Loading Events

« All Events

ವಿಷ್ಣುನಾಯ್ಕ

July 1, 2024

೦೧.೦೭.೧೯೪೪ ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ನಾಲ್ಕು ದಶಕಗಳಿಂದಲೂ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ವಿಷ್ಣುನಾಯ್ಕರು ಹುಟ್ಟಿದ್ದು ೧೯೪೪ರ ಜುಲೈ ೧ ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಅಂಬಾರಕೊಡ್ಲ ಎಂಬಲ್ಲಿ. ತಂದೆ ನಾಗಪ್ಪ, ತಾಯಿ ಬುದವಂತಿಯವರಿಗೆ ಹುಟ್ಟಿದ ಆರು ಮಕ್ಕಳಲ್ಲಿ ಮೂರನೆಯವರು. ಪ್ರಾರಂಭಿಕ ಶಿಕ್ಷಣ ಅಂಬಾರಕೊಡ್ಲ, ಪ್ರೌಢಶಾಲಾ ಶಿಕ್ಷಣ ಅಂಕೋಲದಲ್ಲಿ. ಕನ್ನಡ ಪ್ರಧಾನ ವಿಷಯವಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ, ಜಾನಪದ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮತ್ತು ಕನ್ನಡ ಮತ್ತು ಇತಿಹಾಸ ವಿಷಯಗಳಲ್ಲಿ ಬಿ.ಎಡ್. ಪದವಿಗಳು. ಉದ್ಯೋಗಕ್ಕಾಗಿ ಸೇರಿದ್ದು ದಿನಕರ ದೇಸಾಯಿಯವರು ಪ್ರಾರಂಭಿಸಿದ್ದ ಕೆನರಾ ವೆಲ್‌ಫೆರ್ ಟ್ರಸ್ಟ್‌ನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ. ನಂತರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ೪೩ ವರ್ಷಗಳ ನಿರಂತರ ಸೇವೆ. ವಿದ್ಯಾರ್ಥಿ ದೆಸೆಯಿಂದಲೇ ಸಂಘ ಸಂಸ್ಥೆಗಳಲ್ಲಿ ದುಡಿಯಲು ಪ್ರಾರಂಭಿಸಿದಂತೆ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದ್ದು ಕವನಗಳ ಬರವಣಿಗೆಯ ಮೂಲಕ. ಹದಿನಾರರ ಹರೆಯದಲ್ಲಿಯೇ ಪತ್ರಿಕೋದ್ಯಮವನ್ನು ಪ್ರವೇಶಿಸಿದ ನಾಯ್ಕರು ದಿನಕರ ದೇಸಾಯಿಯವರ ಸಾರಥ್ಯದ ವಾರಪತ್ರಿಕೆಯಲ್ಲಿ ಸುದ್ದಿ ಬರೆಯವುದರಿಂದ ಹಿಡಿದು ಪ್ರೂಫ್ ತಿದ್ದುವ, ಲೇಖನ ಬರೆಯುವ ಮುಂತಾದ ಪತ್ರಿಕೆಯ ಹಲವಾರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇದಲ್ಲದೆ ಹುಬ್ಬಳ್ಳಿಯಿಂದ ಕೆ.ಎಚ್. ಪಾಟೀಲರ ಸಂಪಾದಕತ್ವದಲ್ಲಿ ಹೊರಡುತ್ತಿದ್ದ ‘ವಿಶಾಲ ಕರ್ನಾಟಕ’ ದೈನಿಕ ಪತ್ರಿಕೆಯ ಪಾಕ್ಷಿಕ ಅಂಕಣಕಾರರಾಗಿ, ಮಂಗಳೂರಿನ ವಡ್ಡರ್ಸೆ ರಘುರಾಮ ಶೆಟ್ಟರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ಮುಂಗಾರು’ ದೈನಿಕ ಪತ್ರಿಕೆಯ ವರದಿಗಾರರಾಗಿ, ‘ಕರಾವಳಿ ಮುಂಜಾವು’, ‘ಕರಾವಳಿ ಸುಪ್ರಭಾತ’, ‘ಮುನ್ನಡೆ’, ‘ತೇಜಸ್ವಿ ಪ್ರಪಂಚ’, ಮುಂತಾದ ಪತ್ರಿಕೆಗಳ ಅಂಕಣಕಾರರಾಗಿದ್ದಲ್ಲದೆ ಪ್ರಜಾವಾಣಿ, ಹೊಸತು, ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ, ಪ್ರಪಂಚ, ಸುಧಾ, ತರಂಗ ಪತ್ರಿಕೆಗಳಿಗೆ ಸಾಂದರ್ಭಿಕವಾಗಿ ಬರೆದ ನೂರಾರು ಬಿಡಿ ಬರಹಗಳು. ೨೦೦೨ದಲ್ಲಿ ‘ಸಕಾಲಿಕ’ ಎಂಬ ಪತ್ರಿಕೆಯ ಸಂಪಾದಕರಾಗಿ ವಾರಪತ್ರಿಕೆಯೊಂದನ್ನು ಪ್ರಾರಂಭಿಸಿ ೩ ವರ್ಷಗಳು ನಿರಂತರವಾಗಿ ಪ್ರಕಟವಾದ ಪತ್ರಿಕೆಯಾಗಿತ್ತು. ಇದರಲ್ಲಿ ಪ್ರಕಟವಾಗುತ್ತಿದ್ದ ಮೌಲಿಕ ಲೇಖನಗಳು ಏಳು ಸಂಪುಟಗಳಲ್ಲಿ ಸಂಗ್ರಹಗೊಂಡಿವೆ. ಇದರಲ್ಲಿ ಧಾರಾವಾಹಿಯಾಗಿ ಮೂಡಿಬಂದ ಅಂಕಣ ‘ದುಡಿಯುವ ಕೈಗಳ ಹೋರಾಟದ ಕತೆ’ ಎಂಬ ಸಂಶೋಧನಾತ್ಮಕ ಗ್ರಂಥವಾಗಿ ರಾಜ್ಯ ಸಾಹಿತ್ಯ ಅಕಾಡಮಿಯ ಪುಸ್ತಕ ಪ್ರಶಸ್ತಿಯನ್ನು ಪಡೆದಿದೆ. ದಿನಕರ ದೇಸಾಯಿಯವರಿಂದ ಸ್ಫೂರ್ತಿ ಪಡೆದು ಸಮಾಜವಾದದ ತತ್ತ್ವದಲ್ಲಿ ನಂಬಿಕೆ ಬೆಳೆದು ಅಂಬಾರಕೊಡ್ಲದಲ್ಲಿ ಪ್ರಾರಂಭಿಸಿದ್ದು ‘ಸಮಾಜವಾದಿ ಯುವಕರ ಸಂಘ’, ಸಮಾಜವಾದದ ತತ್ತ್ವಗಳನ್ನು ಅವಿದ್ಯಾವಂತರಲ್ಲೂ ಅರ್ಥವಾಗುವಂತೆ ತಿಳಿಸಿ, ಸಂಘಟಿಸಿ, ಮೂಲಭೂತ ಸಮಸ್ಯೆಗಳಾದ ಅನ್ನ, ನೀರು, ಒಳ್ಳೆಯ ರಸ್ತೆ, ಶಿಕ್ಷಣಕ್ಕೆ ಆದ್ಯತೆ ಗಳಿಸಲು ಹೋರಾಟದಲ್ಲಿ ವಹಿಸಿದ ಮಹತ್ತರ ಪಾತ್ರ. ದಿನಕರ ದೇಸಾಯವರ ನೇತೃತ್ವದ ‘ಉಳುವವನಿಗೇ ನೆಲದೊಡೆಯತನ’ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಜನಾಂದೋಲನ ಪ್ರಾರಂಭಿಸಿದಾಗ ವಿದ್ಯಾರ್ಥಿ ಕಾರ್ಯಕರ್ತರಾಗಿ ಹದಿಮೂರರ ಹರಯದಲ್ಲಿಯೇ ಪಾಲ್ಗೊಂಡಿದ್ದರು. ನಂತರ ಉತ್ತರ ಕನ್ನಡ ಜಿಲ್ಲೆಯ ಮದ್ಯಪಾನ ವಿರೋಧಿ ಆಂದೋಲನ, ಗೋಕಾಕ ಚಳವಳಿ, ಜಯಪ್ರಕಾಶ ನಾರಾಯಣರ ಸಂಪೂರ್ಣ ಕ್ರಾಂತಿ ಮೊದಲಾದ ಹಲವಾರು ಆಂದೋಲನಗಳಲ್ಲಿಯೂ ಭಾಗಿ. ಎಳೆವೆಯಲ್ಲಿಯೇ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದ ವಿಷ್ಣುನಾಯ್ಕರು ರಚಿಸಿದ ಕವನ, ಕಥೆ, ಕಾದಂಬರಿಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಸಂಗ್ರಹವಾಗಿಯೂ ಪ್ರಕಟವಾಗಿವೆ. ನನ್ನ ಅಂಬಾರಕೊಡಲು, ಹೊಸಭತ್ತ, ವಾಸ್ತವ, ಕಳಕೊಂಡ ಕವಿತೆ, ನೋವು, ಪ್ರೀತಿಯ ಪ್ರಶ್ನೆ, ಆಲ ಮತ್ತು ಬಾಲ ಮೊದಲಾದ ೧೪ ಕವನ ಸಂಕಲನಗಳು; ಸಾರಾಯ ಸೂರಪ್ಪ, ಬೋಳುಗುಡ್ಡ, ಬಿನ್ನಹಕೆ ಬಾಯಿಲ್ಲ, ಒಂದು ಹನಿರಕ್ತ, ಅಯ್ನೋರ ಪೂಜೆ, ಸಾವಿನ ಹಾದಿ ಮೊದಲಾದ ೧೦ ನಾಟಕಗಳು; ಮರ್ಯಾದೆ, ಪ್ರಮಾಣ, ವರ್ತಮಾನದ ಕಣ್ಣು, ಅರೆ ಖಾಸಗಿ (ಭಾಗ ೧-೨), ಕಾಲೋಚಿತ ದುಡಿಯುವ ಕೈಗಳ ಹೋರಾಟದ ಕತೆ ಮೊದಲಾದ ೧೨ ಅಂಕಣಬರೆಹ ಕೃತಿಗಳು; ಕಣ್ಣೀರ ಕತೆಗಳು, ದೇವರ ಮರ ಮತ್ತು ಜಂಗುಂ ಜಕ್ಕುಂ ಮೊದಲಾದ ಎರಡು ಕಥಾಸಂಕಲನ ಹಾಗೂ ಕಾದಂಬರಿ; ಕವಿಕರ್ಮಯೋಗಿ ದಿನಕರ ದೇಸಾಯಿ, ಸರ್ವಪಲ್ಲಿ ರಾಧಾಕೃಷ್ಣನ್, ಹಳ್ಳಿ ಹಾಡಿನ ಕಣಜ ನಾಡೋಜ ಸುಕ್ರಿ ಮೊದಲಾದ ಆರು ವ್ಯಕ್ತಿಚಿತ್ರ ಕೃತಿಗಳು; ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯದ ೧೦ ಸಂಪುಟಗಳು ಮತ್ತು ಶತಮಾನದ ಕನ್ನಡ ಸಾಹಿತ್ಯದ ಎರಡು ಸಂಪುಟಗಳೂ ಸೇರಿ ಒಟ್ಟು ೭೭ ಕೃತಿಗಳು ಪ್ರಕಟಿತ. ಸಾಹಿತ್ಯ, ಶಿಕ್ಷಣ, ಕಲೆ ಮತ್ತಿತರ ಜನಪರ ಕಾಳಜಿಗಾಗಿ ಪ್ರಾರಂಭಿಸಿದ್ದು ರಾಘವೇಂದ್ರ ಪ್ರಕಾಶನ. ಈ ಪ್ರಕಾಶನದ ಮೂಲಕ ಸಾಹಿತ್ಯದ ಎಲ್ಲ ಪ್ರಕಾರಗಳೂ ಸೇರಿ ಸುಮಾರು ೨೦೦ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಕೇಂದ್ರ ಸಾಹಿತ್ಯ ಅಕಾಡಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಲೋಕಶಿಕ್ಷಣ ಮಿಷನ್, ಕರ್ನಾಟಕ ಸಾಹಿತ್ಯ ಅಕಾಡಮಿ, ಗ್ರಂಥಾಲಯದ ಆಯ್ಕೆ ಸಮಿತಿ, ಪಠ್ಯಪುಸ್ತಕ ವಿತರಣ ಕಾರ್ಯಕಾರಿ ಸಮಿತಿ, ಮುಂತಾದವುಗಳ ಸದಸ್ಯರಾಗಿ, ಅಂಕೋಲ ಕರ್ನಾಟಕ ಸಂಘದ ಕಾರ್ಯದರ್ಶಿ, ಉಪಾಧ್ಯಕ್ಷ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರ ಬಹುಮುಖ ಸಾಹಿತ್ಯ ಕೊಡುಗೆಗಾಗಿ ಕರ್ನಾಟಕ ರಾಜೊತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಗ್ರಂಥ ಪ್ರಕಾಶಕ ಪ್ರಶಸ್ತಿ, ಎಸ್.ವಿ. ಪರಮೇಶ್ವರ ಭಟ್ಟರ ಕನ್ನಡ ಪರಿಚಾರಕ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಚೌಡಯ್ಯ ಸಾಹಿತ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಲ್ಲದೆ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ರಾಜ್ಯ ಹಲವಾರು ಸಾಹಿತ್ಯ ಗೋಷ್ಠಿಗಳ ಅಧ್ಯಕ್ಷತೆಯ ಗೌರವ ಪುರಸ್ಕಾರಗಳು ದೊರೆತಿವೆ. ಉತ್ತರಣ, ಪರಿಮಳದಂಗಳ, ಗ್ರಂಥ ಸಂಗಾತಿ, ಪುಸ್ತಕ ಲೋಕದ ಅನನ್ಯರು, ವಿಷ್ಣುನಾಯ್ಕ ಎಂಬ ವಿಸ್ಮಯ ಮುಂತಾದ ಇವರ ಪರಿಚಾಯಾತ್ಮಕ ಗ್ರಂಥಗಳೂ ಪ್ರಕಟಗೊಂಡಿವೆ.

Details

Date:
July 1, 2024
Event Category: