Loading Events

« All Events

  • This event has passed.

ಟಿ.ಆರ್. ಅನಂತರಾಮು

August 30, 2023

೩೦..೧೯೪೯ ವಿಜ್ಞಾನದಂತಹ ಗಂಭೀರ ವಿಷಯವನ್ನು ಸರಳೀಕರಿಸಿ ಸಾಮಾನ್ಯರಿಗೂ ಅರ್ಥವಾಗುವಂತೆ ತಮ್ಮದೇ ಆದ ಭಾಷೆಯ ಸೊಗಸು, ಲಾಲಿತ್ಯದಿಂದ ಬರೆಯುತ್ತಿರುವ ಪ್ರಮುಖ ಲೇಖಕರಲ್ಲಿ ಒಬ್ಬರಾದ ಅನಂತರಾಮುರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ತಾಳಗುಂದ ಎಂಬ ಹಳ್ಳಿಯಲ್ಲಿ ೧೯೪೯ ರ ಆಗಸ್ಟ್‌ ೩0 ರಂದು. ತಂದೆ ಶಾಲಾ ಶಿಕ್ಷಕರಾಗಿದ್ದ ಜಿ. ರಾಮಣ್ಣ, ತಾಯಿ ವೆಂಕಟಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ತಾಳಗುಂದ, ಮಾಧ್ಯಮಿಕ ಶಾಲೆ ಓದಿದ್ದು ತರೂರು. ಶಿರಾದ ಮುನಿಸಿಪಲ್‌ ಪ್ರೌಢಶಾಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ. ತುಮಕೂರಿನ ವಿಜ್ಞಾನ ಕಾಲೇಜಿನಿಂದ ಪಡೆದ ಬಿ.ಎಸ್ಸಿ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಪ್ರಥಮ ದರ್ಜೆಯಲ್ಲಿ ಪಡೆದ ಎಂ.ಎಸ್ಸಿ ಪದವಿ (೧೯೭೨). ಅಧ್ಯಾಪಕರಾಗಿ ಬೆಂಗಳೂರಿನ ಸರಕಾರಿ ವಿಜ್ಞಾನ ಕಾಲೇಜು ಹಾಗೂ ಸುರತ್ಕಲ್‌ ರೀಜನಲ್‌ ಎಂಜನಿಯರಿಂಗ್‌ ಕಾಲೇಜುಗಳಲ್ಲಿ ಕೆಲಕಾಲ. ನಂತರ ಭಾರತೀಯ ಭೂವಿಜ್ಞಾನ ಸರ್ವೇಕ್ಷಣ ಇಲಾಖೆಯಲ್ಲಿ ಹಿರಿಯ ಭೂವಿಜ್ಞಾನಿಯಾಗಿ ಸೇವೆಸಲ್ಲಿಸಿ ೨೦೦೮ ರಲ್ಲಿ ನಿವೃತ್ತಿ. ಭಾರತೀಯ ಭೂವಿಜ್ಞಾನ ಸರ್ವೇಕ್ಷಣ ಸಂಸ್ಥೆಯು ನಡೆಸಿದ ಚಿನ್ನದ ನಿಕ್ಷೇಪದ ಶೋಧನ ಕಾರ್ಯದಲ್ಲಿ ಇವರು ನಡೆಸಿದ ದುರ್ಗಮ ಕಾಡುಗಳ ಸಮೀಕ್ಷೆಯ ಗಮನಾರ್ಹ ಕಾರ್ಯ. ಸಾಹಿತ್ಯದ ಬಗ್ಗೆ ಒಲವು ಬೆಳೆದದ್ದು ತಂದೆತಾಯಿಯಿಂದ. ಶಿಕ್ಷಕರಾಗಿದ್ದ ತಂದೆಯವರು ಮಕ್ಕಳಿಗಾಗಿ ನಾಟಕ-ಗೀತೆಗಳನ್ನು ಬರೆದು ಮಕ್ಕಳಿಗೆ ಮನರಂಜನೆ ಒದಗಿಸುತ್ತಿದ್ದರೆ ತಾಯಿಯವರು ಪುರಾಣ-ಪುಣ್ಯಕಥೆಗಳನ್ನೂ ಓದಿ ಮಗನ ಬುದ್ಧಿಕೋಶಕ್ಕೆ ತುಂಬಿದವರು. ಜೊತೆಗೆ ಬೆಂಗಳೂರಿನ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ, ಪ್ರಾಧ್ಯಾಪಕರಾಗಿದ್ದ ಕವಿ, ಕೆ.ಎಸ್‌. ನಿಸಾರ್ ಅಹಮದ್‌ ರವರ ಒಡನಾಟ, ಇವುಗಳಿಂದ ಪ್ರೇರಿತರಾಗಿ ಸಾಹಿತ್ಯದಲ್ಲಿ ಆಸಕ್ತಿವಹಿಸಿ ಬರೆಯತೊಡಗಿದರು. ಕತೆಕಾದಂಬರಿಗಳಿಗಿಂತ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಲೇಖನಗಳನ್ನು ಬರೆಯುವುದು ಕೊಂಚ ಕ್ಲಿಷ್ಟವೆನಿಸಿದರೂ ವಿಜ್ಞಾನ ಸಾಹಿತ್ಯವನ್ನೂ ಜನಪ್ರಿಯಗೊಳಿಸುವ ದೃಷ್ಟಿಯಿಂದ, ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿ ಜನಸಾಮಾನ್ಯರೂ ವಿಜ್ಞಾನ ಲೇಖನಗಳನ್ನೂ ಆಸಕ್ತಿಯಿಂದ ಓದುವಂತೆ ಪ್ರೇರೇಪಿಸಿದ ಕೆಲವೇ ಲೇಖಕರಲ್ಲಿ ಅನಂತರಾಮುರವರೂ ಒಬ್ಬರಾಗಿ, ನಾಡಿನ ಪತ್ರಿಕೆಗಳಿಗೆ ಸುಮಾರು ೮೦೦ ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಭೂಪ್ರದೇಶವೊಂದರ ಶಿಲಾ ರಚನೆಯ ವಿಶ್ಲೇಷಣೆ, ಹವಾಮಾನ ಬದಲಾವಣೆಗಳಿಂದ ಉಂಟಾಗುವ ಪರಿಣಾಮ, ಭೂಮಿಯ ಜೀವನ ವೃತ್ತಾಂತ ಇವುಗಳ ಸಮಗ್ರ ಅಧ್ಯಯನ ವಿಷಯದ ಕನ್ನಡಲದಲ್ಲಿ ‘ಭೂವಿಜ್ಞಾನ ಸಾಹಿತ್ಯ’ ಎಂಬ ಕೃತಿಯನ್ನೂ ಬರೆದು ೧೯೭೮ ರಲ್ಲಿ ಪ್ರಕಟಿಸಿದ ಮೊಟ್ಟಮೊದಲ ಕೃತಿ. ನಂತರ ಬಂದ ಕೃತಿಗಳು ಭೂಮಿಯ ಅಂತರಾಳ, ಬಿಸಿನೀರಿನ ಬುಗ್ಗೆಗಳು, ಬದಲಾಗುತ್ತಿರುವ ಭೂಮಿ, ಹಿಮದ ಸಾಮ್ರಾಜ್ಯದಲ್ಲಿ, ಭೂಮಿಯ ವಯಸ್ಸು, ಭೂಗರ್ಭಯಾತ್ರೆ ಮುಂತಾದ ಗಂಭೀರ ವಿಷಯಗಳ ಜೊತೆಗೆ ಮೆದುಳಿಗೆ ಕಚಗುಳಿ ಇಡುವ ಚೌಚೌ-ಚೌಕಿಯ ವಿಜ್ಞಾನ ವಿನೋದ ಮತ್ತು ಗುರಿಮುಟ್ಟಿದ್ದೇವೆಂದು ಕೊಂಡಾಗ ಇದ್ದಕ್ಕಿದ್ದಂತೆ ಫಲಿತಾಂಶ ಉಲ್ಟಾಹೊಡೆಸುವ ‘ಮರ್ಫಿಲಾ’ ಮೊದಲಾದ ವಿನೋದ ಕೃತಿಗಳು; ಬೀರಬಲ್‌ಸಾಹ್ನಿ, ವರಹಾಮಹಿರ, ಶಕ್ತಿಸಾರಥಿ ರಾಷ್ಟ್ರಪತಿ: ಅಬ್ದುಲ್‌ ಕಲಾಂ, ಸೃಷ್ಟಿವಾದಿಗಳ ಮುಷ್ಟಿಯಲ್ಲಿ ಡಾರ್ವಿನ್‌ ಮೊದಲಾದ ವ್ಯಕ್ತಿ ಚಿತ್ರಗಳೂ ಸೇರಿ ೫೦ ಕ್ಕೂ ಹೆಚ್ಚು ಕೃತಿಗಳನ್ನೂ ರಚಿಸಿದ್ದಾರೆ. ಇದಲ್ಲದೆ ಇಂಗ್ಲಿಷ್‌ನಿಂದ ‘ಸಂಪನ್ಮೂಲಗಳಿಗಾಗಿ ಸಮುದ್ರಮಥನ’, ‘ನಮ್ಮ ಜಲ ಸಂಪನ್ಮೂಲಗಳು’, ‘ವಿಸ್ಮಯಗಳ ನಾಡಿನಲ್ಲಿ’, ‘ಅಂಟಾರ್ಕ್ಟ್‌ಕ ಕಥೆ’, ‘ಪರಿಸರ ಸ್ಥಿತಿ ವರದಿ ಮತ್ತು ಕಾರ್ಯಯೋಜನೆ’, ‘ರಾಕೆಟ್‌’, ‘ಸೌರಶಕ್ತಿಯ ಕತೆ’ ಮುಂತಾದವುಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ. ಜೊತೆಗೆ ಕಾವೇರಿ ಉಗಮದಿಂದ ಅಂತ್ಯದವರೆಗೆ ಹರಿಯುವ ರೋಚಕ ಕಥೆಯ ‘ಕಾವೇರಿ ಹರಿದುಬಂದ ದಾರಿ’ ಮತ್ತು ವಿಜ್ಞಾನ ಸಾಧನೆಯ ಮುನ್ನಡೆಗಳನ್ನು ಗುರುತಿಸುವ ‘ತ್ರಿವಿಕ್ರಮ ಹೆಜ್ಜೆಗಳು’ ಎರಡು ಸಂಪಾದಿತ ಕೃತಿಗಳಾದರೆ ಸುಭಾಶ್‌ ಪಬ್ಲಿಷಿಂಗ್‌ ಸಂಸ್ಥೆಗಾಗಿ ವಿಸ್ಮಯವಿಜ್ಞಾನ ಮಾಲಿಕೆಯ ಪ್ರಧಾನ ಸಂಪಾದಕರಾಗಿ ಪ್ರಕಟಿಸಿದ್ದು ೩೩ ಕೃತಿಗಳು, ಕುವೆಂಪು ಭಾಷಾಭಾರತಿ ಪ್ರಕಟಿಸುತ್ತಿರುವ ಜೆ.ಡಿ. ಬರ್ನಾಲ್‌ ರವರ ‘ಇತಿಹಾಸದಲ್ಲಿ ವಿಜ್ಞಾನ’ ಅನುವಾದಿತ ಕೃತಿಗಳ (ನಾಲ್ಕುಸಂಪುಟಗಳು) ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ ಮಾಸಪತ್ರಿಕೆಗಳಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ವಿಜ್ಞಾನ ಸಂಗಾತಿ’ ಸಂಪಾದಕರಾಗಿ, ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡಮಿಯು ಪ್ರಕಟಿಸುತ್ತಿರುವ ‘ವಿಜ್ಞಾನ ಲೋಕ’ ಪತ್ರಿಕೆಯ ಸಂಪಾದಕ ಮಂಡಲಿಯ ಸದಸ್ಯರಾಗಿರುವುದಲ್ಲದೆ ಸುಮಾರು ೪೦ ವರ್ಷಗಳಿಂದಲೂ ಆಕಾಶವಾಣಿಯಲ್ಲಿ ವಿಜ್ಞಾನದ ಮುನ್ನಡೆಯನ್ನೂ ಗುರುತಿಸುವ ಭಾಷಣ, ಸಂದರ್ಶನ ಕಾರ್ಯಕ್ರಮಗಳು, ಟಿ.ವಿ. ವಾಹಿನಿಗಳಲ್ಲಿ ವೈಜ್ಞಾನಿಕ ಕಾರ್ಯಕ್ರಮಗಳು ಪ್ರಸಾರವಾಗಿವೆ. ನವಕರ್ನಾಟಕ ಪುಸ್ತಕ ಪ್ರಕಟಣಾ ಸಂಸ್ಥೆಯ ಜ್ಞಾನ-ವಿಜ್ಞಾನ ಕೋಶದ ಸಹಾಯಕ ಸಂಪಾದಕರಾಗಿರುವುದಲ್ಲದೆ ಇದೇ ಸಂಸ್ಥೆಯು ಹೊರತಂದಿರುವ ‘ವಿಜ್ಞಾನ ತಂತ್ರಜ್ಞಾನ ಪದಸಂಪದ’ದ (ನಿಘಂಟು) ಪರಿಷ್ಕೃತ ಆವೃತ್ತಿಯ ಸಂಪಾದಕರಲ್ಲೊಬ್ಬರು. ದೆಹಲಿಯ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಮತ್ತು ಸಿ.ಎಸ್‌.ಐ.ಆರ್ ಸಂಸ್ಥೆಗಳಿಗಾಗಿ ಅನೇಕ ವಿಜ್ಞಾನ ಪುಸ್ತಕಗಳನ್ನೂ ಅನುವಾದಿಸಿರುವುದರ ಜೊತೆಗೆ ಡಿ.ಎಸ್‌.ಇ.ಆರ್.ಟಿ. ಸಂಸ್ಥೆಗಾಗಿ ಶಿಲೆಗಳ ಕುರಿತ ಸಾಕ್ಷ್ಯಚಿತ್ರ ಮತ್ತು ಭೂವಿಜ್ಞಾನ ಕುರಿತಂತೆ ಚಿತ್ರಪಟಗಳನ್ನು (chart) ಡಿ.ಎಸ್‌.ಇ.ಆರ್.ಟಿ ಮತ್ತು ತುಮಕೂರು ವಿಜ್ಞಾನ ಕೇಂದ್ರಕ್ಕೆ ರಚಿಸಿಕೊಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಹೆಮ್ಮೆಯ ಪ್ರಕಟಣೆಯಾದ ‘ಕನ್ನಡ ವಿಶ್ವಕೋಶ’ಕ್ಕೆ ಭೂ ವಿಜ್ಞಾನ ಕುರಿತಂತೆ ಲೇಖನಗಳು, ಕರ್ನಾಟಕ ಗ್ಯಾಜೆಟಿಯರ್ ಇಲಾಖೆಗಾಗಿ ಮಂಡ್ಯ, ಬಿಜಾಪುರ, ದ.ಕ, ಕೋಲಾರ, ಉಡುಪಿ ಜಿಲ್ಲೆಗಳಿಗೆ ಪ್ರಸ್ತಾವನೆಯನ್ನೂ ಇಂಗ್ಲಿಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ನಿರಂತರವಾಗಿ ವಿಜ್ಞಾನ ಲೇಖನಗಳನ್ನು ಅತ್ಯಾಕರ್ಷಕ ರೀತಿಯಲ್ಲಿ ಬರೆದು ಜನಪ್ರಿಯಗೊಳಿಸುತ್ತಿರುವ ಅನಂತರಾಮುರವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ‘ಹಿಮದ ಸಾಮ್ರಾಜ್ಯದಲ್ಲಿ’ (೧೯೮೫), ‘ಕರ್ತಾರನಿಗೊಂದು ಕವಿಮಾತು’ (೨೦೦೩), ವಿಜ್ಞಾನ ಕೃತಿಗಳು ಮತ್ತು ‘ಪಶ್ಚಿಮಮುಖಿ’ (ಪ್ರವಾಸಕಥನ-೨೦೦೮) ಕೃತಿಗಳಿಗಾಗಿ ಮೂರು ಬಾರಿ ಪುಸ್ತಕ ಬಹುಮಾನ; ‘ಭೂಕಂಪನಗಳು’ ಕೃತಿಗೆ ಆರ್ಯಭಟಪ್ರಶಸ್ತಿ (೧೯೯೪); ‘ಕಾಲಗರ್ಭಕ್ಕೆ ಕೀಲಿಕೈ’ ಕೃತಿಗೆ ಗೊರೂರು ಸಾಹಿತ್ಯ ಪ್ರಶಸ್ತಿ (೨೦೦೦); ಉಡುಪಿ ಜಿಲ್ಲಾ ಕಾರ್ಕಳದ ಮೌಲ್ಯ ಪ್ರಕಾಶಕರಿಂದ ‘ಮೌಲ್ಯಗೌರವ ಪುರಸ್ಕಾರ’, ಕರ್ನಾಟಕ ಸರಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಷನ್‌ಗ್ರೂಪ್‌ನ ಪ್ರತಿಷ್ಠಿತ ಪ್ರಶಸ್ತಿಯಾದ ‘ವಿಜ್ಞಾನ ಸಂವಹನಕಾರ’ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿವೆ.

Details

Date:
August 30, 2023
Event Category: