Categories
ವಚನಗಳು / Vachanagalu

ಅಲ್ಲಮ ಪ್ರಭು ವಚನಗಳು

ಸನಕ ಸನಂದಾದಿ ಮುನಿಜನಂಗಳೆಲ್ಲರೂ, ಭಸ್ಮಾಂಗಿಗಳೆಲ್ಲರೂ-
ಇವರು ಸತ್ಯರೆಂಬುದು ಹುಸಿ, ನಿತ್ಯರೆಂಬುದು ಹುಸಿ,
ಸತ್ತರೆಂಬುದು ದಿಟ ಗುಹೇಶ್ವರಾ ! /1501
ಸಮತೆ ಎಂಬ ಕಂಥೆ ತೊಟ್ಟು, ಸುಬುದ್ಧಿ ಎಂಬ ಟೊಪ್ಪರವನಿಕ್ಕಿ,
ವಿಷಯವೆಂಬ ಹಾವುಗೆಯ ಮೆಟ್ಟಿ, ತಮಂಧವೆಂಬ ಕುಳಿಯ ಬೀಳದೆ,
ಕ್ರೋಧವೆಂಬ ಕೊರಡ ಎಡಹದೆ, ಮದವೆಂಬ ಚೇಳ ಮೆಟ್ಟದೆ
ಗುಹೇಶ್ವರನ ಶರಣ ಬಂದೆನು,
ಭಕ್ತಿಬಿಕ್ಷವನಿಕ್ಕೈ ಸಂಗನಬಸವಣ್ಣಾ./1502
ಸಮಯವ ಬಿಡಬಹುದೆ ಅಯ್ಯಾ ?
ಅಟ್ಟ ಅಶನವಾದಡೂ ಕಲಸುವದಕ್ಕೆ ಕೈ, ಉಂಬುದಕ್ಕೆ ಬಾಯಿ ಬೇಕು.
ಉಂಬುದಿಲ್ಲಾ ಎಂದು ಸಂದೇಹವ ಹರಿದಲ್ಲಿ
ಸಮಯ ಒಂದೂ ಇಲ್ಲ ಎನಬೇಕು.
ಗುಹೇಶ್ವರನೆಂಬನ್ನಕ್ಕ,
ಬಂಧ-ಮೋಕ್ಷವನರಿಯಬೇಕು ಘಟ್ಟಿವಾಳಯ್ಯಾ./1503
ಸಮುದ್ರದೊಳಗೆ ನೊರೆ ತೆರೆಗಳು ನೆಗಳ್ದವೆಂದಡೆ
ತಾ ಸಮುದ್ರದಿಂದ ಅನ್ಯವಪ್ಪವೆ ?
ನಿರ್ವಿಕಾರ ನಿತ್ಯ ನಿರಂಜನ ನಿರ್ಗುಣ ಪರಿಪೂರ್ಣ ನಿರ್ವಿಕಲ್ಪ
ಪರಬ್ರಹ್ಮಶಿವನಿಂದ ಜಗತ್ತು ಉದಯಿಸಿತ್ತು ಎಂದಡೆ
ಶಿವನಿಂದ ಅನ್ಯವೆನಬಹುದೆ ?
ಇಂತಪ್ಪ ಅರಿವು, ನೀವು ಕೊಟ್ಟ ಸಮ್ಯಕ್ ಜ್ಞಾನಕ್ಕೆ
ಅರಿದಪ್ಪುದಯ್ಯಾ ಗುಹೇಶ್ವರಾ/1504
ಸರೋವರದ ಕಮಲದಲ್ಲಿ ತಾನಿಪ್ಪನು,
ಕೆಂದಾವರೆಯ ಪುಷ್ಪದ ನೇಮವೆಂತೊ?
ಹೂವ ಮುಟ್ಟದೆ ಕೊಯ್ವ ನೇಮವೆಂತೊ?
ಮುಟ್ಟದೆ ಕೊಯ್ವ ಮುಟ್ಟಿದ ಪರಿಮಳ
ಗುಹೇಶ್ವರಾ ನಿಮ್ಮ ಶರಣನು./1505
ಸರ್ಪ ಸಂಸಾರಿಯೊಡನಾಡಿ ಕಟ್ಟುವಡೆಯಿತ್ತು,
ಮನವ ತಮಂಧ ಬಿಡದು ಮನದ ಕಪಟ ಬಿಡದು.
ಸಟೆಯೊಡನೆ ದಿಟವಾಡೆ ಬಯಲು ಬಡಿವಡೆಯಿತ್ತು !
ಕಾಯದ ಸಂಗದ ಜೀವವುಳ್ಳನ್ನಕ್ಕರ,
ಎಂದೂ ಭವ ಹಿಂಗದು ಗುಹೇಶ್ವರಾ./1506
ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ.
ನಾದ ಬಿಂದು ಮಹೇಶ್ವರಸ್ಥಲ.
ಕಳೆ ಬೆಳಗು ಪ್ರಸಾದಿಸ್ಥಲ.
ಅರಿವು ನಿರವಯವು ಪ್ರಾಣಲಿಂಗಿಸ್ಥಲ.
ಜ್ಞಾನ ಸುಜ್ಞಾನ ಶರಣಸ್ಥಲ.
ಭಾವವಿಲ್ಲದ ಬಯಲು ಬಯಲಿಲ್ಲದ ಭಾವ ಆಗಮ್ಯದ ಐಕ್ಯಸ್ಥಲ-
ಇಂತೀ ಷಡುಸ್ಥಲದ ಕೊರಡ ಮೆಟ್ಟಿ ನಿಂದಂಗೆ
ಹೆಸರಿಲ್ಲ ಕುರುಹಿಲ್ಲ ತನಗೆ ತಾನಿಲ್ಲ ಗುಹೇಶ್ವರಾ./1507
ಸರ್ವಸುಯಿಧಾನಿ ಎಂದೆನಿಸಿಕೊಳ್ಳಬಲ್ಲಡೆ,
ಬಂದ ಕಾಮ ಕ್ರೋಧವ ಲಿಂಗಕ್ಕರ್ಪಿತವ ಮಾಡಬೇಕು.
ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನ
ಹೊರಳಿ ಹೋಗಬಾರದು!
ಶಿವಾಚಾರದ ಧಾರೆ ಮೇರೆ ಮುಟ್ಟದ ಮುನ್ನ,
ಅರ್ಪಿತವ ಮಾಡಬಲ್ಲಡೆ;
ಬಿನ್ನಭಾವವೆಲ್ಲಿಯದೊ-ಗುಹೇಶ್ವರಾ?/1508
ಸರ್ವಾಂಗ ಲಿಂಗಸ್ವಾಯತವಾದ ಶರಣಂಗೆ,
ದೇಹ ದಹನವಾಗಲಾಗದು, ನಿಕ್ಷೇಪಿಸದೆ ಇರಲಾಗದು
ಸಂಸಾರಸಂಗದ ಕಷ್ಟವ ನೋಡಾ !
ಅನಾಹತದಲ್ಲಿ ನಿರೂಪ ಸ್ವಾಯತ,
ಗುಹೇಶ್ವರಾ, ನಿಮ್ಮ ಶರಣರಂತಹರಿಂತಹರೆಂದಡೆ,
ನಾಯಕನರಕ./1509
ಸರ್ವಾತ್ಮ ಚೈತನ್ಯವಪ್ಪ ಜಂಗಮದ ಪರಿಯ ನೋಡಾ:
ಅಖಂಡಬ್ರಹ್ಮದ ಬಯಲೆಲ್ಲಾ ತಾನಾಗಿ, ಸುಳಿಯಲೆಡೆಯಿಲ್ಲದೆ ನಿರ್ಗಮನಿಯಾದಲ್ಲಿ
ಒಂದಾಸೆಯೊಳಗಿಲ್ಲದ ಅವಿರಳ ಜ್ಞಾನಿ !
ಕುರಿತೊಂದಕ್ಕೆ ಸುಳಿವವನಲ್ಲ, ಭಕ್ತಿಗಮ್ಯನು,
ಉಳಿದ ಗಮನದ ತುರೀಯವಿಲ್ಲದೆ ತನ್ನ ನಿರ್ಗಮನದ ಇರವು !
ಚತುರಾಕಾರದ ಭೂಮಿಯೆ ಸುಖತಲ್ಪ ಮಂಚ, ಆಕಾಶವೆ ಮೇಲುಕಟ್ಟು,
ಚಂದ್ರಸೂರ್ಯರೆ ಉಭಯ ಭಾಗದಲ್ಲಿ ಬೆಳಗುವ ಜ್ಯೋತಿ !
ಪರಿಣಾಮವೆ ತೃಪ್ತಿ, ದಿಕ್ಕುಗಳೆ ವಸನ, ಸದ್ಗುಣವಾಸನೆಯೆ ಪರಿಮಳ !
ನಕ್ಷತ್ರಂಗಳೆ ಪುಷ್ಪ, ಶಿವತತ್ವಕಾಂತಿಯೆ ಆವರಣ
ತ್ರಿಗುಣಕೂಟವೆ ತಾಂಬೂಲ; ಜ್ಞಾನಶಕ್ತಿಯ ಸಂಗ
ಪ್ರಣವನಾದಗೀತ[ದ] ಕೇಳಿಕೆ,-
ಇಂತೀ ಅಷ್ಟಭೋಗೈಶ್ವರ್ಯದಲ್ಲಿಪ್ಪ ರಾಜಯೋಗಿ ಚರಲಿಂಗ,
ನಿಶ್ಚಿಂತ ನಿರ್ವಾಣಿ ನಿರಂಜನ ನಿರ್ಮಾಯ ನಿರ್ವ್ಯಸನಿ ಪರಮಜಂಗಮ !
ಇಂತಲ್ಲದೆ-ಕಾಯದಿಚ್ಛೆಗೆ ಸುಳಿದು ಕಳವಳಿಸಿ
ತ್ರಿವಿಧಕ್ಕೆ ಬದ್ಧರಪ್ಪವರೆಲ್ಲಜಗತ್ಪಾವನರಪ್ಪರೆ ಹೇಳಾ ಗುಹೇಶ್ವರಾ ?/1510
ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು.
ನಿರಾಳದಿಂದ ನಿರವಯವಾಯಿತ್ತು, ನಿರವಯದಿಂದ ಅನಾದಿಯಾಗಿತ್ತು.
ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ.
ಆ ಶರಣನ ಮೂರ್ತಿಯಿಂದ ಸದಾಶಿವನಾದ,
ಆ ಸದಾಶಿವನ ಮೂರ್ತಿಯಿಂದ ಶಿವನಾದ,
ಆ ಶಿವನ ಮೂರ್ತಿಯಿಂದ ರುದ್ರನಾದ, ಆ ರುದ್ರನ ಮೂರ್ತಿಯಿಂದ ವಿಷ್ಣುವಾದ.
ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ.
ಆ ಬ್ರಹ್ಮನ ಮೂರ್ತಿಯಿಂದಾದವು ಸಕಲ ಜಗತ್ತುಗಳೆಲ್ಲಾ-
ಇವರೆಲ್ಲ ನಮ್ಮ ಗುಹೇಶ್ವರನ ಕರಸ್ಥಲದ ಹಂಗಿನಲ್ಲಿ ಹುಟ್ಟಿ ಬೆಳೆದರು/1511
ಸಹಜವ ನುಡಿದಡೆ ಸೇರುವರಿಲ್ಲ ಕಾಣಿರಣ್ಣಾ.
ಅಸಹಜಕ್ಕಲ್ಲದೆ ಲೋಕ ಭಜಿಸದು.
ಕೆರೆಯ ಕಟ್ಟಿಸುವನ (ಕಟ್ಟುವನ?) ಕಂಡು ಒಡ್ಡರಾಮಯ್ಯನೆಂದಡೆ
ಮುಳಿಸಿನಿಂದ ಲಿಂಗತನುವ ನೋಯಿಸುವರೆ ?
ನಮ್ಮ ಗುಹೇಶ್ವರಲಿಂಗವು ಜಗದೊಳಗೆ ಪರಿಪೂರ್ಣವಾದ ಕಾರಣ,
ಶರಣರ ನೋವು ಮರಳಿ, ಪಾತಕರ ತಾಗಿದಡೆ,
ಅಲ್ಲಯ್ಯ ನೋಡಿ ನಗುತಿರ್ದನು/1512
ಸಹಭಾಜನ ಸಹಭೋಜನವೆಂದೆಂಬರು.
ಭಾಜನವಾವುದು ಭೋಜನವಾವುದು ಎಂದರಿಯರು.
ಭಾಜನವೆ ಅಂಗ, ಭೋಜನವೆ ಲಿಂಗ !
ಭಾಜನಸಹಿತ ಭೋಜನಮಾಡುವ ಹಿರಿಯರು,
ಭಾಜನವನಿರಿಸಿ ಹೋದಡೆ ಅದೆ ಭಂಗ-ಗುಹೇಶ್ವರಾ/1513
ಸಾಗರದೊಳಗಿಪ್ಪ ಪ್ರಾಣಿಗಳು,
ಬೇರೆ ಮತ್ತೊಂದೆಡೆಯಲ್ಲಿ ಇರಬಲ್ಲವೆ ?
ಭವಸಾಗರದೊಳಗಿಪ್ಪ ಜೀವಿಗಳಿಗೆ ಅದೇ ಗತಿಯಲ್ಲದೆ
ಬೇರೆ ಮತ್ತೊಂದೆಡೆಯುಂಟೆ ?
ಗುಹೇಶ್ವರನ ಲೀಲೆ ಜಗನ್ಮಯವಾದಡೆ
ನಾನು ಬೆರಗಾದೆನು !/1514
ಸಾವ ಜೀವಕ್ಕೆ ಗುರು ಬೇಡ, ಸಾಯದ ಜೀವಕ್ಕೆ ಗುರು ಬೇಡ.
ಗುರುವಿಲ್ಲದೆ ಕೂಡಲು ಬಾರದು.
ಇನ್ನಾವಠಾವಿಂಗೆ ಗುರು ಬೇಕು ?
ಸಾವು ಜೀವ ಸಂಬಂಧದಠಾವ ತೋರಬಲ್ಲಡೆ
ಆತನೆ ಗುರು-ಗುಹೇಶ್ವರಾ/1515
ಸಾವನ್ನಕ್ಕರ ಶ್ರವವ ಮಾಡಿದಡೆ, ಇನ್ನು ಕಾದುವ ದಿನವಾವುದು ?
ಬಾಳುವನ್ನಕ್ಕರ ಭಜಿಸುತ್ತಿದ್ದಡೆ, ತಾನಹ ದಿನವಾವುದು ?
ಅರ್ಥವುಳ್ಳನ್ನಕ್ಕರ ಅರಿವುತ್ತಿದ್ದಡೆ, ನಿಜವನೆಯ್ದುವ ದಿನವಾವುದು ?
ಕಾರ್ಯಕ್ಕೆ ಬಂದು, ಆ ಕಾರ್ಯ ಕೈಸಾರಿದ ಬಳಿಕ
ಇನ್ನು ಮತ್ರ್ಯಲೋಕದ ಹಂಗೇಕೆ ?
ತನಿರಸ ತುಂಬಿದ ಅಮೃತಫಲ ಒಮ್ಮಿಗೆ ತೊಟ್ಟುಬಿಡುವುದು ನೋಡಿರೆ,
ದೃಷ್ಟಾಂತವ !
ಬಸವಣ್ಣ ಚೆನ್ನಬಸವಣ್ಣ ಮೊದಲಾದ ಪ್ರಮಥರು
ಗುಹೇಶ್ವರಲಿಂಗದಲ್ಲಿ ನಿಜವನೈದಿ ನಿಶ್ಚಿಂತರಾಗಿರಯ್ಯಾ !/1516
ಸಾವಿರದ ಕಮಲದಲ್ಲಿ ತಾನಿಪ್ಪನು,
ಕೆಂದಾವರೆಯ ಪುಷ್ಪದ ನೇಮವೆಂತೊ ?
ಪುಷ್ಪ ಮುಟ್ಟಿ ಕೊಯ್ವ ನೇಮವೆಂತೊ ?
ಮುಟ್ಟಿದ ಪರಿಮಳವ ಮುಟ್ಟದೆ ಕೊಯ್ದ
ಗುಹೇಶ್ವರಾ-ನಿಮ್ಮ ಶರಣ/1517
ಸಾಸವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ.
ಗಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ.
ತನ್ನನ್ನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ,
ಬಿನ್ನಾಣ ತಪ್ಪಿತ್ತು ಗುಹೇಶ್ವರಾ./1518
ಸಾಸಿರದೆಂಟನೆಯ ದಳದಲ್ಲಿ ಖೇಚರಿ ಚಲ್ಲಣಗಟ್ಟಿ,
ವಾಸುಗಿಯ ಫಣಾಮಣಿ ಪ್ರಜ್ವಲಿಸುವುದ ಕಂಡೆ.
ಅಸುರರೆಲ್ಲ ತಮತಮಗಂಜಿ ಓಸರಿಸಿ ಮುಂದೆ ನಡೆವಲ್ಲಿ,
ನಾಸಿಕ ಮನವ ಮುಸುಕುವುದ ಕಂಡೆ,
ತಾ ಸುಖಸ್ವರೂಪನಾದ; ಸುಖ ಮುಖಪ್ರವೇಶದಿಂದ!
ಗೋಸಾಸಿರ ನಡೆಗೆಟ್ಟವು ಗುಹೇಶ್ವರಾ, ನಿಮ್ಮುವ ನೆರೆದೆನಾಗಿ./1519
ಸಿಡಿಲೊಡನೆ ಕಾದುವಂಗೆ ಕೊಡೆಯೊಂದು ಮರೆಯೆ ?
ಪರ್ವತವ ಹೊರುವಂಗೆ ಸಿಂಬಿಯೊಂದು ಸಹಾಯವೆ ?
ಸಕ್ಕರೆಯ ಸವಿವುದಕ್ಕೆ ಬೇರೊಂದು ಪದಾರ್ಥವೆ ?
ಗುಹೇಶ್ವರನ ಅರಿವುದಕ್ಕೆ ಕುರುಹು ಮುನ್ನೇಕೆ ?/1520
ಸಿದ್ಧರಾಮಯ್ಯನನುವ ನಿರ್ಬುದ್ಧಿ ಮನುಜರು ಎತ್ತಬಲ್ಲರೊ,
ಸದ್ಯೋಜಾತವದನನೆ ಬಲ್ಲ.
ಪಂಚಭೂತವ ಮಾಡಿದ ಘನಕ್ಕೆ ಘನವ ತೋರಿದ
ಫಣಿಯ ಮಣಿಯ ತೊಡಗಿದ
ಚತುರ್ದಶಭುವನದ ಹವಣನಾರು ಬಲ್ಲರೊ ?
ಒಳಗು ಹೊರಗುವ ತೋರಲಿಲ್ಲ !
ಮನದ ಕೊನೆಯಲ್ಲಿ ಬೆಳಗುತಿಪ್ಪ ಗುಹೇಶ್ವರಲಿಂಗದಲ್ಲಿ
ಸಿದ್ಧರಾಮಯ್ಯದೇವರು ತಾನೆ !/1521
ಸಿದ್ಧಿಗಳೊಡನೆ ಕೂಡಿದ ಸಿದ್ಧ ಪುರುಷರೂ ಸರಿಯಲ್ಲ.
ಲಾವಣ್ಯದೊಡನೆ ಕೂಡಿದ ಜಯಂತ ಮನ್ಮಥ ವಸಂತರೂ ಸರಿಯಲ್ಲ.
ಕಲ್ಪವೃಕ್ಷ ಕಾಮಧೇನು ಚಿಂತಾಮಣಿ ಭದ್ರಪೀಠ ಮೊದಲಾದ
ಮಹದೈಶ್ವರ್ಯವುಳ್ಳ ದೇವೇಂದ್ರನೂ ಸರಿಯಲ್ಲ.
ದೇವೇಂದ್ರನ ಮೇಲೆ ಕೋಟ್ಯನುಕೋಟಿ ಮೊದಲಾದ
ಹರಿ ವಿರಿಂಚ್ಯಾದಿಗಳ ಸಂಪದವೂ ಸರಿಯಲ್ಲ.
ಶ್ರುತಿ ವಿದ್ಯದೊಡನೆ ಕೂಡಿದ ವ್ಯಾಸ ದಕ್ಷಾದಿಗಳೂ ಸರಿಯಲ್ಲ.
ಸಪ್ತಕೋಟಿ ಮಹಾಮಂತ್ರಂಗಳ ಬಲ್ಲಂತಹ ಮಹಾಮುನಿಗಳೂ ಸರಿಯಲ್ಲ.
ಮಹಾರಾಜಯೋಗದೊಡನೆ ಕೂಡಿದ ಮನುಮಾಂಧಾತರೂ ಸರಿಯಲ್ಲ.
ಮಹಾಲಿಂಗದೊಡನೆ ಕೂಡಿದ ಶಾಂಭವಯೋಗಕ್ಕೆ ಆವಾವ ಪದವೂ ಸರಿಯಲ್ಲ.
ಈ ಶಾಂಭವಯೋಗವಾರಲ್ಲಿ ಸ್ಥಾವರವಾಗಿದ್ದಿತ್ತು, ಅವರಲ್ಲಿ ಸರ್ವಲಕ್ಷಣಂಗಳು,
ಸರ್ವ ವಿಚಿತ್ರಂಗಳು, ಸರ್ವ ಸುಖಂಗಳು ಸರ್ವ ಭಕ್ಷ್ಯಂಗಳು,
ಸರ್ವೈಶ್ವರ್ಯಂಗಳು ಸರ್ವ ಪದಂಗಳು ಸರ್ವ ಸಿದ್ಧಿಗಳು
ಸರ್ವ ಕ್ರಮಂಗಳು ಸರ್ವ ಕರ್ತೃತ್ವಮುಂಟು.
ಪ್ರಕೃತಿಯೋಗವಂ ಮಾಡುವ ನರಸುರಾಸುರರು
ಮೂಲಪ್ರಕೃತಿಯೋಗವ ಮಾಡುವ ಮನು ಮಾಂಧಾತರು ತೃಣ ಮಾತ್ರವು.
ನಿತ್ಯನಿಜಶಿವಸ್ವರೂಪವಾದ ಶಾಂಭವ ಯೋಗಿಗಳಿಗೆ
ಸರ್ವಯೋಗಂಗಳು ತೃಣಮಾತ್ರವು-ಗುಹೇಶ್ವರಲಿಂಗವನರಿದರಾಗಿ./1522
ಸಿರಿಯಾಳ-ಚಂಗಳೆಯರಂತೆ ಶಿಶುವಧೆಯ ಮಾಡಿದವನಲ್ಲ,
ನಂಬಿ-ಬಲ್ಲಾಳರಂತೆ ಕಾಮುಕತನವ ಮಾಡಿದವನಲ್ಲ,
ಬೊಮ್ಮಯ್ಯ ಕಣ್ಣಪ್ಪನವರಂತೆ ಜೀವಹಿಂಸೆಯ ಮಾಡಿದವನಲ್ಲ.
ಗುಹೇಶ್ವರಾ ನಿಮ್ಮ ಶರಣರಿಗಿಕ್ಕಿದ ತೊಡವು ಸಂಗನಬಸವಣ್ಣ !/1523
ಸೀಮೆಯಿಲ್ಲದ
ನಿಸ್ಸೀಮೆಯಲ್ಲಿ ಅಡಿಯಿಡುವ ಪರಿ ಎಂತಯ್ಯಾ ?
ಕ್ರೀ ಇಲ್ಲದ ನಿಃಕ್ರೀಯಲ್ಲಿ ನಿಜವ ಒಡಗೂಡು ಪರಿ ಇನ್ನೆಂತೊ ?
ಮೊದಲಿಲ್ಲದೆ ಲಾಭ ಉಂಟೆ ? ಇದುಕಾರಣ-
ತನ್ನ ಹರಿವ ಮನವ ನಿಲ್ಲೆಂದು ನಿಲಿಸಿ,
ಜಿಹ್ವೆ ಗುಹ್ಯಾಲಂಪಟವ ಕೆಡಿಸಿ,
ಕ್ರಿಯಾ ಜ್ಞಾನ ಸಂಬಂಧವಾದಲ್ಲದೆ ಶರಣರು ಮೆಚ್ಚರು.
ಇಂತಿವನರಿಯದೆ;
ಆಸೆ ಎಂಬ ಹೇಸಿಕೆಯ ಮೇಲೆ ವೇಷವೆಂಬ ಹೆಣನ ಹೊತ್ತು
ಹೇಸದೆ ಸತ್ತರಲ್ಲಾ ಹಿರಿಯರು-ಗುಹೇಶ್ವರಾ./1524
ಸುಖವ ಬಲ್ಲಾತ ಸುಖಿಯಲ್ಲ, ದುಃಖವ ಬಲ್ಲಾತ ದುಃಖಿಯಲ್ಲ.
ಸುಖ-ದುಃಖವೆರಡನೂ ಬಲ್ಲಾತ ಜ್ಞಾನಿಯಲ್ಲ.
ಹುಟ್ಟದ ಮುನ್ನ ಸತ್ತವರ ಕುರುಹ ಬಲ್ಲಡೆ,
ಬಲ್ಲ ಗುಹೇಶ್ವರ./1525
ಸುಖವನರಿಯದ ಹೆಣ್ಣು ಸೂಳೆಯಾದಳು,
ಲಿಂಗವನರಿಯದ ಭಕ್ತ ಶೀಲವಂತ ಪ್ರಪಂಚಿಯಾದ.
ಈ ಸೂಳೆಗೆ ಸುಖವುಂಟೆ ? ಈ ಶೀಲಕ್ಕೆ ಗತಿಯುಂಟೆ ?
ಈ ಉಭಯರುಗಳು ಕೆಟ್ಟ ಕೇಡ ನೋಡಾ ಗುಹೇಶ್ವರಾ./1526
ಸುಖವಿಲ್ಲ ಸೂಳೆಗೆ ಪಥವಿಲ್ಲ ಶೀಲಕ್ಕೆ
ಮಾಡಲಾಗದು ನೇಮವ, ನೋಡಲಾಗದು ಶೀಲವ.
ಸತ್ಯವೆಂಬುದೆ ಸತ್ಶೀಲ,-ಗುಹೇಶ್ವರಲಿಂಗವನರಿಯ ಬಲ್ಲಂಗೆ !/1527
ಸುತ್ತಲಿಲ್ಲದ ವ್ಯಾಧ ಸುಳಿಯಲಿಲ್ಲದ ಮೃಗವು.
ಒತ್ತಿದನು ಆ ಮೃಗವ ಇರುಬಿನಲ್ಲಿಗೆ ಅಯ್ಯಾ.
`ಸೋವೋವ’ `ಸೋವೋವ’ ಎಂದೆನುತ್ತ ಒತ್ತಿದ ಮೃಗವು
ಇರುಬುಗೊಂಡಿತ್ತು.
ಇರುಬಿನ ಕುಳಿಯೊಳಗೆ ಕೊಲ್ಲದೆ ಕೊಂದನಲ್ಲಾ ಮೃಗವನು.
ಅಳಿಯದೆ ಅಳಿದುದಲ್ಲಾ !
ಮಾಡಲಿಲ್ಲದ ಸಯದಾನ, ನೀಡಲಿಲ್ಲದ ಬೋನ
ಅರ್ಪಿತವಿಲ್ಲದ ತೃಪ್ತಿ; ಗುಹೇಶ್ವರಲಿಂಗಕ್ಕೆ./1528
ಸುತ್ತಿಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ.
ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ.
ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.
ನಿಚ್ಚಕ್ಕಿನ ಗಮನವಂದಂದಿಗೆ;
ಅತ್ತಲಿತ್ತ ಹರಿವ ಮನವ ಚಿತ್ರದಲಿ ನಿಲಿಸಬಲ್ಲಡೆ
ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು./1529
ಸುರಿವ ಜಲಕ್ಕೆ ನೆಲೆ(ನೆಲ?), ಹೊಲೆಯೆಂದು ಪ್ರಮಾಣಿಸಬಹುದೆ ?
ಉರಿವ ಅನಲಂಗೆ ಶತಡೊಂಕು ಸಸಿನವೆಂಬುದುಂಟೆ ?
ಗುಹೇಶ್ವರಲಿಂಗಕ್ಕೆ ಲೇಸು ಕಷ್ಟವೆಂಬುದಿಲ್ಲ ಸಂಗನಬಸವಣ್ಣಾ./1530
ಸುಳಿದು ಸುತ್ತುವ ವಾಯುವಿಕಾರದ ಸಂಸಾರದ ಸುಳುಹು,
ಕಾಯವಿಕಾರದ ಕತ್ತಲೆ, ಮನೋವಿಕಾರದ ಮಾಯೆ,
ಕಾಮವಿಕಾರದ ಕಾಳರಕ್ಕಸಿ, ಇಂದ್ರಿಯವಿಕಾರವೆಂಬ ಹುಚ್ಚು ಶುನಿಗಳು,
ಭಾವವಿಕಾರವೆಂಬ ಭ್ರಮೆ- ಮೊದಲಾದ
ಷಡ್ವಿಕಾರಂಗಳಿಗಾಸ್ಪದವಾದ
ವಾಯುವಿಕಾರದ ವ್ಯವಹರಣೆಯುಳ್ಳನ್ನಕ್ಕ,
ಅರಿಯೆನರಿಯೆ ನೆರೆ ಶಿವಪದವ.
ಗುಹೇಶ್ವರಲಿಂಗದ ನಿಜವನರಿದ ಬಳಿಕ,
ಅರಿಯೆನರಿಯೆ ಲೋಕದ ಬಳಕೆಯ./1531
ಸುಳಿಯ ಬಲ್ಲಡೆ ಸುಳುಹೆ ಲೇಸಯ್ಯಾ.
ಗಮನವಿಲ್ಲದೆ ಸುಳಿಯ ಬಲ್ಲಡೆ, ನಿರ್ಗಮನಿಯಾಗಿ ನಿಲ್ಲಬಲ್ಲಡೆ,
ಅದಕ್ಕದೆ ಪರಿಣಾಮ ಅದಕ್ಕದೆ ಸಂತೋಷ.
ಗುಹೇಶ್ವರಲಿಂಗದಲ್ಲಿ ಅವರ ಜಗದಾರಾಧ್ಯರೆಂಬೆ./1532
ಸುಳಿವ ಸುತ್ತುವ ಮನದ ವ್ಯವಹರಣೆಯುಳ್ಳನ್ನಕ್ಕರ,
ಅರಿಯೆನರಿಯೆ ನೆರೆ ಶಿವಪಥವ
ಗುಹೇಶ್ವರಲಿಂಗದ ನಿಜವನರಿದ ಬಳಿಕ
ಅರಿಯೆನರಿಯೆ ಲೋಕದ ಬಳಕೆಯ./1533
ಸೂಳೆ ಹಲಬರನು ಉಳಿದಳೆಂದು ನಿಂದಿಸಲಿಲ್ಲ ಕೇಳಾ.
ಪತಿವ್ರತೆ ತನ್ನ ಪುರುಷನಲ್ಲದೆ ಮತ್ತೊಬ್ಬನ ಮುಖವ ನೋಡಿದಡೆ
ಅವಳ ಚಾಂಡಾಲಗಿತ್ತಿ ಎಂಬುದು ಲೋಕವೆಲ್ಲವು.
ಕೀರ್ತಿವಾರ್ತೆಗೆ ಮಾಡುವ ಭಕ್ತ ತಪ್ಪಿದಡೆ ಅದ ಮನಕ್ಕೆ ತರಲಿಲ್ಲ.ಸಜ್ಜನ ಸದ್ಭಕ್ತನೆಡಹಿದಡೆ ಅದ ಸೈರಿಸಬಾರದು ಕೇಳಾ.
ನಮ್ಮ ಗುಹೇಶ್ವರಲಿಂಗಕ್ಕೆ ಆದಿಯಿಂದತ್ತತ್ತ ನೀನೆ ಭಕ್ತನಾದ ಕಾರಣ
ಮನ ನೊಂದಿತ್ತು ಕಾಣಾ ಸಂಗನಬಸವಣ್ಣಾ./1534
ಸೃಷ್ಟಿ ಮೊದಲವಸಾನ ಕಡೆಯಾಗಿ ಅರಿವರಿವೆ ಜ್ಞಾನ,
ಅಂತಪ್ಪ ಜ್ಞಾನವೆ ಚಿದ್ಬ್ರಹ್ಮ, ಆ ಚಿದ್ಬ್ರಹ್ಮ ಚಿದ್ಘನಲಿಂಗ ನೋಡಾ,
ಅದೆಂತೆಂದಡೆ: “ಸೃಷ್ಟ್ಯಾದ್ಯೈಕ್ಯಾಂತವಿಜ್ಞಾನೇ ಜ್ಞಾನಂಚಾತ್ಮಪ್ರಕಾಶಕಂ !
ತತ್ಜ್ಞಾನಂ ಪರಮಂ ಬ್ರಹ್ಮ ಲಿಂಗಮಿತ್ಯೇವ ಭಾವಯೇತ್ ”
ಎಂದುದಾಗಿ, ನಿಮ್ಮನರಿದು ತನ್ನ ಮರೆದ
ಪರಮ ಶಿವಯೋಗಿಗೆ ಪರಿಭವಂಗಳುಂಟೆ ಗುಹೇಶ್ವರಾ ?/1535
ಸೃಷ್ಟಿಗೆ ಹುಟ್ಟಿದ ಕಲ್ಲು, ಕಲ್ಲುಕುಟಿಕನಿಂದ ಮೂರ್ತಿಯಾಗಿ
ಮಂತ್ರಕ್ಕೆ ಲಿಂಗವಾಯಿತಲ್ಲಾ
ಇವರಿಗೆ ಹುಟ್ಟಿದ ಕೂಸ ಲಿಂಗವೆಂದು ಕೈವಿಡಿವ
ವ್ರತಗೇಡಿಗಳನೇನೆಂಬೆ ಗುಹೇಶ್ವರಾ/1536
ಸೃಷ್ಟಿಯ ಮೇಲಣ ಕಣಿಯ ತಂದು,
ಅಷ್ಟತನುವಿನ ಕೈಯಲ್ಲಿ ಕೊಡಲು,
ಅಷ್ಟತನು ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ- ಕೆಟ್ಟನಲ್ಲಾ,
ಅನಾಚಾರಿಯೆಂದು ಮುಟ್ಟರು ನೋಡಾ,
ಮುಟ್ಟದ ಭೇದವನು, ವಿಖಂಡಿಸಿದ ಭಾವವನು;
ಭಾವವ್ರತಗೇಡಿಗಳು ತಾವೆತ್ತ ಬಲ್ಲರು ಗುಹೇಶ್ವರಾ ?/1537
ಸೃಷ್ಟಿಯ ಮೇಲಣ ಕಣಿಯ ತಂದು, ಅಷ್ಟತನುವಿನ ಕೈಯಲ್ಲಿ ಕೊಟ್ಟು,
ಕಟ್ಟಿ ಪೂಜೆಯ ಮಾಡಬೇಕೆಂಬರಯ್ಯಾ.
ಅದೆಂತೆಂದಡೆ:ಭೂಮಿಗೆ ಹುಟ್ಟಿ ಶಿಲೆಯಾದ, ಕಲ್ಲುಕುಟಿಕನ ಕೈಯಲ್ಲಿ ರೂಪಾದ,
ಗುರುವಿನ ಕೈಯಲ್ಲಿ ಮೂರ್ತಿಯಾದ.
ಇಂತೀ ಮೂವರಿಗೆ ಹುಟ್ಟಿದ ಸೂಳೆಯ ಮಗನ
ನಾನೇನೆಂದು ಪೂಜೆಯ ಮಾಡಲಿ ?
ಅದು ಬಿದ್ದಿತ್ತೆಂದು ಸಮಾದಿಯ ಹೊಕ್ಕಿಹೆನೆಂಬವನು,
ಅಸ್ತ್ರ ಸಮಾದಿ ಜಲಾಂತರ ವನಾಂತರ ದಿಗಂತರದಲ್ಲಿ ಸತ್ತಡೆ
ಕುಂಬಿನಿಪಾತಕ ನಾಯಕನರಕ.
ಕೈಯ ಲಿಂಗ ಹೋದಡೆ ಮನದ ಲಿಂಗ ಹೋದುದೆ ?-ಎಂದು
ಎತ್ತಿಕೊಂಡು, ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವುದೆ ವ್ರತವು.
ಇದ ಕಟ್ಟುವ ಭೇದವ, ಮುಟ್ಟುವ ಪಥವ
ಚೆನ್ನಬಸವಣ್ಣನೊಬ್ಬನೆ ಬಲ್ಲನಲ್ಲದೆ
ಮಿಕ್ಕ ಅಭ್ಯಾಸಕ್ಕೆ ಅಗ್ಘವಣಿಯ ಕೊಟ್ಟು ಪರವನೆಯ್ದಿದೆನೆಂಬ
ಲಜ್ಜಗೇಡಿಗಳನೇನೆಂಬೆ ಗುಹೇಶ್ವರಾ/1538
ಸೆರಗ ಹಿಡಿದನು ಸೀರೆಯ ಹರಿದನು.
ಹುಟ್ಟ ಮುರಿದನು ಕಂದಲನೊಡೆದನು.
ಭಂಡನವ್ವಾ ಲಜ್ಜೆಭಂಡನವ್ವಾ
ಕಂಡಡೆ ನುಡಿಸದಿರು ಎಲೆ ಮಾಯಾದೇವಿ.
ಆಯುಷ್ಯ ಹಿರಿದು ಭವಿಷ್ಯ ಕಿರಿದು,
ಭವಗೆಟ್ಟು ಹೋದ ಗುಹೇಶ್ವರ ಅಲ್ಲಯ್ಯಂಗೆ
ಮೂಗಿಲ್ಲ ತಂಗಿ/1539
ಸೊಪ್ಪಡಗಿದ ಸುಮ್ಮಾನಿಗಳವರಲ್ಲಿ ಗತಿಯನರಸುವರೆ ?
ಅವರಲ್ಲಿ ಮತಿಯನರಸುವರೆ ?
ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾದವರಲ್ಲಿ ಗತಿಯನರಸುವರೆ ?
ಅವರಲ್ಲಿ ಮತಿಯನರಸುವರೆ ?- ಗುಹೇಶ್ವರನೆಂಬ ನಿಜ ನಿಂದವರಲ್ಲಿ ?/1540
ಸ್ತುತಿ ನಿಂದೆಗೆ ಕಿವುಡನಾಗಿರಬೇಕು.
ಪರಧನ ಪರಸತಿಯರಿಗೆ ಅಂಧಕನಾಗಿರಬೇಕು.
ವಾಕಿನಿಂ ಪರಬ್ರಹ್ಮವ ನುಡಿವ ಕುತರ್ಕಿಗಳ ಎಡೆಯಲ್ಲಿ
ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು.
`ಒಂದು’ ಎಂದು ಅರಿದಲ್ಲಿ ಸಂದೇಹವಿಲ್ಲದಿರಬೇಕು
ಗುಹೇಶ್ವರಲಿಂಗದಲ್ಲಿ ತನ್ನ ತಾ ಮರೆದಿರಬೇಕು./1541
ಸ್ಥಿರಾಸನದಲ್ಲಿರ್ದು ಸ್ವರವು ನಾಲ್ಕರ ನೆಲೆಯರಿದು
ಉರವಣಿಸುವ ಪವನಂಗಳ ತರಹರಿಸಿ
ಇಂದ್ರಿಯಗಳನೊಂದು ಮುಖವಂ ಮಾಡಿ ಬಂದಿಸಿ
ಹಾರುವ ಹಂಸೆಯ ಬೋದಿಸಿ ನಿಲಿಸಿ
ಪರಮಾಮೃತದ ಕುಟುಕನಿಕ್ಕಿ ಸಲಹುತ್ತಿರ್ದೆನಯ್ಯ ಅನುದಿನದಲ್ಲಿ.
ದಾಸೋಹವಳಿದು ಸೋಹವಾಗಲು,
ಹಂಸೆಯ ಗತಿಗೆಟ್ಟು ಪರಮಹಂಸವಾಗಿ ಸೋಹಂ ಸೋಹಂ ಸೋಹಂ ಎಂದುದು
ಗುಹೇಶ್ವರಾ./1542
ಸ್ಥೂಲ ಸೂಕ್ಷ್ಮದೊಳಗೆ ಬೆಳಗುವ,
ಮಹಾಬೆಳಗಾಗಿ ಹೊಳೆವ,- ಜ್ಞಾನಜ್ಯೋತಿ ದಳಗಳನೆಲ್ಲವ ಮೀರಿ,
ನೆಳಲನುಂಗಿದ ಬಿಸಿಲೊಳಗೆ ಚಂದ್ರಮನುದಯ.
ಜಲದಿವಳಯದ ಬೆಳಸ ಹೇಳಲು ಆರ ಅಳವಲ್ಲ.
ಆಳು ಆಳ್ದನ ನುಂಗಿ ಈರೇಳು ಭುವನವ ದಾಂಟಿ
ಗುಹೇಶ್ವರ ನಿಂದ ನಿಲವು ಹೊರಗು ಒಳಗನೆ ನುಂಗಿತ್ತು./1543
ಸ್ಥೂಲವ ಬ್ರಹ್ಮನಳವಡಿಸಿಕೊಂಡ.
ಸೂಕ್ಷ್ಮವ ವಿಷ್ಣುವಳವಡಿಸಿಕೊಂಡ.
ಕಾರಣವ ರುದ್ರನಳವಡಿಸಿಕೊಂಡ.
ನಿಃಕಾಯವ ಈಶ್ವರನಳವಡಿಸಿಕೊಂಡ.
ನಿರಂಜನವ ಸದಾಶಿವನಳವಡಿಸಿಕೊಂಡ.
ನಿರವಯವ ವ್ಯೋಮಾತೀತನಳವಡಿಸಿಕೊಂಡ.
ಈ ಷಡುಸ್ಥಲದವರೆಲ್ಲ ಬಯಲನಳವಡಿಸಿಕೊಂಡು
ಬಯಲಾಗಿತ್ತು ಕಾಣಾ ಗುಹೇಶ್ವರಾ./1544
ಸ್ಫಟಿಕದ ಘಟದಂತೆ ಒಳಹೊರಗಿಲ್ಲ ನೋಡಾ !
ವಿಗಡಚರಿತ್ರಕ್ಕೆ ಬೆರಗಾದೆನು.
ನೋಡುವಡೆ ಕಾಣಬರುತ್ತಿದೆ, ಮುಟ್ಟುವಡೆ ಕೈಗೆ ಸಿಲುಕದು
ಹೊದ್ದುವಡೆ ಸಮೀಪ, ಸಾರಿದಡೆ ಅತ್ತತ್ತ ತೋರುತ್ತಿದೆ.
ಆಕಾರ ನಿರಾಕಾರವ ನುಂಗಿ
ಬಯಲ ಸಮಾದಿಯಲ್ಲಿ ಸಿಲುಕಿತ್ತು ನೋಡಾ !
ದರ್ಶನದಿಂದ ಅಮೃತಾಹಾರವಾಯಿತ್ತು,
ಬೆರಸಿದಡೆ ಇನ್ನೆಂತೊ ಗುಹೇಶ್ವರಾ !/1545
ಸ್ವತಂತ್ರ ಪರತಂತ್ರಕ್ಕೆ ಆವುದು ಚಿಹ್ನ ನೋಡಾ.
ತಾನೆಂಬುದ ಅಳಿದು ಇದಿರೆಂಬುದ ಮರೆದು,
ಭಾವದಗ್ಧವಾಗಿರಬಲ್ಲಡೆ ಅದು ಸ್ವತಂತ್ರ.
ನೀನೆಂಬುದ ದಿಕ್ಕರಿಸಿ ತಾನೆಂಬುದ ನೀಕರಿಸಿ
ಉಭಯ ಭಾವದಲ್ಲಿ ಸನ್ನಹಿತವಾಗಿರಬಲ್ಲಡೆ ಪರತಂತ್ರ.
ಸ್ವತಂತ್ರ ಪರತಂತ್ರವೆಂಬೆರಡನೂ ವಿವರಿಸದೆ,
ತನ್ನ ಮರೆದಿಪ್ಪಾತನೆ ಉಪಮಾತೀತನು.
ಗುಹೇಶ್ವರನ ಶರಣರು ದೇಹವಿಲ್ಲದ ನಿರ್ದೆಹಿಗಳೆಂಬುದು
ಇಂದೆನಗೆ ಕಾಣಬಂದಿತ್ತು ನೋಡಾ ಸಿದ್ಧರಾಮಯ್ಯಾ./1546
ಸ್ವರದ ಹುಳ್ಳಿಯ ಕೊಂಡು, ಗಿರಿಯ ತಟಾಕಕ್ಕೆ ಹೋಗಿ,
ಹಿರಿಯರು ಓಗರವ ಮಾಡುತ್ತಿಪ್ಪರು.
ಗಿರಿ ಬೇಯದಾಗಿ ಓಗರವಾಗದು.
ಅರ್ಪಿತವಿಲ್ಲಾಗಿ ಪ್ರಸಾದವಿಲ್ಲ ಗುಹೇಶ್ವರಾ/1547
ಸ್ವರವೆಂಬ ಕುದುರೆಗೆ ವಿಷ್ಣುವೆಂಬ ಕಡಿವಾಣ,
ಸೂರ್ಯ ಚಂದ್ರರೆಂಬ ಅಂಕಣಿ, ಬ್ರಹ್ಮನೆ ಹಲ್ಲಣ,
ಸುರಾಳವೆಂದಲ್ಲಿ ನಿರಾಳವಾಯಿತ್ತು-ಗುಹೇಶ್ವರನೆಂಬ ರಾವುತಂಗೆ./1548
ಸ್ವಸ್ಥ ಪದ್ಮಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಚಲಿಸದೋಸರಿಸದೆ
ನೆಟ್ಟೆಲುವು ನೆಟ್ಟನೆ ಮಾಡಿ,
`ಅಧೋಗಮನ’ ವಾಯುವನೂಧ್ರ್ವಮುಖವಂ ಮಾಡಿ
ಮನ ಶಕ್ತಿ ಸಂಧಾನಗೊಳಿಸಿ,
ಚತುಃಪದ ಮಧ್ಯಪೀಠದೊಳಿಪ್ಪ ಜ್ಯೋತಿರ್ಮಯಲಿಂಗವಂ,
ಕಾಣುತ್ತಿರಲಾ ಬೆಳಗು ಮೂರು ಲೋಕವನ್ನಾವರಿಸಿ
ಕತ್ತಲೆ ಹರಿದು ಬೆಳಗುಳಿದು,
ಉದಯಾಸ್ತಮಾನವೆಂಬೆರಡರಿಯದಿರ್ದೆ ಗುಹೇಶ್ವರಾ/1549
ಸ್ವಸ್ಥ ಪದ್ಮಾಸನದಲ್ಲಿ ಕುಳ್ಳಿರ್ದು ನಿಟ್ಟೆಲುವ ಮುರಿದು
ನಿಷ್ಠೆಯಿಂದ ಹಿಂದಣ ಬಟ್ಟೆಯ ತೆಗೆದು,
ಅಮೃತವ ಉಂಡಿಹೆನೆಂಬವರು ಕೆಟ್ಟ ಕೇಡಿಂಗೆ ಕಡೆಯಿಲ್ಲ.
`ಅತ್ಯತಿಷ್ಠದ್ದಶಾಂಗುಲ’ ಎಂಬ ಶ್ರುತಿಯ ನೋಡಲು
ಮುಟ್ಟಿ ನೆಲೆಗೊಳಿಸುವಠಾವುಂಟೆ ?
ಸ್ಥಾನಮಾನವೆಂಬ ಮಾತಿಂಗೆ ದೂರವಾದ ಘನವ
ಬ್ರಹ್ಮರಂಧ್ರದಲ್ಲಿ ಕಂಡಿಹೆನೆಂದಡೆ ಕಾಣಬಹುದೆ ?
ನಮ್ಮ ಗುಹೇಶ್ವರಲಿಂಗವು
ಕಲ್ಪಿತಕ್ಕೆ ದೂರ ಕೇಳಾ ಸಿದ್ಧರಾಮಯ್ಯಾ./1550
ಸ್ವಸ್ಥಾನ ಸ್ವ(ಸು?)ಸ್ಥಿರದ ಸುಮನಮಂಟಪದೊಳಗೆ,
ನಿತ್ಯನಿರಂಜನ ಪ್ರಭೆಯೊಳಗೆ, ಶಿವಯೋಗದನುಭಾವವೇಕಾರ್ಥವಾಗಿ,
ಗುಹೇಶ್ವರಾ ನಿಮ್ಮ ಶರಣನನುಪಮಸುಖಿಯಾಗಿರ್ದನು./1551
ಸ್ವಾನುಭಾವದ ಬೆಳಗಿನಲ್ಲಿ ಒಂದು ಬೆಕ್ಕು ಹುಟ್ಟಿತ್ತು.
ಆ ಬೆಕ್ಕಿನ ತಲೆಯ ಮೇಲೊಂದು ಗಿರಿ ಹುಟ್ಟಿತ್ತು.
ಗಿರಿಯ ಮೇಲೆರಡು ರತ್ನ ಹುಟ್ಟಿದವು.
ಆ ರತ್ನಂಗಳನರಸಿಕೊಂಡು ಬರಲು, ಅವು ತನ್ನನವಗ್ರಹಿಸಿದವು.
ಒಂದು ರತ್ನ ಅಂಗವನವಗ್ರಹಿಸಿತ್ತು,
ಮತ್ತೊಂದು ರತ್ನ ಪ್ರಾಣವನವಗ್ರಹಿಸಿತ್ತು.
ಆ ರತ್ನಂಗಳ ಪ್ರಭೆ ತಾನಾದ ನಮ್ಮ ಗುಹೇಶ್ವರನ ಶರಣ
ಸಿದ್ಧರಾಮಯ್ಯದೇವರ ನಿಲವಿಂಗೆ
ನಮೋ ನಮೋ ಎನುತಿರ್ದೆನಯ್ಯಾ ಚೆನ್ನಬಸವಣ್ಣಾ./1552
ಹಗಲ ಇರುಳ ಮಾಡಿ, ಇರುಳ ಹಗಲ ಮಾಡಿ,
ಆಚಾರವ ಅನಾಚಾರವ ಮಾಡಿ, ಅನಾಚಾರವ ಆಚಾರವ ಮಾಡಿ,
ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ
ನುಡಿವವರ ಮಾತ ಕೇಳಲಾಗದು ಗುಹೇಶ್ವರಾ./1553
ಹಗಲಿರುಳೆನ್ನದೆ ಹಸಿವ ಕಳೆದು,
ನಿಜದಲ್ಲಿ ಒರಗಿ ನಿದ್ರೆಯ ಕಳೆದು,
ನೋಡಿ ನೋಡಿ ಸುಖಂಬಡೆದೆನಯ್ಯಾ.
ಗೋಹೇಶ್ವರಯ್ಯಾ ನಿಮ್ಮ ವಿರಹದಲ್ಲಿ, ಕಂಗಳೆ ಕರುವಾಗಿದ್ದೆನಯ್ಯಾ./1554
ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು.
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು.
ಕಂಡವರ ಕಂಡು ಮಂಡೆಯ ಬೋಳಿಸಿಕೊಂಬುವರು.
ಉಂಬುವರ ಕಂಡು ಉಂಬುವರು.
ಪುಣ್ಯಕ್ಷೇತ್ರ ಪುರುಷಕ್ಷೇತ್ರ,
ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬುದಲ್ಲದೆ
ತಮ್ಮ ನಿಧಾನವ ಸಾದಿಸುವ ಭೇದವನರಿಯದೆ
ಷಡುಸ್ಥಲಜ್ಞಾನಿಗಳೆಲ್ಲಾ ಸತ್ತರಲ್ಲಾ ಗುಹೇಶ್ವರಾ./1555
ಹಠಯೋಗ ಲಂಬಿಕೆಯೆಂದು ಆಕುಂಚನವೆಂದು
ವಜ್ರ ಅಮರಿಯ ಕಲ್ಪವೆಂದು ಮಲಮೂತ್ರಂಗಳ ಸೇವಿಸುತ್ತ
ಇದು ಪೂರ್ವ ನವನಾಥಸಿಧರ ಮತೋಕ್ತವೆಂದು
ಕಾಪಾಲಿಕಾಚರಣೆಯ ಆಚರಿಸುವವರಲ್ಲ ಶರಣರು.
ಮೇಣು, ತಲೆಯೊಳಗಣ ವಾತ ಪಿತ್ಥ ಶ್ಲೇಷ್ಮವ ತೆಗೆದು
ಅಮೃತವೆಂದು ಬಿನುಗು ದೃಷ್ಟವ ತೋರುವರಲ್ಲ ಶರಣರು.
ದ್ರವಿಸುವ ದೇಹದಲ್ಲಿ ಅಪ್ಪುವಿನ ಫಲರಸಕ್ಷೀರ ಘೃತ ಮೊದಲಾದವ ಸೇವಿಸುತ್ತ
ಅನ್ನವ ಬಿಟ್ಟೆವೆಂಬ ಭೂತಚೇಷ್ಟಕರಲ್ಲ ಶರಣರು.
ಇಂತಿವೆಲ್ಲವು ಕಾಕು ಸಟೆ ಭ್ರಾಂತೆಂದು ತಿಳಿದು ನಿರ್ಧರ ನಿಜದಿ ನಿಂದರು,
ಗುಹೇಶ್ವರಾ ನಿಮ್ಮ ಶರಣರು ಅಗ್ರಗಣ್ಯರು/1556
ಹತ್ತು ಬಣ್ಣದ ಗಿಡುವಿಂಗೆ,
ಹತ್ತೆಲೆ, ಹತ್ತು ಹೂ, ಹತ್ತು ಕಾಯಾಯಿತ್ತು.
ಹತ್ತು ಹತ್ತು ಘನದಲ್ಲಿ ಅಳವಟ್ಟು,
ಹತ್ತು ಹತ್ತು ಆಚಾರಕ್ರಮದಲ್ಲಿ ವಿಚಾರವ ಕಾಣಬಲ್ಲಡೆ
ಆ ಕಾಯ ಲಿಂಗ ಉದಯ (ಲಿಂಗಮಯ?)ವಹುದು ಕಾಣಾ
ಗುಹೇಶ್ವರಾ./1557
ಹನ್ನೆರಡುಯುಗ ಪ್ರಳಯವಾದಲ್ಲಿ, ಆದಿಬ್ರಹ್ಮಂಗೆ ಪ್ರಳಯ.
ಆದಿಬ್ರಹ್ಮನ ಪ್ರಳಯ ಅಳಿದುಳಿದಲ್ಲಿ, ಮೀನಜರಿಗೊಂದು ಸಿಂಪಿನ ಪ್ರಳಯ.
ಮೀನಜರಿಗೆ ಮೀನ ಪ್ರಳಯವಾದಲ್ಲಿ,
ಅಸಹಸ್ರನೆಂಬ ಗಣೇಶ್ವರಂಗೆ ಒಂದು ಪ್ರಳಯ.
ಆ ಅಸಹಸ್ರನೆಂಬ ಗಣೇಶ್ವರನು ಪ್ರಳಯದಲ್ಲಿ ಅಳಿದುಳಿದಲ್ಲಿ,
ಅಕ್ಷಯನೆಂಬ ಗಣೇಶ್ವರಂಗೆ ಒಂದು ತಲೆಯ ಪ್ರಳಯ
ಆ ಅಕ್ಷಯನೆಂಬ ಗಣೇಶ್ವರಂಗೆ ಅರುವತ್ತುಕೋಟಿ ತಲೆ.
ಇಂತಹ ರುದ್ರಾವತಾರ ಹಲವಳಿದಡೆ,
ಗುಹೇಶ್ವರಲಿಂಗವನೆಂದೂ ಅರಿಯ !/1558
ಹರನ ಕರುಣವ ಪಡೆದ ಸಾಮರ್ಥ್ಯವ ಬಲುಹಿಂದ,
ಶಿವಶರಣರೊಡನೆ ಸೆಣಸಿದಡೆ ಲೇಸುಂಟೆ ?
ಅಘಟಿತಘಟತರಿಗೆ ಅಘಟಿತರುಂಟು ನೋಡಾ !
ನೊಸಲಲೊಬ್ಬ ಕಣ್ಣ ತೆಗೆದಡೆ,
ಅಂಗಾಲಲೊಬ್ಬ ಕಣ್ಣ ತೆಗೆವನು.
ಗುಹೇಶ್ವರನ ಶರಣರು ಉಪಮಾತೀತರು./1559
ಹರಹರಾ ನೀವಿಪ್ಪಠಾವನರಿಯದೆ,
ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವರ
ದಿಟ್ಟತನವ ನೋಡಾ !
ಶಿವಶಿವಾ ನಿಮ್ಮ ಶ್ರೀಮುಖವನರಿಯದೆ
ಸಕಲ ಪದಾರ್ಥವ ನಿಮಗರ್ಪಿಸಿ
ಪ್ರಸಾದವ ಕೊಂಡೆವೆಂದೆಂಬವರ ಎದೆಗಲಿತನವ ನೋಡಾ !
ಹಗರಣದ ಹಣ್ಣ ಮೆದ್ದು ಹಸಿವು ಹೋಯಿತ್ತೆಂದಡೆ
ಆರು ಮೆಚ್ಚುವರು ಹೇಳಾ ಗುಹೇಶ್ವರಾ ?/1560
ಹರಿ ಹೊಲಬನರಿಯ, ಬ್ರಹ್ಮ ಮುಂದನರಿಯ,
ರುದ್ರ ಲೆಕ್ಕವ ಮರೆದು ಜಪವನೆಣಸುತ್ತೆ ದಾನೆ.
ಈಶ್ವರ ಪವನಯೋಗದಲ್ಲಿ ಮಗ್ನನಾದ.
ಸದಾಶಿವ ಭಾವದಲ್ಲಿ ಭ್ರಮಿತನಾದ.
ಒಂದಂಡಜದೊಳಗಣ ಬಾಲಕರೈವರು,
ನಿಮ್ಮನೆತ್ತ ಬಲ್ಲರು ಗುಹೇಶ್ವರಾ./1561
ಹರಿದರಸಿಹೆನೆಂದಡೆ ಮನದ ವಿಕಾರ.
ಸುಳಿದರಸಿಹೆನೆಂದಡೆ ಪವನ ವಿಕಾರ.
ನಿಂದರಸಿಹೆನೆಂದಡೆ ಕಾಯವಿಕಾರ.
ಒಳಗರಸಿಹೆನೆಂದಡೆ ಜ್ಞಾನವಿಕಾರ.
ಅರಸಲಿಲ್ಲದೆ ಬೆರಸಬಲ್ಲಡೆ, ಆತನೆ ಶರಣ ಗುಹೇಶ್ವರಾ./1562
ಹರಿದು ಹತ್ತಿ ಮುಟ್ಟಿ ಹಿಡಿದೆಹೆವೆಂದು
ಜಾರಿ ಉರುಳಿ ಬಿದ್ದರು ಅನಂತರು.
ಹಿಡಿದವರೆಲ್ಲ ಹೆಣನುಂಡು ಹೋದರು.
ನಾ ಹಿಡಿದ ಬಂಡಿ(ಬಂದಿ?)
ಒಡಬಂಡಿ(ಒಡಬಂದಿ?)ಯಾಯಿತ್ತು ಗುಹೇಶ್ವರಾ./1563
ಹರಿಯ ಬಾಯ ಹಾಲು, ಉರಿಯ ಕೈಯ ಬೆಣ್ಣೆ
ಗಿರಿಯ ಮೇಲಣ ಶಿಶು ಹರಿದಾಡುತ್ತಿದೆ,
ಕರೆಯಿಂ ಭೋ ಹಾಲುಗುಡಿ[ಯೆ].
ಸುರಪತಿಯ ಗಜವೇರಿ ಮರಳಿ ಹೋಹನ ಕಂಡು
ಕರೆಯಿಂ ಭೋ.
ಹರನ ಮಂತಣಿಯ ಶೂಲದಲ್ಲಿ,
ಶಿರದಲುಂಗುಟ ಊರಿ, ನೆರೆವುತ್ತಿರ್ದುದ
ನಾನೇನೆಂಬೆ ಗುಹೇಶ್ವರಾ. /1564
ಹರಿವ ನದಿಗೆ ಮೈಯೆಲ್ಲಕಾಲು.
ಉರಿವ ಕಿಚ್ಚಿಗೆ ಮೈಯೆಲ್ಲನಾಲಗೆ. ಬೀಸುವ ಗಾಳಿಗೆ ಮೈಯೆಲ್ಲಮುಖ (ಕೈ?) ಗುಹೇಶ್ವರಾ ನಿಮ್ಮ ಶರಣಂಗೆ,
ಸರ್ವಾಂಗವೆಲ್ಲ ಲಿಂಗ !/1565
ಹರಿಹರಿ ಎಂದಡೆ ಹರಿದರಯ್ಯಾ ಹನ್ನಿಬ್ಬರು ಪರಿಚಾರಕರು
ಹರಿದು ಬಂದು ಚರಣಕ್ಕೆರಗಿ ಬಿಜಯಂಗೆಯ್ಸಿ ಎಂದೆನೆ
ಬಿಜಯಂಗೆಯ್ಯದಿರಲು, ಕರವಾಳ ಶಿರಕಿಕ್ಕಿ ಸೆಳೆದು ನೋಡಿದರು.
ನಿರವಲಯ ತನು ಖಡ್ಗಕ್ಕೆ ಸಿಲುಕುವುದೆ ?
ಹಿರಿಯರಾರೊ ? ಕಿರಿಯರಾರೊ ? ಭಕ್ತಿಯ ಸಕೀಲವ ಬಲ್ಲವರಾರೊ ?
ಶಿರ ಹೋದ ಬಳಿಕ ಸರವೆಲ್ಲಿಯದೊ ? ಸಬುದವೆಲ್ಲಿಯದೊ ?
ಶಿವಶರಣರ ಅಂತರಂಗವನರಿಯದೆ ಮರುಳಾದನು ನೋಡಾ
ನಮ್ಮ ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನು !/1566
ಹಲವು ಮಕ್ಕಳ ತಾಯಂತೆ, ಹೇಸದೆ ಅವರನಾರೈದ ತನುಸಮರ್ಥವು
ನಿಮಗಲ್ಲದೆ ಇನ್ನಾರಿಗೆ ಅಳವಡುವದು ? ಮುನ್ನಾರಿಗೆ ಅಳವಡುವದು ?
ಇನ್ನು ಎನ್ನಳವೆ ನಿಮ್ಮುವನು ತಿಳಿಯಲು ?
ಮುನ್ನಿನ ಸುಕೃತ ಉಂಟಾಗಿ ನಿಮ್ಮ ಪಾದ ದೊರೆಕೊಂಡಿತ್ತು !
ಇನ್ನು ನಮ್ಮನಿಳಿಯ ಬಿಡದೆ, ಎನ್ನುವನು ಇವನೆಂದು ವಿವರಿಸಿ,
ಎನ್ನ ನಿಮ್ಮತ್ತ ತೆಗೆ ಕರುಣಿಸಿ.
ಎನ್ನ ಮಾತಾಪಿತ-ಗುಹೇಶ್ವರಾ,
ನಿಮ್ಮ ಶರಣ ಮಡಿವಳ ಮಾಚಯ್ಯನಿಂದ ಬಯಲಾದೆನು,
ಮುಕ್ತನಾದೆನು ನಿಮ್ಮ ಕರುಣದಿಂದ !/1567
ಹವಣಲ್ಲದ ಶಾಖೆಯ ಕಪಿ ಹಿಡಿಯಲೊಲ್ಲದು.
ಗಮನವಿಲ್ಲದ ಪಿಕಶಿಶು ನುಡಿಯಲರಿಯದು.
ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕಟ.
ಇಂತೀ ತ್ರಿವಿಧದ ಭೇದವ ನೋಡಿರೆ ಭಕ್ತರಪ್ಪಡೆ !
ಹೂ ಮಿಡಿಯ ಹರಿದಡೆ ಹಣ್ಣಪ್ಪುದೆ ?
ಹಸಿವು ತೃಷೆ ವಿಷಯ ಉಳ್ಳನ್ನಕ್ಕ ಅದ್ವೈತ ಉಂಟೆ ಜಗದೊಳಗೆ ?
ತನ್ನ ಮರೆದು ಲಿಂಗವ ಮರೆವುದು,
ತನ್ನ ಮರೆಯದೆ ಲಿಂಗವ ಮರೆವ ಯೋಗವಿನ್ನೆಂತಾದುದೊ ?
ಸುಡು, ಸುಡು, ಅವಂದಿರು ಗುರುದ್ರೋಹಿಗಳು ಆಚಾರಭ್ರಷ್ಟರು.
ಈ ಉಭಯ ತನುಗುಣ ನಾಸ್ತಿಯಾಗದನ್ನಕ್ಕ;-
ಸತ್ಕ್ರಿಯೆಯಿಂದ ಮಾಡುವುದು ಲಿಂಗದಾಸೋಹವ.
ಭಯಭಕ್ತಿಯಿಂದ ಮಾಡುವುದು ಜಂಗಮದಾಸೋಹವ.
ತನು ಕರಗದೆ ಮನ ಬೆರಸದೆ ನಿಮಗೆ ಮಾಡುವ ವ್ರತಗೇಡಿಗಳ
ಎನಗೆ ತೋರದಿರಾ ಗುಹೇಶ್ವರ./1568
ಹಸಿದ ಕಾಳೋರಗನ ಹೆಡೆಯ ನೆಳಲಲ್ಲಿ ಕಾಳಂಧನೆಂಬ ಕಪ್ಪೆ !
ಅಂತಹ ಕಾಳೋರಗನ ಏಳ ನುಂಗಿತ್ತು.
ಅದರ ಬೇಳುವೆಯಲ್ಲಿ ಮೇಲಾಗಿ ಬದುಕಿದೆ ಚೆನ್ನಬಸವಣ್ಣನಿಂದ !
ಗುಹೇಶ್ವರಲಿಂಗವೆಂಬುದು ಪ್ರಮಾಣವಾಯಿತ್ತು!/1569
ಹಸಿದಡೆ ಉಣಬಹುದೆ ನಸುಗುನ್ನಿ ತುರುಚಿಯನು ?
ಅವಸರಕಿಲ್ಲದ ದೊರೆಗೆ ಅರ್ಥವಿದ್ದಲ್ಲಿ ಫಲವೇನು ?
ಸಾಣೆಯ ಮೇಲೆ ಶ್ರೀಗಂಧವ ತೇವರಲ್ಲದೆ
ಇಟ್ಟಿಗೆಯ ಮೇಲೆ ತೇಯಬಹುದೆ ?
ರಂಭೆಯ ನುಡಿ ಸಿಂಬಿಗೆ ಶೃಂಗಾರವೆ ?
ಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನಲ್ಲದೆ
ಅಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನೆ ?
ಸರೋವರದೊಳಗೊಂದು ಕೋಗಿಲೆ ಸ್ವರಗೆಯ್ಯುತ್ತಿದ್ದಡೆ
ಕೊಂಬಿನ ಮೇಲೊಂದು ಕಾಗೆ ಕರ್ರೆನ್ನದೆ ?-ಅಂತೆ ಇದ್ದತ್ತು.
ಬರದಲ್ಲಿ ಬರಡ ಕರೆದೆಹೆನೆಂದು,
ಕಂದಲ ಕೊಂಡು ಹೋದರೆ,
ಕಂದಲೊಡೆದು ಕೈ ಮುರಿದಂತಾಯಿತ್ತು ಗುಹೇಶ್ವರಾ./1570
ಹಸಿಯ ಬಿಸಿಲನೆ ಕೊಯ್ದು ಪದಾರ್ಥವ ಮಾಡಿ,
ಉಸಿರ ಎಸರಲ್ಲಿ ಬಾಗುತ್ತಿಪ್ಪರಯ್ಯಾ!
ಇಕ್ಕಲಿಲ್ಲಾರಿಗೆಯು, ಎರೆಯಲಿಲ್ಲಾರಿಗೆಯು
ಬಿಕ್ಷಾವೃತ್ತಿಗಳು ಬಂದು ಬೇಡುತ್ತಿಪ್ಪರಯ್ಯಾ.
ನಿಮ್ಮ ಒಕ್ಕುದ ಮಿಕ್ಕುದ ಉಡಿಯಲ್ಲಿ ಕಟ್ಟಿಕೊಂಡಿಪ್ಪರಯ್ಯಾ.
ಗುಹೇಶ್ವರಾ ನಿಮ್ಮ ಶರಣರು./1571
ಹಸಿವ ಮುಂದಿಟ್ಟುಕೊಂಡು ಸುಳಿವಾತ ಜಂಗಮವಲ್ಲ.
ಹಸಿವ ಮುಂದಿಟ್ಟುಕೊಂಡು ಸುಳಿಯಲದೇಕೊ ?
ಹಸಿವೆಂಬುದೆ ತನುಗುಣಲಕ್ಷಣಕೆ ಚೈತನ್ಯವಾಗಿಹುದು.
ಆ ತನುಗುಣಲಕ್ಷಣ ಹಿಂಗಿದಲ್ಲದೆ ಜಂಗಮವಲ್ಲ.
ಅದಕ್ಕೆ ಏನಾಯಿತ್ತು ? ಹಸಿವ ಮುಂದಿಟ್ಟು ಸುಳಿವುದಕ್ಕೆ ತೆರನುಂಟು.
ಉಂಡರೆ ಹಂಗಿಗನೆ ಶಿವಯೋಗಿ ?
ಅನುವರಿದುಣಬಲ್ಲಡೆ ಎನ್ನವನೆಂಬೆನು.
ಅನುವನರಿಯದೆ ಭಕ್ತನ ಹರುಷವ ಮುರಿದು ಉಂಡರೆ, ಕೊಂಡರೆ
ಬ್ರಹ್ಮನವನಲ್ಲದೆ ಅವ ನಮ್ಮವನಲ್ಲ.
ಅನುವನರಿಯದೆ ಭಕ್ತನ ಭ್ರಮೆಗೊಳಿಸಿ ಉಂಡರೆ, ಕೊಂಡರೆ
ಹರಿಯವನಲ್ಲದೆ ನಮ್ಮವನಲ್ಲ.
ಅನುವನರಿಯದೆ ಭಕ್ತರಿಗೆ ಕೋಪವ ಹುಟ್ಟಿಸಿ ಉಂಡರೆ, ಕೊಂಡರೆ
ರುದ್ರನವನಲ್ಲದೆ ನಮ್ಮವನಲ್ಲ.
ಇಂತೀ ತ್ರಿವಿಧ ತೆರೆನನರಿಯದೆ ಉಂಬವರೆಲ್ಲರು ತ್ರಿವಿಧ ಭಾಜನರು ಕಾಣಾ
ಗುಹೇಶ್ವರಾ !/1572
ಹಸಿವರತಲ್ಲದೆ ಪ್ರಸಾದಿಯಲ್ಲ.
ತೃಷೆಯರತಲ್ಲದೆ ಪಾದೋದಕಿಯಲ್ಲ.
ನಿದ್ರೆಯರತಲ್ಲದೆ ಭವವಿರಹಿತನಲ್ಲ.
ಅನಲ-ಪವನವರತಲ್ಲದೆ ಪ್ರಾಣಲಿಂಗಿಯಲ್ಲ.-
ಇದು ಕಾರಣ, ಗುಹೇಶ್ವರಲಿಂಗವು ಎಲ್ಲರಿಗೆಲ್ಲಿಯದೊ?/1573
ಹಸಿವಾಯಿತ್ತೆಂದು ಹುಸಿದು ಮಜ್ಜನಕ್ಕೆರೆವರಯ್ಯಾ.
ತೃಷೆಯಾಯಿತ್ತೆಂದು ಅರ್ಪಿತವ ಮಾಡುವರಯ್ಯಾ.
ಇದೆಂತೊ ಭಕ್ತಸಂಬಂಧ ಇದೆಂತೊ ಶರಣಸಂಬಂಧ?
ಇದೆಂತೊ ಲಿಂಗಸಂಬಂಧ?
ಕಾರಣವಿಲ್ಲದ ಭಕ್ತಿಯ ಕಂಡಡೆ,
ಹೋಗ ನೂಕುವನು ಗುಹೇಶ್ವರಾ./1574
ಹಸಿವಿನ ಪ್ರೇಮಕ್ಕೆ ಬೋನವ ಹಿಡಿವರು.
ತೃಷೆಯ ಪ್ರೇಮಕ್ಕೆ ಮಜ್ಜನಕ್ಕೆರೆವರು.
ದೇವರಿಲ್ಲ ಭಕ್ತರಿಲ್ಲ; ನಾನೂ ಇಲ್ಲ ನೀನೂ ಇಲ್ಲ;
ಗುಹೇಶ್ವರಾ, ಪೂಜಿಸುವರೂ ಇಲ್ಲ, ಪೂಜೆಗೊಂಬವರೂ ಇಲ್ಲ. /1575
ಹಸಿವಿಲ್ಲದೆ ಉಣಬಲ್ಲಡೆ, ಉಪಾದಿಯಿಲ್ಲದೆ ಬೇಡಬಲ್ಲಡೆ,
ಅದು ವರ್ಮ, ಅದು ಸಂಬಂಧ.
ಗಮನವಿಲ್ಲದೆ ಸುಳಿಯಬಲ್ಲಡೆ, ನಿರ್ಗಮನಿಯಾಗಿ ನಿಲಬಲ್ಲಡೆ
ಅದು ವರ್ಮ, ಅದು ಸಂಬಂಧ.
ಅವರ ನಡೆ ಪಾವನ, ಅವರ ನುಡಿ ತತ್ವ,
ಅವರು(ರ?) ಜಗದಾರಾಧ್ಯರೆಂಬೆ ಗುಹೇಶ್ವರಾ./1576
ಹಸಿವು ತೃಷೆ ವಿಷಯ ವ್ಯಸನ ಈ ನಾಲ್ಕು ಉಳ್ಳವರು
ಗುಹೇಶ್ವರಲಿಂಗದಲ್ಲಿ ಐಕ್ಯರೆಂತಪ್ಪರೊ ?
ಅರಿದರಿದು ಆಚರಿಸಲರಿಯದ ಕಾರಣ ಲಿಂಗೈಕ್ಯರಲ್ಲ.
ಅರಿದನಾದಡೆ ಹಸಿವ ವಿೂರಿ ಉಂಬ, ತೃಷೆಯ ವಿೂರಿ ಕೊಂಬ,
ವಿಷಯವನಾಳಿಗೊಂಬ, ವ್ಯಸನವ ದಾಂಟಿ ಭೋಗಿಸುವ.
ಇದನರಿಯದಲೆ ಚರಿಸುವ ಕೀಟಕ ಮಾನವರ ಕಂಡು
ಎನ್ನ ಮನ ನಾಚಿತ್ತು ಗುಹೇಶ್ವರಾ./1577
ಹಸಿವುಳ್ಳನ್ನಕ್ಕ ವ್ಯಾಪಾರ ಬಿಡದು,
ಸೀತ ಉಳ್ಳನ್ನಕ್ಕ ಉಪಾದಿಕೆ ಬಿಡದು,
ಮಾತುಳ್ಳನ್ನಕ್ಕ ಬೂಟಾಟಿಕೆ ಬಿಡದು, ನಿದ್ರೆಯುಳ್ಳನ್ನಕ್ಕ ಸತಿಯ ಸಂಗ ಬಿಡದು.
ಇದು ಕಾರಣ-
ಕ್ಷುತ್ತಿಂಗೆ ಬಿಕ್ಷೆ, ಸೀತಕ್ಕೆ ರಗಟೆ, ಮಾತಿಂಗೆ ಮಂತ್ರ,
ಶಯನಕ್ಕೆ ಶಿವಧ್ಯಾನವೆಂದು ಹೇಳಿಕೊಟ್ಟ
ಗುರುವಚನವ ಮೀರಿ ನಡೆವವರಿಗೆ
ಪರದಲ್ಲಿ ಪರಿಣಾಮ ದೊರೆಕೊಳ್ಳದು ನೋಡಾ.
ಇದು ಕಾರಣ-
ಗುರುವಾಜ್ಞೆಯ ಮೀರಿ ಮನಕ್ಕೆ ಬಂದಂತೆ ನಡೆವವರ
ಎನಗೊಮ್ಮೆ ತೋರದಿರಾ ಗುಹೇಶ್ವರಾ./1578
ಹಳೆಗಾಲದಲಿ ಒಬ್ಬ ಪುರುಷಂಗೆ, ಎಳೆಯ ಕನ್ನಿಕೆಯ ಮುದುವೆಯ ಮಾಡಲು,
ಕೆಳದಿಯರೈವರು ನಿಬ್ಬಣ ಬಂದರು.
ಹಸೆಯ ಮೇಲೆ ಮದವಣಿಗನ ತಂದು ನಿಲಿಸಲೊಡನೆ,
ಶಶಿವದನೆ ಬಂದು ಕೈಯ ಪಿಡಿದಳು.
ಮೇಲುದಾಯದಲೊಬ್ಬ ಸತಿ ಕಣ್ಣು ಸನ್ನೆಯ ಮಾಡುತ್ತಿರೆ,
ಕೂಡೆ ಬಂದ ನಿಬ್ಬಣಗಿತ್ತಿಯರೆಲ್ಲ ಹೆಂಡತಿಯರಾದರು !
ದೂರವಿಲ್ಲದ ಗಮನಕ್ಕೆ ದಾರಿಯ ಪಯಣ ಹಲವಾಯಿತ್ತು.
ಸಾರಾಯ ನಿರ್ಣಯವನೇನೆಂಬೆ ಗುಹೇಶ್ವರಾ./1579
ಹಳ್ಳದೊಳಗೊಂದು ಹುಳ್ಳಿ ಬರುತ್ತಿರಲು, ನೊರೆ ತೆರೆಗಳು ತಾಗಿದುವಲ್ಲಾ !
ಸಂಸಾರವೆಂಬ ಸಾಗರದೊಳಗೆ ಸುಖದುಃಖಗಳು ತಾಗಿದವಲ್ಲಾ !
ಇದಕ್ಕಿದು ಮೂರ್ತಿಯಾದ ಕಾರಣ ಪ್ರಳಯವಾಯಿತ್ತು ಗುಹೇಶ್ವರಾ./1580
ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ.
ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ.
ಆಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ.
ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ …
ಇವು ಷಡುಸ್ಥಲಕ್ಕೆ ಹೊರಗು.
ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು./1581
ಹಾಸುಹೊಕ್ಕಿನಠಾವ ದಾಸಯ್ಯ ಬಲ್ಲ.
ಉಂಬ ಉಡುವ (ಊಡುವ ?) ಠಾವ ಸಿರಿಯಾಳ ಬಲ್ಲ.
ಕೊಂಬ ಕೊಡುವ ಠಾವ ಬಲ್ಲಾಳ ಬಲ್ಲ.
ಲಿಂಗ ಜಂಗಮದ ಠಾವ ಬಸವಣ್ಣ ಬಲ್ಲ.
ರುಚಿಯಠಾವ ಬಂಕಯ್ಯ ಬಲ್ಲ.
ನಮ್ಮ ಗುಹೇಶ್ವರನ ನಿಲವ,
ಸೊನ್ನಲಿಗೆಯ ಸಿದ್ಧರಾಮಯ್ಯನೆ ಬಲ್ಲ/1582
ಹಾಳುಮನೆಯ ಹೊಸತಿಲಲ್ಲಿ ನಿಂದಿದ್ದು,
ಆರೂ ಬಾರದ ಬಟ್ಟೆಯ ನೋಡುತ್ತ,
ಆರಿಂಗಾಗದಿರವು ನಮಗಾಯಿತ್ತೆನುತಲಿ, ಆರಯ್ಯ ಬಂದವರಿಗೆ ಶಂಕೆಯಿಲ್ಲ !
ಕಾಲಿಲ್ಲದೆ ಬಂದವರು, ಕೈಯಿಲ್ಲದೆ ಕೊಂಬವರು, ಮೇಲು ತಲೆ ಇದ್ದವರು ನುಡಿವಾಗ
ಮಾರಾರಿಯ ಬೆಳಸ, ಆರಯ್ಯ ಸಂತವಿಡುವರೆಂದಡೆ-
ಸಾರಾಯಂಗಲ್ಲದೆ ಮತ್ತಿನ್ನಾರಿಗಹುದು ಹೇಳಾ ?
ಸಂತೆಯ ಗುಡಿಲ ಸೂಳೆಗೆ ಕೊಂತವ ಕೊಟ್ಟಡೆ
ಎಂತು ಬಚ್ಚಿಡಬಹುದು ?
ಮರುಳುತನವು, ಶಂಕಿಸಿತು ಎನ್ನ ಮನವು,
ಹಿಂದು ಮುಂದು ಕೂಡುವರಿಲ್ಲೆಂದು ಉಮ್ಮಳದಲ್ಲಿ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಪ್ರಸಾದವ ಕೊಂಡು
ನಿರುಪಮಸುಖಿಯಾದೆನು/1583
ಹಾಳೂರೊಳಗೊಂದು ಮನೆಯ ಮಾಡಿ ಬದುಕ ಹೋದಡೆ,
ಕಾಳೋರಗ ಬಂದು ಕಡಿಯಿತ್ತು ನೋಡಾ !
ಕೇರಿ ಕೇರಿಯೊಳಗೆಲ್ಲಾ ಹರಿದಾಡುತ್ತಿದ್ದವು,
ಮಾರಿಯ ತೋರದ ಮದಗಜಂಗಳು.
ಚಿತ್ರಗುಪ್ತನ ಕೈಯ ಚಿತ್ರವ ತಿಳಿದು ನೋಡಿದಡೆ,
ಹಾಳೂರು ಹಾಳಾಯಿತ್ತು ಗುಹೇಶ್ವರಾ !/1584
ಹಿಂದಣ ಅನಂತವನೂ, ಮುಂದಣ ಅನಂತವನೂ
ಒಂದು ದಿನ ಒಳಕೊಂಡಿತ್ತು ನೋಡಾ !
ಒಂದು ದಿನವನೊಳಕೊಂಡು ಮಾತಾಡುವ
ಮಹಂತನ ಕಂಡು ಬಲ್ಲವರಾರಯ್ಯ ?
ಆದ್ಯರು ವೇದ್ಯರು ಅನಂತ ಹಿರಿಯರು,
ಲಿಂಗದಂತುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರಾ !/1585
ಹಿಂದಣ ಕವಿಗಳೆನ್ನ ತೊತ್ತಿನ ಮಕ್ಕಳು
ಮುಂದಣ ಕವಿಗಳೆನ್ನ ಕರುಣದ ಕಂದಗಳು.
ಆಕಾಶದ ಕವಿಗಳೆನ್ನ ತೊಟ್ಟಿಲ ಕೂಸು.
ಹರಿಬ್ರಹ್ಮರೆನ್ನ ಕಕ್ಷಕುಳ.
ನೀ ಮಾವ ನಾನಳಿಯ ಗುಹೇಶ್ವರಾ./1586
ಹಿಂದನರಿಯದದು ಮುಂದನೇನ ಬಲ್ಲುದೊ?
ಉದಯ ಮುಖದಲ್ಲಿ ಹುಟ್ಟಿದ ಪ್ರಾಣಿಗಳು ಅಸ್ತಮಾನಕ್ಕಳಿದರಲ್ಲಾ!
ಅಂದಂದಿನ ಘಟಜೀವಿಗಳು, ಬಂದ ಬಟ್ಟೆಗೆ ಹೋದರಲ್ಲಾ.
ಗುಹೇಶ್ವರನೆಂಬ ಲಿಂಗ ಅರಿಗೂ ಇಲ್ಲವಯ್ಯಾ./1587
ಹಿಂದಳದನೊಂದು ಮಾಡಿ ಸಂದು ಸಂಶಯವಿಲ್ಲದೆ
ನಿಂದ ನೆಲವ ತೋರುವ ಬಸವಣ್ಣನ ಪರಿಯ ನೋಡಾ
ಮುಂದಿರ್ದ ಕೂಸಿನ ಸಂದ ಸರ ಒಂದಾಗಿ ಎರಡೊಂದಾದ
ಘನಮಹಿಮ ಬಸವಣ್ಣನನೇನೆನ್ನಲಿ ?
ಮೂರು ಮೂರನೆ ಮಾಡಿ, ಆರು ಆರನೆ ತಂದು,
ಬೇರೆ ಮತ್ತಿಲ್ಲದ ಬಸವಣ್ಣನ ಪರಿಯ ನೋಡಾ!
ಹತ್ತು ಹತ್ತನೆ ಕೂಡಿ ಧಾತು ಧಾತುವ ಬೆರೆಸಿ
ಕಳೆಕಳೆಗಳೊಂದಾದ ಬಸವಣ್ಣನ ಪರಿಯ ನೋಡಾ!
ಕೃತಯುಗ ತ್ರೇತಾಯುಗ ದ್ವಾಪರಯುಗವಿಲ್ಲದಂದು
ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಧಲವಿಲ್ಲದಂದು;
ಇಂತೀ ತ್ರಿವಿಧವು ಬಸವಣ್ಣನ ಕೈಯಲ್ಲಿ ನಿಕ್ಷೇಪವಯ್ಯಾ!
ಅಂದು ಲಿಂಗದಲಿ ಅನಿಮಿಷ, ಇಂದು ಜಂಗಮದಲಿ ಅನಿಮಿಷ
ಬಸವಣ್ಣ ಅಂದಾದ ಗುರುವೆಂದರಿದೆನಾಗಿ
ಗುಹೇಶ್ವರಾ ಅಮಳೋಕ್ಯ ಸಂಗನಬಸವಿದೇವನ
ಶ್ರೀಪಾದಕ್ಕೆ ಶರಣು
ಶರಣು./1588
ಹಿಂದೆ ಎಷ್ಟು ಪ್ರಳಯ ಹೋಯಿತ್ತೆಂದರಿಯೆ.
ಮುಂದೆ ಎಷ್ಟು ಪ್ರಳಯ ಬಂದಹುದೆಂದರಿಯೆ.
ತನ್ನ ಸ್ಥಿತಿಯ ತಾನರಿಯದಡೆ ಅದೇ ಪ್ರಳಯವಲ್ಲಾ !
ತನ್ನ ವಚನ ತನಗೆ ಹಗೆಯಾದಡೆ ಅದೇ ಪ್ರಳಯವಲ್ಲಾ !
ಇಂತಹ ಪ್ರಳಯ ನಿನ್ನಲುಂಟೆ ಗುಹೇಶ್ವರಾ ?/1589
ಹಿಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು.
ಮುಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು.
ಇನ್ನೂ ಕೊಯ್ದಾನೆ ಪುಷ್ಪಂಗಳನು.
ಉನ್ನತನೆಂಬ ಗಣೇಶ್ವರನ ಕರಡಗೆ ತುಂಬದು ನೋಡಾ !
ಇನ್ನೂ ಕೊಯ್ದಾನೆ ಪುಷ್ಪಂಗಳನು-ಆ ಕುಲಗಿರಿಗೆ ಮೇರುಗಿರಿ ಘನವೆಂದರಿಯರು.
ಗುಹೇಶ್ವರಾ, ನಿಮ್ಮ ಮಹಿಮೆಯ ಹರಿಬ್ರಹ್ಮಾದಿಗಳೂ ಅರಿಯರು./1590
ಹಿಂದೆನ್ನ ಗುರು ಅನಿಮಿಷಂಗೆ ಲಿಂಗವ ಕೊಟ್ಟೆನೆಂಬ ಸೂತಕ ಬೇಡ.
ಅಂದು ಅನಿಮಿಷನು ನಿನ್ನ ಕೈಯಲ್ಲಿದ್ದುದ ತೆಕ್ಕೊಂಡನೆಂಬ ಸಂಕಲ್ಪ ಬೇಡ.
ಹಿಂದು ಮುಂದೆಂಬ ಸಂದಳಿದು, ನಿಜದಲ್ಲಿ ಭರಿತನಾದ ಬಳಿಕ,
ಕೊಡಲುಂಟೆ ಕೊಳಲುಂಟೆ ಹೇಳಾ ?
ಹಿಡಿವಡೆ ಸಿಕ್ಕದು, ಕೊಡುವಡೆ ಹೋಗದು,
ಎಡೆಯಾಟದ ವ್ಯವಹಾರಕ್ಕೆ ಬಾರದು ನೋಡಾ.
ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಯಿತ್ತು ನಿನಗೆ.
ಗುಹೇಶ್ವರನೆಂಬ ಲಿಂಗವ ನಿನಗಿನ್ನು ಹೊಸದಾಗಿ ಕೊಡಲುಂಟೆ
ಹೇಳಾ ಸಂಗನಬಸವಣ್ಣಾ ?/1591
ಹಿಡಿವ ಕೈಯ [ಮೇ]ಲೆ ಕತ್ತಲೆಯಯ್ಯಾ,
ನೋಡುವ ಕಂಗಳ ಮೇಲೆ ಕತ್ತಲೆಯಯ್ಯಾ,
ನೆರೆವ ಮನದ ಮೇಲೆ ಕತ್ತಲೆಯಯ್ಯಾ,
ಕತ್ತಲೆ ಎಂಬುದು ಇತ್ತಲೆಯಯ್ಯಾ,
ಗುಹೇಶ್ವರನೆಂಬುದು ಅತ್ತಲೆಯಯ್ಯಾ./1592
ಹಿರಿದಪ್ಪ ಜಲದಿಯ ಮಡುವಿನೊಳಗೆ,
ಕರಿಯ ಕಬ್ಬಿಲ ಜಾಲವ ಬೀಸಿದ ನೋಡಯ್ಯಾ.
ಅರಿದ ತಲೆ ಐದು, ಅರಿಯದ ತಲೆ ಐದು, ಕರಿಯ ತಲೆ ಐದು,
ಮುಂದೈದಾವೆ ನೋಡಯ್ಯಾ.
ಕರಿಯ ಕಬ್ಬಿಲ ಜಾಲವ ಹೊತ್ತುಕೊಂಡು ಹೋದಡೆ
ನೇತ್ರದಲೋಕುಳಿಯಾಡಿತ್ತ ಕಂಡೆನು ಗುಹೇಶ್ವರಾ./1593
ಹಿರಿದೊಂದು ಮಾರಿಮಸಣಿಯ ಕೈಯಿಲ್ಲದ ಮೋಟ ಹಿಡಿದನು.
ಉಲಿವ ಕಮಲದಲುದಕವಿರ್ದುದು, ಕುಡಿವವರಿಲ್ಲದೆ ಬತ್ತಿ ಹೋಯಿತು.
ನರರು ಸುರರು ಅದಿದೇವತೆಗಳು, ಕುಲವನರಸುತ ಕೂಗುತೈದಾರೆ.
ತನ್ನ ಸುಳುಹಿಗೆ ತನ್ನ ನಿಲುವಿಗೆ,
ತಾನೆ ಬೆರಗಾದನು ಗುಹೇಶ್ವರ !/1594
ಹಿರಿಯರನೆಲ್ಲ ಹುಟ್ಟಿಸಿದಾತನನರಿಯಿರೊ,
ಹಿರಿಯರ ಮಕ್ಕಳಿರಾ ?
ಇಂದು ಎಂದೇನೊ ? ನಾಳೆ ಎಂದೇನೊ ?
ಎಂದೂ ಒಂದೇ ಮಕ್ಕಳಿರಾ ?
ಗುಹೇಶ್ವರಲಿಂಗ ಹಂಗಿಲ್ಲದ ಸಂಯೋಗ
ಇದ ಬೇಗನರಿಯಿರೊ ಹಿರಿಯರ ಮಕ್ಕಳಿರಾ./1595
ಹುಟ್ಟಿ ಕೆಟ್ಟಿತ್ತು ಭಾಗ, ಹುಟ್ಟದೆ ಕೆಟ್ಟಿತ್ತು ಭಾಗ,
ಮುಟ್ಟಿ ಕೆಟ್ಟಿತ್ತು ಭಾಗ, ಮುಟ್ಟದೆ ಕೆಟ್ಟಿತ್ತು ಭಾಗ.
ಇದೇನೊ ? ಇದೆಂತೊ? ಅರಿಯಲೆ ಬಾರದು.
ಇದೇನೊ ಇದೆಂತೊ ಎಂಬ ಎರಡು ಮಾತಿನ ನಡುವೆ,
ಉರಿ ಹತ್ತಿತ್ತು ಮೂರು ಲೋಕವ ಗುಹೇಶ್ವರಾ./1596
ಹುಟ್ಟಿದ ಕೂಸಿಂಗೆ ಪಟ್ಟವ ಕಟ್ಟಿ, ವಿಭೂತಿಯ ಹೂಸಿ,
ಲಿಂಗವ ತೋರಿ-`ಜೋಜೋ’ ಎಂದು
ಜೋಗುಳವಾಡಿದಳು ಮಾಯಾದೇವಿಯಕ್ಕ !
`ಜೋಜೋ’ ಎಂಬ ಸರ ಹರಿದು ತೊಟ್ಟಿಲು ಬಿದ್ದಿತ್ತು,
ಕೂಸು ಸತ್ತಿತ್ತು; ಗುಹೇಶ್ವರನುಳಿದನು !/1597
ಹುಟ್ಟಿದ ನೆಲೆಯ ತೃಷೆ ಬಿಡದವರಿಗೆ,
ಉದಕಲಿಂಗದ ಅನುಭಾವವೇಕೊ?
ಮಾತಿನ ಮಾತಿನ ಮಹಂತರು ಹಿರಿಯರು !
ಗುಹೇಶ್ವರನೆಂಬ ಲಿಂಗಸಾರಾಯ,
ತೋರದು ತೋರದು ಬಹುಮುಖಿಗಳಿಗೆ./1598
ಹುಟ್ಟಿದ ನೆಲೆಯ ತೃಷ್ಣೆ ಬಿಡದವರಿಗೆ,
ಲಿಂಗದ ಅನುಭಾವದ ಮಾತೇಕೊ ?
ಮಾತಿನ ಮಾತಿನ ಮಹಂತರು ಹಿರಿಯರು !
ಗುಹೇಶ್ವರನೆಂಬ ಲಿಂಗಸಾರಾಯವು
ಬಹುಮುಖಿಗಳಿಗೆ ತೋರದು, ತೋರದು./1599
ಹುಟ್ಟಿದಲ್ಲಿಯೆ ಹೊಂದುವುದೆಲ್ಲರಿಗೆಯೂ ಸ್ವಭಾವ.
ಪುಣ್ಯಪಾಪವೆಲ್ಲರಿಗೆಯೂ ಸ್ವಭಾವ.
ಮಹಾಶಿವತತ್ವದಲ್ಲಿ ಹುಟ್ಟಿದ ಶಿವಭಕ್ತರು,
ಆಗಮತತ್ವದಲ್ಲಿ ಹೊಂದಿದಡೇನು ?
ಆ ಪುಣ್ಯಪಾಪವಿಲ್ಲಾಗಿ, ಅವರು ಮಹಾನುಭಾವರು.
ಆದಡೇನು? ಲೋಕದ ಪರಿಯೆ ?-ಅಲ್ಲ.
ಇದ, ಲೋಕದ ಪರಿಯೆಂಬ ಅಜ್ಞಾನಿಗಳನೇನೆಂಬೆ ಗುಹೇಶ್ವರಾ./1600
ಹುಟ್ಟು ಬಂಜೆಯ ಮಗನೊಬ್ಬ ಈಯದೆಮ್ಮೆಯ ಗಿಣ್ಣವ ಬೇಡಿದನು.
ಕೊಂಬಿಲ್ಲದ ಮರನನೇರಿ ತುಂಬ ಹಣ್ಣ ಮೆಲಿದನು.
ಗುಹೇಶ್ವರ ಗುಹೇಶ್ವರ ಇಳಿ ಎಂದಡೆ ಅಳತ್ತೈದಾನೆ !/1601
ಹುಟ್ಟುವರೆಲ್ಲರ ಹುಟ್ಟಬೇಡೆಂದೆನೆ ?
ಹೊಂದುವರೆಲ್ಲರ ಹೊಂದಬೇಡೆಂದೆನೆ ?
ಪ್ರಳಯದಲ್ಲಿ ಅಳಿವರ ಅಳಿಯಬೇಡೆಂದೆನೆ ?
ಗುಹೇಶ್ವರಾ ನಿಮ್ಮನರಿದು ನೆರೆದ ಬಳಿಕ,
ಧರೆಯ ಮೇಲುಳ್ಳವರನಿರಬೇಡವೆಂದೆನೆ ?/1602
ಹುಟ್ಟುವಾತ ನಾನಲ್ಲಯ್ಯಾ, ಹೊಂದುವಾತ ನಾನಲ್ಲಯ್ಯಾ.
ಅದೇನೆಂಬೆನಯ್ಯಾ ಎಂತೆಂಬೆನಯ್ಯಾ?
ನಿಜವನರಿದ ಬಳಿಕ ಮತ್ತೆ ಹುಟ್ಟಲುಂಟೆ ಗುಹೇಶ್ವರಾ. /1603
ಹುಲಿಯ ತಲೆಯ ಹುಲ್ಲೆ, ಹುಲ್ಲೆಯ ತಲೆಯ ಹುಲಿ-
ಈ ಎರಡರ ನಡು ಒಂದಾಯಿತ್ತು !- ಹುಲಿಯಲ್ಲ ಹುಲ್ಲೆಯಲ್ಲ.
ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.
ತಲೆಯಿಲ್ಲದ ಮುಂಡ ತರಗೆಲೆಯ ಮೆದ್ದಡೆ,
ಎಲೆ ಮರೆಯಾಯಿತ್ತು ಕಾಣಾ, ಗುಹೇಶ್ವರಾ./1604
ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ, ಮೇದು ಬಂದೆನೆಂದಡೆ,
ಇದ ಕಂಡು ಬೆರಗಾದೆ.
ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದಡೆ,
ಇದ ಕಂಡು ಬೆರಗಾದೆ.
ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ,
ಇದ ಕಂಡು ಬೆರಗಾದೆ-ಗುಹೇಶ್ವರಾ./1605
ಹುಲ್ಲ ಕಿಚ್ಚುವ, ಕಲ್ಲ ಬೀಜವ, ನೀರ ನೆಳಲುವ,
ಗಾಳಿಯ ನಾರುವ, ಅಗ್ನಿಯ ಹಗಿನುವ, ಬಿಸಿಲಿನ ರುಚಿಯ
ತನ್ನ ಬೆಳಗುವನಾರು ಬಲ್ಲರು ಗುಹೇಶ್ವರಾ ನಿಮ್ಮ ಶರಣರಲ್ಲದೆ ?/1606
ಹುಸಿಯಿಲ್ಲದ ಗೂಡಿನೊಳಗೆ,
ಹೊಸ ಬಣ್ಣದ ಹಕ್ಕಿಯ ಭಸ್ಮವ ಮಾಡಿ ಆ ಗೂಡನೆಯ್ದೆ ನುಂಗೆ,
ಶಿಶು ತಾಯ ಬೆಸಲಾಗಿ, ತಾಯಿ ಶಿಶುವ ನುಂಗೆ,
ಶಿಶು ಕೋಪದಿಂದ ತಾಯನೆಯ್ದೆ ನುಂಗೆ,
ಹೊಸ ದೇಶದಿಂದೊಬ್ಬನಾರಯ್ಯ ಬಂದಾತ
ಹೆಸರಿಲ್ಲದಂತಿಬ್ಬರನೆಯ್ದೆ ನುಂಗೆ
ಬಸವ ಚನ್ನಬಸವ ಅನಿಮಿಷ ಗುಹೇಶ್ವರ ಸಹಿತ
ಶಿಶುವಿನ ಕರಸ್ಥಲದಲ್ಲಿಯೆ ಸುಖಿಯಾದರು !/1607
ಹುಸಿಯುಳ್ಳಾತ ಭಕ್ತನಲ್ಲ ಬಾಧೆಯುಳ್ಳಾತ ಜಂಗಮವಲ್ಲ,
ಆಸೆಯುಳ್ಳಾತ ಶರಣನಲ್ಲ.
ಇಂತಪ್ಪ ಆಸೆ ಹುಸಿ ಬಾಧೆಯ ನಿರಾಕರಿಸಿ ಇರಬಲ್ಲಡೆ-
ಗುಹೇಶ್ವರಾ ನಿಮ್ಮ ಶರಣ./1608
ಹೂ ಕೊಯ್ಯಹೋದಡೆ ಹೂ ದೊರಕೊಳ್ಳದು.
ಅಗ್ಘವಣಿಯ ತುಂಬುವಡೆ ಅಗ್ಘವಣಿ ತುಂಬದು.
ಪೂಜಿಸ ಹೋದಡೆ ಪೂಜೆ ನೆಲೆಗೊಳ್ಳದು.-
ಇದೇನು ಸೋಜಿಗವೊ ಅಯ್ಯಾ !
ಅರಿದು ಮರೆದವನಲ್ಲ, ಬೆರಗು ಹಿಡಿದವನಲ್ಲ.
ಗುಹೇಶ್ವರನೆಂಬ ಬುದ್ಧಿ ಇಂತುಟು. /1609
ಹೂ ಮಿಡಿಯ ಹರಿದು ಒತ್ತಿ ಹಣ್ಣ ಮಾಡಿಹೆನೆಂದಡೆ ಹಣ್ಣಾಗಬಲ್ಲುದೆ ?
ಪರಿಮಳವಿಲ್ಲದ ನನೆಯನರಳಿಸಿ ಮುಡಿದಹೆನೆಂದಡೆ ಸೌರಭ ಉಂಟೆ ?
ಶಿವಶರಣರ ನಿಲವು ಕಾಂಬ ಕಾಲಕ್ಕೆ ಕಾಣಬಹುದಲ್ಲದೆ
ಎಲ್ಲಾ ಹೊತ್ತು ಕಾಣಬಹುದೆ ? ಅಹ ಕಾಲಕ್ಕೆ ತಾನೆ ಅಪ್ಪುದು.
ಗುಹೇಶ್ವರನ ಶರಣರ ನಿಲವ ಕಂಡ ಬಳಿಕ
ಮರಹು, ಬೆಳಗ ಕಂಡ ಕತ್ತಲೆಯಂತೆ
ನೋಡ ನೋಡ ಹರೆವುದು ನೋಡಾ ಸಂಗನಬಸವಣ್ಣಾ./1610
ಹೂವ ಕೊಯ್ಯ ಹೋದಡೆ, ಹೂವಿನ ಮೇಲೊಂದು ಗಿಡ ಹುಟ್ಟಿತ್ತು.
ಹೂವಿನ ಸೊಂಪುವನಾರೂ ಕಂಡವರಿಲ್ಲ.
ಹೂವಿನ ಗುಂಪವನಾರೂ ಬಲ್ಲವರಿಲ್ಲ.
ಹೂವ ಕೊಯ್ಯದೆ ಗಿಡವ ಕಡಿಯದೆ
ನೇಮ ಸಂದುದು ಗುಹೇಶ್ವರಾ./1611
ಹೂವ ಹೊಯ್ಯ ಹೋಗಿ ಕರಡಿಗೆಯ ಮರೆದೆ;
ಪೂಜಿಸ ಹೋಗಿ ಲಿಂಗವ ಮರೆದೆ.
ಗಾಡಿಗರೊಡನಾಡಿ ಜೇನನಳಿದು ತುಪ್ಪವ ಮರೆದೆ.
ಅವರೆಲ್ಲರ ಒಡನಾಡಿಯಾಗಿ ಗುಹೇಶ್ವರಲಿಂಗವ ಮರೆದೆ./1612
ಹೂವಿನ ಮೇಲೊಂದು ಚಿಕ್ಕ ಬೆಟ್ಟ ಹುಟ್ಟಿ,
ಬೆಕ್ಕಿನ ಮೇಲಾರು ಬೆಟ್ಟ ಹುಟ್ಟಿದವು.
ಬೆಟ್ಟದ ಮೇಲಣವರು ಕಲ್ಲನಿರಿಸಿ ಆರೂ ಕಾಣರು !
ಒಂದು ಗಿರಿ ನೂರನಾಲ್ವತ್ತೆಂಟು ಲಕ್ಷ ಮುಖವು.
ನಾನೊಂದು ಮುಖದಲಿ ಇದ್ದೇನೆ ಕಾಣಾ ಗುಹೇಶ್ವರಾ./1613
ಹೃದಯಕಂದದ ಮೇಲೆ ಹುಟ್ಟಿತ್ತು,
ಹರಿದು ಹಬ್ಬಿ ಕೊಬ್ಬಿ ಹಲವು ಫಲವಾಯಿತ್ತು-ನೋಡಿರೆ !
ಪರಿಪರಿಯ ಫಲಂಗಳನು ಬೇಡಿದವರಿಗಿತ್ತು,
ಆ ಫಲವ ಬಯಸಿದವರು ಜಲದೊಳಗೆ ಬಿದ್ದಡೆ
[ನೋಡಿ] ನಗುತ್ತಿರ್ದೆನು-ಗುಹೇಶ್ವರಾ./1614
ಹೃದಯಕಮಲದೊಳಗೊಂದು ಮರಿದುಂಬಿ ಹುಟ್ಟಿತ್ತು,
ಹಾರಿಹೋಗಿ ಆಕಾಶವ ನುಂಗಿತ್ತಯ್ಯಾ !
ಆ ತುಂಬಿಯ ಗರಿಯ ಗಾಳಿಯಲ್ಲಿ,
ಮೂರು ಲೋಕವೆಲ್ಲವೂ ತಲೆಕೆಳಗಾಯಿತ್ತು !
ಪಂಚ ವರ್ಣದ ಹಂಸೆಯ ಪಂಜರವ ಖಂಡಿಸಿದಡೆ,
ಗರಿ ಮುರಿದು, ತುಂಬಿ ನೆಲಕ್ಕುರುಳಿತ್ತು!
ನಿಜದುದಯದ ಬೆಡಗಿನ ಕೀಲ ,
ಗುಹೇಶ್ವರಾ, ನಿಮ್ಮ ಶರಣರ ಅನುಭವಸಂಗದಲ್ಲಿರ್ದು ಕಂಡೆನಯ್ಯಾ./1615
ಹೃದಯದ ಬಾವಿಯ ತಡಿಯಲ್ಲಿ ಒಂದು ಬಾಳೆ ಹುಟ್ಟಿತ್ತು !
ಆ ಬಾಳೆಯ ಹಣ್ಣ ಮೆಲಬಂದ ಸರ್ಪನ ಪರಿಯ ನೋಡಾ.
ಬಾಳೆ ಬೀಗಿ ಸರ್ಪನೆದ್ದೆಡೆ-ನಿರಾಳವು ಕಾಣಾ ಗುಹೇಶ್ವರಾ./1616
ಹೃದಯದಲ್ಲಿರ್ಪ ಮಹಾಲಿಂಗದ ಬೆಳಗಿನಿಂದ
ನಾಸಿಕೆಯಲ್ಲಿ ಆಚಾರಲಿಂಗವ ಕಂಡೆನಯ್ಯಾ.
ಜಿಹ್ವೆಯಲ್ಲಿ ಗುರುಲಿಂಗವ ಕಂಡೆನಯ್ಯಾ.
ನೇತ್ರದಲ್ಲಿ ಶಿವಲಿಂಗವ ಕಂಡೆನಯ್ಯಾ.
ತ್ವಕ್ಕಿನಲ್ಲಿ ಜಂಗಮಲಿಂಗವ ಕಂಡೆನಯ್ಯಾ.
ಭಾವದಲ್ಲಿ ಮಹಾಲಿಂಗವ ಕಂಡೆನಯ್ಯಾ.
ಇಂತೀ ಷಡ್ವಿಧಲಿಂಗವನು
ಎನ್ನ ಸರ್ವಾಂಗದಲ್ಲಿ ಕಂಡು [ಮಹಾಲಿಂ]ಗವಾದೆನು
ಕಾಣಾ ಗುಹೇಶ್ವರಾ./1617
ಹೆಣ್ಣ ನಂಬಿ ತನು ಮನ ಧನವನಿತ್ತೆಯಲ್ಲಾ ಎಲೆ ಮನವೆ ?
ಇದ್ದುದನೆಲ್ಲವ ಕೊಂಡು ಬತ್ತಲೆ ಮಾಡಿ ತಲೆಯ ಬೋಳಿಸಿ
ಕೈಯಲ್ಲಿ ಹಂಚ ಕೊಟ್ಟು ಮತ್ತೊಬ್ಬಗಾಸೆ ಮಾಡುತ್ತಿದ್ದಾಳೆ ಕಂಡಾ !
(ನಿನ್ನ?) ಮುಂದೆ ಮನಕೆ ಬಂದ ಪುರುಷನ ನೋಡುವಳು ಕಾಣಾ.
ಮತ್ತವಳ ನಂಬಿ ನಚ್ಚು ನಾಚಿಕೆಯಿಲ್ಲದ ಭಂಡ ಮನವೆ !
ಹೆಣ್ಣಿನ ಪಾಟಿಯ ತೊರೆದು ಕುಡು ಭಕ್ತ್ಯಂಗನೆಗೆ ತನು ಮನವ
ಮುಕ್ತ್ಯಂಗನೆ ನಿನಗೊಲಿವಳು.ಬೇಗ ವಿರಕ್ತನಾಗಿ, ಹೆಣ್ಣ ಜಾಡಿಸಿ, ತಲೆಯ ಬೋಳಿಸಿಕೊಂಡು,
ಜಾಡಿಗಂಬಳಿಯ ಮುಸುಕಿಟ್ಟು
ಕರ್ಪರ ಒಂದರೊಳು ದೇಶಾಂತರಿಯಾಗು,
ಜಡನ ತೆಗಳಿಸಿ (ಜಡವತಿಗಳಿಸಿ?) ಮುಂದೆ ಲಿಂಗವಹೆ ಕಾಣಾ
ಗುಹೇಶ್ವರಾ./1618
ಹೆಸರು ಹಾಲಯ್ಯ ಎರೆದುಂಬುದಂಬಿಲ’ ಎಂಬ
ಲೋಕದ ಗಾದೆಯ ಮಾತು ದಿಟವಾಯಿತಲ್ಲಾ !
ಮಾತು ಕಲಿತು ಮಂಡೆಯ ಬೋಳಿಸಿಕೊಂಡು
ಊರ ಮಾರಿಯ ಮರನೇರಿದಂತೆ
ಮಾಯೆಯ ಕೊರಳಲ್ಲಿ ಕಟ್ಟಿಕೊಂಡು
ಘಟಸರಣಿಯ ಪಶುಗಳು ಜಂಗಮವೆಂದು ಸುಳಿವ
ನಾಚಿಕೆಯ ನೋಡಾ ಗುಹೇಶ್ವರ/1619
ಹೇಳಿ [ಹೆ] ಹೇಳಿ [ಹೆ] ಕೇಳಿರಣ್ಣಾ
ಮೂರರ ಹೊಲಿಗೆಯ ಬಿಚ್ಚಿ ಆರಮಾಡಬೇಕು.
ಆರರ ತಿರುಳ ತೆಗೆದು ಒದೂರೊಳಗೆ ನಿಲಿಸಬೇಕು.
ಐದರ ಮುಸುಕನುಗಿದು, ಐದರ ಕೆಳೆಯ ಕೆಡಿಸಿ
ಐದರ ನಿಲವನಡಗಿಸಿ,
ಮೂರರ ಮುದ್ರೆಯನೊಡೆದು, ನಾಲ್ಕರೊಳಗೆ ನಿಲ್ಲದೆ
ಮೂರು ಮುಖವು ಒಂದೆ ಭಾವವಾಗಿರಬೇಕು.
ಈ ಭೇದವನರಿಯದೆ ಸುಳಿವವರ ಕಂಡು
ಬೆರಗಾದನು ಕಾಣಾ ಗುಹೇಶ್ವರಾ./1620

 

ಹೊಟ್ಟು ಜಾಲಿಯ ತುತ್ತತುದಿಯ ಮೇಲೊಂದು
ಚೌಷಷ್ಟಿ ವಿದ್ಯಾಕಳಾಪ್ರವೀಣವೆಂಬ ಪಟ್ಟಣ.
ಆ ಪಟ್ಟಣದೊಳಗೊಬ್ಬ ತಳವಾರ-
ಹುಟ್ಟು ಬಂಜೆಯ ಮಗ ಮರೆದೊರಗಲು,
ಐದು ಆನೆಯ ಕಳ್ಳರೊಯ್ದರು, ಐದು ಒಂಟೆ ಹುಯ್ಯಲು ಹೋದವು-
ಅರೆಮರುಳಂಗೆ ನೆರೆಮರುಳ ಬುದ್ಧಿಯ ಹೇಳುತ್ತಿರ್ಪುದ ಕಂಡೆ.
ಕುರುಬ ಕುರಿಯ ಹಾಲ ಕರೆದು ಒಲೆಯ ಮೇಲಿಕ್ಕೆ
ಹಾಲುಕ್ಕಿ ಮಿಕ್ಕ ಹಾಲ ಬೆಕ್ಕು ಕುಡಿಯಿತ್ತು,
ಬೆಣ್ಣೆಯ ಮುಂದಿಟ್ಟುಕೊಂಡಳುತಿರ್ದ ಕಾಣಾ ಗುಹೇಶ್ವರಾ./1621
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು?
ಹಸಿವು ಹೋಹುದೆ?
ಅಂಗದ ಮೇಲೆ ಲಿಂಗಸ್ವಾಯತವಾದಡೇನು?
ಭಕ್ತನಾಗಬಲ್ಲನೆ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ,
ಆ ಕಲ್ಲು ಲಿಂಗವೆ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ?
ಇಂತಪ್ಪವರ ಕಂಡಡೆ ನಾಚುವೆನಯ್ಯಾ-ಗುಹೇಶ್ವರಾ./1622
ಹೊತ್ತಾರೆ ಪೂಜಿಸಲು ಬೇಡ ಕಂಡಾ.
ಬೈಗೆಯೂ ಪೂಜಿಸಲು ಬೇಡ ಕಂಡಾ.
ಇರುಳುವುನು ಹಗಲುವನು ಕಳೆದು,
ಪೂಜೆಯನು ಪೂಜಿಸಲು ಬೇಕು ಕಂಡಾ,
ಇಂತಪ್ಪ ಪೂಜೆಯನು ಪೂಜಿಸುವರ,
ಎನಗೆ ನೀ ತೋರಾ ಗುಹೇಶ್ವರಾ./1623
ಹೊನ್ನ ತೂಗಿದ ತ್ರಾಸುಕಟ್ಟಳೆ ಹೊನ್ನಿಂಗೆ ಸರಿಯುಪ್ಪುದೆ?
ಸನ್ನಹಿತರಾದೆವೆಂಬ ನುಡಿಗೆ ನಾಚರು ನೋಡಾ,
ಕನ್ನದಲಿ ಸವೆದ ಕಬ್ಬುನದಂತೆ,
ಮುನ್ನ ಹೋದ ಹಿರಿಯರು ಲಿಂಗದ ಸುದ್ದಿಯನರಿಯರು.
ಇನ್ನಾರು ಬಲ್ಲರು ಹೇಳಾ ಗುಹೇಶ್ವರಾ?/1624
ಹೊನ್ನಿಗಾಗಿ ಸತ್ತುದೊಂದು ಕೋಟ್ಯನುಕೋಟಿ
ಹೆಣ್ಣಿಗಾಗಿ ಸತ್ತುದೊಂದು ಕೋಟ್ಯನುಕೋಟಿ
ಮಣ್ಣಿಗಾಗಿ ಸತ್ತುದೊಂದು ಕೋಟ್ಯನುಕೋಟಿ
ನೀ ಗುರಿಯಾಗಿ ಸತ್ತವರನಾರನೂ ಕಾಣೆ ಗುಹೇಶ್ವರಾ./1625
ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರ./1626
ಹೊನ್ನೆಂಬ ಕಾರ್ಮಿಕವ ಜರಿದು ಹರಿದು, ಮಣ್ಣೆಂಬ ಭವದ ಭವದ ಹರಿದು,
ಹೆಣ್ಣೆಂಬ ರಾಕ್ಷಸಿಯ ಅಣಲೊಳಗೆ ಸಿಕ್ಕಿ ಅಗಿದಗಿದು ತಿನಿಸಿಕೊಂಬ
ಜಡಜೀವಿಗಳ ಸಂಗದಿಂದಾದ ಸಕಲ ಸುಖಭೋಗಂಗಳ ಬಿಟ್ಟು;
ಲಿಂಗರತಿ ಪರಮಸುಖದ ಚಿದಮೃತದ ನಿತ್ಯ ತೃಪ್ತಿ ಸಂತೋಷ ಇಂಬುಗೊಂಡು,
ವೇಷದ ಭ್ರಾಂತಿನ ಭ್ರಾಮಕದ ಸಮಯ ಕುಲಪಾಷಂಡಿಗಳ ತತ್ಸಂಗವ ಬಿಟ್ಟು
ನಿರಾಶಾ ಪಥದ ಸುಜ್ಞಾನವೆ ಅನುಕೂಲವಾಗಿ
ಘೃತ ಫಳ ಮಧುರರಸ ಮೃಷ್ಟಾನ್ನಂಗಳಲ್ಲಿ ಮನಮಗ್ನವಾದ ಪರಮ ಪ್ರಸಾದದಲ್ಲಿ
ಪರಿಣಾಮಿಯಾದ ಪರಮಲಿಂಗೈಕ್ಯ ವಿರಕ್ತಂಗೆ ಲಿಂಗಾರ್ಪಿತವಲ್ಲದೆ-
ಇಂತೀ ಕ್ರಮವನರಿದು ಸಕಲಭ್ರಾಂತನಳಿಯದೆ
ಮನ್ಮಥವೇಷಧಾರಿಗಳು ಪಂಚಲೋಹ ಕಾರ್ಮಿಕವ ಧರಿಸಿಕೊಂಡು
ಲಿಂಗಾರ್ಪಿತ ಬಿಕ್ಷೆಯೆಂದು ಭುಂಜಿಸುವ ಭುಂಜನೆಯೆಲ್ಲವು
ವರಾಹ ಕುಕ್ಕುಟದ ಮೇಧ್ಯವು, ಅವರಿಗೆ ಪ್ರಸಾದವೆಂಬುದು ಸ್ವಪ್ನದಲ್ಲಿಯೂ ….
…….ಕೊಂಬುದೆಲ್ಲವು ಕತ್ತೆಯ ಮಾಂಸ ಕಾಣಾ ಗುಹೇಶ್ವರಾ./1627
ಹೊರಗನೆ ಕೊಯ್ದು ಹೊರಗನೆ ಪೂಜಿಸಿ
ಹೊರಗಾಗಿ ಹೋಯಿತ್ತು ತ್ರೈಜಗವೆಲ್ಲ.
ಆನದನರಿಯದಂತೆ ಲಿಂಗವ ಪೂಜಿಸ ಹೋದಡೆ,
ಕೈ ಲಿಂಗದಲ್ಲಿ ಸಿಲುಕಿತ್ತಲ್ಲಾ !
ಮನ ದೃಢದಿಂದ ನಿಮ್ಮ ನೆನೆದಿಹೆನೆಂದಡೆ
ತನು ಸಂದಣಿಸಿತ್ತು ಗುಹೇಶ್ವರಾ./1628
ಹೊರಗನೆ ಕೊಯ್ದು ಹೊರಗನೆ ಪೂಜಿಸಿದವರ ಕಂಡು,
ನಾಚಿದೆ ನಾಚಿದೆನಯ್ಯಾ.
ಒಳಗೆ, ಒಂದು ಅನು(ನಿ ?)ಮಿಷಲಿಂಗವ ಕಂಡು,
ಎನ್ನ ಮನೋಪುಷ್ಪದಲ್ಲಿ ಪೂಜಿಸಿದಡೆ
ನಾಚಿಕೆ ಮಾದು ನಿಸ್ಸಂದೇಹಿಯಾದೆನು-ಗುಹೇಶ್ವರಾ./1629
ಹೊರಗಾಡಿ ಬಂದೆನೆಂದು ನುಡಿಸಲೊಲ್ಲದೆ ಸುಮ್ಮನಿದ್ದೆನು
ಎನ್ನ ಮನ ನೊಂದು ತಾಗಿದಡೆ ನಿಮ್ಮತ್ತ ಮುಂದಾದೆನು.
ಬಿಕ್ಕುತ್ತ ಬೆದರುತ್ತ ಕಾಲಮೇಲೆ ಬಿದ್ದಡೆ,
ಕಂಗಳ ಉದಕ ಮಜ್ಜನಕ್ಕೆರೆದಂತಾಯಿತ್ತು !
ಅಂತಿರ್ದಡೆ ಕಂಡು ನೆಗಹಿದನು ನಮ್ಮ ಗುಹೇಶ್ವರಲಿಂಗವು./1630
ಹೊರವೇಷದ ವಿಭೂತಿ ರುದ್ರಾಕ್ಷಿಯನು ಧರಿಸಿಕೊಂಡು
ವೇದ ಶಾಸ್ತ್ರ ಪುರಾಣ ಆಗಮದ ಬಹುಪಾಠಿಗಳು;
ಅನ್ನ ಹೊನ್ನು ವಸ್ತ್ರವ ಕೊಡುವವನ ಬಾಗಿಲ ಕಾಯುವ
ಮಣ್ಣ ಪುತ್ಥಳಿಯಂತಹ ನಿತ್ಯನಿಯಮದ ಹಿರಿಯರುಗಳು.
ಅದೆಂತೆಂದಡೆ: “ವೇದವೃದ್ಧಾ ಅಯೋವೃದ್ಧಾಃ ಶಾಸ್ತ್ರವೃದ್ಧಾ ಬಹುಶ್ರುತಾಃ
ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ -ಎಂದುದಾಗಿ
ಎಲ್ಲ ಹಿರಿಯರು ಲಕ್ಷ್ಮಿಯ ದ್ವಾರಪಾಲಕರು-ಗುಹೇಶ್ವರಾ./1631
ಹೊರಸಿನೆಕ್ಕೆಯ ಶಂಖದ ಮಣಿಯ ಪವಣಿಸಬಲ್ಲವರು
ನೀವಾರಾದಡೂ ಪವಣಿಸಿರಯ್ಯಾ,-ಇದ ನಾನರಿಯೆನಯ್ಯಾ.
ಒಂದು ತಾಳಮರದ ಮೇಲೆ ಮೂರು ರತ್ನವಿಹುದ ನಾ ಬಲ್ಲೆ:
ಒಂದು ರತ್ನ ಉತ್ಪತ್ಯ-ಸ್ಥಿತಿ-ಲಯಕ್ಕೊಳಗಾಯಿತ್ತು.
ಒಂದು ರತ್ನ ಹದಿನಾರು ಭುವನಕ್ಕೆ ಬೆಲೆಯಾಯಿತ್ತು.
ಇನ್ನೊಂದು ರತ್ನಕ್ಕೆ ಬೆಲೆಯಿಲ್ಲವೆಂದು
ಗುಹೇಶ್ವರ ಲಿಂಗೈಕ್ಯವು.-ನಿಶ್ಶಬ್ದಂ ಬ್ರಹ್ಮ ಉಚ್ಯತೇ./1632
ಹೊಸ ಮುತ್ತಿನ ಸುಪ್ಪಾಣಿಯಂತೆ ಲಿಂಗೈಕ್ಯವು.
ಸ್ಫಟಿಕದ ಘಟದೊಳಗಣ ಪ್ರಭೆಯಂತೆ ಲಿಂಗೈಕ್ಯವು.
ವಾಯುವಿನ ಸಂಚದ ಪರಿಮಳದ ನಿಲವಿನಂತೆ
ಲಿಂಗೈಕ್ಯ ಸಂಬಂಧವದು ಗುಹೇಶ್ವರಾ./1633
ಹೋಮವ ಮಾಡುವರ ಕಂಡೆ;
ಹೊಗೆಯ ನಿಲಿಸುವರ ಕಾಣೆ.
ದೂರ ದಾರಿ ನಡೆವರ ಕಂಡೆ;
ಕಾಲುಗಳ ನುಂಗುವರ ಕಾಣೆ.
ಆಲು (ರು?)ತ್ತ ಬೊಬ್ಬೆಗೊಟ್ಟು ರಣದೊಳಗೆ ಅಳಿದು
ಮುಂಡ ಮುಂದೆ ನಡೆದಾಡುವರ ಕಂಡೆ,
ಹರಿದ ಶಿರವ ಹಿಡಿದುಕೊಂಡು,
ಕುಣಿದಾಡುವರ ಕಾಣೆ ಗುಹೇಶ್ವರಾ./1634
ಹೋಹ ಬಟ್ಟೆಯಲೊಂದು, ಮಾಯ ಇದ್ದುದ ಕಂಡೆ.
ಠಾಣಾಂತರ ಹೇಳಿತ್ತು ಠಾಣಾಂತರ ಹೇಳಿತ್ತು,
ಅಲ್ಲಲ್ಲಿಗೆ ಅಲ್ಲಲ್ಲಿಗೆ ಅಲ್ಲಲ್ಲಿಗೆ.
ಗುಹೇಶ್ವರನ ಕರಣಂಗಳು ಕುತಾಪಿಗಳು./1635
…………………..ನುಂಗಿತ್ತು.
ದೂರ ಧಾತು ಸಾರಾಯದೊಳಡಗಿತ್ತು.
ಪುರದೊಳಗೈವರ ಶಿರ ಹರಿದು…………ಮಳದೋಕುಳಿಯಾಗಿತ್ತ ಕಂಡೆ.
ಸಾರಿದ್ದ ಬ್ರಹ್ಮನ ಓಲಗ ಸೂರೆಯಾಯಿತ್ತು.
ಘೋರ ರುದ್ರನ ದಳ ಮುರಿಯಿತ್ತು ಗುಹೇಶ್ವರಾ/1636
“………………….ರು, ನೀವು ಕೇಳಿ,
ನಿಚ್ಚಕ್ಕೆ ನಿಜಹುಸಿಯ ಕಂಡೆವಲ್ಲಾ !
ವಾಯು ಬೀಸುವಲ್ಲಿ ಆಕಾಶ ಬಲಿದಲ್ಲಿ
ಲಿಂಗಾರ್ಪಿತ ಮುಖವನರಿಯರಲ್ಲ.
ಭೋಜನವನುಂಡು ಭಾಜನವನಲ್ಲಿಟ್ಟು ಹೋಹ
ಹಿರಿಯರ ವ್ರತಕ್ಕೆ ಅದೇ ಭಂಗ ಕಾಣಾ ಗುಹೇಶ್ವರಾ. /1637