Loading Events

« All Events

  • This event has passed.

ಎಂ.ಎಸ್. ನರಸಿಂಹಮೂರ್ತಿ

October 20, 2023

೨೦-೧೦-೧೯೪೯ ನಗೆಬರಹಗಾರ, ಭಾಷಣಕಾರ, ಹಾಸ್ಯ ಧಾರಾವಾಹಿಗಳ ಕಥೆಗಾರರಾದ ನರಸಿಂಹಮೂರ್ತಿಯವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ. ತಂದೆ ಎಂ.ವಿ. ಸೂರಪ್ಪ, ತಾಯಿ ಸಾವಿತ್ರಮ್ಮ. ಪ್ರಾರಂಭಿಕ ಶಿಕ್ಷಣ ಮಾಲೂರು, ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ (ಆನರ್ಸ್) ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಕನ್ನಡ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೊಮದಲ್ಲಿ ಪಡೆದ ಪ್ರಥಮ ರ್ಯಾಂಕ್. ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಬೆಳೆದ ಒಲವು. ಉತ್ಥಾನ ಮಾಸಪತ್ರಿಕೆಯ ಐತಿಹಾಸಿಕ ಏಕಾಂಕ ನಾಟಕ ಸ್ಪರ್ಧೆಯಲ್ಲಿ ಪಡೆದ ಮೊದಲ ಬಹುಮಾನ. ಸುಧಾ ವಾರಪತ್ರಿಕೆಯಲ್ಲಿ ಹಾಸ್ಯಲೇಖನ ಪ್ರಕಟ. ಉದ್ಯೋಗಕ್ಕಾಗಿ ಸೇರಿದ್ದು ರಾಷ್ಟ್ರೋತ್ಥಾನ ವಾರ್ತಾ ಪತ್ರಿಕೆಯ ಸಂಪಾದಕರಾಗಿ ಕೆಲಕಾಲ. ನಂತರ ಸೇರಿದ್ದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು. ಮ್ಯಾನೇಜರ ಹುದ್ದೆಗೇರಿ ಪಡೆದ ಸ್ವಯಂ ನಿವೃತ್ತಿ. ನಾಡಿನ ಪ್ರಖ್ಯಾತ ಪತ್ರಿಕೆಗಳಿಗೆಲ್ಲಾ ಬರೆದ ಹಾಸ್ಯ ಲೇಖನಗಳು. ಪ್ರಕಟವಾಗಿರುವ ಹಾಸ್ಯ ಸಂಕಲನಗಳು ಇಪ್ಪತ್ತೈದಕ್ಕೂ ಹೆಚ್ಚು-ಟೈರ್ ಪ್ರಶಸ್ತಿ ವಿಜೇತ, ಶ್ರಮದಾನ, ಕಾನಿಷ್ಕೋಪಾಖ್ಯಾನ, ಬಾಬ್ಬಿ, ಗೂಳಿಕಾಳಗ, ಬಾತ್‌ರೂಮಿನಲ್ಲಿ ಸರಸ, ವೈಕುಂಠಕ್ಕೆ ಬುಲಾವ್, ಮೊದಲಾದುವು. ಮಕ್ಕಳ ಸಾಹಿತ್ಯ-ಮೇಡಂ ಕಾಮ, ಬಾಲಗಂಗಾಧರ ತಿಲಕ್, ಅಶುತೋಷಮುಖರ್ಜಿ, ವಿದ್ಯಾವತಿದೇವಿ. ಹಾಸ್ಯಕಾದಂಬರಿ-ಮಂದಸ್ಮಿತ. ನಾಟಕ-ಸನ್ಮಾನ ಸುಖ, ಲಾಕೌಟ್ ಅಲ್ಲ ನಾಕೌಟ್, ಪ್ರೇಮಚೂರ್ಣ, ಕಿವುಡು ಸಾರ್ ಕಿವುಡು ಮೊದಲ್ಗೊಂಡು ೩೨ ಕೃತಿ ಪ್ರಕಟಿತ. ದೂರದರ್ಶನದ ಕ್ರೇಜಿ ಕರ್ನಲ್ ಧಾರಾವಾಹಿಗೆ ಸಾಹಿತ್ಯ-ಸಂಭಾಷಣೆ ಬರೆದ ನಂತರ ಬಂದ ಹಲವಾರು ವಾಹಿನಿಗಳಾದ ಉದಯ ಟಿ.ವಿ, ಈ ಟಿ.ವಿ. ವಾಹಿನಿಗೆ ಬರೆದ ಹಾಸ್ಯ ಕಥಾ ಸಾಹಿತ್ಯ. ಸಬೀನ, ಜೋಕು-ಜೋಕೆ, ಯದ್ವಾತದ್ವಾ, ಪಾತು-ಸಾತು, ಒಂದೇ ಸುಳ್ಳು. ಕನ್ನಡದ ಮೊಟ್ಟ ಮೊದಲ ದೈನಿಕ ಧಾರಾವಾಹಿ ಪಾ.ಪ. ಪಾಂಡು ೧೦೧೪ ಕಂತುಗಳು, ಸಿಲ್ಲಿ ಲಲ್ಲಿ ೯೦೦ ಕಂತುಗಳು ಬರೆದ ಹೆಗ್ಗಳಿಕೆ. ಸುಮಾರು ೩೦೦೦ ಬಿಡಿಬಿಡಿ ಹಾಸ್ಯ ಕತೆಗಳನ್ನು ವಿವಿಧ ಚಾನಲ್‌ಗಳಿಗೆ ಬರೆದು ದಾಖಲೆ ನಿರ್ಮಿಸಿದ ಏಕೈಕ ಹಾಸ್ಯ ಸಾಹಿತಿ. ಅತಿಮಧುರ ಅನುರಾಗ, ಗಿಡ್ಡುದಾದ, ಯಮಲೋಕದಲ್ಲಿ ವೀರಪ್ಪನ್, ತಿಮ್ಮರಾಯ, ಕತ್ತೆಗಳು ಸಾರ್ ಕತ್ತೆಗಳು ಮುಂತಾದ ಚಲನಚಿತ್ರಗಳಿಗೂ ಸಂಭಾಷಣೆ-ಸಾಹಿತ್ಯ. ಓದುವ-ನೋಡುವ ಎರಡು ಮಾಧ್ಯಮಗಳಿಗೂ ಸಂದ ಪ್ರಶಸ್ತಿಗಳು. ಸ್ವಯಂವಧು, ವರ್ಗಾವರ್ಗಿ ಹಾಸ್ಯ ಸಂಕಲನಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸಮಗ್ರ ಸಾಹಿತ್ಯಕ್ಕೆ ನವರತ್ನಾರಾಂ ಪ್ರಶಸ್ತಿ, ಪರಮಾನಂದ ಪ್ರಶಸ್ತಿ, ನಗೆಭಾಷಣಗಳಿಗೆ ಬೀಚಿ ಪ್ರಶಸ್ತಿ, ರಮಣಶ್ರೀ ನಗೆರಾಜ ಪ್ರಶಸ್ತಿ, ಪಾ.ಪ. ಪಾಂಡು ಧಾರಾವಾಹಿಗೆ ಆರ್ಯಭಟ ಪ್ರಶಸ್ತಿ ಮುಂತಾದುವು. ಅಬುಧಾಬಿಯ ವಿಶ್ವ ಕನ್ನಡ ಸಮ್ಮೇಳನ, ಇಂಗ್ಲೆಂಡ್ ಕನ್ನಡ ಬಳಗ, ಮುಂತಾದೆಡೆ ಹಾಸ್ಯೋತ್ಸವದಲ್ಲಿ ಭಾಗಿ. ಮೂರು ದಶಕಗಳಿಂದಲೂ ಕನ್ನಡ ಜನತೆಗೆ ನೀಡುತ್ತಿರುವ ಹಾಸ್ಯದ ರಸದೂಟ.   ಇದೇ ದಿನ ಹುಟ್ಟಿದ ಸಾಹಿತಿಗಳು : ಡಾ. ಜ. ಚ. ನಿ. – ೧೯೦೯ ಸುನಂದಾ ಬೆಳಗಾಂವ್‌ಕರ್ – ೧೯೩೫ ಕಮಲಾಮೂರ್ತಿ – ೧೯೫೪ ಪಿ. ರತ್ನ ನಗುವನಹಳ್ಳಿ – ೧೯೫೪

Details

Date:
October 20, 2023
Event Category: