Loading Events

« All Events

  • This event has passed.

ಇಂದಿರಾ ಹಾಲಂಬಿ (ಗಿರಿವಾಸಿನಿ)

October 15, 2023

೧೫.೧೦.೧೯೩೪ ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಇಂದಿರಾ ಹಾಲಂಬಿಯವರು ಹುಟ್ಟಿದ್ದು ಉಡುಪಿಯಲ್ಲಿ ೧೯೩೪ರ ಅಕ್ಟೋಬರ್ ೧೫ ರಂದು. ತಂದೆ ಶ್ರೀನಿವಾಸ ಕಂಗಿನ್ನಾಯ, ತಾಯಿ ರಾಜಮ್ಮ. ಓದಿದ್ದು ಎಸ್‌.ಎಸ್‌.ಎಲ್‌.ಸಿ. ಹಿಂದಿವಿಶಾರದ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲದೆ ಖಾಸಗಿಯಾಗಿ ತರಬೇತು ಪಡೆದು ಉಡುಪಿ, ಗುಂಡಿಬೈಲು, ಹೈಕಾಡಿ, ಹಿರಿಯಡ್ಕ ಮುಂತಾದ ಊರುಗಳ ಸರಕಾರಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ನಲವತ್ತು ವರ್ಷಗಳ ದೀರ್ಘ ಕಾರ್ಯನಿರ್ವಹಣೆಯ ನಂತರ ನಿವೃತ್ತರು. ಬಾಲ್ಯದಿಂದಲೇ ರೂಢಿಸಿಕೊಂಡ ಹವ್ಯಾಸದಿಂದ ಓದಿದ್ದು ಹಲವಾರು ಪುಸ್ತಕಗಳು. ಹದಿಮೂರರ ಹರೆಯದಲ್ಲಿಯೇ ಕತೆ, ನಾಟಕ, ಬರೆಯಲು ಪ್ರಾರಂಭಿಸಿದ್ದು ಮೊದಲ ಕಥೆ ಪ್ರಕಟವಾದದ್ದು ಧಾರವಾಡದಿಂದ ಪ್ರಕಟವಾಗುತ್ತಿದ್ದ ‘ನೂತನ’ ಪತ್ರಿಕೆಯಲ್ಲಿ ೧೯೫೨ರಲ್ಲಿ. ಇದೇ ಸಂದರ್ಭದಲ್ಲಿ ಉಡುಪಿಯ ಗಿರಿಬಾಲೆ (ಸರಸ್ವತಿ ಬಾಯಿ ರಾಜವಾಡೆ) ಯವರು ಪ್ರಾರಂಭಿಸಿದ್ದ ‘ಸುಪ್ರಭಾತ’ ಮಾಸ ಪತ್ರಿಕೆಗೂ ಬರೆಯ ತೊಡಗಿದರು. ನಂತರ ಮಂಗಳೂರಿನ ಯುಗಪುರುಷ, ನವಭಾರತ, ಶಿರ್ವದ ವೀಣಾ, ಮುಂಬಯಿಯ ಭಾರತಿ, ಮತ್ತು ಅಕ್ಷಯ, ಬೆಂಗಳೂರಿನ ವಿನೋದ ಪತ್ರಿಕೆಗಳಲ್ಲದೆ ಉತ್ಥಾನ, ವಿಕ್ರಮ, ಕರ್ಮವೀರ, ತುಷಾರ ಮುಂತಾದ ಪತ್ರಿಕೆಗಳಿಗೆ ‘ಗಿರಿವಾಸಿನಿ’ ಎಂಬ ಕಾವ್ಯನಾಮದಿಂದ ಬರೆಯತೊಡಗಿದರು. ಮಕ್ಕಳಲ್ಲಿ ಕನ್ನಡಾಭಿಮಾನ, ಸಹಕಾರ, ಸೌಹಾರ್ದತೆ, ಸಹಬಾಳ್ವೆ ಮುಂತಾದ ಒಳ್ಳೆಯ ಗುಣಗಳನ್ನು ಬೋಧಿಸಲು ಬರೆದದ್ದು ಹಲವಾರು ನಾಟಕಗಳು. ಶಾಲೆಯ ಕಾರ್ಯಕ್ರಮಗಳಲ್ಲಿ ನಾಟಕಗಳನ್ನು ರಂಗದ ಮೇಲೂ ಪ್ರದರ್ಶಿಸಿ ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಮಾಡತೊಡಗಿದರು. ಹೀಗೆ ರಚಿಸಿದ ಮಕ್ಕಳ ಸಾಹಿತ್ಯ ಕೃತಿಗಳಲ್ಲಿ ಮುಖ್ಯವಾದ ನಾಟಕಗಳೆಂದರೆ – ಭಕ್ತಪ್ರಹ್ಲಾದ, ಚಂದ್ರಹಾಸ, ಭೂಕೈಲಾಸ, ಪ್ರತಿಜ್ಞೆ ಮುಂತಾದ ಪೌರಾಣಿಕ ನಾಟಕಗಳು; ರಾಣಿ ಚೆನ್ನಮ್ಮ, ಶ್ರೀಕೃಷ್ಣದೇವರಾಯ, ಗೌತಮಬುದ್ಧ ಮೊದಲಾದ ಚಾರಿತ್ರಿಕ ನಾಟಕಗಳು; ಶುಭದೃಷ್ಟಿ, ದೇವರದಾರಿ, ತೆರೆಯ ಮರೆವು, ಸಿಂಧು ತಿರುಗಿಬಂದಳು, ಒಂದಲ್ಲ ಮತ್ತೊಂದು ಮುಂತಾದ ಸಾಮಾಜಿಕ – ಹಾಸ್ಯ ನಾಟಕಗಳೂ ಸೇರಿ ಸುಮಾರು ೨೦ ಕ್ಕೂ ಹೆಚ್ಚು ನಾಟಕಗಳು – ಪ್ರಾಣಿ ಪರ್ಯಾಯ, ಭಾವತರಂಗ, ಕಥಾವೃಂದ, ಜೀವದ ಅಲೆಗಳ ಮೇಲೆ, ಬಿದ್ದರೂ ಎದ್ದಕತೆ, ಜೊತೆಯಲ್ಲಿ ಇರುವವರು, ಅಂಗೈಯಲ್ಲಿ ಆಕಾಶ, ಮರೆಯಲಾಗದ ಕೆಲವು ಕಥೆಗಳು ಮೊದಲಾದ ಕಥಾ ಸಂಕಲನಗಳು – ಹೆಜ್ಜೆಯ ಗೆಜ್ಜೆ, ಸ್ವರಸಂಸಾರ, ಮಿಂಚು, ಒಡೆಯದ ಕನ್ನಡಿ ಮೊದಲಾದ ಕವನ ಸಂಕಲನಗಳು – ಅಚಂಚಲಾ, ಆಶೋತ್ತರ ಮೊದಲಾದ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಈ ಎಲ್ಲ ಕೃತಿಗಳಲ್ಲಿ ಮುಖ್ಯವಾಗಿ ಕಂಡುಬರುವ ಅಂಶವೆಂದರೆ ಮಾನವೀಯ ಮೌಲ್ಯಗಳ ಪ್ರತಿಪಾದನೆ, ಮೂಢನಂಬಿಕೆಗಳ ವಿರುದ್ಧ ಹೋರಾಟ, ಸುಸಂಸ್ಕೃತ ನಡವಳಿಕೆಗಳನ್ನು ರೂಢಿಸಿಕೊಳ್ಳಲು ಬೋಧನೆ, ಸಾಂಸ್ಕೃತಿಕವಾಗಿ ಒಳ್ಳೆಯ ನಡತೆಯನ್ನು ಉನ್ನತ ಮಟ್ಟದಲ್ಲಿ ಪ್ರತಿಬಿಂಬಿಸುವಿಕೆ ಮುಂತಾದ ಗುಣಗಳು ಇವರ ಕೃತಿಗಳ ಆಶಯವಾಗಿದೆ. ತಾವು ರಚಿಸಿದ ಈ ಎಲ್ಲ ಕೃತಿಗಳ ಪ್ರಕಟಣೆಗಾಗಿ ಸ್ವಂತ ಪ್ರಕಟಣೆಯನ್ನೇ ಪ್ರಾರಂಭಿಸಿದ್ದು ೧೯೮೦ರಲ್ಲಿ ಪ್ರಾರಂಭಿಸಿದ ಸಂದೀಪ ಸಾಹಿತ್ಯ ಪ್ರಕಾಶನದ ಮುಖಾಂತರ. ತಾವು ಬರೆದಿರುವ ೫೦ ಕ್ಕೂ ಹೆಚ್ಚು ಕೃತಿಗಳಲ್ಲದೆ ಇತರ ಲೇಖಕ – ಲೇಖಕಿಯರ ಕೃತಿಗಳೂ ಸೇರಿ ಒಟ್ಟು ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅರುವತ್ತು ಲೇಖಕಿಯರ ಕವನ ಮತ್ತು ಮಿನಿಕಥೆಗಳ ಸಂಕಲನ ‘ಸಂಗಮಷಷ್ಠಿ – ಸೃಷ್ಟಿ’; ವಿವಿಧ ನಾಟಕ ಕರ್ತರ ಸಾಮಾಜಿಕ ನಾಟಕಗಳ ಸಂಕಲನ ‘ವಿನೂತನ’, ವಿವಿಧ ಲೇಖಕರ ವೈಚಾರಿಕ ಲೇಖನಗಳ ಸಂಗ್ರಹ ‘ಸಂಯುಕ್ತ ಸಂಪದ’; ಸಂದೀಪ ಸಾಹಿತ್ಯ ಪರಿಚಯದ ‘ಸ್ಮರಣೆ’ ವಿವಿಧ ಲೇಖಕಿಯರ ಕಥನಗಳ ಬೆಳ್ಮುಗಿಲ ಚುಕ್ಕೆಗಳು; ಮುಂತಾದವುಗಳನ್ನು ಸಂಪಾದಿಸಿದ್ದಾರೆ. ಇವರ ಸಾಹಿತ್ಯ ಪರಿಚಾರಿಕೆಯನ್ನು ಗುರುತಿಸಿ ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು. ‘ಜೊತೆಯಲ್ಲಿ ಇರುವವರು’ ಮಕ್ಕಳ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ (ದ.ಕ. ಜಿಲ್ಲೆಗೆ ಮೀಸಲಾದ) ಜಿ.ಪಿ. ರಾಜರತ್ನಂ ಪ್ರಶಸ್ತಿ, ‘ಋಣಮುಕ್ತರಲ್ಲ’ ನಾಟಕ ತುಳು ಅನುವಾದಕ್ಕೆ ತುಳು ಅಕಾಡಮಿ ಪ್ರಶಸ್ತಿ, ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಹಸ್ತಪ್ರತಿ ಸ್ಪರ್ಧೆಯ ಬಹುಮಾನ, ಸಮಗ್ರ ಸಾಹಿತ್ಯ ಸೇವೆಗಾಗಿ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದ.ಕ. ಜಿಲ್ಲಾಮಟ್ಟದ ಮತ್ತು ಕುಂದಾಪುರ ತಾಲ್ಲೂಕು ಮಟ್ಟದ ಎಂಟನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಹಲವಾರು ಗೌರವಗಳು ಸಂದಿವೆ.

Details

Date:
October 15, 2023
Event Category: