Loading Events

« All Events

ಡಾ. ಶೈಲಜಾ ಉಡಚಣ

July 26

೨೬..೧೯೩೫ ೦೬.೧೨.೨೦೧೦ ಸಂಪ್ರದಾಯಸ್ಥ ಮನೆತನ, ವಿಚಾರಶೀಲ ವ್ಯಕ್ತಿತ್ವ, ಸ್ವತಂತ್ರವಾಗಿ ಆಲೋಚಿಸುವ, ಚಿಂತನ ಪರ ನಿಲುವಿನಲ್ಲಿ ಭಾಷೆ ಹಾಗೂ ಬದುಕಿಗಾಗಿ ಸಂಘರ್ಷದ ಅನಿವಾರ್ಯತೆಯನ್ನನುಭವಿಸುತ್ತಿದ್ದ ಶೈಲಜಾರವರು ಹುಟ್ಟಿದ್ದು ರಾಯಚೂರಿನಲ್ಲಿ ೧೯೩೫ರ ಜುಲೈ ೨೬ರಂದು. ತಂದೆ ತಾಯಿಗಳಿಟ್ಟ ಹೆಸರು ಮಹಾಂತಮ್ಮ ಹಸಮಕಲ್‌. ಮದುವೆಯಾದದ್ದು ಗುಲಬರ್ಗದ ಬಸವಣ್ಣಪ್ಪ ಉಡಚಣರವನ್ನು, ನಂತರ ಶೈಲಜಾ ಉಡಚಣರೆಂದೇ ಪ್ರಖ್ಯಾತರಾದರು. ಓದಿದ್ದು ನಿಜಾಮದ ಕಾಲದ ಮಹಿಳಾ ಸ್ಕೂಲಿನಲ್ಲಿ ಏಳನೆಯ ತರಗತಿಯವರೆವಿಗೆ ಕನ್ನಡ ಮಾಧ್ಯಮದಲ್ಲಿ. ನಂತರ ಮೆಟ್ರಿಕ್ಯುಲೇಷನ್‌ವರೆಗೆ ಓದಿದ್ದು ಉರ್ದು ಮಾಧ್ಯಮದಲ್ಲಿ. ನಿಜಾಮರ ಆಳ್ವಿಕೆಯ ಕಾಲ. ಸ್ವಾತಂತ್ಯ್ರಾ ನಂತರ ಭಾರತದ ಎಲ್ಲ ಪ್ರಾಂತಗಳೂ ಭಾರತದ ಒಕ್ಕೂಟದಲ್ಲಿ ವಿಲೀನವಾದರೂ ಹೈದರಾಬಾದ್ ಸಂಸ್ಥಾನವು ವಿಲೀನವಾಗದೆ ಕಾಸಿಮ್‌ ರಜ್ವಿ ನೇತೃತ್ವದಲ್ಲಿ ವಿರೋಧಿಸುತ್ತಿದ್ದು, ರಜಾಕರಕವಾಯಿತು ಬೀದಿಬೀದಿಯಲ್ಲಿಯೂ ನಡೆಯುತ್ತಿದ್ದು ಭಯದ ವಾತಾವರಣದಲ್ಲಿ ಗುಂಡು, ಗೋಲಿಗಳ ಸದ್ದಿನ ನಡುವೆಯೇ ಶಾಲೆಯಲ್ಲಿ ಕಲಿಕೆ. ಒಂದೆಡೆ ಭಯದ ವಾತಾವರಣ, ಮತ್ತೊಂದೆಡೆ ಆ ಕಾಲದಲ್ಲಿ ಮಹಿಳೆಯರನ್ನೂ ಕಾಲೇಜಿಗೆ ಕಳುಹಿಸುವ ಪರಿಪಾಠವಿರದ ದಿನಗಳು. ಆದರೂ ಸಮಾಜ, ಬಂಧು ಬಾಂಧವರ ವಿರೋಧದ ನಡುವೆಯೂ, ತಂದೆತಾಯಿಗಳ, ಗುರುಹಿರಿಯರ ಆಶೀರ್ವಾದದೊಡನೆ ಕಲಿತು ಹೈಸ್ಕೂಲು ಶಿಕ್ಷಕಿಯಾದದ್ದು ದೊಡ್ಡ ಸಾಧನೆಯ. ಅಧ್ಯಯನ ಶೀಲ ಮನೋಧರ್ಮದ ಶೈಲಜಾರವರು ಬಿ.ಎ., ಬಿ.ಎಡ್‌., ಎಂ.ಎ. ಪದವಿಗಳನ್ನೆಲ್ಲಾ ಪಡೆದದ್ದು ಖಾಸಗಿಯಾಗಿ ಓದಿ. ೧೯೫೯ರಲ್ಲಿ ಗುಲಬರ್ಗಾ ಕಾಲೇಜಿಗೆ ಅಧ್ಯಾಪಕಿಯಾಗಿ ನೇಮಕಗೊಂಡ ನಂತರ ಗುಲಬರ್ಗಾ ಸರಕಾರಿ ಕಾಲೇಜ್‌ ಅಲ್ಲದೆ ಮೈಸೂರು ಮತ್ತು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿಯೂ ಕಾರ್ಯನಿರ್ವಹಿಸಿ ೧೯೯೧ರಲ್ಲಿ ನಿವೃತ್ತಿ ಪಡೆದರು. ಒಂದೆಡೆ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಇಬ್ಬರು ಹುಡುಗರು ಮಾತನಾಡಲು ಪ್ರಾರಂಭಿಸಿದರೆ ‘ಅರೆ, ಯೂರ್, ಕ್ಯಾಕರ್ ರಹೆ ಹೋ…’ ಎಂದೇ ಪ್ರಾರಂಭವಾಗುತ್ತಿದ್ದ ಪರಿಸರದಲ್ಲಿ ಕನ್ನಡವನ್ನೂ ಕಟ್ಟಿ ಬೆಳೆಸಿದ್ದಲ್ಲದೆ, ಮೈಸೂರಿನ ಕಾಲೇಜಿಗೆ ವರ್ಗವಾಗಿ ಬಂದಾಗ ಹೈದರಾಬಾದ್‌ ಕರ್ನಾಟಕದವರಿಗೆ ಕನ್ನಡವೂ ಬರುತ್ತದಾ ಎಂದು ಸಂಶಯಿಸಿದವರಿಗೆ ಕನ್ನಡದಲ್ಲಿ ನಿರರ್ಗಳವಾಗಿ ಪಾಠ ಮಾಡಿ ತೋರಿಸಿ ಕನ್ನಡತನ ಮೆರೆದದ್ದು, ಇವೆಲ್ಲದರ ಹಿಂದಿನ ಶ್ರಮ ಊಹೆಗೂ ನಿಲುಕದ್ದು. ಅಧ್ಯಯನ ಶೀಲ ಪ್ರವೃತ್ತಿಯೇ ಇವರ ಕಾವ್ಯಾಸಕ್ತಿಯ ಮೂಲ ಸೆಲೆಯಾಗಿತ್ತು. ಇವರು ೯ನೆಯ ತರಗತಿಯಲ್ಲಿದ್ದಾಗಲೇ ಸ್ಥಳೀಯ ಪತ್ರಿಕೆಗಳಿಗೆ ಹಲವಾರು ಪದ್ಯಗಳನ್ನೂ ಬರೆದಿದ್ದರು. ಆದರೆ ಸ್ವತಃ ತಾವೇ ಮುನ್ನುಗ್ಗಿ ಪತ್ರಿಕೆಗಳಿಗೆ ಬರೆದು ಕಳುಹಿಸುವ ಪರಿಪಾಠವನ್ನೂ ಇಟ್ಟುಕೊಳ್ಳದೆ, ಕೇಳಿದಾಗ ಬರೆದುಕೊಡುವುದರಲ್ಲಿಯೇ ತೃಪ್ತರು. ಎಂ.ಎಂ. ಕಲಬುರ್ಗಿ ಮತ್ತು ಗುರುಲಿಂಗ ಕಾಪಸೆಯವರ ಒತ್ತಾಯದ ಮೇರೆಗೆ ಮೊದಲ ಕವನ ಸಂಕಲನ ‘ಒಂದುಗಳಿಗೆ’ (೧೯೭೨) ಪ್ರಕಟವಾದುದು ಇವರ ಮೂವತ್ತೈದನೆಯ ವಯಸ್ಸಿನ ನಂತರವೇ. ನಂತರ ‘ಕಾದುನೋಡು’ (೧೯೭೯) ‘ಸ್ವಗತ’ (೧೯೮೧), ‘ಕಪ್ಪುನೆಲ ಸೊಕ್ಕಿದ ಸೂರ್ಯ’ (೧೯೮೭), ‘ತುಂತುರು ಹನಿಗಳು’ (೧೯೯೧), ‘ನನ್ನಂಥವರು’ (೧೯೯೫) ಹೀಗೆ ಹಲವಾರು ಕವನ ಸಂಕಲನಗಳು ಪ್ರಕಟಗೊಂಡವು. ೧೯೭೭ ರಲ್ಲಿ ‘ಕೇಳು ಮಗಾ’ ಎಂಬ ವಚನ ಸಂಕಲನವನ್ನು ಹೊರತಂದರು. ಇವರ ಕೆಲವು ಕವಿತೆಗಳು ಹಿಂದಿ ಹಾಗೂ ಮರಾಠಿ ಭಾಷೆಗೂ ಅನುವಾದಗೊಂಡಿವೆ. ‘ವಚನಕಾರರ ದೃಷ್ಟಿಯಲ್ಲಿ ಸ್ತ್ರೀ’ ಎಂಬ ಪ್ರೌಢಪ್ರಬಂದವನ್ನು ಪಿಎಚ್‌.ಡಿ.ಗಾಗಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಪಿಎಚ್‌.ಡಿ. ಮತ್ತು ಬಹುಮಾನ ಪಡೆದದ್ದು ೧೯೭೭ ರಲ್ಲಿ. ಈ ಗ್ರಂಥವು ೧೯೯೧ ರಲ್ಲಿ ಪ್ರಕಟಗೊಂಡಿತು. ಇತರ ಗದ್ಯ ಕೃತಿಗಳೆಂದರೆ ‘ವಚನಗಳಲ್ಲಿ ಸತಿಪತಿಭಾವ’, ‘ನನ್ನ ಲೇಖನಗಳು’, ವಚನ ಸಾಹಿತ್ಯ ಮತ್ತು ಮಹಿಳೆ, ‘ಮೂರು ಮಾತು ನೂರು ನೀತಿ’, ‘ನಾನು ಮತ್ತು ಸಾಹಿತ್ಯ’, ‘ಕಾಲ ನಮ್ಮ ಕೈಯಲ್ಲಿದೆ’ ಮತ್ತು ಅಮೃತಾ ಪ್ರೀತಮ್‌ ರವರ ಅನುವಾದಿತ ಕೃತಿ ‘ನುಡಿನೆರಳು’ ಮುಂತಾದ ಕೃತಿಗಳು. ಸಾಹಿತ್ಯಕ್ಷೇತ್ರದಂತೆಯೇ ಇವರಿಗೆ ಅತಿ ಹೆಚ್ಚಿನ ಘನತೆ, ಗೌರವಗಳನ್ನೂ ತಂದುಕೊಟ್ಟ ಕ್ಷೇತ್ರವೆಂದರೆ ಸಮಾಜಸೇವೆ. ಗುಲಬರ್ಗ ಜಿಲ್ಲಾ ಮಟ್ಟದ ಮಹಿಳಾ ಸಹಕಾರ ಬ್ಯಾಂಕ್‌ ಸ್ಥಾಪನೆಗಾಗಿ ಹೋರಾಟ ಮಾಡಿ ಸ್ಥಾಪಿಸಿದ್ದು. ಮಹಿಳೆಯರ ಸ್ವಾವಲಂಬನೆ ಮತ್ತು ಅಭ್ಯುದಯಕ್ಕಾಗಿ ಹಗಲಿರುಳು ದುಡಿದರು. ಇವರ ದಿಟ್ಟ ಹೋರಾಟದ ಬ್ಯಾಂಕ್ ಸ್ಥಾಪನೆಯ ಪ್ರಯತ್ನಕ್ಕೆ ರಾಷ್ಟ್ರೀಯ ಮಟ್ಟದ ಪುರಸ್ಕಾರ ದೊರೆತದ್ದು ಇವರ ಹೋರಾಟಕ್ಕೆ ಸಿಕ್ಕ ಗೌರವವಾಗಿತ್ತು. ಇದಲ್ಲದೆ ದೆಹಲಿಯ ಮಹಿಳಾ ಆಯೋಗವುಇವರಿಗೆ ೧೯೯೭ ರಲ್ಲಿ ಅತ್ಯುತ್ತಮ ಸೇವಾ ಪುರಸ್ಕಾರ ನೀಡಿ ಗೌರವಿಸಿದೆ. ಸಾಹಿತ್ಯ ಕ್ಷೇತ್ರದ ಇವರ ಗಣನೀಯ ಸೇವೆಗಾಗಿ ಕಲಬುರ್ಗಿ ಜಿಲ್ಲೆಯ ಮೂರನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕೊಪ್ಪಳದಲ್ಲಿ ನಡೆದ ಅಖಿಲಭಾರತ ಸಾಹಿತ್ಯ ಸಮ್ಮೇಳನದ (೧೯೯೨) ಎರಡನೆಯ ಭಾವೈಕ್ಯ ಕವಿಗೋಷ್ಠಿಯ ಅಧ್ಯಕ್ಷತೆ, ಮುಧೋಳದಲ್ಲಿ ೧೯೯೫ ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ (೬೪ ನೆಯ ಸಮ್ಮೇಳನ-ಅಧ್ಯಕ್ಷತೆ ಎಚ್‌.ಎಲ್‌. ನಾಗೇಗೌಡ)ಇವರ ನಾಡು-ನುಡಿಯ ಸೇವೆಗಾಗಿ ಗೌರವ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೯೫), ಅನುಪಮ ಪ್ರಶಸ್ತಿ (೧೯೯೬), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೮) ಮತ್ತು ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ (೨೦೦೩) ಮುಂತಾದ ಗೌರವ ಪ್ರಶಸ್ತಿಗಳು ದೊರೆತಿವೆ.

Details

Date:
July 26
Event Category: