Loading Events

« All Events

ಡಾ. ರಾ.ಯ. ಧಾರವಾಡಕರ್

July 15

೧೫..೧೯೧೯ ೧೨..೧೯೯೧ ಭಾಷಾಶಾಸ್ತ್ರ, ಪತ್ರಿಕೋದ್ಯಮ, ಅರ್ಥಶಾಸ್ತ್ರ, ರಾಜಕಾರಣ, ಕನ್ನಡಭಾಷೆ,ಸಾಹಿತ್ಯ ಹೀಗೆ ಅದೆಷ್ಟೋ ವಿಷಯಗಳನ್ನೂ ಅಧ್ಯಯನ ಮಾಡಿದ್ದಲ್ಲದೆ ವಿದ್ವತ್‌ ಸಂಪಾದಿಸಿದ್ದ ಧಾರವಾಡಕರರು ಹುಟ್ಟಿದ್ದು ೧೯೧೯ರ ಜುಲೈ ೧೫ರಂದು ವಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ. ತಂದೆ ಯಲಗುರ್ದರಾವ್‌ – ವಕೀಲಿ ವೃತ್ತಿಯಲ್ಲಿದ್ದವರು, ತಾಯಿ ಗಂಗಾಬಾಯಿ. ವಾಚಾಳಿತನ, ಅಧ್ಯಯನ ಪ್ರವೃತ್ತಿಗಳು ತಂದೆಯಿಂದ ಬಂದ ಬಳುವಳಿಯಾಗಿದ್ದರೆ ನಿರ್ಮಲ ಅಂತಃಕರಣ, ತಾಯಿಯ ಕಡೆಯಿಂದ ಬಂದುದಾಗಿತ್ತು. ಪ್ರಾಥಮಿಕ ಶಿಕ್ಷಣ ಬಾಗಲಕೋಟೆಯ ಕನ್ನಡ ಒಂದನೆಯ ನಂಬರ್ ಶಾಲೆಯಲ್ಲಿ. ಮಾಧ್ಯಮಿಕ ಶಿಕ್ಷಣ ಮುನಿಸಿಪಲ್‌ ಆಂಗ್ಲೋ ವರ್ನಾಕ್ಯುಲರ್ ಶಾಲೆ ಮತ್ತು ಬಸವೇಶ್ವರ ಪ್ರೌಢಶಾಲೆಗಳಲ್ಲಿ. ೧೯೩೬ರಲ್ಲಿ ಮುಂಬಯಿಯ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅಣ್ಣನೊಡನೆ ಸಾಂಗ್ಲಿಯ ವಿಲ್ಲಿಂಗ್‌ಡನ್‌ ಕಾಲೇಜಿನಿಂದ ಪ್ರಥಮವರ್ಗದಲ್ಲಿ ಬಿ.ಎ. ಆನರ್ಸ್ (ಕನ್ನಡ) ಪದವಿ (೧೯೪೦) ಪಡೆದ ಮೇಧಾವಿ ವಿದ್ಯಾರ್ಥಿ ಎನಿಸಿಕೊಂಡಿದ್ದರು. ೧೯೪೨ ರಲ್ಲಿ ಪಡೆದ ಎಂ.ಎ. ಪದವಿ. ಇಂಗ್ಲಿಷ್‌ ಐಚ್ಛಿಕ ವಿಷಯವಾಗಿದ್ದು, ಗಳಿಸಿದ ಉತ್ತಮ ಅಂಕಗಳಿಂದ ಅದೇ ಕಾಲೇಜಿನ ಫೆಲೊ ಆಗಿ ಆಯ್ಕೆಯಾಗಿ ಇಂಗ್ಲಿಷ್‌ ಟ್ಯೂಟರ್‌ ಆಗಿಯೂ ಕೆಲಸಮಾಡಿದರು. ಇದೇ ಸಂದರ್ಭದಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಾರ್ಟಟೈಂ ಕನ್ನಡದ ಅಸಿಸ್ಟೆಂಟ್‌ ಲೆಕ್ಚರರ್ ಹುದ್ದೆಗೆ ಕರೆದಿದ್ದು ಅದರಲ್ಲಿ ಸಫಲರಾಗದೆ ನಿರಾಶರಾಗಿ ಮುಂಬಯಿಯ ಸೆಕ್ರಟರಿಯೆಟ್‌ನಲ್ಲಿ ರೇಷನಿಂಗ್‌ ಅಧಿಕಾರಿಯಾಗಿ ನೇಮಕಗೊಂಡರು. ೧೯೪೪ ರಲ್ಲಿ ಅದೇ ತಾನೆ ಪ್ರಾರಂಭವಾಗಿದ್ದ ಧಾರವಾಡದ ಕೆ.ಇ. ಬೋರ್ಡ್ ಕಾಲೇಜಿನಲ್ಲಿ (ಇಂದಿನ ಜೆ.ಎಸ್‌.ಎಸ್‌ ಕಾಲೇಜು) ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳ ಅಸಿಸ್ಟೆಂಟ್‌ ಪ್ರೊಫೆಸರೆಂದು ನೇಮಕಗೊಂಡರು. ಬಿ.ಎಂ.ಶ್ರೀ.ಯವರು ಪ್ರಿನ್ಸಿಪಾಲರಾಗಿದ್ದು ಅವರ ಮರಣಾನಂತರ ತಮ್ಮ ೨೭ನೆಯ ವಯಸ್ಸಿನಲ್ಲಿಯೇ ತಾತ್ಕಾಲಿಕ ಪ್ರಿನ್ಸಿಪಾಲರೆಂದು ನೇಮಕಗೊಂಡವರು ಖಾಯಂ ಪ್ರಿನ್ಸಿಪಾಲರಾಗಿ ಸುಮಾರು ಕಾಲು ಶತಮಾನಗಳ ಕಾಲ ಕಾಲೇಜಿನ ಅಭಿವೃದ್ಧಿಗಾಗಿ ದುಡಿದರು. ಕಾಲೇಜಿಗೊಂದು ಭದ್ರ ಬುನಾದಿ ಹಾಕಿ, ದಕ್ಷ ಆಡಳಿತದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದರು. ೧೯೬೪ರಲ್ಲಿ ಫುಲ್‌ಬ್ರೈಟ್‌ ಸ್ಕಾಲರ್ ಶಿಪ್‌ ಪಡೆದು ಅಮೆರಿಕಾವನ್ನು ಸಂದರ್ಶಿಸಿ ಬಂದ ಧಾರವಾಡಕರರು ಕಡೆಯವರೆಗೂ ನಾಡು-ನುಡಿಗಾಗಿ ಅಪಾರವಾಗಿ ಶ್ರಮಿಸಿದರು. ೧೯೭೩ ರಲ್ಲಿ ಅವರಿಗೆ ಪಿಎಚ್‌.ಡಿ. ತಂದು ಕೊಟ್ಟ ಪ್ರೌಢ ಪ್ರಬಂಧ ‘ಹೊಸಗನ್ನಡ ಉದಯಕಾಲ’. ಹಲವಾರು ಗ್ರಂಥಗಳನ್ನು ರಚಿಸಿದ್ದ ಧಾರವಾಡಕರರು ಪತ್ರಿಕೋದ್ಯಮಕ್ಕಾಗಿ ನೀಡಿದ ಕೃತಿಗಳೆಂದರೆ ಪತ್ರಿಕಾ ವ್ಯವಸಾಯ (೧೯೪೮), ಮತ್ತು ಕರ್ನಾಟಕದಲ್ಲಿ ವೃತ್ತ ಪತ್ರಿಕೆಗಳು (೧೯೪೯). ನಂತರ ಪ್ರಕಟವಾದದ್ದು ಸಾಹಿತ್ಯ ಸಮೀಕ್ಷೆ. ೧೯೫೦ರಲ್ಲಿ ಪ್ರಕಟವಾದ ‘ಕನ್ನಡ ಭಾಷಾ ಶಾಸ್ತ್ರ’ವು ಕನ್ನಡ ಭಾಷೆಯ ಉಗಮ, ವಿಕಾಸ, ವ್ಯಾಕರಣ ವಿಚಾರ, ಭಾಷೆಯ ವೈಶಿಷ್ಟ್ಯಗಳನ್ನೂ ಸೊಗಸಾಗಿ ನಿರೂಪಿಸಿರುವ ಗ್ರಂಥವೆನಿಸಿದೆ. ಇದಕ್ಕೆ ದೇವರಾಜ ಬಹದ್ದೂರ್ ಬಹುಮಾನವೂ ಬಂದಿತು. ಇವರು ಹಲವಾರು ಕೃತಿಗಳನ್ನೂ ರಚಿಸಿರುವುದಲ್ಲದೆ ಸುಮಾರು ಮೂವತ್ತಕ್ಕೂ ಹೆಚ್ಚು ಕೃತಿಗಳನ್ನೂ ಸಂಪಾದಿಸಿದ್ದಾರೆ. ಆದರೂ ಅವರಿಗೆ ಹೆಸರು ತಂದು ಕೊಟ್ಟ ಕ್ಷೇತ್ರವೆಂದರೆ ಪ್ರಬಂದ ಕ್ಷೇತ್ರ. ಪ್ರಬಂಧ ಸಾಹಿತ್ಯವನ್ನೂ ಬೆಳೆಸಿದವರಲ್ಲಿ ಧಾರವಾಡಕರರ ಹೆಸರು ಮುಂಚೂಣಿಯಲ್ಲಿದೆ. ಅವರ ಧೂಮ್ರವಲಯಗಳು (೧೯೬೦), ತೂರಿದ ಚಿಂತನೆಗಳು (೧೯೮೨), ನವಿಲುಗರಿ (೧೯೮೩) ಮತ್ತು ಸೂರ್ಯಪಾನ (೧೯೮೯). ಮುಂತಾದ ನಾಲ್ಕು ಪ್ರಬಂಧ ಸಂಕಲನಗಳು