Loading Events

« All Events

ಶಿವರಾಮು

July 8

೮-೭-೧೯೩೬ ೧೪-೧೧-೧೯೯೯ ಶಿವರಾಮು ಎಂದೇ ಪ್ರಸಿದ್ಧರಾಗಿದ್ದ ಎಂ.ಎಸ್. ಶಿವರಾಮಯ್ಯನವರು ಹುಟ್ಟಿದ್ದು ಮಳವಳ್ಳಿಯಲ್ಲಿ. ತಂದೆ ಸೀತಾರಾಮಯ್ಯ, ತಾಯಿ ಸೀತಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಮಳವಳ್ಳಿ. ಕಾಲೇಜಿಗೆ ಸೇರಿದ್ದು ಎಂಜನಿಯರಿಂಗ್ ಓದಲು ಬೆಂಗಳೂರಿನ ಎಂಜನಿಯರಿಂಗ್ ಕಾಲೇಜಿಗೆ. ಆದರೆ ಅದೇಕೋ ಸ್ವಲ್ಪವೂ ಆಸಕ್ತಿ ಬೆಳೆಯದೆ ಓದನ್ನು ಅರ್ಧಕ್ಕೆ ನಿಲ್ಲಿಸಿ ಆರ್.ಎಸ್.ಎಸ್. ಕಾರ‍್ಯಕರ್ತರಾಗಿ ಊರೂರು ಸುತ್ತಿದರು. ಹೀಗೆ ಗಳಿಸಿದ ಅನುಭವದಿಂದ ವಿಕ್ರಮ ಪತ್ರಿಕೆಯಲ್ಲಿ, ರಾಷ್ಟ್ರೋತ್ಥಾನ ಸಾಹಿತ್ಯ ಮಾಲೆಯಲ್ಲಿ ನಂತರ ಉತ್ಥಾನ ಮಾಸಪತ್ರಿಕೆಯ ಗೌರವ ಸಂಪಾದಕರಾಗಿ ದುಡಿದರು. ಪತ್ರಿಕೋದ್ಯಮದ ಜೊತೆಗೆ ಆರಿಸಿಕೊಂಡದ್ದು ಸಾಹಿತ್ಯಸೇವೆ. ಆದರೆ ೯೬-೯೭ರ ಹೊತ್ತಿಗೆ ಆರೋಗ್ಯ ಕೆಟ್ಟು  ಸುಧಾರಣೆಗಾಗಿ ವೈದ್ಯರ ಸಲಹೆಯಂತೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ಬಳಿಯ ಈಂದಬೆಟ್ಟು ಗ್ರಾಮದಲ್ಲಿ ವಾಸ. ಅಲ್ಲೂ ಸಾಹಿತ್ಯ ಪ್ರಿಯರು ಇವರನ್ನು ಬಿಡದೆ ಬೆಳ್ತಂಗಡಿ ತಾಲ್ಲೂಕಿನ ಐದನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಗೌರವ. ಶಿವರಾಮುರವರು ಕವಿಯಾಗಿ, ಚರಿತ್ರಕಾರರಾಗಿ, ವಿಚಾರ ಸಾಹಿತ್ಯದ ನಿರ್ಮಾಪಕರಾಗಿ, ಹಾಸ್ಯ-ವಿಡಂಬನೆ-ಪ್ರಬಂಧಕಾರರಾಗಿ, ಹೀಗೆ ಎಲ್ಲಾ ಪ್ರಕಾರಗಳಲ್ಲೂ ಅಚ್ಚೊತ್ತಿದ ಭಾರತೀಯ ಸಂಸ್ಕೃತಿಯ ಸಾಕಾರ ರೂಪ. ಕನ್ನಡಕ್ಕೆ ಹಲವಾರು ಪುಸ್ತಕಗಳ ಅನುವಾದ. ಸಾವರ್ಕರರ ‘ಗೋಮಾಂತಕ’ ಗದ್ಯರೂಪವನ್ನು ‘ನೆತ್ತರು-ತಾವರೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ. ಪಾಕಿಸ್ತಾನ, ಚೀನಾಗಳ ಜೊತೆ ಭಾರತೀಯ ಸೈನಿಕರ ಹೋರಾಟದ ಕಥೆ ‘ರಣವೀಳ್ಯ.’ ಸ್ವಾಮಿ ವಿವೇಕಾನಂದರ ಶಿಷ್ಯೆಯ ಅರ್ಪಣ ಭಾವದ ಕಥೆ ‘ಅಕ್ಕ ನಿವೇದಿತಾ’. ಸ್ವಧರ್ಮ, ಸ್ವದೇಶ ಸೇವೆಗಾಗಿ ಕೆಚ್ಚಿನಿಂದ ಹೋರಾಡಿದ ಅಮೋಘವರ್ಷ, ನೃಪತುಂಗ, ಗಂಡುಗಲಿ ಕುಮಾರರಾಮ, ಕಿತ್ತೂರು ರಾಣಿ ಚೆನ್ನಮ್ಮ, ಮುಂಡರಗಿ ಭೀಮರಾಯರು ಮುಂತಾದ ೧೩ ಜನ ಕನ್ನಡ ವೀರ ಪುರುಷರ, ಮಹಿಳೆಯರ ಸಂಸ್ಮರಣೆಯ ಕೃತಿ ‘ಕನ್ನಡ ಕಡುಗಲಿಗಳು’ ಪ್ರಕಟಿತ. ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿದ ಭಾರತ-ಭಾರತಿ ಮಾಲಿಕೆಗಾಗಿ ವಲ್ಲಭಾಯ್ ಪಟೇಲ್, ನಂದನಾರ್, ಬಾಜಿಪ್ರಭು, ಸುಶೀಲಕುಮಾರ ಸೇನ್ ಮುಂತಾದವರ ಜೀವನಚರಿತ್ರೆ. ಇವರ ಅತ್ಯಂತ ಮಹತ್ವದ ಕೃತಿ ‘ಆತ್ಮಾಹುತಿ’, ವೀರ ಸಾವರಕರರ ಜೀವನ ಚರಿತ್ರೆಯ ಕಾದಂಬರಿ ರೂಪ. ಮತ್ತೊಂದು ಪ್ರಮುಖ ಕೃತಿ ‘ಒಂದು ಕಥೆ-ಒಂದು ವ್ಯಥೆ.’ ಉಜ್ವಲ ರಾಷ್ಟ್ರಗೀತೆಗೆ ಬಂದೊದಗಿದ ಅವನತಿಯನ್ನು ವಿವರಿಸುವ ಕೃತಿ. ಹಿಂದೂ ಬಂಡಾಯ, ಅರಳ ಸುರಳಿ-ಕವನ ಸಂಕಲನಗಳು. ಚಿನ್ನದ ಕತ್ತಿ-ವಿಡಂಬನ ಕೃತಿ. ಯಾರನ್ನು ಹೊಗಳದ ಕಾರಂತರಿಂದ ಪ್ರಶಂಶಿಸಲ್ಪಟ್ಟ ಕೃತಿ ಇದು. ಭಾರತೀಯ ಧರ‍್ಮ ಪರಂಪರೆ, ದೇಶಪ್ರೇಮ ಮುಂತಾದುವುಗಳ ಬಗ್ಗೆ ಚಿಂತಿಸುತ್ತಿದ್ದ ಉಜ್ವಲ ರಾಷ್ಟ್ರಪ್ರೇಮಿ ಕಣ್ಮರೆಯಾದುದು ೧೯೯೯ ನವಂಬರ್ ೧೪ರಂದು.   ಇದೇ ದಿನ ಹುಟ್ಟಿದ ಸಾಹಿತಿಗಳು : ಪ್ರೊ. ಎಸ್.ಆರ್. ಮಳಗಿ – ೧೯೧೦ ಪ್ರೊ. ಸಂಜೀವಶೆಟ್ಟಿ – ೧೯೪೫

Details

Date:
July 8
Event Category: