Loading Events

« All Events

  • This event has passed.

ಸಾಯಿಸುತೆ

August 20, 2023

೨೦-೮-೧೯೪೨ ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನರವರು ಹುಟ್ಟಿದ್ದು ಕೋಲಾರದಲ್ಲಿ. ತಂದೆ ವೆಂಕಟಪ್ಪ, ತಾಯಿ ಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ಕೋಲಾರ. ಕಾಲೇಜಿಗೆ ಸೇರಿದರಾದರೂ ೧೭ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ಅಡೆತಡೆ. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿಯಿಂದ ಬೆಳೆದ ಸಾಹಿತ್ಯದ ಒಲವು. ಸ್ವತಃ ಕಲಿತದ್ದು ಹಿಂದಿ, ಇಂಗ್ಲಿಷ್, ಸಂಸ್ಕೃತ. ಬಿಡುವಿನ ವೇಳೆಯಲ್ಲಿ ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು. ಸಾಹಿತ್ಯ ರಚನೆಗಳು ಪ್ರಾರಂಭವಾಗುವುದೇ ಪದ್ಯದಿಂದ-ಇವರೂ ಹೊರತಾಗಿಲ್ಲ. ಕಾದಂಬರಿ ಲೋಕದ ಕಡೆ ಒಲವು. ಪ್ರಜಾಮತ ಸಂಪಾದಕರಾಗಿದ್ದ ಮ.ನ.ಮೂರ್ತಿಯವರ ಭೇಟಿ. ಮೊದಲ ಕಾದಂಬರಿ ‘ಮಿಂಚು’ ಪ್ರಜಾಮತದಲ್ಲಿ ಧಾರಾವಾಹಿಯಾಗಿ ಪ್ರಕಟಿತ. ಮುಂದೆ ೨೬ ಕಾದಂಬರಿಗಳು ಹೆಸರಾಂತ ಪತ್ರಿಕೆಗಳಾದ ಪ್ರಜಾಮತ, ತರಂಗ, ಮಂಗಳಾ, ವನಿತಾ, ಮಂಜುವಾಣಿ, ರಾಗಸಂಗಮ, ಹಂಸರಾಗ, ಪ್ರಿಯಾಂಕ, ಕರ್ಮವೀರ ಮುಂತಾದುವುಗಳಲ್ಲಿ ಪ್ರಕಟಿತ. ರಚಿಸಿದ ಕಾದಂಬರಿಗಳು-ಹೊಂಬೆಳಕು, ವಿವಾಹ ಬಂಧನ, ವಿವಂಚಿತೆ, ವಸುಂಧರ, ಕರಗಿದ ಕಾರ್ಮೋಡ, ಬಾಡದ ಹೂ, ಶುಭಮಿಲನ, ಗಿರಿಧರ, ಮಧುರಗಾನ ಮುಂತಾದ ೧೩೪ ಕಾದಂಬರಿಗಳು. ಹಲವಾರು ಕಾದಂಬರಿಗಳು ಕಂಡ ಹಲವಾರು ಮುದ್ರಣ. ಬಾಡದ ಹೂವು, ಗಂಧರ್ವಗಿರಿ, ಇಬ್ಬನಿ ಕರಗಿತು, ಶ್ವೇತ ಗುಲಾಬಿ ಮುಂತಾದ ೧೨ ಚಲನಚಿತ್ರಗಳಾದ ಕಾದಂಬರಿಗಳು. ಬಾಡದ ಹೂ, ಮಿಡಿದ ಶೃತಿಗೆ ಶ್ರೇಷ್ಠ ಚಲನಚಿತ್ರ ರಾಜ್ಯ ಪ್ರಶಸ್ತಿ, ಇಬ್ಬನಿ ಕರಗಿತು, ಶ್ವೇತ ಗುಲಾಬಿ ಪರಭಾಷೆಯಲ್ಲಿಯೂ ಚಲನಚಿತ್ರಗಳಾಗಿ ಗಳಿಸಿದ ಪ್ರಸಿದ್ಧಿ. ೮ ಕಾದಂಬರಿಗಳು ಚಲನಚಿತ್ರಗಳಾಗಲು ಕಾದುನಿಂತಿದೆ. ಸಣ್ಣಕಥೆಗಳು-ಮಯೂರ, ಮಲ್ಲಿಗೆ, ವನಿತಾ, ಸುಧಾ ವಿಶೇಷಾಂಕಗಳಲ್ಲಿ ಪ್ರಕಟಿತ. ಶಿಶುಸಾಹಿತ್ಯ-ಪಾಪಚ್ಚಿ ಮಾಸ ಪತ್ರಿಕೆಗಾಗಿ ಬರೆದ ಕಥೆಗಳು. ಸಾಕ್ಷರತಾ ಆಂದೋಲನದ ಕಾರ‍್ಯಕ್ರಮದಡಿ ವಯಸ್ಕರ ಶಿಕ್ಷಣಕ್ಕಾಗಿ ಬರೆದ ಪಠ್ಯ ಪುಸ್ತಕಗಳು. ಬಾನುಲಿಗಾಗಿ ಹಲವು ನಾಟಕಗಳು. ಧಾರವಾಡದ ಪಟ್ಟಣದಲ್ಲಿ ಸರ್ಕಲ್‌ನಲ್ಲಿ ನಿಂತು ಕಲ್ಲೊಗೆದರೆ ಒಬ್ಬ ಕವಿಗೆ ತಗಲುವಂತೆ ಯಾವುದೇ ಗ್ರಂಥಾಲಯಕ್ಕೆ ಹೋಗಿ ಕೈ ಇಟ್ಟರೆ ಸಿಗುವುದೇ ಇವರ ಕಾದಂಬರಿ. ಲೈಬ್ರರಿ ಸಾಮ್ರಾಜ್ಞೆ  ಎಂದು ಹಲವಾರು ಸಮೀಕ್ಷೆಗಳಲ್ಲಿ ಪಡೆದ ಅಭಿದಾನ. ಸಂದ ಪ್ರಶಸ್ತಿ ಗೌರವ-ಹಲವಾರು ಕಾದಂಬರಿಗಳು ಚಲನಚಿತ್ರಗಳಾಗಿ ಶ್ರೇಷ್ಠ ಚಲನಚಿತ್ರ, ಶ್ರೇಷ್ಠ ಕಥೆ ಪ್ರಶಸ್ತಿ, ಹಲವಾರು ಮಹಿಳಾ ಸಮ್ಮೇಳನಗಳ ಅಧ್ಯಕ್ಷತೆ. ರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನ. ದಾನಚಿಂತಾಮಣಿ ಅತ್ತಿಮಬ್ಬೆ ಸ್ಮಾರಕ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿಯ WHO IS WHOನಲ್ಲಿ ಸೇರ‍್ಪಡೆ. ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶ್ರೀ ಪ್ರಶಸ್ತಿ, ತುಮಕೂರು ಜಿಲ್ಲಾ ಲೇಖಕಿಯರ ಸಂಘದಿಂದ ಸಾಹಿತ್ಯ ಸಂಪನ್ನೆ ಪ್ರಶಸ್ತಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ವಿದ್ಯಾ ಡಿ. ಮೂರ್ತಿ – ೧೯೩೨ ಕೊರಗಲ್ ವಿರೂಪಾಕ್ಷಪ್ಪ – ೧೯೪೦ ಚಂದ್ರಕಾಂತ ಪೋಕಳೆ – ೧೯೪೯ ಜಿ. ನಾರಾಯಣಸ್ವಾಮಿ – ೧೯೬೪

Details

Date:
August 20, 2023
Event Category: