Loading Events

« All Events

  • This event has passed.

ಬಿ.ಆರ್. ಲಕ್ಷ್ಮಣರಾವ್

September 9, 2023

೦೯..೧೯೪೬ ಚಿಂತಾಮಣಿಯನ್ನೂ ಒಂದು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಿ ಕವಿ, ಕಲಾವಿದರನ್ನೂ ಆಹ್ವಾನಿಸಿ ಬೌದ್ಧಿಕ ಹಸಿವನ್ನು ಹಿಂಗಿಸುವಂತೆ ಪುಷ್ಕಳವಾದ ಭೋಜನವನ್ನೂ ನೀಡಿ ಎಲ್ಲರೂ ಸಂತೋಷಪಡುವಂತೆ ಮಾಡುತ್ತಿದ್ದ ಲಕ್ಷ್ಮಣರಾವ್‌ರವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚೀಮಂಗಲದಲ್ಲಿ ೧೯೪೬ ರ ಸೆಪ್ಟಂಬರ್ ೯ ರಂದು. ತಂದೆ ಬಿ.ಆರ್. ರಾಜಾರಾವ್‌ ರವರು ಸಂಗೀತಾಸಕ್ತರಾಗಿದ್ದು ವಾದ್ಯಸಂಗೀತ ಹಾಗೂ ಹಾಡುಗಾರಿಕೆಯಲ್ಲಿ ಪರಿಶ್ರಮವಿದ್ದವರು. ತಾಯಿ ವೆಂಕಟಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ಚಿಂತಾಮಣಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಬಿ.ಎ. ಪದವಿ ಮತ್ತು ಬಿ.ಎಡ್‌ ಪದವಿಗಳು ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ಚಿಂತಾಮಣಿ ಹೈಸ್ಕೂಲಿನಲ್ಲಿ ಉಪಧ್ಯಾಯರಾಗಿ, ವಿನಾಯಕ ಟ್ಯುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಇದೀಗ ಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಬೆಂಗಳೂರಿನ  ಸಾಂಸ್ಕೃತಿಕ ವಲಯದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಅಪ್ಪನಿಂದ ಬಂದ ಸಂಗೀತದ ಹುಚ್ಚಿನ ಜೊತೆಗೆ ಸಾಹಿತ್ಯದ ಹುಚ್ಚು ಸೇರಿ, ದಾವಣಗೆರೆ ಕಾಲೇಜಿನಲ್ಲಿ ಪಿ.ಯು. ಓದುತ್ತಿದ್ದಾಗಲೇ ಪದ್ಯ ಬರೆಯ ತೊಡಗಿದರು. ಉತ್ತೇಜನ ನೀಡಿದ ಅಧ್ಯಾಪಕರು ಡಿ.ಕೆ. ಸೀತಾರಾಮಶಾಸ್ತ್ರಿಗಳು. ಇವರ ಸಾಹಿತ್ಯಾಸಕ್ತಿ ಕಂಡು ಬಿಎಸ್ಸಿ ಓದಲು ಹೋದವನನ್ನೂ ಬಿ.ಎ. ಓದಲು ಪ್ರೇರೇಪಿಸಿದರು. ನಂತರ ಸೇರಿದ್ದು ಬೆಂಗಳೂರಿನ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಬರೆದ ಹಲವಾರು ಕವನಗಳು ಲಹರಿ, ಗೋಕುಲ, ಸಂಕ್ರಮಣ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ೧೯೬೮ ರಿಂದೀಚೆಗೆ ಗಂಭೀರವಾದ ಸಾಹಿತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡ ಲಕ್ಷ್ಮಣರಾವ್‌ರವರು

ಕೆಂಪು ಸಾಗರವೀಜಿ, ಕಾಡುಮೇಡು ದಾಟಿ ದಣಿದು ಕುಸಿಯದೆ ಮುಂದೆ ಸಾಗಿ ಬರಬೇಕು, ಸುಲಭವಲ್ಲ!

ಎಂದು ಬರೆದ ಕವಿ ಕಾವ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ನವ್ಯ ಸಾಹಿತ್ಯದ ಚಳವಳಿ ಮೊದಲ್ಗೊಂಡು  ಚುಟುಕು, ವಿಡಂಬನೆ, ಸ್ವಗತ, ಭಾವಗೀತೆ ಮತ್ತು ಇತರ ಎಲ್ಲ ಪ್ರಕಾರಗಳಲ್ಲಿಯೂ ಕವಿತೆ ಬರೆಯುತ್ತಾ ಈಜಿ ಬಂದಿದ್ದಾರೆ. ಇವರ ಮೊಟ್ಟಮೊದಲ ಕವನ ಸಂಕಲನ ‘ಗೋಪಿ ಮತ್ತು ಗಾಂಡಲೀನ’ ೧೯೭೧ ರಲ್ಲಿ ಪ್ರಕಟಗೊಂಡಿತು. ಇಲ್ಲಿನ ಕವಿತೆಗಳಲ್ಲಿ ಪೋಲಿತನ ಮತ್ತು ತಮಾಷೆಯನ್ನು ಬಳಸಿದ್ದರೂ ಅನೇಕ ಕವನಗಳಲ್ಲಿ ತಮಾಷೆಯ ಜೊತೆಗೆ ತೀವ್ರವಾದ ವಿಷಾದಗುಣಗಳನ್ನೂ ಅಭಿವ್ಯಕ್ತಿ ಪಡಿಸಿದ್ದಾರೆ. ಕೆಲವು ಕವಿತೆಗಳಲ್ಲಿ ವ್ಯಕ್ತವಾಗಿರುವ ತುಂಟತನದಲ್ಲೂ ಗಟ್ಟಿತನ, ಗಹನತೆ, ಬದುಕು ಮತ್ತು ವಿಚಾರವಂತಿಕೆಯಲ್ಲಿನ ಕಲೆಗಾರಿಕೆಗಳನ್ನು ಕಾಣಬಹುದು. ನಂತರ ಬಂದ ಕವನ ಸಂಕಲನಗಳು ಟುವಟಾರ, ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಎಡೆ ಮತ್ತು ಇವಳು ನದಿಯಲ್ಲ. ಹಲವಾರು ಉತ್ತಮ ಕವಿತೆಗಳನ್ನೂ ಹೊಂದಿರುವ ‘ಇವಳು ನದಿಯಲ್ಲ’ ಕವನ ಸಂಕಲನದಲ್ಲಿ ರುಚಿ ಎಂಬ ಕವನದಲ್ಲಿ ನಮ್ಮ ದೇಹವನ್ನೂ ಸುಸ್ಥಿತಿಯಲ್ಲಿಡಲು ಪ್ರತಿಯೊಂದು ಹಣ್ಣನ್ನೂ ತಿನ್ನುತ್ತೇವೆ. ಜೀರ್ಣಕ್ಕೆ ಬಾಳೆ, ಪ್ರೋಟೀನಿಗೆ ಮಾವು, ಅಯೋಡಿನಿಗೆ ನೇರಳೆ, ಖನಿಜಾಂಶಕ್ಕೆ ಪರಂಗಿ ಎಂದು ವಿವಿಧ ಜೀವಸತ್ವಗಳಿಗೆ ವಿವಿಧ ಹಣ್ಣು ತಿನ್ನುತ್ತಾ

ಕರಬೂಜದಲ್ಲಿ ಕಾರ್ಬೊಹೈಡ್ರೇಟ್‌ ಸೇಬು ತಿಂದರೆ ನಿರೋಗ ಅದುಸರಿ, ಕೇವಲ ರುಚಿಗೆಂದೇ ಹಣ್ಣು ಸವಿಯುವುದು ಯಾವಾಗ?

ಎಂದು ಪ್ರಶ್ನಿಸುತ್ತಾರೆ.

ಜೀವನದಲ್ಲೂ ಅಷ್ಟೆ. ಹಲವಾರು ಆದ್ಯತೆಗಳನ್ನು ಪೂರೈಸುವ ಭರದಲ್ಲಿ ಮನಸ್ಸಂತೋಷವನ್ನುಂಟು ಮಾಡುವ ಅಂಶವನ್ನೇ ಮರೆತುಬಿಡುತ್ತೇವೆ. ಕೊಲಂಬಸ್‌, ಮಧ್ಯಸ್ಥ, ಆಯ್ದ ಅರವತ್ತು ಕವನಗಳು ಸೇರಿ ೯ ಕವನ ಸಂಕಲನಗಳನ್ನು ಪ್ರಕಟಿಸಿದ್ದು ಸಮಗ್ರ ಕಾವ್ಯವೂ ಪ್ರಕಟವಾಗಿದೆ. ಜಪಾನಿನ ಹಾಯಕುಗಳಂತೆ, ಸಂಸ್ಕೃತದ ಮುಕ್ತಕಗಳಂತೆ, ರಾಜರತ್ನಂರವರ ನೂರು ಪುಟಾಣಿಗಳಂತೆ, ಎಸ್‌.ವಿ. ಪರಮೇಶ್ವರ ಭಟ್ಟರ ಮುಕ್ತಕಗಳಂತೆ ಕಿರಿದರಲ್ಲಿ ಪರಿದನ್ನು ಹೇಳುವ ಭಾರತ ಬಿಂದು ರಶ್ಮಿ ಮತ್ತು ಹನಿಗವಿತೆಗಳು ಮರು ಮುದ್ರಣಗೊಂಡಿರುವುದು ಜನಪ್ರಿಯತೆಗೆ ಸಾಕ್ಷಿ.

ಏನಪ್ಪ ಮಹಾಭಾರತ ನೀತಿ? ರಾಜ ಕುರುಡಾದರೆ ಎಲ್ಲ ಫಜೀತಿ

ಇಲ್ಲಿ ದೃಷ್ಟಿಹೀನತೆಗಿಂತ ರಾಜನಾದವನು ಅನ್ಯಾಯ, ಅಧರ್ಮ, ಅತಿಕ್ರಮಣಗಳ ಬಗ್ಗೆ ಬೆನ್ನತಿರುವಿ ಕುರುಡಾಗಿ ಕುಳಿತರೆ ವಿನಾಶವಾದೀತೆಯನ್ನೂ ಧ್ನನಿಸುತ್ತದೆ. ಇದಲ್ಲದೆ ಇವರ ವಿನೋದ ಕವಿತೆಗಳ ಸಂಕಲನ ನ-ನಗು ನಿ-ನಗು ೧೯೯೪ ರಲ್ಲಿ ಪ್ರಕಟಗೊಂಡಿದೆ. ಯುವಕ, ಯುವತಿಯರ ಪ್ರೇಮ, ಪ್ರಣಯ, ವಿರಹ ಮುಂತಾದ ಹೃದಯಕ್ಕೆ ಸಂಬಂಧಿಸಿದ ಕ್ರಿಯೆಗಳನ್ನೂ ಪದ್ಯರೂಪದಲ್ಲಿ ಯಥಾವತ್‌ ಮೂಡಿಸಿ ಅದಕ್ಕೊಂದು ರಾಗತೊಡಿಸಿ ಲಹರಿ ಸಂಸ್ಥೆಯಿಂದ ಹೊರತಂದಿರುವ ಕ್ಯಾಸೆಟ್‌ನಲ್ಲಿ ಸಿ.ಅಶ್ವತ್‌, ಮೈಸೂರು ಅನಂತಸ್ವಾಮಿ, ರತ್ನಮಾಲಾ ಪ್ರಕಾಶ್‌ ಮುಂತಾದವರುಗಳ ಮಧುರ ಸ್ವರದಿಂದ ಕೂಡಿದ ಭಾವಗೀತೆಗಳ ಕ್ಯಾಸೆಟ್‌ ಸುಬ್ಬಾಭಟ್ಟರ ಮಗಳೇ ೨೦೦೫ ರಲ್ಲಿ ಬಿಡುಗಡೆಗೊಂಡಿದ್ದು ನಂತರ ಆಲಿಂಗನ, ನನ್ನವಳು, ಹೇಳಿಹೋಗುಕಾರಣ, ಬಾ ಮಳೆಯೇ ಬಾ ಮುಂತಾದ ಸಿಡಿಗಳು ಬಿಡುಗಡೆಗೊಂಡಿವೆ. ಕವಿತೆಗಳನ್ನು ರಚಿಸಿದಂತೆ ಹಲವಾರು ಕಥೆಗಳನ್ನೂ ಬರೆದಿದ್ದು ಮನುಷ್ಯನ ಸಂಬಂಧಗಳ ಗಂಭೀರ ಶೋಧನೆಯಲ್ಲಿ ತೊಡಗುವ ಕಥೆಗಳ ಕಥಾಸಂಕಲನಗಳಾದ ಜೆಸ್ಟರ್, ಕಬ್ಬೆಕ್ಕು ಮತ್ತು ಸಮಗ್ರಕಥಗಳು’ನಿರಂತರ’ ಪ್ರಕಟವಾಗಿದೆ. ಇದೀಗ ಮಯೂರ ಮಾಸಪತ್ರಿಕೆಗಾಗಿ ಬರೆಯುತ್ತಿರುವ  ಆಪ್ತಬರಹಗಳ ಅಂಕಣ ‘ಒಡನಾಟ’. ಆಗಿಂದಾಗ್ಗೆ ಪತ್ರಿಕೆಗಳಿಗೆ ವ್ಯಕ್ತಿ, ವಿಚಾರ, ವಿನೋದ, ವಿಮರ್ಶೆಗಳ ಬಗ್ಗೆ ಬರೆದ ಲೇಖನಗಳ ಸಂಗ್ರಹ ‘ಇತ್ಯಾದಿ’ ಹಾಗೂ ‘ಆಗಿಂದಾಗ್ಯೆ’ ಅಲ್ಲದೆ ನಾಟಕ ‘ಭಲೇಮಲ್ಲೇಶಿ’, ‘ನನಗ್ಯಾಕೋಡೌಟು’ ಎಂಬ ಎರಡು ನಾಟಕಗಳನ್ನೂ ಬರೆದಿದ್ದಾರೆ. ಇದಲ್ಲದೆ ಎದೆ ತುಂಬಿ ಹಾಡುವೆನು, ಮಂಥನ , ನಮ್ಮಮ್ಮ ಶಾರದೆ, ಬೃಂದಾವನ, ಅಪ್ಪ, ಅನಾವರಣ ಮುಂತಾದ ದೂರದರ್ಶನ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗಳನ್ನೂ ಬರೆದಿದ್ದು ಬಹುಜನ ಪ್ರಿಯಗೀತೆಗಳಾಗಿವೆ. ವಯಸ್ಸು ಅರವತ್ತೈದಾಗಿದ್ದರೂ ಯುವ ಕವಿ ಎಂದೆ ಕರೆಸಿಕೊಳ್ಳುವ ಲಕ್ಷ್ಮಣರಾವ್‌ರವರಿಗೆ ಸಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಡಾ.ಪು.ತಿ.ನ. ಕಾವ್ಯ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದವುಗಳು. ಅಭಿಮಾನಿಗಳು, ಗೆಳೆಯರು ಅರ್ಪಿಸಿದ ಅಭಿನಂದನ ಗ್ರಂಥ ‘ಚಿಂತಾಮಣಿ’ ೨೦೦೬ರಲ್ಲಿ.

Details

Date:
September 9, 2023
Event Category: