Categories
ವಚನಗಳು / Vachanagalu

ಅಮುಗಿದೇವಯ್ಯನ ವಚನಗಳು

ಅಂಗ ಅನಂಗವೆಂಬೆರಡರ ಸಂದಳಿದ ಮಹಂತನ
ಅಂಗ ಸೋಂಕಿತ್ತೆಲ್ಲಾ ಪವಿತ್ರ ಕಾಣಿರೆ.
ಪವಿತ್ರವಿರ್ದಲ್ಲಿ ಪದಾರ್ಥವಿಹುದು, ಪದಾರ್ಥವಿರ್ದಲ್ಲಿ ಮನವಿಹುದು.
ಮನವಿರ್ದಲ್ಲಿ ಹಸ್ತವಿಹುದು, ಹಸ್ತವಿರ್ದಲ್ಲಿ ಜಿಹ್ವೆಯಿಹುದು
ಜಿಹ್ವೆಯಿರ್ದಲ್ಲಿ ರುಚಿಯಿಹುದು, ರುಚಿಯಿರ್ದಲ್ಲಿ ಅವಧಾನವಿಹುದು.
ಅವಧಾನವಿರ್ದಲ್ಲಿ ಭಾವವಿಹುದು, ಭಾವವಿರ್ದಲ್ಲಿ ಲಿಂಗವಿಹುದು.
ಲಿಂಗವಿರ್ದಲ್ಲಿ ಅರ್ಪಿತವಿಹುದು, ಅರ್ಪಿತವಿರ್ದಲ್ಲಿ ಪ್ರಸಾದವಿಹುದು.
ಪ್ರಸಾದವಿರ್ದಲ್ಲಿ ಪರಿಣಾಮವಿಹುದು.
ಇದು ಕಾರಣ ಮಹಾಘನ ಸದ್ಗುರು ಸಿದ್ಧಸೋಮನಾಥಾ,
ನಿಮ್ಮ ಶರಣರು ಪ್ರಾಣಲಿಂಗಪ್ರವೇಶಿಗಳಾಗಿ ಪರಿಣಾಮಪ್ರಸಾದಿಗಳಯ್ಯಾ./1
ಅರಿವನ್ನಕ್ಕ ಭೃತ್ಯಾಚಾರಿ,
ಮೀರಿ ಮಿಕ್ಕು ಶರಣಪಥ ಸೋಂಕು
ತಾನಾಗಿದ್ದ ಸುಖವು ಕೂಡುವನ್ನಕ್ಕ ಪ್ರಾಣಲಿಂಗಿ.
ಕೊಡಲಿಲ್ಲ ಕೊಳಲಿಲ್ಲ, ಲಿಂಗಪ್ರಾಣಿಯಾದವಂಗೆ
ಸಿದ್ಧಸೋಮನಾಥಲಿಂಗದಲ್ಲಿ ಅರುವಿದ್ದ ಬಳಿಕ./2
ಅರ್ಪಿತವಿಲ್ಲದ ಲಿಂಗಕ್ಕೆ ಅನರ್ಪಿತವಿಲ್ಲದ ಶರಣಪ್ರಸಾದಿ.
ರೂಪಿಲ್ಲದ ಲಿಂಗಕ್ಕೆ ರುಚಿಯಿಲ್ಲದ ಪ್ರಸಾದಿ[ಪ್ರಸಾದಿ]
ಅರ್ಪಿಸಲರಿಯದ ಶರಣ, ಅನರ್ಪಿತವನೊಲ್ಲದ ಪ್ರಸಾದಿ.
ಇದುಕಾರಣ ಮಹಾಘನ ಸದ್ಗುರು ಸಿದ್ಧಸೋಮನೆಂಬ ಲಿಂಗವಿರ್ದು,
ತಾನಿಲ್ಲದ ಸುಯಿಧಾನಿ. /3
ಅಲಗಿನ ಮೊನೆಯನೇರಬಹುದು,
ಹುಲಿಯ ಬಲೆಯ ಹೊಗಬಹುದು,
ಸಿಂಹದ ಕೊರಳಿಗೆ ಹಾಯಬಹುದು,
ಸಿದ್ಧಸೋಮನಾಥಾ, ನಿಮ್ಮ ಮುಟ್ಟದೆ ನಿಮಿಷ ಕುಳ್ಳಿರಬಾರದು./4
ಆಲಿಕಲ್ಲ ಕಡಿದು ಪುತ್ಥಳಿಯ ಕಂಡರಿಸುವಂತೆ,
ಉಪ್ಪಿನ ಪೊಟ್ಟಣವನುದಕದಲದ್ದುವಂತೆ,
ಕರ್ಪುರದ ಪ್ರಣತೆಯಲ್ಲಿ ಜ್ಯೋತಿಯ ಬೆಳಗುವಂತೆ
ಸಿದ್ಧಸೋಮನಾಥಲಿಂಗ ಗ್ರಾಹಿ ಅಗ್ರಾಹಿ ತಾ. /5
ಇಹಪರನಲ್ಲ, ಪರಾಪರನಲ್ಲ,
ಭಾವಿಸಿ ಭಾವಿಯಲ್ಲ,
ಕಾಮಿಸಿ ಕಾಮಿಯಲ್ಲ.
ಅನಾಯಾಸ ನಿರಂಜನನು ಸಿದ್ಧಸೋಮನಾಥಲಿಂಗಾ
ನಿಮ್ಮ ಶರಣ ಬಳಸಿ ಬಳಸುವನಲ್ಲ./6
ಊಷ್ಮದೊರತೆಯಂತೆ, ಬಿಸಿಲ ನೆಳಲಿನಂತೆ,
ಬೆಟ್ಟದ ಶಬ್ದ, ಉರಿಯ ನೆಳಲು, ಮಂಜಿನ ಮಳೆಯಂತೆ ಸುಳಿವ,
ಸಿದ್ಧಸೋಮನಾಥಾ ನಿಮ್ಮ ಶರಣ. /7
ಎಮ್ಮ ನಲ್ಲನ ಬಯಲ ಬಣ್ಣವ ಕಂಡು ಎನ್ನ ಮನ ಬೆರಗಾಯಿತ್ತವ್ವಾ,
ಇದು ಕಾರಣ ನೋಡದೆ ನೋಡುತಿರ್ದೆನು.
ಆತನ ನೋಡುವ ತವಕದಿಂದ ಮುಂದೆ ಬಂದೆನ್ನ ಕೂಡಿದನಾಗಿ,
ಕೂಡದೆ ಕೂಡುತಿರ್ದೆನು.
ಆತನ ಬೆರಸುವ ಭೇದದಿಂದ ಆನೆನ್ನ ಮರೆದರೆ
ಮೆಚ್ಚಿ ತಾನೆನಗೊಲಿದನಾಗಿ ಬೆರಸದೆ ಬೆರಸುತಿರ್ದೆ!
[ತಾ]ನೆನ್ನ ಹರಣ ಹಾರದಂತೆನ್ನ ತನುವನಾರಡಿಗೊಂಡನಾಗಿ
ಜ್ಞಾನಾಂಗನೆಯೆಂದೆನಿಸು.
ಇದು ಕಾರಣ, ಮಹಾಘನ ಸಿದ್ಧಸೋಮನಾಥನ
ಅಂಗಸುಖದ ಸಂಗವ ಮೆಚ್ಚಿ ನೆನೆಯದೆ ನೆನೆವುತ್ತಿದ್ದೆನು./8
ಕಂಗಳ ಕತ್ತಲೆಯ ಕೆಡಿಸಿದ ರವಿಯ ಚಂದದಂತಾಯಿತ್ತೆನ್ನಗುರುವಿನುಪದೇಶ.
ಕನ್ನಡಿ ರವಿಯ ತನ್ನೊಳಗೆ ಇರಿಸಿದಂತಾಯಿತ್ತೆನ್ನ ಗುರುವಿನುಪದೇಶ.
ಜಲದ ನಿರ್ಮಳ ಗಗನವನೊಳಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ.
ಚಂದ್ರಕಾಂತದ ಶಿಲೆಯ ಬಂದು ಚಂದ್ರಮ ಸೋಂಕಿದಂತಾಯಿತ್ತೆನ್ನ
ಗುರುವಿನುಪದೇಶ.
ಕೊಡನೊಳಗಣ ಬಯಲ ಹಂಚಿಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ.
ಇದು ಕಾರಣ,
ದರ್ಪಣಕೆ ದರ್ಪಣವ ತೋರಿದಂತಾಯಿತ್ತೆನ್ನ ಗುರುವಿನುಪದೇಶ.
ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಂತಾಯಿತ್ತೆನ್ನ
ಗುರುವಿನುಪದೇಶ./9
ಕಕ್ಕಯ್ಯನ ಪ್ರಸಾದವ ಕೊಂಡೆನ್ನ ಕುಲಸೂತಕ ಹೋಯಿತ್ತಯ್ಯಾ,
ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲಸೂತಕ ಹೋಯಿತ್ತಯ್ಯಾ,
ದಾಸಯ್ಯನ ಪ್ರಸಾದವ ಕೊಂಡೆನ್ನ ತನುಸೂತಕ ಹೋಯಿತ್ತಯ್ಯಾ,
ಚಂದಯ್ಯನ ಪ್ರಸಾದವ ಕೊಂಡೆನ್ನ ಮನಸೂತಕ ಹೋಯಿತ್ತಯ್ಯಾ,
ತೆಲುಗ ಜೊಮ್ಮಯ್ಯನ ಪ್ರಸಾದವ ಕೊಂಡೆನ್ನ ನೆನಹುಸೂತಕ ಹೋಯಿತ್ತಯ್ಯಾ,
ಬಿಬ್ಬ ಬಾಚಯ್ಯನ ಪ್ರಸಾದವ ಕೊಂಡೆನ್ನ ಭಾವಸೂತಕ ಹೋಯಿತಯ್ಯಾ,
ಮೋಳಿಗಯ್ಯನ ಪ್ರಸಾದವ ಕೊಂಡೆನ್ನ ಜನನಸೂತಕ ಹೋಯಿತ್ತಯ್ಯಾ,
ಕೋಲ ಶಾಂತಯ್ಯನ ಪ್ರಸಾದವ ಕೊಂಡೆನ್ನಂತರಂಗದ ಸೂತಕ ಹೋಯಿತ್ತಯ್ಯಾ,
ಮೇದಾರ ಕೇತಯ್ಯನ ಪ್ರಸಾದವ ಕೊಂಡೆನ್ನ
ಬಹಿರಂಗದ ಸೂತಕ ಹೋಯಿತ್ತಯ್ಯಾ,
ಘಟ್ಟಿವಾಳಯ್ಯನ ಪ್ರಸಾದವ ಕೊಂಡೆನ್ನ ಸರ್ವಾಂಗದ ಸೂತಕ ಹೋಯಿತ್ತಯ್ಯಾ ಬಸವಣ್ಣ,
ಚೆನ್ನಬಸವಣ್ಣ, ಪ್ರಭುದೇವರು, ಮಡಿವಾಳಯ್ಯ, ಸಿದ್ಧರಾಮಯ್ಯ,
ಸೊಡ್ಡರ ಬಾಚರಸರು, ಹಡಪದಪ್ಪಣ್ಣ, ಶಂಕರ ದಾಸಿಮಯ್ಯ,
ಹೆಂಡದ ಮಾರಯ್ಯಾ,
ಗಾಣದ ಕಣ್ಣಪ್ಪಯ್ಯ, ಕೈಕೂಲಿ ಚಾಮಯ್ಯ,
ಬಹುರೂಪಿ ಚೌಡಯ್ಯ, ಕಲಕೇತ ಬ್ರಹ್ಮಯ್ಯ ಮೊದಲಾದ
ಶಿವಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ,
ಮಹಾಘನ ಸದ್ಗುರು ಸಿದ್ಧಸೋಮನಾಥಲಿಂಗವೆ
ನಿಮ್ಮ ಧರ್ಮ, ನಿಮ್ಮ ಧರ್ಮ./10
ಕಾಯ ಲಿಂಗಕ್ಕರ್ಪಿತವಾದಡೆ ಕರ್ಮವಿಲ್ಲ,
ಜೀವ ಲಿಂಗಕ್ಕರ್ಪಿತವಾದಡೆ ಜನಿತವಿಲ್ಲ,
ಭಾವಲಿಂಗಕ್ಕರ್ಪಿತವಾದಡೆ ಭ್ರಮೆಯಿಲ್ಲ,
ಅರಿವು ಲಿಂಗಕ್ಕರ್ಪಿತವಾದ ಬಳಿಕ ಪ್ರಸಾದವ
ಗ್ರಹಿಸಿದನಾಗಿ, ಕುರುಹಿಲ್ಲ,
ಮಾಯಾಪ್ರಪಂಚನತಿಗಳೆದು ನಿಮಗರ್ಪಿಸಬಲ್ಲನಾಗಿ,
ಆತನು ಶರಣನು-
ಬೆಚ್ಚಂತೆ, ಬೆರಸಿ ಅಚ್ಚೊತ್ತಿದಂತೆ,
ಅಪ್ಪು ಒಳಕೊಂಡ ವಾರಿಕಲ್ಲಂತೆ,
ಜ್ಯೋತಿಯುಂಡ ತೈಲದಂತೆ, ಜಲವುಂಡ ಮುತ್ತಿನಂತೆ,
ಬಯಲುಂಡ ಬೆಳಗಿನಂತೆ ಇರ್ದನಾಗಿ
ಮಹಾಘನ ಸದ್ಗುರು ಸಿದ್ಧಸೋಮನಾಥಾ
ನಿಮ್ಮ ಶರಣರ ಹೆಸರಡಗಿದ ಲಿಂಗೈಕ್ಯರೆಂದೆ./11
ಕ್ಷುತ್ತು ಪಿಪಾಸೆಯರತಡೇನು, ಭಕ್ತನಪ್ಪನೆ?
ಸ್ವೇಚ್ಛಾಗಮನಿಯಾದಡೇನು, ಭಕ್ತನಪ್ಪನೆ?
ತನು ಬಯಲಾದಡೇನು, ಭಕ್ತನಪ್ಪನೆ?
ಅಷ್ಟಮಹಾಸಿದ್ಧಿಯುಳ್ಳರೇನು, ಭಕ್ತನಪ್ಪನೆ?
ಚತುರ್ವಿಧಪದವ ಪಡೆದು ಕೈಲಾಸದಲ್ಲಿದ್ದಡೇನು, ಭಕ್ತನಪ್ಪನೆ?
ಮಹತ್ವವ ಹಲವು ತೋರಿ ಮೆರೆದಡೇನು, ಭಕ್ತನಪ್ಪನೆ?
ಅಲ್ಲಲ್ಲ, ಭಕ್ತಿಯ ಪರಿ ಎಂತೆಂದಡೆ: ಅಂಗತ್ರಯದಲ್ಲಿ ಲಿಂಗತ್ರಯಸಂಬಂಧವಾಗಿ, ಗುರುಲಿಂಗಜಂಗಮವನಾರಾಧಿಸಿ
ಲಿಂಗತ್ರಯದಲ್ಲಿ ಸಮವೇಧಿಸಿ, ಆ ತ್ರಿವಿಧಲಿಂಗ ಜಂಗಮವನಾರಾಧಿಸಿ,
ಪ್ರಸಾದಗ್ರಾಹಿಯಾದಲ್ಲದೆ ಭಕ್ತನಲ್ಲವೆಂದು
ಸಿದ್ಧಸೋಮನಾಥನ ಶರಣರು ನುಡಿವರಯ್ಯಾ ಪ್ರಭುವೆ./12
ಗುರುಕಾರುಣ್ಯವ ಪಡೆದು ಲಿಂಗದೊಳವಗ್ರಾಹಕನಾಗದೆ,
ಅಂಗಲಿಂಗ, ಪ್ರಾಣಲಿಂಗ, ಆತ್ಮಲಿಂಗಸಂಬಂಧದ ವಿಚಾರವಿಲ್ಲದೆ
ಬರಿಯ ಜ್ಞಾನಯೋಗವೆಂಬ ಶೂನ್ಯದನುಭಾವಿಗೆ ಗುರುಭಕ್ತಿ ಇಲ್ಲ,
ಗುರುಭಕ್ತಿ ಇಲ್ಲವಾಗಿ ಲಿಂಗಭಕ್ತಿ ಇಲ್ಲ, ಲಿಂಗಭಕ್ತಿಯಿಲ್ಲವಾಗಿ ಜಂಗಮಭಕ್ತಿ ಇಲ್ಲ,
ಜಂಗಮಭಕ್ತಿ ಇಲ್ಲವಾಗಿ ಪ್ರಸಾದವಿಲ್ಲ, ಪ್ರಸಾದಪ್ರಸನ್ನವಿಲ್ಲವಾಗಿ ಮೋಕ್ಷವಿಲ್ಲ.
ಇದು ಕಾರಣ,
ಸದ್ಗುರು ಸಿದ್ಧಸೋಮನಾಥನಲ್ಲಿ ಗುರುಕರಜಾತರಾದ
ಲಿಂಗಾಂಗಸಂಬಂಧಿಗಳಪೂರ್ವವಯ್ಯಾ ಪ್ರಭುವೆ./13
ಗುರುಲಿಂಗ ಸಂಯೋಗವಾದಲ್ಲಿ ಶಿವಲಿಂಗದುದಯ.
ಶಿವಲಿಂಗ ಸಂಯೋಗವಾದಲ್ಲಿ ಜಂಗಮಲಿಂಗದುದಯ.
ಜಂಗಮಲಿಂಗ ಸಂಯೋಗವಾದಲ್ಲಿ ಪ್ರಸಾದದುದಯ.
[ಪ್ರಸಾದ ಸಂಯೋಗವಾದಲ್ಲಿ ಪ್ರಾಣದುದಯ]
ಪ್ರಾಣಸಂಯೋಗವಾದಲ್ಲಿ ಜ್ಞಾನದುದಯ.
ಜ್ಞಾನಾನುಭಾವ ಸಂಯೋಗವಾದಲ್ಲಿ ಸುಜ್ಞಾನದುದಯ.
ಇಂತೀ ಗುರುವಿನ ಘನವ, ಲಿಂಗದ ನಿಜವ, ಜಂಗಮದ ಮಹಿಮೆಯ,
ಪ್ರಸಾದದ ರುಚಿಯ, ಪ್ರಾಣನ ನೆಲೆಯ, ಸುಜ್ಞಾನದ ನಿಲವ,
ಮಹಾನುಭಾವದ ಸುಖವನರಿದು ಮರೆದಲ್ಲಿ,
ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಲ್ಲಿ
ಜ್ಞಾನಭರಿತವಾದಂದು ಸುಜ್ಞಾನ. /14
ಗುರುವಿನ ಕರುಣದಿಂದ
ಲಿಂಗಜಂಗಮವ ಕಂಡೆನಯ್ಯಾ.
ಇಂದಿನ ಸುಖಕ್ಕೆ ಹವಣಿಲ್ಲೆಂದು ಕಂಡೆನಯ್ಯಾ,
ಸಿದ್ಧಸೋಮನಾಥಲಿಂಗವಲ್ಲದಿಲ್ಲೆಂದು ಕಂಡೆನಯ್ಯಾ./15
ಗುರುಶಿಷ್ಯಸಂಬಂಧದನುಭಾವವ ಕೇಳಿರಯ್ಯ:
ಗುರುವೆಂಬ ಪರಾಪರ, ಶಿಷ್ಯನೆಂಬ ಇಹಪರ,
ಗುರುವೆಂಬ ಪರಮಾರ್ಥ, ಶಿಷ್ಯನೆಂಬ ಏಕಾರ್ಥ,
ಗುರುವೆಂಬನಲ್ಲ, ಶಿಷ್ಯನೆಂಬನಲ್ಲ
ಏಕೈಕ ಸಿದ್ಧಸೋಮನಾಥನಲ್ಲಿ ಶಬ್ದಕಿಂಬಿಲ್ಲ. /16
ಜಟಾಜೂಟ ಮಕುಟಕೋಟಿಗಳಾದಡೇನು?
ನೊಸಲ ಕಣ್ಣು ಚತುರ್ಭುಜದವರಾದಡೇನು?
ಅಂಗದ ಮೇಲೆ ಲಿಂಗವಿಲ್ಲದವರ ಕಂಡಡೆ
ಬರುಕಾಯರೆಂಬೆನು, ಬರುಮುಖರೆಂಬೆನು.
ಸಿದ್ಧಸೋಮನಾಥಲಿಂಗವಾದೊಡೆಯು ನಮಗೇನು?
ಕೊಂದಡೆ ಕೊಲಲಿ, ಇಂತೆಂಬುದ ಮಾಣೆನಯ್ಯಾ./17
ಜ್ಞಾನದಲರಿದಡೇನಯ್ಯ, ಕ್ರೀಯನಾಚರಿಸದನ್ನಕ್ಕ?
ನೆನೆದ ಮಾತ್ರದಲ್ಲಿ ಅಹುದೆ, ಕಾರ್ಯದಲಲ್ಲದೆ?
ಕುರುಡ ಕಾಣ ಪಥವ, ಹೆಳವ ನಡೆಯಲರಿಯ. ಒಂದಿಲ್ಲದಿರ್ದಡೊಂದಾಗದು.
ಜ್ಞಾನವಿಲ್ಲದಿರ್ದ ಕ್ರೀ ಜಡನು, ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು.
ಇದು ಕಾರಣ
ಸಿದ್ಧಸೋಮನಾಥಲಿಂಗವ ಕೂಡುವ ಶರಣಂಗೆ ಎರಡೂ ಬೇಕು./18
ಜ್ಞಾನಸೂತಕ, ಮೋನಸೂತಕ,
ಜಪತಪ ಅನುಷ್ಠಾನಸೂತಕ,
ಸೋಹಂ ಎಂಬ ಸೂತಕ,
ಸಿದ್ಧಸೋಮನಾಥ ಪ್ರಾಣಲಿಂಗವಾಗಿ
ಸೂತಕ ಹಿಂಗಿತ್ತು ಯಥಾ ಸ್ವೇಚ್ಛೆ. /19
ನೆಲವಾಗಿಲ ಮುಚ್ಚಿ, ತಲೆವಾಗಿಲ ತೆರದು,
ಎವೆ ಮಿಡುಕದಂತೆ ನಿಮ್ಮ ನೋಡುತ್ತಿಪ್ಪ ಸುಖವೆಂದಪ್ಪುದೊ?
ಎನಗೆ ಗುರುವಿನುಪದೇಶವ ಹಿರಿದು ಪರಿಯಲಿ ನಂಬಿ,
ಎರಡು ಪುರ್ಬಿನ ನಡುವೆ ಹರಿವ ಮನವ ನಿಲಿಸಿ,
ಪರಿಣಾಮ ಪರವಶದೊಳೆಂದಿಪ್ಪೆನಯ್ಯಾ?
ಹೋದ ಹೊತ್ತನರಿಯದೆ, ಆದ ದುಃಖವನರಿಯದೆ,
ಬೆರಗು ನಿಂದು ನಿಮ್ಮನೆಂದಿಂಗೊಮ್ಮೆ ನೆರೆವೆ?
ಸದ್ಗುರು ಸಿದ್ಧಸೋಮನಾಥಾ, ಇಂದು ಕಾಣದ ಮುಕ್ತಿ ಎಂದಿಗೂ ಇಲ್ಲ./20
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮರೆಂಬ
ಅಷ್ಟತನುವಿಡಿದು ಜಗಕ್ಕೆ ದೃಷ್ಟನಾಗಿ ತೋರುವ ಕರ್ಮರೂಪವೆಂಬುದು
ಶಿವನ ಸ್ಥೂಲತನುವೆನಿಸುವುದು.
ಸಕಲಲೋಕಕ್ಕೆ ಆಧಾರಾಧೇಯವಾಗಿ,
ಕಮಲಲೋಚನರೊಳಗಾದ ದೇವ ದಾನವ
ಮಾನವಮನುಮುನಿಗಳಿಗೊಡೆಯನಾಗಿ,
ವರದಾಭಯಕರನೆನಿಸಿ ಮೂರ್ತಿಸಹಿತ ತೋರುವ.
ಪ್ರಕೃತಿವಿಡಿದು ನಿತ್ಯವೆನಿಸಿ, ಕೈಲಾಸಪತಿ ಪಶುಪತಿಯಾಗಿ,
ನಂದಿನಾಥ ಭೃಂಗಿನಾಥ ಮೊದಲಾದ ಗಣನಾಥರ ಕಣ್ಗೆ ಮಂಗಳವಾಗಿ ತೋರುವ.
ಸದಾಶಿವಮೂರ್ತಿಯೆಂಬುದು ಶಿವನ ಸೂಕ್ಷ್ಮತನುವೆನಿಸುವುದು.
ಅತ್ಯತಿಷ್ಠದ್ದಶಾಂಗುಲವೆಂಬ ಶ್ರುತಿತಾರ್ಕಣೆಯಾಗಿ,
ಅಕಾಯಚರಿತನಾಗಿ, ಕಾಲಕರ್ಮಕ್ಕಗೋಚರನಾಗಿ,
ತೋರಿಯೂ ತೋರದೆ, ಮುಟ್ಟಿಯೂ ಮುಟ್ಟದೆ,
ಆಗಿಯೂ ಆಗದೆ, ಇರ್ದೂ ಇಲ್ಲದೆ, ಬೆರಸಿಯೂ ಬೆರಸದೆ,
ಆಕಾಶದಂತೆ ಭರಿತನಾಗಿ, ಅವಿನಾಶಿಯಾಗಿ,
ಅಭಾವಿಯಾಗಿ, ತತ್ವಮಸಿವಾಕ್ಯಲೀನವಾಗಿ,
ಜ್ಞಾತೃ ಜ್ಞಾನ ಜ್ಞೇಯವಿಹೀನವಾಗಿ ತೋರಿದನೆನ್ನ ಸ್ವಾಮಿ.
