Categories
ಶರಣರು / Sharanaru

ಅಕ್ಕನಾಗಮ್ಮ/ನಾಗಲಾಂಬಿಕೆ/ನಾಗಮ್ಮ

ಅಂಕಿತ: ಬಸವಣ್ಣಪ್ರಿಯ ಚೆನ್ನಸಂಗಯ್ಯ

‘ನಾಗಮ್ಮ’, ‘ಅಕ್ಕನಾಗಮ್ಮ’ ಎಂದು ಕರೆಯಿಸಿಕೊಳ್ಳುವ ಈಕೆ ಬಸವಣ್ಣನವರ ಸೋದರಿ. ಕಾಲ-೧೧೬೦, ತಂದೆ-ಮಾದರಸ ತಾಯಿ ಮಾದಲಾಂಬಿಕೆ. ಜನ್ಮ ಸ್ಥಳ -ಇಂಗಳೇಶ್ವರ ಬಾಗೆವಾಡಿ. ಗಂಡ ಶಿವದೇವ. ಮಗ – ಚೆನ್ನಬಸವಣ್ಣ. ಈಕೆ ಬಸವಣ್ಣನವರ ಉಜ್ವಲ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾಳೆ. ಕಲ್ಯಾಣದ ಮಹಾಮನೆ, ಅನಭವ ಮಂಟಪಗಳಲ್ಲಿ ಅನನ್ಯ ಕಾರ್ಯಕ್ಷಮತೆಯನ್ನು ತೋರುತ್ತಾಳೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣ ಬಳಗದ ನೇತೃತ್ವವಹಿಸಿ ಉಳುವಿಗೆ ಬರುತ್ತಾಳೆ. ಚೆನ್ನಬಸವಣ್ಣನ ಐಕ್ಯದ ನಂತರ ಚಿಕ್ಕಮಗಳೂರು ಜಿಲ್ಲೆ ಎಣ್ಣೆಹೊಳೆ ತೀರದ ತರೀಕೆರೆಯಲ್ಲಿ ಬಯಲಾಗುತ್ತಾಳೆ.

‘ಬಸವಣ್ಣಪ್ರಿಯ ಚೆನ್ನಸಂಗಯ್ಯ’ ಎಂಬುದು ಇವಳ ಅಂಕಿತ. ಸದ್ಯ ೧೫ ವಚನಗಳು ದೊರೆತಿವೆ. ಅವುಗಳಲ್ಲಿ ಬಸವಣ್ಣನವರ ಸ್ತುತಿಪರವಾದವುಗಳೇ ಅಧಿಕ. ಜೊತೆಗೆ ಇತರ ಶರಣರ ಪ್ರಸ್ತಾಪವೂ ಇದೆ. ಆಕೆಯ ಬದುಕಿನಲ್ಲಿ ಬಂದೆರಗಿದ ಎಡರುಗಳು, ಅವುಗಳನ್ನು ಧೈರ್ಯದಿಂದ ಎದುರಿಸಿದ ರೀತಿ ಕೆಲವು ವಚನಗಳಲ್ಲಿ ಪ್ರತಿಧ್ವನಿಸಿವೆ.