Categories
ಶರಣರು / Sharanaru

ಅಮುಗಿದೇವಯ್ಯ

ಅಂಕಿತ: ಸಿದ್ಧಸೋಮನಾಥ
ಕಾಯಕ: ಬಟ್ಟೆ ನೇಯುವುದು

ಸಾವಯನಲ್ಲ, ಸ್ವರೂಪ ಕುರುಹಿಡಿಯನಾಗಿ.
ನಿರವಯನಲ್ಲ, ನಿರೂಪ ಭಾವಿಸನಾಗಿ.
ದ್ವೈತಿಯಲ್ಲ, ಸೇವ್ಯಸೇವಕನೆಂಬ ಉಭಯವಳಿದುಳಿದನಾಗಿ.
ಅದ್ವೈತಿಯಲ್ಲ, `ನಾಹಂ-ಕೋಹಂ-ಸೋಹಂವೆಂಬ ಭ್ರಮೆಯಳಿದುಳಿದನಾಗಿ.
ಇಂತೀ ಸಕಲಭ್ರಮೆಯಳಿದು ಮಹಾಘನದಲ್ಲಿ ನಿಷ್ಪತಿಯಾಗಿಪ್ಪ
ಸಿದ್ಧಸೋಮನಾಥಲಿಂಗಾ, ನಿಮ್ಮ ಶರಣ.

ಈತನ ಸ್ಥಳ ಸೊಲ್ಲಾಪುರ. ಕಾಯಕ-ಬಟ್ಟೆ ನೇಯುವುದು. ಹೆಂಡತಿ-ವರದಾನಿ. ಕಾಲ-೧೧೬೦. ಮಹಾರಾಷ್ಟ್ರದ ಪುಳಜೆಯಲ್ಲಿ ಈತನನ್ನು ಕುರಿತ ಶಾಸನಗಳು ದೊರೆತಿವೆ. ಒಂದು ಶಾಸನ ಯಾದವ ಚಕ್ರವರ್ತಿ ಸಿಂಘಣನಿಂದ ಅಮುಗಿದೇವ ಪೊಜಿತನಾದುದನ್ನು ತಿಳಿಸಿದರೆ, ಮತ್ತೊಂದು ‘ಮಹೇಶ್ವರಗಣ ಕುಲಾನ್ವಯ ದಿವಾಕರ, ಶರಣ ಸಂತಾನ, ಸಿದ್ಧಕುಲಾಣ೯ವ ಪ್ರವಧ೯ನ ಸುಧಾಕರ’ ಎ೦ದು ಇವನನ್ನು ಹೊಗಳಿದೆ. ಸೊಲ್ಲಾಪುರದ ಕಪಿಲಸಿದ್ಧ ಮಲ್ಲಿಕಾರ್ಜುನನಿಂದ ತನ್ನ ಗೃಹೋಪಕರಣದ ಗಂಟನ್ನು ಹೊರಿಸಿಕೊಂಡು ಹೋಗಿ, ಸಿದ್ಧ ರಾಮನಿಗೆ ಬುದ್ದಿಕಲಿಸಿದ ಕಥೆ, ಕಾವ್ಯ-ಪುರಾಣಗಳಲ್ಲಿ ಪ್ರಸಿದ್ಧವಾಗಿದೆ.

‘ಸಿದ್ಧಸೋಮನಾಥ” ಅಂಕಿತದಲ್ಲಿ ಈತ ರಚಿಸಿದ ೩೦ ವಚನಗಳು ಉಪಲಬ್ಧವಾಗಿವೆ. ಅವುಗಳಲ್ಲಿ ಈತನ ಇಷ್ಟಲಿಂಗ ನಿಷ್ಟೆ, ಶರಣತತ್ವ ನಿರೂಪಣೆ ಕಂಡುಬರುತ್ತವೆ.