Loading Events

« All Events

  • This event has passed.

ರೆ. ಉತ್ತಂಗಿ ಚನ್ನಪ್ಪ

October 28, 2023

೨೮.೧೦.೧೮೮೧ ೨೮..೧೯೬೨ ಸರ್ವಜ್ಞನ ವಚನಗಳನ್ನು ಶಾಸ್ತ್ರೀಯವಾಗಿ ಅಭ್ಯಸಿಸಿ, ಸರ್ವಜ್ಞನನ್ನು ಮನೆಮನೆಗೂ ತಲುಪಿಸಿದ ಮತ್ತು ಕ್ರೈಸ್ತ ಧರ್ಮದ ಬಗ್ಗೆ ಅಪಾರ ನಂಬಿಕೆ ಇದ್ದು ಧರ್ಮೋಪದೇಶಕರಾಗಿದ್ದ ಚನ್ನಪ್ಪನವರು ಹುಟ್ಟಿದ್ದು ಧಾರವಾಡದಲ್ಲಿ ೧೮೮೧ ರ ಅಕ್ಟೋಬರ್ ೨೮ ರಂದು. ಇವರ ವಂಶಸ್ಥರು ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಉತ್ತಂಗಿಯವರಾದುದರಿಂದ ಉತ್ತಂಗಿ ಮನೆತನದ ಹೆಸರಾಯಿತು. ತಾಯಿ ಸುಭದ್ರವ್ವ, ತಂದೆ ದಾನಿಯೇಲಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಧಾರವಾಡ ಗದಗ, ಬೆಟಗೇರಿಗಳಲ್ಲಿ ಪ್ರಾರಂಭಿಕ ಶಿಕ್ಷಣ. ಪ್ರೌಢಶಾಲೆಗೆ ಸೇರಿದ್ದು ಧಾರವಾಡದ ಮಿಷನ್‌ ಹೈಸ್ಕೂಲು.  ಕ್ರಿಸ್ತನ ಬಗ್ಗೆ ತಾಯಿಯಿಂದ ಬಂದ ಭಕ್ತಿಯ ಕಾರಣದಿಂದ ಮತ್ತು ತಾಯಿಯ ಒತ್ತಾಯದಿಂದ ಮಂಗಳೂರಿಗೆ ಹೋಗಿ ಕ್ರೈಸ್ತಧರ್ಮದ ಶಾಲೆಯಲ್ಲಿ ಧರ್ಮೋಪದೇಶದ ಬಗ್ಗೆ ವ್ಯಾಸಂಗಮಾಡಿ ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ ಮುಂತಾದೆಡೆಗಳಲ್ಲಿ ಧರ್ಮೋಪದೇಶಕರಾಗಿ ಕಾರ್ಯನಿರ್ವಹಿಸಿ ೧೯೪೧ ರಲ್ಲಿ ನಿವೃತ್ತರಾದರು. ಇವರು ರಚಿಸಿದ ಹಲವಾರು ಕೃತಿಗಳಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿ, ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳನ್ನು ರಚಿಸಿದ್ದಲ್ಲದೆ ಕ್ರೈಸ್ತಧರ್ಮಕ್ಕೆ ಸಂಬಂಧಿಸಿದ ಹಲವಾರು ಕೃತಿಗಳೂ ಸೇರಿ ಒಟ್ಟು ೧೮ ಕೃತಿಗಳನ್ನು ರಚಿಸಿದ್ದಾರೆ. ಭಾರತದಲ್ಲಿರುವ ಜಾತಿ ಭೇದದ ಬಗ್ಗೆ ಶಾಸ್ತ್ರೀಯವಾಗಿ ವಿವೇಚಿಸಿ ರಚಿಸಿದ ಗ್ರಂಥ ‘ಹಿಂದೂ ಸಮಾಜದ ಹಿತ ಚಿಂತಕ’ ಮತ್ತು ಯೇಸು ಕ್ರಿಸ್ತನ ಜೀವನವನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ ಶಾಸ್ತ್ರೀಯ ದೃಷ್ಟಿಕೋನದಿಂದ ವಿವೇಚಿಸಿ ಬರೆದ ಗ್ರಂಥ ‘ಬನಾರಸಕ್ಕೆ ಬೆತ್ಲೆಹೇಮಿನ ವಿನಂತಿ’-ಇವೆರಡೂ ೧೯೨೧ ರಲ್ಲಿ ಪ್ರಕಟಗೊಂಡಿವೆ. ಕನ್ನಡ ಸಾಹಿತ್ಯಕ್ಕಾಗಿ ಇವರು ನೀಡಿದ ಬಹುದೊಡ್ಡ ಕೊಡುಗೆ ಎಂದರೆ ಸರ್ವಜ್ಞನ ವಚನಗಳ (೧೯೨೪) ಸಂಪಾದನೆ.  ಒಂದು ದಶಕಗಳ ಕಾಲ ಸಂಪಾದನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ೨೦೦೦ ವಚನಗಳನ್ನೂ ಪರಿಷ್ಕರಿಸಿ ಪಾರಮಾರ್ಥಿಕ, ನೈತಿಕ ಮತ್ತು ಲೌಕಿಕ ಎಂಬ ಮೂರು ಭಾಗಗಳಲ್ಲಿ ವಿಭಾಗಿಸಿದ್ದಾರೆ. ಇದಕ್ಕೆ ಬಹುದೀರ್ಘವಾದ ೧೦೮ ಪುಟಗಳ ಪೀಠಿಕೆಯನ್ನು ಬರೆದು ಸರ್ವಜ್ಞನ ಪೂರ್ವೋತ್ತರಗಳನ್ನೆಲ್ಲಾ ಕಲೆಹಾಕಿ ಓದುಗರಿಗೆ ಅವನ ವ್ಯಕ್ತಿತ್ವದ ಬಗ್ಗೆ ಸರಿಯಾದ ಬಗೆಯಲ್ಲಿ ತಿಳಿಯುವಂತೆ ಮಾಡಿದ್ದಾರೆ. ಈ ಕೃತಿಯ ಜನಪ್ರಿಯತೆಯನ್ನು ಕಂಡ ಸರಕಾರವು ಉತ್ತಂಗಿ ಚನ್ನಪ್ಪನವರಿಂದ ಕೃತಿ ಸ್ವಾಮ್ಯವನ್ನು ಪಡೆದು, ವಚನಗಳನ್ನು ಅಕಾರಾದಿಯಾಗಿ ವಿಂಗಡಿಸಿ ಸಾಹಿತ್ಯ ಆವೃತ್ತಿ (೧೯೨೪), ಜೇಬಿನಾಕಾರದ ಆವೃತ್ತಿ (೧೯೩೫), ಜನಪದ ಆವೃತ್ತಿ (೧೯೩೫), ಅಗ್ಗದ ಆವೃತ್ತಿ (೧೯೪೧)-ಹೀಗೆ ನಾಲ್ಕು ರೀತಿಯ ಪುಸ್ತಕಗಳನ್ನು ಹೊರತಂದು ಅದಕ್ಕೆ ಟಿಪ್ಪಣಿ, ವಿಶೇಷ ಟಿಪ್ಪಣಿ ಬರೆಸಿ ಪ್ರಕಟಿಸಿತು. ವ್ಯಾವಹಾರಿಕವಾಗಿ ಕ್ರೈಸ್ತಧರ್ಮವನ್ನು ಪಾಲಿಸಿಕೊಂಡು ಬಂದಿದ್ದರೂ ಪಾರಂಪರ್ಯವಾಗಿ ಬಂದಿದ್ದ ವೀರಶೈವ ಧರ್ಮದ ಮತ್ತು ಸಿದ್ಧಾಂತಗಳ ಬಗ್ಗೆ ಪರಿಶ್ರಮ ಪಡೆದಿದ್ದು, ವೀರಶೈವ ಶರಣರುಗಳಾದ ಮೋಳಿಗಿ ಮಾರಯ್ಯ , ರಾಣಿ ಮಹಾದೇವಿಯವರ ವಚನಗಳು (೧೯೫೦), ಆದಯ್ಯನ ವಚನಗಳು (೧೯೫೭), ಸಿದ್ಧರಾಮ ಸಾಹಿತ್ಯ ಸಂಗ್ರಹ (೧೯೫೫) ಮುಂತಾದವುಗಳಲ್ಲದೆ ಇಂಗ್ಲಿಷ್‌ನಲ್ಲಿ ರಚಿಸಿದ ಕೃತಿಗಳೆಂದರೆ ಹಾರ್ಟ್ ಆಫ್‌ ಲಿಂಗಾಯತ್‌ ರಿಲಿಜನ್‌, ಎ ಫೇತ್‌ ಫಿಲಾಸಫಿ ಅಂಡ್‌ ರಿಲಿಜನ್‌, ಕಂಪ್ಲೀಟ್‌ ಕನಕಾರ್ ಡೆನ್ಸ್‌ ಟು ಭಗವದ್ಗೀತ, ಯಲ್ಲಮ್ಮ: ಎ ಗಾಡೆಸ್ ಆಫ್‌ ಸೌತ್‌ ಇಂಡಿಯಾ, ಕ್ರಿಯೇಷನ್‌, ಎ ವಂಡರ್ ಪುಲ್‌ ಚೈಲ್ಡ್‌ ಆಫ್‌ ಗಾಡ್‌ಗಳ ಜೊತೆಗೆ ವಿಡಂಬನಾಕೃತಿ ಫ್ರಮ್‌ಕ್ರಾಸ್‌ ಟು ಕ್ರೌನ್‌ ಥ್ರೂ ಕ್ರಾಸ್‌ವರ್ಡ್ಸ್ ಮುಂತಾದವುಗಳು. ವೀರಶೈವ ಧರ್ಮ ಮತ್ತು ಕ್ರೈಸ್ತಧರ್ಮವನ್ನು ಪ್ರೀತಿಸುತ್ತಿದ್ದಂತೆ ಮಹಾನ್‌ ರಾಷ್ಟ್ರ ಪ್ರೇಮಿಯಾಗಿದ್ದ ಉತ್ತಂಗಿಯವರು ರಚಿಸಿದ ವ್ಯಕ್ತಿ ಚಿತ್ರಗಳ ಕೃತಿ ಎಂದರೆ ಮಹಾರಾಷ್ಟ್ರದ ಪ್ರಸಿದ್ಧ ಕವಿ ನಾರಾಯಣ ವಾಮನ ತಿಲಕರನ್ನೂ ಕುರಿತು ಜೆ.ಸಿ. ವಿನ್ಸೊರವರು ಇಂಗ್ಲಿಷ್‌ನಲ್ಲಿ ಬರೆದಿದ್ದ ಗ್ರಂಥವನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ (೧೯೨೭). ಮತ್ತೊಂದು ಅನುವಾದಿತ ಕೃತಿ ದೃಷ್ಟಾಂತ ದರ್ಪಣ (೧೯೩೫). ದೇಶಪ್ರೇಮಿ, ನಾಡಪ್ರೇಮಿ, ಸಾಹಿತ್ಯ ಪ್ರೇಮಿಯಾಗಿದ್ದ ಉತ್ತಂಗಿಯವರಿಗೆ ಸಿದ್ಧರಾಮ ಸಾಹಿತ್ಯ ಸಂಗ್ರಹ ಕೃತಿ ಸಂಪಾದನೆಗಾಗಿ ಮೈಸೂರು ಸರಕಾರದ ದೇವರಾಜ ಬಹದ್ದೂರ್ ಬಹುಮಾನ ಲಭಿಸಿದ್ದಲ್ಲದೆ ೧೯೪೯ ರಲ್ಲಿ ಗುಲಬರ್ಗಾದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿತು. ಹೀಗೆ ಕ್ರೈಸ್ತಧರ್ಮ , ವೀರಶೈವ ಧರ್ಮ ಮತ್ತು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಉತ್ತಂಗಿಯವರು ನಿಧನರಾದದ್ದು ೧೯೬೨ ರ ಆಗಸ್ಟ್‌ ೨೮ ರಂದು. ಇವರು ತೀರಿಕೊಂಡ ನಂತರ ಪ್ರಕಟವಾದ ಎರಡು ಮೌಲಿಕ ಕೃತಿಗಳೆಂದರೆ ಮೃತ್ಯುಂಜಯ (೧೯೬೩) ಹಾಗೂ ಲಿಂಗಾಯತ ಧರ್ಮ ಮತ್ತು ಕ್ರೈಸ್ತಧರ್ಮ (೧೯೬೯) ಇವೆರಡು ಗ್ರಂಥಗಳಾದರೆ ೧೯೭೧ ರಲ್ಲಿ ಉತ್ತಂಗಿ ಚನ್ನಪ್ಪನವರ ಸಮಗ್ರಜೀವನ ಚರಿತ್ರೆ ಮತ್ತು ಶತಮಾನೋತ್ಸವ ಸಂದರ್ಭಕ್ಕಾಗಿ ೧೯೮೨ ರಲ್ಲಿ ‘ಉತ್ತಂಗಿ ಚನ್ನಪ್ಪನವರು’ ಎಂಬ ಗ್ರಂಥವನ್ನು ಸಾಹಿತ್ಯ ಪರಿಷತ್ತು ಪ್ರಕಟಿಸಿ ಗೌರವ ತೋರಿಸಿದೆ.

Details

Date:
October 28, 2023
Event Category: