Categories
ರಚನೆಗಳು

ವಿದ್ಯಾಪ್ರಸನ್ನತೀರ್ಥರು

೨೨೪
ಹೇ ಮುರಾರೆ ಹೇ ಮುಕುಂದ ಪ
ಪ್ರೇಮ ವೀಕ್ಷಣದಿಂದ ಪೊರೆಯೊ ಅ.ಪ
ಈ ಮಹಾ ಕುತಾಪಗಳಲಿ
ನಾಮ ಕೀರ್ತನೆಯೊಂದೆ ಎನಗೆ
ಕ್ಷೇಮಕರವೆಂದರಿತು ವದನದಿ
ರಾಮ ರಾಮನೆಂದು ಕೂಗುವೆ ೧
ನೋಡಿದೆನೋ ಈ ಭವದ ಭೋಗವ
ಬೇಡದಾಯಿತೊ ನಿನ್ನ ದಯದಿ
ಈಡನರಿಯೆನೊ ನಿನ್ನ ಗುಣಗಳ
ಪಾಡಿ ಹಿಗ್ಗುತ ಕುಣಿಯುವುದಕೆ ೨
ಆಸೆ ಎನ್ನನು ಮೋಸ ಮಾಡಿತೊ
ಕೋಶವಿದ್ದರು ಕ್ಲೇಶ ಬಿಡದೊ
ಈಶ ನಿನ್ನಯ ಭಜನೆಯೊಂದೆ
ಲೇಸೊ ಲೇಸೊ ಹೇ ಪ್ರಸನ್ನ ೩

೩೨೦
ಹೊಟ್ಟಿಗೆ ಹಿಟ್ಟಿಲ್ಲ ನಿನ್ನಯ
ಜುಟ್ಟಿಗೆ ಮಲ್ಲಿಗೆಯು ಪ
ಉಟ್ಟಿರುವುದು ಶತಛಿದ್ರದ ವಸ್ತ್ರವು
ತೊಟ್ಟಿರುವುದು ಜರತಾರಿಯ ಅಂಗಿಯುಅ.ಪ

ಮಾತೆಯ ಗರ್ಭದಲಿ ವಿಧ ವಿಧ
ಯಾತನೆಯನನುಭವಿಸಿ
ಭೂತಲದಲಿ ಮದಮತ್ಸರ ಲೋಭಕೆ
ಸೋತು ಮನವ ನಿರ್ಭೀತಿಯಿಂದಿರುವೆಯೊ ೧

ದಿನಗಳು ಕಳೆಯುತಿರೆ ಲೋಕದ
ಪ್ರಣಯವು ಹೆಚ್ಚುತಿದೆ
ತನಯ ತರುಣಿ ಮನೆ ಕನಕಗಳೆಲ್ಲವು
ಕನಸಿನ ತೆರದಲಿ ಕ್ಷಣಿಕವೆಂದರಿಯದೆ ೨
ಇದು ನನ್ನದೆಂಬ ಅನುಭವ
ಮಂಗನ ಹಿಗ್ಗಟೆಯು
ಇಂದಿರೆಯರಸನ ಪರಮ ಪ್ರಸನ್ನತೆ
ಪೊಂದಿದ ಪುರುಷನೆ ಜೀವನ್ಮುಕ್ತನು ೩

 

ನುಡಿ-೩: ರೈವತಗಿರಿ :
ಕಥನಾತ್ಮಕ ಹಾಡುಗಳು
೩೪೧
ಎಂಥ ಹಾಸ್ಯಕೆ ಸಿಲುಕೆದೆನು ಶ್ರೀ
ಕಾಂತ ಮಾಡಿದ ಮೋಸಕೆ ಪ
ಸಂತತವು ನೀ ಭಾಮೆ ಎನ್ನ ಏ
ಕಾಂತ ಪ್ರಿಯಳೆಂದುದು ಪುಸಿ ಅ.ಪ
ಮೊಸಗಾರನ ಆ ಸೊಬಗುಗಳಿ
ಗಾಸೆ ಪೊಂದಿದ ಪಸುಳೆಯ
ಆಸೆ ಭಂಗದ ಕ್ಲೇಶವನು ಜಗ
ದೀಶನೊಬ್ಬನೆ ಬಲ್ಲನು
ಭಾಮೆ ಬಿಡೆಲೆ ನಿನ್ನ ಈ ಮನಕ್ಲೇಶವ
ಪ್ರೇಮವ ತೋರೆಲೆ ಕಾಮಿನಿ ಮಣಿಯೆ ೧
ಬಲ್ಲೆನೊ ಕೃಷ್ಣ ಈ ಚೆಲ್ಲಾಟವನು
ವಲ್ಲಭೆ ರುಕ್ಮಿಣಿಯಲ್ಲಿ ಸಲ್ಲಿಸೆಲೋ
ತೋರಲು ಪ್ರೇಮವ ನೀನಲ್ಲದೆ ಇ
ನ್ಯಾರಿರುವರೆ ಈ ಮೂರು ಜಗಗಳಲಿ ೨

ರೈವತಗಿರಿಯಲಿ ಯಾವಳ ಕೂಡಿ ನೀ
ಠೀವಿ ತೋರಿದೆಯೊ ಸೇವಿಸು ಆಕೆಯ
ಅರಿತೆನು ನಿನ್ನಯ ಕೊರತೆಗಳೆಲ್ಲವ
ಅರುಹುವೆ ಕ್ಷಣದಲಿ ಸರಸಿಜಲೋಚನೆ ೩
ಧನ್ಯಳಾದೆ ಕೃಷ್ಣ ಎನ್ನಯ
ಮಾನ್ಯವಚನ ಕೇಳಿ ಮುರಳೀಧರ
ಎನ್ನ ಮೂಢ ನುಡಿಯ ಕ್ಷಮಿಸಿ ಪ್ರ
ಸನ್ನನಾಗು ಯಾದವ ಕುಲಭೂಷಣ
ಪಾರಿಜಾತ ಕುಸುಮ ಗೃಹದಲಿ
ಸೂರೆಗೈವ ಮುದದಿ ನಿನ್ನಯ
ಭೂರಿ ಕರುಣದಿಂದ ಜಗದಲಿ
ಧೀರ ಸತಿಯು ನಾನಾಗುವೆ ಮಾಧವ ೪

(ಕೃಷ್ಣ ಪಾರಿಜಾತದಲ್ಲಿ ಬರುವ ಭಾಮೆಯ
ಕೋಪ, ಕೃಷ್ಣ ಸತ್ಯ ಭಾಮೆಯರ ಸಂವಾದ)

 

ಸಂಪ್ರದಾಯದ ಹಾಡುಗಳು
೩೪೯
ಒಪ್ಪಿಸುವೆವು ಮಗಳ ಸಂತೋಷದಿ ಪ
ತಪ್ಪಿ ನಡೆವುದಿಲ್ಲ ಸ್ವಪ್ನದಲೂ ನಿಮ್ಮ
ಅಪ್ಪಣೆ ಮೀರಳು ಸುಗುಣಶಾಲಿನಿಯು ಅ.ಪ
ಹರಿಗುರುಗಳ ಸೇವೆಯ ಬಲದಿಂದಲೆ
ಅರಗಿಣಿ ಜನಿಸಿದಳುದರದಲಿ
ಕರಗತವಾಗಲು ದೊರೆಯಿತು ಭಾಗ್ಯವೆಂ
ದರಿತೆವು ಕ್ಲೇಶವ ಮರೆತೆವು ಸುಲಭದಿ ೧
ಓದು ಬರಹಗಳ ಕಲಿತಳು ಬಾಲ್ಯದಿ
ಮಾದರಿ ಮಗಳೆಂದೆನಿಸಿದಳು
ಸಾಧು ಸ್ವಭಾವವು ಸ್ವಾದು ನುಡಿಯು ಸದಾ
ಸೋದರಿ ಭಾವದಿ ನೋಡಿದರೆಲ್ಲರು ೨
ಒಲೆಯ ಸಾರಿಸುವಳು ನೆಲವ ಗುಡಿಸುವಳು
ಕೆಲಸಗಳೆಲ್ಲವನರಿತಿಹಳು
ತಿಳಿಗನ್ನಡದಲಿ ದಾಸರ ಪದಗಳ
ಬಲುಮಧುರ ಧ್ವನಿಯಿಂದ ಪಾಡುವಳು ೩
ರೀತಿ ನೀತಿಗಳನರಿತಿರುವಳು ಬಲು
ಕೂತು ಕಾಲ ಕಳೆಯುವಳಲ್ಲ
ಮಾತಿಗೆ ಮರುಳಾಗುವ ಹೆಣ್ಣಲ್ಲವು
ಖ್ಯಾತಿಯ ತರುವಳು ನಿಮ್ಮ ಸಂಸಾರಕೆ ೪
ಒಡವೆ ವಸನಗಳ ಸಡಗರ ಬಯಸಳು
ಬಡಜನರನು ಕಂಡರೆ ಮರುಕ
ಒಡೆಯನ ಪ್ರೀತಿಯೆ ಒಡವೆ ವಸನಗಳೆಂ
ದಡಿಗಡಿಗೆಮ್ಮಲಿ ನುಡಿಯುತಲಿದ್ದಳು ೫
ಇಂಥದು ಬೇಕೆಂಬ ಚಿಂತೆಯನರಿಯಳು
ಸಂತತ ನಗುಮೊಗದರಗಿಣಿಯು
ಅಂತರಂಗ ಬಹಿರಂಗಗಳಲಿ ಬಲು
ಶಾಂತಿಯ ಜೀವನವನು ಬಯಸುವಳು ೬
ದಿಟದಲಿ ಪ್ರೇಮವು ಸಟೆಯಲಿ ದ್ವೇಷವು
ಹಟಮಾರಿಗಳನು ಗಮನಿಸಳು
ಕಟುವಚನಗಳನು ಆಡಳು ಎಂದಿಗು
ಎಟುಕದ ಕಾರ್ಯಕೆ ಯತ್ನವ ಮಾಡಳು ೭
ಮಿತಭಾಷಿಣಿಯಾದರು ಕಾರ್ಯದಲತಿ
ಚತುರಳು ಗೃಹಿಣಿಯ ಧರ್ಮದಲಿ
ಮಿತಿ ಮೀರಳು ನಿಮ್ಮ ಹಿತ ಬಯಸುವಳತಿ
ಮತಿವಂತಳು ಇದು ಸ್ತುತಿ ನುಡಿಯಲ್ಲವು ೮
ಎಮ್ಮಯ ಮಗಳನು ನಿಮ್ಮನೆಗೊಪ್ಪಿಸಿ
ಸಮ್ಮತಿ ಕೊಡಿರೆಂದು ಬೇಡುವೆವು
ಬ್ರಾಹ್ಮಣ ಗೋಷ್ಠಿಯೆ ಸಾಕ್ಷಿ ಇದಕೆ ಇನ್ನು
ನಿಮ್ಮ ನಮ್ಮ ಕುಲ ಉದ್ರ‍ಧತವಾಗಲಿ ೯
ತಾಯಿ ಕರುವ ಕಾಣದೆ ಪರಿದಾಟವು
ತಾಯಿಯರೆಲ್ಲರ ಅನುಭವವು
ಬಾಯಿಬರದು ವರ್ಣಿಸಲೀ ಅನುಭವ
ನ್ಯಾಯವೊ ಮಾಯವೊ ಶ್ರೀಹರಿ ಬಲ್ಲನು ೧೦
ಕೊಟ್ಟ ಹೆಣ್ಣು ಕುಲ ಸೇರಿತು ಎನ್ನುವ
ಶಿಷ್ಟ ವಚನಗಳ ಅರಿತಿಹೆವು
ಶ್ರೇಷ್ಠ ಪ್ರಸನ್ನನ ಮೋಹ ಜಾಲದಿಂದ
ಇಷ್ಟು ವಚನಗಳು ಕ್ಷಮಿಸುವುದೆಮ್ಮನು ೧೧

೩೫೦
ಗಂಧವನರ್ಪಿಸುವೆ ರಮಣನಿಗೆ ಪ
ಇಂದಿರೆಯರಸನ ಗುಣಗಳ ಗಾನದಿ
ಸುಮಧುರವಾದ ಕಂಬುಕಂಧರಕೇ ದಿವ್ಯ ೧
ಸರಸಿಜನಾಭನ ಪೊಗಳುವ ಗ್ರಂಥವ
ನರಿಯಲು ಪಿಡಿದ ಶ್ರೀಕರ ಕರಯುಗಳಕೆ ೨
ಶೀತಲಕರಕುಲಜಾತನ ಸಂಗದಿ
ಪೂತ ಗಂಧವ ಮಮ ಪ್ರೀತಿ ಪ್ರಸನ್ನಗೆ ೩

೩೫೧
ಚಿಗುರೆಲೆಯಿದೆಂದು ನಾ ತಂದೆ ನಿನ್ನಯ ಮುಖದ
ಚಿಗುರು ನೋಡಲು ಕೊಡಲು ನಾಚುತಲಿಹೆ
ಕಮನೀಯ ನಿನ್ನ ಮುಖಕಮಲ ಸೊಬಗನು ನೋಡಿ
ಸಂಪಿಗೆಯ ಪುಷ್ಪವನರ್ಪಿಸೆ ನಿನ್ನ ನಾಸಿಕಾ
ಚಂಪಕವ ನೋಡಿ ಬಲು ನಾಚುತಲಿಹೆ
ಅಂದ ರದನದ ಪಂಕ್ತಿ ಸೊಗಸ ನೋಡುತ ಮನವು
ಕುಂದ ಪುಷ್ಪವ ಕೊಡಲು ನಾಚುತಲಿದೆ
ಸುಂದರವು ಸ್ಪಟಿಕ ಕುಸುಮಗಳೆಂದರಿತೆ ನಿನ್ನ
ಮಂದಹಾಸವ ನೋಡಿ ನಾಚುತಲಿಹೆ
ವರ್ಣದಲಿ ಶ್ರೇಷ್ಠದ ಗುಲಾಬಿ ತಂದಿಹೆ ನಿನ್ನ
ಅರುಣ ತುಟಿಗಳ ನೋಡಿ ನಾಚುತಲಿಹೆ
ಜಾತಿಜಾತಿಯ ಪುಷ್ಪ ಸೋತಿರುವುದು
ಕಾತರಾಗಿವೆ ಮನವು ಮೆಚ್ಚಿಸಲಿಕೆ
ಪ್ರೀತಿ ಸುಧೆಯೊಂದನರ್ಪಿಸುವೆ ಪ್ರಸನ್ನ

೩೫೨
ಜಂಭದಾ ನುಡಿಯಲ್ಲ ತುಂಬಿ ಬರುತಿಹ ಮನದ
ಸಂಭ್ರಮದ ವಚನವಿದು ಮೋಹನಾಂಗ
ಕಂಬಕಂಬಕೆ ಕರವ ಮುಗಿದು ಪ್ರಾರ್ಥನೆ ಮಾಡಿ
ಲಂಬಜಠರನ ಸೇರುವರು ಕೆಲವರು
ಧನವಿರಲು ಗುಣವಿಲ್ಲವೆಂಬ ನುಡಿಯನು ಮರೆತು
ಧನಲೋಭದಿಂದಲತಿ ಮನವ ಸೋತು
ಪ್ರಣಯರಸವರಿಯದಂತಹ ಕೋಡಗನ ಕೂಡಿ
ಮನನೋಯುವರು ಕೆಲರು ಮೌಢ್ಯದಿಂದ
ರಂಭೆ ನಾನಲ್ಲ ಕನಕಾಂಬರವ ಕೊಡಲಿಲ್ಲ
ಗಂಭೀರ ಸುಂದರನ ಸೇರಿದೆನು ನಾ
ಶರಧಿತನಯಳ ಪೂಜೆ ಮಾಡಿ ವರಪಡೆದು ನಾ
ಸುರಿಸುವೆನು ಕನಕ ವರ್ಷವ ಗೃಹದಲಿ
ರೂಪಲಾವಣ್ಯವತಿ ಕಾಂತಿ ಶಾಂತಿ
ನೀ ಪಿಡಿದೆ ನಿನ್ನ ಕರ ನಾ ಪಿಡೆದೆನು
ಶ್ರೀ ಪತಿಯು ಈ ಪರಿ ಪ್ರಸನ್ನನಿಹನು

೩೫೪
ಜನುಮ ಜನುಮದ ಪುಣ್ಯರಾಶಿನಾಮಕ ಗಿರಿಯ
ಶೇಷಗಿರಿಯನು ಸೇರಿ ರಾಜಿಸುವುದು
ಈ ಪರಿಯ ವೈಭವವು ಗೋಪಾಲಕೃಷ್ಣನ ಕೃ
ಪಾಪಾಂಗ ವೀಕ್ಷಣದ ಪರಮಫಲವು
ರೂಪದಲಿ ಮನುಮಥ ರಮಾಪತಿಯ ಕರುಣವಿದು
ಕೋಪವಿಲ್ಲದ ಮಂದಹಾಸ ವದನ
ತಾ ಪಿಡಿದ ಕಾರ್ಯದಲಿ ಜಯಲಕುಮಿಯನು ಪಿಡಿದು
ರೂಪುಗೊಂಡಿಹ ದಿವ್ಯ ಕುಶಲಮತಿಯು
ತಾಪಸರ ಉಪದೇಶದಿಂದಲೀ ಪರಿ ದೋಷ
ಲೇಪವಿಲ್ಲದ ರೀತಿ ನೀತಿ ನಿಲಯ
ಎನ್ನ ಮನದಭಿಲಾಷೆ ಪೂರ್ಣವಾಯ್ತು
ನಿನ್ನ ಕರವನು ಪಿಡಿದು ಧನ್ಯಳಾದೆ
ಕನ್ಯೆ ವಚನಕೆ ಸಿರಿ ಪ್ರಸನ್ನನೇ ಸಾಕ್ಷಿ

೩೬೨
ತಾನಾ ತಾನಾ ತನ್ನ ನನಾ ಪ
ತಾನಾ ತಾನಾ ತನ್ನ ನನಾ ಅ.ಪ
ಕ್ಷೀರಸಾಗರಶಯನ ದೇವನೆ
ಕ್ಷೀರದಲಿ ನೀ ಮುಳುಗಲು
ಧಾರಣಿಯಲಿ ಕ್ಷೀರವೆಲ್ಲವು
ನೀರು ನೀರಾಗಾಯಿತು ೧
ಪಾಪ ಮಂದರಗಿರಿಯ ಕೂರ್ಮದ
ರೂಪಿನಿಂದಲಿ ಎತ್ತಲು
ಈ ಪರಿಯ ನೋಡುತಲಿ ಜನಗಳು
ಕೂಪಕೂರ್ಮದಂತಾದರು ೨
ಹಂದಿರೂಪವ ತೋರಿ ನೀ ಜನ
ಕಂದು ರಕ್ಷಕನಾದರೆ
ಹಂದಿಯಂತಹ ಜನರು ಲೋಕದಿ
ಇಂದು ಭಕ್ಷಕರಾದರು ೩
ನರಸಿಂಹನ ರೂಪಿನಿಂದಲಿ
ಕರುಳ ಕಿತ್ತುದನರಿತರು
ಪರಿಪರಿಯಲಿ ಜನರು ಬಡವರ
ಕರುಳ ಕೀಳುತಲಿರುವರು ೪
ಪುಟ್ಟ ವಟು ವೇಷದಲಿ ಬಲಿಯ ಶಿರ
ಮೆಟ್ಟಿ ದಾನವ ಬೇಡಲು
ದಿಟ್ಟ ಪ್ರಮುಖರ ಕಾಟ ಜನರಿಗೆ
ಹಿಟ್ಟು ಕಾಣದಂತಾಗಿದೆ ೫

(ಕಾಲಸ್ಥಿತಿಯ ಹಿನ್ನೆಲೆಯಲ್ಲಿ ಒಂದು ಅಪೂರ್ಣ ನಿಂದಾಸ್ತುತಿ)

ವಿಶೇಷ ಸಂದರ್ಭದ ರಚನೆಗಳು
೩೬೦
ನವವರುಷದ ನವದಿನದಿ ಮಾ
ಧವ ಕೃಷ್ಣನ ಸಂದರುಶನ ಸುಖಕರವು ಪ

ಜವದಲಿ ಯಾದವರೊಡೆಯನು
ಅವಲೋಕಿಸಿ ಸುವಿನೋದಗಳನು ನೀಡುವ ಅ.ಪ

ಪ್ರಮಾಥಿ ಸಂವತ್ಸರದ
ಸಮಾಗಮದಲಿ ಭಕುತರ
ಸಮೂಹಗಳನು ದುರಿತದ
ಪ್ರಮಾದಗಳಿಂದ ಪೊರೆಯುವ ರಮಾಪತಿ ೧
ನಾಡುಗಳಿಗೆ ಮಳೆ ಬೆಳೆಗಳ
ನೀಡುವನು ಸಮೃದ್ಧಿಯಲಿ
ಬೇಡುವ ಭಕುತರ ಕೋರಿಕೆ ಈಡೇರಿಸಿ
ಕಾಪಾಡುವ ಭಕುತ ಪ್ರಸನ್ನನು ೨

(ಪ್ರಮಾಥಿ ಸಂವತ್ಸರದ ಆಗಮನದ ಸಂದರ್ಭ)

ನುಡಿ-೧ : ಭೂಮಿಸುತ

೩೪೩
ನಿಲ್ಲಿಸೋ ತಲಹರಟೆಯ ಕಳ್ಳ ಕೃಷ್ಣ ಪ

ಕೊಲ್ಲುವೆ ನಿನ್ನನು ವಲ್ಲಭೆಯೊಡನೆ ಅ.ಪ

ಕಾಮಿನಿಯರ ಸಂಘದಲಿ ಕಾಲ ಕಳೆದ ನೀ
ಭೂಮಿ ಸುತನ ಕೆಣಕುತಿಹುದು ಕ್ಷೇಮವಲ್ಲವೊ
ಸೋಮಕುಲಕೆ ಕ್ಷಯ ಕೋರದಿರೊ ೧
ಗಾಳಿಗುದ್ದಲೇನುಫಲವು ಕಾಲ ಕಳೆಯಿತೊ
ಖೂಳ ನಿನ್ನ ಕಳಿಸುವೆ ಯಮನಾಲಯಕೆ ನಾ
ದಿಟ್ಟ ನರಕ ನೀನು ಕೆಟ್ಟೆಯೆಲ್ಲೊ
ಅಷ್ಟಮಹಿಷೀಪತಿ ಕೃಷ್ಣನ ಕೆಣಕಿ ೨

ಮೂರು ಜಗವ ಸೂರೆಗೈವ ಸಾರ್ವಭೌಮ ನಾ
ಜಾರ ಚೋರ ನೀನು ಬಂದ ದಾರಿಯ ಪಿಡಿಯೊ ೩

ಜಾರಚೋರನಾದರೆ ಹದಿನಾರು ಸಾವಿರ
ನೂರು ನಾರಿಯರಿಗೆ ಅರಸನಾಗದಿರುವೆನೆ ೪
(ಕೃಷ್ಣ ಮತ್ತು ನರಕಾಸುರರ ಸಂವಾದ)

೩೪೪
ನೋಡಿದೆನೊ ದೇವ ಪಾರಿಜಾತವ ಪ

ಆಡಿದನುಡಿಯನು ಉಳಿಸಿಕೊ ಮಾಧವ ಅ.ಪ

ಕೋರಿದ ಫಲಗಳ ಸೂರೆಯ ಮಾಡುವ ದಿವ್ಯ
ಪಾರಿಜಾತದ ಸೊಬಗಾರು ವರ್ಣಿಪರೊ ೧

ದ್ವಾರಾವತಿಗೊಯ್ದು ಸೇರಿಸಿ ಗೃಹವನು
ನಾರಿ ರುಕ್ಮಿಣಿಗಿದ ತೋರುವೆನೀಕ್ಷಣ೨
(ಪಾರಿಜಾತ ವೃಕ್ಷ ನೋಡಿದ ಸತ್ಯಭಾಮೆಯ ಸಂತೋಷ)

೩೪೫
ಬಾರೆಲೆ ಭಾಮೆ ನೀ ಶೌರಿಯ ರಮಣಿ ಪ

ತೋರುವೆ ನಿನಗಮರಾವತಿ ಸೊಬಗ ಅ.ಪ

ಇಳೆಯೊಳು ವಾಸದ ಬೇಸರವ
ಕಳೆವುದು ಸುಲಭವು ಈ ಸ್ಥಳದಿ
ಗೆಳತಿ ಎನ್ನೊಡನಿರು ಕೆಲವು ದಿನ ೧

ಪೋಗಿ ಬರುವೆನೆ ಶಚಿದೇವಿ
ಬೇಗ ಬರುವೆನೆಂದಾಡಿರುವೆ
ದ್ವಾರಾವತಿಯ ವೈಭವ ನೋಡಿ
ಯಾರಿರುವರೆ ಇಲ್ಲಿ ಒಂದು ಕ್ಷಣ
ಕೋರದಿರೆನ್ನಯ ವಾಸವನು೨
ಅಮರಾವತಿಯ ವೈಭವಗಳನು
ಸುಮನಸರಲ್ಲದೆ ಅರಿಯುವರೆ
ಕ್ಷಮಿಸು ಎನ್ನಯ ನುಡಿ ಪುಸಿಯಲ್ಲ ೩

ಭಾಗಿಗಳಿರುವರೆ ಭುವಿಯಲ್ಲಿ
ಭೋಗಳೆಣಿಕೆಗೆ ಬಾರದೆಲೆ
ಹೇಗೆ ಬಿಟ್ಟಿರುವುದು ನೀ ಪೇಳೆ ೪
(ಶಚಿದೇವಿ ಮತ್ತು ಸತ್ಯಭಾಮೆಯರ ಸಂವಾದ)

೩೬೧
ಭಾಗವತರ ಕಥೆಯೇ ಕಥೆಯು ಮಿಕ್ಕ ಪ
ಕಾಗಿ ಗುಬ್ಬಿಯ ಕಥೆಗಳು ಬರಿ ವ್ಯಥೆಯು ಅ.ಪ
ರೀತಿ ನೀತಿಗಳಿಲ್ಲ ಮಾತು ಮಧುರವಿಲ್ಲ
ಪ್ರೀತಿ ಲಕ್ಷಣ ಬಲು ಭೀತಿಕರ
ಸೋತ ಹಾಸ್ಯವು ಸಪ್ಪೆ ಮಾತಿನ ಸುರಿಮಳೆ
ನೂತನ ಕಥೆಗಳು ಪ್ರೇಮದಂತಿರುವುದು ೧

ಪೋಕರಿ ಜನಗಳ ವೈಖರಿಗಳನು ಅ
ನೇಕರು ಬರೆದು ಕವಿಗಳಾದರು
ಲೋಕದ ನಡೆನುಡಿ ತಿದ್ದಲಾರದ ಕಥೆ
ಮೇಕೆಯು ಕತ್ತಿನಲ್ಲಿರುವ ಸ್ತನದ ಪರಿ ೨

ಕಂಡುಕೇಳದ ನಡೆ ನುಡಿಯುಳ್ಳ ನಾಯಕ
ಹಿಂಡಿದ ಕುಸುಮ ಪೋಲುವ ನಾಯಕಿ
ಭಂಡತನಗಳೇ ಪ್ರಚಂಡದ ಶೌರ್ಯವು
ರಂಡೆಯ ಕೊರಳಿನ ಕರಿಮಣಿಯಂತಿದೆ ೩

ವ್ಯಂಗ್ಯವೇ ಕವಿತೆ ಲಕುಮಿ ಮೃದು ಹೃದಯವು
ಶೃಂಗಾರಗಳೇ ಸುಂದರ ರೂಪ
ರಂಗನು ಕೊಡುವ ಹಾಸ್ಯಗಳು ಮನೋಹರ
ಇಂಗದ ಸವಿಯಧರಾಮೃತ ಧಾರೆಯು ೪
ಚಂದ್ರ ಸೂರ್ಯರು ಸಪ್ತಸಿಂಧು ಭೂಧರ ಸರಿ
ದ್ರ‍ವಂದನಭೋರು ದಿಕ್ಕುಗಳೆಲ್ಲಾ
ಕಂದುಕ ಕರತಲದಲಿ ಹೊಳೆಯುತಲಿರು
ವಂದದಿ ನಮ್ಮ ಕವೀಂದ್ರರಿಗೆ ೫

ಕಲ್ಲು ಕರಗಿ ಒಣಹುಲ್ಲು ಚಿಗುರುವುದು
ನಿಲ್ಲಲಾಗದೆ ಕುಣಿವುವು ಮುದದಿ
ಹುಲ್ಲೆ ಹುಲಿಯ ಪ್ರೇಮವ ಪಡೆವುದು ಕವಿ
ಮಲ್ಲರು ಬರೆವ ಶ್ರೀನಲ್ಲನ ಕಥೆ ಕೇಳಿ ೬
ನಾನು ನನ್ನದು ಎಂಬ ಅಭಿಮಾನವ ಬಿಟ್ಟು
ಮಾನಸ ಕಲ್ಮಷಗಳ ತೊರೆದು
ಧ್ಯಾನದಿ ಬಿಂಬ ಮೂರುತಿ ದರುಶನ ಮಾಡಿ
ಆನಂದಪಡುವ ಬಗೆಯ ತೋರುವ ಕಥೆ ೭
ಸಕಲ ಪದ್ಯಗಳಲ್ಲಿ ಪ್ರಕೃತಿಯ ಸೌಂದರ್ಯ
ಭಕುತಿ ಪ್ರವಾಹವ ಹರಿಸುವುದು
ಶುಕರ ನುಡಿಗೆ ನವಶಕುತಿಯ ಕೊಡುವುದು
ರುಕುಮಿಣಿರಮಣನ ವಿಜಯದ ಕಥೆಯಿದು ೮
ನಾಡಿನ ನುಡಿಗಳ ಜೋಡಿಸಿ ಕುಶಲರು
ಪ್ರೌಢವಚನಗಳ ಮಾಡುವರು
ನೋಡಿ ನೋಡಿರುವ ಸಾಮಾನ್ಯ ವಸ್ತುವು ತಲೆ
ಯಾಡುವ ತೆರದಿ ವಿಚಿತ್ರವಾಗುವ ಕಥೆ ೯
ತಲೆಯ ನೋಯಿಸುವಂಥ ಶಾಸ್ತ್ರದ ವಿಷಯವ
ಸುಲಿದ ಬಾಳೆ ಹಣ್ಣಿನಂದದಲಿ
ಸುಲಭದಿ ಸವಿಯನುಭವಿಸಲು ಸಾಧನ
ಲಲಿತ ಕವಿತೆಯಿದು ಕಲೆಯ ಅವಧಿಯಿದು ೧೦
ಅನ್ಯ ಕಥೆಗಳೆಲ್ಲಾ ಸಣ್ಣ ಜನರಿಗೆ
ಮಾನ್ಯವಿರಲಿ ಇದ್ದರೇನಾಯ್ತು
ಪುಣ್ಯ ಸುಖವಹ ಇಹಪರದಲಿ ಕೊಡುವ ಪ್ರ
ಸನ್ನ ಶ್ರೀರುಕುಮಿಣೀ ರಮಣನ ಕುಣಿಸುವ ೧೧

( ಭಾಗವತ ಸಪ್ತಾಹದ ಮಂಗಳದಲ್ಲಿ ಹಾಡಲು ಬರೆದದ್ದು)

೩೪೬
ರಮಿಸುವ ನಂದನವನದಲಿ ಸುಖದಿ ಪ

ಸುಮನಸ ಸೇವಿತ ವಿಮಲ ವನದಲಿ ಅ.ಪ

ಮಂದ ಮಾರುತ ಸುಮಗಂಧ ಬೀರುತಲಿರೆ
ಸುಂದರವದನ ಗೋವಿಂದ ಸೊಗಸಿನಲಿ ೧

ವನರುಹ ನೇತ್ರಳೆ ಪರಮ ಪವಿತ್ರಳೆ
ಮನದಣಿಯುವ ಪರಿ ವನವಿಹಾರದಲಿ ೨

ಹೇಮವಸನನೆ ಕೋಮಲರೂಪನೆ
ಭಾಮೆಯಮೇಲೆ ಸುಪ್ರೇಮವ ಬೀರೆಲೊ ೩

ಭಾಸುರಾಂಗಿ ಪರಿಹಾಸ ಮಾಡದಿರು
ಬೇಸರವಾಗಿದೆ ರಾಸಕ್ರೀಡದಿ ೪

ಸಂಗೀತ ಪ್ರಿಯ ರಂಗನ ಒಡಗೂಡಿ
ಶೃಂಗಾರದಲಿ ಅನಂತ ಕೇಳಿಯಲಿ ೫
(ಇಂದ್ರನ ನಂದನವನದಲ್ಲಿ ಕೃಷ್ಣ ಸತ್ಯಭಾಮೆಯರ
ಸರಸ ಸಂಭಾಷಣೆ)

೩೪೭
ರಾರಾಜಿಸುತಿರು ದ್ವಾರಾವತಿಯಲಿ
ಪಾರಿಜಾತ ನಿನಗಾರತಿ ಬೆಳಗುವೆ ಪ

ನಾರದ ಶ್ರೀಹರಿಯಾರಾಧನೆಗೆಂದು
ತೋರಿದ ಭುವಿಯಲಿ ಸೇರಿದೆ ಎನ್ನನು ಅ.ಪ

ಮಂದರಗಿರಿಯನು ತಂದು ಮಥಿಸೆ ಕ್ಷೀರ
ಸಿಂಧುವಿನಲಿ ನೀನಂದು ಜನಿಸಿದೆ
ಇಂದ್ರನ ಸೊಬಗಿನ ನಂದನವನವ ಬಿಟ್ಟು
ಇಂದಿರಾರಮಣನ ಮಂದಿರದಲಿ ನೀ ೧

ಆಡಿದ ನುಡಿಯನು ಮಾಡಿದ ಕೃಷ್ಣನು
ಈಡ ನಾನರಿಯೆನು ನಾಥನ ಕರುಣಕೆ
ಬೇಡಿದ ವರಗಳ ನೀಡು ನೀ ಜನರಿಗೆ
ನೋಡುವೆ ಆಡುವೆ ಪಾಡುವೆ ಕುಣಿಯುವೆ ೨
(ಸತ್ಯಭಾಮೆಯಿಂದ ಪಾರಿಜಾತ ಪ್ರಶಂಸೆ)

೩೫೫
ಶುದ್ಧ ಕುಲದಲಿ ಜನಿಸಿದ ನಿನ್ನ ಕರಪಿಡಿದು
ಶುದ್ಧ ದಾಂಪತ್ಯ ಜೀವನದ ಸೊಬಗು
ಹೃದ್ಗತಾಯಿತು ಹೆಮ್ಮೆಯಿಂದ ನಾ ನುಡಿಯುವುದು
ಪದ್ಮನಾಭನ ಪರಮಕರುಣವಿಹುದು
ನೀ ನುಡಿದ ಎನ್ನ ಗುಣಗಾನ ಕೇಳಿದೆ ನಿನ್ನ
ಸಾನುರಾಗದ ಮನವನರಿತೆನಿಂದು
ಏನಿರಲಿ ಗುಣದೋಷ ಗುಣ ಮಾತ್ರವನು ಗ್ರಹಿಸಿ
ನೀನು ಸಂತಸದಲಿಹುದೆನಗೆ ಶುಭವು
ಕಾಮಜನಕನ ರಮಣಿ ಭಾಮೆ ಕನಸಿನಲಿ ನುಡಿದ
ಆ ಮಹಾ ನುಡಿಯು ಪುಸಿಯಾಗದೆಂದು
ಪ್ರೇಮಸುಧೆ ರಸಪೂರ್ಣವಾದ ಪುಷ್ಪಾದಿಗಳು
ನಾ ಮುದದಿ ಸವಿದು ಸಂತೋಷಪಡುವೆ
ಮೆಚ್ಚಿದೆನು ನಾನಿನ್ನ ವಿನಯಾದಿ ಗುಣಕೆ
ಹೆಚ್ಚು ನುಡಿಯುವುದೇಕೆ ಇದನು ಬಲ್ಲೆ
ಅಚ್ಯುತನು ಪ್ರಸನ್ನನಾಗುವನು ಎಮಗೆ

೩೫೭
ಸೂರ್ಯಚಂದ್ರರು ಸಾಕ್ಷಿ ಆರ್ಯ ವಿಪ್ರರು
ಭಾರ್ಯೆಯರು ಸಾಕ್ಷಿ ನಾ ನುಡಿದ ನುಡಿಗೆ ಪ
ಕಾಯವಚನಗಳಲ್ಲಿ ಭೇದವಿಲ್ಲದೆ ನಡೆವ
ಧೈರ್ಯವಿಹುದೆನಗೆ ಮನಸ್ಥೈರ್ಯವಿಹುದು ೧
ಸಂಗೀತ ಚಾತುರ್ಯ ಶೃಂಗಾರಭಾವಗಳು
ಅಂಗವಲ್ಲವು ಶಾಂತ ದಾಂಪತ್ಯಕೆ ೨
ಬಂಗಾರದಾಭರಣವೇಕೆ ತನ್ನಯ ಪತಿಗೆ
ಮಂಗಳಗಳನ್ನು ಬಯಸುವ ನಾರಿಗೆ ೩
ಕಾಯ ವಾಙ್ಮನಸದಿ ಕರಪಿಡಿದ ನಿನ್ನ ಮನ
ನೋಯದಂದದಿ ನಡೆವೆ ಸಂತತವು ನಾ ೪
ಶ್ರೇಯವಿದು ಪರಸ್ಪರ ಸಹಾಯ ದಾಂಪತ್ಯದಲಿ
ಹಾಯವಾಗಿರಲಿ ಎಮ್ಮಯ ಜೀವನ ೫
ಸತ್ಯಧರ್ಮಗಳು ಸಾಧನವಾಗಲಿ
ನಿತ್ಯ ಸುಖಸಂತೋಷ ಫಲವಾಗಲಿ
ತೃಪ್ತಿಯಾಗಲಿ ನಮ್ಮ ಭಕ್ತ ಪ್ರಸನ್ನ ೬

೩೫೮
ಹಳೇ ನಿರಾಜಿ ಕಂಬಿ ಚೆಲುವಿನ
ಚೆಲುವೆಗೆ ಕೊಡುವೆನು ನಂಬಿ ಪ
ಮಣಕು ಕೊಳಕು ದುರ್ಗಂಧಗಳಿದ್ದರು
ಹೊಣೆಯಾಗುವೆ ನಾನು
ಮಿಣುಕದೆ ಬಗೆಯಿರಿ ತೊರೆದಭಿಮಾನವ
ಉಣಲು ಕೊಡುವೆ ಪರಮಾನ್ನಕೆ ಪಾತ್ರೆಯ ೧

ಚಿಂದಿ ಚಿಂದಿ ಬೆಲೆ ಏನಿದಕೆನ್ನುತಲಿ
ಚಿಂತಿಸದಲೇ ಬಿಸುಡಿ
ಹಿಂದಿನ ಜನುಮದ ಸುಕೃತದ ತೂಕಕೆ
ತಂದು ಕೊಡುವೆ ಹರಿಚಂದನ ಪಾತ್ರೆಯ ೨

ಕೊಳ್ಳುವರಿಲ್ಲದೆ ಕೊಳೆಯಂತಲಿರುವುದು
ಒಳ್ಳೆಯ ಸಮಯವಿದು
ಜಳ್ಳನು ಒಗೆಯಿರಿ ಕೊಳ್ಳಿ ಪ್ರಸನ್ನನು
ಚೆಲ್ಲಿದ ಫಲಗಳ ಮೆಲ್ಲುವ ಪಾತ್ರೆಯ ೩

೩೫೯
ಹಾರ ಹಾಕುವೆ ರಮಣ ಹಾರ ಹಾಕುವೆ ಪ

ಚಾರು ಮಲ್ಲೆ ಮಲ್ಲಿಗೆ ಕಲ್ಹಾರ ಜಾಜಿ ಪಾರಿಜಾತ ಅ.ಪ

ಸ್ವಾಮಿ ನೀ ಹದಿನಾಲ್ಕು ಲೋಕಕೆ ಕಾಮಿತಾರ್ಥಗಳನೆ ಕೊಡುವ
ಕಾಮಧೇನು ನೀನೆಂದರಿತು ಪ್ರೇಮಬಂಧನದಿ ಸೆಳೆಯಲು ೧
ಜಾರಚೋರ ನೀನು ಎಂಬ ದೂರು ಮನಕೆ ತಾರದಂತೆ
ಸೇರಿರುವೆನು ಎನ್ನ ಪುಷ್ಪಹಾರದಂತೆ ಧರಿಸಿ ಪೊರೆಯೊ ೨
ನಿನ್ನ ಹೃದಯದೇಶವೆನಗೆ ಮಾನ್ಯ ಸ್ಥಾನವೆಂದು ಅರಿತು
ನಿನ್ನ ಗೃಹವ ರಂಜಿಸುವೆ ಪ್ರಸನ್ನನಾಗಿ ಸ್ವೀಕರಿಸೆಲೊ೩

ಎಲ್ಲ ಭಯ ಎಲ್ಲ ಭಯ
೨೯೦
ಎಲ್ಲ ಭಯ ಎಲ್ಲ ಭಯ ಕ್ಷುಲ್ಲಕ ಜನಗಳಿಗೆಲ್ಲ ಭಯ ಪ

ತಲ್ಲಣಿಸದೆ ಸಿರಿವಲ್ಲಭನಲಿ ಮನ ನಿಲ್ಲಿಸುವರಿಗೆಲ್ಲ ಜಯ ಅ.ಪ
ಇರಲು ಭಯ ಧನವಿರಲು ಭಯ
ಇಲ್ಲದಿದ್ದರೆ ತಿರಿದುಂಬೊ ಭಯ
ನೆರೆ ಹೊರೆ ಜನಗಳ ಸಿರಿಯನು ನೋಡಲು
ಉರಿಯುವ ಜನಗಳಿಗೆಲ್ಲಿ ಜಯ ೧

ಎಲ್ಲ ಜಯ ಎಲ್ಲ ಜಯ
ಬಲ್ಲ ಸುಜನಗಳಿಗೆಲ್ಲ ಜಯ
ಪೊಳ್ಳು ಜೀವನದ ಜಳ್ಳು ಸೌಖ್ಯಗಳ
ಒಲ್ಲೆನೆಂಬುವರಿಗೆಲ್ಲ ಜಯ ೨
ಇರುಳು ಭಯ ಹಗಲು ಭಯ
ಸರಳ ಜನರ ನೋಡುವುದೆ ಭಯ
ಮರಳು ಮೋಸವುಳ್ಳ ದುರುಳ ಜನಕೆ ತಮ್ಮ
ನೆರಳನು ಕಂಡರೆ ಅಧಿಕ ಭಯ ೩
ಜ್ಞಾನ ಜಯ ದಿವ್ಯ ಜ್ಞಾನ ಜಯ
ಜ್ಞಾನದಿಂದ ಹರಿಸ್ಥಾನ ಜಯ
ಹಾನಿಯ ನೀಡುವ ನಾನಾ ಭೋಗವ
ಮೌನದಿ ತ್ಯಜಿಪರಿಗೇನು ಭಯ ೪

ಒಂದು ಜಯ ನೂರು ಭಯ
ದ್ವಂದ್ವಗಳನು ಸಹಿಸದ ನರಗೆ
ತಂದೆ ಪ್ರಸನ್ನ ಶ್ರೀಕೃಷ್ಣನ ಚರಣ
ದ್ವಂದ್ವ ಸೇವಕರಿಗೆಂದೂ ಜಯ ೫

ಹಾಡಿನ ಹೆಸರು
:
ಎಲ್ಲ ಭಯ ಎಲ್ಲ ಭಯ
ಹಾಡಿದವರ ಹೆಸರು
:
ದಿವ್ಯಾ ರಾಘವನ್
ರಾಗ
:
ಮೋಹನ ಕಲ್ಯಾಣಿ
ತಾಳ
:

ಶೈಲಿ
:

ಸಂಗೀತ ನಿರ್ದೇಶಕರು
:
ಶ್ರೀನಿವಾಸ್ ಟಿ.
ಸ್ಟುಡಿಯೋ
:
ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಕವಳತಾಯಿ ಕವಳ ಅಮ್ಮ
೨೨೭
ಕವಳತಾಯಿ ಕವಳ ಅಮ್ಮ ಪ

ಪಾಪಿ ಪರದೇಶಿಯ ಮರೆಯ ಬೇಡಿರಮ್ಮ ಅ.ಪ

ಸಂಜೆಯ ಕವಳಕ್ಕೆ ಸಾವಿರ ಆಪತ್ತು
ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ
ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ
ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ೧

ನಮದೊಂದು ಸಂಸಾರ ಬಲು ದೊಡ್ಡದವ್ವ
ಶ್ರಮಿಸುವರದರೊಳಗೊಬ್ಬರಿಲ್ಲವ್ವ
ಕಮಲವ್ವ ನಿಮ್ಮಯ ಅಮೃತಹಸ್ತದ ಕವಳ
ಎಮಗೊಂದು ಕ್ಷಣದಲಿ ಅಮೃತವಾಗೋದವ್ವ ೨
ಮಿತಿಯಿಲ್ಲದೈಶ್ಚರ್ಯ ನಿಮಗಿಹುದೆಂದು
ಕ್ಷಿತಿಯೊಳು ಜ್ಞಾನಿಗಳಾಡುತಲಿಹರು
ಅತುಲ ಮಹಿಮ ನಿಮ್ಮ ಪತಿಯ ಪ್ರಸಾದವ
ಪ್ರತಿದಿನವಿತ್ತು ಪ್ರಸನ್ನರಾಗಿರವ್ವ ೩

ಹಾಡಿನ ಹೆಸರು
:
ಕವಳತಾಯಿ ಕವಳ ಅಮ್ಮ
ಹಾಡಿದವರ ಹೆಸರು
:
ಪಂಚಮ್ ಹಳಿಬಂಡಿ
ರಾಗ
:

ತಾಳ
:

ಶೈಲಿ
:

ಸಂಗೀತ ನಿರ್ದೇಶಕರು
:
ಸುಮಿತ್ರಾ ಬಿ. ಕೆ.
ಸ್ಟುಡಿಯೋ
:
ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಜಲಜನಾಭನ ಪೂಜೆ ಅತಿ
೨೯೫
ಜಲಜನಾಭನ ಪೂಜೆ ಅತಿ ಸುಲಭವು ಪ

ಚಲಿಸಿದ ಮನವನ್ನು ಪೊಂದಿರುವ ಸುಜನರಿಗೆ ಅ.ಪ
ತಾಳ ಕೇಳುವನಲ್ಲ ಮೇಳ ಕೇಳುವನಲ್ಲ
ಬಾಳೆ ಮಾವುಗಳ ವೈಭವವ ಕೇಳುವನಲ್ಲ
ಸೂಳೆಯಂದದಿ ಬಹಳ ನಟನೆಗಳು ಬೇಕಿಲ್ಲ
ಬಾಲಕೃಷ್ಣನಲಿ ದೃಢಭಕುತಿಯುಳ್ಳವಗೆ ೧

ನವರತ್ನ ಮಂಟಪದ ಝವೆಯ ಬಯಸುವನಲ್ಲ
ಹವಳಗಳ ಸರದ ವೈಭವವು ಬೇಕಿಲ್ಲ
ಧವಳ ಮುಕ್ತಾಹಾರಗಳ ಬಯಸುವನಲ್ಲ
ಭುವನ ಭೂಷಣನೊಳತಿ ಭಕುತಿಯುಳ್ಳವಗೆ ೨

ಹೊನ್ನಿನಾಭರಣಗಳನ್ನು ಬಯಸನು ವಿವಿಧ
ಅನ್ನಗಳ ರುಚಿಗೆ ಲೋಭವ ಪೊಂದನು
ಅನ್ನಾದಿಮಯ ಹರಿಯು ತನ್ನಲ್ಲಿ ತುಳಸೀದಳ
ವನ್ನು ಭಕುತಿಯೊಳಿಡೆ ಪ್ರಸನ್ನನಾಗುವನು ೩

ಹಾಡಿನ ಹೆಸರು
:
ಜಲಜನಾಭನ ಪೂಜೆ ಅತಿ
ಹಾಡಿದವರ ಹೆಸರು
:
ಸಂಗೀತಾ ಕಟ್ಟಿ, ಗಣೇಶ್ ದೇಸಾಯಿ
ರಾಗ
:

ತಾಳ
:

ಶೈಲಿ
:

ಸಂಗೀತ ನಿರ್ದೇಶಕರು
:
ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ
:
ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ತ್ಯಜಿಸದಲೆ ಸಂಸಾರ
೨೯೭
ತ್ಯಜಿಸದಲೆ ಸಂಸಾರ ಭಜಿಸಬಹುದು ಪ

ಅಜಭವಾದಿಗಳೆಲ್ಲ ತ್ಯಜಿಸಿ ಭಜಿಸುವರೇ ಅ.ಪ

ಅರ್ಣವವ ಪೋಲುವ ಭವವನ್ನು ನೀಗಲು
ವರ್ಣಾಶ್ರಮಗಳ ಧರ್ಮಗಳನರಿತು
ಪೂರ್ಣ ಸುಖಜ್ಞಾನ ಪೊಂದಿದ ಹರಿಯ ಗುಣಗಳನು
ನಿರ್ಣಯದ ಭಕುತಿಯಲಿ ವರ್ಣಿಸುವ ನರನು ೧

ಜನ್ಮವನು ಕಳೆವುದಕೆ ತೀರ್ಮಾನ ಮಾಡಿ ದು
ಷ್ಕರ್ಮಗಳ ತ್ಯಜಿಸಿ ಸತ್ಕರ್ಮಗಳನು
ಮರ್ಮವರಿಯುತ ರಚಿಸಿ ಹೆಮ್ಮೆಯಿಂದಲಿ ತನ್ನ
ಧರ್ಮದಲಿ ಸತಿಸುತರ ಭೋಗ ಉಣುವವರು೨

ಅನ್ಯಾಯಗಳ ಬಿಟ್ಟು ಮಾನ್ಯರೆಂದೆನಿಸುತಲಿ
ಘನ್ನ ಮಹಿಮನ ಸೇವೆಯೆಂದರಿಯುತ
ಕನ್ಯಾದಿ ದಾನಗಳ ಮಾಡುತಲಿ ಮುದದಿಂದ
ಚೆನ್ನಾಗಿ ಹರಿಯ ಪ್ರಸನ್ನತೆಯ ಪಡೆಯುವರು ೩

ಹಾಡಿನ ಹೆಸರು
:
ತ್ಯಜಿಸದಲೆ ಸಂಸಾರ
ಹಾಡಿದವರ ಹೆಸರು
:
ಗಣೇಶ್ ದೇಸಾಯಿ
ರಾಗ
:

ತಾಳ
:

ಶೈಲಿ
:

ಸಂಗೀತ ನಿರ್ದೇಶಕರು
:
ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ
:
ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಮನವು ನೆಮ್ಮದಿಯಾಗಲಿ
೨೭೯
ಮನವು ನೆಮ್ಮದಿಯಾಗಲಿ ಪ
ಅನುದಿನವು ನಿನ್ನ ಮನಸಾರೆ ಪೂಜಿಸುವಂತೆ ಅ.ಪ
ಬೆಟ್ಟ ಬಿಸಿಲಿನಲಿ ಬೇಯುವುದ ನೋಡುತ ಮನವು
ಕೆಟ್ಟು ಹೋಗದೆ ಸತತ ಶುದ್ಧವಿರಲಿ
ಹೊಟ್ಟೆ ಪಾಡಿಗೆ ಕೊರತೆ ಪಡುತಿರುವ ಜನರಲ್ಲಿ
ಸಿಟ್ಟುಬಾರದೆ ಮನಕೆ ತಾಳ್ಮೆಯಿರಲಿ ೧
ನೀರು ಕಡೆದರೆ ಬೆಣ್ಣೆ ಬಾರದೆನ್ನುವ ಕ್ಲೇಶ
ದೂರವಾಗಲಿ ತಿರುಗಿ ಬಾರದಿರಲಿ
ವೀರ ಹನುಮನು ತನ್ನ ಸಾರಸೇವೆಗೆ ಫಲವತುಂಗ ಭುಜಂಗನ ಫಣಿಯಲಿ
ಕೋರಿದನೆ ಧನಕನಕ ವೈಭವಗಳ ೨
ಗೋಪುರವ ತಾಂಗಿರುವೆನೆಂಬ ಗೊಂಬೆಯ ಹೆಮ್ಮೆ
ಈ ಪರಿಯೆ ಮನದ ಕ್ಲೇಶವ ತಂದಿತು
ಶ್ರೀ ಪತಿಯು ಮಾಡಿ ಮಾಡಿಸುವೆನೆಂಬುವಜ್ಞಾನ
ಲೋಪಪೊಂದದೆ ಮನ ಪ್ರಸನ್ನವಾಗಲಿ ದೇವ ೩

 

ಹಾಡಿನ ಹೆಸರು :ಮನವು ನೆಮ್ಮದಿಯಾಗಲಿ
ಹಾಡಿದವರ ಹೆಸರು :ಸುರೇಖಾ ಕೆ. ಎಸ್.
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಟಿ.
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