Categories
ವಚನಗಳು / Vachanagalu

ಅಮುಗೆ ರಾಯಮ್ಮ ವಚನಗಳು

ಅಂಗಕ್ಕಾಚಾರ ಮನಕ್ಕೆ ಜ್ಞಾನ ಸಮರಸಾದ್ವೈತವಾದ ಮತ್ತೆ
ಪುನರಪಿ ಪುನರ್ದಿಕ್ಷೆಯುಂಟೆ ?
ಗರುಡಿಯಲ್ಲಿ ಕೋಲಲ್ಲದೆ, ಕಾಳಗದಲ್ಲಿ ಉಂಟೆ ಕೋಲು ?
ಭವಿಗೆ ಮೇಲುವ್ರತ ಪುನರ್ದಿಕ್ಷೆಯಲ್ಲದೆ, ಭಕ್ತರಿಗುಂಟೆ ?
ವ್ರತತಪ್ಪಿ ಅನುಗ್ರಹವಿಡಿದ ನರಕಿಗಳಿಗೆ ಮುಕ್ತಿ ಇಲ್ಲ ಎಂದೆ ಅಮುಗೇಶ್ವರಲಿಂಗದಲ್ಲಿ./1
ಅಂಗದ ಆಪ್ಯಾಯನಕ್ಕೆ ಲಿಂಗವ ಮರೆದು ತಿರುಗುವ
ಭಂಡಭವಿಗಳನೇನೆಂಬೆನಯ್ಯಾ ?
ಲಿಂಗದಲ್ಲಿ ನಿತ್ಯರಲ್ಲ ; ಜಂಗಮದಲ್ಲಿ ಪ್ರೇಮಿಗಳಲ್ಲ ;
ಹಿಡಿದ ಛಲದಲ್ಲಿ ಕಡುಗಲಿಗಳಲ್ಲ.
ಮೃಡನ ಕಂಡೆಹೆನೆಂಬ ಮೂರ್ಖರ ಮುಖವ ನೋಡಲಾಗದು ;
ಅವರಡಿಯ ಮೆಟ್ಟಲಾಗದು ಕಾಣಾ ಅಮುಗೇಶ್ವರಾ./2
ಅಂಗದ ಮೇಲೆ ಲಿಂಗವಿಲ್ಲದವರಲ್ಲಿ
ಲಿಂಗಾರ್ಪಿತವ ಬೇಡಲೇಕೆ ?
ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ
ಲಿಂಗಾರ್ಪಿತವ ಬಿಡಲೇತಕ್ಕೆ ?
ಜಾತಿಗೋತ್ರವನೆತ್ತಿ ನುಡಿಯಲೇಕೆ ?
ಸಹಜ ಶಿವಭಕ್ತರೆಂದು, ಶೀಲವಂತರೆಂದು, ವ್ರತಾಚಾರಿಗಳೆಂದು,
ವ್ರತಭ್ರಷ್ಟರೆಂದು ಅವರ ಕುಲಛಲವ ಕೇಳಿಕೊಂಡು
ಆಚಾರವುಳ್ಳವರು ಅನಾಚಾರಿಗಳು ಎಂದು
ಬೇಡುವ ಭಿಕ್ಷವ ಬಿಡಲೇತಕ್ಕೆ ?
ಮದ್ಯಮಾಂಸವ ಭುಂಜಿಸುವವರು ಅನಾಚಾರಿಗಳು.
ಆವ ಕುಲವಾದಡೇನು, ಅಂಗದ ಮೇಲೆ ಲಿಂಗವುಳ್ಳವರೆಲ್ಲರು
ಆಚಾರವುಳ್ಳವರೆಂಬೆನಯ್ಯಾ ; ಅಮುಗೇಶ್ವರಲಿಂಗಕ್ಕೆ ಅವರೆ ಸದ್ಭಕ್ತರೆಂಬೆನಯ್ಯಾ./3
ಅಂದ ಚಂದಕ್ಕೆ ಲಿಂಗವ ಮರೆದು ತಿರುಗುವರು !
ಕಂಡ ಕನಸರಿಯರು ಅ ಮುಂದಣ ಸುದ್ದಿಯ ನುಡಿವರು.
ನಿಜವನರಿಯದೆ ಲಿಂಗಸಂಗಿಗಳೆಂದಡೆ ಅಮುಗೇಶ್ವರನ ಶರಣರು ಅತ್ತತ್ತ ಹೋಗೆಂಬರು./4
ಅನುಭಾವಿ ಅನುಭಾವಿಗಳೆಂಬ ಅಜ್ಞಾನಿಗಳ
ಮುಖವ ನೋಡಲಾಗದು.
ಕಂಗಳ ಮುಂದಣ ಕಾಮ, ಮನದ ಮುಂದಣ ಆಸೆ,
ಅಂಗದಲ್ಲಿ ಅಹಂಕಾರವಾಗಿಪ್ಪವರ ಅನುಭಾವಿಗಳೆಂಬೆನೆ ?
ಸೂಳೆಯ ಮನೆಯಲ್ಲಿಪ್ಪ ಗವುಡಿಯಂತೆ
ತಮ್ಮ ತಮ್ಮ ಹಿರಿಯತನವ ಮುಂದುಗೊಂಡು
ಕುರಿಗಳಂತೆ ತಿರುಗುವ ಜಡರುಗಳ ಅನುಭಾವಿಗಳೆಂಬೆನೆ ?
ಹತ್ತೈದ ಕೂಡಿಕೊಂಡು ಇಕ್ಕಿ ಎರೆವವರ ಮನೆಗೆ ಹೋಗಿ,
ಭಕ್ತಿಬಿನ್ನಹವ ಕೈಕೊಂಡಡೆ ಬೆಕ್ಕು ಹಾಲುಕುಡಿದಂತೆ.
ಅತ್ಯತಿಷ್ಠದ್ದಶಾಂಗುಲನೆಂದು ಘಟವ ಹೊರೆವ ಮಿಟ್ಟೆಯ ಭಂಡರು
ಕಟ್ಟಿಗೆ ಮಣ್ಣ ಹಾಕಿ ಹೊಟ್ಟೆಯ ಹೊರೆವವನಂತೆ.
ಇಷ್ಟಲಿಂಗವನರಿಯದೆ ಸತ್ಯರೆಂದು ಘಟವ ಹೊರೆವ ಘಟಕರ್ಮಿಗಳ ಮುಖವ ನೋಡಲಾಗದು ಅಮುಗೇಶ್ವರಲಿಂಗವೆ./5
ಅನುಭಾವಿಗೆ ಅಂಗಶೃಂಗಾರವುಂಟೆ ?
ಅನುಭಾವಿಗೆ ಕಾಮಕ್ರೋಧವುಂಟೆ ?
ಅನುಭಾವಿಗೆ ನಾಹಂ ಕೋಹಂ ಸೋಹಂ ಎಂಬ
ಭ್ರಾಂತಿನ ಭ್ರಮೆಯುಂಟೆ ?
ಅನುಭಾವಿಗೆ ನನ್ನವರು ತನ್ನವರೆಂಬ
ಗನ್ನಗದಕಿನ ಮಾತುಂಟೆ ?
ಅನುಭಾವಿಗಳೆಂಬವರು ಅಲ್ಲಿಗಲ್ಲಿಗೆ
ತಮ್ಮ ಅನುಭಾವಂಗಳ ಬೀರುವರೆ ?
ಅನುಭಾವಿಗಳ ಪರಿಯ ಹೇಳಿಹೆ ಕೇಳಿರಣ್ಣಾ ;
ನೀರಮೇಲಣ ತೆಪ್ಪದಂತೆ, ಸಮುದ್ರದೊಳಗಣ ಬೆಂಗುಂಡಿನಂತೆ
ಇರಬಲ್ಲಡೆ ಅನುಭಾವಿಗಳೆಂಬೆನಯ್ಯಾ.
ವಚನಂಗಳ ಓದಿ ವಚನಂಗಳ ಕೇಳಿ
ಕಂಡ ಕಂಡ ಠಾವಿನಲ್ಲಿ ಬಂಡುಗೆಲೆವ ಜಗಭಂಡರ,
ಆತ್ಮತೇಜಕ್ಕೆ ತಿರುಗುವ ವೇಷಧಾರಿಗಳ ಕಂಡು ಅನುಭಾವಿಗಳೆಂದಡೆ ಅಘೋನರಕ ತಪ್ಪದು ಕಾಣಾ, ಅಮುಗೇಶ್ವರಾ./6
ಅರಿದಬಳಿಕ ಗರುಡಿಯ ಹೋಗಲೇತಕ್ಕೆ !
ನಿಸ್ಸಾಧಕವ ಸಾಧಿಸಿದ ಬಳಿಕ ಸಾಧಿಸಲೇತಕ್ಕೆ !
ಪಟುಭಟ ಬಂದಲ್ಲಿ ಪರಾಕ್ರಮವ ತೋರದಿರಬೇಕು.
ಮೈಯೆಲ್ಲಾ ಕಣ್ಣಾಗಿಪ್ಪವರು ಬಂದು ಮಥನಿಸಿದಡೆ
ಮಾತಾಡದೆ ಇರಬೇಕು.
ಹೊದ್ದಿಯೂ ಹೊದ್ದದ ಸದ್ಯೋನ್ಮುಕ್ತನಾಗಿರಬಲ್ಲರೆ ಅಮುಗೇಶ್ವರಲಿಂಗವು ಎಂಬೆನು./7
ಅರಿಯಬಲ್ಲಡೆ ವಿರಕ್ತನೆಂಬೆನು.
ಆಚಾರವನರಿದಡೆ ಅಭೇದ್ಯನೆಂಬೆನು.
ಸ್ತುತಿ ನಿಂದೆಗೆ ಹೊರಗಾದಡೆ ಸುಮ್ಮಾನಿ ಎಂಬೆನು.
ಘನತತ್ವವನರಿದು ಶಿಶುಕಂಡ ಕನಸಿನಂತೆ ಇದ್ದಡೆ ಶಿವಜ್ಞಾನಿ ಎಂಬೆನಯ್ಯಾ ಅಮುಗೇಶ್ವರಾ./8
ಅರಿವು ಆಚಾರವುಳ್ಳ ಸಮ್ಯಜ್ಞಾನಿಗೆ ಹೇಳುವೆನಲ್ಲದೆ,
ಜಗದಲ್ಲಿ ನಡೆವ ಜಂಗುಳಿಗಳಿಗೆ ನಾ ಹೇಳುವನಲ್ಲ.
ಆರುಸ್ಥಲವನರಿದ ಲಿಂಗೈಕ್ಯಂಗೆ ಅಂಗದಮೇಲಣ ಲಿಂಗ ಭಿನ್ನವಾಗಲು
ಸಂದೇಹಗೊಳ್ಳಲಿಲ್ಲ, ಲಿಂಗ ಹೋಯಿತ್ತು ಎಂದು ನುಡಿಯಲಿಲ್ಲ.
ವೃತ್ತ ಗೋಳಕ ಗೋಮುಖ ಈ ತ್ರಿವಿಧ ಸ್ಥಾನದಲ್ಲಿ ಭಿನ್ನವಾಗಲು
ಲಿಂಗದಲ್ಲಿ ಒಡವೆರೆಯಬೇಕು.
ಹೀಂಗಲ್ಲದೆ ಸಂದೇಹವೆಂದು ಘಟವ ಹೊರೆವ ಅಜ್ಞಾನಿ
ಕೋಟಿಜನ್ಮದಲ್ಲಿ ಶೂರಕನಾಗಿ ಹುಟ್ಟುವ.
ಸಪ್ತಜನ್ಮದಲ್ಲಿ ಕುಷ್ಟನಾಗಿ ಹುಟ್ಟುವ.
ದಾಸೀ ಗರ್ಭದಲ್ಲಿ ಹುಟ್ಟಿ, ಹೊಲೆಯರ ಎಂಜಲ ತಿಂದು,
ಭವಭವದಲ್ಲಿ ಬಪ್ಪುದು ತಪ್ಪದು ಕಾಣಾ, ಚೆನ್ನಬಸವಣ್ಣ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ./9
ಅರಿವು ಉಳ್ಳವರು ನೀವು ಅರಿಯದವರೊಡನೆ ನುಡಿಯದಿರಿ.
ಪೊಡವಿಯ ಶರಣರೆಂದು ನಿಮ್ಮ ಅರುವಿನ ಪ್ರಸಂಗವನುಸುರದಿರಿ.
ವೇಷಪೂರಿತರಾದವರ ಕಂಡು ನುಡಿಯದಿರಿ, ಅಮುಗೇಶ್ವರನೆಂಬಲಿಂಗವನರಿದವರು./10
ಅರಿವುಸಂಬಂಧವುಳ್ಳ ಪರಿಪೂರ್ಣಜ್ಞಾನಿಗಳ
ಅಡಿಗಳಿಗೆ ನಾನೆರಗುವೆನಯ್ಯಾ.
ಎಡೆದೆರಹಿಲ್ಲದೆ ಮೃಡನ ನೆನೆವವರ
ಅಡಿಗಳಿಗೆ ನಾನೆರಗುವೆನಯ್ಯಾ.
ಕಡುಗಲಿಗಳ ಕಂಡಡೆ ಪರಶಿವನೆಂಬೆನಯ್ಯಾ ;
ಅಮುಗೇಶ್ವರಲಿಂಗವನರಿದ ಘನಮಹಿಮನೆಂಬೆನಯ್ಯಾ./11
ಅರುವತ್ತಾರುತತ್ವಂಗಳ ಮೇಲೆ ನಿನ್ನ ಅರಿವವರಿಲ್ಲ.
ಮೂವತ್ತಾರುತತ್ವಂಗಳ ಮೇಲೆ ನೀನು ರಚ್ಚೆಗೆ ಬಂದವನಲ್ಲ.
ಕೈಲಾಸಕ್ಕೆ ಬಂದು ನೀನು ಬ್ರಹ್ಮ ವಿಷ್ಣು ರುದ್ರನ ವಾದದಿಂದ
ಮರ್ತ್ಯಕ್ಕೆ ಬಂದವನಲ್ಲ.
ಅನಾದಿಯಿಂದ ಅತ್ತಲಾದ ಬಸವನಭಕ್ತಿಯ ನೋಡಲೆಂದು ಬಂದವನಲ್ಲದೆ
ಮಾಯಾವಾದದಿಂದ ಮರ್ತ್ಯಕ್ಕೆ ಬಂದನೆಂದು
ನುಡಿವವರ ನಾಲಗೆಯ ಕಿತ್ತು ಕಾಲು ಮೆಟ್ಟಿ ಸೀಳುವೆನು.
ಹೊಟ್ಟೆಯ ಸೀಳಿ, ಮುಳ್ಳಿನ ರೊಂಪೆಯ ಮಡಗುವೆನು ;
ಅದೇನು ಕಾರಣವೆಂದಡೆ
ಬಸವಣ್ಣಂಗೆ ಭಕ್ತಿಯ ತೋರಲೆಂದು,
ಚೆನ್ನಬಸವಣ್ಣಂಗೆ ಆರುಸ್ಥಲವನರುಹಲೆಂದು,
ಘಟ್ಟಿವಾಳ, ಮಹಾದೇವಿ, ನಿರವಯಸ್ಥಲದಲ್ಲಿ ನಿಂದ ಅಜಗಣ್ಣ, ಬೊಂತಲಾದೇವಿ
ಇಂತಿವರಿಗೆ ಸ್ವತಂತ್ರವ ತೋರಲೆಂದು ಬಂದೆಯಲ್ಲಾ.
ಅಮುಗೇಶ್ವರಲಿಂಗಕ್ಕೂ ಎನಗೂ ಪರತಂತ್ರವ ತೋರದೆ ಸ್ವತಂತ್ರನ ಮಾಡಿ ನಿರವಯಸ್ಥಲದಲ್ಲಿ ನಿಲ್ಲಿಸಿದೆಯಲ್ಲಾ, ಪ್ರಭುವೆ/12
ಅರೆಯಮೇಲೆ ಮಳೆ ಹೊಯಿದಂತೆ,
ಅರಿವುಳ್ಳವರಲ್ಲಿ ಅಗಮ್ಯವುಂಟೆ ?
ವಾಯು ರೂಪಾದುದುಂಟೆ ?
ಸರ್ವಸಂಬಂಧವ ಅರಿದ ಶರಣನ ಕಣ್ಣಿನಲ್ಲಿಕಂಡವರುಂಟೆ ?
ತಿಪ್ಪೆಯ ಮೇಲಣ ಅರುವೆಯ ಸುಟ್ಟಡೆ ದಗ್ಧವಾದಂತೆ ಇರಬೇಕು.
ಹೀಂಗಿರಬಲ್ಲಡೆ ಅನುಭಾವಿ ಎಂಬೆನಯ್ಯಾ,
ಅಭೇದ್ಯರೆಂಬೆನಯ್ಯಾ, ಅಂಗಲಿಂಗ ಸಂಬಂಧಿಗಳೆಂಬೆನಯ್ಯಾ.
ಲಿಂಗೈಕ್ಯರೆಂಬೆ ನಿಜವಿರಕ್ತರೆಂಬೆನಯ್ಯಾ.
ಹೀಂಗಲ್ಲದೆ ಆತ್ಮತೇಜಕ್ಕೆ ಹೋರಾಡುವ ಘಾತಕರ ನಿಜವಿರಕ್ತರೆಂಬರೆ ಅಮುಗೇಶ್ವರಾ ?/13
ಆಕಾಶಕ್ಕೆ ಹಾರುವಂಗೆ ದೋಟಿಯ ಕೋಲ ಹಂಗೇತಕಯ್ಯಾ ?
ಭೂಮಿಯ ಸೋಂಕದೆ ನಡೆವವಂಗೆ ಭೂಮಿಯ ಹಂಗೇತಕಯ್ಯಾ ?
ತನ್ನ ತಾನರಿಯದವಂಗೆ ಬಿನ್ನಾಣಿಗಳ ಮಾತೇತಕಯ್ಯಾ ?
ಅಗಮ್ಯವಾಗಿ ಚರಿಸುವಂಗೆ ಅಂಗನೆಯರ ಹಂಗೇತಕಯ್ಯಾ ?
ಅಮುಗೇಶ್ವರಲಿಂಗವನರಿದ ಶರಣಂಗೆ ಕಾವಿ ಕಾಷಾಂಬರವ ಹೊದ್ದು ತಿರುಗುವ ಕರ್ಮಿಗಳ ಹಂಗೇತಕಯ್ಯಾ ?/14
ಆರುಸ್ಥಲದಲ್ಲಿ ನಿಂದವಂಗೆ ಬೇರೊಂದು ಬ್ರಹ್ಮದ ಮಾತೇಕೆ ?
ಬೀದಿಯಲ್ಲಿ ನಿಂದು ನೀನೇನು, ತಾನೇನು ಎಂಬವಂಗೆ ಆದ್ಯರ ವಚನವೇಕೆ ?
ಗಗನವ ಮುಟ್ಟುವಂಗೆ ಅಗಣಿತನ ಸುದ್ದಿಯೇಕೆ ?
ಆರುಸ್ಥಲದಲ್ಲಿ ನಿಂದವಂಗೆ ಅಭೇದ್ಯನ ಸುದ್ದಿಯೇಕೆ ?
ಆರು ಸ್ಥಲವೆಂಬುವ ಷಟ್ಸ್ಥಲಜ್ಞಾನಿಗಳ
ಅರಿವು ಮೀರಿದ ಘನವು ನಿಮಗೇಕೆ ? ಅಮುಗೇಶ್ವರಲಿಂಗವನರಿಯರಣ್ಣಾ./15
ಆಸೆಯುಳ್ಳವಂಗೆ ಮಾಟಕೂಟವಲ್ಲದೆ,
ನಿರಾಸೆಯುಳ್ಳವಂಗೆ ಮಾಟಕೂಟವೇಕೆ ?
ಮನಪರಿಣಾಮಿಗೆ ಮತ್ಸರವೇಕೆ ?
ಸುತ್ತಿದ ಮಾಯಾಪ್ರಪಂಚವ ಜರಿದವಂಗೆ
ಅಂಗನೆಯರ ಹಿಂದು ಮುಂದೆ ತಿರುಗಲೇಕೆ ?
ಅಮುಗೇಶ್ವರನೆಂಬ ಲಿಂಗವನರಿದವಂಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ/16
ಇಮ್ಮೈಯ ಸಿರಿವಂತರ ಕಂಡಡೆ
ಎನ್ನಯ್ಯಾ, ಇತ್ತ ಬನ್ನಿ ಎಂಬರಯ್ಯಾ ;
ಕರ್ಮಿಗಳ ಕಂಡಡೆ ಕತ್ತಹಿಡಿದು ನೂಕೆಂಬರಯ್ಯಾ, ಲಿಂಗವನಪ್ಪಿದ ನಿಜಶರಣರು ಅಮುಗೇಶ್ವರಲಿಂಗವೆ./17
ಇಷ್ಟಲಿಂಗ ಭಿನ್ನವಾಗಲೊಡನೆ ತೆತ್ತಿಗರ ಕಂಡಲ್ಲಿ ವಸ್ತುವ ಬಿಡುವುದು.
ತೆತ್ತಿರಗ ಕಾಣದಿರ್ದಡೆ ನೀರು ನೇಣು ವಿಷ ಔಷಧಂಗಳಲ್ಲಿ
ವಸ್ತುವಿನೊಡನೆ ವಸ್ತುವ ಬಿಡಬೇಕು, ಇದಕ್ಕೆ ಸಂದೇಹವಿಲ್ಲ.
ಆವಾವ ಪ್ರಕಾರದಲ್ಲಿ ಹೋದಡೂ ಸಂದೇಹವಿಲ್ಲ ಲಿಂಗೈಕ್ಯಂಗೆ.
ಅಮುಗೇಶ್ವರಲಿಂಗವೆ, ನಿಮ್ಮ ಶರಣರು ಈರೇಳುಭುವನ ಹದಿನಾಲ್ಕುಲೋಕದಲ್ಲಿ ಲಿಂಗಸಹಿತ ಒಪ್ಪುವರು./18
ಇಷ್ಟಲಿಂಗವ ಪೂಜಿಸುವ ಗುಪ್ತಪಾತಕರನೊಲ್ಲೆ.
ಅದೇನು ಕಾರಣವೆಂದಡೆ,
ಆ ಲಿಂಗದ ಘನವನರಿದು ತ್ರಿಕಾಲಪೂಜೆಯ ಮಾಡಬಲ್ಲಡೆ ಮಹಾನುಭಾವಿಗಳೆಂಬೆ ಅಮುಗೇಶ್ವರಲಿಂಗವೆ./19
ಉತ್ತಮತೇಜಿಗೆ ಚಬುಕಿನಲ್ಲಿ ತೆಗೆವರುಂಟೆ ?
ಪಟ್ಟಣಕ್ಕೆ ಒಡೆಯನಾದ ಬಳಿಕ, ಜಾತಿಗೋತ್ರವನರಸಲುಂಟೆ ?
ಪರಮಸುಜ್ಞಾನಿಗೆ ಪ್ರಾಣದ ಹಂಗುಂಟೆ ?
ಲಿಂಗವನಪ್ಪಿದ ಶರಣನ ಕಂಡಕಂಡವರು ಜರಿದಡೆ, ಸಂದೇಹವುಂಟೆ ?
ಇಹಲೋಕದವರು ಜರಿದರೆಂದು ವಿಪರೀತಗೊಳಲೇಕೆ ?
ಅಮುಗೇಶ್ವರಲಿಂಗವನರಿದ ಶರಣಂಗೆ ಆರು ಹರಸಿದಡೇನು, ಆರು ಹಳಿದಡೇನು ?/20
ಉತ್ತಮತೇಜಿಯಮರಿಗೆ ಸುಪ್ಪತ್ತಿಗೆಯಲ್ಲದೆ
ಕತ್ತೆಯ ಮರಿಗೆ ಸುಪ್ಪತ್ತಿಗೆಯ ಹಾಸುವರೆ ?
ಅಜ್ಞಾನಿಗಳ ಹೃದಯದಲ್ಲಿ ಪರಮಾಮೃತವ ಸುರಿದಡೆ
ಪರರ ಕಾಡಿ ಬೇಡದೆ ಮಾಣ್ಬರೆ ?
ಕುಂಜರನ ವೇಷವ ತೊಟ್ಟು ಹಂದಿಯಂತೆ ತಿರುಗುವ ಅಜ್ಞಾನಿಗಳನೇನೆಂಬೆ ಅಮುಗೇಶ್ವರಾ ?/21
ಉತ್ತರಪಥಕ್ಕೆ ಹೋಗಿ ಮುಕ್ತಿಯನರಿದೆನೆಂಬವರು
ಅರಿಯಲಾರರು ನೋಡಾ.
ಭಕ್ತನಾದೆನೆಂಬವರೆಲ್ಲ ಭವಿಗಳಾದರು ನೋಡಾ.
ಜಂಗಮವಾದೆನೆಂಬವರೆಲ್ಲ ಜಗಭಂಡರಾದರು ನೋಡಾ.
ಲಿಂಗೈಕ್ಯನಾದೆನೆಂಬವರೆಲ್ಲ ಅಂಗವಿಕಾರಿಗಳಾದರು ನೋಡಾ.
ಅಮುಗೇಶ್ವರಲಿಂಗವನರಿಯದಜ್ಞಾನಿಗಳ ಲಿಂಗೈಕ್ಯರೆಂದಡೆ ಅಘೋರನರಕ ತಪ್ಪದು./22
ಉದರಪೋಷಣಕ್ಕೆ ಗಿಡುಗಿಡುದಪ್ಪದೆ ತಿರುಗುವ ಕುನ್ನಿ
ಒಡೆಯನ ಗುರುತಬಲ್ಲುದೆ ?
ಮಳೆಗಾಲದಲ್ಲಿ ಮೀನು ಮಿಡಿಚೆಯ ತಿಂಬ ನರಿ
ಕತ್ತಲೆಯಬಲ್ಲುದೆ ?
ಸತ್ತ ಹಂದಿಯ ತಿಂಬ ನಾಯಿ
ಬೆಳುದಿಂಗಳಬಲ್ಲುದೆ ?
ಕರ್ತನನರಿಯದ ವೇಷಧಾರಿಗಳು ನಿಮ್ಮನೆತ್ತ ಬಲ್ಲರು ಅಮುಗೇಶ್ವರಾ ?/23
ಉಪಮಾತೀತನಾದ ಶರಣನ ಉಪಾಧಿಕನೆನ್ನಬಹುದೆ ?
ತನ್ನ ತಾನರಿದ ಸಮ್ಯಗ್ಜ್ಞಾನಿಗೆ ನನ್ನವರು ತನ್ನವರೆಂಬ
ಭಾವದ ಭ್ರಾಂತಿನಭ್ರಮೆ ತಕ್ಕೆ ?
ಸಮ್ಯಜ್ಞಾನಿಯ ನಾನೇನೆಂಬೆನಯ್ಯಾ ಅಮುಗೇಶ್ವರಲಿಂಗವೆ. ?/24
ಎನ್ನ ಅಂಗದಲ್ಲಿ ಅಗಮ್ಯವಾಗಿ ಬಂದಬಳಿಕ,
ನಿನ್ನ ನೆನೆವವನಲ್ಲ ನಾನು.
ಎನ್ನ ಮನದಲ್ಲಿ ಮನೋಮೂರ್ತಿಯಾಗಿಪ್ಪೆಯಾಗಿ
ಮನದಲ್ಲಿ ನೆನೆವವನಲ್ಲವಯ್ಯಾ ನಿನ್ನ.
ನೀನೆ ಪತಿಯಾಗಿ ನಾನೆ ಸತಿಯಾದ ಕಾರಣ
ನಿನ್ನ ನೆನೆವವನಲ್ಲ ನಾನು ; ನಿನ್ನ ಪೂಜಿಸುವವನಲ್ಲ ನಾನು ;
ನಿನ್ನ ರಚಿಸುವವನಲ್ಲ.
ಎನಗೆ ನಿನಗೆ ಸಂದಿಲ್ಲದೆ ಸಮರಸವಯ್ಯಾ.
ಎನ್ನ ಅರ್ಚನೆ ಪೂಜನೆ ನಷ್ಟವಾಯಿತ್ತುದ
ಎನ್ನ ಕ್ರೀ ನಿಃಕ್ರೀಯ ಕೂಡಿತ್ತು.
ಸಂದಿಲ್ಲದ ಸಮರಸವಾಗಿ, ನಿಮ್ಮ ಸಂದೇಹವಿಲ್ಲದೆ ಕಂಡೆನು.
ಮಹಾಲಿಂಗ ಅಮುಗೇಶ್ವರಲಿಂಗವೆ, ನಿಮ್ಮ ಶರಣ ಪ್ರಭುದೇವರ ಘನವ ನಾನೇನೆಂದುಪಮಿಸುವೆನಯ್ಯಾ./25
ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ.
ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ.
ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವರನಾರನೂ ಕಾಣೆ.
ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚುವ
ಕೆಡಿಸುವವರನಾರನೂ ಕಾಣೆನಯ್ಯಾ.
ಆದ್ಯರ ವೇದ್ಯರ ವಚನಂಗಳಿಂದ
ಅರಿದೆವೆಂಬವರು ಅರಿಯಲಾರರು ನೋಡಾ.
ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು.
ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು.
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು.
ಎನ್ನ ಮನದಲ್ಲಿಪ್ಪ ಮಾಯಾಪ್ರಪಂಚವ ನಾನೆ ಕಳೆಯಬೇಕು.
ಅಮುಗೇಶ್ವರಲಿಂಗವ ನಾನೆ ಅರಿಯಬೇಕು./26
ಎನ್ನ ದೇಹವ ದಗ್ಭವ ಮಾಡಯ್ಯಾ.
ಎನ್ನ ಕಾಯದಲಿಪ್ಪ ಕರ್ಮವ ತೊಡೆಯಯ್ಯಾ.
ಎನ್ನ ಭಾವದಲಿಪ್ಪ ಭ್ರಮೆಯ ಜರಿಯಯ್ಯಾ. ನಾ ಹಿಡಿದ ಛಲವ ಬಿಡದೆ ನಡೆಸಯ್ಯಾ ಅಮುಗೇಶ್ವರಲಿಂಗವೆ./27
ಎಲ್ಲರೂ ಓದುವುದು ವಚನಂಗಳು
ಎಲ್ಲರೂ ನುಡಿವರು ಬೊಮ್ಮವ.
ಎಲ್ಲರೂ ಕೇಳುವುದು ವಚನಂಗಳು ;
ಹೇಳುವಾತ ಗುರುವಲ್ಲ, ಕೇಳುವಾತ ಶಿಷ್ಯನಲ್ಲ.
ಹೇಳಿಹೆ ಕೇಳಿಹೆನೆಂಬನ್ನಕ್ಕರ ವಿರಕ್ತಿಸ್ಥಲಕ್ಕೆ ಭಂಗನೋಡಾ, ಅಮುಗೇಶ್ವರಾ./28
ಒಡೆಯನ ಹೆಸರ ಹೇಳಿ ಒಡಲ ಹೊರೆವವರು ಕೋಟ್ಯಾನುಕೋಟಿ.
ಮೃಡನ ವೇಷವ ಧರಿಸಿ ಕಡುಗಲಿಗಳಾಗಿ
ಚರಿಸುವರ ಕಣ್ಣಿನಲ್ಲಿ ಕಾಣೆ.
ನುಡಿವರು, ಮಾತಿನಲ್ಲಿ ಬ್ರಹ್ಮವ ನುಡಿದಲ್ಲಿ ಫಲವೇನು ಲ
ಎನ್ನೊಡೆಯಾ, ಎನ್ನ ಬಿಡದೆ ಕಡುಗಲಿಯ ಮಾಡಯ್ಯಾ ಅಮುಗೇಶ್ವರಾ./29
ಒಡೆಯರ ಕಂಡಡೆ ಬಡಿವುದಯ್ಯಾ ಬಾಲವನು ಸುನಿ.
ಕೊಡುವ ಕೊಂಬುವರ ಕಂಡು ಅವರಡಿಗೆರಗುವರಯ್ಯಾ.
ಮೃಡನ ವೇಷವ ತೊಟ್ಟು
ಕುರಿಗಳಂತೆ ತಿರುಗುವ ಜಡಜೀವಿಗಳ ಕಂಡಡೆ,
ಮೃಡನ ಶರಣರು ಮೋರೆಯನೆತ್ತಿ ನೋಡರು ಕಾಣಾ ಅಮುಗೇಶ್ವರಾ./30
ಕಂಗಳ ಕಾಮವ ಜರಿದವರ ಕಂಡಡೆ
ಎನ್ನ ಲಿಂಗಯ್ಯಾ ಬನ್ನಿ ಬನ್ನಿ ಎಂಬರಯ್ಯಾ ಅ
ರುದ್ರಲೋಕದ ರುದ್ರಗಣಂಗಳೆಲ್ಲರು
ಬನ್ನಿ ಬನ್ನಿ ಎಂಬರಯ್ಯಾ ಅ
ಸರ್ವಲೋಕದ ಶ್ರೇಷ್ಠಜನಂಗಳು
ಸಾಷ್ಟಾಂಗವ ಎರಗುವರಯ್ಯಾ ಅ
ಬಸವಾದಿ ಪ್ರಮ ಥಗಣಂಗಳು ಕಂಡು
ಬಳಲಿದಿರಿ ಬಾರಯ್ಯಾ ಎಂದು ಅಡಿಗೆರಗುವರಯ್ಯಾ ಅ
ಅಮುಗೇಶ್ವರಲಿಂಗವನರಿದ ಶರಣರು ಅಡಿಗೆರಗುವರಯ್ಯಾ./31
ಕಣ್ಣಿಗೆ ಬಂದಂತೆ ಅನ್ಯದೇಶಕ್ಕೆ ಹೋಗುವ ಕುನ್ನಿಗಳಿಗೆ
ಬಣ್ಣದ ಮಾತೇಕೊ ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳುಳ್ಳವಂಗೆ
ಮಹಾಜ್ಞಾನಿಗಳ ಮಾತೇಕೊ ?
ಕತ್ತಲೆಯ ಕಳೆದು ನಿಶ್ಚಿಂತನಾದವಂಗೆ
ನಚ್ಚುಮೆಚ್ಚಿನ ರಚ್ಚೆಯ ಮಾತೇಕೊ ? ಅಮುಗೇಶ್ವರಲಿಂಗವನರಿದವಂಗೆ ?/32
ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು.
ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು.
ಇದಕ್ಕೆ ಗುರುವಿನ ಹಂಗೇಕೆ, ಲಿಂಗದಪೂಜೆ ಏಕೆ, ಸಮಯದ ಹಂಗೇಕೆ ?
ತನ್ನ ತಾನು ಅರಿದವಂಗೆ ಏಣಾಂಕನಶರಣರ ಸಂಗವೇಕೆ ?
ಇಷ್ಟವನರಿದವಂಗೆ ನಾನೇನು, ನೀನೇನು ಎಂಬ ಗೊಜಡಿನ ಭ್ರಮೆಯೇಕೆ ಅಮುಗೇಶ್ವರಾ ?/33
ಕತ್ತೆಯಂತೆ ಬತ್ತಲೆಯಿದ್ದಡೆನು, ಇಷ್ಟಲಿಂಗಸಂಬಂಧಿಯಾಗಬಲ್ಲನೆ ?
ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದಡೇನು, ನಿತ್ಯನಾಗಬಲ್ಲನೆ ?
ಅನಿತ್ಯವ ಹೊತ್ತುಕೊಂಡು ತಿರುಗುವ ಅಘೋರಿಗಳ ಕಂಡಡೆ ಮಾಗಿಯ ಕೋಗಿಲೆಯಂತೆ ಮೋರೆಯ ತೋರೆನು ಅಮುಗೇಶ್ವರಾ./34
ಕತ್ತೆಯನೇರಿ ಬಪ್ಪವರೆಲ್ಲಾ ನಿತ್ಯರಾಗಬಲ್ಲರೆ ?
ಉಪ್ಪು ಹುಳಿಯ ಮುಟ್ಟುವರೆಲ್ಲ ಕರ್ತನ ಕಾಣಬಲ್ಲರೆ ?
ಅಮುಗೇಶ್ವರನೆಂಬ ಲಿಂಗವನರಿದೆನೆಂಬವರು ಅರಿಯಲರಿಯರು ಆರಾರೂ./35
ಕನ್ನವನಿಕ್ಕುವ ಕಳ್ಳನು ಕನ್ನಗಳ್ಳನೆಂದು ಉಸುರುವನೆ ?
ಅನ್ಯರ ಕೂಡೆ ಬಣ್ಣಬಚ್ಚಣೆಯ ಮಾತಾಡುವ
ಅಣ್ಣ ಅಪ್ಪ ಎಂಬ ಕುನ್ನಿಗಳ ಮೆಚ್ಚುವನೆ ಅಮುಗೇಶ್ವರಲಿಂಗವು/36
ಕರ್ಮೆಂದ್ರಿಯಂಗಳ ಜರಿದು ಕಡುಗಲಿಯಾದೆನು.
ವರ್ಮವನತಿಗಳೆದು ನಿರ್ಮಳನಾದೆನು.
ಅಣ್ಣಾ ಅಪ್ಪಾ ಎಂದು ಬಿನ್ನಾಣದ ಮಾತ ನುಡಿಯೆನು.
ಅನ್ನ ಕೂಳಿಕ್ಕುವರ ಮನೆಯ ಕುನ್ನಿಗಳಾಗಿಪ್ಪವರ ಎನಗೆ ಸರಿ ಎಂಬೆನೆ ಅಮುಗೇಶ್ವರಾ ?/37
ಕಲಿಯುಳ್ಳವನಾಗಿ ಕಟ್ಟಿದೆನು ಬ್ರಹ್ಮನ ಮೇಲೆ ಬಿರಿದ.
ನಿತ್ಯವುಳ್ಳವನಾಗಿ ಕಟ್ಟಿದೆನು ವಿಷ್ಣುವಿನ ಮೇಲೆ ಬಿರಿದ.
ಅವಿರಳತತ್ವದಲ್ಲಿ ನಿಂದು, ಬಂದ ಭವಪಾಶಂಗಳ ಹರಿದು
ಕುಂದು ಹೆಚ್ಚಿಲ್ಲದೆ ಸಂದೇಹವನತಿಗಳೆದು ಕಟ್ಟಿದೆನು.
ಎನ್ನ ಕರಣಂಗಳ ಕಟ್ಟಿದೆನಾಗಿ ರುದ್ರನ ಮೇಲೆ ಕಟ್ಟಿದೆನು ಬಿರಿದ. ಅಮುಗೇಶ್ವರಲಿಂಗವು ಅಪ್ಪಿಕೊಂಡ ಭಾಷೆ./38
ಕಳ್ಳೆಯ ಸಂಗವ ಮಾಡಿ, ಕಾಯವಿಕಾರವ ಮುಂದುಗೊಂಡು
ನಿಜವಲ್ಲಭನ ಅರಿದೆನೆಂಬ ಕರ್ಮಿಗಳ ನೋಡಾ ;
ಘಟಹರಿದವನಂತೆ ಸಟೆದಿಟವನಾಡುವಿರಿ,
ಪಶುಪತಿಯ ಅರಿವೆನೆಂಬ ಪಾಷಂಡಿಗಳ ಮೆಚ್ಚುವನೆ ಅಮುಗೇಶ್ವರ ?/39
ಕಾಗೆಯಮರಿ ಕೋಗಿಲೆಯಾಗಬಲ್ಲುದೆ ?
ಆಡಿನಮರಿ ಆನೆಯಾಗಬಲ್ಲುದೆ ?
ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ ?
ಅರಿವು ಆಚಾರ ಸಮ್ಯಜ್ಞಾನವನರಿಯದೆ
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ./40
ಕಾದ ಹಾಲ ನೊಣ ಮುಟ್ಟಬಲ್ಲುದೆ ?
ಕಿಚ್ಚಿನೊಳಗಣ ಗುಂಡ ಬೆಕ್ಕು ಮುಟ್ಟಬಲ್ಲುದೆ ?
ಮರುಜವಣಿಯ ಕಡ್ಡಿ ಕಯ್ಯಲಿದ್ದವಂಗೆ ಸರ್ಪ ಕಡಿಯಬಲ್ಲುದೆ ?
ಈ ತ್ರಿವಿಧವನರಿದವಂಗೆ ಹಿಂದೆ ಶಂಕೆಯಿಲ್ಲ ; ಮುಂದೆ ಬಿತಿಯಿಲ್ಲ.
ಕಳಂಕು ಇಲ್ಲದೆ ಅಮುಗೇಶ್ವರಲಿಂಗವು ಅಪ್ಪಿಕೊಂಡಿತ್ತು./41
ಕಾಯವಿಕಾರಕ್ಕೆ ತಿರುಗುವರು ಕೋಟ್ಯಾನುಕೋಟಿ
ಕಡುಗಲಿಗಳನಾರನೂ ಕಾಣೆನಯ್ಯಾ.
ಅಂಗಶೃಂಗಾರಿಗಳಾಗಿ ತಿರುಗುವರು ಕೋಟ್ಯಾನುಕೋಟಿ
ಲಿಂಗಶೃಂಗಾರಿಗಳನಾರನೂ ಕಾಣೆನಯ್ಯಾ.
ವಚನರಚನೆಯ ಅರ್ಥ ಅನುಭಾವವ ಬಲ್ಲೆನೆಂದು
ಒಬ್ಬರನೊಬ್ಬರು ಜರಿದು ಸದ್ಯೋನ್ಮಕ್ತರಾದೆವೆಂಬ ಜಗಭಂಡರ ಮೆಚ್ಚುವನೆ ಅಮುಗೇಶ್ವರಲಿಂಗವು ?/42
ಕಾಲಾಡಿಯಂತೆ ದೇಶದೇಶಕ್ಕೆ ತಿರುಗಲೇತಕ್ಕೆ ?
ಪರಸಮಯದ ಜೈನನಂತೆ ನುಡಿಯಲೇತಕ್ಕೆ ?
ಅರಿವುಳ್ಳವರ ಕಂಡು ಅಗಮ್ಯವ ನುಡಿಯಲೇತಕ್ಕೆ ?
ಲಿಂಗವನಪ್ಪಿದ ನಿಜಮಹಿಮರ ಮಾತ ಕಲಿತು
ಮಂಡೆಯ ಬೋಳಿಸಿಕೊಂಡು ಈಶನ ವೇಷವ ತೊಟ್ಟು,
ಗ್ರಾಸಕ್ಕೆ ತಿರುಗುವ ವೇಷಧಾರಿಗಳ ಲಿಂಗೈಕ್ಯರೆಂದಡೆ ಅಘೋರನರಕ ತಪ್ಪದು ಕಾಣಾ, ಅಮುಗೇಶ್ವರಾ./43
ಕಾಲಿಲ್ಲದ ಕುದುರೆಯನೇರಿ ರಾವುತಿಕೆಯ ಮಾಡಬೇಕು.
ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು.
ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಸಾಡಬಲ್ಲಡೆ,
ಇಹಲೋಕಕ್ಕೆ ವೀರನೆಂಬೆ, ಪರಲೋಕಕ್ಕೆ ಧೀರನೆಂಬೆ, ಅಮುಗೇಶ್ವರಲಿಂಗಕ್ಕೆ ಅಧಿಕನೆಂಬೆ./44
ಕಾವಿ ಕಾಷಾಂಬರವ ಹೊದ್ದು ಕಾಮವಿಕಾರಕ್ಕೆ ತಿರುಗುವ
ಕರ್ಮಿಗಳಮುಖವ ನೋಡಲಾಗದು.
ಜಂಗಮವಾಗಿ ಜಗದಿಚ್ಫೆಯ ನುಡಿವ
ಜಂಗುಳಿಗಳಮುಖವ ನೋಡಲಾಗದು.
ಲಿಂಗೈಕ್ಯರೆನಿಸಿಕೊಂಡು ಅಂಗವಿಕಾರಕ್ಕೆ ತಿರುಗುವ
ಲಿಂಗದ್ರೋಹಿಗಳ ಮುಖವ ನೋಡಲಾಗದು ಕಾಣಾ, ಅಮುಗೇಶ್ವರಲಿಂಗವೆ./45
ಕಿರಿ ಕಿರಿದ ನುಡಿದು ಮರಣಕ್ಕೆ ಒಳಗಾಗುವರ ಗಂಡ.
ಬ್ರಹ್ಮವ ನುಡಿದು ಬ್ರಹ್ಮನ ಬಲೆಯಲ್ಲಿ ಸಿಲುಕುವ ಭವಿಗಳ ಗಂಡ.
ನಿತ್ಯವ ನುಡಿದು ವಿಷ್ಣುವಿನ ಬಲೆಯಲ್ಲಿ ಸಿಲುಕುವ ವಿಕಾರಿಗಳ ಗಂಡ.
ಅಮುಗೇಶ್ವರಲಿಂಗವನರಿಯದ ಅಜ್ಞಾನಿಗಳ ಗಂಡ ?/46
ಕುಂಜರನ ಮರಿಯ ಸರಪಳಿಯಲ್ಲಿ ಕಟ್ಟುವರಲ್ಲದೆ,
ಹಂದಿಯ ಮರಿಯ ಸರಪಳಿಯಲ್ಲಿ ಕಟ್ಟುವರೆ ಅಯ್ಯಾ ಲ
ಸಿಂಹದ ಮರಿಯ ಕಂಡಡೆ ಸೋಜಿಗಬಡುವರಲ್ಲದೆ,
ಸಿಂಗಳೀಕನ ಮರಿಯ ಕಂಡಡೆ ಸೋಜಿಗಬಡುವರೆ ಅಯ್ಯಾ ಲ
ಕಸ್ತೂರಿಯಮೃಗವ ಕಂಡಡೆ ಆಶ್ಚರ್ಯಗೊಂಬರಲ್ಲದೆ
ಕತ್ತೆಯಮರಿಯ ಕಂಡಡೆ ಕಣ್ಣಿನಲ್ಲಿ ನೋಡರು ನೋಡಾ ಅ
ಲಿಂಗವನಪ್ಪಿ ಅಗಲದಿಪ್ಪ ಲಿಂಗೈಕ್ಯನ ಕಂಡಡೆ
ಜಗವೆಲ್ಲಾ ಕೊಂಡಾಡುತಿಪ್ಪರು ನೋಡಾ ಅ
ಅಮುಗೇಶ್ವರನೆಂಬ ಲಿಂಗವನರಿಯದ ಅಜ್ಞಾನಿಗಳ ಕಂಡಡೆ ಕತ್ತೆಯಮರಿಯೆಂದು ಕಣ್ಣುಮುಚ್ಚಿಕೊಂಡಿಪ್ಪರು ನೋಡಾ ಅ/47
ಕುಲವನತಿಗಳೆದವಂಗೆ ಕುಲದ ಹಂಗೇತಕಯ್ಯಾ ?
ಬಲ್ಲೆನೆಂಬವಂಗೆ ಗೆಲ್ಲಸೋಲದ ಹಂಗೇತಕಯ್ಯಾ ?
ಅಮುಗೇಶ್ವರನೆಂಬ ಲಿಂಗವನರಿದ ಶರಣಂಗೆ
ಈ ಸಮಯದ ಹಂಗೇತಕಯ್ಯಾ ?/48
ಕೊಂಬಿನಕುರಿಯಂತೆ ಕೂಗಿದಡೇನು, ಲಿಂಗೈಕ್ಯರಾಗಬಲ್ಲರೆ ?
ಕೋಟ್ಯಾನುಕೋಟಿಯನೋದಿದಡೇನು, ಸಾತ್ವಿಕರಾಗಬಲ್ಲರೆ ?
ಬೆನ್ನುಹುಳಿತ ಕೋಣನಂತೆ ಮನೆಮನೆಯ ತಿರಿದುಂಡಡೇನು,
ಮಹಾಜ್ಞಾನಿಯಾಗಬಲ್ಲರೆ ?
ಅಮುಗೇಶ್ವರಲಿಂಗವನರಿಯದವರು ಓದಿದಡೇನು ?
ಕತ್ತೆ ಬೂದಿಯಲ್ಲಿ ಬಿದ್ದಂತಾಯಿತು./49
ಕೋಣವನೇರಿ ಕೋಡಗದಾಟನಾಡುವಂಗೆ
ಭಾರವಣಿಯ ಸುದ್ದಿಯೆಲ್ಲಿಯದು ಲ
ಕರ್ತನನರಿಯದ ಕರ್ಮಿಗಳ ಕೈಯಲ್ಲಿ ಇಷ್ಟಲಿಂಗವಿರ್ದು ಫಲವೇನು, ಅಮುಗೇಶ್ವರಾ ಲ/50
ಗಡ್ಡ ಮಂಡೆಯ ಬೋಳಿಸಿಕೊಂಡವರೆಲ್ಲ ಕಬ್ಬಲಿಗರಮಕ್ಕಳೆಂಬೆ.
ಬತ್ತಲೆ ಇಪ್ಪವರೆಲ್ಲ ಕುಂಚಿಗನ ಮಕ್ಕಳೆಂಬೆ.
ಪಟ್ಟಣಕ್ಕೆ ಹೋಗಿ ಹೆಸರ ಹೇಳುವ ಜಾತಿಕಾರನಂತೆ
ಅರ್ಥ ಅನುಭಾವವ ಬಲ್ಲೆನೆಂದು ಅಗಮ್ಯವ ಬೀರುವ
ಅಫ್ಸೊರಿಗಳ ವಿರಕ್ತರೆನ್ನಬಹುದೆ ರಿನಲಾಗದು.
ವಚನದ ರಚನೆಯ ಅರಿದೆನೆಂಬ
ಅಹಂಕಾರವ ಮುಂದುಗೊಂಡು ತಿರುಗುವ
ಆತ್ಮತೇಜದ ಘಾತಕರ ವಿರಕ್ತರೆನಲಾಗದಯ್ಯಾ.
ವಿರಕ್ತನ ಪರಿಯ ಹೇಳಿಹೆನು ಕೇಳಿರಣ್ಣಾ ತ
ವಾಯು ಬೀಸದ ಉದಕದಂತಿರಬೇಕುದ
ಅಂಬುದಿಯೊಳಗೆ ಕುಂಭ ಮುಳುಗಿದಂತಿರಬೇಕುದ
ದರಿದ್ರಗೆ ನಿಧಾನಸೇರಿದಂತಿರಬೇಕುದ
ರೂಹಿಲ್ಲದ ಮರುತನಂತಿರಬೇಕುದ
ಹಿಂಡನಗಲಿದ ಮದಗಜ ಹಿಂಡಸೇರಿದಂತಿರಬೇಕುದ
ಸಂದೇಹ ಸಂಕಲ್ಪ ಮುಂದುಗೊಳ್ಳದೆ ಇರಬೇಕು.
ಅಂಗಲಿಂಗಿಗಳಲ್ಲಿ ಲಿಂಗಾರ್ಪಿತಕ್ಕೆ ಹೋಗಿ
ಬಂದುದನತಿಗಳೆಯದಿದ್ದಡೆ ವಿರಕ್ತರೆಂಬೆನು.
ರೋಗರುಜಿನಂಗಳು ಬಂದಲ್ಲಿ ಕಿಂಕಿಲನಾಗದೆ ಇರಬಲ್ಲಡೆ ಅಮುಗೇಶ್ವರಲಿಂಗವೆಂಬೆನು./51
ಗರುಡಿಯಲ್ಲಿ ಸಾಮುವ ಮಾಡುವರಲ್ಲದೆ,
ಕಾಳಗದಲ್ಲಿ ಸಾಮುವ ಮಾಡುವರೆ ಲ
ಆದ್ಯರ ವಚನಂಗಳ, ಅರಿವುಸಂಬಂದಿಗಳಲ್ಲಿ
ಅರಿದಬಳಿಕ ಬಿಡಬೇಕು.
ಅವರು ಕಡುಗಲಿಗಳಾಗಿ ಆಚರಿಸುವ ನಿಜವಿರಕ್ತರ ಎನಗೊಮ್ಮೆ ತೋರಾ ಅಮುಗೇಶ್ವರಾ./52
ಗುರುವಿನಡಿಗೆರಗೆನೆಂಬ ಭಾಷೆ ರಿನಗೆ.
ಲಿಂಗವ ಪೂಜಿಸಿ ವರವ ಬೇಡೆನೆಂಬ ಭಾಷೆ ಎನಗೆ.
ಜಡೆಮುಡಿಯುಳ್ಳ ನಿಜಜಂಗಮವ ಕಂಡು
ಅಡಿಗೆರಗದ ಭಾಷೆ ಎನಗೆ.
ಹಿಡಿದ ಛಲವ ಬಿಡದೆ ನಡೆಸಿ
ಮೃಡನ ಪಡೆದೆಹೆನೆಂಬ ಭಾಷೆ ಎನಗೆ.
ಕಡುಗಲಿಯಾಗಿ ಆಚರಿಸಿ ಜಡಿದೆನು
ಅಜ್ಞಾನಿಗಳ ಬಾಯ ಕೆರಹಿನಲ್ಲಿ.
ಮಾತಿನಲ್ಲಿ ವೇಷಧಾರಿಗಳು ಮೃಡನ ಅರಿದೆಹೆನೆಂದು ಗಳಹುತಿಪ್ಪರೆ,
ಕೆರಹಿನಟ್ಟೆಯಲ್ಲಿ ಹೊಯ್ಯದೆ ಮಾಣ್ಬನೆ ಅರಿವುಳ್ಳ ಘನಮಹಿಮನು ಲ
ಅಮುಗೇಶ್ವರನೆಂಬ ಲಿಂಗವ ಅರಿದಿಪ್ಪ ಮಹಾಘನಮಹಿಮನ ನಾನೇನೆಂಬೆನಯ್ಯಾ ಲ/53
ಗುರುವೆಂಬೆನೆ, ಗುರುವು ನರನುದ
ಲಿಂಗವೆಂಬೆನೆ, ಲಿಂಗವು ಕಲ್ಲುದ
ಜಂಗಮವೆಂಬೆನೆ, ಜಂಗಮವು ಆತ್ಮನುದ
ಪಾದೋದಕವೆಂಬೆನೆ, ಪಾದೋದಕ ನೀರುದ
ಪ್ರಸಾದವೆಂಬೆನೆ, ಪ್ರಸಾದ ಓಗರ.
ಇಂತೆಂದುದಾಗಿ,
ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧವ ಹಿಡಿದ ಕಾರಣ,
ಗುರುವೆಂಬವನು ನರನು.
ಅಷ್ಟವಿಧಾರ್ಚವೆ ಷೋಡಶೋಪಚಾರಕ್ಕೆ ಒಳಗಾದ ಕಾರಣ,
ಲಿಂಗವೆಂಬುದು ಕಲ್ಲು.
ಆಶೆಪಾಶೆಗೆ ಒಳಗಾದ ಕಾರಣ,
ಜಂಗಮವೆಂಬುದು ಆತ್ಮನು.
ಲಾಂಛನಿಗಳೆಂದು ಕಾಂಚನಕ್ಕೆ ಕೈಯಾನುವರಲ್ಲಿ
ಪಾದೋದಕ ಪ್ರಸಾದವೆಂದು ಕೊಂಡೆನಾದಡೆ
ಕೆಸರಿನೊಳಗೆ ಬಿದ್ದ ಪಶುವಿನಂತೆ ಆಯಿತ್ತು ಕಾಣಾ
ಅಮುಗೇಶ್ವರಾ./54
ಚಂದ್ರಸೂರ್ಯರಿಬ್ಬರೂ ಬಂಧನಕ್ಕೆ ಬಪ್ಪುದ ಕಂಡೆ.
ಬ್ರಹ್ಮ ವಿಷ್ಣು ಭವಕ್ಕೆ ಗುರಿಯಾದುದ ಕಂಡೆ.
ದೇವ ದಾನವ ಮಾನವರು ಮಾಯಾಯೋನಿಮುಖವಾದುದ ಕಂಡೆ.
ಬಟ್ಟಬಯಲಲ್ಲಿ ನಿಂದು ನಿಮ್ಮ ಮುಟ್ಟಿದೆನಯ್ಯಾ ಅಮುಗೇಶ್ವರಾ./55
ಚಿನ್ನಗಣೆಯ ಕಟ್ಟಿದವರೆಲ್ಲ
ಹೊನ್ನಿನ ನೋಟವ ಬಲ್ಲರೆ ?
ಕರ್ಮಕೆ ಗುರಿಯಾದವರು
ನಿಮ್ಮನೆತ್ತ ಬಲ್ಲರೊ ಅಮುಗೇಶ್ವರಾ ಲ /56
ಜ್ಞಾನವೆಂಬುದು ಬೀದಿಯ ಪಸರವೆ ?
ಬೊಕ್ಕಣಕ್ಕೆ ತುಂಬುವ ಹುರುಳಿಯೆ ?
ಚೀಲದೊಳಗಣ ಜೀರಿಗೆಯೆ ?
ಗಾಣದೊಳಗಣ ಹಿಂಡಿಯೆ ?
ಜ್ಞಾನವೆಂಬುದ ಎಲ್ಲರೊಡನೆ ಬೀರದಿರಬೇಕು.
ಗೆಲ್ಲ ಸೋಲಿನ ಮಾತು ಬಂದಡೆ ಗೆಲ್ಲವ ನುಡಿಯದಿರಬೇಕು ಅಮುಗೇಶ್ವರಲಿಂಗವೆಂಬೆನು./57
ತುಪ್ಪ ಬೋನವನುಂಡು, ನಚ್ಚುಮಚ್ಚಿನ ಮಾತ ನುಡಿದು,
ರಚ್ಚೆಯಲ್ಲಿ ಕುಳಿತು ಇಷ್ಟಲಿಂಗವನಪ್ಪಿದವರ ನಿತ್ಯಜ್ಞಾನಿಗಳೆಂದಡೆ
ಪ್ರತ್ಯಕ್ಷವಾಗಿ ಸುರಿಯವೆ ಬಾಯಲ್ಲಿ ಬಾಲಹುಳು ?
ನಿತ್ಯರ ಕಂಡು ನಿಂದಿಸಿ ವಂದಿಸಿದಡೆ
ಪ್ರತ್ಯಕ್ಷವಾಗಿ ಪರಶಿವನ ಶರಣರು ಹೊಟ್ಟೆಯ ಸೀಳದೆ ಮಾಣ್ಬರೆ ?
ಅಮುಗೇಶ್ವರಲಿಂಗವನರಿಯದೆ
ಬರಿಯ ಮಾತಿನಲ್ಲಿ ಅರಿವು ಸಂಬಂದಿಗಳೆಂದಡೆ,
ನೀವು ಸಾಕ್ಷಿಯಾಗಿ ಮಾರಿಗೆ ಹೊಯಿದ ಕೋಣನ ಕೊರಳ ಕೊಯಿದಂತೆ ಕೊಯ್ವರಯ್ಯಾ./58
ತೆತ್ತಿಗರು ಬಂದು ನಿತ್ಯನಾದೆಯಾ ಎಂದಡೆ,
ಬಿಚ್ಚದಿರಬೇಕು ತನ್ನ ಶಿವಜ್ಞಾನವ.
ತೆತ್ತಿಗರು ಕಂಡು ಮುಕ್ತನಾದೆಯಾ ಎಂದಡೆ,
ಬಿಚ್ಚದಿರಬೇಕು ಅಮುಗೇಶ್ವರಲಿಂಗದ ಅರಿವ./59
ತೊಗಲಬೊಕ್ಕಣದಲ್ಲಿ ಪಾಷಾಣವ ಕಟ್ಟುವರಲ್ಲದೆ
ಪರುಷವ ಕಟ್ಟುವರೆ ?
ಮಣ್ಣಹರವಿನಲ್ಲಿ ಸುರೆಯ ತುಂಬುವರಲ್ಲದೆ
ರತ್ನವ ತುಂಬುವರೆ ?
ಆದ್ಯರ ವಚನಂಗಳಿರ್ದುದ ಕಾಣಲರಿಯದೆ
ನಾ ಘನ ತಾ ಘನವೆಂದು ಅಗಮ್ಯವ ಬೀರುವ
ಅಜ್ಞಾನಿಗಳ ವಿರಕ್ತರೆಂಬೆನೆ ? ಅನುಭಾವಿಗಳೆಂಬೆನೆ ?
ನಿಜವನರಿದ ಲಿಂಗೈಕ್ಯರೆಂಬೆನೆ ? ಅಮುಗೇಶ್ವರಲಿಂಗವನರಿಯದಜ್ಞಾನಿಗಳ ಆರೂಢರೆಂಬೆನೆ ?/60
ದೇಶದೇಶವ ತಿರುಗಿ ಮಾತುಗಳ ಕಲಿತು,
ಗ್ರಾಸಕ್ಕೆ ತಿರುಗುವ ದಾಸಿವೇಶಿಯ ಮಕ್ಕಳ ವಿರಕ್ತರೆಂಬೆನೆ ?
ತನುವಿನಲ್ಲಿಪ್ಪ ತಾಮಸವ ಕಳೆಯದೆ
ಕಾಬವರ ಕಂಡು ವಿರಕ್ತರೆಂದಡೆ, ಕುಂಬಿಪಾತಕ ನಾಯಕನರಕ ತಪ್ಪದು ಅಮುಗೇಶ್ವರಾ./61
ದೇಹವಿಲ್ಲದೆ ಸುಳಿಯಬಲ್ಲಡೆ ಲಿಂಗೈಕ್ಯನೆಂಬೆನು.
ಭಾವವಿಲ್ಲದೆ ಭ್ರಮಿತನಾಗಬಲ್ಲಡೆ ನಿರ್ಲೆಪಿಯೆಂಬೆನು.
ಬಂದ ಬಂದ ಭೇದವನರಿದು
ಲಿಂಗಾರ್ಪಿತವ ಮಾಡಬಲ್ಲಡೆ ಲಿಂಗೈಕ್ಯನೆಂಬೆನುದ ಅಮುಗೇಶ್ವರಲಿಂಗವನರಿದ ಆರೂಢನೆಂಬೆನು./62
ಧೀರನೆಂದು ಬೀದಿಯಲ್ಲಿ ನುಡಿಯಲೇಕೆ ?
ಕಾವಲ್ಲಿ ಕಾಣಬಹುದು.
ವಿರಕ್ತನೆಂದು ನುಡಿಯ ನುಡಿಯಲೇಕೆ?
ಮಹಾಜ್ಞಾನಿಗಳು ನೋಡಾದೊಡನೆ ಕಾಣಬಹುದು.
ನಾನೆ ಬ್ರಹ್ಮವೆಂಬ ಭವಗೇಡಿಗಳ ಮೆಚ್ಚುವನೆ ಅಮುಗೇಶ್ವರಲಿಂಗವು ?/63
ನವನಾರಿಕುಂಜರ ಪಂಚನಾರಿತುರಂಗವೆಂಬವನ ಮೇಲೆ
ಬಿರಿದ ಕಟ್ಟಿದ ಬಳಿಕ,
ಪರಶಿವಂಗೆ ಸಾಕಾರವಾಗಿರಬೇಕು.
ಬಸವಾದಿ ಪ್ರಮ ಥರಿಗೆ ಬಲುಗಯ್ಯನಾಗಿರಬೇಕು.
ಬಸವಣ್ಣಂಗೆ ಲಿಂಗವಾಗಿರಬೇಕು.
ಪ್ರಭುದೇವರಿಗೆ ಪ್ರಣವಸ್ವರೂಪವಾಗಿರಬೇಕು.
ಅಮುಗೇಶ್ವರನೆಂಬ ಲಿಂಗವನರಿದಡೆ ನಿರ್ಭೆದ್ಯನಾಗಿ ನಿಜಲಿಂಗೈಕ್ಯನಾಗಿಪ್ಪನಯ್ಯಾ./64
ನಾನೆ ಕರ್ತನೆಂದು ಹಾಡಿದೆನು ವಚನವ.
ನಾನೆ ನಿತ್ಯನೆಂದು ಕಟ್ಟಿದೆನು ಬಿರಿದ.
ನಾನೆ ನಿರವಯಸ್ಥಲದಲ್ಲಿ ನಿಂದು ಓದಿದೆನು ವಚನವ.
ನಾ ಓದಿದುದೆಲ್ಲಾ ನೀ ಓದಿದುದುದ
ನಾ ಕಟ್ಟಿದ ಬಿರಿದು ನಿನ್ನ ಬಿರಿದು.
ನಾನರಿದ ಅರಿವೆಯಲ್ಲಾ ನಿನ್ನರಿವು.
ನಾ ಕಟ್ಟಿದ ಬಿರಿದಿಂಗೆ ಹಿಂದೆಗೆವನಲ್ಲ.
ಅಮುಗೇಶ್ವರಲಿಂಗಕ್ಕೂ ಎನಗೂ ಪ್ರಭುದೇವರೆ ಗುರುವಲ್ಲದೆ ಈರೇಳುಲೋಕ ಹದಿನಾಲ್ಕುಭುವನದಲ್ಲಿ ಆರನೂ ಕಾಣೆ/65
ನಾನೆ ಗುರುವಾದಬಳಿಕ ಇನ್ನಾರ ನೆನೆವೆನಯ್ಯಾ ?
ನಾನೆ ಲಿಂಗವಾದಬಳಿಕ ಇನ್ನಾರ ನೆನೆವೆನಯ್ಯಾ ?
ನಾನೆ ಜಂಗಮವಾದಬಳಿಕ ಇನ್ನಾರ ನೆನೆವೆನಯ್ಯಾ ?
ಎನಗೆ ಗುರುವಾದಾತನು ನೀನೆ, ಎನಗೆ ಲಿಂಗವಾದಾತನು ನೀನೆ.
ಎನಗೆ ಜಂಗಮವಾದಾತನು ನೀನೆ.
ಎನಗೆ ಪಾದೋದಕ ಪ್ರಸಾದವಾದಾತನು ನೀನೆ. ಅಮುಗೇಶ್ವರಲಿಂಗವಾಗಿ ಎನ್ನ ಕರಸ್ಥಲಕ್ಕೆ ಬಂದಾತನು ನೀನೆ, ಪ್ರಭುವೆ/66
ನಾನೆ ಗುರುವಾದಬಳಿಕ ಗುರುವೆಂಬುದಿಲ್ಲ.
ನಾನೆ ಲಿಂಗವಾದಬಳಿಕ ಲಿಂಗವೆಂಬುದಿಲ್ಲ.
ನಾನೆ ಜಂಗಮವಾದಬಳಿಕ ಜಂಗಮವೆಂಬುದಿಲ್ಲ.
ನಾನೆ ಪ್ರಸಾದವಾದಬಳಿಕ ಪ್ರಸಾದವೆಂಬುದಿಲ್ಲ.
ಅಮುಗೇಶ್ವರನೆಂಬ ಲಿಂಗವು ತಾನೆಯಾದಬಳಿಕ ಲಿಂಗವನರಿದೆನೆಂಬ ಹಂಗಿನವನಲ್ಲ./67
ನಿಜವನರಿದ ವಿರಕ್ತನು ನಿಜಾನುಭಾವಿಯೆಂದು ನುಡಿವನೆ ?
ಅತ್ಯತಿಷ್ಠದ್ದಶಾಂಗುಲನೆಂಬ ಘನವನರಿದು
ಕತ್ತಳೆಯ ಮನೆಯಲ್ಲಿ ಮಧುರವ ಸವಿದಂತೆ ಇರಬೇಕು, ಕಾಣಾ ಅಮುಗೇಶ್ವರಾ./68
ನಿತ್ಯನಾಗಿ ಇಷ್ಟಲಿಂಗವನಪ್ಪಿದ ಶರಣನಿರವ
ಭ್ರಷ್ಟಭವಿಗಳೆತ್ತ ಬಲ್ಲರೊ ?
ನೆಟ್ಟನೆ ನಿಂದು ಮುಟ್ಟಿದೆನು ಶಿವನ ಪಾದವದ
ಎನ್ನಲಿ ಕೆಟ್ಟಗುಣ ಹೊದ್ದಲಿಲ್ಲವೆಂದು
ಮುಟ್ಟಿದೆನು ಎನ್ನ ಇಷ್ಟಲಿಂಗವ.
ಕೆಟ್ಟ ಭವಭಾರಿಗಳ ಕಂಡಡೆ ಭ್ರಷ್ಟರೆಂದು ನಿಮ್ಮನಪ್ಪಿಕೊಂಬೆನು ಅಮುಗೇಶ್ವರಾ./69
ನಿರವಯಸ್ಥಲದಲ್ಲಿ ನಿಂದ ಅಭೇದ್ಯನ
ಅರಿವಿನ ವಚನವುಳ್ಳವಂಗೆ ಅಂಗದ ಹಂಗೇಕೆ ?
ಅರಿವುಳ್ಳವಂಗೆ ಗುರುವಿನ ಹಂಗೇಕೆ ?
ಅರಿವುಳ್ಳವಂಗೆ ಲಿಂಗದ ಹಂಗೇಕೆ ?
ಅರಿವುಳ್ಳವಂಗೆ ಜಂಗಮದ ಹಂಗೇಕೆ ?
ಅರಿವುಳ್ಳವಂಗೆ ಪಾದೋದಕ ಪ್ರಸಾದದ ಹಂಗೇಕೆ ?
ಅರಿವುಳ್ಳವಂಗೆ ಅಮುಗೇಶ್ವರಲಿಂಗವನರಿದೆನೆಂಬ ಸಂದೇಹವೇಕೆ ?/70
ನಿರವಯಸ್ಥಲದಲ್ಲಿ ನಿಂದ ಬಳಿಕ
ಹೊನ್ನ ಹಿಡಿಯೆನೆಂಬ ಭಾಷೆ ಎನಗೆ.
ಹೆಣ್ಣು ಹೊನ್ನು ಮಣ್ಣು ಹಿಡಿದು ಲಿಂಗೈಕ್ಯನಾದೆನೆಂದಡೆ
ಎನ್ನ ಅಂಗದ ಮೇಲೆ ಲಿಂಗವಿಲ್ಲ.
ಪಟ್ಟೆಮಂಚ ಹಚ್ಚಡ ಬಂದಡೆ ದಿಟ್ಟಿಸಿ ನೋಡೆ.
ಸಣ್ಣ ಬಣ್ಣಗಳು ಬಂದಡೆ ಕಣ್ಣೆತ್ತಿ ನೋಡೆನೆಂಬ ಭಾಷೆ ಎನಗೆ.
ಎನ್ನ ಲಿಂಗಕ್ಕೆ ಸೆಜ್ಜೆ ಶಿವದಾರವ
ಬಾಯೆತ್ತಿ ಭಕ್ತ ಜಂಗಮವ ಬೇಡಿದೆನಾದಡೆ,
ಎನ್ನ ಅರುವಿಂಗೆ ಭಂಗ ನೋಡಾ.
ಬಸವಣ್ಣ ಸಾಕ್ಷಿಯಾಗಿ, ಪ್ರಭುವಿಗರಿಕೆಯಾಗಿ.
ಪ್ರಭುದೇವರ ಕಂಡು ಕೈಯಲ್ಲಿ ಕಟ್ಟಿದ ಬಿರಿದಿಂಗೆ ಹಿಂದೆಗೆದೆನಾದಡೆ
ಎನಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ,
ಪಾದೋದಕ ಪ್ರಸಾದವೆಂಬುದು ಎಂದೆಂದಿಗೂ ಇಲ್ಲ.
ಅಮುಗೇಶ್ವರನೆಂಬ ಲಿಂಗವು ಸ್ವಪ್ನದಲ್ಲಿ ಸುಳಿಯಲಿಲ್ಲ./71
ನಿರವಯಸ್ಥಲದಲ್ಲಿ ನಿಂದ ಲಿಂಗೈಕ್ಯಂಗೆ
ಸಂದೇಹವುಂಟೆ ? ಸಂಕಲ್ಪವುಂಟೆ ?
ಹೇಹ ಉಂಟೆ ನಿಜವನರಿದವಂಗೆ ?
ಇಂತೀ ತ್ರಿವಿಧವನರಿದಡೆ ಲಿಂಗೈಕ್ಯನೆಂಬೆನು.
ಅರಿಯದಿರ್ದಡೆ ಕತ್ತೆ ಪರ್ವತಕ್ಕೆ ಹೋಗಿ,
ಕಲ್ಲನೆಡಹಿ ಕಾಲು ಮುರಿದಂತಾಯ್ತು ಕಾಣಾ ಅಮುಗೇಶ್ವರಲಿಂಗವನರಿಯದ ಅಜ್ಞಾನಿಗಳಿಗೆ./72
ನಿಶ್ಚಿಂತಂಗೆ ಅಚ್ಚುಗದ ಮಾತೇಕೆ ?
ಬಟ್ಟಬೋಳರಂತೆ ಹುಚ್ಚುಗೆಲೆಯಲೇಕೆ ?
ಹೋಗಿ ಬರುವವರ ಮಚ್ಚಿ ಒಂದೂರಲ್ಲಿ ಇಚ್ಫೆಯ ನುಡಿದವಂಗೆ ಬಿಚ್ಚಬಣ್ಣನೆಯ ಮಾತೇಕೆ, ಅಮುಗೇಶ್ವರಾ ?/73
ನೀರೊಳಗೆ ಹೋದವನ ಹೆಜ್ಜೆಯ ಕಾಬವರುಂಟೆ ?
ಅಂದಳವನೇರಿದ ಆತ್ಮನ ಹೆಜ್ಜೆಯ ಕಾಬವರುಂಟೆ ?
ಆನೆಯನೇರಿಕೊಂಡು ಅರಿವನರಸುವನಂತೆ,
ಜ್ಞಾನಿಗಳ ಸಂಗದಲ್ಲಿರ್ದು ಆತ್ಮತೇಜಕ್ಕೆ ಹೋರುವನಂತೆ,
ನಾನುನೀನೆಂಬುದನಳಿದು ತಾನೆಯಾಗಿರಬಲ್ಲಡೆ ಅಮುಗೇಶ್ವರಲಿಂಗವು ತಾನೆ ಎಂಬೆನು./74
ನೊಸಲಿನಲ್ಲಿ ಮೂರು ಕಣ್ಣುಳ್ಳ ಪಶುಪತಿಯಾದಡೂ ಆಗಲಿ,
ಆದ್ಯರ ವಚನಂಗಳಲ್ಲಿ,
ಹೊನ್ನ ಹಿಡಿದವರು ಗುರುದ್ರೋಹಿಗಳುದ
ಹೆಣ್ಣ ಹಿಡಿದವರು ಲಿಂಗದ್ರೋಹಿಗಳುದ
ಮಣ್ಣ ಹಿಡಿದವರು ಜಂಗಮದ್ರೋಹಿಗಳುದ
ಹೀಗೆಂದು ಸಾರುತ್ತವೆ ವೇದ.
ಹಿಡಿದ ಆಚರಣೆ ಅನುಸರಣೆಯಾಗಿ, ತ್ರಿವಿಧವ ಹಿಡಿದು,
ನಾನೆ ಬ್ರಹ್ಮವೆಂದು ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿಗಳು
ಎಂಬ ಭವಕರ್ಮಿಗಳಿಗೆ ನರಕವೆ ಪ್ರಾಪ್ತಿ ನೋಡಾ ?
ಲಿಂಗವಂತನೆಂಬೆನೆ ಜಂಗಮವೆಂಬೆನೆ ?
ಹಿಡಿದ ಆಚರಣೆ ಅನುಸರಣೆಯಾದ ಬಳಿಕ ಜಂಗಮವೆನಲಿಲ್ಲ.
ಜಗದಲ್ಲಿ ನಡೆವ ಜಂಗುಳಿಗಳು ಭವಭವದಲ್ಲಿ ಬಳಲುತಿಪ್ಪರು ಅಮುಗೇಶ್ವರಾ./75
ಪಟ್ಟಣದ ಸೂಳೆಯ ಕೂಡೆ ಪರಬ್ರಹ್ಮವ ನುಡಿಯಲೇಕೆ ?
ಸಂತೆಗೆ ಬಂದವರ ಕೂಡೆ ಸಹಜವ ನುಡಿಯಲೇಕೆ ?
ಕತ್ತೆಯನೇರುವರ ಕೂಡೆ ನಿತ್ಯರೆಂದು ನುಡಿಯಲೇಕೆ ?
ಹೊತ್ತುಹೋಕರ ಕೂಡೆ ಕರ್ತನ ಸುದ್ದಿಯ ನುಡಿಯಲೇಕೆ ?
ಅಮುಗೇಶ್ವರಲಿಂಗವನಎದ ಶರಣಂಗೆ
ಹತ್ತುಸಾವಿರವನೋದಲೇಕೆ ?
ಹತ್ತುಸಾವಿರವ ಕೇಳಲೇಕೆ ?
ಭ್ರಷ್ಟರ ಕೂಡೆ ನುಡಿಯಲೇಕೆ ?/76
ಪೊಡವಿಯನಾಳುವರ ದೊರೆಗಳೆಂಬೆನೆ ?
ಮೃಡನ ವೇಷವ ಧರಿಸಿದವರ ಕಡುಗಲಿಗಳೆಂಬೆನೆ ?
ಅರಿವು ಆಚಾರವನರಿಯದವರ ಲಿಂಗೈಕ್ಯರೆಂಬೆನೆ ?
ಎನ್ನೆನಯ್ಯಾ ಅಮುಗೇಶ್ವರಲಿಂಗವೆ./77
ಬಲ್ಲೆನೆಂಬ ವಿರಕ್ತರು ಬಾಯಿದೆರೆದು ಬಲ್ಲೆವೆಂದು ನುಡಿಯದಿರಿ.
ಬ್ಲಿತನಕ್ಕೆ ಹೋರಿಯಾಡಲೇಕೆ ?
ಮಹಾಜ್ಞಾನಿಗಳು ಬಂದು ಬಲ್ಲೆಯಾ ಎಂದಡೆ
ಬಲುಗೈಯ ಅರಿಯೆನೆನ್ನಬೇಕು. ಇದಕೆ ತರ್ಕವೇಕೆ ಅಮುಗೇಶ್ವರಲಿಂಗವನರಿದವಂಗೆ./78
ಬಾವಿಯ ಉದಕವ ಕುಡಿವರ ಕಂಡೆ
ಬಾನಿನಲ್ಲಿಪ್ಪ ಉದಕವ ತರುವರ ಕಾಣೆ.
ಹರವಿಯ ಅಗ್ಘವಣಿಯ ಕುಡಿವವರನಲ್ಲದೆ ಅಮುಗೇಶ್ವರನೆಂಬ ಲಿಂಗವನರಿವವರ ಕಾಣೆ./79
ಬೀಜವಿಲ್ಲದೆ ವೃಕ್ಷ ಬೆಳೆಯಬಲ್ಲುದೆ ?
ಹೂವಿಲ್ಲದೆ ಹಣ್ಣಾಗಬಲ್ಲುದೆ ?
ತೆಂಗಿನ ಮರನ ಬಿತ್ತಿದಡೆ ಅಂಬರಕ್ಕೆ ಹೋಯಿತ್ತುದ
ಕಾಯಿಲ್ಲದೆ, ನೀರು ಇಲ್ಲದೆ
ಗಾಳಿಗೆ ಮರ ಮುರಿದಂತೆ ಆಯಿತ್ತು ಕಾಣಾ.
ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ ವಿರಕ್ತರೆಂಬೆನೆ ? ಎನಲಾಗದು./80
ಬೆಟ್ಟದ ನೆಲ್ಲಿಯಕಾಯ ಪಟ್ಟಣಕ್ಕೆ ಹೊತ್ತುಕೊಂಡು ಹೋಗಿ
ಹೊಟ್ಟೆಯ ಹೊರೆವವನಂತೆ,
ಉತ್ತಮ ತೇಜಿಯ ಹೆಸರ ಕೇಳಿ ಕಡಲೆಯ ತಿಂಬ ಗಾವಲಿಗನಂತೆ,
ಅತ್ತೆಯ ಹೆಸರ ಹೇಳಿ ಹೊಟ್ಟೆಯ ಹೊರೆವ ತೊತ್ತಿನಂತೆ,
ಆದ್ಯರ ವಚನಂಗಳ ಅಲ್ಲಿಗಲ್ಲಿಗೆ ಉಸುರಿ
ಅನ್ನ ಕೂಳಿಂಗೆ ಹರಿದಾಡುವ ಅಜ್ಞಾನಿಗಳ
ಅನುಭಾವಿಗಳೆಂಬೆನೆ ? ಅಯ್ಯಾ, ವಿರಕ್ತರೆಂಬೆನೆ ?
ವೇಷವ ಹೊತ್ತು ತಿರುಗುವ ಡೊಂಬನಂತೆ
ಬಲ್ಲೆ ಬಲ್ಲೆನೆಂಬ ಅಹಂಕಾರವ ನುಡಿವ ಭವಿಗಳ
ಅನುಭಾವಿಗಳೆಂಬೆನಲ್ಲದೆ ವಿರಕ್ತರೆಂಬೆನೆ ?
ವಿಷಯವ ಮುಂದುಗೊಂಡು ತಿರುಗುವ ಅನುಭಾವಿಗಳನೆಂತು ವಿರಕ್ತರೆಂಬೆನಯ್ಯಾ ಅಮುಗೇಶ್ವರಲಿಂಗವೆ ?/81
ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತನಾಗಿ
ನನ್ನವರು ತನ್ನವರೆಂದು ನುಡಿವ ಕುನ್ನಿಗಳ ವಿರಕ್ತರೆಂಬೆನೆ ಅಯ್ಯಾ ?
ಪಕ್ಷ ಪರಪಕ್ಷಂಗಳನರಿತು
ಹೇಹಂಗಳ ಜರಿಯಬಲ್ಲಡೆ ವಿರಕ್ತನೆಂಬೆನು.
ತ್ರಿವಿಧವನತಿಗಳೆದು ವಿರಕ್ತನಾದ ಬಳಿಕ
ತ್ರಿವಿಧವ ಹಿಡಿದ ಗುರುವ ಕಂಡಡೆ, ಅವನ ಅಡಿಗೆರಗಿದೆನಾದಡೆ
ಅಫ್ಸೊರ ನರಕ ತಪ್ಪದು, ಅದೇನು ಕಾರಣವೆಂದಡೆ
ಭವಪಾಶಂಗಳ ಹರಿದು ಅವಿರಳನಾದ ಕಾರಣ,
ವ್ರತಭ್ರಷ್ಟ ಲಿಂಗಬಾಹ್ಯನ ಮುಖವ ನೋಡೆನು.
ಹೊನ್ನು ಹೆಣ್ಣು ಮಣ್ಣು ಹಿಡಿವರ ಕಂಡಡೆ,
ಎನ್ನ ಗುರುವೆಂದು ಅಡಿಗೆರಗೆನು, ಬಸವಣ್ಣನೆ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ./82
ಭಾವವಿಲ್ಲದ ಬಯಲೊಳಗೆ ಮನೆಯ ಮಾಡಿದಡೆ
ಬೆಟ್ಟಬೆಟ್ಟಕ್ಕೆ ಜಗಳಬಂದು ಕಿಚ್ಚು ಹತ್ತಿತ್ತು.
ಭಾವವಿಲ್ಲದ ಬಯಲೊಳಗಣ ಮನೆ ಬೆಂದಿತ್ತು.
ಅಮುಗೇಶ್ವರನೆಂಬ ಲಿಂಗವರಿಯಬಂದಿತ್ತು./83
ಮಂಡೆಬೋಳಾಗಿ ತುಂಡುಗಂಬಳಿಹೊದ್ದಬಳಿಕ
ಅಂದಚಂದಗಳೇಕೆ ?
ಖಂಡಿತನೆ, ಕಂಡಕಂಡವರ ಮನಮೆಚ್ಚುವಂತೆ
ಅಂದಚಂದಗಳೇಕೆ ?
ಮಂಡೆಬೋಳಾದಡೆ ಮಹಾನುಭಾವಿಗಳು ಮೆಚ್ಚುವಂತೆ ಇರಬೇಕು ಕಾಣಾ, ಅಮುಗೇಶ್ವರಾ/84
ಮಂಡೆಯ ಬೋಳಿಸಿಕೊಂಡು
ತುಂಡುಗಂಬಳಿಯ ಹೊದ್ದವರ ಕಂಡಡೆ
ನಂಬಲಾರೆ ನಚ್ಚಲಾರೆ. ಈ ವೇಷವ ನಾಚಿದೆ ಅಮುಗೇಶ್ವರಾ./85
ಮನಕ್ಕೆ ಬಂದಂತೆ ಹಲವುಪರಿಯ ವೇಷವ ತೊಟ್ಟು ಹರಿದಾಡುವ
ಜಾತಿಕಾರರ ಈಶ್ವರನು ಮೆಚ್ಚನುದ
ಸದಾಶಿವನು ಸೈರಣೆಯ ಮಾಡನು.
ಬಸವಾದಿ ಪ್ರಮ ಥರು ಬನ್ನಿ ಕುಳ್ಳಿರಿ ಎನ್ನರು.
ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ ಕಂಡಡೆ ಬನ್ನಿ ಕುಳ್ಳಿರಿ ಎಂಬ ನುಡಿಯ ನುಡಿಯರು./86
ಮರನನೇರಿ ಹಣ್ಣನರಸಹೋದಡೆ
ಮರ ಮುರಿದುಬಿದ್ದ ಮರುಳುಮಾನವನಂತೆ,
ಕೆಸರಿನೊಳಗಣ ಹುಲ್ಲ ಮೇಯಹೋದ ಪಶುವಿನಂತೆ,
ಕೊಂಬೆ ಕೊಂಬೆಗೆ ಹಾರುವ ಕೋಡಗನಂತೆ,
ಉಂಡ ಮನೆಯ ದೂರುವ ಒಡೆಕಾರನಂತೆ,
ಹಳ್ಳ ಹಳ್ಳ ತಿಬ್ಬಳಿ ತಿರುಗುವ ಬಳ್ಳುವಿನಂತೆ,
ಮಾತಿನಲ್ಲಿ ಬ್ರಹ್ಮವ ನುಡಿವ ವೇಷಧಾರಿಗಳ ಲಿಂಗಾಂಗಿಗಳೆಂದಡೆ
ಮಾರಿಗೆತಂದ ಹಂದಿಯ ನಾಯಿ ನರಿ ತಿಂಬಂತೆ ಕಾಣಾ ಅಮುಗೇಶ್ವರಾ./87
ಮರುಜವಣಿಯ ಕಂಡವಂಗೆ ಮರಣದ ಹಂಗುಂಟೆ ?
ಪರುಷವುಳ್ಳವಂಗೆ ಪಾಷಾಣದ ಹಂಗುಂಟೆ ?
ಸರ್ವಾಂಗಲಿಂಗವಾದವಂಗೆ ಅನರ್ಪಿತವುಂಟೆ ?
ಜ್ಯೋತಿಯ ಬೆಳಗಿನಲ್ಲಿದ್ದವಂಗೆ ಕತ್ತಲೆಯ ಹಂಗುಂಟೆ ?
ಅಮುಗೇಶ್ವರಲಿಂಗವಾದವಂಗೆ ಲಿಂಗದ ಹಂಗುಂಟೆ ?/88
ಮರ್ತ್ಯದಲ್ಲಿ ಹುಟ್ಟಿದವರೆಲ್ಲರೂ ಇಷ್ಟಲಿಂಗಸಂಬಂದಿಗಳೆ ?
ಗುರುವಿನಲ್ಲಿ ಉಪದೇಶವ ಪಡೆದವರೆಲ್ಲರೂ ವಿರಕ್ತರಾಗಬಲ್ಲರೆ ?
ಭೂಮಿಯ ಮೇಲಣ ಕಾವಿಯ ಹೊದ್ದು ಕಾಯವಿಕಾರಕ್ಕೆ ತಿರುಗುವ
ಗಾವಿಲರ ಲಾಂಛನಿಗಳೆಂದಡೆ ಅಮುಗೇಶ್ವರಲಿಂಗವು ನೋಡಿ ನೋಡಿ ನಗುತಿಪ್ಪುದು./89
ಮಾಯಾಯೋನಿಯಲ್ಲಿ ಹುಟ್ಟುವ ಮರುಳರೆಲ್ಲರು
ಮಹಾಜ್ಞಾನಿಗಳಪ್ಪರೆ ?
ಕಾಮವಿಕಾರಕ್ಕೆ ತಿರುಗುವ ಜೀವಗಳ್ಳರು
ಅನಾದಿವಸ್ತುವನರಿವರೆ ?
ಮಾತಿನಲ್ಲಿ ಮಹಾಜ್ಞಾನಿಗಳೆಂಬ ವೇಷಧಾರಿಗಳ ಕಂಡು ನಾಚುವೆ ಕಾಣಾ ಅಮುಗೇಶ್ವರಾ/90
ಮುಂಡದಲ್ಲಿ ತಿರುಗುವವರು ಕೋಟ್ಯಾನುಕೋಟಿ;
ತಲೆಯಲ್ಲಿ ತಿರುಗುವವರನಾರನೂ ಕಾಣೆ.
ಅಂಗದಲ್ಲಿಪ್ಪ ಮಲಿನವ ಕಳೆವರು ಕೋಟ್ಯಾನುಕೋಟಿ;
ಮನದಲ್ಲಿಪ್ಪ ಮಲಿನವ ಕಳೆವವರನಾರನೂ ಕಾಣೆ ಅಮುಗೇಶ್ವರಾ./91
ಮುಂಡವ ಬಿಟ್ಟು ತಲೆಯಲ್ಲಿ ನಡೆವ
ತತ್ವಜ್ಞಾನಿಗಳ ತೋರಿಸಯ್ಯಾ.
ಬೀದಿಯಲ್ಲಿ ಸುಳಿಯುವ
ಬಿಸಿಲಕುದುರೆಯ ಏರಬಲ್ಲಡೆ, ಕಡುಗಲಿ ಎಂಬೆನು.
ಮೃಡನ ಅರಿಯಬಲ್ಲಡೆ, ಪೊಡವಿಗೆ ಒಡೆಯರೆಂಬೆನುದ ಅಮುಗೇಶ್ವರಲಿಂಗಕ್ಕೆ ಅತ್ತಲಾದವರೆಂಬೆನು./92
ಮುಂಡವ ಹೊತ್ತುಕೊಂಡು ತಿರುಗುವ
ಮೂಕೊರೆಯರ ಮುಖವ ನೋಡೆ.
ಸತ್ತಕರುವ ಹೊತ್ತುಕೊಂಡು ತಿರುಗುವ
ಭವವಿಕಾರಿಗಳ ಮುಖವ ನೋಡೆ. ನಿತ್ಯನಾದ ಬಳಿಕ, ಅನಿತ್ಯರ ಕೂಡೆ ಅಮುಗೇಶ್ವರಾ./93
ಮೂಗಿಲ್ಲದವಂಗೆ ಕನ್ನಡಿಯ ತೋರಲೇಕೆ ?
ಕೈಯಿಲ್ಲದವಂಗೆ ಕುದುರೆಯನೇರಲೇಕೆ ?
ಕಾಲಿಲ್ಲದವಂಗೆ ನಿಚ್ಚಣಿಗೆಯನೇರಲೇಕೆ ?
ಭಕ್ತಿ ಜ್ಞಾನ ವೈರಾಗ್ಯವಿಲ್ಲದವಂಗೆ ಇಷ್ಟಲಿಂಗವೇಕೆ ಅಮುಗೇಶ್ವರಾ ?/94
ಮೊತ್ತದ ಮಾಮರ ಉರಿಯಿತ್ತ ಕಂಡೆ.
ಉಪ್ಪರಿಗೆ ಬೆಂದು ಕರ್ಪೂರವಾದುದ ಕಂಡೆ.
ಬೆಟ್ಟಸುಟ್ಟು ಸರ್ಪನ ಶಿರ ಹರಿದುದ ಕಂಡೆ.
ನೋಡಿ ನೋಡಿ ನಿಮ್ಮ ಕೂಡಿಕೊಂಡೆನಯ್ಯಾ ಅಮುಗೇಶ್ವರಾ./95
ವಿರಕ್ತ ವಿರಕ್ತ ಎಂಬ ಹಾದಿಕಾರರ ವಿರಕ್ತರೆನ್ನಬಹುದೆ ?
ಕಾವಿಯ ಹೊದ್ದು ತಿರುಗುವ ಜೀವಗಳ್ಳರು ವಿರಕ್ತರೆ ?
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ವಿರಕ್ತರೆಂದಡೆ,
ಅಫ್ಸೊರನರಕ ತಪ್ಪದು ಅಮುಗೇಶ್ವರಲಿಂಗವೆ./96
ವಿರಕ್ತನಾದ ಬಳಿಕ ವಿಷಯಕ್ಕೆ ದೂರನಾಗಿರಬೇಕು.
ಒಣಗಿದ ಮರನ ವಾಯು ಅಪ್ಪಿದಂತಿರಬೇಕು.
ಸಮುದ್ರದೊಳಗೆ ತರುಗಿರಿಗಳು ಮುಳುಗಿದಂತಿರಬೇಕು.
ಮೂಗ ಕಂಡ ಕನಸಿನಂತಿರಬೇಕು.
ಜಾಲಗಾರ ಕಂಡ ರತ್ನದಂತಿರಬಲ್ಲಡೆ, ವಿರಕ್ತನೆಂಬೆನು.
ಹೀಂಗಲ್ಲದೆ ಅರುಹುಳ್ಳವರೆಂದು ತಮ್ಮ ಅಗಮ್ಯವ ಬೀರುವ
ಅಜ್ಞಾನಿಯ ಭಕ್ತನೆಂದಡೆ, ಮಾಹೇಶ್ವರನೆಂದಡೆ, ಪ್ರಸಾದಿಯೆಂದಡೆ,
ಪ್ರಾಣಲಿಂಗಿಯೆಂದಡೆ, ಶರಣನೆಂದಡೆ, ಐಕ್ಯನೆಂದಡೆ ಅಫ್ಸೊರನರಕ ತಪ್ಪದು ಕಾಣಾ, ಅಮುಗೇಶ್ವರಲಿಂಗವೆ./97
ವಿಶ್ವಮಯರೂಪವಾಗಿ ಬಂದೆನಯ್ಯಾ,
ಭಕ್ತಿಗೆ ಎನ್ನ ಮನಕ್ಕೆ ಸಲೆನಿಂದ ನಿಲವು ಅಮುಗೇಶ್ವರಲಿಂಗಕ್ಕೆ ಮಾಟವಾಯಿತ್ತ್ಝು/98
ವೇದ ಶಾಸ್ತ್ರ ಆಗಮ ಪುರಾಣಂಗಳಿಂದ ಅರಿದೆಹೆನೆಂಬ
ಅಜ್ಞಾನಿಗಳು ನೀವು ಕೇಳಿರೊ.
ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತರಾದೆಹೆವೆಂಬರು
ನೀವು ಕೇಳಿರೊ.
ವಿರಕ್ತಿ ವಿರಕ್ತಿ ಎಂದೆಂಬಿರಿ ವಿರಕ್ತಿಯ ಪರಿ ಎಂತುಟು ಹೇಳಿರಣ್ಣಾ.
ಅಷ್ಟಮದಂಗಳನೊತ್ತಿ ಮೆಟ್ಟಿ, ನೆಟ್ಟನೆ ನಿಂದು
ಇಷ್ಟಲಿಂಗವನರಿಯಬಲ್ಲಡೆ ವಿರಕ್ತನೆಂಬೆನು.
ಸೆಜ್ಜೆ ಶಿವದಾರವ ಧರಿಸಿ, ಒರ್ವನಾಗಿ ಒಂಟಿ ವಸ್ತ್ರವ ಕಟ್ಟಿ
ಸಂತೋಷಿಯಾಗಿರಬಲ್ಲಡೆ ವಿರಕ್ತನೆಂಬೆನು.
ಅಂಗದ ಮೇಲೆ ಲಿಂಗವುಳ್ಳ ಲಿಂಗಸಂಗಿಗಳಲ್ಲಿ
ಸಂದೇಹ ಸಂಕಲ್ಪವನತಿಗಳೆದು ಬಂದ ಭೇದವನರಿದು,
ಲಿಂಗಕ್ಕೆ ಕೊಟ್ಟು ಕೊಳಬಲ್ಲಡೆ ಲಿಂಗೈಕ್ಯನೆಂಬೆನು.
ಹೀಂಗಿಲ್ಲದೆ, ಕರದಲ್ಲಿ ತಂದುದನತಿಗಳೆದು
ಕರ್ಪರದಲ್ಲಿ ತಂದುದ ಕೈಕೊಂಡು ಲಿಂಗೈಕ್ಯರು ಎಂಬ
ಲಿಂಗದ್ರೋಹಿಗಳನೆಂತು ಲಿಂಗೈಕ್ಯರೆಂಬೆನಯ್ಯಾ ?
ಲಿಂಗಾಣತಿಯಿಂದ ಬಂದ ಪದಾರ್ಥವ ಸಂದೇಹದಿಂದತಿಗಳೆದು
ಲಿಂಗೈಕ್ಯರೆಂಬ ಲಿಂಗದ್ರೋಹಿಗಳ ಸಮ್ಯಕ್ಜ್ಞಾನಿಗಳೆಂದಡೆ
ಸದಾಚಾರಿಗಳೆಂದಡೆ, ಅನುಭಾವದಲ್ಲಿ ಅದಿಕರೆಂದಡೆ
ಅಫ್ಸೊರ ನರಕವು ತಪ್ಪದು ಕಾಣಾ.
ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ ಲಿಂಗೈಕ್ಯರೆನಲಾಗದು ಕಾಣಿರಣ್ಣಾ./99
ವೇದ ಶಾಸ್ತ್ರ ಆಗಮ ಪುರಾಣಗಳಲ್ಲಿ
ಶ್ರುತಿ ಸ್ಮೃತಿಗಳಲ್ಲಿ ನುಡಿವುದು ಪುಸಿ.
ಪುರಾತನರ ವಚನಂಗಳಲ್ಲಿ ಇಷ್ಟಲಿಂಗ ಬಿನ್ನವಾಗಲು
ಮತ್ತೊಂದು ಲಿಂಗವ ಧರಿಸಿಕೊಳ್ಳಬೇಕೆಂಬುದು ಇಲ್ಲ.
ವೀರಶೈವವುಳ್ಳವರಿಗೆ ಇಷ್ಟಲಿಂಗ ಸಹಸ್ರಭಿನ್ನವಾಗಲು ಧರಿಸುವುದೆಂದು
ಚಿತ್ಪಿಂಡಾಗಮ ವಾತುಲಾಗಮದಲ್ಲಿ ಸಂದೇಹವಿಲ್ಲವೆಂಬವರಿಗೆ
ಏಳುಕೋಟಿ ಯುಗಂಗಳಲ್ಲಿ ನಾಯಕನರಕ ತಪ್ಪದು.
ಕಟ್ಟಿದವರು ಚಂದ್ರಸೂರ್ಯರು ಪೃಥ್ವಿ ಅಪ್ಪುವುಳ್ಳ ಪರಿಯಂತರವು
ನಾಯಕನರಕದಲ್ಲಿಪ್ಪರು ಕಾಣಾ, ಅಮುಗೇಶ್ವರಲಿಂಗವೆದ
ನಿಮ್ಮ ಶರಣರು ಲಿಂಗಬಿನ್ನವಾಗಲು ಲಿಂಗದೊಡನೆ ಅಂಗವ ಬಯಲು ಮಾಡುವರಯ್ಯಾ./100
ವೇಷವ ತೊಟ್ಟು ಗ್ರಾಸಕ್ಕೆ ತಿರುಗುವ
ವೇಷಧಾರಿಗಳ ಕಂಡಡೆ ನಾಚಿತ್ತೆನ್ನ ಮನ.
ಲಿಂಗವನರಿಯದೆ ಲಿಂಗೈಕ್ಯರೆಂಬ
ಅಂಗವಿಕಾರಿಗಳ ಕಂಡಡೆ ಹೊದ್ದದು ಎನ್ನ ಮನ,
ಅರಿದು ಆಚರಿಸಿದೆನೆಂಬ ಅಜ್ಞಾನಿಗಳ ಕಂಡಡೆ
ಮೃಡನ ಶರಣರು ಮೆಚ್ಚುವರೆ ಅಮುಗೇಶ್ವರಾ ?
ಲಿಂಗವನರಿಯದಿರ್ದಡೆ ಎಂತು ಲಿಂಗೈಕ್ಯರೆಂಬೆನಯ್ಯಾ ?/101
ಶರಣನ ಅಂತರಂಗದಲ್ಲಿ ಪ್ರಾಣಲಿಂಗವಾಗಿ,
ಬಹಿರಂಗದಲ್ಲಿ ಇಷ್ಟಲಿಂಗವಾಗಿಪ್ಪ ಭೇದವನರಿಯರ?್ಲಾ ?
ಲೀಲೆಯಾದಡೆ ಉಮಾಪತಿಯಾಗಿಪ್ಪನು,
ಲೀಲೆ ತಪ್ಪುಲೊಡನೆ ಸ್ವಯಂಭುವೆಯಾಗಿಪ್ಪ.
ಶರಣಂಗೆ ಲಿಂಗ ಹೋಯಿತ್ತು ಎಂದು ನುಡಿವವರಿಗೆ
ಕುಂಬಿಪಾತಕ ನಾಯಕನರಕ ತಪ್ಪದು.
ಲಿಂಗೈಕ್ಯವಾದ ಶರಣನ ಸತ್ತನು ಎಂಬ ಭ್ರಷ್ಟರಿಗೆ
ರೌರವನರಕ ತಪ್ಪದು ಕಾಣಾ, ಅಮುಗೇಶ್ವರಲಿಂಗವೆ, ನಿಮ್ಮ ಶರಣರು ಲಿಂಗೈಕ್ಯರು./102
ಶೀಲವಂತನಾದಡೆ ಜಾತಿಯ ಬಿಡಬೇಕು.
ಶಿವಜ್ಞಾನಿಯಾದಡೆ ಸಮಯವ ಬಿಡಬೇಕು.
ಹೀಂಗಲ್ಲದೆ ಜಗದಲ್ಲಿ ನಡೆವ ಭ್ರಾಂತರ ಸುದ್ದಿಯೇಕೆ ನಿಭ್ರಾಂತನಾದ ಶರಣಂಗೆ ಅಮುಗೇಶ್ವರಾ ?/103
ಸಂತೆಗೆ ಬಂದವರೆಲ್ಲ ಸಾವಧಾನಿಯಾಗಬಲ್ಲರೆ ?
ಪಸರವ ಹರಡುವರೆಲ್ಲ ರತ್ನದ ಬೆಲೆಯ ಬಲ್ಲರೆ ?
ಕುದುರೆಯ ಹಿಡಿದವರೆಲ್ಲ ರಾವುತಿಕೆಯ ಮಾಡಬಲ್ಲರೆ ಅಮುಗೇಶ್ವರಾ ?/104
ಸಪ್ತಸಮುದ್ರಂಗಳೆಲ್ಲ ಬತ್ತಿಹೋದವಯ್ಯಾ.
ಸಪ್ತವ್ಯಸನಂಗಳೆಲ್ಲ ಅರತುಹೋದವಯ್ಯಾ.
ನಿತ್ಯರಾದೆವೆಂಬವರೆಲ್ಲ ಅನಿತ್ಯರಾದರಯ್ಯಾ ಮುಕ್ತಿಯೆಂಬುದು ಇನ್ನೆತ್ತಣದಯ್ಯಾ ಅಮುಗೇಶ್ವರಲಿಂಗವೆ ?/105
ಸಮಯದೊಡನೆ ಸುಳಿದಾಡುವೆನೆಂಬ ಭಾವದ ಭ್ರಮೆಯವನಲ್ಲ.
ಆತ್ಮತೇಜಕ್ಕೆ ಹರಿದಾಡುವೆನೆಂಬ ಭ್ರಾಂತಿನ ಭ್ರಮೆಯವನಲ್ಲ.
ಅಮುಗೇಶ್ವರನೆಂಬ ಲಿಂಗವನರಿದ ಬಳಿಕ ನನ್ನವರು ತನ್ನವರು ಎಂಬ ಭ್ರಾಂತಿನವನಲ್ಲ./106
ಸರ್ವಸಂಬಂದಿಯಾಗಿ ಸಮ್ಯಕ್ಜ್ಞಾನಿಯಾಗಿ ಅರಿವೆನು ಶಿವನ ಆದಿಯ,
ಅಷ್ಟಮದಂಗಳ ಒತ್ತಿದೆನಾಗಿ ನೆಟ್ಟನೆ ನಿಲ್ಲುವೆನು.
ಎನ್ನ ಅಂತರಂಗ ಬಹಿರಂಗ ಸರ್ವಾಂಗದಲ್ಲಿ ಕಳಂಕ ಇಲ್ಲವಾಗಿ, ಮುಟ್ಟುವೆನು ಅಮುಗೇಶ್ವರಲಿಂಗವ./107
ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು ?
ಸರ್ವಮಂತ್ರತಂತ್ರಸಿದ್ಭಿ ಮರ್ಮವರಿತಡೇನು ?
ನಿತ್ಯಶಿವಾರ್ಚನೆ ತ್ರಿಕಾಲವಿಲ್ಲದ
ನಿತ್ಯಪಾದೋದಕ ಪ್ರಸಾದ ಸೇವನೆಯಿಲ್ಲ.
ಇದೇತರ ವೀರಶೈವವ್ರತ, ಇದೇತರ ಜನ್ಮಸಾಫಲ್ಯ ಅಮುಗೇಶ್ವರಲಿಂಗವೆ ?/108
ಸಾಧನೆಯ ಬಲ್ಲೆನೆಂದು ಹಾದಿಹೋಕರಕೂಡೆ ಹೋರದಿರಬೇಕು.
ಬೀದಿಯಲ್ಲಿ ನಿಂದು ಬೀರದಿರಬೇಕು.
ಬಲ್ಲೆಯಾ ಎಂದಡೆ ಬಲುಗೈಯನರಿಯೆನೆನಬೇಕು.
ನೆಟ್ಟನೆ ನಿಂದು ಪಟ್ಟಕ್ಕೊಡೆಯರಾದವರೆಂಬೆ ಅಮುಗೇಶ್ವರಲಿಂಗಕ್ಕೆ ಅದಿಕರೆಂಬೆ./109
ಸಿಂಹದಮರಿಯ ಸೀಳ್ನಾಯ ಸರಿ ಎನ್ನಬಹುದೆ ?
ವರಹ ಕುಕ್ಕುಟನ ಸರಿ ಎನ್ನಬಹುದೆ ?
ಹೊನ್ನು ಹೆಣ್ಣು ಮಣ್ಣ ಹಿಡಿದು ಲಿಂಗೈಕ್ಯರೆನಿಸಿಕೊಂಬ ಅಜ್ಞಾನಿಗಳೆಲ್ಲರು
ಸೀಳ್ನಾಯಿಗಳೆಂಬೆನಯ್ಯಾ.
ಸಮ್ಯಕ್ಜ್ಞಾನವ ಮುಂದುಗೊಂಡು ಸದಾಚಾರಿಯಾಗಿ
ಭಕ್ತಿ ಬಿಕ್ಷವ ಬೇಡಬಲ್ಲಡೆ,
ನಿತ್ಯಲಿಂಗೈಕ್ಯರೆಂಬೆ. ಅಮುಗೇಶ್ವರನೆಂಬ ಲಿಂಗಕ್ಕೆ ಅತ್ತತ್ತ?ಾದ ಘನಮಹಿಮನೆಂಬೆನಯ್ಯಾ/110
ಸುಳಿವ ಸುಳುಹು ಅಡಗಿತ್ತೆನಗೆ.
ಎನ್ನ ಕಂಗಳ ಕಾಮ ಕಳೆಯಿತ್ತು.
ಅರಿದೆನೆಂಬ ಮನ ಅಡಗಿದುದ ಕಂಡು
ನನ್ನ ನಾನೆ ತಿಳಿದು ನೋಡಿ,
ಕಟ್ಟಿದೆನು ಕಾಮನ ಮೇಲೆ ಬಿರಿದ.
ಮಾಯಾಯೋನಿಗಳಲ್ಲಿ ಹುಟ್ಟಿದರೆಲ್ಲ,
ನಿರ್ಮಾಯನೆಂಬ ಗಣೇಶ್ವರಗೆ ಸರಿಯಪ್ಪರೆ ?
ಬ್ರಹ್ಮ ವಿಷ್ಣು ರುದ್ರರೆಲ್ಲರು ಮಾಯಾಕೋಳಾಹಳನೆಂಬ ಪ್ರಭುವಿಂಗೆ
ಸರಿಯಲ್ಲವೆಂದು ಕಟ್ಟಿದೆ ಕೈದುವ.
ಸರಿಯೆಂದು ನುಡಿವವರ ಪರಿಪರಿಯಲಿ ಮೆಟ್ಟಿ ಸೀಳುವೆನು ಕಾಣಾ. ಅಮುಗೇಶ್ವರಲಿಂಗಕ್ಕೆ ಅದಿಕನಾದನಯ್ಯಾ ಪ್ರಭುದೇವರು./111
ಸೂರ್ಯಂಗೆ ಅಲ್ಲಿ ಇಲ್ಲಿ ಎಂಬ ಸಂದೇಹವುಂಟೆ ?
ಎಲ್ಲೆಲ್ಲಿಯೂ ತನ್ನ ಪ್ರಭೆಯ ಬೀರುತಿಪ್ಪುದು.
ಬಲ್ಲ ಘನಮಹಿಮನ ಎಲ್ಲರು ಜರಿದಡೇನು ಕಿಂಕಿಲನೆ ?
ಸರ್ವಾಂಗವು ಲಿಂಗವಾದ ನಿರಾಲಂಬಿ
ಕಾಬರ ಕಂಡು ತಾ ಕಾಬವನಲ್ಲದ
ಅರಿವವರ ಕಂಡು ತಾನರಿವವನಲ್ಲದ
ಬಿಡುವವರ ಕಂಡು ತಾ ಬಿಡುವವನಲ್ಲ;
ಹಿಡಿದ ಛಲವ ತಾ ಬಿಡುವವನಲ್ಲ, ಅಮುಗೇಶ್ವರಲಿಂಗವನರಿದವನು./112
ಹಿಡಿದ ಛಲವ ಬಿಡದೆ ನಡೆಸುವರ ಕಂಡಡೆ
ಎನ್ನ ಕರ್ತು ಬಾರೆಂಬರಯ್ಯಾ ಮೃಡನ ಶರಣರು.
ಎನ್ನೊಡೆಯ ಕಡುಗಲಿಯಾಗಿ ಬಿಡದೆ ಆಚರಿಸಿ ಬಳಲಿದಿರಯ್ಯಾ ಅಮುಗೇಶ್ವರನೆಂಬ ಲಿಂಗವನರಿದ ಶರಣರು./113
ಹೆದರದಿರು ಮನವೆ, ಹಿಮ್ಮೆಟ್ಟದಿರು ಮನವೆ,
ಹಿಡಿದ ಛಲವ ಬಿಡದಿರು ಮನವೆ.
ಜರಿದರೆಂದು ಝಂಕಿಸಿದರೆಂದು
ಶಸ್ತ್ರ ಸಮಾದಿ ನೀರು ನೇಣು ವಿಷ ಔಷಧದಲ್ಲಿ ಘಟವ ಬಿಡದೆ
ಗುರುವಾದಡು ಲಿಂಗವಾದಡು ಜಂಗಮವಾದಡು
ನೊಸಲಲ್ಲಿ ಕಣ್ಣುಳ್ಳ ಪಶುಪತಿಯಾದಡು
ತೆತ್ತಿಗರು ಕಂಡು ಒತ್ತಿ ನುಡಿದರೆಂದು ಘಟವ ಬಿಡುವ ಘಟಕರ್ಮಿಗಳು
ಏಳೇಳು ಜನ್ಮದಲ್ಲಿ ಸೂಕರನ ಹೊಟ್ಟೆಯಲ್ಲಿ ಹುಟ್ಟಿ,
ನೂರೊಂದು ಕುಲ ಹದಿನೆಂಟು ಜಾತಿಯ ಅಮೇಧ್ಯವ ತಿಂದು
ಹೊಲೆಯರ ಮನೆಯ ಹೊಸ್ತಿಲ ಕಾಯ್ದುಕೊಂಡಿಪ್ಪರಯ್ಯಾ : ಅಮುಗೇಶ್ವರಲಿಂಗವೆ, ನಿಮ್ಮಾಣೆ ನಿಮ್ಮ ಪ್ರಮ ಥರಾಣೆ./114
ಹೊಟ್ಟೆಯ ಹೊರೆವ ಪಶು, ಕಟ್ಟಿ ಕೊಲ್ಲುವುದ ಬಲ್ಲುದೆ ?
ಕಷ್ಟಜೀವಗಳ್ಳರುದ ಕರ್ತುವಿನ ವೇಷವ ತೊಟ್ಟು ಕತ್ತೆಯಂತೆ ತಿರುಗುವ ಕಳ್ಳರನೊಲ್ಲ ಅಮುಗೇಶ್ವರಲಿಂಗವು./115
ಹೊನ್ನಬಿಟ್ಟಡೇನು, ಹೆಣ್ಣಬಿಟ್ಟಡೇನು, ಮಣ್ಣಬಿಟ್ಟಡೇನು,
ವಿರಕ್ತನಾಗಬಲ್ಲನೆ ?
ಆದ್ಯರ ವಚನಂಗಳ ಹತ್ತುಸಾವಿರವ ಲೆಕ್ಕವಿಲ್ಲದೆ ಓದಿದಡೇನು,
ನಿತ್ಯರಾಗಬಲ್ಲರೆ ?
ಮಂಡೆಯ ಬೋಳಿಸಿಕೊಂಡು ಅಂದಚಂದಕೆ ತಿರುಗುವ ಜಗಭಂಡರ ಮೆಚ್ಚುವನೆ, ಅಮುಗೇಶ್ವರಲಿಂಗವು ?/116