Loading Events

« All Events

ಎಂ.ಸಿ. ಅಂಟಿನ

July 4

೦೪..೧೯೩೬ ಆರೋಗ್ಯವೇ ಮನುಷ್ಯನ ಬದುಕಿನ ಪರಮಸೌಖ್ಯಕ್ಕೆ ಸಾಧನ. ಆರೋಗ್ಯವಂತ ಬದುಕಿನಲ್ಲಿ ನಗುವೇ ಪ್ರಮುಖ. ನಗುನಗುತ ಬಾಳುವುದನ್ನು ರೂಢಿಸಿಕೊಳ್ಳಬೇಕೆಂದು ಹೇಳುತ್ತಾ, ಆರೋಗ್ಯ ಇಲಾಖೆ ಸೇರಿ, ಶಿಕ್ಷಕರಾಗಿ ಹೇಳಿದ್ದಷ್ಟೇ ಅಲ್ಲದೆ ನಗೆಲೇಖನಗಳ ಮೂಲಕ ಕೂಡಾ ಓದುಗರನ್ನು ರಂಜಿಸುತ್ತಾ ಬಂದ ಅಂಟಿನ ರವರು ಹುಟ್ಟಿದ್ದು ಬೆಳಗಾವಿ ಜಿಲ್ಲಾ ಸವದತ್ತಿ ತಾಲ್ಲೂಕಿನ ಸುತಗಟ್ಟಿ ಎಂಬ ಹಳ್ಳಿಯಲ್ಲಿ ೧೯೩೬ ರ ಜುಲೈ ೪ ರಂದು. ತಂದೆ ಸರಕಾರಿ ನೌಕರರಾಗಿದ್ದ ಸಿ.ಸಿ. ಅಂಟಿನ, ತಾಯಿ ಬಸವಲಿಂಗಪ್ಪ. ಪ್ರಾರಂಭಿಕ ಶಿಕ್ಷಣ ಕಿತ್ತೂರು ಮತ್ತು ಚಿಕ್ಕೋಡಿ ಶಾಲೆಗಳಲ್ಲಿ. ಕಾಲೇಜಿಗೆ ಸೇರಿ ಬಿ.ಎ. ಪದವಿ ಪಡೆದದ್ದು ಬೆಳಗಾವಿಯ  ಲಿಂಗರಾಜ ಕಾಲೇಜಿನಿಂದ. ಬಾಹ್ಯ ವಿದ್ಯಾರ್ಥಿಯಾಗಿ, ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಪಡೆದ ಸ್ನಾತಕೋತ್ತರ ಪದವಿ ಮತ್ತು ಆರೋಗ್ಯ ಶಿಕ್ಷಣದಲ್ಲಿ ಡಿಪ್ಲೊಮ. ಸಮಾಜ ಸೇವಕನಾಗಿ ವೃತ್ತಿಯನ್ನಾರಂಭಿಸಿ ಕ್ಷೇತ್ರ ಆರೋಗ್ಯ ಶಿಕ್ಷಕ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾಗಿ, ಉಪವಿಭಾಗೀಯ ಆರೋಗ್ಯ ಶಿಕ್ಷಣಾಧಿಕಾರಿಯಾಗಿ ರಾಯಚೂರು, ಲೋಕಾಪುರ, ಹಿರೇಬಾಗೇವಾಡಿ, ಬಳ್ಳಾರಿ, ಹುಬ್ಬಳ್ಳಿ, ಕಲಬುರ್ಗಿ ಮುಂತಾದೆಡೆಗಳಲ್ಲಿ ಸೇವೆಸಲ್ಲಿಸಿ ೧೯೯೪ ರಲ್ಲಿ ನಿವೃತ್ತಿ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಪರಟಿ ನಾಗಲಿಂಗೇಶ್ವರ ಜಾತ್ರೆಗೆ ಹೋದ ವಿಷಯದ ಮೇಲೆ ಪ್ರಬಂಧ ಬರೆಯಲು ಮಾಸ್ತರು ತಿಳಿಸಿದಾಗ, ಏಳು ಪುಟದ ಪ್ರಬಂಧ ಬರೆದರಂತೆ. ಇದನ್ನೋದಿದ ಮಾಸ್ತರರು ಆಶ್ಚರ್ಯ ಮತ್ತು ಸಂತಸದಿಂದ ಇವರನ್ನು ಕರೆದು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಎಲ್ಲರೂ ಇದೇ ರೀತಿ ಬರೆಯಬೇಕೆಂದು ತಿಳಿಸಿದರಂತೆ. ಕಾಲೇಜಿಗೆ ಸೇರಿದಾಗಲೂ ಸಾಹಿತ್ಯದ ಗೀಳು ಹಿಡಿದು ‘ನಾಝ್‌’ ಎಂಬ ಕೈ ಬರಹದ ಪತ್ರಿಕೆಯನ್ನು ಪ್ರಾರಂಭಿಸಿ, ಅದರಲ್ಲಿ ಕನ್ನಡ, ಮರಾಠಿ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳ ಸಂಯುಕ್ತ ಸಂಚಿಕೆಯನ್ನು ಸಿದ್ಧಪಡಿಸಿದಾಗ ಕನ್ನಡ ವಿಭಾಗದ ಸಂಪಾದಕರು ಇವರೆ. ಕಾಲೇಜು ಮ್ಯಾಗಜಿನ್‌ಗಾಗಿ ‘ಬೋಲೋ ಸಣ್ಣ ಹುಡುಗೋರಕಿ ಜೈ’ ಎಂಬ ನಾಟಕವನ್ನೂ ಬರೆದಿದ್ದು, ಪ್ರಕಟವಾದ ನಂತರ ಕಾಲೇಜು ವಾರ್ಷಿಕೋತ್ಸವದಲ್ಲೂ ರಂಗದ ಮೇಲೂ ಅಭಿನಯಿಸಿ ಸಾಕಷ್ಟು ಜನಪ್ರಿಯತೆಯನ್ನೂ ಪಡೆದರು. ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗಲೇ ‘ಮಿರಿ’ ಎಂಬ ಮಕ್ಕಳ ಕಾದಂಬರಿಯೊಂದನ್ನು ಅನುವಾದ ಮಾಡಲು ಪ್ರಾರಂಭಿಸಿದರಾದರೂ ಪೂರ್ಣಗೊಳ್ಳಲ್ಲಿಲ್ಲ. ಹಾಗೊಂದು ವೇಳೆ ಪೂರ್ಣಗೊಂಡಿದ್ದರೆ ಒಬ್ಬ ಪ್ರಖ್ಯಾತ ಅನುವಾದಕರಾಗುತ್ತಿದ್ದರು. ಉದ್ಯೋಗಕ್ಕೆ ಸೇರಿದ ನಂತರ ಹಲವಾರು ಪತ್ರಿಕೆಗಳಿಗೆ ಬರೆದ ನಗೆ ಬರಹಗಳು, ಕಥೆ, ಹರಟೆ, ಲಲಿತ ಪ್ರಬಂಧ, ನಾಟಕ ಮುಂತಾದವುಗಳು. ಧಾರವಾಡ ಮತ್ತು ಕಲಬುರ್ಗಿ ಆಕಾಶವಾಣಿ ಕೇಂದ್ರದಿಂದ ಇವರ ಹಲವಾರು ನಾಟಕಗಳು ಮತ್ತು ಹರಟೆಗಳು ಪ್ರಸಾರವಾಗಿವೆ. ಕನ್ನಡವಲ್ಲದೆ ಹಿಂದಿ, ಮರಾಠಿ, ಉರ್ದು, ಪಂಜಾಬಿ ಭಾಷೆಗಳನ್ನೂ ಅರಿತಿದ್ದ ಇವರಿಗೆ ಅನುವಾದ ಕೆಲಸವು ಬಹು ಸುಲಭವಾಗಿತ್ತು. ಮರಾಠಿಯ ಹೆಸರಾಂತ ಲೇಖಕರಾದ ಲಕ್ಷಣಲೋಂಡೆಯವರ ಪರಿಚಯವಾದ ನಂತರ ಅವರ ‘ಬದಲಿ’ ಎಂಬ ಮರಾಠಿ ಕಥೆಯನ್ನು ಅನುವಾದಿಸಿದ್ದು, ಅದು ಮಯೂರ ಮಾಸಪತ್ರಿಕೆಯಲ್ಲಿ ‘ವರ್ಗಾವಣೆ’ ಎಂಬ ಹೆಸರಿನಿಂದ ಪ್ರಕಟವಾಯಿತು. ಇದೇ ಲೇಖಕರ ‘ಕೋಹಂ’ ಮತ್ತು ಆರಣ್ಯಕ ಎಂಬ ನಿಗೂಢ ವಸ್ತುವಾಗುಳ್ಳ ಎರಡು ಕಾದಂಬರಿಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದು ತರಂಗ ಹಾಗೂ ಕರ್ಮವೀರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಇಂತಹ ನಿಗೂಢ ವಸ್ತುವಾಗುಳ್ಳ ಕಾದಂಬರಿ ರಚನೆಗಳು ಕನ್ನಡಕ್ಕೆ ಹೊಸತು. ಇನ್ನೊಬ್ಬ ಮರಾಠಿ ಲೇಖಕರಾದ ಮಧುಸೂದನ ಕಾಲೇಲಕರರವರ ‘ದಿವಾ ಜಳೂದೆ ಸಾಲಿ ರಾತ್‌’ ಎಂಬ ನಾಟಕವನ್ನು ‘ದೀಪ ಬೆಳಗಲಿ ಇರುಳೆಲ್ಲ’ ಎಂದು ಕನ್ನಡಕ್ಕೆ ಅನುವಾದಿಸಿದ್ದು ರಂಗದ ಮೇಲೂ ಪ್ರಯೋಗಗೊಂಡು ಸಾಕಷ್ಟು ಜನಪ್ರಿಯ ನಾಟಕವೆನಿಸಿತು. ಕುಟುಂಬ ಯೋಜನಾ ಕಾರ್ಯಕ್ರಮದಲ್ಲಿ ನಿರತರಾಗಿದ್ದಾಗ ‘ಸಹಾರಾ’ ಎಂಬ ಉರ್ದುನಾಟಕವನ್ನೂ ‘ಇನ್ನಾರೆ ಶಾಣ್ಯರಾಗೋಣು’ ಎಂದು ಕನ್ನಡಕ್ಕೆ ಅನುವಾದಿಸಿದ್ದು ಹಲವಾರು ಪ್ರಯೋಗಗಳನ್ನು ಕಂಡಿದ್ದಲ್ಲದೆ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯು ಆಡಿಯೋ ಕ್ಯಾಸೆಟ್‌ ರೂಪದಲ್ಲಿ ಧ್ವನಿಮುದ್ರಿಸಿ ಪ್ರಚಾರಕ್ಕೆ ಬಳಸಿಕೊಂಡಿತು. ಇವರ ಇತರ ಕೃತಿಗಳೆಂದರೆ ‘ಬಾಳೇಶಿ ಹೋಲ್ಡಲ್‌ ಬಿಚ್ಚಿದಾಗ,’ ‘ಮುದ್ದುಕೊಡು’, ‘ಎಲ್ಲರೂ ಅವರೇ’, ‘ಬಾಳೇಶಿ ಮತ್ತೆ ಬಂದ’ (ನಗೆಬರಹ ಸಂಕಲನಗಳು); ಇನ್ನಾರೆ ಶಾಣ್ಯರಾಗೋಣು (ಐದು ನಾಟಕಗಳು), ‘ಬಂಗಾರದ ಚಮಚೆ ಮತ್ತು ಮುರಿದ ಮನೆ ಒಂದಾಯಿತು’ (ಎರಡು ಏಕಾಂಕ ನಾಟಕಗಳು, ‘ಶಕ್ತಿಗಿಂತ ಯುಕ್ತಿ ಮೇಲು’ (ಮೂರು ಮಕ್ಕಳ ನಾಟಕಗಳು), ಶ್ರೀಶಂಕರಪ್ಪರೂ ಬಾಗಿಯವರ ಆತ್ಮಕಥೆ (ನಿರೂಪಣೆ); ಕಳುವಾದದೇವರು (ಕಥಾಸಂಕಲನ-ಮರಾಠಿಯಿಂದ ಕನ್ನಡಕ್ಕೆ), ಸಹ್ಯಾದ್ರಿಸ್ಪಂದನ (ಕಥಾಸಂಕಲನ-ಹಿಂದಿಯಿಂದ), ಆತ್ಮಸಾಕ್ಷಿ (ಕಥಾಸಂಕಲನ) ಮತ್ತು ಸೇವಾವಧಿಯಲ್ಲಿನ ಅವಿಸ್ಮರಣೀಯ ಘಟನೆಗಳ ಆಯ್ದ ಪ್ರಸಂಗಗಳ ‘ನೆನಪಿನ ಹೂಗೊನೆ’ ಪ್ರಕಟವಾಗಿವೆ. ‘ಮುದ್ದುಕೊಡು’ ಹಾಸ್ಯಲೇಖನಗಳ ಕೃತಿಗೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ೨೦೦೦ನೇ ಸಾಲಿನ ವರ್ಷದ ಅತ್ಯುತ್ತಮ ಜಿಲ್ಲಾ ಹಾಸ್ಯಕೃತಿ ಎಂದು ಪರಿಗಣಿಸಿ ಪ್ರಶಸ್ತಿ ನೀಡಿದೆ. ೨೦೦೩ ರಲ್ಲಿ ಬೆಳಗಾವಿಯಲ್ಲಿ ನಡೆದ ಕರ್ನಾಟಕ ಸರಕಾರದ ಗಡಿನಾಡ ಉತ್ಸವದಲ್ಲಿ ಸಮಗ್ರ ಸಾಹಿತ್ಯ ಸೇವೆಗಾಗಿ ಸಂದ ಸನ್ಮಾನ.

Details

Date:
July 4
Event Category: