Categories
ರಚನೆಗಳು

ವಿದ್ಯಾಪ್ರಸನ್ನತೀರ್ಥರು

ನುಡಿ-೧:ಯಂಕಾಮಯೇತ್ಯಾದಿ ಶ್ರುತಿಗಳೆಲ್ಲ
ಲಕ್ಷ್ಮೀದೇವಿ
೨೨೬
ಅಂಬೋರುಹೇಕ್ಷಣೆ ಅಂಬಾಲತೇ ಜಗ
ದಂಬಾ ಪೊರೆಯೆ ಸತತ ಗಂಭೀರ ಗಜಗಮನೆ ಪ
ನಂಬಿದೆ ನಿನ್ನ ಪದಾಂಬುಜಯುಗಳವ
ಕಂಬು ಕಂಧರಿ ಕನಕಾಂಬರ ಧಾರಿಣಿ
ಬೆಂಬಲವೀಯೆ ವಿಳಂಬವ ಮಾಡದೆ ಅ.ಪ
‘ಯಂಕಾಮಯೇ’ತ್ಯಾದಿ ಶೃತಿಗಳೆಲ್ಲಾ
ಪಂಕಜಭವಮುಖ ಸುಮನಸರು
ಕಿಂಕರರೆನ್ನುತ ಪೊಗಳುತಿರೆ
ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿ ಶ
ಶಾಂಕ ಸೋದರಿ ಆತಂಕವ ಬಿಡಿಸೆ ೧
ನೀರಜಾತಗಣ ಕೃತ ನಿಲಯೇ
ಮಾರಜನಕ ಹರಿ ಪ್ರಿಯ ಜಾಯೆ
ಕೋರುವೆ ನಿನ್ನಯ ಪರಮದಯೆ
ಸಾರಸಾಕ್ಷಿ ಸರಿಯಾರು ನಿನಗೆ ಕರು
ಣಾರಸಮಯೆ ಸುವಿಶಾರದೆ ಜನನಿ ೨
ಪನ್ನಗವೇಣಿ ಸಾಗರನ
ಕನ್ಯೆ ನಿಖಿಲ ಸುರನರರೊಳಗೆ
ಮಾನ್ಯೆ ನಿನ್ನ ಪೋಲುವರನ್ಯರುಂಟೆ
ನಿನ್ನ ದಾಸನಾದ ಎನ್ನ ಮನೋರಥ
ವನ್ನು ತಿಳಿಸೆ ಪ್ರಸನ್ನ ಶ್ರೀ ಹರಿಯಲಿ ೩

 

ಲೋಕನೀತಿ
೨೮೫
ಅಧಿಕಾರಿಯಾಗಬೇಕು ಅದಕಾಗಿ ದುಡಿಯಬೇಕು ಪ
ಅಧಿಕಾರಿಯಾಗುವುದು ಸುಲಭವಲ್ಲ
ಎದೆಚಾಚಿ ಜಗದಿ ಹೆಮ್ಮೆಯ ತೋರುವ ಅ.ಪ
ಶಾಶ್ವತವಿರಬೇಕು ಅದನೀಶ್ವರ ಕೊಡಬೇಕು
ವಿಶ್ವವಿದ್ಯಾನಿಲಯವ ಸೇರುತಲಿ
ಶಶ್ವದಿ ಪರವಿದ್ಯಾಶಾಖೆಯಲಿ ೧
ಭೂಷಣವೆನಗೆಂದು ನೀ ಮೋಸ ಹೋಗಬೇಡ
ಸಾಸಿರ ಸಾಸಿರ ಸ್ಥಾನಗಳಿಗೆ ನೀ
ಆಸೆ ಪಡದೆ ಹರಿಶಾಸನ ಸಭೆಯ ೨
ಕಮ್ಮಿಯ ಪ್ರತಿಫಲಕೆ ನೀ ಸಮ್ಮತಿ ಕೊಡದಿರೆಲೊ
ಮರ್ಮವರಿತು ಪರಲೋಕವ ಪಡೆಯಲು
ಹಮ್ಮನು ಮುರಿಯುವ ಕಾರ್ಮಿಕ ಸಭೆಯ ೩
ಕಾಲವರಿತು ಸತತ ನೀ ಮೇಲಕೇಳಬೇಕು
ಬಾಲಗೋಪಾಲನು ನೆಲೆಸುವುದಕೆ ಹೃದ
ಯಾಲಯ ರಚನೆಯ ಚತುರ ಶಿಲ್ಪಿಯ ೪
ಶ್ರವಣ ಮಾಡಬೇಕು ಶಾಸ್ತ್ರವ ಮನನ ಮಾಡಬೇಕು
ಶ್ರವಣ ಮನನ ನಿಧಿ ಧ್ಯಾಸನದಿಂದ ಪ್ರ
ಸನ್ನ ಹರಿದಯದಿ ಸಿಗುವ ಮುಕುತಿಗೆ ೫

 

ಭಗವಂತನ ಸಂಕೀರ್ತನೆ
೧೧೮
ಅನುದಿನ ನೆನೆಯಲೊ ಹನುಮನಿಗತಿ ಪ್ರಿಯ
ಪರಮ ಪಾವನ ರಾಮನಾಮ ಪ
ಇನಕುಲ ಭೂಷಣ ಮುನಿಜನ ತೋಷಣ
ಜಾನಕಿರಮಣನ ನಾಮ ಅ.ಪ
ಗೌತಮ ಸತಿಯೆ ಪುನೀತಳ ಮಾಡಿ ಪ್ರ-
ಖ್ಯಾತಿ ಪೊಂದಿದ ದಿವ್ಯನಾಮ
ಶೀತಲ ಕಿರಣ ಭೂಷಣನ ಧನುವ ಮುರಿದು
ಸೀತೆಯ ಪೊಂದಿದ ನಾಮ ೧
ಜನಕನ ವಚನವನುಳಿಸುವ ನೆವದಲಿ
ವನವಾಸ ಮಾಡಿದನ ನಾಮ
ವನದಲಿ ಖರದೂಷಣ ಮುಖ ದನುಜರ
ಹನನ ಮಾಡಿದ ದಿವ್ಯನಾಮ ೨
ಶರಭಂಗಮುನಿಗೆ ಪರಮ ಪದವನಿತ್ತ
ಪರಮ ಪವಿತ್ರನ ನಾಮ
ವರಿಸಲು ಬಂದ ಶೂರ್ಪಣಿಖಿ ನಾಸಿಕ ಕರ್ಣ
ಮುರಿಸಿದವನ ಶುದ್ಧ ನಾಮ ೩
ಭೂಮಿಜೆಯನು ಮೋಸದಿಂದ ಅಗಲಿಸಿದ
ಮಾರೀಚನ ಕೊಂದ ನಾಮ
ಸ್ವಾಮಿಯ ಪ್ರೇಮಕ್ಕೆ ಮಡಿದ ಜಟಾಯುಗೆ
ಅಭಯ ಹಸ್ತವನಿತ್ತ ನಾಮ ೪
ಆ ಮಹಾ ಹನುಮನ ಕಾಮಿತದಂತೆ
ಮಹೇಂದ್ರ ಸುತನ ಕೊಂದ ನಾಮ
ಕೋಮಲ ಕಮಲ ಸುಹೃದತನಯನಿಗೆ
ಸಾಮ್ರಾಜ್ಯವನಿತ್ತ ನಾಮ ೫
ಪರಿಪರಿವಾರದಿಂ ಶರಧಿಯೊಳ್ ಸೇತು
ಬಂಧನವ ಮಾಡಿದ ರಾಮನಾಮ
ದುರುಳ ರಾವಣ ಮುಖ ರಕ್ಕಸರನೆ ಕೊಂದು
ಧರಣಿ ಸುತೆಯ ಕಂಡ ನಾಮ ೬
ಶರಣವ ಪೊಂದಿದ ಭಕುತ ವಿಭೀಷಣಗೆ
ಕರುಣವ ತೋರಿದ ನಾಮ
ತರುಣಿ ಸೀತೆ ಲಕ್ಷ್ಮಣರಿಂದ ಕೂಡಿ ಪು
ಷ್ಪಕವನೇರಿದ ಸಾಧು ನಾಮ ೭
ಉರುತರ ತಪದಲಿ ನಿರತನಾದ ತಮ್ಮ
ಭರತನ ಉಳಿಸಿದ ನಾಮ
ದೊರೆತನವೊಂದಿ ಸಕಲ ಸುಜನರುಗಳಿಗೆ
ಪರತರ ಸುಖವಿತ್ತ ನಾಮ ೮
ತನ್ನ ಭಕುತರೊಳು ಉನ್ನತನೆನಿಸಿದ
ಘನ್ನಮಾರುತಿಗೊಲಿದ ನಾಮ ಪ್ರ
ಸನ್ನನಾಗಿ ಸಂತತ ಇವನಿಗೆ ತನ್ನ
ಸಹ ಭೋಗ ಸುಖವಿತ್ತ ನಾಮ ೯

 

ತತ್ವಚಿಂತನೆ
೩೨೧
ಅರಿಯಲಳವೇ ಜ್ಞಾನಿಯ ಹೊರಗಿನ ಬಡರೂಪದಿ ಪ
ಧರೆಯು ಉದರದಿ ನೆಲಸಿಹ ಪರಿಪರಿ ವಿಧ
ಸಿರಿಯನು ಅರಿವುದು ಬಲುಸುಲಭವೆ ಅ.ಪ
ಹುಚ್ಚರಂದಿ ಕಾಂಬೋರು ಜನ ಮೆಚ್ಚಿಗೆಯನು ಬಯಸರು
ಅಚ್ಚರಿಯಲಿ ನಡೆವರು ಎಚ್ಚರಿಕೆಯ ಪೊಂದದಂತೆ ೧
ಒಡವೆ ವಸನಗಳೆಲ್ಲವ ಸಡಗರವನು ಅರಿಯರು
ಕಡು ಬಡತನ ಕ್ಲೇಶಕೆ ನಡುಗಲರಿಯರು ಸುಲಭದಿ ೨
ಮೇದಿನಿಯಲಿ ದಿನಗಳ ಮೋದದಿಂದಲಿ ಕಳೆವರು
ಮಾಧವನಲಿ ಭಕುತರು ಬೂದಿ ಮುಚ್ಚಿದ ಕೆಂಡದಂತೆ ೩
ಮರುಳು ಮೋಸವನರಿಯರು ಸರಳಮನದಲಿ ಇರುವರು
ಕೆರಳಿದ ಸುಮದಂದದಿ ತಿರುಳುಗಳನು ಸುಲಭದಿ ೪
ಭಕ್ತ ಪ್ರಸನ್ನನೊಳು ಆಸಕ್ತ ಸನ್ಮನ ಯುಕ್ತರು
ಯುಕ್ತಿ ಚತುರತೆಯರಿಯರು ಹುತ್ತದೊಳಿಹ ಸರ್ಪದಂತೆ ೫

 

೨೮೬
ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ
ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ
ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ
ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ
ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ
ಬಿಟ್ಟಿ ಬಯಸುವ ನರನು ಬಲು ಮೋಸವಂತೆ ೧
ಸುಳ್ಳು ಹೇಳುವ ನರಗೆ ಪರದಾಟವಂತೆ
ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ
ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ
ಕುಳ್ಳ ಹೋರಾಡಿದರೆ ಜಯವಿಲ್ಲವಂತೆ ೨
ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ
ಊರು ಸೇರುವ ಮುನ್ನ ಬಹಳ ದಣಿಯಂತೆ
ಕೀರುತಿಯ ಪಡೆಯುವಗೆ ಬಹು ಶತ್ರುವಂತೆ
ಮೂರು ಜ್ಞಾನಿಗಳಿರಲು ಭಾರಿ ಸಭೆಯಂತೆ ೩
ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ
ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ
ಹಳ್ಳಿಗಾರನ ಸತ್ಯ ಬಹಳ ಒರಟಂತೆ
ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ ೪
ಮುಟ್ಟಲಾಗದ ನಾಯಿ ದಾಸಾನುದಾಸ
ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ
ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ
ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ ೫
ಮುದಿತನವು ಭೂಷಣವು ಸ್ಥಾನವಿರುವವರಿಗೆ
ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ
ಹೆದರುವುದೆ ಭೂಷಣವು ದುಷ್ಟಸಂಗದಲಿ
ಗದಗದವೆ ಭೂಷಣವು ಭಕ್ತಿರಸದಲ್ಲಿ ೬
ತನ್ನ ತಾ ಶೋಧಿಸಲು ಬಲು ದುಃಖವಂತೆ
ಅನ್ಯರನು ಶೋಧಿಸಲು ಸಂತೋಷವಂತೆ
ಕನ್ನಡಿಯ ನೋಡದಿರೆ ಬಲು ಚೆಲುವನಂತೆ
ಕನ್ನಡಿಯ ನೋಡಿದರೆ ತಾನಳುವನಂತೆ ೭
ಬಚ್ಚಲಿಲ್ಲದ ನಗರ ಸುಂದರಲ್ಲಂತೆ
ಬಚ್ಚಿಟ್ಟ ಧನವು ತಾ ಕದ್ದವನಿಗಂತೆ
ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ
ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ ೮
ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ
ಹೆಂಡದಾ ಪೀಪಾಯಿ ಬಲು ಶಕುನವಂತೆ
ಮಂಡೆ ಬೋಳಿರುವವಳು ಬರಬಾರದಂತೆ
ತೊಂಡು ಸೂಳೆಯು ಬರಲು ಬಹಳ ಶಕುನವಂತೆ ೯
ಖ್ಯಾತಿ ಬಾರದು ನರಗೆ ಬದುಕಿರುವ ತನಕ
ಗೋತ ಹೊಡೆದವನು ಬಲು ಗುಣಶಾಲಿಯಂತೆ
ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ
ಕೋತಿ ಕುಣಿಯುತಿರಲು ನೂರು ಜನರಂತೆ ೧೦
ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ
ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ
ಕಹಿಯಾದ ಕಾಫಿಯದು ಅಮೃತ ಸಮವಂತೆ
ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ ೧೧
ಸಾಲಿಗ್ರಾಮ ತೊಳೆಯಲತಿ ಬೇಸರಂತೆ
ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ
ಶೀಲವಾಡುವ ನುಡಿಗೆ ಸಂದೇಹವಂತೆ
ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ ೧೨
ಒಳಿತವನು ಜಗದಲ್ಲಿ ತಲೆ ಎತ್ತನಂತೆ
ಕಲಿಪುರುಷನಂಥವನು ಬಲು ಮೇಲೆಯಂತೆ
ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ
ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ ೧೩
ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ
ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ
ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ
ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ ೧೪
ಭೂಮಿ ಎಲ್ಲವು ಇನ್ನು ಉಳುವಾತಗಂತೆ
ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ
ರಾಮರಾಜ್ಯದಿ ಕಾರು ಓಡಿಸುವವಗಂತೆ
ಆ ಮದುವೆ ಕನ್ಯೆಯು ಪುರೋಹಿತಗಂತೆ ೧೫
ಬಕಳಿಸುವ ನಾಯಕರೆ ಸರಕಾರವಂತೆ
ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ
ಸುಖದ ಅನುಭವ ಜನಕೆ ಕುದುರೆ ಕೊಂಬಂತೆ
ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ ೧೬
ಚಂದ್ರಲೋಕಕೆ ಪಯಣ ಕಾದಿರುವುದಂತೆ
ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ
ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ
ಹಿಂದುಳಿದ ಗುಂಪಿಗವಕಾಶವಿಲ್ಲಂತೆ ೧೭
ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ
ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ
ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ
ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ ೧೮
ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ
ಅರಿಯುವಜ್ಞಾನಿಗಳು ತಲೆಹರಟೆಯಂತೆ
ಅರಿತವನು ನುರಿತನಾದರು ಬೇಡವಂತೆ
ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ ೧೯
ಜೈಲುವಾಸವೆ ಯೋಗ್ಯತೆಯ ಚಿನ್ಹೆಯಂತೆ
ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ
ಥೈಲಿಯಿದ್ದರೆ ಖೂನಿ ಮಾಡಬಹುದಂತೆ
ಶೈಲವೇರುವ ನರನು ಮೇಧಾವಿಯಂತೆ ೨೦
ನರಬಲಿಯ ಕೊಡುವವರು ಹಿರಿಯ ಜನರಂತೆ
ಹಿರಿಯ ಮಾರ್ಗದ ಜನರು ಧರೆ ಭಾರವಂತೆ
ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ
ಸುರಿಸುವರು ಧನಧಾನ್ಯ ಸುರಿಮಳೆಗಳಂತೆ೨೧
ಮಂತ್ರವಾದಿಯು ನೋಡಿ ಗ್ರಹಭಯವಿದೆಂದ
ಯಂತ್ರದಲಿ ನೋಡಿದವ ಹೃದಯರೋಗೆಂದ
ಚಿಂತಿಸುತ ಪಂಡಿತನು ಮೋಹಿನಿಯಿದೆಂದ
ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ ೨೨
ಶಿಂಗಪ್ಪ ಕದ್ದು ತಾ ಜೈಲು ಸೇರಿದನು
ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು
ಹೇಂಗ್ರಪ್ಪ ಬದುಕುವುದು ಎಂದು ಫಲವೇನು
ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ ೨೩
ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ
ಕಾದಾಡಿ ಬದುಕಲನುಭವವಿಲ್ಲವಂತೆ
ಓದು ಬದುಕೆಂದರವಕಾಶವಿಲ್ಲಂತೆ
ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ ೨೪
ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ
ಸುಮನಸರು ಆಳುತಿಹರು ಜನವಿಲ್ಲವಂತೆ
ಕಮಲೆರಮಣಗೆ ಬಂತು ಪೀಕ್ಲಾಟವಂತೆ
ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು ೨೫

 

೨೫೪
ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ
ಸುವಿನೋದವ ಪಡೆದರು ಸುರನರಜನರು ಪ
ಪವನಸುತರ ಮತ ಭುವಿಯಲಿ ಸುಲಭದಿ
ವಿವರಿಸಿ ಜನರಿಗೆ ಪ್ರವಚನವೆಸಗಲು ಅ.ಪ
ಗುರು ಬ್ರಹ್ಮಣ್ಯರ ವರಪದ ಕಮಲಗಳ
ಪರತರ ಭಕುತಿಯಲಿ
ಪರಿಪರಿ ಸೇವಿಸಿ ಗುರುಕರುಣದಲಿ
ಹರುಷವ ಪೊಂದುತಲಿ
ವರವ ಪಡೆದ ಭೂಸುರ ರಾಮಾರ್ಯರ
ವರಸತಿಯುದರದಿ ವಹ್ನಿಪುರದೊಳವ
ತರಿಸುವ ಧರೆಯೊಳು ಸುಜನಗಣವನು
ದ್ಧರಿಸಲು ಮುದದಲಿ ಸಿರಿಪತಿಭಕುತನು ೧
ಅತಿಬಾಲ್ಯದಿ ಗುರ್ವಾಜ್ಞೆಯನನುಸರಿಸಿ
ಯತಿಯಾಶ್ರಮವಹಿಸಿ
ಕ್ಷಿತಿಯೊಳಪರೋಕ್ಷಜ್ಞಾನಿಗಳೆಂದು
ಪ್ರಥೆಯನು ಪೊಂದಿದ ಲಕ್ಷ್ಮೀನಾರಾಯಣ
ಯತಿಯಲಿ ಶಾಸ್ತ್ರಾಮೃತ ಪಾನ ಮಾಡುತ
ಅತಿ ಸುಲಭದ ಶ್ರುತಿಗಳ ಸಾರವ
ಕ್ಷಿತಿ ಸುರರೊಳಗತಿ ಹಿತದಲಿ ಅರುಹಲು ೨
ಗಜಗಹ್ವರ ದೇಶದ ನರಪತಿಗಳಿಗೆ
ನಿಜವರ ಕರುಣದಲಿ
ವಿಜಯಾಭ್ಯುದಯಗಳನು ಸತತ ಪೊಂದಿಸುತ
ರಜತಕನಕ ನವಮಣಿಗಣಯುತ ವಾ
ರಿಜವನು ಪೋಲುವ ಸಿಂಹಾಸನದಲಿ
ಬಿಜಯವಗೈಯ್ಯುತ ಸುಜನ ಸಮೂಹಕೆ
ನಿಜಪದಯುಗಳಾಂಬುಜ ಸೇವೆ ನೀಡಲು ೩
ನಂದತೀರ್ಥರ ವರಶಾಸ್ತ್ರಗಳನ್ನು
ಚಂದದಿ ವಿವರಿಸಲು
ಚಂದ್ರಿಕಾ ನ್ಯಾಯಾಮೃತ ಮೊದಲಾದ
ಗ್ರಂಥಗಳನು ರಚಿಸಿ
ಮಂದಜನಕೆ ಮುಚುಕುಂದನ ಶುಭಗುಣ
ವೃಂದಗಳನು ಸುಖದಿಂದ ಬೋಧಿಸಲು
ಅಂದಪದಗಳನು ರಚಿಸುತ ಶುಭಗುಣ
ಸಾಂದ್ರನ ಭಜನಾನಂದ ಪೊಂದಿಸಲು ೪
ವಿಜಯೀಂದ್ರ ವಾದಿರಾಜ ಮೊದಲಾದ
ನಿಜವರ ಶಿಷ್ಯರುಗಳ
ವ್ರಜಕೆ ಶಾಸ್ತ್ರಾರ್ಥಗಳನು ಬೋಧಿಸುತ
ದ್ವಿಜಕುಲ ಸಂಭವರಾದ ಪುರಂದರ ಸುಜನ ಶಿರೋಮಣಿ
ಕನಕ ಪ್ರಮುಖ ಪೂಜಿತ ಪದಯುಗಳಾಂಬುಜ ಯತಿಶೇಖರ
ವಿಜಯಸಾರಥಿಯು ಪ್ರಸನ್ನನಾಗಲೆಂದು ೫

 

೨೮೭
ಆಕಳ ಕಾಯುವ ಗೊಲ್ಲನ ಪರಿಯಲಿ
ತಾ ಕೋಲನು ಪಿಡಿಯನು ಹರಿಯು ಪ
ಸಾಕಲು ಬಯಸುವ ಜನರಿಗೆ ದೇವನು
ತಾ ಕರುಣಿಸುವನು ಸನ್ಮತಿಯ ಅ.ಪ
ಸಂಸಾರದ ಸಾಗರವನು ದಾಟಲು
ಹಿಂಸೆಗಳೆಲ್ಲವ ಸಹಿಸುವರ
ಸಂಶಯ ಭ್ರಾಂತಿಯ ತೊಲಗಿಸಿ ಪೊರೆಯಲು
ಕಂಸಾರಿಯು ತಾ ಕೊಡುವ ವಿವೇಕವ ೧
ನೀರಿನ ಮೇಲಿನ ಗುಳ್ಳೆಗಳಂದದಿ
ನೂರು ವಿಧದ ಭವ ಭೋಗಗಳು
ಯಾರಲಿ ಕರಣವ ತೋರ ಬಯಸುವನೊ
ದೂರ ಮಾಡುವನು ಧನಕನಕಗಳ ೨
ಶಾಂತಿಯೇ ಸೌಖ್ಯಕೆ ಕಾಣವೆಂಬುವ
ಅಂತರಂಗವನು ಗಮನಿಸಿರಿ
ಶಾಂತಿಗೆ ಸಾಧನ ಜ್ಞಾನವ ಪಡೆಯಲು
ಸಂತತ ಸನ್ಮತಿ ಕೊಡಲಿ ಪ್ರಸನ್ನನು ೩

 

೧೧೯
ಆಟವನಾಡುವ ಬಾರೋ ಶ್ರೀ ಕೃಷ್ಣ ಪ
ನೋಟಕೆ ಜನಗಳ ಕೂಟವು ಕಾದಿದೆ ಅ.ಪ
ದೊರೆಯು ನೀನಂತೆ ದೊರೆಯು ವಾಸಿಸಲು
ಅರಮನೆ ಎಂದಿದನರಿಯಬೇಕಂತೆ
ಪರಿಪರಿಯಲಿ ನಿನ್ನ ಸೇವೆಯು ಮಾಡಲು
ಪರಿಚಾರಕ ನಾನಿರಬೇಕಂತೆ ೧
ತಂದೆಯು ನೀನಂತೆ ತಾಯಿ ರುಕ್ಮಿಣಿಯಂತೆ
ಮಂದಿಗಳೆಲ್ಲರು ಮಕ್ಕಳು ನಿನಗಂತೆ
ಮುಂದೆ ಎಮಗೆ ನಿನ್ನ ದಿವ್ಯ ರಾಜ್ಯದಲಿ
ಒಂದೊಂದು ಭಾಗವ ಬರೆದಿಡಬೇಕಂತೆ ೨
ಬಿಂಬವು ನೀನಂತೆ ಕನ್ನಡಿಯೊಳು ಪ್ರತಿ
ಬಿಂಬವು ನಾನಂತೆ ಯೋಗಿ ಪ್ರಸನ್ನ
ಬಿಂಬದ ವಿಧವಿಧ ಧ್ಯಾನದಿಂದ ಪ್ರತಿ
ಬಿಂಬದಿ ಬಿಂಬವ ನೋಡುವೆನಂತೆ ೩

 

ಚೆಂಡಾಟ, ಕಣ್ಣುಮುಚ್ಚಾಲೆ
೩೨೨
ಆಟವಾಡಬೇಕು ಒಳ್ಳೆ ಊಟಮಾಡಬೇಕು ಪ
ಆಟ ಬಲ್ಲ ಮಾನವನಿಗೆ ರೋಗದ
ಕಾಟವಿರದೆ ತಾ ಊಟ ಮಾಡುವನು ಅ.ಪ
ಪಂಡಿತರಾಗಿ ಅಖಂಡ ಕಲೆಗಳನು
ಚಂಡಿನಂತೆ ಕರತಲದಲಿ ಪಿಡಿಯುತ ೧
ಕಣ್ಣಮುಚ್ಚಿ ಇಂದ್ರಿಯಗಳ ನಿಲ್ಲಿಸಿ
ಹೃನ್ಮಂದಿರದಲಿ ಹರಿಯನು ಹಿಡಿಯುವ ೨
ಈಶ ಜೀವ ಜಡರೆಂಬೊ ಮೂವರಲಿ
ಈಶನೇ ಹಾಸೆಂದರಿಯುತ ಮೂರೆಲೆ ೩
ಹಿಂದಿನ ದಿನ ಹರಿದಿನ ಮರುದಿನಗಳು
ಇಂದಿರೆಯರಸನ ಕೂಡಿ ಏಕಾದಶಿ ೪
ಸಿಕ್ಕಿದ ಸ್ಥಾನವು ದಕ್ಕದೆಂಬುದಕೆ
ಭಕ್ತ ಪ್ರಸನ್ನ ತೋರಿದ ಕೊಕ್ಕಿನ ೫

 

ಆತ್ಮಶೋಧನೆ
೨೬೬
ಆದ ವಿಷಯಗಳು ಬಾಧಿಸದಂತೆನ್ನ
ಮಾಧವ ನೀ ಪೊರೆಯೋ ದಯಾನಿಧೇ ಪ
ಕ್ರೋಧವ ಬಹುತರ ಸಾಧಿಸಿ ಮನದಲಿ
ಖೇದವ ಪೊಂದಿದೆನೊ ರಮಾಧವ ಅ.ಪ
ಹೆಜ್ಜೆಯನರಿಯದೆ ಗೆಜ್ಜೆಕಟ್ಟಿಹೆನೆಂದು
ಗರ್ಜಿಸುತಿರುವರು ದುರ್ಜನರೆಲ್ಲರು
ಮರ್ಜಿಯನರಿಯುವ ಸಜ್ಜನರೆನ್ನನು
ವರ್ಜಿಸ ಬಿಡದಿರೊ ಮೂರ್ಜಗದೊಡೆಯನೆ ೧
ರೀತಿಯನರಿಯದೆ ಆತುರದಲಿ ಮನ
ಸೋತೆನೆನ್ನುತಿಹರೋ ದುರಾತ್ಮರು
ಖ್ಯಾತಿಗಾಗಿ ಧನ ಪ್ರೀತಿಗಾಗಿ ಸಭ್ಯ
ನೀತಿಯ ಮಾರ್ಗದಿಂದ ಚಲಿಸದೆ ಪೊರೆಯೊ ೨
ನಿನ್ನ ನಾನರಿತೆನೊ ಎನ್ನನರಿತು ನೀ ಪ್ರ
ಸನ್ನನಾಗಿ ನಿನ್ನ ಸೇವೆಯ ನೀಡಲು
ಅನ್ಯರಂತಿರಲಿ ನಿನ್ನ ಮನಕೆ ನಾ
ಅನ್ಯನಾಗದಂತೆ ಸತತವು ಕರುಣಿಸೊ ೩

 

೨೬೦
ಆನಂದತೀರ್ಥರ ಆರಾಧನೆಯಿದು
ಆನಂದಪೂರಿತ ಮಹೋತ್ಸವ ಪ

ನಾವಿಂದು ನಿರ್ಮಲ ಮಾನಸದಿಂದ
ಗೋವಿಂದ ಭಕುತರ ಪೂಜಿಸುವ ಅ.ಪ
ಜೀವನ ಚರಿತೆಯ ಕೇಳಿ ಮಹಾತ್ಮರ
ಜೀವನ ಮಾದರಿ ಎಮಗಿರಲಿ
ಜೀವನದಲಿ ಬೇಸರ ಪಡಬೇಡಿರಿ
ಜೀವೋತ್ತಮರೇ ರಕ್ಷಿಸಲಿ ೧
ಎಮ್ಮ ಮತಕೆ ಸಮಮತವಿಲ್ಲವು ಪರ
ಬೊಮ್ಮನ ಸಮ ದೇವತೆ ಇಲ್ಲ
ಎಮ್ಮ ನುಡಿಗೆ ಸಮ ಹಿತನುಡಿಯಿಲ್ಲವು
ಹಮ್ಮಿನಲೀಪರಿ ಬೋಧಿಸುವ ೨
ನಿನ್ನಯ ವಿಷಯವ ವರ್ಣಿಪುದೆಲ್ಲ ಪ್ರ
ಸನ್ನ ಹೃದಯದಲಿ ಧೈರ್ಯದಲಿ
ಇನ್ನು ವೀರ ವೈಷ್ಣವನಾಗುವೆ
ವೆನ್ನುವ ವಚನ ಕುಸುಮವೆರಚಿ ೩

 

೨೮೮
ಆಪ್ತರಾರೆಂಬುದನು ಆಲೋಚನೆಯ ಮಾಡೆ
ಆಪ್ತರೊಬ್ಬರ ಕಾಣೆ ನೀನಲ್ಲದೆ ಪ
ಆಪ್ತರನ್ಯರ ನಂಬಿ ತಪ್ತ ಜೀವನನಾದೆ
ತೃಪ್ತಿಯ ಬೇಡುವೆ ನಿತ್ಯತೃಪ್ತ ನಿನ್ನನು ದೇವ ಅ.ಪ
ಕೋಳಿಕೂಗದೆ ಬೆಳಕು ಬಾರದೆನ್ನುವ ನುಡಿಯ
ಕೇಳಿ ತಲೆದೂಗಿದೆನು ಮೂಢತನದಿ
ಪೇಳಿದುದು ಮಾಡಿದೆನು ತಾಳಿದೆನು ಮರ್ಮನುಡಿ
ಪೇಳಲೇನುಪಯೋಗ ಶ್ರೀಲಲಾಮ ಸುಧಾಮ ೧
ಒಟ್ಟಿ ಕಿಚ್ಚನು ಹುಲ್ಲುಮೆದೆಗೆ ಅರಳಾರಿಸುವ
ದಿಟ್ಟ ಜನರಾಪ್ತರಾಗುವರೆ ಜಗದಿ
ಇಷ್ಟರಂದದಿ ಹೊರಗೆ ಕೆಟ್ಟ ಯೋಚನೆಯೊಳಗೆ
ಸುಟ್ಟ ಬೆರಳಿಗೆ ಸುಣ್ಣವಿಡುವರೊಬ್ಬರ ಕಾಣೆ ೨
ಕೂತ ಕೊಂಬೆಯ ಬುಡವ ತಾ ತರಿವ ಮೇಧಾವಿ
ಮಾತು ಕೇಳುವ ಜನಗಳಾಪ್ತರಾಗುವರೆ
ಪ್ರೀತ ನೀನಾಗೊ ಅನಿಮಿತ್ತಬಾಂಧವ ನಿನ್ನ
ದೂತ ದೂತರ ದೂತನಾಗುವೆ ಪ್ರಸನ್ನ ೩

 

೩೨೩
ಆರಾಧನೆ ಪರಮಾನಂದ ಪ
ತಾರಾನಾಥ ಕುಲೋದ್ಭವ ಕೃಷ್ಣನ ಅ.ಪ
ಘೋರವು ಈ ಸಂಸಾರವೆನ್ನುವುದು
ದೂರಿನ ನುಡಿಯಿದು ಬಾಳುವಗೆ
ನೂರು ವರುಷಗಳ ಮೀರಿ ಜೀವಿಸಲು
ಕೋರಿಕೆ ಬರುವುದು ಧೀರ ಜನರಿಗೆ ೧
ನಿರ್ಮಲ ದೇಹವು ನಿರ್ಮಲ ಹೃದಯವು
ನಿರ್ಮಲ ನಡೆನುಡಿ ಕರ್ಮಗಳು
ಮರ್ಮಜ್ಞರ ಮಾರ್ಗಗಳಲಿ ಸ್ವೋಚಿತ
ಧರ್ಮಗಳಲಿ ವಿಶ್ವಾಸವಿರುವವರಿಗೆ ೨
ಅನ್ನವಿರುವವರಿಗೆ ತಿನ್ನಲಾಗದು
ತಿನ್ನಬಲ್ಲವರಿಗೆ ಅನ್ನವು ಸಿಗದು
ಘನ್ನ ಮಹಿಮನ ಪ್ರಸನ್ನತೆಯಿಂದಲಿ
ಅನ್ನ ಪಡೆದು ತಿನ್ನಲು ಬಲ್ಲವರಿಗೆ ೩

 

೩೨೪
ಇಂದಿರಾ ರಮಣ ಗೋವಿಂದನಾ
ಜ್ಞೆಯ ಪಡೆದು ಬಂದಿರುವ ದಾಸರಿವರು ಪ
ಇಂದು ಧರ್ಮದಿ ಹರಿಯ ಬಾಂಧವರ ಗೃಹ ಸ್ವರ್ಣ
ಮಂದಿರವಾಗುವುದೆಂದು ಸಂದೇಶ ಕಳಿಸಿರುವ ಅ.ಪ
ಸತ್ವ ರಜ ತಮ ಭೇದವಿಹುದು ದಾನಗಳಲ್ಲಿ
ಕರ್ತವ್ಯವೆಂದರಿತು ಭಕ್ತಿಯಿಂದ
ಉತ್ತಮೋತ್ತಮ ದೇಶ ಪಾತ್ರ ಕಾಲಗಳರಿತು
ಪ್ರತ್ಯುಪಕೃತಿಯ ಗಣಿಸದಿತ್ತ ದಾನವೇ ಶ್ರೇಷ್ಠ ೧
ಶ್ರಾವಣದ ಶನಿವಾರ ಶ್ರೀ ವ್ಯಾಸರಾಜರ
ದೇವ ಮಾಧವ ದೇಶಕಾಲ ಪಾತ್ರ
ಈ ವಿಧದ ಯೋಗವಿನ್ಯಾವ ಜನಗಳಿಗುಂಟು
ನೀವು ನೀಡುವ ದಾನ ಕಾವುದಾಪತ್ತಿನಲಿ ೨
ಒಂದು ಹಿಡಿಯವಲಕ್ಕಿ ತಂದಿತಾ ಬ್ರಾಹ್ಮಣಗೆ
ಎಂದೂ ಕೇಳದ ಸಕಲ ಸೌಭಾಗ್ಯವ
ಇಂದು ನೀಡಿರಿ ಮಿತ್ರ ಬಾಂಧವರೆ ದೇವಕಿಯ
ಕಂದನ ಪ್ರಸನ್ನತೆಯ ಬಂದು ಪಡೆಯಲಿಬಹುದು ೩

 

೨೬೭
ಇಂದಿರೇಶ ನಿನ್ನ ಚರಣದ್ವಂಧ್ವವನ್ನು ಬಿಡೆನೊ ಕರುಣಾ
ಸಿಂಧು ಎನ್ನ ಎಂದು ನೋಡುವಿಯೊ ಮೃದು ಮಂದಹಾಸದಿ ಪ
ನೊಂದಿರುವೆನೊ ಮನದಿ ಬಹಳ ಹಿಂದುಮುಂದು ತೋರದಿಹುದು
ಬಂಧು ಬಳಗವೆಲ್ಲ ನೀನೆ ಎಂದಿಹೆನೊ ಅರವಿಂದಲೋಚನ ಅ.ಪ
ಊರು ಊರು ಸುತ್ತಿ ದಣಿದು ಸಾರರಹಿತ ಶಾಸ್ತ್ರಗಳ ವಿ
ಚಾರದಲ್ಲಿ ಕಾಲ ಕಳೆದೆನೋ ಉದಾರಚರಿತ
ಭೂರಿ ಕರಣದಿಂದ ನಿನ್ನ ಚಾರುಚರಣ ಸೇವೆ ರುಚಿಯು
ತೋರಿ ಮನಕೆ ಸಂತಸದಿ ಮುರಾರಿ ಎನಗೆ ಗತಿಯೆನುತಲಿ ೧
ತಾಮಸ ವಿಷಯದಲಿ ಬಹಳ ಪ್ರೇಮದಿಂದ ವಿವಿಧ ದುರಿತ
ಸ್ತೋಮಗಳಲಿ ಮುಳುಗಿ ಬಳಲಿದೆನೊ ನಿಸ್ಸೀಮ ಮಹಿಮ
ನಾಮಸ್ಮರಣ ಮಾತ್ರದಿಂದ ಪಾಮರ ಜನರುಗಳ ಯೋಗ
ಕ್ಷೇಮ ವಹಿಸಿ ಪೊರೆಯುವಂಥ ಕಾಮಧೇನು ನೀನೆಂದರಿತು ೨
ಮಾತಿನಲ್ಲಿ ಮಲ್ಲರೆಂದು ಖ್ಯಾತಿ ಪಡೆದ ಜನಗಳಿರಲು
ಯಾತರವನು ಇವನು ಎನ್ನದಿರು ದೂತ ಪ್ರಸನ್ನನೇ
ಸೋತು ವಿವಿಧ ಕಾರ್ಯಗಳಲಿ ಆತುರದಲಿ ನಿನ್ನ ಪರಮ
ಪ್ರೀತಿಯ ಪಡೆಯುವುದೇ ದೊಡ್ಡ ನೀತಿಯೆಂದು ಅರಿತು ಸತತ ೩

 

೨೫೧
ಇಂದು ಸಾರ್ಥಕವಾಯ್ತು ಹಿಂದೆ ಮಾಡಿದ ಪೂಜೆ ಪ
ಬಂದು ಗುರುವರ್ಯರ ಬೃಂದಾವನವ ನೋಡಿ ಅ.ಪ
ಮಂಗಳತರಂಗಿಣಿಯ ತಂಗಾಳಿ ಸೇವಿಸುತ
ತುಂಗ ಫಣಿಶಾಯಿಯ ಅಪಾಂಗಪಾತ್ರರ ಕಂಡು೧
ಜ್ಞಾನ ವೈರಾಗ್ಯ ಭಕ್ತಿಗಳ ಮೂರ್ತಿಗಳಂತೆ
ನಾನಾಭರಣ ಸೇವೆ ಅರ್ಪಿಸಿದವರ ಕಂಡು ೨
ಸ್ವಾಂತವನು ಗೆಲಿದು ಪ್ರಸನ್ನ ಮಾನಸರಾಗಿ
ಶಾಂತಿಯನು ಪಡೆದ ಏಕಾಂತ ಭಕುತರ ನೋಡಿ ೩

 

೧೨೦
ಉಪಕಾರವ ನೋಡೋ ಮಾಡಿದ ಪ
ಕೃಪೆ ಬೇಡುವುದತಿಶಯವೇ ಪೇಳೊ ಅ.ಪ
ಪಾಲಕ ನೀ ಹದಿನಾಲ್ಕು ಜಗಗಳಿಗೆ
ಮೂಲೆಯ ಗ್ರಾಮದಲಡಗಿ ಬೇಸರದಿ
ಕಾಲಕಳೆಯುವುದ ನೋಡಿ ಮರುಕದಲಿ
ಬಾಲ ಮೂರುತಿಯ ಜಗಕೆ ತೋರಿಸಿದ ೧
ಅಡಕು ಮಣೆಗಳಲಿ ಪೂಜೆಯಗೊಳ್ಳುತ
ಒಡಕು ತೊಗರಿ ಹುಳಿಯನ್ನವ ಮೆಲ್ಲುತ
ಬಡತನದಲಿ ಜೀವನ ಕಳೆಯುತಿರೆ
ಪೊಡವೀಶನ ಭೋಗಗಳನು ಉಣಿಸಿದ ೨
ಸುಂದರ ನವ ಮಣಿ ಮಂದಿರ ವಿಧ ವಿಧ
ಅಂದದ ಮುತ್ತಿನ ಹಾರ ಪದಕಗಳು
ತಂದೆ ಪ್ರಸನ್ನನೇ ಸಾಸಿರ ಸಾಸಿರ
ಮಂದಿಗಳಿಗೆ ವೈಭವಗಳ ತೋರಿದ ೩

 

೧೨೧
ಎಂಥ ಚತುರ ನಿನ್ನ ಮಗನು ಪ
ಎಂಥ ವಂಚಕನೆ ಯಶೋದೆ ಅ.ಪ
ಸದಾನಂದಪೂರ್ಣ ಎಮ್ಮ
ಹೃದಯದಲ್ಲಿಹನೇ ಯಶೋದೆ ೧
ಕಾರ್ಯಾಕಾರ್ಯ ಗಮನವಿಡದೆ
ಧ್ಯೆರ್ಯದಲಿ ನುಡಿದ ಸರಸವ ೨
ಮುಂದೆ ಗತಿಯ ಕೊಡುವೆ ನಿಮಗೆ
ಎಂದು ಪೇಳಿದೆನೆ ಯಶೋದೆ ೩
ಅಂದ ನುಡಿಗೆ ಮನವ ಜರಿದು
ಸಂಧಿ ಮಾಡಿದೆನೆ ಯಶೋದೆ ೪
ಕ್ಷಿಪ್ರದಲ್ಲಿ ತೋರೆ ಇವನ
ಸುಪ್ರಸನ್ನಮುಖಿ ಯಶೋದೆ ೫

 

ವಾಯುದೇವರು – ಹನುಮಂತ
೨೩೧
ಎಂಥ ವೈರಾಗ್ಯ ಹನುಮಂತ
ಎಂಥ ಸೌಭಾಗ್ಯ ಗುಣವಂತ ಪ
ಸಂತತ ರಾಘವನಂಘ್ರಿ ಕಮಲದಲಿ
ಅಂತರಂಗ ಭಕುತಿಯ ಬೇಡಿದೆಯೊ ಅ.ಪ
ಆವರಿಹರು ನಿನ್ಹೊರತು ರಾಘವರ
ಭಾವವರಿತು ಪ್ರತಿ ಕ್ಷಣಗಳಲಿ
ಸೇವೆ ಸಲಿಸಿ ದಯ ಪಡೆಯಲು ಭೋಗವ
ದಾವದನುಭವಿಸೆ ದುರ್ಲಭವು
ಜೀವೋತ್ತಮನದ ಬಯಸದೆ ಏಕೋ
ಭಾವದಿ ಪದಸೇವೆಯ ಕೇಳಿದ ವೀರ ೧
ಜ್ಞಾನಪರಾಕ್ರಮ ಧ್ಯೆರ್ಯವೀರ್ಯಕಧಿ
ಷ್ಠಾನ ಪವನಸುತ ಜಗತ್ರಾಣ
ನೀನಲ್ಲದೆ ಖಗಮೃಗ ಸುರನರರುಗ
ಳೇನು ಚಲಿಸಬಲ್ಲರೊ ಹನುಮ
ಪ್ರಾಣಭಾವಿ ಚತುರಾನನ ಭುವಿಯೊಳ
ಗೇನು ರುಚಿಯೊ ಕಲ್ಯಾಣಚರಿತ ನಿನಗೆ ೨
ಕಪಿ ರೂಪದಿ ದಶಕಂಧರನ ಮಹಾ
ಅಪರಾಧಕ್ಕೆ ಶಿಕ್ಷೆಯನಿತ್ತೆ
ನೃಪರೂಪದಿ ದುರ್ಯೋಧನನಸುವನು
ಅಪಹರಿಸಿದೆಯೋ ಬಲ ಭೀಮ
ವಿಪುಲ ಪ್ರಮತಿ ವರವೈಷ್ಣವ ತತ್ವಗ
ಳುಪದೇಶಿಸಿದ ಪ್ರಸನ್ನ ಯತಿವರೇಣ್ಯ ೩

 

೧೨೨
ಎಂಥಾ ಪುಣ್ಯ ಎಂಥಾ ಭಾಗ್ಯ ಪ
ಕಂತು ಜನಕ ಶ್ರೀಕಾಂತನ ದರುಶನ ಅ.ಪ
ಜಗಜಗಿಸುವ ದಿವ್ಯಾಭರಣಂಗಳ
ಸೊಗಸಿಲಿ ಧರಿಸುತ ನಗುವನ ದರುಶನ ೧
ಹೇರು ಫಲಗಳನು ಸೂರೆಯ ಮಾಡುವ
ಚಾರುವದನ ನಮ್ಮ ಶೌರಿಯ ದರುಶನ ೨
ದೇಶ ತಿರುಗಿ ಆಯಾಸವೇತಕೆ
ಶ್ರೀಶ ಪ್ರಸನ್ನ ಶ್ರೀ ಕೃಷ್ಣನ ದರುಶನ ೩

 

೨೬೮
ಎಂದು ನೀ ನೀಡುವಿಯೊ ಮನಶಾಂತಿ ಗೋವಿಂದನೆ ಎನಗೆ
ಒಂದೂ ತೋರದೆ ಕವಿದಿಹುದೊ ಭ್ರಾಂತಿ ಪ
ಒಂದು ಘಳಿಗೆ ನಿನ್ನ ಪೊಗಳುವೆನೆಂದರೆ
ಬಂದೊದಗುವುದೊ ಕುಂದು ಸಹಸ್ರವು ಅ.ಪ
ಅನುದಿನ ಗಣನೆಗೆ ಬಾರದ ನುಡಿಗೆ ಕೊನೆಮೊದಲುಗಳಿಲ್ಲದೆ
ದಿನಗಳು ಕಳೆದುವು ದುರ್ವಿಷಯದಲಿ ಎಣೆಯಿಲ್ಲದೆ ಎನ್ನ
ಮನದಲಿ ಬೇಸರ ಜನಿಸಿ ಕೊರೆಯುತಿದೆ
ಅನವರತದಿ ನಿನ್ನ ಮನನದಿ ನಲಿಯಲು ೧
ಮರುಳು ಮೋಸಗಳಲಿ ಚತುರತೆಯುಳ್ಳ ದುರುಳರು ಸಂತತ ಮುಖ
ವರಳುವ ತೆರದಲಿ ಸಡಗರದಿಂದ ಒರಲುವ ವಚನಗಳ
ತಿರುಳುಗಳೆಲ್ಲವನರಿತು ಮನ
ತೆರಳದೆ ಸಹಿಸುತ ನರಳುತಿರುವೆನೊ ೨
ಬಗೆ ಬಗೆ ಮಾಡುತಲಿರುವ ದುರಾಶೆಯಗಲಿದೆ ಮನವನ್ನು
ಹಗರಣ ಮಾಡಿದೆನೋ ಜೀವನವ ನಗೆಗೀಡಾದೆನು ನಾ
ಹಗೆ ಪಡ್ವರ್ಗವನೊಗೆದು ತವಚರಣ
ಯುಗಳದಲಿ ಮನವು ಪ್ರಸನ್ನವಾಗುವಂತೆ ೩

 

೨೮೯
ಎದ್ದರಾಳಲ್ಲೆಂದು ಬಿದ್ದಿರುವೆನೊ ನಾನು
ಮಧ್ವರಮಣನೆ ದಯದಿ ಉದ್ಧರಿಸೆಲೊ ಪ
ಏನು ಮಾಡಿದರೇನು ಮಾಡದಿದ್ದರೆ ಏನು
ಕಾಣಲಾರೆನೊ ನೀನೆ ತಿಳಿಸಿ ಪೊರೆಯೊ
ಕಾನನದಿ ತಿರುತಿರುಗಿ ತೊಳಲಿ ಬಳಲುತಲಿ ಬಲು
ದೀನನಾದೆನೊ ಶಕುತಿಯುಕುತಿ ಹೋಗಿ ೧
ನುಡಿದೆ ನಾ ನೂರೆಂಟು ಅಡಿಯಿಡಲು ಬಲು ಕುಂಟು
ಕಡೆಗಾಲದರಿವಾಗಿ ಬಳಲುತಿಹೆನೊ
ಸಡಲಿತೆನ್ನಯ ದೇಹ ಸಿಡಿಯಿತೆನ್ನಯ ಮೋಹ
ನಡೆಯಾಟವೆನಗಿನ್ನು ಸಾಧ್ಯವಿಲ್ಲವು ದೇವ ೨
ಕೊಟ್ಟರೆ ಹೊಗಳುವರು ಕೊಡದಿರಲು ಬೊಗಳುವರು
ಕೊಟ್ಟೆನ್ನ ಕರವೆರಡು ಬೆಂಡಾದವೊ
ಸುಟ್ಟಿತೆನ್ನಯ ಕೋಪ ನಿಷ್ಠುರದಿ ಬೇಸತ್ತು
ಇಷ್ಟು ಜೀವನ ಸಾಕೊ ಕೃಷ್ಣ ಮೂರುತಿಯೇ೩
ಗುಣವಿಲ್ಲ ಧನವಿಲ್ಲ ತನುವಿಲ್ಲ ಮನವಿಲ್ಲ
ಹೊಣೆ ಹೊರೆವುದೆಂತೆಂದು ಕೈ ಬಿಡದಿರೊ
ತೃಣ ಗಿರಿಯನೊದೆಯುವುದು ಒನಕೆ ತಾ ಚಿಗುರುವುದು
ವನಜನಾಭನೆ ನಿನ್ನ ಮನಕೆ ಬರಲು ೪
ನಾನೇನು ಬಲ್ಲೆ ನಿನಗೇನು ರುಚಿಯೆಂಬುದನು
ನಾನರಿತರೂ ನಿನಗೆ ಕೊಡಬಲ್ಲನೆ
ನಾನೇಕೆ ಜನಿಸಿದೆನೋ ನೀ ಬಲ್ಲೆ ನಾನರಿಯೆ
ಏನೆಂದು ಕೋರದೆಲೆ ಪೊರೆಯಬೇಕೊ ೫
ಸಾಯುವರ ನೋಡಿ ಮನ ನೋಯುವುದು ಮೂರುಕ್ಷಣ
ಮಾಯಾಪಾಶವು ಮುಸುರೆ ಮರೆವುದೆಲ್ಲ
ಪ್ರಾಯದವನಂತೆ ಬಲು ಹೇಯ ಕೃತ್ಯಗಳಾಸೆ
ನಾಯಿಬಾಲದ ಡೊಂಕು ತಿದ್ದಿ ಪೊರೆಯೊ ೬
ನಂಬಿದವರೆಲ್ಲ ಬಲು ಸಂಭ್ರಮದಲಿರುವರೊ
ಅಂಬಿಗನ ತೆರನಾದೆ ನದಿ ದಾಟಿಸಿ
ತುಂಬಿರುವ ಮನದಾಸೆ ಹಂಬಲಿಕೆ ನೀಡಿ ತಿರಿ
ದುಂಬುವನ ಕನಸಿನಂತಾದವೆನಗೆ ೭
ಹಿಂದೆ ನಾ ತರಲಿಲ್ಲ ಇಂದು ನಾನಿಟ್ಟಿಲ್ಲ
ಮುಂದೆ ಎನಗೇನು ಬೇಕೆಂದರಿಯೆನೊ
ಹಿಂದಾದುದಂತಿರಲಿ ಇಂದಿರುವದಿರಲಿ ಮನ
ಮಂದಿರದ ದಾನವರ್ಪಿಸುವೆ ನಿನಗೆ ೮
ಮನೆಗೆ ತಾ ಯಜಮಾನ ಕೆಣಕೆ ಬದುಕುವರುಂಟೆ
ಕುಣಿಯುತಿದ್ದರು ಜನರು ನುಡಿದ ತೆರದಿ
ತನುಸಡಲಿ ಬೀಳಲದ ಕೊನೆಗಾಲವೆಂದರಿತು
ಮನೆ ಹೊರಗೆ ಕಸದಂತೆ ಬಿಸುಡುವುದ ನೋಡಿ ೯
ತುಂಬು ಸಂಸಾರದಲಿ ಸಂಭ್ರಮವನೇಕಗಳು
ಸಂಭ್ರಮದಿ ನಿನ್ನ ಹಂಬಲವೇತಕೆ
ಕಂಬ ಸಡಲಿದ ಮನೆಯ ತೆರದಿ ದೇಹವು ಸಡಲೆ
ಡೊಂಬನಾಟವನಾಡಿ ಚಂಬು ಪಿಡಿದಂತೆ ೧೦
ಕೆಲಸವಿರುವಾಗ ಬಲು ಹೊಲಸು ನಿದ್ರೆಯ ಮಾಡಿ
ಹೊಲಸು ವಿಷಯದಿ ಬಹಳ ಎಚ್ಚೆತ್ತೆನೊ
ಕಲಿಯು ಕರೆದೌತಣವನಿತ್ತೆ ನಾ ಬಹುವಿಧದಿ
ಬಲಿಕೊಡುವ ಕುರಿಯಂತೆ ಬಳಲುತಿರುವೆನೊ ದೇವ ೧೧
ಮರೆವು ಜನತೆಗೆ ದೊಡ್ಡವರವೆಂದು ನೀ ಕೊಟ್ಟೆ
ಗಿರಿಯಂಥ ಕಷ್ಟಗಳ ಮರೆಯಲಾಯ್ತೊ
ಅರಿವು ಕೊಡದಂತೆ ನಾ ಮರೆತೆನೆಂಬಪರಾಧ
ಸರಿತೂಗುವುದೆ ಇದಕೆ ಗುರಿ ಯಾರೊ ದೇವ ೧೨
ಸಾಧು ಜನರಿರುವರೊ ಮೇಧಾವಿಗಳು ಇಹರೊ
ಮಾದರಿಯ ಜೀವನವ ತೋರ್ಪರಿಹರೊ
ಸಾಧುವಲ್ಲವೊ ನಾನು ಮೇಧಾವಿಯಲ್ಲ ಹೊಸ
ಮಾದರಿಯ ತಿರುಕನೆಂದರಿತು ಪೊರೆಯೊ ೧೩
ಅರೆಕ್ಷಣವು ನಿನ್ನನು ಸ್ಮರಿಸಲಾರದ ಜನರು
ಅರಮನೆಗಳಲ್ಲಿ ವಾಸಿಸುವುದೇಕೊ
ಕರಚರಣವಿಲ್ಲದ ಕಪೋತಿಕ ನಿನ್ನಯ ನಾಮ
ಕಿರಿಚುತಿರುವುದ ನೋಡಿ ಹರುಷವದೇಕೊ ೧೪
ಗಿಣಿಯಂತೆ ರಾಮ ರಾಮ ಎಂದರೇನು ಫಲ
ಫಣಿಯಂತೆ ಸಾಷ್ಟಾಂಗ ನಮಿಸಲೇನು
ಋಣಿಯಂತೆ ಧನಿಕನಲ್ಲಿ ಹಲ್ಲುಗಳ ಕಿರಿದರೇನು
ಮನವಿಟ್ಟು ಕೆಲಸ ಮಾಡುವುದರಿಯದೆ ೧೫
ಮನಕೆ ಬಂದುದನೆಲ್ಲ ಮಾಡುವವರಿರುವರೊ
ಮನಕೆ ಶಾಂತಿಯ ಮಾಡುವವರ ಕಾಣೆ
ಕನಕವೆರಿಚಿದರಿಲ್ಲ ವನವ ಸೇರಿದರಿಲ್ಲ
ಮನಮಂದಿರದಲಿ ನೀ ಇಣಿಕಿನೋಡುವ ತನಕ ೧೬
ಲಂಚಗಳ ಕೊಟ್ಟು ಫಲಗಳ ಬೇಡುವವನಲ್ಲ
ಸಂಚುಮಾಡಲು ಶಕುತಿ ಯುಕುತಿಯಿಲ್ಲ
ವಂಚಕರ ಬಹುಮತ ಪ್ರಪಂಚದಲಿ ನೀನೊಬ್ಬ
ಹೊಂಚು ಕಾಯುತಲಿರುವ ಎಂಬುದರಿತು ೧೭
ರೈಲು ಬಂಡಿಗಳಲಿ ಐಲುಪೈಲುಗಳನ್ನು
ಮೌಲ್ಯವಿಲ್ಲದೆ ಸಾಗಿಸುವುದನರಿತು
ಕಾಲು ಕಣ್ಣೆಲ್ಲದ ಕಪೋತಿಯೊ ನಾನೊಂದು
ಮೂಲೆಯಲಿ ಕುಳಿತು ಬರಲವಕಾಶವೀಯೊ ೧೮
ನಿನ್ನ ಗುಣಗಳನರಿಯೆ ನಿನ್ನ ವರ್ಣಿಸಲರಿಯೆ
ನಿನ್ನ ಸೇರಲು ಎನಗುಪಾಯವಿಲ್ಲ
ಕನ್ನ ಕತ್ತರಿಯ ಕಾಣಿಕೆಯೊಂದೆ ಸಾಧ್ಯವೊ
ಇನ್ನು ತಲೆ ಎತ್ತಿನೊ ಪ್ರಸನ್ನನಾಗುವ ತನಕ ೧೯

 

೨೯೦
ಎಲ್ಲ ಭಯ ಎಲ್ಲ ಭಯ ಕ್ಷುಲ್ಲಕ ಜನಗಳಿಗೆಲ್ಲ ಭಯ ಪ
ತಲ್ಲಣಿಸದೆ ಸಿರಿವಲ್ಲಭನಲಿ ಮನ ನಿಲ್ಲಿಸುವರಿಗೆಲ್ಲ ಜಯ ಅ.ಪ
ಇರಲು ಭಯ ಧನವಿರಲು ಭಯ
ಇಲ್ಲದಿದ್ದರೆ ತಿರಿದುಂಬೊ ಭಯ
ನೆರೆ ಹೊರೆ ಜನಗಳ ಸಿರಿಯನು ನೋಡಲು
ಉರಿಯುವ ಜನಗಳಿಗೆಲ್ಲಿ ಜಯ ೧
ಎಲ್ಲ ಜಯ ಎಲ್ಲ ಜಯ
ಬಲ್ಲ ಸುಜನಗಳಿಗೆಲ್ಲ ಜಯ
ಪೊಳ್ಳು ಜೀವನದ ಜಳ್ಳು ಸೌಖ್ಯಗಳ
ಒಲ್ಲೆನೆಂಬುವರಿಗೆಲ್ಲ ಜಯ ೨
ಇರುಳು ಭಯ ಹಗಲು ಭಯ
ಸರಳ ಜನರ ನೋಡುವುದೆ ಭಯ
ಮರಳು ಮೋಸವುಳ್ಳ ದುರುಳ ಜನಕೆ ತಮ್ಮ
ನೆರಳನು ಕಂಡರೆ ಅಧಿಕ ಭಯ ೩
ಜ್ಞಾನ ಜಯ ದಿವ್ಯ ಜ್ಞಾನ ಜಯ
ಜ್ಞಾನದಿಂದ ಹರಿಸ್ಥಾನ ಜಯ
ಹಾನಿಯ ನೀಡುವ ನಾನಾ ಭೋಗವ
ಮೌನದಿ ತ್ಯಜಿಪರಿಗೇನು ಭಯ ೪
ಒಂದು ಜಯ ನೂರು ಭಯ
ದ್ವಂದ್ವಗಳನು ಸಹಿಸದ ನರಗೆ
ತಂದೆ ಪ್ರಸನ್ನ ಶ್ರೀಕೃಷ್ಣನ ಚರಣ
ದ್ವಂದ್ವ ಸೇವಕರಿಗೆಂದೂ ಜಯ ೫

 

೨೯೧
ಎಲ್ಲರ ಮನೆ ದೋಸೆ ತೂತು ಪ
ಚಿಲ್ಲರೆಯಲ್ಲವಿದೀ ಮಾತು ಅ.ಪ
ಗಾಜಿನ ಮನೆಯಲಿ ವಾಸಿಸುವ ಪರ
ಗೇಹಕೆ ಕಲ್ಲುಗಳೆಸೆಯುಬಹುದೇ
ಮೂರ್ಜಗನಿಂದಕ ತನ್ನಯ ನಾಶಕೆ
ಬೀಜ ಬಿತ್ತಿ ಫಲ ಭೋಜನ ಮಾಡುವ ೧
ನೀರ ಕ್ಷೀರ ನ್ಯಾಯವ ಕೇಳದ ಜನ
ರ್ಯಾರಿರುವರು ಈ ಧರೆಯೊಳಗೆ
ಬಾರಿಬಾರಿಗದ ಮನಕೆ ತಾರದೆಲೆ
ದೂರಿನ ನುಡಿಯಲಿ ರುಚಿಯು ಉಚಿತವೆ ೨
ಗೂಳಿಯು ಹಳ್ಳಕೆ ಬಿದ್ದ ಕಾಲದಲಿ
ಆಳಗೊಂದು ಕಲ್ಲೆಸೆಯುವರು
ಬಾಳಿಬಾಳಿಸುವ ನರನ ಪ್ರಸನ್ನನು
ಕಾಲಕಾಲದಲಿ ಸಲಹದೇ ಇರುವನೆ ೩

 

ನುಡಿ-೨:ಅಂಬಿಗರವಳನು
೧೨೩
ಎಲ್ಲಿರುವುದೋ ಸಿರಿವಲ್ಲಭನೆ ನಿನ
ಗಲ್ಲದ ಕಾರ್ಯಗಳು ಪ
ಕಲ್ಲಾಗಿದ್ದ ಅಹಲ್ಯಯೆ ನಿಮಿಷದಿ
ಚಲ್ವೆಯ ಮಾಡಿದ ನಲ್ಲ ತ್ರಿಭುವನದಿ ಅ.ಪ
ಶರಧಿಯೆ ವಾಸವು ಗರುಡನೆ ವಾಹನ
ಉರಗಪತಿಯೆ ನಿನ್ನ ಪರಿಯಂಕ
ಶರಧಿ ಕುಮಾರಿಯು ವರರಮಣಿಯು ಸುರ
ವೀರರು ನಿನಗೆ ಕಿಂಕರರಾಗಿರಲು ೧
ಕಂಬದಿ ಜನಿಸಿದೆ ಅಂಬಿಗರವಳನು
ಸಂಭ್ರಮದಲಿ ನಿನ್ನ ಜನನಿಯೆನಿಸಿದೆ
ಅಂಬುಜ ಮಿತ್ರನ ತನಯಗೆ ಮರುತನ
ಬೆಂಬಲವರಿಯುತ ಉಳಿಸಿದೆ ಗೆಲಿಸಿದೆ ೨
ಕ್ರಿಮಿಯಿಂದ ರಾಜ್ಯದ ಅಮಿತ ಕಾರ್ಯಗಳ
ಕ್ರಮದಲಿ ನಡಿಸಿದೆ ವಿಮಲ ತನೋ
ಸುಮನಸರೊಡೆಯನೆ ಕ್ಷಮಿಸಿ ಎನ್ನಯ ಮೋಹ
ತಿಮಿರವ ತೊಲಗಿಸೊ ಸುಮನ ಪ್ರಸನ್ನನೆ ೩

 

೧೨೪
ಏತಕೆ ಈ ಪರಿ ಮೋಸ ವಚನಗಳು
ನಾಚಿಕೆಯಿಲ್ಲವೇನೊ ಕೃಷ್ಣ ಪ
ಯೋಚಿಸುತಿರೆ ನಿನ್ನ ಸತತ ಮನದಲಿ
ಯಾಚಿಸುತಿರುವೆಯೋ ಪರರನ್ನು ಅ.ಪ
ಚಂಚಲತನದಲಿ ನಿನ್ನ ಸೇವಕಳನು
ವಂಚಿಸುತಿರುವುದು ಸರಿಯೇನೊ
ಪಂಚಬಾಣನು ತನ್ನ ಜನಕನಾಗಿಹ ನಿನ್ನ
ಮಿಂಚಿ ನುಡಿಯುವುದು ಅಚ್ಚರಿಯು ೧
ಸಾರಸಲೋಚನೆ ಬೇರೆ ಯೋಚಿಸದಿರು
ಮಾರನು ಎನ್ನಯ ಮೀರುವನೆ
ಜರನೆಂದರಿಯುವ ನಾರೇರಿಗೆನ್ನ ವಿ
ಚಾರವನರುಹಲು ಸೇರಿದೆನು ೨
ಅಂಬುಜಮುಖಿಯರ ಸಂಭ್ರಮದಲಿ ನೀ
ಹಿಂಬಾಲಿಸುತಿರೆ ನಂಬುವೆನೆ
ರಂಭೆಯರವರು ನೀ ಹಿಂಬಾಲಿಸುವೆ
ಡಂಭದ ವಚನವ ನಿಲ್ಲಿಸೆಲೊ ೩
ಪೋತ ನಾನಾಗಿರೆ ಪ್ರೀತಿಯ ನಟಿಸಿದ
ಪೂತನಿಯನುಭವವೆನಗಿಹುದೇ
ಘಾತಕರವರೊ ನೀತಿವಂತರೊ
ಮಾತಿನಂದರಿಯೆ ಹಿಂಬಾಲಿಸಿದೆ ೪
ಲಲನೆಮಣಿಯರ ಜಲವಿಹಾರದ
ಸ್ಥಳಕೆ ನೀನೇತಕೆ ತೆರಳಿದೆಯೊ
ತಿಳಿದು ಇದನು ನಿನ್ನ ಸುಳಿವನು ಅರಿಯಲು
ಸುಲಭವೇನೆಲೊ ಶ್ರೀ ಕೃಷ್ಣ ೫
ಹೊರಗಿನ ರೂಪದಿ ನರರನು ಸುಲಭದಿ
ಮರುಳು ಮಾಡುತಿಹ ತರಳೆಯರು
ಸರಳರೊ ಈ ಜನ ದುರುಳರೊ ಇವರ ಅಂ
ತರಗಳನರಿಯಲು ತೆರಳಿದೆನು ೬
ಅಂತರಂಗಗಳನರಿಯಲು ನಿನ್ನಯ
ತಂತ್ರಗಳೆಲ್ಲವು ನಟನೆಗಳು
ಚಿಂತೆಯ ಪಡದೆ ಸ್ವತಂತ್ರನಾಗಿರುವೆ
ಸಂತಸದಲಿ ಪ್ರಸನ್ನನಾಗೆಲೊ ೭

 

೩೨೫
ಏನಿದ್ದರೇನು ಈ ಮಾನವನಿಗೆ ಜಗದಲ್ಲಿ
ದಾನವಾಂತಕನ ಗುಣಜ್ಞಾನವನು ಪೊಂದದಲೆ ಪ
ಕಾನನದಿ ಬೆಳಗುತಿಹ ಬೆಳದಿಂಗಳಂದದಲಿ
ಜ್ಞಾನ ಹೀನನಿಗೆ ಈ ಮಾನವನ ಜನುಮ ಅ.ಪ
ದಾನ ಮಾಡಿದರೇನು ಧರ್ಮ ಮಾಡಿದರೇನು
ಸ್ನಾನ ಮಾಡಿದರೇನು ನದಿನದದಲಿ
ಜ್ಞಾನವಿಲ್ಲದ ಕರ್ಮಗಳ ರಚಿಸಲೇನುಂಟು
ವಾನರಗೆ ಕರದೊಳಿಹ ಮಣಿಗಳಿಂದೇನು ಫಲ ೧
ಯಾತ್ರೆ ಮಾಡಿದರೇನು ಕಾಶಿ ರಾಮೇಶ್ವರದ
ಕ್ಷೇತ್ರಗಳ ವಾಸದಿಂದೇನು ಫಲವು
ಚಿತ್ರ ಚರಿತನಲಿ ದೃಢಭಕುತಿಯನು ಪೊಂದದಿರೆ
ನೇತ್ರರಹಿತನಿಗುಂಟೆ ಚಿತ್ರಗಳ ಫಲವು ೨
ಹೊನ್ನಿನ ಮದದಿಂದ ಹೆಮ್ಮೆಗೋಸುಗ ಬಹಳ
ಅನ್ನಛತ್ರಗಳ ರಚಿಸಿದರೇನು ಫಲವು
ತನ್ನವರ ದೃಢಭಕುತಿಯನ್ನರಿವ ಸತತ ಪ್ರ
ಸನ್ನ ಹರಿದಾಸರಿಗೆ ಇನ್ನೇನು ಬೇಕು ೩

 

೨೯೨
ಏನು ಮಾಡಿದರೇನು ಫಲವೊ ಪ
ನೀನು ಮಾನಸ ವೃತ್ತಿ ತಿದ್ದುವತನಕ ಅ.ಪ
ಪೂಜೆ ಮಾಡಿದರೇನು ತೇಜಸ್ವಿ ಇರಲೇನು
ರಾಜಧಿರಾಜ ಸಂಪೂಜ್ಯನೆನಿಸಲೇನು
ರಾಜತಾಸನದಲ್ಲಿ ಕುಳಿತರೂ ರಾಜಿಸದ ಮಾನಸದ ವೃತ್ತಿಯು
ಈ ಜಗದ ಜೀವನವು ಕುದುರೆಯ
ಜೂಜಿನಲಿ ಪಣ ಕಟ್ಟಿದಂತಿದೆ ೧
ಭಾರಿ ಪಲ್ಲಕ್ಕಿಯ ಏರಿದ ಅನುಭವ
ನೂರು ಜನರು ಸ್ತುತಿ ಕೇಳಿದ ಅನುಭವ
ಕೀರುತಿಯ ಪರಮಾವಧಿಯನು ಸೇರಿದೆನು ನಾನಿನ್ನ ಕರುಣದಿ
ಭಾರಿ ಗಾಳಿಗೆ ತೆರಗೆಲೆಯು ತಾ
ತೂರುವಂದದಿ ತೂರುತಿಹುದೊ ೨
ವರಗಳ ಕೊಟ್ಟಾಯ್ತು ಹಿರಿಯನೆಂದೆನಿಸ್ಯಾಯ್ತು
ಅರಿತು ಶಾಸ್ತ್ರಾರ್ಥವ ಗುರುತನ ಪಡೆದಾಯ್ತು
ಧರೆತಲದ ವೈಭವಗಳಲಿ ಅತಿ ಅರುಚಿ
ಮನದಲಿ ತೋರುತಿಹುದೋ
ಕರದಲಿರುವ ಪ್ರಸನ್ನನೇ ಹೃತ್ಸರಸಿಜದಿ ನೆಲಿಸೆಲೊ ನಿರಂತರ ೩

 

೧೨೫
ಏನು ವಿನೋದವಿದು ನಮ್ಮ
ಶ್ರೀ ನಿಲಯನ ಗುಣಗಾನ ಮಾಡುವುದು ಪ
ಮಾನಸ ಮಂದಿರದಲಿ ಶ್ರೀ ಕೃಷ್ಣನ
ಕಾಣಲು ಬಯಸುವ ಜನಕೆ ವಿಧಾನ ಅ.ಪ
ಶಾಸ್ತ್ರ ವಿಚಾರ ಶ್ರೋತೃ ವಿಹಾರ
ಶ್ರೋತೃ ಜನಕೆ ಇದು ಪರಮಾಧಾರ ೧
ಶ್ರೀಶನ ನೋಟ ಭೂಸುರ ಕೂಟ
ದಾಸ ಜನಕೆ ಇದು ಭೂವೈಕುಂಠ ೨
ವೇದ ಸುಘೋಷ ವಾದ್ಯದ ಹರ್ಷ
ಸಾಧುಜನಕೆ ಇದು ಬಲು ಸಂತೋಷ ೩
ಸಿಕ್ಕಿತು ಕಾಂತಿ ಹೊಕ್ಕಿತು ಶಾಂತಿ
ಭಕ್ತ ಪ್ರಸನ್ನನು ಬಿಡಿಸಿದ ಭ್ರಾಂತಿ ೪

 

೧೨೬
ಏನು ಸುಕೃತವೋ ಮಧುರಾ ನಗರಕೆ ಪ
ಗಾನಲೋಲ ಹರಿ ತಾ ನೆಲೆಸಿಹುದು ಅ.ಪ
ವರ ವಿಭವಗಳುಳ್ಳ ಪುರಗಳಂತಿರಲು
ಪರಮ ಪುರುಷ ಹರಿ ವಿರಾಜಿಸುತಿರಲು ೧
ಭೂಪ ನಗರಗಳಿಗೀ ಪರಿಯುಂಟೆ
ಗೋಪಾಲಕ ಹರಿ ಕಾಪಾಡುತಿಹುದು ೨
ಸುಮನಸಪುರವಾದ ಅಮರಾವತಿಗುಂಟೆ
ಕಮಲನಯನ ಹರಿ ಸಮಾಗಮವು ಸದಾ ೩
ದಿವಿಜರೊಡೆಯ ಹರಿ ಭುವಿಯಲಿ ಅರಿಸಿ
ಅವತರಿಸುತ ತನ್ನ ಪ್ರವಾಸಗೈದುದು ೪
ನಿರುಪಮ ಆನಂದಪೂರ್ಣ ಪ್ರಸನ್ನನು
ಪರಿಪರಿ ವಿಧದಲಿ ವಿರಾಜಿಸುತಿರಲು ೫

 

ನುಡಿ-೨: ಚಂದ್ರಿಕಾ ನ್ಯಾಯಾಮೃತ
೨೫೫
ಏಸು ಸುಕೃತ ಫಲವೋ ದರುಶನ
ಏಸು ಪುಣ್ಯಕರವೋ ಪ
ಏಸು ಜನ್ಮಗಳ ಸುಕೃತ ಫಲವೋ ಶ್ರೀ
ವ್ಯಾಸರಾಜ ಗುರುವರ್ಯರ ದರುಶನ ಅ.ಪ
ವರ ಕರ್ಣಾಟಕ ಸಿಂಹಾಸನದಲಿ
ಮೆರೆಯುತಲಿರುವ ಯತೀಂದ್ರರ ದರುಶನ ೧
ಚಂದ್ರಿಕ ನ್ಯಾಯಾಮೃತ ತಾಂಡವದಲಿ
ನಂದಕುಮಾರನ ಕುಣಿಸುವ ದರುಶನ ೨
ಹಗಲು ದೀವಟಿಗೆ ಹಸುರು ಛತ್ರಿ ಮುಖ
ಬಗೆ ಬಗೆ ಬಿರುದಾವಳಿಗಳ ವೈಭವ ೩
ರಾಜನ ಕುಹಯೋಗವನೆ ನಿವಾರಿಸಿ
ರಾಜಾಧಿರಾಜ ಸಂಪೂಜ್ಯರ ದರುಶನ ೪
ರುಕುಮಿಣಿ ಭಾಮಾರಮಣನ ಪೂಜಿಸಿ
ಸುಕೃತ ಸ್ವರೂಪ ಪ್ರಸನ್ನರ ದರುಶನ ೫

 

೩೨೬
ಏಳಲಾರದ ಘಟವೇ ನೀ ಬೆಟ್ಟ ಹತ್ತೋದು ದಿಟವೇ ಪ
ನಾಳಿನ ಬಾಳನು ಪೇಳಲಾಗದ ನೀ
ಮೇಲೆಯೋ ಜಂಭದ ಕೋಳಿಯೊ ಯೋಚಿಸು ೧
ನುಡಿದುದು ನಡೆಯದು ಪಿಡಿಯದು ನಿಲ್ಲದು
ತಡೆಯಲು ಸಾಧ್ಯವೆ ಕಡಲನು ಕರದಲಿ ೨
ತ್ರಾಣವಿದ್ದರೆ ಸದಾ ಕಾಣರೆ ಸುಖವನು
ಪ್ರಾಣ ಪ್ರಸನ್ನನು ಒಲಿಯುವ ತನಕ ೩

 

೧೨೭
ಏಳೊ ಬಾಲನೆ ವೇಳೆ ಮೀರುತಿಹುದು ಪ
ಕೇಳುತಿಹರು ಯದುಮೌಳಿಯೆಲ್ಲಿ ಎಂದು ಅ.ಪ
ಎದ್ದು ಬಾರೆಲೋ ಮುದ್ದು ಬಾಲಕೃಷ್ಣ
ಪದ್ಧತಿಯಲಿ ಕ್ಷೀರ ಸಿದ್ಧವಾಗಿಹುದು ೧
ಜಾಣ ನಿನ್ನಯ ವೇಣುನಾದ ಕೇಳೆ
ಏಣನಯನೆಯರು ಕಾಣ ಬಯಸುತಿಹರು ೨
ಯಮುನಾ ತೀರದಿ ಸುಮಲತೆಗಳಲ್ಲಿ
ಕಮಲನಯನ ನಿನ್ನ ರಮಿಸ ಬಯಸುತಿಹರು ೩
ಮೌನಿಜನರು ತಮ್ಮ ಸ್ನಾನ ಮುಗಿಸಿ ನಿನ್ನ
ಜ್ಞಾನ ಪೊಂದೆ ಗುಣಗಾನ ಮಾಡುತಿಹರು ೪
ನಿನ್ನ ಪ್ರಿಯ ಜನರನ್ನು ಕಾಯಿಸಲು
ಇನ್ನು ತರವೇನೋ ಪ್ರಸನ್ನವದನನಾಗಿ ೫

 

೧೨೮
ಒಂದು ಪ್ರಾರ್ಥಿಸಲು ನೂರೊಂದು ಕೊಟ್ಟಿಯೊ ದೇವ
ತಂದೆ ನಿನ್ನಯ ಕರುಣವೆಂದಿಗೂ ಇರಲಿ ಪ
ಇಂದು ನೀನಿತ್ತ ನೂರೊಂದು ನಿನ್ನಯ ಪಾದ
ದ್ವಂದ್ವಕರ್ಪಿಸುವೆ ನಿನ್ನಯ ಸೇವೆ ಎಂದೆನುತ ಅ.ಪ
ನಿನ್ನ ಮೂರ್ತಿಯ ನೋಡಿ ನಿನ್ನ ಸ್ತುತಿಯನೆ ಮಾಡಿ
ನಿನ್ನ ಕರದಲಿ ಪಿಡಿದು ಪುಣ್ಯಗಳಿಸಿದೆನೊ
ನಿನ್ನ ಸುಂದರ ರೂಪ ಸತತ ಹೃದಯದಿ ಪೊತ್ತು
ಧನ್ಯನಾಗಿರುವೆನಿನ್ನೇನು ಬೇಕಿಹುದೆನಗೆ ೧
ನಿಟ್ಟುಸಿರು ಬಿಡಿಸಿದೆಯೊ ಹೊಟ್ಟೆಯನು ಸುಡಿಸಿದೆಯೊ
ಕಟ್ಟಕಡೆಯಲಿ ಕರವನಿತ್ತು ಮೇಲೆತ್ತಿದೆಯೊ
ಕಟ್ಟುಬಣ್ಣವಿದಲ್ಲ ಸುಟ್ಟರಿದು ಪೋಗದೊ
ಘಟ್ಟಿಯಾಯಿತು ಎನ್ನ ಪ್ರೇಮ ನಿನ್ನೊಳಗೆ ೨
ಕೆಸರಿನಲಿ ಕಂಬದಂತಿದ್ದ ಎನ್ನಯ ಸ್ಥಿತಿಯು
ಕುಸಿಯಲಿಲ್ಲವೊ ದೇವ ಶಶಿಕುಲ ಪ್ರಸನ್ನ
ಹೊಸದಾದ ಚೈತನ್ಯವೆನಗೆ ವಿಕಸಿತವಾಯ್ತು
ಉಸಿರಿರುವ ತನಕ ನಾ ಮರೆವುದಿಲ್ಲವೊ ನಿನ್ನ ೩

 

೧೨೯
ಒದಗಿ ಬಂದಿತು ಯೋಗ ಒದಗಿ ಬಂದಿತು ಯೋಗ ಪ
ಪದುಮೆಯರಸನು ರಥದೊಳಿರುವ ದರುಶನ ಭಾಗ್ಯ ಅ.ಪ
ಭುಜಗಶಯನನು ದಿವ್ಯ ರಜತ ರಥದಲಿ ಬರಲು
ಸುಜನರೆಲ್ಲರು ಸೇರಿ ಭಜನೆ ಮಾಡುವ ಭಾಗ್ಯ ೧
ಅಂಗನಾಮಣಿಯರೆ ರಂಗವಲ್ಲಿಯೆ ಎತ್ತಿ
ಮಂಗಳಾಂಗನು ದೀರ್ಘ ಮಾಂಗಲ್ಯವನೆ ಕೊಡುವ ೨
ಬಾಲಕರ ಸಡಗರ ಬಾಲೆಯರ ವೈಯ್ಯಾರ
ಬಾಲ ವೃದ್ಧರು ಸ್ವಾಮಿಯೋಲಗದಿ ಸಹಕಾರ ೩
ಜಯಘೋಷಗಳ ಮಾಡೆ ಭಯಗಳನು ಬಿಡಿರಿ ಮನ
ಬಯಕೆಗಳ ಆನಂದಮಯನು ನೀಡುವ ನಗುತ ೪
ತನ್ನಿ ಫಲಕುಸುಮಗಳ ಧನ್ಯರಾಗಿರಿ
ಕಣ್ಣಾರ ನೋಡಿ ಪ್ರಸನ್ನ ಶ್ರೀ ನಿಲಯನನು ೫

 

೧೩೧
ಕಂಡಿರ ಮಧುರ ನಾಥನ
ಕಂಡವರು ಪೇಳಿ ದಮ್ಮಯ್ಯ ಪ
ದುಂಡು ಮುಖದ ಮೋಹನಾಂಗನು
ಕೊಂಡು ಪೋದನೆಮ್ಮ ಮನವ ಅ.ಪ
ಮಲ್ಲಿಗೆ ತುಳಸಿ ಮಾಲತಿ
ಎಲ್ಲಿ ಪೋದನು ಪೇಳಿ ಕೃಷ್ಣನು
ವಲ್ಲಭನ ಚರಣಗಳಲಿ ನಿಮ್ಮನು
ಸಲ್ಲಿಸಿದ ಹಂಗೆಮ್ಮೊಳಿದ್ದರೆ ೧
ತೋರಿದೆರೆ ನಯನಾಭಿರಾಮನ
ಸೇರುವೆ ಅವನಂಘ್ರಿಯುಗಳಕೆ
ಭೂರಿ ತರದುಪಕಾರ ನಿಮಗೆ ಸ
ತ್ಕಾರ ಬರುವುದು ವಿಧಿಭವರಿಂದ ೨
ಪದ್ಮೆಯರಸನು ನಿಮ್ಮೊಳಿರುವ
ಸುದ್ದಿ ಬಲ್ಲೆವು ತೋರದಿದ್ದರೆ
ಪದ್ಮಸಂಭವ ಪಣೆಯ ಬರಹವ
ತಿದ್ದಿ ಪೇಳಿರಿ ಪದ್ಮಗಳಿರ ೩
ಪಾರಿಜಾತ ಸುಜಾತ ನಂದಕು
ಮಾರ ಮಣಿಯೊಂದನು ಕೊಡಲಾರೆಯ
ಹೇರು ವಿಧ ವಿಧ ರತ್ನ ಮಣಿಗಳ
ಸೂರೆಗೈವ ಅಭೀಷ್ಠಪ್ರದಾತ ೪
ಕೇಳಲೇನುಪಯೋಗವಿವರು
ಪೇಳಲಾರರು ಸುದ್ದಿ ಎಮಗೆ
ತಾಳಲೆಂತು ಪ್ರಸನ್ನ ಕೃಷ್ಣನೆ
ಕೇಳೆಲೆಮ್ಮಯ ಮೊರೆಯ ದಯದಿ ೫

 

೧೩೦
ಕಂದನ ತೂಗಿದಳು ಯಶೋದೆ ಕಂದನ ತೂಗಿದಳು ಪ
ಇಂದಿರಾರಮಣನ ಅಂದವದನದಲಿ
ಮಂದಹಾಸವ ನೋಡಿ ನಂದದಿ ಹಿಗ್ಗುತ ಅ.ಪ
ತಾಮರಸಾಕ್ಷನ ಕೋಮಲಾಂಗವ ನೋಡಿ
ಆ ಮಹಿಳೆಯು ಬಲು ಪ್ರೇಮಭರಿತಳಾಗಿ ೧
ಜಗಜಗಿಸುವ ನವಮಣಿಯ ತೊಟ್ಟಿಲಲಿ
ಜಗದೀಶನು ತನ್ನ ಮಗನೆಂದು ತಿಳಿಯುತ ೨
ಪದಮನಾಭನನು ಹೃದಯದಿ ನೆನೆಯುತ
ಮದದಿಂದಲಿ ದಿವ್ಯ ಪದಗಳ ಪಾಡುತ ೩
ಲಕ್ಷ್ಮೀಶನು ಇತ್ತ ಪುತ್ರಭಿಕ್ಷೆಯೆಂದು
ಅಕ್ಷಿಗಳಲಿ ಸುಖಬಾಷ್ಪವ ಸುರಿಸುತ ೪
ತನ್ನ ಸೌಭಾಗ್ಯವು ಅನ್ಯರಿಗಾವುದೆಂದು
ಹೆಮ್ಮೆಯಿಂದ ಪ್ರಸನ್ನ ನಂದನ ಸತಿ ೫

 

೨೬೯
ಕಡಲಶಯನ ಹರೇ ಉಡುಪತಿ ಕುಲದೊರೆ ಪ
ಅಡಿಗೆರಗಿದೆ ನಿನ್ನ ನೀಡೆಲೊ ಕರಗಳ ಅ.ಪ
ನಡೆಯುವ ಪದಗಳು ಎಡವದಿರುವುದೇನೊ
ಕಡುಮಂದನಲಿ ದಯ ಸಡಿಲಿಸದಿರೊ ದೇವ ೧
ಕಂದನು ಪುಟ್ಟಲು ಅಂಧನಾಗಿರೆ ಅದನು
ಚೆಂದವಿಲ್ಲೆನುತ ಬೀಸುವಳೆ ಜನನಿ ೨
ಹೇಯ ಸಂಸಾರದಿ ಗಾಯವ ಪೊಂದಿ ನಾ
ನೋಯುತಿರುವೆನು ಉಪಾಯವ ಕಾಣದೆ ೩
ಲೋಪಗಳಿಗೆ ಬಲು ಕೋಪಿಸದೆ ಅಯ್ಯೋ
ಪಾಪವೆಂದೆನ್ನುತ ಕಾಪಾಡೆಲೋ ದೇವ ೪
ಎನ್ನೊಳು ದಯದಿ ಪ್ರಸನ್ನನಾಗುವೆಯೆಂದು
ಎನ್ನಮನದಿ ಸದಾ ಧ್ಯಾನಿಸುವೆನೋ ದೇವ ೫

 

೨೯೩
ಕನಸಿನ ಜೀವನ ಕಳವಳವೇತಕೆ ಪ
ಕ್ಷಣಿಕದ ಭಾಗ್ಯಕೆ ಪರದಾಟವೇತಕೆ ಅ.ಪ
ಮರೆತು ದುರ್ದಿಶೆಯನು ಅರೆಗಣ್ಣಿನಲಿ
ದೊರೆಯು ನಾನೆ ಎಂದು ಹರುಷದ ಮಾನಸ
ತೆರೆಯಲಿ ಭಾಗ್ಯವ ಅನುಭವಿಸುತಲಿರೆ
ಹರಕು ಮನೆಯೇ ನಿನ್ನರಮನೆಯಾಗಿದೆ ೧
ಇಲ್ಲವೆಂದೇತಕೆ ಹಲ್ಲನು ಕಡಿಯುವಿ
ಬಲ್ಲ ಮಾನವನಿಗೆ ಹಲ್ಲೇ ಆಯುಧ
ಮುಳ್ಳಿನ ಹಾಸಿಗೆ ಮಲಗಲು ಸೌಖ್ಯವೆ
ತಳ್ಳಿ ನಿಲ್ಲುವಗೆ ಇಲ್ಲೇ ವೈಕುಂಠ ೨
ರಕ್ತದ ಕೋಡಿಯು ಹರಿಯುತಲಿರುವುದು
ಮೃತ್ಯದೇವತೆ ಸದಾ ಕುಣಿಯುತಲಿರುವಳು
ಮತ್ರ್ಯರ ಭಾಗ್ಯವು ಹತ್ತೇ ನಿಮಿಷವು
ಇದ್ದರೇನು ಸುಖ ಇಲ್ಲದೇನು ಭಯ ೩
ಮನದಲಿ ರಾಜ್ಯವ ಕಟ್ಟಬೇಕಣ್ಣ
ಅನುಭವದರಮನೆ ಶೃಂಗರಿಸಣ್ಣ
ಪ್ರಣತ ಪ್ರಸನ್ನನ ಆಲಯ ಮುಟ್ಟಲು
ಅಣುಬಾಂಬ್ಗಳಿಗೂ ಶಕುತಿಯಿಲ್ಲಣ್ಣ ೪

 

೧೩೨
ಕರಗತನಾಗಿರಲು ಶ್ರೀಕೃಷ್ಣನು ಪ
ಪುರಜನಗಳಿಗಿನ್ನು ಕೊರತೆಗಳುಂಟೆ ಅ.ಪ
ಪರಮದಯದಿ ತನ್ನ ನೆರಳಿನೊಳೆಲ್ಲರ
ಪೊರೆಯುತಿರುವ ನಮ್ಮ ಸಿರಿವಲ್ಲಭನು ೧
ನಾಡಿನ ಭಕುತರ ಕೂಡಿಸಿ ಮುದದಲಿ
ಬೇಡಿದ ವರಗಳ ನೀಡುವ ದೊರೆಯು ೨
ಬಿಡಿಬಿಡಿ ನಿಮ್ಮಯ ಕಡು ಕ್ಲೇಶಗಳೆಂದು
ಗಡಗಡ ದುಂದುಭಿ ಹೊಡೆಸುವ ಧೀರನು ೩
ಪತಿತ ಪಾವನೆಂದು ಪ್ರಥೆಯನು ಪೊಂದಿಹ
ಕ್ಷಿತಿಸುರರೊಡೆಯನು ಅತಿಸುಲಭದಿಲಿರೆ ೪
ಎನ್ನನು ಸೇವಿಸಿ ಧನ್ಯರಾಗಿ ಎಂದು
ಸನ್ನೆಯನೀವ ಪ್ರಸನ್ನ ಶ್ರೀಮಾಧವ ೫

 

೧೩೩
ಕರದೊಳಿನ ಮಣಿಗೆ ಕನ್ನಡಿಯೇತಕೆ ಪ
ಸಿರಿ ರಮಣನಲತಿ ಸಂಶಯವೇತಕೆ ಅ.ಪ
ಶರಧಿಯ ಜಲವನ್ನು ಪರಿಪರಿ ದೇಶಕೆ
ಬಿರುಗಾಳಿಗಳಿಂದ ದೊರಕಿಸುವನು ಯಾರು
ಧರೆಯೊಳು ನವನಾಗರಿಕರೆಂದರಿಯುವ
ನರರಿಗೆ ಈ ಪರಿ ತರವೆ ಯೋಚಿಸೆಲೊ ೧
ಎಲ್ಲಾ ದೇಶಗಳ ವಿಚಾರ ನೋಟಗಳನ್ನು
ಇಲ್ಲೇ ತೋರಿಸುವಂಥ ನಲ್ಲರು ಇರುವರು
ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ ಎಂದು
ಬಲ್ಲರೇ ಇವರು ತಲ್ಲಣಿಸುತಿಹರು ೨
ಮಾತೆಯ ಕೋಶದೊಳ್ ವಾಸಿಪ ಶಿಶುವನ್ನು
ಘಾಸಿಯ ಮಾಡದೆ ಪೋಷಿಸುವನು ಯಾರು
ಈಶನ ಕರುಣವು ಲೇಶ ತಪ್ಪಿದರೆ
ಆ ಶಿಶುವಿನ ಜೀವದಾಶೆ ಎಂತಿಹುದೊ ೩
ಎಲ್ಲಾ ನಾರಿಯರು ಗರ್ಭ ಧರಿಸುವರೆ
ಎಲ್ಲಾ ಬೀಜಗಳಿಂದ ತರುಗಳು ಬರುವುದೆ
ಬಲ್ಲವರುಂಟೆ ಇದಕೆ ಕಾರಣ ಲಕ್ಷ್ಮೀ
ವಲ್ಲಭನಲ್ಲದೆ ಸಲ್ಲದು ಈ ಪರಿ ೪
ಭಿನ್ನದೇಶಗಳಲ್ಲಿ ಭಿನ್ನ ರೂಪಗಳುಳ್ಳ
ಭಿನ್ನ ಗುಣಗಳುಳ್ಳ ಭಿನ್ನ ಜಂತುಗಳಿಗೆ
ಭಿನ್ನ ಕಾಲಗಳಲ್ಲಿ ಅನ್ನವನೀಯಲು
ಅನ್ಯರಿಗಳವೆ ಪ್ರಸನ್ನನಿಗಲ್ಲದೆ ೫

 

೨೭೦
ಕರುಣಾ ಪೊಂದಿರೆ ಕೊರತೆಗಳುಂಟೆ ಶ್ರೀ ನರಹರಿಯ ಪ
ನರಿಗಳ ಕೂಗಿಗೆ ಹುಲಿಯಂಜುವುದೆ
ಬಿರುಗಾಳಿಗೆ ದೊಡ್ಡ ಗಿರಿ ನಡುಗುವುದೆ ಅ.ಪ
ನಾನು ತಾನೆಂದು ಕುಣಿಯುತಲಿದ್ದ ಮಾನವರನು ಜರಿದು
ನೀನೆ ಸೇವೆಯನು ಮಾಡೆಂದೆನುತ ತಾನೊಲಿಯುತಲಿ
ಹೀನ ಜನರು ಅಪಮಾನವ ಬಯಸಲು
ನಾನಿಹೆನೆನ್ನುವ ಜಾನಕಿನಾಥನ ೧
ಬಂಧುಗಳೆನ್ನ ನಿಂದಿಸುತಿಹರು ಒಂದನೂ ಕೊಡೆಯೆಂದು
ಹಿಂದು ಮುಂದೆನಗೆ ಕುಂದು ಕೋರುವರು ಒಂದನರಿಯರು
ಮುಂದೆ ಎನಗೆ ಬಲು ತೊಂದರೆಗಳಿರುವು
ವೆಂದು ಪೇಳುವರು ಮಂದರಧರನ ೨
ಧನಿಕನಲ್ಲೆಂದು ಅಲ್ಲಗೆಳೆಯುವರು ಧನವಿಲ್ಲದಿರಲು
ಘನತೆ ಎಂತೆಂದು ಜರಿಯುತಲಿಹರು ಮನವನರಿಯರು
ಧನ ಪಿಶಾಚಿಯನು ಮನದಿಂದ ತೊಲಗಿಸಿ
ಮನದಲಿ ನೆಲಸಿಹ ವನರುಹ ನಯನನ ೩
ನಂಬಿದರೆಮ್ಮ ಧನಕನಕಗಳ ತುಂಬುವೆವೆಂಬ
ಜಂಭದ ಮಾತ ನಂಬದೆ ಇರಲು ಹಂಬಲಿಸುವರು
ನಂಬುವ ಭಕುತರ ಹಿಂಬಾಲಿಸುತಲಿ
ಬೆಂಬಲಿವೀಯುತವ ಅಂಬುಜನಾಭನ ೪
ಚತುರನಲ್ಲೆಂದು ಅತಿದೂರುವರು ಹಿತರಂತೆ ನಟಿಸಿ
ಮಿತಿಮೀರಿ ಎನಗೆ ಬೋಧಿಸುತಿಹರು ಮನ್ಮತಿಯನರಿಯರು
ರತಿಪತಿಯೆನ್ನನು ಪ್ರಸನ್ನನಾಗಿ ದಿವ್ಯ
ಗತಿ ತೋರುತಲಿರೆ ಚತುರತೆಯೇತಕೆ ೫

 

೧೩೪
ಕರೆದೆಡೆಗೆ ತಾ ಬರುವ ಕರೆದೆಡೆಗೆ ತಾ ಬರುವ ಪ
ಬರುವೆ ತರುವ ಸುಖವ ಮುರುಳೀಧರನು ಅ.ಪ
ತಿಳಿಯ ಭಕುತಿಯ ಪಡೆದ ಜನರಿಗೆ
ಗೆಳೆಯನಿವ ಬಲು ಸುಲಭನು
ಇಳೆಯಸುರರಾದರದಿ ಕರೆಯಲು
ಹರುಷದಲಿ ನಲಿನಲಿಯುತಲಿ ೧
ಸದನದಲಿ ಹದನಿಲ್ಲ ಈತನಿ
ಗೊದಗಿಸುವುದತಿ ಸಾಹಸ
ವಿಧಿಯ ಬರಹವು ಇಲ್ಲವೆನುತಲಿ
ಹೆದರದಿರಿ ಮಧುಸೂಧನನು ೨
ಇದು ನನದು ಇದು ನನದು ಎನುವ
ಮದದ ವಚನಕೆ ನಗುತಲಿ
ಇದು ನಿನದು ಎನ್ನಲು ಪ್ರಸನ್ನನು
ವಿದುರನಾಲಯ ಪೊಕ್ಕಿಹ ೩

 

೧೩೫
ಕರೆವರು ಬಾ ಮನೆಗೆ ಶ್ರೀ ಕೃಷ್ಣ
ಮೂರ್ಜಗಗಳಿಗೆ ರಾಜಾಧಿರಾಜ ಪ
ರಾಜಿಸುವ ಸೋಜಿಗದ ಬಲು
ಸೋಜಿಗದ ಮನೆಗೆ ಶ್ರೀ ಕೃಷ್ಣ ಅ.ಪ
ಸಾರಸಲೋಚನೆ ಭೀಷ್ಮಕ ಕುವರಿ
ನೂರು ವಿಧದ ಬಲು ಪರಿಮಳದ
ಚಾರು ಕುಸುಮಗಳ ಹಾರವ ಪಿಡಿದು
ಮಾರಜನಕ ನಿನ್ನ ಕೋರುವಳು ೧
ಚಿತ್ತಜನಯ್ಯನ ಚಿತ್ತದ ರಾಣಿ
ಯತ್ನದಿ ನಿನ್ನನು ಕರೆಸಿದಳು
ಚಿತ್ರವಿಚಿತ್ರದ ಮುತ್ತುರತ್ನಗಳ
ಉತ್ತಮ ಪೀಠಕೆ ದಯಮಾಡೊ ೨
ಯದುಕುಲ ನಂದನ ನೀ ಬಾರೋ
ಮಧುರಾನಾಥಾ ನೀ ಬಾರೋ
ಮದಗಜಗಮನದಿ ಬಾರೊ ಪ್ರಸನ್ನ
ವದನೆಯರಾರತಿ ಬೆಳಗುವರು ೩

 

ನುಡಿ-೧: ನಿಮ್ಮಯ ಪತಿಯ
೨೨೭
ಕವಳತಾಯಿ ಕವಳ ಅಮ್ಮ ಪ
ಪಾಪಿ ಪರದೇಶಿಯ ಮರೆಯ ಬೇಡಿರಮ್ಮ ಅ.ಪ
ಸಂಜೆಯ ಕವಳಕ್ಕೆ ಸಾವಿರ ಆಪತ್ತು
ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ
ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ
ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ೧
ನಮದೊಂದು ಸಂಸಾರ ಬಲು ದೊಡ್ಡದವ್ವ
ಶ್ರಮಿಸುವರದರೊಳಗೊಬ್ಬರಿಲ್ಲವ್ವ
ಕಮಲವ್ವ ನಿಮ್ಮಯ ಅಮೃತಹಸ್ತದ ಕವಳ
ಎಮಗೊಂದು ಕ್ಷಣದಲಿ ಅಮೃತವಾಗೋದವ್ವ ೨
ಮಿತಿಯಿಲ್ಲದೈಶ್ಚರ್ಯ ನಿಮಗಿಹುದೆಂದು
ಕ್ಷಿತಿಯೊಳು ಜ್ಞಾನಿಗಳಾಡುತಲಿಹರು
ಅತುಲ ಮಹಿಮ ನಿಮ್ಮ ಪತಿಯ ಪ್ರಸಾದವ
ಪ್ರತಿದಿನವಿತ್ತು ಪ್ರಸನ್ನರಾಗಿರವ್ವ ೩

 

೧೩೬
ಕವಿಗಳು ಪೊಗಳುವ ವಿವರವ ಪೇಳುವೆ ಪ
ಅವನಿಯೊಳ್ ಕೃಷ್ಣನು ಅವತರಿಸುವ ಕಥೆ ಅ.ಪ
ಸುರರೊಡೆಯನ ದಿವ್ಯ ತರುವನು ಬಲದಲಿ
ಸರಸಿಜನಾಭನು ಧರೆಗೆ ತರುವನೆಂದು
ಅರಿಯುತ ವರ ಸುಮನಸರೆಲ್ಲ
ಕರಗಳಿಂದಲಿ ಸುಮ ಸುರಿದರೆಂದೆನುತಲಿ ೧
ಅಂಬುಜನಾಭನು ಶಿಶುವಾಗಿರಲವನ
ಸಂಭ್ರಮದಲಿ ತನ್ನ ವಶಗೊಳುವುದಕೆ
ತುಂಬುರು ಗಂಧರ್ವರು ಪಾಡಿದರು
ರಂಭೆ ಊರ್ವಶಿಯರು ನೃತ್ಯ ಮಾಡಿದರೆಂದು ೨
ವಾಸುದೇವನು ತನ್ನ ಶಿಶುವೆಂದರಿಯುತ
ವಸುದೇವನ ಬಲು ಆಸೆಗೆ ನಗುತಲಿ
ವಸುಗಳು ದೇವರು ವಾಸುದೇವನು ತಮ್ಮ
ಕೂಸು ಏಕಲ್ಲವೆಂದು ಹರುಷ ಪೊಂದಿದರೆಂದು ೩
ಇಂದುವದನನ ಅಂದವ ನೋಡುತ
ಚಂದ್ರಕಲೆಯರ್ಧ ಕುಂದಿದನೆನ್ನುತ
ಸುಂದರಕೃಷ್ಣನು ಅಂದು ತನ್ನಯ ಕುಲ
ದಿಂದ ಬಂದಿರೆ ಬಲು ನಂದ ಪೊಂದಿದನೆಂದು ೪
ಪನ್ನಗಶಯನನು ಸಣ್ಣ ಕೂಸಾಗಿರೆ
ತನ್ನ ವಿಭುತನಕೆ ಇನ್ನು ಕುಂದಿಲ್ಲವೆಂದು
ಉನ್ನತ ಗಗನ ಪ್ರಸನ್ನನಾಗಿ ದಿವ್ಯ
ಸಣ್ಣ ತಾರೆಗಳಿಂದ ಬೆಡಗು ತೋರಿದ ಕಥೆ ೫

 

ನುಡಿ-೧:ತುಚ್ಛನೆಂಬೋ
೧೩೭
ಕಾರಣನೇ ಇವನು ಎಲ್ಲಕ್ಕೂ
ಕಾರಣನೇ ಇವನು ಪ
ಕಾರಣನಿವನು ಸಾಧಾರಣನಲ್ಲನು
ಮಾರಮಣನು ಕರುಣಾರಸಮಯನು ಅ.ಪ
ಇಚ್ಛೆಯಿಂದಲಿ ತಾನು ಅಖಿಲ ಜಗ
ತ್ರ‍ಸಷ್ಟಿಯ ಮಾಡುವನು
ಸ್ವಚ್ಛನಾದರು ತನ್ನ ಮೆಚ್ಚಿಗೆಯಿಂದಲಿ
ತುಚ್ಛನೆಂಬೊ ಶಬ್ದ ವಾಚ್ಯನಾಗಿರುವನು ೧
ಎಲ್ಲವ ಬಲ್ಲವನು ಈಶನು
ಇಲ್ಲದ ಸ್ಥಳವಿಲ್ಲ
ಚಿಲ್ಲರೆ ದೈವಗಳೆಲ್ಲರು ಈತನ
ಚೆಲ್ಲಾಟಗಳಿಗೆ ಉಲ್ಲಾಸಿಸುವರು ೨
ಭಿನ್ನರೂಪಗಳಿಂದ ಜಗದೊಳು
ತನ್ನ ಲೀಲೆಯ ತೋರ್ಪ
ಸನ್ನುತ ಭಕುತಗೆ ಮನ್ನಣೆಯಿಂದ ಪ್ರ
ಸನ್ನನಾಗಿ ಉನ್ನತ ಪದವೀಯಲು ೩

 

ಗಂಗೆ-ಕಾವೇರಿ
೨೪೫
ಕಾವೇರಿ ಜಲ ಸೋಕಿದಾ ವಾತ ಸಂಗದಿ
ಆವ ದೇಶವು ಧನ್ಯವೊ ಪ
ಪಾವನಾತ್ಮಕ ಪ್ರಥಮ ಝಾವದಲಿ ಮಜ್ಜನವ
ಗೈವ ಸುಜನರೇ ಧನ್ಯರೋ ಅ.ಪ
ಆದಿ ಮಧ್ಯಾಂತರಂಗರ ಸೇವೆಯನು ಮಾಡಿ
ಸಾಧಿಸಿದೆ ಮಾಂಗಲ್ಯವ
ಹೋದ ದೇಶದಿ ಹೊನ್ನು ಮಳೆಗರೆವ ನಿನ್ನ ಪರ
ಮಾದರದಿ ಸೇವಿಸುವರು ೧
ಚೋಳ ಮಂಡಲಭಾಗ್ಯ ಪೇಳಸಾಧ್ಯವೆ ನಿನ್ನ
ಲಾಲನೆಯ ಪಡೆಯುತಿರಲು
ಕೇಳುವನು ನಿನ್ನಯ ಕೃಪಾಲವದಿ ತನು ಮನವ
ಕೀಳು ವಿಷಯಕೆ ಬಿಡದಿರು ೨
ಪುಣ್ಯನದಿಗಳಲಿ ಬಲು ಗಣ್ಯಸ್ಥಾನವ ಪಡೆದು
ಮಾನ್ಯಳಾಗಿರುವೆ ಮಾತೆ
ನಿನ್ನ ತೀರದಲಿ ನೆಲಸಿಹ ಜನಕೆ ಪರಗತಿ ಪ್ರ
ಸನ್ನ ಮುಖಿ ನಿಶ್ಚಯವಿದು ೩

 

೧೩೯
ಕುಣಿ ಕುಣಿಯಲೋ ಬಾಲಗೋಪಾಲ ಪ
ಗೋಪಾಲ ನೀರದ ನೀರ ಅ.ಪ
ಯಮುನಾ ತೀರದಿ ಹಿಮಕಿರಣನು ತಾ
ಮಮತೆಯ ತೋರಲು ಬೆಳಗುತಿಹ
ಘಮಘಮಿಸುವ ಈ ಸುಮಗಳು ಸೂಸಿರೆ
ಪ್ರಮದೆಯರೆಲ್ಲರ ಪ್ರೇಮಾಂಗಣದಲಿ ೧
ಗಂಧವ ಮಾರುತ ಬೀರುತಲಿರುವನು
ಇಂದಿರೆ ಕೊಳಲಿನ ರೂಪದಲಿ
ಚಂದದಿ ನಾದವ ತುಂಬಲು ಪರಮಾ
ನಂದವು ಮಾನಸ ಮಂದಿರದಲಿ ನೀ ೨
ಕಾಯವು ರೋಮಾಂಚಿತವಾಯ್ತೊ
ಮಾಯಾವಾದವೊ ಮೋಹಗಳು
ತಾಯಿ ಮಡಿಲು ಸೇರಿದ ಶಿಶುವಂದದಿ
ಹಾಯವೆನಿಸಿತೊ ಜೀವನ ಯಾತ್ರೆಯು ೩
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಬಿಡಿಸೊ
ಸ್ವಾಮಿ ನಿನ್ನಯ ಪಾದಯುಗಳವೆ ಕ್ಷೇಮವೆನ್ನಿಸೊ
ಸಾರಾಸಾರ ವಿವೇಕದಿ ಮೋಕ್ಷದ ಕೋರಿಕೆ ಪುಟ್ಟಿಸೊ
ನಾರಾಯಣ ನಿನ್ನ ಕರುಣದಿ ಭವ ಪಾರ ಸೇರಿಸೋ ೪
ಸಾರದ ಕರುಣಕೆ ಕಾರಣ ಬಿಂಬದ ಮೂರುತಿ ದರುಶನವು
ಭಾರತಿ ರಮಣನ ಮಂಗಳಶಾಸ್ತ್ರ ವಿಚಾರವೆ ಕಾರಣವು
ಭಕುತ ಜನ ಪ್ರಸನ್ನ ಲಕುಮಿರಮಣ ಎನ್ನು
ತಕಿಟ ತಕಿಟ ಎಂದು ೫

 

೧೩೮
ಕುಣಿ ಕುಣಿಯೆಲೋ ಹರಿಗಾನದಲಿ ಪ
ಅಣಕಿಸುವರೆಂದು ಮನ ಜರಿಯದೆಲೆ ಅ.ಪ
ಅನುಗಾಲವು ಮನಕೊರೆಯುವ
ಅನುತಾಪಗಳ ಕೊನೆಗಾಣಿಸಲು ೧
ಸ್ಥಿರವಲ್ಲವು ನರಜನ್ಮವು
ಸರಿಸಮಯವೆಂದು ಅರಿಯುತ್ತ ಮುದದಿ ೨
ಒಣ ಭೋಗವ ಉಣಲೋಸುಗ
ಹಣಗಳಿಸೆ ಬಲು ದಣಿವುದಕಿಂತ ೩
ಗಾನ ಲೋಲನ ನಾಮ ಮಧುರಸ
ಸಾನುರಾಗದಿಂದ ವಾಸಮಾಡುತಲಿ ೪
ಪನ್ನಗಾರಿವಾಹನ ಹರಿಯು ಪ್ರ
ಸನ್ನನಾಗಲೆಂದು ಸನ್ನುತಿಸುವ ಸದಾ ೫

 

೨೯೪
ಕೆರೆಯನು ದಾಟಲು ಅರಿಯದ ಜನ ಭವ
ಶರಧಿಯ ದಾಟುವರೇ ಶ್ರೀ ನರಹರೆ ಪ
ಹರುಷದಿಂದ ನೀ ಕರವ ಪಿಡಿಯದಿರೆ
ತೊರೆಯ ಸೇರಲಳವೆ ಈ ಧರೆಯೊಳು ಅ.ಪ
ಹಲವು ಜನ್ಮಗಳಲಿ ಗಳಿಸಿದ ಅಘಗಳ
ಅಲೆಗಳೊಳಗೆ ಸಿಲುಕಿ ಸಂತತ
ಮುಳುಗಿ ಮುಳುಗುತ ಕಟುಜಲಗಳ ಕುಡಿಯುತ
ನಳಿನನಾಭ ನಿನ್ನೊಲಮೆಯಿಂದಲ್ಲದೆ ೧
ಕಾಮ ಕ್ರೋಧ ಮದ ಲೋಭ ಮೋಹ
ಮತ್ಸರಗಳೆಂಬ ವಿವಿಧ ಜಲಚರ
ತಾಮಸ ನಕ್ರ ತಿಮಿಂಗಿಲವಿರಲಾಗಿ
ಕಾಮಜನಕ ನಿನ್ನ ಪ್ರೇಮವ ಪೊಂದದೆ ೨
ಚೂರ್ಣಗಳಾದುವು ವಿವಿಧ ನಾವೆಗಳೀ
ಅರ್ಣವದಲಿ ಸಿಲುಕಿ ಸುಲಭದಿ
ಪೂರ್ಣ ಪ್ರಮತಿಗಳ ಮತವನರಿತು ಇನ್ನ
ಪೂರ್ಣ ಪ್ರಸನ್ನತೆ ನಾವೆಯಿಂದಲ್ಲವೆ ೩

 

೧೪೦
ಕೇಶವ ಕೇಶವನೆಂದು ನುಡಿಯಲು
ಈ ಸಂಸಾರವ ಕ್ಲೇಶ ತೊಲಗುವುದು
ಮಾಧವ ಮಾಧವನೆಂದು ನುಡಿಯಲು
ಮಾದರಿಯಲ್ಲಿದ ಮೋದವ ಪೊಂದುವಿ ೧
ಗೋವಿಂದ ಗೋವಿಂದನೆಂದು ನುಡಿಯಲು
ಎಂದಿಗೂ ತೋರದ ನಂದವ ಪೊಂದುವಿ
ವಾಮನ ವಾಮನನೆಂದು ಪೊಗಳಲು
ತಾಮಸವಿಲ್ಲದೆ ಕಾಮಿತ ಪೊಂದುವಿ ೨
ಶ್ರೀಧರ ಶ್ರೀಧರನೆಂದು ನುಡಿಯಲು
ಈ ಧರೆಯೊಳು ನಿನಗೆ ಖೇದವೆಲ್ಲಿಯದು
ಅಚ್ಚುತ ಅಚ್ಚುತನೆಂದು ಪೊಗಳಲು
ಉಚ್ಚ ಕುಲದಿ ನೀ ಮೆಚ್ಚಿಗೆ ಪೊಂದುವೆ ೩
ನರಹರಿ ನರಹರಿಯೆಂದು ನುಡಿಯಲು
ಪರತರ ಸುಖವನು ನಿರುತವು ಪೊಂದುವಿ
ಶ್ರೀ ಕೃಷ್ಣನೆಂದು ಪೊಗಳಲು
ಕಷ್ಟವಿಲ್ಲದೆ ನೀ ಇಷ್ಟವ ಪೊಂದುವಿ ೪
ರಾಘವ ರಾಘವನೆಂದು ಪೊಗಳಲು
ನೀಗುವೆ ಸುಲಭದಿ ಅಘಗಳೆಲ್ಲವನು
ಭಾರ್ಗವನೆನಲು ಪ್ರಸನ್ನನಾಗಿ ಹರಿ
ದುರ್ಗಮ ಮೋಕ್ಷಕೆ ಮಾರ್ಗವ ತೋರುವ ೫

 

೧೪೧
ಕೇಳೇ ಯಶೋದೆ ನಿನ್ನ ತನಯನ ಲೀಲೆಯ
ಪೇಳಲು ಅಳವಲ್ಲವೇ ಪ
ಬಾಳುವ ಸತಿಯರ ಧಾಳಿ ಮಾಡುವ ಯದು
ಮೌಳಿ ಶ್ರೀ ಕೃಷ್ಣಗೆ ಪೇಳೀ ವಿವೇಕವ ಅ.ಪ
ಇಂದುವದನ ಎಮ್ಮ ಮಂದಿರಗಳ ಪೊಕ್ಕು
ಪೊಂದುವ ಪಾಲ್ಬೆಣ್ಣೆಯ
ಇಂದು ಸಿಕ್ಕಿದನೆಂದು ಕರಗಳಿಂ ಪಿಡಿಯಲು
ಮಂದಹಾಸವ ಬೀರಿ ಮನವ ಸೋಲಿಸುವನು ೧
ನೀರಿಗೆ ಪೋಗಲು ಯಾರೂ ಇಲ್ಲದ ವೇಳೆ
ಸೇರುವ ಎಮ್ಮೊಡನೆ
ಮೀರಿ ಪೋಗಲು ಕಾಲು ಬಾರದ ಎಮ್ಮೊಳು
ಸಾರಸಾಕ್ಷ ಕೃಷ್ಣ ಸರಸವ ತೋರುವ ೨
ನಿನ್ನ ತನಯ ಪ್ರಸನ್ನ ಶ್ರೀಕೃಷ್ಣನು
ಅನ್ಯಾಯಕಾರನಮ್ಮ
ಚನ್ನಾಗಿ ಇವನಿಗೆ ಬುದ್ಧಿ ಕಲಿಸದಿರೆ
ಬೆನ್ನು ಹತ್ತುವೆವು ಕನ್ಯೆಯರೆಲ್ಲರು ೩

 

೩೨೭
ಕೊಟ್ಟ ಭಾಗ್ಯವೆ ಸಾಕೋ ಶ್ರೀ ಪ
ಕೃಷ್ಣನ ದಯಬೇಕೋ ದೇವ ಅ.ಪ
ಸಾಸಿರ ಬಂದರೆ ಶಾಂತಿಯೆಂದರಿತೆನೊ
ಸಾಸಿರ ಬಂದಿತು ಶಾಂತಿ ಕಾಣಲಿಲ್ಲ
ಸಾಸಿರ ಸಾಸಿರವೇಸು ಬಂದವೋ
ಕ್ಲೇಶವು ಏರಿತು ಮೋಸಹೋದೆನೊ ೧
ಗಾಳಿಯ ಗುದ್ದಿ ಕೈ ಕೀಲು ಮರಿಯಿತೊ
ಕೇಳುವುದಿಲ್ಲವೊ ನಾಳಿನ ಕೂಳನು
ಕಾಲಕಾಲಕೆ ಹುಲಿ ಹಾಲನು ತರುತಿಹ
ಬಾಲಗೋಪಾಲನ ಕೇಳಿ ಮೋಸಹೋದೆ ೨
ಬೇಡವೆನ್ನುವರಿಗೆ ನೀಡುವ ದೊರೆ ನೀ
ರೂಢಿಯ ಬಲ್ಲೆನೋ ಕಾಡುವುದಿಲ್ಲವೊ
ನೀಡಿದ ಭಾಗ್ಯವು ಕೇಡುತರದೆ ಕಾ
ಪಾಡಬೇಕೆಲೊ ಪ್ರೌಢ ಪ್ರಸನ್ನನೆ ೩

 

೧೪೨
ಕೋಪವೇನೋ ಕೃಷ್ಣ ಕೋಪವೇನೊ
ಪಾಪಿ ಜನಗಳಿಗೆ ನಿನ್ನ ರೂಪವ ತೋರಿದೆನೆಂದು ಪ
ಪೇಳು ಕೃಷ್ಣ ನಿನ್ನ ಕೇಳುವೆನೊ
ಗಾಳಿ ಚಳಿಮಳೆಗಳಲಿ ನಿನ್ನ ಧಾಳಿಯ ಮಾಡಿದೆನೆಂದು ೧
ಸುಳ್ಳಿದಲ್ಲ ಕೃಷ್ಣ ಒಲ್ಲೆನೆಲ್ಲ
ಹಳ್ಳ ಕೊಳ್ಳಗಳಲಿ ನುಗ್ಗಿ ಹಳ್ಳಿ ಹಳ್ಳಿಗೆ ತೋರಿದೆನೆಂದು ೨
ಗುಟ್ಟಿದಲ್ಲ ಕೃಷ್ಣ ಬಿಟ್ಟಿದ್ದಲ್ಲ
ಹೊಟ್ಟೆಪಾಡಿಗಾಗಿ ನಿನ್ನ ರಟ್ಟುಮಾಡಿ ದಣಿಸಿದೆನೆಂದು ೩
ನಿನ್ನ ತ್ಯಾಗ ಕೃಷ್ಣ ಎನ್ನ ಯೋಗ
ಮನ್ನಿಸಲಾರೆಯ ದಯದಿ ಚಿನ್ಮಯ ಪ್ರಸನ್ನ ಕೃಷ್ಣ ೪

 

ಗುರುಸ್ತುತಿ
೨೪೭
ಕೋರುವೆ ಗುರು ವಿದ್ಯಾ ವಾರಿಧಿತೀರ್ಥರ
ಭೂರಿ ದಯವ ಸತತ ಪ
ಧೀರವರೇಣ್ಯ ಸಮೀರ ಸಮಯಗಳ
ಸಾರವನರಿಯುವ ದಾರಿಯ ಕಾಣಲು ಅ.ಪ
ವ್ಯಾಸರಾಜಗುರು ದಾಸರೆಂದಿನಿಸಿ
ಶ್ರೀಶ ಶ್ರೀಕೃಷ್ಣನ ತೋಷಿಸಲು
ಸಾಸಿರ ವಿಧದಲಿ ಸಲಿಸಿ ಸೇವೆಗಳ
ಭಾಸುರ ಕೀರುತಿ ಪಡೆದ ಯತಿವರ ೧
ಅಂದದ ನವಮಣಿ ಮಂದಿರಗಳಲಿ
ನಂದಕುಮಾರನ ಕುಳಿ್ಳರಿಸಿ
ಚಂದದಿ ದಿನ ದಿನ ಪೂಜೆಯ ಗೈದು
ಆನಂದಸಾಗರದಿ ಮಿಂದ ಯತಿವರ ೨
ಘನ್ನ ಮಹಿಮೆ ಸುಖ ಚಿನ್ಮಯ ರೂಪ
ಪ್ರಸನ್ನ ಶ್ರೀಕೃಷ್ಣಗೆ ಹರುಷದಲಿ
ಚಿನ್ನಮಯದ ತೊಟ್ಟಿಲನ್ನು ಸೇವೆ ಮಾಡಿ
ಅನ್ಯರಿಗಲ್ಲದ ಪುಣ್ಯ ಪಡೆದವರ ೩

 

೧೪೩
ಕೋಸಲಾಧಿಪ ಶುಭವನು ದಾಶರಥೇ ಪ
ದಾಸನಲ್ಲಿ ಕೃಪಾಲೇಶವ ಬೀರೆಲೊ ಅ.ಪ
ಹರನ ಚಾಪವ ಮುರಿದು ಸ್ವಯಂ
ವರದಿ ಜಾನಕಿ ಕರವ ಪಿಡಿದು
ಸುರನರರನು ಹರುಷಪಡಿಸಿದ
ಸರಸಿಜಲೋಚನ ಕಾಯೊ ಕರುಣದಲಿ ೧
ವನವ ಸೇರಿ ಮುನಿಗಳ ಶಂ
ಸನವ ಪೊಂದಿದ ಜಾನಕೀಪತಿ
ಮುನಿದು ದುರುಳರ ಹನನ ಮಾಡಿದ
ಹನುಮನಿಗೆ ದರುಶನವಿತ್ತ ೨
ವಾನರಬಲದಿಂದ ಕೂಡಿ
ವನದಿ ಬಂಧಿಸಿ ಲಂಕೆ ಸೇರಿದ
ಶಾನನ ಮುಖರನು ಕೊಂದು
ಜಾನಕಿಯಲಿ ಪ್ರಸನ್ನನಾದ ೩

 

೨೨೫
ಕ್ಷೀರಶರಧಿಶಯನ ನಾರಾಯಣ ಪ
ತೋರೊ ಎನ್ನಲಿ ಕರುಣ ನಾರಾಯಣ ಅ.ಪ
ಕ್ಷಿತಿಯೊಳೆನಗೆ ಸ್ಥಿತಿ ಗತಿಯು ಬೇರಿಲ್ಲವೊ
ಶ್ರಿತಜನ ಕಲ್ಪತರು ಶ್ರೀರಮಣ ೧
ಅರಿಷಡ್ಪರ್ಗವ ಮುರಿದು ಎನಗೆ ನಿನ್ನ
ವರ ಸೇವೆಯ ನೀಡೊ ಶ್ರೀ ನರಹರಿ ೨
ಪಾಮರ ಭಕುತರ ಕ್ಷೇಮವಹಿಸಿ ಅವರ
ಕಾಮಿತಗಳ ನೀಡೊ ಕಾಮಧೇನು ೩
ಸಂತತ ಹೃದಯದಿ ನೆಲೆಸಿ ಎನಗೆ ಮನ
ಶಾಂತಿಯ ದಯಮಾಡೊ ಚಿಂತಾಮಣಿ ೪
ನಿನ್ನ ದಾಸರದಾಸನೆನ್ನಲಿ ದಯದಿ ಪ್ರ
ಸನ್ನ ನಾಗೊ ಶ್ರೀಶ ಲಕ್ಷ್ಮೀಶ ೫

 

ಪಲ್ಲವಿ : ತುಂಗಮಹಿಮನ
೨೪೬
ಗಂಗೇ ಜನನೀ ಮಂಗಳರೂಪಿಣಿ
ತುಂಗ ಮಹಿಮನ ಪಾದಾಂಗುಳಿಜಾತೆ ಪ
ಸಂಗತಿಯರುಹಲು ಬಂದಿರುವೆವು ಕೃಪಾ
ಪಾಂಗವ ತೋರೆಲೆ ಇಂಗಿತವರಿತು ಅ.ಪ
ನಾಲ್ಕು ಮೊಗನು ಹರಿ ಕಾಲಿಗೆ ಕೆಡುಹಲು
ಶೂಲಧರನ ಶಿರ ಆಲಯ ಮಾಡಿದೆ
ಶೈಲದಂತಿಹ ಪಾಪ ಜಾಲಿಸಿ ಕಳೆಯುವೆ
ಪೇಳಲಳವೆ ನಿನ್ನ ಶೀಲವ ಸುಲಭದಿ ೧
ಚಾರು ನದಿಗಳು ಹೇರಳವಿದ್ದರು
ಭಾರತ ದೇಶದಿ ಭಾಗ್ಯದೇವತೆ ನೀ
ದೂರ ದೂರ ದೇಶಗಳಲಿ ನೆಲೆಸಿಹ
ಧೀರರು ನಿನ್ನಯ ಕೋರುತಲಿರುವರು ೨
ಅಂಗಳದಲಿ ಬಿದ್ದು ಹರಿವ ಜಲವು ನಿನ್ನ
ಸಂಗದಿ ಪರಮಮಂಗಲ್ಯವ ಪಡೆವುದು
ಶೃಂಗಾರದ ನಿಧಿ ರಂಗನ ಸೇವೆಗೆ
ಗಂಗೇ ಎನ್ನಂತರಂಗವ ಶೋಧಿಸೆ ೩
ಭೂಮಿಯ ಭೇದಿಸಿ ಸುಂದರ ರೂಪದಿ
ಸ್ವಾಮಿ ಶ್ರೀಮಧ್ವರ ಚರಣಕೆ ನಮಿಸಿ
ಆ ಮಹಾತ್ಮರ ದರುಶನದಿ ಪ್ರಸನ್ನಳೇ
ಕಾಮಿತ ಕರುಣಿಸೇ ತ್ರಿಕರಣ ಶುದ್ಧಿಯ ೪

 

೧೪೫
ಗಾನ ವಿಲೋಲನ ನಾಮ ಸುಧಾರಸ
ಪಾನಮಾಡು ಸತತ ಪ
ಹೀನ ಮನವ ಬಿಟ್ಟು ಸಾನುರಾಗದಿಂದ
ಜಾನಕಿ ವಲ್ಲಭ ಆನಂದಮಯನೆಂದ ಅ.ಪ
ಉಡಿಗೆ ತೊಡುಗೆಗಳ ಸಡಗರವೆಲ್ಲವು
ಕಡು ದು:ಖ ದೇಹವು ನಡುಗುವತನಕ
ನಡುಗಲು ದೇಹವು ಮಡದಿ ಮಕ್ಕಳುಗಳು
ಒಡೆಯನಾದರು ನಿನ್ನ ಸಿಡುಗುಟ್ಟುವರು ೧
ಹಸಿವು ಬಾಯಾರಿಕೆ ಶಿಶು ಮೋಹಗಳಿಂದ
ಪಶುಪಕ್ಷಿಗಳೆಲ್ಲ ನಿನಗೆ ಸಮ
ವಸುಧೆಯೊಳಗೆ ನಿನಗೆ ಅಸಮ ವಿವೇಕವ
ಬಿಸಜಾಕ್ಷನೀಯಲು ಸುಸಮಯವೆಂದರಿತು ೨
ತನ್ನನು ನೆನೆಯಲು ಘನ್ನ ಮಹಿಮೆ ಪ್ರ
ಸನ್ನ ಮೂರುತಿಯು ಎನ್ನವನೆಂದು
ನಿನ್ನಪರಾಧವ ಮನ್ನಿಸಿ ಸಲಹುವ
ಚಿನ್ಮಯ ಮೂರುತಿ ಬಿನ್ನೈಸುವೆನೆಂದು ೩

 

೧೪೬
ಗಾನ ಹರಿನಾಮ ಕೀರ್ತನೆಯ ಗಾನ
ಪರಮಾದರವಿದ್ದರೆ ಗಾನ ಪ
ಗಾನದಿಂದ ಹರಿಯುವ ಬಾಷ್ಪಾಂಜಲಿ
ಭಾನುವಂಶ ಶೇಖರಿನಿಗುಪಾಯನ ಅ.ಪ
ಗಾನರಸದ ಮಜ್ಜನದಿಂದಲಿ ಮನ
ಕಾಣಲು ಶಮದಮ ಸುಖಗಳನು
ಮೀನ ಕೂರ್ಮ ಮೊದಲಾದ ರಮೇಶನ
ನಾನಾ ಲೀಲೆಗಳನ್ನು ಪೊಗಳುವುದೇ ೧
ನಾರಿಯ ಸೌಂದರ್ಯಕೆ ಮಾಂಗಲ್ಯವು
ಕಾರಣವಾಗುವ ತೆರದಲ್ಲಿ
ಹೇರಳ ಗಾಂಭೀರ್ಯವ ರಸಪುಂಜಕೆ
ಬೀರುವ ಶೌರಿಯ ಮಧುರನಾಮಗಳೆ೨
ಆದಿವ್ಯಾಧಿ ಜನನಾದಿ ವಿರೋಧದ
ಬಾಧೆಯ ಕಳೆಯುವ ಔಷಧಿಯು
ಮಾಧವ ಮಧುಸೂಧನ ಶ್ರೀಧರಪರ
ಬೋಧ ಪ್ರಸನ್ನನ ಮಧುರ ನಾಮಗಳೇ ೩

 

೧೪೪
ಗಾನಕೆ ಸುಲಭವು ರಾಮನಾಮವು
ಗಾನಕೆ ಅತಿ ಸುಲಭ ಪ
ದೀನಜನಕೆ ಬಲು ಸಾನುರಾಗನಾದ
ಜಾನಕಿನಾಥನ ದಿವ್ಯನಾಮವು ಅ.ಪ
ತಾಳ ತಂಬೂರಿ ಮೃದಂಗಗಳಿಂದಲಿ
ಪೇಳುವವರಿಗೆ ರಫುಮೌಳಿಯ ನಾಮವು ೧
ಘೋರ ಕಲುಷಗಳ ಪಾರಗಾಣಿಸಿ ಮನ
ಕೋರಿಕೆಗಳನೀವ ತಾರಕ ನಾಮವು ೨
ತಾಪಸ ಸತಿಯಳ ಶಾಪವ ಬಿಡಿಸಿದ
ಭೂಪ ದಾಶರಥಿ ದಿವ್ಯನಾಮವು ೩
ಲಂಕೆಯ ಪೊಕ್ಕು ನಿಶಾಚರನೆ ಕೊಂದು
ಪಂಕಜಾಕ್ಷಿ ಆತಂಕ ಕಳೆದ ನಾಮ ೪
ಎನ್ನವರೆಲ್ಲರು ಬನ್ನಿರಿ ಎನ್ನುತ
ತನ್ನೊಡನೊಯ್ದು ಪ್ರಸನ್ನರಾಮನ ನಾಮ ೫

 

೨೫೨
ಗುರುವರ್ಯರನು ಭಜಿಸೋ ರಾಘವೇಂದ್ರ
ಗುರುವರ್ಯರನು ಭಜಿಸೋ ಪ
ಧರೆತಲದಲಿ ಅವತರಿಸಿ ಸುಜನರನು
ಪರಿಪರಿ ವಿಧದಲಿ ಪೊರೆಯುತಲಿರುವ ಸದ್ ಅ.ಪ
ನಳಿನನಾಭ ಶ್ರೀರಾಮರ ರುಚಿರ ಪದಗಳ ಸಂತತದಿ ಭಜಿಸಿ
ಖಳರ ದುರ್ಮತಗಳನಳಿಸಿ ದಶಪ್ರಮತಿ
ಗಳ ದಿವ್ಯ ಶಾಸ್ತ್ರಾರ್ಥಗಳನು ಸುಲಭದಲಿ
ಇಳೆಯೊಳು ಸುಜನಕೆ ತಿಳಿಯುವ ತೆರದಲಿ
ಬೆಳಗುತಿರುವ ಪರಿಮಳ ಮುಖವರ ಗ್ರಂಥ
ಗಳನು ರಚಿಸುತ ಉಳಿಸಿ ಸುಮತಿಯನು
ಇಳೆಯೊಳು ವರಮಂತ್ರ ನಿಲಯದಿ ನೆಲೆಸಿದ ೧
ಮಂಗಳಕರಳೆಂದು ಚರಿತೆಯುಳ್ಳ ತುಂಗಾತೀರದಿ ನೆಲೆಸಿ
ಕಂಗೊಳಿಸುತ ಚರಣಂಗಳ ಭಜಿಪರ
ಸಂಘಕ್ಕೆ ತಮ್ಮ ಅಪಾಂಗ ವೀಕ್ಷಣದಿಂದ
ಮಂಗಳ ತತಿಗಳ ನೀಡಿ ಅವರ ಆಘ
ಭಂಗವಗೈಯುತ ಅನುದಿನದಲಿ ದ್ವಿಜ
ಪುಂಗವ ನಿಕರದಿ ಪೂಜೆಯಗೊಂಬ ಉ
ತ್ತುಂಗ ಚರಿತರಥಾಂಗಧರ ಪ್ರಿಯ ೨
ಮುನ್ನ ಪ್ರಹ್ಲಾದನೆನೆಸಿ ಶ್ರೀ ನರಹರಿಯನ್ನು ಸತತ ಭಜಿಸಿ
ಇನ್ನೊಂದು ಜನುಮದಿ ಮಾನ್ಯ ಶ್ರೀ ವ್ಯಾಸಮುನಿ
ಯೆನ್ನಿಸಿ ಖಲಮತವನ್ನು ಖಂಡಿಸುತಲಿ
ಚಿನ್ನ ಶ್ರೀಕೃಷ್ಣನ ಉನ್ನತ ಮಹಿಮೆಗ
ಳನ್ನು ಬೋಧಿಸುತ ತನ್ನ ಭಕುತಜನ
ರನ್ನು ಹರುಷದಲಿ ಧನ್ಯರೆನಿಸಿದ ಪ್ರ
ಸನ್ನ ಶ್ರೀರಾಮರ ಭಕುತ ಶಿರೋಮಣಿ ೩

 

ನುಡಿ-೧: ಉತ್ತಮತೀರ್ಥರ
೧೪೭
ಗೋವಿಂದ ಈ ವಿಧ ಸಂಭ್ರಮ ನೋಡುವುದಾನಂದ ಪ
ನೋಡಿ ಈ ವಿಧ ಚಂದ ನೋಡಬಾರದೊ ಬೇರೊಂದ ಅ.ಪ
ಉತ್ತಮ ಕಲ್ಪದ ಮುತ್ತುರತ್ನಗಳು
ಹತ್ತಾರೆಡೆಗಳಲಿ
ಉತ್ತಮ ತೀರ್ಥರ ಚಿತ್ತದ ಮೂರುತಿ
ಪುತ್ಥಲಿ ರೂಪದಿ ಮತ್ತೆಲ್ಲಿರುವುದೊ ೧
ಕಾಲ ನಿಯಾಮಕ ಕಾಲದ ಗತಿಯನು
ಪಾಲಿಸುವುದೇ ತರವು
ಮೂಲೆ ಮೂಲೆ ಕ್ಷೇತ್ರಗಳನೆ ಬಿಟ್ಟು ಈ
ಮೂಲ ಮಂದಿರಕೆ ಬಂದಿರುವಂತಿದೆ ೨
ಚಂದ್ರನ ಕುಲದಲಿ ಜನಿಸಿದ ದೇವಗೆ
ಚಂದ್ರಿಕೆಯಲ್ಲವೆ ಪ್ರಿಯತಮವು
ಚಂದ್ರಿಕಾ ಸೊಬಗಿಲಿ ಮೆರೆದು ನಲಿದ ಶ್ರೀ
ಚಂದ್ರಿಕಾಚಾರ್ಯ ಪ್ರಸನ್ನನ ವೈಭವ ೩

 

೧೪೮
ಗೋವಿಂದ ಗೋವಿಂದ ಗೋವಿಂದನೆನ್ನಲು ಪ
ಏನೆಂದು ಪೇಳಲಿ ಆನಂದವನು ನಾ ಅ.ಪ
ಹಸಿವು ತೋರದೆನಗೆ ತೃಷೆಯು ತೋರದೆನಗೆ
ಹೊಸ ಹೊಸ ಪರಿ ನಾಮರಸವ ಸೇವಿಸುತಿರೆ ೧
ದ್ವೇಷವು ತೋರದು ರೋಷವು ತೋರದು
ಶೇಷಶಯನ ನಿನ್ನ ಹರುಷದಿ ಪೊಗಳಲು ೨
ಭಯವು ತೊಲಗುವುದು ಜಯವು ತೋರವುದು
ನಯನಗಳಲಿ ಸುಖ ಜಲವು ಸುರಿಯುವುದು ೩
ಎಂದಿನ ಪುಣ್ಯವೊ ಇಂದರಿತೆನು ಗೋ-
ವಿಂದನಾಮ ಮಕರಂದದ ಸವಿಯನು ೪
ನಿನ್ನ ಸುಕರುಣದ ಚಿನ್ಹೆ ಕಾಣಿಸಿತು ಪ್ರ
ಸನ್ನನಾಗುವಿಯೆಂದು ಚೆನ್ನಾಗಿ ಅರಿತೆನು ೫

 

೧೪೯
ಚೇಷ್ಟೆಯನು ಮಾಡದಿರೊ ಕೃಷ್ಣ ನೀ ಪರಿ ಬಹಳ
ನಿಷ್ಠುರದ ವಚನಗಳನಾಡುವರು ಜನರು ಪ
ಎಷ್ಟು ತಪವನೆ ಮಾಡಿ ಪಡೆದೆನೊ ನಾನಿನ್ನ
ಕಷ್ಟವಾಯಿತು ನಿಂದೆ ನುಡಿಯ ಕೇಳುವುದು ಅ.ಪ
ಕೊಂಡು ಪೋಗಲಿ ಬೆಣ್ಣೆ ಪಾಲು ಧದಿ ಭಾಂಡಗಳ
ದುಂಡು ನಗುಮೊಗ ಚೆಲುವ ನಿನ್ನ ಮಗನು
ಕಂಡರೆಮ್ಮನು ಮೋರೆ ತಿರುಗಲೇಕೆ ಇಂಥಾ
ಪುಂಡು ಹುಡುಗನೆ ನಿನ್ನ ಮಗನೆಂದು ದೂರುವರು ೧
ಮುರಳಿ ನಾದವ ಕೇಳಿ ಮರೆತು ಮೇವನು ಎಮ್ಮ
ತುರುಕರುಗಳೆಲ್ಲ ಬಲು ಕೃಶವಾದವಮ್ಮ
ಹರಿವ ಯಮುನಾಜಲದೊಳ್ ಆದ ಅವಿವೇಕವನು
ಅರುಹಲೆಮ್ಮಯ ಮನವು ಜರಿವುದೆಂದಾಡುವರು ೨
ಸಂಸಾರ ಮೋಹವನು ತೊರೆದು ಎನ್ನಲಿ ಮನದ
ಸಂಶಯವ ಬಿಡಿ ಬಿಡಿ ಪ್ರಸನ್ನರಾಗಿರಿ ಎಂದ
ಧ್ವಂಸವಾಯಿತು ಎಮ್ಮ ಅಭಿಮಾನ ಇವ ಚಂದ್ರ
ವಂಶಕೆಂತಹ ಕೀರ್ತಿ ತಂದನೆಂದಾಡುವರು ೩

 

೩೫೩
ಜಗಜಗಿಸುವ ಈ ಸೊಗಸಿನ ಪೀಠಕೆ
ನಗುನಗುತ ಬಾರೊ ದೇವ ಪ
ಗಗನರಾಯನಿಗೆ ಮಗಳೆಂದೆನಿಸಿದ
ಜಗಕೆ ಜನನಿ ಕೈಮುಗಿದು ಪ್ರಾರ್ಥಿಸುವಳು ಅ.ಪ
ಅಂಗನೆಯರು ಶ್ರವಣಂಗಳ ತುಂಬುವ
ಸಂಗೀತದ ಸಾರಂಗಳರ್ಪಿಸುವರೊ ೧
ನಾದಸ್ವರದ ಸೊಗಸಾದ ಧ್ವನಿಗಳಲಿ
ನಾದ ಬ್ರಹ್ಮನು ತಾ ಕಾದು ನೋಡುತಲಿಹ ೨
ಪರಿಮಳ ಪುಷ್ಪದ ಸುರಿಮಳೆ ನೋಟವು
ಸ್ಮರಣೆಗೆ ತರುವುದು ಸಿರಿಯ ವಿವಾಹವ ೩
ಭೂಸುರರೆಲ್ಲರು ಆಶೀರ್ವಚನವ
ಶ್ರೀಶ ನಿನ್ನಯ ಸಂತೋಷಕೆ ನುಡಿವರು ೪
ಸುಖ ಸಂತೋಷವು ಮುಖ ಮುಖದಲಿಹುದು
ತವ ಸುಖಾಗಮನದಿಂ ಲಕುಮೀ ಪ್ರಸನ್ನನೇ ೫

 

೨೩೨
ಜನುಮ ಜನುಮದಲಿ ಎನಗಿರಲಿ ಪ
ಹನುಮ ಭೀಮ ಮಧ್ವಮುನಿಗಳ ಸೇವೆಯು ಅ.ಪ
ಮಾತರಿಶ್ವ ನೀ ಪ್ರೀತನಾಗೆ ಅಜ
ತಾತನು ಸುಲಭದಿ ಒಲಿಯುವನು
ಕೋತಿಯ ರೂಪದಿ ಭೂತಲದಲಿ ಬಲು
ಖ್ಯಾತಿ ಪಡೆದ ರಾಮದೂತರ ಸೇವೆಯು ೧
ಹರನ ಭಕುತ ಜರಾಸಂಧನ ಕಾಯುವ
ಹರಿದು ಮುರಿದು ಬಲು ಸುಲಭದಲಿ
ಹರಿಗಪರೋಕ್ಷದಿ ಅರ್ಪಣೆ ಮಾಡಿದ
ಕುರುಕುಲಪತಿ ಬಲಭೀಮರ ಸೇವೆಯು ೨
ಶುದ್ಧ ದ್ವಿಜಕುಲದಿ ಉದ್ಧವಿಸುತ ಅನಿ
ರುದ್ಧನಿಗನುಮತವಾಗಿರುವ
ಸಿದ್ಧಾಂತದ ಪದ್ಧತಿಯನು ತೋರಿದ
ಮಧ್ವಮತದ ತತ್ವದಲಿ ಪ್ರಸನ್ನತೆ ೩

 

ನುಡಿ-೨: ಹನುಮನ ಭವನಗಳನ್ನು
೨೫೬
ಜಯ ಜಯ ವೈಷ್ಣವ ಪಯನಿಧಿ ಚಂದ್ರಗೆ
ಜಯ ಜಯ ವ್ಯಾಸಯತೀಂದ್ರರಿಗೆ ಪ
ಜಯ ಜಯ ವರ ಕರ್ಣಾಟಕ ಪತಿಗೆ
ಜಯ ಸಿಂಹಾಸನವೇರಿದಗೆ ಅ.ಪ
ನಾಕು ಶಾಸ್ತ್ರಗಳ ಪಾರಂಗತರಿಗೆ
ಕಾಕುಮತಗಳನು ತುಳಿದವಗೆ
ಆ ಕಮಲಾಪತಿ ಭಕುತವರೇಣ್ಯಗೆ
ಶ್ರೀಕರ ಚಂದ್ರಿಕಾಚಾರ್ಯರಿಗೆ ೧
ಹನುಮನ ಭಾಷ್ಯವ ಅಣಿಮಾಡಿದಗೆ
ಹನುಮಗೆ ಭವನಗಳನು ಕಟ್ಟಿದಗೆ
ಹನುಮನ ಯಂತ್ರದಿ ಬಿಗಿದಪ್ಪಿದಗೆ
ಮುನಿತ್ರಯದಲಿ ಸೇರಿದ ದೊರೆಗೆ ೨
ಮಾಯಾವಾದಗಳನು ಗೆಲಿದವಗೆ
ಸ್ವೀಯಮತವ ಸ್ಥಾಪಿಸಿದವಗೆ
ನ್ಯಾಯಾಮೃತಧಾರೆಯ ಅಭಿಷೇಕದಿ
ಆ ಯದುಪತಿಯನು ಕುಣಿಸಿದಗೆ ೩
ಚಕ್ರಧರನ ಸುಳುಗಳ ತಿಳಿದವಗೆ
ಮಿಕ್ಕಮತಗಳನು ಅಳಿದವಗೆ
ವಕ್ರಯುಕುತಿಗಳನು ತುಕ್ಕುಡಗೈಯ್ಯವ
ತರ್ಕ ತಾಂಡವದಿ ನಲಿದವಗೆ ೪
ಕೃಷ್ಣದೇವರಾಯನ ಕುಲಪತಿಗೆ
ಕಷ್ಟದ ಕುಹಯೋಗವ ಕೊಂದವಗೆ
ಶಿಷ್ಟಜನಗಳಿಗೆ ಇಷ್ಟಾರ್ಥಗಳನು
ವೃಷ್ಟಿಯಗೈವ ಪ್ರಸನ್ನರಿಗೆ ೫

 

ನುಡಿ-೩: ಅನ್ನಾದಿಮಯ ಹರಿಯು
೨೯೫
ಜಲಜನಾಭನ ಪೂಜೆ ಅತಿ ಸುಲಭವು ಪ
ಚಲಿಸಿದ ಮನವನ್ನು ಪೊಂದಿರುವ ಸುಜನರಿಗೆ ಅ.ಪ
ತಾಳ ಕೇಳುವನಲ್ಲ ಮೇಳ ಕೇಳುವನಲ್ಲ
ಬಾಳೆ ಮಾವುಗಳ ವೈಭವವ ಕೇಳುವನಲ್ಲ
ಸೂಳೆಯಂದದಿ ಬಹಳ ನಟನೆಗಳು ಬೇಕಿಲ್ಲ
ಬಾಲಕೃಷ್ಣನಲಿ ದೃಢಭಕುತಿಯುಳ್ಳವಗೆ ೧
ನವರತ್ನ ಮಂಟಪದ ಝವೆಯ ಬಯಸುವನಲ್ಲ
ಹವಳಗಳ ಸರದ ವೈಭವವು ಬೇಕಿಲ್ಲ
ಧವಳ ಮುಕ್ತಾಹಾರಗಳ ಬಯಸುವನಲ್ಲ
ಭುವನ ಭೂಷಣನೊಳತಿ ಭಕುತಿಯುಳ್ಳವಗೆ ೨
ಹೊನ್ನಿನಾಭರಣಗಳನ್ನು ಬಯಸನು ವಿವಿಧ
ಅನ್ನಗಳ ರುಚಿಗೆ ಲೋಭವ ಪೊಂದನು
ಅನ್ನಾದಿಮಯ ಹರಿಯು ತನ್ನಲ್ಲಿ ತುಳಸೀದಳ
ವನ್ನು ಭಕುತಿಯೊಳಿಡೆ ಪ್ರಸನ್ನನಾಗುವನು ೩

 

೧೫೦
ಜೋ ಜೋ ಸುಖಸಾರ ಪ
ಜೋ ಜೋ ಜೋಜೋ ದೋಷ ವಿದೂರ ಅ.ಪ
ಸುಮ್ಮನೆ ಸಾಗೆಲೊ ಮುಂದೆ
ನಮ್ಮ ಮಗುವು ತಾ ಮಲಗಿಹನಿಂದು
ನಿಮ್ಮ ಮಂದಿಗೆ ಈ ಶಿಶುವು
ಬೊಮ್ಮನು ಫಣಿಯಲಿ ಬರೆದಿಹನೇನೊ ೧
ನಿದ್ರೆಯ ಸುದ್ದಿಯ ಕಾಣದ ನಾನು
ನಿದ್ರೆಯ ಮಾಡುವ ಸಡಗರವೇನು
ಮುದ್ದು ಮಾತುಗಳಲಿ ಫಲವೇನು
ನಿದ್ರೆ ನಾ ಮಾಡಲು ಎದ್ದಿರುವರ್ಯಾರು ೨
ನಿದ್ರೆ ಮಾಡುವುದೆಂತು
ನಿದ್ರೆಯಿಂದೆನಗೆ ಫಲವೆಂತಮ್ಮ
ಬೇಕಾದ ಜೋಗುಳ ಪಾಡುವೇನೊ
ಏಕಮನದಿ ನೀ ಪ್ರಾಜ್ಞನ ಕೂಡೊ
ಸ್ವೀಕರಿಸಿದ ದಧಿ ಕ್ಷೀರಗಳು
ನಾಕು ನಿಮಿಷದಲಿ ಜೀರ್ಣವಾಗುವುವೊ ೩
ಕಣ್ಣನು ಮುಚ್ಚಿದೆ ಪ್ರಾಜ್ಞ ನಾನು
ಚನ್ನಾಗಿ ತಬ್ಬಿದೆ ನೋಡಮ್ಮ
ಎನ್ನಯ ಕುಕ್ಷಿಯು ಬರಿದಾಯ್ತು
ಇನ್ನು ಪ್ರಸನ್ನಳಾಗುಣಬಡಿಸಮ್ಮ ೪

 

೨೭೧
ಜೋಕೆ ಎನ್ನ ವಿಚಾರ ನಾಕು ಜನರಂತಲ್ಲ
ಸ್ವೀಕರಿಸಬೇಕು ಕ್ಷಣದಿ ಪ
ನಾಕಾರು ವಿಧಗಳಲಿ ನೀಪೇಳಿದುದನೆಲ್ಲ
ಏಕಮನದಲಿ ಮಾಡಿದೆ ಕೃಷ್ಣ ಅ.ಪ
ಬಾಲತನದಲಿ ಬಹಳ ಲೋಲನಾಗಿರು ಎಂದು
ಪೇಳಲಿಲ್ಲವೆ ಯೋಚಿಸು
ಕೀಳುಜೀವನದಲ್ಲಿ ಕಾಲವನು ಕಳೆ ಎಂದು
ಪೇಳಿದುದ ನೀ ಮರೆತೆಯಾ
ಶ್ರೀ ಲಕುಮಿಪತಿ ನಿನ್ನ ಕೀಲುಗೊಂಬೆಯ ತೆರದಿ
ಪೇಳಿದುದ ಮಾಡಿರುವೆನೊ ೧
ಶ್ರೀಪತಿಯೆ ನಿನ್ನ ಪ್ರೇರಣೆಯಲ್ಲವೆ ಸರ್ವ
ಪಾಪ ಪುಣ್ಯಕೆ ಕಾರಣ
ಈ ಪರಿಯ ನಿನ್ನ ಸಂಕಲ್ಪವನು ಮೀರಲು
ತಾಪಸೋತ್ತಮರಿಗಳವೆ
ಆಪತ್ತು ಸಂಪತ್ತು ನಿನ್ನಧೀನಗಳೆಂದು
ತಾಪತ್ರಯವ ಸಹಿಸಿದೆ ೨
ಇಂದಿರಾಪತಿ ನಿನ್ನ ಒಂದೊಂದು ದಿನದಲಾ
ನಂದ ಪೂಜೆಗೈಯಲು
ಹಿಂದಿನಾ ಲೆಕ್ಕವು ಸಂದಿಲ್ಲವೆಂದು ನೀ
ನಿಂದು ನುಡಿಯಲು ಸಾಧ್ಯವೆ
ಅಂದು ಮಾಡಿದರ್ಯಾರು ಇಂದು ಮಾಡುವರ್ಯಾರು
ಸಂದೇಹವಿಲ್ಲವೆನಗೆ ೩
ಇಂತಹುದು ಬೇಕೆಂಬ ಚಿಂತೆಯಿಲ್ಲದೆ ಬಹಳ
ಸಂತಸದಿ ಮುಳುಗಿರುವೆನೊ
ಕಂತುಜನಕ ಎನಗೆ ಭ್ರಾಂತಿ ನೀಡದೆ ಮನಕೆ
ಶಾಂತಿಯನು ದಯಮಾಡೆಲೊ
ಸಂತತ ನೀನು ಎನ್ನಂತರಂಗದಲಿರಲು
ಕಂತೆಯಂದದಿ ಕಾಂಬೆನೊ ಜಗವ ೪
ಧೋರಣೆಯ ನುಡಿಗಳಿಗೆ ಕಾರಣನು ನೀನಿರಲು
ಯಾರ ಭಯವೆನಗಿಲ್ಲವೊ
ನೀರಜಾಕ್ಷನೆÉ ನಿನ್ನ ಪ್ರೇರಣೆಯನೆಳ್ಳಷ್ಟು
ಮೀರಿ ನಡೆಯುವುದಿಲ್ಲವೊ
ಸಾರಗುಣ ಸಂಪನ್ನ ಧೀರಭಕ್ತ ಪ್ರಸನ್ನ
ಯಾರಿರುವರೊ ಜಗದಲಿ ನಿನ್ಹೊರತು ೫

 

೧೫೧
ಜ್ಞಾನಾನಂದ ಸ್ವರೂಪ ಭಾನುಕೋಟಿ ಪ್ರದೀಪ
ನಾನಾದೋಷ ನೀರ್ಲೇಪ ಮೀನ ರೂಪ ಪ
ಏನು ಅರಿಯದ ದೀನ ಭಕುತನಿಗೆ
ಸಾನುರಾಗದಿ ಜ್ಞಾನವನೀಯೋ ಅ.ಪ
ನಿಗಮಗಳೆಲ್ಲವು ಬಗೆ ಬಗೆಯಿಂದ ನಿನ್ನ
ಅಗಣಿತ ಗುಣಗಳ ಪೊಗಳುತಲಿದ್ದರು
ಸಿಗದ ನಿನ್ನ ನಾನು ಪೊಗಳಲಳವೆ ಪೇಳೊ
ಜಗದೊಳಖಿಲ ಭೋಗಗಳಾಸೆ ಮುಗಿದವು
ಸಿರಿಯರಸನೆ ನಿನ್ನ ಚರಣಕಮಲದಲಿ
ಪರತರ ಭಕುತಿಯ ದೊರಕಿಸೆಲೊ
ಸರಸಿಜ ಜನಕನೆ ಮರೆತಪರಾಧವ
ಕರುಣದಿಂದಲಿ ಎನ್ನ ಕರಗಳ ಪಿಡಿಯೋ ೧
ಒಂದು ದಿನವು ಸುಖ ಗಂಧವನರಿಯದೆ
ಮುಂದು ತೋರದೆ ಭವ ಸಿಂಧುವದನನೆ
ತೊಂದರೆ ಪಡುತಿಹೆ ಸುಂದರ ವದನನೆ
ತಂದೆ ಎನಗೆ ನೀನೆ ಬಂಧುವೆನಗೆ ನೀನೆ
ಮಂದ ಬುದ್ಧಿಯಲಿ ನಿಂದ್ಯನಾದೆನಗೆ
ಕುಂದು ಸಹಸ್ರವು ಸಂಧಿಸಿತು
ಇಂದು ಮನಕೆ ಆದ ತಂದುಕೊಳ್ಳದೆಲೆ
ಮಂದಹಾಸದಲಿ ಬಂದೆನ್ನ ಪೊರೆಯೋ ೨
ಹಿತವೆಂದು ಭವವನು ಅತಿ ಮೋಸಹೋದೆನು
ಮತಿಗೆಟ್ಟು ನಿನ್ನನು ಸ್ತುತಿಸಲಿಲ್ಲವೊ ನಾನು
ಮಿತಿಮೀರುತಿರಲೆನ್ನ ಸ್ಥಿತಿಯ ನೀನರಿಯುತ
ಮತಿ ಬೇರೆ ಮಾಡಿ ಮರೆತೆಯೇನೊ ಶ್ರೀಪತೆ
ಕ್ಷಿತಿಯೊಳೆನಗೆ ಗತಿ ಇತರರ ಕಾಣೆನÉೂೀ
ಪತಿ ನೀನಿರೆ ವಸುಮತಿಯೊಳಗೆ
ಪತಿತಪಾವನನೆ ಪ್ರಸನ್ನನಾಗಿ ದಿವ್ಯ
ಸತತ ಸುಖಕೆನಗೆ ಪಥವನು ತೋರೊ ೩

 

೨೯೬
ತಗಲಿ ತಗಲದೆ ಈ ಜಗದೊಳು ಜೀವಿಸೊ
ಕಮಲ ಪತ್ರದಲ್ಲಿಹ ಜಲದ ಕಣಗಳಂತೆ ಪ
ತಗಲುತ ನಿರತ ಸುಖವನೀವ ಕರ್ಮಕ್ಕೆ
ತಗಲದೆ ಭವದಲಿ ಬಿಗಿವ ವಿಷಯಗಳಿಗೆ ಅ.ಪ
ಪರಿಪರಿ ಕ್ಷಣಿಕ ಸುಖದ ಮೋಹದೊಳತಿ
ದುರಿತಗಳಿಗೆಳೆವ ದುರುಳರ ಅಗಲೆಲೋ
ಹರಿದಾಸರ ಸಹವಾಸಕ್ಕೆ ತಗಲುತ್ತ
ಹರಿಗುಣ ಪೊಗಳುವ ಪರಮ ಸುಖವ ಬಯಸೊ ೧
ಸತಿ ಸುತರೆಲ್ಲ ಶ್ರೀಪತಿಯ ಸೇವೆಯೊಳತಿ
ಹಿತ ತೋರಲು ಅವರೊಳಾಮತಿಯನು ತಗಲಿಸೊ
ಕ್ಷಿತಿಯೊಳವರು ನಿನ್ನ ಭೋಗವಸ್ತುಗಳೆಂದು
ಮಿತಿ ಮೀರಿರುವ ಮಮತೆಗೆ ತಗಲದಿರೊ ೨
ದುರ್ಮಾರ್ಗದೊಳು ದುಷ್ಟಕರ್ಮಗಳನೆ ಮಾಡಿ
ಹೆಮ್ಮೆಯಿಂದಲಿ ಪಾಪ ಫಲಗಳ ಬಯಸದೆ
ಧರ್ಮದಿ ಸುಖಗಳನನುಭವಿಸುವುದಕೆ
ಸಮ್ಮತಿ ಈ ಯುವ ನಮ್ಮ ಪ್ರಸನ್ನನು ೩