Loading Events

« All Events

  • This event has passed.

ಡಿ.ಎಸ್.ಕರ್ಕಿ

November 15, 2023

೧೫-೧೧-೧೯೦೭ ೧೬-೧-೧೯೮೪ ‘ಹಚ್ಚೇವು ಕನ್ನಡದ ದೀಪ…’ ಈ ಗೀತೆಯನ್ನು ಕೇಳದವರೇ ಇಲ್ಲ. ರಚನಕಾರರಾದ ದುಂಡಪ್ಪ ಸಿದ್ದಪ್ಪ ಕರ್ಕಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಿರೇಕೊಪ್ಪದಲ್ಲಿ. ತಂದೆ ಸಿದ್ದಪ್ಪ, ತಾಯಿ ದುಂಡವ್ವ. ಬಾಲ್ಯದಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರು. ಪ್ರಾರಂಭಿಕ ಶಿಕ್ಷಣ ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಪಡೆದ ಪದವಿ. ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಟಿ. ಪದವಿ. ಪ್ರೊ. ಕೆ.ಜಿ.ಕುಂದಣಗಾರರ ಮಾರ್ಗದರ್ಶನದಲ್ಲಿ ‘ಕನ್ನಡ ಛಂದಸ್ಸಿನ ವಿಕಾಸ’ ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಬಿ.ಟಿ. ಪದವಿ ಪಡೆದ ನಂತರ ಬೆಳಗಾವಿ, ಕಾರವಾರಗಳಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭ. ನಂತರ ಬೆಳಗಾವಿ ಲಿಂಗರಾಜ ಕಾಲೇಜಿನ ಟೀಚಿಂಗ್ ಡಿಪ್ಲೊಮ ವಿಭಾಗದ ಮುಖ್ಯಸ್ಥರಾಗಿ, ಬೆಳಗಾವಿಯಿಂದ ಹುಬ್ಬಳ್ಳಿಗೆ ಬಂದು ಕಾಡು ಸಿದ್ಧೇಶ್ವರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಮೊದಲ ಕವನ ಸಂಕಲನ ‘ನಕ್ಷತ್ರಗಾನ’ ೧೯೪೯ರಲ್ಲಿ ಪ್ರಕಟಿತ. ನಾಡಿನ ಹಲವಾರು ರಮಣೀಯ ತೀರ್ಥಕ್ಷೇತ್ರಗಳ ವರ್ಣನೆಯ ಕವನ ಸಂಗ್ರಹ ಭಾವತೀರ್ಥ. ಮಹಾತ್ಮಗಾಂಧಿಯವರಿಗೆ ಸಲ್ಲಿಸಿದ ಕಾವ್ಯ ಶ್ರದ್ಧಾಂಜಲಿಯು ‘ಗೀತ ಗೌರವ’ ಎಂಬ ಕವನ ಸಂಕಲನದಲ್ಲಿ ಸೇರ್ಪಡೆ. ನಾಡಿನ ಮಹಾನ್ ವ್ಯಕ್ತಿಗಳ ಕುರಿತಾದ ಕವನಗಳು ‘ಕರಿಕೆ-ಕಣಗಲು’ ಕವನ ಸಂಗ್ರಹದಲ್ಲಿ ಪ್ರಕಟಿತ. ಕರಿಕೆ ತಮ್ಮ ಮನೆತನದ ಹೆಸರಾದರೆ ಕಣಗಲು ಇವರ ಶ್ರೀಮತಿಯ ಮನೆತನದ ಹೆಸರು. ಎರಡು ಮನೆತನಗಳ ಅರ್ಥಪೂರ್ಣ ಕವನ ಸಂಕಲನ.ಮಕ್ಕಳ ಸಾಹಿತ್ಯ-ತನನತೋಂ, ಬಣ್ಣದ ಚೆಂಡು ಕವನ ಸಂಕಲನಗಳು. ‘ಕನ್ನಡ ಛಂದೋವಿಕಾಸ’ ಇವರ ಪಿಎಚ್.ಡಿ. ಮಹಾಪ್ರಬಂಧವೂ ಪ್ರಕಟಿತ. ಬದುಕನ್ನು ಹಲವಾರು ಕೋನಗಳಿಂದ ನೋಡಿ ಬರೆದ ಲೇಖನಗಳ ‘ನಾಲ್ದೆಸೆಯ ನೋಟ’ ಅತ್ಯುತ್ತಮ ಪ್ರಬಂಧ ಕೃತಿ. ಕಥಾ ಸಂಕಲನ-ಜೀವನ ಪ್ರಕೃತಿ. ಅನುವಾದ-ಬೇಜುಬರುವಾ. ವಿಜ್ಞಾನಕ್ಕೆ ಸಂಬಂಧಿಸಿದ ಕೃತಿ – ಸಾಹಿತ್ಯ – ಸಂಸ್ಕೃತಿ – ಕೃತಿ. ಸಂದ ಗೌರವಗಳೆಂದರೆ ೧೯೭೨ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೭೦ರಲ್ಲಿ ಫ್ರಾನ್ಸ್, ರಶಿಯಾ ಮುಂತಾದ ದೇಶಗಳಿಗೆ ಭಾರತ ಸರಕಾರದ ಸಾಂಸ್ಕೃತಿಕ ರಾಯಭಾರಿಯಾಗಿ ನೀಡಿದ ಭೇಟಿ. ಕೇಂದ್ರ ಸಾಹಿತ್ಯ ಅಕಾಡಮಿಯ ಸಲಹಾ ಸದಸ್ಯ. ೧೯೬೮ರಲ್ಲಿ ಹುಬ್ಬಳ್ಳಿ ನಾಗರಿಕರಿಂದ ಷಷ್ಟಬ್ದಿ ಸಮಾರಂಭ, ‘ಕಾವ್ಯರ್ಷಿ’ ಗೌರವ ಗ್ರಂಥ ಮತ್ತು ೧೯೯೧ರಲ್ಲಿ ‘ಕಾವ್ಯಗೌರವ’ ಗ್ರಂಥ ಅರ್ಪಿತ.   ಇದೇ ದಿನ ಹುಟ್ಟಿದ ಸಾಹಿತಿಗಳು : ಬಿ. ಜಯಶೀಲ – ೧೯೪೫ ಕೋಡಿ ಹೊಸಳ್ಳಿ ರಾಮಣ್ಣ – ೧೯೪೬ ಹಿ.ಶಿ. ರಾಮಚಂದ್ರಗೌಡ – ೧೯೪೭

Details

Date:
November 15, 2023
Event Category: