Categories
ವಚನಗಳು / Vachanagalu

ಅಲ್ಲಮ ಪ್ರಭು ವಚನಗಳು

ಐದು ಬಣ್ಣದ ಗಿಡುವಿಂಗೆ ಐದೆಲೆ ಐದು ಹೂ, ಐದು ಕಾಯಾಯಿತ್ತು.
ಮತ್ತೈದರಠಾವಿನಲ್ಲಿ, ಐದು ಹೂವಿನ ಕ್ರಮದಲ್ಲಿ
ಹಣ್ಣ ಮೆಲಬಲ್ಲಡೆ, ಗುಹೇಶ್ವರನೆಂಬ ಲಿಂಗವು ತಾನೆ ನೋಡಾ !/501
ಐದು ಮುಖದ ಅಂಗನೆಗೆ ಹದಿನೈದು ದೇಹ ನೋಡಾ!
ಆ ಅಂಗನೆಯ ಮನೆಯೊಳಗಿರ್ದು, ತಾವಾರೆಂಬುದನರಿಯದೆ;
ಬಾಯ್ಗೆ ಬಂದಂತೆ ನುಡಿವರು,
ಗುಹೇಶ್ವರಾ ನಿಮ್ಮನರಿಯದ ಜಡರುಗಳು./502
ಐದು ಸರ್ಪಂಗಳಿಗೆ ತನು ಒಂದು, ದಂತವೆರಡು.
ಸರ್ಪ ಕಡಿದು ಸತ್ತ ಹೆಣನು ಸುಳಿದಾಡುವುದ ಕಂಡೆ.
ಈ ನಿತ್ಯವನರಿಯದಠಾವಿನಲ್ಲಿ, ಭಕ್ತಿಯೆಲ್ಲಿಯದೊ ಗುಹೇಶ್ವರಾ ?/503
ಐವರ ಸಂಗದಿಂದ ಬಂದೆ ನೋಡಯ್ಯಾ.
ಐವರ ಸಂಗದಿಂದ ನಿಂದೆ ನೋಡಯ್ಯಾ.
ಈ ಐವರೂ ತಮ್ಮ ತಮ್ಮ ಬಟ್ಟೆಯಲ್ಲಿ ಹೋದರು.
ನಾನೊಬ್ಬನೆ ನಿಸ್ಸಂಗಿಯಾಗಿ ಉಳಿದೆನಲ್ಲಾ !
ಗುಹೇಶ್ವರನೆಂಬ ನಿತ್ಯನಿರಂಜನ ರೂಹಿಲ್ಲದ ಘನವ ಕಂಡೆನಯ್ಯಾ./504
ಒಂದ ಮಾಡ ಹೋದಡೆ ಮತ್ತೊಂದಾಯಿತ್ತೆಂಬ ಮಾತು
ದಿಟವಾಯಿತ್ತು ನೋಡಾ.
ನಿಮ್ಮ ಒಡತಣ ಅನುಭಾವದಿಂದ
ಗುರುಮುಖ ಸಾಧ್ಯವಾದುದಯ್ಯಾ,
ಗುಹೇಶ್ವರಲಿಂಗದಲ್ಲಿ ನಿನಗೂ ನನಗೂ
ಉಪದೇಶವ ಒಂದಾದ ಭೇದವ ಹೇಳಾ ಚನ್ನಬಸವಣ್ಣಾ/505
ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು,
ಎನಗಾಯಿತ್ತು ನೋಡಾ ಬಸವಣ್ಣಾ
ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ
ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ.
ನಿನ್ನ ಪೂರ್ವಾಪರಸಂಗವ ಮಾಡಬಂದಡೆ
ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ.
ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು
ದಿಟವಾಯಿತ್ತು ನೋಡಾ ಬಸವಣ್ಣಾ.
ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ./506
ಒಂದಡಕೆಯನಿಟ್ಟರೆ ಅಡ್ಡಗೋಡೆ ಬಸುರಾಯಿತ್ತು,
ನಡುಮನೆಯೊಳಗಣ ಕಂಭ ಗಂಡು ಮಗನ ಹಡೆಯಿತ್ತು.
ಹೊರಗೆ ಕಿಚ್ಚನಿಕ್ಕಿ ಒಳಗೆ ಅಗ್ನಿ ಪುಟವ ಹಾಕಿ,
ಹಾದಿ ಹೋಗೋ ಅಣ್ಣ ನಮ್ಮ ಕರುವ ಕಾಣಲಿಲ್ಲವೆ.
ನಿನ್ನೆ ಬಿತ್ತಿದ ಹೊಲದಾಗೆ ಮೊನ್ನೆ ಮೇಯ್ವುದ ಕಂಡೆ.
ಕೊರಳ ಕೊಯ್ವುದ ಕಂಡೆ, ರಕ್ತವ ಕಾಣಲಿಲ್ಲ,
ಸುಡುವುದ ಕಂಡೆ ಬೂದಿಯ ಕಾಣಲಿಲ್ಲ.
ಇಷ್ಟ ಕಂಡು ಬೆರಗಾದ ನಮ್ಮ ಗುಹೇಶ್ವರಾ/507
ಒಂದರ ಮೋರೆಯನೊಂದು ಮೂಸಿನೋಡಿ
ಮತ್ತೊಚ್ಚಿ ಬೇಕಿಂಗೆ (ಹೊತ್ತಿಂಗೆ ?) ಕಚ್ಚಿಯಾಡಿ ಹೋದಂತೆಯಾಯಿತ್ತು,
ನೋಡಿರೆ, ಕಲಿಯುಗದೊಳಗಣ ಮೇಳಾಪವ !
ಗುರುವೆಂಬಾತ ಶಿಷ್ಯನಂತುವನರಿಯ.
ಶಿಷ್ಯನೆಂಬಾತ ಗುರುವಿನಂತುವನರಿಯ.
ಭಕ್ತರೆಂಬವರು ಭಕ್ತರೊಳಗೆ ಸಮವಿಲ್ಲ.
ಜಂಗಮರೆಂಬವರು ಜಂಗಮದೊಳಗೆ ಸಮವಿಲ್ಲ.
ಇದು ಕಾರಣ-ಕಲಿಯುಗದೊಳಗೆ ಉಪದೇಶವ ತೋರುವ (ಮಾಡುವ ?)
ಕಾಳಗುರಿಕೆಯ ಮಕ್ಕಳನೇನೆಂಬೆ ಗುಹೇಶ್ವರಾ ?/508
ಒಂದಾದುದು ಎರಡಪ್ಪುದೆ ? ಎರಡಾದುದು ಒಂದಪ್ಪುದೆ-[ಎಂದ]
ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ ?
ಬಂದ ಜಂಗಮದ ನಿಲವನರಿಯದೆ,
ಹಿಂದನೆಣಿಸಿ ಹಲವ ಹಂಬಲಿಸುವರೆ ?
ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ
ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
ಪರಿಣಾಮವಹುದು ನೋಡಾ.
ಗುಹೇಶ್ವರನೆಂಬ ಲಿಂಗದ ನಿಲವನರಿಯದೆ
ಮರುಳಾದೆಯಲ್ಲಾ ಸಂಗನಬಸವಣ್ಣಾ/509
ಒಂದು ಇಲ್ಲದ ಬಿಂದುವ, ತಂದೆಯಿಲ್ಲದ ಕಂದನ,
ಮಾತೆ ಇಲ್ಲದ ಜಾತನ, ಗಮನವಿಲ್ಲದ ಗಮ್ಯನ,
ಮೂವರರಿಯದ ಮುಗ್ಧನಠಾವ ತೋರಿಸು ಗುಹೇಶ್ವರಾ/510
ಒಂದು ದಿಕ್ಕಿನಲ್ಲಿ ಕತ್ತಲೆಯನಿರಿಸಿ,
ಒಂದು ದಿಕ್ಕಿನಲ್ಲಿ ತನುವನಿರಿಸಿ,
ಒಂದು ದಿಕ್ಕಿನಲ್ಲಿ ವಚನವನಿರಿಸಿ,
ಒಂದು ದಿಕ್ಕಿನಲ್ಲಿ ರುಚಿಯನಿರಿಸಿ,
ನಾಲ್ಕು ದಿಕ್ಕಿನ ನಡುವೆ ನೀನಿರಬಲ್ಲಡೆ,
ಎನ್ನ ಬೆಸಗೊಳ್ಳಯ್ಯಾ ಗುಹೇಶ್ವರಾ./511
ಒಂದು ಧನುವಿಂಗೆ ಮೂರಂಬ ಹಿಡಿದೆ.
ಒಂದು ಬಾಣವ ಬಿಡಲಾಗಿ ಪದ್ಮೋದ್ಭವನ ಸೃಷ್ಟಿಯ ಕಟ್ಟಿತ್ತು,
ಮತ್ತೊಂದು ಬಾಣವ ಬಿಡಲಾಗಿ ಪದ್ಮೋದ್ಭವನ ಹೆಡಗಯ್ಯ ಕಟ್ಟಿತ್ತು.
ಕಡೆಯ ಬಾಣವು ರುದ್ರನ ಹಣೆಯನೊಡೆದು ಅಲಗು ಮುರಿಯಿತ್ತು.
ನಾರಿ ಜಾರಿತ್ತು, ನಾರಿಯ ಹೂಳುವ ಹಿಳಿಕು ಹೋಳಾಯಿತ್ತು.
ಗುಹೇಶ್ವರನ ಶರಣ ಅಲ್ಲಮ ಹಿಡಿದ ಬಿಲ್ಲು ಮುರಿಯಿತ್ತು. /512
ಒಂದು ಪಟ್ಟಣದೊಳಗೆ ಛಪ್ಪನ್ನ ಗೃಹಕ್ಕೆ ಒಂದೆ ಕೀಲಾಗಿ,
ಆ ಕೀಲಿನ ಸಕೀಲವನಾರಿಗೂ ಕಾಣಬಾರದೆಂದೂ-
ಭಾವಿಸಿ ಕಂಡರು ಒಂದೆ ಮನದವರು.
ಉಳಿದವರೆಲ್ಲ ಆ ಕೀಲಿನೊಳಗಾಗಿ ಜೀವ ಜೀರ್ಣವಾಯಿತ್ತು.
ಹದಿನೆಂಟು ಸ್ಥಾನದ ಕೀಲಗಳ ಸಂಗವನಳಿದು, ಸುಸಂಗವಾಗಿ
ಶೃಂಗಾರ ಭೃಂಗಾರವಾಗದೆ ಒಂದು ಮುಖದಲ್ಲಿ ನಿಂದು
ಗುಹೇಶ್ವರಾ-ನಿಮ್ಮ ಶರಣ ಚನ್ನಬಸವಣ್ಣ ಹೊರಗಾದ !/513
ಒಂದು ಮನ;
ಆ ಮನದಲ್ಲಿ ಲಿಂಗತ್ರಯವನು ಒಂದೆ ಬಾರಿ [ಗೆ] ನೆನೆವ ಪರಿಯೆಂತೊ ?
ಅರಿದರಿದು ಲಿಂಗಜಾಣಿಕೆ !
ಮುಂದ ನೆನೆದಡೆ ಹಿಂದಿಲ್ಲ; ಹಿಂದ ನೆನೆದಡೆ ಮುಂದಿಲ್ಲ.
ಒಂದರೊಳಗೆ ಎರಡೆರಡಿಪ್ಪವೆಂದಡೆ,
ಅದು ಭಾವಭ್ರಮೆಯಲ್ಲದೆ ಸಹಜವಲ್ಲ.
ನಿರುಪಾದಿಕಲಿಂಗವನುಪಾದಿಗೆ ತರಬಹುದೆ ?
ಸ್ವತಂತ್ರಲಿಂಗವ ಪರತಂತ್ರಕ್ಕೆ ತರಬಹುದೆ ?
ಗುಹೇಶ್ವರಾ-ನಿಮ್ಮ ಬೆಡಗು ಬಿನ್ನಾಣವನರಿದೆನಾಗಿ,
ಎಂತಿರ್ದುದಂತೆ ಸಂತ ! /514
ಒಂದು ಮುಳ್ಳ ಮೊನೆಯ ಮೇಲೆ ಎಂಬತ್ನಾಲ್ಕು ಲಕ್ಷ ಪಟ್ಟಣವ ಕಟ್ಟಿ,
ಈ ಎಂಬತ್ನಾಲ್ಕು ಲಕ್ಷ ಪಟ್ಟಣಕ್ಕೆ ತಲೆಯಿಲ್ಲದ ತಳವಾರ,
ಆ ತಲೆಯಿಲ್ಲದ ತಳವಾರನ ತಂಗಿ ಮಾತಿನಲಿ ಕಡುಜಾಣೆ.
ಆಕೆ ಸರ್ಪನ ಸಿಂಬೆಯ ಮಾಡಿಕೊಂಡು ತಳವಿಲ್ಲದ ಕೊಡನ ತಕ್ಕೊಂಡು
ಜಲವಿಲ್ಲದ ಬಾವಿಗೆ ನೀರಿಗೆ ಹೋದಳು.
ಆ ಜಲವಿಲ್ಲದ ಬಾವಿಯೊಳೊಂದು ಬೇರಿಲ್ಲದ ಸಸಿ ಪುಟ್ಟಿತ್ತು.
ಆ ಬೇರಿಲ್ಲದ ಸಸಿ ವೃಕ್ಷವಾಗಿರಲಾವೃಕ್ಷವ ಕಾಲಿಲ್ಲದ ಮೃಗ ಏರಿ ಹೋಗುತ್ತಿತ್ತು.
ಅದ ಕಣ್ಣಿಲ್ಲದ ಕುರುಡ ಕಂಡ.
ಕೈಯಿಲ್ಲದ ಪುರುಷ ಹೆದೆಯಿಲ್ಲದ ಬಿಲ್ಲ ಪಿಡಿದು,
ಅಲಗಿಲ್ಲದಂಬಿನಲ್ಲೆಸೆಯಲಾ ಮೃಗವ ತಾಕಲಿಲ್ಲ.
ಅದರ ಹೊಟ್ಟೆಯೊಳಗಿರ್ದ ಪಿಂಡಕ್ಕೆ ತಾಕಿತ್ತು.
ಇದ ಕಂಡು ಬೆರಗಾದ ನಮ್ಮ ಗುಹೇಶ್ವರ./515
ಒಂದೆ ಹೂ, ಒಂದೆ ಅಗ್ಘವಣಿ, ಒಂದೆ ಓಗರ,
ಒಂದೆ ಪ್ರಸಾದ, ಒಂದೆ ಮನ, ಒಂದೆ ಲಿಂಗ.
ನಂದಾದೀವಿಗೆ, ಕುಂದದ ಬೆಳಗು; ಸ್ವತಂತ್ರ ಪೂಜೆ-ಒಂದೇ.
ಅನಾಹತವೆರಡಾಗಿ ಬರುಮುಖರಾಗಿ ಕೆಟ್ಟುಹೋದರು ಗುಹೇಶ್ವರಾ./516
ಒಂದೆಂಬೆನೆ ? ಎರಡಾಗಿದೆ; ಎರಡೆಂಬೆನೆ ? ಒಂದಾಗಿದೆ.
ಒಂದೆರಡೆಂಬ ಸಂದೇಹವಿದೇನೊ ?
ಅಗಲಲಿಲ್ಲದ ಕೂಟಕ್ಕೆ ಬಿಚ್ಚಿ ಬೇರಾಗದ ಉಪದೇಶ !
ಗುರು ಶಿಷ್ಯರೆಂಬ ಭಾವಕ್ಕೆ ಭೇದವುಂಟೆ ಗುಹೇಶ್ವರಾ ?/517
ಒಂದೆರಡರ ಮೂರು ನಾಲ್ಕರ ಪರಿವಿಡಿಯ ಭಾವವನರಿಯದೆ
ಕೆಟ್ಟಿತ್ತು ನೋಡಾ ಲೋಕ, ಕೆಟ್ಟಿತ್ತು ನೋಡಾ ಜಗವು
ಕೆಟ್ಟಿತ್ತು ನೋಡಾ ಈರೇಳು ಭುವನವೆಲ್ಲವು
ಇತ್ತ ವಿಸ್ತಾರವಾಯಿತ್ತು, ಸ್ಥಿತಿ ಆಯತವಾಯಿತ್ತು
ಮಾರಾರಿ ಕಟ್ಟಳೆ ವಿಪರೀತವು ನೋಡಾ
ನಾದ ಚಕ್ರಂಗಳ, ಬಿಂದು ಚಕ್ರಂಗಳ, ಕಲಾ ಚಕ್ರಂಗಳ
ನಿಲ್ಲೆಂದು ನಿಲಿಸಿದ ನಿರ್ವಯ ಚೆನ್ನಬಸವಣ್ಣನು
ಕಾಲಕರ್ಮ ಸ್ಥಿತಿಗುಣವನತಿಗಳೆದು ನಿರ್ಭಾವದಲ್ಲಿ ನಿರ್ವಯ ಚೆನ್ನಬಸವಣ್ಣನು
ತನ್ನಲ್ಲಿ ತಾನು ಬೆಳಗಾದ ಚೆನ್ನಬಸವಣ್ಣನು
ಬೆಳಗಪ್ಪ ಬೆಳಗು ಲೀಯವಾಯಿತು ಗುಹೇಶ್ವರಾ
ಚೆನ್ನಬಸವಣ್ಣನು /518
ಒಂದೆರಡಾದುದ ಬಲ್ಲವರಾರೊ ?
ಎರಡರೊಳಗಣ ಮೂರ ಬಲ್ಲವರಾರೊ ?
ಮೂರರ ಮುಖವನರಿದು ಕೂಡಿ ಮಾಡಬಲ್ಲವರಾರೊ ?
ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನೊಬ್ಬನೆ./519
ಒಂದೆರಡಾದುದನಾರೂ ಅರಿಯರು:
ಆ `ಒಂದು’ ಒಂದೆ ಆಯಿತ್ತು, ತ್ರಿತತ್ವವಾಯಿತ್ತು, ವೇದಾತೀತವಾಯಿತ್ತು,
ಭರಿತವಾಯಿತ್ತು, ಪ್ರಾದೇಶಿಕವಾಯಿತ್ತು, ಭಕ್ತಿಗೆ ಸಾಧ್ಯವಾಯಿತ್ತು.
ಅದಕ್ಕೆ ಆಧಾರ ದೇಹವಾಯಿತ್ತು.
ಅದು ಅಷ್ಟವಿಗ್ರಹ ಸ್ವರೂಪವಾಗಿರುತ್ತಿಪ್ಪುದು.
ಮತ್ತಿರುತಿರ್ದ ಒಂದು ಮಾಯಾಶಕ್ತಿಯಂ ಕೂಡಿ,
ಗುಣತ್ರಯಂಗಳಂ ಕೂಡಿ, ನಾನಾತ್ಮನೆನಿಸಿಕೊಂಡು-
ವಿಷಯಾತ್ಮ ಇಂದ್ರಿಯಾತ್ಮ ಭೂತಾತ್ಮ ಜೀವಾತ್ಮ ಪರಮಾತ್ಮನೆನಿಸಿಕೊಂಡು,
ಪ್ರಾಣಾದಿವಾಯುಗಳಂ ಕೂಡಿಕೊಂಡು ಜಡಪ್ರಕೃತಿಗಳಂ ಹೊತ್ತುಕೊಂಡು
ಸಂಕಲ್ಪ-ವಿಕಲ್ಪವೆಂಬ ಉಭಯ ಕರ್ಮಂಗಳಂ ಕಲ್ಪಿಸಿ
ನಾನಾಯೋನಿ ಪ್ರಾಪ್ತವಾಗುತ್ತಿರ್ದು,
ಲೋಕಾದಿಲೋಕಂಗಳೊಳು ತೊಳಲಿ ಬಳಲಿ
ತನ್ನ ಮೊದಲ ಕೂಡುವ ಪ್ರಕಾರಮಂ ಬಯಸಿ
ನಾನಾ ವಿಧದಿಂದ ಅರಸಿ ಹರಿವುತ್ತಿಪ್ಪರು ಅಖಿಳ ಜೀವಿಗಳೆಲ್ಲರು.
ಇದ ಬೆರಸದೆ; ಬೆರಸಿದ ಸಂಗನಬಸವಣ್ಣನ ನೆನೆನೆನೆದು
ಶರಣೆಂದು ಶುದ್ಧನಾದೆನು ಕಾಣಾ ಗುಹೇಶ್ವರಾ./520
ಒಂದೆರಡೆಂಬ ಸಂದೇಹಕ್ಕೊಳಗಾದವರೆಲ್ಲರೂ
ಬಂದರು ನೋಡಾ ನಾನಾ ಭವದಲ್ಲಿ.
ಕುಂದು ಹೆಚ್ಚಿನ ಹೋರಾಟದಿಂದ ಬಂಧನಕ್ಕೆ ಸಿಕ್ಕಿದರಲ್ಲ !
ಒಂದೆರಡನೊಳಕೊಂಡು ನಿಂದ ನಿಲವ,
ಸಂದಿಲ್ಲದೆ ಹೊಂದಿಪ್ಪ ಗುಹೇಶ್ವರ ತನ್ನಲ್ಲಿ./521
ಒಂಬತ್ತು ಒಟ್ಟೆ ನೆರೆದು ಮೂರು ತತ್ತಿಯನಿಕ್ಕತ್ತ ಕಂಡೆ
ಆನೆ ಆಡಹೋದರೊಂದು ಚಿಕ್ಕಾಡು ನುಂಗಿತ್ತ ಕಂಡೆ
ನಾರಿಯಾಡಹೋದಲ್ಲಿ ಒಂದು ಚಂದ್ರಮತಿಯ ಕಂಡೆನು
ಪೃಥ್ವೀ ಮಂಡಲವನೊಂದು ನೊಣ ನುಂಗಿತ್ತು ನೋಡಾ
ಗುಹೇಶ್ವರನೆಂಬ ಲಿಂಗವ ಕಂಡವರುಳ್ಳರೆ ಹೇಳಿರೆ/522
ಒಕ್ಕು ಮಿಕ್ಕುದ ಕೊಂಬ ನಿಶ್ಚಲಪ್ರಸಾದಿ ನೀ ಕೇಳಾ.
ಒಕ್ಕುದಾವುದು? ಮಿಕ್ಕುದಾವುದು? ಬಲ್ಲಡೆ ನೀ ಹೇಳಾ.
ಒಕ್ಕು ಹೋಹುದು ಕಾಯ, ಮಿಕ್ಕು ಹೋಹುದು ಪ್ರಾಣ.
ಇದು ತಕ್ಕುದೆಂದರಿದು, ಕೊಳಬಲ್ಲಡೆ
ಸಿಕ್ಕುವನು ನಮ್ಮ ಗುಹೇಶ್ವರನು. /523
ಒಕ್ಕುದು ಪ್ರಸಾದವೆಂಬರು, ಮಿಕ್ಕುದು ಪ್ರಸಾದವೆಂಬರು
ಒಕ್ಕುದು ಮಿಕ್ಕುದನೆಲ್ಲ ಬೆಕ್ಕು ಕೊಳ್ಳದೆ ?
ಒಕ್ಕುಮಿಕ್ಕು ಹೋಗುವ ಪಂಚಸಕೀಲವ ಬಲ್ಲಡೆ
ಗುಹೇಶ್ವರಲಿಂಗದಲ್ಲಿ ಆತನೆ ಪ್ರಸಾದಿ/524
ಒಟ್ಟೆಯ ಮರಿ ಮೂರೊಟ್ಟೆಯನಿಕ್ಕಿತ್ತು.
ಕಟ್ಟುಗ್ರದಿರುಹೆ ಕತ್ತಲೆಯ ನುಂಗಿತ್ತು.
ಬೆಟ್ಟವ ಬೆಳ್ಳಕ್ಕಿ ನುಂಗಿತ್ತು.
ಸುಟ್ಟುದು ಎದ್ದು ಕುಳ್ಳಿದ್ದುದಯ್ಯಾ.
ಕಟ್ಟಿರ್ದುದು ತೋರದೆ ಗುಹೇಶ್ವರನಲ್ಲಿಯೆ ಅಡಗಿತ್ತು ನೋಡಾ !/525
ಒಡಲಡಗ ಮಚ್ಚಿದಾತನ ಅಚ್ಚಶರಣನೆಂಬೆ.
ಮಡಿಲಡಗ ಮಚ್ಚಿದಾತನ ಅಚ್ಚಲಿಂಗವಂತನೆಂಬೆ.
(ಈ ಒಡಲಡಗು ಮಡಿಲಡಗಿನೊಳಗೆ ಒಂದ ಮಚ್ಚದಿದ್ದರೆ ?)
ಉತ್ಪತ್ತಿ ಪ್ರಳಯ ತಪ್ಪದು.
ಶ್ರೀಗುರು ಮಹಾಲಿಂಗದಲ್ಲಿ ಒಡಲಡಗ ಮಚ್ಚಿ
ಅಚ್ಚಭವಿಯಾದ ಶರಣನೊಬ್ಬನೆ-ಗುಹೇಶ್ವರ./526
ಒಡಲಲ್ಲಿ ಹುಟ್ಟಿತ್ತು ಭ್ರಮೆಯಿಂದ ಬೆಳೆಯಿತ್ತು.
ಒಡನೆ ಹುಟ್ಟಿತ್ತು ತನ್ನನರಿಯದ ಕಾರಣ.
ಇದು ಒಂದು ಸೋಜಿಗವ ಕಂಡೆ.
ಕೂಡೆ ಭರಿತವೆಂದರಿಯಲು ಅಂಗದಲಳವಟ್ಟಿತ್ತು ಗುಹೇಶ್ವರಾ./527
ಒಡಲುಗೊಂಡ ಮಾನವರೆಲ್ಲರು ನೀವು ಕೇಳಿರೆ,
ಬಿಡದೆ ಕಾಡುವುದು ವಿದಿ ಮೂರುಲೋಕವನೆಲ್ಲ.
ಒಡಲು ಒಡವೆಯನು ಒಲ್ಲೆನೆಂಬವರುಗಳಿಗೆ
ತೊಡರನಿಕ್ಕಿತ್ತು ಮಾಯೆ.
ಆರುದರ್ಶನಕ್ಕೆಲ್ಲ ಮಡದಿ ಮಕ್ಕಳನೊಲ್ಲೆನೆಂಬ ಹಿರಿಯರಿಗೆಲ್ಲ
ತೊಡರನಿಕ್ಕಿತ್ತು ಮಾಯೆ.
ಮೃಡ ಮೊದಲಾದ ಹರಿ ವಿರಿಂಚಿಗಳನೆಲ್ಲರನು
ಕೋಡಗದಾಟವ ಆಡಿಸಿತ್ತು,
ಗುಹೇಶ್ವರಾ ನಿಮ್ಮ ಮಾಯೆ/528
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರಲ್ಲಾ.
ಅಂಗಸಂಗಿಗಳೆಲ್ಲ ಮಹಾಘನವನರಿಯದೆ ನಿಂದಿರೊ!
ಹುಸಿಯನೆ ಕೊಯ್ದು ಹುಸಿಯನೆ ಪೂಜಿಸಿ
ಗಸಣಿಗೊಳಗಾದರು ಗುಹೇಶ್ವರಾ./529
ಒಡಲೊಳಗಿದ್ದು ಒಡಲಿಂಗಾಧಾರವಾಗಿ ಒಡಲ ಸೋಂಕದೆ,
ಒಡಲ ಬೆಳಗುವ ಪರಿಯ ನೋಡಾ !
ಬೆಳಗಿಂಗೆ ಬೆಳಗಾಗಿ ಬೆಳಗುವ ಪರಿಯ ನೋಡಾ !
ಪರಮಚೈತನ್ಯ ನಿರಾಳ ಗುಹೇಶ್ವರಲಿಂಗವ ನೋಡಾ !/530
ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೊ?
ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೆ ಭಂಗ.
ಭಾವಿಸುವ ಭಾವನೆಗಿಂದ ಸಾವು[ದೆ]ಲೇಸು ಕಾಣಾ ಗುಹೇಶ್ವರಾ./531
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ ?
ಬೇಟದ ಮರುಳಗೆ ಲಜ್ಜೆ ಮುನ್ನುಂಟೆ ?
ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ ?
ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ ?
ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೆ ?/532
ಒಳಗ ತೊಳೆದು ಜಲವ ತುಂಬಲರಿಯದ ಅರೆಮರುಳನೇನಾದ ಹೇಳಿರೆ ?
ಜಲದ ಸಂಗವ ತೊರೆಯಲರಿಯದೆ ಜಲವ ಬಯಸುವನೆಂತಿರ್ದ ಹೇಳಿರೆ ?
ನೆಲನ ಶೋದಿಸಿ ನೆಲೆಯನರಿಯದೆ,
ಕೆರೆಯ ಕಟ್ಟಿಸುವ ಒಡ್ಡ ರಾಮನ ಇರವೆಂತು ಹೇಳಿರೆ ?
ನಮ್ಮ ಗುಹೇಶ್ವರನ ನಿಲವನರಿಯದ ಮರುಳ
ಸಿದ್ಧರಾಮನೆಂತಿರ್ದಹ ಹೇಳಿರೆ ?/533
ಒಳಗ ತೊಳೆಯಲರಿಯದೆ ಹೊರಗ ತೊಳೆದು ಕುಡಿವುತ್ತಿರ್ದರಯ್ಯಾ,
ಪಾದೋದಕ ಪ್ರಸಾದವನರಿಯದೆ.
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರಾ./534
ಒಳಗೆ ನೋಡಿಹೆನೆಂದಡೆ ಒಳಗ ನೋಡಲಿಲ್ಲ.
ಹೊರಗೆ ನೋಡಿಹೆನೆಂದಡೆ ಹೊರಗ ನೋಡಲಿಲ್ಲ.
ಜ್ಞಾನವೆಂತುಟೊ? ಅಜ್ಞಾನವೆಂತುಟೊ ?
ಬಲೆಯ ಬೀಸಿ ಕೊಲುವನ ಮನೆಯಲ್ಲಿ ಸತ್ತಡೆ
ಏನು ಕಾರಣ ಅಳುವರೊ ಗುಹೇಶ್ವರಾ ?/535
ಒಳಗೆ ನೋಡಿಹೆನೆಂದಡೆ ಒಳಗೆ ನಿರಾಳ.
ಹೊರಗೆ ನೋಡಿಹೆನೆಂದಡೆ ಹೊರಗೆ ನಿರಾಳ.
ಹೊಲದಲ್ಲಿ ಆವಿಲ್ಲ ಮನೆಯಲ್ಲಿ ಕರುವಿಲ್ಲ.
ನೆಲಹಿನ ಮೇಲಣ ಬೆಣ್ಣೆ-ಇದು ದಿಟವೊ?
ನಾರಿವಾಳದ ಕಾಯೊಳಗಣ ತಿರುಳ
ಒಡೆಯದೆ ಮೆಲಬಲ್ಲಡೆ ಬೆಡಗು-ಗುಹೇಶ್ವರಾ./536
ಒಳಗೆ ಪ್ರಾಣಲಿಂಗ, ಹೊರಗೆ ಕಾಯಲಿಂಗ
ಮನಕ್ಕೆ ಮನ ನಾಚದಿದೇನೊ ?
ಎರಡರ ನಿರಿಗೆಯ ಒಂದೆಂದರಿದಡೆ
ಅದೇ ಪಥವಯ್ಯಾ ಗುಹೇಶ್ವರಾ./537
ಓಂ’ ಎಂದು ವೇದವನೋದುವ ಮಾದಿಗಂಗೆ ಸಾಧ್ಯವಾಗದು ವಿಭೂತಿ.
ಪುರಾಣವನೋದುವ ಪುಂಡರಿಗೆ ಸಾಧ್ಯವಗದು ವಿಭೂತಿ
ಶಾಸ್ತ್ರವನೋದುವ ಸಂತೆಯ ಸೂಳೆಮಕ್ಕಳಿಗೆ ಸಾಧ್ಯವಾಗದು ವಿಭೂತಿ
ಅಂಗಲಿಂಗಸಂಬಂಧವನರಿದ ಶಿವಜ್ಞಾನಿಗಳಿಗಲ್ಲದೆ ಸಾಧ್ಯವಾಗದು ವಿಭೂತಿ.
ಅಂಗೈಯೊಳಗೆ ವಿಭೂತಿಯನಿರಿಸಿಕೊಂಡು,
ಅಗ್ಘಣಿಯ ನೀಡಿ ಗುಣಮರ್ದನೆಯ ಮಾಡಿ
ಲಿಂಗ ಉಚ್ಛಿಷ್ಟನಂಗೈದು ? ಲಿಂಗ ಸಮರ್ಪಣಂಗೈದು,
ಷಡಕ್ಷರಿಯ ಸ್ಮರಣೆಯಂಗೈದು
ಭಾಳದೊಳು ಪಟ್ಟವಂ ಕಟ್ಟಿ, ವಿಭೂತಿಯ ಧಾರಣಂಗೈದು
ಹಸ್ತವ ಪ್ರಕ್ಷಾಲಿಸುವವ ಗುರುದ್ರೋಹಿ ಲಿಂಗದ್ರೋಹಿ ಜಂಗಮದ್ರೋಹಿ.
ಶ್ರೀವಿಭೂತಿಯ ಲಲಾಟಕ್ಕೆ ಧರಿಸಿ ಹಸ್ತವ ತೊಳೆವ
ಪಾತಕರ ಮುಖವ ನೋಡಲಾಗದು.
ಶ್ರೀವಿಭೂತಿಯನು ಶಿವನೆಂದು ಧರಿಸುವುದು, ಪರಶಿವನು ತಾನೆಂದು ಧರಿಸುವುದು.
ಸಾಕ್ಷಿ:ಕೃತ್ವೇವ ಜಲಮಿಶ್ರಂತು ಸಮುಧೃತ್ಯಷಡಕ್ಷರಿ
ಧಾರಯೇತ್ ತ್ರಿಪುಂಡ್ರಂತು ಮಂತ್ರೇಣ ಮಂತ್ರಿತಂ”
ಶ್ರೀವಿಭೂತಿಯ ಧರಿಸಿ ಹಸ್ತವ ತೊಳದಾತಂಗೆ
ದೇವಲೋಕ ಮತ್ರ್ಯಲೋಕಕ್ಕೆ ಸಲ್ಲದೆಂದುದಾಗಿ
ನಿಮ್ಮಾಣೆ ನಿಮ್ಮ ಪ್ರಮಥರಾಣೆ,
ನಮ್ಮ ಗುಹೇಶ್ವರಲಿಂಗವು ತಾನಾದ ವಿಭೂತಿ ಕಾಣಾ ಸಂಗನಬಸವಣ್ಣ. /538
ಓಂ ನಮಃ ಶಿವಾಯ’ ಎಂಬ ದೇವನಿರಲು
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೆ.
ಶರೀರ, ಶರೀರ ರೂಹಿಸಿದ ರೂಹಿಂಗೆ ಮಾಯದ ಬಲೆಯಲ್ಲಿ ಸಿಲುಕಿ
ಅಂಗಸಂಗಿಗಳೆಲ್ಲರು ಮಹಾಘನವನರಿಯದೆ ಹೋದಿರೆ.
ಹುಸಿಯನೆ ಕೊಯ್ದು ಹುಸಿಯನೆ ಪೂಜಿಸೆ-
ನೇಮದೊಳಗಿದು ಸಲ್ಲದು,
ಗುಹೇಶ್ವರಾ, ನಿಮ್ಮ ಶರಣರ ಸಂಬಂಧ
ತೋರದು ತೋರದು ಬಹುಮುಖಿಗಳಿಗೆ !/539
ಓಂ ನಮಃ ಶಿವಾಯಯೆಂಬುದನರಿಯದೆ
ಜಗವೆಲ್ಲವು ನಾಯಾ[ಯಿತ್ತು]
ತಮ್ಮ ತಾವರಿಯದವರಿಗೆ, ಇನ್ನು ಹೇಳಿ ಕೇಳಿದಂತೆ ಆಚರಿಸದಿರ್ದಡೆ
ಆ ನಾಯ ಸಾವು ತಪ್ಪದು.
ಇನ್ನೆತ್ತಣ ಮುಕ್ತಿ ? ಅವರಿಗೆ ಭೋದಿಸಿದ್ದಾನಗದುಫ
ಕಾಣಾ ಗುಹೇಶ್ವರಾ./540
ಓಟೆ ಇದ್ದಂತೆ ಕಾಯಿ ಮೆದ್ದವರುಂಟೆ ?
ಕಾಯದ ಗುಣವಿದ್ದಂತೆ ಲಿಂಗವನರಿದವರುಂಟೆ ?
ಜೋಡು ಹರಿದಲ್ಲದೆ ಕಾಯವನಿರಿಯಲರಿಯದು ಕೈದು.
ಆ ಭಾವವ ತಿಳಿದಲ್ಲದೆ ನಮ್ಮ ಗುಹೇಶ್ವರಲಿಂಗವನರಿಯಬಾರದು
ಕಾಣಾ, ಎಲೆ ಅಂಬಿಗರ ಚಾಡಯ್ಯ./541
ಓಡಿನಲುಂಟೆ ಕನ್ನಡಿಯ ನೋಟ?
ಮರುಳಿನ ಕೂಟ ವಿಪರೀತಚರಿತ್ರ.
ನೋಟದ ಸುಖ ತಾಗಿ ಕೋಟಲೆಗೊಂಡೆನು.
ಗುಹೇಶ್ವರನೆಂಬ ಲಿಂಗವು ಒಬ್ಬನೆ ಅಚಲ.
ಉಳಿದವರೆಲ್ಲರೂ ಸೂತಕಿಗಳು./542
ಓಡಿನಲೂಟ ಕಾಡಿನಲಾಟ-ವಿಪರೀತ ಚರಿತ್ರ !
ಮರುಳಿನ ಕೂಟ !
ಕೋವಿದ ಕೋವಿದ ಅವಿದ ಅವಿದ ಲಿಂಗ
ಗುಹೇಶ್ವರನೆಂಬಾತನೊಬ್ಬನೆ ಹೊರಗು,
ಉಳಿದವರೆಲ್ಲರೂ ಸೂತಕರಯ್ಯಾ./543
ಓದಿ ಓದಿ ವೇದ ವಾದಕ್ಕಿಕ್ಕಿತ್ತು.
ಕೇಳೀ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು.
ಅರಿದೆ ಅರಿದೆನೆಂದು ಆಗಮ ಅಗಲಕ್ಕೆ ಹರಿಯಿತ್ತು.
ನೀನೆತ್ತ ನಾನೆತ್ತಲೆಂದು-
ಬೊಮ್ಮ ಬಕ್ಕಟ ಬಯಲು ಗುಹೇಶ್ವರಾ/544
ಓಹೋ ನಮಃ ಶಿವಾಯ,-
ಮಹದಾಕಾಶದ ಮರೆಯಲ್ಲಿರ್ದ ಶಾಂತ್ಯರ್ಕನ ನಿಲವೊ !
ದಶಮರುತನ ಹೊಯಿಲಿಲ್ಲದೆ,
ತಾನೆ ಲಿಂಗದ ಜ್ಞಾನಜ್ಯೋತಿಯ ನಿಲವೊ !
ತನ್ನಿಂದ ತಾನಾಗಿ ಮುಕ್ತಿಯೆ ಕರಿಗೊಂಡ
ಮುಕ್ತಿಯ ಮುತ್ತಿನ ಧವಳಕಾಂತಿಯ ನಿಲವೊ !
ರುದ್ರಾಕ್ಷಿಯ ಹಂಗು ಬೇಡವೆಂದು
ಹೊದ್ದ ಚರ್ಮದ ಹೊದಿಕೆಯಂ ತೆಗೆದ
ಗಿಟಿ ಗಿಟಿ ಜಂತ್ರದ ನಿಲವೊ !
ಅಲ್ಲ, ತನ್ನ ನಿಲವನರಿಯದೆ ವಾದಿಸುತ್ತಿರಲು
ಉರಿಲಿಂಗೋದ್ಭವವಾದ ಉರಿಲಿಂಗದ ನಿಲವೋ !
ಆವ ನಿಲವೆಂದರಿಯಬಾರದು !
ಗುಹೇಶ್ವರನ ಕಂಗಳಿಗೆ ಒಂದಾಶ್ಚರ್ಯ ತೋರಿತ್ತು
ಕಾಣಾ ಸಂಗನಬಸವಣ್ಣಾ !/545
ಕಂಕಳ ತೂಕ (ನೋಟ ?)ಲಿಂಗಕ್ಕೆ ಭಾರ.
ಅಂಗಜೀವಿಗಳ ಕೂಡೆ ನುಡಿವನೆ ಶರಣನು ?
ನಡೆನುಡಿ ಮುಗ್ಧ, ಗುಹೇಶ್ವರಾ ನಿಮ್ಮ ಶರಣ./546
ಕಂಕುಳೆಂಬುದು ಕವುಚಿನ ತವರುಮನೆ.
ಕರಸ್ಥಲವೆಂಬುದು [ಕೈ] ಕೆಟ್ಟ ಹುಣ್ಣು.
ಅಮಳೋಕ್ಯವೆಂಬುದು ಬಾಯ ಭಗಂದರ (ಬಗದಳ ?).
ಅಂಗಸೋಂಕೆಂಬುದು ಪಾಪದ ತವರುಮನೆ.
ಉತ್ತಮಾಂಗವೆಂಬುದು ನೆತ್ತಿಯ ಮೃತ್ಯು.
ಕಂಠವೆಂಬುದು ಗಂಟಲ ಗಾಣ.
ಮತ್ತೆ, ಗುಹೇಶ್ವರನ ಮಾತು ನಿಮಗೇಕೆಲವೊ ?/547
ಕಂಗಳ ಕರುಳ ಕೊಯ್ದವರ, ಮನದ ತಿರುಳ ಹುರಿದವರ,
ಮಾತಿನ ಮೊದಲ ಬಲ್ಲವರ; ಎನಗೊಮ್ಮೆ ತೋರಾ ಗುಹೇಶ್ವರಾ/548
ಕಂಗಳ ಬೆಳಗ ಕಲ್ಪಿಸಬಾರದು, ಕರ್ಣದ ನಾದವ ವರ್ಣಿಸಬಾರದು.
ಜಿಹ್ವೆಯ ರುಚಿಗೆ ಪ್ರತಿಯಿಲ್ಲವೆಂದಿತ್ತು.
ಮತಿಗೆ ಮಹಾಘನವಪ್ಪ ಸುಷುಮ್ನನಾಳದ ಸುಯಿಧಾನವ,
ಪ್ರಮಾಣಿಸಬಾರದು,
ಅಣು ರೇಣು ತೃಣ ಕಾಷ್ಠದೊಳಗೆ ಭರಿತ ಮನೋಹರ,
ನಿಂದ ನಿರಾಳ- ಗುಹೇಶ್ವರಾ./549
ಕಂಗಳ ಮುಂದಣ ಗೊತ್ತನರಿದು,
ಕಾಮ್ಯದ ಮುಂದಣ ಚಿತ್ತವ ಹರಿದು,
ಮಾಡಿಹೆನೆಂಬ ಮಾಟಕೂಟದ ಚಿತ್ತ ನಿಂದಲ್ಲದೆ ಸ್ವಸ್ಥವಿಲ್ಲ.
ಹಾಂಗಲ್ಲದೆ ಗುಹೇಶ್ವರಲಿಂಗವ ಕಾಣಬಾರದು-
ಆಯ್ದಕ್ಕಿಯ ಮಾರಯ್ಯಾ./550
ಕಂಗಳ ಮುಂದೆ ಕತ್ತಲೆ ಇದೇನೊ?
ಮನದ ಮುಂದಣ ಮರಣ (ಮರವೆ ?) ಇದೇನೊ?
ಒಳಗಣ ರಣರಂಗ ಹೊರಗಣ ಶೃಂಗಾರ !
ಬಳಕೆಗೆ ಬಂದ ಬಟ್ಟೆ ಇದೇನೊ ಗುಹೇಶ್ವರಾ ?/551
ಕಂಗಳ ಸೂತಕ ಕಾಮಿಸಲಾಗಿ ಹರಿಯಿತ್ತು.
ಮನದ ಸೂತಕ ಮುಟ್ಟಲಾಗಿ ಬಿಟ್ಟಿತ್ತು.
ನಾನೆಂಬ ಭಾವ ಗುಹೇಶ್ವರಲಿಂಗದಲ್ಲಿ ಐಕ್ಯವಾಯಿತ್ತು !/552
ಕಂಗಳಲ್ಲಿ ಜ್ಯೋತಿರ್ಲಿಂಗ, ಕೈಯಲ್ಲಿ ಉಭಯ ಪ್ರತಿಷ್ಠೆಯ ಲಿಂಗ,
ಬ್ರಹ್ಮರಂಧ್ರದಲ್ಲಿ ಅಮೃತಲಿಂಗ ಉಂಟೆಂಬ
ತ್ರಿವಿಧ ಸಂದನಳಿಯಬೇಕು; ಸಿದ್ಧರಾಮಯ್ಯಾ,
ಗುಹೇಶ್ವರಲಿಂಗವನರಿಯಬೇಕು/553
ಕಂಗಳಲ್ಲಿ ನಟ್ಟಗಾಯವನಾರಿಗೆ ತೋರಬಹುದಯ್ಯಾ?
ಮನ ಸೋಂಕಿದ ಸುಖವ ಮೊಟ್ಟೆಯ ಕಟ್ಟಬಹುದೆ?
ಆತ ನಿಂದ ನಿಲವಾತಂಗೆ ಸಾಧ್ಯವಾಯಿತ್ತು.
ಆತ ನಿಂದ ನಿಲವನೇನೆಂಬೆ ಗುಹೇಶ್ವರಾ./554
ಕಂಗಳಾಲಿಯ ಕರಿಯ ನಾಳದಲ್ಲಿ, ಈರೇಳು ಭುವನಂಗಳಡಗಿದವು!
ನಾಟಕ ನಾಟಕವ ರಚಿಸುತ್ತ, ಆಡಿಸುವ ಸೂತ್ರದ ಪರಿ,
ಗುಹೇಶ್ವರಲಿಂಗ ನಿರಾಳಚೈತನ್ಯ./555
ಕಂಗಳೇಕೆ `ನೋಡಬೇಡಾ’ ಎಂದರೆ ಮಾಣವು ?
ಶ್ರೋತ್ರಂಗಳೇಕೆ `ಆಲಿಸಬೇಡಾ’ ಎಂದರೆ ಮಾಣವು ?
ಜಿಹ್ವೆ ಏಕೆ `ರುಚಿಸಬೇಡಾ’ ಎಂದರೆ ಮಾಣವು (ದು ?)
ನಾಸಿಕವೇಕೆ `ವಾಸಿಸಬೇಡಾ’ ಎಂದರೆ ಮಾಣವು ? (ದು ?)
ತ್ವಕ್ಕು ಏಕೆ `ಸೋಂಕಬೇಡಾ’ ಎಂದರೆ ಮಾಣವು ? (ದು ?)-
ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು!
ಗುಹೇಶ್ವರಲಿಂಗಕ್ಕೆ ಒಲಿದ ಕಾರಣ, ಅಬಿಮಾನ ಲಜ್ಜೆ ಬೇಸತ್ತು ಹೋಯಿತ್ತು./556
ಕಂಗಳೊಳಗಣ ಕಟ್ಟಿಗೆಯ ಮುರಿಯದ,
ಕೈಯೊಳಗಣ ಕಪ್ಪರವನೊಡೆಯದ,
ತನ್ನೊಳಗಿಪ್ಪ ನಿಕ್ಷೇಪವ ಭೇದಿಸಿ ಕಾಣಲರಿಯದ ಬಿನುಗರೆಲ್ಲ,
ಹಲುಗಿರಿವುತ್ತಿಹರು ಕಾಣಾ ಗುಹೇಶ್ವರಾ/557
ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಿಹೆನೆಂದಡೆ,
ಸಿಕ್ಕದೆಂಬ ಬಳಲಿಕೆಯ ನೋಡಾ.
ಕಂಡುದನೆ ಕಂಡು ಗುರುಪಾದವಿಡಿದಲ್ಲಿ,
ಕಾಣಬಾರದುದ ಕಾಣಬಹುದು ಗುಹೇಶ್ವರಾ./558
ಕಂಡುದೆಲ್ಲ ಪಾವನ ಕೇಳಿತ್ತೆಲ್ಲ ಪರಮಬೋಧೆ,
ಮುಟ್ಟಿತ್ತೆಲ್ಲ ಪರುಷದ ಸೋಂಕು
ಒಡನೆ ನುಡಿದವರೆಲ್ಲ ಸದ್ಯೋನ್ಮುಕ್ತರು.
ಸುಳಿದ ಸುಳುಹೆಲ್ಲ ಜಗತ್ಪಾವನ, ಮೆಟ್ಟಿದ ಧರೆಯೆಲ್ಲ ಅವಿಮುಕ್ತಕ್ಷೇತ್ರ,
ಸೋಂಕಿದ ಜಲವೆಲ್ಲ ಪುಣ್ಯತೀರ್ಥಂಗಳು.
ಶರಣೆಂದು ಭಕ್ತಿಯ ಮಾಡಿದವರೆಲ್ಲರು ಸಾಯುಜ್ಯರು.
ಗುಹೇಶ್ವರಾ ನಿಮ್ಮ ಸುಳುಹಿನ ಸೊಗಸನುಪಮಿಸಬಾರದು./559
ಕಂಡೆನಲ್ಲಾ ಕರುಳಿಲ್ಲದ ಕಲಿಯ !
ಕಂಡೆನಲ್ಲಾ ಯೌವನವಿಲ್ಲದ ನೇಹವ !
ಕಂಡೆನಲ್ಲಾ ಕೈದುವಿಲ್ಲದ ಕಲಿತನವ !
ಕಂಡೆನಲ್ಲಾ ಕುಸುಮವಿಲ್ಲದ ಗಂಧವ !
ಕಂಡೆನಲ್ಲಾ ಗುಹೇಶ್ವರಲಿಂಗದಲ್ಲಿ
ಮರುಳಶಂಕರನೆಂಬ ನಾಮವ !/560
ಕಂಡೆನೆಂಬುದು ಕಂಗಳ ಮರವೆ,
ಕಾಣೆನೆಂಬುದು ಮನದ ಮರವೆ,
ಕೂಡಿದೆನೆಂಬುದು ಅರುಹಿನ ಮರವೆ,
ಅಗಲಿದೆನೆಂಬುದು ಮರಹಿನ ಮರವೆ.
ಇಂತು-ಕಂಡೆ ಕಾಣೆ ಕೂಡಿದೆ ಅಗಲಿದೆ ಎಂಬ,
ಭ್ರಾಂತಿಸೂತಕವಳಿದು ನೋಡಲು
ಗುಹೇಶ್ವರಲಿಂಗವನಗಲಲೆಡೆಯಿಲ್ಲ ಕೇಳಾ, ಎಲೆ ತಾಯೆ/561
ಕಂಡೆಯಾ ಬಸವಣ್ಣಾ,
ಕಣ್ಣಿನೊಳಗಣ ಬೊಂಬೆಯ ಸೂತ್ರದ ಇರವಿನಂತೆ,
ಕುಂದಣದೊಳಗಡೆಗೆ ತೋರುವ ಮೃದು ಛಾಯದಂತೆ,
ನವನೀತದೊಳಗಡಗಿದ ಸಾರದ ಸವಿಯಂತೆ
ಅಂಗವಿಲ್ಲದ ಕುರುಹು, ಭಾವವಿಲ್ಲದ ಬಯಲು,
ಬೆಳಗನರಿಯದ ಜ್ಯೋತಿಯ ಕಂಡೆಯಾ ಸಂಗನಬಸವಣ್ಣಾ,
ಗುಹೇಶ್ವರಲಿಂಗದಲ್ಲಿ ಮರುಳು ಶಂಕರದೇವರ ?/562
ಕಂಬವೊಂದೆ, ದೇಗುಲವೊಂದೆ, ದೇವರೊಂದೆ
ಗುಹೇಶ್ವರ ನಿಮ್ಮ ಮನ್ನಣೆಯ ಶರಣರ ದೇವರೆಂಬೆನು./563
ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖಸೆಜ್ಜೆ ಅಂಗಂಸೋಂಕೆಂಬದು;
ಷಡುಸ್ಥಲದರುಶನಾದಿಗಳಿಗೆ, ಬಹಿರಂಗದಲ್ಲಿ ವೇಷಲಾಂಛನವಯ್ಯಾ.
ಅಂತರಂಗದಲ್ಲಿ ನಾಲ್ಕು ಸ್ಥಲ;
ಬ್ರಹ್ಮರಂಧ್ರ ಭ್ರೂಮಧ್ಯ ನಾಶಿಕಾಗ್ರ ಚೌಕಮಧ್ಯ,
-ಇಂತೀ ಸ್ಥಾನಂಗಳನರಿಯರಾಗಿ!
ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ, ಭ್ರೂಮಧ್ಯದಲ್ಲಿ ಜಂಗಮಸ್ವಾಯತ,
ನಾಶಿಕಾಗ್ರದಲ್ಲಿ ಪ್ರಸಾದಸ್ವಾಯತ, ಚೌಕಮಧ್ಯದಲ್ಲಿ ಅನುಭಾವಸ್ವಾಯತ,
ಅಷ್ಟದಳಕಮಲದಲ್ಲಿ ಸರ್ವಸ್ವಾಯತ.-
ಇದು ಕಾರಣ ಗುಹೇಶ್ವರಾ ನಿಮ್ಮಶರಣರು ಸದಾ ಸನ್ನಹಿತರು./564
ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತನು ಬ್ರಹ್ಮನು.
ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತನು ವಿಷ್ಣುವು.
ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತನು ರುದ್ರನು.
ಅಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತನು ಈಶ್ವರನು.
ಮುಖಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಸದಾಶಿವನು.
ಅಂಗಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಉಪಮಾತೀತನು-
ಇವರೆಲ್ಲರೂ ಬಯಲನೆ ಪೂಜಿಸಿ ಬಯಲಾಗಿ ಹೋದರು.
ನಾನು ನಿತ್ಯವ ಪೂಜಿಸಿ ಮಿಥ್ಯವಳಿದ ಇರವಿನಲ್ಲಿ
ಸುಖಿಯಾದೆನು ಗುಹೇಶ್ವರಾ./565
ಕಟ್ಟಿದಾತ ಭಕ್ತನಪ್ಪನೆ ? ಕೆಡಹಿದಾತ ದ್ರೋಹಿಯಪ್ಪನೆ ?
ಲಿಂಗವ ಕಟ್ಟಲಿಕ್ಕೆ ತನ್ನ ಕೈಯೊಳಗಿಪ್ಪುದೆ ?
ಕೆಡಹಲಿಕ್ಕೆ ಬೀಳಬಲ್ಲುದೆ ?
ಆ ಲಿಂಗವು ಬಿದ್ದ ಬಳಿಕ ಜಗವು ತಾಳಬಲ್ಲುದೆ ?
ಪ್ರಾಣಲಿಂಗ ಬಿದ್ದ ಬಳಿಕ ಆ ಪ್ರಾಣ ಉಳಿಯಬಲ್ಲುದೆ ?
ಲಿಂಗ ಬಿದ್ದಿತ್ತೆಂಬುದು ಸೂತಕದ ಶಬ್ದ, ಭ್ರಾಂತುವಿನ ಪುಂಜ.
ಅಂತು ಅದ ಕೇಳಲಾಗದು.
ಯುಗಜುಗಂಗಳು ಗತವಹವಲ್ಲದೆ ಲಿಂಗಕ್ಕೆ ಗತವುಂಟೆ ?
ಲಿಂಗವು ಬಿದ್ದಿತ್ತೆಂದು ನಿಂದಿಸಿ ನುಡಿವ
ದ್ರೋಹಿಯ ಮಾತ ಕೇಳಲಾಗದು ಕಾಣಾ ಗುಹೇಶ್ವರಾ./566
ಕಡಲ ನುಂಗಿದ ಕಪ್ಪಿನ ಪರಿಭವ ನವಸಾಸಿರ !
ಸಿಡಿಲು ಹೊಯ್ದ ಬಯಲಿಂಗೆ ಬಣ್ಣವುಂಟೆ ?
ಕಂಗಳ ಮುಂದಣ ಕನಸು ಹಿಂಗಿದ ತುಂಬಿಯ ಪರಿಮಳ !
ಅಂಗವಿಲ್ಲದ ರೂಹಿಂಗೆ ಸಂಗವುಂಟೆ ?-ಇದೇನೋ !
ಗಗನದ ಹಣ್ಣನೆ ಕೊಯ್ದು, ಮುಗುದೆ ರುಚಿಯನರಿಯಳು !
ಹಗರಣದಮ್ಮಾವಿನ ಹಯನು ಸಯವಪ್ಪುದೆ ಗುಹೇಶ್ವರಾ ?/567
ಕಡಲ ಮೇಲಣ ಕಲ್ಲು, ಸಿಡಿಲು ಹೊಯ್ದ ಬಾವಿ !
ತಡದ ರಕ್ಕಸಿಯ ಮಗಳು ಅಡವಿಯಲ್ಲಿ ಮಡಿದಳು.
ತೊಡೆಯಬಾರದ ಲಿಪಿಯ ಬರೆಯಬಾರದು ನೋಡಾ !
ನಡುನೀರ ಜ್ಯೋತಿಯ ವಾಯುವ ಕೊನೆಯಲ್ಲಿ ನೋಡಾ !
ಮೊದಲಿಲ್ಲದ ನಿಜ, ಕಡೆಯಿಲ್ಲದ ನಡು-
ಏನೂ ಇಲ್ಲದ ಊರೊಳಗೆ ಹಿಡಿದಡೆ
ನುಂಗಿತ್ತು ನೋಡಾ ಹೆಮ್ಮಾರಿ ಗುಹೇಶ್ವರಾ./568
ಕಡುಜಲಕ್ಕೆ (ಹರಿವ ಜಲಕ್ಕೆ ?) ಇದಿರಾಗಿ ಹರಿವ ಸ್ವಾಮಿಯ ಬರವ ಕಂಡು,
ಬಿಡದೆ ಬೆಂಬತ್ತಿಸುವ ಪರಿಯ ನೋಡಾ.
ನಡೆ ನುಡಿ ಚೈತನ್ಯ ಒಡಲನೊಂದನು ಮಾಡಿ
ಬಿಡದೆ ವೇದಿಸುವ ಬೆಡಗ ಕಂಡೆನಯ್ಯಾ !
ಕಡೆಗೆ ಸೂಸದ ದೃಷ್ಟಿ, ಹಿಡಿದು ತೊಲಗದ ಹಸ್ತ,
ಬೇಡ ಬೇಡ ತನಗೆನ್ನದ ಸಜ್ಜನ ಮಡದಿ,
ತನ್ನ ಗಂಡನ ಅಡಗಿ ಕೂಡುವ ಭೇದ !-
ನಡುವಿರುಳು ಕೂಡಿ ನಿಮಿರೆ ಬೆಳಗಾಯಿತ್ತು.
ಮಾಡಿ ನೀಡುವನ ಕಂಡು ನಾಡು ಬೀಡೆಲ್ಲ ನೆರೆದು
ಕೊಡ ಕೈಯಲ್ಲಿ ಕೊಟ್ಟಡೆ ತೃಪ್ತರಾಗಿ,
ಮಾಡುವರು ಹರಸುವರು ನೋಡುವರು ಮನದಣಿಯೆ
ಕೊಡುವರು ಕೋಟಿ, ಸಹಜ ಒಂದೆ ಎಂದು !
ಜೋಡ ತೊಡದಾತನ ಮೈಯಲ್ಲಿ, ಕೂಡೆ ಘಾಯವಿಲ್ಲದುದ ಕಂಡು,
ನೋಡಿರೆ ಮಸೆ ಮುಟ್ಟದ ಮಹಾಂತನ !
ಬೇಡುವೆನು ಕರುಣವನು, ಪಾದ [ವ]ನೊಸಲಲ್ಲಿ ಸೂಡುವೆನು
ಗುಹೇಶ್ವರನ ಶರಣ ಬಸವಣ್ಣಂಗೆ ನಮೋ ನಮೋ ಎಂಬೆನು./569
ಕಡೆನಾಡಲಿಂಗವ ನಡುನಾಡಿಗೆ ತಂದೆನೆಂಬ ಅಹಂಕಾರವ
ಮುಂದುಗೊಂಡಿದ್ದೆಯಲ್ಲಾ
ಎಂಬತ್ತುನಾಲ್ಕುಲಕ್ಷ ಶಿವಾಲಯವೆಂಬ ಬಯಲಭ್ರಮೆ
ಇದೆಲ್ಲಿಯದು ಹೇಳಾ ?
ಮಹಾಘನಲಿಂಗಕ್ಕೆ ಜಗದ ಜೀವರಾಶಿಗಳು
ಶಿವಾಲಯವಾಗಬಲ್ಲವೆ ?
ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಲಿಂಗವ
ನಿನ್ನ ಎದೆಯಲ್ಲಿ ಇರಿದುಕೊಳ್ಳಾ.
ಗುಹೇಶ್ವರಲಿಂಗವು ನಿನ್ನ ತಪ್ಪಿಸಿ ಹೋದುದ
ಮರೆದೆಯಲ್ಲಾ ಮರುಳ ಸಿದ್ಧರಾಮಯ್ಯಾ/570
ಕಡೆಯಿಲ್ಲದ ದೇಶವ ತಿರುಗಿದೆನು,
ಹವಣಿಲ್ಲದ ಕಂಥೆಯ ತೊಟ್ಟೆನು,
ಹಸಿವಿಲ್ಲದ ಕಪ್ಪರವ ಹಿಡಿದು ಭಕ್ತಿಬಿಕ್ಷವ ಬೇಡ ಬಂದೆನು.
ಗುಹೇಶ್ವರ ಹಸಿದನು, ಉಣಲಿಕ್ಕು ಏಳಾ ಸಂಗನಬಸವಣ್ಣಾ./571
ಕಣ್ಗೆ ಕಾಬಡೆ ರೂಪಲ್ಲ, ಕೈಗೆ ಸಿಲುಕವಡೆ ದೇಹಿಯಲ್ಲ.
ನಡೆವಡೆ ಗಮನಿಯಲ್ಲ, ನುಡಿವಡೆ ವಾಚಾಳನಲ್ಲ.
ನಿಂದಿಸಿದಡೆ ಹಗೆಯಲ್ಲ, ಹೊಗಳಿದವರಿಗೆ ಕೆಳೆಯಲ್ಲ.
ಗುಹೇಶ್ವರನ ನಿಲುವು ಮಾತಿನ ಮಾಲೆಗೆ ಸಿಲುಕುವುದೆ ?
ಸಿದ್ಧರಾಮಯ್ಯ ನೀನು ಮರುಳಾದೆಯಲ್ಲಾ /572
ಕಣ್ಣ ಮುಂದಿರ್ದವನ ಕಾಣದೆ ಹೋದೆನು.
ನೋಡೂದ ನೋಡಲರಿಯದೆ ಕೆಟ್ಟಿತ್ತು ಲೋಕವೆಲ್ಲಾ.
ನೋಡೂದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ.
ನೋಡದ ಕೂಡದ ಅಗಲದ ಸುಖವನು
ಗುಹೇಶ್ವರಾ ನಿಮ್ಮ ಶರಣ ಬಲ್ಲನು. /573
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ,
ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ.
ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ.
ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ
ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ./574
ಕಣ್ಣಿನೊಳಗಣ ಕಸ, ಕಾಲೊಳಗಣ ಮುಳ್ಳು,
ಮನದೊಳಗಣ ಶಂಕೆ ಹರಿಯಿತ್ತು,
ಗುಹೇಶ್ವರನೆಂಬ ಭಾವ ನಿರಾಳವಾದಲ್ಲಿ !/575
ಕಣ್ಣು ಕಂಡಲ್ಲದೆ ಮನ ನೆನೆಯದು.
ಆ ಮನ ನೆನೆದಲ್ಲಿಗೆ ಕಾಲು ನಡೆವುದು.
ಕಾಲು ನಡೆದಲ್ಲದೆ ಕಾರ್ಯವಾಗದು.
ಕಾಲೆಂದಡೆ ನೀ ಚರಿಸುವ ವರ್ತನೆ.
ಆ ವರ್ತನಾಚಾರವೆಲ್ಲವು ಲಿಂಗವು.
ಇದು ಕಾರಣ-ಲಿಂಗವ ಹಿಂಗಿದ ಮಾಟ
ಮೀಸಲಿಲ್ಲದ ಮನೆದೇವರ ಹಬ್ಬದಂತೆ !
ನಮ್ಮ ಗುಹೇಶ್ವರಲಿಂಗಕ್ಕೆ,
ಇದೇ ಬೇಹ ಶೌಚ ಕೇಳಾ ಚಂದಯ್ಯಾ. /576
ಕಣ್ಣೆ ಕಟ್ಟಿಗೆಯಾಗಿ, ಕೈಯೆ ಕರ್ಪರವಾಗಿ ,
ಕಿವಿಯೆ ಸಕಲಪುರಾತನರ ಕಾರುಣ್ಯವೆನುತ,
ಮನದ ಬಿಕ್ಷವನುಂಡು, ತನು ಪರಿಣಾಮವನೆಯ್ದಿಹ
ಘನಮಹಿಮರ ತೋರಯ್ಯಾ ಗುಹೇಶ್ವರಾ/577
ಕದನದೊಳಗಣ ಕಣ್ಣ ಕೆಂಪು, ಕದನದೊಳಗಣ ಮನದ ಕೆಂಪು
ಇದಾವನಾವನ ಕಾಡದಯ್ಯಾ ?
ಪದುಮದೊಳಗೆ ಬಿಂದು ಸಿಲುಕಿ ಅಲ್ಲಿಯೆ ಅದೆ ನೋಡಿರೆ !
ಗುಹೇಶ್ವರನೆಂಬ ಅನುಗ್ರಹ ತನ್ನ ನುಂಗಿ ಲಿಂಗವಿಲ್ಲೆನುತ್ತಿರ್ದೆನು(ದ್ದಿತು?)/578
ಕದಳಿಯ ಬನವ ಹೊಕ್ಕು ಹೊಲಬ ತಿಳಿಯದನ್ನಕ್ಕ,
ಬಯಲ ಗಾಳಿಯ ಹಿಡಿದು ಗಟ್ಟಿ ಮಾಡದನ್ನಕ್ಕ,
ಬರಿದೆ ಬಹುದೆ ಶಿವಜ್ಞಾನ?
ಷಡುವರ್ಣ(ರ್ಗ?)ವಳಿಯದನ್ನಕ್ಕ, ಬರಿದೆ ಬಹುದೆ?
ಅಷ್ಟಮದವಳಿಯದನ್ನಕ್ಕ ನಬರಿದೆ ಬಹುದೆ?
ಮದಮತ್ಸರ ಮಾಡಲಿಲ್ಲ, ಹೊದಕುಳಿಗೊಳಲಿಲ್ಲ,
ಗುಹೇಶ್ವರಲಿಂಗ ಕಲ್ಪಿತದೊಳಗಿಲ್ಲ./579
ಕನಕಾಚಲದಲ್ಲಿ ದಿನನಾಯಕ ಎಂಬ ರತ್ನ ಹುಟ್ಟಿ,
ಅಹುದಲ್ಲ (ಅಹುದು ಅಲ್ಲ?) ಎಂಬ ಕೊಳಗದ ಕೊರಳಿನಲ್ಲಿ ಅಳೆವುತ್ತೈದಾನೆ.
ಕೊಳಗದ ಕೊರಳು ತುಂಬಿ ಅಳೆವಾತನ ಹೃದಯ ತುಂಬಿ
ಗುಹೇಶ್ವರಲಿಂಗದ ಕಂಗಳು ತುಂಬಿ ಮಂಗಳಮಯವಾಯಿತ್ತು !/580
ಕನ್ನಡಿಯೊಳಗಣ ರೂಪನರಸಿಯೂ ಕಾಣರು,
ಹೊಳೆವುತ್ತಿದೆ ಧ್ರುವ (ಭ್ರೂ?) ಮಂಡಲದೊಳಗೆ
ಇದ ಬಲ್ಲವರೊಳಗಿಪ್ಪ ಗುಹೇಶ್ವರ. /581
ಕಬ್ಬಿನ ಬಿಲ್ಲ ಮಾಡಿ, ಪರಿಮಳದಲದ್ದಿ ಅಂಬ ಮಾಡಿ ನಿಲ್ಲೊ ಬಿಲ್ಲಾಳೆ
ಎನ್ನ ಮನದಲ್ಲಿ ಎಸೆಯ ಬಲ್ಲೆಯಯ್ಯಾ, ಗುಹೇಶ್ವರನೆಂಬ ಲಿಂಗವನು ! /582
ಕಬ್ಬಿನ ರಸದೊಳಗಣ ಮುತ್ತನೊಡೆದು ನೋಡಲು
ಹುಬ್ಬಿನ ಮೇಲಣ ನೀಲದ ಪ್ರಭೆಯ ನೋಡಾ !
ವಜ್ರದ ಚಂಡಿಕೆ (ಚಂದ್ರಿಕೆ?)ಯಲ್ಲಿ ಕಟ್ಟಿ ಆಳುವರು !
ಉಭಯ ಕವಿಗಳಿಗೆ ಅರಿಯಬಾರದು.
ಗುಹೇಶ್ವರನ ಸ್ವಾನುಭಾವಿಗಳಿಗಲ್ಲದೆ ತಿಳಿಯಬಾರದು. /583
ಕಬ್ಬು ಬೆಳೆವುದಯ್ಯ ಕರಿಯ ಭೂಮಿಯಿದ್ದಲ್ಲಿ,
ಉಬ್ಬುಬ್ಬಿ ಬೆಳೆವುದಯ್ಯ ಜಲ ಪ್ರಮಾಣವಿರ್ದಲ್ಲಿ,
ದಾರಿದ್ರ್ಯವಿದ್ದಲ್ಲಿ ನಿದ್ರೆ ಬೆಳೆವುದಯ್ಯ,
ನಮ್ಮ ಶಿವನ ಸಲೆ ಸಂದ ಶರಣರಾದ ಹಿರಿಯರಿದ್ದಲ್ಲಿ ಬುದ್ಧಿ ಬೆಳವುದಯ್ಯ,
ಜಟ್ಟಿ ಮಾಸಾಳರಿರ್ದಲ್ಲಿ ಕಾಳಗ ಘನವನಪ್ಪುದಯ್ಯ,
ಇಷ್ಟ ಕಂಡು ಬೆರಗಾದ ನಮ್ಮ ಗುಹೇಶ್ವರ. /584
ಕಬ್ಬುನದ ಗುಂಡಿಗೆಯಲ್ಲಿ [ರಸದ] ಭಂಡವ ತುಂಬಿ,
ಹೊನ್ನ ಮಾಡ ಬಲ್ಲಡೆ ಅದು ಪರುಷ ಕಾಣಿರಣ್ಣಾ.
ಲಿಂಗ ಬಂದು ಉಂಬಡೆ ಪ್ರಸಾದಕಾಯವಪ್ಪಡೆ,
ಅಂದಂದಿಂಗೆ ಭವಕರ್ಮ ಮುಟ್ಟಲಮ್ಮದು ಕಾಣಿರೆ.
ಆದಿಯ ಪ್ರಸಾದಕ್ಕೆ ಬಾಧೆಯಿಲ್ಲ ಕಾಣಿರೆ.
ಶಶಿಯಲ್ಲಿ ಕರಗದು ಬಿಸಿಲಲ್ಲಿ ಕೊರಗದು,
ರಸವುಂಡ ಹೊನ್ನು -ಗುಹೇಶ್ವರಾ ನಿಮ್ಮ ಶರಣ !/585
ಕರಗಿಸಿ ನೋಡಿರೆ ಅಣ್ಣಾ ಕರಿಯ ಘಟ್ಟಿಯನು.
ಆ ಕರಿಯ ಘಟ್ಟಿಯೊಳಗೊಂದು ರತ್ನವಿಪ್ಪುದು.
ಆ ರತ್ನದ ಪರೀಕ್ಷೆಯ ಬಲ್ಲೆವೆಂಬವರೆಲ್ಲರ ಕಣ್ಣುಗೆಡಿಸಿತ್ತು ನೋಡಾ !
ಅರುಹಿರಿಯರೆಲ್ಲರೂ ಮರುಳಾಗಿ ಹೋದರು.
ಕರಿಯ ಘಟ್ಟಿಯ ಬಿಳಿದು ಮಾಡಿ
ಮುಖದ ಮುದ್ರೆಯನೊಡೆಯಬಲ್ಲವರಿಗಲ್ಲದೆ
ಗುಹೇಶ್ವರನ ನಿಲವನರಿಯಬಾರದು ನೋಡಿರಣ್ಣಾ./586
ಕರಣಾದಿ ಗುಣಂಗಳಳಿದು ನವಚಕ್ರಂಗಳು ಬಿನ್ನವಾದ ಬಳಿಕ
ಇನ್ನೇನೊ? ಇನ್ನೇನೊ?
ಪುಣ್ಯ-ಪಾಪವಿಲ್ಲ ಇನ್ನೇನೊ ? ಇನ್ನೇನೊ ?
ಸ್ವರ್ಗ-ನರಕವಿಲ್ಲ ಇನ್ನೇನೊ ? ಇನ್ನೇನೊ ?
ಗುಹೇಶ್ವರಲಿಂಗವ ವೇದಿಸಿ ಸುಖಿಯಾದ ಬಳಿಕ
ಇನ್ನೇನೊ ? ಇನ್ನೇನೊ ?/587
ಕರಸ್ಥಲದ ಬೆಳಗಿನೊಳಗೊಂದು ಘನಲಿಂಗದ ಬೆಳಗ ಕಂಡೆ.
ಮಹಾಮಂಗಳನಿಳಯನಾಗಿ ತೋರುತ್ತಿದ್ದಾನೆ.
ಮಹಾಮಂಗಳನಿಳಯವಾಗಿ ತೋರುತ್ತಿದ್ದಿತ್ತು, ಗುಹೇಶ್ವರಲಿಂಗದ ವಾರ್ತೆ.
ಸಂಗನಬಸವಣ್ಣನ ನಿವಾಳಿಸುತ್ತಿದ್ದಿತ್ತು./588
ಕರಸ್ಥಲದ ಲಿಂಗ ಮನಸ್ಥಲದಲ್ಲಿ ವೇದ್ಯವಾಗಿ
ಮನಸ್ಥಲದ ಲಿಂಗ ಸರ್ವಾಂಗದಲ್ಲಿ ವೇದ್ಯವಾದ ಬಳಿಕ
ಇನ್ನು ಬಿನ್ನಭಾವಕ್ಕೆ ತೆರಹುಂಟೆ ?
ಗುಹೇಶ್ವರಲಿಂಗವ ಬೆರಸಿ ಸಮರಸವಾದ ಬಳಿಕ
ಎರಡೆಂಬುದಿಲ್ಲ ನೋಡಾ ಚನ್ನಬಸವಣ್ಣಾ/589
ಕರಸ್ಥಲದ ಲಿಂಗವೆ ಕಾಯಕ್ಕೆ ವೇದಿಸಿದಲ್ಲಿ, ಕಾಯ ಲಿಂಗವಾಯಿತ್ತು.
ಅಂತಾದ ಮಹಾಘನಲಿಂಗವೆ ಪ್ರಾಣಕ್ಕೆ ವೇದಿಸಿದಲ್ಲಿ ಪ್ರಾಣ ಲಿಂಗವಾಯಿತ್ತು,
ಅಂತಾದ ಮಹಾಘನಲಿಂಗವೆ ಭಾವಕ್ಕೆ ವೇದಿಸಿದಲ್ಲಿ ಭಾವ ಲಿಂಗವಾಯಿತ್ತು.
ಅಂತಾದ ಮಹಾಘನಲಿಂಗವೆ ಜ್ಞಾನಕ್ಕೆ ವೇದಿಸಿದಲ್ಲಿ ಜ್ಞಾನ ಲಿಂಗವಾಯಿತ್ತು.
ಅಂತಾದ ಕಾರಣ-ನಮ್ಮ ಗುಹೇಶ್ವರನ ಶರಣಂಗೆ,
ಅರಿವರತು ಕುರುಹು ನಿಷ್ಪತಿಯಾಗಿ,
ತಾನೆಂಬ ಭಾವವು ಉರಿಯುಂಡ ಕರ್ಪುರದಂತಾಯಿತ್ತು/590
ಕರಿಯ ತಲೆಯ ಅರಮನೆಯ ಸುರಧೇನು ಹಯನಾಯಿತ್ತು !
ಕರೆದುಂಬಾತಂಗೆ ಕೈಕಾಲಿಲ್ಲ !
ಕರು ನಾಲ್ವೆರಳಿನ ಪ್ರಮಾಣದಲ್ಲಿಹುದು !
ಇದ, ಕರೆದುಂಬಾತನೆ ದೇವ-ಗುಹೇಶ್ವರಾ./591
ಕರಿಯ ಮುತ್ತಿನ ಹಾರದ ಪರಿಯೊಂದು ಶೃಂಗಾರ,
ಕರದ ಬಣ್ಣದ ನುಡಿಯ ಬೆಡಗಿನೊಳಗಡಗಿತ್ತು.
ಸಿಡಿಲ ಬಣ್ಣವನುಟ್ಟು ಮಡದಿ ಒಂದೂರೊಳಗೆ
ಕಡುಗಲಿಯ ವಿದ್ಯೆಯನು ನೋಡಿ,
ನೋಡದ ನಿರ್ಭಾವ ವೀರವಿತರಣೆಯಿಂದ,
ಧಾರುಣಿಯ ರಚನೆಯ, ಗುಹೇಶ್ವರನೆಂಬ ಲಿಂಗವ
ಬೆಡಗು ನುಂಗಿ ಅಡಗಿತ್ತು./592
ಕರಿಯು ಸ್ಪರ್ಶನೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಪತಂಗನು ರೂಪೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಭೃಂಗನು ಗಂಧೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಕುರಂಗನು ಶಬ್ದೇಂದ್ರಿಯದಿಂದ ಬಂಧನವಡೆದಳಿಯಿತ್ತು.
ಮತ್ಸ್ಯವು ರಸನೇಂದ್ರಿಯದಿಂದ ಬಂಧನವಡೆದಳಿಯಿತ್ತು.-
ಇಂತೀ; ಒಂದೊಂದು ಇಂದ್ರಿಯೋದ್ರೇಕದಿಂದ
ಒಂದೊಂದು ಪ್ರಾಣಿಯು ಪ್ರಳಯವಾಯಿತ್ತು.
ಪಂಚೇಂದ್ರಿಯಂಗಳ, ಒಂದು ಘಟದಲ್ಲಿ ತಾಳಿಹ ಮನುಷ್ಯ ಪ್ರಾಣಿಗಳಿಗೆ,
ಮರವೆ ಎಡೆಗೊಂಡು ದೇಹಮೋಹಭ್ರಾಂತು ಮುಸುಕಿ
ಮಾಯೆಯ ಬಾಯ ತುತ್ತಹುದು
ಚೋದ್ಯವೇನು ಹೇಳಾ ಗುಹೇಶ್ವರಾ ?/593
ಕರು(ರ?)ಣ ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕೈಯ ನೀಡಿದಡೆ
ಆ ಪುಷ್ಪ ಕರಣದೊಳಗಡಗಿತ್ತಯ್ಯ.
ಷೋಡಶ ಕಳೆ ಹದಿನಾರರೆಸಳು ವಿಕಸಿತವಾಯ್ತು.
ಪುರುಷ ಪುಷ್ಪದ ಮರನು,
ಅದು ಓಗರದ ಗೊಬ್ಬರವನುಣ್ಣದು, ಕಾಮದ ಕಣ್ಣಿರಿಯದು.
ನಿದ್ರೆಯ ಕಪ್ಪೊತ್ತದು.
ಅರುಣ ಚಂದ್ರಾದಿಗಳಿಬ್ಬರ ತೆರೆಯುಂಡು ಬೆಳೆಯದ ಪುಷ್ಪ
ಲಿಂಗವೆ ಧರೆಯಾಗಿ ಬೆಳೆಯಿತ್ತು,
ಆ ಪುಷ್ಪ ನೋಡಾ !
ಆ ಪುಷ್ಪವೆಂದಿಗೂ ನಿರ್ಮಾಲ್ಯವಲ್ಲೆಂದು
ಗುಹೇಶ್ವರ, ನಿಮ್ಮ ಶರಣ ಪ್ರಾಣಲಿಂಗಕ್ಕೆ ಪ್ರಾಣಪೂಜೆಯ ಮಾಡಿದ. /594
ಕರೆಯದೆ ಬಂದುದ, ಹೇಳದೆ ಹೋದುದನಾರೂ. ಅರಿಯರಲ್ಲಾ.
ಅಂದಂದಿಂಗೆ ಬಂದ ಪ್ರಾಣಿಗಳು, ಆರೂ ಅರಿಯರಲ್ಲಾ.
ಗುಹೇಶ್ವರನೆಂಬ ಲಿಂಗವು ಉಣ್ಣದೆ ಹೋದುದನಾರೂ ಅರಿಯರಲ್ಲಾ!/595
ಕರ್ಪುರದ ಗಿರಿಯ ಉರಿ ಹಿಡಿದಡೆ ಇದ್ದಿಲುಂಟೆ ?
ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ ?
ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ,
ಮರಳಿ ಬಾಣವನರಸಲುಂಟೆ ?
ಗುಹೇಶ್ವರನೆಂಬ ಲಿಂಗವನರಿದು
ಮರಳಿ ನೆನೆಯಲುಂಟೆ ?/596
ಕರ್ಮ ಚರಣಾದಿಗಳು ಬೇರಾದವಲ್ಲದೆ
ಅರಿದು ಮುಟ್ಟುವುದು ಒಂದೆ ಆತ್ಮ.
ಬಿಂದುವಿನ ಒಂದು ಸಾರದಲ್ಲಿ,
ಸಸಿ ಹಲವು ನಾಮ ಬೆಳೆವಂತೆ
ಗುಹೇಶ್ವರಲಿಂಗದಲ್ಲಿ `ನಾ’ `ನೀ’
ಎಂಬ ಭಾವವಿಲ್ಲ ಸಿದ್ಧರಾಮಯ್ಯಾ./597
ಕರ್ಮ ನಾಸ್ತಿ ಎಂಬೆ, ಅಸ್ತಿ ನಾಸ್ತಿ (ಅನಾಸ್ತಿ ?) ಎಂಬೆ.
ಜ್ಞಾನ [ದ] ಕೊಬ್ಬಿನಲಿ ಉಲಿವೆ, ಉಲಿದಂತೆ ನಡೆವೆ.
ಸಂಗಡ ಸಹಿತ ಕರಸ್ಥಲಕ್ಕೆ ಬಂದು,
ನೀನು ಬಯಲಾಗೆಯಲ್ಲಾ, ಎನ್ನನೂ ಬಯಲು ಮಾಡೆ-ಗುಹೇಶ್ವರಾ,/598
ಕರ್ಮದ ಕಟ್ಟನೆ ಕೊಯ್ದು ಬ್ರಹ್ಮದ್ವಾರವ ಕಂಡೆ,
ಮೇಲೊಂದು ಕಂಬವ ಕಂಡೆನಲ್ಲಾ !
ಕಂಬವ ಖಂಡಣೆಯ ಮಾಡಿ ಮಹಾಬೆಳಗನೆ ಕಂಡೆ
ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದನು. /599
ಕರ್ಮದ ಗಡಣ ಹಿಂಗಿದುವಿಂದು,
ಪಾಪದ ಬಲೆ ಬಳಸಿ ಹೋದವು.
ಬಲ್ಲೆನು ಈ ಸಂಸಾರದಲ್ಲಿ ನೊಂದು ಬೆಂದೆನಾಗಿ,
ಮಾಯೆಯ ತಲೆಯ ಮೆಟ್ಟಿ ಹೋದೆನು.
ಇನ್ನು ಮರಳಿ ಬಾರೆನು ಗುಹೇಶ್ವರಾ ನಿಮ್ಮಾಣೆ/600
ಕರ್ಮವಿಲ್ಲದ ಕಾಯ, ಕರಣವಿಲ್ಲದ ಪ್ರಾಣ.
ಮಥನವಿಲ್ಲದ ಶಬ್ದ, ಗಮನವಿಲ್ಲದ ಮನ.
ಗುಹೇಶ್ವರಾ ನಿಮ್ಮ ಬರವು ಸಂಗನಬಸವಣ್ಣನ ಮೆಚ್ಚು ನೋಡಾ./601
ಕರ್ಮವೆ ಪ್ರಾಣವೆಂದು ಮಾಡುವಾಗ
ಜ್ಞಾನವನರಿವ ನೆಲೆ ಶುದ್ಧವಿನ್ನಾವುದು ?
ಸಾವನ್ನಕ್ಕ ಸಾಧನೆಯ ಮಾಡಿ ಕಾದವಾಠಾವಿನ್ನಾವುದು ?
ಅರಿದುದ ನೇತಿಗಳೆದು; ಮೇಲರಿದುದ ಕರಿಗೊಳುತ್ತ
ತುಷವ ನೀಗಿದ ತಂಡುಲದಂತೆ
ಕಾಯದ ದೆಸೆ ಶುದ್ಧವಾಗಿರಬೇಕು, ಸಿದ್ಧರಾಮಯ್ಯಾ
ಗುಹೇಶ್ವರಲಿಂಗವನರಿವುದಕ್ಕೆ./602
ಕರ್ಮಾದಿನವೆಂಬ, ಕರ್ಮಿ, ಲಿಂಗಾದಿನವೆಂಬ, ಭಕ್ತ.
ದೇಹ ಪ್ರಾರಬ್ಧವೆಂಬ, ದ್ವೈತಿ-
ಈ ತ್ರಿವಿಧವೆನ್ನದವ[ರ], ನೀನೆಂಬೆ ಗುಹೇಶ್ವರಾ./603
ಕಲಿ ತನ್ನ ತಲೆಯನರಿದು ಕೈಯಲ್ಲಿ ಹಿಡಿದು
ಹಲವು ದ್ವೀಪಕ್ಕೆ ಹೋಗಿ ತೊಳಲುತ್ತೈದಾನೆ !
ಕಂಡವರು ತೋರಿರೆ, ಕೇಳಿದವರು ಹೇಳಿರೆ,
ಬುದ್ಧಿಗೆಟ್ಟವ ಸುದ್ಧಿಯ ಬೆಸಗೊಳ್ಳುತ್ತೈದಾನೆ !
ತಲೆ ತಲೆಯನೆ ನುಂಗಿ ಹಲವು ದ್ವೀಪಕ್ಕೆ ಹೋಯಿತ್ತು.
ಗುಹೇಶ್ವರಾ-ತಲೆ ಮೊದಲಿಲ್ಲ !/604
ಕಲ್ಪಿತದುದಯ ಸಂಕಲ್ಪಿತದ ಸುಳುಹು.
ಪವನಭೇದವನರಿಯದೆ,
ಪ್ರಾಣಲಿಂಗವೆಂಬುದು ಅಂಗಸಂಸಾರಿ,
ಜಂಗಮವೆಂಬುದು ಲಿಂಗಸಂಸಾರಿ.
ಪರವಲ್ಲ ಸ್ವಯವಲ್ಲ, ನಿರವಯ,
ಗುಹೇಶ್ವರನೆಂಬ ಲಿಂಗಕ್ಕೆ ನಾಚರು ನೋಡಾ/605
ಕಲ್ಪಿತವೆಂಬ ಭಕ್ತ ಮಾಡಿದ ಸಯಧಾನವ ನೋಡಾ !
ಅನಂತಕೋಟಿ ಅಜಾಂಡಗಳೆ ಸಯಧಾನವಾಗಿ
ಸವಿಕಲ್ಪ ವಿಷಯಂಗಳೆ ಶಾಕವಾಗಿ
ಸರ್ವವಾಸನೆ ಎಂಬುದೆ ಅಬಿಘಾರವಾಗಿ-
ಇವೆಲ್ಲವನೂ ಜ್ಞಾನವೆಂಬ ಭಾಜನದಲ್ಲಿ ಎಡೆಮಾಡುತ್ತಿರಲು
ಉಣ ಬಂದ ಹಿರಿಯರು ಉಣುತ್ತಿದ್ದುದ ನೋಡಿರೆ !
ನಿರ್ವಿಕಲ್ಪಿತವೆಂಬ ಮಹಂತ ಬರಲು,
ಸಯಧಾನವಡಗಿತ್ತು, ಭಾಜನ ಉಳಿಯಿತ್ತು.
ಆ ಭಾಜನವನುತ್ತಮಾಂಗದಲ್ಲಿ ಅಳವಡಿಸಿಕೊಳಲು
ನಿಶ್ಚಿಂತವಾಯಿತ್ತು ಗುಹೇಶ್ವರಾ./606
ಕಲ್ಯಾಣವರಿಯೆ ಕಟಕವರಿಯೆ ಬೇಂಟೆಯನಾಡುತ್ತಿದ್ದೆ.
ಎನ್ನ ಕೈ ನೋಡಿ ಭೋ ಕಲಿ ವೀರ ಸುಭಟರು.
ಎನ್ನ ಕೈ ನೋಡಿ ಭೋ ಅರುಹಿರಿಯರು.
ಕಾದಿ ಗೆಲಿದು ಗುಹೇಶ್ವರಲಿಂಗದಲ್ಲಿಗೆ ತಲೆವರಿಗೆಯನಿಕ್ಕಿ ಬಂದೆ,
ಎನ್ನ ಕೈ ನೋಡಿ ಭೋ./607
ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ !
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ ?
ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು
ಬದುಕಿದೆನು ಕಾಣಾ ಸಿದ್ಧರಾಮಯ್ಯಾ./608
ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೊ ?
ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ-ಗುಹೇಶ್ವರಾ/609
ಕಲ್ಲ ಹೋರಿನೊಳಗೊಂದು ಕಾರ್ಯವ ಕಾಬಡೆ,
ಕಲ್ಲ ಬೆದಕದೆ ಕಪ್ಪೆಯ ಸೋಂಕದೆ
ಅಲ್ಲಿಯ ಉದಕವ ಕುಡಿಯ ಬಲ್ಲಡೆ-ಅದು ಯೋಗ.
ಬಲ್ಲಡೆ ನಿಮ್ಮಲ್ಲಿ ನೀವೆ ತಿಳಿದು ನೋಡಿರೆ.
ಅರಿವ ಯೋಗಕ್ಕಿದು ಚಿಹ್ನವಯ್ಯಾ:
ಕಲ್ಲು ಕಪ್ಪೆಯೊಳಗಣ ಹುಲ್ಲುರಿಯದೆ ಅಟ್ಟುಂಬಂತೆ ಗುಹೇಶ್ವರಾ./610
ಕಲ್ಲ ಹೋರಿನೊಳಗೊಂದು ಕಿಚ್ಚು ಹುಟ್ಟಿತ್ತ ಕಂಡೆ.
ಹುಲ್ಲ ಮೇವ ಎರಳೆಯ, ಹುಲಿಯ, ಸರಸವ ಕಂಡೆ
ಎಲ್ಲರೂ ಸತ್ತು ಆಡುತ್ತಿಪ್ಪುದ ಕಂಡೆ.
ಇನ್ನು ಎಲ್ಲಿಯ ಭಕುತಿ ಹೇಳಾ ಗುಹೇಶ್ವರಾ ?/611
ಕಲ್ಲ, ದೇವರೆಂದು ಪೂಜಿಸುವರು-ಆಗದು ಕಾಣಿರೊ.
ಅಗಡಿಗರಾದಿರಲ್ಲಾ !
ಮುಂದೆ ಹುಟ್ಟುವ ಕೂಸಿಂಗೆ
ಇಂದು ಮೊಲೆಯ ಕೊಡುವಂತೆ ಗುಹೇಶ್ವರ !/612
ಕಲ್ಲೊಣಗಣ ಕಿಚ್ಚು ಉರಿಯದಂತೆ, ಬೀಜದೊಳಗಣ ವೃಕ್ಷ ಉಲಿಯದಂತೆ,
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು,
ಗುಹೇಶ್ವರ ನಿಂದ ನಿಲವ ಅನುಭ(ಭಾ?)ವ ಸುಖಿ ಬಲ್ಲ./613
ಕವಿತ್ವಸಾಧಕರೆಲ್ಲರು ಕಳವಳಿಸಿ ಕೆಟ್ಟರು.
ವಿದ್ಯಾಸಾಧಕರೆಲ್ಲರು ಬುದ್ಧಿಹೀನರಾದರು.
ಪವನ ಸಾಧಕರೆಲ್ಲರು ಹದ್ದು ಕಾಗೆಗಳಾದರು.
ಜಲಸಾಧಕರೆಲ್ಲರು ಕಪ್ಪೆ ಮೀನಗಳಾದರು.
ಅನ್ನಸಾಧಕರೆಲ್ಲರು ಭೂತಪ್ರಾಣಿಗಳಾದರು.
ಬಸವಣ್ಣ, ಸದ್ಗುರುಸಾಧಕನಾಗಿ
ಸ್ವಯಲಿಂಗವಾದ ಕಾಣಾ ಗುಹೇಶ್ವರಾ./614
ಕಸ್ತೂರಿಯ ಮೃಗ ಬಂದು ಸುಳಿಯಿತ್ತಯ್ಯಾ,
ಸಕಲ ವಿಸ್ತಾರದ ರೂಹು ಬಂದು ನಿಂದಿತ್ತಯ್ಯಾ,
ಆವ ಗ್ರಹ ಬಂದು ಸೋಂಕಿತ್ತೆಂದರಿಯೆನಯ್ಯಾ
ಆವ ಗ್ರಹ ಬಂದು ಹಿಡಿಯಿತ್ತೆಂಬುದ ನಾನರಿಯೆನಯ್ಯಾ.
ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ,
ಗುರು ವಿಖ್ಯಾತನೆಂಬುದ ನಾನರಿದೆನಯ್ಯಾ.
ಗುಹೇಶ್ವರಲಿಂಗದಲ್ಲಿಹಿಂದಣ ಹುಟ್ಟರತು ಹೋದುದ ಕಂಡೆನಯ್ಯಾ./615
ಕಳಸವುಳ್ಳ ಶಿವಾಲಯವೊಂದಕ್ಕೆ, ಚೌಕದಲ್ಲಿ ಎರಡು ಕಂಬ,
ಮೂರುಭಾವ-ಪೂಜಕರಾರೊ? ಅನುಭಾವಿಗಳಿನ್ನಾರೊ ?
ಪೂಜಿಸುವರಿನ್ನಾರೊ ?
ಇದರ ಸ್ಥಾನದ ನೆಲಗತಿಯನಾರು ಬಲ್ಲರು ಗುಹೇಶ್ವರಾ ?/616
ಕಳ್ಳಗಂಜಿ ಕಾಡ ಹೊಕ್ಕಡೆ ಹುಲಿ ತಿಂಬುದ ಮಾಬುದೆ ?
ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ ?
ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೆ ?-
ಇಂತೀ ಮೃತ್ಯುವಿನ ಬಾಯ ತುತ್ತಾದ,
ವೇಷಡಂಬಕರ ನಾನೇನೆಂಬೆ ಗುಹೇಶ್ವರಾ./617
ಕಾಗೆಯ ತಿಂದವನಲ್ಲದೆ ಭಕ್ತನಲ್ಲ.
ಕೋಣನ ತಿಂದವನಲ್ಲದೆ ಮಹೇಶ್ವರನಲ್ಲ.
ಕೋಡಗನ ತಿಂದವನಲ್ಲದೆ ಪ್ರಸಾದಿಯಲ್ಲ.
ನಾಯ ತಿಂದವನಲ್ಲದೆ ಪ್ರಾಣಲಿಂಗಿಯಲ್ಲ.
ಹೇಯವ ತಿಂದವನಲ್ಲದೆ ಶರಣನಲ್ಲ.
ಇಂತೈವರ ತಿಂದವನಲ್ಲದೆ ಲಿಂಗೈಕ್ಯನಲ್ಲ ಗುಹೇಶ್ವರ ! /618
ಕಾಡಿ ಬೇಡಿ ಉಂಬವರೆಲ್ಲರು ಬ್ರಹ್ಮನ ಸಂಪ್ರದಾಯ.
ಕುಟ್ಟಿ ಕುಟ್ಟಿ ಉಂಬವರೆಲ್ಲರು ವಿಷ್ಣುವಿನ ಸಂಪ್ರದಾಯ.
ದಳಾದಳಿಯಲುಂಬವರೆಲ್ಲರು ಯಮನ ಸಂಪ್ರದಾಯ.
ಇವಾವವನೂ ಹೊದ್ದದೆ ಭಕ್ತಿಬಿಕ್ಷವನುಂಬವರೆಲ್ಲ
ನಿಮ್ಮ ಸಂಪ್ರದಾಯ ಕಾಣಾ ಗುಹೇಶ್ವರಾ./619
ಕಾಡುಗಿಚ್ಚೆದ್ದಡೆ ಅಡವಿಯೆ ಗುರಿ.
ನೀರುಗಿಚ್ಚೆದ್ದಡೆ ಸಮುದ್ರವೆ ಗುರಿ.
ಒಡಲುಗಿಚ್ಚೆದ್ದಡೆ ತನುವೆ ಗುರಿ.
ಕಾಲಾಗ್ನಿಯೆದ್ದಡೆ ಲೋಕಂಗಳೆ ಗುರಿ.
ಶಿವಶರಣರ ಮನದಲ್ಲಿ ಕೋಪಾಗ್ನಿಯೆದ್ದಡೆ ನಿಂದಕರೆ ಗುರಿ.
ಗುಹೇಶ್ವರಾ ನಿಮ್ಮ ಮಾಯದ ಹೊಡೆಗಿಚ್ಚಿಂಗೆ
ನಾನು ಗುರಿಯಲ್ಲ ಕೇಳಾ./620
ಕಾಣದುದ ಕಂಡೆ, ಕೇಳದುದ ಕೇಳಿದೆ-
ಮುಟ್ಟಬಾರದುದ ಮುಟ್ಟಿದ, ಅಸಾಧ್ಯವ ಸಾದಿಸಿದ,
ತಲೆಗೆಟ್ಟುದ ತಲೆವಿಡಿದ, ನೆಲೆಗೆಟ್ಟುದ ನಿರ್ಧರಿಸಿದ.
ಗುಹೇಶ್ವರಾ ನಿಮ್ಮ ಶರಣ ಅಜಗಣ್ಣಂಗೆ
ಶರಣೆಂದು ಶುದ್ಧನಾದೆನು./621
ಕಾಣದುದನರಸುವರಲ್ಲದೆ ಕಂಡದುದನರಸುವರೆ ಹೇಳಾ !
ಘನಕ್ಕೆ ಘನವಾದ ವಸ್ತು;
ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ,
ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೆ ಯಂತ್ರವಾದ
ತಾನೆ ಸಕಲವಿದ್ಯಾರೂಪನಾದ.-
ಇಂತಿವೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದ.
ಇನ್ನು ನಿರ್ವಿಕಾರ ಗುಹೇಶ್ವರ./622
ಕಾಣಬಹ ತನು, ಕೇಳಬಹ ಧ್ವನಿಯಿಂದ
ಆಳವಾಡಿ ಕಾಡುತ್ತದೆ ಲೋಕವನು,
ಅಯ್ಯಾ ಅಯ್ಯಾ ಬೊಮ್ಮವೆ !
ಅಣಕಿಸಿ ಲೋಕವನು ಕಾಡುತ್ತದೆ,
ಅಯ್ಯಾ ಅಯ್ಯಾ ಬೊಮ್ಮವೆ !
ಬೊಮ್ಮ ತಾನೆಂದರಿದು ಸಂಸಾರದ ಬೇರ ಹರಿಯಬಲ[ವ]
ಶರಣನೊಬ್ಬನೆ ಗುಹೇಶ್ವರಾ./623
ಕಾಣಬಾರದ ಗುರು ಕಣ್ಗೆ ಗೋಚರವಾದಡೆ;-
ಹೇಳಲಿಲ್ಲದ ಬಿನ್ನಪ್ಪ, ಮುಟ್ಟಲಿಲ್ಲದ ಹಸ್ತಮಸ್ತಕಸಂಯೋಗ.
ಹೂಸಲಿಲ್ಲದ ವಿಭೂತಿಯ ಪಟ್ಟ, ಕೇಳಲಿಲ್ಲದ ಕರ್ಣಮಂತ್ರ.
ತುಂಬಿ ತುಳುಕದ ಕಲಶಾಬಿಷೇಕ ಆಗಮವಿಲ್ಲದ ದೀಕ್ಷೆ,
ಪೂಜೆಗೆ ಬಾರದ ಲಿಂಗ, ಸಂಗವಿಲ್ಲದ ಸಂಬಂಧ.
ಸ್ವಯವಪ್ಪ ಅನುಗ್ರಹ,
ಅನುಗೊಂಬಂತೆ ಮಾಡಾ ಗುಹೇಶ್ವರಾ. /624
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ,
ಎನಗಿದು ಸೋಜಿಗ, ಎನಗಿದು ಸೋಜಿಗ !
ಅಹುದೆನಲಮ್ಮೆನು, ಅಲ್ಲೆನಲಮ್ಮೆನು,
ಗುಹೇಶ್ವರಲಿಂಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ !/625
ಕಾಪ ಕಾಷಾಯಾಂಬರವ ಕಟ್ಟಿ,
ಮಂಡೆ ಬೋಳಾದಡೇನಯ್ಯಾ.
ಎನ್ನಲ್ಲಿ ನಿಜವಿಲ್ಲದನ್ನಕ್ಕ ?
ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೊರೆದಡೇನಯ್ಯಾ
ಮನದಲ್ಲಿ ವ್ರತಿಯಾಗದನ್ನಕ್ಕ ?
ಹಸಿವು ತೃಷೆ ವ್ಯಸನಾದಿಗಳ ಬಿಟ್ಟಡೇನಯ್ಯಾ
ಅರ್ಥದಿಚ್ಛೆ ಮನದಲ್ಲಿ ಹಿಂಗದನ್ನಕ್ಕ ?
ಆನು ಜಂಗಮವೆ ?
ಆನು ಹಿರಿಯನಾದೆನಲ್ಲದೆ ಆನು ಜಂಗಮವೆ ?
ಒಡಲಿಲ್ಲದಾತ ಬಸವಣ್ಣ, ಪ್ರಾಣವಿಲ್ಲದಾತ ಬಸವಣ್ಣ.
[ಎನ್ನ]ಬಸವಣ್ಣನಾಗಿ ಹುಟ್ಟಿಸದೆ
ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರಾ ?/626
ಕಾಮ ಸತ್ಯವ ತಿಂದಿತ್ತು, ಕ್ರೋಧ ಜ್ಞಾನವ ತಿಂದಿತ್ತು,
ಲೋಭ ಧರ್ಮವ ತಿಂದಿತ್ತು,
ಮೋಹ ವಿರಕ್ತಿಯ ತಿಂದಿತ್ತು, ಮದ ಭಕ್ತಿಯ ತಿಂದಿತ್ತು,
ಮತ್ಸರ ಯು(ಮು ?)ಕ್ತಿಯ ತಿಂದಿತ್ತು.
ಈ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯವೆಂಬ
ಅರಿಷಡ್ವರ್ಗಂಗಳಿವು ನಿಮ್ಮ ನೈದಲರಿಯದೆ,
ಈ ಸತ್ಯ ಜ್ಞಾನ ಧರ್ಮ ವಿರಕ್ತಿ ಭಕ್ತಿ ಯುಕ್ತಿಗಳೆಂಬ ಸದ್ವರ್ತನೆಯ,
ದುರ್ವರ್ತನೆಯೆಂಬರಿಷಡುವರ್ಗಂಗಳೆಂಬ ನಾಡ ನಾಯಿಗಳೆ ತಿಂದವು.
ಎನಗೆ ಸದ್ವರ್ತನೆಯಿಲ್ಲದೆ ಅಪ್ರದೇಶಿಕನಾದೆನು ಕಾಣಾ ಗುಹೇಶ್ವರಾ./627
ಕಾಮದಿಂದ ಕಂಡ, ಕ್ರೋಧದಿಂದ ಅಸ್ಥಿ,
ಲೋಭದಿಂದ ಸಕಲ ವಿಷಯಂಗಳು.
ಮೋಹದಿಂದ ನೋಡಿಹೆನೆಂಬುದೆಲ್ಲವು ಕಾಮನ ಬಲೆಯೊಳಗು.
ಕಾಮನ ಗೆದ್ದಠಾವಾವುದು ಹೇಳಾ ಗುಹೇಶ್ವರಲಿಂಗಕ್ಕೆ ?/628
ಕಾಮನ ಕಣ್ಣ ಮುಳ್ಳ ಕಳೆದು
ಭೂಮಿಯ ತೈಲದ ಸೀಮೆಯ ಕೆಡಿಸಿ
ಹೋಮವನುರುಹಿ ದಕ್ಷನ ತಲೆಯನರಿದು
ನಿಸ್ಸೀಮನಾದ ಮಹಿಮನ ನಿಲವನರಿಯಬಹುದೆ ?
ಅರಿವಿಂಗೆ ಅಸಾಧ್ಯ ಉಪಮೆಗೆ ಕಡೆಮುಟ್ಟದು !
ಗುಹೇಶ್ವರನ ಕರುಣಪ್ರಸಾದಿ ಮರುಳಶಂಕರದೇವರೆಂತಪ್ಪನೆಂಬುದ
ತಿಳಿದು ನೋಡಾ ಸಂಗನಬಸವಣ. /629
ಕಾಮನ ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು.
ಆಮಿಷ ತಾಮಸಧಾರಿಗಳೆಲ್ಲ ಎಳತಟವಾದರು.
ಅಕ್ಕಟಾ, ಅಯ್ಯಲಾ, ನಿಮ್ಮ ಕಂಡವರಾರೊ?
ಆಳವಿಲ್ಲದ ಸ್ನೇಹಕ್ಕೆ ಮರಣವೆ ಮಹಾನವಮಿ.
ಗುಹೇಶ್ವರನನರಿಯದೆ ರಣಭೂಮಿಗಳುಲಿದವು !/630
ಕಾಮನ ಕೊಲುವಲ್ಲಿ ಹೋಮವ ಸುಡುವಲ್ಲಿ
ತ್ರಿಪುರಸಂಹಾರದ ಕೀಲನರಿವಲ್ಲಿ
ಆತನ `ಯೋಗಿ’ ಎನಬೇಡ ಆತನ `ಭೋಗಿ’ ಎನಬೇಡ,
ಆತನೆ ಅಚ್ಚಲಿಂಗೈಕ್ಯನು !
ಹಸಿವ ಮರೆದಲ್ಲಿ ವ್ಯಸನವರತಲ್ಲಿ
ಗುಹೇಶ್ವರಲಿಂಗವು, ಸಿದ್ಧರಾಮಯ್ಯದೇವರು ತಾನೆ !/631
ಕಾಮವ ಸುಟ್ಟು ಹೋಮವನುರುಹಿ, ತ್ರಿಪುರಸಂಹಾರದ ಕೀಲ ಬಲ್ಲಡೆ,
ಯೋಗಿಯಾದಡೇನು ? ಭೋಗಿಯಾದಡೇನು ?
ಶೈವನಾದಡೇನು ? ಸನ್ಯಾಸಿಯಾದಡೇನು ?
ಅಶನವ ತೊರೆದಾತ ವ್ಯಸನವ ಮರೆದಾತ-
ಗುಹೇಶ್ವರಲಿಂಗದಲ್ಲಿ ಅವರ ಹಿರಿಯರೆಂಬೆನು./632
ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ,
ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ, ಹಸಿವು, ತೃಷೆ,
ವಿಷಯ, ವ್ಯಸನವ್ಯಾಪ್ತಿಗಳಿಲ್ಲ, ಸಂಸಾರ ಬಂಧನ ಮುನ್ನಿಲ್ಲ,
ಪುಣ್ಯವಿಲ್ಲ, ಪಾಪವಿಲ್ಲ, ಆಚಾರ ಅನಾಚಾರವೆಂಬುದಿಲ್ಲ,
ಸದಾಚಾರ ಸಂಪೂರ್ಣ, ಗುಹೇಶ್ವರಾ, ನಿಮ್ಮ ಶರಣ./633
ಕಾಮಿಸದೆ ನೆನೆದಡೆ, ಕಲ್ಪಿತವಿಲ್ಲದ ಪುರುಷ ಬಂದನೆನಗೆ ನೋಡಾ !
ಕಲ್ಪಿತವಿಲ್ಲದೆ ನೆನೆದಡೆ, ಭಾವಿಸಲಿಲ್ಲದ ಸುಖವು ದೊರಕಿತ್ತು ನೋಡಾ !
ಗುಹೇಶ್ವರನೆಂಬ ಲಿಂಗವನರಿದ ಬಳಿಕ, `ನಾ’ ಎಂಬುದಿಲ್ಲ ನೋಡಾ !/634
ಕಾಮಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ.
ಕಲ್ಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
ಭಾವಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
ರೂಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
ಪೂರ್ವಾಚಾರ್ಯ ಸಂಗನಬಸವಣ್ಣನ ಕಂಡು
ಗುಹೇಶ್ವರಲಿಂಗವು ಅಲ್ಲಿಯೆ ಅನುಶ್ರುತವಯ್ಯಾ !/635
ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬವ ವ್ರತಗೇಡಿ,
ವಿಷ್ಣುವೆಂಬವ ಸತ್ತು ಬಿದ್ದ, ರುದ್ರನೆಂಬವ ಅಬದ್ಧಅವಿಚಾರಿ!
ಅವಿಚಾರದಲ್ಲಿ ಎಲ್ಲರ ಕೊಂದ ಕೊಲೆ, ನಿಮ್ಮ ತಾಗುವುದು ಗುಹೇಶ್ವರಾ. /636
ಕಾಯ ಉಭಯಭೇದವಾಗಿ, ಆತ್ಮನೇಕವಾಗಿ;
ಕಾಯ ಭಕ್ತನಾಗಿ, ಪ್ರಾಣ ಜಂಗಮವಾಗಿ;
ನಾ ಹಿಡಿದ ರೂಪು ಬಸವಣ್ಣನಾಗಿ;
ಅರಿದರಿದು ಗುಹೇಶ್ವರಲಿಂಗವಾಗಿ ನೆನೆವುತ್ತಿದ್ದೆನು./637
ಕಾಯ ಬಿನ್ನವಾಯಿತ್ತೆಂದು ಮುಟ್ಟಿಸುವರು ಲಿಂಗವನು.
ಮುಟ್ಟಲಾಗದು ಲಿಂಗವನು; ಮುಟ್ಟಿದಾತ ಮುಂದೆ ಹೋದ.
ಮುನ್ನ ಮುಟ್ಟಿದವರೆಲ್ಲ ಉಪಜೀವಿಗಳಾದರು.
ಇನ್ನು ಮುಟ್ಟಿದವರಿಗೆ ಗತಿಯುಂಟೆ ಗುಹೇಶ್ವರಾ ?/638
ಕಾಯ ಲಿಂಗೈಕ್ಯವೆ ? ಅಲ್ಲ ನಿಲ್ಲು.
ಜೀವ ಲಿಂಗೈಕ್ಯವೆ ? ಅಲ್ಲ ನಿಲ್ಲು.
ಕಾಯದ ಜೀವದ ಸಂದ ಬಲ್ಲಡೆ-ಆತ ಲಿಂಗೈಕ್ಯ.
ಒಂಬತ್ತು ದ್ವಾರಮಂ ಕಳೆದು, ಹತ್ತನೆಯ ದ್ವಾರದಲ್ಲಿ ನಿಲಬಲ್ಲಡೆ
ಆತನೆ ಗುರು ಕಾಣಾ ಗುಹೇಶ್ವರಾ. /639
ಕಾಯ ಸತಿಯೆಂದು ಹೇಸಿ ಕಳೆದೆ.
ವಾಯದ ಮನ ಮಾಯೆಯೆಂದು ಹೇಸಿ ಬಿಟ್ಟೆ.
ವಾಯದ ಸತಿ ಎಂಬ ಸಂದೇಹವೆಮಗೇಕೆ ?
ಸತಿಯರ ಗೋಷ್ಠಿ ವಿಷ ಕಾಣವ್ವ.
ಗುಹೇಶ್ವರಲಿಂಗದಲ್ಲಿ ನಿನ್ನ ಪತಿಯ ಕುರುಹ ಹೇಳಾ ಎಲೆ ಅವ್ವಾ ? /640
ಕಾಯಕ್ಕೆ ಕಾಯವಾಗಿ, ತನುವಿಂಗೆ ತನುವಾಗಿ
ಮನಕ್ಕೆ ಮನವಾಗಿ ಜೀವಕ್ಕೆ ಜೀವವಾಗಿ ಇದ್ದುದನಾರುಬಲ್ಲರೊ ?
ಅದು ದೂರವೆಂದು, ಅದು ಸಮೀಪವೆಂದು
ಮಹಂತ ಗುಹೇಶ್ವರನೊಳಗೆಂದು, ಹೊರಗೆಂದು
ಬರುಸೂರೆಹೋದರೆಲ್ಲರೂ. /641
ಕಾಯಕ್ಕೆ ಜೀವಕ್ಕೆ ಸಂದು ಮುನ್ನುಳ್ಳಡೆ,
ಅದು ಪ್ರಾಣಲಿಂಗವಲ್ಲ ಕಾಣಿರೆ.
ಲೋಕಾಚಾರದ ಕೂಳನುಂಡು, ಲೀಲೆಯೊಳಾಡುತಿಹರಲ್ಲದೆ
ಸಲೆ ಸಂದವರಪ್ಪರೆ ?
ಈ ಕಲ್ಲ ಹಿಡಿದಾತ ಆ ಕಲ್ಲನೆತ್ತ ಬಲ್ಲ ?
ಇವರೊಬ್ಬರ ಕರೆದಡೆ ಒಬ್ಬರು (ಇಬ್ಬರು ?) `ಓ’ ಎಂಬಂತೆ.
ಇವರಿಬ್ಬರ ಭಾವ ಹುರುಳಿಲ್ಲ ಕಾಣಾ ಗುಹೇಶ್ವರಾ. /642
ಕಾಯಕ್ಕೆ ಮಜ್ಜನ ಪ್ರಾಣಕ್ಕೆ ಓಗರ-
ಇದ ಮಾಡಲೆ ಬೇಕು.
ಸುಳಿವ ಸುಳುಹುಳ್ಳನ್ನಕ್ಕ ಇದ ಮಾಡಲೆ ಬೇಕು.
ಗುಹೇಶ್ವರನೆಂಬ [ಲಿಂಗಕ್ಕೆ] ಆತ್ಮವುಳ್ಳನ್ನಕ್ಕ
ಭಕ್ತಿಯ ಮಾಡಲೆ ಬೇಕು./643
ಕಾಯಗುಣ ಕೆಟ್ಟ ಮತ್ತೆ ಅರ್ಚನೆ ಹಿಂಗಿತ್ತು.
ಪ್ರಾಣಗುಣ ಕೆಟ್ಟ ಮತ್ತೆ ಅರ್ಪಿತ ಹಿಂಗಿತ್ತು.
ಭಾವಗುಣ ಕೆಟ್ಟ ಮತ್ತೆ ಉಭಯ ಜಂಜಡ ಹಿಂಗಿತ್ತು.
ಇಂತಾದ ಕಾರಣ-ನಮ್ಮ ಗುಹೇಶ್ವರನ ಶರಣರು
ಲಿಂಗಭೋಗೋಪಭೋಗವೆಂಬ ಖಂಡಿತ ಬುದ್ಧಿಯ ಮೀರಿ,
ಅಖಂಡಾದ್ವೈತಬ್ರಹ್ಮದಲ್ಲಿ ತಲ್ಲೀಯವಾದರು./644
ಕಾಯಗುಣವಳಿದು ಜೀವನ್ಮುಕ್ತನಾದ ಬಳಿಕ
ಸಮ್ಯಕ್ಜ್ಞಾನವೆಂಬ ಶಾಂತಿ ದೊರೆಕೊಂಡಿತ್ತು ನೋಡಿರೆ !
ಅಂತರಂಗ ಬಹಿರಂಗವೆಂಬುದನು ಅರಿಯನಾಗಿ
ದ್ವೈತಾದ್ವೈತವ ನೀಕರಿಸಿ, ನಿರ್ವಾಣ ನಿಷ್ಪತಿಯಾಗಿ,
ಗುಹೇಶ್ವರಾ ನಿಮ್ಮ ಶರಣನನುಪಮ ಸುಖಿಯಾಗಿರ್ದನು./645
ಕಾಯಗುಣವಳಿದು ಮಾಯಾಮದ ಮುರಿದು,
ಕಾಮಕ್ರೋಧಂಗಳೆಲ್ಲವು ಹೆರೆಹಿಂಗಿ ಹೋದವು.
ಅಂಗವೆಲ್ಲವು ಲಿಂಗಲೀಯವಾಗಿ ಕಂಗಳ ಕಳೆಯ ಬೆಳಗಳಿದು
ಗುಹೇಶ್ವರನ ವಿರಹದುರಿಯೊಳಗೆ ಬೆಂದವರ
ಮರಳಿ ಸುಟ್ಟಿಹೆನೆಂಬ ಸಿದ್ಧರಾಮಯ್ಯ ಮರುಳ ನೋಡಾ./646
ಕಾಯಗೊಂಡ ಮಾನವರಂತೆ ಕೈಗೆ ಸಿಲುಕ.
ಪ್ರಾಣವಿಡಿದ ಜೀವಿಗಳಂತೆ ಎಡೆಯಾಡದಿಪ್ಪ.
ಕಾಂಬಡೆ ಕಂಗಳತೆಯಲ್ಲ, ಕೇಳುವಡೆ ಕಿವಿಗಳತೆಯಲ್ಲ.
ಗುಹೇಶ್ವರನ ನಿಲುವು ಬರಿಯ ಸ್ತೋತ್ರಕ್ಕೆ ನಿಲುಕದು.
ಕಾಣಾ ಸಿದ್ಧರಾಮಯ್ಯಾ./647
ಕಾಯಗೊಂಡು ಹುಟ್ಟಿದವರು;
ದೇವರಾದಡಾಗಲಿ ಈವರಾದಡಾಗಲಿ
ಮಾಯೆಯ ಸಾದಿಸಿ ಗೆಲುವದರಿದು ನೋಡಾ !
ಮನದ ತಮಂಧವ ಗೆಲಿದು,
ನೆನೆದು ಸುಖಿಯಾದೆಹೆನೆಂಬವರ ಬೆಂಬತ್ತಿ ಕಾಡಿತ್ತು ಕರ್ಮ.
ಗುಹೇಶ್ವರಲಿಂಗವ ಕಿರಕಿರಿದಾಗಿ ನೆನೆದಡೆ
ಹಿರಿಹಿರಿದಾಗಿ ಕಾಡುವುದು ನೋಡಾ ಮರಹು !
ಸಂಗನಬಸವಣ್ಣಾ ನೀ ನೆನೆದ ನೆನಹು ಆರಂತಹುದೂ ಅಲ್ಲ ನೋಡಾ. /648
ಕಾಯದ ಒಲವರದಲ್ಲಿ ನಿಲುವ ಚಿತ್ತ,
ಕಂಗಳ ಗೊತ್ತಿನಲ್ಲಿ ಕಟ್ಟುವಡೆದು
ದೃಷ್ಟದ ಇಷ್ಟದಲ್ಲಿ ಕಂಗಳ ಸೂತಕ ಹಿಂಗಿ
ಮನದ ಸೂತಕ ಹರಿದು
ಗುಹೇಶ್ವರನೆಂಬ ಭಾವದ ಭ್ರಮೆ ಅಡಗಬೇಕು./649
ಕಾಯದ ಕಳವಳ ಕಾಣೆನೆಂದಲ್ಲಿ ಹೋಯಿತ್ತು.
ಜೀವದ ದುಷ್ಕೃತ ದೂರವೆಂದಲ್ಲಿ ತಪ್ಪಿತ್ತು.
ಕಾಯ ಜೀವವೆಂಬ ಸೂತಕ, ಮನ ನಿರ್ಮಲವಾದಲ್ಲಿಯೆ ಅಳಿಯಿತ್ತು.
ಗುಹೇಶ್ವರನೆಂಬ ಲಿಂಗವನರಿಯ ಬೇಕಾದಡೆ,
ನಿನ್ನ ಒಳಗ ತೊಳೆದು ನೋಡಾ ಸಿದ್ಧರಾಮಯ್ಯಾ./650
ಕಾಯದ ಕಳವಳಕ್ಕಂಜಿ ಪ್ರಾಣ ಹೋದಲ್ಲಿ,
ಭವ ಹಿಂಗದು, ಪ್ರಕೃತಿ ಬಿಡದು.
ವಾಯಕ್ಕಾದಡೆ ಸತ್ತು ದೇವರ ಕೂಡಿಹೆವೆಂಬರು,
ಈ ವಾಯದ ಮಾತಿಂಗೆ ಆನು ಬೆರಗಾದೆನು.
ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ
ಬೇರಿಲ್ಲ, ಗುಹೇಶ್ವರ ತಾನೆ ! /651
ಕಾಯದ ಕಳವಳವ ಗೆಲಿದಡೇನೊ, ಮಾಯದ ತಲೆಯನರಿಯದನ್ನಕ್ಕರ ?
ಮಾಯೆಯ ತಲೆಯನರಿದಡೇನೊ, ಜ್ಞಾನದ ನೆಲೆಯನರಿಯದನ್ನಕ್ಕರ ?
ಜ್ಞಾನದ ನೆಲೆಯನರಿದಡೇನೊ, ತಾನು ತಾನಾಗದನ್ನಕ್ಕರ ?
ತಾನು ತಾನಾದ ಶರಣರ ನಿಲವಿಂಗೆ
ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ ?/652
ಕಾಯದ ಕೈಯಲ್ಲಿ ಲಿಂಗಕ್ಕೆ ಮಜ್ಜನ,
ಪ್ರಾಣದ ಕೈಯಲ್ಲಿ ಜಂಗಮಕ್ಕೆ ಭೋಜನ
ಇವ ಮಾಡಲೆ ಬೇಕು.
ಸುಳಿವ ಸುಳುಹುಳ್ಳನ್ನಕ್ಕ ಲಿಂಗಜಂಗಮಕ್ಕೆ ಮಾಡಲೆ ಬೇಕು.
ಗುಹೇಶ್ವರನೆಂಬ ಆತ್ಮನುಳ್ಳನ್ನಕ್ಕ ಸತ್ಕ್ರೀಯ ಮಾಡಲೆ ಬೇಕು./653
ಕಾಯದ ಮೇಲೆ ಕಲ್ಲು ಬೀಳಲಿಕ್ಕೆ
ಜೀವ ಆಠಾವನರಿದು
ಕಾವು ಮಾಡಿಸಿಕೊಂಬಾಗ
ನೋವನರಿವುದು ಕಾಯವೊ ? ಜೀವವೊ ? ಉಭಯ ಸಮವೊ ?
ಗುಹೇಶ್ವರಲಿಂಗಕ್ಕೆ ಅನ್ಯವಿಲ್ಲ ಸಂಗನಬಸವಣ್ಣಾ. /654
ಕಾಯದ ಮೊದಲಿಗೆ ಬೀಜವಾವುದೆಂದರಿಯದೀ ಲೋಕ.
ಇಂದ್ರಿಯಂಗಳು ಬೀಜವಲ್ಲ,
ಆ ಕಳಾಭೇದವಲ್ಲ! ಸ್ವಪ್ನ ಬಂದೆರಗಿತ್ತಲ್ಲಾ!
ಇದಾವಂಗೂ ಶುದ್ಧ ಸುಯಿಧಾನವಲ್ಲ ಕಾಣಾ ಗುಹೇಶ್ವರಾ./655
ಕಾಯದಲಾದ ಅರ್ಪಿತ ಅರ್ಪಿತವಲ್ಲ.
ಪ್ರಾಣದಲಾದ ಅರ್ಪಿತ ಅರ್ಪಿತವಲ್ಲ.
ಭಾವದಲಾದ ಅರ್ಪಿತ ಅರ್ಪಿತವಲ್ಲ.
ಅರಿವಿನಲಾದ ಅರ್ಪಿತ ಅರ್ಪಿತವಲ್ಲ.
ನೆನಹಿಲ್ಲದ ಅವಧಾನ ಮರಹಿಲ್ಲದ ಆರೋಗಣೆ
ತಟ್ಟದ ಮುಟ್ಟದ ಅರ್ಪಿತ !
ಗುಹೇಶ್ವರಲಿಂಗದ ಆರೋಗಣೆಯನು,
ಇಂದು ಬಸವಣ್ಣನಿಂದ ಕಂಡೆನು. /656
ಕಾಯದಲಾದ ಮೂರ್ತಿಯಲ್ಲ, ಜೀವದಲಾದ ಮೂರ್ತಿಯಲ್ಲ,
ಪ್ರಾಣದಲಾದ ಮೂರ್ತಿಯಲ್ಲ, ಪುಣ್ಯದಲಾದ ಮೂರ್ತಿಯಲ್ಲ,
ಮುಕ್ತಿಯಲಾದ ಮೂರ್ತಿಯಲ್ಲ,
ಯುಗದಲಾದ ಮೂರ್ತಿಯಲ್ಲ, ಜುಗದಲಾದ ಮೂರ್ತಿಯಲ್ಲ,
ಇದೆಂತಹ ಮೂರ್ತಿಯೆಂದುಪಮಿಸುವೆ ?
ಕಾಣಬಾರದ ಕಾಯ ನೋಡಬಾರದ ತೇಜ,
ಉಪಮಿಸಬಾರದ ನಿಲವು.
ಕಾರಣವಿಡಿದು ಕಣ್ಗೆ ಗೋಚರವಾದ ಸುಖವನು
ಏನೆಂದು ಹೇಳುವೆ ಗುಹೇಶ್ವರಾ ?/657
ಕಾಯದಲ್ಲಿ ಕಳವಳವೆಡೆಗೊಂಡ ಬಳಿಕ,
ಅರಿವಿನಲ್ಲಿ ಮರವೆ ತಾನೆ ನಿಂದಿತ್ತು ನೋಡಾ.
ಕಾಯದ ಕಳವಳವ ವಾಯವೆಂದರಿಯ ಬಲ್ಲಡೆ
ದೇವ ಗುಹೇಶ್ವರನ ನಿಲುವು ತಾನೆ ನೋಡಾ/658
ಕಾಯದಲ್ಲಿ ಕಾಯ ಸವೆದು,
ಪ್ರಾಣದಲ್ಲಿ ಪ್ರಾಣ ಸವೆದು-ನಿಶ್ಚಿಂತವಾದ ಬಳಿಕ
ಹಸಿವು-ತೃಷೆಗಳೆಂಬವು ಅಳಿದು ಹೋದವು ನೋಡಾ.
ಉಂಡಿಹೆನೆಂಬ ಬಯಕೆಯಿಲ್ಲ ಒಲ್ಲೆನೆಂಬ ವೈರಾಗ್ಯವಿಲ್ಲ.
ಇದು ಸ್ವಾನುಭಾವತೃಪ್ತಿಯೊಳಡಗಿತ್ತು.
ಇದು ಕಾರಣ-ನಮ್ಮ ಗುಹೇಶ್ವರಲಿಂಗಕ್ಕೆ
ಆರೋಗಣೆ ಇಲ್ಲ ಕಾಣಾ ಸಂಗನಬಸವಣ್ಣಾ./659
ಕಾಯದೊಳಗಣ ಜೀವವ ಮೀರಿ ಹೋಹ ಕಳ್ಳನ ಸಂಗ ಬೇಡ.
ನಿಮ್ಮ ನಿಮ್ಮ ವಸ್ತುವ ಸುಯಿಧಾನವ ಮಾಡಿಕೊಳ್ಳಿ
ಗುಹೇಶ್ವರನೆಂಬ ಕಳ್ಳನ ಕೊಂದಡೆ ಅಳುವವರಾರೂ ಇಲ್ಲ!/660
ಕಾಯದೊಳಗೆ ಕರಣವಿಲ್ಲ ಪ್ರಾಣದೊಳಗೆ ಭಾವವಿಲ್ಲ.
ಭಾವದೊಳಗೆ ಭ್ರಮೆಯಿಲ್ಲ, ನವನಾಳದೊಳಗೆ ಸುಳುಹು ಮುನ್ನಿಲ್ಲ.
ಬ್ರಹ್ಮರಂಧ್ರದಲ್ಲಿ ಅರಿವು ಅರತ ಶಿವಯೋಗಿ;
ಗುಹೇಶ್ವರನ ಶರಣ ಸಿದ್ಧರಾಮಯ್ಯಾ
ನಿನ್ನ ಕಂಡು ಎನ್ನ ಭವಂ ನಾಸ್ತಿಯಾಯಿತ್ತು ಕೇಳಾ. /661
ಕಾಯದೊಳಗೆ ಕರುಳುಳ್ಳನ್ನಕ್ಕರ ಹಸಿವು ಮಾಣದು.
ಕಾಯದೊಳಗಣ ಕರುಳ ತೆಗೆದು ಕಂಗಳ ಮೇಲಿರಿಸಿ
ಇದನಡಿಗೆಯ ಮಾಡಿ ಗಡಣಿಸುತ್ತಿದ್ದೆ,
ಏನೆಂಬೆ ಗುಹೇಶ್ವರಾ ?/662
ಕಾಯದೊಳಗೆ ಕಾಯವಾಗಿ, ಪ್ರಾಣದೊಳಗೆ ಪ್ರಾಣವಾಗಿ,
ಮನದೊಳಗೆ ಮನವಾಗಿ ಭಾವದೊಳಗೆ ಭಾವವಾಗಿ
ಅರಿವಿನೊಳಗೆ ಅರಿವಿನ ತಿರುಳಾಗಿ,-ಮರಹು ಮಾರಡೆಯಿಲ್ಲದೆ.
ನಿಜಪದವು ಸಾಧ್ಯವಾದ ಬಳಿಕ
ಆವುದು ವರ್ಮ, ಆವುದು ಕರ್ಮ ?
ಆವುದು ಬೋಧೆ, ಆವುದು ಸಂಬಂಧ ?
ನಾ ಹೇಳಲಿಲ್ಲ ನೀ ಕೇಳಲಿಲ್ಲ !
ಅದೇನು ಕಾರಣವೆಂದಡೆ ಬೆಸಗೊಂಬಡೆ ತೆರಹಿಲ್ಲವಾಗಿ !
ಗುಹೇಶ್ವರಲಿಂಗದಲ್ಲಿ ತೆರೆಮರೆ ಆವುದು ಹೇಳಯ್ಯಾ ಬಸವಣ್ಣಾ ?/663
ಕಾಯವ ಹೊತ್ತು ತಿರುಗಾಡುವನ್ನಬರ
ನಾನರಿದೆನೆಂಬುದು ಹುಸಿಯಾಯಿತ್ತು.
ಅರಿದಡೆ ತಾವರೆ ಎಲೆಯ ಬಿಂದುವಿನಂತೆ ಲೇಪವಿಲ್ಲದೆ
ಗುಹೇಶ್ವರಲಿಂಗವನರಿಯಬೇಕು ಸಂಗನಬಸವಣ್ಣಾ. /664
ಕಾಯವಿಡಿದು ಲಿಂಗವಿದೆ ಲಿಂಗವಿಡಿದು ಕಾಯವಿದೆ.
ಅರಿವಿಡಿದು ಮರಹಿದೆ, ಮರಹುವಿಡಿದು
ತೋರುವ ಅರಿವಿದೆ.
ಲಿಂಗಾಂಗವೆರಡೂ ನಿಮ್ಮಲ್ಲಿ ಐಕ್ಯವಾದ ಪರಿ ಎಂತು ಹೇಳಾ ?
ಸ್ವರವಿಡಿದು ಸಬುದ ಸಮರಸವಾದ ಪರಿ ಎಂತು ಹೇಳಾ ?
`ದೇವ’ `ಭಕ್ತ’ ಎಂಬ ನಾಮ ಸೀಮೆಯಡಗಿ
ಗುಹೇಶ್ವರಲಿಂಗದಲ್ಲಿ ತದುಗತವಾಗಿದ್ದ ಪರಿ ಎಂತು ಹೇಳಾ
ಸಂಗನಬಸವಣ್ಣಾ ?/665
ಕಾಯವಿಡಿದು ಸುಳಿದಾಡುವನ್ನಕ್ಕ,
ಕರಣಂಗಳ ಮೀರುವರಾರೈ ಚೆನ್ನಬಸವಣ್ಣಾ ?
ಕರಣಂಗಳಿಂದ ಕರ್ಮಂಗಳ ಮಾಡುತ್ತಿದ್ದಿತು.
ಕರ್ಮವ ಕರ್ಮದಿಂದ ಅಳಿದು ಮಲವ ಜಲ ತೊಳೆದಂತೆ,-
ನಾನು ಕಾಯದ ಕರ್ಮ ಮಾಡುವಲ್ಲಿ,
ಜೀವವಿಕಾರ ಬಿಡಿಸಿದೆಯಲ್ಲಾ !
ಗುಹೇಶ್ವರಲಿಂಗಕ್ಕೆ ಒಡಲಿಲ್ಲ ಎಂಬುದನು,
ಅರುಹಿದೆಯಲ್ಲಾ ಚೆನ್ನಬಸವಣ್ಣಾ. /666
ಕಾಯವಿಡಿದು ಹುಟ್ಟಿದಾತ ಕಾಲಾಗ್ನಿರುದ್ರನಾಗಲಿ,
ಕಾಯವಿಡಿದು ಹುಟ್ಟಿದಾತ ಕಾಮಸಂಹಾರಿಯಾಗಲಿ,
ಕಾಯವಿಡಿದು ಹುಟ್ಟಿದಾತ ಅನಾದಿ ಪರಮೇಶ್ವರನಾಗಲಿ,
ಅರಿವು ಸಾಧ್ಯವಾಗದು ಆರಿಗೆಯು.
ಗುಹೇಶ್ವರಲಿಂಗದಲ್ಲಿ-ನೀನು
ಕಾಯವಿಡಿದು ಕಲ್ಪಿತವ ಹೊದ್ದೆಯೆಂಬುದು,
ಕಾಣ ಬಂದಿತ್ತು ನೋಡಾ ಚೆನ್ನಬಸವಣ್ಣಾ. /667
ಕಾಯವುಳ್ಳನ್ನಕ್ಕ ಶರಣರ ಸಂಗದಿಂದ ಅರಿಯಬೇಕು.
ಜೀವವುಳ್ಳನ್ನಕ್ಕ ಅರಿವಿನ ಮುಖದಿಂದ ಹರಿಯಬೇಕು.
ಅರಿವನ್ನಬರ ಗುಹೇಶ್ವರನೆಂಬ ಕುರುಹಾಯಿತ್ತು./668
ಕಾಯವೆ ಕಡವಸವಾಗಿ, ಮನವೆ ಯೋಗವಟ್ಟಿಗೆಯಾಗಿ;
ಇಂದ್ರಿಯವಿಸಂಚದಿಂದಾದ ಉಪಮೆಯಯ್ಯಾ !
ಏನೆಂದೆನಬಹುದು ? ಎಂತೆಂದೆನಬಹುದು ?
ಸುಖದ ಸೋಂಕಿನಲಾದ ಸಮಾದಿಯಯ್ಯಾ !
ಅಂತರಂಗದ ಕಂಥೆ ಚಿಂತೆಗೆಟ್ಟುದು ಬ್ರಹ್ಮ,
ಗುಹೇಶ್ವರಲಿಂಗದಲ್ಲಿ ಸಂಗವಯ್ಯಾ./669
ಕಾಯವೆ ಸಕಲ, ಪ್ರಾಣವೆ ಸಕಲ-ನಿಷ್ಕಲ,
ಭಾವವೆ ನಿಷ್ಕಲಲಿಂಗವಾಗಿದ್ದ ಮತ್ತೆ
ಬೇರೆ ಆಯತ ಸ್ವಾಯತ ಸನ್ನಹಿತವೆಂಬುದಿಲ್ಲ ನೋಡಾ.
ಶಿವ-ಶಕ್ತಿ (ಭಕ್ತಿ-ಶಕ್ತಿ ?) ಸಂಬಂಧವೆ ದೇಹದೇಹಿಗಳಾಗಿದ್ದ ಬಳಿಕ
ಗುಹೇಶ್ವರಲಿಂಗದಲ್ಲಿ,
ಬೇರೊಂದು ಕುರುಹುವಿಡಿದು ಅರಿಯಲೇಕಯ್ಯಾ ಚನ್ನಬಸವಣ್ಣಾ ?/670
ಕಾಯವೆ ಸತ್ತು ಮಾಯವೆ ಉಳಿಯಿತ್ತು.
ಎರಡರ ಸುಖದುಃಖವನರಿಯರು ನೋಡಾ.
ಅದೇನೆಂದರಿಯರು ಅದೆಂತೆಂದರಿಯರು ನೋಡಾ.
ಹಿರಿಯರೆಲ್ಲಾ ವೃಥಾಯ ಹೋದರು ನೋಡಾ.
ಕಣ್ಣ ಮುಂದಣ ಕಪ್ಪ ಕಳೆಯಲರಿಯರು ನೋಡಾ.
ಗುಹೇಶ್ವರನೆಂಬ ಶಬ್ದಕ್ಕೆ ನಾಚರು ನೋಡಾ !/671
ಕಾಯವೆಂಬ ಕಂಥೆಯ ತೊಟ್ಟವರು,
ಬ್ರಹ್ಮನಾಗಲಿ ವಿಷ್ಣುವಾಗಲಿ ಈಶ್ವರನಾಗಲಿ
ಅಂಗಾಲ ಕಣ್ಣು ಮೈಯೆಲ್ಲಾ ಕಣ್ಣುಳ್ಳ ನಂದಿವಾಹನ ರುದ್ರನಾಗಲಿ
ಗಂಗಾಧರನಾಗಲಿ ಗೌರೀಪತಿಯಾಗಲಿ
ಮಾಯೆ ಕಾಡದೆ ಬಿಡಳು ನೋಡಾ !
ಕಾಯವೆಂಬ ಕಂಥೆಯ ತೊಟ್ಟು ಕೈಲಾಸದಲ್ಲಿದ್ದಡೆ,
ಅಗ್ಗದ ರುದ್ರರೆನ್ನ ನುಗ್ಗು ನುಗ್ಗು ಮಾಡಿ ನೆಲಕ್ಕೆ ಹಾಯ್ಕಿದಡೆ,
ಬಿದ್ದು ಎದ್ದು ಬಂದು ಗುರುವಿನಿಂದ ಭವದ ಬಳ್ಳಿಯ ಹರಿದೆ ನೋಡಾ,
ಹಿಂದಣ ಭವಕ್ಕಂಜಿ, ಮುಂದೆ ಪರಲೋಕದ ಗತಿಯನೊಲ್ಲೆನೆಂದು
ಜರೆದು ಕಳೆದಡೆ-ಪುಣ್ಯಪಾಪಂಗಳೆರಡೂ ಹೊರಗಾದವು.
ಗುಹೇಶ್ವರನೊಡ್ಡಿದ ಸಂಸಾರಸಾಗರವ ದಾಟಿ
ನಿತ್ಯ ನಿಜನಿವಾಸದ ಮುಂಬಾಗಿಲ ಕಂಡು,
ತಲೆವಾಗಿ ಹೊಕ್ಕೆನಯ್ಯಾ. /672
ಕಾಯವೆಂಬ ಕದಳಿಯ ಹೊಕ್ಕು; ಪ್ರಾಣವೆಂಬ ಗಂಹರದಲ್ಲಿ;
ಸಕಲೇಂದ್ರಿಯವೆಂಬ ಕೋಣೆ ಕೋಣೆಗಳಲ್ಲಿ ತಿರುಗಾಡುತ್ತ ಬರಲಾಗಿ
ಮೇರು ಮಂದಿರದ ತ್ರಿಕೋಣೆಯಲ್ಲಿ ಬೆಳಗಾಯಿತ್ತು !
ಗುಹೇಶ್ವರಲಿಂಗವೆಂಬುದು ರೂಪಾಯಿತ್ತು ಸಂಗನಬಸವಣ್ಣಾ./673
ಕಾಯವೆಂಬ ಕಲ್ಪಿತವ ಕಳೆದು, ಪ್ರಾಣವೆಂಬ ಸೂತಕವ ಹರಿದು,
ನಿಜಭಕ್ತಿ ಸಾಧ್ಯವಾದಲ್ಲದೆ ಲಿಂಗಪರಿಣಾಮವನೆಯ್ದಿಸಬಾರದು (ವೇದಿಸಬಾರದು ?)
ಅನು ಮಾಡಿದೆ, ನೀವು ಕೈಕೊಳ್ಳಿ ಎಂದಡೆ ಅದೇ ಅಜ್ಞಾನ.
ನಮ್ಮ ಗುಹೇಶ್ವರಲಿಂಗಕ್ಕೆ ಕುರುಹಳಿದು ನಿಜ ಉಳಿದವಂಗಲ್ಲದೆ
ಪದಾರ್ಥವ ನೀಡಬಾರದು ಕಾಣಾ ಸಂಗನಬಸವಣ್ಣಾ. /674
ಕಾಯವೆಂಬ ಗ್ರಾಮದೊಳಗೊಂದು ಉದರಾಗ್ನಿ
ಹಸಿವು ತೃಷೆ ಅನ್ನ ಪಾನಾದಿಗಳಾಹುತಿಯೆಂಬ ಹೋಮದ ಕುಳಿಯಿದ್ದು,
ನೇಮಾನೇಮಂಗಳನೆಲ್ಲ ಉಳಿದು ಆಹುತಿಯನಿಕ್ಕಿದರು.
ಕೃಚ್ಚ್ರ ಚಾಂದ್ರಾಯಣ ಮೊದಲಾದ ಷೋಡಶ ಕರ್ಮವೆಂಬ ತಪ,
ಎರಡುನೂರಹದಿನಾರು ತೆರೆದ ನೇಮ ಅರವತ್ತಾರು ಶೀಲ,
ಎಂಬತ್ತೆಂಟು ವ್ರತವೆಂಬೀ ಚತುರ್ವಿಧ ಪ್ರಾಣಘಾತಕದೊಳಿಲ್ಲ
ಗುಹೇಶ್ವರ ನಿಮ್ಮ ಶರಣ ಕಂಡೆಯ್ಯ./675
ಕಾಯವೆಂಬ ದೇಗುಲದಲ್ಲಿ ಜೀವವೆಂಬ ದೇವರು,
ಕರಣೇಂದ್ರಿಯಂಗಳೆಂಬ ಸ್ಥಾನಿಕರ ಕೈಯಲ್ಲಿ ಪೂಜಿಸಿಕೊಂಬುದು
ಗುಹೇಶ್ವರಲಿಂಗಕ್ಕೆ ದೂರ !/676
ಕಾಯವೆಂಬ ಮಹಾಕದಳಿಯ ಗೆಲಬಲ್ಲವರನಾರನೂ ಕಾಣೆ-
ಸಂಸಾರವೆಂಬ ಸಪ್ತಸಮುದ್ರ ಬಳಸಿ ಬಂದಿಪ್ಪವು.
ಭವವೆಂಬ ಮಹಾರಣ್ಯದೊಳು,
ಪಂಚೇಂದ್ರಿಯವೆಂಬ ವಿಷದ ಮಳೆ ಸುರುವುತ್ತಿಪ್ಪುದು.
ಕೋಪವೆಂಬ ಪಬರ್ುಲಿ ಮೊರೆವುತ್ತಿಪ್ಪುದು.
ಅಷ್ಟಮದವೆಂಬ ಮದಗಜಂಗಳು ಬೀದಿವರಿಯುತ್ತಿಪ್ಪುವು.
ಕಾಮವೆಂಬ ಕೆಂಡದ ಮಳೆ-ಅಡಿಯಿಡಬಾರದು.
ಮತ್ಸರವೆಂಬ ಮಹಾಸರ್ಪಂಗಳು ಕಿಡಿಯನುಗುಳುತ್ತಿಪ್ಪವು.
ಆಸೆಯೆಂಬ ಪಾಪಿಯ ಕೂಸು ಹಿಸಿಹಿಸಿದು ತಿನ್ನುತ್ತಿಪ್ಪುದು.
ತಾಪತ್ರಯವೆಂಬ ಮೂರಂಬಿನಸೋನೆ ಸುರಿವುತ್ತಿಪ್ಪುದು.
ಅಹಂಕಾರವೆಂಬ ಗಿರಿಗಳು ಅಡ್ಡ ಬಿದ್ದಿಪ್ಪವು.
ಪಂಚಭೂತಗಳೆಂಬ ಭೂತಂಗಳ ಭಯ-ದಿಟ್ಟಿಸಬಾರದು.
ಮಾಯೆಯೆಂಬ ರಕ್ಕಸಿ ಹಸಿಯ ತಿನುತಿಪ್ಪಳು
ವಿಷಯವೆಂಬ ಕೂಪ-ಬಳಸಬಾರದು.
ಮೋಹವೆಂಬ ಬಳ್ಳಿ-ಕಾಲ ಕುತ್ತಬಾರದು.
ಲೋಭವೆಂಬ ಮಸೆದಡಾಯುಧ-ಒರೆ ಉಚ್ಚಬಾರದು.
ಇಂತಪ್ಪ ಕದಳಿಯ ಹೊಗಲರಿಯದೆ
ದೇವದಾನವ ಮಾನವರೆಲ್ಲರೂ, ಮತಿಗೆಟ್ಟು ಮರುಳಾಗಿ ಹೆರೆದೆಗೆದು ಓಡಿದರು.
ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ತಲೆಬಾಲಗೆಟ್ಟರು.
ನಾನು ಈ ಕದಳಿಯ ಹೊಕ್ಕು ಹೊಯ್ದಾಡಿ,
ಮುಳ್ಳು ಮಸೆ ಮುಟ್ಟದೆ ಕಳಿವರಿದು, ಗೆಲಿದು, ಉತ್ತರಿಸಿ;
ಗುಹೇಶ್ವರನೆಂಬ ಲಿಂಗದ ನಿಜಸಮಾದಿಯಲ್ಲಿ ನಿಂದು,
ಪರವಶನಾಗಿ ನಿರಾಳಕ್ಕೆ ನಿರಾಳವಾಗಿದ್ದೆನಯ್ಯಾ !/677
ಕಾಯಶುದ್ಧವಾಯಿತ್ತೆಂದಡೆ ಲಿಂಗ ನೆಲೆಗೊಳ್ಳದು.
ಜೀವ ಶುದ್ಧವಾಯಿತ್ತೆಂದಡೆ ಲಿಂಗ ನೆಲೆಗೊಳ್ಳದು.
ಭಾವ ಶುದ್ಧವಾಯಿತ್ತೆಂದಡೆ ಲಿಂಗ ನೆಲೆಗೊಳ್ಳದು.
ಗುಹೇಶ್ವರಲಿಂಗದಲ್ಲಿ ಶುದ್ಧ ಸುಯಿಧಾನಿಯಾದೆನೆಂದಡೆ
ನಿಜವು ಸಾಧ್ಯವಾಗದು ಕೇಳು ಅವ್ವಾ./678
ಕಾಯಸದೆ ನೆನೆದಡೆ, ಕಲ್ಪಿತವಿಲ್ಲದ ಪುರುಷ ಬಂದನೆನಗೆ ನೋಡಾ,
ಕಲ್ಪಿತವಿಲ್ಲದೆ ನೆರೆದಡೆ ಭಾವಿಸಲಿಲ್ಲದ ಸುಖವು ದೊರಕಿತ್ತು ನೋಡಾ,
ಗುಹೇಶ್ವರನೆಂಬ ಲಿಂಗವನರಿದ ಬಳಿಕ ನೀ ನಾನೆಂಬುದಿಲ್ಲ ನೋಡಾ./679
ಕಾರ ಮೇಘವೆದ್ದು ಧಾರಾವರ್ತ ಸುರಿವಾಗ,
ಧಾರುಣಿಯೆಲ್ಲವೂ ಮುಳುಗಿತ್ತು ನೋಡಾ !
ಕಾರಿರುಳ ಕಣ್ಣೊಳಗೆ ಸೂರ್ಯರನೇಕರು ಮೂಡಿ
ದಾರಿಯ ಹೊಲಬೆಂಬುದು ಕೆಟ್ಟಿತ್ತು ನೋಡಾ !
ಪೂರಾಯ ಗಾಯದಲ್ಲಿ ಸಾಯೆ ಕೊಂದಲ್ಲದೆ
ಸೂರಿಯ (ಸೂರ್ಯ?)ರನೇಕರು ಮಡಿಯರು ಗುಹೇಶ್ವರಾ./680
ಕಾರಣವಿಲ್ಲ ಕಾರ್ಯವಿಲ್ಲ ಏತಕ್ಕೆ ಭಕ್ತರಾದೆವಿಂಬಿರೊ ?
ಐವರ ಬಾಯ ಎಂಜಲನುಂಬಿರಿ, ಐವರು ಸ್ತ್ರೀಯರ ಮುಖವನರಿಯಿರಿ.
ಮೂರು ಸಂಕಲೆಯ ಕಳೆಯಲರಿಯಿರಿ.
ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ, ಭ್ರಮೆಯ ನೋಡಾ ಗುಹೇಶ್ವರಾ./681
ಕಾರಿಯ (ಕಾರ್ಯ?)ವನರಿಯರು ಕೊರತೆಯನರಿಯರು.
ವಾಯಕ್ಕೆ ಬಳಲುವರು ತಾವು ಜ್ಞಾನಿಗಳೆಂದು.
ತಾಯಿಯಿಲ್ಲದ ಮೂಲನ ತಲೆವಿಡಿಯಲರಿಯದೆ
ದೇವರಾದೆವೆಂದಡೆ ನಾಚಿದೆನು ಗುಹೇಶ್ವರಾ./682
ಕಾಲ ಸಡಗರ ಕೈಯಲದೆ ಕೈಯ ಸಡಗರ ಕಂಗಳಲದೆ.
ಅದೇನು ಕಾರಣವೆಂದಡೆ, ಕಂಗಳೇ ಕಾರಣವಾಗಿ,
ಒಂದು ಮಾತಿನೊಳಗೆ ವಿಚಾರವದೆ; ಕನ್ನಡಿಯೊಳಗೆ ಕಾರ್ಯವದೆ,-
ಇದೇನು ಕಾರಣ ತಿಳಿಯಲರಿಯರು ಹೇಳಾ ಗುಹೇಶ್ವರಾ ?/683
ಕಾಲ,-ಕಾಲವರವತ್ತು; ಕಾಲ ಕಾಲವನೆ ಅರಿವುದು.
ಕಾಲ-ಕಾಲವೈವತ್ತು; ಕಾಲ ಕಾಲವನೆ ಅರಿವುದು.
ಕಾಲ-ಕಾಲ ನಾಲ್ವತ್ತು; ಕಾಲ ಕಾಲವನೆ ಅರಿವುದು.
ಕಾಲ-ಕಾಲ ಮೂವತ್ತು; ಕಾಲ ಕಾಲವನೆ ಅರಿವುದು.
ಕಾಲ-ಕಾಲ ಇಪ್ಪತ್ತು; ಕಾಲ ಕಾಲವನೆ ಅರಿವುದು.
ಕಾಲ-ಕಾಲ ಹತ್ತು; ಕಾಲ ಕಾಲವನೆ ಅರಿವುದು.
ಇಂತೀ ಕಾಲಂಗಳ ಕಾಲವನರಿವಡೆ
ಗುಹೇಶ್ವರಲಿಂಗದಲ್ಲಿ ಹೇಳು ಚೆನ್ನಬಸವಣ್ಣಾ ?/684
ಕಾಲಚಕ್ರದ ವಚನ :
ಏಕಂ ಏಕವಾದ ವಸ್ತುವ ಲೋಕಾಲೋಕಂಗಳರಿಯವು
ಸ್ಥೂಲ ಸೂಕ್ಷ್ಮವೆನುತಿರ್ಪರೆಲ್ಲರೂ,
ಆತನೀತ ಬೇರೆ ಮತ್ತೊಬ್ಬಾತನೆಂಬ ಭ್ರಮೆಯಲ್ಲಿ
ಭೂತಪ್ರಾಣಿಗಳವರೆತ್ತ ಬಲ್ಲರು ಆತನ ಘನವ.
ಚಿಟುಕು ಮುನ್ನೂರರವತ್ತು ಕೂಡಿದಡೆ ಒಂದು ವಿಘಳಿಗೆ,
ಆ ವಿಘಳಿಗೆ ಅರುವತ್ತು ಕೂಡಿದೊಡೆ ಒಂದು ಘಳಿಗೆ,
ಆ ಘಳಿಗೆ ಅರುವತ್ತು ಕೂಡಿದೊಡೆ ಒಂದು ದಿನ.
ದಿನ ಮೂವತ್ತು ಕೂಡಿದೊಡೆ ಒಂದು ಮಾಸ
ಮಾಸ ಹನ್ನೆರಡು ಕೂಡಿದೊಡೆ ಒಂದು ವರುಷ
ವರುಷ ಅರುವತ್ತು ಕೂಡಿದೊಡೆ ಒಂದು ಸಂವತ್ಸರ-
ಇಂತೀ ಕಾಲಚಕ್ರಂಗಳು ಈ ಪರಿದಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ.
ನಾಲ್ಕು ಯುಗಂಗಳು ಬೇರೆ ಬೇರೆ ಕಟ್ಟಿದ ಕಟ್ಟಳೆಯೊಳು,
ತಿರುಗಿ ಬರುತ್ತಿಹವು ಕಾಣಿರೆ.
ಕೃತಯುಗ ಹದಿನೇಳು ಲಕ್ಷವು ಇಪ್ಪತ್ತೆಂಟುಸಾವಿರವರ್ಷ ವರ್ತಿಸಿ ನಿಂದಿತ್ತು.
ತ್ರೇತಾಯುಗ ಹನ್ನೆರಡು ಲಕ್ಷವು ತೊಂಬತ್ತಾರುಸಾವಿರ ವರ್ಷ ವರ್ತಿಸಿ ನಿಂದಿತ್ತು.
ದ್ವಾಪರಯುಗ ಎಂಟು ಲಕ್ಷವು ಅರುವತ್ತುನಾಲ್ಕುಸಾವಿರ ವರ್ಷ ವರ್ತಿಸಿ ನಿಂದಿತ್ತು.
ಕಲಿಯುಗ ನಾಲ್ಕುಲಕ್ಷವು ಮೂವತ್ತೆರಡುಸಾವಿರ ವರ್ಷ ವರ್ತಿಸಿ ನಿಂದಿತ್ತು.
-ಇಂತೀ ನಾಲ್ಕು ಯುಗಂಗಳು ಕೂಡಿ ಒಂದಾಗಿ ಮೇಳಯಿಸಿದೊಡೆ,
ನಾಲ್ವತ್ತು ಮೂರು ಲಕ್ಷವು ಇಪ್ಪತ್ತುಸಾವಿರ ವರುಷ ಕಟ್ಟಳೆಯಾಯಿತ್ತು.
ಈ ನಾಲ್ಕುಯುಗಂಗಳು ಇಪ್ಪತ್ತೊಂದು ಬಾರಿ ತಿರುಗಿದಡೆ
ಸುರಪತಿಗೆ ಪರಮಾಯು, ಬ್ರಹ್ಮಂಗೆ ಜಾವ,
ಅಷ್ಟಾಶಿತಿ ಸಹಸ್ರ ಋಷಿಯರು ಸಾವಿರಬಾರಿ ತಿರುಗಿದಡೆ
ಬ್ರಹ್ಮಂಗೆ ಆಯುಷ್ಯ ನೂರಪ್ಪುದು, ವಿಷ್ಣುವಿಂಗೆ ಜಾವಪ್ಪುದು.
ಆ ವಿಷ್ಣುವಿನ ಒಂದು ದಿನ(ಜಾವ?)ದೊಳಗೆ
ನಾಲ್ಕು ಬಾರಿ ಹುಟ್ಟಿ ನಾಲ್ಕು ಬಾರಿ ಹೊಂದುವ ಬ್ರಹ್ಮನು,
ಆ(ದಿ) ವಿಷ್ಣುವಿನ ಒಂದು ದಿನವಪ್ಪುದು, (ಅಂಥ ವಿಷ್ಣುವಿನ ಒಂದು ದಿನದಲ್ಲಿ)
ಸಮಸ್ತ ಈರೇಳು ಭುವನಂಗಳೆಲ್ಲ ಭೂತಸಂಹಾರ ,
ಅಂಥಾ ಭೂತಸಂಹಾರಗಳು
ಹದಿನೆಂಟು ಲಕ್ಷವು ಇಪ್ಪತ್ತೆಂಟುಸಹಸ್ರ ವರುಷ ತಿರುಗಲು
ಪೃಥ್ವಿಯೆಲ್ಲಾ ಜಲಪ್ರಳಯ.
ಅಂಥಾ ಜಲಪ್ರಳಯವೆಂಟು ಬಾರಿ ತಿರುಗಿದಡೆ ವಿಷ್ಣುವಿಂಗೆ ಮರಣ,
ರುದ್ರಂಗೆ ನಿಮಿಷ.
ಅಂಥಾ ರುದ್ರನ ಒಂದು ನಿಮಿಷದಲ್ಲಿ
ಅತಳ ವಿತಳ ಸುತಳ ಮಹೀತಳ ರಸಾತಳ ತಳಾತಳ ಪಾತಾಳ-
ಇಂತು ಕೆಳಗೇಳು ಭುವನಂಗಳು,
ಮೇಲೆ, ಸತ್ಯಲೋಕ ಜನರ್ಲೊಕ ತಪೋಲೋಕ ಮಹರ್ಲೊಕ, ಸ್ವರ್ಲೊಕ
ಭುವರ್ಲೊಕ ಭೂಲೋಕ ಮೊದಲಾಗಿ-ಇಂತೀ ಲೋಕಾಲೋಕಂಗಳೆಲ್ಲ ಮುಳುಗಿ
ಮಹಾಪ್ರಳಯವಾದಲ್ಲಿ ರುದ್ರಲೋಕವೊಂದುಳಿಯೆ, ಆ ರುದ್ರಂಗೆ ಒಂದುದಿನ.
ಅಂಥಾದಿನ ಮುನ್ನೂರರವತ್ತು ಕೂಡಿದಡೆ ಒಂದು ವರುಷ.
ಅಂಥಾ ವರುಷ ಶತಕೋಟಿ ಕೂಡಿದಡೆ ರುದ್ರಂಗೆ ಪರಮಾಯು.
ಅಂಥಾ ರುದ್ರರು ಅನೇಕರು ಹೋದರಲ್ಲಾ,
ಮತ್ತಂ ಪಶುಪತಿ, ಶಂಕರ, ಶಶಿಧರ, ಸದಾಶಿವ, ಗೌರೀಪತಿ, ಮಹಾದೇವ
ಈಶ್ವರರೆಂಬವರು
ಆ ದಿನದಲ್ಲಿ ಇವರು ಪ್ರಮಥಗಣೇಶ್ವರರು, ತಪೋರಾಜ್ಯವನುಂಬರು.
ತಪಕ್ಕೆ ಬಿಜಯಂಗೈವರು ಆ ರುದ್ರರು.
ಲೋಕಾಲೋಕಂಗಳು ಕೂಡಿ ಭೂತ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ,
ಅದು ತೊಡೆದು ಹೋಯಿತ್ತು.
ಬಳಿಕ ಶೂನ್ಯವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ,
ಅದು ತೊಡೆದು ಹೋಯಿತ್ತು
ಬಳಿಕ ಕಾಳಾಂಧರ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ,
ಅದು ತೊಡೆದು ಹೋಯಿತ್ತು-ಬಳಿಕ ಮಹಾ ಪ್ರಕಾಶದ ಬೆಳಗು.
ಇಂತಹ ಕಾಲಂಗಳು ಈ ಪರಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ !
ಅಂತಹ ಕಾಲಂಗಳೂ ಅರಿಯವು, ಅಂತಹ ದಿನಂಗಳೂ ಅರಿಯವು
ಅಂತಹ ದೇವತೆಗಳೂ ಅರಿಯರು,-
ಅಪ್ರಮಾಣ ಅಗಮ್ಯ ಅಗೋಚರ ಉಪಮಿಸಬಾರದು
ಅಂತಿಂತೆನಲಿಲ್ಲ ಗುಹೇಶ್ವರಲಿಂಗ ನಿರಂಜನ ನಿರಾಳ ! ನಿರಾಮಯ !/685
ಕಾಲನ ಕೊಂದಾತನಲ್ಲದೆ ಶುದ್ಧಪ್ರಸಾದಿಯಲ್ಲ.
ಕಾಮನ ತಿಂದಾತನಲ್ಲದೆ ಸಿದ್ಧಪ್ರಸಾದಿಯಲ್ಲ.
ತ್ರಿಪುರವ ಸುಟ್ಟಾತನಲ್ಲದೆ ಪ್ರಸಿದ್ಧಪ್ರಸಾದಿಯಲ್ಲ.
ಕೆಸರಿನಲ್ಲಿ ಕಿಚ್ಚನಿಕ್ಕಿ ಬಸುರ ಬಡಿದುಕೊಂಡಾತಗಲ್ಲದೆ
ಈ ತ್ರಿವಿಧ ಪ್ರಸಾದವಿಲ್ಲ ಕಾಣಾ ಗುಹೇಶ್ವರಾ./686
ಕಾಲಾಗ್ನಿಯೆಂಬ ಕಾಡುಗಿಚ್ಚೆದ್ದು ಲೋಕವ ಸುಟ್ಟಿತ್ತೆಂದಡೆ
ಶಿವಶರಣರಂಜರು.
ಶಶಿಧರ ಮುನಿದು ಬಿಸುಗಣ್ಣ ತೆಗೆದಡೆ
ಶಿವಶರಣರದ ಮನಸಿಗೆ ತಾರರು.
ಅಸಮಾಕ್ಷಲಿಂಗವ ತಮ್ಮ ವಶಕ್ಕೆ ತಂದ ಶರಣರು,
ಮುನಿದು ಉರಿಗಣ್ಣ ತೆಗೆದಡೆ,
ಚತುರ್ದಶ ಭುವನದೊಳಗೆ ಆರೂ ಗುರಿಯಲ್ಲ.
ಗುಹೇಶ್ವರಾ ನಿಮ್ಮ ಅರಿವಿನ ಬೆಳಗು ಬಿಸಿಯಾದಡೆ
ಸಿದ್ಧರಾಮಯ್ಯದೇವರೆಂಬ ಶಿವಯೋಗಿಯ
ಹೃದಯವೆ ಗುರಿ./687
ಕಾಲಿಲ್ಲದ ಗಮನ, ಕೈಯಿಲ್ಲದ ಸೋಂಕು, ಬಾಯಿಲ್ಲದ ರುಚಿ,
ಭಾವವೆ ಕರ್ಪರವಾಗಿ `ಪರಮ ದೇಹಿ’ ಎಂದು ಬೇಡುವ
ಪರಮನ ತೋರಯ್ಯಾ ಗುಹೇಶ್ವರಾ./688
ಕಾಲು ಕರ ಕಾಯ ಜೀವದೊಳಗಾಡುವ
ಭಾವವೇ ದೈವವೆ ?
`ನಾನು’ ಎಂಬುದ ತಾನು ಅಳಿದಲ್ಲಿ ಗುಹೇಶ್ವರಲಿಂಗವು ತಾನೆ !/689
ಕಾಲು ಮುಖವ ತೊಳೆದುಕೊಂಡ ಬಳಿಕ ಮಜ್ಜನಕ್ಕೆರೆವಿರಿ,
ತಾನು ಲಿಂಗವೊ ? ತನ್ನ ಕೈಯದು ಲಿಂಗವೊ ?
ಆವುದು ಲಿಂಗ ಹೇಳಿರೆ ?
ಲಿಂಗಸ್ಥಲವನರಿಯದೆ,
ಎರಡರಿಂದ ಕೆಟ್ಟರು ಗುಹೇಶ್ವರಾ./690
ಕಾಲುಗಳೆಂಬುವು ಗಾಲಿ ಕಂಡಯ್ಯಾ
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ.
ಬಂಡಿಯ ಹೊಡೆವರೈವರು ಮಾನಿಸರು, ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಆದರಿಚ್ಛೆಯನರಿದು ಹೊಡೆಯದಿರ್ದಡೆ,
ಅದರಚ್ಚು ಮುರಿಯಿತ್ತು, ಗುಹೇಶ್ವರಾ./691
ಕಾಲೇ ಕಂಬಗಳಾದವೆನ್ನ, ದೇಹವೇ ದೇಗುಲವಾಯಿತ್ತಯ್ಯಾ !
ಎನ್ನ ನಾಲಗೆಯೆ ಗಂಟೆ, ಶಿರ ಸುವರ್ಣದ ಕಳಸ-ಇದೇನಯ್ಯಾ !
ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯಾ.
ಗುಹೇಶ್ವರಾ ನಿಮ್ಮ ಪ್ರಾಣಲಿಂಗಪ್ರತಿಷ್ಠೆ,
ಪಲ್ಲಟವಾಗದಂತಿದ್ದೆನಯ್ಯಾ/692
ಕಾಳರಕ್ಕಸಿಗೊಬ್ಬ ಮಗ ಹುಟ್ಟಿ,
ಕಾಯದ ರಾಶಿಯ ಮೊಗೆವುತ್ತ ಸುರಿವುತ್ತಲಿದ್ದನಯ್ಯಾ !
ಕಾಳರಕ್ಕಸಿಯ ಮೂಗು ಮೊಲೆಯ ಕೊಯ್ದು,
ದೇವಕನ್ನಿಕೆಯ ಮೊರೆಹೊಕ್ಕು,
ಬಾಯ ತುತ್ತೆಲ್ಲವನು ಉಣಲೊಲ್ಲದೆ ಕಾರಿದಡೆ,
ಆತನೆ ಭಕ್ತನೆಂದೆಂಬೆ ಗುಹೇಶ್ವರಾ./693
ಕಿಚ್ಚಿಗೆ ಮೈಹುಗುಳು ಹುಟ್ಟಿತ್ತು,
ಉದಕಕ್ಕೆ ಚಳಿಯಾಗಿ ಸ್ಫಟಿಕ ಗಿರಿಯಲ್ಲಿ ಹಣ್ಣು ಹುಟ್ಟಿತ್ತು !
ಅಟ್ಟಿತ್ತೊಂದು ತಲೆ ಹೋ ! ಹಣ್ಣನದ (ನೆಯ್ದೆ ?) ನುಂಗಿತ್ತು ರೆ !
ಹೆಂಡತಿಯಿಲ್ಲದ ಗಂಡಂಗೆ ಅರುಮಾನಿಸ ಮಕ್ಕಳು.
ಅಖಂಡಿತ ಗುಹೇಶ್ವರಾ ಹಾ ನಿರಾಳರೆ. /694
ಕಿಚ್ಚಿನ ಕೆಂಡದಂತೆ ಹೊರೆಯಲ್ಲಿಪ್ಪೆಯಯ್ಯಾ,
ಬೆಂಕಿಯ ಬೆಳಗ ಕಂಡೆ-ಇದು ಕಾರಣ,
ನಿಮ್ಮ ಕಂಡೆ ಪರಮಜ್ಞಾನಿ ಗುಹೇಶ್ವರಾ./695
ಕಿಚ್ಚಿನ ದೇವನು, ಕೆಂಡದ ದೇವನು,
ಮಾರಿಯ ದೇವನು, ಮಸಣದ ದೇವನು,
ತಿರುಕ ಗೊರವನೆಂದು ಅಲ್ಲಲ್ಲಿ ಒಂದೊಂದನಾಡುತ್ತಿಪ್ಪರಯ್ಯಾ.
ನಾ ನಿಮ್ಮ ಪೂಜಿಸಿ ನಷ್ಟಸಂತಾನವಾಗಿ,
ಬಟ್ಟಬಯಲಲ್ಲಿ ಬಿದ್ದು ಕೆಟ್ಟೆನು ಗುಹೇಶ್ವರಾ./696
ಕಿಚ್ಚಿನೊಳಗೆ(ನೊಡನೆ?) ಹೋರಿದ ಹುಳ್ಳಿಯಂತಾದೆನಯ್ಯಾ.
ಬೆಂದ ನುಲಿಯ ಸಂದಿಕ್ಕಿ ಮತ್ತೊಂದ ಮಾಡಬಾರದಯ್ಯಾ.
ಗುಹೇಶ್ವರಾ-ನಿಮ್ಮ ನಿಲವಿನ ಪರಿ ಇಂತುಟಯ್ಯಾ./697
ಕಿಚ್ಚು ಬಯಲೆಂದಡದು ನಿರವಯವಕೆ ಹತ್ತಿ ಹೊತ್ತಿದುದುಂಟೆ ?
ಅರಿವು ನಿಜವೆಂದಡೆ ಅಡಗುವುದಕ್ಕೊಂದು ನಾಮ ಉಂಟು.
ಅಗ್ನಿರೂಪಿನಲ್ಲಿ ಹುಟ್ಟಿ ಆ ರೂಪ ದಗ್ಧವ ಮಾಡಿದಲ್ಲದೆ
ತನ್ನ ಹೊದ್ದಿಗೆ ಕೆಡದು.
ಆ ಉಭಯವನರಿವನ್ನಬರ ಕೈಯ ಕುರುಹು,
ಅರಿವನ ಜ್ಞಾನ ಪರಿಪೂರ್ಣವಾಗಿರಬೇಕು.
ನಮ್ಮ ಗುಹೇಶ್ವರಲಿಂಗದಲ್ಲಿ ಆ ಉಭಯವ ತಿಳಿವನ್ನಬರ
ತನ್ನ ಹಿಂಗಿರಬೇಕು ಕಾಣಾ, ಎಲೆ ಅಂಬಿಗರ ಚೌಡಯ್ಯ./698
ಕಿರಿಯರಾದಡೇನು ? ಹಿರಿಯರಾದಡೇನು ?
ಅರಿವಿಂಗೆ ಹಿರಿದು ಕಿರಿದುಂಟೆ ?
ಆದಿ ಅನಾದಿ ಇಲ್ಲದಂದು,
ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು
ಗುಹೇಶ್ವರಲಿಂಗದಲ್ಲಿ ನೀನೊಬ್ಬನೆ ಮಹಾಜ್ಞಾನಿ ಎಂಬುದು
ಕಾಣಬಂದಿತ್ತು ಕಾಣಾ ಚೆನ್ನಬಸವಣ್ಣಾ./699
ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ.
ಪರರ ಬೋದಿಸಿಕೊಂಡುಂಬಾತ ಜಂಗಮವಲ್ಲ.
ತ್ರಿಸಂಧ್ಯಾಕಾಲವೆಂದು ಪ್ರಸಾದವನಿಕ್ಕುವಾತ ಗುರುವಲ್ಲ.
ತ್ರಿಸಂಧ್ಯಾಕಾಲವೆಂದು ಪ್ರಸಾದವ ಕೊಂಬಾತ ಶಿಷ್ಯನಲ್ಲ.
ಪರಗಮನವಿರಹಿತ ಜಂಗಮ, ಕಾಲಕರ್ಮವಿರಹಿತ ಪ್ರಸಾದಿ,
ಪ್ರಸಾದವ ಇಕ್ಕಿಯೂ ಇಕ್ಕದಾತ ಗುರು, ಕೊಂಡೂ ಕೊಳ್ಳದಾತ ಶಿಷ್ಯ.
ಆ ಭಕ್ತನಲ್ಲಿಯೆ ನಿಕ್ಷೇಪಿಸಿ ನಿರ್ಗಮನಿಯಾಗಿ ಹೋದಾತ ಜಂಗಮ.
ಆ ಜಂಗಮಕ್ಕೆ ಅರ್ಥಪ್ರಾಣಾಬಿಮಾನವಿಡಿದು ಮಾಡುವಾತ ಭಕ್ತ-
ಇಂತೀ ಚತುರ್ವಿಧದನುವನು, ಗುಹೇಶ್ವರಲಿಂಗದನುವನು
ವೇಷಧಾರಿಗಳೆತ್ತ ಬಲ್ಲರು ಬಸವಣ್ಣನೊಬ್ಬನೆ ಬಲ್ಲನಲ್ಲದೆ./700
ಕುಂಡಲಿಗನ ಕೀಟದಂತೆ, ಮೈ ಮಣ್ಣಾಗದಂತೆ
ಇದ್ದೆಯಲ್ಲಾ ಬಸವಣ್ಣಾ.
ಜಲದೊಳಗಣ ತಾವರೆಯಂತೆ ಹೊದ್ದಿಯೂ ಹೊದ್ದದಂತೆ
ಇದ್ದೆಯಲ್ಲಾ ಬಸವಣ್ಣಾ.
ಜಲದಿಂದಲಾದ ಮೌಕ್ತಿಕದಂತೆ,
ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣಾ.
ಗುಹೇಶ್ವರಲಿಂಗದ ಆಣತಿವಿಡಿದು,
ತನುಗುಣ ಮತ್ತರಾಗಿದ್ದ ಐಶ್ವರ್ಯಾಂಧಕರ
ಮತವನೇನ ಮಾಡಬಂದೆಯಯ್ಯಾ, ಸಂಗನ ಬಸವಣ್ಣಾ ?/701
ಕುರುಹುಳ್ಳನ್ನಕ್ಕ ಸಮಯದ ಹಂಗು,
ಅರಿದಹೆನೆಂಬನ್ನಕ್ಕ ಆತ್ಮದ ಹಂಗು,
`ಅಲ್ಲ’ `ಅಹುದು’ ಎಂಬನ್ನಕ್ಕ ಎಲ್ಲರ ಹಂಗು,
ಗುಹೇಶ್ವರನೆಂಬನ್ನಕ್ಕ
ಲಿಂಗದ ಹಂಗು ಬೇಕು ಘಟ್ಟಿವಾಳಣ್ಣಾ./702
ಕುರೂಪಿ ಸುರೂಪಿಯ ನೆನೆದಡೆ ಸುರೂಪಿಯಪ್ಪನೆ ?
ಆ ಸುರೂಪಿ ಕುರೂಪಿಯ ನೆನೆದಡೆ ಕುರೂಪಿಯಪ್ಪನೆ ?
ಧನವುಳ್ಳವರ ನೆನೆದಡೆ ದರಿದ್ರ (ದಾರಿದ್ರ್ಯ ?) ಹೋಹುದೆ ?
ಪುರಾತರನು ನೆನೆದು ಕೃತಾರ್ಥರಾದೆವೆಂಬರು,
ತಮ್ಮಲ್ಲಿ ಭಕ್ತಿ ನಿಷ್ಠೆಯಿಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು./703
ಕುಲದಲದಿಕನು ಹೋಗಿ ಹೊಲೆಗೇರಿಯಲ್ಲಿ ಮನೆಯ ಕಟ್ಟಿದಡೆ,
ಕುಲ ಕೆಡದಿಪ್ಪ ಈ ಪರಿಯ ನೋಡಾ !
ಆತನ ಕುಲದವರೆಲ್ಲರು ಮುಖವ ನೋಡಲೊಲ್ಲದಡೆ
ಕುಲವುಳ್ಳವರೆಲ್ಲರೂ ಕೈವಿಡಿದರು.
ಕುಲಗೆಟ್ಟವನೆಂದು ತಿಳಿದು ವಿಚಾರಿಸಲು,
ಹೊಲೆಗೆಟ್ಟು ಹೋಯಿತ್ತು ಕಾಣಾ ಗುಹೇಶ್ವರಾ./704
ಕುಲದೊಳಗೆ ಹುಟ್ಟಿ ಕುಲವ ಬೆರಸದೆ
ತಮ್ಮ ನಿಲವ ಬಲಿದಿಪ್ಪವರು ಇನ್ನಾರು ಹೇಳಾ ?
ಹಬ್ಬಿದ ಮೂರು ಬೆಟ್ಟಕ್ಕೆ ತನ್ನ ಮನವ ಹಬ್ಬಲೀಯದೆ
ಲಿಂಗ ಜಂಗಮಕ್ಕೆ ಸವೆಸಿ ಸ್ವಯಲಿಂಗವಪ್ಪರಿನ್ನಾರು ಹೇಳಾ ?
ಸ್ವಯೋ ಲಿಂಗ ಸ್ವಯೋ ಶರಣ ಸ್ವಯೋ ಭೋಗವೆಂದುದಾಗಿ,
ಗುಹೇಶ್ವರಾ-ನಿಮ್ಮ ಶರಣ ಸಂಗನಬಸವಣ್ಣಂಗೆ
ನಮೋ ನಮೋ ಎಂಬೆನು./705
ಕುಲಮದ ಛಲಮದ ವಿದ್ಯಾಮದದವರ ತೋರದಿರಾ.
ಅವರ ಅರೂಢಪದವಿಯನೆನಗೆ ತೋರದಿರಾ.
ಅವರ ಗರುವ ಗಂಬಿರವನೆನಗೆ ತೋರದಿರಾ.
ಶಮೆದಮೆಯುಳಿದು ದಶಮುಖ ನಿಂದು
ಲಿಂಗದಲ್ಲಿ ಲೀಯವಾದವರನಲ್ಲದೆ, ಎನಗೆ ತೋರದಿರಾ ಗುಹೇಶ್ವರಾ./706
ಕೂಡಲಿಲ್ಲದ ಅಗಲಲಿಲ್ಲದ ಘನವ,
ಕೂಡುವ ಪರಿ ಎಂತವ್ವಾ ?
ಗುಹೇಶ್ವರಲಿಂಗವ ಬೇರೆ ಮಾಡಿ
ಬೆರಸಬಾರದು ಕೇಳಾ ಕೆಳದಿ./707
ಕೂರಹ ಮುಟ್ಟದೆ, ಕೂದಲು ಹರಿಯದೆ, ಬೋಳಾಗಬೇಕು.
ಕಾಯ ಬೋಳೋ ? ಕಪಾಲ ಬೋಳೊ ?
ಹುಟ್ಟುವುದು ಬೋಳೊ ? ಹುಟ್ಟದೆ ಹೋಹುದು ಬೋಳೊ ?
ಗುಹೇಶ್ವರಾ./708
ಕೂರ್ಮನ ಶಿಶುವಿನ ಸ್ನೇಹದಂತಿರಬೇಡಾ ಸಂಗನಬಸವಣ್ಣಾ ?
ಕಾಕಪಿಕಸಂಧಾನದಂತಿರಬೇಡಾ ಸಂಗನಬಸವಣ್ಣಾ ?
ಕೊಂಬ ತಪ್ಪದೆ ಹಾಯ್ವ ಕಪಿಯಂತಿರಬೇಡಾ ಸಂಗನಬಸವಣ್ಣಾ ?
ನೀರು ಕ್ಷೀರವ ಭೇದಿಸಿ ತೆಗೆವ ಹಂಸೆಯಂತಿರಬೇಡಾ ಸಂಗನಬಸವಣ್ಣಾ ?
ಗುಹೇಶ್ವರಲಿಂಗದಲ್ಲಿ ಅವಧಾನ ತಪ್ಪಿ,
ಮರಳಿ ಅರಸಿದಡುಂಟೆ ಹೇಳಾ ಸಂಗನಬಸವಣ್ಣಾ ? /709
ಕೃತಯುಗದಲ್ಲಿ ನಾನು ಭಕ್ತಿ ಕಾರಣ
ಸ್ಥೂಲಕಾಯನೆಂಬ ಗಣೇಶ್ವರನಾಗಿರ್ದೆನಯ್ಯಾ.
ತ್ರೇತಾಯುಗದಲ್ಲಿ ನಾನು ಭಕ್ತಿ ಕಾರಣ
ಶೂನ್ಯಕಾಯನೆಂಬ ಗಣೇಶ್ವರನಾಗಿರ್ದೆನಯ್ಯಾ.
ದ್ವಾಪರದಲ್ಲಿ ನಾನು ಭಕ್ತಿ ಕಾರಣ
ಅನಿಮಿಷನೆಂಬ ಗಣೇಶ್ವರನಾಗಿರ್ದೆನಯ್ಯಾ.
ಕಲಿಯುಗದಲ್ಲಿ ನಾನು ಭಕ್ತಿ ಕಾರಣ
ಅಲ್ಲಮಪ್ರಭುವೆಂಬ ಗಣೇಶ್ವರ (ಜಂಗಮ ?)ನಾಗಿರ್ದೆ
ಕಾಣಾ ಗುಹೇಶ್ವರಾ. /710
ಕೃತಯುಗದಲ್ಲಿ ನೀನು
ಸ್ಕಂದನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು.
ತ್ರೇತಾಯುಗದಲ್ಲಿ ನೀನು
ನೀಲಲೋಹಿತನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು.
ದ್ವಾಪರದಲ್ಲಿ ನೀನು
ವೃಷಭನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು.
ಕಲಿಯುಗದಲ್ಲಿ ನೀನು
ಬಸವನೆಂಬ ಗಣೇಶ್ವರನಾಗಿ, ಸರ್ವಾಚಾರ ಸಂಪನ್ನನಾಗಿ,
ಭಕ್ತಿಜ್ಞಾನವ ಕಂದೆರವೆಯ ಮಾಡಿ,
ಶಿವಾಚಾರದ ಘನದ ಬೆಳವಿಗೆಯ ಮಾಡಿ,
ಶಿವಭಕ್ತಿಯ ಧ್ವಜವನೆತ್ತಿಸಿ ಮರ್ತ್ಯಲೋಕದೊಳಗೆ
ಹರಹಿದ ಭೇದವ ಭೇದಿಸಿ ನೋಡಿ ಆನು ಅರಿದೆ.
ಗುಹೇಶ್ವರ ಸಾಕ್ಷಿಯಾಗಿ ನಿನ್ನ ಮಹಾತ್ಮೆಗೆ
ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ. /711
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು./712
ಕೃತ್ಯಕ್ಕೆ ಬಾರದ ಲಿಂಗವ ಕೃತ್ಯಕ್ಕೆ ತಂದವರಾರೊ ?
ವಾಙ್ಮನಕ್ಕಗೋಚರ ಲಿಂಗ, ಬೊಟ್ಟಿಡಲೆಡೆದೆರಹಿಲ್ಲದ ಲಿಂಗ !
ಪರಾತ್ಪರಗುರು ಕೊಟ್ಟ, ಶಿಷ್ಯ ತೆಗೆದುಕೊಂಡ ಎಂಬ
ರಚ್ಚೆಯ ಭಂಡರ ನೋಡಾ ಗುಹೇಶ್ವರಾ. /713
ಕೆಂಡದ ಗಿರಿಯ ಅರಗಿನ ಬಾಣದಲೆಚ್ಚಡೆ
ಮರಳಿ ಆ ಬಾಣವನರಸಲುಂಟೆ ?
ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ ?
ಗುಹೇಶ್ವರನೆಂಬ ಲಿಂಗವನರಿದ ಬಳಿಕ
ಮತ್ತೆ ಮರಳಿ ನೆನೆಯಲುಂಟೆ ? /714
ಕೆಂಡದ ಗಿರಿಯ ಮೇಲೊಂದು, ಅರಗಿನ ಕಂಬವಿದ್ದಿತ್ತು ನೋಡಯ್ಯಾ.
ಅರಗಿನ ಕಂಬದ ಮೇಲೆ ಹಂಸೆಯಿದ್ದಿತ್ತು.
ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ/715
ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು.
ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು.
ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು.
ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು,
ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು./716
ಕೆಟ್ಟ ಒಡವೆಯನರಸ ಹೋಗಿ,
ಆ ಕೆಟ್ಟ ಒಡವೆಯ ಕಂಡ ಬಳಿಕ, ಆರನೂ ಕೇಳಲಿಲ್ಲ ಹೇಳಲಿಲ್ಲ,
ಅದು ಮುನ್ನಲಿದ್ದ ಹಾಂಗೆ ಆಯಿತ್ತು.
ಅಂತು ಶರಣನು ಆ ಪರಿಯಲೆ ತನ್ನ ಸ್ವಯಾನುಭಾವದಿಂದ
ತನ್ನ ನಿಜವ ತಾ ಕಂಡು ಸೈವೆರಗಾಗಿರಲು,
ಅದನ್ನು ಅಜ್ಞಾನಿಗಳು ಬಲ್ಲರೆ ಗುಹೇಶ್ವರಾ ?/717
ಕೆಟ್ಟುದನರಸ ಹೋಗಿ ತಾನೆ ಕೆಟ್ಟಿತ್ತು.
ಹೇಳಲೆಂತೂ ಬಾರದು ಕೇಳಲೆಂತೂ ಬಾರದು.
ಎಂತಿರ್ದುದಂತೆ !
ಸಹಜ ಸ್ವಾನುಭಾವದ ಸಮ್ಯಕ್ ಜ್ಞಾನವ, ಅಜ್ಞಾನಿ ಬಲ್ಲನೆ
ಗುಹೇಶ್ವರಾ ?/718
ಕೆರೆ ದೇಗುಲಂಗಳೆಲ್ಲವು ಹಿಂದಣ ಅಡಿವಜ್ಜೆಗೆ ಒಳಗು.
ಕರ್ಮಕಾಂಡ ಯೋಗಂಗಳೆಲ್ಲವು ಭವದ ತೆಕ್ಕೆಗೆ ಒಳಗು.
ಹಿಂದಣ ಮುಂದಣ ಸಂದನಳಿದು
ಗುಹೇಶ್ವರಲಿಂಗದಲ್ಲಿ ಸಲೆ ಸಂದಿರಬೇಕು ಸಿದ್ಧರಾಮಯ್ಯಾ./719
ಕೆರೆಯ ಕಟ್ಟಿಸುವ ಒಡ್ಡನ ಪ್ರತಾಪವನೇನೆಂಬೆನಯ್ಯಾ.
ನೆಲನನಗಿದು ಜಲವ ಮೊಗೆದಿಹೆನೆಂಬ ಬಳಲಿಕೆಯ ನೋಡಾ.
ಒಂದು ಕಲ್ಲನು ಕಡಿದು ಮತ್ತೊಂದು ಕಲ್ಲಿಗೆ
ಭೋಗವ ಕೊಟ್ಟಿಹೆನೆಂಬ ಅಜ್ಞಾನವಿದೇನೊ ?
ಗುಹೇಶ್ವರಾ ಈ ಇರವಿನ ಪರಿಗೆ ಬೆರಗಾದೆನು ! /720
ಕೆರೆಯಲುಂಡು ತೊರೆಯ ಹೊಗಳುವರು.
ಅತ್ಯುತ್ಕಟದ ಪರಬ್ರಹ್ಮವನೆ ನುಡಿವರು.
ಸಹಜ ಪಿನಾಕಿಯ ಬಲೆಯಲ್ಲಿ ಸಿಲುಕಿ
ಭವವ ಹರಿಯಲರಿಯರು.
ರುದ್ರನ ಛತ್ರವನುಂಡು ಇಲ್ಲವೆಯ ನುಡಿವ ಹಿರಿಯರಿಗೆ
ಮಹದ ಮಾತೇಕೋ ಗುಹೇಶ್ವರಾ?/721
ಕೆಲಬರು ಕಂಡೆವೆಂಬರು, ಕೆಲಬರು ಕಾಣೆವೆಂಬರು.
ತಾರಾಮಂಡಲವೆ ? ಸೂರ್ಯಮಂಡಲವೆ ?
ಗುಹೇಶ್ವರನಿಪ್ಪುದು ಚಂದ್ರಗಿರಿಪಟ್ಟಣವು ! /722
ಕೆಳಗೇಳು ಭುವನಂಗಳಿಲ್ಲದಂದು, ಮೇಲೇಳು ಭುವನಂಗಳಿಲ್ಲದಂದು,-
ಅಂದು ಆದ ಗುರು, ಅಂದು ಆದ ಲಿಂಗ, ಅಂದು ಆದ ಜಂಗಮ,
ಅಂದು ಆದ ಪ್ರಸಾದ, ಅಂದು ಆದ ಪಾದೋದಕ.
ಇಂದಿನದಾವುದೂ ಹೊಸತಿಲ್ಲಯ್ಯಾ.
ಶಶಿಧರಂಗೆ ವೃಷಭನಾಗಿದ್ದಂದು
ಗುಹೇಶ್ವರನ ಶರಣ ಸಂಗನಬಸವಣ್ಣನಂದೆ ಸಾಹಿತ್ಯನು./723
ಕೆಳಗೇಳು ಲೋಕಂಗಳಿಲ್ಲದ ಮುನ್ನ, ಮೇಲೇಳು ಲೋಕಂಗಳಿಲ್ಲದ ಮುನ್ನ
ಸಹಸ್ರ (ಸಮಸ್ತ ?) ಬ್ರಹ್ಮಾಂಡಗಳಿಲ್ಲದ ಮುನ್ನ, ಅಲ್ಲಿಂದತ್ತತ್ತ;
ಬಸವಣ್ಣಾ ನೀನು ಲಿಂಗಭಕ್ತ, ಜಂಗಮಪ್ರಾಣಿ !
ಶಶಿಧರನ ಶರಣಂಗೆ ವೃಷಧರ ಸ್ವಾಯತವಾಗಿ,
ನಮ್ಮ ಗುಹೇಶ್ವರಲಿಂಗಕ್ಕೆ ಸಂಗನಬಸವಣ್ಣನೆ ಭಕ್ತನೆಂದರಿದು
ನಾನು ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. /724
ಕೈಯಲ್ಲಿ ಕಟ್ಟುವರು ಕೊರಳಲ್ಲಿ ಕಟ್ಟುವರು,
ಮೈಯಲ್ಲಿ ಕಟ್ಟುವರು ಮಂಡೆಯಲ್ಲಿ ಕಟ್ಟುವರು,
ಮನದಲ್ಲಿ ಲಿಂಗವ ಕಟ್ಟರಾಗಿ !
ಆದ್ಯರು ಹೋದರೆಂದು ವಾಯಕ್ಕೆ ಸಾವರು.
ಸಾವುದು ವಿಚಾರವೆ ಗುಹೇಶ್ವರಾ ?/725
ಕೈಯಲ್ಲಿ ಕರಸ್ಥಲ ಮನದಲ್ಲಿ ಪರಸ್ಥಲ,
ತನುವೆಲ್ಲ ಹುಸಿಸ್ಥಲ-ಶರಣನೆಂತೆಂಬೆ?
ಮಾತಿನಂತುಟಲ್ಲ ಕ್ರಿಯಾಸಮ (ಕ್ರಿಯಾಗಮ?) ಸ್ಥಲ.
ಊತ್ಪತ್ಯ-ಸ್ಥಿತಿ-ಲಯರಹಿತ ನಿಜಸ್ಥಲ,
ಗುಹೇಶ್ವರನೆಂಬ ಲಿಂಗೈಕ್ಯವೈಕ್ಯ./726
ಕೈಯಲ್ಲಿ ಡಾಣೆ ಮನದಲ್ಲಿ ಕ್ರೋಧ ವಚನದಲ್ಲಿ ಕಿಂಕಲ,
ಲಿಂಗದ ವಾರ್ತೆ ನಿನಗೇಕೆ ಹೇಳಾ ಬಸವಾ ?
ಜಂಗಮವೆ ಲಿಂಗವೆಂಬ ಶಬ್ದಸಂದೇಹಸೂತಕಿ ನೀನು,
ಸಜ್ಜನ ಸದ್ಭಕ್ತಿಯ ಮಾತು ನಿನಗೇಕೆ ಹೇಳಾ ಬಸವಾ ?
ಕಬ್ಬುನದ ರೂಪು ಪರುಷವ ಮುಟ್ಟಿದಡೆ ಹೊನ್ನಾಯಿತ್ತಲ್ಲದೆ
ಪರುಷವಪ್ಪುದೆ ಹೇಳಾ ಬಸವಾ ?
ಗುಹೇಶ್ವರನೆಂಬ ಪರುಷದ ಪುತ್ಥಳಿಯನರಿಯಬಲ್ಲಡೆ
ನಿನ್ನ ನೀನೆ ತಿಳಿದು ನೋಡಾ ಸಂಗನಬಸವಣ್ಣಾ. /727
ಕೈಲಾಸಕ್ಕೆ ಹೋದವರೆಲ್ಲ ಕೈಸೆರೆಯಾದರು.
ಲಿಂಗದಲ್ಲಿ ಲೀಯವಾದವರೆಲ್ಲ ಬಂಧನಕ್ಕೊಳಗಾದರು.
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದವರೆಲ್ಲ
ಎಡೆಯಾಡುತ್ತಿದ್ದರು.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣ
ಜಂಗಮಪ್ರಸಾದಿಯಾದನಾಗಿ ಸ್ವಯಲಿಂಗವಾದ !/728
ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ,
ಅಲ್ಲಿದ್ದಾತ ರುದ್ರನೊಬ್ಬ.
ಆ ಬೆಟ್ಟಕ್ಕೂ ಆ ರುದ್ರಂಗೆಯೂ
ಪ್ರಳಯವುಂಟೆಂಬುದ
ಗುಹೇಶ್ವರಾ ನಿಮ್ಮ ಶರಣ ಬಲ್ಲನು/729
ಕೊಂಕಣ ದ್ವೀಪದಲ್ಲಿ ಒಂದು ಕಪಿ ಹುಟ್ಟಿತ್ತು
ತಪವ ಮಾಡುವ ಸಪ್ತ ಋಷಿಯರ ನುಂಗಿತ್ತು
ನವನಾಥಸಿದ್ಧರ ತೊತ್ತಳದುಳಿಯಿತ್ತು,
ಅರುಹಿರಿಯರ ತಲೆಯ ಮೆಟ್ಟಿ ಅರಿಯಿತ್ತು.
ಕಪಿಜನ ವೈರಿ ಸರ್ಪನ ಹೇಳಿಗೆಯಲ್ಲಿ ನಿದ್ರೆಗೆಯ್ಯಿತ್ತು.
ಯೋಗಿಗಳ ಭೋಗಿಗಳ ಕೊಲ್ಲದ ಕೊಲೆಯ ಕೊಂದಿತ್ತು.
ಕಾಮನ ಅರೆಯ ಮೆಟ್ಟಿ ಕೂಗಿತ್ತು,
ಕೋಳಿಯ ಹಂಜರನನಾಸಿಕ ಬೆಕ್ಕ ನುಂಗಿತ್ತು,
ಕೋಳಿಯ ಅರ್ಕಜದ ಅರಿವನರಿವ ಅರುಹಿರಿಯರ ಮಿಕ್ಕು ;
ಭಾವಸೊಕ್ಕನುಂಡು ಕೊಕ್ಕರನಾಯಿತ್ತು.
ಹಿಂದಿರ್ದ ಕೋಳಿಯ ಕೊಕ್ಕರನ ಕಪಿಯ, ಭಾವವ ಅರಿಯದಿರ್ದ ಕಾರಣ-
ಕೆದರಿದ ಚರಣ ಉಡುಗಿ, ಮರಣವರಿಯದೆ, ಕರಣದೇಹತ್ವವಿಲ್ಲದೆ,
ಲಿಂಗೈಕ್ಯ-ತಾನೆ ಪ್ರಾಣ ಪುರುಷ.
ಇದನರಿದು ನುಂಗಿದಾತನೆ ಪರಮಶಿವಯೋಗಿ-
ಭಂಗವರಿಯದ, ಜನನದ ಹೊಲಬರಿಯದ, ಭಾವದ ಜೀವವರಿಯದ !
-ಇದು ಕಾರಣ ನಿಮ್ಮ ಶರಣನು ಲಿಂಗಸ್ವಯಶಕ್ತಿಶರಣ ತಾನೆ. /730
ಕೊಂಡ ಆಹಾರದ ರಸವ ಕಟ್ಟಿ,
ಯೋಗಿಗಳಾದೆವೆಂಬ
ಭಂಡರು ನೀವು ಕೇಳಿರೊ.
ಜೋಡು ದೇಹದ ಮಲಿನವ ಕಟ್ಟಿ ಮಾಯೆಯ ಗೆದ್ದಿಹೆವೆಂಬರು.
ಬಿಂದುವಿನ ಸಂಚವನಿವರೆತ್ತ ಬಲ್ಲರು ?
ಮನದ ಮಲಿನವೆ ಮಾಯೆ, ಮನದ ಸಂಚವೆ ಬಿಂದು.
ಇಂತಪ್ಪ ಬಿಂದುವ ಕಟ್ಟಿ ಮಾಯೆಯ ಗೆಲಲರಿಯದವರು
ಅವರೆತ್ತಣ ಯೋಗಿಗಳು ಗುಹೇಶ್ವರಾ ?/731
ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯನೇರ ಬಯಸುವರು,
ವೀರರೂ ಅಲ್ಲ, ದಿರರೂ ಅಲ್ಲ, ಇದು ಕಾರಣ-
ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು,
ತೊಳಲುತ್ತ ಇದ್ದಾರೆ.
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು ?/732
ಕೋಣನ ಕೊಂಬಿನ ತುದಿಯಲ್ಲಿ, ಏಳುನೂರೆಪ್ಪತ್ತು ಸೇದೆಯ ಬಾವಿ.
ಬಾವಿಯೊಳಗೊಂದು ಬಗರಿಗೆ, ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯಾ.
ಆ ಸೂಳೆಯ ಕೊರಳಲ್ಲಿ ಏಳುನೂರೆಪ್ಪತ್ತು
ಆನೆ ನೇರಿತ್ತ ಕಂಡೆ ಗುಹೇಶ್ವರಾ./733
ಕೋಣನನೂ ಕುದುರೆಯನೂ; ಹಾವನೂ ಹದ್ದನೂ;
ಮೊಲನನೂ ನಾಯನೂ, ಇಲಿಯನೂ ಬೆಕ್ಕನೂ,
ಹುಲಿಯನೂ ಹುಲ್ಲೆಯನೂ-ಮೇಳೈಸುವಂತೆ
ಮೇಳವಿಲ್ಲದವನ ಒಕ್ಕತನ, ಅಳಿಯ ಬಾಳುವೆ,
ಕಾಡಬೆಕ್ಕಿಂಗೆ ತುಯ್ಯಲನಿಕ್ಕುವಂತೆ !-ಕೇಳು ಗುಹೇಶ್ವರಾ
ನಿರಾಳ ಬೋಳಿಂಗೆ ತೊಂಡಿಲ ಮುಡಿಸುವಂತೆ/734
ಕೋಪ-ತಾಪವ ಬಿಟ್ಟು ಭ್ರಾಂತಿಭ್ರಮೆಯಂ ಬಿಟ್ಟು
ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ
ಇಂತೀ ಕಡುಲೋಭದ ರುಚಿ ಹಿಂಗಿ
ಜಂಗಮವಾದಲ್ಲದೆ, ಭವ ಹಿಂಗದು ಕಾಣಾ ಗುಹೇಶ್ವರ./735
ಕೋಪತಾಪವೆಂಬುದು ಅರಿವಿನೊಳಗೆ,
ಭಕ್ತಿ ಯುಕ್ತಿ ಎಂಬುದು ನಿತ್ಯದೊಳಗೆ.
ಭಾವದ ಬಗೆಗೆ ಬಣ್ಣವಿಟ್ಟುಕೊಂಡಡೆ
ನಿರ್ಭಾವಿಕಂಗೆ ಅದು ಸಹಜವೆ ?
ಬಂದ ಶರಣರ ನಿಲವನರಿದು,
ಸಂದುಸಂಶಯವಳಿದು ನಂಬದಿದ್ದಡೆ,
ಹಿಂದು ಮುಂದಾಗಿ ಹೋಹನು ಕಾಣಾ
ನಮ್ಮ ಗುಹೇಶ್ವರಲಿಂಗವು. /736
ಕ್ರಿಯಾದೀಕ್ಷೆ ಮಂತ್ರದೀಕ್ಷೆ ಹೀನರಿಗೆ
ಜಂಗಮ ಪಾದೋದಕ ಪ್ರಸಾದವ ಕೊಡುವನೊಬ್ಬ ಜಂಗಮದ್ರೋಹಿ ನೋಡ !
ಗುಹೇಶ್ವರಲಿಂಗವೆ ! /737
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಇಕ್ಷುವಿನೊಳಗಣ ಮಧುರ ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ತಿಲದೊಳಗಣ ತೈಲ ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕ್ಷೀರದೊಳಗಣ ಘೃತ ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕಾಷ್ಠದೊಳಗಣ ಅಗ್ನಿ ?
ಇದು ಕಾರಣ,
ನಮ್ಮ ಗುಹೇಶ್ವರಲಿಂಗವ ತನ್ನೊಳರಿದೆನೆಂಬ ಮಹಂತಂಗೆ
ಸತ್ಕ್ರಿಯಾಚರಣೆಯೆ ಸಾಧನ ಕಾಣಿಭೋ. /738
ಕ್ಷೀರಕ್ಕೆ ತವರಾಜವ ಹೊಯ್ದಲ್ಲಿ, ಬೇರೆ ಲೇಸು ಕಷ್ಟವನರಸುವರೆ ?
ಅಂಗಕ್ಕೆ ತಿಮಿರವಾದಲ್ಲಿ ಅಂಗುಲ ಮುಟ್ಟಿ ತಿಮಿರದ ಅಂಗವ ಕೆಡಿಸಿದಡೆ,
ಅಂಗಕ್ಕೆ ಮಿಥ್ಯವುಂಟೆ ?
ಎನ್ನಂಗವು ತಾನಾದ ಕಾರಣ, `ನೀನು’ ಎಂಬ ನಾಮ ಬೇರಿಲ್ಲ
ಗುಹೇಶ್ವರಲಿಂಗವು ನೀನಾದ ಕಾರಣ./739
ಕ್ಷೀರಸಾಗರದೊಳಗಿರ್ದ ಹಂಸೆಗೆ ಹಾಲ ಬಯಸಲುಂಟೆ ?
ಪುಷ್ಪದೊಳಗಿರ್ದ ತುಂಬಿಗೆ ಪರಿಮಳವನರಸಲುಂಟೆ ?
ತಾವು ಲಿಂಗದೊಳಗಿರ್ದು,
ಬೇರೆ ಇತರ ಕಾಮ್ಯಾರ್ಥದೊಳಗಿರ್ಪ
ಭ್ರಾಂತರನೇನೆಂಬೆನಯ್ಯಾ ಗುಹೇಶ್ವರಾ./740
ಕ್ಷೀರಸಾಗರದೊಳಗಿರ್ದು ಆಕಳ ಚಿಂತೆಯೇಕೆ ?
ಮೇರುಮಂದಿರದೊಳಗಿರ್ದು ಜರಗ ತೊಳೆವ ಚಿಂತೆಯೇಕೆ ?
ಶ್ರೀಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆಯೇಕೆ ?
ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆಯೇಕೆ ?
ಕರಸ್ಥಲಕೆ ಲಿಂಗ ಬಂದ ಬಳಿಕ
ಇನ್ನಾವ ಚಿಂತೆ ಹೇಳಾ, ಗುಹೇಶ್ವರಾ./741
ಖಂಡಾಖಂಡ ಸಂಯೋಗವಿಲ್ಲದ ಅಖಂಡಿತನ ನಿಲವು,
ತನ್ನಲ್ಲಿ ಅಲ್ಲದೆ ಮತ್ತೆಲ್ಲಿಯೂ ಇಲ್ಲ.
ಬಯಲ ಹಿರಿಯರು ಬಯಲನೆ ಅರಸುವರು.
ಅಲ್ಲಿ ಉಂಟೆ ಹೇಳಾ ಗುಹೇಶ್ವರಾ?/742
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನಾಸಿಕವಾಯಿತ್ತು.
ತಾನಲ್ಲದೆ ಅನ್ಯ ವಾಸನೆ ಇಲ್ಲವಾಗಿ,
ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತು.
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಜಿಹ್ವೆಯಾಯಿತ್ತು.
ತಾನಲ್ಲದೆ ಅನ್ಯ ರುಚಿ ಇಲ್ಲವಾಗಿ,
ಅಲ್ಲಿಯೆ ಮಹತ್ತಪ್ಪ ಅಪ್ಪು ಅಡಗಿತ್ತು.
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನೇತ್ರವಾಯಿತ್ತು.
ತಾನಲ್ಲದೆ ಅನ್ಯ ರೂಪಿಲ್ಲವಾಗಿ,
ಅಲ್ಲಿಯೆ ಮಹತ್ತಪ್ಪ ಅಗ್ನಿ ಅಡಗಿತ್ತು.
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ತ್ವಕ್ಕಾಯಿತ್ತು.
ತಾನಲ್ಲದೆ ಅನ್ಯ ಸೋಂಕಿಲ್ಲವಾಗಿ,
ಅಲ್ಲಿಯೆ ಮಹತ್ತಪ್ಪ ವಾಯು ಅಡಗಿತ್ತು.
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಶ್ರೋತ್ರವಾಯಿತ್ತು.
ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ,
ಅಲ್ಲಿಯೆ ಮಹತ್ತಪ್ಪ ಆಕಾಶವಡಗಿತ್ತು.
ಇಂತು ಪಂಚಭೂತಂಗಳಡಗಿದಡೆ,
ಪಂಚಬ್ರಹ್ಮಮಯವಾಯಿತ್ತು.
ಅದರೊಳಗೆ ಜಗತ್ತಡಗಿದ ಭೇದವದೆ.
ಪಂಚವರ್ಣಾತೀತವಾಗಿ ಮಹತ್ತನೊಳಕೊಂಡ
ಶರಣನ ಭೇದವನು ಏನೆಂದುಪಮಿಸುವೆನಯ್ಯಾ ಗುಹೇಶ್ವರಾ. /743
ಖೇಚರಪವನದಂತೆ ಜಾತಿಯೋಗಿಯ ನಿಲುವು !
ಮಾತಿನೊಳು ಧಾತು ನುಂಗಿ ಉಗುಳದಿನ್ನೆಂತೊ ?
ಭೂಚಕ್ರವಳಯವನು ಆಚಾರ್ಯ ರಚಿಸಿದ.
ಗ್ರಾಮವೆಲ್ಲವ ಸುಟ್ಟು, ನೇಮ ನಾಮವ ನುಂಗಿ
ಗ್ರಾಮದ ಪ್ರಭುವನೆ ನುಂಗಿ,
`ಗುಹೇಶ್ವರ ಗುಹೇಶ್ವರ’ ಎನುತ ನಿರ್ವಯಲಾಗಿತ್ತು./744
ಖೇಚರರಾಗಲಿ ಭೂಚರರಾಗಲಿ ಲಾಂಛನಧಾರಿಯಾಗಲಿ,
ಮರಣವಾರಿಗೂ ಮನ್ನಣೆಯಿಲ್ಲ!
ಸನಕ ಸನಂದಾದಿಗಳಿಗೂ ಮರಣ ಮನ್ನಣೆಯಿಲ್ಲ.
ಇದು ಕಾರಣ – ಗುಹೇಶ್ವರಾ ನಿಮ್ಮ ಶರಣರು
ಕಾಲನ ಬಾರಿಗೆ ಕಲ್ಪಿತರಾಗರು !/745
ಗಂಗಾದೇವಿ ಮುಂಡೆಯಾದಳು,
ಗಾರೀದೇವಿ ಓಲೆಯ ಕಳೆದಳು.
ಚಂದ್ರಸೂರ್ಯರಿಬ್ಬರೂ ನೀರಿಳಿದರು.
ವಾಯುದೇವ ವಿಮಾನವ ಹೊತ್ತ,
ವಾಸುದೇವ ತಲೆಗೂಳ್ಳಿಯನಿರಿದ.
ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ ! /746
ಗಂಗಾದೇವಿಯ ಹುಳಿಯ ಕಾಸಿ, ಗೌರಿದೇವಿಯ ಕೂಳನಟ್ಟು,
ಭಕ್ತನ ಬಾಡನಟ್ಟು, ದೇವನ ಸಾಸವೆಗಲಸಿ,
ಬ್ರಹ್ಮನಡ್ಡಣಿಗೆ, ವಿಷ್ಣು ಪರಿಯಾಣ, ರುದ್ರನೋಗರ,
ಈಶ್ವರ ಮೇಲೋಗರ, ಸದಾಶಿವ ತುಪ್ಪ;
ಉಣಲಿಕ್ಕಿ ಕೈಕಾಲು ಮುರಿಯಿತ್ತು ಗುಹೇಶ್ವರಾ./747
ಗಂಗೆಯ ತಡಿಯಲೊಂದು ಐವಾಗಿಲಪಟ್ಟಣದ ಕಾಲುವಳ್ಳಿಯಲ್ಲಿ
ಹುಟ್ಟಿ ಬೆಳೆದೆ ನಾನು.
ತರುವಕ್ಕಳ ಕೂಡಿ ನೀರಾಟವ ಹೊಕ್ಕು,
ಉಟ್ಟುವ ಹೋಗಾಡಿಹಳೆಂದು
ಬಾಯ ಬಾಯ ಕುಟ್ಟಿ,
ಬ್ರಹ್ಮ ಪಾಶವೆಂಬ ಕಿರಿಗೆಯನುಗಿದುಕೊಂಡಳು ನಮ್ಮವ್ವೆ.
ಇಂತಪ್ಪ ತಾಯಿತಂದೆಯರ ಕೂಡೆ ಮುನಿದು ಹೋಗಿ,
ಗುಹೇಶ್ವರನಲ್ಲಯ್ಯನ ಮೊರೆಹೊಕ್ಕೆ.
ಇನ್ನು ಮರಳಿ ಬಂದು ಆ ಕಿರಿಗೆಯನುಟ್ಟೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ./748
ಗಂಡಂಗಿಂದ ಹೆಂಡತಿ ಮುನ್ನವೆ ಹುಟ್ಟಿ,
ಗಂಡಂಗಿಂದ ಕಿರಿಯಳಾದಳು
ಆ ಹೆಂಡತಿಯೆ ಒಡಹುಟ್ಟಿದಳಾದಳೆಂಬುದ ಕೇಳಿ,
ಆ ಗಂಡ ಸಂಗವ ಮಾಡಿದಡೆ
ಇಬ್ಬರಿಗೊಂದು ಮಗು ಹುಟ್ಟಿತ್ತಲ್ಲಾ!
ಆ ಹುಟ್ಟಿದ ಮಗುವ ತಾಯಿ ಮುದ್ದಾಡಿಸಿದಡೆ
ತಾಯ ತಕ್ಕೈಸಿತ್ತಿದೇನು ಹೇಳಾ?
ತಾಯಿಯೆದ್ದು ಪತಿಭಕ್ತಿಯ ಮಾಡಿತ್ತ ಕಂಡು
ಗುಹೇಶ್ವರಲಿಂಗಕ್ಕೆ ಭಕ್ತಿ ಪರಿಣಾಮವಾಯಿತ್ತು./749
ಗಗನ ಮಂಡಳದ ಸೂಕ್ಷ್ಮನಾಳದಲ್ಲಿ
`ಸೋಹಂ ಸೋಹಂ’ ಎನುತ್ತಿರ್ದತ್ತದೊಂದು ಬಿಂದು,
ಅಮೃತದ ವಾರಿದಿಯ ದಣಿಯುಂಡ ತೃಪ್ತಿಯಿಂದ.
ಗುಹೇಶ್ವರಾ ನಿಂದ(ನಿಮ್ಮ?)ಲ್ಲಿಯೆ ಎನಗೆ ನಿವಾಸವಾಯಿತ್ತು./750
ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ?
ವಾಯುವಿನ ಸ್ಥಳವನರಿದವರುಂಟೆ ?
ಅಂಬುದಿಯ ಗುಣ್ಪವನಳೆದವರುಂಟೆ ?
ಲಿಂಗದ ಪ್ರಮಾಣ ಹೇಳಬಹುದೆ ?
ಚಂದ್ರಮಂಡಲ ತಾರಾಮಂಡಲ ಸೂರ್ಯಮಂಡಲ ಇತ್ತಿತ್ತಲಯ್ಯಾ !
ಪಂಚಮುಖವಾಗಿ, ನೊಸಲಕಣ್ಣು ಚತುಭರ್ುಜ ಅಣುಮಾತ್ರವೆ ?
ಒಬ್ಬ ಶರಣನಾಗಿ ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ
ಅಲ್ಲಿಂದತ್ತ ಶರಣು ಶರಣು. /751
ಗಗನದ ಮೇಘಂಗಳು ಸುರಿದಲ್ಲಿ ಒಂದು ಹಿರಿಯ ಕೆರೆ ತುಂಬಿತ್ತು.
ಆ ಕೆರೆಗೆ ಏರಿ ಮೂರು;
ಅಲ್ಲಿ ಒಳಗೆ ಹತ್ತು ಬಾವಿ ಹೊರಗೆ ಐದು ಬಾವಿ !
ಆ ಏರಿಯೊಳಗೆ ಒಂಬತ್ತು ತೂಬನುಚ್ಚಿದಡೆ
ಆಕಾಶವೆಲ್ಲ ಜಲಮಯವಾಗಿತ್ತು !
ತುಂಬಿದ ಜಲವನುಂಡುಂಡು ಬಂದು
ಅಂಜದೆ ನುಡಿವ ಭಂಡಯೋಗಿಗಳನೇನೆಂಬೆ ಗುಹೇಶ್ವರಾ/752
ಗಗನದ ಮೇಘಂಗಳೆಲ್ಲ ಸುರಿದು[ವು] ಭೂಮಿಯ ಮೇಲೆ.
ಭೂಮಿ ದಣಿಯುಂಡು ಸಸಿಗಳೆಲ್ಲಾ ಬೆಳೆದವು.
ಬಹುವಿಕಾರದಿಂದ ಬೆಳೆದ ಸಸಿ[ಯ], ವಿಕಾರದಿಂದ ಗ್ರಹಿಸುವ
ಕಾಮವಿಕಾರಿಗಳು, ಲಿಂಗವನೆತ್ತ ಬಲ್ಲರು ಗುಹೇಶ್ವರಾ. /753
ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ
ಸಯ ಸಂಭ್ರಮದಲ್ಲಿ ಮನೆಯ ಮಾಡಿತ್ತು
ಬ್ರಹ್ಮನಾ ಗಿಳಿಗೆ ಹಂಜರವಾದ, ವಿಷ್ಣು ಆ ಗಿಳಿಗೆ ಕೊರೆವ ಕೂಳಾದ
ರುದ್ರನಾ ಗಿಳಿಗೆ ತಾ ಕೋಳಾದ (ಕೋಳುವೋದ ?)
ಇಂತೀ ಮೂವರ ಮುಂದಣ ಕಂದನ ನುಂಗಿ
ದೃಷ್ಟನಾಮ ನಷ್ಟವಾಯಿತ್ತು-ಇದೆಂತೊ ಗುಹೇಶ್ವರಾ ?/754
ಗಗನದ ಮೇಲೊಂದು ಸರೋವರ;
ಆ ಜಲದಲ್ಲಿ ಮುಖವ ತೊಳೆದು ಹೂವ ಕೊಯ್ವವರೆಲ್ಲರೂ;
ದೇವರಿಗೆ ಮುಖಮಜ್ಜನವನೆರೆದು, ಪೂಜಿಸಿ ಹೊಡವಂಟಡೆ
ಒಮ್ಮೆ ನಾಯಕನರಕ ತಪ್ಪದಲ್ಲಾ!
ದೇವಲೋಕದ ಪ್ರಮಥರ ಲಜ್ಜೆಯನೇನ ಹೇಳುವೆ ಗುಹೇಶ್ವರಾ/755
ಗಗನಪವನದ ಮೇಲೆ ಉದಯಮುಖದನುಭಾವ,
ಸದಮದದ ಗಜವ ನಿಲಿಸುವ ಮಾವತಿಗ ಬಂದ.
ಅಷ್ಟದಳಕಮಲದೊಳು ಸೃಷ್ಟಿಯಂಕುರ ಭಜನೆ;
ಮೆಟ್ಟಿ ನಿಂದಾತ ಪರಮಯೋಗಿಯಾಗದೆ ಮಾಣ !
ಬಯಲ ಬಣ್ಣವ ತುಂಬಿ, ನೆಳಲ ಶೃಂಗಾರವ ಮಾಡಿದ
ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ಶರಣೆನುತಿರ್ದೆನು./756
ಗಗನವೆ ಗುಂಡಿಗೆ ಆಕಾಶವೆ ಅಗ್ಘವಣಿ,
ಚಂದ್ರ, ಸೂರ್ಯರಿಬ್ಬರು ಪುಷ್ಪ, ಬ್ರಹ್ಮ ಧೂಪ, ವಿಷ್ಣು ದೀಪ,
ರುದ್ರನೋಗರ !-ಸಯಧಾನ ನೋಡಾ !
ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ !/757
ಗತಿಗೆಟ್ಟೆ ಧೃತಿಗೆಟ್ಟೆ ಮತಿಗೆಟ್ಟೆ ನಾನಯ್ಯಾ.
ನಡೆವಡೆ ಶಕ್ತಿಯಿಲ್ಲ ನುಡಿವಡೆ ಜಿಹ್ವೆಯಿಲ್ಲ.
ಇದಿರಲೊಬ್ಬರ ಉಪಚಾರ ಸೇರದು ನೋಡಾ ಎಮಗೆ.
ಬಂದ ಬರವನರಿದು ನಿಂದ ನಿಲವನರಿದು ಕೂಡಬಲ್ಲ ಶರಣಂಗೆ,
ಬೇರೊಂದು ಏಕಾಂತವೆಂಬ ಸಂದೇಹ ಉಂಟೆ ?
ತೆರಹಿಲ್ಲದ ಘನವನೊಳಕೊಂಡ ಬಳಿಕ
ಬರಲೆಡೆಯುಂಟೆ ನಮ್ಮ ಗುಹೇಶ್ವರಲಿಂಗಕ್ಕೆ ?/758
ಗತಿವಿರಹಿತನೇನೆಂಬೆ, ಎಂತೆಂಬೆ ?
ಅಘಟಿತಘಟಿತ ಅಖಂಡಿತಮಹಿಮನನೇನೆಂಬೆನೇನೆಂಬೆ ?
ಆದಿಯಿಂದತ್ತತ್ತ ಗುಹೇಶ್ವರ !
ಅಲ್ಲಯ್ಯನ ಸುಳುಹು ಜಗಕ್ಕೆ ಪಾವನ./759
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು,
ತುಂಬಿ ನೋಡಾ !
ಆತುಮ ತುಂಬಿ ತುಂಬಿ ಪರಮಾತುಮ ತುಂಬಿ ತುಂಬಿ ನೋಡಾ!
ಗುಹೇಶ್ವರನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು
ತುಂಬಿ ನೋಡಾ !/760
ಗಿಡುವಿಲ್ಲದ ಪುಷ್ಪಕ್ಕೆ ಕುಸುಮವಿಲ್ಲದ ಪರಿಮಳವಿದ್ದಿತ್ತಯ್ಯಾ !
`ಕ್ಷಂ ಕ್ಷಂ’ ಎನುತ್ತಿದ್ದಿತಯ್ಯಾ.
`ಹಂ ಹಂ’ ಎನುತ್ತಿದ್ದಿತಯ್ಯಾ.
ಬಯಲುವಿಡಿದು ಹೋದಡೆ,
ಪಿಂಡಕ್ಕೆ ಹೆಣನ ಸುಡುವರಿಲ್ಲ ಗುಹೇಶ್ವರಾ ! /761
ಗಿರಿಗಳ ಗುಹೆಗಳ ಕಂದರದಲ್ಲಿ, ನೆಲಹೊಲನ ಮುಟ್ಟದೆ ಇಪ್ಪೆ ದೇವಾ !
ಮನಕ್ಕೆ ಅಗಮ್ಯ ಅಗೋಚರನಾಗಿ, ಅಲ್ಲಲ್ಲಿ ಎಲ್ಲೆಲ್ಲಿಯೂ ನೀನೆ ಇಪ್ಪೆಯಯ್ಯಾ !
ಗುಹೇಶ್ವರಾ ನಿಮ್ಮನು ಅಗಲಕ್ಕೆ ಹರಿವರಿದು ಕಂಡೆ ನಾನು. /762
ಗುದ ಲಿಂಗ ನಾಬಿಕಮಲದಿಂದ ಮೇಲೆ ಷಡಂಗುಲವನೊತ್ತಿದಡೆ
ಕಣ್ಣಿಲ್ಲದೆ ಕಾಣಬಹುದು ಲಿಂಗಪ್ರಕಾಶವ,
ಕಿವಿಯಿಲ್ಲದೆ ಕೇಳಬಹುದು ಮಹಾನಾದ ಸುನಾದವ
ಕಂಡು ಕೇಳಿದ ಬಳಿಕ ಮನ ನಂಬದಿದ್ದಡೆ
ಮಕ್ಕಳಾಟಿಕೆ ತಪ್ಪದು ಗುಹೇಶ್ವರಾ. /763
ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ,
ಚತುಃಕೋಣೆ ಚೌದಳ ಪದ್ಮ, ಅಲ್ಲಿ ಇಹ ಅಕ್ಷರ ನಾಲ್ಕು-ವ, ಶ, ಷ, ಸ,
ಅದರ ವರ್ಣ ಸುವರ್ಣ, ಅದಕ್ಕೆ ಅದಿದೇವತೆ ದಾಕ್ಷಾಯಣಿ.ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ, ಅಪ್ಪುವೆಂಬ ಮಹಾಭೂತ,
ಧನುರ್ಗತಿ, ಷಡುದಳ ಪದ್ಮ, ಅಲ್ಲಿ ಇಹ ಅಕ್ಷರವಾರು-ಬ, ಭ, ಮ, ಯ, ರ, ಲ,
ಅದರ ವರ್ಣ ಪಚ್ಚೆಯ ವರ್ಣ, ಅದಕ್ಕೆ ಅದಿದೇವತೆ ಬಹ್ಮನು.ನಾಬಿಸ್ಥಾನದಲ್ಲಿ ಮಣಿಪೂರಕವೆಂಬಚಕ್ರ, ತೇಜವೆಂಬ ಮಹಾಭೂತ,
ತ್ರಿಕೋಣೆ, ದಶದಳ ಪದ್ಮ ಅಲ್ಲಿ ಇಹ ಅಕ್ಷರ ಹತ್ತು-
ಡ, ಢ, ಣ, ತ, ಥ, ದ, ಧ, ನ, ಪ, ಫ,
ಅದರ ವರ್ಣ ಕೃಷ್ಣವರ್ಣ, ಅದಕ್ಕೆ ಅದಿದೇವತೆ ವಿಷ್ಣು.ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ,
ಷಟ್ಕೋಣೆ, ದ್ವಾದಶಗಳ ಪದ್ಮ ಅಲ್ಲಿ ಇಹ ಅಕ್ಷರ ಹನ್ನೆರಡು-
ಕ, ಖ, ಗ, ಘ, ಙ, ಚ, ಛ, ಜ, ಝ, ಞ, ಟ,ಠ,
ಅದರ ವರ್ಣ ಕುಂಕುಮವರ್ಣ, ಅದಕ್ಕೆ ಅದಿದೇವತೆ ಮಹೇಶ್ವರನು.

ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ,
ವರ್ತುಲಾಕಾರ, ಷೋಡಶದಳ ಪದ್ಮ ಅಲ್ಲಿ ಇಹ ಅಕ್ಷರ ಹದಿನಾರು-
ಅ, ಆ, ಇ, ಈ, ಉ, ಊ, ಋ, ಋೂ,ಎ,ಏ, ಐ, ಓ, ಔ, ಅಂ, ಅಃ,
ಅದರ ವರ್ಣ ಶ್ವೇತವರ್ಣ, ಅದಕ್ಕೆ ಅದಿದೇವತೆ ಸದಾಶಿವನು.

ಭ್ರೂಮಧ್ಯಸ್ಥಾನದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ,
ತಮಂಧಾಕಾರ, ದ್ವಿದಳಪದ್ಮ ಅಲ್ಲಿ ಇಹ ಅಕ್ಷರವೆರಡು- ಹಂ, ಕ್ಷಂ,
ಅದರ ವರ್ಣ ಮಾಣಿಕ್ಯವರ್ಣ, ಅದಕ್ಕೆ ಅದಿದೇವತೆ ಶ್ರೀಗುರು.

ಉನ್ಮನೀಜ್ಯೋತಿ ಬ್ರಹ್ಮರಂಧ್ರದ ಮೇಲೆ. ಸಹಸ್ರದಳ ಪದ್ಮ,
ಅಲ್ಲಿ ಅಮೃತವಿಹುದು ಅಲ್ಲಿ `ಓಂ’ ಕಾರಸ್ವರೂಪವಾಗಿ
ಗುಹೇಶ್ವರಲಿಂಗವು ಸದಾಸನ್ನಹಿತನು./764

ಗುರು ಶಿಷ್ಯರಿಬ್ಬರ ಮಧ್ಯದಲ್ಲಿ ಒಂದು ಮಗು ಹುಟ್ಟಿತ್ತು ನೋಡಾ !
ಗುರುವಿಂಗೆ ಗುರುವಾದ ಪರಿಯೆಂತೊ ?
ಶಿಷ್ಯಂಗೆ ಶಿಷ್ಯನಾದ ಪರಿಯೆಂತೊ ?
ಆದಿಯ ಲಿಂಗವ ಸಾಧ್ಯವ ಮಾಡಿ ತೋರಿದ
ಗುಹೇಶ್ವರನ ಚನ್ನಬಸವಣ್ಣಂಗೆ
ಶರಣೆಂದು ಬದುಕಿದೆನು ಕಾಣಾ ಸಂಗನಬಸವಣ್ಣಾ. /765
ಗುರು, ಶಿಷ್ಯ ಸಂಬಂಧವನರಸಲೆಂದು ಹೋದಡೆ,
ತಾನೆ ಗುರುವಾದ ತಾನೆ ಶಿಷ್ಯನಾದ, ತಾನೆ ಲಿಂಗವಾದ.
ಗುಹೇಶ್ವರಾ-ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟಡೆ,
ಭಾವ ಬತ್ತಲೆಯಾಯಿತ್ತು !/766
ಗುರುತತ್ವದಲ್ಲಿ ಹುಟ್ಟಿ, ಶಿವತತ್ವದಲ್ಲಿ ಬೆಳೆದು
ಪರತತ್ವದಲ್ಲಿ ಮಗ್ನವಾದ ಶರಣಂಗೆ
ಕಾಯವಿಡಿದಡೇನು ? ಕಾಯವಳಿದು ನಿರ್ವಯಲಾದಡೇನು ?
ಕಾಯಸಮಾದಿ ಕರಣಸಮಾದಿ ಭಾವಸಮಾದಿಯಾದ ಬಳಿಕ,
ಗುಹೇಶ್ವರಲಿಂಗದಲ್ಲಿ ಬಯಲಭ್ರಮೆಯ ಕಳೆದು
ಸುಜ್ಞಾನಸಮಾದಿಯನೆಯ್ದಬಲ್ಲಡೆ
ಅದೇ ನಿಜಸಮಾದಿ ಕೇಳಾ ಸಿದ್ಧರಾಮಯ್ಯಾ./767
ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ
ನೆನೆವ ಮನವು ತಾನು ಗುರುವಾಯಿತು ನೋಡಾ.
ಆಹಾ ! ಮಹಾದೇವ,
ಇನ್ನಾವುದರಿಂದ ? ಆವುದನು ? ಏನೆಂದು ನೆನೆವೆ ?
ಮನವೆ ಗುರುವಾದ ಕಾರಣ,-
ಮನವೆ ಗುರುವಾಗಿ ನೆನಹನಿಂಬುಗೊಂಡನು
ಗುಹೇಶ್ವರಲಿಂಗ ಚೋದ್ಯಚರಿತ್ರನು !/768
ಗುರುವಿಂಗೂ ಶಿಷ್ಯಂಗೂ,-
ಆವುದು ದೂರ ? ಆವುದು ಸಾರೆ ? ಎಂಬುದನು, ಆರುಬಲ್ಲರು ?
ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ, ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ.
ಕರ್ಮವೆಂಬ ಕೌಟಿಲ್ಯ ಎಡೆವೊಕ್ಕ ಕಾರಣ, ಬಿನ್ನವಾಗಿ ಇದ್ದಿತ್ತೆಂದಡೆ,
ಅದು ನಿಶ್ಚಯವಹುದೆ ?
ಆದಿ ಅನಾದಿಯಿಂದತ್ತತ್ತ ಮುನ್ನಲಾದ
ಪರತತ್ವಮಂ ತಿಳಿದು ನೋಡಲು,
ನೀನೆ ಸ್ವಯಂ ಜ್ಯೋತಿಪ್ರಕಾಶನೆಂದರಿಯಲು,
ನಿನಗೆ ನೀನೆ ಗುರುವಲ್ಲದೆ ನಿನ್ನಿಂದದಿಕವಪ್ಪ ಗುರುವುಂಟೆ ?
ಇದು ಕಾರಣ ಗುಹೇಶ್ವರಲಿಂಗವು ತಾನೆ ಎಂಬುದನು
ತನ್ನಿಂದ ತಾನೆ ಅರಿಯಬೇಕು ನೋಡಾ./769
ಗುರುವಿಡಿದ ಅರಿವು ಅರಿವಲ್ಲ,
ಲಿಂಗವಿಡಿದ ಅರಿವು ಅರಿವಲ್ಲ.
ಇಲ್ಲದ ಗುರು ಇಲ್ಲದ ಲಿಂಗ !
ಕಲ್ಪಿತಕ್ಕೆ ಅರಿವಹುದೆ ?
ತನ್ನಿಂದ ತಾನರಿವುದೆ ಅರಿವು ಗುಹೇಶ್ವರಾ. /770
ಗುರುವಿದು ಲಿಂಗವಿದು ಜಂಗಮವಿದು ಎಂಬ ಭೇದವ
ಏಕವ ಮಾಡಿ ನಿನಗೆ ತೋರಿದವರಾರು ಹೇಳಾ ?
ಆದಿ ಅನಾದಿಯನು ಒಂದು ಮಾಡುವ,
ಭಾವ ನಿರ್ಭಾವವನು ಅರುಹಿದವರಾರು ಹೇಳಾ ?
ದೀಕ್ಷೆ ಶಿಕ್ಷೆ ಸ್ವಾನುಭಾವದ ಪರಿಯ ತೋರಿ
ನಿಜಪದದಲ್ಲಿ ನಿಲಿಸಿದವರಾದು ಹೇಳಾ ?
ಗುಹೇಶ್ವರಲಿಂಗದಲ್ಲಿ
ನಿನ್ನ ಆಯತವ ಹೇಳಾ ಮಡಿವಾಳ ಮಾಚಯ್ಯಾ ? /771
ಗುರುವಿನ ಪರಿ ವಿಪರೀತವಾಯಿತ್ತಯ್ಯಾ,
ಭ್ರಮರ-ಕೀಟ ನ್ಯಾಯದಂತಾಯಿತ್ತು.
ಗುರು ತನ್ನ ನೆನೆವನ್ನಬರ ಎನ್ನನಾ ಗುರುವ ಮಾಡಿದನು.
ಇನ್ನು ಶಿಷ್ಯನಾಗಿ ಶ್ರೀಗುರುವ ಪೂಜಿಸುವರಾರು
ಹೇಳಾ ಗುಹೇಶ್ವರಾ ?/772
ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ
ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ.
ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ.
ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ.
ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು
ಬಸವಣ್ಣ ಎನ್ನ ಕಂಗಳ ಮುಂದೆ !
ಗುಹೇಶ್ವರ ಸಾಕ್ಷಿಯಾಗಿ,
ಎನ್ನ ಮೇಲೆ ದ್ರೋಹವಿಲ್ಲ ಕಾಣಾ ಚನ್ನಬಸವಣ್ಣಾ ! /773
ಗುರುವಿನಿಂದಾದ ಕಾಯವ ಬೆರಸಿ, ಗುರುವನರಿಯದಾದೆನಯ್ಯಾ.
ಲಿಂಗದಿಂದಾದ ಜೀವ ಬೆರಸಿ, ಲಿಂಗವನರಿಯದಾದೆನಯ್ಯಾ.
ಜಂಗಮದಿಂದಾದ ಮನವ ಬೆರಸಿ ಜಂಗಮವನರಿಯದಾದೆನಯ್ಯಾ.
ಈ ತ್ರಿವಿಧ ಭಕ್ತಿಯುಕ್ತಿಯ ಅರುಹಿಸಿ ಕೊಟ್ಟ
ಸಂಗನಬಸವಣ್ಣನ ಬೆರಸಿ-ನೀನು ನಾನು
ಬದುಕಿದೆವು ಕಾಣಾ ಗುಹೇಶ್ವರಾ. /774
ಗುರುವೆಂದರಿಯರು, ಹಿರಿಯರೆಂದರಿಯರು;
ದೇವರೆಂದರಿಯರು, ಭಕ್ತರೆಂದರಿಯರು.
ಲಿಂಗವೆಂದರಿಯರು, ಜಂಗಮವೆಂದರಿಯರು;
ಬಂದ ಬರವನರಿಯರು ನಿಂದ ನಿಲವನರಿಯರು.
ಶಿವಶರಣರ ನೋಯಿಸುವ ಪಾತಕರನೇನೆಂಬೆ ?
ಗುಹೇಶ್ವರಾ, ನಿಮ್ಮ ಮನ ನೊಂದ ನೋವು ಬರಿದೆ ಹೋಗದು./775
ಗುರುವೆಂಬಾತ ಶಿಷ್ಯನಂತುವನರಿಯ,
ಶಿಷ್ಯನೆಂಬಾತ ಗುರುವನಂತುವನರಿಯ.
ಗುರುವಿನಲ್ಲಿ ಸಮವಿಲ್ಲ, ಶಿಷ್ಯನಲ್ಲಿ ಸಮವಿಲ್ಲ,
ಜಂಗಮ ಜಂಗಮದಲ್ಲಿ ಸಮವಿಲ್ಲ, ಭಕ್ತ ಭಕ್ತನಲ್ಲಿ ಸಮವಿಲ್ಲ.
ಇದು ಕಾರಣ ಕಲಿಯುಗದಲ್ಲಿ ಉಪದೇಶವ ಮಾಡುವ
ಕಾಳುಕುರಿಕೆಯ ಮಕ್ಕಳನೇನೆಂಬೆ ಗುಹೇಶ್ವರಾ. /776
ಗುರುವೊಂದೆ ಬಸಿರು, ಲಿಂಗ ಒಂದೆ ಬಸಿರು
ಜಂಗಮ ಒಂದೆ ಬಸಿರು ಪ್ರಸಾದ ಒಂದೆ ಬಸಿರು-
ಇದನಾರಯ್ಯಾ ಅಮಳೋಕ್ಯವ ಮಾಡಿ ತೋರಿದವರು ?
ಇದನಾರಯ್ಯಾ ಪ್ರಜ್ವಲಿತವ ಮಾಡಿ ಬೇರೆ ತೋರಿದವರು ?
ಪೂರ್ವಾಚಾರಿ ಭಕ್ತಿಭಾಂಡಾರಿ ಬಸವಣ್ಣಾ
ಎನಗೆ ನೀನು ಗುಹೇಶ್ವರಲಿಂಗವ ತೋರಿದೆಯಾಗಿ
ಲೋಕಾದಿಲೋಕವೆಲ್ಲವು ಎನಗೆ ಕಿಂಚಿತ್./777
ಗುರುಶಿಷ್ಯಸಂಬಂಧಕ್ಕೆ ಲಿಂಗವ ಧರಿಸುವರಯ್ಯಾ.
ನಿಮ್ಮ ಬಂಧನಕ್ಕಿಕ್ಕಿ ಆಳುವರಯ್ಯಾ.
ಆನು ಕಂಡು ಮರುಗಿ `ಅಕಟಕಟಾ’ ಎಂದೆನಲ್ಲಾ !
ಕೂಗಿಲ್ಲ ಬೊಬ್ಬೆಯಿಲ್ಲ ಹೋದ ಹೊಲಬನರಿಯರು
ದೇವಾ ಗುಹೇಶ್ವರಾ ಬಾಳುದಲೆಯ ಹಿಡಿದೆನು./778
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲ-
ಬಸವಣ್ಣನ ಕರಸ್ಥಲದೊಳಗೆ ಅಡಗಿತ್ತಲ್ಲ !
ಇನ್ನಾರಿಗೆ ಭಕ್ತಿಸ್ಥಲ, ಇನ್ನಾರಿಗೆ ಸಾರುವುದೀ ಲಿಂಗಸ್ಥಲ ?
ಗುಹೇಶ್ವರಾ ಸಂಗನಬಸವಣ್ಣನ ಮೊರೆಹೊಕ್ಕು ಬದುಕಿದೆನು./779
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವಡಗಿದ ಕರಸ್ಥಲ
ಇನ್ನಾರಿಗೆ ಸಾರಿತ್ತು ?
ನಿರ್ವಂಚಕತ್ವ ನಿತ್ಯನಿಜಸ್ಥಲವಾದ ಭಕ್ತಿಸ್ಥಲ
ಇನ್ನಾರಿಗೆ ಸಾರಿತ್ತು ಬಸವಣ್ಣಂಗಲ್ಲದೆ ?
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ
ಮೊರೆಯ ಹೊಕ್ಕು ನಾನು ಬದುಕಿದೆನು./780
ಗುರುಸ್ಥಲಭಕ್ತರ ಮೂಲ ಜ್ಞಾನಶಕ್ತಿಗಳಾರು ಗುರುಸ್ವರೂಪವಾದವು.
ಆ ಗುರುಸ್ವರೂಪವನುಳ್ಳ ಶಕ್ತಿಗಳಿಂದ,
ಪರಮಚೈತನ್ಯವೆಂಬ ಮಂಟಪ ಉದಯಿಸಿ
ಸಕಲಲೋಕಕ್ಕೆ ಆದಿಯಾಯಿತ್ತು.
ಆ ಮಂಟಪದ ಮೇಲೆ ನಾನು ಕುಳಿತು ಸಂತೋಷದಿಂದ
ಗುಹೇಶ್ವರಲಿಂಗವ ಕಣ್ಣು ತುಂಬಿ ನೋಡಿದ ನೋಟ
ಸಕಲಭಕ್ತರಿಗೆ ಕೂಟವಾಯಿತ್ತು ಕಾಣಾ ಸಂಗನಬಸವಣ್ಣಾ. /781
ಗುರುಸ್ವಾಯತವಾಯಿತ್ತು ಲಿಂಗಸ್ವಾಯತವಾಯಿತ್ತು,
ಜಂಗಮಸ್ವಾಯತವಾಯಿತ್ತು ಬಸವಣ್ಣನಿಂದಲೆಂದಡೆ-
ತನುವಿಲ್ಲದಿರಬೇಕು ಮನವಿಲ್ಲದಿರಬೇಕು ಧನವಿಲ್ಲದಿರಬೇಕು;
ಅರಿವರಿತು ಮರಹು ನಷ್ಟವಾಗಿರಬೇಕು.
ಗುಹೇಶ್ವರಲಿಂಗದಲ್ಲಿ.
ನಿಲರ್ೆಪಿಯಾದಲ್ಲದೆ ಇಲ್ಲ ಕಾಣಾ ಮಡಿವಾಳ ಮಾಚಯ್ಯಾ. /782
ಗ್ರಾಮಮಧ್ಯದ ಮೇಲಣ ಮಾಮರ,
ಸೋಮಸೂರ್ಯರ ನುಂಗಿತ್ತಲ್ಲಾ!
ಅಮರಗಣಂಗಳ ನೇಮದ ಮಂತ್ರ,
ಬ್ರಹ್ಮಾಂಡಕೋಟಿಯ ಮೀರಿತ್ತಲ್ಲಾ!
ಸುಮನ ಸುಜ್ಞಾನದೊಳಗಾಡುವ ಮಹಾಮಹಿಮಂಗೆ,
ನಿರ್ಮಳವಾಯಿತ್ತು-ಗುಹೇಶ್ವರಾ./783
ಘಟಪಟದ ಬಿತ್ತಿಯಂತೆ ಬಿನ್ನವೆಂಬ ಹಾಂಗೆ ಇಹುದು.
ತಿಳಿದು ನೋಡಿದಡೆ ಬಿನ್ನವುಂಟೆ ?
ಘಟದೊಳಗಣ ಬಯಲು, ಪಟದೊಳಗಣ ನೂಲು;
ಬಿತ್ತಿಯ ಮೃತ್ತಿಕೆಯಂತೆ ಒಂದಲ್ಲದೆ ಎರಡಿಲ್ಲ.
ದೇಹಿಗಳೊಳಗೆ ಗುಹೇಶ್ವರನಲ್ಲದೆ ಮತ್ತಾರೂ ಇಲ್ಲ. /784
ಘಟಸರ್ಪನಂತೆ ಅತಿಶಯವು !
ನಾಬಿಸರವರಸ್ಥಾನಕವೆ ದಳವೆಂಟು !
ನವದಳಕಮಲ ಊಧ್ರ್ವಮಂಡಲದ ಅಮೃತಸೇವನೆಯಾಗಿ,
ಶಿವಯೋಗಿಯಾದೆವೆಂಬರು.
ಗುಹೇಶ್ವರಲಿಂಗವು ಪವನವಿಯೋಗ !/785
ಘನಚೈತನ್ಯಜಂಗಮದ ಕಾರಣಾಂಗವಾದಾತ ಗುರು,
ನಿಜಚೈತನ್ಯವನುಳ್ಳ ಜಂಗಮದ ಸೂಕ್ಷ್ಮಾಂಗವಾದಾತ ಗುರು,
ಸುಚೈತನ್ಯಜಂಗಮದ ಚರವಿಗ್ರಹವಾದಾತ ಗುರು,
ಭಕ್ತಾಚಾರವನುಳ್ಳ ಸ್ಥೂಲಾಂಗವಾದಾತ ಗುರು,
ಇಂತೀ ಘನಚೈತನ್ಯ ಜಂಗಮದ ಸ್ವರೂಪನಾದಾತ ಗುರು.
ಅಂತಪ್ಪ ಜಂಗಮದ ಸಂಬಂಧವಾದ ಶ್ರೀಗುರುವಿಂಗೆ,
ನಮೋ ನಮೋ ಎಂಬೆನು ಕಾಣಾ ಗುಹೇಶ್ವರಯ್ಯಾ. /786
ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ,
ಪ್ರಾಣವ ಬರೆಯಬಹುದೆ ಅಯ್ಯಾ?
ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ,
ಭಕ್ತಿಯ ಮಾಡಬಹುದೆ ಅಯ್ಯಾ?
ಪ್ರಾಣವಹ ಭಕ್ತಿಯ ತನ್ಮಯ ನೀನು.
ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ./787
ಘನವ ಕಂಡು ಮನ ಅವಗ್ರಾಹಕವಾಯಿತ್ತು.
ಕಂಡು ಕಂಡು ಮನ ಮಹಾಘನವಾಯಿತ್ತು,
ತಲ್ಲೀಯವಾಯಿತ್ತು !-ತದುಗತ ಶಬ್ದ ಮುಗ್ಧವಾದುದನೇನೆಂಬೆ
ಗುಹೇಶ್ವರಾ ?/788
ಘನವ ನೆನೆವ ಮನದಲ್ಲಿ ತನುವಿನಾಸೆ ಮುನ್ನಿಲ್ಲ,
ನೆನೆವ ಮನವನೊಳಕೊಂಡ ಘನವನೇನೆಂಬೆನಯ್ಯಾ !
ತನ್ನಲ್ಲಿ ತಾನೆಯಾಗಿತ್ತು !
ನೆನಹಳಿದ ನಿರಾಳವ ಕಂಡು ಬೆರಗಾದೆ !
ಅಂತು ಇಂತು ಎನಲಿಲ್ಲ.
ಚಿಂತೆಯಿಲ್ಲದ ಘನಗುಹೇಶ್ವರಯ್ಯನ ಬೆರಸಲಿಲ್ಲ./789
ಘನವ ಮನ ಕಂಡು ಆದನೊಂದು ಮಾತಿಂಗೆ ತಂದು ನುಡಿದಡೆ
ಅದಕ್ಕದೇ ಕಿರಿದು ನೋಡಾ.
ಅದೇನೂ ಇಲ್ಲದ ನಿಸ್ಸಂಗದ ಸುಖವು ಗುಹೇಶ್ವರ !/790
ಘನವಪ್ಪ ಪರಿಯಾಣದಲ್ಲಿ ಒಂದನುವಿನ ಬೋನವನಳವಡಿಸಿ,
ಪರಿಪರಿಯ ಪದಾರ್ಥಂಗಳು ಬಗೆಬಗೆಯಿಂದ ಬರಲು,
ನೋಡದ ಮುನ್ನವೆ ರೂಪವರ್ಪಿತವಾಯಿತ್ತು.
ಮುಟ್ಟದ ಮುನ್ನವೆ ಸೋಂಕರ್ಪಿತವಾಯಿತ್ತು.
ರುಚಿಸದ ಮುನ್ನವೆ ಸುಖವರ್ಪಿತವಾಯಿತ್ತು.
ಅವಧಾರು ಅವಧಾರು ಲಿಂಗವೆ,
ನಿನ್ನ ಮನಕ್ಕೆ ಬಂದ ಪದಾರ್ಥವ ನಿನ್ನ ಘನಕ್ಕೆ ನೀನರ್ಪಿಸಿದಡೆ
ಎನ್ನ ಮನಕ್ಕೆ ಬಂದ ಪದಾರ್ಥವ ನಾ ನಿನಗರ್ಪಿಸುವೆನು.
ಗುಹೇಶ್ವರಾ ನಿನಗೆ ಭರಿತ ಬೋನವನಳವಡಿಸಿ ನೀಡಬಲ್ಲವನಾಗಿ
ಎನಗೂ ನಿನಗೂ ಸಂಗನಬಸವಣ್ಣನ ಪ್ರಸಾದ-
ಆರೋಗಿಸು ದೇವಾ./791
ಘನವಪ್ಪ ಬೋನವನು ಒಂದು ಅನುವಿನ ಪರಿಯಾಣದಲ್ಲಿ ಹಿಡಿದು,
ಗುರುಲಿಂಗವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದ.
ಈ ತೆರೆದ ಘನವಪ್ಪ ಲಿಂಗವನು,
ಒಂದನುವಿನಲ್ಲಿ ತಂದಿರಿಸಿ,
ಘನವಪ್ಪ ಬೋನವನು ಲಿಂಗವಾರೋಗಣೆಯ ಮಾಡಿ,
ಮಿಕ್ಕುದ ಕೊಳ್ಳಬಲ್ಲಡೆ ಪ್ರಸಾದಿ.-
ಇಂತೀ ತೆರನ ಬೆಸಗೊಳ್ಳಬಲ್ಲಡೆ,
ಎನ್ನ ಬೆಸಗೊಳ್ಳೈ-ಗುಹೇಶ್ವರಾ./792
ಘುಟಿಕಾಸಿದ್ಧರ ಘುಟಿಕೆಯುರುಳಿತ್ತು
ಯಂತ್ರಿಗಳ ಯಂತ್ರ ಎದ್ದು ಹೋಯಿತ್ತು
ಮಂತ್ರಿಗಳ ಮಂತ್ರ ಮರೆತುಹೋಯಿತ್ತು
ಔಷದಿಗರ ಔಷಧವನಾರಡಿಗೊಂಡಿತ್ತು
ಸರ್ವವಿದ್ಯಾಮುಖದ ಜ್ಯೋತಿ ನಂದಿತ್ತು
ಈ ವಿಷಯದ ಲಹರಿಯಲ್ಲಿ ಮೂರುಲೋಕದವರೆಲ್ಲರು
ಮೂಛರ್ಿತರಾದರು ಕಾಣಾ ಗುಹೇಶ್ವರ./793
ಚಂದ್ರಕಾಂತದ ಗಿರಿಗೆ ಉದಕದ ಸಂಚ,
ಸೂರ್ಯಕಾಂತದ ಗಿರಿಗೆ ಅಗ್ನಿಯ ಸಂಚ,
ಪರುಷದ ಗಿರಿಗೆ ರಸದ ಸಂಚ.
ಬೆರಸುವ ಭೇದವಿನ್ನೆಂತೊ?
ಅಪ್ಪುವನು ಅಗ್ನಿಯನು ಪಕ್ವಕ್ಕೆ ತಂದು
ಅಟ್ಟುಂಬ ಭೇದವನು ಗುಹೇಶ್ವರ ಬಲ್ಲ./794
ಚಂದ್ರಮನ ಕಾಂಬಡೆ ಆ ಚಂದ್ರನಿಂದೊದಗಿದ ಬೆಳಗೆ ಮುಖ್ಯ.
ಸೂರ್ಯನ ಕಾಂಬಡೆ ಆ ಸೂರ್ಯನಿಂದೊದಗಿದ ಬೆಳಗೆ ಮುಖ್ಯ.
ಜ್ಯೋತಿಯ ಕಾಂಬಡೆ ಆ ಜ್ಯೋತಿಯಿಂದೊದಗಿದ ಬೆಳಗೆ ಮುಖ್ಯ.
ರತ್ನವ ಕಾಂಬಡೆ ಆ ರತ್ನದಿಂದೊದಗಿದ ಬೆಳಗೆ ಮುಖ್ಯ.
ನಮ್ಮ ಗುಹೇಶ್ವರಲಿಂಗವ ಕಾಂಬಡೆ
ಆ ಮಹಾವಸ್ತುವಿನ ಪರಮ ಪ್ರಕಾಶದಿಂದೊದಗಿದ
ಭಸಿತವೇ ಮುಖ್ಯ ಕಾಣಿರಣ್ಣಾ. /795
ಚಂದ್ರಮನೊಳಗಣ ಎರಳೆಯ ನುಂಗಿದ ರಾಹುವಿನ ನೋಟವು,
ಅಂದಂದಿಗೆ ಬಂದು ಕಾಡಿತ್ತು ನೋಡಾ.
ಒಂದರ ತಲೆ, ಒಂದರ ಬಸುರು-ಅಂದಂದಿಗೆ ಬಂದು ಕಾಡಿತ್ತು ನೋಡಾ.
ನಂದಿ ನಂದಿಯ ನುಂಗಿ ಬಂದುದು ಮಹೀತಳಕ್ಕಾಗಿ,
ಇಂದು, ರವಿಗಡಣವ ನಾನೇನೆಂಬೆ ಗುಹೇಶ್ವರಾ/796
ಚಿತ್ತ ಶುದ್ಧವಿಲ್ಲದವರಲ್ಲಿ ಮನ ಸಂಚಲ ನಿಲ್ಲದು.
ಮನ ಸಂಚಲ ನಿಲ್ಲದವರಲ್ಲಿ ಶಿವಧ್ಯಾನ ಕರಿಗೊಳ್ಳದು.
ಶಿವಧ್ಯಾನ ಕರಿಗೊಳ್ಳದವನ ಮಾತು ಸಟೆ.
ಗುಹೇಶ್ವರಲಿಂಗವನರಿಯದ ಭ್ರಾಂತಿಯೋಗಿಗಳ ಮನ
ಬೇತಾಳನಂತೆ ಕಾಡುವುದು./797
ಚಿತ್ತದ ಸ್ನೇಹವ ಸಜ್ಜನಕ್ಕರ್ಪಿತವ ಮಾಡೆ;
ನಟ್ಟಿದ್ದ ಬೇಟಕ್ಕೆ ತಾಗು-ತಡೆಯುಂಟೆ ಎಲೆ ಮರುಳೆ ?
ಆತುರದಲ್ಲಿ ಕಳವಳಿಸಿ, ವ್ಯಾಕುಳದಲ್ಲಿ ಡಾವರಿಸುತ್ತಿಪ್ಪುದೀ ಮನವು.
ಈ ಮನವು ಚಿಹ್ನೆದೋರದ ಘನಕ್ಕೆ ಬೆಂಬತ್ತಿ ಬಿಡದಿರಬಲ್ಲಡೆ,
ತನ್ಮೂರ್ತಿ ತನ್ನಲ್ಲಿ ಗುಹೇಶ್ವರಲಿಂಗವು !/798
ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ,
ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು.
ಆ ಮೂರ್ತಿಯ ಘನತೆಯ ಏನೆಂದೂ ಉಪಮಿಸಬಾರದು !
ನೋಡಿದಡೆ ಮೂರ್ತಿ ಹಿಡಿದಡೆ ಬಯಲು !
ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ.
ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ
ಲೀಲಾಮೂಲದ ಪ್ರಥಮ ಬಿತ್ತಿ./799
ಚಿನ್ನವನೊರೆಯಬಹುದಲ್ಲದೆ ಬಣ್ಣವನೊರೆಯಬಹುದೆ ?
ಹೂವ ಮುಡಿಯಬಹುದಲ್ಲದೆ ಗಂಧವ ಮುಡಿಯಬಹುದೆ ?
ಕರ್ಮವ ಮಾಡಬಹುದಲ್ಲದೆ ವಸ್ತುವನರಿಯಬಹುದೆ ?
ಗುಹೇಶ್ವರನೆನಬಹುದಲ್ಲದೆ,
ಲಿಂಗವು ತಾನಾಗಬಾರದು ಸಿದ್ಧರಾಮಯ್ಯಾ. /800
ಚೌದಂತ ಮದಕರಿಯೊಳಡಗಿತ್ತು.
ಬೆಳಗಿನ ಬಳಗದ ನವಪಂಜರವೊ !
ಮದಾಳಿಯ ಸುಳುಹಿನ ಸೂಕ್ಷ್ಮಂಗಲ್ಲದೆ.
ಭಾವ ಪರಿಮಳವ ಭೇದಿಸಬಾರದು.
ಅಳಿ ರತುನವ ನುಂಗಿದ ಪರಿಯೆಂತೊ ?
ಸಾಧ್ಯವಾಯಿತ್ತು ಸುಖಸಂಭಾಷಣೆ
ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣಂಗೆ./801
ಜಂಗಮ ಘನವೆಂಬೆನೆ? ಬೇಡಿ ಕಿರಿದಾಯಿತ್ತು.
ಲಿಂಗ ಘನವೆಂಬೆನೆ? ಕಲುಕುಟಿಗನ ಕೈಯಲ್ಲಿ
ಮೂಡಿಸಿಕೊಂಡು ಕಿರಿದಾಯಿತ್ತು.
ಭಕ್ತ ಘನವೆಂಬೆನೆ? ತನು-ಮನ-ಧನದಲ್ಲಿ ವಂಚಕನಾಗಿ ಕಿರಿದಾದ.
ಇಂತೀ ತ್ರಿವಿಧದಲ್ಲಿ ಪರಿಣಾಮವಿಲ್ಲ ಪರಮಾರ್ಥವಿಲ್ಲ.
ಘನವ ಬಲ್ಲವರಾರೊ ಗುಹೇಶ್ವರಾ ? /802
ಜಂಗಮ ಜಂಗಮವೆಂಬ ಭಂಗಿತರ ಮುಖವ ನೋಡಲಾಗದು.
ಅದೇನು ಕಾರಣವೆಂದಡೆ-ನಿರಾಳಜಂಗಮವನರಿಯದೆ ನಾನೆ ಜಂಗಮವೆಂಬರು.
ಗ್ರಂಥ “ಜಕಾರಂ ಜನನಂ ನಾಸ್ತಿ ಗಕಾರಂ ಗಮನವರ್ಜಿತಂ
ಮಕಾರಂ ಮರಣಂ ನಾಸ್ತಿ ಏತದ್ಭವ್ಜೇಂಗಮಂ –
ಎಂದುದಾಗಿ, ಇಂತಪ್ಪ ನಿರ್ದೆಹಿ ಜಂಗಮವ ಕರ-ಮನ-ಭಾವದಲ್ಲಿ ಆರಾದಿಸಿ
ಜನನ ಮರಣಂಗಳ ಗೆಲಿದು ಕರ್ಪುರದ ಜ್ಯೋತಿಯಂತೆ ಇರಬಲ್ಲಡೆ
ಆ ಮಹಾತ್ಮನೆ ತ್ರೈಜಗದೊಡೆಯನೆಂಬೆ,
ಆ ಮಹಾತ್ಮನೆ ವಿಶ್ವಪರಿಪೂರ್ಣನೆಂಬೆನು ಗುಹೇಶ್ವರಾ. /803
ಜಂಗಮಕ್ಕೆ ಲಕ್ಷಣವಾವುದೆಂದಡೆ :
ಲಿಂಗರೂಪಾಗಿ ಪಾದಾರ್ಚನೆಯ ಮಾಡಿಸಿಕೊಳ್ಳಬೇಕು.
ಭಕ್ತಂಗೆ ಲಕ್ಷಣವಾವುದೆಂದಡೆ:
ಭೃತ್ಯರೂಪಾಗಿ ಪಾದಾರ್ಚನೆಯ ಮಾಡಬೇಕು.
ಜಂಗಮವು ಲಿಂಗರೂಪವಹ ವಿವರವೆಂತೆಂದಡೆ:
ಮಾತಿನಲ್ಲಿ ನಾನು ಲಿಂಗರೂಪೆಂದಡೆ ಹರಿಯದು
ತನು-ಮನ-ಧನತ್ರಯಂಗಳ ಹಿಡಿದೂ ಹಿಡಿಯದೆ
ಮಾಡಿಸಿಕೊಂಬುದೀಗ ಜಂಗಮಕ್ಕೆ ಲಕ್ಷಣ.
ಆ ನಿಲವಿಂಗೆ ಭವಂನಾಸ್ತಿ.
ಭಕ್ತನು ಭೃತ್ಯರೂಪವಹ ವಿವರವೆಂತೆಂದಡೆ:
ಮಾತಿನಲ್ಲಿ ನಾನು ಭ್ಯತ್ಯರೂಪೆಂದಡೆ ಹರಿಯದು.
ತನು-ಮನ-ಧನತ್ರಯಂಗಳ ಜೀವನ ಗುಣಕ್ಕಿಕ್ಕದೆ
ಗುರುಲಿಂಗಜಂಗಮಕ್ಕೆ ಸಂದಳಿದು ದಾಸೋಹವ ಮಾಡುವುದೀಗ ಭಕ್ತಂಗೆ ಲಕ್ಷಣ.
ಆ ನಿಲವಿಂಗೆ ಭವಂನಾಸ್ತಿ.
ಇಂತೀ ಉಭಯಕುಳಸ್ಥಳದ ಸಂದಳಿದು
ಒಂದಾಗಿ ನಿಂದ ನಿಲವು ಗುಹೇಶ್ವರಲಿಂಗದಲ್ಲಿ ಐಕ್ಯವು !/804
ಜಂಗಮದಿಂಗಿತಾಕಾರವ ನೋಡಿ ಲಿಂಗವೆಂದರಿದ ಭಕ್ತರು
ಮನ ಮನ ಬೆರಸಿದಡೆ,
ಕೂರ್ಮದ ಶಿಶುವಿನ ಸ್ನೇಹದಂತೆ ಮುನ್ನವೆ ತೆರಹಿಲ್ಲದಿರಬೇಕು ನೋಡಾ.
ಬಂದ ಬರವನರಿಯದೆ ನಿಂದ ನಿಲವ ನೋಡದೆ
ಕೆಮ್ಮನೆ ಅಹಂಕಾರವ ಹೊತ್ತಿಪ್ಪವರ
ನಮ್ಮ ಗುಹೇಶ್ವರಲಿಂಗನು ಒಲ್ಲ ಕಾಣಾ. /805
ಜಂಗಮವೆ ಲಿಂಗವೆಂದು ನಂಬಿದ ಬಳಿಕ
ಸಂದೇಹವಿಲ್ಲದೆ ಇರಬೇಕು ನೋಡಾ.
ಸಂದುಸಂಶಯವಳಿದು ಸಯವಾದ ಭಕ್ತಿ,
ಹಿಮ್ಮೆಟ್ಟಿದಡೆ ಹೋಯಿತ್ತಲ್ಲಾ.
ಒಪ್ಪಚ್ಚಿ ಬಳಿಕ ಕಿಂಕಿಲನಾಗಿ, ಮತ್ತೊಪ್ಪಚ್ಚಿ ಬಳಿಕ ಅಹಂಕಾರಿಯಾದಡೆ
ಹೋಗ ನೂಕುವ ಕಾಣಾ ನಮ್ಮ ಗುಹೇಶ್ವರಲಿಂಗವು./806
ಜಂಗಮವೆ ಲಿಂಗವೆಂದು ನಂಬಿದ ಭಕ್ತನ ಕಣ್ಣ ಮುಂದೆ
[ಜಂಗಮ] ನಿಂದು ಹೋದಡೆ,
ಹಿಂದೆ ಮಾಡಿದ ಭಕ್ತಿಯೆಲ್ಲವೂ ನೀರಲ್ಲಿ ನೆನೆಯಿತ್ತು
ಮಂದಮತಿಯಾಗಿ ಕಂಡೂ ಕಡೆಗಣಿಸಿ
ಹೋಹವನು ಅಂಗವಿಕಾರಿ ನೋಡಾ.
ಮುಂದುವರಿದು ಅವನ ಮನೆಯ ಹೊಗುವ
ಜಂಗಮಕ್ಕೆ ಭವ ಹಿಂಗದು.
ನಮ್ಮ ಗುಹೇಶ್ವರಲಿಂಗವು
ಅರಿದು ಬರುದೊರೆವೋದವರ ಒಲ್ಲನು ಹೋಗಾ ಮರುಳೆ./807
ಜಂಗಮವೆ ಹೊರಗಿರಲು ಲಿಂಗಾರ್ಚನೆ ಏವುದಯ್ಯಾ ?
ಪ್ರಾಣನ ಹೊರಗಿರಿಸಿ ಎಡೆಯಾಡುವ ದೇಹವುಂಟೆ ?
ಶರಣರು ಬಂದು ಬಾಗಿಲಲ್ಲಿ ನಿಂದಿರಲು
ತನ್ನ ತಾ ಮರೆದಿಪ್ಪವರ ಕಂಡಡೆ
ನಮ್ಮ ಗುಹೇಶ್ವರಲಿಂಗ ಒಡೆಯ ಹಾಯ್ಕದೆ ಮಾಣ್ಬನೆ ?/808
ಜಂಗಮಸ್ಥಲಕ್ಕೆ ಲಕ್ಷಣವಾವುದೆಂದಡೆ ಹೇಳಿಹೆ ಕೇಳಿರಣ್ಣಾ :
ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಬೇಕು.
ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಬೇಕು,
ಐದರ ಮುಸುಕನುಗಿದು, ಐದರ ಕಳೆಯ ಕೆಡಿಸಿ
ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು
ನಾಲ್ಕರೊಳಗೆ ನಿಲ್ಲದೆ, ಮೂರು ಮುಖವು ಒಂದು ಭಾಗವಾಗಿ ಇರಬೇಕು !
ಈ ಭೇದವನರಿಯದೆ ಸುಳಿವರ ಕಂಡು
ಬೆರಗಾದೆ ಕಾಣಾ ಗುಹೇಶ್ವರಾ./809
ಜಂಬೂದ್ವೀಪದ ವ್ಯವಹಾರಿ ಖಂಡ ಭಂಡವ ತುಂಬಿ
ಕುಂಬಿನಿಯುದರದ ಮೇಲೆ ಪಸರವನಿಕ್ಕಿದ.
ಉಷ್ಣ ತೃಷ್ಣೆ ಘನವಾಗಿ, ಕಡಲೇಳು ಸಮುದ್ರವ ಕುಡಿದು
ನೀರಡಿಸಿದಾತ ಅರಲುಗೊಂಡು ಬೆರಗಾದ.
ಶಿಶು ತಾಯ ಹೆಣನ ಹೊತ್ತುಕೊಂಡು ಹೆಸರ ಹೇಳುತ್ತೈದಾನೆ !
ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು./810
ಜಗ[ದ್]ವಂದ್ಯರೆಂದು ನುಡಿದು ನಡೆವರು ನೋಡಾ.
ಭವಬಂಧನದ ಕುಣಿಕೆಯ ಕಳೆಯಲರಿಯರು ನೋಡಾ.
ಭವ ತಮ್ಮ ತುಳಿ ತುಳಿದು ಕೊಂದಿತ್ತು ನೋಡಾ !
ಶಬ್ದವೇದಿಗಳೆಂದು ನುಡಿದು ನಡೆವರು ನೋಡಾ,
ನಿಃಶಬ್ದ ವೇದಿಸದಿರ್ದಡೆ, ಗುಹೇಶ್ವರ ನೋಡಿ ನಗುತ್ತಿಪ್ಪನೋಡಾ !/811
ಜಗತ್ತಿನ ಹೊಲೆಯನೆಲ್ಲವನು ಉದಕ ಕೊಳುವುದು,
ಆ ಉದಕದ ಹೊಲೆಯ ಕಳೆದಲ್ಲದೆ
ಲಿಂಗಕ್ಕೆ ಮಜ್ಜನಕ್ಕೆರೆವ ಲಿಂಗದ್ರೋಹಿಗಳ ಮಾತಕೇಳಲಾಗದು.
ಮೇಘಬಿಂದುವಿನಿಂದಾದ ಉದಕ, ಸೂರ್ಯನ ಮುಖದಿಂದಾಗಿ ದ್ರವ್ಯ,
ಅಗ್ನಿಯ ಮುಖದಿಂದಾದ ಪಾಕ-ಇಂತಿವರ ಪೂರ್ವಾಶ್ರಯವ ಕಳೆದಲ್ಲದೆ
ಭಕ್ತ ಮಾಹೇಶ್ವರರೂ ಶೀಲಪರರೂ ಮೊದಲಾದ
ನಾನಾ ವ್ರತಿಗಳು ಲಿಂಗಕ್ಕೆ ಮಜ್ಜನವ ಮಾಡಲಾಗದು,
ಅರ್ಪಿಸಲಾಗದು, ಅದೆಂತೆಂದಡೆ:
ಉದಕದ ಪೂರ್ವಾಶ್ರಯವನು, ದ್ರವ್ಯದ ಪೂರ್ವಾಶ್ರಯವನು,
ಕಳೆದಲ್ಲದೆ ಲಿಂಗಕ್ಕೆ ಅರ್ಪಿಸಬಾರದು.
ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆವ ಪರಿಯೆಂತೆಂದಡೆ:
ಉದಕದ ಪೂರ್ವಾಶ್ರಯವ ಮಂತ್ರಯುಕ್ತವಾಗಿ
ಜಂಗಮದ ಪಾದೋದಕದಿಂದ ಕಳೆದು
ಪಾಕಪ್ರಯತ್ನವ ಮಾಡುವುದು.
ದ್ರವ್ಯದ ಪೂರ್ವಾಶ್ರಯ ಜಂಗಮದ ಹಸ್ತ ಪರುಷದಿಂದ ಹೋದುದಾಗಿ
ಅಗ್ನಿಯಲಾದ ಪಾಕದ ಪೂರ್ವಾಶ್ರಯವು
ಜಂಗಮದ ಪ್ರಸಾದದಿಂದ ಹೋಯಿತ್ತು.
ಈ ಶಿವನ ವಾಕ್ಯಗಳನರಿದು, ಮತ್ತೆ
ಜಂಗಮದ ಪಾದೋದಕದಿಂದ ಪಾಕಪ್ರಯತ್ನವ ಮಾಡಲಾಗದು,
ಲಿಂಗಕ್ಕೆ ಮಜ್ಜನಕ್ಕೆರೆಯಲಾಗದೆಂಬ ಶೈವ ಬೌದ್ಧ
ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ,
ಬಿಟ್ಟನಾದರೆ,-ಅವ ವ್ರತಭ್ರಷ್ಟ ಅವನ ಮುಖವ ನೋಡಲಾಗದು.
ಸಾಕ್ಷಿ:“ಸರ್ವಾಚಾರಪರಿಭ್ರಷ್ಟಃ ಶಿವಾಚಾರೇನ ಶುಧ್ಯತಿ
ಶಿವಾಚಾರ ಪರಿಭ್ರಷ್ಟಃ ರೌರವಂ ನರಕಂ ವ್ರಜೇತ್”-
ಇಂತೆಂದುದಾಗಿ, ಸಮಸ್ತವಾದ ವ್ರತಂಗಳಲ್ಲಿ ಭ್ರಷ್ಟರಾದವರ
ಶಿವಾಚಾರದಲ್ಲಿ ಶುದ್ಧನ ಮಾಡಬಹುದು,
ಶಿವಾಚಾರದಲ್ಲಿ ಭ್ರಷ್ಟರಾದವರಿಗೆ ರೌರವ ನರಕ ತಪ್ಪದು.
ಅವಗೆ ಪ್ರಾಯಶ್ಚಿತ್ತವಿಲ್ಲಾಗಿ
ಅವನ ಮುಖವ ನೋಡಲಾಗದು, ಮತ್ತಂ
“ವ್ರತಭ್ರಷ್ಟಮುಖಂ ದೃಷ್ಟ್ವಾಶ್ವಾನಸೂಕರವಾಯಸಂ
ಅಶುದ್ಧಸ್ಯ ತಥಾದೃಷ್ಟಂ ದೂರತಃ ಪರಿವರ್ಜಯೇತ್”-ಇಂತೆಂದುದಾಗಿ,
ವ್ರತಶೀಲಗಳಲ್ಲಿ ನಿರುತನಾದ ಶಿವಶರಣನು ಪಥದಲ್ಲಿ ಆಚಾರಭ್ರಷ್ಟನ ಕಂಡಡೆ
ಮುಖವ ನೋಡಿದಡೆ ನಾಯ ಕಂಡಂತೆ ಸೂತಕನ ಕಂಡಂತೆ ಕಾಗೆಯ ಕಂಡಂತೆ
ಹೇಸಿಗೆಯ ಕಂಡಂತೆ ತೊಲಗುವುದು.
ಆ ವ್ರತವ ಬಿಡಿಸಿದವನು, ಅವನ ಮಾತ ಕೇಳಿ ಬಿಟ್ಟವನು
ಇಬ್ಬರಿಗೂ ಗುರುಲಿಂಗಜಂಗಮ ಪಾದೋದಕ ಪ್ರಸಾದಕ್ಕೆ ಹೊರಗಾಗಿ
ಅನಂತಕಾಲ ನರಕವನೈದುವರು. ಆ ಪಾಪಿಗಳ ಮುಖವ ನೋಡಲಾಗದು,
ನುಡಿಸಲಾಗದು ವ್ರತನಿಷ್ಠೆಯುಳ್ಳವರು ಕಾಣಾ ಗುಹೇಶ್ವರಾ./812
ಜಗತ್ಸೃಷ್ಟನಹ ಅಜನ ಕೊಂಬು ಮುರಿಯಿತ್ತು.
ಧರೆಯ ಚಂದ್ರಸೂರ್ಯರಿಬ್ಬರೂ ನೆಲಕ್ಕೆ ಬಿದ್ದರಲ್ಲಾ !
ಉದಯ ನಿಂದಡೆ ಅಸ್ತಮಾನವಹುದು.
ಊರು ಬೆಂದು ಉಲುಹಳಿದುದು. -ಇದೇನು ಸೋಜಿಗವೊ !
ದೇವ ಸತ್ತ ದೇವಿ ಕೆಟ್ಟಳು, ಆನು ಬದುಕಿದೆನು ಗುಹೇಶ್ವರಾ./813
ಜಗತ್ಸ್ವಯಂಭು’ ಎಂಬ ಗುಹೇಶ್ವರನ
ಕರಸ್ಥಲದಲ್ಲಿ ಹಿಡಿದಾಡುತ್ತಿರ್ದಡೆ
ಆದಿಲಿಂಗವೆಂದು ಬಗೆಯದು ಲೋಕವೆಲ್ಲ.
ಗುಹೇಶ್ವರಾ-ನಿಮ್ಮ ಶರಣ ಬಸವಣ್ಣ,
ಅಚ್ಚಲಿಂಗವ ಹಿಡಿದ ಕಾರಣ,
ಬರಿಯ ಲಿಂಗದ ಮಸ್ತಕವಾಯಿತ್ತು ತ್ರಿಜಗದೊಳಗೆ ! /814
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು
ಮನೆಮನೆ ತಪ್ಪದೆ ತಿರುಗುವ ತುಡುಗುಣಿಯಂತೆ
ಕಾಡಲಾಗದು ಭಕ್ತನ, ಬೇಡಲಾಗದು ಭವಿಯ.
ಕಾಡಿ ಬೇಡಿ ನೀವು ಒಲಿಸಿಕೊಂಡಡೆ,
ಬೇಂಟೆಯ ಶ್ವಾನ ಮೊಲಕ್ಕೆ ಬಾಯಿದೆರೆದಂತೆ ಗುಹೇಶ್ವರಾ/815
ಜಗದ ಜನವ ಹಿಡಿದು ಉಪದೇಶವ ಮಾಡಿದ ಗುರುವಿಂಗೆ,
ಆ ಉಪದೇಶ ಕೊಟ್ಟುಕೊಂಡ ಮಾರಿಗೆ ಹೋಹುದಲ್ಲದೆ
ಅಲ್ಲಿ ನಿಜವಳವಡುವುದೆ ?
ತೆರನನರಿಯದ ಸಂಸಾರ ಜೀವಿಗಳು ಮಾಡಿದ ದೋಷ
ತಮ್ಮನುಂಗಿ, ಆ ಗುರುವಿಂಗೆ ಉಪಹತಿಯ ಮಾಡುವುದು ನೋಡಾ.
ಗುಹೇಶ್ವರಾ-ತಾನಿಟ್ಟ ಬೇತಾಳ ತನ್ನನೆ ತಿಂದಡೆ
ಬೇಕು ಬೇಡ ಎನಲುಂಟೆ ?/816
ಜಗದಗಲದ ಗಗನದ ಆನೆ ಕನಸಿನಲ್ಲಿ ಬಂದು ಮೆಟ್ಟಿತ್ತ ಕಂಡೆ
ಅದೇನೆಂಬೆ ಹೇಳಾ ? ಮಹಾಘನವನದೆಂತೆಂಬೆ ಹೇಳಾ ?
ಗುಹೇಶ್ವರನೆಂಬ ಲಿಂಗವನರಿದು ಮರೆದಡೆ,
ಲೋಯಿಸರದ ಮೇಲೆ ಬಂಡಿ ಹರಿದಂತೆ !/817
ಜಗದಗಲದ ಮಂಟಪಕ್ಕೆ, ಮುಗಿಲಗಲದ ಮೇಲುಕಟ್ಟಿನಲ್ಲಿ
ಚಿತ್ರ [ವಿಚಿತ್ರ]ವ ನೋಡುತ್ತ ನೋಡುತ್ತ;
ಧ್ಯಾನವಿಶ್ರಾಮದಲ್ಲಿ ದಿಟದಿಟವೆಂಬುದೊಂದು ದರುಶನವ ನೋಡುತ್ತ ನೋಡುತ್ತ,
ಗಗನಗಂಬಿರದಲ್ಲಿ ಉದಯವಾಯಿತ್ತ ಕಂಡೆ !
ಗುಹೇಶ್ವರನೆಂಬ ಲಿಂಗವು ತಾನೆಯಾಗಿ/818
ಜಗದಗಲದಲ್ಲಿ ಹಬ್ಬಿದ ಬಲೆ, ಯುಗಜುಗಕ್ಕೆ ತೆಗೆಯದು ನೋಡಾ !
[ಅದು] ಬಗೆಯಲ್ಲಿ ಭ್ರಮೆಗೊಳ್ಳದು;-ತನ್ನ ಇರವಿನ ಪರಿ ಇಂತುಟಾಗಿ !
ಜಗದ ಪ್ರಾಣಿಗಳುಲಿದುಲಿದು ಮರಳಿ ಮತ್ತಲ್ಲಿಯೆ ಬೀಳಲು;
ಬಲೆಯ ನೇಣು ಬಗ್ಗುರಿಯ ಕೈಯಲಿರಲು,-
ಬಲೆಯ ನೇಣ ಕಣ್ಣಿ ಕಳಚಿ,
ಲಿಂಗಕ್ಕೆ ಪ್ರಾಣ ಶರಣೆನ್ನುತ್ತವೆ ನಿಂದು,
ಒಡಲುಪಾದಿಯನರಿಯದೆ ಬೆಳಗಿನಲ್ಲಿ ನಿಂದು,
ಬೇಡಿದವರಿಗೆ ಅಣಿಮಾದಿ ಗುಣಂಗಳನಿತ್ತು,
ಮನೋಮಧ್ಯದಲ್ಲಿ ನಿಲಿಸಿ ನೆನೆವುತ್ತಿರ್ದು ಸುಖಿಯಾದ;
ಪ್ರಾಣನಾಥನ ಕಾಯ ಶೂನ್ಯಲಿಂಗಕ್ಕೆ, ಪ್ರಾಣಶೂನ್ಯಶರಣ.
ಗುಹೇಶ್ವರಲಿಂಗವ ಬೆರಸಿ ಬೇರಿಲ್ಲ. /819
ಜಲ ಕೂರ್ಮ ಗಜ ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು,
ಗಗನವಿಲ್ಲದಂದು ಪವನನ ಸುಳುಹು ಇಲ್ಲದಂದು,
ಅಗ್ನಿಗೆ ಕಳೆ ಮೊಳೆದೋರದಂದು, ತರು ಗಿರಿ ತೃಣಕಾಷ್ಠಾದಿಗಳಿಲ್ಲದಂದು,
ಯುಗಜುಗ ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು,
ನಿಜವನರಿದಿಹೆನೆಂಬ ತ್ರಿಜಗಾದಿಪತಿಗಳಿಲ್ಲದಂದು-
ತೋರುವ ಬೀರುವ ಪರಿ ಇಲ್ಲದಂದು,
ಆ ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು ! /820
ಜಲದ ಸತ್ವ ಜಲಚರಾದಿಗಳಿಗಲ್ಲದೆ ಬಲುಹಿಲ್ಲ
ವಾಗದ್ವೈತಿಗಳ ಅದ್ವೈತ, ಸ್ವಯವ ಮುಟ್ಟಬಲ್ಲುದೆ ?
ಗುಹೇಶ್ವರಲಿಂಗಕ್ಕೆ [ಅವರು] ದೂರ ಸಂಗನಬಸವಣ್ಣಾ./821
ಜಲದೊಳಗಿರ್ದ ಕಿಚ್ಚು ಜಲವ ಸುಡದೆ,
ಜಲವು ತಾನಾಗಿಯೆ ಇದ್ದಿತ್ತು ನೋಡಾ,
ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು ತಾನಲ್ಲ,
ಕುಲದೊಳಗಿರ್ದು ಕುಲವ ಬೆರಸದೆ, ನೆಲೆಗಟ್ಟುನಿಂದುದನಾರು ಬಲ್ಲರೊ?
ಹೊರಗೊಳಗೆ ತಾನಾಗಿರ್ದು-ಮತ್ತೆ ತಲೆದೋರದಿಪ್ಪುದು,
ಗುಹೇಶ್ವರಾ ನಿಮ್ಮ ನಿಲವು ನೋಡಾ./822
ಜಲದೊಳಗೆ ಹುಟ್ಟಿ ನೆಲದೊಳಗೆ ಹುದುಗಿರ್ದುದ,
ಕೆಲಬಲದೊಳಗಿರ್ದವರೆಲ್ಲಾ ಬಲ್ಲರೆ ?
ಗಾಳಿಯೊಳಗಿಪ್ಪ ಜ್ಯೋತಿ ಕೆಡದೆ ಇದ್ದುದ ಕಂಡು -ನಾನು ಬೆರಗಾದೆ !
ಬಾಲಕ್ರೀಡೆಯೊಳಗಾಡುತ್ತಿಪ್ಪ ನಾರಿಯ ಮಕ್ಕಳೈವರು,
ಆರೂ ಕಾಣದ ಬಾವಿಯೊಳಗೆ ಬಿದ್ದಿರಲು,
ಬೇರೆ ಮತ್ತೆ ಜ್ಞಾನವೆಲ್ಲಿಯದೊ ?
ಗುಹೇಶ್ವರಾ, ನಿಮ್ಮನರಿಯದ, ಬರಿಯರಿವಿನ ಹಿರಿಯರ ಕಂಡಡೆ,
ನಾನು ನಾಚುವೆನಯ್ಯಾ./823
ಜಲದೊಳಗೆ ಹುಟ್ಟಿದ ಹಲವು ಬಣ್ಣದ ವೃಕ್ಷ,
ಕೊಂಬಿಲ್ಲದೆ ಹೂವಾಯಿತ್ತು, ಇಂಬಿನಲ್ಲಿ ಫಲದೋರಿತ್ತು !
ಜಂಬೂದ್ವೀಪದ ಮುಗ್ಧೆಯ ಅಂಗೈಯ ಅರಳುದಲೆ
ಇಂದ್ರನ ವಾಹನವ ನುಂಗಿ,
ಬ್ರಹ್ಮರಂಧ್ರದೊಳಗೆ ಆಸನ ಪವನವ ದೃಢಸೂಸಿ
ಬೀಸರವೋಗದ ಶಿವಯೋಗ !
ಸಾಕ್ಷೀಭೂತಾತ್ಮದ ಮಾತು ಮಥನವ ನುಂಗಿ
ಜ್ಯೋತಿಯೊಳಗಣ ಕರ್ಪುರದ ಬೆಳಗಿನಂತಿದ್ದಿತ್ತು
ಗುಹೇಶ್ವರಲಿಂಗದಲ್ಲಿ ಯೋಗ ! /824
ಜಲವಿಲ್ಲದ ಕೆರೆ, ಫಲವಿಲ್ಲದ ಬನ,
ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯಾ,
ಅಲ್ಲಿ ಶಿವನಿಲ್ಲ,
ಪ್ರೇತಜಡಾರಣ್ಯದಲ್ಲಿ ಹೋಗಬಹುದೆ ಗುಹೇಶ್ವರಾ ?/825
ಜವನ ಕದ್ದ ಕಳ್ಳನು ಆಗಲಿ ಮಿಕ್ಕು ಹೋದಡೆ,
ಅಗಲಕ್ಕೆ ಹಬ್ಬಿತ್ತು ಅಲ್ಲಲ್ಲಿ ನೋಡಲು.
ಶರಣರ ಸಂಗವನರಸುವರೆಲಾ ್ಲಅಲ್ಲಲ್ಲಿ ನೋಡಿರೆ !
ಸಾಧಕರೆಲ್ಲರೂ ಸಾದಿಸ ಹೋಗಿ,
ಅಭೇದ್ಯವನರಿಯದೆ ಕೆಟ್ಟರು ಗುಹೇಶ್ವರಾ./826
ಜಾತಿಜಂಗಮ ಒಂದು ಕೋಟಾನುಕೋಟಿ,
ನೀತಿಜಂಗಮ ಒಂದು ಕೋಟಾನುಕೋಟಿ,
ಸಿದ್ಧಜಂಗಮ ಒಂದು ಕೋಟಾನುಕೋಟಿ,
ಜ್ಞಾನಜಂಗಮ ತ್ರೈಲೋಕ ದುರ್ಲಭ ಗುಹೇಶ್ವರಾ./827
ಜಾತಿಭೇದಂಗಳನು ಅರಿವುದಯ್ಯಾ.
ಸಾಕ್ಷಾತ್ ಹಿಂದು ಮುಂದ ಹರಿವುದಯ್ಯಾ.
ಪ್ರೀತಿಯಿಂದ ಬೆಳಗು ಮತ್ತಪ್ಪುದಯ್ಯಾ.
ಆದಡೆ,-ಆತ ಗುಹೇಶ್ವರನೆಂದರಿವುದಯ್ಯಾ/828
ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನಿಸಿಕೊಳಬಹುದೆ ?
ಆಠಾವು ಹಿಂಗಿದಡೆ ಭಂಗಿತನು ಕಂಡಾ.
ಅಂತರಂಗದಲೊದಗೂದನರಿಯರು
ಗುಹೇಶ್ವರನೆಂಬುದು ಮೀರಿದ ಘನವು/829
ಜಾಲಗಾರನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ,
ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವಂತೆ,
ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರಗುವಂತೆ,-
ಠಕ್ಕನ ಪೂಜೆಗೆ ಮೆಚ್ಚುವನೆ ನಮ್ಮ ಗುಹೇಶ್ವರನು?/830
ಜಿಹ್ವೆಯ ಮುಖದಿಂದುಂಡು ಗುಹ್ಯದ್ವಾರದಿಂ ಬಿಡುವನೆ ಯೋಗಿ ?
ಅಲ್ಲ, ನಿಲ್ಲು.
ಶುಕ್ಲ ಶೋಣಿತಮಲದೇಹಿಯಲ್ಲ-
ಇಬ್ಬಟ್ಟೆಯಂ ಕಟ್ಟಿದ ಮಹಾಯೋಗಿ !
ಮೇಲಿಪ್ಪ ಕೈಲಾಸವ ಮರ್ತ್ಯಕ್ಕೆ ತಂದು ನಿಲಿಸಿದ,
ಸರಿಯಿಲ್ಲದ ಪ್ರತಿಯಿಲ್ಲದ ಗುಹೇಶ್ವರ
ಸಿದ್ಧರಾಮಯ್ಯದೇವರು ತಾನೆ./831
ಜೀವಕ್ಕೆ ಜೀವವೇ ಆಧಾರ
ಜೀವತಪ್ಪಿಸಿ ಜೀವಿಸಬಾರದು.
“ಪೃಥ್ವೀಬೀಜಂ ತಥಾ ಮಾಂಸಂ ಅಪ್ದ್ರವ್ಯಂ ಸುರಾಮಯಂ
ಆತ್ಮಾ ಜೀವಸಮಾಯುಕ್ತಂ ಜೀವೋ ಜೀವೇನ ಭಕ್ಷಯೇತ್ ಎಂದುದಾಗಿ
ಅಹಿಂಸಾ ಪರಮೋಧರ್ಮವೆಂಬ ಶ್ರಾವಕರನು ಕಾಣೆ.
ಲಿಂಗಾರ್ಪಿತವಾದುದೆಲ್ಲ ಶುದ್ಧ; ಉಳಿದುದೆಲ್ಲ ಜೀವನ್ಮಯ ಕಾಣಾ,
ಗುಹೇಶ್ವರಾ. /832
ಜೀವತಾಮಸದ ಮಾಯದ ಬಲೆಯ ಭ್ರಾಂತಿಂಗೆ ಸೋಲುವ ಶರೀರ !
ಸಂಸಾರ ಸಂಗವ ಭೇದಿಸಿ ನೋಡುವಡೆ ದೂರ,
ಚಿಂತೆಯನೆ ಗೆಲಿದು ಸುಳಿದಡೆ,
ಗುಹೇಶ್ವರನೆಂದರಿದ ಶರಣಸಾರಾಯನು./833
ಜೀವವಿಲ್ಲದ ಹೆಣನ ಹಿಡಿದಾಡುವರಯ್ಯಾ.
ಪ್ರತಿಯಿಲ್ಲದಪ್ರತಿಗೆ ಪ್ರತಿಯ ಮಾಡುವರಯ್ಯಾ.
ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರಯ್ಯಾ-ಗುಹೇಶ್ವರ./834
ಜೂಜಿನ ವೇಧೆಯುಂಟು ಜಾಗರದ ಬಲವಿಲ್ಲ;
ಆಗಲೂ ಗೆಲಲುಂಟೆ ಪ್ರಾಣಪದತನಕ?
ರತುನದ ಸರ ಹರಿದು ಸೂಸಿ ಬಿದ್ದಡೆ
ಮಾಣಿಕವ ಬೆಲೆಯಿಟ್ಟು ಬಿಲಿತವರಿಲ್ಲ,
ಸರ್ಪಿಣಿ ಸರ್ಪನ ನುಂಗಿ [ದೀಪ] ನುಂಗಿತ್ತು
ಇದು, ಯೋಗದ ದೃಷ್ಟಾಂತ ಗುಹೇಶ್ವರಾ. /835
ಜ್ಞಾತೃವೆ ಅರಸುವುದು ಜ್ಞಾನವೆ ಅರಿವುದು.
ಜ್ಞೇಯವೆ ನಿಶ್ಚಯಿಸುವುದು.
ಈ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧಸಾಧನದಿಂದ
ಲಿಂಗವನರಸಿ ಲಿಂಗವನರಿದು ಲಿಂಗವ ಬೆರಸಿ ಲಿಂಗವಾದ ಮತ್ತೆ,
ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧಭ್ರಾಂತಿಸೂತಕ ಹೋಯಿತ್ತು
ನಿಜವಾಯಿತ್ತು ಕಾಣಾ ಗುಹೇಶ್ವರಾ/836
ಜ್ಞಾನಚಕ್ರ:
ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ
ವಾಙ್ಮನಕ್ಕಗೋಚರ ಶಬ್ದಗಂಬಿರ ಉಪಮಾತೀತ, ಉನ್ನತ ಪರಶಿವ,
ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ
ಪರಮಾನಂದದ ಮಹಾಮಹಿಮಂಗೆ,
ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ
ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ,
ಅಜಾಂಡ-ಬ್ರಹ್ಮಾಂಡವೆ ಕರ್ಣಕುಂಡಲ,
ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ,
ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ,
ಅವಿಚಾರವೆ ಸುಳುಹು, ಅಕಲ್ಪಿತವೆ ಬಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,-
ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ;
ಗಗನಗಂಬಿರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು
ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು;
ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ,
ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ,
ನಿತ್ಯನಿರಂಜನವೆ ಧೂಪದೀಪಾರತಿ,
ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ,
ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ-
ವಿವೇಕ ವಿಚಾರದಿಂದ ವೀಳೆಯವನವಧರಿಸೂದು.
ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ.
ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ-
ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ,
ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ.
ನಿರಂತರ ಪಾತಾಳ ಊಧ್ರ್ವದ ಪವನ;-ತ್ರಿಭುವನಗಿರಿಯೆಂಬ ಪರ್ವತವನೇರಿ,
ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ
ಪರಮಾನಂದದ ಮಹಾಮಹಿಮಂಗೆ;
ಇಹಲೋಕವೇನು ? ಪರಲೋಕವೇನು ?-
ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು,
ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ,
ನಮೋ ನಮೋ ಎಂಬೆನು./837
ಜ್ಞಾನದ ಉಬ್ಬು ಕೊಬ್ಬಿನಲ್ಲಿ ನುಡಿವುತ್ತಿಪ್ಪರೆಲ್ಲರ (ಉಲಿವುತ್ತಿಪ್ಪರೆಲ್ಲರ ?);
ನಾಮ ನಾಸ್ತಿಯಾಗದು, ತನುಗುಣ ನಾಸ್ತಿಯಾಗದು,
ಕರಣಾದಿಗುಣಂಗಳು ನಾಸ್ತಿಯಾಗವು, ಕರಸ್ಥಲವು ನಾಸ್ತಿಯಾಗದು.
ಇದೆತ್ತಣ ಉಲುಹೊ ಗುಹೇಶ್ವರಾ ?/838
ಜ್ಞಾನದಿಂದ ನಿಮ್ಮನರಿದಿಹೆನೆಂದಡೆ:
ಅರಿವಿಂಗೆ ಬಂದಾಗಲೆ ಕುರುಹು.
ಕುರುಹಿಂಗೆ ಕೇಡುಂಟು;
ಜ್ಞಾನವೆಂಬುದೇನು ? ಮನೋಭೇದ !
ಇಂತಪ್ಪ ಜ್ಞಾನದ ಕೈಯಲ್ಲಿ,
ಅರುಹಿಸಿಕೊಂಡಡೆ ನೀ ದೇವನಲ್ಲ,
ಅರಿಯದಿದ್ದಡೆ ನಾ ಶರಣನಲ್ಲ.
ನೀ ದೇವ, ನಾ ಶರಣನೆಂತಾದೆ ಹೇಳಾ ಗುಹೇಶ್ವರಾ ?/839
ಜ್ಞಾನದುದಯವೇ ಭಕ್ತ,
ಜ್ಞಾನದ ಶೂನ್ಯವೇ ಐಕ್ಯ.
ಇಂತೀ ಜ್ಞಾನದಾದ್ಯಂತವನರಿವರಿವೆ ಸರ್ವಜ್ಞನಾದ ಈಶ್ವರ ನೋಡಾ.
ಅದೆಂತೆಂದಡೆ:
“ಚಿದೋದಯಶ್ಚ ಸದ್ಭಕ್ತೋ ಚಿತ್ಯೂನ್ಯಂಚೈಕ್ಯಮೇವ ಚ
ಉಭಯೋರೈಕ್ಯ ವಿಜ್ಞೇಯಾತ್ಸರ್ವಜ್ಞಮೀಶ್ವರಃ” (?)
ಎಂದುದಾಗಿ
ಇಂತೀ ಷಟ್ಸ್ಥಲದೊಳಗಾದ್ಯಂತವಡಗಿಹ ಭೇದವ
ನೀ ನಲ್ಲದನ್ಯರೆತ್ತ ಬಲ್ಲರು ಗುಹೇಶ್ವರಾ./840
ಜ್ಞಾನೋದಯವಾಗಿ ಷಟ್ಸ್ಥಲದ ನಿರ್ಣಯವೆಂತುಟೆಂದು ವಿಚಾರಿಸೆ:
ಮೊದಲಲ್ಲಿ ಭಕ್ತಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ಮಾಹೇಶ್ವರಸ್ಥಲಕ್ಕೆ ಬಂದು,
ಮಾಹೇಶ್ವರಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ಪ್ರಸಾದಿಸ್ಥಲಕ್ಕೆ ಬಂದು,
ಪ್ರಸಾದಿಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ಪ್ರಾಣಲಿಂಗಿಸ್ಥಲಕ್ಕೆ ಬಂದು,
ಪ್ರಾಣಲಿಂಗಿಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ಶರಣಸ್ಥಲಕ್ಕೆ ಬಂದು,
ಶರಣಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ಐಕ್ಯಸ್ಥಲಕ್ಕೆ ಬಂದು,
ಐಕ್ಯಸ್ಥಲವೆಂತು ಹೇಳಿತ್ತು-
ಅಂತೆ ನಡೆದು ಪೂರೈಸಿ ನಿರವಯಸ್ಥಲಕ್ಕೆ ಬಂದು
ನಿರಾಳಕ್ಕೆ ನಿರಾಳನಾದೆನಯ್ಯಾ ಗುಹೇಶ್ವರಾ./841
ಜ್ಯೋತಿ ಕಂಡಾ, ಇರಲು ಕತ್ತಲೆ ಕಂಡಾ !
ನಿಧಾನ ಕಂಡಾ, ಇರಲು ಬಡತನ ಕಂಡಾ !
ಪ್ರಸಾದ ಕಂಡಾ, ಕೊಂಡಡೆ ಪ್ರಳಯ ಕಂಡಾ !
ಗುಹೇಶ್ವರ ಕಂಡಾ, ಇದು ಭ್ರಾಂತು ಕಂಡಾ !/842
ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ ಕೈಯಲಿಪ್ಪ ಉಪ್ಪಿಂಗೆ,
ಶ್ರೀಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ-ಈ ಮೂರಕ್ಕೆಯೂ
ಬೇರೆ ಕ್ರಿಯಾವರ್ತನೆಯುಂಟೆ ಗುಹೇಶ್ವರಾ ?/843
ಡೊಂಕನ ಕೊಂಡು ಡೊಂಕನ ಕಾಡುವಡೆ
ನಮ್ಮ ಡೊಂಕನೆ ಸಾಲದೆ ?
ಕೆಮ್ಮುವನಾದಡೆ ನಮ್ಮವನೆ ಸಾಲದೆ ?
ಎಂಬ ಲೋಕದ ಗಾದೆಯ ಮಾತಿನಂತೆ;
ಈ ಡೊಂಕನ ಕೊಂಡು ಸಸಿನವ ಕೊಡಬಲ್ಲಡೆ
ಅವರ ಹಿರಯರೆಂಬೆ ಗುರುವೆಂಬೆ.
ಅವರಿಗೆ ನಮೋ ನಮೋ ಎಂಬೆ.
ಈ ಡೊಂಕನ ಕೊಂಡು ಸಸಿನವ ಕೊಡಲರಿಯದಿದ್ದಡೆ,
ಆ ಗುರುವಿಂಗೆ ಏಳನೆಯ ನರಕ,
ಭವಘೋರದಲ್ಲಿ ಓಲಾಡುತ್ತಿಹ.
ಇದು ಕಾರಣ,
ಡೊಂಕನ ಕೊಂಡು ಸಸಿನವ ಕೊಡಬಲ್ಲ
ಗುರು, ಅಪೂರ್ವ ಕಾಣಾ ಗುಹೇಶ್ವರಾ./844
ಭಕ್ತ ಭಕ್ತನೆಂದೇನೊ ? ಭವಿಗಳು ಮನೆಯಲುಳ್ಳನ್ನಕ್ಕ ಭಕ್ತನೆ ?
ಭಕ್ತ ಭಕ್ತನೆಂದೇನೊ ? ಅನ್ಯದೈವ ಸುರೆ ಮಾಂಸವುಳ್ಳನ್ನಕ್ಕ ಭಕ್ತನೆ ?
ಭಕ್ತ ಭಕ್ತನೆಂದೇನೊ ? ಹರಕೆ ತೀರ್ಥಯಾತ್ರೆಯುಳ್ಳನ್ನಕ್ಕ ಭಕ್ತನೆ ?
ಭಕ್ತ ಭಕ್ತನೆಂದೇನೊ ? ತನು ಮನ ಧನ ವಂಚನೆಯುಳ್ಳನ್ನಕ್ಕ ಭಕ್ತನೆ ?
ಇವರೆಲ್ಲರು ಎದೆಯಲ್ಲಿ ಕಲ್ಲನಿರಿಸಿಕೊಂಡು
ಸಾವಿಂಗೆ ಸಂಬಳಿಗರು ಕಾಣಾ ಗುಹೇಶ್ವರಾ./845
ಭಕ್ತರ ಮನೆಯೊಳಗೆ ಮನೆಕಟ್ಟಿಕೊಂಡಿಪ್ಪ ಜಂಗಮದ ಇಂಗಿತಾಕಾರವೆಂತೆಂದಡೆ
ಆ ಭಕ್ತನ ತನುಮನದೆಡೆಯಲ್ಲಿ ಮೋಹಿತನಾಗದೆ,
ಹೋಹ, ಬಾಹ, ಭಕ್ತ ಜಂಗಮಕ್ಕೆ ಮಾಡುವ ದಾಸೋಹ ನೋಡಿ,
ಅವರಿಗೆ ಮಾಡುವಡೆ ಎನಗೆ ಮಾಡುವ ಭಕ್ತಿಯೆಂದು ಇದ್ದ ಪರಿಯಲ್ಲಿ ಸುಖಿಸಿ,
ಬಂದ ಪರಿಯಲ್ಲಿ ಪರಿಣಾಮಿಸಿ,
ನಿಷ್ಕಾಮ್ಯ, ನಿಸ್ಪೃಹ, ನಿರ್ದೊಷಿಯಾಗಿ,
ಕೋಪ ತಾಪವಿಲ್ಲದೆ ಭಕ್ತಿ ಜ್ಞಾನಯುಕ್ತನಾಗಿ
ಆ ಭಕ್ತನ ನಡೆ ನುಡಿಯಲ್ಲಿ ಜಡ ಹುಟ್ಟಿದರೆ ಅದಲ್ಲವೆಂದು ಕಳೆದು,
ಸತ್ಯದ ಬುದ್ಧಿಗಲಿಸಿ ಸಂತೈಸಿಕೊಂಡು ಇಹುದೆ ಜಂಗಮಲಕ್ಷಣ.
ಅಂಥ ಜಂಗಮನೆ ಪ್ರಾಣವಾಗಿ,
ಅದರಾಜ್ಞೆಯ ಮೀರದೆ
ಮನವಚನಕಾಯದಲ್ಲಿ ಉದಾಸೀನವಿಲ್ಲದೆ,
ಅವರ ಕೂಡಿಕೊಂಡು ದಾಸೋಹವ ಮಾಡುವುದೆ ಭಕ್ತನ ಲಕ್ಷಣವು.
ಈ ಎರಡಕ್ಕೂ ಭವಂ ನಾಸ್ತಿಯಹುದು.
ಇಂತಪ್ಪ ಭಕ್ತ ಜಂಗಮದ ಸಕೀಲಸಂಬಂಧವ
ಬಸವಣ್ಣ ಮೆಚ್ಚುವನು ಕಾಣಾ ಗುಹೇಶ್ವರಾ./846
ಭಕ್ತಿಯನಾರು ಬಲ್ಲರು ? ಬಲ್ಲವರನಾರನೂ ಕಾಣೆ.
ತನ್ನ ಮರೆದು ಇದಿರ ಹರಿದು ಇರಬಲ್ಲಡೆ ಆತ ಭಕ್ತ .
ಆ ಭಕ್ತಂಗೆ ಶಿವನೊಲಿವ.
ನುಡಿಯಲ್ಲಿ ಭಕ್ತಿಯನಾಡಿ ನಡೆಯಲ್ಲಿ ಇಲ್ಲದಿದ್ದಡೆ
ಕಡೆಮುಟ್ಟಿ ಶಿವನೊಲಿವುದು ಹುಸಿ.
ಮರೆದು ಕೋಪದುರಿಯನುಗುಳಿ
ಅರಿದು ಬಂದೆರಗಿದೆನೆಂಬ ನುಡಿಗೆ
ಒಲಿವನೆ ನಮ್ಮ ಗುಹೇಶ್ವರಲಿಂಗವು ?/847
ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ,
ಆ ಸುಳುಹಾಗಿ ಸುಳಿಯಬೇಕು.
ನಿಂದಡೆ ನೆಟ್ಟನೆ ಭಕ್ತನಾಗಿ ನಿಂದು
ಸಹಜ ಮಾಟವ ಮಾಡಬೇಕು.
ಸುಳಿದಡೆ ನೆಟ್ಟನೆ ಪರಮಜಂಗಮವಾಗಿ ಸುಳಿಯಬೇಕು.
ನಿಂದು ಭಕ್ತನಾಗಲರಿಯದ, ಸುಳಿದು ಜಂಗಮವಾಗಲರಿಯದ
ಉಭಯಭ್ರಷ್ಟರನೇನೆಂಬೆನಯ್ಯಾ ಗುಹೇಶ್ವರಾ./848
ತಂದೆಯ ಸದಾಚಾರ ಮಕ್ಕಳೆಂಬರು,
ಗುರುಮಾರ್ಗಾಚಾರ ಶಿಷ್ಯನದೆಂಬರು.
ಮೇಲು ಪಂಕ್ತಿಯ ಕಾಣರು ನೋಡಾ.
ತತ್ವದ ಮೇಲು ಪಂಕ್ತಿ ಅತ್ತಲೆ ಉಳಿಯಿತ್ತು.
ಕತ್ತಲೆಯ ಮರೆಯಲ್ಲಿ ಕಾಣರು ನೋಡಾ.
ತತ್ವದ ಹಾದಿಯನು, ಭಕ್ತಿಯ ಭೇದವನು,
ಇವರೆತ್ತ ಬಲ್ಲರಯ್ಯಾ ಗುಹೇಶ್ವರಾ/849
ತತ್ತಿಯೊಳಗಣ ಹಕ್ಕಿಯ ಪ್ರಾಣವದೆತ್ತಣಿಂದ ತೋರಿತ್ತೊ ?
ಅದು ಮಾತನಾಡುವ ಬೆಡಗ ಜಡಜೀವಿಗಳೆತ್ತ ಬಲ್ಲರು ?
ಎತ್ತಿನ ಮರೆಯ ಬೇಟೆಕಾರನ
ಅಡವಿಯ ಮೃಗವೆತ್ತ ಬಲ್ಲವು ಗುಹೇಶ್ವರಾ ?/850
ತತ್ವವ ನುಡಿವ ಹಿರಿಯರೆಲ್ಲರು.
ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗಪಡುತ್ತಿದ್ದರು ನೋಡಾ,
ನಿತ್ಯಾನಿತ್ಯವ ಹೇಳುವ ಹಿರಿಯರು ತಮ್ಮ ಒಡಲ ಕಕ್ಕುಲತೆಗೆ ಹೋಗಿ,
ಭಕ್ತಿಯ ಹೊಲಬನರಿಯದ, ಜಡಜೀವಿ ಮಾನವರ ಇಚ್ಛೆಯ ನುಡಿದು,
ಹಲುಬುತ್ತಿಪ್ಪರು ನೋಡಾ !
ಕತ್ತೆಗೆ ಕಪರ್ೂರವ ಹೇರಿದಂತೆ,
ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ./851
ತತ್ವವೆಂಬುದ ನೀನೆತ್ತ ಬಲ್ಲೆಯೊ ?
ಸತ್ತು ಮುಂದೆ ನೀನೇನ ಕಾಬೆಯೊ ?
ಇಂದೆ ಇಂದೆಯೊ ಇಂದೆ ಮಾನವಾ
ಮಾತಿನಂತಿಲ್ಲ ಶಿವಾಚಾರ, ದಸರಿದೊಡಕು ಕಾಣಿರಣ್ಣಾ.
ರಚ್ಚೆಯ ಮಾತಲ್ಲ ಬೀದಿಯ ಮಾತಲ್ಲ.
ಏಕೋ ರಾತ್ರಿಯ ಬಿಂದು ನೋಡಾ !
ಗುಹೇಶ್ವರನ ಕೂಡಿದ ಕೂಟ
ಇಂದು ಸುಖ, ಮುಂದೆ ಲೇಸು/852
ತತ್ವಾತತ್ವಂಗಳಿಲ್ಲದಂದು, ಸಾಕ್ಷಿಸಭೆಗಳಿಲ್ಲದಂದು,
ಏನೇನಿಲ್ಲದಂದು, ಬಯಲು ಬಲಿವಂದು ಈ ಬಿಂದುವಾಯಿತ್ತು.
ಆ ಬಿಂದು ಅಕ್ಷರತ್ರಯ ಗದ್ದಿಗೆಯಲ್ಲಿ ಕುಳ್ಳಿರಲು ಲೋಕದುತುಪತಿಯಾಯಿತ್ತು.
ನಾದದ ಬಲದಿಂದ ಮೂರ್ತಿಯಾದನೊಬ್ಬ ಶರಣ.
ಆ ಶರಣನಿಂದಾದುದು ಪ್ರಕೃತಿ,
ಆ ಪ್ರಕೃತಿಯಿಂದಾಯಿತು ಲೋಕ ಲೌಕಿಕ
ಆ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ
ಗುಹೇಶ್ವರ, ನಿಮ್ಮ ಶರಣ ಸಂಗನಬಸವಣ್ಣ. /853
ತನಗುಳ್ಳ ನಿಧಾನ ತನಗಿಲ್ಲದಂತೆ,
ಬಂಧುಗಳೆಲ್ಲರ ನುಂಗಿ ಅಂಬುದಿ ಬತ್ತಿತ್ತು.
ಅದುಭುತ ಸತ್ತಿತ್ತು; ರಣರಂಗವತ್ತಿತ್ತು.
ಇರುಳು ಮಾಣಿಕವ ನುಂಗಿ ಮರಣವಾದ ಬಳಿಕ
ಅಮೃತದ ಪುತ್ಥಳಿಯ ಹಾಲ ಕುಡಿಯ ಕರೆದಡೆ
ಗುಹೇಶ್ವರಲಿಂಗಕ್ಕೆ ಊಟವೆಂಬುದಿಲ್ಲ ನೋಡಾ ಸಂಗನಬಸವಣ್ಣಾ./854
ತನು ಉಂಟೆಂದಡೆ ಪಾಶಬದ್ಧ, ಮನ ಉಂಟೆಂದಡೆ ಭವಕ್ಕೆ ಬೀಜ.
ಅರಿವ ನುಡಿದು ಕೆಟ್ಟೆನೆಂದರೆ ಅದೇ ಅಜ್ಞಾನ.
ಭಾವದಲ್ಲಿ ಸಿಲುಕಿದೆನೆಂಬ ಮಾತು ಬಯಲ ಭ್ರಮೆ ನೋಡಾ.
ಒಮ್ಮೆ ಕಂಡೆ, ಒಮ್ಮೆ ಕಾಣೆ, ಒಮ್ಮೆ ಕೂಡಿದೆ, ಒಮ್ಮೆ ಅಗಲಿದೆ
ಎಂದಡೆ ಕರ್ಮ ಬೆಂಬತ್ತಿ ಬಿಡದು.
ನಿನ್ನೊಳಗೆ ನೀ ತಿಳಿದುನೋಡಲು ಬಿನ್ನವುಂಟೆ ?
ಗುಹೇಶ್ವರಲಿಂಗವನರಿವಡೆ ನೀನೆಂದೇ ತಿಳಿದು ನೋಡಾ ಮರುಳೆ ?/855
ತನು ಒಂದು ದ್ವೀಪ, ಮನ ಒಂದು ದ್ವೀಪ,
ಆಪ್ಯಾಯನ ಒಂದು ದ್ವೀಪ, ವಚನ ಒಂದು ದ್ವೀಪ.-
ಇಂತೀ ನಾಲ್ಕು ದ್ವೀಪದೆಡೆಯ ಬೆಸಗೊಂಬಡೆ
ಗುಹೇಶ್ವರಾ-ನಿಮ್ಮ ಸ್ಥಾನಂಗಳು./856
ತನು ತರತರಂಬೋಗಿ, ಮನವು ನಿಮ್ಮಲ್ಲಿ ಸಿಲುಕಿತ್ತಯ್ಯಾ.
ನೋಟವೇ ಪ್ರಾಣವಾಗಿ ಅಪ್ಯಾಯನ ನಿಮ್ಮಲ್ಲಿ ಆರತುದಯ್ಯಾ.
ಸಿಲುಕಿತ್ತು ಶೂನ್ಯದೊಳಗೆ, ಗುಹೇಶ್ವರಾ ನಿರಾಳವಯ್ಯಾ !/857
ತನು ದಾಸೋಹ, ಅವಯವಂಗಳೆಲ್ಲವು ಆಚಾರ,
ಮನ ಪ್ರಾಣವೆಂಬವೆಲ್ಲವು ಅರಿವಿನ ಮೂರ್ತಿ ನೋಡಾ.
ಒಳಗು ಹೊರಗು, ಹೊರಗು ಒಳಗು ಎಂಬುದನರಿಯದ
ಸತ್ಯ ಸದಾಚಾರಿ ನೀನು.
ನಿನ್ನಳವ ಅರಿಯಲು ಆನು ಏತರವನಯ್ಯಾ.
ಅಂತರಂಗದಲ್ಲಿ ಅರಿವು ಉಂಟಾದಡೇನು ?
ಎನ್ನ ಕಾಯದಲ್ಲಿ ಭಕ್ತಿ ಸ್ವಾಯತವಿಲ್ಲ, ಆಚಾರವೆಂಬುದು ಅತ್ತತ್ತಲಿಲ್ಲ.
ಸರ್ವಾಚಾರಸಂಪನ್ನ [ನೀನು], ನಿನ್ನಳವ ನಾನೆತ್ತ ಬಲ್ಲೆನಯ್ಯಾ ?
ಗುಹೇಶ್ವರ ಸಾಕ್ಷಿಯಾಗಿ,
ನಿಮ್ಮ ಮಹಾಮನೆಯ ಕಾವಲು ಬಂಟ ನಾನೆಂಬುದ
ನಿಮ್ಮ ಪ್ರಮಥರೆಲ್ಲಾ ಬಲ್ಲರು ಸಂಗನಬಸವಣ್ಣಾ./858
ತನು ನಿಮ್ಮ ಪೂಜಿಸುವ ಕೃಪೆಗೆ ಸಂದುದು.
ಮನ ನಿಮ್ಮ ನೆನೆವ ಧ್ಯಾನಕ್ಕೆ ಸಂದುದು.
ಪ್ರಾಣ ನಿಮ್ಮ ನೆರೆವ ರತಿಸುಖಕ್ಕೆ ಸಂದುದು-
ಇಂತು, ತನು ಮನ ಪ್ರಾಣ ನಿಮಗೆ ಸಂದಿಪ್ಪ
ನಿಸ್ಸಂಗಿಯಾದ ನಿಚ್ಚಟ, -ನಿಜಲಿಂಗೈಕ್ಯ ಕಾಣಾ ಗುಹೇಶ್ವರಾ. /859
ತನು ಬತ್ತಲಿದ್ದರೇನೊ ಮನ ಶುಚಿಯಾಗದನ್ನಕ್ಕರ ?
ಮಂಡೆ ಬೋಳಾದಡೇನೊ, ಭಾವ ಬಯಲಾಗದನ್ನಕ್ಕರ ?
ಭಸ್ಮವ ಹೂಸಿದಡೇನೊ,
ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ ?
ಇಂತೀ ಆಶೆಯ ವೇಷದ ಭಾಷೆಗೆ,
ಗುಹೇಶ್ವರಾ ನೀ ಸಾಕ್ಷಿಯಾಗಿ ಛೀ ಎಂಬೆನು./860
ತನು ಶುದ್ಧವಾಯಿತ್ತು ಬಸವಾ ಇಂದೆನ್ನ.
ಮನ ಶುದ್ಧವಾಯಿತ್ತು ಬಸವಾ ಇಂದೆನ್ನ.
ಭಕ್ತಿ ಯುಕ್ತಿ ಮುಕ್ತಿ ಶುದ್ಧವಾಯಿತ್ತು ಬಸವಾ ಇಂದೆನ್ನ.
ಇಂತೀ ಸರ್ವವೂ ಶುದ್ಧವಾಯಿತ್ತು ಬಸವಾ ಇಂದೆನ್ನ.
ನಮ್ಮ ಗುಹೇಶ್ವರಲಿಂಗಕ್ಕೆ
ಆದಿಯಾಧಾರವಾದೆಯೆಲ್ಲಾ ಬಸವಣ್ಣಾ ನೀನಿಂದು. /861
ತನು ಹೊರಗಿರಲು, ಪ್ರಸಾದ ಒಳಗಿರಲು
ಏನಯ್ಯಾ ನಿಮ್ಮ ಮನಕ್ಕೆ ಮನ ನಾಚದು?
ಪ್ರಾಣಕ್ಕೆ ಲಿಂಗದಲ್ಲಿ ಪ್ರಸಾದವ ಕೊಂಡಡೆ,
ವ್ರತಕ್ಕೆ ಭಂಗ ಗುಹೇಶ್ವರಾ./862
ತನುಗುಣನಾಸ್ತಿ ಮನಗುಣನಾಸ್ತಿ ಧನಗುಣನಾಸ್ತಿಯಾದಡೇನು ?
ಭಾವನಾಸ್ತಿಯಾಗಿರಬೇಕು.
ಭಾವನಾಸ್ತಿಯಾದಲ್ಲದೆ ಅರಿವು ನೆಲೆಗೊಳ್ಳದು.
ಅರಿವು ನೆಲೆಗೊಂಡಲ್ಲಿ ಕುರುಹಿಂಗೆ ಹೊರಗು
ಕುರುಹಳಿದು ಕೂಡುವ ಪರಮಸುಖವು,
ಗುಹೇಶ್ವರಲಿಂಗದಲ್ಲಿ ನಿನಗೆ ಸಾಧ್ಯವಾದ ಪರಿಯ ಹೇಳಾ
ಮಡಿವಾಳ ಮಾಚಯ್ಯಾ ?/863
ತನುಗುಣನಾಸ್ತಿಯಾಗಿ ಲಿಂಗಸಂಗಿಯಾದಳು.
ಮನಗುಣನಾಸ್ತಿಯಾಗಿ ಅರಿವುಸಂಗಿಯಾದಳು.
ಭಾವಗುಣನಾಸ್ತಿಯಾಗಿ ಮಹಾಪ್ರಭೆ ತಾನಾದಳು.
`ತಾನು’ `ಇದಿರು’ ಎಂಬ ಎರಡಳಿದು
ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ
ಮಹಾದೇವಿಯಕ್ಕಗಳ ನಿಲವಿಂಗೆ ಶರಣೆನುತಿರ್ದೆನು./864
ತನುವ ಗುರುವಿಂಗರ್ಪಿಸಿ, ಮನವ ಲಿಂಗಕ್ಕರ್ಪಿಸಿ,
ಭಾವವ ಜಂಗಮಕ್ಕರ್ಪಿಸಿ, ನಿಜವ ತೃಪ್ತಿಯಲರ್ಪಿಸಿ,
ಘನವ ಅರಿವಿಂಗೆ ಅರ್ಪಿಸಿ,
ಅರ್ಪಿತವೆ ಅನರ್ಪಿತವಾಗಿ, ಅನರ್ಪಿತವೆ ಅರ್ಪಿತವಾಗಿ
ಅರ್ಪಿತ ಅನರ್ಪಿತಗಳಳಿದು ನಿತ್ಯಪ್ರಸಾದಿಯಾಗಿ
ಪ್ರಸಾದದ ಹಾದಿಯನೆಲ್ಲರಿಗೆ ತೋರಿ
ಮಹಾಪ್ರಸಾದದ ಬೆಳವಿಗೆಯ ಮಾಡಿದನು-
ಗುಹೇಶ್ವರನ ಶರಣ ಚನ್ನಬಸವಣ್ಣನು./865
ತನುವ ಗೆಲಲರಿಯದೆ, ಮನವ ಗೆಲಲರಿಯದೆ
ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು.
ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ
ಧನವ ಜಂಗಮದಲ್ಲಿ ಸವೆಸಿ ಗೆಲಬಲ್ಲಡೆ,
ಸಂಗನಬಸವಣ್ಣನಲ್ಲದೆ ಮತ್ತಾರನು ಕಾಣೆ.
ಗುಹೇಶ್ವರಾ-ನಿಮ್ಮ ಶರಣ ಸಂಗನಬಸವಣ್ಣಂಗೆ,
ನಮೋ ನಮೋ ಎನುತಿರ್ದೆನು./866
ತನುವ ತಾಗದ ಮುನ್ನ, ಮನವ ತಾಗದ ಮುನ್ನ,
ಅಪ್ಯಾಯನ ಬಂದು ಎಡೆಗೊಳ್ಳದ ಮುನ್ನ-ಅರ್ಪಿತವ ಮಾಡಬೇಕು.
ಗುರುವಿನ ಕೈಯಲ್ಲಿ ಎಳತಟವಾಗದ ಮುನ್ನ-ಅರ್ಪಿತವ ಮಾಡಬೇಕು.
ಎಡದ ಕೈಯಲ್ಲಿ ಕಿಚ್ಚು, ಬಲದ ಕೈಯಲ್ಲಿ ಹುಲ್ಲು,
ಉರಿ ಹತ್ತಿತ್ತು ಗುಹೇಶ್ವರಾ ನಿಮ್ಮ ಪ್ರಸಾದಿಯ !/867
ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ
ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ./868
ತನುವರ್ಪಿತವೆಂದಡೆ ಗುರುದ್ರೋಹ.
ಮನವರ್ಪಿತವೆಂದಡೆ ಲಿಂಗದ್ರೋಹ.
ಧನವರ್ಪಿತವೆಂದಡೆ ಜಂಗಮದ್ರೋಹ-
ಇಂತೀ ತನುಮನಧನಗಳೆಂಬ ಅನಿತ್ಯವನು
ನಿತ್ಯಕ್ಕರ್ಪಿಸಿ ಭಕ್ತನಾದೆನೆಂದಡೆ, ಅದು ಅಜ್ಞಾನ ನೋಡಾ.
ಒಡೆಯರಿಗೆ ಉಂಡೆಯ ಮುರಿದಿಕ್ಕಿ
ನಾ ಭಕ್ತನೆಂಬ ಮಾತ ಸಮ್ಯಕ್ ಶರಣರು ಮೆಚ್ಚುವರೆ ?
ನಮ್ಮ ಗುಹೇಶ್ವರಲಿಂಗಕ್ಕೆ,
ನೀನು ಆವುದರಲ್ಲಿ ಏನನರ್ಪಿಸಿ ಭಕ್ತನಾದೆ ಹೇಳಾ ಸಂಗನಬಸವಣ್ಣಾ ? /869
ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ, ಜೀವಕ್ಕೆ ಜೀವವಾಗಿ,
ಇದ್ದುದನಾರು ಬಲ್ಲರೊ?
ಅದು ದೂರವೆಂದು, ಸಮೀಪವೆಂದು,
ಮಹಂತ ಗುಹೇಶ್ವರ[ನು], ಒಳಗೆಂದು ಹೊರಗೆಂದು,
ಬರುಸೂರೆವೋದರು./870
ತನುವಿನ ಕೊರತೆಗೆ ಸುಳಿಸುಳಿದು , ಮನದ ಕೊರತೆಗೆ ನೆನೆನೆನೆದು,
ಭಾವದ ಕೊರತೆಗೆ ತಿಳಿತಿಳಿದು, ಶಬ್ದದ ಕೊರತೆಗೆ ಉಲಿದುಲಿದು,
ಗುಹೇಶ್ವರನೆಂಬ ಲಿಂಗವು ಮನದಲ್ಲಿ ನೆಲೆಗೊಳ್ಳದಾಗಿ !/871
ತನುವಿನ ಗುಣವ ವಿವರಿಸಿಹೆನೆಂದೆಡೆ, ಮನ ಶುದ್ಧವಾಗಬೇಕು.
ಮನದ ಗುಣವ ವಿವರಿಸಿಹೆನೆಂದೆಡೆ ಇಂದ್ರಿಯಂಗಳು, ಶುದ್ಧವಾಗಬೇಕು.
ತನು ಮನ ಇಂದ್ರಿಯಂಗಳು ಶುದ್ಧ ಸುಯಿಧಾನವಾಗಿ
ಲಿಂಗಮುಖಕ್ಕೆ ವೇದ್ಯವಾದಲ್ಲದೆ
ಗುಹೇಶ್ವರನ ಬೆರಸಬಾರದು ಕೇಳಾ ತಾಯೆ./872
ತನುವಿನಲ್ಲಿ ತನು ಸವೆಯದು, ಮನದಲ್ಲಿ ಮನ ಸವೆಯದು,
ಧನದಲ್ಲಿ ಧನ ಸವೆಯದು.
ಭಕ್ತಿಯುಕ್ತಿಯ ಮಾತು ನಿನಗೇಕೆ ಹೇಳಾ ಬಸವಾ ?
ಮಾಟಕೂಟವೆಂಬ ಕೀರ್ತಿವಾರ್ತೆಗೆ ಸಿಲುಕಿ
ಜಂಗಮವೆ ಲಿಂಗವೆಂಬುದ ಮರೆದೆಯೆಲ್ಲಾ ಬಸವಣ್ಣಾ !
ಗುಹೇಶ್ವರನ ಶರಣರಿಗೆ ತ್ರಿಕರಣವನೊಪ್ಪಿಸಿದಲ್ಲದೆ
ಭಕ್ತನಾಗಬಾರದು ಕಾಣಾ ಸಂಗನಬಸವಣ್ಣಾ./873
ತನುವಿನಲ್ಲಿಪ್ಪ ಲೋಭವ ಮನವ ಕದ್ದು ಮಾತನಾಡಿದಡೆ
ಆ ತನುವೆ ಮನೋರೂಪವಾಗಿ ಕಾಣಬರುತ್ತದೆ.
ಆ ಮನದಲ್ಲಿ ಬಯಕೆ ಸಮರತಿಯಾಗದಾಗಿ;
ಕಾಮ(ಯ?)ದ ಕರುಳು ಲೋಭದ ಬಯಕೆಯೊಳಗದೆ.
ಅರಿದೆನೆಂದು ಬರುಮಾತ ನುಡಿದಡೆ
ನಮ್ಮ ಗುಹೇಶ್ವರಲಿಂಗವು ಮೆಚ್ಚ ನೋಡಾ
ಮಡಿವಾಳ ಮಾಚಯ್ಯಾ. /874
ತನುವಿಲ್ಲದೆ ಕಂಡು ಕಂಡು ನಿಂದೆ.
ಬೆರಗಿಲ್ಲದೆ ಕಂಡು ಕಂಡು ಬೆರಗಾದೆ.
ರೂಹಿಲ್ಲದೆ ಕಂಡರಿದೆ ಗುಹೇಶ್ವರನೆಂಬ ಲಿಂಗವ !/875
ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ,
ಬಲಿದು ಷಡ್ವಿಧಭಕ್ತಿಯೆಂಬ ಸೋಪಾನದಿಂದ
ಪರಮಾನಂದವೆಂಬ ಜಲವ ತುಂಬಿ
ಕೆರೆಯ ಕಟ್ಟಬಲ್ಲವರನಾರನೂ ಕಾಣೆ !
ನಾನು ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ./876
ತನುವೆಂಬ ದೇವಸ್ಥಾನದೊಳಗೆ ಮಸ್ತಕಾಗ್ರವೆಂಬ ಸೆಜ್ಜಾಗೃಹದಲ್ಲಿ
ಪ್ರಾಣಲಿಂಗಸ್ವಯಂಬ ಪ್ರತಿಷ್ಠೆಯಾಗಿರಲು,
ಗುರುವೆಂಬ ಆರ್ಚಕನು ಮಂತ್ರವೆಂಬ ಆಗಮಿಕನು ಸಹ
ಲಿಂಗವೆಂಬ ಉಚ್ಚಾಯ ವಿಗ್ರಹವನು ಕರಸ್ಥಲವೆಂಬ ರಥದಲ್ಲಿ
ಮೂರ್ತಿಗೊಳಿಸಿ-
ಆ ಕರಸ್ಥಲವೆಂಬ ರಥಕ್ಕೆ ಜ್ಞಾನಕ್ರಿಯೆ ಎರಡು ಪಾದದ್ವಯ ಎರಡು ಕೂಡಿ
ನಾಲ್ಕು ಗಾಲಿಗಳಂ ಹೂಡಿ, ಪಂಚೇಂದ್ರಿಯಗಳೆಂಬ ಪತಾಕೆಗಳಂ ಧರಿಸಿ
ಏಕೋಭಾವವೆಂಬ ಕಳಸವನಿಟ್ಟು, ದಶವಾಯುಗಳೆಂಬ ಪಾಶವಂ ಬಂದಿಸಿ
ಷಡಂಗಗಳೆಂಬ ಮೊಳೆಗಳಂ ಬಲಿದು, ಸಪ್ತಧಾತುವೆಂಬ
ಝಲ್ಲಿ ಪಟ್ಟೆಯನಲಂಕರಿಸಿ
ಅಷ್ಟಮದ ಸಪ್ತವ್ಯಸನಂಗಳೆಂಬ ಆನೆ ಕುದುರೆಗಳು ಸಹ
ಮಹಾನಾದವೆಂಬ ಭೇರಿ ವಾದ್ಯಂಗಳಿಂ
ಷೋಡಶವಿಕಾರಂಗಳೆಂಬ ನರ್ತಕೀಮೇಳದಾರತಿಯಿಂ
ಅಂತಃಕರಣ ಚತುಷ್ಟಯಗಳೆಂಬ ಚಾಮರಧಾರಕರಿಂ
ಮನವೆಂಬ ಹೊರಜೆಯಿಂ ಕರಣಂಗಳೆಂಬ ಕಾಲಾಳ್ಗಳಿಂ-ಪಿಡಿಸಿ,-
ಸುಬುದ್ಧಿಯೆಂಬ ಭೂಮಿಯಲ್ಲಿ ಆನಂದವೆಂಬರಸು ರಥಮಂ ನಡೆಸಿ
ನೆನಹು ನಿಷ್ಪತ್ತಿಯೆಂಬ ಸ್ಥಾನದಲ್ಲಿ ನಿಲಿಸಿ-
ಇಷ್ಟಲಿಂಗವೆಂಬ ಉಚ್ಚಾಯ ವಿಗ್ರಹವನ್ನು
ಹೃದಯಕಮಲವೆಂಬ ಅಂತರಾಳದಲ್ಲಿ ಮೂರ್ತಿಗೊಳಿಸಿ
ಆನಂದವೆಂಬ ಅರಸು ನಿರಾಳವೆಂಬ ಅಪರಿಮಿತ ಪಟ್ಟಣವ
ಪ್ರವೇಶವಾದನು ಕಾಣಾ ಗುಹೇಶ್ವರಾ. /877
ತನ್ನ ಕಣ್ಣಿನಲ್ಲಿ ಕಾಣದಂತೆ ಇದ್ದಿತ್ತು ದರ್ಪಣದೊಳಗಣ ಬೆಳಗು.
ಬೆಳಗಿನೊಳಗಣ ಬೆಳಗು ಗುಹೇಶ್ವರನಿಪ್ಪೆಡೆಯ ತಿಳಿದು ನೋಡಯ್ಯಾ.
ಸಂಗನಬಸವಣ್ಣಾ./878
ತನ್ನ ತಾನರಿತ ಬಳಿಕ ಅನ್ಯವಿಲ್ಲ.
ಕಾಬ ಮರಹು ನಷ್ಟವಾಯಿತ್ತು.
ಆ ಮರವೆ ನಷ್ಟವಾದ ಬಳಿಕ
ಅರಿವಿನ ಮರವೆಯ ನೆರೆ ಮರೆದ ಬಳಿಕ
ಅಲ್ಲಿ ನಿಶ್ಶಬ್ದವಾಯಿತ್ತು ಗುಹೇಶ್ವರಾ./879
ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ !
ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ !
ಅರಿದು ಮರೆದ ಶಿವಯೋಗಿಯ ಶಬ್ದವೆಲ್ಲವು
ಉಪದೇಶವಲ್ಲದೆ ಬಿನ್ನವುಂಟೆ ?
ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ,
ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ !
ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ
ಬಾಯ್ದೆಗೆದೆನಲ್ಲದೆ, ಬಿನ್ನವುಂಟೆ ಹೇಳಾ ಮರುಳೆ ?/880
ತನ್ನ ತಾನರಿದೆನೆಂಬವನ ಮುನ್ನ ನುಂಗಿತ್ತು ಮಾಯೆ.
ನಿನ್ನೊಳಗೆ ಅರಿವು ಬಿನ್ನವಾಗಿರುತ್ತಿರಲು
ಮುನ್ನವೆ ನೀನು ದೂರಸ್ಥ ನೋಡಾ !
ಬಿನ್ನವಿಲ್ಲದ ಅಜ್ಞಾನವ ಬಿನ್ನವ ಮಾಡಬಲ್ಲಡೆ
ತನ್ನಲ್ಲಿ ಅರಿವು ನಿಜವಪ್ಪುದು ಗುಹೇಶ್ವರಾ/881
ತನ್ನ ತಾನರಿದೆಹೆನೆಂದಡೆ ತನಗೆ ತಾನನ್ಯನೆ ?
ನಿಮ್ಮ ನಾನರಿದೆಹೆನೆಂದಡೆ ನಿಮ್ಮಿಂದಲಾನನ್ಯನೆ ?
ತನ್ನ ನಿಮ್ಮನರಿದೆಹೆನೆಂಬ ಅರಿವಿನ ಬೆನ್ನಲ್ಲಿಪ್ಪುದು
ತನ್ನ ತನ್ನಿಂದಿನ್ನೇತರಿಂದರಿವೆ ಹೇಳಾ ಗುಹೇಶ್ವರಾ./882
ತನ್ನ ಮುಟ್ಟಿ ನೀಡಿದುದೆ ಪ್ರಸಾದ,
ತನ್ನ ಮುಟ್ಟ[ದೆ] ನೀಡಿದುದೆ ಓಗರ.
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ.
ಇದು ಕಾರಣ-ಇಂತಪ್ಪ ಭೃತ್ಯಾಚಾರಿಗಲ್ಲದೆ
ಪ್ರಸಾದವಿಲ್ಲ ಗುಹೇಶ್ವರಾ. /883
ತನ್ನನರಿಯದ ಅರಿವೆಂತುಟೊ ? ತನ್ನ ಮರೆದ ಮರಹೆಂತುಟೊ ?
ಅರಿದವರು ಮರೆದವರು
ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ ಗುಹೇಶ್ವರಾ./884
ತನ್ನನರಿಯೆನೆಂಬುದು ಅಜ್ಞಾನ ನೋಡಾ.
ಅರಿಯದ ಅಜ್ಞಾನವ ಅಗಳೆದು
ಜ್ಞಾನವ ಕಾಣೆನೆಂಬುದು ವಿಪರೀತ ಭಾವ ನೋಡಾ !
ಎಲ್ಲವನು ತೋರುವ ಘನವನು ಎಲ್ಲಿಯೂ ಕಾಣಬಾರದು.
ಕಾಣಬಾರದ ನಿಜವ ತೋರಬಾರದು,
ತೋರಬಾರದ ನಿಜವ ತಿಳಿಯಬಾರದು,.
ಗುಹೇಶ್ವರಲಿಂಗದಲ್ಲಿ ಬಯಕೆಯುಳ್ಳನ್ನಕ್ಕ
ತವಕ ಎಡೆಗೊಂಡಿಪ್ಪ ಕಾರಣ
ತಿಳುಹಲಿಲ್ಲವೆಂಬುದ ನಿನ್ನ ನೀ ತಿಳಿದು ನೋಡಾ ಸಿದ್ಧರಾಮಯ್ಯಾ./885
ತನ್ನರಿದವಂಗೆ ಇದಿರೆಂಬುದಿಲ್ಲ, ತನ್ನರಿಯದವಂಗೆ ಇದಿರೆಂಬುದುಂಟು.
ಅರುಹು ಮರಹು ಕುರುಹಳಿಯಿತ್ತು, ಬೆರಗಾಯಿತ್ತು.
ಬೆರಗು ಬೆರಗಿನೊಳಗೆ ಕರಿಗೊಂಡಿತ್ತು ಇದೇನೊ?
ಭ್ರಾಂತು ಭ್ರಾಂತನೆ ನುಂಗಿ
ಗುಹೇಶ್ವರ ಭವಿಯ ಬೆಂಬತ್ತಿ ಭವಿಯಾದ ಕಾರಣ/886
ತನ್ನಿಂದ ತನ್ನ ನೋಡಲು, ತನಗೆ ತಾ ಪ್ರತ್ಯಕ್ಷನಾಗೆ
ಆ ಪ್ರತ್ಯಕ್ಷವೆಂಬುದೆ ಭ್ರಾಂತು ನೋಡಾ !
ಅದೇನು ಕಾರಣವೆಂದಡೆ;
ತನಗೆ ತಾನು ಅನ್ಯವಲ್ಲಾಗಿ, ಎನಗೆ ಅನ್ಯವಿಲ್ಲ.
ಅನ್ಯ ನಾನಲ್ಲ ಎಂದು; `ಬ್ರಹ್ಮವು ನಾನು’ ಎಂಬೆಡೆ-
ಅದು ಅತಿಶಯದಿಂದ ಭ್ರಾಂತು-ಎಂಬುದನು ತಿಳಿದು ನೋಡಾ.
ಅದೇನು ಕಾರಣವೆಂದಡೆ:
`ಬ್ರಹ್ಮಕ್ಕೆ ನಾ ಬ್ರಹ್ಮ’ ಎಂಬುದು ಘಟಿಸದಾಗಿ !
ಅತಿಶಯದ ಸುಖವಳಿದ ನಿರಂತರ ಸುಖವೆಂತುಟೆಂದಡೆ
ಗುರು ಮುಗ್ಧನಾದೆಡೆಯ ತಿಳಿಯಲು ನೋಡಲು
ಗುಹೇಶ್ವರಲಿಂಗದ ನಿಲವು ತಾನೆ./887
ತಪವೆಂಬುದು ತಗಹು, ನೇಮವೆಂಬುದು ಬಂಧನ,
ಶೀಲವೆಂಬುದು ಸೂತಕ, ಭಾಷೆಯೆಂಬುದು ಪ್ರಾಣ ಘಾತಕ.-
ಇಂತೀ ಚತುರ್ವಿಧದೊಳಗಲ್ಲ
ಗುಹೇಶ್ವರಾ ನಿಮ್ಮ ಶರಣರು ಅಗ್ರಗಣ್ಯರು.
ತಿ/888
ತಪ್ಪ ಹೊರಿಸಿ ಹೊರಟೆಹೆನೆಂಬುದು ಸತ್ಯವೆ ?
ತನು, ಸೀರೆಯನುಳಿದು ನಿರ್ವಾಣವಾದಲ್ಲಿ
ಮನದ ಭ್ರಾಂತು ನಿಶ್ಚಯವಾಗದು !
ಕೇಶವೆಂಬ ಸೀರೆ ಅಂಗಕ್ಕೆ ಮರೆಯಾಯಿತ್ತು.
ಅಪಮಾನವೆಂತು ಹರಿಯಿತ್ತು ?
ಅದು ಗುಹೇಶ್ವರಲಿಂಗಕ್ಕೆ ಸಲ್ಲದ ವೇಷ !/889
ತಪ್ಪಿ ನೋಡಿದಡೆ ಮನದಲ್ಲಿ ಅಚ್ಚೊತ್ತಿದಂತಿತ್ತು .
ಇಪ್ಪೆಡೆಯ ವಿಚಾರಿಸಿ ನೋಡಿದಡೆ ಇಲ್ಲದಂತಾಯಿತ್ತು,
ಲೆಪ್ಪದ ಜಲದ ಪಾದಘಾತದಂತೆ.
ಕರ್ತೃತ್ವವೆಲ್ಲಿಯದೊ ಗುಹೇಶ್ವರಾ./890
ತಮ್ಮ ತಮ್ಮ ಭಾವಕ್ಕೆ, ಉಡಿಯಲ್ಲಿ ಕಟ್ಟಿಕೊಂಡ(ಬ?)ರು.
ತಮ್ಮ ತಮ್ಮ ಭಾವಕ್ಕೆ, ಕೊರಳಲ್ಲಿ ಕಟ್ಟಿಕೊಂಡ(ಬ?)ರು,
ನಾನೆನ್ನ ಭಾವಕ್ಕೆ ಪೂಜಿಸ ಹೋದಡೆ,
ಕೈತಪ್ಪಿ ಮನದಲ್ಲಿ ಸಿಲುಕಿತ್ತೆನ್ನ ಲಿಂಗ.
ಸಾಧಕನಲ್ಲ ಭೇದಕನಲ್ಲ-ಗುಹೇಶ್ವರಲ್ಲಯ್ಯ ತಾನೆ ಬಲ್ಲ./891
ತಮ್ಮ ತಮ್ಮ ಮುಖದಲ್ಲಿ;
ಲಿಂಗವನೊಲಿಸಿದರು, ಆರಾದಿಸಿದರು, ಬೇಡಿತ್ತ ಪಡೆದರು ಎಲ್ಲಾ-
ಲಿಂಗಭೋಗೋಪಭೋಗಿಗಳಾಗಿ ಭೋಗಿಸುವವರಿಲ್ಲ.
ಗಂಗೆವಾಳುಕರೆಲ್ಲ ವರಮುಖಿಗಳಾಗಿ
ಮೂರ್ತಿಯಳಿದು ಹೋದರು ಗುಹೇಶ್ವರಾ./892
ತಮ್ಮ ತಾವರಿದೆಹೆವೆಂಬರು, ತಮ್ಮ ತಾವರಿವ ಪರಿಯೆಂತೋ ?
ಎಲ್ಲರನೂ ಕಾಬ ಕಣ್ಣು ತನ್ನ ಕಾಬುದೆ ?
ತನ್ನರಿವಿಂದ ತಾ ಬಿನ್ನವಾಗಲರಿವನೆ ?
ತನ್ನ ತಾನಿದಿರಿಟ್ಟು ಕಾಬಾತನೊಬ್ಬನುಂಟೆ ?
ತನ್ನ ತಾನರಿವ ಪರಿಯ ಗುಹೇಶ್ವರಾ ನಿಮ್ಮ ಶರಣ ಬಲ್ಲ./893
ತಮ್ಮ ತಾವರಿಯರು ಹೇಳಿದಡೂ ಕೇಳರು.
ಆರರ ಹೊಲಬ ಏನೆಂದರಿಯರು.
ಎಂಟರ ಕಂಟಕವ ಮುನ್ನರಿಯರು.
ಏರಿದ ಬೆಟ್ಟವ ಇಳಿಯಲರಿಯದವರ ಏನೆಂಬೆ ಗುಹೇಶ್ವರಾ ?/894
ತಲೆ ಇಲ್ಲದ ತಲೆಯಾತಂಗೆ ಕರುಳಿಲ್ಲದ ಒಡಲು ನೋಡಾ!
ಆ ನಲ್ಲಂಗೆ ಅಂಗವಿಲ್ಲದ ಅಂಗನೆ ಸತಿಯಾಗಿಪ್ಪಳು!
ಇವರಿಬ್ಬರ ಬಸುರಲ್ಲಿ ಹುಟ್ಟಿದಳೆಮ್ಮ ತಾಯಿ,
ನಾ ಹುಟ್ಟಿ, ತಾಯ ಕೈವಿಡಿದು ಸಂಗವ ಮಾಡಿ
ನಿರ್ದೊಷಿಯಾದೆನು ಕಾಣಾ ಗುಹೇಶ್ವರಾ./895
ತಲೆಯ ಮೇಲೆ ತಲೆಯಿದ್ದಿತ್ತಲ್ಲಾ !
ಆ ತಲೆಯಾತಲೆ ನುಂಗಿತ್ತಲ್ಲಾ !
ಸತ್ತು ಹಾಲ ಸವಿಯ ಬಲ್ಲಡೆ,
ರಥದ ಕೀಲ ಬಲ್ಲಡೆ-ಅದು ಯೋಗ !
ಶಿಶು ಕಂಡ ಕನಸಿನಲುಳ್ಳ ತೃಪ್ತಿ ನಿನ್ನಲ್ಲಿ ಉಂಟೆ ಗುಹೇಶ್ವರಾ?/896
ತಲೆಯಲಟ್ಟುಂಬುದ ಒಲೆಯಲಟ್ಟುಂಡಡೆ ಹೊಗೆ ಘನವಾಯಿತ್ತು.
ತಲೆಯಲಟ್ಟುಂಡಾತ ಮಹಾಪ್ರಸಾದಿ,
ಈಶ್ವರಸ್ವರವ ನುಡಿಯಲರಿಯದೆ ಬೀಸರವೋದರಣ್ಣಗಳೆಲ್ಲ.
ಈಶ್ವರ ಸ್ವರವ ನುಡಿದರೆ ತಾನೆ ಶಿವನು
ಗುಹೇಶ್ವರನೆಂಬುದು ಬೇರಿಲ್ಲ ಕಾಣಿರೊ. /897
ತಲೆಯಲಟ್ಟುಂಬುದ, ಒಲೆಯಲಟ್ಟುಂಬರು,
ಒಲೆಯಲುಳ್ಳುದ, ಹೊಟ್ಟೆಯಲುಂಬೈಸಕ್ಕರ
ಹೊಗೆ ಘನವಾಯಿತ್ತು-
ಇದ ಕಂಡು ಹೇಸಿಬಿಟ್ಟೆನು ಗುಹೇಶ್ವರಾ/898
ತಲೆಯಿಲ್ಲದ ಅಟ್ಟೆ ಜಗವ ನುಂಗಿತ್ತು.
ಅಟ್ಟೆಯಿಲ್ಲದ ತಲೆ ಆಕಾಶವ ನುಂಗಿತ್ತು.
ಅಟ್ಟೆ ಬೇರೆ, ತಲೆ ಬೇರಾದಡೆ-ಮನ ಸಂಚಲಿಸುತ್ತಿದ್ದಿತ್ತು !
ಅಟ್ಟೆಯನೂ ತಲೆಯನೂ ಬಯಲು ನುಂಗಿದಡೆ,
ಅನು ನುಂಗಿದೆನು ಗುಹೇಶ್ವರನಿಲ್ಲದಂತೆ !/899
ತಲೆಯಿಲ್ಲದ ಮೃಗ ಒಡಲಿಲ್ಲದೆ ಆಹಾರವ ಕೊಂಡಿತ್ತು,
ಹೆಜ್ಜೆ ಇಲ್ಲದೆ ಹರಿಯಿತ್ತು !
ಅದ ಶುದ್ಧಿಯ ಮಾಡ ಹೋದಾತನಿನ್ನೂ ಮರಳನು.
ವೆಜ್ಜವಿಲ್ಲದ ಮಣಿಯ ದಾರವಿಲ್ಲದೆ ಪವಣಿಸುವ
ನಿಮ್ಮ ಶರಣನ ಪರಿಯ ನೋಡಾ ಗುಹೇಶ್ವರಾ !/900
ತಾ ಕೇಳಿ, ನೋಡಿ, ಮುಟ್ಟಿ ಮನವರಿದ ಸುಖವ
ಲಿಂಗಕ್ಕೆ ಕೊಡುವುದೆಂತೊ ಅಂಗ ಮನವೆಂಬವನು ?
ಲಿಂಗದ ಪರಿಪೂರ್ಣವನು ಕಾಣದಿಹ
ಅಂಗಹೀನರಿಗೇಕೆ ವ್ರತಾಚಾರದ ಹೊಲಬು ?
ಜೀರ್ಣಪರ್ಣ-ರವಿರಶ್ಮಿ ಜ್ಞೇಯದಂತೆ (ನ್ಯಾಯದಂತೆ?)
ಜಗದೊಳಗೆ ಏತರಲ್ಲಿಯೂ ಖಂಡಿತವಿಲ್ಲದೆ ಗುಹೇಶ್ವರನಿಪ್ಪ
ಭಕ್ತದೇಹಿಕನಾಗಿ !/901
ತಾ ನಡೆವಡೆ ನಡೆಗೆಟ್ಟ ನಡೆಯ ನಡೆವುದಯ್ಯಾ.
ತಾ ನುಡಿವಡೆ ನುಡಿಗೆಟ್ಟ ನುಡಿಯ ನುಡಿವುದಯ್ಯಾ.
ರೂಹಿಲ್ಲದ ಸಂಗವ ಮಾಡಬೇಕು,
ಭವವಿಲ್ಲದ ಭಕ್ತಿಯ ಮಾಡಬೇಕು.
ತಾನಾವನೆಂದರಿಯದಂತಿಹುದು, ಗುಹೇಶ್ವರಾ./902
ತಾ ಬಾಳಲಾರೆ ವಿದಿಯ ಬೈದನೆಂಬ ನಾಣ್ಣುಡಿ
ದಿಟವಾಯಿತ್ತಲ್ಲಾ ಬಸವಣ್ಣಾ.
ಅವಧಾನ ತಪ್ಪಿ ಆಚಾರಗೆಟ್ಟು ನಡೆದು
ಶಿವನಾದಿನವೆಂದಡೆ ಹೋಹುದೆ ?
ಗುಹೇಶ್ವರಲಿಂಗದಲ್ಲಿ ಈ ಬಣ್ಣಿಗೆಯ ಮಾತು ಸಲ್ಲದು ಕೇಳಾ
ಸಂಗನಬಸವಣ್ಣಾ./903
ತಾ ಸುಖಿಯಾದಡೆ ನಡೆಯಲು ಬೇಡ.
ತಾ ಸುಖಿಯಾದಡೆ ನುಡಿಯಲು ಬೇಡ.
ತಾ ಸುಖಿಯಾದಡೆ ಪೂಜಿಸಲು ಬೇಡ,
ತಾ ಸುಖಿಯಾದಡೆ ಉಣಲು ಬೇಡಫ ಗುಹೇಶ್ವರಾ./904
ತಾ ಹೆಳವ; ಎಡಹೊತ್ತಿನ ಪಯಣ;
ಒಡ್ಡಿದ ಮಳೆಯ ಮುಗಿಲು,
ಸೋರುವ ಮನೆ, ನೆಲದ ಹಾಸಿಕೆ,
ಕೊರಳಲ್ಲಿ ಮೂರು ಮಣ್ಣ ಮಣಿ,
ಹಿಂದೆ ಕಲ್ಲೊರಳು, ಮೇಣದೊನಕೆ,
ಹಳೆ ಅಕ್ಕಿ, ಹೊಸ ಭಾಂಡ-
ಹಸಿಯ ಬೆರಣಿಯ ತಾಳಿಯನಿಕ್ಕಿ,
ಕಿಚ್ಚಿಲ್ಲದೆ ಒಲೆಯನುರುಹಿ ಓಗರವನಡಲು,
ಗುಹೇಶ್ವರಲಿಂಗವು ಒಡೆದ ತಳಿಗೆಯ [ಲಿ?]
ಆರೋಗಣೆಯ ಮಾಡಿದನು./905
ತಾನಿಟ್ಟ ಬೇತಾಳ ತನ್ನನೆ ತಿಂದಿತ್ತೆಂಬಂತೆ,
ನಿನ್ನ ಭವಾವಳಿಯನೆತ್ತುವನ್ನಕ್ಕ
ಎನ್ನ ಮರವೆ ಎನಗೆ ಎಚ್ಚರಿಕೆಯಾಯಿತ್ತು,
ಎನ್ನ ಪೂರ್ವ ನಿರ್ವಾಹವಾಯಿತ್ತು !
ನಿಮ್ಮ ವರ್ಮ ತಿಳಿಯದೆನಗೆ,-ಅದೆಂತೆಂದಡೆ:
ಹಿಂದೆ ನೀನೇನಾಗಿದ್ದೆ ಎಂಬುದನು ಅರಿಯೆನಾಗಿ.
ಇಂದು ನಿಮ್ಮ ಮನೆಯಲಿ ಆರೋಗಣೆಯಾಗದು ಕಾಣಾ
ಸಂಗನಬಸವಣ್ಣ ನಮ್ಮ ಗುಹೇಶ್ವರಲಿಂಗಕ್ಕೆ ! /906
ತಾನಿರ್ದು ತನ್ನನರಿಯದೆ ಇನ್ನೆಂದಿಗೆ ಶರಣನಪ್ಪನಯ್ಯಾ ?
ಪವನಸ್ಥಾನವನರಿದ ಬಳಿಕ, ಬಂದು ಬಂದು ಸುಳಿಯಲಿಲ್ಲ.
ಇದರಂತುವನಾರು ಬಲ್ಲರು ಗುಹೇಶ್ವರಾ-ನಿಮ್ಮ ಶರಣರಲ್ಲದೆ ?/907
ತಾನು ಮಿಂದು ಕಾಲ ತೊಳೆದ ಬಳಿಕ
ಲಿಂಗಕ್ಕೆ ಮಜ್ಜನಕ್ಕೆರೆವರು.
ತಾನು ಲಿಂಗವೊ ಲಿಂಗ ಲಿಂಗವೊ ?
ಏನು ಲಿಂಗನವುಫ? ಬಲ್ಲಡೆ ನೀವು ಹೇಳಿರೆ.
ಲಿಂಗಸಂಬಂಧವನರಿಯದೆ ಕೆಟ್ಟರು ಗುಹೇಶ್ವರಾ./908
ತಾನೆಂದೆನಲೊಲ್ಲದೆ ಗುರುವೆಂದು ಹಿಡಿದವನ,
ಗುರುವೆಂದಲ್ಲಿಯೆ ನೀನೆಂದು ನಡೆದವನ,
ನೀನೆಂದಲ್ಲಿಯೆ ಲಿಂಗಜಂಗಮದ ಸಕೀಲಸಂಬಂಧವ ನೆಲೆಗೊಳಿಸಿದವನ,
ಲಿಂಗಜಂಗಮದಲ್ಲಿ ತನ್ನ ಮರೆದು ಕರಿಗೊಂಡ ಲಿಂಗೈಕ್ಯನ,
ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. /909
ತಾಪತ್ರಯದಲ್ಲಿ ಬೇವ ಒಡಲ ಹಿಡಿದು ತಂದು
ಜ್ಞಾನವೆಂಬ ಉರಿಗೆ ಆಹುತಿಯ ಕೊಟ್ಟವನ,
ಜ್ಞಾನವೆಂಬ ಕಾಯವ ಹಿಡಿದು ತಂದು
ನಿಶ್ಶೂನ್ಯವೆಂಬ ತೇಜದಲ್ಲಿ ಸುಟ್ಟವನ,
ನಿಶ್ಶೂನ್ಯವೆಂಬ ಶಬ್ದವ ಸುಟ್ಟು, ಭಸ್ಮವ ಧರಿಸಿದ ಲಿಂಗೈಕ್ಯನ,
ಲೋಕದ ಸ್ಥಿತಿ-ಗತಿಯ ಮರೆದು, ನಿರ್ವಾಣದಲ್ಲಿ ನಿಂದವನ,
ಗುಹೇಶ್ವರಲಿಂಗದಲ್ಲಿ ತನ್ನ ಮರೆದ ಅಲ್ಲಯ್ಯನ ಕೋಪದಲ್ಲಿ ಕಿಚ್ಚಿನಲ್ಲಿ
ಸುಟ್ಟಿಹೆನೆಂಬ ಸಿದ್ಧರಾಮಯ್ಯನನೇನೆಂಬೆನು ?/910
ತಾಯಿ ಬಂಜೆಯಾದಲ್ಲದೆ ಶಿಶು ಗತವಾಗದು.
ಬೀಜ ನಷ್ಟವಾದಲ್ಲದೆ ಸಸಿ ಗತವಾಗದು.
ನಾಮ ನಷ್ಟವಾದಲ್ಲದೆ ನೇಮ ನಷ್ಟವಾಗದು.
ಮೊದಲು ಕೆಟ್ಟಲ್ಲದೆ ಲಾಭದಾಸೆ ಬಿಡದು.
ಗುಹೇಶ್ವರನೆಂಬ ಲಿಂಗದ ನಿಜವನೆಯ್ದುವಡೆ,
ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು./911
ತಾಯಿಗಾದ ಸುಖದುಃಖಂಗಳು ಬಸಿರ ಶಿಶುವಿಂಗೆ ನೋಡಯ್ಯಾ.
ಶಿವಶರಣರಿಗೆ ಮಾಡಿದ ಸುಖದುಃಖಗಳು ಶಿವನ ತಾಗುವುವು.
ಕರಣವುಳ್ಳವರು ಮರಣವಿಲ್ಲದವಂಗೆ ಮುಳಿದಡೆ
ತನುವುಳ್ಳವರ ಮುಟ್ಟುವುದಲ್ಲದೆ, ಒಡಲಿಲ್ಲದಾತನ ಮುಟ್ಟಬಲ್ಲುದೆ ?
ಗುಹೇಶ್ವರಾ ಕೆಂಡವ ಒರಲೆ ಮುಟ್ಟಬಲ್ಲುದೆ ?/912
ತಾಯಿ-ತಂದೆಯಿಲ್ಲದ ಕಂದಾ,
ನಿನಗೆ ನೀನೆ ಹುಟ್ಟಿ ಬೆಳೆದೆಯಲ್ಲಾ !
ನಿನ್ನ ಪರಿಣಾಮವೆ ನಿನಗೆ ಪ್ರಾಣತೃಪ್ತಿಯಾಗಿರ್ದೆಯಲ್ಲಾ !
ಭೇದಕರಿಗೆ ಅಭೇದ್ಯನಾಗಿ ನಿನ್ನ ನೀನೆ ಬೆಳಗುತ್ತಿರ್ದೆಯಲ್ಲಾ !
ನಿನ್ನ ಚರಿತ್ರ ನಿನಗೆ ಸಹಜ ಗುಹೇಶ್ವರಾ. /913
ತಾಯಿಯಿಲ್ಲದ ಶಿಶುವಿಂಗೆ,
ಶಿಶುವಿಲ್ಲದ ತಾಯಿ ಮೊಲೆಯನೂಡಿದಳು.
ಮೊಲೆವಾಲನುಂಡ ಶಿಶು ತಾಯ ತಕ್ಕೈಸಿದಡೆ
ತಾಯಿ ಆ ಶಿಶುವಿಂಗೆ ಸತಿಯಾದಳಲ್ಲಾ !
ಸತಿಯ ಸಂಗದ ಸುಖವ ಪತಿಯಿಲ್ಲ (ಯಿಂ?)ದರಿದಲ್ಲಿ
ಸತಿ ಪತಿ ಎಂಬೆರಡೂ ಅಳಿಯಿತ್ತು ನೋಡಾ !
ಈ ನಿಜದ ನಿರ್ಣಯವ ಎನಗೆ ತೋರಿದ
ಗುಹೇಶ್ವರನ ಶರಣ ಮಡಿವಳ ಮಾಚಿತಂದೆಗಳ ಪಾದಕ್ಕೆ
ನಮೋ ನಮೋ ಎನುತಿರ್ದೆನು./914
ತಾಳಮರದ ಮೇಲೊಂದು ಬಾವಿ ಇದ್ದಿತ್ತಲ್ಲಾ.
ಆ ಬಾವಿಯ ತಡಿಯ ಹುಲ್ಲನು, ಒಂದು ಮೊಲ ಬಂದು ಮೇಯಿತ್ತಲ್ಲಾ!
ಕಾಯಸಹಿತಜೀವನ ಬಾಣಸ ಮಾಡಲರಿಯರು
ಗುಹೇಶ್ವರಾ-ನಿಮ್ಮಾಣೆ./915
ತಾಳು ಬೋಳು ಕಟ್ಟಿಗೆ ಕರ್ಪರವೆಂದೆಂಬರು.
ತಾಳು ಬೋಳು ಕಟ್ಟಿಗೆ ಕರ್ಪರವಾವುದೆಂದರಿಯರು.
ತಾಳು:ತನುಗುಣಾದಿಗಳ ಪ್ರಾಣಗುಣಾದಿಗಳ
ತಾಳಿಕೊಂಡಿರಬಲ್ಲಡೆ ತಾಳು.
ಬೋಳು:ಭ್ರಮೆಯಿಲ್ಲದೆ ಬಂಧನವಿಲ್ಲದೆ ಸಂಸಾರ ವಿಷಯಗಳ ಬೋಳೈಸಿ
ತನ್ನಿಚ್ಛೆಗೆ ನಿಲಿಸಿಕೊಂಡಿರಬಲ್ಲಡೆ ಬೋಳು.
ಕಟ್ಟಿಗೆ:ಕರಣಾದಿ ಗುಣಂಗಳ ನಿಲಿಸಿಕೊಂಡಿರಬಲ್ಲಡೆ ಕಟ್ಟಿಗೆ.
ಕರ್ಪರ:ಪರವ ಅರಿದಿರಬಲ್ಲಡೆ ಕರ್ಪರ-
ಇಂತೀ ಚತುರ್ವಿಧವನರಿದವರ ಪರಮಾರಾಧ್ಯರೆಂಬೆ ಕಾಣಾ
ಗುಹೇಶ್ವರಾ./916
ತಿಂಬ ಗಂದೆಯ ಮೇಲೆ ಉಗುರು ಬಿದ್ದಂತಾಯಿತ್ತು.
ಅರಸುವ ಬಳ್ಳಿ ಕಾಲ ಸುತ್ತಿದಂತಾಯಿತ್ತು.
ನಾನು ಬಯಸುವ ಬಯಕೆ ತಾರ್ಕಣೆಗೆ ಬಂದಿತ್ತು.
ಗುಹೇಶ್ವರಲಿಂಗದಲ್ಲಿ,
ಎನಗೂ ನಿನಗೂ ಒಂದಾದ ಪರಿ ಎಂತು ಹೇಳಾ
ಚನ್ನಬಸವಣ್ಣಾ ?/917
ತಿಳಿದಿರ್ದ ಮಡುವಿನೊಳಗೆ ಸುಳಿಸುಳಿದಾಡುತ್ತಿದೆ
ಒಂದು ಸುವರ್ಣದ ಬಿಂದು !
ಅದು ಹಿಂದು ಮುಂದಾಗಿ ನೋಡಿದವರಿಗೆಲ್ಲ ಕಾಣಬಾರದು.
ಮಡುವ ತುಳುಕದೆ ದಡವ ಸೋಂಕದೆ ಹಿಡಿಯಬಲ್ಲಡೆ
ಗುಹೇಶ್ವರನೆಂಬ ಲಿಂಗವು ಈಗಳೆ ಸಾಧ್ಯ./918
ತುಂಬಿ ಪರಿಮಳವನುಂಡಿತೊ, ಪರಿಮಳ ತುಂಬಿಯ ನುಂಡಿತೊ ?
ಲಿಂಗ ಪ್ರಾಣವಾಯಿತೊ ? ಪ್ರಾಣ ಲಿಂಗವಾಯಿತೊ ?
ಗುಹೇಶ್ವರಾ, ಇವರ ಈ ಉಭಯದ ಭೇದವ ನೀನೆ ಬಲೆ/919
ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ !
ಇದೇನು ಸೋಜಿಗ ಹೇಳಾ ?
ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ,
ದೇವ ಬಂದಡೆ ದೇಗುಲ ಓಡಿತ್ತ ಕಂಡೆ-ಗುಹೇಶ್ವರಾ. /920
ತುಂಬಿದ ತೊರೆಯ ಹಾಯ್ದಹೆವೆಂದು
ಹರುಗೋಲನೇರುವ ಅಣ್ಣಗಳು ನೀವು ಕೇಳಿರೆ.
ತೊರೆಯೊಳಗಣ ನೆಗಳು ಹರುಗೋಲ ನುಂಗಿದಡೆ, ಗತಿಯಿಲ್ಲ.
ಎಚ್ಚತ್ತು ನಡಿಸಿರೆ.
ನಡುದೊರೆಯಲ್ಲಿ ಹುಟ್ಟು ಹಾಯ್ಕಿದಡೆ,
ಹರುಗೋಲು ಮುಳುಗದೆ, ಏರಿದವರು ಸತ್ತರು.
ಇದರೊಳಹೊರಗನರಿದಾತನಲ್ಲದೆ
ಗುಹೇಶ್ವರಲಿಂಗದಲ್ಲಿ ಅಚ್ಚ ಶರಣನಲ್ಲ./921
ತೆಗೆದು ವಾಯುವ ನೇಣ ಗಗನದಲ್ಲಿ ಗಂಟಿಕ್ಕಿ,
ತ್ರಿಜಗಾದಿಪತಿಯ ಕೋಣೆಯಲ್ಲಿ ಹಸುವಿದ್ದು,
ಕರುವ ಕೊಂದು ಕಂದಲನೊಡೆದು, ಕರೆಯಬಲ್ಲವಂಗಲ್ಲದೆ,
ಹಯನಾಗದು ನೋಡಾ !
ಹಯನೆ ಬರಡು, ಬರಡೆ ಹಯನು !
ಅರುಹಿರಿಯರ ಬಾಯ, ಕರು ಒದೆದು ಹೋಯಿತ್ತು !
ಎರಡಿಲ್ಲದ ನಿರಾಳ ಗುಹೇಶ್ವರ./922
ತೆರಹಿಲ್ಲದ ಘನ ಕುರುಹಿಂಗೆ ಬಾರದ ಮುನ್ನ
ತೋರಿದವರಾರು ಹೇಳಾ ಮಹಾ ಘನ ಲಿಂಗೈಕ್ಯವನು ?
ಆರೂಢದ ಕೂಟದಲ್ಲಿ ನಾನಾರುವ ಸಾಕ್ಷಿಯ ಕಾಣೆನು.
ಬೇರೆ ಮಾಡಿ ನುಡಿಯಬಹುದೆ ಪ್ರಾಣಲಿಂಗವನು ?
ಅರಿವು ಸ್ವಯವಾಗಿ ಮರಹು ನಷ್ಟವಾದಲ್ಲಿ
ಗುಹೇಶ್ವರಾ ನಿಮ್ಮ ಶರಣನುಪಮಾತೀತನು/923
ತೆರಹಿಲ್ಲದ ಘನವ ಅರಸಿಹೆನೆಂದಡೆ ಕಾಣಬಾರದು.
ಅದೇನು ಕಾರಣವೆಂದಡೆ:
ಆ ಅರಸುವಾತನು ತಾನೆ ವಸ್ತುವಾದ ಕಾರಣ.
ವಿಚಾರಕ್ಕೆ ಬಾರದ[ದು]
ನಿಶ್ಚಲಬ್ರಹ್ಮವೆಂಬುದು ಗುಹೇಶ್ವರಾ. /924
ತೆರಹಿಲ್ಲದ ಘನವ ಮನ ಒಳಕೊಂಡು
ಆ ತಲೆಯಿಲ್ಲದ (ತಲಹಿಲ್ಲದ?) ಮನವ ಘನ ಒಳಕೊಂಡು
ತನಗೆ ತಾ ತರಹರವಾದ ಬಳಿಕ
ಇನ್ನು ಮರಳಿ ಇಂಬುಗೊಡಲುಂಟೆ ?
ಗುಹೇಶ್ವರನ ಲೀಲೆ ಮಾಬನ್ನಕ್ಕರ
ಉರಿಯೊಳಗಣ ಕರ್ಪುರದಂತಿರಬೇಕು ಕಾಣಾ ಸಿದ್ಧರಾಮಯ್ಯಾ./925
ತೆರೆಯ ಮರೆಯ ಕುರುಹೆಂಬುದೇನೊ
ಒಳಗೆ ಲಿಂಗವನನುವಿಡಿದ ಬಳಿಕ ?
ಪೂಜಿಸುವ ಭಕ್ತನಾರೊ ? ಪೂಜಿಸಿಕೊಂಬ ದೇವನಾರೊ ?
ಮುಂದು ಹಿಂದು, ಹಿಂದು ಮುಂದಾಯಿತ್ತು
ಗುಹೇಶ್ವರಾ ನಾನು ನೀನು, ನೀನು ನಾನಾದ ಬಳಿಕ
ಮತ್ತೇನುಂಟು ಹೇಳಾ ? /926
ತೋಟವ ಬಿತ್ತಿದ[ರೆಮ್ಮ]ವರು, ಕಾಹ ಕೊಟ್ಟವರು ಜವನವರು.
ನಿತ್ಯವಲ್ಲದ ಸಂಸಾರ ವೃಥಾ ಹೋಯಿತಲ್ಲಾ !
ಗುಹೇಶ್ವರನಿಕ್ಕಿದ ಕಿಚ್ಚು, ಹೊತ್ತಿಕ್ಕಲುಂಟು ಅಟ್ಟುಣಲಿಲ್ಲ ಗುಹೇಶ್ವರಾ./927
ತೋರಬಾರದ ಘನವ ಹೇಳಲೆಂದೇನಯ್ಯಾ ?
ಹೇಳಬಾರದ ಘನವ ತೋರಲೆಂದೇನಯ್ಯಾ ?
ಶರಸಂಧಾನದ ಪರಿಯಲ್ಲ ನೋಡಾ !
ಗುಹೇಶ್ವರಲಿಂಗವು ಕಲ್ಪಿತವಲ್ಲ ನೋಡಯ್ಯಾ./928
ತೋರಬಾರದಠಾವಿನಲ್ಲಿ ಒಂದು ಹೊಂಬಣ್ಣ ಸುಳಿಯಿತ್ತು.
`ಸ್ಯೋಹಂ ಸ್ಯೋಹಂ’ಎಂದುದು ಬ್ರಹ್ಮವು.
ಮುಟ್ಟಿಯೂ ಮುಟ್ಟದ ಬ್ರಹ್ಮವ ನೆಟ್ಟನೆ ಮುಂದರಿದೆ.
ಕಟ್ಟಳೆಯಿಲ್ಲದ ಇರವು ಗುಹೇಶ್ವರಾ ನಿಮ್ಮ ನಿಲವು./929
ತೋರಿದ ಭೇದವ ತೋರಿದಂತೆ ಕಂಡಾತನಲ್ಲದೆ,
ದ್ಯಷ್ಟಿವಾಳಕ ತಾನಲ್ಲ.
ಬೇರೊಂದ ವಿವರಿಸಿಹೆನೆಂದಡೆ,
ಆರ ಮೀರಿದಲ್ಲದೆ ಅರಿಯಬಾರದು.
ಅರಿವನರಿದು ಮರಹ ಮರೆಯದೆ,
ಮನದ ಬೆಳಗಿನೊಳಗಣ ಪರಿಯನರಿಯದೆ
ವಾದಿಸಿ ಕೆಟ್ಟು ಹೋದರು ಗುಹೇಶ್ವರಾ,
ಸಲೆ ಕೊಂಡ ಮಾರಿಂಗೆ !/930
ತೋರುವುದೆಲ್ಲ ಬೇರಾಗಿ ಕಾಂಬುದು,
ಕಂಡುದ ಬಿಡುವುದು ಕಾಣದುದ ಹಿಡಿವುದು.
ಕಾಣದುದ ಕಂಡೆವೆಂದು ಬಿಟ್ಟಣ್ಣಗಳು
ನಟ್ಟನಡುನೀರೊಳಗೆ ಕೆಟ್ಟ ಕೇಡ ನೋಡಾ ಗುಹೇಶ್ವರಾ./931
ತ್ರಿನದಿಯ ಮಧ್ಯದಲ್ಲೈದು ಕುದುರೆಯ ಕಟ್ಟಿದ್ದ ಕಂಭ ಮುರಿಯಿತ್ತು.
ಎಂಟಾನೆ ಬಿಟ್ಟೋಡಿದವು.
ಹದಿನಾರು ಪ್ರಜೆ ಬೊಬ್ಬಿಡುತ್ತಿದ್ದವು.
ಶತಪತ್ರಕಮಲಕರ್ಣಿಕಾ ಮಧ್ಯದಲ್ಲಿ
ಗುಹೇಶ್ವರಲಿಂಗವು ಮುಗ್ಧವಾಗಿರ್ದನು./932
ತ್ರಿಪುರವನುರುಹಿದ ತ್ರಿಣೇತ್ರನಲ್ಲ,
ಅಂಧಕಾಸುರನ ಮೆಟ್ಟಿ ನಾಟ್ಯವನಾಡಿದಾತನಲ್ಲ,
ಖಂಡಕಪಾಲಿಯಲ್ಲ ಮುಂಡಧಾರಿಯಲ್ಲ,
ಮಂಡಲದೊಳಗೆ ಬಂದು ಸುಳಿವಾತನಲ್ಲ,
ಈಶ್ವರನಲ್ಲ ಮಹೇಶ್ವರನಲ್ಲ,
ಗುಹೇಶ್ವರನೆಂಬ ಲಿಂಗ ಅಪಾರ ಮಹಿಮನು./933
ತ್ರಿಭುವನವೆಂಬ ಪಂಜರದೊಳಗೆ, ಸಂಸಾರಚಕ್ರದಲ್ಲಿ-
ಹೊನ್ನು ಪ್ರಾಣವೆ ಪ್ರಾಣವಾಗಿ, ಹೆಣ್ಣು ಪ್ರಾಣವೆ ಪ್ರಾಣವಾಗಿ
ಮಣ್ಣು ಪ್ರಾಣವೆ ಪ್ರಾಣವಾಗಿ,
ಆ ಸುಖದ ಸೊಕ್ಕಿನಲ್ಲಿ ಈಸಿಯಾಡುತ್ತಿರ್ದರಲ್ಲಾ,
ಬಹುವಿಧದ ವ್ಯವಹಾರ ವೇದಿಸಿದವರು ಗುಹೇಶ್ವರಾ./934
ತ್ರಿವಿಧದ ನಿತ್ಯವ, ತ್ರಿವಿಧದ ಅನಿತ್ಯವ ಬಲ್ಲವರಾರೊ?
ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧ ಪ್ರಸಾದವ ಕೊಳ್ಳಬಲ್ಲಡೆ;
ಆತನು ತ್ರಿವಿಧನಾಥನೆಂಬೆನು, ಆತನು ವೀರನೆಂಬೆನು.
ಆತನು ದಿರನೆಂಬೆನು,
ಆತನು ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆನು./935
ದರ್ಪಣದೊಳಗಣ ರೂಹಿಂಗೆ ಆ ದರ್ಪಣವೆ ಉತ್ಪತ್ತಿ ಸ್ಥಿತಿ ಲಯವಲ್ಲದೆ
ಮತ್ರ್ಯಲೋಕದೊಳಗಣ ಆಕೃತಿ ಅಲ್ಲಿಲ್ಲವೇಕಯ್ಯಾ ?
ಆ ಲೋಕದೊಳಗೆ ಉತ್ಪತ್ಯ(ತ್ತಿ ?) ಸ್ಥಿತಿ ಲಯ-ಇದೆಂತಹ ಕರ್ಮಬದ್ಧರು ?
ಒಂದರ ಪರಿ ಒಂದಕ್ಕಿಲ್ಲ ಕಂಡಿರೆ !
ದೃಷ್ಟವಹ ಗುರುಹಸ್ತದೊಳಗಣ ಸದ್ಭಕ್ತಂಗೆ,
ಅಲ್ಲಿಯ ಉತ್ಪತ್ತಿ ಸ್ಥಿತಿ ಲಯ-ಇದೆಂತಹ ಕರ್ಮದ ಪರಿಯೊ ?
ಮತ್ತಾವ ಪರಿಯೂ ಇಲ್ಲ, ಲಿಂಗದ ಪರಿಯ ಮಾಡಿದ ಗುಹೇಶ್ವರ./936
ದಾರಿಗೊಂಡು ಹೋಹವರೆಲ್ಲರೂ ನೀವು ಕೇಳಿರೆ.
ಮೂರು ಬಟ್ಟೆ ಕೂಡಿದಠಾವಿನಲ್ಲಿ ಒಬ್ಬ ಹೆಮ್ಮಾರಿ ಐದಾಳೆ.
ಆ ಮಾರಿಯ ಬಾಯೊಳಗೆ ಮೂರು ಘಟ್ಟವಿಪ್ಪುವು.
ನಂಜಿನ ಸೊನೆ ಸುರಿವುತ್ತಿಪ್ಪುದು.
ಕಾಡ ಕೋಣನ ಮುಖದಲ್ಲಿ ಕತ್ತಲೆ ಕಾಣಲೀಸದು.
ಐದು ಬಾಯ ಹುಲಿ ಆಗುಳಿಸುತ್ತಿಪ್ಪುದು.
ಇವೆಲ್ಲವ ಗೆದ್ದಲ್ಲದೆ ಗುಹೇಶ್ವರನ ಕಾಣಬಾರದು/937
ದುಷ್ಟನಿಗ್ರಹ ಶಿಷ್ಟಪರಿಪಾಲಕನಪ್ಪ ದಿವ್ಯವಸ್ತು
ಶಕ್ತಿಗೊಳಗಾಯಿತ್ತಾಗಿ
ಬಚ್ಚಬಯಲೆಂಬುದಕ್ಕುಪಮಾನವಿಲ್ಲಯ್ಯ [ಗುಹೇಶ್ವರ]. /938
ದೂರದ ತುದಿಗೊಂಬನಾರಯ್ಯ ಗೆಲುವರು ?
ಮೀರಲಿಲ್ಲದ ನಿರಾಳದ ಘನವನು (ನಿಲವನು ?),
ಮೀರಿ, ಕಾಬ ಘನವನು ಬೇರೆ ತೋರಲಿಲ್ಲ.
ತೋರಿ ಕಾಬಡೆ ತನ್ನ ಹಿಡಿಯಲಿಲ್ಲ.
ಓರೆ ಆವಿನ ಹಾಲನಾರಯ್ಯ ಕರೆವರು ?
ಮೂರು ಲೋಕದೊಳಗೆ ತಾನಿಲ್ಲ ಗುಹೇಶ್ವರಾ./939
ದೃಷ್ಟಕ್ಕೆ ದೃಷ್ಟ ಮುಂದಿಲ್ಲ, ಇಲ್ಲ.
ಮಾಡಿದಡೇನಹುದೊ? ಮಾಡದಿರ್ದಡೇನಹುದೊ?
ಗುಹೇಶ್ವರನೆಂಬ ಅರುಹಿನ ಕುರುಹು ಮಂದಿಲ್ಲ, ಇಲ್ಲ.
ಮಾಡಿದಡೇನಹುದೊ? /940
ದೇವ ಕಂಡಾ, ಭಕ್ತ ಕಂಡಾ; ಮರಳಿ ಮರಳಿ ಶರಣೆಂಬ ಕಂಡಾ.
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
ಸಾವನ್ನಕ್ಕ ಸರಸವುಂಟೆ ಗುಹೇಶ್ವರಾ ?/941
ದೇವನೊಲಿದ, ನೀನೊಲಿದೆ-ಎಂಬುದು ಅದಾವುದಕ್ಕಾ ?
ಭಾವಶುದ್ಧವಾದಲ್ಲಿ ಸೀರೆಯನಳಿದು ಕೂದಲು ಮರೆಸಲೇತಕ್ಕೆ ?
ಅದು ಅಂತರಂಗದ ನಾಚಿಕೆ ಬಾಹ್ಯದಲ್ಲಿ ತೋರಿತ್ತು.
ಅದು ಗುಹೇಶ್ವರಲಿಂಗಕ್ಕೆ ಒಲವರವಲ್ಲ./942
ದೇವರೆಲ್ಲರ ಹೊಡೆತಂದು ದೇವಿಯರೊಳಗೆ ಕೂಡಿತ್ತು ಮಾಯೆ,
ಹರಹರಾ ಮಾಯೆ ಇದ್ದೆಡೆಯ ನೋಡಾ.
ಶಿವಶಿವಾ ಮಾಯೆ ಇದ್ದೆಡೆಯ ನೋಡಾ.
ಎರಡೆಂಬತ್ತುಕೋಟಿ ಪ್ರಮಥಗಣಂಗಳು, ಅಂಗಾಲ ಕಣ್ಣವರು
ಮೈಯೆಲ್ಲಾ ಕಣ್ಣವರು, ನಂದಿ ವಾಹನ ರುದ್ರರು-ಇವರೆಲ್ಲರು,
ಮಾಯೆಯ ಕಾಲಗಾಹಿನ ಸರಮಾಲೆ ಕಾಣಾ ಗುಹೇಶ್ವರಾ./943
ದೇವಲೋಕದ ದೇವಗಣಂಗಳೆಲ್ಲ ಎನ್ನ ಹೊರಗೆಂಬರು;
ಅದು ದಿಟವೆ.
ಸತ್ಯ ಸಾತ್ವಿಕ ಸದ್ಭಕ್ತರು ಎನ್ನ ಹೊರಗೆಂಬರು;
ಅದು ದಿಟವೆ.
ಹದಿನಾಲ್ಕು ಭವನದೊಳಗೆ ಅವರು ತಾವಿರಲಿ,
ನಾ ನಿಮ್ಮೊಳಗು ಗುಹೇಶ್ವರಾ./944
ದೇವಲೋಕದವ[ರೆಲ್ಲರ] ವ್ರತಗೇಡಿಗಳೆಂಬೆ.
ಮತ್ರ್ಯಲೋಕದವ[ರೆಲ್ಲರ] ಭಕ್ತದ್ರೋಹಿಗಳೆಂಬೆ.
ದೇವಸಂಭ್ರಮ ಗಣಪದವಿಯ ಕಂಡವರೆಲ್ಲರ
ಕುಂಭಕರ್ಣನಂತೆ ಅತಿನಿದ್ರಿಗಳೆಂಬೆ.
ಅನಂತಶೀಲರ ಕಂಡಡೆ ಕೈಕೂಲಿಕಾರರೆಂಬೆ-
ಗುಹೇಶ್ವರಾ ಲಿಂಗೈಕ್ಯವನರಿಯರಾಗಿ./945
ದೇವಲೋಕದವರ ತೃಣವೆಂಬೆ.
ಮರ್ತ್ಯಲೋಕದವರ ಕ್ಷಣವೆಂಬೆ.
ಅಹಂಕಾರವೆಂಬ ಶೃಂಗಾರವ ಮಾಣೆ !
ಆನಲ್ಲದೆ ಅನ್ಯವ ಅಲ್ಲೆಂಬೆ
ಗುಹೇಶ್ವರನೆಂಬವನು ತಾನೆ ತಾನಾಗಿ./946
ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ.
ತಮಂಧ ಗುರಿಯಾಗಿ ಲಯವಾಗಿ ಹೋದವರ ಕಂಡೆ.
ಕಾಮ ಗುರಿಯಾಗಿ ಬೆಂದು ಹೋದವರ ಕಂಡೆ.
ನೀ ಗುರಿಯಾಗಿ ಹೋದವರನಾರನೂ ಕಾಣೆ ಗುಹೇಶ್ವರಾ./947
ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ ?
ಎರಡಕ್ಕೆ ಹೇಳಲಿಲ್ಲಯ್ಯಾ.
ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನಪ್ಪನು ?/948
ದೇಹಭಾವವಳಿದಲ್ಲದೆ ಜೀವಭಾವವಳಿಯದು.
ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು.
ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು.
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು.
ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು.
ಇದು ಕಾರಣ;-
ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ
ಗುಹೇಶ್ವರಲಿಂಗದ ಅರಿವು ಸಾಧ್ಯವಪ್ಪುದು ಕಾಣಾ ಸಿದ್ಧರಾಮಯ್ಯಾ. /949
ದೇಹಿಗೆ ದೇಹಿಯಾಗಿರ್ಪುದರ ಭೇದವನು ಆರು ಬಲ್ಲರು ?
ಹರಿಬ್ರಹ್ಮಾದಿಗಳರಿಯರು, ಮನುಮುನಿಗಳರಿಯರು,
ಸಿದ್ಧಸಾಧಕರರಿಯರು.
ಅರಿವಿಂಗೆ ಅರಿವಾಗಿರ್ಪುದನು ನಿನ್ನ ಅರಿವಿಂದ ಅರಿಯಬಹುದೆ ?
ಗುಹೇಶ್ವರಲಿಂಗವನರಿವಡೆ ನೀನರಿಯದಂತಿರಬೇಕು. /950
ದ್ರವ್ಯ ನೀನು ದ್ರವ್ಯಾರ್ಥ ನೀನು; ಪದ ನೀನು, ಪದಾರ್ಥ ನೀನು.
ಸಕಲ ನೀನು ನಿಷ್ಕಲ ನೀನು.
ಸಕಲ ನಿಷ್ಕಲಾತ್ಮಕ ಪರಿಪೂರ್ಣ ಶಿವನಲ್ಲದೆ ಅನ್ಯ ಬಿನ್ನಭಾವ ಉಂಟೆ ?
ಸಕಲ ನಿಷ್ಕಲ ತತ್ವಂಗಳು; ನಿಮ್ಮೊಳಗೆ ಸಮಾಸವನೆಯ್ದುವೆವೆಂದು
ತಮ್ಮ ತಮ್ಮ ಅಂಗದ ಮೇಲೆ ಸರ್ವಪದಾರ್ಥಂಗಳ ಹೆಸರಿಟ್ಟು
ಹೊತ್ತುಕೊಂಡೈದಾವೆ ನೋಡಾ !
ಅದೆಂತೆಂದಡೆ:
“ದ್ರವ್ಯಾರ್ಥಂ ಚ ಮಹಾದೇವೋ ದ್ರವ್ಯರೂಪೋ ಮಹೇಶ್ವರಃ
ಇತಿ ಮೇ ಭೇದನಂ ನಾಸ್ತಿ ಸರ್ವರೂಪಸ್ಸದಾಶಿವಃ” –
ಇಂತೆಂದುದಾಗಿ-ನಾದ ನೀನು, ಬಿಂದು ನೀನು, ಕಳೆ ನೀನು,
ಕಳಾತೀತ ನೀನು ಗುಹೇಶ್ವರಾ./951
ಧರೆಯ ಮೇಲಣ ಜನಿತಕ್ಕೆ ಉರಗನ ಅಧರಪಾನ.
ನಖಕಂಕಣ (ನ ಖ ಕಂ ಕ ಣ ?) ಮುಖ ಮೂವತ್ತೊಂದು ಶಿರವ ನುಂಗಿತ್ತು ನೋಡಾ !
ಉತ್ತರಾಪಥದ ಕೊಡಗೂಸು ಈಶಾನ್ಯದ ಒಡಲೊಳಗೆ ಅಡಗಿ,
ಸಾಕಾರದ ಸಂಗವ ನುಂಗಿದ ಭಾಷೆಯನರಿಯದ ಮುಗ್ಧೆ !
ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು
ಗುಹೇಶ್ವರಲಿಂಗವು ತ್ರಿಕಾಲ ಪೂಜೆಯ ನುಂಗಿತ್ತು./952
ಧರೆಯ ಮೇಲುಳ್ಳ ಅರುಹಿರಿಯರೆಲ್ಲರು ನೆರಹಿ
ಪರಿಯಾಯಪರೀಕ್ಷೆಯನೊರೆದು, ಬಣ್ಣವ ನೋಡಿ,
ಸರೋವರದ ಪುಷ್ಪದೊಳು ಭರಿತ ಪರಿಮಳ ತುಂಬಿ,
ಪರಮಜ್ಞಾನ ಜ್ಯೋತಿ ಪರಬ್ರಹ್ಮವನು ಮೀರಿ
ಪುರುಷರತ್ನದೊಳಡಗಿ, ಗುಹೇಶ್ವರ ನಿಂದ ನಿಲುವು-
ಮೇರು ಗಗನವ ನುಂಗಿತ್ತು./953
ಧರೆಯ ಮೇಲುಳ್ಳ ಅರುಹಿರಿಯರೆಲ್ಲರೂ
ಮರುಳುಗೊಂಡಾಡುತ್ತಿದ್ದಾರೆ ನೋಡಾ.
ಮಂಜಿನ ಮಡಕೆಯೊಳಗೆ ರಂಜನೆಯ ಭಂಡವ ತುಂಬಿ
ಅಂಜದೆ ಪಾಕವ ಮಾಡಿಕೊಂಡು ಉಂಡು,
ಭಂಡವ ಮಾರುತ್ತಿರ್ಪರು ನೋಡಾ.
ಸಂಜೀವನಿಯ ಬೇರೆ ಕಾಣದೆ ಮರಣಕ್ಕೊಳಗಾದರು
ಗುಹೇಶ್ವರನನರಿಯದ ಭವಭಾರಕರೆಲ್ಲರು./954
ಧರೆಯ ಮೇಲೊಂದು ಅರಿದಪ್ಪ ರತ್ನ ಹುಟ್ಟಿರಲು,
ಅದನರಸಲರಸ ಹೋಯಿತ್ತಯ್ಯಾ.
ನಡುನೀರೊಳಗೆ ಮುಳುಗಿ, ಆಳವರಿದು ನೋಡಿ,
ಕಂಡೆಹೆನೆಂದಡೆ ಕಾಣಬಾರದು.
ಧಾರೆವಟ್ಟಲ ಕಳೆದುಕೊಂಡು ನೀರ ಶೋದಿಸಿ ನೋಡಿದಡೆ
ದೂರದಲ್ಲಿ ಕಾಣಬರುತ್ತಿಹುದು ನೋಡಾ.
ಸಾರಕ್ಕೆ ಹೋಗಿ ಹಿಡಿದುಕೊಂಡೆನೆಂಬ ದಿರರೆಲ್ಲರ ಮತಿಯ
ಬಗೆಯ ನುಂಗಿತ್ತು ಗುಹೇಶ್ವರಾ/955
ಧರೆಯ ಮೇಲೊಂದು ಪಿರಿದಪ್ಪ ಸಂತೆಯ ನೆರವಿಗೆ ಬಂದವರನೇನೆಂಬೆನು !
ಪರಿಪರಿಯ ಭಂಡದ ವ್ಯವಹಾರದೊಳಗೆ ಕೊಡಲಿಲ್ಲ, ಕೊಳಲಿಲ್ಲ.
ವ್ಯಥಾ ವಿಳಾಸವಿದೇನೊ ?
ಅರೆಮರುಳೆಂಬ ಶಿವನು,
ನೆರೆ ಮರುಳೆಂಬ ಜಗವ ಹುಟ್ಟಿಸಿದ ಪರಿಯ ಕಂಡು
ಬೆರಗಾದೆ ಗುಹೇಶ್ವರಾ./956
ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ.
ಬಲೆಯ ಬೀಸುವ ಗಂಡರಾರೂ ಇಲ್ಲ,
ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ.
ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ.
ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು,
ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು.
ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು
ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?)
ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು
ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು.
ಹತ್ತೆ ಸಾರಿದ ಮೃಗವ ತಾನೆಚ್ಚಡೆ
ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು.
ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು
ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು.
ಗುಹೇಶ್ವರಾ ನಿಮ್ಮ ಶರಣ
ಕಟ್ಟಿದಿರ ಬಾಣಸದ ಮನೆಗೆ ಬಂದನು./957
ಧರೆಯಾಕಾಶ ಕೂಡಿ ಜಗವಾದಂತೆ,
ಕಾಯ, ಜೀವ ಕೂಡಿ ಸಾವಯವಾದಂತೆ,
ನಾದ ಬಿಂದು ಕೂಡಿ ಲಿಂಗವಾಯಿತ್ತು.
ಅದೆಂತೆಂದಡೆ:
ನಾದ ಬಿಂದು ಶಕ್ತಿ ರೂಪಾಗಿ,
ಈ ಉಭಯ ಸಂಪುಟದಿಂದ ಲಿಂಗವಾಗಿ,
ಅದು ಕಾಯ ಜೀವದಂತೆ ಕೂಡಿ ಏಕವಾದಲ್ಲಿ
ಆ ಕಾಯದಿಂದ ಜೀವ ವಿಯೋಗವಾಗಿಹುದೇ ಗುಹೇಶ್ವರಾ ?/958
ಧರೆಯಾಕಾಶ ತಾರಾಮಂಡಲ ಸಪ್ತಸಮುದ್ರಂಗಳಿಲ್ಲದಂದು,
ಒಂದು ಮಹಾವೃಕ್ಷವಿದ್ದಿತ್ತಯ್ಯಾ.
ಆ ವೃಕ್ಷವ ಕಂಡು ನಾನು `ಓಂ ನಮಃ ಶಿವಾಯ’ ಎನುತಿದ್ದೆನು.
ಆ ವೃಕ್ಷದಿಂದ ಷಡುಸಾದಾಖ್ಯಂಗಳು ಪುಟ್ಟಿದುವು.
ಆ ಷಡುಸಾದಾಖ್ಯಂಗಳ ನೆಳಲಲ್ಲಿ ಕುಳ್ಳಿರ್ದು
ನಾನು ಬಸವಾ ಬಸವಾ ಬಸವಾ ಎನುತಿರ್ದೆನು ಕಾಣಾ ಗುಹೇಶ್ವರಾ./959
ಧರೆಯಾಕಾಶವಿಲ್ಲದಂದು, ತ್ರೈಮಂಡಲ ನೆಲೆಗೊಳ್ಳದಂದು,
ಹೋಮ ನೇಮ ಜಪ ತಪವಿಲ್ಲದಂದು ನಿಮ್ಮನಾರು ಬಲ್ಲರು ?
ಹರಿ ಬ್ರಹ್ಮಾದಿಗಳಿಗೆ ಅಗೋಚರ, ನಿಲರ್ೆಪ ನಿರಂಜನನಾಗಿ-
ವೇದಂಗಳರಿಯವು, ಶಾಸ್ತ್ರ ಸ್ಮೃತಿಗಳು ನಿಮ್ಮನರಿಯವು.
ಗಗನಕಮಲಕುಸುಮ ಪರಿಮಳದಿಂದತ್ತತ್ತಲು
ಗುಹೇಶ್ವರಾ ನಿಮ್ಮ ನಿಲವನಾರು ಬಲ್ಲರು ?/960
ಧರೆಯೂ ಬ್ರಹ್ಮಾಂಡವೂ ಚಂದ್ರಸೂರ್ಯ ತಾರಾಮಂಡಲವೂ
ಇಲ್ಲಿಂದತ್ತಲೆ ನೋಡಾ.
ನರನಲ್ಲ ಸುರನಲ್ಲ ಭ್ರಾಂತನಲ್ಲ ಶರಣನು,
ಲಿಂಗಸನ್ನಹಿತ ಅಪಾರಮಹಿಮನು.
ಸುರಾಸುರರೆಲ್ಲರು ನಿಮ್ಮ ವರದಲ್ಲಿ ಸಿಲುಕಿದರು !
ಸರಸದೊಳಗಲ್ಲ ಹೊರಗಲ್ಲ ಕೇಳು ಭಾವ ಗುಹೇಶ್ವರ. /961
ಧಾತು ಮಾತು ಪಲ್ಲಟಿಸಿದರೆ, ಗಮನವಿನ್ನೆಲ್ಲಿಯದೊ?
ಧ್ಯಾನ ಮೌನವೆಂಬುದು ತನುಗುಣ ಸಂದೇಹವಯ್ಯಾ.
ಸುಜ್ಞಾನಭರಿತ, ಅನುಪಮಸುಖಿ-ಗುಹೇಶ್ವರಾ ನಿಮ್ಮ ಶರಣನು./962
ಧೂಪ ದೀಪಾರತಿಯ ಬೆಳಗುವಡೆ, ನೀನು ಸ್ವಯಂಜ್ಯೋತಿಪ್ರಕಾಶನು.
ಅರ್ಪಿತವ ಮಾಡುವಡೆ, ನೀನು ನಿತ್ಯತೃಪ್ತನು.
ಅಷ್ಟವಿಧಾರ್ಚನೆಯ ಮಾಡುವಡೆ, ನೀನು ಮುಟ್ಟಬಾರದ ಘನವೇದ್ಯನು.
ನಿತ್ಯನೇಮಂಗಳ ಮಾಡುವಡೆ ನಿನಗೆ ಅನಂತನಾಮಂಗಳಾದವು
ಗುಹೇಶ್ವರಾ. /963
ಧ್ಯಾನ ಆಧ್ಯಾತ್ಮಿಕದಲ್ಲಿ ಕಂಡಹೆನೆಂಬುದು
ಜೀವನಲ್ಲದೆ ಪರಮನಲ್ಲ.
ಜಪ ತಪ ನೇಮ-ನಿತ್ಯಂಗಳಿಂದ ಕಂಡಹೆನೆಂಬುದು
ಪ್ರಕೃತಿಯಲ್ಲದೆ ಸುಚಿತ್ತವಲ್ಲ.
ಭಾವದಿಂದ ಪ್ರಮಾಣಿಸುವುದೆ ಏಕರೂಪು,
ಗುಹೇಶ್ವರಲಿಂಗವು ತಾನೆ. /964
ಧ್ಯಾನ ಸೂತಕ, ಮೌನ ಸೂತಕ, ಜಪಸೂತಕ, ಅನುಷ್ಠಾನ ಸೂತಕ.
ಗುಹೇಶ್ವರನೆಂಬ ಲಿಂಗವನರಿದ ಬಳಿಕ ಸೂತಕ ಹಿಂಗಿತ್ತು,
ಯಥಾ ಸ್ವೇಚ್ಛೆ. /965
ನ ಎಂಬುದೆ ನಂದಿಯಾಗಿ, `ಮ’ ಎಂಬುದೆ ಮಹತ್ತಾಗಿ,
`ಶಿ’ ಎಂಬುದೆ ರುದ್ರನಾಗಿ, `ವಾ’ ಎಂಬುದೆ ಹಂಸೆಯಾಗಿ,
`ಯ’ ಎಂಬುದೆ ಅರಿವಾಗಿ, `ಓಂ’ ಕಾರವೆ ಗುರುವಾಗಿ,
ಸಂಬಂಧವೆ ಅಸಂಬಂಧವಾಗಿ, ಅಸಂಬಂಧವೆ ಸಂಬಂಧವಾಗಿ,
ಎರಡೂ ಒಂದಾಗಿ ಗುಹೇಶ್ವರಲಿಂಗಸಂಬಂದಿ/966
ನಚ್ಚು ಮಚ್ಚಿನ ಸುಖ ಪರಿಣಾಮ ಸನ್ನಹಿತವಾದ ಬಳಿಕ,
ಇನ್ನು ಅನುಭಾವವೆಂಬುದಿಲ್ಲ-ಅಂತಿರಲಿ ನುಡಿಯ ಗಡಣ.
ಶಶಿಧರನಟ್ಟಿದ ಬೆಸನ ಮಾಡಬಂದ ಬಳಿಕ,
ಹೇಳಿದ ಮಣಿಹವ ಮಾಡುತ್ತಿಹುದಲ್ಲದೆ
ಅದು ತನ್ನಲ್ಲಿ ತಾನು ಬೆರಸುವಂದಿಗೆ ಬೆರಸಲಿ;
ಆ ದಿನಕ್ಕೆ ಬಂದು ಹೇಳುವೆವು ನಿರ್ಣಯವ.
ಗುಹೇಶ್ವರಲಿಂಗದ ಆಣತಿ ಬಪ್ಪನ್ನಬರ
ಶಿವಶರಣರೆಲ್ಲರೂ ಸಂಗನಬಸವಣ್ಣ ಸಹಿತ ನಿತ್ಯರಾಗಿ ಇರಿ./967
ನಚ್ಚುಮಚ್ಚಿಂಗೆ ಪೂಜಿಸಿ ನಿಶ್ಚಯವೆಂದೆನಲಿಲ್ಲ.
ತಾನು ಲಿಂಗವೊ ? ಪ್ರಾಣ ಲಿಂಗವೊ ?
ಆವುದು ಲಿಂಗ ? ಬಲ್ಲವರು ನೀವು ಹೇಳಿರೆ
ಅಂಗದಲ್ಲಿ ಅಂ(ಸಂ ?)ಗಿಯಲ್ಲ, ಸಂಗದಲ್ಲಿ ವ್ಯಸನಿಯಲ್ಲ
ಅಂಗವಿಲ್ಲದ ಸಂಗ ಗುಹೇಶ್ವರ ನಿಮ್ಮ ಶರಣ./968
ನಚ್ಚುಮಚ್ಚಿನ ಲಿಂಗವ ಗ್ರಹಿಸಿ, ಮಚ್ಚು ಒಳಗೊಂಡಿತ್ತಯ್ಯಾ.
ಕರ್ಪುರದ ಕರಡಿಗೆಯ ಘಾಸಿಮಾಡಿದಂತಾಯಿತ್ತು.
ಲಿಂಗಾನುಭಾವಿಗಳ ಸಂಗದಿಂದ ನಾನು ಕಣ್ದೆರೆದೆನು ಕಾಣಾ ಗುಹೇಶ್ವರಾ./969
ನಟ್ಟಿರ್ದ ಬೆಟ್ಟಕ್ಕೆ ತಾಗು ತಡೆಯುಂಟೆ ಮರುಳೆ ?
ಆತುರದಲ್ಲಿ ಕಳವಳಿಸಿ, ವ್ಯಾಕುಳದಲ್ಲಿ ಕಳವಳಿಸುತಿಪ್ಪುದೀ ಮನವು.
ಆ ಮನವು ಬೆನ್ನುದೋರದ ಮೊದಲೆ ಘನವ ಬೆಂಬತ್ತಿ ಬಿಡದಿರಬಲ್ಲಡೆ
ತನ್ನಲ್ಲಿ ತ(ಚಿ?)ನ್ಮೂರ್ತಿ ಗುಹೇಶ್ವರನಯ್ಯಾ./970
ನಡೆ ನುಡಿಯಿಲ್ಲದ ಗುರುವ ಕಂಡು
ಉಪದೇಶವ ಪಡೆಯಲೆಂದು ಹೋದಡೆ;
ಒಡನೆ ನುಡಿಯನು ನುಡಿಸಿದಡೆ ಕೇಳನು.
ಕಡೆ ಮೊದಲ ಕಾರ್ಯ ಎಂತಪ್ಪುದೊ ಅಯ್ಯಾ ?
ಮೂಗರ ಮೂಗರ ಪ್ರಸಂಗದಂತೆ ಇದೆ
ಎನ್ನೊಳಗೆ ಅರಿವಿನ ಪರಿಮಳ !
ಹೊರಗೆ ನೋಡಿದಡೆ ಮುಗ್ಧವಾಯಿತ್ತು.
ಇದನೆಂತು ಉಪಮಿಸುವೆ ಅನಿಯಮದ ಬೆಡಗ ?
ಇದು ತನ್ನಿಂದ ತಾನಪ್ಪುದಲ್ಲದೆ, ಬಿನ್ನದಲುಂಟೆ ಗುಹೇಶ್ವರಾ ? /971
ನಡೆದಡೆ ನಡೆಗೆಟ್ಟ ನಡೆಯ ನಡೆವುದಯ್ಯಾ.
ನುಡಿದಡೆ ನುಡಿಗೆಟ್ಟ ನುಡಿಯ ನುಡಿವುದಯ್ಯಾ.
ಒಡಲ ಹಿಡಿದಡೆ ಹಿಡಿಯದೆ ಹಿಡಿವುದಯ್ಯಾ.
ಕೂಡುವಡೆ ಕೇಡಿಲ್ಲದ ಕೂಟವ ಕೂಡುವುದಯ್ಯಾ,
ಗುಹೇಶ್ವರಾ ನಿಮ್ಮಲ್ಲಿ ನಿಲುವುದಯ್ಯಾ./972
ನಡೆದಡೆ ನಿರ್ಗಮನಿ !
ಸುಳಿದಡೆ ಗತಿವಿರಹಿತನನು ಏನೆಂಬೆನು ? ಎಂತೆಂಬೆನು ?
ಅಘಟಿತಘಟಿತನನು, ಏನೆಂಬೆನು ಎಂತೆಂಬೆನು ?
ಅಖಂಡಿತ ಮಹಿಮನನು ಏನೆಂಬೆನು ಎಂತೆಂಬೆನು ?
ಆದಿಯಿಂದತ್ತತ್ತ ಗುಹೇಶ್ವರನ ಶರಣ ಅಲ್ಲಮಯ್ಯನ ಸುಳುಹು
ಜಗಕ್ಕೆ ಪಾವನ !/973
ನಡೆವರಿಗೊಂದು ಬಟ್ಟೆ, ಮನೆಯ ಒಡೆಯರಿಗೊಂದು ಬಟ್ಟೆ.
ನಡೆಯದು ನಡೆಯದು ಹೋ ನಡೆಗೆಟ್ಟಿತ್ತು ನಿಂದಿತ್ತಲ್ಲಾ!
ಗಮನಾಗಮನದ ನುಡಿಯ ಬೆಡಗಿನ ಕೀಲ,
ಮಡಗಿದಾತ ಬಲ್ಲ ಗುಹೇಶ್ವರಾ./974
ನಡೆವಲ್ಲಿ, ನುಡಿವಲ್ಲಿ ಪ್ರಾಣಲಿಂಗವೆಂದೆಂಬರು,
ಕೆಡೆಯಲೊಡನೆ ಹೆಣನದು ಎಂಬರು, ಬೇಗ ಬಾರೆಂಬರು !
ಹಿರಿಯ ಭೂಮಿಯಲ್ಲಿ ನಿಮ್ಮ ಹೆಸರಿಲ್ಲ ಗುಹೇಶ್ವರಾ. /975
ನದೀಜಲ, ಕೂಪಜಲ, ತಟಾಕಜಲವೆಂದಂಬು
ಹಿರಿದು ಕಿರಿದಾದುದನರಿಯರು.
ಬೇರೆ ಮತ್ತೊಂದು ಭಾಷೆ ವ್ರತ ನೇಮಂಗಳ ಹಿಡಿವ
ಶೀಲಸಂಬಂದಿಗಳು ಜಾತ್ಯಂಧರು,
ನಿಮ್ಮನೆತ್ತಬಲ್ಲರು ಗುಹೇಶ್ವರಾ ?/976
ನರರು ಸುರರು ಕಿನ್ನರರು ಮೊದಲಾದವರೆಲ್ಲರೂ
ಪಿಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ,
ನಾನವರ ರೂಹಿಸಿ ಬಲ್ಲೆನೆ ಅಯ್ಯಾ ?
ದೇವಗಣ ರುದ್ರಗಣ ಪ್ರಮಥಗಣ ಮೊದಲಾದವರೆಲ್ಲರೂ
ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ
ನಾನವರ ಭಾವಿಸಿ ಬಲ್ಲೆನೆ ಅಯ್ಯಾ ?
ಸತ್ಯರು ನಿತ್ಯರು ಮುಕ್ತರು ಮಹಾಮಹಿಮರೆಲ್ಲರು
ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ
ನಾನವರ ಅರಿದು ಬಲ್ಲೆನೆ ಅಯ್ಯಾ ?
ಇಂತೀ ತ್ರಿಭಾಂಡವನೊಳಕೊಂಡ ಅಖಂಡಿತ ಪರಿಪೂರ್ಣವಪ್ಪ ಭಾಂಡವೆ,
ತನ್ನ ಇರವೆಂದರಿದ ನಿಜಲಿಂಗೈಕ್ಯನ-ಉಪಮಿಸಲಿಲ್ಲ,
ಉಪಮಿಸಲಿಲ್ಲಾಗಿ ರೂಹಿಸಲಿಲ್ಲ, ರೂಹಿಸಲಿಲ್ಲಾಗಿ ಭಾವಿಸಲಿಲ್ಲ,
ಭಾವಿಸಲಿಲ್ಲಾಗಿ ಅರಿಯಲಿಲ್ಲ !
ಅರಿಯಲಿಲ್ಲದ ಅರಿವೆ ತಾನಾಗಿ, ಗುಹೇಶ್ವರನೆಂಬುದು ಬೇರಿಲ್ಲ./977
ನರಲೋಕದ ನರರುಗಳೆಲ್ಲರು ನರಸಂಸಾರಕ್ಕೊಳಗಾದರು.
ಸುರಲೋಕದ ಸುರರುಗಳೆಲ್ಲರು ಸುರಸಂಸಾರಕ್ಕೊಳಗಾದರು.
ಮುನಿಲೋಕದ ಮುನಿಗಳೆಲ್ಲರು ತಪಃಸಂಸಾರಕ್ಕೊಳಗಾದರು.
ರುದ್ರಲೋಕದ ರುದ್ರಗಣಂಗಳೆಲ್ಲರು ರುದ್ರಪದವೆಂಬ ಸಂಸಾರಕ್ಕೊಳಗಾದರು.
ಲಿಂಗವ ಧರಿಸಿದವರೆಲ್ಲರು ಲಿಂಗಸಂಸಾರಕ್ಕೊಳಗಾದರು.
ಜಂಗಮವ ಪೂಜಿಸಿದವರೆಲ್ಲರು ಸಾಯುಜ್ಯ ಸಂಸಾರಕ್ಕೊಳಗಾದರು.
ಪ್ರಸಾದ ಪಾದೋದಕ ಸಂಬಂದಿಗಳೆಲ್ಲರು ಪ್ರಸಾದ ಸಂಸಾರಕ್ಕೊಳಗಾದರು.
ಗುಹೇಶ್ವರಲಿಂಗದಲ್ಲಿ ಸರ್ವ ಸಂಸಾರವಿರಹಿತ ಚನ್ನಬಸವಣ್ಣಂಗೆ,
ನಮೋ ನಮೋ ಎಂಬೆನು./978
ನವಖಂಡಪೃಥ್ವಿ, ಚತುರ್ದಶಭುವನಗ್ರಾಮದಿಂದತ್ತತ್ತ ಮುನ್ನ ಅನಾದಿಯಲ್ಲಿ,
ಜಂಗಮವೆ ಲಿಂಗವೆಂಬಿರಿ.
ಇದೇನಿ ಭೋ, ಎಡೆಯಲ್ಲಿ ಕೊಲೆಯಾಯಿತ್ತು !
ಭಕ್ತಿ ಹಿಂದುಮುಂದಾಯಿತ್ತು, ರಕ್ಕಸರ ಪರಿಯಾಯಿತ್ತು !
ಇದ ಕಂಡು ಬೆರಗಾದೆ ಗುಹೇಶ್ವರಾ !/979
ನವನಾಳ ಬಿಂದು ಪವನ ಹೃದಯಕಮಲ ಮಧ್ಯದ ದಳವ ಮೆಟ್ಟಿ,
ಗಳಿಗೆ ಗಳಿಗೆಗೆ ಚರಿಸುವ ಪರಮಹಂಸನ
ಆರಿಗೆಯೂ ಅರಿಯಬಾರದು-ಘಮ್ಮುಘಮ್ಮೆನೆ ಸುತ್ತುವನಲ್ಲದೆ !
ಅದೆಂತೆಂದಡೆ:
“ಪೂರ್ವದಲೇ ಭವೇತ್ ಭಕ್ತಿರಾಗ್ನೇಯಾಂ ಚ ಕ್ಷುಧೈವ ಚ
ದಕ್ಷಿಣೇ ಕ್ರೋಧಮುತ್ಪನ್ನಂ ನೈರುತ್ಯಾಂ ಸತ್ಯಮೇವ ಚ
ಪಶ್ಚಿಮೇ ತು ಭವೇತ್ ನಿದ್ರಾ ವಾಯವ್ಯಾಂ ಗಮನಸ್ತಥಾ
ಉತ್ತರಾಯಾಂ ಧರ್ಮಶೀಲಾವೈಶಾನ್ಯಾಂ ವಿಷಯಸ್ತಥಾ
ಅಷ್ಟದಲೇಷು ಮಧ್ಯಸ್ಥಮಾನಚಂದಮಚಲಂ ಶಿವಃ-ಎಂದುದಾಗಿ
ಇಂದು ಅಷ್ಟದಳವ ಮೆಟ್ಟಿ ಚರಿಸುವ ಆ ಪರಮಹಂಸನ
ತಲೆಗಿಂಬ ಮಾಡಿ ನಿಲಿಸಬಲ್ಲ ನಿಮ್ಮ ಶರಣ ಚನ್ನಬಸವಣ್ಣಂಗೆ
ನಾನು ನಮೋ ನಮೋ ಎಂಬೆನು ಗುಹೇಶ್ವರಾ./980
ನವಿರೂ ನೆಳಲೂ ಇಲ್ಲದಂದು, ಷಡುಶೈವರಿಲ್ಲದಂದು
ಬ್ರಹ್ಮಾಂಡ ಭಾಂಡ ಭಾಂಡಾವಳಿಗಳಿಲ್ಲದಂದು
ಪಿಂಡಾಂಡ ಅಂಡ ಪಿಂಡಾವಳಿಗಳಿಲ್ಲದಂದು
ಅಖಂಡಿತ ಜ್ಯೋತಿರ್ಮಯಲಿಂಗ !
ಶರಣನ ಲೀಲೆಯಿಂದಾದ ಏಳು ತೆರದ ಗಣ[ಘನ?] ಪಿಂಡವಂ ಕಂಡು
ಅಖಂಡಿತನಾಗಿ ಬದುಕಿದೆನಯ್ಯಾ ಗುಹೇಶ್ವರಾ./981
ನಾ `ನೀ’ ಎಂಬ ಭೇದ ಅಂದೂ ಇಲ್ಲ, ಇಂದೂ ಇಲ್ಲ
ಸಾಲೋಕ್ಯನಲ್ಲ ಸಾಮೀಪ್ಯನಲ್ಲ ಶರಣ.
ಸಾರೂಪ್ಯನಲ್ಲ ಸಾಯಜ್ಯನಲ್ಲ ಶರಣ.
ಕಾಯನಲ್ಲ ಅಕಾಯನಲ್ಲ
ಗುಹೇಶ್ವರಲಿಂಗ ತಾನೆಯಾಗಿ/982
ನಾ ದೇವನಲ್ಲದೆ ನೀ ದೇವನೆ ?
ನೀ ದೇವನಾದಡೆ ಎನ್ನನೇಕೆ ಸಲಹೆ ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.-
ನಾ ದೇವ ಕಾಣಾ ಗುಹೇಶ್ವರಾ !/983
ನಾ ಸತ್ತೆನೆಂದು ಕೂಗಿದುದುಂಟೆ ?
ಬೈಚಿಟ್ಟ ಬಯಕೆ ಕರೆದುದುಂಟೆ ?
ಹೆಪ್ಪಿಟ್ಟ ಹಾಲು ಸಿಹಿಯಪ್ಪುದೆ ?
ಈ ಮಾತು ಒಪ್ಪವಲ್ಲ ಗುಹೇಶ್ವರಲಿಂಗಕ್ಕೆ./984
ನಾಚಿ ಮಾದುದು ಮಾದುದಲ್ಲ, ನಾಚದೆ ಮಾದುದು ಮಾದುದಲ್ಲ.
ಹೇಸಿ ಮಾದುದು ಮಾದುದಲ್ಲ, ಹೇಸದೆ ಮಾದುದು ಮಾದುದಲ್ಲ.
ಆಲಸಿ ಮಾದುದು ಮಾದುದಲ್ಲ, ಆಲಸದೆ ಮಾದುದು ಮಾದುದಲ್ಲ.
ನಾಚದೆ ಹೇಸದೆ ಆಲಸದೆ ಮಾದಡೆ ಮಾದುದು-ಗುಹೇಶ್ವರಾ./985
ನಾಣ ಮರೆಯ ನಾಚಿಕೆ ಒಂದು ನೂಲ ಮರೆಯಲಡಗಿತ್ತು.
ಬಲ್ಲೆನೆಂಬ ಅರುಹಿರಿಯರೆಲ್ಲಾ ಅಲ್ಲಿಯೇ ಮರುಳಾದರು.
ನೂಲ ಮಾರಿ ಹತ್ತಿಯ ಬಿಲಿಯ ಹೋದರೆ,
ಅದು ಅತ್ತಲೆ ಹೋಯಿತ್ತು ಗುಹೇಶ್ವರಾ./986
ನಾದ ಮುನ್ನವೊ ಬಿಂದು ಮುನ್ನವೊ ?
ಕಾಯ ಮುನ್ನವೊ ಜೀವ ಮುನ್ನವೊ ?
ಜೀವ ಕಾಯದ ಕುಳಸ್ಥಳಂಗಳ ಬಲ್ಲವರು ನೀವು ಹೇಳಿರೆ ?
ಗುಹೇಶ್ವರಾ ನೀನು ಮುನ್ನವೊ ನಾನು ಮುನ್ನವೊ ?
ಬಲ್ಲವರು ನೀವು ಹೇಳಿರೆ ?/987
ನಾದದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು, ಎಲೆ ಮರುಳೆ !
ಬಿಂದು ದಳದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು ಎಲೆ ಮರುಳೆ !
ಮಧ್ಯದಳದ ಉತ್ಪತ್ತಿ ಸ್ಥಿತಿ ಲಯವನು
ಹೇಳಿದಡೇನು ಕೇಳಿದಡೇನು ಎಲೆ ಮರುಳೆ !
ಮುಗಿಲಗಲದ ಅಂಬರ ವಾಯು ಅಗ್ನಿಜಲ ಧರೆಯ ಹೊತ್ತುಕೊಂಡು
ಅವ, ಹೇಳಿದಡೇನು ಕೇಳಿದಡೇನು ಎಲೆ ಮರುಳೆ !
ಗುಹೇಶ್ವರಲಿಂಗದ ಬಾರಿಗೊಳಗಾಗಿ,
ಇವೆಲ್ಲವನುಂಟುಮಾಡಲರಿಯೆನಾಗಿ-ಎನಗಿಲ್ಲವೆನುತಿರ್ದೆನಯ್ಯಾ./988
ನಾದಬಿಂದುಗಳಿಲ್ಲದಂದು ನಿರ್ಭಯನೆಂಬ ಗಣೇಶ್ವರನು,
ಉತ್ಪತ್ತಿ ಸ್ಥಿತಿ ಲಯವಿಲ್ಲದಂದು ಅಕ್ಷಯನೆಂಬ ಗಣೇಶ್ವರನು,
ಓದು ವೇದಂಗಳಿಲ್ಲದಂದು ಓಂಕಾರನೆಂಬ ಗಣೇಶ್ವರನು,
ಯುಗಜುಗಂಗಳಿಲ್ಲದಂದು ಊಧ್ರ್ವಮುಖನೆಂಬ ಗಣೇಶ್ವರನು,
ಗುಹೇಶ್ವರಲಿಂಗವಿಲ್ಲದಂದು ನಿರ್ಮಾಯನೆಂಬ ಗಣೇಶ್ವರನು./989
ನಾನೀನೆಂಬ ಭಾವವಾರಿಂದಾಯಿತ್ತು ಹೇಳಾ ?
ನೀನೆಂಬುದೆ ಅಜ್ಞಾನ, ನಾನೆಂಬುದೆ ಮಾಯಾದಿನ.
ನೀನೆನ್ನದೆ ನಾನೆನ್ನದೆ ಇಪ್ಪ ಸುಖವ, ಬಿನ್ನವಿಲ್ಲದೆ ಅರಿಯಬಲ್ಲಡೆ
ಆ ಸುಖ ನಿಮಗರ್ಪಿತ ಕಾಣಾ ಗುಹೇಶ್ವರಾ./990
ನಾನು ಗುರುಲಿಂಗಜಂಗಮದಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಪಾದೋದಕ ಪ್ರಸಾದದಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಮೂರು ಪ್ರಣವಗಳಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಪುರಾತನರ ಮೇಲುಪಂಕ್ತಿಗಳಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಶರಣರುಗಳಲ್ಲಿ ನಿಷ್ಠೆವಿಡಿದು,
ಬೇಡಿ ಹಾಡಿ ಹೊಗಳಿ ಐದು ಬಗೆಯ ಜಪವ ಜಪಿಸಿ
ಬೇಡಿಕೊಂಡು ಬದುಕಿದೆನಯ್ಯಾ.
ಗುಹೇಶ್ವರಾ ನಿಮ್ಮ ಶರಣ ಬಸವಣ್ಣನ ಸನ್ನಿದಿಯಿಂದ
ನಾನು ಕೃತಾರ್ಥನಾದೆನಯ್ಯಾ. /991
ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ ?
ಹಿರಿದು ಕಿರಿದೆಂದಲ್ಲಿ ಏನಾಯಿತ್ತು ?
ಹಿರಿದು ಕಿರಿದೆಂಬ ಶಬ್ದವಡಗಿದರೆ,
ಆತನೆ ಶರಣ ಗುಹೇಶ್ವರಾ./992
ನಾನು ಭಕ್ತನಾದಡೆ, ನೀನು ದೇವನಾದಡೆ,
ನೋಡುವೆವೆ ಇಬ್ಬರ ಸಮರಸವನೊಂದು ಮಾಡಿ?
ಭೂಮಿಯಾಕಾಶವನೊಂದು ಮಾಡಿ,
ಚಂದ್ರ-ಸೂರ್ಯರಿಬ್ಬರ ತಾಳವ ಮಾಡಿ ಆಡುವೆವೆ?
ಜಡೆಯ ಮೇಲಣ ಗಂಗೆ ನೀನು ಕೇಳಾ,
ತೊಡೆಯ ಮೇಲಣ ಗಾರಿ ನೀನು ಕೇಳಾ,
ಗುಹೇಶ್ವರನೆಂಬ ಲಿಂಗವು ಎನ್ನ ಕೈಯಲ್ಲಿ ಸತ್ತಡೆ,
ರಂಡೆಗೂಳನುಂಬುದು ನಿಮಗೆ ಲೇಸೆ? /993
ನಾನು ಸಜ್ಜೀವವೊ, ನೀನು ಸಜ್ಜೀವವೊ ?
ನಿನಗೆಯೂ ಎನಗೆಯೂ ಸಂಬಂಧವಯ್ಯಾ,
ನಿನ್ನನೆಂತು ಪ್ರಾಣಲಿಂಗವೆಂದು ಪೂಜಿಸುವೆನಯ್ಯಾ ?
ಎನ್ನ ಪ್ರಸಾದವು ನಿನಗೆ ನಿನ್ನ ಪ್ರಸಾದವು ಎನಗೆ.
ಎನಗೆಯೂ ನಿನಗೆಯೂ ಏಕಪ್ರಸಾದ ಕಾಣಾ ಗುಹೇಶ್ವರಾ./994
ನಾನೆಂಬ ಅಹಂಕಾರ ತಲೆದೋರಿದಲ್ಲಿ
ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು.
ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು.
ಜ್ಞಾನಜ್ಯೋತಿ ಕೆಡಲೊಡನೆ,
ನಾ ಬಲ್ಲೆ,-ಬಲ್ಲಿದರೆಂಬ ಅರುಹಿರಿಯರೆಲ್ಲರು
ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ./995
ನಾನೆಂಬ ಅಹಂಕಾರದಲ್ಲಿ ನಾನುಂಡೆನಾದಡೆ,
ಎನಗದೆ ಭಂಗ.
ಸ್ತುತಿ-ನಿಂದೆಗೆ ನೊಂದೆನಾದಡೆ
ಅಂಗೈಯಲ್ಲಿರ್ದ ಗುಹೇಶ್ವರಲಿಂಗಕ್ಕೆ ದೂರ ಕಾಣಾ
ಸಂಗನಬಸವಣ್ಣಾ./996
ನಾನೆಂಬುದು ಪ್ರಮಾಣ, ನೀನೆಂಬುದು ಪ್ರಮಾಣ.
ಸ್ವಯವೆಂಬುದು ಪ್ರಮಾಣ, ಪರವೆಂಬುದು ಪ್ರಮಾಣ.
ಪ್ರಮಾಣವೆಂಬುದು ಪ್ರಮಾಣ,
ಗುಹೇಶ್ವರನೆಂಬುದು ಅಪ್ರಮಾಣ ! /997
ನಾಬಿಮಂಡಲದ ಉದಯವೆ ಉದಯ.
ಮಧ್ಯನಿರಾಳದ ನಿಲವಿನ ಪರಿಯ ನೋಡಾ !
ಪವನಶೂಲದ ಮೇಲೆ ಪರಿಣಾಮವಯ್ಯಾ.
ಊಧ್ರ್ವ ಮುಖದಲ್ಲಿ ಉದಯವಾಯಿತ್ತ ಕಂಡೆ.
ಮಿಂಚುವ ತಾರಕೆ ಇದೇನೊ ಗುಹೇಶ್ವರಾ./998
ನಾಬಿಮಂಡಲದೊಳಗೆ ಈರೈದು ಪದ್ಮದಳ,
ಸದಮದ ಗಜಮಸ್ತಕದೊಳಗೆ ತೋರುತ್ತದೆ.
ಅಕಾರ ಉಕಾರ ಮಕಾರ ಮರ್ಮಸ್ಥಾನ ತ್ರಿಕೂಟಸ್ಥಾನದ
ಸಮರಸದ ಸುಖದಲ್ಲಿ ಬೆಳೆದ ಕಂದ ಮೂಲಾದಿಗಳ,
ಹೊಸರಸದ ಅಮೃತವನು ಓಸರಿಸಿ,
ದಣಿಯುಂಡ ತೃಪ್ತಿಯಿಂದ ಸುಖಿಯಾದೆನು ಗುಹೇಶ್ವರಾ./999
ನಾಮ ನೇಮಂಗಳಾಗಿಪ್ಪ ಹಿರಿಯರು ಆದಿಕುಳವನರಿಯರಾಗಿ,
ಇದೇನಯ್ಯಾ, ಸೂಕ್ಷ್ಮದ ಗಂಟಲಗಾಣವಿದೇನಯ್ಯಾ ?
ನೆಳಲ ರೂಹಿಂಗೆ ಬಯಲು ಸಯವೆ
ಅಪಾಯರಹಿತ ಗುಹೇಶ್ವರಾ ?/1000