ಶ್ರೀಗುರುಕಾರುಣ್ಯದಿಂದಳವಟ್ಟು,
ಜ್ಞಾನಿಯ ಹೃದಯದೊಳಗೆ ದರ್ಪಣದ ಛಾಯೆಯಂತೆ ತೋರಿ ಹಿಡಿಯಲಿಲ್ಲದ
ಒಳಗಣ ಬಯಲು ಮುಸುಕಿದ ಮಹಾಬಯಲಿನಂತೆ ಮುಟ್ಟಲಿಲ್ಲದ
ಸ್ವಯಂವೇದ್ಯವಾದ ಘನತತ್ವದ ರೂಪೆಂಬುದು
ಮಹಾಘನ ಸದ್ಗುರು ಸಿದ್ಧಸೋಮನಾಥಾ,
ನಿಮ್ಮ ಕಾರಣತನುವೆನಿಸುವುದು./21
ಪೃಥ್ವಿ ಸಕಲವ ಧರಿಸಿಕೊಂಡಿಪ್ಪಂತೆ
ಶಿವಶರಣ ಸಮಾಧಾನಿಯಾಗಿರಬೇಕಯ್ಯಾ.
ಅಪ್ಪುವಿನ ನಿರ್ಮಳದಂತೆ ಶಿವಶರಣ ನಿರ್ಮಳನಾಗಿರಬೇಕಯ್ಯಾ.
ಪಾವಕನು ಸಕಲದ್ರವ್ಯಂಗಳ ದಹಿಸಿಯು ಲೇಪವಿಲ್ಲದ ಹಾಂಗೆ
ಶಿವಶರಣ ನಿರ್ಲೇಪನಾಗಿರಬೇಕಯ್ಯಾ.
ವಾಯು ಸಕಲದ್ರವ್ಯಂಗಳಲ್ಲಿಯು ಸ್ಪರ್ಶನವ ಮಾಡಿಯು
ಆ ಸಕಲದ ಗುಣವ ಮುಟ್ಟದ ಹಾಂಗೆ
ಶಿವಶರಣ ಸಕಲಭೋಗಂಗಳನು ಭೋಗಿಸಿಯು
ಸುಗಂಧ ದುರ್ಗಂಧಂಗಳನು ಮುಟ್ಟಿಯು
ನಿರ್ಲೇಪಿಯಾಗಿರಬೇಕಯ್ಯ!
ಆಕಾಶವು ಸಕಲದಲ್ಲಿ ಪರಿಪೂರ್ಣವಾಗಿಹ ಹಾಂಗೆ
ಶಿವಶರಣ ಸಕಲದಲ್ಲಿ ಪರಿಪೂರ್ಣನಾಗಿರಬೇಕಯ್ಯಾ.
ಇಂದುವಿನಂತೆ ಶಿವಶರಣ ಸಕಲದಲ್ಲಿ ಶಾಂತನಾಗಿರಬೇಕಯ್ಯಾ.
ಭಾನುವು ತಮವನಳಿಸಿ ಪ್ರಕಾಶವ ಮಾಡುವ ಹಾಂಗೆ
ಶಿವಶರಣ ಅವಿದ್ಯವ ತೊಲಗಿಸಿ ಸುವಿದ್ಯವ ಮಾಡಬೇಕಯ್ಯಾ.
ಇದು ಕಾರಣ, ಸದ್ಗುರುಪ್ರಿಯ ಸಿದ್ಧಸೋಮನಾಥಾ,
ನಿಮ್ಮ ಶರಣ ನಿರ್ಲೇಪನಯ್ಯಾ./22
ಪ್ರಾಣಲಿಂಗವೆಂಬುದೊಂದು ಮಾತಿನಂತುಟಲ್ಲ.
ಲೋಗರ ಸುಖದುಃಖ ತನ್ನದೆನ್ನದನ್ನಕ್ಕ
ಚೆನ್ನ ಸಿದ್ಧಸೋಮನಾಥನೆಂಬ ಲಿಂಗ ಬರಿದೆ ಒಲಿವನೆ? /23
ಮಂಗಳ ಮಣ್ಣ ಬೆರಸದಂತೆ,
ಬಯಲು ಮೂರ್ತಿಯಾಗದಂತೆ,
ಬಿಸಿಲು ಮಳೆಯಲ್ಲಿ ನಾಂದದಂತೆ,
ಗಾಳಿ ಧೂಳ ಹತ್ತದಂತೆ,
ಸಿದ್ಧಸೋಮನಾಥಲಿಂಗಾ
ನಿಮ್ಮ ಶರಣ ಬಳಸಿ ಬೇರಿಪ್ಪ./24
ಮರುಳು ಮದ್ದುಕುಣಿಕೆಯ ಕಾಯ ತಿಂದು,
ಮರುಳೇರಿತ್ತ ಹೇಳಲುಂಟೆರಿ ಶಿವಶಿವಾ!
ಲಿಂಗ ತನ್ನನವಗ್ರಹಿಸಿದ ಬಳಿಗ ಅಂಗವಿಕಾರವೆಂಬುದನರಿಯರು,
ಸಿದ್ಧಸೋಮನಾಥನೆಂಬ ಶಬ್ದಭಂಗವಳಿದು ಸಂಗವುಳಿದ ಬಳಿಕ./25
ಮೋಹ]ರಹಿತ, ಕೋಪದಲಗು [ಮುಟ್ಟ],
ಜಾಗ್ರ ಸ್ವಪ್ನ ಸುಷುಪ್ತಿಯ ತಟ್ಟಲೀಯ.
ಧನ ಪ್ರಾಣ ಹೆಣ್ಣು ಮಣ್ಣನು ಮರಳಿಸ,
ಸಿದ್ಧ ಸೋಮನಾಥಲಿಂ[ಗಾಶಿವ]ಯೋಗಿ ಸಿದ್ಧರಾಮ. /26
ಶಿವನ ನೆನೆದಡೆ ಭವ ಹಿಂಗೂದೆಂಬ
ವಿವರಗೇಡಿಗಳ ಮಾತ ಕೇಳಲಾಗದು.
ಹೇಳದಿರಯ್ಯಾ, ಜ್ಯೋತಿಯ ನೆನೆದಡೆ ಕತ್ತಲೆ ಕೆಡುವುದೆ?
ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವುದೆ?
ರಂಭೆಯ ನೆನೆದಡೆ ಕಾಮದ ಕಳವಳವಡಗುವುದೆ ಅಯ್ಯಾ?
ನೆನೆದರಾಗದು, ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ,
ಸದ್ಗುರು ಸಿದ್ಧಸೋಮನಾಥಲಿಂಗನ ನೆನೆಯಬಾರದು./27
ಸಾವಯನಲ್ಲ, ಸ್ವರೂಪ ಕುರುಹಿಡಿಯನಾಗಿ.
ನಿರವಯನಲ್ಲ, ನಿರೂಪ ಭಾವಿಸನಾಗಿ.
ದ್ವೈತಿಯಲ್ಲ, ಸೇವ್ಯಸೇವಕನೆಂಬ ಉಭಯವಳಿದುಳಿದನಾಗಿ.
ಅದ್ವೈತಿಯಲ್ಲ, `ನಾಹಂ-ಕೋಹಂ-ಸೋಹಂವೆಂಬ ಭ್ರಮೆಯಳಿದುಳಿದನಾಗಿ.
ಇಂತೀ ಸಕಲಭ್ರಮೆಯಳಿದು ಮಹಾಘನದಲ್ಲಿ ನಿಷ್ಪತಿಯಾಗಿಪ್ಪ
ಸಿದ್ಧಸೋಮನಾಥಲಿಂಗಾ, ನಿಮ್ಮ ಶರಣ./28
ಸುಳುಹೆಂಬುದನರಿಯ, ಸೂಕ್ಷ್ಮವೆಂಬುದನರಿಯ,
ಒಳಗೆಂಬುದನರಿಯ, ಹೊರಗೆಂಬುದನರಿಯ.
ಇರ್ದುದು ಇರ್ದಂತೆ ಇರ್ದಿತ್ತು ಕಾಣಾ.
ಸಿದ್ಧಸೋಮನಾಥನೆಂಬ ಲಿಂಗವು ಶಬ್ದಮುಗ್ಧವಾದುದನೇನೆಂಬೆನಯ್ಯಾ!/29
ಹುಡಿ ಹತ್ತದ ಗಾಳಿಯಂತೆ,
ಕಾಡಿಗೆ ಹತ್ತದಾಲಿಯಂತೆ,
ನೆಯ್ ಹತ್ತದ ನಾಲಗೆಯಂತೆ,
ಮಂಗಳ ಮಣ್ಣ ಬೆರಸದಂತೆ,
ಸಿದ್ಧಸೋಮನಾಥಾ,
ನಿಮ್ಮ ಶರಣನು ಸಕಲಸುಖಂಗಳ ಸುಖಿಸಿಯೂ ಬೇರಿಪ್ಪನು./30