ಪ್ರಕಟಗೊಂಡಿವೆ. ಕತೆಗಾರರಾಗಿಯೂ ಹೆಸರು ಗಳಿಸಿರುವ ಧಾರವಾಡಕರರು ಏಳು ಜನ ನಿಗ್ರೋ ಕತೆಗಾರರ ಕತೆಗಳನ್ನಾರಿಸಿಕೊಂಡು ಕನ್ನಡಕ್ಕೆ ರೂಪಾಂತರಿಸಿ ‘ತೆರೆಯ ಹಿಂದೆ’ ಅಮೆರಿಕನ್‌ ನಿಗ್ರೋ ಕಥೆಗಳು ಮತ್ತು ಸಾಗರೋತ್ತರ ಕಥೆಗಳು ಎಂಬ ಸಂಕಲನಗಳನ್ನು ತಂದು ಹೊಸ ಮಾದರಿಯ ಕತೆಗಳನ್ನು ಓದುಗರಿಗೆ ನೀಡಿದ್ದಾರೆ. ತಮ್ಮ ಅಮರಿಕಾ ಪ್ರವಾಸಾನುಭವವನ್ನೂ ನಿರೂಪಿಸುವ ಕೃತಿ ‘ನಾ ಕಂಡ ಅಮರಿಕೆ’ಗೆ ರಾಜ್ಯ ಸಾಹಿತ್ಯ ಅಕಾಡಮಿಯ ಪುರಸ್ಕಾರವನ್ನೂ ಪಡೆದಿದ್ದಾರೆ. ಇದಲ್ಲದೆ ವ್ಯಕ್ತಿ ಪರಿಚಯದ ಕೃತಿಗಳಾದ ವೆಂಕಟರಂಗೋಕಟ್ಟಿ, ಶ್ರೀನಮನ, ಡಾ. ನಂದಿಮಠರ ನೆನಪು, ರೊದ್ದ ಶ್ರೀನಿವಾಸರಾಯರು, ಕಾವ್ಯಾನಂದ, ಪುಣೇಕರ ಮುಂತಾದವುಗಳನ್ನೂ ರಚಿಸಿದ್ದಾರೆ. ಶಾಂತ ಕವಿಗಳ ಮೂರು ಕೀರ್ತನೆಗಳಾದ ವಿದ್ಯಾರಣ್ಯ ವಿಜಯ, ರಾವಣ-ವೇದವತಿ ಮತ್ತು ಶ್ರೀಕೃಷ್ಣ ದಾನಾಮೃತಗಳನ್ನೂ ಬೆಳಕಿಗೆ ತಂದಿದ್ದಾರೆ. ಇದಲ್ಲದೆ ಇವರು ರಚಿಸಿದ ಇತರ ಕೃತಿಗಳೆಂದರೆ ನಮ್ಮ ದೇಶದ ಯೋಜನೆಗಳು, ದೇವರು-ಧರ್ಮ, ಮುಂತಾದವುಗಳಲ್ಲದೆ ದಿ ಗೋಲ್ಡನ್‌ ಜರ್ಸಿ, ಶ್ರೀಗಂಧ, ದಿ ಲಿಂಗರಿಂಗ್‌ ಫ್ರಾಗ್ರೆನ್ಸ್‌ ಇಂಗ್ಲಿಷ್‌ ಕೃತಿಗಳಾದರೆ (ಇತರರೊಡನೆ) ಲೋಕಮಾನ್ಯ ತಿಲಕರು, ವಿಜಯದುಂದುಭಿ, ಭೀಷ್ಮಪರ್ವಸಂಗ್ರಹ, ಕರ್ಮಯೋಗಿ ಹಾಗೂ ಗಾಂಧಿಸಾಹಿತ್ಯದ ಸುಮಾರು ೩೦ ಕೃತಿಗಳನ್ನೂ ಸಂಪಾದಿಸಿದ್ದಾರೆ. ಸಾರಸ್ವತ ಲೋಕದಲ್ಲಿ ವಿಶಿಷ್ಟರೀತಿಯಲ್ಲಿ ದುಡಿದ ರಾ.ಯ.ಧಾ ರವರಿಗೆ ಮೈಸೂರು ಸರಕಾರದಿಂದ ಸಾರ್ವಜನಿಕ ಸೇವಾ ಪ್ರಶಸ್ತಿ, ಮೂರು ಸಾವಿರ ಮಠದ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಜೊತೆಗೆ ಅಭಿಮಾನಿಗಳು ೧೯೯೦ ರಲ್ಲಿ ಅರ್ಪಿಸಿದ ಬೃಹತ್‌ ಗ್ರಂಥ ‘ಪ್ರಬಂಧ ಪ್ರಪಂಚ’. ಕನ್ನಡ ಸಾರಸ್ವತ ಲೋಕದಲ್ಲಿ ‘ರಾಯ’ರೆಂದೇ ಕರೆಸಿಕೊಂಡಿದ್ದ ಧಾರವಾಡಕರರು ಸಾಹಿತ್ಯಲೋಕದಿಂದ ನಿರ್ಗಮಿಸಿದ್ದು ೧೯೯೧ ರ ಏಪ್ರಿಲ್‌ ೧೨ರಂದು.

Details

Date:
July 15
Event Category: