವಚನಮನದಿಂದ ಪ್ರಸನ್ನನ
ಮಾಯವನರಿತಾಚರಿಪರು ವಿರಳ ೫

 

೩೧೬
ಸುಲಿದ ಬಾಳೆ ಹಣ್ಣು ಸುಟ್ಟು ತಿನ್ನಬೇಡಿರೊ
ಹಳೆಯ ಜನರ ಅನುಭವಗಳ ಹಳಿಯಬೇಡಿರೊ
ಬಿಳಿಯ ವಸ್ತುವೆಲ್ಲ ಕ್ಷೀರವಲ್ಲ ಕಾಣಿರೊ
ಥಳಥಳಿಸುವುದೆಲ್ಲ ರಜತವಲ್ಲ ಕಾಣಿರೊ
ಸಿರಿಯು ಬಂದ ಕಾಲದಲ್ಲಿ ಮೆರೆಯಬೇಡವೋ
ಶಿರವು ಗಟ್ಟಿಯೆಂದು ಕಂಬ ಗುದ್ದಬೇಡವೊ
ಮನಕೆ ತುಷ್ಟಿಕೊಡದ ಕಾರ್ಯಗಣನೆ ಬೇಡವೊ
ಅನುವಿನಲ್ಲಿ ಪಿಡಿದ ಕಾರ್ಯ ಕೊನೆಯಗಾಣಿಸೊ
ಹಾವು ಕೊಂದು ಹದ್ದುಗಳಿಗೆ ಹಾಕಬೇಡವೊ
ಗೋವು ಕೊಂದು ಪಾದರಕ್ಷೆ ದಾನಬೇಡವೊ ೧೦

ಅರಿಯದ ಜನರಲ್ಲಿ ಅಂತರಂಗಬೇಡವೊ
ಪರರ ಗೋಪ್ಯ ತಿಳಿದರೆ ಬಹಿರಂಗಬೇಡವೊ
ನಗುವ ಜನರ ಮುಂದೆ ಜಂಭ ಕೊಚ್ಚಬೇಡವೊ
ರಗಳೆ ರಂಪದಿಂದ ಪರರ ಒಲಿಸಬೇಡವೊ
ಗೆದ್ದರಾ ಎತ್ತು ಬಾಲವನ್ನು ಹಿಡಿಯಬೇಡವೊ
ಒದ್ದರೆ ಅದು ಹಲ್ಲುಗಳನು ಕಿರಿಯಬೇಡವೊ
ಮೂರ್ಖ ಜನಗಳಲ್ಲಿ ವಾದ ಮಾಡಬೇಡವೊ
ಮಕ್ಕಳೆದುರಿನಲ್ಲಿ ಗ್ರಾಮ್ಯವಚನ ಬೇಡವೊ
ಬಳಿಕ ಮಾತನಾಡುವನು ಗೆಳೆಯನಲ್ಲಯ್ಯ
ಕುಳಿತು ತಿನ್ನುವವನು ಸಾಹುಕಾರನಲ್ಲಯ್ಯ ೨೦
ಗಂಟು ಜಗಳ ಕದನಗಳಲಿ ತಂಟೆಬೇಡಯ್ಯ
ನಂಟರಿಷ್ಟರಲ್ಲಿ ಭಂಟನಾಗಬೇಡಯ್ಯ
ನಾಕು ಜನರ ಮಾತ ಮೀರಿ ನಡೆಯಬೇಡಯ್ಯ
ಪೋಕರಿ ಜನಗಳಲಿ ಮೂಕ ಬದಿರನಂತಿರೊ
ಕಾಲದಲ್ಲಿ ಕೆಲಸಮಾಡಿ ಮುಗಿಸೆಲೊ
ನಾಳೆ ನಾಳೆಯೆಂಬ ಕೆಲಸ ಹಾಳು ಕಾಣಿರೊ
ಬಿಂಕದಿಂದ ಹರಿಗುರುಗಳ ಮರೆಯಬೇಡಯ್ಯ
ಸಂಕಟ ಬಂದಾಗ ವೆಂಕಟೇಶ ಬರುವನೆ
ಸಾಲ ಸೋಲ ಮಾಡಿ ದಾನ ಧರ್ಮ ಬೇಡಯ್ಯ
ಕೇಳದಿರಲು ನೀತಿ ಹೇಳ ಹೋಗಬೇಡಯ್ಯ ೩೧
ಪರರು ನೋಯುವಂಥ ಮಾತನಾಡಬೇಡಯ್ಯ
ಉರಿವ ಒಲೆಗೆ ಉಪ್ಪುಕಾಳನೆರಚಬೇಡಯ್ಯ
ನೆರೆಯು ಬಾಳುತಿರಲು ನೋಡಿ ಕರಗಬೇಡಯ್ಯ
ಬರಿದೆ ಅಯ್ಯೊ ಪಾಪವೆನಲು ಮರುಕವಲ್ಲವೊ
ದುರುಳ ಜನಗಳಲ್ಲಿ ಸರಳನಾಗಬೇಡಯ್ಯ
ಹರಿಯ ಭಜನೆಯಲ್ಲಿ ಮನದಿ ನಾಚಬೇಡವೊ
ತಿರುಕನಂತೆ ಜ್ಞಾನದ ಭಿಕ್ಷೆಯನು ಬೇಡೆಲೊ
ತುರುಕನಂತೆ ಕಾಮದ ತಲೆ ಬಡಿದು ಜೀವಿಸೊ
ಸಜ್ಜನಗಳು ಸಮ್ಮತಿಸುವ ಮಾರ್ಗದಲಿ ನಡಿ
ದುರ್ಜನಗಳು ಪೇಳಿ ತೋರಿದೆಲ್ಲವನು ಬಿಡಿ೪೦
ಫಲದ ಚಿಂತೆಯಿಲ್ಲದಂತೆ ಧರ್ಮಗಳಿಸಿರೊ
ಫಲವು ಹರಿಯಧೀನ ಕೆಲಸ ಮಾತ್ರ ನಿನ್ನದೊ
ಧ್ಯಾನ ಮಾಡದಿರಲೊ ಮನದಿ ದುಷ್ಟ ವಿಷಯದ
ಧ್ಯಾನದಿಂದ ವಿಷಯದಲ್ಲಿ ಸಂಗ ಬರುವುದೊ
ಸಂಗದಿಂದ ದುಷ್ಟಭೋಗ ಕಾಮ ಬರುವುದೊ
ಭಂಗವಾದ ಕಾಮದಿಂದ ಕೋಪ ಬರುವುದೊ
ಕೋಪದಿಂದ ಮನದಲಿ ವ್ಯಾಮೋಹ ಬರುವುದೊ
ಈ ಪರಿಮೋಹದಲಿ ಸ್ಮರಣೆ ನಾಶಪಡುವುದು
ಸ್ರ‍ಮತಿಯು ತಪ್ಪಿದವನ ಬುದ್ಧಿಮೃತಿಯು ಪೊಂದಲು
ಕ್ಷಿತಿಯೊಳವಗೆ ಸರ್ವನಾಶವೆಂದು ನುಡಿಯಿದೆ ೫೦
ಜ್ಞಾನಕೆ ಸಮ ಸಂಪತ್ತಿಲ್ಲ ಜನಕೆ ಲೋಕದಿ
ಮೌನಕೆ ಸಮ ಗುಹ್ಯಕೆ ಪಾಲಕರಿಲ್ಲವೊ
ಜ್ಞಾನ ಸರ್ವಕರ್ಮಗಳನು ದಹಿಸಿಬಿಡುವುದೊ
ಜ್ಞಾನದಿಂದ ಪರಮಶಾಂತಿ ಪಡೆಯುಬಹುದೆಲೊ
ಚಿರತನ ವರ್ಣಾಶ್ರಮಗಳ ಧರ್ಮ ಬಿಡದಿರೊ
ಪರರ ನೋಡಿ ವೇಷಗಳನು ಧರಿಸಬೇಡವೊ
ಮಿತಿಯ ಮೀರಿ ಭೋಜನವನು ಮಾಡಬೇಡವೊ
ಅತಿಯ ನಿದ್ರೆಯಲ್ಲಿ ಕಾಲ ಕಳೆಯಬೇಡವೊ
ಲೋಕವ ಭಯಪಡಿಸಬೇಡ ನಡೆನುಡಿಗಳಲಿ
ಲೋಕಕೆ ಭಯಪಡಲಿಬೇಡ ಧರ್ಮ ಪಥದಲಿ ೬೦
ಶತುಮಿತ್ರರಲ್ಲಿ ಒಂದೆ ಭಾವ ಪಡೆಯೆಲೊ
ಸ್ತೋತ್ರ ನಿಂದೆಗಳಿಗೆ ಹಿಗ್ಗಿ ಕುಂದಬೇಡವೊ
ಭಕ್ತಜನರ ನಡೆನುಡಿಗಳ ನಿಂದಿಸದಿರೆಲೊ
ಯುಕ್ತರವರು ಹಿರಿಯ ದಯಕೆ ಪಾತ್ರರಿವರೊ
ಜಗವು ಸತ್ಯ ಬಗೆ ಬಗೆಯಲಿ ಸೊಗಸ ನೋಡೆಲೊ
ಜಗಕೆ ಕರ್ತನೋರ್ವಗೆ ಕೈ ಮುಗಿದು ಬೇಡೆಲೊ
ದೇಶಕಾಲ ಪಾತ್ರವರಿತು ದಾನ ಮಾಡೆಲೊ
ಆಸೆ ಮೋಸಗಳಿಗೆ ಮನವ ಲೇಸು ಕೊಡದಿರೊ
ಪರರ ಮನವು ಕೆದರದಂತೆ ನಿಜಹಿತ ನುಡಿಯು
ಗುರುತರ ವಾಚನಿಕ ತಪವ ಮರೆಯಬೇಡವೊ ೭೦
ಸರ್ವಕರ್ಮ ಫಲಗಳನ್ನು ಬಿಡುವನೆ ಯತಿಯು
ಗರ್ವಮತ್ಸರಾದಿಗಳನು ಬಿಡುವುದೆ ಮತಿಯು
ಶರಣು ಹೊಡೆಯೊ ಕರುಣಮಯನ ಚರಣಯುಗಳದಿ
ಕರಗತವಾಗುವುದು ನಿನಗೆ ಇಹಪರ ಸುಖವು
ಮಮತೆ ಬಿಟ್ಟು ಜಗದಿ ತಗಲಿ ತಗಲದೆ ಇರೆಲೊ
ಕಮಲಪತ್ರಗಳಲಿ ಜಲದ ಕಣಗಳ ತೆರದಿ
ಶುದ್ಧ ಧರ್ಮಲೇಶವು ತಲೆ ಕಾಯಬಲ್ಲದೊ
ಪದ್ಮನಾಭ ಜನರ ಚಿತ್ತಶುದ್ಧಿ ನೋಡುವ
ನಾನೆ ಬ್ರಹ್ಮನೆಂಬ ವಾದ ಬಾಳಬಲ್ಲದೆ
ತಾನೆ ಬೀಳಲಿರುವ ಮರಕೆ ಕೊಡಲಿ ಏತಕೆ ೮೦
ಜ್ಞಾನತೀರ್ಥಗಳಲಿ ಮುಳುಗಿ ಸ್ನಾನ ಮಾಡೆಲೊ
ಜ್ಞಾನಕೆ ಜ್ಯೋತಿಗಳ ಬೆಳಕು ಕಾಣುತಿರುವುದೊ
ದಾರುಣ ಸಂಸಾರ ಜಲದಿ ಪಾರುಗಾಣಲು
ಧೀರನಾಗಿ ಈಜುವವಗೆ ತಾರಣ ಸುಲಭ
ತಲೆಯ ಮೇಲೆ ಕೈಯನಿಟ್ಟು ಕೂಡ ಬೇಡವೊ
ಬೆಳಸಿದಂತೆ ತರುಲತೆಗಳು ಫಲಕೊಡುವುದೊ
ಮುಂದೆ ಇಟ್ಟ ಹೆಜ್ಜೆಗಳನು ಹಿಂದೆಗೆಯದಿರೊ
ಮಂದಿಗಳಿಗೆ ಫಲದಲಿ ಸಂದೇಹ ಬೇಡವೊ
ಹುಳಿಯ ರಕ್ತವಿರುವತನಕ ತಲೆಯು ಬಾಗದು
ಹಳೆಯದಾಗಿ ಬಗ್ಗಿದಾಗ ಕಾಲ ಸಾಲದೊ ೯೦
ಪರರ ನುಡಿಗಳನ್ನು ಕದ್ದು ಕೇಳಬೇಡವೊ
ಅರಿತು ನಿನ್ನ ಹರಿಯು ಗುದ್ದಿ ಬುದ್ಧಿ ಕಲಿಸುವ
ಚಾಡಿಯಾಡ ಬೇಡ ಚಾಡಿ ಕೇಳಬೇಡವೊ
ಸೇಡನು ತೀರಿಸುವ ಹೇಡಿಯಾಗಬೇಡವೊ
ನಿನ್ನ ಮಾನದಂತೆ ಪರರ ಮಾನವೆಂದರಿಯೆಲೊ
ಅನ್ನ ಹಾಕುವವರ ಹರಿಸಿ ಘನ್ನವೆನಿಸೆಲೊ
ಕುಲವ ಶೋಧಿಸುತಲಿ ಕನ್ಯೆದಾನ ಮಾಡೆಲೊ
ತಲೆಯ ಕ್ರಾಪು ಯೋಗ್ಯತೆಗೆ ಪ್ರಮಾಣವಲ್ಲವೊ
ಒಲಿದು ಬಂದ ಕುಲದ ಕನ್ಯೆ ಕರವ ಪಿಡಿಯೆಲೊ
ಥಳಕು ಬೆಳಕು ನೋಡಿ ಬಲೆಗೆ ಬೀಳ ಬೇಡವೊ ೧೦೦
ಗಾಳಿಯು ಬಂದಾಗ ಬೇಗ ತೂರಿ ಕೊಳ್ಳಲೊ
ಕಾಲದ ಸ್ಥಿತಿಯರಿತು ತಗ್ಗಿ ಬಗ್ಗಿ ನಡೆಯೆಲೊ
ಮೇಲಿನ ದರ್ಜೆಯಲಿ ನಡೆದು ಕೇಳಬೇಡವೊ
ನಾಲಗೆ ಚೆನ್ನಿರುವ ನರಗೆ ಜಗಳವಿಲ್ಲವೊ
ಇರುಳು ಕಂಡ ಬಾವಿಗೆ ನೀ ಉರುಳಬೇಡವೊ
ಶಕ್ತಿ ಇರುವ ಕಾಲದಲ್ಲಿ ಉತ್ತಮನೆನಿಸೊ
ಶಕ್ತಿಯಲ್ಲಿದಾಗ ಇದ್ದು ಸತ್ತ ಪ್ರಾಯವೊ
ಸ್ವೊತ್ತಮ ಜನರಲ್ಲಿ ನಿಯತ ಭಕ್ತಿ ಮಾಡೆಲೊ
ಭಕ್ತಿಯಿಲ್ಲದವಗೆ ಮುಕ್ತಿಯಿಲ್ಲ ಕಾಣಿರೊ ೧೧೦

ಪಾಪಿಯಾಗಬೇಡ ಇತರ ಜನರ ವಂಚಿಸಿ
ಕೋಪ ಮಾಡಬೇಡ ಕೊಟ್ಟ ಋಣವ ಕೇಳಲು
ಕೂಪ ಕೂರ್ಮದಂತೆ ಜಗವ ನೋಡಬೇಡವೊ
ರೂಪುರಂಗುಗಳಿಗೆ ಮನವ ಸೋಲಬೇಡವೊ
ಹಡೆದ ಮಕ್ಕಳುಗಳ ಕಾಲದಲ್ಲಿ ತಿದ್ದೆಲೊ
ಗಿಡದಲಿ ಬಗ್ಗಿಸದ ಮರವು ಬಗ್ಗಲಾರದೊ
ಕೊಡಲಿಯನ್ನು ಸೇರಿ ಮರದ ಕಾವಿನಂದದಿ
ನಡತೆ ಕಲಿಸದಿದ್ದರವರು ಬುಡಕೆ ತರುವರೊ
ಗಳಿಸಿದವನ ಧನವು ಬಳಸಿದವನಿಗೆಂದರಿಯೆಲೊ
ಬಳಸಲು ನೀತಿಯಲಿ ಧನವ ಗಳಿಸಿ ಸುಖಿಸೆಲೊ ೧೨೦
ಕಳಿಯಬೇಡಿ ಕಾಲವನ್ನು ಕುಳಿತೆಡೆಗಳಲಿ
ತಿಳಿದು ಮರ್ಮ ಕಲಿ ಪುರುಷನ ನೆಲಕೆ ತುಳಿಯಿರಿ
ಹೇಯ ಜನಕೆ ಗುಹ್ಯ ತತ್ವ ಪೇಳಬೇಡವೊ
ನಾಯಿಗಳಿಗೆ ಹವ್ಯದಾನ ಮಾಡಬೇಡವೊ
ಕಾಯುವ ಗುರುಚರಣವೆ ಬಲುಶ್ರೇಯವೆನ್ನದೆ
ಕಾಯ ಸುಟ್ಟರೇನು ಫಲವು ಕರ್ಮ ಸುಡುವುದೆ
ಉಣಲು ಬದುಕಬೇಡ ಜಗದಿ ಬದುಕಲು ಉಣೆಲೊ
ಜನನ ಮರಣ ನಿಯತ ಕಾಲಗಳಲಿ ಬರುವವೊ
ಕೊನೆ ಮೊದಲುಗಳಿಲ್ಲವು ಈ ಜಗಪ್ರವಾಹಕೆ
ತನಗೆ ತಾನೆ ಬೀಳದು ಜಗದಾಖ್ಯ ವೃಕ್ಷವು ೧೩೦
ತಾಳಿದವನು ಬಾಳುವನೆಂದರಿತು ನಡೆಯೆಲೊ
ಗಾಳಿಗುದ್ದಿ ಕರಗಳನ್ನು ನೋಯಿಸದಿರೆಲೊ
ಬಾಲನೆಂದು ಅರಿತು ಸತತ ಜ್ಞಾನವ ಗಳಿಸೆಲೊ
ನಾಳೆಯ ದಿನ ನಂಬದಂತೆ ಧರ್ಮಗಳಿಸೆಲೊ
ಹರಿಯುಕೊಟ್ಟ ಕಾಲದಲ್ಲಿ ಪರರ ರಕ್ಷಿಸೊ
ಹರಿಯು ಕೊಡದ ಕಾಲದಲ್ಲಿ ಹರುಷ ಬಿಡದಿರೊ
ದೂಷಕರನು ಎಂದಿಗು ನೀ ದ್ವೇಷಿಸದಿರೆಲೊ
ಹೇಸಿಗೆಯನು ನಾಲಿಗೆಯಲಿ ತೆಗೆದುಬಿಡುವರೊ
ಹಳ್ಳಕೆ ಬಿದ್ದವನಮೇಲೆ ಕಲ್ಲೆಸೆಯದಿರೊ
ಟೊಳ್ಳು ಹರಟೆಗಾರನೆದರು ನಿಲ್ಲ ಬೇಡವೊ ೧೪೦
ಒಳ್ಳೆಯ ಫಲಕೊಡುವ ಕಾರ್ಯಗಳು ಚಿಂತಿಸೊ
ಜಳ್ಳು ಹುಲ್ಲಿಗಾಗಿ ಬೆವರು ಸುರಿಸಬೇಡವೊ
ಬಿಂದು ಬಿಂದು ಸೇರಿ ಸಿಂಧುವಾಯಿತೊ
ಹಿಂದಿನ ಮೊಳೆಯಿಂದ ದೊಡ್ಡ ವೃಕ್ಷವಾಯಿತೊ
ಒಂದನು ಇನ್ನೊಂದು ಸೇರಿ ಕೋಟಿಯಾಯಿತೊ
ಮಂದಿಗಳಿದನರಿತು ಪುಣ್ಯರಾಶಿ ಗಳಿಸಿರೊ
ನೆರಳು ನೀರು ಕೊಟ್ಟ ಜನರ ಮರೆಯ ಬೇಡವೊ
ಸರಿಯುತಿರುವ ಮಾರಿ ಮಸಣಿ ಕರೆಯಬೇಡವೊ
ಅರಿಯದ ಅಜ್ಞಾನಿಯೊಡನೆ ಸರಸಬೇಡವೊ
ತರುಗು ತಿನ್ನುವವನ ಕೇಳಬೇಡ ಹಪ್ಪಳ ೧೫೦
ದೇಹಿಯೆಂದು ಬಂದವನಿಗೆ ನಾಸ್ತಿಯೆನದಿರೊ
ಸಾಹಸವನು ಮಾಡದಿರೊ ಪ್ರಬಲ ಜನರಲಿ
ಮೋಹಕೆ ತುತ್ತಾಗದಿರೆಲೊ ಪರಸತಿಯರಲಿ
ದೇಹಕೆ ಬಲ ಶುದ್ಧಿ ಕೊಡುವ ನಿಯಮ ಬಿಡದಿರೊ
ಭಾಗ್ಯಹೀನ ಬಡವನೆಂದು ಜರಿಯಬೇಡವೊ
ಯೋಗ್ಯತೆಯನು ತಿಳಿಯಲು ಬಲು ಸುಲಭವಲ್ಲವೊ
ಶ್ಲಾಘ್ಯವಾದ ಮೂಲಿಕೆಗಳನರಿಯೆ ಸುಲಭವೆ
ಯೋಗ್ಯತೆಯನುಸರಿಸಿ ಬರುವ ಭಾಗ್ಯ ಬೇರಿದೆ
ಖ್ಯಾತಿಗಾಗಿ ಆತ್ಮಸ್ತುತಿಯ ಮಾಡಬೇಡವೊ
ಕೋತಿಯಂತೆ ಕುಣಿಯಬೇಡ ಸರಿಸಮರೊಳಗೆ ೧೬೦
ಮೂತಿ ತಿರುಗಬೇಡ ಪರರ ಹಿತನುಡಿಗಳಿಗೆ
ಸೋತ ಹಾಸ್ಯ ಮಾಡಬೇಡ ರಸಿಕ ಜನರಲಿ
ಹಿರಿಯರು ಸಂದೇಹಪಡುವ ಮಾರ್ಗ ತ್ಯಜಿಸೆಲೊ
ಬರಿಯ ಮಾತನಾಡಿ ಬೆನ್ನು ತಟ್ಟ ಬೇಡವೊ
ಪರರ ಹಳ್ಳಕ್ಕಿಳಿಸಿ ಆಳ ನೋಡಬೇಡವೊ
ಕರಕೆ ಸಿಕ್ಕಿದಾಗ ಹಲ್ಲು ಕಿರಿಯಬೇಡವೊ
ಮೆದೆಗೆ ಬೆಂಕಿಯಿಕ್ಕಿ ಅರಳು ಹುಡುಕಬೇಡವೊ
ಎದೆಯು ಒಡೆಯುವಂತೆ ಸುದ್ದಿ ಪೇಳಬೇಡವೊ
ಬೀದಿಯಲಿರುವ ಜನಗಳ ಬೇಸರಿಸಬೇಡವೊ
ಬೆದೆಯಲಿರುವ ದುರುಳನನ್ನು ಕೆಣಕಬೇಡವೊ ೧೭೦
ಊರು ಕುರಿಯ ಕಾದು ಗೌಡನೆನಿಸಬೇಡವೊ
ಭಾರಿಯ ಜಲ ಪ್ರವಾಹ ತಡೆಯ ಹೋಗಬೇಡವೊ
ದೂರು ತರುವ ಜನರ ಕ್ಷಣದಿ ನಂಬಬೇಡವೊ
ನಾರಿಯ ಸಾಹಸವ ನಂಬಿ ದುಡುಕಬೇಡವೊ
ಎರಡು ಕರವು ಸೇರದೆ ಚಪ್ಪಾಳೆಯಾಗದು
ಕುರುಡನು ತೋರಿಸುವುದೆಲ್ಲ ಮಾರ್ಗವಾಗದು
ಕರಡಿಯು ಮೈಯಪರಚಲದು ಸೌಖ್ಯವಾಗದು
ಗುರುಗಳ ಬಿಟ್ಟೋದಲು ಉಪದೇಶವಾಗದು
ಹರಿಯಭಕುತಿ ಹರಿಯದಿರಲು ಗಾನವಾಗದು
ಬರಿಯ ಸ್ವರಗಳುರುಳಿಸೆ ಕೀರ್ತನೆಯದಾಗದು ೧೮೦
ಕರದಿ ತಟ್ಟೆ ಹೊಳೆಯುಂತಿರೆ ಪುರಾಣವಾಗದು
ಕಿರಿಯ ಜನರ ಗುಣಗಾನವು ಭಜನೆಯಾಗದು
ಅಕ್ಕಿಗಾಗಿ ಅಲೆವರೆಲ್ಲ ದಾಸರಾಗರು
ಬೆಕ್ಕಿನಂತೆ ಕಣ್ಣು ಮುಚ್ಚಿ ಯತಿಗಳಾಗರು
ಚಿಕ್ಕ ಜಿರಳೆ ಮೀಸೆಯಿರಲು ರಾಯರಾಗದು
ಚಿಕ್ಕ ಕೊಳೆಯ ಚೌಕ ಧರಿಸೆ ಮಡಿಯದಾಗದು
ಕದ್ದು ಅವಿತುಕೊಂಬರೆಲ್ಲ ಗರತಿಯಾಗರು
ಮದ್ದು ಮಾಟ ಮಾಡುವವರು ಸುದತಿಯಾಗರು
ಶುದ್ಧ ಧೈರ್ಯ ನಡತೆಯಿಂದ ನಿಂದ್ಯರಾಗರು
ಬುದ್ಧಿ ಬದುಕು ಹೇಳುವವರು ದ್ವೇಷಿಯಾಗರು ೧೯೦
ರೀತಿ ನೀತಿಗಳನು ಪರಗೆ ಹೇಳಲು ಸುಲಭ
ಮಾತನಾಡಿದಂತೆ ಮಾಡಿ ತೋರುವರಿಹರೇ
ತಾತನ ಕಾಲದಲ್ಲಿ ನುಡಿದ ಮಾತಿದಲ್ಲವು
ಹೋತನ ಗಳಸ್ತನವಿದಲ್ಲ ಕೂತು ಕೇಳರಿ
ಗಾದೆಗಳನು ವೇದವೆಂದು ಪೇಳಲುಚಿತವು
ಮಾದರಿ ಅಣುಶಕ್ತಿಯಿಂದೆ ಗಾದೆ ಗಾದೆಗು
ಪರಮ ಭಾಗವತರ ಚರಿತೆಯೋದಿ ನೋಡಿರಿ
ಅರಿಯಬಹುದು ನುಡಿದ ನೀತಿಸಾರವೆಲ್ಲವ
ನಾಡುನುಡಿಗಳೆಂದು ಮರೆಯಬೇಡವೆಂದಿಗು
ಪಾಡಿದರೆ ಪ್ರಸನ್ನ ಹರಿಯು ನೀಡುವ ಫಲವ ೨೦೦

 

೨೨೦
ಸೇರದಾದವು ಅಶನವಸನಗಳಾರೊಡನೆ ನಾ ಪೇಳಲಿ ಪ
ಸಾರಸಾಕ್ಷ ಮುರಾರಿ ಕೃಷ್ಣನ ಮೂರುತಿಯ ನಾ ಕಾಣದೆ ಅ.ಪ
ಹಿಂದೆ ವನದಲಿ ಸುಂದರಾಂಗ ಮುಕುಂದ ಕೃಷ್ಣನ ಪರಿಪರಿ
ಅಂದ ಲೀಲೆಗಳಿಂದ ಪೊಂದಿದ ನಂದಗಳ ನೆನೆ ನೆನೆದರೆ ೧
ಮಾರಜನಕನು ಜಾರನೆಂಬ ವಿಚಾರವನು ನಾನರಿಯದೆ
ಸೇರಿದೆನು ಮನಸಾರ ಮುದದಲಿ ಯಾರಿಗಳವೇ ಮರೆಯಲು ೨
ಮೋಸಗಾರನ ಆ ಸೊಬಗುಗಳಿಗಾಸೆ ಪೊಂದಿದ ಪಸುಳೆಯ
ಆಸೆಭಂಗದ ಕ್ಲೇಶವನು ಜಗದೀಶನೊಬ್ಬನೆ ಬಲ್ಲನು ೩
ತರುಲತೆಗಳು ಹರಿವ ಯಮುನಾ ಸರಿದೇನಾದರೂ ಬಲ್ಲವೆ
ಸರಸದಲಿ ತಿರುತಿರುಗುತಿಹ ಮುರಹರನ ಸುದ್ಧಿಯ ಕೇಳಲೆ ೪
ಘನ್ನ ಮಹಿಮೆ ಪ್ರಸನ್ನ ಕೃಷ್ಣನು ತನ್ನ ಸಂತಸದಿಂದಲಿ
ಎನ್ನ ಕರಗಳಿಗೊಮ್ಮೆ ಸಿಕ್ಕಲು ಇನ್ನು ಅವನನು ಬಿಡುವೆನೆ ೫

 

೩೧೭
ಸೋಜಿಗದಲಿ ಜೀವಿಸುವರು ಸುಜನರು ಪ
ಈ ಜಗದಲಿ ದುಷ್ಟ ಗೋಜಿಗೆ ಸಿಲುಕದೆ ಅ.ಪ
ಪರರ ವಿಭವಗಳಿಗೆ ಕರಗಲರಿಯರಿವರು
ಕೊರೆಯುವ ಬಡತನಕುರಿಯಲರಿಯರು
ಹರಿ ಕರುಣದಿ ತಮಗೆ ಸಿರಿಯು ಬಂದೊದಗಲು
ಪರಿಪರಿ ವಿಧದಲಿ ಮೆರೆಯದೆ ದೈನ್ಯದಿ ೧
ಕೆಡುಕುತನಗಳನು ಅರಿಯರು ಈ ಜನ
ಬಡವರ ಸೌಖ್ಯಕೆ ದುಡಿವರು ಮುದದಲಿ
ಕಡುದುರುಳರು ನಿಂದೆ ನುಡಿಗಳಾಡುವರೆಂದು
ದುಡುಕದೆ ಅವರಲಿ ಕ್ಷಮೆಯ ತೋರುತ ಸದಾ ೨
ಪರರಿಗುಪಕೃತಿಯಲರಿಯರು ಮಿತಿಯನು
ಪರರಿಗುಪಕೃತಿಗೆ ಜರಿಯರು ಮತಿಯನು
ಶರಣ ಪ್ರಸನ್ನನ ಕರುಣವ ಪೊಂದಲು
ವರನೀತಿಗಳಲಿ ನಿರತರಾಗುತ ಸದಾ ೩

 

೨೫೭
ಸ್ಮರಿಸೈ ಸತತವು ಸಂಸ್ಮರಿಸೈ ಸತತವು ಪ
ಯತಿಗುಣ ಭೂಷಣ ವ್ಯಾಸ ಯತೀಂದ್ರರ ಅ.ಪ
ಗುರುಬ್ರಹ್ಮಣ್ಯರ ಕರಕಮಲದಿ ಪುಟ್ಟಿ
ಪರಮ ಕೀರುತಿಯಿಂದ ಮೆರೆದ ಯತೀಂದ್ರರ ೧
ಸುಖಬೋಧ ಸದಾಗಮಸಾರವ ನಿಜ
ಮುಖದಿಂದ ಭೂಸುರರೊಳಗರುಹಿದವರ ೨

ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವ
ಚಂದದಿ ರಚಿಸಿ ಆನಂದಗೊಂಡವರ ೩
ವರಕರ್ಣಾಟಕ ಸಿಂಹಾಸನದಲಿ
ಮರಕತಮಣಿಯಭೀಷೇಕ ಪಡೆದವರ ೪

ಉನ್ನತ ಗುಣ ಸುಖ ಚಿನ್ಮಯ ರೂಪ ಪ್ರ
ಸನ್ನ ಶ್ರೀರಾಮನ ಭಕುತವರೇಣ್ಯರ ೫

೩೩೯
ಸ್ವಾಂತವ ತೊಳೆಯುತಲಿರಬೇಕು
ಶಾಂತಿನಿಕೇತನವಾಗುವ ತನಕ ಪ
ಶಾಂತ ಮೂರುತಿ ಶ್ರೀಶಾಂತನು ತನ್ನ ಏ
ಕಾಂತ ಮಂದಿರವೆಂದೊಪ್ಪುವ ತನಕ ಅ.ಪ
ಕಾಮ ಕ್ರೋಧವೆಂಬೊ ಕಸಗಳನು
ನೇಮದಿಂದ ಗುಡಿಸುತಲಿರಬೇಕು
ಪ್ರೇಮಜಲದ ಸೇಚನೆ ಮಾಡಿ ಹರಿ
ನಾಮಸ್ಮರಣೆ ಧೂಪವ ಕೊಡಬೇಕು ೧
ಕಲಿಪುರುಷನ ಓಡಿಸಬೇಕು
ತಿಳಿಯ ವೈರಾಗ್ಯ ಭಕ್ತಿಗಳೆಂಬ
ತಳಿರು ತೋರಣವ ಕಟ್ಟಲಿಬೇಕು
ನಳಿನನಾಭನ ಮನ ಸೆಳೆಯುವ ತೆರದಿ ೨
ಕಾಣಲು ಪರಮತತ್ವದ ದಿವ್ಯ
ಜ್ಞಾನದ ಜ್ಯೋತಿಯ ಮುಡಿಸಲಿ ಬೇಕು
ಜ್ಞಾನ ಸುಖಾದಿ ಸದ್ಗುಣ ನಿಧಿಯು
ತಾನೆ ಪ್ರಸನ್ನನಾಗುತ ನೆಲೆಸುವ ಪರಿ೩

ತುಳಸಿ
೨೪೪
ಸ್ವೀಕರಿಸೆನ್ನಯ ಪೂಜೆಯ ತುಳಸೀ
ಲೋಕೋತ್ತರನರಸೀ ಪ
ಈ ಕರಗಳು ಧನ್ಯಗಳಾಗಲಿ ಮನ
ವ್ಯಾಕುಲ ಪರಿಹರಿಸಮ್ಮ ಜನನಿ ಅ.ಪ
ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ
ಫುಲ್ಲ ಕುಸುಮವಿರಲು
ಒಲ್ಲನು ಹರಿ ನೀನಿಲ್ಲದ ಪೂಜೆಯ
ಬಲ್ಲರಿದನು ಜ್ಞಾನಿಗಳು ಮಾತೆ ೧

ವಂದಿಸಿ ನಿನ್ನಯ ಚರಣಗಳಿಗೆ ಫಲ
ಗಂಧ ಪುಷ್ಪಗಳನರ್ಪಿಸುವೆ
ಬೃಂದಾವನಲೋಲನ ವಲ್ಲಭೆ ಮೃದು
ಮಂದಹಾಸವನು ತೋರೆ ಮಾತೆ ೨
ನೀನಿದ್ದೆಡೆ ಹರಿ ತಾನಿರುವನು ಅನು
ಮಾನವಿಲ್ಲವೆನಗೆ
ದಾನ ಧರ್ಮಗಳ ಫಲಕೆ ಕಾರಣಳು
ನೀನಾಗಿರುವೆ ಪ್ರಸನ್ನವದನೆ ೩

ನುಡಿ-೧: ಒಡಕು ಒಂಬತ್ತಿನ ದೇಹ

೩೪೦
ಹಗಲು ಸಮಯದಲಿ ಇರುಳು ನೋಡಿದ ಬಾವಿ
ಗುರುಳಬಹುದೇ ನರರು ಈ ಜಗದೊಳು ಪ

ಮರುಳು ಮಾಡುವ ಭವದುರುಳು ಬಂಧನದೊಳು
ಸಿಗಲು ಬಯಸಬಹುದೇ ಅವಿವೇಕದಿ ಅ.ಪ
ಅಡಿ ಐದು ಉದ್ದದ ಒಡಕು ಒಂಭತ್ತಿನ
ಕಡು ದುಃಖ ದೇಹಕೆ ಸಿಡಿವುದು ತರವೆ
ಪೊಡವೀಶನಾದರೂ ಮಡಿಯಲು ನಿನ್ನಯ
ಸಡಗರವೆಲ್ಲವು ಹಿಡಿಯೊಳಗಲ್ಲವೇ ೧

ಅನುದಿನದಲಿ ನೀನು ಹಣ ಹಣವೆನ್ನುತ
ಕುಣಿಯುವುದನು ನೋಡಿ ಅಣಕಿಸುವರು ನಿನ್ನ
ತನುಮನ ಕ್ಲೇಶವನನುಭವಿಸುತ ಸದಾ
ಹಣವಗಳಿಸಲದನುಣುವರು ಬೇರಿಹರು ೨

ಗೃಹಿಣಿ ಗೃಹಿಗಳೆಲ್ಲ ಕುಹಕವೆಂದರಿಯದೆ
ಗೃಹವು ಎನ್ನದು ಎಂದು ಗೃಹಿಣಿ ಎನ್ನವಳೆಂದು
ಬಹುವಿಧ ವೈಭವವೆನಗಿಹುದೆನ್ನುವ
ಮಹದಾಗ್ರವನ್ನು ಸಹಿಸುವನೇ ಹರಿ ೩

ಕಂತೆ ಕಂತೆಯ ಸಿರಿ ಸಂತತ ಗಳಿಸಲು
ಅಂತಕ ತನುವನು ಸೆಳೆಯಲು ಗಳಿಸಿದ
ಕಂತೆಗಳೆಲ್ಲವೂ ಎಂತು ನಿಲ್ಲಿಸುವುವು
ಚಿಂತಿಸಿ ಮನದೊಳು ಹರಿಯನು ನಿಲಿಸೊ ೪

ಊಹಿಸುತೆಲ್ಲವ ಈ ಮಹಿಯೊಳಗಿನ
ಮೋಹವ ಜರಿಯುತ ಪಾಹಿ ಎಂದು
ಆ ಮಹಾಮಹಿಮ ಪ್ರಸನ್ನ ಹರಿಯ ದಿವ್ಯ
ಸ್ನೇಹಸುಜಲದ ಪ್ರವಾಹದೊಳಗೆ ನಲಿಯೊ ೫

೨೩೮
ಹನುಮನ ಮತದಲಿ ಅನುಮಾನ ಬೇಡವೊ
ಮನಮುಟ್ಟಿ ಭಜಿಸಲೊ ಎಲೆ ಮನವೇ ಪ

ಸನಕಾದಿ ವಂದಿತ ಮನಸಿಜ ಜನಕ
ವನಜನಯನ ಹರಿಗನುಮತವಾದಂತ ಅ.ಪ

ಹರಿಯೆ ಸರ್ವೋತ್ತಮ ವಿಧಿ ಭವಾದಿಗಳಲ್ಲಿ
ಅನುಚರರಿವನಿಗೆ ಪರತಂತ್ರರು
ವಿವಿಧ ತಾರತಮ್ಯ ನಿರತ ಪೊಂದಿರುವರು
ಸಕಲ ಜಗಂಗಳು ನಿಜವೆಂದು ಬೋಧಿಪ೧

ಮುಕುತಿಯೆಂಬುದು ನಿಜಾನಂದದ ಅನುಭವ
ಭಕುತಿಯೇ ಪಡೆಯಲು ಸಾಧನವು
ಪ್ರಕೃತಿ ಸಂಯುತವಾದ ದೇಹವ ಕಳೆಯಲು
ಯುಕುತಿ ಬೇರಿಲ್ಲವೆಂದು ಭರದಿ ಸಾರುವಂಥ ೨

ನಯನಕೆ ಗೋಚರ ಒಣ ಊಹೆಯಿಂದಲಿ
ತಿಳಿಯಲು ಹರಿಯನು ಅಳವಲ್ಲವು
ನಿಗಮಗಳಿಂದಲೆ ಅರಿತ ಜ್ಞಾನಿಗೆ ಪ್ರ
ಸನ್ನನಾಗುವನೆಂದು ದೃಢದಿಂದರುಹುವ ೩

ನುಡಿ-೩ : ಅಂತಿಮ ಭಾಷ್ಯಾದಿಗಳ ರಚಿಸಿ

೨೩೯
ಹನುಮನ ಮನೆಯವರು ನಾವೆಲ್ಲರು
ಹನುಮನ ಮನೆಯವರು ಪ

ಅನುಮಾನಪಡದೆಲೆ ಸ್ಥಳವ ಕೊಡಿರಿ ಎಮಗೆ ಅ.ಪ
ಊಧ್ರ್ವ ಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ
ಹೃದ್ಗತವಾದೆಮ್ಮ ತತ್ವಗಳನೆ ನೋಡಿ
ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ
ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ೧

ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು
ಉತ್ತಮ ನೀಚರೆಂಬುವ ಭೇದ ಬಲ್ಲೆವು
ಸುತ್ತಲು ಕಂಡು ಕಾಣದೆ ಇಹ ಎಲ್ಲಕೂ
ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು ೨

ಹಲವು ಲೋಕಗಳುಂಟೆಂಬುದ ಬಲ್ಲೆವು
ಹಲವು ಯೋನಿಗಳಲ್ಲಿ ಜನ್ಮಗಳೊಲ್ಲೆವು
ಅಲವಭೋಧರು ನಮ್ಮ ಕಳುಹಿದರಿಲ್ಲಿಗೆ
ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ ೩

೨೪೦
ಹನುಮಾನ್ ಕೀ ಜೈ ಹನುಮಾನ್ ಕೀ ಜೈ
ಹನುಮಾನ್ ಕೀ ಜೈ ಜೈ ಹನುಮಾನ್ ಪ
ಥೈ ಥೈ ಥೈ ಥೈ ಥೈಥಕ ಥೈಥಕ
ತಕಿಟ ತಕಿಟ ತಕ ಜೈ ಹನುಮಾನ್ ಅ.ಪ.
ಹರಿ ಸರ್ವೋತ್ತಮನೆಂಬುವ ತತ್ವಕೆ ಜಯ
ಭೇರಿಯ ಹೊಡೆದೆಯೊ ಹನುಮಾನ್
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ ೧
ವೈಷ್ಣವ ತತ್ವಗಳನು ಬೋಧಿಸಿ ಜಯ
ಭೇರಿಯ ಹೊಡೆದೆಯೊ ಬಲಭೀಮ
ಢಣ ಢಣ ಢಣ ಢಣ ಢಣ
ಢಣ ಜಯ ಭೇರಿಯ ನಾದವು ಕೇಳುತಿದೆ ೨

ಮೋಕ್ಷಕ್ಕೆ ಒಳ್ಳೆಯ ಮಾರ್ಗವ ತೋರುತ
ಜಯ ಭೇರಿಯ ಹೊಡೆದೆಯೊ ಮಧ್ವ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ ೩

ಅಂದಿನ ನಾದವು ಇಂದು ನುಡಿಯುತಿದೆ
ಮಂದಿಗಳೆಲ್ಲರು ಕೇಳುವರು
ತಂದೆ ಪ್ರಸನ್ನನ ಮಂದಿರಲಿ ಇದು
ಎಂದೆಂದಿಗೂ ಶಾಶ್ವತವಿರಲಿ ೪

ನುಡಿ-೧: ಹರಿಪಾದೋದಕ

೨೪೩
ಹರನಮಃ ಪಾರ್ವತೀ ಪತೆಯೇ ನಮೋ
ಹರನಮಃ ಪಾರ್ವತೀ ಪತೆಯೇ ಪ

ಹರಹರ ಶಂಕರ ಶಂಭೋ ಮಹಾದೇವ
ಹರನಮಃ ಪಾರ್ವತೀ ಪತೆಯೇ ಅ.ಪ
ಹರಿಯ ಪಾದೋದಕ ಶಿರದಲಿ ಧರಿಸಿದ
ಪರಮ ವೈಷ್ಣವ ನಿನ್ನ ಚರಣಗಳಿಗೆ ನಮೋ ೧

ಅತ್ರಿಯ ಪತ್ನಿಯ ಉದರದಿ ಜನಿಸಿದ
ದತ್ತನಾಮಕ ಹರಿ ಭ್ರಾತ ದೂರ್ವಾಸನೆ ೨

ಹರಿಯು ಪ್ರಸನ್ನನಾಗುವ ತೆರದಲಿ ಮನ
ಕರುಣಿಸೋ ಉರಗಭೂಷಣ ಗಿರಿಜಾಪತೆ ೩

ರುದ್ರದೇವರು
೨೪೨
ಹರಿ ಭಕುತಿಯ ಪೊಂದಿಸೆಲೋ ಕರುಣದಿ ಗಿರಿಜಾರಮಣ ಪ

ನರಹರಿಯಲಿ ವರಭಕುತನೆಂದರಿಯರು ನಿನ್ನ ದುರುಳ ಜನರು ಅ.ಪ

ಗಂಗೆಯ ಶಿರದಲಿ ಧರಿಸಿ ಭುಜಂಗವ ಕೊರಳಲ್ಲಿ ಪೊಂದಿದ
ಮಂಗಳ ವರಶೈಲಜೆಯ ಅಪಾಂಗರಸ ಅನಂಗವೈರಿ೧

ಶ್ರೀಹರಿಯಾಜ್ಞೆಯನು ವಹಿಸಿ ಮೋಹಶಾಸ್ತ್ರಗಳನು ರಚಿಸಿ
ಈ ಮಹಿಯೊಳು ದುರುಳರನ್ನು ಮೋಹಿಸಿದ ಮಹಾದೇವ ೨

ಪನ್ನಗಭೂಷಣ ಶಂಕರ ಷಣ್ಮುಗಪಿತ ಚಂದ್ರಮೌಳಿ
ಸನ್ನುತಿಸುವೆ ನಿನ್ನ ಮನವಿ ಎನ್ನಲಿ ದಯದಿಂ ಪ್ರಸನ್ನ ೩

೨೨೧
ಹರಿಯೆ ಚಿತ್ರಲೀಲೆಗಳನು ಅರಿಯಲಳವೇ ಸುಲಭದಿ ಪ
ನಿರತ ಸೇವೆ ಮಾಡುತಿರುವ ಸಿರಿಯು ತಾನಚ್ಚರಿಯಲ್ಲಿರಲು ಅ.ಪ
ಪೊಡವಿಯಲಿ ದುರಿತಗಳನ್ನು ನಡೆನುಡಿಗಳಿಂದರಿಯದಿರುವ
ಹುಡುಗರಾಗಿ ನಲಿಯುವರನ್ನು ಸಿಡಿಲಿನಿಂದ ತನ್ನಡಿಗಳಿಗೆಳೆವ ೧
ಕ್ಲೇಶದಿಂದ ಗಳಿತವಾದ ಹೇಸಿಗೆಯ ದೇಹದಲ್ಲಿ
ಆಸೆ ತೊರೆದು ನರಳುವರಲಿ ಲೇಶ ಕರುಣ ತೋರದೆ ಇರುವ೨

ಸತ್ಯ ಸಂಕಲ್ಪನೆಂದರಿತು ನಿತ್ಯನನ್ನು ನೆನೆದು ತಮ್ಮ
ಕೃತ್ಯಗಳನು ರಚಿಸಿ ಮುದದಿ ತೃಪ್ತನಾಗುವ ಭಕ್ತರ ಪ್ರಸನ್ನ ೩

೩೧೮
ಹರಿಲೀಲೆ ಹರಿಲೀಲೆ ಪ
ಜಗದೊಳು ಸುಜನರು ಬಳಲುತಲಿರುವುದು ಅ.ಪ
ಉಚ್ಚಕುಲದಿ ಪುಟ್ಟಿ ಸ್ವಚ್ಛ ಜ್ಞಾನದಿಂದ
ಅಚ್ಯುತನಂಘ್ರಿಯ ಪೂಜಿಸುತಿರಲು
ತುಚ್ಛ ಜನರುಗಳು ಸ್ವೇಚ್ಭೆಯಿಂದಲಿ
ಹುಚ್ಚು ಹರಟೆಗಳ ಹರಟುವುದೆಲ್ಲವು ೧

ಪಂಡಿತರೆಲ್ಲ ಅಖಂಡ ಕಲೆಗಳಿಗೆ
ಮಂಡನರೆನಿಸಿ ಭೂಮಂಡಲದಿ
ಭಂಡಿ ಭಂಡಿ ಧನರಾಶಿಗಳಿರಲಾಗಿ
ಪಿಂಡಕ್ಕಿಲ್ಲದೆ ತಿರುಗುತಲಿರುವುದು ೨

ಮನವ ತೊರೆಯುತ ಕಾಮಿನಿಯರುಗಳು
ಗಾನವ ಮಾಡಲು ಆನಂದಿಪರು
ಜ್ಞಾನಿ ದಾಸರುಗಳು ಭಕುತಿಯಿಂದ ಹರಿ
ಗಾನವ ಮಾಡಲು ಮಾನಸದಿರುವುದು ೩

ಪನ್ನಗಶಯನನು ತನ್ನ ಭಕುತರಿಗೆ
ಹೆಣ್ಣು ಹೊನ್ನು ಮಣ್ಣಿನ ಆಸೆ
ಯನ್ನು ಬಿಡಿಸಿ ಅವರನ್ನು ಉದ್ಧರಿಸಿ ಪ್ರ
ಸನ್ನನಾಗುವೆ ನಾನೆನ್ನುತ ಪೇಳ್ವುದು ೪

೨೨೨
ಹಿಗ್ಗಿದಳು ನಂದನ ಸತಿ
ಮುಗ್ಧೆ ತನ್ನಯ ಸುತನ ಮುದ್ದು ಮುಖವ ನೋಡಿ ಅ.ಪ

ಪಾಲು ಬೆಣ್ಣೆ ಕಳ್ಳ ತಾಳು ಕಟ್ಟುವೆ ನಿನ್ನ
ಕಾಲುಗಳನೆಂದು ಕರಗಳಲಿ ಪಿಡಿದು
ನೀಲಮೇಘಶ್ಯಾಮ ಶ್ರೀಲಕುಮಿಯರಸನನು
ಬಾಲನೆಂದರಿತು ಆಲಿಂಗನದಿ ಮೈ ಮರೆತು೧

ಅಂಬುಜೋದ್ಭವನಯ್ಯ ಅಂಬೆಗಾಲಿಡುವುದನು
ನಂಬಬಹುದೇ ಮೋಹಜಾಲವಿರಲು
ಸಂಭ್ರಮದಿ ಸುತನನ್ನು ಚುಂಬಿಸುತ ರಭಸದಲಿ
ಅಂಬುಜಾನನೆ ಮೋದ ಕಂಬನಿಯ ಸುರಿಸುತ್ತ ೨

ಓರೆಗಣ್ಣಿನ ನೋಟ ನಾರಿಯರ ಪೇಚಾಟ
ಮೂರು ಲೋಕಕೆ ಹರ್ಷಕರ ಮಂದಹಾಸ
ಸೇರಿಸಿದ ಮುಕ್ತಗಳ ಮೀರಿ ಪೊಳೆಯುವ ದಂತ
ಚಾರುಮುಖಿ ಸುತನ ಮನಸಾರ ದರುಶನದಿಂದ ೩
ಭೃಂಗಗಳ ಧಿಕ್ಕರಿಪ ಮಂಗುರುಳು ಮಸ್ತಕದಿ
ರಂಗಿನಾ ಕಸ್ತೂರಿತಿಲಕ ಪಣೆಯಲ್ಲಿ
ಶೃಂಗಾರ ಸಿಂಧು ಶ್ರೀರಂಗನ್ನ ನೋಡುತಲಿ
ಅಂಗನಾಮಣಿ ಅಂತರಂಗ ಪ್ರೇಮದ ಭರದಿ ೪

ತನ್ನ ಉದರದಿ ನಳಿನಜಾಂಡವನೆ ಪೊತ್ತಿರುವ
ಉನ್ನತೋನ್ನತ ಸುಗುಣ ಜ್ಞಾನಮಯನ
ತನ್ನ ಮಗನೆಂದರಿತು ಸ್ತನ್ಯಪಾನದಿ ಸುಪ್ರ
ಸನ್ನಮುಖಿ ಹರುಷ ಪುಳಕಿತಳಾಗಿ ಹೆಮ್ಮೆಯಲಿ ೫

೩೧೯
ಹುಚ್ಚು ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಎನ್ನ
ಅಚ್ಚಳಿಯದೆ ದಡಕೆ ತಂದಿತಚ್ಚುತನ ದಯ ೧

ಬಿಚ್ಚಿ ತೋರಲಾಗದೆನ್ನ ಅಚ್ಚರಿಯನು ದೇವ ನಿನ್ನ
ಮೆಚ್ಚುಗೆಯನು ಪಡೆವೆನೆಂದು ಸತ್ಯ ಮಾಡುವೆ ೨

ಅಷ್ಟದಾರಿದ್ರ್ಯ ಬರಲಿ ಕಷ್ಟ ರಾಶಿ ರಾಶಿ ಬರಲಿ
ಶ್ರೇಷ್ಟದ ಮಾನಸದ ಭಾಗ್ಯವಿತ್ತು ಪೊರೆಯಲೊ ೩
ವಿಷವ ಬಡಿಸುವರಿಗೆ ದಿವ್ಯ ರಸ ಕುಡಿಸುವಂತೆ ದೇವ
ಹಸನ ಬುದ್ಧಿಯಿತ್ತು ಪೊರೆಯೊ ಹೃಷಿಕೇಶನೆ ೪
ತ್ರಾಣವ ಕೊಡೊ ಮನಕೆ ದೇವ ಪ್ರಾಣಗಳನ್ನು ಚರಣದಲ್ಲಿ
ಕಾಣಿಕೆಯರ್ಪಿಸುವೆ ರಮಾಪ್ರಾಣನಾಥನೆ೫

ಮದಕೆ ಕಿಚ್ಚನೊಟ್ಟಿ ಕ್ಷಣದಿ ಎದೆಗೆ ಕೆಚ್ಚನಿತ್ತು ಮುದದಿ
ಬದುಕಿನಲೇ ಮುಕುತಿ ಸೌಖ್ಯವಿತ್ತು ಪೊರೆಯೆಲೊ೬

ಎನ್ನ ಚಿತ್ತ ರಾಜ್ಯದಲ್ಲಿ ಉನ್ನತ ಪೀಠದಲಿ ಕುಳಿತು
ನಿನ್ನ ವಿಭವ ತೋರುತಲಿ ಪ್ರಸನ್ನನಾಗೆಲೊ ೭

೨೨೩
ಹೂ ಬೇಕೆ ಹೂವು ಪರಿಮಳದ ಹೂವು ಪ

ಪರಮ ಪುರುಷ ನಮ್ಮ ಕೃಷ್ಣನ ತೋಟದ ಅ.ಪ

ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ
ಮಲ್ಲೆ ಗುಲಾಬಿ ತಾವರೆ ಪಾರಿಜಾತ
ಎಲ್ಲ ವಿಧದ ಮನಕ್ಲೇಶವ ಕಳೆಯಲು
ಪುಲ್ಲಲೋಚನ ನಮ್ಮ ಕೃಷ್ಣನು ಧರಿಸಿದ ೧
ದಾರದಿ ಕಟ್ಟಿಲ್ಲ ಮಾರು ಹಾಕುವುದಿಲ್ಲ
ಕೇರಿ ಕೇರಿಗಳಲ್ಲಿ ಮಾರುವುದಲ್ಲ
ಭೂರಿಭಕುತಿ ಎಂಬ ಭಾರಿಯ ಬೆಲೆಗಿದ
ಮಾರೆಂದು ಪೇಳಿದ ಶೌರಿಯ ಸೊಬಗಿನ೨

ರಂಗು ರಂಗುಗಳಿಂದ ಕಂಗೊಳಸುವ ಸ್ವಚ್ಛ
ಬಂಗಾರದ ಛವಿ ಹಂಗಿಸುವ
ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವ
ನಂಘ್ರಿಯ ಸಂಗದಿ ಮಂಗಳಕರವಾದ ೩